Categories
ವಚನಗಳು / Vachanagalu

ಚಂದಿಮರಸನ ವಚನಗಳು

ಅಂಗದ ಮೇಲೆ ಶ್ರೀಗುರು ಲಿಂಗ ಸಂಬಂಧವ ಮಾಡಿ
ಅಂಗಾಶ್ರಯವನಳಿದು ಲಿಂಗಾಶ್ರಯವ ಮಾಡಿದ ಬಳಿಕ
ಅಂಗಭೋಗಂಗಳ ಬಿಟ್ಟು, ಲಿಂಗ ಕ್ರಿಯೆಗಳನುಳ್ಳವರಾಗಿ
ಅಂಗಾರ್ಚನೆಯನತಿಗಳೆದು ಲಿಂಗಾರ್ಚನೆಯ ಮಾಡುತ್ತ,
ಅಂಗ ಮುಂತಲ್ಲವೆಂದು ಲಿಂಗ ಮುಂತಾಗಿಯೆ
ಎಲ್ಲ ಕ್ರೀಗಳನು ಗಮಿಸಿ ಸದ್ವ್ರತವನಾಚರಿಸುತ್ತ,
ನಿಜವೀರಶೈವ ಸಂಪನ್ನರಪ್ಪ ಭಕ್ತಜಂಗಮಾರಾಧ್ಯ
ಸ್ಥಳಂಗಳನುಳ್ಳವರಾಗಿರ್ದು
ಮತ್ತೆ ಮರಳಿ, ಅಂಗವನೆ ಆಶ್ರಯಿಸಿ,
ಅಂಗಭೋಗಂಗಳನು, ಅಂಗಾರ್ಪಿತ ಭುಂಜನೆಗಳನು
ಭಕ್ತ ಜಂಗಮಾರಾಧ್ಯ ಸ್ಥಳಂಗಳನ್ನುಳ್ಳವರಾಗಿರ್ದು
ಮತ್ತೆ, ಮರಳಿ, ಅಂಗವನೆ ಆಶ್ರಯಿಸಿ
ಅಂಗಭೋಗಂಗಳನು, ಅಂಗಕ್ರೀಗಳನು, ಅಂಗದರ್ಚನೆಗಳನು,
ಅಂಗ ಮುಂತಾದ ಗಮನಂಗಳನು, ಅಂಗಾರ್ಪಿತ ಭುಂಜನೆಗಳನು,
ಭಕ್ತ ಜಂಗಮಾರಾಧ್ಯರುಗಳು ಲಿಂಗವಿರಹಿತರಾಗಿ ಮಾಡಿದಡೆ
ಲಿಂಗವಿಲ್ಲ, ಲಿಂಗಾರ್ಚನೆಯಿಲ್ಲ, ಲಿಂಗಪ್ರಸಾದವಿಲ್ಲ.
ಲಿಂಗ ಮುಂತಾದ ಮುಕ್ತಿಗಮನ, ಇಹಪರದಲ್ಲಿಯೂ ಇಲ್ಲ.
ಇದನರಿದು, ಲಿಂಗಭೋಗವೇ ಭೋಗ,
ಲಿಂಗಾರ್ಚನೆಯೇ ಪೂಜೆ, ಲಿಂಗಾರ್ಪಿತವಾದುದೇ ಪ್ರಸಾದ,
ಲಿಂಗಮುಂತಾಗಿಯೇ ಎಲ್ಲ ಕ್ರೀಗಳನು ಮಾಡುವುದಯ್ಯಾ,
ಸಿಮ್ಮಲಿಗೆಯ ಚಿನ್ನರಾಮಾ./1
ಅಂಗದೊಳಗೆ ಲಿಂಗನಾಗಿ ಬಂದ ಲಿಂಗವನೆಂತು ಪೂಜಿಸಿ
ಮುಕ್ತಿಯ ಪಡೆವೆನಯ್ಯಾ!
ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ
ಲಿಂಗವನೆಂತು ಮುಟ್ಟಿ ಪೂಜಿಸಿ
ಮುಕ್ತಿಯ ಪಡೆವೆನಯ್ಯಾ!
ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ?
ಈ ಕಷ್ಟವ ಕಂಡು ಮುಟ್ಟಲಂಜಿ
ನಿಮ್ಮಲ್ಲಿಯೇ ನಿಂದೆ,
ಸಿಮ್ಮಲಿಗೆಯ ಚೆನ್ನರಾಮಾ./2
ಅನಲನ ಬಣ್ಣದ ಉಲುಹಿನ ರೂಹಿನ ತೋರಿಕೆ
ನಿಶ್ಚಯ ದಿಟವೆಂದು ಎಳೆಯ ಕತ್ತಲೆ
ಹಳೆಯ ಬಣ್ಣದ ಬಳಿ ವಿಡಿದಾಡುವಿರಲ್ಲಾ!
ಭವಲೇಪ ಲೋಪವಿಲ್ಲವಾಗಿ
ಪುಣ್ಯಪಾಪ ಜನಿತರು ಹಿರಿಯರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಹೆಸರಲ್ಲಿ ಸಂತುಷ್ಟರಿವರು./3
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ
ಅಂಧಕನ ಕೈಯ ಅಂಧಕ ಹಿಡಿದಂತೆ,
ಮುಂದೇನಪ್ಪುದು ಹೇಳೆಲೆ ಮರುಳೆ?
ಬರುಮಾತಿನ ರಂಜನೆಯನಾಡದಿರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹುಸಿಯ ಹಸರದವನಲ್ಲ./4
ಅರಿವುದೊಂದೆ ಎರಡಾಗಬಲ್ಲುದೊಂದೆ,
ಬೇರೆ ತೋರಬಲ್ಲುದದೊಂದೆ,
ತನ್ನ ಮರೆಯಬಲ್ಲುದದೊಂದೆ,
ತಾನಲ್ಲದನ್ಯವಿಲ್ಲೆಂದರಿದ ಅರಿವು ನೀನೆ,
ಸಿಮ್ಮಲಿಗೆಯ ಚೆನ್ನರಾಮಾ./5
ಅರ್ಪಿತಂಗಳನಾರು ಮುಖದಲ್ಲಿ ಮಾಡಬಲ್ಲಡೆ
ಕಲ್ಪಿತಂಗಳು ಹೊದ್ದಲಮ್ಮವು.
ಅರ್ಪಿತವಳವಡದ ಭೇದ ಮರಳಿತ್ತು
[ಸಿ] ಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ./6
ಅಶನದಲಾಯಷ್ಯ ವ್ಯಸನದ ಬೀಜ
ನಟನೆಯನೇನುವ ನಟಿಸದಿರಾ!
ಆದುದೆ ಜನನ, ಮಾದುದೆ ಮರಣ,
ತೋರುವುದೆಲ್ಲವು ದಿವಸದ ವಿಸ್ತಾರ.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಸಂಭ್ರಮ
ಜೀವರಿಗೆಲ್ಲಿಯದೊ?/7
ಅಳಿವ ತೋರಿಕೆಗಾದಿಯಿಲ್ಲ,
ಕಳಿವ ಭ್ರಾಂತಿಗೆ ಲಕ್ಷ ್ಯವಿಲ್ಲ.
ತಿಳಿವೆನಿನ್ನೇನ ಹೇಳಾ!
ಬೆಳಗ ತೋರಿಸುವ ಬೆಳಗೊಂದಿಲ್ಲವಾಗಿ
ಸ್ವಯಂಪ್ರಕಾಶ ಪರಿಪೂರ್ಣವಾದ
ನಿಜವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./8
ಆತ್ಮನೆಂತಪ್ಪಡೆ,
ನಿರವಯ ನಿರ್ಗುಣ ನಿರ್ವಿಕಾರ!
ನೋಡುವಡೆ,
ಕರ್ಮವ ಮಾಡುವವರಾರೊ?
ಅಲ್ಲಿ ಸಂಸಾರವಾರಿಗೆ ತೋರಿತ್ತೊ?
ಬಂಧ ಮೋಕ್ಷಗಳಾರಿಗೆ, ಎಲೆ ಅಯ್ಯಾ?
ನಿನ್ನ ನಿನ್ನಿಂದ ತಿಳಿದು ನೋಡಲು
ತಥ್ಯಮಿಥ್ಯಗಳೊಂದಕ್ಕೊಂದು ತಟ್ಟಲರಿವವೆ?
ಪುಸಿಮಾಯೆ ತೋರಿತ್ತು; ಸೋಜಿಗ, ಭ್ರಮೆ!
ದಿಟ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!/9
ಆನೆಂಬುದಿಲ್ಲ, ತಾನು ತಾನೆಂಬುದಿಲ್ಲ.
ವಿಜ್ಞಾನಮಾನಂದ ಬ್ರಹ್ಮವೆಂಬುದಿಲ್ಲ, ಇಲ್ಲವೆಂಬುದಿಲ್ಲ.
ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ./10
ಆರತವಡಗಿತ್ತು, ಸಾರತ ಸವೆಯಿತ್ತು.
ಸಂಭ್ರಮ ಸೈವೆರಗಾಯಿತ್ತು.
ನಚ್ಚಿಕೆ ನಾಚಿತ್ತು, ಮಚ್ಚಿಕೆ ಮರೆಯಿತ್ತು.
ನಿಷ್ಠೆ ನಿರ್ಭಾವಿಸಿ ನಿಸ್ಸಂದೇಹಕ್ಕೊಳಗಾಯಿತ್ತು.
ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಖಂಡಿತಪೂಜೆ ಭಂಡಾಯಿತ್ತು./11
ಆವ ಕಾಲದೊಳಾದಡೂ ಆವ ದೇಶದೊಳಾದಡೂ
ತನ್ನ ಲಲಾಟಲಿಖಿತ ಪ್ರಾರಂಬ್ಧಕರ್ಮ ಉಂಡಲ್ಲದೆ ತೀರದು;
ದೈವತಾಪ್ರಾರಬ್ಧ ಭೋಗಿಸಿದಲ್ಲದೆ ಕ್ಷಯವಾಗದು;
ದೇವ ದಾನವ ಮಾನವರಿಗಾದಡೂ ನಿವಾರಿಸಬಾರದು.
ತನು ತಾನಲ್ಲ, ತನ್ನದಲ್ಲ.
ಇದು ಮಾಯೆಯೆಂದರಿದು ಸುಖಿಯಾದಾತ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ! /12
ಇಂದುವಿನ ಬೆಳಗಿಂದ ಇಂದುವ
ಭಾನುವಿನ ಬೆಳಗಿಂದ ಭಾನುವ
ದೀಪದ ಬೆಳಗಿಂದ ದೀಪವ ಕಾಬಂತೆ
ತನ್ನ ಬೆಳಗಿಂದ ತನ್ನನೆ ಕಂಡಡೆ
ನಿನ್ನ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./13
ಇಂದ್ರಜಾಲ ಗಾಂಧರ್ವನಗರಾದಿಗಳ ಭ್ರಮೆಯ
ಹುಸಿಯೆಂದು ಕಾಣಬಹುದಲ್ಲದೆ
ಪ್ರಮಾಣಿಸಬಾರದು.
ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂದು
ಅರಿಯಬಹುದಲ್ಲದೆ ಕಾಣಿಸಬಾರದು.
ದೇಹಾದಿ ಗುಣಧರ್ಮ ಕರ್ಮಂಗಳು ತಾನಲ್ಲ,
ಇವು ತನ್ನವಲ್ಲವೆಂದು ತಿಳಿಯಬಹುದು.
ಅದು ಮಾಯಾಮಯ ಪ್ರಾರಂಭ ಕೆಡೆಕೆಡುಗು.
ನೀತಿ ಕ್ರಮದಿಂದ ಬೋದ್ಯದೀಪ್ತಿ ತಾನೆಂದು
ಅರಿದರಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಂಗಾವ ದುಃಖವೂ ಇಲ್ಲ./14
ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ
ವಿಷಯಂಗಳಲ್ಲಿ ಆಸಕ್ತಿಯುಳ್ಳವನು ಅಂತರ್ಮುಖ ರೂಪನಪ್ಪ,
ಪ್ರತ್ಯಗಾತ್ಮನನೆಂತೂ ಕಾಣಲರಿಯೆನು.
ಮೇರುಗಿರಿಯ ಕಂಡೆಹೆನೆಂದು ತೆಂಕಮುಖನಾಗಿ ನಡೆದು
ಮೇರುಗಿರಿಯ ಕಾಣಲರಿಯನೆಂತಂತೆ,
ಸಕಲ ವಿಷಯಾಸಕ್ತಿಯ ಬಿಟ್ಟು ನಿರ್ವಿಷಯಿಯಾಗಿ
ನಿಜದಲ್ಲಿ ನಿಂದ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./15
ಇಲ್ಲದ ತನುವಿಲ್ಲೆಂಬುದಕ್ಕೆ
ಉಳ್ಳಾತನನುಂಟೆಂಬುದಕ್ಕೆ
ಶಾಸ್ತ್ರಪುರಾಣಾಗಮಂಗಳನೋದಿ ಕೇಳಿ ತಲ್ಲಣಗೊಂಬುದಕ್ಕೆ
ಕಾರಣವೇನೂ ಇಲ್ಲದುದಿಲ್ಲ, ಉಂಟಾದುದುಂಟು.
ಇಲ್ಲ ಉಂಟೆಂಬುದಕ್ಕೆ
ತೆರಹಿಲ್ಲದ ಸಚ್ಚಿದಾನಂದಮಪ್ಪ ನಿಜವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./16
ಇಹಪರವೆಂಬ ಇದ್ದೆಸೆಯಾಗಿರ್ದನ ಪರಿ ಹೊಸತು!
ನೆಯಿ ಹತ್ತದ ನಾಲಗೆಯಂತೆ,
ಹುಡಿ ಹತ್ತದ ಗಾಳಿಯಂತೆ,
ಕಾಡಿಗೆ ಹತ್ತದ ಆಲಿಯಂತೆ ಇರ್ದೆನಯ್ಯಾ!
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಆಚರಿಸುತ್ತ ಆಚರಿಸುತ್ತ ಆಚರಿಸದಂತಿರ್ದೆ ನೋಡಯ್ಯಾ/17
ಉಪ ಜೀವೋಪಜೀವಕ ಶತ್ರು ಮಿತ್ರಾದಿ ಉದಾಸೀನ.
ಸ್ತುತಿ ನಿಂದೆ ಮಾನಾಪಮಾನ ಪ್ರಾರಬ್ಧ
ಸುಖದುಃಖ ಭೋಗೋಪಭೋಗಂಗಳನುಳ್ಳ ತನು ಉಳ್ಳನ್ನಕ್ಕ
ಆರಿಗಾದಡೂ ರಾಗದ್ವೇಷವೆತ್ತ ಹೋದಡೊ ಬೆನ್ನಬಿಡವಾಗಿ
ಇವ ಮಾಣಿಸಬಾರದು.
`ದೃಷ್ಟತ್ವೇನ ಅಹಂ ಮಮ’ ಎಂದುದಾಗಿ
ಇಂತು ಕಾಮ ಕ್ರೋಧಾದಿಯೇ ಮಾಯೆ.
ಈ ಮಾಯೆಯನುಳಿದು ಸೋಹಂಭಾವದೊಳಿರೆ
ಆತ ನಿತ್ಯಮುಕ್ತನವ್ಯಕ್ತನಪ್ರಮೇಯ
ಪರಮಾನಂದನಪ್ಪ ನಿರವಯನಹ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./18
ಉಪನಿಷದ್ವಾಕ್ಯಮಪ್ಪ ಗುರುವಚನವ ಹೃದಯದಲ್ಲಿ ನಂಬದೆ,
ತಮ್ಮೊಳಿದ್ದ ಹಾಗೆ ಗಳಹುತಿಪ್ಪರಯ್ಯ.
