Categories
ವಚನಗಳು / Vachanagalu

ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳು

ಭೂಲೋಕದಲ್ಲಿ ಕುಳ್ಳಿರ್ದು ಆಕಾಶದ ಸುದ್ದಿಯ ನುಡಿದರೆ
ಆಕಾಶದ ನೆಲೆಯ ಬಲ್ಲರೆ ಅಯ್ಯ?
ಪಾತಾಳಲೋಕದಲ್ಲಿದ್ದವರು ಕೈಲಾಸದ ಸುದ್ದಿಯ ನುಡಿದರೆ
ಕಂಡಂತೆ ಆಗಬಲ್ಲುದೆ ಅಯ್ಯ?
ತತ್ವಶಾಸ್ತ್ರವನೋದಿ
ತತ್ವಮಸ್ಯಾದಿ ವಾಕ್ಯಾರ್ಥಂಗಳ ತಿಳಿದು
ತತ್ವಮಸಿಯಾದನೆಂಬವರೆಲ್ಲಾ ಎತ್ತ ಹೋದರೋ?
ವ್ಯರ್ಥವಾಗಿ ಸತ್ತು ಹೋದರಲ್ಲ.
ಇದು ಕಾರಣ, ನಿಮ್ಮ ಶರಣರು
ಉತ್ಪತ್ತಿ ಸ್ಥಿತಿ ಪ್ರಳಯರಹಿತವಾದ ಮಹಾಲಿಂಗದಲ್ಲಿ
ಸಂಯೋಗವಾದ ಅಚ್ಚ ಲಿಂಗೈಕ್ಯರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./501
ಭೋಜನಸಾಲೆಯ ಆಧಾರದ ರತ್ನಪೀಠದಲ್ಲಿ ವಿರಾಜಿಸುವ
ರಾಜಮೂರ್ತಿ ಇವನಾರಯ್ಯ?
ಮೂಜಗದೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು
ತಾನೆ ಕಾಣಿರೋ./502
ಮಂಜರ ದೃಷ್ಟಿಯಲ್ಲಿ ತೋರುವ ಇಂದ್ರಿಯ ಭೋಗಂಗಳು
ಮಹೇಂದ್ರಜಾಲವಾಗಿಪ್ಪುವು.
ಇದು ಮನಸಿನ ವಿಕಾರವೆಂಬುದನೊಬ್ಬರು ತಿಳಿಯದೆ
ತಬ್ಬಿಬ್ಬುಗೊಳುತ್ತಿದಾರೆ ನೋಡ ತ್ರೆ ಜಗವೆಲ್ಲ.
ಮಂಜರ ದೃಷ್ಟಿಯಲ್ಲಿ ಚಂದ್ರಮನುದಯವಾಗಲು
ಇಂದ್ರಿಯ ಭೋಗಂಗಳ ಮಹೇಂದ್ರಜಾಲವೆಲ್ಲ
ಬೆಂದು ಹೋದವು ನೋಡ ಎನ್ನ ತಂದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./503
ಮಂಜರ ದೃಷ್ಟಿಯೊಳಗೆ ಚಂದ್ರಮನುದಯ ನೋಡಾ.
ಚಂದ್ರಮಂಡಲನೊಡೆದು ರವಿ ಮೂಡಲು
ಮಂಜರ ಸತ್ತಿತ್ತು; ದೃಷ್ಟಿ ನಷ್ಟವಾಯಿತ್ತು.
ಚಿಚ್ಚಂದ್ರ ಸೂರ್ಯರೊಂದಾಗಿ ಚಿದಾತ್ಮ ಲಿಂಗವಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./504
ಮಂಡೆ ಬೋಳಾಗಿ, ಮೈ ಬತ್ತಲೆಯಾಗಿಪ್ಪವರ ಕಂಡರೆ
ನಿರ್ವಾಣಿಗಳೆಂಬೆನೆ? ಎನ್ನೆನಯ್ಯ.
ಅಖಂಡಿತವಾಗಿ ಮನ ಬೋಳಾಗಿ ಭಾವ ಬತ್ತಲೆಯಾಗಿರಬಲ್ಲರೆ
ಅದು ನಿರ್ವಾಣವೆಂಬೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./505
ಮಡಕೆಯ ತುಂಬಿ ಪಾವಡೆಯ ಕಟ್ಟುವರಲ್ಲದೆ
ಸರ್ವಾಂಗವನು ಸದಾಚಾರವೆಂಬ ಪಾವಡದಲ್ಲಿ
ಕಟ್ಟುವರನಾರನೂ ಕಾಣೆನಯ್ಯ.
ಬಾಯ ತುಂಬಿ ಪಾವಡೆಯ ಬಿಗಿಬಿಗಿದು ಕಟ್ಟುವರಲ್ಲದೆ
ಮನದ ಬಾಯ ಅರುಹೆಂಬ ಪಾವಡೆಯಲ್ಲಿ
ಕಟ್ಟುವರನಾರನು ಕಾಣೆನಯ್ಯ.
ಮುಖ ತುಂಬಿ ಪಾವಡೆಯ ಕಟ್ಟುವರಲ್ಲದೆ
ಮೂಗು ಹೋದವರಂತೆ
ಭಾವ ತುಂಬಿ ನಿರ್ವಾಣವೆಂಬ ಪಾವಡೆಯ
ಕಟ್ಟುವರನಾರನೂ ಕಾಣೆನಯ್ಯ.
ಅಂಗ ಆಚಾರದಲ್ಲಿ ಸಾವಧಾನವಾಗದೆ,
ಮನ ಅರುಹಿನಲ್ಲಿ ಸಾವಧಾನವಾಗದೆ,
ಭಾವ ನಿರ್ವಾಣದಲ್ಲಿ ಸಾವಧಾನವಾಗದೆ,
ಬರಿದೆ ಶೀಲವಂತರು ಶೀಲವಂತರೆಂದರೇನಯ್ಯ.
ತನು ಮನ ಧನ ಅವಗುಣವೆಂಬ ಭವಿಯ ಕಳೆಯದೆ
ಹೊರಗೆ ವ್ರತಿಗಳೆಂದರೆ ಆರು ಮಚ್ಚುವರಯ್ಯ?
ಹುಚ್ಚರಿರಾ ಸುಮ್ಮನಿರಿ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು
ಇವರ ಮೆಚ್ಚನು ಕಾಣಿರೋ!/506
ಮಣ್ಣ ಮಚ್ಚಿ ಮನೆಯ ಮಚ್ಚಿದವಂಗೆ
ಗುರುವಿನ ಮಚ್ಚೆಲ್ಲಿಯದೋ?
ಹೆಣ್ಣ ನಚ್ಚಿ ಹೊನ್ನ ನಚ್ಚಿದವಂಗೆ
ಲಿಂಗದ ಮಚ್ಚೆಲ್ಲಿಯದೋ?
ಹೆಂಡತಿ ಮಕ್ಕಳು ಬಂಧುಗಳು ಹಿತರೆಂದು ಮಚ್ಚಿದವರಿಗೆ
ಜಂಗಮದ ಮಚ್ಚೆಲ್ಲಿಯದೋ?
ಗುರು ಲಿಂಗ ಜಂಗಮವ ನಂಬದವರಿಗೆ
ಮುಕ್ತಿಯೆಂಬುದು ಕನಸಿನಲ್ಲಿಯೂ ಇಲ್ಲವಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನಿಮ್ಮ ನಂಬದ ಪಾಪಿಗಳಿಗೆ./507
ಮಣ್ಣಿನಿಂದಾದ ಮಡಕೆ, ಚಿನ್ನದಿಂದಾದ ತೊಡಿಗೆ,
ಕಂಚಿನಿಂದಾದ ತಳಿಗೆ, ಬಟ್ಟಲು,
ಕಬ್ಬುನದಿಂದಾದ ಕೊಡಲಿ, ಕುಡನು
ಮೊದಲಾದವರ ಕಾರ್ಯ ಕಾರಣಕ್ಕೆ ಭಿನ್ನವುಂಟೆ? ಇಲ್ಲವೆಂಬಂತೆ.
ಮಹಾಲಿಂಗದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ
ಉದಯಿಸಿದ ಶರಣಂಗೆ
ಭಿನ್ನವೆಲ್ಲಿಯದೋ ಶರಣಂಗೂ ಲಿಂಗಕ್ಕೂ?.
ಅದ್ವೆ ತಾನಂದದಿಂದ ಸಂಪೂರ್ಣವನುಳ್ಳುದಲ್ಲದೆ
ಅಲ್ಲಿ ಮತ್ತೊಂದು ಸಂದೇಹವುಂಟೆ?.
ಅಲ್ಲಿ ಸಂಶಯವ ಕಲ್ಬಿಸುವ ಮಾಯಾಭ್ರಾಂತರ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./508
ಮತ್ರ್ಯಲೋಕದುದರದೊಳಗೆ ಮೃತ್ಯುದೇವತೆ
ಕತ್ತೆ ಕುದುರೆಯ ಹಡದು
ಪುತ್ರೋತ್ಸಾಹವ ಮಾಡುವದ ಕಂಡು
ಸತ್ಯಲೋಕದ ಸತಿಯರು ಬಂದು
`ಇದೆತ್ತಳುಚ್ಚಾಹ’ವೆಂದು ಬೆಸಗೊಳಲು
ಕತ್ತೆ ಕುದುರೆಗಳು ಸತ್ತು ಮೃತ್ಯುದೇವತೆಯೆತ್ತಹೋದಳೆಂದರಿಯೆ.
ಆ ಲೋಕವೆಲ್ಲವೂ ಮುಕ್ತಿಸಾಮ್ರಾಜ್ಯವಾದುದ ಕಂಡು
ಇದು ನಿತ್ಯ ನಿಜಲಿಂಗೈಕ್ಯವೆಂದರಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./509
ಮದಗಜದ ಹೃದಯದಲ್ಲಿ ಮರಿವಾಲಿಪ್ಪುದ ಕಂಡೆನಯ್ಯ.
ಹುಲ್ಲೆ ಅರಿಯದೆ ಹುಲಿಯ ಬಾಯ ತುತ್ತಾಯಿತ್ತಲ್ಲ.
ಬಲ್ಲವರ ಕಡೆಯಿಂದ ಭಾಸ್ಕರನುದಯಿಸಲು
ಹುಲಿಬಿಟ್ಟು ಹುಲ್ಲೆ ಮರಿವಾಲನುಂಡು ಮರಣನವಳಿಯಿತ್ತಲ್ಲಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./510
ಮನ ಘನವಸ್ತುವಾದ ಬಳಿಕ,
ಮನ ವಚನ ಕಾಯವೆಂಬ ತ್ರಿಕರಣ ಶುದ್ಧಾತ್ಮನೆಂಬೆ.
ನಿತ್ಯ ಮುಕ್ತನೆಂಬೆ. ನಿರಾಲಂಬಿಯೆಂಬೆ.
ಆತನ ತನು ಶುದ್ಧವಾಗಿ ತನುವೇ ಗುರು;
ಆತನ ಮನ ಶುದ್ಧವಾಗಿ ಮನವೇ ಲಿಂಗ.
ಆತನ ಭಾವ ಶುದ್ಧವಾಗಿ
ಭಾವವೇ ಮಹಾನುಭಾವ ಚರಲಿಂಗ ನೋಡಾ.
ಇಂತೀ ಜ್ಞಾನವೇ ಗುರು.
ಆರುಹೇ ಶಿವಲಿಂಗ,
ಮಹಾನುಭಾವವೇ ಜಂಗಮ.
ಇಂತೀ ತ್ರಿವಿಧವು, ತನ್ನ ತ್ರಿವಿಧಾತ್ಮ ನೋಡಾ.
ಜ್ಞಾನ ಗುರುವೆಂದರೆ ತನ್ನ ಜೀವಾತ್ಮ.
ಅರುಹೆಂಬ ಶಿವಲಿಂಗವೆಂದರೆ ತನ್ನ ಅಂತರಾತ್ಮ.
ಮಹಾನುಭಾವ ಜಂಗಮವೆಂದರೆ ತನ್ನ ಪರಮಾತ್ಮ.
ಇಂತ್ರೀ ತ್ರಯಾತ್ಮ ಏಕಾತ್ಮವಾದರೆ
ಸಚ್ಚಿದಾನಂದ ನಿರಂಜನ ಪರಾಪರವಸ್ತು ನೀನೇ.
ಅಲ್ಲಿ ನಾ ನೀನೆನಲಿಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./511
ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು.
ಬುದ್ಧಿಯಿದ್ದಲ್ಲಿಯೇ ನಿಮ್ಮ ವಿಚಾರಿಸಬೇಕಯ್ಯ.
ಚಿತ್ತವಿದ್ದಲ್ಲಿಯೇ ನಿಮ್ಮ ನಿಶ್ಚಯಿಸಬೇಕು.
ಅಹಂಕಾರವಿದ್ದಲ್ಲಿಯೇ ನಿಮ್ಮ ಮಮಕರಿಸಬೇಕಯ್ಯ.
ಕಾಯವಿದ್ದಲ್ಲಿಯೇ ಸಾಯದ ಸಂಚವನರಿದು ಎಚ್ಚತ್ತಿರಬೇಕಯ್ಯ.
ಜೀವಹಾರಿಯ ಕೆಡೆದು ಭೂಗತವಾಗಿ,
ವಾಯುಪ್ರಾಣಿಯಾಗಿ ಹೋಹಾಗ,
ಆಗ ಮುಕ್ತಿಯ ಬಯಸಿದರುಂಟೇ?
ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವಂಗಳ ಮೀರಿದ,
ನಿರ್ಭಾವ ಲಿಂಗೈಕ್ಯನಾದ ನಿರಾಶ್ರಯನಯ್ಯ ಮಾಹೇಶ್ವರನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./512
ಮನಸಿನ ಸಂಶಯ ಕನಸಿನ ಭೂತವಾಗಿ ಕಾಡುವುದು ನೋಡಾ.
ಮನಸಿನ ಸಂಶಯವನಳಿದರೆ ಕನಸಿನ ಕಾಟ
ಬಿಟ್ಟೋಡಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./513
ಮನೋಮಧ್ಯದಲ್ಲಿ ಒಂದು ಶಶಿ ಸಂಧಾನದ ಕಳೆ ಸಂಧಿಸಿ
ಅರುಣೋದಯವಾದಂತಿದೆ ಇದೇನಯ್ಯ?
ಅದು ಎನ್ನ ಭಾಗ್ಯದಿಂದ ಮತಿಪ್ರಕಾಶನವಾಯಿತ್ತಯ್ಯ.
ಆ ಪ್ರಸನ್ನ ಪ್ರಸಾದವನೊಳಕೊಂಡು, ಉತ್ತಮೋತ್ತಮವಾಗಿ
ನಿಮಗೆ ಸಲುವಳಿಯಾದುದನು ಆರು ಬಲ್ಲರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./514
ಮರಕ್ಕೂ ಕೊಂಬಿಗೂ ಭೇದವುಂಟೇ ಅಯ್ಯ?
ಅಂಗಕ್ಕೂ ಅವಯವಗಳಿಗೂ ಭೇದವುಂಟೇ ಅಯ್ಯ?
ಅಂಗದ ಮೇಲೆ ಲಿಂಗವನಿರಿಸಬಹುದು,
ಅವಯವಂಗಳ ಮೇಲೆ ಲಿಂಗನಿರಿಸಬಾರದೇಕೆಂಬಿರಯ್ಯ.
ಅಂಗವೇ ಶುದ್ಧ, ಅವಯವಂಗಳು ಅಶುದ್ಧವೇ ಮರುಳುಗಳಿರಾ?
ಮುಚ್ಚಿಕೊಂಡಿರಿ ಭೋ.
ಲಿಂಗ ಪ್ರಸಾದವ ಕೊಂಬ ಶರಣಂಗೆ
ಕೈ, ಬಾಯಿ, ಅವಯವಂಗಳೊಳಗೆಲ್ಲವು ಲಿಂಗವೇ
ತುಂಬಿಪ್ಪುದು ಕಾಣಿಭೋ.
ಈ ಶರಣ ಲಿಂಗದ ಸಮರಸವನಿವರೆತ್ತ ಬಲ್ಲರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./515
ಮರವೆಯ ತಮವ ಕಳೆಯಯ್ಯ.
ಅರುಹಿನ ಜ್ಯೋತಿಯ ಬೆಳಗಯ್ಯ.
ಅರುಹಿನ ಜ್ಯೋತಿಯ ಬೆಳಗಿ,
ನಿಮ್ಮ ಕುರುಹ ಕಂಡು ಕೂಡುವ
ತುರ್ಯಾವಸ್ಥೆಯ ಸುಖವನೆ ಕೊಡು ಕಂಡ ಮಹಾಲಿಂಗ ತಂದೆ.
ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./516
ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ ಕಂಡೆನಯ್ಯ.
ಆ ಮರ್ಕಟನ ಹಿಡಿದು
ಮಾಣಿಕವ ತಕ್ಕೊಳ್ಳಲಾರಳವಲ್ಲ ನೋಡಾ
ಆ ಮರ್ಕಟನ ಕೊಂದು ಮಾಣಿಕವ ತಕ್ಕೊಳ್ಳಬಲ್ಲಡೆ
ಮುಕ್ಕಣ್ಣ ಶಿವನೆಂದು ಬೇರುಂಟೆ ಹೇಳಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./517
ಮಲದ ಕುಳಿವೊಂದು ಮುಖ; ಜಲದ ಕುಳಿವೊಂದು ಮುಖ;
ರಕ್ತದ ಕುಳಿವೊಂದು ಮುಖ; ಕೀವಿನ ಕುಳಿವೊಂದು ಮುಖ;
ಕ್ರಿಮಿಕೀಟಜಂತುಗಳು ತುಂಬಿಪ್ಪ ಕುಳಿವೊಂದು ಮುಖ;
ವಾತ ಪಿತ್ಥ ಶ್ಲೇಷ್ಮ ಸರ್ವಾಂಗದಲ್ಲಿ ತುಂಬಿ
ಸರ್ವತೋಮುಖವಾಗಿಪ್ಪುದು ನೋಡ.
ಕಿವಿಯಲ್ಲಿ ಗುಗ್ಗೆ, ಕಣ್ಣಿನಲ್ಲಿ ಜಾರು,
ಮೂಗಿನಲ್ಲಿ ಸುರಿವ ಸಿಂಬಳು,
ಹಲ್ಲಿನಲ್ಲಿ ಕಿನಿಕೆ, ಉರದಲ್ಲಿ ಮಾಂಸದ ಗ್ರಂಥಿ,
ಒಳಗೆ ಕರುಳ ಜಾಳಿಗೆ, ಅಮೇದ್ಯದ ಹುತ್ತ,
ಹೊರಗೆ ಚರ್ಮದ ಹೊದಕೆ,
ಈ ಹೆಣ್ಣು ರೂಪಿನ ಬಣ್ಣದ ಕಾಯದ ಕಂಡು
ಕಣ್ಣುಗೆಟ್ಟು ಮನಮುಟ್ಟಿ ಮರುಳಾದಿರಲ್ಲ.
ಮುಕ್ಕಣ್ಣ, ನಿನ್ನನರಿಯದ ಬರಿಯ ಬಣ್ಣದ ಹಿರಿಯರು
ಭ್ರಮೆಗೊಂಬುದ ನೋಡಿ ನಾನು ಹೇಸಿ
ಕಡೆಗೆ ತೊಲಗಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./518
ಮಲದೊಡನೆ ಕೈದಂಡೆಯನಿಕ್ಕಿದಡೆ,
ಮಾನಸಿಕೆ ಕೆಡದೆ ಮಾಣ್ಬುದೆ?
ನಾಯ ಸರಸ ಸೀರೆಯ ಕೇಡು, ಮಾಯಾಸಂಗ ಹರಣದ ಕೇಡು.
ಎಲೆ ಮಹಾಮಹೇಶ್ವರ ಶಿವನೇ
ನಿನ್ನ ಸಂಗವಲ್ಲದೆ ಈ ದುಸ್ಸಂಗವೆಲ್ಲ
ದುರ್ಗತಿಗೆ ಬೀಜ ಕಂಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./519
ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ.
ಜಲವೊತ್ತಿದರೆ ಬಚ್ಚಲೊಳಗೆ ಬಿಡಬೇಕಯ್ಯ.
ಇಂದ್ರಿಯವೊತ್ತಿದರೆ ಯೋನಿಯೆಂಬ ಬಚ್ಚಲೊಳಗೆ
ಬಿಡಬೇಕಯ್ಯ.
ಸ್ವಾನನೊಂದು ಚರ್ಮವ ಕಚ್ಚಿ ತಂದು, ತಿಪ್ಪೆಯ ಕೆರದು ಹೂಳಿ,
ಮತ್ತೊಂದು ನಾಯಿ ಬಂದು ಕಚ್ಚೀತೆಂದು ಕಾಯ್ದುಕೊಂಡಿಪ್ಪಂತೆ
ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ
ಮನೆಯ ಮರೆಯಲ್ಲಿರಿಸಿಕೊಂಡು,
ಮತ್ತೊಂದು ಬಂದು ಕಚ್ಚೀತ್ತೆಂದು
ಕುಕ್ಕನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯಿನ್ನೆಲ್ಲಿಯದೋ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./520
ಮಸಿ ಕಪ್ಪಾಯಿತ್ತೆಂದು
ಹಾವುಮೆಕ್ಕೆಯ ಹಣ್ಣು ಕಹಿಯಾಯಿತ್ತೆಂದು
ತಿಪ್ಪೆಯ ಹಳ್ಳ ಕದಡಿತ್ತೆಂದು
ಹಂದಿ ಹುಡು ಹುಡುಗುಟ್ಟಿತ್ತೆಂದು
ನಾಯಿ ಬಗುಳಿತ್ತೆಂದು ಸಂದೇಹಿಸಿದವರುಂಟೆ?
ಇದು ಕಾರಣ,
ಅರಿಯದ ಅಜ್ಞಾನಿಗಳು ನುಡಿದರೆ
ಅರುಹಿಂಗೆ ಭ್ರಮೆಯುಂಟೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./521
ಮಹದಾಕಾಶ ಘಟ ಭೇದದಿಂದ
ಘಟಾಕಾಶ ಮಹದಾಕಾಶವಾಗಿ ತೋರಿದರೆ
ಆಕಾಶವೊಂದಲ್ಲದೆರಡುಂಟೇ ಮರುಳೆ?
ಪರಶಿವ ತಾನೆ ತನ್ನ ಶಕ್ತಿಭೇದದಿಂದ ಶರಣ ಲಿಂಗವೆಂದಡೆ
ಶರಣ ಲಿಂಗಕ್ಕೆ ಭಿನ್ನವೆಲ್ಲಿಯದೋ?
ಈ ಶರಣಮತವು ಪ್ರಕೃತಿಯಿಂದಾದ
ದೈ ್ವತಾದ್ವೆ ತ ಮತವಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./522
ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ,
ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರುಪ್ರಕಾರ.
ಸ್ವರಾಕ್ಷರವೆಲ್ಲ ನಾದಸಂಬಂಧ.
ವಿಕಲಾಕ್ಷರವೆಲ್ಲ ಬಿಂದುಸಂಬಂಧ.
ವ್ಯಾಪಕಾಕ್ಷರವೆಲ್ಲ ಕಳಾಸಂಬಂಧ.
ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ.
ಈ ನಾದ ಬಿಂದು ಕಳೆಗಳ ಗಭರ್ೀಕರಿಸಿಕೊಂಡಿಪರ್ುದು ಚಿತ್ತು.
ಆ ಚಿತ್ ಪ್ರಣಮಸ್ವರೂಪವೆ, ಅದ್ವೆ ತಾನಂದದಿಂದ
ಸಂಪೂರ್ಣವನುಳ್ಳ
ಆದಿಮಹಾಲಿಂಗವು, ಅನುಪಮಲಿಂಗವು, ಅನಾಮಯಲಿಂಗವು,
ಅದ್ವಯಲಿಂಗವು, ಪರಮಲಿಂಗವು, ಪರಾಪರಲಿಂಗವು,
ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./523
ಮಳೆಹುಯ್ದರಾಕಾಶ ನೆನೆವುದೇ?.
ಬಿರುಗಾಳಿ ಬೀಸಿದರಾಕಾಶ ನೋವುದೇ?.
ಕಿತ್ತಲಗಿನಿಂದಿರದರೆ ಆಕಾಶ ಹರಿವುದೇ?.
ಬಚ್ಚಬರಿಯ ಬಯಲು ಕಟ್ಟು ಕುಟ್ಟಿಗೊಳಗಾಗಬಲ್ಲುದೇ?.
ನಿಶ್ಚಿಂತ ನಿರಾಳನಾದ ನಿಜೈಕ್ಯನ,
ತಥ್ಯಮಿಥ್ಯದಿಂದ ನುಡಿವ ತುಶ್ಚರ ನುಡಿ ತಟ್ಟಬಲ್ಲುದೇ
ವಸ್ತುವ ವಾಕುಶಾಸ್ತ್ರ ಖಂಡಿಸಬಲ್ಲುದೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./524
ಮಾಡಿದ ಮಾಟವನರಿಯದ ಭಕ್ತ.
ಕೂಡಿದ ಕೂಟವನರಿಯದ ಭಕ್ತ.
ಮಾಟ ಕೂಟವೆಂಬ ಕೋಟಲೆಯನುಳಿದ
ನಿಸ್ಸಂಗತ್ವ ನಿರಾಭಾರಿ ನಿಸ್ಸೀಮ ನಿರ್ದೆಹಿ
ನಿಜದಲ್ಲಿ ಅಡಗಿದ ನಿತ್ಯ ಮುಕ್ತನಯ್ಯಾ ಭಕ್ತನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./525
ಮಾತಿನಲ್ಲಿ ಭವಿಯ ಬಿಟ್ಟರೇನೋ?
ಕನಸಿನಲ್ಲಿ ಮನಸಿನಲ್ಲಿ ಆವರಿಸಿಪ್ಪ
ಭವಿ ಭವಿಯೆಂಬ ಸಂದೇಹದ ಕೀಲಕಳೆದು
ನಿಸ್ಸಂದೇಹ ನಿರ್ಲೆಪನಾಗಿರಬಲ್ಲರೆ
ಶೀಲಸಂಪನ್ನರೆಂಬೆ.
ಉಳಿದುದೆಲ್ಲ ಸೂತಕದ ಪಾತಕ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./526
ಮಾತಿನಲ್ಲಿ ಮಹತ್ವವ ನುಡಿದು
ನೀತಿಯಲ್ಲಿ ಅಧಮರಾದ ಮಾನವರು
ಈಶ್ವರೋವಾಚವ ನುಡಿದುಕೊಂಡು ನಡೆದರೆ
ಬೆಟ್ಟಕ್ಕ ನಾಯಿ ಬಗುಳಿದಂತೆ.
ಕಷ್ಟರ ನುಡಿ ಕಾಮಾರಿಯ ಮುಟ್ಟದು ಕಾಣಾ.
ನಿಮ್ಮ ಮುಟ್ಟದ ಮನಕ್ಕೆ ಬಂದಂತೆ ನಡೆವವರ,
ಮನಕ್ಕೆ ಬಂದಂತೆ ನುಡಿವವರ ಮಚ್ಚೆನು ಕಾಣಾ.
ಅಲ್ಲಿ ನೀವಿಲ್ಲದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./527
ಮಾತೆಯಿಲ್ಲದ ಅಜಾತನು, ತಂದೆಯಿಲ್ಲದ ಇಂದುಧರನು,
ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು.
ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು.
ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ
ಮಹಾಮಹಿಮನು ನೋಡಾ, ಭಕ್ತನು.
ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ
ಜಗಭರಿತನು, ಅದ್ವಯನು ನೋಡಾ ಭಕ್ತನು.
ಇಂತಪ್ಪ ನಿರುಪಾಧಿಕ ಭಕ್ತನ,
ನಿರ್ಗುಣ ಚರಿತ್ರವನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./528
ಮಾನಸ ವಾಚಕ ಉಪಾಂಶಿಕವೆಂದು
ಪ್ರಣವ ಪಂಚಾಕ್ಷರಿಯ ಜಪ ಮೂರು ತೆರನಾಗಿಪ್ಪುದು.
ಮನಸಿನಲ್ಲಿಯೆ ಪ್ರಣವಮಂತ್ರವ ಸ್ಮರಿಸುವುದು ಮಾನಸ.
ವಾಕ್ಯದಿಂದ `ಶಿವಾಯ ಹರಾಯ ಭವಾಯ
ಮೃಡಾಯ ಮೃತ್ಯುಂಜಯಾಯ
ಸೋಮಶೇಖರ ಪ್ರಭವೇ ವಿಭವೇ
ಶಿವಶಿವಾ ಶರಣು ಶರಣೆ’ಂಬುದೇ ವಾಚಕ.
