Categories
ವಚನಗಳು / Vachanagalu

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ವಚನಗಳು

730
ಅರ್ಥಪ್ರಾಣಾಬಿಮಾನದ ಮೇಲೆ ಬಂದಡೂ ಬರಲಿ,
ವ್ರತಹೀನನ ನೆರೆಯಲಾಗದುದ
ನೋಡಲು ನುಡಿಸಲು ಎಂತೂ ಆಗದು.
ಹರಹರಾ, ಪಾಪವಶದಿಂದ ನೋಡಿದಡೆ,
ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು. ಇಂತಲ್ಲದವರ ಉರಿಲಿಂಗಪೆದ್ದಿಗಳರಸ ನಕ್ಕು ಕಳೆವನವ್ವಾ.
731
ಅಯ್ಯಾ, ಸೂಳೆಗೆ ಹುಟ್ಟಿದ ಮಕ್ಕಳಿಗೆ,
ಕೊಟ್ಟವರೊಳು ಸಮ್ಮೇಳ, ಕೊಡದವರೊಳು ಕ್ರೋಧ.
ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.
ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
732
ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದಕೂಳು.
ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು.
ಅಳಿಯನಲ್ಲಿ ಕೊಂಬ ಪ್ರಸಾದ ಅಮೇಧ್ಯ.
ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ.
ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ.
ನಂಟರಲ್ಲಿ ಕೊಂಬ ಪ್ರಸಾದ ನರಮಾಂಸ.
ವಂದಿಸಿ ನಿಂದಿಸಿ ಕೊಂಬ ಪ್ರಸಾದವ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
733
ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು ? ಜಾತಿಗಳು ನೀವೇಕೆ ಕೀಳಾಗಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಬಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಬಿತವಾಯಿತು.
ಅದೆಂತೆಂದಡೆ ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
734
ಕೃತಯುಗ ಮೂವತ್ತೆರಡುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.
ತ್ರೇತಾಯುಗ ಹದಿನಾರುಲಕ್ಷವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕುವಾಗ
ಮಹಿಷನೆಂಬ ಕರಿ ಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು.
ದ್ವಾಪರಯುಗ ಎಂಟುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಅಶ್ವನೆಂಬ ಕುದುರೆಯ ಕೊಂದು ಹೋಮವನಿಕ್ಕಿದರು ಬ್ರಹ್ಮಣರು.
ಕಲಿಯುಗ ನಾಲ್ಕು ಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಜಾತಿಯಾಡಿನ ಮಗ ಹೋತನಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.
ಅಣೋರಣೀಯಾನ್ ಮಹತೋ ಮಹೀಯಾನ್ ಎಂದುದಾಗಿ,
ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ ಶರಣೆನ್ನದೆ
ಮುನ್ನ ಒಂಟಿಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ
ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ
ಹಂದಿಯ ಬಸುರಲ್ಲಿ ಬಪ್ಪುದು ತಪ್ಪದು ಕಾಣಾ.
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
735
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲದ
ಸತ್ಯಶುದ್ಧವಿಲ್ಲದುದು ಕಾಯಕವಲ್ಲದ
ಆಸೆಯೆಂಬುದು ಭವದ ಬೀಜದ
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
