Categories
ವಚನಗಳು / Vachanagalu

ತುರುಗಾಹಿ ರಾಮಣ್ಣನ ವಚನಗಳು

ಅಂಗಕ್ಕೆ ಲಿಂಗ ಆಚಾರ, ಲಿಂಗಕ್ಕೆ ಸರ್ವಕ್ರಿಯಾಸಂಬಂಧ ಆಚಾರ.
ಆ ಆಚಾರಕ್ಕೆಸರ್ವಗುಣ ವಿಚಾರದಿಂದ ಬೀಜ ನಿರ್ವಿಜನರಿದು
ಕಾಬುದು ಕಾಣಿಸಿಕೊಂಬ ಉಭಯವ ವೇದಿಸಿ
ಪರುಷ ಲೋಹವ ಗ್ರಹಿಸಿದಂತೆ ವಿಭೇದಕ್ಕೆ ಒಡಲಲ್ಲದೆ
ನಿಂದನೆಲೆ, ಲಿಂಗ ಪ್ರಾಣದ ಕೂಟ; ಇದು ವಿಶುದ್ಧಿ,
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ನಿಷ್ಟತ್ತಿಯಾದ ನಿರ್ವೆದ./1
ಅಯ್ಯಾ, ಏನನಹುದೆಂಬೆ, ಏನನಲ್ಲಾ ಎಂಬೆ.
ಕಾಯವುಳ್ಳನ್ನಕ್ಕ ಕರ್ಮ ಬಿಡದು,
ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು.
ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು.
ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ
ಜೀವಭ್ರಮೆ ನಿಂದಲ್ಲಿ ನಿಂದಿತ್ತು.
ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ
ಬಂದಿತ್ತು ದಿನ, ಅಂಗವ ಹರಿವುದಕ್ಕೆ.
ಈ ಸಂದೇಹದ ಸಂದಿಯಲ್ಲಿ ಕೆಡಹದೆ
ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ./2
ಅರಿದೆಹೆನೆಂಬನ್ನಕ್ಕ ಆ ತುರಿಯ
ಕಂಡೆಹೆನೆಂಬನ್ನಕ್ಕ ಆ ತುರಿಯ
ಕಂಡೆನು ಎಂಬಲ್ಲಿ ಸಂದೇಹದ ಸಂದು
ಆತುರವೆಂಬ ಅರಿಕೆ ತುರಿಯವೆಂಬ ಮೋಹ
ಕಂಡೆನು ಎಂಬ ಸಂದೇಹದ ಸಂದು ನಿಂದಲ್ಲಿ
ಅದು ನಿಜದುಳುಮೆ;
ಗೋಪತಿನಾಥ ವಿಶ್ವೇಶ್ವರಲಿಂಗವೆ ಪ್ರಮಾಣು./3
ಆತ್ಮಂಗೆ ಕಾಯವೆ ರೂಪು.
ಆ ಕಾಯಕ್ಕೆ ಆತ್ಮನೆ ಹಾಹೆ.
ಆ ಹಾಹೆಗೆ ಅರಿವೇ ಬೀಜ.
ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವಿಜ./4
ಆವಾವ ಭೇದಂಗಳಿಂದ ಬಂದಡೂ ಕಾವುದೊಂದೆ ಭೇದ.
ಹೆಣ್ಣು ಹೊನ್ನು ಮಣ್ಣು ಕಾವಲ್ಲಿ ಸಜ್ಜನಂಗಲ್ಲದೆ ಅಶಕ್ಯ ನೋಡಾ.
ಅವ ಕಾವಲ್ಲಿಯಾದಡೂ ಭಾವಶುದ್ಧವಾಗಿರಬೇಕು.
ಈ ಗುಣ ಅರಿವಿನ ಕುರುಹಿನ ಹಾದಿ;
ತುರುಗಾಹಿ ರಾಮನ ಪಥ.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಸುಪಥದ ಪಥ./5
ಇದಿರಿಡುವ ಪೂಜೆ ವಾಗ್ಬ್ರಹ್ಮದ ಷಡುಸ್ಥಲದ ಸೋಪಾನ
ಅಡಿಯ ಮೆಟ್ಟಿ ಅಡಿವಿಡಿವನ್ನಕ್ಕ
ಗೋಪತಿನಾಥ ವಿಶ್ವೇಶ್ವರಲಿಂಗವುಉಭಯನಾಮವಾಗಿಪ್ಪನು./6
ಉತ್ಪತ್ಯವೆಂಬ ಪಶುವಿನ ಮೇಲೆ
ಸ್ಥಿತಿಯೆಂಬ ವೃಷಭ ಏರಿತ್ತಲ್ಲಾ.
ಸ್ವಸ್ಥಾನವಾಗಿ ಸುಖದ ಸುಗ್ಗಿಯಿಂದ
ಬಿಂದು ನಿಂದು ಕರು ಹುಟ್ಟಿತ್ತಲ್ಲಾ.
ಕರು ಉದಯವಾಗಿ ಕರಿಗೊಂಡಡೆ ಲಲ್ಲೆಯಿಂದ ಕ್ಷೀರ.
ಅವು ಒಲ್ಲದಿದ್ದಡೆ ಓರೆಯಾಯಿತ್ತಲ್ಲಾ.
ಇಂತೀ ಅರಿವು ಕರಿಗೊಂಡ ಭೇದ.
ಇಂತೀ ಅರಿದು ಬರುದೊರೆವೋದ ಭೇದ.
ಇಂತೀ ಜ್ಞಾನ ನೇತ್ರಸೂತ್ರ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ
ತುರುಗಾಹಿ ರಾಮನ ಮಾತು./7
ಉದಯದಲ್ಲಿ ಬ್ರಹ್ಮನ ಕಾವೆ
ಮಧ್ಯಾಹ್ನಕ್ಕೆ ವಿಷ್ಣುವ ಕಾವೆ
ಅಸ್ತಮಯದಲ್ಲಿ ರುದ್ರನ ಕಾವೆ.
ಕತ್ತಲೆಯಾದ ಮತ್ತೆ ತಮ್ಮ ತಮ್ಮ ಮಂದೆಗೆ ಹೊಡೆದು
ಈ ಕಾವ ಕಟ್ಟಿಗೆಯ ಇನ್ನೆಂದಿಗೆ ಬಿಡುವೆ?
