Categories
ವಚನಗಳು / Vachanagalu

ಉರಿಲಿಂಗದೇವನ ವಚನಗಳು

ಅಂಗದ ಮೇಲೆ ಲಿಂಗದೇವನಿದ್ದಂತೆ, ಇತರ ಸ್ಥಾವರಲಿಂಗಕ್ಕೆ ಹೋಗಿ ಹೋಗಿ,
ದೇವರ ಕಂಡೆನೆಂದು ನಲಿದು ಉಲಿವುತಿಪ್ಪ ಸಲೆ ಮನುಜರುಗಳಿಗೆ,
ಉಪದೇಶವ ಮಾಡುವ ಗುರುವಿಂಗೆ,
ಪುಣ್ಯದ ಬಟ್ಟೆಯ ಕೊಡ ಉರಿಲಿಂಗ ತಂದೆ./1
ಅಂತರಂಗದಲ್ಲಿ ಆವರಿಸಿ, ಬಹಿರಂಗದಲ್ಲಿ ತೋರುವೆ.
ಕಂಗಳ ಕೊನೆಯಲ್ಲಿ ಮೂರುತಿಯಾಗಿ, ಮನದ ಕೊನೆಯಲ್ಲಿ ತೋರುವೆ.
ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ
ಉರಿಲಿಂಗದೇವ ನೀನಯ್ಯಾ./2
ಅನಂತ ವೇದಶಾಸ್ತ್ರಾಗಮ ಪುರಾಣ ತರ್ಕ
ತಂತ್ರಗಳನು ಆತ್ಮ ಮಾಡಿದನಲ್ಲದೆ,
ಆತ್ಮನನವು ಮಾಡಿದುದಿಲ್ಲ.
ಎನ್ನ ಅಂತರಂಗದ ಅರಿವಿನ ಮೂರ್ತಿ ಉರಿಲಿಂಗದೇವರು
ಸಂಕಲ್ಪಿಸಿ ಆಗೆಂದಡಾದವು./3
ಅರಿದೊಡೆ ಶರಣ, ಮರೆದೊಡೆ ಮಾನವ.
ಪಾತಕನು, ಹೊಲೆಯನು, ನಾನೇತಕ್ಕೆ ಬಾತೇ ?
ಹೊತ್ತಿಂಗೊಂದೊಂದು ಪರಿಯ ಗೋಸುಂಬೆಯಂತೆ
ಈಶನ ಶರಣರ ಕಂಡುದಾಸೀನವ ಮಾಡುವ
ದಾಸೋಹವನರಿಯದ ದೂಷಕನು ನಾನಯ್ಯ.
ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ,
ಈಶ ನೀ ಸಲಹಯ್ಯಾ, ಉರಿಲಿಂಗತಂದೆ./4
ಅವರಾರ ಪರಿಯಲ್ಲ ಎಮ್ಮ ನಲ್ಲನು.
ವಿಶ್ವವೆಲ್ಲವು ಸತಿಯರು, ಸೋಜಿಗದ ಪುರುಷನು.
ಅವರವರ ಪರಿಯಲ್ಲೆ ಅವರವರ ನೆರೆವನು,
ಅವರವರಿಗವರಂತೆ ಸುಖಮಯನು ನೋಡಾ.
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ, ಕೆಳದಿ.
ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು,
ನಿನ್ನನಗಲನು, ನಿನ್ನಾಣೆ, ಉರಿಲಿಂಗದೇವ, ತನ್ನಾಣೆ ಕೆಳದಿ./5
ಅಷ್ಟವಿಧಾರ್ಚನೆ, ಷೋಡಶೋಪಚಾರ ಬಾಹ್ಯಕ್ರೀಯೆಂಬ
ಭಾವಭ್ರಮಿತರ ಮಾತ ಕೇಳಲಾಗದು.
ಧನವುಳ್ಳಾತನು ಅಷ್ಟಸಂಪದದೈಶ್ವರ್ಯವ ಭೋಗಿಸುವನಲ್ಲದೆ,
ಧನಹೀನ ದಾರಿದ್ರನೇನ ಭೋಗಿಸುವನೋ ?
ಲಿಂಗವೂ ಪ್ರಾಣವೂ ಅವಿರಳಾತ್ಮಕವಾಗಿ ಉತ್ಕೃಷ್ಟವಾಗಿದ್ದಲ್ಲಿ,
ಆ ಅಮಳಸೋಂಕು ತುಳುಂಕಿ,
ಬಾಹ್ಯಕ್ರೀಯಾಗಿ ಕರಸ್ಥಲಕ್ಕೆ ಬಂದುದೈಸಲ್ಲದೆ,
ಅದು ಅಂತರಂಗವಲ್ಲ, ಬಹಿರಂಗವಲ್ಲ
ನಮ್ಮ ಉರಿಲಿಂಗದೇವರು./6
ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ.
ಏಕೆ ಬಂದಿರೋ ಎಲೆ ಅಣ್ಣಗಳಿರಾ.
ನಿಮಗಪ್ಪುವುದಕ್ಕೆಡೆಯಿಲ್ಲ.