ಆರೇನೆಂದ ಮಾತ ನೀ ಕೇಳಿದಡೆ ಕೆಡುವೆ.
ಎಲೆ ಮರುಳೆ `ಅಂದೆನೈವಾ ನಿಯಮನಾ’ ಎಂದುದು ವೇದ.
ಅನುಭವದಿಂದ ತಿಳಿದು ನೋಡಿ ನಂಬು.
ಸದ್ಗುರು ನೀನೆ, ಸಿಮ್ಮಲಿಗೆಯ ಚೆನ್ನರಾಮಾ./19
ಉಳ್ಳ ರಜ್ಜುವಿನಲ್ಲಿ ತೋರಿತಿಲ್ಲದಹಿಯೆಂತಂತೆ
ನೋಡಿ ಅರಿದಂದು ಕೆಟ್ಟುದಲ್ಲ.
ನಾಮರೂಪು ಕ್ರಿಯಾಭೇದದಿಂ ತೋರುವ ಜಗವು
ಪರಮನಲ್ಲಿ ಎಂದಡೆ ಕೇಡಿಂಗಿಮ್ಮೆ ಕೇಡುಂಟೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./20
ಎಂತು ಬಣ್ಣಿಸುವರಯ್ಯಾ ಲೋಕ ಸದುಹೃದಯರಲ್ಲದವರ!
ಇಂತಪ್ಪವರನಲ್ಲದೆ ಲೋಕ ಹೊಗಳಬಲ್ಲುದೆ? ಹೇಳಾ!
ತಮ್ಮತಮ್ಮ ಪರಿಗಳಲು ಇರದವರ ಮೆಚ್ಚುವರಾರೊ
ಈ ಲೋಕದೊಳಗೆ?
ಸಿಮ್ಮಲಿಗೆಯ ಚೆನ್ನರಾಮಾ./21
ಎಕ್ಕಸಿಕ್ಕಗೆಡದವನೆ ಅದ್ವೈತಿ, ಆನೇನೆಂಬೆನಯ್ಯಾ.
ತಾನಲ್ಲದನ್ಯವಿಲ್ಲೆಂದರಿದ ನಿಜಗುಣ ಶಿವಯೋಗಿ
ಏನುವನು ತಾನರಿಯಬಲ್ಲನೆ ಹೇಳಾ.
ಇನ್ನು ಸ್ತುತಿ ನಿಂದೆಗೆಡೆಯುಂಟೆ?
ನಿಜಗುಣನಲ್ಲಿ ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./22
ಎಲುವಿನ ಹಂಜರ ಕರುಳಿನ ಜಾಳಿಗೆ
ಅಮೇಧ್ಯದ ಹುತ್ತ ಮೂತ್ರದ ಬಾವಿ
ಶ್ಲೇಷ್ಮದ ಕೆಸರು ಕೀವಿನ ಸೋನೆ
ನೆತ್ತರ ಮಡು ನಾಡಿಗಳ ಸುತ್ತುವಳ್ಳಿ
ನರವಿನ ನೇಣ ಜಂತ್ರ ಮಾಂಸದ ಘಟ್ಟಿ ತೆಪ್ಪ
ಕಿಸುಕುಳದ ಹೇಸಿಕೆ ಅತಿಹೇಯ ಮಲಿನ
ಆಸ್ಥಿ ರೋಮ ತೊಗಲ ಪಾಕುಳ
ಕ್ರಿಮಿಯ ಸಂಕುಳ ಬಲಿದಪರ ರೇತೋ ರಜಸ್ಸಿನಲ್ಲಿ ಜನಿತ
ಉತ್ಪತ್ತಿ ಸ್ಥಿತಿ ಲಯದ ಬೀಜ
ಆಧಿ ವ್ಯಾಧಿಯ ತವರುಮನೆ
ವಿಷಯದ ಭವ ದುಃಖದಾಗರ ಮೋಹದ ಬಲೆ
ತೋರಿ ಕೊಡುವ ತನು.
ಇದ ನೀನೆಂದು ನಿನ್ನದೆಂದು ಮಾಡಬಾರದ ಪಾಪಂಗಳ ಮಾಡಿ,
ಬಾರದ ಭವಂಗಳಲ್ಲಿ ಬಂದು, ದೇಹದಿಚ್ಚೆಗೆ ಸಂದು,
ಹೂಸಿ ಮೆತ್ತಿ ಹೊದಿಸಿದ ದೇಹದಂತುವ ಕಂಡು
ಮರುಗುವೆ ಮರುಳಮಾನವಾ!
ಅಘೋರ ನರಕದಲ್ಲಿಕ್ಕುವಾಗ
ಅಡ್ಡಬಪ್ಪವರಾರು ಹೇಳಾ?
ಅಹಂಮಮತೆಯ ಮರದು, ದೇಹದಿಚ್ಛೆಯ ಬಿಟ್ಟು
ಸೋಹಂ ಬ್ರಹ್ಮಾಸ್ಮಿ ಎಂದು ಕೇಡಿಲ್ಲದ ಸುಖವ
ಮಾಡಿಕೊ ಮರುಳೇ.
ಮೋಹ ಬೇಡ! ಕೆಡುವೆ!
ನಿನ್ನಲ್ಲಿ ನೀನೇ ತಿಳಿದು ನೋಡಾ
ಸಿಮ್ಮಲ್ಲಿಗೆಯ ಚೆನ್ನರಾಮಾ./23
ಎಲುವು ತೊಗಲು ನರ ಮಾಂಸ ಪುರೀಷ
ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ
ಜರೆ ಮರಣ ಜಂತು
ಹಲವು ರೋಗಂಗಳ ತವರ್ಮನೆ
ನೋಡುವಡೆ ಪಾಪದ ಪುಂಜ
-ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ?
ಈ ಸುಖದಾಸೆಯ ವಿಚಾರಿಸಿ ನೋಡಿದಡೆ
ಸಕಲ ದುಃಖದಾಗರ, ನರಕದ ಪಾಕುಳ.
ಅಂಗನೆಯರಿಂತೆಂದು ತಿಳಿದು
ವಿರಕ್ತನಾದ ಪರಮ ಸೌಖ್ಯಾಂಗ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./24
ಏನೆಂದನಲಿಲ್ಲದ ಮಹಾಘನವು
ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು!
ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ,
ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ,
ಆತ್ಮನಿಂದಾದುದು ಆಕಾಶ,
ಆಕಾಶದಿಂದಾದುದು ವಾಯು,
ವಾಯುವಿನಿಂದಾದುದು ಅಗ್ನಿ,
ಅಗ್ನಿಯಿಂದಾದುದು ಅಪ್ಪು,
ಅಪ್ಪುವಿನಿಂದಾದುದು ಪೃಥ್ವಿ,
ಪೃಥ್ವಿಯಿಂದಾದುದು ಸಕಲ ಜೀವವೆಲ್ಲಾ.
ಇವೆಲ್ಲಾ ನಿಮ್ಮ ನೆನಹುಮಾತ್ರದಿಂದಾದವು
ಸಿಮ್ಮಲಿಗೆಯ ಚೆನ್ನರಾಮಾ./25
ಕಂಗಳ ಮುಂದೆ ತೋರಿದ ಮಿಂಚು
ಮನದ ಮೇಲೆ ತಿಳಿಯಿತ್ತಿದೇನೊ!
ಕಳೆಯಬಾರದು ಕೊಳಬಾರದು
ಕಂಗಳ ಕತ್ತಲೆಯ, ಮನದ ಮಿಂಚುವ.
ಇದ ಬಲ್ಲವರನಲ್ಲೆನಿಸಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು./26
ಕಂಗಳ ಮೊಲೆ ಕೂರ್ಮನ ಆಪ್ಯಾಯನ
ಉಂಬ ಭೇದವ ಬಲ್ಲವರಾರೊ? ಅರಿಯಬಾರದು.
ಘನವನರಿತ ಅಗಮ್ಯನ ನಿಲವನರಿಯಬಾರುದು.
ಇದರನುವನವಗವಿಸಿ ತೆರಹಿಲ್ಲದಾತ
ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಮಹಿಮನು./27
ಕಂಡುದ ಕೇಳಿದುದ ತಾಗಿತ ಸೋಂಕಿತ್ತ
ಕಾಯದ ಕೈಯಲ್ಲಿ ಲಿಂಗಾರ್ಪಿತವಾಯಿತ್ತೆಂದಡೆ ತಪ್ಪಿತ್ತು ನೋಡಾ!
ತಾನರಿವುತ್ತ ಕೊಡಲುಂಟೆ ಲಿಂಗಕ್ಕೆ?
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಶರಣನಲ್ಲ ಆತ! ಸಂದೇಹಿ!/28
ಕಣ್ಣೆಯ್ದಿದ ಭಾವ ಕಾಲೆಯ್ದಿದ ಬಲ್ಲವೆ ಮರುಳೆ!
ಮನವೆಯ್ದಿದ ಘನವು ತನುವಿಂಗೆ ಸಿಲುಕುವುದೆ?
ಇದೆತ್ತಣ ಮಾತೊ?
…ಡನೆಂದರಿದ ಬಳಿಕ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು
ಹೊರಗರಸಲಿಲ್ಲ ನಿಲ್ಲು./29
ಕನಸಿನ ಸಹಸ್ರಾಕ್ಷನೆಚ್ಚತ್ತು ನೋಡಿ
ತನ್ನ ನಿಜವನರಿವಾಗ ಕೇಳೆಲೆ ಮರುಳೆ
ದ್ವ ್ಯಕ್ಷನಾಗಿ ಅರಿಯದೆ ಮೇಣು ಸಹಸ್ರಾಕ್ಷದಲ್ಲಿ ಅರಿದನೆ ಹೇಳಯ್ಯಾ?
ನಿರವಯ ನಿರವದ್ಯ ನಿರ್ವಿಕಾರ ನಿರಂಜನ
ಘನಾನಂದಾದ್ವಯ ಪರಿಪೂರ್ಣನಾಗಿ ತನ್ನನರಿವವನಲ್ಲದೆ
ಮತ್ತೊಂದು ಪರಿಯಲ್ಲಿ ಅರಿಯಬಲ್ಲನೆ ಹೇಳಾ?
ಮುನ್ನಿನ ಪರಿಯಲ್ಲಲ್ಲದೆ, ಕೋಹಮ್ಮಿನೆಚ್ಚರಿಂದ
ಸೋಹಂ ಭಾವಾದಿಯಲ್ಲದೆ
ಜ್ಞಾತೃ ಜ್ಞಾನ ಜ್ಞೇಯ ವಿಹೀನನಾಗಿ
ತನ್ನನರಿದಡೆ ಅರಿದ, ಅಲ್ಲದಿದ್ದಡೆ ಅರಿಯದಾತನು.
ಇದು ತಪ್ಪದು ಸಿಮ್ಮಲಿಗೆಯ ಚೆನ್ನರಾಮನ ವಚನ./30
ಕನಸಿನಲ್ಲಿ ಹುಟ್ಟಿದ ಕಂದಂಗೆ
ನೆನಸಿನಲ್ಲಿ ಜಾತಕರ್ಮವ ಮಾಡುವರೆ?
ಭ್ರಮೆಯಿಂದ ತೋರುವಹಂ ಮಮತೆಯ ಚಿಃಯೆಂದು
ತನ್ನನರಿದಂಗೆ ಕ್ರೀಯೆನಿಸಿ
ಏನೂ ಇಲ್ಲ ನಿನ್ನಲ್ಲಿ ನೋಡುವಡೆ.
ನಿಜಗುಣ ಸಕಲ ಕರ್ಮರಹಿತ
ಚಿನ್ಮಯ ಪರಿಪೂರ್ಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./31
ಕನ್ನಡಿಯಲ್ಲಿ ತೋರುವ ಕಣ್ಣು ನೋಡುವ ಕಣ್ಣು ಕಾಬುದು ಹುಸಿ.
ಇದು ದಿಟದಂತೆ ತೋರಿದ ಬುದ್ಧಿ
ದರ್ಪಣದಲ್ಲಿ ತೋರುವ ಹುಸಿಯಂತೆರಡು ಜೀವನು.
ಈ ಜೀವನು ಶುದ್ಧ ಚಿದ್ರೂಪವ ಕಾಬ ಕೂಡುವ
ನಾನೀನೆಂಬುದು ಮಿಥ್ಯೆ, ಜೀವಭಾವಮಿಂತುಟು.
ನಾ ನಿರ್ವಾದವೆಂದು ತಿಳಿದ ಬುದ್ಧಿಯ ಭಾವ
ಸದಾನಂದಸ್ವರೂಪನಪ್ಪ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./32
ಕರ್ಮಿಭಕ್ತ ಜ್ಞಾನಿ ಲೌಕಿಕವೆಂಬ ಚತುರಾಶ್ರಮಿಗಳಿಗೆ
ತ್ರಿಜಗದೊಳಗೆ ಶ್ರುತ್ಯಾನುಭಾವ ಸಿದ್ಧವಾಗಿಹುದು.
ಹಿಡಿದು ಸುಖವಿಲ್ಲ. ಬಿಟ್ಟು ದುಃಖವಿಲ್ಲ.
ನೆರೆಯರಿದು ವಿಷಯಂಗಳ ಬಿಟ್ಟಡೆ
ಪರಮಾನಂದವೆಂದೆಂದಿಗೂ ಸೋಹಂಭಾವವಹುದು.
ಈ ಸೋಹಂಭಾವದಲ್ಲಿ ನಿಂದಂದು
ಈ ದೇಹದ ಅಹಂಮಮತೆಯೆಂಬ ಜಡಮಾಯೆ ಉಳಿವುದೆ,
ಸಿಮ್ಮಲಿಗೆಯ ಚೆನ್ನರಾಮನಾಥನ ಭಾವಿಸಿ ನೋಡಿದಲ್ಲಿ!/33
ಕವಿ ಗಮಕಿ ವಾದಿ ವಾಗ್ಮಿಯೆಂಬ
ಮಾಯಾವೇಷ ಮತಕ್ಕೆ ದೂರ.
ಸಾಮುದ್ರಿಕರ ಶಬುದವು ನೆರೆಯವು.
ತಾರ್ಕಿಕರ ತರ್ಕಕ್ಕಿಲ್ಲ ಮತಿ ಮನುಗಳೆಂಬ
ಹಿರಿಯರರಿವಿನಲ್ಲಿ ನಿಲ್ಲು ನಿಲ್ಲು ಮಾಣು,
ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತು ಗಳಿಗೆ./34
ಕವಿ ಗಮಕಿ ವಾದಿ ವಾಗ್ಮಿಯೆಂಬವರ ಮಾತಿಂಗಿಲ್ಲ.
ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ.
ತರ್ಕಿಗಳ ತರ್ಕಕ್ಕಿಲ್ಲ.
ಶಬ್ದಿಕರ ಶಬ್ದ ನೆರೆಯವ ತೋರುವಡೆ ವಿಷಯವಾಗಿರದು.