ಗೋಪತಿನಾಥ ವಿಶ್ವೇಶ್ವರಲಿಂಗವು ನಷ್ಟವಹನ್ನಕ್ಕ
ಎನ್ನ ಕೈಯ ಕಟ್ಟಿಗೆ ಬಿಡದು./8
ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು ವಾಹನ ವಾಹಕನ ಹೃದಯವನರಿತು.
ವಸ್ತುವ ಮುಟ್ಟಿ ಆಡುವ ಚಿತ್ತ ನಿಜವಸ್ತುವಿನ ಗೊತ್ತನರಿಯದೆ
ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ ನೋಡಾ!
ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ
ಕಟ್ಟುವಡೆವಂತೆ ಮಾಡು
ಗೋಪತಿನಾಥ ವಿಶ್ವೇಶ್ವರಲಿಂಗ./9
ಕಂಗಳ ದೃಷ್ಟದಿಂದ ನಿಷ್ಠೆಯನರಿತು,
ನಿಷ್ಠೆ ನಿಜದಲ್ಲಿ ನಿಂದು ಅರಿವು ಕರಿಗೊಂಡಲ್ಲಿ
ಗೋಪತಿನಾಥ ವಿಶ್ವೇಶ್ವರಲಿಂಗವು ದೃಷ್ಟವಾಯಿತ್ತು./10
ಕರೆವ ಹಸುವ ಉಳುವ ಬೆನ್ನತ್ತ
ಮೊಲೆವುಂಬ ಕರುವ ಕುರುಹನರಿಯದೆ ಕಾಣಬಹುದೆ,
ಈ ತ್ರಿವಿಧವಿಲ್ಲದೆ ಗುರುವಿನ ಇರವ
ಲಿಂಗದ ಮೂರ್ತಿಧ್ಯಾನವ
ಅರಿವಿನ ಮರೆದೊರಗುವ ಕಲೆಯ
ಚಲನೆ ನಿಂದಲ್ಲಿ ಆತ್ಮಲಿಂಗ ಭೇದ, ಪ್ರಾಣ ಸಂಬಂಧವಪ್ಪುದು.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು./11
ಕಾಯನೂ ಬಿಲ್ಲನೂ ಕೂಡೆ ಹಿಡಿದು ಎಸೆಯಬಹುದೆ?
ಕ್ರೀಯನೂ ನಿಃಕ್ರೀಯನೂ ಕೂಡಿ ವೇದಿಸಿ ನಡೆಯಬಹುದೆ?
ಕಾಯಿ ಹಣ್ಣಾಹನ್ನಕ್ಕ ಶಾಖೆಯ ಸಂಗ ಬೇಕು.
ಹಣ್ಣು ನೆರೆ ಬಲಿದು ರಸ ತುಂಬಿದ ಮತ್ತೆ ತೊಟ್ಟಿಗೆ ಬಿಡುಗಡೆ.
ಜ್ಞಾನ ರಸ ಕ್ರೀ ಮಲ ತನ್ನೊಳಗಿದ್ದು ತನ್ನ ಸ್ವಾದು ಬೇರಾದಂತೆ
ಕ್ರೀ ಸಂಬಂಧ ಜ್ಞಾನಸಂಬಂಧ ಉಭಯವ ವಿಚಾರಿಸಲಿಕ್ಕಾಗಿ
ನಿರವಯದಿಂದೊದಗಿದ ಸಾವಯವನರಿತು
ನಿಃಕ್ರೀಯಿಂದಕೀವೊಡಲುಗೊಂಡುದ ಕಂಡು
ಆದಿ ವಸ್ತುವಿಗೆ ಅನಾದಿ ವಸ್ತು ಬೀಜವಾದುದನರಿದು
ನೀರಿಗೆ ಸಾರಬಂದು ರಸವಾದ ತೆರನಂತೆ
ತಿಲ ಮರಳಿ ಹೊರಳಿ ಬೆಳೆವಲ್ಲಿ
ಆ ರಸ ಬೇರಿಲೊ ಕೊನರಿಲೊ ಕುಸುಮದಲೊ ಕಾಯಲೊ?
ಈ ಸರ್ವಾಂಗದೊಳಡಗಿ ಇದ್ದ ಠಾವ ಬಲ್ಲಡೆ ಕ್ರೀಜ್ಞಾನಸಂಬಂಧಿ.
ಅದು ವಾರಿಯ ಸಾರದಿಂದ ಸಾಕಾರ ಬಲಿದು
ನಿರಾಕಾರದ ಈ ಗುಣದಲ್ಲಿ ಒಂದರಿಂದ ಒಂದನರಿದೆಹೆನೆಂದಡೆ
ಸಂದೇಹ ಮೊದಲಾದ ಸಂಶಯವರ್ತಕ ವಸ್ತುವಿನಲ್ಲಿ ವರ್ತಿಸಿ
ವಸ್ತು ಆ ವಸ್ತುವ ಗರ್ಭಿಕರಿಸಿ ನಿಶ್ಚಯವಾದ ನಿಜ ಕ್ರೀ ನಿಃಕ್ರೀ ನಿರ್ವಾಹ
ಗೋಪತಿನಾಥ ವಿಶ್ವೇಶ್ವರಲಿಂಗವನರಿತಲ್ಲಿ./12
ಕಾಲವೇಳಯನರಿದು ತೃಣ ವಾರಿ
ನೆಳಲನರಿದು ರಕ್ಷಿಸಿ ಕಾವನಿರವು.
ಪಿಂಡ ಪ್ರಾಣ ಆರೋಗ್ಯಂಗಳಲ್ಲಿ ನಿಂದು
ಆತ್ಮನ ನಿಜಸ್ವಸ್ಥವನರಿದು
ಕ್ರೀಯಲ್ಲಿ ಶುದ್ಧ ಪೂಜೆಯಲ್ಲಿ ನಿಷ್ಠೆ
ನೆಲೆಯನರಿದಲ್ಲಿ ತ್ರಿವಿಧದ ಬಿಡುಗಡೆ.
ಆತ್ಮನ ಬಿಡುವ ಅವಸಾನವನರಿಯಬೇಕು
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ./13
ಕಾವುದು ಹುಟ್ಟುವುದು ಮೀರಿದಡೆ ಹೊಡೆವುದು.
