Categories
ವಚನಗಳು / Vachanagalu

ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳು

ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ.
ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ.
ಲಿಂಗಾಂಗವೆಂಬ ಎರಡನರಿಯೆನಯ್ಯ.
ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ
ಪ್ರಾಣಲಿಂಗವೆಂಬ ಎರಡನರಿಯೆನಯ್ಯ.
ಎರಡೆರಡೆಂದು ಈ ಹುಸಿಯನೇಕೆ ನುಡಿವರಯ್ಯ.
ಇನ್ನೆರಡು ಒಂದಾಯಿತ್ತಾಗಿ
ಲೋಕಚಾತುರ್ಯ, ಲೋಕವ್ಯವಹರಣೆ.
ಲೋಕಭ್ರಾಂತಿಯ ಮರೆದೆನಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ./1
ಅಂಗ ಲಿಂಗ, ಲಿಂಗ ಅಂಗವೆಂದೆಂಬಿರಿ;
ಅಂಗ ಸೂತಕವ ಹೇಳುವಿರಿ.
ಪ್ರಾಣವೆ ಪ್ರಸಾದ, ಪ್ರಸಾದವೆ ಪ್ರಾಣವೆಂದೆಂಬಿರಿ;
ಪ್ರಕೃತಿ ಭಾವವ ಕಲ್ಪಿಸಿಕೊಂಬಿರಿ;
ಇದು ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವವೆ? ಅಲ್ಲ ಕಾಣಿರೋ.
ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವ ಭರಿತವಾದರೆ,
ಲಿಂಗವ ಮುಟ್ಟಿ ಅರ್ಪಿಸಲ್ಲಮ್ಮೆವೆಂಬುದು ಅಜ್ಞಾನ ನೋಡ.
ಈ ಅಜ್ಞಾನಿಗಳ ಅಂಗದಲ್ಲಿ ಲಿಂಗವುಂಟೇ?
ಮನದಲ್ಲಿ ಮಂತ್ರವುಂಟೇ? ಪ್ರಾಣದಲ್ಲಿ ಪ್ರಸಾದವುಂಟೇ?
ಈ ಅಶುದ್ಧ ಜೀವಿಗಳಿಗೆ
ಶುದ್ಧವಹ ಶಿವಪ್ರಸಾದ ಸಂಬಂಧ ಎಂದೂ ಇಲ್ಲ ಕಾಣ.
ಲಿಂಗ ಸೋಂಕಿದ ಅಂಗದಲ್ಲಿ ಶುದ್ಧಾಶುದ್ಧ ಉಂಟೇ? ಇಲ್ಲ;
ಈ ಅನಂಗಸಂಗಿಗಳ ಮುಖ ತೋರದಿರಾಯೆನಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./2
ಅಂಗ ಹಲವರ ಮೇಲೇ ನಿಂದಾತನ
ಕಾಣುವ ಕಂಗಳು ಒಂದೇ ನೋಡಾ.
ಆ ಕಾಣುವ ಕಂಗಳು ತನ್ನ ಕಣ್ಣೋ,
ಬೇರೊಂದು ಬಿನ್ನಾಣದ ಕಣ್ಣೋ
ಎಂಬ ಬೆಡಗನರಿದು,
ತನ್ನ ಕಣ್ಣ ಕಳದು ಬಿನ್ನಾಣದ ಕಣ್ಣನಳಿಯಲು
ತನ್ನ ಮುನ್ನಿನ ಕಣ್ಣು ಕಾಣಬಂದಿತ್ತು ನೋಡಾ.
ಅದು ನಿನ್ನ ಕಣ್ಣೆಂದರಿದ ಮಾತ್ರದಲ್ಲಿ ಎನ್ನ ನುಂಗಿತ್ತು.
ನಿನ್ನಲ್ಲಿ ಅಡಗತ್ತು;
ಅದು ಅಡಗಿದ ಠಾವಿನಲ್ಲಿ ನಾನಡಗಿ ನಿರ್ವಯಲಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./3
ಅಂಗಕ್ಕೆ ಆಚಾರವೆ ಆಶ್ರಯ.
ಆಚಾರಕ್ಕೆ ಪ್ರಾಣವೆ ಆಶ್ರಯ.
ಪ್ರಾಣಕ್ಕೆ ಜ್ಞಾನವೆ ಆಶ್ರಯ.
ಜ್ಞಾನಕ್ಕೆ ಲಿಂಗವೆ ಆಶ್ರಯ.
ಲಿಂಗಕ್ಕೆ ಜಂಗಮವೆ ಆಶ್ರಯ.
ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ
ಸದ್ಭಕ್ತನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./4
ಅಂಗಗುಣವುಂಟೇ ಲಿಂಗವನೊಳಕೊಂಡ ನಿರಂಗ ಸಂಗಿಗೆ?
ಆತ್ಮಗುಣವುಂಟೇ ಪರಮಾತ್ಮಲಿಂಗ ಸಂಬಂಧಿಗೆ?
ಅಹಂಭಾವವುಂಟೇ ತಾನೆಂಬ ಭಾವವಳಿದು
ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ?
ಸಂದೇಹಾವರಣ ಎಂದೂ ಇಲ್ಲ ನೋಡಾ.
ತಾನೆಂದೆಂದೂ
ಇಂದುಧರನಂಗದಲ್ಲಿ ಉದಯವಾಗಿ ಬಂದನಾಗಿ,
ಹುಟ್ಟಿದ ಬಟ್ಟೆಯ ಮೆಟ್ಟಿ ನಡೆದು
ಹುಟ್ಟಿದಲ್ಲಿಯೆ ಹೊಂದುವಾತನೆ ಮಾಹೇಶ್ವರನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./5
ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು
ಭಂಗವ ಮಾರುತಿಪ್ಪಳು ನೋಡಾ.
ಆಕೆಗೆ ಹರಿಗೆಯ ಪಂಗನೆಂಬವ ಗಂಡನಾಗಿಪ್ಪನು ನೋಡಾ.
ಅಂಗಡಿಯ ಬೀದಿಯ ಮುಚ್ಚಿ,
ಕೊಂಗಿತಿಯ ಕೋಡ ಮುರಿದು,
ಹರಿಗೆಯ ಪಂಗನ ಕೊಂದಲ್ಲದೆ,
ಲಿಂಗವ ಕಾಣಬಾರದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./6
ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ,
ಅದು ಕಾಮಾರಿ ನೋಡಾ.
ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ
ಅವಿರಳ ಪರಬ್ರಹ್ಮನಾಗಿ
ಅರಿಷಡುವರ್ಗಂಗಳ ಗರ್ವವ ಮುರಿದನು ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./7
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ,
ಅಂಗಕಳೆ ಲಿಂಗಕಳೆ ಎಂಬುಭಯವಳಿದು
ಆತನ ಅಂಗವೆಲ್ಲವು ಲಿಂಗಮಯವಾಗಿ
ಅಂಗಲಿಂಗ ಪದಸ್ಥನಯ್ಯ ಶರಣನು.
ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ
ಮನವು ಮಹಾಘನವನಿಂಬುಗೊಂಡಿಪ್ಪುದಾಗಿ
ಪ್ರಪಂಚುಪದಂಗಳನರಿಯನಯ್ಯ ಶರಣನು.
ಮನಲಿಂಗ ಪದಸ್ಥನಾದ ಕಾರಣ
ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ
ಪ್ರಾಣನ ಗುಣವಳಿದು
ಪ್ರಾಣಲಿಂಗ ಪದಸ್ಥನಯ್ಯ ಶರಣನು.
ಭಾವ ಬ್ರಹ್ಮವನಪ್ಪಿ
ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ
ಪರಮಾವಸ್ಥನಯ್ಯ ಶರಣನು.
ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ
ಘನಲಿಂಗ ಪದಸ್ಥನಯ್ಯ ಶರಣನು.
ಇಂತಪ್ಪ ಘನಮಹಿಮ ಶರಣಂಗೆ
ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ;
ಪ್ರತಿಯಿಲ್ಲ ಅಪ್ರತಿಮ ಶರಣಂಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./8
ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು
ಲಿಂಗ ತಾನೆಯಯ್ಯ.
ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು ಲಿಂಗ ತಾನೆಯಯ್ಯ.
ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವುದು
ಲಿಂಗ ತಾನೆಯಯ್ಯ.
ಜಿಹ್ವೆಯ ಕೊನೆಯ ಮೊನೆಯಲ್ಲಿ ರುಚಿಸುವುದು
ಲಿಂಗ ತಾನೆಯಯ್ಯ.
ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವುದು
ಲಿಂಗ ತಾನೆಯಯ್ಯ.
ಶ್ರೋತ್ರದ ಕೊನೆಯ ಮೊನೆಯಲ್ಲಿ ಕೇಳುವುದು
ಲಿಂಗ ತಾನೆಯಯ್ಯ.
ಭಾವದ ಕೊನೆಯ ಮೊನೆಯಲ್ಲಿ ತೃಪ್ತಿಯಿಂದ
ಪರಿಣಾಮಿಸುವುದು ಲಿಂಗ ತಾನೆಯಯ್ಯ.
ಇದುಕಾರಣ,
ಲಿಂಗ ಮುಂತಲ್ಲದೆ ಸಂಗವ ಮಾಡೆ.
ಲಿಂಗ ಮುಂತಲ್ಲದೆ ಅನ್ಯವ ನೋಡೆ.
ಲಿಂಗ ಮುಂತಲ್ಲದೆ ಅನ್ಯವ ವಾಸಿಸೆ.
ಲಿಂಗ ಮುಂತಲ್ಲದೆ ಅನ್ಯವ ರುಚಿಸೆ.
ಲಿಂಗ ಮುಂತಲ್ಲದೆ ಅನ್ಯವ ಸೋಂಕೆ.
ಲಿಂಗ ಮುಂತಲ್ಲದೆ ಅನ್ಯವ ಕೇಳೆನು.
ಲಿಂಗ ಮುಂತಲ್ಲದೆ ಅನ್ಯವ ಪರಿಣಾಮಿಸೆನು.
ಹೀಂಗೆಂಬ ನೆನಹು ನಿತ್ಯಾನಿತ್ಯ ವಿವೇಕವ್ರತವಯ್ಯಾ ಎನಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!/9
ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ
ಕಂಗಳ ಕೊನೆಯ ಬಿಡುಮುಳ್ಳು ತಾಕಲು,
ಭಂಗಿತರಾದರು ಹರಿ ಬ್ರಹ್ಮರೆಲ್ಲರು.
ಅಂಗದ ಕೊನೆಯ ಮೊನೆಯ ಬಿಡುಮುಳ್ಳ ಮುರಿಯಲು,
ಮಂಗಳಮಯ ಮಹಾಲಿಂಗವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./10
ಅಂಗದ ಭಂಗವ ಲಿಂಗ ಸಂಗದಿಂದ ಪರಿಹರಿಸಬೇಕಯ್ಯ.
ಮನೋಮಾಯವ ಅರುಹಿನ ಬಲದಿಂದ ಪರಿಹರಿಸಬೇಕಯ್ಯ.
ಜೀವನೋಪಾಧಿಯ ಶಿವಾನುಭಾವದಿಂದ
ಹರಿಯಬೇಕು ಕಾಣಿರೋ.
ಕರಣದ ಕತ್ತಲೆಯ ಸದಮಲದ ಬೆಳಗನುಟ್ಟು
ಪರಿಹರಿಸಬೇಕು ಕಾಣಿರೋ.
ಜವ್ವನದ ಹೊರ ಮಿಂಚ, ಕಣ್ಣಿಗೆ ತೋರುವ ಕಾಮಜಾಲಂಗಳ
ಶಿವಜ್ಞಾನಾಗ್ನಿಯ್ಲಲ್ವಿಕ್ಕಿ ಸುಟ್ಟುರುಹಿ
ಭಸ್ಮವಧರಿಸಬಲ್ಲರೆ ಶರಣನೆಂದೆಂಬೆ;
ಉಳಿದವೆಲ್ಲಾ ಹುಸಿಯೆಂಬೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./11
ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ.
ಅಂಗದೊಳಗೆ ಪ್ರಾಣವಿಪ್ಪುದಯ್ಯ.
ತನುವಿನ ಮೇಲಿಪ್ಪ ಲಿಂಗವ
ಮನದಲ್ಲಿ ಸ್ವಾಯತಮಾಡಿ ನೆರೆಯಲರಿಯದೆ
ಧನ ಕಾಮಿನಿಯರ ಭ್ರಾಂತಿನಲ್ಲಿ ಜಿನುಗುವ ಮನುಜರಿಗೆ
ಪ್ರಾಣಲಿಂಗವೆಂದೇನೋ ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./12
ಅಂಗದಮೇಲೊಂದು ಲಿಂಗವ ಕಂಡೆ;
ಲಿಂಗದಮೇಲೊಂದಂಗವ ಕಂಡೆನು ನೋಡಾ.
ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು.
ಶಿವಜೀವರೊಂದಾದಲ್ಲಿ,
ಪ್ರಾಣಾಪಾನ, ವ್ಯಾನ, ಉದಾನ, ಸಮಾನ,
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ[ವೆ]ಂಬ
ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ
ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./13
ಅಂಗನೆಯ ಚಿತ್ತ,
ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ
ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ
ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ
ಅಪ್ಪಿ ಅಗಲದಿಪ್ಪರೆ
ಆ ಮಹಾತ್ಮನ ಏನೆಂದುಪಮಿಸುವೆನಯ್ಯ?
ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂಧಿಯ?
ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ,
ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./14
ಅಂಗಭಾವದಿಂದ ಲಿಂಗಮುಖವನು
ಅಂಗಮುಖವನು ಅರಿದು ಜಂಗಮ ಮುಖವನು ಅರಿದಡೆ
ಸಂಸಾರವೆಂಬ ಬಂಧನವಿಲ್ಲವಯ್ಯ.
ಜಂಗಮವೆಂದರೆ ಸಾಕ್ಷಾತ್ ಪರವಸ್ತು ತಾನೆ ನೋಡಾ.
ಅದೇನು ಕಾರಣವೆಂದಡೆ:
ಅಂಗವಾರಕ್ಕೆ ಲಿಂಗವಾರಕ್ಕೆ ಮೇಲಾಗಿ
ಆ ಅಂಗವನು ಲಿಂಗವನು ತನ್ನಲ್ಲಿ ಏಕೀಕರಿಸಿಕೊಂಡು
ತಾನು ಪರಮ ಚೈತನ್ಯನಾದ ಕಾರಣ.
ಆ ಪರವಸ್ತುವಿನ ಪ್ರಸನ್ನ ಪ್ರಸಾದಮುಖವನರಿದು
ಇಹ ಪರವ ನಿಶ್ಚೆ ಸೂದಿಲ್ಲ ನೋಡಾ.
ಅದೇನು ಕಾರಣವೆಂದಡೆ:
ಇಹ ಪರಕ್ಕೆ ಹೊರಗಾಗಿ
ಪರಮ ಪದದಲ್ಲಿ ಪರಿಣಾಮಿಯಾದನಾಗಿ
ಈ ತ್ರಿವಿಧವು ಒಂದೆಯೆಂದರಿದಾತನೆ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ./15
ಅಂಗಲಿಂಗ ಸಂಬಂಧದ ನಿಲುಕಡೆಯನರಿಯದೆ
ಅಘೋರತಪವ ಮಾಡಿದರೇನು?
ಗಾಳಿಯಾಹಾರವ ಕೊಂಡರೇನು?
ತರಗೆಲೆಯ ಮೆದ್ದರೇನು?
ಗಿರಿಗಹ್ವರದೊಳಗಿದ್ದರೇನು?
ಅಂಗಲಿಂಗಸಂಬಂಧಿಗಳಾಗಬಲ್ಲರೆ.
ಅಂಗಲಿಂಗಸಂಗಂದಿಂದಲ್ಲದೆ,
ಅಂತರಂಗದಲ್ಲಿ ಅರುಹು ತಲೆದೋರದು.
ಅಂತರಂಗದಲ್ಲಿ ಅರುಹು ತಲೆದೋರಿದಲ್ಲದೆ,
ಆತ್ಮಲಿಂಗದ ಆದ್ಯಂತವನರಿಯಬಾರದು.
ಆತ್ಮಲಿಂಗದ ಆದ್ಯಂತವನರಿಯದೆ ಅಘೋರತಪವಮಾಡಿದರೆ
ಅದೇತಕ್ಕೂ ಪ್ರಯೋಜನವಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./16
ಅಂಗವಾರು, ಲಿಂಗವಾರು
ಶಕ್ತಿಯಾರು, ಭಕ್ತಿಯಾರು,
ಇಂತಿವೆಲ್ಲವ ನಿನ್ನಲ್ಲಿ ಗರ್ಭಿಕರಿಸಿಕೊಂಡು
ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ
ನಿನ್ನ, ನಿಃಕಲಶಿವತತ್ವವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./17
ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ ಕಂಡೆ.
ಕಾಯವಿಲ್ಲದೆ ಅಪ್ಪಿದೆ.
ಮನವಿಲ್ಲದೆ ನೆನೆದೆ.
ಭಾವವಿಲ್ಲದೆ ಭಾವಿಸಿ
ಮಾಯವಿಲ್ಲದೆ ಸಂಗವ ಮಾಡಿ ನಿಸ್ಸಂಗಿಯಾದೆನು.
ನಿರುಪಾಧಿಕ ನಿಷ್ಕಳಂಕ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./18
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು,
ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ.
ಅಗ್ನಿಯಂಗದ ಉದರದೊಳಗೆ
ಪರಿಪರಿಯ ರಸದ ಭಾವಿ.
ಆ ರಸದ ಭಾವಿಯ ತುಳಕ ಹೋದವರೆಲ್ಲ
ಅಗ್ನಿಯನುಣ್ಣದೆ, ಆ ರಸವನೆ ಉಂಡು,
ಅಗ್ನಿಯ ಸ್ವರೂಪವಾದರು ನೋಡ.
ಅಗ್ನಿಯ ಸ್ವರೂಪವಾದುದ ಕಂಡು
ಕುರುಹಳಿದು ಅರುಹಡಗಿ ನಿರವಯಲಸಮಾಧಿಯಲ್ಲಿ
ನಿಂದ ನಿಬ್ಬೆರಗು
ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./19
ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ,
ಶಿವಲಿಂಗದುದಯವ ಕಂಗಳಿಲ್ಲದೆ ಕಂಡು,
ಅಂಗವಿಲ್ಲದೆ ಸಂಗವ ಮಾಡಿ,
ನಿಸ್ಸಂಗಿಯಾಗಿ ಸರ್ವಸಂಗಕ್ಕೆ ಹೊರಗಾಗಿ,
ನಿರ್ವಯಲ ಬೆರಸಲು
`ಮಂಗಳ ಮಂಗಳ’ವೆನುತ್ತಿಪ್ಪ
ಮಹಾಗಣಂಗಳ ಸಂಗದಲ್ಲಿ ಮೈಮರೆದನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./20
ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ.
ಲಿಂಗವುಳ್ಳನ್ನಕ್ಕರ ಅಂಗ ಅಂಗವೆನುತಿರ್ದೆ.
ಅಂಗ ಲಿಂಗವುಳ್ಳನ್ನಕ್ಕರ ಅರುಹು ಅರುಹುಯೆನುತಿರ್ದೆನು.
ಅರುಹು ಅರುಹುಯೆಂಬನ್ನಕ್ಕರ ಭಾವ ನಿರ್ಭಾವಯೆನುತಿರ್ದೆನು.
ಅಂಗ ಲಿಂಗದಲ್ಲಡಗಿ, ಲಿಂಗ ಅಂಗದಲ್ಲಡಗಿ,
ಅಂಗ ಲಿಂಗವೆಂಬುಭಯ ಭಾವವರತಲ್ಲಿ
ಅರುಹು ಅರುಹೆಂಬುವುದು ಬರಿದಾಯಿತ್ತು ನೋಡಾ.
ಅರುಹು ಅರುಹೆಂಬುವದು ಅರಿದಾದಲ್ಲಿ,
ಭಾವ ನಿರ್ಭಾವ ಬಯಲಾಗಿ
ಬಚ್ಚಬರಿಯ ಬಯಲೆಯಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./21
ಅಂಗಾಲಕಣ್ಣವರ ಪದವಿ ಅವರಿಗೆ ಇರಲಿ.
ಮೇಗಾಲಕಣ್ಣವರ ಪದವಿ ಅವರಿಗೆ ಇರಲಿ.
ಮೈಯೆಲ್ಲಾ ಕಣ್ಣವರ ಪದವಿ ಅವರಿಗೆ ಇರಲಿ.
ಪಂಚಮುಖ ನೊಸಲಕಣ್ಣು ನಂದಿವಾಹನರಪ್ಪ
ಗಂಗೆವಾಳುಕ ಸಮಾರುದ್ರರ ಪದವಿ ಅವರಿಗೆ ಇರಲಿ.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ
ಪದಗಳು ಅವರಿಗೆ ಇರಲಿ.
ಎನಗೆ ಆವ ಫಲವು ಬೇಡ. ಆವ ಪದವೂ ಬೇಡ.
ನಾನು ನಿಮ್ಮ ಪದದೊಳಗಡಗಿ,
ಎನಗೆ ನಿನಗೆ ಭಿನ್ನವಿಲ್ಲದಿಪ್ಪ
ಪರಮ ಭಕ್ತಿಸಂಪದವನೆ ಕೊಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./22
ಅಂಗುಷ್ಠದಲ್ಲಿ ಸರ್ಪದಷ್ಟವಾಗಲು
ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ.
ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು
ಆ ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡಾ.
ಲಿಂಗವನಪ್ಪಿ ಲಿಂಗಸಂಗಿಯಾದ ಅಭಂಗ ಶರಣಂಗೆ
ಅನಂಗಸಂಗವುಂಟೆ? ಬಿಡಾ ಮರುಳೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./23
ಅಂಡಜ ಪಿಂಡಜ ಬಿಂದುಜ ಉದಯವಾಗದಂದು,
ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ
ತತ್ವತ್ರಯಂಗಳ ನಾಮಸೀಮೆಗಳೇನುಯೇನೂಯಿಲ್ಲದಂದು,
ಆಚಾರ ಅನಾಚಾರವಿಲ್ಲದಂದು,
ಸೀಮೆ ನಿಸ್ಸೀಮೆಯಿಲ್ಲದಂದು,
ಗಮನ ನಿರ್ಗಮನವಿಲ್ಲದಂದು,
ಪುಣ್ಯಪಾಪ, ಕರ್ಮಧರ್ಮ, ಸ್ವರ್ಗನರಕ, ಇಹಪರವಿಲ್ಲದಂದು,
ಪರಾತ್ ಪರವಸ್ತು ನೀನೊಬ್ಬನೆಯಿರ್ದೆಯಲ್ಲಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./24
ಅಂತರಂಗದಲ್ಲಿ ಅರುಹು ಪೂರ್ಣವಾಗಿ
ಬಹಿರಂಗದಲ್ಲಿ ಸತ್ಕಿ ್ರಯಾಸಂಪನ್ನನಾದ ಸುಚರಿತ್ರನು ನೋಡಾ ಭಕ್ತನು.
ತನು ಮನ ಭಾವದಲ್ಲಿ ಇಷ್ಟ ಪ್ರಾಣ ಭಾವವ ನಿಲಿಸಿ
ತನು ಮನ ಭಾವ ವಿರಹಿತನಾಗಿ ನಿರ್ದೆಹಿ ನೋಡಾ ಭಕ್ತನು.
ಕ್ರಿಯೆ ಜ್ಞಾನ ಭಾವಲಿಂಗವ ಮುಟ್ಟಿ ಹಿಮ್ಮೆಟ್ಟದ
ನಿಭ್ರಾಂತನಯ್ಯಾ ನಿಮ್ಮ ಭಕ್ತನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./25
ಅಂತರಂಗದಲ್ಲಿ ಜ್ಞಾನ,
ಬಹಿರಂಗದಲ್ಲಿ ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ
ಏಕಭಾವವೆನಿಸಿಕೊಂಬುದಯ್ಯ.
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತಿಪ್ಪುದಯ್ಯ.
ಕುಂಭದಲ್ಲಿ ಉದಕವಿಪ್ಪುದು.
ಅಗ್ನಿಯ ಜ್ವಾಲೆಯ ಸಾಮಥ್ರ್ಯದಿಂದ
ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ
ಜ್ಞಾನ ಸತ್ಕಿ ್ರಯೋಪಚಾರವ ಮಾಡಲಾಗಿ
ಪ್ರಾಣವೆ ಲಿಂಗಸ್ವರೂಪವಪ್ಪುದು ತಪ್ಪದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!/26
ಅಂತರವಿಲ್ಲದಂದು, ಬಾಹ್ಯವಿಲ್ಲದಂದು,
ಅಡಿ, ಮುಡಿ, ಒಡಲು, ಮತ್ತೊಂದೆಡೆಯೇನೂಯಿಲ್ಲದಂದು,
ದೆಶ, ದಿಕ್ಕುಗಳು ವಿಶ್ವಪ್ರಪಂಚುಯೇನೂಯಿಲ್ಲದಂದು,
ಸ್ಥಾವರ ಜಂಗಮಾತ್ಮಕಂಗಳಿಗೆ ಆಧಾರಕರ್ತೃವೆಂಬ
ನಾಮಂಗಳೇನೂಯಿಲ್ಲದಂದು,
ಸರ್ವಶೂನ್ಯನಿರಾಲಂಬವಾಗಿರ್ದೆಯಲ್ಲಾ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./27
ಅಂದಾದಿಬಿಂದು ಉದಯಿಸದಂದು,
ಮಾಯಾಶಕ್ತಿ ಹುಟ್ಟದಂದು,
ಪರಶಿವತತ್ವದಲ್ಲಿ ಚಿತ್ತು ತಲೆದೋರದಂದು,
ಚಿತ್ತಿನಿಂದ ನಾದ ಬಿಂದು ಕಳೆಗಳುದಯವಾಗದಂದು,
ನಾದ ಬಿಂದು ಕಳೆವೊಂದಾಗಿ ಚಿತ್ಪಿಂಡ ರೂಹಿಸದಂದು,
ಶೂನ್ಯ ಮಹಾಶೂನ್ಯವಿಲ್ಲದಂದು,
ನಿಃಕಲ ನಿರಾಳತತ್ವವೆಂಬ ಹೆಸರಿಲ್ಲದಂದು,
ನಿತ್ಯನಿರಂಜನ ನೀನೊರ್ಬನೆಯಿರ್ದೆಯಲ್ಲ ನಿನ್ನ ನೀನರಿಯದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./28
ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು
ಅಂಬುಜ ಉದಯವಾಗಿ
ಅಮರಗಣಂಗಳು ಸಂಭ್ರಮಿಸುತ್ತಿದಾರೆ ನೋಡಾ.
ಅಮರಗಣ ತಿಂಥಿಣಿಯೊಳಗೆ
ಅನುಪಮ ಮಹಿಮನ ಕಂಡು
ಅಪ್ಪಿ ಅಗಲದೆ ಅಪ್ರತಿಮನಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವವ ಪ್ರಭುವೇ./29
ಅಕ್ಕನ ತಮ್ಮನ ಸಂಗದಿಂದ ಹೆತ್ತವ್ವೆ ಹುಟ್ಟಿದಳು ನೋಡಾ.
ಹೆತ್ತವ್ವೆ ಹುಟ್ಟಲು ಅಕ್ಕನು ತಮ್ಮನು ಅಳಿದರು ನೋಡಾ.
ಹೆತ್ತವ್ವೆ ಮುತ್ತವ್ವೆಯ ನುಂಗಿ ಪರತತ್ತ್ವವನೆಯ್ದಿದಳು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./30
ಅಕ್ಷರವೆಂಬುದು ಲೆಕ್ಕದೊಳಗು;
ಲೆಕ್ಕವೆಂಬುದು ನೆನಹಿನೊಳಗು;
ಇವೆಲ್ಲಾ ಕಲ್ಪಿತದೊಳಗು.
ಕಲ್ಪಿತವೆಂಬುದು ಖಂಡಿತ ನೋಡ
ಅಖಂಡ ಪರಿಪೂರ್ಣ, ನಿರ್ವಿಕಲ್ಪ, ನಿತ್ಯಾತ್ಮಕನಾದ
ಲಿಂಗೈಕ್ಯನ ಕಲ್ಪಿತಕ್ಕೆ ತಂದು ನುಡಿವ
ಕರ್ಮಕಾಂಡಿಗಳನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./31
ಅಗ್ನಿಯ ಸಂಪುಟದ ದೆಸೆಯಿಂದ
ಘಟದೊಳಗಿದ್ದ ಉದಕವು ಹೇಂಗೆ ಬತ್ತಿ ಬಯಲಪ್ಪುದಯ್ಯ
ಆ ಪ್ರಕಾರದಲ್ಲಿ ಜ್ಞಾನ ಸತ್ಕಿ ್ರಯಾಸಮರಸವಾದಲ್ಲಿ
ಪ್ರಾಣವೆ ಲಿಂಗವಾಯಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./32
ಅಗ್ನಿಯೆ ಅಂಗವಾದ ಪ್ರಸಾದಿಯಲ್ಲಿ
ಪ್ರಾಣಲಿಂಗ ಶರಣ ಐಕ್ಯ ಭಕ್ತ ಮಾಹೇಶ್ವರನಪ್ಪ
ಅಂಗಪಂಚಕವು ಗರ್ಭಿಕೃತವಾಗಿ
ಆ ಪ್ರಸಾದಿಯಲ್ಲಿ ಶಿವಲಿಂಗ ಸಂಬಂಧವಾಗಿ
ಆ ಶಿವಲಿಂಗದಲ್ಲಿಯೆ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಆಚಾರಲಿಂಗ ಗುರುಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ
ಶಿವಲಿಂಗವೆ ಸರ್ವಾಶ್ರಯವಾಗಿ
ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ
ಪ್ರಸಾದಿಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./33
ಅಜ ಹರಿ ಸುರ ಮನು ಮುನಿಗಳ
ಮರುಳುಮಾಡಿ ಕಾಡಿತ್ತೀ ಮಾಯೆ.
ಪತಿವ್ರತೆಯೆಂಬುವರ ಪರಿಯಟಣಗೊಳಿಸಿತ್ತೀ ಮಾಯೆ.
ಯತಿಗಳೆಂಬವರ ಎದೆಯೆದೆಯನೊದೆದಿತ್ತೀ ಮಾಯೆ.
ಸಚರಾಚರಂಗಳನೆಲ್ಲವ ಜನನ ಮರಣಗಳೆಂಬ ಅಣಲೊಳಗಿಕ್ಕಿ
ಆಗಿದಗಿದು ಉಗಿಯಿತ್ತು ನೋಡ ಮಾಯೆ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನಿಮ್ಮ ಶರಣರಲ್ಲದವರ ಕೊಂದು ಕೂಗಿಸಿತ್ತು ನೋಡ ಈ ಮಾಯೆ./34
ಅಜ ಹರಿ ಸುರರಿಗೆ ಶರೀರವ ತೊಡಿಸಿ
ಕರಣದೋಕುಳಿಯಾಡಿ
ವಿಷಯದ ಮಳೆಯ ಕರೆವುತ್ತಿದ್ದಾಳೆ ನೋಡಾ.
ಹರಣದ ಮಧ್ಯದಲ್ಲಿ ನಿಂದು,
ಹೆಣ್ಣು ಹೊನ್ನು ಮಣ್ಣು ತೋರಿ,
ಕಣ್ಣ ಕಟ್ಟಿದಳು ನೋಡಾ,
ನಿಮ್ಮ ಕಾಣಲೀಯದೆ.
ತಾನು ತಲೆಕೆಳಗಾಗಿ ಕಾಲುಮೇಲಾಗಿ ನಡೆವಳು.
ಕರಿಯಾಗಿ ನಿಂದು, ಹರಿಯಾಗಿ ಹರಿದು,
ಉರಿಯಾಗಿ ಸುಡುತಿಪ್ಪಳು ನೋಡಾ.
ಕರಿಯ ಶಿರದಲ್ಲಿ ಉರಿ ಹುಟ್ಟಲು
ಕರಿ ಬೆಂದಿತ್ತು, ಹರಿ ನಿಂದಿತ್ತು, ಉರಿ ಕೆಟ್ಟಿತ್ತು.
ಶರೀರಗುಣವಳಿದು ಸದ್ಭಕ್ತಿಸಾಮ್ರಾಜ್ಯವನಾಳುತ್ತಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./35
ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ,
ಹೊಟ್ಟೆಗೆ ಕಾಣದ ಅರಪಿನಂತೆ. ಇಷ್ಟಲಿಂಗಕ್ಕೆ ಕೊಟ್ಟೆನೆಂದು
ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಹೊಟ್ಟೆಯ ತುಂಬಿಕೊಂಬ ಭ್ರಷ್ಟರಿಗೆ ಪ್ರಸಾದವೆಲ್ಲಿಯದೊ?
ತಟ್ಟುವ ಮುಟ್ಟುವ ಮರ್ಮವನರಿದು
ಕಾಯದ ಕರಣದ ಕೈಯಲ್ಲಿ ಇಷ್ಟಲಿಂಗದ ಮುಖವನರಿದು
ಕೊಟ್ಟು ಕೊಳಬಲ್ಲರೆ ಪ್ರಸಾದಿಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./36
ಅಟ್ಟುದನು ಅಡಲುಂಟೆ? ಸುಟ್ಟುದ ಸುಡಲುಂಟೇ ಅಯ್ಯ?
ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲುದೇ ಅಯ್ಯ?
ಕಪರ್ೂರವ ಅಗ್ನಿ ನುಂಗಿದ ಬಳಿಕ ಕರಿಯುಂಟೇ ಅಯ್ಯ?
ಶರಣನ ಲಿಂಗ ನುಂಗಿ, ಲಿಂಗವ ಶರಣ ನುಂಗಿ,
ನದಿಯೊಳಗೆ ನದಿ ಬೆರೆಸಿದಂತೆ ಬೆರೆದು,
ಶುದ್ಧ ನಿರ್ಮಲನಾದ ಲಿಂಗೈಕ್ಯಂಗೆ,
ಭಿನ್ನಾಭಿನ್ನವ ಕಲ್ಪಿಸುವ ಅಜ್ಞಾನಿಗಳ
ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./37
ಅಡವಿಯ ಹುಲ್ಲ ಮೇದ ಪಶು
ಮಡುವಿನಗ್ಛವಣಿಯ ಕುಡಿದು ನಡುಬೀದಿಯಲ್ಲಿ ಬರುತ್ತಿರಲು,
ಕಡೆಯಲಿರ್ದ ಹುಲಿ ಬಂದು ಹಿಡಿಯಲು,
`ನಿನ್ನೊಡವೆಯನೇನ ಬಳಸಿಕೊಂಡೆನೋ’ ಎಂದು
ತನ್ನೊಡೆಯನ ಕರೆಯಲು,
ಹಿಡಿದ ಹುಲಿ ಬಿಟ್ಟೋಡಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./38
ಅಡಿಗಡಿಗೆ ಭವಹರನ ನೆನೆವುತ್ತ, ಭಸಿತವ ಧರಿಸುತ್ತ
ಭವವ ತಪ್ಪಿಸಿಕೊಂಬ ಸುಖಕ್ಕೆ ಇನ್ನು ಸರಿಯುಂಟೇ?
ಪ್ರತಿಯಿಲ್ಲದ ಅಪ್ರತಿಮ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./39
ಅಣಿಮಾ ಗರಿಮಾ ಲಘಿಮಾ ಮಹಿಮಾ
ಪ್ರಾಪ್ತಿ ಪ್ರಾಕಾಮ್ಯ ಈಶತ್ವ ವಶತ್ವವೆಂಬ
ಅಷ್ಟಮಹದ್ವೆ ಶ್ಚರ್ಯವ ತೃಣೀಕರಿಸಿಕೊಂಡಿಪ್ಪನು
ನೋಡಾ ಶರಣನು.
ಅಂಜನಾಸಿದ್ಧಿ, ಘುಟಿಕಾಸಿದ್ಧಿ, ಕಾಯಸಿದ್ಧಿ, ರಸಸಿದ್ಧಿ,
ವಾಚಾಸಿದ್ಧಿ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನ,
ಪರಕಾಯಪ್ರವೇಶ, ಖೇಚರಗಮನ. ಅಗ್ನಿಸ್ತಂಭ, ಜಲಸ್ತಂಭ,
ಮಾರಣ, ಮೋಹನ, ಉಚ್ಛಾಟನ ಇಂತಿವು ಮೊದಲಾದ
ನಾನಾಕುಟಿಲಸಿದ್ಧಿಯ ಪ್ರಪಂಚ ಹೊದ್ದನು ನೋಡಾ ಶರಣನು.
ಗುಣತ್ರಯಂಗಳನಳಿದ ನಿರ್ಗುಣನು
ನಿತ್ಯನು ನಿರಾಮಯನು ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./40
ಅದ್ಭುತದಾಕಾಶದಲ್ಲಿ ಶುಭ್ರವರ್ಣದ ಅಂಗನೆ
ವಿದ್ಯುರ್ಲತೆಯ ಹಡೆದಳು ನೋಡಾ.
ವಿದ್ಯುರ್ಲತೆಯ ಬೆಳಗಿನಿಂದ ಶುದ್ಧಪ್ರಸಾದವ ಕಂಡು
ಶುದ್ಧಾಶುದ್ಧವನಳಿದು, ನಾ ನೀನೆಂಬುದ ಹೊದ್ದದೆ
ಎರಡಳಿದ ನಿರಾಳ ನೀನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./41
ಅದ್ವೆ ತವ ನುಡಿವ ಬದ್ಧಭವಿಗಳಿರಾ
ಮನದ ಕ್ಷುದ್ರವಡಗದು ಕಾಣಿ ಭೋ.
ತತ್ತ್ವಾರ್ಥವ ನುಡಿವ ವ್ಯರ್ಥಕಾಯರುಗಳಿರಾ
ವಿಕಾರದ ಕತ್ತಲೆ ಹರಿಯದು ಕಾಣಿ ಭೋ.
ಶಿವಾನುಭಾವ ನಿಮಗೇಕೆ? ಸತ್ತ ಹಾಂಗಿರಿ ಭೋ.
ತತ್ತ್ವವತ್ತಲೆಯಾಗಿ ನೀವಿತ್ತಲೆಯಾಗಿ
ಮೃತ್ಯುವಿನ ಬಾಯ ತುತ್ತಾದಿರಲ್ಲಾ.
ತತ್ತ್ವವಿತ್ತುಗಳು ವೃಥಾ ಸತ್ತುದ ಕಂಡು
ಮೃತ್ಯುಂಜಯನ ಶರಣರು ನಗುತಿಪ್ಪರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./42
ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು.
ಆ ನಿರ್ಮಲಮಹಾಜ್ಞಾನಚಿತ್ಸ್ವರೂಪವೇ ಬಸವಣ್ಣ ನೋಡ.
ಆ ಬಸವಣ್ಣನಿಂದ ನಾದ ಬಿಂದು ಕಳೆ.
ಆ ನಾದ ಬಿಂದು ಕಳೆ ಸಮರಸವಾಗಿ
ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ
ಲಿಂಗಸ್ವರೂಪವಾಯಿತ್ತು ನೋಡ.
ಇದು ಕಾರಣ,
ಅನಾದಿಶರಣ ಆದಿಲಿಂಗವೆಂದೆ,
ಬಸವಣ್ಣನಿಂದ ಲಿಂಗವಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./43
ಅನಾದಿ ಭವಿಗಳಾಗಿ ಅವಾಂತರ ಭಕ್ತರಾದೆವೆಂಬವರೆಲ್ಲ
ಹುಟ್ಟಿದ ಯೋನಿಯಲ್ಲಿ ಹುಟ್ಟಿ, ಮೆಟ್ಟದ ಭೂಮಿಯ ಮೆಟ್ಟಿ,
ಉಣ್ಣದ ಆಹಾರವನುಂಡು, ಕಾಣದ ಕರ್ಮಂಗಳ ಕಂಡು,
ಭವ ಭವದಲ್ಲಿ ಭಂಗಬಡುತಿಪ್ಪುದು ತಪ್ಪದು ನೋಡ.
ಇದು ಕಾರಣ,
ಆದಿಯಲ್ಲಿಯೂ ಭಕ್ತರು, ಅನಾದಿಯಲ್ಲಿಯೂ ಭಕ್ತರು.
ಎಂದೆಂದೂ ಭಕ್ತಿಸಮರಸರಾಗಿ ಭೇದವಾದಿಗಳಲ್ಲ ನಿಮ್ಮ
ಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./44
ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ
ಚಿದಂಗ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ.
ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿತ್ ಸ್ವರೂಪಕಂ
ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ
ಆಪಾದ ಮಸ್ತಕಾಂತಂಚ ರೋಮ ರೋಮ ಭವೇಚ್ಛಿವಃ
ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯುದ್ಧೂಳನಾದ್ಭವೇತ್’
ಎಂದುದಾಗಿ
ಅನಾದಿ ಶಾಶ್ವತ ನಿತ್ಯ ಪರಶಿವಸ್ವರೂಪು ತಾನೇ ನೋಡಾ ಶ್ರೀವಿಭೂತಿ.
ಪರಶಿವನ ಪರಮ ಚೈತನ್ಯ ಚಿತ್ ಸ್ವರೂಪು ತಾನೇ ನೋಡಾ ಶ್ರೀ ವಿಭೂತಿ.
ಚಿದಂಗ ವೃಷಭಾಕಾರ ತಾನೇ ನೋಡಾ ಶ್ರೀವಿಭೂತಿ.
ಆ ಚಿದ್ಭಸ್ಮವನೆ ನೀ ಧರಿಸಿಪ್ಪೆಯಯ್ಯ.
ನೀನೊಲಿದು ಧರಿಸಿದ ಪರಮಪಾವನ ಚಿದ್ಭಸ್ಮವನೆ
ನಾನು ಸರ್ವಾಂಗದಲ್ಲಿ ಧರಿಸಿ,
ಸರ್ವಾಂಗವೆಲ್ಲವು ಶಿವಮಯವಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./45
ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು
ಭೇದವಮಾಡಿ ನುಡಿವವರೆಲ್ಲ
ಭವಬಾಧೆಯಲ್ಲಿ ಮುಳುಗಿ, ಭವಪಾಶಂಗಳು ಹರಿಯದೆಯಿಪ್ಪ
ಪಶುಭಾವದ ಪರಿಯ ನೋಡ.
ಇದು ಕಾರಣ,
ಆದಿಯಲ್ಲಿಯ ಮುಕ್ತರು, ಅನಾದಿಯಲ್ಲಿಯು ಮುಕ್ತರು,
ಎಂದೆಂದೂ ಮುಕ್ತರಯ್ಯ ನಿಮ್ಮ ಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./46
ಅನಾದಿಗಣೇಶ್ವರನ ಶಿಷ್ಯ ಆದಿಗಣೇಶ್ವರ.
ಆದಿಗಣೇಶ್ವರನ ಶಿಷ್ಯ ನಿರ್ಮಾಯನೆಂಬ ಗಣೇಶ್ವರ.
ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ.
ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರನು.
ಜ್ಞಾನಾನಂದನೆಂಬಗಣೇಶ್ವರನ ಶಿಷ್ಯರು ಆತ್ಮಗಣೇಶ್ವರನು.
ಆತ್ಮಗಣೇಶ್ವರನ ಶಿಷ್ಯರು ಅಧ್ಯಾತ್ಮಗಣೇಶ್ವರ.
ಅಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ.
ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು.
ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು.
ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು.
ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿಯ ಗೋಸಲದೇವರು.
ಹರದನಹಳ್ಳಿಯ ಗೋಸಲದೇವರ ಶಿಷ್ಯರು ಶಂಕರದೇವರು.
ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು.
ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು.
ಚೆನ್ನಬಸವೇಶ್ವರದೇವರ ಕರಕಮಲದಲ್ಲಿ ಉತ್ಪತ್ತಿಯಾದ ಶಿಶು
ಸಿದ್ಧಲಿಂಗ ನಾನಯ್ಯ.
ಹೀಂಗೆ ಅನಾದಿವಿಡಿದು ಬಂದ ಗುರು
ಅನಾದಿವಿಡಿದು ಬಂದ ಲಿಂಗ
ಅನಾದಿವಿಡಿದು ಬಂದ ಜಂಗಮ
ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ
ಅನಾದಿವಿಡಿದು ಬಂದ ಪಾದೋದಕ-ಪ್ರಸಾದ
ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ
ಅನಾದಿ ಸಂಸಿದ್ಧವಾದ ವೀರಶೈವಾಚಾರಸಂಪತ್ತು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./47
ಅನಾದಿಮಲಿನರಾಗಿ, ಆದಿ ನಿರ್ಮಲರಾದೆವೆಂದು,
ನಿಮ್ಮ ಶರಣರಿಗೆ ಮಾಯಾಕರ್ಮವ ಕಲ್ಪಿಸಿ ನುಡಿವ
ಮಾದಿಗರನೆನಗೊಮ್ಮೆ ತೋರದಿರು.
ಇದು ಕಾರಣ,
ಅನಾದಿ ನಿತ್ಯ ನಿಶ್ಚಿಂತ ನಿರ್ಮಲ ನಿರಾವರಣರು ನಿಮ್ಮ ಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./48
ಅನಾದಿಯಾಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ,
ಈ ಜಗವನೊಬ್ಬರೂ ಸೃಷ್ಟಿಮಾಡಿದ ಕರ್ತುವಲ್ಲ.
ಎಂದೆಂದೂ ಜಗವಿದ್ದಿತ್ತು ನಿತ್ಯವೆನ್ನು.
ಎಂದೆಂದೂ ಜಗವಿದ್ದಿತ್ತೆಂಬೆಯಾದರೆ,
ಶಿವನ ಸೃಷ್ಟಿ, ಸ್ಥಿತಿ, ಸಂಹಾರ, ಸ್ಥಿರೋಭಾವ, ಅನುಗ್ರಹವೆಂಬ
ಪಂಚಕೃತ್ಯಗಳು ಹುಸಿಯೆಂದೆನ್ನು.
ಶಿವನಿಗೆ ಸೃಷ್ಟಿ ಸ್ಥಿತಿ ಸಂಹಾರಾರ್ಥವುಂಟಾದರೆ,
ಈ ಜಗತ್ತೆಲ್ಲವೂ ಶಿವನ ನೆನಹು ಮಾತ್ರದಿಂದ ಹುಟ್ಟಿತ್ತಲ್ಲದೆ,
ಎಂದೆಂದೂ ಉಂಟೆಂಬುದು ಶೈವ ಪಶುಮತವಲ್ಲದೆ,
ವೀರಶೈವರ ಮತವಲ್ಲ.
ವೀರಶೈವರ ಮತವೆಂತೆಂದಡೆ:
ಘನ ಗಂಭೀರ ವಾರಿಧಿಯೊಳಗೆ ಫೇನತರಂಗ
ಬುದ್ಬುದ ಶೀಕರಾದಿಗಳು ತೋರಿದಡೆ,
ಆ ಸಾಗರ ಹೊರಗಾಗಿ ತೋರಬಲ್ಲವೇ?
ಆ ಪರಶಿವಸಾಗರದಲ್ಲಿ ತೃಣಾದಿ ಬ್ರಹ್ಮಾಂತವಾದ ದೇಹಿಗಳು
ಉತ್ಪತ್ತಿಯಾಗಿ ಮತ್ತಲ್ಲಿಯೇ ಅಡಗುತ್ತಿಪ್ಪರು ನೋಡಾ.
ಇದು ಕಾರಣ, ಲಿಂಗನಿರ್ಮಿತದಿಂದ ಜಗತ್ತಾಯಿತೆಂದೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./49
ಅನಾದಿಯಾಗಿ ಶಿವನುಂಟು,
ಮಾಯೆಯುಂಟು,
ಆತ್ಮನುಂಟೆಂಬುದನಾವರಿಯೆವಯ್ಯ.
ಆದಿ ಅನಾದಿ ಸುರಾಳ ನಿರಾಳವಿಲ್ಲದಂದು,
ಮಾಯೆಯನು ಕಾಣೆ, ಆತ್ಮನನು ಕಾಣೆ.
ಮಹಾದೇವ ತಾನೊಬ್ಬನೇ ಇದ್ದೆನೆಂಬುದು
ಕಾಣಬಂದಿತ್ತು ನೋಡ ಶಿವಜ್ಞಾನದೃಷ್ಟಿಗೆ.
ಆ ಲಿಂಗನಿರ್ಮಿತದಿಂದ ಮಾಯೆ ಹುಟ್ಟಿತ್ತು ನೋಡಾ.
ಆ ಮಾಯೆಯಿಂದ ತತ್ವಬ್ರಹ್ಮಾಂಡಾದಿ
ಲೋಕಾದಿಲೋಕಂಗಳು ಹುಟ್ಟಿದವು ನೋಡಾ.
ಹೀಂಗೆ ನಿನ್ನ ನೆನಹು ಮಾತ್ರದಿಂದ ತ್ರೆ ಜಗ ಹುಟ್ಟಿತ್ತು ನೋಡಾ.
ಆ ತ್ರೈಜಗಂಗಳ ಉತ್ಪತ್ತಿ ಸ್ಥಿತಿ ಲಯಂಗಳಿಗೆ
ನೀನೆ ಕಾರಣನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./50
ಅನ್ಯತ ಅನಾಚಾರ ಅನ್ಯಹಿಂಸೆ
ಪರಧನ ಪರಸ್ತ್ರೀ ಪರನಿಂದ್ಯವ ಬಿಟ್ಟು,
ಲಿಂಗನಿಷ್ಠೆಯಿಂದ ಶುದ್ಧಾತ್ಮಕನಾಗಿರಬಲ್ಲರೆ,
ಮಾಹೇಶ್ವರಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./51
ಅಪ್ರಶಿಖಾಮಂಡಲದಲ್ಲಿ
ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ
ಚಿತ್ಶಿಖಿಯೆಂಬ ಕಿಚ್ಚು ಹುಟ್ಟಿ
ಮೃತ್ಯುಗಳ ಮೊತ್ತವ ಸಂಹರಿಸಿ
ತತ್ ತ್ವಂ ಅಸಿಯೆಂಬ ಪದವ ನುಂಗಿ
ಪರಾಪರವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./52
ಅಮೇಧ್ಯವ ಭುಂಜಿಸುವ ಸೂಕರ
ಅಮೃತದ ಸವಿಯನೆತ್ತಬಲ್ಲುದಯ್ಯ?
ಗೆಜ್ಜಲ ತಿಂಬ ಕರಡಿ ಖರ್ಜೂರದ ಹಣ್ಣಿನ
ಸವಿಯನೆತ್ತಬಲ್ಲುದಯ್ಯ?
ಬೇವ ತಿಂಬ ಕಾಗೆ ಬೆಲ್ಲದ ಸವಿಯನೆತ್ತ ಬಲ್ಲುದಯ್ಯ?
ಅಂಗನೆಯರ ಸಮ್ಮೇಳನದ ವಿಕಾರದ ಭಂಗಿಯ
ಕೊಂಡು ಮೈಮರೆದ ಮನುಜರು
ಲಿಂಗಪ್ರೇಮದ ಸುಖವನಿವರೆತ್ತಬಲ್ಲರಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./53
ಅಯಿವರ ಮುಖದಲ್ಲಿ ಆರುಮಂದಿ ಹುಟ್ಟಿ
ಎಲ್ಲರಿಗೆ ಕೈಯಾಗಿಪ್ಪುದು ನೋಡಾ.
ಹಲವರ ಕೈಯಯೊಳಗಿಪ್ಪ ಒಬ್ಬ ಚಾಂಡಾಲಗಿತ್ತಿ
ಮೂರು ಮುಖದಲ್ಲಿ ಆರೂಢರ ನುಂಗಿದಳು ನೋಡಾ.
ಹಲವು ಕೈಗಳ ಹಾರಹೊಯಿದು
ಮೂರುಮುಖದಂಗನೆಯರ ಶಿರವ ನೆರೆ ಮೆಟ್ಟಿ ನಿಲ್ಲಬಲ್ಲರೆ
ಆತನು ನಿರ್ಮಾಯನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./54
ಅಯ್ಯಾ, ವಾಕ್ಕನೂ ಮೀರಿ, ಮನಸ್ಸನೂ ಮೀರಿ,
ಅಕ್ಷರಂಗಳನೂ ಮೀರಿ,
ಜ್ಞಾನವನೂ ಮೀರಿ ತೋರುವ ನಿರುಪಮವಸ್ತುವೆಂಬುತಿದ್ದಿರಿ:
ಅದು ರೂಪಾಗಿ, ಎನ್ನ ಕರಸ್ಥಲಕ್ಕೆ ಇಷ್ಟ, ಮನಸ್ಥಲಕ್ಕೆ ಪ್ರಾಣವಾಗಿ,
ಭಾವದಲ್ಲಿ ಭರಿತವಾಗಿ, ತೀವಿ ಪರಿಪೂರ್ಣವಾಗಿ,
ಎಡೆಗಡೆಯಿಲ್ಲದೆಯಿಪ್ಪ ಭೇದವ ಕರುಣಿಸಿದಿರಿಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./55
ಅರಳಿಯೆಲೆಯ ಮೇಯ ಬಂದ ಎರಳೆ
ಹಾರಿಬಿದ್ದುದ ಕಂಡೆನಯ್ಯ.
ಅರಳಿಯೆಲೆಯ ಹರಿಯಲು
ಎರಳೆ ಎದ್ದೋಡಿತ್ತು ನೋಡಾ.
ಓಡಿಹೋದ ಎರಳೆ ಅಡಗಿದ ಠಾವ ಬಲ್ಲರೆ,
ಪ್ರಾಣಲಿಂಗ ಸಂಬಂಧಿಗಳೆಂಬೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./56
ಅರಿವಿನ ಕುರುಹನರಿಯದೆ
ತನುವ ಕರಗಿಸಿ ಮನವ ಬಳಲಿಸಿದರೆ ಏನು ಪ್ರಯೋಜನವೋ?
ಇಂದ್ರಿಯವ ನಿಗ್ರಹ ಮಾಡಿ ವಿಷಯಂಗಳ ಬಂಧಿಸಿ
ಆತ್ಮಂಗೆ ಬಂಧನವ ಮಾಡಿದರೆ
ಆತ್ಮದ್ರೋಹ ಕಾಣಿಭೋ.
ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ
ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ.
ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು.
ಮನದ ಮಲಿನ ಹಿಂಗದನ್ನಕ್ಕರ
ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./57
ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು,
ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು,
ವಿಷಯಂಗಳ ಶಿವನರಿಯಿತ್ತು.
ದಶವಿಧೇಂದ್ರಿಯಂಗಳ ದಾಳಿಯ ನಿಲಿಸಿತ್ತು.
ಪಂಚಮಹಾಭೂತಂಗಳಂಗಳ ಪ್ರಪಂಚುವ ಪರಿಹರಿಸಿತ್ತು.
ಬ್ರಹ್ಮವೇ ತಾನೆಂಬ ಕುರುಹ ಮೈಗಾಣಿಸಿತ್ತು.
ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ,
ಮಹಾಲಿಂಗುರು ಶಿವಸಿದ್ಧೇಶ್ವರ ಪ್ರಭುವೇ./58
ಅರುಹು ತಲೆದೋರಿತೆಂದು,
ಗುರುಹಿರಿಯರ ಜರಿಯಲಾಗದಯ್ಯ.
ಗುರುವನು ಜರಿಯೆ; ಹಿರಿಯರನು ಜರಿಯೆ;
ಅದೇನು ಕಾರಣವೆಂದಡೆ;
ಗುರುವೇ ಸದ್ರೂಪು, ಲಿಂಗವೇ ಚಿದ್ರೂಪು,
ಜಂಗಮವೇ ಆನಂದಸ್ವರೂಪು.
ಇವು ಮೂರು ಬರಿಯ ಅರುಹು ಸ್ವರೂಪು.
ಅವ ಜರಿಯಲುಂಟೆ?.
ನಡುವಣ ಪ್ರಕೃತಿಯ ಜರಿವುತ್ತಿಪ್ಪೆನಯ್ಯ.
ಆ ಪ್ರಕೃತಿಯ ಜರಿದರೆ
ಗುರುಹಿರಿಯರಿಗೆ ನಿಮಗೇಕೆ ದುಮ್ಮಾನವಯ್ಯ?.
ಪ್ರಕೃತಿಯೇನು ನಿಮ್ಮ ಸೊಮ್ಮೆ ಹೇಳಿರಯ್ಯ.
ಜೀವನೋಪಾಯಕ್ಕೆ ಪರಮಾರ್ಥವನಲ್ಲಾಯೆಂಬ ಪ್ರಪಂಚಿಗಳ
ಮೆಚ್ಚನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./59
ಅರ್ಥಪ್ರಾಣಾಭಿಮಾನವನು
ಗುರು ಲಿಂಗ ಜಂಗಮದ ಮುಖಕ್ಕೆ ಸಮರ್ಪಿಸಿ,
ಆ ಗುರು ಲಿಂಗ ಜಂಗಮವೆ
ತನು ಮನ ಪ್ರಾಣವಾಗಿರಬಲ್ಲರೆ,
ಭಕ್ತನ ಸ್ಥಲವಿದೆಂಬೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./60
ಅವುದಾನೊಂದು ಪದಾರ್ಥವ ಲಿಂಗಾರ್ಪಿತವ ಮಾಡಿದ ಬಳಿಕ
ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಾಯಿತ್ತು ನೋಡಾ.
ಆ ಪ್ರಸಾದವ ಮುಟ್ಟುವ ಹಸ್ತವು ಪ್ರಸಾದ ಹಸ್ತ.
ಆ ಪ್ರಸಾದವ ಕೊಂಬ ಜಿಹ್ವೆಯು ಪ್ರಸಾದ ಜಿಹ್ವೆ.
ಆ ಪ್ರಸಾದಕ್ಕೆ ಭಾಜನವಾಗಿಪ್ಪ ಸರ್ವಾಂಗವು
ಪ್ರಸಾದ ಕಾಯ ನೋಡ.
ಪ್ರಸಾದವೆಂದರೆ ಪರಶಿವಸ್ವರೂಪು ತಾನೆ ನೋಡಾ.
ಈ ಪರಮ ಪ್ರಸಾದಗ್ರಾಹಕನಾದ ಪ್ರಸಾದಿಯ
ಬಾಹ್ಯಾಭ್ಯಂತರವೆಲ್ಲ ಪ್ರಸಾದಮಯ ನೋಡಾ.
ಪ್ರಸಾದ ಸದ್ಭಾವದಲ್ಲಿ ಎಂಜಲೆಂಬ ಸಂಶಯ ಸುಳಿಯಲಾಗದು.
ಎಂಜಲೆಂಬ ಸಂಶಯ ಸುಳಿದರೆ ಅದು ಅಜ್ಞಾನ ನೋಡಾ.
ಅವಂಗೆ ಪ್ರಮಥ ಪ್ರಸಾದವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./61
ಅಷ್ಟದಳಕಮಲವ ಮೆಟ್ಟಿ ಚರಿಸುವ
ಹಂಸನ ಭೇದವ ಹೇಳಿಹೆನು:
ಪೂರ್ವದಳಕೇರಲು ಗುಣಿಯಾಗಿಹನು.
ಅಗ್ನಿದಳಕೇರಲು ಕ್ಷುಧೆಯಾಗಿಹನು.
ದಕ್ಷಿಣದಳಕೇರಲು ಕ್ರೋಧಿಯಾಗಿಹನು.
ನೈಋತ್ಯದಳಕೇರಲು ಅಸತ್ಯನಾಗಿಹನು.
ವರುಣದಳಕೇರಲು ನಿದ್ರೆಗೆಯ್ವುತಿಹನು.
ವಾಯುದಳಕೇರಲು ಸಂಚಲನಾಗಿಹನು.
ಉತ್ತರದಳಕೇರಲು ಧರ್ಮಿಯಾಗಿಹನು.
ಈಶಾನ್ಯದಳಕೇರಲು ಕಾಮಾತುರನಾಗಿಹನು.
ಈ ಅಷ್ಟದಳಮಂಟಪದ ಮೇಲೆ ಹರಿದಾಡುವ ಹಂಸನ
ಕುಳನ ತೊಲಗಿಸುವ ಕ್ರಮವೆಂತುಟಯ್ಯಾಯೆಂದೊಡೆ:
ಅಷ್ಟದಳಮಂಟಪದ ಅಷ್ಟಕೋಣೆಗಳೊಳಗೆ
ಅಷ್ಟ ಲಿಂಗಕಳೆಯ ಪ್ರತಿಷ್ಠಿಸಿ
ಹಂಸನ ನಟ್ಟ ನಡುಮಧ್ಯದಲ್ಲಿ ತಂದು ನಿಲಿಸಲು
ಮುಕ್ತಿಮೋಕ್ಷವನೆಯ್ದಿ ಪರವಶನಾಗಿಪ್ಪನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./62
ಅಷ್ಟವಿಧಾರ್ಚನೆಯ ಮಾಡಿದರೇನೋ
ತನುಗುಣಂಗಳ ಮೆಟ್ಟಿ ಮುರಿಯದನ್ನಕ್ಕರ?
ಷೋಡಶೋಪಚಾರವ ಮಾಡಿದರೇನೋ
ಸೂಳೆಯರಂತೆ ಹಲವು ಕಡೆಗೆ ಹೋಹ ಮನವ
ನೆನಹಿನ ಹಸ್ತದಲ್ಲಿ ಹಿಡಿದು
ಇಷ್ಟಲಿಂಗದಲ್ಲಿ ನೆನಹ ಗಟ್ಟಿಗೊಳಿಸಿ
ಕೃತನಿಶ್ಚಯದಿಂ ದೃಢವಿಡಿದು
ಅನಿಷ್ಟವ ಪರಿಹರಿಸಬಲ್ಲರೆ
ಆತನೆ ಶಿವಲಿಂಗಾರ್ಚಕನು; ಲಿಂಗಧ್ಯಾನ ಸಂಪನ್ನನು;
ಲಿಂಗವಲ್ಲದನ್ಯವನರಿಯದ ಅಚಲಿತ ಮಹಿಮನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./63
ಅಷ್ಟಾಷಷ್ಠಿಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣ.
ಲಕ್ಷ ಲಕ್ಷ ಕೋಟಿ ಕೋಟಿ ಜಪ (ವ)ನೆಣಿಸಿದರಿಲ್ಲ ಕಾಣಿರಣ್ಣ.
ಧ್ಯಾನ ಮೌನ ಹೋಮ ನೇಮ ಅನುಷ್ಠಾನವ ಮಾಡಿದರಿಲ್ಲ
ಕಾಣಿರಣ್ಣ.
ನೂರಿಪ್ಪತ್ತುವೇಳೆ ಭೂಪ್ರದಕ್ಷಿಣವ ಮಾಡಿದರಿಲ್ಲ ಕಾಣಿರಣ್ಣ.
ಕಾಶಿ ಕೇದಾರ ಶ್ರೀಶೈಲ ಶಿವಗಂಗೆಗೈದಿದರಿಲ್ಲ ಕಾಣಿರಣ್ಣ.
ಇವೆಲ್ಲ ಬರಿಯ ಭ್ರಾಂತು.
ಇಪ್ಪ ಠಾವ ಹೇಳಿಹೆನು ಕೇಳಿರಣ್ಣ.
ಶ್ರೀಗುರು ಕರುಣದಿಂದ ಬಿಜಯಂಗೈಸಿ ಕೊಟ್ಟ
ಪರಮಲಿಂಗ ತನ್ನ ಕರದಲ್ಲಿ ತುಂಬಿಪ್ಪುದಯ್ಯ.
ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಆ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲರೆ
ಅಲ್ಲಿಪ್ಪನು ಶಂಭು ಪರಮೇಶ್ವರನು.
ಇದೇ ನಿಶ್ಚಯ; ಉಳಿದವೆಲ್ಲ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./64
ಅಹಂ ಬ್ರಹ್ಮವೆಂದೆಂಬ ಜ್ಞಾನಹೀನನಾದ ವಾಗದ್ವೆ ತಿಯಲ್ಲ.
ಅಹಂ ಭಿನ್ನವೆಂದೆಂಬ ದ್ವೆ ತ ಪಶುಮತವಲ್ಲ.
ಸ್ವರ್ಗ ಮತ್ರ್ಯ ಪಾತಾಳದೊಳಗೆ ಶರಣ ಲಿಂಗ ಮತ ಬೇರೆ.
ಈ ಶರಣ ಲಿಂಗದ ನಿಲುಕಡೆಯನು
ಪರಶಿವಜ್ಞಾನಿಗಳು ಬಲ್ಲರಲ್ಲದೆ
ಪ್ರಪಂಚ ಜೀವಿಗಳೆಂದೂ ಅರಿಯರು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./65
ಅಹಂಕಾರಭಾವ, ಅವಿದ್ಯಾಭಾವ,
ಜ್ಞಾನಾಜ್ಞಾನಭಾವ, ಜ್ಞಾನವಿಕೃತಿಭಾವ
ವರ್ತನವಿಕೃತಿಭಾವ, ಮೋಹನವಿಕೃತಿಭಾವ ಎಂಬ
ಭ್ರಾಂತಿಭಾವವ ಮಾಣಿಸಯ್ಯ.
ಇಂದ್ರಿಯಭಾವ, ವಿಷಯಭಾವ
ಭೂತಭಾವ, ಕರಣಭಾವ
ವಿಶ್ವ ತೈಜಸ ಪ್ರಾಜ್ಞ್ಲವ್ವೆಂಬ
ಜೀವಭಾವದ ಭ್ರಮೆಯ ಕಳೆಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./66
ಅಳಿಯಗೂಳಿಗೆ ಹೋದಾತ ಅತ್ತೆಯ ನೆರೆದರೆ
ನಾದಿನಿಯರು ನೋಡಿ ಸೋಜಿಗವ ಮಾಡುತ್ತಿದಾರೆ ನೋಡಾ.
ನಾದಿನಿಯರ ತಾಯಿ ಅತ್ತೆಯ ಕೊಂದು
ಅಳಿಯನ ನುಂಗಿ ಪರಪುರುಷನ ನೆರೆದು
ಮುತ್ತೆ ದೆಯಾದುದು ಸೋಜಿಗ, ಸೋಜಿಗ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./67
ಆ ಭಕ್ತಂಗೆ ಲಿಂಗವೇ ಪ್ರಾಣ;
ಆ ಲಿಂಗಕ್ಕೆ ಗುರುವೇ ಪ್ರಾಣ;
ಆ ಗುರುವಿಂಗೆ ಜಂಗಮವೇ ಪ್ರಾಣ ನೋಡಾ.
ಅದೇನುಕಾರಣವೆಂದರೆ:
ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ
ಜಂಗಮವು ನೋಡಾ.
ಆ ಪರಮ ಜಂಗಮದಿಂದ ನಿಃಕಲ ಗುರುಮೂರ್ತಿ
ಉದಯವಾದನು ನೋಡಾ.
ಆ ನಿಃಕಲ ಗುರುಮೂರ್ತಿಯಿಂದ
ಆದಿಮಹಾಲಿಂಗವು ಉದಯವಾಯಿತ್ತು ನೋಡಾ.
ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು.
ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ
ಆ ಜಂಗಮ ಪ್ರಸಾದವೇ ಪ್ರಾಣ ನೋಡಾ.
ಇದು ಕಾರಣ:
ಭಕ್ತನಾದರೂ ಲಿಂಗವಾದರೂ ಗುರುವಾದರೂ
ಜಂಗಮ ಪ್ರಸಾದವ ಕೊಳ್ಳಲೇಬೇಕು.
ಜಂಗಮ ಪ್ರಸಾದವ ಕೊಳ್ಳದಿದ್ದರೆ
ಆತ ಗುರುವಲ್ಲ, ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾ.
ಆ ಶೈವ ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ;
ಆತನಿಂದ ಪಡೆದುದು ಲಿಂಗವಲ್ಲ.
ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ.
ಅವ ಭೂತಪ್ರಾಣಿ ನೋಡಾ.
ಇದುಕಾರಣ:
ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು.
ಆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ
ಅವ ಭವಿಗಿಂದಲು ಕರಕಷ್ಟ ನೋಡಾ.
