Categories
ವಚನಗಳು / Vachanagalu

ದಾಸೋಹದ ಸಂಗಣ್ಣನ ವಚನಗಳು

ಅಂಗದಲ್ಲಿ ಲಿಂಗ ವೇಧಿಸಬೇಕೆಂಬಲ್ಲಿ
ಅಂಗಕ್ಕೂ ಲಿಂಗಕ್ಕೂ ಏನು ಸಂಬಂಧ?
ಅಂಗದ ಮೇಲೆ ವಿಷವ ತೊಡೆಯಲಿಕ್ಕಾಗಿ
ಚರ್ಮ ಹಿಂಗದೆ ಆತ್ಮಂಗೆ ಲಹರಿ ಕೊಂಡುದುಂಟೆ?
ಇಂತೀ ಅಂಗ ಲಿಂಗದಲ್ಲಿ ಅರ್ಚನೆ ಆವರಿಸಿ ಆತ್ಮಸ್ಥಿರೀಕರಿಸಿ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./1
ಅಗ್ನಿಯ ಕಳೆ ಐದು ಗುಣ, ಜ್ಯೋತಿಯ ಕಳೆ ಹಲವು ಗುಣ.
ರತ್ನದ ಕಳೆ ನವಗುಣ, ಚಿತ್ತದ ಕಳೆ ವಿಶ್ವತೋಮುಖ.
ಸುಚಿತ್ತದ ಕಳೆ ಏಕಜ್ಯೋತಿಯಾಗಿಪ್ಪುದ ತಿಳಿದು
ಇಷ್ಟದ ಲಕ್ಷ ್ಯದಲ್ಲಿ ಬೈಚಿಟ್ಟಾತ ಪ್ರತ್ಯಕ್ಷ ಪರಮಸುಖಿ.
ಮತ್ರ್ಯ ಕೈಲಾಸವೆಂಬ ಗುಟ್ಟಿನ ಕೊಳಕಿಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮಧುಕೇಶ್ವರನು./2
ಅಡುವ ಮಡಕೆಯ ತೋರಿ ಶಿಶುವಿನ ಹಸುವಅಡಗಿಸುವವಳಂತೆ,
ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ
ಹಸುಳೆಯ ಅಡಗಿಸುವವಳಂತೆ,
ಎನ್ನ ಗಸಣಿಗಾರದೆ ಗುರುಚರವೆಂಬ ಬರಿಯ ಇರವ ತೋರಿ,
ನೀನು ಎಲ್ಲಿ ಅಡಗಿದೆ? ನಿನ್ನ ಕುರುಹ ತ್ರಿವಿಧದಲ್ಲಿಯೂ ಕಾಣೆ.
ಅದು ನಿನ್ನ ಗನ್ನವೊ? ಎನ್ನ ವಿಶ್ವಾಸದ ಹೀನವೊ?
ಉಭಯವೂ ನಿನ್ನ ಕೇಡು.
ಆಳಿನ ಅಪಮಾನ ಆಳ್ದಂಗೆ ತಪ್ಪದು.
ನೀನೆ ಕೆಡುವೆ, ನಿನ್ನೊಳಗೆ ಮುನ್ನವೆ ನಾ ನಷ್ಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./3
ಅತ್ತಲಿಂದ ಬಂದವನ ಇತ್ತಳವ ಕಂಡು,
ಇತ್ತಲಿಂದ ಹೋದವನ ಅತ್ತಳವ ಕಂಡು,
ಇದೆತ್ತಣ ಸುದ್ದಿಯೆಂದು ನಾ ಕೇಳಲಾಗಿ,
ಕತ್ತೆ ಸತ್ತಿತ್ತು, ಕುದುರೆ ಹರಿಯಿತ್ತು,
ಬೇಹಾರ ನಷ್ಟವಾಯಿತ್ತು.
ಮಧುಕೇಶ್ವರಲಿಂಗವೇ ಎಂದು ಬಾಯಾರುವ ಚಿತ್ತ
ಬಟ್ಟಬಯಲಾಯಿತ್ತು/4
ಅಪ್ಪುಮಯದಿಂದಾದ ಶರೀರ ಹುಟ್ಟುವಲ್ಲಿ
ಅಪ್ಪು ಕೊಡನೊಡೆದು ಉತ್ಪತ್ಯವಾದುದು ಪಿಂಡದ ಭೇದ.
ಆ ಪಿಂಡ ನಷ್ಟವನೆಯ್ದುವಲ್ಲಿ ಉಂಗುಷ್ಪ ಮುಂತಾದ ಅಡಿತೊಡೆಗಳಲ್ಲಿ
ಅಪ್ಪು ಆವರ್ಜಿಸಿ ಚೇತನ ನಷ್ಟವಾಗಿ,
ಇದು ದೃಷ್ಟ ಪಿಂಡದಿ ಮರಣ.
ಈ ಉಭಯದ ಜನನ ಮರಣವ ತಾನರಿತು,
ಜಗದಂತೆ ಹುಟ್ಟದೆ ಜಗದಂತೆ ಹೊಂದದೆ,
ಶ್ರೀಗುರುವಿನ ಕರಕಮಲದಲ್ಲಿ ಅಂತಃಕರಣ ಆನಂದ
ಅಶ್ರುಜಲ ಉಣ್ಮಿ,
ಹುಟ್ಟಿದ ಪಿಂಡ ಗುರು ಕರಜಾತ.
ಇಂತಪ್ಪ ಲಿಂಗಮೂರ್ತಿ ಧ್ಯಾನದಿಂದ ಬೆಳೆದು,
ತ್ರಿವಿಧ ಪ್ರಸಾದವ ಸ್ವೀಕರಿಸಿ
ಸರ್ವಜ್ಞಾನ ಸಂಪನ್ನನಾಗಿ ಪಿಂಡದ ಅಳಿವನರಿವಲ್ಲಿ
ಸಂಚಿತದ ಸುಖ, ಪ್ರಾರಬ್ಧದ ಶಂಕೆ, ಆಗಾಮಿಯ ಆಗು
ಇಂತೀ ತ್ರಿವಿಧ ಭೇದವ ಕಂಡು
ತ್ರಿವಿಧ ಮಲಕ್ಕೆ ಮನವನಿಕ್ಕದೆ ಇವು ಮುನ್ನ ತನ್ನವಲ್ಲ,
ಇನ್ನು ನನ್ನವಲ್ಲ ಎಂಬುದ ತಿಳಿದು,
ಸತಿ-ಸುತ-ಪಿತ-ಜನನಿ-ಬಂಧು ಮುಂತಾದ ವರ್ಗಂಗಳನರಿತು,
ಇವು ತಾವು ಬಟ್ಟೆಯೆಂಬುದು ತಿಳಿದು ಲೌಕಿಕಕ್ಕೆ ಮನವಿಕ್ಕದೆ,
ಆತ್ಮಂಗೆ ಉಚಿತ ವೇಳೆ ಬಂದಲ್ಲಿ
ಗುರುವಿನಲ್ಲಿ ವಿಶ್ವಾಸ, ಲಿಂಗದಲ್ಲಿ ಮೂರ್ತಿಧ್ಯಾನ,
ಜಂಗಮದಲ್ಲಿ ಪ್ರಸನ್ನ ಪ್ರಸಾದವ ಕೈಕೊಂಡು,
ಹುಸಿಯ ಮೃತ್ತಿಕೆಯಲ್ಲಿ ಸರಳು ಸುರಿದಂತೆ,
ತನ್ನ ಇಷ್ಟದಲ್ಲಿ ಚಿತ್ತ ಹೊರೆಯಿಲ್ಲದೆ ಹರಿದು,
ಎರವಿಲ್ಲದೆ ಕೂಡಿ ಬೆರೆದುದೆ ಸಾವಧಾನಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./5
ಅಪ್ಪುವಿನ ಉತ್ಕಟದ ಮಣಿಯಂತೆ
ಚಿತ್ರದ ಎಸುಗೆಯ ಲಕ್ಷಣದಂತೆ
ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ
ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ
ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ
ಇದು ಕ್ರಿಯಾಪಥ ಮುಕ್ತನ ಭೇದ.
ಅರಿದು ಮರೆದವನ ಚಿತ್ತದ ಗೊತ್ತು.
ಷಟ್ಕರ್ಮ ವಿರಕ್ತನ ನಷ್ಟ,
ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ;
ನಿರುತ ಸ್ವಯ ಸಂಗದ ಕೂಟ,
ಈ ಗುಣ ಸಾವಧಾನಿಯ ಬೇಟ,
ಸರ್ವಾಂಗಲಿಂಗಿಯ ಕೂಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./6
ಅರಿಕೆ ಉಳ್ಳನ್ನಕ್ಕ ಅರಿವು,
ಅರಿವು ಉಳ್ಳನ್ನಕ್ಕ ಕುರುಹು,
ಕುರುಹು ಉಳ್ಳನಕ್ಕ ಸತಿ್ಕೃ ಮಾರ್ಗಂಗಳು.
ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು.
ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ
ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ,
ಇದು ನಿಜವಸ್ತುವಿನ ವಸ್ತುಕ.
ಈ ಗುಣ ನಿರ್ಭಾವ ಭಾವವಾದ ಸಂಬಂಧ.
ಇದು ವರ್ತಕ ಭಕ್ತಿಯ ಭಿತ್ತಿ.
ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./7
ಅರ್ಪಿತವಾದುದು ಮುಟ್ಟದೆ,
ಅನರ್ಪಿತದಲ್ಲಿ ಮುಟ್ಟನರಿದು,
ದೃಷ್ಟವ ಕಂಡು ಅರ್ಪಿಸುತ
ಕಾಯದಿಂದ ಬಂದ ಕರ್ಮಾರ್ಪಿತ,
ಭಾವದಿಂದ ಬಂದ ಭೇದಸ್ವರೂಪು,
ಇಂತೀ ಕಾಯವ ಜೀವನರಿದಲ್ಲಿ ದೃಷ್ಟ ತನ್ನಷ್ಟವಾದುದು
ಉಭಯ ಅರ್ಪಿತದ ದೃಷ್ಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./8
ಆತ್ಮಂಗೆ ಜೀವ ಪರಮನೆಂದು ವಿಭೇದವ ತಿಳಿವಲ್ಲಿ
ಆ ಅರಿವಿಂಗೆ ಆವ ಠಾವಿನ ಕುರುಹು?
ಸಂಪುಟದ ಘಳಿಗೆಯಂತೆ ಮಡಿಕೆಯ ಭೇದ.
ಜೀವ ಪರಮನ ಉಭಯದ ಯೋಗ.
ಮುಕುರದ ಒಳ ಹೊರಗಿನಂತೆ ಘಟವೊಂದು.
ದ್ರವ್ಯವೇಕವ ಮಾಡುವ ಕುಟಿಲದಿಂದ ಉಭಯ ಭಿನ್ನವಾಯಿತ್ತು.
ಈ ಗುಣ ಜೀವ ಪರಮನ ನೆಲೆ.
ಇದಾವ ಠಾವಿನ ಅಳಿವು ಉಳಿವು?
ಈ ಗುಣವ ಭಾವಿಸಿ ತಿಳಿದಲ್ಲಿ ಸ್ವಾನುಭಾವ ಸಂಗ
ಸಾವಧಾನದ ಕೂಟ, ಜ್ಞಾನನೇತ್ರ ಸೂತ್ರ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./9
ಆತ್ಮನು ಘಟದಲ್ಲಿದ್ದ ಸೂತ್ರವ ಯೋಗಿಗಳು ಭೇದಿಸಿ ಕಂಡು
ಧ್ಯಾನ ಧಾರಣ ಸಮಾಧಿಯಿಂದ ಆತ್ಮನ ಕಟ್ಟುವಡೆದನೆಂದು
ನುಡಿದ ದಿಟ್ಟರ ನೋಡಾ.
ಆತ್ಮ ಕಟ್ಟುವಡೆದ ಮತ್ತೆ ನಿಧಾನಿಸುವುದೇನು ಧಾರಣದಲ್ಲಿ?
ಎಡೆ ತಾಕುವದೇನು ಸಮಾಧಿಯಲ್ಲಿ?
ಸಮಾಧಾನದಿಂದ ಸಮಾಧಿಯಲ್ಲಿಪ್ಪುದೇನು ಎಂಬುದ ತಾನರಿತಲ್ಲಿ
ಯೋನಿಯ ಯೋಗವೆನಲೇತಕ್ಕೆ?
ಈಡಾ ಪಿಂಗಳವೆಂಬ ಎರಡು ದಾರಿಯಲ್ಲಿ
ಸುಷುಮ್ನಾನಾಳಕ್ಕೆ ಏರಿದ ಮತ್ತೆ
ಆತ್ಮನು ಮತ್ತೆ ಮತ್ತೆ ನಾಡಿನಾಡಿಗಳಲ್ಲಿ ದ್ವಾರದ್ವಾರಂಗಳಲ್ಲಿ
ಭೇದಿಸಿ ವೇದಿಸಲೇತಕ್ಕೆ?
ಬೀಜದ ತಿರುಳು ಸತ್ತ ಮತ್ತೆ
ಎಯ್ದೆ ನೀರಹೊಯ್ದಡೆ ಸಾಗಿಸಿ ಬೆಳೆದುದುಂಟೆ?
ಆತ್ಮಯೋಗಿಯಾದಲ್ಲಿ ನೇತ್ರ ಶ್ರೋತ್ರ ಘ್ರಾಣ ತ್ವಕ್ಕು ಜಿಹ್ವೆ
ಎಂದಿನ ನಿಹಿತದಂತೆ ಆಡಬಹುದೆ?
ಅದು ಯೋಗವಲ್ಲ, ಇವ ಕಲಿತೆಹೆನೆಂಬ ಬಲು ರೋಗವಲ್ಲದೆ,
ಇದು ಮೀಸಲುಗವಿತೆ, ಇದು ಘಾತಕರುಗಳಿಗೆ ಅಸಾಧ್ಯ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./10
ಆರುಸ್ಥಲ ವರ್ಣಿಸುವಲ್ಲಿ
ಭಕ್ತಂಗೆ ಮಾಹೇಶ್ವರಂಗೆ ಪ್ರಸಾದಿಗೆ ಪ್ರಾಣಲಿಂಗಿಗೆ ಶರಣಐಕ್ಯಂಗೆ.
ಸ್ಥಲವಾರು ಲಿಂಗವೊಂದೆ; ವರ್ಣವಾರು ಪಟವೊಂದೆ;
ಅಕ್ಷರವಾರು ಬೀಜವೊಂದೆ; ದಳವಾರು ಆತ್ಮವೊಂದೆ.