ಗಣ್ಣಿನ ಕೋಲಹಿಡಿದು ಗೋವ ಕಾವುತ್ತಿರಲಾಗಿ,
ಕಾವಗಣ್ಣಿನಲ್ಲಿ ಕರ್ಮವಡಗಿ,
ಕಟ್ಟುವ ಕಗ್ಗಣ್ಣಿನಲ್ಲಿ ಧರ್ಮವಡಗಿ,
ಮೀರುವಗಣ್ಣಿನಲ್ಲಿ ವರ್ಮವಡಗಿ,
ತ್ರಿವಿಧವನೊಳಕೊಂಡ ಕೋಲುಗೋವಿನ ಬೆನ್ನಿನಲ್ಲಿ ಲಯವಾಯಿತ್ತು,
ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ./14
ಕೋ ಬಾ ಎಂದಲ್ಲಿ ಆತ್ಮನ ಭೇದ,
ಅಂಬಾ ಎಂದಲ್ಲಿ ಅರಿವಿನ ಭೇದ,
ಧಾ ಎಂದು ನಕ್ಕಿರಿದಲ್ಲಿ ಚಿದಾತ್ಮನ ಭೇದ.
ಇಂತೀ ಗುಣದ ಪಶು ಅಸುವಿನ ಬಲೆಯ ಕಾಯ್ದೊಪ್ಪಿಸಬೇಕು,
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ./15
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ
ನಿಲಿಸುವಂತೆ
ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು,
ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ
ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗೆ ತಲ್ಲೀಯವಾಗಿಪ್ಪುದೆ ಮಹಾ ನಿಜದ
ನೆಲೆ.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ./16
ಕ್ರೀ ಶುದ್ಧತೆಯಾದಲ್ಲಿ ಭಾವ ಶುದ್ಧವಾಗಿಪ್ಪುದು.
ಭಾವಶುದ್ಧವಾಗಿಪ್ಪಲ್ಲಿ ಸರ್ವೆಂದ್ರಿಯಂಗಳು ಏಕೇಂದ್ರಿಯವಾಗಿ
ಚಿತ್ತಶುದ್ಧ ಸಿದ್ದಿಯಾದಲ್ಲಿ ಸರ್ವಜ್ಞಾನ ಸಂಪನ್ನನಪ್ಪನು.
ಆ ಗುಣ ನಿಜನೆಲೆಯಾದಲ್ಲಿ
ಗೋಪತಿನಾಥ ವಿಶ್ವೇಶ್ವರಲಿಂಗ ವಚಿಚ್ಚಂತಿಪ್ಪನು./17
ಕ್ರೀಯನೆ ಭಾವಿಸಿಹೆನೆಂದಡೆ ಮೃತ್ತಿಕೆಯ
ಸಾಕಾರವ ತೊಳೆದು ನಿರ್ಮಳವನರಸುವಂತೆ.
ಶೂನ್ಯದಲ್ಲಿ ವಿಶ್ರಮಿಸಿ ಕಂಡೆಹೆನೆಂದಡೆ ಕೆಂಗಳಿಗೆಟ್ಟದು
ಕೈಮುಟ್ಟದು, ಆತ್ಮಂಗೆ ಆಗೋಚರ
ಇಂತೀ ಉಭಯವನೊಡಗೂಡಿ ಕಂಡೆಹೆನೆಂದಡೆ
ಕ್ರೀಗೆ ಅಂಗನಿಲ್ಲದು; ಆತ್ಮಂಗೆ ಸಲ್ಲದು.
ಉಭಯದಾಟ ಕೂಡಿ ನಿನ್ನರಿವನ್ನಕ್ಕ ಕಲ್ಪಿತಾಂತರ ಕೂಟವಾಗುತ್ತಿದೆ.
ಇದರಚ್ಚುಗವ ಬಿಡಿಸು ಗೋಪತಿನಾಥ ವಿಶ್ವೇಶ್ವರಲಿಂಗ./18
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಭಕ್ತಿಸ್ಥಲ
ಮಹೇಶ್ವರಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ
ಇಂತೀ ನವಗುಣಸ್ಥಲಂಗಳಲ್ಲಿ ಸಾಧಕ ಮೂರು
ಸಾಧ್ಯ ಮೂರು ಅಸಾಧ್ಯ ಮೂರು.
ಸಾಧಕದಿಂದ ಸಾಧ್ಯ, ಸಾಧ್ಯದಿಂದ ಅಸಾಧ್ಯ
ಅಸಾಧ್ಯದಿಂದ ಭೇದಕತ್ವ
ಇಂತೀ ದಶಗುಣಸಿದ್ಧಿ.
ಸಿದ್ಧಿಯಾದಲ್ಲಿ ಮೂವತ್ತಾರು ಭೇದ ಇಪ್ಪತ್ತೈದು ತತ್ವ
ನೂರುಸ್ಥಲ ಪ್ರಮಾಣು.
ಒಂದು ಸ್ಥಲದಲ್ಲಿ ನಿಂದು ಐಕ್ಯವಾಗಲಾಗಿ
ಬೀಜದೊಳಗಣ ಫಲ ಪರ್ಣ ಅಂಕುರ ವಿಭೇದವಿಲ್ಲದೆ ಅಡಗಿದಂತೆ.
ಈ ಗುಣ ಸರ್ವಸ್ಥಲ ಸಂಪೂರ್ಣವ ಐಕ್ಯಬೀಜ ನಾಮ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದ ನಿರ್ವಿಜ./19
ಜೀವಕುಳವಳಿಯಿತ್ತು, ಜ್ಞಾನಕುಳ ಉಳಿಯಿತ್ತು.
ಭವಪಾಶ ಹರಿಯಿತ್ತು, ಅಜ್ಞಾನ ಹಿಂಗಿತ್ತು.
ಎಲೆ ಗೋಪತಿನಾಥ ವಿಶ್ವೇಶ್ವರಲಿಂಗಾ,
ನಿನ್ನತ್ತ ಮನವಾಯಿತ್ತೆನಗೆ
ಕೃಪೆಮಾಡು ಕೃಪೆಮಾಡು ಶಿವಧೋ ಶಿವಧೋ./20
ಜ್ಞಾನನೇತ್ರ ಮುಸುಕ ತೆಗೆದು ಮುಂದಕ್ಕೆ ಅದೇನ ಕಾಬುದು?
ಕಾಬುದು ಕಾಣಿಸಿಕೊಂಬುದು ನಿಜ ತಾನಾದಲ್ಲಿ
ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯನಾಮವಿಲ್ಲ./21
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು
ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು
ಮರೆಯಲಾಗದು
ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು.
ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ?