ಆ ಭವಭಾರಿಯ ಮುಖ ನೋಡಲಾಗದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./68
ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು,
ಸಚ್ಚಿದಾನಂದ ಪರಬ್ರಹ್ಮ ನೀನೆಯಾಗಿ
ಎಲ್ಲಾ ತತ್ವಂಗಳಿಗೆ ನೀನಾದಿಯಾಗಿ, ನಿನಗೊಂದಾದಿಯಿಲ್ಲದೆ
ನೀ, ನಿರಾದಿಯಾದಕಾರಣ
ನಿನ್ನ, ನಿಃಕಲಶಿವತತ್ವವೆಂದರಿದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./69
ಆಕಾರ ನಿರಾಕಾರವಿಲ್ಲದಂದು,
ಹಮ್ಮುಬಿಮ್ಮುಗಳಿಲ್ಲದಂದು,
ಜೀವ ಪರಮರಿಲ್ಲದಂದು,
ಮನ ಮನನ ಮನುನೀಯವಿಲ್ಲದಂದು,
ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ,
ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು,
ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ.
ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು.
ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು.
ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು.
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ.
ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ.
ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ.
ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು.
ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು.
ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು.
ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು.
ಆ ಪಂಚಲಕ್ಷಣವುಳ್ಳ ಮೂರ್ತಿ
ತಾನೆ ತ್ರಯವಾದ ಭೇದವ ಹೇಳಿಹೆನು.
ಅದೆಂತೆಂದಡೆ:
ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು
ಮೂರುತೆರನಾಗಿಪ್ಪುದು.
ಬಾಹ್ಯ ನಿಃಕಲತತ್ತ್ವವಾಗಿಪ್ಪುದು.
ಒಂದು ಸಕಲನಿಃಕಲತತ್ತ್ವವಾಗಿಪ್ಪುದು.
ಒಂದು ಸಕಲತತ್ತ್ವವಾಗಿಪ್ಪುದು.
ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು.
ಸದಾಶಿವತತ್ತ್ವ ಐದುತೆರನಾಗಿಪ್ಪುದು.
ಮಾಹೇಶ್ವರತತ್ವ ಇಪ್ಪತ್ತೆ ದು ತೆರನಾಗಿಪ್ಪುದು.
ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು.
ಸ್ಥೂಲ, ಸೂಕ್ಷ್ಮಂ, ಪರತತ್ವವೆಂಬ ಈ ಮೂರು ತತ್ತ್ವವೆ
ಆರಾದ ಭೇದಮಂ ಪೇಳ್ವೆ.
ಅದೆಂತೆಂದಡೆ:
ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್ಶಕ್ತಿ.
ಚಿತ್ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ.
ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ.
ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು.
ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ.
ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ.
ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ.
ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ.
ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ.
ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು.
ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ.
ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು.
ಹೀಂಗೆ ಮೂರು ಆರು ತೆರನಾಯಿತ್ತಯ್ಯ.
ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು.
ಅದೆಂತೆಂದಡೆ:
ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು,
ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ
ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು.
ಅದರಿಂದಲಾದ ಮೂರ್ತಿಗೆ
ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ.
ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು.
ಅದರಿಂದಲಾದ ಮೂರ್ತಿಗೆ
ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ,
ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು.
ಅದರಿಂದಲಾದ ಮೂರ್ತಿಗೆ
ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ,
ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು.
ಅದರಿಂದಲಾದ ಮೂರ್ತಿಗೆ
ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ,
ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು.
ಅದರಿಂದಲಾದ ಮೂರ್ತಿಗೆ
ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ,
ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು.
ನಿರಾಕಾರವೇ ಸಾಕಾರವಾಗಿ ತೋರಿತ್ತು.
ಸಾಕಾರ ನಿರಾಕಾರವೇಕವೆಂಬುದನು
ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ.
ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ
ಮತ್ತೊಂದರಿಂದಾದುದಲ್ಲ.
ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ:
ಸದ್ಯೋಜಾತ ಮುಖದಲ್ಲಿ ಪೃಥ್ವಿ.
ವಾಮದೇವ ಮುಖದಲ್ಲಿ ಅಪ್ಪು.
ಅಘೋರ ಮುಖದಲ್ಲಿ ಅಗ್ನಿ.
ತತ್ಪುರುಷ ಮುಖದಲ್ಲಿ ವಾಯು.
ಈಶಾನ್ಯ ಮುಖದಲ್ಲಿ ಆಕಾಶ.
ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ
ಭೇದವ ಹೇಳಿಹೆನು.
ಆವಾವೆಂದರೆ:
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ
ಸ್ಥೂಲಭೂತಿಕವೈದು.
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು.
ವಾಕು ಪಾಣಿ ಪಾದ ಪಾಯು ಗುಹ್ಯವೆಂದು
ಕರ್ಮೆಂದ್ರಿಯಂಗಳೈದು.
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು.
ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು.
ಜೀವನೊಬ್ಬನು;
ಅಂತು ಆತ್ಮತತ್ತ್ವವಿಪ್ಪತ್ತೆ ದು.
ವಿದ್ಯಾತತ್ತ್ವಹತ್ತು ತೆರನು.
ಅದೆಂತೆಂದಡೆ:
ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷ್ಠೆ,
ನಿವೃತ್ತಿ ಎಂದು ಕಲಾಶಕ್ತಿಯರೈದು.
ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ
ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ
ಸಾದಾಖ್ಯಮೂರ್ತಿಗಳೈದು.
ಅಂತು ವಿದ್ಯಾತತ್ವ ಹತ್ತು ತೆರನು.
ದ್ವಿತೀಯ ತತ್ತ್ವಮೂವತ್ತೆ ದು ತೆರನು.
ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು.
ಅಂತು ತತ್ತ್ವ ಮೂವತ್ತಾರು.
ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ತತ್ತ್ವ
ಮೂವತ್ತಾರು ತೆರನು.
ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು.
ಅದು ಹೇಂಗೆಂದಡೆ:
ತತ್ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು.
ತತ್ಪದವೆಂದು ತೂರ್ಯನಾಮದ ಶಿವತತ್ತ್ವವು.
ತ್ವಂ ಪದವೆಂದು ಇಪ್ಪತ್ತೆ ದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು.
ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು.
ತತ್ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ
ಲಿಂಗಾಂಗ ಸಂಬಂಧ.
ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./70
ಆಕಾರವಿಲ್ಲದಾತಂಗೆ ಅಂಗವೆಂದೇಕೆ ಕಲ್ಪಿಸಿ ಹೇಳುವಿರಿ?
ಅದು ಲಿಂಗಾನುಭಾವಿಗಳ ದೃಷ್ಟಿಯೆ? ಅಲ್ಲ. ಬಿಡಾ ಮರುಳೆ.
ಮಮಕಾರವಿಲ್ಲದಾತಂಗೆ ಮಾನಿನಿಯರಿಬ್ಬರೆಂದೇನೋ?
ಮಾನಿನಿಯರಿಬ್ಬರಿಲ್ಲದಾತಂಗೆ
ಲೀಲಾ ಮಾಯಿಕದ ಸಂಸಾರದ ಕುರುಹೆಂದೇನೊ?
ನಾಮ ನಿರ್ನಾಮನಾದ ನಿರಾಲಂಬಿಗೆ
ನಾಮ ಸೀಮೆಯ ಕಲ್ಪಿಸಲುಂಟೆ?
ನಿಸ್ಸೀಮಂಗೆ ನಿರ್ವಿಕಲ್ಪಿತಂಗೆ ಕಲ್ಪಿತವುಂಟೆ?
ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರವುಂಟೆಂಬ
ಹೂಸಕರ ಮಾತ ಕೇಳಲಾಗದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./71
ಆಕಾಶದೊಳಗಣ ಆಕಾಶ, ಜ್ಞಾನ;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ಆಕಾಶದೊಳಗಣ ವಾಯು, ಮನಸ್ಸು;
ಅಲ್ಲಿ ಜಂಗಮಲಿಂಗ ಸ್ವಾಯತ.
ಆಕಾಶದೊಳಗಣ ಅಗ್ನಿ, ಅಹಂಕಾರ;
ಅಲ್ಲಿ ಶಿವಲಿಂಗ ಸ್ವಾಯತ.
ಆಕಾಶದೊಳಗಣ ಅಪ್ಪು, ಚಿತ್ತ;
ಅಲ್ಲಿ ಗುರುಲಿಂಗ ಸ್ವಾಯತ.
ಆಕಾಶದೊಳಗಣ ಪೃಥ್ವಿ, ಬುದ್ಧಿ;
ಅಲ್ಲಿ ಆಚಾರಲಿಂಗ ಸ್ವಾಯತ.
ಹೀಂಗೆ ಪಂಚಕರಣಂಗಳಲ್ಲಿಯೂ
ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ವಾಯುವಿನೊಳಗಣ ಆಕಾಶ, ಸಮಾನವಾಯು;
ಅಲ್ಲಿ ಪ್ರಸಾದಲಿಂಗ ಸ್ವಾಯತ,
ವಾಯುವಿನೊಳಗಣ ಅಗ್ನಿ, ಸಮಾನವಾಯು;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ವಾಯುವಿನೊಳಗಣ ಅಗ್ನಿ, ಉದಾನವಾಯು;
ಅಲ್ಲಿ ಶಿವಲಿಂಗ ಸ್ವಾಯತ.
ವಾಯುವಿನೊಳಗಣ ಅಪ್ಪು, ಅಪಾನವಾಯು;
ಅಲ್ಲಿ ಗುರುಲಿಂಗ ಸ್ವಾಯತ.
ವಾಯುವಿನೊಳಗಣ ಪೃಥ್ವಿ, ಪ್ರಾಣವಾಯು;
ಅಲ್ಲಿ ಆಚಾರಲಿಂಗ ಸ್ವಾಯತ.
ಹೀಂಗೆ ವಾಯುಪಂಚಕದಲ್ಲಿಯೂ
ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ;
ಅಲ್ಲಿ ಶಿವಲಿಂಗ ಸ್ವಾಯತ.
ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ಅಗ್ನಿಯೊಳಗಣ ವಾಯು ತ್ವಗಿಂದ್ರಿಯ;
ಅಲ್ಲಿ ಜಂಗಮಲಿಂಗ ಸ್ವಾಯತ.
ಅಗ್ನಿಯೊಳಗಣ ಅಪ್ಪು, ಜಿಹ್ವೇಂದ್ರಿಯ;
ಅಲ್ಲಿ ಗುರುಲಿಂಗ ಸ್ವಾಯತ.
ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ;
ಅಲ್ಲಿ ಆಚಾರಲಿಂಗ ಸ್ವಾಯತ.
ಹೀಂಗೆ ಬುದ್ಧೀಂದ್ರಿಯಂಗಳಲ್ಲಿಯೂ
ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಅಪ್ಪುವಿನೊಳಗಣ ಅಪ್ಪು, ರಸ;
ಅಲ್ಲಿ ಗುರುಲಿಂಗ ಸ್ವಾಯತ.
ಅಪ್ಪುವಿನೊಳಗಣ ಆಕಾಶ, ಶಬ್ದ;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ಅಪ್ಪುವಿನೊಳಗಣ ವಾಯು, ಸ್ಪರ್ಶನ;
ಅಲ್ಲಿ ಜಂಗಮಲಿಂಗ ಸ್ವಾಯತ.
ಅಪ್ಪುವಿನೊಳಗಣ ಅಗ್ನಿ ರೂಪು;
ಅಲ್ಲಿ ಶಿವಲಿಂಗ ಸ್ವಾಯತ.
ಅಪ್ಪುವಿನೊಳಗಣ ಪೃಥ್ವಿ ಗಂಧ;
ಅಲ್ಲಿ ಆಚಾರಲಿಂಗ ಸ್ವಾಯತ.
ಹೀಂಗೆ ಪಂಚವಿಷಯಂಗಳಲ್ಲಿಯೂ
ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ;
ಅಲ್ಲಿ ಆಚಾರಲಿಂಗ ಸ್ವಾಯತ.
ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ಪೃಥ್ವಿಯೊಳಗಣ ವಾಯು, ಪಾಣೀಂದ್ರಿಯ;
ಅಲ್ಲಿ ಜಂಗಮಲಿಂಗ ಸ್ವಾಯತ.
ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ;
ಅಲ್ಲಿ ಶಿವಲಿಂಗ ಸ್ವಾಯತ.
ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ;
ಅಲ್ಲಿ ಗುರುಲಿಂಗ ಸ್ವಾಯತ.
ಹೀಂಗೆ ಪಂಚಕಮರ್ೇಂದ್ರಿಯಂಗಳಲ್ಲಿಯೂ
ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಆತ್ಮನೊಳಗಣ ಆತ್ಮ,ಶುದ್ಧಾತ್ಮ;
ಅಲ್ಲಿ ಮಹಾಲಿಂಗ ಸ್ವಾಯತ.
ಆತ್ಮನೊಳಗಣ ಆಕಾಶ, ಸುಜ್ಞಾನ;
ಅಲ್ಲಿ ಪ್ರಸಾದಲಿಂಗ ಸ್ವಾಯತ.
ಆತ್ಮನೊಳಗಣ ವಾಯು, ಸುಮನ;
ಅಲ್ಲಿ ಜಂಗಮಲಿಂಗ ಸ್ವಾಯತ.
ಆತ್ಮನೊಳಗಣ ಅಗ್ನಿ, ನಿರಹಂಕಾರ;
ಅಲ್ಲಿ ಶಿವಲಿಂಗ ಸ್ವಾಯತ.
ಆತ್ಮನೊಳಗಣ ಅಪ್ಪು, ಸುಬುದ್ಧಿ;
ಅಲ್ಲಿ ಗುರುಲಿಂಗ ಸ್ವಾಯತ.
ಆತ್ಮನೊಳಗಣ ಪೃಥ್ವಿ, ಸುಚಿತ್ತ;
ಅಲ್ಲಿ ಆಚಾರಲಿಂಗ ಸ್ವಾಯತ.
ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಇಂತೀ ಅಂಗ ಪ್ರಾಣಂಗಳಲ್ಲಿಯು
ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ
ಸರ್ವಾಂಗಲಿಂಗಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./72
ಆಕಾಶವರ್ಣದ ಅಂಗನೆ
ಲೋಕಾಲೋಕಂಗಳ ನೋಡಿಹೆನೆಂದು ಇಳಿದು ಬರಲು
ಆ ಲೋಕದವರೆಲ್ಲರು ಕಂಡು
ನಮ್ಮ ಈ ಲೋಕದ ಸ್ತ್ರೀಯಲ್ಲ
ಇವಳಾವಲೋಕದ ಸ್ತ್ರೀಯೋಯೆಂದು ನೋಡುತ್ತ ನೋಡುತ್ತ
ಆ ದೇವ ಸ್ತ್ರೀಯ ಸಂಗವ ಮಾಡಿ
ದೇವನಾದುದ ಕಂಡೆ.
ಭಾವಭ್ರಮೆಗೆ ಹೊರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./73
ಆಕಾಶವೇ ಅಂಗವಾದ ಶರಣನಲ್ಲಿಯೆ
ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯಪ್ಪ
ಅಂಗಪಂಚಕವು ಗರ್ಭಿಕೃತವಾಗಿ
ಆ ಶರಣಂಗೆ ಪ್ರಸಾದಲಿಂಗವೆ ಸ್ವಾಯತವಾಗಿ
ಆ ಪ್ರಸಾದಿಲಿಂಗದಲ್ಲಿಯೆ
ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ
ಪ್ರಸಾದಲಿಂಗವೆ ಆಶ್ರಯವಾಗಿ
ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ
ಶರಣನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./74
ಆಗಮಮೂರ್ತಿ ಅಂತರಾತ್ಮನೊಳಿರುತಿರೆ
ಆಗಮವನರಿಯಬೇಕೆಂದೇನು ಹೇಳಿರೋ?
ಆಗಮವ ವಿಚಾರಿಸಿ ಅರಿಯಬೇಕೆಂಬ ಅರುಹು ಲೋಗರಿಗಲ್ಲದೆ
ಆಗಮಮೂರ್ತಿಯೇ ತಾನಾದರುಹು ಕುರುಹುಗೊಂಡ ಮೂರ್ತಿಗೆ
ಆಗಮವಿಚಾರವೆಂದೇನು ಹೇಳ?
ಆಗಮ, ಅರುಹಿನಮೂರ್ತಿ ಮಾಡಿದರಾದವು ಕಾಣಿರಣ್ಣ.
ವೇದ, ವಿವೇಕಿ ನುಡಿದರಾದವು ಕಾಣಿರಣ್ಣ.
ಶಾಸ್ತ್ರ, ಸರ್ವಜ್ಞ ನಿರ್ಮಿಸಿದರಾದವು ಕಾಣಿರಣ್ಣ.
ಪುರಾಣ ಅಗ್ರಗಣ್ಯ ಆಗೆಂದರಾದವು ಕಾಣಿರಣ್ಣ.
ತರ್ಕವ ಅತರ್ಕ ್ರ್ಯನು, ಅರ್ಥಿಗೆ ಆಡಿಸಾಡಿ ನೋಡಬೇಕೆಂದು
ಮಾಡಿದ ನೋಡ.
ವೇದ ಶಾಸ್ತ್ರ, ಪುರಾಣಾಗಮ ತರ್ಕ ಇವು ಉಪಮೆಯೊಳಗು.
ಉಪಮೆಗೊಳಗಾದವು ಉಪಮಾತೀತನ ಇವೆತ್ತ ಬಲ್ಲವು ಹೇಳ?
ಆತ್ಮಲಿಂಗದ ಆದ್ಯಂತವನರಿಯದೆ
ದ್ವೆ ತಾದ್ವೆ ತಿಗಳೆಂದು ನುಡಿದುಕೊಂಡು ನಡೆವ
ಭವರೋಗಿಗಳನೇನೆಂಬೆನಯ್ಯ?
ಆಗಮಮೂರ್ತಿ, ಅಂತರಂಗ ಬಹಿರಂಗ
ಸರ್ವಾಂಗ ಅಂತರ್ಯಾಮಿಯಾಗಿಹುದ
ಶಿವ ಪ್ರಸನ್ನ ಪ್ರಸಾದದಿಂದೊದಗಿದ ಸ್ವಾನುಭಾವಿ ಬಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ.
ಬಸವಣ್ಣ, ಪ್ರಭು, ಚೆನ್ನಬಸವಣ್ಣ ಮುಖ್ಯರಾದ
ನಮ್ಮ ಪ್ರಮಥರು ಬಲ್ಲರು ಶಿವನ ಘನವ./75
ಆಗಮವ ಬಲ್ಲೆ ಆಗಮವ ಬಲ್ಲೆವೆಂದು
ಆಗಮಜ್ಞರೆನಿಸಿಕೊಂಬರು ನೀವು ಕೇಳಿರೋ.
ಆಗಮವೆಂದು ನುಡಿವ ವಾಗಿಂದ್ರಿಯವ ಬಲ್ಲಿರಲ್ಲದೆ,
ಆಗಮಮೂರ್ತಿ ಹೇಗಿಹುದು ಬಲ್ಲರೆ[ನೀವು] ಹೇಳಿ.
ಆಗಮಮೂರ್ತಿ ವಾಙ್ಮನಕ್ಕಗೋಚರವು.
ವಾಙ್ಮನಕ್ಕಗೋಚರವಾದ ವಸ್ತುವ
ಆಗಮದಿಂದ ಅಂತಿದೆ, ಇಂತಿದೆಯೆಂದು ಹೇಳುವ ಭ್ರಾಂತಿನ
ಬಹುಭಾರಿಗಳನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./76
ಆಚಾರ ಅನಾಚಾರವೆಂಬುದು ಇಲ್ಲ.
ಸೀಮೆ ನಿಸ್ಸೀಮೆಯೆಂಬುದು ಇಲ್ಲ.
ಗಮನ ನಿರ್ಗಮನವೆಂಬುದು ಇಲ್ಲವಯ್ಯ.
ಕರ್ಮ-ಧರ್ಮ, ಸುಖ-ದುಃಖ, ಪುಣ್ಯ-ಪಾಪ,
ಭಯ-ನಿರ್ಭಯ, ಮೋಹ-ಮಾಯಾ, ಇಹ-ಪರವೆಂಬ
ಉಭಯ ಸಂದೇಹವಿಲ್ಲವಯ್ಯ.
ಇವೇನೂ ಇಲ್ಲದ ಪರಮನಿರ್ವಾಣ ನಿರ್ವಯಲೆ
ಶರಣ ಲಿಂಗ ಸಮರಸವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./77
ಆಚಾರಲಿಂಗ ಗುರುಲಿಂಗ ಶಿವಲಿಂಗ
ಇವು ಮೂರು ಇಷ್ಟಲಿಂಗ.
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಇವು ಮೂರು ಪ್ರಾಣಲಿಂಗ.
ಇಷ್ಟಲಿಂಗವು ಸತ್ಕಿ ್ರಯಾ ಸ್ವರೂಪು.
ಪ್ರಾಣಲಿಂಗವು ಸುಜ್ಞಾನ ಸ್ವರೂಪು.
ಮತ್ತೆ ಕ್ರಿಯಾ ಸ್ವರೂಪವೇ ಲಿಂಗವು.
ಸುಜ್ಞಾನ ಸ್ವರೂಪವೇ ಜಂಗಮವು.
ಇದು ಕಾರಣ,
ಆಕಾರ ಸ್ವರೂಪವೇ ಲಿಂಗವು;
ನಿರಾಕಾರ ಸ್ವರೂಪವೇ ಜಂಗಮವು.
ಆದಿಯೆ ಲಿಂಗವು-; ಅನಾದಿಯೇ ಜಂಗಮವು.
ಇದು ಕಾರಣ,
ಜಂಗಮ ಪ್ರಸಾದ ಲಿಂಗಕ್ಕಲ್ಲದೆ
ಲಿಂಗ ಪ್ರಸಾದ ಜಂಗಮಕ್ಕೆಂಬುದು ಅದು ಅಜ್ಞಾನ ನೋಡಾ.
ಆದಿಲಿಂಗ ಅನಾದಿಜಂಗಮ ಇವೆರಡು ಒಂದಾಗಿ ನಿಂದ ನಿಲುವು
ನಿರಾಕಾರ ಪರವಸ್ತು.
ಆ ನಿರಾಕಾರ ಪರವಸ್ತುವನೊಡಗೂಡಿ
ನಾನು ನಿರಾಳನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./78
ಆಚಾರಲಿಂಗ ಸಂಬಂಧಿಯಾದ ಬಳಿಕ
ಪಂಚಭೂತದ ಪ್ರಕೃತಿಕಾಯ ಅಳಿದಿರಬೇಕಯ್ಯ.
ಗುರುಲಿಂಗ ಸಂಬಂಧಿಯಾದ ಬಳಿಕ
ಪಂಚವಿಷಯಂಗಳ ಸಂಚವಂಚನೆಯ ಕೆಡಿಸಿರಬೇಕಯ್ಯ.
ಶಿವಲಿಂಗ ಸಂಬಂಧಿಯಾದ ಬಳಿಕ
ಮಾಯಾಕರ್ಮೆಂದ್ರಿಯದ ಕುಹಕಳಿದಿರಬೇಕಯ್ಯ.
ಜಂಗಮಲಿಂಗ ಸಂಬಂಧಿಯಾದ ಬಳಿಕ
ಬುದ್ಧೀಂದ್ರಿಯಂಗಳ ಶುದ್ಧಿಯಿಂದಿರಬೇಕಯ್ಯ.
ಪ್ರಸಾದಲಿಂಗ ಸಂಬಂಧಿಯಾದ ಬಳಿಕ
ಅಂತಃಕರಣಚತುಷ್ಟಯ, ಸತ್ವರಜತಮಂಗಳ
ಪ್ರವರ್ತನೆಯ ಮೆಟ್ಟಿ ಮುರಿದಿರಬೇಕಯ್ಯ.
ಮಹಾಲಿಂಗ ಸಂಬಂಧಿಯಾದ ಬಳಿಕ
ಷಡುವರ್ಣ ಧಾತುವನಳಿದು
ವಸ್ತು ರೂಪಾಗಿ ಶುದ್ಧ ನಿರ್ಮಲನಾಗಿ
ತನುತ್ರಯ ಜೀವತ್ರಯ ಅವಸ್ಥಾತ್ರಯ ಪ್ರಕೃತಿತ್ರಯ
ಇಂತೀ ನಾನಾವಿಧಂಗಳನೆಲ್ಲವನು ಒಂದುಮಾಡಿ
ನಾನು ನೀನೆಂಬುಭಯವಿಲ್ಲದೆ
ಜೀವ ಪರಮೈಕ್ಯವಪ್ಪ ಪರಾಪರವೆ ತಾನಾಗಿರಬೇಕಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./79
ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ.
ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ.
ಶಿವಲಿಂಗಕ್ಕೆ ಜಂಗಮಲಿಂಗವೇ ಪ್ರಾಣ.
ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ.
ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ.
ಇಂತಿವು ಒಂದಕ್ಕೊಂದು ಪ್ರಾಣವಾಗಿಪ್ಪುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./80
ಆಚಾರಲಿಂಗಕ್ಕೆ ಪೃಥ್ವಿಯೆ ಸಮರ್ಪಣ.
ಗುರುಲಿಂಗಕ್ಕೆ ಜಲವೆ ಸಮರ್ಪಣ.
ಶಿವಲಿಂಗಕ್ಕೆ ಅಗ್ನಿಯೆ ಸಮರ್ಪಣ.
ಜಂಗಮಲಿಂಗಕ್ಕೆ ವಾಯುವೆ ಸಮರ್ಪಣ.
ಪ್ರಸಾದಲಿಂಗಕ್ಕೆ ಆಕಾಶವೆ ಸಮರ್ಪಣ.
ಮಹಾಲಿಂಗಕ್ಕೆ ಆತ್ಮನೆ ಸಮರ್ಪಣವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./81
ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ ಬಯಲಾದನು.
ಗುರುಲಿಂಗದ ಪ್ರಸನ್ನತ್ವದಿಂದ ಮಹೇಶ್ವರ ಬಯಲಾದನು.
ಶಿವಲಿಂಗದ ಪ್ರಸನ್ನತ್ವದಿಂದ ಪ್ರಸಾದಿ ಬಯಲಾದನು.
ಜಂಗಮಲಿಂಗದ ಪ್ರಸನ್ನತ್ವದಿಂದ ಪ್ರಾಣಲಿಂಗಿ ಬಯಲಾದನು.
ಪ್ರಸಾದಲಿಂಗದ ಪ್ರಸನ್ನತ್ವದಿಂದ ಶರಣ ಬಯಲಾದನು.
ಮಹಾಲಿಂಗದ ಪ್ರಸನ್ನತ್ವದಿಂದ ಐಕ್ಯ ಬಯಲಾದನು.
ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದದಲ್ಲಿ
ಷಡಂಗವು ಸಮರಸವಾದವು.
ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದವನ್ನೇ ಪದಾರ್ಥವ ಮಾಡಿ
ಬ್ರಹ್ಮರಂಧ್ರದ ಸಹಸ್ರದಳಕಮಲಕರ್ಣಿಕಾಮಧ್ಯದಲ್ಲಿಪ್ಪ
ಸಚ್ಚಿದಾನಂದ ನಿತ್ಯ ಪರಿಪೂರ್ಣವಪ್ಪ ಘನ ಚೈತನ್ಯವೆಂಬ
ಪರಮ ಚರಲಿಂಗಕ್ಕೆ ಸಮರ್ಪಣವ ಮಾಡಿ
ಆ ಪರಮ ಚರಲಿಂಗದ ಪ್ರಸನ್ನ ಪ್ರಸಾದದೊಳಗೂಡಿ
ನಿರವಯವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./82
ಆಚಾರಲಿಂಗಾನುಭಾವದಿಂದ
ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ!
ಸದ್ಗುರುರತಿಯಿಂದ
ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ!
ಶಿವಲಿಂಗದ ಸಂಗದಿಂದ
ಅಗ್ನಿಯ ಪೂರ್ವಾಶ್ರಯವನಳಿದ
ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ!
ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ
ಜಂಗಮಲಿಂಗಗ್ರಾಹಕನ ನೋಡಾ!
ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ
ನಿರ್ಮಲ ನಿರಾವರಣನ ನೋಡಾ!
ಮಹಾಲಿಂಗದ ಸಂಗದಿಂದ ಜೀವಭಾವವಳಿದ
ಮಹಾಮಹಿಮನ ನೋಡಾ!
ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ
ನಿರಂಗಸಂಗಿಯ ನೋಡಾ!
ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./83
ಆಚಾರವಿಲ್ಲದ ಗುರು ಭೂತಪ್ರಾಣಿ
ಆಚಾರವಿಲ್ಲದ ಲಿಂಗ ಶಿಲೆ.
ಆಚಾರವಿಲ್ಲದ ಜಂಗಮ ಮಾನವ.
ಆಚಾರವಿಲ್ಲದ ಪಾದೋದಕ ನೀರು.
ಆಚಾರವಿಲ್ಲದ ಪ್ರಸಾದ ಎಂಜಲು.
ಆಚಾರವಿಲ್ಲದ ಭಕ್ತ ದುಃಕರ್ಮಿ.
ಇದು ಕಾರಣ,
ಅಟ್ಟವನೇರುವುದಕ್ಕೆ ನಿಚ್ಚಣಿಗೆಯೆ ಸೋಪಾನವಯ್ಯ.
ಹರಪದವನೆಯ್ದುವರೆ
ಶ್ರೀ ಗುರು ಹೇಳಿದ ಸದಾಚಾರವೆ ಸೋಪಾನವಯ್ಯ.
ಗುರುಪದೇಶವ ಮೀರಿ,
ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ
ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./84
ಆಜ್ಞಾಕರ್ತೃವಿನ ಅಂಗನೆಗೆ
ಮೋಹದ ಮಗಳು ಹುಟ್ಟಿದಳು ನೋಡಾ.
ಆಕೆಯ ವಿಲಾಸದಿಂದ ಲೋಕಾದಿಲೋಕಂಗಳೆಲ್ಲ
ಉದಯಿಸಿದವು ನೋಡಾ.
ಆಯಾಕೆ ನಿಂದಲ್ಲೆ ಪ್ರಳಯವಾಗುತ್ತಿಪ್ಪವು ನೋಡಾ.
ಆ ಲೋಕ ಲೌಕಿಕವನತಿಗಳೆದು,
ಆಕೆಯ ಸಂಗಕ್ಕೆ ಹೊರಗಾದಾತನೇ,
ಏಕಮೇವ ನ ದ್ವಿತೀಯ ಪರಬ್ರಹ್ಮವು.
ತಾನು ತಾನಾದ ಪ್ರಾಣಲಿಂಗೈಕ್ಯನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./85
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ
ಅಮೃತಮಯ ಲಿಂಗವ ಕಂಡೆನು ನೋಡಾ.
ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು
ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ.
ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ
ಮೂರು ಆರಾಗಿ ಆರು ಮೂವತ್ತಾರಾಗಿ
ಮೂವತ್ತಾರು ಇನ್ನೂರಹದಿನಾರಾಗಿ
ಆ ಇನ್ನೂರ ಹದಿನಾರರ ಬೆಳಗು
ಪಿಂಡಾಂಡದಲ್ಲಿ ಪರಿಪೂರ್ಣವಾಗಿ
ಸದಾ ಸನ್ನಿಹಿತವಾಗಿಪ್ಪುದು.
ನಿಮ್ಮ ಶರಣ ಸಂಗನ ಬಸವಣ್ಣ
ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ
ಅಜ ಹರಿ ಸುರ ಮನು ಮುನಿಗಳಿಗೆ
ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./86
ಆಡಿನ ಶಿರದಮೇಲೆ ಕುಣಿದಾಡುವ ಕೋಡಗ
ಮಾರುತನ ಕೂಡೆ ಉಡುವ ಹಡೆಯಿತ್ತು ನೋಡಾ.
ಉಡುವಿನ ನಾಲಗೆಯಲ್ಲಿ ಅಜ ಹರಿ
ಸುರ ಮನು ಮುನಿಗಳು ಅಡಗಿದರು.
ಇವರೆಲ್ಲರ ಯಜನಾದಿಕೃತ್ಯಂಗಳು
ಉಡುವಿನ ಕಾಲಿನಲ್ಲಿ ಅಡಗಿದವು.
ತ್ರಿಜಗವೆಲ್ಲವು ಹೀಂಗೆ ಪ್ರಳಯದಲ್ಲಿ ಮುಳುಗಿದೆಯಲ್ಲ.
ಉಡುವಿನ ನಾಲಗೆ ಕೊಯಿದು,
ಕುಣಿದಾಡುವ ಕೋಡಗನ ಕಾಲಮುರಿದು,
ಅಜಪಶುವ ಕೊಂದು, ಅಗ್ನಿಯಲ್ಲಿ ಸುಟ್ಟು ಭಸ್ಮವಮಾಡಬಲ್ಲಾತನ
ಜನನಮರಣ ವಿರಹಿತನೆಂಬೆ, ತ್ರಿಜಗಾಧಿಪತಿಗಳಿಗೆ ಒಡೆಯನೆಂಬೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./87
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಈ ಮೂರು ಮಲತ್ರಯಂಗಳು.
ಒಂದು ಕೆಂಪಿನ ಮಲ; ಒಂದು ಬೆಳ್ಳಿನ ಮಲ;
ಒಂದು ಕಪ್ಪಿನ ಮಲ.
ಈ ಮೂರು ಪ್ರಕಾರದ ಮಲವ ಭುಂಜಿಸಿ,
ಸಂಸಾರ ವಿಷಯ ಕೂಪವೆಂಬುವ
ತಿಪ್ಪೆಯ ಗುಂಡಿಯ ನೀರಕುಡಿದು,
ಮಾಯಾಮೋಹವೆಂಬ ಹಾಳುಗೇರಿಯ ಗೊಟ್ಟಿನಲ್ಲಿ ಬಿದ್ದು,
ಸೂಕರನಂತಿಪ್ಪವರ ಎಂತು ಭಕ್ತರೆಂಬೆ? ಎಂತು ದೇವರೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./88
ಆತ್ಮದೃಕ್ಕಿಂದ ಈಶ್ವರನ ತಿಳಿದಲ್ಲದೆ, ಜಾತಿಸ್ಮರತ್ವವ ಕಾಣಬಾರದು;
ಜ್ಯೋತಿರ್ಮಯಲಿಂಗದಿಂದೊಗೆದ ಶರಣನ,
ಏತರಿಂದ ಕಂಡು ಹೇಳುವಿರಣ್ಣ?
ಮಾತಿನಿಂದ ಹೇಳಿಹೆನೆಂದಡೆ, ವಾಚಾತೀತ ಶಿವಶರಣನು.
ವಾಙ್ಮನಕ್ಕಗೋಚರವಾದ ಮಹಾಘನ ಪರತತ್ವದಲುದಯವಾದ
ಶರಣನ
ಮಾತಿಗೆ ತಂದು ನುಡಿವ ಮರುಳುಮಾನವರನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./89
ಆತ್ಮನೂ ಉಂಟು, ಮಲಮಾಯಾ ಕರ್ಮಂಗಳೂ ಉಂಟು;
ಶಿವನೂ ಉಂಟು ಎಂದಡೆ,
ಶಿವನೇನು ಪರಿಪೂರ್ಣನೋ ಖಂಡಿತನೋ?
ಶಿವನೇನು ಕಿಂಚಿಜ್ಞನೋ ಸರ್ವಜ್ಞನೋ?
ಶಿವನು ಪರಿಪೂರ್ಣನಾದಡೆ,
ಮಲಮಾಯಾ ಕರ್ಮಂಗಳಿದ್ದೆಡೆಯಾವುದು ಹೇಳಾ.
ಖಂಡಿತನೆಂಬೆಯಾ ಶಿವನೊಂದು ಮೂಲೆಯಲ್ಲಿಪ್ಪನೆ?
ಸರ್ವವ್ಯಾಪಕನೆಂಬುದು ಹುಸಿಯೆ? ಸರ್ವಜ್ಞನೆಂಬುದು ಹುಸಿಯೆ?
ಆದಡೆ ಕಿಂಚಿಜ್ಞನೆನ್ನು. ಕಿಂಚಿಜ್ಞನೆಂಬ ಶಾಸ್ತ್ರವುಂಟೇ?
ಪರಿಪೂರ್ಣಸರ್ವಮಯವಾದ ವಸ್ತು ನೀನೊಬ್ಬನೆಯಾಗಿ
ಪ್ರತಿಯಿಲ್ಲದಪ್ರತಿಮ ನೀನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./90
ಆತ್ಮನೇ ಅಂಗವಾದ ಐಕ್ಯನಲ್ಲಿ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನಪ್ಪ
ಅಂಗಪಂಚಕವು ಗರ್ಭಿಕೃತವಾಗಿ,
ಆ ಐಕ್ಯಂಗೆ ಮಹಾಲಿಂಗ ಸಂಬಂಧವಾಗಿ
ಆ ಮಹಾಲಿಂಗದಲ್ಲಿಯೇ ಆಚಾರಲಿಂಗ ಗುರುಲಿಂಗ
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ,
ಮಹಾಲಿಂಗವೇ ಆಶ್ರಯವಾಗಿ
ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ
ಐಕ್ಯನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./91
ಆದಿ ಅಂಗನೆಯ ಉದರದಲೊಂದು ಅದ್ಭುತದ ಕಿಚ್ಚು ಹುಟ್ಟಿ
ಮೂರು ಹಂಸೆಯ ನುಂಗಿ ಮುಪ್ಪುರವ ಸುಟ್ಟು
ಆರೂಢಪದದಲ್ಲಿ ನಿಂದ
ಅದ್ವಯ ಲಿಂಗೈಕ್ಯವನೇನೆಂದುಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./92
ಆದಿ ಅನಾದಿಗಳಿಲ್ಲದಂದು,
ನಾದ ಬಿಂದು ಕಳೆ ಮೊಳೆದೋರದಂದು,
ದೇಹ ದೇಹಿಗಳುತ್ಪತ್ತಿಯಾಗದಂದು,
ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು,
ಸಕಲ ಸಚರಾಚರಂಗಳ ಸುಳುಹಿಲ್ಲದಂದು,
ಇವೇನುಯೇನೂ ಇಲ್ಲದಂದು,
ನೀನು ಶೂನ್ಯನಾಗಿರ್ದೆಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./93
ಆದಿ ಅನಾದಿಗಳೇನೂ ಇಲ್ಲದ ನಿರುಪಮಲಿಂಗದಲ್ಲಿ
ಅನುಪಮಭಕ್ತಿ ಜನಿಸಿತ್ತು ನೋಡ.
ಆ ಭಕ್ತಿಯ ಗರ್ಭದಲ್ಲಿ ಸತ್ಯಶರಣನುದಯಿಸಿದನು.
ಇದು ಕಾರಣ,
ಅನಾದಿ ಕೇವಲ ಮುಕ್ತನೇ ಶರಣನೆಂಬ ವಾಕ್ಯ
ಸತ್ಯ ಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./94
ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ
ಭೇದಿಸಿ ಬಹಿಷ್ಕರಿಸಿ ಸರ್ವಾಂಗದಲ್ಲಿ ಧರಿಸಲು
ಭವಬಂಧನ ದುರಿತದೋಷಂಗಳು
ಪರಿಹರವಪ್ಪುದು ತಪ್ಪದು ನೋಡಾ.
ಇದು ಕಾರಣ ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸಿ
ಮಲತ್ರಯಂಗಳ ತೊಳೆದೆನು ನೋಡಾ.
ಮಲತ್ರಂಯಗಳು ಪರಿಹರವಾಗದ ಮುನ್ನ
ಭವಬಂಧನದ ಬೇರುಗಳ ಸಂಹರಿಸಿ
ಜನನ ಮರಣಂಗಳ ಒತ್ತಿ ಒರಸುವುದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./95
ಆದಿ ಪರಶಿವ ಬಿಂದುವಿನಿಂದ ಮಾದೇವಿ ಹುಟ್ಟಿ
ತ್ರೆ ಜಗದ ಜನನಿ ನೋಡಾ.
ಆಕೆ ಜಾತಿ ವಣರ್ಾಶ್ರಮ ಕುಲ ಗೋತ್ರ
ನಾಮ ಸೀಮೆಯ ಕೂಡಿಕೊಂಡಿಪ್ಪ ಭ್ರಾಂತು ಲಕ್ಷಣೆ ನೋಡಾ.
ಆಕೆಯ ಬಲೆಯಲ್ಲಿ ಲೋಕಾಧಿಲೋಕಂಗಳೆಲ್ಲವೂ ಸಿಕ್ಕಿ, ಕಾಕಾಗಿ,
ಆಕೆಯ ಒಡನೆ ಹುಟ್ಟಿ ಒಡನೆ ಬೆಳೆದು
ಆಕೆಯ ಒಡನೆ ಲಯವಾಗುತಿಪ್ಪವು.
ಆಕೆ ಉಂಟಾಗಿ ಲೋಕಾಧಿಲೋಕಂಗಳ ತೋರಿಕೆ.
ಆಕೆ ಲಯವಾದಲ್ಲಿಯೆ,
ಲೋಕಾಧಿಲೋಕಂಗಳೆಲ್ಲವು ಲಯ ನೋಡಾ.
ಆಕೆಯ ಕೈಕಾಲ ಕಡಿದು, ಮೊಲೆ ಮೂಗನುತ್ತರಿಸಿ
ಆಕೆಯ ವಿಕಾರಸಂಗವನಳಿದು
ಆದಿ ಪರಶಿವಬಿಂದುವನೆಯ್ದಬಲ್ಲರೆ
ಆತನು ಲೋಕಾಧಿಲೋಕಂಗಳ ಪ್ರಪಂಚುವ ಗೆಲಿದ
ನಿಃಪ್ರಪಂಚಿ ಮಾಹೇಶ್ವರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./96
ಆದಿ ಮಧ್ಯಾವಸಾನವಿಲ್ಲದಂದು,
ಆದಿ ಅನಾದಿ, ಬಿಂದು ಕಳೆಗಳಿಲ್ಲದಂದು,
ಸಾವಯ, ನಿರವಯವಿಲ್ಲದಂದು,
ತತ್ವ ಬ್ರಹ್ಮಾಂಡಾದಿ
ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು;
ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿದ್ದೆಯಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./97
ಆದಿಪರಮೇಶ್ವರನು ತನ್ನ ವಿನೋದಾರ್ಥ ಕಾರಣ
ಶರಣನಾಗಿ ತೋರಿದರೆ,
ಭೇದವ ಮಾಡಿ ನುಡಿವ ವಾದಿಗಳ ಬಾಯಲ್ಲಿ ಕೆರಹನಿಕ್ಕುವೆನು.
ಅನಾದಿ ಪರಶಿವನು ತಾನೆ ಶರಣನೆಂಬ ವಾಕ್ಯ
ಸತ್ಯ ಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./98
ಆದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು
ಮೂರು ಪ್ರಕಾರವಾಗಿಪ್ಪುದು.
ಆದಿಪಿಂಡವೇ ಜೀವಪಿಂಡ.
ಮಧ್ಯಪಿಂಡವೇ ಸುಜ್ಞಾನಪಿಂಡ.
ಅನಾದಿಪಿಂಡವೇ ಚಿತ್ಪಿಂಡ.
ಜೀವಪಿಂಡವೆಂದು
ಅಷ್ಟತನುಮೂರ್ತಿಗಳಿಂದ ಉತ್ಪತ್ತಿಯಾದವು. ಅಂದಿಂದ
ಭವಭವಂಗಳೊಳಗೆ ಬಂದು,
ಶಿವಕೃಪೆಯಿಂದ ಭವಕಲ್ಪಿತ ತೀರಿ,
ಶಿವವಾಸನಾ ಪಿಂಡಸ್ವರೂಪವನಂಗೀಕರಿಸಿದ್ದೀಗ ಜೀವಪಿಂಡ.
ಸುಜ್ಞಾನಪಿಂಡವೆಂದು
ಶಿವಾಜ್ಞೆಯಿಂದ ಚಿತ್ತಿನಂಶವೆ ಸಾಕಾರವಾಗಿ,
ಜಗದ್ದಿತಾರ್ಥಕಾರಣ ಮತ್ರ್ಯಲೋಕದಲ್ಲಿ ಉದಯವಾಗಿ,
ಶರೀರಸಂಬಂಧಿಗಳಾಗಿಯು
ಆ ಶರೀರದ ಗುಣಧರ್ಮಕರ್ಮಂಗಳ ಹೊದ್ದಿಯು
ಹೊದ್ದದಿಪ್ಪರು.
ಅದೇನು ಕಾರಣವೆಂದಡೆ:ಚಿದಂಶಿಕರಾದ ಕಾರಣ.
ಶರೀರವಿಡಿದರೆಯೂ ಆ ಶರೀರಸಂಬಂಧಿಗಳಲ್ಲ ಎಂಬುದಕ್ಕೆ
ದೃಷ್ಟವಾವುದೆಂದಡೆ:
ಉರಿ ಬಂದು ಕಪರ್ೂರವ ಸೋಂಕಲಾಗಿ
ಕಪರ್ೂರದ ಗುಣ ಕೆಟ್ಟು ಉರಿಯೇ ಆದಂತೆ,
ಪರುಷದ ಬಿಂದು ಬಂದು ಲೋಹವ ಸೋಂಕಲು
ಆ ಲೋಹದ ಗುಣ ಕೆಟ್ಟು ಚಿನ್ನವಾದಂತೆ,
ಆ ಶರಣರು ಬಂದು ಆ ಲಿಂಗವ ಸೋಂಕಲಾಗಿ,
ಆ ಪಂಚಭೂತದ ಪ್ರಕೃತಿಕಾಯ ಹೋಗಿ,
ಪ್ರಸಾದಕಾಯವಾಗಿತ್ತಾಗಿ.
ಇದು ಕಾರಣ, ಬಸವ ಮೊದಲಾದ ಪ್ರಮಥರು
ಧರಿಸಿದ ಶರೀರವೆಲ್ಲ
ಸುಜ್ಞಾನಪಿಂಡವೆಂದು ಹೇಳಲ್ಪಟ್ಟಿತ್ತು.
ಅದುಕಾರಣ ಪಂಚಭೂತಂಗಳ ಪವಿತ್ರವ ಮಾಡಲೋಸ್ಕರವಾಗಿ,
ಧರಿಸಿದ ಪಿಂಡವಲ್ಲದೆ, ವಾಸನಾಧರ್ಮದ ಪಿಂಡವಲ್ಲ.
ಶುದ್ಧರೇ ಅಹುದು ದೇಹಮಾತ್ರದಲಾದ
ವಾಸನಾಪಿಂಡವೆಂಬುದದು ಅಜ್ಞಾನ ನೋಡ.
ಚಿತ್ಪಿಂಡವೆಂದು
ಚಿನ್ನ ಬಣ್ಣದ ಹಾಂಗೆ ಶಿವತತ್ವವ ಬಿಟ್ಟು ಎಂದೂ ಅಗಲದೆ
ಇದ್ದಂಥಾದು.
ಚಿದಂಗಸ್ವರೂಪವಾಗಿ,
ಚಿದ್ಭನಲಿಂಗಕ್ಕೆ ಚಿದ್ಭಾಂಡಸ್ಥಾನವಾಗಿದ್ದಂಥದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./99
ಆದಿಯ ಸಂಗದಲಾದವನ ದೇವರೆಂದೆನ್ನೆ,
ಸಂಗಸುಖದಲಿಪ್ಪವನ ದೇವರೆಂದೆನ್ನೆ,
ಶಕ್ತಿಸಂಪುಟವಾದವನ ದೇವೆರೆಂದೆನ್ನೆ,
ಇಬ್ಬರಸಂಗದಲಾದವನ ದೇವರೆಂದೆನ್ನೆ,
ಭಾವ ಸದ್ಭಾವ ನಿರ್ಭಾವವೆಂಬ
ಭಾವತ್ರಯವುಳ್ಳವನ ದೇವರೆಂದೆನ್ನೆ,
ಸಗುಣ ನಿರ್ಗುಣಗಳಿಗೆ ಮಿಗೆ ಮಿಗೆಯಾಗಿ ತೋರುವ
ಪರಮಾವ್ಯಯ ನೀನಾದ ಕಾರಣ,
ನಿರವಯಲಿಂಗವೆಂದೆ; ನಿಃಕಲಪರಬ್ರಹ್ಮವೆಂದೆ,
ಏಕಮೇವನದ್ವಿತೀಯ ಪರಾತ್ಪರವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./100
ಆದಿಯಲ್ಲಿ ಈಶ್ವರನು ಕೂಗಿದ ಕೂಗ
ತ್ರೆ ಜಗವೆಲ್ಲಾ ಕೂಗುತ್ತಿದೆ ನೋಡ.
ಮುದಿಬಳ್ಳು ಕೂಗಿದ ಕೂಗ ಮರಿಬಳ್ಳುಗಳೆಲ್ಲ
ಬಳ್ಳಿಟ್ಟು ಬಗುಳುತ್ತಿಪ್ಪವು ನೋಡ.
ಮರಿಬಳ್ಳುಗಳು ಬಗುಳಿದ ಬಗುಳು
ಮುದಿಬಳ್ಳುವ ಮುಟ್ಟದಿದೇನು ಸೋಜಿಗವೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು
ವಾಙ್ಮನಕ್ಕಗೋಚರನಾದ ಕಾರಣ,
ಅವರ ನಡೆಯು ನುಡಿಯು ಮುಟ್ಟವು ಕಾಣಿರೋ./101
ಆದಿಯಲ್ಲಿ ನಾ ಹುಟ್ಟುವಂದೆನ್ನ ಒಡಹುಟ್ಟಿದರೈವರು ನೋಡ.
ಒಡಹುಟ್ಟಿದರೈವರೆನಗೆ ಒಡಲಾಗಿಪ್ಪರು ನೋಡಾ.
ಒಡಲನುರಿಗಿತ್ತು ಎನ್ನ ನಿಮಗಿತ್ತು
ನಿರ್ವಯಲಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./102
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ,
ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ?
ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ
ರೇವಣಸಿದ್ಧೇಶ್ವರನು,
ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ
ನಾಯಕನರಕ ತಪ್ಪದು.
ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು
ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು
ಪರಮೇಶ್ವರನ ನಿಜಚಿನ್ಮಯಮಪ್ಪ ಊಧ್ರ್ವಮುಖದಲ್ಲಿ
ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡ.
ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ
ಮತ್ರ್ಯದಲ್ಲಿ ಅವತರಿಸಿದಡೆ,
ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ
ಎಂದು ಸಂದೇಹಿಸುವ
ಅವಲಕ್ಷಣ ನಾಯ ನಾಲಗೆಯ,
ಯಮದೂತರು ಕೀಳದೆ ಮಾಣ್ಬರೆ?
ಇವರಿಂಗೆ ನಾಯಕನರಕ ತಪ್ಪದು ಕಾಣಾ,
ಎಲೆ ಶಿವನೆ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./103
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ
ಗುರೂಪದೇಶ ದೊರಕೊಂಡ ಪರಿಯೆಂತೋ?
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ
ಲಿಂಗ ಸಂಬಂಧ ದೊರಕೊಂಡ ಪರಿಯೆಂತೋ?
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ,
ಜಂಗಮ ಪ್ರಾಣಿಯಾದ ಪರಿಯೆಂತೋ?
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ,
ಪಾದೋದಕ ಪ್ರಸಾದ ಸಂಬಂಧಿಯಾದ ಪರಿಯೆಂತೋ?
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ,
ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಧಾರಣವಾದ ಪರಿಯೆಂತೋ?
ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ,
ರುದ್ರಾಕ್ಷಿ, ಪ್ರಣವಪಂಚಾಕ್ಷರಿ
ಈ ಎಂಟು, ಶುದ್ಧ ಚಿದ್ರೂಪ ಪರಶಿವ ತಾನೇ ನೋಡಾ!
ಆ ಪರಶಿವಬೀಜವೇ ಚಿತ್ತು.
ಆ ಚಿತ್ತಿನ ಪ್ರಭೆಯಲ್ಲಿ ಶರಣನು ಉದಯಿಸಿದನು.
ಇದು ಕಾರಣ, ಆದಿಯಲ್ಲಿ ಶಿವಬೀಜ ಶರಣನಾದ ಕಾರಣ
ಶುದ್ಧ ನಿರ್ಮಲನು ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./104
ಆದಿಯಲ್ಲಿ ಹುಟ್ಟಿದಾತನು ಮೇದಿನಿಗಿಳಿದು
ತನ್ನಾದಿಯಂತುವ ಮರೆದು
ಮೇದಿನಿಯೆ ತಾನೆಂಬಂತಿಪ್ಪನು ನೋಡಾ.
ಆದಿಯಿಂದಗಲಿ ಭೇದವಾದಿಯಾಗಿ ಅವಿಚಾರಿಯಾದನು ನೋಡಾ.
ಮೇದಿನಿಯ ಹೃದಯದಲ್ಲಿ ನಾದಬ್ರಹ್ಮದ ಕಳೆ ಉದಯವಾಗಲು
ಮೇದಿನಿಯ ಗುಣ ಧರ್ಮ ಕರ್ಮ ವಣರ್ಾದಿ ದೇವತೆಗಳಳಿದು
ಆದಿಮಾಹೇಶ್ವರನೆಂದರಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./105
ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ.
ಆದಿಲಿಂಗದ ಸಂಧಾನದ ಭೇದಾದಿಭೇದದಿಂದ
ಮೂಲ ಪ್ರಣವವ ತಿಳಿದು
ನಾದ ಬೆಳಗಿನ ಕಳೆಯ ನೋಡಿ ಕಂಡೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./106
ಆದಿಯಾಧಾರವ ಮುಟ್ಟದ ನಾದ ಬಿಂದು ಕಳಾತೀತನ ಕಂಡೆನು,
ಅದು ಆದಿ ಮಹಾಘನಲಿಂಗ ನೋಡಾ.
ಅದು ಎನ್ನಂಗ, ಪ್ರಾಣದಲ್ಲಿ ನಿಂದು
ಲಿಂಗ ಜಂಗಮವಾಯಿತ್ತು ನೋಡಾ.
ಲಿಂಗವೆ ಅಂಗವಾಗಿ, ಜಂಗಮವೆ ಪ್ರಾಣವಾಗಿ
ಪರಶಿವಕಳೆಯೆ ಕಾರಣವಾಗಿಪ್ಪ
ಲಿಂಗಾಂಗಿಯ ಮಾಹೇಶ್ವರನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./107
ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ.
ಆಧಾರದೊಳಗೆ ಆದಿಯಿಪ್ಪುದ ಕಂಡೆನಯ್ಯ.
ಆದಿ ಆಧಾರವ ನುಂಗಿ ಆಧಾರ ಆದಿಯ ನುಂಗಲು
ಸಾಧ್ಯಸಾಧಕ, ಪೂಜ್ಯಪೂಜಕ,
ದೇವ ದೇಹಿಕನೆಂಬವರಾರೂ ಇಲ್ಲದ
ಎರಡಿಲ್ಲದ ನಿರಾಳ ನೀನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./108
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ
ಚತುರ್ದಳ ಚತುಕ್ಷರ,
ಷಡುದಳ ಷಡಕ್ಷರ,
ದಶದಳ ದಶಾಕ್ಷರ,
ದ್ವಾದಳದಳ ದ್ವಾದಶಾಕ್ಷರ,
ಷೋಡಶದಳ ಷೋಡಶಾಕ್ಷರ,
ದ್ವಿದಳ ದ್ವ ಯಯಾಕ್ಷರವೆಂಬ,
ಚಕ್ರ ದಳ, ಅಕ್ಷರಂಗಳೆಲ್ಲವು ಬಯಲಾದವು ನೋಡಾ.
ಪೀತ ಹರಿತ ಮಾಂಜಿಷ್ಠ ಶ್ವೇತ ಕಪೋತವರ್ಣಮುಖ್ಯವಾದ
ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ
ಪಂಚಾಧಿದೇವತೆಗಳು ಬಯಲಾದರು ನೋಡಾ.
ಅದೆಂತಡೆಂದಡೆ:
ಬ್ರಹ್ಮ ವಿಷ್ಣುವಿನಲ್ಲಡಗಿ, ವಿಷ್ಣು ರುದ್ರನಲ್ಲಡಗಿ,
ರುದ್ರ ಈಶ್ವರನಲ್ಲಡಗಿ, ಈಶ್ವರ ಸದಾಶಿವನಲ್ಲಡಗಿ,
ಸದಾಶಿವ ಚಿತ್ತಿನಲ್ಲಡಗಿ,
ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ,
ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./109
ಆಧಾರಚಕ್ರದಲ್ಲಿ ನಕಾರ ಸ್ವಾಯತ.
ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ಸ್ವಾಯತ.
ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
ಅನಾಹತಚಕ್ರದಲ್ಲಿ ವಾಕಾರ ಸ್ವಾಯತ.
ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ.
ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ,
ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./110
ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ.
ಮೂಜಗ ಸತ್ತು ಮೂಜಗದೊಡೆಯನುಳಿದುದು
ಸೋಜಿಗವೆಂದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./111
ಆಧಾರಶಕ್ತಿ ಅನಾದಿಪುರುಷನ ಕೂಡಲು
ತ್ರೆ ಜಗದುತ್ಪತ್ತಿಯಾಯಿತ್ತು ನೋಡಾ.
ತ್ರೆ ಜಗಹುಟ್ಟುವುದಕ್ಕತ್ತ ಮುನ್ನ
ತಾ ಹುಟ್ಟಿದೆನೆಂದರಿಯಬಲ್ಲರೆ
ಮೂರುಲೋಕದ ಉತ್ಪತ್ತಿ ಸ್ಥಿತಿ ಪ್ರಳಯದೊಳಗಲ್ಲ.
ಆ ಪ್ರಳಯವಿರಹಿತನಾದಾತನೆ ಅಚ್ಚ ಶರಣನು.
ಆತ ನಿತ್ಯ ನಿರಂಜನನು.
ಆ ಮಹಾತ್ಮನನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./112
ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ;
ಸ್ವಾಯತಲಿಂಗ ಸಂಬಂಧವಿಲ್ಲದಾತ ಮನಭವಿ;
ಸನ್ನಿಹಿತಲಿಂಗವ ಸಂಬಂಧವಿಲ್ಲದಾತ ಆತ್ಮಭವಿ;
ಇದು ಕಾರಣ, ಆಯತಲಿಂಗವ ಅಂಗದಲ್ಲಿ ಅಳವಡಿಸಿ,
ಸ್ವಾಯತಲಿಂಗವ ಮನದಲ್ಲಿ ಅಳವಡಿಸಿ
ಸನ್ನಿಹಿತಲಿಂಗವ ಆತ್ಮನಲ್ಲಿ ಅಳವಡಿಸಿ
ಅಂಗಮನಪ್ರಾಣದಲ್ಲಿ ಲಿಂಗವ ಧರಿಸಿ ಹೆರೆಹಿಂಗದಿರ್ದೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./113
ಆಯತಲಿಂಗದಲ್ಲಿ ಅಂಗಗುಣವಳಿದು
ಸರ್ವಾಂಗವನು ಲಿಂಗನಿಷ್ಠೆಯಲ್ಲಿ ಘಟ್ಟಿಗೊಳಿಸಿ
ಲಿಂಗಾಂಗಸಂಗದಲ್ಲಿ ನಿರತನು ನೋಡಾ.
ಸ್ವಾಯತಲಿಂಗದಲ್ಲಿ ಮನ ವೇದ್ಯವಾಗಿ
ಮನೋಮಾಯವನಳಿದ ನಿರ್ಮಾಯ ನಿರಾಕುಳನು
ಮಾಯಾಪ್ರಪಂಚಿನೊಳಗೆ ಚರಿಸದ ಪ್ರಾಣಲಿಂಗನಿಷ್ಠನು ನೋಡಾ.
ಸನ್ನಿಹಿತಲಿಂಗದಲ್ಲಿ ತನ್ನನಳಿದು
ತಾನೆಂಬುವ ಭಾವವೇನೂ ತೋರದ ಮಹಾನುಭಾವಿಯ ನೋಡಾ.
ತಾನೆಂಬುದೇನೂ ಇಲ್ಲವಾಗಿ, ನೀನೆಂಬುದು ಇಲ್ಲ;
ನಾನು ನೀನೆಂಬುದು ಇಲ್ಲವಾಗಿ,
ಲಿಂಗವೆ ಸರ್ವಮಯವಾಗಿಪ್ಪುದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./114
ಆರಾರರಿಂದ ಮೀರಿ ತೋರುವ[ಸೀಮೆ] ನಿಸ್ಸೀಮೆ ನೋಡಾ.
ಆ ಸೀಮೆಯರಸು ಅನಾಹತನು.
ಆವ ಆವರಣವೂ ಇಲ್ಲದ ನಿರಾವರಣಂಗೆ
ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು.
ಈ ಲಿಂಗಾಂಗ ಸಂಯೋಗವ ತತ್ತ್ವಮಸ್ಯಾದಿ ವಾಕ್ಯಾರ್ಥವೆಂಬ
ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./115
ಆರೆಂಬ ಸಂಖ್ಯೆ ಆರೂ ಇಲ್ಲದ
ರಾಜ್ಯದಿ ಮಾರಾರಿಯೊಬ್ಬನೇ ಅರಸು ನೋಡಾ.
ಅರಸು ಪ್ರಧಾನಿ ಮಂತ್ರಿ ಆನೆ ಸೇನೆ
ಪ್ರಜೆ ಪರಿವಾರವೆಲ್ಲವು ಸತ್ತು
ಅರಸಿನ ಅರಸುತನ ಕೆಟ್ಟಿತ್ತು ನೋಡಾ.
ತನ್ನಿಂದನ್ಯವಾಗಿ ಇನ್ನಾರೂ ಆರು ಏನುಯೇನೂ ಇಲ್ಲದ
ನಿರಾಕಾರವ ನೆರೆದು
ಆ ನಿರಾಕಾರ ಪರವಸ್ತುವೆಯಾದನಾಗಿ,
ಅದು ಲಿಂಗಾಂಗ ಸಂಯೋಗ ಕಾಣಾ,
ಮಹಾಲಿಂಗುಗುರು ಶಿವಸಿದ್ಧೇಶ್ವರ ಪ್ರಭುವೇ./116
ಆಲಿಯ ಕೊನೆಯಲ್ಲಿ ಬೆಳೆದ ಹಾಲೆ
ಬಾಲೆಯರನೆ ಬಯಸುತ್ತಿಪ್ಪುದು ನೋಡಾ.
ಆಲಿಯ ಕೊನೆಯ ಹಾಲೆಯ ಹರಿದು
ಬಾಲೇಂದುಮೌಳಿ ತಾನಾದ ಲಿಂಗೈಕ್ಯವನೇನ ಹೇಳುವೆನಯ್ಯ?
ನೇತ್ರಕ್ಕೆ ಪ್ರತ್ಯಕ್ಷ ಘನಮಹಿಮ ತಾನಾದ ನಿಲವ
ಚೆನ್ನಬಸವಣ್ಣ ಬಲ್ಲ.
ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋಯೆನುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./117
ಆಶಾಪಾಶವೆಂಬ ಆಧಿವ್ಯಾದಿ ಅಂಡಲೆವುತ್ತಿಪ್ಪವು ನೋಡಾ.
ದೋಷ ದುರ್ಗುಣವೆಂಬ ದುರಿತ ದುಃಖ
ಪೀಡಿಸುತಿಪ್ಪವು ನೋಡಾ.
ಸಕಲ ಕರಣಂಗಳೆಂಬ ಖಾಸದ ವ್ಯಾಧಿ ಹಿಡಿದು
ಕಳವಳಿಸುತಿಪ್ಪವು ನೋಡ.
ಈಶ್ವರೋವಾಚವ ನುಡಿದುಕೊಂಡು ನಡೆವರೆ ನಾಚದ
ಪಾಷಂಡಿ ವೇಷಧಾರಿ ಪಶುಗಳು,
ಪ್ರಾಣಲಿಂಗ ಸಂಬಂಧದ ಯೋಗವನಿವರೆತ್ತ ಬಲ್ಲರು?
ತಮ್ಮಂಗದಮೇಲೆ ಲಿಂಗವಿದ್ದು
ಅನ್ಯಮತನಾಚರಿಸುವ ಕುನ್ನಿಗಳಿಗೆ
ಪ್ರಾಣಲಿಂಗ ಸಂಬಂಧವೆಲ್ಲಿಯದೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./118
ಆಸುವಳಿದ ಕಾಯದಂತೆ
ದೆಸೆಗೆಟ್ಟಿನಯ್ಯ ದೆಸೆಗೆಟ್ಟಿನಯ್ಯ.
ಅದೇನು ಕಾರಣವೆಂದಡೆ:
ಪಶುಪತಿಯ ಭಕ್ತಿ ವಿಶ್ವಾಸವಿಲ್ಲದೆ ವಿಷಯಾತುರನಾಗಿರ್ದೆನಯ್ಯ.
ಇದು ಕಾರಣ,
ಎನ್ನ ಸಂಸಾರವಿಷಯಂಗಳ ಮಾಣಿಸಿ ಭಕ್ತನೆಂದೆನಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./119
ಇಂತೀ ಹಿಂದೆ ಹೇಳಿದ ವಸ್ತುವ ಬೇರಿಟ್ಟು ತಿಳಿಯಲಿಲ್ಲ.
ನಿನ್ನಲ್ಲಿ ಉಂಟು ತಿಳಿದು ನೋಡಯ್ಯ ಮಗನೆ.
ನಿನ್ನ ಪಿಂಡದ ಹೊರಗೆ ಭರಿತವಾಗಿ.
ತಲೆದೋರದೆ, ಕಾಣಿಸಿಕೊಳ್ಳದೆ
ಪಿಂಡಸ್ಥನಾಗಿ ಚಿದ್ರೂಪನದಾನೆ.
ಈ ಪಿಂಡಸ್ಥಲದ ಭೇದವ ತಿಳಿಯೆಂದನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./120
ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ,
ಬಹಿರಂಗದಲ್ಲಿ ಅಂಗದ ಮೇಲೆ
ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು
ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ.
ಎಷ್ಟು ಅರುಹಾದರೂ ಅಂಗದಮೇಲೆ
ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ;
ಅದು ನಮ್ಮ ಪುರಾತನರ ಮತವಲ್ಲ.
ಸಾಕ್ಷಾತ್ ಪರಮೇಶ್ವರನಾದರೂ ಆಗಲಿ,
ಅಂಗದಮೇಲೆ ಲಿಂಗಧಾರಣವಿಲ್ಲದಿದ್ದರೆ,
ಅವನ ಮುಖವ ನೋಡಲಾಗದು ಕಾಣ.
ಅದೇನು ಕಾರಣವೆಂದರೆ:
ಅದು ಶಿವಾಚಾರದ ಪಥವಲ್ಲದ ಕಾರಣ.
ಗುರುಕರುಣದಿಂದ ಪಡೆದ ಲಿಂಗವ
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ
ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./121
ಇಂತು ಕ್ರೀಯಿಲ್ಲದೆ ಜ್ಞಾನ ಪ್ರಯೋಜನವಿಲ್ಲ;
ಜ್ಞಾನವಿಲ್ಲದೆ ಕ್ರೀ ಪ್ರಯೋಜನವಿಲ್ಲವಯ್ಯ
ಅದು ಹೇಂಗೆಂದರೆ:
ದೇಹವಿಲ್ಲದೆ ಪ್ರಾಣಕ್ಕೆ ಆಶ್ರಯವುಂಟೆ ಅಯ್ಯ?
ಪ್ರಾಣವಿಲ್ಲದೆ ಕಾಯಕ್ಕೆ ಚೈತನ್ಯವುಂಟೆ ಅಯ್ಯ?
ಕ್ರೀಯಿಲ್ಲದೆ ಜ್ಞಾನಕ್ಕೆ ಆಶ್ರಯವಿಲ್ಲ.
ಜ್ಞಾನವಿಲ್ಲದೆ ಕ್ರೀಗೆ ಆಶ್ರಯವಿಲ್ಲ.
ಕ್ರಿಯಾಜ್ಞಾನಪ್ರಕಾಶವಿಲ್ಲದೆ ಲಿಂಗಕ್ಕಾಶ್ರಯವಿಲ್ಲ.
ಇದು ಕಾರಣ,
ಜ್ಞಾನ ಸತ್ಕಿ ್ರಯೋಪಚಾರವಿರಬೇಕೆಂದಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./122
ಇಂದ್ರಿಯಂಗಳಿಗೊಂದೊಂದು ಮಾತ ಕಲಿತು
ಬಹಳವ ಬಲ್ಲೆವು, ಬ್ರಹ್ಮಜ್ಞಾನಿಗಳೆಂದು ನುಡಿದುಕೊಂಡು
ನಡೆಯಬಲ್ಲರಲ್ಲದೆ,
ಸಾವನರಿದಿಹೆನೆಂದರೆ ದೇವತಾದಿಗಳಿಗಳವಲ್ಲ ಕಾಣಿರಣ್ಣ.
ದೇವರಮೂರ್ತಿಯ ಭಾವದಲ್ಲಿ ಕಂಡಲ್ಲದೆ
ಭವದುಃಖ ಹಿಂಗವು ನೋಡ.
