Categories
ವಚನಗಳು / Vachanagalu

ಏಲೇಶ್ವರ ಕೇತಯ್ಯನ ವಚನಗಳು

ಅಂಗ ಸರ್ವಾಂಗಭಾವವ ಮುಟ್ಟುವಲ್ಲಿ,
ಆ ಭಾವ ತನ್ನಯ ಕ್ರೀಯ ನಿಬದ್ಧಿಸಿ ಹಿಡಿವಲ್ಲಿ,
ಬಾಹ್ಯದ ಕ್ರೀ, ಅಂತರಂಗದ ಅರಿವು, ಉಭಯ ಏಕ ಸನ್ಮತವಾಗಿ,
ಸರ್ವವ್ಯವಧಾನಂಗಳಲ್ಲಿ ಸರ್ವವ ಹಿಡಿದುಬಿಡುವಲ್ಲಿ,
ತನ್ನ ಕ್ರೀಗೆ ಒಳಗಾದುದ ಒಡಗೂಡುವಲ್ಲಿ,
ಸಹಭೋಜನದ ಸಮವನರಿತು, ಭರಿತಾರ್ಪಣವ ಅರ್ಪಿತವನರಿತು,
ತಾ ಲಕ್ಷಿಸಿದ ವ್ರತದ ಕಟ್ಟಳೆಯ ಕಂಡು
ತನು ಕ್ರೀಯಲ್ಲಿ ಶುದ್ಧವಾಗಿ, ಆತ್ಮ ಅರಿವಿನಲ್ಲಿ ಶುದ್ಧವಾಗಿ,
ಅರಿವು ಆಚಾರದಲ್ಲಿ ಲೀಯವಾಗಿ,
ಆ ಸದ್ಭಾವವೆ ಏಲೇಶ್ವರಲಿಂಗದ ವ್ರತದ ಸಂಬಂಧ. /1
ಅಂಗಕ್ಕೆ ಆಚರಣೆ, ಮನಕ್ಕೆ ನಿರ್ಮಲ ಮನೋಹರವಾಗಿ,
ಸಕಲದ್ರವ್ಯಪದಾರ್ಥಂಗಳ
ಬಾಹ್ಯದಲ್ಲಿ ಕಂಡು, ಅಂತರಂಗದಲ್ಲಿ ಪ್ರಮಾಣಿಸಿ,
ತನ್ನ ಭಾವಕ್ಕೆ ಒಪ್ಪಿದುದ ಒಪ್ಪಿ, ಅಲ್ಲದುದ ಬಿಟ್ಟ ನಿಶ್ಚಯ ನಿಜವ್ರತಾಂಗಿ
ಜಗದ ಹೆಚ್ಚು ಕುಂದಿನವರ ಭಕ್ತರೆಂದು ಒಪ್ಪುವನೆ?
ಏಲೇಶ್ವರಲಿಂಗವಾಯಿತ್ತಾದಡು ಕಟ್ಟಳೆಯ ವ್ರತಕ್ಕೆ
ಕೃತ್ಯದೊಳಗಾಗಿರಬೇಕು./2
ಅಂಗಕ್ಕೆ ಕ್ರೀಯ ಅಂಗೀಕರಿಸಿದಲ್ಲಿ ಮನಕ್ಕೆ ಮುನ್ನವೆ ವ್ರತವ ಮಾಡಬೇಕು.
ಆ ವ್ರತಕ್ಕೆ ಮುನ್ನವೆ ತಟ್ಟು-ಮುಟ್ಟು ತಾಗು-ಸೋಂಕು ಬಪ್ಪುದನರಿಯಬೇಕು.
ಅವು ಬಂದು ಸೋಂಕಿದ ಮತ್ತೆ
ಅಂಗವ ಬಿಟ್ಟೆಹೆನೆಂಬುದೆ ವ್ರತಕ್ಕೆ ಭಂಗ.
ಇಂತೀ ಸಂದು ಸಂಶಯವನರಿಯಬೇಕೆಂದು
ಅಂಗಕ್ಕೆ, ಕ್ರೀ ಆತ್ಮಂಗೆ ಅರಿವಿಂಗೆ ನೆರೆ ವ್ರತವ
ಸೋಂಕಿಂಗೆ ಹೊರಗಾಗಿ ಮಾಡಬೇಕು,
ಏಲೇಶ್ವರಲಿಂಗದಲ್ಲಿ ವ್ರತಸ್ಥನಾಗಬಲ್ಲಡೆ./3
ಅಂಗವಾರು ಗುಣದಲ್ಲಿ ಹರಿದಡೆ, ಲಿಂಗ ಮೂರೆಂದು ಕಂಡಡೆ,
ಆತ್ಮ ಹಲವೆಂದು ನೋವ ಕಂಡಡೆ, ಎನ್ನ ವ್ರತಕ್ಕೆ ಅದೇ ಭಂಗ.
ಒಂದ ದೃಢವೆಂದು ಹಿಡಿದಲ್ಲಿ ನಾನಾ ವ್ರತ ನೇಮ ಅಲ್ಲಿ ಸಂದಿಪ್ಪವು.
ಇದಕ್ಕೆ ಸಂದೇಹವಿಲ್ಲ, ಏಲೇಶ್ವರಲಿಂಗದಾಣತಿ/4
ಅಂಧಕ ವ್ರತಿಯಲ್ಲ, ಪಂಗುಳ ಕ್ರೀವಂತನಲ್ಲ,
ಕುಟಿಲ ಸದೈವಭಕ್ತನಲ್ಲ.
ಇಂತೀ ಗುಣವೆ [ದೃಷ್ಟ], ದೃಷ್ಟದಲ್ಲಿಯೇ ದೃಷ್ಟವ ಕಂಡು,
ಅಂಧಕ, ಪಂಗುಳ, ಕುಟಿಲ ಈ ಮೂರಕ್ಕೆ ವ್ರತದಂಗವೊಂದೂ ಇಲ್ಲ,
ಇದಕ್ಕೆ ಏಲೇಶ್ವರಲಿಂಗವೆ ಸಾಕ್ಷಿ./5
ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ,
ಚೆನ್ನಾಯಿತ್ತು ಒಡೆಯರ ಕಟ್ಟಳೆ.
ಮಿಕ್ಕಾದವಕ್ಕೆ ಗನ್ನವ ಮಾಡಿ-
ಈ ಬಣ್ಣ ಬಚ್ಚಣೆಯ[ಲ್ಲಿ] ನಡೆವ ಕನ್ನಗಳ್ಳರ ಶೀಲ
ಇಲ್ಲಿಗೆ ಅಲ್ಲಿಗೆ ಮತ್ತೆಲ್ಲಿಗೂ ಇಲ್ಲ.
ಏಲೇಶ್ವರಲಿಂಗವು ಅವರವೊಲ್ಲನಾಗಿ./6
ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ.
ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ.
ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು
ನಡೆದೆಹೆನೆಂಬುದೆ ಪರಪಾಕದ ಪಾಕುಳ.
ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು,
ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮರ್ತ್ಯರ ಸುಗುಣ ದುರ್ಗುಣವನೊಲ್ಲ,
ನಿತ್ಯಾನಿತ್ಯವ ಮುಟ್ಟಿ ಮರ್ತ್ಯರ ಕರ್ಕಶವನೊಲ್ಲ.
ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು-
ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು,
ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ,
ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ
ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ./7
ಅಳಿಮೇಳ ಚರ್ಚಗೊಟ್ಟಿ ಚಾವಟತನಕಾಗಿ ವ್ರತದಾಳಿಯ ಮಾಡಿಕೊಳ್ಳದೆ
ತನುವಿಗೆ ಕಟ್ಟು, ಮನಕ್ಕೆ ವ್ರತ,
ಸರ್ವೆಂದ್ರಿಯ ವಿಸರ್ಜನವಾಗಿ ಮಾಡಿಕೊಂಬುದೆ ಸ್ವಯವ್ರತ.
ಈ ಗುಣ ಏಲೇಶ್ವರಲಿಂಗಕ್ಕೆ ವ್ರತದ ಸುಪಥದ ಪಥ. /8
ಆತ ಅಂಗವ ತೊಟ್ಟಡೇನು? ಪರಾಂಗನೆಯರ ಸೋಂಕ.
ಕರವಿದ್ದಡೇನು? ಮತ್ತೊಂದ ಅಪಹರಿಸಿ ತೆಗೆಯ.
ಕರ್ಣವಿದ್ದಡೇನು? ಮತ್ತೊಂದು ಅನ್ಯಶಬ್ದವ ಕೇಳ.
ಕಣ್ಣಿದ್ದಡೇನು? ಲಿಂಗವಲ್ಲುದದ ನೋಡ
ನಾಸಿಕವಿದ್ದಡೇನು? ಅರ್ಪಿತವಲ್ಲದುದ ವಾಸಿಸ.
ಜಿಹ್ವೆಯಿದ್ದಡೇನು? ಪ್ರಸಾದವಲ್ಲದುದ ಸ್ವೀಕರಿಸ.
ಇಂತಿವೆಲ್ಲರಲ್ಲಿ ಸರ್ವವ್ಯವಧಾನಿಯಾಗಿ
ನಡೆನುಡಿ ಅರಿವು ಶುದ್ಧಾತ್ಮನು ಏಲೇಶ್ವರಲಿಂಗವು ತಾನೆ./9
ಆವ ವ್ರತ ನೇಮವ ಹಿಡಿದಡೂ
ಆ ವ್ರತ ನೇಮದ ಭಾವಶುದ್ಧವಾಗಿರಬೇಕು.
ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ
ಬಾಹ್ಯದ ಬಳಕೆ ಅಂತರಂಗದ ನಿರಿಗೆ
ಉಭಯ ಶುದ್ಧವಾಗಿಪ್ಪ ಭಕ್ತನಂಗವೆ ಏಲೇಶ್ವರಲಿಂಗದಂಗ./10
ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು.
