Categories
ವಚನಗಳು / Vachanagalu

ಚೆನ್ನಯ್ಯನ ವಚನಗಳು

ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ
ಆ ಲಿಂಗವ ಏತಕ್ಕೆ ಧರಿಸಲಿ ?
ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ
ಆ ಪ್ರಸಾದ ಏತಕ್ಕೆ ಕೊಳ್ಳಲಿ ?
ಇದು ಕೊಟ್ಟವನ ಗುಣದಿಂದಾದುದು.
ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ?
ಏತಕ್ಕೆ ಪ್ರಸಾದವ ಕೊಂಬುವಿರಿ ?
ಇದಕ್ಕೆ ಸಾಕ್ಷಿ: ‘ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ’
ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ.
ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ
ನಿಮ್ಮ ನಡೆ ಎಂತೆಂದಡೆ: ಸಾಕ್ಷಿ: ‘ನಾಮಧಾರಕ ಗುರು ನಾಮಧಾರಕಃ ಶಿಷ್ಯಃ |
ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||’
ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ
ಉರಿಕಪರ್ುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ
ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು.
ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ.
ಗುರು, ಲಿಂಗ, ಜಂಗಮ, ತೀರ್ಥಪ್ರಸಾದ
ಪಂಚಬ್ರಹ್ಮಮೂರ್ತಿ ನಿಮ್ಮ ಶರಣ.
ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ
ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ
ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ,
ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ,
ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು
ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./1
ಅಂಗವೆ ಶರಣನಾದ ನಿಮಿತ್ಯದಲ್ಲಿ
ಶರಣನ ಸವರ್ೆಂದ್ರಿಯಂಗಳೆಲ್ಲ
ಲಿಂಗಮುಖ ಗುಟಕಿಯ[ಲ್ಲದೆ ಅನ್ಯ ಗುಟಕಿಯ ಕೊಂಡರೆ]
ಅಲ್ಲಿಯ ಹೀನ ಹುಯ್ಯಲಂಗಳ ಗುಟಕಿಯ ತೆಗೆದುಕೊಂಡಂತೆ,
ಶರಣನ ಅಂಗದಲ್ಲಿ ಸೋಂಕಿದ ಸುಖಂಗಳೆಲ್ಲ ಲಿಂಗಮಯವೆಂದರಿಯದೆ
ಲಿಂಗವ ಬೇರೆ ಇಟ್ಟು ಕೊಟ್ಟುಕೊಂಬೆನೆಂಬ ಕುನ್ನಿಗಳಿಗೆ
ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./2
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ನಿಜಪ್ರಸಾದವೆಂಬ
[ಈ ಚತುರ್ವಿಧಪ್ರಸಾದದ] ನಿರ್ಣಯ[ವ]ನರಿದು
[ಕೊಂಡು] ಕೊಡಬಲ್ಲಾತನೆ ಗುರು,
ತಿಳಿದು ಕೊಳಬಲ್ಲಾತನೆ ಸದ್ಭಕ್ತ.
ಈ ಭೇದವನರಿಯದೆ ಅಚ್ಚ ನಿಚ್ಚ ಪ್ರಸಾದವೆಂದು ನೀರಕೂಳನುಂಬುವ
ಉಚ್ಫಿಷ್ಟ ಮುದಿಹೊಲೆಯರ ಮೂಗು ಕೊಯ್ಯದೆ ಮಾಣ್ಬನೆ
[ನಿಮ್ಮ ಶರಣ] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. /3
ಅಚ್ಚಪ್ರಸಾದವೆಂಬುದೆ ನಿಶ್ಚಲ ನಿರ್ವಯಲಕ್ಕೆ ನಾಮವು.
ಅಚಲ ಅದ್ವಯ ಅಭಿನ್ನವೆಂಬುದೆ [ಅಚ್ಚಪ್ರಸಾದ ].
ಗುರುಸ್ವಾನುಭಾವದಿಂದರಿದು ನಿಶ್ಚಯವಾದುದೆ ನಿಚ್ಚಪ್ರಸಾದ.
ಅಷ್ಟಮೂರ್ತಿಗಳ ಸಮಯವನರಿದುದೆ ಸಮಯಪ್ರಸಾದ.
ಏಕಪ್ರಸಾದವೆಂಬುದೆ ಅಂಡಪಿಂಡ ಬ್ರಹ್ಮಾಂಡಗಳಿಗೆ ಏಕರಸಮಯವಾಗಿ
ತತ್ವಮಸಿಯಾದಿ ವಾಕ್ಯಂಗಳನರಿತು
ಸರ್ವಕಲ್ಪಿತಬ್ರಹ್ಮವೆಂದು ಅರಿತುಕೊಳ್ಳಬಲ್ಲರೆ
ಏಕಮೇವನದ್ವಿತೀಯವೆಂದು ವಾಕ್ಯಂಗಳಿಗೆಡೆಗೊಡದೆ ಏಕಪ್ರಸಾದವ
ಕೊಂಡವರು ಬಸವ ಚನ್ನಬಸವ [ಪ್ರಭುದೇವ] ಮುಖ್ಯವಾದ
ಅಸಂಖ್ಯಾತ ಗಣಂಗಳು.
[ಕೊಂಡವರ ಏಕ] ಪ್ರಸಾದದಿಂದ
ಮುಂದಾದವರಿಗೂ ಇದೇ ಪ್ರಸಾದ
ಹಿಂದಾದವರಿಗೂ ಇದೇ ಪ್ರಸಾದ
ಇಂದಾದವರಿಗೂ ಇದೇ ಪ್ರಸಾದ.
ಈ ಪ್ರಸಾದವಲ್ಲದೆ ನಿತ್ಯಾನಿತ್ಯ ಹಸಿವು ತೃಷೆಗೆ ಕೊಂಬುವದು
ಪಾದೋದಕಪ್ರಸಾದವಲ್ಲ.
ನೀರಕೂಳನುಂಡು ಜಲಮಲವೆಂಬುದು
ಪಾದೋದಕ ಪ್ರಸಾದವಲ್ಲ.
ನಿತ್ಯ ನಿತ್ಯ ತೃಪ್ತಿಯೇ ಪ್ರಸಾದವೆಂಬುವದು ಪರಮಾನಂದವು.
ಈ ಭೇದವನರಿದುಕೊಳ್ಳಬಲ್ಲಾತನೆ ಭಕ್ತ, ಕೊಡಬಲ್ಲಾತನೆ ಗುರುವು.
ಪಾದೋದಕ ಪ್ರಸಾದವ ಕೊಳ್ಳಬೇಕೆಂಬಾತ ಭಕ್ತನಲ್ಲ, ಬದ್ದಭವಿ.
ಉರಿಕೊಂಡ ಕಪರ್ುರವ ಮರಳಿ ಸುಡುವರೆ ?
ಪರುಷ ಮುಟ್ಟಲು ಲೋಹ ಹೊನ್ನಾದ ಮೇಲೆ ಮರಳಿ ಮರಳಿ
ಪರುಷವ ಮುಟ್ಟಿಸುವರೆ ?
ಜ್ಯೋತಿ ಮುಟ್ಟಿದ ಮನೆಗೆ ಕತ್ತಲುಂಟೆ ?
ಪಾದೋದಕ ಪ್ರಸಾದ ಸೋಂಕಿದ ಕಾಯ ಪ್ರಸಾದವಲ್ಲದೆ
ಪ್ರಸಾದಕ್ಕೆ ಪ್ರಸಾದವುಂಟೆ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?/4
ಆತನ ಅಗಲೊಳಗೆ ಕಪ್ಪು ಬಿದ್ದಿಹುದು,
ಅನ್ಯರ ಎಡೆಯೊಳಗೆ ಕಪ್ಪು ಇದ್ದಿತು ನೋಡೆಂಬ ಅಂಧಕಗಳಿರಾ.
ತಮ್ಮ ಕಾಣದೆ ಅನ್ಯರ ಧಿಕ್ಕರಿಸಿ ನುಡಿವ ಕುನ್ನಿಗಳಿಗೆ
ಶಿವಲಿಂಗ ಮುನ್ನವೇ ಇಲ್ಲ[ವೆಂದ] ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./5
ಇಷ್ಟ, ಪ್ರಾಣ, ಭಾವ ತ್ರಿವಿಧಾತ್ಮ ಕಾರಣ
ತಾನೆ ಶಿವಲಿಂಗವೆಂದರಿಯದೆ
ಲಿಂಗ ಬೇರೆ ಶರಣ ಬೇರೆಯೆಂಬ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದ.
‘ಏಕಮೂರ್ತಿಸ್ತ್ರಯೋಭರ್ಾಗಾ ತ್ರಿವಿಧಂ ಲಿಂಗಮುಚ್ಯತೇ
ಕಾರ್ಯಭಿನ್ನ ಮೃಡಭಾವಂ’ ಎಂದುದು ನಿಮ್ಮ ಶ್ರುತಿ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./6
ಇಷ್ಟಲಿಂಗ ಇನ್ನೂರಹದಿನಾರು ಮುಖದಿಂದ ತೃಪ್ತಿಗೊಳ್ಳುತಿಹುದು.