ಅರಿವೊಡೆ ಅತಕ್ರ್ಯ,
ಅದು ನಿನ್ನಲ್ಲಿಯೆ ಅದೆ,
ಸಿಮ್ಮಲಿಗೆಯ ಚೆನ್ನರಾಮಾ./35
ಕಾಳಕೂಟ ಹಾಳಾಹಳ ವಿಷಂಗಳು
ಕುಡಿದವರಲ್ಲನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು
ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ,
ಕೇಳಿದವರ, ಕೂಡಿದವರ, ಗಡಣ ಸಂಗಮಾತ್ರದಿಂ
ಮಡುಹಿ ನರಕದಲ್ಲಿ ಕೆಡಹದೆ ಮಾಡಳು.
ದೇವ ದಾನವ ಮಾನವರನಾದಡು ಉಳಿಯಲೀಯಳು!
ಆವಂಗೆಯೂ ಗೆಲಬಾರದೀ ಮಾಯೆಯ!
ಗೆಲಿದಾತ ನೀನೆ ಸಿಮ್ಮಲಿಗೆಯ ದಾತ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ!/36
ಕಿಚ್ಚು ದೈವವೆಂದು ಹವಿಯ ಬೇಳುವರು.
ಕಿಚ್ಚು ಹಾರುವರ ಮನೆಯ ಸುಡುವಾಗ
ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ
ಬೊಬ್ಬಿರಿದೆಲ್ಲರ ಕರೆವರು.
ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ
ವಂದಿಸುವುದ ಬಿಟ್ಟು ನಂದಿಸುತ್ತಿದ್ದರು./37
ಕುರುಡ ಕಾಣನೆಂದು, ಕಿವುಡ ಕೇಳನೆಂದು
ಹೆಳವ ಹರಿಯನೆಂದು, ಮರುಳ ಬಯ್ದನೆಂದು,
ಪಿಶಾಚಿ ಹೊಯ್ದನೆಂದು ಮನಕತಬಡುವರೆ ಹೇಳಾ?
ತಾನರಿವುಳ್ಳಾತ ತತ್ವವನರಿಯದವರಲ್ಲಿ
ಗುಣದೋಷವನರಿಸುವರೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./38
ಕೂರ್ಮನ ಗತಿಯ ಕುವಾಡ ಯೋಗವು
ಕುಹಕವಾದಿಗಳಿಗಳವಡದು.
ಉತ್ತಮಾಂಗವನು ಉರಸ್ಥಲದಲ್ಲಿ ಬೈಚಿಡುವ
ಬಯಕೆಯನಾರೈದು ನೋಡಾ!
ಅದನು ಆರಯ್ಯಲಚಲ ನೀನೇ,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು
ಎಂದೂ ಎನಲಿಲ್ಲ!/39
ಕೋಕ ಪಿಂಗಳ ತಾರಾಗ್ರೀವ ಚಕ್ರಪಾಣಿ ಧನುರ್ಧಾರಕರೆಂಬ
ಅತಿರಮಣರು ಬಡಿದಾಡಿದರೈ.
ಉಸಿರಳಿದು ಉಸಿಕನೆ ಹೋದರು,
ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತು ಗಳಿಗೆ./40
ಕೋಹಮೆಂಬುದು ಪ್ರಸನ್ನಭಾವ.
ತನ್ನನರಿಸುವ ಕತದಿಂದ ನಿರಹಂಕಾರ,
ಪರಮ ವಿರಹಿತ, ವಿಷರಹಿತ.
ಏನೂ ಹೊರಹೊದ್ದದ ಸನ್ಮಾತ್ರ ಚಿನ್ಮಯ ಪರಮಾನಂದ
ತಿಳಿದು ನೋಡುವಡೆ, ನಿಜಗುಣ ತಾನೇ,
ಸಿಮ್ಮಲಿಗೆಯ ಚೆನ್ನರಾಮಾ/41
ಗಗನಾದಿ ಸಾಕಾರದಜ್ಞಾನಭಾವವನತಿಗಳೆದು
ಅರಿತ ಅರಿವಿಂದವೆ ನೋಡಿ, ಆ ಅರಿವನೆ ತಿಳಿದು,
ಏನೂ ಅರಿಯೆನೆಂಬುದೆ ನಿಂದ ನಿಲವು.
ಸಚ್ಚಿದಾನಂದ ನಿತ್ಯ ಪರಿಪೂರ್ಣ ನೀನೇ,
ಸಿಮ್ಮಲಿಗೆಯ ಚಿನ್ನರಾಮಾ./42
ಗಣಂಗಳ ಬರುವ ಕಂಡು ಕೈಮುಗಿದು ಅಂಜಲೇಬೇಕು.
ಶರಣೆನ್ನಲೊಲ್ಲದೀ ಮನವು.
ಆಳಿನ ಭಕ್ತಿಯನರಿಯರಾಗಿ ಶರಣೆನ್ನಲೊಲ್ಲದೀ ಮನವು.
ಆಳ್ದನೆಂದು ನಂಬಿ ನಂಬಲೊಲ್ಲದಾಗಿ,
ಸಿಮ್ಮಲಿಗೆಯ ಚೆನ್ನರಾಮನೆನ್ನಕಡೆ ನೋಡಿ ನಗುತಲಿದ್ದಾನೆ./43
ಗಾಳಿ ಬೀಸುವಲ್ಲಿ ಕೇಳೆಲವೊ
ಬೀಸಣಿಗೆಯ ಉಸುರೆಂತು ಮೆರೆವುದು ಹೇಳಾ ಮರುಳೆ!
ನಿಸ್ಸಾಳ ಬಾರಿಸುವಲ್ಲಿ ಢವುಡೆ ತಂಬಟದ ದನಿ
ಎಂತು ಮೆರೆವುದು ಹೇಳಾ ಮರುಳೆ!
ಸಿಮ್ಮಲಿಗೆಯ ಚೆನ್ನರಾಮನೆಂಬ
ಸೀಮೆಯಿಲ್ಲದ ನಿಸ್ಸೀಮಂಗೆ
ಲಿಂಗ ಸಂಸಾರಿ ಸರಿಯಲ್ಲ ಹೇಳಾ ಮರುಳೆ!/44
ಗುಣ ದೋಷ ಕರ್ಮಂಗಳನೇನೆಂದು ಅರಿಯ.
ಈ ಜಗವೆಲ್ಲಾ ಮಾಯೆಯೆಂದು ಕಂಡನಭೇದ್ಯ.
ಸುಖಸ್ವರೂಪ ನಿಜಗುಣ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ./45
ಗುಣ ಧರ್ಮ ಕರ್ಮಂಗಳನೇನೆಂದೂ ಅರಿಯೆ.
ಸಾಕಾರಾದಿ ಭೌತಿಕಂಗಳನೇನೆಂದೂ ಅರಿಯೆ.
ಅರಿವೆ ಮರವೆ ಎಂಬುದನರಿಯೆನೆಂದು
ಅರಿಯದ ನಿಜವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./46
ಗುರು ಹೇಳಿದುದನೆರಡಿಲ್ಲದೆ ನಂಬಿ
ಶಿರದಲ್ಲಿ ಮನವಿರಿಸಿ
ಪೆರತೇನುವ ನೆಮ್ಮದೆ ನಿಂದಲ್ಲಿ
ನೀನೆ ಸಿಮ್ಮಲಿಗೆಯ ಚೆನ್ನರಾಮಾ!/47
ಗೋವಾದಿಯಾದ ಸಾಕಾರಾದಿ ಭೌತಿಕಂಗಳನತಿಗಳೆದು
ನಿರಾಕಾರ ಪ್ರಾಣಾದಿಯಾದ ಮನೇಂದ್ರಿಯಂಗಳ ನೆಲೆಗಳೆದು
ಅರಿವಿನರಿವಿಂದವೇ ನೋಡಿ,
ಅರಿವು ಮರವೆಗಳೆರಡನು ನೇತಿಗಳೆದು
ಏನೂ ಇಲ್ಲದೆ ಶೂನ್ಯವಾಗಿ ನಿಂದ ನಿಜಸ್ವರೂಪ ನೀನೇ,
ಸಿಮ್ಮಲಿಗೆಯ ಚೆನ್ನಾರಾಮಾ./48
ಘನಗಂಭೀರ ಮಹಾ ವಾರುಧಿಯಲ್ಲಿ
ಫೇನ ತರಂಗ ಬುದ್ಬುದಂಗಳಾದವಲ್ಲದೆ ಬೇರಾಗಬಲ್ಲವೆ?
ಆತ್ಮನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಕೋಟಿಗಳಾದವಲ್ಲದೆ ಬೇರಾಗಬಲ್ಲವೆ?
ಇದ ಬೇರೆಂಬ ಅರೆಮರುಳುಗಳ ನಾನೇನೆಂಬೆ?
ವಿಶ್ವವನರಿದು ನೋಡಲು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಬೇರಿಲ್ಲ./49
ಚತುರ್ವಿಂಶತಿಯೇ ದೇಹ,
ಪಂಚವಿಂಶಕನೇ ದೇಹಿ,
ಷಡ್ವಿಂಶಕನೇ ಆತ್ಮಕನು.
ಅರಿದಡೆ ಸಚ್ಚಿದಾನಂದಮಪ್ಪ ನಿಜವು ನೀನೆ,
ಸಿಮ್ಮಲಿಗೆಯ ಚೆನ್ನರಾಮಾ./50
ಚತುರ್ವಿಧ ಪಾಥ್ಯತ್ವವೆಮಗುಂಟು.
ಸುರಾದಿ ಚೂಡಾಮಣಿಗಳೆಂಬ
ಜಾಣನೇರಿಸಿದಕೊಂಡು ನುಡಿವಂತುಟಲ್ಲ.
ಸುಜನಜನ ಮನೋಜನವೆನಿಸುವಂತುಟಲ್ಲ.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಅರಿವಿನಂತುಟಲ್ಲ./51
ಜನನಾದಿ ಇಲ್ಲದವ ಜನನಾದಿಯನೇಕೆ ಒಡಂಬಡುವೆ?
ಗುಣಕರ್ಮವಿಲ್ಲದವ ವಿಷಯಂಗಳನೇಕೆ ಒಡಂಬಡುವೆ?
ಬಂಧುವಿಲ್ಲದವ ಮೋಕ್ಷವನೇಕೆ ಒಡಂಬಡುವೆ?
ಸಿಮ್ಮಲಿಗೆಯ ಚೆನ್ನರಾಮಾ./52
ಜಲದಲ್ಲಿ ಇಲ್ಲದೆ ಜಲದಲ್ಲಿ ತೋರುವ ತೆರೆಗಳನು
ಭೂತ ತಿಳಿದೆಡೆಯಲ್ಲಿಯೂ ಇಲ್ಲದಂತೆ ಪರಮನ ಹೊದ್ದದಂತೆ
ಆ ಪರಮನಲ್ಲಿಯೆ ತೋರುವ ಜಗವನು
ಭೂತಭ್ರಮೆಯಿಂದ ತಿಳಿದೆಡೆಯಲ್ಲಿಯೂ ಇಲ್ಲದೆ
ನೆನಸಿನ ವಾರಣಾಸಿಯಲ್ಲಿ ಕನಸಿನ ಕಟಕವ ಕಂಡಂತೆ
ಇದ್ದ ಮಹವೆಂಬ ತೋರಿಕೆಯ ಎಲ್ಲವನು ತಿಳಿದಚಲಿತ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ./53
ಜಾಣನಯ್ಯಾ ಸದ್ಗುರುವ ನಂಬುವಲ್ಲಿ.
ಜಾಣನಯ್ಯಾ ವಿಷಯಂಗಳ ಬಿಡುವಲ್ಲಿ.
ಜಾಣನಯ್ಯಾ ಅವಿದ್ಯವ ಗೆಲ್ಲುವಲ್ಲಿ.
ಜಾಣನಯ್ಯಾ ತನ್ನ ತಾನರಿವಲ್ಲಿ
ಜಾಣನಯ್ಯಾ ನಿಜಗುಣನ ಶ್ರೀಪಾದವ ಪಿಡಿವಲ್ಲಿ
ಜಾಣನಯ್ಯಾ ನಮ್ಮ ಸಿಮ್ಮಲಿಗೆಯ ಚೆನ್ನರಾಮಾ./54
ಜೀವಂಗೆ ಸ್ವಪ್ನದಂತೆ ದಿಟ ತೋರಿ
ಜೀವನೊಡನೆ ಕೆಡುವ ಸಂಸಾರದ ಪರಮನೆಂದೇಕೆನುಡಿವೆಯೊ?
ಪರಮನಾದಡೆ ಪರಮನಲ್ಲಿ ಪರಮರಾಗಿಯಾದಡು ಎನಗೆಕಾಣಬಾರದು.
ದೋಷಪನ್ನಾರಿ ವೇದಾನುಭವವಿದು ಪ್ರತಿ ಚಿನ್ಮಯವಾಗಿಹುದು.
ಈ ನಿಷ್ಕಲಬಿಂಬ ದಿಟವಿದೆಂದು ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./55
ಜ್ಞಾತೃ ಜ್ಞಾನ ಜ್ಞೇಯವೆಂಬ ಮಾತಿನ ಮಾತಿಲ್ಲದೆ
ಇದರ ಧಾತು ಕುಳಿದುತ್ಪತ್ತಿಯನಾರು ಬಲ್ಲರೊ?
ಮನದ ಸಂಚಲವೆ ಜ್ಞಾತೃ,
ಪ್ರಾಣನ ಸಂಚಲವೆ ಜ್ಞಾನ,
ಭಾವದ ಸಂಚಲವೆ ಜ್ಞೇಯ.
ಇಂತೀ ಮನ ಪ್ರಾಣ ಭಾವಂಗಳು ಭೂತಧಾತುವಿನುತ್ಪಿತ್ತಿ,
ಮೊದಲುಗೆಟ್ಟಲ್ಲಿಯೆ ತುದಿಗೆ ಲಯ,
ನಡುವೆ ತೋರುವುದಾವುದೊ?
ಇದು ಕಾರಣ ಅರಿಯಲಿಲ್ಲದೆ ಇರವೆ ಅರಿವಿಂಗೆ ಅರಿವಾಗಿ
ಕುರುಹಿಂಗೆ ತೆರಪಾಗಿರ್ದುದನರಿವ ಪರಿ ಇನ್ನೆಂತೊ?
ಇದನರಿದೆವೆಂಬ ಅರೆಮರುಳುಗಳ
ಅರಿವಿಂಗೆ ಅಭೇದ್ಯನಾದ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ/56
ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು
ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ?
ನಿನ್ನ ಮರುತನ ಜಗದ ಡಂಗುರ ನೋಡಾ!
ಇನ್ನಾರಿಗೆಯು ದೃಶ್ಯವಿಲ್ಲ.
ಐಕ್ಯಂತು ಭಾವ ದೃಷ್ಟಿ.
ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು./57
ತನು ಕಿಂಕರನಾಗದೆ, ಮನಕಿಂಕರನಾಗದೆ,
ಇಂದ್ರಿಯ ಕಿಂಕರನಾಗದೆ,
ಆತ್ಮ ಕಿಂಕರನಾಗದೆ, ಶ್ರುತಿ ಕಿಂಕರನಾಗದೆ
ಇವೆಲ್ಲವ ನೆರೆ ತೊರೆದು ಏನು ಎನ್ನದೆ
ಮರ್ಯಾದೆ ತಪ್ಪದೆ ಸದ್ಗುರು ಕಿಂಕರನಾಗಿ
ಭವಗೆಟ್ಟು ಹೋದವರನೇನೆಂಬೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./58
ತನುವೆಂಬುದು ನಿಮ್ಮ ನಿಜವ ಕಾಣಲೀಯದು.
ಮನವೆಂಬುದು ನಿಮ್ಮ ದಿಟವ ಕಾಣಲೀಯದು.