ವ್ರತ ಕೆಟ್ಟುದ ಕಂಡು,
ಇನ್ನು ತಪ್ಪೆನೆಂದಡೆ ಒಪ್ಪಿ ಕೂಡಿಕೊಳ್ಳಬಾರದು.
ಸತಿ ಕೆಟ್ಟು ನಡೆದುದ ಕಂಡು
ಆ ಗುಣ ಶುನಕಸ್ವಪ್ನದಂತೆ.
ಇಂತೀ ಇವ ಕಂಡು ಮತ್ತೆ ಹಿಂಗದಿದ್ದೆನಾದಡೆ
ಇಹಪರಕ್ಕೆ ಹೊರಗು, ಏಲೇಶ್ವರಲಿಂಗಕ್ಕೆ ದೂರ./11
ಉಂಡವರ ನೋಡಿ, ತಮ್ಮ ಬಂಧುಗಳ ನೋಡಿ,
ಅವರು ಜಂಗಮವೆಂದು, ತನ್ನ ಸಂದೇಹದ ಕಟ್ಟಳೆಯವರೆಂದು ಮಾಡುವ
ಲಂದಣಿಗರ ಜಗಭಂಡರ ಒಡೆಯರ ಕಟ್ಟಳೆ,
ವ್ರತದಂಗದ ಸಂಗವಲ್ಲ, ಏಲೇಶ್ವರಲಿಂಗಕ್ಕೆ ದೂರ. /12
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ,
ಅರುವತ್ತಾರು ವ್ರತಂಗಳಲ್ಲಿ
ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ.
ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ.
ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು,
ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು.
ಭಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಬಿನ್ನದಠಾವ ಹೇಳಾ,
ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ./13
ಒಡೆಯರು ಭಕ್ತರಲ್ಲಿ ಕೃಷಿಯಿಲ್ಲದೆ ಬೇಡಿ ತಂದು,
ತನ್ನ ಮಡದಿ ಮಕ್ಕಳ ಹೊರೆದು, ಮಿಕ್ಕಾದುದ ಒಡೆಯರಿಗಿಕ್ಕಿಹೆನೆಂಬ
ಅಡುಗೂಲಿಕಾರನ ಗಂಜಿಗುಡಿಹಿಯ ಭಕ್ತಿ
ತನ್ನ ಸಂಸಾರದ ಅಡಿಗೆಯೊಳಗೆ ಅಡಗಿತ್ತು, ಇದು ಬೆದಕಿದಡೆ ಹುರುಳಿಲ್ಲ.
ನನ್ನಿಯೆತ್ತಿಗೆ ಎನ್ನ ಮಣ್ಣೆತ್ತು ಘನವೆನಬೇಕು,
ಅದು ಭಕ್ತಿಪಕ್ಷದ ಓಸರ.
ಬಿಡಲಿಲ್ಲ, ಅರಿದು ಹಿಡಿಯಲಿಲ್ಲ.
ಆ ಅಂಗವ, ಒಡಗೂಡುವ ಶರಣರು ನೀವೆ ಬಲ್ಲಿರಿ.
ಎನಗದು ಸಂಗವಲ್ಲ ಏಲೇಶ್ವರಲಿಂಗಕ್ಕೆ./14
ಒಡೆಯರು ಭಕ್ತರಿಗೆ ಸಲುವ ಸಹಪಙ್ತಯಲ್ಲಿ,
ಗುರು ಅರಸೆಂದು, ತನ್ನ ಪರಿಸ್ಪಂದವೆಂದು
ರಸದ್ರವ್ಯವ ಎಸಕದಿಂದ ಇಕ್ಕಿದಡೆ,
ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ.
ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ-
ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ./15
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ
ತಡೆಯಿತು ಶಕುನವೆಂದುಳಿದಡೆ,
ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು
ಮುಂತಾದ ಸಂಕಲ್ಪಕ್ಕೊಳಗಾದಲ್ಲಿ
ವ್ರತಕ್ಕೆ ಭಂಗ, ಆಚಾರಕ್ಕೆ ದೂರ.
ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ,
ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ
ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ
ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ./16
ಓಗರ ಮೇಲೋಗರವನುಂಬನ್ನಕ್ಕ ಗಡಿತಡಿಯ ಕಾಯಿಸಿ,
ಮತ್ತೊಡೆಯರ ಕರೆಯೆಂದು,
ಮತ್ತೊಡೆಯರು ಬಂದಲ್ಲಿ ಮಡದಿಯರ ಮನೆಯೊಳಗವಿಸಿ,
ತನ್ನ ಬಿಡುಗಡೆಯ ಸ್ತ್ರೀಯರ ಕೈಯಲ್ಲಿ
ಒಡೆಯರು ಪಾದವೆಂದು ಅಡಿಯ ತೊಳೆವುತ್ತ,
ಆ ತೊಳೆದ ನೀರ ತಾ ಕುಡಿವುತ್ತ,
ಲಿಂಗಮಜ್ಜನವೆಂದು ಎರೆವುತ್ತ,
ಅವರು ಉಂಡು ಮಿಕ್ಕ ಓಗರವ ಪ್ರಸಾದವೆಂದು
ಲಿಂಗಕ್ಕೆ ತೋರಿ ತಾವು ಭುಂಜಿಸುತ್ತ,
ಇಂತಿವರು ತಮ್ಮ ವ್ರತವ ತಾವರಿಯದೆ, ತಮ್ಮ ಭಾವವ ತಾವರಿಯದೆ,
ಸುರೆಯ ಕುಡಿದವರಂತೆ, ಮರುಳು ಗ್ರಹ ಹೊಡೆದವರಂತೆ!
ಇಂತೀ ತ್ರಿವಿಧ ಗುಡಿಹಿಯ ಭಕ್ತಿ ಅಸಗ ನೀರಡಿಸಿ ಸತ್ತಂತಾಯಿತ್ತು.
ಆ ಗುಣಕಟ್ಟಳೆ ಏಲೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು. /17
ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ,
ಅದು ಸ್ವಯಂಭು ಹೇಮವಪ್ಪುದೆ?
ಹೆಣ್ಣು ಹೊನ್ನು ಮಣ್ಣು ಕುರಿತು
ಕುಜಾತಿಗನ್ನಕ್ಕೆ ಶೀಲವಂತನಾದವ
ನನ್ನಿಯ ವ್ರತದ ದೆಸೆಯ ಬಲ್ಲನೆ?
ಇಂತೀ ಗನ್ನರನರಿದು, ಇಂತೀ ನಿಜಪ್ರಸನ್ನರ ಕಂಡು,
ಉಭಯದ ಬಿನ್ನಾಣದ ವ್ರತದ ಬೆಸುಗೆಯ
ತ್ರಿಕರಣಕ್ಕೆ ಅನ್ಯವಿಲ್ಲದೆ ಮಾಡಬೇಕು.
ಏಲೇಶ್ವರಲಿಂಗಕ್ಕೆ ವ್ರತಕ್ಕೆ ಆಚಾರ್ಯನಾಗಬಲ್ಲಡೆ./18
ಕ್ರೀ ನಿಃಕ್ರೀಯೆಂಬ ಉಭಯವಾವುದು?
ತನ್ನನರಿತಲ್ಲಿ ಕ್ರೀ, ತನ್ನ ಮರೆದಲ್ಲಿ ನಿಃಕ್ರೀ.
ನಾನೆಂಬುದುಳ್ಳನ್ನಕ್ಕ ಸರ್ವಕ್ರೀ ಸಂಭ್ರಮಿಸಬೇಕು,
ನಾನೆಂಬುದೆನೂ ತೋರದಲ್ಲಿ ಕ್ರೀಯೆಂಬುದೇನೂ ಇಲ್ಲ.
ಇಂತೀ ಭಾವವ ತಿಳಿದು ನಿಮ್ಮ ನೀವೆ ನೋಡಿಕೊಳ್ಳಿ,
ಜಿಡ್ಡ ಜಿಗುಡೆಂಬ ಸಂದೇಹವ ತಾನುಂಡು ತೇಗಿದಂತೆ.
ಇದಕ್ಕೆ ಸಂದೇಹವಿಲ್ಲ. ಏಲೇಶ್ವರಲಿಂಗವೇ ಸಾಕ್ಷಿ./19
ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ.
ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ.
ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು.
ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು.
ಆ ಷಡುಸ್ಥಲದ ಭಾವಂಗಳೆ ಭಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು.
ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ,
ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ
ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ
ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು./20
ಕ್ರೀಯ ಅನುವನರಿದಾತ ಗುರುವೆಂಬೆ,
ಕ್ರೀಯ ಅನುವನರಿತುದು ಲಿಂಗವೆಂಬೆ,
ಕ್ರೀಯ ಅನುವನರಿದಾತ ಜಂಗಮವೆಂಬೆ.
ಇಂತೀ ತ್ರಿವಿಧಮೂರ್ತಿ ಆಚಾರಕ್ಕೆ ಅನುಕೂಲವಾಗಿ
ಬಂಗಾರದೊಳಗೆ ಬಣ್ಣವಡಗಿದಂತೆ, ಆ ಬಣ್ಣವೇಧಿಸಿ ಬಂಗಾರವಾದಂತೆ.
ಇಂತು ಆಚಾರಕ್ಕೂ ಅರಿವಿಂಗೂ ಪಡಿಪುಚ್ಚವಿಲ್ಲವಾಗಿ,
ಆಚಾರವೆ ಕುಲ, ಅನಾಚಾರವೇ ಹೊಲೆ.
