Categories
ವಚನಗಳು / Vachanagalu

ಉಳಿಯುಮೇಶ್ವರ ಚಿಕ್ಕಣ್ಣ

1628
ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ
ಬಾ[ತೆ]ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ?
ಹುರುಳಿಲ್ಲದಿಹ ಸಂಸಾರ
ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ?
ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ?
ಎಡಹಿ ಕೊಡ ನೀರೊಳಗೆ ಒಡೆದಂತೆ
ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.
1629
ಆನು ಭಕ್ತ, ಆನು ಶರಣ, ಆನು ಲಿಂಗೈಕ್ಯನೆಂದೊಡೆ ಲಿಂಗವು ನಗದೆ?
ಪಂಚೇಂದ್ರಿಯಂಗಳು ನಗವೆ? ಅರಿಷಡ್ವರ್ಗಂಗಳು ನಗವೆ?
ಎನ್ನ ತನುವಿನೊಳಗಣ ಸತ್ವರಜತಮೋ ಗುಣಂಗಳು ನಗವೆ?
ಹೇಳಯ್ಯಾ ಉಳಿಯುಮೇಶ್ವರಾ?
1630
ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ,
ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ,
ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ,
ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ
ಬೆರೆಸಿದೆನಯ್ಯಾ ಉಳಿಯುಮೇಶ್ವರಾ.
1631
ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯಾ!
ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ!
ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ!
ಎನ್ನ ಶಿವಲಿಂಗದೇವನೆ ಬಾರಯ್ಯ!
ಎನ್ನ ಭಕ್ತವತ್ಸಲನೆ ಬಾರಯ್ಯ!
`ಓಂ ನಮಃ ಶಿವಾಯ’ ಎಂದು ಕರೆವೆನು
ಉಳಿಯುಮೇಶ್ವರಲಿಂಗವೆ ಬಾರಯ್ಯ!
1632
ಎಲುವೊಡೆದು, ತನು ಕರಗಿ, ಮನವು ಝಜ್ಜರಂಬೋಗಿ,
ಲಿಂಗದಲ್ಲಿ ನೀರು ನೀರಾಗಿ ಬೆರೆಸಲಿಬೇಕು,
ಜಂಗಮದಲ್ಲಿ ವಾರಿಕಲ್ಲಾಗಿ ಕರಗಲಿಬೇಕು.
ಸರ್ವಾಂಗ ಪುಳಕಂಗಳೊಡೆದು ಕಡಲುಗಳಾಗಿ,
ನಿರ್ವಾಣ ನಿಜಪದವೆಂದಪ್ಪುದೋ ಉಳಿಯುಮೇಶ್ವರಾ?
1633
ಎಲುದೊರೆ ಸರಸವಾಡಲೇನು? ಭೃಂಗೀಶನೇ,
ಸೀಳಿ ಹೊದೆಯಲೇನು? ಗಜಾಸುರನೆ,
ಹೆಣ್ಣು ಲೀಲೆಯಲಾಡಲೇನು? ಅಂಧಕಾಸುರನೆ,
ಮನವನಲ್ಲಾಡಲೇನು? ಸಿರಿಯಾಳನೆ.
[ನೆ]ಣತೃಣದೋಪಾದಿ ನಾನು,
ಎನ್ನನಿನಿತು ಬಳಲಿಸುವರೆ?
ಕರುಣಿಸು ಕರುಣಾಕರ ಉಳಿಯುಮೇಶ್ವರಾ.
1634
ಒಂದು ಯೋನಿಯಲ್ಲಿ ಬಂದ ದುಃಖವ ನಾನು ಎಂದೆಂದಿಗೂ ಕಳೆಯಲಾರೆ
ಇನ್ನು ಎಂಬತ್ತುನಾಲ್ಕುಲಕ್ಷವೆಂದರೆ, ನಾನಿನ್ನೇವೆನಯ್ಯಾ?
ಒಂದುವನರಿಯದ ಶಿಶು ನಾ ನೊಂದೆನಯ್ಯಾ!
ಎನ್ನ ಕಂದ ಬಾ ಎಂದು,
ಕಂಬನಿಯ ತೊಡೆದೆತ್ತಿ, ಆನಂದದಿಂದ ಕಣ್ದೆರೆ ಉಳಿಯುಮೇಶ್ವರಾ.
1635
ತೊರೆಯ ಉದಕವ ಕೊಂಡು
ತರಿದು ಸೊಪ್ಪನೆ ಮೆದ್ದು
ಇರವು ಲಿಂಗಗೂಡಾಗಿ ಇರಬೇಕು.
ಕೆÙರೆಯ ನೀರನೆ ಮಿಂದು
ಅರುವೆಗಪ್ಪಡ ಉಟ್ಟು
ಇರವು ಲಿಂಗಗೂಡಾಗಿ ಇರಬೇಕು.
ಅರುವೆಲ್ಲವು ಮುಚ್ಚಿ
ಹೆರರಿಗಾಸೆಯ ಮಾಡಿಸಿ
ಎನ್ನನಿರಿದಿರಿದು ಸುಡುವರೆ
ಉಳಿಯುಮೇಶ್ವರಾ.