ಪ್ರಾಣಲಿಂಗ ನೂರಾಹನ್ನೊಂದು ಮುಖವಾಗಿ ತೃಪ್ತಿಗೊಳ್ಳುತಿಹುದು.
ಭಾವಲಿಂಗ ಷಡ್ವಿಧಮುಖದಿಂದ ತೃಪ್ತಿಗೊಳ್ಳುತಿಹುದು.
ಈ ತ್ರಿವಿಧಲಿಂಗವು ಒಂದಾಗಿ, ವಿಶ್ವತೋಮುಖವಾಗಿ
ಶರಣನ ಅಂಗದಲ್ಲಿ ಶಿವಲಿಂಗವೆ ತೃಪ್ತಿಗೊಳ್ಳುತಿಹುದು.
ಈ ಭೇದವ ತಿಳಿಯದೆ ಭಿನ್ನವಿಟ್ಟು ಕೊಟ್ಟು ಕೊಂಬೆನೆಂಬ ಕುನ್ನಿಗಳಿಗೆ
ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./7
ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು
ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ.
ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ
ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು.
”ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ”
ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./8
ಇಷ್ಟಲಿಂಗವೆ ಅನಾದಿಯು, ಪ್ರಾಣಲಿಂಗವೆ ಆದಿಯು.
ಇದು ಮಾರ್ಗಕ್ರೀಯೆನಿಸುವುದು.
ಪ್ರಾಣಲಿಂಗವೆ ಅನಾದಿಯು, ಇಷ್ಟಲಿಂಗವೆ ಆದಿಯು.
ಇದು ಮೀರಿದ ಕ್ರಿಯಾಮಾರ್ಗವೆನಿಸುವುದು.
ಈ ಉಭಯದ ಭೇದವ ಸದ್ಗುರು ಮುಖದಿಂ ತಿಳಿದು,
ಆದಿ ಅನಾದಿಯೆಂಬ ಉಭಯವನುಳಿದು,
ಒಂದೇಪರಾತ್ಪರವಸ್ತುವೆಂದು ಅರಿದು,
ಸಮಭಾಜನದಿಂದ ಪ್ರಸಾದಕ್ಕೆ ಪ್ರಸಾದವನರ್ಪಿಸಿ,
ಪಾದೋದಕಕ್ಕೆ ಪಾದೋದಕವನರ್ಪಿಸಿ,
ತಾನುಭಯಮಧ್ಯದಲ್ಲಿ ಭಾವಲಿಂಗರೂಪದಿಂದ
ಪರಿಣಾಮಪಾದೋದಕ ಪ್ರಸಾದವನಪ್ಪಿ ಅಗಲದಿಪ್ಪಾತನೆ
ಮಹಾಶಿವಕಲಾಚೈತನ್ಯ ನಿಜಪ್ರಸಾದಿ ನೋಡಾ.
ಭಕ್ತ ಜಂಗಮವೆಂಬ ಉಭಯಭಾವವಳಿದು,
ದುರ್ಮಾರ್ಗ ಅನಾಚಾರ ಅಜ್ಞಾನವ ತ್ಯಜಿಸಿ,
ಶರಣಗಣಂಗಳು ಹೋದ ಮಾರ್ಗವನರಿದು,
ಉಭಯಭಾವವಳಿದು,
ಸತ್ಕ್ರಿಯಾ ಸಮ್ಯಜ್ಞಾನ ಸಮರಸಾನಂದವನರಿದು,
ಜಂಗಮದ ತೀರ್ಥಪ್ರಸಾದವ ಜಂಗಮಕ್ಕರ್ಪಿಸಿ,
ಲಿಂಗತೀರ್ಥಪ್ರಸಾದವ ಲಿಂಗಕ್ಕರ್ಪಿಸಿ,
ಉಭಯಸಂಬಂಧದಾಚರಣೆಯ ತಿಳಿದು,
ಅಂಗಲಿಂಗವೆಂಬ ಉಭಯವನಳಿದು,
ಅಂಗಲಿಂಗವಾದುದೊಂದೆ ವಸ್ತುವೆಂದರಿದು,
ಕೊಟ್ಟು ಕೊಳಬಲ್ಲಾತನೆ ಮಹಾಪ್ರಸಾದಿ ನೋಡಾ.
ಇದನರಿಯದೆ ಕೊಟ್ಟು, ಕೊಂಡು ಪಾದೋದಕ ಪ್ರಸಾದವ
ಬಹಿರಂಗಕ್ಕಿಕ್ಕಿ ಅಹಂಕರಿಸುವ ಮೂಳರಿಗೆ
ಮಹಾಪ್ರಸಾದವಿಲ್ಲ ಕಾಣಾ.
ಅವರಿಗೆ ರೌರವನರಕ ತಪ್ಪದು ನೋಡಾ.
ಅದರಿಂದ ನಿನ್ನ ನೀನರಿದು, ನಿನ್ನ ನಿಜವ ನೀ ತಿಳಿದು,
ಭೋಗಿಸೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./9
ಏನೂ ಏನೂ ಇಲ್ಲದೆ ತಾನೆ ತಾನಾಗಿರ್ದ
ಭಾನುಕೋಟಿಪ್ರಭೆ ಒಂದಾದ ಪ್ರಸಾದ.
ವರ್ಣ ವಸ್ತು ನಾದ ಬಿಂದು ಕಳೆಗಳಿಲ್ಲದಂದು
ಸುರಾಳ ನಿರಾಳವಿಲ್ಲದಂದು
ಪಿಂಡಾಂಡ ಬ್ರಹ್ಮಾಂಡಂಗಳು ಮೊಳೆದೋರದಂದು
ಪಂಚಮೂರ್ತಿಗಳ ನಾಮವಿಲ್ಲದಂದು
ಪಂಚಪ್ರಣಮದ ಘೋಷಧ್ವನಿದೋರದಂದು
ಮಹಾಪ್ರಸಾದ ಆಕಾಶವೆ ತಾನೆಯಾದ ಚಿತ್ಪ್ರಸಾದದ ಪ್ರಕಾಶವೆ
ಅನಂತಕೋಟಿ ಸೋಮಸೂರ್ಯಪ್ರಭೆಯನೊಳಕೊಂಡಿತ್ತು.
ಸಾಕಾರವೆ ಚಿಚ್ಫಕ್ತಿ[ಗೆ] ಆದಿಯಾಗಿ ಅನಂತಕೋಟಿಶಕ್ತಿಗಳಿಗೆ
ಆಶ್ರಯಸ್ಥಾನವಾಗಿದ್ದಿತ್ತು.
ದಕಾರವೆ ದಶದಿಶಭರಿತಪೂಣರ್ಾಕಾರ ಲಿಂಗವಾಗಿ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣನಾಮವೆಂದುದಾ ಪ್ರಸಾದ ಶಬ್ದ.
ಈ ಭೇದವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆನಬಹುದು.
ಈ ಭೇದವನರಿದು ಕೊಳಬಲ್ಲರೆ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆನಬಹುದು.
ಇದನರಿಯದೆ ಕೊಟ್ಟ ಜಂಗಮಕ್ಕೆ, ಕೊಂಡ ಭಕ್ತಂಗೆ
ರೌರವ ನರಕವೆಂದುದು ನೋಡಾ.
ಇದಕ್ಕೆ ಸಾಕ್ಷಿ: ‘ಜ್ಞಾನಹೀನಂ ಗುರುಂ ಪ್ರಾಪ್ಯ ಶಿಷ್ಯೋ ಜ್ಞಾನವಿವಜರ್ಿತಃ |
ಅಂಧ್ಯೋಂಧಕರಯುಕ್ತಶ್ಚದ್ವಿವಿಧಂ ಪಾತಕಂ ಭವೇತ್ ||’
ಎಂದುದಾಗಿ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವು
ಶ್ರುತಿ ಸಾಕ್ಷಿಯಾಗಿ ಛೀ ಎನ್ನದೆ ಮಾಣ್ಬನೆ ನಿಮ್ಮ ಶರಣನು ? /10
ಗುರು ಹಸ್ತಮಸ್ತಕಸಂಯೋಗ ಲಿಂಗಶರಣನಾದ ಬಳಿಕ
ಮಲದೇಹಿ ಮಾಂಸಪಿಂಡ ವಾಯುಪ್ರಾಣಿಯು ಹೋಗಿ
ಪ್ರಸಾದಕಾಯ ಮಂತ್ರಪಿಂಡ ಲಿಂಗಪ್ರಾಣಿಯಾಯಿತು.
ಇಂತೀ ಸರ್ವಾಂಗಪ್ರಸಾದಮಂತ್ರಮೂರ್ತಿಯಾದ ಶರಣನ
ನಿಲವನರಿಯದೆ ವೇಷಧಾರಿಗಳು ನಿಂದಿಸಿ ನುಡಿಯುತಿಹಿರಿ.