736
ಗುರುವಿದ್ದಂತೆ ಪರರಿಗೆ ನೀಡಬಹುದೆ ?
ಮನೆಯ ಆಕಳು ಉಪವಾಸ ಇರ?ಾಗಿ
ಪರ್ವತಕ್ಕೆ ಸೊಪ್ಪೆಯ ಹೊರಬಹುದೆ ?
ಎಂಬ ಪರವಾದಿ ನೀಕೇಳು.
ಗುರುವು ಶಿಷ್ಯಂಗೆ ಲಿಂಗವಕೊಟ್ಟು
ತಾನು ವ್ರತಗೇಡಿಯಾಗಿ ಹೋಗುವಲ್ಲಿ
ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದಕಾರಣ,
ಪರರ ಕಂಡರೆ ತನ್ನಂತೆ ಕಾಣ್ಬು ಎಂದು
ಗುರುವು ಹೇಳಿದ ವಾಕ್ಯವ ಮರೆದಿರಲ್ಲ ?
ಅಳಿಯ ಒಡೆಯರು, ಮಗಳು ಮುತ್ತೈದೆ,
ಮನೆದೇವರಿಗೆ ಶರಣೆಂದರೆ ಸಾಲದೆ ?
ಎಂಬ ಅನಾಚಾರಿಗಳ ಮಾತು ಅದಂತಿರಲಿ.
ಜಂಗಮದೇವರ ಪ್ರಾಣವೆಂಬ ಭಕ್ತರು
ಲಿಂಗಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ,
ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ.
ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ
ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ.
ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
737
ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೆ ?
ಹುಸಿದು ತಂದು ಮಾಡುವಾತ ಭಕ್ತನೆ ?
ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ ?
ನಿಂದಯಾ ಶಿವಭಕ್ತಾನಾಂ ಕೋಟಿ ಜನ್ಮನಿ ಸೂಕರಃ |
ಸಪ್ತಜನ್ಮನಿ ಭವೇತ್ ಕುಷ್ಠೀ ದಾಸೀಗರ್ಭೆಷು ಜಾಯತೇ ||’
ಎಂದುದಾಗಿ, ತನ್ನ ಪ್ರಾಣದ ಮೇಲೆ ಬಂದಡೂ ಬರಲಿ, ಇವರ ಬಿಡಬೇಕು.
ಬಿಡದಿರಲು ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
738
ನಿಂದಿಸಿ ಕೊಂಬ ಪ್ರಸಾದ ಕುನ್ನಿಯಪ್ರಸಾದ.
ಅವರು ತ್ರಿವಿಧಕ್ಕೆ ಇಚ್ಫಿಸರು.
ಅಲ್ಲಿ ನಿಂದಿಸಿ ಅವರ ಬಿಟ್ಟಲ್ಲಿ,
ಅವರ ಹಿಂದೆ ಕೊಂಡುದು ಅವರ ಮಲಮೂತ್ರದ
ಮುಂದೆ ಹುಳುಗೊಂಡವಯ್ಯಾ, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
739
ಭಾಗ್ಯವುಳ್ಳ ಪುರುಷಂಗೆ ಕಾಮಧೇನು
ಕಾಮಿಸಿದುದನೀವುದಯ್ಯಾ.
ನಿರ್ಭಾಗ್ಯ ಪುರುಂಷಗೆ ಕಾಮಧೇನು
ತುಡುಗುಣಿಯಾಗಿ ತೋರುವುದಯ್ಯಾ.
ಸತ್ಯಪುರುಷಂಗೆ ಕಲ್ಪವೃಕ್ಷ
ಕಲ್ಪಿಸಿದುದನೀವುದಯ್ಯಾ.
ಅಸತ್ಯಪುರುಷಂಗೆ ಕಲ್ಪವೃಕ್ಷ
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮಪುರುಷಂಗೆ ಚಿಂತಾಮಣಿ
ಚಿಂತಿಸಿದುದನೀವುದಯ್ಯಾ.
ಅಧರ್ಮಪುರುಷಂಗೆ ಚಿಂತಾಮಣಿ
ಗಾಜಿನಮಣಿಯಾಗಿ ತೋರುವುದಯ್ಯಾ.
ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ
ಜಂಗಮಲಿಂಗವಾಗಿ ತೋರುವುದಯ್ಯಾ.
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ
ಮಾನವನಾಗಿ ತೋರುವುದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
740
ವ್ರತವೆಂಬುದು ನಾಯಕರತ್ನ;
ವ್ರತವೆಂಬುದು ಸುಪ್ಪಾಣಿಯ ಮುತ್ತು
ವ್ರತವೆಂಬುದು ಜೀವನ ಕಳೆದ
ವ್ರತವೆಂಬುದು ಸುಯಿದಾನ.
ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.

741
ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ.
ಅವರು ಲಿಂಗವಿದ್ದೂ ಭವಿಗಳು.
ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.