Categories
ವಚನಗಳು / Vachanagalu

ಘನಲಿಂಗದೇವನ ವಚನಗಳು

ಅಂಗದ ಮೇಲಕ್ಕೆ ಬಂದ ಆಚಾರಲಿಂಗದ ಹೊಲಬನರಿಯದೆ
ಕೈಲಾಸದ ಮೇಲಿಪ್ಪ
ಬಾಲಕೋಟಿಸೂರ್ಯಪ್ರಕಾಶವನುಳ್ಳ ಶಿವನನೊಲಿಸಬೇಕೆಂದು
ಒಂದು ವಸ್ತುವ ಎರಡಿಟ್ಟು ನುಡಿವ ಮಂದಮತಿಗಳು ನೀವು ಕೇಳಿರೇ.
ಮಹಾಮೇರುಪರ್ವತವೇ ಶರಣ.
ಆ ಶರಣನ ಸ್ಥೂಲತನುವೇ ರಜತಾದ್ರಿ.
ಸೂಕ್ಷ ್ಮತನುವೇ ಹೇಮಾದ್ರಿ.
ಕಾರಣತನುವೇ ಮಂದರಾದ್ರಿ.
ಈ ಮೂರುಪರ್ವತಂಗಳ ಅರಮನೆಗಳಲ್ಲಿ ನೆಲಸಿಪ್ಪ
ಶಿವನಾರೆಂದರೆ ನಿರಾಕಾರ ಶೂನ್ಯಬ್ರಹ್ಮವೇ.
ಶರಣನ ಕುರಿತು ಪಂಚಸಾದಾಖ್ಯಂಗಳನೊಳಕೊಂಡು
ಸಾಕಾರವಾಗಿ ಬಂದ ಇಷ್ಟಲಿಂಗವೇ[ಆ] ಶಿವನು.
ಗ್ರಂಥ : `ಜ್ವಲತ್ ಕಾಲಾನಲಾಭಾಸಾ ತಟಿತ್ ಕೋಟಿ ಸಮಪ್ರಭಾ|
ತಸ್ಯೋಧ್ರ್ವಾ ಚ ಶಿಖಾ ಸೂಕ್ಷಂ ಚಿದ್ರೂಪಾ ಪರಮಾ ಕಲಾ|
ಏವಂ ವೇದ ಕಲಾ ದೇವಿ ಸದ್ಗುರೋಶ್ಯಿಷ್ಯಮಸ್ತಕೇ
ಹಸ್ತಾಬ್ಜಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ
ವಪುರೇವಂ ಸಮುತ್ಪನ್ನಂ ತತ್ ಪ್ರಾಣಂ ಮಿಶ್ರಿತಂ ಭವೇತ್
ಯಥಾ ಗುರುಕರೇ ಜಾತಾ ಲಿಂಗ ಭಕ್ತಿದ್ರ್ವಿಭೇದಕಾ’
ಇಂತೆಂದುದಾಗಿ ಆ ನಿರಾಕಾರಬ್ರಹ್ಮನೇ ಶಿವನು.
ಆ ಶಿವನ ಧರಿಸಿಪ್ಪ ಶರಣನ ಕಾಯವೇ ಕೈಲಾಸ.
ಇದಲ್ಲದೆ ಮತ್ತೊಂದು ಕೈಲಾಸ
ಬೇರೊಬ್ಬ ಶಿವನುಂಟೆಂದು ಭ್ರಮೆಗೊಂಡು
ಮನವನೆರಡು ಮಾಡಿಕೊಂಬುದು ಅಜ್ಞಾನ ನೋಡಾ.
ಉರದ ಮಧ್ಯದಲ್ಲಿ ಒರಗಿಪ್ಪ ಗಂಡನಂ ಬಿಟ್ಟು
ಇನ್ನು ನೆರೆಮನೆಯ ಗಂಡರಿಗೆ ಮನವನಿಕ್ಕುವ
ಹಾದರಗಿತ್ತಿಗೆ ಪತಿಭಕ್ತಿಯೆಲ್ಲಿಯದೋ?.
ಶ್ರೀಗುರು ಕರುಣಿಸಿಕೊಟ್ಟ ಕ್ರಿಯಾಲಿಂಗವನು
ಅರ್ಚನೆ ಪೂಜನೆಯಿಂದ ಅರ್ಪಿತಾವಧಾನದಿಂದ
ಧ್ಯಾನ ಧಾರಣದಿಂದ ಸಮತೆ ಸಮಾಧಾನದಿಂದ
ಧ್ಯಾನ ಮೌನ ಉಪಾವಸ್ಥೆಯಿಂದ
ಮುನಿಸು ಮೂದಲೆಯಿಂದ ಕಾಮಿಸಿ ಕಂಬನಿದುಂಬಿ
ಕರಸ್ಥಲದಲಿಪ್ಪ ಪ್ರಾಣೇಶ್ವರನ ಶ್ರೀ ಚರಣಕ್ಕೆ
ಲಲಾಟ ಪೂಜೆಯ ಮಾಡಿ
ಒಲಿಸಿ ಒಡಗೂಡಿ ನಿಜಮುಕ್ತಿವಡೆಯದೆ
ಆಕಾರವಂ ಮರೆದು ನಿರಾಕಾರವಂ ಕೂಡಿಹೆನೆಂಬ
ಲೋಕದ ಕಾಕುಮಾನವರೆಲ್ಲಾ ಕಾಲ ಕಾಮರಿಗೆ ತುತ್ತಾಗಿ
ಕಾಲಾಗ್ನಿರುದ್ರನ ಹೊಡೆಗಿಚ್ಚಿಗೊಳಗಾದರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./1
ಅಗ್ನಿ ಅಗ್ನಿಯ ಕೂಡಿ ಬೆಳಗು ಮುಂಬರಿವುದಲ್ಲದೆ
ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ
ಬೆಳಗು ನಿಜವಹುದೆ ಅಯ್ಯ?
ಆ ಪರಮಾರ್ಥವ ತಿಳಿದ ಪರಮಜ್ಞಾನಿಯ ಕೂಡೆ
ಸಮ್ಯಜ್ಞಾನಿ ಅನುಭವಿ ಬಾಯಿದೆಗೆದೊಡೆ
ಉಭಯದ ತನು ಕರಣ ಮನಂಗಳು
ಸ್ಫಟಿಕದ ಪುತ್ಥಳಿಯಂತೆ
ನಿರ್ಮಲ ಸ್ವರೂಪವಪ್ಪವಲ್ಲದೆ
ಕಾಳಿಕೆವೆರವುದೆ ಅಯ್ಯ?
ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ
ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./2
ಅಯ್ಯ
ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ,
ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ,
ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ
ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ,
ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ.
ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ,
ತನ್ನ ನಿರಂಜನ ಶಕ್ತಿಯ ನಸುನೆನಹಿಂದ
ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ
ಮೊಳೆದೋರಿತ್ತಯ್ಯ.
ಆ ಶುದ್ಧ ಪ್ರಸಾದವೆಂಬ ಮೊಳೆ
ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ
ಕರ್ಣಿಕಾಪ್ರಕಾಶ ಪಂಚನಾದವನುಳ್ಳ
ಷೋಡಶ ಕಲಾಪುಂಜರಂಜಿತವಪ್ಪ
ಹನ್ನೊಂದನೂರುದಳದ ಪತ್ರದಲ್ಲಿ
ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ
ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ.
ಆ ಸಿದ್ಧಪ್ರಸಾದವೆಂಬ ಎಳವೆರೆ
ತನ್ನ ಶಾಂತಶಕ್ತಿಯ ಚಲನೆಯಿಂದ
ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ
ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ.
ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ
ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ
ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು.
ಆ ಹೂಗಳ ಮಹಾಕೂಟದಿಂದ
ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು.
ಆ ಹಣ್ಣುಗಳ ಆದ್ಯಂತಮಂ ಪಿಡಿದು
ಸದ್ಯೋನ್ಮುಕ್ತಿಯಾಗಬೇಕೆಂದು
ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು
ತಿಳಿದು ನೋಡಿ ಕಂಡು
ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ
ಜ್ಞಾನ ಕ್ರೀಗಳೆಂಬ ದೃಢದಿಂದೇರಿ
ನಾಲ್ಕೆಲೆಯ ಪೀತವರ್ಣದ ಹಣ್ಣ
ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು
ಆರೆಲೆಯ ನೀಲವರ್ಣದ ಹಣ್ಣ
ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು
ಹತ್ತೆಲೆಯ ಸ್ಫಟಿಕವರ್ಣದ ಹಣ್ಣ
ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು
ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ
ಸುಮನನೆಂಬ ಹಸ್ತದಲ್ಲಿ ಪಿಡಿದು
ಹದಿನಾರೆಲೆಯ ಮಿಂಚುವರ್ಣದ ಹಣ್ಣ
ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು
ಆಸನಸ್ಥಿರವಾಗಿ ಕಣ್ಮುಚ್ಚಿ
ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ
ರೇಚಕ ಪೂರಕ ಕುಂಭಕಂಗೈದು
ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ
ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ
ಸಿಂಹನಾದಂಗಳಂ ಕೇಳಿ ಹರುಷಂಗೊಂಡು
ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ
ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ
ದಶವಾಯುಗಳ ಹೆಸಗೆಡಿಸಿ
ಅಷ್ಟಮದಂಗಳ ಹಿಟ್ಟುಗುಟ್ಟಿ
ಅಂತಃಕರಣಂಗಳ ಚಿಂತೆಗೊಳಗುಮಾಡಿ
ಮೂಲಹಂಕಾರವ ಮುಂದುಗೆಡಿಸಿ
ಸಪ್ತವ್ಯಸನಂಗಳ ತೊತ್ತಳದುಳಿದು
ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ
ಕಮರ್ೇಂದ್ರಿಯಂಗಳ ಕಾಲಮುರಿದು
ತನ್ಮಾತ್ರೆಯಂಗಳ ತೋಳಕೊಯ್ದು,
ಅರಿಷಡ್ವರ್ಗಂಗಳ ಕೊರಳನರಿದು
ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ-
ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ
ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ
ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು
ಓಂಕಾರವೆಂಬ ಮಂತ್ರದಿಂದ ಸಂತೈಸಿ
ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ
ಆ ಪರಬ್ರಹ್ಮವೆ ತಾನೆಯಾಗಿ
ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ
ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ
ನಿರ್ಭಾವವೆಂಬ ಹಸ್ತದಿಂ ಪಿಡಿದು
ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ
ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ
ಆ ನಿಷ್ಕಲಬ್ರಹ್ಮವೇ ತಾನೆಯಾಗಿ
ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ
ಶೂನ್ಯಬ್ರಹ್ಮದ ಶೂನ್ಯಪಾದಮಂ
ನಿಷ್ಕಲವೆಂಬ ಹಸ್ತದಿಂ ಪಿಡಿದು
ಕ್ಷಕಾರವೆಂಬ ಮಂತ್ರದಿಂ ಸಂತೈಸಿ
ಘೃತಘೃತವ ಕೂಡಿದಂತೆ
ಶೂನ್ಯಬ್ರಹ್ಮವನೊಡಗೂಡಿ
ಆ ಶೂನ್ಯಬ್ರಹ್ಮವೇ ತಾನೆಯಾಗಿ-
`ನಿಶಬ್ದಂ ಬ್ರಹ್ಮ ಉಚ್ಯತೇ’ ಎಂಬ
ಒಂಬತ್ತು ನೆಲೆಯ ಮಂಟಪದೊಳಿಪ್ಪ
ನಿರಂಜನಬ್ರಹ್ಮದ ನಿರಂಜನಪಾದಮಂ
ಶೂನ್ಯವೆಂಬ ಹಸ್ತದಿಂ ಪಿಡಿದು
ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ
ಬಯಲ ಬಯಲು ಬೆರಸಿದಂತೆ
ನಿರಂಜನಬ್ರಹ್ಮವೇ ತಾನೆಯಾಗಿ-
ಮಹಾಗುರು ಸಿದ್ಧಲಿಂಗಪ್ರಭುವಿನ
ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು.
ಎನ್ನ ಹೃದಯಕಮಲೆಂಟು ಮಂಟಪದ
ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ
ಎನ್ನ ತಂದೆ ಸುಸ್ಥಿರವಾಗಿ
ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ-
ಭಕ್ತಿ ಜ್ಞಾನ ವೈರಾಗ್ಯವೆಂಬ
ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ.
ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ
ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು
ಮೀಟು ಜವ್ವನೆಯಾದೆನಯ್ಯ ನಾನು.
ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು
ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ.
ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ
ಪರಂಜ್ಯೋತಿಲಿಂಗವೆ
ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು
ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ
ಕಂಠಮಾಲೆಯಂ ಧರಿಸು.
ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ
ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು.
ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ
ರತ್ನದ ಕರ್ಣಾಭರಣಂಗಳಂ ತೊಡಿಸು.
ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ
ತ್ರಿಪುಂಡ್ರಮಂ ಧರಿಸು.
ಕ್ರೀಯಲ್ಲದೆ ನಿಷ್ಕ್ರಿಯ ಮಾಡೆನೆಂಬ
ಮೌಕ್ತಿಕದ ಬಟ್ಟನಿಕ್ಕು.
ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ
ಕನಕಲತೆಯ ಬಾಸಿಂಗಮಂ ಕಟ್ಟು.
ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ
ನವ್ಯದುಕೂಲವನುಡಿಸು.
ಲಿಂಗಾಣತಿಯಿಂದ ಬಂದುದನಲ್ಲದೆ
ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ
ರತ್ನದ ಕಂಕಣವಂ ಕಟ್ಟು.
ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ
ಪರಿಮಳವಂ ಲೇಪಿಸು.
ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ
ಹಾಲು ತುಪ್ಪಮಂ ಕುಡಿಸು.
ಪ್ರಸಾದವಲ್ಲದೆ ಭಿನ್ನರುಚಿಯಂ ನೆನೆಯೆನೆಂಬ
ತಾಂಬೂಲವನಿತ್ತು ಸಿಂಗರಂಗೆಯ್ಯ.
ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ
ಪ್ರಮಥಗಣಂಗಳ ಮಧ್ಯದಲ್ಲಿ
ಎನ್ನ ಮದುವೆಯಾಗಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./3
ಅಯ್ಯಾ ಬಸವಾದಿ ಪ್ರಮಥರೇ
ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ
ದಣಿಯಲುಂಡ ದೆಸೆಯಿಂದಲೆನ್ನ ತನು
ಷಟ್ಸ ್ಥಲವನೊಳಕೊಂಡು ಉದಯವಾಯಿತ್ತು.
ಎನ್ನ ಪಾದ ಷಟ್ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು.
ಎನ್ನ ಹಸ್ತ ಷಟ್ಸ್ಥಲಪತಿಯನಲ್ಲದೆ ಪೂಜೆಯ ಮಾಡದು.
ಎನ್ನ ಘ್ರಾಣ ಮೊದಲು
ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು
ಷಟಸ್ಥಲವನಲ್ಲದೆ ಆಚರಿಸವು.
ಎನ್ನ ಮನ ಷಟಸ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ
ಹರುಷಗೊಂಡು ಹರಿದಾಡದು.
ಎನ್ನ ಪ್ರಾಣ ಷಟ್ಸ್ಥಲಕ್ಕೆ ಸಲೆ ಸಂದ
ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ
ಕಿರುಬಟ್ಟೆಯಲ್ಲಿ ನಡೆಯದು.
ಇಂತಿವೆಲ್ಲವು ಷಟ್ಸ ್ಥಲವನಪ್ಪಿ ಅವಗ್ರಹಿಸಿದ
ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ
ಮೋಹದಕಂದನಾದ ಕಾರಣ
ಎನಗೆ ಷಟ್ಸ ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./4
ಅರ್ಥದ ಮೇಲಣ ಆಶೆಯುಳ್ಳನ್ನಕ್ಕರ,
ಮರ್ತ್ಯಲೋಕದ ಮಹಾಜಂಜರಿ ಬಿಡದಯ್ಯ.
ನಾನು ಮರ್ತ್ಯಲೋಕದ ಹಂಬಲ ಹರಿದು,
ನಿನ್ನ ನಂಬಿ ನಚ್ಚಿದೆನೆಂಬುದಕ್ಕೆ ಪ್ರತ್ಯಕ್ಷಮಂ ತೋರುತಿಪರ್ೆ
ನೋಡಯ್ಯ ಲಿಂಗವೆ.
ಅನಘ್ರ್ಯವಾದ ಮುತ್ತು ರತ್ನಂಗಳು ಹೊಂಗೊಡದಲ್ಲಿ ತುಂಬಿ,
ನಾನಿರ್ದ ಏಕಾಂತವಾಸಕ್ಕೆ ಉರುಳಿ ಬರಲು,
ಹಾವ ಕಂಡ ಮರ್ಕಟನಂತೆ, ನಾನು ಅಡ್ಡಮೊಗವನಿಕ್ಕಿದೆನೆನೆ,
ನಿನಗೊಲಿದ ಶರಣನೆಂದು ಭಾವಿಸಿ,
ಎನ್ನ ಮರ್ತ್ಯಲೋಕದ ಸಂಕಲೆಯಂ ತರಿದು,
ನಿನ್ನ ಗಣಂಗಳ ಒಳಗುಮಾಡು.
ಅದಲ್ಲದೆ,
ಅದರ ಮೇಲೆ ಕಿಂಚಿತ್ತು ಆಶೆಯಂ ಮಾಡಲೊಡನೆ,
ಚಂದ್ರಸೂರ್ಯಾದಿಗಳುಳ್ಳನ್ನಕ,
ಎನ್ನ ಹಂದಿ ನಾಯಿ ಬಸುರಲ್ಲಿ ಹಾಕದಿದ್ದೆಯಾದರೆ,
ನಿನಗೆ ಅಲ್ಲಮಪ್ರಭುವಿನಾಣೆ
ಆಳಿನಪಮಾನ ಆಳ್ದಂಗೆ ತಪ್ಪದಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./5
ಅರ್ಪಿತ ಅವಧಾನದ ಕ್ರಮವ
ವಿಸ್ತರಿಸಿ ಒಪ್ಪವಿಟ್ಟು ಹೇಳಿಹೆ ಕೇಳಿರಣ್ಣ.
ಭಿನ್ನಭೋಜನ ಪ್ರಸಾದಭೋಜನ ಸಹಭೋಜನವೆಂದು
ಲಿಂಗಾರ್ಪಿತ ಮೂರು ಪ್ರಕಾರವಾಗಿಪ್ಪುದು.
ಮುಂದಿಟ್ಟು ಸಕಲಪದಾರ್ಥವಂ ಇಷ್ಟಲಿಂಗಕ್ಕೆ ಕೊಟ್ಟು
ಆ ಲಿಂಗಮಂ ಸೆಜ್ಜೆಯರಮನೆಗೆ ಬಿಜಯಂಗೈಸಿ
ಅಂದಂದಿಂಗೆ ಬಂದ ಪದಾರ್ಥಮಂ
ಲಿಂಗಕ್ಕೆ ಕೊಡದೆ ಕೊಂಬುದೀಗ ಭಿನ್ನಭೋಜನ.
ಮುಂದಿಟ್ಟ ಸಕಲಪದಾರ್ಥಂಗಳು ಲಿಂಗಕ್ಕೆ ಒಂದು ವೇಳೆ ಕೊಡದೆ
ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು
ಆ ಭೋಜ್ಯಮಂ ಇಳುಹದೆ ಕೊಂಬುದೀಗ ಪ್ರಸಾದಭೋಜನ.
ಮುಂದಿಟ್ಟು ಸಕಲಪದಾರ್ಥಂಗಳ ಲಿಂಗಕ್ಕೆ ಮೊದಲು ಕೊಟ್ಟು
ಮತ್ತೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು
ಕೊಂಬುದೀಗ ಸಹಭೋಜನ.
ಇಂತೀ ತ್ರಿವಿಧ ಭೋಜನದ ಅಂತರಂಗದನ್ವಯವ
ನಿಮ್ಮ ಶರಣರೇ ಬಲ್ಲರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./6
ಆಕಾಶದಿಂದಲಾಯಿತ್ತು ನಿರಾಕಾರ.
ಆ ನಿರಾಕಾರ ಚಿದಕಾಶದ ಮೇಲೆ ನಿಂದಿತ್ತು.
ಆ ನಿರಾಕಾರದಿಂದಲಾಯಿತ್ತು ಭಾವ.
ಆ ಭಾವ ಕರಣದ ಮೇಲೆ ನಿಂದಿತ್ತು.
ಆ ಭಾವದಿಂದಲಾಯಿತ್ತು ಮನ.
ಆ ಮನವು ಸೂಕ್ಷ ್ಮದ ಮೇಲೆ ನಿಂದಿತ್ತು.
ಆ ಮನದಿಂದಲಾಯಿತ್ತು ತನು.
ಆ ತನು ಸ್ಥೂಲದ ಮೇಲೆ ನಿಂದಿತ್ತು.
ಆ ತನುವು ಮನವ ಕೂಡಿದಲ್ಲಿಯೇ ತನು ನಷ್ಟವಾಯಿತ್ತು.
ಮನುವು ಭಾವವ ಕೂಡಿದಲ್ಲಿಯೇ ಮನ ನಷ್ಟವಾಯಿತ್ತು.
ಭಾವವು ನಿರಾಕಾರವ ಕೂಡಿದಲ್ಲಿಯೇ ಭಾವ ನಷ್ಟವಾಯಿತ್ತು.
ಇಂತೀ ತ್ರಿವಿಧ ನಷ್ಟವಾದಲ್ಲಿಯೇ
ಶರಣನ ಹುಟ್ಟು ನಷ್ಟವಾಯಿತ್ತು,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./7
ಆಚಾರಲಿಂಗವ ಅಂಗೈಯೊಳಗಳವಡಿಸಿ
ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ
ಪುಷ್ಪಜಾತಿಗಳಿಂದಚರ್ಿಸಿ ಪೂಜೆಮಾಡುವ ಕರವು
ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ
ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು.
ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು
ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ
ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು.
ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ
ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ
ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು.
ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ
ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ
ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು.
ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ
ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ
ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು.
ಆ ಲಿಂಗವ ನೆನೆವ ಮನ
ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ
ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು.
ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ
ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ
ನೆಲೆಗೊಂಡಿತ್ತು.
ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ
ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ
ಆ ಲಿಂಗವೊಲಿದು ಅಂಗವೇಧಿಸಿ
ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು.
ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ
ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ
ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು
ಕ್ರೀಯ ಮರೆಯಲೊಡನೆ
ಆ ಲಿಂಗವೊಲಿದು ಮನವೇಧಿಸಿ ಭಾವಂಗಳಡಗಿ
ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು.
ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ
ಕಪರ್ೂರ ಹೋಗಿ ಉರಿಯ ಹಿಡಿದಂತಾದ
ಸಮಾಧಿಯೋಗದೊಳಿರ್ದು
ಜ್ಞಾನವ ಮರೆಯಲೊಡನೆ
ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು.