ಇಂತೀ ಭೇದಂಗಳು ಭಿನ್ನವಾಗಿ; ನಿಚ್ಚಣಿಗೆಯ ಮೆಟ್ಟಿನಂತೆ,
ಮೊದಲು ತುದಿಯಾದಿಯಾಗಿ ತುದಿಕಡೆಯಾದಿಯಾಗಿ
ಎಡೆತಾಕುವ ತೆರದಂತೆ, ಸ್ಥಲವೆರಡು ಆಚರಣೆ ನಾಲ್ಕು.
ಇಂತೀ ಭೇದವಾರರಲ್ಲಿ ಷಡುಸ್ಥಲ ಸಂದು,
ಸಂಗನ ಬಸವಣ್ಣ ಚನ್ನಬಸವಣ್ಣನಿಂದ
ಪ್ರವಾಹವಾಗಿ ಭಕ್ತಿ ರೂಪಾಯಿತ್ತು.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./11
ಆಹಾ ಆಶ್ಚರಿಯವೆಂಬುದಕ್ಕೆ ಮುನ್ನವೆ,
ಹೋ ಹೋ ಹೋಯಿತ್ತೆಂಬುದಕ್ಕೆ ಮುನ್ನವೆ,
ನಿಜವಸ್ತುವಿನ ಠಾವನರಿದು ವ್ಯವಧಾನದಿಂದ
ಸಾವಧಾನ ಸಂಬಂಧಿ ತಾನೆ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./12
ಇಂತೀ ಪಿಂಡಸ್ಥಲ ಪಿಂಡಜ್ಞಾನಸ್ಥಲ ಜ್ಞಾನ ಉದಯ ಸ್ಥಲ
ಜ್ಞಾನ ದಿವ್ಯ ಪರಿಪೂರ್ಣಸ್ಥಲ.
ಈ ಗುಣ ಸಂಗನಬಸವಣ್ಣನ ಕ್ರೀ, ಚನ್ನಬಸವಣ್ಣನ ಜ್ಞಾನ,
ಪ್ರಭುದೇವರ ಅರಿವು, ನಿಜಗುಣನ ನಿಃಕಲ,
ಅಜಗಣ್ಣನ ಐಕ್ಯ, ಸಿದ್ಧರಾಮತಂದೆಯ ಶ್ರದ್ಧೆ,
ಮರುಳಶಂಕರನ ನಿಜ, ಘಟ್ಟಿವಾಳಯ್ಯನ ದಿಟ್ಟತನ,
ಅಕ್ಕಗಳ ಪರಮ ನಿರ್ವಾಣ
ಇಂತೀ ಪ್ರಮಥಶಕ್ತಿ ಭಕ್ತಿಯೊಳಗಾದ
ಶರಣಸಂಕುಳಕ್ಕೆ ನಮೋನಮಃ ಎಂಬೆನು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./13
ಇಷ್ಟಲಿಂಗಪ್ರಾಣಿಗಳೆಂದು ಅರ್ಚಿಸಿ ಪೂಜಿಸಿ ಮತ್ತೆ,
ನಿಜವಸ್ತು ಬೇರುಂಟೆಂದು ಆತ್ಮಂಗೆ ಗೊತ್ತ ಬೇರೆ ಅರಸುವಲ್ಲಿ
ಇಷ್ಟಲಿಂಗದ ವಿಶ್ವಾಸ ಇತ್ತಲೆ ಉಳಿಯಿತ್ತು.
ಆ ಗುಣ ವರ್ತನ ಹಾನಿ ಗುರುಕೊಟ್ಟ ವಸ್ತುವಿಗೆ ದೂರ,
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./14
ಈ ಸಂಸರ್ಗದಲ್ಲಿ ಹುಟ್ಟಿದ ಶಿಶುವೆಂದು
ಮಾಯಾಮೋಹದಿಂದ ಲಾಲಿಸಿ,
ಸಕಲ ಸುಖಭೋಗಂಗಳಲ್ಲಿ ಪಾಲಿಸಿ,
ವಸ್ತು ವಸ್ತ್ರ ಮುಂತಾದ ರತ್ನಮೌಕ್ತಿಕಂಗಳ ಗಳಿಸಿ
ನಿಕ್ಷೇಪಿಸಿಪ್ಪವರಿಂದ ಕಡೆಯೆ?
ತನ್ನ ಕರಕಮಲದಲ್ಲಿ ಹುಟ್ಟಿದ ಶಿಶುವಿಂಗೆ
ಶಿವಜ್ಞಾನದಿಂದ ಬಂದ ಶಿಷ್ಯಂಗೆ
ಶಿವಶ್ರದ್ಧೆ ಮೋಹ ಹೀಗಿರಬೇಕು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮಧುಕೇಶ್ವರನು/15
ಉಪೇಕ್ಷೆಯುಳ್ಳನ್ನಕ್ಕ ಭಕ್ತನಲ್ಲ,
ಹಿತಶುತ್ರುವಾಗಿಹನ್ನಕ್ಕ ಮಾಹೇಶ್ವರನಲ್ಲ.
ಪರದ್ರವ್ಯಭಕ್ಷಿತ ಪ್ರಸಾದಿಯಲ್ಲ.
ಪ್ರಜ್ಞಾಹೀನ ಪ್ರಾಣಲಿಂಗಿಯಲ್ಲ.
ಕುಚಿತ್ತ ಅಪಸರೆಯ ಕ್ಷಣಿಕ ಶರಣನಲ್ಲ.
ಉಪಮಾ ಭೇದ ಗುಪ್ತಪಾತಕ ಐಕ್ಯನಲ್ಲ.
ಇಂತೀ ಷಡುಸ್ಥಲಂಗಳ ಸ್ಥಾನ ವಿವರಂಗಳನರಿತು
ಸ್ಥಲನಿರ್ವಾಹಿಯಾಗಿ ತತ್ವದ ಮುಖದಿಂದ ನಿತ್ಯ ಅನಿತ್ಯವತಿಳಿದು
ಪರತತ್ವದ ಗೊತ್ತಿನಲ್ಲಿ ನಿಜ ನಿರವಯವಪ್ಪ ಆತ್ಮನಬೆಚ್ಚಂತೆ ಬೈಚಿಟ್ಟು
ತತ್ಕಾಲ ಉಚಿತವನರಿದು ಕಾಂತಿ ನಷ್ಟವಾಗಿ ಕಳವಳಿಸಿ ಕಂಗೆಡದೆ
ಕುರುಹಿನ ಲಕ್ಷ ್ಯದಲ್ಲಿ ಚಿತ್ತ ಸಮೂಹದಲ್ಲಿ ಎಚ್ಚರಿಕೆ
ನಿಜವಸ್ತುವಿನಲ್ಲಿ ಚಿತ್ತು ಲೇಪವಾದುದು
ಸಾವಧಾನ ಸಂಬಂಧಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./16
ಉರಿಯ ಗಿರಿಯಲ್ಲಿ ಕರ್ಪುರದ ತರು ಹುಟ್ಟಿ, ಉರಿ ನಷ್ಟವಾಗಿ,
ಆ ತರುವಿನಲ್ಲಿ ಬೆಂಕಿಯ ಹಣ್ಣು ಹುಟ್ಟಿ,
ಅಪ್ಪುವಿನ ಪಕ್ಷಿ ಬಂದು ಮೆಟ್ಟಿ ಕುಟುಕಲಾಗಿ,
ಆ ಹಣ್ಣಿನ ತೊಟ್ಟಿನೊಳಡಗಿತ್ತು ಹಕ್ಕಿ.
ಮಧುಕೇಶ್ವರಲಿಂಗ ಎತ್ತ ಹೋದನೆಂದರಿಯೆ./17
ಎಂಟು ಯೋಗ ಆರು ಭೇದ ಮೂರು ಬಟ್ಟೆ ಐದು ಮುಟ್ಟು
ಈರೈದು ಹಾದಿ ಹದಿನಾರು ಸಂಗ ನಾಲ್ಕು ಮೆಟ್ಟು ಎರಡುಸಂಚಾರ
ಒಂದರ ಕಟ್ಟಿನಲ್ಲಿ ಮುಟ್ಟುಮಾಡಿ ನಿಲಿಸಿ,
ದೃಷ್ಟದ ಇಷ್ಟದಲ್ಲಿ ಬೈಚಿಟ್ಟು,
ಅವರವರ ಸ್ವಸ್ಥಾನದ ಕಟ್ಟಣೆಯಲ್ಲಿ ವಿಶ್ರಮಿಸಿ
ಆ ಚಿತ್ತವ ಆ ಚಿತ್ತು ಒಡಗೂಡಿ ಇಪ್ಪುದೆ ಕ್ರಿಯಾಪಥಲಿಂಗಾಂಗಯೋಗ.
ಇದನರಿಯದೆ ಮಾಡುವ ಯೋಗವೆಲ್ಲವೂ ತನ್ನಯ ಭವರೋಗ,
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./18
ಏತರ ದೊಣ್ಣೆಯಲ್ಲಿ ಹೊಯ್ದಡೂ ಪೂಸನಪ್ಪನು.
ಆವ ಪರಿಯಲ್ಲಿ ಸವೆದು ಮಾಡಿದಡೂ ವಸ್ತುವಿಗೆ ಲೇಸಪ್ಪುದು.
ಶ್ವೇತನ ಪುಷ್ಪದಂತೆ, ಭಾಸುರನ ಕಿರಣದಂತೆ,
ಪರುಷ ಕ್ರೋಧದಿಂದ ಉರವಣೆಯಲ್ಲಿ ಲೋಹವ ಬೆರಸಿದಂತೆ,
ಕ್ಷುಧೆ ಅಡಸಿದವಂಗೆ ಪಾಲ್ಗಡಲ ತಡಿಯಲ್ಲಿ ತಳಿದವನಂತೆ,
ಆವ ಪರಿಯಲ್ಲಿ ಸವೆದಡೂ ವಸ್ತು ಭಾವಕೆಂದಲ್ಲಿ ಶಿವಾರ್ಪಣ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./19
ಕಂಡ ಮತ್ತೆ ಕಂಡುದ ಕಾಣುವುದಕ್ಕೆ ಮುನ್ನವೇ ಕಾಣದುದ
ಉಭಯ ದೃಷ್ಟವ ಕಡೆಗಾಣಿಸಿ ಕಂಡುದ ಕಾಣದಲ್ಲಿ ಎಯ್ದಿಸಿ
ಕಾಣದುದ ಕಂಡಲ್ಲಿ ನಿಕ್ಷೇಪಿಸಿ
ಅದು ಉರಿ ಕರ್ಪುರದ ಇರವಿನಂತೆ ಆದುದು ಇಷ್ಟಲಿಂಗ
ಆತ್ಮದೃಷ್ಟಕೂಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./20
ಕಂಡಡೇನು ನುಡಿ ಅಡಗಿದ ಮತ್ತೆ
ವಾಚಾರಚನೆಯನರಿಯಬಹುದೆ?
ಚಾ ಕರೆದಡೇನು, ಅನ್ಯರ ಮಾತ ಕೇಳದ ಮತ್ತೆ?
ಇಂತೀ ಕ್ರೀಯಲ್ಲಿ ವಸ್ತುಭಾವದಲ್ಲಿ ನಿಶ್ಚಯ
ಉಭಯಸ್ಥಲ ಪರಿಪೂರ್ಣ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./21
ಕಂಡುದ ಬಿಟ್ಟು ಕಾಣದುದ ಕಂಡೆಹೆನೆಂದಡೆ
ಅಂಡ ಪಿಂಡಕ್ಕೆ ಹೊರಗಾದವಂಗಲ್ಲದೆ ಸಾಧ್ಯವಲ್ಲ
ಅದು ಅಣೋರಣಿಯೊಳಗಣ ಮಹಾರೇಣು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ
ಮಾತುಳಂಗ ಮದುಕೇಶ್ವರನು./22
ಕಕ್ಷೆ ಭಕ್ತನ ಸೋಂಕು.
ಮುಖಸಜ್ಜೆ ಮಾಹೇಶ್ವರನ ಸೋಂಕು.
ಕರಸ್ಥಲ ಪ್ರಾಣಲಿಂಗಿಯ ಸೋಂಕು.
ಉತ್ತಮಾಂಗ ಶರಣನ ಸೋಂಕು.
ಅಮಳೋಕ್ಯ ಐಕ್ಯನ ಸೋಂಕು.
ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ,
ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ
ಸನ್ನದ್ಧಲಿಂಗ,
ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ
ಪರಿಪೂರ್ಣಲಿಂಗ
ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ
ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ
ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ
ಭೇದ.
ಇಂತೀ ಸ್ಥಲವಿವರ ಕೂಟಸಂಬಂಧ.
ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ
ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ,
ಹಲವು ಹೊಲಬಿನ ಪಥದಲ್ಲಿ ಬಂದಡೂ
ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು.
ಇಂತೀ ಸ್ಥಲವಸ್ತುನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./23
ಕಣ್ಣಿನಿಂದ ನಡೆದು, ಕಾಲಲ್ಲಿ ಮುಟ್ಟಿ ಕಂಡು
ನಾಸಿಕದ ಓಹರಿಯಲ್ಲಿ ದೇಶಿಕನಾಗಿ,
ಕರ್ಣದ ನಾದದಲ್ಲಿ ಗರ್ಭವುದಿಸಿ,
ನಾಲಗೆಯ ತೊಟ್ಟಿಲಲ್ಲಿ ಮರೆದೊರಗಿ
ಅರಿವುತ್ತ ಕರದ ಕಮ್ಮಟದಲ್ಲಿ ಬೆಳೆವುತ್ತ ನಲಿವುತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./24
ಕರಣಂಗಳ ನಿವೃತ್ತಿಯ ಮಾಡಿ ಲಿಂಗವ ಕಂಡೆಹೆನೆಂಬಲ್ಲಿ
ಮುಂದೆ ಅರಿದು ಕಾಣಿಸಿಕೊಂಬ ಕುರುಹು ಅದೆಂತುಟಯ್ಯಾ?
ಆ ಕರಣವೆ ಮೊದಲು ಆ ಕುರುಹು ಹಿಂಗೆ
ಆ ಕುರುಹಿಂದೆ ಇಂದ್ರಿಯಂಗಳು ಸಲೆಸಂದು,
ನೀರನಟ್ಟಿ ಮುಂದಳ ಸಾರ ಸವಿಯ ಫಲ ಭೋಗಂಗಳಬೆಳವಂತೆ,
ಇದು ಲಿಂಗವ್ಯವಧಾನಿಯ ಸಂಬಂಧ,
ಇಂದ್ರಿಯ ಲಿಂಗ ಮುಖಂಗಳಿಂದ
ಲಿಂಗ ಇಂದ್ರಿಯ ಮುಖದಿಂದ.