ನಿಮಗಪ್ಪುವದಕ್ಕೆಡ್ಡಬಂದಹನೆಮ್ಮ ನಲ್ಲ.
ಏಕೆ ಬಂದಿರೋ,
ಉರಿಲಿಂಗದೇವನನಪ್ಪಿ ಸೊಪ್ಪಾದ ಹಿಪ್ಪೆಗೆ ?/7
ಆದ ಗತಿಯನ್ನನುಭವಿಸುವುದಲ್ಲದೆ
ಹೇಳಬಾರದಾರಿಗೆಯೂ, ನೋಡಯ್ಯಾ.
ಕಾಣಬಾರದಾಂತಗೆ ಸವಿದೋರಬಾರದ ರೂಪು ನೋಡಯ್ಯಾ,
ಹೇಳಬಾರದ ಶಬುದ.
ಉರಿಲಿಂಗದೇವಾ, ನಿಮ್ಮನರಿದ ಸುಖವಿಕ್ಕಬಾರದು ತಕ್ಕವರಿಗಲ್ಲದೆ./8
ಆದಿ-ಅನಾದಿ, ಸಾಕಾರ-ನಿರಾಕಾರ ಎಂಬುವೇನುವಿಲ್ಲದ
ವಾಗತೀತವಾದ ನಿರ್ನಾಮವಸ್ತು ತಾನೆ !
ತನ್ನ ಲೀಲಾವಿಲಾಸದಿಂದಾದ ಪ್ರಭಾವದ ಸ್ಫುರಣವೆ ಮಹಾಪ್ರಕಾಶ.
ಆ ಮಹಾಪ್ರಕಾಶದ ಆವರಣವೆ ನಿಜಾತ್ಮನು.
ಆ ನಿಜಾತ್ಮನೆ ತನ್ನಿಂದಾದ ಸಮಸ್ತವಸ್ತುಗಳೆನಿಪ ತತ್ವಂಗಳಿಗೆ
ತಾನೇ ಕಾರಣವಾದ.
ಇದನರಿಯದೆ ಆತ್ಮಂಗೆ ಅನಾದಿಮಲತನುತ್ವ
ಪಾಶಬಂಧ ಉಂಟೆಂಬರು, ಅದು ಹುಸಿ.
ಆ ಆತ್ಮನು ತನ್ನಿಂದ ಪ್ರವರ್ತಿಸುವ ಮಹದಾದಿ ತತ್ತ್ವಂಗಳಿಗೆ
ತಾನೇ ಮೂಲಾಧಾರವಾದ ಕಾರಣ
ಮೂಲಪ್ರಕೃತಿಸ್ವರೂಪವೆನಿಸಿಕೊಂಬನು.
ಆ ನಿಜಾತ್ಮನಲ್ಲಿ ಅನಾದಿಮಲಪಾಶಂಗಳು ಸತ್ಯವಲ್ಲ.
ಇದು ಕಾರಣ ಆ ಆತ್ಮನು ಮೇಲಣ ಘನಲಿಂಗವಾದುದು ತಾನೆ,
ಲಯಿಸುವುದಕ್ಕೂ ಗಮಿಸುವುದಕ್ಕೂ ತಾನೆ.
ತಾನಾ ಕಾರಣನಾದನಾಗಿ ಪ್ರತಿಪದಾರ್ಥವಿಲ್ಲ.
ಅದೆಂತೆಂದಡೆ: ಪರಾತ್ಪರತರವಪ್ಪ ಪರಬ್ರಹ್ಮಕ್ಕೆ ಬೆಚ್ಚಿ ಬೇರಾಗದ ಕಾರಣ.
ಅದು ದೀಪ ದೀಪದ ಪ್ರಭೆಯಂತೆ,
ರತ್ನ ರತ್ನದ ಕಾಂತಿಯಂತೆ ಆತ್ಮಲಿಂಗೈಕ್ಯ.
ಇಂತೀ ಸಹಜಸೃಷ್ಟಿಯನರಿಯದೆ “ಅನಾದಿ ಆತ್ಮಂಗೆ ಪಾಶಂಗಳುಂಟು,
ಆತ್ಮ ಪಶು ಪಾಶ ಮಾಯೆ ಪತಿ ಶಿವ“ ಎಂಬರು ! ಇಂತೀ ತೆರದಲ್ಲಿ
ತ್ರಿಪಾದರ್ಥಗಳ ಹೇಳುವರು ! ಅದು ಹುಸಿ.
ಸೃಷ್ಟಿ ಮೊದಲು ಐಕ್ಯ ಕಡೆಯಾಗಿ ಅಭೇದವಲ್ಲದೆ ಭೇದವಿಲ್ಲ.
ಇನ್ನು ಅದ್ವೈತಮತದಲ್ಲಿ ವೇದಾಂತಿಯೆಂಬಾತ ನಿಜ ಸೃಷ್ಟಿಯರಿಯ.