ಹಮ್ಮು ಬಿಮ್ಮು ಅನೃತ ಆಸತ್ಯ ಅವಿದ್ಯ
ಈ ಪಂಚವಿಷಯ ಅಜ್ಞಾನಭಾವಕ್ಕೆ ಮೂಲವಯ್ಯಾ.
ಅರಿವು ನಿನ್ನೊಡಲಾಗಿ ಮರವೆಯ ಮರೆದೆನೆಂಬುದು ಮಿಥ್ಯ
ತಿಳಿದಳಿದುಳಿದ ಬಚ್ಚಬರಿಯರಿವು
ಸಚ್ಚಿದಾನಂದ ಸ್ವರೂಪ ನೀನೆ,
ಸಿಮ್ಮಲಿಗೆಯ ಚೆನ್ನರಾಮ./59
ತನ್ನ ತನ್ನಿಂದವೆ ತಿಳಿದು ನೋಡೆಲವೊ!
ತನ್ನ ತನ್ನಿಂದವೆ ಆನೆನ್ನದೆ, ಎನ್ನದೆನ್ನದೆ
ಅನ್ಯ ವಿಷಯಕ್ಕೆರಗದೆ ತನ್ನ ನಿಜಸುಖದಲ್ಲಿ ನಿಂದಂದು ತಾನೇ,
ಸಿಮ್ಮಲಿಗೆಯ ಚೆನ್ನರಾಮಾ./60
ತನ್ನ ಮರೆವಂದವ ಶ್ರೀ ಗುರುವಿನ ವಚನದಿಂ ತಿಳಿದು ನೋಡಯ್ಯಾ,
ಪರಬ್ರಹ್ಮತಾನಾದಂದು ತನ್ನ ತಾ ಮರೆವೆ ನೋಡಯ್ಯಾ.
ಇದನರಿದು ಸುಖಿಯಾದಾತ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./61
ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ?
ತನ್ನ ರೂಪ ಕಂಡಡೆ ಸಾಲದೆ?
ಸದ್ಗುರು ಆವನಾದಡೇನೋ?
ತನ್ನನರುಹಿಸಿದಡೆ ಸಾಲದೆ?
ಸಿಮ್ಮಲಿಗೆಯ ಚೆನ್ನರಾಮಾ./62
ತಮ ತಮಗೆ ಜ್ಞಾತೃವಿಲ್ಲ ಜ್ಞಾನವಿಲ್ಲ ಜ್ಞೇಯವಿಲ್ಲೆನಲು
ಆರಿಗೆ ತೋರೂದೊ?
ಜಗವಿನ್ನಾರಿಗೆ ತೋರೂದೊ ನಿನ್ನ?
`ನಿಜಾನಂದಾನುಭಾವಸ್ಯ ಸರ್ವಸಾಕ್ಷಿಕ ಯೋಗಿನಃ’ ಎಂದುದಾಗಿ
ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ
ಜೀವನ್ಮನವೆ ಸರ್ವಸಾಕ್ಷಿಯಾಗಿ ನಿಲಬಲ್ಲಾತನೆ
ಸಿಮ್ಮಲಿಗೆಯ ಚೆನ್ನರಾಮ ತಾನೆ!/63
ತಾ ಸನ್ಮಾತ್ರನಾಗಿ ಅಸನ್ಮಾತ್ರನೆನಲುಂಟೆ?
ತಾ ಚಿನ್ಮಾತ್ರನಾಗಿ ಅಚಿನ್ಮಾತ್ರನೆನಲುಂಟೆ;
ತಾ ಸುಖರೂಪನಾಗಿ ಅಸುಖರೂಪನೆನಲುಂಟೆ?
ತಾ ನಿತ್ಯನಾಗಿ ಅನಿತ್ಯನೆನಲುಂಟೆ?
ತಾ ಪರಿಪೂರ್ಣನಾಗಿ ಅಪರಿಪೂರ್ಣನೆನಲುಂಟೆ?
ಏನೆಂಬೆನಂ್ಯಾ, ತತ್ವವನರಿಯದ ಮರುಳುಗಳ!
ತಿಳಿದು ನೋಡಿ ತಾನೆಂದು ಇದಿರೆಂದು ಏನೆಂದು ತೋರದ
ಸಚ್ಚಿದಾನಂದ ನಿತ್ಯ ಪರಿಪೂರ್ಣನು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./64
ತಾನಿದಿರೆಂಬುದೊಂದು ಮಾಯೆ ತೋರಿತ್ತಾಗಿ ತಾನಲ್ಲ.
ಈ ತೋರುವುದು ಉಳುಮೆ.
ಜ್ಞಾನಾನಂದ ತಾನೆಂಬುದನಾರೂ ಅರಿಯರಲ್ಲಾ!
ನೋಡಲೇನೂ ಇಲ್ಲವಾಗಿ ನಿಜಸಿದ್ಧ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ. /65
ತಾನೆ ದೇವನೆಂಬ, ತಾನೆಲ್ಲ ಬಲ್ಲೆನೆಂಬ
ತಾನೇ ಅಹಂಬ್ರಹ್ಮನೆಂಬ
ಏನುವನೂ ಸಲಿಸದಿಹನಯ್ಯಾ.
ಎನುವಲ್ಲದ ಹುಸಿಯನೆ ನುಡಿವ(ನ)
ಜ್ಞಾನಿಯೆಂತೆಂಬೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./66
ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು.
ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು.
ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ
ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ.
ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ
ಇಂತುಂಟೆಂದು ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./67
ತೃಷ್ಣೆಯ ಜೀವವೆಂಬ ಬೆಸುಗೆ ಬಿಡುವಲ್ಲಿ ವಶವಲ್ಲ ಅಸಾಧ್ಯ
ಬ್ರಹ್ಮಾದಿಗಳಿಗೆ ಆಳಿಗೊಂಡುದು ವಾಯು.
ವಾಯು ಕೇಳಿ ಅರಿವರನರಿವ ಮರಸಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಅವಧಾನ ಜನಿಸಿತ್ತಾಗಿ./68
ತೋರುವಡೆ ವಿಷಯವಾಗಿರದು,
ಅದು ಅರಿಯಬಾರದಾಗಿ ಅರಿಯಬಾರದು,
ಅರಿಯಬಾರದಾಗಿ ಹೇಳಬಾರದ,
ಹೇಳಬಾರದಾಗಿ ಕಾಣಬಾರದು.
ಅದು ಅತಕ್ರ್ಯ, ಅದು ನಿನ್ನಲ್ಲಿಯೆ ಇದೆ.
ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ.
ಅದನೇನೆಂಬೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./69
ತೋರುವುದೆಲ್ಲವ ಕಾಬಾತ ತಾನೆಂದು ನೋಡೆ
ತೋರುವುದ ಕಾಬವನು ಈ ತೋರಿಕೆಯೆ ಹುಸಿಯಾಗಿ
ಏನುವನೂ ಕಾಣದೆ ನಿಂದ ನಿಲುವು.
ಸಚ್ಚಿದಾನಂದಸ್ವರೂಪು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./70
ದರ್ಪಣದಿಂದ ತನ್ನನರಿದಾತ ಮತ್ತೆ
ದರ್ಪಣಕ್ಕೆ ಕಿಂಕರನಾಗಬೇಕೆ?
ಶ್ರುತಿಯಿಂದ ತನ್ನನರಿದಾತ ಮತ್ತೆ
ಶ್ರುತಿಗೆ ಕಿಂಕರನಾಗಬೇಕೆ?
ಹೇಳಾ, ಎಲೆ ಮರುಳೆ ಜಡಪಿಂಡವೆ!
ನೀನು ನಿರವಯ ನಿರ್ಗುಣ ನಿತ್ಯ ಪರಿಪೂರ್ಣನಹೆ.
ಈ ಸಿಮ್ಮಲಿಗೆಯ ಚೆನ್ನರಾಮನ
ಅರಿವಿನೊಳಗಡಗಿದಡೆ ಶ್ರುತಿಗತೀತನಹೆ./71
ದಶಪಂಚಕಳೆಯಿಂದ ಶಶಿಬಿಂದು ಉದಯವು.
ದಶಪಂಚವನು ನುಂಗಿ ದಶಪಂಚವನು ಉಗುಳಿತು.
ಅದರ ದೆಸೆಯನರಿಯದೆ ಹೋದರು.
ಅದು ಬೆಸಗೊಂಬವರಿಗೆ ತಾನು ವಿಷಮ.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ
ದೆಸೆಯನರಿಯದೆ ಹೋದರು./72
ದಾಸಯ್ಯನೆನಗೆ ಸಾಲೋಕ್ಯನಯ್ಯಾ,
ಚೆನ್ನಯ್ಯನೆನಗೆ ಸಾಮೀಪ್ಯನಯ್ಯಾ.
ಕಕ್ಕಯ್ಯನೆನಗೆ ಸಾರೂಪ್ಯನಯ್ಯಾ.
ಮಾಚಯ್ಯನೆನಗೆ ಸಾಯುಜ್ಯನಯ್ಯಾ.
ದಾಸಯ್ಯನೊಕ್ಕುದ ಕೊಂಡೆನು.
ಚನ್ನಯ್ಯನ ಮಿಕ್ಕುದ ಕೊಂಡೆನು.
ಕಕ್ಕಯ್ಯನುಂಡು ಮಿಕ್ಕುದ ಕಾದು ಕೊಂಡೆನು.
ಮಾಚಯ್ಯನ ಜ್ಞಾನಪ್ರಸಾದವ ಕೊಂಡೆನು.
ಪುರಾತರೊಳಗಾಗಿ ಬಸವಣ್ಣನ ಡಿಂಗರಿಗ
ಚನ್ನಬಸವಣ್ಣನ ಹಳೆಯನೆಂದು
ತಮ್ಮೊಕ್ಕುದನಿಕ್ಕಿ ಸಲಹಿದರು ಕಾಣಾ,
ಸಿಮ್ಮಲಿಗೆಯ ಚೆನ್ನರಾಮಾ./73
ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ
ಅನೇಕ ವ್ಯವಹಾರವಾದಂತೆ
ಜೀವನೆ ಜಗ, ಜಗವೆ ಜೀವನಾದ.
ಆದಿ ಅನಾದಿ ವಿಚಿತ್ರತರವಾದ ಮಾಯೆ.
ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ.
ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ.
ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ
ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು.
ಅದೆಂತೆಂದಡೆ: “ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ|
ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||’ ಎಂದುದಾಗಿ,
ಸಟೆಯ ಮಾಯೆಯ ಸಟೆಯೆಂದು
ಕಳೆದುಳಿದ ಧೀರ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./74
ದಿಟದಂತೆ ತನು ತನ್ನ ಹಾಂಗೆ ತೋರಿತ್ತಾಗಿ ದೃಷ್ಟ ದೋಷಭ್ರಾಂತಿ.
ಎನ್ನದಿಟದಂತೆ, ತನು ತನ್ನ ಹಾಂಗೆ ಇಂದ್ರಿಯಕ್ಕೆತೋರಿಹದಾಗಿ.
ದರ್ಶನದೋಷ ಭ್ರಾಂತಿಯೆಂದು ತಾನು ತಾನೆಂದು ತಾ
ನೆನೆಯದಿಹುದಾಗಿ.
ದೃಷ್ಟದೋಷ ಭ್ರಾಂತಿಯನೂಹಿಸಿ ಜೀವ ತನ್ನ ದಿಟವೆಂದುಬಗೆದಹನಾಗಿ.
ತಾನೇನೂ ಎನ್ನ ಕನಸಿನ ಹಾಂಗೆ.
ಭ್ರಾತಿಯೇನನೂ ಭೂತಸಾದೃಶ್ಯವನೂತಿಳಿದಂದು ನಿಜಗುಣ.
ಈ ನಿಜದಲ್ಲಿ ಅರಿದಾಗ ಭೇದವೇನೂ ಇಲ್ಲವಾಗಿ
ನಿರ್ಮಾಯ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./75
ದೃಶ್ಯವ ಕಾಬ ದೃಷ್ಟನಾರೋ ಎಂದಡೆ
ದೃಶ್ಯ ದೃಷ್ಟಗಳನರಿವ ಅರಿವದು
ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ.
ಅದೃಶ್ಯಭಾವ ದೃಷ್ಟಿ ಚಿನ್ಮಯ
ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./76
ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ,
ಕಾಲಕರ್ಮವಿಲ್ಲದಲ್ಲಿಂದತ್ತತ್ತ,
ಮಾಯಾಮೋಹವಿಲ್ಲದಲ್ಲಿಂದತ್ತತ್ತ,
ಏನೂ ಏನೂ ಇಲ್ಲದಲ್ಲಿಂದತ್ತತ್ತ,
ಆದಿಮೂವರಿಲ್ಲದಲ್ಲಿಂದತ್ತತ್ತ,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದಲ್ಲಿಂದತ್ತತ್ತ!/77
ನಡೆಯೊಂದು ನುಡಿಯೊಂದು ಪರಿಯುಳ್ಳವ ತತ್ತ್ವವಿದನಲ್ಲ.
ಜಡಮತಿ ತನ್ನ ನಗುವವರನರಿಯ.
ಕರ್ಮವಿಲ್ಲ, ಭಕ್ತಿ ಜ್ಞಾನವಿಲ್ಲೆಂಬ,
ಒಮ್ಮೆಯೂ ವೈರಾಗ್ಯ ತನ್ನಲಿಲ್ಲ.
ಎಕ್ಕಸಿಕ್ಕರ ಪರಿಯಾಯದವದ್ವೈತಿ, ವಿಕಳ.
ಅಕ್ಕಟಕ್ಕಟಾ! ಎರಡರಿಂದಲೂ ಕೆಟ್ಟರು ನೋಡಾ!
ಸಿಮ್ಮಲಿಗೆಯ ಚೆನ್ನರಾಮನ ನಿಜವನರಿಯದೆ./78
ನಾಯ ಕುನ್ನಿಯ ಕಚ್ಚಬೇಡ, ಬಗುಳಬೇಡವೆಂದಡೆ ಮಾಣ್ಬುದೆ?
ಹಂದಿಯನಶುದ್ಧವ ತಿನಬೇಡ, ಹೊರಳಬೇಡವೆಂದಡೆ ಮಾಣ್ಬುದೆ?
ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ?
ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./79
ನಿಚ್ಚ ಕನಸಿನಲ್ಲಿ ಅಶ್ವಮೇಧ ಬ್ರಹ್ಮಹತ್ಯವ ಮಾಡಿದಡಂ
ಎಂತು ನಡೆದಡಂ ದೇವದತ್ತಂಗೆ ಗುಣದೋಷವುಂಟೆ?
ಸ್ವರ್ಗನರಕವುಂಟೆ ಹೇಳಾ? ಅದೆತ್ತಣ ಮಾತೊ!
ಕನಸು ತಾ ಮಿಥ್ಯೆಯಪ್ಪುದರಿಂ ಮಾಯಾಮಯ.
ಈ ಮಾಯೆಯನರಿದು ಹುಸಿ ಜೀವಭಾವದಿಂದ
ಏನ ಮಾಡಿದಡೇನೋ ಸಿಮ್ಮಲಿಗೆಯ ಚೆನ್ನರಾಮಾ./80
ನಿಚ್ಚ ನಿಚ್ಚ ಮುಟ್ಟಿ ನಿಚ್ಚ ನಿಚ್ಚ ಅಗಲುವದ ಕಂಡು
ನಾಚಿತ್ತಯ್ಯಾ ಎನ್ನ ಮನ, ನಾಚಿತ್ತು.