ನಿಮ್ಮ ಅಂಗದ ಮೇಲೆ ಲಿಂಗ ಸೋಂಕಲು ಲಿಂಗಾಂಗವಾದುದಿಲ್ಲವೆ ?
ನೀವು ಪ್ರಸಾದಕೊಂಡ ಕಾಯವೆಲ್ಲ ಪ್ರಸಾದಕಾಯ ಆದುದಿಲ್ಲವೆ ?
ನೀವು ಮಂತ್ರಮೂರ್ತಿ ಆದುದಿಲ್ಲವೆ ?
ಈ ತ್ರಿವಿಧ ಪೂರ್ವವ ಕಳೆದು ಪುನಜರ್ಾತನ ಮಾಡಿದಾತ
ಅವಗೆ ಗುರುವಿಲ್ಲ,
ಅವನು ಶಿಲೆಯ ಮಾರಿ ಹೊಟ್ಟೆಹೊರಕೊಂಬುವ ಭೂತದೇಹಿ.
ಅವನು ಗುರುವೆಂದು ಪೂಜಿಸುವ ವೇಷಧಾರಿ,
ಅವರಿಬ್ಬರಿಗೂ ಪಾದೋದಕ ಪ್ರಸಾದ ವಿಷವಾಗಿ
ಹೊಟ್ಟೆ ಹೊರೆದುಕೊಂಬ ಜಂಗಮ
ತುತ್ತು ಬುತ್ತಿಯನಾಯ್ದುಕೊಂಡು ತಿಂಬ ಪಿಶಾಚಿ.
ಇಂತೀ ಲಿಂಗಾಂಗಿ ಲಿಂಗಪ್ರಾಣಿಯಾದ ಶರಣರ ನಿಂದಿಸುವ ಲಾಂಛನಧಾರಿಗಳಿಗೆ
ಶಿವಲಿಂಗ ಸಂಬಂಧವಿಲ್ಲವೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./11
ಜಲವಂ ತೊಳೆದು ಕುಡಿವ ಮಲದೇಹಿಗಳ
ಮುಖವ ನೋಡಲಾಗದು ಎಂಬುದಕ್ಕೆ
”ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ |
ದಕಾರಂ ದಹ್ಯತೇ ಜನ್ಮ ಕಕಾರಂ ಕರ್ಮಛೇದನಂ ||’
ಎಂದುದು ಚೆನ್ನಯ್ಯಪ್ರಿಯ ನಿರ್ಮಾಯಪ್ರಭು[ವಿನ ವಚನವು]/12
ತೀರ್ಥಃ ಜಂಗಮಾನಾಂ ಲಿಂಗಪ್ರಸಾದಂ ಕ್ರೀಯತೇ |
ಲಿಂಗ ಜಂಗಮಾದ್ವಯೋಭಾವ ತೀರ್ಥಂ ನಾಸ್ತಿ ಸುರಾಪಾನಂ ||’
ಜಂಗಮದಲ್ಲಿ ಪಾದತೀರ್ಥವ ಪಡೆದುಕೊಂಡು
ಲಿಂಗಮುಖದಲ್ಲಿ ಕೊಡಬೇಕೆಂದು
ಲಿಂಗಕ್ಕೆ ಕೊಟ್ಟು ಕೊಂಬುವದು
ತೀರ್ಥವಲ್ಲ ಅದು ಸುರಾಪಾನ.
ಅವರಿಗೆ ಗುರುವಿಲ್ಲ, ಲಿಂಗವಿಲ್ಲ. ಜಂಗಮವಿಲ್ಲ,
ತೀರ್ಥವಿಲ್ಲ, ಪ್ರಸಾದವಿಲ್ಲ.
ಅವರಿಗೆ ರೌರವ ನರಕ ತಪ್ಪದೆಂದನು,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./13
‘ನರದೇಹಿನಾಂ ನಾಸ್ತಿ ಲಿಂಗಂ’
ಅವನು ಅಶುದ್ಧ ದೇಹಿ ಸೂತಕದೇಹಿ,
‘ಲಿಂಗಶುದ್ಧ ಜ್ಯೋತಿಸ್ತಥಾ ಶುದ್ಧ ಸಂಶುದ್ಧ ಲಿಂಗಾಂಗೀ’
ಲಿಂಗಪ್ರಾಣಿ ಪ್ರಸಾದದೇಹಿಯಾದ ಶರಣನು
ಮುಟ್ಟಿದುದೆಲ್ಲ ಪವಿತ್ರ.
ಆತನು ನುಡಿದುದೆಲ್ಲ ಶಿವಮಂತ್ರ.
ಆತ ನಿಂತ ಭುವನಂಗಳೆಲ್ಲ ಕೈಲಾಸ.
ಆತ ಸೋಂಕಿದ ಶಿಲೆಗಳೆಲ್ಲ ಪರಂಜ್ಯೋತಿಲಿಂಗಗಳಾದವು.
ಆತ ಸಂಚಾರ ಮಾಡಿದ ಜಲಗಳೆಲ್ಲ ಪುಣ್ಯತೀರ್ಥಂಗಳಾದವು.
ಆತನ ಪೂಜಿಸಿ ಪಾದೋದಕ ಪ್ರಸಾದವ ಪಡಕೊಂಡ ಭಕ್ತರೆಲ್ಲ
ರುದ್ರಗಣ ಅಮರಗಣಂಗಳಾದರು.
ಇಂತು ಶಿವಲಿಂಗಸಂಬಂಧಿಯಾದ ಈ ಜಂಗಮಕ್ಕೆ
ನಮೋ ನಮೋ ಎನುತಿದ್ದನಯ್ಯ, ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./14
ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುಲರ್ಾಭ.
ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು.
ಶಿವಭಕ್ತ ಜನ್ಮದಲ್ಲಿ ಬಂದು
ಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು.
ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು,
ಶಿವನ ಸಾಕಾರವೆ ಜಂಗಮದೇವ.
ಇಂತೆಂಬ ಉಭಯಭೇದ ನಿಮಗೆ ತಿಳಿಯದು.
ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆ
ಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./15
ಪಂಚತತ್ತ್ವದೊಳು ಪಂಚಕೃತಿಯೊಳು ಪಂಚತತ್ತ್ವ.
ಶರಣನ ಪಂಚೇಂದ್ರಿಯ ಶಿವನ ಪಂಚಮುಖವೆಂದರಿಯದೆ
ಹಂಚು ಹಿಡಿದು ಹಲ್ಲು ತೆರೆವಂತೆ ಕಲ್ಲು ಹಿಡಿದು
ತನ್ನ ಕಂಡೆನೆಂಬ ಖುಲ್ಲದೇಹಿಗಳಿಗೆ
ಶಿವಲಿಂಗ ಮುನ್ನವೆ ಇಲ್ಲವೆಂದ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./16
ಪಂಚಮೂರ್ತಿಯ ತತ್ವಶರಣ
ತಾನೇ ಇಷ್ಟಲಿಂಗವೆಂದರಿಯದೆ,
ಸೃಷ್ಟಿಯೆ ಇಷ್ಟಲಿಂಗವೆಂದರಿದು
ತಮ್ಮ ಹುಸಿ ಮಾಡುವ ಭ್ರಷ್ಟರಿಗೆ ಶಿವಲಿಂಗ ಇಲ್ಲವೆಂದ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./17
ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ.
ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿರ್ದರೆ ಕೇಳಿರಿ.
ಪಾದೋದಕವೆ ಪರಾತ್ಪರಾನಂದವು.
ಆ ಆನಂದವೆ ಚಿದ್ಬಿಂದು; ಆ ಚಿದ್ಬಿಂದುವೆ ಪಾದೋದಕ.
ಆ ಪಾದೋದಕವ ಶ್ರೀಗುರು ಲಿಂಗ ಜಂಗಮದ ದ್ವಿಪಾದದ
ಭ್ರೂಮಧ್ಯಸ್ಥಾನದಲ್ಲಿದರ್ುದನರಿದಚರ್ಿಸಿದ ಪರಿಣಾಮವೆ
ಚಿದಾನಂದಬಿಂದು ತೊಟ್ಟಿಟ್ಟುದೆ ಪಾದೋದಕವು.
ಈ ಭೇದವನರಿದು ಕೊಳಬಲ್ಲರೆ ಪಾದೋದಕವೆನಬಹುದು.
ಇದನರಿಯದೆ ಕೆರೆ ಬಾವಿ ಹಳ್ಳ ಹೊಳೆ ಚಿಲುಮೆ ನೀರ ತಂದು
ಮನೆಗೆ ಬಂದಲ್ಲಿ ಅಗ್ಗಣಿಯೆಂಬಿರಿ.
ಜಂಗಮದ ಪಾದದ ಮೇಲೆರದರೆ ತೀರ್ಥವೆಂಬಿರಿ.