ಭವದುಃಖ ಹಿಂಗಿಸದೆ ಶಿವಾನುಭವವೇಕೆ ಹೇಳಿರೇ?
ಹುಸಿಯನೇ ಹೊಸೆದು, ಪಸೆಯನೇ ಕೊಚ್ಚಿ
ಪಶುಪತಿಯ ಅನುಭಾವಿಗಳೆಂದು
ಪ್ರಳಯಕ್ಕೊಳಗಾಗಿ ಹೋದರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./123
ಇಂದ್ರಿಯಂಗಳುಳ್ಳನ್ನಕ್ಕರ ಪ್ರಾಣಂಗೆ ಬಂಧನ ಮಾಬುದೆ
ಭವದುಃಖಿಗಳಿರೆ?
ಇಂದ್ರಿಯಂಗಳನೆಲ್ಲವ ಲಿಂಗಸಂಧಾನವ ಮಾಡಬಲ್ಲರೆ
ಪ್ರಾಣನ ಬಂಧನ ಬಿಟ್ಟು ಓಡುವುದು ನೋಡಾ.
ಪ್ರಾಣಲಿಂಗವಾಗಿಯಲ್ಲದೆ ಪ್ರಳಯವ ಗೆಲಬಾರದು.
ಪ್ರಳಯ ಪ್ರಳಯದ ಹಳೆಯರಾಗಿಪ್ಪವರ
ಪ್ರಾಣಲಿಂಗಸಂಬಂಧಿಗಳೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./124
ಇಚ್ಛಾಶಕ್ತಿ ತನ್ನ ಗರ್ಭದಲ್ಲಿ ಈರೇಳುಲೋಕವ ಹೆತ್ತಳು ನೋಡಾ.
ಆ ಲೋಕಾಧಿಲೋಕಂಗಳೊಳಗೆ ತಾನೇಕಾಕಿಯಾಗಿ
ಆ ಲೋಕದ ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗದೆ
ನಿತ್ಯಳಾಗಿಪ್ಪಳು ನೋಡಾ.
ಆ ಇಚ್ಛಾಶಕ್ತಿ ನಿಶ್ಚಿಂತನ ನೆರೆದು
ನಿರಾಳವಾದುದು ತಾನೆಂದು ಕಂಡಾತನ[ನು]
ಸರ್ವಜ್ಞ ಶರಣೆನೆಂಬೆನು.
ಆತನ ಅಲ್ಲಮಪ್ರಭುವೆಂಬೆನು.
ಆ ಪರಮ ನಿರಂಜನಪ್ರಭುವಿಗೆ
ನಮೋ ನಮೋಯೆಂದು ಬದುಕಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./125
ಇದು ಕಾರಣ, ದೇವಗುರು ನಿರೂಪಿಸಿದ
ಷಡಕ್ಷರಮಂತ್ರವನಗಲ್ದು
ಹುಟ್ಟಿ ಸಾವ, ಕೆಡುವ ಮಂತ್ರತಂತ್ರಯಂತ್ರಾದಿಗಳ ಕಲಿತು
ಬದುಕಿಹೆನೆಂಬ ಕಾಳ್ವಿಚಾರವ ಬಿಡು ಗಡಾ ಮನುಜರಿರ.
“ಓಂ ನಮಃ ಶಿವಾಯ ಇತಿ ಮಂತ್ರಸ್ಸರ್ವ
ಮಂತ್ರರ್ಾ ಸ್ಥಾಪಯೇತ್’
ಎಂಬ ಬಿರಿದು ಕಾಣಿರೋ.
ಎಲ್ಲ ಮಂತ್ರಕ್ಕೂ ಶಿವಮಂತ್ರವೇ ಗುರುವೆಂದರಿಯದೆ,
ಅನ್ಯನಾಮವಿಡಿದು ಬಳಲುವ ಅನಾಚಾರಿಗಳ ಕಂಡಡೆ
ಎನ್ನ ಮನ ನಚ್ಚದು ಮಚ್ಚದಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./126
ಇದು ಕಾರಣ, ಸರ್ವಾಂಗೋದ್ಧೂಳನವೆ ಅಧಿಕ ನೋಡಾ.
ಆತನ ರೋಮರೋಮಂಗಳೆಲ್ಲವು ಲಿಂಗಮಯ ನೋಡಾ.
ಆತನು ಪವಿತ್ರಕಾಯನು ನೋಡಾ.
ಆತನು ಸ್ವಯಂಜ್ಯೋತಿಸ್ವರೂಪನು ನೋಡಾ.
ಆತನು ಶುದ್ಧ ನಿರ್ಮಲನು ನೋಡಾ.
ಆ ಪರಶಿವಸ್ವರೂಪಂಗೆ ನಮೋನಮೋ ಎಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./127
ಇದು ಕಾರಣ,
ಎನ್ನ ಮಾನಸ ನಿಮ್ಮುವನೆ ನೆನೆವುತಿಪ್ಪುದು.
ಎನ್ನ ವಾಚಕ ನಿಮ್ಮುವನೆ ಕೀರ್ತಿಸುತಿಪ್ಪುದು.
ಎನ್ನ ಕಾಯಕ ಷಟ್ಕರ್ಮಂಗಳನೆಲ್ಲ ಮರೆದು
ಶಿವಲಿಂಗಕೃತ್ಯವನೆ ಮಾಡುತಿಪ್ಪುದು ನೋಡಾ.
ಈ ಭಾಷೆ ಮನ ಮನತಾರ್ಕಣೆಯಾಗಿ ಹುಸಿಯಲ್ಲ.
ತನಗಿಲ್ಲದುದನುಂಟುಮಾಡಿಕೊಂಡು ಹುಸಿವನೇ ಶಿವಶರಣ?
ಅದಲ್ಲ ಬಿಡು.
ಎನ್ನ ಜಾಗರ ಸ್ವಪ್ನ ಸುಷುಪ್ತಿಯೊಳು
ಶಿವ ಶಿವಾ ಶಿವ ಶಿವಾಯೆಂದು ಭವಭಾರವ ನೀಗಿ
ನಾನು ಭಕ್ತನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./128
ಇನ್ನಿವಕ್ಕೆ ಅರ್ಪಿತಮುಖಂಗಳ ಹೇಳಿಹೆನು:
ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ
ಈ ಐದು ಲಿಂಗವೂ
ಆಚಾರಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗ ಆಚಾರಲಿಂಗ-
ಈ ಐದು ಲಿಂಗವು
ಗುರುಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಆಚಾರಲಿಂಗ ಗುರುಲಿಂಗ-
ಈ ಐದು ಲಿಂಗವು
ಶಿವಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ
ಗುರುಲಿಂಗ ಶಿವಲಿಂಗ-
ಈ ಐದು ಲಿಂಗವು
ಜಂಗಮಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಮಹಾಲಿಂಗ ಆಚಾರಲಿಂಗ ಗುರುಲಿಂಗ
ಶಿವಲಿಂಗ ಜಂಗಮಲಿಂಗ-
ಈ ಐದು ಲಿಂಗವು
ಪ್ರಸಾದಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ-
ಈ ಐದು ಲಿಂಗವು
ಮಹಾಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ.
ಹೀಂಗೆ ಅಂಗಮುಖಂಗಳಲ್ಲಿಯೂ
ಲಿಂಗವೇ ಮುಖವಾಗಿಪ್ಪ ಭೇದವನರಿಯಲುಬೇಕಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./129
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ:
ಪೃಥ್ವಿಯೇ ಅಂಗವಾದ ಭಕ್ತನು
ಸುಚಿತ್ತವೆಂಬ ಹಸ್ತದಿಂದ
ಆಚಾರಲಿಂಗಕ್ಕೆ
ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ
ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಜಲವೇ ಅಂಗವಾದ ಮಾಹೇಶ್ವರನು
ಸುಬುದ್ಧಿಯೆಂಬ ಹಸ್ತದಿಂದ
ಗುರುಲಿಂಗಕ್ಕೆ
ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ
ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಅಗ್ನಿಯೇ ಅಂಗವಾದ ಪ್ರಸಾದಿಯು
ನಿರಹಂಕಾರವೆಂಬ ಹಸ್ತದಿಂದ
ಶಿವಲಿಂಗಕ್ಕೆ
ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ
ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ವಾಯುವೇ ಅಂಗವಾದ ಪ್ರಾಣಲಿಂಗಿಯು
ಸುಮನವೆಂಬ ಹಸ್ತದಿಂದ
ಜಂಗಮಲಿಂಗಕ್ಕೆ
ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ
ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಆಕಾಶವೇ ಅಂಗವಾದ ಶರಣನು
ಸುಜ್ಞಾನವೆಂಬ ಹಸ್ತದಿಂದ
ಪ್ರಸಾದಲಿಂಗಕ್ಕೆ
ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ
ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಆತ್ಮನೇ ಅಂಗವಾದ ಐಕ್ಯನು
ಸದ್ಭಾವವೆಂಬ ಹಸ್ತದಿಂದ
ಮಹಾಲಿಂಗಕ್ಕೆ
ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ
ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಈ ಅರ್ಪಿತ ಅವಧಾನದ ಭೇದವನರಿದು
ಭೋಗಿಸುವ ಭೋಗವಲ್ಲವು
ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ;
ಅನಪಿರ್ತವೇ ಕರ್ಮದ ತವರುಮನೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ
ಮುಟ್ಟವು./130
ಇಪ್ಪತ್ತೆ ದುಧರೆಯೊಳಗೆ ಮುಪ್ಪುರವಿಪ್ಪುದ ಕಂಡೆನಯ್ಯ.
ಮುಪ್ಪುರದೊಳಗೆ ಸಪ್ತಸಾಗರ ಸುತ್ತಿ ಹರಿದು
ಸರ್ವರ ತಲೆಯನೆತ್ತಲೀಸದು ನೋಡ.
ಸಪ್ತಸಾಗರವನೊಂದು ಕಪ್ಪೆ ಕುಡಿದು
ಸಪ್ತಸಾಗರವರತು
ಕಪ್ಪೆ ಸತ್ತು, ಇಪ್ಪತ್ತೆ ದು ಧರೆಯಳಿದು
ಮುಪ್ಪುರ ಬೆಂದುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./131
ಇಬ್ಬರಿಗೊಬ್ಬ ಮಗ ಹುಟ್ಟಿ
ಅವನೊಬ್ಬನಿಗೈವರು ಹೆಂಡಿರು ನೋಡಾ.
ಸವತಿ ಮಚ್ಚರವ ಬಿಟ್ಟು ತಮ್ಮ ತಮ್ಮ ಭಾವದಲ್ಲಿ
ನೆರೆವರು ನೋಡಾ.
ಆಯ್ವರ ಕೂಟದಲ್ಲಿ ಮೈಮರೆದಿದ್ದುದ ಕಂಡು
ಮೇಲೊಬ್ಬ ಸತಿ ಬಂದು ನೆರೆಯಲು
ಐವರ ಮನವಾರ್ತೆ ಕೆಟ್ಟು
ಆಕೆಯ ಸಂಗದಿಂದ ಸೈವೆರಗಾಗಿ
ಸರ್ವ ನಿರ್ವಾಣಿಯಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./132
ಇವು ಮೂರೂ ನಿತ್ಯವಾದಡೆ,
ಮಾಯೆಯೂ ಆತ್ಮನು ಉತ್ಪತ್ತಿ ಸ್ಥಿತಿ
ಪ್ರಳಯಕ್ಕೊಳಗಾಗುತ್ತಿಪ್ಪವು ನೋಡಾ.
ಶಿವನೆ ಉತ್ಪತ್ತಿ ಸ್ಥಿತಿ ಪ್ರಳಯರಹಿತನಾಗಿ
ನಿತ್ಯನಾಗಿಪ್ಪನು ನೋಡಾ.
ಇದು ಕಾರಣ,
ಅನಿತ್ಯವಾದ ಪಶುಪಾಶಂಗಳ ನಿತ್ಯವೆಂಬುದು
ಅದು ಅಜ್ಞಾನ ನೋಡಾ.
ಶಿವಜ್ಞಾನೋದಯದಿಂದ ತಿಳಿದುನೋಡಿದರೆ,
ಶಿವತತ್ವವೊಂದೇ ನಿತ್ಯವು; ಉಳಿದವೆಲ್ಲವು ಅನಿತ್ಯ ಕಾಣ.
ಹೀಂಗೆಂದು ಕಂಡ ಕಾಣಿಕೆ ನೀನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./133
ಇಷ್ಟಲಿಂಗ ಪ್ರಾಣಲಿಂಗವೆನುತಿಪ್ಪರು.
ಇಷ್ಟಲಿಂಗ ಪ್ರಾಣಲಿಂಗದ ಸುದ್ಧಿಯನಾರುಬಲ್ಲರಯ್ಯ?
ಇಷ್ಟಲಿಂಗವನರಿದರೆ ಅನಿಷ್ಟ ಪರಿಹರವಾಗಿರಬೇಕು ನೋಡಾ.
ಪ್ರಾಣಲಿಂಗವನರಿದರೆ ಪ್ರಪಂಚು ನಾಸ್ತಿಯಾಗಿರಬೇಕು ನೋಡಾ.
ಇಷ್ಟವು ಪ್ರಾಣವು ಒಂದೆಯೆಂದರಿದು ಒಡವೆರಸಿದ ಬಳಿಕ
ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿವಿಧಾವಸ್ಥೆಯಲ್ಲಿ
ಲಿಂಗವಲ್ಲದೆ ಮತ್ತೇನು ತೋರಲಾಗದು ನೋಡಾ.
ಆ ಮಹಾತ್ಮನು ಸರ್ವಾಂಗಪ್ರಾಣಲಿಂಗಮೂರ್ತಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./134
ಇಷ್ಟಲಿಂಗಕ್ಕೆ ಕೊಡದೆ, ಪ್ರಾಣಲಿಂಗಾರ್ಪಿತವ ಮಾಡುವ
ಪ್ರಪಂಚಿಗಳಿರ,
ಅಂಗದ ಮೇಲಿದ್ದುದು ಲಿಂಗವಲ್ಲವೆ?
ಪ್ರಾಣವೆ ಲಿಂಗವಾದರೆ, ಆ ಇಷ್ಟಲಿಂಗವೇತಕ್ಕೆ? ತೆಗೆದೇಕೆ ಬಿಡಿರಿ?
ಆ ಲಿಂಗವನೆ ಬಿಡಬಾರದಂತೆ
ಆ ಲಿಂಗಾರ್ಪಿತವಿಲ್ಲದೆ ಉಣಬಹುದೆ?
ತಥಾಪಿ ಉಂಡಿರಿಯಾದರೆ,
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ.
ಶಿವಾರ್ಪಣವಿಲ್ಲದೆ ಬಾಯಿಗೆ ಬಂದಂತೆ ತಿಂಬ ಅನಾಮಿಕರ
ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./135
ಇಷ್ಟಲಿಂಗದ ಪೂಜೆಯಾವುದು,
ಪ್ರಾಣಲಿಂಗದ ಪೂಜೆಯಾವುದು,
ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ.
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು,
ಅದು ಇಷ್ಟಲಿಂಗದ ಪೂಜೆ.
ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ
ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು
ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ
ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.
ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ
ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ
ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.
ಇವು ಮೂರು ಲಿಂಗದ ಅರ್ಚನೆ.
ಮೂರು ಲಿಂಗದ ಉಪಚಾರ.
ಶಿವಾರ್ಥಿಗಳಾದ ವೀರಶೈವರುಗಳು ಮಾಡುವ
ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./136
ಇಷ್ಟಲಿಂಗದ ಮುಖವಾವುದು?
ಪ್ರಾಣಲಿಂಗದ ಮುಖವಾವುದು?
ಭಾವಲಿಂಗದ ಮುಖವಾವುದು ಎಂದರೆ ಹೇಳಿಹೆ ಕೇಳಿರಣ್ಣ:
ಇಷ್ಟಲಿಂಗದ ಮುಖವೈದು:
ಪ್ರಾಣ ವಾಯುಗಳ ಮುಖವನೆಯ್ದಿ ಪ್ರಾಣಲಿಂಗವೆನಿಸಿಕೊಂಡಿತ್ತು.
ಭಾವವನೆಯ್ದಿ ಭಾವಲಿಂಗವೆನಿಸಿಕೊಂಡಿತ್ತು.
ಒಂದೇ ಲಿಂಗ ತನುತ್ರಯಂಗಳಲ್ಲಿ
ಇಷ್ಟ ಪ್ರಾಣ ಭಾವ ರೂಪಕವಾಗಿಪ್ಪುದು.
ಜೀವತ್ರಯಂಗಳಲ್ಲಿ ಮಂತ್ರ ಜ್ಞಾನ ಧ್ಯಾನ ರೂಪಕವಾಗಿಪ್ಪುದು.
ಅವಸ್ಥಾನತ್ರಯಂಗಳಲ್ಲಿ ಸತ್ಕಿ ್ರಯಾಚರಣೆ
ತದ್ವಾಸನೆ ತಲ್ಲೀಯ್ಯವಾಗಿಪ್ಪುದು.
ಮಲತ್ರಯಂಗಳಲ್ಲಿ ಸ್ವಯ ಚರ ಪರ ರೂಪಕವಾಗಿಪ್ಪುದು.
ಈಷಣತ್ರಯಂಗಳಲ್ಲಿ ಲಿಂಗ ಪ್ರೇಮರತಿಗೆ ಸಕಲಸಾಧನಂಗಳಾಗಿ
ಮಾಯಾಭ್ರಾಂತಿಯನು ನಿಭ್ರಾಂತಿಯೆನಿಸಿ
ಶುದ್ಧ ಪ್ರಭಾ ಪರಿಪೂರ್ಣ ಲಿಂಗ ತಾನೆ
ಪ್ರಸನ್ನ ಪ್ರಸಾದ ರೂಪಕನಾಗಿರುತಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./137
ಇಷ್ಟಲಿಂಗವ ತೋರಿ
ನಾವು ನಿಷ್ಠೆವಾನರು, ನಾವು ಲಿಂಗಾಂಗಿಗಳೆಂದು
ಹೊಟ್ಟೆಯ ತುಂಬಿಕೊಳಬಹುದಲ್ಲದೆ
ಸರ್ವಾಂಗವನೂ ಲಿಂಗನಿಷ್ಠೆಯಲ್ಲಿ ಘಟ್ಟಿಗೊಳಿಸಬಾರದು
ಕಾಣಿರಣ್ಣ.
ಹೊಟ್ಟೆಯಾರ್ಥವುಳ್ಳವಂಗೆ ನಿಷ್ಠೆಯೆಲ್ಲಿಯದೊ?
ನಿಷ್ಠೆ ಹೀನರಿಗೆ ನೀವು ಕನಸಿನೊಳಗೂ ಇಲ್ಲ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./138
ಇಷ್ಟಲಿಂಗಾರ್ಪಣವಾವುದು,
ಪ್ರಾಣಲಿಂಗಾರ್ಪಣವಾವುದು,
ಭಾವಲಿಂಗಾರ್ಪಣವಾವುದುಯೆಂದರೆ ಹೇಳಿಯೆ ಕೇಳಿರಯ್ಯ.
ಇಷ್ಟಲಿಂಗಕ್ಕೆ ಶರೀರವೆ ಸಮರ್ಪಣ.
ಪ್ರಾಣಲಿಂಗಕ್ಕೆ ಮನವೆ ಸಮರ್ಪಣ.
ಭಾವಲಿಂಗಕ್ಕೆ ತೃಪ್ತಿಯೆ ಸಮರ್ಪಣ.
ಶರೀರವೆಂದರೆ ರೂಪು, ಮನವೆಂದರೆ ರುಚಿ,
ತೃಪ್ತಿಯೆಂದರೆ ಸಂತೋಷ.
ಈ ತೆರನನರಿದು ಲಿಂಗಕ್ಕೆ ಸಮರ್ಪಿಸಿ
ಪ್ರಸಾದವ ಭೋಗಿಸಬಲ್ಲಾತನೇ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯೆಂದು ಹೇಳಲ್ಪಟ್ಟಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./139
ಇಹಲೋಕದಲ್ಲಿ ಲಿಂಗವ ಪೂಜಿಸಿ
ಪರಲೋಕದ ಪದವಿಯ ಬಯಸುವನಲ್ಲ ನೋಡಾ.
ಇಹಪರವನೊಳಕೊಂಡ ಪರಿಪೂರ್ಣಲಿಂಗವು
ತನ್ನ ಸರ್ವಾಂಗದಲ್ಲಿ ಸನ್ನಿಹಿತವಾಗಿರಲು
ಆ ಲಿಂಗದಲ್ಲಿ ತನ್ನಂಗವ ಬೆರಸಿ
ಆ ಶುದ್ಧ ಪರಮಾತ್ಮಲಿಂಗವೇ ಗೂಡಾಗಿಪ್ಪ
ಲಿಂಗನಿಷ್ಠನ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./140
ಈ ಪಿಂಡಜ್ಞಾನದ ಕಳೆ,
ವಾಕ್ಕನು ಮೀರಿತ್ತು; ಮನಸ್ಸನು ಮೀರಿತ್ತು;
ಅಕ್ಷರಂಗಳ ಮೀರಿತ್ತು; ಜ್ಞಾನವನು ಮೀರಿ ತೋರುವ
ನಿರಂಜನ ಸೂಕ್ಷ್ಮಂವಸ್ತುವೆಂದು ಭಾವಿಸುವೆಂದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./141
ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ
ಲಿಂಗದೇಹಿಯೆನಿಸಿಕೊಂಡ ಜ್ಞಾನಿಪುರುಷನು
ತನ್ನ ಜ್ಞಾನಸ್ವರೂಪವನರಿಯಬೇಕಯ್ಯ.
ಆ ಜ್ಞಾನವೇ ಆರುತೆರನಾಗಿಪ್ಪುದು. ಅವಾವವೆಂದಡೆ:
ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ,
ಪ್ರಸಾದಲಿಂಗ, ಮಹಾಲಿಂಗವೆಂದು ಇಂತೀ ಆರುತೆರನಾಗಿಪ್ಪುದು.
ಈ ಷಡ್ವಿಧವ್ರತವನರಿದು ಆಚರಿಸುವ
ಕ್ರಮವೆಂತುಟಯ್ಯಯೆಂದಡೆ:
ಆಧಾರಚಕ್ರಸ್ಥಾನದಲ್ಲಿ ನಾಲ್ಕೆಸಳಕಮಲದ
ವ ಶ ಷ ಸಯೆಂಬ ನಾಲ್ಕು ಬೀಜಾಕ್ಷರದ
ಪೃಥ್ವಿತತ್ವದ ಕೆಂಪುವರ್ಣದ ನೆಲೆಯನರಿಯಬೇಕಯ್ಯ.
ಸ್ವಾಧಿಷ್ಠಾನಚಕ್ರದಲ್ಲಿ ಆರೆಸಳಕಮಲದ
ಬ ಭ ಮ ಯ ರ ಲಯೆಂಬ ಆರು ಬೀಜಾಕ್ಷರ ಯುಕ್ತವಾದ
ಅಪ್ಪುತತ್ವದ ನೀಲವರ್ಣದ ನೆಲೆಯನರಿಯಬೇಕಯ್ಯ.
ಮಣಿಪೂರಕಚಕ್ರಸ್ಥಾನದಲ್ಲಿ ಹತ್ತೆಸಳಕಮಲದ
ಡ ಢ ಣ ತ ಥ ದ ಧ ನ ಪ ಫ ಯೆಂಬ ಹತ್ತು ಬೀಜಾಕ್ಷರ
ಸ್ವಾಯತವಾಗಿಪ್ಪ
ಅಗ್ನಿತತ್ವದ ಕುಂಕುಮವರ್ಣದ ನೆಲೆಯನರಿಯಬೇಕಯ್ಯ.
ಅನಾಹತಚತ್ರಸ್ಥಾನದಲ್ಲಿ ಹನ್ನೆರಡೆಸಳಕಮಲದ
ಕ ಖ ಗ ಘ ಙ ಚ ಛ ಜ ರುು ಞ ಟ ಠಯೆಂಬ ಹನ್ನೆರಡು
ಬೀಜಾಕ್ಷರಯುಕ್ತವಾಗಿರ್ಪ
ವಾಯುತತ್ವದ ಶ್ವೇತವರ್ಣದ ನೆಲೆಯನರಿಯಬೇಕಯ್ಯ.
ವಿಶುದ್ಧಿಚಕ್ರಸ್ಥಾನದಲ್ಲಿ ಹದಿನಾರೆಸಳಕಮಲದ
ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ
ಎಂಬ ಹದಿನಾರು ಬೀಜಾಕ್ಷರ ಸ್ವಾಯತವಾಗಿಪ್ಪ
ಆಕಾಶತತ್ವದ ಸ್ಫಟಿಕವರ್ಣದ ನೆಲೆಯನರಿಯಬೇಕಯ್ಯ.
ಆಜ್ಞಾಚಕ್ರಸ್ಥಾನದಲ್ಲಿ ಎರಡೆಸಳಕಮಲದ
ಹಂ ಸ ಯೆಂಬ ಎರಡು ಬೀಜಾಕ್ಷರಯುಕ್ತವಾಗಿಪ್ಪ
ಆತ್ಮತತ್ವದ ಮಾಣಿಕ್ಯವರ್ಣದ ನೆಲೆಯನರಿಯಬೇಕಯ್ಯ.
ಇವೆಲ್ಲವಕ್ಕೂ ಮೇಲಣತತ್ವವೆನಿಸುವ ಬ್ರಹ್ಮರಂದ್ರದಲ್ಲಿ
ಸಾವಿರೆಸಳಕಮಲದ, ಸಾವಿರ ಬೀಜಾಕ್ಷರ
ಸರ್ವತೋಮುಖವಾಗಿಪ್ಪ ಭೇದವನರಿಯಬೇಕಯ್ಯ.
ಇನ್ನೀ ಚಕ್ರಂಗಳಿಗೆ ಲಿಂಗಸ್ವಾಯತಯುಕ್ತವಾಗಿಪ್ಪ
ಭೇದವ ಹೇಳಿಹೆನು:
ಆಧಾರಚಕ್ರದ ನಾಲ್ಕೆಸಳಕಮಲದ ಮಧ್ಯದಲ್ಲಿ
ಆಚಾರಲಿಂಗವ ಸ್ವಾಯತವ ಮಾಡಿ
ಸ್ವಾಧಿಷ್ಠಾನಚಕ್ರದ ಆರೆಸಳಕಮಲದ ಮಧ್ಯದಲ್ಲಿ
ಗುರುಲಿಂಗವ ಮೂರ್ತಿಗೊಳಿಸಿ
ಮಣಿಪೂರಕಚಕ್ರದ ಹತ್ತೆಸಳಕಮಲದ ಮಧ್ಯದಲ್ಲಿ
ಶಿವಲಿಂಗವ ಸಂಬಂಧಿಸಿ
ಅನಾಹತಚಕ್ರದ ಹನ್ನೆರಡೆಸಳಕಮಲದ ಮಧ್ಯದಲ್ಲಿ
ಪ್ರಸಾದಲಿಂಗವ ಮೂರ್ತಿಗೊಳಿಸಿ
ಆಜ್ಞಾಚಕ್ರದ ಎರಡೆಸಳಕಮಲದ ಮಧ್ಯದಲ್ಲಿ
ಮಹಾಲಿಂಗವ ನೆಲೆಗೊಳಿಸಿ
ಪ್ರಾಣದಲ್ಲಿ ಆಚಾರಲಿಂಗವ ಸಂಬಂಧಿಸಿ
ಜಿಹ್ವೆಯಲ್ಲಿ ಗುರುಲಿಂಗವ ಸ್ವಾಯತವಮಾಡಿ
ನೇತ್ರದಲ್ಲಿ ಶಿವಲಿಂಗವ ಮೂರ್ತಿಗೊಳಿಸಿ
ತ್ವಕ್ಕಿನಲ್ಲಿ ಜಂಗಮಲಿಂಗವ ನೆಲೆಗೊಳಿಸಿ
ಶ್ರೋತ್ರದಲ್ಲಿ ಪ್ರಸಾದಲಿಂಗವ ಸಂಬಂಧಿಸಿ
ಭಾವದಲ್ಲಿ ಮಹಾಲಿಂಗವ ನೆಲೆಗೊಳಿಸಿ
ಬ್ರಹ್ಮರಂಧ್ರದಲ್ಲಿರ್ಪ ಪರಿಪೂರ್ಣಲಿಂಗವು
ಸರ್ವಾಂಗದಲ್ಲಿಯು ಸ್ವಾಯತವಾಗಲು
ಅಂಗಸಂಗಗಳೆಲ್ಲವು ಲಿಂಗಸಂಗಗಳಾಗಿ
ಲಿಂಗ ದೃಕ್ಕೇ ನಿರಂತರ ಪ್ರಕಾಶಿಸುತಿಪ್ಪುದಯ್ಯ.
ಲಿಂಗಪ್ರಭೆಯೊಳಗೆ ಶಿವಶಿವಾಯೆನುತಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./142
ಈ ಲೋಕದಲ್ಲಿ ಸತ್ಕಿ ್ರಯನೆ ಪ್ರತಿಷ್ಠೆಯ ಮಾಡುತ್ತಿಪ್ಪರು.
ಗೋವಿನ ದೇಹದಲ್ಲಿ ಘೃತವಿಪ್ಪುದು.
ಆ ಗೋವಿಂಗೆ ಪುಷ್ಟಿಯಾಗಲರಿಯದು.
ಆ ಗೋವ ಬೋಧಿಸಿ
ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು
ಆ ನವನೀತದೆ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ.
ಈ ಪ್ರಕಾರದಲ್ಲಿ ಲಿಂಗೋಪಚಾರವ ಮಾಡಲಾಗಿ ಜ್ಞಾನವಹುದು.
ಜ್ಞಾನವಾಗಲಿಕ್ಕೆ ಸಮ್ಯಜ್ಞಾನವಹುದು.
ಸಮ್ಯಜ್ಞಾನವಾಗಲಾಗಿ ಪ್ರಾಣವೆ ಲಿಂಗವಪ್ಪುದು ತಪ್ಪದು.
ಸಂದೇಹವಿಲ್ಲವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./143
ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ
ಮಾತಿನ ಮಮಕಾರಕ್ಕೆ
ಆಗಮವ ಬಲ್ಲೆವೆಂದು ಕೂಗಿಡುವರು ನೋಡಾ.
ಆಗಮವತಿರಹಸ್ಯ.
ಆಗಮ ಹೇಗಿಹುದೆಂಬುದ ಲೋಗರು ನೀವೆತ್ತ ಬಲ್ಲಿರಿ?
ಆಗಮಮೂರ್ತಿ ಅನುಭಾವಿ ಬಲ್ಲ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನಿಮ್ಮ ಶರಣರು ಬಲ್ಲರು./144
ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ
ಮೃತ್ಯುಲೋಕವನೆಯ್ದಲು
ಆ ಶಕ್ತಿಯರ ಕೃತ್ಯಾಕೃತ್ಯಂಗಳು ಕೆಟ್ಟು
ಆ ಲೋಕವೆಲ್ಲಾ ಭಕ್ತಿ ಸಾಮ್ರಾಜ್ಯವಾಯಿತ್ತು ನೋಡಾ.
ಶಕ್ತಿ ಭಕ್ತಿಯೆಂಬ ಸತ್ಕ ೃತ್ಯ ನಷ್ಟವಾಗಿ
ಮುಕ್ತ್ಯಂಗನೆಯ ಮುಖವ ನೋಡುತ್ತ ನೋಡುತ್ತ
ಸಚ್ಚಿದಾನಂದೈಕ್ಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./145
ಉದಯ ಮುಖದ ಜ್ಯೋತಿಯಿಂ
ಅಧೋಮುಖಕಮಲ ಊಧ್ರ್ವಮುಖವಾಗಿ
ಷಡುಕಮಲಾಂಬುಜಂಗಳು ಉದಯವಾಗಿ
ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ.
ಅಂಬುಜಕಮಲ ಆರರಿಂದ ಸ್ವಯಂಭುವ
ಪೂಜಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./146
ಉದಯ ಮುಖದ ಪ್ರಸಾದ ಸದಮಲದ ಬೆಳಗೇ
ಸದ್ರೂಪವಾಗಿ ಸರ್ವಾಂಗವನೊಳಕೊಂಡಿತ್ತು ನೋಡಾ.
ಆ ಪ್ರಸಾದ ಸರ್ವಾಂಗವನೊಳಕೊಂಡು ಮೂರ್ತಿಯಾಗಿ
ಆ ಪ್ರಸಾದವೆ ತದಾಕಾರವಾಗಿ ನಿಲ್ಲಲು,
ಆ ಪ್ರಸಾದದೊಳಗೆ ಆ ಅಂಗ ಬಯಲಾಯಿತ್ತು ನೋಡಾ.
ಮಧ್ಯಾಹ್ನ ಮುಖದ ಪ್ರಸಾದ
ಶುದ್ಧ ಸ್ವಯಂಜ್ಯೋತಿ ಚಿದ್ರೂಪವಾಗಿ ಮನವನೊಳಕೊಂಡಿತ್ತು.
ಆ ಪ್ರಸಾದದಲ್ಲಿ ಆ ಮನ ಬಯಲಾಯಿತ್ತು ನೋಡಾ.
ಅಸ್ತಮಯ ಮುಖದ ಪ್ರಸಾದ ಪ್ರಸನ್ನಿಕೆ
ಶತಕೋಟಿ ಸೋಮ ಸೂರ್ಯರ ಉದಯದಂತೆ
ಆನಂದ ಸ್ವರೂಪವಾಗಿ ಪ್ರಜ್ವಲಿಸುತ್ತಿದೆ ನೋಡಾ.
ಆ ಪ್ರಸಾದವೆನ್ನ ಭಾವವ ನುಂಗಿತ್ತಾಗಿ,
ಭಾವ ಬಯಲಾಯಿತ್ತು ನೋಡಾ.
ಭಾವ ಬಯಲಾಯಿತ್ತಾಗಿ,
ಆ ಪ್ರಸಾದ ನಿರ್ಭಾವ ಪ್ರಸಾದತ್ವನೆಯ್ದಿ,
ನಿರ್ವಯಲಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./147
ಉದಯದ ಪೂಜೆ ಉತ್ಪತ್ತಿಗೆ ಬೀಜ.
ಮಧ್ಯಾಹ್ನದ ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ.
ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜ.
ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು
ಸದಾ ಸನ್ನಹಿತವಾಗಿ ಮಾಡುವ ಪೂಜೆ
ಉತ್ಪತ್ತಿ ಸ್ಥಿತಿ ಲಯಂಗಳ ಮೀರಿದ ನಿತ್ಯ ನಿರ್ಮಲ ಪೂಜೆ ಕಾಣಾ.
ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./148
ಉದಯಮುಖದ ಜ್ಯೋತಿ ಶರೀರತ್ರಯದ ನುಂಗಿತ್ತು.
ಮಧ್ಯಾಹ್ನಮುಖದ ಜ್ಯೋತಿ ಮಲತ್ರಯಂಗಳ ನುಂಗಿತ್ತು.
ಅಸ್ತಮಯಮುಖದ ಜ್ಯೋತಿ ಅಹಂಕಾರತ್ರಯಂಗಳ ನುಂಗಿತ್ತು.
ಈ ಮೂರು ಪ್ರಕಾರದ ಜ್ಯೋತಿಯ
ಅಖಂಡ ಜ್ಞಾನಜ್ಯೋತಿ ನುಂಗಿತ್ತು.
ಅಖಂಡ ಜ್ಞಾನಜ್ಯೋತಿ ಅವಿರಳಬ್ರಹ್ಮವನೆಯಿದಿ ನುಂಗಿ
ಅಲ್ಲಿಯೆ ಅಡಗಿತ್ತು.
ಅದು ಅಡಗಿದಲ್ಲಿ ತಾನಡಗಿದಾತನೇ ಶಿವಯೋಗಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./149
ಉದ್ದದ ಮೇಲಣ ಕಪಿ, ಬದ್ಧರಸವ ಕರೆಯಲು,
ಬದ್ಧರಸವ ಕುಡಿದು ಸಿದ್ಧರೆಲ್ಲಾ ಪ್ರಳಯವಾದರು ನೋಡಾ.
ಉದ್ದದ ಮೇಲಣ ಕಪಿಗೆ,
ಸಿದ್ಧರಸವನುಣಿಸಬಲ್ಲಾತನಲ್ಲದೆ, ಶಿವಯೋಗಿಯಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./150
ಉರಿಗೆ ತೋರಿದ ಬೆಣ್ಣೆ ಕರುಗವಂತೆ,
ಅಸಿಯ ಜವ್ವನೆಯರ ಕಂಡು ವಿಷಯಾತುರರಾಗಿ
ಕುಸಿವುತ್ತಿಪ್ಪರು ನೋಡಾ ಹಿರಿಯರು.
ಇದು ಹುಸಿಯೆಂದರಿದು
ನಿಮ್ಮ ಶರಣರು ಮನದ ಕೊನೆಯ ಮೊನೆಯಲ್ಲಿ
ಶಶಿಧರನ ಸಾಹಿತ್ಯವ ಮಾಡಬಲ್ಲರಾಗಿ,
ಸಂಸಾರವಿಷಯದೋಷ ಪರಿಹರವಪ್ಪುದು ತಪ್ಪುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./151
ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ
ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯಾ.
ಉರಿಯನುಂಡು, ಶರೀರವಿಲ್ಲದಾಕೆಯ ನೆರೆದು
ಪರಮಾಮೃತವ ಸೇವಿಸಿ
ಪರಮ ಪರಿಣಾಮದೊಳಗೋಲಾಡಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./152
ಊಟದ ದೆಸೆಯಿಂದ ಹೆಚ್ಚಿ
ಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು,
ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ.
ಈ ಲೋಕದ ಮಾನವರು ಸುಖಿಗಳಾದರೆ
ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ?
ಮಾಯಾ ಮೋಹವೆಂಬ ಮೊಲನಾಗರು
ಹಿಡಿದು ಬಿಡದು ನೋಡಾ.
ಸುಖಿ ಸುಖಿಗಳೆಂಬ ಈ ಲೋಕದ
ಕಾಕುವಿಚಾರವನೇನೆಂಬೆನಯ್ಯ?.
ಭಕ್ತಿಯೇ ರೂಪು, ನಿತ್ಯವೇ ಲಾವಣ್ಯ, ಮುಕ್ತ್ಯಂಗನೆಯ ಕೂಡಿ
ಸುಖಿಸುವುದೇ ಸುಖ.
ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ.
ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./153
ಊರ ಮಧ್ಯದಲ್ಲಿ ಹುಟ್ಟಿದ ಕಿಚ್ಚು, ಮೇರುವೆಯ ಸುಟ್ಟಿತ್ತು
ನೋಡಾ.
ಕೇರಿಕೇರಿಯಲ್ಲಿ ಬೀದಿವರಿದು, ಅರಣ್ಯವನಾವರ್ತಿಸಿತ್ತು ನೋಡಾ.
ಅರಣ್ಯದೊಳಗಿರ್ದ ಅಂಗನೆಯ ಮುಡಿ ಬೆಂದು,
ಊರ ಹತ್ತಿರ ಕಿಚ್ಚು ಉಮಾಪತಿಯನಪ್ಪಲು
ನಾರಿಪುರುಷರಳಿದು ಮಾರಾರಿಯೊಬ್ಬನೆ ಅದನು ನೋಡಿರೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./154
ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ,
ಈರೇಳುಲೋಕವ ನುಂಗಿ ಊರೆಲ್ಲವ ಸುಟ್ಟಿತ್ತು ನೋಡಾ.
ಊರ ಸುಟ್ಟ ಉರಿಗಣ್ಣು ಅದು ಆರಿಗೂ ಕಾಣಬಾರದು.
ಅದು ಮಾರಾರಿ ತಾನೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./155
ಊರ ಹೊಲನ ಮೇದ ಬಸವ, ಕಾಡುಗಟ್ಟೆಯ ನೀರ ಕುಡಿದು
ಕಡೆಯಲ್ಲಿದ್ದ ಪಶುವಿನ ಮಡಿಲ ಮೂಸಿ,
ಉಚ್ಚಿಯ ಕುಡಿದು ಹಲ್ಲುಗಿರಿದು ಕ್ರೀಡಿಸುವಂತೆ
ಹಸಿವಿನಿಚ್ಚೆಗೆ ನಾಡ ಅಶನವ ತಿಂದು,
ವ್ಯಸನದಿಚ್ಛೆಗೆ ಯೋನಿಕಟ್ಟೆಯನರಿಸಿಕೊಂಡು ಹೋಗಿ,
ಅಶುದ್ಧದಲ್ಲಿ ಬಿದ್ದು ಹೊರಳುವ ಹಂದಿಯಂತೆ,
ಮಾಯಾಮೋಹದ ವಿರಹದೊಳಗೆ
ಅಳುತ್ತ ಮುಳುಗುತ್ತ ಇಪ್ಪವರು
ದೇವನನೆತ್ತ ಬಲ್ಲರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./156
ಊರನಾಶ್ರಯಿಸುವನೆ ಉಪಜೀವಿಗಳಂತೆ?
ಕಾಡನಾಶ್ರಯಿಸುವನೆ ಕರಡಿಯಂತೆ?
ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ.
ಊರಾವುದು ಕಾಡುವುದು ಎಂದರಿಯದೆ
ಕಳವಳಿಸುತ್ತಿಪ್ಪರು ನೋಡಾ.
ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ.
ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ
ಸಕಲ ಕರಣಂಗಳು ಕಾಣಮರುಳೆ.
ಕಾಯದ ಕರಣಂಗಳಿಗೆ ವಶಗತವಾಗಿರ್ದು
ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ?
ಇದುಕಾರಣ ನಿಮ್ಮ ಶರಣರು
ಕಾಯವನು ಜೀವವನು ಕರಣವನು
ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ
ಕಾಯವನು ಜೀವವನು ಕರಣವನು ಹೊದ್ದದೆ
ಮಹಾಘನಲಿಂಗಪದದೊಳಗಿಪ್ಪರಯ್ಯ
ಪ್ರಾಣಲಿಂಗ ಸಂಬಂಧಿಗಳು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./157
ಊರಿಗೆ ಹೋಗುವ ದಾರಿಯೊಳಗೊಬ್ಬ
ಉಲುಗಿರಿ ಮನೆಯ ಮಾಡಿಕೊಂಡು,
ದಾರಿಗೊಂಡು ಹೋಗುವ ಅಯ್ಯಗಳ ಬಾರಿಭೋ ಬಾರಿಭೋ
ಎನುತ್ತೆ ದಾಳೆ ನೋಡಾ.
ನಾರಿಯ ವಿಲಾಸವ ನೋಡಿ
ದಾರಿಯ ತಪ್ಪಿದರು ನೋಡಾ ಅಯ್ಯಗಳು.
ನಾರಿಯ ಕೊಂದಲ್ಲದೆ ದಾರಿಯ ಕಾಣಬಾರದು.
ನಾರಿಯ ಕೊಂದು ದಾರಿಹಿಡಿದು ನಡದು
ಊರ ಹೊಕ್ಕಲ್ಲದೆ ಉಪಟಳವಡಗದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./158
ಊರಿಗೆ ಹೋಹ ದಾರಿಯಲ್ಲಿ
ಒಂದು ಕೋಡಗ ಕುಳಿತಿಪ್ಪುದ ಕಂಡೆನಯ್ಯ.
ಊರಿಗೆ ಹೋಹ ಅಣ್ಣಗಳ ಏಡಿಸಿ ಕಾಡುತ್ತಿದೆ ನೋಡಾ.
ಕೋಡಗನ ಹಿಡಿದು ಕೊಡತಕ್ಕೆ ಹಾಕಿಹೆನೆಂದು ಹೋದರೆ,
ಊರನೆಲ್ಲ ನುಂಗಿತ್ತು.
ಆರಿಗೂ ಕಾಣಿಸದಿದೆ ಇದೇನು ಸೋಜಿಗವೋ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./159
ಊರೊಳಗೆ ಅನೇಕ ಜ್ಯೋತಿಯ ಕಂಡೆ.
ಬಾಗಿಲೊಳಗೆ ನವರತ್ನವ ಕಂಡೆ.
ಮೇಲಣ ಮಾಣಿಕಕ್ಕೆ ಬೆಲೆಯಿಡಲಾರಳವಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./160
ಊರೊಳಗೆ ಆರುಮಂಟಪವ ಕಂಡೆನು.
ಐವತ್ತೆರಡು ಎಸಳಿಂದ ರಚಿಸುತ್ತಿಪ್ಪುದಯ್ಯ.
ಎಸಳೆಸಳು ತಪ್ಪದೆ ಅಕ್ಷರ ಲಿಪಿಯನೇ ಕಂಡು
ಅಕ್ಷರ ಲಿಪಿಯ ಹೆಸರ ಕಲ್ಪಿತ ಲಿಪಿಯನೇ ತೊಡೆದು
ನಿರ್ವಿಕಲ್ಪ ನಿತ್ಯಾತ್ಮಕನಾದೆನಯ್ಯ.
ಆರು ಮಂಟಪವನಳಿದು
ಮೂರು ಕೋಣೆಯ ಕೆಡಿಸಿ
ಸಾವಿರೆಸಳ ಮಂಟಪವ ಹೊಗಲಾಗಿ
ಸಾವು ತಪ್ಪುವುದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./161
ಊರೊಳಗೆ ಉದಕತುಂಬಿ ಬಾಗಿಲೆಲ್ಲ ಕೆಸರಾದವು ನೋಡಾ.
ಮನೆಯೊಳಗೆ ಕಸ ಹೆಚ್ಚಿ, ಶಶಿಯ ನೆಳಲೀಯದು ನೋಡಿರೆ.
ಊರೊಳಗಣ ಉದಕವ ಹೊರಡಿಸಿ,
ಬಾಗಿಲೊಳಗಣ ಕೆಸರ ಸುಟ್ಟು,
ಮನೆಯೊಳಗಣ ಕಸವ ತೆಗೆದು,
ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./162
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು,
ಬಲದ ಕೈಯಲ್ಲಿ ಮುದ್ದೆಯ ಮಾಡಿ,
`ಉಣ್ಣು ಉಣ್ಣೆಂ’ದು ಊಡಿಸಿದರೆ ಒಲ್ಲದು ಕಾಣಿರಯ್ಯ.
ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ.
ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು,
ದೇವರನೇಕೆ ದೂರುವಿರಯ್ಯ?
ದೇವರು ಹೀಂಗೆ ಒಲ್ಲದು.
ಉಂಬ ಕ್ರಮವ ಹೇಳಿಹೆ ಕೇಳಿರಯ್ಯ.
ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ
ಸವಿದು ಪರಿಣಾಮಿಸುವುದಲ್ಲ.
ಸವಿದು ಪರಿಣಾಮಿಸುವುದೆಲ್ಲಿಯೆಂದರೆ;
ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ
ಷಡುರಸ್ನಾನದ ರುಚಿಯ
ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ
ಸವಿದು ಪರಿಣಾಮಿಸುವದಯ್ಯ.
ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ
ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ.
ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ
ಷಡ್ವಿಧರೂಪಿನ ಭೋಗಂಗಳ
ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ.
ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ
ಷಡ್ವಿಧ ಸ್ಪರ್ಶನದ ಭೋಗಂಗಳ
ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ.
ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ
ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ
ಪರಿಣಾಮಿಸುವದು ಲಿಂಗ ತಾನೆ ನೋಡಾ.
ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ
ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ,
ಪರಿಣಾಮಿಸುವಾತನು ಲಿಂಗದೇವನೆಂದರಿದು,
ಸರ್ವೆಂದ್ರಿಯಮುಖದಲ್ಲಿ ಬಂದ ಸರ್ವತೋಮುಖಪದಾರ್ಥವ,
ಸರ್ವತೋಮುಖಲಿಂಗಕ್ಕೆ ಅರ್ಪಿಸಿ,
ಸರ್ವಾಂಗವೆಲ್ಲವು ಬಾಯಾಗಿ,
ಸರ್ವತೋಮುಖಪ್ರಸಾದವ ಕೊಂಡು,
ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./163
ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲದ ಕಾರಣ,
ಅಡಿಯಿಲ್ಲದ ಮುಡಿಯಿಲ್ಲದ ಒಡಲಿಲ್ಲದ,
ಹಿಡಿಯಲಿಲ್ಲದ, ಬಿಡಲಿಲ್ಲದ, ನೋಡಲಿಲ್ಲದ, ನುಡಿಸಲಿಲ್ಲದ,
ಕೂಡಲಿಲ್ಲದ ಅಪ್ರತಿಮ ನೀನಾಗಿ,
ಅರುಹಿಲ್ಲದ, ಮರಹಿಲ್ಲದ, ಮಹಾಮಹಿಮ ನೀನಾದಕಾರಣ,
ನಿನ್ನ, ನಿರವಯಲಿಂಗವೆಂದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./164
ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ.
ಎನಗೆ ಜೀವವುಂಟೆಂಬರು ಎನಗೆ ಜೀವ ಮುನ್ನವೆ ಇಲ್ಲವಯ್ಯ.
ಎನಗೆ ಭಾವವುಂಟೆಂಬರು ಎನಗೆ ಭಾವ ಮುನ್ನವೆ ಇಲ್ಲವಯ್ಯ.
ಅದೇನು ಕಾರಣವೆಂದಡೆ:
ಎನ್ನ ಕಾಯ ಜೀವ ಪ್ರಾಣನಾಯಕ ಪರಮೇಶ್ವರ ನೀನಾದ ಕಾರಣ.
ಎನಗಿನ್ನಾವ ಭಯವೂ ಇಲ್ಲ ನೋಡಾ.
ನಾನು ನಿರ್ಭಯನಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./165
ಎನ್ನ ಕಾಯ ಕಾಮಾರಿಯಲ್ಲಿ ಸಾವಧಾನವಾಯಿತ್ತಾಗಿ
ಕಾಯವೆನಗಿಲ್ಲ ನೋಡಾ.
ಎನ್ನ ಮನ ಮಾಹೇಶ್ವರನಲ್ಲಿ ಸಾವಧಾನವಾಯಿತ್ತಾಗಿ
ಮಾಯಾ ಪ್ರಪಂಚು ಹೆರೆದೆಗೆದೋಡಿತ್ತು ನೋಡಾ
ಎನ್ನ ಪ್ರಾಣ ಪರಮೇಶ್ವರನಲ್ಲಿ ಸಾವಧಾನವಾಯಿತ್ತಾಗಿ
ಪ್ರಾಣಾದಿ ವಾಯುಗಳ ಪ್ರಪಂಚಿನ ಗಮನಾಗಮನ
ನಾಸ್ತಿಯಾಯಿತ್ತು ನೋಡಾ.
ಎನ್ನ ಭಾವ ಭವಹರನಲ್ಲಿ ಸಾವಧಾನವಾಯಿತ್ತಾಗಿ
ಭಾವಭಾವಭ್ರಮೆಗಳು ಅಳಿದು ಹೋದುವು ನೋಡಾ.
ಭಾವ ನಿಭಾರ್ವವಾಗಿ ಬ್ರಹ್ಮವ ಮುಟ್ಟಿತ್ತಾಗಿ
ನಿನ್ನಯ ಪ್ರಸಾದ ಎನ್ನನೊಳಕೊಂಡಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./166
ಎನ್ನ ತನುವಿಕಾರದ ಭಯ, ಎನ್ನ ಮನವಿಕಾರದ ಭಯ,
ತನುಮನವನಂಡಲೆವ ಧನವಿಕಾರದ ಭಯ ನೋಡಾ.
ಹಗಲು ಹಸಿವಿನ ಚಿಂತೆ, ಇರುಳು ವಿಷಯದ ಚಿಂತೆ;
ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ
ಸದಾ ಶಿವನ ಧ್ಯಾನತತ್ಪರನಾಗಿ
ಶಿವತತ್ವವಿಚಾರದೊಳಗೆ ಇರಲೊಲ್ಲೆನು ನೋಡಾ.
ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ
ಸ್ವಾನನ ವಿಧಿಯಂತಾಯಿತ್ತಯ್ಯ.
ಅಮೃತಮಯ ಲಿಂಗಸಂಗವನೊಲ್ಲದೆ
ಸಂಸಾರಸಂಗಕ್ಕೆ ಮಯ್ಯಾನುವ ಮರುಳುಮನವೆ
ನಿನ್ನ ನಾನೇನೆಂಬೆನಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./167
ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗದು
ಶಿವಲಿಂಗಮೂರ್ತಿಯ ಮಾಡಿ
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು.
ಆ ಲಿಂಗವು ಸರ್ವಾವಸ್ಥೆಯಲ್ಲಿಯು
ಅಂಗವ ಬಿಟ್ಟು ಅಗಲಲಾಗದುಯೆಂದು
ನಿರೂಪಿಸಿದನಯ್ಯ ಶ್ರೀಗುರು.
ಇದು ಕಾರಣ,
ಅಂಗವ ಬಿಟ್ಟು ಲಿಂಗ ನಿಮಿಷಾರ್ಧವಗಲಿದಡೆ,
ನಾಯಕನರಕ ತಪ್ಪದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./168
ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ.
ಪಂಚಭೂತದ ಪ್ರಕೃತಿಕಾಯವ ಕಳೆದು
ಪ್ರಸಾದಾಕಾಯವ ಮಾಡಿದಿರಿಯಯ್ಯ.
ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ.
ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ.
ಅಂಗವಿಷಯಭ್ರಮೆಯ ಕಳೆದು
ಲಿಂಗವಿಷಯಭ್ರಾಂತನ ಮಾಡಿದಿರಿಯಯ್ಯ.
ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ.
ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ
ಮಾಡಿದಿರಿಯಯ್ಯ.
ಕುಲಸೂತಕ ಛಲಸೂತಕ ತನುಸೂತಕ ಮನಸೂತಕ
ನೆನಹುಸೂತಕ ಭಾವಸೂತಕವೆಂಬ
ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ
ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./169
ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು
ನಿಮ್ಮ ನೆನಯಲೊಲ್ಲದು ನೋಡ.
ಎನ್ನ ಕಾಯ ನಿಮ್ಮ ಮುಟ್ಟದೆ
ಸಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ.
ಎನ್ನ ಪ್ರಾಣ ನಿಮ್ಮ ಮುಟ್ಟದೆ
ಪ್ರಪಂಚೆನೊಳಗೇ ಮುಳುಗುತ್ತಿಪ್ಪುದು ನೋಡ.
ಎನ್ನ ಭಾವ ನಿಮ್ಮ ಭಾವಿಸಿ ಭ್ರಮೆಯಳಿಯದೆ,
ಸಂಸಾರ ಭಾವನೆ ಸಂಬಂಧವಾಗಿ ಮುಂದುಗಾಣದೆ,
ಮೋಕ್ಷಹೀನನಾಗಿರ್ದೆನಯ್ಯ.
ಸುರಚಾಪದಂತೆ ತೋರಿ ಅಡಗುವ ಅನಿತ್ಯ ತನುವನು
ನಿತ್ಯವೆಂದು, ನಿರುತವೆಂದು ವೃಥಾ ಹೋಯಿತ್ತು ಎನ್ನ ವಿವೇಕ.
ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ.
ಎನ್ನ ಅವಿವೇಕವ ಕಳೆದು, ಶಿವತತ್ವವಿವೇಕವನಿತ್ತು ಕರುಣಿಸಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./170
ಎನ್ನ ರೂಹೆ ನಿನ್ನ ರೂಹಯ್ಯಾ; ನಿನ್ನ ರೂಹೆ ಎನ್ನ ರೂಹಯ್ಯ.
ಎನ್ನ ಜೀವನವೆ ನಿನ್ನ ಜೀವನವಯ್ಯ;
ನಿನ್ನ ಜೀವನವೆ ಎನ್ನ ಜೀವನವಯ್ಯ.
ಎನ್ನ ಸುಖವೆ ನಿನ್ನ ಸುಖವಯ್ಯ.
ನಿನ್ನ ಸುಖವೆ ಎನ್ನ ಸುಖವಯ್ಯ.
ನಿನಗೆ ಎನಗೆ ಸಂದು ಸಂಶಯವಿಲ್ಲವಯ್ಯ.
ಸಂದುಂಟೆಯ ನುಡಿವುದೆಲ್ಲವು ಬಂಧನದ ನುಡಿ ಕಾಣಿರೋ.
ಆದಿಯಲು ಸಂದಿಲ್ಲ. ಅನಾದಿಯಲು ಸಂದಿಲ್ಲ.
ಎಂದೆಂದೂ ಸಂದಿಲ್ಲ ಶರಣ ಲಿಂಗಕ್ಕೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./171
ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು
ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು.
ಎನ್ನ ಪೂರಕವೇ [`ಓಂ ಓಂ ಓಂ’]ಯೆಂಬ ಪ್ರಣವ
ಸ್ವರೂಪವಾಗಿಪ್ಪುದು ನೋಡಾ.
ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ
ನಮಃ ಶಿವಾಯ’ ಯೆನುತಿಪ್ಪುದು ನೋಡಾ.
ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ
ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ.
“ಮಂತ್ರಮಧ್ಯೇ ಭವೇಲ್ಲಿಂಗಂ| ಲಿಂಗಮಧ್ಯೇ ಭವೇನ್ಮಂತ್ರಃ
ಮಂತ್ರಲಿಂಗದ್ವಯೋರೈಕ್ಯಂ| ಇಷ್ಟಲಿಂಗಂ ತು ಶಾಂಕರಿ||’
ಎಂದುದಾಗಿ,
ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ
ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ
ಎನ್ನ ಕರಸ್ಥಲದಲ್ಲಿ ಕರತಾಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ.
ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ
ಮನಮುಟ್ಟಿ ನೆನೆದು
ಸಂದಿಲ್ಲದಿಷ್ಟಲಿಂಗದಲ್ಲಿ ಭಾವವಬಲಿದು
ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು
ಶಿವಶಿವಾ ಹರಹರಾಯೆನುತಿರ್ದೆನಯ್ಯ.
ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./172
ಎನ್ನಂತರಂಗದ ಆತ್ಮನೊಳಗೆ
ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ.
ಆ ಪುರುಷನ ಮುಟ್ಟಿ ಹಿಡಿದು,
ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ
ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ.
ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ.
ಆತನ ರೂಪು ಲಾವಣ್ಯ ಯುಕ್ತಿ ವಿಧಾನವ
ಏನೆಂದುಪಮಿಸುವೆನಯ್ಯ?
ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ.
ಕೆಂಜೆಡೆಯ ಭಾಳನೇತ್ರಂ
ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ.
ಕಂಜಪದಯಗಳದೊಳು ಹೊಳವುತ್ತಿದಾನೆ
ನಂಜುಗೊರಳಭವ ಕಾಣಿಭೋ.
ಭವರೋಗವೈದ್ಯ, ಭವಹರ, ಎನ್ನ ತಂದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು,
ಎನ್ನ ಹೃದಯದಲ್ಲಿ ಕಂಡು,
ಮನೋಭಾವದಲ್ಲಿ ಆರಾಧಿಸುತ್ತಿರ್ದೆನಯ್ಯ./173
ಎನ್ನಂತರಂಗದೊಳಗಣ ಆತ್ಮಲಿಂಗ,
ಅನಂತ ಜ್ಯೋತಿಯಂತಿಪ್ಪುದು ನೋಡಾ.
ಬಹಿರಂಗದಲ್ಲಿ ನವರತ್ನದಂತಿಪ್ಪುದಯ್ಯ.
ತಿಂಗಳ ಸೂಡಿದಭವನು
ಭವಭಂಗಿತರಿಗಾರಿಗೂ ಗೋಚರಿಸನು ಕಾಣ.
ಲಿಂಗನಿಷ್ಠಾಂಗಿಗಳಿಗೆ
ಮಂಗಳಮಯನಾಗಿ ತೋರ್ಪನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ
ಕಾಣಿರೋ./174
ಎಮ್ಮೆಯನೇರಿದ ಎತ್ತು ಸಮ್ಮಗಾರ ನೋಡ.
ಎತ್ತಿನ ಒಡೆಯ ಬಂದು ಎಮ್ಮೆಯ ಕೊಲ್ಲಲು
ಸಮ್ಮಗಾರನು ಸತ್ತು ನಿಮ್ಮ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./175
ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ ತೊಡರಿದೆ ನೋಡ.
ಎರಡನೊಂದೆಂದು ತಿಳಿಯಲು ನೆರಡು ಮಾಯಿತ್ತು;
ಕರಡಿ ಬಿಟ್ಟೋಡಿತ್ತು ನೋಡಾ.
ಕಾಣಬಹುದು ಶೂನ್ಯ ನಿರಾಳ ತಾನು ತಾನೆಂಬುದ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./176
ಎಲೆಗಳೆದ ವೃಕ್ಷದಂತೆ ಉಲುಹಡಗರ್ಿದೆನಯ್ಯ.
ತೆರೆಯಳಿದ ಅಂಬುಧಿಯಂತೆ
ಪರಮ ಶಿವಸಾಗರದೊಳಗೆ ಮುಳುಗಿ
ಪರಮ ಚಿದ್ಗಂಭೀರನಾಗಿರ್ದೆನಯ್ಯ.
ಘಟವನಳಿದಾಕಾಶದಂತೆ ಬಚ್ಚಬರಿಯ ಬಯಲಾಗಿ
ನಿಶ್ಚಲನಾಗಿರ್ದೆನಯ್ಯ.
ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ
ಶುದ್ಧ ಅಮಲಬ್ರಹ್ಮವಾಗಿ
ಪ್ರತಿಯಿಲ್ಲದ ಅಪ್ರತಿಮ ಅನುಪಮ ಅಪ್ರಮಾಣ
ಅನಾಮಯನು ನೋಡಾ ಶಿವೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./177
ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ!
ಎಲ್ಲರು ಅಲ್ಲ ಎಂಬುದು ಪ್ರಮಾಣವಲ್ಲ ಕಾಣಿಭೋ.
ಅದೇನು ಕಾರಣವೆಂದರೆ:
ಶಿವಶರಣರ ಹೃದಯದಂತಸ್ಥವನರಿಯರಾಗಿ,
ಎನ್ನ ಅಹುದೆಂಬುದನು, ಅಲ್ಲ ಎಂಬುದನು ಮನ್ಮನೋಮೂರ್ತಿ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ನೀನೆ ಬಲ್ಲೆ./178
ಏನನೋದಿದರೇನಯ್ಯಾ?
ಏನಕೇಳಿದರೇನಯ್ಯಾ?
ಏನಹಾಡಿದರೇನಯ್ಯಾ?
`ಓದಿ ಮರುಳಾದೆಯೋ ಕೂಚಿಭಟ್ಟ’ರೇ! ಎಂದು.
ಗಿಣಿಯೋದಿ ತನ್ನ ಹೇಲ ತಾ ತಿಂದಂತೆ,
ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ
ಸಿದ್ಧಾಂತ ನಿರ್ಣಯವಿಲ್ಲದೆ,
ಮಾತಿಗೆ ಮಾತುಕಲಿತು ನುಡಿಗೆ ನುಡಿಯ ಕಲಿತು
ತರ್ಕಮರ್ಕಟರಂತೆ ಹೋರುವ
ಬಯಲಸಂಭ್ರಮದ ತಕರ್ಿಗಳ ಕಂಡರೆ,
ಮಾಗಿಯ ಕೋಗಿಲೆಯಂತೆ
ಮುಖ ಮುನಿಸಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./179
ಏನುಯೇನೂ ಇಲ್ಲದ ಠಾವಿನಲ್ಲಿ
ನಾನೀನೆಂಬುದು ಇದೇನು ಕಾರಣವೋ?.
ಇದು ನಿನ್ನ ವಿನೋದಾರ್ಥಕಾರಣವೆಂಬುದು
ಮಾನವರಿಗೆ ತಿಳಿಯಬಾರದು ನೋಡಾ.
ತಾ ಹುಟ್ಟಿದಲ್ಲಿಯೆ ಮೂರುಲೋಕ ಹುಟ್ಟಿತ್ತು.
ತಾನಳಿದಲ್ಲಿಯೆ ಮೂರುಲೋಕವಳಿಯಿತ್ತು.
ನಾ ನೀನೆಂಬುದಳಿದಲ್ಲಿಯೆ ನಿನ್ನ ನೆಲೆ ಸ್ವಯಂಭುವಾಯಿತ್ತು.
ಸ್ವಯಂಭುವಳಿದು ಶೂನ್ಯವಾಯಿತ್ತು.
ಮೂಲವಸ್ತುವೆಂದು ಬೇರುಂಟೆ ತಾನಲ್ಲದೆ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./180
ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ
ಫಲವಿಲ್ಲದ ಹಣ್ಣಿನ ರುಚಿಯ ತಲೆಯೆ ಬಾಯಾಗುಣಬಲ್ಲರೆ,
ನೆಲ ಬೆಂದಿತ್ತು, ತಲೆ ಸತ್ತಿತ್ತು.
ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./181
ಏಳುಪೀಠದೊಳಗೆ ಸಾವಿರದೈವತ್ತೆರಡು
ಮನೆ ಮಾಡಿಪ್ಪುದ ಕಂಡೆನಯ್ಯ.
ಒಂದೇ ಜ್ಯೋತಿ ಸಾವಿರದೈವತ್ತೆರಡು ಜ್ಯೋತಿಯ
ಬೆಳಗುತ್ತಿದೆ ನೋಡಯ್ಯ.
ಏಳುಪೀಠದೊಳಗೆ ಏಕಾಕಾರ ಅಖಂಡಪರಿಪೂರ್ಣವಾಗಿಪ್ಪುದಯ್ಯ.
ಆ ಪರಿಪೂರ್ಣ ಪರಾಪರವೇ ತಾನೆಂದರಿದು
ಸಮರಸವನೆಯ್ದಬಲ್ಲಾತನಲ್ಲದೆ
ಶಿವೈಕ್ಯನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./182
ಐದು ಬಣ್ಣದ ಗಿಡುವಿಂಗೆ ಇಪ್ಪತ್ತೆ ದು ಕೊನೆ ನೋಡಾ.
ಅಲ್ಲಿ ಸುತ್ತಿಯಾಡುವತನೊಬ್ಬನೆ ನೋಡಾ.
ಐದು ಬಣ್ಣವಳಿದು ಇಪ್ಪತ್ತೆ ದು ಶಾಖೆ ಮುರಿಯಲು
ಅಲ್ಲಿ ಆಡುವಾತ ಸತ್ತು ಕೋಳುಹೋಯಿತ್ತು;
ನಿಮ್ಮವರಿಗೆ ನಿತ್ಯನಿಜಲಿಂಗೈಕ್ಯ ಸಾಮ್ರಾಜ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./183
ಐದುಬಣ್ಣದ ಊರಿಂಗೆ ಐದುಬಗೆಯ ಕೇರಿ
ರಚಿಸುತ್ತಿದಾವೆ ನೋಡಾ.
ಊರುಕೇರಿಯ ಮಧ್ಯದಲ್ಲಿ ಅಷ್ಟದಳಮಂಟಪವದೆ ನೋಡಾ.
ಅಷ್ಟದಳಮಂಟಪದೊಳಗಾಡುವ ಹಂಸನ ನಿಲವ
ನಟ್ಟ ನಡುಮಧ್ಯದಲ್ಲಿ ನಿಲಿಸಿ ನೆರೆಯಬಲ್ಲಾತನೆ ದಿಟ್ಟ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./184
ಐದೂರ ಹೊಲದಲಿ ಕೆಟ್ಟ ಪಶುವನು
ಆರೂರ ಹೊಕ್ಕು ಅರಿಸಿಹೆನೆಂದು ಹೋದರೆ
ಮೂರೇ ಮನೆಯಲ್ಲಿ ಈರುಗಾರಾಗಲಾಗಿ
ಅರಸಬಂದಯ್ಯಗಳು ಆಸತ್ತು ಹೋದರಲ್ಲ.
ಅರಸುವ ಅರುಹೆ ತಾನೆಂದು ತಿಳಿಯಲು
ಮೂರಾರಕ್ಷರವಾಗಿ ತೋರುವ
ಮೂಲಾಕ್ಷರಾತ್ಮಕ ತಾನೆ ತಪ್ಪದೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./185
ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ.
ಅದಕ್ಕೆ ನಂಟರು ಅರೇಳೆಂಟು ಹತ್ತು ನೋಡ.
ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಲು
ಎಂಟಾನೆ ಸತ್ತವು; ನಂಟರು ಕೈಬಿಟ್ಟರು.
ಒಂಟೆಯ ತಲೆಯ ಮೆಟ್ಟಿ ನಿಂದು
ಉರಿಯ ಪುರುಷನ ನೆರದು
ಕಂಟಕಂಗಳ ಗೆಲಿದು
ಸಂಸಾರಸಾಗರವ ದಾಂಟಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./186
ಒಂದು ಪದದೊಳಗೆ ಎರಡೆಂಬತ್ತೆಂಟುಕೋಟಿ ಪದ
ಹುಟ್ಟಿದವು ನೋಡಾ.