ಇದಕ್ಕೆ ಒಲವರವಿಲ್ಲ, ಏಲೇಶ್ವರಲಿಂಗವ ಕೇಳಲಿಲ್ಲ. /21
ಗುರುಪ್ರಸಾದವ ಕೊಂಬಲ್ಲಿ ಇಹವನರಿಯಬೇಕು,
ಲಿಂಗಪ್ರಸಾದವ ಕೊಂಬಲ್ಲಿ ಪರವನರಿಯಬೇಕು,
ಜಂಗಮಪ್ರಸಾದವ ಕೊಂಬಲ್ಲಿ ಇಹಪರ ಉಭಯವನರಿತು ಸ್ವೀಕರಿಸಬೇಕು.
ಗಣಪ್ರಸಾದವ ಸಮೂಹದಲ್ಲಿ ಕೊಂಬಲ್ಲಿ,
ರಾಜಸ ತಾಮಸ ಸಾತ್ವಕವಂ ಅರಿದು
ಕೊಂಬಲ್ಲಿ ತ್ರಿವಿಧವಂ ಮರೆದು,
ಅಜೀರ್ಣ ಮನ ಮುಂತಾದ ಮಿಕ್ಕಾದ ತೊಡಕಿಂಗೆ ಒಡಲಲ್ಲದೆ,
ವಡಬಾನಳನಂತೆ, ಉರಿಯ ಒಡಲಿನಂತೆ,
ಆಕಾಶವನವಗವಿಸಿದ ಗೋಳಕಾಕಾರದಂತೆ,
ಕುರುಹಿಂಗೆ ಒಡಲಿಲ್ಲದೆ ಕೊಂಡುದು ಗಣಪ್ರಸಾದ.
ಹೀಂಗಲ್ಲದೆ ಹುಲಿ ಹಾಯಿದ ಗೋವ ಹಲವು ನರಿಗಳು ಕೊಂಡು
ತಮ್ಮ ತಮ್ಮ ಹೊಲಗಳಿಗೆ ಹೋದಂತಾಗಬೇಡ.
ಎನಗಿನಿತು ಒಲವರವೆಂದು ನೋಯಬೇಡ.
ಇದು ಏಲೇಶ್ವರಲಿಂಗದ ವ್ರತದಂಗದ ಹೊಲಬಿನ ಹಾದಿ./22
ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು,
ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು.
ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ
ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು.
ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು.
ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು.
ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ
ಆತ ತ್ರಿವಿಧ ಪ್ರಸಾದಿಯೆಂಬೆ.
ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ! /23
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ
ಮಣ್ಣು ಬೆಂದು ಹಿಂಗಿ ಓಡಾದುದು ಸರಿಯಿಂದ ಸಂದುಗೂಡುವುದೆ?
ಅರಿಯದ ಮರವೆಯ ಒಡಗೂಡಬಹುದಲ್ಲದೆ
ಅರಿತು ಹೇಳಿ ಕೇಳಿ ಮತ್ತರಿಯೆನೆಂದು
ಅಹಂಕಾರದಲ್ಲಿ ನುಡಿವವನ ಒಡಗೂಡಬಹುದೆ?
ಇಂತೀ ಗುಣವ ಅರಿದು ಒಪ್ಪಿದಡೆ ಪರಕ್ಕೆ ದೂರ,
ಅಲ್ಲ- ಅಹುದೆಂದಡೆ ಶರಣರ ಗೆಲ್ಲ ಸೋಲದ ಹೋರಾಟ.
ಇಂತಿವರೆಲ್ಲರೂ ಕೂಡಿ ನೊಂದಡೆ ನೋಯಲಿ,
ನಾ ಕೊಂಡ ವ್ರತದಲ್ಲಿಗೆ ತಪ್ಪೆನು.
ಇದು ವ್ರತಾಚಾರವ ಬಲ್ಲವರ ಭಾಷೆ.
ಏಲೇಶ್ವರಲಿಂಗವು ಕುಲ್ಲತನವಾದಡೂ ಒಲ್ಲೆನು./24
ಜಂಗಮದ ಮುಂದಿಟ್ಟು ಕೊಟ್ಟು ಕೊಂಡೆಹೆನೆಂಬ
ಸರ್ವಸಮಯಾಚಾರ ಸಂಪತ್ತಿನಿರವು:
ಮಜ್ಜನ ಭೋಜನ ಅಂದಳ ಛತ್ರ ಚಾಮರ ಕರಿ ತುರಗ ದರ್ಪಣ
ಹಲುಕಡ್ಡಿ ನಖಚಣ ಪರಿಮಳ ಗಂಧ ಮೆಟ್ಟಡಿ ತಾಂಬೂಲ ರತ್ನಾಭರಣ
ಮೆತ್ತೆ ಶಯನ ಸ್ತ್ರೀಸಂಸರ್ಗ ಒಡೆಯಂಗೆ ಆಯಿತ್ತೆಂಬುದ ಕೇಳಿ,
ಆ ಒಡೆಯನ ವಾಚಾಪ್ರಸಾದದಿಂದ ಮಹಾಪ್ರಸಾದವೆಂದು
ತನ್ನ ಸ್ವಸ್ತ್ರೀಗೆ ಕೂಟಸ್ಥನಾಗಬೇಕು.
ಇಂತೀ ಭಾವ ಸರ್ವಸಮಯಾಚಾರ.
ಈ ವರ್ತಕದಂಗ ನಿಂದಾತನ ಸಂಗ,
ಏಲೇಶ್ವರದಂಗ ಉಮೇಶ್ವರಲಿಂಗವು ಆ ಭಕ್ತನಂಗ./25
ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ:
ಶಿಶು, ಬಂಧುಗಳು, ಚೇಟಿ,
ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ
ಒಡೆಯರಿಗೆ ಸಲುವುದಕ್ಕೆ ಮುನ್ನವೆ
ಸೀತಾಳ ಶಿವದಾನವೆಂದು ಇಕ್ಕಬಹುದೆ?
ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ.
ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ.
ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ./26
ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ
ಸರ್ವವೆಲ್ಲವು ಲಿಂಗಾಯತಸಂಬಂಧವಾಗಿ,
ಭವಿಸಂಗ, ಭವಿನಿರೀಕ್ಷಣೆ, ಭವಿ ಅಪೇಕ್ಷೆ, ಭವಿದ್ರವ್ಯಂಗಳನೊಲ್ಲದೆ,
ಶಿವನನರಿವರಲ್ಲಿ, ಶಿವನ ಪೂಜೆಯ ಮಾಡುವರಲ್ಲಿ,
ಶಿವಮೂರ್ತಿಧ್ಯಾನದಿಂದ ಶಿವಲಿಂಗಾರ್ಚನೆಯ ಮಾಡುವರಲ್ಲಿ,
ಶಿವಪ್ರಸಾದವ ಕಾಡಿ ಬೇಡಿ ತಂದು ಒಡೆಯನಿಗಿತ್ತು
ಆ ಪ್ರಸಾದವ ಏಲೇಶ್ವರಲಿಂಗಕ್ಕೆ ಕೊಟ್ಟ
ಆ ವ್ರತಭಾವಿಗೆ ನಮೋ ನಮೋ ಎನುತಿದ್ದೆ. /27
ತಂದೆಯ ಮಗ ಕರೆದು, ಮಗನ ತಂದೆ ಕರೆದು,
ಭಾವನ ಮೈದುನ ಕರೆದು, ಮೈದುನನ ಭಾವ ಕರೆದು,
ತಮ್ಮ ಬಂಧುಗಳ ಜಂಗಮವೆಂದು ಕೂಡಿಕೊಂಡು ಉಂಬ
ಜಗಭಂಡರ ನೇಮ ಸುಸಂಗವಲ್ಲ, ಏಲೇಶ್ವರಲಿಂಗಕ್ಕೆ./28
ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು,
ಮನ ಮುಟ್ಟುವುದಕ್ಕೆ ಮುನ್ನವೆ ಅರಿವು ಶೀಲವಾಗಿರಬೇಕು,
ಅಂಗ ಮನ ಅರಿವು ವ್ರತಾಂಗದಲ್ಲಿ ಕರಿಗೊಂಡು
ಆಚಾರಕ್ಕೆ ಅನುಸರಣೆಯಿಲ್ಲದೆ, ಆತ್ಮವ್ರತ ತಪ್ಪಿದಲ್ಲಿ ಓಸರಿಸದೆ,
ಆ ವ್ರತದ ಅರಿವು ಹೆರೆಹಿಂಗದೆ ಇಪ್ಪಾತನಂಗವೆ ಏಲೇಶ್ವರಲಿಂಗದಂಗ./29
ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ,
ಧನಶೀಲ ಜಂಗಮಭಕ್ತಿ, ತ್ರಿವಿಧಶೀಲ ಮಹಾಭಕ್ತಿ.
ಅಂಗ ಮನ ಭಾವ ಕರಣಂಗಳಲ್ಲಿ ವ್ರತದಂಗವೆ ಪ್ರಾಣವೆಂದು ಇಪ್ಪುದು ಛಲಭಕ್ತಿ.
ಇಂತೀ ಭೇದಭಾವಂಗಳಲ್ಲಿ ಅಣುಮಾತ್ರ ತಪ್ಪ
ಕ್ಷಣಮಾತ್ರ ಸೈರಿಸೆವೆಂಬುದು ನಿಶ್ಚಯಭಕ್ತಿ.
ಇಂತೀ ವರ್ತಕಶುದ್ಧ ಸದ್ಭಕ್ತಂಗೆ ಮರ್ತ್ಯ-ಕೈಲಾಸವೆಂಬ ತತ್ತು ಗೊತ್ತಿಲ್ಲ.
ಆತ ವ್ರತಲಕ್ಷಣಮೂರ್ತಿ, ಏಲೇಶ್ವರಲಿಂಗವು ತಾನೆ. /30
ತನುಸಂಪಾದನೆಯ ನೇಮ, ಭಾವಸಂಪಾದನೆಯ ನೇಮ,
ಜ್ಞಾನಸಂಪಾದನೆಯ ನೇಮ, ಕ್ರೀಸಂಪಾದನೆಯ ನೇಮ,
ಆಚಾರಸಂಪಾದನೆಯ ನೇಮ, ಸರ್ವಭಾವಸಂಪಾದನೆಯ ನೇಮ,
ಸರ್ವಸ್ಥಲದ ಸಂಪಾದನೆಯ ನೇಮ, ತ್ರಿವಿಧಮಲದ ಸಂಬಂಧ ನೇಮ.