ತೀರ್ಥವೆಂದುಕೊಂಡು ತೃಷೆಯನಡಗಿಸಿ,
ಕಡೆಯಲ್ಲಿ ಮೂತ್ರವ ಬಿಟ್ಟುಬಂದೆವು ಹೊರಗಗ್ಗಣಿಯ ತನ್ನಿ
ಎಂಬ ಜಲವು ತೀರ್ಥವಲ್ಲ.
ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ.
ಇವರಿಬ್ಬರ ನಡತೆ ಎಂತಾಯಿತ್ತೆಂದಡೆ: ಎಕ್ಕಲ ಅಮೇಧ್ಯವ ತಿಂದು
ಒಂದರ ಮೋರಿಯ ಒಂದು ಮೂಸಿ
ನೋಡಿದಂತಾಯಿತ್ತೆಂದಾತ, ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./18
ಪಾದೋದಕ ಪ್ರಸಾದ ಅರ್ಪಿತ ಅವಧಾನವ ತಿಳಿದು,
ತಾ ಕೊಂಡು, ಕೊಡಬಲ್ಲಾತನೆ ಗುರುಲಿಂಗಜಂಗಮವು.
ಅಂತಪ್ಪ ಗುರುಲಿಂಗಜಂಗಮವ ಭೇದಿಸಿ
ಕೊಳಬಲ್ಲಾತನೆ ಸದ್ಭಕ್ತಪ್ರಸಾದಿಶರಣ.
ಗುರುಲಿಂಗಜಂಗಮದ ಪಾದತೀರ್ಥವಾದ ಮೇಲೆ
ತಾ ಸವಿದು ಲಿಂಗಕ್ಕರ್ಪಿಸಿ, ಲಿಂಗ ಸವಿದು,
ತಾ ತೃಪ್ತನಾಗಿ ಆಚರಿಸುವುದೆ
ಅದೇ ಉತ್ತಮೋತ್ತಮ ಲಿಂಗಾರ್ಪಣ
ಶರಣಸಂತೃಪ್ತಿಯೆಂದಾತ ನಿಮ್ಮ ಶರಣ.
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ, ನೀವೆ ಬಲ್ಲಿರಿ./19
ಪಾದೋದಕವ ಕೊಂಡೆವೆಂಬ ಅಣ್ಣಗಳಿರಾ, ನೀವು ಕೇಳಿರೊ.
ಪಾದೋದಕದ ನಿಲವ ನೀವು ಬಲ್ಲರೆ ಹೇಳಿರೊ.
ಅರಿಯದಿರ್ದರೆ ಕೇಳಿರೊ.
ಅದೆಂತೆಂದಡೆ: ‘ಪಾ’ಕಾರವೆ ಪರಾತ್ಪರ ನಾಮವುಳ್ಳುದು,
ಪರಬ್ರಹ್ಮವು ಪರಮಾನಂದ ಸ್ವರೂಪವು.
‘ದೋ’ಕಾರವೆ ದಯದೋರಿತ್ತುವೆಂಬ
ನಾಮವನ್ನುಳ್ಳ ದುರಿತ ವಿನಾಶನವು.
‘ದ’ಕಾರವೆ ದಶದಿಶಭರಿತ ಪೂರ್ಣಚಿದಾಂಬುಧಿಯ ಪರಮಜ್ಞಾನವ ತೋರಿತ್ತು.
‘ಕ’ಕಾರವೆ ಕರ್ಮವಿನಾಶನವೆನಿಸಿತ್ತು.
ಇಂತಪ್ಪ ಪಾದೋದಕವ ನೀಡಿದಾತನೆ
ಗುರುಲಿಂಗಜಂಗಮವೆನಿಸಬಹುದು; ಕೊಂಡಾತ[ನೆ] ಸದ್ಭಕ್ತನೆನಬಹುದು.
ಇಂತೀ ಭೇದಾಭೇದವನರಿದು ಕೊಟ್ಟು ಕೊಂಡುದುದಕ್ಕೆ
ಕಾಯಶುದ್ಧ, ಕರಣಶುದ್ಧ, ಜೀವಶುದ್ಧ, ಭಾವಶುದ್ಧ.
ಈ ಚತುರ್ವಿಧ ಶುದ್ಧವಾಯಿತ್ತೆಂದಡೆ,
ಕಾಯ ಸುದ್ಧಪ್ರಸಾದವಾಯಿತ್ತು, ಕರಣ ಸಿದ್ಧಪ್ರಸಾದವಾಯಿತ್ತು.
ಜೀವ ಪ್ರಸಿದ್ಧಪ್ರಸಾದವಾಯಿತ್ತು, ಭಾವ ಪರಾತ್ಪರಪ್ರಸಾದವಾಯಿತ್ತು.
ಈ ಚತುರ್ವಿಧ ಶುದ್ಧವ ಮಾಡಿದಾತ ನಿಮ್ಮ ಶರಣ.
ಹೀಗಲ್ಲದೆ ಜಲವ ತೊಳೆದು ಕುಡಿವ ಮಲದೇಹಿಗಳ
ಮುಖವ ನೋಡಲಾಗದಯ್ಯಾ.
ಇದಕ್ಕೆ ಸಾಕ್ಷಿ: ‘ಪಾಕಾರಂ ಪರಮಾನಂದಂ ದೋಕಾರಂ ದೋಷನಾಶನಂ |
ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ ||’
ಎಂದುದು, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವಿನ ವಚನವು./20
ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ ಬೊಪ್ಪಗಳು ನೀವು ಕೇಳಿರೊ.
ಕಾಯಪ್ರಸಾದವನರಿದು, ಕರಣಪ್ರಸಾದವನರಿದು,
ಜೀವಪ್ರಸಾದವನರಿದು, ನಿಜಪ್ರಸಾದವನರಿದು ಕೊಳಬಲ್ಲರೆ ಪ್ರಸಾದಿ.
ಕೊಂಬವರ ಕಂಡು ಪ್ರಸಾದವ ಕೈಕೊಂಡರೆ
ಕಂಡವರ ಕಂಡು ಕೌದಿಯ ಹೊಲಿಯ ಹೋದರೆ ಕುಂಟೆಳೆ ಬಿದ್ದಂತೆ.
ನವಿಲು ಕುಣಿಯಿತ್ತೆಂದು ಶಾಬಕ ಕುಣಿದು ಪುಚ್ಚವ ಕಳಕೊಂಡಂತೆ.
ಸಿಂಹ ಲೆಂಘಣಿಸಿತ್ತೆಂದು ಸೀಳನಾಯಿ [ಲೆಂಘಣಿಸಿ]
ಸೊಂಟವ ಕಳಕೊಂಡಂತೆ.
ಸದ್ಭಕ್ತರ ಕಂಡು ನಾನು ಸದ್ಭಕ್ತನೆಂದು ಓಗರವ ನೀಡಿಸಿಕೊಂಡು
ಅಯ್ಯಾ, ಹಸಾದ, ಮಹಾಪ್ರಸಾದವ ಪಾಲಿಸಿರೆಂದು
ತನ್ನಾದಿ ಕ್ರಿಯಾದೀಕ್ಷೆ, ತನ್ನ ಮಧ್ಯೆ ಜ್ಞಾನದೀಕ್ಷೆ,
ತನ್ನವಸಾನ ಮಹಾಜ್ಞಾನ ದೀಕ್ಷೆಯ ತಿಳಿಯದೆ
ತನ್ನ ಪೂರ್ವಾಪರ, ತನ್ನ ಉದಯಾಸ್ತಮಾನವರಿಯದೆ,
ಅರ್ಪಿತಾವಧಾನಭಕ್ತಿಯನರಿಯದೆ,
ಗುರು ಲಿಂಗ ಜಂಗಮದ ನಿಲುಕಡೆಯನರಿಯದೆ,
ಕಾಂಚನವ ಕೊಟ್ಟು, ಕೈಯಾಂತು ಪಡಕೊಂಬ
ಭಕ್ತನ ಅಂಗವಿಕಾರವು ಮುನ್ನಿನಂತೆ.
ಆ ಭಕ್ತನ ಆಚಾರ ವಿಚಾರ ನಡೆ ನುಡಿ ದೀಕ್ಷಾತ್ರಯಂಗಳ ವಿಚಾರಿಸದೆ
ಪ್ರಸಾದವ ಕೊಟ್ಟ ಗುರುವಿನ ವಿಚಾರವು ಮುನ್ನಿನಂತೆ.
ಈ ಉಭಯತರು, ಬಟ್ಟೆಗುರುಡನ ಕೈಯ ಬಟ್ಟೆಗುರುಡ ಹಿಡಿದು
ಹಳ್ಳವ ಬಿದ್ದಂತೆ ಕಾಣಾ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. /21
ಪ್ರಸಾದ ಪ್ರಸಾದವೆಂದು ನುಡಿವಿರಿ;
ಎಲ್ಲರಿಗೆಲ್ಲಿಹದೊ ಪ್ರಸಾದ ?
ಈ ಪ್ರಸಾದದ ಭೇದವ ಬಲ್ಲರೆ ಚನ್ನಬಸವಣ್ಣ.