ಆ ಎರಡೆಂಬತ್ತೆಂಟು ಕೋಟಿ ಪದದೊಳಗೆ ಅನೇಕ ಕಾಲುಗಳು
ಹುಟ್ಟಿದವು ನೋಡಾ.
ಆ ಅನೇಕ ಕಾಲುಗಳ ಮುರಿದು,
ಎರಡೆಂಬತ್ತುಕೋಟಿ ಪದಗಳನಳಿದು,
ಒಂದೆ ಪದದಲಿ ನಿಲಬಲ್ಲರೆ ಆತನು ಪರಶಿವ ಪದಸ್ಥನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!/187
ಒಂದೆರಡಾಯಿತ್ತೆಂಬುದು ಭ್ರಮೆ.
ಎರಡು ಮೂರಾಯಿತ್ತೆಂಬುದು ತಾ ಭ್ರಮೆ.
ಮೂರು ಆರಾಯಿತ್ತೆಂಬುದು ಮುನ್ನವೆ ಭ್ರಮೆ.
ಎನಗೆ ಆರೂ ಇಲ್ಲ; ಮೂರು ಇಲ್ಲ; ಉಭಯವೂ ಇಲ್ಲ.
ಉಭಯವಳಿದುಳಿದು ಒಂದಾದೆನೆಂಬುದು ಮುನ್ನವೇ ಇಲ್ಲ.
ಮುನ್ನ ಮುನ್ನವೇ, ಪರವಸ್ತು ತಾನಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./188
ಒಂದೇ ವೇಳೆ ಪುರುಷಾಹಾರ ಪ್ರಮಾಣಿನಲ್ಲಿ ಗಡಣಿಸಿಕೊಂಡು
ಲಿಂಗಕ್ಕೆ ಕೊಟ್ಟು ಲಿಂಗವನವಧರಿಸಿಕೊಂಬಿರಿ.
ಮತ್ತೊಂದು ಪದಾರ್ಥ ಬಂದರೆ ಮುಟ್ಟಿ ಅರ್ಪಿಸಲಮ್ಮರು.
ಅದೇನು ಕಾರಣ? ಕೈಯೇನು ಎಂಜಲೆ?
ಕೈಯೆಂಜಲಾದವಂಗೆ ಮೈಯೆಲ್ಲಾಯೆಂಜಲು.
ಎಂಜಲೆಂದರೆ ಅಮೇಧ್ಯ.
ಅಪವಿತ್ರಕಾಯದಮೇಲೆ ಲಿಂಗವ ಧರಿಸಿಕೊಂಡಿಪ್ಪಿರೆ?
ಇಂತಪ್ಪ ಸಂದೇಹಿ ಮಾನವರ ನಿಮ್ಮ ಪ್ರಸಾದಿಗಳು ಮೆಚ್ಚರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./189
ಒಡಲು ಉಮಾಪತಿಯಲ್ಲಿ ನಿಂದು
ಮನವು ಮಾರಾರಿಯಲ್ಲಿ ಬಲಿದು ನಿಂದ ಕಾರಣ
ತನುಮನದ ತಾಮಸದ ತವಕ ಮುರಿದೋಡಿತ್ತು ನೋಡಾ.
ಜೀವ ಪ್ರಣವವನಪ್ಪಿ
ಪರಮಾತ್ಮ ಸ್ವರೂಪು ಕೃತ ನಿಶ್ಚಯವಾಗಿ
ಪ್ರಪಂಚ ತಲೆದೋರಲೀಯದು ನೋಡಾ.
ಭಾವ ಬ್ರಹ್ಮವನಪ್ಪಿ
ದೇಹ ಭಾವಂಗಳನೆಲ್ಲಾ ಕೊಡಹಿತ್ತು ನೋಡಾ.
ದೇಹ ಮೋಹವಳಿದು
ಸರ್ವಾಂಗವು ಲಿಂಗನಿಷ್ಠೆಯಲ್ಲಿ ಲೀಯವಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./190
ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ ಹೇಳುವಿರಿ?
ಇಬ್ಬರ ಸಂಗದಿಂದಾನೆಂಬುದು
ಅಜ್ಞಾನವಲ್ಲದೆ ಅರುಹಲ್ಲ ನೋಡಾ.
ಒಬ್ಬರ ಸಂಗದಿಂದಾದ ಸ್ವಸಂಗಿಗೆ ತಂದೆಯೆಂದು ಕಲ್ಪಿಸಿ
ತಾಯೆಂದು ಹೇಳಲಿಲ್ಲ.
ತಂದೆ ತಾಯಿಗಳಿಲ್ಲದಾತಂಗೆ ಬಂಧುಗಳೆಂದೇನೋ ಭ್ರಾಂತರಿರಾ?
ಅಯೋನಿಸಂಭವನಾಗಿ ಶರಣನು ಸ್ವಯಂಭು ತಾನಾದನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./191
ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ,
ಒಬ್ಬಳು ಕಾಯದ ರೂಪೆಯಾಗಿ ಕಾಯವ ಶುದ್ಧವ ಮಾಡುವಳು.
[ಆ]ಕಾಯದ ಗುಣವ ಹೊದ್ದಳು ನೋಡಾ.
ಮತ್ತೊಬ್ಬಳು ಪ್ರಾಣದ ರೂಪೆಯಾಗಿ
ಪ್ರಾಣವ ಶುದ್ಧವ ಮಾಡುವಳು;
ಆ ಪ್ರಾಣನ ಗುಣವ ಹೊದ್ದಳು ನೋಡಾ.
ಇಬ್ಬರ ಸಂಗದಿಂದ ತಾನೊಬ್ಬ ಸಾಯಲು
ಮೂರುಲೋಕದ ತಬ್ಬಿಬ್ಬು ಬಿಟ್ಟು,
ಕತ್ತಲೆ ಹರಿಯಿತ್ತು, ತಲ್ಲಣವಡಗಿತ್ತು.
ಎಲ್ಲರೂ ನಿರಾಳರಾದರು.
ಅವರು ನಿಮ್ಮವರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./192
ಒಬ್ಬರುತ್ತಮರೆಂಬರು.
ಒಬ್ಬರು ಮಧ್ಯಮರೆಂಬರು.
ಒಬ್ಬರು ಕನಿಷ್ಠರೆಂಬರು.
ಒಬ್ಬರಧಮರೆಂಬರು.
ಒಬ್ಬರು ಕಷ್ಟ ನಿಷ್ಠೂರಿಗಳೆಂಬರು.
ಎಂದರದಕೇನು ಯೋಗಿಗೆ
ವಿನಯ ಕಂಟಕವಲ್ಲದೆ.
ಲೋಕಾರ್ಥಕ್ಕೂ ಪರಮಾರ್ಥಕ್ಕೂ ವಿರುದ್ಧ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./193
ಒಸಿ ಲೋಕಾಧೀನ, ಒಸಿ ಶಿವಾಧೀನವುಂಟೆ ಲೋಕದೊಳಗೆ?
ಒಸಿ ಪುರುಷಪ್ರಯತ್ನ, ಒಸಿ ಶಿವಪ್ರಯತ್ನವುಂಟೆ ಲೋಕದೊಳಗೆ?
ಒಸಿ ಲೋಕಾರ್ಥ, ಒಸಿ ಪರಮಾರ್ಥವುಂಟೆ ಲೋಕದೊಳಗೆ?
ಒಸಿ ಜೀವಗುಣ, ಒಸಿ ಪರಮನಗುಣವಂಟೆ ಲೋಕದೊಳಗೆ?
ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ
ಅಧಿಷ್ಠಾನ ಕರ್ತೃ ಶಿವನೆಂದರಿಯದವಂಗೆ ಶಿವಜ್ಞಾನವೆಲ್ಲಿಯದೋ?
ಸಮಸ್ತಾತ್ಮರಿಗೆ ಸರ್ವಪ್ರೇರಕ ಸರ್ವಚೈತನ್ಯ ಸರ್ವವ್ಯಾಪಕ
ಸರ್ವಮಯನು ಸರ್ವಜ್ಞನೊಬ್ಬನೆ ಸರ್ವಕಾರಣ.
ಹೀಗೆಂಬುದು ಪರಮಾರ್ಥವಲ್ಲದೆ
ಉಳಿದವೆಲ್ಲಾ ಜೀವಭಾವ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./194
ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು?
ಶಿವಶರಣರಿಗೆ ತಥ್ಯ ಮಿಥ್ಯ ಸಲುವುದೆ?
ಸಲ್ಲದೆಂದುದಾಗಿ ಆದಿ-ವ್ಯಾಧಿ, ಸುಖ-ದುಃಖ,
ಭಯ-ಮೋಹ, ಪುಣ್ಯ-ಪಾಪ, ಇಹ-ಪರವೆಂಬ
ಉಪಾಧಿಯ ಹೊದ್ದದೆ
ಆಚಾರ ಅನಾಚಾರವೆಂಬುದರಿಯದಿರ್ದಡೆ
ಜಲದೊಳಗಣ ಸೂರ್ಯನಂತೆ
ವಿಶ್ವಪ್ರಪಂಚ ಹೊದ್ದಿಯು ಹೊದ್ದದೆ
ಬೆರಸಿಯು ಬೆರಸದೆ ಸರ್ವಸಾಕ್ಷಿಕನಾಗಿರಬಲ್ಲರೆ
ಆತಂಗೆ ಸಲುವುದೀ ಮತ
ಆಚಾರದೆಡೆಯಲ್ಲಿ ಅನುಸರಣೆಯುಂಟೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./195
ಒಳಗಿಪ್ಪಾತನ ಹೊರಗೆ ನೋಡಿ ಕಂಡೆನಯ್ಯ.
ಹೊರಗಿಪ್ಪಾತನ ಒಳಗೆ ನೋಡಿ ಕಂಡೆನಯ್ಯ.
ಒಳಹೊರಗಿಪ್ಪವರಿಬ್ಬರು ಒಂದಾಗಿ ನಿಂದ ನಿಲುವು
ಬಯಲು ಬಯಲ ಬೆರಸಿದಂತೆ ನಿರಾಳವಾಯಿತ್ತು ಕಾಣಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./196
ಒಳಗೆ ನೋಡಿದರೆ ಒಳಗೆ ಬಯಲು.
ಹೊರಗೆ ನೋಡಿದರೆ ಹೊರಗೆ ಬಯಲು ನೋಡಾ.
ನೆನೆದಿಹೆನೆಂದರೆ ಮನ ಬಯಲು,
ನೆನೆಸಿಕೊಂಡೆನೆಂದರೆ ನೀನಿಲ್ಲವಾಗಿ
ನಾನೂ ಬಯಲು, ನೀನೂ ಬಯಲು ನೋಡಾ.
ಭಾವಿಸಿಕೊಂಬ ವಸ್ತುವಿಲ್ಲವಾಗಿ
ಭಾವ ಬಯಲೆಂದೆನು ನೋಡಾ.
ಮರಹು ನಷ್ಟವಾಯಿತ್ತಾಗಿ ಅರುಹು ಶೂನ್ಯವಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./197
ಒಳಗೆಂದೇನು? ಹೊರಗೆಂದೇನು?
ಅರುಹೆಂದೇನು? ಮರಹೆಂದೇನು?
ತಾನೆಂದೇನು? ಇದಿರೆಂದೇನು?
ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ.
ಒಳಗು ತಾನೆ, ಹೊರಗು ತಾನೆ.
ಅರುಹು ತಾನೆ, ಮರಹು ತಾನೆ.
ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./198
ಒಳಗೆಂಬವನೊಬ್ಬ; ಹೊರಗೆಂಬವನೊಬ್ಬ.
ರೂಪೆಂಬವನೊಬ್ಬ; ನಿರೂಪೆಂಬವನೊಬ್ಬ.
ಕಾಮಿಯೆಂಬವನೊಬ್ಬ; ನಿಃಕಾಮಿಯೆಂಬವನೊಬ್ಬ.
ಮಾಯಿಯೆಂಬವನೊಬ್ಬ; ನಿರ್ಮಾಯಿಯೆಂಬವನೊಬ್ಬ.
ಶುದ್ಧನೆಂಬವನೊಬ್ಬ; ಅಶುದ್ಧನೆಂಬವನೊಬ್ಬ.
ಮಲಿನನೆಂಬವನೊಬ್ಬ; ನಿರ್ಮಲಿನನೆಂಬವನೊಬ್ಬ.
ಒಳಗೆಂಬಾತನು ಅಲ್ಲ; ಹೊರಗೆಂಬಾತನು ಅಲ್ಲ.
ರೂಪೆಂಬಾತನು ಅಲ್ಲ; ನಿರೂಪಪೆಂಬಾತನು ಅಲ್ಲ.
ಕಾಮಿಯೆಂಬಾತನು ಅಲ್ಲ; ನಿಃಕಾಮಿಯೆಂಬಾತನು ಅಲ್ಲ.
ಮಾಯಿ ಎಂಬಾತನೂ ಅಲ್ಲ. ನಿರ್ಮಾಯಿ ಎಂಬಾತನೂ ಅಲ್ಲ
ಶುದ್ಧನೆಂಬಾತನು ಅಲ್ಲ; ಅಶುದ್ಧನೆಂಬಾತನು ಅಲ್ಲ.
ಮಲಿನನೆಂಬಾತನು ಅಲ್ಲ; ನಿರ್ಮಲಿನನೆಂಬಾತನು ಅಲ್ಲ.
ನಾನು ನೀನೆಂಬುದೇನುಯೇನೂ ಇಲ್ಲದ
ಪರಾಪರವೇ ಶರಣನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./199
ಒಳಹೊರಗೆ ಭರಿತನಾಗಿ ವಸ್ತು ತಲೆದೋರದೆ, ಕಾಣಿಸಿಕೊಳ್ಳದೆ
ಇಪ್ಪನೆನುತ್ತಿದ್ದಿರಿ;
ಆ ವಸ್ತುವಿನ ಗುಣ, ವಸ್ತುವಿನ ಸ್ವರೂಪು, ಆವುದು ಕರುಣಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./200
ಒಳಹೊರೆಗೆಂಬ ಉಭಯ ಸಂದೇಹದಿಂದ
ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತಲ್ಲದೆ,
ಒಳಹೊರಗೆಂಬ ಉಭಯಸಂದೇಹವಳಿದು
ಜೀವ ಪರಮರೆಂದೆಂಬ ಉಭಯವು
ಪರಮನೊಬ್ಬನೇಯೆಂದು ತಿಳಿದರೆ,
ಗುರುವೇ ಶಿಷ್ಯ; ಶಿಷ್ಯನೇ ಗುರುವಾದುದನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./201
ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ.
ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ.
ಪ್ರಣವವೇ ಪರಮಾತ್ಮ ಸ್ವರೂಪವಾಗಿ
ಪರಮೇಶ್ವರನ ಗೌಪ್ಯಮುಖ ನೋಡಾ.
ಪ್ರಣವವೆ ಶಿವಶರಣರ ಹೃದಯಾಧಿಪತಿ
ಇದು ಕಾರಣ,
ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ.
ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ
ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./202
ಓಂಕಾರವೇ ಪಂಚಭೂತಾತ್ಮಮಯ ನೋಡ.
ನಕಾರವೇ ದಶೇಂದ್ರಿಯ,
ಮಃಕಾರವೇ ಮನಪಂಚಕಂಗಳು ನೋಡ.
ಶಿಕಾರವೇ ಪ್ರಾಣಸ್ವರೂಪು,
ವಾಕಾರವೇ ದಶವಾಯುಗಳಸ್ವರೂಪು,
ಯಕಾರವೇ ತ್ರಿಗುಣಸ್ವರೂಪು ನೋಡ.
ಓಂಕಾರವೇ ಪಾದಾದಿ ಮಸ್ತಕಪರಿಯಂತರ
ಪರಿಪೂರ್ಣವಾಗಿ ತ್ವಗುಮಯವಾಗಿಪ್ಪುದು.
ನಕಾರವೇ ರುಧಿರಮಯವಾಗಿಪ್ಪುದು.
ಮಃಕಾರವೇ ಮಾಂಸಮಯವಾಗಿಪ್ಪುದು.
ಶಿಕಾರವೇ ಮೇದಸ್ಸುಮಯವಾಗಿಪ್ಪುದು.
ವಾಕಾರವೇ ಅಸ್ಥಿಮಯವಾಗಿಪ್ಪುದು.
ಯಕಾರವೇ ಮಜ್ಜಾಮಯವಾಗಿಪ್ಪುದು.
ಈ ಷಡಕ್ಷರಮಂತ್ರವೆಲ್ಲವು ಕೂಡಿ
ಶುಕ್ಲಮಯವಾಗಿಪ್ಪುದು ನೋಡಾ.
ಇದು ಕಾರಣ,
ಶರಣನ ಸಪ್ತಧಾತು ಸರ್ವೆಂದ್ರಿಯ ವಿಷಯ ಕರಣಂಗಳೆಲ್ಲವು
ಷಡಕ್ಷರಮಂತ್ರಮಯವಾಗಿಪ್ಪವು.
ಇದು ಕಾರಣ, ಶರಣನ ಶರೀರವೆ ಶಿವನ ಶರೀರ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./203
ಓಂಕಾರವೇ ಶಿವ, ಯಕಾರವೇ ಸದಾಶಿವ,
ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ,
ಮಃಕಾರವೇ ಈಶ್ವರ, ನಕಾರವೇ ಈಶಾನ.
ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ,
ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ,
ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ,
ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ,
ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ.
ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ,
ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ,
ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ,
ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ.
ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ,
ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ;
ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ.
ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ,
ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ,
ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪುನೋಡಾ.
ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ.
ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ.
ಮಃಕಾರವೇ ವಾಮದೇವಮಂತ್ರಮೂರ್ತಿ.
ಶಿಕಾರವೇ ಅಘೋರಮಂತ್ರಮೂರ್ತಿ.
ವಾಕಾರವೇ ತತ್ಪುರುಷಮಂತ್ರಮೂರ್ತಿ.
ಯಕಾರವೇ ಈಶಾನ್ಯಮಂತ್ರಮೂರ್ತಿ.
ಓಂಕಾರವೇ ಮಹಾಮಂತ್ರಮೂರ್ತಿ.
ಇಂತಿವು ಮಂತ್ರಮೂರ್ತಿಯ
ವದನಭೇದವೆಂದರಿವುದು ನೋಡಾ.
ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು,
ಶಿಕಾರವೇ ಆನಂದ ವಾಕಾರವೇ ನಿತ್ಯ,
ಯಕಾರವೇ ಪರಿಪೂರ್ಣ,
ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ.
ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ,
ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ,
ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ
ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ.
ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./204
ಕಂಗಳ ಕಳೆಯಲ್ಲಿ ಚೆಂಗಣಿಗಿಲ ಕಂಡೆ.
ಚೆಂಗಣಿಗಿಲ ಕಮಲವ ಕುಯಿದು
ಶಿವಲಿಂಗಪೂಜೆಯ ಮಾಡಬಲ್ಲ ಶರಣಂಗೆ
ಸಂಸಾರ ಸಂಗವ ಹೊದ್ದಿಗೆಯೆಂದೇನು ಹೇಳಾ ಪ್ರಾಣಲಿಂಗ ಸಂಗಿಗೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./205
ಕಂಗಳನೋಟ, ಕರಸ್ಥಲದ ಲಿಂಗ ಹೃದಯದ ಜ್ಞಾನ-
ಲಿಂಗವೆಂಬ ಲಿಂಗಮುಖದಲ್ಲಿ ಮಾತನಾಡುತ್ತಿರಲಾಗಿ,
ನಡೆವ ಕಾಲು ಕೆಟ್ಟು, ಹಿಡಿವ ಕೈಯ ಕತ್ತಲೆ ಹರಿದು
ಬೆಳಗಾಯಿತ್ತಯ್ಯ.
ನೆನೆವ ಮನದ ಕತ್ತಲೆ ಹರಿದು ಬೆಳಗಾಯಿತ್ತಯ್ಯ.
ನೋಡುವ ಕಂಗಳ ಕತ್ತಲೆ ಹರಿದು ಬೆಳಗಾಯಿತ್ತಯ್ಯ.
ಬೆಳಗಿನೊಳು ಬೆಳಗಾಗಿ, ಬೆಳಗು ಸಮರಸವಾಗಿ,
ಇಂದು ಇಂದುವ ಕೂಡಿದಂತೆ, ರವಿ ರವಿಯ ಬೆರಸಿದಂತೆ,
ಮಿಂಚು ಮಿಂಚನು ಕೂಡಿದಂತೆ, ಉಭಯದ ಸಂಚವಳಿದು
ಸ್ವಯಂ ಜ್ಯೋತಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./206
ಕಂಡೊಂದ ನುಡಿವುದೀ ಲೋಕ.
ಕಾಣದೊಂದ ನುಡಿವುದೀ ಲೋಕ.
ಹಿಂದೆ ನಿಂದಿಸಿದರೆಂದು ಕುಂದಲಿಲ್ಲ.
ಮುಂದೆ ವಂದಿಸಿದರೆಂದುಬ್ಬಲಿಲ್ಲ.
ವಂದನೆ ನಿಂದನೆಯೆಂಬುದು ಉಪಜೀವಿಗಳಿಗಲ್ಲದೆ,
ಉಪಮಾತೀತನಾದ ಪ್ರಾಣಲಿಂಗೈಕ್ಯನಿಗುಂಟೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./207
ಕಂಥೆ ಖಟ್ವಾಂಗ ದಂಡ ಕಮಂಡಲ
ಗುಂಡುಗಪ್ಪರದ ಜೋಳಿಗೆ ಕಾಮಾಕ್ಷಿ ಇವು
ಪಂಚಮುದ್ರೆ ಪರಿಪೂರ್ಣಸ್ಥಲಕುಳವೆಂದು
ನುಡಿದುಕೊಂಡು ನಡೆವರಯ್ಯ.
ಜೀವವೆಂಬುದು ಹಾರಿ
ಕಾಯವೆಂಬ ಕಂಥೆಯ ತಡೆಗೆಡೆದು
ಮೆಟ್ಟಿ ಮೆಟ್ಟಿ ಹೂಳುವಲ್ಲಿ ಬಿಟ್ಟು ಹೋಹ ಪ್ರಾಣಕ್ಕೆ
ಆವುದು ಕಂಥೆ? ಆವುದು ಖಟ್ವಾಂಗ?
ಆವುದು ದಂಡ? ಆವುದು ಕಮಂಡಲ?
ಆವುದು ಗುಂಡುಗಪ್ಪರದ ಜೋಳಿಗೆ?
ಆವುದು ಕಾಮಾಕ್ಷಿ? ಈ ಸ್ಥಲಕುಳದ ನಿರ್ಣಯವ ಬಲ್ಲರೆ
ಹಿರಿಯರೆಂದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./208
ಕಟ್ಟರಸ[ನ] ಬಂದು ಕಳ್ಳರು ಮುತ್ತಲು,
ಪಟ್ಟಣ ಬೆದರಿತ್ತು ನೋಡಾ.
ಪಟ್ಟಣದ ತಳವಾರರು ದುಷ್ಟರನೆಬ್ಬಟ್ಟಲು
ಬೆದರಿಕೆ ಬಿಟ್ಟೋಡಿತ್ತು ನೋಡಾ.
ಕಾಯಪಟ್ಟಣದ ಕಳವಳಡಗಿತ್ತು.
ಇದನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./209
ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ,
ಒಕ್ಕಲಿಲ್ಲದ ಊರು ಹಾಳು,
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ
ಲೋಕದ ದೃಷ್ಟಾಂತದಂತೆ
ಮುಕ್ಕಣ್ಣನರುಹಿಲ್ಲದವನ ಹೃದಯ
ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./210
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ
ದೇವನಿಲ್ಲದ ದೇಗುಲದಂತೆ,
ಪತಿಯಿಲ್ಲದ ಸತಿಯ ಶೃಂಗಾರದಂತೆ,
ಗುರುವಾಜ್ಞೆಯಿಲ್ಲದೆ
ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ
ಶಿವನ ಮುಟ್ಟದು ನೋಡಾ.
ಶ್ರೀಗುರುವಿನ ವಾಕ್ಯದಿಂದಹುದೆಂದುದನು
ಅಲ್ಲ ಎಂದು ಉದಾಸಿನದಿಂದ ಮಾಡಿದ ಭಕ್ತಿ
ಅದು ಕರ್ಮಕ್ಕೆ ಗುರಿ ನೋಡಾ.
ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ
ಸದ್ಯೋನ್ಮುಕ್ತಿಗೆ ಕಾರಣ ನೋಡಾ.
ಏಕೋಭಾವದ ನಿಷ್ಠೆ
ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ.
ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು
ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ
ಕರ್ಮಂಗಳ ಒತ್ತಿ ಒರಸುವುದು ನೋಡಾ.
ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ
ನಮೋ ನಮೋ ಎಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./211
ಕಡೆಯಲ್ಲಿ ಮೊದಲಲ್ಲಿ ಸುವರ್ಣವೊಂದಲ್ಲದೇ ಬೇರಿಲ್ಲ ಕಾಣಿರೋ.
ಬಂಗಾರ ಪ್ರಕೃತಿಯಿಂದ ಬೇರಿಟ್ಟು ತೋರಿತ್ತು ಎಂದಡೆ
ಬೇರಾಗಬಲ್ಲುದೆ ಅಯ್ಯ
ಶುದ್ಧ ಪರಮಾತ್ಮ ತಾನೆ ಒಂದೆರಡಾಗಿ
ಜೀವ ಪರಮನೆಂದು ತೋರಿತ್ತೆಂದಡೆ
ಆವಾಗ ಜೀವ, ಆವಾಗ ಪರಮನೆಂಬ ಭೇದವನರಿಯದೆ
ಅರೆ ಮರುಳಾದಿರಲ್ಲ.
ದೇಹಭಾವದ ಉಪಾಧಿವುಳ್ಳನ್ನಕ್ಕರ ಜೀವನು;
ದೇಹಭಾವದ ಉಪಾಧಿ ಶಿವಭಾವದಲ್ಲಿ ಅಳಿದ ಬಳಿಕ
ಜೀವನೆಂಬವನು ಪರಮನೆಂಬವನು ತೀವಿ
ಪರಿಪೂರ್ಣ ಪರವಸ್ತು ತಾನೇ ತಾನೆಂಬಾತ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ./212
ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ
ಬಣ್ಣಗುಂದಿ ಬಳಲುವರಯ್ಯ.
ಬಂದರೆ ಹೆಚ್ಚಿ, ಬಾರದಿದ್ದರೆ ಕುಂದಲೇತಕೆ?
ಕುಂದಿದರೆ ಬಪ್ಪುದೆ?
ಹಿರಿದು ಜರಿದು ಹೇಡಿಗೊಂಡು
ಕರಗಿ ಕೊರಗಿ ಕೋಡಿವರಿದು[ದೆಂದು]
ನಿಂದುರಿದು ಕಡುನೊಂದು ಭವಬಡುತ್ತಿಪ್ಪರಯ್ಯ.
ಒಂದು ನಿಮಿಷ ನಿಮಿಷಾರ್ಧ ನಿಮ್ಮ ನೆನಹಿಲ್ಲ ನೋಡಾ!
ಆಶೆಯೆಂಬ ಮಾಯಾಪಾಶದೊಳಗೆ ಸಿಕ್ಕಿ
ದೋಷ ದುರ್ಗುಣದಿಂದ ಬಿದ್ದುರುಳುವ ಪಾಶಬದ್ಧರ
ಈಶ ಲಾಂಛನಧಾರಿಗಳೆಂತೆಂಬೆನಯ್ಯಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./213
ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ
ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ
ವಿವೇಕದಲ್ಲಿ ಮತ್ಸರ
ಅರುಹಿನಲ್ಲಿ ಮಾಯವುಳ್ಳನ್ನಕ್ಕರ
ಎಂತು ಭಕ್ತನೆಂಬೆ? ಎಂತು ಮಾಹೇಶ್ವರನೆಂಬೆ?
ಎಂತು ಪ್ರಸಾದಿಯೆಂಬೆ? ಎಂತು ಪ್ರಾಣಲಿಂಗಿಯೆಂಬೆ?
ಎಂತು ಶರಣನೆಂಬೆ? ಎಂತು ಐಕ್ಯನೆಂಬೆ?
ಎಂತು ಷಟ್ಸ ್ಥಲದಲ್ಲಿ ಸಂಪೂರ್ಣನೆಂದೆಂಬೆ?
ಎಂತು ಧ್ಯಾನಿಗಳೆಂಬೆ? ಎಂತು ಅನುಭಾವಿಗಳೆಂಬೆ?
ವಾಕುಪೋಟಾರ್ಥಿಗಳು, ಉದರ ಘಾತಕರ
ಎನಗೊಮ್ಮೆ ತೋರದಿರಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ/214
ಕಣ್ಣಿಲ್ಲದಾತ ಕಾಣಬಲ್ಲನೆ ಅಯ್ಯ?
ಕಿವಿಯಿಲ್ಲದಾತ ಕೇಳಬಲ್ಲನೇನಯ್ಯ?
ಮೂಗಿಲ್ಲದ ಮೂಕಾರ್ತಿ ವಾಸಿಸಬಲ್ಲನೆ ಅಯ್ಯ?
ನಾಲಿಗೆಯಿಲ್ಲದವ ರುಚಿಸಬಲ್ಲನೆ ನೋಡಯ್ಯ?
ಕೈಯಿಲ್ಲದ ಮೋಟ ಹಿಡಿಯಬಲ್ಲನೆ?
ಕಾಲಿಲ್ಲದ ಹೆಳವ ನಡೆಯಬಲ್ಲನೆ ಅಯ್ಯ?
ಹಂದೆ ಶೌರ್ಯದ ಕುರುಹ ಬಲ್ಲನೆ?
ನಪುಂಸಕ ವ್ಯವಹರಿಸಬಲ್ಲನೆ ಅಯ್ಯ?
ತಮ್ಮ ತಾವರಿಯದ ಅಜ್ಞಾನಿಗಳು,
ಗುರು ಗುರುವೆಂದು ಅನ್ಯರಿಗೆ ಉಪದೇಶವ ಕೊಟ್ಟು
ಅರುಹಿನ ಆಚರಣೆಯ ಹೇಳಿ
ಸತ್ಪಥದ ಆಚರಣೆಯ ಹೇಳಿ
ತಮ್ಮ ಹಾದಿಯ ತಾವರಿಯರು;
ತಾವಿನ್ನಾರಿಗೆ ಹಾದಿಯ ತೋರಿಹರಯ್ಯ?
ಆ ಭೂಭಾರಿಗಳು ಗುರು ಗುರುವೆಂಬುದಕ್ಕೆ ನಾಚರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./215
ಕತ್ತಲೆಯ ಪುರವ ಕಳ್ಳರು ಮುತ್ತಲು
ಪುರಪತಿ ಮುತ್ತಿಗೆಗೆ ಒಳಗಾದನು ನೋಡಾ ಅಯ್ಯ.
ಅತ್ತಳ ಊರಿಂದ ಬೆಳಗು ಪಸರಿಸಲು
ಮುತ್ತಿಗೆ ತೆಗೆದೋಡಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./216
ಕತ್ತಲೆಯ ಮನೆಯಲ್ಲಿ ಕಾಮಿನಿ ಮುತ್ತ ಸರಗೆಯ್ವದ ಕಂಡೆ.
ಕತ್ತಲೆ ಹರಿದು, ಮನ ಬತ್ತಲೆಯಾಗಿ
ತತ್ತ್ವಮಸಿ ವಾಕ್ಯದಿಂದತ್ತತ್ತ ತಾನಾಗಿ
ತಾ ಸತ್ತ ಬಳಿಕ ಇನ್ನೆತ್ತಳ ಯೋಗ ಹೇಳಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./217
ಕತ್ತಲೆಯನೊಳಕೊಂಡ ಬೆಳಗಿನಂತೆ
ಪಕ್ಷಿಯನೊಳಕೊಂಡ ತತ್ತಿಯಂತೆ
ಮುತ್ತನೊಳಕೊಂಡ ಚಿಪ್ಪಿನಂತೆ
ಸಾಗರವನೊಳಕೊಂಡ ಶಶಿಯಂತೆ
ಜಗವನೊಳಕೊಂಡ ಆಕಾಶದಂತೆ
ಎನ್ನ ನೀವು ಒಳಕೊಂಡಿರಿಯಾಗಿ
ನಾನೋ ನೀನೋ ಏನೆಂದರಿಯೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./218
ಕತ್ತೆಗೇಕಯ್ಯ ಕಡಿವಾಣ, ತೊತ್ತಿಗೆ ತೋಳಬಂದಿಯೇಕಯ್ಯ?
ಶ್ವಾನಗೇಕೆ ಆನೆಯ ಜೋಹವಯ್ಯ?
ಹಂದೆಗೇಕೆ ಚಂದ್ರಾಯುಧವಯ್ಯ?
ಶಿವನಿಷ್ಠೆಯಿಲ್ಲದವಂಗೆ
ವಿಭೂತಿ ರುದ್ರಾಕ್ಷಿ ಶಿವಮಂತ್ರ ಶಿವಲಿಂಗವೆಂಬ
ಶಿವಚೋಹವೇತಕಯ್ಯ ಇವರಿಗೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./219
ಕನಕಗಿರಿನಿವಾಸಂ ಕಾಮನಾಶಂ ಕಮಲವೈರಿಭೂಷಂ
ವಿನುತನಾಮಧೇಯಂ ಅನುಪಮಾವತಾರಸಾರಂ
ಪರಮ ವೀರಶೈವಭಕ್ತಿಭಾವಂ ಜನಿತಪುಣ್ಯಕಾಯಂ
ಭವರೋಗವೈದ್ಯಂ ಭವಹರಂ
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./220
ಕನಸಿನ ಕಾಮಿನಿಯರ ರೂಪು
ಮನಸಿಗೆ ರಮ್ಯವಾಗಿ ಕಾಣುವದು.
ಅದು ಮನಸಿನ ಮಾಯ ಕಾಣಿಭೋ.
ಮನಸಿನ ಮಾಯವನಳಿಯಲು
ಕನಸಿನ ಕಾಮಿನಿಯರ ರೂಪು ಮನಸಿನಲ್ಲಿಲ್ಲ ನೋಡಾ.
ಆ ಭ್ರಾಂತು ಭ್ರಮೆಗಳನಳಿದಾತನಲ್ಲದೆ
ಪ್ರಾಣಲಿಂಗ ಸಂಬಂಧಿಯಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ/221
ಕನಸಿನಲ್ಲಿ ಬಂದು ನೆರೆವ ಸ್ತ್ರೀಯರು
ಮನಸಿನ ಮಾಯ ಕಾಣಿಭೋ.
ಮನಸ್ಸಿನಲ್ಲಿ ಮಹವ ನಿಲಿಸಲು
ಕನಸ್ಸಿನಲ್ಲಿ ಬಂದು ನೆರೆವ ಸ್ತ್ರೀಯರು ಮನಸ್ಸಿನಲ್ಲಿಲ್ಲ ನೋಡಾ.
ಮನವನಳಿದಾತನೆ ಮಹಾದೇವನು ತಾನೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!/222
ಕಬ್ಬಿನ ಹೊರಗಣ ಸೋಗೆಯ ಮೆದ್ದು
ಪರಿಣಾಮಿಸುವ ಪಶುವಿನಂತೆ,
ಹೊರವೇಷವ ಹಲ್ಲಣಿಸಿಕೊಂಡು
ಈಶ್ವರೋವಾಚದ ನುಡಿಯ ನುಡಿದು
ಬಲ್ಲವರೆನಿಸಿಕೊಳಬಹುದಲ್ಲದೆ,
ಈಶ್ವರನ ನಿಲವ ಈ ಉಪಚಾರದಲ್ಲಿ ಕಾಣಬಹುದೆ?
ಕಾಣಬಾರದು ಕಾಣಿರಯ್ಯ.
ಕಬ್ಬ ಕಡಿದು ಒಳಗಣ ಮಧುರವ ಸ್ವೀಕರಿಸುವ ಮದಗಜದಂತೆ
ಅಂತರಂಗದ ನಿಳಯದಲಿ ನಿಜವ ಕಂಡು ನಿವಾಸಿಗಳಾಗಿ
ಚಿದಂಗ ಚಿತ್ಪ್ರಾಣ ಚಿಚ್ಛಕ್ತಿ ಚಿದಾಕಾಶವೆನಿಸುವ
ಚಿದ್ಫ ್ರಹವೇ ಸ್ಥಳಕುಳವೆಂದರಿದು ಸುಳಿಯಬಲ್ಲರೆ ಸ್ಥಲಜ್ಞರೆಂಬೆ.
ಉಳಿದವರೆಲ್ಲಾ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./223
ಕರಣಂಗಳೆಂಬ ಕತ್ತಲೆಗವಿದು
ಕಾಮುಕಾತುರದಿಂ ವಿಷಯಾಂಬುಧಿಯೊಳಗೆ ಮುಳುಗಿ
ಯತೀಶ್ವರನು ಯತೀಶ್ವರನು ಎಂದು
ಹಿತಗೆಟ್ಟು ನುಡಿದುಕೊಂಡು ನಡೆವ
ಮತಿಹೀನ ಮಾನವರನೇನೆಂಬೆ ಶಿವನೇ?
ಈಶ್ವರ ಶರಣಂಗೆ ವಿಕಾರ ಹೊದ್ದಿದಡೆ
ಮೀಸಲ, ನಾಯಿ ಮುಟ್ಟಿದಂತಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./224
ಕರಿಯ ಕರದಲ್ಲಿ ಅರಿಯಾರು ಹುಟ್ಟಿ
ಸಿರಿದೇವಿಯ ಸೇವಿಸಿ
ಮತಿವಂತರ ಮರುಳು ಮಾಡಿ
ಗತಿ ಸತ್ಪಥಕೆ ವೈರಿಗಳಾದವು ನೋಡಾ.
ಕರಿಯ ಕರವ ಮುರಿದು
ಹರಿಯ ಮುಖದಲ್ಲಿ ಹಾಲು ಕುಡಿಯಬಲ್ಲರೆ
ಸಿರಿದೇವಿ ಮಡಿದಳು.
ಅರಿಗಳಾರು ನಮಗಾಧಾರವಿಲ್ಲೆನುತ
ತೆಗೆದೋಡಿದುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./225
ಕರಿಯ ಕಾಮಿನಿಯ ಉದರದಲ್ಲಿ ಧರೆ ಈರೇಳಿಪ್ಪವು ನೋಡಾ.
ಹರಿ ಹತ್ತನು ಹೊತ್ತು ನಡೆವುತ್ತಿಪ್ಪಳು ನೋಡಾ.
ಆಕೆಯ ಶಿರದಲ್ಲಿ ಸಿಂಹ, ಹೃದಯದಲ್ಲಿ ಕರಿ,
ಸರ್ವಾಂಗದಲ್ಲಿ ಭಲ್ಲುಕ ನೋಡಾ.
ಶಿರದಲ್ಲಿ ಶಿವಕಳೆ, ಹೃದಯದಲ್ಲಿ ಪರಮಕಳೆ,
ಸರ್ವಾಂಗದಲ್ಲಿ ಸರ್ವಜ್ಞಾನವರ್ಮಕಳೆ ಉದಯವಾಗಲು
ಶಿರದ ಸಿಂಹ ಸತ್ತು, ಹೃದಯದ ಕರಿಯಳಿದು
ಸರ್ವಾಂಗದಲ್ಲಿ ತೊಡರಿದ ಭಲ್ಲೂಕ ಬಿಟ್ಟು
ಸರ್ವಜ್ಞ ನಿನಗೆ ನಾನು ಭಕ್ತನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./226
ಕರಿಯ ದಾನವನ ಶಿರದಲ್ಲಿ ಮರುಜೆವಣಿಯ ಹಣ್ಣಿಪ್ಪುದ ಕಂಡೆ.
ಇರುಹೆ ಬಂದು ಮುತ್ತಲು ಮರುಜೆವಣಿ
ಆರಿಗೂ ಕಾಣಬಾರದಯ್ಯ.
ಇರುಹಿನ ಬಾಯ ಟೊಣೆದು
ಮರುಜೆವಣಿಯ ಹಣ್ಣ ಸವಿಯಬಲ್ಲಾತಂಗೆ
ಮರಣವಿನ್ನೆಲ್ಲಿಯದೋ?
ಮರಣವ ಗೆಲಿದಾತನನೇ ಮಹಾಲಿಂಗೈಕ್ಯನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./227
ಕರಿಯ ಮಹಿಸನಿಗೊಂದು ಅರಿದ ತಲೆ ಹುಟ್ಟಿ
ಧರೆಯಾಕಾಶವನಾರಡಿಗೊಂಡಿತ್ತಯ್ಯ.
ಅರಿದ ತಲೆಯಲ್ಲಿ ಉರಿ ಹುಟ್ಟಲಾಗಿ
ಶಿರ ಬೆಂದು ಕರಿಯ ಮಹಿಸನಳಿದು
ಧರೆಯಾಕಾಶವ ಬೆರಸಿ ಚಿದಾಕಾಶಮಯವಾಯಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./228
ಕರಿಯ ಶಿರದಲ್ಲಿ ಬರಿಕೈ ಹುಟ್ಟಿ
ಶರೀರವ ನುಂಗಿ ಉರಿಯನುಣ್ಣುತ್ತಿದೆ ನೋಡಾ.
ಉರಿಯ ನಾಲಿಗೆಯಲ್ಲಿ ಮನೋನ್ಮನಿ ಹುಟ್ಟಿ
ಕರಿಯ ಶಿರವ ಮೆಟ್ಟಿ ನಿಂದಳು ನೋಡಾ.
ಉರಿಯ ನಾಲಿಗೆ ನಂದಿ, ಕರಿಯ ಬರಿಕೈ ಮುರಿದು,
ನಿರ್ವಯಲ ಬೆರಸಿದಳು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./229
ಕರ್ಕಸನ ಕಂಗಳೊಳಗೆ ರಾಕ್ಷಸರ ಪಡೆಯಿಪ್ಪುದ ಕಂಡೆನಯ್ಯ.
ರಾಕ್ಷಸರ ಪಡೆಯೊಳಗೆ ಮುಕ್ಕಣ್ಣನುದಯವಾಗಲು
ಕರ್ಕಸನ ಕಂಗಳು ಕೆಟ್ಟು
ರಾಕ್ಷಸರ ಪಡೆ ಮುರಿದೋಡಿತ್ತು ನೋಡಾ!
ಮುಕ್ಕಣ್ಣ ಶಿವನೊಲವ ನಾನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./230
ಕರ್ಣದ ಕೊನೆಯಲ್ಲಿ ಎರಡು ಪರ್ಣ ಹುಟ್ಟಿ
ನಿರ್ನಾಮ ಶ್ರುತವ ನೆಲೆಗೊಳಲೀಯವು ನೋಡಾ.
ಕರ್ಣದ ಕೊನೆಯ ಪರ್ಣವ ಹರಿದು
ನಿರ್ಮಲ ನಿರಾವರಣನೇ ಕರ್ಣವಾಗಿಪ್ಪ
ಪ್ರಭುದೇವರ ಪಾದಕ್ಕೆ ನಮೋ ನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./231
ಕರ್ಮಿ ಬಲ್ಲನೆ ಭಕ್ತಿಯ ಮರ್ಮವ,
ಚರ್ಮವ ತಿಂಬ ಸೊಣಗಬಲ್ಲುದೆ ಪಾಯಸದ ಸವಿಯ?
ಉಚ್ಚಿಯ ಬಚ್ಚಲ ಮಚ್ಚಿ ಕಚ್ಚಿ ಕಡಿದಾಡುವ ಮರುಳುಮಾನವರು
ನಿಶ್ಚಿಂತ ನಿರಾಳನಿಗೊಲಿದು ಒಚ್ಚತ ಹೋಗಿ
ಅಪ್ಪಿ ಅಗಲದಿಪ್ಪ ಅನುಪಮಸುಖನಿವರೆತ್ತ ಬಲ್ಲರು?
ಸಂಸಾರವೆಂಬ ಸೊಕ್ಕು ತಲೆಗೇರಿ ಮುಂದುಗಾಣದೆ
ಅಕಟಕಟಾ ಕೆಟ್ಟಿತ್ತು ನೋಡ ತ್ರೆ ಜಗವೆಲ್ಲ.
ಸ್ವರ್ಗ ಮತ್ರ್ಯ ಪಾತಾಳಕ್ಕೆ ಪಶುಪತಿ ಏಕೋದೇವನೆಂದು ಅರಿದು
ಸಂಸಾರಪ್ರಪಂಚ ಮರೆಯಾ ಮರುಳೇ.
ಪರಮಸುಖದೊಳಗಿರ್ದು ಅಲ್ಪಸುಖಕ್ಕೆ ಆಸೆಮಾಡುವ
ಅಜ್ಞಾನಿಗಳನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ?/232
ಕರ್ಮೆಂದ್ರಿಯಂಗಳ ನಿಮರ್ೂಲ್ಯವ ಮಾಡಬಲ್ಲರೆ ಶರಣ.
ಅರಿಷಡ್ವರ್ಗಂಗಳ ಕಡಿದು ಕತ್ತರಿಸಬಲ್ಲರೆ ಶರಣ.
ಶಬ್ದಾದಿ ವಿಷಯಂಗಳ ಸಂಹರಿಸಿ,
ಬುದ್ಧೀಂದ್ರಿಯಂಗಳ ಒದ್ದು ನೂಕಬಲ್ಲರೆ ಶರಣ.
ಪ್ರಾಣಾದಿ ವಾಯುಗಳ ಪರಿಹರಿಸಿ,
ಅಂತಃಕರಣಂಗಳ ಭ್ರಾಮಕವ ನಿವೃತ್ತಿಯ ಮಾಡಬಲ್ಲರೆ ಶರಣ.
ಗುಣತ್ರಯಂಗಳನಳಿದು, ಪ್ರಣವ ಮೂಲವ ತಿಳಿದು,
ತ್ರಿಣಯನನಪ್ಪಿ ಅಗಲದಿರಬಲ್ಲರೆ
ಆ ಶರಣಂಗೆ ನಮೋನಮೋಯೆಂಬೆ.
ಇಂತಿವನೆಲ್ಲವ ತನ್ನೊಳಗಿರಿಸಿಕೊಂಡು
ತಾನೇ ಸತಿ, ಲಿಂಗವೇ ಪತಿಯಾಗಿ
ಪಂಚೇಂದ್ರಿಯಂಗಳು ನಾಸ್ತಿಯಾಯಿತ್ತೆಂಬ
ಪ್ರಪಂಚಿಗಳ ಮೆಚ್ಚರು ಕಾಣಾ ನಿಮ್ಮಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./233
ಕಲ್ಲ ಶರೀರವ ಧರಿಸಿ ಶಿಲಾಭೋಗಕ್ಕೆ ಬಂದವರು ಕೆಲಬರು:
ಕಾಯಕಂಥೆಯ ತೊಟ್ಟು ಕರ್ಮಭೋಗಕ್ಕೆ ಬಂದವರು ಕೆಲಬರು.
ಕಲ್ಲಕಂಥೆಯ ತೊಟ್ಟು ಲಿಂಗವೆನಿಸಿಕೊಂಡು
ಕಾಯಕಂಥೆಯ ತೊಟ್ಟು ಜಂಗಮವೆನಿಸಿಕೊಂಡು
ಲೋಗರ ಉಪಚಾರಕ್ಕೆ ಬಂದ ಭೋಗರುದ್ರರೆಲ್ಲ
ಆಗು ಹೋಗಿಂಗೆ ಗುರಿ ನೋಡಾ.
ಅದೇನು ಕಾರಣವೆಂದರೆ:
ತಮ್ಮಾದಿಯ ಶಿವತತ್ವವ ಭೇದಿಸಿ ಘನಲಿಂಗಪದಸ್ಥರು
ತಾವೆಂದೆರಿಯದೆ,
ಶಿವಪದಕ್ಕೆ ಅನ್ಯವಾದ ಗಣೇಶ್ವರಪದವೆಂಬ ಗರ್ವಪರ್ವತವಡರಿ
ಕೆಟ್ಟರು ನೋಡ, ತಮ್ಮ ನಿಜಪದವನರಿಯದೆ.
ಇದು ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೆಂಬ
ನಿಜಲಿಂಗಜಂಗಮವೊಂದಾದ ಪದವು
[ಈ] ಒಂದರ ಹಾದಿಯದಲ್ಲ ಬಿಡಾ, ಮರುಳೇ./234
ಕಸನೀರ ತರುವ ದಾಸಿಗೆ ಒಂದು ಶಿಶು ಹುಟ್ಟಿತ್ತು ನೋಡಾ.
ಶಿಶುವೆದ್ದು ತಾಯನಪ್ಪಲು ಕಸನೀರು ಅರತುಹೋಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./235
ಕಾಮದಿಂದ ಕರಗನು, ಕ್ರೋಧದಿಂದ ಕೊರಗನು.
ಲೋಭ ಮೋಹಂಗಳಿಂದತಿ ನೋವನಲ್ಲ ನೋಡಾ, ಭಕ್ತನು.
ಮದ ಮತ್ಸರಗಳಿಂದ ಬೆದಬೆದನೆ ಬೇವವನಲ್ಲ;
ಅಹಂಕಾರ ಮಮಕಾರಗಳಿಂದ ಮತಿಮಂದನಲ್ಲ ನೋಡಾ,
ಭಕ್ತನು
ಆಕಾರ ನಿರಾಕಾರ ಏಕವಾದ
ಏಕಮೇವ ಪರಬ್ರಹ್ಮವು ತಾನೇ ನೋಡಾ, ಭಕ್ತನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./236
ಕಾಮದಿಂದ ಕರಗಿದೆನಯ್ಯ, ಕ್ರೋಧದಿಂದ ಕೊರಗಿದೆನಯ್ಯ;
ಲೋಭ ಮೋಹಂಗಳಿಂದ ಅತಿ ನೊಂದೆನಯ್ಯ;
ಮದ ಮತ್ಸರಂಗಳಿಂದ ಬೆದಬೆದನೆ ಬೆಂದೆನಯ್ಯ;
ಅಹಂಕಾರ ಮಮಕಾರದಿಂದ ಮತಿಮಂದನಾಗಿರ್ದೆನಯ್ಯ;
ಇದು ಕಾರಣ,
ಎನ್ನ ಕಾಮಾದಿ ಷಡುವರ್ಗಂಗಳ ಕಳದು,
ಅಹಂಕಾರ ಮಮಕಾರಂಗಳ ಮಾಣಿಸಿ,
ನಿರಹಂಕಾರಿಯೆಂದೆನಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./237
ಕಾಯ ಬತ್ತಲೆಯಿದ್ದರೇನೋ ಮಾಯವಳಿಯದನ್ನಕ್ಕರ?
ಮಂಡೆ ಬೋಳಾದರೇನೋ
ಸಂಸಾರ ವಿಷಯವ ಛೇದಿಸದನ್ನಕ್ಕರ?
ಇದೇತರ ನಿರ್ವಾಣ? ಸುಡು.
ನಿರಾಲಂಬಿಗಳಾದ ನಿಜ ಶರಣರು ಮಚ್ಚರು ಕಾಣಾ.
ಹೊರ ವೇಷದ ಹೂಸಕ[ರ],
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./238
ಕಾಯ ಲಿಂಗಾರ್ಪಿತವಾದ ಬಳಿಕ
ಕರ್ಮತ್ರಯಗಳು ಇರಲಾಗದು ನೋಡಾ.
ಜೀವ ಲಿಂಗಾರ್ಪಿತವಾದ ಬಳಿಕ
ಸಂಸಾರವ್ಯಾಪ್ತಿಯಹಂಥಾ ಜೀವನಗುಣವಿರಲಾಗದು.
ಅದು ಅರ್ಪಿತವಲ್ಲ ನೋಡಾ.
ಕರಣಂಗಳು ಲಿಂಗಾರ್ಪಿತವಾದ ಬಳಿಕ
ಆ ಕರಣಂಗಳೆಲ್ಲವು ಲಿಂಗಕಿರಣಂಗಳಾಗಿ
ಆ ಲಿಂಗಕಿರಣವೆ ಹರಣವಾಗಿರಬೇಕು ನೋಡಾ.
ಕಾಯದ ಜೀವದ ಕರಣದ ಗುಣವ ಕಳೆಯದ
ಲಿಂಗಾರ್ಪಿತ ಪ್ರಸಾದಿಗಳೆಂಬ ಪ್ರಪಂಚಿಗಳ ಮಚ್ಚನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./239
ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ.
ಕರಣಕ್ಕಾಧಾರ ಭಕ್ತ. ಲಿಂಗಕ್ಕಾಧಾರ ಭಕ್ತ.
ಜಂಗಮಕ್ಕಾಧಾರ ಭಕ್ತ. ಪ್ರಸಾದಕ್ಕಾಧಾರ ಭಕ್ತ.
ಶಕ್ತಿಗಾಧಾರ ಭಕ್ತ. ಭಕ್ತಿಗಾಧಾರ ಭಕ್ತ.
ಎನಗಾಧಾರ ಭಕ್ತ. ನಿನಗಾಧಾರ ಭಕ್ತ.
ನಾನು ನೀನೆನ್ನದೆ ನಿರವಯ ನಿರ್ಮಾಯನಯ್ಯ ಭಕ್ತನು.
ಇಂತಪ್ಪ ಭಕ್ತ ಸಂಗನಬಸವಣ್ಣನ ಶ್ರೀಪಾದಪದ್ಮದಲ್ಲಿ
ಭ್ರಮರನಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./240
ಕಾಯಕ್ಕೆ ಇಷ್ಟಲಿಂಗವೆಂದೆಂಬಿರಿ;
ಮನಕ್ಕೆ ಪ್ರಾಣಲಿಂಗವೆಂದೆಂಬಿರಿ;
ಆತ್ಮಂಗೆ ತೃಪ್ತಿಲಿಂಗವೆಂದೆಂಬಿರಿ;
ಈ ತ್ರಿವಿಧಾಂಗದಲ್ಲಿ ತ್ರಿವಿಧಲಿಂಗಸಂಬಂಧವಾಯಿತ್ತೆಂದೆಂಬಿರಿ.
ಮನ ಭಾವಂಗಳಲ್ಲಿ ಅರ್ಪಿತಕ್ರೀಯಲ್ಲಿ
ಆರ್ಪಿತವಿಲ್ಲಾ ಎಂಬುದು ಅದು ಅರುಹೆ?
ಕ್ರಿಯೆಗೂ ಜ್ಞಾನಕ್ಕೂ ಭಿನ್ನವುಂಟೇ ಕುರಿಮಾನವ?
ಇದು ಕಾರಣ,
ಕಾಯದ ಕೈಮುಟ್ಟಿ ಕ್ರಿಯಾರ್ಪಣ.
ಮನದ ಕೈಮುಟ್ಟಿ ಜ್ಞಾನಾರ್ಪಣ.
ಭಾವದ ಕೈಮುಟ್ಟಿ ಪರಿಣಾಮಾರ್ಪಣ.
ಈ ತ್ರಿವಿಧಾರ್ಪಣದೊಳಗೆ
ಒಂದು ಬಿಟ್ಟು ಒಂದ ಅರ್ಪಿಸಲಾಗದು.
ಇದು ಕಾರಣ,
ಎಷ್ಟು ಅರುಹುಳ್ಳಾತನಾದರೂ ಆಗಲಿ
ಇಷ್ಟಲಿಂಗಾರ್ಪಣವಿಲ್ಲದೆ,
ಪ್ರಾಣವೇ ಲಿಂಗವಾಯಿತ್ತೆಂದು
ಅನ್ನ ಪಾನಂಗಳು ಮುಖ್ಯವಾಗಿ
ರೂಪಾಗಿ ಬಂದ ಸಮಸ್ತ ಪದಾರ್ಥಂಗಳನು
ತನ್ನ ಇಷ್ಟಲಿಂಗಕ್ಕೆ ಕೊಡದೆ ಬಾಯಿಚ್ಚೆಗೆ ತಿಂಬ ನರಕಜೀವಿಯ
ಎನಗೊಮ್ಮೆ ತೋರದಿರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./241
ಕಾಯಗೊಂಡು ಹುಟ್ಟಿಸಿ, ಕರಣಾದಿಗುಣಂಗಳಿಗೆ ಗುರಿಮಾಡಿ,
ಕಾಡಿಸಾಡುವಿರಯ್ಯ.
ಇದು ಕಾರಣ, ಎನ್ನ ಕಾಯದ ಕರಣದ ಗುಣಂಗಳ ಕಳದು
ಎನ್ನ ಒಳಹೊರಗೆ ಹಿಡಿದಿಪ್ಪ ಮಾಯಾಪ್ರಪಂಚವ ಮಾಣಿಸಿ,
ನೀವಲ್ಲದೆ ಮತ್ತೇನುವನು ಅರಿಯದಂತೆ
ಸಂಸಾರಸುಖವ ನೆನೆಯದಂತೆ ಕರುಣಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./242
ಕಾಯದ ಮೇಲೆ ಲಿಂಗವಧರಿಸಿ ದೇವಪೂಜೆಯ ಮಾಡಿ
ಕಾಯವಳಿದು ದೇವತಾಭೋಗವನೆಯಿದಿಹೆನೆಂಬ
ಗಾವಿಲರ ಎನಗೊಮ್ಮೆ ತೋರದಿರಯ್ಯ.
ಕಾಯವನು ಜೀವವನು ಲಿಂಗದಲ್ಲಿರಿಸಬಲ್ಲರೆ
ಮಹಾದೇವನೆಂದು ಬೇರುಂಟೇ?
ಆ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./243
ಕಾಯದ ರೂಪನು ಕಂಗಳು ನುಂಗಿತ್ತು.
ಪ್ರಾಣದ ರೂಪನು ನೆನಹು ನುಂಗಿತ್ತು.
ಭಾವದ ರೂಪನು ಅರುಹು ನುಂಗಿತ್ತು.
ಇವೆಲ್ಲರ ರೂಪನು ನಿರೂಪು ನುಂಗಿತ್ತು,
ಆ ನಿರೂಪು ಸ್ವರೂಪೀಕರಿಸಿ ನಾ ನುಂಗಿದೆನು.
ಆ ನಿರೂಪು ಸ್ವರೂಪವೆರಡೂ ಬಯಲು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./244
ಕಾಯದೊಳಗಣ ಜೀವ ಹೇಂಗಿಪ್ಪುದೆಂದಡೆ:
ಒಳಗೊಂದು ಬೆಳಗುವ ಜ್ಯೋತಿಯಂತಪ್ಪುದಯ್ಯ.
ಕಾಯವೇ ಶರಣ, ಜೀವವೇ ಲಿಂಗವೆಂಬ
ಉಪಾಯವನಾರೂ ತಿಳಿಯರಲ್ಲಾ.
ಜೀವನ ಬೆಳಗು ಕಾಯವ ನುಂಗಲು
ಕಾಯ ನಿರವಯವಾಯಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./245
ಕಾಯಪ್ರಸಾದವ ಎನ್ನ ಕರಸ್ಥಲದಲ್ಲಿ ಕಂಡೆ.
ಅದು ಎನ್ನ ಕಂಗಳ ನುಂಗಿ
ಸರ್ವಾಂಗವು ತಾನಾಗಿ ನಿಂದು
ಪ್ರಜ್ವಲಿಸುತ್ತಿತ್ತು ನೋಡಾ.
ಪ್ರಾಣ ಪ್ರಸಾದವ ಎನ್ನ ಮನಸ್ಥಲದಲ್ಲಿ ಕಂಡೆ.
ಅದು ಎನ್ನ ಮನವ ನುಂಗಿತ್ತು ನೋಡಾ.
ಅನುಭಾವ ಪ್ರಸಾದವ ಎನ್ನಾತ್ಮನ ಕೈಯಲ್ಲಿ ಕಂಡೆ.
ಅದು ಎನ್ನಾತ್ಮನ ನುಂಗಿತ್ತು ನೋಡಾ.
ಕಾಯಪ್ರಸಾದ ಪ್ರಾಣಪ್ರಸಾದ ಅನುಭಾವಪ್ರಸಾದವೆಂಬ
ಈ ತ್ರಿವಿಧಪ್ರಸಾದವು ಒಂದಾಗಿ,
ಎನ್ನ ಬ್ರಹ್ಮರಂಧದಲ್ಲಡಗಿ ನಿರ್ಭಾವ ಪ್ರಸಾದವಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./246
ಕಾಯಲಿಂಗಾರ್ಪಿತವಾಯಿತ್ತಾಗಿ
ಕರ್ಮ ನಿಮರ್ೂಲ್ಯವಾಗಿ
ನಿರ್ಮಲಾಂಗಿಯಾದೆನು ನೋಡಾ.
ಜೀವ ಲಿಂಗಾರ್ಪಿತವಾಯಿತ್ತಾಗಿ
ಜೀವ ಪರಮರೆಂಬ ಉಭಯವಳಿದು
ಚಿತ್ಪರಮಲಿಂಗವಾದೆನು ನೋಡಾ.
ಪ್ರಾಣಲಿಂಗಾರ್ಪಿತವಾಯಿತ್ತಾಗಿ
ಇಹಪರವನರಿಯೆನು ನೋಡಾ.
ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ
ಶರಣ ಲಿಂಗವೆಂಬ ಕುರುಹಿಲ್ಲ ನೋಡಾ.
ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ
ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ
ಅಪ್ರತಿಮ ಪ್ರಸಾದಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./247
ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ.
ಮಾಯೆಯಿಲ್ಲದ ಭಕ್ತ, ಮರಹಿಲ್ಲದ ಭಕ್ತ, ಅರುಹಿಲ್ಲದ ಭಕ್ತ.
ಒಳಗಿಲ್ಲದ ಭಕ್ತ, ಹೊರಗಿಲ್ಲದ ಭಕ್ತ.
ತಾನಿಲ್ಲದ ಭಕ್ತ, ಇದಿರಿಲ್ಲದ ಭಕ್ತ.
ತಾನಿದಿರೆಂಬುವುದೇನುಯೇನೂಯಿಲ್ಲದ ಪರಮನಲ್ಲಿ
ಬೆರಸಿ ಬೇರಿಲ್ಲದ ಪರಮಭಕ್ತನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./248
ಕಾಯವೆಂಬ ಕೆರೆಗೆ,
ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ,
ದೃಢವೆಂಬ ತೂಬನಿಕ್ಕಬೇಕಯ್ಯ.
ಆನಂದವೆಂಬ ಜಲವ ತುಂಬಿ,
ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ.
ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ ಬೆಳೆಸಿ,
ಅರುಹೆಂಬ ಹೂವ, ಅದ್ವೆ ತವೆಂಬ ಹಸ್ತದಿಂದ ಕುಯಿದು
ಅನುಪಮಲಿಂಗಕ್ಕೆ, ಪೂಜಿಸಬಲ್ಲರೆ ಲಿಂಗಾರ್ಚಕರೆಂಬೆ.
ಈ ಭೇದವನರಿಯದೆ, ಹುಸಿಯನೆ ಪೂಜಿಸಿ,
ಗಸಣೆಗೊಳಗಾದ ಪಿಸುಣಿಗಳ
ಲಿಂಗಪೂಜಕರೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./249
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ.
ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ
ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ.
ಇದೇ ಸಂಸಾರವೆಂಬುದನರಿಯದೆ
ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು
ವಿರಕ್ತನಾದೆನೆಂಬ ಅಜ್ಞಾನಿಯ ಪರಿಯ ನೋಡಾ.
ಇದು ವಿರಕ್ತಿಯೇ? ಅಲ್ಲ.
ದೇಹೇಂದ್ರಿಯ ಮನಃಪ್ರಾಣಾದಿಗಳ
ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು.
ಆತಂಗೆ ನಮೋ ನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./250
ಕಾಯಶೂನ್ಯನು ಕರಣಶೂನ್ಯನು ಮಾಹೇಶ್ವರನು.
ಆತ್ಮಶೂನ್ಯನು ಸರ್ವಶೂನ್ಯ ನಿರಾಲಂಬಿ ಮಾಹೇಶ್ವರನು.
ಆದಿ ಅನಾದಿಯ ಗೆದ್ದ ಅನಾದಿ ಪರಶಿವಮೂರ್ತಿಯ
ಮನಮುಟ್ಟಿದ ಧೀರನಯ್ಯ ನಿಮ್ಮ ವೀರಮಾಹೇಶ್ವರನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./251
ಕಾರ್ಯನಲ್ಲ, ಕಾರಣನಲ್ಲ,
ಕಲ್ಪಿತನಲ್ಲ, ನಿರ್ವಿಕಲ್ಪಿತನಲ್ಲ,
ನೆನಹುಮಾತ್ರದಿಂದ ಜಗವ ಸೃಷ್ಟಿಸಿದೆನೆಂಬ
ಭಾವ ಬಣಿತೆಯವಲ್ಲ,
ಇದಿರಿಂಗೆ ತಾನಿಲ್ಲ, ತನಗೆ ಇದಿರಾಗಿ ಒಂದು ವಸ್ತುವಿಲ್ಲ,
ಪ್ರತಿಯಿಲ್ಲದ ಪ್ರತಿಮ, ಅನುಪಮಮಹಿಮ,
ನಿನ್ನ ನಿಃಕಲನೆಂದೆಂಬರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./252
ಕಾಲದ ಗಂಡ, ಕರ್ಮದ ಗಂಡ.
ವಿಧಿಯ ಗಂಡ, ವಿಧಾತನ ಗಂಡ.
ಇಹದ ಗಂಡ, ಪರದ ಗಂಡ.
ಇಹಪರವ ಮೀರಿದ ಪರಾಪರನು ನೋಡಾ, ಮಾಹೇಶ್ವರನು.
ಅಂಗದ ಮೇಲೆ ಲಿಂಗವ ಧರಿಸಿ,
ಲಿಂಗಾಂಗವನೊಂದು ಮಾಡಿ,
ನಿತ್ಯನೇ ತಾನೆಂದರಿಯದೆ, ಸಾವಿಗಂಜುವ ಸಂದೇಹಿಯ ಗಂಡ.
ನಿಸ್ಸಂದೇಹಿ, ನಿರ್ಲೆಪಕನಯ್ಯ, ಮಾಹೇಶ್ವರನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./253
ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಕಾಮನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ತನುತ್ರಯಂಗಳೆಂಬ ತ್ರಿಪುರವ
ಚಿತ್ಶಿಖಿಯೆಂಬ ಜ್ಞಾನಾಗ್ನಿಯಿಂದ ದಹಿಸಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮತ್ರಯಂಗಳ ದಹಿಸಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಸತ್ವ ರಜ ತಮಂಗಳ ಸುಟ್ಟುರುಹಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ದಹಿಸಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಜೀವಭಾವ ಇಂದ್ರಿಯಭಾವ ವಿಷಯಭಾವ ಭೂತಭಾವ
ಜನನಭಾವ ಬೀಜಭಾವವೆಂಬ ಭವಾಶ್ರಯವ
ಜ್ಞಾತೃ ಜ್ಞಾನ ಜ್ಞೇಯವೆಂಬ
ತ್ರಿಪುಟಿಯೇಕಾರ್ಥವಾದ ಅಗ್ನಿಯಿಂದ ಸುಟ್ಟುರುಹಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಸ್ವರ್ಗ ಮತ್ರ್ಯ ಪಾತಾಳಕ್ಕೆ ಆಧಾರಸ್ಥಾನವೇ ಚಿತ್ತು.
ಆ ಚಿತ್ಸ್ವರೂಪವೇ ಬಸವಣ್ಣ.
ಇದು ಕಾರಣ ಚಿದ್ವಿಭೂತಿಯನೆ ಸದಾಕಾಲದಲ್ಲಿ ಧರಿಸಿ,
ಶುದ್ಧ ಚಿದ್ರೂಪನಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./254
ಕಾಲವ್ಯಾಘ್ರನ ಶಿರವನೊಡೆದು
ಜ್ವಾಲಾಮುಖ ಗಣೇಶ್ವರನುದಯವಾಗಿ
ಕಾಲ ಕಾಮ ಮಾಯಾದಿಗಳ ಮದರ್ಿಸಿ
ಲಿಂಗಲೀಲೆಯಿಂದವೋಲಾಡುತಿದಾನೆ ನೋಡಾ.
