Categories
ವಚನಗಳು / Vachanagalu

ಕಲಕೇತಯ್ಯ ವಚನಗಳು

34
ಅಕ್ಕನ ಗಂಡ ಭಾವಾಂತೆಗೆ ತಂದೆ
ಮುಪ್ಪಟ್ಟಿಯ ಬಣ್ಣವ ಬಿಳಿದುದಲು
ಕಡೆಯಲ್ಲಿ ಕಪೋತ ಕೆಂಪು ಹುಟ್ಟಿತ್ತು.
ಆ ಬಣ್ಣವ ತೊಳೆದಡೆ ಬಿಳಿದನೊಡಗೂಡುವವಾಗಿ
ಅರಿವು ಮರವೆಯೆಂಬ ಕಡೆದಡಿಯ ಬಣ್ಣದಡಿ
ಹರಿಯಲಾಗಿ ಬಿಳಿಯರಿವೆಯಾಯಿತ್ತು.
ನಿನ್ನ ಉಡಿ ತುಂಬಿ ಉಟ್ಟುಕೊ ಎಂದು ತಂದೆ
ಮೇಖಲೇಶ್ವರಲಿಂಗವನರಿಯ ಹೇಳಿ

35
ಎನ್ನ ತಗರು ಆರು ಸನ್ನೆಗೆ ಏರದು,
ಮೂರು ಸನ್ನೆಗೆ ಓಡದು.
ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವದು.
ಕುಟಿಲ ಕವಳವನೊಲ್ಲದು.
ಮದ್ದು ಮರುಡೆ ಬೆಳುವೆಯ ಗುಣ ಗಾಳಿಯ ಲೆಕ್ಕಿಸದು.
ಇಂತೀ ಅರಿಗುರಿಯ ಕೋಡ ಕಿತ್ತು
ಒಂದ ಹಿಂದಕ್ಕಿರಿಸಿ, ಒಂದ ಹಿಡಿದಾಡ ಬಂದೆ.
ಆ ಕೋಡಿನಲ್ಲಿ ನಾನಾ ವರ್ಣದ ಶಬ್ದದ ಉಲುಹು.
ಇಂತಿವೆಲ್ಲವ ಒಂದುಂಗುರದಲ್ಲಿ ಸೇರಿಸಿ
ಅಂಗುಲಿಗಳಲ್ಲಿ ಮುಟ್ಟಿಯಾಡುತ್ತ ಬಂದೆ,
ಮೇಖಲೇಶ್ವರಲಿಂಗದಲ್ಲಿ ಲೀಯವಾದ
ಶರಣರ ನೋಡಿಹೆನೆಂದು

36
ಕಾಣುತವೆ ಬಂದುದನರಿದು,
ಕಂಡಾತನ ಮನಧರ್ಮದ ಚಂದವ ಕಂಡು,
ಬಂದಿತ್ತು ಬಾರದೆಂಬ ಸಂದೇಹ ನಿಂದು,
ಇದೆಲ್ಲವೂ ಲಿಂಗಾಣತಿಯೆಂಬ ಸಂದನರಿದು
ವರ್ಮದ ಮಾಟದವಂಗೆ ತಾ ವರ್ಮಿಗನಾಗಿದ್ದು,
ಗಂಡಭೇರುಂಡನ ಪಕ್ಷಿಯಂತೆ
ಒಡಲೊಂದೆ ಉಭಯ ಶಿರ ಬೇರಾದ ತೆರ.
ಇದು ಕಲಕೇತನ ಒಲವಿನ ತೆರ.
ಉಭಯಸ್ಥಲದ ಹೊಲದ ನಲವಿನ ಪಥ.
ಮೇಖಲೇಶ್ವರಲಿಂಗದ ಒಲವಿನ ಕುಲ.

