Categories
ವಚನಗಳು / Vachanagalu

ಕಡಕೋಳ ಮಡಿವಾಳಪ್ಪನ ವಚನಗಳು

ಅಂತಾದ ಕೈಲಾಸ ಮಹಾಮೂರ್ತಿಪರಮಾತ್ಮನು
ತನ್ನ ವಕ್ಷ ಭಸ್ಮೋದ್ಭವ ರೇಣುರೂಪೆನಿಸಿದ ರೇಣುಕಾಖ್ಯ ತಾನಾಗಿ
ಲೋಕಪಾವನಾರ್ಥವಾದ ನಾರದಮುನಿ ವಿನಂತಿಗೆ
ಭೂವನಿತೆಯ ಭ್ರೂಮಧ್ಯ ಮಹಾಲಿಂಗವಾದ
ಕೊಲ್ಲೀಪಾಕಿ ಸೋಮೇಶ್ವರನೊಳುದ್ಭವಿಸಿ,
ಅರಿಯದೇಳುನೂರುವರ್ಷ ಸರ್ವೆಂದ್ರಿಯಗಳ ಶಿಕ್ಷಿಸಿ,
ನಿಜತತ್ತ್ವ ತಿಳಿಯುವುದಕ್ಕೆ ತನ್ನ ಬಯಸುವಗರ್ೆ ತತ್ವೋಪದೇಶವ ಕೈಗೊಳಿಸಿ,
ಸರ್ವತೀರ್ಥ ಸರ್ವದೇಶವ ನೋಡುವುದಕ್ಕೆ
ಖೇಚರಿಯ ಗಮನದಲ್ಲಿ ನೋಡುತ್ತ ಸಂಚರಿಸುತಿರ್ದು
ಮತ್ತೇಳ್ನೂರುವರ್ಷ ಲೋಕೋಪಕಾರವಾಗಿ ಸರ್ವಜನ ಅಭೀಷ್ಠೆಯನು ಸಲ್ಲಿಸಿ,
ಮುನ್ನೂರು ರಾಜಕುಮಾರಿಯರ ಮದುವೆಯಾಗಿ,
ಪೊಡವಿಡಿ ರುದ್ರಮುನಿಸ್ವಾಮಿಗಳ ಪಡೆದು,
ಷಡ್ವಿಧಾಚಾರ್ಯರೊಳಗೆ ಪಂಚಾಚಾರ್ಯರಂ ಪ್ರತಿಷ್ಠಿಸಿ,
ಪಂಚಬಗೆಯ ನಾಮವಿಟ್ಟು ಪಂಚಸಿಂಹಾಸನಕ್ಕೆ ಕರ್ತವ್ಯಮಾಡಿ
ಘನಲಿಂಗ, ಅತೀತ, ಪಟ್ಟ, ಪರದೇಶಿ, ಮಹಾಂತ, ನಿರಂಜನನೆಂಬ
ಆರರೊಳಗೆ ಐದು ಇದಿರಿಟ್ಟು,
ರುದ್ರಮುನಿಸ್ವಾಮಿಗಳ ಪಾದದಲ್ಲಿ
ಹಲವು ಶಿಷ್ಯರ ಪಡೆಸಿ, ಮಂತ್ರೋಪದೇಶವ ಕೊಡಿಸಿ,
ಭುವನಜನ ಶಿಕ್ಷ ದೀಕ್ಷೊಪದೇಶಕ್ಕೆ ಕರ್ತೃತ್ವ ಕೈಗೂಡಿಸಿ,
ದೇಶ ದೇಶದಲ್ಲಿ ನೆಲೆಗೊಳಿಸಿ ಸರ್ವಭೋಗ ಬಂಧ ಸುಖ ತನ್ನ ಪುತ್ರಂಗೆ ಇತ್ತು,
ಪೊಡವಿಡಿ ರುದ್ರಮುನಿಸ್ವಾಮಿಯೆಂಬ ನಾಮ ಗುರ್ತಿಟ್ಟು
ಬಹುನಾಮವನಂಗೀಕರಿಸಿ ಈ ಭುವನದಲ್ಲಿ ಮೆರೆಯುವಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./1
ಅಜ್ಞಾನವಳಿದು ಸುಜ್ಞಾನಿಯಾಗಿ, ಅಂತರಂಗದವಗುಣವ ಹೊರಹಾಕಿ,
ಅಂತಃಕರಣಗಳ ಕರಿಗೊಳಿಸಿ, ಮಾನಸಪೂಜೆಯ ಮನೋಹರವಾಗಿ,
ಶುದ್ಧಸ್ಥಾವರಕ್ಕೆ ಪ್ರತಿಸ್ಥಾವರವಾಗಿ
ಅಸ್ಥಿ ಚರ್ಮ ಮಜ್ಜೆ ಮಾಂಸ ರುಧಿರ-ಮೊದಲಾದವನೆಲ್ಲಾ ಶುಷ್ಕಗೊಳಿಸಿ,
ಸುಮ್ಮನೆ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./2
ಅತತತತತ ಮಹೀಂದ್ರಜಾಲಿ
ಜ್ಯಾಜ್ಯಾಜ್ಯಾಜ್ಯಾಜ್ಯಾ ಮಲನಾಡಚವಡಿ,
ಛೀ ಕುರುಬರ ಪಿಡ್ಡಿ, ಛೀ ಹಲಗಿಸಕಿ ನಾಗಿ,
ಗುಲು ಗುಲು ಗುಲು ಗುಲುಪುತ್ತ ಬಾ ಮತ್ತ ಬಾ
ಅಹಾ ಉಪ್ ಮಂತ್ರ ಗಾಳಿ ಚೀಲ್ದಾಗಿಂದ ಬಾ
ಕಿವಿಯೊಳಗೆ ಹೋಗು ಬಾಯೊಳಗಿಂದ ಬಾ
ಮೂಗಿನೊಳಗ ಹೋಗು ಕಣ್ಣೊಳಗಿಂದ ಬಾ
ತಲೆಯೊಳಗೆ ಹೋಗು ಬೆನ್ನೊಳಗಿಂದ ಬಾ
ಮೈಯೊಳಗೆ ಹೋಗು ಅಂಗಾಲೊಳಗಿಂದ ಬಾ
ಅಂಗೈಯೊಳಗೆ ಹೋಗು ಗಾಳಿಗೆ ಗಾಳಿ ಧೂಳಿಗೆ ಧೂಳಿ
ಬೈಲಿಗೆ ಬೈಲು ನಿಬರ್ೆಲು ಮಹಾಂತಯೋಗಿ
ಗಾಳಿಪೂಜಿ ಸುಡುಗಾಡಲಿಂದ ಬಂದೆವಯ್ಯಾ
ಶಂಕರಪ್ರಿಯ ಚನ್ನಕದಂಬಲಿಂಗ ಮಹಾಂತಯೋಗಿ./3
ಅದೇ ಅದೇ ಎಂಬಲ್ಲಿ, ಇದು ಎಂಬುದುಂಟೆ ?
ಅದು ಎಂದರೆ ವಸ್ತು, ಇದು ಅಂದರೆ ಅರಿವು.
ಇದು ಹೋದ ಮ್ಯಾಲೆ ಅದು ಇರಲಿಲ್ಲಾ.
ಕರ್ಪುರಕ್ಕೆ ಹತ್ತಿ ಉರಿವ ಉರಿ, ಆ ಕರ್ಪುರವು
ಕರಗಿ ಹೋದ ಮೇಲೆ ಆ ಉರಿಯು ಏನಾಯಿತೊ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?/4
ಅನ್ಯವಿಲ್ಲದ ಅರ್ಚನವೆಂತೆಂದಡೆ :
“ನಿಷ್ಕಲಂ ನಿಗಮಾತೀತಂ ನಿಶ್ಶೂನ್ಯಂ ಶೂನ್ಯಮೇವ ಚ |
ನಿರಂಜನಂ ನಿರಾಕಾರಂ ಸಾಕಾರಂ ಪರದರ್ಶನಂ ||
ನೀರೂಪಂ ಸ್ವರೂಪಂ ಚೈವ ನಿರ್ಗುಣಂ ಸಗುಣಂ ತತಃ |
ಅದೃಶ್ಯ ದೃಶ್ಯಮಹಾಂತ ಸ್ವಯಂಭೂ ಫ್ರಭುವೇ ನಮಃ ||
ಮತ್ಕಲಾಂ ಚಿತ್ಕಲಾಂ ಚೈವ ಚಿದ್ರೂಪಂ ಚಿನ್ಮಯಂ ತತಃ |
ಚಿತ್ಪ್ರಕಾಶಂ ಅಖಂಡೇಶಂ ಇಷ್ಟಲಿಂಗಾಕರಂ ದ್ವಯಂ ||
ಪಾದ್ಯಮಘ್ರ್ಯಂ ಆಚಮನಂ ಸರ್ವದೇವಸಮಾಹಿತಃ |
ತದ್ರೂಪಂ ಸಲಿಲಂ ಸ್ವಾಹಾ ಮದೇವಸ್ನಾನಮಾಚರೇತ್ ||
ಏಕಮೇವಭವೇನ್ಮಾತ್ರಂ ಏಕಮಾತ್ರಂ ಭವೇನ್ಮನುಃ |
ಏಕಮಂತ್ರಂ ಷಡಕ್ಷರಂ ಷಡಕ್ಷರಂ ಷಡಾನನಃ ||
ಷಡಾನನಃ ಭವೇತ್ತತ್ತ್ವಂ ತತ್ತಾ ್ವತೀತಂ ಅಸಂಖ್ಯಕಂ |
ಯಥಾಚಿತ್ತಂ ತಥಾಕಾರಂ ತತ್ಫಲಂ ಸ್ವಶಿವಾರ್ಪಿತಂ ||”
ಇಂತೀ ಪರಿಯಲಿ ಜಲ ಗಂಧ ಪುಷ್ಪ ದೀಪ ಧೂಪ
ನೈವೇದ್ಯ ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ
ಷೋಡಶೋಪಚಾರ ಸರ್ವವು ತಾ ಮುಂತಾಗಿ
ತನ್ನ ನಿಜದಲ್ಲಿ ನಿವೇದಿಸಲದೇ ಸದಾಚಾರ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./5
ಅರವುತೋರಿಕೆಯೇನೂ ಇಲ್ಲದಂದು,
ಮರವು ತೋರಿಕೆಯೇನೂ ಇಲ್ಲದಂದು,
ಕುರುಹುತೋರಿಕೆ ಏನೂ ಇಲ್ಲದಂದು
ಚಿನ್ನಾದ ಚಿದ್ಬಿಂದು ಚಿತ್ಕಳೆ ಇಲ್ಲದೆ ಏನೋ ಏನೋ ಆಗಿದರ್ಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./6
ಆ ಗುರುಶಿಷ್ಯರೆರಡು ಒಂದಾಗಿ
ತಾನೇ ತಾನಾದ ವಿನೋದವೇನೆಂಬೆ ?
ಮಹಾಂತ ಮಹಾಂತ ನೀನೆಂದರೆ ನೀನು
ಇಂದಿನ ಮಹಾಂತನೇ ಅಲ್ಲಾ, ಅಂದಿನ ಮಹಂತ ನೀನು.
ನೀನು ನಿರುಪಮ, ನಿರಾಳ, ನಿಷ್ಕಳ, ನಿಬರ್ೆಲು,
ಮಹಾಬಯಲಾದ ಅಂದಿನ ಮಹಾಂತ ನೀನಲ್ಲವೆ ?
ಅದು ನೀ ಹ್ಯಾಂಗ ಬಲ್ಲೆಯೆಂದರೆ : ನೀನು ನನಗೆ ತತ್ವೋಪದೇಶ ಹೇಳಿದಾತನೇ ? ಅಲ್ಲ.
ಅಷ್ಟಾಂಗಯೋಗಂಗಳ ಹೇಳಿದಾತನೇ ? ಅಲ್ಲ.
ಮುದ್ರೆಸಾಧನವ ಹೇಳಿದಾತನೇ ? ಅಲ್ಲ.
ಹಠಯೋಗ ಲಯಯೋಗ ಲಂಬಿಕಾಯೋಗ
ತಪಜಪ ಅದ್ವೈತಾದಿ ನಿತ್ಯನೇಮ ಪುಣ್ಯ ಸತ್ಕರ್ಮ
ಮೊದಲಾದ ಇವು ಏನಾದರೂ ಎನಗೆ ಹೇಳಿದಾತನೇ ? ಅಲ್ಲ.
ಇವು ಏನು ಹೇಳಲೊಲ್ಲದೆ ನನಗೊಂದು ಹೇಳಿದಿರಿ.
ಅದ ಏನು ಹೇಳಿದಿರಿ ಅಂದರೆ,
ನಿನ್ನ ನೀ ತಿಳಿದು ಹಾಡೆಂದು ಹೇಳಿದಿರಿ.
ನೀನು ಹೇಳಿದುದಕ್ಕೆ ನಾನು ನನ್ನ ಒಬ್ಬುಳಿಯ ಮಾಡಿ ಏಕಚಿತ್ತಾಗಿ
ಹೊರ ಆಸೆ ಬಿಟ್ಟು ಒಳನೋಟವಿಟ್ಟು
ಹಸಿವೆ ತೃಷೆಗಳಂ ಸುಟ್ಟು ನನ್ನನ್ನೇ ನಾ ಕೆಟ್ಟು
ರತಿ ನಿನ್ನೊಳಗಿಟ್ಟು ಆತ್ಮಜ್ಞಾನ ಅಳವಟ್ಟು, ಅಹಂಬ್ರಹ್ಮವಂ ಬಿಟ್ಟು,
ನೀ ಒಂದು ಮಾಡೆಂದರೆ ನಾ ಒಂಬತ್ತು ಮಾಡಿ ಹುಡುಕಲು,
ಅಲ್ಲಿ ನಿನ್ನ ಬಲ್ಲಾದೆ, ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ.
ನನ್ನ ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ.
ಅದು ಹ್ಯಾಂಗ ಬಲ್ಲಿ ಅಂದರೆ,
ಮಾತಿಲೆ ಬಲ್ಲಲ್ಲಿ ನಿನ್ನ ವಾರ್ತಿ ಕೇಳಿ ಬಲ್ಲೆ,
ನಿನ್ನ ಸನ್ನಿಧಿಗೆ ಹೋಗಿ ಬಲ್ಲೆ, ನಿನ್ನ ಕಂಡು ಬಲ್ಲೆ,
ನಿನ್ನ ಕೂಡಿ ಬಲ್ಲೆ, ನಿನ್ನ ಸದ್ವಾಸನೆಗೊಂಡು ಬಲ್ಲೆ,
ನಿನ್ನ ಸ್ನೇಹವ ಮಾಡಿ ಬಲ್ಲೆ, ನಿನ್ನ ಕೂಡುಂಡು ಬಲ್ಲೆ,
ನಿನ್ನ ಸಮರಸಗೂಡಿ ಬಲ್ಲೆ, ನಿನ್ನ ಕೂಡಿದ ಪರಮಸುಖ
ಪರಮ ಉಪಕಾರಕ್ಕೆ ಹೇಳಬಲ್ಲೆ, ವಿಸ್ತಾರವಾಗಿ ನಿನ್ನ ಹಾಡಿ ಬಲ್ಲೆ,
ಒಂದೆ ಮಾಡಬಲ್ಲಲ್ಲಿ ಒಂಬತ್ತ ಮಾಡಬಲ್ಲೆ,
ಈ ಒಂಬತ್ತುಮಾಡಿ ಬಲ್ಲಲ್ಲಿ ನಾ ಮೊದಲಾದ ಸರ್ವವು ನೀನೆಂಬುದು ಬಲ್ಲೆ.
ಇನ್ನು ಎನ್ನ ಪ್ರಾಣ, ಮನ, ದೇಹ, ಭಾವ, ಅರವು, ಮನವು
ನನ್ನ ಸರ್ವವು ನೀನಾದ ಮ್ಯಾಲೆ ನನಗೇನುಂಟು ?
ಮತ್ರ್ಯಲೋಕದ ಮಹಾಗಣಂಗಳು, ಮಹಾನುಭಾವಿಗಳು,
ನಿಜಜ್ಞಾನಿಗಳು, ಮಹಾ ಅರವಿಗಳು, ಎನಗೊಂದು ಹೆಸರಿಟ್ಟಿದ್ದರು.
ಅದು ಹೆಸರು ನಿನಗೆ ಆಯಿತು. ಅದೇನು ಹೆಸರೆಂದರೆ ?
ಸರ್ವವು ನೀನಾದಮ್ಯಾಲೆ, ಸತ್ಕರ್ಮ ದುಷ್ಕರ್ಮ ಎರಡು ನೀನೇ ಆದಿ.
ನಾನು ಇನ್ನೇನು ಮಾಡಲಿ ಎಂದು
ಆವ ಕರ್ಮವಿಲ್ಲದೆ ಸುಮ್ಮನೆ ಇರುತಿರಲು, ಅದ ಕಂಡು ಹೆಸರಿಟ್ಟಿದ್ದರು.
ಈತ ಸತ್ಕರ್ಮಿಯೆಂಬುವೆ ಸತ್ಕರ್ಮಿ ಅಲ್ಲಾ,
ಈತಗೆ ನಾವು ದುಷ್ಕರ್ಮಿಯೆಂಬುವೆ ದುಷ್ಕರ್ಮಿ ಅಲ್ಲಾ,
ಪಾಪಿಯೆಂಬುವೆ ಪಾಪಿ ಅಲ್ಲಾ, ಪುಣ್ಯನೆಂಬುವೆ ಪುಣ್ಯನಲ್ಲಾ,
ಆಸೆ ಅಲ್ಲಾ ನಿರಾಸೆ ಅಲ್ಲಾ, ಅಜ್ಞಾನಿ ಅಲ್ಲಾ ಸುಜ್ಞಾನಿ ಅಲ್ಲಾ,
ಕಾಮಿ ಅಲ್ಲಾ ನಿಷ್ಕಾಮಿ ಅಲ್ಲಾ, ಕ್ರೋಧಿ ಅಲ್ಲಾ ನಿಷ್ಕ್ರೋಧಿ ಅಲ್ಲಾ,
ಲೋಭಿ ಅಲ್ಲಾ ನಿರ್ಲೊಭಿ ಅಲ್ಲಾ, ಮೋಹಿ ಅಲ್ಲಾ ನಿರ್ಮೊಹಿ ಅಲ್ಲಾ,
ಅಹಂಕಾರಿ ಅಲ್ಲಾ ನಿರಹಂಕಾರಿ ಅಲ್ಲಾ, ಮತ್ಸರಿ ಅಲ್ಲಾ ಮತ್ಸರರಹಿತನೇ ಅಲ್ಲಾ.
ಯೋಗಿಯೇ ಅಲ್ಲಾ ಭೋಗಿಯೆ ಅಲ್ಲಾ.
ತ್ಯಾಗಿಯೇ ಅಲ್ಲಾ ರಾಗಿಯೇ ಅಲ್ಲಾ, ಸುಖಿಯೇ ಅಲ್ಲಾ ದುಃಖಿಯೆ ಅಲ್ಲಾ,
ಕ್ರಿಯಯುಕ್ತನೇ ಅಲ್ಲಾ ಕ್ರಿಯಾಬಾಹ್ಯನೇ ಅಲ್ಲಾ,
ಭವಿಯೇ ಅಲ್ಲಾ ಭಕ್ತನೇ ಅಲ್ಲಾ, ಶಿವನೇ ಅಲ್ಲಾ ಜೀವನೇ ಅಲ್ಲಾ.
ಅರುವೇ ಅಲ್ಲಾ ಮರವೆಯೇ ಅಲ್ಲಾ,
ಸತ್ತವನೇ ಅಲ್ಲಾ ಬದುಕಿದವನೇ ಅಲ್ಲಾ,
ಊರವನೇ ಅಲ್ಲಾ ಅಡವಿಯವನೇ ಅಲ್ಲಾ,
ಗುರುವೇ ಅಲ್ಲಾ ಶಿಷ್ಯನೇ ಅಲ್ಲಾ, ಶಂಕರನೆ ಅಲ್ಲಾ ಕಿಂಕರನೇ ಅಲ್ಲಾ,
ಹೇಳುವವನೇ ಅಲ್ಲಾ ಕೇಳುವವನೇ ಅಲ್ಲಾ,
ಮೂಕನೇ ಅಲ್ಲಾ ಮಾತಾಡುವವನೇ ಅಲ್ಲಾ, ಹೆಣ್ಣೆ ಅಲ್ಲಾ ಗಂಡೇ ಅಲ್ಲಾ,
ನಪುಂಸಕನೇ ಅಲ್ಲಾ ಅಂತರಪಿಶಾಚಿಯೇ ಅಲ್ಲಾ,
ವಿಷಯಾತುರಿಯೇ ಅಲ್ಲಾ ವಿರಕ್ತನೇ ಅಲ್ಲ,
ಇಹಲೋಕ ಇಚ್ಛಿಯೇ ಅಲ್ಲಾ ಪರಲೋಕ ಬಯಕಿಯೇ ಅಲ್ಲಾ.
ಅದು ಎಂಬುವೆ ಅದು ಅಲ್ಲ, ಇದು ಎಂಬುವೆ ಇದು ಅಲ್ಲ.
ಹಾಂಗೂ ಅಲ್ಲ ಹೀಂಗೂ ಅಲ್ಲ, ಅಂತೂ ಅಲ್ಲಾ ಇಂತೂ ಅಲ್ಲಾ,
ಏನೂ ಅಲ್ಲಾ ಅಲ್ಲಾ ಅಲ್ಲಾ ಎಂದು ಹೆಸರಿಟ್ಟಿದ್ದರು ಎನಗೆ.
ಇದು ಹೆಸರು ನಿನಗೆ ಆಯಿತು.
ಅದೆಂತೆಂದೊಡೆ : ಅಲ್ಲಮಪ್ರಭು ಎಂಬುವ ನಾಮವು ನಿನಗೆ ಆಯಿತಲ್ಲದೆ ನನಗೆಲ್ಲಿಹದು ?
ಅದು ಕಾರಣ ನನಗೆ ನಾಮವಿಲ್ಲಾ ರೂಪವಿಲ್ಲಾ ಕ್ರೀಯವಿಲ್ಲಾ
ಬಯಕೆಯಿಲ್ಲಾ ಭವವಿಲ್ಲಾ ಆವುದೂ ಇಲ್ಲಾ.
ಅದೇಕೆ ನೀ ಅಲ್ಲಾ ನಾ ಇಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./7
ಆ ಚಿದ್ಬೈಲಮೂರ್ತಿ ತಾನಾದ ಶಿವನ
ಸ್ಥೂಲಕಾಯವೆಂಬ ಬಹಿರಾವರ್ತದಿಂದ
ಆವರ್ತ ಕಠೋರ ಮಾಯಾ ತಾರಕ
ಚಂದ್ರ ಸೂರ್ಯ ಆತ್ಮ ಆಕಾಶ ವಾಯು
ಅಗ್ನಿ ಅಪ್ಪು ಪೃಥ್ವಿ-ಇವು ಹನ್ನೆರಡು
ಪ್ರಳಯೋತ್ಪತ್ತಿ ಪ್ರಳಯಸ್ಥಿತಿ ಪ್ರಳಯ ಪ್ರಳಯ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./8
ಆ ಪರಶಿವ ತಾನೇ ತಾನಾದ, ಲೀಲಾವೇಷದಲ್ಲಿ ಮೇಲಾದ.