ಗಂಧ ಕುಸುಮದಂತೆ ಇಂದ್ರಿಯ ಕುರುಹಿನ ಭೇದ.
ಈ ದ್ವಂದ್ವ ಉಳ್ಳನ್ನಕ್ಕ ದೃಕ್ಕಿಂಗೆ ದೃಷ್ಟಿಯಿಂದ ಕಾಣಿಸಿಕೊಂಬಂತೆ
ಅರಿವು ಕುರುಹಿನ ಭೇದ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./25
ಕಾಯದ ಗುಣವನರಿಯದೆ ಕರ್ಮಯೋಗವ ಮಾಡಬಹುದೆ?
ಕರ್ಮದ ಗುಣವನರಿಯದೆ ಆತ್ಮಯೋಗವ ಮಾಡಬಹುದೆ?
ಆತ್ಮನ ಗುಣವನರಿಯದೆ ವರ್ಮಯೋಗವ ಕಾಣಬಹುದೆ?
ನೀರಿನಿಂದಲಾದ ಕೆಸರ ನೀರಿಂದಲೆ ತೊಳೆವಂತೆ,
ಮುಳ್ಳು ಮುಳ್ಳಿನಿಂದವೆ ಕಳೆವಂತೆ,
ಕರ್ಮದಿಂದ ಸತ್ಕರ್ಮ ಮರ್ಮದಿಂದ
ನಿಜಮರ್ಮ ಸೂಜಿಯ ಮೊನೆಯ ದಾರದಂತೆ
ಇದು ಲಿಂಗ ಒಡಗೂಡಿದ ಕ್ರಿಯಾಪಥಯೋಗ.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./26
ಕಾಲಿಗೆ ಕಣ್ಣು ಹುಟ್ಟಿ ಬಾಯಿ ಬಸುರಾಗಿ ಕಿವಿಯಲ್ಲಿ ಹುಟ್ಟಿ
ಕೈಯಲ್ಲಿ ಬೆಳವುತ್ತಿದೆ ನೋಡಾ ಆ ಶಿಶು!
ಉ ಎಂದಲ್ಲಿ ಉಪಮೆಗೆ ಬಾರದು,
ಉಗ್ಗೆಂದಲ್ಲಿ ಹೊಂದದು ಜಗವ.
ಅಂಬಳಿಕ್ಕುವುದಕ್ಕೆ ಮೊದಲೆ ಕಂಬಳಿಯ ಮುಸುಕಿಟ್ಟು
ಈ ತ್ರಯದ ಬೆಂಬಳಿಯಲ್ಲಿಯೆ ಲೀಯ.
ಇದು ಜ್ಞಾನಪಿಂಡೈಕ್ಯ.
ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./27
ಕಾಲು ಮೂರು, ಬಸುರು ನಾಲ್ಕು, ಕೈ ಐದು,
ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು
ಮೂವತ್ತೆರಡು.
ಇಂತೀ ಪಿಂಡಕ್ಕೆ ಐವತ್ತೊಂದು ಕಳೆ.
ಆ ಜೀವಕ್ಕೆ ಪರಮನೊಂದೆ ಕಳೆ.
ಈ ಗುಣ ಜ್ಞಾನಪಿಂಡದ ಭೇದ.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./28
ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ
ಹಿಂಗಿ ಹಿಂಗಿ ಹಿಸುಕಲುಂಟೆ?
ಗುರುತಪ್ಪುಕನ ಲಿಂಗಬಾಹ್ಯನ ಜಂಗಮನಿಂದಕನ
ಆಚಾರಭ್ರಷ್ಟನ ಜ್ಞಾನಹೀನನ
ಅರಿತು ಕಂಡು ಕೂಡಿದಡೆ,
ತನ್ನವನೆಂದು ಅಂಗೀಕರಿಸಿದಡೆ,
ಖಂಡವ ಬಿಟ್ಟು ಮತ್ಸ ್ಯಕ್ಕೆ ಹರಿದ ಜಂಬುಕನಂತೆ ಆಗದೆ?
ಸದಾಚಾರದಲ್ಲಿ ಸಂದಿರಬೇಕು.
ಕಟ್ಟಾಚಾರದಲ್ಲಿ ನಿಂದಿರಬೇಕು.
ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./29
ಕುಸುಮ ಕ್ರೀ ಗಂಧ ನಿಃಕ್ರೀಯೆಂದಲ್ಲಿ
ಕುಸುಮವನಗಲಲಿಕ್ಕಾಗಿ ಒಡಗೂಡಿದ ಗಂಧ ಹಸುಕಾಗದೆ?
ಗಂಧ ಸ್ವಯಂಭುವಾದಡೆ ಕುಸುಮವ ಹಿಸುಕಿದಲ್ಲಿಯೇ
ಒಡಲುಗೊಂಡುದು ನೊಂದಿತ್ತೆಂದು ತಾ ಸ್ವಯವಾಗಿ
ಎಂದಿನಂತಿದ್ದಿತ್ತೆ?
ಇದು ಕ್ರೀಜ್ಞಾನ ಭೇಧ, ಸ್ವಾನುಭಾವ ಶುದ್ಧ,
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./30
ಕ್ರಿಯಾಶಕ್ತಿಗೆ ಫಟ ಕ್ರೀಪತಿಯಾಗಿ
ಇಚ್ಚಾಶಕ್ತಿಗೆ ಆತ್ಮ ಸಂಬಂಧ ಪತಿಯಾಗಿ
ಜ್ಞಾನಶಕ್ತಿಗೆ ಚಿದಾದಿತ್ಯ ಚಿತ್ಪ್ರಕಾಶ ಪತಿಯಾಗಿ
ಇಂತೀ ತ್ರಿವಿಧ ಶಕ್ತಿಗೆ ಅವರವರ ತದ್ಭಾವಕ್ಕೆ
ಭಾವಾಜ್ಞನಾದೆಯಲ್ಲಾ ಭಕ್ತಿ ಕಾರಣವಾಗಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮದುಕೇಶ್ವರನು./31
ಗಂಧವ ಬಂಧಿಸಿ ಹಿಡಿದೆಹೆನೆಂದಡೆ ಆ ಗಂಧದ
ಅಂಗವಿಲ್ಲದೆ ನಿಂದುದುಂಟೆ ಸುಗಂಧ?
ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ
ಸಂಧಿಸುವುದು?
ಇದು ಲಿಂಗಾಂಗಿಯ ಸಾವಧಾನ ಸಂಬಂಧ.
ನಿಳಯದ ಬಾಗಿಲು ತಿಳುವಳ.
ಲಿಂಗಮೂರ್ತಿಯ ತದ್ದಾ ್ಯನ ಶುದ್ಧ ಲೇಪವಾದುದು
ತತ್ಕಾಲ ಸಂಬಂಧಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./32
ಗುರುವನರಿದಲ್ಲಿ ಮೂರನರಿದು ಐದ ಬಿಡಬೇಕು.
ಲಿಂಗವನರಿದಲ್ಲಿ ಅರನರಿದು ಮೂರ ಬಿಡಬೇಕು
ಜಂಗಮವನರಿದಲ್ಲಿ ಮೂವತ್ತಾರನರಿದು ಇಪ್ಪತ್ತೆ ದ ಬಿಡಬೇಕು.
ಇಂತೀ ತ್ರಿವಿಧವನೊಡಗೂಡಿ,
ನಾನಾ ಸ್ಥಲಂಗಳ ಶತ ಕುರುಹಿನಲ್ಲಿ ಗತಮಾಡಿ
ಒಂದು ಎಂಬ ಸಂದೇಹ ಬಿಟ್ಟಿತ್ತು.
ಆ ಸಂದೇಹವುಂಟೆಂಬ ಸಂಧಿಯಲ್ಲಿ ಗುರುವಿಂಗೆ ಎರಡಡಿ
ಲಿಂಗಕ್ಕೆ ಮೂರಡಿ, ಜಂಗಮಕ್ಕೆ ಆರಡಿ,
ಇಂತೀ ತ್ರಿವಿಧದಲ್ಲಿ ಸ್ಥಲಂಗಳನರಿತು
ಗುರುವಿನ ಭವಪಾಶಮಂ ಕೆಡಿಸಿ, ಲಿಂಗದ ತ್ರಿವಿಧದ ಬೇರೆ ಕಿತ್ತು
ಜಂಗಮದ ಸರ್ವಸಂಗವ ಮಾಡುವ ಜಂಗುಳಿ ಜಂಘೆಯಮುರಿದು,
ಮೂರನವಗವಿಸಿ ನಿಂದ ಪರಮಭಕ್ತಂಗೆ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರಲಿಂಗಕ್ಕಿಂದತ್ತ
ನಮೋ ನಮೋ ಎನುತ್ತಿದ್ದೆನು./33
ಗುರುವಿಂಗೊಂದು ಲಿಂಗಕ್ಕೆರಡು ಜಂಗಮಕ್ಕೆ ಮೂರು ಸತಿಸಂದಲ್ಲಿ,
ಗುರು ಸತ್ತು ಲಿಂಗ ಚಿತ್ತು ಜಂಗಮ ಆನಂದವೆಂದಲ್ಲಿ,
ಹಿಂಗದವು ಮೂರು ನಿಜವಸ್ತು ಒಂದರಲ್ಲಿ.
ಆ ಒಂದು ಸಂಗನಬಸವಣ್ಣನಲ್ಲಿ ಅಡಗಿ
ಚನ್ನಬಸವಣ್ಣನಲ್ಲಿ ತಲ್ಲೀಯವಾಯಿತ್ತು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./34
ಗುರುವೈದು ಬಂದು ಮೂರು ಲಘುವಾರರಿಂದ ಹುಟ್ಟಿದಅಂಡ ಪಿಂಡ.
ಆ ಪಿಂಡದ ಪಿಂಡಕ್ಕೆ ಗುರು ಇಪ್ಪತ್ತೈದು, ಬಿಂದು ಮೂವತ್ತಾರು,
ಲಘ ಐವತ್ತೊಂದರಲ್ಲಿ ಕೂಡಿದ ನಾದವೊಂದು.
ಅದು ನೇಮಾಕ್ಷರಲೇಪ, ತ್ರಿಕರಣ ಲೊಪ, ಜ್ಞಾನಪಿಂಡವೈಕ್ಯ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./35
ಗುರುಸ್ವರೂಪನಾಗಿ ಬಂದು ಬ್ರಹ್ಮನ ಉತ್ಪತ್ಯವ ಕೆಡಿಸಿ
ಮಾಂಸಪಿಂಡವ ಕಳೆದು ಮಂತ್ರಪಿಂಡದಿಂದ ಪ್ರತಿಷ್ಠೆಯ ಮಾಡಿ
ನಾನಾ ಕ್ರೀ ವರ್ತನಕ್ಕೆ ಹೊಲಬನಿಟ್ಟುಕೊಟ್ಟು
ನಿನ್ನ ಕರಕಮಲದಲ್ಲಿ ಜ್ಯೋತಿರ್ಮಯವಪ್ಪ
ನಿನ್ನ ನಿಜಾತ್ಮದರಿವ ಆ ಕುರುಹಿನಲ್ಲಿ ಬೈಚಿಟ್ಟು
ನಿಜಲಿಂಗವ ಮಾಡಿ ಎನ್ನ ಕೈಯಲ್ಲಿ ಕೊಟ್ಟೆ.
ಆ ಲಿಂಗಸ್ವರೂಪು ನೀನಾಗಿ ಬಂದು ಹೃತ್ಕಮಲದಲ್ಲಿ ನಿಂದು
ಕರಣ ನಾಲ್ಕು ಮದವೆಂಟು ಇಂದ್ರಿಯವೈದು ವಿಷಯವಾರು
ಇಂತಿವರೊಳಗಾದ ಸರ್ವೆಂದ್ರಿಯವ ಕೆಡಿಸಿ
ತ್ರಿಗುಣಾತ್ಮಕದ ತ್ರಿಶಕ್ತಿ ಭೇದವ ತ್ರಿಮಲದ ಘೋಷವ ಕೆಡಿಸಿ
ನಿಶ್ಚಯಪದದಿಂದ ಹೃತ್ಕಮಲವಾಸಿಯಾದೆ;
ಆ ಗುಣದಿಂದ ನಾ ಸಾಫಲ್ಯನಾದೆ.
ಜಂಗಮಮೂರ್ತಿಯಾಗಿ ಬಂದು
ಎನಗೆ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರುವಾಗಿ
ಶುದ್ಧ ಸಿದ್ಧ ಪ್ರಸಿದ್ಧಮಂ ತೋರಿ
ಎನ್ನ ಭವಛೇದನಮಂ ಮಾಡಿದೆ.
ಇಂತೀ ತ್ರಿವಿಧಮೂರ್ತಿ ಭಕ್ತಿ ವಿಷಯದಿಂದ
ಬಸವಣ್ಣ ಚನ್ನಬಸವಣ್ಣಗೋಸ್ಕರವಾಗಿ ಕ್ರಿಯಾಸಂಬಂಧಿಯಾದೆ.
ಶಂಭುವಿನಿಂದಿತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./36
ಜಗಭಗದ ಊಧ್ರ್ವದಲ್ಲಿ ಮೋಹನದ ಗೊಟ್ಟಿ ಹುಟ್ಟಿತ್ತು.
ಗೊಟ್ಟಿಯ ಪೂರ್ವದಲ್ಲಿ ಕಮಲವರಳಿತ್ತು.
ಕಮಲ ಹೃತ್ಕಮಲದಲ್ಲಿ ಬಿಂದು ವ್ಯಂಜನದಿಂದ
ಗುರುಲಿಂಗ ರೂಪಾಗಿ ಪುಲ್ಲಿಂಗ ಚರಿಸಿತ್ತು.
ನಪುಂಸಕಲಿಂಗವಡಗಿತ್ತು.
ಬಿಂದುವಿನಿಂದ ನಾದ, ಆ ಸುನಾದದಿಂದ ಕಳೆ,
ಆ ಕಳೆಯ ಕಾಂತಿಯಿಂದ ಜಗ.