ಸಂದಿಲ್ಲದಲ್ಲಿ ಸಂದ ಮಾಡಿದರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಸಂಸಾರ ಸಂಬಂಧಿಗಳು./81
ನಿಜದಿಂದ ಕ್ಷತ್ರಿಯನೆಂದು
ನಿಜವನರಿಯದ ಕರ್ಣನ ವ್ಯಾಧಭಾವ ಬಿಡದಂತೆ
ತಾನು ತನ್ನ ನಿಜವನರಿದಡೂ
ಜಾತಿಯಾಶ್ರಮ ಗುಣಧರ್ಮ
ಜೀವಾದಿ ಭೇದಂಗಳೊಳಗಾದ
ಮಾಯಾ ಮಯಂಗಳೆಂಬ ಮುನ್ನಿನ ಭ್ರಮೆಗಳ
ಬಿಡಲರಿಯದ ಬಡ ಮನುಜರೆಲ್ಲರೂ
ನಿಜಗುಣನ ನಿಜಭಾವದಲೂ ನಿಲ್ಲದವಂಗೆ
ನಿಜಸುಖವು ಸಾಧ್ಯವಪ್ಪುದೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ./82
ನಿಜವಸ್ತುವೊಂದೆ,
ಎರಡಾಗಬಲ್ಲುದದೊಂದೆ,
ಬೇರೆ ತೋರಬಲ್ಲುದದೊಂದೆ,
ತನ್ನ ಮರೆಯಬಲ್ಲುದದೊಂದೆ,
ಆ ಮರವೆಯ ಬಲ್ಲುದದೊಂದೆ,
ತಾನಲ್ಲದನ್ಯವಿಲ್ಲೆಂದರಿದರಿವು ತಾನೇ,
ಸಿಮ್ಮಲಿಗೆಯ ಚೆನ್ನರಾಮಾ./83
ನಿತ್ಯ ಪರಿಪೂರ್ಣನೆಂದು ಪ್ರತ್ಯಕ್ಷ ಶ್ರುತಿ ಸಾರುತ್ತಿರಲು
ಮತ್ತೆ ಪರಿಭಾವಿಸಲೇನುಂಟು ಹೇಳಾ?
ಕರೆದಡೆ ಬಂದಿತ್ತು, ಕಳೆದಡೆ ಹೋಯಿತ್ತು.
ಎಂಬ ಕರ್ಮಕೌಟಿಲ್ಯದಲ್ಲಿ ಬಂದವನಲ್ಲ.
ಪ್ರತಿ ವ್ಯತಿರಿಕ್ತ ಗತಿ ಬಿಡದು.
ಸಿಮ್ಮಲಿಗೆ ಚೆನ್ನರಾಮನೆಂಬ ಲಿಂಗವು
ಜಡರುಗಳಿಗೆಲ್ಲಿಯದೊ?/84
ನಿರವಯ ನಿರ್ಗುಣ ಪರಿಪೂರ್ಣದ್ವಯನಾಗಿ
ಕಾ ಎಂಬ ಕರ್ಮವಿಲ್ಲ ಮ ಎಂಬ ಮಂತ್ರವಿಲ್ಲ,
ಏನೂ ಇಲ್ಲ ನಿನ್ನಲ್ಲಿ.
ನೋಡುವಡೆ ನಿಜಗುಣ ನಿಜತತ್ವ ನೀನೇ
ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ./85
ನಿರಾಚರಣ ನಿರ್ಜನಿತ ನಿರ್ಲೆಪ
ನಿಃಕಪಟಿ ನಿರ್ವಚನೀಯನುಪಮಿಸಲಿಲ್ಲ ನಿಲ್ಲೋ!
ನಿರಾಳ ನಿರ್ಮಾಯ ನಿಸ್ಸಂಗಿ ನಿರ್ಲಿಖಿತ
ನಿರವಯನ ಅವಯವಕ್ಕೆ ತರಲಿಲ್ಲ ನಿಲ್ಲೋ!
ಸಿಮ್ಮಲಿಗೆಯ ಚೆನ್ನರಾಮನೆಂಬ
ಜಂಗಮಲಿಂಗವನು ಉಪಮಿಸಲಿಲ್ಲ ನಿಲ್ಲೋ!!/86
ನೀನಲ್ಲದುದ ನೀನೆಂಬೆ,
ನಿನಗಿಲ್ಲದುದ ನಿನ್ನದೆಂಬೆ,
ನೀನಲ್ಲದುದಿನ್ನಿಲ್ಲ ಕಾಣಾ!
ನಿನಗೇನೂ ಇಲ್ಲ, ಅಹಂಮಮತೆಯ ಬಿಟ್ಟು ನೋಡಾ,
ನೀನೇ ಸಿಮ್ಮಲಿಗೆಯ ಚೆನ್ನರಾಮಾ./87
ನೆನೆದೆನೆಂಬಲ್ಲಿ ಎನ್ನ ಮನದಿಂದ ತೊಲಗಿಪ್ಪನೆ?
ಅರಿದೆನೆಂಬಲ್ಲಿ ಎನಗೆ ಆತಗೆ ಕಂಡರಿತವುಂಟೆ?
ಇಲ್ಲದ ಮಾತ ತಂದು ಅಲ್ಲಲ್ಲಿ ಆಡುವಿರಿ!
ನಿಮ್ಮಬಲ್ಲತನಕ್ಕೆ ನಾನಂಜುವೆ ಕಾಣಿರೊ!
ಸಲ್ಲದು! ನಿಮ್ಮ ಮಾತು ನಿಲ್ಲಲಿ!
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು
ನಾನೆ ಕಾಣಾ! ಜಡನೆ!/88
ನೆನೆವಾಗ ತನ್ನ ಮನದಿಂದಗಲಿಪ್ಪನೆಂಬಲ್ಲಿ
ಎನಗೆಯೂ ಆತ್ಮಂಗೆಯೂ ಕಂಡರಿವ ಠಾವುಂಟೆ?
ಇಲ್ಲದ ಮಾತ ಕೊಂಡುಬಂದಲ್ಲಲ್ಲಿಗೆ ಒಡವಿರಿಸಲ್ಲದದು.
ನಿಮ್ಮ ಬಲ್ಲತನಕ್ಕಾನಂಜುವೆ ಕಾಣಿಭೋ!
ಸಿಮ್ಮಲಿಗೆಯ ಚೆನ್ನರಾಮನೆಂಬ
ಲಿಂಗವಿಲ್ಲದವರಿಗಿಲ್ಲ ಬರುಮಾತೇನು./89
ನೇಣ ಹಾವೆಂದು ಬಗೆದವನಂತೆ
ಇದೇ ಹಾದಿ ಆನೆಂದು ಬಗೆದು
ತನ್ನ ಭ್ರಮೆಯಿಂದ ಇಲ್ಲದ ಸಂಸಾರದ ಸಕಲ
ದುಃಖಕ್ಕೊಳಗಾದರಯ್ಯಾ.
ಆ ಭ್ರಮೆಯ ಹುಸಿಯೆಂದು ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./90
ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ
ಹಾವಿನಲ್ಲಿನೇಣು ಉಂಟಾಗಬಲ್ಲುದೆ ಹೇಳಾ?
ಶಿವನಿಂದನ್ಯವೇನೂ ಇಲ್ಲೆಂದು ಬೋಧಿಸುವಂಗೆ
ತನು ಕರಣೇಂದ್ರಿಯ ಶಬ್ದಾದಿ ವಿಷಯ
ಸಂಸಾರ ಸುಖದುಃಖಗಳಾಗಬಲ್ಲವೆ?
ಇಲ್ಲದುದ ಕಂಡೆ, ಉಂಟೆಂಬುದತರ್ಕ
`ನೇಹನಾ ನಾಸ್ತಿಕಿಂಚನ, ಏಕಮೇವ ನಿರಂತರಂ’ ಎಂದುದು ವೇದ.
ಶಿವನಿಂದನ್ಯವೇನೂ ಇಲ್ಲ ಎಂದರಿದರಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./91
ನೋಡಿದಡೆ ಕಾಣಬಾರದು,
ನೋಡದಿರ್ದಡೆ ಕಾಣಬಹುದು; ಇದು ಸೋಜಿಗ!
ಸತ್ತಲ್ಲ ಅಸತ್ತಲ್ಲ; ಅದು ತಾನೆ ಮಾಯೆ; ಹುಸಿ.
ಅಹಿ ರಜ್ಜುವಿನಿಂ ನೋಡಿದ ನೋಟ ತಾನೆ,
ಸಿಮ್ಮಲಿಗೆಯ ಚೆನ್ನರಾಮಾ!/92
ಪಂಚಭೂತದ ಸೂತಕದ ಬಳಿವಿಡಿದು
ಪ್ರಜ್ವಲಿಸುವ ಆತ್ಮಜ್ಯೋತಿಯೆಂಬ ಮಾತಿನೊಳಗಲ್ಲ.
ನಾದ ಬಿಂದು ಕಳಾತೀತನೆಂದು ನುಡಿವರು.
ಹೆಸರಿಲ್ಲದ ಬಯಲ ತಮ್ಮ ತಮ್ಮ ಮುಖಕ್ಕೆ ಹೆಸರಿಟ್ಟು
ತಮ ತಮಗೆ ಕರತಳಾಮಳಕವೆಂಬರು.
ಅದರಾದಿಯಂತ್ಯವನರಿಯರು
ಎಂತು ಬಲ್ಲರು ಸಿಮ್ಮಲಿಗೆಯ ಚೆನ್ನರಾಮನೆಂಬ
ಶಬ್ದ ಉದ್ದೇಶಿಗಳು?/93
ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲ
ಅಷ್ಟದಿಕ್ಕುಗಳೆಂಬವರೊಳಗಿಲ್ಲವಣ್ಣಾ.
ಗಗನಮಂಡಲದೊಳಗೆ ಬೆಳಗುವ
ರವಿಶಶಿಗಳುದಯದ ಬಳಿವಿಡಿದು ಸುಳಿವವರೊಳಗಲ್ಲ.
ಅಂತಿಂತಾಗದ ಮುನ್ನ ಇನ್ನೇನೂ ಇಲ್ಲ.
ಬೆಸಗೊಂಬಡೆ ಹೇಳುವೆ.
ನಿನ್ನ ವಶಕ್ಕೆ ಬಾರದು ಕೇಳು,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿಲ್ಲ,
ಬರಿಮಾತೇನು?/94
ಪಂಚೇಂದ್ರಿಯವೆಂಬ ಪಾಪಿಯ ಕೂಸು
ಸಂತವಿಡೆ ಸಂತವಿರದು ನೋಡಾ!
ಮುದ್ದಾಗಿ ಮರೆಸಿ ಬುದ್ಧಿಯ ನುಂಗಿತ್ತು.
ಹುಸಿಯ ನೇವರಿಸಿ ಮಸಿಮಣ್ಣ ಮಾಡಿತ್ತು.
ಸಿಮ್ಮಲಿಗೆಯ ಚನ್ನರಾಮನಲ್ಲಿ
ಲಿಂಗಸಂಗಿಗಳಲ್ಲದವರ./95
ಪಡುವಣ ಹೆಣ್ಣ
ಮೂಡಣ ಮಣ್ಣ
ತೆಂಕ ಬಡಗಲ ಹೊನ್ನ
ಆಳುವ ಚಾಂಚೆಳಸಂಚೂರ ಪಂಚಾನನನ ಸಂಚಿಗವ…
ಸಿಮ್ಮಲಿಗೆಯ ಚೆನ್ನರಾಮನೊಲ್ಲ./96
ಪರಮಂಗೆ ಪ್ರಕೃತಿಯ ಸಂಗದಿಂದ ಜೀವಭಾವ.
ಆ ಜೀವಂಗೆ ಅಂಗನೆಯರ ಸಂಗದಿಂದ
ರೌರವ ನರಕದಿಂದ ದುಃಖ ಹೇತು.
ದುಃಖಹೇತುವಿನಿಂದ ನಾನಾ ಯೋನಿಯ ಜನನ.
ಇದು ಕಾರಣ ನಾನಾ ಯೋನಿಯಲ್ಲಿ ಜನಿಸುವ
ಪ್ರಕೃತಿಯ ಸಂಗ ಬಿಡದವಂಗೆ ಮುಕ್ತಿಯೆಲ್ಲಿಯದು
ಸಿಮ್ಮಲಿಗೆಯ ಚೆನ್ನರಾಮಾ?/97
ಪರಮಾತ್ಮನ ಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ.
ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ತ.
ಅಂತಪ್ಪ ಜೀವಾಂತರಾತ್ಮಾದಿಗಳು ಅಂಗ ಪ್ರಾಣವಾದಲ್ಲಿಒಂದೆಯೆನಿಸಿದರು.
ಆ ಒಂದೆಯೆಂಬ ತಾಮಸ ಜೀವನು
ಅಂಗನೆಯರ ಸಂಗ ಮೊದಲಾದ ನಾನಾ ದುಃಖಗಳಲ್ಲಿ ನೋವುತ್ತ,
ನಾನಾಯೋನಿಗಳಲ್ಲಿ ಜನಿಸುತ್ತ,
ರೌರವ ನರಕ ಆಳುತ್ತಮುಳುಗುತ್ತಲಿಹನು.
ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು
ನಾಹಂಎನ್ನದೆಸೋಹಂಎನ್ನುತ್ತ
ಸಿಮ್ಮಲಿಗೆಯಚನ್ನರಾಮನೆಂಬ ಅಖಂಡ ಲಿಂಗದೊಳಗೆ ನಿತ್ಯತ್ವವನೆಯ್ದಿ
ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು./98
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು
ಪಂಚ ಮಹಾಭೂತಂಗಳು.
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬಿವು
ಪಂಚಪ್ರಾಣವಾಯುಗಳು.
ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬಿವು
ಪಂಚಕರ್ಮೆಂದ್ರಿಯಂಗಳು.
ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬಿವು
ಪಂಚಜ್ಞಾನೇಂದ್ರಿಯಂಗಳು.
ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ಅಂತಃಕರಣ
ಚತುಷ್ಟಯಂಗಳು.
ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ದೇಹವಾಯಿತ್ತು.
ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ|
ಚತುರ್ವಿಂಶತಿದೇಹಾನಿ ಸಾಂಖ್ಯಶಾಸ್ತ್ರವಿದೋ ವಿದುಃ||
ಎಂದುದಾಗಿ, ಇಂತೀ ಇಪ್ಪತ್ತನಾಲ್ಕು ತತ್ತ್ವಂಗಳು ಕೂಡಿ
ಚೇಷ್ಟಿಸುವಾತನೇ ಜೀವಾತ್ಮನು.
ಅದೆಂತೆಂದಡೆ: ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ|
ಆತ್ಮಾ ಷಡ್ವಿಂಶಕಶ್ಚೈವ ಪರಾತ್ಮಾ ಸಪ್ತವಿಂಶಕಃ||
ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ|
ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ
ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್
ಇಂತೆಂದುದಾಗಿ ಇಂತೀ ಪಂಚವಿಂಶತಿ ತತ್ತ್ವಂಗಳುತ್ಪತ್ತಿಯು
ನಿಮ್ಮ ನೆನಹುಮಾತ್ರದಿಂದಾದವಾಗಿ
ಇವರ ಗುಣಧರ್ಮಕರ್ಮಂಗಳು ನಿಮಗಿಲ್ಲ ನೋಡಾ,
ಸಿಮ್ಮಲಿಗೆಯ ಚೆನ್ನರಾಮಾ./99
ಪ್ರಾಣ ಪ್ರಾರಂಭ ಪ್ರಾರಬ್ಧವಿಲ್ಲಾಗಿ
ಪರಚಿಂತೆ ಪರಬೋಧೆಯ ಪರಿಚಿತನಲ್ಲ.