ಆ ಜ್ವಾಲಾಮುಖ ಗಣೇಶ್ವರನನು
ಉರಿಲಿಂಗವೆಯ್ದಿ ನುಂಗಿದ್ದ ಕಂಡು
ನಾನು ಲಿಂಗೈಕ್ಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./255
ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ ಕರೆವುದ
ಮಾನವಲೋಕದವರು ಕಂಡು,
ಕಾಲಾಗ್ನಿರುದ್ರನ ಭುವನವೆತ್ತ ಜೇನುಮಳೆಯತ್ತಲೆಂದು
ತಾವು ಚೋದ್ಯವ ಮಾಡುತ್ತಿರಲು,
ಮೇಲಣ ಲೋಕದಿಂದ ಅಮೃತಸೋನೆ ಸುರಿಯಲು
ಕಾಲಾಗ್ನಿ ಕೆಟ್ಟಿತ್ತು.
ಜೇನುಸೋನೆ ಅಮೃತವಾಗದ ಮುನ್ನ,
ನೋಡಬಂದವರೆಲ್ಲ ಸತ್ತುದ ಕಂಡು,
[ತಾ] ನಿರ್ವಯಲಾದನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./256
ಕಾವಿಯ ಸೀರೆಯ ಒಡೆಯರು
ಬಾವಿಯ ಆಳವ ನೋಡಿಹೆನೆಂದು ಹೋದರೆ
ಬಾವಿಯ ಬಗದೇವಿ ನುಂಗಿದುದ ಕಂಡೆನಯ್ಯ.
ಬಾವಿಯ ಹೂಳಿ, ಬಗದೇವಿಯ ಕೊಂದು
ಕಾವಿಯ ಸೀರೆಯ ಹರಿದಲ್ಲದೆ
ದೇವರ ಕಾಣಬಾರದು; ಪ್ರಾಣಲಿಂಗ ಸಂಬಂಧಿಗಳೆಂಬರೆ
ನಾಚದವರನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./257
ಕಾಳರಾತ್ರೆಯ ಮನೆಯ ಮಂಟಪದ ಕೋಣೆ ಕೋಣೆಗಳೊಳಗೆ
ಏಳೆಂಟು ಕೋಣಗಳು ಹೂಣಿ ಹೊಡೆದಾಡುತ್ತಿವೆ ನೋಡಾ.
ಭಾನುವಿನ ಉದಯಕ್ಕೆ ಕೋಣ ಸತ್ತುದ ಕಂಡು
ಪ್ರಾಣವೇ ಲಿಂಗವಾಯಿತ್ತೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./258
ಕಿಚ್ಚಿಗೂ ನೀರಿಗೂ ಏಕತ್ವವುಂಟೆ?.
ಗಾಳಿಗೂ ಧೂಳಿಗೂ ಏಕತ್ವವುಂಟೆ?.
ಭೂಮಿಗೂ ಆಕಾಶಕ್ಕೂ ಏಕತ್ವವುಂಟೆ?.
ನೀರಿಗೂ ನೆಳಲಿಗೂ ಏಕತ್ವವುಂಟೆ?.
ಕನ್ನಡಿಗೂ ಪ್ರತಿಬಿಂಬಕ್ಕೂ ಏಕತ್ವವುಂಟೆ?.
ತಮಕ್ಕೂ ಬೆಳಕಿಗೂ ಏಕತ್ವವುಂಟೆ?.
ಪ್ರಾಣ ಪರತತ್ವದಲ್ಲಡಗಿದ ಪ್ರಾಣಲಿಂಗೈಕ್ಯಂಗೆ,
ಪ್ರಪಂಚಿನ ಹೊದ್ದಿಗೆಯುಂಟೆ ಹೇಳಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./259
ಕಿವಿಯಿಂದ ಕೇಳಿದುದು, ಕಣ್ಣಿಂದ ಕಂಡುದು,
ಘ್ರಾಣದಿಂದ ಘ್ರಾಣಿಸಿದುದು, ಜಿಹ್ವೆಯಿಂದ ಭುಂಜಿಸಿದುದು,
ಸ್ಪರ್ಶದಿಂದ ಮುಟ್ಟಿದುದು, ತೃಪ್ತಿಯಿಂದ ಪರಿಣಾಮಿಸಿದುದು,
ಲಿಂಗವೆಂದೆಂಬುದು ಸಹವರ್ತಿಯೆನಿಸಿಕೊಂಬುದು.
ಒಂದಕೊಂದು ಪ್ರಾಣ ಒಂದನೊಂದು ಕೂಡಿಹುದು ತಂದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./260
ಕುಂಡಲಿಯ ಒಲೆಯ ಭಾಂಡದಲ್ಲಿ ಮಂಡಿಸಿಪ್ಪ
ತುಂಡುಮುಂಡುಕಾರ್ತಿ ಜಗವನೆಲ್ಲಾ ಬಂಡುಮಾಡುತ್ತಿದಾಳೆ
ನೋಡಾ.
ಕುಂಡಲಿಯ ಒಲೆಯಲ್ಲಿ ಕೆಂಡವ ಚಾಚಲು ಭಾಂಡವೊಡೆದು
ತಂಡು ಮುಂಡುಕಾರ್ತಿಯ ತಾಮಸ ಬೆಂದು
ಕುಂಡಲಿಯ ಸರ್ಪನೆದ್ದು ಮಂಡೆವಾಲನುಂಡು
ಮಡಿದುದ ಕಂಡೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./261
ಕೆಂಜೆಡೆಯ ಭಾಳನೇತ್ರಂ
ರಂಜಿಪ ರವಿಕೋಟಿ ತೇಜದಿಂದುರವಣಿಪಂ
ಕಂಜಪದಯುಗದೊಳು ಹೊಳೆವುತ್ತಿಹ ನಂಜುಗೊರಳಭವ
ಭವಕುಕ್ಷಿಯೊಳೀರೇಳುಭುವನವಂ ಮಿಗೆ ತಾಳ್ದ
ರಾಕ್ಷಸಹರ ರಕ್ಷಿಸೆನ್ನುವಂ
ಹರ ಹರಾ ಶಿವ ಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./262
ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ?.
ಒಡೆದ ಮಡಕೆಗೆ ಒತ್ತುಮಣ್ಣಕೊಟ್ಟರೆ ನಿಲಬಲ್ಲುದೇ ಅಯ್ಯ?.
ಮುತ್ತೊಡೆದರೆ ಹತ್ತಬಲ್ಲುದೇ?.
ಸುರಚಾಪ ನಿರ್ಧರವಾಗಬಲ್ಲುದೇ ಅಯ್ಯ?.
ಚಿತ್ತವೊಡೆದರೆ ಭಕ್ತಿ ನೆಲೆಗೊಳ್ಳದು.
ಭಕ್ತಿ ಬೀಸರವಾದರೆ, ಮುಕ್ತಿಯೆಂಬುದು ಎಂದಿಗೂ ಇಲ್ಲ ಕಾಣಾ.
ಇದು ಕಾರಣ,
ಚಿತ್ತ ಲಿಂಗವನಪ್ಪಿ ಒಡೆಯದೆ,
ಭಕ್ತಿ ಬೀಸರವೊಗದೆ,
ನಿಮ್ಮ ಕೂಡಿ, ನಿತ್ಯ ನಿರ್ಮುಕ್ತನಾದೆನು ಕಾಣಾ.
ಎಲ್ಲರ ಪರಿಯಲ್ಲ, ಎನ್ನ ಪರಿ ಬೇರೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./263
ಕೆಸರಿಲ್ಲದ ಭೂಮಿಯಲ್ಲಿ
ಎಸಳಿಲ್ಲದ ಏಕೋವರ್ಣದ ತಾವರೆ ಹುಟ್ಟಿತ್ತು ನೋಡಾ.
ಆ ಭಾವತಾವರೆಯಿಂದ ಪೂಜೆಯ ಮಾಡುವ ಶರಣನೇ
ದೇವನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./264
ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ.
ಕೇಡಿಲ್ಲದ ಲಿಂಗಕ್ಕೆ ಕೇಡ ಕಟ್ಟುವರಯ್ಯ.
ಕೇಡಿಲ್ಲದ ಜಂಗಮಕ್ಕೆ ಕೇಡ ಕಟ್ಟುವರಯ್ಯ.
ಕೇಡಿಲ್ಲದ ಮಂತ್ರಕ್ಕೆ ಕೇಡಕಟ್ಟಿ,
ಆಹ್ವಾನಿಸಿದಲ್ಲಿ ಇದ್ದಿತ್ತು,
ವಿಸರ್ಜಿಸಿದಲ್ಲಿ ಮಂತ್ರ ಭಿನ್ನವಾಯಿತ್ತೆಂದು,
ಸಂದೇಹದಲ್ಲಿ ಮುಳುಗಿ ಮೂಡುತ್ತಿಪ್ಪರಯ್ಯ.
ತನು ಮನ ಭಾವದಲ್ಲಿ ವಜ್ರಲೇಪದಂತೆ ಲೇಪಿಸಿಕೊಂಡು
ಒಳಹೊರಗೆ ಓಂನಮಶ್ಯಿವಾಯಯೆನುತ
ಸದಾ ಸನ್ನಿಹಿತನಾಗಿಪ್ಪುದನರಿಯದೆ, ಕೆಟ್ಟಿತ್ತು ಇದ್ದಿತ್ತು ಎನ್ನಲೇಕೆ?
ಕೆಡುವಾಗ ಹಾಲಂಬಿಲವೇ? ಬಳಸುವಾಗ ಹಾಲೋಗರವೇ?
ಅದು ಕೆಡುವುದು ಅಲ್ಲ; ಅಳಿವುದೂ ಅಲ್ಲ.
ನಿಮ್ಮ ಸಂಕಲ್ಪ ವಿಕಲ್ಪವೆಂಬ ಸಂದೇಹವೇ ಕೆಡಿಸುತ್ತ ಅಳಿಸುತ್ತ
ನಿಮ್ಮ ಕಾಡುತ್ತಿಪ್ಪವು ಕಾಣಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./265
ಕೈ[ಯ]ಮರೆದು ಕಾದುವ ಕಾಳಗವದೇನೋ?
ಮೈಮರೆದು ಮಾಡುವ ಮಾಟವದೇನೋ?
ಬಾಯಿ ಮರೆದು ಉಂಬ ಊಟವದೇನೋ?
ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ
ಜನ್ಮದ ಮೃತ್ಯು ನೋಡಾ.
ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ.
ಸಂಕಲ್ಪ ವಿಕಲ್ಪವಿಲ್ಲದೆ
ಮನ ಲಿಂಗಸಾಹಿತ್ಯವಾದರೆ ಅರ್ಪಿತ;
ಅದು ಪ್ರಸಾದ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./266
ಕೈಯಲ್ಲಿ ಕುರುಹು, ಬಾಯಲ್ಲಿ ಅರುಹ ನುಡಿವುತಿಪ್ಪ ಅಯ್ಯಗಳೆಲ್ಲ
ಇರುಹಿನ ಮೂತ್ರದಲ್ಲಿ ಪ್ರಳಯವಾದರು ನೋಡಾ.
ಬಳಿಕಿವರರುಹು ಬರುದೊರೆವೋಯಿತ್ತು.
ಇವರ ಪ್ರಾಣಲಿಂಗಿ ಸಂಬಂಧಿಗಳೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./267
ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ
ಕಾಯ ಕೊಯಿವ ಅರೆಮರುಳನಂತೆ
ಅನಾದಿಮೂಲದೊಡೆಯ
ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ
ಬೇರೆ ಲಿಂಗವುಂಟು, ಬೇರೆ ಕ್ಷೇತ್ರವುಂಟು ಎಂದು
ಹಲವು ಲಿಂಗಕ್ಕೆ ಹರಿದು ಹಂಬಲಿಸುವ
ಈ ಸೂಳೆಗೆ ಹುಟ್ಟಿದವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪ್ರಸಾದವಿಲ್ಲ
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./268
ಕೊ[ತ್ತಿ]ಗೆ ಕೊಂಬು ಹುಟ್ಟಬಲ್ಲುದೆ?
ನುಚ್ಚಕ್ಕಿ ಮೊಳೆಯಬಲ್ಲುದೆ?
ಸತ್ತ ಮರ ಎಳಕ ಬಲ್ಲುದೆ?
ಅರೆಯ ಮೇಲೆ ತಾವರೆ ಬೆಳೆಯಬಲ್ಲುದೆ ಅಯ್ಯ?
ದುರ್ಬುದ್ಧಿ ಮಾನವರ ಭಾವದಲ್ಲಿ ಶಿವಜ್ಞಾನ
ಕರಿಗೊಳ್ಳಬಲ್ಲುದೆ ಅಯ್ಯ?
ಶಿವಜ್ಞಾನವಿಲ್ಲದವರಿಗೆ ಶಿವಕೃಪೆಯೆಲ್ಲಿಯದೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ/269
ಕೊರಡು ಕೊನರಾಗಬಲ್ಲುದೇ?
ಬರಡು ಹಯನಾಗಬಲ್ಲುದೇ ಅಯ್ಯಾ?
ಕುರುಡಗೆ ಕನ್ನಡಿಯ ತೋರಿದಡೆ ನೋಡಬಲ್ಲನೆ?
ಮೂಗಗೆ ರಾಗವ ಹೇಳಿದರೆ ಹಾಡಬಲ್ಲನೆ ಅಯ್ಯ?
ಹೇಗ ಬುದ್ಧಿಯ ಬಲ್ಲನೇ ಅಯ್ಯ?
ಲೋಗರಿಗೆ ಉಪದೇಶವ ಹೇಳಿದರೆ
ಶಿವಸತ್ಪಥದ ಹಾದಿಯ ಬಲ್ಲರೇ ಅಯ್ಯ?.
ಇದು ಕಾರಣ,
ಶಿವ ಸತ್ಪಥದ ಆಗೆಂಬುದು ಶಿವಜ್ಞಾನಸಂಪನ್ನಂಗಲ್ಲದೆ
ಸಾಧ್ಯವಲ್ಲ ಕಾಣ.
ಅಸಾಧ್ಯವಸ್ತುವಿನೊಳಗಣ ಐಕ್ಯ
ಅವಿವೇಕಗಳಿಗೆ ಅಳವಡುವುದೇ ನಮ್ಮವರಿಗಲ್ಲದೆ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./270
ಕೋಡಗನ ಅಣಲ ಸಂಚದಲ್ಲಿ
ಎರಡು ದಾಡೆ ಹುಟ್ಟಿದವು ನೋಡಾ.
ಆ ದಾಡೆಯ ಸಂಚಲದಲ್ಲಿ
ಮೂರುಲೋಕವೆಲ್ಲ ಆಳುತ್ತ ಮುಳುಗುತ್ತಿದೆ ನೋಡಾ.
ತ್ರೆ ಜಗದ ಮಸ್ತಕವನೊಡದು ನೀವು ಮೂಡಲು
ಈರೇಳು ಲೋಕವೆಲ್ಲ ಬೆಳಗಾಯಿತ್ತು ನೋಡಾ.
ಈರೇಳು ಲೋಕವನೊಳಕೊಂಡ ಬೆಳಗು ತಾನೆಂದರಿಯಲು
ಕೋಡಗನಣಲಸಂಚದ ದಾಡೆ ಮುರಿಯಿತ್ತು;
ಮೂರು ಲೋಕದ ವೇದನೆ ಮಾದುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./271
ಕ್ರಿಯಾಸ್ವರೂಪವೇ ಲಿಂಗವೆಂದು,
ಜ್ಞಾನಸ್ವರೂಪವೇ ಜಂಗಮವೆಂದು,
ಜ್ಞಾನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ
ಲಿಂಗಕ್ಕೆ ಜೀವಕಳೆಯೆಂದೆ.
ಜ್ಯೋತಿ ಕಪರ್ೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು.
ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು.
ಈ ಕ್ರಿಯಾ ಜ್ಞಾನ ಭಾವ ನಿರವಯವಾದವಾಗಿ
ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ
ಇದುಕಾರಣ,
ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ.
ಕೊಡುವುದು ಕೊಂಬುದು ಎರಡೂ ನಿರ್ಲೆಪವಾದ ಬಳಿಕ
ನಾನೆಂಬುದೂ ನೀನೆಂಬುದೂ,
ಏನು ಏನುಯೆಂಬೂದಕ್ಕೆ ತೆರಹಿಲ್ಲದೆ,
ಪರಿಪೂರ್ಣ ಸರ್ವಮಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./272
ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜರಾ, ಮರಣವೆಂಬ
ಷಡೂರ್ಮಿಗಳಿಲ್ಲದೆಯಿಪ್ಪನು.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ
ಷಡುವರ್ಗಂಗಳಿಲ್ಲದೆಯಿರುತಿರ್ಪನು.
ನಾಹಂ ಕೋಹಂ ಸೋಹಂ ಎಂಬ
ಭಾವರಹಿತನಾಗಿಪ್ಪನು.
ಅಷ್ಟವಿಧಾರ್ಚನೆ, ಷೋಡಶೋಪಚಾರ ರಹಿತನಾಗಿಪ್ಪನು.
ಕಪರ್ೂರ ಅಗ್ನಿ ಸಂಯೋಗವಾಗಿ
ಕಪರ್ುರದ ಗುಣವಳಿದು ಅಗ್ನಿಯಾದಂತೆ
ಲಿಂಗವ ನೆನನೆನೆದು ಲಿಂಗವೇ ತಾನಾಗಿಪ್ಪುದೀಗ
ನಿಜಲಿಂಗೈಕ್ಯಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./273
ಗಂಗಾಸ್ಥಾನ ಕೋಟಾನುಕೋಟಿಗಿಂದ
ವಿಭೂತಿಯಸ್ನಾನವಧಿಕ ನೋಡಾ.
ಮಂತ್ರಸ್ನಾನ ಕೋಟಾನುಕೋಟಿಗಿಂದ
ವಿಭೂತಿಯಸ್ನಾನವಧಿಕ ನೋಡಾ.
ವಿಭೂತಿರೇಣುಮಾತ್ರದಿಂದ ರುದ್ರನಪ್ಪುದು ತಪ್ಪುದು ನೋಡಾ.
ಸರ್ವಾಂಗದಲ್ಲಿ ಶ್ರೀ ವಿಭೂತಿಯ ಉದ್ಧೂಳನವ ಮಾಡಿದಾತನ-
ನೇನೆಂದುಪಮಿಸುವೆನಯ್ಯ ಆ ಮಹಾತ್ಮನ?
ಆತನು ಜಗತ್ ಪಾವನನು ನೋಡಾ!
ಇಂತಪ್ಪ ಪವಿತ್ರಕಾಯಂಗೆ ನಮೋನಮೋಯೆಂಬೆನು ಕಾಣ,
ಆತನು ಪರಮಾತ್ಮಸ್ವರೂಪನಾದ ಕಾರಣ.
ಆತನು ಪಂಚಬ್ರಹ್ಮಸ್ವರೂಪನಾದ ಕಾರಣ,
ಆ ಮಹೇಶ್ವರಂಗೆ ಶರಣೆಂದು ಬದುಕಿದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./274
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ?
ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ?
ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ?
ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ.
ಅಹುದೋ ಅಲ್ಲವೋ, ಏನೋ ಎಂತೋ ಎಂದು
ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ.
ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ.
ಲಿಂಗವನರಿಯದಾತಂಗೆ
ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ.
ಈ ಅರುಹು ಮರಹೆಂಬುಭಯದ ಮುಸುಕ ತೆಗೆದು
ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ
ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./275
ಗಂಡಗಿಂದ ಹೆಂಡತಿ ಮೊದಲೇ ಹುಟ್ಟಿದರು
ಆ ಗಂಡಗಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ.
ಗುರುವಿಗಿಂದ ಶಿಷ್ಯ ಅರುಹುಳ್ಳವನಾದರು,
ಆ ಗುರುವಿಂಗೆ ಭೃತ್ಯನಲ್ಲದೆ ಕರ್ತನಲ್ಲವಯ್ಯ.
ಕುದುರೆಯ ಹಿಡಿಯ ಹೇಳಿದರೆ
ರಾವುತಿಕೆಯ ಮಾಡಿದರೆ ಒಪ್ಪುವರೇ?
ಆಳಾಗಿದ್ದು ಆರಸಾಗಿರ್ದೆನೆಂದರೆ ಒಪ್ಪುವರೇ?
ಮಗನೇನು ತಂದೆಯಾಗಬಲ್ಲನೇ?
ಇದುಕಾರಣ, ಶಿಷ್ಯಂಗೆ ಭಯಭಕ್ತಿ ಕಿಂಕುರ್ವಾಣವೆ ಇರಬೇಕು.
ಈ ಗುಣವುಳ್ಳರೆ ಆ ಶಿಷ್ಯನೆ ಗುರುವಪ್ಪುದು ತಪ್ಪದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./276
ಗಂಡಿಂಗೆ ಹೆಣ್ಣಲ್ಲದೆ ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ
ಈ ಅರೆಮರುಳ ಶಿವನ ನಾನೇನೆಂಬೆನಯ್ಯ?
ಅಪಮಾನವ ಅನ್ಯರಿಗೆ ಕೊಡುವ ದೇವನ ಮರುಳತನವ ನೋಡಾ.
ಅದೇನು ಕಾರಣವೆಂದಡೆ:
`ಪತಿರ್ಲಿಂಗಸ್ಸತೀ ಚಾಹಮಿತಿಯುಕ್ತಸ್ಸದಾ ತಥಾ
ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಂ||’
ಎಂದುದಾಗಿ ಮುಕ್ಕಣ್ಣಂಗೆ ನಾ ಹೆಣ್ಣಾದ ಕಾರಣ
ಎನ್ನ ಕರಣೋಪಕರಣಗಳೆಲ್ಲವು ಲಿಂಗೋಪಕರಣಂಗಳಾಗಿ
ನಿಮ್ಮ ಚರಣವೆ ಹರಣವಾಗಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./277
ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ
ಭೂಮಂಡಲದಲ್ಲಿ ಉದಯವಾದುದ ಕಂಡೆನಯ್ಯ.
ಭೂಮಂಡಲದಲುದಯವಾದ ಶಶಿಕಳೆ,
ತ್ರೆ ಜಗವ ನುಂಗಿತ್ತು ನೋಡ.
ನಾರಿಯರ ತಲೆಯ ಮೆಟ್ಟಿ, ಮೇರುವೆಯ ಹೊಕ್ಕಿತ್ತು ನೋಡಾ.
ಮೇರುಗಿರಿಯ ಪರ್ವತದಲ್ಲಿಪ್ಪಾತನನೆಯ್ದೆ ನುಂಗಿತ್ತು ನೋಡಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./278
ಗಮನವುಳ್ಳನ್ನಕ್ಕರ ನಿರ್ಗಮನವುಂಟು.
ಗಮನ ನಿರ್ಗಮನವುಳ್ಳನ್ನಕ್ಕರ ಸ್ಥಲ ಕುಳವುಂಟು.
ಸ್ಥಲ ಕುಳವುಳ್ಳನ್ನಕ್ಕರ ಸೋಹ ದಾಸೋಹಮುಂಟು.
ಸೋಹ ದಾಸೋಹವುಳ್ಳನ್ನಕ್ಕರ ಜ್ಞಾನಾಚಾರವುಂಟು.
ಜ್ಞಾನಾಚಾರವುಳ್ಳನ್ನಕ್ಕರ ತಾನಿದಿರುಂಟು.
ಗಮನ ನಿರ್ಗಮನ ನಾಸ್ತಿಯಾದರೆ ಸ್ಥಲ ಕುಳನಾಸ್ತಿ.
ಸ್ಥಲ ಕುಳನಾಸ್ತಿಯಾದರೆ ಸೋಹ ದಾಸೋಹ ನಾಸ್ತಿ
ಸೋಹದಾಸೋಹ ನಾಸ್ತಿಯಾದರೆ ಜ್ಞಾನಾಚಾರ ನಾಸ್ತಿ.
ಜ್ಞಾನಾಚಾರ ನಾಸ್ತಿಯಾದರೆ ನಾ ನೀನೆಂಬುದು ನಾಸ್ತಿ.
ನಾ ನೀನೆಂಬುದು ನಾಸ್ತಿಯಾದಲ್ಲಿ ಸವಿಕಲ್ಪ ನಿರ್ವಿಕಲ್ಪ ನಾಸ್ತಿ.
ಸವಿಕಲ್ಪ ನಿರ್ವಿಕಲ್ಪ ನಾಸ್ತಿಯಾದಲ್ಲಿ
ಆದ್ಯರೆನಲಿಲ್ಲ, ವೇದ್ಯರೆನಲಿಲ್ಲ, ಸಾಧ್ಯರೆನಲಿಲ್ಲ,
ಏನೂ ಏನೂ ಇಲ್ಲದ ಸರ್ವಶೂನ್ಯ ನಿರಾಲಂಬವು
ನಿರ್ವಯಲಪದವು;
ಆವ ಆವರಣವೂ ಹೊದ್ದದ ಪರಮಾನಂದ ಪದವು
ಇದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./279
ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ
ಪರಿಣಾಮವಲ್ಲದೆ,
ಬೇರೊಂದೆಡೆಮಾಡಿ ಉಣ್ಣೆಂದರೆ ಉಣ್ಣಬಲ್ಲುದೇ ಅಯ್ಯ?
ಪ್ರಾಣದೊಳಗೆ ಪ್ರಾಣವಾಗಿಪ್ಪ ಲಿಂಗಕ್ಕೆ, ಆ ಶರಣನುಂಡಲ್ಲಿಯೆ
ತೃಪ್ತಿಯಲ್ಲದೆ,
ಬೇರೆ ಊಡಿಸಿದರೆ ಉಣಬಲ್ಲುದೇ ಅಯ್ಯ?
ಸಂಯೋಗ ವಿಯೋಂಗಗಳಲ್ಲಿ, ತಟ್ಟುವ ಮುಟ್ಟುವ,
ಅಣುಬಿಂದು ಸುಖಾರ್ಥವನು,
ಅರಿವವನು, ಅರ್ಪಿಸುವವನು, ಭೋಗಿಸುವವನು, ನೀನೆಯಲ್ಲದೆ,
ನಾ(ನ)ಲ್ಲ ನೋಡಾ.
ಲಿಂಗದೊಳಗಿರ್ದು, ಲಿಂಗಕ್ಕೆ ಲಿಂಗವನರ್ಪಿಸಿ,
ಲಿಂಗಪ್ರಸಾದದೊಳಗೆ, ಒಡಗೂಡಿ ಮಹಾಪ್ರಸಾದಿಯಾಗಿ,
ಮಹಕ್ಕೆ ಮಹವಾಗಿ, ಪರಕ್ಕೆ ಪರವಾಗಿ,
ಸಾವಧಾನ ಪ್ರಸಾದಿಯಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./280
ಗಾಜಿನ ಮನೆಯ ಮಾಡಿಕೊಂಡು ವಿರಾಜಿಸುವ ಗೀಜಿಗನು
ಓಜನ ಕೈಯಲ್ಲಿ ಸಿಕ್ಕಿ ಗಾಜು ಗೋಜಾಗುತ್ತಿದೆ.
ತನ್ನೋಜೆಯ ಮರೆಯಿತ್ತಲ್ಲಯ್ಯ.
ಗಾಜಿನ ಮನೆಯ ಮುರಿದು, ಓಜನ ಕೊಂದು
ಗಾಜು ಗೋಜು ಬಿಟ್ಟು ತನ್ನೋಜೆಯನರಿದಲ್ಲದೆ ಒಳ್ಳಿತ್ತಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./281
ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ,
ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ,
ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ,
ನಿರ್ವಯಲಾದನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./282
ಗಾಳಿ ಬೀಸುವನ್ನಕ್ಕರ ಮರನುಲಿಯದೆ ಮಾಣದಯ್ಯ.
ಕಾಯುವುಳ್ಳನ್ನಕ್ಕರ ವಿಕಾರ ಸಾಯದು ನೋಡ.
ಭಾವವುಳ್ಳನ್ನಕ್ಕರ ಭ್ರಮೆ ಅಡಗದಯ್ಯ.
ಮನವುಳ್ಳನ್ನಕ್ಕರ ಮಾಯೆ ಮಾಣದಯ್ಯ.
ಮಾಯವುಳ್ಳನ್ನಕ್ಕರ ಸಾವು ಮಾಣ್ಬುದೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./283
ಗಿರಿಯ ಮೇಲಣ ಕೋಡಗ,
ಹಿರಿಯ ಮಾರಿಯ ನುಂಗಿತ್ತು ನೋಡಾ.
ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ,
ಎಪ್ಪತ್ತೆ ದು ಗ್ರಾಮವನೆಯಿದೆ ನುಂಗಿತ್ತು ನೋಡಾ.
ದಶಗಮನಂಗಳ ಕೂಡಿ
ವಿಶ್ವತೋಪಥದಲ್ಲಿ ನಡೆವುತಿಪ್ಪುದು ನೋಡಾ.
ಒಂದು ಪಥವ ತಾನೆಂದೂ ಅರಿಯದು ನೋಡಾ.
ತಾ ಬಂದಂದಿಂದ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./284
ಗುಣತ್ರಯಂಗಳನಳಿದ ನಿರ್ಗುಣನ ಮೇಲೆ
ನಿರ್ವಯಲು ಬಂದೆರಗಿತ್ತು ನೋಡಾ.
ನಿರ್ವಯಲು ಬಂದೆರಗಿದ ರಭಸಕ್ಕೆ
ವಿಶ್ವಪ್ರಪಂಚು ಎದ್ದೋಡಿದವು.
ಕರಣಂಗಳೆಂಬ ಕಳ್ಳರು ಕಾಲುಗೆಟ್ಟರು ನೋಡಾ.
ತನುತ್ರಯಂಗಳೆಂಬ ತ್ರಿಪುರದ ಕೀಲು ಹರಿಯಿತ್ತು.
ಕಾಮ ಕಾಲರ ಊಳಿಗದ ಉಪಟಳ ಎದ್ದೋಡಿತ್ತು ನೋಡಾ.
ಆತ್ಮತ್ರಯಂಗಳ ಅಹಂಕಾರದ ಬೇರು ಸಂಹಾರವಾಗಿ
ಪ್ರಕೃತಿತ್ರಯಂಗಳ ಪ್ರಪಂಚು ಕೆಟ್ಟು
ಜೀವ ಪರಮರೆಂಬ ಭಾವ ಸತ್ತಿತ್ತು.
ಜೀವ ಪರಮರೆಂಬ ಭಾವ ಸತ್ತಿತ್ತಾಗಿ
ನಿರ್ಗುಣ ಲಿಂಗೈಕ್ಯವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./285
ಗುರು ಅಳಿದನು ಉಳಿದನು ಎಂದೆಂಬರಿ
ಗುರು ಅಳಿದರೆ ಜಗ ಉಳಿಯಬಲ್ಲುದೆ?
`ಸ್ಥಾವರಂ ಜಂಗಮಾಧಾರಂ ನಿರ್ಮಲಂ ಸ್ಥಿರಮೇವ ಚ|
ಜಗದ್ವಂದಿತಪಾದಾಯ ತಸ್ಮೆ ಶ್ರೀ ಗುರುವೇ ನಮಃ||’
ಎಂದುದಾಗಿ,
ಗುರು ಅಳಿವನೂ ಅಲ್ಲ; ಉಳಿವನೂ ಅಲ್ಲ.
ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು
ಕುತ್ತಗೊಳಿಸುತ್ತಿದೆಯಲ್ಲ.
ಈ ವಿಕಾರದಲ್ಲಿ ಮುಳುಗಿದವನ ಶಿಷ್ಯನೆಂದೆಂಬೆನೆ? ಎನ್ನೆನಯ್ಯ.
ಗುರು ಸತ್ತನೆಂದು ಬಸುರ ಹೊಯಿಕೊಂಡು
ಬಾಯಿಬಡಿಕೊಡು ಅಳುತ್ತಿಪ್ಪ ದುಃಖಜೀವಿಗಳಿಗೆ
ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ;
ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ.
ಈ ತ್ರಿವಿಧವೂ ಇಲ್ಲವಾಗಿ,
ಪಾದೋದಕ ಪ್ರಸಾದವೂ ಇಲ್ಲವಯ್ಯ.
ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು
ಎಂದೆಂದಿಗೂ ಇಲ್ಲವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./286
ಗುರು ಲಿಂಗ ಜಂಗಮದ ಭಕ್ತರೆಂದು
ಗುಣಕಥನವ ನುಡಿದುಕೊಂಡು
ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ
ಅಣ್ಣಗಳು ನೀವು ಕೇಳಿಭೋ.
ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ.
ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು ಭೂತ.
ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ;
ಹೊನ್ನು ನಿಮ್ಮದೆಂಬಿರಿ.
ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ.
ಆ ಭೂತ ನಿಮ್ಮಹಿಡಿದು, ಹಿಸಿಕಿ ಕೊಂದು ಕೂಗಿ,
ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ
ಗಾರುಮಾಡುತಿಪ್ಪವು ಕಾಣಿಭೋ.
ಅ[ವ] ನೀವು ಹಿಡಿದು ಕೀರ್ತಿಸುತಿರ್ದು
ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./287
ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು
ಗುರುದೇವನೇ ಪರತತ್ವವು; ಆ ಪರಶಿವ ತಾನೆ ಗುರುರೂಪಾಗಿ
ವರ್ತಿಸಿದನು, ಶಿಷ್ಯದೀಕ್ಷಾಕಾರಣ.
ಆ ಶ್ರೀಗುರು, ಶಿಷ್ಯನ ಮಸ್ತಕದಲ್ಲಿ ತನ್ನ ಹಸ್ತಕಮಲವನಿರಿಸಿ,
ಈ ಪ್ರಕಾರವಪ್ಪ ಲಿಂಗಕಳೆಯ ಪ್ರತಿಷ್ಠೆಯಂ ಮಾಡಿದನಾಗಿ,
ಆ ಗುರುವಿನ ಹಸ್ತದಿಂದ ಆ ಕಳೆ ಹುಟ್ಟಿ,
ಅದೇ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು;
ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು.
ಭಾವಭರಿತವಾಗಿ ಭಾವಲಿಂಗವಾಯಿತ್ತು.
ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗವು ತಾನೆ
ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ,
ಪ್ರಸಾದಲಿಂಗ, ಮಹಾಲಿಂಗವೆಂದು ಆರುತೆರನಾಯಿತ್ತು.
ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ, ಮಹಾಲಿಂಗ
ಈ ಲಿಂಗಪಂಚಕವು ಗರ್ಭಿಕೃತವಾಗಿ
ಆಚಾರಲಿಂಗವೆಂದು ಕ್ರಿಯಾಲಿಂಗವೆಂದು
ಒಂದೇ ಪರಿಯಾಯವಾಗಿ
ಕ್ರಿಯಾಲಿಂಗವೆಂದು ಇಷ್ಟಲಿಂಗವೆಂದು
ಒಂದೇ ಪರಿಯಾಯವಾಗಿ
ಇಂತಿವೆಲ್ಲವನೊಳಕೊಂಡು ನಿನ್ನ ಕರಸ್ಥಲಕ್ಕೆ ಬಂದಿತ್ತು ವಸ್ತು.
ಈ ಕರಸ್ಥಲದ ಮಹಾಘನದ ನಿಲವನು ಹೀಗೆಂದು
ಅರಿವುದೆಂದನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./288
ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು,
ಜಂಗಮ ಪ್ರಸಾದಕ್ಕೆ ಹೇಸುರರು, ಭಕ್ತಪ್ರಸಾದಕ್ಕೆ ಹೇಸುವರು.
ಹೊಲತಿ ಮಾದಿಗಿತ್ತಿ ಬಲ್ಲವಳಾದರೆ,
ಹಲವು ಪರಿಯಲ್ಲಿ ಅವಳೆಂಜಲ ತಿನುತಿಪ್ಪರು ನೋಡಾ ಜಗ.
ಹದಿನೆಂಟು ಜಾತಿಯ ಎಂಜಲ ಹೇಹವಿಲ್ಲದೆ
ತಿಂಬ ಭವಜಾತಿಗಳಿಗೆ
ಪ್ರಸಾದ ದೊರಕೊಂಬುದೆ? ದೊರಕೊಳ್ಳದು.
ಆದೇನುಕಾರಣವೆಂದಡೆ:
ಭವಭವದಲ್ಲಿ ಯೋನಿಚಕ್ರದಲ್ಲಿ ತಿರುಗುತ್ತಿಪ್ಪರಾಗಿ.
ಈ ಅಶುದ್ಧಜೀವಿಗಳಿಗೆ ಶುದ್ಧವಹ ಶಿವಪ್ರಸಾದದಲ್ಲಿ
ಸಂಬಂಧ ಸಮನಿಸದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./289
ಗುರುಪ್ರಸಾದಿಯಾದ ಬಳಿಕ
ವಾತ ಪಿತ್ತ ಶ್ಲೇಷ್ಮವೆಂಬ ತ್ರಿದೋಷವಿಲ್ಲದಿರಬೇಕು.
ಲಿಂಗಪ್ರಸಾದಿಯಾದ ಬಳಿಕ
ಶೀತೋಷ್ಣಾದಿಗಳ ಭಯವಿಲ್ಲದಿರಬೇಕು.
ಜಂಗಮಪ್ರಸಾದಿಯಾದ ಬಳಿಕ
ಆಧಿ ವ್ಯಾಧಿಯಿಲ್ಲದಿರಬೇಕು.
ಮಹಾಪ್ರಸಾದಿಯಾದ ಬಳಿಕ
ಮರಣವಿಲ್ಲದಿರಬೇಕು.
ತಾಪತ್ರಯ ತನುವ ಪೀಡಿಸುವನ್ನಕ್ಕರ
ಪ್ರಸಾದಿ ಪ್ರಸಾದಿಯೆಂದೇನೋ ಜಡರುಗಳಿರ?
ಕೆಂಡವ ಇರುಹೆ ಮುತ್ತಬಲ್ಲುದೆ?
ನೊಣ ಹಾದರೆ ಮದಸೊಕ್ಕಿದಾನೆಯ ಬರಿ ಮುರಿಯಬಲ್ಲುದೆ?
ಪ್ರಸಾದಿಯ ಪ್ರಳಯಬಾಧೆಗಳು ಬಾಧಿಸಬಲ್ಲವೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./290
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ.
ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ.
ಜಂಗಮಮುಖದಿಂದ ಕೊಂಬುದು ಪ್ರಸಿದ್ಧ ಪ್ರಸಾದ.
ಗುರುಪ್ರಸಾದದಿಂದ ಎನ್ನ ತನು ಶುದ್ಧವಾಯಿತ್ತು.
ಲಿಂಗಪ್ರಸಾದದಿಂದ ಎನ್ನ ಮನ ಶುದ್ಧವಾಯಿತ್ತು.
ಜಂಗಮಪ್ರಸಾದದಿಂದ ಎನ್ನ ಪ್ರಾಣ ಶುದ್ಧವಾಯಿತ್ತು.
ನಿಮ್ಮ ಪ್ರಸಾದದಿಂದ ಶುದ್ಧವಾಗದೆ ತನ್ನಿಂದ ತಾನೆ ಶುದ್ಧನಾದೆನೆಂಬ
ವಾಗದ್ವೆ ತಿಯ ತೋರದಿರ.
ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು
ಲಿಂಗ ಪ್ರಸಾದವ ತಾ ಗ್ರಹಿಸುವದೇ ಆಚಾರ.
ಹೀಂಗಲ್ಲದೆ,
ಜಂಗಮ ಪ್ರಸಾದವ ಅಂಗಕ್ಕೆ ಕೊಡಬಹುದಲ್ಲದೆ
ಲಿಂಗಕ್ಕೆ ಕೊಡಬಾರದೆಂಬ ಅನಾಚಾರಿಗೆ
ನಾಯಕನರಕ ತಪ್ಪದು ಕಾಣಾ, ನೀ ಸಾಕ್ಷಿಯಾಗಿ ಎಲೆ ಶಿವನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./291
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ.
ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ.
ಜಂಗಮಮುಖದಿಂದ ಕೊಂಬುದು ಪ್ರಸಿದ್ಧಪ್ರಸಾದ.
ಜ್ಞಾನಮುಖದಿಂದ ಕೊಂಬುದು ಮಹಾಪ್ರಸಾದ.
ಈ ನಾಲ್ಕು ತೆರದಲ್ಲಿ ಕೊಂಬುವುದು ಪ್ರಸಾದವಲ್ಲದೆ
ರಣದ ಬೀರರ ಹಾಂಗೆ ಬಾಚಿಸಿಕೊಂಡು
ಕೊಂಬಷ್ಟ ಕೊಂಡು, ಬಿಡುವಷ್ಟ ಬಿಟ್ಟು
ಸೂರೆಗೂಳಾಗಿ ಚೆಲ್ಲಿಯಾಡುವುದು ಇದಾವ ಪ್ರಸಾದ ಹೇಳ?
ಅದೆಂತೆಂದೊಡೆ:
ಅಣುಮಾತ್ರ ಪ್ರಸಾದಾನ್ನಂ ತ್ಯಕ್ತ್ವಾ ಭುಕ್ತಾನ್ನ ಕಿಲ್ಬಿಷಂ|
ಸ ಪಾಪೀ ನರಕಂ ಯಾತಿ ತದ್ಗ ೃಹಂ ನರಕಾಲಯಂ||
ಎಂದುದಾಗಿ
ಬಹು ಜನಂಗಳು ಕಾರಿದ ಕೂಳ ಶ್ವಾನ ಭುಂಜಿಸಿ
ತನ್ನೊಡಲ ಹೊರೆದಂತಾಯಿತ್ತು ಕಾಣಾ ವಿಶ್ವಾಸವಿಲ್ಲದ ಪ್ರಸಾದ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./292
ಗುರುಮುಖದಿಂದ ಪರಮಲಿಂಗವು ತನ್ನ ಕರವ ಸೇರಿದ ಬಳಿಕ
ಆ ಲಿಂಗದಲ್ಲಿ ಸ್ನೇಹ ಮೋಹವ ಬಲಿದು, ಲಿಂಗಪ್ರೇಮಿಯಾಗಿ,
ಲಿಂಗಭಾವದಲ್ಲಿ ತನ್ನ ಭಾವವ ಬಲಿದ ಬಳಿಕ
ಅನ್ಯವಿಷಯವ್ಯಾಪ್ತಿಯ
ವ್ಯವಹಾರದ ಭ್ರಾಂತಿಯಿಲ್ಲದಿರಬೇಕು ನೋಡಾ.
ಇದೇ ಏಕಚತ್ತಮನೋಭಾವಿಯ ಗುಣ;
ಇದೇ ಲಿಂಗಗ್ರಾಹಕನ ನಿರುತ.
ಲಿಂಗವ ಮುಟ್ಟಿ ಮತ್ತೇನನೂ ಮುಟ್ಟದ ನಿಃಕಳಂಕನ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./293
ಗುರುವ ಮುಟ್ಟಿ ಬಂದಲ್ಲಿ ಪ್ರಸಾದ.
ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ.
ಲಿಂಗವ ಮುಟ್ಟಿ ಬಂದಲ್ಲಿ ಪ್ರಸಾದ,
ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ.
ಜಂಗಮವ ಮುಟ್ಟಿಬಂದಲ್ಲಿ ಪ್ರಸಾದ,
ತನ್ನ ಬಾಯಿ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ.
ಗುರುವಿದ್ದಲ್ಲಿ ಅವಗುಣವುಂಟೆ?
ಲಿಂಗವಿದ್ದಲ್ಲಿ ಒಳ್ಳೆಯ ಸ್ಥಲ ಅಲ್ಲದ ಸ್ಥಲವುಂಟೆ?
ಜಂಗಮವಿದ್ದಲ್ಲಿ ಜಾತಿ ವಿಜಾತಿಯುಂಟೆ?
ಪ್ರಸಾದವಿದ್ದಲ್ಲಿ ಎಂಜಲುಂಟೆ?
ಇಂತಪ್ಪ ಪ್ರಪಂಚಜೀವಿಗಳನೆಂತು ಪ್ರಸಾದಿಗಳೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./294
ಗುರುವನರಿಯದ ಭಕ್ತ, ಲಿಂಗವನರಿಯದ ಭಕ್ತ.
ಜಂಗಮನವರಿಯದ ಭಕ್ತ, ಪ್ರಸಾದವನರಿಯದ ಭಕ್ತ.
ಪಾದೋದಕವನರಿಯದ ಭಕ್ತ, ತನ್ನನರಿಯದ ಭಕ್ತ.
ಇದಿರನರಿಯದ ಭಕ್ತ.
ತಾನು ತಾನಾದ ಅವಿರಳನು ಅದ್ವಯನು ನೋಡಾ.
ಪರಮಭಕ್ತನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./295
ಗುರುವನು ಮಹಾದೇವನನು ಒಂದೇಯೆಂದು
ಭಾವಿಸಲು ಬೇಕು ನೋಡಾ.
ಎರಡೆಂಬ ಪ್ರತಿಭಾವ ತೋರದಡೆ, ಅದು ಅಜ್ಞಾನ ನೋಡಾ.
ಇದು ಕಾರಣ ಅವನಾನೊರ್ವನು ಎರಡೆಂದು ಭಾವಿದನಾದಡೆ,
ಅನೇಕಕಾಲ ನರಕದ ಕುಣಿಯಲ್ಲಿಪ್ಪುದು ತಪ್ಪದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./296
ಗುರುವಿನಿಂದ ಉಪದೇಶವ ಪಡೆದು,
ಗುರುಪುತ್ರನೆನಿಸಿಕೊಂಡ ಬಳಿಕ
ಪೂರ್ವದ ತಾಯಿತಂದೆಯೆಂದು, ಬಂಧುಗಳೆಂದು,
ಮಲಸಂಬಂಧವ ನೆನೆಯಲಾಗದು ಕಾಣಿರೊ.
ಇನ್ನಿವ ನೆನೆದಿರಾದರೆ ಶಿವದ್ರೋಹ ತಪ್ಪದಯ್ಯ.
ಇನ್ನು ನಿಮಗೆ ತಾಯಿ ತಂದೆಗಳ ಹೇಳಿಹೆ ಕೇಳಿರೆ.
ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಗಳು.
ಗುರುವಿನಿಂದ ಪರವಿನ್ನಾರೂ ಇಲ್ಲವೆಂದು
ನಂಬಬಲ್ಲರೆ ಶಿಷ್ಯನೆಂಬೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./297
ಗುರುವಿನಿಂದ ಉಪದೇಶವ ಹಡದ ಶಿಷ್ಯಂಗೆ
ಭಾವವಾವುದಯ್ಯಯೆಂದಡೆ;
ಸದ್ಗುರು ಸಂದರೆ ಲಿಂಗದಲ್ಲಿ ಐಕ್ಯವಾದರೆಂದು ಭಾವಿಸುವುದಯ್ಯ.
ಲೋಕದವರಂತೆ ಸತ್ತರು ಕೆಟ್ಟರುಯೆಂದು
ಬರಿಯ ದುನರ್ುಡಿಯ ನುಡಿದರೆ,
ಅಘೋರ ನರಕ ತಪ್ಪದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./298
ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡ.
ಬೆಟ್ಟದುದ್ದ ಮಾತೆಲ್ಲ ಏತಕಯ್ಯಯೆಂದರೆ-
ಗೇಣುದ್ದ ಒಡಲ ಹೂಣುವದಕ್ಕಾಗಿ ಕಾಣಾ.
ವಾಚಾಳತ್ವದಿಂದ ಉದರವ ಹೊರೆವವರೆಲ್ಲಾ ಗುರುವೆ?
ಇಂದ್ರಿಯಂಗಳಿಗೊಂದೊಂದು ಮಾತಕಲಿತು
ಸದಾಶಿವನ ಸಂಧಿಸಿ ಸರ್ವರಿಗೆ ತೋರಿಹೆನೆಂಬರು,
ತಾವೇಕೆ ಕಾಣರೋ?
ತಾವು ಕಾಣದೆ, ತಮ್ಮಲ್ಲಿ ವಸ್ತು ವಿವೇಕವಿಲ್ಲದೆ
ಅನ್ಯರಿಗೆ ಹೇಳುವ ಬೋಧೆ, ಅದು ಅವಿಚಾರ ಕಾಣ.
ಗುರುತತ್ವದ ಬಲ್ಲ ಗುರು ಶುದ್ಧ ಚಿದ್ರೂಪನು.
ಚಿನ್ಮಯನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./299
ಘೃತ ಘೃತವ ಬೆರಸಿದಂತೆ,
ಕ್ಷೀರ ಕ್ಷೀರವ ಬೆರಸಿದಂತೆ,
ತೈಲ ತೈಲವ ಬೆರಸಿದಂತೆ,
ನೀರು ನೀರ ಬೆರಸಿದಂತೆ,
ಜ್ಯೋತಿ ಜ್ಯೋತಿಯ ಕೂಡಿದಂತೆ,
ಬಯಲು ಬಯಲ ಬೆರಸಿದಂತೆ,
ಪ್ರಾಣ ಪ್ರಾಣ ಸಂಯೋಗವಾದ
ಶರಣ ಲಿಂಗ ಸಮರಸವನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./300
ಚಂದ್ರನಿಂದಾದ ಕಲೆ ಚಂದ್ರನಬೆರಸಿ ಚಂದ್ರನಾದಂತೆ,
ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ,
ಅಗ್ನಿಯಿಂದಾದ ಕಾಂತಿ ಅಗ್ನಿಯನೆ ಬೆರಸಿ ಅಗ್ನಿಯಾದಂತೆ,
ದೀಪದಿಂದಾದ ಬೆಳಗು ದೀಪವನೆ ಬೆರಸಿ ದೀಪವಾದಂತೆ,
ಸಮುದ್ರದಿಂದಾದ ನದಿ ಸಮುದ್ರವನೆ ಬೆರಸಿ ಸಮುದ್ರವಾದಂತೆ,
ಪರಶಿವತತ್ತ್ವದಲ್ಲಿಯೆ ನಾನುದಯಿಸಿ
ಆ ಪರಶಿವತತ್ತ್ವದಲ್ಲಿಯೆ ಬೆರಸಿ
ಪರಶಿವಯೋಗಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./301
ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ
ಹಿಂದಳ ಕೇರಿಯವರು ಕಂಡು
ಮುಂದಳೂರವರಿಗೆ ಮೊರೆಯ ಹೇಳುತ್ತಿದಾರೆ ನೋಡಿರೇ.
ಮುಂದಳೂರವರೆಲ್ಲಾ ರವಿಯೋಕುಳಿಯ ಸಂಗದಿಂದ
ಮಂಗಳ ಮುಂಗಳವೆನುತ ಶಿವಲಿಂಗೈಕ್ಯರಾದುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./302
ಚಂದ್ರಮನ ರಾಹುವೆಡೆಗೊಳಲು
ಪುರ ನಿಂದಿರಿವುತ್ತಿದೆ ನೋಡಾ.
ಮಂದಾರಗಿರಿಯ ಸಲಿಲ ಮುಂಜೂರಲೊಸರಲು
ನಿಂದಿರುವುದು ಕೆಟ್ಟು ನಿಜ ನಿಂದಿತ್ತಯ್ಯ ಎನ್ನ ತಂದೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./303
ಚಂದ್ರಮನೊಳಗಣ ಕಳಹಂಸೆಯೆದ್ದು ರಾಹುವ ನುಂಗಲು
ಮಂಡಲದಸುರರು ಮಡಿದು,
ಚಂದ್ರಮನಬೆಳಗು ಮಂಡಲವನಗವಿಸಲು
ಮಂಡಲ ಕರಗಿ
ಮಂಡಲಾಧಿಪತಿ ತನ್ನ ಕಂಡುದು ಸೋಜಿಗ ಸೋಜಿಗ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./304
ಚಿತ್ತ ಬುದ್ಧಿ ಅಹಂಕಾರ ಹುಟ್ಟದಂದು,
ಮನ ಜ್ಞಾನ ಭಾವಂಗಳುತ್ಪತ್ತಿಯಿಲ್ಲದಂದು,
ಜ್ಞಾತೃ ಜ್ಞಾನ ಜ್ಞೇಯಂಗಳು ಹುಟ್ಟದಂದು,
ಜ್ಞಾನ ಸುಜ್ಞಾನ ಮಹಜ್ಞಾನವೆಂಬ,
ವೃತ್ತಿಜ್ಞಾನಂಗಳಿಲ್ಲದಂದು,
ಅಖಂಡ ಪರಿಪೂರ್ಣ ಅದ್ವಯ ನಿಃಕಲ ನಿಜಜ್ಞಾನಮೂರ್ತಿ
ನೀನೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./305
ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ
ಮಹಾಜ್ಞಾನ ಪ್ರಕಾಶವಾಗಿ ಮೆರೆವುತ್ತಿಹ ಚಿಲ್ಲಿಂಗವು
ಶರಣನ ದೇಹವೆಂಬ ಭೂಮಿಯ ಮರೆಯಲ್ಲಿ
ಅಡಗಿಪ್ಪುದು ನೋಡಾ.
ನೆಲನ ಮರೆಯ ನಿಧಾನದಂತೆ,
ಷಡಾಧಾರದಲ್ಲಿ ಷಡಾದಿಯಾಗಿ ಷಡಾತ್ಮಕನಾಗಿಪ್ಪುದು ನೋಡಾ.
ಪಂಚೇಂದ್ರಿಯ ದ್ವಾರಂಗಳಲ್ಲಿ ಪಂಚವದನನಾಗಿ
ಪ್ರಭಾವಿಸುತ್ತಿಪ್ಪುದು ನೋಡಾ.
ದಶವಾಯುಗಳ ಕೂಡಿ ದೆಸೆದೆಸೆಗೆ ನಡೆವುತ್ತ
ವಿಶ್ವಚೈತನ್ಯನಾಗಿಪ್ಪುದು ನೋಡಾ.
ಸರ್ವಾಂಗದಲ್ಲಿಯೂ ತನ್ಮಯವಾಗಿಪ್ಪುದು ನೋಡಾ.
ಮನದಲ್ಲಿ ಮತಿಯ ಕಣಜ, ಮಾತಿನಲ್ಲಿ ಜ್ಯೋತಿರ್ಲಿಂಗವಾಗಿ
ಎನ್ನ ಬ್ರಹ್ಮರಂಧ್ರದಲ್ಲಿ ತೊಳಗಿ ಬೆಳಗುವ ಪರಂಜ್ಯೋತಿ ನೀನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./306
ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ.
ಚಿತ್ತೇ ಚಿಪ್ಪು, ಮುತ್ತೇ ವಸ್ತುವೆಂಬ
ಯುಕ್ತಿಯನಾರೂ ತಿಳಿಯರಲ್ಲಾ.
ಚಿಪ್ಪಳಿದು ಮತ್ತೆ ಬೆರೆಸಲಾಗಿ
ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./307
ಚಿತ್ತನ ಮನೆಯಲ್ಲಿ ಸತ್ತಿಪ್ಪವನಿವನಾರೋ?
ಸತ್ತವನ ನೋಡಿ, ಎತ್ತಹೋದರೆ,
ಎತ್ತಹೋದವ ಸತ್ತು, ಸತ್ತವನೆದ್ದು ಕೂಗುತ್ತಿದ್ದಾನೆ.
ಈ ಚಿತ್ರವನೇನೆಂಬೆನೋ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./308
ಚಿತ್ತೇ ಅಂಗ, ಸತ್ತೇ ಪ್ರಾಣ,
ಆನಂದವೇ ಶರಣನ ಕರಣ ನೋಡಾ.
ನಿತ್ಯವೇ ಪ್ರಸಾದ.
ಪರಿಪೂರ್ಣವೇ ಸರ್ವಾಂಗದ ಪ್ರಕಾಶ.
ಪರಮಾನಂದವೇ ಪಾದಜಲ ನೋಡಾ.
ಇದುಕಾರಣ, ಸಚ್ಚಿದಾನಂದ ಸ್ವರೂಪನು ನಿಮ್ಮ ಶರಣನೈ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./309
ಚಿತ್ರದ ಬೊಂಬೆ ರೂಪಾಗಿರ್ದರೇನೋ?
ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ?
ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಅತ್ತಿಯ ಹಣ್ಣು ಕಳಿತಿರ್ದರೇನೋ?
ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ತಿಪ್ಪೆಯ ಹಳ್ಳ ತಿಳಿದಿರ್ದರೇನೋ?
ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ವೇದ ಶಾಸ್ತ್ರ ಪುರಾಣಾಗಮಂಗಳನೋದಿ
ಎಲ್ಲರಲ್ಲಿಯೂ ಅನುಭಾವಿಗಳಾದರೇನೋ?
ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ
ಪ್ರಯೋಜನಕಾರಿಗಳಾದುದಿಲ್ಲ.
ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ
ಎಂತು ಶಿವಶರಣರೆಂಬೆ ವಾಚಾಳಿಕರ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./310
ಚಿದಾನಂದಸುಖಮಯವಪ್ಪ ವಸ್ತುವಿಂಗೆ,
ಇಂದ್ರಿಯಾನಂದ ಹೊದ್ದಿದಡೆ ನಾ ನೊಂದೆನಯ್ಯ.
ನಾನು ಬೆಂದೆನಯ್ಯ. ನಾನು ಚಿದಾನಂದಸ್ವರೂಪನು.
ಈ ಅನಾನಂದವಿದೇನೋ? ಇದು ಕಾರಣ,
ಅನಾಯತವಪ್ಪ ಇಂದ್ರಿಯವಿಕಾರವ ಮಾಣಿಸಯ್ಯ ಎನ್ನ ತಂದೆ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./311
ಚಿದ್ವಿಲಾಸದ ಮುಂದೆ ಇದಿರಿಟ್ಟು ತೋರುವ
ಮಾಯಾವಿಲಾಸದ ಹೊದ್ದಿಗೆಯಿದೇನೋ.
ಶುದ್ಧ ನಿರ್ಮಲ ನಿರಾವರಣನೆಂಬ ನಿಜಭಾವವೆ ನಿಶ್ಚಯವಾದರೆ,
ಎನ್ನ ತನು ಮನ ಭಾವದ ಒಳಹೊರಗೆ ಹಿಡಿದಿಪ್ಪ
ಮಾಯಾಪ್ರಪಂಚು ಮಾಬುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./312
ಚಿನ್ನದ ಗಿರಿಯಲ್ಲಿ ಚಿನ್ಮಯಮೂರ್ತಿಯ ಕಂಡೆನಯ್ಯ.
ಚಿನ್ನ ಕಾರ್ಮಿಕವಲ್ಲ; ಚಿನ್ಮಯ ಮೂರ್ತಿಯಲ್ಲ;
ಇದರನ್ವಯವೇನು ಹೇಳಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./313
ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ
ಮುನ್ನಿನ ಚಿನ್ನವೆ ಆದಂತೆ,
ಉದಕದಿಂದಾದ ವಾರಿಕಲ್ಲು ಕರಗಿ
ಮುನ್ನಿನ ಉದಕವೆ ಆದಂತೆ,
ಚಿನ್ಮಯ ವಸ್ತುವಿನಿಂದುದಯಿಸಿದ ಚಿತ್ಸ್ವರೂಪನಾದ ಶರಣನು
ಆ ಚಿನ್ಮಯ ಪರವಸ್ತುವನೆ ಬೆರಸಿ
ಪರಮ ಶಿವಯೋಗಿಯಾದನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./314
ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ ಮತ್ತೊಂದು
ರೂಪಾಗಬಲ್ಲುದೆ ಹೇಳಾ?
ಲಿಂಗಮುಖದಿಂದ ಉದಯವಾದ ಶರಣರು
ಲಿಂಗದ ರೂಪಲ್ಲದೆ,
ಮತ್ತೊಂದು ರೂಪೆಂದೆನಬಹುದೇ? ಎನಲಾಗದು ನೋಡ.
ಶಿವನ ಅಂಶವಾದ ಶರಣರಿಗೆ ಮಲಿನಭಾವ ಕಲ್ಪಿಸುವ
ಮಹಾಪಾತಕರಿಗೆ ನಾಯಕನರಕ ತಪ್ಪದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./315
ಚಿನ್ಮಯ ವಸ್ತುವಿನಿಂದ ಚಿದ್ಬಿಂದು ಉದಯಿಸಿತ್ತು.
ಆ ಚಿತ್ತಿನ ಪ್ರಭೆಯಲ್ಲಿ ಶರಣನುದಯಿಸಿದನು.
ಇದು ಕಾರಣ,
ಚಿನ್ಮಯ, ಚಿದ್ರೂಪ, ಚಿತ್ಪ್ರಕಾಶ,
ಚಿದಾತ್ಮನೆ ಶರಣನೆಂಬ ವಾಕ್ಯ ಸತ್ಯಕಂಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./316
ಚಿಲುಮೆಯ ಅಗ್ಘವಣಿಯ ಕುಡಿದರೇನೋ,
ಜನ್ಮದ ಮೈಲಿಗೆಯ ತೊಳೆಯದನ್ನಕ್ಕರ?
ಕಾಡುಗಟ್ಟಿಯ ನೀರ ಕುಡಿದರೇನೋ,
ತನ್ನ ಕಾಡುವ ಕರಣಾದಿ ಗುಣಂಗಳ ಕಳೆದುಳಿಯದನ್ನಕ್ಕರ?
ಉಳ್ಳಿ ನುಗ್ಗೆಯ ಬಿಟ್ಟರೇನೋ,
ಸಂಸಾರದ ಸೊಕ್ಕಿನುಕ್ಕಮುರಿದು
ಮಾಯಾದುರ್ವಾಸನೆಯ ವಿಸರ್ಜಿಸದನ್ನಕ್ಕರ?
ಸಪ್ಪೆಯನುಂಡರೇನೋ
ಸ್ತ್ರೀಯರ ಅಪ್ಪುಗೆ ಬಿಡದನ್ನಕ್ಕರ?
ಅದೇತರ ಶೀಲ, ಅದೇತರ ವ್ರತ ಮರುಳೇ?
ಅಂಗವಾಚಾರಲಿಂಗವಾಗಿ
ಮನವು ಅರಿವು ಸಂಬಂಧವಾಗಿ
ಸರ್ವ ದುರ್ಭಾವ ಚರಿತ್ರವೆಲ್ಲಾ ಕೆಟ್ಟು
ಸತ್ಯ ಸದ್ಭಾವ ನೆಲೆಗೊಂಡ ಸದ್ಭಕ್ತನ ಸುಶೀಲಕ್ಕೆ
ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./317
ಜಂಗಮ ಜಂಗಮವೆಂದರೇನೋ ಲಜ್ಜಾಭಂಡರಿರ?
ಜಂಗಮವಂತೆ ಕಳಂಕಿಯೇ? ಅಪೇಕ್ಷಿಯೇ? ಅಶಕ್ತನೇ?
ಪಾಶಜೀವಿಗಳ್ಲನ್ವೆಂತು ಜಂಗಮವೆಂಬೆನಯ್ಯ?
ಜಂಗಮವೇನು ದೋಷಿಯೇ? ದುರ್ಗುಣಿಯೇ? ಅಸತ್ಯನೇ?
ಅನಾಚಾರಿಯೇ? ಅಲ್ಲ ಕಾಣಿರಯ್ಯ.
ಹೇಳ್ಲಿಹೆನ್ವು ಕೇಳಿ ನಿಃಕಳಂಕ, ನಿರಪೇಕ್ಷ, ನಿರಾಶಕ,
ನಿದರ್ೊಷಿ, ನಿಃಪುರುಷ; ಸತ್ಯ, ದಯೆ, ಕ್ಷಮೆ, ದಮೆ,
ಶಾಂತಿ, ಸೈರಣೆ, ಸಮಾಧಾನ ಸಂತೋಷ ಪರಿಣಾಮಿ.
ನುಡಿ ತತ್ವ; ನಡೆ ಪಾವನ; ಸುಳುಹು ವಸಂತಗಾಳಿ.
ಜಗದಾರಾಧ್ಯ, ಸ್ವಯ ಸ್ವತಂತ್ರ ಚರ ಪರಿಣಾಮಿ
ಪರಿಪೂರ್ಣ ಪ್ರಕಾಶ.
ಸರ್ವತತ್ವಾಶ್ರಯ. ಶೂನ್ಯ ನಿಶ್ಯೂನ್ಯ ನಿರಾಳನೇ
ಜಂಗಮದೇವ ಕಾಣಿರೋ, ಕೇಳಿ[ರಯ್ವಾ],
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಘನವ./318
ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ?
ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ?
ಜಂಗಮಕ್ಕೆ ತಳಿಗೂಳ ತಳಿದು
ತಾ ಗಂಗಳ ತುಂಬಿ ಒಟ್ಟಿಸಿಕೊಂಡು ಕೊಂಬನೆ ಪ್ರಸಾದಿ?
ಪ್ರಸಾದಿಯಂತೆ ಪ್ರಪಂಚುಂಟೆ?
ಕಕ್ಕುಲತೆಯಮಾಡಿ ಕೊಂಡನಾದರೆ
ನಾಯಮಾಂಸ ತಿಂದ ಸಮಾನ ಕಾಣಿರೋ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./319
ಜಂಗಮದ ಗುಣವನು, ಜಂಗಮದ ಭೇದವನು
ಜಂಗಮದ ರೂಪವನು ಹೇಳಿಹೆ ಕೇಳಿರಣ್ಣ.
ಜಂಗಮವೆಂದರೆ ಪರಮಜ್ಞಾನ ಸ್ವರೂಪನು.
ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ]
ಉಪಜೀವನಕನಲ್ಲ ಕಾಣಿರಣ್ಣ.
ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ.
ಸತ್ತು ಚಿತ್ತಾನಂದಭರಿತನು.
ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೆ,
ಜಂಗಮದೇವನೆಂದರಿಯಲು ಯೋಗ್ಯ ಕಾಣಿಭೋ.
ಆ ಘನ ಚೈತನ್ಯವೆಂಬ ಜಂಗಮವ
ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./320
ಜಂಗಮವೇನು ಕಾಮಿಯೇ? ಕ್ರೋಧಿಯೇ? ಲೋಭಿಯೇ?
ಅಲ್ಲ ಕಾಣಿರಣ್ಣ.
ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ ಕಾಣಿರಣ್ಣ.
ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ?
ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣ.
ನಿಃಕಾಮಿ, ನಿಃಕ್ರೋಧಿ, ನಿಲರ್ೊಭಿ, ನಿಮರ್ೊಹಿ,
ನಿರ್ಮದ, ನಿರ್ಮತ್ಸರನಯ್ಯ.
ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೆಪಕನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ./321
ಜಂಗಮವೇನು ಸಂಗಿಯೇ? ಭೂಭಾರಿಯೇ? ಸೀಮನೇ?
ಉಪಾಧಿಕನೇ? ದೇಹಿಯೇ? ಮಲಿನನೇ? ಅನಿತ್ಯನೇ?
ಅಲ್ಲ ಕಾಣಿರಯ್ಯ.
ನಿಸ್ಸಂಗಿ; ನಿರಾಭಾರಿ; ನಿಸ್ಸೀಮ; ನಿರುಪಾಧಿಕ; ನಿರ್ದೆಹಿಯಯ್ಯ.
ನಿರ್ಮಲ; ನಿತ್ಯ; ನಿರುಪಮ; ನಿರ್ಗುಣ; ನಿರಾಧಾರ; ನಿರಾಲಂಬ;
ಸರ್ವಾಧಾರ ಸದಾನಂದಿಯೆ ಜಂಗಮದೇವನಯ್ಯ.
ಆ ಜಂಗಮೆ ತಾನಾಗದೆ
ಜಂಗಮ ಜಂಗಮವೆದು ನುಡಿದುಕೊಂಡು ನಡೆದರೆ
ನಾಚದವರನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./322
ಜಲವೆ ಅಂಗವಾದ ಮಾಹೇಶ್ವರನಲ್ಲಿ
ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಭಕ್ತನಪ್ಪ
ಅಂಗಪಂಚಕವು ಗರ್ಭಿಕೃತವಾಗಿ
ಆ ಮಾಹೇಶ್ವರಂಗೆ ಗುರುಲಿಂಗ ಸಂಬಂಧವಾಗಿ
ಆ ಗುರುಲಿಂಗದಲ್ಲಿಯೆ
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಆಚಾರಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ
ಗುರುಲಿಂಗವೆ ಆಶ್ರಯವಾಗಿ
ಇಂತೀ ಷಡ್ವಿಧಲಿಂಗದಲ್ಲಿಯೆ
ಬೆರಸಿ ಬೇರಿಲ್ಲದರಿಬಲ್ಲರೆ ಮಾಹೇಶ್ವರನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./323
ಜೀವ ಪವನನ ಬೆರಸಿದ ಪ್ರಾಣನ ನಿಲುವು
ಹೊಗೆ ಸುತ್ತಿದ ಉರಿಯಂತಿದೆ ನೋಡಾ.