ಆತನೇ ಪರಬ್ರಹ್ಮ.
ಇದನರಿಯದೆ
ಜ್ಞಾನಕ್ರೀಗಳಿಂದಾಚರಿಸಿ
ಲಿಂಗಾಂಗ ಸಂಯೋಗವಾಗದೆ
ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ
ತಮ್ಮ ಅರಿವಿಂಗೆ ತಾವೇ ತಲೆದೂಗಿ
`ಅಹಂ ಬ್ರಹ್ಮ’ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./8
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ
ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ
ಮುನ್ನ ನೀನು ಶಾಖೆದೋರುವಲ್ಲಿ
ನಿನ್ನೊಳಂಕುರಿಸಿ ನಾನು
ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ
ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ
ಗರ್ಭದಿಂದ ಬಂದು ಬಂದು
ಒಮ್ಮೆ ಮಾನವನಪ್ಪಂದಿಗೆ
ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ.
ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ.
ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ
ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ
ಶರಣವೆಣ್ಣಾಗಿ ಹುಟ್ಟಿದೆನಯ್ಯ.
ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು.
ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು.
ಎನಗೆ ನಿನ್ನೊಳು ನುಡಿಯಬೇಕೆಂಬ
ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು.
ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ
ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ
ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು.
ಭಕ್ತಿಯೆಂಬ ವಿರಹಾಗ್ನಿ
ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು
ನಿಂತಲ್ಲಿ ನಿಲಲೀಸದಯ್ಯ.
ಕುಳಿತಲ್ಲಿ ಕುಳ್ಳಿರಲೀಸದಯ್ಯ.
ಮನ ನಿಂದಲ್ಲಿ ಮನೋಹರವಪ್ಪುದಯ್ಯ.
ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು
ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ.
ನಾನು ಧರೆಯೊಳುಳಿವುದರಿದು.
ಪ್ರೇಮದಿಂ ಬಂದು ಕಣ್ದುಂಬಿ ನೋಡಿ
ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು
ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ
ಲಲ್ಲೆವಾತಿಂ ಗಲ್ಲವ ಪಿಡಿದು
ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ
ಕೂಡೆನ್ನ ಪ್ರಾಣೇಶನೇ.
ಕೂಡಿದಿರ್ದೊಡೆ ಗಲ್ಲವ ಪಿಡಿ.
ಪಿಡಿಯದಿರ್ದೊಡೆ ಬೊಟ್ಟಾಡು.
ಬೊಟ್ಟಾಡದಿರ್ದೊಡೆ ಆಲಂಗಿಸು.
ಆಲಂಗಿಸದಿರ್ದೊಡೆ ಕೈವಿಡಿ.
ಕೈವಿಡಿಯದಿರ್ದೊಡೆ ಮಾತಾಡು.
ಮಾತಾಡದಿರ್ದೊಡೆ ನೋಡು.
ನೋಡದಿರ್ದೊಡೆ ಬಾ.
ಬಾರದಿರ್ದೊಡೆ
ಪ್ರಮಥಗಣಂಗಳೊಡನೆನ್ನವಳೆಂದು ನುಡಿ.
ನುಡಿಯದಿರ್ದೊಡೆ
ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು.
ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು.
ಕರ್ಮ ಕಾಂತಿಯಪ್ಪುದು.
ಕಾಮ ಕೈದುಗೊಂಬ, ಕಾಲ ಕಲಿಯಪ್ಪ.
ಭವಕ್ಕೆ ಬಲ್ಮೆ ದೊರೆವುದು.
ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ,
ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ
ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ.
ಹೊಗಲಂಜುವೆನಯ್ಯ.
ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ
ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ
ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ.
ಇಂತಿವಂ ತಿಳಿದು
ನಿನ್ನ ಮನದೊಳು ನನ್ನವಳೆಂದರೆ
ದಿವಾರಾತ್ರೆಯುಳ್ಳನ್ನಬರ
ಎನ್ನ ಮನ ಜಿಹ್ವೆ ನೇತ್ರಂಗಳಿಗೆ
ಬಂಧನಗಳೆಂಬಿವು ಮುಂಗೆಡುವುವಯ್ಯ.
ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು
ತಳಿರಾಗಿ ಹೂ ಮಿಡಿಗೊಂಬುದಯ್ಯ.
ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ
ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ.
ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ.
ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ.
ಶತ್ರುಗಳೆನಗೆ ಮಿತ್ರರಪ್ಪರಯ್ಯ.
ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು.
ಕಾಮನ ಕೈದು ಖಂಡಿಸುವುದು.
ಕರ್ಮದ ಕಾಂತಿ ಕರಗುವುದು.
ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ.
ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ.
ನಿನಗೆ ಮೆಚ್ಚಿದೆನಯ್ಯ.
ನಿನ್ನ ಮೆಚ್ಚಿಸಿಕೊಳ್ಳಲರಿಯದ
ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು.
ಎನ್ನವಸ್ಥೆಯಂ ಲಾಲಿಸು,
ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು.
ಎನ್ನ ಬಿನ್ನಪಮಂ ಲಾಲಿಸು,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./9
ಆರುಬಣ್ಣದ ಹದಿನೈದು ದೇಹದ ಕೋಡಗ,
ಒಂದು ರತ್ನವ ಮೆಟ್ಟಿಕೊಂಡು,
ಒಂದು ರತ್ನವ ಹಿಡಿದುಕೊಂಡು,
ಮತ್ತೊಂದು ರತ್ನವ ಮರೆಮಾಡಿಕೊಂಡು,
ಮೇರುಪರ್ವತವ ಶಿಖರವನೇರಿತು ನೋಡ.
ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ,
ಆ ಪಟ್ಟಣದ ಪ್ರಜೆಪರಿವಾರಂಗಳ ಕೈಕಾಲುಗಳಂ ಕೊಯ್ದು,
ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ,
ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು,
ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ,
ತನ್ನಿಂದ ತಾನೇ ಸತ್ತೀತು.
ಭಕ್ತಿಯೆಂಬ ಬಿಲ್ಲ ಹಿಡಿದು,
ನಿರಹಂಕಾರವೆಂಬ ತಿರುವನೇರಿಸಿ,
ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು,
ಆ ರತ್ನಂಗಳಂ ಕೊಂಡು,
ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./10
ಇಕ್ಕಿದ ಹರಿಗೆ ತೊಲದ ಕಂಭ’ವೆಂದು ಬಿರಿದನಿಕ್ಕಿ
ಹುಯ್ಯಲ ಕಂಡು ಓಡಿ ಬರುವಂಗೆ ಆ ಬಿರಿದೇತಕಯ್ಯ?
ಬತ್ತೀಸಾಯುಧದ ಸಾಧನೆಯ ಕಲಿತು
ಕಾಳಗದಲ್ಲಿ ಕೈಮರೆದು ಘಾಯವಡೆದಂಗೆ ಆ ಸಾಧನೆ ಏತಕಯ್ಯ?
ಕತ್ತಲೆಗಂಜಿ ಕರದಲ್ಲಿ ಜ್ಯೋತಿಯಂ ಪಿಡಿದು
ಹಾಳುಗುಳಿಯಲ್ಲಿ ಬೀಳುವಂಗೆ ಆ ಜ್ಯೋತಿಯೇತಕಯ್ಯ?
ಆದ್ಯರ ವಚನಂಗಳ ಸದಾಕಾಲದಲ್ಲಿ ಓದಿ
ಶಿವತತ್ವ ಆತ್ಮತತ್ವ ವಿದ್ಯಾತತ್ವವನರಿದು
ಆರಕ್ಕೆ ಆರ ನೆಲೆಮಾಡಿ ಮೂರಕ್ಕೆ ಮೂರ ಸಂಬಂಧಿಸಿ
ಐದಕ್ಕೆ ಇನ್ನು ಪ್ರತಿಯಿಲ್ಲವೆಂದು ಅರಿದ ವಿರಕ್ತರು
ಪುರಾತನರಂತೆ ಸಮ್ಯಜ್ಞಾನ ಕ್ರೀಯಿಂದಲೆ ಆದರಿಸುವುದು,
ಭಕ್ತ ವಿರಕ್ತರ ಆಚರಣೆಯೆಲ್ಲಾ ಒಂದೇ.
ಅದು ಹೇಗೆಂದರೆ
ಭಕ್ತಂಗೆ ಬಹಿರಂಗದ ದಾಸೋಹ.
ವಿರಕ್ತಂಗೆ ಅಂತರಂಗದ ದಾಸೋಹ.
ಈ ಆಚರಣೆಯನತಿಗಳೆದು
ಮನ ಬಂದ ಪರಿಯಲ್ಲಿ ನಡೆದು ಕೆಡುವಂಗೆ
ಆದ್ಯರ ವಚನವೇತಕಯ್ಯ?
ಆದ್ಯರ ವಚನವೆಂಬುದು ಸಂತೆಯಮಾತೆ? ಪುಂಡರ ಪುರಾಣವೇ?
ಲೋಕದ ಜನರ ಮೆಚ್ಚಿಸುವ ಬೀದಿಯ ಮಾತೆ?
ಶಿವ ಶಿವ
ನೀವು ಶಿವಶರಣರ ಕೂಡಾಡಿ ವಚನಂಗಳ ಕಲಿತು
ಆ ವಚನಂಗಳ ನಿಮ್ಮ ಊಟದ ವೆಚ್ಚಕ್ಕೆ
ಈಡು ಮಾಡಿಕೊಂಡಿರಲ್ಲದೆ
ಮುಂದಣ ಮುಕ್ತಿಯ ಪದವ ಕಾಣದೇ ಹೋದಿರಲ್ಲಾ?
ಇದು ಕಾರಣ-
ಶಿವಜ್ಞಾನೋದಯವಾದ ಲಿಂಗಾಂಗಿಗಳಿಗೆ
ಎನ್ನ ನುಡಿ ಮೈಗಂದೆಯಂ ತುರಿಸಿದಂತೆ
ಹಾಲು ಸಕ್ಕರೆಯನುಂಡಂತೆ ಸವಿದೋರುತ್ತದೆ.
ವೇಷಧಾರಿ ವಿಶ್ವಾಸಘಾತುಕರಿಗೆ
ಎನ್ನ ನುಡಿ ಅಲಗಿನ ಮೊನೆಯಂತೆ ಇರಿಯುತ್ತಿದೆಯಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./11
ಇನ್ನೇವೆನಿನ್ನೇವೆನೆಲೆ ತಂದೆ
ಹೆಣ್ಣು ಬಾಲೆಯ ಮೊರೆಯ ಕೇಳಯ್ಯ.
ಮುನ್ನ ಹುಟ್ಟಿದ ಒಂಬತ್ತು ಮಕ್ಕಳ ನಗೆನುಡಿಯ ಕೇಳಲಾರೆ.
ಮನೆಯ ಗಂಡನ ಬೆಡಗು ಬಿನ್ನಾಣವ ನೋಡಲಾರೆ.
ನನ್ನ ಸಿರಿಯಲ್ಲಿ ನಾನು ಓಲಾಡಲಾರೆ.
ಎನಗೊಂದು ಮಗುವ ಕೊಡಯ್ಯ ಗುರುವೆ.
ಆ ಮಗುವಿನ ಕೈಯಿಂದ ಗಂಡನ ತಲೆಯೊಡೆಯಿಕ್ಕಿಸು.
ಮಕ್ಕಳ ಕೊರಳ ಕೊಯಿಸು.
ಎನ್ನ ದಂಡವ ಕೊಳಿಸು.
ಪಟ್ಟಣಕ್ಕೆ ಹೋಗುವ ಹಾದಿ ಮೂರುಬಟ್ಟೆ ಕೂಡಿದ ಮಧ್ಯದಲ್ಲಿ,
ಮಣಿಹವ ಮಾಡುತ್ತಿಪ್ಪ
ಕೈಕಾಲಿಲ್ಲದ ಮೋಟಂಗೆ ಮೆಚ್ಚಿ ಮರುಳಾದ ಪತಿವ್ರತೆಯಯ್ಯ ನಾನು.
ಎನ್ನ ಕೊಂಡು ಹೋಗಿ ಅವನಿಗೆ ಮದುವೆಯ ಮಾಡಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./12
ಉಚ್ಚೆಯ ಬಚ್ಚಲ ಹಲವು ಭಗದ ದೇವತೆಯ
ಮಾಯೆಯ ಹಾವಳಿಯ ನೋಡಿರಣ್ಣ.
ಕರಣಹಸುಗೆಯನೋದುವಣ್ಣಗಳ ಕಾಲ ಹಿಡಿದೆಳೆಯಿತು ಮಾಯೆ.
ಮಿಶ್ರಾರ್ಪಣಗಳನೋದುವಣ್ಣಗಳ
ಮೀಸೆಯ ಹಿಡಿದುಯ್ಯಾಲೆಯನಾಡಿತು ಮಾಯೆ.
ಆತ್ಮನ ಸ್ವರೂಪವನರಿವಣ್ಣಗಳ ತನಗಾಳು ಮಾಡಿತ್ತು ಮಾಯೆ.
ಶಿವಜ್ಞಾನವ ಕೀಳುಮಾಡಿ
ತತ್ವಸ್ವರೂಪವನರಿವಣ್ಣಗಳ ತನಗೆ ಮುದ್ದು ಮಾಡಿಸಿ ಮೋಹಿಸಿ
ಬತ್ತಲೆ ನಿಲಿಸಿತು ಮಾಯೆ.
ಮಂತ್ರಗೋಪ್ಯವನೋದುವಣ್ಣಗಳ
ಕುಟಿಲವೆಣ್ಣಿನ ಕುಮಂತ್ರಕ್ಕೆ ಸಿಕ್ಕಿಸಿ ಕಾಡಿತು ಮಾಯೆ.
ಬರಿಯ ವೈರಾಗ್ಯದ ಮಾಡುವಣ್ಣಗಳ
ಸ್ತ್ರೀಯರ ಮುಡಿಯ ಸಿಂಗರಿಸುವಂತೆ ಮಾಡಿತು ಮಾಯೆ.
ಜಪಧ್ಯಾನಗಳ ಮಾಡುವಣ್ಣಗಳ ಭಗಧ್ಯಾನವ ಮಾಡಿಸಿತು ಮಾಯೆ.
ಲಿಂಗವ ಕರಸ್ಥಲದಲ್ಲಿ ಹಿಡಿದಣ್ಣಗಳ
ಅಂಗನೆಯರ ಹಿಂದಣ ಪುಕಳಿಯ ಮುಂದಣ ಯೋನಿಚಕ್ರವ
ಮುಟ್ಟಿಸಿ ಮೂಗನರಿಯಿತು ಮಾಯೆ.
ಪ್ರಸಾದ ಲೇಹ್ಯವ ಮಾಡುವಣ್ಣಗಳ
ಪೊಸಜವ್ವನೆಯರ ತುಟಿಯ ಲೋಳೆಯ ನೆಕ್ಕಿಸಿತು ಮಾಯೆ.
ಬೆಡಗಿನ ವಚನವನೋದುವಣ್ಣಗಳ
ಸಖಿಯರ ತೊಡೆಯಲ್ಲಿ ಹಾಕಿತು ಮಾಯೆ.
ವಚನವನೋದುವಣ್ಣಗಳ ರಚನೆಗೆ ನಿಲಿಸಿತು ಮಾಯೆ.
ಇದು ಕಾರಣ,
ಇಚ್ಛೆಯ ನುಡಿದು ಕುಚ್ಫಿತನಾಗಿ
ಬರಿವಿರಕ್ತನಂತೆ ಹೊಟ್ಟೆಯ ಹೊರೆದು
ಹೊನ್ನು ಹೆಣ್ಣು ಮಣ್ಣು ದೊರೆತಲ್ಲಿ ಹಿಡಿದಿಹ
ಕರ್ಮಿಯೆಂಬ ಕಾಳಮೂಳರಿಗೆಲ್ಲಿಯದೋ ವಿರಕ್ತಿ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./13
ಎನ್ನ ಕಾಯ ಪ್ರಸಾದವಾಯಿತ್ತು.
ಎನ್ನ ಜೀವ ಪ್ರಸಾದವಾಯಿತ್ತು.
ಎನ್ನ ಪ್ರಾಣ ಪ್ರಸಾದವಾಯಿತ್ತು.
ಎನ್ನ ಕರಣೇಂದ್ರಿಯಂಗಳೆಲ್ಲವು ಪ್ರಸಾದವಾದುವು ನೋಡಾ.
ನೀವೆನ್ನ ಕರಸ್ಥಲದಲ್ಲಿ ಪ್ರಸಾದ ರೂಪಾದಿರಾಗಿ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./14
ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ
ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ.
ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ,
ಎಮ್ಮಪ್ಪಗೆ ಮದುವೆಯ ಮಾಡಿದರು.
ಎನ್ನ ಗಂಡನ ಮನೆಯೊಡವೆಯನೆನ್ನ ಉಗುರುಕಣ್ಣಿನಲ್ಲೆತ್ತಿ
ಒಗತನವ ಮಾಡುವೆನು.
ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು.
ಎನ್ನ ಗಂಡ ಆಳಲಿ ಆಳದೆ ಹೋಗಲಿ
ಪತಿಭಕ್ತಿಯ ಬಿಡೆ ಕಾಣಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./15
ಎನ್ನ ಮನೋಮಧ್ಯದೊಳಗೊಂದು
ಅನುಮಾನ ಅಂಕುರದೋರಿತು ಕೇಳಾ ಎಲೆ ತಂಗಿ.
ಲಿಂಗಾಣತಿಯಿಂ ಬಂದ ಪದಾರ್ಥವ
ಮನವೊಪ್ಪಿ ಲಿಂಗಕ್ಕೆ ಕೊಟ್ಟುದೇ ಪ್ರಸಾದ.
ಆ ಪ್ರಸಾದದೊಳಗಿದ್ದುದೇ ರಸ.
ಹೊರಗಿದ್ದುದೇ ಹಿಪ್ಪೆ.
ಮತ್ತಂ ಒಳಗಿದ್ದುದೇ ಮಧುರ
ಹೊರ ಹೊರಗಿದ್ದುದೇ ಕಠಿಣ.
ಕರುಣಿಸಿಕೊಂಬುದೇ ಸುಖಿತ.
ಅದ ನುಡಿಯಲಂಜಿ ನಡುಗುತಿಪ್ಪೆನಯ್ಯ.
ಅದೇನು ಕಾರಣ ನಡುಗುತಿಪ್ಪೆನೆಂದರೆ
ಪ್ರಸಾದವೇ ಪರತತ್ವವೆಂದು ಪ್ರಮಥಗಣಂಗಳ
ಸಮ್ಯಜ್ಞಾನದ ನುಡಿ ಉಲಿಯುತ್ತಿದೆ.
ಇದು ಕಾರಣ-
ಪ್ರಸಾದವೆಂಬ ಪರತತ್ವದಲ್ಲಿ ಜ್ಞಾನ ಅಜ್ಞಾನಗಳೆರಡೂ
ಹುದುಗಿಪ್ಪವೆಂದು ನಾನು ನುಡಿಯಲಮ್ಮೆ.
ತಥಾಪಿ ನುಡಿದರೆ,
ಎನಗೆ ಮರ್ತ್ಯಲೋಕದ ಮಣಿಹವೆಂದಿಗೂ ತೀರದೆಂದು
ಕಠಿಣ ಪದಾರ್ಥವ ಲಿಂಗಕ್ಕೆ ಕೊಟ್ಟು ಕೊಳಲಮ್ಮೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./16
ಎನ್ನಂತರಂಗದಲ್ಲಿ ಕುಮಂತ್ರ ಕುಡಿವರೆದ ಭೇದವ
ನಿನ್ನೊಡನೆ ಮರೆಯಿಲ್ಲದೆ ಆಡುತಿಪ್ಪೆನಯ್ಯ ಒಡೆಯನೇ.
ಜಾಗ್ರದವಸ್ಥೆಯಲ್ಲಿ ಲೋಕೋಪಚಾರ ಬಿಡದು.
ಜಿಹ್ವಾಲಂಪಟತನ ಉಡುಗದು.
ಸುಖ ದುಃಖಕ್ಕೆ ಎನ್ನ ಮನ ಮರುಗುತಿರ್ದು ಬಳಿಕ
ಎನಗೆ ಇಷ್ಟಲಿಂಗದ ಪೂಜೆಯೆಲ್ಲಿಯದೋ?
ಸ್ವಪ್ನಾವಸ್ಥೆಯಲ್ಲಿ ಬ್ರಹ್ಮಾಂಡದೊಳಗುಳ್ಳ
ಕಡೆ ಮೊದಲಿಲ್ಲದ ದುರ್ವಿಕಾರ ಸ್ವಪ್ನದಲ್ಲಿ
ಹರಿದಾಡುವ ಜೀವಂಗೆ
ಪ್ರಾಣಲಿಂಗದ ಪೂಜೆಯೆಲ್ಲಿಯದೋ?
ಸುಷುಪ್ತ್ಯವಸ್ಥೆಯಲ್ಲಿ ಲಿಂಗವ ಕೂಡಿ ಮೈಮರೆದಿರದೆ
ಕನಸಿನಲ್ಲಿ ಸ್ತ್ರೀಯ ಕೂಡಿ ಇಂದ್ರಿಯಂಗಳ ಬಿಟ್ಟು ಆನಂದಿಸುವ
ಕಾಮವಿಕಾರಿಗೆ
ಭಾವಲಿಂಗದ ಪೂಜೆಯೆಲ್ಲಿಯದೋ?
ಈ ಪ್ರಕಾರದ ದುರ್ಗುಣಂಗಳ ನಾನು ಮರೆಮಾಡಿಕೊಂಡು
ಶರಣನೆಂದು ವಚನಂಗಳ ಹಾಡಿದರೆ
ತಿಂಗಳ ಬೆಳಕಿನ ಸಿರಿಯಂ ಕಂಡು ನಾಯಿ
ಹರುಷಂಗೊಂಡು ಬಳ್ಳಿಟ್ಟು ಬೊಗಳಿದಂತಾಯಿತು.
ಅದೇನು ಕಾರಣವೆಂದೊಡೆ
ನೀ ಎನ್ನ ಅಂಗದ ಮೇಲಕ್ಕೆ ಬಂದೆ ಎಂಬ ಸಂತೋಷಕ್ಕೆ
ಉಬ್ಬಿ ಕೊಬ್ಬಿ ಅಹಂಕರಿಸಿ ಹಾಡಿದೆನಲ್ಲದೆ
ನುಡಿವಂತೆ ನಡೆಯಲಿಲ್ಲ ನಡೆದಂತೆ ನುಡಿಯಲಿಲ್ಲ.