ಉಸಿರ ಬೀಜದ ಹಸಿಯ ಬಣ್ಣದ ವಶವಿದನಾಗಿ, ವಶಗತನಲ್ಲ.
ನಿರಂತರ ಸ್ವತಂತ್ರ ಶರಣನು,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಶಬ್ದಮುಗ್ಧವಾಗಿ./100
ಫಣಿ ತನ್ನ ಹೆಡೆಯ ಮಣಿಯ ಕಂಡಹರೆಂದು ಕತ್ತಲೆಗೋಡಿತ್ತಯ್ಯಾ.
ಬಳಿ ಬಳಿಯಲ್ಲಿ ಬೆಳಗು ಬರುತ್ತಿರಲು
ತಾನಡಗುವ ಠಾವಿನ್ನೆಲ್ಲಿಯಯ್ಯಾ?
ತನ್ನರಿವಿನ ಕುರುಹಳಿಯದನ್ನಕ್ಕ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆಲ್ಲಿಯದಯ್ಯಾ?/101
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು
ನಾಲ್ಕೂ ದೆಸೆಯಲಟ್ಟುತ ಬರೆ
ಕಂಡು ಭಯದಿಂದ ಹೋಗ ದೆಸೆಯಿಲ್ಲದೆ
ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ
ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ
ಜೇನುಹುಳು ಮೈಯನೂರುವಾಗ
ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ
ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ
ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ
ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ
ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು
ನಿರ್ವಿಷಯನಾಗಿ ನಿಂದ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./102
ಬಲುಹಾಗಿ ತತ್ವವಡಸಿದಾತ ಸತ್ತನೆ?
ಕರಗುವ ತತ್ಪುಂಜನೆಯ ಕರಣವ ತಪ್ಪಿಸಿ ಪ್ರವೇಶಿಸುವಾತ
ಸಂಚರಿಸುವ ತದ್ಬ ್ರಮೆಯಿಂದ ಬಯಲ ಕರಣಂಗಳಿಗೆಡೆಗೊಡುವ ಕತದಿಂ
ಪಂಚಮಹಾರೂಪನ ಅಹಂಭಾವದ ಜೀವನಿಂದ
ರಾಗಾದಿ ಮಲತ್ಯಾಗದಿಂದ, ಸಕಲ ಕರಣ ವ್ಯಾಪಾರದಿಂದ,
ಉತ್ತುಂಗ ಪದೋನ್ನತಿಯಿಂದ ಸಮವೆನೆ,
ಕರಣದೊಳಿಪ್ಪರಿವಿಂದೆ ಚೇಷ್ಟಿಸುವನಾಗಿ ಪ್ರಾಣಾದಿರೂಪನು.
ತಾ ನುಡಿದುದ ತಾನೆ ಕೇಳುವ, ಲೇಸೆಂಬುದ ಹಿಡಿವ,
ಮುಂದೆ ನೇತಿಗತಿಯ ಕರಣಂಗಳ ಕಾಬ,
ಹೊಲ್ಲಹದವ ಬಿಡುತ್ತ ಸೇವಿಸುವ,
ಸ್ವಚ್ಛಾಂಗ ಸುಖವಾಸನೆಗೆರಗುವ,
ಕರ್ಮೆಂದ್ರಿಯದ ಬುದ್ಧೀಂದ್ರಿಯಾನಂದ
ತಾನೆಂಬುದನಾರೂ ಅರಿಯರಯ್ಯಾ!
ನೋಡಲೇನದ ನಿಶ್ಚಯಿಸಿ ನಾ ಬಲ್ಲೆನೆಂಬ ಆರಿದು ಮರೆಯದಂತೆ
ರೂಪನಪ್ಪಿ ಸೋಹಮೆಂಬುದು ಜೀವ.
ಇಂತಪ್ಪ ಸರ್ವದೃಷ್ಟವನೊಳಕೊಂಡು.
ಪಂಚವಿಂಶತಿಯಾಗಿ ತೋರುವ ತೋರಿಕೆಯೆಲ್ಲಾ
ಹುಸಿಯೆಂದರಿದರಿವು ನಿಜತತ್ವ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./103
ಬಲ್ಲೆವು ಬಲ್ಲೆವೆಂದೆಂಬರು,
ಬಯಲು ಭ್ರಮೆಗೆ ಬಳಲುತ್ತಿರ್ಪರು.
ಹಗಲುಗತ್ತಲೆ ಹಗಲುಗತ್ತಲೆ
ಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ.
ಬಲ್ಲವರನಲ್ಲೆನಿಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ
ನಾಮದೊಡಕು./104
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಉಪಹಾರ.
ಉಬ್ಬಸ ಉರಿಸುವುದೆ ಮೈಯಕ್ಕುವುದೆ?
ಅದೆಲ್ಲಿಯ ಮಾತು, ಹುಸಿ.
ಅದಲ್ಲ, ನಿಲ್ಲು ಎಲೆ ಜಡನೆ!
ಬೇರೆ ವಚಿಸಲಿಲ್ಲ,
ಸಿಮ್ಮಲಿಗೆಯ ಚೆನ್ನರಾಮನೆಂಬ ಶಬ್ದವಿತ್ತುಗಳಿಗೆ./105
ಬೆಳಗಿನ ಬೀಜ ಮಹಾಬೆಳಗು
ಕತ್ತಲೆಯನೊಳಕೊಂಡು
ಕಣ್ಣಿರೆವ ಪರಿಯ ನೋಡಾ!
ತಿಳಿವಡೆ ಬೆಳಗಲ್ಲ,
ಒಳಗೊಳಗೆ ಹೊಳೆವ ಕಳೆ ಇದೇನೊ!
ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು!
ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ
ಮಹಾಘನಲಿಂಗದಲ್ಲಿಯೆ ಕಾಲೂರಿ ನಿಂದ
ಪರಿಯನೇನೆಂಬೆ!/106
ಬೆಳಗಿನ ಬೀಜವಿಡಿದು ಬೆಳೆದ ಕತ್ತಲೆ,
ಆ ಕತ್ತಲೆವಿಡಿದು ಬೆಳೆದ ಮೂವರು,
ದೃಷ್ಟದ ನಷ್ಟವ ವಿತ್ತವೆಂದು ಹಿಡಿದುಕೊಂಡೈದಾರೆ
ಆದಿವಾಸದೊಳಗಣ ಹಿರಿಯರೆಲ್ಲರು
ಸಾಧಾರಣ ಸಾರತರಾಗಿಯೆ ಹೋದರು,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ
ನಿಜವನರಿಯದೆ./107
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ
ಮನುಷ್ಯ ಸ್ತ್ರೀ ಪುನ್ನಕಾದಿ ಜಾತಿಪ್ರತ್ಯಯಂಗಳು
ಬಾಲಭಾವದೊಳೆಂತಂತೆ.
ತನ್ನ ನಿಜವನರಿಯದವನು
ಕೋಹಂಭಾವ ನಾಹಂಭಾವ ಸೋಹಂಭಾವಾದಿ
ಸಕಲ ಹಂಕ್ರಿಯಾಗದುಃಖವಿಲ್ಲದ
ಅಜನ ಪ್ರಮೇಯಜ್ಞಾನ ಚಿನ್ಮಾತ್ರಯೆಂಬ
ಸುಖಸ್ವರೂಪ ತಾನೇ.
ಪರಮನೆಂಬ ನಿಜವನರಿದಾತ,
ಮರೆಯನೆಂತಿರ್ದದಂ ಎಂತು ನಡೆದಡಂತೆ ಸಂತ,
ಸಿಮ್ಮಲಿಗೆಯ ಚೆನ್ನರಾಮನಾಶ್ರಯದಲ್ಲಿರ್ದ ಪರಮಾರೂಢ.
ಆತನ ಸದ್ಬೋಧೆ ಅವನ ಮಂತ್ರದಿಂದ
ಕೇಳಿ ಶುದ್ಧರಾಗಿ ಬದುಕಿ./108
ಭಕ್ತರ ನಿರ್ಮಳ ಭಕ್ತಿ
ಏನೆಂದರಿಯದ ಯುಕ್ತಿಶೂನ್ಯನಪ್ಪ
ಅಹಂಕಾರಿ ಮರುಳನನೆಂತು ಗುರುವೆಂಬೆ?
ಪ್ರಕೃತಿಧರ್ಮವನಾತ್ಮಂಗೇರಿಸಿ ಕಾಬ
ಜಡ ನರನನೆಂತು ಗುರುವೆಂಬೆ?
ಭಾವಶುದ್ಧಿಯಾಗದೆ ಕೆಮ್ಮನೆ ತಪ್ಪುಗೊಂಬ
ಜಡ ನರನನೆಂತು ಗುರುವೆಂಬೆ?
ಶರಣರಲಿ ಗುಣದೋಷವನೇನುವರಸದೆ
ಸುಖವ ಮಾಡುವಾತನ ಗುರುವೆಂದು ನಂಬುವೆ
ಸಿಮ್ಮಲಿಗೆಯ ಚೆನ್ನರಾಮಾ./109
ಭ್ರಮೆಯ ಭ್ರಮೆಯೆಂದುದಾಗಿ ಬೆನ್ನಿಲ್ಲ ಬಸುರಿಲ್ಲ
ನೆಲೆಯಿಲ್ಲದ ಕಾರಣ ಮೇಲಿಲ್ಲಿನ್ನೆಂತೊ!
ಉಂಟೆಂಬುದು ಮುನ್ನವೆ ಗುಂಟಕ್ಕೆ ತರಲಿಲ್ಲ.
ಇಲ್ಲೆಂಬುದು ಮುನ್ನವೆ ಸೊಲ್ಲಿಂಗೆ ಯುಕ್ತಿ ಎಯ್ದದು.
ಹುಟ್ಟು ನಷ್ಟವಿಲ್ಲ; ದೃಷ್ಟವುಳ್ಳ ಮಾತು!
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲಿನ್ನೆಂತೊ!/110
ಮಣ್ಣ ಕಳೆದು ಮಡಕೆಯಿಲ್ಲ.
ಹೊನ್ನ ಕಳೆದು ತೊಡಿಗೆಯಿಲ್ಲಿ.
ತನ್ನ ಕಳೆದು ಜಗವಿಲ್ಲ; ತಾನೇ ತನ್ನಿಂದನ್ಯವಿಲ್ಲ.
ಸುಖ ದುಃಖ ಬಂಧಮೋಕ್ಷಗಳಿಲ್ಲದ
ನಾಹಂ ಎಂದೆನಲಿಲ್ಲ, ಕೋಹಂ ಎಂದೆನಲಿಲ್ಲ,
ಸೋಹಂ ಎಂದೆನಲಿಲ್ಲ.
ನುಡಿಗೆ ಎಡೆಯೆನಿಸಿ, ಏನೂ ಇಲ್ಲದ
ಸಚ್ಚಿದಾನಂದ ನಿತ್ಯಪರಿಪೂರ್ಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./111
ಮನದ ಬೆಸನ ಕಂಗಳಲ್ಲಿ ಗರ್ಭವಾಗಿ
ಕೈ ಪ್ರಸೂತೆಯಾದ ಪ್ರಪಂಚನೇನೆಂಬೆ?
ಮಾಡಿದಡಾಯಿತ್ತು, ಮಾಡದಿರ್ದಲ್ಲಿ ಹೋಯಿತ್ತು.
ನಚ್ಚದಿರು ನಿಶ್ಚಯವಲ್ಲ,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಸಂಸಾರಿ ನೀ ಕೇಳಾ!/112
ಮನದಿಂದ ಸಂಸಾರ ಸುಖದುಃಖ ಮಾಯಾಮಯ
ಈ ಮನದ ವಿಷಯದಲ್ಲಿ ಕೂಡಲೀಯದೆ ನಿಮ್ಮಲ್ಲಿ ನಿಲಿಸಿ
ಆ ಮನ ತಾನು ತನ್ನ ನಿಜದಲ್ಲಿ ನಿಂದು ನೋಡೆ
ಆ ನೋಡುವ ನೋಟ ಉಳಿದಂದು
ಉಳಿದ ಪರಮಾನಂದ ನೀನೇ,
ತಿಳಿದು ನೋಡಾ, ಸಿಮ್ಮಲಿಗೆಯ ಚೆನ್ನರಾಮಾ./113
ಮನರಥದ ಮೇಲೆ ನಿಂದುದ ಭೇದಿಸಬಾರದಯ್ಯ,
ಸರಶಬ್ದವಾದಿಗಳು ಹರಿಯಿತನರಿಯರಾಗಿ.
ಹರಿವಿರಂಚಿಗಳಿಗೆ ತುರ್ಯವೆಲ್ಲಿಯದೊ?
ತನುಮುಖದ ತನುಭಾವಿಗಳಿವರು.
ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ
ವಾಗದ್ವೈತವ ನುಡಿವರಲ್ಲದೆ ನಿಜವೆಲ್ಲಿಯದು?/114
ಮನವೇನ ಬಯಸಿತ್ತು
ಆ ಬಯಕೆಗಳನೇನು ಮನಕ್ಕೆ ಕುಡದೆ
ಅರಿವು ತಾನಾಗಿ ಸಂದೇಹವಳಿದು ನಿಂದ
ಸಕಲ ವಿಷಯಂಗಳ ಒಡಗೂಡದಾತ
ಸಿಮ್ಮಲಿಗೆಯ ಚೆನ್ನರಾಮ ತಾನೆ./115
ಮುಟ್ಟದ ಮುನ್ನವೆ ಹುಟ್ಟಿ
ಹೆತ್ತಲ್ಲಿ ಸತ್ತುದು ನೋಡಾ!
ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು.
ಆದಲ್ಲಿ ಹೋಯಿತ್ತು ನೋಡಾ!
ಹೋದಾದಲ್ಲಿ ನಿಂದಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವುಲಿಂಗೈಕ್ಯರಲ್ಲಿ./116
ಮುನ್ನವೆ ಮೂರರ ಹಂಬಲ ಹರಿದು
ಗುರು ಚರ ವಿರಕ್ತನಾದ ಬಳಿಕ
ಇನ್ನೂ ಮೂರರ ಜಿಹ್ವೆಯ ಹಂಬಲೇಕೆ?
ಆವಾವ ಜೀವಂಗಳು ತಮ್ಮವಲ್ಲದೆ ಮುಟ್ಟವಾಗಿ
ತೊಂಡ ಮಚ್ಚಿದ ಜೀವದನದಂತೆ,
ಊರೂರ ತಪ್ಪದೆ ಹರಿದು ಜೋಗಿಯ ಕೈಯ ಕೋಡಗದಂತೆ.
ಅನ್ಯರಿಗೆ ಹಲುಗಿರಿದು ವಿರಕ್ತನೆನಿಸಿಕೊಂಬ
ಯುಕ್ತಹೀನರ ಕಂಡಡೆ ಎನ್ನ ಮನ ನಾಚಿತ್ತು
ಸಿಮ್ಮಲಿಗೆಯ ಚೆನ್ನರಾಮಾ./117
ಮುನ್ನಿನ ಜನ್ಮದ ಭಕ್ತಿ ಹೋಯಿತ್ತಾಗಿ ಬಾರದು.
ಇನ್ನಹ ಜನ್ಮದ ಭಕ್ತಿ ಇಲ್ಲವಾಗಿ ಅದು ಬಾರದು.