ಇಂತೀ ಜಗದ ಉತ್ಪತ್ಯದಲ್ಲಿ ಹುಟ್ಟದೆ ಸ್ಥಿತಿಗೊಳಗಲ್ಲದೆ
ಲಯಕ್ಕೆ ಹೊರಗಾಗಿ ಅರಿದುದು ಸ್ವಾನುಭಾವ ಸಂಬಂಧ
ಇದು ಪಿಂಡ, ಪಿಂಡಜ್ಞಾನ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./37
ಜಲವ ಕಾಣದ ಬೋದನಂತೆ
ನೋಡುತ್ತ ಗರಿಯ ಹಿಡಿದ ಅಂಟಿನಂತೆ
ಹಿಡಿದೊಡವೆಯ ಬಿಡಲಾರದೆ ಬೇವುತ್ತ
ಅಡಿವಜ್ಜೆಯ ಮೆಟ್ಟಿ ಬಿಡಲಾರದೆ ಅಡಿಗಡಿಗೆ ಎಡತಾಕುತ್ತ
ಕೂಪರ ಕೈಯಿಂದ ಘಾತಕತನದಿಂದ ವ್ಯಾಪರಿಸುತ್ತ
ಸುಡು ಅದೇತರ ವಿರಕ್ತಿ!
ಮಾತಿನ ಮಾಲೆಯ ಪೂಸತ್ವ!
ಇದ ನಿಹಿತಲಿಂಗಾಂಗಿಗಳೊಪ್ಪರು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./38
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ
ಕಟ್ಟಳೆಯ ವರುಷಕ್ಕೆ ತಪ್ಪದೆ
ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು
ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು
ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ
ಅವು ಬಾರದಿರೆ ತಾ ಸಂಧಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ
ಗುರುಸ್ಥಲ ಎಂದಿಗೂ ಇಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./39
ತನು ಮೂರು ಆತ್ಮವಾರು ಜೀವವೆರಡು
ಜ್ಞಾನ ಎಂಬತ್ತನಾಲ್ಕು ಲಕ್ಷ
ಪರಮನೊಂದೆ ಭೇದ.
ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ
ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ
ಆಹಾರ ವ್ಯವಹಾರ ವಿಷಯಂಗಳಿಂದ
ಉತ್ಪತ್ಯ ಸ್ಥಿತಿ ಲಯಂಗಳಿಂದ
ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ.
ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ
ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ
ಸರ್ವ ಜೀವದ ಕ್ಷುದೆ, ಸವರ್ಾಂತ್ಮಂಗಳಲ್ಲಿ ದಯ
ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ
ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸವರ್ಾತ್ಮಕ್ಕೆ
ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ.
ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು/40
ತನುಧರ್ಮವ ಕಂಡು ಮನಧರ್ಮವನರಿದು,
ಅರಿವಿನ ವಿವೇಕದಿಂದ ಭೃತ್ಯರನೊಡಗೂಡುವನೆ ಗುರುಚರಮೂರ್ತಿ.
ಆತ ಪರಮ ವಿರಕ್ತ, ಪರಾಪರದಿಂದತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು/41
ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿಎಸಲಿಕ್ಕಾಗಿ,
ಗುರಿಯಲ್ಲಿಯೆ ಸರ ಪರಿಹರಿಸಿ,
ಆ ಸರದಲ್ಲಿಯೇ ತಮ ಪರಿಹರಿಸಿತ್ತು.
ಲಕ್ಷ ್ಯದಲ್ಲಿಯೆ ಚಿತ್ತ, ಚಿತ್ತದಲ್ಲಿಯೆ ಲಕ್ಷ ್ಯ ಅಲಕ್ಷ ್ಯವಾಯಿತ್ತು.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./42
ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ
ಕುರುಹನರಿಯದೆ ಅಗೆಯಬಹುದೆ?
ಸಕಲ ವೇದ ಶಾಸ್ತ್ರ ಪುರಾಣ ಅಗಮಂಗಳ ತಾ ಬಲ್ಲೆನೆಂದಡೆ
ಕ್ರೀಯಿಲ್ಲದೆ ಜ್ಞಾನಹೀನವಾಗಿ ಭಾವಶುದ್ಧವಿಲ್ಲದೆ
ಮತ್ತೇನುವನರಿಬಲ್ಲನೆ?
ಇದು ಕಾರಣದಲ್ಲಿ ಕ್ರೀಗೆ ಪೂಜೆ, ಅರಿವಿಂಗೆ ತ್ರಿವಿಧದ ಬಿಡುಗಡೆ,
ಆ ಬಿಡುಗಡೆಯ ಅಡಿಯಮೆಟ್ಟಿದ ಶರಣ
ಉಂಡುಪವಾಸಿ ಬಳಸಿ ಬ್ರಹ್ಮಚಾರಿ.
ಪಳುಕಿನ ವರ್ತಿಯಂತೆ, ತಿಲರಸ ಅಪ್ಪುವಿನಂತೆ,
ಹೊದ್ದಿಯೂ ಹೊದ್ದದ ನಿಜಲಿಂಗಾಗಿಯ ಯೋಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮದುಕೇಶ್ವರನು./43
ತುಂಬಿ ಕುಸುಮದ ಬಂಡುಂಬಂತೆ
ಕುಸುಮದಂಗ ಹರಿಯದೆ
ಸುಗಂಧ ಆತ್ಮನಲ್ಲಿ ತುಂಬಿ ತುಂಬಿದ್ದಂತೆ
ಕುಂಡಲಿ ಕೀಟಕನ ತಂದು ಮೃತ್ತಿಕೆಯ ಮಂದಿರದಲ್ಲಿ ಇರಿಸಿ
ಆ ಬೆಂಬಳಿಯಲ್ಲಿ ರೆುುಂಕರಿಸಲಾಗಿ
ಅದು ತನ್ನ ಭೀತಿಯಿಂದ ಮತ್ತೆ ಬಂದಿತ್ತಲ್ಲಾ ಎಂದು
ತಾ ಸತ್ತೆಹೆನೆಂಬ ಸಂದೇಹದಿಂದ ಮೂಛರ್ೆ ಕರಿಗೊಂಡು
ಕೀಟಕನಂಗವಳಿದು ಕುಂಡಲಿಯಾದ ತೆರದಂತೆ
ಈ ಗುಣ ಅಂಗಲಿಂಗ ಮೂರ್ತಿಧ್ಯಾನ ನಿಂದಲ್ಲಿ
ಪ್ರಾಣಲಿಂಗಸಂಬಂಧ.
ಅದು ತದ್ಭಾವ ನಿಜವಾದಲ್ಲಿ ಲಿಂಗಪ್ರಾಣಯೋಗ.
ಉಭಯದ ಸಂದನಳಿದು ಸಂಬಂಧ ಸಂಬಂಧಾವಾದಲ್ಲಿ
ಆ ವಸ್ತು ವಸ್ತುಲೇಪ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮದುಕೇಶ್ವರನು./44
ತೊಟ್ಟುಬಿಡುವ ವೇಳೆಯನರಿದ ಮತ್ತೆ
ದೋಟಿಯನಿಕ್ಕಲೇತಕ್ಕೆ?
ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ
ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ?
ಇದು ಗುರುಸ್ಥಲಕೆ ನಿಶ್ಚಯವಲ್ಲ;
ಇದು ಶಿಲೆಯ ಮಾರಿಯ ಹದಹು;
ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ
ಆತ ಸದ್ಗುರುಜಾತನಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮಧುಕೇಶ್ವರನು./45
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ.
ಚತುವರ್ಿಧ ಫಲಪ್ರಾಪ್ತಿಯ ಅನುಭವಿಸದೆ
ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ.
ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು
ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು.
ಷಡಾಧಾರಂಗಳಿಂದ ಸುಳಿದ ಸೂಕ್ಷ ್ಮದ ಆತ್ಮನ ನೆಲೆಯನರಿದು
ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು.
ಸುಖದುಃಖವೆಂಬ ಉಭಯವನಳಿದು.
ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು.
ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ
ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ
ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದುಐಕ್ಯಸ್ಥಲ.
ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲನೋಡಾ!
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗೆ ಮಧುಕೇಶ್ವರನು./46
ತ್ರಿವಿಧ ಪ್ರಸಾದವ ಸ್ವೀಕರಿಸುವಲ್ಲಿ
ತನ್ನ ಸತ್ಪತ್ರವಲ್ಲದುದ ಲಿಂಗಕ್ಕೆ ಅರ್ಪಿಸಿಕೊಂಡಹೆನೆನಲ್ಲಿಲ್ಲ.
ಗುರು ಪ್ರಸಾದ ಬಂದಿತ್ತೆಂದು ತನ್ನ ಕ್ರೀ ಮೀರಿ ಮುಟ್ಟಲಿಲ್ಲ.
ಜಂಗಮ ಪ್ರಸಾದವ ಉಭಯ ಪ್ರಸಾದದಲ್ಲಿ ಕೂಡಿ
ತನ್ನ ಕ್ರೀ ಹೊರೆಯಾಗಿ ಕೊಳ್ಳಲಿಲ್ಲ.
ಇಂತೀ ತ್ರಿವಿಧ ಪ್ರಸಾದದ ಭೇದ
ಭಕ್ತಿ ವರ್ತಕಂಗೆ ಶುದ್ಧವಾದಲ್ಲಿ ಲಿಂಗ ಪ್ರಸಾದ.
ಮಾಹೇಶ್ವರ ವರ್ತಕಂಗೆ ತನು-ಮನ ಶುದ್ಧವಾದಲ್ಲಿ ಗುರುಪ್ರಸಾದ.
ಪ್ರಸಾದಿಸ್ಥಲ ವರ್ತಕಂಗೆ ತ್ರಿವಿಧಮಲತ್ರಯ ದೂರಸ್ಥನಾಗಿ
ಮನ-ವಚನ-ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿ
ಆಯಾ ಉಚಿತದಲ್ಲಿ ಜಂಗಮ ಪ್ರಸಾದ ಬರಲಿಕ್ಕಾಗಿ
ಸ್ವಯ ಸತ್ಕಿ ್ರ ತಪ್ಪದೆ ತನ್ನ ದೃಷ್ಟಕ್ಕೆ
ಕೊಟ್ಟು ಕೊಂಬುದು ಮಹಾಪ್ರಸಾದಿಯ ಪ್ರಸನ್ನ.
ಈ ರಚನೆ ಮಹಾಪ್ರಮಥರ ಪ್ರಸಾದ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ
ಮಾತುಳಂಗ ಮಧುಕೇಶ್ವರನು./47
ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ,
ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ;
ಮೋಕ್ಷಗುರುವಾಗಿ ಬಂದು ತ್ರಿವಿಧ ಮಲದ ಕೆಡಿಸಿ ಮುಕ್ತನಮಾಡಿದೆ.
ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ,
ನಿಜಲೀಲೆಗೆ ಜಂಗಮರೂಪಾಗಿ,
ಇಂತೀ ತ್ರಿವಿಧ ರೂಪಾಗಿ ಭಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./48
ದೃಕ್ಕು ಸಕಲವನವಗವಿಸುವನ್ನಕ್ಕ,
ಶ್ರೋತ್ರ ಶಬ್ದವ ವೇಧಿಸುವನ್ನಕ್ಕ,
ಕ್ರೀ ಶೂನ್ಯವೆನಲೇತಕ್ಕೆ?
ಭಾವಿಸಿಹೆನೆಂಬನ್ನಕ್ಕ ಕ್ರೀ ಅರಿದೆಹೆನೆಂಬನ್ನಕ್ಕ ಸೂತಕ.
ಕುಕ್ಕಳಗುದಿವುದ ಹುಟ್ಟಿನಲ್ಲಿ ತೆಗೆದಿಕ್ಕುವಂತೆ,
ಅದು ದೃಷ್ಟಕ್ಕ ದೃಷ್ಟ, ನಿಶ್ಚಯಕ್ಕೆ ನಿಜ.
ಈ ಗುಣ ಉಭಯಸ್ಥಲ ನಿವರ್ಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./49
ದೃಷ್ಟದ ಜ್ಯೋತಿಯ ನಂದಿಸಬೇಕಲ್ಲದೆ
ಪರಂಜ್ಯೋತಿಯ ಬಂಧಿಸಿ ನಂದಿಸಿ ಕೆಡಿಸಿಹೆನೆಂದಡೆ
ಕೆಟ್ಟುದುಂಟೆ ಆ ಬೆಳಗು?
ಈ ಗುಣ ಇಷ್ಟಲಿಂಗವನರಿವುದಕ್ಕೆ ದೃಷ್ಟ
ಮನ ಇಷ್ಟದಲ್ಲಿ ವಿಶ್ರಮಿಸಿದ ಲಕ್ಷ ್ಯ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./50
ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ?
ಲಿಂಗವಿಲ್ಲದೆ ಧ್ಯಾನಕ್ಕೆ ಸಂಗ ಸನ್ಮತವುಂಟೆ?
ಈ ಗುಣ ಶ್ರುತ ದೃಷ್ಟ ಕೂಡಿ ಅನುಮಾನಕ್ಕೆ ಒಳಗಾದಂತೆ.
ಈ ಗುಣ ಅಂಗಲಿಂಗ ಆತ್ಮಲಿಂಗ ಸಂಗ ಸುಸಂಗಿಯ ಸಂಗ,
ಉಭಯಸ್ಥಲ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./51
ನಸುಗಾಯವಡೆದವನಂತೆ ನೋವುಣ್ಣದೆ,
ಸತ್ಕಿ ್ರವಂತನಂತೆ ಸಂದೇಹವಿಲ್ಲದೆ,
ಖಳನಿಚ್ಚಟನಂತೆ ಆತ್ಮಕ್ಕೆ ಸಂದು ಸಂಶಯವಿಲ್ಲದೆ,
ನೆರೆ ಅರಿದವನಂತೆ ಮರವೆಯ ಕುರುಹಿಗೆ ಬಾರೆದ,
ಲಿಂಗದಲ್ಲಿ ಕರಿಗೊಂಡವನಂತೆ ಕೊಟ್ಟಿಹೆ ಕೊಂಡೆಹೆನೆಂಬ ಸೂತಕವಿಲ್ಲದೆ,
ಬೊಮ್ಮವನರಿದವನಂತೆ ಅವರಿವರಲ್ಲಿ ಸುಮ್ಮಾನದ ಸುಖವ ನುಡಿಯದೆ,
ಘಟಕರ್ಮ ಯೋಗಿಯಂತೆ ಆ ದೇಹ ಇಂದ್ರಿಯಂಗಳಿಲ್ಲದೆ,
ಲಿಂಗಸಂಗಿಯಂತೆ ಬಾವಸರ್ವರ ಸಂಗ ಮಾಡದೆ
ಇಂತೀ ಸರ್ವಗುಣಸಂಪನ್ನ ನವಬ್ರಹ್ಮಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./52
ನಾ ನೀನೆಂಬನ್ನಕ್ಕ ಕ್ರೀಯ ಮಾಡುತ್ತಿರಬೇಕು.
ನಾನೀನೆಂಬುದಳಿದ ಮತ್ತೆಅದು ಅವಿರಳ ಸ್ವರೂಪು;
ನಾಮ ಶೂನ್ಯ ನಾಸ್ತಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./53
ನೋಡುವರೆಲ್ಲರು ಆಡಬಲ್ಲರೆ?