ಇಂತೀ ಕ್ರೀ ಅಂಗಕ್ಕೆ, ಇಂತೀ ಜ್ಞಾನ ಲಿಂಗಕ್ಕೆ.
ಇಂತಿವ ಕಳೆದುಳಿದ ಭಾವ, ವಸ್ತುವಿನಲ್ಲಿ ನಿಶ್ಚಯವಾದ ಶೀಲವಂತಂಗೆ
ಹಿಂಗದೆ ನಮೋ ಎಂದು ಬದುಕಿದೆ ಏಲೇಶ್ವರಲಿಂಗ ಸಹಿತಾಗಿ. /31
ತಪ್ಪಿ ಇಷ್ಟ ನೆಲಕ್ಕೆ ಬಿದ್ದಲ್ಲಿ
ದೃಷ್ಟದಿಂದ ತನ್ನ ತಾನೆ ಬಂದುದು ಅದು ಏಕಲಿಂಗನಿಷ್ಠೆ.
ವ್ರತಗೆಟ್ಟೆನೆಂಬುದನರಿತು ಆಗವೆ ಪ್ರಾಣವ ಬಿಟ್ಟುದು ವ್ರತನಿಷ್ಠೆವಂತನ ಭಾವ.
ಇಂತೀ ಉಭಯಕ್ಕೆ ತಟ್ಟುಮುಟ್ಟಿಲ್ಲ,
ಹೀಗಲ್ಲದೆ ಇಷ್ಟವೆಂದೇನು? ವ್ರತಗೆಟ್ಟವನೆಂದೇನು? ಎಂದು
ಘಟ್ಟಿಯತನದಲ್ಲಿ ಹೋರುವ ಮಿಟ್ಟೆಯ ಭಂಡಂಗೆ
ಮತ್ತೆ ಸತ್ಯ ಸದಾಚಾರ ಭಕ್ತಿ ಉಂಟೆ?
ಇಂತಿವರನು ನಾ ಕಂಡು ಗುರುವೆಂದು ವಂದಿಸಿದಡೆ,
ಲಿಂಗವೆಂದು ಪೂಜಿಸಿದಡೆ, ಜಂಗಮವೆಂದು ಶರಣೆಂದಡೆ,
ಎನಗದೆ ಭಂಗ, ಏಲೇಶ್ವರಲಿಂಗ ತಪ್ಪಿದಡೂ ಹೊರಗೆಂಬೆನು. /32
ತಾ ನೇಮವ ಮಾಡಿಕೊಂಡು
ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು,
ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು,
ಹೋದ ಹೋದಠಾವಿನಲ್ಲಿ ಓಗರವನಿಕ್ಕಿಸುವ
ಲಾಗಿನ ಶೀಲವಂತರ ಮನದ ಭೇದವ
ನೀವೇ ಬಲ್ಲಿರಿ ಏಲೇಶ್ವರಲಿಂಗವೆ./33
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ
ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು,
ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ,
ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ
ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ
ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ,
ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು
ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮರ್ತ್ಯದ ಅನುಸರಣೆ.
ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ.
ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ.
ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ.
ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ.
ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು,
ಕೆಟ್ಟಿಹಿತೆಂದು ಸೂಚನೆದೋರಿತ್ತು. /34
ತಾವರೆಯ ಎಲೆಯ ಮೇರಳ ನೀರಿನಂತೆ
ಎನ್ನ ಮನ ಆವ ವ್ರತವನೂ ನೆಮ್ಮದಿದೆ ನೋಡಾ.
ಎನ್ನ ಸಂದೇಹದಿಂದ ಮಹಾವ್ರತಿಗಳ ಸಂಗ ಸುಸಂಗವಾಗದಿದೆ ನೋಡಾ.
ಕ್ರೀಯನರಿಯದು, ಅರಿವ ನೆನೆಯದು,
ಬರುದೊರೆಯೋಹ ಮನಕ್ಕೆ
ಒಂದುಕುರುಹ ತೋರಾ, ಏಲೇಶ್ವರಲಿಂಗಾ./35
ದಾಯಗಾರನ ಶೀಲ, ತ್ರಿವಿಧ ಢಾಳಕನ ಭಕ್ತಿ,
ಶಬರನ ದಯೆ, ಚೋರನ ಲಲ್ಲೆ, ಕಳ್ಳೆಯ ಬಲ್ಲತನ,
ಇವೆಲ್ಲವು ಕಲಿಯ ಮಣಿಯಂತೆ ಅಲ್ಲಿಗಲ್ಲಿಗೆ ದಾಯ.
ಇಂತೀ ಕಳ್ಳರ ವ್ರತ ನೇಮ
ಸುಳಿದಲ್ಲಿಯೆ ಕಾಣಬಂದಿತ್ತು ಏಲೇಶ್ವರಲಿಂಗಕ್ಕೆ./36
ದೃಷ್ಟಿ ನಟ್ಟು ಚಿತ್ತವೊಪ್ಪಿದಲ್ಲಿ ಬೇರುಂಟೆ ಹಾದರವೆಂಬುದು?
ಆ ಗುಣವ ಕಂಡು ಮನಶಂಕೆದೋರಿದಲ್ಲಿ ನಿಂದೆಗೆ ಬೇರೊಂದೊಡಲುಂಟೆ?
ಇಂತೀ ಉಭಯಭಾವ ತಲೆದೋರಿದಲ್ಲಿ
ಅಂಗಕ್ಕೆ ಆಚಾರವಿಲ್ಲ, ಆತ್ಮಂಗೆ ವ್ರತವಿಲ್ಲ.
ಇಂತೀ ಸಂದೇಹದಲ್ಲಿ ಸಾವವ ಇಹಪರ ಉಭಯಕ್ಕೆ ಹೊರಗು.
ಏಲೇಶ್ವರಲಿಂಗ ಅವರಿಗೆ ಮುನ್ನವೆ ಒಳಗಲ್ಲ./37
ಧೂಳು ಪಾವಡ, ಕಂಠ ಪಾವಡ, ಸರ್ವಾಂಗ ಪಾವಡದೊಳಗಾದ,
ಲವಣ ಸಪ್ಪೆವೊಳಗಾದ ನಾನಾ ಶೀಲಸಂಪನ್ನರಿಗೆಲ್ಲಕ್ಕೂ
ಭಾವದ ವ್ರತ ಬೇರುಂಟು, ಸದ್ಭಾವದ ವ್ರತ ಬೇರುಂಟು.
ಪೃಥ್ವಿ ಅಪ್ಪುತೇಜ ವಾಯು ಆಕಾಶದೊಳಗಾದ ಪಂಚಭೂತಿಕತನು
ವ್ರತವ ಅಂಗೀಕರಿಸುವಲ್ಲಿ ತ್ರಿಜಾತಿಭೇದಂಗಳುಂಟು.
ಪೃಥ್ವಿ ಸೋಂಕ ವಿಚಾರಿಸಿ, ಅಪ್ಪು ಸೋಂಕ ವಿಚಾರಿಸಿ, ತೇಜ ಸೋಂಕ ವಿಚಾರಿಸಿ,
ವಾಯುಸೋಂಕ ವಿಚಾರಿಸಿ, ಆಕಾಶ ಸೋಂಕ ವಿಚಾರಿಸಿ
_ಇಂತೀ ಪಂಚದೋಷಂಗಳ ಸಂಕಲ್ಪವಿಲ್ಲದಂತೆ
ಲಯ ನಿರ್ಲಯವ ಕಂಡು, ಅಳಿವುಳಿವನರಿದು,
ಅಂಗ ಮನ ಭಾವ ಕರಣಂಗಳನೊಂದುಮಾಡಿ,
ಅರ್ಪಿತವಾದುದ ಕಂಡು, ಅನರ್ಪಿತವಾದುದನರಿತು,
ಚಿತ್ತ ಮುಟ್ಟುವುದಕ್ಕೆ ಮುನ್ನವೆ ಮತ್ತವು ಬಹಠಾವ ಕಂಡಲ್ಲಿ,
ಅರ್ಪಿತವನವಗವಿಸಿ ಅನರ್ಪಿತವ ಹೊರತಟ್ಟಿ
ನಿಜನಿಶ್ಚಯವಾದ ಶೀಲ ಅರುವತ್ತನಾಲ್ಕನೆಯ ವ್ರತ.
ಇವರೊಳಗಾದ ಕ್ರೀಯೆಲ್ಲವು ಸಂಕಲ್ಪದ ಸಂದೇಹ.
ನಿಮ್ಮ ನೀವು ತಿಳಿದುಕೊಳ್ಳಿ.
ಮುಂದಕ್ಕೆ ಏಲೇಶ್ವರದಲ್ಲಿ ರಾಮೇಶ್ವರಲಿಂಗಕ್ಕೆ
ಜಗದ ಲೀಲೆ ಸಂದೇಹವಾಗಿದ್ದಿತ್ತು. /38
ನಾನಾ ಭಾವದ ವ್ರತಂಗಳನರಿವಲ್ಲಿ
ಎಚ್ಚರಿಕೆ ವ್ಯವಧಾನ ಮುಂತಾಗಿ
ತಟ್ಟು-ಮುಟ್ಟು ತಾಗು-ಸೋಂಕುಗಳಲ್ಲಿ ಎಚ್ಚರಿಕೆ ಗುಂದದೆ,
ನಡೆವಲ್ಲಿ, ಒಂದ ಕುರಿತು ನುಡಿವಲ್ಲಿ, ಲಕ್ಷಿಸಿ ಅರಿವಲ್ಲಿ
ಧರೆ ಜಲ ಅನಲ ಅನಿಲಂಗಳಲ್ಲಿ ದೃಕ್ಕು ದೃಶ್ಯ ಏಕವಾಗಿ ವರ್ತಿಸಿ ನಡೆವುದು
ಖಂಡಿತನ ವ್ರತ.