ಈ ಪ್ರಸಾದದ ಭೇದವ ಬಲ್ಲರೆ ಬಸವಣ್ಣ.
ಈ ಪ್ರಸಾದದ ಭೇದವ ಬಲ್ಲರೆ ಪ್ರಭುದೇವರು.
ಈ ಪ್ರಸಾದದ ಭೇದವ ಬಲ್ಲರೆ ಮರುಳಶಂಕರದೇವ
ಸಿದ್ಧರಾಮ ಅಜಗಣ್ಣ ಮುಕ್ತಾಂಗನೆ ಅಕ್ಕಮಹಾದೇವಿ.
ಮಿಕ್ಕಿನ ಜಡಜೀವಜಾಳುಗಳಿಗೆಲ್ಲಿಹದೊ ಪ್ರಸಾದ ?
ಗಡಿಗೆಯೊಳಗಿದ್ದಾಗ ಬೋನ, ಹರಿವಾಣಕ್ಕೆ ಬಂದಾಗ ನೈವೇದ್ಯ,
ಜಂಗಮ ಮುಟ್ಟಿ ಗ್ರಹಿಸಿದಾಗಳೆ ಪ್ರಸಾದವೆಂದು ಕೊಂಡು,
ತಮ್ಮ ಉದರಕ್ಕೆ ಹೊಂದಿದಲ್ಲಿಯೆ ದುರ್ಗಂಧವಾಯಿತ್ತೆಂದು,
ಜಲ ಮಲವ ಬಿಟ್ಟುಬಂದೆವು ಹೊರಗಗ್ಘಣಿಯ ತನ್ನಿಯೆಂಬ ಹೊಲೆಮಾದಿಗರ
ಮೂಗ ಕೊಯ್ದು, ನಿಂಬೆಹುಳಿಯ ಹಿಂಡದೆ ಮಾಣ್ಬನೆ
[ನಿಮ್ಮ ಶರಣ] ಚನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?/22
ಪ್ರಸಾದ ಪ್ರಸಾದವೆಂಬುವುದು ಎಲ್ಲರಿಗೆಲ್ಲಿಹದೊ?
ಪ್ರಸಾದವೆಂಬುವುದು ಅಚಲಾನಂದ ಅವಿನಾಶನ
ಅವಿರಳ ದ್ವಂದ್ವಾತೀತ ಬಂಧಮೋಕ್ಷಕ್ಕೆ ಅತೀತವು ನೋಡಾ.
ಓಗರ ಪ್ರಸಾದವಲ್ಲ.
ಓಗರ ಪ್ರಸಾದವೆಂದು ಕೊಟ್ಟಾತ ಗುರುವಲ್ಲ, ಕೊಂಡಾತ ಶಿಷ್ಯನಲ್ಲ.
ಓಗರ ಪ್ರಸಾದವೆಂದು ಕೊಂಡು, ಮಲಮೂತ್ರ ಮಾಡಿಬಿಡುವ
ಹೊಲೆ ಮಾದಿಗರ ಮೂಗ ಕೊಯ್ಯದೆ ಮಾಣ್ಬನೆ [ನಿಮ್ಮ ಶರಣ]
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ?/23
ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ,
ರೋಮರೋಮವೆಲ್ಲ ಲಿಂಗ.
ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ.
ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ
ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ.
ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ, ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ.
ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು.
ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು.
ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು.
ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು.
ಆಣವಮಲ, ಮಾಯಾಮಲ, ಕಾರ್ಮಿಕಮಲ ಅನಂತಕೋಟಿಗಳಿಗೆ
ನಕಾರವೇ ಮೂಲ.
ಇನ್ನೂರು ಹದಿನಾರು ಭುವನಂಗಳು ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು
ಹದಿನೆಂಟುಧಾನ್ಯಕ್ಕೆ ಶಾಕಪತ್ರ
ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ.
ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ.
ಈ ಜಗವೆಲ್ಲ ಮಲವನೆ ಭುಂಜಿಸಿ ಮಲವನೆ ವಿಸರ್ಜನೆಯಂ ಮಾಡುವರು.
ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ.
ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ.
ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು.
ಪ್ರಸಾದವೆಂತೆಂದಡೆ : ಅವರ್ಣ, ಆದಿ, ಅವ್ಯಕ್ತ.
ಆ ನಾಮವು, ಭಗರ್ೊದೇವಾದಿ
ಪಂಚಮೂರ್ತಿಗಳಿಗೆ ಆಶ್ರಯವಾಯಿತು.
ಕರಣಚತುಷ್ಟಯಂಗಳಿಗೆ ನಿಲುಕದು.
ಪ್ರಾಣಾದಿ ವಾಯುಗಳಿಗೆ,
ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ.
ವಾಕ್ಕಾದಿ ಕಮರ್ೆಂದ್ರಿಯಗಳಿಗೆ ತೋರದು.
ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು
ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ,
ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ. /24
ಪ್ರಸಾದ[ವ ಕೊಂಡೆ] ಪ್ರಸಾದ[ವ ಕೊಂಡೆ]ನೆಂಬಿರಿ
ಪ್ರಸಾದ ಕೆಡುವುದೆ?
ಪ್ರಸಾದ ಒಮ್ಮೆ ಸುಗಂಧ, ಒಮ್ಮೆ ದುರ್ಗಂಧವೆ ?
ಪ್ರಸಾದವು ಶಬ್ದ ಸ್ಪರ್ಶನ ರೂಪು ರಸ ಗಂಧಕ್ಕೆ ಅತೀತವು.
ಓಗರ ಪ್ರಸಾದವೆಂದು ಕೊಂಡು
ರೋಗ ಬಂದಿತ್ತೆಂದು ವೈದ್ಯಕಾರರ ಬಳಿಗೆ ಹೋಗಿ
ವೈದ್ಯವ ಕೊಂಡು, ಮಲಬದ್ಧ ಭಾಂಡವ ತೊಳೆದು
ರೋಗವು ಹೋಯಿತ್ತೆಂದು ನಲಿನಲಿದಾಡಿ
ಭಕ್ತ ಜಂಗಮರು ತಾವೆಂದು ನುಡಿವ ಮುಚ್ಚಟ ಮುದಿನಾಯಿಗಳ
ಮೂಗ ಕೊಯ್ಯದೆ ಮಾಣ್ಬನೆ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./25
ಪ್ರಸಾದದಿಂದ ತೋರಿತ್ತು ಷಡ್ವಿಧಹಸ್ತವು.
ಪ್ರಸಾದದಿಂದ ತೋರಿತ್ತು ಷಡ್ವಿಧಚಕ್ರಂಗಳು
ಷಡ್ವಿಧಸಾದಾಖ್ಯ, ಷಡ್ವಿಧಬೀಜಾಕ್ಷರವೆ ಷಡ್ವಿಧಲಿಂಗವಾಯಿತ್ತು.
ಷಡ್ವಿಧಹಸ್ತವೆ ಷಡ್ವಿಧ ಕೈಗಳು ಪ್ರಸಾದಕಲೆ ಎನಿಸಿತ್ತು.
ಷಡ್ವಿಧಸಾದಾಖ್ಯವೆ ಷಡ್ವಿಧಮುಖವೆನಿಸಿತ್ತು.
ಷಡ್ವಿಧಹಸ್ತಮುಖವೆ ಷಡ್ವಿಧಲಿಂಗವೆನಿಸಿತ್ತು.
ಷಡ್ವಿಧದ್ರವ್ಯವೇ ಷಡ್ವಿಧಪ್ರಸಾದ.
ಷಡ್ವಿಧಪ್ರಸಾದವೆ ಷಡ್ವಿಧತೃಪ್ತಿ ಎನಿಸಿತ್ತು.
ಷಡ್ವಿಧತೃಪ್ತಿಯನರಿದಾತ
ಷಡ್ವಿಧದ್ರವ್ಯವೇ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./26
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ ತಾನಾಯಿತ್ತು.
ಕಾರಣ ಅಸ್ಥಿ ಸೌಮ್ಯವಾಯಿತ್ತು.
ಮಾಂಸ[ಪಿಂಡ] ಮಂತ್ರರೂಪವಾಯಿತ್ತು.
ಚರ್ಮ ಚಿದ್ರೂಪವಾಯಿತ್ತು, ನಾಡಿ ನಿರಂಜನವಾಯಿತ್ತು,
ರೋಮ ಓಂ ರೂಪವಾಯಿತ್ತು.
ಇಂತೀ ಪಂಚಭೂತಕಾಯ ಪ್ರಸಾದ[ಕಾಯ]ವಾಯಿತ್ತು.
ಮಾಂಸಪಿಂಡ ಮಂತ್ರಪಿಂಡವಾಯಿತ್ತು.
ವಾಯು ಪ್ರಾಣಲಿಂಗ ಪ್ರಾಣವಾಯಿತ್ತು.
ನರರೂಪ ಹರರೂಪವಾಯಿತ್ತು.
ಹರರೂಪ ಗುರು ಚರ ಪರಮ ಪ್ರಸಾದವಾಯಿತ್ತು.