ಇದು ಕಾರಣ
ಎನ್ನ ಮನದ ಕಾಳಿಕೆಯ ಕರುಣದಿಂದ ಕಳೆದು
ಅವಸ್ಥಾತ್ರಯಂಗಳಲ್ಲಿ ನಿನ್ನನಪ್ಪಿ ಅಗಲದಿಪ್ಪಂತೆ
ಎನ್ನನು ಪರಮಕಾಷ್ಠಿಯ ಮಾಡಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./17
ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ.
ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು
ಒಂದು ದಿನ ಸವಿಯೂಟ ತಪ್ಪಿದರೆ
ಹಲವ ಹಂಬಲಿಸಿ ಹಲುಗಿರಿದು,
ಎನ್ನ ಕೊಂದು ಕೂಗುತ್ತಿದೆ ನೋಡಾ.
ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?.
ಕಲಸಿ ಕಲಸಿ ಕೈಬೆರಲು ಮೊಂಡಾದವು.
ಅಗಿದಗಿದು ಹಲ್ಲುಚಪ್ಪಟನಾದವು.
ಉಂಡುಂಡು ಬಾಯಿ ಜಡ್ಡಾಯಿತು.
ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು.
ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು.
ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು.
ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು.
ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ.
ಕಾಯವಿಕಾರವೆಂಬ ಕತ್ತಲೆ ಕವಿಯಿತು.
ಮನೋವಿಕಾರವೆಂಬ ಮಾಯೆ ಸೆರೆವಿಡಿದಳು.
ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ.
ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು.
ಕಾಯಾಲಾಗದೆ ದೇವ?.
ಸಾವನ್ನಬರ ಸರಸವುಂಟೆ ಲಿಂಗಯ್ಯ?.
ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ.
ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ
ಕರುಣಿ?.
ಮುಕ್ತಿಗಿದೇ ಪಯಣವೋ ತಂದೆ?.
ನೀನಿಕ್ಕಿದ ಮಾಯಾಸೂತ್ರಮಂ ಹರಿದು,
ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ,
ಅಂಗಭೋಗ-ಆತ್ಮಭೋಗಂಗಳನಡಗಿಸಿ,
ಲಿಂಗದೊಳು ಮನವ ನೆಲೆಗೊಳಿಸಿ,
ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./18
ಎಲೆ ಕರುಣಿ,
ಜನನಿಯ ಜಠರಕ್ಕೆ ತರಬೇಡವಯ್ಯ.
ತಂದರೆ ಮುಂದೆ ತಾಪತ್ರಯಕ್ಕೊಳಗಾದ
ತರಳೆಯ ದುಃಖದ ಬಿನ್ನಪವ ಕೇಳಯ್ಯ.
ಆಚಾರಲಿಂಗಸ್ವರೂಪವಾದ ಘ್ರಾಣ,
ಗುರುಲಿಂಗಸ್ವರೂಪವಾದ ಜಿಹ್ವೆ,
ಶಿವಲಿಂಗಸ್ವರೂಪವಾದ ನೇತ್ರ,
ಜಂಗಮಲಿಂಗಸ್ವರೂಪವಾದ ತ್ವಕ್ಕು,
ಪ್ರಸಾದಲಿಂಗಸ್ವರೂಪವಾದ ಶ್ರೋತ್ರ,
ಮಹಾಲಿಂಗಸ್ವರೂಪವಾದ ಪ್ರಾಣ,
ಪಂಚಬ್ರಹ್ಮ ಸ್ವರೂಪವಾದ ತನು,
ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ,
ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ,
ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ,
ಎಂತು ನುಸುಳುವೆನಯ್ಯ?.
ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ.
ಬೇಗೆವರಿದು ನಿಂದುರಿದೆನಯ್ಯ.
ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ.
ಎನ್ನ ಭವಕ್ಕೆ ನೂಂಕಬೇಡಯ್ಯ.
ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ,
ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು,
ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ.
ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ,
ಫಲವು ಬೇಡ, ಪದವು ಬೇಡ ನಿಮ್ಮ
ಶ್ರೀಪಾದವನೊಡಗೂಡಲೂಬೇಡ,
ಎನಗೆ ಪುರುಷಾಕಾರವೂ ಬೇಡವಯ್ಯ.
ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ.
ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ,
ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ
ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ
ಎನ್ನ ನೀ ನಿಲಿಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./19
ಎಲೆ ತಂಗಿ,
ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ,
ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ,
ನಿನ್ನ ಪೂರ್ವಾಪರವಾವುದಮ್ಮ?.
ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು,
ಭಂಡಾರಿ ಬಸವಪ್ಪೊಡೆಯದೇವರು.
ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು.
ಕೂಗಲೂರು ನಂಜಯ್ಯದೇವರು.
ಆ ನಂಜಯ್ಯದೇವರ ಕರಕಮಲದಲ್ಲಿ,
ಉದಯವಾದ ಶರಣವೆಣ್ಣಯ್ಯಾ ನಾನು.
ಎನ್ನ ಗುರುವಿನ ಗುರು ಪರಮಗುರು,
ಪರಮಾರಾಧ್ಯ ತೋಂಟದಾರ್ಯನಿಗೆ
ಗುರುಭಕ್ತಿಯಿಂದೆನ್ನ ಶರಣುಮಾಡಿದರು.
ಆ ತೋಂಟದಾರ್ಯನು,
ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ,
ಪ್ರಮಥಗಣಂಗಳ
ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ
ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ,
“ಘನಲಿಂಗಿ’ ಎಂಬ ನಾಮಕರಣಮಂ ಕೊಟ್ಟು,
ಪ್ರಾಯಸಮಥರ್ೆಯಂ ಮಾಡಿ,
ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ,
ಅರುಹೆಂಬ ಬಣ್ಣವ ನಿರಿವಿಡಿದುಡಿಸಿ,
ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ,
ತನಗೆ ನಾನಾಗಬೇಕೆಂದು ಬೇಡಿಕಳುಹಲು,
ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ./20
ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ,
ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ,
ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ.
ನಾನು ಸ್ವರ್ಗ ಮರ್ತ್ಯ ಪಾತಾಳದೊಳಗುಳ್ಳ
ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ
ಎನ್ನ ಚತುರಂಗಬಲಕ್ಕೆ
ಬೇಡಿದ ಪಡಿ ಕಂದಾಯಮಂ ಕೊಟ್ಟು ಕೊಟ್ಟು ನಷ್ಟವಾಗಿ
ಎನಗೆ ಎರಡುನಲವತ್ತೆರಡುಲಕ್ಷದಭವರಾಟಳದ ಋಣಬಿದ್ದಿತ.
ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು.
ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ
ತೆಗೆಯಿತು.
ಎನ್ನ ನಂಬಿ ಕೆಡಬೇಡ, ಕೆಡಬೇಡ.
ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ.
ಅಜ್ಞಾನತಮಕ್ಕೆ ಜ್ಯೋತಿಃಪ್ರಕಾಶವನುಳ್ಳ
ಸಮ್ಯಜ್ಞಾನವೇ ನೀನು ಕೇಳಯ್ಯ.
ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ.
ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ.
ಎನ್ನೊಳಗೆ ನೀನು,
ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ,
ನೀನೂ ನಾನೂ,
ಗೋಳಕಾಕಾರಸ್ವರೂಪವಾದ ನಿಷ್ಕಲಬ್ರಹ್ಮದಲ್ಲಿ,
ಉದಯವಾದ ಸಹೋದರರು.
ಎಂಟುಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ,
ಸುವರ್ಣವರ್ಣದ ಸಿಂಹಾಸನದ ಮೇಲಿಪ್ಪ,
ಮನೋನಾಥನೆನಗೆ ಕಾಣಿಸಿ,
“ನಿನ್ನ ಶ್ರೀ ಚರಣಮಂ ಎಂದೆಂದೂ
ಪೂಜೆಮಾಡುವ ಭೃತ್ಯ’ನೆಂದು,
ಭಯಭಕ್ತಿಯಿಂದ ಬಣ್ಣಿಸಿ,
ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟು ಮಾಡು.
ಚಿದಾಕಾಶದಲ್ಲಿ, ಆರು ಮೂರಾಗಿ, ಮೂರು ಒಂದಾಗಿ,
ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ,
ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ, ಎನ್ನನಿಕ್ಕಿ
“ನಿನ್ನ ಆದಿ ಅನಾದಿಯ ಹಳೆಯ’ ನೆಂದು ಬಿನ್ನಪಂಗೈದು
ಕರುಣಾರಸಮಂ ಬೀರಿಸಿ,
ಎನಗೆ ಮುಕ್ತಿರಾಜ್ಯಮಂ ಕೊಡು’ವಂತೆ ಸಂಧಾನಮಂ ಮಾಡು.
ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ
ಅಭಯ ಹಸ್ತಮಂ ಕೊಡಿಸಿ
ಎನ್ನ ಎಂಬತ್ತುನಾಲ್ಕು ಲಕ್ಷ ಭವರಾಟಾಳದ ಋಣವ
ತಿದ್ದುವಂತೆ ಮಾಡಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./21
ಏನೆಂಬೆನೇನೆಂಬೆನಯ್ಯ?
ಮತಿಗೆಟ್ಟು ಮಾನವಲೋಕಕ್ಕೆ ಬಂದೆ.
ಬಂದ ಬರವಿನಲ್ಲಿಯೆ ಭವವೆಂಬ ಭೂಪತಿ ಎನ್ನ ಸೆರೆವಿಡಿದು
ಕಾಲ-ಕಾಮರ ವಶಕ್ಕೆ ಕೊಟ್ಟನಯ್ಯ.
ಕಾಲಂಗೆ ಕಾಯುವ ದಂಡವ ತೆತ್ತದ್ದು ಲೆಕ್ಕವಿಲ್ಲ.
ಮನಸಿಜಂಗೆ ಮನವ ದಂಡವಿತ್ತುದ್ದು ಲೆಕ್ಕವಿಲ್ಲ.
ಹೋದಹೆನೆಂದರೆ ಒಳಕಾವಲವರು, ಹೊರಕಾವಲವರು ಹೊಗಲೀಸರು.
ನನ್ನ ಸೆರೆಯಲ್ಲಿ ನಾನು ಬಿಡಿಸಿಕೊಂಡು ಹೋದಹೆನೆಂದರೆ
ನಾನು ದರಿದ್ರನಯ್ಯ.
ಎನ್ನ ಸೆರೆಯ ಬಿಡಿಸಿಕೊಳ್ಳಿರಯ್ಯ ಬಸವಾದಿ ಪ್ರಮಥರೇ.
ನಿಮ್ಮ ಸೆರಗೊಡ್ಡಿ ಬೇಡಿಕೊಂಬೆನಯ್ಯ.
ಭಕ್ತಿಗೆ ಭಂಡಾರವಾಗಿಪ್ಪ ಸಂಗನ ಬಸವಣ್ಣ,
ಎನಗೆ ಹಾಗತೂಕ ಭಕ್ತಿಯ ಕೊಡಯ್ಯ.
ಪ್ರಸಾದವೆ ಚಿತ್ಪಿಂಡಸ್ವರೂಪವಾದ ಚೆನ್ನಬಸವಣ್ಣ,
ಎನಗೆ ಹಾಗತೂಕ ಜ್ಞಾನವ ಕೊಡಯ್ಯ.
ಮಾಯಾಕೋಲಾಹಲನಪ್ಪ ಅಲ್ಲಮಪ್ರಭುವೇ,
ಎನಗೆ ಹಾಗತೂಕ ವೈರಾಗ್ಯವ ಕೊಡಯ್ಯ.
ಬೆಟ್ಟದ ಗುಂಡತಂದು ಇಷ್ಟಲಿಂಗದಲ್ಲಿ
ಐಕ್ಯವ ಮಾಡಿದ ಘಟ್ಟಿವಾಳಲಿಂಗವೇ,
ಎನಗೆ ಹಾಗತೂಕ ಲಿಂಗವ ಕೊಡಯ್ಯ.
ಈ ನಾಲ್ಕು ಹಾಗ ಕೂಡಿದಲ್ಲಿಯೆ
ಮನಲಿಂಗದಲ್ಲಿ ಒಂದು ಹಣಮಪ್ಪುದು.
ಮನಲಿಂಗದಲ್ಲಿ ಒಂದು ಹಣವಾದಲ್ಲಿಯೇ
ಆ ಚಂದ್ರಾಯುಧ ದೊರಕೊಂಬುದು.
ಎನಗೆ ಚಂದ್ರಾಯುಧವಂ ಪಿಡಿದು,
ಒಳಕಾವಲ ನಾಲ್ವರ ಕೊರಳ ಕೊಯ್ದು,
ಹೊರಕಾವಲೈವರ ಹರಿಹಂಚುಮಾಡಿ
ಕೂಟದ ಕಾವಲವರ ಪಾಟಿಮಾಡದೆ,
ಭವದ ಬಳ್ಳಿಯ ಕೊಯ್ದು,
ಕಾಲ ಕಾಮರ ಕಣ್ಣ ಕಳೆದು,
ಎಡಬಲದ ಹಾದಿಯ ಹೊದ್ದದೆ,
ನಡುವಣ ಸಣ್ಣ ಬಟ್ಟೆಗೊಂಡು,
ರತ್ನಾಚಲವನೇರಿ, ಅಲ್ಲಿಪ್ಪ ಲಿಂಗಮಂ ಬಲಗೊಂಡು,
ನೀವಿದ್ದ ಉನ್ಮನಿಯ ಪುರಕ್ಕೆ ಬಂದು,
ನಿಮ್ಮ ಪಡುಗ ಪಾದರಕ್ಷೆಯಿಂ ಪಿಡಿದು,
ನಿಮ್ಮ ಬಾಗಿಲ ಕಾಯ್ದಿಪ್ಪುದೇ ಎನಗೆ ಭಾಷೆ.
ಎನ್ನ ಬಿನ್ನಪವ ನೀವು ಮನವೊಲಿದು ಕರುಣಿಪುದಯ್ಯ
ಇದಕೆ ನೀವೇ ಸಾಕ್ಷಿಯಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ./22
ಓಡು ಒಡಕು ಹುರುಳಿ ಹುಳುಕು
ಹುರಿವಾಕೆಯ ಕೈ ಸೊಟ್ಟು ಕಣ್ಣು ಕುರುಡು
ಮೆಲುವಾತ ಬೋಡ ಮೂಕೊರೆಗ.
ಇಂತಿವರು ತಮ್ಮ ಭೋಗಕ್ಕೆ ಸುರಪತಿಯ ಭೋಗವ ಜರಿವ
ನರಿಕುರಿಗಳ ನಾನೇನೆಂಬೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./23
ಕತ್ತಲೆ ಭೂತಳದ ವರ್ತಮಾನಕ್ಕೆ ಹೇಸಿ ಮನ ಓತು
ಸುಚಿತ್ತ ನಿರ್ವಾಣದಾಸೋಹಮಂ ಕೈವಿಡಿದೆನಮ್ಮಾ.
ಎನ್ನ ತನುವೇ ವನಿತೆ ಕರಣಂಗಳೇ ದ್ರವ್ಯ
ಉರವಣಿಸಿದ ಭಕ್ತಿ ಇಂತೀ ತ್ರಿವಿದ ಪದಾರ್ಥಗಳಂ ಹಿಡಿದು
ಗಣಂಗಳ ಮುಂದೆ
ಕರಪಾತ್ರೆಯೆಂಬ ಕಾಯಕಮಂ ಕಟ್ಟಿದೆ.
ಎನ್ನ ಸಮಯಾಚಾರಕ್ಕೆ ಸ್ಮಶಾನ ಮಂಟಪದಲ್ಲಿ ಗುರುವ ತಡೆದೆ.
ಹೃದಯಮಂಟಪದಲ್ಲಿಹ ಜಂಗಮವ ತಡೆದೆ.
ಎನ್ನ ಸ್ವಯ ಕಾಯಕಮಂ ತಂದು
ರೂಪು ಪದಾರ್ಥಗಳಂ ನಿರ್ಭಾವ ಪರಿಯಾಣದಲ್ಲಿ ಗಡಣಿಸಿ
ಗುರುವಿನ ಮುಂದಿಕ್ಕಿದೆ.
ರುಚಿ ಪದಾರ್ಥಂಗಳಂ ಸುಮನ ಪರಿಯಾಣದಲ್ಲಿ ಗಡಣಿಸಿ
ಜಂಗಮದ ಮುಂದಿಕ್ಕಿದೆ.
ತೃಪ್ತಿ ಪದಾರ್ಥಂಗಳಂ ಭಾವದ ಪರಿಯಾಣದಲ್ಲಿ ಗಡಣಿಸಿ
ಲಿಂಗದ ಮುಂದಿಕ್ಕಿದೆ.
ಇಂತೀ ನಿರಂಜನ ಗುರು ಲಿಂಗ ಜಂಗಮ ಸವಿದು
ಒಕ್ಕು ಮಿಕ್ಕ ತ್ರಿವಿಧಪ್ರಸಾದವನುಂಡು
ತ್ರಿವಿಧಕರ್ಮ ನಾಸ್ತಿಯಾಗಿ ನಾನು ಬದುಕಿದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./24
ಕತ್ತಲೆ ಸತ್ತು ಬೆಳಗು ಬೀದಿವರಿಯಿತ್ತು ನೋಡಾ ಎಲೆ ಅಮ್ಮಾ.
ಪಂಚತತ್ವಂಗಳ ಮೇಲಿಪ್ಪ ಆಚಾರಲಿಂಗದ ನಿಷ್ಠೆಯ ಬಲದಿಂದ
ಆ ಖಂಡಿತ ಕರಣಂಗಳನೊಳಕೊಂಡಿಪ್ಪ
ಈಷಣತ್ರಯಂಗಳ ಬೀಯವನಿಕ್ಕಿ ತ್ಯಾಗಾಂಗಿಯಾದೆ.
ಹದಿನೇಳುತತ್ವಂಗಳ ಮೇಲಿಪ್ಪ
ಜಂಗಮಲಿಂಗದ ಎಚ್ಚರಿನ ಬಲದಿಂದ
ಅನಂತಸವಿಯನೊಳಕೊಂಡಿಪ್ಪ ಷಡುರಸಾನ್ನಂಗಳಲಿ
ಲಿಂಗಭೋಗೋಪಭೋಗಿಯಾಗಿ ಭೋಗಾಂಗಿಯಾದೆ.
ಮೂರುತತ್ವಂಗಳ ಮೇಲಿಪ್ಪ
ನಿರಾಕಾರಲಿಂಗದ ಅರುಹಿನ ಬಲದಿಂದ
ಪ್ರಣವ ಪಂಚಾಕ್ಷರಿಯ ಸ್ಮರಿಸಿ
ಮನ ಮಹಾಲಿಂಗದಲ್ಲಿ ಯೋಗವಾಗಿ ಯೋಗಾಂಗಿಯಾಗಿ
ಚಿದ್ಪ್ರಹ್ಮಾಂಡದೊಳಗಣ ಏಳುತಾವರೆಯ ಮೇಲಿಪ್ಪ
ನಿಷ್ಕಲ ಚಿದ್ವಿಂದುಲಿಂಗಕ್ಕೆ ಪ್ರಾಣಪೂಜೆಯಂ ಮಾಡೆ
ಮಹಾಜ್ಞಾನಬಲದಿಂದ ನವದ್ವೀಪಗಳ ಲಿಂಗಂಗಳ ಬೆಳಗು
ಪಿಂಡಾಂಡದಲ್ಲಿ ಪ್ರಭಾವಿಸಿ ತೋರುತಿರ್ಪುದಾಗಿ
ನಾನು ಸರ್ವಾಂಗಲಿಂಗಿಯಾದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./25
ಕನ್ನವನ್ನಿಕ್ಕಿ ಚಿನ್ನವ ತಂದು
ಜಂಗಮಾರ್ಚನೆಯ ಮಾಡುವದಾವ ಸದಾಚಾರ?
ಹಾದರವಮಾಡಿ ಹಾಗವ ತಂದು
ಜಂಗಮಾರ್ಚನೆಯ ಮಾಡುವದಾವ ಸದಾಚಾರ?
ಗಾಣವ ಹಾಕಿ ಮೀನ ಹಿಡಿದು ತಂದು
ಜಂಗಮಾರ್ಚನೆಯ ಮಾಡುವದಾವ ಸದಾಚಾರ?
ಇಂತಿವರೆಲ್ಲರು
ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ
ಸದಾಚಾರಕ್ಕೊಳಗಾಗಿ ಮುಕ್ತಿವಡೆದರು.
ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ
ವ್ರತನೇಮಗಳ ಹಿಡಿದು ಬಿಟ್ಟವಂಗೆ
ಮುಂದು ಹಿಂದಾಯಿತು, ಆತ ವ್ರತಗೇಡಿ.
ಅದು ಹೇಗೆಂದೊಡೆ
ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ
ಕರ್ಮತ್ರಯಂಗಳು ಬೆನ್ನ ಬಿಡವೆಂದು
ಶರಣರ ವಚನಂಗಳು ಸಾರುತ್ತಿವೆ.
|| ಗ್ರಂಥ || `ಸ್ಥಾವರಂ ಭಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ|
ಉಭಯೋರ್ಭಿನ್ನಭಾವೇನ ನಾರ್ಚನಂ ನ ಚ ವಂದನಂ||’
ಇಂತೆಂದುದಾಗಿ
ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ?
ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ?
ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ?
ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ.
ಉರಿ ಕಪರ್ೂರವ ಹಿಡಿದಂತೆ
ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ
ಶರಣಸ್ಥಲದ ಮತವಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./26
ಕಪಿ ಕಳ್ಳ ಕುಡಿದು,
ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು,
ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು.
ಆದಿಯಲ್ಲಿ ನಿನ್ನ ಗರ್ಭಾಂಬುಧಿಯಲ್ಲಿ ಜನಿಸಿ, ನಿನ್ನ ನೆನಹಿಲ್ಲದೆ,
ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ,
ಪ್ರಾಣಲಿಂಗವನರಿಯದ ಪರಮಪಾತಕರ,
ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ,
ತಂದೆ-ತಾಯಿ ಬಂಧು-ಬಳಗವೆಂದು, ಭಾವಿಸಿದ
ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ,
ನಿಂದ ಠಾವಿಂಗೆ ನೀರ್ದಳಿವರಯ್ಯ.
ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ.
ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ.
ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ.
ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ,
ಮಾಡಿತಯ್ಯ ಎನ್ನ ಮಾಯೆ.
ಒರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ
ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ.
ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ.
ನಿನ್ನನೇ ಜನನೀ ಜನಕರೆಂಬ,
ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು,
ಜಾಗ್ರತ್ಸ ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ,
ಅಕ್ಕರಿಂದ ರಕ್ಷಿಪುದಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./27
ಕಾಮಧೇನುವಿನಲ್ಲಿ ಕಲ್ಪಿಸಿದ ಸವಿಯಿಪ್ಪುದಲ್ಲದೆ
ಮರ್ತ್ಯದ ಪಶುವಿನಲ್ಲಿ ಉಂಟೇನಯ್ಯ?