ನಾನೆಂಬುದ ಇದೇನೆಂದು ಅರಿವನ್ನಕ್ಕ
ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ.
ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ./22
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ
ಕಟ್ಟಳೆಯ ವರುಷಕ್ಕೆ ತಪ್ಪದೆ
ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು
ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು
ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ
ಅವು ಬಾರದಿರೆ ತಾ ಸಂಧಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ
ಗುರುಸ್ಥಲ ಎಂದಿಗೂ ಇಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./23
ತನು ಮೂರು ಆತ್ಮವಾರು ಜೀವವೆರಡು
ಜ್ಞಾನ ಎಂಬತ್ತನಾಲ್ಕು ಲಕ್ಷ
ಪರಮನೊಂದೆ ಭೇದ.
ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ
ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ
ಆಹಾರ ವ್ಯವಹಾರ ವಿಷಯಂಗಳಿಂದ
ಉತ್ಪತ್ಯ ಸ್ಥಿತಿ ಲಯಂಗಳಿಂದ
ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ.
ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ
ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ
ಸರ್ವ ಜೀವದ ಕ್ಷುದೆ, ಸರ್ವಾಂತ್ಮಂಗಳಲ್ಲಿ ದಯ
ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ
ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸರ್ವಾತ್ಮಕ್ಕೆ
ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ.
ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು/24
ತನುಧರ್ಮವ ಕಂಡು ಮನಧರ್ಮವನರಿದು,
ಅರಿವಿನ ವಿವೇಕದಿಂದ ಭೃತ್ಯರನೊಡಗೂಡುವನೆ ಗುರುಚರಮೂರ್ತಿ.
ಆತ ಪರಮ ವಿರಕ್ತ, ಪರಾಪರದಿಂದತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು/25
ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿಎಸಲಿಕ್ಕಾಗಿ,
ಗುರಿಯಲ್ಲಿಯೆ ಸರ ಪರಿಹರಿಸಿ,
ಆ ಸರದಲ್ಲಿಯೇ ತಮ ಪರಿಹರಿಸಿತ್ತು.
ಲಕ್ಷ ್ಯದಲ್ಲಿಯೆ ಚಿತ್ತ, ಚಿತ್ತದಲ್ಲಿಯೆ ಲಕ್ಷ ್ಯ ಅಲಕ್ಷ ್ಯವಾಯಿತ್ತು.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./26
ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ
ಕುರುಹನರಿಯದೆ ಅಗೆಯಬಹುದೆ?
ಸಕಲ ವೇದ ಶಾಸ್ತ್ರ ಪುರಾಣ ಅಗಮಂಗಳ ತಾ ಬಲ್ಲೆನೆಂದಡೆ
ಕ್ರೀಯಿಲ್ಲದೆ ಜ್ಞಾನಹೀನವಾಗಿ ಭಾವಶುದ್ಧವಿಲ್ಲದೆ
ಮತ್ತೇನುವನರಿಬಲ್ಲನೆ?
ಇದು ಕಾರಣದಲ್ಲಿ ಕ್ರೀಗೆ ಪೂಜೆ, ಅರಿವಿಂಗೆ ತ್ರಿವಿಧದ
ಬಿಡುಗಡೆ,
ಆ ಬಿಡುಗಡೆಯ ಅಡಿಯಮೆಟ್ಟಿದ ಶರಣ
ಉಂಡುಪವಾಸಿ ಬಳಸಿ ಬ್ರಹ್ಮಚಾರಿ.
ಪಳುಕಿನ ವರ್ತಿಯಂತೆ, ತಿಲರಸ ಅಪ್ಪುವಿನಂತೆ,
ಹೊದ್ದಿಯೂ ಹೊದ್ದದ ನಿಜಲಿಂಗಾಗಿಯ ಯೋಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮದುಕೇಶ್ವರನು./27
ತುಂಬಿ ಕುಸುಮದ ಬಂಡುಂಬಂತೆ
ಕುಸುಮದಂಗ ಹರಿಯದೆ
ಸುಗಂಧ ಆತ್ಮನಲ್ಲಿ ತುಂಬಿ ತುಂಬಿದ್ದಂತೆ
ಕುಂಡಲಿ ಕೀಟಕನ ತಂದು ಮೃತ್ತಿಕೆಯ ಮಂದಿರದಲ್ಲಿ ಇರಿಸಿ
ಆ ಬೆಂಬಳಿಯಲ್ಲಿ ರೆುುಂಕರಿಸಲಾಗಿ
ಅದು ತನ್ನ ಭೀತಿಯಿಂದ ಮತ್ತೆ ಬಂದಿತ್ತಲ್ಲಾ ಎಂದು
ತಾ ಸತ್ತೆಹೆನೆಂಬ ಸಂದೇಹದಿಂದ ಮೂಛರ್ೆ ಕರಿಗೊಂಡು
ಕೀಟಕನಂಗವಳಿದು ಕುಂಡಲಿಯಾದ ತೆರದಂತೆ
ಈ ಗುಣ ಅಂಗಲಿಂಗ ಮೂರ್ತಿಧ್ಯಾನ ನಿಂದಲ್ಲಿ
ಪ್ರಾಣಲಿಂಗಸಂಬಂಧ.
ಅದು ತದ್ಭಾವ ನಿಜವಾದಲ್ಲಿ ಲಿಂಗಪ್ರಾಣಯೋಗ.
ಉಭಯದ ಸಂದನಳಿದು ಸಂಬಂಧ ಸಂಬಂಧಾವಾದಲ್ಲಿ
ಆ ವಸ್ತು ವಸ್ತುಲೇಪ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮದುಕೇಶ್ವರನು./28
ತೊಟ್ಟುಬಿಡುವ ವೇಳೆಯನರಿದ ಮತ್ತೆ
ದೋಟಿಯನಿಕ್ಕಲೇತಕ್ಕೆ?
ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ
ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ?
ಇದು ಗುರುಸ್ಥಲಕೆ ನಿಶ್ಚಯವಲ್ಲ;
ಇದು ಶಿಲೆಯ ಮಾರಿಯ ಹದಹು;
ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ
ಆತ ಸದ್ಗುರುಜಾತನಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮಧುಕೇಶ್ವರನು./29
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ.
ಚತುರ್ವಿಧ ಫಲಪ್ರಾಪ್ತಿಯ ಅನುಭವಿಸದೆ
ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ.
ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು
ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು.