ಮಾತನಾಡುವರೆಲ್ಲರು ಲಿಂಗಾಂಗಯೋಗ ಬಲ್ಲರೆ?
ಸಾಧನೆಯ ಮಾಡುವ ಬಾಲರೆಲ್ಲರೂ ಕಳನಹೊಕ್ಕು ಕಾದಬಲ್ಲರೆ?
ಈ ಮಾತಿನ ಮಾಲೆಯ ಸಂಸಾರದ ತೂತ ಯೋಗಿಗಳೆಲ್ಲರೂ
ಲಿಂಗಾಂಗ ನಿಹಿತ ಯೋಗವ ಬಲ್ಲರೆ?
ಶಂಭುವಿನಿಂದಿತ್ತ ಸ್ವಯಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./54
ಪಂಚಭೌತಿಕದಿಂದತ್ತ ಪಂಚಭೌತಿಕ ಒಳಗಾದುದರಿಂದಿತ್ತ,
ಕುರುಹಿಲ್ಲದೆ ದೇವರೆನಿಸಿಕಂಡವರಾರಯ್ಯಾ?
ಅಪೂರ್ವವಸ್ತುವ ಕಂಡೆಹೆನೆಂದಡೂ ಕಟ್ಟುವುದಕ್ಕೊಂದಂಗ,
ಇರಿಸುವುದಕ್ಕೊಂದು ಆಶ್ರಯ.
ಈ ಗುಣ ತೆರನನರಿಯಬೇಕು.
ಅರಿವೆ ವಸ್ತು, ಕುರುಹಿಲ್ಲಾ ಎಂದು ನುಡಿದ ಬರುಬರ
ಕಾಳ್ಗೆಡೆವರ ಅವರನೊಡಗೂಡ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./55
ಪೃಥ್ವಿಯ ಅಂಶಿಕ ಶರೀರ ದರ್ಪಗೆಡುವುದ ಕಂಡು,
ಅಪ್ಪುವಿನ ಅಂಶಿಕ ಶುಕ್ಲ ಶೋಣಿತ ಜಲ ಕುಪ್ಪಳಿಸುವುದ ಕಂಡು,
ತೇಜದ ಅಂಶಿಕ ಅಗ್ನಿ ಡಾವರವಿಲ್ಲದುದ ಕಂಡು,
ವಾಯುವಿನ ಅಂಶಿಕ ಸವರ್ಾಂಗದಲ್ಲಿ ವೇದಿಸದೆ
ನಾಡಿಗಳಲ್ಲಿ ಭೇದಿಸದೆ
ಆತ್ಮನು ಗಾಢವಿಲ್ಲದುದ ಕಂಡು,
ಆಕಾಶವನವಗವಿಸುವ ಆಲಿಸೂತ್ರ ಓಸರಿಸುವುದ ಕಂಡು,
ಮತ್ತಿನ್ನೇತರ ಅರಿವು?
ಇಂತಿವು ದೃಷ್ಟವಿದ್ದಂತೆ ನಷ್ಟವನೆಯ್ದುವುದಕ್ಕೆ ಮುನ್ನವೆ,
ತನ್ನಯ ಲಕ್ಷ ್ಯದ ಇಷ್ಟದಲ್ಲಿ ಚಿತ್ತವನನುಕರಿಸಿ ಸುಚಿತ್ತನಾದವ ಸಾವಧಾನಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./56
ಪೃಥ್ವೀತತ್ವದಿಂದ ಭಕ್ತಿರೂಪು,
ಅಪ್ಪು ತತ್ವದಿಂದ ಮಾಹೇಶ್ವರರೂಪು,
ತೇಜ ತತ್ವದಿಂದ ಪ್ರಸಾದಿ ರೂಪು,
ವಾಯು ತತ್ವದಿಂದ ಪ್ರಾಣಲಿಂಗಿ ರೂಪು,
ಆಕಾಶ ತತ್ವದಿಂದ ಶರಣ ರೂಪು,
ಇಂತೀ ಪಂಚತತ್ವವನವಗವಿಸಿ ಮಹದಾಕಾಶ
ಅವಕಾಶವಾದುದು ಐಕ್ಯನ ಅಂತರಿಕ್ಷೆ.
ನಿರ್ಮುಕ್ತ ಸ್ವಯಂಸ್ವಾನುಭಾವದಿಂದ ಸಾವಧಾನವನರಿವುದು
ಷಟ್ಕರ್ಮನಾಶನ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು/57
ಪೃಥ್ವೀತತ್ವದೊಳಗಾದವೈದು,
ಅಪ್ಪು ತತ್ವದೊಳಗಾದವೈದು,
ತೇಜ ತತ್ವದೊಳಗಾದವೈದು,
ವಾಯು ತತ್ವದೊಳಗಾದವೈದು,
ಆಕಾಶತತ್ವ ದೊಳಗಾದವೈದು,
ಇಂತೀ ಇಪ್ಪತ್ತೈದು ತತ್ವವನವಗವಿಸಿದ ಮೂಲತತ್ವವೈದು,
ಇಂತೀ ಮೂವತ್ತಾಕ್ಕೆ ವಿಭೇದದಿಂದ ಸಾಧನೆಗೊಳಗಾದವಾರು.
ಇಂತೀ ಮೂವತ್ತಾರು ತತ್ವಂಗಳ ನಿಶ್ಚೆ ಸಿ ಕಂಡು,
ನಿತ್ಯಾನಿತ್ಯವ ತಿಳಿದು,
ಭಕ್ತಿ ಜ್ಞಾನ ವೈರಾಗ್ಯಗಳೆಂಬಿವ ನಿಶ್ಚೆ ಸಿ,
ಲಿಂಗ ನಿಜತತ್ವದಲ್ಲಿ ಆತ್ಮನ ಸಂಘಟ್ಟವ ಮಾಡಿ,
ಉಚಿತದ ಸಂದನರಿದು ಅಳಿವುದು ಸಾವಧಾನಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು. /58
ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು,
ಯೋಗವೆಂಟು, ಸಂಯೋಗವೆರಡು, ವಿಯೋಗವೊಂದು,
ವಿಭೇದವೆರಡು, ಭೇದವೊಂದು, ಅರಿಕೆಯೆರಡು ಅರಿದುದೊಂದು
ಆಕಾಶ ಮೂರು ಅವಾಕಾಶವೆರಡು, ಮಹದಾಕಾಶ ನಾಲ್ಕು.
ಇಂತಿವೆಲ್ಲವೂ ಮಹಾಪ್ರಕಾಶದ ಪ್ರಭೆ ಪ್ರಜ್ವಲವಾಗಿ
ಉಭಯನಾಮರೂಪ ತಾಳ್ದು,
ವಂಶ ಮೂರರಲ್ಲಿ ಅಳವಟ್ಟು ಸ್ಥಲವಾರರಲ್ಲಿ ಬೆಳೆದು,
ಕುಳವೆಂಟರಲ್ಲಿ ಓಲೈಸಿ ಕುಳ ನಾಲ್ಕರಲ್ಲಿ ಒಕ್ಕಿ,
ಫಲ ಮೂರರಲ್ಲಿ ಅಳೆದು ಹಗ ಒಂದರಲ್ಲಿ ತುಂಬಿತ್ತು.
ಇಂತೀ ವಿವಿಧ ಸ್ಥಲಂಗಳ ಹೊಲಬನರಿತು
ವರ್ತಕಕ್ಕೆ ಕ್ರೀ ಶುದ್ಧ, ಅರಿವಿಂಗೆ ಬಿಡುಗಡೆ ಶುದ್ಧ
ಬಿಡುಗಡೆ ಎರಡು ಏಕವಾದಲ್ಲಿ ಸ್ಥಲ ನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮಧುಕೇಶ್ವರನು./59
ಪ್ರಮಾಣವ ಪ್ರಮಾಣಿಸಿದಲ್ಲಿ ತಪ್ಪದಿಪ್ಪೆ.
ಅಪ್ರಮಾಣ ಅಗೋಚರವೆಂದಡೆ ಅತ್ಯತಿಷ್ಠದ್ದಶಾಂಗುಲನಾಗಿಪ್ಪೆ.
ಪೂರ್ವಕ್ಕೆ ಭಾವಜ್ಞನಾಗಿ, ಉತ್ತರಕ್ಕೆ ತೊಟ್ಟುಬಿಟ್ಟು ಹಣ್ಣಿನಂತೆ
ನಿಶ್ಚಯನಾಗಿಪ್ಪೆ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./60
ಪ್ರಸಾದಕ್ಕೆಂದು ಮುಯ್ಯಾಂತು ಕೈವೊಡ್ಡಿ ಬಾಯಿದೆರೆವಲ್ಲಿ
ಘೃತ ಪಳ ಮಧುರ ರಸ ಮೃಷ್ಟಾನ್ನವೆಂದು ಚಿತ್ತದಲ್ಲಿಕಲೆದೋರಿ,
ಜಿಹ್ವೆಯ ಲಂಪಟಕ್ಕೆ ಕೈಯಾಂತು ಬಾಯಿಬಿಟ್ಟು ಕೊಂಡಡೆ,
ಸಮ್ಮಗಾರನ ತಿತ್ತಿಯ ಪೋಷಣ ಪ್ರಸಾದಿಗೆ ನಿಶ್ಚಯವಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./61
ಬರಡು ಕರೆವಾಗ ಈಯಿತ್ತೆ?
ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ?
ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ?
ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ?
ಇಂತಿವು ವಿಶ್ವಾಸದ ಹಾಹೆ.
ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ
ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ.
ಈ ಗುಣ ತಪ್ಪದೆಂದು ಸಾರಿತ್ತು ಡಂಗುರ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./62
ಬೇರಿನ ಬಣ್ಣ ನೋಡ ನೋಡಲಿಕ್ಕೆ ಹಬೆಗೆ ಹಾರುವ ತೆರದಂತೆ
ಪಂಕದ ಸಾರ ಕಿರಣಕ್ಕೆ ಏವಂಕದಲ್ಲಿಯೆ ಅಡಗಿದಂತೆ
ಈ ಘಟ ಸಂಕೇತದಲ್ಲಿದ್ದ ಆತ್ಮನು ಆ ಗುಣ ಏವಂಕದಲ್ಲಿಯೆ
ಅಡಗಿದ ಮತ್ತೆ ಠವಣೆಗೆ ಸಂದುಂಟೆ?
ಇದು ಅಂಗಲಿಂಗ ಸಂಬಂಧ, ಲಿಂಗಾಂಗ ಸಂಯೋಗ.
ಶಂಭುವಿನಿಂದತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./63
ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ?
ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ
ಹಾಲಾಹಲ ಒಡಲನೇರಿದುದುಂಟೆ?
ಸಂಜೀವನದ ಫಲವ ಕಂಡು ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ?
ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ
ಅವಗುಣ ವೇಷದಲ್ಲಿ ಅಡಗಿತ್ತು, ಸದ್ಗುಣ ವಸ್ತುವಿನಲ್ಲಿ ಹೊದ್ದಿತ್ತು.
ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು,
ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./64
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ
ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ್ಲ್ಲ.
ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ,
ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ;
ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ;
ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ
ಸಿದ್ಧಾಂತ ಉಭಯಸ್ಥಲ ನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./65
ಭಕ್ತಂಗೆ ಮೂರು ಗುಣ, ಮಾಹೇಶ್ವರಂಗೆ ಆರು ಗುಣ,
ಪ್ರಸಾದಿಗೆ ಎಂಟು ಗುಣ, ಪ್ರಾಣಲಿಂಗಿಗೆ ಹತ್ತು ಗುಣ,
ಶರಣಂಗೆ ಹದಿನಾರು ಗುಣ, ಐಕ್ಯಂಗೆ ಐವತ್ತೆರಡು (ಗುಣ).
ಸರನಾದು ಭೇದ ನಿಂದಲ್ಲಿ ಒಂದೆ ಗುಣ ಸಂದಿತ್ತು.
ಇದು ಕ್ರಿಯಾಸ್ಥಲ ನಿರ್ವಾಹ.
ಸಂಗನ ಬಸವಣ್ಣನ ಆದಿ, ಚನ್ನಬಸವಣ್ಣನ ಅನಾದಿ
ಶರಣ ಸಂತತಿಯ ಸಂಬಂಧ ಮಾರ್ಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./66
ಭಕ್ತನ ಕ್ರೀ, ಮಾಹೇಶ್ವರನ ನಿಶ್ಚಯ, ಪ್ರಸಾದಿಯ ನಿಷ್ಠೆ,
ಪ್ರಾಣಲಿಂಗಿಯ ಯೋಗ, ಶರಣನ ನಿಬ್ಬೆರಗು, ಐಕ್ಯದ ನಿರ್ಲೆಪ.
ಇಂತೀ ಆರುಸ್ಥಲವನವಗವಿಸಿ ಕಲೆದೋರದೆ ನಿಂದುದು
ವಿರಕ್ತನ ಏಕಸ್ಥಲದಾಟ, ನಿಜತತ್ವದ ಕೂಟ!
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./67
ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ
ಗುರುಚರಪರದಲ್ಲಿ ಶ್ರುತದಿಂದ ಕೇಳಿ ದೃಷ್ಟದಿಂದ ಕಂಡು,
ಅನುಮಾನದಿಂದ ವಿಚಾರಿಸಿಕೊಂಡರಿದಡೂ
ವೃಶ್ಚಿಕದಿಂದ ನೊಂದ ಚೋರನಂತೆ ಬಾಯಿ ಮುಚ್ಚಿದಂತಿರಬೇಕು.
ಮಾಹೇಶ್ವರಸ್ಥಲವ ತಾಳ್ದಲ್ಲಿ
ಆವ ವ್ರತಹಿಡಿದಡೂ
ತಪ್ಪಿದವರ ಕಂಡಲ್ಲಿ, ಗುರುಲಿಂಗಜಂಗಮದ ನಿಂದೆಯ ಕೇಳಿ ಕಂಡಲ್ಲಿ,
ತನ್ನ ಅನುವಿಂಗೆ ಬಾರದೆ ಆಚಾರಕ್ಕೆ ಓಸರಿಸಿದವರ ಕಂಡಲ್ಲಿ,
ತನ್ನ ಸ್ಥಲಕ್ಕೆ ಊಣಯವೆಂದು ಕೇಳಿದಲ್ಲಿ
ಕೇಳಿದ ತೆರನ ತನ್ನ ತಾನರಿದಲ್ಲಿ,
ಇದಿರಿಗೆ ಆಜ್ಞೆ ತನಗೆ ಸಾವಧಾನ ಕಡೆಯೆಂಬುದನರಿತುದು
ವಿಶ್ವಲಿಂಗ ಮಾಹೇಶ್ವರಸ್ಥಲ.