ಮಹಾಶೇಷನಲ್ಲಿ ಮಾಣಿಕ್ಯ ಪ್ರಭಾವಿಸುತಿಪ್ಪುದಲ್ಲದೆ
ಕೆರೆಯೊಳಗಣ ಒಳ್ಳೆಯೊಳಗುಂಟೇನಯ್ಯ?
ವಾರಣದ ಕುಂಭಸ್ಥಲದಲ್ಲಿ ಮೌಕ್ತಿಕ ಬೆಳಗುತಿಪ್ಪುದಲ್ಲದೆ
ಊರ ಹಂದಿಯಲ್ಲಿ ಉಂಟೇನಯ್ಯ?
ಶರಣರ ಮನೋಮಧ್ಯದಲ್ಲಿ ಆ ಶಿವನು ಮೂರ್ತಿಗೊಂಡು
ಆ ಶರಣರ ಜಿಹ್ವೆಯ ಕೊನೆಯ ಮೇಲೆ
ವಚನವೆಂಬ ಪರಮಾಮೃತವ ಕರೆದು
ಕೆಲಬಲದ ಗಣಂಗಳಿಗೆ ಸವಿದೋರಿ
ಆ ಶರಣರಲ್ಲಿ ಪರಿಪೂರ್ಣನಾಗಿಪ್ಪನಲ್ಲದೆ
ದ್ವೆ ತ ಅದ್ವೆ ತಗಳೆಂಬ ಮನೆ ಶುನಕ ಸೂಕರರಲ್ಲಿ ಉಂಟೇನಯ್ಯ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./28
ಕುಂದಣಕ್ಕೆ ಒಪ್ಪುವ ಒರೆ ಬಣ್ಣದ ಮಿಶ್ರವಂ
ಚಿನ್ನವರದ ಬಲ್ಲನಲ್ಲದೆ
ಗೇಯ್ದುಂಬ ಒಕ್ಕಲಮಗನೆಂತು ಬಲ್ಲನಯ್ಯ?
ವಸ್ತುವನೊಡಗೂಡುವ ಸಂಧಾನದ ನುಡಿಯಗಡಣದ
ಲಿಂಗ ಬೆಳಗ ಲಿಂಗಸಂಧಾನಿ ಬಲ್ಲನಲ್ಲದೆ
ಅರಿವು ಮರವೆಯನೊಳಕೊಂಡಿಪ್ಪ
ವೇಷಧಾರಿಗಳವರೆಂತು ಬಲ್ಲರಯ್ಯಾ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./29
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ,
ಹಂದಿಯ ತಂದು ಅಂದಣವನೇರಿಸಿದಂತೆ,
ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?.
ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು.
ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ.
ಒಡನಾಡಿದವರ ಕಡುಕೋಪದಿನಿರಿದುಕೊಂದೆ.
ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ.
ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ.
ಗೋವ ಕೊಂದವರ ವಹಿಸಿಕೊಂಡೆ.
ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ.
ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು.
ಇಂತಪ್ಪ ಮಹಾಪಾತಕಂಗಳ ಮಾಡಿದ್ದ
ಹೊಲೆಯನಿವನೆಂದು ನೀನರಿದ ಬಳಿಕ,
ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು,
ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ.
ಅದೇನು ಕಾರಣವೆಂದೊಡೆ-
ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ,
ನಾಳೆ ಶೂಲಕ್ಕೆ ತೆಗಸುವರೆ,
ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ,
ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ,
ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು,
ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು
ವೀರವೃಂದದ ಹಲಗೆ ಕಹಳೆಯಂ,
ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ,
ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು,
ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ
ಸಟೆಯುಪಚಾರಕ್ಕಾದ ಲಾಂಛನವಲ್ಲದೆ,
ದಿಟದೊಲವಲ್ಲವಯ್ಯ ದೇವನೆ.
ನಾನು ಮುಂದನರಿಯದಂಧಕನಯ್ಯ.
ನಿನ್ನ ಬಾಗಿಲ ಕಾವ ಗೊಲ್ಲನಯ್ಯ.
ನಿನ್ನ ಕುದುರೆಯ ಸಾಕುವ ಗೋವನಯ್ಯ.
ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ.
ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ.
ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ.
ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ.
ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./30
ಕೆಳದಿಯರೊಡನಾಡಿ ಕಾಮಕಲಾಪ್ರೌಢಿಯನರಿದು
ಪ್ರಾಣಕಾಂತನ ಒಲಿಸಿ ಸುರತಸಂಯೋಗದೊಳಿಪ್ಪ ಕಾಮಿನಿಗೆ
ಮತ್ತೆ ಕೆಳದಿಯರ ಕೂಡಣ ವಿನೋದಕ್ಕೆ ಮನವೆಳಸುವುದೇ ಅಯ್ಯ?
ಶರಣ ಸಂಭಾಷಣೆಯಿಂದ
ಪುರಾತನವಚನದ ಪರಮಾಮೃತವ ದಣಿಯಲುಂಡು
ಆ ವಚನದ ಹೆಜ್ಜೆವಿಡಿದು ಹೋಗಿ
ತ್ರಿವಿಧಲಿಂಗದ ಆದ್ಯಂತಮಂ ಅರಿದು
ಆ ಲಿಂಗಂಗಳಂ ಅರಿವಿಡಿದಾಚರಿಸಿ
ಷಡಂಗ ಷಡ್ವಿಧಲಿಂಗಂಗಳಿಗೆ ಮಾತೃಸ್ಥಾನವಾದ
ನಿಷ್ಕಳಬ್ರಹ್ಮವೆನಿಪಾ ಸಿದ್ಧಲಿಂಗ ಪ್ರಭುವಂ ಕಂಡು
ಆ ಸಿದ್ಧಲಿಂಗ ಪ್ರಭುವಂ
ಹೃದಯ ತ್ರಿಪುಟಿ ಸುಷುಮ್ನೆಯೆಂಬ
ಮೂರು ಸಿಂಹಾಸನದ ಮೇಲೆ
ಗುರು ಲಿಂಗ ಜಂಗಮವೆನಿಸಿ ಮೂರ್ತಿಗೊಳಿಸಿಕೊಂಡು
ತುಂಬಿ ತುಳುಕದ ಮಂದಮಾರುತ ಮೈ ಸೋಂಕದ
ಭಾನುವಿನಕಿರಣಕ್ಕೆ ಬಳಲದ
ಚಂದ್ರೋದಯಕ್ಕೆ ಅಂದವಾಗದ
ಜನರ ಕಣ್ಮನಕ್ಕೆ ಅಗೋಚರವಾದ
ಜಾಜಿ ಸಂಪಿಗೆ ಇರವಂತಿಗೆ ಮಲ್ಲಿಗೆ
ಕೆಂದಾವರೆ ಸೇವಂತಿಗೆ ಎಂಬ
ಭಾವ ಪುಷ್ಪಂಗಳಲ್ಲಿ ಪೂಜೆಯಂ ಮಾಡಿ
ಬೀಗಿ ಬೆಳವುತ್ತಿಪ್ಪ ಶರಣಂಗೆ
ಮತ್ತೆ ಅನುಭಾವದ ಸುಖ ಸವಿದೋರುವುದೇ ಅಯ್ಯ?
ಕೆನೆ ಸಾಧ್ಯವಾದ ಬಳಿಕ ಹಾಲಿನ ಹಂಗೇತಕಯ್ಯಾ?
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./31
ಕೇಳು ಕೇಳಯ್ಯ ಆತ್ಮನೇ,
ಎರಡು ಪ್ರಕಾರದ ಆದಿಮಧ್ಯ ಅವಸಾನವ ತಿಳಿದು ನೋಡು,
ಕೆಡಬೇಡ ಕೆಡಬೇಡ.
ತಂದೆಯ ದೆಸೆಯಿಂದ ತಾಯಿ ಯೋನಿಚಕ್ರದಲ್ಲಿ ಬಂದುದೇ ಆದಿ.
ಹೊನ್ನು ಹೆಣ್ಣು ಮಣ್ಣು ನನ್ನದೆಂದು ಹಿಡಿದು ಷಟ್ಕರ್ಮವನಾಚರಿಸಿ
ಸುಖದುಃಖಂಗಳಲ್ಲಿ ಮುಳುಗಿಪ್ಪುದೇ ಮಧ್ಯ.
ಆತ್ಮನ ಕೃಪೆಯಿಂದ ಅರೆದು ಸಣ್ಣಿಸಿಕೊಂಡು
ಭವಕ್ಕೆ ನೂಂಕಿಸಿಕೊಳ್ಳುವುದೇ ಅವಸಾನ.
ಇವನರಿದು ಇವಕ್ಕೆ ಹೇಹಮಂ ಮಾಡು.
ಮತ್ತೆ ಆದಿ ಮಧ್ಯ ಅವಸಾನಮಂ ತಿಳುಹುವೆನು.
ನಾನು ಮಹಾಲಿಂಗದ ಗರ್ಭಾಬ್ಧಿಯಲ್ಲಿ ಬಂದೆನೆಂಬುದೇ ಆದಿ.
ಲೋಕದ ವ್ಯವಹಾರವ ಸಾಕುಮಾಡಿ
ಇಷ್ಟಲಿಂಗದಲ್ಲಿ ನಿಷ್ಠೆಯಾಗಿ,
ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿ,
ಕ್ಷುತ್ತಿಂಗೆ ಭಿಕ್ಷೆ ಶೀತಕ್ಕೆ ರಗಟೆಯಾಗಿ,
ಮೋಕ್ಷಗಾಮಿಯಪ್ಪುದೇ ಮಧ್ಯ.
ತನುವ ಬಿಡುವಲ್ಲಿ ಮನವ ಪರಬ್ರಹ್ಮಕ್ಕೆ ಸಮರ್ಪಣ ಮಾಡಿ,
ಜನನ-ಮರಣ ಗೆಲುವುದೇ ಅವಸಾನ.
ಇದನರಿದು ಇದಕ್ಕೆ ಮೆಚ್ಚಿ,
ಲಿಂಗವನೆ ಸಾಧಿಸು ವೇಧಿಸು.
ಕಪಿಯ ಕೈಯ ಕನ್ನಡಿಯಂತೆ ಕುಣಿದರೆ ಕುಣಿದು,
ಏಡಿಸಿದರೆ ಏಡಿಸಿ, ಹಲ್ಲುಕಿರಿದರೆ ಹಲ್ಲುಕಿರಿದು,
ಮನವಾಡಿದಂತೆ ನೀನಾಡಬೇಡ.
ಮನವಾಡಿದಂತೆ ಆಡಿದವಂಗೆ,
ಭಕ್ತಿಯೆಲ್ಲಿಯದು? ಜ್ಞಾನವೆಲ್ಲಿಯದು?
ವೈರಾಗ್ಯವೆಲ್ಲಿಯದು? ವಿರಕ್ತಿಯೆಲ್ಲಿಯದು?
ಮುಕ್ತಿಯೆಲ್ಲಿಯದಯ್ಯಾ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./32
ಕೋಗಿಲೆ ಸ್ವರಗೈದಿತೆಂದು
ಕಾಗೆ ಅದಕ್ಕೆ ಇದಿರಾಗಿ ಕುಳಿತು ಕರ್ರೆಂದು ಕಟಕಿಯನಾಡಿದರೆ
ಆ ಕೋಗಿಲೆಗಾದ ಕೊರತೆಯೇನಯ್ಯ?
ಸೂರ್ಯ ಪ್ರಕಾಶವನುಳ್ಳವನಲ್ಲಿ ಕತ್ತಲೆ ಮೈಯವನೆಂದು
ಹಗಲು ಕಣ್ಣು ಕಾಣದ ಗೂಗೆ ಕೆಟ್ಟು ನುಡಿದರೆ
ಸೂರ್ಯನಿಗಾದ ಕೊರತೆಯೇನಯ್ಯ?
ಕನ್ನಡಿಗೆ ಮೂಗಿಲ್ಲವೆಂದು ಮೂಕೊರೆಯೆ ಹಳಿದರೆ
ಆ ಕನ್ನಡಿಗಾದ ಕೊರತೆಯೇನಯ್ಯ?
ದ್ವೈತ ಅದ್ವೈತವ ನೂಂಕಿ
ಅಂಗ ಲಿಂಗದ ಹೊಲಬನರಿದು ಸ್ವಯಂಲಿಂಗಿಯಾದ ಶರಣನ
ಅಂಗವಿಕಾರದ ಪಂಗುಳ ಮಾನವರು
ಜರಿದು ರುುಂಕಿಸಿ ನುಡಿದರೆ
ಆ ಲಿಂಗಾನುಭಾವಿಗಾದ ಕೊರತೆಯೇನಯ್ಯಾ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./33
ತಾಪತ್ರಯಂಗಳಿಗೆನ್ನನು ಒಳಗುಮಾಡುವ
ಕರ್ಮತ್ರಯಂಗಳು ಕೆಟ್ಟಕೇಡ ನೋಡಾ ಎಲೆ ತಂಗಿ.
ಕಾಯದ ಕಳವಳಕಂಜಿ ಸಂಚನ ಮಡಗುವ
ಹೊನ್ನ ಬಿಟ್ಟಲ್ಲಿಯೇ ಸಂಚಿತಕರ್ಮ ನಾಸ್ತಿಯಾಯಿತು.
ಬಂದುದು ಮೊದಲಾಗಿ ಆಗಾಗಲೇ ಅನುಭವಿಸಿ
ಲಬ್ಧವನುಳಿಯಲೀಯದೆ ಭೋಗವನುಂಬ
ಹೆಣ್ಣ ಬಿಟ್ಟಲ್ಲಿಯೇ ಪ್ರಾರಬ್ಧಕರ್ಮ ನಾಸ್ತಿಯಾಯಿತು.
ಇಂದು ಬಿತ್ತಿ ಮುಂದಕ್ಕೆ ಆಗು ಮಾಡುವ
ಮಣ್ಣ ಬಿಟ್ಟಲ್ಲಿಯೇ ಆಗಾಮಿಕರ್ಮ ನಾಸ್ತಿಯಾಯಿತು.
ಸಂಚಿತಕರ್ಮ ನಾಸ್ತಿಯಾದಲ್ಲಿಯೇ
ಬ್ರಹ್ಮನ ಸೃಷ್ಟಿಯೆಂಬ ಸೆರೆಮನೆ ಹಾಳಾಯಿತು.
ಪ್ರಾರಬ್ಧಕರ್ಮ ನಾಸ್ತಿಯಾದಲ್ಲಿಯೇ
ವಿಷ್ಣುವಿನ ಸ್ಥಿತಿಯೆಂಬ ಸಂಕೋಲೆ ತಡೆಗೆಡೆಯಿತು.
ಆಗಾಮಿಕರ್ಮ ನಾಸ್ತಿಯಾದಲ್ಲಿಯೇ
ರುದ್ರನ ಸಂಹಾರವೆಂಬ ಪ್ರಳಯಾಗ್ನಿ ಕೆಟ್ಟಿತ್ತು.
ಇಂತೀ ಮೂವರ ದಾಂಟಿದಲ್ಲಿಯೇ
ತಂದೆ ತಾಯಿಗಳೆನ್ನ ಕೈವಿಡಿದೆತ್ತಿಕೊಂಡು
ಬಸವಾದಿ ಪ್ರಮಥರ ಕೈ ವಶವ ಮಾಡಿದರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./34
ತೊಟ್ಟುಬಿಟ್ಟ ಹಣ್ಣಾಗಿ ಎನಗೆ ನಿಜೈಕ್ಯದ ಬಟ್ಟೆ ನಿರುತವಾಯಿತಯ್ಯ.
ಪರಿಭವಕ್ಕೆ ತರುವ ಪಂಚಭೂತಂಗಳೆಂಬ ವಾರಕವ
ಪಂಚಬ್ರಹ್ಮಕ್ಕೊಪ್ಪಿಸಿದೆ.
ಅಗಣಿತ ಕರಣಂಗಳನೊಳಕೊಂಡು
ಸುಖವೊಂದು ದುಃಖಹದಿನಾರಕ್ಕೊಳಗು ಮಾಡುವ
ಆತ್ಮನೆಂಬ ವಾರಕವ ಪರಬ್ರಹ್ಮಕ್ಕೊಪ್ಪಿಸಿದೆ.
ಉತ್ಪತ್ತಿ ಸ್ಥಿತಿ ಪ್ರಳಯವೆಂಬ ವಾರಕವ
ಮೂದೇವರಿಗೊಪ್ಪಿಸಿದೆ.
ಇಂತಪ್ಪ ಋಣಂಗಳ ತಿದ್ದಿ ಸಿರಿವಂತನಾಗಿ
ಭವರಾಜನ ಬಲವ ಗೆದ್ದೆ.
ಭೂತಳದ ಭೋಗವ ನಚ್ಚು ಮುಚ್ಚೆಂಬ ಕೋಳಮಂ ಕಳೆದೆ.
ಹೊಕ್ಕು ಹೊರಡುವ ತ್ರಿಭುವನವೆಂಬ ತ್ರಿಪುರಮಂ ಸುಟ್ಟು
ಸಂಸಾರವೆಂಬ ಸಪ್ತಸಮುದ್ರಂಗಳಂ ದಾಂಟಿದೆ.
ಉನ್ಮನಿಯಪುರದ ಬಚ್ಚಬರಿಯ ಬೆಳಗಿನ
ಬಯಲಬ್ರಹ್ಮವ ಮರೆಹೊಕ್ಕೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./35
ದೇವ,
ಕಂಬಳಕ್ಕೆ ಹೋಗಿ ಕನಕದಕೊಡನ ಕಂಡಂತೆ
ಮರ್ತ್ಯಲೋಕಕ್ಕೆ ಬಂದು ಮಾನವಜನ್ಮವ ಕಂಡೆ.
ಆ ಮಾನವ ಜನ್ಮಕ್ಕೆ
ಘೃಣಾಕ್ಷರನ್ಯಾಯದಂತೆ ಲಿಂಗ ಬಂದುದ ಕಂಡೆ.
ಎನಗಿದು ಚೋದ್ಯವಯ್ಯ ಎನಗಿದು ವಿಪರೀತವಯ್ಯ
ಇದಕ್ಕೆ ನುಡಿದಂತೆ ನಡೆಸು ನಡೆದಂತೆ ನುಡಿಸು.
ನುಡಿ ನಡೆಗೆ ಭಿನ್ನವಾದರೆ ನಿಮ್ಮ ಶರಣರೊಪ್ಪರು.
ನಿಮ್ಮ ಶರಣರೊಪ್ಪದಲ್ಲಿಯೆ ನೀನೊಪ್ಪೆ.
ನೀನೊಪ್ಪದಲ್ಲಿಯೆ ಬಂದಿತೆನಗೆ ಭವದ ಹೆಮ್ಮಾರಿ.
ಅದಕ್ಕೆ ನಾನಂಜುವೆನಯ್ಯ ನಾನಳಕುವೆನಯ್ಯ.
ನುಡಿ- ನಡೆ ಎರಡಾಗದಂತೆ ನಡೆಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./36
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ.
ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ
ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ
ಅರಣ್ಯಮಧ್ಯದಲ್ಲಿ
ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ
ತೃಷೆಯೆದ್ದು ಮನವ ಮತಿಗೆಡಿಸಿ
ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು
ಆ ಸಮಯದಲ್ಲಿ ಖರ್ಜೂರ ಮಾವು
ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು
ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು
ವೃಕ್ಷಂಗಳಡಿಯಲ್ಲಿ ಬಿದ್ದಿರಲು
ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ
ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ.
ಅದೇನು ಕಾರಣವೆಂದೊಡೆ
`ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ’ವೆಂದು
ಆದ್ಯರ ವಚನ ಸಾರುತೈದಾವೆ ನೋಡಾ.
ಇದು ಕಾರಣ-
ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ
ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು
ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ
ಮುಂದನರಿಯದೆ ನುಡಿದೆನಯ್ಯ.
ಸತಿಯ ಭಾಷೆ ಪತಿಗೆ ತಪ್ಪದಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./37
ನಿಜಗುಣ ಚೆಂದಿಮರಸರು ಕರಸ್ಥಲದ ನಾಗಿದೇವರೊಳಗಾದ
ಎಲ್ಲಾ ವಿರಕ್ತರು ಆವ ಕ್ರಿಯೆಯಲ್ಲಿ ಆಚರಿಸಿ ಲಿಂಗೈಕ್ಯರಾದರೆಂದು
ಕೆಟ್ಟು ನುಡಿವ ಭವಹೇತುಗಳು ನೀವು ಕೇಳಿರೆ.
ಅವರು ತುಂಬಿದ ತೊರೆಯ ಸಂಭ್ರಮದಿಂದ ಹಾಯ್ದರು.
ಶಕ್ತಿಯ ಮುಂದೆ ಹಾಲು ಬೋನ ಹಣ್ಣು ಕಜ್ಜಾಯವಿಕ್ಕಿರಲು
ಆ ಶಕ್ತಿಯ ಮಾತನಾಡಿಸಿ ಉಂಡರು.
ವಿಷವ ಪದಾರ್ಥವೆಂದು ಕೊಡಲು ಉಂಡು ದಕ್ಕಿಸಿಕೊಂಡರು.
ಭಿಕ್ಷಕ್ಕೆ ಹೋದಲ್ಲಿ ಕಾಮುಕ ಸ್ತ್ರೀ ಬಂದು ಹಿಡಿದಡೆ
ಅವರಂಗಳದಲ್ಲಿ ಅವಳ ಅನುಭವಿಸುವಾಗ
ಆ ಸಮಯದಲ್ಲಿ ಮನೆಯೊಡೆಯ ಬಂದು ಕಡಿದರೆ
ಖಂಡೆಯದ ಮೊನೆಗೆ ಬಯಲಾಗಿ ತೋರಿದರು.
ಪಚ್ಚೆಯ ಕಡಗಮಂ ತಿರುಗಣಿಯ ಮಡುವಿಗಿಟ್ಟು
ತಿರುಗಿ ಕರೆದುಕೊಂಡರು.
ಕೆಂದೆಂಗಿನ ಎಳನೀರ ಭಾವಾರ್ಪಣವ ಮಾಡಿದರು.
ಪಟ್ಟದರಸಿನ ರಾಣಿಯು ಪಲ್ಲಕ್ಕಿಯ ಮೇಲೆ ಹೋಗುವಲ್ಲಿ
ಅವಳ ಬಟ್ಟಮೊಲೆವಿಡಿದು ಮುದ್ದಾಡಿ
ಇರಿಸಿಕೊಂಡು ಬಯಲಾದರು.
ದೇವೇಂದ್ರಭೋಗಮಂ ಬಿಟ್ಟರು.
ತನು ನಿಲಿಸಿ ಪ್ರಾಣವ ಕೊಂಡೊಯ್ದರು.