ಷಡಾಧಾರಂಗಳಿಂದ ಸುಳಿದ ಸೂಕ್ಷ ್ಮದ ಆತ್ಮನ ನೆಲೆಯನರಿದು
ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು.
ಸುಖದುಃಖವೆಂಬ ಉಭಯವನಳಿದು.
ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು.
ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ
ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ
ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದುಐಕ್ಯಸ್ಥಲ.
ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲನೋಡಾ!
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗೆ ಮಧುಕೇಶ್ವರನು./30
ತ್ರಿವಿಧ ಪ್ರಸಾದವ ಸ್ವೀಕರಿಸುವಲ್ಲಿ
ತನ್ನ ಸತ್ಪತ್ರವಲ್ಲದುದ ಲಿಂಗಕ್ಕೆ ಅರ್ಪಿಸಿಕೊಂಡಹೆನೆನಲ್ಲಿಲ್ಲ.
ಗುರು ಪ್ರಸಾದ ಬಂದಿತ್ತೆಂದು ತನ್ನ ಕ್ರೀ ಮೀರಿ ಮುಟ್ಟಲಿಲ್ಲ.
ಜಂಗಮ ಪ್ರಸಾದವ ಉಭಯ ಪ್ರಸಾದದಲ್ಲಿ ಕೂಡಿ
ತನ್ನ ಕ್ರೀ ಹೊರೆಯಾಗಿ ಕೊಳ್ಳಲಿಲ್ಲ.
ಇಂತೀ ತ್ರಿವಿಧ ಪ್ರಸಾದದ ಭೇದ
ಭಕ್ತಿ ವರ್ತಕಂಗೆ ಶುದ್ಧವಾದಲ್ಲಿ ಲಿಂಗ ಪ್ರಸಾದ.
ಮಾಹೇಶ್ವರ ವರ್ತಕಂಗೆ ತನು-ಮನ ಶುದ್ಧವಾದಲ್ಲಿ ಗುರುಪ್ರಸಾದ.
ಪ್ರಸಾದಿಸ್ಥಲ ವರ್ತಕಂಗೆ ತ್ರಿವಿಧಮಲತ್ರಯ ದೂರಸ್ಥನಾಗಿ
ಮನ-ವಚನ-ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿ
ಆಯಾ ಉಚಿತದಲ್ಲಿ ಜಂಗಮ ಪ್ರಸಾದ ಬರಲಿಕ್ಕಾಗಿ
ಸ್ವಯ ಸತ್ಕಿ ್ರ ತಪ್ಪದೆ ತನ್ನ ದೃಷ್ಟಕ್ಕೆ
ಕೊಟ್ಟು ಕೊಂಬುದು ಮಹಾಪ್ರಸಾದಿಯ ಪ್ರಸನ್ನ.
ಈ ರಚನೆ ಮಹಾಪ್ರಮಥರ ಪ್ರಸಾದ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ
ಮಾತುಳಂಗ ಮಧುಕೇಶ್ವರನು./31
ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ,
ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ;
ಮೋಕ್ಷಗುರುವಾಗಿ ಬಂದು ತ್ರಿವಿಧ ಮಲದ ಕೆಡಿಸಿ ಮುಕ್ತನಮಾಡಿದೆ.
ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ,
ನಿಜಲೀಲೆಗೆ ಜಂಗಮರೂಪಾಗಿ,
ಇಂತೀ ತ್ರಿವಿಧ ರೂಪಾಗಿ ಭಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./32
ದೃಷ್ಟಿಯ ದೃಷ್ಟದಿಂದ ಮೋಹದ ಲವಲವಿಕೆ.
ಮೋಹದ ಲವಲವಿಕೆಯಿಂದ ಸ್ವರ್ಶನದ ಉಭಯದ ಕೂಟ ಏಕವಾದಲ್ಲಿ
ಹಿಂದಣ ಕುರುಹು ಮುಂದಣ ಲಕ್ಷ ್ಯ ಅಲಕ್ಷ ್ಯನಾಗಿ
ದಂಪತಿ ದ್ವಂದ್ವವಿಲ್ಲದೆ, ನಿಜವೆಂಬ ಕುರುಹು ಅರಿಕೆದೋರದೆ
ಅವಿರಳ ನಾಮಶೂನ್ಯವಾದದು
ಗೋಪತಿನಾಥ ವಿಶ್ವೇಶ್ವರಲಿಂಗವು ಹೃತ್ಕಮಲದಲ್ಲಿ
ವಿಶ್ರಾಂತಿಯಾದ ಇರವು./33
ನೀನು ಅಂಗದಲ್ಲಿ ಕಡಿದುದ ಬಿಟ್ಟು
ಬಿಟ್ಟು ನೋಡಿ ನಿನ್ನ ಕುರುಹ ಕಾಣೆ.
ನೀನು ಕರ್ಣದಲ್ಲಿ ಹೇಳಿದುದ ನೆನೆದು ನೆನೆದು ಮನದಲ್ಲಿ ನಿಲ್ಲೆ.
ನೀ ಬಿಡೆಂದುದ ಬಿಟ್ಟೆ, ನೀ ಹಿಡಿಯೆಂದುದ ಹಿಡಿದೆ.
ನೀ ಅರಿಯೆಂದುದ ಮುಖಗುರುಹ ಕಾಣೆ.
ನಿನ್ನರಿಕೆ ಇನ್ನೆಂದಿಗೆ?
ಈ ಘಟವ ಬಿಡುವುದಕ್ಕೆ ಮೊದಲೆ
ನಿನ್ನಡಿಯ ಗುಡಿಯ ತೋರು
ಗೋಪತಿನಾಥ ವಿಶ್ವೇಶ್ವರಲಿಂಗಾ./34
ನೆನಹೆ ಲಿಂಗವಾದ ಮತ್ತೆ ಮುಟ್ಟುವುದಕ್ಕೆ ಮಸ್ತಕವಿಲ್ಲ.
ಮಾಡುವಾತ ವರ್ಮಜ್ಞನಾದಲ್ಲಿ
ಇಕ್ಕಿಹೆ ಕೊಚ್ಚಿಹೆನೆಂಬುದು ನಷ್ಟವಾಯಿತ್ತು.
ಅರಿದು ಚರಿಸುವ ವಿರಕ್ತಂಗೆ ತಥ್ಯಮಿಥ್ಯವಳಿದಲ್ಲಿ ಹೊಕ್ಕೆಹೆ ಹೊರಟಿಹೆ
ಇದಿರ ಚಿತ್ತವನರಿದೆಹೆನೆಂಬ ಗೊತ್ತುಗೆಟ್ಟಿತ್ತು.