ಅದೆಂತೆಂದಡೆ: `ಶಕ್ತ್ಯಧೀನಂ ಪ್ರಪಂಚಶ್ಚ’ ಎಂಬ ಶ್ರುತಿಯನರಿದು !
ಆ ಶಕ್ತಿಯ ಆಧಾರದಲ್ಲಿ ತೋರುವ ತತ್ತ್ವಂಗಳ ಪ್ರವರ್ತನೆ ವಿಶ್ವವೆನಿಸುವದು.
ಅದನರಿಯದೆ ವೇದಾಂತಿ ದಗ್ದೈಶ್ಯವೆಂಬ,
ದೃಕ್ಕೆ ವಸ್ತುವೆನಿಪಾತ್ಮನೆಂಬ, ದೃಶ್ಯವೆ ಮಾಯೆಯೆಂಬ ! ಅದು ಹುಸಿ;
ಆ ಶಕ್ತಿಯ ಆಧಾರದಲ್ಲಿ ತೋರುವ ವಿಶ್ವಪ್ರಪಂಚವು.
ಆ ಪ್ರಪಂಚದ ಮಧ್ಯದಲ್ಲಿ ತೋರುವ ಶಕ್ತಿಯ ಕ್ರಮವೆಂತೆಂದಡೆ:
ಜಲಮಧ್ಯದಲ್ಲಿ ತೋರುವ ಇನಬಿಂಬದಂತೆ ಬಿಂಬಿಸುವುದಾಗಿ !
ಆ ಬಿಂಬವೇ ಜೀವನು, ಆ ಜೀವನೆ ದೃಕ್ಕು,
ಅವನ ಕೈಯಲ್ಲಿ ಕಾಣಿಸಿಕೊಂಬ ವಿಷಯವೆ ಮಾಯೆ.
ಈ ಎರಡರ ವ್ಯವಹಾರ ಆ ಶಕ್ತಿಗೆ ಇಲ್ಲವಾಗಿ,
ದೃಕ್ಕುದೃಶ್ಯವೆಂಬ ವೇದಾಂತಿಯ ಮತವಂತಿರಲಿ.
ಇಂತೀ ದ್ವೈತಾದ್ವೈತದಲ್ಲಿ ಪ್ರವರ್ತಿಸರು ಶಿವಶರಣರು.
ಈ ದ್ವೈತಾದ್ವೈತದಲ್ಲಿ ಪ್ರವರ್ತಿಸುವ ಪ್ರವರ್ತನಕ್ಕೆ ತಾವೆ ಕಾರಣವೆನಿಪ್ಪರು.
ಇಂತೀ ಕಾರಣವೆನಿಸಿರ್ಪ ಶರಣರ ನಿಲವೆಂತುಂಟೆಂದಡೆ:
ಸಕಲವಿಶ್ವವೆ ಸತಿಯರೆನಿಸಿ ತಾನು ತನ್ನ ನಿಜಕ್ಕೆ ಅಂಗನಾಗಿ,
ಆ ನಿಜವೆ ಆತ್ಮಂಗೆ ಅಂಗವಾಗಿ ನಿಂದ ನಿಲವೆ ಪರವಸ್ತುವಿನ ಪ್ರಭಾವ.
ಆ ಪ್ರಭಾವಾದ ಶರಣನ ನಿಲುವೆ
ಉರಿಲಿಂಗದೇವನೆಂಬ ಗಂಡನಾಗಿ ಬಂಧ ತೆಗೆದ./9
ಇಂಬಿನ ಚುಂಬನ ಅಮೃತಾಹಾರ, ಆಲಿಂಗನವೆ ಆಭರಣ,
ಸೋಂಕೆ ವಸ್ತ್ರ, ನೋಟವೆ ಕೂಟ,
ಒಡನಾಟವೆ ಅಷ್ಟಭೋಗವೆನಗೆ.
ಉರಿಲಿಂಗದೇವನ ಕೂಟವೆ ಪರಾಪರ ವಾಙ್ಮನಾತೀತ ಪರಮಸುಖ./10
ಇನಿಯನೆನಗೆ ನೀನು, ಇನ್ನೇನನೊಂದ ನಾನರಿಯೆ.
ನೀ ನುಡಿಸಲು ನುಡಿವೆನು, ನಡೆಸಲು ನಡೆವೆನು,
ನೀನಲ್ಲದರಿಯೆನು, ನಲ್ಲ ನೀ ಕೇಳಾ.
ನೀನೇ ಗತಿ, ನೀನೇ ಮತಿ. ನಿನ್ನಾಣೆಯಯ್ಯಾ, ಉರಿಲಿಂಗದೇವಾ./11
ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ.
ಅರಿದರಿದು, ಬಿಲುಗಾರನಹೆಯೊ !
ಎಸೆದಿಬ್ಬರು ಒಂ[ದಾ]ಹರು ಗಡ.
ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ !
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು.
ನಾವಿಬ್ಬರೊಂದಾಗೆ ಬಿಲ್ಲಾಳಹೆ, ಎಸೆಯೆಲೋ ಕಾಮಾ./12
ಈ ನಲ್ಲನ ಬೇಟದ ಕೂಟದ ಪರಿಯನು
ಏನೆಂದು ಹೇಳುವೆ ? ವಿಪರೀತ ಕೆಳದಿ.