ತಾನೇ ಶಿವ, ನಾನೇ ಶಿಷ್ಯ, ನೀನೇ ಗುರುವು, ಏನು ಮುಕ್ತಿ ?
ಈ ಚಾಪಲ್ಯದೊಳಗೆ ನೀ ಹೇಳಿದ್ಹಾಂಗೆ ನಾ ಕೇಳಿದೆನಾಗಿ
ಒಂದೇ ಒಂದೆಂಬೋ ನಿಜಜ್ಞಾನ ಸಾಧಿಸುತ್ತ,
ಆ ನಿಜಜ್ಞಾನದಿಂದೆ ನೋಡಲು,
ಆವರ್ತದಿ ಬೀಜಮಧ್ಯ ಸಾವು ಅಂತ್ಯವಾಗಿ,
ಸರ್ವವು ಸರ್ವಮಯವೆನಿಸಿತ್ತು.
ಮತ್ತೆ ಕಾಮ ಮನ್ಮಥನಲ್ಲಿ, ಕ್ರೋಧ ಯಮನಲ್ಲಿ,
ಲೋಭ ಕುಬೇರನಲ್ಲಿ, ಮೋಹ ಇಂದ್ರನಲ್ಲಿ,
ಮದ ಬ್ರಹ್ಮನಲ್ಲಿ, ಮತ್ಸರ ವರುಣನಲ್ಲಿ.
ಮತ್ತೆ ಭಕ್ತಿ ಬಸವಣ್ಣನಲ್ಲಿ, ವೈರಾಗ್ಯ ಮಡಿವಾಳನಲ್ಲಿ,
ಶಾಂತಿ ಮರುಳಶಂಕರದೇವರಲ್ಲಿ, ನಿಜ ಅಜಗಣ್ಣನಲ್ಲಿ,
ಜ್ಞಾನ ಚೆನ್ನಬಸವಣ್ಣನಲ್ಲಿ ; ಅರುಹು ಪ್ರಭುವಿನಲ್ಲಿ, ಕುರುಹು ಗೊಲ್ಲಾಳನಲ್ಲಿ.
ಮತ್ತೆ ಸುಖ ಸ್ವರ್ಗದಲ್ಲಿ, ದುಃಖ ನರಕದಲ್ಲಿ, ಪುಣ್ಯ ಸತ್ಕರ್ಮದಲ್ಲಿ,
ಪಾಪ ದುಷ್ಕರ್ಮದಲ್ಲಿ, ಜೀವಾತ್ಮ ಪರಮಾತ್ಮನಲ್ಲಿ, ಪರಮಾತ್ಮ ಮೊದಲಲ್ಲೆ.
ಮತ್ತೆ ಹಲವು ಮಲದಲ್ಲಿ
ನಾ ಶಿಷ್ಯನಲ್ಲೇ, ನೀ ಗುರುವಿನಲ್ಲೇ, ತಾ ಶಿವನಲ್ಲೇ,
ಮುಕ್ತಿಯಲ್ಲೇ, ಅಲ್ಲೇನೋ, ಇಲ್ಲೇನೋ ಎಲ್ಲೇನೋ ಎಂತೇನೋ ?
ನಾನೇನೋ ನೀನೇನೋ, ತಾನೇನೋ ಏನೇನೋ ?
ಇದೇ ನಿಜವೆಂಬ ಅರುವು ಅಡಗಿದುದು ಬೆರಗು.
ಈ ಬೆರಗು ಹೋದುದೇ ನಿಬ್ಬೆರಗು.
ನಿಬ್ಬೆರಗು ಎಂಬುದೇ ಬಯಲು ;
ಆ ಬಯಲು ಬಯಲಾದದ್ದೇ ನಿರ್ಬಯಲು.
ಇದಲ್ಲದೆ ನಿಜವು ತಿಳಿದಿದ್ದು ;
ಆ ನಿಜವು ತಾನಾಗದಿರ್ದರೆ ಆ ಮನುಜರು ಮುಂದೇನಾದರು ?
ಗಜವಿಜಿಗೆ ಹೋತ್ಹೋಯಿತು, ಚದುರರಾದವರೆಲ್ಲಾ ಬದಿರಾಗಿ ಹೋದರು.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./9
ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ
ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ,
ಕಂತುಹರನ ಧ್ಯಾನವ ಮಾಡಲು, ಆ ಹರ ಗುರುರೂಪವ ತಾಳ್ದು ಬಂದು,
ತನ್ನ ಚಿಂತಿಸಿದ ಸುಜ್ಞಾನಿಗಳಿಗೆ,
ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ
ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ,
ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ,
ಮೊದಲಾದ ಅನಂತ ಮುದ್ರೆಗಳ ಸಾಧಿಸಿ,
ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ,
ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ,
ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ,
ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ
ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ,
ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ,
ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು
ಪರಿಪರಿಯ ಬೆರಗುಗಳ ತಿಳಿದು, ಇದೇ ನಿಜಬ್ರಹ್ಮವೆಂದು ಹೆಮ್ಮೆ ಸಿ,
ಆಸೆವೊಡಿಯದೆ, ಕ್ಲೇಶ ಕಡಿಯದೆ,
ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ ಮುಂದುಗಾಣದೇ ಹೋದರು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./10
ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ
ಪಿಂಡಾಂಡವಾದ ಪುಣ್ಯಾತ್ಮರು,
ಬಿಂದುರೂಪಾಗಿ ಬಂದ ಸೂತಕ ಕಂಡು ಸಂದೇಹಗೊಂಡು,
ಚಂದವಳಿದು, ಹಿಂದೆ ಬಂದಾ ಯೋನಿಯ ಕಿಸುಕುಳ
ಮೂತ್ರದಕುಣಿಗೆ ಬೀಳಬಾರದೆಂದು ಹೇಯ ಹುಟ್ಟಿ
ಸ್ತ್ರೀ ಭೋಗವ ಬಿಟ್ಟು, ವೈರಾಗ್ಯ ತಲಿಗೇರಿ,
ಅನ್ನ ವಸ್ತ್ರವ ಕಳೆದು ಊರೊಳಗಿರಬಾರದೆಂದು
ದೇಶ ಸಂಚಾರ ಮಾಡಿ, ಕಾಶಿ, ಕೇದಾರ, ರಾಮೇಶ್ವರ,
ಶ್ರೀಶೈಲ, ಉಳವಿ, ಹಂಪಿ, ಗೋಕರ್ಣ
ಮೊದಲಾದ ಅನಂತ ತೀರ್ಥವ ಮಿಂದು,
ಸಾಯಬಾರದ ಅಂಗಸಿದ್ಧಿ, ಅಲಗುನೋಯಿಸದ ಘುಟಿಕಾಸಿದ್ಧಿ,
ಹೇಳಿದ್ದಾಗುವ ವಾಕ್ಯಸಿದ್ಧಿ, ಹೆಸರುಹೇಳುವ ಬೆನಕನಸಿದ್ಧಿ,
ರೋಗಕಳೆಯುವ ಮೂಲಿಕಿಸಿದ್ಧಿ,
ಬೆರಗುಮಾಡುವ ಬೇತಾಳಸಿದ್ಧಿ, ಅಗ್ನಿಸ್ತಂಭನ,
ಜಲಸ್ತಂಭನ, ಗಗನಕ್ಕೆ ಹಾರುವ ಯೋಗಸಿದ್ಧಿ,
ದೂರದೃಷ್ಟಿ, ದೂರಶ್ರವಣ, ಸರ್ವದೃಷ್ಟಿ,
ಉಂಡೂಟ, ಕಂಡ ಕನಸು, ಮನೋಬಯಕೆ, ಹಿಂದಿನ ಖೂನ, ಕನಸಸಾಕ್ಷಿ,
ಇಂದ್ರಜಾಲ, ಮಹೇಂದ್ರಜಾಲ, ಸುವರ್ಣಜನನ,
ಬಂಗಾಳಿ, ಮರಣಯೋಗ, ಪರಕಾಯಪ್ರವೇಶ, ರಾಜಯೋಗ,
ರಾಜವಶ, ಜನವಶ, ಸ್ತ್ರೀವಶ, ಭಸ್ಮಸಿದ್ಧಿ, ಅಂಜನಸಿದ್ಧಿ,
ಮೋಹನ, ವೈರಿಸ್ತಂಭನ, ವಾಯುಸ್ತಂಭನ, ಭೂತ, ಪ್ರೇತ,
ಪಿಶಾಚಿ, ಬ್ರಹ್ಮರಾಕ್ಷಸ, ಜಟ್ಟಿಂಗ, ಹಿರೋಡ್ಯಾ, ಯಲ್ಲಮ್ಮಾ,
ಪೋತಮ್ಮಾ, ಚಂಡಿಚಾಮುಂಡ್ಯಾದಿಗಳ ಮಾತನಾಡಿಸುವ
ಮಂತ್ರಸಿದ್ಧಿ, ಹುಲಿ, ಹಲ್ಲಿ, ಕತ್ತಿ, ನರಿ, ಕಾಗಿ, ಹಾಲ್ಹಕ್ಕಿ
ಮೊದಲಾದ ಮೃಗಪಕ್ಷಿಯ ಮಾತು ತಿಳಿಯುವ ಯಂತ್ರತಂತ್ರಸಿದ್ಧಿ,
ಮಲಮೂತ್ರವನು ಬಿಡದ ಅಂತರಪಚನ
ಅದೃಶ್ಯ ಅನಂತ ಆಹಾರ ಜೀವಸ್ತಂಭನ, ದೇವ ಪ್ರತ್ಯಕ್ಷ ಸಂಜೀವನ,
ಬಂಧವಿಮೋಚನ, ದೃಷ್ಟಿ ಆಗಮನ, ಇಷ್ಟದಾಯಕ ಮನೋಗಮನ
ಮೊದಲಾದ ಅನಂತ ಸಿದ್ಧಿಗಳಿಗಾಶೆ ಮಾಡಿ
ಮಣ್ಣುಗಾಣದೇ ಹೋದರು ಅನಂತರು.
ಅದು ಅಂತಿರಲಿ, ಫಲಪದವಿ ಪಡೆವೆವೆಂದು ಹಳ್ಳ, ಕೊಳ್ಳ, ನದಿತೀರ,
ಅಡವಿ ಅರಣ್ಯ ಗುಡ್ಡ ಗಿರಿ, ಗವಿ ವಟವೃಕ್ಷ, ಸಂಗಮ,
ಮಠ ಮಾನ್ಯ ಮೊದಲಾದ ಸುಸ್ಥಳದಲ್ಲಿ ಕುಳಿತು
ನಿದ್ರೆ ಆಹಾರ ತೊರೆದು, ಆಸನವ ಬಲಿದು, ಮೌನ ಮುದ್ರೆಯ ಹಿಡಿದು,
ವಾತ, ಅಂಬು, ಪರ್ಣ, ಕಲ್ಲು, ಹಣ್ಣು, ಬೂದಿ,
ಹುಲ್ಲಿನ ರಸ, ನೆಲ, ಬೇರು, ಗಡ್ಡಿ ಮೊದಲಾದ ಆಹಾರವ ಕೊಂಡು,
ಮೈಗೆ ಹುತ್ತೇರಿ, ಜಡಿಯಲ್ಲಿ ಆಲವ ಬೆಳೆದು,
ಗಡ್ಡದೊಳು ಗೀಜಗವು ಮನಿ ಮಾಡಿರಲು,
ಮನವಳಿಯದೆ, ಘನವ ತಿಳಿಯದೆ, ತನುವ ಉಳಿಯದೆ,
ಪಂಚೇಂದ್ರಿಯ ಮಿಂಚು ತೊಳಿಯದೆ, ಹಳೆಹಂಚಾದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./11
ಆ ಪರಶಿವನ ಚಿತ್ತ ಹೆತ್ತ ಮತ್ರ್ಯದ ಮಾನವರೊಳಗೆ
ಮಹಾಜ್ಞಾನ ಜನಿಸಿ ಆತ್ಮಜ್ಞಾನವ ಪಡೆದು,
ಆ ಅಖಂಡ ಜ್ಞಾನವ ಮೀರಿ ಬ್ರಹ್ಮ ತಾನಾದರೆ
ಭವ ಶಿವ ಎಂಬೋದೆರಡಿಲ್ಲದಿದ್ದರಾಯಿತು.
ನಾ ತಿಳದೆ ನೀ ತಿಳಿ ಎಂಬುವದು ಹೋದರೆ ಶಬ್ದಮುಗ್ಧ.
ಚೋರ ತಗದಿಟ್ಟ ದ್ರವ್ಯವ ಮತ್ತೊಬ್ಬಚೋರ ಒಯ್ದಂತೆ ಇರಬೇಕು.
ಸರ್ವವು ಒಂದಾದ ಮೇಲೆ ಹಲವು ಮಾತ್ಯಾಕೆ ?
ತಾ ತಿಳಿದ ಮ್ಯಾಲೆ ಸುಮ್ಮನಿರಲ್ಯಾಕೆ ?
ಪ್ರೇಮವಿದ್ದರೆ ಕಾಮಬಿಡುವದ್ಯಾಕೆ ?
ಕಾಮವಿಲ್ಲದಿದ್ದರೆ ಪ್ರೇಮವಿಡುವದ್ಯಾಕೆ ?
ಇವು ಇಲ್ಲದಾತಗೆ ಮೌನಮುದ್ರೆಯ ಮಾಡಿ
ಯೋಚನೆ ಗೊಡವೆ ಯಾಕೆ ?
ಜ್ಞಾನ ಹಾನ್ಯಾದ ನಾಚಿಕೆ ಸಾಲದೆ ?
ಮೂಕರಾದೇವೆಂದು ಜೋಕೆಯಲ್ಲಿರುತ
ಬೇಕಾದ ಕಾಲಕ್ಕೆ ತಾ ಕೈಲೆ ತೋರಿಸುವ ಇಂತಹ ಅನೇಕ ಕಳ್ಳಮೂಳರು
ಲಂಡ್ಕೇನ್ಹಳ್ಳವಗೂಡಿ ಹೋದರು,
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./12
ಆ ಪರಶಿವನ ಚಿದ್ವಿಲಾಸದಿಂದಾದ ಇಹದೊಳಗೆ
ನರನಾಗಿ ಅರುವುಹಿಡಿದು ಕುರುಹುಕಂಡವಂಗೆ ಗರ್ವವುಂಟೆ ?
ಅರುವು ಪಿಡಿಯದೆ ಕುರುಹುಗಾಣದೆ
ಬರಿಯ ಬಾಯಿಲೆ ಬ್ರಹ್ಮವ ನುಡಿದರೆ ಬ್ರಹ್ಮನಾಗಬಲ್ಲರೆ ?
ಬ್ರಹ್ಮನಾದ ಮೇಲೆ ಇಮ್ಮನ ಎಲ್ಲಿಹದೊ ?
ತಾನು ಅದ್ವೆ ತನಾದ ಮೇಲೆ ದ್ವೆ ತವನಾಚರಿಸುವದುಂಟೆ ?
ತಾನೇ ನಿಜ ಸರ್ವವೂ ಸುಳ್ಳೆಂಬುದುಂಟೆ ?
ಅಹುದು ಅಲ್ಲ ಎಂಬುವುದುಂಟೆ ?
ಗುರುವ ಹಿಂದುಗಳೆದು, ಕಟ್ಟಿದಾ ಲಿಂಗವ ಬಿಟ್ಟು,
ಜಂಗಮವ ಜರಿಯಲುಂಟೆ ?
ಅಖಂಡವ ತಿಳಿದು ಆ ಅಖಂಡವು ತಾನಾಗದೆ
ಭಂಗಿ ಮುಕ್ಕಿದವನಂತೆ, ಅಂಗ ಬತ್ತಲೆಯಾಗಿ,
ಮಂಗಮತಿಗೂಡಿ ಸಂಗವ ಸಂದು,
ಒಂದಾಗದೆ ಭಂಗಾಗಿ ಹೋದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./13
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ,
ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ,
ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ,
ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು,
ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ,
ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು,
ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ,
ಆ ಕಲ್ಲತಗಲಿದ ಕಾಲ್ನೋವಿಗೆ ಔಷಧಿಯ ಮಾಡಿ,
ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು,
ಆ ತಾಯಿಯೆತ್ತಿಕೊಂಡು,
ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ
ತಾ ಹೊದ್ದ ಮೇಲ್ಸೆರಗಿಲೊರಸಿ ಮೊಲೆಯುಣಿಸಿ,
ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ
ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ
ಅಳುಳುಳುಳುಳುಳೆಂದು ಹಾಡುತ್ತಿರಲು,
ಆ ಶಿಶುವು ಆ ಔಷಧದಿಂದೆ ನೋವು ಹೋಗಿ,
ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ,
ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ,
ತೊಟ್ಟಿಲ ತೂಗುವುದರೊಳಗೆ ಜೋಕಬಂದು,
ಸುಖನಿದ್ರೆಯೊಳ್ ಮೈಮರೆದಿರಲು,
ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು,
ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ,
ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ
ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ,
ಆ ಶಿಶುವಿನ ಸಾವು ಆರು ಅರಿಯರು.
ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ
ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ
ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು
ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ
ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೊಪದೇಶವಮಾಡಿ,
ತನ್ನ ಚಿತ್ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ
ತೋರಿ ಹೇಳಿ ಕಾಣಿಸಿಕೊಡಲು,
ಆ ಚಿತ್ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು
ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ
ಸರ್ವ ಅವಯವಂಗಳ ಕಸರು ಕಳೆದು,
ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ,
ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ
ಹಿಂದಿಂದು ಹೇಯವಾಗೆ
ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ,
ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ
ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ,
ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ
ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ
ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ,
ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ,
ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ,
ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು,
ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು,
ಸಾವು ಬಂದು ಸಾವು ಸತ್ತು ಸಾವು ಸಾವಾಗಲು
ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ
ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು,
ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ
ಅರುವು ಮರೆಗೊಂಡಿರ್ಪ ನಿಬರ್ೆಲ ಆರೂ ಅರಿಯರೋ.
ಆ ಶರಣ ತನ್ನರುವು ತಾನರಿಯ,
ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ.
ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ
ಗಾಳಿಗೊದರುವ ಒಡಕುಮಡಕಿಯ ಸ್ವರವ
ಕಡಿಮಿಯಾದ ನಾದವನು ಆಲಿಸಿ,
ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು,
ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ,
ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು
ಅದು ತಪ್ಪಲಿಕ್ಕೆ ಪಂಚತತ್ವದೇಹವು,
ಪಂಚತತ್ವಕ್ಕೆ ಕೂಡಿಸುವೆವು ಎಂಬುವರು.
ಅದು ಹಾಂಗಿರಲು, ಆ ದೇಹ ಬಯಲುವಾದರೇನು ?
ಆ ಬಯಲಿಗೆ ಸಾವು ಇಲ್ಲವು.
ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು.
ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ,
ಭ್ರಷ್ಟರಾಗಿ ಹೋದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./14
ಆ ಪರಶಿವನ ನಿರ್ಬಯಲವೇ ಮಹಾಬಯಲು,
ಚಿದ್ಬಯಲು, ಬಯಲು ಮೂರಾದರೂ ಒಂದೇ.
ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ.
ಆರು ಮೂರು ಒಂಬತ್ತಾದರೂ ಒಂದೇ.
ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು.
ಈ ಹಲವಾದರೂ ನಿಬರ್ೆಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ.
ನಿಬರ್ೆಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ?
ನಿಬರ್ೆಲೇ ನಿಬರ್ೆಲೆಂಬುದು ಇದು ಎಲ್ಲಿ ಇದೇ ನಿಬರ್ೆಲು.
ಮತ್ತೆ ತಾ ನಿಬರ್ೆಲ ರೂಪಾದರೂ, ಆ ರೂಪ ತಾ ನಿಬರ್ೆಲಲ್ಲವೇ ?
ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ ?
ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ ?
ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿಬರ್ೆಲು.
ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ,
ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ,
ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ,
ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ,
ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ,
ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ
ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ,
ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ,
ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ,
ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ,
ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ,
ಅರವಾದದ್ದು ಅರವು, ಮರವಾದದ್ದು ಮರವು.
ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ,
ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು,
ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು.
ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ.
ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ,
ದುರಗಿಯೆಂಬುದೇ ಶಕ್ತಿ , ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ,
ಲಿಂಗವೆಂಬುದೇ ಮನ, ಮನವೆಂಬುದೇ ಘನ,
ಘನವೆಂಬುದೇ ಗುರು, ಗುರುವೆಂಬುದೇ ಪರ,
ಪರವೆಂಬುದೇ ತಾನು, ತಾನುಯೆಂಬುದೇ ಬೈಲು,
ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ
ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ,
ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ,
ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ,
ನಾದಯೆಂಬುದೇನಾದುದೇ ಹೇಳಲಿಕ್ಕೆ ನಿಬರ್ೆಲು.
ನಿಬರ್ೆಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ
ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು,
ರುದ್ರ ಈಶ್ವರ ಸದಾಶಿವ ಮಹಾದೇವರು
ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು,
ಅಷ್ಟಾವರಣ ನಿಷ್ಠೆಯುಳ್ಳವರು, ಮಹಾನುಭಾವಿಗಳು,
ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ,
ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ,
ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ,
ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ,
ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ,
ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ,
ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ,
ಸಾವು ಬ್ಯಾರೆ, ಜೀವ ಬ್ಯಾರೆ,
ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ,
ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ,
ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು
ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ
ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ
ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./15
ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ
ಪೂರ್ವಪುಣ್ಯವೊದಗಿ, ಸಂಸಾರ ಹೇಯವಾಗಿ,
ಗುರುಕಾರುಣ್ಯವ ಪಡೆದು, ಆತ್ಮಜ್ಞಾನ ತಿಳಿಯಲಿಕ್ಕೆ,
ಮನಗೊಟ್ಟು, ತತ್ವವ ಶೋಧಿಸಿ, ಪುರಾತನ ವಚನ ಹಾಡಿಕೊಂಡು
ಅನುಭವಿಯಾಗಿ, ನಾನೇ ಅನುಭಾವಿ ನಾನೇ ಪ್ರಭು,
ನಾನೇ ಪರಬ್ರಹ್ಮವ ಬಲ್ಲ ಪರಮಜ್ಞಾನಿಯೆಂದು,
ಬಸವಾದಿ ಪೂರ್ವಪ್ರಮಥರ ಪುರಾತರ ಮಹಾಗಣಂಗಳ ಜರಿದು,
ಈ ಭುವನದಲ್ಲಿ ಇನ್ನಾ ್ಯರು ನಿಜವನರಿತವರಿಲ್ಲೆಂದು ಅಹಂಕರಿಸಿ,
ನಾವು ಮಹಾಜ್ಞಾನಿಗಳು, ನಾವು ಕೇವಲ ಶಿವಾಂಶಿಕರು,
ನಮ್ಮನ್ನಾರು ಅರಿಯರು,
ನಮ್ಮ ಬಲ್ಲವರು ಪುಣ್ಯವಂತರು, ನಮ್ಮನ್ನರಿಯದವರು ಪಾಪಿಷ್ಠರು.