ಉಂಗುಷ್ಠದಲ್ಲಿ ಧರಿಸಿದ್ದ ಲಿಂಗಮಂ ತೆಗೆಯಲು
ಆ ಲಿಂಗದ ಕೂಡೆ ಪ್ರಾಣವ ಕಳುಹಿದರು.
ಮಿಡಿವಿಲ್ಲಿನೊಳಗೆ ಲಿಂಗವನೆಚ್ಚು
ಆ ಲಿಂಗದೊಡನೆ ನಿರವಯಲಾದರು.
ಉಪಾಧಿಕೆಯೊಡಲಾಸೆಯ ಸುಟ್ಟರು.
ಚಳಿ ಮಳೆಯೆನ್ನದೆ ಅರಣ್ಯದಲ್ಲಿದ್ದರು.
ಹಸಿದರೆ ಕೆಸರ ಮೆದ್ದರು.
ಅವರು ಲಿಂಗಾಂಗರೂಢರಾಗಿ ಲಿಂಗದಲೈಕ್ಯರಾದರು.
ನೀವು ಅವರಂತೆ ಲಿಂಗಾಂಗವ ತೋರಬೇಕು.
ಅದಿಲ್ಲದಿದ್ದರೆ ಜ್ಞಾನಕ್ರಿಯಗಳಿಂದಿರಬೇಕು.
ಅದಿಲ್ಲದಿದ್ದರೆ ಸುಮ್ಮನಿದ್ದು ಶಿವಶರಣರ ಮನಸಿಂಗೆ ಬರಬೇಕು.
ಹೀಗಲ್ಲದೆ
ಹೊಟ್ಟೆಯಕಿಚ್ಚಿನ ಬಾಯಿ ಬಡಕುತನವೇತಕಯ್ಯ ನಿಮಗೆ?
ಆನೆ ಮದವೆದ್ದು ಸೋಮವೀಥಿಯ ಸೂರೆಮಾಡಿತೆಂದು
ಆಡು ಮದವೆದ್ದು ಬೇಡಗೇರಿಗೆ ಹೋಗಿ
ಕೊರಳ ಮುರಿಸಿಕೊಂಬಂತೆ
ಅಂದಿನ ಕಾಲದ ಹನುಮ ಲಂಕೆಯ ದಾಂಟಿದನೆಂದು
ಇಂದಿನ ಕಾಲದ ಕಪಿ ಹಳ್ಳವ ದಾಂಟಿದಂತೆ
ಅರ್ತಿಯಿಂದ ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರಿದಂತೆ
ರಾಜಕುಮಾರ ತೇಜಿಯನೇರಿದನೆಂದು
ರಜಕನ ಕುವರ ಕುನ್ನಿಯನೇರಿದಂತೆ
ಬಲಮುರಿಯ ಶಂಖ ಧಿಗಿಲು ಭುಗಿಲೆಂದು ರುುಂಕರಿಸಿತೆಂದು
ಕೆರೆಯೊಳಗಣ ಗುಳ್ಳೆ ಕೀಚು ಕೀಚೆಂದಂತೆ
ತಮ್ಮಿರವ ತಾವರಿಯದೆ
ಬಾಳುವ ಕಾಲದಲ್ಲಿ ಮರಣದ ಮದ್ದಕೊಂಬ
ಈ ಖೂಳ ಮಾನವರ ಎನಗೊಮ್ಮೆ ತೋರದಿರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./38
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು
ಶಿವಶರಣರು ನುಡಿಯುತ್ತಿಪ್ಪರು.
ಆ ಸಂಧಾನದ ಹೊಲಬ ನಾನರಿಯೆ, ಎನಗೆ ಮುಕ್ತಿಯಿಲ್ಲ.
ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ.
ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ
ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ.
ಗುರು ಕೊಟ್ಟ ಸಂಧಾನವೆ
ಎಂಟೆಸಳಿನ ಚೌದಳದ ಮಧ್ಯದಲ್ಲಿ
ಹೊಂಗಲಶದಂತೆ ಥಳಥಳನೆ ಹೊಳೆಯುತ್ತಿದೆ.
ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ
ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ.
ಗುರು ಕೊಟ್ಟ ಸಂಧಾನವೆ
ಪಂಚಪತ್ರದ ಮಧ್ಯದಲ್ಲಿ
ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿದೆ.
ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು.
ಇವನೆ ಕಣ್ದುಂಬಿ ನೋಡು
ಇವನೆ ಮನದಣಿವಂತೆ ಹಾಡು
ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ.
ತಪ್ಪದು ನೀನಂಜಬೇಡ.
ಗುರು ಕೊಟ್ಟ ಸಂಧಾನವಂ ಮರೆದು
ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./39
ನಿತ್ಯವಾಗಿಪ್ಪ ಪರಮಾತ್ಮನು ಅನಿತ್ಯವಾಗಿಪ್ಪ ದೇಹದೊಡನಾಡಿ
ಜೀವನಾಗಿ ಹೋಗುತ್ತಿದೆ ನೋಡಾ.
ನಿತ್ಯ ಅನಿತ್ಯದ ಸಂದನಿಕ್ಕಿದ ಸಮರ್ಥರಾರಯ್ಯ?
ಇದಕ್ಕೆ ಅನುಕೂಲವಾಗಿ ಮಾಡಿದವರು ಮತ್ತೊಬ್ಬರುಂಟೆಂದು
ನಿನ್ನ ಮನದಲ್ಲಿ ತಿಳಿಯಬೇಡ.
ಅದು ತನಗೆ ತಾನೇ ಮಾಡಿಕೊಂಡಿತು.
ಅದು ಹೇಗೆಂದೊಡೆ
ಆತ್ಮನು ಭೋಗವೆಂಬ ಸೂಜಿಯಂ ಪಿಡಿದು
ಆ ಸೂಜಿಗೆ ಮೂರೊಂದು ಕರಣ
ಎರಡು ಮೂರು ಇಂದ್ರಿಯಂಗಳೆಂಬ ನವಸೂತ್ರವನೇರಿಸಿ
ತನು ಮನದಂಚ ಸೇರುವೆಯಂ ಮಾಡಿ
ಕಂಠದಾರಮಂ ಕಟ್ಟಿ
ಸಂದರಿಯಬಾರದಂತೆ ಅದು ತನಗೆ ತಾನೆ ಹೊಲುಕೊಂಡಿತ್ತು.
ಇದು ಬಿಚ್ಚಿ ಬೇರೆ ಮಾಡುವ ಪರಿಯಾವುದಯ್ಯ?
ಭೋಗವೆಂಬ ಸೂಜಿಯಂ ಮುರಿದು
ನಾಲ್ಕು ಕರಣ ಐದಿಂದ್ರಿಯವೆಂಬ
ಒಂಬತ್ತು ದಾರಮಂ ತುಂಡತುಂಡಿಗೆ ಹರಿಯಲೊಡನೆ
ತನು ಪ್ರಕೃತಿಯಂ ಕೂಡಿತ್ತು.
ಪ್ರಾಣ ಪರಬ್ರಹ್ಮವಂ ಕೂಡಿತ್ತು ಕಾಣಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./40
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ
ಗಮನಿಯಾದ ಶರಣಂಗೆ ಅನುಗೊಳದೆಂಬ
ಅಣ್ಣಗಳು ನೀವು ಕೇಳಿರೇ.
ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ
ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು
ರವಿಕಿರಣಂಗಳು ಹಿಂದುಳಿದಿಪ್ಪವೇ?
ಅದು ಕಾರಣ-
ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು.
ಅಂಗವಿದ್ದಲ್ಲಿ ಲಿಂಗವಿಪ್ಪುದು.
ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು.
ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ.
ಆ ಶರಣ ನಡೆದಲ್ಲಿಯೇ
ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ.
ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ.
ಆ ಶರಣ ನೋಡುವಲ್ಲಿಯೇ
ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ.
ಆ ಶರಣ ನೋಡುವಲ್ಲಿಯೇ
ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ.
ಶರಣ ಕುಂಭಿಸುವಲ್ಲಿಯೇ
ಓಂಕಾರ ಒಡಗೂಡುವುದಯ್ಯ.
ಶರಣ ರೇಚಿಸುವಲ್ಲಿಯೇ
ಪಂಚಾಕ್ಷರಂಗಳು ಎಡೆಯಾಡುತ್ತಿವೆ.
ಶರಣ ಸುಳಿವಲ್ಲಿಯೇ
ಹಲವು ಪ್ರಕಾರದ ವಸ್ತುಗಳ ತನುಸೋಂಕು
ಲಿಂಗಮನವ ತುಂಬುತ್ತಿದೆ.
ಇದು ಕಾರಣ
ತೋಂಟದಾರ್ಯನ ಕರುಣಪ್ರಸಾದಮಂ ಪಡೆದು
ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ
ಗಮನಾಗಮನವೆಂಬುಭಯವುಂಟೇ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./41
ನಿರ್ವಾಣಪದಕ್ಕೆ ಕಾಮಿತನಾಗಿ
ಸಕಲಪ್ರಪಂಚಿನ ಗರ್ವವಂ ನೆಗ್ಗಲೊತ್ತಿ
ಏಕಲಿಂಗನಿಷ್ಠಾಪರವಾಗಿ ಆಚರಿಸುವ ಪರಮ ವಿರಕ್ತರ
ಉಪಾಧಿಕೆಯಿಲ್ಲದ ಕ್ರೀಗಳಾವುವಯ್ಯ ಎಂದರೆ-
ತ್ರಿಸಂಧ್ಯಾಕಾಲದಲ್ಲಿ ಲಿಂಗಪೂಜೆ
ಲಿಂಗೋದಕ ಹಲ್ಲುಕಡ್ಡಿ ಮೊದಲಾದ ಸಕಲ ಪದಾರ್ಥಂಗಳ
ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಎಚ್ಚರಿಕೆ
ತೀರ್ಥಪ್ರಸಾದದಲ್ಲಿ ಅವಧಾನ
ಅಚ್ಚ ಲಿಂಗೈಕ್ಯರ ಮನೆಯಲ್ಲಿ ಭಿಕ್ಷ
ಕಠಿಣ ಪದಾರ್ಥಂಗಳಂ ಹಿಡಿದರೆ ಹಿಡಿದಂತೆ
ಬಿಟ್ಟರೆ ಬಿಟ್ಟಂತೆ ಇಪ್ಪುದು.
ತದ್ದಿನವ ಕಳೆದು ಭವಿ ಭಕ್ತಿಯನೊಪ್ಪುಗೊಳ್ಳದೆ
ಬಿದ್ದ ಫಲಂಗಳ ಮುಟ್ಟದೆ
ರಾತ್ರಿಯ ಕಾಲಕ್ಕೆ ಭಿಕ್ಷ ಬಿಡಾರವೆಂದು
ಭಕ್ತರು ಬಿನ್ನಹ ಮಾಡಿದರೆ ಕೈಕೊಂಬುದು
ಅಲ್ಲದಿದ್ದರೆ ಹೋಗಲಾಗದು.
ಭಕ್ತರು ವಿಭೂತಿ ಮುಂತಾದಿ ಪದಾರ್ಥಕ್ಕೆ ಹೇಳಿದರೆ
ಇಚ್ಛೆಯಾದರೆ ಕೈಕೊಂಬುದು ಒಲ್ಲದಿದ್ದರೆ ಬಿಡುವುದು.
ಒಪ್ಪಿಕೈಕೊಂಡ ಬಳಿಕ ವಿಭೂತಿಯ ಮೀರಲಾಗದು.
ವಿಭೂತಿಯ ಕಟ್ಟು ವಿರಕ್ತರಿಗೆ ಇಲ್ಲವೆಂಬುದು ಶರಣಸ್ಥಲಕ್ಕೆ
ಸಲ್ಲದು.
ಇಂತಿವೆಲ್ಲವು ಗಣಂಗಳು ಒಪ್ಪವಿಟ್ಟ ಆಚರಣೆ.
ಈ ಆಚರಣೆಯ ಸಮಾಧಿಯೋಗ ಪರಿಯಂತರ
ನಡೆಸುವಾತನೀಗ ನಿರಂಗ ಶರಣ.
ಅದಲ್ಲದೆ
ಪುರಾತನರ ಗೀತವನೋದಿ ಪುರಾತನರ ಮಕ್ಕಳಾದ ಬಳಿಕ
ಕಿರಾತರ ಮಕ್ಕಳಂತೆ ಮನ ಬಂದ ಪರಿಯಲ್ಲಿ ನಡೆಯಲಾಗದು.
ಪುರಾತನರಂತೆ ನಡೆವುದು.
ಹೀಗಲ್ಲದೆ
ಹೊತ್ತಿಗೊಂದು ಬಗೆ ದಿನಕೊಂದು ಪರಿಯಾಗಿ ನಡೆಸುವಲ್ಲಿ
ಶರಣನೇನು ಮುಗಿಲಬಣ್ಣದ ಬೊಂಬೆಯೆ?
ಶರಣ ಮೊಲನಾಗರೇ? ಶರಣನಿಂದ್ರಚಾಪವೇ?
ಶರಣ ಗೋಸುಂಬೆಯೇ?
ನೋಡಿರಯ್ಯ ಕಡಿದು ಕಂಡರಿಸಿ ಒಪ್ಪವಿಟ್ಟ
ರತ್ನದಪುತ್ಥಳಿಯ ಪ್ರಕಾಶದಂತೆ ನಿಜಗುಂದದಿಪ್ಪುದೀಗ ಶರಣಸ್ಥಳ.
ಬಾಲಕನಿಲ್ಲದ ಅಂಗನೆಯ ಮೊಲೆಯಲ್ಲಿ ಹಾಲು ತೊರೆವುದ
ಅಯ್ಯ?
ಕ್ರಿಯವಿಟ್ಟು ನಡೆವ ಆಚರಣೆಯೆಲ್ಲಿಯದೋ
ಮುಕ್ತಿಯ ಪಥಕ್ಕೆ ಕ್ರಿಯೆ ಸಾಧನವಲ್ಲದೆ?
ಅದು ಹೇಗೆಂದೊಡೆ-
ಕ್ರೀಯೆಂಬ ಬೀಜದಲ್ಲಿ ಸಮ್ಯಜ್ಞಾನವೆಂಬ ವೃಕ್ಷ ಪಲ್ಲವಿಸಿತ್ತು.
ಆ ವೃಕ್ಷ್ಲದಲ್ಲ್ವಿ ಭಕ್ತಿಯೆಂಬ ಹೂವಾಯಿತ್ತು.
ಆ ಹೂವು ಲಿಂಗನಿಷ್ಠೆಯೆಂಬ ಹಣ್ಣಾಯಿತ್ತು.
ಆ ಹಣ್ಣಿನ ಅಮೃತಸಾರಮಂ ನಾನು ದಣಿಯಲುಂಡು
ಬಸವಾದಿ ಪ್ರಮಥರ ಪಡುಗ ಪಾದರಕ್ಷೆಯಂ
ಹಿಡಿವುದಕ್ಕೆ ಯೋಗ್ಯನಾದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./42
ಪರಮ ಲಿಂಗಾಂಗಿಯ ಇರವು ಎಂತಿಪ್ಪುದಯ್ಯಾ ಎಂದರೆ
ವಾಕ್ಕು ಮೂಲ ಮಂತ್ರದಲ್ಲಿ ಜೋಕೆಗುಂದದೆ
ಪಾಣಿ ಶಿವಲಿಂಗಪೂಜೆಗೆ ಮಾಣದೆ ಮನಸಂದು
ಪಾದವೇಕಾಂತವಾಸಕ್ಕೆ ಹರುಷದಿಂದ ಪದವಿಟ್ಟು
ಗುಹ್ಯ ಬ್ರಹ್ಮಚಾರಿಯಾಗಿ ಆನಂದಮಂ ಅಳಿದು
ಪಾಯುವಿನ ಗುಣ ಅದಕ್ಕದು ಸಹಜವೆಂದು ನೆಲೆಮಾಡಿ
ಕರ್ಮೆಂದ್ರಿಯಂಗಳ ಕಾಲ ಮುರಿದು
ಶಬ್ದ ಮೊದಲು ಗಂಧ ಕಡೆಯಾದ ನಾಲ್ಕೊಂದು ವಿಷಯಂಗಳು
ತನುಮನವ ಸೋಂಕುವುದಕ್ಕೆ ಮುನ್ನವೇ ಲಿಂಗಾರ್ಪಣವ ಮಾಡಿ
ಆ ವಿಷಯಂಗಳಿಗೊಳಗಾಗದೆ
ಆತ್ಮತ್ರಯಂಗಳ ತಾಳ ಕೊಯ್ದು
ಪಂಚಬ್ರಹ್ಮಂಗಳಂ ಪಂಚೇಂದ್ರಿಯಂಗಳಲ್ಲಿ ಪ್ರತಿಷ್ಠೆ ಮಾಡಿ
ಕಾಮುಕತನವ ಕಡೆಗೊತ್ತಿ
ಜ್ಞಾನೇಂದ್ರಿಯಂಗಳ ನೆನಹ ಕೆಡಿಸಿ
ಪ್ರಾಣ ಮೊದಲಾದ ಮೂರೆರಡು ವಾಯುಗಳ
ಜರಿದು ಸೆರೆವಿಡಿದು
ಮೊದಲಾ ವಾಯುವಿನ ವಶಮಾಡಿ
ಪಂಚವಾಯುವಿನ ಸಂಚಮಂ ಕೆಡಿಸಿ
ಅಂತಃಕರಣಗಳೆಂಬ ಮಾನಸಗಳ್ಳರ ಕಳೆದು
ದ್ವಾದಶಪತ್ರದ ಹೊಂದಾವರೆಯ ಲಿಂಗಕ್ಕೆ
ನಿರಂಜನ ಪೂಜೆಯಂ ಮಾಡುವ ಪೂಜಾರಿಗಳಂ ಮಾಡಿ
ಕರಣಂಗಳಂ ಗೆಲಿದು
ಅಂತಃಕರಣಂಗಳ ಚಿಂತೆಗೊಳಗುಮಾಡಿ
ಆತ್ಮಜ್ಞಾನಮಂ ಅಡಗಿಸಿ ಭೋಗಮಂ ನೀಗಿ
ಪಂಚಭೂತಂಗಳೆಂಬ ಭೂಪರಿಗೆ ಪರಿಚಾರಕರಾದ
ಇಪ್ಪತ್ತೆ ದುಜೀವರಿಗೆ ನಿರುದ್ಯೋಗಮಂ ಮಾಡಿ
ಫಲಪದಂಗಳನೊದೆದು
ನಿರ್ವಯಲಕೂಟಕ್ಕೆ ಮನವಿಟ್ಟು
ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ
ಆ ಲಿಂಗಮಂ
ಅನಿಮಿಷ ದೃಷ್ಟಿಯಿಂದ ನೋಡುವುದೀಗ ಲಿಂಗದ ನೋಟ.
ಅದು ರತ್ನಾಕರ ಜಂಬೂದ್ವೀಪದ ಸುನಾದ ಬ್ರಹ್ಮದ ಕೂಟ.
ಹೀಂಗಲ್ಲದೆ
ಪಂಚಭೂತಂಗಳ ಕುಟಿಲವ್ಯಾಪಾರಂಗಳೆಂಬ ಬಲೆಗೆ ತಾನು ಸಿಲ್ಕಿ
ಭಕ್ತಿ ಜ್ಞಾನ ವೈರಾಗ್ಯಮಂ ಸುಟ್ಟುರುಹಿ
ಉಪಾಧಿಕೆಯಲ್ಲಿ ಒಡವೆರದು
ಹೊಟ್ಟೆಯ ಕಿಚ್ಚಿಗೆ
ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ
ಇದಿರ ಮೆಚ್ಚಿಸುವೆನೆಂದು ಆ ಲಿಂಗವ ನೋಡುವ
ನೋಟವೆಂತಿಪ್ಪುದೆಂದೊಡೆ
ಹೊತ್ತು ಹೋಗದ ಕೋಡಗ
ತಿರುಗಾಟಕ್ಕೆ ಬಂದು ಮಾಣಿಕ್ಯಮಂ ಕಂಡು
ಆ ಮಾಣಿಕ್ಯವ ಕರದಲ್ಲಿ ಪಿಡಿದು
ಮೂಸಿ ನೆಕ್ಕಿ ನೋಡಿ ಹಲ್ಲುಗಿರಿದು ನೋಡಿ ನೋಡಿ
ಕಾಲಮಂ ಕಳೆದ ತೆರನಂತಾಯಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./43
ಪಿಂಡಬ್ರಹ್ಮಾಂಡಗಳಿಲ್ಲದಂದು
ಅಷ್ಟದಿಕ್ಪಾಲಕರ ಹುಟ್ಟಿಲ್ಲದಂದು
ನಿಷ್ಕಳ ಪರಂಜೋತಿ ತಾನೊಂದೆ ನೋಡಾ.
ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ
ಮಹಾಲಿಂಗವೆನಿಸಿತು.
ಆ ಮಹಾಲಿಂಗವೇ ತನ್ನ ಪರಮಾನಂದದಿಂದ
ಪ್ರಸಾದಲಿಂಗವೆಂದು ಜಂಗಮಲಿಂಗವೆಂದು ಶಿವಲಿಂಗವೆಂದು
ಗುರುಲಿಂಗವೆಂದು ಆಚಾರಲಿಂಗವೆಂದು
ಹೀಂಗೆ ಪಂಚಲಿಂಗವೆನಿಸಿತು.
ಆ ಪಂಚಲಿಂಗಂಗಳ
ಪ್ರಾಣ ಅಂಗ ಮುಖ ಪದಾರ್ಥಂಗಳಾವುವೆಂದರೆ-
ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಆಚಾರಲಿಂಗವೇ ಅಂಗ.
ಆ ಅಂಗಕ್ಕೆ ಆಚಾರಲಿಂಗದ
ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ಗಂಧಂಗಳೇ ದ್ರವ್ಯಪದಾರ್ಥ.
ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಗುರುಲಿಂಗವೇ ಅಂಗ.
ಆ ಅಂಗಕ್ಕೆ ಶಿವಲಿಂಗದ
ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ.
ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ
ಆ ಪ್ರಾಣಕ್ಕೆ ಜಂಗಮಲಿಂಗವೇ ಅಂಗ
ಆ ಅಂಗಕ್ಕೆ ಜಂಗಮಲಿಂಗದ ಆಚಾರಾದಿ
ಪ್ರಸಾದಲಿಂಗಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ಸ್ಪರ್ಶಂಗಳೇ ದ್ರವ್ಯಪದಾರ್ಥ.
ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಪ್ರಸಾದಲಿಂಗವೇ ಅಂಗ
ಆ ಅಂಗಕ್ಕೆ ಪ್ರಸಾದಲಿಂಗದ ಆಚಾರಾದಿ
ಪ್ರಸಾದಲಿಂಗಂಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ಶಬ್ದಂಗಳೇ ದ್ರವ್ಯಪದಾರ್ಥ
ಈ ಪ್ರಕಾರದಲ್ಲಿ ಪಂಚಲಿಂಗಂಗಳ
ಪ್ರಾಣ ಅಂಗ ಮುಖ ಪದಾರ್ಥ ಇಂತಿವರ
ನೆಲೆಯ ತಿಳಿದು ತಟ್ಟುವ ಮುಟ್ಟುವ ಸುಖಂಗಳ
ಆಯಾ ಮುಖಂಗಳಿಗೆ ಕೊಟ್ಟು
ತೃಪ್ತಿಯ ಭಾವದಿಂದ ಮಹಾಲಿಂಗಕ್ಕೆ ಸಮರ್ಪಿಸುವ ಅವಧಾನ
ನಿಮ್ಮ ಶರಣರಿಗಲ್ಲದೆ ಮಿಕ್ಕ ಜಡಜೀವಿಗಳೆತ್ತ ಬಲ್ಲರೋ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./44
ಬಿಲ್ಲು ಕೋಲವಿಡಿದು ಮನ ಬಂದ ಪರಿಯಲ್ಲಿ ಎಚ್ಚಾಡುವಾತ
ಅರ್ತಿಕಾರನಲ್ಲದೆ ಬಿಲ್ಲುಗಾರನಲ್ಲವಯ್ಯ.
ಹೊನ್ನು ಹೆಣ್ಣು ಮಣ್ಣ ಬಿಟ್ಟು
ಚೆನ್ನಾಗಿ ಮಂಡೆಯ ಬೋಳಿಸಿಕೊಂಡು
ಹಾಡಿದ ವಚನಂಗಳೇ ಹಾಡಿಕೊಂಡು
ಮುಂದೆ ವಸ್ತುವ ಸಾಧಿಸಿಕೊಳ್ಳಲರಿಯದೆ
ಹಸಿದರೆ ತಿರಿದುಂಡು
ಮಾತಿನಮಾಲೆಯ ಕಲಿತಾತ
ವಿರಕ್ತನೆಂಬ ನಾಮಕ್ಕರುಹನಲ್ಲದೆ
ಸಂಧಾನಕ್ಕರುಹನಲ್ಲ.
ಅದೇನು ಕಾರಣವೆಂದೊಡೆ
ಭಕ್ತಿಯೆಂಬ ಬಿಲ್ಲ ಹಿಡಿದು
ಸಮ್ಯಜ್ಞಾನವೆಂಬ ಹೆದೆಯನೇರಿಸಿ
ಲಿಂಗನಿಷ್ಠೆಯೆಂಬ ಬಾಣವ ತೊಟ್ಟು
ಆಕಾಶದ ಮೇಲಣ ಮುಪ್ಪುರದ ಮಧ್ಯದ
ಮಾಣಿಕ್ಯದ ಕಂಭವ ಮುಳುಗಲೆಚ್ಚು
ಮಾಯೆಯ ಬಲುಹ ಗೆಲಿದ
ಶರಣನೀಗ ಲಿಂಗಸಂಧಾನಿಯಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./45
ಬೆಳಗು ಕತ್ತಲೆಯೆಂಬ ಕತ್ತಲೆಯ ಬೆಳಗೆಂಬ
ಪಶುಮತದ ಪಾಷಂಡಿಗಳು ನೀವು ಕೇಳಿರೇ.
ಮಲಮಾಯಾಕರ್ಮಗಳು ಆತ್ಮಂಗೆ ಕೇಡಿಲ್ಲದೆ
ಅನಾದಿಯಲ್ಲಿಯೂ ಉಂಟೆಂದು ನುಡಿಯುತ್ತಿಪ್ಪಿರಿ.
ಕಾಮಧೇನುವಿನ ಗರ್ಭದಲ್ಲಿ ಕತ್ತೆಯ ಮರಿ ಹುಟ್ಟುವುದೇ?
ಕಲ್ಪವೃಕ್ಷದಲ್ಲಿ ಕಾಗೆಮಾರಿಯ ಹಣ್ಣು ಬೆಳೆವುದೆ?
ಪರುಷದಗಿರಿಯಲ್ಲಿ ಕಬ್ಬುನ ಮೊಳೆದೋರುವುದೆ?
ಅನಂತಕೋಟಿ ಮಿಂಚುಗಳ ಪ್ರಭೆಯನೊಳಕೊಂಡ
ಪರಶಿವತತ್ವದಲ್ಲಿ ಉದಯವಾದ ಚಿದಂಶಿಕನಪ್ಪ ಪರಮಾತ್ಮಂಗೆ
ಅನಾದಿಮಲವನುಂಟು ಮಾಡುವ ಸಿದ್ಧಾಂತಿಯ
ಅಡ್ಡವಸ್ತ್ರದಲ್ಲಿಪ್ಪುದು ಒಡ್ಡಗಲ್ಲ ಮುರುಕಲ್ಲದೆ ಲಿಂಗವಲ್ಲ.
ಅದೇನು ಕಾರಣವೆಂದರೆ
ಇಕ್ಕುವಾಕೆ ಮೂಗು ಮುಚ್ಚಿಕೊಂಡು ಇಕ್ಕಿದ ಬಳಿಕ
ಉಂಬಾತ ಹೇಗುಂಬನಯ್ಯ?
ಆತ್ಮನು ಅನಾದಿಮಲಾವರಣವೆಂದು ನೀನೆ ಉಸುರುತ್ತಿರ್ದ ಬಳಿಕ
ನಿನ್ನಂಗದ ಮೇಲಕ್ಕೆ ಬರುವ ಲಿಂಗಕ್ಕೆ ಮೂಗಿಲ್ಲವೇ?
ಪುಣ್ಯಕ್ಷೇತ್ರದಲ್ಲಿ ಲಿಂಗವಿಪ್ಪುದಲ್ಲದೆ
ಹಾಳುಕೇರಿಯಲ್ಲಿ ಲಿಂಗವುಂಟೆ?
ಇಲ್ಲವೆಂಬುದ ನಿನ್ನ ನೀನೇ ತಿಳಿದು ನೋಡು.
ಇದು ಕಾರಣ ದ್ವೆ ತಮಾರ್ಗಕ್ಕೆ
ಮುಕ್ತಿಯೆಂಬುದು ಎಂದೆಂದಿಗೂ ಸಟೆ ಹೊರಗೆಂ[ಬೆ]ನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./46
ಭಕ್ತಿ ಜ್ಞಾನ ವೈರಾಗ್ಯ ತಪ್ಪದೆ
ಷಟ್ಸ್ಥಲಮಾರ್ಗದಿರವು ತಪ್ಪದೆ
ಜ್ಞಾನ ಕ್ರೀಗಳಲ್ಲಿ ಪ್ರೇಮ ತಪ್ಪದೆ
ಶರಣಸತಿ ಲಿಂಗಪತಿಯಾದ ಭಾವ ತಪ್ಪದೆ
ಇಷ್ಟ ಪ್ರಾಣ ಭಾವಲಿಂಗಗದ ಪೂಜೆ ತಪ್ಪದೆ
ಷಡ್ವಿಧಲಿಂಗದಲ್ಲಿ ಅರ್ಪಿತಾವಧಾನ ತಪ್ಪದೆ
ತೀರ್ಥಪ್ರಸಾದದಲ್ಲಿ ಒಯ್ಯಾರ ತಪ್ಪದೆ
ಮಂತ್ರಗಳಂ ಒಡವರೆದು ಲಿಂಗಸಂಧಾನ ತಪ್ಪದೆ
ಹಿಡಿದ ವ್ರತಂಗಳಲ್ಲಿ ನಿಷ್ಠೆ ತಪ್ಪದೆ
ನಡೆದಂತೆ ನುಡಿದು ನುಡಿದಂತೆ ನಡೆವ ಭಾವ ತಪ್ಪದೆ
ದ್ವೆ ತಾದ್ವೆ ತವ ನೂಂಕಿ
ಬರಿಯ ವೈರಾಗ್ಯವನೊಪ್ಪುಗೊಳ್ಳದೆ
ನಿಜವಿರಕ್ತಿಯ ಹೊಲಬುದಪ್ಪದೆ
ಪಂಚೈವರೊಂದಾಗಿ ಸದ್ಯೋನ್ಮುಕ್ತಿಗೆ ಮನವನಿಟ್ಟು
ಅರ್ತಿಯಿಂದಾಚರಿಸುವರಯ್ಯ ನಿಮ್ಮ ಶರಣರು,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./47
ಭಕ್ತಿ ಜ್ಞಾನವೈರಾಗ್ಯವು
ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು
ಉತ್ತರಜ್ಞಾನಿಗಳು ನುಡಿವುತ್ತಿಪ್ಪರು.
ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ
ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ.
ಗುರು ಲಿಂಗ ಜಂಗಮ ತೀರ್ಥ ಪ್ರಸಾದ
ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು
ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ.
ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು
ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ
ತೂರಿ ಬಿಡುವುದೇ ಎನ್ನ ಜ್ಞಾನ.
ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ
ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ
ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ
ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ
ಎನ್ನ ವೈರಾಗ್ಯಕ್ಕೆ ಕುಂದು ನೋಡಾ.
ಅದೇನು ಕಾರಣವೆಂದೊಡೆ
ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು
ಪತಿವ್ರತೆಯಲ್ಲದೆ
ಗಂಡನಿಕ್ಕಿದ ಪಡಿಯನೊಲ್ಲದೆ
ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ
ಪತಿಭಕ್ತಿ ಅಳವಡುವುದೇ ಅಯ್ಯ?
ಲಿಂಗಾಣತಿಯಿಂದ ಬಂದ ಪದಾರ್ಥವ
ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ
ಲಿಂಗಾಣತಿಯಿಂದ ಬಂದ ಪದಾರ್ಥವ
ಸಟೆಗೆ ಉಂಡು ಕೊಂಡಂತೆ ಮಾಡಿ
ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು
ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ
`ಶರಣಸತಿ ಲಿಂಗಪತಿ’ ಭಾವ ಅಳವಡುವುದೇ ಅಯ್ಯ.
ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ
ನಿಜಮುಕ್ತಿಯನರಸುವ ಅಣ್ಣಗಳಿರವು
ಬಂಜೆ ಮಕ್ಕಳ ಬಯಸಿ
ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./48
ಭಕ್ತಿಯಿಂದ ವಿರಕ್ತರೆಂದು
ಬಾಯತುಂಬ ಕರೆಯಿಕೊಂಬ ವಿರಕ್ತರೆಲ್ಲ ವಿರಕ್ತರೇ ಅಯ್ಯ?
ವಿರಕ್ತರದೊಂದು ಸಾಮಥ್ರ್ಯ ಸುಗುಣ
ಸಮುದ್ರೆಯನೊರೆವುತಿಪ್ಪೆ ಕೇಳಿರಣ್ಣ.
ಕಾಯದ ಕಣ್ಣ ಜಾಗ್ರದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸಿ
ಕಾಯಗುಣಂಗಳ ಕೆಲಕ್ಕೆ ತೊಲಗಿಸಿ ತತ್ಪದನಾಗಿ
ಮನದಕಣ್ಣ ಸ್ವಪ್ನದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸಿ
ಮನೋವಿಕಾರಮಂ ಹಸಗೆಡಿಸಿ ತ್ವಂಪದನಾಗಿ
ಭಾವದಕಣ್ಣ ಸುಷುಪ್ತಿಯಲ್ಲಿ ಭಾವಲಿಂಗಕ್ಕೆ ಸಮರ್ಪಿಸಿ
ಭಾವದಿಚ್ಛೆಯ ತಪ್ಪಿಸಿ ಅಸಿಪದವಾಗಿ
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯನೊಂದುಮಾಡಿ
ಪರಬ್ರಹ್ಮ ಸ್ವರೂಪವಾಗಿ
ಜಾಗ್ರತ್ ಸ್ವಪ್ನ ಸುಷುಪ್ತಿಯೆಂಬರಿವರಿತು
ಹಸಿವು ತೃಷೆ ವಿಷಯ ವ್ಯಾಪಾರಂಗಳಂ ಸುಟ್ಟುರುಹಿದ
ತೋಂಟದ ಸಿದ್ಧಲಿಂಗ, ಅಲ್ಲಮಪ್ರಭು, ಅನಿಮಿಷದೇವರು,
ಇಂತಿವರು ವಿರಕ್ತರಲ್ಲದೆ
ಮತ್ತೆ ವಿರಕ್ತರೆಂಬ ನುಡಿ ನಿಮ್ಮ ಹಡಪದಲ್ಲಿರಲಿ.
ಅದೇನು ಕಾರಣವೆಂದೊಡೆ
|| ಗ್ರಂಥ || `ವಿಕಾರಂ ವಿಷಯಾದ್ದೂರಂ ರಕಾರಂ ರಾಗವರ್ಜಿತಂ|
ಕ್ತಕಾರಂ ತ್ರಿಗುಣಂ ನಾಸ್ತಿ ವಿರಕ್ತಸ್ಯಾರ್ಥಮುಚ್ಯತೇ’||
ಇಂತೆಂದುದಾಗಿ
ಹಗಲಾದರೆ ಹಸಿವು ತೃಷೆಗೆ ಬಾಯಿಬಿಟ್ಟು
ಇರುಳಾದರೆ ವಿಷಯಾತುರನಾಗಿ
ಕಳವಳಿಸಿ ಕನಸ ಕಂಡು ಬೆದರಿ
ಶಿವಶಿವ ಎಂದು ಕುಳಿತು
ಸುಷುಪ್ತಿಯಲ್ಲಿ ಮೈಮರೆದು
ಮುಟ್ಟಿ ತಟ್ಟಿದ ಸವುಜ್ಞೆಯನರಿಯದಿಪ್ಪವರೆಲ್ಲ
ವಿರಕ್ತರೆ? ಅಲ್ಲಲ್ಲ.
ಅವರು ತ್ರಿವಿಧ ಪದಾರ್ಥವನತಿಗಳೆದು
ಗುರು ಲಿಂಗ ಜಂಗಮವನಂತರಂಗದಲ್ಲಿ
ಪೂಜೆಯ ಮಾಡುವ ದಾಸೋಹಿಗಳಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./49
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು.
ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು.
ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು.
[ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ
ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ
ಫಲಭೋಗಕ್ಕೊಳಗಾದರು.
ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ.
ಆರ ಬಿಟ್ಟು ಮೂರ ಕಂಡು ಮನ ಮುಳುಗಿ
ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./50
ಮರ್ತ್ಯದ ಬೀಜವ ಬಿತ್ತಿ ಕುಡಿಯೊಡೆಯದ ಮುನ್ನ
ಕತ್ತಲೆ ಬೆಳಗು ವಿಸ್ತರಿಸಿ ತೋರ್ಪುದರತ್ತಲೆ
ನಿನ್ನ ಚಿದಂಶಿಕನಪ್ಪ ಶರಣಂಗೆ
ಭೂತಳದ ಭೋಗವನೋತು ಬಳಸೆಂದು
ಪ್ರೀತಿಯಿಂದ ಕಲ್ಪಿಸಿಕೊಡುವರೆ ಅಯ್ಯ?
ರಾಜಹಂಸನಿಗೆ ಅಮೃತಾಹಾರವನಿಕ್ಕಬೇಕಲ್ಲದೆ
ಗರುತ್ಮನ ಆಹಾರವನಿಕ್ಕುವರೆ ಅಯ್ಯ?
ಅದೆಂತೆನಲು
ಅವನಿಯ ಭೋಗಕ್ಕೆ ಅತಿಮಿಗಿಲೆನಿಸಿಕೊಂಬುದು
ಮಜ್ಜನ ಭೋಜನ ಅನುಲೇಪನ
ಆಭರಣ ವಸ್ತ್ರ ತಾಂಬೂಲವಯ್ಯ.
ಇದಕ್ಕೆ ನೂರ್ಮಡಿ ಮಿಗಿಲೆನಿಸಿಕೊಂಬುದು
ಸುದತಿಯರ ಮೃದುನುಡಿ ತೆಕ್ಕೆ ಚುಂಬನ
ಸುರತಸಂಭ್ರಮದ ಲೀಲಾವಿನೋದವಯ್ಯ.
ಆ ಸರಸ ಲೀಲಾವಿನೋದದ ಬಗೆಯ ಹೇಳಲಂಜುವೆನಯ್ಯ.
ಹೇಳುವೆ- ನೀನು ಮಾಂಕೊಳದಿರಯ್ಯ.
ಹೇಲಕುಳಿಯೊತ್ತಿನ ಉಚ್ಚೆಯ ಬಚ್ಚಲು.
ಹಡುಕುನಾರುವ ಕೀವು ತುಂಬಿದ ಹಳೆಯ ಗಾಯ.
ಕೋಲುಕುಕ್ಕುವ ತೊಗಲು ಪಡುಗ.
ಆ ಪಡುಗದ ಸೊಗಸು ಮಾನವರ ತಲೆಗೇರಿ
ಮುಂದಲ ಕಾಲಿನಲಿ ಅಮರ್ದಪ್ಪಿ ಪಿಡಿದು
ಹೆಣ್ಣುನಾಯ ಬಾಯಲೋಳೆಯ
ಗಂಡುನಾಯಿ ಚಪ್ಪರಿದು ನೆಕ್ಕಿಕೊಳುತ್ತ
ಬಾಯೊಳಗೆ ಕಿಸುಕುಳದ ಬಾಯನಿಕ್ಕಿ
ಒಡೆಯನೊಂದಾಗಿ ಬಂದ ಹೊಸ ಮನುಷ್ಯರ ಕಂಡ ನಾಯಂತೆ
ಕರುಗಳ ಹಾಕುವ ಕಾಮದೈನ್ಯರ ಕರ್ಮಭೋಗಮಂ ಕಂಡು
ಹರಣ ಹಾರಿ ಮನ ನಾಚಿ ಹೇಸಿ ಹೇಡಿಗೊಂಡು
ಹೊನ್ನು ಹೆಣ್ಣು ಮಣ್ಣೆಂಬ ಮೂರು ಸಂಕಲೆಯ ಕೀಲ
ಜ್ಞಾನಚೀರಣದಿಂದ ಕಡಿಗಡಿದು
ವಿರಕ್ತನಾಗಿ ನಿರ್ವಾಣ ಪದಕ್ಕೆ ಕಾಮಿತನಾಗಿ
ಸ್ವಾನುಭಾವದಲ್ಲಿ ಆಚರಿಸುವ ಆಚರಣೆಯಾವುದೆಂದರೆ-
ಅಂಗದ ಮೇಲೆ ಲಿಂಗವುಳ್ಳ ಪಟ್ಟದರಾಣಿ ಅರಸುವೆಣ್ಣು
ಅನಾದಿನಾಯಕಿ ಜಾರೆ ಪತಿವ್ರತೆ ಪುಂಡುವೆಣ್ಣು
ಕೆಂಪಿ ಕರಿಕಿ ದಾಸಿ ವೇಶಿ ಮೊಂಡಿ ಮೂಕೊರತಿ ಕುಂಟಿ ಕುರುಡಿ
ಇವರೆಲ್ಲರ ಭಕ್ತಿಯಿಂ ಸಮಾನಂಗಂಡು
ಇವರೆಲ್ಲರಂ ಗುರುವಿನ ರಾಣಿವಾಸಕ್ಕೆ ಸರಿಯೆಂದು ನಿರ್ಧರಿಸಿ
ಊರ್ವಶಿ ರಂಭೆ ತಿಲೋತ್ತಮೆಯರಿಗೆ ಸರಿಯಾದ
ಶಂಖಿನಿ ಪದ್ಮಿನಿಗೆಣೆಯಾದ
ರತಿಯ ಲಾವಣ್ಯಕ್ಕೆ ಸರಿಮಿಗಿಲೆನಿಪ ಚಿಲುವೆಣ್ಣುಗಳ
ಗೋಮಾಂಸ ಸುರೆಗೆ ಸರಿಯೆಂದು-
ಭಾವಿಸಿದೆನಯ್ಯ ನೀ ಸಾಕ್ಷಿಯಾಗಿ.
ಕಬ್ಬುವಿಲ್ಲನಂ ಖಂಡಿಸಿ
ಕಾಸೆಯನಳಿದು ಸೀರೆಯನುಟ್ಟು ಗಂಡು ಹೆಣ್ಣಾಗಿ
ನಿನಗೆ ವಧುವಾದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./51
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ
ಮರುಳುಮಾನವರ ಬಗೆಯ ನೋಡಯ್ಯ ಮನವೇ.
ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು
ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು
ತೆಂಗ ಪೋಟಾಡುವಂತೆ
ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು
ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ
ಮನೆಮನೆಗೆ ಹೋಗಿ
ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ
ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ
ವೇಷಮಂ ಹಲ್ಲುಣಿಸಿ ಕೊಂಡು
ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು
ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು
ಹೂಸಕದುಪಚಾರಮಂ ನುಡಿದು
ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ
ನಚ್ಚು ಮಚ್ಚ ನುಡಿದು
ಉಂಡುಕೊಂಡು ದಿನಕಾಲಮಂ ನೂಂಕಿ
ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ
ಭವಿ ಭಕ್ತರೆನ್ನದೆ ಉಂಡುಟ್ಟಾಡಿ
ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ
ನಡೆಯಿಲ್ಲದ ನಡೆಯ ನಡೆದು
ನುಡಿಯಿಲ್ಲದ ನುಡಿಯ ನುಡಿದು
ತನ್ನ ಕಪಟವನರಿಯದೆ
ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ
ಹಸಿಯ ಮಾದಿಗರಂತೆ ಹುಸಿಯ ನುಡಿದು
ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ
ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು
ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./52
ಮುಂದನರಿಯದ ಮತಿಗೆಟ್ಟ ಮರುಳು ಮನವೇ
ಕಾಲ ಕಾಮರ ಗೆಲುವ ಉಪಾಯವಾವುದೆಂದು
ತಲೆಯೂರಿ ನೆಲನ ಬರೆವುತಿಪ್ಪೆ
ಮೊಲ ಜಂಬುಕಂಗಳ ಹುಯ್ಯಲಿಗೆ
ಆನೆಯ ಘೌಜನಡ್ಡಮಾಡಬೇಕೇ?
ಕಾಲ ಕಾಮರ ಗೆಲುವುದಕ್ಕೆ ಆಲೋಚನೆಯೇತಕಯ್ಯ ಮನವೆ?
ಪಂಚೇಂದ್ರಿಯಂಗಳು
ಪಂಚಬ್ರಹ್ಮವನಪ್ಪಿ ಅಗಲದಿಪ್ಪುದೇ
ಪಂಚಬಾಣನ ಹರಣದ ಕೇಡು.
ನಾನು ಪರಬ್ರಹ್ಮದಲ್ಲಿಯೇ ಜನನ.