ಹೊಗೆಯ ಕಳೆದು ಚಿದಾಗ್ನಿಯ ಬಲಗೊಳಬಲ್ಲರೆ
ಜಗದೊಡೆಯ ತಾನು ತಾನಲ್ಲದೆ ಬೇರಿಲ್ಲ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./324
ಜೀವನ ಬುದ್ಧಿ ಪರಮನ ಬುದ್ಧಿಯಿರಬೇಕೆಂದೆಂಬರು,
ಇದು ಶಿವಶರಣರ ಗುಣವೆ?,
ಲೋಕದ ಅಜ್ಞಾನಿಗಳ ಗುಣವಲ್ಲದೆ?.
ಎರಡು ಚಿತ್ತವುಳ್ಳವ ಭಕ್ತನೆ?
ಎರಡು ಬುದ್ಧಿವುಳ್ಳವ ಮಹೇಶ್ವರನೆ?
ಎರಡು ಅಹಂಕಾರವುಳ್ಳವ ಪ್ರಸಾದಿಯೆ?
ಎರಡು ಮನವುಳ್ಳವ ಪ್ರಾಣಲಿಂಗಿಯೆ?
ಎರಡರಿವುಳ್ಳವ ಶರಣನೆ?
ಎರಡು ಭಾವವುಳ್ಳವ ಲಿಂಗೈಕ್ಯನೆ?
ಎರಡೆರಡೆಂಬ ಜೀವಭಾವವನಳಿದು
ಶಿವಭಾವಸಂಪನ್ನನಾದ ಏಕೋಭಾವಿ ನಿಮ್ಮ ಮಾಹೇಶ್ವರನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./325
ಜೇನುತುಪ್ಪದಲ್ಲಿ ಬಿದ್ದು ಸಾವ ನೊಣನಂತೆ,
ಕೀಳುಮಾಂಸದ ಸವಿಗೆ,
ಗಂಟಲಗಾಣದಲ್ಲಿ ಸಿಕ್ಕಿ ಸಾವ ಮೀನಿನಂತೆ,
ಹೀನವಿಷಯಕ್ಕೆ ನಚ್ಚಿ ಮಚ್ಚದಿರಾ ಎಲೆಲೆ ಹುಚ್ಚ ಮನವೇ.
ಅಲ್ಪಸುಖಕ್ಕೆ ಮಚ್ಚಿ, ಅನಂತ ಭವಭಾರಕ್ಕೊಳಗಾಗಿ
ದುರ್ಗತಿಗಿಳಿಯದಿರಯ್ಯ ಬೆಂದ ಮನವೇ.
ಹರಹರಾ ಶಿವಶಿವಾಯೆಂಬುವದ ಮರೆಯದಿರು;
ಮರೆದೊರಗದಿರು.
ನಾಯ ಸಾವ ಸಾವೆ ಕಂಡಾ ಎಲೆಲೆಲೆ ಮನವೇ.
ಈ ಮರುಳುತನವ ಬಿಟ್ಟು,
ಎನ್ನೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿಗೆ
ಶರಣು ಶರಣೆನ್ನಕಲಿಯಾ ಸುಖಿಯಾಗಬಲ್ಲರೆಲೆ[ಲೆಲೆ] ಮನವೇ./326
ಜ್ಞಾನಗಮ್ಯಂ ದೃಢಪ್ರಾಜ್ಞಂ ದೇವದೇವಂ ತ್ರಿಲೋಚನಂ
ಮಹಾದೇವಂ ಮಹಾತ್ಮಾನಂ ಮಹಾಜ್ಞಾನ ಪರಾತ್ಪರಂ
ಮಹಾಪಾಪಹರಂ ದೇವಂ ಮದ್ದೇವ ದೇವದೇವಂ
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./327
ಜ್ಞಾನಜ್ಯೋತಿಯ ಉದಯ,
ಭಾನು ಕೋಟಿಸೂರ್ಯರ ಬೆಳಗು ನೋಡಾ.
ತನುತ್ರಯ, ಜೀವತ್ರಯ, ಅವಸ್ಥಾತ್ರಯಾದಿಯಾದ
ಎಲ್ಲ ತೋರಿಕೆಯನೊಳಗೊಂಡು
ಜ್ಯೋತಿ ಕಪರ್ುರವ[ನು] ನೆರೆದಂತಿದೆ ನೋಡಾ.
ಷಡಾಧಾರಂಗಳಲ್ಲಿ ತೊಳಗಿ ಬೆಳಗಿ
ಬ್ರಹ್ಮರಂಧ್ರದಲ್ಲಿ ವಿಶ್ರಾಂತಿಯನೆಯ್ದಿದ
ಅಖಂಡ ಜ್ಞಾನಜ್ಯೋತಿ ನೋಡಾ.
ಆ ಮಹಾಪ್ರಕಾಶದ ಬೆಳಗಿನೊಳಗೆ ಮಹವ ಕಂಡು
ಮಹಕೆ ಮಹ, ಪರಕೆ ಪರವಾಗಿ,
ಎನ್ನಿಂದನ್ಯವಾಗಿ ಮತ್ತೊಂದು ಪರವಿಲ್ಲದೆ,
ನಾನೇ ಪರವಸ್ತುವಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./328
ಜ್ಯೋತಿಯ ತಮವೆಡೆಗೊಡಂತೆ
ಚಂದ್ರಮನ ರಾಹುಎಡೆಗೊಂಡಂತೆ
ನಿಧಾನವ ಸರ್ಪನೆಡೆಗೊಂಡಂತೆ
ಅಂಬುಧಿಯ ಅನಲನೆಡೆಗೊಂಡಂತೆ
ಮನವ ಮಾಯವಡೆಗೊಂಡು
ನಿಮ್ಮ ನೆನಹ ನೆಲೆಗೊಳಲೀಯದೆ
ಮರಣಕ್ಕೊಳಗುಮಾಡುತ್ತಿಪ್ಪುದಯ್ಯ.
ಈ ತಮವ ಪರಿಹರಿಸಿ ಎನ್ನನುಳುಹಿಕೊಳ್ಳಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./329
ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ?
ಲಿಂಗವಿದ್ದಂಗದಲ್ಲಿ ಅಜ್ಞಾನವುಂಟೆ?
ಅಜ್ಞಾನವಿಲ್ಲವಾಗಿ ಅಂಗವಿಕಾರವಿಲ್ಲ.
ಅಂಗವಿಕಾರವಿಲ್ಲವಾಗಿ
ಹೆಂಗಳಿಗೆ ಸೋಲರು, ಹೊಂಗಳಿಗೆಣಿಸರು
ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./330
ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ.
ಶಂಭುಪದಪದ್ಮಭಕ್ತಿನಂಬುಗೆವಿಡಿದು ಅಗಲದಿರಬಲ್ಲಡೆ ಶರಣ.
ಸೂಸಲೀಯದೆ ಮನವ ಈಶಪದದಲ್ಲಿ
ಮೀಸಲಾಗಿರಿಸಿಕೊಂಡಿರಬಲ್ಲಡೆ
ಆ ಶರಣನ ಜಗದೀಶನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./331
ತಂದೆ ತಾಯಿಗಳ ವಿಕಾರದ ಶುಕ್ಲಶೋಣಿತದ ಸಂಬಂಧವಪ್ಪ
ಸರ್ವಸೂತಕತನುವಿಡಿದ ಪ್ರಾಣಿಗಳಿಗೆ
ಯಮನ ಸಂಹಾರವ ಕಲ್ಪಿಸಿಕೊಂಡಿಪ್ಪ ಶಿವನ
ಪರಿಯಾನಾರೂ ಅರಿಯರಲ್ಲ.
ಈ ಮಾಯಿಕ ಸಂಬಂಧವಾದ ದೇಹ ತಾನೆಂದೆಂಬ
ಮೂಢಾತ್ಮರ ನಾನೇನೆಂಬೆನಯ್ಯ?.
ಆತ್ಮ ಅನಾತ್ಮನ ವಿಚಾರಿಸಿ ತಿಳಿಯಲು
ಅಚೇತನವಾದ ಅನಾತ್ಮಸ್ವರೂಪೇ ದೇಹ;
ಆ ದೇಹಕ್ಕೆ ಆಶ್ರಯವಾಗಿಪ್ಪ ಚೈತನ್ಯನೇ ಆತ್ಮನು.
ಇದು ಕಾರಣ, ದೇಹವೇ ಜಡ; ಆತ್ಮನೇ ಅಜಡನು.
ಅದೇನುಕಾರಣ ದೇಹ ಜಡ, ಆತ್ಮನು ಅಜಡನುಯೆಂದಡೆ;
ದೇಹವೇ ಮಾಯಾಕಾರ್ಯವಾದ ಕಾರಣ ಜಡ;
ಇದು ಕಾರಣ, ಇಂದ್ರಿಯಂಗಳು ಜಡ; ವಿಷಯಂಗಳು ಜಡ;
ಕರಣಂಗಳು ಜಡ; ವಾಯುಗಳು ಜಡ; ಆತ್ಮನೇ ಅಜಡನು.
ಆತ್ಮನದೇನುಕಾರಣ ಅಜಡನೆಂದರೆ
ಶಿವಾಂಶಿಕನಾದಕಾರಣ ಅಜಡನು.
ಆ ಶುದ್ಧ ಚಿದ್ರೂಪನಾದ ಆತ್ಮನು
ಅವಿದ್ಯಾಸಂಬಂಧವಾದ ದೇಹೇಂದ್ರಿಯದ ಸಂಗದಿಂದ
ಸಂಸಾರಿಯಾಗಿಪ್ಪನು ನೋಡಾ.
ಈ ಸಂಸಾರವ್ಯಾಪ್ತಿಯಹಂಥ
ಜೀವನದ ಗುಣವ ಕಳೆದುಳಿದಿಹನೆಂದಡೆ
ದೇವ ದಾನರ ಮಾನವರಿಗೆ ದುರ್ಲಭ ನೋಡಾ.
ಈ ಮಾಯಾಪ್ರಪಂಚ ನಿವೃತ್ತಿಯಮಾಡುವ
ಮಹದರುಹು ತಾನೆಂತಾದೋ
ಅಂತಪ್ಪ ಅರುಹುಳ್ಳ ಶರಣರಿಗೆ
ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./332
ತಂದೆಯ ವಧುವ ತಂದು, ಮಗನಿಗೆ ಮದುವೆ ಮಾಡಿದೆ;
ಮಗನ ಹೆಂಡತಿ ತಂದು, ಅವರಪ್ಪಗೆ ಮದುವೆ ಮಾಡಿದೆ;
ಆದಿಪಿಂಡವೇ ಜೀವಪಿಂಡ;
ಅತ್ತೆ ಸೊಸೆಯ ನೆರದಳು;
ತಂದೆಮಕ್ಕಳಿಬ್ಬರೂ ಪರಾಂಗನೆಯ ನೆರದು,
ಪರಾಪರವಸ್ತುವಾದುದನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./333
ತಂದೆಯ ಸಾಮಥ್ರ್ಯದಿಂದ ಹುಟ್ಟಿದ ಮಗನಿಗೆ
ಆ ತಂದೆಯ ಸ್ವರೂಪಲ್ಲದೆ ಬೇರೊಂದೂ ಸ್ವರೂಪೆಂದು
ತಿಳಿಯಲುಂಟೇ ಅಯ್ಯ?.
ಶಿವ ತಾನೆ ತನ್ನ ಸಾಮಥ್ರ್ಯವೆ ಒಂದೆರಡಾಗಿ,
ಗುರುವೆಂದು ಶಿಷ್ಯನೆಂದು ಆಯಿತ್ತೆಂದಡೆ,
ಆ ಗುರುವಿಂಗೂ ಶಿಷ್ಯಂಗೂ ಬೇರಿಟ್ಟು ನುಡಿಯಲಾಗದಯ್ಯ.
ಗುರುವಿನ ಅಂಗವೇ ಶಿಷ್ಯ; ಶಿಷ್ಯನ ಅಂಗವೇ ಗುರು.
ಆ ಗುರುವಿನ ಪ್ರಾಣವೇ ಶಿಷ್ಯ; ಶಿಷ್ಯನ ಪ್ರಾಣವೇ ಗುರು.
ಈ ಗುರುಶಿಷ್ಯಸಂಬಂಧ ಒಂದಾದ ಬಳಿಕ
ಗುರು ಶಿಷ್ಯರೆಂದು ಬೇರಿಟ್ಟು ನುಡಿವ ಭ್ರಷ್ಟರನೇನೆಂಬೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./334
ತಂದೆಯಿಲ್ಲದ, ತಾಯಿಯಿಲ್ಲದ,
ಹೆಸರಿಲ್ಲದ, ಕುಲವಿಲ್ಲದ,
ಹುಟ್ಟಿಲ್ಲದ, ಹೊಂದಿಲ್ಲದ,
ಅಯೋನಿಸಂಭವ ನೀನಾದಕಾರಣ
ನಿನ್ನ ನಾನು ನಿಃಕಲಲಿಂಗವೆಂದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./335
ತತ್ತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ
ಬಚ್ಚಬರಿಯ ಬಯಲ ಬಣ್ಣ ಶೃಂಗರಿಸಿ
ಪರತತ್ತ್ವವಾಯಿತ್ತು ನೋಡಾ.
ಆ ಪರತತ್ತ್ವ ತನ್ನ ಶಕ್ತಿ ಸಾಮಥ್ರ್ಯದಿಂದ ವಿಭಜಿಸಿ
ಅಂಗ ಲಿಂಗವಾಯಿತ್ತು ನೋಡಾ.
ಅಂಗವೆಂದರೆ ಶರೀರ; ಲಿಂಗವೆಂದರೆ ಪ್ರಾಣ.
ಇದು ಕಾರಣ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದು?
ಭೇದವೆಲ್ಲಿಯದು ಬಿಡಾ ಮರುಳೆ.
ಶರಣನೇ ಲಿಂಗವೆಂಬುದು ಸತ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./336
ತತ್ವಚಿಂತಾಮಣಿಗಳೆಂಬ ರುದ್ರಾಕ್ಷೆಗಳ ಭಕ್ತಿದಾರದಲ್ಲಿ ಸರಗೊಳಿಸಿ,
ಯುಕ್ತಿವಿಧಾನವಿಡಿದು ಧರಿಸಿ ಸದ್ಯೋನ್ಮುಕ್ತನಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./337
ತತ್ವಾರ್ಥವ ಬಲ್ಲೆವೆಂಬರಯ್ಯ ತತ್ತಿಯೊಳಗಣ ಬಾಲಕರು.
ತತ್ವಾನುಭಾವ ಸಂಭವಿಸಿದರೆ ಸತ್ತು ಹೋಗಲುಂಟೆ?
ಸತ್ತು ಹೋಗುವ ಪ್ರಾಣಿಗಳ ಶಿವತತ್ವಾನುಭಾವಿಗಳೆಂತೆಂಬೆನಯ್ಯ?
ಅನುಪಮ ಅದ್ವಯರೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./338
ತನು ನಿನಗನ್ಯವೆಂದರಿಯದೆ, ತನು ನಿನ್ನದೆಂಬೆ;
ಮನ ನಿನಗನ್ಯವೆಂದರಿಯದೆ, ಮನ ನಿನ್ನದೆಂಬೆ;
ಧನ ನಿನಗನ್ಯವೆಂದರಿಯದೆ, ಧನ ನಿನ್ನದೆಂಬೆ;
ಸ್ಥೂಲ ಸೂಕ್ಷ್ಮಂಕಾರಣವೆಂದೆಂಬ ತನುತ್ರಯ ನೀನಲ್ಲ;
ಮನ ಮನನ ಮಾನನೀಯವೆಂದೆಂಬ ಮನತ್ರಯ ನೀನಲ್ಲ;
ಧನ ಮಮಕಾರ ಸಂಗ್ರಹವೆಂಬ ಕಾರ್ಮಿಕತ್ರಯ ನೀನಲ್ಲ;
ಇವು ಒಂದೂ ನೀನಲ್ಲ; ನೀನಾರೆಂದಡೆ:
ನೀನು ಸಚ್ಚಿದಾನಂದಸ್ವರೂಪವಪ್ಪ ಶಿವತತ್ವವೇ
ನೀನೆಂದು ತಿಳಿದು ನೋಡ, ಉಳಿದವೆಲ್ಲಾ ಹುಸಿಯೆನ್ನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./339
ತನು ಲಿಂಗವಾದ ಬಳಿಕ ವಿಕಾರವುಂಟೆ?
ಮನ ಲಿಂಗವಾದ ಬಳಿಕ ಮಾಯವುಂಟೆ ಅಯ್ಯ?
ಭಾವ ಲಿಂಗವಾದ ಬಳಿಕ ಭ್ರಮೆಯುಂಟೆ?
ಕಾಯ ಲಿಂಗವಾದ ಬಳಿಕ ಕಳವಳವೆಲ್ಲಿಯದೊ?
ಜೀವ ಲಿಂಗವಾದ ಬಳಿಕ ಉಪಾಧಿಯುಂಟೇ ಅಯ್ಯ?
ಪ್ರಾಣ ಲಿಂಗವಾದ ಬಳಿಕ ಪ್ರಳಯವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./340
ತನು ಶುದ್ಧವಿಲ್ಲ ಎಂಬಾತ
ಅಂಗದ ಮೇಲೆ ಲಿಂಗವ ಧರಿಸಲಾಗದು.
ಮನ ಶುದ್ಧವಿಲ್ಲ ಎಂಬಾತ
ಲಿಂಗವ ಹಿಡಿದು ಪೂಜೆಯ ಮಾಡಲಾಗದು.
ಪ್ರಾಣ ಮಲಿನವೆಂಬ ಪಶುಗಳಿಗೆ ಪ್ರಾಣಲಿಂಗವೆಲ್ಲಿಯದೋ?
ಇದು ಕಾರಣ,
ಆರು ಶೈವದಲ್ಲಿ ನಡೆವುತಿಪ್ಪವರೆಲ್ಲ
ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಾ ನೀ ಸಾಕ್ಷಿಯಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./341
ತನುತ್ರಯಂಗಳು ಸದ್ರೂಪವಪ್ಪ ಗುರುವಿನಲ್ಲಡಗಿ
ತನು ನಿರ್ವಯಲಾಯಿತ್ತು.
ಮನತ್ರಯಂಗಳು ಚಿದ್ರೂಪವಪ್ಪ ಲಿಂಗದಲ್ಲಿ ಅಡಗಿ
ಮನ ನಿರ್ವಯಲಾಯಿತ್ತು.
ಧನವೆಂದರೆ ಅರ್ಥ, ಅರ್ಥವೆಂದರೆ ಜೀವಾತ್ಮ.
ಜೀವಾತ್ಮ, ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯಂಗಳು
ಪರಮಾನಂದವೆಂಬ ಜಂಗಮದಲ್ಲಡಗಿ ಏಕಾರ್ಥವಾದವಾಗಿ
ಧನ ನಿರ್ವಯಲಾಯಿತ್ತು.
ಈ ಸಚ್ಚಿದಾನಂದ ನಿತ್ಯ ಪರಿಪೂರ್ಣ ನಿರಾಕಾರ
ಪರವಸ್ತುವಿನಲ್ಲಡಗಿತ್ತಾಗಿ
ಲಿಂಗೈಕ್ಯವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./342
ತನುವ ಗುರುವಿಂಗೆ ಸವೆವುದು ಶೀಲ;
ಮನವ ಲಿಂಗಕ್ಕೆ ಸವೆವುದು ಶೀಲ;
ಧನವ ಜಂಗಮಕ್ಕೆ ಸವೆವುದು ಶೀಲ;
ತನುವ ಗುರುವಿಂಬುಗೊಂಬುದು ಶೀಲ;
ಮನವ ಲಿಂಗವಿಂಬುಗೊಂಬುದು ಶೀಲ;
ಧನವ ಜಂಗಮವಿಂಬುಗೊಂಬುದು ಶೀಲ;
ಈ ತನು ಮನ ಧನದಲ್ಲಿ ನಿರ್ವಂಚಕನು ಶೀಲವಂತನಲ್ಲದೆ
ಕಚ್ಚಿದ ಬದ್ಧ ಭವಿಯ ಶೀಲವಂತನೆಂತೆಂಬೆನಯ್ಯ?.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ಮಾತಿನನೀತಿಯ ಶೀಲವಂತರ ಕಂಡು ಹೇಸಿತ್ತು ಮನ./343
ತನುವ ನೀವು ಸೋಂಕಿ ತನು ನಷ್ಟವಾಯಿತ್ತಯ್ಯ.
ಮನವ ನೀವು ಸೋಂಕಿ ಮನ ನಷ್ಟವಾಯಿತ್ತಯ್ಯ.
ಭಾವವ ನೀವು ಸೋಂಕಿ ಭ್ರಮೆ ನಷ್ಟವಾಯಿತ್ತಯ್ಯ.
ಅರುಹೆ ನೀವಾದಿರಿಯಾಗಿ ಮರಹು ನಷ್ಟವಾಗಿ ಹೋಯಿತ್ತಯ್ಯ.
ಮರಹು ಅಳಿಯಿತ್ತಾಗಿ ಮಾಯೆಯಳಿದು ಹೋಯಿತ್ತಯ್ಯ.
ಮಾಯೆಯಳಿಯಿತ್ತಾಗಿ ನಿರಾಳ ನಿರ್ಮಾಯ
[ಪರಾ] ಪರವಸ್ತುವಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./344
ತನುವ ಮುಟ್ಟಿಹ ಮನ ಮನವ ಮುಟ್ಟಿದ ತನು
ತನು ಮನವ ಮುಟ್ಟಿಹ ಸರ್ವಕರಣಂಗಳ ನೋಡಾ.
ಕಾಯದ ಕರಣಂಗಳ ಮುಟ್ಟಿಹ ಜೀವನ ನೋಡಾ.
ಕಾಯ ಜೀವ ಕರಣಂಗಳ
ಶುದ್ಧ ಪರಮಾತ್ಮಲಿಂಗದಲ್ಲಿ ಮುಟ್ಟಿಸಬಲ್ಲರೆ
ಅದೇ ಅರ್ಪಿತ, ಅದೇ ಪ್ರಸಾದ ನೋಡಾ.
ಆ ಪ್ರಸಾದಿ ಎಂದೂ ಪ್ರಳಯ ವಿರಹಿತ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./345
ತನುವನು ಶ್ರೀಗುರುವು ಕ್ರಿಯಾದೀಕ್ಷೆಯಿಂದ
ತನುಗುಣವನು ಭಸ್ಮೀಕೃತವ ಮಾಡಿದಬಳಿಕ,
ಅದು ದೃಶ್ಯ ಜಡ ತನುವಲ್ಲ.
ಶಿವಸತ್ಕಿ ್ರಯಾಚಾರದ ಮೂಲಸೂತ್ರವೆ ತನ್ನ ತನುವೆಂದರಿವುದು.
ಶ್ರೀಗುರು ಮಂತ್ರದೀಕ್ಷೆಯಿಂದ ಮನದ ಪೂರ್ವಾಶ್ರಯವ ಕಳೆದು
ಮನಕ್ಕೆ ಘನ ನೆನಹ ಸಂಬಂಧಿಸಿದನಾಗಿ, ಮನ ನಿರ್ಮಲವಾಗಿ
ಲಿಂಗಕ್ಕಾಶ್ರಯವೆಂದು ಅರಿವುದು.
ಶ್ರೀಗುರು ಜ್ಞಾನದೀಕ್ಷೆಯಿಂದ
ಪ್ರಾಣನ ಪ್ರಪಂಚಿನ ಪಶುಭಾವವ ಕಳೆದು
ಅಖಂಡಿತ ಜ್ಞಾನಲಿಂಗಕಳೆಯು ತನ್ನ ಪ್ರಾಣನಾಥನೆಂದು
ತಿಳುಹಿದನಾಗಿ,
ಪ್ರಾಣನ ಮಲಿನವೆಂಬುದು ಪಶುಭಾವವಲ್ಲದೆ ಲಿಂಗಭಾವವಲ್ಲ.
ಈ ಸಂದೇಹ ಭ್ರಾಂತಿಯುಳ್ಳ ಕಾರಣ, ಶೈವ ಹೊಲ್ಲ
ಎನ್ನುತ್ತಿರ್ದೆನಯ್ಯ.
ತಮ್ಮ ತಾವರಿದು ನಿಶ್ಚೆ ಸದಿರ್ದಡೆ ಮಾಣಲಿ,
ಗುರೂಪದೇಶದಿಂದ ನಿಶ್ಚೆ ಸುವುದು. ಇದು ಸಂದೇಹವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./346
ತನುವಿಡಿದು ಕಾಬುದು ಗುರುವಿನ ಭೇದ.
ಮನವಿಡಿದು ಕಾಬುದು ಲಿಂಗದ ಭೇದ.
ಜ್ಞಾನವಿಡಿದು ಕಾಬುದು ಜಂಗಮದ ಭೇದ.
ಈ ತ್ರಿವಿಧವಿಡಿದು ಕಾಬುದು ಮಹಾ ಪ್ರಕಾಶ.
ಆ ಮಹಾಪ್ರಕಾಶದೊಳಗೆ ಮಹವ ಕಂಡು
ಮಹಕ್ಕೆ ಮಹನಾಗಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./347
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ.
ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ.
ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ.
ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ.
ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ
ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ.
ಹೀಂಗಲ್ಲದೆ:
ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು
ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು
ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ
ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ.
ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ.
ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ.
ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ?
ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ?
ಈ ಭಂಗಿತರ ಮುಖವ ನೋಡಲಾಗದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./348
ತನುವಿನಲ್ಲಿ ಜ್ಞಾನಗುರು ಸಾಹಿತ್ಯವಾಗಿ
ತನುಭಾವವಿಲ್ಲ ನೋಡಾ.
ಮನದಲ್ಲಿ ಅರುಹೆಂಬ ಶಿವಲಿಂಗ ಅಚ್ಚೊತ್ತಿತ್ತಾಗಿ
ಮನಭಾವವಿಲ್ಲ ನೋಡಾ.
ಭಾವದಲ್ಲಿ ಮಹಾನುಭಾವವೆಂಬ ಜಂಗಮ ಸಂಬಂಧವಾಯಿತ್ತಾಗಿ
ಭಾವಾಭಾವಂಗಳಿಲ್ಲದ ಸದ್ಭಾವಿ ನೋಡಾ.
ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾದ ನಿಃಪ್ರಪಂಚಿಯ ನೋಡಾ.
ಆಚಾರ ಅಂಗವಾಗಿ ಅರುಹು ಹೃದಯವಾಗಿ,
ಹೃದಯ ಶುದ್ಧವಾಗಿ ಹದುಳಿಗನಾದ ಸದ್ಭಕ್ತನಲ್ಲಿ
ಮದನಹರನಿಪ್ಪನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./349
ತನುವಿನೊಳಗೆ ತನುವಾಗಿಪ್ಪಿರಯ್ಯ.
ಮನದೊಳಗೆ ಮನವಾಗಿಪ್ಪಿರಯ್ಯ.
ಭಾವದೊಳಗೆ ಭಾವವಾಗಿಪ್ಪಿರಯ್ಯ.
ಎನ್ನಂಗ ಪ್ರಾಣ ಮಹಾಲಿಂಗ ನೀವೆಯಾದ ಕಾರಣ
ಎನ್ನಗಿನ್ನಾವ ಭಂಗವೂ ಇಲ್ಲ ನೋಡಾ.
ಅದೇನು ಕಾರಣವೆಂದಡೆ:
ಎನ್ನಂಗವು ನಿಮ್ಮೊಳಗಡಗಿ
ಶುದ್ಧ ಪರಮಾತ್ಮನಾದೆನು ಕಾಣಾ.
ಇನ್ನಾವ ಪ್ರಪಂಚೂ ಎನಗಿಲ್ಲ ನೀನು ನಿರ್ಲೆಪಕನಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./350
ತನುವಿನೊಳಗೆ ಲಿಂಗ, ಲಿಂಗದೊಳಗೆ ತನು.
ಮನದೊಳಗೆ ಲಿಂಗ, ಲಿಂಗದೊಳಗೆ ಮನ.
ಭಾವದೊಳಗೆ ಲಿಂಗ, ಲಿಂಗದೊಳಗೆ ಭಾವ.
ಪ್ರಾಣದೊಳಗೆ ಲಿಂಗ, ಲಿಂಗದೊಳಗೆ ಪ್ರಾಣವಾಗಿರ್ದು,
ಬೇರಿಟ್ಟು ನುಡಿವ ಭಿನ್ನಜ್ಞಾನಿಗಳಿಗೆ ಲಿಂಗವೆಲ್ಲಿಯದೊ?.
ಲಿಂಗವಿಲ್ಲವಾಗಿ ಪ್ರಸಾದವಿಲ್ಲ;
ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ ನೋಡಾ.
ಇದು ಕಾರಣ.
ಭಿನ್ನಾಭಿನ್ನವನಳಿದು ನಿನ್ನೊಳಗಡಗಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./351
ತನುವಿಲ್ಲದಂದಿನ, ಮನವಿಲ್ಲದಂದಿನ,
ಕಾಲಕರ್ಮಂಗಳಿಲ್ಲದಂದಿನ, ಕರಣಂಗಳಿಲ್ಲದಂದಿನ,
ಇಂದ್ರಿಯಂಗಳ ವ್ಯವಹಾರದ ಸುಖವಿಲ್ಲದಂದಿನ,
ಇವೇನುಯೇನೂ ಇಲ್ಲದಂದು,
ನೀನು, ಶೂನ್ಯನಾಗಿರ್ದೆಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./352
ತನುವುಳ್ಳನ್ನಕ್ಕರ ನಿನ್ನ ಸಾವಯನೆಂದೆ
ಮನಪ್ರಾಣಂಗಳುಳ್ಳನ್ನಕ್ಕರ ನಿನ್ನ ಸಾವಯ ನಿರವಯನೆಂದೆ.
ಅನುಭಾವವುಳ್ಳನ್ನಕ್ಕರ ನಿನ್ನ ನಿರವಯನೆಂದೆ.
ನಾನುಳ್ಳನ್ನಕ್ಕರ ನೀನೆಂದೆ.
ನಾ ಸತ್ತ ಬಳಿಕ ನೀನೆಲ್ಲಿಯವನು ಹೇಳ.
ಇದು ಕಾರಣ,
ಸಾವಯನೆನ್ನೆ, ಸಾವಯ ನಿರವಯನೆನ್ನೆ, ನಿರವಯನೆನ್ನೆ.
ನಿರಾಕಾರ ಬಯಲಾದ ಕಾರಣ,
ಪರಾಪರ ವಸ್ತುವೆಂದೆನಲಿಲ್ಲ ಕಾಣಾ ಎರಡಿಲ್ಲದ ನಿರಾಳನ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./353
ತನುವೆಂಬುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು;
ತಾಮಸವೆಂಬ ಸರ್ಪಂಗೆ ತಲೆ ಹದಿನಾಲ್ಕು; ಒಡಲಾರು.
ಬಾಲವ ಬ್ರಹ್ಮಲೋಕಕ್ಕಿಟ್ಟು, ಶಿರವ ಹರಿದ್ವಾರದಲ್ಲಿರಿಸಿ,
ಕರಣೇಂದ್ರಿಯಂಗಳೆಂಬ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ.
ಆ ವಿಷವು ಶಿವಶರಣರಲ್ಲದವರನೆಲ್ಲರ ಸುಡುವುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./354
ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು.
ಅನ್ಯ ಸತಿ, ಅನ್ಯ ಧನದಾಸೆಯನ್ನು
ಬಿಡಬೇಕೆಂಬುದು ನೋಡ, ಜಗ.
ತನ್ನ ಸತಿಯಾರು ಅನ್ಯಸತಿಯಾರೆಂದು
ಬಲ್ಲವರುಂಟೆ ಹೇಳ ಮರುಳೆ,
ಬಲ್ಲವರುಂಟುಂಟು ಶಿವಶರಣರು.
ತನ್ನ ಶಕ್ತಿಯೆ ಶಿವಶಕ್ತಿ;
ಅನ್ಯಶಕ್ತಿಯು ಮಾಯಾಶಕ್ತಿ ಕಾಣ ಮರುಳೆ.
ಇದು ಕಾರಣ,
ಮಾಯಾಶಕ್ತಿಯ ಸಂಗ ಭಂಗವೆಂದು ನಿವೃತ್ತಿಯ ಮಾಡಿ
ಶಿವಶಕ್ತಿಸಂಪನ್ನರಾಗಿ
ಶಿವಲಿಂಗವ ನೆರೆವರಯ್ಯ ನಿಮ್ಮ ಶರಣರು.
ಇದು ಕಾರಣ,
ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರನರಕ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./355
ತನ್ನ ಹೃದಯಕ್ಕೆ ಲಿಂಗದ ಹೃದಯ,
ತನ್ನ ಶ್ರೋತ್ರಕ್ಕೆ ಲಿಂಗದ ಶ್ರೋತ್ರ,
ತನ್ನ ನೇತ್ರಕ್ಕೆ ಲಿಂಗದ ನೇತ್ರ,
ತನ್ನ ತ್ವಕ್ಕಿಗೆ ಲಿಂಗದ ತ್ವಕ್ಕು,
ತನ್ನ ನಾಸಿಕಕ್ಕೆ ಲಿಂಗದ ನಾಸಿಕ,
ತನ್ನ ಜಿಹ್ವೆಗೆ ಲಿಂಗದ ಜಿಹ್ವೆ ಪ್ರತಿರೂಪಕವಾಗಿರ್ದ ಬಳಿಕ,
ಅಂಗವಿದೆಂದು, ಲಿಂಗವಿದೆಂದು,
ಬೇರಿಟ್ಟು ನುಡಿಯಲುಂಟೇ ಅಯ್ಯ?.
ಶರಣನೇ ಲಿಂಗ; ಲಿಂಗವೇ ಶರಣ.
ಇವೆರಡಕ್ಕೂ ಭಿನ್ನವೆಲ್ಲಿಯದೋ ಒಂದೆಯಾದ ವಸ್ತುವಿಂಗೆ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./356
ತನ್ನಂಗದ ಮೇಲೆ ಶಿವಲಿಂಗವಿದ್ದು
ಸತ್ಕಿ ್ರಯಾಮುಖದಿಂದ ಲಿಂಗಾರ್ಪಿತವ ಮಾಡಿ
ಆ ಲಿಂಗ ಪ್ರಸಾದವ ಕೊಂಬುದೆ ಶಿವಾಚಾರಪದ ನೋಡಾ!
ಆ ಸದ್ಭಕ್ತನಲ್ಲಿ ಶಿವನಿಪ್ಪನು.
ಹೀಂಗಲ್ಲದೆ,
ಅಂತರಂಗದಲ್ಲಿ ಆತ್ಮಲಿಂಗವುಂಟೆಂದು
ಮನ ಭಾವಂಗಳಿಂದರ್ಪಿತವೆಂದು
ಇಷ್ಟಲಿಂಗಾರ್ಪಣವಿಲ್ಲದ ಕರಕಷ್ಟಂಗೆ
ಅವನಿಗೆ ಆವ ಸತ್ಯವು ಇಲ್ಲ; ಆವ ಸದಾಚಾರವು ಇಲ್ಲ;
ಶಿವಜ್ಞಾನವೆಂಬುದು ಮುನ್ನವೆ ಇಲ್ಲ.
ಶಿವಲಿಂಗಾರ್ಪಣಹೀನವಾಗಿ ಕೊಂಬುದು ಅದು ಶಿವಜ್ಞಾನವೆ?
ಇಂತಪ್ಪ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./357
ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು ನೋಡಾ.
ತಲೆಯಳಿಯಿತ್ತು:ನೆಲ ಬೆಂದಿತ್ತು.
ತಲೆಯೊಳಗಣ ಕಣ್ಣು
ತ್ರಿಜಗದಾಧಿಪತಿಯ ತಾನೆಂದು ನೋಡುತ್ತ ನೋಡುತ್ತ ಅಡಗಲು
ನೆಲದೊಡೆಯ ಸತ್ತುದ ಕಂಡು
ನಿರ್ವಯಲ ಸಮಾಧಿಸ್ಥಲವಾಗಿ
ಕುರುಹಳಿದ ಲಿಂಗೈಕ್ಯನಯೇನೆಂದುಪಮಿಸುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./358
ತಲೆವಾಲೊಸರಲು
ನೆಲ ಬೆಂದು ನೀರರತು
ಕಿಚ್ಚು ಕೆಟ್ಟಿತ್ತು ನೋಡಾ
ಗಾಳಿಯ ದೂಳಿಯ ದಾಳಿನಿಂದು
ಅಂಬರದ ಸಂಭ್ರಮವಡಗಿತ್ತು ನೋಡಾ.
ಹಾಲಕುಡಿದ ಶಿಶು ಸತ್ತು ತಾನು ತಾನಾದುದ
ಏನೆಂದುಪಮಿಸುವೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./359
ತಾನೆ ಬ್ರಹ್ಮವೆಂದು ಕರ್ತೃಹೀನನಾದ ವಾಗದ್ವೆ ತಿಯಲ್ಲ.
ಅನಾದಿ ಭಿನ್ನವಾಗಿ ದ್ವೆ ತಿಯಲ್ಲ ನೋಡ ಶರಣನು.
ಅದೇನು ಕಾರಣವೆಂದರೆ:
ಮಹಾಘನ ಪರಶಿವತ್ತ್ವದಲ್ಲಿ ಚಿತ್ತು ಉದಯಿಸಿತ್ತು.
ಆ ಚಿಚ್ಛಕ್ತಿಯಿಂದ ಶಿವಶರಣನುದಯಿಸಿದನು.
ಅಂತು ಉದಯಿಸಿದ ಚಿದ್ರೂಪಮನೇ ಶರಣನು;
ಸದ್ರೂಪವೇ ಲಿಂಗವು.
ಈ ಶರಣ ಲಿಂಗವೆರಡರ ಸಂಬಂಧವ
ದ್ವೆ ತವೆನಲಿಲ್ಲ; ಅದ್ವೆ ತವೆನಲಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./360
ತಾನೊಬ್ಬನು; ಕೊಲುವರು ಹಲಬರು.
ಹಲವು ದಿಕ್ಕಿನ ಕಿಚ್ಚೆದ್ದು ಸುಡುವಲ್ಲಿ ನೆಲನ ಮರೆಹೊಗಲು
ಜಲಮಯವಾಯಿತ್ತು ನೋಡಾ.
ಜಲದೊಳಗಾಳುವನ ಜಲಂಧರ ರಕ್ಕಸ ಭಕ್ಷಿಸುತ್ತಿರಲು
ಆಕಟಕಟಾ ಶಿವನೇಯೆನಲು
ಮುಕ್ಕಣ್ಣ ತೆರೆದನು; ರಕ್ಕಸನ ಸೊಕ್ಕು ಮುರಿಯಿತ್ತು,
ಕೊಲುವರು ಹಲಬರು ನೆಲನ ಬಿಟ್ಟೋಡಿದರು.
ಹಲವು ದಿಕ್ಕಿನ ಕಿಚ್ಚು ಕೆಟ್ಟಿತ್ತು.
ನೆಲ ಕರಗಿತ್ತು; ಜಲವರತಿತ್ತು.
ಜಲಧಿ ದಾಂಟಿ, ಅಮೃತ ಸಾಗರವ ಬೆರಸಿ
ಅನುಪಮಸುಖಿಯಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./361
ತಾಪತ್ರಯಾದಿಗಳಳಿಯವು;
ಕೋಪ ಮೋಹಾದಿಗಳ ಸುಟ್ಟುರುಹಲರಿಯರು;
ಅಷ್ಟಮದಂಗಳ ಹಿಟ್ಟುಗುಟ್ಟಲರಿಯರು.
ಬಟ್ಟಬಯಲ ತುಟ್ಟಿ ತುದಿಯಣ ಮಾತನೇಕೆ ನುಡಿವಿರಣ್ಣ?
ಕರಕಷ್ಟ ಕರಕಷ್ಟ ಕಾಣಿಭೋ!
ಇಂದ್ರಿಯಂಗಳ ಮುಸುಕುನುಗಿಯದೆ
ವಿಷಯಂಗಳ ಶಿರವನರಿಯದೆ
ಕರಣಂಗಳ ಕಳವಳವ ಕೆಡಿಸದೆ
ಕರ್ಮೆಂದ್ರಿಯಂಗಳ ಮೂಲದ ಬೇರ ಕಿತ್ತು ಭಸ್ಮವ ಮಾಡದೆ
ಕಷ್ಟಕಾಮನ ನಷ್ಟವ ಮಾಡಲರಿಯದೆ
ಲಿಂಗನಿಷ್ಠರೆಂಬ ಕಷ್ಟವನೇನೆಂಬೆನಯ್ಯ?
ಮೃತ್ಯುಗಳ ಮೊತ್ತವ ಕಿತ್ತೆತ್ತಿ ಕೆದರದೆ
ಸತ್ವರಜತಮಂಗಳ ನಿವೃತ್ತಿಯ ಮಾಡದೆ
ನಿತ್ಯ ನಿಶ್ಚಿಂತ ನಿರ್ಮಲರೆಂಬ ಕಷ್ಟಯೋಗಿಗಳನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./362
ತಾಳ ಮರನ ಹಿಡಿದು ತನಿರಸವನುಂಬನ್ನಕ್ಕರ
ಬಾರದ ಭವದಲ್ಲಿ ಬಪ್ಪುದು ತಪ್ಪದು ನೋಡಾ.
ತಾಳಮರನ ಹಿಡಿಯದೆ ತನಿರಸವ ಮುಟ್ಟದೆ
ಮೇಲಣ ಹಾಲಕುಡಿಯಬಲ್ಲರಾಗಿ
ನಿಮ್ಮ ಶರಣರು ಭವವಿರಹಿತರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./363
ತಾಳಮರದ ಮೇಲೊಂದು ಹೂಳಿದ್ದ ವಸ್ತುವ ಕಂಡೆ.
ಏಳುನೂರೆಪ್ಪತ್ತು ಮನೆಯಲ್ಲಿ ತಾನಾಗಿಪ್ಪುದಯ್ಯ.
ಸರ್ವ ಸಂದುಗಳೊಳಗೆ ಅಳವಟ್ಟು ಬೆಳಗುವುದು.
ನಟ್ಟ ನಡು ಮಧ್ಯದಲ್ಲಿ ನಂದಾದೀವಿಗೆ
ನಂದದ ಬೆಳಗು ಕುಂದದು ನೋಡಿರೇ.
ಮೂರಾರು ನೆಲೆಗಳ ಮೀರಿ ಪರಿಪೂರ್ಣವಾಗಿಪ್ಪುದು.
ದಶನಾಡಿಗಳೊಳಗೆ ಎಸೆದು ಪಸರಿಸಿಪ್ಪ
ಸ್ಫಟಿಕಪ್ರದ್ಯುತ್ ಪ್ರಭಾಮಯವಾಯಿತ್ತಯ್ಯ.
ಒಳಗಿಲ್ಲ, ಹೊರಗಿಲ್ಲ, ಎಡನಿಲ್ಲ, ಬಲನಿಲ್ಲ,
ಹಿಂದಿಲ್ಲ, ಮುಂದಿಲ್ಲ, ಅಡಿಯಿಲ್ಲ, ಅಂತರವಿಲ್ಲ,
ಆಕಾಶವೆಂಬುದು ಮುನ್ನಿಲ್ಲವಯ್ಯ.
ಹಿಡಿದರೆ ಹಿಡಿಯಿಲ್ಲ, ಕರೆದರೆ ನುಡಿಯಿಲ್ಲ,
ನೋಟಕ್ಕೆ ನಿಲುಕದು.
ಇದರಾಟ ಅಗಮ್ಯವಾಗಿಪ್ಪುದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./364
ತುಂಟ ಬಂಟಂಗೆ ನಂಟರು ನಾಲ್ವರು ನೋಡಾ.
ಬಂಟರು ಎಂಟುಮಂದಿಗಳಾಗಿಪ್ಪರಯ್ಯ.
ನಂಟರು ನಾಲ್ವರ ಕೊಂದು ಬಂಟರು ಎಂಟಮಂದಿಯ ಬಿಟ್ಟಲ್ಲದೆ
ತುಂಟತನ ಬಿಡದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./365
ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು;
ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತರದಂತೆ,
ವಿಷಯ ತೋರಿದಡೆ ಯೋನಿ ಚಕ್ರವ ನಿಶ್ಚಯಿಸುವುದು
ಆ ವಿಷಯ ತೀರಿದ ಬಳಿಕ ಆ ಯೋನಿ
ಸ್ನಾನದಕುಳಿಯಿಂದ ಕಡೆಯಾಗಿಪ್ಪುದು ನೋಡ.
ಸತಿಯೆಂಬುವಳು ಸತ್ತ ಶವಕಿಂದ ಕಡೆಯಾಗಿಪ್ಪಳು ನೋಡ.
ಅಪ್ಪಬಾರದು ಅಪ್ಪಬಾರದು; ಅತಿ ಹೇಸಿಕೆ.
ಪಶುಪತಿ ನೀ ಮಾಡಿದ ವಿಷಯವಿಧಿ
ಈರೇಳು ಲೋಕವನಂಡೆಲೆವುತ್ತಿದೆ ನೋಡಾ.
ಈ ಸಂಸಾರ ಪ್ರಪಂಚ ದೇವದಾನವ ಮಾನವರು
ಪರಿಹರಿಸಲಾರದೆ
ಆಳುತ್ತ ಮುಳುಗತ್ತಲಿಪ್ಪರು ನೋಡಾ.
ಇದು ಕಾರಣ, ಸದಾಶಿವನನರಿದು ನೆನೆಯಲು
ಸಂಸಾರಪ್ರಪಂಚು ಕೆಡುವುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./366
ತೈಲ ಬತ್ತಿ ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುದು ನೋಡಾ.
ಸದ್ಭಕ್ತಿ ಸ್ನೇಹ ಮೋಹದಿಂದ ಲಿಂಗಸ್ಫರುಶನವ ಮಾಡಿ,
ಆ ಭಕ್ತನ ದೇಹ ಮನ ಕರಣಂಗಳೆಲ್ಲವು
ಲಿಂಗವಾದವು ನೋಡಾ.
ಲಿಂಗವ ಮುಟ್ಟಿನ ಮತ್ತೊಂದೇನುವ ಮುಟ್ಟದ ನಿಮರ್ೊಹಿಯ
ಮಾಹೇಶ್ವರನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./367
ದನುಜ ಮನುಜ ದಿವಿಜರ ಅಲ್ಪಪದವಿಯನೇನೆಂದು
ಅರಿಯನು ನೋಡಾ ಶರಣನು.
ಮನುಮುನಿಗಳ ಕ್ಷಣಿಕ ಪದಗಿದವ
ಬಗೆವನೇ ನಿಃಕಾಮಿ ಶರಣನು?
ಕಾಮಧೇನು ಗೀಮಧೇನು ಕಲ್ಪತರು ಗಿಲ್ಪತರು
ಚಿಂತಾಮಣಿ ಗಿಂತಾಮಣಿ ಪರುಷ ಗಿರುಷಗಳೆಂಬ
ಪ್ರಪಂಚುಗಳ ಎಣಿಸುವನೆ ನಿಭ್ರಾಂತಶರಣನು?
ಇಹಲೋಕದ ಸುಖ, ಪರಲೋಕದ ಗತಿ ಎಂಬ
ಇಹಪರವನೆಣಿಸುವನೆ ಶರಣನು?
ಇಹಪರವೆಂಬ ಇದ್ದಸೆಗೆಟ್ಟು
ಪರಾಪರವಸ್ತುವೇ ತಾನಾದ
ಪರಮ ಪರಿಣಾಮಿ ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./368
ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು
ಶಶಿಕಳೆಯೊಳಗೆ ರವಿಯ ಬೆಳಗು ನೋಡಾ.
ರವಿ ಶಶಿ ಶಿಖಿ ಏಕರಸಮಯವಾಗಿ
ಓಂಕಾರವೊಂದಾದ ನಾದ,
ಆ ಆಧಾರ ಸ್ಥಾಧಿಷ್ಠಾನ ಮಣಿಪೂರಕ ಅನಾಹುತ
ವಿಶುದ್ಧಿ ಆಜ್ಞೇಯದಲ್ಲಿ.
ಕಂಡು, ಕೂಡಿ ಸುಖಿಸುತಿರ್ದೆನಯ್ಯಾ,
ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು
ನಾನು ನೀನಾದೆನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./369
ದೂರ್ವೆಯದಳನ ಮೇಯಬಂದ ಮೊಲನ
ಉರ್ವಿಯ ಕರಡಿ ತೊಡರಿಗೊಂಡಿಪ್ಪುದಯ್ಯ.
ಕರಡಿಯ ಹಿಡಿದ ಬೇಡನ ಕಯ್ಯ ಕಾಡು ನಾಯಿಗಳು
ನಾಡನೆಲ್ಲವ ಹರಿದು ತಿನುತಿಪ್ಪವು;
ಇವರ ಗಾಢವನೇನೆಂಬೆನಯ್ಯ.
ಇವರ ಗಾಢ ಗಮಕವ ಮುರಿದಾತನಲ್ಲದೆ
ಲಿಂಗೈಕ್ಯನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./370
ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ,
ಪುತ್ರ ಮಿತ್ರ ಕಳತ್ರತ್ರಯ ಧನಧಾನ್ಯ ಷಡುಚಂದನಾದಿ
ಭೋಗಾದಿಭೋಗಂಗಳ ಪಡೆದು
ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ,
ಕಾಯವೇ ದುಃಖದಾಗರವೆಂದು ಅರಿಯೆಯಲ್ಲ?
ಕಾಯವೇ ಸಕಲಧರ್ಮಕರ್ಮಕ್ಕಾಶ್ರಯವೆಂದರಿಯೆಯಲ್ಲ?
ಪುಣ್ಯ ಪಾಪವಶದಿಂದ
ಸ್ವರ್ಗನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ?
ಹುಟ್ಟುವುದು ಮಹಾದುಃಖ; ಹುಟ್ಟಿ ಸಂಸಾರಶರಧಿಯೊಳು
ಬದುಕುವುದು ದುಃಖ.
ಸಾವ ಸಂಕಟವನದ ನಾನೇನೆಂಬೆನಯ್ಯಾ,
ಅದು ಅಗಣಿತ ದುಃಖ.
ಆವಾವ ಪರಿಯಲ್ಲಿ ತಿಳಿದುನೋಡಲು,
ಈ ಮೂರು ಪರಿಯ ದುಃಖ ಮುಖ್ಯವಾದ
ಅನಂತ ದುಃಖ ನೋಡಾ.
ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ,
ಮಾಯಾಮೋಹನ ತಾಳ್ದು ಮತ್ತನಾಗಿರದೆ,
ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ,
ಪಂಚವದನನ ನೆನೆನೆನೆದು
ಸಂಸಾರಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./371
ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ.
ದೇವಸಾಲೆಯು ಅಳಿವುದಲ್ಲ; ದಿವ್ಯಮೂರ್ತಿಯು ಕೆಡುವುದಲ್ಲ.
ಕೇಡಿಲ್ಲದ ಪರವಸ್ತು ತಾನೆಂದರಿದಾತನಲ್ಲದೆ,
ಶಿವಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./372
ದೇವಸ್ತ್ರೀಯರ ಸಂಗಕ್ಕೆ ಎಣಿಸುವದೆಲ್ಲ ಕಾಯಗುಣ ಕಾಣಿರಣ್ಣ.
ಆವ ಹಾವಾದಡೇನು ವಿಷವೊಂದೇ ನೋಡ.
ಮಾಯಿಕಕ್ಕೆ ದೇವತ್ವವುಂಟೇ ಮರುಳು ಮಾನವ?
ಮಹಾದೇವನೇ ದೇವನಲ್ಲದೆ, ಅನಿತ್ಯವಾದ ಮಾಯಾಪ್ರಪಂಚು
ನಿತ್ಯವಾದ ಶಿವನ ನೆನೆದರೆ ಕೆಡುವುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./373
ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ.
ಆ ದೇಹದೊಡನೆ ಮಿಶ್ರವಾದ ಪ್ರಾಣನು
ಶ್ರೀಗುರುವಿನ ಕರಕಮಲದಲ್ಲಿ ಉತ್ಪತ್ತಿಯಾಗಿ,
ಅಂಗದ ಮೇಲೆ ಲಿಂಗಸ್ವಾಯತವ ಮಾಡಿ
ಉರುತರ ಲಿಂಗದಲ್ಲಿ ಭರಿತ ಚರಿತ ಚಾರಿತ್ರನ ಮಾಡಿದನಾಗಿ
ಲಿಂಗದೇಹಿ ಲಿಂಗಪ್ರಾಣಿಯೆನಿಸಿಕೊಂಡು ಬದುಕಿದೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./374
ದೇಹವ ಮರೆಗೊಂಡಿಪ್ಪ ಆತ್ಮನಂತೆ,
ಶಕ್ತಿಯ ಮರೆಗೊಂಡಿಪ್ಪ ಶಿವನಂತೆ,
ಕ್ಷೀರವ ಮರೆಗೊಂಡಿಪ್ಪ ತುಪ್ಪದಂತೆ,
ವಾಚ್ಯವ ಮರೆಗೊಂಡಿಪ್ಪ ಅನಿರ್ವಾಚ್ಯದಂತೆ,
ಲೋಕಾರ್ಥದೊಳಡಗಿಪ್ಪ ಪರಮಾರ್ಥದಂತೆ,
ಎನ್ನ ಆತ್ಮನೊಳಡಗಿಪ್ಪ ಪರಮಾರ್ಥ ತತ್ವವು,
ಬೀಜದೊಳಡಗಿದ ವೃಕ್ಷದಂತೆ ಇದ್ದಿತಯ್ಯ.
ನಾನರಿಯದ ಮುನ್ನ ಎನ್ನೊಳಡಗಿದ್ದಿತಯ್ಯ
ಶರಣ ಲಿಂಗ ಸಂಬಂಧ,
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ./375
ದೇಹವೇ ದೇಗುಲ, ಕಾಲೇ ಕಂಬ, ಶಿರಸ್ಸೇ ಶಿಖರ ನೋಡಾ.
ಹೃದಯಕಮಲಕರ್ಣಿಕಾವಾಸವೇ ಸಿಂಹಾಸನ.
ಮಹಾಘನಪರತತ್ತ್ವವೆಂಬ ಪ್ರಾಣಲಿಂಗವ ಮೂರ್ತಿಗೊಳಿಸಿ,
ಪರಮಾನಂದಾಮೃತಜಲದಿಂದ ಮಜ್ಜನಕ್ಕೆರೆದು,
ಮಹಾದಳಪದ್ಮದ ಪುಷ್ಪದಿಂದ ಪೂಜಿಸಿ,
ಪರಮ ಪರಿಣಾಮವೆಂಬ ನೈವೇದ್ಯವ ಗಡಣಿಸಿ,
ಪ್ರಾಣಲಿಂಗಕ್ಕೆ
ಪ್ರಾಣಸಂಬಂಧವಾದ ಪೂಜೆಯ ಮಾಡುತ್ತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./376
ದೇಹಾದಿಗುಣವಿಲ್ಲದ
ಜಾತಿ ವಣರ್ಾಶ್ರಮ ನಾಮರೂಪಿಲ್ಲದ
ಜಿಹ್ವಾಲಂಪಟತ್ವವಿಲ್ಲದ
ಮದ ಮೋಹಾದಿಗಳಿಲ್ಲದ
ಮಾಯಾದೇಹದ ಮಲತ್ರಯದ ದುರ್ವಾಸನೆಯಿಲ್ಲದ
ಸಂಗ ಸಂಯೋಗ ಸಂಬಂಧವೆಂಬ ಇಂದ್ರಿಯಂಗಳ ಬಂಧವಿಲ್ಲದ
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯಿಲ್ಲದ
ತ್ರಿಪುಟಿಯ ಮೀರಿ, ತ್ರಿಪುಟಿಗೆ ನಿಲುಕದ ಸ್ಥಾನದ
ಅರುಹಿನ ಪರಬ್ರಹ್ಮವೇ ಶರಣ ಲಿಂಗ ಕಾಣಿಭೋ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣರು
ಅದ್ವೆ ತಾನಂದದಿಂದ ಸಂಪೂರ್ಣ ಕಾಣಿರೋ./377
ದ್ವಾದಶದಳ ಮಂಟಪದಲ್ಲಿ ರವಿ, ಶಶಿ, ಶಿಖಿಯ ಪೀಠದಲ್ಲಿ
ಶಶಿವದನೆ ವಿಶ್ವತೋ ಮುಖವಾಗಿದ್ದಾಳೆ ನೋಡ.
ಶಶಿಮುಖಿಯ ಸಂಗದಿಂದ ಪಶುಪತಿಯ ನೆರೆದು
ವಿಶ್ವತೋಮುಖ ಪ್ರಸಾದಿಯಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./378
ದ್ವೆ ತಿಯಲ್ಲ ಅದ್ವೆ ತಿಯಲ್ಲ ಕಾಣಿಭೋ ಶರಣ.
ದ್ವೆ ತಾದ್ವೆ ತವೆಂಬ ಉಭಯ ಕಲ್ಪನೆಯನಳಿದುಳಿದ
ವೀರಮಾಹೇಶ್ವರನು
ಪರಶಿವನ ನಿರುತ ಸ್ವಯಾನಂದಸುಖಿ.
ಪರಶಿವನ ಪರಮ ತೇಜದಾದಿ ಬೀಜ.
ಪರಶಿವನ ಪರಮಜ್ಞಾನಪ್ರಕಾಶಮಯ ಪರಮಾನಂದದ,
ನಿರುಪಮಲಿಂಗದ
ಪ್ರಭಾಕಿರಣವೇ ತಾನಾದ ಶರಣನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./379
ಧನುಜಮನುಜ ದಿವಿಜಲೋಕಭರಿತಂ
ಧರ್ಮಚರಿತಂ ದುರಿತದೂರಂ ವನಧಿವಡಬ ತೇಜೋಮಯಂ
ಪಂಚವಕ್ತ್ರಂ ಪ್ರಪಂಚುರಹಿತಂ ಪರಾತ್ಪರಂ
ಹರ ಹರ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./380
ಧರೆಯ ಮೇಲಣ ಅರೆಯಲ್ಲಿ
ಮೇರುಗಿರಿ ಹುಟ್ಟಿದುದ ಕಂಡೆನಯ್ಯ.
ಗಿರಿಯ ಸನ್ನಿಧಿಯಲ್ಲಿ ವಜ್ರ ಉದಯಿಸಲು
ಗಿರಿ ಕರಗಿ ಅರೆವೊಡೆದು, ಧರೆ ಬೆಂದು
ಕಾಲಾಗ್ನಿ ಎದ್ದು ಉರಿವುತ್ತಿದೆ ನೋಡಾ.
ಆ ಉರಿಯೇ ವಜ್ರದ ಪ್ರಭೆಯೆಂದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./381
ಧರೆಯಾಕಾಶದ ಮಧ್ಯದಲ್ಲಿ
ಉರಿಯ ಸೀರೆಯನುಟ್ಟು
ಧರೆಯಾಕಾಶಕ್ಕೆ ಎಡೆಯಾಡುತಿದಾಳೆ ನೋಡಾ.
ಊರ ಒಳ ಹೊರಗೆ ತಾನಾಗಿ
ಆರು ಬಣ್ಣದ ಪಕ್ಷಿಯ ಶಿರದ ಅಮೃತವ ಕರೆದು
ತಾನು ಪರಮಾನಂದ ಲೀಲೆಯಿಂದ ನಲಿದಾಡುತಿದಾಳೆ ನೋಡಾ.
ಊರು ಬೆಂದು ಉಲುಹು ಅಳಿದುಳಿದು
ಆರು ಬಣ್ಣದ ಪಕ್ಷಿಯಳಿದು
ಆರೂಢವಾಯಿತ್ತು ನೋಡಾ.
ಉರಿಯ ಸೀರೆಯ ಆಂಗನೆ ಉಪಮಾತೀತನ ನೆರೆದುದ ಕಂಡು
ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./382
ನಂದೀಶ್ವರ, ಭೃಂಗೀಶ್ವರ, ವೀರಭದ್ರ,
ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ,
ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ,
ಸದಾಶಿವ, ಈಶ್ವರ, ಮಹೇಶ್ವರ, ರುದ್ರ,
ಘಂಟಾಕರ್ಣ, ಗಜಕರ್ಣ,
ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ,
ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ
ಗಣಾಧೀಶ್ವರರು ಇವರು,
ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ
ಶುದ್ಧ ಚಿದ್ರೂಪರಪ್ಪ ಪ್ರಮಥರು.
ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ
ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ.
ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ,
ಅವರಾಗಮವಂತಿರಲಿ.
ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ
ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./383
ನಕಾರವೇ ಪೃಥ್ವಿ:ಮಃಕಾರವೇ ಅಪ್ಪು, ಶಿಕಾರವೇ ಅಗ್ನಿ,
ವಾಕಾರವೇ ವಾಯು, ಯಕಾರವೇ ಆಕಾಶ,
ಓಂಕಾರವೇ ಆತ್ಮಸ್ವರೂಪು ನೋಡಾ.
ಮತ್ತೆ
ನಕಾರವೇ ಬ್ರಹ್ಮ, ಮಃಕಾರವೇ ವಿಷ್ಣು, ಶಿಕಾರವೇ ರುದ್ರ,
ವಾಕಾರವೇ ಈಶ್ವರ, ಯಕಾರವೇ ಸದಾಶಿವ,
ಓಂಕಾರವೇ ಮಹಾತ್ಮನು ನೋಡಾ.
ಮತ್ತೆ
ಅಂತ್ರರ್ಯಾಮಿಯೇ ನಕಾರ, ಚೈತನ್ಯ ಮಃಕಾರ, ಭಾವನೇ ಶಿಕಾರ,
ಕರ್ತಾರನೇ ವಾಕಾರ, ಕ್ಷೇತ್ರಜ್ಞನೇ ಯಕಾರ,
ಶಿವನೆ ಓಂಕಾರ ನೋಡ.
ಮತ್ತೆ
ಕರ್ಮಾಂಗ ಸ್ವರೂಪನಪ್ಪ ಭಕ್ತನೇ ನಕಾರ.
ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೇ ಮಃಕಾರ.
ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ.
ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಾಕಾರ.
ಭೂತಾಂಗ ಸ್ವರೂಪನಪ್ಪ ಶರಣನೆ, ಯಕಾರ.
ಶಿವಾಂಗ ಸ್ವರೂಪನಪ್ಪ ಐಕ್ಯನೇ ಓಂಕಾರ ನೋಡಾ.
ಮತ್ತೆ
ನಕಾರವೇ ಸದ್ಭಕ್ತಿ, ಮಃಕಾರವೇ ನೈಷ್ಠಿಕಾಭಕ್ತಿ, ಶಿಕಾರವೇ ಅವಧಾನಭಕ್ತಿ,
ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ,
ಓಂಕಾರವೇ ಸಮರಸಭಕ್ತಿ ನೋಡ.
ಮತ್ತೆ
ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ,
ಶಿಕಾರವೇ ಶಿವತತ್ವ ನೋಡಾ.
ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ,
ಓಂಕಾರವೇ ಸಮರಸಭಕ್ತಿ ನೋಡ.
ಮತ್ತೆ
ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ,
ಶಿಕಾರವೇ ಶಿವತತ್ವ ನೋಡ.
ವಾಕಾರವೇ ಈಶ್ವರತತ್ವ, ಯಕಾರವೇ ಸದಾಶಿವತತ್ವ,
ಓಂಕಾರವೇ ಪರತತ್ವ ನೋಡಾ.
ಮತ್ತೆ
ನಕಾರವೇ ಸುಚಿತ್ತ ಹಸ್ತ, ಮಃಕಾರವೇ ಸುಬುದ್ಧಿ ಹಸ್ತ,
ಶಿಕಾರವೇ ನಿರಹಂಕಾರ ಹಸ್ತ, ವಾಕಾರವೇ ಸುಮನ ಹಸ್ತ,
ಯಕಾರವೇ ಸುಜ್ಞಾನ ಹಸ್ತ, ಓಂಕಾರವೇ ಸದ್ಭಾವ ಹಸ್ತ,
ಇಂತಿವು ಅಂಗಷಡಕ್ಷರ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./384
ನಡುಮನೆಯೊಳಾಡುವ ಸಿಂಗಳೀಕನನೊಂದು
ಉಡು ನುಂಗಿದ್ದುದ ಕಂಡು
ಕಡೆಯಲಿದ್ದ ಕಾಳಲದೇವಿ ನಗುತ್ತಿದಾಳೆ ನೋಡಾ.
ನಡುಮಧ್ಯದಲ್ಲಿ ನಕ್ಷತ್ರ ಉದಯವಾಗಲು
ಉಡು ಸಿಂಗಳಿಕ ಮಡಿದು,
ಕಡೆಯಲಿದ್ದ ಕಾಳಲದೇವಿ ಕೆಡೆಮುರಿದೋಡಿದಳು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./385
ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ.
ಮೃಡನ ಗಡಣೆಯಲ್ಲಿ ಜಗವೆಲ್ಲ ಅಡಗಿ ಉಡುಗಿದೆ ನೋಡಾ.
ಈ ಒಡೆಯನ ಮಹಿಮೆಯನೇನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./386
ನದಿವಾಸಿಗಳು, ವನವಾಸಿಗಳು, ಗಿರಿವಾಸಿಗಳು, ಗುಹೆವಾಸಿಗಳು,
ಇಂದ್ರಿಯ ಭಯಂಗಳಿಗಂಜಿ ಕಂದ ಮೂಲಂಗಳ ಭಕ್ಷಿಸುವ
ಕಾನನದ ಮರುಳುಗಳೆಲ್ಲ
ಲಿಂಗಪ್ರಾಣಿಗಳಿಗೆ,
ಪ್ರಾಣಲಿಂಗ ಸಂಬಂಧಿಗಳಾದ ಪರಶಿವಯೋಗಿಗಳಿಗೆ
ಸರಿಯೇ ಈ ಭ್ರಾಂತರೆಲ್ಲ?
ಇದು ಕಾರಣ, ನಿಮ್ಮ ಶರಣರು
ಅಂಗ ಪ್ರಾಣ ಇಂದ್ರಿಯಂಗಳೆಲ್ಲವು ಲಿಂಗ ನಿವಾಸಿಗಳಾಗಿ
ಲಿಂಗದೊಳಡಗಿದ ಲಿಂಗಗ್ರಾಹಕರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./387
ನರರಂತೆ ನಡೆವುತ್ತಿಪ್ಪರಯ್ಯ, ನರರಂತೆ ನುಡಿವುತ್ತಿಪ್ಪಿರಿ ಅಯ್ಯ.
ನರರಂತೆ ಉಣ್ಣುತ್ತಿಪ್ಪಿರಯ್ಯ, ನರರಂತೆ ಉಡುತಿಪ್ಪಿರಿ ಅಯ್ಯ.
ನೋಡಿದರೆ ಅವರವರಂತಿಪ್ಪಿರಿ, ವಿವರಿಸಿದರೆ
ನೀವು ನಿಮ್ಮಂತೆ ಇಪ್ಪಿರಿ ಅಯ್ಯ.
ಹತ್ತರೊಳಗೆ ಹನ್ನೊಂದಾಗಿಪ್ಪಿರಿ ಅಯ್ಯ.
ಕುರುಹಿನ ನಾಮವಿಡಿದು ಕರೆದರೆ `ಓ’ ಎಂದೆಂಬಿರಿ.
ನಾಮವಿಲ್ಲದ ಸೀಮೆಯಿಲ್ಲದ ನಿಸ್ಸೀಮ ಲಿಂಗೈಕ್ಯನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./388
ನವಿಲಾಡಿತೆಂದು ಕೆಂಬೋತ ಪಕ್ಕವ ತರಕೊಂಡಂತೆ
ಹುಲಿಯ ಬಣ್ಣಕ್ಕೆ ನರಿ ಮೈಯ ಸುಟ್ಟುಕೊಂಡಂತೆ
ಕೋಗಿಲೆ ಸ್ವರಗೆಯ್ದದೆಂದು ಕಾಗೆ ಕರೆದಂತೆ
ಲಿಂಗನಿಷ್ಠಾಂಗಿ ವಚನಹಾಡಿದರೆ ಒಪ್ಪುವನಲ್ಲದೆ
ನಿಷ್ಠೆಹೀನರು ಓದಿ ಹಾಡಿದರೆ
ನಳ್ಳಿಗುಳ್ಳೆಯ ತಿಂದ ನರಿ ಹಳ್ಳದ ತಡಿಯಲ್ಲಿ
ಬಳ್ಳಿಟ್ಟು ಬಗುಳಿದಂತೆ ಏನೆಂದು
ಪಾಟಿ ಮಾಡರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./389
ನಾದ ಗುರುಮುಖವೆಂದೆಂಬರು.
