Categories
ವಚನಗಳು / Vachanagalu

ಉಪ್ಪರಗುಡಿಯ ಸೋಮಿದೇವಯ್ಯ ವಚನಗಳು

1206
ಕಾಯಕ್ಕೆ ಕರಣಂಗಳಿಲ್ಲ, ಜೀವಕ್ಕೆ ಇಂದ್ರಿಯಗಳಿಲ್ಲ.
ಅದೆಂತೆಂದಡೆ: ಕಾಯಕ್ಕೂ ಜೀವಕ್ಕೂ ಇಂದ್ರಿಯಂಗಳ ಬೆಂಬಳಿಯಲ್ಲಿ, ಸಂಗಗುಣದಲ್ಲಿ
ಘಟಜೀವದ ಬೆಂಬಳಿಯನರಿದು,
ಸಂಚಿನ ಸಂಬಂಧದಿಂದ ಘಟಕರಚರಣಾದಿಗಳೆಲ್ಲ
ಅವಯವಂಗಳ ಸಂಚಿನ ಭೇದದಿಂದ ಮಿಂಚುವುದನರಿದು
ಅವಗತ ಸಂಚವನರಿದವಂಗೆ
ಗಾರುಡೇಶ್ವರಲಿಂಗವು ಸಾಧ್ಯವಲ್ಲ.
1207
ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ?
ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ?
ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ?
ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ?
ಎಂಬುದ ಅಂತಸ್ಥದಿಂದ ತಿಳಿದು,
ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ,
ಒಂದ ಬಿಟ್ಟೊಂದು ಇರದು.
ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ,
ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ.
ಇಂತೀ ಉಭಯಭಾವದ ಭೇದವನರಿದ ಪರಮ[ಸುಖ]
ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
1208
ಕಾಯದಿಂದ ತೋರುವದು ಪ್ರಪಂಚವಲ್ಲ,
ಜೀವದಿಂದ ತೋರುವದು ಪ್ರಪಂಚವಲ್ಲ,
ಅದಂ ತದ್ಭಾವದಿಂದ ತೋರುವದೆ ಪ್ರಪಂಚುಯೆಂಬುದನರಿದು
ಸದ್ಭಾವಕ್ಕೊಡಲೆಂಬುದ ಕಂಡು,
ಅರಿದು ಮರೆದಲ್ಲಿ ನಿಃಪ್ರಪಂಚು, ಅರಿದಲ್ಲಿ ಪ್ರಪಂಚು.
ಉಭಯದ ತೆರದರಿಸಿನ ಕುರುಹುದೋರದೆ
ಅಡಗಿ ನಿಷ್ಪತ್ತಿಯಾದುದು,
ಗಾರುಡೇಶ್ವರಲಿಂಗವನರಿದುದು.
1209
ಕಾಯ ವಸ್ತುವೆಂದಡೆ ನಾನಾ ಮಲಗುಣಂಗಳ ಹೊರೆಯದು.
ಜೀವ ವಸ್ತುವೆಂದಡೆ ತ್ರಿವಿಧಮಲದ ಹೊರೆ.
ಅರಿವು ವಸ್ತುವೆಂದಡೆ ಒಂದು ಕುರುಹಿನ ಹೊರೆಯಲ್ಲಿ ಹೊರೆಯದು.
ಇಂತೀ ಹೊರೆಯ ಹೊರೆಯದೆ,
ಪರೀಕ್ಷೆ ವಿದ್ಯನಾಗಿ ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
1210
ತಾ ದೇವರಾದ ಮತ್ತೆ
ಪೂಜೆಗೊಂಡವರಲ್ಲಿ ಅಡಗಡಿಗೆ ಗಡಿತಡಿಗೆ ಬರಲೇತಕ್ಕೆ ?
ತಾ ಪರಮನಿರ್ವಾಣದಲ್ಲಿ ತಿರಿಗಿ
ಆಡು[ವ]ವರ, [ಕೂ]ಡುವವರ, ಒಳ್ಳಿತ್ತ ಸಡಗರಿಸಿ ನುಡಿವ[ವ]ರ ಒಡಗೂಡಿ
ಬಾಗಿಲು ಚಾವಡಿಮನೆಯಲ್ಲಿ ನಿಲ್ಲು, ಬಾ_ಹೋಗೆನಿಸಿಕೊಳಲೇತಕ್ಕೆ ?