ಪ್ರಸಾದಿಸ್ಥಲವ ತಾಳ್ದಲ್ಲಿ,
ಶುದ್ಧವೆನ್ನದೆ ಸಿದ್ಧವೆನ್ನದೆ ಪ್ರಸಿದ್ಧವೆನ್ನದೆ
ಉಚಿತದಲ್ಲಿ ಚಿಕಿತ್ಸೆ ಜುಗುಪ್ಸೆಯೆನ್ನದೆ
ಕಾಲರುದ್ರನಂತೆ ದಾವಾನಳನಂತೆ
ಪೂರ್ಣಚಂದ್ರ ಮಹಾರ್ಣಸಿಂಧುವಿನ ತೆರದಂತೆ
ನೂತನ ಇನನ ಹೋದ ಕಳೆಯಂತೆ ಬಂದುದ ನಿಂದುದ ಬಹುದ
ಸಂದಿತ್ತು.
ಸಾಕುಬೇಕೆನ್ನದೆ ಕರುಣದಿಂದ ಬಂದಡೆ ಕರುಣದಿಂದ ಸಾಕೆಂದು
ನಿಂದಡೆ,
ಪ್ರಸಾದವ ಕೊಂಡಲ್ಲಿ ಉಕ್ಕಳ ಉಬ್ಬಸ ತಬ್ಬಿಬ್ಬು ಹೋಗಿ,
ವೃದ್ಧಿಗೆ ಎಡೆಯಿಲ್ಲದೆ,
ಭಾಗೀರಥಿಯಂತೆ ತುಂಬಿತ್ತೆಂದು ಸೂಸದೆ ಎಲ್ಲಾ ಎಂದು ಹಿಂಗದೆ
ಎಂದಿನಂತೆ ತುಂಬಿದಂತೆ ಇಪ್ಪ ನಿಜಪ್ರಸಾದಿಯ ನಿಜದಂಗಸ್ಥಲ.
ಪ್ರಾಣಲಿಂಗಿಸ್ಥಲವ ತಾಳ್ದಲ್ಲಿ,
ಬಿತ್ತುಳಿದ ಕಾಪರ್ಾಸದ ಹಿಕ್ಕಿದ ಮಧ್ಯದಲ್ಲಿ ಕಿಚ್ಚು ಮುಟ್ಟದಂತೆ
ಪೃಥ್ವಿಯ ಪಿಪೀಲಿಕ ಮೃತ್ತಿಕೆಯ ಮುಟ್ಟಲಿಕ್ಕಾಗಿ,
ಅಪ್ಪು ಒಡಗೂಡಿಯೆ ತಿಟ್ಟ ನಿಂದಂತೆ,
ಕಪರ್ೂರದ ವೃಕ್ಷಕ್ಕೆ ಬುಡದಿಂದ ಕಿಚ್ಚು ಹತ್ತಿದಂತೆ,
ಮಧುಮಕ್ಷಿಕದ ಚಿತ್ತವಿದ್ದಂತೆ,
ಆಯುಃಕಾಂತ ಲೋಹಕ್ಕೆ ಆತ್ಮಭಾವವಿದ್ದಂತೆ,
ಕೂರ್ಮನ ಶಿಶುವಿನ ಸ್ನೇಹವಿದ್ದಂತೆ,
ಈ ಗುಣ ಸದ್ಭಾವದಲ್ಲಿ ಪ್ರಾಣಲಿಂಗಿಸ್ಥಲ.
ಶರಣಸ್ಥಲದ ತಾಳ್ದಲ್ಲಿ,
ಮದಗಜದಂತೆ ಬಿದಿರಿನ ಪಟುಭಟನಂತೆ ಮಸಗಿದ
ಮಾರುತನಂತೆ
ಘನಸಿಂಧು ಎಸಗಿದ ಉದ್ಭವದಂತೆ ಕಾಲಸಂಹಾರ
ಲೀಲೆಯಾದಂತೆ
ತಾನಿರೆಂಬ ಭಾವವ ಮರೆದು ನಿಶ್ಚಲ ನಿಜವಾದುದು
ಶರಣಸ್ಥಲ.
ಐಕ್ಯಸ್ಥಲವ ತಾಳ್ದಲ್ಲಿ,
ಶಕ್ತಿಯಲ್ಲಿ ನಿಂದ ಅಪ್ಪುವಿನಂತೆ, ಬಿಂದುವನೊಳಕೊಂಡ
ರಜ್ಜುವಿನಂತೆ
ರಜ್ಜುವನೊಳಕೊಂಡ ಋತುಕಾಲದ ಸುರಂಗದ ನಿರಂಗದಂತೆ.
ಸುಗಂಧವ ಕೊಂಡೊಯ್ದ ಸಂಚಾರ ಹೋಗ ಹೋಗಲಿಕ್ಕಾಗಿ
ಸುಗಂಧದಂಗವಡಗಿದಂತೆ ವಿದ್ಯುಲ್ಲತೆಯ ಕುಡಿವೆಳಗಿನಂತೆ
ನಿರವಯದ ಗರ್ಜನೆಯಂತೆ,
ವಿಷರುಹದ ಭದ್ರದ ಸುವರ್ಣದ ನಿರ್ಧರದ ನಿರವಯದಂತೆ,
ಅಂಬುಧಿಯೊಳಗಡಗಿದ ಸೂಕ್ಷ ್ಮ ಸಮಸಂಗದ ಘಟದಂತೆ,
ಮಂಜಿನಪದ ಬಿಸಿಲಂಗದ ನಾಮದಲ್ಲಿ ಇಂಗಿ ಹೋದಂತೆ,
ಈ ನಿರಂಗ ನಿಶ್ಚಯವಾದಲ್ಲಿ ಐಕ್ಯಸ್ಥಲ.
ಇಂತೀ ಆರುಸ್ಥಲವನರಿದು ಮೂರುಸ್ಥಲದಲ್ಲಿ ನಿಂದು,
ಉಭಯಸ್ಥಲ ಕೂಡಿ ಎರಡಳಿದ ಉಳುಮೆ ಪರಿಪೂರ್ಣವಸ್ತು
ಬಂಧಮೋಕ್ಷ ಕರ್ಮಂಗಳಿಂದತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./68
ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು,
ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು,
ಶರಣಸ್ಥಲವೆರಡು, ಐಕ್ಯಸ್ಥಲ ಒಂದು,
ಭಕ್ತಂಗೆ ಮೂರು ಗೊತ್ತು, ಮಾಹೇಶ್ವರಂಗೆ ನಾಲ್ಕು ಗೊತ್ತು,
ಪ್ರಸಾದಿಗೆ ಐದು ಗೊತ್ತು, ಪ್ರಾಣಲಿಂಗಿಗೆ ಆರು ಗೊತ್ತು,
ಶರಣಂಗೆ ಎರಡು ಗೊತ್ತು, ಐಕ್ಯಂಗೆ ಒಂದು ಗೊತ್ತಾಗಿ
ಸಂಬಂಧಿಸಿ ಷಡುಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕೆ ಆರು ಸ್ಥಲ
ಹೊರೆ ಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚರಿಸುವಲ್ಲಿ
ನೂರೊಂದು ಸ್ಥಲಂಗಳಲ್ಲಿ ಆರೋಪಿಸಿ ನಿಂದುದು ಮೂರೆ
ಭಕ್ತಿಸ್ಥಲ,
ಸಂದುದು ನಾಲ್ಕೆ ಮಾಹೇಶ್ವರಸ್ಥಲ,
ಕೊಂಡುದು ಐದೆ ಪ್ರಸಾದಿಸ್ಥಲ,
ಗಮನವಿಲ್ಲದೆ ನಿಜದಲ್ಲಿ ನಿಂದುದಾರೆ ಪ್ರಾಲಿಂಗಿಸ್ಥಲ,
ಸ್ತುತಿ-ನಿಂದೆಗೆಡೆಯಿಲ್ಲದೆ ನಿಂದುದೆರಡೆ ಶರಣಸ್ಥಲ,
ನಿರ್ನಾಮವಾಗಿ ಭಾವಕ್ಕೆ ಬ್ರಮೆಯಿಲ್ಲದುದೊಂದೆ ಐಕ್ಯಸ್ಥಲ.
ಇಂತೀ ಭಿನ್ನ ವರ್ಣಂಗಳಲ್ಲಿ ವರ್ಣಸ್ವರೂಪನಾದೆಯಲ್ಲಾ,
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./69
ಮಂಜರಿ ನುಂಗಿದ ಚೂಡ ತನ್ನ ಕಾಲವೇಳೆಗೆ
ನಿಂದು ಕೂಗಿದುದುಂಟೆ?
ಲಿಂಗವನರಿದ ಚಿತ್ತ ಸಂಸಾರದ ಸಂದಣಿಯಲ್ಲಿ ಮುಳುಗುವುದೆ?
ಈ ದ್ವಂದ್ವವನರಿದು ಯೋಗ ಸಂಬಂಧಿಯಾಗಿರಬೇಕು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./70
ಮಣ್ಣಿನಲ್ಲಿ ಹುಟ್ಟಿದ ಹೊನ್ನು, ಕಲ್ಪಿನಲ್ಲಿ ಹುಟ್ಟಿದ ರನ್ನ,
ಚಿಪ್ಪಿನಲ್ಲಿ ಹುಟ್ಟಿದ ಮುತ್ತು, ವೃಕ್ಷದಲ್ಲಿ ಹುಟ್ಟಿದ ಗಂಧ
ಅವು ತಮ್ಮ ಸ್ವಸ್ಥಾನಂಗಳ ಮೀರಿ
ಪರಸ್ಥಾನಂಗಳಲ್ಲಿ ನಿಂದು ಪ್ರಾಪ್ತಿಯನೆಯ್ದುವಂತೆ,
ಪಿಂಡ ಅಂಡದಲ್ಲಿ ಹುಟ್ಟಿ ಅಂಡವನಿತಿಗಳೆದು ನಿಜ ಪಿಂಡವಾದಂತೆ,
ಗುರುವಿನ ಕರಕಮಲದಲ್ಲಿ ಹುಟ್ಟಿ,
ಲಿಂಗಮೂರ್ತಿಯ ಸರ್ವಾಂಗದಲ್ಲಿ ಬೆಳೆದು
ಜಂಗಮವಪ್ಪ ನಿರಂಗ ಪ್ರಸಾದದಲ್ಲಿ ಬೆರೆದು ಅವಿರಳನಾದವಂಗೆ
ಬಂಧ ಮೋಕ್ಷ ಕರ್ಮಂಗಳ ಬೆಂಬಳಿಗೆ ಸಲ್ಲ!
ಅದು ನಿರಂಗವಸ್ತು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./71
ಮರಾಳನ ಗದಕ ತೇಜಿಯ ಚಿತ್ತ ಪನ್ನಗನ ವಳಿ ಹೊಳಹಿನಂತೆ
ಘಟಾತ್ಮನ ಭೇದ.
ಇದು ನಿರುತ ಸ್ವಯಾನುಭಾವದಿಂದ ಸಂಬಂಧಿಸಿ
ಉರಿ ಲೋಹದ ಯೋಗದಂತೆ ಆಗದೆ,
ಉರಿ ಕಪರ್ೂರದಿರವಿನಂತೆ ಆಗಬೇಕು.
ಇದು ಸಾವಧಾನ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./72
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ,
ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ,
ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ.
ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ
ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ
ಅನುಮಾನದಲ್ಲಿ ಅರಿದುದ
ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ.
ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./73
ಮರ್ಕಟನ ಲಾಗು ಶಾಕೆಯುಳ್ಳನ್ನಕ್ಕ,
ವಿಹಂಗನ ಪಥ ಬಯಲುಳ್ಳನ್ನಕ್ಕ,
ಪಿಪೀಲಿಕನ ಜ್ಞಾನ ಮಧುರರಸವುಳ್ಳನ್ನಕ್ಕ,
ಇಂತೀ ತ್ರಿವಿಧ ಗುಣ ಇದಿರುಳ್ಳನ್ನಕ್ಕ
ಇಂತೀ ವಸ್ತು ಉಂಟಾಗಿ ದೃಷ್ಟ ಇದಿರಿಟ್ಟವು.
ಉರಿ ಕಪರ್ೂರವ ಸುಡಿಲಿಕ್ಕೆ ಘಟದ ತಿಟ್ಟವಳಿದಂತೆ
ವಸ್ತು ದೃಷ್ಟದ ಅಂಗದಲ್ಲಿ ಬಂದು ಪ್ರತಿಷ್ಠೆಯಾಗಲಾಗಿ
ಘಟದ ಸರ್ವೆಂದ್ರಿಯಂಗಳು ಅಲ್ಲಿಯೇ ನಷ್ಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./74
ಮಾಂಸ ಪಿಂಡತ್ರಯ, ಸೂಕ್ಷ ್ಮ ಪಿಂಡತ್ರಯ, ಕಾರಣ ಪಿಂಡತ್ರಯ
ಇಂತಿವ ಶೋಧಿಸಿ, ಲಿಂಗವ ಸಾಗಿಸಿ ದೀಕ್ಷೆಯ ಮಾಡಬೇಕು.
ಇದು ಸದ್ಗುರು ಮೂರ್ತಿಯ ತೆರ.
ಶಂಭುವಿನಿಂದಿತ್ತು ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./75
ಮಾರುತನ ಮನೆಯಂತೆ ಉದಕ ಮುಕುರದ ಬಿಂಬದಂತೆ
ರತ್ನಕಾಂತಿಯ ಕಳೆಯಂತೆ ಪಾವಕದ ಪ್ರಥಮ ಬೀಜದಂತೆ
ಸುವರ್ಣವನೊಡಗೂಡಿದ ಸುವಳಿಯಂತೆ
ಮರೀಚಿಕವ ಕೂಡಿದ ವರುಣದಂತೆ
ಸುನಾದವನೊಳಕೊಂಡ ಬಯಲಿನಂತೆ
ಇಂತೀ ನಾಮ ರೂಪು ಪಿಂಡಜ್ಞಾನ ಭೇದ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./76
ಮುತ್ತಿನ ನೀರಿನಂತೆ, ರತ್ನದ ಬೆಂಕಿಯಂತೆ,
ಸುರಚಾಪದಂತೆ, ಶರಧಿಯ ಹೊಳೆಯಂತೆ,
ವರವಳಿದ ಶಿಲಾಮೂರ್ತಿಯಂತೆ,
ದೃಷ್ಟವಿದ್ದು ನಷ್ಟವಪ್ಪುದು ನಿಜ ನಿಷ್ಠೆವಂತನ ಸಾವಧಾನ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./77
ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ
ಆಶ್ರಯವರ್ಣ ದಳವರ್ಣ ಭಾವವರ್ಣ ಆತ್ಮವರ್ಣ
ಅಕ್ಷರವರ್ಣ ಸ್ಥಲವರ್ಣಂಗಳ ಕಲ್ಪಿಸಿ,
ಭೇದಕ್ರೀಯಿಂದ ಅರಿಯಬೇಕಾಗಿ
ಕ್ರೀ ಮೂರು, ಸ್ಥಲವಾರು, ತತ್ವವಿಪ್ಪತ್ತೈದು,
ಕಥನ ಮೂವತ್ತಾರು, ಪ್ರಸಂಗ ನೂರೊಂದರಲ್ಲಿ ನಿರ್ವಾಹ.
