Categories
ವಚನಗಳು / Vachanagalu

ದೇಶಿಕೆಂದ್ರ ಸಂಗನಬಸವಯ್ಯನ ವಚನಗಳು

ಕೋಪ ಮರವೆಗಳಿಂದೊಗೆದ ಕುರುಹಿಂಗೆ
ಬಾಹ್ಯಬಾಧೆಯನು ತೊಡೆದವರುಂಟು.
ಲೋಕದೊಳಗೆ ಜನನಸಂಗಬಾಧೆಯನು ತೊಡೆದವರಾರು ಹೇಳಾ?
ಮೋಹ ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು;
ಇಳೆಯೊಳಗೆ ತಾಪಸ್ಥಿತಿಸಂಗಬಾಧೆಯನು ತೊಡೆದವರಾರು ಹೇಳಾ?
ಮರವೆಗಳಿಂದೊಗೆದ ಕುರುಹಿಂಗೆ
ಬಾಹ್ಯಬಾಧೆಯನು ತೊಡೆದವರುಂಟು;
ಜಗದೊಳಗೆ ಮರಣಸಂಗಬಾಧೆಯನು ತೊಡೆದವರಾರು ಹೇಳಾ?
ಅಶನವ್ಯಸನವಿತ್ತುಗಳಿಂದೆ ಹಿರಿಯರೆನಿಸಬಹುದು,
ಲೋಕದೊಳಗೆ ಕ್ರಿಯಾಜ್ಞಾನೈಶ್ವರ್ಯಗಳಿಂದೆ ಹಿರಿಯರೆನಿಸುವರಾರು ಹೇಳಾ,
ಗುರುನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನಲ್ಲದೆ. /501
ಕೋಳಿಯಕೂಗಿನಲ್ಲಿ ಹುಟ್ಟಿದ ಬೆಕ್ಕು ಹಾಲುಕುಡಿದುದ ಕಂಡೆ.
ಇರುವೆಯ ಒಡಲೊಳಗೆ ಮೂರುಲೋಕದವರು ಮರೆದುನಿಂದರು.
ನಡುಮನೆಯ ಪಂಜರದೊಳಗಿರ್ದ ಹಕ್ಕಿಯ ಪಕ್ಕವ ಮುರಿದು
ಪಂಜರವನುಳಿದು,
ಚಂದ್ರನ ಕೂಡಿ ಇರುವೆಯ ನುಂಗಲು
ಮಂಗಲಮಯ ಮೂರುತಿ ತಾನೆ ಗುರುನಿರಂಜನ ಚನ್ನಬಸವಲಿಂಗ./502
ಕ್ರಿಯಾ ಗುರುವಿನಿಂದೊದಗಿ ಬಂದ ಮಹಾಂತಪದದಿಂದೆ
ಎನ್ನಂಗವ ಕಂಡೆ ಲಿಂಗದೊಳಗೆ.
ಜ್ಞಾನಗುರುವಿನಿಂದೊದಗಿ ಬಂದ ಮಹಾಂತಪದದಿಂದೆ
ಎನ್ನ ಪ್ರಾಣವಕಂಡೆ ಲಿಂಗದೊಳಗೆ.
ಮಹಾಜ್ಞಾನ ಗುರುವಿನಿಂದೊದಗಿ ಬಂದ ಮಹಾಂತಪದದಿಂದೆ
ಎನ್ನಾತ್ಮವಕಂಡೆ ಲಿಂಗದೊಳಗೆ.
ಅಂಗ ಪ್ರಾಣಾತ್ಮಲಿಂಗದೊಳಗಡಗಿ ತಾನಿಲ್ಲದ ಬಳಿಕ
ಪಾದೋದಕವನಾಹ್ವಾನಿಸಿ ವಿಸಜರ್ಿಸುವ ಭಾವ ತರಹರವಾಗಿ ಮರೆಯಿತ್ತು
ಗುರುನಿರಂಜನ ಚನ್ನಬಸವಲಿಂಗದೊಳಗೆ./503
ಕ್ರಿಯಾಗಮ್ಯಲಿಂಗವನು ಸತ್ಕ್ರಿಯಾ ಭಕ್ತಿಯಿಂದೆ
ತ್ಯಾಗಾಂಗದಲ್ಲಿ ಧರಿಸಿದ ವಿರಾಗ್ರತೆಯನುಳ್ಳ ಮಾಹೇಶ್ವರನು
ಕಾಯಕದಲ್ಲಿ ವಾಚಕ ಮಾನಸ ಸಂವಿತ್ಪ್ರಭಾನಂದಮಯವಾಗಿತೋರುತ್ತಿಹನಲ್ಲದೆ,
ಅಂಗಭವಿ ವೇಷಧಾರಿಗಳಂತಲ್ಲ ನೋಡಾ !
ಜ್ಞಾನಗಮ್ಯಲಿಂಗವನು ಸುಜ್ಞಾನಭಕ್ತಿಯಿಂದೆ
ಭೋಗಾಂಗದಲ್ಲಿ ಧರಿಸಿದ ಕಡುಗಲಿ ವೀರಮಾಹೇಶ್ವರನು
ವಾಚಕದಲ್ಲಿ ಮಾನಸ ಕಾಯಕ ಮಹೋತ್ಸಾಹಮಯವಾಗಿ
ತೋರುತ್ತಿಹನಲ್ಲದೆ, ಪ್ರಾಣಭವಿ ವೇಷಧಾರಿಗಳಂತಲ್ಲ ನೋಡಾ !
ಭಾವಗಮ್ಯಲಿಂಗವನು ಮಹಾಜ್ಞಾನಭಕ್ತಿಯಿಂದೆ
ಯೋಗಾಂಗದಲ್ಲಿ ಧರಿಸಿದ ಘನಗಂಭೀರಮಾಹೇಶ್ವರನು
ತನ್ನ ಮಾನಸದಲ್ಲಿ ಕಾಯಕ ವಾಚಕ
ಪರಮಶಾಂತ ಜ್ಞಾನಮಯವಾಗಿ ತೋರುತ್ತಿಹನಲ್ಲದೆ,
ಆತ್ಮಭವಿ ವೇಷಧಾರಿಗಳಂತಲ್ಲ ನೋಡಾ !
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಷಟ್ಸ್ಥಲಗಮ್ಯ ಷಡುದರ್ಶನಗಮ್ಯ ನೋಡಾ !/504
ಕ್ರಿಯಾಘನಗುರುವಿನಿಂದೊಗೆದು
ಪಂಚಾಚಾರಸ್ವರೂಪವನು ಕರ ಮನ ಭಾವದಲ್ಲಿ ಧರಿಸಿ,
ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರಮಾರ್ಗವಿಡಿಯದುಳಿದು
ಸ್ಥೂಲತನುವಿನಲ್ಲಿ ಅಣವಮಲಸಂಗ ಹಿಂಗದೆ,
ನಾನು ಶುದ್ಧಪ್ರಸಾದಿಯೆಂದು
ಸೂಕ್ಷ್ಮ ತನುವಿನಲ್ಲಿ ಮಾಯಾಮಲಯೋಗ ಹಿಂಗದೆ,
ನಾನು ಸಿದ್ಧಪ್ರಸಾದಿಯೆಂದು,
ಕಾರಣ ತನುವಿನಲ್ಲಿ ಕಾರ್ಮಿಕಮಲಸಂಬಂಧ ಹಿಂಗದೆ,
ನಾನು ಪ್ರಸಿದ್ಧಪ್ರಸಾದಿಯೆಂದು ನುಡಿಯುತಿಪ್ಪರಲ್ಲ!
ನುಡಿವ ನಾಲಿಗೆ, ನುಡಿಸುವ ಮನ,
ಎಚ್ಚರಿಸುವ ಅರಿವು, ಇವು ಯಾತಕ್ಕೆ ಬಾತೆಯಯ್ಯಾ?
ಇವು ಹಿಡಿದು ನಡೆವ ಜೀವನಿಗೆ ನಿರಿಯಾಮಾರ್ಗ ತಪ್ಪುವ ಬಗೆಯೆಂತು?
ನಿರಂತರದುಃಖಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./505
ಕ್ರಿಯಾಘನಗುರುವಿರ್ದಂತೆ ದರ್ಶನ ಸ್ಪರ್ಶನ
ಸಂಭಾಷಣೆಯೆಂಬ ಸತ್ಪೇಮ ಪ್ರಸಾದವ
ಸಮವೇದಿಸಿಕೊಂಡಾಚರಿಸುವುದೇ ಸರ್ವಜ್ಞತ್ವ.
ನಿಜಾನಂದಪರಿಪೂರ್ಣತ್ವ ನಿತ್ಯತೃಪ್ತತ್ವ
ಮತ್ತೆಂತೆಂದೊಡೆ, ಗ್ರಾಮೊಂದರಲ್ಲಿರ್ದಡೆ ತ್ರಿಕಾಲದಲ್ಲಿ ಕಂಡು ಬದುಕುವುದು.
ಗಾವುದದಾರಿಯ ಗ್ರಾಮದಲ್ಲಿರ್ದಡೆ
ಎಂಟುದಿವಸಕೊಂದುವೇಳೆ ಕಂಡು ಬದುಕುವುದು.
ಮೂಗಾವುದ ದೂರದಲ್ಲಿರ್ದಡೆ ಮಾಸಕ್ಕೊಮ್ಮೆ ಕಂಡು ಬದುಕುವುದು.
ಹನ್ನೆರಡುಗಾವುದ ಮೇಲೆಯಿರ್ದಡೆ ಆರುಮಾಸಕ್ಕೊಮ್ಮೆ ಕಂಡು ಬದುಕುವುದು.
ಎತ್ತಣಾಗಿ ದೂರದಿಂದಿರ್ದಡೆ ವರುಷಕೊಂದುವೇಳೆ ಕಂಡು ಬದುಕುವುದು.
ತಪ್ಪಲಾಗದು,ಮತ್ತೆ ತಪ್ಪಿದರೆ ಗುರುದ್ರೋಹ.
ಗುರುದ್ರೋಹಿಯಾದಲ್ಲಿ ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಪಂಚಾಕ್ಷರಿದ್ರೋಹವೆಡೆಗೊಂಬುವುದು.
ಇಂತು ಅಷ್ಟಾವರಣದ್ರೋಹಿಗೆ ನಿರಂತರ ಹಿರಿಯ ನರಕ ತಪ್ಪದು.
ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ. /506
ಕ್ರಿಯಾನುಭಾವಿಗಳು ಮುಗ್ದರಲ್ಲ, ಜ್ಞಾನಾನುಭಾವಿಗಳು ಮುಗ್ಧರಲ್ಲ,
ತತ್ವಾನುಭಾವಿಗಳು ಮುಗ್ಧರಲ್ಲ, ಶಿವಾನುಭಾವಿಗಳು ಮುಗ್ಧರಲ್ಲ,
ಪರಮಾನುಭಾವಿಗಳು ಮುಗ್ಧರಲ್ಲ, ಮಹಾನುಭಾವಿಗಳು ಮುಗ್ಧರಲ್ಲ,
ಮತ್ತಾರು ಮುಗ್ಧರೆಂದಡೆ ಮುಕ್ತಾಯಕ್ಕನಣ್ಣ ಆರೂಢನಜಗಣ್ಣ ಮುಗ್ಧ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./507
ಕ್ರಿಯಾಶಕ್ತಿ ಸಮೇತ ಅಚಾರಲಿಂಗವನು
ಪೃಥ್ವಿತತ್ವದಲ್ಲಿರಿಸಿ ಸದ್ವಾಸನೆಯೊಳು ಚರಿಸುತಿರ್ದನು.
ಜ್ಞಾನಶಕ್ತಿಸಮೇತ ಗುರುಲಿಂಗವನು
ಅಪ್ಪುತತ್ವದಲ್ಲಿರಿಸಿ ಸದ್ರುಚಿಯೊಳು ಚರಿಸುತಿರ್ದನು.
ಇಚ್ಛಾಶಕ್ತಿಸಮೇತ ಶಿವಲಿಂಗವನು
ಅಗ್ನಿತತ್ವದಲ್ಲಿರಿಸಿ ಸುರೂಪಿನೊಳು ಚರಿಸುತಿರ್ದನು.
ಆದಿಶಕ್ತಿಸಮೇತ ಜಂಗಮಲಿಂಗವನು
ವಾಯುತತ್ವದಲ್ಲಿರಿಸಿ ಸುಸ್ಪರ್ಶನದಲ್ಲಿ ಚರಿಸುತಿರ್ದನು.
ಪರಶಕ್ತಿಸಮೇತ ಪ್ರಸಾದಲಿಂಗವನು
ಆಕಾಶತತ್ವದಲ್ಲಿರಿಸಿ ಸುಶಬ್ದದಲ್ಲಿ ಚರಿಸುತಿರ್ದನು.
ಚಿತ್ಶಕ್ತಿಸಮೇತ ಮಹಾಲಿಂಗವನು
ಆತ್ಮತತ್ವದಲ್ಲಿರಿಸಿ ಸುತೃಪ್ತಿಯಲ್ಲಿ ಚರಿಸುತಿರ್ದನು.
ಇಂತಿಷ್ಟಲಿಂಗವನು ಕಂಗಳ ಮುಂದೆ ಇರಿಸಿ ಹಿಂಗದನಿಮಿಷನಾಗಿರ್ದನು
ಗುರುನಿರಂಜನ ಚನ್ನಬಸವಲಿಂಗ./508
ಕ್ಷುತ್ತುವರತಲ್ಲಿ ಪ್ರಸಾದದ ಭಾವನಾಸ್ತಿ.
ಪಿಪಾಸುವರತಲ್ಲಿ ಪಾದೋದಕದ ಭಾವನಾಸ್ತಿ.
ಶೋಕವರತಲ್ಲಿ ತಪ ಮೌನ ಜಪ ನಾಸ್ತಿ.
ಮೋಹವರತಲ್ಲಿ ಮಾಟಕೂಟದ ಬೇಟನಾಸ್ತಿ.
ಜನನವರತಲ್ಲಿ ಶಿಷ್ಯತನನಾಸ್ತಿ.
ಮರಣವರತಲ್ಲಿ ಗುರುನಿರಂಜನ ಚನ್ನಬಸವಲಿಂಗವಾಗಿ ಲಿಂಗೈಕ್ಯನಾಸ್ತಿ./509
ಖಜರ್ುರ ಸಾರಾಯ ಕಾಯಶೂನ್ಯ, ನಾರಿವಾಳ ಸಾರಾಯ ಮನಶೂನ್ಯ,
ದ್ವಂದ್ವಮೂರ್ತಿಯನೊಂದು ಭಾವ ಸತಿಭಾವ ಸಾರಾಯ ಸತ್ಯಾಂಗ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./510
ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ
ಕತರ್ುಗಳಿಗೆ ಅರ್ಥವ ಸವೆಯದೆ
ಸಟೆವೆರೆದು ಬಾಳುವ ಕುಟಿಲಗಳ್ಳರಿಗೆಂತಪ್ಪುದಯ್ಯಾ ಭಕ್ತಿ ?
ಸತ್ಯ ಧನವ ನಿತ್ಯ ನಿತ್ಯವರಿದು ಮರೆದಿತ್ತಡೆ
ಕತರ್ುವೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗಾ./511
ಗಂಡನ ಚಿತ್ತವನರಿದು ಒತ್ತೆಯನಿತ್ತ ಒಲುಮೆ ಗೆಲುವಾಗಿತ್ತು ನೋಡಾ!
ಲಿಂಗದ ಬೆಳಗನರಿದ ಕಳೆಯನೊತ್ತೆಯು ಕಲ್ಪವೃಕ್ಷ ಕಾಣಾ!
ಅರಿಯದ ಗುದ್ಯಾಟ ಬರಿಗೈಯ ಸುರಿದಂತೆ ಪರಿಣಾಮದ ಪ್ರಭೆಯಿಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ!/512
ಗಂಡನ ತಾಳಿಯ ಒರೆದು ನೋಡಿದರೆ
ಮೂರು ಬಣ್ಣದೊಳಗೆ ಅನಂತ ಬಣ್ಣಗಳಾಗಿ ಒಪ್ಪುತಿರ್ದವು ನೋಡಾ !
ನಮ್ಮಾತನ ಒಲುಮೆಗೆ ಬಣ್ಣದ ಸಾರವ ಸುಖಿಸಬಂದ
ಅಣ್ಣಗಳ ಕಣ್ಮನ ಭಾವಕ್ಕೆ ಕಾರ್ಯವಾದರೆ
ಕಾರಣನಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ./513
ಗಂಡನ ಸುಖದುಃಖವನರಿಯದ ದಿಂಡಿಯದೊತ್ತು,
ಅವಳ ಉಪಚಾರ ಕಂಡಿತ್ತು ; ಅವಳ ಮೋಹ ಕಂಡಿತ್ತು.
ಅವಳನು ಪುರುಷಸಹಗಮನಿಯರ ಸರಿಯೆನಲುಂಟೆ ?
ಮತ್ತೆ ಅಂಗದಮೇಲೆ ಲಿಂಗವ ಧರಿಸಿ ಸಂಗಸಂಯೋಗ ಸಮರಸವನರಿಯದ
ಭಂಗಗೇಡಿ ಮನುಜನ ಕ್ರಿಯಾ ಕಂಡಿತ್ತು, ಅವನ ಜ್ಞಾನ ಕಂಡಿತ್ತು,
ಆ ಪ್ರಾಣಿಯನು ಲಿಂಗಸಹಭೋಜನ ಸಮಸುಖ
ಸಮರಸಾನಂದರುಗಳಿಗೆ ಸರಿಯೆನಲುಂಟೆ ?
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮೈಕ್ಯ ಪ್ರಸಾದಿಗೆ
ನಮೋ ನಮೋ ಎನುತಿರ್ದೆನು./514
ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ.
ತಂಡ ತಂಡದ ಭೋಗವನಾ ಮಂಡಲದ ಮಾನಿನಿಯರೇನು ಬಲ್ಲರು ಕಾಣಿರೆ !
ಸುಚಿತ್ತಾಲಯದಲ್ಲಿ ಬಹಿರಚತುಷ್ಟಿಕಳಾಯುಕ್ತದಿಂ ನೆರೆವ
ವತ್ತರ ಒಲುಮೆಯ ರತಿಯೊಳ್ಮುಳುಗಿದ ಸೊಬಗಿನ ಸೊನ್ನೆಯನೇನೆಂಬೆನವ್ವ !
ಸುಬುದ್ಧಿ ನಿಲಯದಲ್ಲಿ ಮಧ್ಯಚತುಷ್ಟಿಕಳಾಯುಕ್ತದಿಂ ಕೂಡುವ
ಬಣ್ಣಿತೆ ಭಾವರಮ್ಯ ನಯವಪ್ಪುಗೆಯಸುಖದೊಳ್ಮುಳುಗಿದ
ಪರಿಣಾಮದ ಕುಶಲವನೇನೆಂಬೆನವ್ವ !
ನಿರಹಂಕಾರ ಗೃಹದಲ್ಲಿ ಅಂತಃಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ
ಎಳೆಮೋಹ ಸಮತೆಯ ಸುಖದೊಳ್ಮುಳುಗಿದ
ಪರಮಪರಿಣಾಮವನೇನೆಂಬೆನವ್ವ !
ಸುಮನಮಂಟಪದಲ್ಲಿ ಮಹಾನುಭಾವ ಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ
ಕಲೆ ಸೋಂಕು ರತಿರಮ್ಯದೊಳ್ಮುಳುಗಿದ ಅತಿಶಯದುನ್ನತಿಯನೇನೆಂಬೆನವ್ವ !
ಸುಜ್ಞಾನಮಂದಿರದಲ್ಲಿ ಆನಂದಚತುಷ್ಟಿಕಳಾಯುಕ್ತದಿಂ ನೆರೆವ
ಮೆಚ್ಚು ಅಚ್ಚೊತ್ತಿರ್ದವಿರಳ ಪರಿ ಸುಖವನೇನೆಂಬೆನವ್ವ !
ಸದ್ಭಾವಾಲಯದಲ್ಲಿ ಸಮರಸಚತುಷ್ಟಿಕಳಾಯುಕ್ತದಿಂ ಸತ್ಕೂಟ ಸನುಮತವೆನಿಸುವ
ಅನುಪಮ ಸುಖರತಿಯೊಳ್ಮುಳುಗಿದ ಅಗಣಿತದುನ್ನತಿಯನೇನೆಂಬೆನವ್ವ !
ನಿಜಾಲಯದಲ್ಲಿ ನಿತ್ಯನಿಬ್ಬೆರಗು ಪರವಶ ಪರಿಪೂರ್ಣವೆಂಬ
ಅಖಂಡ ಚತುಷ್ಟಿಕಳಾಯುಕ್ತದಿಂ
ಅಬಿನ್ನಸಂಯೋಗದತಿಶಯದಾನಂದದೊಳ್ಮುಳುಗಿದ
ಘನಸುಖದುನ್ನತಿಯ
ಗುರುನಿರಂಜನ ಚನ್ನಬಸವಲಿಂಗದೊಳಗೆ ಏನೆಂಬೆನವ್ವ !/515
ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ,
ಮಂಡಲದೊಳಗುಳ್ಳ ಮಿಂಡರ ನೋಡಿ ನೋಡಿಯಿತ್ತಡೆ
ಗಂಡನೈಶ್ವರ್ಯದ ಬೆಳಗು ಘನವಾಯಿತ್ತು ಮೂರು ಲೋಕದೊಳಗೆ ;
ವಿನಯವಾಯಿತ್ತು ಸಕಲಸನ್ನಿಹಿತರಿಗೆ ;
ಸನುಮತವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ./516
ಗಂಡನಿಂದೆ ಹುಟ್ಟಿದ ಕೂಸ ತೊಟ್ಟಿಲೊಳಗಿಟ್ಟು ಮುದ್ದಾಡಿದರೆ
ಮೊಲೆ ತೊರೆದು ಹಾಲು ಸುರಿಯಲು ಅದರ ಸವಿಯ ಕಾಲಲ್ಲಿ ಕಂಡು
ತಾಯಿಮಗಸಹಿತ ಗುರುನಿರಂಜನ ಚನ್ನಬಸವಲಿಂಗನ
ಶರಣರೊಳು ಸುಖಿಸಿದರು./517
ಗಂಡಸು ಹೆಂಗಸು ಕಂಡು ಕಾಣದ ಬಂಟಾಟಬಗೆಯ
ಖಂಡಿಸಿ ನಡೆವ ಮಹಿಮನು.
ನಾದ ಬಿಂದು ಕಳೆಯ ಸಡಗರವ ಸುಟ್ಟು ಉರಿಯ ಬೆಳಗಕೂಡಿ,
ಹಿಂದಮುಂದನುಣ್ಣದೆ ಪುಣ್ಯ ಪಾಪವ ನೋಡಿ
ಸುಖಿಸುವ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ./518
ಗಂಡುಹೆಣ್ಣಲ್ಲದಾರು ಹನ್ನೊಂದುಕೋಟಿಗಳನಳಿದು ನೀಟವಾಗಿಷ್ಟವಹಿಡಿದು
ಮಾಟಗಳೆದು ಮಾಡಿದರೆಮ್ಮ ಬಸವಾದಿಪ್ರಮಥರು.
ಅವರಾಟವನರಿದು ಮಾಡುವಲ್ಲಿ ಪಂಚೇಂದ್ರಿಯಂಗಳಲ್ಲಿ
ಪ್ರಕಾಶ ಮುಂದುವರಿಯಬೇಕು.
ವಿಷಯಂಗಳಲ್ಲಿ ಕಳೆ ಸೂಸುತಿರಬೇಕು,
ಕರಣಂಗಳಲ್ಲಿ ಬೆಳಗು ಬೆಂಬಳಿಗೊಂಡಿರಬೇಕು.
ಗುರುನಿರಂಜನ ಚನ್ನಬಸವಲಿಂಗದ ಪ್ರಭೆಯೊಳಡಗಿ ಆಚರಿಸುತ್ತಿರಬೇಕು.
/519
ಗಂಧವನಡಗಿಸಿಕೊಂಡ ಘ್ರಾಣದಂತಾಯಿತ್ತೆನ್ನ ಭಕ್ತಿ.
ರಸವನಡಗಿಸಿಕೊಂಡ ನಾಲಗೆಯಂತಾಯಿತ್ತೆನ್ನ ಭಕ್ತಿ.
ರೂಪವನಡಗಿಸಿಕೊಂಡ ನೇತ್ರದಂತಾಯಿತ್ತೆನ್ನ ಭಕ್ತಿ.
ಸ್ಪರ್ಶನವನಡಗಿಸಿಕೊಂಡ ತ್ವಕ್ಕಿನಂತಾಯಿತ್ತೆನ್ನ ಭಕ್ತಿ.
ಶಬ್ದವನಡಗಿಸಿಕೊಂಡ ಕರ್ಣದಂತಾಯಿತ್ತೆನ್ನ ಭಕ್ತಿ. ಮತ್ತೆಲ್ಲವನಡಗಿಸಿಕೊಂಡ
ಚನ್ನವೃಷಭೇಂದ್ರಲಿಂಗವು ಭಕ್ತಿಭಾವವೆಲ್ಲವು ತಾನಾಯಿತ್ತು.
/520
ಗಂಭೀರ ಗುರುವೆನ್ನ ಸಂಗಸಮರಸವ ಮಾಡಿ,
ಅಂಗದೊಳಡಗಿರ್ದ ಕಂಗಳ ಬೆಳಗ
ಕರುಣದಿಂದೆತ್ತಿ ಪಣೆಗಿಡಲು,
ಗಣಿತಲಿಖಿತವು ಕಾಣದೋಡಿದವು,
ಕಳೆ ಬಿಂದು ನಾದ ಸಂಭ್ರಮೆಯಗೊಂಡು,
ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ./521
ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು
ಅರುವಿನಮುಖದಿಂದ ಅಂಗ ಭಾವದ ಕಳೆಯೊಳು ನಿಂದು
ಕರಸ್ಥಲಕ್ಕೆಯ್ದಿಸಿ, ನಯನಸ್ಥಲವೆರಸಿ ಹೃದಯಸ್ಥಲಕ್ಕೊಯ್ದು
ಭೃಕುಟಿಸ್ಥಲದಲ್ಲಿರಿಸಿ ಮಂತ್ರಸ್ಥಲ ಕೂಡಿ ಲಯಸ್ಥಲದಲ್ಲಿ
ಘನಸುಖಪರಿಣಾಮಿಯಾಗಿರ್ದ ಕಾಣಾ ನಿಮ್ಮ ಶರಣ.
ಇಂತೀ ಸಗುಣ ನಿರವಯಾನಂದ ನಿಜಸುಖವನರಿಯಲರಿಯದೆ
ಶೈವಾಗಮದ ನುಡಿಯವಿಡಿದು ಗಿರಿ ಗಹ್ವರ ನದಿಮೂಲ
ಶರಧಿ ಕಾಂತಾರ ಕಾಶಿ ಮೊದಲಾದ
ಕಂಡ ಕಂಡದುದಕ್ಕೆ ಹರಿದು ಹೋಗಿ
ಅನ್ನೋದಕವ ಸಣ್ಣಿಸಿ ಸೊಪ್ಪು ಪಾಷಾಣಪುಡಿಯ ಕೊಂಡು
ಕಷ್ಟಬಟ್ಟು ಕಾಣಲರಿಯದೆ ಕೆಟ್ಟುಹೋಗುವ ಭ್ರಷ್ಟರಿಗೆ
ಜ್ಞಾನಿಯೆಂದು ನುಡಿವ ಶುನಕರಿಗೆ ನಾಯಕ ನರಕ ತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./522
ಗಗನದಾವರೆ ಮೇರುಗಿರಿಪರ್ವತದೊಳೆಸೆವ ಪರಬ್ರಹ್ಮಶಿವನ
ಮುಖಮುಖಾಂತರದಿಂ ನೋಡಿ ಕಂಡು ಸುಖಮಯನಾಗಿರಬೇಕಲ್ಲದೆ,
ಯುಕುತಿಯಾಯಾಸದಿಂದರಿದು ಕಂಡು ಕೂಡಬೇಕೆಂಬ
ಮುಕುತಿಗೇಡಿಗಳಿನ್ನೆಂತು ಪಥವನರಿದಿರುವರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ !/523
ಗಜಬಜೆಯ ನೀಗಿ ನಿಜಬೆಳಗಿನಲ್ಲಿ ಸುಳಿವ ಸುಜ್ಞಾನಿ ಶರಣನಂಗವು
ಆಚಾರಪ್ರಭೆಯೊಳಡಗಿಪ್ಪುದು.
ಮನವು ಮಹಾನುಭಾವಪ್ರಕಾಶದೊಳಡಗಿರ್ಪುದು.
ಪ್ರಾಣವು ಸಂಗಸುಖವಾಗಿರ್ಪುದು.
ಅರಿವು ಗುರುನಿರಂಜನ ಚನ್ನಬಸವಲಿಂಗವಾಗಿರ್ಪುದು./524
ಗತಿಮತಿಯೊಳೊಡವೆರೆದ ಪರಮಾನಂದ ಶರಣ
ಪುತ್ರ ಮಿತ್ರ ಕಳತ್ರಾದಿಗಳನರಿಯ ನೋಡಾ.
ಜಾತಿ ಗೋತ್ರ ಕುಲ ಆಶ್ರಮ ನಾಮ ವರ್ಣಂಗಳಿಲ್ಲದೆ
ಭಕ್ತಾಂಗನೆ ಮುಕ್ತಾಂಗನೆಯ ನೆರೆದು ಯುಕ್ತಿಯನಳಿದುಳಿದು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ತಾನು ತಾನಾದ ಭಾವಶೂನ್ಯನ ಏನೆಂದುಪಮಿಸಬಹುದು ಹೇಳಾ !/525
ಗಾರುಡಿಗನ ಸಂಗವನರಿದ ಜಾಣ,
ಹಾವನಾಡಿಸಬಲ್ಲ, ಹದ್ದನಾಡಿಸಬಲ್ಲ, ಕಪಿಯನಾಡಿಸಬಲ್ಲ.
ಮತ್ತೆ ತಾನೆ ಗುರುನಿರಂಜನ ಚನ್ನಬಸವಲಿಂಗದೊಳಡಗಬಲ್ಲ. /526
ಗಿಳಿಯ ಗರ್ಭದಲ್ಲಿ ಮಾಜರ್ಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು
ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು
ಪುರದ ಜನರು ಬಿತಿಗೊಂಡು ನೋಡುವ ಸಮಯದಲ್ಲಿ
ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು,
ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು./527
ಗುಂಜುರಂಜಿನ ಮೋಹದ ಸಂಜೆ ಬೆಳಗ ಸಂಯುಕ್ತರು
ನಿಮ್ಮಾರ್ಚನೆಯಾರ್ಪಣವೆಂದು ರಂಜಿಕ್ಕಿ ಮಾಡುವರಯ್ಯಾ,
ಎಲೆ ನಿರಂಜನ ನಿಸ್ಸೀಮ ನಿಗಮಗೋಚರ ಲಿಂಗವೇ,
ಅರ್ಥ ವಿಷಯಕ್ಕೆ ಅರ್ಚನೆಯನೆಸಗುವರಯ್ಯಾ ಬಲ್ಲಂತೆ.
ಹೆಣ್ಣಿನ ವಿಷಯಕ್ಕೆ ನಲಿನಲಿದರ್ಚನೆಯ ಮಾಡುವರಯ್ಯಾ ಮೈದುಂಬಿ.
ಹಲವುಪರಿ ಅಶನಕ್ಕೆ ಕುನ್ನಿಗಳಂತೆ ಬಾಲವ ಬಡಿದು,
ನಿಮ್ಮ ನೆನೆವನೆಬ್ಬಿಸಿ ಗರ್ಭವ ತುಂಬಿ
ಮಬ್ಬುಗೊಂಡು ಬೀಳುವ ಮಲಭುಂಜಕ ಮನುಜರು
ನಿಮಗಾರ್ಚನೆಯಾರ್ಪಣೆ ಮಾಡಿಕೊಂಬ ಪರಿಯೆಂತಯ್ಯಾ ?
ಈ ವೇಷಧಾರಿಗಳಿಗೆ ನಿಮ್ಮ ನಿಜಾನಂದ
ಶೇಷಪ್ರಸಾದ ನಿಲುವೆಂತು ಸಿಕ್ಕುವುದಯ್ಯಾ
ಗುರುನಿರಂಜನ ಚನ್ನಬಸವಲಿಂಗಾ ?/528
ಗುಣಯುಕ್ತನಾಗಿ ಗಣಸಮ್ಮೇಳ ಸಂಯೋಗಿಯೆಂದಡೆ
ಅಣಕವಾಯಿತ್ತು ನಿನ್ನ ಜನ್ಮ ಅವನಿಯೊಳಗೆ.