ಬಿಂದು ಲಿಂಗಮುಖವೆಂದೆಂಬರು.
ಕಳೆ ಜಂಗಮಮುಖವೆಂದೆಂಬರು.
ನಾದವೆಲ್ಲಿಯದು ಜೀವವಿಲ್ಲದವಂಗೆ?
ಬಿಂದುವೆಲ್ಲಿಯದು ಕಾಯವಿಲ್ಲದವಂಗೆ?
ಕಳೆಯೆಲ್ಲಿಯದು ಕರಣಂಗಳಿಲ್ಲದವಂಗೆ?
ನಾದವ ಗುರುವೆಂದೆನ್ನೆ, ಬಿಂದುವ ಲಿಂಗವೆಂದೆನ್ನೆ.
ಕಳೆಯ ಜಂಗಮವೆಂದೆನ್ನೆ.
ನಾನುಳ್ಳನ್ನಕ್ಕರ ನೀನಲ್ಲದೆ, ನಾನೆಂಬುದಳಿದ ಬಳಿಕ,
ನಾನಿಲ್ಲ ನೀನಿಲ್ಲ:ಸ್ವಯವಿಲ್ಲ ಪರವಿಲ್ಲ.
ನಾದ ಬಿಂದು ಕಳಾತೀತನಾದ
ಆದಿ ಸ್ವಯಂಭೂ ತಾನಾದ ಲಿಂಗೈಕ್ಯಂಗೆ
ನನಗನ್ಯವಾಗಿ ಇನ್ನೇನನೂ ಹೇಳಲಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./390
ನಾದ, ಬಿಂದು, ಕಳಾ ಭೇದವ ತಿಳಿದಲ್ಲದೆ
ಆರಕ್ಷರವಾದ ತೆರನನರಿಯಬಾರದು.
ಆರಕ್ಷರಕ್ಕೆ ಮೂಲಪ್ರಣವವ ತಿಳಿದಲ್ಲದೆ
ನಾದ ತಲೆದೋರದು.
ನಾದ ಬೆಳಗಿನ ಕಳೆಯ ನೋಡಿ ಕಂಡಲ್ಲದೆ
ರಾಜ ಶಿವಯೋಗಿಯಾಗಬಾರದು.
ರಾಜ ಶಿವಯೋಗವೆಂಬುದು
ಆದಿಯಲ್ಲಿ ಶಿವಬೀಜವಾದ
ಮಹಾಮಹಿಮನಿಗೆ ಸಾಧ್ಯವಪ್ಪುದಲ್ಲದೆ
ತ್ರೆ ಜಗದಲಾರಿಗೂ ಅಸಾಧ್ಯ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./391
ನಾದಪ್ರಿಯಂ ನಾದಮಯಂ ನಾದೋರ್ಲಿಂಗ ನಗೇಶ್ವರಂ
ಆದಿ ಮಧ್ಯಾಂತರಹಿತಂ ವೇದೋ ವೇದವಿದಂ ವರಂ
ಮಂತ್ರಮೂರ್ತಿ ಮಹಾರುದ್ರಂ ಓಮಿತಿ ಜ್ಯೋತಿರೂಪಕಂ
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./392
ನಾನು ನೀನೆಂಬ ಉಭಯ ತನುಗುಣ ನಾಸ್ತಿಯಾಗಿ
ಅರುಹು ಮರಹೆಂಬುಭಯದ ಮರೆಹು ಅಳಿಯಿತ್ತಯ್ಯ.
ಮರೆಹು ಅಳಿಯಿತ್ತಾಗಿ,
ಮಹದರುಹಿನ ಆಚರಣೆ ಕರಿಗೊಂಡಿತ್ತಯ್ಯ.
ಮಹದರುಹಿನ ಆಚರಣೆ ಕರಿಗೊಂಡಿತ್ತಾಗಿ,
ಮಹಾಲಿಂಗದ ಬೆಳಗು ಒಳಕೊಂಡಿತ್ತಯ್ಯ.
ಮಹಾಲಿಂಗದ ಬೆಳಗು ಒಳಕೊಂಡಿತ್ತಾಗಿ,
ಮಂಗಳಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ,
ಪರಮ ಪರಿಣಾಮ ನೆಲೆಗೊಂಡಿತ್ತಯ್ಯಾ./393
ನಾನೆಂಬುದು ಅಹಂಕಾರ; ನೀನೆಂಬುದು ಮಾಯೆ.
ನಾನು, ನೀನೆಂಬುಭಯವಳಿದರೆ,
ನಾನೆಂಬನು ನೀನೆಂಬವನು ನೀನೇ ಅಯ್ಯಾ.
ಈ ಎರಡರ ಭೇದವೆಲ್ಲಿಯದೋ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./394
ನಾನೊಬ್ಬನುಂಟೆಂಬವಂಗೆ ನೀನೊಬ್ಬನುಂಟಾಗಿ ತೋರುವೆ.
ನಾನು ನೀನೆಂಬುದುಂಟಾದಲ್ಲಿ ಜ್ಞಾನ ಅಜ್ಞಾನವುಂಟಾಯಿತ್ತು.
ಜ್ಞಾನ ಅಜ್ಞಾನ ಉಂಟಾದಲ್ಲಿಯೆ ನಾನಾವಿಧದ
ಪ್ರಪಂಚು ಆಯಿತ್ತು ನೋಡಾ.
ಮಾಯಿಕವೆಂಬುದು ಹೀಂಗಲ್ಲದೆ ಇನ್ನು ಹೇಂಗಿಹುದು ಹೇಳಾ?,
ನಾನು ನೀನೆಂಬುದೆರಡು ಸತ್ತರೆ ಜ್ಞಾನ ಅಜ್ಞಾನವರತಿತ್ತು.
ನಾನಾವಿಧವಾಗಿ ತೋರಿದ ಮಾಯಿಕವಳಿಯಿತ್ತು.
ಮಾಯಿಕವಳಿಯಿತ್ತಾಗಿ ನಿರ್ಮಾಯನಾದೆನು ಕಾಣಾ.
ನಿರ್ಮಾಯನಾದ ನಿಜಶರಣಂಗೆ
ಕಾಯವೆಲ್ಲಿಯದು? ಮಾಯವೆಲ್ಲಿಯದು?
ಮನವೆಲ್ಲಿಯದು? ನೆನಹೆಲ್ಲಿಯದು?
ಅರುಹೆಲ್ಲಿಯದು? ಕುರುಹೆಲ್ಲಿಯದು.
ತಾನಷ್ಟವಾದ ಸರ್ವನಷ್ಟಂಗೆ
ತನಗನ್ಯವಾಗಿ ಇನ್ನೇನು ದೃಷ್ಟವನೂ ಹೇಳಲಿಲ್ಲ.
“ಯದೃಷ್ಟಂ ತನ್ನಷ್ಟಂ’ ಎಂದುದಾಗಿ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ
ಲಿಂಗವು ನಿರಾಳವಾಗಿ,
ಇನ್ನೇನು ಎಂಬ ನುಡಿಗೆಡೆಯಿಲ್ಲ ಕಾಣಿರೋ./395
ನಾಮರೂಪು ಕ್ರೀಗಳೇನುಯೇನೂ ಇಲ್ಲದ
ನಿತ್ಯನಿರಂಜನ ಪರವಸ್ತು ತಾನೆ ನಿರಂಜನಪ್ರಣವ ನೋಡಾ.
[ಆ] ನಿರಂಜನ ಪರವಸ್ತುವಿನಲ್ಲಿ ಪರಮ ಚಿತ್ಕಲೆ ಉದಯವಾಗಿ,
ಆ ಚಿದ್ರೂಪ ಕಲೆಯ ಶುದ್ಧಪ್ರಣವವೆನಿಸಿತ್ತು ನೋಡಾ.
ಆ ಶುದ್ಧ ಪ್ರಣವದಲ್ಲಿ ಚಿತ್ತು;
ಆ ಚಿತ್ತೇ ಸಚ್ಚಿದಾನಂದಸ್ವರೂಪವನುಳ್ಳುದಾಗಿ,
ಚಿತ್ಪ್ರಣವವೆನಿಸಿತ್ತು ನೋಡಾ.
ಆ ಚಿತ್ ಪ್ರಣವಸ್ವರೂಪವಪ್ಪ ಪರತತ್ವದಲ್ಲಿ ಪರಶಕ್ತಿ
ಉದಯವಾಯಿತ್ತು.
ಆ ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವಯ್ಯ.
ಆಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಇಂತೀ ಮೂರಕ್ಕೆ ಪರಶಕ್ತಿಯೇ ತಾಯಿ.
ಇಂತೀ ನಾಲ್ಕು ಒಂದಾದಲ್ಲಿ ಪ್ರಣವವಾಯಿತ್ತಯ್ಯ.
ಆ ಪ್ರಣವವೇ ಪಂಚಲಕ್ಷಣವಾಯಿತ್ತು; ಅದೆಂತೆಂದಡೆ:
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ,
ಅರ್ಧಚಂದ್ರಾಕೃತಿ ಬಿಂದುಕೃತಿ.
ಇಂತೀ ಪಂಚಾಕೃತಿಯಾಯಿತ್ತಯ್ಯ.
ತಾರಕಾಕೃತಿಯಲ್ಲಿ ನಕಾರ ಜನನ;
ದಂಡಕಾಕೃತಿಯಲ್ಲಿ ನಕಾರ ಜನನ.
ಕುಂಡಲಾಕೃತಿಯಲ್ಲಿ ಶಿಕಾರ ಜನನ.
ಅರ್ಧಚಂದ್ರಾಕೃತಿಯಲ್ಲಿ ವಕಾರ ಜನ.
ಬಿಂದುಕೃತಿಯಲ್ಲಿ ಯಕಾರ ಜನನ.
ಇಂತೀ ಪ್ರಣವದಿಂದ ಪಂಚಾಕ್ಷರ[ಂ]ಗಳುತ್ಪತ್ತಿಯಾದವಯ್ಯ.
ಪ್ರಣವವೇ ಕೂಡಿ, ಷಡಕ್ಷರವೆಂದು ಹೇಳಲ್ಪಟ್ಟಿತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./396
ನಾಲಗೆಯ ಕೊನೆಯಲ್ಲಿ ನಂಜಿನ ಸೋನೆ ಸುರಿವನ್ನಕ್ಕರ
ಬಾರದುದ ಬಯಸುತ್ತಿಪ್ಪುದು ನೋಡಾ.
ನಾಲಗೆಯ ನಂಜನೆ ಕೆಡಿಸಿ, ಅಮೃತವ ಸವಿಯಬಲ್ಲವರಾಗಿ
ನಿಮ್ಮ ಶರಣರು ಅನುಪಮಸುಖಿಗಳಯ್ಯ.
ನಿಮ್ಮ ಶರಣರೆಲ್ಲರ ಪಾದಕ್ಕೆ ನಮೋ ನಮೋಯೆನುತಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./397
ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತ್ತು.
ಆ ಚಿತ್ತಿನಿಂದ ಆಕಾರ ಉಕಾರ ಮಕಾರಗಳೆಂಬ
ಅಕ್ಷರತ್ರಯಂಗಳಾದವು.
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ.
ಇಂತೀ ತ್ರಿವಿಧಕಕ್ಕೆ ತಾಯಿ ಚಿತ್ತು.
ಇಂತೀ ನಾಲ್ಕು ಒಂದಾದಲ್ಲಿ ಓಂಕಾರವೆಂಬ
ಪ್ರಣವದುತ್ಪತ್ತಿಯಾಯಿತ್ತು.
ಆ ಓಂಕಾರವೆಂಬ ಪ್ರಣವವೇ,
ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ
ಮಹಾಲಿಂಗನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./398
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು.
ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ.
ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ.
ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ.
ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ
ಪಶುಪತಿಯೆಂಬ ಕಲಾಮೂರ್ತಿ.
ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಶಿವನೆಂಬ ಐಕ್ಯನು.
ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು.
ಆ ಉಪಮಾತೀತನ ಮಧ್ಯದಲ್ಲಿ ಆತ್ಮನು.
-ಇಂತು ಮಹಾಸಾದಾಖ್ಯದ ಸೃಷ್ಟಿ.
ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ;
ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ.
ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ.
ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ.
ಆ ಶಿವಸಾದಾಖ್ಯದ ಮಧ್ಯದಲ್ಲಿ
ಮಹಾದೇವನೆಂಬ ಕಲಾಮೂರ್ತಿ.
ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಕ್ಷೇತ್ರಜ್ಞನೆಂಬ ಶರಣ.
ಆ ಶರಣನ ಮಧ್ಯದಲ್ಲಿ ಸದಾಶಿವನು.
ಆ ಸದಾಶಿವನ ಮಧ್ಯದಲ್ಲಿ ಆಕಾಶ.
ಇಂತು ಶಿವಸಾದಾಖ್ಯದ ಸೃಷ್ಟಿ.
ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ.
ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ.
ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ.
ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ.
ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ
ಭೀಮೇಶ್ವರನೆಂಬ ಕಲಾಮೂರ್ತಿ.
ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಕರ್ತಾರನೆಂಬ ಪ್ರಾಣಲಿಂಗಿ.
ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ.
ಆ ಈಶ್ವರನ ಮಧ್ಯದಲ್ಲಿ ವಾಯು.
-ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ.
ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ.
ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ.
ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ.
ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ.
ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ
ಮಹಾರುದ್ರನೆಂಬ ಕಲಾಮೂರ್ತಿ.
ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಭಾವನೆಂಬ ಪ್ರಸಾದಿ.
ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು.
ಆ ರುದ್ರನ ಮಧ್ಯದಲ್ಲಿ ಅಗ್ನಿ.
-ಇಂತು ಮೂರ್ತಿಸಾದಾಖ್ಯದ ಸೃಷ್ಟಿ.
ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷ್ಠೆಯೆಂಬ ಕಲೆ.
ಆ ಪ್ರತಿಷ್ಠೆಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ.
ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ.
ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ.
ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಚೈತನ್ಯವೆಂಬ ಮಾಹೇಶ್ವರ.
ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು.
ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು.
-ಇಂತು ಕರ್ತುಸಾದಾಖ್ಯದ ಸೃಷ್ಟಿ.
ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ.
ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ.
ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ.
ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ.
ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ.
ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ
ಅಂತರ್ಯಾಮಿಯೆಂಬ ಭಕ್ತ.
ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ.
ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ.
ಆ ಬ್ರಹ್ಮನಿಂದ ನರರು ಸುರರು ಅಸುರರು
ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ
ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು.
ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./399
ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ?.
ಸತ್ಯ ಜ್ಞಾನಿಗೆ ಅಜ್ಞಾನದ ಭಯವುಂಟೇ?.
ವಾತ ಪಿತ್ತ ಶ್ಲೇಷ್ಮ ನಷ್ಟವಾದವಂಗೆ
ತಾಪತ್ರಯಾದಿಗಳ ಭಯವುಂಟೇ?.
ಸ್ವಯಂಜ್ಯೋತಿಯ ಬೆಳಗನುಳ್ಳಾತನು
ಚಂದ್ರಸೂರ್ಯಾದಿಗಳ ಬೆಳಗನಾಶ್ರಯಿಸುವನೆ?.
ನಿಜದಿಂದ ತನ್ನ ತಾನರಿದು, ತಾನು ತಾನಾದತನು,
ಮಾಯಾದ ಗಜಬಜೆಯ ಹುಸಿಗೆ ಬೆದರುವನೆ ಮಹಾಶರಣನು?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./400
ನಿತ್ಯ ನಿಜವಸ್ತುವಿನ ಪ್ರಸನ್ನತ್ವ ಸಚ್ಚಿದಾನಂದ ಚಿದ್ಬೆಳಗು
ತತ್ತ್ವಬ್ರಹ್ಮಾಂಡವ ನುಂಗಿ
ತತ್ತ್ವಬ್ರಹ್ಮಾಂಡದಿಂದತ್ತತ್ತ ತಾನಾದ
ನಿಶ್ಚಿಂತ ನಿರಾಳನ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./401
ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು
`ಏಕಮೇವಾ ನ ದ್ವಿತೀಯ ಪರಾಪರವೆ’
ಶರಣ ಲಿಂಗವೆಂದು ತೋರಿತ್ತು ಕಾಣಾ.
ಎಂದರೆ, ಆ ಅಂಗ ಲಿಂಗಕ್ಕೆ ಭಿನ್ನವೆಲ್ಲಿಯದೋ?
ಅದೆಂತೆಂದಡೆ:
ಚಿನ್ನ ಬಣ್ಣದಂತೆ, ಶಿವಶಕ್ತಿಯಂತೆ,
ಶುದ್ಧ ಪರಾಪರವೆ ಶರಣನು ನೋಡಾ,
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ./402
ನಿತ್ಯನಿರಂಜನನಾದ ಪರಶಿವನು
ಲಿಂಗ ಜಂಗಮ ಭಕ್ತನೆಂದು ಮೂರು ತೆರನಾದನು ನೋಡಿರೇ.
ಸದ್ರೂಪು ಲಿಂಗ, ಚಿದ್ರೂಪು ಭಕ್ತ,
ಆನಂದ ಸ್ವರೂಪವೇ ಜಂಗಮ ನೋಡಾ.
ಆ ಚಿತ್ಸ್ವರೂಪವಪ್ಪ ಭಕ್ತಂಗೆ ಸತ್ಸ್ವರೂಪವಪ್ಪ ಲಿಂಗವೇ ಅಂಗ;
ಆನಂದಸ್ವರೂಪವಪ್ಪ ಜಂಗಮವೇ ಪ್ರಾಣ.
ಇದುಕಾರಣ,
ಲಿಂಗವೆ ಅಂಗ, ಜಂಗಮವೆ ಪ್ರಾಣಗ್ರಾಹಕನಾದ
ಚಿನ್ಮಯನಯ್ಯ ಭಕ್ತನು.
ಲಿಂಗ ಜಂಗಮ ಭಕ್ತ ಮೂರುವೊಂದಾಗಿ ಪರಶಿವತತ್ತ್ವದಲ್ಲಡಗಿದ
ಅದ್ವೆ ತ ಪರಬ್ರಹ್ಮವು ತಾನೇ ಪರಮಭಕ್ತ ನೋಡಾ,
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ./403
ನಿರವಯ ನಿರಾಮಯಂ ನಿರಾಕುಳಂ
ನಿದ್ರ್ವಂದ್ವಂ ನಿರ್ಮಳ ನಿಜಸ್ವರೂಪಂ
ನಿರ್ಭಾವ ನಿಃಪುರುಷ ನಿರಂಜನ ನಿರಾಕಾರಂ
ನಿರಾವರಣ ನಿರುಪಮ ನಿರ್ಗುಣ ನಿರಾಧಾರ ನಿರಾಲಂಬಂ
ಸರ್ವಾಧಾರ ಸದಾಶಿವಂ ಅತ್ಯತಿಷ್ಠದ್ದಶಾಂಗುಲಂ ನಿತ್ಯನಿಶ್ಚಿಂತಂ;
ನಿರ್ಮಲ ನಿರ್ಮಾಯ ನಿರಾಳಕಂ;
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./404
ನಿರಾಕಾರ ಪರವಸ್ತು ತಾನೇ
ಸದ್ರೂಪು ಚಿದ್ರೂಪು ಆನಂದ ಸ್ವರೂಪವೆಂದಾಯಿತ್ತು ನೋಡಾ.
ಸತ್ತೇ ಶರಣಲಿಂಗವೆಂದೆ.
ಚಿತ್ತೇ ಶಕ್ತಿಭಕ್ತಿಯೆಂದೆ.
ಆನಂದವೇ ಹಸ್ತ ಮುಖ ಪದಾರ್ಥ ಪ್ರಸಾದವೆಂದೆ.
ಹೀಂಗೆಂಬುವದು ವೇದ ಪ್ರಮಾಣವಲ್ಲ;
ಆಗಮ ಪ್ರಮಾಣವಲ್ಲ; ಸ್ಮ ೃತಿ ಪ್ರಮಾಣವಲ್ಲ.
ಅದೇನು ಕಾರಣವೆಂದರೆ,
ಇದರಿಂದ ನಾನರಿದುದಿಲ್ಲ.
ಮತ್ತೇತರಿಂದರಿದೆನೆಂದರೆ,
ಶಿವಪ್ರಸನ್ನೇತಿಪ್ರಸಾದದಿಂದರಿದು ಕಣ್ದೆರೆದು,
ಸಚ್ಚಿದಾನಂದ ನಿತ್ಯ ಪರಿಪೂರ್ಣ
ಪರಶಿವತತ್ತ್ವ ಸ್ವರೂಪವೇ ಶರಣನೆಂಬ ವಾಕ್ಯ ಸತ್ಯ ನೋಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./405
ನಿರಾಕಾರ ಪರವಸ್ತು[ತಾನೆ] ತನ್ನ ವಿನೋದಾರ್ಥಕಾರಣ
ನಿಜಜ್ಞಾನವಾಗಿ ತೋರಿತ್ತು ನೋಡಾ.
ಆ ಮಹಾಜ್ಞಾನ ಚಿತ್ತೇ
ಅಂಗಸ್ಥಲ ಲಿಂಗಸ್ಥಲವೆಂದಾಯಿತ್ತು ನೋಡಾ.
ಅಂಗವೇ ಶರಣ; ಲಿಂಗವೇ ಶಿವ.
ಅಂಗಲಿಂಗದ ಸಂಗಸಮರಸ ತಾನೆಂಬಾತ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./406
ನಿರಾಕಾರ ಬಯಲು ಮೂರ್ತಿಗೊಂಡು
ಮಹಾಜ್ಞಾನವೇ ಚಿತ್ಸ್ವರೂಪವಾಯಿತ್ತು.
ಆ ಚಿಚ್ಛಕ್ತಿಸ್ವರೂಪವೇ ಶರಣನಾಗಿ ಮೂರ್ತಿಗೊಂಡನು ನೋಡಾ.
ಆ ಶರಣನ ಸಹಸ್ರಾಂಶದಲ್ಲಿ ಸದಾಶಿವನಾದನು.
ಆ ಸದಾಶಿವನ ಸಹಸ್ರಾಂಶದಲ್ಲಿ ಈಶ್ವರ ಮೂರ್ತಿಯಾದನು.
ಆ ಈಶ್ವರನ ಸಹಸ್ರಾಂಶದಲ್ಲಿ ರುದ್ರನಾದನು.
ಆ ರುದ್ರನ ಕೋಟಿಯ ಅಂಶದಲ್ಲಿ ವಿಷ್ಣು ಹುಟ್ಟಿದನು.
ಆ ವಿಷ್ಣುವಿನ ಕೋಟಿಯ ಅಂಶದಲ್ಲಿ ಬ್ರಹ್ಮನಾದನು.
ಆ ಬ್ರಹ್ಮನ ಕೋಟಾನುಕೋಟಿಯ ಅಂಶದಿಂದ
ನರರು ಸುರರು ಹೆಣ್ಣು ಗಂಡು ಮೊದಲಾದ
ಸಕಲ ಚರಾಚರಂಗಳೆಲ್ಲವು ಹುಟ್ಟಿದವು ನೋಡಾ.
ಇಂತಿವೆಲ್ಲವೂ ಪರಶಿವನ ನೆನಹುಮಾತ್ರದಿಂದ
ತೋರಿ ಅಡಗತ್ತಿಹವು.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಇಂತೀ ಐವರನು ತನ್ನಲ್ಲಿ ಗರ್ಭಿಕರಿಸಿಕೊಂಡಿಪ್ಪನು,
ಚಿತ್ಸ್ವರೂಪನಪ್ಪ ಶರಣನು.
ಆ ಶರಣನೇ ಚೆನ್ನಬಸವಣ್ಣನು.
ಆ ಚೆನ್ನಬಸವಣ್ಣನೇ ಎನ್ನಂತರಂಗದ ಸುಜ್ಞಾನ
ಪ್ರಾಣಲಿಂಗವೆಂದರಿದು
ಮನೋಭಾವದಿಂದ ಆರಾಧಿಸಿ
ಪಾಣಲಿಂಗ ಸಂಬಂಧಿಯಾಗಿದ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./407
ನಿರಾಕಾರವೇ ಸಾಕಾರವಾಗಿ,
ನಿರ್ವಿಕಾರದ ಸೋಂಕಿನ ಸೊಬಗೆ ನೆಲೆವನೆಯಾಗಿಪ್ಪಿರಿ ಅಯ್ಯ.
ಆತ್ಮಜ್ಯೋತಿ, ಮನೋಜ್ಯೋತಿ, ಸ್ವಯಂಜ್ಯೋತಿ,
ಕೇವಲ ಪರಂಜ್ಯೋತಿ ಜ್ಞಾನಾನಂದಮಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./408
ನಿರಾಧಾರ ನಿರಾಲಂಬ ಸರ್ವಾಧಾರ
ಸರ್ವಜ್ಞ ಸರ್ವಗತ ಸವರ್ೇಶ್ವರ
ನಿನ್ನ, ನಿರವಯನೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./409
ನಿರೂಪ ರೂಪು ಮಾಡಬಲ್ಲುಡೆ ಶರಣ.
ರೂಪು ನಿರೂಪುವಿಡಿದಾಚರಿಸಿ
ತನು ಮನವ ಬಯಲ ಮಾಡಬಲ್ಲಡೆ ಶರಣ.
ರೂಪು ನಿರೂಪಳಿದು ನಿರ್ವಯಲಾದರೆ
ಆತನು ಲಿಂಗೈಕ್ಯನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./410
ನಿರ್ವಯಲ ಸ್ಥಲದಲ್ಲಿ
ಬಿಳಿಯ ತಾವರೆ ಶತಸಹಸ್ತ್ರ ದಳದಿಂದ
ಪ್ರಭಾವಿಸುತ್ತಿಹುದು ನೋಡಾ.
ಅದು ಎಳೆ ಮಿಂಚು ಶತಕೋಟಿಗಳ ಬೆಳಗ ಕೀಳ್ಪಡಿಸುವ
ಅಮಲ ಬ್ರಹ್ಮ ನೋಡಾ.
ಆ ಬ್ರಹ್ಮದಂಗವ ಬಗಿದುಹೊಕ್ಕು,
ದೀಪ ದೀಪವ ಬೆರಸಿದಂತೆ, ಏಕರಸಮಯವಾದ
ಅಚ್ಚ ಲಿಂಗೈಕ್ಯನು, ಅಚಲಿತ ನಿರಾಳನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./411
ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ
ಬಿಳಿಯ ಮದಗಜವ ಕಳೆವರೆ ಅರಳವಲ್ಲ ನೋಡಾ.
ಬಿಳಿಯ ಮದಗಜದ ಶಿರವ ಉರಿಯ ಚರಣದಲ್ಲಿ ಮೆಟ್ಟಿ,
ನಿರವನಯನನೆರೆದು ನಿಜಲಿಂಗೈಕ್ಯನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./412
ನಿಶ್ಚಲನೆಂಬ ನಿರ್ದೆಹಿಯ ಮೇಲೆ
ಸಚ್ಚಿದಾನಂದವೆಂಬ ಪರವು ಬಂದೆರಗಿಯೆಯ್ದಿ
ಎಯ್ದೆ ನುಂಗಿತ್ತು ನೋಡಾ.
ಎಯ್ದಿ ನುಂಗಲಾಗಿ ಕಾರ್ಯನೆನಲಿಲ್ಲ; ಕಾರಣವೆನಲಿಲ್ಲ;
ಪರಮ ಕಾರಣವೆನಲಿಲ್ಲ;
ಜೀವ ಪರಮರೈಕ್ಯನವನೊಳಕೊಂಡು ತೀವಿ
ಪರಿಪೂರ್ಣ ಪರಾಪರನೆನಲಿಲ್ಲ.
ಲಕ್ಷ ್ಯವೆನಲಿಲ್ಲ; ನಿರ್ಲಕ್ಷ ್ಯವೆನಲಿಲ್ಲ; ಅಲಕ್ಷ ್ಯನ ಅದ್ವಯನ.
ಶೂನ್ಯನೆನಲಿಲ್ಲ; ನಿಶ್ಯೂನ್ಯನೆಲಿಲ್ಲ; ಮಹಾಶೂನ್ಯನೆನಲಿಲ್ಲ.
ಏನು ಏನೂ ಎನಲಿಲ್ಲ.
ನಿರಾಕಾರ ಬಯಲು ನಿಶ್ಯಬ್ದಮಯವಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ
ನಾಮ ರೂಪು ಕ್ರೀಗಳು ನಷ್ಟವಾದ ಕಾರಣ
ಏನೂ ಎನಲಿಲ್ಲ ನೋಡಾ./413
ನೀ ಹುಟ್ಟಿದೆಯಯ್ಯ ಗುರುವಿನ ಮನಸ್ಥಲದಲ್ಲಿ.
ನಾ ಹುಟ್ಟಿದೆನಯ್ಯ ಗುರುವಿನ ಕರಸ್ಥಲದಲ್ಲಿ.
ಇದು ಕಾರಣ:
ನನ್ನ ಅಂಗವ ಮಾಡಿ, ನಿನ್ನ ಪ್ರಾಣವ ಮಾಡಿ
ಪ್ರಾಣಲಿಂಗಪ್ರತಿಷ್ಠೆಯ ಮಾಡಿದನಯ್ಯ ಶ್ರೀಗುರು.
ಆ ಗುರುವಿನ ಪ್ರಸನ್ನ ಪ್ರಸಾದದಿಂದ, ನಾನು ನೀನು ಹುಟ್ಟಿದೆವಾಗಿ,
ಎನಗೂ ನಿನಗೂ ಗುರುಪ್ರಸಾದವೇ ಪ್ರಾಣ ನೋಡ.
ಇದುಕಾರಣ:
ಗುರುಪ್ರಸಾದವ, ಎಲೆ ಲಿಂಗವೆ ನೀನು ಕೊಳಲೇಬೇಕು.
ಗುರುಪ್ರಸಾದವ, ಕೊಳದಿದ್ದರೆ ನೀ ಲಿಂಗವಲ್ಲ ನೋಡಾ.
ಪ್ರಸಾದವಿಲ್ಲದ ಲಿಂಗಕ್ಕೆ ದೇವತ್ವವೆಲ್ಲಿಯದೊ?
ದೇವತ್ವವಿಲ್ಲದುದು ಪೂಜೆಗೆ ಸಲುವುದೇ?
ಪೂಜೆಗೆ ಸಲ್ಲದೆಂದೆನು ಕಾಣಾ ಎಲೆ ಶಿವನೆ ನೀ ಸಾಕ್ಷಿಯಾಗಿ.
ಇದು ಕಾರಣ:
ಗುರುಪ್ರಸಾದವ ನಾನು ಕೊಳ್ಳಲೇಬೇಕು.
ಆ ಗುರುಪ್ರಸಾದವ ಕೊಳ್ಳದಿದ್ದರೆ ನಾನು ಪ್ರಸಾದಿಯಲ್ಲ ನೋಡಾ.
ಇದುಕಾರಣ:
ನಾನೂ ನೀನೂ ಗುರುಪ್ರಸಾದಿಗಳು ಕಾಣಾ.
ಕೇಳು:
ಗುರಮಂತ್ರೋಪದೇಶದಿಂದ ಹುಟ್ಟಿದ ಲಿಂಗಕ್ಕೆ
ಗುರುಪ್ರಸಾದವ ಕೊಡಬಾರದು ಎಂಬ ಅನಾಚಾರಿಗಳಿಗೆ
ನಾಯಕನರಕ ತಪ್ಪದು ನೋಡಾ.
`ಏವಂ ಭೇದ ಕಲಾದೇವಿ ಸದ್ಗುರುಶ್ಯಿಷ್ಯ ಮಸ್ತಕೇ|
ಹಸ್ತಾಬ್ಜ ಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ
ವಪುರೇವ ಸಮುತ್ಪನ್ನಾ ತತ್ಪ್ರಾಣ ಮಿಶ್ರಿತಾ ಭವೇತ್|
ಯಥಾ ಗುರು ಕರೇ ಜಾತಂ ಲಿಂಗಂ ಭಕ್ತಿ ವಿಭೇದತಃ||’
ಎಂದುದಾಗಿ
ಗುರುಪ್ರಸಾದ ಎನಗೂ ನಿನಗೂ ಪ್ರಾಣಪ್ರತಿಷ್ಠೆಯೆಂದನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./414
ನೀರ ಮೂಡೆಯ ಕಟ್ಟಿ,
ಬಯಲಿಗೆ ಬಲೆಯ ಬೀಸಬಹುದೇ ಅಯ್ಯ?
ಉರಿಗೆ ಅರಗ ತೋರಿ,
ಗಾಳಿಗೆ ಸೊಡರ ಹಿಡಿಯಬಹುದೇ ಅಯ್ಯ?
ಮಳಲಗೋಡೆಯನಿಕ್ಕಿ, ಮಂಜ ಮನೆಯ ಮಾಡಿದರೆ
ಸ್ಥಿರವಾಗಬಲ್ಲುದೇ ಅಯ್ಯ?
ಹಲವು ಮುಖದಲ್ಲಿ ಜಿನುಗುವ ಭವಭಾರಿ ಮನದಲ್ಲಿ
ಶಿವನ ನೆನಹ ಕರಿಗೊಳಿಸಬಹುದೇ? ಬಾರದಾರಿಗೂ.
ಇದು ಕಾರಣ,
ಬಹುಮುಖದ ಮನವ,
ಶುದ್ಧ ಸುಜ್ಞಾನ ಸದ್ಭೋಧೆಯಿಂದ ಏಕಮುಖವ ಮಾಡಿ,
ಆ ಮನವ ಮಹಾಲಿಂಗ ಪದದಲ್ಲಿ ಸಂಯೋಗವ ಮಾಡಿ,
ಮನೋಭ್ರಾಂತಿಯನಳಿದ ನಿಭ್ರಾಂತನ
ಮಹೇಶ್ವರನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./415
ನೀರಜದೊಳಗೆ ಹುಟ್ಟಿದ ಕಿಚ್ಚು,
ವಾರಿಧಿಯ ಕುಡಿವುದ ಕಂಡೆನಯ್ಯ.
ಸಾಗರಬತ್ತಿ, ಇಪ್ಪತ್ತೆ ದು ಗ್ರಾಮವ ನುಂಗಿದ ಕಪ್ಪೆ,
ಬಾಯಾರಿ ಸತ್ತಿತ್ತು ಕಾಣ, ದೇವಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./416
ನೀರೊಳಗಣ ಪಾವಕನೆದ್ದುರಿಯಲು
ಮೇರುಗಿರಿ ಬೆಂದುದ ಕಂಡನಯ್ಯ.
ಊರಳಿದು ಉಲುಹಡಗಿ
ಮಾರಿಮಸಣಿಯರು ಮಡಿದುದು ಸೋಜಿಗ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./417
ನೂಲೆಳೆಯ ತೋರದ ಪಶುವಿಂಗೆ
ಮೇರುವೆಯ ತೋರ ಕೆಚ್ಚಲು ನೋಡ ಅಯ್ಯ.
ಅದಕ್ಕೆ ಕೋಡೆರಡಿಲ್ಲ ನೋಡಾ.
ಅದು ಮೊಲೆಗೊಕ್ಕುಳಹಾಲ ಕರೆವುದು.
ಕರೆವಾತಗೆ ಕೈಯಲ್ಲ;
ಕುಡಿವಾತಗೆ ಬಾಯಿಲ್ಲ ನೋಡಾ.
ಕೈಯಿಲ್ಲದೆ ಕರೆದು ಬಾಯಿಲ್ಲದೆ ಉಂಡು
ತೃಪ್ತಿಯಿಲ್ಲದೆ ಪರಿಣಾಮಿಸಬಲ್ಲಾತನಲ್ಲದೆ
ಶಿವಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./418
ನೂಲೆಳೆಯ ತೋರದ ಮರದಲ್ಲಿ
ಬೆಟ್ಟದ ತೋರ ಕಾಯಿ ಫಲವಾದುದ ಕಂಡೆನಯ್ಯ.
ಮರನನೇರಿ ಕಾಯಿ ಕೊಯಿವನ್ನಕ್ಕರ
ಭವಭಾರ ಹಿಂಗದು ನೋಡಾ.
ಮರವನೇರದೆ ಕಾಯ ಮುಟ್ಟದೆ
ಮೇಲಣ ಹಣ್ಣಿನ ರುಚಿಯ ಚೆನ್ನಾಗಿ ಸ್ವೀಕರಿಸಬಲ್ಲಾತನಲ್ಲದೆ
ಶಿವಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./419
ನೆನಹಿಲ್ಲದ ಘನವಸ್ತು ಜಗತ್ ಸೃಷ್ಟ್ಯರ್ಥಕಾರಣ,
ನೆನೆದ ನೆನಹೇ ಸಾರಯವಾಯಿತ್ತಯ್ಯ.
ಆ ನೆನಹು ಅಧೋಮುಖ ಊಧ್ರ್ವಮುಖವೆಂದು
ಎರಡು ತೆರನಾಗಿಪ್ಪುದಯ್ಯ.
ಅಧೋಮುಖದ ಪ್ರಕೃತಿಸೃಷ್ಟಿಯಿಂದ
ಹರಿ ವಿರಿಂಚಿ ಮೊದಲಾದ ಸಮಸ್ತ ಜಗತ್ತೆಲ್ಲಾ ಹುಟ್ಟಿತ್ತು ನೋಡಾ.
ಊಧ್ರ್ವಮುಖವಪ್ಪ ನಿಜ ಚಿನ್ಮಯದ
ಮಹಾಜ್ಞಾನಪ್ರಭೆಯ ಸಾಮಥ್ರ್ಯದಲ್ಲಿ
ಪ್ರಮಥರು ರುದ್ರರು
ಮೊದಲಾದ ಮಹಾಗಣಂಗಳುತ್ಪತ್ತಿಯಾದರಯ್ಯ.
ಹೀಂಗೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಸೃಷ್ಟಿ
ಎರಡು ಪರಿಯಾಯವಾಗಿಪ್ಪುದು ಕಾಣಿರೋ./420
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ
ಆದ ಪಿಂಡವ ತಾನೆಂದೆಂಬ
ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ?
ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ
ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ
ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ
ಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./421
ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ
ಸ್ವಯಂ ಜ್ಞಾನಶಿಖಿ ಉದಯವಾಯಿತ್ತು ನೋಡಾ.
ಆ ಸ್ವಯಂ ಜ್ಞಾನಶಿಖಿ ಊಧ್ರ್ವಲೋಕಕ್ಕೆ ಹೋಗಿ,
ವ್ಯೋಮಾಮೃತ ಪ್ರಸಾದವನುಂಡು,
ನಾಮ ರೂಪು ಕ್ರೀಗಳನಳಿದು ನಿರವಯವಾಯಿತ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./422
ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ.
ಅದರಂಕುರ ಮೂರು, ಫಲವಿಪ್ಪತ್ತೆ ದು ನೋಡಾ.
ಪ್ರಥಮಾಂಕುರ ಶಿವ, ದ್ವಿತೀಯಾಂಕುರ ಸದಾಶಿವ,
ಮೂರನೆ ಅಂಕುರ ಮಹೇಶ್ವರ.
ಫಲವಿಪ್ಪತ್ತೆ ದು, ಪಂಚವಿಂಶತಿ ಲೀಲಾವಿಗ್ರಹ ನೋಡಾ.
ಫಲವಿಪ್ಪತ್ತೆ ದು, ಅಂಕುರ ಮೂರನೊಳಕೊಂಡು
ನಿಂದ ನಿರ್ವಯಲ
ಪ್ರಾಣಲಿಂಗವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./423
ನೆಲನಿಲ್ಲದ ಭೂಮಿಯಲ್ಲಿ ಒಂದು ತಲೆ ಹುಟ್ಟಿ
ತಲೆ ಹಲವು ಮುಖವಾಗಿದೆ.
ಅದರ ನೆಲೆಯ ಬಲ್ಲ ಹಿರಿಯರನಾರನು ಕಾಣೆ ನೋಡಾ.
ಹಲವು ಮುಖ ಹಾವಾಡಿಗನ ನುಂಗಲು
ನೆಲನೆತ್ತ ಹೋಯಿತ್ತೆಂದರಿಯೆನಯ್ಯ.
ಹಾವಾಡಿಗ ದೇವಾಡಿಗನೊಳಗಡಗಲು
ಹಾವೆತ್ತ ಹೋದವೋ ದೇವಾ?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./424
ನೆಲ್ಲುದ್ದ ಮರನನೇರಿ ಇಳಿಯಲರಿಯದೆ
ತ್ರೆ ಜಗವೆಲ್ಲಾ ತಲ್ಲಣಿಸುತ್ತಿದೆ ನೋಡಾ.
ಅಲ್ಲಿಯ ಫಲವ ಬಯಸಿದ ಹಿರಿಯರೆಲ್ಲ ಹಳ್ಳದಲ್ಲಿ ಕೆಡೆದರೆ
ಇದ ಕಂಡು ಹೇಸಿ, ಕಡೆಗೆ ತೊಲಗಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./425
ನೇಮ ನೆಲಗತವಾಯಿತ್ತು.
ಸೀಮೆ ನಿಸ್ಸೀಮೆಯಾಯಿತ್ತು ನೋಡಾ.
ನೀರ ಕಿಚ್ಚು ನುಂಗಿ ಊರನಾವರಿಸಿತ್ತು ನೋಡಾ.
ಊರ ಬೆಂದು ಉಲುಹಳಿದುಳಿದು
ಸೀಮೆ ನಾಮವ ಮೀರಿ ತಾನು ಪರಾಪರನು ನೋಡಾ.
ತನ್ನಿಂದನ್ಯವಾಗಿ ಇನ್ನೇನೂ ಇಲ್ಲ.
ಅನ್ಯ ಅನನ್ಯವೆಂಬುದಳಿದುಳಿದು
ಅದ್ವೆ ತ ಪರವಸ್ತುವಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./426
ನೋಟವಾಗದ ಮುನ್ನ ಬೇಟವಾಯಿತ್ತು.
ಬೇಟವಾಗದ ಮುನ್ನ ಕೂಟವಾಯಿತ್ತು.
ಕೂಟವಾಗದ ಮುನ್ನ ಬಸುರಾಯಿತ್ತಯ್ಯ.
ಬೇನೆ ತೋರದ ಮುನ್ನ ಬೆಸನಾಯಿತ್ತಯ್ಯ.
ಬೆಸಲಾದ ಶಿಶುವೆದ್ದು ತಂದೆಯನಪ್ಪಲು
ಪಶುಪತಿ ಐಕ್ಯವಾದುದು ಸೋಜಿಗವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./427
ನೋಡಿಹೆನೆಂದರೆ ನೋಟ ಸಮರಸವಾಯಿತ್ತು.
ಕೂಡಿಹೆನೆಂದರೆ ಕೂಟ ನಿಬ್ಬೆರಗಾಯಿತ್ತಯ್ಯ.
ನೋಟ ಕೂಟಗಳೆಂಬುಭಯವಳಿದು,
ನಿಜದಲ್ಲಿ ನಿರ್ವಯಲಾಯಿತ್ತಯ್ಯ.
ನೋಡಲಿಲ್ಲದ ನುಡಿಸಲಿಲ್ಲದ
ಕೂಡಿಲಿಲ್ಲದಪ್ರತಿಮ ತಾನು ತಾನಾದ ಪರಮಾನಂದ ಸುಖದಲ್ಲಿ
ಓಲಾಡುತ್ತಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./428
ಪಂಚಭೂತಂಗಳುತ್ಪತ್ತಿ ಇಲ್ಲದಂದು,
ಅಂಡಜವಳಯ ರಚಿಸದಂದು,
ಚತುರ್ದಶಭುವನಂಗಳಿಲ್ಲದಂದು,
ಪಂಚಾಶತಕೋಟಿ ವಿಸ್ತೀರ್ಣದ
ಅನಂತಕೋಟಿ ಬ್ರಹ್ಮಾಂಡಾದಿ
ಲೋಕಾದಿಲೋಕಂಗಳೇನುಯೇನೂಯಿಲ್ಲದಂದು,
ನಾನು ನೀನೆಂಬ ವಾಕು ಹುಟ್ಟದಂದು,
ಅನಿರ್ವಾಚ್ಯ ಮಹಾಶೂನ್ಯನಾಗಿರ್ದೆಯಲ್ಲಾ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./429
ಪಂಚಭೂತಿಕತತ್ತ್ವಂಗಳೆಂಬ ಬ್ರಹ್ಮಾಂಡದೊಳಗೆ
ತನುತ್ರಯಂಗಳೆಂಬ ಅಡ್ಡ ಬೆಟ್ಟ.
ಗುಣತ್ರಯಗಳೆಂಬ ಘೋರಾರಣ್ಯ.
ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ತೋಹುಗಳು.
ಆಗು ಹೋಗು ದೇಗೆಗಳೆಂಬ ಕುಳಿ, ತೆವರು.
ಪ್ರಕೃತಿತ್ರಯಂಗಳೆಂಬ ಮೃಗ, ಮಲತ್ರಯಂಗಳೆಂಬ
ಮೇಹ ಮೇದು,
ವಿಷಯಗಳೆಂಬ ಜಲವ ಕುಡಿದು, ಪರಿಣಾಮಿಸುತ್ತಿದೆ ನೋಡಾ.
ಜೀವವೆಂಬ ಕಾಡಬೇಡನು
ತೋಹಿನೊಳಗಣ ಮೃಗದ ಬೇಂಟೆಗೆ ಹೋದರೆ
ತೋಹಿನೊಳಗಣ ತಳವಾರರು ಹಿಡಿದೊಯ್ದುದ ಕಂಡು
ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./430
ಪಂಚಭೂತೇಂದ್ರಿಯಂಗಳ ವಂಚನೆಯನತಿಗಳೆದ
ನಿರ್ವಂಚಕನ ನೋಡಾ.
ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ
ವಿಶ್ವಾವ್ಯಸನ, ಉತ್ಸಾಹವ್ಯಸನ, ಸೇವಕಾವ್ಯಸನವೆಂಬ
ಸಪ್ತವ್ಯಸನಂಗಳ ಸಂಹಾರವ ಮಾಡಿದ ನಿವ್ರ್ಯಸನಿಯ ನೋಡಾ.
ಷಡೂರ್ಮಿ ಷಡುವರ್ಗಂಗಳ ಹೊಡೆದಪ್ಪಳಿಸಿ
ದಶವಾಯುಗಳ ಗಮನಾಗಮನದ ಶಿರವನರಿದ
ಶಿವಜ್ಞಾನ ಸಂಪನ್ನನ ನೋಡಾ.
ಅಷ್ಟತನುಮೂರ್ತಿಗಳ ಒಳಹೊರಗೆ ತೊಳಗಿ ಬೆಳಗುವ
ಸ್ವಯಂಜ್ಯೋತಿ ತಾನಾಗಿ
ಅಷ್ಟತನುಮೂರ್ತಿಯ ಮದಂಗಳ ಸುಟ್ಟುರುಹಿ
ಒತ್ತಿ ಒರಸಿದ ಉಪಮಾತೀತನ ನೋಡಾ.
ಸರ್ವವಿಕಾರಂಗಳ ಗರ್ವಪರ್ವತವ ಮುರಿದು
ನಿರ್ವಿಕಾರಿಯಾದ ನಿಶ್ಚಲ ವಿರಕ್ತನ ನೋಡಾ.
ಒಳ ಹೊರಗೆಂಬ ಕುಳವಳಿದ ನಿಃಕಳಂಕ ನಿರಾಕುಳನ ನೋಡಾ.
ಅರುಹು ಮರಹಳಿದು, ನಿರ್ದೆಹಿಯಾಗಿ
ನಿರ್ಮಲಾತ್ಮಕನಾಗಿ ಲಿಂಗವನಪ್ಪಿ ಅಗಲದಿಪ್ಪ ಮಹಾತ್ಮ
ಶರಣರಿಂಗೆ
ನಮೋ ನಮೋಯೆಂದು ಬದುಕಿದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./431
ಪಂಚಮುದ್ರೆ ಪಂಚಮುದ್ರೆಯೆಂದೇನೋ?
ಹೇಳಿಹೆ ಕೇಳಿ;
ಸರ್ವಾಂಗವನು ಸಮತೆಯೆಂಬ ಸದಾಚಾರದಲ್ಲಿಯೆ
ನೆಲೆಗೊಳಿಸಿದ್ದುದೇ ಕಂಥೆಯಯ್ಯ.
ಸುಬುದ್ಧಿಯೆಂಬ ಮಕುಟಕ್ಕೆ
ಅರುಹೆಂಬ ಬಟ್ಟಪಾವಡೆ, ಕ್ರೀಯೆಂಬ ಪಾಗ.
ವಿಚಾರದಿಂದ ಬಳಸಿ ಸುತ್ತಬೇಕು ಕಾಣಿರಣ್ಣ.
ದೃಢವೆಂಬ ದಂಡ, ವಿವೇಕವೆಂಬ ಕಪ್ಪರವ
ಹಿಡಿಯಬೇಕು ಕಾಣಿರಯ್ಯ.
ಜ್ಞಾನವೆಂಬ ಭಸ್ಮಘುಟಿಕೆ ಸುಮನವೆಂಬ ಗಮನ,
ಸುಚಿತ್ತವೆಂಬ ಸುಳುಹು, ಪರತತ್ವ ಸದ್ಭಾವದಿಂದ
ಪರಮದೇಹಿಯೆಂದು ಸುಳಿವ
ಪರದೇಶಿಕನ ತೋರಿ ಬದುಕಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./432
ಪಂಚವಕ್ತ್ರಂ ದಶಭುಜಂ ದಶಪಂಚನೇತ್ರಂ
ದ್ವಿಪಾದಂ ತನುವೇಕಂ ಶುದ್ಧಸ್ಫಟಿಕಪ್ರದ್ಯುಕ್ತಂ
ಪ್ರಭಾಮಯಮೂರ್ತಿ
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./433
ಪಂಚವಿಂಶತಿತತ್ವಾಶ್ರಯವೆಂಬ ಪಟ್ಟಣದೊಳಗೆ
ಆರುಬಣ್ಣದ ಪಕ್ಷಿ ಮೂರು ಗೂಡ ಮಾಡಿಕೊಂಡು
ನಾಲ್ಕರಾಹಾರವ ಕೊಂಬುವುದ ಕಂಡೆನಯ್ಯ.
ಐದರ ನೀರ ಕುಡಿದು ಪರಿಣಾಮಿಸುತ್ತಿದೆ ನೋಡ.
ಏಳರ ಮೊಲೆಯನುಂಡು ಎಂಟರಾಭರಣವ ತೊಟ್ಟಿದೆ ನೋಡಾ.
ಹತ್ತರ ಬೆಂಬಳಿವಿಡಿದು ಒಂಬತ್ತು ಬಾಗಿಲೊಳಗೆ
ನಡೆದಾಡುವದ ಕಂಡೆನಯ್ಯ.
ಕೊಂಬುಕೊಂಬಿನಯಿಂಬಿನಲ್ಲಿ ಸುಳಿದಾಡುತ್ತಿದೆ ನೋಡಯ್ಯ.
ಆ ಸುಳುಹಿನ ಸೂಕ್ಷ್ಮಂವ ತಿಳಿದು
ತನ್ನ ಸುಳುಹನರಿವ ಹಿರಿಯರಾರನು ಕಾಣೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./434
ಪಂಚಶಕ್ತಿಯನು ಪಂಚಸಾದಾಖ್ಯವನು
ಪಂಚಕಲೆಗಳನು ಪಂಚಾಕ್ಷರಂಗಳನು ಪಂಚಭೂತಾತ್ಮವನು
ತನ್ನಲ್ಲಿ ಗರ್ಭಿಕರಿಸಿಕೊಂಡು
ತಾನು ಚಿದ್ಭ ್ರಹ್ಮಾಂಡಾತ್ಮಕನಾಗಿ, ಚಿನ್ಮಯನಾಗಿ,
ಚಿದ್ರೂಪನಾಗಿ, ಚಿತ್ಪ್ರಕಾಶನಾಗಿ, ಚಿದಾನಂದನಾಗಿ
ಸುಖ ದುಃಖ ಮೋಹ ಭಯಂಗಳ ಹೊದ್ದದೆ,
ಸರ್ವವ್ಯಾಪಕನಾಗಿ, ಸರ್ವಚೈತನ್ಯಮಯನಾಗಿಪ್ಪ
ಪರಂಜ್ಯೋತಿಲರ್ಿಂಗವು ಎನ್ನ ಪ್ರಾಣಲಿಂಗವಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./435
ಪಂಚಾಕ್ಷರವೇ ಪಂಚಮುಖವಾಗಿ
ಎನ್ನ ಪಂಚೇಂದ್ರಿಯಂಗಳಾಗಿಪ್ಪುವು ನೋಡಾ.
ಪ್ರಣವವೆ ಪ್ರಾಣಮೂರ್ತಿಯಾಗಿರ್ದೆನಯ್ಯ.
ಇದು ಕಾರಣ,
ಪರತತ್ವ ಜ್ಞಾನಮಯವಾಗಿ “ಓಂ ನಮಃಶಿವಾಯ’ ಎಂಬ
ಶಿವಷಡಕ್ಷರಮಂತ್ರವನೆ ಸ್ಮರಿಸಿ, ಭವಸಾಗರವ ದಾಂಟಿ
ಭಕ್ತನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./436
ಪಂಚೇಂದ್ರಿಯ ಸಪ್ತಧಾತುಗಳ ಮುಟ್ಟದೆ
ಸದಾಶಿವನ ಮುಟ್ಟಿಪ್ಪ ಭಕ್ತನ ಪರಿಯ ನೋಡಾ.
ಕಾಮಾದಿ ಷಡುವರ್ಗಂಗಳ ಸೋಂಕದ
ನಿಸ್ಸೀಮನ ಪರಿಯ ನೋಡಾ.
ಗುಣತ್ರಯಂಗಳನರಿಯದ ನಿರ್ಗುಣವ ಪರಿಯ ನೋಡಾ.
ಅಹಂಕಾರತ್ರಯಂಗಳನಳಿದು ತಾಪತ್ರಯಂಗಳ ನೀಗಿ
ಕೋಪ ಮೋಹಾದಿಗಳ ವಿಸರ್ಜಿಸಿದ ಸದ್ಭಕ್ತನ ಪರಿಯ ನೋಡಾ.
ಒಳಹೊರಗನರಿಯದೆ
ನಿರಾಕುಳನಾದ ನಿಜಭಕ್ತನ ಪರಿಯ ನೋಡಾ.
ನಾನೆಂಬುದ ಮರೆದು ನೀನೆಂಬುದನಳಿದು
ತಾನು ತಾನಾದ ಸದ್ಭಕ್ತಂಗೆ
ನಮೋನಮೋಯೆಂದು ಬದುಕಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./437
ಪಟ್ಟಣ ಪಾಳೆಯದೊಳಗೆ ವ್ಯವಹರಿಸುತ್ತಿಪ್ಪ ಸೆಟ್ಟಿಕಾರಿತಿಗೆ
ಒಬ್ಬ ಹುಟ್ಟುಗರುಡ ಗಂಡನಾಗಿಪ್ಪನು ನೋಡಾ.
ಪಟ್ಟಣ ಬೆಂದು, ಪಾಳಯವಳಿದು,
ಸೆಟ್ಟಕಾತಿಯ ಮನವಾರ್ತೆ ಕೆಟ್ಟು,
ಹುಟ್ಟುಗುರುಡಂಗೆ ಕಣ್ಣು ಬಂದಲ್ಲದೆ
ಮುಂದಣ ಬಟ್ಟೆ ಯಾರಿಗೂ ಕಾಣಬಾರದು ನೋಡಾ.
ಸೂಕ್ಷ್ಮಂ ಶಿವಪಥದ ಹಾದಿ ಎಲ್ಲರಿಗೆ ಸಾಧ್ಯವೇ?
ಸಾಧ್ಯವಲ್ಲ ಕಾಣಾ ಶಿವಜ್ಞಾನ ಸಂಪನ್ನಂಗಲ್ಲದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./438
ಪಟ್ಟಸಾಲೆಯ ಗದ್ದುಗೆಯೊಳಗೆ
ಜಗಜಟ್ಟಿ ಮೂರ್ತಿ ಇವನಾರಯ್ಯ?
ಕಟ್ಟೆ ಒಡೆದು ಹೊಟ್ಟು ಹಾರಿತ್ತು; ಗಟ್ಟಿ ಉಳಿಯಿತ್ತು.
ಈ ಕಟ್ಟಣೆಯನೇನೆಂಬೆನೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./439
ಪಡುವ ಕಚ್ಚಿದ ನಾಯಿ ಒಡೆಯನ ಕುರುಹ ಬಲ್ಲುದೆ?
ಹೊನ್ನು ಹೆಣ್ಣು ಮಣ್ಣ ಕಚ್ಚಿದ
ಮನುಜರು ನಿಮ್ಮನೆತ್ತ ಬಲ್ಲರಯ್ಯ?
ನಿಮ್ಮನರಿಯದ ಮನುಜರು ನಾಯಕುನ್ನಿಗಿಂದಲೂ
ಕರಕಷ್ಟ ನೋಡಾ
ನಿತ್ಯವ ಹಿಡಿಯದೆ, ಅನಿತ್ಯವ ಹಿಡಿದು,
ವ್ಯರ್ಥಕ್ಕೆ ಸತ್ತವರ ನೋಡಿ ಹೇಸಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./440
ಪತಿಭಕ್ತೆಯಾದರೆ, ತನ್ನ ಪತಿಗೆ ಸವರ್ೊಪಚಾರಂಗಳ ಮಾಡಿ
ಸಮಸ್ತ ಪದಾರ್ಥವನಾತಂಗೆ ನೀಡಿ
ಆತನುಂಡು ಮಿಕ್ಕುದನುಂಬುದೇ ಪತಿವ್ರತಾಭಾವವೆಂಬ
ಲೋಕದ ದೃಷ್ಟಾಂತದಂತೆ
ಶರಣಸತಿ ಲಿಂಗಪತಿಯೆಂಬುದನು ಗುರೂಪದೇಶದಿಂದರಿದು
ಆ ಗುರುವಚನಪ್ರಮಾಣಂಗಳಿಂದವೆ
ಸಮಸ್ತ ಪದಾರ್ಥವ
ತನ್ನ ಕರಸ್ಥಲದಲ್ಲಿರ್ಪ ಇಷ್ಟಲಿಂಗಕ್ಕೆ ಕೊಟ್ಟು ಕೊಂಬುದೆ ಆಚಾರ.
ಇದು ಕಾರಣ, ಇಷ್ಟಲಿಂಗಕ್ಕೆ ಕೊಡದೆ
ಅಂತರಂಗದಲ್ಲಿ ಪ್ರಾಣಲಿಂಗವುಂಟೆಂದು ಮನಕ್ಕೆ ಬಂದಂತೆ ತಿಂಬ
ಶ್ವಾನಜ್ಞಾನಿಗಳಿಗೆ ನಾಯಕನರಕ ತಪ್ಪದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./441
ಪರಮಾರ್ಥವ ನುಡಿದು ಪರರ ಕೈಯಾಂತು
ಬೇಡುವುದು ಕರಕಷ್ಟವಯ್ಯ.
ಪುರಾತರಂತೆ ನುಡಿಯಲೇಕೆ? ಕಿರಾತರಂತೆ ನಡೆಯಲೇಕೆ?
ಆಸೆಯಿಚ್ಛೆಗೆ ಲೇಸ ನುಡಿವಿರಿ.
ಇಚ್ಛೆಯ ನುಡಿವುದು ಉಚ್ಚೆಯ ಕುಡಿವುದು ಸರಿ ಕಾಣಿರೋ.
ಇಚ್ಛೆಯ ನುಡಿವನೆ ಶಿವಶರಣನು?
ಮಾತಿನಲ್ಲಿ ಬೊಮ್ಮವ ನುಡಿದು
ಮನದಲ್ಲಿ ಆಸೆಯ ಸೋನೆ ಕರೆವುತಿಪ್ಪುದು.
ಈ ವೇಷವ ಕಂಡೆನಗೆ ಹೇಸಿಕೆಯಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./442
ಪರಶಕ್ತಿ ಬಂದು ಪಶುಪತಿಯ ನೆರೆಯಲು
ಅತಿಶಯನೊಬ್ಬ ಉದಯವಾದನು.
ಆತ ಆದಿ ಶರಣನು.
ಪಶು ಪಾಶ, ಮಲ ಮಾಯ ಕರ್ಮವನೆಂದೆಂದೂ ಹೊದ್ದದ
ಅನಾದಿ ನಿರ್ಮಲನು ನೋಡಾ ಲಿಂಗ ಶರಣನು.
ಆದಿ ಅನಾದಿಯಿಂದತ್ತತ್ತ ತಾನಾದ
ಪರಾಪರನು ನಿಜಲಿಂಗೈಕ್ಯನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./443
ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ.
ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು
ನಿಃಕಲತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ,
ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ,
ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ
ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ
ಸದಾಶಿವತತ್ವ, ಈಶ್ವರತತ್ವ, ಮಹೇಶ್ವರತತ್ವ ಈ ಮೂರು
ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು,
ಭಕ್ತರ ಪೂಜೆಯ ಕೈಕೊಂಡು,
ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು,
ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ,
ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು.
ಅದಕ್ಕೆ ಕರ ಚರಣಾದ್ಯವಯವಂಗಳಿಲ್ಲ.
ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ
ಸ್ವರೂಪನುಳ್ಳದು.
ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದು.
ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭಿಕರಿಸಿಕೊಂಡು,
ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ
ಪರಂಜ್ಯೋತಿಲರ್ಿಂಗವು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./444
ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷೆಯ
ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ
ಧರಿಸಿದ ಶಿವಶರಣನೇ ರುದ್ರನು.
ಆ ರುದ್ರಾಕ್ಷೆಯ ಜಪಿಸಿದಾತನೇ ಸದ್ಯೋನ್ಮುಕ್ತನು. ಇದು ಕಾರಣ,
ಅಜ ಹರ ಸುರ ಮನು ಮುನೀಶ್ವರರು
ಶ್ರೀವಿಭೂತಿ ರುದ್ರಾಕ್ಷೆಯನೆ ಧರಿಸಿ
ಶಿವಲಿಂಗಾರ್ಚನೆಯ ಮಾಡುತ್ತಿಪ್ಪರು.
ಪ್ರಮಥಗಣ ರುದ್ರಗಣ ಮುಖ್ಯವಾದ ಗಣಾಧೀಶ್ವರರು
ವಿಭೂತಿ ರುದ್ರಾಕ್ಷೆಯನೆ ಧರಿಸಿ,
ಪ್ರಣವ ಪಂಚಾಕ್ಷರಿಯನೆ ಜಪಿಸಿ,
ಪ್ರಣವ ಸ್ವರೂಪಿಗಳಾಗುತ್ತಿಪ್ಪರು.
ನೋಡಿದವರು ಮುಟ್ಟಿದವರು ಧರಿಸಿದವರು ಜಪಿಸಿದವರೆಲ್ಲ
ಸಕಲ ಪ್ರಪಂಚನಳಿದು ಪರಶಿವ ಸ್ವರೂಪರಪ್ಪುದು ತಪ್ಪದು ನೋಡಾ.
ಇದು ಕಾರಣ, ನಾನು ವಿಭೂತಿ ರುದ್ರಾಕ್ಷೆಯನೆ ಧರಿಸಿ,
ಶಿವಲಿಂಗಾರ್ಚನೆಯನೆ ಮಾಡಿ ಪ್ರಣವ ಪಂಚಾಕ್ಷರಿಯನೆ
ಜಪಿಸುತ್ತಿದ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./445
ಪರಶಿವನಿಂದ ಚಿಚ್ಛಕ್ತಿ.
ಆ ಚಿಚ್ಛಕ್ತಿಯಿಂದ,
ಪರಾ ಆದಿ ಇಚ್ಛಾ ಜ್ಞಾನ ಕ್ರಿಯೆಯೆಂಬ
ಪಂಚಕಲಾಶಕ್ತಿಯರುದಯವಾದರು ನೋಡಾ.
ಆ ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ.
ಆ ನಿವೃತ್ತಿಕಲೆಯಿಂದ ಮಹಾಮಾಯೆ ಹುಟ್ಟಿತ್ತು ನೋಡಾ.
ಆ ಮಹಾಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಜನನ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./446
ಪರುಷ ಸೋಂಕಲು
ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ?
ಹಲವು ತೃಣಂಗಳೆಲ್ಲವು
ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ?
ಹಳ್ಳಕೊಳ್ಳದ ನೀರೆಲ್ಲಾ ಬಂದು
ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ.
ಹಲವು ವರ್ಣದ ಪದಾರ್ಥವನೆಲ್ಲವ ತಂದು
ಶಿವಲಿಂಗಾರ್ಪಣವ ಮಾಡಲು
ಆ ಪದಾರ್ಥದ ಪೂರ್ವಾಶ್ರಯವಳಿದು
ಪ್ರಸಾದವಪ್ಪುದು ತಪ್ಪದು ನೋಡಾ.
ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ.
ಆತನು ಶುದ್ಧ ನಿರ್ಮಲನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./447
ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ
ಆ ಪರುಷದ ಗೊಡವೆ ಏತಕಯ್ಯ?
ಅಗ್ನಿ ಸೋಂಕಿಯೂ ಕಾಷ್ಠದ ಗುಣವಳಿಯದಿದ್ದರೆ
ಆ ಅಗ್ನಿಯ ಗೊಡವೆ ಏತಕಯ್ಯ?
ಗರುಡನಿದ್ದೂ ಸರ್ಪದ ಭಯ ಹಿಂಗದಿದ್ದರೆ
ಆ ಗರುಡನ ಗೊಡವೆ ಏತಕಯ್ಯ?
ವಜ್ರಾಂಗಿಯ ತೊಟ್ಟಿದರ್ೂ ಬಾಣದ ಭಯ ಹಿಂಗದಿದ್ದರೆ
ಆ ವಜ್ರಾಂಗಿಯ ಗೊಡವೆ ಏತಕಯ್ಯ?
ಆನೆಯನೇರಿಯೂ ಶ್ವಾನನ ಭಯಹಿಂಗದಿದ್ದರೆ
ಆ ಆನೆಯ ಗೊಡವೆ ಏತಕಯ್ಯ?
ಜ್ಯೋತಿಯಿದ್ದೂ ಕತ್ತಲೆ ಹರೆಯದಿದ್ದರೆ
ಆ ಜ್ಯೋತಿಯ ಗೊಡವೆ ಏತಕಯ್ಯ?
ಅಂಗದ ಮೇಲೆ ಚಿದ್ಘನಲಿಂಗವ ಧರಿಸಿದ್ದು
ತನುಮನದ ಅವಗುಣ ಹಿಂಗದಿದ್ದರೆ
ಆ ಲಿಂಗದ ಗೊಡವೆ ಏತಕಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನೀವು ಸೋಂಕಿಯೂ ಭವ ಹಿಂಗದಿದ್ದರೆ
ನಿಮಗೆ ಕುಂದಯ್ಯ./448
ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನದ ಕಂಡೆನಯ್ಯ.
ಅದು ಅನಂತಕೋಟಿ ಸೋಮಸೂರ್ಯರ ಬೆಳಗು ನೋಡ.
ಅತಿಶಯದ ಬೆಳಗಿನ ಬೆಳಗಿನೊಳು
ಆನಂದಸುಖದೊಳಗೋಲಾಡುತಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./449
ಪಶು ಪಾಶ ಮಲ ಮಾಯಾಕರ್ಮಂಗಳು ನಿತ್ಯವೆಂಬೆ.
ನಿತ್ಯವಾದಡೆ,
`ಪಶುಪಾಶವಿನಿರ್ಮುಕ್ತಃ ಪರಮಾತ್ಮಾ ಸದಾಶಿವಃ ಎಂದುದಾಗಿ
ಇದಂ ಮಲತ್ರಯದೋಷಂ ಗುರುಣೈವ ವಿಮೋಚನಂ’
ಎಂದುದಾಗಿ,
ಪಶು ಪಾಶ ಮಲ ಮಾಯಾಕರ್ಮಂಗಳು
ಗುರೂಪದೇಶದಿಂದಲೂ ಶಿವಪ್ರಸಾದತ್ವದಿಂದಲೂ
ಕೆಡುತ್ತಿರ್ದಾವು.
ಪಶು ಪಾಶ ಮಲ ಮಾಯಾ ಕರ್ಮಂಗಳು
ಶಿವಯೋಗಿಗಳ ಮಧ್ಯದಲ್ಲಿಯೂ ಕೆಡುತ್ತಿರ್ದಾವು;
ಕೆಡುತ್ತಿರ್ದಂಥ ಅನಿತ್ಯವಾದ ವಸ್ತುವ,
ಅಭ್ರಚ್ಛಾಯವ ನಿತ್ಯವೆನ್ನಬಹುದೇ?