ಇಂತೀ ಭೇದಂಗಳ ಭೇದಿಸಿ ವಿಭಾಗಿಸದೆ
ವಾಯುವಿನ ಕೈಯ ಗಂಧದಂತೆ ನಾಸಿಕಕ್ಕೆ ವಾಸನೆ ತೋರಿ
ಹಿಡಿದೆಹೆನೆಂದಡೆ ಬುಡ ಸಿಕ್ಕದೆ
ತ್ರಿವಿಧ ಭಕ್ತಿ ಸನ್ನದ್ಧನಾಗಿಪ್ಪ ಸದ್ಭಕ್ತನ ಶ್ರೀಪಾದವೆ
ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಆಲಯ./35
ನೆವದಿಂದ ಶರಣರ ಬಾಗಿಲಲ್ಲಿ ಹೋಗಿ
ಕಟ್ಟಿದ ಹಸು ಕೂಡಿದ ಎತ್ತು ಬಿಡಿರೊ ಎಂದು ಕೂಗುತ್ತಿದ್ದೇನೆ.
ಎನ್ನ ಕೂಗಿನ ದನಿಯಿಂದ ಮಹಾಶರಣರ ಸತಿ ಬಂದು
ಕಟ್ಟಿದ ಹಸುವ ಬಿಟ್ಟು, ಕೂಡಿದ ಎತ್ತ ಕಡಹಿ
ನಾಳೆ ಕೊಡಿಯೆಂದು ಹೊಡೆವುತಿದ್ದೇನೆ
ಗೋಪತಿನಾಥ ವಿಶ್ವೇಶ್ವರಲಿಂಗದಡಿಗಾಗಿ./36
ಪರಬ್ರಹ್ಮದಿಂದ ಅಪರವ ಕಾಬುದು
ಅಪರದಿಂದ ಪರಾಪರವ ಧ್ಯಾನಿಸುವುದು.
ಧ್ಯಾನ ತದ್ದಾ ್ಯನವಾದಲ್ಲಿ ಮೂರ್ತಿಯ ನಿಜ ನಿಃಕಲಲೀಯ
ಅದು ತ್ರಿವಿಧ ನಾಮನಷ್ಟ. ತ್ರಿವಿಧಾತ್ಮಸೂತಕ ನಾಶನ
ಗೋಪತಿನಾಥ ವಿಶ್ವೇಶ್ವರಲಿಂಗವು ಅವಿರಳ ಸಂಬಂಧಿ./37
ಪ್ರಥಮ ಮೂಲದಲ್ಲಿ ನಿರಾಕಾರವಸ್ತು ಸಾಕಾರವಾಯಿತ್ತು.
ಆಚಾರಕ್ಕೋಸ್ಕರವಾಗಿ ವಸ್ತು ಅನಾಚಾರಿಯಾದ.
ಅನಾಹತ ಸಂಸಿದ್ಧ ಆಗಲಾಗಿ ವಿಚಾರಮುಖದಿಂದ ಆಚಾರ್ಯನಾದ.
ಆ ಮರದ ಶಾಖೆಯ ತೊಡಪಿಂದ ಆ ಮರದ ಫಲದ ಕೈಗೆ ತಾಹಂತೆ
ಈ ಗುಣ ಕ್ರೀ ನಿಃಕ್ರೀಯೆಂಬ ಉಭಯವಿವರದ ಭೇದ.
ಉಭಯಕ್ಕೆ ಒಂದು ಶುದ್ಧವಾದಲ್ಲಿ ಒಂದಲ್ಲಿ ಒಂದು ಸಂದಿತ್ತು.
ಈ ಗುಣ ಕ್ರೀ ನಿಃಕ್ರೀಲೇಪ, ಏಕಸ್ಥಲ ಐಕ್ಯನ ಕೂಟ
ಗೋಪತಿನಾಥ ವಿಶ್ವೇಶ್ವರಲಿಂಗದ ಒಳಗಿನಾಟ. /38
ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು/39
ಬೆಳೆದು ಬೆಳೆಯಿಸಿಕೊಂಬುದು
ನೀರೊ ನೆಲನೊ ಬೀಜವೊ ಎಂಬುದ ತಿಳಿದು,
ಕರ್ಮವರ್ಮ ಕೂಟಂಗಳ ಆಟವನರಿತು
ವರ್ತನಕ್ಕೆ ಕ್ರೀ ಸತ್ಯಕ್ಕೆ ಜ್ಞಾನ
ಜ್ಞಾನಕ್ಕೆ ಸರ್ವಜೀವದ ವ್ಯಾಪಾರ ಭೇದ.
ಅದು ಸಂಪದ ಸಂಬಂಧ ತತ್ವ
ಗೋಪತಿನಾಥ ವಿಶ್ವೇಶ್ವರಲಿಂಗದ ಕ್ರಿಯಾನಿರ್ವಾಹ./40
ಭಾವವುಳ್ಳನ್ನಕ್ಕ ಭ್ರಮೆಯ ಬೀಜ.
ಭ್ರಮೆ ನಿಭ್ರಮೆಯಹನ್ನಕ್ಕ ಪೂಜೆಯ ದೃಷ್ಟ.
ಪುಣ್ಯದ ಬೀಜ ಸುಖದ ಬೆಳೆ ಸಾಧನ ಸಂಪತ್ತು.
ಇಂತೀ ಕ್ರೀ ಸಾಧ್ಯವಹನ್ನಕ್ಕ ಅಸಾಧ್ಯದ ಸಂಬಂಧ.