ಬಿಡು ಹಿಡಿದುನಡೆ ಎಡಬಲನುರುಹಿ ಹೆಜ್ಜೆದಪ್ಪಿ ಹೆಜ್ಜೆಹಿಡಿದು ಮಡಿದರೆ
ಅದೇ ಮಹಾಲಿಂಗೈಕ್ಯ ಗುರುನಿರಂಜನ ಚನ್ನಬಸವಲಿಂಗ ಶರಣರಲ್ಲಿ./529
ಗುರು ಶಿಷ್ಯ, ಲಿಂಗ ಭಕ್ತ, ಜಂಗಮ ಶರಣ, ಭಾವದಂಗವರಿಯಬಂದ
ನಿಜಾನಂದ ನಿಲವಿಗೆ ನಾನರಿದರಿದಾನಂದಮುಖನಾಗಿಹೆನು.
ಕಾಯವರಿಯದು ಮನವರಿಯದು ಪ್ರಾಣವರಿಯದು ಭಾವವರಿಯದು
ನಡೆ ನುಡಿ ನೋಟವರಿಯವು
ಗುರುನಿರಂಜನ ಚನ್ನಬಸವಲಿಂಗ ನೀನಲ್ಲದೆ./530
ಗುರುಕರಜಾತನಾಗಿ ಸಕಲಚೈತನ್ಯವೇ ಜಂಗಮವೆಂದರಿದ ಬಳಿಕ,
ಕ್ರಿಯೆಯಲ್ಲಿ ಜಂಗಮ ಸನ್ನಿಹಿತ ಸುಖಿಸಬೇಕಲ್ಲದೆ
ವಿರಹಿತ ನಡೆ ಹೀನವಯ್ಯಾ.
ಧರೆಯೊಳು ಚೈತನ್ಯವನಗಲಿ ಜೀವಿಸಲುಂಟೆ?
ಹಸಿಯ ಭೂತದ ವಶಗತರ ಮಾತು
ಮುಟ್ಟಲರಿಯದು ಗುರುನಿರಂಜನ ಚನ್ನಬಸವಲಿಂಗ ಭಕ್ತಿಯ./531
ಗುರುಕರಜಾತನಾದ ಸಗುಣಾನಂದ ಸಂಪನ್ನನು
ಬಿಡಬೇಕು ಕಾಣಾ ತನುತ್ರಯದಾಸೆಯನು, ಭಕ್ತಿಕ್ರಿಯಾ ವಿಶ್ವಾಸವನು.
ಶಿವಲಿಂಗನಿಷ್ಠೆ ನಿರ್ಗುಣಾನಂದೈಶ್ವರ್ಯವುಳ್ಳಾತನು
ಬಿಡಬೇಕು ಕಾಣಾ ಮಲತ್ರಯದಾಸೆಯನು, ಲಿಂಗಸುಖರತಿ ಮೋಹವನು.
ಜಂಗಮದಾಸೋಹಸುಖಮಯನು ಬೀಡಬೇಕು ಕಾಣಾ
ಜೀವನತ್ರಯದಾಸೆಯನು, ತ್ರಿವಿಧ ಪ್ರಸಾದಸಾರವನು.
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಲ್ಲಿ
ಇವು ತಪ್ಪಿದರೆ ಮುಂದೆ ನರಕ ತಪ್ಪದು ಕಾಣಾ./532
ಗುರುಕರಜಾತರಾಗಿ ಬಂದವರೆಂದು
ಹರಿವಾಣತುಂಬಿ ಸೂಸುತ ನೀಡಿಸಿಕೊಂಡು,
ತೋರಿಕೊಂಬ ಭೇದವನರಿಯದೆ
ಕುಂಡಿತುಂಬಿದ ತೊಂಡುಪಶುವಿನಂತೆ ಕೈಬಾಯಿದುಡುಕಿ ತಿಂದು,
ಸೂರ್ಯಾಡಿ ಸಮಯಾಚಾರಕ್ಕೆ ಛೀ ಛೀ ಎಂದು
ಢೂಕ ಹಾಕುವರೆಂದು ಕೊಟ್ಟು ಕೊಟ್ಟುಂಬ
ಸೊಟ್ಟನಡೆಯ ಭ್ರಷ್ಟ ಮೂಳ ಹೊಲೆಯರ
ಹೊಟ್ಟೆಯ ತುಳಿದುಹಾಕುವರು ದುರ್ಗತಿಗೆ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./533
ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು
ಮನಬಲ್ಲಂತೆ ಹರಿದಾಡಿ,
ಹಿರಿಯರನರಿಯದೆ ಹಳಿದು ಮರೆಯಿಂದೆ
ದುಬರ್ುದ್ಧಿಯ ಮಡುಗಿ ಹೆಮ್ಮೆ ಮುಮ್ಮೊಗನಾಗಿ
ಮೆರೆದು ಹೋಗುವ ಬರಿವೇಷಭಾರಕರಿಗೆ
ಪರಮಕ್ರಿಯಾ ನಿಜಜ್ಞಾನದ ನಿಲುವೆಂತು ಸಾಧ್ಯವಪ್ಪುದಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./534
ಗುರುನಿರಂಜನ ಪರಮಕಟಾಕ್ಷಮಣಿಯೆನಗೆ
ಸರ್ವಾಚಾರ ಸಂಪತ್ತ ತೋರ ಬಂದುದು ನೋಡಾ.
ಆಚಾರಲಿಂಗವಾಗಿ ಶ್ರದ್ಧಾಭಕ್ತಿಯೊಳು ಸುಖಿಸಿ
ಎನ್ನ ಸುಚಿತ್ತಹಸ್ತವ ಕೊಳಬಂದ ನೋಡಾ.
ಗುರುಲಿಂಗವಾಗಿ ನೈಷ್ಠಿಕಭಕ್ತಿಯೊಳು ಪರಿಣಾಮಿಸಿ
ಎನ್ನ ಸುಬುದ್ಧಿಹಸ್ತವ ಕೊಳಬಂದುದು ನೋಡಾ.
ಶಿವಲಿಂಗವಾಗಿ ಸಾವಧಾನಭಕ್ತಿಯೊಳು ಆನಂದಿಸಿ
ಎನ್ನ ನಿರಹಂಕಾರಹಸ್ತವ ಕೊಳಬಂದುದು ನೋಡಾ.
ಜಂಗಮಲಿಂಗವಾಗಿ ಅನುಭಾವಭಕ್ತಿಯೊಳು ಸಂತೋಷಬಟ್ಟು
ಎನ್ನ ಸುಮನಹಸ್ತವ ಕೊಳಬಂದುದು ನೋಡಾ.
ಪ್ರಸಾದಲಿಂಗವಾಗಿ ಆನಂದಭಕ್ತಿಯೊಳು ಹರುಷಬಟ್ಟು
ಎನ್ನ ಸುಜ್ಞಾನಹಸ್ತವ ಕೊಳಬಂದುದು ನೋಡಾ.
ಮಹಾಲಿಂಗವಾಗಿ ಸಮರಸಭಕ್ತಿಯೊಳು ತೃಪ್ತಿಬಟ್ಟು
ಎನ್ನ ಸದ್ಭಾವಹಸ್ತವ ಕೊಳಬಂದುದು ನೋಡಾ.
ಇಂತು ಷಡುಲಿಂಗವಾಗಿ ಷಟ್ಸ್ಥಲವನ್ನಿತ್ತು
ಷಡುಭಕ್ತಿಯೊಳಾನಂದಿಸಿ
ನಿರಂಜನ ಚನ್ನಬಸವಲಿಂಗ ಸಂಬಂಧಿಯೆನಿಸಬಂದುದು ನೋಡಾ./535
ಗುರುಪಾದೋದಕದೊಳಗಿರ್ದೆವೆಂಬರು ;
ಗುರುಪಾದೋದಕದ ನೆಲೆಯನರಿಯದ ಸಂಚಿತದೊಳಗಿಪ್ಪ ವಂಚಕರು.
ಲಿಂಗಪಾದೊದಕದೊಳಗಿರ್ದೆವೆಂಬರು ;
ಲಿಂಗಪಾದೋದಕದ ನೆಲೆಯನರಿಯದ ಪ್ರಾರಬ್ಧದೊಳಗಿಪ್ಪ ಮಂದಾತ್ಮರು.
ಜಂಗಮಪಾದೋದಕದೊಳಗಿರ್ದೆವೆಂಬರು ;
ಜಂಗಮಪಾದೋದಕದ ನೆಲೆಯನರಿಯದ ಆಗಾಮಿಯೊಳಗಿಪ್ಪ ಅನಿಷ್ಟರು.
ತ್ರಿವಿಧೋದಕವನರಿಯದೆ ತ್ರಿವಿಧಕರ್ಮದೊಳು ಮುಳುಗಿರ್ದ
ನವಖಂಡ ಪಾದೋದಕೈಕ್ಯರೆಂಬ
ಸುಲಭನುಡಿಗೆ ಮೆಚ್ಚರಯ್ಯಾ ನಿಮ್ಮ ಶರಣರು
ಗುರುನಿರಂಜನ ಚನ್ನಬಸವಲಿಂಗಾ./536
ಗುರುಪ್ರಸಾದವನು ಪಡೆವೆನೆ ಎನಗಂಗವಿಲ್ಲ ಕಾಣಾ !
ಲಿಂಗಪ್ರಸಾದವ ಪಡೆವೆನೆ ಎನಗೆ ಮನವಿಲ್ಲ ಕಾಣಾ !
ಜಂಗಮಪ್ರಸಾದವ ಪಡೆವೆನೆ ಎನಗೆ ಪ್ರಾಣವಿಲ್ಲ ಕಾಣಾ !
ಗುರುನಿರಂಜನ ಚನ್ನಬಸವಲಿಂಗಾ
ನೀವೆನ್ನಂಗ ಮನ ಪ್ರಾಣವಾಗಿ
ತೆರಹಿಲ್ಲದಿರ್ಪ ಪರಮಸುಖಪ್ರಸಾದದೊಳೋಲಾಡುತಿರ್ದೆನು ಕಾಣಾ./537
ಗುರುಪ್ರಸಾದಿಯೆನಿಸಿಕೊಂಡಬಳಿಕ
ತನ್ನ ಕಾಯವನುಪಚಾರದನುಕೂಲಿಗಲಸಿದರೆ
ಆ ಕಾಯ ಮಾಯೋಚ್ಛಿಷ್ಟ.
ಲಿಂಗಪ್ರಸಾದಿಯೆನಿಸಿಕೊಂಡಬಳಿಕ
ತನ್ನ ಕರಣವ ಮಂತ್ರಧ್ಯಾನ ಜಪಸ್ತೋತ್ರೋಪಚಾರದನುಕೂಲಿಗಲಸಿದರೆ
ಆ ಕರಣ ಮಾಯೋಚ್ಛಿಷ್ಟ.
ಜಂಗಮಪ್ರಸಾದಿಯೆನಿಸಿಕೊಂಡಬಳಿಕ
ತನ್ನಾತ್ಮವನು ದಾಸೋಹದುಪಚಾರದನುಕೂಲಿಗಲಸಿದರೆ
ಆ ಆತ್ಮನು ಮಾಯೋಚ್ಛಿಷ್ಟ.
ಇಂತು ತ್ರಿವಿಧ ಪ್ರಸಾದಿಗಳೆನಿಸಿಕೊಂಡಬಳಿಕ
ತ್ರಿವಿಧಕ್ಕನುಕೂಲಿಯಾಗದಿರ್ದಡೆ ತ್ರಿವಿಧರ್ೋಚ್ಛಿಷ್ಟ.
ತ್ರಿವಿಧರ್ೋಚ್ಛಿಷ್ಟವಾದ ಜೀವನಿಗೆ ನಾಯಕ ನರಕ ತಪ್ಪದು ಕಾಣಾ
ಗುರುನಿರಂಜನ ಚನ್ನ ಬಸವಲಿಂಗಾ./538
ಗುರುಭಕ್ತನಾದ ಮೇಲೆ ಅಂಗದ ಸುಖವ ಮರೆದಿರಬೇಕು.
ಲಿಂಗಭಕ್ತನಾದ ಮೇಲೆ ಮನದ ಸುಖವ ಮರೆದಿರಬೇಕು.
ಜಂಗಮಭಕ್ತನಾದಮೇಲೆ ಪ್ರಾಣದ ಸುಖವ ಮರೆದಿರಬೇಕು.
ಪಾದೋದಕಭಕ್ತನಾದ ಮೇಲೆ ರಸನೆಯ ಸುಖವ ಮರೆದಿರಬೇಕು.
ಪ್ರಸಾದಭಕ್ತನಾದ ಮೇಲೆ ಅನ್ಯವಾಸನೆಯ ಸುಖವ ಮರೆದಿರಬೇಕು.
ವಿಭೂತಿಯ ಧರಿಸಿದ ಮೇಲೆ ಸೋಂಕಿನ ಸುಖವ ಮರೆದಿರಬೇಕು.
ರುದ್ರಾಕ್ಷಿಯ ಧರಿಸಿದ ಮೇಲೆ ಸ್ತ್ರೀರೂಪಿನ ಲಕ್ಷಣ ಮರೆದಿರಬೇಕು.
ಮಂತ್ರವೇದಿಯಾದ ಮೇಲೆ ಲಲನೆಯರ
ವಿನಯ ನುಡಿಯ ಒಲಿದು ಕೇಳದಿರಬೇಕು.
ಇಂತು ಅಷ್ಟಾವರಣವನು ಅಂಗದಲ್ಲಿ ಕಾಣಿಸಿಕೊಂಡ ಬಳಿಕ
ಭಕ್ತಿ ನಿಷ್ಠೆಯ ನೆರೆದು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಚ್ಚರಿತನಾಗಿರಬೇಕು./539
ಗುರುಭಕ್ತಿಯ ಮಾಡುವೆ ಗುರುವನರಿಯದೆ.
ಲಿಂಗಭಕ್ತಿಯ ಮಾಡುವೆ ಲಿಂಗವನರಿಯದೆ.
ಜಂಗಮಭಕ್ತಿಯ ಮಾಡುವೆ ಜಂಗಮವನರಿಯದೆ.
ಪ್ರಸಾದಭಕ್ತಿಯ ಮಾಡುವೆ ಪ್ರಸಾದವನರಿಯದೆ.
ಚತುರ್ವಿಧಸಾರಾಯ ಸಗುಣಾನಂದಸುಖಿ
ಚತುರ್ವಿಧಸಾರಾಯವನರಿಯದೆ
ಗುರುನಿರಂಜನ ಚನ್ನಬಸವಲಿಂಗದೊಡಲುಗೊಂಡು
ಉಲುಹನರಿಯದಿರ್ದೆನು./540
ಗುರುಮುಖದಿಂದುದಯವಾಗಿ ಬಂದ ಪ್ರಣವಾದಿ ಪಂಚಾಕ್ಷರವನು,
ತನು ಮನ ಭಾವವಿರಹಿತನಾಗಿ ನೆನಹು ನಿಂದರೆ
ಚಿನುಮಯ ಪರಶಿವಲಿಂಗ ತಾನೆ ಬೇರಿಲ್ಲ
ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./541
ಗುರುಮುಖದಿಂದೊಗೆದ ನಿರವಯಾನಂದ ಪ್ರಸಾದಮೂರ್ತಿಗೆ
ಪರಿಯಿಂದೆಸೆವ ತನು ಮನ ಭಾವಾದಿ ಸಚ್ಚಿತ್ಪದಾರ್ಥವನು
ಸಂಚಲವಿಲ್ಲದೆ ಸಾವಧಾನಿಯಾಗಿ,
ಭಿನ್ನವಳಿದರ್ಪಿಸಿಯಾನಂದಿಸಬಲ್ಲಾತನೆ ಪ್ರಸಾದಿಯಯ್ಯಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ. /542
ಗುರುಮುಟ್ಟಿ ಗುರುವಾಗಿ ನಡೆವ ಅಪ್ರತಿಮ ಭಕ್ತನ
ಅನುಸಂಧಾನದ ಬೆಳಗನೇನೆಂದುಪಮಿಸಬಹುದಯ್ಯಾ!
ಗತಿಮತಿಯೋಗದ ರಂಜನೆಯ ವಾಸನೆಗೆ ನಿಲುಕದಿರ್ದ
ನಿರಾಗಮದ ನಿಯತ ಗಂಪನೇನೆಂದರಿಯಬಹುದು!
ನೆನಹ ನಿಜದಲ್ಲಿಟ್ಟು ಮನವ ಘನದಲ್ಲಿಟ್ಟು ಘನವ ಕರದಲ್ಲಿಟ್ಟು
ವಿನಯ ಚರದಲ್ಲಿಟ್ಟು ಮಾಡುವ ಮಾಟತ್ರಯದೊಳಗೆ ನೀಟವಾಗಿರ್ದ
ನಿರಂತರ ಗುರುನಿರಂಜನ ಚನ್ನಬಸವಲಿಂಗವು./543
ಗುರುಲಿಂಗ ಜಂಗಮಕ್ಕೊಕ್ಕುಮಿಕ್ಕಿದುದಕ್ಕೆ ಯೋಗ್ಯವೆಂದು
ಬೀರಿಕೊಳ್ಳುವ ಕಕ್ಕುಲಾತಿ ಡಂಭಕ ವೇಷಧಾರಿಗಳನೇನೆಂಬೆನಯ್ಯಾ !
ಆ ಗುರುಲಿಂಗಜಂಗಮ ಬಂದಲ್ಲಿ,
ಅರ್ಥ ಪ್ರಾಣ ಅಬಿಮಾನವಿಡಿದು ವಂಚನೆಯೊಳ್ನಿಂದು
ಮಾಡಿ ನೀಡಿ ಕೊಂಡು ಕಳುಹಿಸುವ ತ್ರಿವಿಧಗುರುದ್ರೋಹಿಗಳಿಗೆ
ಸತ್ಕ್ರಿಯಾಚಾರವೆಲ್ಲಿಹದೊ !
ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ
ಸುಜ್ಞಾನಾಚಾರವೆಲ್ಲಿಹದೊ !
ಸುಜ್ಞಾನಾಚಾರವಿಲ್ಲದ ತ್ರಿವಿಧ ಜಂಗಮದ್ರೋಹಿಗಳಿಗೆ
ಸಮರಸಭಾವಾಚಾರವೆಲ್ಲಿಹದೊ !
ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯಪದವೆಲ್ಲಿಹದೊ !/544
ಗುರುಲಿಂಗಚರಶೇಷ ಪದಜಲ ಭಸಿತ ರುದ್ರಾಕ್ಷಿ ಪ್ರಣವದ
ಪ್ರಕಾಶ ಸುಖೋನ್ನತಿಯನರಿಯದೆ,
ಮುದ್ರೆ ಭದ್ರ ಛಿದ್ರ ಚೆದುರಿಕೆಯಿದೆ
ಬೆಳಗು ಕಂಡುಕೊಂಡೆನೆಂಬ ಕುಂಭಿನಿಯುಳ್ಳ ಸುಂಬಳಗುರಿಗಳ
ಗತಿಮತಿಗತೀತ ಕಾಣಾ ನಮ್ಮ ಗುರುನಿರಂಜನ ಚನ್ನಬಸವಲಿಂಗವು./545
ಗುರುಲಿಂಗಜಂಗಮಕ್ಕೆ ಕೊಡುವುದನೇ ಬಲ್ಲನಲ್ಲದೆ
ಬೇಡುವುದನರಿಯ ನೋಡಾ.
ಅದೆಂತೆಂದೊಡೆ, ಪಂಚರಸಂಗಳ ರುಚಿಸೌಖ್ಯವ ಕೊಟ್ಟು
ಪರಿಣಾಮವ ತೋರಬಲ್ಲನಲ್ಲದೆ
ತಾನು ಒಂದರಲ್ಲಿಯೂ ಬೇಡಲರಿಯನು.
ಅದು ಕಾರಣ, ಚನ್ನಗುರುಲಿಂಗಜಂಗಮಪ್ರಭುವೆ
ನಿಮ್ಮ ಶರಣ ದೊರೆಗಳಿಗೆ ಕೊಡಬಲ್ಲನಾಗಿ
ನರರುಗಳ ಬೇಡಲರಿಯ ಕಾಣಾ./546
ಗುರುಲಿಂಗಜಂಗಮದ ಭಕ್ತನಾದೆನೆಂದು,
ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ.
ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ.
ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ.
ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ.
ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ.
ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ.
ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ.
ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ.
ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ.
ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ
ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ
ಗುರುನಿರಂಜನ ಚನ್ನಬಸವಲಿಂಗಾ ?/547
ಗುರುಲಿಂಗಜಂಗಮದ ಭಕ್ತಿಯ ಮಾಡುವರು ನಾಮಧಾರಿಗಳು.
ಗುರುವೆಂದರಿಯರು ಲಿಂಗವೆಂದರಿಯರು ಜಂಗಮವೆಂದರಿಯರು.
ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ.
ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು.
ಅರಿದು ಮಾಡಿ ಮರೆದಿರು
ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ./548
ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ
ಶ್ರದ್ಧೆ ನಾಚಿ ಭಕ್ತತ್ವವ ನುಂಗಿ ಬಯಲಾಯಿತ್ತು.
ಪಂಚಾಕ್ಷರಿಯ ಭೀನ್ನವಿಟ್ಟರಿದರೆ
ನಿಷ್ಠೆ ನಾಚಿ ಮಹೇಶ್ವರತ್ವವ ನುಂಗಿ ಬಯಲಾಯಿತ್ತು.
ಪ್ರಸಾದವ ಭಿನ್ನವಿಟ್ಟರಿದರೆ
ಸಾವಧಾನ ನಾಚಿ ಪ್ರಸಾದಿಸ್ವರೂಪವ ನುಂಗಿ ಬಯಲಾಯಿತ್ತು.
ರುದ್ರಾಕ್ಷಿಯ ಭಿನ್ನವಿಟ್ಟರಿದರೆ
ಅನುಭಾವ ನಾಚಿ ಪ್ರಾಣಲಿಂಗಿಸ್ವರೂಪವ ನುಂಗಿ ಬಯಲಾಯಿತ್ತು.
ಪಾದೋದಕ ಭಿನ್ನವಿಟ್ಟರಿದರೆ
ಆನಂದಭಕ್ತಿ ನಾಚಿ ಶರಣತ್ವವ ನುಂಗಿ ಬಯಲಾಯಿತ್ತು.
ಶ್ರೀ ವಿಭೂತಿಯ ಭಿನ್ನವಿಟ್ಟರಿದರೆ
ಸಮರಸ ನಾಚಿ ಐಕ್ಯತ್ವವ ನುಂಗಿ ಬಯಲಾಯಿತ್ತು.
ಇಂತು ಅಷ್ಟಾವರಣ ಭಿನ್ನವಿಟ್ಟು ಷಟ್ಸ್ಥಲಬ್ರಹ್ಮಿಯಾದೆನೆಂದರೆ
ಫಲಪದದತ್ತ ನಿಜಪದವರಿಯಬಾರದು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿತನು./549
ಗುರುಲಿಂಗವ ಪಡೆವರೆಂದು
ನರರು ದುರ್ವರ್ತನೆಯೊಳಿರಲು ಅರೆಭಕ್ತರೆನಿಸುವರು,
ಅನಾದಿಭಕ್ತನಾಗಿ ಆದಿಗುರುವಿನ ಕೈಯಿಂದೆ
ಆದಿ ಅನಾದಿಯಿಂದತ್ತತ್ತಲಾದ ಮೂದೇವರರಿಯದ
ನಿರಂಜನಲಿಂಗವ ಸಾದಿಸಿ ಕರಸ್ಥಲಕ್ಕೆ ತಂದು,
ತ್ರಿವಿಧಾಚರಣೆವಿಡಿದಾಚರಿಸುವಲ್ಲಿ
ಅರೆಭಕ್ತರಿಗೆ ಆಪ್ತರೆಂದರೆ ಸಂಧಿಸಿತು ಕರ್ಮತ್ರಯ.
ಅವರಿಗೆ ಶರಣೆಂದರೆ ಕುರುಹುಗೊಂಡಿತ್ತು ಲಯಗಮನ.
ಅವರಿಗೆ ಶಿವನೆಂದು ಭಕ್ತಿಯ ಮಾಡಿ ನೀಡಿದರೆ
ಸೈದಾನದ ಕೇಡು ದುಃಖದ ಬೀಡು.
ಅವರಲ್ಲಿ ಪಾದೋದಕ ಪ್ರಸಾದ ಕೊಡಕೊಳ್ಳಿಯಾದರೆ
ಪಂಚಮಹಾಪಾತಕ ಘಟಿಸುವದು.
ಅವರಿಗೆ ಶಿವಾನುಭಾವವನಿತ್ತಡೆ ಬ್ರಹ್ಮಹತ್ಯವೆಡೆಗೊಡುವದು.
ಅದೇನುಕಾರಣವೆಂದೊಡೆ,
ಅವರು ಆದ್ಯರು ವೇದ್ಯರು ಸಾಧ್ಯರು ಆಚರಿಸಿದ ಆಚರಣೆಗೆ ಕೂಡಿ
ದುರ್ನಡೆಯಲ್ಲಿ ಬಿದ್ದು ದೂರಿಕೊಂಬವರಾಗಿ.
ಅವರ ಕೂಡೆ ಸಕಲವ ಬಿಟ್ಟು ಮತ್ತೊಂದು ವೇಳೆ ಬೇಕಾದರೆ,
ಲೌಕಿಕರ ಭಕ್ತಿ ಅವರ ಸ್ನೇಹ ಅವರ ಸೇವೆಯು ಅವರು ಮಾಡಿದ ಪೂಜೆ
ಅವರಿಂದೆ ಸಕಲವನು ಶುದ್ಧಮಾಡಿಕೊಂಡು ಸುಖಿಸುವದು
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತವಾಗಿ./550
ಗುರುಲಿಂಗವು ಬಂದೆನ್ನ ಕರಸ್ಥಲಕೈದಿದ ಮೇಲೆ,
ಸಿರಿಸಂಪತ್ತು ಸಂಭ್ರಮವಾಯಿತ್ತು ;
ಸಕಲ ಗಣತಿಂತಿಣಿ ನೆರೆಯಿತ್ತು.
ಅನುಸರಣೆ ಅಡಗಿತ್ತು, ಆಚಾರ ಬೆಳಗಿತ್ತು,
ಪುರದರಮನೆ ಪರಿಪರಿ ಶೃಂಗರಿಸಿತ್ತು,
ಎನ್ನ ಸುಚಿತ್ತವೆಂಬ ಹಸ್ತ ಸುಬುದ್ಧಿಯನೈದಲು,
ಗುರುನಿರಂಜನ ಚನ್ನಬಸವಲಿಂಗದಾಣತಿಗೆ
ಮಹೇಶ್ವರತ್ವ ಮುಂದುವರಿಯಿತ್ತು./551
ಗುರುವ ಕಂಡಾತ ಶಿಷ್ಯನಲ್ಲ, ಲಿಂಗವ ಕಂಡಾತ ಭಕ್ತನಲ್ಲ,
ಜಂಗಮವ ಕಂಡಾತ ಶರಣನಲ್ಲ.
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ನಿಜೈಕ್ಯಂಗೆ ಕಾಣಲಿಲ್ಲ ಕಟ್ಟಲಿಲ್ಲ ಮಾಡಲಿಲ್ಲ [ಮಟ್ಟ]ಲಿಲ್ಲ./552
ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ
ಗುರುದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ.
ಲಿಂಗವ ಕಂಡು ಲಿಂಗದಲ್ಲಿ ಅನುಸರಣೆಯ ಮಾಡಿದರೆ
ಲಿಂಗದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ.
ಜಂಗಮವ ಕಂಡು ಜಂಗಮದಲ್ಲಿ ಅನುಸರಣೆಯ ಮಾಡಿದರೆ
ಜಂಗಮದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ.
ಪ್ರಸಾದವ ಕಂಡು ಪ್ರಸಾದದಲ್ಲಿ ಅನುಸರಣೆಯ ಮಾಡಿದರೆ
ಪ್ರಸಾದದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ.
ಶರಣಭಕ್ತರ ಕಂಡು ಶರಣಭಕ್ತರಲ್ಲಿ ಅನುಸರಣೆಯ ಮಾಡಿದರೆ
ಶರಣ ಭಕ್ತದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ
ಗುರುನಿರಂಜನ ಚೆನ್ನಬಸವಲಿಂಗ ಸಾಕ್ಷಿಯಾಗಿ
ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ.
ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು.
ಅರಿದು ಮಾಡಿ ಮರೆದಿರು
ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ./553
ಗುರುವ ಕಂಡು ಶರಣೆಂದವರು, ಲಿಂಗವ ಕಂಡು ಶರಣೆಂದವರು,
ಜಂಗಮವ ಕಂಡು ಶರಣೆಂದವರು ಸ್ವಯವನರಿಯರು.
ಗುರುವ ಕಂಡು ಶರಣೆನ್ನದವರು, ಲಿಂಗವ ಕಂಡು ಶರಣೆನ್ನದವರು,
ಜಂಗಮವ ಕಂಡು ಶರಣೆನ್ನದವರು ಮರೆವಿನ ಸುಖಪರಿಣಾಮ ತಲೆಗೇರಿ
ತಲ್ಲೀಯವಾದರು ಗುರುನಿರಂಜನ ಚನ್ನಬಸವಲಿಂಗದೊಳಗೆ. /554
ಗುರುವನರಿದು ಮರೆದವರೆಂದು
ಗುರುಭಕ್ತಿಯ ನಾಶಮಾಡುವರು, ಆಣವ ಮಲಮೋಹಿತರು,
ಲಿಂಗವನರಿದು ಮರೆದವರೆಂದು
ಲಿಂಗಭಕ್ತಿಯ ನಾಶಮಾಡುವರು, ಮಾಯಾಮಲಮೋಹಿತರು.
ಜಂಗಮವನರಿದು ಮರೆದವರೆಂದು
ಜಂಗಮಭಕ್ತಿಯ ನಾಶಮಾಡುವರು ಕಾರ್ಮಿಕಮಲಮೋಹಿತರು.
ಇವರನೆಂತು ಶರಣರೆನ್ನಬಹುದು ?
ಮಲತ್ರಯವನಳಿದು ಲಿಂಗತ್ರಯವನರಿದು ಮಾಡುವ ಮಾಟ
ಮಹಾಘನದ ಕೂಟ ಗುರುನಿರಂಜನ ಚನ್ನಬಸವಲಿಂಗಾ. /555
ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು,
ಪರಮಲಿಂಗೈಕ್ಯವು ನಮಗುಂಟೆಂದು ನುಡಿವ ನಾಲಿಗೆ ನೀಟಾಗಿಹುದು;
ಗುರುವಿಗಿತ್ತ ತನುವು ನೀಟಾಗಿಹುದು.
ಲಿಂಗದ ಮನ ಚೆಲುವಾಗಿಹುದು.
ಜಂಗಮದ ಧನ ಸ್ವಚ್ಛವಾಗಿಹುದು.
ಆಡಿರ್ದಂತೆ ಆಚರಿಸಿ ಅರ್ಪಿತವಾಗಲರಿಯದೆ
ನಾಲಿಗೆ ಮರಳಿದರೆ ಕೀಳರೆ?
ತನು ವಂಚಿಸಿ ಬಿದ್ದರೆ ದುರ್ಗತಿಗೆ ಎಳೆದುಹಾಕರೆ?
ಮನಸ್ಸು ಮರಳಿ ಬಿದ್ದರೆ ನಾಚಿಕೆಯ ಕೊಳ್ಳರೆ?
ದ್ರವ್ಯವ ಮರಳಿ ಸುಖಿಸಿದರೆ ವೈತರಣಿಯೊಳು ದುಃಖಬಡಿಸರೆ?
ಇದು ಕಾರಣ ನಿಮ್ಮ ನಡತೆ ಯಮನಿಗೆ ಹಿಡಿತ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./556
ಗುರುವಿನ ಪ್ರಸಾದವ ಬೇಡಿದರೆ ಆಡ್ಯಾಡಿ ಉಣ್ಣೆಂದು ಕೊಟ್ಟ.
ಅಲ್ಲಿ ನಿನ್ನ ಹಿರಿಕಿರಿಯರ ಮರೆದರೆ ಹರಿದು ಹಾಕುವನೆಂದು-
ನೆರೆದುಂಬೆ ನಿರ್ವಾಚಕದಿಂದೆ ಗುರುನಿರಂಜನ ಚನ್ನಬಸವಲಿಂಗಾ./557
ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ
ಎನಗೆ ಶುದ್ಧಪ್ರಸಾದ ಸಾಧ್ಯವಾಯಿತ್ತು.
ಲಿಂಗದಲ್ಲಿ ಶಿಲೆಯನರಸಿ ಸುಟ್ಟು ಬಿಸಾಟಿದಲ್ಲಿ
ಎನಗೆ ಸಿದ್ಧಪ್ರಸಾದ ಸಾಧ್ಯವಾಯಿತ್ತು.
ಜಂಗಮದಲ್ಲಿ ಕುಲವನರಸಿ ಕೊಂದು ಹಾಕಿದಲ್ಲಿ
ಎನಗೆ ಪ್ರಸಿದ್ಧಪ್ರಸಾದ ಸಾಧ್ಯವಾಯಿತ್ತು.