37
ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು,
ಆರಡಗಿತ್ತು ತಗರಿನ ಹಣೆಯಲ್ಲಿ.
ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ.
ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ.
ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು.
ಇಂತೀ ಕಲಕೇತ ವಿದ್ಯವ ಧರಿಸಿ
ಮಹಾಶರಣರ ಮನದ ಮಂದಿರದಲ್ಲಿ
ಕಲಕೇತನ ಒಲವರದಲ್ಲಿ
ಮೂಡಿ ಮುಳುಗಬೇಡ ಎಂದು ಸಾರಿ ಮಾರಬಂದೆ.
ಶುದ್ಧಪ್ರಸಾದ ಎನಗುಂಟು, ಸಿದ್ಧಪ್ರಸಾದ ಎನಗುಂಟು,
ಪ್ರಸಿದ್ಧಪ್ರಾಸದ ನಿಮಗುಂಟು,
ಆ ಪ್ರಸನ್ನಪ್ರಸಾದ ಎನಗೆ ಬೇಕೆಂದು
ಮೇಖಲೇಶ್ವರಲಿಂಗವನೊಡಗೂಡಿಕೊಂಡು ಬೇಡಬಂದೆ.

38
ಕ್ರಿಯಾಶಕ್ತಿ ಬ್ರಹ್ಮಂಗೆ ಸರಸ್ವತಿಯಾಗಿ ಬಂದುದನರಿದ,
ಇಚ್ಛಾಶಕ್ತಿ ವಿಷ್ಣುವಿಂಗೆ ಮಹಾಲಕ್ಷ್ಮಿಯಾಗಿ ನಿಂದುದನರಿದು,
ಜ್ಞಾನಶಕ್ತಿ ರುದ್ರಂಗೆ ಉಮಾದೇವಿಯಾಗಿ ಸಲೆ ಸಂದುದನರಿದು,
ಇಂತೀ ತ್ರಿವಿಧ ಶಕ್ತಿಗಳ ಮನೋಹರದಲ್ಲಿ
ತ್ರಿವಿಧ ಮೂರ್ತಿಗಳು ಆಡುವದ ಕಂಡು
ನಾನಾಸುಖ ಪರಿಪೂರ್ಣ ಕಳೆಯಿಂದ ಕ್ರಿಯಾಶಕ್ತಿ
ಅದರ ಸುಖಿಚ್ಛೆಯಿಂದ ಇಚ್ಛಾಶಕ್ತಿ
ಈ ಉಭಯಶಕ್ತಿ ಸನ್ಮತವಾಗಿ ನಿಂದ ಉಳುಮೆ ಜ್ಞಾನಶಕ್ತಿ.
ಇಂತೀ ತ್ರಿವಿಧ ಶಕ್ತಿಯ ಒಡಹುಟ್ಟಿ ನಾ ಬಂದೆ.
ಬ್ರಹ್ಮಂಗೆ ಕಿರಿದಂಗಿಯ ಕೊಟ್ಟು ಮೈದುನನ ಮಾಡಿಕೊಂಡೆ.
ವಿಷ್ಣುವಿಂಗೆ ನಡುವಳಾಕೆಯ ಕೊಟ್ಟು ಬಿಡುಮುಡಿಯ ಮೈದುನನ
ಮಾಡಿಕೊಂಡೆ.
ರುದ್ರಂಗೆ ಹಿರಿಯಕ್ಕನ ಕೊಟ್ಟು ಎನ್ನೊಡಗೂಡುವ ಭಾವನ
ಮಾಡಿಕೊಂಡೆ.
ಕಿರಿದಂಗಿಯ ಗಂಡ ಸತ್ತ, ನಡುದಂಗಿಯ ಗಂಡ ಬಿಟ್ಟ,
ಹಿರಿಯಕ್ಕನ ಕೊಂದ ಭಾವ.
ಇಂತೀ ಮೂವರ ಕೊಳುಕೊಡೆ ದೃಷ್ಟ ಸಂಬಂಧ ನಷ್ಟವಾಯಿತ್ತು.
ಕಲುಹೃದಯದ ಕಲಕೇತಮಲ್ಲ ಬಂದೆ.
ಗೆಲ್ಲ ಸೋಲವೆಂಬ ತಗರ ಕೋಡ ಹಿಡಿದು
ಮೇಖಲೇಶ್ವರಲಿಂಗವಲ್ಲದಿಲ್ಲಾಯೆಂದು ನಲಿದು
ಕುಣಿದಾಡಬಂದೆ.