ಆತ ಸಂದೇಹವಿಲ್ಲದ ನಿರಂಗ ಏಲೇಶ್ವರಲಿಂಗವು ತಾನೆ./39
ನಾನಾ ಭೇದದ ವ್ರತವ ಸಾಧಿಸಿ ಭೇದಿಸಿ ವೇಧಿಸುವಲ್ಲಿ,
ಬಾಹ್ಯ ಅಂತರಂಗದಲ್ಲಿ ಉಭಯ ಏಕವಾಗಿ,
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕೊಂಡ ವ್ರತಕ್ಕೆ ಭಿನ್ನಭಾವವಿಲ್ಲವೆ,
ಎಲ್ಲಾ ಎಚ್ಚರಿಕೆಯಲ್ಲಿ ಬಲ್ಲವನಾಗಿ,
ಅರಿದುದ ಬಿಟ್ಟು ಮರದೆನೆಂದು ಮತ್ತೆ ಅರಿದು ನಡೆದೆಹೆನೆಂಬುದು
ಆ ವ್ರತಕ್ಕೆ ಅದೆ ಮರವೆಯಲ್ಲವೆ?
ಜೇಡನ ಮುಂದಣ ನೇಯಿಗೆಯ ನೂಲೆ? ಸಂಪುಟದ ಲೇಖನವೆ?
ಲೋಹದ ಭಾವವೆ?
ಅದು ಕುಂಭದ ಭಿನ್ನದಂತೆ, ಮೌಕ್ತಿಕದ ಸಂದಿನಂತೆ.
ವ್ರತ ತಪ್ಪಿದಲ್ಲಿಯೆ ತಪ್ಪನೊಪ್ಪಲಿಲ್ಲ,
ಏಲೇಶ್ವರಲಿಂಗವಾದಡೂ ಧಿಕ್ಕರಿಸಿ ಬಿಡುವೆನು./40
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು,
ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ.
ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ,
ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ.
ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ.
ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ,
ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ,
ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ
ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ.
ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ.
ಇದಕ್ಕೆ ಎನಗೆ ನಿಶ್ಚಯ.
ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ
ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ./41
ಪರಪಾಕದ್ರವ್ಯವ ಬಿಟ್ಟಲ್ಲಿ
ಬಹುಜಲ, ಹರಿವ ಜಲ ಮುಂತಾದ ಬಹು ನಿರೀಕ್ಷಣೆಯಾದ ಜಲಂಗಳ ಮುಟ್ಟಲಿಲ್ಲ.
ಇಂತೀ ಪಾಕ ತಮ್ಮಾಯತ[ವೆ], ಉದಕ ಅನ್ಯರಾಯತವೆ?
ಮೊಲೆಯ ಮುಚ್ಚಿ ಸೀರೆಯ ತೆರೆದಲ್ಲಿ ಅಪಮಾನವೆಲ್ಲಿ ಅಡಗಿತ್ತು?
ಇಂತೀ ವ್ರತದಂಗವ ನೀವೆ ಬಲ್ಲಿರಿ.
ಇದು ಏಲೇಶ್ವರಲಿಂಗಕ್ಕೆ ಒಪ್ಪದ ಕ್ರೀ. /42
ಬಸವೇಶ್ವರಂಗೆ ಸರ್ವಗುಣ ಶೀಲ,
ಚೆನ್ನಬಸವಣ್ಣಂಗೆ ದಿವ್ಯಜ್ಞಾನಗುಣ ಶೀಲ,
ಪ್ರಭುದೇವರಿಗೆ ಬಸವಣ್ಣ ಚೆನ್ನಬಸವಣ್ಣನ
ಉಭಯಗುಣ ಶೀಲ,
ಮಡಿವಾಳಯ್ಯಂಗೆ ವೀರಗುಣ ಶೀಲ,
ಅಜಗಣ್ಣಂಗೆ ಐಕ್ಯಗುಣ ಶೀಲ,
ಸಿದ್ಧರಾಮಯ್ಯಂಗೆ ಯೋಗಗುಣ ಶೀಲ,
ನಿಜಗುಣಂಗೆ ಆತ್ಮಗುಣ ಶೀಲ,
ಚಂದಯ್ಯಂಗೆ ವೈರಾಗ್ಯಗುಣ ಶೀಲ,
ಘಟ್ಟಿವಾಳಂಗೆ ತ್ರಿವಿಧಗುಣ ಶೀಲ,
ಮೋಳಿಗಯ್ಯಂಗೆ ಭೇದಗುಣ ಶೀಲ,
ಅಕ್ಕಗಳಿಗೆ ನಿರ್ವಾಣಗುಣ ಶೀಲ,
ಮಿಕ್ಕಾದ ಪ್ರಮಥರಿಗೆಲ್ಲಕ್ಕೂ ಸ್ವತಂತ್ರಗುಣ ಶೀಲ.
ಎನಗೆ ಏಲೇಶ್ವರಲಿಂಗವು ಕೊಟ್ಟುದೊಂದೆ ವಿಶ್ವಾಸಗುಣ ಶೀಲ. /43
ಬಾವಿ ಭಾಜನ ಚಿಲುಮೆ ಪರ್ಣ ಫಲ ಸರ್ವಸಯದಾನ ಸಂಗ್ರಹಗಳಲ್ಲಿ
ಲಿಂಗಮುಖವಾಗಿ ತಂದ ಮತ್ತೆ,
ಮನೆಯಲ್ಲಿ ಲಿಂಗಬಾಹ್ಯ ಕಂಡರೆಂದು ಅವರಿಗೆ ಲಿಂಗವ ಕಟ್ಟಬಹುದೆ?
ಆ ಲಿಂಗದ್ರವ್ಯವ ಸೂಸಬಹುದೆ?
ಲಿಂಗಾಂಗಿಗಳು ನೀವೆ ಉಭಯದ ಸಂದ ತಿಳಿದುಕೊಳ್ಳಿ.
ಕಟ್ಟಿದ ಘಟ ತಪ್ಪದಂತೆ, ಲಿಂಗದ್ರವ್ಯ ಸೂಸದಂತೆ,
ಸಂದೇಹದ ಸಂಬಂಧದಲ್ಲಿ ಸಾಯದಂತೆ, ಸುಸಂಗವ ತಿಳಿದುಕೊಳ್ಳಿ
ಏಲೇಶ್ವರಲಿಂಗದಲ್ಲಿ ವ್ರತವನಂಗೀಕರಿಸಬಲ್ಲಡೆ./44
ಬೇಡಿ ಮಾಡುವ ಭಕ್ತನ ಇರವೆಂತೆಂದಡೆ:
ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು,
ಸತಿಸುತರಿಗೆಂದೆನ್ನದೆ,
ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ,
ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ
ಬೇಡಿ[ದ]ನೆಂಬ ಭಾವವಿಲ್ಲ.
ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ./45
ಭಕ್ತಂಗೆ ಗುರುಪ್ರಸಾದ, ಮಾಹೇಶ್ವರಂಗೆ ಲಿಂಗಪ್ರಸಾದ,
ಪ್ರಸಾದಿಗೆ ಜಂಗಮಪ್ರಸಾದ, ಪ್ರಾಣಲಿಂಗಿಗೆ ಜ್ಞಾನಪ್ರಸಾದ,
ಶರಣಂಗೆ ಪ್ರಸನ್ನ ಪ್ರಸಾದ, ಐಕ್ಯಂಗೆ ನಿಜಪ್ರಸಾದ.
ಹೀಂಗಲ್ಲದೆ ರಣದ ವೀರರಂತೆ ಸೂರೆಗೂಳಿನಲ್ಲಿ ಅದಾರ ಪ್ರಸಾದ ಹೇಳಾ?
ತ್ರಿವಿಧಶೇಷಪ್ರಸಾದವ ಕೊಂಬಲ್ಲಿ
ಸಮಭೇದವನರಿತು, ಪ್ರಸಾದದ ಕ್ರಮಭೇದವ ಕಂಡು,
ಆಯತ ಸ್ವಾಯತ ಸನ್ನಹಿತವೆಂಬ ತ್ರಿವಿಧ ಕ್ರೀಯ
ವಿಚಾರಿಸಿ ನಡೆವುದು ಷಟ್ಸ್ಥಲದ ಕ್ರೀ,
ಆಚಾರಕ್ಕೆ ಇಕ್ಕಿದ ಗೊತ್ತು, ಏಲೇಶ್ವರಲಿಂಗವು ವ್ರತಸ್ಥನಾದ ಯುಕ್ತಿ./46
ಭಕ್ತರಾಶ್ರಯಕ್ಕೆ ಭಕ್ತರು ಹೋಹಲ್ಲಿ
ಅವರ ನಿತ್ಯಕೃತ್ಯವ ವಿಚಾರಿಸಿ, ತಮ್ಮ ನೇಮಕ್ಕೆ ಅವರ ಭಾವವೊಂದಾದಲ್ಲಿ
ತಮ್ಮ ಕೃತ್ಯದ ಒಡೆಯರು ಮುಂತಾಗಿ ಹೋಗಬೇಕಲ್ಲದೆ,
ಆ ಭಕ್ತರ ಆಶ್ರಯಕ್ಕೆ ಒಡೆಯರ ಕಟ್ಟಳೆ ಉಂಟೆಂದು,
ತಮ್ಮ ಒಡೆಯರ ಬಿಟ್ಟು ತುಡುಗುಣಿತನದಲ್ಲಿ ಉಂಬವಂಗೆ_
ಇಂತಿ ಬಿಡುಮುಡಿಯ [ಭ]ಂಡರನೊಪ್ಪ ಏಲೇಶ್ವರಲಿಂಗವು./47
ಭಕ್ತಿಯಿಂದ ನಡೆದೆಹೆನಂಬಲ್ಲಿ ವ್ರತಲಕ್ಷವುಂಟು, ಅಲಕ್ಷವುಂಟು.
