Categories
ವಚನಗಳು / Vachanagalu

ಒಕ್ಕಲಿಗ ಮುದ್ದಣ್ಣ ವಚನಗಳು

1733
ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ,
ವಿಶ್ವಾಸವೆಂಬ ಬತ್ತ ಒಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಬಿಮ ಜೀವಧನದೊಡೆಯ.

1734
ಆವ ವರ್ಣವ ಕೂಡಿದಡೂ ಅಪ್ಪುಮಯ ತಪ್ಪದಂತೆ,
ಸರ್ವಗುಣಸಂಪನ್ನನಾದಲ್ಲಿ ಭಕ್ತನೆಂದಡೂ ತಾನಾಗಿ,
ಮಹೇಶ್ವರ[ನೆಂ]ದಡೂ ತಾನಾಗಿ,
ಪ್ರಸಾದಿಯೆಂದಡೂ ತಾನಾಗಿ, ಪ್ರಾಣಲಿಂಗಿಯೆಂದಡೂ ತಾನಾಗಿ,
ಶರಣನೆಂದಡೂ ತಾನಾಗಿ, ಐಕ್ಯನೆಂದಡೂ ತಾನಾಗಿ,
ಒಂದನಹುದು ಒಂದನಲ್ಲಾ ಎನ್ನದೆ
ಕತ್ತಲೆಯಲ್ಲಿ ಹಾಲಕೊಂಡಡೆ ಸಿಹಿ ತಪ್ಪುವುದೆ?
ಸತ್ತು ಚಿತ್ತು ಆನಂದವೆಂಬ ಗೊತ್ತ ಹರಿದವಂಗೆ
ತಟ್ಟು ಮುಟ್ಟು ಹತ್ತುವ ಭಾವ ಒಂದೂ ಇಲ್ಲ
ಕಾಮಭೀಮ ಜೀವಧನದೊಡೆಯ ತಾನು ತಾನೆ.

1735
ಕುಂಭದ ಮಳೆ ಹೊಯ್ಯಿತ್ತು.
ಮೂರಂಗದ ನೇಗಿಲ ತರಿಯಬೇಕು.
ಆರಂಗದ ಭೂಮಿಯಲ್ಲಿ ಅರಸಲಾಗಿ ಒಂದೆ ಮರ ಹುಟ್ಟಿತ್ತು.
ಹುಟ್ಟುವಾಗ ಮರ ಮೂರು ಕವೆ, ಅಲ್ಲಿಂದತ್ತಾರು ಕವೆಯಾಯಿತ್ತು.
ಆ ಆರರ ಮಧ್ಯದಲ್ಲಿ ಮೂವತ್ತಾರು ಕವೆಯಾಯಿತ್ತು.
ಆ ಮೂವತ್ತಾರರ ಮಧ್ಯದಲ್ಲಿ ನೂರೊಂದು ಕೊಂಬೆ ಶಾಖೆಗೂಡಿತ್ತು.
ಆ ಮರನನೇರಿ ಹಿಂದುಮುಂದಣ ಕೊಂಬೆ ಕಳೆದು
ಕೊಡಲಿಯಾಡೋದಕ್ಕೆ ತೆರಪಮಾಡಿ, ನಡುವಣ ಕೊಂಬೆ ಕಡೆವುತ್ತಿರಲಾಗಿ,
ಒಂದು ಹೊಯಿಲಿಗೆ ಇದರಂಗದ ತೊಪ್ಪೆ ಹರಿದು,
ಉಭಯಕ್ಕೆ ದಿಂಡು ಹರಿದು,
ತ್ರಿವಿಧಕ್ಕೆ ಗರ್ಭಗೆಚ್ಚು ಖಂಡಿತವಾಯಿತ್ತು.
ಮರ ತಟ್ಟಾರಬೇಕೆಂದು ಇರಿಸಿ ಬಂದೆ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

1736
ಕ್ರೋಧ ಬಂದಲ್ಲಿ ಕೊಲ್ಲೆಂಬುದು,
ದಯೆ ಬಂದಲ್ಲಿ ಬೇಡಾ ಎಂಬುದು,
ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ?
ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು,
ಅದನರಿವುದು ಅದೇನು ಹೇಳಾ?
ಆತ್ಮನರಿವೊ ಅದೇನು ಮರವೆಯೊ?
ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ
ಪುಸಿಯಹುದೊಂದೊ ಎರಡೊ?
ಅರಿದಡೆ ತಾನೆಂಬ ಮರೆದಡೆ ಜಗವೆಂಬ
ಉಭಯಕ್ಕೊಳಗಾಗದ ಮುನ್ನವೆ ಅರಿ,
ಕಾಮಬಿಮ ಜೀವಧನದೊಡೆಯನ.