ನಾವು ಮಹತ್ವ ಉಳ್ಳವರು, ನಾವು ಮಕ್ಕಳ ಕೊಡುವೆವು,
ರೋಗ ಕಳೆಯುವೆವು, ಬ್ರಹ್ಮಹತ್ಯಾದಿ ಪಿಶಾಚಿಯ ಸೋಂಕು ಬಿಡಿಸುವೆವು
ಎಂದು ವಿಭೂತಿ ಮಂತ್ರಿಸಿಕೊಟ್ಟು,
ಅವರ ಮನೆಯಲ್ಲಿ ಶಿವಪೂಜೆಯ ಪಸಾರವನಿಳಿಯಿಟ್ಟು,
ಆ ರೋಗದವರನ್ನು ಮುಂದೆ ಕೂಡ್ರಿಸಿಕೊಂಡು,
ತಾ ಕೂತು ಕಣ್ಣು ಮುಚ್ಚಿ, ಒಳಗೆ ಬೆಳಗವ ಕಂಡು,
ಕಣ್ದೆರೆದು, ಬಿರಿಗಣ್ಣಿನಿಂದ ನೋಡ್ತ ಹಡ್ತ ಹುಡ್ತ ಮಾಡಿ
ಪರಿಣಾಮವಾಗಲೆಂದು ಹೇಳಲು, ಅದು ರಿಣಾ ತೀರಿಹೋದರೆ,
ನಮ್ಮ ಮಹತ್ವ ಎಂಥಾದ್ದು, ಹಿಂದೆ ಇಂಥಾ ಮಹತ್ವ ಬಳಹ ಮಾಡೀವಿಯೆಂದು
ಅಲ್ಲಲ್ಲಿ ಹೆಸರು ಹೇಳಿಕೊಳ್ಳಬೇಕು. ಅದು ಹೋಗದಿದ್ದರೆ-
ಇವರ ವಿಶ್ವಾಸ ಘಟ್ಟಿಲ್ಲೆಂದು, ಏನರೆ ನೆವ ಕೊಳ್ಳಬೇಕು.
ಕೊಟ್ಟರೆ ಹೊಗಳಬೇಕು, ಕೊಡದಿದ್ದರೆ ಬೊಗಳಬೇಕು.
ಅವರಿಂದ ಆ ಹಣವು ತನಗೆ ಬಾರದಿದ್ದರೆ
ಅವರ ಅರ್ಥವ ಕಳೆಯಬೇಕೆಂಬ ಯೋಚನೆಬೇಕು.
ಅಥವಾ ಫಣ್ಯಾಚಾರದಲ್ಲಿ ಅವರಿಂದ ಅರ್ಥವ ಸೆಳೆತಂದು
ಹಿಂದೆ ತಾ ಬಿಟ್ಟು ಪೂರ್ವಪ್ರಪಂಚದವರಿಗೆ ಕೊಟ್ಟು
ಈ ವಿಷಯಾತುರಕ್ಕೆ ವಾಯು ತಪ್ಪಿ ನಡೆದು
ಇದು ಪ್ರಭುವಿನಪ್ಪಣೆಯೆಂದು ಹಾಡಿದ್ದೇ ಹಾಡುವ
ಕಿಸಬಾಯಿದಾಸನ್ಹಾಂಗೆ ಹಾದಿಡ್ದೇ ಹಾಡಿಕೊಳ್ಳುತ್ತ,
ಕ್ರೀಯ ನಿಃಕ್ರಿಯವಾಗಿ ಸತ್ತ ಕತ್ತಿಯ ಎಲವು ತಂದು
ತಿಪ್ಪಿಯಲ್ಲಿ ಬಚ್ಚಿಟ್ಟು ಸುತ್ತುವ ತಲೆಹುಳುಕ
ಹುಚ್ಚುನಾಯಿಯಂತೆ, ಉಚ್ಚಿಯಾ ಪುಚ್ಚಿಗೆ ಮೆಚ್ಚನಿಟ್ಟ
ನಿಚ್ಚ ಕಚ್ಚಿಗಡಕರಿಗೆ ತಮ್ಮ ನಿಜದೆಚ್ಚರ ಇನ್ನೆಲ್ಲಿಹದೋ ?
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./16
ಆ ಪರಶಿವನ ಮೂಲಮಂತ್ರಸ್ವರೂಪವಾದ
ಭುವನಬ್ರಹ್ಮಾಂಡದ, ಸಕಲಜೀವಿಗಳ ವಿಸ್ತಾರವ ಕಂಡು,
ತೋರಿ ಅಡಗುವ ಪರಿಗೆ ಸಂಸಾರಮಿಥ್ಯವೆಂದು
ಸಜ್ಜನಗುಣದಲ್ಲಿ ಕೂಡಿ, ಸತ್ಪುರುಷರ ಸಂಗವಮಾಡಿ,
ಶಾಸ್ತ್ರಾಗಮ ಶಿವಪುರಾಣ, ಶಿವಾಚಾರದಲ್ಲಿ ಮನವಿಟ್ಟು
ತತ್ ತ್ವಂ ಅಸಿಯೆಂಬೋ ವಾಕ್ಯಕ್ಕೆ ಚಿತ್ತವೆಳಸಿ
ವಸ್ತು ತಿಳಿಯಬೇಕೆಂದು ತತ್ವಜ್ಞಾನಿಗಳ ಹುಡುಕುವ
ಶ್ರುತಿಜ್ಞಾನಿಗಳಿಗೆ, ಆ ವಸ್ತುವೇ ಗುರುವಾಗಿ,
ತತ್ವೋಪದೇಶವ ಹೇಳಿ, ತತ್ವ ಮಂತ್ರ ವಿವರವ ತಿಳಿಸಲು,
ಆ ತತ್ವ ಮಂತ್ರ ವಿವರವ ತನ್ನೊಳಗೆ ಲಕ್ಷವಿಟ್ಟು ನೋಡೆ
ಆತ್ಮಜ್ಞಾನ ಅನುಮಿಷವಾಯಿತ್ತು.
ಆ ಆತ್ಮಜ್ಞಾನ ಅನುಮಿಷದೃಷ್ಟಿ, ಆ ಆತ್ಮಾನಾತ್ಮವ ಶೋಧಿಸಿತ್ತು.
ಆ ಶೋಧನೆ ಮಹಾಜ್ಞಾನ ಬೆಳಗಲು,
ಆ ಬೆಳಗಿನೊಳಗೆ ಮೂಲಪ್ರಣವದ
ಒಡಲೊಳಗಿನ ಆರು ಆಕೃತಿಗಳೆ ಆರು ಬೀಜಪ್ರಣವಗಳು,
ಆ ಆರು ಪ್ರಣವಗಳೇ ಆ ಪರಶಿವನ ಆರು ಮುಖಗಳು,
ಆ ಆರು ಮುಖಗಳಿಗೆ ಆರು ತತ್ವಗಳು,
ಆರಾರು ಮೂವತ್ತಾರುತತ್ವವು.
ಮೂವತ್ತಾರುತತ್ವಗಳಿಗೆ ಬ್ರಹ್ಮಾಂಡ,
ಆ ಬ್ರಹ್ಮಾಂಡವೇ ಹನ್ನೆರಡು ಭೂತ,
ಹನ್ನೆರಡು ಭೂತಗಳೇ ಪಿಂಡಾಂಡ.
ಆ ಪಿಂಡಾಂಡದಲ್ಲಿ ಹನ್ನೆರಡು ಜ್ಞಾನ, ಹನ್ನೆರಡು ಸ್ಥಾನ, ಹನ್ನೆರಡು ಚಕ್ರ,
ಹನ್ನೆರಡು ಅಂಗ, ಹನ್ನೆರಡು ಲಿಂಗ, ಹನ್ನೆರಡು ಭಕ್ತಿ,
ಹನ್ನೆರಡು ಶಕ್ತಿ, ಹನ್ನೆರಡು ಮಂತ್ರ, ಹನ್ನೆರಡು ಹಸ್ತ,
ಹನ್ನೆರಡು ಮುಖ, ಹನ್ನೆರಡು ಪದಾರ್ಥ, ಹನ್ನೆರಡು ಪ್ರಸಾದ,
ಹನ್ನೆರಡು ತೃಪ್ತಿ-ಇವು ಮೊದಲಾದ ಸತ್ಕರ್ಮದೊಳಾಗದ
ಸರ್ವಸುಗುಣಗಳು, ಸರ್ವದುರ್ಗುಣಗಳು,
ಸರ್ವವೂ ಮೂಲಪ್ರಣವವೆಂದು ತಿಳಿದು,
ಸರ್ವವೂ ಮೂಲಪ್ರಣವವೇ ಶಿವ, ಆ ಮೂಲಪ್ರಣವವೇ ಅಷ್ಟಾವರಣ,
ಆ ಮೂಲಪ್ರಣವವೇ ಸಕಲಪ್ರಾಣಿಗಳು,
ಆ ಮೂಲಪ್ರಣವವೇ ನಾನು, ಸರ್ವವೂ ಮೂಲಪ್ರಣವವೆಂದು
ಇಲ್ಲೇನು, ಅಲ್ಲೇನು, ಎಲ್ಲೇನು, ಹಿಂಗೇನು,
ಹಾಂಗೇನು, ಹ್ಯಾಂಗೇನು, ಇದ್ದಂಗಿರು ಸಿದ್ಧೇಶನೆಂಬುವದ ತಿಳಿದು,
ತಿಳಿಯದೇ ನರಕದ ಕೇರಿಗೆ ಕಿರಿಕುಲದ ಸೂಕರ ಹೋದಂತೆ,
ಹಸಿಯ ತೊಗಲಿನ ವಸರುವ ತೂತಿನ ಹಳೇ ಘಾಯಿಯ ಬಿರಿಕಿನೊಳಗೆ,
ಸರಕನೇ ಎದ್ದು ಜರಕನೇ ಜಾರಿ ಸಿಗಬಿದ್ದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./17
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ
ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು,
ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು,
ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ,
ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ-
ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ
ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೆಹಿಯಾಗಿ,
ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ
ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ
ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ
ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು
ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು
ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ
ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು.
ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು.
ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ,
ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ
ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ,
ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ,
ಅಷ್ಟವಿಧಾರ್ಚನೆ, ಅಷ್ಟಾವರಣನಿಷ್ಠೆ –
ಇವು ಮೊದಲಾದ ಅನಂತ ಸುಗುಣದಿಂದೆ
ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ
ಅಥವಾ ಬಹು ಸತ್ಕರ್ಮವಾದಡೆ
ಸದಾಶಿವನ ಚೌಪದ ಬಹುಪದದೊಳಗಾಗಿ
ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ
ಪುಣ್ಯದ ಫಲವನ್ನು ಅನುಭವಿಸಿ ಮರಳಿ
ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ
ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು,
ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು.
ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ
`ಅತಿದಾನಾದ್ ಬಲೇರ್ಬಂಧಃ’ ಎಂಬ ನೀತಿ ಉಂಟಾಗಿ,
ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ
ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ.
ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ,
ದುಷ್ಕರ್ಮಕ್ಕೆ ಬೀಜ ಸತ್ಕರ್ಮ.
ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ,
ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ,
ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./18
ಆ ಪರಶಿವನೊಳಗಿರ್ದ ಜಗದಾತ್ಮನಲ್ಲಿ ತೋರುವ
ಸತ್ಕರ್ಮ ದುಷ್ಕರ್ಮಕ್ಕೆ ಅಂಜಿ
ಶಿವಧೋ ಶಿವಧೋ ಎಂದು ಮೊರೆಯಿಡಲು,
ಶಿವ ಸಾಧುರಮುಖದಿಂದಲ್ಲಿ ಬಂದು
ಗುರುವಿನ ಪಿಡಿಯೆಂದು ಹೇಳಲು,
ಗುರುವೇ ಗುರುವೇ ಎಂದು ಮೊರೆಯಿಟ್ಟು
ಗುರುವಿನ ಬಯಸುವ ಚಿದ್ಭ್ರಮೆ ಘಟ್ಟಿಗೊಂಡು
ಮುಂದೆ ನಿಂದಿರಲು, ಆ ಮುಂದೆ ನಿಂತ ಗುರುವಿನ ಪ್ರಾರ್ಥಿಸಲು,
ಆ ಶ್ರೀಗುರು ಆ ಶಿಷ್ಯನ ತನ್ನ ಕರುಣಜಲದಿಂದ ಮೈದೊಳೆದು,
ವಿಭೂತಿಪಟ್ಟವ ಕಟ್ಟಿ, ರುದ್ರಾಕ್ಷಿಯ ಅಲಂಕರಿಸಿ,
ಪಂಚಾಚಾರ್ಯರ ಸಾಕ್ಷಿಯಮಾಡಿ, ಶಿಕ್ಷಿಸಿ, ದೀಕ್ಷೆಯನೆಸಗಿ,
ಮೋಕ್ಷದ ಹಣ್ಣಿನ ಬಯಕೆಗೆ ಬೀಜವಿದೆಯೆಂದು ಲಿಂಗವ ಕೊಟ್ಟು,
ಜಂಗಮವ ಬೆರೆಸಿ, ಪಾದೋದಕವ ತರಳಿಸಿ,
ಶಿವಪ್ರಸಾದವರಳಿಸಿ, ಮಂತ್ರಕಾಯವ ಮಾಡಿ,
ಮುಕ್ತಿಪಕ್ವಗೈ ಎಂದು ಹೇಳಿ ಶಬ್ದಮುಗ್ಧವಾಗಲು,
ಆ ಶಬ್ದಮುಗ್ಧವಾದ ಗುರುವಿನ ಹೃದಯವ ತಿಳಿಯದೇ,
ತಾನ್ಯಾರೆಂಬುದನ್ನು ಅರಿಯದೆ, ಗುರುವಿನ ಹಾಡಿ ಹಾಡಿ,
ವಿಭೂತಿಯ ಪೂಸಿ ಪೂಸಿ, ರುದ್ರಾಕ್ಷಿಯ ಧರಿಸಿ ಧರಿಸಿ,
ಲಿಂಗವ ನೋಡಿ ನೋಡಿ, ಜಂಗಮದ ಆರಾಧನೆಯ ಮಾಡಿ ಮಾಡಿ,
ಪಾದೋದಕವ ಕುಡಿದು ಕುಡಿದು, ಪ್ರಸಾದವನುಂಡುಂಡು,
ಮಂತ್ರವನ್ನೋದೋದಿ, ಮಹತ್ವವ ಭ್ರಮಿಸಿ,
ಮುಕ್ತಿಯ ಬಯಸಿ ಬಯಸಿ, ಕಿಸಬಾಯಿ ಆಗಿ ಆಗಿ ಹಸಗೆಟ್ಟು
ಮುನ್ನಿಗಿಂ ಮಿಗಿಲಾಗಿ, ಭವಭವದಲ್ಲಿ ಮಸಿಮಣ್ಣಾದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./19
ಆಗ ಆದುದು ತಾನೆ ಇಕೊ ಈಗ ಆದುದು ತಾನೆ
ಕೂಗಿ ಹೇಳಿದುದು ತಾನೆ ತಲೆದೂಗಿ ಕೇಳುವುದು ತಾನೆ | ಪಲ್ಲ |
ಬೀಜ ಬಿತ್ತಾಯಿತು ಆ ಬೀಜವೇ ವೃಕ್ಷವಾಯಿತು
ಬೀಜ ಫಲವಾಯಿತು ಬೀಜ ಬೀಜವೇ ರಸವಾಯಿತು.
ರಸವೆ ಊಟವಾಯಿತು ಆ ರಸವೇ ತಾಟಾಯಿತು ಆ
ರಸವೇ ನೋಟಾಯಿತು ರಸವೇ ಕೂಟಾಯಿತು.
ಕೂಟೇ ಹೆಣ್ಣಾಯಿತು ಆ ಕೂಟೇ ಗಂಡಾಯಿತು
ಕೂಟೇ ಪಿಂಡಾಯಿತು ಆ ಕೂಟೇ ಆಶಾಯಿತು.
ಆಶೆ ದೋಷವಾಯಿತು ಆಶೆ ಪಾಶವಾಯಿತು ಆ
ಆಶೆ ಘಾಸ್ಯಾಯಿತು ಆಶೆ ಆಶೆ ನಾಶಾಯಿತು.
ನಾಶ ನಾನಾಯಿತು ಆ ನಾಶ ನೀನಾಯಿತು
ನಾಶ ತಾನಾಯಿತು ನಾಶ ನಾಶ ಮಹಾಂತಾಯಿತು./20
ಆಸೆ ಇಲ್ಲಾ, ನಿರಾಸೆ ಇಲ್ಲಾ, ಕ್ಲೇಶ ಇಲ್ಲಾ, ರೋಷವಿಲ್ಲಾ,
ದ್ವೇಷವಿಲ್ಲಾ, ದೂಷಿಯಿಲ್ಲಾ-ಇವೂ ಏನೂ ಇಲ್ಲದೇ
ತಾನಲ್ಲಾಗದೆ ಮೆಲ್ಲಮೆಲ್ಲನೆ ಸತ್ತು ಸತ್ತು ಹೋಯಿತು
ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./21
ಇಲ್ಲ ಇಲ್ಲೆಂಬೊ ನಿಬರ್ೆಲೊಳು ತಾನೇನು
ಇಲ್ಲದವಾಚ್ಯ ಸ್ವಯಂಭು ಬೈಲ್ಹೆಂಗಾದುದೊ ತಾನೇ ತಾನೆಂದರೆ | ಪಲ್ಲ |
ನಿರುಪಮ ನಿಃಕಳ ಪರಬ್ರಹ್ಮವಾದುದು ತಾನೆ ತಾನೆ ಆ-
ಪರಬ್ರಹ್ಮದೊಳಗೆ ಚಿತ್ಕಳೆ ಅರವು ಆದುದು ತಾನೆ ತಾನೆ
ಅರವಿನೊಳು ಅರವು ಅರಿತುದೆ ಮನವಾದುದು ತಾನೆ ಆ
ಅರಿತ ಮನವೆ ನೆನವಿಗೆ ಘನವಾದುದು ತಾನೆ ತಾನೆ
ಘನವಾದ ಘನವೇ ತಾ ಘನಲಿಂಗವಾದುದು ತಾನೆ ತಾನೆ ಆ
ಘನಲಿಂಗದೊಳಗೆ ತಾ ನವಲಿಂಗವಾದುದು ತಾನೆ ತಾನೆ ಆ
ಘನಲಿಂಗವೇ ಅವನ ಅಂಗವಾದುದು ತಾನೆ ತಾನೆ
ಘನ ನವಲಿಂಗವೇ ಬಹುಬಗೆಯಾದುದು ತಾನೆ
ನವಶಕ್ತಿ ನವಭಕ್ತಿ ನವನಾದವಾದುದು ತಾನೆ ತಾನೆ
ನವಚಕ್ರ ನವವರ್ಣ ನವಮಂತ್ರವಾದುದು ತಾನೆ ತಾನೆ
ನವಹಸ್ತ ನವಮುಖ ನವದೈವವಾದುದು ತಾನೆ ತಾನೆ ಈ
ನವರೂಪು ನವರುಚಿ ನವತೃಪ್ತಿಯಾದುದು ತಾನೆ ತಾನೆ
ಮೂರಾರು ಮುಂದೆ ಮೂವತ್ತಾರಾದುದು ತಾನೆ ತಾನೆ ಈ
ಮೂರಾರೇ ಇನ್ನೂರಾಹದಿನಾರಾದುದು ತಾನೆ ತಾನೆ
ಮೂರಾರೇ ಹನ್ನೆರಡುನೂರಾ ತೊಂಬತ್ತಾರಾದುದು ತಾನೆ ತಾನೆ ಈ
ಮೂರಾರೇ ಮೀರಿ ಈ ಜಗಮಯವಾದುದು ತಾನೆ ತಾನೆ
ಒಂದೇ ಮೂರಾದುದು ಒಂದೇ ಆರಾದುದು ತಾನೆ ತಾನೆ ಆ
ಒಂದೇ ಆರು ಮೂರು ಒಂದೇ ಬರಿ ಆದುದು ತಾನೆ ತಾನೆ
ಒಂದಾದ ಅಂದದಾನಂದ ನಾಮವಾದುದು ತಾನೆ ತಾನೆ ಈ
ಸಂದ ಮಹಾಂತನ ಕಂದನಾದುದು ತಾನೆ ತಾನೆ/22
ಈ ಪೊಡವಿಯ ಮಡದಿಯ ನಡುನಯನದ ಬೆಡಗಿನ
ಬೆಳಗಿನೊಳೆಸೆವಾ ಬಾಳೇಹಳ್ಳಿ ಸಿಂಹಾಸನಾಧೀಶ
ಪೊಡವಿಡಿ ರುದ್ರಮುನಿಸ್ವಾಮಿಗಳ ಕರಕಂಚೋದ್ಭವರಾದ
ಚಿಕ್ಕರೇವಣಸಿದ್ಧಸ್ವಾಮಿಗಳು ಎನಿಸಿದರು.
ಆ ಚಿಕ್ಕ ರೇವಣಸಿದ್ಧಸ್ವಾಮಿಗಳ ಶಿಷ್ಯ ಗುರುನಂಜಸ್ವಾಮಿ,
ಆ ಗುರುನಂಜಸ್ವಾಮಿಗಳ ಶಿಷ್ಯ ರಾಚೋಟಿಸ್ವಾಮಿ,
ಆ ರಾಚೋಟಿಸ್ವಾಮಿಗಳ ಶಿಷ್ಯ ನಿಡುಮಾಮಿಡಿ ಕರಿಬಸವಸ್ವಾಮಿ,
ಆ ಕರಿಬಸವಸ್ವಾಮಿಗಳ ಶಿಷ್ಯ ಮಲಘಣ ಶಾಂತಸ್ವಾಮಿಗಳು,
ಆ ಮಲಘಣದ ಶಾಂತಸ್ವಾಮಿಗಳ ಶಿಷ್ಯ ಜಡೆಶಾಂತಸ್ವಾಮಿಗಳು
ಆ ಜಡೆಶಾಂತಸ್ವಾಮಿಗಳ ಶಿಷ್ಯ ಮಹಾಂತಸ್ವಾಮಿಗಳು,
ಆತನ ಶಿಷ್ಯ ಮಡಿವಾಳಸ್ವಾಮಿ,
ಆತನ ಶಿಷ್ಯ ರಾಚೋಟಿಸ್ವಾಮಿಗಳು,
ಆತನ ಶಿಷ್ಯ ಮಹಾಂತಸ್ವಾಮಿ,
ಆತನ ಶಿಷ್ಯ ಅತೀತವ ಕೈಕೊಂಡು ಸರ್ವಕ್ಕೆ ಅತೀತನಾದ
ಚಿಣಮಗೇರಿ ಚೌಡಾಪೂರ ನಡುಸೀಮಿ ಗುಡ್ಡದ ಯೋಗಿಯೆನಿಸಿದ
ಮಹಾಂತಸ್ವಾಮಿಗಳು,
ಆತನ ಶಿಷ್ಯ ಮಡಿವಾಳಸ್ವಾಮಿ,
ಆತನ ಶಿಷ್ಯ ಮರಿಸ್ವಾಮಿಗಳು, ಆತನ ಶಿಷ್ಯ ಗುರುಬಸವದೇವರು.
ಆ ಗುರು ಬಸವದೇವರ ಕನ್ನೆ ಶಿಷ್ಯ ಬಿದನೂರ ಮಡಿವಾಳಾಖ್ಯನು.