ಎನ್ನ ತನು ಮನ ಧನಂಗಳ ಪರಬ್ರಹ್ಮಕ್ಕೆ ಮಾರುಕೊಟ್ಟೆನೆಂಬ
ನಿಚ್ಚಟದ ನುಡಿಯೇ ಕಾಲನ ಗಂಟಲಗಾಣ.
ಅದು ಹೇಗೆಂದೊಡೆ
ಲಿಂಗಾಂಕಿತವಾದ ವೃಕ್ಷಂಗಳ
ಮಂಡಲಾಧಿಪತಿ ಮೊದಲಾಗಿ ಮುಟ್ಟಲಮ್ಮ.
ಆನೆಯ ತನುಜನ ಆಡು ಮುರಿದರೆ
ಹೀನವಾರಿಗಪ್ಪುದಯ್ಯ?
ಈ ಪ್ರಕಾರದ ಸಮ್ಯಜ್ಞಾನದಿಂದ
ನಿಮ್ಮ ಶರಣರು
ಕಾಲ ಕಾಮರ ಗೆಲಿದರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./53
ಮುಚ್ಚಿ ಮೂದಲಿಸಿ ಮೊನೆಗೆಡಿಸುವ
ಮಾಯಾಪ್ರಪಂಚಿನ ಬಲೆಗೆ ಸಿಲುಕದೆ
ನಾನು ಧ್ಯಾನ ಮೌನ ಉಪಾವಸ್ಥೆಯಿಂದ
ಷಟ್ಕೋಣೆಯ ಸುವರ್ಣದ್ವೀಪದ ಅರಸಿನ ಬಲವಿಡಿದು
ಪಂಚವಿಂಶತಿತತ್ವಂಗಳೆಂಬ ಮಾಯಾಸುಭಟರ ಸ[ೂ]ಡಕೊಂದು
ಪಂಚಬ್ರಹ್ಮವೇ ಪಂಚಭೂತಂಗಳಾಗಿ
ತನುವಿಡಿದು ಲಿಂಗನಿಷ್ಠೆಯಿಂದ
ಓಂಕಾರಸ್ವರೂಪವಾಗಿ ಅಹಂಕರಿಸದೆ
ದಾಸೋಹಂಭಾವದಿಂದ
ತ್ರಿಕೂಟಪರ್ವತಕ್ಕೆ ಪಶ್ಚಿಮದಿಕ್ಕಿನಲ್ಲಿ
ಅನಂತ ಕಾರ್ಮುಗಿಲ ಮಿಂಚಿನಂತೆ
[ತೋರುತ್ತಿಪ್ಪು]ದೀಗ ಶಾಂಭವದ್ವೀಪ.
ಆ ಶಾಂಭವದ್ವೀಪದಲ್ಲಿ ನೆಲಸಿರ್ಪ
ನಿರವಯಲ ಬೆಳ್ದಿಂಗಲ ಬೀಜಮಂ ನಾನು ಕಂಡು
ಕಂಬನಿದುಂಬಿ ನಮಸ್ಕಾರಮಂ ಮಾಡಿದ ಘನದಿಂದ
ಬ್ರಹ್ಮ ವಿಷ್ಣು ರುದ್ರ ಇಂತೀ ಮೂವರಂ ಕೆಡೆಮೆಟ್ಟಿ
ಜನನ ಮರಣಂಗಳಂ ಗೆಲಿದು ನಾನು ಹುಟ್ಟುಗೆಟ್ಟೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./54
ಮೂರೈದುತನುವಿಡಿದ ನರಗುರಿಗಳೆಲ್ಲಾ ಭಕ್ತರಪ್ಪರೆ? ಅಲ್ಲಲ್ಲ.
ನಮ್ಮ ಶಿವಭಕ್ತರ್ಗೆ
ಸದ್ಗೋಷ್ಠಿ ಸದಾಚಾರಂಗಳೇ ಪಾದಗಳು.
ಗುರುವೇ ಸ್ಥೂಲತನು.
ಲಿಂಗವೇ ಸೂಕ್ಷ ್ಮತನು.
ಜಂಗಮವೇ ಕಾರಣತನು.
ಸಮ್ಯಜ್ಞಾನವೇ ಪ್ರಾಣ.
ತೀರ್ಥ ಪ್ರಸಾದವೇ ನೇತ್ರಂಗಳು.
ಇಂತಪ್ಪ ತನುವಿಡಿದು ತಾವು ತಮ್ಮ ಊರಿಗೆ ಹೋಗುವಂತೆ
ಮುಕ್ತಿಪುರಕ್ಕೆ ಹೋಗಿ
ನೊಸಲಕಣ್ಣು ಪಂಚಮುಖ ದಶಭುಜದ
ಉಮಾವಲ್ಲಭನಾದ ಪರಶಿವನ ಓಲಗದಲ್ಲಿ
ಗಣಂಗಳ ಮಧ್ಯದಲ್ಲಿ ಓಲಾಡುತ್ತಿಪ್ಪರಯ್ಯ ನಮ್ಮವರು.
ಇಂತಪ್ಪ ತನುವಿಡಿಯದ ಅಜ್ಞಾನಿಗಳು
ಕಿರುಬಟ್ಟೆಯಲ್ಲಿ ಹರಿದು ಕಂಗೆಟ್ಟು ಕಾಡ ಹೊಕ್ಕು
ಕಣ್ಣು ಕಾಣದೆ ಕಮರಿಯ ಬಿದ್ದು ಬಳಲುತ್ತಿಪ್ಪರಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./55
ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತೆ
ಎಂಬ ಸಪ್ತಮಲ ವ್ಯಸನ ಮದಂಗಳೆನ್ನನಾವರಿಸಿ
ಕಾಡುತ್ತಿವೆಯಯ್ಯ.
ನಿಮ್ಮುವ ನಾನೆಂತರಿವೆನಯ್ಯ?
ನಿಮ್ಮುವ ನಾನೆಂತು ನೆನೆವೆನಯ್ಯ?
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ,
ಇಂತಿವ ಕಳೆದು,
ಎನಗೆ ನಿಮ್ಮ ಪರಮಭಕ್ತಿಯ ಪಾಲಿಸಯ್ಯ ನಿಮ್ಮ ಧರ್ಮ./56
ಲಿಂಗಾಂಗ ಸಂಬಂಧದ ಭೇದವನರಿಯದೆ
ನಾವು ಲಿಂಗಾಗಿಸಂಬಂಧಿಗಳೆಂದು
ಅಂದಚಂದವಾಗಿ ನುಡಿದುಕೊಂಬ
ಕ್ರಿಯಾಭ್ರಾಂತರು ನೀವು ಕೇಳಿರೋ
ಲಿಂಗಾಂಗ ಸಂಬಂಧದ ಉತ್ತರೋತ್ತರದ ನಿರ್ಣಯವ.
ಹೊರಗಣ ಹೂವನ್ನೆ ತಂದು
ಸ್ಥೂಲತನುವಿನ ಮೇಲಿಪ್ಪ ಆಚಾರಲಿಂಗಮಂ ಪೂಜೆಮಾಡಿ
ತನುವ ಸಮರ್ಪಿಸಿ ಬೇಡಿಕೊಂಡು
ಹೊರಗಣ ಹೊನ್ನು ಹೆಣ್ಣು ಮಣ್ಣು ಷಟ್ಕರ್ಮಂಗಳ
ಬಿಟ್ಟುದೇ ಇಷ್ಟಲಿಂಗಪೂಜೆ.
ಒಳಗಣ ಹೂವನ್ನೆ ತಂದು
ಸೂಕ್ಷ ್ಮತನುವಿನ ಮೇಲಿಪ್ಪ ಜಂಗಮಲಿಂಗಮಂ ಪೂಜೆಮಾಡಿ
ಮನವ ಸಮರ್ಪಿಸಿ ಉಪಾವಸ್ಥೆಯಂ ಮಾಡಿ
ಒಳಗಣ ಅಂತಃಕರಣಂಗಳಂ ಸುಟ್ಟುದೇ ಪ್ರಾಣಲಿಂಗಪೂಜೆ.
ಮನೋಮಧ್ಯದೊಳಿಪ್ಪ ಭಾವಪುಷ್ಪವನ್ನೆ ತಂದು
ಕಾರಣತನುವಿನ ಮೇಲಿಪ್ಪ ತೃಪ್ತಿಲಿಂಗಮಂ ಪೂಜೆ ಮಾಡಿ
ಸಂತೋಷವಂ ಸಮರ್ಪಿಸಿ ದೈನ್ಯಂಬಟ್ಟು
ಜ್ಞಾನ ಕ್ರಿಯೆಗಳಳಿದುದೇ ಭಾವಲಿಂಗಪೂಜೆ.
ಈ ಪ್ರಕಾರದ ಲಿಂಗಾಂಗ ಸಾಧಕತ್ವಮಂ
ಶಿವರಾತ್ರಿಯ ಸಂಕಣ್ಣಂಗೊಲಿದಂತೆ
ಎನಗೊಲಿದು ಕರುಣಿಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./57
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ
ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ
ಶಿವಲಿಂಗಮೋಹಿಗಳು ನೀವು ಕೇಳಿರಯ್ಯ.
ಶರಣರು ಮುಕ್ತಿಪುರಕ್ಕೆ ಹೋಗುವ
ಬಟ್ಟೆಯ ಬೆಡಗು ಬಿನ್ನಾಣದ ಪರಿಯ.
ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ
ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ
ಮಹಾಪಟ್ಟಣವೊಂದೇ.
ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು.
ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ
ಅಹಂಕಾರ ಮಮಕಾರಂಗಳೆಂಬ ಎರಡು
ಪಟ್ಟಣಂಗಳು ತುಂಬಿ ತುಳುಕುತ್ತಿವೆ.
ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು.
ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ.
ಆ ಭಕ್ತಿಪುರಕ್ಕೆ ಹಾದಿಯಿಲ್ಲ.
ಆ ಭಕ್ತಿಪುರಕ್ಕೆ ಹೋದಲ್ಲದೆ
ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು.
ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ
ಶರಣ ಮನದಲ್ಲಿ ತಿಳಿದು
ಆ ಹೆಬ್ಬಟ್ಟೆಗಳಲ್ಲಿ ಹೋದರೆ
ಎಂಬತ್ತುನಾಲ್ಕುಲಕ್ಷ ಪ್ರಕಾರದ ಪರಮಂಡಲದಲ್ಲಿ
ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ
ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ
ಭಕ್ತಿಪುರಮಂ ಕಂಡು
ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ
ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ
ಮಹಾಸರೋವರದ ಅರಣ್ಯವಿದೆ.
ಆ ಸರೋವರದ ಮಧ್ಯದಲ್ಲಿ
ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ.
ಆ ದೇಗುಲದಲ್ಲಿ
ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ
ಜಂಗಮಲಿಂಗವಿದೆ.
ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು
ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ
ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ
ನೆನೆದಂತೆ ಮನದಲ್ಲಿ ಬೇಡಿ
ದೇಹ ಮನ ಪ್ರಾಣಕುಳ್ಳ
ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ
ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ
ಊಧ್ರ್ವದಿಕ್ಕಿನ ಆಕಾಶದಲ್ಲಿ
ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು
ಆ ತ್ರಿಪುರವ ಮೇಲೆ ಬ್ರಹ್ಮರಂಧ್ರವೆಂಬ
ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ
ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು
ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ
ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ
ಆ ಬಾಗಿಲಿನಲ್ಲಿ
ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ
ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು,
ಊಧ್ರ್ವಕುಂಡಲಿನಿಯೆಂಬ ಜ್ಞಾನಶಕ್ತಿ.
ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು.
ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ
ಶರಣ ತನ್ನ ಮನದಲ್ಲಿ ತಾನೆ ತಿಳಿದು
ಅಲ್ಲಿಪ್ಪ ಮಹಾಲಿಂಗಮಂ ಶರಣ
ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ
ಸೋಮ ಸೂರ್ಯರ ಕಲಾಪಮಂ ನಿಲಿಸಿ
ಕುಂಭಮಂ ಇಂಬುಗೊಳಿಸಿ
ರೆುುಂ ರೆುುಂ ಎಂದು ರೆುುಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ
ಚಿಣಿಮಿಣಿ ಎಂದು ಸಣ್ಣರಾಗದಿಂದ
ಮನವ ಸೋಂಕುತಿಪ್ಪ ವೀಣಾನಾದಮಂ
ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ
ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ
ಚಿಟಿಲು ಪಿಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ
ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ
ಉಲಿವುತಿಪ್ಪ ಪ್ರಣವನಾದಮಂ
ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೈಂ ಹ್ರೌಂ ಹ್ರಂ ಹ್ರಃ
ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ
ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ
ಈ ಪ್ರಕಾರದ ನಾದಂಗಳಂ ಶರಣ ಕೇಳಿ
ಮನದಣಿದು ಹರುಷಂ ಮಿಕ್ಕು
ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ
ಚೌಕಮಧ್ಯದಲ್ಲಿ
ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ
ಇಂತಿವರೊಳಗಾದ ನವರತ್ನಂಗಳ
ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ
ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು
ಆಕಾಶವನಲೆವುತಿಪ್ಪುದಂ ಕಂಡು
ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ
ಎರಡು ಹದಿನಾರು ಗೊತ್ತುಗಳಲ್ಲಿ
ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ
ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರವಂ ಕಂಡು
ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು
ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ
ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ
ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು
ಶರಣನು ಒಳಹೊಗಲೊಡನೆ
ಬಹಿರಾವರಣದ ವೀಥಿ ಓಲಗದೊಳಿಪ್ಪ
ಹರಿ ಸುರ ಬ್ರಹ್ಮಾದಿ ದೇವತೆಗಳು
ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ
ಅನಂತರೆಲ್ಲರು ಬೆದರಿ ಕೆಲಸಾರೆ
ಸೋಮವೀಥಿಯೊಳಿಪ್ಪ ಅನಂತರುದ್ರರೊಳಗಾದ
ಇಪ್ಪತ್ತನಾಲ್ಕುತಂಡದ ಅನಂತರು
ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು
ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ
ಸೂರ್ಯವೀಥಿಯೊಳಿಪ್ಪ
ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ
ಹದಿನಾರುತಂಡದ ಅನಂತರುದ್ರರು ಬಂದು
ಶರಣನ ಸನ್ಮಾನವಂ ಮಾಡೆ
ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷ್ಠೆಯರೊಳಗಾದ
ಎಂಟುತಂಡದ ಅನಂತಶಕ್ತಿಯರು ಬಂದು
ಶರಣನ ಇದಿಗರ್ೊಳೆ
ಕನರ್ಿಕಾವೀಥಿಯೊಳಿಪ್ಪ ಅಂಬಿಕೆ ಗಣಾನಿಯರೊಳಗಾದ
ನಾಲ್ಕುತಂಡದ ಶಕ್ತಿಯರು ಬಂದು
ಶರಣನ ಕೈವಿಡಿದು ಕರೆತರೆ
ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ
ಶುಭ್ರವರ್ಣದ ಹತ್ತುನೂರುದಳವ ಗಭರ್ೀಕರಿಸಿಕೊಂಡು
ಬೆಳಗುತಿಪ್ಪ ಒಂದು ಮಹಾಕಮಲ.
ಆ ಕಮಲದಳಂಗಳೊಳಗಿಪ್ಪ ಪ್ರಣವ.
ಆ ಪ್ರಣವ ಸ್ವರೂಪರಾದ
ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು
ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ
ನಮಸ್ಕಾರವ ಮಾಡೆ
ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ
ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು
ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ
ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ
ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ
ಪದ್ಮಿನಿ ಚಂದ್ರಿಣಿಯರೊಳಗಾದ
ಷೋಡಶ ಲಾವಣ್ಯಶಕ್ತಿನಿಯರ ಬೆಳಗಂ ಕಂಡು
ಆ ಬೆಳಗಿನೊಡ್ಡವಣೆ ಬಯಲಾಯಿತ್ತು.
ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ
ಪಂಚಪ್ರಣವಂಗಳ ಬೆಳಗಂ ಕಂಡು
ಆ ಲಾವಣ್ಯಶಕ್ತಿನಿಯರ ಬೆಳಗು ತೆಗೆದೋಡಿತ್ತು.
ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ
ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು
ಆ ಪ್ರಣವಂಗಳ ಬೆಳಗು ತಲೆವಾಗಿದವು.
ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ
ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ
ಮನಂ ನಲಿದು ಆನಂದಾಶ್ರುಜಲಂ ಸುರಿದು
ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ
ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ
ಕಪರ್ೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ
ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ
ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ,
ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ
ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ
ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು.
ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು.
ನಿವೃತ್ತಿಯ ಬಟ್ಟೆ ನಿರ್ಮಲವಾಯಿತು.
ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./58
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ
ಹಂಬಲಿಸಿ ಹಲಬುತಿಪ್ಪರಣ್ಣ.
ಕಠಿಣ ಪದಾರ್ಥವ ಸವಿದೊಡೆ ವಿರತಿಯೆ?
ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ?
ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ?
ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ
ವಿರತಿಯೆ?
ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ?
ನಿಷ್ಕ್ರಿಯ ಮಾಡಿದೊಡೆ ವಿರತಿಯೆ?
ಮೌನಗೊಂಡಡೆ ವಿರತಿಯೆ?
ನಿರ್ಮೌನವಾದಡೆ ವಿರತಿಯೆ?
ಕ್ರೀಯನಾಚರಿಸಿ,
ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ?
ಇಂತಿವೆಲ್ಲವು ವಿರತಿಯ ನೆಲೆಯನರಿಯದೆ
ತಲೆಬಾಲಗೆಟ್ಟು ಹೋದವು.
ಇನ್ನು,
ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ-
ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ
ಹಿಡಿದ ವ್ರತನೇಮಂಗಳಲ್ಲಿ ನೈಷ್ಠೆಯಾಗಿ
ಈಷಣತ್ರಯಂಗಳ ಘಾಸಿಮಾಡಿ
ಬಹಿರಂಗಮದಂಗಳ ಬಾಯ ಸೀಳಿ
ಅಂತರಂಗಮದಂಗಳ ಸಂತೋಷಮಂ ಕೆಡಿಸಿ
ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ
ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು
ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ
ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ
ತನು ಮನವ ಸೋಂಕಿದ
ಸಾಕಾರ ನಿರಾಕಾರವೆಂಬ ಪದಾರ್ಥಂಗಳ
ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ
ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ
ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ
ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು
ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ
ಮಧ್ಯವೀಗ ಸಂಗಮಕ್ಷೇತ್ರ.
ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ
ತೋಂಟದ ಅಲ್ಲಮನೆಂಬ ಪರಬ್ರಹ್ಮದ
ಬೆಳಗಿನ ಪ್ರಭೆಯ ಮೊತ್ತಮಂ ಕಂಡು
ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ
ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ
ಪೂಜೆಯಂ ಮಾಡಿ
ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ.
ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ
ಮಾತಿಂಗೆ ಮಾತು ಕೊಟ್ಟು
ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./59
ಶರಣಸತಿ ಲಿಂಗಪತಿಯೆಂದು ಬಣ್ಣಿಸಿ
ಒಪ್ಪವಿಟ್ಟು ನುಡಿದುಕೊಂಬ ಕುಟಿಲವೆಣ್ಣಲ್ಲವಯ್ಯ ನಾನು.
ನಿನಗೆ ಮೆಚ್ಚಿ ಮರುಳಾದ ಪತಿವ್ರತೆಯೆಂಬುದಕ್ಕೆ
ದೃಷ್ಟವ ಕೊಟ್ಟು ನುಡಿವುತಿಪ್ಪೆ ಕೇಳಯ್ಯ ಗಂಡನೇ.
ಮಾನವರ ಸಂಚವಿಲ್ಲದ ಮಹಾ ಘೋರಾಟವಿಯಲ್ಲಿ
ನಾನು ಹೋಗುತಿಪ್ಪ ಆ ಸಮಯದಲ್ಲಿ
ಸೋರ್ಮುಡಿಯ ಸೊಬಗಿನ ನಿಡುಹುಬ್ಬಿನ ಕಡುಜಾಣೆ
ಅಲರ್ಗಣ್ಣ ಅಂಬುಜಮುಖಿ ಮುಗುಳ್ನಗೆಯ ಸೊಬಗುವೆಣ್ಣು
ಬಂದುಗೆಯ ಬಾಯ ಅಂದವುಳ್ಳವಳು
ನಳಿತೋಳ ನಾಯಕಿ ಕಕ್ಕಸ ಕುಚದ ಸೊಕ್ಕುಜವ್ವನೆ
ಸೆಳೆನಡುವಿನ ಸಿರಿವಂತೆ ಕುಂಭಸ್ಥಳದ ನಿತಂಬಿನಿ
ಪೊಂಬಾಳೆದೊಡೆಯ ಕಂಬುಕಂಧರೆ
ಕೆಂದಳಿರಚರಣದ ಮಂದಗಮನೆ
ಇಂತಪ್ಪ ಚಲುವಿನ ಕೋಮಲಾಂಗಿ
ಸರ್ವಾಭರಣಂಗಳ ತೊಟ್ಟು ನವ್ಯ ದುಕೂಲವನುಟ್ಟು
ಅನುಲೇಪನಗಳ ಅನುಗೈದು ನಡೆತಂದು
ಎನ್ನ ಅಮರ್ದಪ್ಪಿ ಅಲಂಗಿಸಿ ಮೋಹಿಸಿ
ಮುದ್ದುಮಾಡಿ ಕಾಮಾತುರದ ಭಕ್ತಿಯಿಂದ
ಎನ್ನ ಕರಮಂ ಪಿಡಿದು ತನ್ನ ಕೂಟಕ್ಕೆ ಒಡಂಬಡಿಸುವ ಕಾಲದಲ್ಲಿ
ನಾನು ಹುಲಿಹಿಡಿದ ಕಪಿಲೆಯಂತೆ ನಡುಗುತಿರ್ದೆನೆ
ನಿನ್ನ ಸತಿಯೆಂದು ಕೈವಿಡಿದು ಎನ್ನ ರಕ್ಷಣೆಯಂ ಮಾಡು
ನಿನಗಲ್ಲದೆ ಅನ್ಯರಿಗೆ ಕಿಂಚಿತ್ತು ಮನಸೋತೆನಾದೊಡೆ
ನೀಂ ನೂಂಕೆನ್ನ ಜನ್ಮಜನ್ಮಾಂತರ ಎಕ್ಕಲನರಕದಲ್ಲಿ
ಎನ್ನ ನೀಂ ನೂಂಕದಿರ್ದೆಯಾದಡೆ ನಿಮಗೆ ನಿಮ್ಮಾಣೆ
ನಿಮ್ಮ ಅಧರ್ಾಂಗಿಯಾಣೆ ನಿಮ್ಮ ಬಸವಾದಿ ಪ್ರಥಮರಾಣೆ
ಎನ್ನೀ ಅತಿಬಿರುದಿನ ಭಾಷೆಯೆಂಬುದು ನಿನ್ನ ಕರುಣವಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./60
ಶರಣು ಶರಣಾರ್ಥಿ ಲಿಂಗವೇ
ಹೊನ್ನು ಹೆಣ್ಣು ಮಣ್ಣು ಬಿಟ್ಟಾತನೇ ವಿರಕ್ತನೆಂದು
ವಿರಕ್ತದೇವರೆಂದು
ಬಣ್ಣವಿಟ್ಟು ಬಣ್ಣಿಸಿ ಕರೆವರಯ್ಯ.