ಇಂತು ಇವರ ದುರ್ಗುಣ ಕಠಿಣ ಅಕುಲವನರಸದೆ
ಕೊಡುಕೊಳ್ಳೆ ಸಮರಸದೊಳಿರ್ನೆನಾದಡೆ
ಕಡೆಯಿಲ್ಲದ ನರಕವೆಂಬ ಶ್ರುತಿ ಗುರುಸ್ವಾನುಭಾವದಿಂದರಿದು ನೂಂಕಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸಮರಸಪ್ರಸಾದಿಯಾಗಿರ್ನೆನಯ್ಯಾ./558
ಗುರುವಿನಿಂದುದಯವಾಗಿ ಕರಸ್ಥಲಕ್ಕೆ ಲಿಂಗವ ಪಡೆದು,
ಕರ್ಣದಲ್ಲಿ ಪರಮಪಂಚಾಕ್ಷರವ ತುಂಬಿ,
ಮುಖದಲ್ಲಿ ಉಚ್ಚರಿಸಿದ ಬಳಿಕ, ಮಂತ್ರಮೂರ್ತಿಯಾಗಿರಬೇಕಲ್ಲದೆ,
ಹುಸಿ, ದಿಟ, ರುಚಿ, ಅರುಚಿ, ಕುಯುಕ್ತವಾಕ್ಕು ದೋಷವರ್ತನೆಯುಳ್ಳಡೆ
ಅಷ್ಟಾವರಣ ಪಂಚಾಚಾರಕ್ಕೆ ವಿಹೀನವಾಗಿ ಅಧೋಗತಿಗಿಳಿವನು
ನಿರಂಜನ ಚನ್ನಬಸವಲಿಂಗವನರಿಯದೆ./559
ಗುರುವಿನಿಂದುದಯವಾಗಿ ಬಂದವರೆಂದು ಹೇಳುವರು
ಹಲ್ಲಿಗೆ ಶಿಲ್ಕದ ನಾಲಿಗೆಯ ಸಾಕಿದವರ ಸರಸವ ನೋಡಾ !
ಗುರುವೆಂಬುದ ಕಂಡರಿಯರು, ಲಿಂಗವೆಂಬುದ ಕಂಡರಿಯರು,
ಜಂಗಮವೆಂಬುದ ಕಂಡರಿಯರು, ಪ್ರಸಾದವೆಂಬುದ ಕಂಡರಿಯರು.
ಇಂತು ಕಂಡರಿಯದೆ ಕಂಡಕಂಡಂತೆ ನುಡಿದು ತಪ್ಪಿ ಬಿದ್ದುಹೋಗುವ
ಚಂಡ ಚರ್ಮಗೇಡಿ ಹೀನಮಾನವರನೆಂತು
ಶರಣಕವಳಿಗೆ ಸರಿಯೆನ್ನಬಹುದು ಗುರುನಿರಂಜನ ಚನ್ನಬಸವಲಿಂಗಾ./560
ಗುರುವಿನಿಂದುದಯವಾಗಿ ಲಿಂಗನಡೆಸಂಪನ್ನರೆನಿಸಿಕೊಂಡ ಹಿರಿಯರು
ಗುರುದಯದೊಳೈಕ್ಯತೆಯನೈದಬೇಕಲ್ಲದೆ,
ಗುರುದಯವಿಲ್ಲದೆ ಬರಿದೆ ಬಳಲುವ ಭಾವಗೇಡಿ ಭ್ರಷ್ಟಭವಿಗಳ ಸಂಗ
ಹೀನ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./561
ಗುರುವಿಲ್ಲದ ಶಿಷ್ಯ ಕರವಿಲ್ಲದ ಲಿಂಗವಹಿಡಿದು
ಕಂಗಳಿಲ್ಲದೆ ನೋಡಿ ಕರುಳಿಲ್ಲದೆ ಪೂಜಿಸಿ,
ಭಾವವಿಲ್ಲದೆ ಬೆರೆಸಿದ ಬಳಿಕ
ಮಾಡಬಾರದ ಮಾಟ ನೋಡಬಾರದ ನೋಟ ಕೂಡಬಾರದ ಕೂಟ
ನಿಮ್ಮೊಳಗಾಯಿತ್ತು,
ಗುರುನಿರಂಜನ ಚನ್ನಬಸವಲಿಂಗಾ./562
ಗುರುವು ಲಿಂಗವಹನ್ನಬರ ಕಾಯಕದಲ್ಲಿ ವಂಚನೆಯನುಳುಹಿದರೆ
ಆ ಕಾಯ ಕಿಲ್ಬಿಷಕೂಪಕ್ಕಾಹುತಿಯೆಂಬುದು ಶಿವನ ವಾಕ್ಯ.
ವಾಚಕದಲ್ಲಿ ವಂಚನೆಯನುಳುಹಿದರೆ
ಆ ವಾಚಕ ನಿರಯಬಾಧೆಯಧ್ವನಿಯೆಂಬುದು ಶಿವನ ವಾಕ್ಯ.
ಮಾನಸದಲ್ಲಿ ವಂಚನೆಯನುಳುಹಿದರೆ
ಆ ಮಾನಸ ಯಮದೂತರ ಕೋಪಾಹುತಿಯ
ಅನಾನಂದದಾಲಯವೆಂಬುದು ಶಿವನ ವಾಕ್ಯ.
ಅದುಕಾರಣ, ಆ ಕರಣತ್ರಯವು ದುವರ್ೊಚ್ಫಿಷ್ಟವಾಗಿ ಬಿದ್ದು ಹೋದ ಪ್ರಾಣಿಗಳನು
ನೋಡಲಾಗದು ಮಾತಾಡಲಾಗದು ಸುಜ್ಞಾನಿ ಕ್ರಿಯಾಸಂಬಂದಿಗಳು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./563
ಗುರುವುಳ್ಳನ್ನಕ್ಕರ ಶಿಷ್ಯನೆಂಬೆ, ಲಿಂಗವುಳ್ಳನ್ನಕ್ಕರ ಭಕ್ತನೆಂಬೆ,
ಜಂಗಮವುಳ್ಳನ್ನಕ್ಕರ ಶರಣನೆಂಬೆ,
ಈ ತ್ರಿವಿಧವು ಕಾಣದಿರ್ದಡೆ ಗುರುನಿರಂಜನ ಚನ್ನಬಸವಲಿಂಗವೆಂಬೆ./564
ಗುರುವೆ ಶರಣು, ಮಹಾಗುರುವೆ ಶರಣು,
ಪರಮಗುರುವೆ ಶರಣು.
ಎನ್ನನಾಗುಮಾಡಿದ ಸಂಭೋಗ ಸಂಯೋಗಸಂಪನ್ನ ನೀನೆ,
ನಿರಂಜನ ಚನ್ನಬಸವಲಿಂಗ
ಜಯ ಜಯ ಜಯವೆನುತಿರ್ದೆನು./565
ಗುರು-ಶಿಷ್ಯರಿಲ್ಲದಿಂದಲತ್ತ, ಲಿಂಗ-ಭಕ್ತರಿಲ್ಲದಿಂದಲತ್ತ,
ಜಂಗಮ-ಶರಣರಿಲ್ಲದಿಂದಲತ್ತ,
ಜಲದೊಳಿರ್ದ ಮುತ್ತಿನಂತಿರ್ದನು ನಿರಂಜನ ಚನ್ನಬಸವಲಿಂಗ./566
ಗುರುಸೋಂಕು ಸಂಭಾಷಣೆ ಸ್ವರೂಪವಧರಿಸಿದ ಮಹಾತ್ಮನೇ
ಆದಿ ಕತರ್ುವೆಂಬೆ, ಅನಾದಿ ಕತರ್ುವೆಂಬೆ, ಮೂಲದೊಡೆಯನೆಂಬೆ.
ಚನ್ನ ಭಕ್ತಿ ಜ್ಞಾನ ವೈರಾಗ್ಯಮೂರ್ತಿಲಿಂಗವೆಂಬೆ./567
ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ,
ಜಂಗಮಸ್ಥಲವುಳ್ಳನ್ನಕ್ಕರ ಶರಣ,
ಇಂತು ಗುರುಲಿಂಗಜಂಗಮವನರಿದು ಮರೆದಲ್ಲಿ
ಲಿಂಗೈಕ್ಯ ತಾನೆ ಗುರುನಿರಂಜನ ಚನ್ನಬಸವಲಿಂಗದಲ್ಲಿ./568
ಗೆಲ್ಲಸೋಲೆಂಬ ಕಲಿಧರ್ಮದಲ್ಲಿ ಗೆಲಬೇಕೆಂಬ
ನರ ಸುರ ಖಗ ಮೃಗ ಕೀಟ ಕ್ರಿಮಿಗಳೆಲ್ಲ ಹೆಣಗುತಿಪ್ಪವಲ್ಲದೆ
ಸೋಲಬೇಕೆಂಬ ಕುರುಹುಗಾಣದು ನೋಡಾ.
ಸೋಲದಲ್ಲಿ ಭವಮಾಲೆ ಬಲಿಯಿತ್ತು ಕಲಿಯುಗ ಕಳೆವೊಡೆಯಿತ್ತು.
ಅಂತಂತೆ ಶರಣಶಿವಾನುಕೂಲ.
ಸೋಲಬಾರದ ಕತರ್ು ಸೋತುಬಂದಲ್ಲಿ ಸೋತುಗೆಲ್ಲುವುದಪೂರ್ವ.
ಸೋತುಗೆಲ್ಲುವ ಸುಲಭವಳಿದು ಖ್ಯಾತಿವಡೆದು ಹೋಗಿ ಬಂದು ಹೋದರು
ಗುರುನಿರಂಜನ ಚನ್ನಬಸವಲಿಂಗಕೀತೆರವಾಗಿ./569
ಘಟಿತ ನನೆಯನಂತರ ಪರಿಮಳ ವಿಕಸನಮುಖದಿಂದೆ ಪ್ರಬಲಿಸುವಂತೆ,
ಸ್ವಾನುಭಾವಸೂತ್ರವರಿದ ಜ್ಞಾನಕಲಾತ್ಮನು
ಕಳೆದು ಕಂಡ ಕಾಣಬಾರದ ಕುರುಹ ಒಂದಿಸಿ ಕೂಡಿಕೊಂಡು
ಹಿಡಿದು ನಡೆದುಂಬ ನವೀನದ ಬೆಳಗು ನೀನೆ
ಗುರುನಿರಂಜನ ಚನ್ನಬಸವಲಿಂಗಾ./570
ಘನ ಮನವನೊಳಕೊಂಡು, ಮನ ಘನವನೊಳಕೊಂಡು,
ಆ ಘನಮನವ ನಿಜವೊಳಕೊಂಡು, ಆ ನಿಜವು ನಿರ್ವಯಲಾದುದು
ನೀನು ನಾನೆಂಬ ನಿಲುವಿಗೆ ಸಾಧ್ಯವಾಗಿಹುದು
ಗುರುನಿರಂಜನ ಚನ್ನಬಸವಲಿಂಗದೊಳಗೆ./571
ಘನಗಂಭೀರಲಿಂಗವೆನ್ನ ಕಾಯದನುವರಿಯಬಂದಬಳಿಕ
ಎನ್ನ ಕಾಯದ ರತಿಯ ಕಡೆಗಿಡಲೆನಗೆ ಸೊಗಸದು ಕಾಣಮ್ಮ.
ಎನ್ನ ಮನದನುವರಿಯಬಂದಬಳಿಕ
ಮನದ ಮಮಕಾರ ಸರಿದರಿಯಲೆನಗೆ ಸೊಗಸದು ಕಾಣಮ್ಮ.
ಎನ್ನ ಪ್ರಾಣದನುವರಿಯಬಂದಬಳಿಕ
ಪ್ರಾಣದ ಮೋಹವಿತರವೆರಸಲೆನಗೆ ಸೊಗಸದು ಕಾಣಮ್ಮ.
ಎನ್ನ ಭಾವದನುವರಿಯಬಂದಬಳಿಕ
ಭಾವದ ಭ್ರಾಂತಿ ಪರಿದಾವರಿಸಲೆನಗೆ ಸೊಗಸದು ಕಾಣಮ್ಮ.
ಎನ್ನ ಕಾಯ ಮನ ಪ್ರಾಣ ಭಾವವೆಂಬ
ಚತುರ್ವಿಧಸಾರಾಯ ಸುಖಲೋಲನಾಗಿರ್ದಬಳಿಕ
ಗುರುನಿರಂಜನ ಚನ್ನಬಸವಲಿಂಗವನಗಲಲೆಡೆಗಾಣದೆ
ಪರವಶವಾಗಿರ್ದೆ ಕಾಣಮ್ಮ./572
ಘನಮಹಾಪ್ರಕಾಶಲಿಂಗವೆನ್ನ ಕರಸ್ಥಲದಲ್ಲಿ ಮಿನುಗುತ್ತಿರಲು,
ಎನ್ನ ಕಮರ್ೆಂದ್ರಿಯಗಳೆಲ್ಲ ಕಳೆದುಳಿದವು,
ಎನ್ನ ವಿಷಯಂಗಳೆಲ್ಲ ಸತ್ತುನಿಂದವು,
ಎನ್ನ ಧಮರ್ೆಂದ್ರಿಯವೆಲ್ಲ ಅಳಿದುಳಿದವು,
ಎನ್ನ ಪ್ರಾಣಾದಿ ವಾಯುಗಳೆಲ್ಲ ಮರೆದುನಿಂದವು.
ಎನ್ನ ಕರಣಂಗಳೆಲ್ಲ ಬಿಟ್ಟುನಿಂದವು,
ಕ್ರಿಯಾದಿ ಶಕ್ತಿಗಳೆಲ್ಲ ಪ್ರಕಾಶವಾಗಿನಿಂದವು,
ನಿರಂಜನ ಚನ್ನಬಸವಲಿಂಗದವಸರಕ್ಕೆ./573
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ,
ಅನುವರಿದು ಅವರವರ ಒಡವೆಯ ಅವರವರಿಗಿತ್ತು
ವಿನಯ ಮುಂದುಗೊಂಡಿಪ್ಪುದೇ ಸಹಜ.
ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ,
ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ.
ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ
ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ./574
ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ
ಅನಿಷ್ಟವ ನಷ್ಟಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಚಿನುಮಯ ಶರಣರನುಭಾವದ ಬೆಳಗೆನ್ನ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ
ಪ್ರಾಣನ ಪ್ರಕೃತಿಯ ದಹಿಸಿ ಥಳಥಳನೆ ಬೆಳಗುತ್ತಿದೆ ನೋಡಾ.
ಸತ್ಪುರುಷರನುಭಾವದ ಬೆಳಗೆನ್ನ ಭಾವಸ್ಥಲದಲ್ಲಿ ಭಾವಲಿಂಗವಾಗಿ
ಸಂಸಾರ ವಿಷಯಭ್ರಾಂತಿಯನಳಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿಜಪ್ರಕಾಶ ಶರಣರನುಭಾವದ ಬೆಳಗೆನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ
ಅನಾಚಾರವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಸತ್ಯಶರಣರನುಭಾವದ ಬೆಳಗೆನ್ನ ಜಿಹ್ವೆಯ ಸ್ಥಲದಲ್ಲಿ ಗುರುಲಿಂಗವಾಗಿ
ಅನೃತವ ನಾಶಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಅನುಪಮ ಶರಣರನುಭಾವದ ಬೆಳಗೆನ್ನ ನಯನ ಸ್ಥಲದಲ್ಲಿ ಶಿವಲಿಂಗವಾಗಿ
ದುಶ್ಚಲನೆಯ ದಹಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಿಪೂರ್ಣ ಶರಣರನುಭಾವದ ಬೆಳಗೆನ್ನ ತ್ವಕ್ಕಿನ ಸ್ಥಲದಲ್ಲಿ ಜಂಗಮಲಿಂಗವಾಗಿ
ಭಿನ್ನಭಾವದ ಸೋಂಕನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಮಾನಂದ ಶಣರನುಭಾವದ ಬೆಳಗೆನ್ನ ಶ್ರೋತ್ರಸ್ಥಲದಲ್ಲಿ
ಪ್ರಸಾದಲಿಂಗವಾಗಿ ದುಃಶಬ್ದರತಿಯ ನಷ್ಟವ ಮಾಡಿ
ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಮಶಾಂತ ಶರಣರನುಭಾವದ ಬೆಳಗೆನ್ನ ಹೃದಯಸ್ಥಲದಲ್ಲಿ
ಮಹಾಲಿಂಗವಾಗಿ ಬಿನ್ನದರಿವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರುಪಮ ಶರಣರನುಭಾವದ ಬೆಳಗೆನ್ನ ಬ್ರಹ್ಮರಂಧ್ರದಲ್ಲಿ
ನಿಃಕಲಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರ್ಮಾಯ ಶರಣರನುಭಾವದ ಬೆಳಗೆನ್ನ ಉನ್ಮನಿಯಲ್ಲಿ
ಶೂನ್ಯಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರವಯ ಶರಣರನುಭಾವದ ಬೆಳಗೆನ್ನ ಪಶ್ಚಿಮದಲ್ಲಿ
ನಿರಂಜನಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಅಖಂಡ ಶರಣರನುಭಾವದ ಬೆಳಗೆನ್ನ ಕಿಂಚಿತ್ತು ಕಾಣಿಸದೆ
ಸರ್ವಾಂಗದಲ್ಲಿ ಥಳಥಳನೆ ಹೊಳೆಯುತ್ತಿದೆ ನೋಡಾ./575
ಘನಸಾರ ಹೇಮ ಮೌಕ್ತಿಕಕ್ಕೆ ಮೊದಲಿಲ್ಲದಂತೆ ತೋರಿದಡಾತನೆಂಬೆ.
ಉದಕದಂತಿದರ್ು ವಹ್ನಿಯಂತಾದೊಡಾತನೆಂಬೆ.
ದದ್ಧಪಟದ ನಿಲುವು ಸರ್ವಕ್ಕೂ ತೋರಿದಡಾತನೆಂಬೆ,
ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬ ಅನುಪಮಶರಣ./576
ಘ್ರಾಣದೊಳಗೆ ಗಂಧವದೆ ಗಂಧದೊಳಗೆ ಘ್ರಾಣವದೆ.
ನಾಲಿಗೆಯೊಳಗೆ ರುಚಿಯದೆ ರುಚಿಯೊಳಗೆ ನಾಲಿಗೆಯದೆ.
ಕಂಗಳೊಳಗೆ ರೂಪವದೆ ರೂಪಿನೊಳಗೆ ಕಂಗಳಿವೆ.
ತ್ವಕ್ಕಿನೊಳಗೆ ಸ್ಪರ್ಶನವದೆ ಸ್ಪರ್ಶದೊಳಗೆ ತ್ವಕ್ಕಿದೆ.
ಕರ್ಣದೊಳಗೆ ಶಬ್ದವದೆ ಶಬ್ದದೊಳಗೆ ಕರ್ಣವದೆ.
ಹೃದಯದೊಳಗೆ ಸುಖವದೆ ಸುಖದೊಳಗೆ ಹೃದಯವದೆ.
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ
ಶರಣನೊಳಗೆ ನೀವು ನಿಮ್ಮೊಳಗೆ ಶರಣ ಕಾಣಾ./577
ಚಂಗಳೆಯಮ್ಮನ ಭಾವದೊಳ್ಮುಳುಗಿ ಪಂಚಾಚಾರಸ್ವರೂಪನಾಗಿರ್ದೆಕಾಣಾ.
ನಂಬಿಯಕ್ಕನ ಭಾವದೊಳ್ಮುಳುಗಿ ಮಂತ್ರಾತ್ಮಸ್ವರೂಪನಾಗಿರ್ದೆ ಕಾಣಾ.
ಚೋಳಿಯಕ್ಕನ ಭಾವದೊಳ್ಮುಳುಗಿ ನಿರೀಕ್ಷಣಾಸ್ವರೂಪನಾಗಿರ್ದೆ ಕಾಣಾ.
ನೀಲಲೋಚನೆಯಮ್ಮನ ಭಾವದೊಳ್ಮುಳುಗಿ ಯಜನಸ್ವರೂಪನಾಗಿರ್ದೆ ಕಾಣಾ.
ಅಮ್ಮವ್ವೆಯರ ಭಾವದೊಳ್ಮುಳುಗಿ ಸ್ತೌತ್ಯಸ್ವರೂಪನಾಗಿರ್ದೆ ಕಾಣಾ.
ಮಹಾದೇವಿಯರ ಭಾವದೊಳ್ಮುಳುಗಿ ವೇದಿಸ್ವರೂಪನಾಗಿರ್ದೆ ಕಾಣಾ.
ಇಂತು ಎನ್ನ ಮಾತೆಯರ ಭಾವದೊಳು ಸಮರಸವಾಗಿ
ಮುಕ್ತಾಯಕ್ಕನ ಗರ್ಭದೊಳು ನಿತ್ಯಪ್ರಸಾದಿಯಾಗಿರ್ದೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ./578
ಚಂದ್ರ ಮೂಡಿದನಂತೆ, ಚಂದ್ರಿಕೆಯೊಳು ನಿಂದು ನೋಡಿದನಂತೆ,
ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ,
ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ,
ಗಾರುಡಿಗನಾಟವ ಕಲಿತುಕೊಂಡನಂತೆ,
ನಮ್ಮೆಲ್ಲರ ಕೊಂದು ಕೊಂಬುವನಂತೆ, ನಿರಂಜನ ಚನ್ನಬಸವಲಿಂಗನಂತೆ,
ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ./579
ಚಂದ್ರಮೌಳಿಯೆನಿಸಿಕೊಂಡು
ಕಾಮನನುರುಹಿದನೆಂದರೆ ನಗೆ ಬಂದಿತ್ತೆನಗೆ.
ಮಾಯಾಕೋಲಾಹಲನೆನಿಸಿಕೊಂಡು
ಮುಡಿಯಲ್ಲಿ ಹೆಣ್ಣ ತಳೆದನೆಂದರೆ ನಗೆ ಬಂದಿತ್ತೆನಗೆ.
ನಿಃಕಲಗುರುನಿರಂಜನ ಚನ್ನಬಸವಲಿಂಗವೆನಿಸಿಕೊಂಡು
ಎನಗೆ ಪತಿಯಾಗಿ ಭೋಗಿಸುವುದ ಕಂಡು ನಗೆ ಬಂದಿತ್ತು ಎನ್ನೊಳಗೆ./580
ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ ಪುರುಷರನುವ ಕಂಡಾಡು.
ಅತ್ತಲವರು ಬಂದಡೆ, ಮತ್ತೇನೆಂದು ಬೆಸಗೊಳ್ಳಬಾರದು.
ಅಹಮ್ಮೆನ್ನದ ಅರ್ಥವ ತಂದು, ಸೋಹಮ್ಮೆಂಬ ಕುಳಕಿತ್ತಡೆ,
ದಾಸೋಹಂ ಭಾವ ಧರಿಸುವದು.
ಗುರುನಿರಂಜನ ಚನ್ನಬಸವಲಿಂಗದಲಿ/581
ಚರಣಗತಿ ಸದ್ಗಮನ, ಹಸ್ತಗತಿ ಸದ್ಭಕ್ತಿ, ಜಿಹ್ವೆಗತಿ ಸದ್ವಾಕ್ಯ,
ನೇತ್ರಗತಿ ಅಬಿನ್ನನೋಟ, ಶ್ರೋತ್ರಗತಿ ಶಿವಾನುಶ್ರುತಿ,
ಘ್ರಾಣಗತಿ ಸದ್ವಾಸನೆ, ಮನಗತಿ ಸಮ್ಯಕ್ಜ್ಞಾನ, ಭಾವಗತಿ ಮಹಾನುಭಾವ.
ಇಂತೀ ಸನ್ನಿಹಿತ ಶರಣನು ಪರಮಪ್ರಸಾದಮೂರ್ತಿ ತಾನೆ ಅಲ್ಲದೆ
ಅನ್ಯವಿಲ್ಲ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣನ ಪರಿ ಆವ ದೇಶದೊಳಗೂಯಿಲ್ಲ./582
ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ.
ಬಾಳೆಯೆಲೆಯಮೇಲೆ ತುಪ್ಪವತೊಡದಂತೆ,
ನಿಮ್ಮ ಔದುಂಬಫಳ ಛಾಯ ನುಡಿಯ ತೆಗೆದಿಡಿರಿ.
ಜಂಗಮಲಿಂಗ ಗುರುಹಿರಿಯರನರಸುವರೆ ಜ್ಞಾನಿಗಳು?
ಅವರ ಕಾಯ್ದಿಪ್ಪ ತನು ಮನ ಭಾವ ವಿಕೃತಿಯನರಸುವರಲ್ಲದೆ.
ಅದೇನು ಕಾರಣವೆಂದೊಡೆ: ತನು ಮನ ಭಾವವಿಡಿದಿರ್ಪ ಜನರನ್ನು
ಒಂದು ವೇಳೆ ತಿಳಿಸಿಕೊಳ್ಳಬಹುದು;
ಅಳಿದುಳಿದಂಗಲಿಂಗಸಂಬಂಧಿಗಳೆಂದು ನುಡಿದು
ಅಳಿದಲ್ಲಿ ಉಳಿದರೆ ಅದು ಮಲದೇಹಿ, ಮರಳಿ ಶುದ್ಧವಾಗದು ನೋಡಾ.
ಹೇಮ ಮೌಕ್ತಿಕದಂತೆ ಅರಿದಾಚರಿಸುವುದು
ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯಾಗಬೇಕಾದರೆ./583
ಚಲುವ ಲಿಂಗಯ್ಯ ಒಲಿದು ಬಂದನೆಂದು
ನಲುವಿಂದೆ ಮನೆಯ ನಿರ್ಮಿಸಿದಳು.
ಗೋಡೆಯ ತೊಳೆದು ಸಾರಣೆಯ ಮಾಡಿ ಚಿತ್ರವಗೊಳಿಸಿದಳು.
ಹಳೆಯ ತೊಲೆಪಟ್ಟಿ ಜಂತೆಗಳ ತೊಳೆದು
ಬಿಳಿಯ ಬಣ್ಣದಿಂದ ಒಪ್ಪವಿಟ್ಟಳು.
ನೆಲಗಚ್ಚನೆಬ್ಬಿಸಿ ಸುಟ್ಟು ನಿರ್ಮಲರಿವೆಯ ನಡೆಮಡಿಯ ಮಾಡಿದಳು.
ಮೇಲಣ ಪಟ್ಟಸಾಲೆಯ ಮೊದಲು ನಿರ್ಮಿಸಿದ
ಚದುರಗೆಲಸದ ಪೀಠವನರಿದು ಕೆಳದಿಯರೊಂದಾಗಿ
ಕೈಗೊಟ್ಟು ನೆರೆದರೆ ಪರಿಣಾಮವಾಯಿತ್ತು
ಗುರುನಿರಂಜನ ಚನ್ನಬಸವಲಿಂಗಕ್ಕೆ./584
ಚಿತ್ಕಲೆ ನೀಲಮ್ಮನವರ ಪದಸ್ಪರ್ಶನದಿಂದೆ ಕಾಯಶೂನ್ಯನಾದೆ.
ಅಕ್ಕಮಹಾದೇವಿಗಳ ಪದಸ್ಪರ್ಶನದಿಂದೆ ಕರಣಶೂನ್ಯನಾದೆ.
ನಾಗಲಾಂಬಿಕೆಯರ ಪದಸ್ಪರ್ಶನದಿಂದೆ ಪ್ರಾಣಶೂನ್ಯನಾದೆ.
ಮುಕ್ತಾಯಕ್ಕಗಳ ಪದಸ್ಪರ್ಶನದಿಂದೆ ಭಾವಶೂನ್ಯನಾದೆ
ಗುರುನಿರಂಜನ ಚನ್ನಬಸವಲಿಂಗದೊಳಗೆ./585
ಚಿತ್ಕಾಯದ ತಿರುಳ ಲಿಂಗದಲ್ಲಿ ಅರಿದು ಸಂಗಸಂಯೋಗಿ ನೋಡಾ,
ಚಿನ್ಮಾನಸದ ತಿರುಳ ಲಿಂಗದಲ್ಲರಿದು ಕೂಟಸಂಯೋಗಿ ನೋಡಾ,
ಚಿದ್ಭಾವದ ತಿರುಳ ಲಿಂಗದಲ್ಲರಿದು ಸಮರಸಸಂಯೋಗಿ ನೋಡಾ,
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಲಿಂಗಪ್ರಾಣೈಕ್ಯನ ನೋಡಾ./586
ಚಿತ್ತವನಡಗಿಸಿ ಬಂದವರು ಭಕ್ತೈಕ್ಯಪದಸ್ಥರಹರೆ ?
ಬುದ್ಭಿಯನಡಗಿಸಿಬಂದವರು ಮಹೇಶ್ವರೈಕ್ಯಪದಸ್ಥರಹರೆ ?
ಅಹಂತೆಯನಡಗಿಸಿ ಬಂದವರು ಪ್ರಸಾದಿಯೈಕ್ಯಪದಸ್ಥರಹರೆ ?
ಮನವನಡಗಿಸಿ ಬಂದವರು ಪ್ರಾಣಲಿಂಗಿಯೈಕ್ಯಪದಸ್ಥರಹರೆ ?
ಜ್ಞಾನವನಡಗಿಸಿ ಬಂದವರು ಶರಣೈಕ್ಯಪದಸ್ಥರಹರೆ ?
ಭಾವವನಡಗಿಸಿ ಬಂದವರು ನಿಜೈಕ್ಯಪದಸ್ಥರಹರೆ ?
ಗುರುನಿರಂಜನ ಚನ್ನಬಸವಲಿಂಗದಲ್ಲಿ./587
ಚಿದಾತ್ಮನೇ ಅಂಗವಾದ ಶರಣ ಚಿತ್ಪೃಥ್ವಿಯೇ ತನ್ನಂಗವಾಗಿ
ಆಚಾರಲಿಂಗೈಕ್ಯವನರಿದು ಬಂದನಯ್ಯಾ.
ಚಿದಪ್ಪುವೇ ತನ್ನಂಗವಾಗಿ ಚಿದ್ಗುರುಲಿಂಗೈಕ್ಯವನರಿದು ಬಂದನಯ್ಯಾ.
ಚಿದಗ್ನಿಯೇ ತನ್ನಂಗವಾಗಿ ಚಿಚ್ಫಿವಲಿಂಗೈಕ್ಯವನರಿದು ಬಂದನಯ್ಯಾ.
ಚಿದ್ವಾಯುವೇ ತನ್ನಂಗವಾಗಿ ಚಿಜ್ಜಂಗಮಲಿಂಗೈಕ್ಯವನರಿದು ಬಂದನಯ್ಯಾ.
ಚಿದಾಕಾಶವೇ ತನ್ನಂಗವಾಗಿ ಚಿತ್ಪ್ರಸಾದಲಿಂಗೈಕ್ಯವನರಿದು ಬಂದನಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣ ಚಿನ್ಮಹಾಲಿಂಗೈಕ್ಯವನರಿದು ಚಿದ್ರೂಪವಾಗಿರ್ದ ಕಾಣಾ./588
ಚಿದ್ಘನಪ್ರಸಾದಕ್ಕಂಗವಾದ ಚಿನ್ಮಯ ಶರಣರ ಘನವನರಿಯದೆ,
ನಾವು ಫಲಪದಕ್ಕೆಳಸದ ಸದಮಲ ದಾಸೋಹಿಗಳೆಂದು,
ಮದನಾರಿಯ ವೇಷವ ಧರಿಸಿ,
ಇತರ ಇಂಗಿತವನರಿಯದೆ ಹದುರ ಚೆದುರಿನಿಂದೆ ಮದಮಾನವರ ಹೃದಯಕರಗಿಸಿ,
ಸಹಜ ನಿರೂಪಾಧಿಗಳುಳಿದು ದುವರ್ುಪಾಧಿಯೊಳು ನಿಂದು
ಭಕ್ತ ಮಹೇಶ್ವರರುಗಳಿಗೆ ಮಾಡುವೆನೆಂದು ಭೂತಜನಕಿಕ್ಕಿ
ಲೆಕ್ಕವ ಹೇಳಿ ಅಕ್ಕರೆಯಿಂದೆ ಮುಕ್ಕಣ್ಣನ ಪದವೆಮಗೆಂದು ಹೆಚ್ಚುಗೆವಡೆದು
ಒಕ್ಕಲು ಸಹಿತ ಉದರ ಹೊರೆವ
ಮುಕ್ಕ ಭಂಗಿತರಿಗಿಕ್ಕಿದ ಭಾವತೊಡರು ಸಹಜವೆಂದು
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರು ಗಹಗಹಿಸಿ ಮಿಕ್ಕಿ ನಿಂದರು./589
ಚಿದ್ಬಿಂದುಮುಖದಿಂದ ಭಾವಿಸಿ ಮಾಡುವುದು,
ಚಿನ್ನಾದ ಮುಖದಿಂದ ಭಾವಿಸಿ ನೋಡುವುದು,
ಚಿತ್ಕಲಾಮುಖದಿಂದ ಭಾವಿಸಿ ಕೂಡುವುದು,
ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗವನು
ಅರಿವರಿತರಸುವಣ್ಣಗಳು ಸುಯಿಧಾನಭಕ್ತಿ ಸುಲಭರಿದು./590
ಜಂಗಮವಿರಹಿತ ಲಿಂಗಾರ್ಪಿತ
ಸಂಗವಿಲ್ಲದ ಸತಿಪತಿಯಂತೆ ಸುಖವೆಲ್ಲಿಹದೊ!