ಇಂತೆರಡಿಲ್ಲಾಗಿ ಬೋಧಿಸಲಿಲ್ಲ.
ಈಗಲಿಷ್ಟಾಗಿಷ್ಟ ಮಿತ್ರ ಗುಣತ್ರಯ ಪ್ರಾರಬ್ಧಂಗಳು
ಭೋಗಿಸಿದಲ್ಲದೆ ಕೆಡವಾಗಿ ಶ್ರುತ್ಯಾನುಭವ ಸಿದ್ಧವಯ್ಯ.
ತ್ಯಾಗ ಸಮೇತ ಮಾಡಿ ಸಕಲ ಭೇದವನೇನನೂ ಹೇಳಲರಿಯ
ನಿಜಗುಣಯೋಗಿ ತಾನಾಗಿ ಸಿಮ್ಮಲಿಗೆಯ ಚೆನ್ನರಾಮನಾಥ
ಇವೆಲ್ಲವ ಕನಸೆಂದು ಹುಸಿ ಮಾಡಿದ./118
ಮೂದಲೆಯ ಮಾತು ಕೂದಲ ಕೀಲಿನಂತಲ್ಲದರಿಯಬಾರದು.
ಹೆಡತಲೆಯ ಮಾತು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಲಿಂಗಾನುಭಾವಿಗಲ್ಲದರಿಯಬಾರದು./119
ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ.
ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ.
ಹರಿ ಬ್ರಹ್ಮ ರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ.
ಹೋ! ಹೋ!! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಮಾಯಾಮರ್ಕಟ ವಿಧಿಯೇ!/120
ಲೋಕಗತಿ ಬೇರೆ ತನ್ನ ಗತಿ ಬೇರೆ ನಿಜಗುಣನಿಗೆ,
ಜಡಾಜಡ ಕರ್ಮಭೇದದಿಂದ
ಲೋಕಕ್ಕೆ ಜ್ಞಾನಿ ಮರುಳು
ಜ್ಞಾನಿಗೆ ಲೋಕ ಮರುಳು.
ಈ ಭಾವಭೇದವ ತಿಳಿಯಲರಿದು ನೋಡಾ, ವಿಪರೀತಗತಿ.
ನೋಡುವಡೆ ನಿಜಗುಣ ತಾನೇ,
ಸಿಮ್ಮಲಿಗೆಯ ಚೆನ್ನರಾಮಾ./121
ಲೋಕವ ತಾ ಹೇಸಿದ ಬಳಿಕ
ತನ್ನ ಲೋಕ ಹೇಸುವಂತಿರಬೇಕು.
ಲೋಕದ ಚಾರಿತ್ರ ಶೃಂಗಾರವ ತಾ ಹೇಸಿದ ಬಳಿಕ
ತನ್ನ ಚಾರಿತ್ರ ಶೃಂಗಾರವ ಲೋಕ ಕಂಡು ಹೇಸುವಂತಿರಬೇಕು.
ದೇಹಗುಣರಹಿತವಾದ ವಿರಕ್ತಿ
ಜ್ಞಾನಕ್ಕೆ ಇದೇ ಯುಕ್ತಿ.
ಈ ಯುಕ್ತಿಯ ತಿಳಿದಡೆ ಅದೇ ಮುಕ್ತಿ!
ಸಿಮ್ಮಲಿಗೆಯ ಚೆನ್ನರಾಮಾ./122
ವಸುಧೆಯೊಳಗುಬ್ಬಸವಾದ ಪ್ರಾಣಿಗಳನೆಲ್ಲ
ವಶಕ್ಕೆ ತಂದು ಕಾವ ಗೋವ
ಹೇಮ ಹೇಮಿಗಳೆಲ್ಲರು ನಾಮ ಡಾವಣಿಗಳಾದರು;
ವಿಧಿಗೆ ಬಲಿಯನು ತೆತ್ತಾಡುತಿರ್ಪರು
ಸಿಮ್ಮಲಿಗೆಯ ಚೆನ್ನಾರಾಮನೆಂಬ ಲಿಂಗದ
ಸೀಮೆಯೊಳಗೆಲ್ಲರು./123
ವಿಧಿ ನಿಷೇಧ ಜನನಿ ಜನಕ ಕುಲಗೋತ್ರ
ಜಾತಿ ಭೇದಾಭೇದ ಸ್ವರ್ಗನರಕಾದಿ ಭಯವೇನೂ ಇಲ್ಲ,
ಜಗವೇನೂ ಇಲ್ಲ.
“ಅತ್ರ ಪಿತಾ ಪಿತಾ ಭವತಿ ಮಾತಾ ಮಾತಾ
ಲೋಕಾ ಲೋಕಾ ದೇವೋದೇವ ವೇದೋವೇದ
ಬ್ರಾಹ್ಮಣೋ ಬ್ರಾಹ್ಮಣಶ್ಚಾಂಡಾಲೋ ಚಾಂಡಾಲಃ||’
ಎಂದುದು ವೇದ.
ಅದು ತಾನೆ ತನ್ನಿಂದನ್ಯವಿಲ್ಲ.
ತೋರುವ ತೋರಿಕೆಯೆಲ್ಲ ಮಾಯೆಯೆಂದರಿದು
ಜ್ಞಾನಾನಂದ ಪರಿಪೂರ್ಣ ತಾನೆಂದರಿದು
ನೀನಾಗಿ ನಿಂದ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./124
ವಿಧಿಯ ಮೀರಿ ಮೈದೋರುವ
ಮಂತ್ರ ತಂತ್ರ ಸಿದ್ಧರ ಕಾಣೆ.
ಕಾಲವಶ ಕರ್ಮವಶ ನಿಮ್ಮ ಮಂತ್ರ ತಂತ್ರ ಕಾವುದೆ?
ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ
ವಿಧಿ ಮುಟ್ಟುವನ್ನಕ್ಕ ವಿಜಯರಾಗಿ ಬದುಕಿರೊ./125
ವಿಷಮದಶ ಪದನವನು ವಶಕ್ಕೆ ತಂದು ನಿಲಿಸಿ
ಸುಷುಮ್ನ ಸುಸರದ ಊದ್ರ್ವಪಥವನರಿದೆವೆಂದು
ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ
ಶಶಿಯಮೃತವನುಂಡು ಸುಖಿಯಾದೆನೆಂಬರು.
ಇವರೆಲ್ಲರು ಉಪಾಧಿಯನರಿಯದೆ ಹೋದರು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಬಯಲದ್ವೈತವ ನುಡಿವರು./126
ವಿಷಯ ವಿರಕ್ತನಾಗಿ ದೃಢ ಭಕ್ತಿಯಿಂದ
ಸದ್ಗುರು ಚರಣಕ್ಕೆ ಶರಣಾಗತಿ ಹೊಕ್ಕು
ನಿರ್ಮಲನಾಗಿ ತತ್ಸನ್ನಿಧಿಯಲ್ಲಿ ನಿಂದು
ತನ್ನನರಿಯಲೆಂದು ಬಂದು,
ತಾನಾ ಅರಿವೆ ಮೈಯಾಗಿ,
ಅರಿಯೆ ನಾನೆನ್ನದೆಂಬ ಮರವೆಯನರಿವುದು.
ಸನ್ಮಾತ್ರ ತನು ತಾನಲ್ಲೆಂಬರಿವು ತಾನಲ್ಲವೆ?
ಚಿನ್ಮಯ ಚೋದ್ಯ ರೂಪನಲ್ಲವೆ?
ನಿರವಯ ನಿರ್ಗುಣ ತಾನೇತರಿಂದ
ನೋವವನಲ್ಲೆಂದನಲಾನಂದಮಯ.
ಮಿಥ್ಯೆಯಿಂ ಕೆಡುವುದು ಸಕಲ ಜಗವು.
ಸತ್ಯವೆನಗೆ ಕೇಡಿಲ್ಲೆಂದರಿಯಲು ನಿತ್ಯಪದ.
ಸರ್ವಭಾವ ಹುಸಿ ತೋರದೆ
ನಿಂದ ನಿಲವದು ಪರಿಪೂರ್ಣಸತ್ಯ, ನಂಬು,
ನಿನ್ನ ನೀ ತಿಳಿದು ನೋಡೆ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./127
ವೇದವಾವುದು, ವೇದ್ಯವಾವುದು?
ವೇದವಿಧಾನವಾವುದೆಂದರಿವವರು ನೀವು ಕೇಳಿರೆ!
ವೇದವೆಂಬುದು ಬರಿಯರಿವು.
ಮಹಾಲಿಂಗವನರಿದಾತನೆ ವೇದ್ಯನೆಂದು ಶಬ್ದಾದಿ ಸಕಲವಯ್ಯಾ.
ವೇದ ವೇದ್ಯರೂಪ ವೇದವಿದನು
ಸಿಮ್ಮಲಿಗೆಯ ಚೆನ್ನರಾಮಾ./128
ವ್ಯಾಸ ವಾಲ್ಮೀಕಿ ಶುಕನು
ಸುತಾಯ ದೇಹಭಾವವೆಂಬವರಿಗೆ ಜಾರಿಕೆ.
ಧಾರುಣಿಯ ಮೇಲಾದ ಪಾದವು ನಿಲ್ಲದು.
ಜಾರಿಕೆ ಅಳವುಗೆಟ್ಟಳವೆಯ ಆಳವೆಯು
ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತುಗಳಿಗೆ./129
ಶಬ್ದಾದಿ ಸಕಲ ವಿಷಯಗುಣಂಗಳ ನೀ ರಾಗ ವಿರಾಗಕಾರಣವಾಗಿ
ಮನಸಾದಿ ಕರಣೇಂದ್ರಿಯಂಗಳೊಳಗಾದ ಜೀವನ
ನಿವಾರಣೆಯ ಮಾಡಯ್ಯಾ.
`ನಿಜಾನಂದಾನುಭಾವಸ್ಯ ಸರ್ವಸಾಕ್ಷಿಯಾನ್ ಯೋಗನಾಂ’ಎಂದುದಾಗಿ,
ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ
ಜೀವನ ಮನವೆ ಸರ್ವಸಾಕ್ಷಿಯಾಗಿ ನಿಲ್ಲಬಲ್ಲಾತನೆ
ಸಿಮ್ಮಲಿಗೆಯ ಚೆನ್ನರಾಮ ತಾನೆ./130
ಶಾಂತಸುಖವಿರಲೊಲ್ಲದೆ ನೀನೇಕೆ ಭ್ರಮಿಸುವೆಯೊ?
ದೇಹಧರ್ಮ ಆರ ವಶವೂ ಅಲ್ಲ.
ದೇಹದಿಚ್ಛೆ ಪ್ರಾರಬ್ಧ ಉಂಡಲ್ಲದೆ ಹೋಗದು.
ತನುಧರ್ಮವಿಲ್ಲದಚಲ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./131
ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.
ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆ
ಕೊಟ್ಟಿಹೆನೆಂಬ ಶಬ್ದ ಅಳಿದರುಳಿಯಿತು./132
ಶಿವಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು.
ಶರಣೆನ್ನಲೊಲ್ಲದೀ ಮನವು;
ಆಗಿನ ಭಕ್ತಿಯನರಿಯದು,
ಬಾಗಿ ಶರಣೆನ್ನಲೊಲ್ಲದೀ ಮನವು.
ಆಳ್ದನೆಂದು ನಂಬಿಯೂ ನಂಬದಾಗಿ,
ಸಿಮ್ಮಲಿಗೆಯ ಚೆನ್ನರಾಮನೆನ್ನ ಕೇಡ ನೋಡಿ
ನಗುತೈದಾನೆ./133
ಸಂಕಲ್ಪವೆಂಬ ಸಂಕಲೆ ಹರಿಯಿತ್ತಲ್ಲಾ!
ಕಾಮವೆಂಬ ಕಂಭವ ಕಿತ್ತೀಡಾಡಿತ್ತಲ್ಲಾ!
ಮಾಯವೆಂಬ ಮಾವತಿಗನ ಮೀರಿತ್ತು
ಆಸೆಯೆಂಬ ಅಂಕುಶಕ್ಕೆ ನಿಲ್ಲದು.
ಮಾಯಾಪಾಶವೆಂಬ ಪಾಯದಳ ಅಂಜಿ ಓಡಿತ್ತು.
ಮದಗಜವೆಂಬ ಅನೆ ಅಳಿದ ಬಳಿಕ,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಆನೆ ಆನೆ ಎಂಬುದೇನೂ ಇಲ್ಲದೆ ಹೋಯಿತ್ತು./134
ಸಂಸಾರ ಮಾಯೆ ಅತಿದುಃಖ ಹೊಲ್ಲೆಂದು,
ಅತ್ಮಜ್ಞಾನದಿಂದ ನಿತ್ಯಸುಖಿಯಪ್ಪುದೆ ಲೇಸೆಂದು,
ಅರಿದವಂಗಾದ ಹೊಲ್ಲೆಹವೇನು?
ಇದನೊಲ್ಲದವಂಗಾದ ಲೇಸೇನು ಹೇಳಾ!
ಈ ದೇಹದಲುಣಬೇಡಿದ ಇಷ್ಟ ಕರ್ಮ ಇದಾವ ದೇಹಿಗೆ
ಮಾದುದೊ?
ನಿನ್ನ ನೀನೇ ಭಾವಿಸಿ ತಿಳಿದು ನೋಡಾ,
ಸಿಮ್ಮಲಿಗೆಯ ಚೆನ್ನರಾಮನಿಕ್ಕಿದ
ಸಂಸಾರದ ತೊಡಕು ಬಿಡಸಬಾರದು!/135
ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು,
ಅಟ್ಟುಂಡೆಹೆನೆಂದು ಒಲೆಯ ಬೂದಿಯ ತೋಡುವನ್ನಕ್ಕ
ಒಳಗೊಂದು ಕಿಡಿಯಿದ್ದು ಕೈಬೆಂದು
ಮರಗುವಂತಾಯಿತ್ತಲ್ಲಾ ಎನಗೆ!
ನಿಸ್ಸಂಸಾರಿಯ ಒಡಲೊಲೆಯ ಬೂದಿಯ ಕೆಣಕುವನ್ನಕ್ಕ
ಒಳಗೊಂದು ಸುಜ್ಞಾನವೆಂಬ ಕಿಡಿಯಿದ್ದು
ಎನ್ನ ಮನದ ಕೈ ಬೆಂದು ಹೃದಯ ಮರಗುತ್ತಿದ್ದೇನೆ.
ಇದಕ್ಕೆ ಶೀತಾಳಮಂತ್ರವುಂಟೆ ಅಯ್ಯಾ!