ಈ ಏಕವಸ್ತು ತ್ರಿಗುಣಾತ್ಮಕವಾದ ಸಂಬಂಧ.
ಇಂತಿವನರಿತೆಹೆನೆಂದು ಒಂದಕ್ಕೊಂದು ಸಂದನಿಕ್ಕದೆ
ಗುರುವಿನ ಕಾರುಣ್ಯವನರಿತು, ಲಿಂಗದಲ್ಲಿ ಚಿತ್ತವ ಮೂರ್ತಿಗೊಳಿಸಿ
ಜಂಗಮದಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಭಕ್ತಿಯನೊಪ್ಪಿ
ನಿಶ್ಚಯನಾಗಿಪ್ಪುದೆ ಭಕ್ತಿಯ ಅಂಗಕ್ಕೆ ಇಕ್ಕಿದ ಗೊತ್ತು ವಿಶ್ವಸ್ಥಲ ನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./78
ಮೆಟ್ಟಿದ ಪಂಕವ ಅಪ್ಪುವಿನಿಂದಲ್ಲದೆ ನೀಗಬಾರದು.
ಮಾಡುವ ಕ್ರೀಯ ಅರಿವಿನ ದೆಸೆಯಿಂದಲ್ಲದೆ
ಬಿಡುಮುಡಿಯನರಿಯಬಾರದು.
ಮಹಾನಿಜತತ್ವದ ಬೆಳಗ ಮಹಾಶರಣ ಸಂಸರ್ಗದಲ್ಲಿ ಅಲ್ಲದೆ
ಅರಿದು ಹರಿಯಬಾರದು.
ಶಂಭುವಿನಿಂದತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./79
ಯೋಗವೆಂಬುದೇನು ಲಕ್ಷ ್ಯದೊಳಗೆ ಅಲಕ್ಷ ್ಯವಡಗಿಪ್ಪುದು;
ಇಷ್ಟದಲ್ಲಿ ಅಭೀಷ್ಟವಡಗಿಪ್ಪುದು; ಸ್ಥೂಲದಲ್ಲಿ ಸೂಕ್ಷ ್ಮವಡಗಿಪ್ಪುದು;
ಅರಿದಲ್ಲಿ ಆ ಆರಿಕೆ ಅಡಗಿಪ್ಪುದು, ವಸ್ತುಕದಲ್ಲಿ ಆ ವಸ್ತು ಅಡಗಿ,
ರಂಜನೆಯಲ್ಲಿ ನಿರಂಜನ ಕುರುಹುಗೊಂಡು
ಆ ರಂಜನೆ ರಂಜಿಸುವಂತೆ,
ತಾನರಿವ ಕುರುಹಿನಲ್ಲಿ ನಿಜದರಿವು ಕರಿಗೊಂಡು
ಇಷ್ಟಲಿಂಗಕ್ಕೆ ದೃಷ್ಟಾತ್ಮಲೇಪವಾಗಿ ಇದು ಕ್ರಿಯಾ ಲಿಂಗಾಂಗಯೋಗ.
ನಿಜವನರಿಯದೆ ಕುಟಿಲ ಘಟಂಗಳಿಂದ ಅಂಬಿಕಾ ಹಠ
ಘಟಯೋಗಿಗಳೆಲ್ಲರು
ಭವಸಾಗರದ ಸಟೆಯೋಗಿಗಳು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./80
ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ
ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು?
ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ?
ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ?
ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ?
ಇಂತೀ ತ್ರಿವಿಧದ ಬಿಡುಮುಡಿಯನರಿತು,
ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ
ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ.
ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ
ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ
ನಿಸ್ಪ ೃಹ.
ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ
ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ.
ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ
ಸಂಪನ್ನನಾದುದು
ಲಿಂಗ ಭೋಗೋಪಭೋಗಿಯ ಅಂಗನಿರತ,
ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./81
ಲಿಂಗಕ್ಕೆ ನೈವೇದ್ಯ ಸಕಲ ಪದಾರ್ಥ ಬಂದಿರಲಿಕ್ಕಾಗಿ
ಕಂಗಳು ತುಂಬಿ ನೋಡಿ ಕೈ ತುಂಬ ಮುಟ್ಟಿ,
ಲಿಂಗಾರ್ಪಿತಕ್ಕೆ ಮೊದಲೆ ಕ್ಷುಧೆಯಾವರಿಸಿ ಮನ ನೆಟ್ಟಿತ್ತಾದಡೆ,
ಆ ಗುಣ ಲಿಂಗಾರ್ಪಿತವಲ್ಲ, ಕ್ರೀಗೆ ಸಲ್ಲ,
ಪ್ರಮಥರೊಳಗಲ್ಲ, ಪ್ರಸನ್ನನೊಪ್ಪ.
ಶಂಭುವಿನಿಂದಿತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./82
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು
ವರ್ತುಳ ಖಂಡಿಕಾದಂಡ ಗೋಮುಖ
ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ
ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು
ಪಂಚಸೂತ್ರದಿಂದ ಪ್ರಯೋಗಿಸಿ,
ಅಚೇತನವಪ್ಪ ಶಿಲೆಯ ಕುಲವಂ ಹರಿದು,
ತಾ ಶುಚಿಭರ್ೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ
ಮೂರ್ತಿಗೊಳಿಸಿ
ತನು ಕರಗಿ ಮನ ರೆುುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ
ನಿಧಾನಿಸಿ ನಿಕ್ಷೇಪವ ಕಾಬವನಂತೆ
ಬಯಲ ಬಂದಿವಿಡಿವವನಂತೆ
ಶಿಲೆಯಲ್ಲಿ ರಸವ ಹಿಳವವನಂತೆ
ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ
ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ
ಶೋಧಿಸಿ ಮುಚ್ಚಿತಾಹವನಂತೆ
ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ,
ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ
ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ
ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ
ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ
ಷೋಡಶಕಳೆಯಿಂದ ಉಪಚರಿಸಿ
ನವಕಳಶ ಪ್ರಯತ್ನ ಪ್ರಯೋಗವ ಮಾಡಿ
ಚತುವರ್ಿಧ ಆಚಾರ್ಯರ ಕೂಡಿ
ಅಷ್ಟದೆಸೆಗಳಲ್ಲಿ ಕತರ್ೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು,
ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು
ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು
ಉಪೇಕ್ಷಿಸಿ ಧಾರಣವ ಮಾಡುವಲ್ಲಿ
ಗುರು ನಾನೆಂಬುದ ಮರೆದು ಅಹಂಕಾರವ ತೊರೆದು
ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ
ಮಂತ್ರಾಭಿಷೇಕ ತೀರ್ಥಮಂ ತಳೆದು
ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ
ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ
ಪಾಷಾಣ ಲೋಹದ ಮೇಲೆ ಬಿದ್ದಂತೆ
ನಂಜೇರಿದಂಗೆ ಸಂಜೀವನ ಸಂಧಿಸಿದಂತೆ
ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ
ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು
ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ,
ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ,
ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ
ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ಸಿ ನಡೆಯೆಂದು
ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./83
ಲಿಂಗಾಂಗವಾದ ಭೋಗ ಭೋಜ್ಯಂಗಳ ತೆರನೆಂತುಟೆಂದಡೆ:
ಅವುದ ಕೂಡಿದಲ್ಲಿಯೂ ಬಿಂದು ತಿಲಸಾರದಂತಿರಬೇಕು.
ಅವುದ ಬೆರಸಿದಲ್ಲಿಯೂ ಮುಕುರದ ಬಿಂಬದ ಪ್ರತಿಬಿಂಬದಂತೆ
ಸಂಗ ತೋರಿ ಅಂಗವಳಿದಿರಬೇಕು.
ಇದು ಲಿಂಗಾಂಗಿಯ ಮುಟ್ಟು, ಸುಸಂಗಿಯ ನಿರತ
ಸ್ವಯಾಂಗಿಯ ಉಭಯದ ಮುಟ್ಟು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./84
ವಾದ್ಯಕ್ಕೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ?
ಅರಿವಿಂಗೆ ಬಂಧವಲ್ಲದೆ ಅರುಹಿಸಿಕೊಂಬವಂಗೆ ಬಂಧುವುಂಟೆ?
ಆರಿದೆಹೆನೆಂಬ ಭ್ರಮೆ ಅರುಹಿಸಿಕೊಂಡಹೆನೆಂಬ ಕುರುಹು
ಉಭಯ ನಾಸ್ತಿಯಾದಲ್ಲಿ ಬಾವಶುದ್ಧವಿಲ್ಲ.
(ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ),
ಮಾತುಳಂಗ ಮಧುಕೇಶ್ವರನು./85
ವಿರಕ್ತಂಗೆ ವಿಷಯವುಂಟೆ?
ಶರಣಂಗೆ ತಥ್ಯಮಿಥ್ಯವುಂಟೆ?
ಮಹದೊಡಗೂಡಿ ಮಾಹಾತ್ಮೆಯನಳಿದವಂಗೆ
ಗಾಂಭೀರ ಗರ್ವಕ್ಕೆ ಎಡೆದೆರವುಂಟೆ?
ಆತನಿರವು ದಗ್ಧಪಟದಂತೆ,
ದಹ್ಯದಲ್ಲಿ ನೊಂದ ರಜ್ಜುವಿನ ತೆರದಂತೆ,
ನಿರವಯದಲ್ಲಿ ತೋರಿ ತೋರುವ
ಮರೀಚಿಕಾ ಜಲದ ತೆರೆಯ ಹೊಳಹಿನ ವಳಿಯಂತೆ.
ರೂಪಿಂಗೆ ದೃಷ್ಟವಾಗಿ ಹಿಡಿವೆಡೆಯಲ್ಲಿ
ಅಡಿಯಿಲ್ಲದೆ ವಸ್ತುವನೊಡಗೂಡಬೇಕು.
ಆತ ಹಿಡಿದುದು ಹಿಡಿಕೆಯಲ್ಲ, ಮುಟ್ಟಿಂಗೊಳಗಲ್ಲ.
ಅಂಬರದ ವರ್ಣ ಎವೆ ಹಳಚುವುದಕ್ಕೆ ಮುನ್ನವೆ
ಛಂದವಳಿದಂತೆ.
ಇದು ಲಿಂಗಾಂಗಿಯ ಮುಟ್ಟು,
ಸರ್ವಗುಣ ಸಂಪನ್ನನ ತೊಟ್ಟು,
ದಿವ್ಯಜ್ಞಾನಿಯ ತಟ್ಟು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./86
ವಿಷ ಚರದಲ್ಲಿ ಉಂಟು, ವಿಷ ಸ್ಥಾವರದಲ್ಲಿ ಉಂಟು.
ನಿವರ್ಿಷ ಚರದಲ್ಲಿ ಉಂಟು, ನಿವರ್ಿಷ ಸ್ಥಾವರದಲ್ಲಿ ಉಂಟು.
ಇದಿರಿಟ್ಟು ಕಾಬಲ್ಲಿ ಉಂಟು ದೃಷ್ಟ.
ಅಲ್ಲಿ ಇಲ್ಲದಿರೆ ತನ್ನಲ್ಲಿ ಉಂಟು ದೃಷ್ಟ.
ಆ ಗುಣ ನೀರಿನೊಳಗೆ ಬೆರೆದೆಯ್ದುವ ತಿಳಿವಳಿಯ ಕುಂಪಟೆಯಂತೆ.
ವಾರಿಯಂಗವೆ ತನ್ನ ಚರಾಂಗವಾಗಿ ಇದು ಸದ್ಭಾವಕ್ರಿಯಾಂಗಸ್ಥಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./87
ವಿಷ ತನ್ನೊಳಗಾದಡೂ ತನ್ನ ಕೇಡು,
ವಿಷದೊಳಗು ತಾನಾದಡೂ ತನ್ನ ಕೇಡು.
ಕರ್ಕಸದ ನಡುವೆ ಹುಟ್ಟಿದ ಕಂಬದಂತೆ.
ಇಂತಿವನರಿದು ಮಾಡಿ ನೀಡಿ ವೃಥಾ ನಿರರ್ಥಕ್ಕೆ ಹೋಗಬೇಡ.
ಹುತ್ತಕ್ಕೆ ಹಾಲನೆರೆದಲ್ಲಿ ಸರ್ಪ ಕುಡಿಯಿತ್ತೆ ಆ ಹಾಲ?
ಅದು ತಮ್ಮ ಕೃತ್ಯದ ಕಟ್ಟಣೆಗೆ ಸರ್ಪನೊಪ್ಪಿ ಕಾಟವ ಬಿಟ್ಟಿತೆ?
ಅದು ತಮ್ಮ ಚಿತ್ತದ ದರ್ಪದ ತೆರ.
ಇಂತೀ ವಿಶ್ವಾಸದಿಂದ ಶಿವಭಕ್ತಿಯನೊಪ್ಪುಗೊಂಬ,
ಇದು ವಿಶ್ವಾಸಿಯ ಸ್ಥಲ.
ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./88
ಶಿಲೆಯೊಳಗೆ ಪಾವಕನಿಪ್ಪ ತೆರನಂತೆ
ಕಡೆ ನಡು ಮೊದಲೆನ್ನದೆ
ಎಲ್ಲಿ ಮುಟ್ಟಿದಲ್ಲಿ ಕಿಡಿ ಪಲೈಸುವಂತೆ
ಸರ್ವಾಂಗಲಿಂಗವಾದ ಶರಣಂಗೆ ಆವ ಗುಣದಲ್ಲಿ ನೋಡಿದಡೂ,
ಅಲ್ಲಿಯೆ ಲಿಂಗ ಮುಂಚು.
ತನಗೆ ಅನ್ಯ ಭಿನ್ನವೆಂಬ ಮುಟ್ಟಿನ ಸೂತಕ ಕಟ್ಟಿನ ಭಾವವಿಲ್ಲ.
ಹಣ್ಣಿನಲ್ಲಿ ವಿಷ ವೇಧಿಸಲಿಕ್ಕಾಗಿ ಹಣ್ಣು ಸಾವುದೆ
ಹಣ್ಣಿನ ರಸವ ಕೊಂಡವನಲ್ಲದೆ?