ಪುರುಷ ಶಕ್ತಿಯಾಗಿ, ಶಕ್ತಿ ಪುರುಷನಾಗಿ
ನೆರೆದು ಸುಖಿಸುವನು ಕೇಳಾ ಕೆಳದಿ.
ಅತಿ ಕಾಮಿ ವಿಪರೀತನು ಉರಿಲಿಂಗದೇವನು,
ನೆರೆಯಲು ನೆರೆವುದು ಮನದಿಚ್ಚೆ ಕೆಳದಿ./13
ಉಂಡೆಹೆನೆಂಬಲ್ಲಿ ಅನ್ನವನಿಕ್ಕದೆ ಸತ್ತ ಮತ್ತೆ,
ಅಕ್ಕಿಯ ಹೇರ ಮಸ್ತಕದಲ್ಲಿರಿಸಿ,
ಘಟ್ಟಿ ತುಪ್ಪ ತೋಯ ಉಣ್ಣೆಂದು ಬಿಕ್ಕಿ ಬಿಕ್ಕಿ ಅಳುವನಂತೆ,
ಇವರಚ್ಚುಗದ ಭಕ್ತಿಯ ಕಂಡು ಮೆಚ್ಚನಯ್ಯಾ, ಎನ್ನ ಉರಿಲಿಂಗತಂದೆ./14
ಉರಿಲಿಂಗದೇವ ನಿನ್ನನಗಲದ ಪರಿಯನು ಹೇಳಿಹೆನು,
ಕೇಳಾ ನಿನಗೆ ಸಖಿಯೆ: ಉರಿಲಿಂಗದೇವ ಎಂಬುದೆ ಮಂತ್ರ ,
ಉರಿಲಿಂಗದೇವ ಎಂಬುದೆ ಯಂತ್ರ ,
ಉರಿಲಿಂಗದೇವ ಎಂಬುದೆ ತಂತ್ರ,
ಉರಿಲಿಂಗದೇವ ಎಂಬುದೆ ವಶ್ಯ.
ಉರಿಲಿಂಗದೇವಾ, ಉರಿಲಿಂಗದೇವಾ, ಎನ್ನುತ್ತಿದ್ದೇನೆ./15
ಎನ್ನ ನಲ್ಲನೆನ್ನನೊಲ್ಲದಿರ್ದಡೆ ನಾ ಎಲ್ಲಿ ಅರಸುವೆನವ್ವಾ ?
ಗಂಗೆಯ ನೋನೆನು, ಗೌರಿಯ ನೋನೆನು.
ಎಲ್ಲಿ ಅರಸುವೆನವ್ವಾ,
ಎನ್ನ ಅಂತರಂಗದ ಆತ್ಮಜ್ಯೋತಿ ಉರಿಲಿಂಗದೇವಾ ಎಂದು
ಇಲ್ಲಿಯೇ ಅರಸುವೆನವ್ವಾ./16
ಎಮ್ಮ ನಲ್ಲನ ಕೂಡಿದ ಕೂಟವ ಇದಿರಿಗೆ ಹೇಳಬಾರದವ್ವಾ.
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ.
ಉರಿಲಿಂಗದೇವ ಬಂದು ನಿರಿಯ ಸೆರಗ ಸಡಿಲಿಸಲೊಡನೆ
ನಾನೊ ತಾನೊ ಏನೆಂದರಿಯೆನು./17
ಎಮ್ಮ ನಲ್ಲನವ್ವಾ, ನಲ್ಲರಿಗೆ ನಲ್ಲನು.
ವಂಚನೆಗೆ ನೆರೆಯನು, ನಿರ್ವಂಚನೆಗೆ ನೆರೆವನು,
ಉರಿಲಿಂಗದೇವನು./18
ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ ಮರೆಯಲಿಪ್ಪನ ನೆರೆಯಲೆಂತಹುದು ?
ಹೆಣ್ಣಿನ ಮರೆಯ ಹೊಗುವ ನಲ್ಲಗೆ ಮತ್ತೆ ನಾಚಿಕೆಯಿಲ್ಲ ಕೇಳಾ, ಕೆಳದಿ.
ಲೋಗರ ಪತಿಯ ಮರಸಿಕೊಂಡಿಪ್ಪ
ಚಂಡಿಯರಿಗೆ ಮತ್ತೆ ನಾಚಿಕೆಯಿಲ್ಲ ಕೇಳಾ.
ಅವದಿರ ಝಂಕಿಸಿ ತೊಲಗಿಸಿ
ಹಿಡಿದಡೆ ಬಿಡದಿರೆಂದೂ ಉರಿಲಿಂಗದೇವನ./19
ಒಬ್ಬನೆ ಗರುವನಿವ, ಒಬ್ಬನೆ ಚೆಲುವನಿವ,
ಒಬ್ಬನೆ ಧನಪತಿ ಕೇಳಾ ಕೆಳದಿ,
ಇವಗೆ ಹಿರಿಯರಿಲ್ಲ, ಇವಗೆ ಒಡೆಯರಿಲ್ಲ.