ಆ ಮಡಿವಾಳಾಖ್ಯನೆಂಬ ನಾಮವಿಡಿದು ನಿರ್ನಾಮಲೀಲಾ ನಟಿಸಬೇಕೆಂಬ
ಅರವಿನೊಳಗೆ ಮರವಾಗಿದರ್ಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./23
ಈ ಭುವನದಲ್ಲಿ ಐದು ಜೀನಸಿನ ಐದು ವೃಕ್ಷ.
ಆ ಐದು ವೃಕ್ಷಕ್ಕೆ ಐದೈದು ಜೀನಸಿನ ಐದೈದು ಶಾಖೆಗಳು.
ಆ ಐದೈದು ಶಾಖೆಗಳಿಗೆ ಐದೈದು ಅಡ್ಡ ಶಾಖೆಗಳು.
ಆ ಅಡ್ಡ ಶಾಖೆಗಳಿಗೆ ಅನಂತ ಜೀನಸಿನ ಅನಂತ ಎಲೆಗಳು.
ಇಂತಪ್ಪ ಐದು ವೃಕ್ಷಗಳ ಬುಡ ಕೊನಿ ಒಳಗ ಮಾಡಿಕೊಂಡು,
ಬುಡ ಕೊನಿ ಇಲ್ಲದ ಬಳ್ಳಿ ಆ ಆ ಜೀನಸಿಗೆ ತಾನು ಆ ಆ ಜೀನಸಾಗಿ
ಆ ಗಿಡಯೆಂಬ ಗುರ್ತು ತೋರಿದ ಹಾಗೆ ಮುಸುಕಿಟ್ಟಿಹುದು.
ಆ ಮುಸುಕಿಟ್ಟ ಬಳ್ಳಿಯ ಚಿಗುರೆಲೆಯನು ಹರಿಯದೆ,
ಆ ವೃಕ್ಷದ ಕೊನರು ಡೊಂಕಿಸದೆ
ಆ ಬುಡ ಕೊನಿಯಿಲ್ಲದ ಬಳ್ಳಿಯ ಕಡೆದೆಗೆದ ನಿಮ್ಮ ನಿಜಶರಣನು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./24
ಒಂದು ಮರವ ಕೊರೆದು ನೂರೆಂಟು ಬೊಂಬೆಯ ಮಾಡಿ
ಮರವೇ ಬೊಂಬೆಯಲ್ಲದೆ ಮರ ಬ್ಯಾರೆ ತಾನಿಲ್ಲಾ.
ಇದರಂತೆ ತಾನೇ ಹಲವು ಆಗಲು ತಾನೇ
ಹಲವಲ್ಲದೆ ತಾ ಬ್ಯಾರೆಲ್ಲಿಹನೋ ಇದೇ ಅನುಭವ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./25
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ
ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು.
ಆ ಗಡಹವ ನೋಡ ಹೋಗಲು, ಆ ಗಡಹದ
ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು
ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ
ಮೊದಲಾದ ಅನಂತ ಪರಿವಾರ ಆರೈಸಿರುವದು.
ಅಲ್ಲಿ ವೇದ ಆಗಮ ಪುರಾಣ ಮೊದಲಾದ
ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು.
ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ
ಮೊದಲಾದ ಅನಂತ ಪ್ರಕಾಶವಿರ್ಪುದು.
ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕಣರ್ಿ
ಮೊದಲಾದ ಅನಂತ ನಾದವಿರ್ಪುದು.
ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ
ಚಿತ್ರವಿಚಿತ್ರವಾದ ಮಂಟಪವಿರ್ಪುದು.
ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ
ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ
ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು.
ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು.
ಅದರೊಳಗೆ ನೋಡಬೇಕೆಂದು ಹೋಗಲು
ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು.
ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ
ಎಂಥಾತ ಆತನ ಆತುರದಿ ನೋಡಬೇಕೆಂದು
ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ.
ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ.
ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ
ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ
ಅಲ್ಲೇ ಇರ್ದಂತೆ ಇರುತಿರ್ದೆನೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./26
ಒಂದೇ ಆಗಿರ್ದ ಪರಶಿವನು ಮೂರಾಗಿ
ಮೂರರಿಂದೆ ಪೂಜೆಗೊಂಡು ಎರಡಾಗಿ
ಮೂರು ಎರಡು ಭೇದವಿಲ್ಲದೆ ಒಂದಾಗಿ ತೋರಿದಿರಿ.
ಅದೆಂತೆಂದೊಡೆ :ಅಖಂಡ ಪರಶಿವನ ಭೇದಿಸಿ ಕಾಂಬಲು
ತೋರಿದ ನಾದವೇ ಗುರುವಾಗಿ, ಬಿಂದುವೆ ಲಿಂಗವಾಗಿ,
ಕಳೆಯೇ ಜಂಗಮವಾಗಿ, ಸುಜಲವೆ ಪಾದೋದಕವಾಗಿ,
ತಿಳಿಯೇ ಪ್ರಸಾದವಾಗಿ,
ಕಾಣಿಸುವ ಸುಪ್ರಕಾಶದ ತೇಜಪುಂಜವೆ ಶ್ರೀವಿಭೂತಿಯಾಗಿ,
ಸೂರ್ಯ ಚಂದ್ರಾದಿಗಳೆ ರುದ್ರಾಕ್ಷಿಮಣಿಯಾಗಿ,
ಪಿಂಡಬ್ರಹ್ಮಾಂಡಕೊಂದೆ ಎನಿಸಿದ ಓಂಕಾರವೆ
ಸರ್ವಮಂತ್ರಗಳ ಶ್ರೇಷ್ಠ ಆದಿಮಂತ್ರವೆನಿಸಿ,
ಬ್ರಹ್ಮಾಂಡ ಅಷ್ಟಾವರಣದ ಇನ್ನೊಂದು ಪರಿಯಾಗಿ ತೋರಿ,
ಹಲವು ಪರಿಯಲಿ ಲೀಲೆಯಾಗಿ ಮೆರೆದ
ಹಲವು ಹಲವಲ್ಲದೆ ಹಲವು ಒಂದಾಗಿ, ಒಂದೆ ತಾನಾದ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./27
ಕಸ್ತೂರಿಮೃಗವು, ಕಸ್ತೂರಿಯ ಹುಡುಕುತ್ತ ಹೋದರೆ
ಕಸ್ತೂರಿಮೃಗವು ತಾನಲ್ಲದೆ ಕಸ್ತೂರಿಯು ಸಿಗಲುಂಟೆ ?
ಕನ್ನಡಿಯ ಮಹಲಿನೊಳಗೆ ಕುನ್ನಿ ತಾ ಕೂತು
ಸುತ್ತಲಿರ್ದ ಕನ್ನಡಿಯೊಳಗೆ ಕುನ್ನಿಗಳ ಕಂಡು
ತನ್ನ ರೂಹೆಂದು ಅರಿಯದೆ ಅನ್ಯವೆಂದು ಕೂಗಲು
ಆ ಕೂಗು ಎಂದಿಗೆ ಮಾಣ್ಬುದೋ ತನ್ನ ತಾ ತಿಳಿದಂದಿಗಲ್ಲದೆ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./28
ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ.
ಶ್ರೀಗುರು ಮಹಾಂತಯೋಗೇಂದ್ರ ನೀವು ಎನಗೆ
ಗತಿ ಮತಿ ಚೈತನ್ಯದಿ ಸರ್ವವು ನೀನೇ ಆದಿಯಲ್ಲಾ.
ನಿನಗೆ ನಾನು ಏನಾದೆ ಹೇಳಾ ?
ನಾನು ನೀನೇ ಆದದ್ದು ಹೇಳಬಾರದೆಂಬುದು ಅಹಂಕಾರವೇ ದೇವಾ ?
ನೀನು ಅಹಂಕಾರಿಯಾಗಿರೆ ನಾನು ನಿರಹಂಕಾರಿಯಾದರೆ
ಹೆಚ್ಚುಕಡಿಮೆಯಾಗುವದು.
ಅದು ಕಾರಣ ನೀನು ಹೇಳದಿದ್ದರೆ ನಾನು ಹೇಳುವೆನು.
ಅದೆಂತೆಂದೊಡೆ : ನಾನು ನಿನ್ನ ಗುರುವಿನಲ್ಲಿ ಮುಂದೆ ಹುಟ್ಟಿದೆ,
ನೀನು ನನ್ನ ಹಿಂದೆ ಹುಟ್ಟಿದೆ : ನಿನಗೆ ನಾನು ಏನಾದೆ ? ನಿನಗೆ ನಾನು ಅಣ್ಣನಾದೆ.
ಮತ್ತೆ ನಾನು ಮುಂದೆ ಗುರುವ ಪಡದು ನಾ ನಿನ್ನ ಪಡೆದೆ.
ನಿನಗೆ ನಾನು ತಂದಿಯಾದೆ.
ನಾ ಮುಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲಿ
ನಾ ನಿನಗೆ ಮುತ್ತ್ಯಾನಾದೆ.
ಮುಂದೆ ಸಾಧುರ ಸಂಗ ಪಡೆದು
ಆ ಸಾಧುರ ಸಂಗದಿಂದೆ ಗುರುವಿನ ಪಡೆದು
ಆ ಗುರುವಿನಿಂದ ನಿನ್ನ ಪಡದಲ್ಲೆ ನಾ ನಿನಗೆ ಅಜ್ಜನಾದೆ.
ಮುಂದೆ ಸತ್ಕರ್ಮ, ಆ ಸತ್ಕರ್ಮ ಪಡದಲ್ಲೆ ಸಾಧುರಸಂಗ,
ಆ ಸಾಧುರಸಂಗದಿಂದ ಗುರು,
ಆ ಗುರುವಿನಲ್ಲಿ ನೀನಾದುದಕ್ಕೆ ನಿನಗೆ ಪಣಜನಾದೆ.
ಮುಂದೆ ನೀತಿ ಪಡದಲ್ಲಿ ಆ ನೀತಿಯಿಂದ ಸತ್ಕರ್ಮ,
ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರು,
ಆ ಗುರುವಿನಿಂದ ನಾನಾದಮ್ಯಾಲೆ ನಾ ನಿನಗೆ ಪಣಜನಪ್ಪನಾದೆ.
ಮುಂದೆ ನಾನು ಜ್ಞಾನ ಪಡೆದಲ್ಲಿ ಆ ಜ್ಞಾನದಿಂದ ನೀತಿ,
ಆ ನೀತಿಯಿಂದೆ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ,
ಆ ಸಾಧುರಸಂಗದಿಂದೆ ಗುರುವು, ಆ ಗುರುವಿನಿಂದ ನಿನ್ನ ಪಡೆದಲ್ಲಿ
ನಾ ನಿನಗೆ ಪಣಜನ ಮುತ್ತ್ಯನಾದೆ.
ನಾ ಮುಂದೆ ನರಜನ್ಮ ಪಡದಲ್ಲಿ ಜ್ಞಾನ, ಆ ಜ್ಞಾನದಿಂದೆ ನೀತಿ,
ನೀತಿಯಿಂದ ಸತ್ಕರ್ಮ, ಸತ್ಕರ್ಮದಿಂದೆ ಸಾಧುರ ಸಂಗ,
ಸಾಧುರಸಂಗದಿಂದೆ ಗುರುವು, ಗುರುವಿನಿಂದೆ ನೀನು,
ನಾ ನಿನಗೆ ಪಣಜನಜ್ಜನಾದೆ.
ಈ ನರಜನ್ಮಕ್ಕೆ ಮುಂದೆ ಪುಣ್ಯವೆ ಕಾರಣ.
ಮುಂದೆ ಪುಣ್ಯಪಡೆದಲ್ಲಿ ಆ ಪುಣ್ಯದಿಂದೆ ಈ ನರಜನ್ಮಪಡೆದೆ.
ಈ ನರಜನ್ಮದಿಂದೆ ಜ್ಞಾನಪಡೆದೆ, ಈ ಜ್ಞಾನದಿಂದೆ ನೀತಿಪಡೆದೆ,
ನೀತಿಯಿಂದೆ ಸತ್ಕರ್ಮ, ಸತ್ಕರ್ಮದಿಂದೆ ಸಾಧುರಸಂಗಪಡೆದೆ.
ಈ ಸಾಧುರಸಂಗದಿಂದೆ ಗುರುವಿನಪಡೆದೆ.
ಗುರುವಿನಿಂದ ನಿನ್ನ ಪಡೆದೆ ; ನಾ ನಿನಗೆ ಪಣಜನ ಪಣಜನಾದೆ.
ಇಷ್ಟಾದರೂ ಆಯಿತೇ ?
ಮತ್ತೆ ನಿನ್ನ ಘ್ರಾಣಕ್ಕೆ ಗಂಧವಕೊಟ್ಟೆ, ನಿನ್ನ ಜಿಹ್ವೆಗೆ ರಸವ ನೀಡಿದೆ,
ನಿನ್ನ ನೇತ್ರಕ್ಕೆ ರೂಪವ ತೋರಿದೆ, ನಿನ್ನ ಅಂಗಕ್ಕೆ ಆಭರಣವನಿಟ್ಟೆ,
ನಿನ್ನ ಶ್ರೋತ್ರಕ್ಕೆ ಶಬ್ದವ ಕೊಟ್ಟೆ, ನಿನ್ನ ಹೃದಯಕ್ಕೆ ತೃಪ್ತಿಯಮಾಡಿದೆ.
ನಾನು ಈ ಪರಿಯಲ್ಲಿ ನಿನ್ನ ಹುಟ್ಟಿಸಿದೆ,
ನಿನ್ನ ಬೆಳೆಸಿದೆ, ನಿನ್ನ ಮನ್ನಿಸಿದೆ, ನಿನ್ನ ವಣರ್ಿಸಿದೆ.
ಮತ್ತೆ ಗುರು-ಶಿಷ್ಯ ಸತಿ-ಪತಿನ್ಯಾಯ.
ನೀ ಪತಿ ನಾ ಸತಿ, ಅಹುದೋ ಅಲ್ಲವೋ ?
ಮತ್ತೆ ನೀ ಪತಿಯಾದ ಮೇಲೆ ನಿನಗೆ ನಾನು ಸೋಲಬೇಕೋ
ನನಗೆ ನೀನು ಸೋಲಬೇಕೋ ?
ನನಗೆ ನೀ ಸೋತಲ್ಲಿ ನಾ ಹೆಚ್ಚೊ ? ನೀ ಹೆಚ್ಚೊ ?
ನಾನೇ ಹೆಚ್ಚು. ಅದು ಹೇಗೆಂದಡೆ : ನನ್ನ ಮುಡಿಯಲಾದ ಗಂಧಕ್ಕೆ ನಿನ್ನ ಘ್ರಾಣೇಂದ್ರಿಯ ಸೋತಿತು.
ನನ್ನ ಅಧರಾಮೃತಕ್ಕೆ ನಿನ್ನ ಜಿಹ್ವೇಂದ್ರಿಯ ಸೋತಿತು.
ನನ್ನ ಹಾವ ಭಾವ ವಿಭ್ರಮ ವಿಲಾಸ ಶೃಂಗಾರ ತೋರಿಕೆಗೆ
ನಿನ್ನ ನಯನೇಂದ್ರಿಯ ಸೋತಿತು.
ನನ್ನ ಅಂಗದಾಲಿಂಗಕ್ಕೆ ನಿನ್ನ ತ್ವಗೇಂದ್ರಿಯ ಸೋತಿತು.
ನನ್ನ ಸಂಗಸಮರಸದಲ್ಲಿ ನಿನ್ನ ಸಂಯೋಗ ಸೋತಿತು.
ನೀನು ಆವ ಪರಿಯಾಗಿ ನನ್ನ ಸೋಲಿಸಬಂದರೆ.
ನಾನು ನಿನ್ನ ಆವಾವ ಪರಿಯಾಗಿ ಸೋಲಿಸಿದೆ.
ಅದು ಹಾಂಗಿರಲಿ, ಇನ್ನೊಂದುಂಟು-ಅದು ಏನೆನಲು : ನೀನು ನಾ ಮುಡದದ್ದು ಮುಡದಿ, ನಾ ಉಂಡದ್ದು ಉಂಡಿ,
ನಾ ಕಂಡದ್ದು ಕಂಡಿ, ನಾ ಉಟ್ಟದ್ದು ಉಟ್ಟಿ,
ನಾ ಕೇಳಿದ್ದು ಕೇಳಿದಿ, ನಾ ಕುಡದದ್ದು ಕುಡಿದಿ,
ನೀನು ನನ್ನ ಪ್ರಸಾದಿ ಆದಿಯಲ್ಲಾ.
ಮತ್ತೆ ನನ್ನ ಮೂಗೇ ನಿನ್ನ ಮೂಗು, ನನ್ನ ಬಾಯಿಯೇ ನಿನ್ನ ಬಾಯಿ,
ನನ್ನ ಕಣ್ಣೇ ನಿನ್ನ ಕಣ್ಣು, ನನ್ನ ಮೈಯ್ಯೇ ನಿನ್ನ ಮೈ,
ನನ್ನ ಕಿವಿಯೇ ನಿನ್ನ ಕಿವಿ, ನನ್ನ ಹೃದಯವೇ ನಿನ್ನ ಹೃದಯ,
ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ,
ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ,
ನಾನೇ ನೀನು, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./29
ಗುರುಶಿಷ್ಯರೆಂಬಲ್ಲಿ ಬೋಧೆ ಮೊದಲೇ ಇತ್ತು.
ಇವು ಮೂರು ಒಂದಾಗಿರ್ದು ಒಂದು ಇಲ್ಲದೆ,
ಒಂದು ಇಲ್ಲದಾ ಒಂದರೊಳಗೆ ಒಂದು ಒಂದೆಂಬ ಮಹಾಬಯಲವೆ
ಚಿದ್ಬಯಲಾದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./30
ಘನಲಿಂಗ, ಅತೀತ, ವಿರಕ್ತಿ-ಈ ಮೂರು ಒಂದಾಗಿ
ಭವತಿಭಿಕ್ಷವ ಕೈಕೊಂಡು
ಉಂಡು ಉಪವಾಸಿ ಆಗಿ, ಬಳಸಿ ಬ್ರಹ್ಮಚಾರಿ ಆಗಿ,
ತತ್ತ್ವಮಂತ್ರೋಪದೇಶವ ಪಸರಿಸಿ,
ಆಚಾರ ಹೆಚ್ಚುಗೊಳಿಸಿ, ನಿಷ್ಠೆಯೊಳಗಿರ್ದು,
ಕಷ್ಟನಿಷ್ಠುರವನಳಿದು ಸೃಷ್ಟಿಗೆ ಮಿಗಿಲೆನಿಸಿಕೊಂಡು
ಜಗವಾದ ಬಗೆಯ ಅರಿಯದೆ ಬಗೆತಗಿಗೆ ಈಡಾಗಿ
ನಗನಗುತಾ ಸತ್ತುಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./31
ಚಿತ್ತೆಂಬೊ ಬಿತ್ತುವಡೆದು, ಕಳೆಯೆಂಬೋ ಮೊಳಕೆ ಹುಟ್ಟಿ,
ಮಾಯವೆಂಬೋ ವೃಕ್ಷವಾಯಿತ್ತು.
ಆ ವೃಕ್ಷದಲ್ಲಿ ಹಲವು ಶಾಖೆ, ಹಲವು ಎಲೆ, ಹಲವು ಪುಷ್ಪ,
ಹಲವು ಕಾಯಿ, ಹಲವು ಸವಿ, ಹಲವು ಬೀಜ,
ಹಲವು ಫಲವಾಯಿತಲ್ಲದೆ,
ನಾನೆಂಬುದೇನು ? ನೀನೆಂಬುದೇನು ? ತಾನೆಂಬುದೇನು ? ಏನೆಂಬುದೇನು ?
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./32
ಚಿತ್ಪ್ರಕಾಶವು ತಾನೆ ತನ್ನ ಲೀಲಾವಿಲಾಸಕ್ಕೆ
ತಾನೇ ಮೇರುಪರ್ವತಾದಿ ಬ್ರಹ್ಮಾಂಡ ಪಿಂಡಾಂಡ
ಸಕಲ ಚರಾಚರ ದೇವ ಮಾನವ ದಾನವ
ಸದಾಶಿವ ಪರಮಾತ್ಮರೆಂಬ ತೋರಿಕೆಯೆಲ್ಲಾ ನೀನಾದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ,/33
ಜಯ ಜಯ ನಿರುಪಮ ನಿರವಯ ನಿಷ್ಕಲ
ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ
ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ |
ಸುಳ್ಳೆ ನಿಬರ್ೆಲೆನಿಸಿ ಮೆರೆದಿ
ಸುಳ್ಳೆ ಮಹಾಬೈಲಾಗಿ ತೋರಿದಿ
ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ
ಸುಳ್ಳೆ ಪರಶಿವ ಚಿತ್ತಭಿತ್ತಿಯು
ಸುಳ್ಳೆ ಇಚ್ಛೆಯ ನೆನವಕೊನರಿಸಿ
ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1|
ಸುಳ್ಳೆ ನೆಲ ಜಲ ಅಗ್ನಿ ವಾಯು
ಸುಳ್ಳೆ ಗಗನಾತ್ಮಾರ್ಕ ಚಂದ್ರಮ
ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ
ಸುಳ್ಳೆ ಬೀಜದ ಸಸಿಯ ಫಲರಸ
ಸುಳ್ಳೆ ಶೋಣಿತ ಶುಕ್ಲ ಶರೀರ
ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2|
ಸುಳ್ಳೆ ತ್ರಿಜಗ ಸಚರಾಚರಗಳು
ಸುಳ್ಳೆ ತನ್ನನು ತಾನೆ ಎಂಬುದು
ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ
ಸುಳ್ಳೆ ತಾ ಸತ್ಕರ್ಮ ಸದ್ಗುಣ
ಸುಳ್ಳೆ ತಾ ದುಷ್ಕರ್ಮ ದುರ್ಗುಣ
ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3|
ಸುಳ್ಳೆ ಕಾಮ ಶೀಮ ನೇಮವು
ಸುಳ್ಳೆ ಭೋಗ ತ್ಯಾಗ ಯೋಗವು
ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು
ಸುಳ್ಳೆ ಇಹಪರ ಪಾಪ ಪುಣ್ಯವು
ಸುಳ್ಳೆ ಸ್ವರ್ಗ ನರಕ ಸುಖ ದುಃಖ
ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4|
ಸುಳ್ಳೆ ಭಾವದ ಭ್ರಮಿಗೆ ಭವಭವ
ಸುಳ್ಳೆ ತಾ ತಿರುತಿರುಗಿ ಬಳಲುತೆ
ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು
ಸುಳ್ಳೆ ತಾ ಮಹಾಮೇರು ಮಹತ್ವವು
ಸುಳ್ಳೆ ಈ ಮಾಯಾ ಗಮನವು
ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5|
ಸುಳ್ಳೆ ಅಷ್ಟಾವರಣದರ್ಚನೆ
ಸುಳ್ಳೆ ತಾ ಅಷ್ಟಾಂಗಯೋಗವು
ಸುಳ್ಳೆ ಬೆಳಗಿನ ಬೆಳಗು ಅದ್ವೆ ತಾದಿ ನಿಜಮುಕ್ತಿ
ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ
ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ
ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6|
ಸುಳ್ಳೆ ತಾ ಶಿವ ಸುಳ್ಳೆ ನೀ ಗುರು
ಸುಳ್ಳೆ ನಾ ಶಿಷ್ಯಾಗಿ ಈ ಭವಕರ
ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ
ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ
ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ
ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7|
ಸುಳ್ಳೆ ಹುಡುಕಿ ನಾ ನನ್ನ ಮರೆದೆ
ಸುಳ್ಳೆ ಹುಡುಕಿ ನಾ ನಿನ್ನ ಅರಿದೆ
ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು
ಸುಳ್ಳೆ ಬಂದಿತು ಸುಳ್ಳೆ ನಿಂದಿತು
ಸುಳ್ಳೆ ಹೊಂದಿತು ಸುಳ್ಳೆ ಹೋಯಿತು
ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8|
ಸುಳ್ಳೆ ಇಪ್ಪತ್ತೈದು ನಿಜಪದ
ಸುಳ್ಳೆ ಹತ್ತೊಂಬತ್ತು ವಚನಗಳು
ಸುಳ್ಳೆ ಈ ಪರಿವಧರ್ಿನೊಂಬತ್ತೆಂದೆನು ಹಾಡು
ಸುಳ್ಳೆ ಹಾಡುವದಾಯ್ತು ಹಾಡು
ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ
ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9|/34
ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು,
ತಂದೆಯದು ಒಂದು ದಿನದ ಶುಕ್ಲ,
ತಾಯಿಯದು ಒಂಬತ್ತು ತಿಂಗಳದ ಶೋಣಿತವು ಕೂಡಿ,
ಗಟ್ಟಿಗೊಂಡು ಪಿಂಡವಾದ ಈ ಶರೀರದ ಕಷ್ಟ ಎಷ್ಟಂತ್ಹೇಳಲಿ,
ಆ ತಾಯಿಯ ಉದರದಲ್ಲಿರ್ದ ಆ ಪರಿಯೆಂತೆಂದರೆ : ಕದ್ದ ಕಳ್ಳನ ಹೆಡಗುಡಿಯಕಟ್ಟಿ ಹೊಗಸಿದ ಸೆರೆಮನೆಗಿಂತ
ಸಹಸ್ರ ಇಮ್ಮಡಿ ಉಪದ್ರವಾಯಿತು.
