Categories
ಶರಣರು / Sharanaru

ಗೋರಕ್ಷ

ಅಂಕಿತ: ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ
ಕಾಯಕ: ಗೋಪಾಲನೆ

ಮೂಲತ: ನಾಥಪರಂಪರೆಗೆ ಸೇರಿದ ಈತನ ಮೂಲ ಹೆಸರು ಗೋರಖನಾಥ. ಮತ್ಸೇಂದ್ರನಾಥ ಈತನ ಗುರು. ಅವನಿಂದ ಅನೇಕ ಸಿದ್ಧಿಗಳನ್ನು ಪಡೆದು ವಜ್ರಕಾಯನಾಗಿರುತ್ತಾನೆ. ಅಲ್ಲಮಪ್ರಭು ವಾದದಲ್ಲಿ ಇವನನ್ನು ಸೋಲಿಸಿ, ಇಷ್ಟಲಿಂಗ ದೀಕ್ಷೆಯನ್ನು ನೀಡಿ, ಶೂನ್ಯಸಂಪಾದನೆಯ ಮಾರ್ಗವನ್ನು ತೋರಿಸುತ್ತಾನೆ. ಈತನ ಕಥೆ ಶೂನ್ಯ ಸಂಪಾದನೆ, ಪ್ರಭುಲಿಂಗಲೀಲೆ ಮೊದಲಾದ ಕೃತಿಗಳಲ್ಲಿ ಪ್ರಸಿದ್ಧವಾಗಿದೆ. ಕಾಲ-೧೧೬೦. ಗೋರಕ್ಷನ ಜನ್ಮಸ್ಥಳ-ಪಟ್ಟದಕಲ್ಲು. ಅಲ್ಲಿನ ಅರಸು ನರವರ್ಮನ ಗೋವುಗಳನ್ನು ಕಾಯುವ ವೃತ್ತಿಯನ್ನು ಕೈಕೊಂಡಿದ್ದ. ಐಕ್ಯಸ್ಥಳ-ಶ್ರೀಶೈಲ. ‘ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗ’ ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ನಾನಾ ರೀತಿಯ ಸಿದ್ಧಿ, ಜ್ಞಾನ, ಯೋಗ, ಆತ್ಮ ವಿದ್ಯೆಗಳ ವಿವರ ಅವುಗಳಲ್ಲಿದೆ.

ಮಚ್ಚೇಂದ್ರನಾಥನ ಶಿಷ್ಯ. ಯೋಗಸಿದ್ಧಿಯಿಂದ ದೇಹದ ಮೇಲೆ ಪ್ರಭುತ್ವ ಹೊಂದಿ, ಶ್ರೀಶೈಲದಲ್ಲಿದ್ದನು. ಪ್ರಭುವಿನ ಸಂದರ್ಶನದ ನಂತರ ಇವನಲ್ಲಿ ಪರಿವರ್ತನೆಯಾಯಿತು. ವಚನಗಳನ್ನು ಈ ಘಟ್ಟದಲ್ಲಿ ಬರೆದಿರುವಂತಿದೆ. ಶಿವಯೋಗಾನುಸಂಧಾನದ ವಿವರಗಳು ಇವನ ವಚನಗಳಲ್ಲಿವೆ.