ಮಿಕ್ಕಾದ ಸರ್ವಗುಣಂಗಳಲ್ಲಿ ಹೊತ್ತು ಹೋರಿಹೆನೆಂದಡೆ ಭಕ್ತಿ ಲಕ್ಷಣ.
ವಿಶ್ವಮಯಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಚಿತ್ತವೊಪ್ಪಿ ನಡೆವ ಕೃತ್ಯವ ಹೊತ್ತು,
ಆ ಕೃತ್ಯ ತಪ್ಪದೆ ನಿಶ್ಚಯವಾಗಿರಬೇಕು.
ಇದು ಏಲೇಶ್ವರಲಿಂಗಕ್ಕೆ ವ್ರತದ ಗುತ್ತಗೆಯ ನೇಮ. /48
ಭಾಂಡ ಭಾಜನ ಉಪಕರಣ ವಸ್ತ್ರ ಮುಂತಾದ ಸಕಲದ್ರವ್ಯಂಗಳ
ಮನದ ಕಟ್ಟಿಂಗೆ ತಟ್ಟು-ಮುಟ್ಟನರಿತು
ಅಹುದಾದುದನೊಪ್ಪಿ, ಅಲ್ಲದುದ ಬಿಟ್ಟು,
ಇದಿರು ಮೆಚ್ಚುವಂತೆ ಕಪಟ ಅನುಕರಣೆಗೆ ಒಳಗಾಗದೆ,
ಲಿಂಗ ಮೆಚ್ಚುವಂತೆ, ಶರಣರು ಒಪ್ಪುವಂತೆ
ನಿಂದ ಸದ್ಭಕ್ತನಂಗವೆ ಏಲೇಶ್ವರಲಿಂಗವು./49
ಮನಕ್ಕೆ ಬಂದಂತೆ ನೇಮವ ಮಾಡಲಿಲ್ಲ,
ಆರಾರ ಅನುವ ಕಂಡು ಆ ನೇಮವನನುಕರಿಸಲಿಲ್ಲ.
ತಾನಾಚರಿಸುವ ಸತ್ವ, ತಾ ಹಿಡಿದ ವ್ರತನೇಮದ ನಿಸ್ಚಯ.
ಇಷ್ಟನರಿಯದೆ ದೃಷ್ಟವ ಕಂಡು ಘಟ್ಟಿಯ ತನದಲ್ಲಿ ಹೋರುವ
ಮಿಟ್ಟೆಯ ಭಂಡರನೊಪ್ಪ ಏಲೇಶ್ವರಲಿಂಗವು./50
ಮನಕ್ಕೆ ವ್ರತವ ಮಾಡಿ, ತನುವಿಗೆ ಕ್ರೀಯ ಮಾಡಬೇಕು.
ಇಂದ್ರಿಯಂಗಳಿಗೆ ಕಟ್ಟನಿಕ್ಕಿ, ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು.
ಹೀಂಗಲ್ಲದೆ ವ್ರತಾಚಾರಿಯಲ್ಲ.
ಮನಕ್ಕೆ ಬಂದಂತೆ ಹರಿದು, ಬಾಯಿಗೆ ಬಂದಂತೆ ನುಡಿದು,
ಇಂತೀ ನಾ ವ್ರತಿಯೆಂದರೆ ಮೂಗನರಿಯದೆ ಮಾಣ ಏಲೇಶ್ವರಲಿಂಗನು./51
ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ,
ಸಕಲಸುಖಭೋಗಂಗಳ ಹಿಡಿವಲ್ಲಿ,
ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ,
ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು./52
ಮಾಡುವ ಧರ್ಮಕ್ಕೆ ಅಸುರದ ಕರ್ಮವೇತಕ್ಕೆ?
ಭಕ್ತಿಯ ಮಾಡಿ ಸತ್ಯವನಾಚರಿಸಿಹೆನೆಂಬಲ್ಲಿ
ತಾ ಮಾಡುವ ದ್ರವ್ಯಕ್ಕೆ ಆದರಣೆಯಿಂದ ಆದರಿಸಬೇಕು,
ಏಲೇಶ್ವರಲಿಂಗವನರಿವುದಕ್ಕೆ./53
ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ.
ಸಪ್ಪೆಯ ವ್ರತ ನಿಶ್ಚಿಂತ, ಅದು ದೋಷನಾಶನ,
ಇಂತೀ ಉಭಯ ವ್ರತವೆ ಕಟ್ಟು.
ಮಿಕ್ಕಾದ ಅರುವತ್ತೆರಡು ಶೀಲ ಸ್ವತಂತ್ರಸಂಬಂಧ,
ಅವು ಎಂಭತ್ತನಾಲ್ಕು ಲಕ್ಷ ಜೀವವ್ರತದ ಸಂಬಂಧ.
ವ್ರತವ ಹಿಡಿದಲ್ಲಿ, ಆ ವ್ರತಕ್ಕೆ ಅನುಸರಣೆ ಬಂದಲ್ಲಿ,
ಬಂದಿತು ಬಾರದೆಂಬ ಸಂದೇಹಕ್ಕೆ ಮುನ್ನವೆ
ಆತ್ಮ ನಿರಂಗವಾಗಬಲ್ಲುದೊಂದೆ ವ್ರತ.
ಮತ್ತೆ ಮಿಕ್ಕಾದವೆಲ್ಲವೂ ಸಂದಣಿಯ ತಗಹು,
ಪರಿಸ್ಪಂದದ ಕೊಳಕು, ಲಂದಣಿಗರ ಬಂಧದ ಮಾತಿನ ಮಾಲೆ.
ಇಂತೀ ಸಂಗ ದುಸ್ಸಂಗವನರಿತು ಹಿಂಗುವದ ಹಿಂಗಿ,
ತನ್ನ ಸಂಗಸುಖಕ್ಕೆ ಬಂದುದ ಕೂಡಿಕೊಂಡು,
ವ್ರತಭಂಗಿತನಲ್ಲದೆ ನಿರುತ ಸ್ವಸಂಗಿಯಾದ ಸರ್ವಾಂಗಸಂಬಂಧ ಶೀಲವಂತಂಗೆ,
ಬೇರೊಂದುವಿಲ್ಲ, ಏಲೇಶ್ವರಲಿಂಗವು ತಾನೆ. /54
ಲಿಂಗಭಕ್ತ ಗುರುಪ್ರಸಾದವ ಕೊಳಲಿಲ್ಲ,
ಜಂಗಮಭಕ್ತ ಲಿಂಗಪ್ರಸಾದವ ಕೊಳಲಿಲ್ಲ,
ಮಹಾಭಕ್ತ ಜಂಗಮಪ್ರಸಾದವ ಕೊಳಲಿಲ್ಲ,
ನೇಮದ ಕೃತ್ಯದ ಮಹಾವ್ರತಿ ಗಣಪ್ರಸಾದವ ಕೊಳಲಿಲ್ಲ.
ಅದೆಂತೆಂದಡೆ:
ಗುರುಭಕ್ತಂಗೆ ಗುರುವಿನಲ್ಲಿಯೆ ಮುಕ್ತಿ, ಲಿಂಗಭಕ್ತಂಗೆ ಲಿಂಗದಲ್ಲಿಯೆ ಮುಕ್ತಿ,
ಜಂಗಮಭಕ್ತಂಗೆ ಜಂಗಮದಲ್ಲಿಯೆ ಮುಕ್ತಿ.
ಮಹಾಭಕ್ತಂಗೆ ಶರಣರಲ್ಲಿಯೆ ಮುಕ್ತಿ ಸಂಬಂಧ.
ಇಂತೀ ಸಮಯ [ಗ]ಣಸಮೂಹ ಕೂಡಿದಲ್ಲಿ ಆ ಕಾರುಣ್ಯವೆ ಮಹಾಮುಕ್ತಿ.
ಆ ಮುಕ್ತಿಯೆ ಅವಿಮುಕ್ತಿಕ್ಷೇತ್ರಂಗಳಾದಲ್ಲಿ ಪ್ರಸನ್ನಪ್ರಸಾದವಾಯಿತ್ತು.
ಆ ಲಿಂಗವ್ರತದಂಗವ ತಾಳಲಾಗಿ ಏಲೇಶ್ವರಲಿಂಗವು ಸರ್ವಶೀಲವಂತನಾದ./55
ವ್ರತವನಂಗೀಕರಿಸಿದ ಮಹಾಭಕ್ತಂಗೆ
ಆತ್ಮತೇಜ ಅಹಂಮಮತೆ ರಾಗದ್ವೇಷಂಗಳುಂಟೆರಿ
ಗುರುಲಿಂಗಜಂಗಮ ಮಹಾಭಕ್ತರಲ್ಲಿ ಭೃತ್ಯಂಗೆ ಭೃತ್ಯನಾಗಿ,
ವ್ರತಸ್ಥರಲ್ಲಿ, ಮಿಕ್ಕಾದ ಸದ್ಗತಿವಂತರಲ್ಲಿ ಅತಿಶಯವಾಗಿರಬೇಕು,
ಏಲೇಶ್ವರಲಿಂಗವನರಿಯಬಲ್ಲಡೆ./56
ವ್ರತಶುದ್ಧವಾಗಿ ನಡೆವಾತನೆ ಎನಗೆ ಅಧೀನದರಸು,
ಪಂಚಾಚಾರ ಶುದ್ಧವಾಗಿ ನಡೆವಾತನೆ ಎನಗೆ ಸದ್ಗರುಮೂರ್ತಿ,
ಆವಾವ ನೇಮಕ್ಕೂ ಭಾವಶುದ್ಧವಾಗಿ ಇಪ್ಪ ಮಹಾಭಕ್ತನೆ
ಏಲೇಶ್ವರಲಿಂಗವು ತಾನೆ./57
ವ್ರತಸಂಬಂಧಭಾವಿ ಒಡೆಯರು
ಭಕ್ತರ ಮನೆಗೆ ಒಡಗೂಡಿ ಹೋಗಿ
ಅವರ ಮಡದಿಯರ ಕಂಡು ಮನವ ಬಿಡೆಯವ ಮಾಡಿದಡೆ,
ಅವರೊಡವೆಗೆ ವಂಚಿಸಿದಡೆ, ಸುಡುವನೊಡಲ.