ಇಂತಪ್ಪ ನಲ್ಲನು ಲೇಸು ಕಾಣೆಲಗೆ.
ನಾವೆಲ್ಲಾ ಒಂದಾಗಿ ಹಿಡಿದು ಬಿಡದಿರೆ
ಬಿಡಿಸುವರಿನ್ನಿಲ್ಲ ಉರಿಲಿಂಗದೇವನ./20
ಕಾಮನ ಕೊಂದು ಪಟ್ಟಕ್ಕೆ ನಿಂದ ಕಾಮರಾಜರಾಜನು, ರಾಜಾಧಿರಾಜನು.
ಗಂಡರನೆಲ್ಲರ ಹೆಂಡಿರ ಮಾಡಿ ನೆರೆವ ವೈಶಿಕ, ಕಾಮಿನೀ ಕೇಳಾ,
ಇಂತಪ್ಪ ಕಾಮಿ ಎನಗತಿ ಕಾಮಿಸಿ ನೆರೆದು
ಕಾಮಸಿದ್ಧಿಯನೀವನು ಉರಿಲಿಂಗದೇವನು./21
ಕಾಮಾ, ನಿನ್ನ ಬಿಲ್ಲಾಳುತನುವನು, ಎಸುಗೆಯನು ನೋಡುವೆನು.
ಕೇಳೆಲವೊ, ಕುಸುಮಶರವನು ತೊಡು ನೀನು,
ಏಸು, ನಿನ್ನೆಸುಗೆಯ ನೋಡುವೆನು ಕೇಳಾ.
ಎನಗೂ ಉರಿಲಿಂಗದೇವಗೂ ತೊಟ್ಟೆಸು,
ಎಸಲು ನೀ ಬಿಲ್ಲಾಳಹೆಯಾ ಕಾಮಾ./22
ಕಾಮಿನಿ ಕಾಮನಿಗೆ ಎರಡು ಗುರಿಯೆಂದು ಸರಳೆಸುಗೆಯ ಮಾಡುವೆ.
ಕಾಮನಲ್ಲೊ [ಅ]ಲ್ಲೊ ಬಿಲ್ಲಾಳೆ !
ಎಸಲು ಎರಡೊಂದಪ್ಪುದು ಗಡ, ಕಾಮಾ
ಎನಗೆ ಉರಿಲಿಂಗದೇವಗೆ ತೊಟ್ಟೆಸು,
ಎರಡೊಂದಾದಡೆ ಬಿಲ್ಲಾಳಹೆ, ಎಸೆಯೊ ನೀನು./23
ಕಾಯಕ್ಕೆ ಕಾಯವಾಗಿ ಪ್ರಾಣಕ್ಕೆ ಪ್ರಾಣವಾಗಿ
ಮನಕ್ಕೆ ಮನವಾಗಿ ನೆರೆವ ನೋಡೆಲಗವ್ವಾ.
ನಲ್ಲನ ಬೇಟದ ಕೂಟದ ಸುಖವನೇನೆಂದು ಬಣ್ಣಿಪೆ, ಮಹಾಸುಖವ !
ನಲ್ಲನ ನೋಟದ ಕೂಟದನುವನೇನೆಂದುಪಮಿಸುವೆ, ಮಹಾಘನವ !
ತಾನು ತಾನೆಂದು ವಿವರಿಸಬಾರದಂತೆ
ನೆರೆದನು ನೋಡಾ, ಉರಿಲಿಂಗದೇವನು./24
ಕಾಯಕ್ಕೆ ಕಾಹ ಕೊಡುವರಲ್ಲದೆ
ಮನಕ್ಕೆ ಕಾಹ ಕೊಡುವರೆ ಕೆಳದಿ ?
ಇಂತಪ್ಪ ನಲ್ಲನನೆಲ್ಲಿಯೂ ಕಾಣೆ,
ಇಂತಪ್ಪ ಪುರುಷನನೆಲ್ಲಿಯೂ ಕಾಣೆ,
ಇಂತಪ್ಪ ಚೋದ್ಯವನೆಲ್ಲಿಯೂ ಕಾಣೆ,
ಸದ್ಗುಣದ ಕಾಹನು ಮನಕ್ಕೆ ಕೊಟ್ಟನು,
ಉರಿಲಿಂಗದೇವನು, ಅತಿಚೋದ್ಯವೆನಗೆ./25
ಕೂರ್ತಾಗ ಭಕ್ತ, ಮುನಿದಾಗ ಮಾನವ,
ಪಾತಕ ನಾನೇತಕ್ಕೆ ಬಾತೆ ?
ಗೋಸುಂಬೆಯಂತೆ ಎನ್ನ ಮನ ಗಳಿಗೆಗೊಂದು ಪರಿ !