1737
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ.
ಇಂತೀ ನಾಲ್ಕರ ಮಧ್ಯದ ಮನೆಗೆ
ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,
ಮಾಂಸದ ಗೋಡೆ, ಚರ್ಮದ ಹೊದಿಕೆ,
ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ.
ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ,
ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ,
ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ,
ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ.
ಮನೆ ನಷ್ಟವಾಗಿ ಹೋದಡೆಯೂ
ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ
ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,
ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.

1738
ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು,
ಅಲ್ಲಿಂದ ಆಚೆ ಮಧ್ಯಭೂಮಿ.
ಮೂರು ನೆಲದ ಭೂಮಿಯ ಆರೈದು ಬೆಳೆದೆಹೆನೆಂದಡೆ,
ಇದಾರ ವಶವೂ ಅಲ್ಲ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

1739
ಪೂರ್ವಕ್ಕೆ ತಾಳಾಗಿ ಉತ್ತರಕ್ಕೆ ತಲಹಾ ಬಿದ್ದ ಮರನ ತಂದು,
ನಿಬದ್ಧಿಯ ಕಾರುಕನ ಕೈಯಲ್ಲಿ ಸುಬದ್ಧಿಸಿ, ಶುದ್ಧೈಸಿ
ಅನಾದಿಯೆಂಬ ಹುಗಿಲುದೆಗೆದು,
ಆದಿಯೆಂಬ ಈಯವನಿಕ್ಕಿ,
ಇಷ್ಟವೆಂಬ ವಿಶ್ವಾಸದ ಮೇಳಿಯಂ ಬೆಟ್ಟಿ,
ಭಾವವೆಂಬ ಜಿಗುಳಿಯನಿಕ್ಕಿ,
ಸದ್ಭಾವವೆಂಬ ಗುಳುವ ತೊಡಿಸಿ,
ಸತ್ಕ್ರಿಯೆಯೆಂಬ ಕಣ್ಣಿಯಲ್ಲಿ ನೇಗಿಲ ತೊಡಚಿ,
ಜ್ಞಾನಚಕ್ಷುವೆಂಬ ನೊಗದ ಉಭಯದ ಕೊನೆಯಲ್ಲಿ
ಎಡಗೋಲಿನಲ್ಲಿ ಕಾರಿಯ ಹೂಡಿ,
ಬಲಗೋಲಿನಲ್ಲಿ ಬೆಳ್ಳಿಯ ಹೂಡಿ,
ಅಡಿ ಕೆತ್ತುವಂತೆ ಧಾಯೆಂದು ಹೊಡೆಯಲಾಗಿ,
ಭೂಮಿಯೊಡಗೂಡಿ ಸವೆಯಿತ್ತು.
ಬಿತ್ತವಟ್ಟಕ್ಕೆ ದಿಕ್ಕಿಲ್ಲ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

1740
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರೀಯ ಬಿಡಲಿಲ್ಲ, ಅರಿವ ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ,
ಅರಿವು ಆಚರಣೆಯೆಲ್ಲ ನಿಂದು,
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.