1636
ನಂದಿನಾಥ ಭೃಂಗಿನಾಥ ವೀರಭದ್ರ
ಗಣಂಗಳೆಲ್ಲಾ ನೀವು ಕೇಳಿರೆ: ನಿಮ್ಮ ತೊತ್ತು ಬಂದಿದ್ದಾನೆಂದು ನೀವು ಹೇಳಿರೆ,
ನಿಮ್ಮ ಲೆಂಕ ಬಂದಿದ್ದಾನೆಂದು ನೀವು ಹೇಳಿರೆ,
ನಿಮ್ಮ ದಾಸ ಬಂದಿದ್ದಾನೆಂದು ನೀವು ಹೇಳಿರೆ.
ಎನ್ನ ದೇವರು ಉಳಿಯುಮೇಶ್ವರನ ಪಿಂ[ಗದ]
ಚಿಕ್ಕ ಬಂದಿದ್ದಾನೆಂದು ನೀವು ಹೇಳಿರೆ.
1637
ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ,
ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ,
ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ,
ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ,
ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ.
ಇಂತಿವರ ಶ್ರೀಪಾದದಲ್ಲಿ ಉರಿಯುಂಡ ಕರ್ಪುರದಂತಡಗಿದೆನಯ್ಯಾ
ಉಳಿಯುಮೇಶ್ವರಾ.
1638
ವಾರಣಾಸಿ, ಅವಿಮುಕ್ತಿ ಇಲ್ಲಿಯೇ ಇದ್ದಾನೆ.
ಹಿಮದ ಕೇತಾರ, ವಿರೂಪಾಕ್ಷ ಇಲ್ಲಿಯೇ ಇದ್ದಾನೆ.
ಗೋಕರ್ಣ, ಸೇತುರಾಮೇಶ್ವರ ಇಲ್ಲಿಯೇ ಇದ್ದಾನೆ.
ಶ್ರೀಶೈಲ ಮಲ್ಲಿನಾಥ ಇಲ್ಲಿಯೇ ಇದ್ದಾನೆ.
ಸಕಲಲೋಕಪುಣ್ಯಕ್ಷೇತ್ರ ಇಲ್ಲಿಯೇ ಇದ್ದಾನೆ,
ಸಕಳಲಿಂಗ ಉಳಿಯುಮೇಶ್ವರ ತನ್ನಲ್ಲಿ ಇದ್ದಾನೆ.
1639
ಶೈವನೇಮಸ್ತರ ಕೈಯಲುಪದೇಶವಾದೊಡೇನಯ್ಯಾ,
ಅಲ್ಲಿ ಏನೂ ಊನಯವಿಲ್ಲ, ಪಾರಂಪರ್ಯದಲ್ಲಿ ನಡದುತ್ತಾಗಿ.
ನದಿಯ ಮೂಲವನೂ ಗುರುವಿನ ಮೂಲವನೂ ಅರಸುವರೆ?
ಗುರುಲಿಂಗಜಂಗಮ ಸಾಕ್ಷಿಯಾಗಿ
ಷಡಕ್ಷರ ಪ್ರಣವಮಂತ್ರದಿಂ ಲಿಂಗದರ್ಶನವಾಯಿತ್ತಾಗಿ
ಕಳೆಯಬಾರದು, ಬೆರಸಿ ತನ್ನೊಳಗೆ ತಾನಚ್ಚೊತ್ತಿ ಕರಿಗೊಂಡಿತ್ತಾಗಿ.
ಅಂದು ಬಳ್ಳೇಶ್ವರದ ಮಲ್ಲಯ್ಯಗಳು
ಬಳ್ಳವ ಲಿಂಗವ ಮಾಡಿದರೆಂದು
ಕಳೆದರೆ ಎಮ್ಮ ಪ್ರಮಥರು?
ಕಾಳಹಸ್ತಿಯಲ್ಲಿ ಕಣ್ಣಪ್ಪದೇವರು
ಸುಜ್ಞಾನಭಕ್ತಿಯಿಂದ ಸ್ಥಾವರವನೆ
ಗುರುರೂಪ ಮಾಡಿ ಪೂಜಿಸಿದರೆಂದು
ಕಳೆದರೆ ಎಮ್ಮ ಪುರಾತನರು?
ಅಂದು ಕಲ್ಯಾಣದಲ್ಲಿ ಹುಸಿಯನೆ ದಿಟಮಾಡಿ
ಬದನೆಕಾಯ ಲಿಂಗವ ಮಾಡಿ ಸಲಿಸನೆ ನಮ್ಮ ಬಸವಣ್ಣನು?
ಇವರೆಲ್ಲರೂ ನಿಮ್ಮ ಭಜಿಸಿ ನಿಮ್ಮತ್ತಲಾದರು,
ನಾ ನಿನಗೇನ ಮಾಡಿದೆನಯ್ಯಾ ಉಳಿಯುಮೇಶ್ವರಾ?