ನಿತ್ಯವೆಂಬೆಯಾದಡೆ, ಮಲಮಾಯಾಕರ್ಮಂಗಳು
ಎಂದೂ ತೊಲಗುವುದಿಲ್ಲ ಎನ್ನು.
ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ
ಎಂಬಾಗವೇ
ಮುಕ್ತಿಯಿಲ್ಲಯೆನ್ನು. ಮುಕ್ತಿಯುಂಟಾದಡೆ,
ಮಲಮಾಯಾಕರ್ಮಂಗಳು ನಿತ್ಯವೆಂಬುದು ಅಬದ್ಧ.
ಅವು ನಿತ್ಯವಾದಾಗವೆ, ಉತ್ಪತ್ತಿ ಸ್ಥಿತಿ ಪ್ರಳಯಂಗಳಿಲ್ಲಾಯೆನ್ನು.
ಉತ್ಪತ್ತಿ ಸ್ಥಿತಿ ಪ್ರಳಯಂಗಳುಂಟಾದಲ್ಲಿ, ನಿತ್ಯವೆನಲಿಲ್ಲ.
ಪೃಥ್ವಿಯ ಲಯ ಅಪ್ಪುವಿನಲ್ಲಿ, ಅಪ್ಪುವಿನ ಲಯ ಅಗ್ನಿಯಲ್ಲಿ,
ಅಗ್ನಿಯ ಲಯ ವಾಯುವಿನಲ್ಲಿ, ವಾಯುವಿನ ಲಯ ಆಕಾಶದಲ್ಲಿ,
ಆಕಾಶದ ಲಯ ಆತ್ಮನಲ್ಲಿ, ಆತ್ಮನ ಲಯ ಮಹಾಲಿಂಗದಲ್ಲಿ.
ಇಂತಿವೆಲ್ಲವೂ ಮಹಾಲಿಂಗದಲ್ಲಿಯೇ ಹುಟ್ಟಿ,
ಮಹಾಲಿಂಗದಲ್ಲಿಯೇ ಲಯವಾಗುವಲ್ಲಿಯೆ
ಪಿಂಡಾಂಡವೆಲ್ಲವೂ ಲಯ. ಸಮಸ್ತ ತತ್ವಂಗಳೆಲ್ಲವೂ ಲಯ.
ಈ ಲಯ ಗಮಂಗಳಿಗೆ ಆಸ್ಪದವಾದ ಶಿವತತ್ವವೊಂದೇ ನಿತ್ಯವಲ್ಲದೆ,
ಉಳಿದವೆಲ್ಲವೊ ನಿತ್ಯವೆಂಬುದು ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./450
ಪಶುವನೇರಿದ ಕೋಣ ಶಿಶುವೇಧೆಗಾರ ನೋಡಾ.
ಪಶುವಿನ ಒಡೆಯ ಬಂದು ಕೋಣನನೆಬ್ಬಟ್ಟಲು
ಶಿಶುವಿನ ವೇದನೆ ಮಾಯಿತ್ತು ನೋಡಾ.
ಶಿಶುವೆದ್ದು ತನ್ನ ತಾಯನಪ್ಪಲು
ತಾಯಿ ತಂದೆಯನೊಡಗೂಡಿ ನಿಂದ ನಿಲುವು
ತಾನೊಂದೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./451
ಪಶುವಿನ ಉದರದೊಳಗಿಪ್ಪ ಕ್ಷೀರ
ಶಿಶುವಿಂಗಲ್ಲದೆ ಪಶುವಿಂಗಲ್ಲದೆ ಇಪ್ಪ ಪರಿಯಿದೇನೋ?
ಪಶುವಿನ ಕಳೇವರದಿಂ ಪೊರಮಟ್ಟು, ಕಾಲಾಗ್ನಿಯಾಗಿ
ಪಶುವ ಕೊಂದಿತ್ತು. ಶಿಶುವ ನುಂಗಿತ್ತು.
ಪಶುಪತಿಯ ಕೂಡಿ, ಶಿಶುವಿಂಗೆ ಪಶುವಿಂಗೆ
ಹೊರಗಾದ ವಿಷಯಾತೀತನು ನಿಮ್ಮ ರೂಹು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./452
ಪಶ್ಚಿಮಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು
ತತ್ತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ.
ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ
ಪ್ರಸಾದ ನೋಡಾ.
ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ
ಮಹಾಪ್ರಸಾದಿಯಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./453
ಪಿಂಡ ಬ್ರಹ್ಮಾಂಡವನು ಕಂಡು ನುಂಗಿದ ಆಕೆ
ಪಿಂಡ ಬ್ರಹ್ಮಾಂಡದ ಪ್ರಪಂಚ ಸೋಂಕಳು ನೋಡಾ.
ಪಿಂಡ ಬ್ರಹ್ಮಾಂಡದ ಒಳಹೊರಗೆ ತಾನಾಗಿ
ಅಖಂಡಿತನ ನೆರೆದು ಅಚ್ಚಲಿಂಗೈಕ್ಯಳಾದಳು ನೋಡಾ.
ಇದು ಶರಣಸತಿ ಲಿಂಗಪತಿಯ ಸಂಯೋಗವೆಂದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./454
ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ.
ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ.
ಆ ಭಾಂಡವಯೆನ್ನ ಮಂಡೆಯ ಮೇಲೆ ಹೊತ್ತಿಪ್ಪೆನಯ್ಯ.
ಮೂಲಜ್ಞಾನಾಗ್ನಿಯೆದ್ದು ಮೇಲಣ ಕಮಲವ ತಾಗಲು
ಕಮಲದೊಳಗಣ ಕೊಡ ಕೊಡದೊಳಗಣ ಉದಕ
ಉಕ್ಕಿ ಶರೀರದ ಮೇಲೊಗಲು
ಪಿಂಡ ಕರಗಿ ಅಖಂಡಮಯನಾದೆನು.
ಅಮೃತ ಬಿಂದುವ ಸೇವಿಸಿ
ನಿತ್ಯಾನಿತ್ಯವ ಗೆದ್ದು
ನಿರ್ಮಲ ನಿರಾವರಣನಾದೆನು.
ಸೀಮೆಯ ಮೀರಿ ನಿಸ್ಸೀಮನಾದೆನು.
ಪರಮ ನಿರಂಜನನನೊಡಗೂಡಿ
ಮಾಯಾರಂಜನೆಯಳಿದು
ನಿರಂಜನನಾಗಿದ್ದೆನು ಕಾಣಾ.
ಸಮಸ್ತ ವಿಶ್ವಪ್ರಪಂಚಿಗೆ ಹೊರಗಾಗಿ
ನಿಃಪ್ರಪಂಚ ನಿರ್ಲೆಪನಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./455
ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು,
ಪಿಂಡದೊಳ ಹೊರಗೆ ತಾನಾಗಿ,
ತಂಡತಂಡದ ಭವ ತಿಮಿರವ ಖಂಡಿಸಿತ್ತು ನೋಡಾ.
ಆ ಅಖಂಡ ಜ್ಞಾನಜ್ಯೋತಿಯಿಂದ ಅಪ್ರಮಾಣಲಿಂಗದಲ್ಲಿ
ನಿಃಪತಿಯಾದಾತನೇ ನಿಜಶರಣನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./456
ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ ಶರಣ?
ಪರಿಜನಂಗಳ ಮೆಚ್ಚಿಸುವಾಗ ಪಾದರಗಿತ್ತಿಯೆ ಶರಣ?
ಸರ್ವರ ಮೆಚ್ಚಿಸುವಾಗ ಸಂತೆಯ ಸೂಳೆಯೇ ಶರಣ?
ತನ್ನ ಲಿಂಗದ ನಚ್ಚು ಮಚ್ಚು ಪರಬ್ರಹ್ಮದಚ್ಚು.
ನಿಂದಕರ ಸುಡುವ ಎದೆಗಿಚ್ಚು ನೋಡ.
ಕೆಂಡವ ಕೊಂಡು ಮಂಡೆಯ ತುರಿಸುವಂತೆ
ಕೆಂಡಗಣ್ಣನ ಶರಣರ ಇರವನರಿಯದೆ
ದೂಷಣೆಯ ಮಾಡುವ ನರಕಿಜೀವಿಗಳ
ನರಕದಲ್ಲಿಕ್ಕದೆ ಮಾಬನೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./457
ಪುರುಷಾಮೃಗದ ಕೈಯಲ್ಲಿ, ಪರುಷವಿಪ್ಪುದ ಕಂಡೆನಯ್ಯ.
ಪರುಷವ ಸೋಂಕದೆ ಪಶುವಾಗಿದೆ ನೋಡಾ.
ಪುರುಷಾಮೃಗವನರಿದು ಪರುಷವ ಸಾಧನಮಾಡಬಲ್ಲ
ಹಿರಿಯನಾರನೂ ಕಾಣೆ.
ಕಸ್ತುರಿಯ ಮೃಗ ಬಂದು ಸುಳಿಯಲು
ಪುರುಷಾಮೃಗವಳಿದು, ಪರುಷಸಾಧನವಾಗಿ,
ಪರಾಪರವಾದುದೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./458
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ,
ಆತ್ಮನೆಂಬ ಅಷ್ಟತನುಮೂರ್ತಿಸ್ವರೂಪುಗೊಳ್ಳದಂದು,
ನಾನು, ನೀನೆಂಬ ಭ್ರಾಂತಸೂತಕ ಹುಟ್ಟದಂದು,
ನಾಮ, ರೂಪು, ಕ್ರೀಗಳೇನುಯೇನೂ ಇಲ್ಲದಂದು,
ಸರ್ವಶೂನ್ಯವಾಗಿರ್ದೆಯಲ್ಲ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./459
ಪೃಥ್ವಿ, ಸುಚಿತ್ತ, ಘ್ರಾಣ, ಗಂಧ, ಪಾಯ್ವಿಂದ್ರಿಯ
ಇವು ಭಕ್ತನಂಗಮುಖಂಗಳು.
ಆ ಭಕ್ತಂಗೆ ಆಚಾರಲಿಂಗವೇ ಪ್ರಾಣವಾಗಿಪ್ಪುದಯ್ಯ.
ಅಪ್ಪು, ಸುಬುದ್ಧಿ, ಜಿಹ್ವೆ, ರಸ, ಗುಹ್ಯ
ಈ ಐದು ಮಹೇಶ್ವರನ ಅಂಗಮುಖಂಗಳು,
ಆ ಮಹೇಶ್ವರಂಗೆ ಗುರುಲಿಂಗವೇ ಪ್ರಾಣವಾಗಿಪ್ಪುದಯ್ಯ.
ಅಗ್ನಿ, ನಿರಹಂಕಾರ, ನೇತ್ರ, ರೂಪು, ಪಾದ
ಈ ಐದು ಪ್ರಸಾದಿಯ ಅಂಗಮುಖಂಗಳು.
ಆ ಪ್ರಸಾದಿಗೆ ಶಿವಲಿಂಗವೇ ಪ್ರಾಣಲಿಂಗವಾಗಿಪ್ಪುದಯ್ಯ.
ವಾಯು, ಸುಮನ, ತ್ವಕ್ಕು, ಸ್ಪರ್ಶನ, ಪಾಣಿ
ಈ ಐದು ಪ್ರಾಣಲಿಂಗಿಯ ಅಂಗಮುಖಂಗಳು.
ಆ ಪ್ರಾಣಲಿಂಗಿಗೆ ಜಂಗಮಲಿಂಗವೇ ಪ್ರಾಣವಾಗಿಪ್ಪುದಯ್ಯ.
ಆಕಾಶ, ಸುಜ್ಞಾನ, ಶ್ರೋತ್ರ, ಶಬ್ದ, ವಾಕು
ಈ ಐದು ಶರಣನ ಅಂಗಮುಖಂಗಳು.
ಆ ಶರಣನಿಗೆ ಪ್ರಸಾದಲಿಂಗವೇ ಪ್ರಾಣವಾಗಿಪ್ಪುದಯ್ಯ.
ಆತ್ಮ, ಸದ್ಭಾವ, ಮನ, ನೆನಹು, ಪರಿಣಾಮ
ಈ ಐದು ಐಕ್ಯನ ಅಂಗಮುಖಂಗಳು.
ಆ ಐಕ್ಯಂಗೆ ಮಹಾಲಿಂಗವೇ ಪ್ರಾಣವಾಗಿಪ್ಪುದಯ್ಯ.
ಇಂತೀ ಅಂಗಮುಖವನರಿದು
ಲಿಂಗಮುಖವ ಮಾಡಬಲ್ಲರೆ ಪ್ರಸಾದಿಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./460
ಪೃಥ್ವಿಯ ಮೇಲಣ ಕಲ್ಲ ತಂದು
ಮತ್ರ್ಯರೆಲ್ಲರು ಪೂಜಿಸಿ
ಶಿವಭಕ್ತಿಯೆಂದು ಮಾಡುತಿಪ್ಪರು ನೋಡಾ.
ಕೊಟ್ಟಾತನ ಗುರುವೆಂಬರು; ಕೊಂಡಾತನ ಶಿಷ್ಯನೆಂಬರು.
ಕೊಟ್ಟವ ಕೊಂಡವ ಉಭಯಮತ್ರ್ಯರೂ
ಮರಣಕ್ಕೊಳಗಾಗಿ ಹೋಹಲ್ಲಿ
ಪೃಥ್ವಿಯ ಕಲ್ಲು ಪೃಥ್ವಿಯಲುಳಿಯಿತ್ತು ನೋಡಾ.
ಭಕ್ತಿ ಭ್ರಷ್ಟಾಗಿ ಹೋಯಿತ್ತು.
ಹೀಂಗಲ್ಲ ಬಿಡಿ, ಇದು ಗುರುಶಿಷ್ಯಸಂಬಂಧವಲ್ಲ.
ಅರುಹು ಸಹಿತವಾಗಿ ಗುರುವೆಂದೆಂಬೆ;
ಆಚಾರಸಹಿತವಾಗಿ ಗುರುವೆಂದೆಂಬೆ;
ನಿಷ್ಠೆ ಸಹಿತವಾಗಿ ಲಿಂಗವೆಂದೆಂಬೆ;
ಇದು ಪರಮಸೌಖ್ಯ;
ಪರಮ ಭಕ್ತಿಯ ಪರಿಣಾಮವು.
ಉಳಿದವೆಲ್ಲ ಭ್ರಷ್ಟು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./461
ಪ್ರಣವವೇ ಪರಬ್ರಹ್ಮವು. ಪ್ರಣವವೇ ಪರಾಪರವಸ್ತು.
ಪ್ರಣವವೇ ಪರತತ್ವವು ಪ್ರಣವವೇ ಪರಂಜ್ಯೋತಿ ಪ್ರಕಾಶವು.
ಪ್ರಣವವೇ ಪರಶಿವ. ಪ್ರಣವವೇ ಶುದ್ಧಪ್ರಸಾದ.
ಪ್ರಣವವೇ ಪರಮಪದ.
ಪ್ರಣವವೇ.
ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ ನೋಡಾ.
ಪ್ರಣವವೇ
ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ
ಮಾತೃಸ್ಥಾನ ನೋಡಾ.
ಇಂತಪ್ಪ ಶಿವಸ್ವರೂಪವಪ್ಪ ಪ್ರಣವಮಂತ್ರವನೇ
ಶುದ್ಧಮಾಯಾಸಂಬಂಧವೆಂಬ ಅಬದ್ಧರ
ಎನಗೊಮ್ಮೆ ತೋರದಿರಯ್ಯ.
ಮಂತ್ರ ಜಡವಾದಲ್ಲಿಯೆ ಗುರು ಜಡ.
ಗುರು ಜಡವಾದಲ್ಲಿಯೆ ಲಿಂಗವು ಜಡ.
ಲಿಂಗವು ಜಡವಾದಲ್ಲಿಯೆ ಜಂಗಮವು ಜಡ.
ಜಂಗಮವು ಜಡವಾದಲ್ಲಿಯೇ ಪ್ರಸಾದವು ಜಡ.
ಪ್ರಸಾದವು ಜಡಯೆಂಬುವರಿಗೆ ಮುಕ್ತಿಯೆಂಬುದು ಎಂದೂ ಇಲ್ಲ.
ಮಂತ್ರ ಗುರು ಲಿಂಗ ಜಂಗಮ ಪ್ರಸಾದ ಮುಕ್ತಿ ಈ ಆರು
ಸಾಕ್ಷಾತ್ ಶಿವ ತಾನೆಯಲ್ಲದೆ ಬೇರಿಲ್ಲ.
ಶಿವ ಬೇರೆ ಇವು ಬೇರೆಯೆಂಬ ಅಜ್ಞಾನ ಕರ್ಮಕಾಂಡಿಗಳ
ಪಶುಮತ(ದ)ವರಯೆನಗೊಮ್ಮೆ ತೋರದಿರು.
ಇದು ಕಾರಣ, ಪ್ರಣವವೇ ಪರವಸ್ತು.
ಪಂಚಾಕ್ಷರವೇ ಪಂಚಮುಖವನ್ನುಳ್ಳ ಪರಮೇಶ್ವರ ತಾನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./462
ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ.
ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ,
ಆ ಮಹಾಜ್ಞಾನವೇ ಅನಾದಿ ಶರಣರೂಪಾಗಿ,
ಆ ನಿರಾಕಾರ ಪರವಸ್ತುವಿಗೆ ಆಧಾರವಾಗಿ,
ಚಿನ್ನ ಬಣ್ಣದ ಹಾಂಗೆ ಭಿನ್ನವಿಲ್ಲದಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?.
ಆ ನಿರಾಕಾರ ಪರವಸ್ತುವೆ ನಿಃಕಲಲಿಂಗವಾದಲ್ಲಿ,
ಆ ನಿಃಕಲಲಿಂಗದಿಂದ ಜ್ಞಾನಚಿತ್ತುದಯವಾಗಿ,
ಆ ಜ್ಞಾನಚಿತ್ತುವೆ ಶರಣರೂಪಾಗಿ,
ಆ ನಿಃಕಲಲಿಂಗಕ್ಕಾಶ್ರಯವಾಗಿ,
ಚಿದಂಗಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?.
ಆ ನಿಃಕಲಜ್ಞಾನಚಿತ್ತುವೆ ಬಲಿದು ಚಿಚ್ಛಕ್ತಿಯಾದಲ್ಲಿ,
ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ,
ಆ ಶಾಂತ್ಯತೀತೋತ್ತರೆಯೆಂಬ ಕಲೆಯಿಂದ ನಾನುದಯವಾಗಿ,
ಆ ಮಹಾಲಿಂಗಕ್ಕಾಶ್ರಯವಾಗಿ,
ಐಕ್ಯನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?
ಆ ಚಿಚ್ಛಕ್ತಿಯಿಂದ ಪರಶಕ್ತಿ ಉದಯವಾಗಿ,
ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ,
ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಪ್ರಸಾದಲಿಂಗಕ್ಕಾಶ್ರಯವಾಗಿ,
ಶರಣರೂಪಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರುಬಲ್ಲರು ಹೇಳು?
ಆ ಪರಶಕ್ತಿಯಿಂದ ಆದಿಶಕ್ತಿ ಉದಯವಾಗಿ,
ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧ ಸುಜ್ಞಾನವೆಂಬ
ಜಂಗಮಲಿಂಗವಾದಲ್ಲಿ
ಆ ಶಾಂತಿಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಜಂಗಮಲಿಂಗಕ್ಕಾಶ್ರಯವಾಗಿ,
ಪ್ರಾಣಲಿಂಗಿಯಾಗಿಪ್ಪುದ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳು?.
ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಉದಯವಾಗಿ,
ಆ ಇಚ್ಛಾಶಕ್ತಿಯ ಸಂಗದಿಂದ ನೀನು
ದಿವ್ಯ ಶಿವಲಿಂಗಾಕಾರವಾದಲ್ಲಿ
ಆ ವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಶಿವಲಿಂಗಕ್ಕಾಶ್ರಯವಾಗಿ,
ಪರಮ ಪ್ರಸಾದಿಯಾಗಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?.
ಆ ಇಚ್ಛಾಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾಗಿ
ಆ ಸುಜ್ಞಾನಶಕ್ತಿಯ ಸಂಗದಿಂದ ನೀನು ಗುರುಲಿಂಗವಾದಲ್ಲಿ
ಆ ಪ್ರತಿಷ್ಠೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಗುರುಲಿಂಗಕ್ಕಾಶ್ರಯವಾಗಿ,
ಮಹೇಶ್ವರನಾಗಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?.
ಆ ಸುಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಉದಯವಾಗಿ,
ಆ ಕ್ರಿಯಾಶಕ್ತಿಯ ಸಂಗದಿಂದ ನೀನು ಆಚಾರಲಿಂಗವಾದಲ್ಲಿ
ಆ ನಿವೃತ್ತಿಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಆಚಾರಲಿಂಗಕ್ಕಾಶ್ರಯವಾಗಿ,
ಸದ್ಭಕ್ತನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?.
ನೀ ನಿನ್ನ ಸ್ವಲೀಲೆಯಿಂದ ನಾನಾರೂಪವಾದಲ್ಲಿ
ನಿನ್ನ ಬೆಂಬಳಿವಿಡಿದು ನಾನು ನಾನಾರೂಪಗುತ್ತಿರ್ದೆನಯ್ಯಾ.
ನೀನಾವಾವ ರೂಪಾದೆ ನಾನು ಆ ಆ ರೂಪಾಗುತ್ತಿರ್ದೆನಯ್ಯಾ.
ಇದು ಕಾರಣ, ಶರಣ ಲಿಂಗವೆರಡಕ್ಕೂ ಭಿನ್ನವಿಲ್ಲವೆಂಬುದನು
ಸ್ಥಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ
ಆಗಮಯುಕ್ತಿಯಿಂದ ಅರಿದುದು ಅರುಹಲ್ಲ.
ಅದೇನುಕಾರಣವೆಂದೊಡೆ;
ಶ್ರುತಜ್ಞಾನದಿಂದ ಸಂಕಲ್ಪಭ್ರಾಂತಿ ತೊಲಗದಾಗಿ,
ಈ ಷಡುಸ್ಥಲಮಾರ್ಗವನು
ದ್ವೆ ತಾದ್ವೆ ತದೊಳಗೆ ಕೂಡಲಿಕ್ಕಿ ನುಡಿಯಲಾಗದು.
ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ
ನಿತ್ಯನಿರಂಜನ ಪರತತ್ವವು ತಾನೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./463
ಪ್ರಥಮದಲ್ಲಿ ಭಕ್ತರಾದೆವೆಂಬರು.
ದ್ವಿತೀಯದಲ್ಲಿ ಮಾಹೇಶ್ವರರಾದೆವೆಂಬರು.
ತೃತೀಯದಲ್ಲಿ ಪ್ರಸಾದಿಯಾದೆವೆಂಬರು.
ನಾಲ್ಕನೆಯಲ್ಲಿ ಪ್ರಾಣಲಿಂಗಿಯಾದೆವೆಂಬರು.
ಅಯ್ದನೆಯಲ್ಲಿ ಶರಣರಾದೆವೆಂಬರು.
ಆರನೆಯಲ್ಲಿ ಐಕ್ಯರಾದೆವೆಂಬರು.
ಆರುಸ್ಥಲವ ಮೀರಿ ನಿರವಯಸ್ಥಲವನೆಯ್ದಿದೆವೆಂಬರು.
ಇದು ಖಂಡಿತ ಷಟ್ಸ್ಥಲಬ್ರಹ್ಮಜ್ಞಾನ ನಿರ್ಣಯವಲ್ಲ.
ಆವಾವಸ್ಥಲವನಂಗಂಗೊಂಡರು
ಆ ಸ್ಥಲದಲ್ಲಿ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲಡೆ
ಸದ್ಭಕ್ತನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./464
ಪ್ರವೃತ್ತಿ ನಿವೃತ್ತಿಯೆಂದು ಎರಡು ತೆರನಾಗಿಹುದೆಂಬರು.
ಪ್ರವೃತ್ತಿಯೇ ಶಕ್ತಿಮಯವೆಂದೆಂಬರು.
ನಿವೃತ್ತಿಯೇ ಭಕ್ತಿಮಯವೆಂದೆಂಬರು.
ಪ್ರವೃತ್ತಿಯೇ ಮಾಯೆಯೆಂದೆಂಬರು.
ನಿವೃತ್ತಿಯೇ ನಿರ್ಮಾಯೆಯೆಂದೆಂಬರು.
ಪ್ರವೃತ್ತಿ ನಿವೃತ್ತಿಗೆ ಪರಮ ಕಾರಣವಾಗಿ ಪರಶಿವನೆಂದೆಂಬರು.
ಇದುಕಾರಣ, ಎನಗೆ ಪ್ರವೃತ್ತಿಯೂ ಇಲ್ಲ; ನಿವೃತ್ತಿಯೂ ಇಲ್ಲ;
ಪರಮ ಕಾರಣನೆಂಬುದೂ ಇಲ್ಲ.
ಶಿವ ಶರಣನೆಂಬೆರಡೂ ಏಕಾರ್ಥವಾಗಿ
ನಿರಾಕಾರ ಪರವಸ್ತು ತಾನೊಂದೆಯಾಯಿತ್ತಾಗಿ
ತನ್ನಿಂದನ್ಯರಾಗಿ ಉಂಟೆಂಬುದೇನನು ಹೇಳಲಿಲ್ಲ.
ತಾನೆ ಪರಾಪರವಸ್ತು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./465
ಪ್ರಸಾದ ಪದಾರ್ಥ ಉಚ್ಛಿಷ್ಟವೆನುತಿಪ್ಪಿರಿ?
ಪ್ರಸಾದವಾವುದು ಪದಾರ್ಥವಾವುದು ಉಚ್ಛಿಷ್ಟವಾವುದು
ಹೇಳಾ ಮರುಳೆ?
ಪ್ರಸಾದವೆಂದರೆ ಪರಂಜ್ಯೋತಿಸ್ವರೂಪವಪ್ಪ ಶಿವತತ್ವವು;
ಪದಾರ್ಥವೆಂದರೆ ಆತ್ಮನು;
ಉಚ್ಛಿಷ್ಟವೆಂದರೆ ಮಾಯೆ ನೋಡ;
ಮಾಯಾಕಾರ್ಯವಾದುದೇ ದೇಹ.
ದೇಹೇಂದ್ರಿಯ ಮನಃಪ್ರಾಣಾದಿಗಳಪ್ಪ ಚತುರ್ವಿಂಶತಿತತ್ವಂಗಳು
ಆ ಚತುರ್ವಿಂಶತಿ ತತ್ವಂಗಳಿಗೆ
ಆಶ್ರಯವಾಗಿ ಚೈತನ್ಯವಾಗಿ ಆತ್ಮನು;
ಅಂತು ಆತ್ಮ ಸಹವಾಗಿ ಪಂಚವಿಂಶತಿ ತತ್ವಂಗಳು.
ಇಂತು ದೇಹೇಂದ್ರಿಯಾದಿಗಳ ಕಳೆದು
ಆತ್ಮನ ಪರಮಾತ್ಮನಲ್ಲಿ ಸಮರ್ಪಿಸಬಲ್ಲರೆ
ಪರಮ ಪ್ರಸಾದಿಯೆಂಬೆನು.
ಪರಂಜ್ಯೋತಿಪ್ರಕಾಶನೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./466
ಪ್ರಸಾದಿಗೆ ಲಕ್ಷಣವಾವುದೆಂದರೆ ಹೇಳಿಹೆ ಕೇಳಿ[ರಯ].
ಕಾಯದಿಂದ ಮನಸ್ಸಿನಿಂದ ವಾಕ್ಯದಿಂದ
ಸತ್ಯಶುದ್ಧವಾಗಿ, ವಿಶ್ವಾಸ ಶ್ರದ್ಧೆಯೆಡೆಗೊಂಡು
ಶರೀರವನು ಪ್ರಾಣವನು ಒಡೆಯೆಂಗೆ ಸಮರ್ಪಿಸಿ
ಪ್ರಸಾದವ ಕೈಕೊಳಬಲ್ಲರೆ ಪ್ರಸಾದಿಯೆಂಬೆ.
ಹೀಂಗಲ್ಲದೆ
ಕುಳವೆಂಬ ಕೋಳಕ್ಕೆ ಸಿಲ್ಕಿದ ಕಾಳ್ವಿಚಾರಿ ಋಣಪಾತಕರ
ಪ್ರಸಾದಿ ಸದ್ಭಾವಿಯೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./467
ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ
ಪ್ರಾಣಲಿಂಗಿಯ ಅಂಗವು ಹೇಂಗಿಹುದಯ್ಯ ಎಂದರೆ:
ಲಿಂಗ ನೆನಹೆ ಹಿಂಚಾಗಿ ಲಿಂಗ ನೆನಹೆ ಮುಂಚಾಗಿಹುದಯ್ಯ.
ಅಂಗವಿಷಯಂಗಳೆ ಹಿಂಚಾಗಿ
ಲಿಂಗವಿಷಯಂಗಳೆ ಮುಂಚಾಗಿಪ್ಪುದಯ್ಯ.
ಆವಾಗಲು ಲಿಂಗಸಹಿತವಾಗಿಯೆ
ಇಂದ್ರಿಯಂಗಳ ಭೋಗವ ಭೋಗಿಸುತಿಪ್ಪುದಯ್ಯ.
ಭೋಗಿಸುವ ಕ್ರಮವೆಂತುಟಯ್ಯ ಎಂದಡೆ:
ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರವೆಂಬ ಮುಖದ್ವಾರಂಗಳಲ್ಲಿ
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗವೆಂಬ
ಲಿಂಗಸ್ಥಲಂಗಳ ಮೂರ್ತಿಗೊಳಿಸಿ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಈ ಪದಾರ್ಥಂಗಳ
ಲಿಂಗಮುಖಕ್ಕೆ ನಿವೇದಿಸಿ
ಆ ಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತಿಪ್ಪಾತನೇ
ಪ್ರಾಣಲಿಂಗಿ ಲಿಂಗಪ್ರಾಣಿಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./468
ಪ್ರಾಣಲಿಂಗದಲ್ಲಿ ಅವಿಶ್ವಾಸ ಕಂಡಾ.
ತೀರ್ಥಲಿಂಗದಲ್ಲಿ ವಿಶ್ವಾಸವ ಮಾಡುವ,
ಬಣಗರ ಎನಗೊಮ್ಮೆ ತೋರದಿರ.
ಉಡಿಸಿ ತೊಡಿಸಿ ನೋಡುವ ಗಂಡನ
ತನು ಮುಟ್ಟಿ ಅಪ್ಪಿ, ಮನ ಮುಟ್ಟಿ ನೆರೆಯದೆ,
ಕಡೆಯಲ್ಲಿದ್ದವರಿಗೆ ಕಾಮಿಸುವ, ತುಡುಗುಣಿ ಹೊಲತಿಯಂತೆ,
ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಹರಿವ ಅನಾಚಾರಿಗಳಿಗೆ,
ಮುನ್ನವೆ ಶಿವನಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./469
ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ
ಮೈಯೆಲ್ಲಾ ಮುಳ್ಳು, ಮುಖವೀರೈದು ನೋಡಾ.
ಬಣ್ಣಜ ಮಡಕೆಯನೊಡೆದು
ಹೆಣ್ಣನ ಮೈಯ ಮುಳ್ಳನೆಲ್ಲಾ ಮುರಿದು
ಮುಖವೀರೈದ ಕೆಡಿಸಿದನು ನಿರ್ಮಲ ನಿರಾವರಣ ಶರಣನು.
ಆ ಶರಣಂಗೆ ನಮೋ ನಮೋಯೆಂಬೆನು ಕಾಣಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./470
ಬಯಲ ಮೂರ್ತಿ ಮಾಡಿ,
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು.
ಬಯಲಮೂರ್ತಿಯ ಅಮೂರ್ತಿಯ ಮಾಡಿ,
ಎನ್ನ ಪ್ರಾಣದೊಳಗಿರಿಸಿದನಯ್ಯ ಶ್ರೀಗುರು.
ಬಯಲು ಬಯಲನೆ ಬೆರಸಿ ಬಯಲೆಂದೆನಿಸಿ
ಎನ್ನ ಭಾವದೊಳಗಿರಿಸಿದನಯ್ಯ ಶ್ರೀಗುರು.
ಇದು ಕಾರಣ,
ಎನ್ನ ಕರಸ್ಥಲ ಮನಸ್ಥಲ ಭಾವಸ್ಥಲದಲ್ಲಿ ನಿಮ್ಮಧರಿಸಿ
ನಾನು ಅಂಗಲಿಂಗ ಸಂಬಂಧಿಯಾದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./471
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ
ಸಂಪನ್ನನಾದೆನಯ್ಯ.
ಚೆನ್ನಬಸವಣ್ಣನ ಪ್ರಸಾದದಿಂದ ಷಟ್ಸ್ಥಲಜ್ಞಾನಸಂಪನ್ನನಾದೆನಯ್ಯ.
ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ
ಎನ್ನ ಸ್ವರೂಪವೆಂದರಿದು
ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ.
ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ.
ಮಹಾದೇವಿಯಕ್ಕಗಳ ಪ್ರಸಾದದಿಂದ
ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ
ನಿರ್ವಾಣಪದದಲ್ಲಿ ನಿಂದೆನಯ್ಯ.
ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ
ಹಡೆದೆನಯ್ಯ.
ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ
ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ
ವೀರಮಾಹೇಶ್ವರನಾದೆನು ನೋಡಾ.
ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ
ಪರಮಪ್ರಸಾದದಿಂದ
ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ
ಕರಣೇಂದ್ರಿಯಂಗಳ ಕಳೆದುಳಿದು
ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು
ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ.
ನಿಮ್ಮ ಶರಣರ ಪ್ರಸಾದದಿಂದ ನಾನು
ಪ್ರಸಾದಿಯಾಗಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./472
ಬಹು ಜನಂಗಳು ಹೇತ ಹೇಲ
ಹಂದಿ ತಿಂದು ತನ್ನ ಒಡಲ ಹೊರೆವುದಯ್ಯ.
ತಾ ಹೇತ ಹೇಲ ಮರಳಿ ಮುಟ್ಟದು ನೋಡಾ.
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ
ಆ ಭವಿಯ, ನಂಟರು ಹೆತ್ತವರು ಬಂಧುಗಳೆಂದು ಬೆರಸಿದರೆ
ಆ ಹಂದಿಗಿಂದಲೂ ಕರ ಕಷ್ಟ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./473
ಬಿಂದಿನ ಕೊಡನ ಹೊತ್ತಾಡುವ ಅಂಗನೆಯ ಒಂದಾಗಿ
ಹುಟ್ಟಿದರೈವರು ಸ್ತ್ರೀಯರು.
ಚಂದ ಚಂದದ ಮನೆಯ ರಚಿಸಿ
ಅಲ್ಲಿ ಸರ್ವರ ಒಂದುಗೂಡುವುದ ಕಂಡೆನಯ್ಯಾ.
ಬಿಂದಿನ ಕೊಡ ತುಳುಕಿ ಚಂದ್ರಾಮೃತವೊಗಲು
ಚಂದಚಂದದ ಮನೆಯಳಿದು
ಒಂದಾಗಿ ಹುಟ್ಟಿದವರೈವರು ಒಬ್ಬನ ನೆರೆದು
ನಿಬ್ಬೆರಗಾದುದ ಕಂಡು ನಾನು ಬೆರಗಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./474
ಬಿಂದುಮಾಯಿಕವಿಲ್ಲದಂದು
ಮೂವತ್ತಾರುತತ್ವಂಗಳುತ್ಪತ್ತಿಯಾಗದಂದು,
ತತ್ ಪದ ತ್ವಂ ಪದ ಅಸಿ ಪದವೆಂಬ ಪದತ್ರಯಂಗಳಿಲ್ಲದಂದು,
ತತ್ ಪದವೆ ಲಿಂಗ, ತ್ವಂ ಪದವೆ ಅಂಗ, ಅಸಿ ಪದವೆ
ಲಿಂಗಾಂಗಸಂಯೋಗ.
ಈ ಅಂಗ ಲಿಂಗ ಸಂಬಂಧವೆಂದು,
ಈ ತತ್ವಮಸ್ಯಾದಿ ವಾಕ್ಯಾರ್ಥವಿಲ್ಲದಂದು,
ಅಲ್ಲಿಂದತ್ತತ್ತ ನೀನು ಪರಾತ್ಪರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./475
ಬಿಂದುಶೂನ್ಯವಾದ ಲಿಂಗವೇ ಅಂಗವಾಗಿ,
ಕಾಯಶೂನ್ಯನಯ್ಯ ಭಕ್ತನು.
ನಾದಶೂನ್ಯವಾದ ಜಂಗಮವೆ ಪ್ರಾಣವಾಗಿ,
ಪ್ರಾಣಶೂನ್ಯನಯ್ಯ ಅನಾದಿಭಕ್ತನು.
ತನ್ನಂಗಸ್ವರೂಪವಪ್ಪ ಲಿಂಗಕ್ಕೆ
ತನ್ನ ಪ್ರಾಣಸ್ವರೂಪವಪ್ಪ ಪರಮ ಚೈತನ್ಯಜಂಗಮದ
ಪ್ರಸನ್ನ ಪ್ರಸಾದವೇ ಆ ಲಿಂಗಕ್ಕೆ ಪ್ರಾಣಕಳೆ ನೋಡಾ.
ಆ ಲಿಂಗದ ಪ್ರಾಣಕಳೆಯ
ಆ ಜಂಗಮಕ್ಕೆ ಪದಾರ್ಥವ ಮಾಡಿ ಸಮರ್ಪಿಸಿ,
ಆ ಘನ ಚೈತನ್ಯವೆಂಬ ಪರಮ ಜಂಗಮಲಿಂಗದ
ಪರಿಣಾಮ ಪ್ರಸಾದಿಯಯ್ಯ ಭಕ್ತನು.
ಲಿಂಗ ಜಂಗಮ ಪ್ರಸಾದ ಭಕ್ತ ಇಂತೀ ಚತುರ್ವಿಧವು
ಒಂದಾಗಿ ನಿಂದ ನಿಲವು ನೀನೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./476
ಬೂದಿಯಲ್ಲಿ ಹೊರಳುವ ಕತ್ತೆಯಂತೆ,
ಎಲುವ ಕಡಿವ ಶ್ವಾನನಂತೆ,
ಹಾತೆಯ ತಿಂಬ ಹಲ್ಲಿಯಂತೆ,
ಕಿಚ್ಚ ಹಾಯುವವಳಂತೆ
ಒಚ್ಚಿ ಹೊತ್ತಿನ ಭೋಗಕ್ಕೆ ಮಚ್ಚಿ ಹುಚ್ಚಾದಿರಿಯಲ್ಲ
ಮೃತ್ಯುಂಜಯನನಪ್ಪದೆ ಮೃತ್ಯುವಿನ ಬಾಯತುತ್ತಾದವರ ಕಂಡು
ನಗುತ್ತಿದ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./477
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ
ಪಂಚಾಧಿದೇವತೆಗಳಿಲ್ಲದಂದು,
ಈ ಪಂಚೈವರ ಲಯ ಗಮನಂಗಳಿಗೆ ಕಾರಣವಾದ
ಶಿವಶಕ್ತಿಗಳಿಲ್ಲದಂದು,
ಈ ಶಿವ ಶಕ್ತಿಗಳಿಗೆ ಕಾರಣವಾದ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣವೆಂಬ
ನಿಃಕಲತತ್ವವಿಲ್ಲದಂದು,
ನೀನು ಶೂನ್ಯನಾಗಿರ್ದೆಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./478
ಬ್ರಹ್ಮ ವಿಷ್ಣುಪದವೆಂಬುವು ಒಂದು ತೃಣ ನೋಡಾ,
ನಿಮ್ಮ ಮಾಹೇಶ್ವರಂಗೆ.
ಇಂದ್ರಾದಿ ದಿಕ್ಪಾಲಕರ ಭೋಗ ಒಂದು ತೃಣ ನೋಡಾ,
ನಿಮ್ಮ ಮಾಹೇಶ್ವರಂಗೆ,
ತ್ರಿಭುವನಸಂಪದ ಒಂದು ಕಿಂಚಿತ್ತು ನೋಡಾ, ನಿಮ್ಮ
ಮಾಹೇಶ್ವರಂಗೆ,
ದೀಕ್ಷೆಯೆಂಬುವುದಿಲ್ಲ ನೋಡಾ, ದಿವ್ಯಜ್ಞಾನಿ ತಾನಾಗಿ.
ಶಿಕ್ಷೆಯೆಂಬುವುದಿಲ್ಲ ನೋಡಾ,
ವಿಷಯಂಗಳು ತನ್ನ ವಶಗತವಾದವಾಗಿ.
ಮೋಕ್ಷವೆಂಬುವುದಿಲ್ಲ ನೋಡಾ, ನಿತ್ಯ ಮುಕ್ತ ತಾನಾಗಿ.
ಮಾಯಾ ಮೋಹ ರಹಿತ ನಿಮ್ಮ ನೆನಹೆ ಪ್ರಾಣವಾಗಿ
ನಾನು ಮಾಹೇಶ್ವರನಾದುದ ಏನ ಹೇಳುವೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./479
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ.
ವಿಷ್ಣುಪದವ ಪಡೆದೆನೆಂಬುದು ತೃಷ್ಣೆ ಕಾಣಿರೋ.
ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ
ಮರುಳು ಮಾನವರಿರಾ.
ದೇವಾತಾದಿಭೋಗಂಗಳ ಪಡೆದಿಹೆನೆಂದು
ಪರಿಣಾಮಿಸುವ ಗಾವಿಲರನೇನೆಂಬೆನಯ್ಯ?
ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ.
ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ
ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ.
ಅದೇನು ಕಾರಣವೆಂದರೆ:
ಇವೆಲ್ಲವೂ ಅನಿತ್ಯಪದವಾದ ಕಾರಣ.
ಇವೆಲ್ಲ ಪದಂಗಳಿಗೂ ಮೇಲಾದ
ಮಹಾಲಿಂಗ ಪದವೇ ನಿತ್ಯತ್ವಪದ.
ಆ ಮಹಾಲಿಂಗ ಪದದೊಳಗೆ ಸಂಯೋಗವಾದ
ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ
ಒಂದು ವಸ್ತುವ ಬಲ್ಲನೇ ಅನನ್ಯ ಶರಣನು?
ಇದು ಕಾರಣ,
ತನುವ ಬಳಲಿಸಿ ತಪವಮಾಡಿ
ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ
ಹಂದಿ ತಪವಮಾಡಿ
ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ.
ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./480
ಬ್ರಹ್ಮರಂಧ್ರದಲ್ಲಿ ಅನಾದಿಗಣೇಶ್ವರನೆನಿಸಿ,
ಸರ್ವತೋಮುಖ[ವಾ]ಗಿಪ್ಪಿರಯ್ಯ.
ಲಲಾಟದಲ್ಲಿ ಆದಿಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಕರ್ಣದಲ್ಲಿ ಆತ್ಮಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಕರ್ಣದಲ್ಲಿ ಆಧ್ಯಾತ್ಮಗಣೇಶ್ವರನೆನಿಸಿಪ್ಪಿರಯ್ಯ.
ಬಲದ ನಯನದಲ್ಲಿ ನಿರ್ಮಾಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ನಯನದಲ್ಲಿ ನಿರ್ಮಲನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ನಾಸಿಕದಲ್ಲಿ ನಿರ್ಭಯನೆಂಬ ಗಣೇಶ್ವರನೆನೆಸಿಪ್ಪಿರಯ್ಯ.
ಜಿಹ್ವೆಯಲ್ಲಿ ನಿರ್ಭಾವನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬೆನ್ನಿನಲ್ಲಿ ಪಂಚವದನನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಕಂಠದಲ್ಲಿ ಜ್ಞಾನಾನಂದನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಭುಜದಲ್ಲಿ ಅಕ್ಷಯನೆಂಬ ಗಣೇಶ್ವರನೆಸಿಪ್ಪಿರಯ್ಯ.
ಎಡದ ಭುಜದಲ್ಲಿ ವ್ಯೋಮಸಿದ್ಧನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ತೋಳಿನಲ್ಲಿ ಸದಾಶಿವನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ತೋಳಿನಲ್ಲಿ ಶೂಲಪಾಣಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಮುಂಗೈಯಲ್ಲಿ
ಭಾಳಲೋಚನನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಮುಂಗೈಯಲ್ಲಿ ಪಶುಪತಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಬರಿಯಲ್ಲಿ ಭವಹರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಬರಿಯಲ್ಲಿ ಮೃಡನೆಂಬ ಗಣೇಶ್ವರನೆನಿಸಿಪ್ಪಿರಯ್ಯ
ಹೃದಯದಲ್ಲಿ ಓಂಕಾರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ನಾಭಿಯಲ್ಲಿ ಶಂಕರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಕಟಿಯಲ್ಲಿ ಮೃತ್ಯುಂಜಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ
ಗುಹ್ಯದಲ್ಲಿ ಕಾಮಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಗುಧಸ್ಥಾನದಲ್ಲಿ ಕಾಲಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ತೊಡೆಯಲ್ಲಿ ಪ್ರಮಥನಾಥನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ತೊಡೆಯಲ್ಲಿ
ಮಹಾಮಹೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಮಣಿಪಾದದಲ್ಲಿ
ಪಟ್ಟವರ್ಧನನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಮಣಿಪಾದದಲ್ಲಿ
ಚಂದ್ರಶೇಖರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಕಣಪಾದದಲ್ಲಿ ಅಖಂಡಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಕಣಪಾದದಲ್ಲಿ ವ್ಯೋಮಕೇಶನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಹರಡಿನಲ್ಲಿ ಜನನ ವಿರಹಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಹರಡಿನಲ್ಲಿ ವಿಶ್ವೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಮೇಗಾಲಲ್ಲಿ ಮೇಘವಾಹನನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಮೇಗಾಲಲ್ಲಿ ಈಶಾನ್ಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಉಂಗುಷ್ಠದಲ್ಲಿ
ಮಣಿಭೂಷಣನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಉಂಗುಷ್ಠದಲ್ಲಿ ವಿರೂಪಕ್ಷನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಬಲದ ಆರೆಪಾದದಲ್ಲಿ
ಊಧ್ರ್ವಮುಖನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಎಡದ ಅರೆಪಾದದಲ್ಲಿ ಸಚರಾಚರನೆಂಬ ಗಣೇಶ್ವರನೆನಿಸಿಪ್ಪಿರಯ್ಯ.
ಆಧಾರಸ್ಥಾನದಲ್ಲಿ ಆಚಾರಲಿಂಗವೆನಿಸಿಪ್ಪಿರಯ್ಯ.
ಸ್ವಾಧಿಷ್ಠಾನದಲ್ಲಿ ಗುರುಲಿಂಗವೆನಿಸಿಪ್ಪಿರಯ್ಯ.
ಮಣಿಪೂರಕದಲ್ಲಿ ಶಿವಲಿಂಗವೆನಿಸಿಪ್ಪಿರಯ್ಯ.
ಅನಾಹತದಲ್ಲಿ ಜಂಗಮಲಿಂಗವೆನಿಸಿಪ್ಪಿರಯ್ಯ.
ವಿಶುದ್ಧಿಯಲ್ಲಿ ಪ್ರಸಾದಲಿಂಗವೆನಿಸಿಪ್ಪರಯ್ಯ.
ಆಜ್ಞಾಯಲ್ಲಿ ಮಹಾಲಿಂಗವೆನಿಸಿಪ್ಪಿರಯ್ಯ.
ಇಂತಿವೆಲ್ಲಾ ನಾಮಂಗಳನೊಳಕೊಂಡು,
`ಓಂ ನಮಃ ಶಿವಾಯ ಇತಿಮಂತ್ರಂ ಸರ್ವಮಂತ್ರಾನ್ ಸ್ಥಾಪಯೇತ್.
ಮಂತ್ರಮೂರ್ತಿ ಮಹಾರುದ್ರಂ, ಓಂ ಇತಿ ಜ್ಯೋತಿರೂಪಕಂ’
ಎನಿಸಿಕೊಂಡು
ಬಾಹ್ಯಾಭ್ಯಂತರದೊಳು ಪರಿಪೂರ್ಣವಾಗಿ ಪ್ರಕಾಶಿಸುತ್ತಿಪ್ಪಿರಿಯಾಗಿ
ಸರ್ವಾಂಗವು ಲಿಂಗಮಯವೆಂದರಿದು
ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸುತಿಪ್ಪೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./481
ಬ್ರಹ್ಮರಂಧ್ರವೆಂ[ಬುದು]ಉತ್ತರೋತ್ತರ ಕೇತಾರವಯ್ಯ.
ಭ್ರೂಮಧ್ಯವೆಂಬ ಶ್ರೀಶೈಲ;
ಹೃದಯ ಕಮಲಕರ್ಣಿಕಾವಾಸವೆನಿಸುವ ಕಾಶಿ ಕಾಣಿಭೋ.
ಬ್ರಹ್ಮರಂಧ್ರದಲ್ಲಿ ಗುರುಸ್ವಾಯತ;
ಭ್ರೂಮಧ್ಯದಲ್ಲಿ ಲಿಂಗಸ್ವಾಯತ;
ಹೃದಯಕಮಲಕರ್ಣಿಕಾವಾಸದಲ್ಲಿ ಪರಮ ಜಂಗಮಲಿಂಗಸ್ವಾಯತ.
ಈ ಲಿಂಗಗಳು ಇದ್ದಲ್ಲಿಯೇ ಸಮಸ್ತ ಲಿಂಗಂಗಳಿರ್ಪವು.
ಅಲ್ಲಿಯೇ ಸಮಸ್ತ ತೀರ್ಥಯಾತ್ರೆಗಳಿಪ್ಪವು.
ಸಮಸ್ತ ಕ್ಷೇತ್ರಂಗಳು ಅಲ್ಲಿಯೇ ಇಪ್ಪವು.
ಗತಿಪಥ ಮುಕ್ತಿಯೂ ಅಲ್ಲಿಯೇ ಇಪ್ಪವು.
ಹೀಂಗೆ ತನ್ನ ಒಳಹೊರಗೆ ಭರಿತವಾಗಿಪ್ಪ ಲಿಂಗವ
ತಾ ಕುರುಹನರಿಯದೆ,
ಅನ್ಯಲಿಂಗದಲ್ಲಿ ವರವ ಹಡದೆನೆಂಬ ಕುನ್ನಿಗಳನೊಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./482
ಬ್ರಹ್ಮವೆನಲು ಪರಬ್ರಹ್ಮವೆನಲು
ಪರಮನೆನಲು ಪರಮೇಶ್ವರನೆನಲು
ಪರಮಾತ್ಮನೆನಲು ಪರತತ್ವವೆನಲು
ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು
ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು.
ಪರಶಿವನೆಂದರೆ ಪರಮಾತ್ಮ.
ಪರಮಾತ್ಮನೆಂದರೆ ಮಹಾಲಿಂಗ.
ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು.
ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು.
ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು.
ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು.
ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು.
ಒಂದನೊಂದ ಕೂಡಿಹವು.
ಇಂತೀ ಷಟ್ಸ್ಥಲವೂ ಏಕವೆಂದರಿವುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./483
ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ
ನಿಭ್ರಾಂತನ ನೆಮ್ಮಿ ತೋರಿದ ಲೀಲಾಸೂತ್ರ ಮಾತ್ರದಿಂದ
ನೀನು ಹಲವಾದುದ ನಾನು ಕಂಡೆನಯ್ಯ.
ಲೀಲಾಸೂತ್ರ ಮಾತ್ರದ ಕಾಲ ಕಾಲ ಕೀಲನು ಕಳೆದು
ಮುನ್ನಿನ ನಿಭ್ರಾಂತನ ನೆರೆದು
ನಿತ್ಯ ನಿರಂಜನ ಶಿವಯೋಗಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./484
ಭಕ್ತ ಮಾಹೇಶ್ವರ ಪ್ರಸಾದಿಯೆಂದು
ಈ ಮೂರು ಕ್ರಿಯಾಂಗವಯ್ಯ.
ಪ್ರಾಣಲಿಂಗಿ ಶರಣ ಐಕ್ಯವೆಂದು
ಈ ಮೂರು ಜ್ಞಾನಾಂಗವಯ್ಯ.
ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು
ಈ ಮೂರು ಕ್ರಿಯಾಲಿಂಗವಯ್ಯ.
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು
ಈ ಮೂರು ಜ್ಞಾನಲಿಂಗವಯ್ಯ.
ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೆಶವ ಹೇಳಿಹೆನು.
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು
ಆ ಆರು ಕ್ರಿಯಾಂಗವು.
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು
ಲಿಂಗವಾರು ತೆರನಾಗಿಪ್ಪುದಯ್ಯ.
ಇನ್ನು ಸಂಗವಾರು ತೆರನದೆಂತೆಂದಡೆ:
ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು
ಸಂಗವಾರು ತೆರನಾಗಿಪ್ಪುದಯ್ಯ.
ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ;
ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ;
ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ.
ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ
ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ.
ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ:
ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ
ಆ ಆರು ಪ್ರಾಣಾಂಗಗಳು.
ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧಲಿಂಗವು
ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು
ಜ್ಞಾನಗಮ್ಯವಾಗಿ ಸಂಗದನುವನರಿದು
ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ.
ಹಿಂದೆ ಹೇಳಿದ ಕ್ರಿಯಾಂಗವಾರು
ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು.
ಈ ಉಭಯಾಂಗವು ಲಿಂಗಸಂಗದಿಂದ
ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ
ನಿರುಪಮ ಮಹಿಮ ಶರಣ ತಾನೆ
ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. /485
ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ ಲಿಂಗವಾವುದು,
ಪ್ರಸಾದಿಗೆ ಲಿಂಗವಾವುದು, ಪ್ರಾಣಲಿಂಗಿಗೆ ಲಿಂಗವಾವುದು,
ಶರಣಂಗೆ ಲಿಂಗವಾವುದು, ಐಕ್ಯಂಗೆ ಲಿಂಗವಾವುದುಯೆಂದರೆ
ಈ ಲಿಂಗಸ್ಥಲಂಗಳ ಭೇದವ ಹೇಳಿಹೆನಯ್ಯ.
ಭಕ್ತಂಗೆ ಆಚಾರಲಿಂಗ.
ಮಾಹೇಶ್ವರಂಗೆ ಗುರುಲಿಂಗ.
ಪ್ರಸಾದಿಗೆ ಶಿವಲಿಂಗ.
ಪ್ರಾಣಲಿಂಗಿಗೆ ಜಂಗಮಲಿಂಗ.
ಶರಣಂಗೆ ಪ್ರಸಾದಲಿಂಗ.
ಐಕ್ಯಂಗೆ ಮಹಾಲಿಂಗವೆಂದು ಹೇಳಲ್ಪಟ್ಟಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./486
ಭಕ್ತಂಗೆ ಹಸ್ತವಾವುದು, ಮಾಹೇಶ್ವರಂಗೆ ಹಸ್ತವಾವುದು,
ಪ್ರಸಾದಿಗೆ ಹಸ್ತವಾವುದು, ಪ್ರಾಣಲಿಂಗಿಗೆ ಹಸ್ತವಾವುದು,
ಶರಣಂಗೆ ಹಸ್ತವಾವುದು, ಐಕ್ಯಂಗೆ ಹಸ್ತವಾವುದು ಎಂದರೆ,
ಈ ಹಸ್ತಂಗಳ ಭೇದವ ಹೇಳಿಹೆನಯ್ಯ:
ಭಕ್ತಂಗೆ ಸುಚಿತ್ತವೇ ಹಸ್ತ.
ಮಾಹೇಶ್ವರಂಗೆ ಸುಬುದ್ಧಿಯೇ ಹಸ್ತ.
ಪ್ರಸಾದಿಗೆ ನಿರಹಂಕಾರವೇ ಹಸ್ತ.
ಪ್ರಾಣಲಿಂಗಿಗೆ ಸುಮನವೇ ಹಸ್ತ.
ಶರಣಂಗೆ ಸುಜ್ಞಾನವೇ ಹಸ್ತ
ಐಕ್ಯಂಗೆ ಸದ್ಭಾವವೇ ಹಸ್ತ.
ಇಂತಿ ಹಸ್ತಂಗಳ ಭೇದವ ತಿಳಿವುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./487
ಭಕ್ತನಂಗವಾವುದು, ಮಾಹೇಶ್ವರನಂಗವಾವುದು,
ಪ್ರಸಾದಿಯಂಗವಾವುದು, ಪ್ರಾಣಲಿಂಗಿಯಂಗವಾವುದು,
ಶರಣನಂಗವಾವುದು, ಐಕ್ಯನಂಗವಾವುದು ಎಂದರೆ,
ಈ ಅಂಗಸ್ಥಲಗಳ ಭೇದವ ಹೇಳಿಹೆನಯ್ಯ;
ಭಕ್ತಂಗೆ ಪೃಥ್ವಿಯಂಗ.
ಮಾಹೇಶ್ವರಂಗೆ ಜಲವೆ ಅಂಗ.
ಪ್ರಸಾದಿಗೆ ಅಗ್ನಿಯೆ ಅಂಗ.
ಪ್ರಾಣಲಿಂಗಿಗೆ ವಾಯುವೆ ಅಂಗ.
ಶರಣಂಗೆ ಆಕಾಶವೆ ಅಂಗ.
ಐಕ್ಯಂಗೆ ಆತ್ಮನೆ ಅಂಗ
ಇಂತೀ ಅಂಗಸ್ಥಲಂಗಳ ಭೇದವ ತಿಳಿಯುವುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./488
ಭಕ್ತಾದ್ಯೆ ಕ್ಯಾಂತವಹ ಷಡಂಗಕ್ಕೆ
ಭಕ್ತನಂಗವೇ ಆದಿಯಾಗಿ
ಆ ಭಕ್ತಂಗೆ ಪೃಥ್ವಿಯೆ ಅಂಗವಾಗಿ
ಆ ಪೃಥ್ವಿಯ ಅಂಗವನುಳ್ಳ ಭಕ್ತನಲ್ಲಿಯೇ
ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಪ್ಪ
ಅಂಗಪಂಚಕವು ಗರ್ಭಿಕೃತವಾಗಿ
ಆ ಭಕ್ತನಂಗದಲ್ಲಿಯೇ ಆಚಾರಲಿಂಗಸ್ವಾಯತವಾಗಿ
ಆ ಆಚಾರಲಿಂಗದಲ್ಲಿಯೇ
ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗವೆನಿಸುವ
ಲಿಂಗಪಂಚಕವು ಗರ್ಭಿಕೃತವಾಗಿ
ಆಚಾರಲಿಂಗವೇ ಸರ್ವಕಾರಣವಾಗಿ
ಇಂತೀ ಷಡ್ವಿಧಲಿಂಗದಲ್ಲಿಯೇ ಬೆರಸಿ ಬೇರಿಲ್ಲದಿರಬಲ್ಲರೆ
ಭಕ್ತನೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./489
ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ,
ಮಾಹೇಶ್ವರಸ್ಥಲ ಪ್ರಸಾದಿಸ್ಥಲದಲ್ಲಡಗಿ,
ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲದಲ್ಲಡಗಿ,
ಪ್ರಾಣಲಿಂಗಿಸ್ಥಲ ಶರಣಸ್ಥಲದಲ್ಲಡಗಿ,
ಶರಣಸ್ಥಲ ಐಕ್ಯಸ್ಥಲದಲ್ಲಡಗಿ,
ಇಂತೀಷಡಂಗಯೋಗ ಸಮರಸವಾಗಿ
ಷಡುಸ್ಥಲವ ಮೀರಿ ನಿರವಯಸ್ಥಲವನೆಯ್ದಿ,
ಆ ನಿರವಯಸ್ಥಲ ನಿರಾಳದಲ್ಲಗಿ,
ಆ ನಿರಾಳ ನಿತ್ಯನಿರಂಜನ ಪರವಸ್ತು ತಾನಾಯಿತ್ತಾಗಿ,
ಕ್ರಿಯಾನಿಷ್ಪತ್ತಿ ಜ್ಞಾನನಿಷ್ಪತ್ತಿ ಭಾವನಿಷ್ಪತ್ತಿ,
ಮಾಡುವ ಕ್ರೀಗಳೆಲ್ಲಾ ನಿಷ್ಪತ್ತಿಯಾಗಿ,
ಅರಿವ ಅರುಹೆಲ್ಲಾ ಅಡಗಿ,
ಭಾವಿಸುವ ಭಾವವೆಲ್ಲ ನಿರ್ಭಾವವಾಗಿ,
ನಿರ್ಲೆಪಕ ನಿರಂಜನ ವಸ್ತು ತಾನು ತಾನಾದಲ್ಲದೆ,
ಧ್ಯಾನಿಸಲಿಕೇನೂ ಇಲ್ಲ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ,
ಷಟ್ಸ್ಥಲಜ್ಞಾನಸಾರಾಯಸ್ವರೂಪನೆಂದು
ಹೇಳಲ್ಪಟ್ಟನು./490
ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು,
ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು,
ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು,
ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ.
ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು
ಅನಂತ ಹಿರಿಯರ ನುಂಗುವದ ಕಂಡು,
ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ
ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./491
ಭರಿತಬೋನ ಭರಿತಬೋನವೆಂದು
ಒಂದೆ ವೇಳೆ ಬಾಚಿಸಿಕೊಂಡು
ಲಿಂಗಕ್ಕೆ ಕೊಟ್ಟೆವು ಲಿಂಗಪ್ರಸಾದವಾಯಿತ್ತೆಂದು
ಬಿಗಿಬಿಗಿದು ಕಟ್ಟಿಕೊಂಡು
ಮತ್ತೊಂದು ಪದಾರ್ಥ ಬಂದರೆ ಲಿಂಗವ ಬಿಡಲಮ್ಮರಯ್ಯ.
ಆ ಪದಾರ್ಥವ ಕಂಡು ಮನದಲ್ಲಿ ಬಯಸಿ
ಕುದಿಕುದಿದು ಕೋಟಲೆಗೊಂಡು ಹಲ್ಲು ಬಾಯಾರುತ್ತಿಪ್ಪರಯ್ಯ.
ಅದೇಕೆ ಲಿಂಗವ ಬಿಡಲಮ್ಮಿರಿ ಕೈಯೇನು ಎಂಜಲೆ?
ಕೈಯೆಂಜಲಾದಂಗೆ ಬಾಯೆಲ್ಲಾ ಎಂಜಲು.
ಬಾಯೆಂಜಲಾದವಂಗೆ ಸರ್ವಾಂಗವೆಲ್ಲಾ ಎಂಜಲು.
ಎಂಜಲಂದರೆ ಅಮೇಧ್ಯ.
ಅಮೇಧ್ಯದ ಮೇಲೆ ಲಿಂಗವ ಧರಿಸಿಪ್ಪಿ[ರೇನು] ಹೇಳಿರಣ್ಣ?
ಈ ಸಂದೇಹಿಭ್ರಾಂತಿಯ ಕೈವಿಡಿಯಲೊಲ್ಲರು ನಿಮ್ಮಶರಣರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./492
ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು,
ಕಾಣಬಾರದೆಯಿದ್ದ ಕಣ್ಣಿಂಗೆ ಜ್ಞಾನವೆಂಬ ಅಂಜನವನೆಚ್ಚು
ಶಿವಪಥವಿದೆಂದು ತೋರಿಸಿದ ಸದ್ಗುರುದೇವಂಗೆ
ನಮೋನಮೊಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./493
ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ
ಜಗಂಜ್ಯೋತಿಯ ಕಂಡೆನಯ್ಯ.
ಅದು ಹಗಲಿರುಳನರಿಯದೆ ಜಗಜಗಿಸುತ್ತಿದ್ದುದು ನೋಡಾ.
ಜಗಂಜ್ಯೋತಿಯ ಬೆಳಗಿನೊಳಗೆ
ಅಗಣಿತ ಮಹಿಮನಿದ್ದಾನೆ ನೋಡಾ.
ಆ ಅಪ್ರಮಾಣಲಿಂಗದೊಳಗೆ ನಾನಿರ್ದೆನು ಕಾಣಾ.
ಅನುಪಮ ಮಹಿಮ
ಮಹಾಲಿಂಗಗುರು ಶಿವಸಿದ್ಧೇಶ್ವರಾಯೆಂಬುದಕ್ಕೆ
ತೆರಹಿಲ್ಲ ನೋಡಿರೇ./494
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ,
ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ
ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ
ಇರುವುದಕ್ಕೆಯಿಂಬುಗಾಣದವಂಗೆ,
ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ,
ನಮೋನಮೋಯೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./495
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ
ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ
ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ
ಇರುವುದಕ್ಕೆಯಿಂಬುಗಾಣದವಂಗೆ
ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ
ನಮೋನಮೊಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./496
ಭಾವ ಮನಕ್ಕೆ ಲಿಂಗವ ಧರಿಸಿ ಕಾಯಕ್ಕೆ ಲಿಂಗವಿಲ್ಲದಿರಬಹುದೇ?
ಎರಡಂಗ ಭಕ್ತರಾಗಿ, ಒಂದಂಗ ಭವಿಯಾಗಿಪ್ಪ
ಭ್ರಾಂತರ ಮುಖವ ನೋಡಲಾಗದು.
ತನು ಮನ ಭಾವದಲ್ಲಿ ಲಿಂಗವ ಧರಿಸಿ
ಲಿಂಗತ್ರಯಕ್ಕೆ ಅಂಗತ್ರಯಕ್ಕೆ ಅಗಲಿಕೆಯಿಲ್ಲದೆ
ಅಚಲಿತನಾಗಿರ್ದೆನಯ್ಯಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./497
ಭೂತಗ್ರಾಮದಲ್ಲಿ ಪಾತಕದ ಕಿಚ್ಚು ಹುಟ್ಟಿ
ಪಂಚಾಗ್ನಿಯಾಗಿ ಸರ್ವರ ಘಾತಿಸುತ್ತ ಘರ್ಜಿಸುತ್ತಿದ್ದಿತ್ತು ನೋಡಾ.
ಪಂಚಬ್ರಹ್ಮದ ಮುಖದಲ್ಲಿ ಪರಮಶಿಖಿ ಉದಯಿಸಲು
ಭೂತಗ್ರಾಮ ಬೆಂದು, ಪಾತಕದ ಪಂಚಾಗ್ನಿ ಕೆಟ್ಟು,
ಪಂಚಬ್ರಹ್ಮದ ಕಿಚ್ಚು ಪರಬ್ರಹ್ಮವನಪ್ಪಲು
ಪರಮ ಶಿವೈಕ್ಯವಾಯಿತ್ತು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./498
ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ
ಶಿಲೆಯನೆಂತು ಲಿಂಗವೆಂದೆಂಬೆನಯ್ಯ?
ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ.
ಶಿಲಾಲಿಖಿತವ ಕಳೆದು, ಕಳಾಭೇದವನರಿದು
ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ;
ಕೊಂಡಾತ ಶಿಷ್ಯನೆಂಬೆನಯ್ಯ
`ಯಥಾ ಕಲಾ ತಥಾ ಭಾವೋ| ಯಥಾ ಭಾವಸ್ತಥಾ ಮನಃ||
ಯಥಾ ಮನಸ್ತಥಾ ದೃಷ್ಟಿ| ರ್ಯಥಾ ದೃಷ್ಟಿಸ್ತಥಾ ಸ್ಥಲಂ||’
ಎಂದುದಾಗಿ
ಈ ಭೇದವನರಿಯದೆ
ಇಷ್ಟವ ಮಾರುವಾತಂಗೂ ಕೊಂಬಾತಂಗೂ
ನಾಯಕನರಕ ತಪ್ಪದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./499
ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು
ಭೂತದೇಹಿಗಳ ಕೈಯಲ್ಲಿ ಕೊಟ್ಟು
ಕೊಟ್ಟ ಕೂಲಿಯ ತಕ್ಕೊಂಡು, ಹೊಟ್ಟೆಯ ಹೊರೆವ ಭ್ರಷ್ಟರಿಗೆ
ಪ್ರಸಾದವೆಲ್ಲಿಯದೋ?
`ನಾದಂ ಲಿಂಗಮಿತಿ ಜ್ಞೇಯಂ| ಬಿಂದು ಪೀಠಮುದಾಹೃತಂ||
ನಾದ ಬಿಂದುಯುತಂ ರೂಪಂ| ಲಿಂಗಾಕಾರಮಿಹೋಚ್ಯತೇ||’
ಎಂದುದಾಗಿ
ಇಷ್ಟಲಿಂಗದಾದಿಯನಿವರೆತ್ತ ಬಲ್ಲರು?,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./500