ಎಡಬಲ ಮೂತ್ರದ ಹಡಕಿಯ ಬಾಧೆ,
ನಡುವೆ ಕಡಿವ ಜಂತುಗಳ ಬಾಧೆ,
ಕುದಿವ ಜಠರಾಗ್ನಿಯ ಬಾಧೆ, ಏರಿಳಿವ ಶ್ವಾಸಮಾರುತನ ಬಾಧೆ,
ಹೆತ್ತವ್ವ ನುಂಗಿದ ತುತ್ತು ಅಳನೆತ್ತಿಗೆ ತಗಲಲು
ಹತ್ತುಸಾವಿರ ಸಿಡಿಲು ಹೊಡೆದಂತಾಯಿತು.
ಮೇಲೆ ಕುಡಿವ ನೀರಿನಿಂದಾದ ಸಂಕಟ ಹೇಳಲಳವಲ್ಲ.
ಆ ತಾಯಿ ನಡಿವ ನುಡಿವ ಆಡುವ ಹಾಡುವ ಓಡುವ
ಕೂಡ್ರುವ ಆಕಳಿಸುವ ಮಲಗುವ ಏಳುವ ಬೀಳುವ
ಮೈಮುರಿಯುವ ಇಂತು ಅನಂತ ಬಾಧೆಯೊಳಗೆ
ಸಾಯದ ಕಾರಣವೇನು ? ಕರ್ಮನಿವೃತ್ತಿ ಇಲ್ಲದಾಗಿ.
ಇಂತು ದುಃಖದಲ್ಲಿ ಒಂಬತ್ತುತಿಂಗಳು ತುಂಬಿ
ಸರ್ವ ಅವಯವಂಗಳ ಬಲಿದು ಎಚ್ಚರಹುಟ್ಟಿ ಜಾತಿಸ್ಮರತ್ವವ ತಿಳಿದು,
ಕೆಟ್ಟೆ ಕೆಟ್ಟೆನೆಂದು ತನ್ನ ಮುನ್ನಿನ ಕರ್ಮಕ್ಕೆ ನಡುನಡುಗಿ
ಕಡೆಗಾಣುವ ಪರಿಯೆಂತೆಂದು ಚಿಂತಿಸಿ,
ಸರ್ವರಿಗೆ ಶಿವನೇ ದೈವವೆಂದು ಸರ್ವರ ಪಾಪಪೊರೆವಾತನೆಂದು ತಿಳಿದು,
ಈ ಭವಬಾಧೆ ಬಿಡಿಸಿಕೊಳ್ಳುವುದಕ್ಕೆ
ಶಿವಧೋ ಶಿವಧೋ ಶಿವಧೋ ಎಂದು ಮೊರೆಯಿಡುವ ಸಮಯಕ್ಕೆ
ವಿಷ್ಣು ಪ್ರಸೂತಿಯ ಗಾಳಿಬೀಸಲು ತಲೆಮೇಲಾಗಿದ್ದ ಶಿಶುವು,
ಅಗಸ ಅರವಿಯ ಹಿಂಡಿದಂತೆ, ಹೆಡಕ್ಹಿಡಿದು ಮುರಿದೊತ್ತಿ
ತಲೆಕೆಳಗೆ ಮಾಡಿ ಯೋನಿದ್ವಾರದಾ ಹೊರಯಕ್ಕೆ ನೂಕಲು,
ಅಕ್ಕಸಾಲಿಗನು ಕಂಬೆಚ್ಚಿನಲ್ಲಿಕ್ಕಿ ತೆಗೆದ ಚಿನ್ನದ ಸಲಾಕೆಯಂತಾಯಿತಲ್ಲಾ.
ಮುಂದೆ ಭೂಸ್ಪರ್ಶನದಿಂದೆ ಹಿಂದಿನ ಜಾತಿಸ್ಮರತ್ವವ ಮರೆತು,
ತನ್ನ ಮಲಮೂತ್ರದಲ್ಲಿ ತಾನೆ ಹೊರಳ್ಯಾಡಿ, ಅನಂತದುಃಖವಂ ಬಡೆದು,
ಬಾಲತ್ವನೀಗಿ ಯವ್ವನಬರಲು, ತಾನು ಹ್ಯಾಂಗಾದೆನೆಂದು ತಿಳಿಯದೆ
ತಾ ಹಿಂದೆ ಬಂದ ಮೂತ್ರದ ಕುಣಿಗೆ ಮನವಿಟ್ಟು ಬಾಯಿದೆರೆದು
ಕುದಿಕುದಿದು ಕಿಸುಕುಳದ ಕೀವು ರಕ್ತವೊಸರುವ
ಹಸಿ ಘಾಯಿ ಹಳದೊಗಲಿಗೆ ಸೋತು
ಮುಪ್ಪಾಗಿ ಕೆಮ್ಮು ಕ್ಯಾಕರಿಕೆ ವಾತ ಪಿತ್ಥ ಶ್ಲೇಷ್ಮಾದಿ
ಅನಂತ ರೋಗಾದಿಗಳಿಂದ ಸತ್ತು ಸತ್ತು ಹೋಯಿತು
ಅನಂತಕಾಲ ಅನಂತಜನ್ಮ,
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./35
ತನ್ನ ತಾನರಿಯದ ಆ ಅಖಂಡ ಮಹತ್ತತ್ತ್ವವೆ
ತನ್ನ ತಾನರಿದ ಚಿತ್ಕಳೆ ತಾನೇ.
ಆ ಚಿತ್ಕಳೆ ತಾನೇ ತಾನೆಂಬೊ ಅರಿವು ತನಗಾದಲ್ಲಿ
ತಾನೆಂಬುದೊಂದೇ ಎರಡಾಯ್ತು.
ತಾನೆಂಬುದೊಂದು ಈ ಎರಡು ಮೂರು ಕೂಡಿ
ಮೂರು ಒಂದೇ, ಒಂದೇ ಮೂರು,
ಚಿನ್ನಾದ ಚಿದ್ಬಿಂದು ಚಿತ್ಕಳೆ ಇವು ಮೂರು ತಾನೆ.
ತಾನೆ ತನ್ನ ಬಲ್ಲಾತ ಅಲ್ಲಮಪ್ರಭು ನಿರಂಜನಮೂರ್ತಿ ನೀನಾಗಿರ್ದೆಯಲ್ಲ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./36
ತನ್ನ ವಿನೋದಕ್ಕೆ ತಾನೇ ಹಲವಾದುದರಿತು,
ಹಲವಾದ ಹಲವಿನೊಳಗೆ ತಾ ಹಲವಾಗದೆ, ಹಲವು ಹಲವಲ್ಲವೆಂದು
ತಾನೇ ಹಲವೆಂದು, ಹಲವು ತಾನೆಂದು,
ಹಲವು ಹಲವೆಂದರೇನು, ತಾನು ತಾನೆಂದರಿಯನು.
ತಾನೇ ಅಲ್ಲದೆ, ಹಲವು ಎಲ್ಲಿಹದೊ, ಹಲವು ಇಲ್ಲ.
ಬೀಜ ವೃಕ್ಷವಾಯಿತ್ತೆ ? ವೃಕ್ಷ ಬೀಜವಾಯಿತ್ತೆ ?
ಬೀಜವೃಕ್ಷವಾದ ಮೇಲೆ ಬೀಜವೇನಾಯಿತ್ತು ?
ಇದ ತಿಳಿದು ಸರ್ವಲೀಲವ ಸಮಾಪ್ತಮಾಡಿ
ಸರ್ವಸಮ ನಿರೀಕ್ಷಣೆಯಲ್ಲಿ ಸಂತುಷ್ಟವಡದು
ಅಸ್ತಮಾನದ ಆದಿತ್ಯನಂತೆಯಿರುವುದೇ ಸಮ್ಯಕ್ಜ್ಞಾನದೊಳಗೆ ತೋರಿದ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./37
ತಾನೇ ಅಖಂಡಬಯಲಾಗಿ,
ಆ ಅಖಂಡ ಬೈಲು ಗಟ್ಟಿಗೊಂಡು ಚಿತ್ಪಿಂಡವಾಗಿ,
ಚಿತ್ಶಕ್ತಿ ಕಾಂತನಾಗಿ ಚಿದ್ವಿಲಾಸವು ಕೂಡಿ,
ಚಿದ್ರೂಪವ ತೋರಿ ಚಿನ್ಮಯನೆನಿಸಿ ಚಿತ್ಪ್ರಕಾಶ ನೀನಾದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./38
ತಾನೇ ಎರಡಾಗಿ, ತಾನೇ ಎರಡು ಒಂದಾಗಿ,
ತನ್ನ ತಾನೆ ಅರ್ಚಿಸಿಕೊಳ್ಳುವ, ಅರ್ಚಿಸುವ ನುತಿಸುವ
ಧ್ಯಾನಿಸುವ ಜಪಿಸುವ ಶರಣುಹೋಗುವ ಹಾಡುವ
ಆಡುವ ನೋಡುವ ಕೂಡ್ರುವ ತನ್ನ ವಿನೋದ
ತನಗಾಯಿತಲ್ಲದೆ ತನಗನ್ಯವೇ ಇಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./39
ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು
ಕೆಂಪುಬಣ್ಣವಿರ್ಪುದು.
ದಂಡಕಾಕೃತಿಯ ಮಕಾರಪ್ರಣವದ ಸ್ವಾದಿಷ್ಠಾನಚಕ್ರದೊಳು
ನೀಲವರ್ಣವಿರ್ಪುದು.
ಕುಂಡಲಾಕೃತಿಯ ಶಿಕಾರಪ್ರಣವದ ಮಣಿಪೂರಚಕ್ರದೊಳು
ಕುಂಕುಮವರ್ಣವಿರ್ಪುದು.
ಅರ್ಧಚಂದ್ರಾಕೃತಿಯ ಯಕಾರಪ್ರಣವದ ಅನಾಹತಚಕ್ರದೊಳು
ಪೀತವರ್ಣವಿರ್ಪುದು.
ದರ್ಪಣಾಕೃತಿಯ ಯಕಾರಪ್ರಣವದ ವಿಶುದ್ಧಿಚಕ್ರದೊಳು
ಶ್ವೇತವರ್ಣವಿರ್ಪುದು.
ಜ್ಯೋತಿರಾಕೃತಿಯ ಒಂಕಾರಪ್ರಣವದ ಆಜ್ಞಾಚಕ್ರದೊಳು
ಮಾಣಿಕ್ಯವರ್ಣವಿರ್ಪುದು.
ಮತ್ತಂ, ಪೃಥ್ವಿತತ್ವಯುಕ್ತನಾದ ಸದ್ಭಕ್ತನೆಂಬ ಅಂಗನ
ಸುಚಿತ್ತಹಸ್ತದೊಳು ಆಚಾರಲಿಂಗವಿರ್ಪುದು.
ಅಪ್ಪು ತತ್ವಯುಕ್ತವಾದ ಮಹೇಶನೆಂಬ ಅಂಗನ
ಸುಬುದ್ಧಿಹಸ್ತದೊಳು ಗುರುಲಿಂಗವಿರ್ಪುದು.
ತೇಜತತ್ವಯುಕ್ತನಾದ ಪ್ರಸಾದಿಯೆಂಬ ಅಂಗನ
ನಿರಹಂಕಾರಹಸ್ತದೊಳು ಶಿವಲಿಂಗವಿರ್ಪುದು.
ವಾಯುತತ್ವಯುಕ್ತನಾದ ಪ್ರಾಣಲಿಂಗಿಯೆಂಬ ಅಂಗನ
ಸೂರ್ಯಹಸ್ತದೊಳು ಜಂಗಮಲಿಂಗವಿರ್ಪುದು.
ಆಕಾಶತತ್ವಯುಕ್ತನಾದ ಶರಣನೆಂಬ ಅಂಗನ
ಸುಜ್ಞಾನಹಸ್ತದೊಳು ಪ್ರಸಾದಲಿಂಗವಿರ್ಪುದು.
ಆತ್ಮತತ್ವಯುಕ್ತನಾದ ಐಕ್ಯನೆಂಬ ಅಂಗನ
ಸದ್ಭಾವಹಸ್ತದೊಳು ಮಹಾಲಿಂಗವಿರ್ಪುದು.
ಮತ್ತಂ, ಘ್ರಾಣವೆಂಬಮುಖದ ಕ್ರಿಯಾಶಕ್ತಿಯ
ಶ್ರದ್ಧಾಭಕ್ತಿಯೊಳು ಸುಗಂಧಪದಾರ್ಥವಿರ್ಪುದು.
ಜಿಹ್ವೆಯೆಂಬಮುಖದ ಜ್ಞಾನಶಕ್ತಿಯ
ನೈಷ್ಠಿಕಾಭಕ್ತಿಯೊಳು ಸಾರಸಪದಾರ್ಥವಿರ್ಪುದು.
ನೇತ್ರವೆಂಬಮುಖದ ಇಚ್ಛಾಶಕ್ತಿಯ
ಸಾವಧಾನಭಕ್ತಿಯೊಳು ಸಾರೂಪಪದಾರ್ಥವಿರ್ಪುದು.
ತ್ವಗೇಂದ್ರಿಯೆಂಬಮುಖದ ಆದಿಶಕ್ತಿಯ
ಅನುಭಾವಭಕ್ತಿಯೊಳು ಸುಸ್ವರೂಪಪದಾರ್ಥವಿರ್ಪುದು.
ಶ್ರೋತ್ರೇಂದ್ರಿಯಮುಖದ ಪರಶಕ್ತಿಯ
ಆನಂದವೆಂಬಭಕ್ತಿಯೊಳು ಸುಶಬ್ದಪದಾರ್ಥವಿರ್ಪುದು.
ಹೃದಯೇಂದ್ರಿಯಮುಖದ ಚಿತ್ಶಕ್ತಿಯ
ಸಮರಸಭಕ್ತಿಯೊಳು ಸುತೃಪ್ತಿಯಿರ್ಪುದು.
ಇಂತೀ ಎಪ್ಪತ್ತೆರಡುಮುಖದಿ ನಿನ್ನ ಪೂಜಿಸಿ,
ನಿನ್ನ ಹಾಡ್ಯಾಡಿ, ನಿನ್ನ ಧ್ಯಾನಿಸಿ, ನಿನ್ನ ಚಿಂತಿಸಿ,
ನಿನ್ನೊಳು ಕೂಡುತ, ನೀನಾರೆಂದು ಹವಣಿಸಿ
ಅಂತರಂಗದಿ ಪೊಕ್ಕು ನೋಡೆ ನೀನಲ್ಲದೆ
ನಾನೇ ಆದ ಪರಿ ಇದೇನು ಚೋದ್ಯವೊ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?/40
ದಯಾಧರ್ಮ ಶಮೆದಮೆ, ಶಾಂತಿದಾಂತಿ ನಯಾನೀತಿ,
ಸುಮನ ಸುಬುದ್ಧಿ, ನಿರಹಂಕಾರ, ಸುಜ್ಞಾನ ಸುಚಿತ್ತ,
ಸದ್ಭಾವ ಸತ್ಕರ್ಮ, ಪರೋಪಕಾರ ಸುಖಭೋಗ,
ಶಿವಯೋಗ ರಾಜಯೋಗ, ಸಾಧುರಸಂಗ, ಶಿವತತ್ತ್ವ,
ಶಿವಪೂಜೆ ಶಿವಧ್ಯಾನ ಶಿವಮಹತ್ವಾಪೇಕ್ಷೆ,
ಶಿವಸಂಕಥಾಗೋಷ್ಠಿಯಲ್ಲಿರ್ದು, ತನ್ನ ತಾನರಿಯದೇ
ಸತ್ತು ಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./41
ನನ್ನ ಕಾಲು ನನ್ನ ಕೈ ನನ್ನ ಕಣ್ಣು ನನ್ನ ಮೂಗು
ನನ್ನ ಬಾಯಿ ನನ್ನ ಮೈ ನನ್ನ ಮನ ನನ್ನ ಪ್ರಾಣ
ಇವು ಮೊದಲಾದ ಸಮಸ್ತವು ನನ್ನದೆಂಬುದು ಅದಾವುದದು ?
ಆವುದು ಅಕೊ ಅದೇ ತಾನಾದನಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./42
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ
ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ
ಷಡ್ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು,
ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು,
ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು.
ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ
ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ
ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು.
ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು
ಈ ಮಾನವಜನ್ಮದ ಅಜ್ಞಾನಕ್ಕೆ
ಆ ಮಹಾಮಹಾಂತ ಪರಿಮಳವನೊಳಕೊಂಡು
ಮಹಾಂತಮಾರುತ ಸುಳಿಯಲು
ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು.
ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು.
ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು.
ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು.
ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು.
ಆ ಚಿಂತಾಪರವಶದಿಂದೆ ದುಃಖಗೊಂಡಿರಲು
ಆ ಮಹಾಂತಪರಿಮಳವನೊಳಕೊಂಡು,
ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ
ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು,
ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ,
ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ
ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ
ನಿಃಕಲವೇ ನಾನು, ನಾನೇ ನೀನು.
ಹೀಗೆಂಬುವುದ ಉಸುರದೆ ಮರೆಗೈದು,
ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು
ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ,
ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು.
ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ.
ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ,
ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ,
ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ,
ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ
ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ,
ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ,
ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು,
ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು,
ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು.
ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು.
ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು.
ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು.
ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು.
ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು.
ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು.
ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು.
ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ,
ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ
ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ
ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ,
ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ
ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ
ಕಾಣಿಸಲು ಸಮ್ಯಜ್ಞಾನವೆನಿಸಿತು.
ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ
ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ,
ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ
ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು
ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ
ತೋರಿದಲ್ಲಿ ತತ್ವಜ್ಞಾನವಾಯಿತು.
ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು.
ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು.
ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ
ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು.
ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ
ಮಹಾಜ್ಞಾನಪ್ರಕಾಶವಾಯಿತು.
ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು
ಬೊಂಬೆಸೂತ್ರ ಆಡಿಸುವವನಂತೆ
ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು
ಇವು ಮೂರು ಎಲ್ಲಿಹವು, ಏನೆಂದು
ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು.
ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು
ತನ್ನೊಳಗೆ ಜಗ, ಜಗದೊಳಗೆ ತಾನು,
ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು.
ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ
ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ
ತಾನೆ ತಾನೆಂಬೊ ಅರುವಾಯಿತು.
ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿಬರ್ೆಲಾಗಲು
ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./43
ನಿರಂಜನ ತನಗೆ ತಾನೆ ಸುರಂಜನವತೋರಲು
ಅಂಗ ಲಿಂಗವಾಯಿತ್ತು ; ಆ ಅಂಗ ಲಿಂಗ ಸಂಗೊಳಿಸಿದ
ಉಪಚಾರ ಉಪಮೆ ಸಮರಸವಾಯಿತ್ತು.
ಆ ಸಮರಸವೇ ಸಾಕಾರವಾಗಿ ತನ್ನ ಪ್ರತಿಬಿಂಬವೆ
ನೋಡಿಕೊಳ್ಳುವುದಕ್ಕೆ ಕನ್ನಡಿಯೊಳಗಿನ ರೂಹಿನಪರಿಯಲಿ
ಅನಾದಿ ಶರಣ ನಿನ್ನೊಳಗೆ ನೀನೇ
ನಾನೆಂಬೋ ಭಾವಕ್ಕೆ ಎದುರಾಗಿರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./44
ನಿರ್ಬಯಲು ನಿರ್ಬಯಲು
ನಿರ್ಬಯಲೆ ಮಹಾಬಯಲು
ನಿರ್ಬಯಲೆ ಚಿದ್ಬಯಲಲೆ ಮಹಾಂತಯೋಗಿ. | ಪಲ್ಲ |
ಚಿತ್ಕಳೆಯು ಚಿತ್ಕಳೆಯು
ಚಿತ್ಕಳೆಯು ಚಿದ್ಬಿಂದು
ಚಿತ್ಕಳೆಯು ಚಿನ್ನಾದ ತಾನೆ ತಾನೆ.
ಚಿತ್ಕಳೆಯು ಕಳೆಯೊಳಗೆ
ಚಿತ್ಕಳೆಯು ಬಿಂದುದಿಸಿ
ಚಿತ್ಕಳೆಯ ನಾದವು ತಾನೆ ಮಹಾಂತಯೋಗಿ. | 1|
ನಾದ ಬಿಂದು ಕಳೆಯು
ಆದ ಮೂರೂ ಕೂಡಿ
ಭೇದವಿಲ್ಲದೆ ತಾನೊಂದಾಯಿತಲ್ಲಾ !
ಆಧಾರವೆರಡಾದ
ಮಹತ್ವ ಅದರೋಳೊಂದು
ಬೋಧರೂಪಾಗಿರ್ದ ಮಹಾಂತಯೋಗಿ. | 2|
ಮೂರು ಮೂರೆರಡಾಗಿ
ಮೂರು ತಾ ಬ್ಯಾರ್ಯಾಗಿ
ಆರು ಮೂರಕ್ಕೆ ಮೇಲಾಯಿತಲ್ಲಾ !