ಕ್ರಿಯಾಕಾಲದಲ್ಲಿ ಇತರವಾಗಿ ಒಬ್ಬರು ಕೇಳದ ಹಾಗೆ
ತನ್ನ ಕಿವಿ ಕೇಳುವ ಹಾಗೆ
ಶಿವ ಮಂತ್ರದಲ್ಲಿ ಸುಯಿಧಾನಿಯಾಗಿ ಪುನಃಶ್ಚರಣೆಯಾಗಿ
ತ್ರಿಸಂಧ್ಯಾಕಾಲದಲ್ಲಿ ಬಿಡದೆ ಉಚ್ಚರಿಸುವುದೀಗ ಉಪಾಂಶಿಕ.
ಈ ಮೂರು ಪ್ರಕಾರದಲ್ಲಿ ಶಿವಮಂತ್ರವ ಜಪಿಸಬೇಕು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./529
ಮಾರುತನ ಮುಖದ ಮಾನಿನಿ
ಆರುಮಂದಿಯ ಹಡೆದಳು ನೋಡಾ.
ಅವರು ಮೂರುಲೋಕವ ಕೊಲುವ ವೈರಿಗಳು.
ಅವರ ಜಯಿಸುವವರಾರನೂ ಕಾಣೆ!
ಅರಿಗಳಾರನು ಕೊಂದಾತ ತ್ರಿಜದೊಡೆಯನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./530
ಮಾಳಿಗೆಯ ಮನೆಯ ಕಾಳಿಕೆಯೊಳಗೆ
ಹೂಳಿದ್ದ ವಸ್ತು ಇದೇನಯ್ಯಾ?.
ಮಾಳಿಗೆ ಬಯಲಾಗಿ ಕಾಳಿಕೆ ಅಳಿದಲ್ಲದೆ;
ಹೂಳಿದ್ದ ವಸ್ತುವ ಕಾಣಲಾರಳವಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./531
ಮಿಂಚಿನ ಪ್ರಭೆಯಲ್ಲಿ ಪಂಚವದನನ ಕಂಡೆನಯ್ಯ.
ಸಂಚವಿಲ್ಲದೆ ನಿರೀಕ್ಷಿಸಲು ಪಂಚಪಂಚೀಕೃತಿಯ
ಪ್ರಪಂಚು ಪರಿಹಾರವಾಗಿ,
ನಿಃಪ್ರಪಂಚ ನಿರ್ಲೆಪಕನಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./532
ಮುಂಡದಲ್ಲಿ ಹುಟ್ಟಿದ ತಲೆ
ಕೆಂಡವ ಕಚ್ಚಿ ಕುಣಿದಾಡುವುದ ಕಂಡೆನಯ್ಯ.
ಮುಂಡ ಬೆಂದು ತಲೆವುಳಿದು ಕೆಂಡ ಕೆದರಲಾಗಿ
ಅಖಂಡ ಪರಿಪೂರ್ಣ ಪರಕ್ಕೆ ಪರನಾದ ಲಿಂಗೈಕ್ಯನನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./533
ಮುಂದಳ ಮನೆಯಲ್ಲಿ ಚಂದ್ರಶೇಖರನಿದಾನೆ ನೋಡಾ ಅಯ್ಯ.
ಚಂದ್ರಶೇಖರನ ಸ್ನೇಹವ ಮಾಡಲು ಬಂಧನ ಹಿಂಗಿತ್ತಯ್ಯ.
ಜಗ ವಂದನೆಗೆಯ್ಯಲಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./534
ಮುಂದಳ ಮುಖಸಾಲೆಯೊಳಗೆ
ಉದ್ದಂಡಮೂರ್ತಿಯ ಕಂಡೆನಯ್ಯ.
ಲಂಡರ ಪುಂಡರ ಭಂಡರ ದಂಡಿಸುತ್ತಿದಾನೆ ನೋಡಾ,
ಮುಂದಣ ಮುಖಸಾಲೆಯ ಮುರಿದು
ಉದ್ದಂಡಮೂರ್ತಿ ಉಳಿದ ಪ್ರಚಂಡತೆಯನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./535
ಮುಖದಲ್ಲಿ ಮಂತ್ರ ಹೃದಯದಲ್ಲಿ ಧ್ಯಾನ,
ಪ್ರಾಣದಲ್ಲಿ ಲಿಂಗ ನೆನಹು ಕರಿಗೊಂಡ
ಶಿವಾತ್ಮಶರಣನ ಹೃದಯವೇ
ಪರಮೇಶ್ವರರಿಗೆ ನಿವಾಸಸ್ಥಾನ, ನೆರೆಮನೆಯಾಗಿಪ್ಪುದಯ್ಯ.
ಆ ಪರಮೇಶ್ವರನೊಳಗಣ ಸಮರಸ ಭಾವವೆ
ಆ ಶರಣಂಗೆ ನಿತ್ಯ ನೇಮ ಪೂಜೆಯಾಗಿಪ್ಪುದಯ್ಯ.
ಇದೇ ಪೂರ್ಣ ಶರಣಭಾವ.
ಅಲ್ಲಿಯ ಲಿಂಗಸಿದ್ಧಿ, ಘನಲಿಂಗ ಪದಸ್ಥಿತಿ. ಲಿಂಗಪೂಜೆ.
ಮತ್ತಲ್ಲಿಯೆ ನಿಶ್ಚಯವದೇ ಪರಮಾರ್ಥ.
ಇದಲ್ಲದೆ ಅನ್ಯವಪ್ಪೆಲ್ಲವು ಆತ್ಮ ದುಃಖ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./536
ಮುಗಿಲ ಮರೆಯ ಸೂರ್ಯನಂತೆ,
ನೆಲದ ಮರೆಯ ನಿಧಾನದಂತೆ,
ಒರೆಯ ಮರೆಯ ಅಲಗಿನಂತೆ,
ಹಣ್ಣಿನೊಳಗಣ ರಸದಂತೆ,
ಶರಣನ ಶರೀರವ ಮರೆಗೊಂಡು,
ಪರಮಪಾವನಮೂರ್ತಿ, ಪರಾಪರ,
ತಾನು ತಾನಾಗಿರ್ದದನೇನೆಂಬೆನಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./537
ಮುಚ್ಚಿದ ಕಣ್ಣು ತೆರದುದ ಕಂಡೆ;
ಕಿಚ್ಚಿನ ಜ್ವಾಲೆ ಕರವುದ ಕಂಡೆ;
ಮೃತ್ಯುಗಳ ಮೊತ್ತ ಕಿತ್ತೋಡುವುದ ಕಂಡೆ;
ಕತ್ತಲೆ ಬೆಳಗಾದುದ ಕಂಡೆ;
ಬಿಚ್ಚಿ ಬೇರಿಲ್ಲದ ಬೆಳಗೆನ್ನನೊಳಕೊಂಡು
ನಿತ್ಯ ಪ್ರಸನ್ನನಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./538
ಮುತ್ತಿನ ದಿವಾಣದೊಳಗೆ ತತ್ವವೆಣ್ಣುಗಳೆಂಬ ಮುತ್ತೈದೆಯರು
ಮುತ್ತು ಮಾಣಿಕ ನವರತ್ನದ ತೊಡಿಗೆಯ ತೊಟ್ಟು
ಉತ್ತುಂಗರಾಶಿಯೆಂಬ ಅಮೃತಕಿರಣವ
ಪ್ರಜ್ವಲಿಸುತಿದಾರೆ ನೋಡಾ.
ಆ ಕಿರಣಂಗಳ ಸೋಂಕಿದವರೆಲ್ಲ ಅಮರಗಣಂಗಳಾದುದ ಕಂಡು
ನಾನು ಶರಣನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./539
ಮುಪ್ಪುರದರಸಿಂಗೆ ಮುಖವೈದು,
ಬಾಯಿ ಹದಿನಾರು, ಹಲ್ಲು ಇನ್ನೂರ ಹದಿನಾರು ನೋಡಾ.
ಆರೂಢನಂಗದಲ್ಲಿ ಅಭರ್ುತದ ಕಿಚ್ಚು ಹುಟ್ಟಲು
ಮೂರೂರು ಬೆಂದು, ಮುಖವೈದು ಕೆಟ್ಟು,
ಬಾಯಿ ಹದಿನಾರು ಮುಚ್ಚಿ,
ಇನ್ನೂರಹದಿನಾರು ಹಲ್ಲು ಮುರಿದವು ನೋಡಾ.
ಮುಪ್ಪರದರಸ ನುಂಗಿದ್ದ ಕಿಚ್ಚು ನಿಷ್ಪತ್ತಿಯಾಗಲು
ಲಿಂಗಾಂಗ ಸಂಯೋಗವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./540
ಮೂಡಣಗಿರಿಯಲ್ಲಿ ಸೂರ್ಯನುದಯವಾಗಲು
ಮುಂದಣ ಕೇರಿಯ ಕೋಳಿ ಕೂಗುತ್ತದೆ ನೋಡಾ.
ಕೋಳಿಯ ದನಿಗೇಳುತ್ತ ಆ ಲೋಕದ ಪ್ರಾಣಿಗಳು
ಪ್ರಣಮನಂಗೈಯ್ವುತ್ತಿಪ್ಪರು.
ಕೋಳಿ ಸತ್ತಿತ್ತು, ಕೂಗು ಅಡಗಿತ್ತು.
ಪ್ರಣಮನಂಗೆಯ್ವುತ್ತಿಪ್ಪ ಪ್ರಾಣಿಗಳೆಲ್ಲರು ಪ್ರಳಯವಾದುದ ಕಂಡು
ಲೋಕಾಲೋಕದ ತೋರಿಕೆ ಏಕಾಕಾರವಾಯಿತ್ತು.
ಅನುಪಮ ಲಿಂಗೈಕ್ಯಂಗೆ ಲೋಕ ಭ್ರಮೆಯುಂಟೆ?
ನಿಭ್ರಾಂತನಾದ ನಿತ್ಯನಿರಂಜನನಿಗಿನ್ನೆತ್ತಳ ರಂಜನೆ ಹೇಳಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./541
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲು
ಆರೂರೊಳಗಾಡುವ ಪಕ್ಷಿ
ಐವತ್ತೆರಡು ವೃಕ್ಷಂಗಳ ಹತ್ತುತ್ತ ಇಳಿಯುತ್ತ ಇರಲಾಗಿ
ಉಲುಹು ಘನವಾಯಿತ್ತು ನೋಡಾ.
ಒಂಬತ್ತು ಬಾಗಿಲೊಳಗೆ ಹೋಗುತ್ತ ಬರುತ್ತಿಪ್ಪುದಯ್ಯ.
ಇದುಕಾರಣ,
ಒಂಬತ್ತು ಬಾಗಿಲ ಮುಚ್ಚಿ
ಐವತ್ತೆರಡು ವೃಕ್ಷಂಗಳ ಉಲುಹನಡಗಿಸಿ
ಏಕವೃಕ್ಷದಲ್ಲಿ ಸ್ವಸ್ಥಿರವಾಗಿ ನಿಲಿಸಿ
ಆರೂರಲಾಡುವ ಪಕ್ಷಿಯ ಪ್ರಳಯವ ತಪ್ಪಿಸಬಲ್ಲರೆ
ಪ್ರಾಣಲಿಂಗಿಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./542
ಮೂರುಮಂಡಲ ತಿರುಗುವಲ್ಲಿ
ಆರೂರವರು ಅಳುತ್ತಿರ್ಪರು ನೋಡಾ.
ಬೇರೊಂದೂರವರು ಬಂದು,
ಮೂರುಮಂಡಲವನೊಂದುಮಾಡಿ
ಆರೂರವರ ಆಳುವ ಮಾಣಿಸಿ
ಬೇರೊಂದೂರ ಹೊಕ್ಕು ನೋಡಲು
ಈ ಊರೊಳಗೆ ಸತ್ತವನಿವನಾರೋಯೆಂದು
ನೋಡಿಯೆತ್ತಹೋಗಲು
ಎಲ್ಲರೂ ಸತ್ತುದ ಕಂಡು ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./543
ಮೂರುಲೋಕದ ಮೋಹಿನಿ
ಆರುಲೋಕದ ಅಂಗನೆಯರ ಸಂಗವ ಮಾಡಿ,
ಮೂರುಲೋಕದ ಮೋಹವ ಮರೆದು
ತಾ ಸತ್ತಳು ನೋಡಾ.
ಮೂರುಲೋಕದ ಮೋಹಿನಿ ಸತ್ತುದ ಕಂಡು,
ಆರುಲೋಕದ ಅಂಗನೆಯರು,
ನಾವೀ ಲೋಕದಲ್ಲಿರಲಾಗದೆಂದು ಮೀರಿದ ಲೋಕಕ್ಕೆ ಹೋಗಿ,
ಆರೂಢನ ನೋಡುತ್ತ ನೋಡುತ್ತ ಆರೂರವರೂ ಸತ್ತರು.
ಇದು ಮೀರಿದ ಲಿಂಗೈಕ್ಯ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./544
ಮೂರೊಂದಾದ ಕಿಚ್ಚು ಧಾರಿಣಿಯೆಲ್ಲವ ಸುಡುವುದ ಕಂಡೆ.
ಧರೆಯ ಮೇಲಣ ಮನುಜರು
ಉರಿಯ ಬೀಜವ ಪವಣಿಗೆಯ ಮಾಡಿ
ಶರೀರವನಳಿದು ಸದಾಶಿವ ಸದಾಶಿವಯೆನುತ್ತ
ಮನುಜತ್ವವಳಿದು ದೇವನಾದುದ ಕಂಡು
ಇದ ಶಿವಜೀವೈಕ್ಯವೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./545
ಮೂರೊಂದುಗೂಡಿದ ಬಟ್ಟೆಯಲ್ಲಿ
ಮಾರಿ ಮನೆಯ ಮಾಡಿಕೊಂಡಿಪ್ಪುದ ಕಂಡೆನಯ್ಯ.
ಮಾರಿಯ ಮುಖದಲ್ಲಿ ಮರ್ಕಟ ಹುಟ್ಟಿ ಮಾರುತನ ಬೆರಸಿ
ಈರೇಳು ಲೋಕವ ನುಂಗಿತ್ತು ನೋಡಾ.
ಈರೇಳು ಲೋಕವ ನುಂಗಿದ ಕಪಿ ಮೇಲುಗಿರಿಯನೇರಿ
ದಾರಿಗೊಂಡು ಬರುವರ ಏಡಿಸಿ ಕಾಡುತ್ತಿರ್ದುದು ನೋಡಾ.
ಕೋಡಗನ ಮುಖವ ನೋಡಿಹೆನೆಂದು ಹೋದರೆ
ಅದು ಕಾಲಸರ್ಪನಾಗಿ ನುಂಗಿ
ಹೇಳಿಗೆಯೊಂದರೊಳಗಡಗಿತ್ತು ನೋಡಾ.
ಹೇಳಿಗೆ ಮುರಿಯಿತ್ತು; ಕಾಲಸರ್ಪ ಸತ್ತಿತ್ತು.
ಮೇಲುಗಿರಿಯೆನೇರಿದ ಮರ್ಕಟ
ನಾರಿಯ ಶಿರವ ಮೆಟ್ಟಿ
ಮಾರಾರಿಯ ಬೆರಸಿದ್ದ ಕಂಡು ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./546
ಮೃತಜೀವಿಯೆಂಬ ಹೆಂಗೂಸಿನ ಶಿರದಲ್ಲಿ
ಅಮೃತದ ಸೋನೆ ಸುರಿವುತ್ತಿದೆ ನೋಡ.
ಹಾಲುಮಳೆ ಕರೆದು ಆಕೆಯ ಮೇಲೆ ಮೇರೆದಪ್ಪಿ ಹರಿಯಲು
ಆ ಬಾಲೆ ಅಳಿದು ಆ ಲೋಕದ ಪ್ರಾಣಿಗಳು ಸತ್ತು
ಸಚರಾಚರಂಗಳ ಮೀರಿ
ಸಚ್ಚಿದಾನಂದ ಶಿವೈಕ್ಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./547
ಮೆಟ್ಟಿಲಿಲ್ಲದ ಭೂಮಿಯಲ್ಲಿ
ಹುಟ್ಟಿಲಿಲ್ಲದ ಹೆಮ್ಮರ ಹುಟ್ಟಿತ್ತು ನೋಡಾ.
ಮೆಟ್ಟಿ ಹತ್ತೆಹೆನೆಂದರೆ ಕೊಂಬಿಲ್ಲ;
ಮುಟ್ಟಿ ಹಿಡಿದಿಹೆನೆಂದರೆ ಮೂರ್ತಿಯಲ್ಲ.
ಅದರಲ್ಲಿ ಕಟ್ಟಣೆಗೆಯ್ದದ ಹಣ್ಣು
ರಸತುಂಬಿ, ತೊಟ್ಟು ಬಿಡದು ನೋಡಾ.
ತೊಟ್ಟ ಮುಟ್ಟದೆ ಕಟ್ಟಣೆಗೆಯ್ದದ ಹಣ್ಣು ಮುಟ್ಟಿ ಸವಿಯಬಲ್ಲಾತನ
ಹುಟ್ಟರತಾತನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./548
ಮೆತ್ತಾನ ಅಶನವನುಂಡು, ಕೆಚ್ಚಾನ ಚರ್ಮವ ಕಚ್ಚಿಕೊಂಡು
ಬೆಚ್ಚಾನ ಮನೆಯಲ್ಲಿ ಬಿದ್ದಿಪ್ಪವರಿಗೆ,
ಅಚ್ಚುಗವೆ ಅನಂತ ಬಹುದುಃಖ?
ಮೃತ್ಯುಂಜಯನನರಿಯದೆ
ಸಂಸಾರವೆಂಬ ಮೃತ್ಯುವಿನ ಬಾಯತುತ್ತಾಗಿ
ಉತ್ಪತ್ತಿ ಸ್ಥಿತಿ ಪ್ರಳಯಕೊಳಗಾದಿರಿಯಲ್ಲ?
ನಿತ್ಯ ನಿರಂಜನ ಪರವಸ್ತುವ ಮಚ್ಚಲರಿಯದೆ,
ವೃಥಾ ಕೆಟ್ಟಿತ್ತು ನೋಡಾ ತ್ರೆ ಜಗ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./549
ಮೊಲನ ಕಂಡ ನಾಯಂತೆ
ಇಂದ್ರಿಯವಿಷಯಕ್ಕೆ ಮುಂದುವರಿಯದಿರಾ.
ಅಂಗನೆಯರ ಸಮ್ಮೇಳದಿಂ ಭಂಗಿತನಾಗದಿರಾ.
ಲಿಂಗವನಪ್ಪಿ ಸುಖಿಯಾಗಿ ಎಲೆ ಮನವೇ.
ಅಂಗದಿಚ್ಛೆಗೆ ಆಯಸಂಬಡದಿರಾ.
ಲಿಂಗ ಸಂಗಿಗಳು ನೋಡಿ ನಗುವರೆಲೆ[ಲೆಲೆ] ಮನವೇ.
ಇಂದ್ರಿಯಭೋಗಂಗಳೆಂಬವು
ಕನಸಿನ ಸಿರಿಯಂತೆ ತೋರಿ ಅಡಗುವವೋ.
ಇವನೇಕೆ ನಚ್ಚುವೆ ಮಚ್ಚುವೆ ಹುಚ್ಚು ಮನವೇ?
ಹರಹರಾ ಶಿವ ಶಿವಾ ಎನ್ನೆಯೋ ಎಲೆಲೆ ಮನವೇ.
ನಿನ್ನ ನಾ ಬೇಡಕೊಂಬೆನಯ್ಯೋ ಎಲೆಲೆ ಮನವೇ.
ಸಿಂಹನ ಕಂಡ ಕರಿಯಂತೆ
ಕೆಡೆಬಡೆದೋಡದರಿಯ್ಯೋ ಪಾಪಿ ಮನವೇ.
ಲಿಂಗ ಪಾದವ ಸಾರಿ, ಶಿವಭಕ್ತನಾಗಿ
ಮುಕ್ತಿಸಮ್ಮೇಳನಾಗಯ್ಯ.
ಕರ್ತೃ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಡಗೂಡಿ,
ನಿತ್ಯನಾಗಬಲ್ಲರೆಲೆಲೆ ಮನವೇ./550
ಮೊಸಳೆಯ ಹಿಡಿದ ಮೊಣ್ಣ ಮಂಡಲದ ವಿಷಹತ್ತಿ
ಜಗವೆಲ್ಲ ಮಸುಳಿಸಿ ಮರೆದೊರಗಿದುದ ಕಂಡೆನಯ್ಯ.
ವಿಷದ ಹೊಗೆಯನು ಕೆಡಿಸಿ ಮೊಸಳೆಯ ಬಿಡಿಸಿಕೊಂಬ
ಅಸಮಾನರನಾರನು ಕಾಣೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./551
ಮೋಹನ ಮೊಲೆಯ ಮುದ್ದುಮೊಗದ ಭಾವಕಿಯರ,
ಲಲ್ಲೆನುಡಿಯೆಂಬ ನಯಗತ್ತಿ
ಎಲ್ಲರ ಹೃದಯವ ಕೊರವುತ್ತಿದೆ ನೋಡಾ.
ಇನ್ನೆಲ್ಲಿಯ ಅರುಹೋ ಶಿವ ಶಿವಾ,
ಬಲ್ಲತನ ಬರುದೊರೆ ಹೋಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./552
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧ್ಯಾನ, ಧಾರಣ, ಸಮಾಧಿ ಎಂದು
ಈಯೆಂಟು ಅಷ್ಟಾಂಗಯೋಗಂಗಳು.
ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು
ಎರಡು ಪ್ರಕಾರವಾಗಿಹವು.
ಯಮಾದಿ ಪಂಚಕವೈದು ಪೂರ್ವಯೋಗ;
ಧ್ಯಾನ, ಧಾರಣ, ಸಮಾಧಿಯೆಂದು ಮೂರು ಉತ್ತರಯೋಗ.
ಇವಕ್ಕೆ ವಿವರ:
ಇನ್ನು ಯಮಯೋಗ ಅದಕ್ಕೆ ವಿವರ:
ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ
ಇಂತಿವೈದನು ಬಿಟ್ಟು
ಲಿಂಗಪೂಜೆಯ ಮಾಡುವುದೀಗ ಯಮಯೋಗ.
ಇನ್ನು ನಿಯಮಯೋಗ- ಅದಕ್ಕೆ ವಿವರ:
ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ
ಆಗಮಧರ್ಮಂಗಳಲ್ಲಿ ನಡೆವವನು.
ಶಿವನಿಂದೆಯ ಕೇಳದಿಹನು.
ಇಂದ್ರಿಯಂಗಳ ನಿಗ್ರಹವ ಮಾಡುವವನು.
ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ
ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು.
ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ
ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಭೀತನಾಗಿಹನು.
ಇದು ನಿಯಮಯೋಗ.
ಇನ್ನು ಆಸನಯೋಗ- ಅದಕ್ಕೆ ವಿವರ:
ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ,
ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ
ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು
ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ.
ಇನ್ನು ಪ್ರಾಣಾಯಾಮ- ಅದಕ್ಕೆ ವಿವರ:
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು.
ಇವಕ್ಕೆ ವಿವರ:
ಪ್ರಾಣವಾಯು ಇಂದ್ರ ನೀಲವರ್ಣ.
ಹೃದಯಸ್ಥಾನದಲ್ಲಿರ್ದ
ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ
ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು
ಅನ್ನ ಜೀರ್ಣಿಕರಣವಂ ಮಾಡಿಸುತ್ತಿಹುದು.
ಅಪಾನವಾಯು ಹರಿತವರ್ಣ.
ಗುಧಸ್ಥಾನದಲ್ಲಿರ್ದು
ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ
ಆಧೋದ್ವಾರಮಂ ಬಲಿದು
ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು.
ವ್ಯಾನವಾಯು ಗೋಕ್ಷಿರವರ್ಣ.
ಸರ್ವಸಂದಿಗಳಲ್ಲಿರ್ದು
ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ
ಅನ್ನಪಾನವ ತುಂಬಿಸುತ್ತಿಹುದು.
ಉದಾನವಾಯ ಎಳೆಮಿಂಚಿನವರ್ಣ.
ಕಂಠಸ್ಥಾನದಲ್ಲಿರ್ದು
ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ
ಛದರ್ಿ ನಿರೋಧನಂಗಳಂ ಮಾಡಿ
ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು.
ಸಮಾನವಾಯು ನೀಲವರ್ಣ.
ನಾಭಿಸ್ಥಾನದಲ್ಲಿರ್ದು
ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ
ಅನ್ನರಸವನು
ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು.
ಈ ಐದು ಪ್ರಾಣಪಂಚಕ.
ಇನ್ನು ನಾಗವಾಯು ಪೀತವರ್ಣ.
[ಲೋ] ಮನಾಳಂಗಳಲ್ಲಿರ್ದು
ಚಲನೆಯಿಲ್ಲದೆ ಹಾಡಿಸುತ್ತಿಹುದು.
ಕೂಮವಾಯುವ ಶ್ವೇತವರ್ಣ.
ಉದರ ಲಲಾಟದಲ್ಲಿರ್ದು
ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು
ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ
ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು.
ಕೃಕರವಾಯು ಅಂಜನವರ್ಣ.
ನಾಸಿಕಾಗ್ರದಲ್ಲಿರ್ದು
ಕ್ಷುಧಾದಿ ಧರ್ಮಂಗಳಂ ನೆಗಳೆ
ಗಮನಾಗಮನಂಗಳಂ ಮಾಡಿಸುತ್ತಿಹುದು.
ದೇವದತ್ತವಾಯು ಸ್ಫಟಿಕವರ್ಣ.
ಗುಹ್ಯ[ಕಟಿ] ಸ್ಥಾನದಲ್ಲಿರ್ದು
ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ
ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು.
ಧನಂಜಯವಾಯು ನೀಲವರ್ಣ.
ಬ್ರಹ್ಮರಂಧ್ರದಲ್ಲಿರ್ದು
ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ
ಮರಣಗಾಲಕ್ಕೆ ನಿಘರ್ೊಷಮಪ್ಪುದು.
ಈ ಪ್ರಕಾರದಲ್ಲಿ ಮೂಲವಾಯುವೊಂದೇ
ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು.
ಆ ಪವನದೊಡನೆ ಪ್ರಾಣ ಕೂಡಿ
ಪ್ರಾಣದೊಡನೆ ಪವನ ಕೂಡಿ
ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ,
ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು
ನವನಾಳಂಗಳೊಳಗೆ ಚರಿಸುತ್ತಿಹುದು.
ಅಷ್ಟದಳಂಗಳೇ ಆಶ್ರಯವಾಗಿ
ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು
ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ
ಅಲ್ಲಿಂದ ನಾಸಿಕಾಗ್ರದಲ್ಲಿ
ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು;
ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು.
ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು
ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು.
ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ
ರೇಚಕ ಪೂರಕಂಗಳ ಭೇದವನರಿದು
ಮನ ಪವನಂಗಳ ಮೇಲೆ ಲಿಂಗವ ಸಂಬಂಧಿಸಿ
ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ
ಲಿಂಗ ಸ್ವರೂಪವ ಮಾಡಿ
ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ
ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ.
ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ:
ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು,
ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ.
ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ
ಜೀವಂಗೆ ಭವ ಭವದ ಬಂಧನವನೊಡಗೂಡಿ
ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು;
ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು.
ಅದರಿಂದಲಾಹಾರಮಂ ಕ್ರಮ ಕ್ರಮದಿಂದ
ಉದರಕ್ಕೆ ಹವಣಿಸುತ್ತ ಬಹುದು.
ಗುರು ಕೃಪೆಯಿಂದ ಈ ಪ್ರಕಾರದಲ್ಲಿ
ಸರ್ವೆಂದ್ರಿಯಂಗಳನು ಲಿಂಗಮುಖದಿಂದ
ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ.
ಈ ಐದು ಪೂರ್ವಯೋಗಂಗಳು.
ಇನ್ನು ಧ್ಯಾನ, ಧಾರಣ, ಸಮಾಧಿಯೆಂದು ಮೂರು
ಉತ್ತರಯೋಗಂಗಳು.
ಇನ್ನು ಧ್ಯಾನಯೋಗ- ಅದಕ್ಕೆ ವಿವರ:
ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ
ಶಿವಲಿಂಗ ಸ್ವರೂಪವ ಮಾಡಿ
ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ
ಆ ಕರಸ್ಥಲದಲ್ಲಿದ್ದ ಶಿವಲಿಂಗವೇ
ಪರಮಾರ್ಥಚಿಹ್ನವೆಂದರಿದು
ಆ ಲಿಂಗವನೇ
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ,
ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ
ಆ ಶಿವಲಿಂಗಮೂರ್ತಿಯನೆ
ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ.
ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ
ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ.
ಆ ಸತ್ಕ್ರಿಯಾ ಜ್ಞಾನಯೋಗದಿಂದ
ಪ್ರಾಣಂಗೆ ಶಿವಕಳೆಯ ಸಂಬಂಧಿಸಿ
ಇಷ್ಟ, ಪ್ರಾಣ, ಭಾವವೆಂಬ
ಲಿಂಗತ್ರಯವನು ಏಕಾಕಾರವ ಮಾಡಿ
ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ
ಮಹಾಲಿಂಗದೊಳಗೆ ಸಂಯೋಗವಾಗಿ
ಭಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾಧಿಯೋಗ.
ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ
ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ.
ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು-
ಅವಾವವೆಂದಡೆ:
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ
ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ
ಈ ಐದು ಕರ್ಮಯೋಗಂಗಳು.
ಅವರು ಲಕ್ಷಿಸುವಂಥಾ ವಸ್ತುಗಳು
ಉತ್ತರಯೋಗವಾಗಿ ಮೂರು ತೆರ.
ಅವಾವವೆಂದಡೆ:
ನಾದಲಕ್ಷ, ಬಿಂದುಲಕ್ಷ, ಕಲಾಲಕ್ಷ ವೆಂದು ಮೂರು ತೆರ.
ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು.
ಬಿಂದುವೇ ಆಕಾರ, ಉಕಾರ, ಮಕಾರ,
ಈ ಮೂರು ಶುದ್ಧಬಿಂದು ಸಂಬಂಧವೆಂದೂ.
ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ
ಲಕ್ಷಿಸುವರು.
ಕಲೆಯೇ ಚಂದ್ರನ ಕಲೆಯ ಹಾಂಗೆ,
ಸೂರ್ಯನ ಕಿರಣಂಗಳ ಹಾಂಗೆ,
ಮಿಂಚುಗಳ ಪ್ರಕಾಶದ ಹಾಂಗೆ,
ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ,
ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ.
ಈ ಎಂಟು ಇತರ ಮತದವರು ಮಾಡುವ ಯೋಗಂಗಳು.
ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು.
ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ.
ಅದುಕಾರಣ ಇವ ಮುಟ್ಟಲಾಗದು.
ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ:
ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ
ಭಾವ, ಮನ, ಕರದಲ್ಲಿ ಶ್ರೀಗುರು ತಂದು
ಸಾಹಿತ್ಯವ ಮಾಡಿದನಾಗಿ
ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ,
ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ,
ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನು, ಮನ, ಭಾವಂಗಳಲ್ಲಿ
ಇಷ್ಟ, ಪ್ರಾಣ, ಭಾವವಾದ ಭೇದವನರಿದು
ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ
ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ
ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ
ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ
ಲಿಂಗವೇ ತಾನು ತಾನಾಗಿ
ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./553
ಯುವತಿಯರ ವ್ಯವಹಾರವೆಂಬ ವಿಕಳತೆ ಹತ್ತಿ
ಯೋಗದ ಸಮತೆ ಸಡಿಲಿತ್ತು ನೋಡಾ.
ಸತ್ಯ ಸತ್ತಿತ್ತು, ಭಕ್ತಿಯರತಿತ್ತು.
ಮಾಯಾವಿಲಾಸವೆಂಬ ಮೃತ್ಯು ಮುಟ್ಟದ ಮುನ್ನ,
ನಿಮ್ಮತ್ತ ಹಿಡಿದು ಎತ್ತಿಕೊಳ್ಳಯ್ಯಾ,
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ./554
ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ;
ಕಾಳಾಮುಖಿಯಲ್ಲ; ಪಾಶುಪತಿಯಲ್ಲ;
ಈ ಷಡುದರುಶನಂಗಳಾಚರಣೆಯಲ್ಲ. ಶರಣನಾಚರಣೆ ಬೇರೆ.
ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ,
ಪ್ರವರಶೈವ, ಅಂತ್ಯಶೈವವೆಂಬ ಈ ಆರುಶೈವದ ನೀತಿಯಲ್ಲ.
ಇಂತಿವೆಲ್ಲರ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತ.
ಶುದ್ಧ, ವಿಶೇಷ, ನಿರ್ವಾಣವೆಂದು
ವೀರಶೈವ ಮೂರುತೆರನಾಗಿಪ್ಪುದು.
ಆ ಮೂರು ತಾನೆ ಆರುತೆರನಾಗಿ ತೋರಿತ್ತದೆಂತೆಂದೊಡೆ:

ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು.
ಇಂತೀ ಆರುಪ್ರಕಾರದಲ್ಲಿ ವರ್ತಿಸುತ್ತಿಹುದು ವೀರಶೈವ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./555

ರಂಜನೆಯ ಕೊಡದಲ್ಲಿ ಮಂಜಿನುದಕವ ತುಂಬಿ
ಮಾನಿನಿ ಹೊತ್ತು ಮೂರು ಲೋಕದಲ್ಲಿ
ರಂಜಿಸುತ್ತಿದ್ದಾಳೆ ನೋಡಾ.
ಮಾನಿನಿಯ ರಂಜನೆಯ ಕಂಡು
ನಾನು, ಹಿರಿಯರೆಂಬವರೆಲ್ಲ
ಮಾನಿನಿಯ ಮಸಕದ ವಿಷಯಕೊಳಗಾದುದ
ಇನ್ನೇನ ಹೇಳುವೆನಯ್ಯ.
ರಂಜನೆಯ ಕೊಡವೊಡೆದು ಮಂಜಿನುದಕವರತು
ಮಾನಿನಿಯ ರಂಜನೆಯ ಮಸಕದ ವಿಷಯವಡಗಿದರೆ
ಪರಮ ನಿರಂಜನನೆಂದು ಬೇರುಂಟೇ ತಾನಲ್ಲದೇ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./556
ರಕ್ಕಸಿಯ ಹೊಳಲಲ್ಲಿ ಒಂದು ಪಕ್ಷಿ ಹುಟ್ಟಿ
ರಕ್ಕಸಿಯ ಕೊಂದುದ ಕಂಡೆನಯ್ಯ.
ಹಿಕ್ಕೆಯ ಬಿಟ್ಟು ಹಕ್ಕೆಯ ಮೇದು
ಅಖಂಡಿತನಾದುದು ಸೋಜಿಗ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./557
ರವಿಯ ಮಂಡಲದಲ್ಲಿ ಶಶಿಯ ಮೇಘದ ಸೋನೆ ಸುರಿವುತ್ತಿದೆ.
ಅಗ್ನಿವರ್ಣದ ಬೀಜದಲ್ಲಿ
ಐದುವರ್ಣದ ವೃಕ್ಷ ಹುಟ್ಟಿತ್ತು ನೋಡಿರೇ.
ಆ ವೃಕ್ಷ ನಾನಾರೂಪಿನ ಫಲ ಪ್ರಜ್ವಲಿಸುತ್ತಿದೆ ನೋಡಾ.
ನಾನಾರೂಪಿನ ಪ್ರಜ್ವಲಾಕಾರ ಏನು ಏನೂ ಇಲ್ಲದ ಠಾವಿನಲ್ಲಿ
ವಿಶ್ರಾಂತಿಯನೆಯ್ದಿರೆ.
ನಾನು ಸ್ವಯಂಭುವಾದೆನು ಕಾಣಾ.
ಏನು ಏನೂ ಇಲ್ಲದ ನಿರಾಳ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./558
ರೂಪಲ್ಲದೆ, ನಿರೂಪಲ್ಲದೆ,
ಸಾವಯನಲ್ಲದೆ, ನಿರವಲಯನಲ್ಲದೆ,
ನಾಮನಲ್ಲದೆ, ನಿರ್ನಾಮನಲ್ಲದೆ,
ಇವಾವ ಪರಿಯೂ ಅಲ್ಲದ ಕಾರಣ,
ನೀನು ನಿಃಕಲನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./559
ರೂಪಾಗಿ ಬಂದ ಪದಾರ್ಥವ
ಕಾಯದ ಕೈಯಲ್ಲಿ ಇಷ್ಟಲಿಂಗಕ್ಕೆ ಕೊಟ್ಟು
ಶುದ್ಧ ಪ್ರಸಾದವ ಕೊಂಡು
ಸರ್ವಾಂಗಶುದ್ಧನಾದೆನು ನೋಡಾ.
ರುಚಿಯಾಗಿ ಬಂದ ಪದಾರ್ಥವ
ಮನದ ಕೈಯಲ್ಲಿ, ಜಿಹ್ವೆಯ ಮುಖದಲ್ಲಿ ಪ್ರಾಣಲಿಂಗಕ್ಕೆ ಕೊಟ್ಟು
ಸಿದ್ಧಪ್ರಸಾದಗ್ರಾಹಕನಾಗಿ
ಮನ ನಿರ್ಮಲವಾಯಿತ್ತು ನೋಡಾ.
ಪರಿಣಾಮವಾಗಿ ಬಂದ ಪದಾರ್ಥವ
ಭಾವದ ಕೈಯಲ್ಲಿ, ಹೃದಯದ ಮುಖದಲ್ಲಿ ತೃಪ್ತಿಲಿಂಗಕ್ಕೆ ಕೊಟ್ಟು
ಪ್ರಸಿದ್ಧಪ್ರಸಾದವ ಕೊಂಡು
ಶುದ್ಧಪರಮಾತ್ಮನಾದೆನು ನೋಡ.
ಈ ಕ್ರಿಯಾಜ್ಞಾನಾರ್ಪಣವಿರಬೇಕು.
ಕಾಯವು ಆತ್ಮನು ಬಯಲಾಹನ್ನಕ್ಕರ.
ಈ ಕಾಯವೂ ಜೀವವೂ ಪರತತ್ವದಲ್ಲಿ ಅಡಗದೆ,
ಬರಿಯ ವಾಗದ್ವೆ ತದಿಂದ ತಾನೆ ಲಿಂಗವಾದೆನೆಂದು,
ಇಷ್ಟಲಿಂಗಾರ್ಪಣವ ಬಿಡುವ ನಾಯ ಮುಖವ
ಎನಗೊಮ್ಮೆ ತೋರದಿಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./560
ಲಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ.
ಹಟಯೋಗಿಗಳ ಅಟಮಟಗಾರರೆಂದೆಂಬೆ.
ಅಷ್ಟಾಂಗಯೋಗಿಗಳ ಕಷ್ಟ ಕರ್ಮಿಗಳೆಂದೆಂಬೆ.
ಪವನಯೋಗಿಗಳ ಪ್ರಪಂಚಿಗಳೆಂದೆಂಬೆ.
ಲಯಯೋಗಿಗಳ ನಾಯಿಗಿಂದ ಕಡೆ ಎಂಬೆ.
ಅದೇನು ಕಾರಣವೆಂದರೆ;
ಲಯಯೋಗವೆಂಬುವದು ನಾನಾ ದರುಶನದಲ್ಲಿ ವರ್ತಿಸುವುದಾಗಿ
ಆದ ಶಿವಯೋಗಿಗಳು ಒಲ್ಲರು.
ಮಂತ್ರಯೋಗವೆಂಬುವದು ಸರ್ವಸಂದೇಹಕ್ಕಿಕ್ಕಿ ಕೊಲುತಿಪ್ಪುದು.
ಅದೇನು ಕಾರಣವೆಂದಡೆ:
ಮಂತ್ರವೇ ಲಿಂಗ, ಲಿಂಗವೇ ಮಂತ್ರವೆಂದರಿದು
ಲಿಂಗನೆನಹ ಸಂಬಂಧಿಸಿಕೊಳ್ಳಲರಿಯದೆ
ಲಿಂಗ ವಿರಹಿತವಾಗಿ ಮಾಡುತಿಪ್ಪರಾಗಿ.
ಅದು ಅಂಗ ಲಿಂಗ ಸಂಬಂಧಿಗಳು ಮಚ್ಚರು ನೋಡ.
ಅದೇನು ಕಾರಣವೆಂದರೆ:
ಕೆಲವು ಶೈವರುಗಳು ಮಾಡುವರಾಗಿ
ರಾಜಯೋಗವೆಂಬುವದು ಗಾಜು ಗೋಜು ನೋಡ.
ಅದನು ಲಿಂಗವಿರಹಿತವಾಗಿ
ಜ್ಞಾತೃ ಜ್ಞಾನ, ಜ್ಞೇಯ ಒಂದಾದಲ್ಲಿಯೆ ಯೋಗವೆನುತಿಪ್ಪರಾಗಿ.
ಇವು ಒಂದೂ ಲಿಂಗಾಗಯೋಗದ ಹಜ್ಜೆಯಲ್ಲ ನೋಡ.
ಅದು ಕಾರಣ, ಲಿಂಗನಿಷ್ಠರು ಮಚ್ಚರು.
ಅದೇನು ಕಾರಣವೆಂದಡೆ:
ಲಿಂಗವ ತೆಗೆದಡೆ ಲಿಂಗದೊಡನೆ ಪ್ರಾಣ ಹೋಗದಾಗಿ,
ಅದೆಲ್ಲಿಯ ಯೋಗವಯ್ಯ ಭ್ರಾಂತು ಯೋಗ.
ಇದು ಕಾರಣ, ನಿಮ್ಮ ಶರಣರು ಲಿಂಗಪ್ರಾಣಿಗಳು;
ಪ್ರಾಣಲಿಂಗಸಂಬಂಧಿಗಳು;
ಪ್ರಸಾದಮುಕ್ತರು
ಈ ಮೂರು ಪ್ರಕಾರದಲ್ಲಿ ಕೂಡುತ್ತಿಪ್ಪರು ಶಿವಯೋಗಿಗಳು.
ಇದು ಕಾರಣ ನಿಮ್ಮ ಶರಣರು
ಸ್ವಾನುಭಾವಜ್ಞಾನ ಶುದ್ಧಶಿವಯೋಗದಲ್ಲಿ
ಸ್ವರೂಪಜ್ಞಾನಿಗಳು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./561
ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ,
ಕೋಟಲೆಗೊಳದಿರ ಮರುಳು ಮಾನವ.
ನಿಟಿಲತಟದಲ್ಲಿ ಮಠವ ಮಾಡಿಕೊಂಡು
ನಿಶ್ಚಿಂತ ನಿರಾಳನಾಗಿರ.
ಹುಸಿಯ ಮಾಯಾತಮಂಧಕೆ ದಿಟಪುಟದಿವಾಕರ ಎನ್ನೊಡೆಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಕಾಣಿರೋ./562
ಲಲಾಟದಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷೆಯ ಮಾಲೆ
ಮುಖದಲ್ಲಿ ಶಿವಮಂತ್ರ, ಅಂಗದ ಮೇಲೆ ಶಿವಲಿಂಗ ಧಾರಣವುಳ್ಳ
ಶಿವಭಕ್ತನೆ ಸಾಕ್ಷಾತ್ ಶಿವ ತಾನೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./563
ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು
ಒಂದೇ ವಸ್ತು ನೋಡ.
ಚಿನ್ನಾದ ಸ್ವರೂಪವೇ ಜಂಗಮ.
ಚಿದ್ಬಿಂದು ಸ್ವರೂಪವೇ ಲಿಂಗ.
ಈ ನಾದ ಬಿಂದುವಿಂಗೆ ಆಧಾರವಾದ ಚಿತ್ಕಲಾ ಸ್ವರೂಪವೇ
ಚಿನ್ಮಯ ಭಕ್ತನು ನೋಡ.
ಶಿವಂಗೂ ಭಕ್ತಂಗೂ ಭಿನ್ನಮುಂಟೆ?
ಆ ಭಕ್ತಿಗೂ ಭಕ್ತಂಗೂ ಭೇದವುಂಟೆ?
ಇಲ್ಲವಾಗಿ-
ದೇವ ಬೇರೆ ಭಕ್ತ ಬೇರೆ ಎಂಬ ಕರ್ಮಕಾಂಡಿಗಳ ಮತವಂತಿರಲಿ.
ನಿಮ್ಮ ಶರಣರಿಗೆ ನಿಮಗೆ ಭಿನ್ನವಿಲ್ಲವೆಂದೆನು ಕಾಣ.
ಶರಣನೇ ಸಾಕ್ಷಾತ್ ಶಿವ ತಾನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./564
ಲಿಂಗಕ್ಕೂ ಪ್ರಾಣಕ್ಕೂ ಭೇದವಿಲ್ಲೆಂದರಿದು
ಲಿಂಗಾರ್ಚನೆಯ ಮಾಡಿ ಈ ಪ್ರಕಾರದಲ್ಲಿ ಆಚರಿಸಲಾಗಿ
ಷಟ್ಪ್ರಕಾರವಪ್ಪ ಲಿಂಗವು ಕ್ರಮ ತಪ್ಪದೆ ಸಾಧ್ಯವಪ್ಪುವು.
ಸಂಕಲ್ಪ ವಿಕಲ್ಪವಿಲ್ಲದೆ ಹೀಂಗೆಂದರಿಯಲು
ಆ ಪ್ರಾಣನು ಲಿಂಗಪ್ರಭೆಯೊಳಗೋಲಾಡುತ್ತಿಪ್ಪುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./565
ಲಿಂಗಕ್ಕೆ ತನ್ನ ತನುವೇ ಭಾಜನವಾಗಿ,
ಆ ತನುವಿಂಗೆ ಲಿಂಗವೇ ಭಾಜನವಾಗಿ,
ತನುವೆಂಬ ಭಾಜನವಳಿದು ಲಿಂಗವೇ ಭಾಜನವಾಗಿರಬಲ್ಲರೆ
ಅದು ಲಿಂಗಭಾಜನವೆಂಬೆ.
ಮನಕ್ಕೆ ಲಿಂಗವೇ ಭಾಜನವಾಗಿ, ಲಿಂಗಕ್ಕೆ ಮನವೇ ಭಾಜನವಾಗಿ
ಮನವೆಂಬ ಭಾಜನವಳಿದು, ಮನವೇ ಲಿಂಗಭಾಜನರಾಗಿರಬಲ್ಲರೆ,
ಮನಲಿಂಗಭಾಜನವೆಂಬೆ.
ಪ್ರಾಣಕ್ಕೆ ಲಿಂಗವೇ ಭಾಜನವಾಗಿ,
ಲಿಂಗಕ್ಕೆ ಪ್ರಾಣವೇ ಭಾಜನವಾಗಿ
ಪ್ರಾಣವೆಂಬ ಭಾಜನವಳಿದು,
ಪ್ರಾಣವೇ ಲಿಂಗವಾಗಿರಬಲ್ಲರೆ,
ಪ್ರಾಣಲಿಂಗಭಾಜನವೆಂಬೆ.
ತನುಭಾಜನ ಮನಭಾಜನ ಪ್ರಾಣಭಾಜನ ಇಂತೀ ತ್ರಿವಿಧವು
ಚಿದ್ಭಾಂಡೆಯಲ್ಲಿ ಅಡಗಿ ಚಿದ್ಪ್ರಹ್ಮವೇ ತಾನಾಗಿರಬಲ್ಲರೆ,
ಸಹವರ್ತಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./566
ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ?
ನಿಃಶಬ್ದಮಯವಾದ ಕಾರಣ.
ಜಂಗಮಕ್ಕೆ ಬಿಂದುವಿಲ್ಲ. ಅದೇನು ಕಾರಣ?
ಅದು ಶಬ್ದಮಂತ್ರೋಪದೇಶವನುಳ್ಳುದಾದ ಕಾರಣ.
ಅದುಕಾರಣ, ನಾದ ಸ್ವರೂಪವೇ ಜಂಗಮ;
ಬಿಂದುಸ್ವರೂಪವೇ ಲಿಂಗ.
ಇದುಕಾರಣ, ಲಿಂಗವೇ ಜಂಗಮದ ಲಿಂಗ;
ಆ ಜಂಗಮವೇ ಲಿಂಗದ ಪ್ರಾಣ.
ಆ ನಾದ ಬಿಂದು ಸ್ವರೂಪ ಲಿಂಗವಪ್ಪ ಜಂಗಮಕ್ಕೆ ಆಧಾರವಪ್ಪ
ಚಿತ್ಕಲಾ ಸ್ವರೂಪನೇ ಭಕ್ತನು.
ಈ ನಾದ ಬಿಂದು ಕಳೆಗಳ ಕೂಡಿಕೊಂಡಿಪ್ಪ ಶಿವತತ್ವವು, ತಾನೇ
ಲಿಂಗ ಜಂಗಮ ಭಕ್ತನೆಂದು ಮೂರುತೆರನಾದನು ನೋಡಾ.
ಈ ಮೂರು ಒಂದೆಯೆಂದು ಅರಿದೆನು ನೋಡಾ.
ಎನ್ನ ಶರಣತ್ವದ ಆದಿಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./567
ಲಿಂಗದಿಂದ ಶರಣರುದಯಯವಾಗದಿರ್ದಡೆ,
ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ
ಏಳುನೂರುಯೆಪ್ಪತ್ತು ಅಮರಗಣಂಗಳು
ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ,
ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ
ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ.
ಲಿಂಗದಿಂದ ಶರಣರುದಯವಾಗದಿರ್ದಡೆ,
ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ,
ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ.
ಇಂತಪ್ಪ ದೃಷ್ಟವ ಕಂಡು ನಂಬದಿಪರ್ುದು ಕರ್ಮದ ಫಲ.
ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ
ನೋಡಾ.
ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು
ಪ್ರಮಾಣೆ? ಅಲ್ಲ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./568
ಲಿಂಗದೇಹಿ ಶಿವಾತ್ಮಕನು ಲಿಂಗದಾಚಾರದಲ್ಲಿಯೇ ನಡೆವನಯ್ಯ.
ಲೋಕವರ್ತಕನಲ್ಲ.
ಲೋಕಚಾತುರಿಕೆ, ಲೋಕವ್ಯವಹರಣೆಯನನುಕರಿಸಿ ನಡೆವವನಲ್ಲ.
ಶಿವಜ್ಞಾನ ಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು
ಸರ್ವಾಂಗವೂ ಲಿಂಗರೂಪಾಗಿ ಸಮರ್ಪಿಸಿಕೊಂಡು
ಲಿಂಗದೊಡನೆ ಭುಂಜಿಸುತ್ತಿಪ್ಪನಯ್ಯ.
ಶಿವಸ್ಮರಣೆಯಿಂದ ಸ್ವೀಕರಿಸುತ್ತಿಪ್ಪುದೇ
ಸಹಭೋಜನವೆನಿಸಿಕೊಂಡಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./569
ಲಿಂಗಮಧ್ಯೇ ಜಗತ್ಸರ್ವಂ’ ಎಂದುದಾಗಿ-
ಜಗವ ಹೊರಗಿರಿಸಿ, ಲಿಂಗವನೊಳಗಿರಿಸಿಕೊಂಡು
ಲಿಂಗ ಪ್ರೇಮಿಯಾದ ನಿರುತನು
ಜಗ ತೋರುವಲ್ಲಿಯೂ ಅಡಗುವಲ್ಲಿಯೂ
ತೋರಿಯಡದಗದೆ ಅನುಪಮಮಹಿಮನಯ್ಯ, ಮಹೇಶ್ವರನು.
ಜಗದ ಒಳಹೊರಗೆ ಸರ್ವ ವ್ಯಾಪಕನಾದ
ಪರಿಪೂರ್ಣ ಸರ್ವಗತನಯ್ಯ ಲಿಂಗೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./570
ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ.
ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೊ.
ಲಿಂಗವ ಧರಿಸಿಪ್ಪ ಅಂಗವೆ ಲಿಂಗದಂಗ ತಾನೆ ನೋಡಾ.
ಲಿಂಗಪ್ರಸಾದವ ಕೊಂಬ ಪ್ರಾಣಲಿಂಗ ತಾನೆ ನೋಡಾ.
ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ
ಕರ್ಮವ ಕಲ್ಪಿಸಿ ನುಡಿವ ಅಬದ್ಧರನೇನೆಂಬೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./571
ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠ ಕಾಣಿರೋ.
ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೋ.
ಲಿಂಗವ ಧರಿಸಿಪ್ಪಂಗವೆ ಲಿಂಗದಂಗವಾಗಿ
ಲಿಂಗಕ್ಕೂ ಅಂಗಕ್ಕೂ ಭಿನ್ನವಿಲ್ಲ ಕಾಣಿರೋ.
ಲಿಂಗಪ್ರಸಾದವ ಕೊಂಬ ಪ್ರಾಣ ಲಿಂಗ ತಾ ನೋಡಾ.
ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ
ಲಿಂಗಸಹಭೋಜನವ ಮಾಡಬೇಕೆಂಬುದೆ ಸದಾಚಾರ.
ಹೀಂಗಲ್ಲದೆ
ಅಂಗಕ್ಕು ಲಿಂಗಕ್ಕು ಭೇದ ಭಾವವ ಕಲ್ಪಿಸಿಕೊಂಡು
ಲಿಂಗಸ ಭೋಜನವ ಮಾಡಬಾರದೆಂಬ
ಸಂದೇಹ ಸೂತಕ ಪ್ರಾಣಿಗಳಿಗೆ
ಅಂಗದಲ್ಲಿ ಲಿಂಗವಿಲ್ಲ, ಮನದಲ್ಲಿ ಮಂತ್ರವಿಲ್ಲ;
ಪ್ರಾಣದಲ್ಲಿ ಪ್ರಸಾದವಿಲ್ಲ.
ಪ್ರಸಾದವಿಲ್ಲದವರಿಗೆ ಮುಕ್ತಿಯೆಂಬುದೆಂದೂ ಇಲ್ಲ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./572
ಲಿಂಗವೇ ಪತಿಯಾಗಿ ತಾನೆ ಸತಿಯಾಗಿ
ಅನ್ಯವನರಿಯದೆ ಪಂಚೇಂದ್ರಿಯರಹಿತನಾಗಿ
ತೆರಹಿಲ್ಲದರುಹು ತಾನಾಗಿ
ನೆರೆ ಅರುಹಿನೊಳು ನಿಬ್ಬೆರಗಾಗಿ
ಹೃದಯ ಕಮಲ ಮಧ್ಯದಲ್ಲಿ ಪರಮೇಶ್ವರನೊಳಗಣ
ಸಮರಸ ಸ್ನೇಹವೆರಸಿ
ಅಗಲದಿಪ್ಪುದೀಗ ಶರಣಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./573
ಲಿಂಗಸ್ಥಲದಲ್ಲಿ ಲಿಂಗಕಳೆ ಹೇಗಾಯಿತಯ್ಯ?
ಆವುದಾನೊಂದು ಕಳೆಯ ಸ್ಥಾಪಿಸುವ ಭೇದವಾವುದಯ್ಯ?
ಇದನರಿಯೆನು; ಕರುಣಿಸಯ್ಯ ತಂದೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ./574
ಲೋಕದ ನಚ್ಚು ಮಚ್ಚೆಂಬ ಕಿಚ್ಚೆದ್ದು ಸುಡುತಿದೆ ನೋಡ.
ನಿಶ್ಚಿಂತ ನಿರಾಳವೆಂಬ ನೀರನೆರೆಯಲು,
ಆ ಕಿಚ್ಚು ಕೆಡುವುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./575
ಲೋಕಮೆಚ್ಚೆ ನಡೆವರಯ್ಯ, ಲೋಕಮೆಚ್ಚೆ ನುಡಿವರಯ್ಯ.
ಲೋಕಮೆಚ್ಚೆ ನಡೆಯೆ ಹೋಯಿತ್ತೆನ್ನ ಶಿವಾಚಾರ.
ಲೋಕಮೆಚ್ಚೆ ನುಡಿಯೆ ಹೋಯಿತ್ತೆನ್ನ ಶಿವಜ್ಞಾನ.
ಲೌಕಿಕವರ್ತನ ನಾಯಕನರಕವೆಂದಿತ್ತು ಗುರುವಚನ.
ಇದು ಕಾರಣ ಲಿಂಗ ಮೆಚ್ಚೆ ನಡವೆ; ಲಿಂಗ ಮೆಚ್ಚೆ ನುಡಿವೆ
ಲಿಂಗ ಲಿಂಗವೆಂಬ ಲಿಂಗಭ್ರಾಂತನಾಗಿ ವರ್ತಿಸುವೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./576
ಲೋಕಾಧಿ ಲೋಕಂಗಳೇನುಯೇನೂ ಇಲ್ಲದಂದು
`ಏಕಮೇವಾದ್ವಿತೀಯಂ ಪರಬ್ರಹ್ಮ’ ತಾನೊಂದೆ ನೋಡಾ.
ಅದು ತನ್ನನು ನೆನೆಯದೆ, ಇದಿರನು ನೆನೆಯದೆ
ನೆನಹು ನಿಷ್ಪತ್ತಿಯಾಗಿದ್ದಿತು ನೋಡ.
ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ
ಸಾವಯವಾಗಿ ಚಿತ್ತೆನಿಸಿಕೊಂಡಿತ್ತು.
ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ
ಎಂಬ ಐದಂಗವನಂಗೀಕರಿಸಿ,
ನಿಃಕಲ ಶಿವತತ್ವವೆನಿಸಿತ್ತು ನೋಡ.
ಆ ನಿಃಕಲ ಶಿವತತ್ವ ತಾನೊಂದೆ,
ತನ್ನ ಶಕ್ತಿಯ ಚಲನೆಮಾತ್ರದಿಂದ
ಒಂದೆರಡಾಯಿತ್ತು ನೋಡ.
ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ.
ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು,
ವರ್ತಿಸುತ್ತಿಹುದು ನೋಡ.
ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು.
ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು,
ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.
ಶಕ್ತಿಯೆ ನಿವೃತ್ತಿಯೆನಿಸಿತ್ತು.
ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ.
ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು.
ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು.
ಅದು ಹೇಂಗೆಂದಡೆ;
ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು.
ಅದು ಹೇಂಗೆಂದಡೆ :
ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು,
ಮೂರು ತೆರನಾಯಿತ್ತು.
ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು
ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು.
ಅದು ಹೇಂಗೆಂದಡೆ :
ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು
ಎರಡು ತೆರನಾಯಿತ್ತು.
ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು
ಎರಡು ತೆರನಾಯಿತ್ತು.
ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು
ಎರಡು ತೆರನಾಯಿತ್ತು.
ಹೀಂಗೆ ಒಬ್ಬ ಶಿವನು ಆರು ತೆರನಾದನು.
ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ,
ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ,
ಶಾಂತಿಯೆಂಬ ಕಲಾಪರಿಯಾಯವನುಳ್ಳ ಆದಿಶಕ್ತಿ,
ವಿದ್ಯಾಕಲಾಪರಿಯಾಯವನುಳ್ಳ ಇಚ್ಛಾಶಕ್ತಿ,
ಪ್ರತಿಷ್ಠಾಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ.
ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ,
ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ,
ಷಟ್ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು.
ಇದು ಲಿಂಗಷಟ್ಸ್ಥಲ.
ಇನ್ನು ಒಂದು ಅಂಗ ಮೂರು ತೆರನಾಯಿತ್ತು.
ಅದು ಹೇಂಗೆಂದಡೆ:
ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು
ಪ್ರಕಾರವಾಯಿತ್ತು.
ಈ ತ್ರಯಾಂಗ ಒಂದೊಂದು ಎರಡೆರಡಾಗಿ,
ಆರು ತೆರನಾಯಿತ್ತು.
ಅದು ಹೇಂಗೆಂದೆಡೆ:
ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು.
ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು
ಎರಡು ತೆರನಾಯಿತ್ತು.
ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು
ಎರಡು ತೆರನಾಯಿತ್ತು.
ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು.
ಸಮರಸಭಕ್ತಿ, ಆನಂದಭಕ್ತಿ, ಅನುಭಾವಭಕ್ತಿ, ಅವಧಾನಭಕ್ತಿ,
ನೈಷ್ಟಿಕಾಭಕ್ತಿ, ಸದ್ಭಕ್ತಿ ಎಂದು
ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ,
ಷಟ್ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು.
ಇದು ಅಂಗಷಟ್ಸ್ಥಲ.
ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ-
ಆ ನಿವೃತ್ತಿಯ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು.
ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ.
ಅಂಗವೆಂದಡೆ ಶರಣ:ಲಿಂಗವೆಂದಡೆ ಶಿವ.
ಆ ಶರಣಂಗೆ ಆ ಲಿಂಗವು ಆವಾಗಲೂ ಪ್ರಾಣವು
ಆ ಲಿಂಗಕ್ಕೆ ಆ ಶರಣನಾವಾಗಲೂ ಅಂಗವು.
ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗಲ್ಲದೆ,
ಭಿನ್ನವಿಲ್ಲ.
ಇದು ಕಾರಣ, ಅನಾದಿಯಿಂದವು
ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ,
ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು
ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ,
ಆಗಮಯುಕ್ತಿಯಿಂದ ಅರಿದುದು ಅರುಹಲ್ಲ.
ಅದೇನು ಕಾರಣವೆಂದಡೆ;
ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ.
ಈ ಷಟ್ಸ್ಥಲಮಾರ್ಗವು ದ್ವೆ ತಾದ್ವೆ ತದ ಪರಿವರ್ತನೆಯಲ್ಲ.
ಅದೇನು ಕಾರಣವೆಂದಡೆ;
ಇದು ಶಿವಾದ್ವೆ ತಮಾರ್ಗವಾದ ಕಾರಣ.
ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ
ಬೊಮ್ಮ, ಪರಬೊಮ್ಮನೆಂದು ಬೇರುಂಟೆ ತಾನಲ್ಲದೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./577
ಲೋಹವ ಅಗ್ನಿ ವೇಧಿಸಿಕೊಂಡಿಪ್ಪಂತೆ,
ಕಲ್ಲಿನಲ್ಲಿ ಕಳೆ ತುಂಬಿಪ್ಪಂತೆ,
ಸರ್ವಾಂಗವನು ಲಿಂಗಕಳೆ ತುಂಬಿ ಸರ್ವತೋಮುಖವಾಗಿ,
ಮಿಸುನಿಯ ಚಿನ್ನದ ಬೆಳಗಿನಂತೆ ಪಸರಿಸುತ್ತಿಪ್ಪ,
ಹೊಚ್ಚ ಹೊಸ ಬ್ರಹ್ಮವನೊಡಗೂಡಿದ
ಪ್ರಾಣಲಿಂಗೈಕ್ಯವನೇನ ಉಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./578
ವಂದಿಸಿ ನಿಂದಿಸುವ ಸಂದೇಹಿಯ ಮನೆಯ ಕೂಳು
ಹಂದಿಯ ಬಾಯ ತುತ್ತ ನಾಯಿ ಕಿತ್ತುಕೊಂಡು
ತಿಂದಂತಾಯಿತ್ತು ಕಾಣ.
ಅದೇನು ಒಡಲ ಉಪಾಧಿಗೆ ತನ್ನ ನಿಂದಿಸಿದುದನರಿಯದೆ
ಭಕ್ತನೆಂದು ಒಳಗಿಟ್ಟುಕೊಂಡು ನಡೆವವರನೊಲ್ಲೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./579
ವಸ್ತುವಿನ ಸ್ವರೂಪ ಹೇಳಿಹೆ ಕೇಳು,
ಹೊಳೆವುತ್ತಿದ್ದ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು;
ಅನಂತಕೋಟಿ ಮಿಂಚುಗಳ ಪ್ರಭೆಯ ಪ್ರಕಾಶವನುಳ್ಳುದು;
ಅನಂತಕೋಟಿ ಸೋಮ ಸೂರ್ಯರ ಪ್ರಭೆಯ ಪ್ರಕಾಶವನುವುಳ್ಳದು;
ಮುತ್ತು ಮಾಣಿಕ್ಯ ನವರತ್ನದ ಕಿರಣಂಗಳ ಪ್ರಭೆಯ
ಪ್ರಕಾಶವನುಳ್ಳುದು;
ನಿನ್ನ ಪಿಂಡದ ಮಧ್ಯದಲ್ಲಿ ಉದಯವಾಗಿ ತೋರುವ
ಪಿಂಡಜ್ಞಾನದ ಮಹದರುಹೆ
ಪರಬ್ರಹ್ಮವೆಂದು ಅರಿಯಲು ಯೋಗ್ಯವೆಂದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./580
ವಸ್ತುವೆಂದಡೆ ಪರಬ್ರಹ್ಮದ ನಾಮ.
ಆ ವಸ್ತುವಿನಿಂದ ಆತ್ಮನ ಜನನ.
ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು.
ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು.
ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು;
ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು.
ಇಂತು ಹುಟ್ಟಿದ ಪಂಚಭೂತಂಗಳೆ,
ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು.
ಅದು ಹೇಗೆಂದಡೆ:
ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು.
ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ.
ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ.
ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ.
ಪೃಥ್ವಿಯಿಂದ ವಾಗಾದಿ ಕರ್ಮೆಂದ್ರಿಯಂಗಳು ಪುಟ್ಟಿದವಯ್ಯ.
ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ,
ಶರೀರ ವ್ಯಕ್ತೀಕರಿಸಿತ್ತಯ್ಯ.
ಅದೆಂತೆಂದಡೆ:
ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು.
ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು.
ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು.
ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು.
ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು.
ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ.
ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ.
ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ.
ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ.
ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ.
ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ.
ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ.
ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ.
ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ.
ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ.
ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ.
ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ.
ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ.
ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು.
ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು.
ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು.
ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು.
ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು.
ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ.
ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ.
ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ.
ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ.
ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ.
ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ.
ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ,
ಚೈತನ್ಯವಾಗಿ ಆತ್ಮನೊಬ್ಬನು.
ಇಂತು ಇಪ್ಪತ್ತೆ ದುತತ್ವಂಗಳ ಭೇದವೆಂದು ಅರಿಯಲು
ಯೋಗ್ಯವಯ್ಯ.
ಆಕಾಶದೊಳಗಣ ಆಕಾಶ ಜ್ಞಾನ.
ಆಕಾಶದೊಳಗಣ ವಾಯು ಮನಸ್ಸು.
ಆಕಾಶದೊಳಗಣ ಅಗ್ನಿ ಅಹಂಕಾರ.
ಆಕಾಶದೊಳಗಣ ಅಪ್ಪು ಬುದ್ಧಿ.
ಆಕಾಶದೊಳಗಣ ಪೃಥ್ವಿ ಚಿತ್ತ.
ಇಂತಿವು, ಆಕಾಶದ ಪಂಚೀಕೃತಿಯಯ್ಯ.
ವಾಯುವಿನೊಳಗಣ ವಾಯು ಉದಾನವಾಯು.
ವಾಯುವಿನೊಳಗಣ ಆಕಾಶ ಸಮಾನವಾಯು.
ವಾಯುವಿನೊಳಗಣ ಅಗ್ನಿ ವ್ಯಾನವಾಯು.
ವಾಯುವಿನೊಳಗಣ ಅಪ್ಪು ಅಪಾನವಾಯು.
ವಾಯುವಿನೊಳಗಣ ಪೃಥ್ವಿ ಪ್ರಾಣವಾಯು.
ಇಂತಿವು, ವಾಯುವಿನ ಪಂಚೀಕೃತಿಯಯ್ಯ.
ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ.
ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ.
ಅಗ್ನಿಯೊಳಗಣ ವಾಯು ತ್ವಗಿಂದ್ರಿಯ.
ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ.
ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ.
ಇಂತಿವು, ಅಗ್ನಿಯ ಪಂಚೀಕೃತಿಯಯ್ಯ.
ಅಪ್ಪುವಿನೊಳಗಣ ಅಪ್ಪು ರಸ.
ಅಪ್ಪುವಿನೊಳಗಣ ಆಕಾಶ ಶಬ್ದ.
ಅಪ್ಪುವಿನೊಳಗಣ ವಾಯು ಸ್ಪರ್ಶನ.
ಅಪ್ಪುವಿನೊಳಗಣ ಅಗ್ನಿ ರೂಪು.
ಅಪ್ಪುವಿನೊಳಗಣ ಪೃಥ್ವಿ ಗಂಧ.
ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ.
ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ.
ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ.
ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ.
ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ.
ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ.
ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ
ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು
ಸ್ವಾನುಭಾವದ ನಿಷ್ಠೆಯಿಂದರಿದು
ಈ ದೇಹ ಸ್ವರೂಪವು ತಾನಲ್ಲವೆಂದು
ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು,
ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂಧಿಸಿ,
ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ
ಕ್ರಮವಿದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./581
ವಸ್ತುವೆಂದಡೆ:ಹೇಂಗಾಯಿತ್ತಯ್ಯಾಯೆಂದಡೆ,
ಹೇಳಿಹೆ ಕೇಳಯ್ಯಾ ಮಗನೆ.
ಕಾಷ್ಟದಲ್ಲಿ ಅಗ್ನಿ ಹೇಂಗೆ ಹಾಂಗಿಪ್ಪುದು;
ಕ್ಷೀರದೊಳಗೆ ಘೃತ ಹೇಂಗೆ ಹಾಂಗಿಪ್ಪುದು;
ತಿಲದಲ್ಲಿ ತೈಲ ಹೇಂಗೆ ಹಾಂಗಿಪ್ಪುದು;
ಜಲದೊಳಗೆ ಸೂರ್ಯ ಹೇಂಗೆ ಹಾಂಗಿಪ್ಪುದು;
ಕನ್ನಡಿಯೊಳಗೆ ಪ್ರತಿಬಿಂಬ ಹೇಂಗೆ ಹಾಂಗಿಪ್ಪುದು;
ಸರ್ವತ್ರ ಎಲ್ಲಾ ಠಾವಿನಲ್ಲಿಯೂ ವಸ್ತುವಿನ ಕಳೆ
ಪರಿಪೂರ್ಣವಾಗಿಪ್ಪುದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./582
ವಸ್ತುವೆಂದರೆ ಪರಬ್ರಹ್ಮನಾಮ.
ಆ ವಸ್ತು ತನ್ನಿಂದ ಭಾವವ ಕಲ್ಪಿಸಿ,
ಆ ಭಾವದಿಂದ ಮಾಯವ ಕಲ್ಪಿಸಿ,
ಆ ಮಾಯದಿಂದ ಮೋಹವ ಕಲ್ಪಿಸಿ,
ಆ ಮೋಹದಿಂದ ಸಕಲ ಪ್ರಪಂಚುವ ಹುಟ್ಟಿಸಿ,
ಆ ಪ್ರಪಂಚಿನಿಂದ ಸಮಸ್ತ ಜಗತ್ತು ಹುಟ್ಟಿತ್ತು ನೋಡಾ.
ಇಂತಿವೆಲ್ಲವು ನೀನಾಗೆಂದಡಾದವು;
ನೀ ಬೇಡಾಯೆಂದಡೆ ಮಾದವು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./583
ವಸ್ತುವೆಂದೊಡೆ ಹೇಂಗಾಯಿತ್ತಯ್ಯ?
ಗ್ರಹಿಸುವ ಭೇದವಾವುದಯ್ಯ?
ಕಳೆಯ ಸ್ಥಾಪಿಸುವ ಭೇದವಾವುದಯ್ಯ?
ಇದರ ಗುಣವನಾನರಿಯೆನು; ಕರುಣಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./584
ವಾಚಾತೀತ, ಮನೋತೀತ ಅಗೋಚರ
ನಿರ್ನಾಮ ನಿರ್ಗುಣ ನಿತ್ಯ ನಿರಂಜನ
ನಿರವಯ ನಿರಾಮಯ ನಿರ್ಮಲ
ನಿಃಕಲ ಜ್ಞಾನನಿಭರ್ೆದ್ಯ ನಿರುಪಾಧಿಕ ನಿರವಸ್ಥ ನಿರಾವರಣ
ಅದ್ವೆ ತಾನಂದ ಸಂಪೂರ್ಣವನ್ನುಳ್ಳ ಪರಶಿವ,
ತಾನೆ ಪರಮೇಶ್ವರನಾದನು.
ಆ ಪರಮೇಶ್ವರನಿಂದ ಸದಾಶಿವನಾದನು.
ಸದಾಶಿವನಿಂದ ಈಶ್ವರನಾದನು.
ಈಶ್ವರನಿಂದ ಮಹೇಶ್ವರನಾದನು.
ಮಹೇಶ್ವರನಿಂದ ರುದ್ರನಾದನು.
ರುದ್ರನಿಂದ ವಿಷ್ಣು ಹುಟ್ಟಿದನು.
ವಿಷ್ಣುವಿನಿಂದ ಬ್ರಹ್ಮ ಹುಟ್ಟಿದನು.
ಬ್ರಹ್ಮನಿಂದ ಸಕಲ ಜಗತ್ತೆಲ್ಲಾ ಆಯಿತು.
ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ;
ಸ್ವಾಧಿಷ್ಠಾನಚಕ್ರಕ್ಕೆ ವಿಷ್ಣುವಧಿದೇವತೆ;
ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ;
ಅನಾಹತಚಕ್ರಕ್ಕೆ ಈಶ್ವರನಧೀದೇವತೆ
ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ;
ಆಜ್ಞಾಚಕ್ರಕ್ಕೆ ಪರಮೇಶ್ವರನಧಿದೇವತೆ.
ಆಧಾರಸ್ಥಾನದ ಬ್ರಹ್ಮತತ್ವಕ್ಕೆ ಆಚಾರಲಿಂಗವ ಸ್ವಾಯತವ ಮಾಡಿ
ಸ್ವಾಧಿಷ್ಠಾನದ ವಿಷ್ಣುತತ್ವಕ್ಕೆ ಗುರುಲಿಂಗವ ಸ್ವಾಯತವ ಮಾಡಿ
ಮಣಿಪೂರಕಸ್ಥಾನದ ರುದ್ರತತ್ವಕ್ಕೆ ಶಿವಲಿಂಗವ ಸ್ವಾಯತವ ಮಾಡಿ
ಅನಾಹತಸ್ಥಾನದ ಈಶ್ವರತತ್ವಕ್ಕೆ ಜಂಗಮಲಿಂಗವ ಸ್ವಾಯತವ ಮಾಡಿ
ವಿಶುದ್ಧಿಸ್ಥಾನದ ಸದಾಶಿವತತ್ವಕ್ಕೆ ಪ್ರಸಾದಲಿಂಗವ ಸ್ವಾಯತವ ಮಾಡಿ
ಆಜ್ಞಾಸ್ಥಾನದ ಪರಮೇಶ್ವರನೆಂಬ ತತ್ವಕ್ಕೆ ಮಹಾಲಿಂಗವ ಸ್ವಾಯತವ ಮಾಡಿ
ಪರಿಪೂರ್ಣಲಿಂಗವು ತಾನೆ ಸರ್ವಾಂಗದಲ್ಲಿ ಸ್ವಾಯತವಾಗಲು,
ಆ ಶರಣನ ಸರ್ವಾಂಗವು ನಿರುಪಮ ಲಿಂಗಸ್ವಾಯತವಾಗಿ
ನಿರವಯಸ್ಥಲ ವೇದ್ಯವಾಯಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./585
ವಾಚ್ಯಾವಾಚ್ಯಂಗಳಿಲ್ಲದಂದು,
ಪಕ್ಷಾಪಕ್ಷಗಳಿಲ್ಲದಂದು,
ಸಾಕ್ಷಿ, ಸಭೆಗಳಿಲ್ಲದಂದು,
ಪೃಥ್ವಿ ಆಕಾಶಾದಿಗಳಿಲ್ಲದಂದು,
ಉತ್ಪತ್ತಿ, ಸ್ಥಿತಿ, ಲಯಂಗಳಿಲ್ಲದಂದು,
ಸತ್ವ, ರಜ, ತಮಗಳೆಂಬ ಗುಣತ್ರಯಂಗಳಿಲ್ಲದಂದು,
ಅಹಂಕಾರ ಮಮಕಾರ ಪ್ರಕೃತಿ ಮಹತ್ತು,
ಮಾಯಾಪ್ರಪಂಚು ಮೊಳೆದೋರದಂದು,
ಮಾಯಿಕ ನಿರ್ಮಾಯಿಕಂಗಳು ಹುಟ್ಟದಂದು,
ಜ್ಞಾನಾಜ್ಞಾನಗಳು ಉದಯವಾಗದಂದು,
ರೂಪು ನಿರೂಪು ಹುಟ್ಟದಂದು,
ಕಾಮ ನಿಃಕಾಮಂಗಳಿಲ್ಲದಂದು,
ಮಾಯಾಮಾಯಂಗಳೇನುಯೇನೂಯಿಲ್ಲದಂದು,
ನಿನ್ನ ನಿರ್ಮಾಯನೆಂದು ಹೆಸರಿಟ್ಟು ಹೇಳುವರಾರೂಯಿಲ್ಲದಂದು,
ನಿಜವು ನಿನ್ನಯ ಘನತೆಯ ನೀನರಿಯದೆ,
ಇದಿರನು ಅರಿಯದೆ, ಏನನು ಅರಿಯದೆ,
ನೀನೆ ನೀನಾಗಿರ್ದೆಯಲ್ಲಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./586
ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ
ಶರಣ ಐಕ್ಯ ಭಕ್ತ ಮಹೇಶ್ವರ ಪ್ರಸಾದಿಯಪ್ಪ
ಅಂಗಪಂಚಕವು ಗರ್ಭಿಕೃತವಾಗಿ
ಆ ಪ್ರಾಣಲಿಂಗಿಗೆ ಜಂಗಮಲಿಂಗ ಸ್ವಾಯತವಾಗಿ
ಆ ಜಂಗಮಲಿಂಗದಲ್ಲಿಯೇ
ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ
ಗುರುಲಿಂಗ ಶಿವಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ
ಜಂಗಮಲಿಂಗವೆ ಆಶ್ರಯವಾಗಿ
ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ
ಪ್ರಾಣಲಿಂಗಿಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./587
ವಾರಣದ ತಲೆಯನೊಡೆದು
ಉತ್ತುಂಗರಾಸಿಯೆಂಬ ಭಕ್ತ್ಯಂಗನೆ ಉದಯವಾದಳು ನೋಡಾ.
ಭಕ್ತ್ಯಂಗನೆಯ ಬಸುರೆಲ್ಲಾ ನಿತ್ಯ ನಿರ್ಮಲಜ್ಯೋತಿ.
ಸತ್ಯಜ್ಞಾನಮನಂತಂಬ್ರಹ್ಮವನೆಯಿದಿ ನುಂಗಿ ಉಗುಳಲಾರದೆ
ಅಲ್ಲಿಯೇ ಸತ್ತಿತ್ತು ನೋಡಾ.
ತಾ ಸತ್ತ ಬಳಿಕ ಇನ್ನೆತ್ತಳ ತತ್ವಾತತ್ವವಿಚಾರ ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./588
ವಾರಣದುದರದಲ್ಲಿ ಮಾರಿ ಮನೆಯಮಾಡಿಕೊಂಡಡಿಪ್ಪಳು
ನೋಡಾ.
ಮಾರಿಯ ಮನೆಯ ಹೊಕ್ಕವರೆಲ್ಲ ದಾರಿಯ ಕಾಣದೆ,
ಹೋರಾಟಗೊಳುತ್ತಿದ್ದಾರೆ ನೋಡಾ.
ಇವರೆಲ್ಲರ ಹೋರಾಟವ ಕಂಡು,
ಮೂರುಲೋಕದ ಮಸ್ತಕವ ಮೆಟ್ಟಿ ನಿಲಲು,
ವಾರುಣದುದರ ಬೆಂದಿತ್ತು. ಮಾರಿ ಸತ್ತಳು.
ದಾರಿ ನಿವಾಟವಾಯಿತ್ತು ನಿಮ್ಮವರಿಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./589
ವಾರಿ ಬಲಿದು ವಾರಿಶಿಲೆಯಾದಂತೆ,
ವಾರಿಶಿಲೆ ಕರಗಿ ಉದಕವಾದಂತೆ,
ನಿನ್ನ ವಿನೋದಕ್ಕೆ ನೀನೆ ಶರಣನಾದೆ.
ನಿನ್ನ ವಿನೋದಕ್ಕೆ ನೀನೆ ಲಿಂಗವಾದೆ.
ನಿನ್ನ ವಿನೋದ ನಿಂದಲ್ಲಿ, ನೀನೆ ಶರಣ ಲಿಂಗವೆಂಬುಭಯವಳಿದು
ನಿರಾಳ ನಿರ್ಮಾಯನಾಗಿ ನಿಶ್ಯಬ್ದಮಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./590
ವಾಸನೆಯ ಕೊಂಬುದು ಲಿಂಗದ ನಾಸಿಕ;
ರುಚಿಸುವದು ಲಿಂಗದ ಜಿಹ್ವೆ;
ನೋಡುವದು ಲಿಂಗದ ನೇತ್ರ;
ಕೇಳುವದು ಲಿಂಗದ ಶ್ರೋತ್ರ;
ಸೋಂಕುವದು ಲಿಂಗ ತ್ವಕ್ಕು;
ನಡೆವುದು ಲಿಂಗ ತಾನೆ.
ನುಡಿವುದು ಲಿಂಗ ತಾನೆ.
ಮನಬೆರಸಿ ಪರಿಣಾಮಿಸುವುದು ಲಿಂಗ ತಾನೆಯೆಂಬ ಭಾವ
ಸಹಭಾಜನವೆಂದೆನಿಸಿಕೊಂಡಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./591
ವಿಶ್ವಾಸದಿಂದ ಅಂಗನೆಯ ಕುಚ, ಲಿಂಗವಾದುದಿಲ್ಲವೆ?
ವಿಶ್ವಾಸದಿಂದ ಬಳ್ಳ ಲಿಂಗವಾದುದಿಲ್ಲವೆ?
ವಿಶ್ವಾಸದಿಂದ ಆಡಿನ ಹಿಕ್ಕೆ ಲಿಂಗವಾದುದಿಲ್ಲವೆ?
ವಿಶ್ವಾಸದಿಂದ ಲಿಂಗವನಪ್ಪಿದ ಹೆಣ್ಣು ಗಂಡಾದುದಿಲ್ಲವೆ?
ವಿಶ್ವಾಸದಿಂದ ಓಗರವು ಪ್ರಸಾದವಾಗಿ
ಎಂಜಲೆಂದ ವಿಪ್ರರ ಮಂಡೆಯ ಮೇಲೆ ತಳೆಯಲು
ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ?
ಇದು ಕಾರಣ,
ವಿಶ್ವಾಸದಿಂದ ಗುರು; ವಿಶ್ವಾಸದಿಂದ ಲಿಂಗ;
ವಿಶ್ವಾಸದಿಂದ ಜಂಗಮ, ವಿಶ್ವಾಸದಿಂದ ಪ್ರಸಾದ.
ವಿಶ್ವಾಸಹೀನಂಗೆ ಗುರುವಿಲ್ಲ, ಲಿಂಗವಿಲ್ಲ,
ಜಂಗಮವಿಲ್ಲ, ಪ್ರಸಾದವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./592
ವಿಷಯರತಿಯುಳ್ಳವಂಗೆ ಈಶ್ವರರತಿಯಿನ್ನೆಲ್ಲಿಯದೋ?
ಅಂಗವಿಕಾರವುಳ್ಳವರಿಗೆ ಲಿಂಗಾಂಗ ಸಂಬಂಧವಿನ್ನೆಲ್ಲಿಯದೋ
ಅಯ್ಯ?.
ಮಾಯಾಪಟಲ ಹರಿಯದ ಹಿರಿಯರಿಗೆ ಮಹದ ಮಾತೇಕೋ?
ಸಂಸಾರಸಂಗಾನುಭಾವದ ದುಶ್ಚರಿತ್ರದೊಳಗಿಪ್ಪವರಿಗೆ
ಲಿಂಗಾನುಭಾವದ ಮಾತೇಕೋ? ಬಿಡು ಬಿಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./593
ವೇದಶಾಸ್ತ್ರ ಪುರಾಣಾಗಮಂಗಳುದಯವಾಗದಂದು,
ದ್ವೆ ತಾದ್ವೆ ತವಿಲ್ಲದಂದು
ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ,
ಮಾಣಿಕ್ಯವರ್ಣಮೆಂಬ
ಈ ಷಡುವರ್ಣಮುಖ್ಯವಾದ ಸಮಸ್ತವರ್ಣಂಗಳಿಲ್ಲದಂದು,
ನೀನು, ವಾಚಾತೀತ ಮನಾತೀತ ವಣರ್ಾತೀತ
ಭಾವಾತೀತ ಜ್ಞಾನಾತೀತನಾಗಿ,
ನೀನು ನಿಃಕಲನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./594
ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿಧಿಯ
ದರ್ಶನವಾದಿಗಳ ಪರಿ ವರ್ತನೆಯಲ್ಲ; ಶರಣನ ವರ್ತನೆ ಬೇರೆ.
ವೀರಶೈವ ಸಿದ್ಧಾಂತ ನಿರ್ಣಯ ನಿಜಭಕ್ತಿ.
ನಿಜ ಶಿವಜ್ಞಾನ, ಪರಮ ವೈರಾಗ್ಯವನುಳ್ಳ
ಸರ್ವಾಚಾರ ಸಂಪನ್ನ ಶರಣ.
ಲಿಂಗಾತ್ಮಕ, ಲಿಂಗೇಂದ್ರಿಯ, ಲಿಂಗಾಂಗಸಂಗಿ, ಘನಲಿಂಗಯೋಗಿ.
ಪ್ರಾಣಮುಕ್ತ, ಮನೋಮುಕ್ತ, ಶರೀರಮುಕ್ತ.