ಕಂಗಳರಿಯದ ನೋಟ
ಕನಸಿನೊಳಗಿನ ಬೇಟ ನಿಜವೆಲ್ಲಿಹದೊ!
ಇದು ನಿಜವಲ್ಲ, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ./591
ಜಡಶೀಲಗಳ ಹೊತ್ತು ಕೆಡುವೊಡಲಹೊರೆವ
ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು.
ಮನದಿಚ್ಫೆಗನುವಾದ ತನುಸುಖಪದಾರ್ಥವನು
ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು.
ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು
ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ
ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು.
ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ
ಪರಸಮಯಾದಿ ದುರಾಸೆವಿಡಿದು
ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ.
ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು
ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ
ನಮ್ಮ ವೀರಮಾಹೇಶ್ವರಂಗೆ./592
ಜನನ ಸ್ಥಿತಿ ಮರಣವಿರಹಿತನಾಗಿದರ್ುದೇ ಪ್ರಸಾದಕಾಯವಯ್ಯಾ.
ಅದೆಂತೆಂದೊಡೆ, ಜನನಭಾವವಳಿದು
ಪುನರ್ಜನನಭಾವ ನಿಂದುದೇ ಶುದ್ಧಶೇಷಾಂಗವು.
ಮಾಯಾಸಂಸಾರ ಸ್ಥಿತಿಭಾವವಳಿದು
ಲಿಂಗಭೋಗೋಪಭೋಗಿಯಾಗಿಹುದೇ ಸಿದ್ಧಶೇಷಾಂಗವು.
ಮಾಯಾಸಂಸಾರ ಸ್ಥಿತಿಭಾವವಳಿದು
ಲಿಂಗಭೋಗೋಪಭೋಗಿಯಾಗಿಹುದೇ ಸಿದ್ಧಶೇಷಾಂಗವು.
ಕಾಲ ಮರಣ ಭಾವವಳಿದು
ಮನ ನಿರಂಜನ ಮಹಾಜ್ಞಾನೈಕ್ಯವಾದುದೇ ಪ್ರಸಿದ್ಧಶೇಷಾಂಗವು.
ಈ ತ್ರಿವಿಧಾಂಗ ಸಂಗಸದ್ಭಕ್ತಿಪ್ರಿಯ ಪಂಚಾಕ್ಷರಮೂರ್ತಿಲಿಂಗವು./593
ಜಲದಿಯೊಳಗೆ ಬಿದ್ದ ಜಲಗಲ್ಲ ತೆಗೆದು ಕಾಣಬಾರದು.
ಜ್ವಾಲಾದ್ರಿಗಿಟ್ಟ ಅರಗಿನಂಬ ತೆಗೆದು ಕಾಣಬಾರದು.
ಫಲವಾದಾಗ ಪರಾಗವ ತರಿಸಿ ಕಾಣಲುಬಾರದು.
ಗುರುನಿರಂಜನ ಚನ್ನಬಸವಲಿಂಗವೆರೆದ
ಶರಣನ ತಂದು ಕಾಣಲುಬಾರದು./594
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ
ನಿರಂಜನಲಿಂಗವ ಪಡೆದ ಅಗಣಿತಪ್ರಸಾದಿಯು
ತಾನು ತನ್ನಾನಂದಕ್ಕೆ ಅಡಿಯಿಟ್ಟು ನಡೆವಲ್ಲಿ,
ತನ್ನ ಪದದನುವನರಿದು ಸಾಕಾರ, ನಿರಾಕಾರ, ನಿರ್ಮಾಯಕ್ಕಿತ್ತು,
ಅರಿದರಿದುಕೊಂಡಾನಂದಿಸುವನಲ್ಲದೆ,
ಅಘಭರಿತ ಜಗಭಂಡ ಜಂಗುಳಿಗಳಂತೆ,
ಮಣ್ಣಿನ ಕರ್ಮದಲ್ಲಿ ನಿಂದು, ಹೆಣ್ಣಿನ ಮೋಹದಲ್ಲಿ ಸಿಲ್ಕಿ,
ಹೊನ್ನಿನಾಸೆಯಲ್ಲಿ ಮುಳುಗಿ ಚನ್ನಗುರುಲಿಂಗ ಜಂಗಮಕ್ಕಿತ್ತು
ಕೊಂಬ ಉನ್ನತಪ್ರಸಾದಿಗಳೆಂದು,
ಕುನ್ನಿಗಳ ಧ್ವನಿ ಸಹಜದಂತಿರುವರಲ್ಲಾ,
ಗುರುನಿರಂಜನ ಚನ್ನಬಸವಲಿಂಗಾ./595
ಜಾಗ್ರದಲ್ಲಿ ಉದರಾವಸರಕ್ಕೆ ಕುದಿಕುದಿದು ಕೆಡಹುತ್ತಿಹುದು.
ಸ್ವಪ್ನದಲ್ಲಿ ಮಲತ್ರಯರತಿವೊಂದಿ ಭುಂಜಿಸಿ ಮುಳುಗಿಸುತ್ತಿಹುದು.
ಸುಷುಪ್ತಿಯಲ್ಲಿ ದುರ್ಗಾಡಾಂಧಕಾರ ಕವಿದು ಪರವಶವನೆಯ್ದಿಸುತ್ತಿಹುದು.
ಇಂತಿಹ ಅವಿದ್ಯಾಂಗನೆಯ ಕಳೆದುಳಿವ ಕಣ್ಣುಳ್ಳ
ಹಿರಿಯರ ನಾನಾರನು ಕಾಣೆನಯ್ಯಾ,
ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಲ್ಲದೆ./596
ಜಾಗ್ರಪತಿಯ ವ್ಯವಹಾರ ಕತ್ತಲ ಬೆಳಗಾಯಿತ್ತು.
ಸ್ವಪ್ನಕರ್ತುವಿನ ಕಳವಳ ಸರಿದು ಸಮವೇದಿಸಿತ್ತು.
ಸುಷುಪ್ತಾಳ್ದನ ಸೊಗಸುರಿದು ನಿಂದಿತ್ತು.
ಮೂವರ ಹಿಂದೆ ಸಂದಲ್ಲಿ ಬಂದಿತ್ತು
ಗುರುನಿರಂಜನ ಚನ್ನಬಸವಲಿಂಗದ ಬೆಳಗು./597
ಜಾಗ್ರಾವಲಂಬನವನು ಸ್ವಪ್ನ ತಾನೊಳಕೊಂಡು,
ಸ್ವಪ್ನಾವಲಂಬನವನು ಸುಷುಪ್ತಿ ತಾನೊಳಕೊಂಡು,
ತೂರ್ಯ ತೂರ್ಯಾತೀತ ಸಹಜಾನಂದಮಯವಾದಂತೆ,
ಆಚಾರಲಿಂಗಾವಲಂಬನವನು ಸುಜ್ಞಾನಲಿಂಗ ತಾನೊಳಕೊಂಡು,
ಸುಜ್ಞಾನಲಿಂಗಾವಲಂಬನವನು ಆತ್ಮಲಿಂಗವೊಳಗೊಂಡು
ಪರಿಪೂರ್ಣ ಪರಮಾನಂದ ಪರವಶದೊಳೋಲಾಡುತಿರ್ದನು
ಗುರುನಿರಂಜನ ಚನ್ನಬಸವಲಿಂಗದೊಳಗೆ./598
ಜಾತಿ ಗೋತ್ರ ಕುಲ ಆಶ್ರಮ ವರ್ಣ ನಾಮ
ನಿರಂಜನಲಿಂಗಸನ್ನಿಹಿತನಾದ ಶರಣನು
ಪಂಚಸೂತಕವನರಿಯದೆ ಪಂಚಬ್ರಹ್ಮ ತಾನೆಯಾಗಿ
ಪರಮಾನಂದಸುಖಮುಖಿಯಾಗಿರ್ದನಲ್ಲದೆ
ಷಡ್ಭ್ರಮೆಯಲ್ಲಿ ನಿಂದು ಪಂಚಸೂತಕದ ವರ್ತನೆಯಲ್ಲಿ ಬೆಂದು
ಒಡಲಗೊಂಡು ಹೋಗುವ ಜಡಪಾತಕನಂತಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./599
ಜೀವಪರಮನೊಂದು ಮಾಡಬೇಕೆಂಬುದೊಂದು ಕುರುಹು.
ಜ್ಞಾನ ಕ್ರಿಯೆಯಿಂದೆ ಕೂಡಬೇಕೆಂಬುದೊಂದು ಕುರುಹು
ನಾನೇನಾಗಬೇಕೆಂಬುದೊಂದು ಕುರುಹು.
ಇದು ಕಾರಣ ಕುರುಹಳಿದಲ್ಲದೆ ಇರವಾಗಬಾರದು.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೈಕ್ಯಂಗೆ
ಜೀವನಿಲ್ಲ, ಪರಮನಿಲ್ಲ, ಜ್ಞಾನವಿಲ್ಲ, ಕ್ರಿಯೆಯಿಲ್ಲ,
ನಾನು ಇಲ್ಲ ನೀನು ಇಲ್ಲ ತಾನು ತಾನಾಗಿರ್ಪನು ಕಾಣಾ./600
ಜೀವಪರಮರನೊಂದುಮಾಡಿ ಕಾಣಬೇಕೆಂಬ
ಸಂದೇಹಸೂತಕಭಾವಕ್ಕೆ ಅತೀತ ಕಾಣಾ.
ಅಭಿನ್ನವಸ್ತುವ ಭಿನ್ನವಿಡುವ ಬಗೆಯೆಂತು?
ಭಿನ್ನವಾಗಿರ್ದ ಜೀವ ಶಿವನಾಗುವ ಬಗೆಯೆಂತು?
ಹಗಲಿರುಳುವೊಂದಾದರೆ ಕಾಣಬಹುದು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ. /601
ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು,
ಸರ್ವಾಚಾರಸಂಪತ್ತಿನೊಳಗಿರಿಸಿದ ಕ್ರಿಯಾಘನಗುರುವಿನ ತೆಗೆದುಹಾಕಿ
ನಾವು ಲಿಂಗಜಂಗಮಸನ್ನಿಹಿತರೆಂದಡೆ
ಆ ನಾಲಿಗೆ ಕೀಳದಿಹರೆ ಕಾಲನವರು ?
ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ ಖಂಡಿಸದಿಹರೆಯಮನವರು?
ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ ಬಿಸಾಟರೆ ಅಂತಕನವರು?
ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ ಕಡಿಕಡಿದು ಕಡೆಗಿಡರೆ ಯಮನವರು ?
ಆ ಆದಿಯ ಗುರುನಾಮಾಮೃತವ ಸೇವಿಸುವರ ಹೃದಯವನಿರಿದು
ಕೆಡಹದಿಹರೆ ದಂಡಧರನವರು ?
ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ
ಮಾನವರ ಬಾದಿಸರೆ ಕೀನಾಶನವರು ?
ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ ಸೇವಿಸುವ ಭಾವವನು
ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು ?
ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ ವೈತರಣಿಯಕೂಟ
ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ./602
ಜ್ಞಾನವಿಕೃತಭಾವವುಳ್ಳರೆ ಪ್ರಕಾಶತ್ವ ಶೂನ್ಯವಾಗಿಹುದು;
ಅಲ್ಲಿ ಸ್ವಯಜಂಗಮವೆನಲಿಲ್ಲ.
ವರ್ತನವಿಕೃತಭಾವವುಳ್ಳರೆ ಪ್ರಮೋದತ್ವ ಪ್ರವರ್ತನತ್ವ ನಾಸ್ತಿಯಾಗಿಹುದು;
ಅಲ್ಲಿ ಚರಜಂಗಮವೆನಲಿಲ್ಲ.
ಮೋಹನವಿಕೃತಭಾವವುಳ್ಳರೆ ಪ್ರಮೋದತ್ವ ವಿರಹಿತವಾಗಿಹುದು;
ಅಲ್ಲಿ ಪರಜಂಗಮವೆನಲಿಲ್ಲ.
ಇದು ಕಾರಣ ತ್ರಿವಿಧವಿದರ್ು ತ್ರಿವಿಧನಾಸ್ತಿಯಾದಲ್ಲಿ
ತ್ರಿವಿಧನುಗ್ರಹ ಮಾಡಿದರೆ ತ್ರಿವಿಧ ದ್ರೋಹತಪ್ಪದು,
ಗುರುನಿರಂಜನ ಚನ್ನಬಸವಲಿಂಗಕ್ಕೆ ನೀಡಬೇಕಾದರೆ
ಅರಸಿ ಕಂಡು ಮಾಡಬೇಕು, ಸ್ಥಲಕ್ಕೆ ಸನುಮತ./603
ಜ್ಞಾನಿಗುರುವರನ ಕರಕಂಜೋದಯ ಶರಣ
ತನ್ನ ಕರಕಂಜದೊಳಿಷ್ಟಗುರುವರನರಿದು,
ಸುಜ್ಞಾನಪ್ರಭೆಯೊಳಗೆ ಸುಳಿದಾಡುವ ಪರಿಯ ನೋಡಾ.
ಪೃಥ್ವಿಯಂಗವ ಧರಿಸಿ ಪಂಚಾಚಾರವಿಡಿದು
ಸಂಚರಿಸುವ ಭಕ್ತನ ಸವಿಯ ನೋಡಾ.
ಅಪ್ಪುವಿನಂಗವ ಧರಿಸಿ ನಿಷ್ಪತ್ತಿ ನಿಜವಿಡಿದು
ನಿರ್ಮಲ ಗಮನದೊಳೊಪ್ಪುವ ನಿಲುವಿನ ನಿಃಕಳಂಕವ ನೋಡಾ.
ತೇಜಾಂಗವ ಧರಿಸಿ ಮಾಜದರುವಿಡಿದು
ಸೋಜಿಗಸುಖವಿತ್ತು ಕೊಂಬ ಸಾವಧಾನಿಯ ಸಮ್ಮಿಶ್ರವ ನೋಡಾ.
ಅನಿಲಂಗವ ಧರಿಸಿ ಯಜನದನುವರಿವಿಡಿದು ಭಜನೆ ಭಾವವನಳಿದು
ಮೂಜಗವರಿದು ಬೆಳಗುವ ಕಳೆವರನ ನೋಡಾ.
ಅಂಬರಂಗವ ಧರಿಸಿ ಪರನಾದ ಪ್ರಭೆವಿಡಿದು
ಚಿದ್ವೈತ ಗಮನಾದ್ವೈತ ಸುಖಸಂಬಂಧದ ಸುಳುಹ ನೋಡಾ.
ಆತ್ಮಾಂಗವ ಧರಿಸಿ ಅನನ್ಯಕಳೆವಿಡಿದು ಸಮರಸದೊಳಿಪ್ಪ
ಸದ್ಭಕ್ತನ ಚರಾಂಗದಲ್ಲಿ ಬೆಳಗುವ
ಚನ್ನಬಸವಲಿಂಗದ ನಿಲುವ ನೋಡಾ./604
ಡಂಭಕರೊಂದು ಲಿಂಗವ ಕೊಂಡು ಮಂಡಲದೊಳಗಾಡುವರಯ್ಯಾ.
ಒಡೆಯನ ಪೂಜೆಯ ಮಾಡುವರಯ್ಯಾ.
ಹೊತ್ತಾರೆದ್ದು ಕ್ಷೇತ್ರ ಮನೆಕೆಲಸವ ಮುಂದಿಟ್ಟು,
ಒಂದೊಂದು ಕುರುಹ ಮುಂದಿಟ್ಟು ಸಂಧಿಸಿ ಮಾಡಿಕೊಂಬ
ಬಂಧಮೋಹಿಗಳ ಪೂಜೆ ಎಂದೆಂದು ನಿಮ್ಮ ಕಾಣಲರಿಯದು.
ಮತ್ತೆಂತೆಂದೊಡೆ, ಹಿಂದುಮುಂದಿನ ಸಂದೇಹವಳಿದು
ಆನಂದಮುಖನಾಗಿ, ಆಯಾಯ ಕಾಲಕ್ಕೆ ಪೂಜಾರ್ಪಣವ ಪರಿಣಾಮಿಸಿ
ನಿರಂತರಸಾವಧಾನಿಯಾದರೆ ಆತ ನಿಜವೆಂಬೆ
ಗುರುನಿರಂಜನ ಚನ್ನಬಸವಲಿಂಗಾ./605
ತಂಗಿಯ ಗಂಡನೆನ್ನನೆರೆದು ಪರಿಮಳವ ಪೂಸಿ ಪರಿಪರಿಯ ರುಚಿಗಾಣಿಸಿದನು.
ಚಲುವಿಕೆಯ ತೋರಿ ತಕರ್ೈಸಿ ಮಾತನಾಡದೆ
ನಿನ್ನ ಗಂಡಂಗೆ ಶರಗ ಹಾಸುವಳೆಂದು
ಗುರುನಿರಂಜನ ಚನ್ನಬಸವಲಿಂಗವೆನ್ನೊಳಗಾದ ಕಾಣಮ್ಮ. /606
ತಂದೆ ತಾಯಿ ಬಂಧುಬಳಗ ದಂದುಗದ ಸಂದುಬಿಚ್ಚಿ
ಗುರುವಿಂಗೆ ಕಂದನಾಗಿ ಲಿಂಗಸತಿಯಾಗಿ ಕೈಕೊಟ್ಟಮೇಲೆ
ಅಂದಿನಂತೆ ಅರಿಯಬೇಕಲ್ಲದೆ,
ಅರಿವುಗೆಟ್ಟು ಮರವೆಯೊಳ್ನಿಂದು
ಸರಿದು ಸಂಸಾರದೊಳು ಕೂಡಿ ಬೆರೆದು ಬೆಟ್ಟವನೇರಿ,
ಬರಿಯ ವಾಗದ್ವೈತದೊಳಗಿಪ್ಪ ಕುರಿಮಾನವರು
ತೆರವಕಾಣರು ನಮ್ಮ ಗುರುನಿರಂಜನ ಚನ್ನಬಸವಲಿಂಗಪ್ರಸಾದದಲ್ಲಿ./607
ತಂದೆ ತಾಯಿಯ ಮಾತ ನೋಡಿಕೊಂಡು ಬಂದೆ ನೋಡಯ್ಯಾ.
ಮಾತಿನ ಮರುಳರ ಕೂಡಿನಿಂದೆ ನೋಡಯ್ಯಾ.
ನೋಡಿನಿಂದಲ್ಲಿ ಮರುಳಗಳಲ್ಲಿಟ್ಟು ಹೋದರು ನೋಡಯ್ಯಾ.
ಸಂಗದಿಂದೆ ಸಂಗವನಳಿದು ನಿಸ್ಸಂಗಿಯಾದೆ ನೋಡಯ್ಯಾ.
ಗುರುನಿರಂಜನ ಚನ್ನಬಸವಲಿಂಗದ ಗರ್ಭದೊಳಡಗಿದೆ ನೋಡಯ್ಯಾ./608
ತಂದೆತಾಯಿಗಳಿಂದುದಯವಾಗಿ ಬಂದು
ಮೂರೂರು ಭೂಮಿಯೊಳಗೆ ಮೂರು ಮುಖದ ಎತ್ತು,
ಹಗಲಿರುಳು ಕಾಳಗತ್ತಲೆಯಲ್ಲಿ ಮೂರು ನಾಮವ ಹೊತ್ತು,
ಮೂರು ಹುಲ್ಲಿನ ರಸವನು ನೀರ ಮೇಲೆ ನಿಂದು ಸೇವಿಸುತ್ತಿರಲು,
ನಾಭಿಯಿಂದೆ ಅಗ್ನಿ ಸೂಸಿ ಉರಿಹತ್ತಿ ಎತ್ತು ಬೆಂದಿತ್ತು ನೋಡಾ!
ನೀರೊಳಗಿರ್ದ ಗಜಾಳಿ ಕುರಿಗಳ ಕೂಡಿ ನೋಡುತಿರ್ದವು.
ಪರಿಪರಿಯಿಂದೆ ಬೀಸುವ ಗಾಳಿ ನಿಂದಿತ್ತು ನೋಡಾ!
ಗೊರವನ ಕೈಪಂಜಿನ ಬೆಳಗ ಕಂಡು
ಕೈಕಾಲುಮುಖದೊಳೆದು ನಡೆದು ನಿಂದಲ್ಲಿ ಬೆಳಗಿನ ಬೆಳಗು ತಾನೆ ನೋಡಾ
ಗುರುನಿರಂಜನ ಚನ್ನಬಸವಲಿಂಗಾ!/609
ತಂದೆಯ ಮಗನ ಕೈಹಿಡಿದು
ಮದುವೆಯ ಮಡದಿಯಾದ ಪರಿ ಹೊಸತಯ್ಯಾ.
ಮನೆಯ ಗಂಡನ ಮುಂದಿಟ್ಟು
ಮೂರುಲೋಕವನರಿದು ತನ್ನತ್ತ ವಶಗತಮಾಡಿ
ಸರ್ವಸಂಭ್ರಮದಿಂದೆ ನಡೆ ನೋಟ ತರಹರವಾಗಿರ್ದಳಯ್ಯಾ.
ಹೊರಗೊಳಗಿನ ನೆರವೆಯ ತಂದು, ತಲೆಗೂಡಿ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ನೆರೆವ
ಪರವಶದ ನಿಷ್ಪತ್ತಿಯನೇನೆಂದುಪಮಿಸುವೆನಯ್ಯಾ./610
ತಂದೆಯ ಹೆಸರ ಮಗನಮಡದಿಗೆ ಮಿಂಡರು ಮೂವರು ನೋಡಾ.
ಒಬ್ಬಂಗೆ ಕೈಗೊಟ್ಟು ಗುದ್ಯಾಡುವಳು,
ಒಬ್ಬಂಗೆ ಮಾತುಕೊಟ್ಟು ಚಿಂತಿಸುವಳು,
ಒಬ್ಬನ ನೆರೆದು ಸುಖಿಸುವಳು,
ಇಂತಪ್ಪ ನಿತ್ಯ ನೇಮದ ಹಾದರಗಿತ್ತಿಗೆ
ಗುರುನಿರಂಜನ ಚನ್ನಬಸವಲಿಂಗವ
ಕೂಡುವಳೆಂದು ನಗುವರು ಶರಣರು./611
ತತ್ವತ್ರಯಂಗಳು ನಿತ್ಯತ್ವವನೈದಿ ಮಹವೆಂದು ಮರೆದ ನಿಲುವಿಂಗೆ
ರೂಪನರ್ಪಿಸಲಿಲ್ಲವೆಂಬುದು ಕೊರತೆ, ರೂಪಿಲ್ಲದ ರೂಪು ತಾನಾಗಿಪ್ಪನು.
ರುಚಿಯನರ್ಪಿಸಲಿಲ್ಲವೆಂಬುದು ಕೊರತೆ, ರುಚಿಯಿಲ್ಲದ ರುಚಿಯು ತಾನಾಗಿಪ್ಪನು.
ತೃಪ್ತಿಯನರ್ಪಿಸಲಿಲ್ಲವೆಂಬುದು ಕೊರತೆ, ತೃಪ್ತಿಯಿಲ್ಲದ ತೃಪ್ತಿ ತಾನಾಗಿಪ್ಪನು.
ಇದು ಕಾರಣ ಸಾಧಕದ ಭೇದಕದ ನುಡಿ ನುಡಿದಲ್ಲಿಯೇ ಸೃಷ್ಟಿನಷ್ಟ.
ಆ ಭಾವವನರಿಯದ ಸದ್ಭಾವ ರೂಪು ತಾನೆ
ಗುರುನಿರಂಜನ ಚನ್ನಬಸವಲಿಂಗಾ./612
ತಥ್ಯತಾನೆಂಬ ನಿತ್ಯದ ನಿಲುವ ಮರೆದು,
ಮಿಥ್ಯಮಂದಿರದ ಸತ್ಯಸಂಸ್ಕೃತಿಯೊಳೊತ್ತೆಗೆಯ್ದು,
ಕರ್ತು ಗುರುಲಿಂಗಜಂಗಮದ ಅನುವಿನ
ಗೊತ್ತು ಸುಟ್ಟು ಮಾಡುವ ಬಡವರಿಗೆ
ಮತ್ತೆ ಇನ್ನೆಲ್ಲಿಯದು ಹೇಳಾ ಲಿಂಶರಣಸ್ಥಲ
ಗುರುನಿರಂಜನ ಚನ್ನಬಸವಲಿಂಗಾ. /613
ತಥ್ಯಮಿಥ್ಯ ನಿರಂಜನ ಶರಣನ ಭಾವ
ಕತರ್ು ಭೃತ್ಯತ್ವವ ನುಂಗಿ ಕಡೆಗಾಯಿತ್ತು.
ಮರಳಿ ಬರಲೆಡೆಯಿಲ್ಲದೆ ಬಯಲಾದುದನು
ಬಸವ ಚನ್ನಬಸವ ಪ್ರಭು ಸಮರಸಾನುಭಾವ
ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ./614
ತನಿರಸವ ತುಂಬಿರ್ದ ಫಳವು ತನ್ನ ಸಾರವನ್ನು ಸರಿಯಿಟ್ಟು ಹೇಳಿಕೊಳ್ಳದು.
ಶಿವಾನುಭಾವಭರಿತ ಸ್ವಯಾನಂದಸುಖಿ ಇದಿರಿಡಲರಿಯ ಕಾಣಿಸಿಕೊಳ್ಳಲರಿಯ.
ತನ್ನಲ್ಲಿ ತಾನು ತರಹರವಾದನಾಗಿ,
ಗುರುನಿರಂಜನ ಚನ್ನಬಸವಲಿಂಗವಿಡಿದು ಲಿಂಗವನರಿಯ.
/615
ತನು ಇಂಪುಗೊಂಡು ಮನ ಭಾವ ಬೆಚ್ಚಿ ಮುಂದುವರಿದು ಮಾಡಲು
ಭಕ್ತಿರಸ ಮನ ಸೊಂಪುಗೊಂಡು
ಭಾವ ತನು ಕರಗಿ ಮಚ್ಚುಗೊಂಡು ಮಾಡಲು
ಭಕ್ತಿಯ ಮಧುರಭಾವ ತರಹರಗೊಂಡು
ತನು ಮನ ತುಂಬಿ ಕಂಗಳರತಿ ಕಡೆಗುಕ್ಕಿಮಾಡಲು ಭಕ್ತಿಯ ಸೌಖ್ಯ.
ಇಂತು ಶ್ರದ್ಧೆ ಸಾವಧಾನಾನಂದವೆಂತೆಂಬ
ಭಕ್ತಿತ್ರಯದ ಬೆಳೆಯೊಳಗೊಪ್ಪುತಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಭಕ್ತ./616
ತನು ಕ್ರಿಯೆಯಲ್ಲಿ, ಮನ ಜ್ಞಾನದಲ್ಲಿ, ಪ್ರಾಣ ಘನದಲ್ಲಿ,
ಭಾವ ಮಹದಲ್ಲಿ ತರಹರವಾಗಿ,
ತನ್ನ ತಾನರಿದಿರ್ದ ಶರಣನ ಸಮರಸಕ್ಕೆ ಮೆಚ್ಚಿ ಬಿದ್ದೆನು
ಗುರುನಿರಂಜನ ಚನ್ನಬಸವಲಿಂಗದೊಳಗೆ./617
ತನುಮನಭಾವವನಿತ್ತು ತ್ರಿವಿಧಲಿಂಗಸನ್ನಿಹಿತನಾದ ಶರಣಂಗೆ
ತನುಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ?
ಮನಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ?
ಭಾವಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ ?
ತನುಮನಭಾವ ಪ್ರಕೃತಿಯಲ್ಲಿ ವರ್ತಿಸಿ
ಲಿಂಗಾಂಗಸಂಬಂದಿಗಳೆಂಬ ಮಂಗ ಹೊಲೆಯ ಭಂಗರುಗಳನೇನೆಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./618
ತನುರಹಿತವಾಗಿ ನಿಂದಾತ ಶರಣ ;
ಮನತರಹರವಾಗಿ ನಿಂದಾತ ಶರಣ ;
ಪ್ರಾಣತರಹರವಾಗಿ ನಿಂದಾತ ಶರಣ.
ಇಂತಲ್ಲದೆ ತನು ಆಣವಮಲದಲ್ಲಿ ತರಹರವಾಗಿ,
ಮನ ಮಾಯಾಮಲದಲ್ಲಿ ತರಹರವಾಗಿ,
ಪ್ರಾಣ ಕಾರ್ಮಿಕಮಲದಲ್ಲಿ ತರಹರವಾಗಿ,
ಇಂತಿರ್ದು ನಾನು ಭಕ್ತ ನಾನು ಮಾಹೇಶ್ವರ ನಾನು ಪ್ರಸಾದಿ
ನಾನು ಪ್ರಾಣಲಿಂಗಿ ನಾನು ಶರಣ ನಾನು ಐಕ್ಯನೆಂಬ
ನುಡಿಗಡಣವ ಕಂಡು ಮೃಡನ ಶರಣರು ಕೈಹೊಡೆದು ನಗುತಿರ್ದರು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./619
ತನುರುಚಿಯ ಮನದಲ್ಲರಿದು, ಮನರುಚಿಯ ತನುವಿನಲ್ಲರಿದು,
ತನುಮನರುಚಿಯ ಆತ್ಮನಲ್ಲರಿದು ಅವಧರಿಸಿಕೊಂಡ ಬಳಿಕ
ಅಂತಿಂತೆಂಬುದು ಅಧಮನುಡಿ ಕಾಣಾ.
ಅರಿಯದಿರ್ದಡೆ ಬಾರದು ಮಾಣಾ.
ದ್ವಂದ್ವಭಾವದ ಸಂದಿನ ಬೇನೆಯ ಕಂಡು ಹಿಂದುಮುಂದಾಗಿ ನಾಚಿತೆನ್ನ ಮನ.
ಬೆಂದೊಡಲ ಬಾಧೆಯ ಮುಂದಿರಿಸದಿರು
ನಮ್ಮ ಗುರುನಿರಂಜನ ಚನ್ನಬಸವಲಿಂಗ ಶರಣಚರಿತೆಯ. /620
ತನುಲೋಭಿಯ ಭಕ್ತಿ ಗುರುದ್ರೋಹ;
ಮನಲೋಭಿಯ ಪೂಜೆ ಲಿಂಗದ್ರೋಹ.
ಧನಲೋಭಿಯ ದಾಸೋಹ ಜಂಗಮದ್ರೋಹ.
ಈ ತ್ರಿವಿಧಲೋಭಿಯ ಸಂಗಸಂಭಾಷಣೆಯಿಂದೆ,
ಭವದ ಬಲೆ ಹರಿಯದು ನೋಡಾ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./621
ತನುವ ದಂಡಿಸಿ ಧನವ ಗಳಿಸಿ
ಅನುವರಿಯದೆ ಬಿನುಗು ಮುಖನಾಗಿ,
ಕಲ್ಲುಮಣ್ಣಿಗೆ ಕಳೆದುಳಿವ ಕಾಲನ ಬಾಧೆಗೆ ಉಳಿವಿಲ್ಲ,
ಮನವ ಕನಲಿಸಿ ಕ್ಷುಧೆಯ ಮರುಗಿಸಿ ಅರ್ಥವ ಗುಡಿಸಿ
ಆಳ್ದನ ಮರೆದು ಸತಿಪುತ್ರ ವಿಷಯಭ್ರಾಂತಕ್ಕೊಲಿದು,
ಅಳಿಸಿ ಕಸಗೂಡಿ ಕಳೆದುಳಿವ ಮಾಯೆಗುಳಿವಿಲ್ಲ.
ಭಾವ ಬೆಚ್ಚಿ ಕೊನರಿ ಕೊಸದು ಧನವ ತಂದು,
ಮಹಾದೇವನ ಮರೆದು, ಅನಿತ್ಯಸಂಸಾರ ಅಪವಾದ ಅರಿಷ್ಟಭಾವಕ್ಕೆಳಸಿ,
ದುಷ್ಕರ್ಮಿಯಾಗಿ ಉಳಿದು, ದುರ್ಗತಿಯನೈದುವದೊಡಕೊಳವಲ್ಲ.