1741
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,
ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ
ಓಂಕಾರನಾದವೆಂಬ ಸೆಳೆಕೋಲಂ ಪಿಡಿದು
ಉತ್ತರ ಕ್ರೀಯೆಂಬ ಸಾಲನೆತ್ತಿ
ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು
ಅರುಹೆಂಬ ರವಿಯ ಕಿರಣದಿಂದ ಒಣಗಿಸಿ
ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ
ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು
ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು
ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ,
ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು,
ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ,
ಹಂಸನೆಂಬ ಎತ್ತಂ ಹೂಡಿ,
ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ,
ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ
ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ.
ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು
ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು,
ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ
ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ
ಬಾಲಚಂದ್ರನೆಂಬ ಕವಣೆಯಂ ಪಿಡಿದು
ಪ್ರಪಂಚುವೆಂಬ ಹಕ್ಕಿಯಂ ಸೋವಿ
ಆ ಬತ್ತ ಬಲಿದು ನಿಂದಿರಲು,
ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ,
ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು,
ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ
ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ,
ಮುಕ್ತಿಯೆಂಬ ಕೋಟಾರಕ್ಕೆ ತಂದು,
ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ,
ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ,
ಪುಣ್ಯದ ಬೀಜಮಂ ತಳೆದು
ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು
ಅಂಗಜಾಲನ ಕಣ್ಣಮುಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ
ಯಮರಾಜನೆಂಬರಸಿಗೆ ಕೋರನಿಕ್ಕದೆ
ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು
ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ,
ಕಾಮಭೀಮ ಜೀವಧನದೊಡೆಯ ಪ್ರಭುವೆ
ನಿಮ್ಮ ಧರ್ಮ, ನಿಮ್ಮ ಧರ್ಮ..

1742
ಮೂರಡಿ ಮಣ್ಣಿಗೆ ಆರು ಹೊನ್ನ ತೆತ್ತು,
ಮೀರಿ ಹದಿಕೆಯ ಬೇಡೆನೆಂದು, ಈ ಗ್ರಾಮದವರ ಮುಂದಿಟ್ಟು
ಮೀರಲಿಲ್ಲಾಯೆಂದು ಪಟ್ಟೆಯ ಕೊಟ್ಟು,
ಮತ್ತೂರು ಗೂಡಿ ಹದಿಕೆಯ ಬೇಡಿದಡೆ, ನಾ ಕೊಡಲಿಲ್ಲ.
ನೀ ಕೊಟ್ಟ ಪಟ್ಟೆ
ನಮ್ಮ ನಟ್ಟನಡುಮನೆಯ ಐದುಕಾಲ ನೆಲಹಿನಲ್ಲಿ ಕಟ್ಟಿಯದೆ ಕೋ !
ನೀ ತಪ್ಪಿದಡೆ ನಿನಗೆ ಹೇಳುವ ಒಡೆಯರುಂಟೆ?
ನಾನೊಕ್ಕಲು ನೀನೊಡೆಯ.
ಮೀರಿ ಕೊಂಡಿಹೆನೆಂದಡೆ
ಮುನ್ನವೇ ಸಿದ್ಧಾಯ ಸೆರೆಗೆ ನಾನೊಳಗು.
ಗುತ್ತಿಗೆಕಾರಂಗೆ ಮತ್ತೆ ಕುಳವುಂಟೆ?
ಇನ್ನು ಕೊಟ್ಟೆನಾದೊಡೆ
ಎನ್ನ ಹಟ್ಟಿಕೊಟ್ಟಿಗೆಯೊಡೆಯ ಕಾಮಭೀಮ ಜೀವಧನದಾಣೆ.

1743
ವರುಣನ ಕಿರಣದಿಂದ
ಅಪ್ಪುವಿನ ಸಾರ ಪೃಥ್ವಿಯೊಳಡಗಿದ್ದು
ಪೃಥ್ವಿಯ ತಪ್ಪಿಸಿ ತಾನೊಪ್ಪದಲ್ಲಿ ತೆಗವಂತೆ
ಅರಿವು-ಮರವೆ, ಪೃಥ್ವಿ-ಅಪ್ಪುವಿನಂತೆ ಇಪ್ಪ ಭೇದವ ತಾನರಿದು
ಜಡ-ಅಜಡವೆಂಬ ಉಭಯವರಿವುದು
ಸಕಲವೊ? ನಿಃಕಲವೊ? ಬೇರೊಂದು ಹೊಲಬೊ?
ನಿನ್ನೊಲವರವ ನೀನೆ ಬಲ್ಲೆ.
ಕಾಮಭೀಮ ಜೀವಧನದೊಡೆಯ ನಾನೆಂದೂ ಅರಿಯೆ.

1744
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.