ಅನಾದಿ ಕೇವಲ ಮುಕ್ತರಯ್ಯಾ ನಿಮ್ಮ ಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./595
ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆಯೆಂಬ
ದೀಕ್ಷಾತ್ರಯಂಗಳಿಂದ ತನುತ್ರಯಂಗಳ ಪೂರ್ವಾಶ್ರಯವ ಕಳದು
ಲಿಂಗತ್ರಯಂಗಳ ಸಂಬಂಧಿಸಿದನದೆಂತೆಂದಡೆ:
ವೇಧಾದೀಕ್ಷೆಯೆಂದು ಶ್ರೀಗುರು ತನ್ನ ಹಸ್ತವ
ಶಿಷ್ಯನ ಮಸ್ತಕದಲ್ಲಿ ಸಂಯೋಗವ ಮಾಡಿದುದು;
ಮಂತ್ರದೀಕ್ಷೆಯೆಂದು ಶ್ರೀಗುರು ಪ್ರಣವಪಂಚಾಕ್ಷರಿಯ ಮಂತ್ರವ
ಕರ್ಣದಲ್ಲಿ ಉಪದೇಶಿಸಿದುದು;
ಕ್ರಿಯಾದೀಕ್ಷೆಯೆಂದು ಆ ಮಂತ್ರಸ್ವರೂಪವನೆ
ಇಷ್ಟಲಿಂಗಸ್ವರೂಪವ ಮಾಡಿ ಕರಸ್ಥಲದಲ್ಲಿ ಸಂಬಂಧಿಸಿದುದು.
ಇದು ಕಾರಣ,
ವೇಧಾದೀಕ್ಷೆಯಿಂದ ಕಾರಣತನುವಿನ ಪೂರ್ವಾಶ್ರಯವಳಿದು
ಭಾವಲಿಂಗಸಂಬಂಧವಾಯಿತ್ತು.
ಮಂತ್ರದೀಕ್ಷೆಯಿಂದ ಸೂಕ್ಷ್ಮಂತನುವಿನ ಪೂರ್ವಾಶ್ರಯವಳಿದು
ಪ್ರಾಣಲಿಂಗಸಂಬಂಧವಾಯಿತ್ತು.
ಕ್ರಿಯಾದೀಕ್ಷೆಯಿಂದ ಸ್ಥೂಲತನುವಿನ ಪೂರ್ವಾಶ್ರಯವಳಿದು
ಇಷ್ಟಲಿಂಗಸಂಬಂಧವಾಯಿತ್ತು.
ಅಂಗತ್ರಯಂಗಳಲ್ಲಿ ಲಿಂಗತ್ರಯಂಗಳ ಧರಿಸಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./596
ಶರಣನಂಗ ಲಿಂಗವನಪ್ಪಿತ್ತಾಗಿ
ಶರಣನ ತನುವೆ ಲಿಂಗದ ತನು ನೋಡಾ.
ಲಿಂಗದ ತನು ಶರಣನನಪ್ಪಿತ್ತಾಗಿ
ಶರಣನ ತನುವೆ ಲಿಂಗದ ತನು ನೋಡಾ.
ಶರಣನ ಮನ ಲಿಂಗವನಪ್ಪಿ, ಲಿಂಗದ ಮನ ಶರಣನನಪ್ಪಿದ ಕಾರಣ
ಶರಣನ ಮನವೆ ಲಿಂಗ; ಲಿಂಗದ ಮನವೆ ಶರಣ ನೋಡಾ.
ಶರಣನ ಹರಣ ಲಿಂಗವನಪ್ಪಿ
ಲಿಂಗದ ಹರಣ ಶರಣನನಪ್ಪಿದ ಕಾರಣ
ಶರಣನ ಹರಣವೆ ಲಿಂಗ
ಲಿಂಗದ ಹರಣವೆ ಶರಣ ನೋಡಾ.
ಶರಣನ ಭಾವವೆ ಲಿಂಗ;
ಲಿಂಗದ ಭಾವವೆ ಶರಣ ನೋಡಾ.
`ಅಹಂ ಮಾಹೇಶ್ವರಃ ಪ್ರಾಣೋ| ಮಮ ಪ್ರಾಣೋ ಮಾಹೇಶ್ವರಃ
ತಸ್ಮಾದ್ಧವಿರಳಂ ನಿತ್ಯಂ ಶರಣಂ ನಾಮವರ್ತತೇ||’
ಎಂದುದಾಗಿ ಭಾವ ಭೇದವಿಲ್ಲ ಶರಣ ಲಿಂಗಕ್ಕೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./597
ಶರಣನೇ ಲಿಂಗ; ಲಿಂಗವೇ ಶರಣ
ಈ ಎರಡಕ್ಕೂ ಭಿನ್ನವಿಲ್ಲವಯ್ಯ.
ಲಿಂಗಕ್ಕಿಂತಲೂ ಶರಣನೇ ಅಧಿಕವಯ್ಯ.
ನಿಮಗೆ ಪಂಚಮುಖ;
ನಿಮ್ಮ ಶರಣಂಗೆ ಸಹಸ್ರ ಮುಖ, ಸಹಸ್ರ ಕಣ್ಣು,
ಸಹಸ್ರ ಬಾಹು, ಸಹಸ್ರ ಪಾದ.
ಆ ಶರಣನ ಮುಖದಲ್ಲಿ ರುದ್ರ;
ಭುಜದಲ್ಲಿ ವಿಷ್ಣು,
ಜಂಫೆಯಲ್ಲಿ ಆಜನ ಜನನ.
ಇಂದ್ರ ಪಾದದಲ್ಲಿ; ಚಂದ್ರ ಮನಸ್ಸಿನಲ್ಲಿ;
ಸೂರ್ಯ ಚಕ್ಷುವಿನಲ್ಲಿ; ಅಗ್ನಿ ವಕ್ತ್ರದಲ್ಲಿ;
ಪ್ರಾಣದಲ್ಲಿ ವಾಯು; ನಾಭಿಯಲ್ಲಿ ಗಗನ;
ಪಾದತಲದಲ್ಲಿ ಭೂಮಿ; ದಶದಿಕ್ಕು ಶ್ರೋತ್ರದಲ್ಲಿ;
ಶಿರದಲುದಯ ತೆತ್ತೀಸಕೋಟಿ ದೇವಾದಿದೇವರ್ಕಳು.
ಇಂತು ಕುಕ್ಷಿಯಲ್ಲಿ ಜಗವ ನಿರ್ಮಿಸಿ ನಿಕ್ಷೇಪಿದನು
ಅಕ್ಷಯನು, ಅಗಣಿತನು.
ಇಂತಪ್ಪ ಮಹಾಮಹೇಶ್ವರನ ನಿಜ ಚಿನ್ಮಯಸ್ವರೂಪವೇ
ಪ್ರಭುದೇವರು ನೋಡಾ.
ಅಂತಪ್ಪ ಪರಮ ಪ್ರಭುವೇ
ಎನಗೆ ಪರಮಾನಂದವಪ್ಪ ಪ್ರಾಣಲಿಂಗವೆಂದು ಆರಾಧಿಸಿ
ಬದುಕಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./598
ಶರನಿಧಿ ರತ್ನವ ಧರಿಸಿದ್ದರೆ
ಆ ಮಹಾನದಿಗೆ ಒಂದು ಬಡತನ ಉಂಟೇ ಅಯ್ಯ?
ಮೇರುಗಿರಿಪರ್ವತ ಮೂಲಿಕೆಯ ಧರಿಸಿರ್ದರೆ
ಆ ಮೇರುಗಿರಿಪರ್ವತಕೆ ಒಂದು ಬಡತನ ಉಂಟೇ ಅಯ್ಯ?
ಅನಾದಿಮಯ ಪರಿಪೂರ್ಣಲಿಂಗವು ಶರಣನಾಗಿ ಪ್ರವರ್ತಿಸಿತ್ತು.
ಏತಕ್ಕಯ್ಯ ಎಂದರೆ;
ತನ್ನ ಮಹಿಮಾಗುಣ ವೈಭವವ ಪ್ರಕಾಶಿಸ ತೋರಲಾಯಿತ್ತಯ್ಯ?
ಶರಣ ಲಿಂಗವೆಂಬ ಅಂತರವೆಲ್ಲಿಯದೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ
ಶರಣ ಲಿಂಗವೆಂಬಾತ ಕಾಣಿರೋ./599
ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು ಹುಟ್ಟಿದರು ನೋಡಾ.
ಐವರು ಸ್ತ್ರೀಯರ ವಿಲಾಸದಿಂದ
ಅನೇಕ ಕೋಟಿ ಬ್ರಹ್ಮಾಂಡಗಳ ತೋರಿಕೆ ನೋಡಾ.
ಪಿಂಡಾಂಡಕ್ಕೆ ತಾವೆ ಅಧಿಷ್ಠಾನ ಕರ್ತೃಗಳಾಗಿಪ್ಪವು ನೋಡಾ.
ಸ್ತ್ರೀಯರೈವರ ಅವರವರ ಭಾವಕ್ಕೆ ನೆರೆದು
ಪರಮನೊಬ್ಬನೇ ಪಂಚಪುರುಷನಾಗಿಪ್ಪನು ನೋಡಾ.
ಸ್ತ್ರೀಪುರುಷರನೊಳಕೊಂಡು
ಅತಿಶಯವಾದ ಅವಿರಳಪರಬ್ರಹ್ಮವೇ ತಾನಾದುದ ಕಂಡು
ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./600
ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ
ಚಿತ್ಕರಣಂಗಳು ನೋಡಾ.
ಆತಂಗೆ ಶರೀರ[ಶುಚಿ] ಚಿದ್ಭೂಮಿ ಚಿಜ್ಜಲ ಚಿದಗ್ನಿ
ಚಿತ್ಪ್ರಾಣವಾಯು ಚಿದಾಕಾಶಮಯ ನೋಡಾ.
ಆ ಚಿದಾಭರಣಂಗೆ ಚಿಚೈತನ್ಯ[ಕೆ] ತ್ವಾನೇ ಪ್ರಾಣಲಿಂಗ ನೋಡಾ.
ಆ ಚಿದಾಭರಣ ಶರಣನು ಚಿದ್ಘನಲಿಂಗವ ನೆರೆದು
ಪರಾಪರನಾದ ಪರಶಿವಯೋಗಿ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./601
ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು
ಪಶುಪತಿಯ ಸಂಗಸುಖಕ್ಕೆ ಯಾಕೆ ಎಣಿಸಲೊಲ್ಲರಯ್ಯ?
ಶಿವ ಶಿವಾ! ನೀ ಮಾಡಿದ ವಿಷಯದ ವಿಧಿ,
ಈರೇಳುಲೋಕವನಂಡಲೆವುತ್ತಿದೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./602
ಶಶಿವದನೆಯ ಮಸ್ತಕವನೊಡೆದು
ಅಸಮಾಕ್ಷನುದಯವಾದನು ನೋಡಿರೇ.
ಅಸಮಾಕ್ಷನುದಯಕ್ಕೆ ರವಿ ಶಶಿ ಶಿಖಿವೊಂದಾಗಿ
ಅಸಮಾಕ್ಷನ ನೆರೆದು ಸತಿ ಪತಿ ಭಾವ ಸತ್ತಿತ್ತು.
ಪರವಸ್ತುವೆಂದು ಬೇರುಂಟೆ ತಾನಲ್ಲದೆ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./603
ಶಾಂಭವಲೋಕದ ಕುಂಭಿನಿಯುದರದ ಮೇಲೆ
ಅಂಗನೆ ಅರುದಿಂಗಳ ಹಡೆದಳು ನೋಡಾ.
ಅರುದಿಂಗಳ ಅದಾರನೂ ಅರಿಯದೆ
ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು
ಕುಂಭಿನಿಯುದರದಂಗನೆ ಸತ್ತುದ ಕಂಡು
ಇಹಲೋಕ ಪರಲೋಕ ಆವ ಲೋಕವ ಹೊಗದೆ
ಲೋಕಶ್ರೇಷ್ಠವಲ್ಲವೆಂದು
ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು
ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ
ನಮೋ ನಮೋಯೆಂದು ಬದುಕಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./604
ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ಅಪ್ರಮೇಯ
ಶುದ್ಧ ಸೂಕ್ಷ್ಮಂ ಚಿನ್ಮಯನು ನೋಡಾ.
ಆ ಚಿದಮೃತ ಕಳಾಪ್ರಸಾದವನೊಡಗೂಡಿ
ಶುದ್ಧ ಪ್ರಣವ ಪ್ರಸಾದಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./605
ಶಿವತತ್ವದ ಆದಿಮಧ್ಯಾವಸಾನವನರಿಯದೆ
ಭಕ್ತರೆಂತಪ್ಪಿರಿಯಯ್ಯ?
ಶಿವತತ್ವದಾದಿಯೇ ಮಹೇಶ್ವರ.
ಶಿವತತ್ವದ ಮಧ್ಯವೇ ಸದಾಶಿವ.
ಶಿವತತ್ವದವಸಾನವೇ ಪರತತ್ವ.
ಮಾಹೇಶ್ವರನಲ್ಲಿ ತನುವ ನಿಲ್ಲಿಸಿ
ಸದಾಶಿವನಲ್ಲಿ ತನ್ನ ಮನವ ಸಾಹಿತ್ಯವ ಮಾಡಲು
ಮನೋಮಧ್ಯದಲ್ಲಿ ಪಂಚಬ್ರಹ್ಮಮೂರ್ತಿಯಾಗಿಪ್ಪುನು
ನೋಡಾ ಸೂಕ್ಷ್ಮಂತತ್ವವು.
ಪ್ರಾಣವು ಪರವನಪ್ಪಿ ಪರಾಪರನಾಗಿ
ಪ್ರಪಂಚವನೇನುವಂ ಮುಟ್ಟದೆ
ಪರಮಮಾಹೇಶ್ವರನಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./606
ಶಿವನ ಕಾಯವೇ ಭಕ್ತ, ಭಕ್ತನ ಕಾಯವೇ ಶಿವ.
ಶಿವನ ಚೈತನ್ಯವೇ ಭಕ್ತ, ಭಕ್ತನ ಚೈತನ್ಯವೇ ಶಿವನು ನೋಡಾ.
ಭಕ್ತನ ಮನ ಭಾವ ಕರಣಂಗಳೇ ಭಕ್ತನು ನೋಡಾ.
ಇದು ಕಾರಣ.
ಶಿವನೇ ಭಕ್ತನು; ಭಕ್ತನೇ ಶಿವನು.
ದೇವ ಭಕ್ತನೆಂಬ ಅಂತರವೆಲ್ಲಿಯದೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./607
ಶಿವನಲ್ಲದೆ ಬೇರೆ ದೈವವಿಲ್ಲ ನೋಡ ಎನಗೆ.
ಶಿವಮಂತ್ರವಲ್ಲದೆ ಬೇರೆ ಮಂತ್ರವಿಲ್ಲ ನೋಡ ಎನಗೆ.
ಇದು ಕಾರಣ,
`ಓಂ ನಮಃಶಿವಾಯ ಓಂ ನಮಃ ಶಿವಾಯ ಓಂ ನಮಃಶಿವಾಯ’
ಎಂಬ
ಷಡಕ್ಷರಮಂತ್ರವನೆ ಜಪಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./608
ಶಿವನೂ ಉಂಟು, ಆತ್ಮನೂ ಉಂಟು, ಮಾಯೆಯೂ ಉಂಟು
ಎಂಬೆ ಎಲೆ ಮರುಳು ಮಾನವ.
ಆತ್ಮನನಾದಿಯೋ, ಮಾಯೆಯನಾದಿಯೋ, ಶಿವನನಾದಿಯೋ?
ಈ ಮೂರೂ ಅನಾದಿಯಲ್ಲಿ ಉಂಟಾದರೆ,
ಆದಿಯೆಂದಡೆ ದೇಹ, ಅನಾದಿಯೆಂದೆಡೆ ಆತ್ಮನು.
ದೇಹವೂ ಆತ್ಮನೂ ಮಾಯೆಯೂ ಈ ಮೂರೂ ಇಲ್ಲದಂದು
ನಿತ್ಯನಿರಂಜನ ಪರಶಿವತತ್ತ್ವವೊಂದೇ ಇದ್ದಿತ್ತೆಂಬುದು
ಯಥಾರ್ಥವಲ್ಲದೆ,
ಉಳಿದವೆಲ್ಲ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./609
ಶಿವನೇ ಶರಣ, ಶರಣನೇ ಶಿವನೆಂದೆಂಬರು.
ಹೀಗೆಂದೆಂಬುದು ಶ್ರುತಪ್ರಮಾಣದ ವಾಚಾಳಕತ್ವವಲ್ಲದೆ
ಪರಮಾರ್ಥವಲ್ಲ ನೋಡ.
ಶರಣನೇ ಲಿಂಗವೆಂಬುದು ಏಕಾರ್ಥವಾದಡೆ,
ಇತರ ಮತದ ದ್ವೆ ತಾದ್ವೆ ತ ಶಾಸ್ತ್ರವ ಕೇಳಿ,
ಅಹುದೋ ಅಲ್ಲವೋ, ಏನೋ ಎಂತೋ ಎಂದು
ಸಂದೇಹಿಸಿದಲ್ಲಿ ಅದು ಅಜ್ಞಾನ ನೋಡಾ.
ಶಿವಜ್ಞಾನ ಉದಯವಾದ ಶರಣರ
ಆದಿ ಮಧ್ಯಾವಸಾನವರಿದು, ನಿಶ್ಚಯಿಸಿ, ನೆಲೆಗೊಂಡ ಬಳಿಕ
ಇತರ ಮತದ ವೇದ ಶಾಸ್ತ್ರಪುರಾಣ ಆಗಮಂಗಳ
ಶ್ರುತಿ ಭ್ರಾಂತಿಗೆ ಭ್ರಮೆಗೊಂಬನೆ ನಿಭ್ರಾಂತನಾದ ನಿಜಲಿಂಗೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./610
ಶಿವಭಾವದಿಂದ ಆತ್ಮಹುಟ್ಟಿ
ಶಿವ ತಾನೆಂಬುಭಯವನಲಂಕರಿಸಿದನಾಗಿ
ಆತ್ಮಂಗೆ ಭಾವವೆಂಬ ಹೆಸರಾಯಿತ್ತು.
ಆತ್ಮನು ಆಕಾಶವ ಬಂದು ಕೂಡಿದಲ್ಲಿ
ಜ್ಞಾನವೆಂಬ ಹೆಸರಾಯಿತ್ತು.
ಆತ್ಮನು ವಾಯುವ ಬಂದು ಬೆರಸಿದಲ್ಲಿ
ಮನಸ್ಸೆಂಬ ಹೆಸರಾಯಿತ್ತು.
ಆತ್ಮನು ಅಗ್ನಿಯ ಬಂದು ಕೂಡಿದಲ್ಲಿ
ಅಹಂಕಾರವೆಂಬ ಹೆಸರಾಯಿತ್ತು.
ಆತ್ಮನು ಅಪ್ಪುವ ಬಂದು ಬೆರಸಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು.
ಆತ್ಮನು ಪೃಥ್ವಿಯ ಬಂದು ಕೂಡಿದಲ್ಲಿ ಚಿತ್ತ ಪುಟ್ಟಿತ್ತಯ್ಯ.
ಚಿತ್ತವಾಚಾರಲಿಂಗವ ಧರಿಸಿಪ್ಪುದು.
ಬುದ್ಧಿ ಗುರುಲಿಂಗವ ಧರಿಸಿಪ್ಪುದು.
ಅಹಂಕಾರ ಶಿವಲಿಂಗವ ಧರಿಸಿಪ್ಪುದು.
ಮನಸ್ಸು ಜಂಗಮಲಿಂಗವ ಧರಿಸಿಪ್ಪುದು.
ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು.
ಭಾವ ಮಹಾಲಿಂಗವ ಧರಿಸಿಪ್ಪುದಯ್ಯ.
ಈ ಭೇದವನರಿದು ಲಿಂಗವ ಧರಿಸಬಲ್ಲರಾಗಿ
ನಿಮ್ಮ ಶರಣರು ಸರ್ವಾಂಗಲಿಂಗಿಗಳಯ್ಯ.
ಬಸವ, ಪ್ರಭು, ಚೆನ್ನಬಸವಣ್ಣ ಮೊದಲಾದ ವೀರ ಶಿವೈಕ್ಯರ
ಬಂಟರಬಂಟನಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./611
ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ.
ಹರಹರಯೆಂಬುದು ಹರಣದ ತೊಡಕಿನ ಮರಣವ
ಪರಿಹರಿಸುವುದು ನೋಡಾ.
ಇದು ಕಾರಣ,
ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿಯು
`ಓಂ ನಮಃಶಿವಾಯ ಓಂ ನಮಃಶಿವಾಯ ಓಂ ನಮಃಶಿವಾಯ’
ಎಂಬ
ಪ್ರಣವ ಪಂಚಾಕ್ಷರಿಯನೆ ಸ್ಮರಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./612
ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ ನೆನೆರ
ಭಂಡರ ಮುಖವ ನೋಡೆ, ನೋಡೆ.
ಶಿವಾಶ್ರಯವೆಂದರೆ, ಶ್ರೀ ಗುರುವಿನ ಕರಕರಮಲವೆಂಬ ಪರಿ;
ಭವಾಶ್ರಯವೆಂದರೆ, ತನ್ನ ಹಿಂದಣ ತಾಯಿ ತಂದೆಗಳೆಂಬ ಪರಿ.
ಇಂತು ಗುರುಕರಜಾತನಾಗಿ, ಗುರುಕುಮಾರನಾಗಿ,
ನರರ ಹೆಸರ ಹೇಳುವ ನರಕಜೀವಿಯ ಎನಗೊಮ್ಮೆ ತೋರದಿರ.
ತಾನು ಶುದ್ಧನಿರ್ಮಲನಾಗಿ ಮಲಸಂಬಂಧವ ಬೆರೆಸುವ
ಮರುಳುಮಾನವನ ಪರಿಯ ನೋಡಾ.
ಇಂತಪ್ಪ ಅಜ್ಞಾನಿಯ ಶಿಷ್ಯನೆಂದು ಕೈವಿಡಿಯಬಹುದೆ?.
ಇಂತಿವರಿಬ್ಬರ ಗುರುಶಿಷ್ಯಸಂಬಂಧವ ಕಂಡು
ನಾನು ಹೇಸಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./613
ಶಿಶು ತಾಯ ಮರೆವುದೆ ಅಯ್ಯ?
ಪಶು ಕರುವ ಮರೆವುದೆ ಅಯ್ಯ?
ಅಂಗನೆ ರಮಣನ ಮರೆವಳೆ ಅಯ್ಯ?
ಲಿಂಗಸಾವಧಾನಿಯಾದಾತ ಲಿಂಗದ ನೆನಹ ಮರೆವನೆ ಅಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./614
ಶುದ್ಧ ಶಿವತತ್ವ ವೇದ್ಯವಾಗಿ ಶಬ್ದಮುಗ್ಧನಾದೆನಾಗಿ
ಮೂರ್ತಿ ಅಮೂರ್ತಿ ತತ್ತ್ವಾತತ್ವಂಗಳನರಿಯೆ.
ಮದ ಮೋಹಂಗಳ ಮರೆದೆ.
ಅದೇನುಕಾರಣವೆಂದರೆ:
ಮಂದೆ ಅರಿವುದಕ್ಕೆ ಕುರುಹಿಲ್ಲವಾಗಿ.
ಅರುಹು ಕುರುಹುನೊಳಕೊಂಡು
ತೆರಹಿಲ್ಲದ ಪರಿಪೂರ್ಣನಿಗೆ ಮಾಯವೆಲ್ಲಿಯದು?
ದೇಹಮದೆಲ್ಲಿಯದು? ದೇಹಿಯದೆಲ್ಲಿಯವನು?
ಮಾಯ ದೇಹ ದೇಹಿಯಿಲ್ಲವಾಗಿ
ಸ್ವಯವೆಲ್ಲಿಯದು ಪರವೆಲ್ಲಿಯದು?
ಪರವಸ್ತು, ತಾನಾದ ಶರಣಂಗೆ ಮುಂದಿನ್ನೇನು ಹೇಳಲಿಲ್ಲ ಕಾಣಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./615
ಶುದ್ಧ ಸತ್ಕುಲಜಂಗೆ ಅಃಕ್ಕುಲಿಜೆಯ ಸಂಗದಿಂದ
ಸತ್ಕುಲ ಕೆಟ್ಟು ಅಃಕ್ಕುಲಜನಾಗಿ ಹುಟ್ಟುತ್ತ ಹೊಂದುತ್ತಿಹುದ-
ನಿದನಾರು ಮಾಡಿದರೋ ಎಂದು ಆರೈದು ನೋಡಿ
ಮಾರಾರಿಯ ಕೃತಕವೆಂದರಿಯಲಾ
ಸತ್ಕುಲಜನ ತಾಯಿ ಅಃಕ್ಕುಲಿಜೆಯ ಕೊಂದು
ಸುಪುತ್ರನ ನುಂಗಿ
ತತ್ತ್ವಮಸಿವಾಕ್ಯದಿಂದತ್ತತ್ತಲಾದವನ
ನೆತ್ತಿಯಲ್ಲಿ ಹೊತ್ತು ನೆರೆಯಲು
ಭಕ್ತಿ ನಿಃಪತಿಯಾಯಿತ್ತು.
ಸತ್ಯವಿಲ್ಲ, ಎನಗೊಂದು ಸಹಜವಿಲ್ಲ.
ಗುರು ಲಿಂಗ ಜಂಗಮವೆಂಬ ಮಿಥ್ಯದ ಮಾತೆಲ್ಲಿಯದೋ
ಮೂರೊಂದಾಗಿ ಬೆರೆದ ನಿರಾಳಕ್ಕೆ?.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ
ನಾಮವೆಲ್ಲಿಯದೋ ನಿರ್ನಾಮಂಗೆ? ಬಿಡಾ ಮರುಳೆ./616
ಶೈವರು ಕಟ್ಟಿದ ಗುಡಿಯ ಹೊಗಲೇಕೆ?
ಶೈವರು ನೆಟ್ಟ ಲಿಂಗವ ಮುಟ್ಟಿ ಪೂಜಿಸಲೇಕೆ?
ಆದಕೆ ಉಪಾಸಿತವ ಮಾಡಲೇಕೆ?
ನೆಟ್ಟಿದ್ದ ಕಲ್ಲಿಗೆ ನೀಡಿ ಕೆಡೆದರೆ
ಕಟ್ಟಿದ್ದ ಕಲ್ಲಿನ ಕಷ್ಟವ ನೋಡಿರೆ!
ಕಟ್ಟಿದ ಕಲ್ಲು ಕಳೆದಿಟ್ಟು ಬಿಟ್ಟು
ನೆಟ್ಟಿದ್ದ ಕಲ್ಲಿಗೆ ನಮಿಸಿರಾ ಭ್ರಷ್ಟರಿರಾ.
ತನ್ನ ಗುರು ಕೊಟ್ಟ ಇಷ್ಟಲಿಂಗ ಕೊಡಲರಿಯದೆಂದು,
ನೆಟ್ಟಿದ್ದ ಲಿಂಗ ಕೊಟ್ಟಿತ್ತೆಂಬ ಕೊಟ್ಟಿಗಳ ಕೆಡೆನೋಡಿ
ಹೊಟ್ಟೆ ಹುಣ್ಣಾಗುವಂತೆ ನಗುತಿರ್ದೆನಯ್ಯ.
ಅದೇನು ಕಾರಣವೆಂದಡೆ:
ಕಟ್ಟಿದ್ದುದೂ ಕಲ್ಲು, ನೆಟ್ಟಿದ್ದುದೂ ಕಲ್ಲು.
ಅದೇನು ಕಾರಣವೆಂದಡೆ;
ಏಕಲಿಂಗನಿಷ್ಠಾಚಾರವಿಲ್ಲದ ಕಾರಣ.
ಪ್ರಾಣಲಿಂಗಿಗೆ ಈ ಪಾಷಾಣದ ಹಂಗುಂಟೆ?
ಆತ್ಮನೊಳಗೆ ಹುಟ್ಟಿದ ಅನುಭಾವಲಿಂಗವ ಶ್ರೀಗುರು ತಂದು
ಕರಸ್ಥಲದಲ್ಲಿ ಇಷ್ಟಲಿಂಗವ ಮಾಡಿರಿಸಿದನಾಗಿ
ಇಷ್ಟ ಪ್ರಾಣ ಒಂದೇಯೆಂದು ಅರಿದು
ಆರಾಧಿಸಿ ಸುಖಿಯಾಗಿದ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./617
ಶ್ರೀಗುರು ಈ ವಿಭೂತಿಯನ್ನು ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಲು
ಬ್ರಹ್ಮನ ಉತ್ಪತ್ಯದ ಅಂಡವೊಡೆಯಿತ್ತು ನೋಡಾ.