ದೇವಭಕ್ತನ ಪ್ರಸಾದವೆ ಭಕ್ತಿ ಮುಕ್ತಿಪ್ರಸಾದ ತಾನೆ,
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./27
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ.
ಆತ ಘ್ರಾಣಿಸಿದ್ದು ಆಚಾರಲಿಂಗಪ್ರಸಾದ.
ಆತ ರುಚಿಸಿದ್ದೆಲ್ಲ ಗುರುಲಿಂಗಪ್ರಸಾದ.
ಆತ ನೋಡಿದ್ದೆಲ್ಲ ಶಿವಲಿಂಗಪ್ರಸಾದ.
ಆತ ಸ್ಪರ್ಶನಮಾಡಿದ್ದೆಲ್ಲ ಜಂಗಮಲಿಂಗಪ್ರಸಾದ.
ಆತ ಕೇಳಿದ್ದೆಲ್ಲ ಪ್ರಸಾದಲಿಂಗಪ್ರಸಾದ.
ಆತನ ಸವರ್ೆಂದ್ರಿಯವೆಲ್ಲ ಪರಿಪೂರ್ಣವಾದದ್ದೆಲ್ಲ ಮಹಾಲಿಂಗಪ್ರಸಾದ.
ಇಂತೀ ಪ್ರಸಾದವೆಲ್ಲವ ಕೊಂಡ ಸರ್ವಾಂಗಪ್ರಸಾದಿ
ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./28
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದವು.
ಪ್ರಸಾದವೆ ಕೋಟಿಲಿಂಗವೆಂದರಿವುದು.
ಪ್ರಸಾದಮೂರ್ತಿಯಾದ ಶರಣನ ರೋಮ ರೋಮಂಗಳು
ಕೋಟಿಲಿಂಗವೆಂದುಚ್ಚರಿಸುವರಲ್ಲಾ !
ಘ್ರಾಣಮುಖ ನಾಸಿಕ ಆಚಾರಲಿಂಗವಾಗಿ,
ಗಂಧದ್ರವ್ಯವ ಗ್ರಹಿಸಿ ಗಂಧವಾದ ಪ್ರಸಾದವೆ ಬಿಂದು,
ಸರ್ವಾಂಗಮಯವಾದ ಮಹೇಶ್ವರನ ಷಡುರಸವ
ಭುಂಜಿಸುವ ಜಿಹ್ವೆಯೆ ಗುರುಲಿಂಗ.
ಷಡಕ್ಷರಿಮಂತ್ರನಾದ ಪ್ರಸಾದಿ, ಅಗ್ನಿಯೇ ಚರ್ಮ ಸ್ವರ
ಸರ್ವಾಂಗಮೂರ್ತಿ ಶಿವಲಿಂಗ.
ದೃಶ್ಯಾದೃಶ್ಯ ದೃಕ್ಕು ಜಾತಿ ಜ್ಯೋತಿಸ್ವರೂಪು ತಾನಾದ ಪ್ರಸಾದಿ.
ಸ್ಥಾವರ ಜಂಗಮ ಪ್ರಣಮಸ್ವರೂಪು
ತ್ವಕ್ಕು ಸರ್ವಾಂಗ ಸ್ಪರ್ಶನ ಜಂಗಮಲಿಂಗನಾದ ಪ್ರಸಾದಿ.
ಆಕಾಶ, ಘಟಾಕಾಶ, ಮಠಾಕಾಶ, ಬಿಂದ್ವಾಕಾಶ, ಚಿದಾಕಾಶ,
ವ್ಯೋಮಾಕಾಶ ಗೋತ್ರ ಸಹಲಿಂಗನಾದ ಪ್ರಸಾದಿ.
ಜೀವಾತ್ಮ ಅಂತರಾತ್ಮ ಪರಮಾತ್ಮ
ಸವರ್ೆಂದ್ರಿಯ ತೃಪ್ತಿಯಾದ ಮಹಾಲಿಂಗನಾದ
ಪ್ರಸಾದಮೂರ್ತಿ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./29
ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು,
ಈ ಪ್ರಸಾದದ ಭೇದವ ತಿಳಿದವರಾರು.
ಪ್ರಸಾದವೆಂಬ ಮೂರಕ್ಷರದ ಭೇದವ ಬಲ್ಲವರಾರು.
ಆಕಾರ ನಿರಾಕಾರ ಸಾಕಾರ ಈ ಮೂರು ಪ್ರಕಾರವಾಯಿತ್ತು.
ಈ ‘ಪ್ರ’ಕಾರದ ಭೇದವ ಬಲ್ಲವರಾರು.
ಸಕಲ ನಿಃಕಲ ನಿರಂಜನನಾದ ಭೇದವ ಬಲ್ಲರೆ
‘ಸಾ’ಕಾರದ ಭೇದವ ಬಲ್ಲವರೆ, ‘ದ’ಕಾರದ ಭೇದವನರಿದವರೆ,
ಆದಿ ಆಧಾರ ಅನಾದಿ ಈ ತ್ರಿವಿಧವ ಬಲ್ಲವರು.
ಇಂತೀ ಪ್ರಸಾದವೆಂಬ ಸದ್ಭಾವದ ನಿರ್ಣಯವನರಿಯದೆ
ಪ್ರಸಾದವ ಕೊಟ್ಟಾತನು ಕೊಂಡಾತನು ಇವರಿಬ್ಬರ ಭೇದವೆಂತೆಂದರೆ: ಹುಟ್ಟುಗುರಡನ ಕೈಯ ತೊಟ್ಟಿಗುರುಡ ಹಿಡದಂತಾಯಿತು.
ಈ ಭೇದವೆಂತೆಂದರೆ :ಇಷ್ಟ ಪ್ರಾಣ ಭಾವ ‘ಪ್ರ’ಕಾರವಾಯಿತು.
‘ಸಾ’ಕಾರವೆ ಜಂಗಮಲಿಂಗ ಪ್ರಸಾದಲಿಂಗ ಸೋಂಕಿ ನವಪೀಠಗಳಾಗಿ
ನವಲಿಂಗ ಸೋಂಕಿ ನವಪೀಠ ಪ್ರಸಾದವಾಯಿತು.
ನವಪ್ರಸಾದ ನವಪ್ರಣಮವೆ ನವಬೀಜವಾಯಿತು.
ನವಹಸ್ತಗಳ ನೆಲೆಗೊಳಿಸಿ ಶಿವಲಿಂಗಧಾರಣಮಂ ಮಾಡಿ
ನವಲಿಂಗಮುಖವನರಿದು ನವನೈವೇದ್ಯವಂ ಮಾಡಿ
ನವಮುಖಕ್ಕಿತ್ತ ನವಪ್ರಸಾದಿಯಾದ ಶರಣನು
ನವಚಕ್ರಗಳೆಲ್ಲ ನವಜಪ ಪ್ರಸಾದವೆ ತಾನೆ ಆಗಿ
ನವರತ್ನಪ್ರಭೆ ಏಕರವಿರಶ್ಮಿಯಾದಂತೆ,
ನವಕೋಟಿ ಸೋಮಸೂರ್ಯರ ಪ್ರಭೆ ಒಂದಾಗಿ
ದಿವ್ಯಜ್ಯೋತಿಲರ್ಿಂಗ ತಾನಾದ ಶರಣನು.
ಅರಿವೆ ಶಿವಲಿಂಗ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ತಾನೆ ಆಯಿತು.
ನವ ಅಸ್ಥಿಗಳಡಗಿ ನವಲಿಂಗ ಒಂದೆ ಅಂಗವಾಗಿ ಬೆಳಗುತಿಹ ಶರಣಂಗೆ
ಇಹಲೋಕವೇನು, ಪರಾತ್ಪರಲೋಕವೇನು ?
ಸಗುಣವೇನು ನಿಗರ್ುಣವೇನು ?
ನಿರಂಜನವೇನು, ನಿಷ್ಕಳವೇನು, ನಿರ್ಮಾಯವೇನು ?
ಆತಂಗೆ ಭಕ್ಷವಿಲ್ಲ ಅಭ್ಯಕ್ಷವಿಲ್ಲ ಅರ್ಪಿತವಿಲ್ಲ ಅನರ್ಪಿತವಿಲ್ಲ.
ಆತ ರುಚಿಸಿದ್ದೆಲ್ಲ ಪ್ರಸಾದ, ಅತ ಸೋಂಕಿದ್ದೇ ಪಾವನ.
ಆತ ಮೆಟ್ಟಿದ ಭೂಮಿಯೆಲ್ಲ ಪುಣ್ಯಕ್ಷೇತ್ರಂಗಳಾದವು.
ಆತ ಜಲಮಲವ ಬಿಟ್ಟು ಬಂದ, ಸಂಚಮನವ ಮಾಡಿದ
ಸ್ಥಾನಾದಿಗಳೆಲ್ಲ ಪುಣ್ಯತೀರ್ಥಂಗಳಾದವು.