ಈ ಗುಣ ಸರ್ವಾಂಗಲಿಂಗಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./89
ಶ್ರೀಗುರು ಕುರುಹು ಕೊಟ್ಟು, ಕುರುಹಿನ ಬೆಂಬಳಿಯಲ್ಲಿ
ಅರಿಯೆಂದು ಹೇಳಲಿಕ್ಕಾಗಿ
ಆ ಉಭಯವ ಮರೆದು ಬೇರೊಂದರಿವಿನ ಮುಖದಲ್ಲಿ
ಒಡಗೂಡಿಹೆನೆಂಬ ಅಡಗಗಳ್ಳರ ನೋಡಾ.
ಕುರಿ ನಾಚಿ ವತ್ಸ ಮೊದಲಾಗಿಯೂ ತಮ್ಮ ಒಡೆಯನ
ಇಂತೀ ಗುಣವನರಿಯದ ಬಡಿವ ಬಾಯವರನೊಡಗೂಡ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./90
ಷಡ್ಭಾವಲಿಂಗ ಷಡುವರ್ಣಭೇದ,
ಷಡುಸ್ಥಲಕ್ರೀ, ಷಟ್ಕರ್ಮಯುಕ್ತಿ,
ಇಂತೀ ಸ್ಥಲವಿವರಂಗಳೆಲ್ಲವೂ ಪರವಸ್ತುವಿನ
ಮೂಲಾಂಕುರ ಲಿಂಗಮೂರ್ತಿ.
ಆ ವಸ್ತು ತ್ರಿಗುಣಾತ್ಮಕವಾಗಿ ತ್ರಿವಿಧಲಿಂಗ ಸ್ವರೂಪದಿಂದ,
ಉಭಯವ ಕೂಡಿಕೊಂಡು ಉಮಾಮಹೇಶ್ವರತ್ವದಿಂದ,
ಭಕ್ತಿ ಕಾರಣನಾಗಿ ತತ್ವಂಗಳ ಗಭರ್ಿಕರಿಸಿಕೊಂಡು ಗೊತ್ತನಿಟ್ಟು
ಸ್ಥಲಂಗಳ ವ್ಯಕ್ತೀಕರಿಸಿ ಆರಾರ ವಿಶ್ವಾಸಂಗಳಲ್ಲಿ
ಮನೋಮೂರ್ತಿಯಾಗಿ ಗುರುವಿಂಗೆ ಇಹಪರವೆಂಬ
ಉಭಯವನರಿಪಿ,
ಲಿಂಗಕ್ಕೆ ಕಳಾಸ್ವರೂಪವೆಂಬ ಕಳೆಯನಿಂಬಿಟ್ಟು,
ಜಂಗಮಕ್ಕೆ ಪರಮ ನಿರ್ವಾಣವೆಂಬ ಪರಮಪದಮಂ ಲಕ್ಷಿಸಿ,
ಸ್ಥಲಕ್ಕೆ ಸ್ಥಲಜ್ಞನಾಗಿ, ನಿಸ್ಥಲಕ್ಕೆ ಪರಿಪೂರ್ಣನಾಗಿ,
ಇಂತೀ ಇದಿರೆಡೆಯಿಲ್ಲದ ವಸ್ತು ನೀನಲ್ಲಾ.
ಶಂಭುವಿನಿಂದಿತ್ತ ಸ್ವಯಂಭುವನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./91
ಸಂಚದ ಸರಾಗದಂತೆ, ಮಿಂಚಿನ ಕುಡಿವೆಳಗಿನ ಸಂಚಾರದಂತೆ,
ಉರಿಯ ನಾಲಗೆಯ ದ್ರವದ ತರಂಗದಂತೆ,
ಪನ್ನಗನ ಜಿಹ್ವೆಯ ನಿಳಿವಳಿಯಂತೆ,
ಚಮತ್ಕಾರದ ಅಸಿಯ
ಗುಣಮೊನೆಯಂತೆ,
ಅಶ್ವಪರ್ಣದ ಅಗ್ರದ ಬಿಂದುವಿನ ಅಂದದಾತ್ಮನ ತಿಳಿದು,
ಸರ್ವೆಂದ್ರಿಯದಲ್ಲಿ ಮುಂಚುವುದಕ್ಕೆ ಮುನ್ನವೆ
ಆತ್ಮನ ಉಚಿತವನರಿದು,
ರಸ ಬೆಂಕಿಯಲ್ಲಿ ಬೆರೆದಂತಾಗಬೇಕು;
ಈ ಗುಣ ಸಾವಧಾನಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./92
ಸತ್ತು ಚಿತ್ತುವಿನಿಂದ, ಚಿತ್ತು ಆನಂದದಿಂದ,
ತ್ರಿವಿಧ ಭೇದ ಮುಕ್ತಿಯ ಗೊತ್ತು,
ಮುಕ್ತಿ ನಿಮರ್ುಕ್ತವಾದುದು ನಿಜವಸ್ತುವಿನ ಗೊತ್ತು;
ಅದು ನಿಶ್ಚಯದ ಪದ.
ಶಂಭುರಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./93
ಸರ್ಪ ಮುಟ್ಟಿದಡೇನು ವಿಷ ತಪ್ಪಿದ ಮತ್ತೆ?
ಲೌಕಿಕಿ ವರ್ತನವಾದಡೇನು ಚಿತ್ತ ವಸ್ತುವಿನಲ್ಲಿ ಮುಟ್ಟಿದ ಮತ್ತೆ?
ತ್ರಿವಿಧವ ಮುಟ್ಟಿ ಪೂಜಿಸಿದಡೇನು
ತ್ರಿವಿಧ ಮಲತ್ರಯಕ್ಕೆ ಕಚ್ಚಿ ಕಡಿದಾಡಿದ ಮತ್ತೆ?
ಮಾತಿನ ಮಾಲೆಯಿಂದ ದ್ವೆ ತಾದ್ವೆ ತಂಗಳ ಎಷ್ಟು ನುಡಿದಡೇನು
ಚಿತ್ತ ವಸ್ತುವಿನಲ್ಲಿ ನಿಹಿತವಿಲ್ಲದೆ ಮತ್ತೆ?
ಇಂತಿವನರಿತು ಗುರುಕರಜಾತನಾದವಂಗೆ ಕತರ್ೃಭೃತ್ಯನೆಂಬ
ಸೂತಕದ ಸುಳುಹಿಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./94
ಸರ್ವಾಂಗಲಿಂಗ ವ್ಯವಧಾನಿ ಎಂದು ಆತ್ಮಂಗೆ ಕಟ್ಟಮಾಡಿ,
ಒಟ್ಟಾದ ತಿರುಗಿ ಮುಟ್ಟಿಹೆನೆನಬಹುದೆ?
ಮತ್ತೆ ಮನಸೋತು ಮುಟ್ಟುವುದು ವಿಷಯವೊ?
ನಿವರ್ಿಷಯವೊ?
ಹೆಣ್ಣ ಹಿಡಿದಲ್ಲಿ ವಿಷಯ ವ್ಯಾಪಾರನಾಗಿ
ಹೊನ್ನ ಹಿಡಿದಲ್ಲಿ ಸತಿ-ಸುತ ಸಕಲ ಸುಖಂಗಳಿಗೆ ಈಡೆಂದು
ಅಂಡಿನ ಅಂಡಕ್ಕೆ ಹಾಕುತ್ತ,
ಮಣ್ಣ ಹಿಡಿದಲ್ಲಿ ಅರೆ ಅಡಿಗಾಗಿ ಕಡಿದಾಡುತ್ತ
ಆ ತೆರ ಅರಿಕೆಗೊಡಲುಂಟೆ?
ಉನ್ಮತ್ತಂಗೆ ತನ್ನ ನುಡಿ ಸಸಿನವಲ್ಲದೆ
ಸನ್ಮತಗುಂಟೆ ಮರವೆಯ ತೆರ?
ಬಿಟ್ಟುದು ಹಿಡಿದೆನೆಂಬ ನಾಚಿಕೆ ತೋರದೆ,
ದುಷ್ಟ ಜೀವವ ನೋಡಾ?
ಅದು ನುಡಿಗೆಡೆಗಂಜದು, ಪುಡಿಪುಚ್ಚವಿಲ್ಲ,
ಅವರ ಒಡಗೂಡಲಿಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./95
ಸಹಪಂತಿಯಲ್ಲಿ ಗುರುಚರವಿರುತಿರಲಿಕ್ಕಾಗಿ
ತನ್ನ ಗುರುವೆಂದು ಮುಂದಿದ್ದ ಪ್ರಸಾದವ ಬಿಟ್ಟು
ಕೈವೊಡ್ಡಿ ಕೊಂಡಡೆ, ವಿಚಾರವಿಲ್ಲದೆ ಕೊಟ್ಟಡೆ,
ಆ ಗುರುವಿಂಗೆ ಗುರುವಿಲ್ಲ, ಅವನಿಗೆ ಪ್ರಸಾದವಿಲ್ಲ.ಮುಂದೆ ಇದಿರಿಟ್ಟು ತೋರಿದನಾಗಿ
ಎಲ್ಲಿಯೂ ನಾನೆ ಎಂದಲ್ಲಿ ಗುರುಸ್ಥಲ.
ಅಲ್ಲಿ ಪರಿಪೂರ್ಣನಾಗಿಪ್ಪನು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./96
ಸುಗಂಧದ ಅಂಗವಿದ್ದು ಕರಂಡದಲ್ಲಿ ಬಂಧಿಸಲಿಕ್ಕಾಗಿ,
ಗಂಧ ನಿಂದಿತ್ತಲ್ಲದೆ, ವಾಯುವಿನ ಕೈಯ ಗಂಧವ
ಕರಂಡದಲ್ಲಿ ಕೂಡಿ ಮುಚ್ಚಲಿಕ್ಕೆ ನಿಂದುದುಂಟೆ ಆ ಸುವಾಸನೆ?
ಈ ಗುಣ ಲಿಂಗಾಂಗಿಯ ಸಂಗದ ಇರವು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./97
ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ
ಎನ್ನ ಘಟದಲ್ಲಿ ಮೂರ್ತಿಗೊಂಡು
ಬಾಹ್ಯಕ್ರೀ ಆರ್ಚನೆ ಪೂಜನೆಗಳಿಂದ ಶುದ್ಧತೆಯ ಮಾಡಿದೆ.
ಸೂಕ್ಷ ್ಮ ತನುವಿಂಗೆ ಭಾವದ ಕೊನೆಯಲ್ಲಿ ಅರಿವಾಗಿ ಬಂದು
ಪ್ರಕೃತಿ ಸಂಚಾರ ಮರವೆಯಿಂದ ಬಹ ತೆರನ ತೀಚರ್ಿ
ಸರ್ವೆಂದ್ರಿಯಲ್ಲಿ ನೀ ನಿಂದು ಆ ಸೂಕ್ಷ ್ಮತನುವ ಶುದ್ಧವ ಮಾಡಿದೆ.
ಕಾರಣತನುವಿಂಗೆ ಇಂದ್ರ ಮಹೇಂದ್ರ ಜಾಲದಂತೆ,
ಮುರೀಚಿಕಾ ಜಲವಳಿಯತೆ,
ವಿದ್ಯುಲ್ಲತೆಯ ಸಂಚದ ಶಂಕೆಯ ಬೆಳಗಿನಂತೆ
ಸಷುಪ್ತಿಯಲ್ಲಿ ಮರವೆಯಿಂದ ಮಗ್ನನಾಗಲೀಸದೆ
ಆ ಚಿತ್ತುವಿಗೆ ನೀ ಚಿತ್ತವಾಗಿ ಮೂಛರ್ೆಗೊಳಿಸದೆ
ನೀನೆ ಮೂರ್ತಿಗೊಂಡೆಯಲ್ಲಾ!
ಇಂತೀ ತ್ರಿವಿಧ ಸ್ವರೂಪಕ್ಕೆ ತ್ರಿವಿಧಾಂಗ ಭರಿತನಾಗಿ
ತ್ರಿವಿದ ಸ್ವರೂಪ ನೀನಲಾ!
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./98
ಸ್ಥೂಲತನುವ ಬಿಟ್ಟು ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಕ್ರೀವಿಡಿದು ಅಂಗದಲ್ಲಿ ನಿಂದ ಕಾರಣ
ಸೂಕ್ಷ ್ಮತನುವನೊಲ್ಲದೆ ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಭಾವದ ಕೈಯಲ್ಲಿ ಅರ್ಪಿಸಿಕೊಂಬೆಯಾಗಿ.
ಕಾರಣತನುವ ಹರಿದು ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಚಿದಾದಿತ್ಯ ಚಿತ್ಪ್ರಕಾಶದ ಬೆಳಗಿನಲ್ಲಿ ಕಟ್ಟುವಡೆದೆಯಾಗಿ.
ಇಂತೀ ಜಾಗ್ರದಲ್ಲಿ ಕ್ರೀವಂತನಾಗಿ,
ಸ್ವಪ್ನದಲ್ಲಿ ಆತ್ಮಸ್ವರೂಪನಾಗಿ,
ಸುಷುಪ್ತಿಯಲ್ಲಿ ಮೂಛರ್ೆಯಿಂದ ಅಮೂರ್ತಿಯಾಗಿ
ವಿರಳಕ್ಕೆ ಅವಿರಳನಾಗಿ ಪರಿಪೂರ್ಣವಸ್ತು ನೀನಲಾ!
ಶುಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./99
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ
ನಿಂದ ಇಂಗಡಲಿನ ಅಡಿಯ ಕಂಡವರುಂಟೆ?
ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ
ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ?
ಅದು ಸರಿಹರಿದ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./100
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ,
ಕೊಂಬೆಗೆ ಕೋಡಗನಾಗಿ ಅವರವರ ಬೆಂಬಳಿಯಲ್ಲಿ
ಅಜಬೀಜವ ಕಾವ ಜಂಬುಕನಂತೆ ತಿರುಗಲೇತಕ್ಕೆ?
ಆಯುಷ್ಯ ತೀರಿದಲ್ಲಿ ಮರಣ, ಐಶ್ವರ್ಯ ಹೋದಲ್ಲಿ ದಾರಿದ್ರ ್ಯ
ಬಪ್ಪುದು
ಎಲ್ಲಿದ್ದಡೂ ತಪ್ಪದೆಂದರಿದ ಮತ್ತೆ
ಬಾಯಿಮುಚ್ಚಿ ಸತ್ತಂತಿಪ್ಪ ತೆರ.
ಇದು ಭಕ್ತಿವಿರಕ್ತಿಯ ಪಥ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು./101