ಈಶ್ವರಾ, ನಿಮ್ಮ ಭಕ್ತರ ಉದಾಸೀನವ ಮಾಡಿ
ದಾಸೋಹವಿಲ್ಲದ ಅತಿದೂಷಕ ದ್ರೋಹಿ, ನಾನಯ್ಯಾ !
ಬೇಸತ್ತೆನೀ ಮನಕ್ಕೆ, ಏಸು ಬುದ್ಧಿಯ ಹೇಳಿದಡೂ ಕೇಳುದು,
ಈಶಾ, ಸಂತೈಸಯ್ಯಾ, ಉರಿಲಿಂಗದೇವಾ./26
ಗಾಡಿಗ ನಲ್ಲನು ಕಾಡಿಹನೆಲಗೆ.
ಕೂಡಿಹನಗಲಿಹ ಕಾಡಿಹನೆನ್ನ ಕೆಳದಿ, ನೀನಿದ ಮಾಣಿಸು.
ಅವನನಗಲದ ವಿರಹಿಯ ಕೂಟದ ಸುಖವನು
ಉರಿಲಿಂಗದೇವನು ಬಲ್ಲನು ಕೆಳದಿ. /27
ಠಕ್ಕನ ಠಕ್ಕಿಪ ತೆರನನು
ಚದುರೆ ಚದುರಿಸದೆ ನೀನುಸುರಾ ಸತ್ಯವ,
ಜಪಿಸಲು ಸಿಕ್ಕುವನಲ್ಲನು, ಸತ್ಯ ಸತ್ಯವು ಕೇಳಾ ಕೆಳದಿ.
ಅವನುಂಬಲ್ಲಿ ಉಡುವಲ್ಲಿ ನೇಹವ ಬೆರಸಲು ಸಿಕ್ಕುವ,
ಬಿಡದಿರು ಉರಿಲಿಂಗದೇವನ./28
ತೀರ್ಥಯಾತ್ರೆಯಲ್ಲಿ ಕೂಡೆಹೆನೆಂದು
ಏಗೈದು ಹೋಹ ಪರಿಯ ನೋಡಾ, ಅಯ್ಯಾ.
ಮನೆಗೆ ಬಂದ ಜಂಗಮಕ್ಕೆ ಇಲ್ಲಾ ಎಂದು,
ಜಗಜಾತ್ರೆಯಲ್ಲಿ ಅನ್ನವನಿಕ್ಕಿದಡೆ,
ಪುಣ್ಯವೆಂಬ ಅಣ್ಣಗಳಿಗೇಕೆ, ಸದಾಚಾರ ಉರಿಲಿಂಗತಂದೆ ?/29
ನಲ್ಲ ಮುಳಿದು ಹೋಗುತ್ತ
ಎನ್ನ ಮನವ ನಂಬದೆ ಮೈಗಾಹಾಗಿ ಇರಿಸಿದನು.
ಉರಿಲಿಂಗದೇವನು ತಾ ಬಂದು ನೆರೆವನ್ನಬರ./30
ನಲ್ಲನ ಕೂಡಿದ ಸುಖದ ಸುಗ್ಗಿಯ ನಾನೇನೆಂಬೆ ಕೇಳಾ ಕೆಳದಿ.
ಸುಖದ ಸವಿ ಸ್ರವಿಸಿ ಹರಿಯಿತ್ತು.
ಹೇಳಲು ನಾಚಿಕೆ, ಕೇಳಲೂ ನಾಚಿಕೆ, ಕೇಳಾ ಕೆಳದಿ.
ಸುಖರಸ ಮಡುಗಟ್ಟಿದಲ್ಲಿ,
ಉರಿಲಿಂಗದೇವನ ಕೂಡಿದ ಸುಖಸಾಗರದಲ್ಲಿ ಕ್ರೀಡಿಸುತಿರ್ದೆ ಕೆಳದಿ./31
ನಲ್ಲನ ಕೂಡುವ ಭರದಲ್ಲಿ ಎನ್ನುವನಿದಿರುವನೇನೆಂದರಿಯೆನು.
ನಲ್ಲನ ಕೂಡುವಾಗಳೂ ಎನ್ನುವ ನಲ್ಲನನೇನೆಂದರಿಯೆನು.
ಉರಿಲಿಂಗದೇವನ ಕೂಡಿದ ಬಳಿಕ
ನಾನೊ ತಾನೊ ಏನೆಂದರಿಯೆನು./32
ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ ತಪ್ಪೆನು ಹೇಳಾ ಕೆಳದಿ ?
ನಲ್ಲನ ಬೇಡಲು ನಾಚಿಕೆ ಎನಗೆ, ಮತ್ತೆಲ್ಲಿಯು ನಿಲ್ಲೆನು.
ಕೂಡುವ [ಶಕ್ತಿ]ಯ ತಾನರಿದಿಹನು ಕೇಳಾ ಕೆಳದಿ.
ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು,
ಉರಿಲಿಂಗದೇವನ ಕೂಡುವೆನು./33
ನಲ್ಲನ ಕೂಡುವನ್ನಕ್ಕ ಸುಖದ ಸುಗ್ಗಿಯನೇನೆಂದರಿಯೆ, ಕೇಳಾ ಕೆಳದಿ.