ಅವ ಮೃಡಭಕ್ತನಲ್ಲ, ಇಹ ಪರಕ್ಕೆ ದೂರ,
ಏಲೇಶ್ವರಲಿಂಗಕ್ಕೆ ಮುನ್ನವೆ ದೂರ./58
ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ
ಮುಂತಾದ ಕಾಯಕವ ಬಿಟ್ಟು,
ತನ್ನ ಸ್ವಕಾಯಕದಿಂದ ಬಂದು ಒದಗಿದ ದ್ರವ್ಯವ ಒಡೆಯನ ಮುಂದಿಟ್ಟು,
ತಾನೊಡಗೂಡಿ ಕೊಂಡ ಪ್ರಸಾದಿಯ ಪ್ರಸಾದವ
ಎನ್ನೊಡೆಯನ ಮುಂದಿಟ್ಟು
ಏಲೇಶ್ವರಲಿಂಗಕ್ಕೆ ಕೊಡುವೆನು. /59
ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು.
ಅದೆಂತೆಂದಡೆ:
ಬಾಲರು ಭ್ರಾಮಕರು ಚೋರರು ಕಟುಕರು
ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_
ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ?
ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು.
ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು.
ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ
ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ,
ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ.
ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ,
ಭಕ್ತಿಗೆ ಇದಿರೆಡೆಯಿಲ್ಲ,
ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ.
ಇದು ಕಟ್ಟಾಚಾರಿಯ ದೃಷ್ಟ,
ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ./60
ಶಸ್ತ್ರ, ಸಮಾಧಿ, ನೀರು, ನೇಣು, ಮಿಕ್ಕಾದ ವಿಷ ಔಷಧಿಗಳಿಂದ
ವ್ರತ ತಪ್ಪಿತೆಂದು ಆತ್ಮಘಾತಕವ ಮಾಡಬಹುದೆ?
ವ್ರತ ತಪ್ಪಿತ್ತೆಂದು ತಾನಳಿಯಬಹುದೆ?
ಅರಿವು ತೋರಿದಲ್ಲಿಯೆ ಆ ಘಟವ ಮರೆದು ಲಿಂಗವ ಬೆರಸಬೇಕಲ್ಲದೆ.
ಹೀಗಲ್ಲದೆ ಊರೆಲ್ಲರ ಕೂಡಿ ಲಾಗಿಗೆ ಸತ್ತೆಹೆನೆಂದು,
ಬೇಡಾ ಎಂದಡೆ ಉಳಿದೆಹೆನೆಂಬ ವಿದಾಂತರ ಲಾಗಲ್ಲಾ.
ಬಂಧನವಿಲ್ಲದೆ ಲಿಂಗವ ಒಡಗೂಡಬೇಕು ಏಲೇಶ್ವರಲಿಂಗದಲ್ಲಿಗಾಗಿ./61
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಮಪ್ಪ ಪ್ರಸಾದಂಗಳನರಿವಲ್ಲಿ,
ಆಯತ ಸ್ವಾಯತ ಸನ್ನಿಹಿತ ಸಮಯೋಚಿತ ಪ್ರಸಾದವ ಕೊಂಬಲ್ಲಿ,
ಗುರುಭಕ್ತನಾದಲ್ಲಿ ಆ ವಿವರವ ತಿಳಿಯಬೇಕು,
ಲಿಂಗಭಕ್ತನಾದಲ್ಲಿ ಆ ಗುಣವನರಿಯಬೇಕು,
ಜಂಗಮಭಕ್ತನಾದಲ್ಲಿ ಆ ಉಭಯವ ವಿವರಿಸಲಿಲ್ಲ.
ಮಹಾಪ್ರಮಥರಲ್ಲಿ ಪ್ರಸನ್ನವಾಗಲಾಗಿ ಗುರುಲಿಂಗಜಂಗಮ ಮೂರೊಂದಾಯಿತು.
ಆ ತ್ರಿವಿಧಪ್ರಸಾದವನರಿತು ಗಣಪ್ರಸಾದವ ಕೊಂಬುದು,
ಆ ಗಣ ಸ್ವಸ್ಥವಾಗಿ ಮಹಾಪ್ರಸಾದವಾಯಿತ್ತು.
ಆ ಪ್ರಸಾದವ ಕೊಂಡು ಏಲೇಶ್ವರಲಿಂಗವು ಸರ್ವಶೀಲವಂತನಾದ./62
ಸಂಚಿತ ತನುವಿನ ಕ್ರೀ, ಪ್ರಾರಬ್ಧ ಆತ್ಮನ ಕ್ರೀ, ಆಗಾಮಿ ಅರಿವಿನ ಕ್ರೀ.
ಇಂತೀ ತ್ರಿವಿಧಕ್ರೀಯ ನೆರೆ ಅರಿದವಂಗೆ ಹಿಂದಣ ತಾಗು-ಮುಂದಣ ಸೋಂಕು.
ಮತ್ತೆಲ್ಲಾ ಎಡೆಯಲ್ಲಿ ನಿಂದ ವ್ರತದ ಸಂಬಂಧವ ಬಲ್ಲ ಆ ವ್ರತ
ಅರುವತ್ತೈದನೆಯ ಕ್ರೀ.
ಆ ಭಾವ ಆರೋಪವಾದಲ್ಲಿ ಏಲೇಶ್ವರಲಿಂಗನು ವ್ರತಸ್ಥನಾದ./63
ಸಂದೇಹವುಂಟಾದಲ್ಲಿ
ಆ ವ್ರತವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಾಣಿಸಿಕೊಂಡು
ಅನುಮಾನದಲ್ಲಿ ಅರಿದು ವಿಚಾರಿಸಿ,
ಮರವೆ ಅಹಂಕಾರದಿಂದ ಬಂದ ಉಭಯವ ತಿಳಿದು
ದೋಷವಿಲ್ಲದಂತೆ ಪರಿದೋಷವ ಕಂಡು,
ಶರಣತತಿ ಮುಂತಾಗಿ ಪ್ರಾಯಶ್ಚಿತ್ತವೆಂಬುದು ವರ್ತಕ ವ್ರತ.
ಇಂತಿವನರಿದು ಅಲ್ಲ-ಅಹುದೆನ್ನದೆ, ಎಲ್ಲರ ಮನಕ್ಕೆ ವಿರೋಧವ ತಾರದೆ,
ಅಲ್ಲಿ ಆತ್ಮನ ಬೆರೆಯದೆ,
ಕಲ್ಲಿಯ ಮಧ್ಯದಲ್ಲಿ ಜಾರಿದ ಅಪ್ಪುವಿನಂತೆ
ಉಭಯದಲ್ಲಿಗೆ ಕಾಣಿಸಿಕೊಳ್ಳದ ವ್ರತಾಂಗಿ [ಎ]ಲ್ಲಿಯೂ ನಿಸ್ಸೀಮ.
ಅದು ಅರುವತ್ತಮೂರನೆಯ ಶೀಲ,
ಅರಿಬಿರಿದಿನ ಭಾವ ಏಲೇಶ್ವರಲಿಂಗಕ್ಕೆ./64
ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ,
ಅಪ್ಪುಲವಣ ಮೃತ್ತಿಕೆಲವಣ ಸ್ಥಾವರಲವಣ_ ಇಂತೀ ತ್ರಿವಿಧಲವಣಂಗಳಲ್ಲಿ
ಅಧಮ ವಿಶೇಷಂಗಳನರಿದು, ಹಿಡಿವುದ ಹಿಡಿದು ಬಿಡುವುದ ಬಿಟ್ಟು,
ಅಂಗದ ಕ್ರೀ, ಮನ, ಅಂಗೀಕರಿಸುವ ವರ್ತನ_
ಈ ತ್ರಿವಿಧಕ್ಕೆ ಲಿಂಗ ಸುಯಿದಾನಿಯಾಗಿರಬೇಕು ಏಲೇಶ್ವರಲಿಂಗಕ್ಕೆ./65
ಸತಿ ಸುತ ಪುರುಷರಿಗೆಲ್ಲಕ್ಕೂ ಬೇರೊಂದು ಒಡಲುಳ್ಳನ್ನಕ್ಕ,
ವ್ರತ ಕ್ರೀಭಾವ ಬೇರಾದಲ್ಲಿ ಬೇರೆ ಒಬ್ಬ ಒಡೆಯರ ಕಟ್ಟಣೆ ಬೇಕು.