39
ಜಗಕ್ಕಹುದಾದುದ ಕಿತ್ತು ಜಗಕ್ಕಲ್ಲವಾದುದ ತೊಟ್ಟು
ಜಗ ಹಿಡಿದುದ ಬಿಟ್ಟು, ಜಗ ಒಲ್ಲದುದ ತೊಟ್ಟು
ತಾನರಿದುದ ಮರದು, ಆ ಮರವೆಗೆ ಒಡಲಾದುದನರಿದು
ಉಭಯದ ಕೋಡ ಕಿತ್ತು, ನಲಿದೊಲವಿನ ಹೊಲನ ಬಿಟ್ಟು
ಕೊಂಬಿನ ಗಿಲಿಕೆಯಲ್ಲಿ ಒಲದಾಡುವೆ.
ಜಗಭಂಡರ ಅಂಗಳದಲ್ಲಿ ತುಳಿದಾಡುತ್ತಲಿರಬೇಕು
ಮೇಖಲೇಶ್ವರಲಿಂಗ ಒಡಗೂಡುತ್ತಲಿರಬೇಕು.

40
ನಾನು ನಿನಗೆ ತಂಗಿಯ ಕೊಟ್ಟು ನೀನೆನೆಗೆ ಮೈದುನನಾದೆ.
ನಾನು ನಿನಗೆ ಅಕ್ಕನ ಕೊಟ್ಟು ನೀನೆನಗೆ ಭಾವನಾದೆ.
ನಾನು ನೀನೂ ಏನಹರೆಂಬುದ ತಿಳಿದು
ಅಣ್ಣನಿಗೆ ತಂಗಿ, ಅಕ್ಕನಿಗೆ ತಮ್ಮ
ಇವರಿಬ್ಬರೂ ದೃಷ್ಟದಲ್ಲಿ ಒಡಹುಟ್ಟಿದರಾದ ಮತ್ತೆ
ತಂಗಿಯ ಮಗಳು ಸೊಸೆಯಾಗಿ,
ಅಕ್ಕನ ಮಗ ಅಳಿಯನಾದ ಚಿತ್ರವ ನೋಡಾ!
ಒಂದು ಯೋನಿಯಲ್ಲಿ ಬಂದುದನರಿಯದೆ,
ನಿನ್ನ ಒಡಹುಟ್ಟಿದ [ವ]ಳಿಗೆ ನೀ ಗಂಡನಾಗಿ,
ಎನಗೆ ನೀ ಭಾವನಾದ ಪರಿಯ ನೋಡಿ ನಾಚಿಸಬಂದೆ.
ಕಲಕೇತನಲ್ಲಿ ಕೊಳುಕೊಡೆ ಬೇಡ
ಮೇಖಲೇಶ್ವರಲಿಂಗದ ಹೊಲಬ ತಿಳಿಯಬಲ್ಲಡೆ.