ಮತ್ತೆಂತೆಂದೊಡೆ: ಒಡೆಯರಿಗೊಡವೆಯನು ವಂಚಿಸುವ
ತುಡುಗುಣಿಯರ ಬಾಯಲ್ಲಿ
ಹುಡಿಯ ಹೊಯ್ಯಿಸಿ ನಡೆವ ಕಡುಗಲಿ ವೀರಮಾಹೇಶ್ವರ ನಾನು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./622
ತನುವಿಡಿದು ಮಾಡಿದ ಪದಾರ್ಥವು ಘನಲಿಂಗಕ್ಕೆ ಸಲ್ಲದು.
ಮನವಿಡಿದು ಮಾಡಿದ ಪದಾರ್ಥವು ಅನುವಿಂಗೆ ಸೊಗಸದು.
ಧನವಿಡಿದು ಮಾಡಿದ ಪದಾರ್ಥವು ಪರಮಲಿಂಗಕ್ಕೆ ಸಮನಿಸದು.
ಅದು ಕಾರಣ ತನು ಮನ ಧನವಿಡಿದ ಸುಖಿಗಳು
ಗುರುನಿರಂಜನ ಚನ್ನಬಸವಲಿಂಗಕ್ಕತ್ತತ್ತ ದೂರ./623
ತನುವಿನಂತೆ ತನು, ಮನದಂತೆ ಮನ, ಪ್ರಾಣದಂತೆ ಪ್ರಾಣ,
ಭಾವದಂತೆ ಭಾವ, ನಡೆಯಂತೆ ನಡೆ, ನುಡಿಯಂತೆ ನುಡಿ,
ಹೇಗೆ ಇರ್ದಂತೆ ಹಾಗೆ ಇದರ್ು ನಾವು ಆದಿಯಿಂದೆ ಅನಾದಿಯ ಕಂಡೆವು.
ಅನುಪಮ ಗತಿಮತಿಗಳೆಂಬ ನುಡಿ ನಿಮ್ಮನು ತೊರೆಯದಿಹವೆ ?
ಕಿಚ್ಚಿನೊಳಗಿಕ್ಕದಿಹವೆ ? ಪಿಶಾಚಿಯ ಮಾಡದಿಹವೆ ?
ಭ್ರಮಣಗೊಳಿಸದಿಹವೆ ? ದುರ್ಗತಿಗಿಕ್ಕದಿಹವೆ ? ನಾಲಿಗೆಯ ಸೀಳದಿಹವೆ ?
ನುಡಿದಂತೆ ಹಿಡಿದು ನಡೆವರೆ ಶರಣರೆಂಬೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./624
ತನುವಿನಮೋಹ ತರಹರವಾಗಿ
ಮನದ ರಭಸ ಮುಂದುವರಿದು
ಪ್ರಾಣನಪ್ರಕೃತಿಪ್ರವೇಶದೊಳು ಭಾವಭ್ರಾಂತಿಗೊಂಡು
ತನ್ನ ಸ್ವಭಾವನರಿಯದೆ, ಸುಲಲಿತ ಶರಣರೆನಿಸಿಕೊಂಬ
ಅಬದ್ಧ ಮೂಢರ ಗುರುನಿರಂಜನ
ಚನ್ನಬಸವಲಿಂಗದಲ್ಲಿ ನೆನೆಯಲಾಗದು./625
ತನುವಿಲ್ಲದ ಘನಕ್ಕೆ ತನುಸಂಬಂದಿಸಿದರೆ ಒಂದನೆಯ ಪಾತಕ.
ಮನವಿಲ್ಲದ ಘನಕ್ಕೆ ಮನವ ಸಂಬಂದಿಸಿದರೆ ಎರಡನೆಯ ಪಾತಕ.
ಧನವಿಲ್ಲದ ಘನಕ್ಕೆ ಧನವ ಸಂಬಂದಿಸಿದರೆ ಮೂರನೆಯ ಪಾತಕ.
ಭಾವವಿಲ್ಲದ ಘನಕ್ಕೆ ಭಾವ ಸಂಬಂದಿಸಿದರೆ ನಾಲ್ಕನೆಯ ಪಾತಕ.
ತಾನಿಲ್ಲದ ಘನಕ್ಕೆ ತನ್ನ ಸಂಬಂದಿಸಿದರೆ ಐದನೆಯ ಪಾತಕ.
ಇಂತು ಪಂಚವಿಧವನರಿಯದೆ
ಪಂಚಬ್ರಹ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿರ್ದ ನಿಜಕ್ಕೆ
ಗಜಬಜೆಯಗಲಸಿದರೆ ಪಂಚಮಹಾಪಾತಕದೊಳಗಾಗುವರು./626
ತನುವು ಸವೆಯದು ಮನವು ಸವೆಯದು ಪ್ರಾಣಾದಿ ದ್ರವ್ಯ ಸವೆಯದು,
ಕಂಡಕಂಡಲ್ಲಿ ಕುಂಡಿಯನೆತ್ತಿ ತಲೆಯ ಚಾಚುವ
ತೂಳಮೇಳದ ಸಂತೆಯ ಭಂಡರು ಶರಣರಪ್ಪರೆ ?
ಮನೆಯ ನಚ್ಚು ಬಿಡದು, ಮಡದಿಯ ಮರುಳು ಬಿಡದು,
ಹಣದ ರತಿಯು ಬಿಡದು.
ಬಿಟ್ಟಿಯ ಭಕ್ತಿಯ ಮಾಡುವ ಕೆಟ್ಟ ನರನಿಗೆ
ಶ್ರೇಷ್ಠಶರಣ ಭಕ್ತನಾಮ ಸಲ್ಲದು ಕಾಣಾ.
ಮತ್ತೆಂತೆಂದೊಡೆ, ತನುವಿನಲ್ಲಿ ನಿರ್ವಂಚಕತ್ವ, ಮನದಲ್ಲಿ ನಿದ್ರ್ವಂದ್ವ,
ಪ್ರಾಣದಲ್ಲಿ ಪ್ರೇಮರತಿಸಂಯುಕ್ತನೇ ಶರಣ.
ಮನೆ ಮಡದಿ ಧನದಲ್ಲಿ ಇಲ್ಲದಿರ್ದಾತನೆ
ಶರಣಭಕ್ತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./627
ತನುಶುದ್ಧಿಯನರಿಯದೆ ಜೀವಭಾವಿಯಾಗಿ ಕೆಟ್ಟನು ವೇದಾಂತಿ.
ಪ್ರಾಣಶುದ್ಧಿಯನರಿಯದೆ ಭಿನ್ನಭಾವಿಯಾಗಿ ಕೆಟ್ಟನು ಸಿದ್ಧಾಂತಿ.
ಆತ್ಮಶುದ್ಧಿಯನರಿಯದೆ ಹುಸಿಕಲಾಭಾವಿಯಾಗಿ ಕೆಟ್ಟನು ಬಿನ್ನಯೋಗಿ.
ಈ ವಿಚಾರವಂತಿರಲಿ, ತ್ರಿವಿಧ ಶುದ್ಧಿಯನರಿದು,
ತ್ರಿವಿಧ ಭಕ್ತಿಪ್ರಭೆಯೊಳು ನಿಂದು,
ತ್ರಿವಿಧಲಿಂಗಕೃಪಾಂಬುವಿನಭಿಷೇಕಪರಿಣಾಮಿಯಾಗಿ ವರ್ತಿಸುವುದೇ
ಘನಗಂಬಿರ ವರ್ತನವಹುದೆಂಬೆ; ಆ ವರ್ತನದೊಳಗೆ
ಕತರ್ು ಚನ್ನವೃಷಭೇಂದ್ರಲಿಂಗವು ಸುಖಮುಖಿಯಾಗಿಪ್ಪನು ಕಾಣಾ./628
ತನುಶೂನ್ಯನಾಗಿ ಆಚಾರಲಿಂಗ ಶೂನ್ಯ, ಮನಶೂನ್ಯನಾಗಿ ಗುರುಲಿಂಗ
ಶೂನ್ಯ,
ಪ್ರಾಣಶೂನ್ಯನಾಗಿ ಶಿವಲಿಂಗ ಶೂನ್ಯ, ಭಾವಶೂನ್ಯನಾಗಿ ಜಂಗಮಲಿಂಗ ಶೂನ್ಯ,
ಜ್ಞಾನಶೂನ್ಯನಾಗಿ ಪ್ರಸಾದಲಿಂಗ ಶೂನ್ಯ, ಆತ್ಮಶೂನ್ಯನಾಗಿ ಮಹಾಲಿಂಗಶೂನ್ಯ.
ಸರ್ವಶೂನ್ಯನಾಗಿ ಸತಿಪತಿಭಾವದ ಸಲೀಲೆಗೊಮ್ಮೆ
ಸಾಕಾರ ಸಂಯೋಗಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./629
ತನುಶೂನ್ಯಶರಣಂಗೆ ಕುಲವೆಂಬುದೇನು ಹೇಳಾ.
ಮನಶೂನ್ಯಶರಣಂಗೆ ಛಲವೆಂಬುದೇನು ಹೇಳಾ.
ಪ್ರಾಣಶೂನ್ಯಶರಣಂಗೆ ಧನವೆಂಬುದೇನು ಹೇಳಾ.
ಭಾವಶೂನ್ಯಶರಣಂಗೆ ತಪವೆಂಬುದೇನು ಹೇಳಾ.
ತ್ರಿಪುಟಿಶೂನ್ಯಶರಣಂಗೆ ಭಿನ್ನವೆಂಬುದೇನು ಹೇಳಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣನು ಸರ್ವಶೂನ್ಯ ಲಿಂಗೈಕ್ಯ ಕಾಣಾ./630
ತನುಸೂತ್ರಚೈತನ್ಯಕ್ಕಿದ್ದನೊಬ್ಬ, ಮನಸೂತ್ರಚೈತನ್ಯಕ್ಕಿದ್ದನೊಬ್ಬ,
ಆತ್ಮಸೂತ್ರಚೈತನ್ಯಕ್ಕಿದ್ದನೊಬ್ಬ,
ಈ ಮೂವರ ಮುಂಭಾರವ ಹೊತ್ತು ನಡೆಯದೆ,
ಮರೆದು ಬಳಸಿದರ್ಥದ ಬಡ್ಡಿಯನರಿದು ಕೊಟ್ಟು
ಮೂಲದ್ರವ್ಯದಲ್ಲಡಗಿ ಅಮರಿಸಬಲ್ಲರೆ
ಆದಿಯ ಭಕ್ತನಹುದು ಗುರುನಿರಂಜನ ಚನ್ನಬಸವಲಿಂಗದಲ್ಲಿ./631
ತನ್ನ ಕಾರ್ಯಕ್ಕಾಸ್ಪದ ಕಳೆಯಳಿಯದ ಮುನ್ನ ಕಂಡು ಕಾಣಿಸಿದ ಸುಳುಹ,
ಸುಳುಹಿಡಿದ ಮೇಲೆ ಬಳಿವಿಡಿದು ಬಂದು ತೋರಿಕೊಟ್ಟನು.
ಮೂರಾರು ಕೋಟಿ ಸೋಮಸೂರ್ಯರೊಂದಾದ
ಮಹಾಪ್ರಕಾಶವು ಎನ್ನ ಕಂಗಳಮುಂದೆ,
ಕಂಗಳ ಮುಂದಿನ ಬೆಳಗು ಕಾಯವನುಂಗಿ,
ಕರಣವನುಂಗಿ, ಪ್ರಾಣವನುಂಗಿ ಭಾವಬಿಚ್ಚಿ
ಮಹಾನುಭಾವ ಗುರುನಿರಂಜನ ಚನ್ನಬಸವಲಿಂಗ ತಾನಾದುದು./632
ತನ್ನ ಕಾಲು ಹೇಸಿಕೆ, ಇತರರ ಕಾಲನರಸಿ ಜರಿವ.
ತನ್ನ ಕೈ ಹಡಿಕೆ, ಇತರರ ಕೈಯನರಸಿ ಹಳಿವ.
ತನ್ನ ಕಣ್ಣು ಕುರುಡು, ಇತರರ ಕಣ್ಣನರಸಿ ತೆಗೆವ.
ತನ್ನ ಬಾಯಿ ಹೊಲಸು, ಇತರರ ಬಾಯಿಯನರಸಿ ಬೊಗಳುವ.
ತನ್ನ ನಿಲುವೆಲ್ಲ ದುರ್ವಾಸನೆ, ಇತರರ ವಾಸನೆಯ ಭಾವಿಸುವ.
ಇಂಥ ನರಕಪ್ರಾಣಿಯ ನೆರಮನೆಯಲ್ಲಿರ್ದಡೆ ಪಾತಕ ಸೋಂಕುವುದು.
ಆ ಪಾಪಿ ಕಮರ್ಿಯನು ನಡೆನುಡಿಯೊಳು ಸುಳುಹಿಸಲಾಗದು ಸಧಮರ್ಿಗಳು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಾಣೆ./633
ತನ್ನ ತಂದುಕೊಟ್ಟ ಚನ್ನಗುರುಲಿಂಗವ ಭಿನ್ನವಿರಹಿತನಾಗಿ
ಮುನ್ನ ಕರದಲ್ಲಿಟ್ಟು ಹೃದಯಕಾಸಾರದುದಕ ಮಜ್ಜನಗೈದು,
ಅಷ್ಟದಳಕುಸುಮವನಿಟ್ಟು ಶರಣೆಂದು ಮಾಡುವೆನು.
ಕರಸ್ಥಲದ ಲಿಂಗವ ಮನಸ್ಥಲದಲ್ಲಿ ಧರಿಸಿ,
ಉನ್ಮನಸೋದಕದಿ ಮಜ್ಜನಕ್ಕೆರೆದು
ತ್ರಿದಳಕುಸುಮವನಿಟ್ಟು ಶರಣೆಂದು ಮಾಡುವೆನು.
ಮನಸ್ಥಲದ ಲಿಂಗವನು ಭಾವಸ್ಥಲದಲ್ಲಿ ಧರಿಸಿ,
ಚಿಜ್ಜಲದಿಂ ಮಜ್ಜನಕ್ಕೆರೆದು
ಸಾಸಿರದಳಕುಸುಮವನಿಟ್ಟು ಶರಣೆಂದು ಮಾಡುವೆನು.
ಭಾವಸ್ಥಲದ ಲಿಂಗವನು ಸರ್ವಾಂಗದಲ್ಲಿರಿಸಿ
ಸತ್ಯೋದಕದಿಂ ಮಜ್ಜನಕ್ಕೆರೆದು,
ಪಶ್ಚಿಮಕೋಣೆಯಲ್ಲಿಪ್ಪ ನಿಶ್ಚಿಲಕುಸುಮವನಿಟ್ಟು
ಶರಣು ಶರಣೆಂದು ಬದುಕಿದೆನು ನಿರಂಜನ ಚನ್ನಬಸವಲಿಂಗವನು./634
ತನ್ನ ತಾನರಿದು ಅನ್ಯವ ಮರೆದು
ನಡೆಯಲ್ಲಿ ನುಡಿವೆರೆದು ನುಡಿಯಲ್ಲಿ ನಡೆವೆರೆದು,
ಕಡೆಮೊದಲನೂಂಕಿ ನಡುವೆ ಕಳೆದುಳಿಸಿ ಬಳಿವಿಡಿವಲ್ಲಿ
ಬಗೆಬಗೆಯ ಬಣತೆಯ ಸೊಗಸಿನಿಂದ ಕೂಡಬಲ್ಲ ಮಹಾಂತನೆ
ಶರಣ ತಾನೆ ಗುರುನಿರಂಜನ ಚನ್ನಬಸವಲಿಂಗ./635
ತನ್ನ ನೆವದಿಂದೆ ತಾ ಬಂದು ತಾನು ತಾನಾಗಿ
ಆಡಬಾರದುದನಾಡಿ ಉಣಬಾರದುದನುಂಡು,
ಕೂಡಬಾರದುದ ಕೂಡಿ ಕುರುಹಳಿದ
ಗುರುನಿರಂಜನ ಚನ್ನಬಸವಲಿಂಗ ತಾನೆ./636
ತನ್ನ ನೇಮಿಸಿ ಕಳಿವಿದಖಂಡಪರಶಿವನು
ತನ್ನಿಂದೆ ತಾ ಬಂದು ನಿಂದಲ್ಲಿ,
ತನತನಗೆ ಬಂದ ಬಂಧವನರಿದು ಹಿಂದುಮುಂದರಿಯದೆ
ಚಂದಚಂದದಲಿ ಅರ್ಪಿಸಿಕೊಂಡು ಸುಖಿಸುವನಲ್ಲದೆ,
ಒಂದನರಿಯದೆ ಸಂದವರೆಂದು, ಬಂದ ಬಂದ ಪದಾರ್ಥವನು,
ಸಂಧಿ ಸಂಧಿಸಿ ಕೊಟ್ಟು ಕೊಂಡು,
ಬೆಂದುಹೋಗುವ ಮಂದಮತಿಯಂತಲ್ಲ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ./637
ತನ್ನನರಿದು ಹಿಡಿದು ಬಂದ ಶರಣ
ಎಂಟರಲ್ಲಿ ನಿಂದು, ಏಳರಲ್ಲಿ ನಡೆದು,
ಒಂದರಲ್ಲಿ ನಿಂದು, ಎಂಟರಲ್ಲಿ ನಡೆದು,
ಒಂದರಲ್ಲಿ ನಿಂದು, ಆರರಲ್ಲಿ ನಡೆದು,
ಒಂದರಲ್ಲಿ ನಿಂದು, ನಾಲ್ಕರಲ್ಲಿ ನಡೆದು,
ಒಂದರಲ್ಲಿ ನಿಂದು ಮೂರರಲ್ಲಿ ನಡೆದು
ಒಂದರಲ್ಲಿ ನಿಂದು, ಮೂರರಲ್ಲಿ ನಡೆದುಡುಗಿದ ಮತ್ತೆ
ಒಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು,
ಮತ್ತೆ ಮೂರರಲ್ಲಿ ತನುಮನಭಾವವೆರೆದು ನಿಂದ ಮಹಿಮಂಗೆ
ಗುರುನಿರಂಜನ ಚನ್ನಬಸವಲಿಂಗ ಕರತಳಾಮಳಕ ಕಡೆಗಿಲ್ಲ./638
ತನ್ನನರಿಯದೆ ನಡೆವನಯ್ಯಾ ನಿಮ್ಮ ಶರಣ,
ತನ್ನನರಿಯದೆ ನುಡಿವನಯ್ಯಾ ನಿಮ್ಮ ಶರಣ,
ತನ್ನನರಿಯದೆ ನೋಡುವನಯ್ಯಾ ನಿಮ್ಮ ಶರಣ,
ತನ್ನನರಿಯದೆ ಕೂಡುವನಯ್ಯಾ
ಗುರುನಿರಂಜನ ಚನ್ನಬಸವಲಿಂಗವನು ನಿಮ್ಮ ಶರಣ./639
ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು.
ಬಿಂದು ಬೇರಾಗಿ ಬೆರಸಿಕೊಂಡಲ್ಲಿ ಬಿಂದು ಬಿಚ್ಚಿ
ಹಿಂದು ಮುಂದು ನಿಲಿಸಿದರೆ ಬಂಧ ಆಗ ಬಯಲಾಯಿತ್ತು.
ತಂದೆಯು ನೋಡಿ ಕಂದನ ಕೈವಿಡಿದಲ್ಲಿ
ಮುಂದುಗಂಡೆನು ಮೂದೇವರರಿಯದ ಬೇಹಾರವನು.
ಕೊಡಲಿಲ್ಲ ಕೊಳಲಿಲ್ಲದ ಸಡಗರ ಸ್ವಯವಾದಲ್ಲಿ ಸತಿಭಾವತಪ್ಪಿ
ಗುರುನಿರಂಜನ ಚನ್ನಬಸವಲಿಂಗಕಂಗವಾಗಿ./640
ತನ್ನಿಂದ ತಾನೆ ಮುಂದು ನೋಡಿ ಬಂದರೆ
ಹಿಂದು ಮುಂದಿನ ಬಿತಿ, ಕರಣ ಕಲೆಗಳ ನೀತಿ,
ಸಂದು ಸಂಶಯ ಜಾತಿ, ಸೋತು ಸರಿದವು ಜ್ಯೋತಿ,
ಮಾತ ಮಥನಿಸಿ ನಿಂದ ನಿರಂಜನ ಚನ್ನಬಸವಲಿಂಗವ ನೋಡ.
/641
ತನ್ನಿಂದಾದ ಚನ್ನರುದ್ರಾಕ್ಷಿಯನು
ಮುನ್ನ ಧರಿಸಿದ ಮುನಿಜನ ದೇವತಾದಿಗಳೆಲ್ಲ
ಮನ್ನಣೆಯ ಫಲಪದವ ಪಡೆದು ಸುಖಿಯಾಗಿರ್ದರು.
ಮತ್ತೆ ಸಕಲರೊಲಿದು ಧರಿಸಿ ಇಚ್ಫೈಸಿ ಪಡೆದರಗಣಿತ ಸೌಖ್ಯವನು.
ಇಂತಪ್ಪ ಮಹಾಘನ ರುದ್ರಾಕ್ಷಿಯನು
ಹಗಲಿರುಳು ಬಿಡದೆ ಧರಿಸಿ ಪರಮಸುಖಿಯಾಗಿರ್ದೆನು
ನಿರಂಜನ ಚನ್ನಬಸವಲಿಂಗದಲ್ಲಿ./642
ತಪ್ಪಿಸಿ ಒಪ್ಪಿಸಿ ಒಲಿಸಿಕೊಂಡು ಬಂದು ನಡೆವ
ಮಡದಿಯ ಸಡಗರವ ನೋಡಾ!
ಕಡುಲೋಭಿ ಮನೆಯಗಂಡನೊಂದಿಗೆ ಬಾಳಿ
ಅರಳುಪ್ಪರಿಗೆಯಲ್ಲಿ ಸುಪ್ಪತ್ತಿಗೆಯ ಮೇಲೆ ಸುಳಿದಾಡುವ,
ಶುದ್ಧನ ಕಳೆಯ ನೆರೆದಪ್ಪಿ ಕಾಣುವಳು
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ. /643
ತಮ್ಮನ ಮದುವೆಯಾದೆ ತಾಯಿ ತಂದೆಯನೊಲಿಸಿ,
ಎನ್ನ ಶೃಂಗಾರದ ಸೊಬಗ ನೋಡಿ ನೋಡಿ ನೆರೆಯಬೇಕೆಂದು,
ನೋಟದ ಸಂಚದೊಳಗೆ ಆಟ ಹಣ್ಣಿ ನಿಂದಿತ್ತು,
ಆಟದ ಭರದಲ್ಲಿ ನೋಟಕರ ಸಂತವಿಡದಿರ್ದಡೆ,
ಅಂತಕನ ಕುಳವಯ್ಯಾ, ನಾನಂತಲ್ಲ ನಿನ್ನವರೆನ್ನಪ್ರಾಣ
ಗುರುನಿರಂಜನ ಚನ್ನಬಸವಲಿಂಗಾ./644
ತಲೆಯಿಲ್ಲದ ಮಲೆನಾಡ ಹೆಣ್ಣಿಂಗೆ ಮೊಲೆಯೇಳು ನೋಡಾ!
ಪಂಚವರ್ಣದ ಹಾಲ ತಲೆಗುತ್ತಿ ಕುಡಿದವರು
ವಿದಿ ಮಾಧವ ವಿಷಧರಪದದೊಳಗಾದರು.
ಮತ್ತೆ ಮೊದಲರಿಯದವರ ಕಂಡು
ಚಪಲಗತಿ ಚೆಲುವ ಗುರುನಿರಂಜನ ಚನ್ನಬಸವಲಿಂಗದ ಬಲೆಯೊಳು ಬಿದ್ದು
ಕುಲಗೆಟ್ಟು ಕುರುಹಳಿದ ಸುಖವನೇನೆಂಬೆ ಹಿಂದಣ ಕೂಟವರಿಯರು./645
ತಾ ದೇವರೆನಿಸಿ ಪೂಜೆಗೊಂಬ ವೀರಮಹೇಶ್ವರಗೆ,
ತನಗೊಂದು ಹಿರಿದುಂಟೆ ? ತಾನಾಗಿಹನು ಎಲ್ಲಕ್ಕೂ
ಗುರುನಿರಂಜನ ಚನ್ನಬಸವಲಿಂಗ ಶರಣರು ಮೆಚ್ಚುವಂತೆ./646
ತಾ ಭಕ್ತನಾಗಿ ಭವಿಯ ನಿರೀಕ್ಷಣೆಯ ಮಾಡಿದರೆ ಒಂದನೆಯ ಪಾತಕ.
ಕೊಡುಕೊಳ್ಳುವ ವ್ಯವಹಾರ ಮಾಡಿದರೆ ಎರಡನೆಯ ಪಾತಕ.
ತಂದೆ, ಮಗ, ಸಹೋದರ, ನೆಂಟನೆಂದು ನಡೆದರೆ ಮೂರನೆಯ ಪಾತಕ.
ಶಿವಪ್ರಸಂಗವ ಮಾಡಿದರೆ ನಾಲ್ಕನೆಯ ಪಾತಕ.
ಸಂಗಸಮರಸವ ಮಾಡಿದರೆ ಐದನೆಯ ಪಾತಕ.
ಇಂತು ಪಂಚಮಹಾಪಾತಕರಿಗೆ ಭಕ್ತನೆಂದರೆ ಭವತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./647
ತಾನಿಲ್ಲದ ತವನಿದಿಯ ತೆರನ ನೋಡಾ,
ನೀನೆನ್ನದ ನಿಲವು ಘನವನೊಳಕೊಂಡು
ತವನಿದಿಯ ತಲೆಯಲಿಟ್ಟು ಶಿವನೆಂಬ ಸುಳುಹಳಿದ ನಿಲುವೇ
ನಿತ್ಯತ್ವರೂಪವದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ. /648
ತಾನು ತನ್ನ ವಿನೋದವನುಳಿದು ಬಂದವನಲ್ಲ;
ಬಯಲುವಿಡಿದು ನಿಂದವನಲ್ಲ;
ಹುಸಿ ಹುಂಡನ ಕೈಯ ಕೊಂಡವನಲ್ಲ;
ಗಂಡು ಹೆಣ್ಣಿನ ದಾರಿಯ ನಡೆದವನಲ್ಲ;
ತನ್ನ ತಾಯಿ ತಂದೆಯ ಮರೆದವನಲ್ಲ;
ತಾನೊಂದು ಬೇರೆ ನೀಡಿಕೊಂಡುಂಡು ಹೋಗುವನಲ್ಲ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ತಾನು ತಾನಾಗಿರ್ದ ಪ್ರಸಾದ ಪ್ರಸಾದಿ./649
ತಾನು ತಾನಾಗಿ ತನ್ನನರಿಯದಿರ್ದ ಶರಣನ
ಇಂದ್ರಿಯಂಗಳು ಸತ್ತಿರ್ದವು,
ವಿಷಯಂಗಳು ಸತ್ತಿರ್ದವು,
ಕರಣಂಗಳು ಸತ್ತಿರ್ದವು
ಗುರುನಿರಂಜನ ಚನ್ನಬಸವಲಿಂಗವಾಗಿ./650
ತಾನು ಪ್ರಸಾದಿಯೆನಿಸಿಕೊಂಬ ಹಿರಿಯನು
ತನ್ನ ಪ್ರಾಣವಾದ ಗುರುಚರಲಿಂಗಕ್ಕೆ ತನ್ನನರಿಯದೆ ಮಲತ್ರಯಕ್ಕೆ
ಮಗ್ನತೆಯಾಗಿ ಹೊತ್ತುಗಳೆದರೆ
ಕಿತ್ತು ಹಾಕುವರು ನಾಯಕನರಕದೊಳಗೆ ಅನಂತಕಾಲ
ಗುರುನಿರಂಜನ ಚನ್ನಬಸವಲಿಂಗಾ. /651
ತಾನೆಂದರಿದ ಶರಣಂಗೆ ಬೇರೇನುಯಿಲ್ಲ ನೋಡಾ
ತನಗೆ ಬೇರಾದುದು ಕಾಯ ಮನ ಕರಣ ಭಾವ ಕಾಣಾ.
ತನಗೆ ಬೇರಾದುದು ಹೊನ್ನು ಹೆಣ್ಣು ಮಣ್ಣುಗಳ ಮೇಲೆ
ಮೋಹವೆಂಬ ಅನಿತ್ಯವದು ಕಾಣಾ.
ತನಗೆ ಬೇರಾದುದು ಷಡೂಮರ್ೆ ಷಡ್ವರ್ಗ ಗುಣತ್ರಯಾದಿ
ದುಃಸಂಗದಲಿ ಕೂಟಭ್ರಾಂತಿ ಕಾಣಾ.
ತನಗೆ ಬೇರಾದುದು ಸಂಕಲ್ಪ ಸಂಶಯದಿಂದಾದ ಭವತಿಮಿರ ಕಾಣಾ.
ಇಂತು ಸಕಲ ಸಂಸ್ಕೃತಿಯೆ ನಿತ್ಯವಾಗಿ
ತನ್ನ ನಿಜವನ ಬೇರೆ ಮಾಡಿ ನಡೆವ ಭಾವ ಅದು ಬೇರೆ ಕಾಣಾ.
ಈ ಭೇದವನರಿಯದೆ ಶಿವನ ಕಾಣಬೇಕು ಕೂಡಬೇಕೆಂಬ
ಅವಿವೇಕಿಗಳಿಗೆತ್ತಣ ಶರಣಸ್ಥಲವಯ್ಯಾ
ಗುರುನಿರಂಜನ ಚನ್ನಬಸವಲಿಂಗಾ. /652
ತಾನೆಂಬುದ ತೋರಲಿಲ್ಲ ನೀನೆಂಬುದ ಬೀರಲಿಲ್ಲ,
ತೋರುವುದನೆಲ್ಲ ತೂರಿ ನಡೆವಲ್ಲಿ ಹಾರವಾಗದಂಗ ನಿನ್ನಂಗ ನಿಜವೆಂಬೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./653
ತಾನೇ ತನ್ನ ಲೀಲೆಯಿಂದೆ ಒಂದು ಎರಡಾಗಿ,
ಮೂರು ಮೂರಾಗಿ, ಆರು ಆರಾಗಿ,
ಮೂವತ್ತಾರು ಮೂವತ್ತಾರಾಗಿ,
ಇನ್ನೂರ ಹದಿನಾರು ಇನ್ನೂರ ಹದಿನಾರಾಗಿ,
ವಿಶ್ವಪರಿಪೂರ್ಣವಾಗಿ
ತನ್ನ ತಾನೇ ಇನ್ನೂರಹದಿನಾರು ಇನ್ನೂರಹದಿನಾರಾಗಿ
ಮತ್ತೆ ಮೂವತ್ತಾರು ಮೂವತ್ತಾರಾಗಿ,
ಮತ್ತೆ ಆರು ಆರಾಗಿ, ಮತ್ತೆ ಮೂರು ಮೂರಾಗಿ,
ಮತ್ತೆ ಒಂದೊಂದಾಗಿ, ಮತ್ತೆ ಗುರುನಿರಂಜನ ಚನ್ನಬಸವಲಿಂಗವಾಗಿ
ನಿರ್ವಯಲಾದುದು, ಇದೇ ಒಂದಾಶ್ಚರ್ಯ.
ಇದನುಳಿದು ಆಶ್ಚರ್ಯವೆಂಬುದು ಅಶುದ್ಭವಾಕು ಕಾಣಾ./654
ತಾನೇ ಶಿವನೆಂದು ಅರಿದು ಸತ್ತ ಬಳಿಕ
ನಿತ್ಯಾನಂದ ನಿಜಸುಖಿಯೆಂದಿತ್ತು.
ತಾನೇ ದೇಹಿಯೆಂದು ಮರೆದು ಸತ್ತ ಬಳಿಕ
ಮಿಥಿ್ಯಾನಂದ ಭವದುಃಖಿಯೆಂದಿತ್ತು.
ತನ್ನ ತಾನರಿಯದೆ ತಾನೆಯೆಂದು
ತನು ಭಾವ-ಮನ-ಪ್ರಾಣಧರ್ಮದಲ್ಲಿರ್ದು ಸತ್ತ ಬಳಿಕ ತ್ರಿದೈವ ಕುಳವೆಂದಿತ್ತು.
ತನುಭಾವನಾಗಿ ಮಹಾನುಭಾವ ಶಿವನ ಘನವಾಗಿ ಪೂಜಿಸಿ ತನುವಳಿದ ಬಳಿಕ
ದೇವಾದಿ ಮನುಜಾಂತ್ಯ ಪದದೊಳೊಂದುಂಟು ಮೂಲಕ್ಕೆಂದಿತ್ತು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶಿವಶರಣರ ವಾಕ್ಯ./655
ತಾಮಸಗುಣದಲ್ಲಿ ತಲ್ಲೀಯವಾದ ನಾಮದೇಹಿಗಳ
ನಡೆ ಲಿಂಗದೊಳಡಗದು, ನುಡಿ ಲಿಂಗದೊಳಡಗದು,
ನೋಟವು ಲಿಂಗದೊಳು ನಾಟದು, ಮಾಟ ಮಾಣದು.