ಅವರನೆಲ್ಲಿ ಕಂಡಲ್ಲಿಯೆ ನೋಡಿ,
ಅವರು ಸಲ್ಲೀಲೆಯಲ್ಲಿ ಮಾಡುವುದ ಕೇಳಿ
ಅಲ್ಲಿಯೆ ಪರಮಾನಂದದಲ್ಲಿ ಸುಖಿಯಹ ಮಹಾತ್ಮಂಗೆ
ಅಲ್ಲಿಯಿಲ್ಲಿಯೆಂಬ ಭಾವದ ಭ್ರಮೆಯಿಲ್ಲ,
ಗಾರುಡೇಶ್ವರಲಿಂಗವನರಿದ ಶರಣ.
1211
ದಾಸ-ದುಗ್ಗಳೆಯವರ ತವನಿಧಿಪ್ರಸಾದವ ಕೊಂಡೆನಯ್ಯಾ.
ಸಿರಿಯಾಳ-ಚೆಂಗಳೆಯವರ ಪ್ರಾಣಪ್ರಸಾದವ ಕೊಂಡೆನಯ್ಯಾ.
ಸಿಂಧು-ಬಲ್ಲಾಳವರ ಸಮತಾಪ್ರಸಾದವ ಕೊಂಡೆನಯ್ಯಾ.
ಬಿಬ್ಬಬಾಚಯ್ಯಗಳ ಸಮಯಪ್ರಸಾದವ ಕೊಂಡೆನಯ್ಯಾ.
ಮಹಾದೇವಿಯಕ್ಕಗಳ ಜ್ಞಾನಪ್ರಸಾದವ ಕೊಂಡೆನಯ್ಯಾ.
ನೀಲಲೋಚನೆಯಮ್ಮನವರ ನಿರ್ವಯಲಪ್ರಸಾದವ ಕೊಂಡೆನಯ್ಯಾ.
ಇಂತೀ ಏಳ್ನೂರೆಪ್ಪತ್ತಮರಗಣಂಗಳ
ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ಬದುಕಿದೆನು
ಕಾಣಾ ಗಾರುಡೇಶ್ವರಾ.
1212
ಧರ್ಮದಿಂದ ಮೋಕ್ಷ,
ಮೋಕ್ಷದಿಂದ ಚತುರ್ವಿಧಫಲಪದಂಗಳೊಳಗೊಂದು.
ಅದು ಜನ್ಮ ಬಹ ಸಂದು.
ಈ ಉಭಯದ ಸಂದನರಿದು
ಕ್ಷುತ್ತಿಂಗೆ ಭಿಕ್ಷ, ಅಂಗಕ್ಕೆ ವಸ್ತ್ರ,
ಕನಕ ಕನ್ನೆ ಭೂದಾನ ಮುಂತಾದ ಧರ್ಮವ ಕರ್ಮಿಗಳಿಗೆ ಕೊಟ್ಟು,
ಧರ್ಮಂಗೆ ತನ್ನ ವರ್ಮವನಿತ್ತು,
ಸುಖಸುಮ್ಮಾನಿಯಂತೆ ಮಾಡಿದಡಂತೆ ಪರಮಸುಖಿ,
ಗಾರುಡೇಶ್ವರಲಿಂಗನರಿದ ಪರಮಪ್ರಕಾಶ.
1213
ಬೆಳಗು ನಷ್ಟವಾದಲ್ಲಿ ಕಳೆ ಪ್ರಜ್ವಲಿತವಿಲ್ಲ,
ಕ್ರೀ ನಷ್ಟವಾದಲ್ಲಿ ಅರಿವಿನ ತೆರಪಿಗೊಡಲಿಲ್ಲ.
ಕ್ರೀಯಂಗಕ್ಕೆ, ಅರಿವು ಆತ್ಮಂಗೆ.
ಇಂತೀ ಉಭಯ ಏಕವಾದಲ್ಲಿ ಲಕ್ಷನಿರ್ಲಕ್ಷವಾಗಿ,
ಗಾರುಡೇಶ್ವರಲಿಂಗವು ಗಾರುಡಕ್ಕೆ ಬಾರನು.