41
ಪ್ರಥಮದಲ್ಲಿ ರುದ್ರತ್ವ;
ಅದು ಘಟಿಸಿದಲ್ಲಿ ಈಶ್ವರತ್ವ.
ಈ ಎರಡು ಕೂಡಿದಲ್ಲಿ ಸದಾಶಿವತತ್ವ.
ಇಂತೀ ತ್ರಿವಿಧಲೀಲೆ ಏಕಾರ್ಥವಾದಲ್ಲಿ
ಪರಶಿವತತತ್ತ್ವದ ಪರಮಪ್ರಕಾಶ.
ಇದರಿಂದ ಮೀರುವ ತೆರನುಂಟಾದಡೆ ನೀವು ಹೇಳಿ
ನಾ ಮಾರ್ಕೊಳ್ಳೆನು.
ನೀವು ಹೇಳಿದಂತೆ ನಾ ಪ್ರಸಾದವೆಂಬೆನು.
ಆರು ಶೈವದ ಭೇದ,
ಮೂರು ಶೈವದ ಭಜನೆ,
ಷಡುದರ್ಶನದ ತರ್ಕ
ಇವನೆಲ್ಲವನುದ್ಧರಿಸಬಂದ ಪ್ರಭುದೇವರು,
ಬಸವಣ್ಣ, ಚೆನ್ನಬಸವಣ್ಣ
ಇವರೊಳಗಾದ ಏಳ್ನೂರೆಪ್ಪತ್ತಮರಗಣಂಗಳು,
ಸ್ವತಂತ್ರ ಸಂಬಂಧಿಗಳಪ್ಪ ಪ್ರಥಮರು
ಶಿವಾಚಾರ ಚಕ್ರವರ್ತಿಗಳು,
ಸತ್ಯರು ನಿತ್ಯರು ಸದ್ಯನ್ಮುಕ್ತರು
ಸುಮನರು ವಿಮಲರು ಪೂರ್ಣರು ಪರಿಪೂರ್ಣರು
ಮೇಖಲೇಶ್ವರಲಿಂಗದಲ್ಲಿ ಮಹಾನುಭಾವಿಗಳು.

42
ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು?
ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ?
ಒಡೆಯರು ಭಕ್ತರಿಗೆ ಮಾಡಿಹೆನೆಂದು
ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ
ನಿಂದು ಕಾಯಲೇತಕ್ಕೆ?
ಈ ಗುಣ ಕಾಯಕದಂದವೆ?
ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವು.
ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ
ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು.

43
ಬೇಡುವ ಭಂಡನ, ಕೊಡದೆ ಹೋರುವ ಲಂಡನ
ಉಭಯದ ದ್ರವ್ಯವ ತಂದು, ಅಲ್ಲಿ ಉಂಡು,
ಸುಖಿಯಾದೆಹೆನೆಂಬ ಉಭಯ ಭಂಡನ ದಿಂಡಿಕೆ ಕೆಡೆಯದ
ಮೇಖಲೇಶ್ವರ ಲಿಂಗದ ಅಂಗವೇಕೆ ತಿಳಿಯದು.

44
ಭಕ್ತ ಮಾಹೇಶ್ವರ ಪ್ರಸಾದಿ
ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು.
ಪ್ರಾಣಲಿಂಗ ಶರಣ ಐಕ್ಯ
ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು.
ಇಂತೀ ಉಭಯದ ಕೋಡ ಹಿಡಿದು
ಪಶ್ಚಿಮ ದ್ವಾರವ ಮುಚ್ಚಿ ನಿಂದು
ಉತ್ತರ ದ್ವಾರದಲ್ಲಿ ಎಡತಾಕುವ ನಿಶ್ಚಿಂತರ ಮುಚ್ಚಿಸಿ
ಸಚ್ಚಿದಾನಂದದಿ ನಲಿದೊಲೆದು
ಕಲೆ ವಿದ್ಯವನೊಪ್ಪಿನ ಬಂದೆ.
ಉಲುಹಿನ ಗಿಲಿಕೆಯ ಕೊಂಬಿನಲ್ಲಿ ಸುಳುಹಿನ
ಸೂಕ್ಷ ್ಮದ ಕಳೆಯ ಬೆಳಗಿನಲ್ಲಿ
ಅಕ್ಕನ ಗಂಡ ಭಾವಂದಿರ ಧಿಕ್ಕರಿಸ ಬಂದೆ.
ಮೇಖಲೇಶ್ವರಲಿಂಗವನರಿಯ ಹೇಳಿ.