ಮಂಜಿನ ಮರೆಯಲ್ಲಿ ಮುಳುಗಿ, ಗಂಜಿಯ ಕಳೆದು ನಿರಂಜನದ ನಿಲುವೆಂದಡೆ
ಅಂಜಿ ಅಲಸಿದನು ಅಪ್ಪಿಕೊಳ್ಳದೆ ಗುರುನಿರಂಜನ ಚನ್ನಬಸವಲಿಂಗ./656
ತಾಮಸಗೊಂಡು ತಾಪತ್ರಯದಲ್ಲಿ ಬೆಂದು
ಹುಸಿರೂಹಿನಲ್ಲಿ ಹೊಡೆದಾಡುತಿರ್ದ ಪ್ರಾಣಿಗಳು
ಮೃಡನಂಗಗೊಂಡಮಹಿಮರ ಘನತೆಯ ನೋಡಿ ಕೇಳಿ
ತಾವಾದೆವೆಂಬ ತರಳನುಡಿ ಮನಗೊಂಡು
ಗುರುವೆಂದು ಲಿಂಗವೆಂದು ಜಂಗಮವೆಂದು ಪಾದೋದಕಪ್ರಸಾದವೆಂದು
ಪಂಚಾಚಾರ ಪ್ರಮಾಣವಿಡಿದು ವಂಚನೆವೈದಿ ಸಂಚಿತಪ್ರಾಪ್ತಿಯನರಿದು
ಆಗಾಮಿಯಿಂದೆ ಅಂತಕನಾಳಿನ ಕೈವಶ ಕಡೆಗಾಣದಿಪ್ಪರಿಗೆ ಜಾಣಪದವೆಲ್ಲಿಹದೊ
ಗುರುನಿರಂಜನ ಚನ್ನಬಸವಲಿಂಗಾ !/657
ತಾಮಸವ ತರಿದು ಕಲ್ಪನೆಯ ಕಳೆದು, ಸಂಶಯಗುಣವಳಿದು,
ಭ್ರಾಂತಿವಿರಹಿತವಾಗಿ, ಕಾಯಮನಪ್ರಾಣಭಾವಕ್ಕೆ ಪ್ರಭೆಯನೂಡಿ,
ಮತ್ಸ್ಯ ಕೂರ್ಮ ವಿಹಂಗ ಗತಿಯರಿದು ಕಂಡು ಮರೆದು
ಪರಿಣಾಮಮುಖಿ ತಾನೆ ಪ್ರಾಣಲಿಂಗಿ ಕಾಣಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ /658
ತಾಮಸವಿಲ್ಲದ ಪ್ರಾಣಕ್ಕೆ ಭಂಗವಿಲ್ಲದ ಸಸಿನವಾಗಿಪ್ಪುದು.
ತಾಮಸಭಂಗವಿಲ್ಲದ ನಿಲವು ಸಚರಾಚರ ಸಂತೃಪ್ತಿ.
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಪ್ರಾಣಗುರು ಅಂಗಶಿಷ್ಯ./659
ತಾಯಿ ಮಗಳ ಸಂಗವ ಮಾಡಿ ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ
ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು ಕೂಡಬಂದರು ನೋಡಾ.
ಕೆಡಿಸಬಂದವರಾರು ನುಡಿಸಬಂದರು ಕಾಣಾ.
ಸುಖಿಸಬಂದವರಾರು ಸುಳಿದುನಿಂದರು ಕೇಳಾ.
ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು.
ಗುರುನಿರಂಜನ ಚನ್ನಬಸವಲಿಂಗಕ್ಕೆ ಶರಗ ಹಾಸಿದರೆ
ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು./660
ತಾಯಿಯ ತನ್ನೆದೆಯಲ್ಲಿ ಕಂಡು ತಾಯಿಯ ಗಂಡನಾಗಿ ಬಂದರೆ
ಮೂರುಕೂಟಕ್ಕೊಬ್ಬ ಮಗ ಹುಟ್ಟಿ, ಕೈ ಬಾಯಿಯೊಳಗೆ ಬಂದಿತ್ತು ನೋಡಾ.
ಸಾಲುಮನೆಯೊಳು ಸಂಗವ ಮಾಡಿ ಮೇಲುಮನೆಯೊಳಿರ್ದ
ಗುರುನಿರಂಜನ ಚನ್ನಬಸವಲಿಂಗವ ಹೊಕ್ಕು ಬೆರಸಿದೆ ನೋಡಾ./661
ತಾಯಿಯಲ್ಲಿ ಬಯಸಿ ತಂದ ತಲೆಯ
ಕೈಯೊಳಿಟ್ಟು ಕಾಣದಿದರ್ೊಡೆ ಸವಿಸುಖ ತಪ್ಪಿತ್ತು.
ಮಣ್ಣೊಳಗೆ ಮುಚ್ಚಿದರೆ ಒಂದನೆಯ ಸುಖ ತಪ್ಪಿತ್ತು.
ಜಲದೊಳಗೆ ಮುಚ್ಚಿದರೆ ಎರಡನೆಯ ಸುಖ ತಪ್ಪಿತ್ತು.
ಕಿಚ್ಚಿನೊಳಗೆ ಮುಚ್ಚಿದರೆ ಮೂರನೆಯ ಸುಖ ತಪ್ಪಿತ್ತು.
ಗಾಳಿಯೊಳಗೆ ಮುಸುಕಲಿಟ್ಟರೆ ನಾಲ್ಕನೆಯ ಸುಖ ತಪ್ಪಿತ್ತು.
ಅಂಬರದೊಳಗಡಗಿಸಿದರೆ ಐದನೆಯ ಸುಖ ತಪ್ಪತ್ತು.
ಕತರ್ಾರನಲ್ಲಿಟ್ಟು ಕಾಣಿಸದಿರ್ದಡೆ ಆರನೆಯ ಸುಖ ತಪ್ಪಿತ್ತು.
ಈ ಸುಖವನರಿಯದೆ ಮತ್ತೆ ಮತ್ತೆ ಮಾಡಿಕೊಂಡರೇನು
ಅತ್ತತ್ತಲರಿಯದೆ ವ್ಯರ್ಥವಾಯಿತ್ತು
ಗುರುನಿರಂಜನ ಚನ್ನಬಸವಲಿಂಗವು ಸಾಕ್ಷಿಯಾಗಿ. /662
ತಾಯಿಯೆಂದರಿಯ, ತಂಗಿಯೆಂದರಿಯ, ಅತ್ತೆ ಅತ್ತಿಗೆಯೆಂದರಿಯ,
ಸೊಸೆ ನಾದುನಿ ಮಗಳೆಂದರಿಯದೆ ಕಾಮುಕಗೊಂಡು
ಬಂದಯೋನಿ ನಿಂದಹೊಟ್ಟೆ ತಿಂದಮೊಲೆಯೆಂಬುದನರಿಯದೆ
ಬೀಳುವ ಶುನಿ ಸೂಕರ ಮಾನವಗೆ
ಮಹೇಶ್ವರನೆಂದು ಶರಣ ಸಂಬಂಧಿಸಿದರೆ ನಾಯಕ ನರಕ ತಪ್ಪದು.
ಅದು ಕಾರಣ ಬಿಟ್ಟು ಕಳೆವುದು
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರು./663
ತಿಲ ಏರಂಡಿಲ ಬೀಜವು ಭೂ ಜಲ ಸಂಪರ್ಕದಿಂದೆ ಅಂಕುರಿಸಿ ಬೆಳೆದು
ಆಗಿನೊಳು ತೈಲ ಶೂನ್ಯತೋರಲು ಮುಂದೆ ತಪ್ಪದು.
ಈ ತೆರನಿಪ್ಪನು ಅನಾದಿ ಶರಣ ಭಾವಜ್ಞರಿಗೆ
ಗುರುನಿರಂಜನ ಚನ್ನಬಸವಲಿಂಗ ತಾನೆಂಬ ತೋರಿಕೆ./664
ತುಂಬಿದ ಪುರದೊಳಗೆ ಸಂಭ್ರಮಸುಖಿ ನಾನಿರಲು
ಸುಳಿದಾಡಬಂದವನಾರೊ ?
ಶಂಭುವಿನವರಿಗಿಂಬುಗೊಡೆ.
ಮುಂಬರಿವ ಕರಣಪತಿಯೆನ್ನ ಮಂತ್ರಿ.
ಕರಿಯನೇರಿದ ಭೂಪತಿಯೆನ್ನ ಸುತನು.
ತಲೆಕೆಳಗೆ ಮಾಡಿ ನಡೆವ ಸೊಸೆಯಂದಿರೈವರ ಬಲವೆನಗುಂಟು.
ಇನ್ನೆನಗೆಣೆಯುಂಟೆ ಮೂರುಲೋಕದೊಳಗೆ ?
ನಿರಂಜನ ಚನ್ನಬಸವಲಿಂಗ ಶರಣರಲ್ಲದವರ
ಹುಲ್ಲು ಹೊಟ್ಟುಗಳ ಮಾಡಿ ತುಳಿದು ತೂರುವೆ./665
ತೂರ್ಯಾನಂದಮಯ ಶರಣನು ತಾನೇ ಬ್ರಹ್ಮವೆಂದು ನುಡಿದುಕೊಂಡು
ಸತ್ಕ್ರಿಯಾನುಭಾವರತಿಯನರಿಯದೆ,
ಭಾವದತ್ತ ಹೋಗುವ ಗೊಡ್ಡು ವೇದಾಂತಿಯಂತಲ್ಲ.
ಅದೇನು ಕಾರಣವೆಂದೊಡೆ, ತನ್ನ ಕಾಯವೇ ಇಷ್ಟಲಿಂಗಸ್ವರೂಪವಾದ ಕಾರಣ.
ತಾನು ದೇಹಿಯಾಗಿ ಲಿಂಗವೇ ನಿರ್ದೆಹಿಯಾಗಿ
ತಾನು ಮಲಮಾಯಾ ಪಾಶಬದ್ಧನಾಗಿ ಲಿಂಗವೇ ನಿರ್ಮಲ
ನಿರ್ಮಾಯ ಪಾಶವಿರಹಿತನೆಂದು
ಸಮ್ಯಕ್ಜ್ಞಾನಾನುಭಾವದನುವರಿಯದೆ ಸೂತಕಿಯಾಗಿ,
ಭಿನ್ನವಿಟ್ಟರ್ಚಿಸಿ ಫಲಪದವಡೆದು ಭೋಗಿಸಿ
ಎಡೆಯಾಡುವ ಶೈವಸಿದ್ಧಾಂತಿಯಂತಲ್ಲ.
ಅದೇನು ಕಾರಣವೆಂದೊಡೆ, ಚಿತ್ಪ್ರಣವಲಿಂಗ ತಾನಾದ ಕಾರಣ.
ಭಿನ್ನಾಭಿನ್ನವಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪರಮಸುಖಪರಿಣಾಮಿಯಾಗಿರ್ದೆನು./666
ತೆರಹಿಲ್ಲದ ಕುರುಹಿಲ್ಲದ ಸರಿಯಿಲ್ಲದ
ಪರಮನ ಪಡೆದವರೊಲವ ನೋಡಾ !
ಮರಹಿಲ್ಲದ ಕರಕಮಲದಲ್ಲಿ ತಾ ಹೆರೆಹಿಂಗದೆ
ಬಗೆಬಗೆಯೊಳು ನೆರೆವ ಸಿರಿಯ ನೋಡಾ !
ಗುರುನಿರಂಜನ ಚನ್ನಬಸವಲಿಂಗನ ಶರಣರ ಮಚ್ಚಿನ ಇರವ ನೋಡಾ.
/667
ತೋರಿಕೆಯ ಕೊಂಬನೆ ಸಾಧಕದಾಟದ ಸವಿರೂಪದಂತೆ.
ತೋರಿಕೆಯ ಕೊಂಬನು ಕಾಲವರುಷ ಬರುವಿಂಗೆ ಹಲಾಯುಧನ ಭಾವದಂತೆ.
ತೋರಿಕೆಯ ಕೊಳ್ಳಲರಿಯ ಇಹಪರವಿಡಿದು.
ತೋರಿಕೆಯ ಕೊಳ್ಳಬಲ್ಲ ಗುರುನಿರಂಜನ ಚನ್ನಬಸವಲಿಂಗವೆಂಬ./668
ತ್ರಿಪುರವ ಸುಟ್ಟ ಭಸಿತವೆಂದು, ಕಾಲನನುರುಹಿದ ಭಸ್ಮವೆಂದು,
ಕಾಮನ ದಹಿಸಿದ ವಿಭೂತಿಯೆಂದು
ಪ್ರೇಮದಿಂದಿತ್ತೆನ್ನ ಗುರುಲಿಂಗ.
ಅಂತಃಪ್ರಭಾನಂದಮಯ ವಿಭೂತಿಯನು
ಪಾದದ್ವಿ, ಮಧ್ಯ, ದ್ವಯಬಾಹು,
ಶಿರಮೂಲ, ತ್ರಿಪುಂಡ್ರ, ತ್ರಿವರ್ಣಂಗಳರಿದು ಧರಿಸಿ
ಪರಮಪದದೊಳಾನಂದಮಯನಾಗಿರ್ದೆನು ಕಾಣಾ
ನಿರಂಜನ ಚನ್ನಬಸವಲಿಂಗಾ./669
ತ್ರಿವಿಧಾನುಗ್ರಹಸಂಬಂಧವಾದ ದೇಹ ಲಿಂಗಕ್ಕೆ ಕ್ಷೇತ್ರವೆಂದು
ಸದ್ಗುರುನಾಥ ಕರಸ್ಥಲಕ್ಕೆ ಕೊಟ್ಟ ಲಿಂಗವ ಕಿರಿದು ಮಾಡಿ,
ಭೂಕ್ಷೇತ್ರದೊಳಗಿಪ್ಪ ಸ್ಥಾವರವ ಹಿರಿದೆಂದು,
ತೊಳಲಿ ಬಳಲಿ ಹೋಗಿ ಅರ್ಚನೆಯಾರಾಧನೆಯ ಮಾಡಿ
ಕರ್ಮವ ಕಳೆದು ನಿರ್ಮಲವಾದೆವೆಂಬ
ಚರ್ಮಗೇಡಿಗಳಿಗೆ ಎತ್ತಣನುಗ್ರಹ ಎತ್ತಣಭಕ್ತಿಯೈ
ಗುರುನಿರಂಜನ ಚನ್ನಬಸವಲಿಂಗಾ./670
ತ್ರೈಮಲದಾಸೆಯ ಮನಗೊಂಡು ಮಹಾಘನ ಮಹಿಮರಾಚರಣೆಯ ಹೊತ್ತು
ನಡೆಬದ್ಧ ಹಿರಿಯರೆಂದು ಬರುವರು.
ಮಾರ್ಗಕ್ರಿಯೆಯೆನುತ ಸಾರವಿಹೀನ ಜಡಕ್ರಿಯೆ ಕೋಟಲೆಯಗೊಂಡು
ಕಾಂತಾರ ಬಿದ್ದು ಕಳವಳಕ್ಕೊಳಗಾದರು.
ತಾವು ತಮ್ಮ ಹೂಳಿ ಇತರರನೆತ್ತಿ ತಂದು ಹಳಿದಾಡುವ
ಮಲಭಾಂಡರನೆನ್ನತ್ತ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ./671
ದಂಡೆ ತೊಂಡಲವ ಕಟ್ಟಿ ಮೆರೆವ ಮುತ್ತೈದೆಯಾಗಿ,
ಹಸೆಯಮೇಲಣ ಮಾತ ಹುಸಿಯದೆ,
ಕಸ ಮೂರರ ಹಸಿಗೆಯ ಬಸಿಗೆ ಸಿಲ್ಕದೆ,
ಭಾವಾಭಾವವಳಿದುಳಿದ ಭಾವಭರಿತನಾಗಿದರ್ುದೆ,
ಪರಮ ನಿರ್ವಾಣಪದಾಸ್ಪದ ಶರಣ ತಾನೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./672
ದಶಪಂಚಮಾಯಾಟಲನುರುಹಿ, ಪಂಚಾಚಾರವೇ ಪ್ರಾಣವಾಗಿ,
ಕಾಯದ ಕರ್ಮಕತ್ತಲೆಯ ಪರಿಸಿ, ಅಷ್ಟಾವರಣವೇ ಅಂಗವಾಗಿ,
ಗುರುಭಕ್ತಿ, ಲಿಂಗಪೂಜೆ ಜಂಗಮದಾಸೋಹವೆ
ಮಹಾನುಭಾವವಾದ ಘನಮಹಿಮನೆ,
ಮಹಾಮಹೇಶ್ವರ ಕಾಣಾ ಗುರುನಿರಂಜನ ಚನ್ನಬಸವಲಿಂಗ./673
ದಶವಾಯುಗಳ ದೆಸೆಗೆಡಿಸಿ ಮಸಿಯ ಹೆಂಗಳೆಂದು ವಿಷಯನುರುಹಿ,
ಕಸಮಲವ ಕಳೆದುಳಿದು ಶಶಿಧರನ ವಶಗತ ಮಾಡಿಕೊಂಡಾಚರಿಸುವಲ್ಲಿ
ಅನುಪಮ ಕ್ರಿಯಾಜ್ಞಾನಬೆಳಗಿನ ಸುಖವೇದಿಯಾಗಿ
ಆದಿ ಮಧ್ಯ ಅವಸಾನದನುವರಿದಿರಬೇಕು.
ಅಂಗ ಮನ ಪ್ರಾಣ ಪ್ರಕಾಶಾವಧಾನ
ನಿರಂತರ ನಿಜಾನಂದ ನಿಶ್ಚಿಂತನಾಗಿರಬೇಕು.
ಗುರುನಿರಂಜನ ಚನ್ನಬಸವಲಿಂಗ ಪ್ರಸಾದಕ್ಕೆ ಪ್ರಸಾದಿಯಾಗಿರಬೇಕು./674
ದಾರಿಮೂರರ ತೋರಿಕೆಗೆ ಗೋಚರವಿರಹಿತ ನಿರವಯಾನಂದ
ಪರಬ್ರಹ್ಮವನರಿದು ತೆರಹಿಲ್ಲದಿರ್ಪ ಶರಣ
ತನ್ನ ವಿನೋದಕಾರಣ ನೋಡಿ ಮಾಡಿತ್ತಡೆ ಜಡನಲ್ಲ ಕಾಣಾ.
ಸಮ್ಯಕ್ಜ್ಞಾನಾನಂದಪರಿಪೂರ್ಣನು
ನೋಡಿ ಮಾಡೀಯದಿರ್ದಡೆ ಶೂನ್ಯನಲ್ಲ ಕಾಣಾ.
ಸತ್ಕ್ರಿಯಾಂಗಪರಿಪೂರ್ಣನು ಅಂತಿಂತೆನ್ನಲೆಡೆಯಿಲ್ಲ
ಗುರುನಿರಂಜನ ಚನ್ನಬಸವಲಿಂಗವಾಗಿರ್ದ ನಿಜರೂಪಕ್ಕೆ./675
ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ
ದೇಶ ದೇಶವ ತಿರುಗಿ ಆಸೆಯೆಂಬ ಅದ್ಭುತ ಅಂಗಗೊಂಡು
ಹೇಸಿಕೆಯೊಳು ಬಿದ್ದೇಳದ ಮಕ್ಷುಕನಂತೆ
ಮಲಬದ್ಧ ಮನುಜರ ಬೋಧಿಸಿ ಕಾಡಿ ಕರೆಕರೆಸಿ,
ಕಾಸಾದಿ ದ್ರವ್ಯವ ಕೊಂಡು ಬಂದು ಹಾಸಿ ಹಬ್ಬಕಿಕ್ಕಿ,
ನಾಮಾಡಿದೆನೆಂಬ ನಾಯಿಯ ತೇಜವ ಹೊತ್ತು ತೊಳಲುವ
ತಥ್ಯ ಭಂಡರ ಸೋಗಿಗೆ ಸೊಗಸರಯ್ಯಾ
ನಿಮ್ಮ ಭಕ್ತರು ಗುರುನಿರಂಜನ ಚನ್ನಬಸವಲಿಂಗಾ./676
ದಿನವ ಬಲ್ಲವರು ತಿಥಿಯ ಬಲ್ಲವರು ವತ್ಸರವ ಬಲ್ಲವರು
ಅವರು ಬಲ್ಲವರೆಂಬೆ ನಾಲ್ಕುಯುಗದಲ್ಲಿ.
ದಿನವ ಬಲ್ಲವರು ತಿಥಿಯ ಬಲ್ಲವರು ವತ್ಸರವ ಬಲ್ಲವರು
ಇವರು ಬಲ್ಲವರು ಎಂಬೆ ನಾಲ್ಕುಯುಗದಲ್ಲಿ.
ಅಂಗವೊಂದೆ ಅನುಭಾವವೊಂದೆ ಸಂಗವೊಂದೆ
ದ್ವಂದ್ವಕೆ ಅರಿದರಾಗುವೆ ಆಚಾರಂಗ ಗುರುನಿರಂಜನ ಚನ್ನಬಸವಲಿಂಗ./677
ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ.
ಕೆಳದಿಯರೊಂದಾಗಿ ಬೆಳುದಿಂಗಳೊಳು ನಿಂದು
ಕಳವಳಗೊಂಡು ಸುಳುಹನಾಲಿಸುತಿರ್ದೆನವ್ವ,
ಎನ್ನಂಗಳ ಮುಂದೆ ಆತ ಸನ್ನಿಹಿತ ಬಂದರೆ
ನೋತ ಫಲ ಸಂಭವಿಸಿತ್ತೆನಗವ್ವ.
ಕಾಯದಣಿವಂತೆ ಮಾಡಿ ಮುಂದುಗೊಂಡಿಪ್ಪೆ,
ಮನದಣಿವಂತೆ ನೋಡಿ ಮುಂದುಗೊಂಡಿಪ್ಪೆ,
ಪ್ರಾಣದಣಿವಂತೆ ನೀಡಿ ಮುಂದುಗೊಂಡಿಪ್ಪೆನವ್ವ.
ಭಾವದಣಿವಂತೆ ಸಮಸುಖಾನಂದದೊಳೋಲಾಡುತ್ತ ಮುಂದುಗೊಂಡಿಪ್ಪೆ.
ಗುರುನಿರಂಜನ ಚನ್ನಬಸವಲಿಂಗ ಶರಣರೆನ್ನ
ಮನೆಗೆ ಬರುವಂತೆ ಮಾಡಾ ಎಲೆ ಅವ್ವಾ./678
ದಿವದೊಳಗೆ ದ್ಯುಮಣಿಯೊಪ್ಪಿ ತೋರುತ್ತಿಹುದು.
ರಜನಿಯೊಳಗೆ ತಾರಾಪತಿಯೊಪ್ಪಿ ತೋರುತ್ತಿಹುದು.
ಗಣತಿಂತಿಣಿಯೊಳಗೆ ಶಿವಾನುಭಾವವೊಪ್ಪಿ ತೋರುತ್ತಿಹುದು.
ಗುರುನಿರಂಜನ ಚನ್ನ ಬಸವಲಿಂಗದೊಳಗೆ
ಎನ್ನ ಮನವೊಪ್ಪಿ ತೋರುತ್ತಿಹುದು./679
ದಿವಾಕರನ ದಿನಕರ್ಮದೊಳಗೆ ನಿಮಿಷಾರ್ಧ ಲಫ್ಸುಜಡತ್ವವಿಲ್ಲದೆ
ಕಾರ್ಯನಾಗಿ ಕಾರಣಾನುಕೂಲಿಯಾದಂತೆ,
ನಿಶಾಕರನು ಮಾಸದ್ವಂದ್ವಕರ್ಮಾದಿ ರಾಹುಬಾಧೆಯೊಳು ಲಘುಜಡತ್ವವಿಲ್ಲದೆ
ಕಾರ್ಯನಾಗಿ ಕಾರಣಾನುಕೂಲಿಯಾದಂತೆ,
ಅಂತಜ್ಞರ್ಾನ ಬಾಹ್ಯ ಶಾಂತಾನ್ವಿತ ಶರಣನು
ತನ್ನ ನಿತ್ಯ ಜ್ಞಾನ ಕ್ರಿಯಾವರ್ತನದೊಳಗೆ
ಗುರುಲಿಂಗಜಂಗಮ ಭಕ್ತಿ ವಿಭವ ವಿನಯವೆಂಬ ವಿಮಲತ್ವವನು
ಜರೆಮರಣಾದಿ ದ್ವಂದ್ವಕರ್ಮ ಮಾಯಾ ಶಂಕಾ ವಿಷಮಬಾಧೆಯನೊಗೆದು
ಲಫ್ಸುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾಗಿ ಮೆರೆವ
ಮಹಿಮಾತಿಶಯವನುಳ್ಳ ಭಕ್ತನೆ ಸಾಕ್ಷಾತನೆಂಬೆ.
ಚೆಲುವಾತ್ಮಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನಲ್ಲದೆ ಬೇರಿಲ್ಲ ಕಾಣಾ./680
ದುರ್ಜನ ರಾಜ ತನ್ನ ದೋಷವನೊಳಕೊಂಡು ತಾನೇ ತೋರುವಂತೆ,
ಜೀವನಿಗುಪದೇಶವನಿತ್ತಡೆ ಚರಿತೆಯೊಳು ಸಮಯಕ್ಕೆ
ನೀಚಾಶ್ರಯವೆ ತೋರುತ್ತಿಹುದು.
ಅದು ಕಾರಣ, ಪ್ರಕೃತಿಭಾವಿಗೆ ಅನುಗ್ರಹ ಸಲ್ಲದು
ಗುರುನಿರಂಜನ ಚನ್ನಬಸವಲಿಂಗಾ./681
ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ.
ದೇಶವ ತಿರುಗುವರು ಒಡಲ ಪೋಷಿಸುವುದರಿಂದ.
ದೇಶವ ತಿರುಗುವರು ಮಲಮೂರರ ಆಸೆ, ವೇಶ್ಯೆಯ ಮಚ್ಚು ತಲೆಗೇರಿ,
ಗುರುಸೇವೆ ಮುಂದುಗೊಂಡು ದೇಶಾಂತರವ ಮಾಡಲಿಲ್ಲ.
ಲಿಂಗಪೂಜೆ ಮುಂದುಗೊಂಡು ದೇಶವ ತಿರುಗಲಿಲ್ಲ.
ಜಂಗಮದಾಸೋಹ ಮುಂದುಗೊಂಡು ದೇಶವ ತಿರುಗಲಿಲ್ಲ.
ಇಂತು ಅಪ್ರಯೋಜನ ಪ್ರಾಣಿಗಳ ಶಿವಯೋಗಿಗಳೆಂದು
ನಿರ್ಮಲ ಗಮನಮತಿಮಹಿಮರು ನುಡಿದುಕೊಳ್ಳಲಾಗದು
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಜನರನು./682
ದೇಶಿಕಶಿವಯೋಗಿ ಭುವನಾಕಾಶವಿಡಿದು
ದೇಶಾಂತರವ ಮಾಡುವ ಪರಿಯೆಂತೆಂದೊಡೆ: ಕನ್ನಡದೇಶದಿಂದೆ ನೋಡಿ, ಮರಾಠ ಮಲಯ ದೇಶವ ಹಿಂದೆ ಬಿಟ್ಟು,
ಕೊಂಕಣದೇಶವಿಡಿದು
ಕಲ್ಯಾಣಪುರವರಾಧೀಶ್ವರ ಬಸವರಾಜೇಂದ್ರನ ಕಂಡು ಶರಣುಹೋಗಬೇಕೆಂದು
ಮಧ್ಯದೇಶದ ಧರ್ಮರಾಯನ ಕಂಡು ಮೂಕೋಟಿ ದ್ರವ್ಯವನಿತ್ತು ತೋರೆಂದಡೆ
ಮುಟ್ಟಿ ಕನರ್ಾಟಕದೇಶದಿಂದೆ ತೋರಿದ ನೋಡಾ.
ಕಂಡ ಕಲ್ಯಾಣದೊಳೊಪ್ಪುವ ಬಸವಣ್ಣಂಗೆ
ಹೊರಗೊಳಗೊಳಗೆ ಕರಣತ್ರಯಗೂಡಿ ಚರಣಗಳ ಪಿಡಿದು ಸಕಲ ಜನರಿಗೆ
ಉತ್ತರದೇಶದ ಪರಿಯನರುಪಲು ಸುಖಮುಖಿಗಳಾದವರು.
ಅಲ್ಲಿಂದೆ ಮೂಡಣದೇಶವ ತಿರುಗಿ,
ಬಂಗಾಳದೇಶಕ್ಕೆ ದಕ್ಷಿಣವಾದ ನಂಜುಂಡನ ಜಾತ್ರೆಯ ನೋಡಲು,
ಆ ನಂಜುಂಡನ ಜಾತ್ರೆಯ ಮುನ್ನವೆ
ಕೂಡಲಸಂಗಮನಾಥನ ಜಾತ್ರೆಯಾಗಿ ಕಾಣುತಿದರ್ಿತ್ತು.
ಆ ಜಾತ್ರೆಯೊಳು ನಿಂದು ಪಾಂಡವದೇಶದ ಸುಖವನು ಕುಂತಣದೇಶದತ್ತ
ಆರು ಮಠವ ನಿಮರ್ಿಸಿದ ಆರು ದರ್ಶನ ಗತಿಮತಿಯನರಿದು
ಕುಂಭಕೋಣೆಯ ರಂಭೆಯ ಕೈವಿಡಿದು, ಪಶ್ಚಿಮದೇಶದಲ್ಲಿ ಪರಮಹರುಷವೆರೆದು
ಘನಗಂಭೀರ ಕಡಲೋಕುಳಿಯಾಡುತಿರ್ದು
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ
ಅನಂತ ದೇಶವ ಪಾವನಮಾಡಿ ಮೀರಿದ ದೇಶದತ್ತ ಸಾರಿದನು. /683
ದೇಹಭಾವಶೂನ್ಯ ಶರಣಲಿಂಗ, ಮನಭಾವಶೂನ್ಯ ಶರಣಲಿಂಗ,
ಪ್ರಾಣಭಾವಶೂನ್ಯ ಶರಣಲಿಂಗ, ಸರ್ವಶೂನ್ಯ ಶರಣ ಮಹಾಲಿಂಗ.
ಈ ಲಿಂಗೈಕ್ಯನಂತಸ್ಥವನಜಗಣ್ಣ ಬಲ್ಲನಲ್ಲದೆ
ನಾಮರೂಪಕ್ರಿಯಾಸಂಭೋಗಿಗಳೆತ್ತ ಬಲ್ಲರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./684
ದ್ವಾದಶೇಂದ್ರಿಯಂಗಳು ಶೀಲಸಂಪಾದನೆಯ ಹಿಡಿದು
ನಡೆವುತಿರ್ದ ಕಾರಣ,
ಇಂದ್ರಿಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು.
ದಶವಾಯುಗಳು ಸಚ್ಚರಿತದಿಂದಾಚರಿಸುತಿರ್ದ ಕಾರಣ,
ಪ್ರಾಣಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು.
ಶ್ರುತಿಜ್ಞಾನ ಮತಿಜ್ಞಾನ ಅವದಿಜ್ಞಾನ ಮನಪರ್ಯಾಯಜ್ಞಾನ
ನಿರುತಜ್ಞಾನ ವಿರಾಗತೆಜ್ಞಾನಂಗಳೆಲ್ಲ ಮಹಾಜ್ಞಾನವಿಡಿದಿರ್ದವಾಗಿ
ಜ್ಞಾನಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು.
ಜ್ಞಾನವಿಕೃತಿಭಾವ ವರ್ತನಾವಿಕೃತಿಭಾವ ಮೋಹನವಿಕೃತಿಭಾವಂಗಳೆಲ್ಲ
ಮಹಾನುಭಾವವಾಗಿ ಸೂಚಿಸುತಿರ್ದಕಾರಣ,
ಭಾವಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು.
ಪುರಾಣತೂರ್ಯ ದ್ವೈತತೂರ್ಯ ಅದ್ವೈತತೂರ್ಯ
ತ್ರಿಪುಟಿತೂರ್ಯ ಯೋಗತೂರ್ಯಾದಿಗಳೆಲ್ಲಾ
ಶಿವಯೋಗತೂರ್ಯವಾಗಿ ಪರವಶವಾಗಿರ್ದಕಾರಣ,
ತೂರ್ಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು.