ವಿರಳ ಅವಿರಳವೆಂಬ ಕಲೆ ಕಳೆಯಲ್ಲಿ ಕಲೆದೋರದೆ ನಿಂದುದು
ಗೋಪತಿನಾಥ ವಿಶ್ವೇಶ್ವರಲಿಂಗವು ವಿಶ್ವನಾಮ ನಷ್ಟವಾದಭೇದ./41
ಮೂರು ಬೆಟ್ಟದ ತಪ್ಪಲಿನ ಮಧ್ಯದಲ್ಲಿ
ಆಡುವ ಹಿಡಿದು ಮೇಯಿಸುತ್ತಿರಲಾಗಿ,
ಅಡ್ಡ ಬೆಟ್ಟದಲ್ಲಿ ದೊಡ್ಡಹುಲಿ ಹುಟ್ಟಿ ಹಾಯಿತ್ತು ಹಸುವ;
ಉದ್ದಿಹ ಬೆಟ್ಟದಲ್ಲಿ ಭದ್ರಗಜ ಬಂದು ಹೊಯ್ಯಿತ್ತು ಎತ್ತ;
ಮಧ್ಯದ ಬೆಟ್ಟದಲ್ಲಿ ಹುಟ್ಟಿದ ತೋಳ ಹಿಡಿಯಿತ್ತು ಕರುವಿನಕೊರಳ
ಹುಲಿ ಗಜ ತೋಳನ ಉಡು ನುಂಗಿತ್ತ ಕಂಡೆ
ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ./42
ವರ್ತುಳ ವಾಯುವಲ್ಲಿ ಎದ್ದ ತೃಣ ಪರ್ಣ ಕುಂಪಟಿ
ಮುಂತಾದವನೆಲ್ಲವನು ದಂಡ ಸಾಕಾರ ಮುಂತಾಗಿ ತೋರಿ
ಸಂಚಾರ ನಿಂದ ಮತ್ತೆ ಅವು ಮುನ್ನಿನ ಸಂಚದಂತೆ ನಿಂದವು.
ನಿರವಯ ವಸ್ತುವನೊಡಗೂಡಿದ ಕ್ರೀವಸ್ತು ವಸ್ತುಕವಾಗಲಾಗಿ
ಮುಂಚಿ ಮುಟ್ಟುವ ಕ್ರೀ ಮುನ್ನಿನ ಸಂಚದಲ್ಲಿಯೆ ಅಡಗಿದವು.
ಇದು ಕ್ರೀಜ್ಞಾನ ನಿರ್ವಾಹ ಭಾವ
ಗೋಪತಿನಾಥ ವಿಶ್ವೇಶ್ವರಲಿಂಗವು ನಿರ್ವಾಹನಾದಆಟ./43
ಶಕ್ತಿ ಸಮೇತವಾಗಿ ಇಹನ್ನಕ್ಕ ಬಿಂದುವಿನ ಸತ್ವ
ಕೂಟಸ್ಥಬಿಂದು ಜಾರಿದಲ್ಲಿ ನಿಂದಿತ್ತು ಸತ್ವ
ಅರಿವು ಮುಖದಿಂದ ಕ್ರಿಯಾಶಕ್ತಿಯ ಕೂಟ
ಆರಿವು ಜಾರಿದಲ್ಲಿ ಮರೆದು ಹೋಯಿತ್ತು ಕ್ರಿಯಾಭೇದ.
ನಾನರಿವುದಕ್ಕೆ ಅರಿವ ತೋರು
ನೋಡುವುದಕ್ಕೆ ಕುರುಹ ತೋರು
ನಾನಡುಗುವುದಕ್ಕೆ ಗುಡಿಯ ತೋರು
ಗೋಪತಿನಾಥ ವಿಶ್ವೇಶ್ವರಲಿಂಗಾ./44
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ
ವಾಚಾರಚನೆಯೆಂಬ ಹುಲಿ ಹುಟ್ಟಿ,
ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ
ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ,
ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ
ಪರಿಭ್ರಮಣದ ತೋಳ ಹುಟ್ಟಿ,
ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು
ಗಜ ಅಜದ ಮೆಲುಕಿನಲ್ಲಿ ಸಿಕ್ಕಿ,
ತೋಳ ಉಡುವಿನ ಕಣ್ಣಿನೊಳಡಗಿತ್ತು.
ತುರುವಿನ ಮುಂದೆ ಬರಿಕೆಯಿವುತ್ತಿದೆ
ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು./45
ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ
ಮೂರ್ತಿಧ್ಯಾನದಿಂದ ಮಹಾಪ್ರಸಂಗವ
ಮಹಾಪ್ರಸಾದವೆಂದು ಕೈಕೊಂಡು,
ಆ ಗುಣ ಗುರುಭಕ್ತಿ ಸಾಧನ,
ಶಿವಲಿಂಗ ಪೂಜೆಯ ಮಾಡುವಲ್ಲಿ
ಪರಾಕು ಪರಿಭ್ರಮಣ ಪ್ರಕೃತಿಭಾವ
ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ
ಕಂಗಳಲ್ಲಿ ಹೆರೆಹಿಂಗದೆ,
ಭಾವದಲ್ಲಿ ಬೈಚಿಟ್ಟುಕೊಂಡು
ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ
ಜಂಗಮ ಸೇವೆಯ ಮಾಡುವಲ್ಲಿ
ಇಷ್ಟ ಕಾಮ್ಯ ಮೋಕ್ಷಂಗಳನರಿತು
ಆಶನ ವಿಷಯ ರೋಷ ಆಸಕರನರಿತು
ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ,
ವೈಭವಕ್ಕೆ ಖ್ಯಾತಿ ಲಾಭಂಗಳನರಿತು
ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ;
ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ
ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ./46
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು
ಅನುಮಾನದಲ್ಲಿ ಅರಿದು ಮತ್ತೆ
ಉಪದೃಷ್ಟದಲ್ಲಿ ಅನ್ಯಭಿನ್ನವ ಮಾಡಿ ಕೇಳಲೇತಕ್ಕೆ?
ತಾನರಿದ ಕಲೆಯ ಇದಿರಲ್ಲಿ ದೃಷ್ಟವ ಕೇಳಲೇತಕ್ಕೆ?