ಇಂತೀ ನಿಮ್ಮ ಶರಣನ ಸರ್ವಾಂಗವೆಲ್ಲ ಶಿವಮಂದಿರವು
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ. /30
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು.
ಚಿತ್ಶಕ್ತಿಯಿಂದ ಮಹಾಲಿಂಗರೂಪವಾಯಿತು.
ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು.
ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು.
ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು.
ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು.
ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು.
ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು.
ಲಿಂಗದಿಂದ ಜಗತ್ತು ಉದ್ಭವಿಸಿದವು.
‘ಲಿಂಗಮಧ್ಯೇ ಜಗತ್ಸರ್ವಂ ತೆ್ರೃಲೋಕ್ಯಂ ಸಚರಾಚರಂ |
ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ ||
ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ !
ಲಯನರ್ಾಗಮಶ್ಯನಂ ಲಿಂಗಶಬ್ದಮೇವಚೇತ್ ||
ಲೀಯತೇ ಗಮ್ಯತೇ ಯತ್ರಯೋನಿಃ ಸರ್ವಚರಾಚರಂ |
ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||”
ಸರ್ವ ಸಚರಾಚರವೇ ಪ್ರಸಾದರೂಪ.
ಅನಂತಕೋಟಿ ಬ್ರಹ್ಮಾಂಡಗಳಿಗೆ
ಪ್ರಸಾದವೆ ಕಾಯ ಜೀವ ಪ್ರಾಣವಾಯಿತು,
ಕಾಯ ಇಷ್ಟಲಿಂಗವಾಯಿತು,
ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು.
ಪೃಥ್ವಿ ಅಪ್ಪುಗಳೆರಡು ಕಾಯವಾಯಿತು.
ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು.
ಅಕಾರ ಓಂಕಾರವೇ ಭಾವವಾಯಿತು.
ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು
[ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು]
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./31
ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ.
ಶಿವಭಕ್ತರು ಪಾದೋದಕ ಪ್ರಸಾದವ ಕೊಂಬುವಲ್ಲಿ
ಭವಿಮಿಶ್ರವೆಂದು ವಿಚಾರಿಸಿ ಕೇಳುವಿರಿ.
ಬೆಲ್ಲ, ಸಕ್ಕರೆ, ಉಪ್ಪು, ತೈಲ, ತುಪ್ಪ, ಭವಿಪಾಕವ ಭುಂಜಿಸುವಿರಿ.
‘ಯಥಾ ದೇಹಂ ತಥಾಹಂಚ ಲಿಂಗವಾಯತೆ’
ಭವಿಪಾಕ ಕಿಲ್ಬಿಷವೆಂದು ಕಿಲ್ಬಿಷವ ಭುಂಜಿಸಿದ ಬಳಿಕ
ಅಚ್ಚಲಿಂಗಾಗವೆಲ್ಲಿಹುದೊ ವ್ರತಗೇಡಿಗಳಿರಾ ?
ನಿಮ್ಮ ದೇವಭಕ್ತರೆಂದು ಪೂಜಿಸಿದವರಿಗೆ ಭವ ತಪ್ಪದು.
ನಮ್ಮ ಶಿವಗಣಂಗಳು ಅಚ್ಚಲಿಂಗೈಕ್ಯರು.
ಅವರು ಅನಾದಿ ಪಾದೋದಕ ಪ್ರಸಾದವ ಕೊಂಬುವರು.
ಅವರು ಅನಾದಿಲಿಂಗಾಂಗಿಗಳು.
ಅವರು ಮುಟ್ಟಿದ್ದೆಲ್ಲ ಪಾವನ
ಅವರು ನೋಡಿದ್ದೆಲ್ಲ ಪವಿತ್ರವೆಂದ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./32
ಭವಿಮಿಶ್ರವೆಂಬಿರಿ, ಅಚ್ಚಲಿಂಗಾಂಗಿಗಳೆ ಕೇಳಿರಿ.
ಅಚ್ಚಲಿಂಗಾಂಗಿಗಳಾದರೆ ನಿಮ್ಮ ಸವರ್ೆಂದ್ರಿಯವೆಂಬ ಭವಿಯ
ಉಚ್ಫಿಷ್ಠವ ಭುಂಜಿಸಿ ತಮ್ಮೊಳಗೆ ಭವಿಯ ವಿಚಾರಿಸದ
ಕುನ್ನಿಗಳಿಗೆ ಮೆಚ್ಚ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./33
ಮಲದೇಹಿಗಳ ಅಂಗದ ಮೇಲೆ ಲಿಂಗವಿದ್ದರೇನು ಅದು ಲಿಂಗವಲ್ಲ.
ಅದೇನು ಕಾರಣವೆಂದರೆ, ಅವನು ಪ್ರಸಾದದೇಹಿ ಸಂಸ್ಕಾರಿದೇಹಿಯಲ್ಲ.
ಅವನ ಸೋಂಕಿದ ಲಿಂಗವು ಕೆರೆಯ ಕಟ್ಟೆಯ ಶಿಲೆಯಂತಾಯಿತು.
ಅವನು ಲಿಂಗಾಂಗಿ ಲಿಂಗಪ್ರಾಣಿಯಾಗದೆ
ಅವನು ಮುಟ್ಟಿದ ಭಾಂಡ ಭಾಜನಂಗಳೆಲ್ಲ ಹೊರಮನೆ
ಊರ ಅಗ್ಗವಣಿ ಎಂದೆನಿಸುವವು.
ಅವನು ಮಲದೇಹಿ.
ಅವನಂಗದಲ್ಲಿ ಗುರುವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲ ಪ್ರಸಾದವಿಲ್ಲ.
ಅವನು ಅಶುದ್ಧ ಮಲದೇಹಿ.
ಅವನ ಪೂಜಿಸಿದವಂಗೆ ರೌರವ ನರಕ ತಪ್ಪದೆಂದಾತ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./34
ಯದಾ ಪಾದೋದಕಂ ಭಾವ್ಯಂ ತಥಾ ಪ್ರಸಾದಃ ಕ್ರೀಯತೇ|
ತೀರ್ಥ ಪ್ರಸಾದ ಸಮಾಯುಕ್ತ ಉತ್ತಮೋತ್ತಮ ಲಿಂಗಾರ್ಪಣಂ || ”
ಜಂಗಮದಲ್ಲಿ ಪಾದತೀರ್ಥವಾದ ಮೇಲೆ
ತಾನು ಸವಿದು ಲಿಂಗಕ್ಕೆ ಅರ್ಪಿಸುವದು
ಅದೀಗ ಉತ್ತಮೋತ್ತಮ ಲಿಂಗಾರ್ಪಣವೆಂದುದು
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./35
ಲಿಂಗಸೋಂಕಿ ಲಿಂಗವಾಗದಿದ್ದರೆ ಅದು ಲಿಂಗವಲ್ಲ.
ಪ್ರಸಾದಸೋಂಕಿ ಪ್ರಸಾದವಾಗದಿದ್ದರೆ ಅದು ಪ್ರಸಾದವಲ್ಲ,
ಅದು ಅಶುದ್ಭ.
ಮಂತ್ರಸೋಂಕಿ ಮಂತ್ರಮೂರ್ತಿಯಾಗದಿದ್ದರೆ ಅದು ಮಂತ್ರವಲ್ಲ,
ಅದರ ಭಾವ ಬೇರೆ.
ಈ ತ್ರಿವಿಧ ಭೇದವನರಿಯದ ವೇಷಧಾರಿಗಳು ಭಕ್ತರಲ್ಲ.
ದೇವಭಕ್ತರಾದರೇನು, ಮಲದೇಹಿ ಮಾಂಸಪಿಂಡ ಇರುವದು.
ತಮ್ಮ ದೇಹ ಕಲ್ಲುಸೋಂಕಿ ಹಸ್ತ ಸುಚಿತ್ತವಾಯಿತೆಂದು
ಪುಕಳಿಯನೊರೆಸುವ ಅರಿವೆಯಲ್ಲಿ ಮಗಿ ಹಿಡಿದು
ನೀರು ಹೊಯ್ದುಕೊಂಡು ಶುದ್ಧವಾಯಿತೆಂಬವರು,
ಅವರು ಮಲದೇಹಿ, ಅವನ ಹಸ್ತ ಶುದ್ಧವಲ್ಲ, ಅದು ಅಶುದ್ಧ.
ಆ ಕೈಯಲಿ ಲಿಂಗವ ಹಿಡಿದುದು ಲಿಂಗವಲ್ಲ, ಅದು ಪ್ರೇತಲಿಂಗ.