1214
ಮರನುರಿದು ಬೆಂದು ಕರಿಯಾದ ಮತ್ತೆ
ಉರಿಗೊಡಲಾದುದ ಕಂಡು,
ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ.
ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ,
ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ,
ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ?
ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ?
ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು,
ಗಾರುಡೇಶ್ವರಲಿಂಗವ ಕೂಡಿದವನ ಕೂಟ.
1215
ಶಿಖಿರಶಿವಾಲಯವ ಕಂಡು
ಕೈಮುಗಿದಲ್ಲಿ ದೈವ ಒಪ್ಪುಗೊಂಡಿತ್ತು,
ಅದು ತಾನಿ[ತ್ತ] ಆಲಯವಾದ ಕಾರಣ.
ಸಮಯದರ್ಶನಕ್ಕೆ ಇಕ್ಕಿ ಎರೆದಲ್ಲಿ,
ಧರ್ಮವೆಂದು ಕೊಟ್ಟುಕೊಂಡಲ್ಲಿ,
ಶಿವನೊಪ್ಪುಗೊಂಬುದೆ ವಿಧ.
ದಿಟವಿರ್ದು ವಿಶ್ವಾಸದಿಂದ ಮಾಡುವ ಭಕ್ತಿ,
ಚತುರ್ವಿಧ ಫಲಪದಂಗಳ ಗೊತ್ತಿನ ಮುಕ್ತಿ.
ಇದು ಸತ್ಯಕ್ರೀವಂತನ ಚಿತ್ತ,
ಗಾರುಡೇಶ್ವರಲಿಂಗದಲ್ಲಿ ಭಕ್ತಿ[ಯ] ಕ್ರೀ.
1216
ಸರ್ಪನಲ್ಲಿ ವಿಷ ಇದ್ದಿತ್ತೆಂದಡೆ,
ಸರ್ವಾಂಗದಲ್ಲಿ ವಿಷ ತಪ್ಪದಿಪ್ಪುದೆ, ವಿಷವಿಪ್ಪಠಾವು ಒಂದಲ್ಲದೆ ?
ಪೃಥ್ವಿಯಲ್ಲಿ ನಿಕ್ಷೇಪವಿದ್ದಿತ್ತೆಂದಡೆ,
ಅಲ್ಲಲ್ಲಿ ಎಲ್ಲಾ ಠಾವಿನಲ್ಲಿ ಅಡಗಿಪ್ಪುದೆ ?
ಸಮಯಕುಲದಲ್ಲಿ ವಸ್ತು ಪರಿಪೂರ್ಣವೆಂದಡೆ,
ದರ್ಶನಪಾಷಂಡಿಗಳಲ್ಲಿ ವಸ್ತುಪರಿಪೂರ್ಣನಾಗಿಪ್ಪನೆ ?
ಇಪ್ಪ ಸತ್ಯಸನ್ಮುಕ್ತರಲ್ಲಿಯಲ್ಲದೆ, ಪರಮವಿರಕ್ತನಲ್ಲಿಯಲ್ಲದೆ.
ನೆಲದಲ್ಲಿದ್ದ ನಿಧಾನವನರಿದು ಅಗಿವುದು,
ವಿಷವಿದ್ದ ಬಾಯ ಮುಚ್ಚಿಹಿಡಿವುದು,
ನೆರೆ ವಸ್ತುವಿದದ್ದ ಠಾವನರಿದು ಪೂಜಿಸುವುದು.
ಇಂತೀ ಬಯಕೆಗೆ, ಬಯಕೆ ಸಮೂಹಕ್ಕೆ ತ್ರಿವಿಧಮಲ.
ಖ್ಯಾತಿಲಾಭಕ್ಕೆ ಭೂತಹಿತ.
ಅರಿವುಳ್ಳವರಲ್ಲಿ ಎರವಿಲ್ಲದ ಕೂಟ.
ಇಂತಿವು ಜಗದಲ್ಲಿ ಅರಿದು ಮಾಡುವನ ಪರಿತೋಷ
ಗಾರುಡೇಶ್ವರಲಿಂಗದಲ್ಲಿ ಎರಡಳಿದವನ ಕೂಟ.