ಶ್ರೀಗುರು ಈ ವಿಭೂತಿಯನೆ ಅಡಿಗಡಿಗೆ ಧರಿಸಿ ಕಲಿಸಿದನಾಗಿ
ವಿಷ್ಣುವಿನ ಸ್ಥಿತಿಗತಿಯ ಕುಕ್ಷಿಹರಿಯಿತ್ತು ನೋಡಾ.
ಶ್ರೀಗುರು ಈ ವಿಭೂತಿಯ ಸರ್ವಾಂಗದಲ್ಲಿ
ಧರಿಸೆಂದು ಉಪದೇಶಿಸಿದನಾಗಿ,
ಅಂತರಂಗದ ಬಹಿರಂಗದ ಭ್ರಾಂತಿ ಭಸ್ಮವಾಗಿ.
ರುದ್ರನ ಲಯದ ಹೊಡೆಗಿಚ್ಚು ಕೆಟ್ಟಿತ್ತು ನೋಡಾ.
ಶ್ರೀಗುರು ಈ ವಿಭೂತಿಯ ಅನಾದಿಚಿತ್ ಸ್ವರೂಪವೆಂದು
ತಿಳುಹಿದನಾಗಿ
ಅನಾದಿ ಸಂಸಿದ್ಧವಾದ ವಿಮಲಭೂತಿಯನೆ ಕ್ರೀಯಿಟ್ಟು
ಅಡಿಗಡಿಗೆ ಧರಿಸುತ್ತಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./618
ಶ್ರೀಗುರು ಶಿವಗಣಂಗಳ ಮಧ್ಯದಲ್ಲಿ ಎನಗೆ ಉಪದೇಶಿಸುವಲ್ಲಿ
ಪರಮೇಶ್ವರನ ಪಂಚಮುಖವನೆ
ಪಂಚಕಳಶವಾಗಿ ಮೂರ್ತಿಗೊಳಿಸಿ,
ಗಣಂಗಳು ಸಾಕ್ಷಿಯಾಗಿ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟು
`ಈ ಲಿಂಗವೆ ಗಂಡ, ನೀನೇ ಹೆಂಡತಿ’ಯೆಂದು ಹೇಳಿ,
ಲಲಾಟದಲ್ಲಿ ವಿಭೂತಿಯ ಪಟ್ಟವ ಕಟ್ಟಿ
ಹಸ್ತದಲ್ಲಿ ಕಂಕಣವ ಕಟ್ಟಿ, ಪಾದೋದಕ ಪ್ರಸಾದವನಿತ್ತು
ಎಂದೆಂದಿಗೂ ಸತಿಪತಿಭಾವ ತಪ್ಪದಿರಲಿಯೆಂದು
ನಿರೂಪಿಸಿದದನಯ್ಯ ಶ್ರೀಗುರು.
ಆ ನಿರೂಪವ ಮಹಾಪ್ರಸಾದವೆಂದು ಕೈಕೊಂಡೆನಯ್ಯ.
ಇದು ಕಾರಣ, ಎನ್ನ ಪತಿಯಲ್ಲದೆ ಅನ್ಯವನರಿಯೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./619
ಶ್ವಾನಂಗೆ ಪೃಷ್ಠದಲ್ಲಿ ಬಾಲ;
ಉಪಾಧಿಕಂಗೆ ಬಾಯಲ್ಲಿ ಬಾಲ ನೋಡಾ.
ಮಮಕಾರವೆಂಬ ನಾಯಿಯೆದ್ದು ಮುರುಗಲು
ನಾಲಗೆಯೆಂಬ ಬಾಲ ಬಡಿದಾಡುತ್ತಿದೆ ನೋಡಾ.
ಒಡಲುಪಾಧಿಗೆ ಉಪಚಾರವ ನುಡಿವ ವಿರಕ್ತನ ನಾಲಿಗೆ
ನಾಯ ಬಾಲಕಿಂದ ಕರಕಷ್ಟ ನೋಡಾ.
ಪರಮಾರ್ಥ ಪದದಲ್ಲಿ ಪರಿಣಾಮಿಯಾದವನ ಬಾಯಲ್ಲಿ
ಪ್ರಪಂಚುಂಟೆ ಹೇಳಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./620
ಷಡಕ್ಷರ ಶಕ್ತಿ ಯುಕ್ತವಾಗಿ
ಷಡುಸಾದಾಖ್ಯಮೂರ್ತಿ ಸಂಪೂರ್ಣವಾಗಿ
ಶರಣನ ಷಡಂಗದಲ್ಲಿ ಸದಾ ಸನ್ನಹಿತನಾಗಿ
ಸರ್ವ ಸರ್ವಜ್ಞ ಸರ್ವೆಶ ಸರ್ವಾನಂದಮಯ
ಷಟ್ಸ್ಥಲಬ್ರಹ್ಮಮೂರ್ತಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./621
ಷೋಡಶದಳಕಮಲದಲ್ಲಿ ನೋಡಬಾರದ ವಸ್ತುವ ಕಂಡೆ;
ಅದು ಶತಕೋಟಿ ಸೋಮಸೂರ್ಯರು
ಉದಯವಾದಂತಿದೆ ನೋಡಾ.
ನೋಡಬಾರದ ವಸ್ತುವ ಕೂಡಿ
ಅಭಿನವ ಶಿವಪ್ರಸಾದಿಯಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./622
ಸಂಗ್ರಹದ ಮನೆಯಲ್ಲಿ ಭೃಂಗೀಶ್ವರನೆದ್ದು
ಲಿಂಗಲೀಲೆಯಾಡುವುದ ಕಂಡೆನಯ್ಯ.
ನಂದೀಶ್ವರ ಮುಖ್ಯರಾದ ಪ್ರಮಥರು
ನಲಿದಾಡುತ್ತಿದಾರೆ ನೋಡಾ ಅಯ್ಯ.
ಸಂಗ್ರಹದ ಮನೆಯಳಿದು ಭೃಂಗಿ ಸಿಕ್ಕದೆ
ಭಂಗಿತರಾದರಲ್ಲಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./623
ಸಕಲ ಕರಣಂಗಳನು ಬಕುತಿಯ ಜ್ವಾಲೆಯಲ್ಲಿ ಸುಟ್ಟು
ಯುಕುತಿಯ ವಿಭೂತಿಯ ಧರಿಸಲು
ಮುಕುತಿಯಹುದಕೆ ಸಂದೇಹವಿಲ್ಲ.
ಇದು ಕಾರಣ ಶಿವಸಂಬಂಧವಾದ
ಶ್ರೀ ವಿಭೂತಿಯನೊಲಿದು ಧರಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./624
ಸಕಲ ಗುರು, ಸಕಲ ನಿಃಕಲ ಜಂಗಮ, ನಿಃಕಲ ಲಿಂಗ
ಇಂತೀ ತ್ರಿವಿಧಲಿಂಗಕ್ಕೆ ಮಾಡುವ ಭಕ್ತಿಯ ಕ್ರಮವೆಂತೆಂದೆಡೆ:
ಲಿಂಗವು ಜಂಗಮವು ಗುರುವಿನಲ್ಲಿ ಉಂಟೆಂದು
ತನು ಮನ ಧನವ ಸವೆದು ಮಾಡುವುದು ಗುರುಭಕ್ತಿ.
ಗುರುವು ಜಂಗಮವು ಲಿಂಗದಲ್ಲಿ ಉಂಟೆಂದು
ಮನ ಧನ ತನು ಮುಟ್ಟಿ ಮಾಡುವುದು ಲಿಂಗಭಕ್ತಿ.
ಗುರುವು ಲಿಂಗವು ಜಂಗಮದಲ್ಲಿ ಉಂಟೆಂದು
ಧನ ಮನ ತನುವ ಸವೆದು ಮಾಡುವುದು ಜಂಗಮಭಕ್ತಿ.
ಈ ತ್ರಿವಿಧಲಿಂಗಕ್ಕೆ ತ್ರಿವಿಧ ಪ್ರಕಾರದಲ್ಲಿ
ಮಾಡಿ ಕೂಡಿ ವಿರಾಜಿಸುವಾತನೆ ಶಿವಭಕ್ತನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./625
ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ
ಅಖಂಡ ಪರಿಪೂರ್ಣ ಗೋಳಕಾಕಾರ ಪರಂಜ್ಯೋತಿಸ್ವರೂಪವಪ್ಪ
ಮಹಾಲಿಂಗವಾಯಿತ್ತು ನೋಡಾ.
ಆ ಲಿಂಗದ ಮಧ್ಯದಲ್ಲಿ
ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ,
ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು,
ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ,
ಸಕಲ ನಿಃಕಲವಾಗಿ,
ಪಂಚಮುಖ ದಶಭುಜ ದಶಪಂಚನೇತ್ರ ದ್ವಿಪಾದ ತನುವೇಕ
ಶುದ್ಧ ಸ್ಫಟಿಕವರ್ಣ ಧಾತುವಿನಿಂದ
ಒಪ್ಪುತ್ತಿಪ್ಪುದು ಸದಾಶಿವಮೂರ್ತಿ.
ಆ ಸದಾಶಿವನ ಈಶಾನ್ಯಮುಖದಲ್ಲಿ ಆಕಾಶ ಪುಟ್ಟಿತ್ತು.
ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು.
ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು.
ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು.
ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು.
ಮನಸ್ಸಿನಲ್ಲಿ ಚಂದ್ರ, ಚಕ್ಷುವಿನಲ್ಲಿ ಸೂರ್ಯ.
ಪರಮಾತ್ಮ ಸ್ವರೂಪವಪ್ಪ ಗೋಪ್ಯಮುಖದಲ್ಲಿ ಆತ್ಮ ಹುಟ್ಟಿದನು.
ಇಂತು, ಪೃಥ್ವಿ ಅಪ್ಪು ತೇಜ ವಾಯು
ಆಕಾಶ ಚಂದ್ರ ಸೂರ್ಯ ಆತ್ಮನೆಂಬ
ಶಿವನ ಅಷ್ಟತನುಮೂರ್ತಿಯೆ ಸಮಸ್ತ ಜಗತ್ತಾಯಿತ್ತು.
ಆ ಜಗತ್ತಾವಾವವೆಂದಡೆ:
ಚತುರ್ದಶ ಭುವನಂಗಳು, ಸಪ್ತ ಸಮುದ್ರಂಗಳು,
ಸಪ್ತ ದ್ವೀಪಂಗಳು, ಸಪ್ತ ಕುಲಪರ್ವತಂಗಳು,
ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗರ್ಭಿಕರಿಸಿಕೊಂಡು
ಬ್ರಹ್ಮಾಂಡವೆನಿಸಿತ್ತು.
ಇದು ಜಗದುತ್ಪತ್ತಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./626
ಸಚ್ಚಿದಾನಂದನ ಸಂಕಲ್ಪಮಾತ್ರದಿಂದ
ಮಿಥ್ಯಾ ಛಾಯೆ ತೋರಿತ್ತು ನೋಡಾ.
ತಥ್ಯವೇ ಶಿವತತ್ತ್ವ,
ಮಿಥ್ಯಯೇ ಮಾಯಾಸೂತ್ರದ ಜಗಜ್ವಾಲ ನೋಡಾ.
ತಥ್ಯವೇ ತನ್ನ ನಿಜವೆಂದು, ಮಿಥ್ಯವೇ ಹುಸಿಯೆಂದರಿವ
ಶಿವತತ್ತ್ವಜ್ಞಾನಿಗಳಪೂರ್ವ ನೋಡಾ.
ತಥ್ಯಮಿಥ್ಯವೆಂಬ ಹೊತ್ತುಹೋಕನತಿಗಳೆದ
ನಿತ್ಯ ನಿರಂಜನನು ತಾನು ತಾನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./627
ಸಟ್ಟುಗ ಸವಿಯಬಲ್ಲುದೇ?
ಅಟ್ಟ ಮಡಕೆ, ಉಣಬಲ್ಲುದೇ ಅಯ್ಯ?
ಬಟ್ಟಬಯಲು, ಕಟ್ಟುಕುಟ್ಟಿಗೊಳಗಾಗಬಲ್ಲುದೇ?
ನಿಷ್ಠೆ ಹೀನರಿಗೆ ಲಿಂಗ, ಕಟ್ಟಳೆಗೆ ಬರಬಲ್ಲುದೇ?
ಕರ ಕಷ್ಟರಿರಾ ಸುಮ್ಮನಿರಿ ಭೋ.
ಕಟ್ಟಳೆಗೆಯ್ದದ ಮಹಾಘನದಲ್ಲಿ
ಮನಮುಚ್ಚಿ ಹಿಮ್ಮೆಟ್ಟದೆ ಅಡಗಿದಾತನೇ,
ಅಚಲಿತ ಮಾಹೇಶ್ವರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./628
ಸಣ್ಣನ ನೂಲುವ ಚಿಣ್ಣಂಗೆ ಬಣ್ಣ ಮುನ್ನಿಲ್ಲ ನೋಡಯ್ಯ.
ಚಿಣ್ಣ ತಾನಾದರೇನಯ್ಯ? ಬಣ್ಣವುಳ್ಳವರ ಕಣ್ಣಿಗೆ
ಕಾಣಿಸನು ನೋಡಯ್ಯ.
ಬಣ್ಣವಳಿದು ಕಣ್ಣ ಕತ್ತಲೆ ಹರಿದಲ್ಲದೆ
ಚಿಣ್ಣನ ಕಾಣಬಾರದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ/629
ಸತ್ತಾತ ಗುರು, ಹೊತ್ತಾತ ಲಿಂಗವು,
ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ.
ಸತ್ತವನೊಬ್ಬ, ಹೊತ್ತವನೊಬ್ಬ,
ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ.
ಆತ್ತವರಮರರು, ನಿತ್ಯವಾದುದು ಪ್ರಸಾದ,
ಪರಿಪೂರ್ಣವಾದುದು ಪಾದಜಲ.
ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./630
ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಾಗಿ
ಚಿತ್ರದ ಪ್ರತಿಮೆಯ ಅವಯವಂಗಳ ಶೃಂಗಾರದಂತೆ
ಆಕಾರವೆಂಬಂತಿರ್ದೆನಯ್ಯ.
ಚಿತ್ತೆಂಬ ಲಿಂಗದೊಳಗೆ ಮನವಡಗಿ
ನವನಾಳದ ಸುಳುಹು ಕೆಟ್ಟು
ಸುಷುಪ್ತಿಯನೆಯ್ದಿದ್ದೆನಯ್ಯ.
ಇದು ಕಾರಣ:
ಎನ್ನ ಜಾಗ್ರ ಸ್ವಪ್ನ ಸುಷುಪ್ತಿಯೆಂತಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ.
ಆನಂದವೆಂಬ ಜಂಗಮದಲ್ಲಿ ಅರುಹು ಏಕತ್ವವಾಗಿ
ಅತ್ಮೋಹಂಯೆಂಬುದನರಿಯೆನು ನೋಡಾ,
ನಾನು ಪರಮಾತ್ಮನಾದ ಕಾರಣ.
ನಿತ್ಯವೆಂಬ ಪ್ರಸಾದದಲ್ಲಿ ಪ್ರಾಣವಡಗಿ ನಿತ್ಯಾನಿತ್ಯವನರಿಯದೆ
ಸಚ್ಚಿದಾನಂದ ನಿತ್ಯ ಪರಿಪೂರ್ಣವಾಗಿ
ಅನಾದಿ ಭಕ್ತನಾದೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./631
ಸತ್ಯ ಜ್ಞಾನಮನಂತ ಬ್ರಹ್ಮ’ವೆಂಬ
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣನಪ್ಪ ಪರಶಿವನ
ಚಿತ್ಪ್ರಾಣಶಕ್ತಿಯಿಂದ
ಪರಮ ಜ್ಞಾನಶಕ್ತಿ ಉದಯಿಸಿದಳು ನೋಡ.
ಆ ಪರಿಪೂರ್ಣಪ್ರಕಾಶ ಜ್ಯೋತಿರ್ಮಯ ಚಿದಗ್ನಿಸ್ವರೂಪವನುಳ್ಳ,
ಸಮ್ಯಜ್ಞಾನದಲ್ಲಿ,
ಶರಣನ ಉತ್ಪತ್ತಿ, ಶರಣನ ಸ್ಥಿತಿ, ಶರಣನ ಲಯ ಕಾಣಿಭೋ.
ಆ ಸದಮಲಾನಂದಚಿದ್ಭ ್ರಹ್ಮಾಂಡಾತ್ಮಕ ತಾನೆಂಬುದನು
ಶ್ರೀಗುರುವಿನ ಮುಖದಿಂದ ಅರಿದು ನಿಶ್ಚಯಿಸಿದ ಬಳಿಕ
ತಾನೆ ನಿರಂತರ ನಿತ್ಯಮುಕ್ತನು; ಅನಾದಿ ಕೇವಲ ಮುಕ್ತನು;
ಶುದ್ಧ ನಿಃಕಲ ನಿರವಯ ನಿರಾಮಯನು ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
2/632
ಸತ್ಯದ ಭೂಮಿಯಲ್ಲಿ ಭಕ್ತಿಯ ಬೆಳಸು
ಕರಣದ ಕತ್ತಲೆಯೆಂಬ ಕಳೆಯ ಕಳೆದು
ಶಕ್ತಿ ಭಕ್ತಿಯನೊಳಕೊಂಡು ನಿಂದ ಮುಕ್ತ್ಯಂಗನೆ
ಸಚ್ಚಿದಾನಂದ ಸ್ವರೂಪೆ ನೋಡಾ.
ನಿತ್ಯ ನಿಜತತ್ವ ನೆರೆದು,
ಉತ್ಪತ್ತಿ ಸ್ಥಿತಿ ಪ್ರಳಯವ ಮೀರಿದ ಶರಣನ
ಪರಮ ಭಕ್ತಿಯನೇನೆಂದುಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./633
ಸತ್ಯದಲ್ಲಿ ನಡೆವುದು ಶೀಲ;
ಸತ್ಯದಲ್ಲಿ ನುಡಿವುದು ಶೀಲ,
ಸಜ್ಜನ ಸದಾಚಾರದಲ್ಲಿ ವರ್ತಿಸಿ
ನಿತ್ಯವನರಿವುದೆ ಶೀಲ ಕಾಣಿಭೋ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ./634
ಸತ್ಯನಲ್ಲ, ಅಸತ್ಯನಲ್ಲ.
ಕರ್ಮಿಯಲ್ಲ, ಧರ್ಮಿಯಲ್ಲ, ನಿಃಕರ್ಮಿಯಯ್ಯ ಭಕ್ತನು.
ಆಚಾರನಲ್ಲ ಅನಾಚಾರನಲ್ಲ;
ಪುಣ್ಯ ಪಾಪ ವಿರಹಿತನಾಗಿ ನಿಷ್ಪಾಪಿಯಯ್ಯ ಭಕ್ತನು.
ವ್ರತ ನೇಮ ಮಂತ್ರ ತಂತ್ರ
ಭವಿ ಭಕ್ತನೆಂಬುವುದಿಲ್ಲ ನೋಡಾ, ಲಿಂಗೈಕ್ಯಂಗೆ.
ಸವಿಕಲ್ಪನಲ್ಲ. ನಿರ್ವಿಕಲ್ಪನಲ್ಲ.
ಸೀಮನಲ್ಲ. ನಿಸ್ಸೀಮನಲ್ಲ.
ಪರಮ ನಿರಂಜನನು ತಾನೆ ನೋಡಾ ಭಕ್ತನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./635
ಸತ್ಯಲೋಕದಿಂದ ಚಿತ್ಸಮುದ್ರ ಉಕ್ಕಿ ಹರಿಯಲು
ಸಪ್ತಸಮುದ್ರಂಗಳೆಲ್ಲಾ ಬರತವು ನೋಡಾ.
ಮತ್ರ್ಯಲೋಕದ ಮಾನವರು ಚಿತ್ಸಮುದ್ರದೊಳಗೆ ಮುಳುಗಿ
ನಿತ್ಯ ನಿಶ್ಚಿಂತ ನಿರ್ಮಲರಾದರು ನೋಡಾ.
ಚಿತ್ ಸಮುದ್ರದೊಳಗೆ ಮುಳುಗಿ ಸತ್ತಾತ
ಸಾಕ್ಷಾತ್ ಪರವಸ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./636
ಸದಾಚಾರದಲ್ಲಿ ನಡೆವವನ
ಶಿವನಲ್ಲಿ ಭಕ್ತಿಯಾಗಿಪ್ಪವನ
ಶಿವಲಾಂಛನವ ಕಂಡಲ್ಲಿ ವಂದನೆಗೈವುತಿಪ್ಪವನ
ಲಿಂಗ ಜಂಗಮವ ಒಂದೇ ಭಾವದಲ್ಲಿ ಕಂಡು
ಭೃತ್ಯಾಚಾರ ಸದಾಚಾರಯುಕ್ತನಾಗಿರಬಲ್ಲರೆ
ಭಕ್ತನ ಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./637
ಸದ್ಗುರುವಿನ ದೆಸೆಯಿಂದ ಆವನೋರ್ವನ ಕಿವಿಯಲ್ಲಿ
ಬ್ರಹ್ಮೋಪದೇಶವು ಹೇಳಲ್ಪಟ್ಟಿತ್ತು,
ಆ ಶಬ್ದವೇ ಬೀಜವೆಸಿಕೊಂಡಿತ್ತಯ್ಯ.
ಅದು ಆವುದಯ್ಯ ಎಂದಡೆ:
ಶ್ರೀಗುರುವಿನ ದೆಸೆಯಿಂದ ಪಡೆದ ಶಿವಮಂತ್ರಾಕ್ಷರವೇ
ಬೀಜವೆನಿಸಿಕೊಂಡಿತ್ತಯ್ಯ.
ಅಂಥಾ ಪ್ರಾಣಿಯೆ ಜ್ಞಾನಕಾಯನೆನಿಸಿಕೊಂಬನಯ್ಯ.
ಶಿವಮಂತ್ರೋಪದೇಶವಿಲ್ಲದಾತನು
ಪ್ರಕೃತಿಕಾಯನೆನಿಸಿಕೊಂಬೆನಯ್ಯ.
ಇದು ಕಾರಣ, ಪ್ರಕೃತಿಕಾಯವೆಂದು ಜ್ಞಾನಕಾಯವೆಂದು
ಎರಡು ಭೇದವಾಗಿಪ್ಪುದಯ್ಯ.
ಶಿವಮಂತ್ರದೀಕ್ಷೋಪದೇಶವಾಗಲಾಗಿ,
ಪ್ರಕೃತಿಕಾಯ ಹೋಗಿ ಜ್ಞಾನಕಾಯುವಪ್ಪುದು ತಪ್ಪದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./638
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ
ಐವರನೆತ್ತಿ ನುಂಗಿದ ಅವಿರಳ ಪರಬ್ರಹ್ಮ ನೋಡಾ.
ಆ ಪರಬ್ರಹ್ಮವ ನುಂಗಿದನು ನಿರವಯ.
ನಿರವಯವ ನುಂಗಿದ ನಿರಾಳ.
ನಿರಾಳವ ನುಂಗಿದ ನಿತ್ಯ ನಿರಂಜನ ಪರವಸ್ತು ನೋಡಾ.
ಇವರೆಲ್ಲರ ನುಂಗಿದ ಪರವಸ್ತು ಎನ್ನ ನುಂಗಿತ್ತಾಗಿ,
ಆ ಪರವಸ್ತುವ ನಾನು ನುಂಗಿದೆನಾಗಿ,
ನಿಃಶಬ್ದಮಯವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./639
ಸದ್ಯೋಜಾತನ ಮುಟ್ಟಿ, ಪೃಥ್ವಿ ಬಯಲಾಗಿ
ಚಿತ್ತ ಪಂಚಕವು ಕೆಟ್ಟವು ನೋಡಾ.
ವಾಮದೇವನಿಗೊಲಿದು, ಅಪ್ಪು ಬಯಲಾಗಿ
ಬುದ್ಧಿ ಪಂಚಕವು ಕೆಟ್ಟವು ನೋಡಾ.
ಅಘೋರನ ನೆರೆದು, ಅಗ್ನಿ ಬಯಲಾಗಿ
ಅಹಂಕಾರ ಪಂಚಕವಳಿದು ನಿರಹಂಕಾರಿಯಾದೆನಯ್ಯ.
ತತ್ಪುರುಷನನಪ್ಪಿ, ವಾಯು ಬಯಲಾಗಿ
ಮನಪಂಚಕವಳಿದವು ನೋಡಾ.
ಈಶಾನ್ಯನೊಡಗೂಡಿ, ಆಕಾಶಬಯಲಾಗಿ
ಭಾವ ಪಂಚಕವಳಿದು ನಿರ್ಭಾವಿಯಾಗಿ ನಿಜಲಿಂಗೈಕ್ಯನಾದೆನಯ್ಯ.
ಎಲ್ಲಾ ಪದಂಗಳ ಮೀರಿ
ಮಹಾಲಿಂಗ ಪದದೊಳಗೆ ಸಂಯೋಗವಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./640
ಸದ್ಯೋಜಾತನ ಶುದ್ಧ ಪ್ರಸಾದವೆನ್ನ ನಾಸಿಕವ ನುಂಗಿತ್ತಾಗಿ
ಗಂಧಷಡ್ವಿಧ ಬಯಲಾಗಿ
ಗಂಧ ದುರ್ಗಂಧವನರಿಯದು ನೋಡಾ.
ವಾಮದೇವನ ಒಲುಮೆಯ ಪ್ರಸಾದ ಎನ್ನ ಜಿಹ್ವೆಯ ತುಂಬಿತ್ತಾಗಿ
ಷಡ್ವಿಧ ರಸ ಬಯಲಾಗಿ ಮಧುರ ಆಮ್ರ ಲವಣ ತಿಕ್ತ ಕಟು
ಕಷಾಯವೆಂಬ ಷಡುರಸ್ನಾನದ ರುಚಿಯನರಿಯದು ನೋಡಾ.
ಅಘೋರನ ಅವಿರಳಪ್ರಸಾದ ಎನ್ನ ಕಂಗಳ ತುಂಬಿ
ಷಡ್ವಿಧರೂಪು ಬಯಲಾಗಿ
ಸುರೂಪು ಕುರೂಪೆಂದರಿಯದು ನೋಡಾ.
ತತ್ಪುರುಷನ ಒಪ್ಪುವ ಪ್ರಸಾದವೆನ್ನ ತ್ವಕ್ಕು ತುಂಬಿತ್ತಾಗಿ
ಸ್ಪರ್ಶನ ಷಡ್ವಿಧ ಬಯಲಾಗಿ ಮೃದು ಕಠಿಣ ಶೀತೋಷ್ಣವೆಂಬ
ಸೋಂಕನರಿಯದು ನೋಡಾ.
ಈಶಾನ್ಯನ ವಿಮಲಪ್ರಸಾದ ಎನ್ನ ಶ್ರೋತ್ರ ತುಂಬಿತ್ತಾಗಿ
ಶಬ್ದ ಷಡ್ವಿಧ ಬಯಲಾಗಿ ಸುಶಬ್ದ ದುಶ್ಯಬ್ಧವನರಿಯದು ನೋಡ.
ಪರಮೇಶ್ವರನ ಪರಮ ಪ್ರಸಾದವೆನ್ನ ಪ್ರಾಣವ ತುಂಬಿ
ಪರಿಣಾಮ ಷಡ್ವಿಧ ಬಯಲಾಗಿ
ತೃಪ್ತಿ ಅತೃಪ್ತಿಯನರಿಯದು ನೋಡಾ.
ಇವೆಲ್ಲವ ಮರೆದು ಮಹಾಘನಪ್ರಸಾದದಲ್ಲಿ ಸಮರಸವಾಯಿತ್ತಾಗಿ
ಅರ್ಪಿತವನರಿಯದು, ಅನರ್ಪಿತನರಿಯದು.
ಭಾವವನರಿಯದು, ನಿರ್ಭಾವವನರಿಯದು.
ನಿರವಯ ಪ್ರಸಾದವನೆಯ್ದಿ ನಿರ್ವಯಲಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./641
ಸದ್ರೂಪವೇ ಸಂಗನಬಸವಣ್ಣ ನೋಡ.
ಚಿದ್ರೂಪವೇ ಚೆನ್ನಬಸವಣ್ಣ ನೋಡ.
ಆನಂದ ಸ್ವರೂಪವೇ ಪ್ರಭುದೇವರು ನೋಡ.
ಇದು ಕಾರಣ,
ಸದ್ರೂಪವಾದ ಸಂಗನ ಬಸವಣ್ಣನೇ ಗುರು;
ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ;
ಆನಂದಸ್ವರೂಪವಾದ ಪ್ರಭುದೇವರೇ ಜಂಗಮವು ನೋಡ.
ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./642
ಸದ್ರೂಪು ಶರಣನಲ್ಲದೆ, ಅಸದ್ರೂಪು ಶರಣನಲ್ಲ.
ಚಿದ್ರೂಪು ಶರಣನಲ್ಲದೆ, ಆಚಿದ್ರೂಪು ಶರಣನಲ್ಲ.
ಆನಂದಸ್ವರೂಪು ಶರಣನಲ್ಲದೆ, ಅನಾನಂದಸ್ವರೂಪು ಶರಣನಲ್ಲ.
ಇದು ಕಾರಣ ನಿಮ್ಮ ಶರಣರು
ಪರಮ ನಿರ್ಮಲ ಸಚ್ಚಿದಾನಂದ ನಿತ್ಯ ಪರಿಪೂರ್ಣ
ಪರಶಿವ ಸ್ವರೂಪ ತಾನೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./643
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ
ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ
ಪರಕೆ ಪರವಾದ ಪರಾಪರವು ತಾನೆ ನೋಡಾ.
ಆ ಪರಾಪರವು ತಾನೆ
ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ,
ಪರಿಪೂರ್ಣನಾಗಿ,
ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ
ಅಕಳಂಕನು ನೋಡಾ.
ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ
ಅದ್ವಯನು ನೋಡಾ.
ನವಚಕ್ರಾಂಬುಜಗಳ ದಳ ಕುಳ ವಣರ್ಾದಿ ದೇವತೆಗಳ
ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ
ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು.
ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ.
ಆ ಚಿದದ್ವಯವಾದ ಬಸವಣ್ಣನೇ
ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ,
ಎನ್ನ ಸರ್ವಾಂಗಲಿಂಗವು ಕಾಣಾ.
ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು
ಬಸವಣ್ಣನಾದ ಕಾರಣ,
`ಬಸವಲಿಂಗ ಬಸವಲಿಂಗ ಬಸವಲಿಂಗಾ’ಯೆಂದು ಜಪಿಸಿ
ಭವಾರ್ಣವ ದಾಂಟಿದೆನು ಕಾಣಾ.
ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ
ಶರಣನಾದೆನು ಕಾಣಾ.
ಬಸವನೇ ಲಿಂಗವಾದ ಕಾರಣ ನಾನಂಗವಾದೆನು.
ಕರ್ತೃವೇ ಬಸವಣ್ಣ, ಭೃತ್ಯನೇ ನಾನು.
ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ
ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ.
ಇದು ಕಾರಣ,
ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ,
ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ.
ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ
ನಾನು ಶರಣನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./644
ಸಪ್ತದ್ವೀಪದ ಮಧ್ಯದಲ್ಲಿ
ಇಪ್ಪತ್ತೆ ದು ಕೊನೆಯ ವೃಕ್ಷವ ಕಂಡೆನಯ್ಯ.
ಎಂಟರಾದಿಯಲ್ಲಿ ನಿಂದು
ಏಳರ ನೀರನಲ್ಲಿ ಬೆಳೆದು
ಆರರ ಭ್ರಮೆಯಲ್ಲಿ ಮುಳುಗಿ ಮೂಡುತ್ತಿಹುದು.
ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಯ್ಯ.
ಎಲೆ ಹೂವು ಫಲವು ಹಲವಾಗಿಪ್ಪುದಯ್ಯ.
ಸಪ್ತದ್ವೀಪವೂ ಅಲ್ಲ;
ಇಪ್ಪತ್ತೆ ದು ಕೊನೆಯೂ ಅಲ್ಲ;
ಎಂಟಲ್ಲ, ಏಳಲ್ಲ, ಆರರ ಭ್ರಮೆಯಲ್ಲ;
ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಿಲ್ಲ;
ಎಲೆ ಹೂವು ಫಲವು ಹಲವಾಗಿ ತೋರುವ
ತೋರಿಕೆ ತಾನಲ್ಲವೆಂದು
ನಡುವಣ ವೃಕ್ಷದ ನೆಲೆಯ ನಿರ್ಣಯವ ತಿಳಿದಾತನಲ್ಲದೆ
ಸಲೆ ಶಿವಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./645
ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು
ಅನಾದಿಪರಶಿವ ನೀನೊರ್ಬನೆ ಇರ್ದೆಯಯ್ಯ.
ಆ ನಿರಕಾರ ಪರಶಿವನಿಂದ ನಾನುದಯವಾಗಿ,
ಮಾಯಾರಂಜನೆ ಹುಟ್ಟದ ಮುನ್ನ
ನಿರಂಜನನೆಂಬ ಗಣೇಶ್ವರನಾಗಿರ್ದೆನು.
ಜ್ಞಾನಾಜ್ಞಾನಗಳಿಲ್ಲದಂದು
ಜ್ಞಾನಾನಂದನೆಂಬ ಗಣೇಶ್ವರನಾಗಿರ್ದೆನು.
ಈ ಶರೀರವಿಲ್ಲದಂದು ನಿರ್ಮಲನೆಂಬ ಗಣೇಶ್ವರನಾಗಿರ್ದೆನು.
ಬಸವ ಮೊದಲಾದ ಪ್ರಮಥರೆಲ್ಲರೂ ಪ್ರಸಾದವ ಎನ್ನಲ್ಲಿ
ಸಂಬಂಧಿಸಿ,
ನಿನ್ನ ಕೃಪಾಪ್ರಸಾದವನೆನ್ನಲ್ಲಿ ಮೂರ್ತಿಗೊಳಿಸಿ,
`ಇನ್ನಾವುದಕ್ಕೂ ಅಂಜಬೇಡ’ವೆಂದು,
ನೀನು, ನಿನ್ನ ಪ್ರಮಥರು ಎನ್ನ ಆಜ್ಞಾಪಿಸಿ
ಮತ್ರ್ಯಕ್ಕೆ ಕಳುಹಿದಿರಿಯಾಗಿ,
ಕಳುಹಿದ ಭೇದವ ಶಿವಜ್ಞಾನೋದಯದಿಂದ ಅರಿದು
ಸಿದ್ಧಲಿಂಗನೆಂಬ ನಾಮ
ಎನಗೆ ನಿನ್ನಿಂದ ಬಂದಿತ್ತೆಂಬುದ ಅರಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./646
ಸರ್ವಾಂಗವನು ಲಿಂಗನಿಷ್ಠೆಯಿಂದ ಘಟ್ಟಿಗೊಳಿಸಿ
ಮನವ ಉನ್ಮನಿಯಾವಸ್ಥೆಯನೆಯ್ದಿಸಿ
ಶತಪತ್ರದಲ್ಲಿ ಸೈತಿಟ್ಟು ಲಿಂಗಕ್ಕೆ ಅರ್ಪಿಸಿದ ನೈವೇದ್ಯದ
ಲಿಂಗ ನೆನಹಿನಲ್ಲಿಯೆ ಸ್ವೀಕರಿಸುವುದು
ಅಂಗಾರ್ಪಿತವ ವಿಸರ್ಜಿಸುವುದಯ್ಯ.
ತಟ್ಟುವ ಮುಟ್ಟುವ ಸೋಂಕುವ ವರ್ಮವನರಿದು
ಲಿಂಗಮುಖಕ್ಕೆ ನಿವೇದಿಸಿ
ಲಿಂಗಪ್ರಸಾದವ ಸ್ವೀಕರಿಸುತಿರಬಲ್ಲರೆ
ಪ್ರಸಾದಿಸ್ಥಳವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./647
ಸವಿಕಲ್ಪ ಸತ್ತಿತ್ತು,
ನಿರ್ವಿಕಲ್ಪವೆಂಬ ಗರ್ವವಳಿದು,
ತೆರಹಿಲ್ಲದ ಮಹಾಘನದೊಳಡಗಿತ್ತಾಗಿ.
ಸಾಧ್ಯವಿಲ್ಲ, ಸಾಧಕನಿಲ್ಲ;
ಪೂಜ್ಯನಿಲ್ಲ, ಪೂಜಕನಿಲ್ಲ;
ದೇವನಿಲ್ಲ, ಭಕ್ತನಿಲ್ಲ.
ಇವೇನುಯೇನೂ ಇಲ್ಲವಾಗಿ
ನಾಮನಲ್ಲ, ನಿರ್ನಾಮನಲ್ಲ;
ಸೀಮನಲ್ಲ, ನಿಸ್ಸೀಮನಲ್ಲ;
ಇವೇನುಯೇನೂ ಇಲ್ಲದ ಸರ್ವಶೂನ್ಯನಿರಾಲಂಬವು,
ನಿರ್ವಯಲು ನಿರಾಕಾರ ಪರವಸ್ತುವು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./648
ಸಹಸ್ರದಳದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ಸರ್ವಜ್ಞನು
ಅನಂತಕೋಟಿ ಸೋಮ ಸೂರ್ಯರ ಬೆಳಗು ನೋಡಾ.
ಸಾವಿರದೈವತ್ತೆರಡುಯೆಸಳಿನಲ್ಲಿ ತಾನಾಗಿ ತೊಳಗಿ ಬೆಳಗುವ
ಏಕಮೇವಾದ್ವಿತೀಯನ ಪ್ರಸಾದದುದಯ ನೋಡಾ.
ಆ ಪರಮ ಪ್ರಸಾದಗ್ರಾಹಕನಾಗಿ
ಶುದ್ಧ ಶಿವಯೋಗಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./649
ಸಾಧ್ಯ ಸಾಧಕರಿಲ್ಲದಂದು,
ಪೂಜ್ಯ ಪೂಜಕರಿಲ್ಲದಂದು,
ದೇವ ಭಕ್ತನೆಂಬ ನಾಮ ತಲೆದೋರದಂದು,
ಉಪಾಸ್ಯ ಉಪಾಸಕರಿಲ್ಲದಂದು,
ಅಂಗಸ್ಥಲ ಲಿಂಗಸ್ಥಲವಾಗದಂದು,
ನಿನ್ನ, ನಿಃಕಲ ಶಿವತತ್ವವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./650
ಸಾಳುವನ ಹಕ್ಕಿಯನು ಪಾಳೆಯದ ನಾಯಿ ಹಿಡಿದುದ ಕಂಡೆನಯ್ಯ.
ನಾಯಿ ಹಿಡಿದಿಪ್ಪ ನಾಕಿತಿ ನಾಗರಕಾಟವಾಗಿ ಕಾಡುತ್ತಿಪ್ಪಳಯ್ಯ.
ನಾಗರಿಗೆ ಮದ್ದ ಹೇಳ ಬಂದಯ್ಯಗಳು
ನಾಕಿತಿಯ ನಟನೆಯಲ್ಲಿ ಸಿಲುಕಿದರು.
ಈ ಲೋಗರನಾಚಾರ್ಯರೆಂತೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./651
ಸಿರಿಯ ಸೀರೆಯನುಟ್ಟು,
ಐವರು ತರುಣಿಯರು ಉರಿಯ ಪುರುಷನ ನೆರೆಯ ಹೋಗಿ,
ಸಿರಿಯ ಸೀರೆಯ ತೆಗೆಯದೆ ನಾಚಿದರು ನೋಡಾ.
ಸಿರಿಯ ಸೀರೆಯನಳಿದು, ಉರಿಯ ಪುರುಷನ ನೆರೆಯಲು,
ಅದು ಪರಮ ಶಿವಯೋಗವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./652
ಸುಗುಣವೆ ಲಿಂಗಪ್ರಾಣಿಯಯ್ಯ.
ದುರ್ಗುಣವೆ ವಾಯುಪ್ರಾಣಿಯಯ್ಯ.
ಸುಗುಣ ದುರ್ಗುಣವೆಂಬುಭಯವನತಿಗಳದು,
ಸುಖ ದುಃಖಾದಿಗಳ ಸಮಾನಂಗಂಡು,
ಶತ್ರು ಮಿತ್ರಾದಿಗಳ ಸಮಾನಂಗಂಡು,
ಸ್ತುತಿ ನಿಂದ್ಯಾದಿಗಳ ಸಮಾನಂಗಂಡು,
ಹಾಸ್ಯ ವಿಸ್ಮಯ ವಿರಹ ಕರಣ ಹೇಸಿಕೆ
ಇಂತೀ ಪ್ರಾಣನ ವಿಷಯಭ್ರಾಂತಿಯನತಿಗಳೆದು,
ಪ್ರಾಣನ ಪೂರ್ವಾಶ್ರಯವನಳಿದು,
ಲಿಂಗದ ನೆನಹು ಸಂಬಂಧಿಸಿ,
ಲಿಂಗವೇ ಪ್ರಾಣವಾಗಿರಬಲ್ಲರೆ
ಪ್ರಾಣಲಿಂಗಿಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./653
ಸುಡುವಗ್ನಿ ಕಾಷ್ಠದಿರದ ಬಲ್ಲುದೆ ಅಯ್ಯಾ?
ಕೊರೆದು ಹರಿವ ಉದಕ ಗಿರಿಯ ಗರ್ವವ ಬಲ್ಲುದೆ ಅಯ್ಯಾ
ಮುರಿದು ತಿಂಬ ತೋಳ ಕುರಿಯ ಮರಿಯ ಬೇನೆಯ ಬಲ್ಲುದೆ?

ಅಯ್ಯಾ
ತನ್ನವಸರಕ್ಕೆ ಆರನಾದರೂ ಸಾಧಿಸಿ ಭೇದಿಸಿ
ಕೊಂಬೆ ತಿಂಬೆನೆಂಬವ
ಅಸತ್ಯ ಸುಸತ್ಯದ ಕುರುಹ ಬಲ್ಲನೆ?
ಸತ್ಯದ ಕುರುಹನರಿಯನಾಗಿ ಶಿವಭಕ್ತಿಯನೆಂತರಿವನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./654

ಸುದತಿ ಪುತ್ರ ಮಿತ್ರ ಮಾತೃಪಿತೃರು ಹಿತರು ನಿತ್ಯರೆಂದು
ಹದೆದು ಕುದಿದು ಕೋಟಲೆಗೊಂಬನ್ನಕ್ಕರ ಗುರುವೆಂದೇನಯ್ಯ.
ಸುರಚಾಪದಂತೆ ತೋರಿ ಕೆಡುವ
ಹೆಣ್ಣು ಹೊನ್ನು ಮಣ್ಣ ನಚ್ಚಿ ಮದಡನಾಗಿಪ್ಪನ್ನಕ್ಕರ
ಲಿಂಗವೆಂದೇನಯ್ಯ.
ಈ ಕಷ್ಟ ಸಂಸೃತಿಯ ಕೂಪತಾಪದೊಳಗೆ
ಬಿದ್ದುರುಳುವ ನಾಮನಷ್ಟರಿಗೆ ಜಂಗಮಲಿಂಗವೆಂದೇನಯ್ಯ.
ಈ ದುಷ್ಟದುರ್ಮಲತ್ರಯದ
ಅಂಧಕಾರ ಘೋರತರವಿಕಾರ ಸರ್ಪದಷ್ಟರಾದ ದುಷ್ಟರಿಗೆ
ಶಿವಸತ್ವಥವೆಂದೇನು ಹೇಳಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಭಕ್ತನ ಮಾಹೇಶ್ವರ/655
ಸುಧೆಯೊಳಗೆ ವಿಷವುಂಟೆ? ಮಧುರದೊಳಗೆ ಕಹಿಯುಂಟೆ?
ದಿನಮಣಿಯೊಳಗೆ ಕಪ್ಪುಂಟೆ? ಬೆಳದಿಂಗಳೊಳಗೆ ಕಿಚ್ಚುಂಟೆ?
ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ?
ಮಹಾಜ್ಞಾನಸ್ವರೂಪರಪ್ಪ ಶರಣರೇ ಲಿಂಗವೆಂದರಿದ ಮಹಾತ್ಮಂಗೆ
ಸಂಕಲ್ಪ ಭ್ರಮೆಯುಂಟೆ? ಅದೇತರ ವಿಶ್ವಾಸ? ಸುಡು ಸುಡು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./656
ಸುರತರು ವೃಕ್ಷದೊಳಗಲ್ಲ; ಸುರಧೇನು ಪಶುವಿನೊಳಗಲ್ಲ;
ಪರುಷ ಪಾಷಾಣದೊಳಗಲ್ಲ; ಶಿಷ್ಯನ ಭಾವಕ್ಕೆ ಗುರು ನರನಲ್ಲ;
ಗುರುವೇ ಪರಮೇಶ್ವರನೆಂದು ಭಾವಿಸಬಲ್ಲಡೆ ಶಿಷ್ಯನೆಂಬೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./657
ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ,
ನೊರೆವಾಲ ಚಲ್ಲಿ ಕಾಟೆಯ ಬಯಸಿ ಬಾಯಾರುವಂತೆ,
ತಾಯ ಮಾರಿ ತೊತ್ತ ಕೊಂಬವರಂತೆ,
ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ,
ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ,
ಮಾಯಾಪ್ರಪಂಚ ಮಚ್ಚಿದ ಮನುಜರು,
ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿ[ಸುವ]
ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./658
ಸೂಕ್ಷ್ಮಂನಾಳದಲ್ಲಿ ಶುಭ್ರಮೂರ್ತಿಯ ಕಂಡೆನಯ್ಯ.
ಲೋಕಾಧಿಲೋಕದೊಳು ಏಕೋಭರಿತನಾಗಿ
ಸರ್ವ ಸಾಕ್ಷಿಕನಾಗಿದಾನೆ ನೋಡಿರಯ್ಯ.
ಆಕಾರವಳಿದು ನಿರಾಕಾರಮಯವಾಗಲು
ಲೋಕೇಶ ತಾನು ತಾನಾದ ಲಿಂಗೈಕ್ಯನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./659
ಸೂರ್ಯನ ಬೆಳಗಿಂಗೆ
ಕೊಳ್ಳಿಯ ಬೆಳಗ ಹಿಡಿಯಲುಂಟೇ ಮರುಳೆ?
ತನ್ನ ಮುಖವ ತಾ ಬಲ್ಲವಂಗೆ
ಕನ್ನಡಿಯ ಹಿಡಿದು ನೋಡಲುಂಟೇ ಹೇಳಾ.
ತನ್ನ ಸುಳುಹಿನ ಸೂಕ್ಷ್ಮಂವ ತಾನರಿದ ಸ್ವಯಜ್ಞಾನಿಗೆ
ಇನ್ನಾವ ಆಗಮಬೋಧೆಯೇಕೆ ಹೇಳ?
ಆಗಮಶಿಕ್ಷೆಯೆಂಬುದು, ಲೋಗರಿಗಲ್ಲದೆ,
ಆದಿಯಲ್ಲಿ ಶಿವಬೀಜವಾದ ಮಹಾಮಹಿಮರಿಗುಂಟೇ?
ಸ್ವಾನುಭಾವಜ್ಞಾನ ಎಲ್ಲರಿಗೂ ಇಲ್ಲವಲ್ಲ.
ಇಲ್ಲದಿರ್ದಡೆ ಮಾಣಲಿ, ಅದಕ್ಕೇನು ಕೊರತೆಯಿಲ್ಲ.
ಮತಾಂತರ ಶಾಸ್ತ್ರಾಗಮಂಗಳ ಮುಟ್ಟಲಾಗದು.
ಅದೇನು ಕಾರಣವೆಂದಡೆ:
ಅವರಂಗದ ಮೇಲೆ ಗುರು ಲಿಂಗ ಜಂಗಮ ಪಾದೋದಕ
ಪ್ರಸಾದವಿಲ್ಲದ ಕಾರಣ.
ಆ ಆಗಮದಲ್ಲಿ ಜಂಗಮಪ್ರಸಾದವ ಲಿಂಗಕ್ಕರ್ಪಿಸಿ,
ಕೊಟ್ಟು ಕೊಳಬೇಕೆಂಬ ಪ್ರಮಾಣವ ಹೇಳವಾಗಿ.
ಛಿಃ, ಅವೆಲ್ಲಿಯ ಆಗಮ, ಅವು ಅಂಗಲಿಂಗ ಸಂಬಂಧಿಗಳಿಗೆ
ಮತವೇ? ಅಲ್ಲ.
ಸದ್ಗುರುವಿನ ವಚನ ಪ್ರಮಾಣೇ? ಅಲ್ಲ.
ಗುರುವಚನ ಪ್ರಮಾಣವಲ್ಲದ ಮಾರ್ಗವ ಹಿಡಿದು
ಆಚರಿಸುವರೆಲ್ಲರು ಗುರುದ್ರೋಹಿಗಳು.
ಎಲೆ ಶಿವನೇ, ನೀ ಸಾಕ್ಷಿಯಾಗಿ ಅಂಗಲಿಂಗ ಸಂಬಂಧಿಗಳಿಗೆ
ಪರಮ ವೀರಶೈವಾಗಮವೇ ಪ್ರಮಾಣು.
ಪುರಾತನರ ಮಹಾವಾಕ್ಯವೇ ಪ್ರಮಾಣು.
ಉಳಿದುವೆಲ್ಲ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./660
ಸೂರ್ಯನಿಂದ ತೋರಿದ ಕಿರಣಂಗಳಿಗೂ
ಆ ಸೂರ್ಯನಿಗೂ ಭಿನ್ನವುಂಟೇ?.
ಚಂದ್ರನಿಂದ ತೋರಿದ ಕಲೆಗೆ ಆ ಚಂದ್ರನಿಗೂ ಭಿನ್ನವುಂಟೇ?.
ಅಗ್ನಿಯಿಂದ ತೋರಿದ ಕಾಂತಿಗೂ ಆ ಅಗ್ನಿಗೂ ಭಿನ್ನವುಂಟೇ?.
ಜ್ಯೋತಿಯಿಂದ ತೋರಿದ ಬೆಳಗಿಗೂ
ಆ ಜ್ಯೋತಿಗೂ ಭಿನ್ನವುಂಟೇ?.
ಅಗಮ್ಯ, ಅಗೋಚರ, ಅಪ್ರಮಾಣ, ಅಪ್ರತಿಮ ಮಹಾಲಿಂಗದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ
ಉದಯಿಸಿದ ಶರಣಂಗೂ ಆ ಮಹಾಲಿಂಗಕ್ಕೂ ಭಿನ್ನವುಂಟೇ?
ಇದ ಬೇರೆಂಬ ಅರೆಮರುಳುಗಳನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./661
ಸೋಮನಾಳದಲ್ಲಿ ಶುಭ್ರ ಕಳೆ,
ಪಿಂಗಳನಾಳದಲ್ಲಿ ಸುವರ್ಣಕಳೆ,
ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಯ ಬೆಳಗು ನೋಡಾ.
ಏಳುನೂರೆಪ್ಪತ್ತು ನಾಳದಲ್ಲಿ ಹೊಳೆವುತ್ತಿಹ ಕಾಲಾಗ್ನಿ ಕಾಂತಿ.
ನೀಲಲೋಹಿತನ ಪ್ರಸಾದದುದಯ ತುದಿಮೊದಲಿಲ್ಲ ನೋಡಾ.
ಆದಿ ಮಧ್ಯಾವಸಾನವಿಲ್ಲದ ಪ್ರಮಾಣ ಪ್ರಸಾದದಲ್ಲಿ ನಿಷ್ಪತಿಯಾಗಿ
ನಿಜಲಿಂಗೈಕ್ಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./662
ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಆಧಾರವಾಗಿ
ನಿರ್ಮಲವಾಗಿ, ಸ್ಥಿರವಾಗಿ, ಸರ್ವಸರ್ವಜ್ಞಾನ ಸರ್ವಾತ್ಮಕ
ನಿರ್ವಿಕಾರ ನಿತ್ಯಾತ್ಮಕನಾದ ಪರಮಾತ್ಮಲಿಂಗವು,
“ಪರಂ ಗೂಢಂ ಶರೀರರಸ್ಥಂ ಲಿಂಗಕ್ಷೇತ್ರಮನಾದಿವತ್|
ಯಥಾದಿಮೀಶ್ವರಂ ತೇಜಂ ತಲ್ಲಿಂಗಂ ಪಂಚಸಂಜ್ಞಕಂ||’
ಎಂಬ ಪಂಚಸಂಜ್ಞೆಯನೊಳಕೊಂಡು
“ಆಣೋರಣೀಯಾನ್ ಮಹತೋ ಮಹೀಯಾನ್’
ಎಂದುದಾಗಿ,
ಅಣುವಿಂಗಣು ಮಹತ್ತಕ್ಕೆ ಮಹತ್ತಾಗಿಪ್ಪ ಮಹಾಲಿಂಗದ ನಿಲುಕಡೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./663
ಸ್ಥೂಲ ಸೂಕ್ಷ್ಮಂ ಪರತತ್ವವೆಂಬ ನಾಮ ನಿನಗಿಲ್ಲದಂದು,
ನಿನ್ನ ಸ್ಥೂಲನೆಂದು ಕುರುಪಿಡುವ
ಅಜ, ಹರಿ, ಸುರಪತಿ ಮೊದಲಾದ ದೇವತೆಗಳಿಲ್ಲದಂದು,
ನಿನ್ನ ಸೂಕ್ಷ್ಮಂನೆಂದು ಕುರುಪಿಡುವ
ಮನು ಮುನೀಶ್ವರರಿಲ್ಲದಂದು,
ನಿನ್ನ ಸ್ಥೂಲ ಸೂಕ್ಷ್ಮಂ ಪರಾತ್ಪರನೆಂದು,
ನಿನ್ನ ಆದಿ ಮಧ್ಯಾವಸಾನ ಅಖಂಡ ಪರಿಪೂರ್ಣತ್ವವನರಿವ,
ಅವಿರಳಜ್ಞಾನಸಂಬಂಧಿಗಳಪ್ಪ ಗಣಾಧೀಶ್ವರರಿಲ್ಲದಂದು,
ಇವರಾರೂಯಿಲ್ಲದಂದು
ಅನಾದಿ ಪರಶಿವನೆಂದೆನಲಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./664
ಸ್ಫಟಿಕದ ಘಟದೊಳಗೆತ್ತಿದ ಜ್ಯೋತಿ,
ಒಳಹೊರಗೊಂದೆ ಸ್ವಯವಾಗಿ ಪ್ರಜ್ವಲಿಸುವಂತೆ,
ಎನ್ನೊಳಗಿಪ್ಪಾತನೂ ಹೊರಗಿಪ್ಪಾತನೂ ಒಂದೇ ವಸ್ತುವೆಂಬ
ಆದ್ಯಂತವು ಕಾಣುಬಂದಿತ್ತು ನೋಡಾ.
ಆ ಪರತತ್ವವೇ ಶರಣ ತಾನೆ ನೋಡಾ.
ಬೇರೊಂದು ಸ್ವರೂಪವಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./665
ಸ್ವಯಾಧೀನಮುಕ್ತನೆಂಬವನೊಬ್ಬ;
ಪರಾಧೀನ ಮುಕ್ತನೆಂಬುವನೊಬ್ಬ.
ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು
ಅದು ಅಜ್ಞಾನ ನೋಡ.
ಆತ್ಮನು ಪಶುಪಾಶಬದ್ಧನು,
ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ.
ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ
ಶಿವನೊಬ್ಬನು ಬೇರುಂಟೆಂದೆ.
ಮಲ ಮಾಯಾ ಕರ್ಮವನುಂಡು ತೀರಿಸಿ
ಶಿವನ ಪ್ರಸಾದದಿಂದ ಮುಕ್ತನೆಂಬೆ.
ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ.
ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ.
ಮಸಿಯೆಂದಾದರೂ ಬೆಳ್ಪಾದುದುಂಟೆ?
ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ,
ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ?
ಇದು ಕಾರಣ, ದ್ವೆ ತಕ್ಕೆ ಎಂದೂ ಮುಕ್ತಿಯಿಲ್ಲಯೆಂದೆ.
ಇತರ ಮತಂಗಳಂತಿರಲಿ.
ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು.
ಆ ಸುಜ್ಞಾನಶಕ್ತಿಯು ಗರ್ಭದಲ್ಲಿ ಶಿವಶರಣನುದಯವಾದ.
ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ,
ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು,
ತಾನೆ ಪರಶಿವತತ್ವದೊಳಗೆ
ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ
ನಿತ್ಯ ಮುಕ್ತನಾದ ನಿಜಲಿಂಗೈಕ್ಯನು
ದ್ವೆ ತಿಯಲ್ಲ; ಅದ್ವೆ ತಿಯಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./666
ಸ್ವಾನುಭಾವ ವಿವೇಕ ಅಂತರ್ಗತವಾಗಿ
ಜ್ಞಾನ ತಲೆದೋರಿತ್ತಯ್ಯ.
ಆ ತಲೆಯೊಳಗೊಂದು ಚಿತ್ಪ್ರಾಣನ ಕಂಡೆನಯ್ಯ.
