Categories
ಶರಣರು / Sharanaru

ಚಂದಿಮರಸ

ಅಂಕಿತ: ಸಿಮ್ಮಲಿಗೆಯ ಚೆನ್ನರಾಮ
ಕಾಯಕ: ಸುತ್ತೂರು ವೀರಸಿಂಹಾಸನದ ಅಧ್ಯಕ್ಷ

ಈತ ಬಸವಣ್ಣನವರ ಹಿರಿಯ ಸಮಕಾಲೀನ. ಕಾಲ ೧೧೬೦. ಕೃಷ್ಣಾನದಿ ತೀರದ ಚಿಮ್ಮಲಿಗೆ ಈತನ ಹುಟ್ಟೂರು. ಈಗ ಈ ಊರಿನಲ್ಲಿ ಇವರ ಸ್ಮರಣೆಗಾಗಿ ಪ್ರಾರ್ಥನಾ ಮಂದಿರವನ್ನು ಕಟ್ಟಿಸಲಾಗಿದೆ. ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ, ದೈವ, ಮಾಯೆ, ಅಜ್ಞಾನ ಈ ಮುಂತಾದ ವಿಷಯಗಳನ್ನು ಚಂದಿಮರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಸರಳವಾದ ಇವರ ವಚನಗಳು ತುಂಬಾ ಪರಿಣಾಮಕಾರಿಯಾಗಿವೆ. ತಮ್ಮ ಅರಿವೇ ತಮಗೆ ಗುರು. ಈ ಅರಿವನ್ನು ಪ್ರತಿಯೊಬ್ಬರು ಜಾಗೃತಗೊಳಿಸಿ ಬಾಳಬೇಕೆಂದು ಇವರ ವಚನಗಳಲ್ಲಿ ಮೂಡಿಬರುತ್ತವೆ.

ಇವರ ಗುರು ನಿಜಗುಣಯೋಗಿ ಇವರಿಂದ ದೀಕ್ಷೆ ಪಡೆದು ಬಸವ ಧರ್ಮದ ಸಂಸ್ಕಾರವನ್ನು ಪಡೆಯುತ್ತಾರೆ. ಆನಂತರ ವಚನಗಳನ್ನು ಬರೆದಿದ್ದಾರೆಂದು ತಿಳಿದುಬರುತ್ತದೆ. ಮೂಲತ: ಬ್ರಾಹ್ಮಣನಾಗಿದ್ದ ಈತ ಈ ಗುರುವಿನಿಂದ ದೀಕ್ಷೆ ಪಡೆದು ಶರಣನಾದ. ಅಂಕಿತ – ಸಿಮ್ಮಲಿಗೆಯ ಚೆನ್ನರಾಮ. ೧೫೭ (160) ವಚನಗಳು ದೊರೆತಿವೆ. ಅವುಗಳಲ್ಲಿ ಅರಿವು. ಆತ್ಮಜ್ಞಾನ, ಶರಣಸ್ತುತಿ, ಅನುಭಾವ ಕೆನೆಗಟ್ಟಿ ನಿಂತಿವೆ.

ಮನುಷ್ಯನಲ್ಲೇ ದೇವರಿದ್ದಾನೆ. ಸತ್ಯವನ್ನರಿತು, ಸಾಧನೆ ಮಾಡಿದರೆ ತಾನೇ ದೇವನಾಗುವನು. ಮಾನವನು ಶಿವಯೋಗ ಸಾಧನೆ ಮಾಡುತ್ತಾ ಕೊನೆಗೆ ಮಹಾಂತವನ್ನು ಹೊಂದಬಹುದು ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಇವರು ವಾಸ್ತವವಾದಿ, ಬದುಕನ್ನು ಪ್ರೀತಿಸಿದವರು, ಇರುವಷ್ಟು ದಿನ ಚೆನ್ನಾಗಿ ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡುತ್ತಾ, ಅವರ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದವರಾಗಿದ್ದಾರೆ.

ಸದಾಚಾರ, ಸದ್ಗುಣಿ, ಸಂಸಾರ ಮತ್ತು ಪಾರಮಾರ್ಥ ಎರಡನ್ನು ಸಮನಾಗಿ ಸ್ವೀಕರಿಸಿದವರು. ಸಂಸಾರಿಯಾಗಿದ್ದುಕೊಂಡೇ ಶರಣರಾಗಬಹುದು, ಮುಕ್ತಿಯನ್ನು ಪಡೆಯಬಹುದೆಂದು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಸಮಾಜದ ಓರೆ-ಕೋರೆಗಳನ್ನು ತಮ್ಮ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಇವರು ಮಹಾಮಹಿಮ, ವೀರ ಶಿವಶರಣರಾಗಿದ್ದು ಶರಣ ತತ್ತ್ವದ ಧ್ರುವತಾರೆಯಾಗಿ ಮಿಂಚಿದ್ದಾರೆ.