ಸುಖದ ಸವಿಗೆ ಸ್ರವಿಸಿ ಕೂಡಿದೆ ನೋಡವ್ವ.
ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ
ಕೂಡುವೆನುರಿಲಿಂಗದೇವನ./34
ನಲ್ಲನ ಕೂಡೆಹೆನೆಂದು ನೆನೆವನ್ನಬರ
ತವಕದಿಂದ ಮೇಲುವಾಯ್ದೆ ನೋಡವ್ವಾ.
ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಕಾಯದೊಳಗೆ ಕಾಯವಾಗಿ,
ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ
ಕೂಡುವೆ ಉರಿಲಿಂಗದೇವನ./35
ನಲ್ಲನ ರೂಪೆನ್ನ ನೇತ್ರವ ತುಂಬಿತ್ತು,
ನಲ್ಲನ ನುಡಿಯೆನ್ನ ಶ್ರೋತ್ರವ ತುಂಬಿತ್ತು,
ನಲ್ಲನ ಸುಗಂಧವೆನ್ನ ಘ್ರಾಣವ ತುಂಬಿತ್ತು,
ನಲ್ಲನ ಚುಂಬನವೆನ್ನ ಜಿಹ್ವೆಯ ತುಂಬಿತ್ತು,
ನಲ್ಲನ ಆಲಿಂಗವೆನ್ನ ಅಂತರಂಗ ಬಹಿರಂಗದಲ್ಲಿ,
ನಲ್ಲನ ಪ್ರೇಮವೆನ್ನ ಮನವ ತುಂಬಿತ್ತು,
ಕೂಡಿ ಸುಖಿಯಾದೆ ಉರಿಲಿಂಗದೇವನ./36
ನಲ್ಲನೊಲ್ಲನೆಂದು ಮುನಿದು ನಾನಡಗಲು
ಅಡಗುವ ಎಡೆಯೆಲ್ಲಾ ತಾನೆ, ನೋಡೆಲಗವ್ವಾ.
ನಲ್ಲ ನೀನಿಲ್ಲದೆಡೆಯಿಲ್ಲ.
ಅಡಗಲಿಕಿಂಬಿಲ್ಲಾಗಿ ಮುನಿದು ನಾನೇಗುವೆನು ?
ಶರಣುಗತಿವೋಗುವೆನು ಉರಿಲಿಂಗದೇವನ./37
ನೀನೇ ಗತಿ ಎನಗಿನ್ನೊಂದರಿಯೆ,
ನೀ ನಡೆಸಲು ನಡೆವೆ, ನೀ ನುಡಿಸಲು ನುಡಿವೆ.
ನೀನಿಲ್ಲದರಿಯೆನು ಕೇಳಾ,
ನೀನೆ ಗತಿ ನೀನೆ ಮತಿ ಎನಗಯ್ಯಾ, ನಿಮ್ಮಾಣೆ ಉರಿಲಿಂಗದೇವಾ./38
ನೆನಹಿನ ನಲ್ಲನು ಮನೆಗೆ ಬಂದಡೆ
ನೆನೆವುದಿನ್ನಾರನವ್ವಾ ?
ನೆರೆವ ಕ್ರೀಯಲ್ಲಿ ನೆರೆದು, ಸುಖಿಸುವುದಲ್ಲದೆ
ನೆನೆವುದಿನ್ನಾರನವ್ವಾ ?
ನೆನಹಿನ ನಲ್ಲ ಉರಿಲಿಂಗದೇವನ ಕಂಡ ಬಳಿಕ
ನೆನವುದಿನ್ನಾರ ಹೇಳವ್ವಾ ?/39
ಮಂಗಳಮಯಲಿಂಗವ ಮನ ಹಿಂಗದೆ ಸುಸಂಗಿಯಾಗಿ,
ಮಹಾಲಿಂಗದ ಪ್ರಸಂಗಿಯಾಗಿ ಇಪ್ಪಾತನ ಅಂಗವೆನಗೆ ಮಂಗಳತರಂಗ.
ಆತನ ಪ್ರಸಂಗದಲ್ಲಿರಿಸಾ, ಉರಿಲಿಂಗದೇವಾ !/40
ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ,
ಕೊರಳಲ್ಲಿ ಕಟ್ಟಿಕೊಳ್ಳಲೇಕೆ ?
ನೋಡುವ ಕಣ್ಣು ಮುಚ್ಚಿದ ಮತ್ತೆ,
ತನಗೆ ಎಡೆಯಾಟವುಂಟೆ ?
ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ,
ಚಿತ್ತದಲ್ಲಿ ಹಿಂಗದಿರಬೇಕು.
ಉರಿಲಿಂಗತಂದೆಯ ಸಿರಿಯ ಭಾಷೆ./41
ಮಾನಸದಲ್ಲಿಪ್ಪನು, ಬುದ್ಧಿಯಲ್ಲಿಗೆ ಹೋಹನು.
ಚಿತ್ತದಲ್ಲಿ ನೆಲೆ ಎಮ್ಮ ನಲ್ಲಗೆ, ಕೇಳವ್ವಾ, ಕೆಳದಿ.
ಅಹಂಕಾರ ಕೂಡಿ ಅಹಂಕಾರದ ನಲ್ಲನ ಪರಿಕರ
ವಿಪರೀತ ಅಹಂಕಾರ. ಅಹಂಕಾರರೀ ಮತ್ತೆ ಯಾರಲ್ಲಿ ಕೂಡಿ ಸುಖಿಸುವೆ ?
ಇವರೆಲ್ಲರ ಮುಂದೆ ತನ್ನ ಹಿಡಿದು ನೆರೆದಡೆ
ಅವರೆನ್ನನೇಗೆಯ್ವರು ಉರಿಲಿಂಗದೇವಾ./42
ಲಿಂಗ ಕರಸ್ಥಲಕ್ಕೆ ಬಂದ ಮತ್ತೆ ಕಂಗಳು ತುಂಬಿವರಿಯದಿರ್ದಡೆ,
ಆ ಲಿಂಗಪೂಜೆಯಾಕೆ ?
ಲಿಂಗ ಜಿಹ್ವೆಯಲ್ಲಿ ನೆನೆವಾಗ ಅಂಗವ ಮರೆಯದಿರ್ದಡೆ
ಆ ಲಿಂಗದ ನೆನಹದೇಕೆ ?
ಲಿಂಗವಾರ್ತೆಯ ಕಿವಿತುಂಬ ಕೇಳಿ
ಸರ್ವಾಂಗ ಝೊಂಪಿಸಿ ಮನಮಗ್ನವಾಗಿ ಇರದಿರ್ದಡೆ,
ಉರಿಲಿಂಗತಂದೆಯ ಸಿರಿಯ ನೆನೆಯಲೇಕೆ ? /43
ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಗರು, ನೋಡಯ್ಯ.
ಪುಣ್ಯದಂತೆ ಬಪ್ಪರು,
ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ
ಉಪಮಿಸಬಾರದು./44
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಚೆಲುವನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಗುರುವನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಹರಿಯನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಪುರುಷನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ದೇವನು./45
ಶ್ರುತಿಭ್ರಾಂತು ನಿರಸನ:ಶಿವಾಗಮಪ್ರತಿಷ್ಠೆ,
ಕುಲಾಭಿಮಾನ ನಿರಸನ:ಶಿವಕುಲಪ್ರತಿಷ್ಠೆ,
ಅನ್ಯದೈವನಿರಸನ:ಏಕೋದೇವಪ್ರತಿಷ್ಠೆ,
ಸ್ಥಾವರನಿರಸನ:ಏಕಲಿಂಗನಿಷ್ಠಾಪ್ರತಿ[ಷ್ಠೆ].
ಪರಮತತಿರಸ್ಕಾರ ಸ್ವಮತಸ್ಥಾಪನದಿಂ
ಮಾಹೇಶ್ವರನ ನಿಜಸ್ಥಲ.
ಅನಂತ ವೇದಶಾಸ್ತ್ರಪುರಾಣಾಗಮತರ್ಕಂಗಳ
ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ.
ಎನ್ನಂತರಂಗದ ಅರಿವಿನ ಮೂರ್ತಿಯಾಗಿ
ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು./46
ಸಕಲಶ್ರುತಿಗಳ ಮುಂದಿರ್ದವರ
ಸವಿಮಾತಿನ ವಶಕ್ಕೆ ಸಿಕ್ಕದೆ
ಅತೀತವಾದ ವಸ್ತುವ ಬೇಡಿಕೊಳ್ಳಿರೆ.
ಸಕಲಾತ್ಮರ ಮುಂದಿರ್ದವರ ತರ್ಕಕ್ಕೆ ಉರಿಲಿಂಗವಾಗಿ ಸಿಕ್ಕದೆ
ಅತೀತವಾದ ವಸ್ತುವ ಬೇಡಿಕೊಳ್ಳಿರೆ.
ಇಂತು ಸಕಲಾತ್ಮರ ಹೊಂದಿಯೂ ಹೊಂದದೆ
ನಿತ್ಯಸಿಂಹಾಸನದ ಮೇಲೆ ನಿತ್ಯನಾಗಿರ್ದ
ನಮ್ಮ ಉರಿಲಿಂಗದೇವನ ಬೇಡಿಕೊಳ್ಳಿರೆ./47
ಹಾಡುವೆ ನಲ್ಲನ, ಬೇಡುವೆ ನಲ್ಲನ,
ಕೂಡುವೆ ನಲ್ಲನ ನಿಚ್ಚನಿಚ್ಚ ನೋಡಾ.
ಅವನೆ ಸಖನೆನಗೆ, ಅವನೆ ಸುಖವೆನಗೆ, ಅವನೆ ಪ್ರಾಣವು ಕೇಳಲೆ ಕೆಳದಿ.
ಉರಿಲಿಂಗದೇವನೆನಗೆ ಸಂಜೀವನ ಕೆಳದಿ./48