ಆರಾರಿನ್ನೂರ್ಹದಿ-
ನಾರಾದ ತತ್ವ ಮಹಾ
ಕಾರಣನೆ ಪರಬ್ರಹ್ಮ ಮಹಾಂತಯೋಗಿ. | 3|
ಆ ಮಹಾಕಾರಣದೊಳಗೆ
ತಾ ಮಹಾನಿರ್ಬಯಲಿರಲು
ಮಹಾ ಅಖಂಡ ರೂಪಾಯಿತಲ್ಲಾ !
ಈ ಮಹಾಲಿಂಗದ ಚಿ
ತ್ಪ್ರೇಮವೇ ಶ್ರೀಮಹಾದೇವಿ
ಕಾಮಿತ ಕಲ್ಪವೃಕ್ಷ ಮಹಾಂತಯೋಗಿ. | 4|
ತಾನೆ ತಾನೆರಡಾಗಿ
ತಾನೆರಡೊಂದಾಗಿ
ತಾನೆ ಮುಂದೊಂದು ರೂಪಾಯಿತಲ್ಲಾ !
ತಾನೆ ಮುಂದೊಂದಾದ
ತಾನೆ ಆ ವಸ್ತುವಿಗೆ
ತಾನಾರುಮುಖವಾದ ಮಹಾಂತಯೋಗಿ. | 5|
ಆರು ಮುಖಗಳು ತಾನೆ
ಆರು ಆಕೃತಿಯಾಗಿ
ಆರು ಕಲೆ ಆರು ಲಿಂಗಾಯಿತಲ್ಲಾ !
ಆರು ಲಿಂಗಾಂಗಕ್ಕೆ
ಆರು ಶಕ್ತಿಗಳಾಗಿ
ಆರಾರೊಂದಾಗಿರ್ದ ಮಹಾಂತಯೋಗಿ. | 6|
ಆರು ಅಧಿದೇವತರಿಂ
ಆರು ಭೂತಗಳು ಹುಟ್ಟಿ
ಮೂರು ಲೋಕವೆಂಬುದೊಂದಾಯಿತಲ್ಲಾ !
ಮೂರು ಲೋಕದೊಳಗೆ
ಈರೇಳು ಲೋಕಾಗಿ
ಮೇರು ಅವಕರ್ಾದ ಮಹಾಂತಯೋಗಿ. | 7|
ಆವರಣದಾವರಣ
ಈವರಣೆಂದ್ಹೇಳಕಾ
ಲಾವರಣದೊಳಗೈವತ್ತಾಯಿತಲ್ಲಾ !
ಆವರಣ ಈವರಣ
ಭಾವರಣ ಬಹುವರಣ
ಜೀವರಣ ತಾನಾದ ಮಹಾಂತಯೋಗಿ. | 8|
ಜೀವೇ ತಾ ಬ್ರಹ್ಮಾಂಡ
ಜೀವೇ ತಾ ಪಿಂಡಾಂಡ
ಜೀವೇ ತಾ ಸಚರಾಚರವಾಯಿತಲ್ಲಾ !
ಜೀವೇ ದೇವರ ದೇವ
ಜೀವೇ ಸಾವರ ಸಾವ
ಜೀವಕ್ಕೆ ಜೀವಾದ ಮಹಾಂತಯೋಗಿ. | 9|
ಜೀವಾತ್ಮ ಜೀವಾತ್ಮ
ಜೀವಾತ್ಮ ಅಂತರಾತ್ಮ
ಜೀವಾತ್ಮ ಪರಮಾತ್ಮವಾಯಿತಲ್ಲಾ !
ಜೀವಾತ್ಮ ಮಹಾತ್ಮ
ಜೀವಾತ್ಮ ಬಹುವಾತ್ಮ
ಜೀವಾತ್ಮ ಏಕಾತ್ಮ ಮಹಾಂತಯೋಗಿ. | 10|
ಕನ್ನೆಸುರಳಿಸಲೊಂದು
ಸೊನ್ನೆ ಮಂಡಲವಾಗಿ
ಸೊನ್ನೆ ಹನ್ನೊಂದು ರೂಪಾಯಿತಲ್ಲಾ !
ಹನ್ನೊಂದು ಹಲವಾಗಿ
ಇನ್ನೊಂದಿಲ್ಲಲ್ಲೆನಿಸಿ
ಕನ್ನೆ ಕಾರಣವಾದ ಮಹಾಂತಯೋಗಿ. | 11|
ಗೌರ ಗಂಭೀರ ಸುಧೆ
ಮೀರಿ ಬಗೆ ಬಗೆ ಸ್ವಾದ
ಹಾರೈಸಿ ಹಲವು ಬೀಜಾಯಿತಲ್ಲಾ !
ತಾರ ಅಷ್ಟತನುವು ಕೂಡಿ
ಸಾರ ಸಂಗ್ರಹ ಮಾಡಿ
ತೋರಿದಾ ಷಡ್ರಸವೊ ಮಹಾಂತಯೋಗಿ. | 12|
ಮಾಡಿಕೊಂಡುಣದಿರಲು
ಬೇಡಿಕೊಂಡುಣಬೇಕು
ಮಾಡಿ ಬೇಡುಂಬುದೆರಡಾಯಿತಲ್ಲಾ !
ನಾಡಕೃತ್ಯವ ನೋಡಿ
ಜೋಡು ಸೂತ್ರವ ಹೂಡಿ
ನಾಡ ನಾಡ ಹಡದಾತ ಮಹಾಂತಯೋಗಿ. | 13|
ಹಾಡೋದು ಆಡೋದು
ನೋಡೋದು ಓಡೋದು
ಕೂಡ್ರೋದು ಕಾಡೋದು ಒಂದಾಯಿತಲ್ಲಾ !
ಕಾಡು ಕತ್ತಲೆಯಾಗಿ
ಮೋಡ ಮರೆಗೊಂಡಿರಲು
ಜೋಡ ಅಗಲಿದಂತಾದ ಮಹಾಂತಯೋಗಿ. | 14|
ಮರವೆ ಅರವಿನೊಳಗಾಗಿ
ಅರವು ಮರವಿನೊಳಾಗಿ
ಅರವು ಮರವೆಂಬುವೆರಡಾಯಿತಲ್ಲಾ !
ಅರುವು ಮರವೆರಡರೊಳು
ನರ ನಾಗ ಸುರ ಅಸುರ
ಪರಿಪರಿ ಮನುಮುನಿಯಾದ ಮಹಾಂತಯೋಗಿ. | 15|
ಇಂತು ರೂಪಾಗಿರ್ದ-
ನಂತ ಕಾಲವು ಕಳಿಯೇ
ಎಂತಿರ್ದಂತಿರ್ದಂತಾಯಿತಲ್ಲಾ !
ಕಂತುಕೇಳಿಯೊಳಿರಲು
ಅಂತಕಾಂತಕನಾಗಿ
ಚಿಂತೆ ಚಿಂತಿಸಲಾದ ಮಹಾಂತಯೋಗಿ. | 16|
ಚಿಂತೆ ಘನವಾಗಲಿಕ್ಕೆ
ಎಂತಯ್ಯಯೆನಲು ತಾ
ನಂತರಂತರವಾಗಿ ಹೋಯಿತಲ್ಲಾ !
ಪಂಥ ಪಕ್ಷವು ಮೀರೆ
ಕಂತು ಹೇಯವು ತೋರೆ
ಚಿಂತೆ ಚಿಂತಾರತ್ನ ಮಹಾಂತಯೋಗಿ. | 17|
ಬಿಂದು ರೂಪಾಗಿ ನಾ
ಬಂದೆ ಯೋನಿಯೊಳಿಂದು
ಸಂದೇಹದೊಳಗೆ ಬೆರಗಾಯಿತಲ್ಲಾ !
ಅಂದವಳಿದಿರ್ದಲ್ಲಿ
ಮುಂದೆ ಸುಜ್ಞಾನವಾಯಿತು
ಬಂದ ಶ್ರೀಗುರುರಾಯ ಮಹಾಂತಯೋಗಿ. | 18|
ಹಲವು ಗುರುಮುಖದಿಂದೆ
ಹಲವು ಮಂತ್ರವ ಕೇಳಿ
ಹಲವು ಯೋಗ ಸಾಧನವಾಯಿತಲ್ಲಾ !
ಹಲವು ಮತದೊಳಗ್ಹೊಕ್ಕು
ಹಲವು ಸಿದ್ಧಿಯ ಪಡೆದು
ಹಲವು ಮಹತ್ವ ಆದಾತ ಮಹಾಂತಯೋಗಿ. | 19|
ಹಲವು ಮಹತ್ವದಲ್ಲಿ
ಹಲವು ಪೂಜೆಯಗೊಂಡು
ಹಲವರಿಗೆ ಪೂಜಿಸುವದಾಯಿತಲ್ಲಾ !
ಹಲವು ಮತದೊಳಗೊಂದು
ಸುಲಭ ಶಿವಮತವಿರಲು
ಚಲುವ ಅಷ್ಟಾವರಣದ ಮಹಾಂತಯೋಗಿ. | 20|
ಶಿವನ ಅಷ್ಟಾವರಣವೇ
ಶಿವಪದವಿಯೆನಿಸಿತ್ತು
ಶಿವಶರಣೆಂಬುವದೆರಡಾಯಿತಲ್ಲಾ !
ಶಿವಪದವಿಯೆಂಬುವದು
ಭವದ ಮಲಕಿನ ಕೀಲು
ಶಿವನ ನಿಜತತ್ವ ಆದ ಮಹಾಂತಯೋಗಿ. | 21|
ನಿಜತತ್ವಯೆಂಬುವದು
ಅಜಹರಿಗೆ ಅಳವಡದು
ಈ ಜನರ ಗಜವಿಜಿಗೆ ಬೆರಗಾಯಿತಲ್ಲಾ !
ಮಜರೆ ಮಹಾಜ್ಞಾನಕ್ಕೆ
ತ್ರಿಜಗ ತನ್ನೊಳಗಾಗಿ
ನಿಜಶರಣ ತಾನಾದ ಮಹಾಂತಯೋಗಿ. | 22|
ಶರಣನಾಚರಣೆಯು
ಮೆರೆಯುವ ಮಹಾನುಭಾವ
ಅರಿದು ಹೇಳುವದು ಕೇಳುವದು ಆಯಿತಲ್ಲಾ !
ಪರಿಪರಿಯ ನುಡಿಗಳು
ಪರಿಪರಿಯ ನಡೆಗಳು
ನಿರಹಂಕಾರದೊಳಿರ್ದ ಮಹಾಂತಯೋಗಿ. | 23|
ನಿರಹಂಕಾರದಲ್ಲಿ
ಅರವು ವಿಕಸನವಾಯಿತು
ಅರುವಿಗೆ ಅರುವು ಮೇಲಾಯಿತಲ್ಲಾ !
ಅರವು ಅಡಗಿದ ಬಳಿಕ
ಕುರುಹು ಕಾಣದೇ ಹೋಯಿತು
ಉರಿಯುಂಡ ಕರ್ಪುರವೋ ಮಹಾಂತಯೋಗಿ. | 24|
ಬಯಲ ನೆನವಿನೊಳಾದ
ಬಯಲುಬ್ರಹ್ಮಾಂಡದೊಳು
ಬಯಲೇ ಪಿಂಡಾಂಡಮಯವಾಯಿತಲ್ಲಾ !
ಬಯಲಬ್ರಹ್ಮವ ಬೀರಿ
ಬಯಲ ಮಡಿವಾಳ ಸಾರಿ
ಬಯಲೇ ನಿರ್ಬಯಲಾದ ಮಹಾಂತಯೋಗಿ./45
ನಿರ್ಬಯಲು ಮಹಾಬಯಲು ಚಿದ್ಬಯಲು ಬಯಲಾತ್ಮ
ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ
ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ
ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ
ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ
ನೀನೇ ನಾನಾದುದೇ ಇದೇ ಆದಿಯಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./46
ಪರಶಿವನ ಕಾರಣಕಾಯವಾದ ಗುರುವಿನ ಹೃದಯವೆನಿಸಿದ
ನವವರ್ಣ ನವಭಕ್ತಿ ನವಶಕ್ತಿ ನವಚಕ್ರ ನವಲಿಂಗ ನವಅಂಗ
ನವನಾದ ನವಸ್ಥಾನ ನವವರ್ಣ ನವಮಂತ್ರ ನವಮುಖ ನವತೃಪ್ತಿ
-ಇವು ಹನ್ನೆರಡು ಬಯಲುತ್ಪತ್ಯ, ಬಯಲು ಸ್ಥಿತಿ, ಬಯಲೇ ಬಯಲೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./47
ಪರಶಿವನ ನಿಶ್ಶೂನ್ಯಕಾಯವಾದ ಮುಕ್ತಿನಿರ್ಭಾವವೆನಿಸಿದ
ನಿಃಕಳಂಕ ನಿಃಶಂಖ ನಿಃಕಾಮ ನಿಸ್ಸೀಮ ನಿರಾಭಾವ ನಿರಾಕಾರ
ನಿರ್ಭೆದ್ಯ ನಿರ್ವೆದ್ಯ ನಿಸ್ಸಾರ ನಿರಾಧಾರ ನಿಃಕಲ ನಿರುಪಮ
-ಇವು ಹನ್ನೆರಡು ನಿರ್ಬಯಲುತ್ಪತ್ಯ, ನಿಬರ್ೆಲ ಸ್ಥಿತಿ,
ನಿರ್ಬಯಲೆ ನಿರ್ಬಯಲೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./48
ಪರಶಿವನ ಮಹಾಕಾರಣಕಾಯವಾದ ಶಿಷ್ಯನ ಮನವೆನಿಸಿದ
ಸವೇಂದ್ರಿ ಸರ್ವಕರಣ ಸರ್ವನಾಮಕಾಮ
ಸರ್ವಮೋಹ ಸರ್ವ ಆಶೆ ಸರ್ವಸುಖ ಸರ್ವದುಃಖ
ಸರ್ವಪಾಪ ಸರ್ವಪುಣ್ಯ ಸರ್ವಚಿಂತೆ ಸರ್ವಗುಣ
ಸರ್ವಾದಿ ಸರ್ವವ್ಯಸನಂಗಳು- ಇವು ಹನ್ನೆರಡು
ಮರವೋತ್ಪತ್ತಿ, ಮರವೇ ಸ್ಥಿತಿ, ಮರವೇ ಮರವೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./49
ಪರಶಿವನ ಶೂನ್ಯಕಾಯವಾದ ಮಂತ್ರಜ್ಞಾನವೆನಿಸಿದ
ಅರವು ಮಹದರವು ನಿಜಜ್ಞಾನ ಬ್ರಹ್ಮಜ್ಞಾನ
ಅಖಂಡಜ್ಞಾನ ಮಹಾಜ್ಞಾನ ಆತ್ಮಜ್ಞಾನ ತತ್ವಜ್ಞಾನ
ಶೃತಿಜ್ಞಾನ ಸಮ್ಯಜ್ಞಾನ ಮತಿಜ್ಞಾನ ಮನೋಜ್ಞಾನ
-ಇವು ಹನ್ನೆರಡು ಬೆರಗುತ್ಪತ್ಯ, ಬೆರಗು ಸ್ಥಿತಿ, ಬೆರಗೇ ಬೆರಗೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./50
ಪರಶಿವನ ಷಟ್ಕಾಯದೊಳಗೆ ತೋರಿದಾ
ಆರಾರು ಆರು ಹನ್ನೆರಡು ನೂರಾಯೆಂಟು ತತ್ವವಾಯಿತು.
ಈ ನೂರಾಯೆಂಟರೊಳಗೆ ಸಹಸ್ರ ಲಕ್ಷ ಕೋಟಿ ಶಂಖ
ಪದ್ಮ ಅರ್ಬುದ ಅನಂತ ಅಗಣಿತ ಅಗಮ್ಯ ಅಗೋಚರ
ಅಪ್ರಮಾಣಿತ ಅತೀತ ಅಣೋರಣೀಯಾನ್
ಮಹತೋ ಮಹೀಯಾನ್ ಏನೋ ಎನೋ ಎನಿಸಿದಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./51
ಪರಶಿವನ ಸೂಕ್ಷ್ಮಕಾಯವಾದ ಜಗದ ಅಸುವೆನಿಸಿದ
ಬೀಜ ವೃಕ್ಷ ಫಲ ರಸ ವೀರ್ಯ ಪಿಂಡ
ಪ್ರಾಣ ಮನ ಎಚ್ಚರ ನೆನಹು ಮೋಹ ಆಶೆ
-ಇವು ಹನ್ನೆರಡು ಸಾವೋತ್ಪತ್ಯ, ಸಾವೇ ಸ್ಥಿತಿ, ಸಾವೇ ಸಾವೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./52
ಪುಣ್ಯವಿಷ್ಟು, ಪಾಪವಿಷ್ಟು, ಕರ್ಮವಿಷ್ಟು, ಧರ್ಮವಿಷ್ಟು,
ಶೀಲವಿಷ್ಟು, ದುಶ್ಶೀಲವಿಷ್ಟು, ಸಜ್ಜನಸಂಗವಿಷ್ಟು,
ದುರ್ಜನರಸಂಗವಿಷ್ಟು, ಹಿತವಿಷ್ಟು, ಅಹಿತವಿಷ್ಟು,
ಸ್ತುತಿಯಿಷ್ಟು, ನಿಂದ್ಯವಿಷ್ಟು, ಅಜ್ಞಾನವಿಷ್ಟು, ಸುಜ್ಞಾನವಿಷ್ಟು,
ಚಿಂತಿಯಿಷ್ಟು, ಸಂತೋಷವಿಷ್ಟು, ಮೋಹವಿಷ್ಟು,
ನಿರ್ಮೊಹವಿಷ್ಟು, ಆಶೆಯಿಷ್ಟು, ವೈರಾಗ್ಯವಿಷ್ಟು,
ಅಹಂಕಾರವಿಷ್ಟು, ನಿರಹಂಕಾರವಿಷ್ಟು, ಕ್ರೋಧವಿಷ್ಟು,
ಶಾಂತಿಯಿಷ್ಟು, ಯೋಗವಿಷ್ಟು, ಭೋಗವಿಷ್ಟು, ಲಬ್ಧವಿಷ್ಟು,
ಹೇಯವಿಷ್ಟು-ಉತ್ತಮ, ಮಧ್ಯಮ, ಕನಿಷ್ಠವೆಂಬ
ಮೂರರೊಳಗೆ ಒಂದೂ ನಿಜವಿಲ್ಲದೆ ಬಡಯೆತ್ತಿನ ಮುಕಳ್ಯಾಗ
ಶಗಣಿ ಸಿಕ್ಕಂತೆ ಬಹುಗುಣಿಯಾಗಿ
ಬೆಲ್ಲ ಬೇವು ಕಲಸಿ ಸವಿದಂತೆ ವ್ಯರ್ಥವಾಗಿ ಹೋಯಿತು
ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./53
ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ
ಷಡ್ರಸವನೊಂದುಮಾಡಿಕೊಂಡು ಸವಿದುಂಡು
ಚಿಂತೆಗೆಟ್ಟು ಸಂತೋಷವು ಅಳವಟ್ಟು
ನಗಿಗೆ ಹಗೆಗೆ ಒಂದಾಗಿ, ಝಗಝಗನೆ ಹೊಳೆದು
ವೈರಾಗ್ಯವೇ ಆರೋಗ್ಯವಾಗಿ ಭವರೋಗಬ್ಯಾನಿಗೆ ನೆಲಿಯಾಗಿ
ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./54
ಬಂದು ಬಂದದ್ದರಿಯರಿದೆ, ಹೋಗಿ ಹೋದದ್ದರಿಯದೆ,
ಇದ್ದು ಇದ್ದದ್ದರಿಯದೆ, ನೊಂದು ನೊಂದದ್ದರಿಯದೆ,
ಕೆಟ್ಟು ಕೆಟ್ಟದ್ದರಿಯದೆ, ಎಂಬತ್ನಾಲ್ಕುಲಕ್ಷ ಜೀವರಾಶಿ,
ಯೋನಿದ್ವಾರದಲ್ಲಿ ತಿರುತಿರುಗಿ ಬಂದದ್ದನ್ನರಿಯದೆ,
ಏನೂ ಏನರಿಯದ್ಹಾಂಗೆ ಅರಿತು ಅರಿಯದ್ಹಾಂಗೆ ಇರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./55
ಬೆಡಗು : ಕೊಡಲಿ ಪಿಡಿದಲ್ಲದೇ ಕಾಡು ಕಡಿಯದು.
ಆ ಕಾಡ ಕಡಿದಲ್ಲದೆ ಕಲ್ಪವೃಕ್ಷದ ವನವು ಕಾಣದು.
ಆ ಕಲ್ಪವೃಕ್ಷದ ವನವ ಕಂಡಡೂ,
ಆ ಕಲ್ಪವೃಕ್ಷದ ವನವನಳಿದಲ್ಲದೆ ಕದಳಿಯು ಸಿಗದು.
ಆ ಕದಳಿಯ ಸುಲಿದು ಒಳಪೊಕ್ಕಲ್ಲದೆ ನಿಜವು ತಿಳಿಯದು.
ಆ ನಿಜವು ತಿಳಿದಲ್ಲದೆ ನಿರ್ಬಯಲು ತಾನಾಗದು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./56
ಬೈಲ ಬ್ರಹ್ಮವು ತನ್ನ ಬೈಲಿನೊಳಗೆ ತಾನೆ
ಬೈಲುರೂಪವಾಗಿ ಬೈಲಾದುದು ತಾನೆ | ಪಲ್ಲ |
ಜಾರನೋರ್ವಗೆ ಸುತರು ನೂರೆಂಟು ಹುಟ್ಟಿಹರು
ಚೋರತನಕ್ಕೆ ಬಿದ್ದು ಹೋರುವ ತಾನೆ
ಚೋರತನಕೆ ಬಿದ್ದು ಹೋರುವ ಮಕ್ಕಳ
ಜಾರ ತಾ ಕೊಂದು ಅಳಿವನು ತಾನೆ. | 1|
ಪುಂಡಪುಂಡರು ಕೂಡಿ ದಂಡೆತ್ತಿ ಬರುವರು
ಕಂಡಕಂಡ್ಹಂಗೆ ಕಡಿದಾಡಿ ತಾನೆ.
ಕಂಡಕಂಡ್ಹಂಗೆ ಕಡಿದಾಡಿ ಆ ದಂಡು
ಬಂಡಾಟವಾಗಿ ಹೋಗುದು ತಾನೆ. | 2|
ಇರವಿಯ ದಂಡೆದ್ದು ಧರೆಯೆಲ್ಲ ಮುತ್ತುವುದು
ನರರಿರುವುದಕ್ಕೆ ನೆಲೆಯಿಲ್ಲ ತಾನೆ.
ನರರಿರುವುದಕ್ಕೆ ನೆಲೆಯಿಲ್ಲದಂತಾಗಿ
ಧರೆ ಉರಿದಿರಿವಿ ಅಳಿವುದು ತಾನೆ. | 3|
ಇದ್ದ ದೈವಗಳೆಲ್ಲ ಬಿದ್ದುರುಳಿ ಹೋದಾವು
ಸುದ್ದಿ ಕೇಳೋರ್ವ ಬರುವನು ತಾನೆ
ಸುದ್ದಿ ಕೇಳೋರ್ವ ಬಂದು ತಾ ಮಾಡಿದ
ಬುದ್ಧಿಂದ ಸೀಮಾ ನೇಮವು ತಾನೆ. | 4|
ಮಾಡಿದ ನೇಮ ಸೀಮಾ ಮಾಡಿದಂತಿರದೆ ತಾ
ಕೂಡೋದು ಜಾತಿಸಂಕರ ತಾನೆ
ಕೂಡೋದು ಜಾತಿಸಂಕರವಾಗಲು
ರೂಢಿಯೊಳಗೆ ಮಹಾಶ್ಚರ್ಯವು ತಾನೆ. | 5|
ಹಿಂದೆ ಬಸವರಾಜ ಬಂದು ತೋರಿದ ಮಹತ್ವಕ್ಕೆ
ಅಂದೇ ಆಯಿತು ವಿಘ್ನ ಪ್ರಮಥರಿಗೆ ತಾನೆ
ಅಂದಾದ ವಿಘ್ನಕ್ಕೆ ಪ್ರಮಥರು ತಾವೆಲ್ಲಾ
ಮುಂದಾಗುವದು ಸೂಚಿಸಿದರು ತಾನೆ. | 6|
ಮುಂದಾದುದು ತಾನೆ ಮುಂದೇನಾಗುವದು ಅದ
ರಂದವ ಅರಿಯದೆ ಉಳುವಿಟ್ಟರು ತಾನೆ
ಅಂದವರಿಯದೆ ತಾವು ಉಳುವಿಟ್ಟು ಹೋದ ಕಾರಣ
ಬಂದುಹೋಗುವದು ಭವವುಂಟು ತಾನೆ. | 7|
ಚನ್ನಣ್ಣ ಬರುವದು ಬಿನ್ನಣ ಮುಂದುಂಟು
ಚನ್ನಣ್ಣನಿಂದೇನಾಗುವದು ತಾನೆ
ಚನ್ನಣ್ಣನಿಂದೇನಾಗದಿರಲು ಆಗ
ತನ್ನ ತಾ ತಿಳಿದು ನಿಜವಹ ತಾನೆ | 8|
ಆರು ಕೂಡಿಸಿದರೆ ಕೂಡದು ಆರು ಅಗಲಿಸಿದರೆ ಅಗಲದು
ಆರಿಗೆ ಆರಾಗಿ ಮೀರುವದು ತಾನೆ
ಆರಿಗೆ ಆರಾಗಿ ಮೀರುವ ಮಾತಿಗೆ
ಘೋರಾಟವಾಯಿತು ಬಹುಜನ್ಮ ತಾನೆ | 9|
ಒಂದೊಂದು ಜೀವದಿಂದೆ ಮುಂದೊಮ್ಮೆ ಸರ್ವಜೀವವು
ಹೊಂದಿ ಹೋಗುವದು ಲಯವಾಗಿ ತಾನೆ
ಹೊಂದಿ ಹೋಗುವದು ಲಯವಾಗಿ ಅದರೊಳ್
ಬಂದುಳಿದು ಹಲವಾಗುವದು ತಾನೆ | 10|
ನಿಷ್ಠೆ ನೆಲೆಗೊಳಿಸಿ ನಿಷ್ಠೆಯೊಳ್ ಅಳಿವರು
ನಿಷ್ಠೆ ಉಳ್ಳವರು ನಿಜವಲ್ಲ ತಾನೆ
ನಿಷ್ಠೆಯುಳ್ಳವರು ನಿಜವಲ್ಲ ಇದರಂತೆ
ದುಷ್ಟರು ದುಷ್ಟರೊಳ್ ಅಳಿವರು ತಾನೆ | 11|
ಅಳಿದದ್ದು ಅಳಿವುದು ಉಳಿದದ್ದು ಉಳಿವುದು
ಇಳೆಯು ನೀರೊಳ್ ಕರಗುವದು ತಾನೆ
ಇಳೆಯು ನೀರೊಳು ಕರಗಿದ ಕಾಲಕ್ಕೆ
ಬಲವಂತನೊಬ್ಬನು ಬರುವನು ತಾನೆ | 12|
ಬಲವಂತ ಬಂದಾಗ ನೆಲಜಲ ನೆಲಮಾಡಲು
ಹಲವುಕಾಲ ಮತ್ತಾಗುವದು ತಾನೆ
ಹಲವುಕಾಲ ಮತ್ತಾಗುವದು ಈ ಪರಿ
ನೆಲೆಯೊಳಳಿವು ಸಾಕಾರಕ್ಕೆ ತಾನೆ | 13|
ಆರಾರ ವ್ಯಾಳ್ಯಕ್ಕೆ ಮೀರುವದು ಈ ಭೂಮಿ
ನೀರೊಳು ಕೂಡಿ ನೀರಾಗುವದು ತಾನೆ
ನೀರೊಳು ಕೂಡಿ ನೀರಾಗಿರಲು ಆ ನೀರು
ನೀರರ್ತು ಅಗ್ನಿ ಆಗುವದು ತಾನೆ | 14|
ಅನಲಾನ ಉರಿನುಂಗಿ ಅನಿಲಾನ ಒಳಕೊಂಡು
ಅನುವಾಯಿತು ಆಕಾಶ ಆತ್ಮನೊಳು ತಾನೆ
ಅನುವಾಯಿತು ಆತ್ಮನೊಳು ಆಕಾಶ ಆ ಆತ್ಮ
ಚಿನುಮಯನೊಳಗೆ ತನುಮಯ ತಾನೆ | 15|
ಲೀಲವನುಳಿದು ತಾ ಲೀಲವಾಗಲು ಮಹಾಂತ
ಮೂಲೋಕವೆಲ್ಲಾ ಸಾಲೋಕ್ಯ ತಾನೆ
ಮೂಲೋಕವೆಲ್ಲಾ ಸಾಲೋಕ್ಯವೆಲ್ಲುಂಟು
ಲೀಲ ಮೇಲಾಗಿ ತಾನಹನು ತಾನೆ./57
ಬ್ರಹ್ಮನೆಂಬ ಪೂಜಾರಿಗೆ ಬ್ರಹ್ಮನೇ ಅಧಿದೈವನಾಗಿ
ಪೂರ್ವದಿಕ್ಕಿನೊಳು ಭಕ್ತಿಸ್ಥಲವೆನಿಸಿತ್ತು.
ವಿಷ್ಣುನೆಂಬ ಪೂಜಾರಿಗೆ ವಿಷ್ಣುವೆ ಅಧಿದೈವನಾಗಿ
ಪಶ್ಚಿಮದಿಕ್ಕಿನೊಳು ಮಹೇಶ್ವರಸ್ಥಲವೆನಿಸಿತ್ತು.
ರುದ್ರನೆಂಬ ಪೂಜಾರಿಗೆ ರುದ್ರನೇ ಅಧಿದೈವನಾಗಿ
ದಕ್ಷಿಣದಿಕ್ಕಿನೊಳು ಪ್ರಸಾದಿಸ್ಥಲವೆನಿಸಿತ್ತು.
ಈಶ್ವರನೆಂಬ ಪೂಜಾರಿಗೆ ಈಶ್ವರನೇ ಅಧಿದೈವನಾಗಿ
ಉತ್ತರದಿಕ್ಕಿನೊಳು ಪ್ರಾಣಲಿಂಗಿಸ್ಥಲವೆನಿಸಿತ್ತು.
ಸದಾಶಿವನೆಂಬ ಪೂಜಾರಿಗೆ ಸದಾಶಿವನೇ ಅಧಿದೈವನಾಗಿ
ಊಧ್ರ್ವದಿಕ್ಕಿನೊಳು ಶರಣಸ್ಥಲವೆನಿಸಿತ್ತು.
ಮಹಾದೇವನೆಂಬ ಪೂಜಾರಿಗೆ ಮಹಾದೇವನೇ ಅಧಿದೈವನಾಗಿ
ಪಾತಾಳದಿಕ್ಕಿನೊಳು ಐಕ್ಯಸ್ಥಲವೆನಿಸಿತ್ತು.
ಇಂತು ತತ್ವವನೆ ಅರಿತು ನನ್ನ ನಾ ಮರೆತು
ನಿನ್ನೊಳು ಬೆರೆತೆನಾಗಿ ನೀ ನಾನೆಂಬ ಉಭಯ
ಭೇದವನಳಿಸಿ ಸಂದಿಲ್ಲದೆ ಒಂದಾಗಿ ತೋರ್ದ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./58
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ಎಂಬ ಈ ನಿರ್ಣಯ ಹೇಳಿದ ವಿಚಾರಕ್ಕೆ
ಇನ್ನೊಂದು ಸಂಜ್ಞೆ ಅಲ್ಲವೆ, ಇದು ಅಪೂರ್ವವೇ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?/59
ಭೂಮಿ ಜಲ ಅಗ್ನಿ ಗಾಳಿ ಆಕಾಶ ಇವು ಮೊದಲಾದ
ಪಂಚಕದಿಂದುದಿಸಿದುದೆ ಬ್ರಹ್ಮಾಂಡವೆನಿಸಿತ್ತು.
ಅದರ ಸೂತ್ರವಿಡಿದು ಬಂದದ್ದೇ ಪಿಂಡಾಂಡವೆನಿಸಿತ್ತು.
ರವಿ ಚಂದ್ರ ಆತ್ಮದಿ ಅಂಗವೆನಿಸಿತ್ತು.
ಪಿಂಡಾಂಡದಿ ತೋರುವ ಕಾಯವೇ ಗುರುವಾಗಿ, ಪ್ರಾಣವೆ ಲಿಂಗವಾಗಿ,
ಜ್ಞಾನವೆ ಜಂಗಮವಾಗಿ, ಮುಂದೆ ಕಾಯದೊಳು ಕಾಂಬ
ಅರುವಿನ ಬೆಳಗೆ ವಿಭೂತಿ, ಅರುವಿನ ಕರಣವೇ ಪಾದೋದಕ,
ಅರುವಿನ ಆನಂದವೇ ಪ್ರಸಾದ, ಅರುವಿನ ಕೃಪೆಯೇ ರುದ್ರಾಕ್ಷಿ,
ಅರುವು ತಾನೇ ಆಗು ಮೆರೆದುದೇ ಮಂತ್ರ
ಇಂತು ಪಿಂಡಾಂಡಪಂಚಕ ಅಷ್ಟತನು ಒಳಗೊಂಡು
ಕಾಂಬುದೊಂದೀಪರಿಯ
ಅಷ್ಟಾವರಣವಾದ ಶ್ರೇಷ್ಠಗುರುವೆ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./60
ಮಾಯ ಛಾಯ ಏನೂ ಇಲ್ಲದಂದು,
ಕಾಲ ಕಲ್ಪಿತ ಏನೂ ಇಲ್ಲದಂದು,
ಬ್ರಹ್ಮಾಂಡ ಪಿಂಡಾಂಡ ಏನೂ ಇಲ್ಲದಂದು,
ಸ್ವಯಂಲೀಲಾ ಸಂಪರ್ಕಶಕ್ತಿ ಸೋಹಂಭಾವವಿಲ್ಲದೆ
ತಾನೆಂಬೊ ಮಹಾಂತನಾಗಿರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./61
ಮಾಯೆ ಹುಟ್ಟಿ ಮಾಯೆ ಬೆಳೆದು
ಮಾಯೆ ಸತ್ತು ಹೋಯಿತ್ತಲ್ಲಾ.
ಆ ಮಾಯೆಗೆ ನೋವೇನು ? ಸರ್ವವೂ ಮಾಯೆಯೇ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./62
ಮೊದಲೇ ಭಕ್ತ ತನುವಕೊಟ್ಟು, ಮನವಕೊಟ್ಟು,
ಧನವಕೊಟ್ಟು, ಸತಿಸುತಪಿತರಾದಿಯಾದ ಸರ್ವವಕೊಟ್ಟು,
ಕೊಂಡುದ ಕಡೆಗಿಟ್ಟು ನಿತ್ಯತ್ವ ಕೆಟ್ಟು
ಸತ್ತು ಸತ್ತು ಹೋಯಿತ್ತು-ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./63
ರೂಪತೋರಿಕೆಯೇನೂ ಇಲ್ಲದಂದು,
ಕರಣತೋರಿಕೆಯೇನೂ ಇಲ್ಲದಂದು,
ಪ್ರಾಣ ತೋರಿಕೆಯೇನೂ ಇಲ್ಲದಂದು,
ನಿರ್ಭಾವ ನಿರುಪಮ ನಿರಂಜನ ನಿಷ್ಕಳ ಏನೂ ಇಲ್ಲದಂದು,
ನಿಬರ್ೆಲೆಂಬುದು ಏನೋ ಏನೋ ಸುಳ್ಳಾಗಿದರ್ಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./64
ರೂಪಾದ ಮೇಲೆ ನಿರೂಪವಿಲ್ಲಾ,
ನಿರೂಪಾದ ಮೇಲೆ ರೂಪವಿಲ್ಲಾ.
ತಾನೇ ರೂಪಾಯಿತ್ತು, ತಾನೇ ನಿರೂಪವಾಯಿತ್ತು.
ಬೇಕಾದರೆ ಬಂತು, ಸಾಕಾದರೆ ಹೋಯ್ತು.
ತಾ ಬಂದು ಹೋಗುವದರೊಳಗೆ ಶಿವಬ್ಯಾರೆ, ಜಗಬ್ಯಾರೆ,
ನರರು ಬ್ಯಾರೆ, ಸುರರು ಬ್ಯಾರೆ, ಇಹಬ್ಯಾರೆ, ಪರಬ್ಯಾರೆ,
ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸುಖ ಬ್ಯಾರೆ ದುಃಖ ಬ್ಯಾರೆ,
ಈ ಸರ್ವವು ಬ್ಯಾರೆ ಬ್ಯಾರೆಯಾಗಿ ತೋರುವ
ತನ್ಮ ವಿನೋದ, ತನ್ನಾಟ, ತಾನೆಂದರೇನು ? ಮಾಯೆ.
ಮಾಯೆಯೆಂದರೇನು ? ನಿರ್ಮಾಯೆ.
ನಿರ್ಮಾಯೆ ಎಂದರೆ ಬಂತ್ಹಾ ್ಯಂಗೆ, ಹೋಯಿತ್ಹಾ ್ಯಂಗೆ ?
ಹುಟ್ಟಿತ್ಹಾ ್ಯಂಗೆ ? ಬೆಳೀತ್ಹಾ ್ಯಂಗೆ ಸತ್ತಿತ್ಹ್ಯಾಂಗೆ ಮಹಾಂತಯೋಗಿ ?
ಹೋಗೋದಲ್ಲಾ ನಿರ್ಮಾಯ ನಿರ್ವಯಲಾದ ಮ್ಯಾಲೆ ಬರುವದಲ್ಲ,
ಅಲ್ಲಂದರೇನು ಬಂತು ? ಏನು ಬಂತೆಂದರೇನು ಹೋಯಿತು ?
ಹೋಗೋದೇನು ? ಬರೋದೇನು ? ಬರೋದಿಲ್ಲಾ ಹೋಗೋದಿಲ್ಲಾ.
ಏನೂ ಇಲ್ಲಾ, ಎಂತೂ ಇಲ್ಲಾ, ಸುಮ್ಮನೆ ಪರಬ್ರಹ್ಮ,
ಪರಬ್ರಹ್ಮೆಂಬೋ ನಾಮವುಂಟೆ ? ಆ ಪರಬ್ರಹ್ಮ ಎಲ್ಲಿಯಿತ್ತು ?
ಪರಬ್ರಹ್ಮ ತಾನಾಗುವುದಕ್ಕೆ ಮೊದಲೇ ಏನೆಂಬೋ ನಾಮವುಂಟು ?
ಚಿತ್ತೆಲ್ಲಿತ್ತು ? ಪ್ರಾಣೆಲ್ಲಿತ್ತು ? ಭಾವೆಲ್ಲಿತ್ತು ?
ಚಿತ್ತ ಚಿತ್ತಾಗುವದು, ಆ ಚಿತ್ತ ಪಟ್ಟಾಗುವದು.
ಇದರೊಳಗ ಭಾವೇನು ಜೀವೇನು ? ಸಾವೇನು ನೋವೇನು ?
ಈ ಮಾಯೆಯ ಬೆಡಗಿನ ಹೆಸರು ಮಹಾಂತ.
ಈ ಮಾಯೆ ತಾನೆ ನಿರ್ಮಾಯೆ ಆದರೆ
ಸಾವು ಇಲ್ಲಾ ಗೀವು ಇಲ್ಲಾ, ಬ್ರಹ್ಮಾಂಡವಿಲ್ಲಾ ಪಿಂಡಾಂಡವಿಲ್ಲಾ,
ನಾನೂ ಇಲ್ಲಾ ನೀನೂ ಇಲ್ಲಾ, ಶಿವನು ಇಲ್ಲಾ ಗಿವನು ಇಲ್ಲಾ.
ಮುಕ್ತಿ ಇಲ್ಲಾ ಗಿಕ್ತಿ ಇಲ್ಲಾ, ಮಾಂತ ಇಲ್ಲಾ ಗೀಂತ ಇಲ್ಲಾ.
ಇಲ್ಲಗಿಲ್ಲ ಸುಳ್ಳೆ ಸುಳ್ಳೆ ಸುಳ್ಳೇನೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./65
ಶಿವಜೀವರಿಲ್ಲದಂದು, ಮಂತ್ರತಂತ್ರಗಳಿಲ್ಲದಂದು,
ಅಹುದು ಅಲ್ಲ ಇಲ್ಲದಂದು,
ನವಬ್ರಹ್ಮ ಷಡುಬ್ರಹ್ಮ ಪಂಚಬ್ರಹ್ಮವಿಲ್ಲದೆ
ನಿನ್ನ ನೀ ಅರಿಯದೆ ಅಖಂಡನಾಗಿರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./66
ಶ್ರೀಗುರುಬಸವದೇವರು ತರುಣ ಬಾರೆಂದು
ಅಂದದಿ ಕರೆದು ಕರುಣಾಜಲದಿ ಮೈದೊಳೆದು,
ಶಿರದಿ ಮೇಲೆ ಪ್ರಸನ್ನ ಪರುಷಹಸ್ತವನಿಟ್ಟು,
ಶಿಕ್ಷಿಸಿ ದೀಕ್ಷೆಯನೆಸಗಿ ಕರ್ಣದೊಳು
ಮಹಾಮಂತ್ರವನೂದಿ ಸದಾಚಾರ ಪೇಳ್ದನೆಂತೆನೆ : ಗಂಧಪ್ರಸಾದದ ನಿವೃತ್ತಿಕಲೆಯ
ಕರ್ತೃಸಾದಾಖ್ಯದೊಳು ಸತ್ ಲಕ್ಷಣವೆನಿಸಿತ್ತು.
ರಸಪ್ರಸಾದದ ಪ್ರತಿಷ್ಠಾಕಲೆಯ
ಕರ್ಮಸಾದಾಖ್ಯದೊಳು ಚಿತ್ ಲಕ್ಷಣವೆನಿಸಿತ್ತು.
ರೂಪಪ್ರಸಾದದ ವಿದ್ಯಾಕಲೆಯ
ಮೂರ್ತಿಸಾದಾಖ್ಯದೊಳು ಆನಂದ ಲಕ್ಷಣವೆನಿಸಿತ್ತು.
ಸ್ವರೂಪಪ್ರಸಾದದ ಶಾಂತಿಕಲೆಯ
ಅಮೂರ್ತಿಸಾದಾಖ್ಯದೊಳು ನಿತ್ಯ ಲಕ್ಷಣವೆನಿಸಿತ್ತು.
ಶಬ್ದಪ್ರಸಾದದ ಶಾಂತ್ಯತೀತಕಲೆಯ
ಶಿವಸಾದಾಖ್ಯದೊಳು ಪರಿಪೂರ್ಣ ಲಕ್ಷಣವೆನಿಸಿತ್ತು.
ತೃಪ್ತಿಪ್ರಸಾದದ ಶಾಂತ್ಯತೀತೋತ್ತರಕಲೆಯ
ಮಹಾಸಾದಾಖ್ಯದೊಳು ಅಖಂಡವೆಂಬ ಲಕ್ಷಣವೆನಿಸಿತ್ತು.