ಇದು ಸತ್ಪಥಕ್ಕೆ ಎಯ್ದುವ ಹಾದಿ, ವ್ರತಸ್ಥಲದ ಭಕ್ತಿಯುಕ್ತಿ,
ಏಲೇಶ್ವರಲಿಂಗವ ಮುಟ್ಟುವ ಗೊತ್ತು./66
ಸದ್ಭಾವವ್ರತಿ, ವೀರವ್ರತಿ, ಧೀರವ್ರತಿ, ದೃಷ್ಟವ್ರತಿ,
ನಿಷ್ಠೆಯವ್ರತಿ, ಸರ್ವಜ್ಞಾನವ್ರತಿ, ಸಂತೋಷವ್ರತಿ,
ಸಂಬಂಧವ್ರತಿ, ಸಂಪದವ್ರತಿ, ಸರ್ವಾಂಗವ್ರತಿ,
ಪರಿಪೂರ್ಣವ್ರತಿ, ಸರ್ವಜೀವದಯಾವ್ರತಿ,
ಸಕಲವ್ರತಿ, ನಿಃಕಲವ್ರತಿ,
ಪರವ್ರತಿ, ಪರಬ್ರಹ್ಮವ್ರತಿ, ಪರತತ್ತ್ವವ್ರತಿ, ಪರವಸ್ತುವ್ರತಿ,
ಪಿಂಡವ್ರತಿ, ಪಿಂಡಜ್ಞಾನವ್ರತಿ,
ಸ್ಥೂಲವ್ರತಿ, ಸೂಕ್ಷ್ಮವ್ರತಿ, ಕಾರಣವ್ರತಿ,
ಅಂಗವ್ರತಿ, ಲಿಂಗವ್ರತಿ, ಧನವ್ರತಿ, ಧಾನ್ಯವ್ರತಿ,
ದೃಕ್ಕಿಂಗೊಳಗಾದ, ತನ್ನ ಕ್ರೀಗನುಕೂಲವಾದ
ಸಂಬಂಧವ್ರತಂಗಳ ಆರೋಪಿಸಿ ನಿಂದಲ್ಲಿ
ನಾನಾ ಸಮೂಹದ ಸತ್ಕ್ರೀಗಳನರಿತು,
ರೋಚಕ ಅರೋಚಕ ಮಾರ್ಗ ಅಮಾರ್ಗದ ಉಭಯದ ತತ್ತನರಿದು
ಸಕ್ರೀಯ ಆದಿಯನರಿದು, ನಿಃಕ್ರೀಯ ನಿಜವ ಭೇದಿಸಿ ಕಂಡು
ಸರ್ವದಯಾಸಂಪನ್ನನಾಗಿ ಸರ್ವಾಂಗಲಿಂಗಿಯಾಗಿ
ಸಕಲವ್ರತಮಹಾರಾಜ್ಯಸ್ಥನಾಗಿ ನಿಂದ ಏಲೇಶ್ವರಲಿಂಗಕ್ಕೆ ನಾನಿಳಿದ ಬಂಟ.
ವ್ರತವನರಿದು ಮರೆದವರ ಸ್ವಪ್ನದಲ್ಲಿ ಕಂಡಡೆ
ಅವರಿಗಿಕ್ಕಿದ ತೊಡರು ಎಲೆದೊಟ್ಟ ನುಂಗಿದೆನು. /67
ಸರ್ವವ್ಯವಧಾನಂಗಳಲ್ಲಿ ಆವಾವ ವ್ರತಭಾವವ ತಾನಂಗೀಕರಿಸಿದಲ್ಲಿ,
ಒಡೆಯರು ಭಕ್ತರಠಾವಿನಲ್ಲಿ ಉಣೆಯಕ್ಕೆ ಎಡೆಗೊಡದೆ,
ಕ್ರೀ ಮುಂಚು, ಅರಿವ ಆತ್ಮ ಹಿಂಚಾಗಿ, ಓಸರವಿಲ್ಲದ ತ್ರಾಸಿನಂತೆ,
ಹಿಡಿದ ವ್ರತಕ್ಕೆ, ಆಚರಣೆಗೆ, ಒಡಗೂಡುವ ವಸ್ತುವಿಗೆ,
ಬೇರೊಂದೆಡೆಯೆಂದು ಕಲ್ಪಿತ ಹಿಂಗಿದವಂಗೆ,
ಕೊಂಡ ವ್ರತದಲ್ಲಿ ಆತ್ಮ ನಿಂದವಂಗೆ,
ಆತನ ಸಂಗವೆ ಏಲೇಶ್ವರಲಿಂಗದ ಕೂಟ./68
ಸರ್ವವ್ರತಸ್ಥರ ನೇಮಸ್ಥಲದ ಕಟ್ಟಳೆ:
ಅಂಗವು ವ್ರತ, ಲಿಂಗವು ವ್ರತ, ಭಾವವು ವ್ರತ.
ಇಂತೀ ತ್ರಿವಿಧವ್ರತವ ಆರೋಗಿಸಿ ನಡೆವಲ್ಲಿ
ಬಾಹ್ಯಕ್ರೀಯಲ್ಲಿ ಲಿಂಗವ ಭಾವಿಸುವಲ್ಲಿ, ದೃಷ್ಟಿ ನಟ್ಟು ನೋಡುವಲ್ಲಿ
ತನ್ನ ವ್ರತದಾಳಿ ಮಿಶ್ರವಿಲ್ಲದೆಯಿಪ್ಪುದು
ಏಲೇಶ್ವರಲಿಂಗದ ವ್ರತದಂಗದ ಭಾವ. /69
ಸರ್ವಸಮಯಾಚಾರ, ಸಕಲಭೋಗಸಮಯಾಚಾರ,
ಇಂತೀ ಭೇದಂಗಳಲ್ಲಿ ಕೊಡುವ-ಕೊಂಬುದ-ಒಡಗೂಡುವುದ,
ಒಡೆಯಂಗೆ ಕೊಟ್ಟು,
ಅವರ ಅಡಿವಿಡಿದು ಒಡೆಯನ ನಿರೂಪದಿಂದ
ತನ್ನ ಅಡಿಯೆಡೆ ಕೊಡುವ – ಕೊಂಬುವ ಸುಖಭೋಗಂಗಳು ಮುಂತಾಗಿ
ಇವ ಒಡೆಯಂಗಿತ್ತು ತಾ ಕೊಂಬುದು, ಒಡೆಯರ ಕಟ್ಟಳೆ.
ಹೀಗಲ್ಲದೆ ಹಾಸ ತೆಗೆದ ತುಡುಗುಣಿಯಂತೆ ಕಡಿವಂಗೆ
ಮತ್ತೆ ಒಡೆಯರ ಕಟ್ಟಳೆಯಿಲ್ಲ,
ಏಲೇಶ್ವರಲಿಂಗಕ್ಕೆ ದೂರವೆಂಬೆ. /70
ಸರ್ವಸಮೂಹದಲ್ಲಿ ಏಕಪ್ರಸಾದವ ಕೊಂಬಲ್ಲಿ,
ತಮ್ಮ ಕ್ರೀ ಭಾವ ಅರಿವು ಆಚರಣೆಗೆ ಒಳಗಾಗಿ,
ಅರ್ಥ ಪ್ರಾಣ ಅಭಿಮಾನಂಗಳಲ್ಲಿ ಕಟ್ಟುಮೆಟ್ಟಿಲ್ಲದೆ,
ತಥ್ಯ ಮಿಥ್ಯಾದಿಗಳಿಗೆ ಹೊತ್ತು ಹೋರದೆ, ಏಕ ಪ್ರಸಾದವ ಕೊಂಡಂತೆ
ಆತ್ಮ ಏಕವಾಗಿಪ್ಪುದು ವಿಹಿತಕ್ರೀ.
ಈ ಗುಣ ಏಲೇಶ್ವರಲಿಂಗನು ಸರ್ವಶೀಲವಂತನಾಗಿ ಕೊಂಬ ಪ್ರಸಾದ./71
ಸರ್ವಾಂಗವಾಡ, ಮುಖವಾಡ, ಆತ್ಮವಾಡ_
ಇಂತೀ ವ್ರತನೇಮದ ಕಟ್ಟಿನಲ್ಲಿ ಇಪ್ಪನಿರವು:
ತನ್ನ ನೇಮಕ್ಕೆ ನೇಮವ ಅಂಗೀಕರಿಸಿದವನಲ್ಲಿ
ಅಂಗಬಂಧವ ತೆಗೆದು ತೋರುವುದು,
ಮುಖಬಂಧವ ತೆಗೆದು ನೋಡುವುದು,
ಆತ್ಮಬಂಧವ ಬಿಟ್ಟು ಮಾತನಾಡುವುದು.
ಇಂತೀ ಭಾಷೆಗೆ ಭಾಷೆ ಒಳಗಾದವನಲ್ಲಿ
ಇದು ನಿಹಿತದ ವ್ರತ ಏಲೇಶ್ವರಲಿಂಗಕ್ಕೆ/72
ಹಿಡಿದ ವ್ರತ ಘಟಿಸಿತ್ತೆಂದು
ಮುಂದೆ ಒಂದು ವ್ರತಕ್ಕೆ ಅಡಿಯಿಡುವ ಪರಿಯಿನ್ನೆಂತೊ?
ಆ ವ್ರತ ತನಗೆ ಸಂಭವಿಸಿ ನಿಂದಲ್ಲಿ
ಹೆಣ್ಣಿಗೆ ವಿಷಯ ಹೊನ್ನು ಮಣ್ಣಿಗೆ ಅಪೇಕ್ಷೆ ಮತ್ತೆ,
ಸರ್ವೆಂದ್ರಿಯಂಗಳಲ್ಲಿ ಹಿಂಗಿ ನಿಂದ ವ್ರತದಂಗವಾವುದು?
ತಾ ನಿಂದ ವ್ರತ ಒಂದಂಗದಲ್ಲಿ ಸಲೆ ಸಂದುದು.
ಆ ಭಾವದಲ್ಲಿ ಸರ್ವವ್ರತ ಸಂದಿತ್ತು, ಏಲೇಶ್ವರಲಿಂಗಕ್ಕೆ./73
ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು
ಉಂಡೆಹೆನೆಂಬ ಜಗಭಂಡೆಯ ನೋಡಾ.
ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ?
ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು.
ಇಂತೀ ಸಂಸಾರದ ಘಾತಕತನದ ವ್ರತ
ಮೀಸಲ ಶುನಕ ಮುಟ್ಟಿದಂತೆ
ಅದು ಏಲೇಶ್ವರಲಿಂಗಕ್ಕೆ ದೂರ./74