ಇದು ಪರಿಪೂರ್ಣಭಾವ,
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದಕೂಟ./47
ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಟ
ಕಪಿಲಿ ಕರ್ಬುರ ಅಳಗು ಬೊಟ್ಟಳಗ
ಇಂತೀ ದಶವರ್ಣದ ಪಶುನಾಮದ ಅಸುವನರಿತು
ಸಂಜ್ಞೆ ಗರ್ಜನೆ ತಾಡನೆ ತ್ರಿವಿಧ ಭೇದಂಗಳಿಂದ
ಕಾದೊಪ್ಪಿಸಬೇಕು ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ./48
ಸ್ಥಲಂಗಳನರಿದು ಆಚರಿಸುವಲ್ಲಿ
ಮೂರನರಿದು ಮೂರ ಮರೆದು ಮೂರವೇದಿಸಿ
ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ
ಮತ್ತಿಪ್ಪತ್ತೈದರ ಭೇದವಡಗಿ
ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು
ಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬ
ಉಭಯನಾಮ ಬಿಡದು./49
ಸ್ಥಲಕ್ಕೆ ಸೂಕ್ಷ ್ಮ, ಸೂಕ್ಷ ್ಮಕ್ಕೆ ಕಾರಣ,
ಕಾರಣಕ್ಕೆ ಬಿಂದು ವಿಸರ್ಜನವಿಲ್ಲದ ಅಕಾರ್ಯ
ಅದು ಶೂನ್ಯದೊಳಗಣ ನಿಶ್ಯೂನ್ಯ
ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯವಳಿದ
ನಿರ್ಲೆಪ./50
ಹಸುವ ಕಾವಲ್ಲಿ ದೆಸೆಯನರಿತು,
ಎತ್ತ ಕಾವಲ್ಲಿ ಪೃಥ್ವಿಯನರಿದು,
ಕರುವ ಕಟ್ಟುವಲ್ಲಿ ಗೊತ್ತ ಕಂಡು
ಧನವ ಕಾವಲ್ಲಿ ಸಜ್ಜನನಾಗಿ,
ಜೀವಧನವ ಕಂಡಲ್ಲಿ ಮನ ಮುಟ್ಟದೆ,
ಇಂತೀ ಭೇದೇಂದ್ರಿಯಂಗಳ ತುರುಮಂದೆಯಲ್ಲಿ
ಕರು ಕಡುಸು ಎತ್ತು ಹಸುವಿನಲ್ಲಿ ಚಿತ್ರದ ವರ್ಣವನರಿಯಬೇಕು
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ./51
ಹಸುವಿಂಗೆ ಆರು ಬಾಯಿ, ಎತ್ತಿಂಗೆ ಮೂರು ಬಾಯಿ
ಕರುವಿಂಗೆ ಒಂದು ಬಾಯಲ್ಲಿ ನಾನಾವರ್ಣದ ಹುಲ್ಲ ಮೇದು
ನೀರಡಸಿ ನೆಟ್ಟಾಲೆ ನಿಂದುವು ಕಣ್ಣು.
ಕರು ಸತ್ತ ಮತ್ತೆ ಹಸುವಿನ ಹಂಗಿಲ್ಲ.
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ
ಕರುವಿನ ಹರಣ ಹೋಹುದಕ್ಕೆ ಮುನ್ನವೆ
ಒಡಗೂಡಿ ಶುದ್ಧಿ ಯನೊಪ್ಪಿಸಬೇಕು./52
ಹಸುವಿಂಗೆ ಸಂಜ್ಞೆ, ಎತ್ತಿಂಗೆ ಮುಟ್ಟು, ಕರುವಿಂಗೆ ಲಲ್ಲೆ.
ಇಂತೀ ತ್ರಿಗುಣದ ಇರವ, ತ್ರಿಗುಣಾತ್ಮಕ ಭೇದವ,
ತ್ರಿಗುಣ ಭಕ್ತಿಯ ಮುಕ್ತಿಯ, ತ್ರಿಗುಣ ಘಟಾದಿಗಳ,
ತ್ರಿಗುಣ ಮಲ ನಿರ್ಮಲಂಗಳ,
ತ್ರಿಗುಣ ಸ್ವಯ ಚರ ಪರಂಗಳಲ್ಲಿ
ತ್ರಿವಿಧ ಶಕ್ತಿ ತ್ರಿವಿಧ ಮುಕ್ತಿ
ಇಂತೀ ತ್ರಿವಿಧಂಗಳೊಳಗಾಗಿ
ಉತ್ಪತ್ಯ ಸ್ಥಿತಿ ಲಯ ತ್ರಿವಿಧದ ಹೆಚ್ಚು ಕುಂದನರಿತು,
ಎತ್ತು ಹಸುವಿನ ಸಂಗದಿಂದ ಕರುವಾದ ತೆರನನರಿತು
ಇಂತೀ ಒಂದರಲ್ಲಿ ಒಂದು ಕೂಡಲಿಕ್ಕೆ
ಬಿಂದು ನಿಂದು ಕುರುಹಾದುದ ಕಂಡು
ನೆನೆದು ನೆನೆಸಿಕೊಂಬುದದೇನೆಂದು ತಿಳಿದು,
ಇಂತೀ ಅಂಡ ಪಿಂಡಗಳಲ್ಲಿ ನಿರಾತ್ಮನು ಆತ್ಮನಾಗಿ,
ನಾನಾರೆಂಬುದ ತಾನರಿತು ತಿಳಿದಲ್ಲಿ
ತುರುಮಂದೆಯೊಳಗಾಯಿತ್ತು.
ಇದು ಗೋಪತಿನಾಥನ ಕೂಟ,
ವಿಶ್ವನಾಥಲಿಂಗನ ಲೀಲಾಭಾವದಾಟ./53
ಹಸುವಿಂಗೆ ಹರವರಿ, ಎತ್ತಿಂಗೆ ಕಟ್ಟುಗೊತ್ತು,
ಕರುವಿಂಗೆ ವಿಶ್ವತೋಮುಖವಾಗಿ
ಹರಿವುತ್ತಿಪ್ಪ ಕರುವಿನ ಅರಿವ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಕಟ್ಟುವಡೆಯಬೇಕು./54
ಹಸುವಿಂಗೊಂದು ಕಚ್ಚು, ಎತ್ತಿಂಗೆರಡು ಕಚ್ಚು,
ಕರುವಿಂಗೆ ಮೂರು ಕಚ್ಚು.
ಇಂತಿವ ನೋಡಿ ಮೇಯಿಸಿಕೊಂಡು
ತೊಂಡುಹೋಗದಂತೆ ಕಾಯಿದೊಪ್ಪಿಸಬೇಕು
ಗೋಪತಿನಾಥ ವಿಶ್ವೇಶ್ವರಲಿಂಗದರಿಕೆಯಾಗಿ./55
ಹಸುವಿಗೆ ಹಾಗ, ಎತ್ತಿಗೆ ಹಣವಡ್ಡ,
ಕರುವಿಗೆ ಮೂರು ಹಣ, ಎಮ್ಮೆ ಕೋಣಕುಲವ ನಾ ಕಾಯಲಿಲ್ಲ.
ಅವು ಎನ್ನ ತುರುವಿಗೆ ಹೊರಗು.
ತೊಂಡು ಹೋಗದಂತೆ ಕಾದೊಪ್ಪಿಸುವೆ
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ./56