ಇಂತು ಪಂಚಾಂಗದಲ್ಲಿ ಪಂಚಾಚಾರ ಪೀಠವಾಗಿ ನಾನೊಪ್ಪುತಿರ್ದಕಾರಣ
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ
ಮಹದಾನಂದದೊಳೋಲಾಡುತಿರ್ದೆನು./685
ಧನಗಂಡನ ಬೆಲೆವೆಣ್ಣಿನ ಗಲಭೆಯ ಸೌಖ್ಯದಂತೆ
ನಲಿನಲಿದಾಡುವ ಸುಳುಹಿಂಗೆ ಸುಳುಹಿನ ಸುಖದ ಮುಖವಿಲ್ಲ ಕಾಣಾ.
ಅದು ಕಾರಣ, ನಿಮಿಷ ಬೇಟದೊತ್ತಿಂಗೆ ಲಾಭವನರಿಯದೆ
ಅನಿಮಿಷ ಬೇಟದೊತ್ತೇ ಅನುಪಮವಾದಲ್ಲಿ ಆತನೇ ಅಚ್ಚ ಶರಣ
ಗುರುನಿರಂಜನ ಚನ್ನಬಸವಲಿಂಗಾ./686
ಧನದಲ್ಲಿ ಮಕಾರಸ್ವರೂಪವಾದ
ಸ್ವಯಂ ಜಂಗಮವನರಿದರ್ಚಿಸಬಲ್ಲಾತನೆ ಶರಣ.
ಮಮಕಾರದಲ್ಲಿ ವಕಾರಸ್ವರೂಪವಾದ
ಚರಜಂಗಮವನರಿದರ್ಚಿಸಬಲ್ಲಾತನೆ ಶರಣ.
ಸಂಗ್ರಹದಲ್ಲಿ ಓಂಕಾರಸ್ವರೂಪವಾದ
ಪರಜಂಗಮವನರಿದರ್ಚಿಸಬಲ್ಲಾತನೆ ಶರಣ.
ಈ ತ್ರಿವಿಧಜಂಗಮವನರಿದರ್ಚಿಸಬಲ್ಲಾತಂಗಲ್ಲದೆ
ಶರಣಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./687
ಧನರತಿಯುಳ್ಳ ಸೂಳೆಯ ಮನ ಭುಜಂಗನ ರತಿವೆರಸದುಪಚಾರದಂತೆ.
ಪದಫಲ ರತಿಭಕ್ತನ ಮನಸ್ಸು ನಿಜವೆರಸದೆ ಪೂಜೆ
ಗಜೆಬಜೆಯಾಯಿತ್ತು
ಗುರುನಿರಂಜನ ಚನ್ನಬಸವಲಿಂಗದ ಬೆಳಗನರಿಯದೆ./688
ಧರೆ ಗಗನದಲ್ಲಿರ್ದು ಬಯಲ ಕುರುಹರಿಯದೆ
ಬಡಿದಾಡಿ ಮಡಿದು ಹೋದರು ಅನಂತ ಹಿರಿಯರು.
ಇದ ಕಂಡು ಮರಳಿದರೆ ಮನದೊಡೆಯ ನೀ ಸಾಕ್ಷಿ.
ಮಧ್ಯಮಂಟಪದೊಳಗಿಪ್ಪ ಶುದ್ಭಧನವೆಲ್ಲ
ಚಿದ್ರೂಪಗಲ್ಲದೆ ಮತ್ತೊಂದನರಿಯದ ಭಾವ
ಗುರುನಿರಂಜನ ಚನ್ನಬಸವಲಿಂಗ ನಿಮ್ಮಾಣೆ./689
ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು,
ಕಿಚ್ಚನು ಕೆಂಡದಲ್ಲಿ ಸುಟ್ಟು, ಗಾಳಿಯನು ವಾತದಲ್ಲಿ ತಿರುಹಿ,
ಆಕಾಶವನು ಬಯಲಲ್ಲಿ ಬಗೆದು,
ತನ್ನನು ತನ್ನಲ್ಲಿ ನೋಡಿ ಮಾಡಿ ಪೂಜಿಸಿ ಸುಖಿಸಲರಿಯದೆ
ಪಂಚ ಪಂಚವರ್ತನಾಭಾವದ ಕಳೆಯಲ್ಲಿ ಬೆಳೆದು ತೋರಿ ಮಾಡಿ,
ಮಾಟಕೂಟದ ಕೋಟಲೆಯೊಳಗೆ ಭಂಗಿತರಾದರು.
ಅದು ಕಾರಣ ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು
ಅಲ್ಲಿಯೇ ಹಿಂಗಿರ್ದನು ನಿರ್ಮಲಹೃದ್ಬೆಳಗಿನಲ್ಲಿ./690
‘ನ ಗುರೋರದಿಕಂ ನ ಗುರೋರಧಿಕಂ ನ ಗುರೋರಧಿಕಂ’
ಎಂಬ ಶ್ರುತಿಯುಂಟಾಗಿ,
ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಹರ ಕಾಯನೆಂಬ ವಾಕ್ಯ ದಿಟ.
ಅದೆಂತೆಂದೊಡೆ : ಪರಶಿವನಾಣತಿವಿಡಿದೈತಂದು
ತನುಸಂಗ ಮರವೆಯಾವರಿಸಿದಂದು,
ತನ್ನತ್ತ ತಾನೊಯ್ವ ಸತ್ವ ತನಗಿಲ್ಲ.
ಮತ್ತೆ ಸುಜ್ಞಾನಗುರುವಾಗಿ ಬಂದೆನ್ನೆಚ್ಚರಿಸಿ,
ಕ್ರಿಯಾಘನಗುರುವಾಗಿ ಬಂದೆನ್ನ ಬೋದಿಸಿ
ಅತ್ತಲಾ ಪರಶಿವನ ತಂದೆನ್ನ ಕರ ಮನ ಭಾವದಲ್ಲಿ ತೋರಿ ಕಾಣಿಸಿದ
ನಿರಂಜನ ಚನ್ನಬಸವಲಿಂಗ ತಾನೆಂಬ ಭಾವವನು./691
‘ನ ಗುರೋರಧಿಕಂ ನ ಗುರೋರಧಿಕಂ ನ ಗುರೋರದಿಕಂ’
ಎಂಬ ಹರವಾಕ್ಯವನರಿದು,
ಲಿಂಗಾಚಾರಾದಿ ಪ್ರಾಣವಾಗಿ ಜಂಗಮನುಭಾವಪ್ರಸಿದ್ಭ
ಪ್ರಮಾಣಚರಿತೆಯನರಿಯದೆ
ಗೊಡ್ಡುಮಾತನೊಡ್ಡಿಕೊಂಡು ಎಡ್ಡೆಡ್ಡಿಂದೆ ವರ್ತಿಸುವ
ಧಡ್ಡ ಕೋಟಲೆಯ ನೋಡಾ !
ಗುರುವೆನ್ನ ಕರಸ್ಥಲದಲುಂಟೆಂದು ಇರವ ಶೋದಿಸಿ
ಜರಿದು ಹರಿದು ಹಿರಿಯರೆನಿಸಿ ಮೆರೆವ
ಗುರುದ್ರೋಹಿಗಳ ನೆರೆಯಲಾಗದು ನಡೆನುಡಿಸಂಪನ್ನರು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./692
ನಕಾರ ಮಕಾರವನೆಯ್ದಿ, ಮಕಾರ ಶಿಕಾರವನೆಯ್ದಿ,
ಶಿಕಾರ ವಕಾರವನೆಯ್ದಿ, ವಕಾರ ಯಕಾರವನೆಯ್ದಿ,
ಯಕಾರ ಓಂಕಾರವನೆಯ್ದಿ, ಓಂಕಾರ ನಿರಂಜನವನೆಯ್ದಿ,
ನಿರಾಮಯವಾಗಿ ನಿಸ್ಥಲ ನಿಜವಾದುದ
ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ./693
ನಕಾರದೊಳಗೆ ಓಂಕಾರವ ಕಂಡೆ, ಮಕಾರದೊಳಗೆ ಓಂಕಾರವ ಕಂಡೆ,
ಶಿಕಾರದೊಳಗೆ ಓಂಕಾರವ ಕಂಡೆ, ವಕಾರದೊಳಗೆ ಓಂಕಾರವ ಕಂಡೆ,
ಯಕಾರದೊಳಗೆ ಓಂಕಾರವ ಕಂಡೆ.
ಓಂಕಾರದೊಳಗೆ ಪಂಚಾಕ್ಷರವ ಕಂಡು,
ನಮೋ ನಮೋ ಎನುತಿರ್ದೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ನೀವೆಯಾಗಿ./694
ನಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಮಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಶಿಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ವಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಯಕಾರಪಂಚಾಕ್ಷರವ ನೋಡಲು
ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು.
ಇಂತು ಪಂಚಾಕ್ಷರದ ನೆಲೆಯ ಮೇಲೆ ಓಂಕಾರವ ನೋಡಲು
ಗುರುನಿರಂಜನ ಚನ್ನಬಸವಲಿಂಗಾ
ತಾನಾಗಿ ಕಾಣಿಸಿಕೊಳ್ಳುತಿರ್ದ ಶರಣನು./695
ನಚ್ಚುಮಚ್ಚಿನ ಅಚ್ಚು ಬಿಚ್ಚಿ ಬೇರಿಲ್ಲದಿಪ್ಪ
ಅಚ್ಚಪ್ರಕಾಶಲಿಂಗವ ಕಂಡ ಶರಣನ ಭಾವಕ್ಕೆ
ವೇದಾಗಮಶಾಸ್ತ್ರ ತರ್ಕಾಳಿಯನರಿದಾಡುವ
ಮರ್ಕಟ ಕೂಕ ಕುಟಿಲ ವ್ಯವಹಾರಿಗಳ ಅರಿವು ಆಶ್ಚರ್ಯವಾಗಿ ಹೋಗುವದು
ಗುರುನಿರಂಜನ ಚನ್ನಬಸವಲಿಂಗದ ಪದಬೆಳಗನರಿಯದೆ./696
ನಡುಗಡಲಲ್ಲಿರ್ಪ ಪಾಷಾಣಕ್ಕೆ ಸೂರ್ಯನ ಧ್ಯಾಸವುಂಟೆ
ಧರೆಯ ಪಾಷಾಣಕ್ಕಲ್ಲದೆ?
ಕಡುಜಡಸಂಸಾರಮಧ್ಯದಲ್ಲಿರ್ಪ ಕಲುಹೃದಯಮನುಜಂಗೆ
ಚಿತ್ಶರಣನಾಚಾರಪದ ಸಾಧ್ಯವಪ್ಪುದೆ
ಚಿತ್ಕಾಯ ಸುಜ್ಞಾನ ಕಾರುಣ್ಯಹೃದಯಗಲ್ಲದೆ?
ಗುರುನಿರಂಜನ ಚನ್ನಬಸವಲಿಂಗಾ./697
ನಡುಮನೆ ಕಂಬದೊಳಗಿರ್ದ ಬೆಂಕಿ
ಹೊರಗೆದ್ದು ಊರನೆಲ್ಲ ಸುಟ್ಟಿತ್ತು ನೋಡಾ!
ತಳವಾರನ ಮಡದಿ ಹಡೆದಮಕ್ಕಳ ಬಿಟ್ಟು
ಉರಿಯ ಸೀರೆಯನುಟ್ಟು ಗಂಡನ ಶಿರವ ಕೊಯ್ದು
ಹಿರಿಯ ಮಗನ ನುಂಗಿ ಉಗುಳದಿರಲು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗಸಂಬಂಧವೆಂಬೆ ಕಾಣಾ./698
ನಡೆಗತೀತವಾದ ಘನವು ನಡೆಗಲಿತು ಬಂದುದೆನಗರಿದಾಯಿತ್ತು.
ಅನುಪಮದ ನಿಲುವು ಉಪಮೆಗೆ ಬಂದುದೆನಗರಿದಾಯಿತ್ತು.
ಅಪ್ರತಿಮದಾನಂದದ ಘನವು ಪ್ರತಿಕರಿಸಿಬಂದುದೆನಗರಿದಾಯಿತ್ತು.
ಬೇರಾಗಿರ್ದ ಬ್ರಹ್ಮ ಭೋರನೆ ಅಂಗವಿಸಿದುದೆನಗೆ ಅರಿದಾಯಿತ್ತು.
ಅಂಗಲಿಂಗವಾಗಿ ಸಂಗಸಮರಸವಾಗಿ ಬಯಲಾದುದೆನಗೆ ಅರಿದಾಯಿತ್ತು.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮೊಳಗೆ ಮತ್ತೆ ಅರಿದೆನೆಂಬುದೇನು ಹೇಳಾ !/699
ನಡೆದವರ ನುಡಿಯ ಕಲಿತು ತುಡುಗುಣಿ ತಾನೊಂದು ಲಿಂಗವಹಿಡಿದು
ನಡೆವ ಮನಬಂದಂತೆ, ನುಡಿವ ಜಿಹ್ವೆ ಶುಷ್ಕವಹನ್ನಕ್ಕರ,
ಹಿಡಿವ ಕರಣೇಂದ್ರಿಯ ವಿಷಯದಿಚ್ಫೆಗೆ ಸೋಲ್ತು.
ಮತ್ತೆ ಗುರುಲಿಂಗಜಂಗಮವನಿದಿರಿಡದ ಪರಿಣಾಮಿಯೆಂದರೆ
ಆ ಬಾಯಲ್ಲಿ ಸುರಿಯವೆ ಬಾಲ್ಹುಳಗಳು ?
ಈ ವಾಕ್ಪಟುಪ್ರಾಣಿಯನು ಬಿಟ್ಟು ಕಳೆವುದು
ಗುರುನಿರಂಜನ ಚನ್ನಬಸವಲಿಂಗದ ನವೀನ ಚರಿತೆಯ ತೋರದೆ./700
ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು
ಒಡೆಯನವಸರವನವರೆತ್ತ ಬಲ್ಲರೋ !
ಮಾಂಸಕ್ಕೆ ಬಿದ್ದ ಶುನಿಭಾವದಂತೆ
ಕೊಡುಕೊಳ್ಳೆ ಬೆಳೆಯುಂಟು ಕಾಲನಲ್ಲಿ,
ಅರಿದು ಮರೆದವರಂತಲ್ಲ ಕೊಡುಕೊಳ್ಳೆ ಬೆಳೆಯುಂಟು
ಗುರುನಿರಂಜನ ಚನ್ನಬಸವಲಿಂಗಾ./701
ನಡೆನಡೆದು ನಡೆಗಳುಡುಗಿ ನಡೆಯನರಿಯದಿರ್ದುದು.
ನುಡಿನುಡಿದು ನುಡಿಗಳುಡುಗಿ ನುಡಿಯಲರಿಯದಿರ್ದುದು.
ನೆನೆನೆನೆದು ನೆನಹು ನಿರ್ಧರವಾಗಿ ನೆನೆಯಲರಿಯದಿರ್ದುದು.
ಗುರುನಿರಂಜನ ಚನ್ನಬಸವಲಿಂಗವ ಭಾವಿಸಿ ಭಾವಿಸಿ,
ಭಾವ ನಿರ್ಭಾವವಾಗಿ ನಿರ್ವಯಲಾದುದು ಶರಣನ ಭಾವ./702
ನಡೆನಡೆದು ನಡೆಗಳುಡುಗಿ ನುಡಿನುಡಿದು ನುಡಿಗಳುಡುಗಿ
ಕಡುತವಕ ಕಡೆಗಿಟ್ಟು ಕಾಣದಿರ್ದ ಶರಣನಖಂಡಿತನೆಂದು
ಕಲ್ಪನೆಗೆ ತಂದು ನುಡಿವ ನರರುಗಳಿಗೆ ನರಕವೇ ಕಡೆಗಿಂಬು ಕಾಣಾ
ಗುರುನಿರಂಜನ ಚನ್ನಬಸವಲಿಂಗಸಾಕ್ಷಿ./703
ನಡೆನಡೆದು ಸಡಗರದಲ್ಲಿಪ್ಪ ಶಿವಜ್ಞಾನಿ ಶರಣನು,
ಪಡೆದರ್ಥದಿಂದೊಡವೆರೆದು ಸುಖಿಸುವಲ್ಲಿ,
ಅಡಿಗಡಿಗೆ ಅವಧಾನಭರಿತನಾಗಿ, ಅಂಗಮನಭಾವದನುವರಿದು
ಅರ್ಪಿಸಿಕೊಳ್ಳಬಲ್ಲ ಪರಮಪರಿಣಾಮಿ
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ. /704
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ
ಎನ್ನ ಸಡಗರ ಹೆಚ್ಚಿತ್ತು ನೋಡಾ !
ಬಡಿವಾರದ ಬಲವಯ್ಯಾ,
ಕತರ್ು ಭೃತ್ಯಕಳೆ ಉನ್ನತವಾಗಿ
ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ.
ನಾದ ಬಿಂದು ಕಳೆ ನವೀನವಯ್ಯಾ.
ಮೂದೇವರೊಡೆಯ ಶರಣು ಶರಣು ಕರುಣಾನಿಧಿ
ಗುರುನಿರಂಜನ ಚನ್ನಬಸವಲಿಂಗಾ./705
ನಡೆನೋಟ ಚೈತನ್ಯದೊಡವೆರೆದು
ಒಡೆಯನ ಪಿಡಿದು ಸಡಗರಮುಖನಾದಲ್ಲಿ
ಮೊದಲು-ಮಧ್ಯ-ತುದಿ ಭಜನೆಯೆಂಬ
ಕಣ್ಮನದ ಕಳವಳನಳಿದುಳಿದ ನಿಜಾನಂದ ನೋಡಾ !
ಮಾಡಿದರೆ ಮಾಟ ಶೂನ್ಯ, ನೋಡಿದರೆ ನೋಟ ಶೂನ್ಯ,
ನೀಡಿದರೆ ನಿಲವು ಶೂನ್ಯ, ಮಾಟತ್ರಯದಾಟಭರಿತ,
ಗುರುನಿರಂಜನ ಚನ್ನಬಸವಲಿಂಗದಂಗ ತಾನೆಯಾಗಿ./706
ನಡೆಯನಿತ್ತು ನಡೆದುಂಬ, ನುಡಿಯನಿತ್ತು ನುಡಿದುಂಬ,
ನೋಟವಿತ್ತು ನೋಡಿ ಉಂಬ.
ನಾಡಮೇಗಣ ಜ್ಯೋತಿಯ ಬೆಳಗೆ ಹಿಡಿದುಕೊಂಡು
ಸುಖಿಸುತಿರ್ದನು ಗುರುನಿರಂಜನ ಚನ್ನಬಸವಲಿಂಗದಲ್ಲಿ./707
ನಡೆಯಲರಿಯದ ನಡೆಯ ನಡೆದನಯ್ಯಾ.
ನುಡಿಯಲರಿಯದ ನುಡಿಯ ನುಡಿದನಯ್ಯಾ.
ಮಾಡಬಾರದ ಮಾಟವ ಮಾಡಿದನಯ್ಯಾ.
ನೋಡಬಾರದ ನೋಟವ ನೋಡಿದನಯ್ಯಾ.
ಕೂಡಬಾರದ ಕೂಡವ ಕೂಡಿದನಯ್ಯಾ.
ಗುರುನಿರಂಜನ ಚನ್ನಬಸವಲಿಂಗದಂಗವಾಗಿ ಶರಣನು./708
ನಡೆಯಲರಿಯದೆ ನಡೆವರಯ್ಯಾ ತನುವಿಡಿದು,
ನೋಡಲರಿಯದೆ ನೋಡುವರಯ್ಯಾ ಮನವಿಡಿದು,
ಮುಟ್ಟಲರಿಯದೆ ಮುಟ್ಟುವರಯ್ಯಾ ಪ್ರಾಣವಿಡಿದು,
ವಾಸಿಸಲರಿಯದೆ ವಾಸಿಸುವರಯ್ಯಾ ಭಾವವಿಡಿದು,
ಕಾಣಲರಿಯದೆ ಕಾಣುವರಯ್ಯಾ ಜೀವವಿಡಿದು,
ಹೋಗಿ ಬರುವ ದಾರಿಯ ಸುಖಿಗಳಿಗೆತ್ತಣ ಶರಣಸ್ಥಲವಯ್ಯಾ,
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಅಸಮಜ್ಞಾನರಿಗಲ್ಲದೆ./709
ನಡೆಯಲಾರದವರು ನಡೆದರೆ ಸೈರಿಸಲಾರದವರು,
ನುಡಿಯಲಾರದವರು ನುಡಿದರೆ ಸೈರಿಸಲಾರದವರು,
ನೋಡಲಾರದವರು ನೋಡಿದರೆ ಸೈರಿಸಲಾರದವರು,
ಕೂಡಲಾರದವರು ಕೂಡಿದರೆ ಸೈರಿಸಲಾರದವರು,
ಗುರುನಿರಂಜನ ಚನ್ನಬಸವಲಿಂಗವನರಿಯದೆ ನರಕವನೈದುವರು./710
ನಡೆಯಿಲ್ಲದ ನಡೆ ನಷ್ಟವಾಯಿತ್ತು.
ನುಡಿಯಿಲ್ಲದ ನುಡಿ ಲಯವಾಯಿತ್ತು.
ನೋಟವಿಲ್ಲದ ನೋಟ ಲೀಯವಾಯಿತ್ತು.
ಕೂಟವಿಲ್ಲದ ಕೂಟ ಕುರುಹಳಿಯಿತ್ತು.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ./711
ನಡೆಯೆನಗೆ ಬಾರದಯ್ಯಾ ಕ್ರಿಯಾತೊಡರುಗೊಂಡು.
ನುಡಿಯೆನಗೆ ಬಾರದಯ್ಯಾ ಮನದ ತಿರುಳ ಬಿಚ್ಚಿ.
ನೋಟವೆನಗೆ ಬಾರದಯ್ಯಾ ಮನನದ ತಿರುಳ ತೆಗೆದು.
ಕೂಟವೆನಗೆ ಸೊಗಸದಯ್ಯಾ ಮನನೀಯದ ತಿರುಳ ತೆಗೆದಿಟ್ಟು.
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮೊಳಗಿರ್ದ ಶರಣಂಗೆ ನೀವೆಯಾದಿರಾಗಿ,
ನಾನು ನೀನೆಂಬ ಕುರುಹಿಲ್ಲವಯ್ಯಾ./712
ನಡೆವ ದಾರಿಯಲ್ಲೆನ್ನ ಒಡೆಯರು ಬರಲು
ಬಿಳಿಯಂಬರ ಗರ್ದುಗೆಯ ಮೇಲಿರಿಸಿ,
ಪಾದಪ್ರಕ್ಷಾಲನೆಯ ಮಾಡಿ,
ಇಚ್ಫಿತ ಪದಾರ್ಥವ ಮುಚ್ಚಿನೀಡಿ,
ನಚ್ಚಿ ಮೆಚ್ಚಿ ನಲಿದಾಡುವೆ.
ಹೆಚ್ಚಿ ಉಳಿಮೆಯ ಶೇಷವ ಕೊಂಡು
ಪಾದೋದಕವ ಧರಿಸಿ ಪಾವನನಾದೆನು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./713
ನನ್ನ ನಾನರಿಯದ ಮುನ್ನ ನಿನ್ನನಾರುಬಲ್ಲರು ಹೇಳಾ,
ನಿನ್ನಿಂದ ನಿನ್ನ ಕಂಡು, ಮುಟ್ಟಿ, ಕೇಳಿಕೊಂಡ ಬಳಿಕ
ನಿನ್ನ ಕಣ್ಣಿಂದೆ ನಿನ್ನ ಕಂಡು, ನಿನ್ನೊಳಗೆ ನೀನಾದಮೇಲೆ
ಗುರುನಿರಂಜನ ಚನ್ನಬಸವಲಿಂಗ ವೇಧಿಸಿಕೊಳ್ಳಲು ತೆರಹಿಲ್ಲ ನೋಡಾ./714
ನರಮುನಿಗಳರಿಯರು ನಿಮ್ಮಂತುವ,
ಸುರಪಾದಿ ಸಕಲಮನು ಷಡ್ದರ್ಶನಗಳರಿಯರು, ನಿಮ್ಮ ಪದಬೆರೆಯರು.
ಹದುಳಿಗರ ಸದುಹೃದಯ ನಿವಾಸ,
ಮುದದಿಂದೊಲಿದೆನ್ನ ಕರಸರಸಿಜಕ್ಕೈತಂದು,
ಘನಸಾರಾಯದನುವಿನೊಳು ನೆರೆದು
ಪರಿಣಾಮಿಸುವ ಪರಮಮೂರುತಿ,
ನಿಮಗೆ ಶರಣು ಶರಣೆಂಬೆನನುದಿನ
ಗುರುನಿರಂಜನ ಚನ್ನಬಸವಲಿಂಗಾ./715
ನವಖಂಡಮಂಡಲದೊಳಗೆ ಬೀಸುವ ಗಾಳಿಯ
ತಡೆದು ಬೀಸುವುದೊಂದು ರೂಪು.
ಮೂರಾರು ದ್ವಾರದವರಂದವ ಕೆಡಿಸಿ ಸುಳಿವುದೊಂದು ರೂಪು.
ಎರಡೈದು ದುಃಖವನು ಐದು ವರತೆಯೊಳು
ತೊಳೆದು ಸೇವಿಸುವುದೊಂದು ರೂಪು.
ಇಂತು ರೂಪತ್ರಯಾನಂದವಳಿದುಳಿದ ಸುಖಿ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಾಣಲಿಂಗಿ./716
ನವಭಕ್ತಿರಸವಕೊಂಡು ಶಿವಪ್ರಸಾದವನಿತ್ತ ಬಳಿಕ
ಆ ಪ್ರಸಾದವನೊಂದೆರಡು ಮೂರಾರು ಮತ್ತೆ
ಮುಖಮುಖವರಿದು ವೇಧಿಸಿದಲ್ಲಿ ಕಿರಿಕುಳವಲ್ಲುಂಟೆ ?
ಬರಿಕುಳವಿಲ್ಲುಂಟೆ ? ಕುಳಂಗಳ ನಿಲಿಸಿ ಕೂರ್ಪರೊಳು ಬೆರೆದು ಕೂಡಬಾರದು.
ಅದು ಕಾರಣ ಸೂತ್ರದ ಸುಳುಹು ಕಳಚಲಾಗದು ಕನಸಿನಲ್ಲಿ.
ಕಾರಣಮೂರ್ತಿಯ ಕಲ್ಪಿತಕ್ಕೆ ಇದೇ ಕುರುಹು
ಗುರುನಿರಂಜನ ಚನ್ನಬಸವಲಿಂಗದಲ್ಲಿ./717
ನವರತ್ನಕ್ಕೆ ಬಂಗಾರವ ತೆತ್ತಿಸಿ ಕಳಂಕರಹಿತತ್ವಚರಿತೆಯಿಂದೆ
ವ್ಯವಹಾರವ ಮಾಡಿಕೊಳ್ಳಬಲ್ಲಾತನೆ ಶರಣ.
ಕುಲಾಲ ಕೀಟಕನಂತೆ ಸಕಲಸಂಭ್ರಮದಲ್ಲಿ ತೋರಬಲ್ಲಾತನೆ ಶರಣ,
ಘನಸಾರ ಜ್ವಾಲೆ ಸಂಪರ್ಕ ಸ್ವಯವಾಗಿರಬಲ್ಲಾತನೇ ಶರಣ.
ಈ ತ್ರಿವಿಧದ ಭೇದವನರಿದು ಮರೆದಿಪ್ಪ ಮಹಾಘನವ
ಗುರುನಿರಂಜನ ಚನ್ನಬಸವಲಿಂಗದಲ್ಲಿಯೇ ಕಾಣಲಾಯಿತ್ತು. /718
ನಾಗರಪಂಚಮಿ ನಾರಿಯರು
ನಾಗತಿಯ ಕೂಡಿ ಹಾಲ ಹೊಯ್ಯಬಂದ ಪರಿಯ ನೋಡಾ !
ಹಾಲ ಕುಡಿದ ನಾಗರ ಹಾರುವನ ಹಿಡಿದು
ಮೂರುಲೋಕದೊಳಗೆ ಗರಳಗೊಂಡು ತಿರುಗಿಸಿತ್ತು ನೋಡಾ.
ಹಾರುವನ ಹೊಕ್ಕಳದಲ್ಲಿ ನಕ್ಷತ್ರಮೂಡಿ
ಚಂದ್ರನಕೂಡಿ ಆಕಾಶಮಂಡಲದಲ್ಲಿರಲು
ಚಂದ್ರನ ಬೆಳಗ ಕಂಡ ಜಲನಿಧಿ ಮೇರೆದಪ್ಪಿ ಹರಿಯಲು
ಮೂರುಲೋಕ ಮುಳುಗಿ,
ನಾಗತಿ ಸತ್ತು ಪಂಚಮಿನಾರಿಯರು ನಾಗರನೆತ್ತಿ ಬಿಳಿಹಾಲ ಹೊಯ್ಯುತ್ತ
ಹಾರುವನಕೊಂದು ತಳಿಗೆಯೊಳಿಟ್ಟು ಆರತಿಯ ಬೆಳಗಿದರು ಜಯಜಯವೆಂದು
ಗುರುನಿರಂಜನ ಚನ್ನಬಸವಲಿಂಗದಂಗದ ಬೆಳಗಿನೊಳುಬೆರೆದು./719
ನಾಚಿಕೆಯಿಲ್ಲದ ಹೆಂಡತಿ, ಗುಣವಿಲ್ಲದ ಗಂಡನ ಮದುವೆಯ ನಿಬ್ಬಣದಲ್ಲಿ,
ಮಿಂಡರ ಗುದ್ದಾಟ ಘನವಾಯಿತ್ತು ನೋಡಾ !
ಚೆನ್ನೆಯ ಜವ್ವನದ ಸುಖವ ಚನ್ನಿಗರು ಮೋಹಿಸಿ ಭೋಗವ ಮಾಡಿದರೆ,
ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು. /720
ನಾದ ಬಿಂದು ಕಲಾ ನಿರಂಜನಲಿಂಗವೆನ್ನಂಗದಲ್ಲಿ
ಸತ್ಕ್ರಿಯಾನುಭಾವ ಸುಖಿ.
ಆದಿ ಮಧ್ಯಾಂತ ಶೂನ್ಯ ಅಗಮ್ಯ ಅಗೋಚರಲಿಂಗವೆನ್ನಂಗದಲ್ಲಿ
ಸಮ್ಯಕ್ಜ್ಞಾನಾನುಭಾವ ಪರಿಣಾಮಿ.
ಶೂನ್ಯ ನಿಃಶೂನ್ಯ ನಿಃಕಳಂಕ ನಿಜಾನಂದಲಿಂಗವೆನ್ನಂಗದಲ್ಲಿ
ಸಮರಸಾನುಭಾವ ತೃಪ್ತಿ.
ಸತ್ತುಚಿತ್ತಾನಂದ ಗುರುನಿರಂಜನ ಚನ್ನಬಸವಲಿಂಗ
ಎನ್ನ ಸರ್ವಾಂಗ ಸಮಸುಖಾನಂದ./721
ನಾದ ಬಿಂದು ಕಲಾತೀತ ನಿರವಯಾನಂದ ನಿಜಬ್ರಹ್ಮವೇ
ತಾವೆಂದು ನುಡಿದುಕೊಂಡು
ಪರಧನಕ್ಕೆ ಆಶೆಯನಿಕ್ಕಿ, ಪರವಧುವಿಗೆ ಮನವನಿಕ್ಕಿ, ಪರದೈವಕ್ಕೆ ಶಿರವ ಚಾಚುವ
ನಿರವಯಕ್ಕೆ ನಿರಂತರವಾದ ಮಾಯಾ ನಿರ್ಮಾಲ್ಯರಿಗೆ
ನಿಜಗುರುನಿರಂಜನ ಚನ್ನಬಸವಲಿಂಗದಲ್ಲಿ
ನಿರ್ವಯಲ ನಿಜಸಮಾದಿಯು ಎಂದೆಂದಿಗೆ ಎತ್ತಲೂ ಹೇಳಾ./722
ನಾದ ಬಿಂದು ಕಳೆ ನಿರಂಜನ ಘನಗಂಭೀರ ಮಹಾಪ್ರಸಾದಲಿಂಗವು
ತನ್ನ ತಾನರ್ಚಿಸಿ ವಿನೋದಿಸಬೇಕೆಂಬ ಲೀಲೆಗೆ,
ತಾನೇ ಲಿಂಗವಾಗಿ, ತಾನೇ ಅಂಗವಾಗಿ, ತಾನೇ ದ್ರವ್ಯವಾಗಿ,
ಶರಣಸತಿ ಲಿಂಗಪತಿಯೆಂಬ ಭಾವದಿಂದೆ
ತಾ ನೆರವಿದ ಲೋಕೋಪಕಾರವಾಗಿ ಆಚರಿಸುತಿರ್ದನು
ಗುರುನಿರಂಜನ ಚನ್ನಬಸವಲಿಂಗ. /723
ನಾದ ಬಿಂದು ಕಳೆಯ ಕಾಣಿಕೆಯನಿತ್ತು ಕರುಣವ ಪಡೆದುಕೊಂಡು,
ಅಂಗೈಯ ಚಾಚಲು ಕಂಗಳಗೂಡಿ ಸಂಗಸಮರಸಕ್ಕಿಂಬು ಹೇಳಿ,
ನಡೆಸಿದ ತನ್ನಿಂದೆನ್ನ ಭಕ್ತಿಯ ಬೆಳಗಿನೊಳು ತಾನೇ ತಾನು
ಗುರುನಿರಂಜನ ಚನ್ನಬಸವಲಿಂಗ./724
ನಾದಬಿಂದುಕಲಾತೀತವಾದ ಅವಿರಳ ಪ್ರಕಾಶಲಿಂಗವ
ರೂಪನರಿದು ಅರ್ಚಿಸಬಾರದು ನೋಡಾ.
