Categories
ಶರಣರು / Sharanaru

ಕದಿರಕಾಯಕದ ಕಾಳವ್ವೆ

ಅಂಕಿತ: ಕದಿರರೆಮ್ಮಿಯೊಡೆಯ ಗುಮ್ಮೇಶ್ವರ
ಕಾಯಕ: ರಾಟೆಯಿಂದ ನೂಲು ತೆಗೆಯುವುದು

೭೪೪
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.

ಈಕೆಗೆ ರೆಬ್ಬವ್ವೆ ಎಂದೂ ಕರೆಯಲಾಗುತ್ತದೆ. ಕಾಲ-೧೧೬೦. ಕವಿ ಚರಿತೆಕಾರರು ಈಕೆ ಕದಿರ ರೇಮಯ್ಯನ ಸತಿಯಾಗಿರಬೇಕೆಂದು ಊಹಿಸಿದ್ದಾರೆ. ಕಾಯಕ-ರಾಟಿಯಿಂದ ನೂಲು ತೆಗೆಯುವುದು. ಸದ್ಯ ಈಕೆಯ ನಾಲ್ಕು ವಚನಗಳು ಮಾತೃ ದೊರೆತಿವೆ. ಅ೦ಕಿತ ’ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ’ ಎರಡು ವಚನಗಳಲ್ಲಿ ಸತಿಪತಿಭಾವ ವ್ಯಕ್ತವಾಗಿದ್ದರೆ, ಉಳಿದ ಒಂದರಲ್ಲಿ ಶರಣರ ಸ್ತುತಿ, ಇನ್ನೂಂದರಲ್ಲಿ ಕಾಯಕದ ಮಹತಿ ಅಡಕವಾಗಿದೆ. ನಾಲ್ಕರಲ್ಲಿ ಮೂರು ಬೆಡಗಿನ ವಚನಗಳಾಗಿದ್ದರೆ, ಒಂದು ಸರಳ ವಚನವೆನಿಸಿದೆ. ಬೆಡಗಿನ ವಚನಗಳಿಗೆ ಸಿಂಗಳದ ಸಿದ್ಧ ಬಸವರಾಜ ಟೀಕೆ ಬರೆದಿದ್ದಾನೆ. ವೃತ್ತಿಪರಿಭಾಷೆ ಈಕೆಯ ವಚನಗಳಲ್ಲಿ ಸಾರ್ಥಕವಾಗಿ ಬಳಕೆಯಾಗಿದೆ.