ಆವ ಪರಿ ವಿರಕ್ತನಾದನಯ್ಯ ಗುರುವೇ?
ಹೊನ್ನೆಂಬ ರಿಪುವು ಚೋರರ ದೆಸೆಯಿಂದ
ಶಿರಚ್ಛೇದನವ ಮಾಡಿಸಿ
ನೃಪರಿಂ ಕೊಲಿಸುತಿಪ್ಪುದು.
ಹೆಣ್ಣೆಂಬ ರಕ್ಕಸಿ ಲಲ್ಲೆವಾತಿಂದ
ಗಂಡನ ಮನವನೊಳಗುಮಾಡಿಕೊಂಡು
ಸಂಸಾರಸುಖಕ್ಕೆ ಸರಿಯಿಲ್ಲವೆನಿಸಿ
ಸಿರಿವಂತರಿಗಾಳುಮಾಡಿ
ಇರುಳು ಹಗಲೆನ್ನದೆ ತಿರುಗಿಸುತಿಪ್ಪಳು.
ಮಣ್ಣೆಂಬ ಮಾಯೆ ತನ್ನಸುವ ಹೀರಿ ಹಿಪ್ಪೆಯ ಮಾಡಿದಲ್ಲದೆ
ಮುಂದಣಗುಣವ ಕೊಡದು.
ಇವ ಬಿಟ್ಟಾತ ವಿರಕ್ತನೆ? ಅಲ್ಲ.
ಕಾಯಕಕ್ಕಾರದೆ ಜೀವಗಳ್ಳನಾಗಿ ಮಂಡೆಯ ಬೋಳಿಸಿಕೊಂಡು
ಕಂಡ ಕಂಡವರ ಮನೆಯಲ್ಲಿ ಉಂಡು
ಕುಂಡೆಯ ಬೆಳೆಸಿಕೊಂಡಿಪ್ಪಾತ ಆತುಮಸುಖಿಯಯ್ಯ.
ಮಾತಿನಮಾಲೆಯನಳಿದು ಕಾಯದ ಕಳವಳವನಳಿದು
ಲೋಕದ ವ್ಯವಹಾರವ ನೂಂಕಿ
ಅಂಬಿಲವ ಅಮೃತಕ್ಕೆ ಸರಿಯೆಂದು ಕಂಡು
ಏಕಾಂಗಿಯಾಗಿ ತನುವ ದಂಡಿಸಿ
ಗಿರಿಗಹ್ವದಲ್ಲಿದ್ದರೆ ವಿರಕ್ತನೆ? ಅಲ್ಲ.
ಅದೇನು ಕಾರಣವೆಂದೊಡೆ
ತಾಯಿಯ ಗರ್ಭದಲ್ಲಿ ಶಿಶುವು
ಇಕ್ಕಿದ ಕುಕ್ಕುಟಾಸನವ ತೆಗೆಯದು.
ಶೀತ ಉಷ್ಣವೆನ್ನದು. ಉಪಾಧಿಕೆಯನರಿಯದು.
ಮುಚ್ಚಿದ ಕಣ್ಣು ಮುಗಿದ ಕೈಯಾಗಿ ಉಗ್ರತಪಸ್ಸಿನಲ್ಲಿಪ್ಪುದು.
ಅದಕ್ಕೆ ಮುಕ್ತಿಯಾದರೆ ಇವನಿಗೆ ಮುಕ್ತಿಯುಂಟು.
ಬರಿಯ ವೈರಾಗ್ಯ ಭವಕ್ಕೆ ಬೀಜವಾಯಿತ್ತು.
ಇನ್ನು ನಿಜವಿರಕ್ತಿಯ ಪರಿಯಾವುದೆಂದೊಡೆ-
ತ್ರಿವಿಧಪದಾರ್ಥದಲ್ಲಿ ಮನವಿಲ್ಲದೆ
[ಭಕ್ತರ] ಬಣ್ಣದ ನುಡಿಗೆ ಹಣ್ಣಾಗದೆ
ಅಂಗಭೋಗವ ನೂಂಕಿ ಲಿಂಗಭೋಗವ ಕೈಕೊಂಡು
ಆತ್ಮತೇಜವನಲಂಕರಿಸದೆ
ಅಸುವಿಗೆ ಭಿಕ್ಷವ ನೆಲೆಮಾಡಿ
ಸದಾಕಾಲದಲ್ಲಿ ಮಂತ್ರಮಾಲೆಯಂ ಮನದಲ್ಲಿ ಕೂಡಿ
ಆದಿ ಮಧ್ಯಾವಸಾನಮಂ ತಿಳಿದು
ನಿರ್ಮಲಚಿತ್ತನಾಗಿ ಏಕಾಂತವಾಸಿಯಾಗಿ
ನವಚಕ್ರಂಗಳಲ್ಲಿ ನವಬ್ರಹ್ಮಗಳ ಮೂರ್ತಿಗೊಳಿಸಿ
ಕಾಯದ ಕಣ್ಣಿಂದ ಕರತಲಾಮಲಕವ ನೋಡುವಂತೆ
ಮನದ ಕಣ್ಣಿಂದ ನವಬ್ರಹ್ಮಸ್ವರೂಪವ ಮನದಣಿವಂತೆ ನೋಡಿ
ಸುಚಿತ್ತವೇ ಮೊದಲು ನಿರವಯವೆ ಕಡೆಯಾದ ನವಹಸ್ತಂಗಳಿಂದ
ಭಾವಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಮನದಣಿವಂತೆ
ಸುಚಿತ್ತ ಗುರುವನಪ್ಪಿ ಸುಬುದ್ಧಿ ಲಿಂಗವನಪ್ಪಿ
ನಿರಹಂಕಾರ ಜಂಗಮವನಪ್ಪಿ ಸುಮನ ಪ್ರಸಾದವನಪ್ಪಿ
ಸುಜ್ಞಾನ ಪಾದೋದಕವನಪ್ಪಿದ ಲಿಂಗಾಂಗೀಯೀಗ ವಿರಕ್ತನು.
ಇಂತಪ್ಪ ವಿರಕ್ತಿಯೆಂಬ ಪ್ರಸನ್ನತ್ವ ಪ್ರಸಾದಮಂ
ಎನಗೆ ಕರುಣಿಪುದಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./61
ಶಿವನ ಕೃಪೆಯಿಂದ ಎನ್ನ ಪುಣ್ಯ ಹಣ್ಣಾದಂತೆ
ಸರ್ವಾಂಗದಲ್ಲಿ ಪ್ರಸಾದಂಗಳ ನಾನು ಎಡೆಬಿಡುವಿಲ್ಲದೆ
ಧರಿಸಿದ್ದ ಸಂಭ್ರಮವ ನೋಡಾ ಎಲೆ ಅಮ್ಮ.
ಮುಕ್ತಿಪುರವ ತೋರುವ ಪ್ರಸಾದವ ಪಂಚಸ್ಥಾನದಲ್ಲಿ ಧರಿಸಿದೆ.
ಪ್ರಸಿದ್ಧಪ್ರಸಾದ ಸಿದ್ಧಪ್ರಸಾದ ಶುದ್ಧಪ್ರಸಾದ
ಆದಿಪ್ರಸಾದ ಮಹಾಪ್ರಸಾದ
ಎಂಬ ಪಂಚಪ್ರಸಾದಂಗಳಂ ಪಂಚಸ್ಥಾನದಲ್ಲಿ ಧರಿಸಿದೆ.
ಪ್ರಸಿದ್ಧಪ್ರಸಾದವ ಆಕಾಶದಲ್ಲಿ ಧರಿಸಿದೆ.
ಸಿದ್ದಪ್ರಸಾದವ ಬ್ರಹ್ಮರಂಧ್ರದಲ್ಲಿ ಧರಿಸಿದೆ.
ಆಚಾರಾದಿ ಪ್ರಸಾದಮಂ ತತ್ವ ಎರಡರ ಮೇಲೆ ಧರಿಸಿದೆ.
ಮಹಾಪ್ರಸಾದಮಂ ಪಶ್ಚಿಮದಲ್ಲಿ ಧರಿಸಿದೆ.
ಇಂತಪ್ಪ ಪರಬ್ರಹ್ಮವೆನಿಸುವ ಪ್ರಸಾದಂಗಳ ನಾನು
ದಿನಾರಾತ್ರಿಯೆನ್ನದೆ ಪೂಜೆಯ ಮಾಡಿದಲ್ಲಿ
ಎನಗೆ ಪರಮಾರ್ಥದರಿವು ಕೈಸಾರಿತು.
ಆ ಪರಮಾರ್ಥದರಿವು ಕೈಸಾರಿದಲ್ಲಿಯೇ
ಎನ್ನ ತನು ಮನ ಧನಂಗಳು ಪದಾರ್ಥಗಳಾದವು.
ಆ ಪದಾರ್ಥಂಗಳ ಏಕಚಿತ್ತ ಮನೋಭಾವದಲ್ಲಿ
ತೋಂಟದ ಸಿದ್ಧಲಿಂಗನೆಂಬ ನಿಷ್ಕಲಬ್ರಹ್ಮಕ್ಕೆ ಸಮರ್ಪಿಸಿದಲ್ಲಿಯೇ
ಎನಗೆ ಅನಿತ್ಯತೆ ಕೆಟ್ಟು ನಿತ್ಯವೆಂಬುದು ನಿಜವಾಯಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./62
ಶಿವಪ್ರಸಾದವ ಬೀಸರವೋಗಬಾರದೆಂದು
ಎಚ್ಚರಿಕೆ ಅವಧಾನದಿಂದರ್ಪಿಸಿ
ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ
ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ
ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ?
ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ
ಭಕ್ತಿ ಭಕ್ತಿಯಿಂದ ವೈಯಾರದಲ್ಲಿ
ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು.
ಅದಲ್ಲದೆ
ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ
ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ.
ಅದು ಎನ್ನ ಜ್ಞಾನಕ್ಕೆ ಸಂದಿತು.
ಅದು ಹೇಗೆಂದೊಡೆ
ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ
ಶಿವಭಕ್ತೆ ಸತ್ಯಕ್ಕನ ಮನೆಗೆ
ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ’ ಎನ್ನಲೊಡನೆ
ಹರನ ಬಾಯ ಹುಟ್ಟಿನಲ್ಲಿ ತಿವಿದಳು.
ಅದು ಅವಳ ಭಾಷೆಗೆ ಸಂದಿತು.
ಅವಳು ಶಿವದ್ರೋಹಿಯೇ? ಅಲ್ಲ.
ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ
ಕುಟುಕುನೀರ ಕುಡಿಯುವ ಸಮಯದಲ್ಲಿ
ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು
ಮೂರು ಪಾಶಂಗಳ ಕುಣಿಕೆಯ ಕಳೆದು
ಭೋಗ ಭುಕ್ತ್ಯಾದಿಗಳನತಿಗಳೆದು
ಅಹಂಕಾರ ಮಮಕಾರಗಳನಳಿದು
ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ
ಪೊಡವಿಯ ಸ್ನೇಹಮಂ ಹುಡಿಗುಟ್ಟಿ
ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ
ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು
ಬಸವಾದಿಪ್ರಮಥರರಿಕೆಯಾಗಿ
ಶಿವನ ಮುಂದೆ ಕಡುಗಲಿಯಾಗಿ
ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ
ಶಿವನು ಮೂಗುಕೊಯ್ದು ಕನ್ನಡಿಯ ತೋರಿ
ಅಣಕವಾಡಿ ನಗುತಿಪ್ಪನೆಂದು
ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು.
ಆ ಸಮಯದಲ್ಲಿ
ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ
ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು.
ನಾನು ಪ್ರಸಾದದ್ರೋಹಿಯೆ? ಅಲ್ಲ.
ಇಂತಲ್ಲದೆ.
ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ
ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ
ಉದಾಸೀನವ ಮಾಡಲಮ್ಮೆನು.
ಮಾಡಿದೆನಾದಡೆ
ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು.
ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./63
ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ
ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ.
ಜನನ ಮರಣಕಂಜಿ
ತಾನಾರೆಂಬುದಂ ಸ್ವಾನುಭಾವದಿಂ ನೋಡಿ
ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ
ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ
ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು
ಬಂಧುವರ್ಗಮಂ ಭಂಗಿಸಿ ಉಪಾಧಿಕೆಯನುರುಹಿ
ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು
ಮಮಕಾರಂಗಳಂ ಮುಂದುಗೆಡಿಸಿ
ಲೋಕದ ನಚ್ಚುಮೆಚ್ಚಿಗೆ ಕಿಚ್ಚುಗುತ್ತಿ
ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ
ಮರಹ ಮಗ್ಗಿಸಿ ಮನ ತನುವನಪ್ಪಿ
ಸರ್ವ ಕರಣಂಗಳಂ ಚರಲಿಂಗಮುಖವ ಮಾಡಿ
ಆತ್ಮವಿದ್ಯಾಲಿಂಗದಲ್ಲಿ ಮನಸಂದು
ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ
ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು
ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ
ಆರೆರಡು ಪ್ರಕಾರದ ನಾದಂಗಳಂ ಕೇಳಿ
ಹರುಷಂ ಹರವರಿಗೊಂಡು
ಎನಗೆ ಶಿವತತ್ವ ಸಾಧ್ಯವಾಯಿತು.
ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ
ಕ್ರೀಯಂ ಬಿಟ್ಟು ಗಂಭೀರಜ್ಞಾನದೊಳಿರುವ ಶರಣಂಗೆ
ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ
ಶಿವನಲ್ಲಿ ನಿಜೈಕ್ಯವಿಲ್ಲ.
ಅದೇನು ಕಾರಣವೆಂದೊಡೆ-
ಷಟ್ಸ ್ಥಲಬ್ರಹ್ಮಿಯೆನಿಸಿಕೊಂಡು
ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ
ಎರಡೊಂದು ಸ್ಥಲ ಒಂದಾದ ಸ್ಥಲದಲ್ಲಿ
ಶರಣಲಿಂಗವೆಂಬುಭಯವಳಿದು
ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ
ಸಿದ್ಧಪ್ರಸಾದವೆಂಬ ನಿಷ್ಕಲಬ್ರಹ್ಮದಲ್ಲಿ
ಉರಿ ಕಪರ್ೂರದಂತೆ ಬೆಳಗುದೋರಿ
ಶುದ್ಧಪ್ರಸಾದವನಂಗಂಗೊಂಡು
ನಿರಂಜನ ಪ್ರಸಾದವನೊಡಗೂಡಿದ
ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ
ಶಿವಲಿಂಗಪೂಜೆಯಂ ಬಿಟ್ಟ[ರೆ]?
ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]?
ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]?
ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]?
ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]?
ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]?
ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ
ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ
ಅವನ ಕರ್ಮಾದಿಕರ್ಮಂಗಳಂ ಸುಟ್ಟು
ಅವನ ರಕ್ಷಿಪುದಂ ಬಿಟ್ಟ[ರೆ]?
ಇಂತಿವೆಲ್ಲವು ಕ್ರೀಯೋಗಗಳು.
`ಕ್ರಿಯಾದ್ವೆ ತಂ ನ ಕರ್ತವ್ಯಂ ಜ್ಞಾನಾದ್ವೆ ತಂ ಸಮಾಚರೇತ್|
ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||’
ಇಂತೆಂದುದಾಗಿ ಇದುಕಾರಣ
ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ
ನಿಜಮುಕ್ತಿಯಲ್ಲದೆ
ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು
ಸಾಯುಜ್ಯಪದಸ್ಥಲನಪ್ಪನಲ್ಲದೆ
ಹರನಲ್ಲಿ ಸಮರಸವಿಲ್ಲವೆಂದೆನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./64
ಸದಮಲಭಕ್ತಿಯಿಂದ ಭಕ್ತನು ನಮಸ್ಕರಿಸಿ
ಎನ್ನ ಕೈವಿಡಿದು ತನ್ನ ಮಠಕ್ಕೆ ಕರೆದೊಯ್ದು
ತಾನು ಪಟ್ಟಗದ್ದುಗೆಯ ಮೇಲೆ ಕುಳಿತು
ಚಿನ್ನದ ಪರಿಯಾಣದಲ್ಲಿ ಪಂಚಾಮೃತವನುಣ್ಣುತ
ಎನ್ನ ಕದವಿನ ಮರೆಯಲ್ಲಿ ಕುಳ್ಳಿರಿಸಿ
ಒಡೆದ ಓಡಿನಲ್ಲಿ ಅಂಬಲಿಯನೆರೆಯಲು
ಎಲೆ ದೇವ ಎನ್ನ ಮನದಲ್ಲಿ ನೊಂದೆನಾದೊಡೆ
ನಾನು ಕರಪಾತ್ರನಲ್ಲ ಅಪಾತ್ರನು.
ಅದೇನು ಕಾರಣವೆಂದೊಡೆ
ನಾನು ಮೂರಾರುತಿಂಗಳು
ಜನನಿಯ ಜಠರವೆಂಬ ಸೆರೆಮನೆಯಲ್ಲಿ ಸಿಕ್ಕಿರುವಾಗ
ಎನಗೆ ಸದಾಕಾಲ ಉಣಲಿಟ್ಟು
ಸಲಹಿದವ ನೀನೋ? ಅವನೋ?
ಆ ಸೆರೆಮನೆಯಿಂದ ಎನ್ನ ಕೈವಿಡಿದು ಕರೆತಂದು
ಶಿವಲಾಂಛನಮಂ ಕರುಣದಿಂದಿತ್ತು
ಮರ್ತ್ಯಲೋಕದಲ್ಲಿ ಎನ್ನಂ ಪೂಜ್ಯನ ಮಾಡಿದಾತ
ನೀನೋ? ಅವನೋ?.
ಇದು ಕಾರಣ-
ಇಕ್ಕುವಾತ ಅವನೆಂಬುದು ಎನ್ನಲಿಲ್ಲ.
ಎಚ್ಚವನಿದ್ದಂತೆ ಅಂಬಿಗೆ ಮುನಿವರೇ ಅಯ್ಯ?
ನಾನು ಉಂಡುಟ್ಟು ಸುಖಿಯಾದರೆ ನಿನ್ನ ಹಾಡುವೆ.
ನಾನು ಹಸಿದು ನೊಂದೆನಾದರೆ ನಿನ್ನಂ ಬೈವೆನಲ್ಲದೆ
ಮಾನವರ ಹಂಗು ಎನಗೇತಕಯ್ಯಾ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ. /65
ಸಾಧು ಗುಣಕ್ಕೆ ಸಲೆ ಸಂದ ವಾರಣ ಬಂದು
ಹುಟ್ಟು ಕಂಗಳರ ಸಭಾಮಧ್ಯದಲ್ಲಿ ನಿಲ್ಲಲು
ಕೆಲದೊಳಿಪ್ಪ ಕಣ್ಣುಳ್ಳಾತ ಆನೆ ಬಂದಿತೆಂದು ನುಡಿಯಲೊಡನೆ
ಅತಿ ಪ್ರೇಮದಿಂದ ಕಂಗಳರು
ಆ ಆನೆಯ ಅವಯವಂಗಳಂ ಮುಟ್ಟಿ ನೋಡಿ
ಆನೆ ಕೊಳಗದಾಕಾರವೆಂದು ಕಾಲ ಮುಟ್ಟಿದಾತ
ಆನೆ ಒನಕೆಯಾಕಾರವೆಂದು ಸೊಂಡಿಲ ಮುಟ್ಟಿದಾತ
ಆನೆ ಹರವಿಯಾಕಾರವೆಂದು ಕುಂಭಸ್ಥಲವ ಮುಟ್ಟಿದಾತ
ಆನೆ ಮೊರದಾಕಾರವೆಂದು ಕಿವಿಯ ಮುಟ್ಟಿದಾತ
ಆನೆ ರಜಪೂರಿಗೆಯಾಕಾರವೆಂದು ಬಾಲವ ಮುಟ್ಟಿದಾತ
ಇಂತಿವರೆಲ್ಲರೂ ಆನೆಯ ನೆಲೆಯನರಿಯದೆ
ತಮ್ಮೊಳಗೆ ತಾವು ಕೊಂಡಾಡುತ್ತಿಪ್ಪರು.
ಆನೆಯ ನೆಲೆಯ ಆನೆಯನೇರುವ ಪಟ್ಟದರಸು ಬಲ್ಲನಲ್ಲದೆ
ಹುಟ್ಟು ಕುರುಡರದೇನು ಬಲ್ಲರಯ್ಯ?.
ಈ ಪ್ರಕಾರದಲ್ಲಿಪ್ಪ ಪಶುಪ್ರಾಣಿಗಳು
ನಿಜೈಕ್ಯರ ಆಚರಣೆಯನರಿಯದೆ
ಮೂಗಿನಾಭರಣವ ಮೂಗಿಗಿಕ್ಕುವಂತೆ
ನುಡಿದು ನಡೆಯ ತಪ್ಪುವರು.
ಅದು ಶಿವಜ್ಞಾನಿಗಳ ಮತವಲ್ಲ.
ಅದು ಹೇಗೆಂದೊಡೆ
ಪ್ರತ್ಯಕ್ಷ ಜ್ಞಾನವ ಪ್ರಮಾಣಿಸಿ ಅಪರೋಕ್ಷಜ್ಞಾನವನಾಲೋಚಿಸಿ
ಸಹಜಜ್ಞಾನವ ಸಂಪಾದಿಸಿ
ಈ ಜ್ಞಾನತ್ರಯವನೊಂದುಮಾಡಿ
ಬಿಡುವ ಹಿಡಿವ ಆಚರಣೆಯಂ ನೆಲೆಗೊಳಿಸಿಕೊಂಡು
ಹಿಡಿದಾಚರಣೆಯಲ್ಲಿ ಪರಾಕ್ರಮಿಯಾಗಿ
ಆದಿ ಅನಾದಿಯ ಮೇಲಣ
ಜ್ಯೋತಿರ್ಮಯವಪ್ಪ ಶೂನ್ಯಲಿಂಗಮಂ
ಬೆರಸಿ ಭಿನ್ನವಿಲ್ಲದಿರ್ಪ ಆಚರಣೆಯ
ವೀರಮಾಹೇಶ್ವರ ಬಲ್ಲನಲ್ಲದೆ
ಅಜ್ಞಾನಿ ಬಾಯಿಬಡಿಕರಿವರೆತ್ತ ಬಲ್ಲರಯ್ಯಾ?,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./66