ಆದಿಮಧ್ಯಾಂತಶೂನ್ಯ ಲಿಂಗವ ಸಾದಿಸಿ ತಂದು ಪೂಜಿಸಬಾರದು ನೋಡಾ.
ಶೂನ್ಯ ನಿಃಶೂನ್ಯ ಗತಿಶೂನ್ಯಲಿಂಗವ
ಮತಿನಾಮವಿಟ್ಟು ಅರಿದರ್ಚಿಸಬಾರದು ನೋಡಾ.
ಇಲ್ಲ ಇಲ್ಲದ ಲಿಂಗವನಲ್ಲಲ್ಲಿಗೆ ತಂದು
ಮೆಲ್ಲಮೆಲ್ಲನೆ ಪೂಜಿಸುವರಂಗದಲ್ಲಿ ಬೆಳಗುವ ಪರಿಯ ನೋಡಾ.
ಸದಾಚಾರ ಸುಖಪ್ರಿಯ ಸುಲಲಿತ ನೋಡಾ
ನಮ್ಮ ಸದ್ಗುರು ಚನ್ನವೃಷಭೇಂದ್ರಲಿಂಗವು./725
ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು
ಪರಮಗುರುಮುಖದಿಂದೆ ಸಾಧಿಸಿ,
ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ,
ಕಳೆವ ಕರಡವಿಯೊಳೆಸೆವುತ,
ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ,
ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ
ಹಿಡಿತ ಬಿಡಿತಗಳರಿದು,
ಜರೆದು ನೂಂಕುತ ಹಿಡಿದುಕೊಂಬುತ
ಶರಣು ಶರಣೆಂದು ಬೆರೆದು ಬೆರಗಾಗಿರ್ಪ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ./726
ನಾದಸುಖವಿಡಿದು ಸಾಧಿಸಿ ಮಾಡಿಕೊಂಡವನಲ್ಲ ಶರಣ.
ಬಿಂದುವಿನಲ್ಲಿ ಸುಖವಿಡಿದು ಸಂಕೋಚಿಸಿ ಮಾಡಿಕೊಂಡವನಲ್ಲ ಶರಣ.
ಕಳೆಯ ಸುಖವಿಡಿದು ಕಂಡು ಕಂಡು ಮಾಡಿಕೊಂಡವನಲ್ಲ ಶರಣ.
ವೃಷಿಕಂಗಳ ಸುಖವಿಡಿದು ಮಾಟದಲ್ಲಿ ನಿಂತು ಮಾಡಿಕೊಂಡವನಲ್ಲ ಶರಣ.
ಗುರುನಿರಂಜನ ಚನ್ನಬಸವಲಿಂಗದಂಗ ಸುಖಿಯಾಗಿರ್ದ ಪ್ರಸಾದಿ ಶರಣ./727
ನಾಲ್ಕು ಇಪ್ಪತ್ತುನಾಲ್ಕು ಲಕ್ಷ ಯೋಜನ ಪ್ರಮಾಣದೊಳಗೆ
ಛಪ್ಪನ್ನದೇಶ ಮಂಡಲದಲ್ಲಿ ಮಿಗೆ ಒಪ್ಪುತಿರ್ಪುದೊಂದು ಸೊಬಗಿನ ಕಲ್ಯಾಣ.
ಅಂತಪ್ಪ ಕಲ್ಯಾಣಮಧ್ಯದಲ್ಲಿ
ಮುಂತೆಸೆವ ಸಿಂಹಪೀಠಾಗ್ರದ ಪವಳ ಪೊಸಮುತ್ತು
ನೀಲಪ್ರಕಾಶದೊಬ್ಬುಳಿಯೊಳೊಪ್ಪುವ
ಬಸವಣ್ಣ, ಚನ್ನಬಸವಣ್ಣ ಪ್ರಭುಸ್ವಾಮಿಗಳವರ
ವರಚರಣವನರಿದು ಕರ ಮನ ಭಾವದಲ್ಲಿ
ಹೆರೆಹಿಂಗದರ್ಚಿಸುವ ಪರಮ ಶಿವಯೋಗಿಯ ಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./728
ನಾಲ್ಕು ಬಿಟ್ಟು ನೋಡುವದು.
ಸಾಕಾರದ ಬೆಳಗು ಸ್ವಯಂ ಆದಲ್ಲಿ ಶುದ್ಧವನರಿಯೆ.
ನಿರಾಕಾರದ ಬೆಳಗು ನಿಜವಾದಲ್ಲಿ ಸಿದ್ಧವನರಿಯೆ.
ನಿಜಾನಂದದ ಬೆಳಗು ನಿಷ್ಪತಿಯಾದಲ್ಲಿ ಪ್ರಸಿದ್ಧವನರಿಯೆ.
ಗುರುನಿರಂಜನ ಚನ್ನಬಸವಲಿಂಗದ ಬೆಳಗೆನ್ನನೊಳಕೊಂಡಲ್ಲಿ
ಪರಮಾನಂದವನರಿಯೆ ಭಿನ್ನವಿಟ್ಟು./729
ನಾಲ್ಕುಯುಗದ ಸಂಸಾರ ಸಂಬಂದಿಸಿ
ಬ್ರಹ್ಮಲೋಕವ ಕಂಡೆ, ವಿಷ್ಣುಲೋಕವ ಕಂಡೆ, ರುದ್ರಲೋಕವ ಕಂಡೆ,
ಈಶ್ವರಲೋಕವ ಕಂಡೆ, ಸದಾಶಿವಲೋಕವ ಕಂಡೆ,
ಪರಮೇಶ್ವರ ಲೋಕವ ಕಂಡೆ.
ಈ ಆದಿದೈವದೊಡೆತನ ಒಬ್ಬನೊಡಲೊಳಗೆಂದು ನಾನಿರಲು
ಅಪ್ಪುಗೆಯ ಕುರುಹು ಮರೆದ ಮೇಲಿನ ಭೋಗ
ಗುರುನಿರಂಜನ ಚನ್ನಬಸವಲಿಂಗ./730
ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ
ಅಬದ್ಧ ಮೂಢಮನುಜರನೇನೆಂಬೆನಯ್ಯಾ!
ಗುರುಪ್ರಸಾದಿಯಾದಡೆ, ಕಾಯಗುಣವಳಿದು
ಪರಸ್ತ್ರೀಸಂಗ ಪರದ್ರವ್ಯ ಅಪಹರಣ
ಅಭಕ್ಷಭಕ್ಷಣ ಹಿಂಸಾದಿಗಳನಳಿದುಳಿದಿರಬೇಕು.
ಲಿಂಗಪ್ರಸಾದಿಯಾದಡೆ ಹುಸಿ ನಿಷ್ಠುರಾದಿ ವಾಕ್ದೋಷಂಗಲನಳಿದಿರಬೇಕು.
ಜಂಗಮಪ್ರಸಾದಿಯಾದಡೆ ಆಸೆ ಆಮಿಷ ದುರ್ಮೋಹಾದಿಗಳನಳಿದಿರಬೇಕು.
ಇಂತಲ್ಲದೆ ಕರಣತ್ರಯವಳಿಯದೆ ಕರ್ಮತ್ರಯವನುಂಬ
ಕಾಳಕೂಳರಿಗೆ ತ್ರಿವಿಧಪ್ರಸಾದವೆಲ್ಲಿ ಹದಯ್ಯಾ?
ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಪ್ರಸಾದಿಗಳಿಗಲ್ಲದೆ./731
ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು
ಅನ್ಯವಾಸನೆಯ ನೆನೆವ ಮನ ಶೂನ್ಯ ಕಾಣಾ.
ಜಿಹ್ವೆಯಲ್ಲಿ ಗುರುಲಿಂಗವನರಿದರ್ಪಿಸಿಕೊಂಡು
ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ.
ನೇತ್ರದಲ್ಲಿ ಶಿವಲಿಂಗವನರಿದರ್ಪಿಸಿಕೊಂಡು
ಅನ್ಯದೃಷ್ಟಿಗೆಳಸುವ ಮನವಿರಹಿತ ಕಾಣಾ.
ತ್ವಕ್ಕಿನಲ್ಲಿ ಜಂಗಮಲಿಂಗವನರಿದರ್ಪಿಸಿಕೊಂಡು
ಅನ್ಯಸ್ಪರ್ಶನಕ್ಕಾಸ್ಪದವಾದ ಮನ ನಾಸ್ತಿ ಕಾಣಾ.
ಶೋತ್ರದಲ್ಲಿ ಪ್ರಸಾದಲಿಂಗವನರಿದರ್ಪಿಸಿಕೊಂಡು
ಅನ್ಯಶಬ್ದರಮಿಸಲು ಮನವಿಲ್ಲ ಕಾಣಾ.
ಹೃದಯದಲ್ಲಿ ಮಹಾಲಿಂಗವನರಿದರ್ಪಿಸಿಕೊಂಡು
ಅನ್ಯಪರಿಣಾಮಕ್ಕೆಳಸುವ ಮನವಿರಹಿತ ಕಾಣಾ.
ಕಾಯ ಕಾರಣ ಪ್ರಾಣಶೂನ್ಯ ಲಿಂಗಮಯ
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ./732
ನಿಚ್ಚನಿರ್ಮಲ ಅಚ್ಚಪದಾರ್ಥವನು
ಸಚ್ಚಿದಾನಂದಲಿಂಗಸನ್ನಿಹಿತ ಸುಖಾನಂದಮಯ ಅವಿರಳಪ್ರಸಾದಿ
ಅರ್ಪಿಸಿ ಕೊಂಬ ದ್ವೈತಸುಖಿಯಲ್ಲ, ಅರ್ಪಿಸದೆ ಕೊಂಬ ಅದ್ವೈತಸುಖಿಯಲ್ಲ,
ಅರ್ಪಿಸದೆ ಅರ್ಪಿಸಿ ಕೊಂಬ ನಿತ್ಯ ಪರಿಣಾಮಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ./733
ನಿಜಕ್ರಿಯಾಸುಜ್ಞಾನ ಸುವಿಲಾಸನೊಮ್ಮೆ ಜಡಕ್ರಿಯಾ ತೊಡರೊಳು ಬೀಳ,
ಅಡಿಯಿಡನೊಮ್ಮೆ ಅಗಣಿತ ಕಟ್ಟುವ್ರತ ಕಾವಳಿಗೆ,
ಅರಿಯನೊಮ್ಮೆ ನಿಸ್ಸೀಮ ಬರಿ ನಿಯಮಬದ್ಧ ಬಣತೆಯ,
ಹುಡಿ ನುಡಿಯನೊಮ್ಮೆ, ಹಸನವಿಡಲರಿಯ.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಾಮಸುಖಿ ಶರಣ./734
ನಿಜಲಿಂಗಮುಖದಿಂದ ಗಜಬಜೆಯನಳಿದು
ಸುಜನಸಂದಣಿಯೊಳೊಪ್ಪಿ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡ ತೇಜೋಮೂರ್ತಿಯ,
ನಿತ್ಯ ನಿರ್ಮಲಾನಂದ ಪ್ರಕಾಶದೊಳ್ವೆರೆದು
ಸುಖಮಿರ್ದೆನು, ನಿರಂಜನ ಚನ್ನಬಸವಲಿಂಗಾ./735
ನಿಜಲಿಂಗೈಕ್ಯ ನಿಜಲಿಂಗೈಕ್ಯರೆಂದು ನುಡಿದುಕೊಂಬ
ಕಡುಮಂದಮತಿಗಳನೇನೆಂಬೆನಯ್ಯಾ.
ಸತ್ವ-ರಜ-ತಮ ಗಿರಿಯ ಗವಿಯ ಹೊಕ್ಕು ಗಬ್ಬುಗೊಂಡು
ಗರಳಘಾತದೊಳು ಮುಳುಗಿದ ವಿಹಂಗಗತಿಗಳೆತ್ತಬಲ್ಲರಯ್ಯಾ
ನಿಮ್ಮ ಶರಣನ ಲಿಂಗೈಕ್ಯದ ಘನವ !
ಪತಂಗ ಜಲದಲ್ಲಿ ಮುಳುಗಬಾರದು,
ಅನಿಮಿಷನು ಅಗ್ನಿಯಲ್ಲಿ ಮುಳುಗಬಾರದು
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ನೀವೇ ಬಲ್ಲಿರಿ./736
ನಿಜಲಿಂಗೈಕ್ಯ ನಿರ್ವಾಣಪದದನುಭಾವದ ಸೌಖ್ಯ ವಚನವನು
ಹೇಳುವ ಹಿರಿಯರೆಲ್ಲ
ತಮ್ಮ ಕತ್ತಲೆಯನುಳಿಸಿ ಇತರರಲ್ಲರಸಿ ವಾಕ್ಪಟುತ್ವವನೆತ್ತಿಹರು.
ಸಮುಖ ಕಿಂಕರತ್ವವನಿದಿರಿಟ್ಟು ಅರಸುವರಂತೆ
ಜಲದಲ್ಲೊರ್ಣಿಸಿದ ಭಕ್ತಿಜ್ಞಾನ ವೈರಾಗ್ಯಪತಾಕಿಯನ್ನು
ಉಲಿಸುತ್ತ ಕೇಳುತ್ತಿಹರು.
ಇವರರಿವು ಎಂತೆನಲು ಎಲುಪಾಲದ ಮರದ ಫಲದಂತೆ,
ಮರೀಚಿಕೆಯ ಜಲದಂತೆ, ಹೆಣನ ಸೊಬಗು ಪ್ರಲಾಪದಂತೆ,
ಗುರುನಿರಂಜನ ಚನ್ನಬಸವಲಿಂಗಕ್ಕವರು
ಅವರಂತೆ, ತಾನು ತನ್ನಂತೆ./737
ನಿಜವಕೊಟ್ಟು ಗಜಬಜೆಯನೆಸಗಲುಂಟೆ ?
ಒಡಲಕಿಚ್ಚಿನ ತುಡುಗು ಬೆಡಗಿನೊಳಗಿಲ್ಲ ಉಪದೇಶ.
ನಿನ್ನ ಸಂಸಾರ ನಿನ್ನುದ್ದ, ನಿಃಸಂಸಾರಿಗಳ ತಗುಲಿಕೊಳ್ಳದಿರು.
ಕೊಟ್ಟವರಾರು ಕೊಂಡವರಾರು ?
ಹಮ್ಮು ಬಿಮ್ಮು ಹವಣಿಸಿಕೊ
ಗುರುನಿರಂಜನ ಚನ್ನಬಸವಲಿಂಗಸಹಿತ ಗುರುವೆನಿಸುವರೆ./738
ನಿತ್ಯಪದದಲ್ಲಿ ತತ್ವಮೊತ್ತವನರಿದು
ಚಿತ್ತಾದಿ ಮಲಿನವಳಿದುಳಿದು
ಹಸ್ತದಿಂದೆ ಪಿಡಿದೆತ್ತಿ ಕರ್ತು ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು
ಕೊಳಬಲ್ಲವನವಿರಳಪ್ರಸಾದಿ./739
ನಿತ್ಯಾನಂದ ನಿಜಗುರುವಿತ್ತ ನಿರ್ಮಲಲಿಂಗ
ಆಧಾರದಲ್ಲಿ ಆಚಾರಲಿಂಗವಾಗಿ ಪ್ರಕಾಶವ ತೋರುತಿಹನು.
ಎನ್ನ ಸ್ವಾಧಿಷ್ಠಾನದಲ್ಲಿ ಗುರುಲಿಂಗವಾಗಿ ಪ್ರಭೆಯ ತೋರುತಿಹನು.
ಎನ್ನ ಮಣಿಪೂರಕದಲ್ಲಿ ಶಿವಲಿಂಗವಾಗಿ ಕಳೆಯ ಪ್ರಭಾವಿಸುತಿರ್ದನು.
ಎನ್ನ ಅನಾಹತದಲ್ಲಿ ಜಂಗಮಲಿಂಗವಾಗಿ ಬೆಳಗುತಿರ್ದನು.
ಎನ್ನ ವಿಶುದ್ಧಿಯಲ್ಲಿ ಪ್ರಸಾದಲಿಂಗವಾಗಿ ಮಹಾಪ್ರಕಾಶವ ಬೀರುತಿರ್ದನು.
ಎನ್ನ ಆಜ್ಞೇಯದಲ್ಲಿ ಮಹಾಲಿಂಗವಾಗಿ ಸಕಲಮಹಾಪ್ರಕಾಶವ ಬೀರುತಿರ್ದನು.
ಎನ್ನ ಬ್ರಹ್ಮಚಕ್ರದಲ್ಲಿ ನಿಃಕಲಲಿಂಗವಾಗಿ ಅಖಂಡ ಬೆಳಕ ತೋರುತಿಹನು.
ಎನ್ನ ಶಿಖೆಯಲ್ಲಿ ನಿಶ್ಶೂನ್ಯಲಿಂಗವಾಗಿ ಅವಿರಳಪ್ರಕಾಶ ತೋರುತಿಹನು.
ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಅಗಣಿತಪ್ರಕಾಶವ ತೋರುತಿಹನು.
ಇಂತು ಸರ್ವಾಂಗದಲ್ಲಿ ತನ್ನ ಪ್ರಭೆಯ ತೋರಿ
ಎನ್ನ ಕರಸ್ಥಲದಲ್ಲಿ ನಿತ್ಯ ನಿರಂಜನ ಚನ್ನಬಸವಲಿಂಗವು
ನಿತ್ಯವಾಗಿರ್ದುದ ಕಂಡು ನಮೋ ನಮೋ ಎನುತಿರ್ದೆನು. /740
ನಿತ್ಯಾನಂದ ನಿರ್ಮಲ ಜ್ಯೋತಿರ್ಮಯಲಿಂಗಸುಖಿ ಶರಣಂಗೆ,
ಅವಿದ್ಯಾಮಾಯಾಮಲಯದುಸ್ಸಂಸಾರದಾಯಾಸದೋರಲು ಕಾರಣವೇನು,
ಇದು ಸಂಗತಿಯೊಳಿರ್ದು ನಾವು ಲಿಂಗ ನಮಗೆ ಪಾಶವಿಲ್ಲೆಂದು
ತನುಮನಭಾವವ ಮೀರಿರ್ದ ಮಹಿಮರೆಂದು
ಬೊಗಳಿ ಬಿದ್ದು ಹೋಗುವ ವಾಗದ್ವೈತಿ ಭಂಡಮೂಢರ ಶರಣರೆಂದರೆ
ಅಘೋರನರಕ ತಪ್ಪದು ನೋಡಾ ಗುರುನಿರಂಜನ ಚನ್ನಬಸವಲಿಂಗಾ./741
ನಿತ್ಯಾನಂದ ಶರಣ ಮಿಥ್ಯಸಂಸಾರದಲ್ಲಿ ಬಳಲುವನಲ್ಲ ನೋಡಾ.
ತನುವಿರ್ದು ತನುವಿಲ್ಲ ಮನವಿರ್ದು ಮನವಿಲ್ಲ ಧನವಿರ್ದು ಧನವಿಲ್ಲ.
ತನುಮನಧನವಿಡಿದು ಶರಣಸತಿ ಲಿಂಗಪತಿಯೆಂಬ ಭಾವವನು
ತಲೆಯಲ್ಲಿ ಕಟ್ಟಿ ನಲಿನಲಿದಾಡುತಿರ್ದ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಸುಖಿಯಾಗಿ. /742
ನಿತ್ಯಾನಂದ ಸುಖಮುಖ ಶರಣರು ನುಡಿವರು-
ಕಾಯಕಳೆ ಸಂಗಮನೆಂದರೆ ಗುರುವಿಹೀನನೆಂದು.
ಮನಕಳೆ ಸಂಗಮನೆಂದರೆ ಲಿಂಗವಿಹೀನನೆಂದು.
ಪ್ರಾಣಕಳೆ ಸಂಗಮನೆಂದರೆ ಜಂಗಮವಿಹೀನನೆಂದು.
ಭಾವಕಳೆ ಸಂಗಮನೆಂದರೆ ಪ್ರಸಾದವಿಹೀನನೆಂದು,
ಅರುಹಿನ ಕಳೆ ಸಂಗಮನೆಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪಾದೋದಕ ಸಂಬಂಧಿ ಭಕ್ತನೆಂದು./743
ನಿತ್ಯಾನಂದಸಂವಿತ್ಪ್ರಭಾಮೂರ್ತಿಯಾದ
ಸತ್ಯಸ್ಥಲಾಶ್ರಯದಲ್ಲೊಪ್ಪುವ ಸದ್ಗುರುವರನಾಜ್ಞೆವಿಡಿದಾಚರಿಸುವ
ಸಗುಣನಿರ್ಗುಣಸನ್ನಿಹಿತ ಸದಮಲಾನಂದ
ಪ್ರಸಾದಿಯ ವೇಷವ ಹೊತ್ತು ನಡೆವಣ್ಣಗಳಿರಾ,
ನಿಮ್ಮ ನಡೆಯೊಳು ತಪ್ಪಿ ನಡೆಯಬೇಡಿರಿ,
ನಿಮ್ಮ ನುಡಿಯೊಳು ತಪ್ಪಿ ನುಡಿಯಬೇಡಿರಿ,
ನಿಮ್ಮ ಭಕ್ತಿಯಲ್ಲಿ ಬೆರಸಬೇಡಿರಿ;
ನಿಮ್ಮ ಜ್ಞಾನದಲ್ಲಿ ಕಲಸಬೇಡಿರಿ,
ನಿಮ್ಮ ವಿರಾಗತೆಯಲ್ಲಿ ಅನುಸರಿಸಬೇಡಿರಿ,
ನೂರು ವರುಷ ಬಾಳಿ ನರಕವನುಂಬುವಕಿಂತ,
ಒಂದೈದುದಿವಸ ಅಹುದಹುದೆನಿಸಿ
ಗುರುನಿರಂಜನ ಚನ್ನಬಸವಲಿಂಗದಂಗವಾಗಿ
ಅಮಲಪ್ರಸಾದಿಯೆನಿಸಿಕೊಂಬುವುದು ಕಾಣಾ./744
ನಿನ್ನಾಣತಿಗೆ ಇಂಬುಗೊಂಡು ನಿನ್ನಿಂದಾದ ಸುಖವ,
ನಿನ್ನಿಂದ ನಿನಗೀಯಬೇಕೆಂದು ಬಂದ ನಿಜಾತ್ಮನಿಗೆ,
ನೀನಿಟ್ಟ ತೊಡರು ಬಂಧಿಸಲೇನು ಕಾರಣವಯ್ಯಾ ?
ನಿನ್ನ ಧರ್ಮದ ಗತಿಯ ನೀನಿಟ್ಟ ಮಾಯೆಯ ಕುಟಿಲವೋ ?
ನೀನೇ ಬಲ್ಲೆ ನಾನೆತ್ತ ಬಲ್ಲೆನಯ್ಯಾ !
ನಿನ್ನೊಡಲ ಮೊರೆಗೊಂಡ ಮರುಳ ನಾನು ನಿರಂಜನ ಚನ್ನಬಸವಲಿಂಗಾ./745
ನಿಮಗಂದಾದ ಕಾಯದ ರತಿಯ ಕದ್ದು ಸುಖಿಸುವನಲ್ಲ ಕೇಳಾ.
ನಿಮಗಂದಾದ ಮನದ ರತಿಯ ಕದ್ದು ಸುಖಿಸುವನಲ್ಲ ಕೇಳಾ.
ನಿಮಗಂದಾದ ಪ್ರಾಣದ ರತಿಯ ಕದ್ದು ಸುಖಿಸುವನಲ್ಲ ಕೇಳಾ.
ನಿಮಗಂದಾದ ಭಾವದೊಳು ಸಕಲವನಿರಿಸಿ
ನಿಃಕಲ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ರತಿಯೊಳು ರತಿವೆರಸಿ
ನಿರುತ ಪರಿಣಾಮ ಪರವಶದೊಳೋಲಾಡುತಿರ್ದೆನು ಕಾಣಾ./746
ನಿಮಿಷವಳಿದು ಅನಿಮಿಷನಾಗಿ ಅರಿದು ಮರೆದ ಅಪ್ರತಿಮ ಶರಣ ತಾನೆಂದು
ಕಾರ್ಯ ಕಾರಣಕ್ಕನುಕೂಲಿಯಾದಡು ತಾ ಮಾಡಿದಡು, ತಾ ಸುಖಿಸಿದಡು,
ತನ್ನ ವಿನೋದದಾನಂದದೊಳಗೆಯಲ್ಲದೆ ಅಣುಮಾತ್ರವಿಲ್ಲ ಕಾಣಾ,
ತಾನೆಂತಿರ್ದಂತೆ ಗುರುನಿರಂಜನ ಚನ್ನಬಸವಲಿಂಗ ಕಾಣಾ./747
ನಿಮ್ಮ ರ್ಪಿತದನುವಿಂಗಲ್ಲದೆ ಎನ್ನ ಕಾಲುಗಳು ಮುಂದಕ್ಕೆ ಹರಿಯವು.
ನಿಮ್ಮ ರ್ಪಿತದವಸರಕ್ಕಲ್ಲದೆ ಎನ್ನ ಕೈಗಳು [ಪಿಡಿ]ಯವು.
ನಿಮ್ಮ ರ್ಪಿತದ ಕುರುಹಿಂಗಲ್ಲದೆ ಎನ್ನ ತನುವು ಅಲಸದು.
ನಿಮ್ಮ ರ್ಪಿತದ ಬರುವಿಂಗಲ್ಲದೆ ಎನ್ನ ನುಡಿ ಅನುಕರಿಸದು.
ನಿಮ್ಮ ರ್ಪಿತದ ಸುಳಿಹಿಂಗಲ್ಲದೆ ಎನ್ನ ಕಂಗಳು ಸೂಸವು.
ನಿಮ್ಮ ರ್ಪಿತದ ಕೇಳಿಗಲ್ಲದೆ ಎನ್ನ ಕರ್ಣಂಗಳೊಲಿದು ಲಾಲಿಸವು.
ನಿಮ್ಮ ರ್ಪಿತದ ಸುಖಕ್ಕಲ್ಲದೆ ಎನ್ನಾತ್ಮ ಪರಿಣಾಮಿಸದು
ಗುರುನಿರಂಜನ ಚನ್ನಬಸವಲಿಂಗವಾದ ಕಾರಣ./748
ನಿಮ್ಮಿಂದೆ ನೀವಿಟ್ಟ ಮಾಯೆ ನಿಮ್ಮಿಂದ ಬಂದು ಆವರಿಸಿ ನುಂಗುತಿರಲು
ಇನ್ನಾರು ಬಿಡಿಸುವರಯ್ಯಾ ?
ಕಡಲುಕ್ಕಿ ಪ್ರಳಯವಾದರೆ, ಅಂಬರ ಕಳಚಿ ಧರೆಗೆ ಬಿದ್ದರೆ,
ಭೂಜಲವೈದಿದರೆ ಇನ್ನಾರು ಹೇಳಿಕೇಳುವರಯ್ಯಾ ?
ನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ./749
ನಿರಂಜನ ನಿತ್ಯಾನಂದ ಶರಣ ತಾನು ರಂಜನೆಯ ರಮ್ಯಭಾವಿಯಲ್ಲ.
ಅದೇಕೆಂದಡೆ, ಮುತ್ತಿನ ರಾಶಿಯ ಮೇಲಿದರ್ು
ಮೃತ್ತಿಕೆಯ ಮಣಿಗೊಳಿಸಿ ಮಾರುವ ಮರುಳನಂತೆ,
ತಥ್ಯ ಮಿಥ್ಯ ರೂಪನಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಾಷೆ ಬಲವಂತ. /750
ನಿರಂಜನ ಲಿಂಗಸನ್ನಿಹಿತ ನಿರಾಮಯ ಶರಣಂಗೆ
ಖಂಡಿತವಿಟ್ಟು ನುಡಿವ ವರ್ಮಗೇಡಿ ಕುರಿಮನುಜರ ವಾಕ್ಪಟುತ್ವವ ನೋಡಾ !
ಆದಿ ಅನಾದಿಯಿಂದತ್ತತ್ತಲಾದ ಮೂದೇವರರಿಯದ ಮಹದಾನಂದವೇ
ಕಾರ್ಯಕಾರಣಾತೀತ ತನ್ನತನಗೆ ಸಕಲನಿಃಕಲಸೌಜನ್ಯವಾಯಿತ್ತು.
ಆ ಸಚ್ಚಿದಾನಂದ ಪರಬ್ರಹ್ಮವೇ ಶರಣಲಿಂಗಸಂಬಂಧವೆಂಬುದಾದುದು.
ಆ ಶರಣಲಿಂಗಸಂಬಂಧವೆ ತನ್ನ ವಿನೋದಕ್ಕೆ ತಾನೇ ಅಂಗವಾಗಿ, ಲಿಂಗವಾಗಿ,
ಶಕ್ತಿಯಾಗಿ, ಭಕ್ತಿಯಾಗಿ, ಹಸ್ತವಾಗಿ,
ಮುಖವಾಗಿ, ಪದಾರ್ಥವಾಗಿ, ಪ್ರಸಾದವಾಗಿ,
ಅಷ್ಟಾವರಣವಾಗಿ, ಪೂಜ್ಯನಾಗಿ, ಪೂಜಕನಾಗಿ, ಉಪಕರಣವಾಗಿ
ಇಂತು ತನ್ನ ತಾನಾನಂದಿಸಿ, ತನ್ನಲ್ಲಿ ತಾ ನಿರ್ವಯಲಾದರೆ
ಮುಂದೇನರಿಯದೆ ನಿಂದೆಯ ಮಾಡುವ ಬೆಂದ ಮೂಢರಿಗೆ
ಮುಂದೆ ವೈತರಣಿಯಿಂಬುಗೊಟ್ಟಿಹುದು ;
ಗುರುನಿರಂಜನ ಚನ್ನಬಸವಲಿಂಗ ದೂರವಾಗಿಹನು./751
ನಿರಾಕಾರ ಲಿಂಗವೆನ್ನ ಸ್ಥೂಲತತ್ವದ ವ್ಯವಹಾರವನು
ಜಾಗ್ರಾವಸ್ಥೆಯಲ್ಲಿ ಕ್ರಿಯಾಗಮ್ಯನಾಗಿ
ಆನಂದಿಸುವಲ್ಲಿ ನಾನು ಸತಿಭಾವದಿಂದ ನಗುತಿರ್ದೆನು.
ನಿರಾಮಯ ಲಿಂಗವೆನ್ನ ಸೂಕ್ಷ್ಮತತ್ವದ ವ್ಯವಹಾರವನು
ಸ್ಪಪ್ನಾವಸ್ಥೆಯಲ್ಲಿ ಜ್ಞಾನಗಮ್ಯನಾಗಿ ಪರಿಣಾಮಿಸುವಲ್ಲಿ
ನಾನು ಸತಿಭಾವದಿಂದೆ ನಗುತಿರ್ದೆನು.
ನಿರವಯ ಲಿಂಗವೆನ್ನ ಕಾರಣತತ್ವದ ವ್ಯವಹಾರವನು
ಸುಷುಪ್ತಾವಸ್ಥೆಯಲ್ಲಿ ಭಾವಗಮ್ಯನಾಗಿ ಆಸ್ವಾದಿಸುವಲ್ಲಿ
ನಾನು ಸತಿಭಾವದಿಂದೆ ನಗುತಿರ್ದೆನು.
ಗುರುನಿರಂಜನ ಚನ್ನಬಸವಲಿಂಗವೆಂಬ
ಷಟ್ಸ್ಥಲಸಂಭೋಗಿ ಸ್ವಯವಾದಲ್ಲಿ ನಗುತಿರ್ದೆನು./752
ನಿರುಪಮಲಿಂಗ ಸುಖಮುಖಭರಿತ ಶರಣನೊಂದು ವೇಳೆ,
ರೂಪವ ಹೊತ್ತರೆ ಜಡನಲ್ಲ, ನಿರೂಪವ ಹೊತ್ತರೆ ಅದ್ವೈತಿಯಲ್ಲ,
ಮತ್ತೆ ದ್ವಂದ್ವಾವಲಂಬ ನಿರಾವಲಂಬ
ಗುರುನಿರಂಜನ ