Categories
ಶರಣರು / Sharanaru

ಉಪ್ಪರಗುಡಿಯ ಸೋಮಿದೇವಯ್ಯ

ಅಂಕಿತ: ಗಾರುಡೇಶ್ವರ ಲಿಂಗ

ಸರ್ಪನಲ್ಲಿ ವಿಷ ಇದ್ದಿತ್ತೆಂದಡೆ,
ಸರ್ವಾಂಗದಲ್ಲಿ ವಿಷ ತಪ್ಪದಿಪ್ಪುದೆ, ವಿಷವಿಪ್ಪಠಾವು ಒಂದಲ್ಲದೆ ?
ಪೃಥ್ವಿಯಲ್ಲಿ ನಿಕ್ಷೇಪವಿದ್ದಿತ್ತೆಂದಡೆ,
ಅಲ್ಲಲ್ಲಿ ಎಲ್ಲಾ ಠಾವಿನಲ್ಲಿ ಅಡಗಿಪ್ಪುದೆ ?
ಸಮಯ ಕುಲದಲ್ಲಿ ವಸ್ತು ಪರಿಪೂರ್ಣವೆಂದಡೆ,
ದರ್ಶನಪಾಷಂಡಿಗಳಲ್ಲಿ ವಸ್ತುಪರಿಪೂರ್ಣನಾಗಿಪ್ಪನೆ ?
ಇಪ್ಪ ಸತ್ಯಸನ್ಮುಕ್ತರಲ್ಲಿಯಲ್ಲದೆ, ಪರಮವಿರಕ್ತನಲ್ಲಿಯಲ್ಲದೆ.
ನೆಲದಲ್ಲಿದ್ದ ನಿಧಾನವನರಿದು ಅಗಿವುದು,
ವಿಷವಿದ್ದ ಬಾಯ ಮುಚ್ಚಿಹಿಡಿವುದು,
ನೆರೆ ವಸ್ತುವಿದ್ದ ಠಾವನರಿದು ಪೂಜಿಸುವುದು.
ಇಂತೀ ಬಯಕೆಗೆ, ಬಯಕೆ ಸಮೂಹಕ್ಕೆ ತ್ರಿವಿಧಮಲ.
ಖ್ಯಾತಿಲಾಭಕ್ಕೆ ಭೂತಹಿತ.
ಅರಿವುಳ್ಳವರಲ್ಲಿ ಎರವಿಲ್ಲದ ಕೂಟ.
ಇಂತಿವು ಜಗದಲ್ಲಿ ಅರಿದು ಮಾಡುವನ ಪರಿತೋಷ
ಗಾರುಡೇಶ್ವರಲಿಂಗದಲ್ಲಿ ಎರಡಳಿದವನ ಕೂಟ.

“ಗಾರುಡೇಶ್ವರ ಲಿಂಗ’ ಆಂಕಿತದಲ್ಲಿ ೧೧ ವಚನಗಳು ದೊರೆತಿವೆ. ಕಾಯ-ಅತ್ಮಗಳ ಸಂಬಂಧ, ಪ್ರಸಾದ ಮಹತ್ವ, ಕ್ರಿಯಾ-ಜ್ಞಾನ ಸಾಮರಸ್ಯ ಮೊದಲಾದ ವಿಷಯಗಳು ಅವುಗಳಲ್ಲಿ ಅಭಿವ್ಯಕ್ತವಾಗಿವೆ.

ಒಳ್ಳೆಯ ಅನುಭಾವಿ. ತನ್ನ ಆಲೋಚನೆಗಳನ್ನು ಪರಿಣಾಮಕಾರಿ ಉಪಮೆ, ದೃಷ್ಟಾಂತಗಳ ಮೂಲಕ ತಿಳಿಯಪಡಿಸುವನು. ದಾಸ – ದುಗ್ಗಳೆ, ಸಿರಿಯಾಳ – ಚೆಂಗಳೆ, ಸಿಂಧುಬಲ್ಲಾಳ, ಬಿಬ್ಬಿಬಾಚಯ್ಯ, ಮಹಾದೇವಿಯಕ್ಕ, ನೀಲಲೋಚನೆಯಮ್ಮ – ಇವರೇ ಮೊದಲಾದ 770 ಅಮರಗಣಂಗಳ ಬಯಲಪ್ರಸಾದವ ಕೊಂಡು ಬದುಕಿದೆ ಎಂದು ಒಂದು ವಚನದಲ್ಲಿ ಹೇಳಿರುವನು.

ದಾಸ-ದುಗ್ಗಳೆಯವರ ತವನಿಧಿಪ್ರಸಾದವ ಕೊಂಡೆನಯ್ಯಾ.
ಸಿರಿಯಾಳ-ಚೆಂಗಳೆಯವರ ಪ್ರಾಣಪ್ರಸಾದವ ಕೊಂಡೆನಯ್ಯಾ.
ಸಿಂಧು-ಬಲ್ಲಾಳವರ ಸಮತಾಪ್ರಸಾದವ ಕೊಂಡೆನಯ್ಯಾ.
ಬಿಬ್ಬಬಾಚಯ್ಯಗಳ ಸಮಯಪ್ರಸಾದವ ಕೊಂಡೆನಯ್ಯಾ.
ಮಹಾದೇವಿಯಕ್ಕಗಳ ಜ್ಞಾನಪ್ರಸಾದವ ಕೊಂಡೆನಯ್ಯಾ.
ನೀಲಲೋಚನೆಯಮ್ಮನವರ ನಿರ್ವಯಲಪ್ರಸಾದವ ಕೊಂಡೆನಯ್ಯಾ.
ಇಂತೀ ಏಳ್ನೂರೆಪ್ಪತ್ತಮರಗಣಂಗಳ
ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ಬದುಕಿದೆನು
ಕಾಣಾ ಗಾರುಡೇಶ್ವರಾ.