‘ಸಂಸಾರೀ ಭೂತಃ ಪ್ರಾಣೇನ ಜಾಯತೇ ಪ್ರಾತಃಕಾಲೇ |
ಮುಖಂ ದೃಷ್ಟ್ವಾ ಕೋಟಿ ಜನ್ಮನಿ ಸೂಕರಃ||’
ಇಂತಪ್ಪ ತಮ್ಮ ಅಂಗದ ಅಶುದ್ಧವ ಕಳೆಯಲಾರದೆ
ಲಿಂಗಾಂಗಿ ಲಿಂಗಪ್ರಾಣಿಗಳೆಂದೆನಿಸುವ ವೇಷಧಾರಿಗಳಿಗೆ
ಹಂದಿಯ ಜನ್ಮ ತಪ್ಪದೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./36
ಲಿಂಗಾಂಗಿ ಲಿಂಗಪ್ರಾಣಿ ಲಿಂಗಾತ್ಮಕ ಲಿಂಗಚೈತನ್ಯ ಶರಣನ
ಇಂಗಿತವನರಿಯದೆ ದೂಷಿಸುವ ವೇಷಧಾರಿಗಳೆ ಕೇಳಿರೊ.
ಲಿಂಗವ ಪೂಜಿಸಿ ಲಿಂಗಾಂಗಿಗಳ ದೂಷಿಸಿದರೆ
ಆ ಲಿಂಗ ನಿಮಗೆ ಕಾಲಾಗ್ನಿರುದ್ರನು.
ನಿಮ್ಮ ನಾಲಿಗೆ ಹೆಡದೆಲೆಯಲ್ಲಿ ತೆಗೆದು ಭುಂಜಿಸುವನು.
ಎಚ್ಚತ್ತು ನುಡಿಯಿರಿ ದೋಷಕಾರಿಗಳೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./37
ಲಿಂಗಾಂಗಿ ಲಿಂಗಪ್ರಾಣಿಗಳು ಪ್ರಸಾದಕಾಯ ಮಂತ್ರಮೂರ್ತಿಗಳು.
ಅವರು ನೋಡಿದುದೆಲ್ಲ ಲಿಂಗದೃಷ್ಟಿ,
ಅವರು ಕೇಳಿದುದೆಲ್ಲ ಲಿಂಗಸ್ತೋತ್ರ.
ಅವರು ಮುಟ್ಟಿದುದೆಲ್ಲ ಲಿಂಗಹಸ್ತ,
ಅವರು ಘ್ರಾಣಿಸುವುದೆಲ್ಲ ಲಿಂಗಘ್ರಾಣ.
ಅವರು ರುಚಿಸುವುದೆಲ್ಲ ಲಿಂಗಜಿಹ್ವೆ.
ಅವರ ಸವರ್ೆಂದ್ರಿಯಮುಖದಲ್ಲಿ ಪರಿಣಮಿಸುವುದು ಲಿಂಗ ತಾನೆ.
ಇಂತು ಶರಣಗಣಂಗಳಿಗೆ ಲಿಂಗಕ್ಕೆ
ಕೊಟ್ಟು ಕೊಡಲಿಲ್ಲವೆಂಬ ಭಂಗಿತರುಗಳಿಗೆ
ಶಿವಲಿಂಗ ಮುನ್ನವಿಲ್ಲವೆಂದ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./38
ವೃಕ್ಷಕ್ಕೆ ಭೂಮಿ ಮುಖವೋ ? ಭೂಮಿಗೆ ವೃಕ್ಷ ಮುಖವೋ ?
ಶರಣಂಗೆ ಅಂಗ ಮುಖವೋ? ಲಿಂಗಕ್ಕೆ ಶರಣ ಮುಖವೋ ?
ಈ ಭೇದವ ಬಲ್ಲರೆ ಹೇಳಿರಿ.
ವೃಕ್ಷಕ್ಕೆ ನೀರು ಎರೆದರೆ ಭೂಮಿಯಲ್ಲಿ ಫಲವಹುದು,
ಭೂಮಿಯಲ್ಲಿ ನೀರೆರೆದರೆ ವೃಕ್ಷಕ್ಕೆ ಫಲವಹುದು.
ಶರಣನ ಮುಖದಲ್ಲಿ ಲಿಂಗ ತೃಪ್ತಿಯಹುದು,
ಲಿಂಗದ ಮುಖದಲ್ಲಿ ಶರಣನ ತೃಪ್ತಿಯಹುದು.
ಆ ಲಿಂಗಮುಖ ಶರಣನೆಂದು ಅರಿಯದ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./39
ಶಿವಲಿಂಗ ಸಂಸಾರಸಂಪನ್ನ ಶರಣನು
ಲಿಂಗಮುಖದಲ್ಲಿ ಭೋಗಿಸುತ್ತಿಹನು ಮುಟ್ಟಿದ ಸುಖಂಗಳನೆಲ್ಲ.
ಲಿಂಗ ಬೇರೆ ಶರಣ ಬೇರೆ ಎಂದು ನುಡಿವ
ಅಸಂಸ್ಕಾರಿ ಭೂತದೇಹಿಗಳು
ಭಕ್ತ ಜಂಗಮರೆಂದು ಮುಖವ ನೋಡಿದರೆ
ಹಂದಿಯ ಜನ್ಮ ತಪ್ಪದೆಂದು ಶ್ರುತಿ ಸಾರುತಿದೆ : ‘ಪ್ರೇತಲಿಂಗ ಸಂಸ್ಕಾರಿಣಾಂ ಭೂತಪ್ರಾಣಿ ನಜಾಯತೇ |
ಪ್ರಭುತೇ ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ||’
ಇಂತು ಪ್ರೇತಲಿಂಗ ಸವಳು ಭುಂಜಿಸುವುದಲ್ಲದೆ
ದ್ವಯವಲ್ಲದೆ ಪ್ರಸಾದವಲ್ಲವೆಂದ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./40
ಶಿವಲಿಂಗಾಂಗಿ ಲಿಂಗಪ್ರೇಮಿ ನಡೆಲಿಂಗ ನುಡಿಲಿಂಗ
ಮುಖಲಿಂಗ ಭಾವಲಿಂಗ ಸರ್ವಾಂಗಲಿಂಗ ಚೈತನ್ಯಾತ್ಮಕ
ಶರಣನರಿಯದೆ ವೇಷಧಾರಿಗಳು ನುಡಿವರು.
ಲಿಂಗ ಬೇರೆ ಅಂಗ ಬೇರೆ ಇಂತೆಂದು ನುಡಿವ ಚಾರ್ವಾಕರ
ಅಂಗದ ಮೇಲೆ ಹೊಂದಿದ ಲಿಂಗವೆಲ್ಲ ಶಿಲೆಯು.
ಅವನು ನುಡಿಯುವ ಮಾತು ಹೆಂಡ ಕುಡಿವವರ ಬೊಗಳಾಟ.
ಅವರು ಕೊಂಬುವುದೆಲ್ಲ ಅಶುದ್ಧವಲ್ಲದೆ ಪ್ರಸಾದವಲ್ಲ.
ಅವರು ವಿಭೂತಿ ರುದ್ರಾಕ್ಷಿ ಲಿಂಗವ ಧರಿಸಿದರೇನು
ಯಮದರ್ಶನ ಚೋರದರ್ಶನ.
ಲಿಂಗಾಂಗಿ ಲಿಂಗಪ್ರಾಣಿಗಳ ನಿಂದಿಸುವ ವೇಷಧಾರಿಗಳು
ಜಂಗಮವೆಂದು ಪೂಜಿಸುವ ಭಕ್ತಂಗೆ ಎಕ್ಕಲಜನ್ಮ ಬಿಡದೆಂದ
ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ./41
ಶ್ರೀ ಗುರುಲಿಂಗಜಂಗಮದ ಚರಣೋದಕವ ಭೇದಿಸಲರಿಯದೆ,
ಬರಿದೆ ಶಿವಭಕ್ತರೆಂದು ಹೊಗಳಿ,
ಮಡು ಹೊಂಡ ಹಳ್ಳ ಹೊಳೆ ಕೆರೆ ಬಾವಿ ಮೊದಲಾದ ಜಡ ಜಲವ ಕುಡಿದು,
ಶಿವಭಕ್ತಿಯ ಬೊಗಳುವ ಮಲದೇಹಿಗಳ ಮುಖವ ನೋಡಲಾಗದು.
ಪಾದೋದಕದ ನೆಲೆಕಲೆಯನರಿಯದ ಗೂಗೆಗಳ ಮುಖವ
ನೋಡಲಾಗದೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭು ನಿಷ್ಕಳಲಿಂಗವು.ಬರಿದೆ ಶಿವಭಕ್ತರೆಂದು ಹೊಗಳಿ,
ಮಡು ಹೊಂಡ ಹಳ್ಳ ಹೊಳೆ ಕೆರೆ ಬಾವಿ ಮೊದಲಾದ ಜಡ ಜಲವ ಕುಡಿದು,
ಶಿವಭಕ್ತಿಯ ಬೊಗಳುವ ಮಲದೇಹಿಗಳ ಮುಖವ ನೋಡಲಾಗದು.
ಪಾದೋದಕದ ನೆಲೆಕಲೆಯನರಿಯದ ಗೂಗೆಗಳ ಮುಖವ
ನೋಡಲಾಗದೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭು ನಿಷ್ಕಳಲಿಂಗವು./42