ಇಂತು ಗುರುನಿರೂಪವ ಕೈಕೊಂಡು ನಿನ್ನ ಭೇದಿಸಿ
ನಿನ್ನ ಸಾಧಿಸಿ ನಿನ್ನ ಶೋಧಿಸಿ ನಿನ್ನ ಅರಿದಾ
ಬೆಡಗಿನ ಬೆಳಗದೊಳು ನನ್ನ ಮರೆದೆನಯ್ಯ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./67
ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ
ಅವಿರಳಪರಂಜ್ಯೋತಿಸ್ವರೂಪವೇ ಮಹಾಂತ
ಅಖಂಡಪರಶಿವಬ್ರಹ್ಮದ ನಿಜಚಿದ್ವಿಲಾಸದೊಳಾದ
ಬ್ರಹ್ಮಾಂಡಮಂಡಲಕ್ಕೆ ನಡುಗಂಬವಾದ ಬಳಿಕ
ಅನಂತ ನರ ನಾಗ ಸುರ ಅಸುರ ಮನು ಮುನಿ
ಮನೋವಿಷ್ಟಪ್ರದಾಯಕ ಈರೇಳುಲೋಕಾಧಾರ
ಮಹಾಮೇರುಶಿಖರಮಂದಿರಮಂಟಪಮಧ್ಯದೊಳೆಸೆವಾ
ನವರತ್ನಸಿಂಹಾಸನಾಗ್ರದಮ್ಯಾಲೆ ಆ ನಿರ್ಬಯಲವೇ ಗಟ್ಟಿಗೊಂಡು
ಆ ಅಖಂಡಪರಬ್ರಹ್ಮವೇ ವಿನೋದದೊಳಗೊಂದು
ವಿನೋದವಾಗಿ ತಾನೇ ರೂಪದೋರಿ,
ಪಂಚಮುಖ ದಶಭುಜ ತ್ರಿಪಂಚನೇತ್ರ ವಿಷಕಂಠ ಗಂಗೋತ್ತುಮಾಂಗ
ಚಂದ್ರಮೌಳಿ ಅಹಿಕುಂಡಲಿ ಗಜಚರ್ಮಾಂಬರ
ಅರ್ಧನಾರೀಶ ವ್ಯಾಘ್ರಾಜಿನುಡಿಗೆ ಹರಿನಯನಾಂಕಿತ ಪಾದಪಂಕಜ
ಶ್ರೀಮನ್ಮಹಾದೇವ ಮೂರ್ತಿಗೊಂಡಿರಲು
ಅಲ್ಲಿ ಹರಿ ಅಜ ಇಂದ್ರಾದ್ಯಷ್ಟ ದಿಕ್ಪಾಲಕರು
ಅಷ್ಟವಸುಗಳು ಹದಿನಾಲ್ಕು ಮನುಗಳು
ಎಂಬತ್ತೆಂಟುಕೋಟಿ ಮುನಿಗಳು
ಮುನ್ನೂರಾಮೂವತ್ತಾರು ಕೋಟಿ ದೇವತೆಗಳು
ಕಿನ್ನರರು ಕಿಂಪುರುಷರು ಗರುಡರು ಗಂಧರ್ವರು
ಸಿದ್ಧರು ಸಾಧ್ಯರು ಸಾಧಕರು ಅಪ್ಸರೆಯರು ನಾಗದೇವತೆಗಳು
ಮೊದಲಾದ ಅನಂತ ದೇವತೆಗಳು,
ಮತ್ತೆ ವೀರೇಶ ನಂದೀಶ ಭೃಂಗೀಶ ವಿಘ್ನೇಶ
ಕಾಲಭೈರವ ಮಹಾಕಾಯ ಗಜಕರ್ಣ ಘಂಟಾಕರ್ಣ ಶಂಖಕರ್ಣಾದಿ
ವ್ಯಾಘ್ರಮುಖ ಸಿಂಹಮುಖ ವಾಮಮುಖ
ಗಜಮುಖಾದಿಯಾದ ಅನಂತ ಮುಖದವರು,
ಏಕಾಕ್ಷ ದ್ವಿಯಕ್ಷ, ತ್ರಿಯಕ್ಷ ಶತಾಕ್ಷ ಸಹಸ್ರಾಕ್ಷ ಅನಂತಾಕ್ಷರರು,
ಏಕಜಿಹ್ವೆ ದ್ವಿಜಿಹ್ವೆ ತ್ರಿಜಿಹ್ವೆ ಶತಜಿಹ್ವೆ ಸಹಸ್ರಜಿಹ್ವೆ
ಮೊದಲಾದ ಅನಂತ ಜಿಹ್ವೆಗಳು,
ಏಕ ದ್ವಿತೀಯ ಪಂಚ ಶತ ಸಹಸ್ರನಾಸಿಕ ಮೊದಲಾದ ಅನಂತ ನಾಸಿಕರು,
ಇದರಂತೆ ಅನಂತಪಾದ ಅನಂತಬಾಹು
ಅನಂತಶಿರ ಮೊದಲಾದ ಗಂಗೆಯ ಮೇಲ್ಗಣಿತಕ್ಕೆ ಮೀರಿದ
ಪ್ರಮಥಗಣ ರುದ್ರಗಣ ಅಮರಗಣ ಮಹಾಗಣಂಗಳು,
ಓಲೈಸಿ ಮೆರೆಯುವ ವೇದಾಗಮ ಪುರಾಣಶಾಸ್ತ್ರ ಉಪನಿಷತ್ತು
ಬಲ್ಲ ಪಾಂಡಿತ್ಯರು ವೇದಾಧ್ಯಯನರು ನವರಸವ ಬಲ್ಲ ಕವಿಗಳು
ಗಮಕಿ ವಾದಿ ವಾಗ್ಮಿಗಳು, ರಾಗವಿಶಾರದರಾದ
ನಾರದ ತುಂಬುರ ಕಂಬಲ ಅಶ್ವತ್ಥರು, ಪಾಠಕ ಪರಿಹಾಸಕರ ಬಹುನಾಟ್ಯದಿಂ
ಭೇರಿ ಮೃದಂಗ ಮೊದಲಾದ ಅನಂತ ನಾದಘೋಷ
ಅನಂತ ಮಾಂಗಲ್ಯೋತ್ಸವದಿಂದ ಓಲಗವ ಕೈಕೊಂಡು
ಅನಂತ ಸೌಖ್ಯದಲಿ ಪರಮಾತ್ಮನೆನಿಸಿ ಮೆರೆಯುವಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./68
ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು.
ನಾಮವೊಂದೇ ರೂಪವೊಂದೇ ಕ್ರೀವೊಂದೇ
ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ
ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ.
ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು
ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು.
ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ,
ಆ ಮಹತ್ವವು ತನಗನ್ಯವೇ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?/69
ಸತ್ಯವೇ ಗುರುವಾಗಿ ತೋರಿತು, ಚಿತ್ತವೆ ಲಿಂಗವಾಗಿ ತೋರಿತು,
ಆನಂದವೆ ಜಂಗಮವಾಗಿ ತೋರಿತು,
ನಿತ್ಯವೆ ಪಾದೋದಕವಾಗಿ ತೋರಿತು,
ಪರಿಪೂರ್ಣವೆ ಪ್ರಸಾದವಾಗಿ ತೋರಿತು,
ಅಖಂಡತ್ವವೇ ಶಿವಾಕ್ಷಮಣಿ ಎನಿಸಿ ತೋರಿತು.
ಆ ಪರಬ್ರಹ್ಮವೇ ತಾನಾದ ವಿನೋದವು ಮಂತ್ರವೆನಿಸಿತ್ತು.
ಮತ್ತೆ ತನ್ನ ನಾಮವೆ ಪಂಚಾಕ್ಷರಿ, ತನ್ನ ಸ್ಥಲವೇ ಷಡಕ್ಷರಿ,
ತನ್ನ ರೂಪ ದೇಹ ನೋಟ ನೆನಹು ಸರ್ವವೂ ಪರಶಿವರೂಪ.
ಆನಿ ಬೆಳವಲಹಣ್ಣು ನುಂಗಿದಾ ಪರಿಯಂತೆ,
ಒಡೆದರೆ ಏನೂ ಇಲ್ಲ ಬೈಲೇ ಬೈಲು,
ಅದರಂತೆ ಕೇಳೋದು ಬೈಲು, ಹೇಳೋದು, ಬೈಲು,
ಹೌದು ಎಂಬುವದದು ಬೈಲು, ಅಲ್ಲವೆಂಬುದದು ಬೈಲು;
ಬೈಲಿಗೆ ಬೈಲು ನಿಬರ್ೆಲು.
ಕಾಡಕಿಚ್ಚಿನ ಕೈಯ ಮೆದಿಯ ಕೊಯಿಸಿದರೆ
ಹಿಂದೆ ಮೆದಿ ಇಲ್ಲಾ, ಮುಂದೆ ನಿಲುವು ಇಲ್ಲಾ.
ವಾಯದ ರಾಸಿಗೆ ಮರಣದ ಕೊಳಗ, ಅಳ್ಯೋದು ನೆರಳುವದು ಬೈಲು.
ಅಳತೆಗೆ ಹೋಗದು, ಹೊಯ್ತಕ್ಕೆ ಸಿಗದು.
ರವಿಯಂತೆ ಬದ್ಧವಿಲ್ಲಾ, ಪರಿಪೂರ್ಣ ಪರಂಜ್ಯೋತಿ ಬೈಲು.
ಇಂತು ಪರಿಯಲ್ಲಿ ನೂರೆಂಟು ಪರಿಪರಿಯ ಅಷ್ಟಾವರಣದ
ವಚನವಾಗಿ ಸುಳ್ಳೆ ಸುಳ್ಳೆನಿಸಿ ಸಾರಿದಿ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./70
ಸದ್ಭಕ್ತನ ಸತ್ಕ್ರಿಯವೆ ಗುರುವೆನಿಸಿ,
ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ,
ಲಿಂಗನ ಪೂಜಿಸುವ ಸದಾಚಾರವೇ ಜಂಗಮವೆನಿಸಿ,
ಪಾದ್ಯದಲ್ಲಿ ಪಾದೋದಕವಾಗಿ, ಜಿಹ್ವೆಯಲ್ಲಿ ಪ್ರಸಾದವಾಗಿ,
ಲಲಾಟದಲ್ಲಿ ವಿಭೂತಿಧಾರಣವಾಗಿ,
ಉರ, ಸಿರ, ಕಂಠದಲ್ಲಿ ಶಿವಾಕ್ಷಿಮಣಿಯೆನಿಸಿ,
ಶ್ರೋತ್ರದಲ್ಲಿ ಮಂತ್ರವಾಗಿ
ಇಂತು ಇವು ಬಾಹ್ಯ ಅಷ್ಟಾವರಣದ ಕ್ರಮವೆನಿಸಿತ್ತು.
ಇನ್ನು ಅಂತರಂಗದಿ ಆತ್ಮನ ಅರುವೆ ಗುರುವೆನಿಸಿತ್ತು.
ಪ್ರಾಣವೆ ಲಿಂಗವಾಗಿ ತೋರಿತ್ತು.
ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮವೆನಿಸಿತ್ತು.
ಜಿಹ್ವಾಗ್ರವೇ ಪಾದೋದಕವಾಗಿ, ನಾಶಿಕವೆ ಪ್ರಸಾದವಾಗಿ,
ತ್ವಕ್ಕಿನಲ್ಲಿ ಶ್ರೀವಿಭೂತಿ, ನೇತ್ರದಲ್ಲಿ ಪರಾಕ್ಷಮಣಿ,
ಕರ್ಣದ್ವಾರದೊಳು ಮೊಳಗುವ ಮಂತ್ರದಿಂದೆ
ಕೂಡಿಕೊಂಡ ಈ ಪರಿಯೇ ಅಂತರಾತ್ಮಷ್ಟಾವರಣವೆನಿಸಿತು.
ನೀನೊಂದು ಇದ್ದು ಇಂತುಪರಿಯಲ್ಲಿ
ಪೂಜೆ ಪೂಜಕ ಪೂಜ್ಯನೆನಿಸಿ ಮೆರೆದಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./71
ಸಾವುಯಿಲ್ಲಾ, ಸಾವು ಇಲ್ಲದೆ ಸಾವು ಬಂತು,
ಸತ್ತವನ ಚಂದ ಇದ್ದವಗಲ್ಲದೇ ಸತ್ತವಗೆಲ್ಲಿಹದೋ ?
ಇದ್ದವರು ಮಾಡಿದ ಮಂತ್ರಪಠನ ಸಮಾಧಿಕ್ರಿಯಾ
ಇದ್ದವರೇ ಬಲ್ಲರು, ಸತ್ತವ ಅರಿಯ.
ಸತ್ತವನೆನಿಸಿಕೊಂಡು, ಸತ್ತವ ಸಾಯದೇ,
ಸತ್ತು ಸತ್ತು ಹೋಯಿತ್ತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./72
ಸುಖಿಯಾಗಿ ಸುಖವರಿಯದೆ, ದುಃಖಿಯಾಗಿ ದುಃಖವರಿಯದೆ,
ಶಿವನೆಂಬುವದರಿಯದೆ, ಜಗವೇನೆಂಬುವದರಿಯದೆ,
ನಾನು ಏನೆಂಬುವದರಿಯದೆ, ಇಹವರಿಯದೆ ಪರವರಿಯದೆ,
ಪುಣ್ಯವರಿಯದೆ ಪಾಪವರಿಯದೆ, ಸ್ವರ್ಗವರಿಯದೆ ನರಕವರಿಯದೆ,
ಬಹುಮೂಢ ಅಜ್ಞಾನವೆಂಬ ವಿಲಾಸ ಅನಂತಕಾಲ ನಟಿಸಿರ್ದು
ಅನಂತಕಾಲವಾಯಿತ್ತೆಂಬೆ, ಚಿಂತೆಯಿಲ್ಲದೆ ಅನಂತಕಾಲವಿರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./73
ಸುಳ್ಳಪ್ಪನ ಮಗ ಕಳ್ಳಪ್ಪ, ತಳ್ಳಿಗೆ ಹೋಗಿ ಕೊಳ್ಳಿಯಕೊಟ್ಟು
ಹಾಳ ಹಳ್ಳಿಯ ಸುಲಿದು, ಬೆಳ್ಳಿ ಬಂಗಾರ ಎಳ್ಳಷ್ಟು ಕೊಡಲಿಲ್ಲಾ.
ಕಳ್ಳಪ್ಪನ ಸುಳ್ಳಪ್ಪ ಕೇಳಲು, ಆ ಕಳ್ಳಪ್ಪ ಸುಳ್ಳಪ್ಪನಾದ
ಆ ಸುಳ್ಳಪ್ಪ ಮಳ್ಳಪ್ಪನಾದ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./74
ಸುಳ್ಳು ಸುಳ್ಳು ನಿರ್ಬಯಲ ನಿರುಪಮ ನಿರಾವರಣ
ನಿರ್ಮಾಯ ನಿರ್ಲಯ ನಿಷ್ಕಲ-ಇವು ಆರು ಸುಳ್ಳೆನಿಸಿತ್ತು.
ನಿರ್ಭಾವ ನಿರ್ಜಿವ ನಿರ್ದೆಹ ನಿಜ್ರ್ಯಾತ ನಿರಂಜನ
ನಿರಾಲಂಬ-ಇವು ಆರು ಸತ್ತೆನಿಸಿತ್ತು.
ಸುರಾಳ ನಿರಾಳ ಅಣು ರೇಣು ಮಹಾ ಮಹತ್ವ
ಇವು ಆರು ಚಿತ್ತೆನಿಸಿತ್ತು.
ನಿಷ್ಕಾಮ ನಿರ್ಮೊಹ ನಿರ್ಲೊಭ ನಿರ್ಮದ
ನಿಲರ್ೆಪ ನಿಶ್ಚಿಂತ-ಇವು ಆರು ಆನಂದವೆನಿಸಿತ್ತು.
ನಿರಾಶ ನಿರ್ಗುಣ ನಿಷ್ಕರ್ಮ ನಿರ್ಭಯ
ನಿರ್ಲಜ್ಜ ನಿಃಶಬ್ದ-ಇವು ಆರು ನಿತ್ಯವೆನಿಸಿತ್ತು.
ಚಿನ್ನಾದ ಚಿದ್ಬಿಂದು ಚಿತ್ಕಳೆ ಚಿದ್ರೂಪ ಚಿನ್ಮಯ
ಚಿತ್ಪ್ರಕಾಶ-ಇವು ಆರು ಪರಿಪೂರ್ಣವೆನಿಸಿತ್ತು.
ಪರವಸ್ತು ಘನವಸ್ತು ನಿಜವಸ್ತು ಮಹಾಂತ ಸ್ವಯಂಭು
ಅಖಂಡ-ಇವು ಆರು ಅವಿರಳಪರಂಜ್ಯೋತಿಯೆನಿಸಿತ್ತು.
ಈ ಆರಾರು ಮೂವತ್ತಾರು ಮಹಾತತ್ವಯುಕ್ತವಾಗಿ
ತಾನೆ ತಾನಾದ ಅವಿರಳಪರಂಜ್ಯೋತಿಯೆನಿಸಿದ
ಪರಬ್ರಹ್ಮವೆಂಬ ಮಹಾಬಯಲೊಳಗೆ ತೋರಿಯಡಗಿದ
ಸ್ಥೂಲ ಸೂಕ್ಷ್ಮ ಕಾರಣ ಮಹಾಕಾರಣ ಶೂನ್ಯ
ನಿಶ್ಶೂನ್ಯ-ಇವು ಆರರ ವಿವರ : ನಾದ ಬಿಂದು ಕಳೆ-ಒಂದೇ ಮೂರು, ಮೂರು ಒಂದೆ.
ಇವು ಮೂರು ಒಂದಾದ ಒಡಲಿಂಗೆ
ಶಿವ ಜಗ ಗುರು ಶಿಷ್ಯ ಮಹಾಂತ ಮುಕ್ತಿ-ಇವು ಆರು.
ಈ ಆರು ಮುಖದಿಂದೊಪ್ಪುವ ಚಿದ್ಬೈಲಮೂರ್ತಿಯು ತಾನೆ
ಶಿವ-ಶಕ್ತಿ, ಅಂಗ-ಲಿಂಗ, ನಾನು-ನೀನು
ಎಂಬ ತನ್ನ ತಾನೇ ಒಂದೇ ಎರಡಾದ,
ಎರಡು ಒಂದಾದ ವಿನೋದವೇನೆಂಬೆ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./75
ಸ್ಥೂಲತನುವಿನೊಳು ಪರವೆಂಬ ಸಂಜ್ಞದಿ
ಹೆಣ್ಣುದುಂಬಿಯ ನಾದಪುಟ್ಟಿ ಅದರಿಂದ ಋಗ್ವೇದವಾಯಿತು.
ಸೂಕ್ಷ್ಮತನುವಿನೊಳು ಗೂಢವೆಂಬ ಸಂಜ್ಞದಿ
ವೀಣಾನಾದ ಪುಟ್ಟಿ ಯಜುರ್ವೆದವಾಯಿತು.
ಕಾರಣತನುವಿನೊಳು ಶರೀರಸ್ಥಲವೆಂಬ ಸಂಜ್ಞದಿ
ಘಂಟಾನಾದ ಪುಟ್ಟಿ ಸಾಮವೇದವಾಯಿತು.
ನಿರ್ಮಲತನುವಿನೊಳು ಲಿಂಗಕ್ಷೇತ್ರವೆಂಬ ಸಂಜ್ಞದಿ
ಭೇರೀನಾದ ಪುಟ್ಟಿ ಅಥರ್ವಣವೇದವಾಯಿತು.
ಆನಂದತನುವಿನೊಳು ಅನಾದಿಯೆಂಬ ಸಂಜ್ಞದಿ
ಮೇಘನಾದ ಪುಟ್ಟಿ ಅಜಪವೇದವೆನಿಸಿತು.
ಶುದ್ಧತನುವಿನೊಳು ಮಹಾಸಂಜ್ಞದಿ
ಪ್ರಣವನಾದ ಪುಟ್ಟಿ ಗಾಯತ್ರಿವೇದವೆನಿಸಿತು.
ಆರು ತನುವಿಲೆ ಆರು ಸಂಜ್ಞ, ಆರು ಸಂಜ್ಞದಿ ಆರು ನಾದ,
ಆ ಆರು ನಾದಕ್ಕೆ ಆರು ವೇದವಾಗಿ ಮೆರೆದ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./76
ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ ?
ಎನ್ನ ಶ್ರೀಗುರು ಬಸವೇಶ್ವರನು ಎನ್ನ ಶಿಕ್ಷಿಸಿ ದೀಕ್ಷೆಯನೆಸಗಿ
ಮೋಕ್ಷದಖಣಿಯಮೂರ್ತಿಯತಂದು, ತನ್ನ ಗುರು ತನ್ನ ಗುರ್ತವ ತೋರಿದಾ.
ಆ ಗುರ್ತವ ಎನ್ನ ಕೈಯಲ್ಲಿಟ್ಟು ಈ ಮಹಾಂತನ ಪೂಜಿಸಿ
ಮುಕ್ತಿಯ ಪಡಿಯೆಂದು ನಿರೂಪಿಸಲು,
ಆ ಗುರುನಿರೂಪವ ಕೈಕೊಂಡು ಮಹಾಂತನ ಮುಂದಿಟ್ಟುಕೊಂಡು
ಈ ಮಹಾಂತ ಎನ್ನ ಗುರುವಿನಗುರು ಎನಗೆ ಪರಮಾರಾಧ್ಯ
ತಾ ಲಿಂಗವಾಗಿ ಬಂದಕಾರಣವೇನೆಂದು ತನ್ನೊಳಗೆ ತಾನೆ ವಿಚಾರಿಸಲು,
ಅಲ್ಲಿ ಹೊಳೆದುದು ನೀನು ನನಗೆ ಪರಮಾರಾಧ್ಯ,
ಒಂದೇ ಲಿಂಗವೇ ಹಲವರಾಗಿ ತೋರಿದಿರಿ.
ಅದೆಂತೆಂದಡೆ : ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯಮಂತ್ರ
ಮತ್ತು ಶಿಕ್ಷಾಗುರು ದೀಕ್ಷಾಗುರು ಮೋಕ್ಷಾಗುರು
ಗುರುವಿನಗುರು ಪರಮಗುರು ಪರಮಾರಾಧ್ಯ
ಮಹಾಂತದೇವರ ದೇವ ನೀನೇ ಆದಿ.
ನೀವು ಹೀಂಗಾದ ಪರಿಯೆಂತೆಂದಡೆ : ಮೊದಲೇ ಶಿಕ್ಷಾಗುರು ಶಿಖಾಮಣಿಸ್ವಾಮಿಯೆನಿಸಿದಿರಿ,
ದೀಕ್ಷಾಗುರು ಗುರುಬಸವಸ್ವಾಮಿಯೆನಿಸಿದಿರಿ,
ಮೋಕ್ಷಾಗುರು ಶ್ರೀಮನ್ಮಹಾಮುರಘೆಯಸ್ವಾಮಿಗಳ ಚರಮೂರ್ತಿ
ಸಿರಿವಾಸ ಚನ್ನಬಸವೇಶ್ವರರೆನಿಸಿದಿರಿ.
ಗುರುವಿನಗುರು ಹಳಪ್ಯಾಟಿ ಬಸವಯ್ಯನೆನಿಸಿದಿರಿ.
ಪರಮಗುರು ಭಂಗೀಪರ್ವತದೇವರೆನಿಸಿದಿರಿ.
ಪರಮಾರಾಧ್ಯ ಗೊಬ್ಬೂರ ಸದಾಶಿವದೇವರೆನಿಸಿದಿರಿ.
ಸರ್ವದೇವರು ಮಹೇಶ್ವರರು ಎನಗೆ ಮಹಾಮಹಾಂತನೆನಿಸಿದಿರಿ.
ಎನ್ನ ದೇವರದೇವ ಸರ್ವವು ನೀನೇ ಆಗಿರ್ದು,
ನೀನು ಒಂದೇ ಪರಮಾರಾಧ್ಯರೆನಲುಂಟೆ ?
ಒಂದೇ ನೀ ಎನಗೆ ಲಿಂಗವಾದನೆನಲುಂಟೆ ?
ಲಿಂಗವಾದಾತನು ನೀನೆ, ಪರಮಾರಾಧ್ಯನಾದಾತನು ನೀನೆ,
ಗುರುವಾದಾತನು ನೀನೆ, ಅರುವಾದಾತನು ನೀನೆ,
ನೀನಲ್ಲದೆ ಮತ್ತೊಂದು ಬ್ಯಾರೆ ಭಾವಿಸಲುಂಟೆ ?
ಎನ್ನ ಹುಟ್ಟಿಸಿದ ಮಹಾಂತನು ನೀನೆ,
ಎನ್ನ ಬೆಳಸಿದ ಶರಣಬಸವಪ್ಪನು ನೀನೆ
ಎನ್ನ ಮನ್ನಿಸಿದ ಘನಸಿದ್ದಪ್ಪನು ನೀನೆ,
ಎನ್ನ ನಿಂದಿಸಿದ ಹಳಪ್ಯಾಟಿ ಬಸಯ್ಯನು ನೀನೆ,
ಉಣಿಸುವ ಉಡಿಸುವ ಹಾಸುವ ಹೊಚ್ಚುವ
ಮುಚ್ಚುವ ಚುಚ್ಚುವ ಹಳಿವ ಮುಳಿವ
ಸರ್ವವೂ ಎನಗೆ ನೀನಲ್ಲದೆ ಮತ್ತೊಬ್ಬರಿಲ್ಲ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./77
ಹೃದಯತೋರಿಕೆಯೇನೂ ಇಲ್ಲದಂದು,
ನೆನಹುತೋರಿಕೆಯೇನೂ ಇಲ್ಲದಂದು,
ನಿರಾಳತೋರಿಕೆ ಏನೂ ಇಲ್ಲದಂದು,
ನಾದ ಬಿಂದು ಕಳೆಯಿಲ್ಲದಂದು,
ತಾನೆ ತಾನೆಂಬೊ ಮಹಾಬಯಲಾಗಿದರ್ಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ./78