ಅದೇ ಎನ್ನ ಪ್ರಾಣದೊಡೆಯನೆಂದರಿದು
ಅಲ್ಲಿ ಸನುಮತ ಸಂಗಿಯಾಗಿ
ಘನಸಮರಸವಾಗಿ ಮನ ಮಗ್ನನಾಗಿ
ಸದಾ ಸನ್ನಹಿತನಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./667
ಹಜಾರದ ಪೀಠದ ಮನೆಯಲ್ಲಿ
ಭಜಕಜನವರೇಣ್ಯನಿದಾನೆ ನೋಡ.
ಕುಜನ ಜನವಳಿದು
ಸುಜನಜನಮುಖಸ್ಸರೋಜ ರಾಜಹಂಸನೆಂಬಾತ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ತಾನೆ ಕಾಣಿರೋ./668
ಹಜ್ಜೆಯುಳ್ಳ ಮೃಗ ಇಬ್ಬರ ಕೂಡಿ
ಹಲಬರ ನೆರಹಿ
ಹಬ್ಬವ ಮಾಡುವ ಭರವಸ
ಉಬ್ಬರವೆಂಬುವದನೊಬ್ಬರು ಅರಿಯರು ನೋಡಾ.
ಹಜ್ಜೆಯಿಲ್ಲದ ಮೃಗ ಇಬ್ಬರ ಕೂಡದು,
ಹಲಬರ ನೆರಹದು, ಹಬ್ಬವನೊಲ್ಲದು.
ತಾನೊಬ್ಬನೆಯಾಯಿತ್ತು ನೋಡಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣ
ಸ್ವತಂತ್ರ ಕಾಣಿರೋ./669
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ.
ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ.
ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ.
ತ್ರೆ ಜಗವೆಲ್ಲಾ ಮೂಛರ್ೆಗತರಾದರು ನೋಡಾ.
ವೀರರು ಧೀರರು ವ್ರತಿಗಳು ಸಾಮಥ್ರ್ಯರೆಲ್ಲ
ಮತಿಗೆಟ್ಟು ಮರುಳಾದರು ನೋಡಾ.
ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ
ವಿಕಾರಗೊಂಡರು ನೋಡಾ.
ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ,
ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ.
ಈ ಮಾಯಾ ಪ್ರಪಂಚ ಕಳೆವಡೆ
ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./670
ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ.
ಗಿಳಿಯೆದ್ದೋಡಿ ಹಾಲ ಕುಡಿಯಲು,
ಹರಿಯ ಕೈ ಮುರಿದು,
ಮಾರ್ಜಾಲಗೆ ಮರಣವಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./671
ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ.
ಕರಿಯ ಮಲ್ಲಿಗೆಯ ಕಮಲವ ಕುಯಿದು
ಕಾಮಾರಿಯ ಚರಣವನಚರ್ಿಸಬಲ್ಲ ನಿಸ್ಸೀಮ ಶರಣಂಗೆ,
ನಾಮ ಸೀಮೆಗಳೆಂದೇನು?
ಕಾಲ ಕಲ್ಪಿತವೆಂದೇನು?
ನಿರ್ವಿಕಲ್ಪಭಾವದಲ್ಲಿ ಲಿಂಗಾರ್ಚನೆಯ ಮಾಡುವ ಶರಣಂಗೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./672
ಹರಿಯ ಹೇಳಿಗೆಯಲ್ಲಿ ಮಾರ್ಜಾಲ ಮೂಷಕನ
ಹಡೆದುದ ಕಂಡೆನಯ್ಯ.
ಕರಿಯ ಬೇಡನ ಕೈವಿಡಿದು, ರಾಹುಕೇತುಗಳಾಗಿ
ಚಂದ್ರಸೂರ್ಯರ ಕೊರೆಕೂಳನುಂಡು
ಧರೆಯಾಕಾಶಕ್ಕೆ ಶರೀರವಿಲ್ಲದೆ ಎಡೆಯಾಡುವುದ ಕಂಡೆ.
ಸಿರಿವರ ವಾಣಿಪತಿಯೆಂಬವರ ತನ್ನ ಹೊರೆಯಲ್ಲಿಕ್ಕಿ ಆಳಿ
ಮನುಮುನೀಶ್ವರರ ಮರೆದೊರಗಿಸಿದ್ದ ಕಂಡೆ.
ಇದರ ನೆಲೆಯನರಿದು, ಹೊಲಬ ತಿಳಿದುಕೊಳಬಲ್ಲಾತನಲ್ಲದೆ
ಲಿಂಗೈಕ್ಯನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./673
ಹರಿವ ನೀರ ಮಧ್ಯದಲ್ಲಿ
ಉರಿವ ಜ್ಯೋತಿಯ ಬೆಳಗ ನೋಡಿ ಕಂಡೆನಯ್ಯ.
ಸಾರಿರ್ದು ನೋಡಿದರೆ, ನೀರೊಳಗೆ ಮುಳುಗಿ ಉರಿವುತ್ತಿದೆ ನೋಡಾ.
ದೂರದಲ್ಲಿರ್ದ ನೋಡಿದರೆ, ನೀರಮೇಲೆ ಉರಿವುತ್ತಿದೆ ನೋಡಾ.
ಇದೇನೋ! ಇದೇನೋ!!
ಜ್ಯೋತಿಯ ಗುಣವೋ, ತನ್ನ ಭ್ರಾಂತಿನ ಗುಣವೋ ಎಂದು,
ಸ್ವಯಜ್ಞಾನ ಗುರುವಿನ ಮುಖದಿಂದ ವಿಚಾರಿಸಲು
ಹರಿವ ನೀರು ಬತ್ತಿತ್ತು. ಜ್ಯೋತಿ ಉಳಿಯಿತ್ತು.
ಆ ಉಳಿದ ಉಳಿಮೆಯೆ ತಾನೆಂದು ತಿಳಿದಾತನಲ್ಲದೆ,
ಶಿವಶರಣನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./674
ಹಲವು ಜನ್ಮಂಗಳಲ್ಲಿ ಒದಗಿಸಲ್ಪಟ್ಟ
ಪಾಪಂಗಳೆಂಬ ಕರ್ಮಂಗಳನು
ಜ್ಞಾನಾಗ್ನಿಯಿಂದ ಸುಟ್ಟುರುಹಿ ಪ್ರಕಾಶಿಸಿ ತೋರಿಸಿದ
ಸದ್ಗುರುದೇವಂಗೆ
ನಮೋನಮೋಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./675
ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು
ಪರಿಪರಿಯ ಕೇರಿಯಲ್ಲಿ ಸುಳಿದಾಡುವಳಿವಳಾರೋ?
ಈ ಊರಿಗೆ ನಾನೊಡತಿ; ಇಲ್ಲಿ ಸುಳಿಯುವುದಕ್ಕೆ
ನಿನಗೇನು ಕಾರಣ ಹೇಳಾ?
ಈ ಊರಿಗೂ ನಿನಗೂ ನಾನೊಡತಿಯೆನುತ
ಊರ ಸುಟ್ಟು ನಾರಿಯ ಕೊಂದವಳು
ನಾನು ಪರಾಪರಾಂಗನೆಯೆನುತ
ಸ್ವಪತಿಯ ನೆರೆದು ನಿಷ್ಪತಿಯನೆಯಿದುದ ಕಂಡು
ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./676
ಹಸು ಸತ್ತು ಆರುದಿನ, ಕರು ಸತ್ತು ಮೂರು ದಿನ.
ಅಂದು ಬಿತ್ತಿದ ಬೆಳಸು ಇಂದು ಫಲಕಾತುದ ಕಂಡೆನಯ್ಯಾ.
ಫಲ ರಸವನುಂಡುಂಡು ಪರಮ ಪರಿಣಾಮಿಯಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./677
ಹಾರುವ ಹಕ್ಕಿಗೆ ಗರಿ ಈರೈದಾದುದ ಕಂಡೆನಯ್ಯ.
ಕುಳಿತರೆ ಗೇಣುದ್ಧ, ಎದ್ದರೆ ಮಾರುದ್ದ.
ಹಾರುವಲ್ಲಿ ಆರುಗೇಣಾಗಿಪ್ಪುದಯ್ಯ.
ಮತ್ತರಿದೆನೆಂದರೆ ಅದೆ ನೋಡಾ.
ತನ್ನ ತಿಳಿದರೆ ತಾನು ಅತಿಸೂಕ್ಷ್ಮಂ ನೋಡಾ.
ತನ್ನ ಪರಿ ವಿಪರೀತ ವಿಸ್ಮಯವಾಗಿದೆ ನೋಡಾ.
ಮೂರಾರು ಬಾಗಿಲಲ್ಲಿ ಹಾರಿ ಹಲುಬುವುದಯ್ಯ.
ಸರ್ವಬಾಗಿಲಲ್ಲಿ ಪಬರ್ಿ ಪಲ್ಲಯಿಸುವುದು.
ಈ ಬಾಗಿಲೆಲ್ಲವು ತನ್ನ ಹಾದಿಯೆಂದರಿಯದು ನೋಡಾ.
ತನ್ನ ಹಾದಿಯನರಿದು ಚೆನ್ನಾಗಿ ನಡೆದಾಡಬಲ್ಲರೆ
ಮೇಲುಗಿರಿ ಪರ್ವತವ ಓರಂತೆಯ್ದಿ
ನಿರ್ವಯಲ ಬೆರಸಿತ್ತೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./678
ಹಾರುವ ಹಕ್ಕಿಗೆ ಗರಿಯಿಲ್ಲ ನೋಡಾ.
ಊರೊಳಗಿಪ್ಪ ಕಪಿಗೆ ತಲೆಯಿಲ್ಲ ನೋಡಾ.
ಹಾರುವ ಹಕ್ಕಿಗೆ ಗರಿ ಬಂದು,
ಊರೊಳಗಿಪ್ಪ ಕಪಿಗೆ ತಲೆ ಬಂದಲ್ಲದೆ
ತಾನಾರೆಂಬುದನರಿಯಬಾರದು.
ತನ್ನಾದಿಯ ಶಿವತತ್ವವ ಭೇದಿಸಲರಿಯದೆ,
ವೇದಾಗಮ ಮುಖದಿಂದ ನಿಮ್ಮನರಿದೆನೆಂಬ
ಆಜ್ಞಾನಿಗಳನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./679
ಹಾರುವರ ಮನೆಯ ದೇವಿಯ ಹದಿರು ಚದರಿನಲ್ಲಿ
ಹಲಬರು ಸಿಕ್ಕಿ ಕೆಟ್ಟರು ನೋಡ.
ಹಾರುವರ ಕೊಂದು ಹದಿರು ಚದಿರು ಅಳಿದಲ್ಲದೆ
ದೇವರ ಕಾಣಬಾರದು, ಪ್ರಾಣಲಿಂಗ ಸಂಬಂಧಿಗಳೆಂಬರೆ,
ನಾಚದವರನೇನೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./680
ಹಾಲೋಗರವನುಂಡು ಬಾಲೆಯರ ತೋಳಮೇಲೊರಗಿದಡೆ
ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣ.
ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು,
ಸವಿನುಡಿ ಕಠಾರಿ ನೋಡಾ.
ಅಲ್ಲಿಯ ನೆನಹು ಆಜ್ಞಾನ ನೋಡಾ.
ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ
ಹುಟ್ಟಿಸಿ ಕೊಲುವದಾಗಿ,
ಆ ಸಂಸಾರ ನಿನಗೆ ಹಗೆಯೆಂದು ತಿಳಿಯ, ಮರುಳುಮಾನವ.
ಇದುಕಾರಣ, ಸಂಸಾರಸುಖವನುಣ್ಣಲೊಲ್ಲದೆ,
ಬಾಲೇಂದುಮೌಳಿಯ ಜ್ಞಾನಪ್ರಸಾದವನುಂಡು ನಾನು
ಬದುಕಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./681
ಹಾವ ಹಿಡಿದ ಚೇಳು ತಾನೆದ್ದೂರಲು
ಮೂಜಗವೆಲ್ಲವು ಬೇನೆಹತ್ತಿ ಬೇವುತ್ತಿದೆ ನೋಡಾ.
ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./682
ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ.
ಕಿಚ್ಚಿನೊಳಗಣ ಸಂಗ ಸುಟ್ಟು ಭಸ್ಮವ ಮಾಡುವದಯ್ಯ.
ಲಿಂಗದೃಷ್ಟಿ ತಪ್ಪಿ, ಅಂಗನೆಯರ ನೋಟ ಬೇಟ
ಕಂಗಳ ಕೆಡಿಸಿ ಭಂಗಿತರ ಮಾಡುವುದಯ್ಯ.
ಪರಸ್ತ್ರೀಯರ ಕೂಟ ಪಂಚಮಹಾಪಾತಕದಲ್ಲಿಕ್ಕುವುದಯ್ಯ.
ಧರೆಯೊಳಕೊಳ್ಳದು; ಹಿರಿಯರು ಮಚ್ಚರು.
ಹಿರಿಯರು ಮಚ್ಚರಾಗಿ ಶಿವ ಮುನ್ನವೆ ಮಚ್ಚನು.
ನಾಯಕನರಕ ತಪ್ಪದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./683
ಹಾವು ಹಿಡಿದ ಚೇಳು ತಾನೆದ್ದು ಊರಲು
ಮೂಜಗವೆಲ್ಲಾ ಬೇನೆಹತ್ತಿ ಬೇವುತ್ತಿದೆ ನೋಡಾ.
ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು.
ಬೇನೆ ಮಾದು ತಾನೆ ತಾನಾದುದನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./684
ಹಾಳುಕೇರಿಯಲೊಂದು ಹಂದಿಯೂ ನಾಯೂ
ಮೈಥುನವ ಮಾಡುವದ ಕಂಡು
ಆಕಾಶದಲಾಡಡುವ ಅರಗಿಳಿ ನಗುತ್ತಲಿದೆ ನೋಡಾ.
ಆಡುತ್ತಾಡುತ್ತ ಬಂದ ಅರಗಿಣಿ ಮಾರ್ಜಾಲನ ನುಂಗಲು
ಮಾಯಾವಿಲಾಸ ಅಡಗಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./685
ಹಿಂದಳ ಅಂಗ, ಮುಂದಳ ಮುಖ
ಉಭಯ ಚೈತನ್ಯವೆಂದೆಂಬರಯ್ಯ.
ಹಿಂದು ಮುಂದು ಉಭಯಚೈತನ್ಯವೆಂಬನ್ನಕ್ಕರ
ಬಂದಿತ್ತು ನೋಡ ತೊಡಕು.
ಹಿಂದು ಮುಂದು ಉಭಯಚೈತನ್ಯವೊಂದೂಯಿಲ್ಲದ ವರ್ತನೆ
ಸರ್ವಾಚಾರ ಸಂಪತ್ತು ನಿಮ್ಮ ಶರಣರ ಚರಿತ್ರ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./686
ಹಿಕ್ಕೆಯ ನುಂಗಿದ ಹಕ್ಕೆಯ ನಿಲುವು
ನಕ್ಷತ್ರದುದಯದಂತಿಪ್ಪುದಯ್ಯ.
ಹಿಕ್ಕೆಯಳಿದು ಹಕ್ಕೆವುಳಿಯದ ಮುನ್ನ
ಜಲಂಧರ ರಾಕ್ಷಸನ ಸೊಕ್ಕು ಮುರಿದು
ಮುಕ್ಕಣ್ಣ ತಾನು ತಾನಾದ ಲಿಂಗೈಕ್ಯನ ಏನೆಂದುಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./687
ಹಿರಿಯ ಕಡಲನೊಂದು ಮಂಡೂಕ ಕುಡಿವುದ ಕಂಡೆನಯ್ಯ.
ಮಂಡೂಕನ ಮಾರ್ಜಾಲ ಹಿಡಿದಿದೆ ನೋಡಾ.
ಮಾರ್ಜಾಲನ ಮೂಷಕ ನುಂಗಿದುದ ಕಂಡೆನಯ್ಯ.
ಮೂಷಕನ ಮೂವರ್ಣದ ಪಕ್ಷಿ
ಹಿಡಿದು ಮೈದೋರದು ನೋಡಾ.
ಇವೆಲ್ಲವ ಕೂಡಿಕೊಂಡು ಇಪ್ಪುದೊಂದು
ಕೊಟ್ಟದ ಗ್ರಾಮವ ಕಂಡೆನಯ್ಯ.
ಆ ಗ್ರಾಮದ ಬಾಗಿಲೊಳಗೊಬ್ಬ ಕರಿಯ ಕಬ್ಬಿಲನಿದ್ದು
ಜಾಲವ ಬೀಸಿ ಕೊಂಡೈದಾನೆ ನೋಡಾ.
ಆ ಜಾಲದೊಳಗೆ ಹರಿಬ್ರಹ್ಮದೇವತಾದಿಗಳು ಸಿಕ್ಕಿ
ಒದ್ದಾಡುತ್ತಿದ್ದಾರೆ ನೋಡಾ.
ಆ ಜಾಲದ ಹರಿದು, ಕರಿಯ, ಕಬ್ಬಿಲನ ಕೈಕಾಲು ಕಡಿದು,
ಕಿವಿ, ಮೂಗುನುತ್ತರಿಸಿಯಲ್ಲದೆ ಪ್ರಾಣಲಿಂಗಸಂಬಂಧಿಯಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./688
ಹೀಂಗೆಂದರಿಯದೆ
ತಾ ನಡೆದೆನೆಂದು, ತಾ ನುಡಿದೆನೆಂದು,
ತಾ ವಾಸಿಸಿದೆನೆಂದು, ತಾ ರುಚಿಸಿದೆನೆಂದು,
ತಾ ಸೋಂಕಿದೆನೆಂದು, ತಾ ಕೇಳಿದೆನೆಂದು, ತಾನೆ ನೆನೆದೆನೆಂದು,
ತಾನೆಂಬುದನೆ ಮುಂದುಮಾಡಿಕೊಂಡು,
ಲಿಂಗವೆಂಬುದನೆ ಹಿಂದುಮಾಡಿಕೊಂಡು,
ಭೋಗಿಸುವ ಭೋಗವೆಲ್ಲವು, ಅಂಗಭೋಗ ಕಾಣಿರೋ.
ಅಂಗದಿಚ್ಛೆಗೆ ಉಂಡು ಲಿಂಗಕ್ಕೆಂಬ
ಆಧಮಜೀವಿಗಳೇನೆಂಬೆನಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./689
ಹೃದಯಕಮಲಕರ್ಣಿಕಾವಾಸದಲ್ಲಿ
ದಿಟಪುಟಜ್ಞಾನ ಉದಯವಾಗಿ ಧಿಕ್ಕರಿಸಲಾಗಿ,
ಸಟೆ ದೂರವಾಗಿ ವಿವರ್ಜಿತವಾದವು ನೋಡಾ.
ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ,
ಸ್ಫಟಿಕ ಪ್ರಜ್ವಲಾಕಾರವಾಯಿತ್ತು ನೋಡಾ.
ಆ ಶಿವಜ್ಞಾನಪ್ರಭೆಯೊಳಗೆ ನಿಟಿಲಲೋಚನನೆಂಬ ನಿತ್ಯನ ಕಂಡು,
ಅದೇ ಎನ್ನ ನಿಜವೆಂದು ಬೆರಸಿ ಅಭಿನ್ನಸುಖಿಯಾಗಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./690
ಹೃದಯಮಧ್ಯದಲೊಂದು ಸದಮಲದುದಯವ ಕಂಡೆ.
ಅದಕೆ ಉದಯವಿಲ್ಲ, ಮಧ್ಯಾಹ್ನವಿಲ್ಲ,
ಅಸ್ತಮಯವಿಲ್ಲ ನೋಡಾ.
ಆ ಸದಮಲದ ಎಸಳಿನಿಂದ ಪೂಜೆಯಮಾಡಬಲ್ಲ ಸರ್ವಜ್ಞಂಗೆ
ಹೊರ ಉಪಚಾರವೆಂಬ
ಬರಿಯ ಭಾವದ ಬಳಲಿಕೆಯೆಂದೇನು ಹೇಳಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./691
ಹೆಂಗಳೊಲವೆಂಬುದು ಅಂಗಜನ ಅರಮನೆ:
ಭಂಗಂಬಡುತ್ತಿದ್ದಾರೆ ನೋಡಾ ತ್ರೆ ಜಗವೆಲ್ಲ
ಇದು ಕಾರಣ,
ನಿಮ್ಮ ಶರಣನು ಲಿಂಗನೆನಹೆಂಬ ಕಿಚ್ಚ ಹಿಡಿಯಲು
ಅಂಗಜನ ಅರಮನೆ ಉರಿದು, ಭವ ಹೆರೆಹಿಂಗಿತ್ತು ನೋಡ,
ಇದೇ ಲಿಂಗದೊಲವು; ನಿಜೈಕ್ಯಪದ.
ಉಳಿದವೆಲ್ಲಾ ಹುಸಿ ಭ್ರಮೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./692
ಹೆಣನ ಕಂಡರೆ ನಾಯಿ ಕಚ್ಚದೆ ಮಾಣ್ಬುದೇ?
ನೊಣನ ಕಂಡರೆ ಕಪ್ಪೆ ಹಿಡಿದಲ್ಲದೆ ಮಾಣ್ಬುದೇ?
ಹಣವ ಕಂಡರೆ ಮನ ಕನಲಿದಲ್ಲದೆ ಮಾಣ್ಬುದೇ?
ಬಿಸಿಯ ಕಂಡರೆ ಬೆಣ್ಣೆ ಕರಗಿದಲ್ಲದೆ ಮಾಣ್ಬುದೇ?
ಹುಸಿಯ ಕಂಡರೆ ಲೋಕ ನಚ್ಚುವುದು, ಮಚ್ಚುವುದು.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ಇವರು ಮಚ್ಚಿಯೇನು?
ನಮ್ಮ ನಾಯಿಗೆ ತಮ್ಮ ಮಗುವ ಕೊಡಬೇಡ./693
ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ ಹೊನ್ನ ಬಿಟ್ಟೆನೆಂದು
ಜಗದ ಕಣ್ಣ ಕಟ್ಟಿ ಮೆರೆವ
ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ.
ಮಾತಿನಲ್ಲಿ ಬಿಟ್ಟಿರೋ, ಮನದಲ್ಲಿ ಬಿಟ್ಟಿರೋ?
ಈ ನೀತಿಯ ಹೇಳಿರಿ ಎನಗೊಮ್ಮೆ.
ತನುಮನದ ಮಧ್ಯದಲ್ಲಿ ಇವರ ನೆನಹು ಕೆಟ್ಟು
ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ
ಇವ ಬಿಟ್ಟರೆಂದೆಂಬೆನಯ್ಯ.
ಮಾತಿನಲ್ಲಿ ಬಿಟ್ಟು, ಮನದಲ್ಲಿ ಉಳ್ಳರೆ
ಭವಭವದಲ್ಲಿ ತಂದು
ಕುನ್ನಿ ನಾಯ, ಕೆರವ ಕಚ್ಚಿಸುವ ಹಾಂಗೆ ಕಚ್ಚಿಸಿದಲ್ಲದೆ
ಮಾಣದು ಕಾಣಿರಯ್ಯ.
ಹಿಡಿದು ಸಂಸಾರಿಗಳಲ್ಲ. ಬಿಟ್ಟು ನಿಸ್ಸಂಸಾರಿಗಳಲ್ಲ.
ಎರಡೂ ಅಲ್ಲದ ಎಟುವರನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./694
ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು
ಕರಣಂಗಳ ಗುಣ ಕಾಣಿರಣ್ಣ.
ಕರಣದ ಕತ್ತಲೆಯ ಲಿಂಗಬೆಳಗನುಟ್ಟು ಕಳೆದು
ಮುಕ್ಕಣ್ಣನೆ ಕಣ್ಣಾಗಿಪ್ಪ
ಶರಣ ಬಸವಣ್ಣನ ಪಾದವ ತೋರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./695
ಹೆಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ.
ಮಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ.
ಹೊನ್ನು ಪ್ರಾಣವೆ ಪ್ರಾಣವಾಗಿಪ್ಪರಯ್ಯ.
ಈ ಹೆಣ್ಣು ಮಣ್ಣು ಹೊನ್ನೆಂಬಿವು
ಪ್ರಾಣಂಗೆ ಪ್ರಪಂಚುಭಾವವೆಂದರಿದು
ಪ್ರಾಣಂಗೆ ಲಿಂಗಕಳೆಯ ಸಂಬಂಧಿಸಿ
ಲಿಂಗಕ್ಕೆ ಪ್ರಾಣಕಳೆಯ ಸಂಬಂಧಿಸಿ
ಪ್ರಾಣ ಲಿಂಗವೆಂಬ ಪ್ರತಿಭಾವ ತೋರದೆ
ಅಪ್ರತಿಮ ಲಿಂಗಸಂಬಂಧಿಯಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./696
ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ ನುಂಗಿತ್ತು;
ಈರೇಳು ಲೋಕ ನುಂಗಿ ಕಾಳಕೂಟವಿಷವನೆ
ಉಗುಳುತ್ತಿದೆ ನೋಡ.
ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು
`ಪಶುಪತಿ ಪಶುಪತಿ’ ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು,
ಹೇಳಿಗೆ ಮುರಿಯಿತ್ತು;
ಈರೇಳುಲೋಕದ ನುಂಗಿದ ಸರ್ಪ ತಾನು ಸತ್ತಿತ್ತು.
ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./697
ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು
ಹೊರ ಉಪಚಾರವ ಮಾಡುವುದೆಲ್ಲ
ಬರಿಯ ಭಾವದ ಬಳಲಿಕೆ ನೋಡಾ.
ಅಳಲದೆ ಬಳಲದೆ ಆಯಾಸಂಬಡದೆ
ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ
ಪೂಜಿಸಬಲ್ಲ ಶರಣಂಗೆ
ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./698
ಹೊನ್ನು ತನ್ನ ಬಣ್ಣದ ಲೇಸುವ ತಾನರಿಯದಂತೆ
ಬೆಲ್ಲ ತನ್ನ ಮಧುರವ ತಾನರಿಯದಂತೆ
ಪುಷ್ಪ ತನ್ನ ಪರಿಮಳವ ತಾನರಿಯದಂತೆ
ವಾರಿಶಿಲೆ ಅಂಬುವಿನೊಳು ಲೀಯವಾದಂತೆ
ಮನವು ಮಹಾಲಿಂಗದಲ್ಲಿ ಲೀಯವಾಗಿ
ಮನವಳಿದು ನೆನಹುಳಿದು
ನೆನಹು ನಿಃಪತಿಯಾಗಿ ನಾನು ನೀನಾಗಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./699
ಹೊರಗೆ ಅಗ್ನಿ ಉರಿವುತಿಪ್ಪುದಯ್ಯ.
ಕುಂಭದೊಳಗೆ ಉದಕವಿಪ್ಪುದಯ್ಯ.
ಅಗ್ನಿಯ ಸಂಪರ್ಕದ ದೆಸೆಯಿಂದ ಕುಂಭದೊಳಗಿರ್ದ ಉದಕವು
ಹೇಂಗೆ ಉಷ್ಣವಹುದು ಹಾಂಗೆ
ಸವರ್ೇಂದ್ರಿಯವನುಳ್ಳಪ್ರಾಣನು
ತನ್ನ ಪೂರ್ವಗುಣವನು ಬಿಟ್ಟು ಲಿಂಗಕಳೆಯನೆ ವೇಧಿಸಿ
ಪ್ರಾಣವೆ ಲಿಂಗವೆನಿಸಿಕೊಂಡಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./700

ಹೊರಗೆ ವೇಷದ ಸೊಂಪು
ಒಳಗೆ ರೋಷದ ಮೊಟ್ಟೆಯಯ್ಯ.
ಅಶನವನಿಕ್ಕಿ ಹಣವ ಕೊಡದವರ ಕಂಡರೆ
ಶಾಪಿಸಿ ಕೋಪಿಸಿ ಪಾಪಿಗಳೆಂಬಿರಯ್ಯ.
ನಿಮ್ಮ ಕಿಚ್ಚಿಗೆ ಸಾಪಿಸಿ ಕೋಪಿಸಿ ಹೊಯಿದು ಕುತಾಪಿಸುವವರು
ನೀವು ಪಾಪಿಗಳಲ್ಲದೆ,
ಅವರು ಪಾಪಿಗಳೇ ತಿಳಿದು ನೋಡಿರಯ್ಯ.
ಜಗದ ಕರ್ತನ ವೇಷಧರಿಸಿ ಕರ್ತೃ ನೀವಾದ ಬಳಿಕ
ಮಾನವರು ಕೊಟ್ಟಾರು ಕೊಂಡಾರು ಎಂಬ ಭ್ರಾಂತಿಯೇಕೆ?
ಅರೆಮರುಳಗಳಿರಾ, ಕೊಡುವಾತ ಶಿವನೆಂದರಿಯದ
ಉದರ ಘಾತಕ ಖುಲ್ಲರನೊಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./701