ಎನ್ನ ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ
ನಿಜಗುಣ ಶರಣೆಂಬುದೆ ಇದಕ್ಕೆ ಶೀತಾಳಮಂತ್ರ/136
ಸಂಸಾರವೆಂಬ ಹೇರಡವಿಯ ಅಂಧಕಾರದ,
ಜನ್ಮಪಥದ ಆಧಿವ್ಯಾದಿಗಳೆಂಬ ಗಿರಿದುರ್ಗ ಜಲದುರ್ಗಂಗಳ,
ಧನ ವನಿತೆ ವಿಷಯ ಮೃಗತೃಪ್ಣೆಯ ಬಳಿವಿಡಿದ
ರಾಗದ್ವೇಷದ ಕೊಳ್ಳೆದರಿಲುಗಳ,
ಖಗಮೃಗದ ಭಯದ,
ತಾಪತ್ರಯದ ಕಾಳುಗಿಚ್ಚಿನಲ್ಲಿ ಬೇವ ನರಗುರಿಗಳಾದ
ಸಾವ ಕೆಡುವ ಅಹಂಮಮತೆಯ ಹೊತ್ತು ನಡೆವ ಜೀವರಿಗೆ
ಭವಬಂಧನ ಹರಿದು ಗುರುಪದವಪ್ಪುದು
ನಿಜಗುಣನ ಶ್ರೀಪದವ ಶರಣುಗತಿ ಒಕ್ಕಡೆ, ನಿತ್ಯ ಸುಖಪೂರಿತ
ಸಿಮ್ಮಲಿಗೆಯ ಚೆನ್ನರಾಮ ತಾನಹ ನೆರೆ ನಂಬಿದಡೆ./137
ಸಕಲ ಸಂಸಾರದ ಆಸುರತೆಯನರಿದು, ಅಹಂಮಮತೆಯನಳಿದು,
ಲೇಸಿದು ಹೊಲ್ಲೆಹವಿದು, ತತ್ತ್ವವಿದು ಅತತ್ತ್ವವಿದೆಂದರಿದು
ಏನುವನು ಸಂಪಾದಿಸದೆ ನಿಜಸುಖ ನೀನೇ
ನಿಜಗುಣರೂಪಾಗಿರ್ದ ಸುಖಮುಖದ ಪಿಕದಂತೆ
ಮೌನಿಯಾಗಿ ನಿಂದ ನಿಲುವು ನೀನೆ ನಿಜಗುಣ,
ಸಿಮ್ಮಲಿಗೆಯ ಚೆನ್ನರಾಮಾ./138
ಸತ್ಯ ಜ್ಞಾನ ಪರಿಪೂರ್ಣಾನಂದ ಪರಮವಿದ್ಯೆಯದೇಕೊ?
ಜಡ ದುಃಖ ದೇಶಿಕ ಕಲ್ಪಿತ ಅಕಲ್ಪಿತ
ಅಲ್ಲಿ ಕಲ್ಪಿತ ಪರಮನ ಕಟ್ಟಿದ ನೋಡಾ,
ಪರಮ ಕಲ್ಪಿತನ ಕಟ್ಟಿದನೊ ಹೇಳಯ್ಯಾ.
ಅಲ್ಲಿ ಬಂಧವಾರಿಗೆ ಮೋಕ್ಷವಾರಿಗೆ ಹೇಳಯ್ಯಾ.
ನಿನ್ನಿಂದ ನಿನ್ನ ತಿಳಿದು ನೋಡು.
ತಥ್ಯಮಿಥ್ಯಗಳೊಂದನೊಂದು ಕಟ್ಟಲರಿದವೆ ಹೇಳು?
ಹುಸಿ ತೋರಿಕೆ ದಿಟತಾನೆ?
ಸಿಮ್ಮಲಿಗೆಯ ಚೆನ್ನರಾಮಾ./139
ಸನ್ಮಣಿ ಎಂತು ಹೊದ್ಧಿದಂತೆ ತೋರುತಿಪ್ಪುದು?
ನಿಜ ತನ್ನಂತೆ.
ಅನುಭವಿ ಅವರವರಂತೆ ತೋರುವ.
ತಾ ತನ್ನಂತೆ ಮತ್ತಾರಂತೆಯೂ ಆಗ.
ಸನ್ಮಾತ್ರ ಚಿನ್ಮಯ ಪರಮಾನಂದ
ತಿಳಿದು ನೋಡುವಡೆ ನಿಜಗುಣ ತಾನೇ,
ಸಿಮ್ಮಲಿಗೆಯ ಚೆನ್ನರಾಮಾ./140
ಸಮವೇದ್ಯನು ಮನವೇನ ಬಯಸಿತ್ತು?
ಆ ಬಯಕೆಯನೇನುವನು ಮನಕ್ಕೆ ಕೊಡದೆ
ಅರಿವು ತಾನಾಗಿ ನಿಮ್ಮ ಸಂದೇಹವಳಿದು ನಿಂದ
ಪರಮಾನಂದರೂಪು, ಸಕಲ ವಿಷಯಂಗಳ ಒಡಗೂಡದಾತ
ಸಿಮ್ಮಲಿಗೆಯ ಚೆನ್ನರಾಮಾ./141
ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ
ಆ ಸಮುದ್ರದೊಳಗೇ ಇಹವು.
ತೆರೆಗಳು ಬೇರೊಂದುದಕವೆ?
ನಿಮ್ಮಿಂದಲಾದ ಜಗವು ನಿಮ್ಮಲ್ಲಿಯೆ ಇದ್ದು
ನಿಮ್ಮಲ್ಲಿಯೆ ಅಡಗುವುದು.
ಬೇರೆ ಬೇರೆ ಕುಲವುಂಟೆ ಈ ಜಗಕ್ಕೆ?
ಅದೆಂತೆಂದಡೆ: ಬ್ರಹ್ಮಬೀಜಂ ಜಗತ್ಸರ್ವಂ ಬ್ರಹ್ಮಣೈವ ವಿವರ್ಧತೇ|
ಬ್ರಹ್ಮಣ್ಯೇವ ಲಯಂ ಯಾತಿ ಜಾತಿಭೇದಃ ಕಥಂ ಭವೇತ್||
ಇಂತೆಂದುದಾಗಿ,
ಕುಲವೂ ಇಲ್ಲ ಛಲವೂ ಇಲ್ಲ.
ಮರೆಯ ನುಡಿಯನೊಪ್ಪುವನೆ?
ಸಿಮ್ಮಲಿಗೆಯ ಚೆನ್ನರಾಮ, ಬಿಡು ಜಡನೇ./142
ಸರ್ವಂ ಖಲ್ವಿದಂ ಬ್ರಹ್ಮ’ ಎಂದುದು ವೇದ.
`ತ್ವಮೇವ ಬ್ರಹ್ಮ ನಾನ್ಯಾತೋಸ್ಮಿನ್’ ಎಂದುದು ವೇದ.
`ನಾನ್ಯಾತೋಸ್ಮಿನ್ ದೃಷ್ಟಾ’ ಎಂದುದು ವೇದ.
`ನಾನ್ಯತ್ ಕಿಂಚಿದ್ ವಿದ್ಯತೇ’ ಎಂದುದು ವೇದ.
`ನ ಕರ್ಮಣಾ ಲಿಪ್ಯತೇ’ ಎಂದುದು ವೇದ.
ತನ್ನಿಂದನ್ಯವೇನೂ ಇಲ್ಲವೆಂದರಿದರಿವು
ಸಚ್ಚಿದಾನಂದಸ್ವರೂಪಮಪ್ಪ ನಿಜವು ನೀನೆ,
ಸಿಮ್ಮಲಿಗೆಯ ಚೆನ್ನರಾಮಾ./143
ಸಾಕಾರಸ್ವರೂಪಿ ಸಂಗನಬಸವಣ್ಣ ನೋಡಾ.
ನಿರಾಕಾರಸ್ವರೂಪಿ ಚನ್ನಬಸವಣ್ಣ ನೋಡಾ.
ನಿರ್ವಯಲ ಪರವಸ್ತುಸ್ವರೂಪಿ ಪ್ರಭುದೇವರು ನೋಡಾ.
ಇಂತೀ ಮೂವರ ಕಾರುಣ್ಯಪ್ರಸಾದವ ಕೊಂಡು
ಮೀರಿದ ಘನವಾದೆನು ಸಿಮ್ಮಲಿಗೆಯಚೆನ್ನರಾಮನಲ್ಲಿ./144
ಸಾವು ತಡವಲ್ಲ, ನರಕ ದೂರವಲ್ಲ,
ಕೆಮ್ಮನೆ ಕೆಡಬೇಡ.
ವಿಷಯವ ಬಿಡು, ಗುರುಭಕ್ತಿಯ ನಂಬು ಸುಖಿಯಪ್ಪೆ,
ಸಿಮ್ಮಲಿಗೆಯ ಚೆನ್ನರಾಮಾ./145
ಸುರರಿಗೆ ನಿರಂತರ ಜಾಗ್ರ,
ಮರುಳುಗಳಿಗೆ ನಿರಂತರ ಸ್ವಪ್ನ,
ಅಚರಜೀವಿಗಳಿಗೆ ನಿರಂತರ ಸುಷುಪ್ತಿ,
ವರ ಯೋಗಿಗಳಿಗೆ ನಿರಂತರ ತುರ್ಯ.
ಸ್ಥೂಲ ಸೂಕ್ಷ ್ಮ ಕಾರಣವ ಪ್ರಾಪ್ತಿಸುವ ತನು
ತನ್ನ ಮಾಯಾತನುವಾಗಿ ಮಾಯೆ ತೋರುತ್ತಿಪ್ಪುದು.
ಸಕಲ ತನುರಹಿತ ನೀನೆಂದು
ಸಕಲ ಮಾಯೆ ಹುಸಿಯೆಂದು
ತನ್ನ ತನ್ನಿಂದರಿದ ಪರಮಾರೂಢ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./146
ಸ್ಥಾಣು ಚೋರರಜ್ಜುಸರ್ಪ ಮೃಗ ತೃಷ್ಣೆಕನಸು,
ಇಂದ್ರಜಾಲ ಗಂಧರ್ವನಗರವೆಂಬ ಭ್ರಮೆಗಳ
ಹುಸಿಯೆಂದರಿದವನು ಪ್ರಪಂಚ ಹೇಳಲರಿಯದಿರ್ದಡೆ ದಿಟವಪ್ಪುದೆ?
ವಿಚಾರಿಸಿ ನೋಡಲು ಜಗ ಹುಸಿ, ದಿಟ ತಾನೆಂದರಿದಾತನ ಅರಿವು
ಕೆಡಲರಿವುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ./147
ಹಂದಿ ಹೈನವಲ್ಲ! ಸಂಸಾರಿ ಜಂಗಮವಲ್ಲ
ಸಂಸಾರಿ ಜ್ಞಾನಿಗೂ ನಿರಾಭಾರಿ ಹೆಡ್ಡತನಕ್ಕೂ ಸರಿಯೆನ್ನಬಹುದೆ?
ಸಿಮ್ಮಲಿಗೆಯ ಚೆನ್ನರಾಮಾ!/148
ಹತ್ತರ ಹಸುಗೆಯಲಚ್ಚಾದ ಪರಿಗಳ
ನೀವೆತ್ತ ಬಲ್ಲಿರೊ!
ಗಣಿತದ ಗುಣತವ ನಾಲ್ಕು ಬಂದಡೆ ಖಳ
ಐದು ಬಂದಡೆ ನಂದಿ, ಆರಾದಡೆ ಜಾಗರ,
ಏಳರಲ್ಲಿ ತಿಗ,
ಇದು ಜಾಣರೆಂಬವರಿಗೆ ಕನ್ನಡ,
ಸಿಮ್ಮಲಿಗೆಯ ಚೆನ್ನರಾಮನೆಂಬ ಅಂಗದಲ್ಲಿ ಜೂಜುಕೊಳ್ಳದು./149
ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ
ನಡೆಯಲ್ಲಿ ಹಾವ ಕಂಡು ಮರಳುವ
ಗಾವಿಲತನವ ನೋಡಾ!
ತನ್ನಿಂದನ್ಯವೆಂದಡೆ ಭಿನ್ನ ವ್ಯತಿಕರವಾಯಿತ್ತು.
ತನ್ನ ಪರಮಾರ್ಥ ತನ್ನಲ್ಲಿ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ
ಮಾಯಾಮರ್ಕಟ, ಜಡವೆ!/150
ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು
ಬೆಂಬೀಳದಿರು ಮರುಳೆ!
ಮಾಯೆ ದಿಟಕ್ಕಿಲ್ಲ; ಇಲ್ಲದುದನೆಂತು ಕೆಡಿಸುವಿರೊ?
ತನ್ನನರಿದಡೆ ಸಾಕು.
ಅರಿದೆನರಿಯೆನೆಂಬುದು ಮಾಯೆ.
ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ./151
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ
ಇಲ್ಲದ ಶಂಕೆಯನುಂಟೆಂಬನ್ನಕ್ಕ
ಅದಲ್ಲಿಯೇ ರೂಪಾಯಿತ್ತು.
ಹೇಡಿಗಳನೇಡಿಸ ಕಾಡಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ./152
ಹುಸಿಯ ವ್ಯಾಧನು ನಿಜದಿಂದ ಕ್ಷತ್ರಿಯನೆಂದು ಬೋಧಿಸಲು
ಬೋಧೆ ದೊರಕೊಂಬುದಲ್ಲದೆ
ಎಲೆ ಕ್ಷತ್ರಿಯ ನೀ ವ್ಯಾಧನೆಂದು ಬೋಧಿಸಲು
ಬೋಧೆ ದೊರಕೊಂಬುದೆ ಹೇಳಾ!
ಜೀವ ಭೋಕ್ತೃ ನಿಜ ಪರಮನೆಂದೆನ್ನದೆ
ಪರಮನೆ ಹುಸಿ ಜೀವನೆ ದಿಟವೆಂದು ಬೋಧಿಸಲು
ಬೋಧೆ ದೊರಕೊಳ್ಳದು ನೋಡಾ!
ಜ್ಞಾತೃ ಜ್ಞಾನ ಜ್ಞೇಯಾದಿ ಜ್ಞಪ್ತಿ ಸುಖ ಪರಿಪೂರ್ಣನಲ್ಲ
“ಕೋಯಮಾತ್ಮಾನಾನೃತೋಸ್ತಿ ಯಸ್ಮಿನ್ನೇಕಮೇವಾ
ದ್ವಿತೀಯಂ ತತ್ವಮಸಿ’
ಎಂದುದು ವೇದ,
ಸಿಮ್ಮಲಿಗೆಯ ಚೆನ್ನರಾಮಾ./153
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ.
ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ.
ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ.
ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ.
ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ.
ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ.
ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವ
ಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ.
ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ.
ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ.
ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದ
ಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ.
ಸ್ಥಾವರವ ಜಂಗಮದೊಳಡಗಿಸಿ
ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ.
ಇದು ಕಾರಣ ನಿಜಗುಣನೆಂಬ ಮಹಾಜಂಗಮ
ನಿಜಾನಂದವೆಂಬ ಒಕ್ಕುಮಿಕ್ಕ ಘನಪ್ರಸಾದವ ಕೊಟ್ಟನಾಗಿ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನ
ಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ./154
ಹೆರದ ಮುನ್ನವೆ ಹುಟ್ಟಿ
ಹೆತ್ತಲ್ಲಿಯೆ ಸತ್ತುದು ನೋಡಾ!
ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು.
ಆದಲ್ಲಿ ಆಯಿತ್ತು, ಹೋದಲ್ಲಿ ಹೋಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗೈಕ್ಯವು./155
ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ.
ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ.
ನೆಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು?
ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ./156
ಹೊತ್ತುದ ಹುಸಿಮಾಡಲರಿಯದೆ ದುಃಖ ದುರ್ಮತಿ ಬಿಡದು.
ಮತ್ತೆ ಸಂಸಾರಿಯಲರಸಲದೇನುಂಟು?
ಜೀವನವೇನವನ ಜೀವನವೇನು?
ಪ್ರಾರಬ್ಧಕ್ಕೆ ಪರಿಯಾಯವ ಮಾಡಿ
ಬಿಟ್ಟಿಯ ನಡೆವನ ಜೀವನವೇನವನ ಜೀವನವೇನು?
ಆಗಮ ನಿಗಮವನರಿಯದೆ ನಿರ್ಬುದ್ಧಿ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಬಾಧೆಗೆ
ಭಾಜನವಾದವನ ಜೀವನವೇನು?/157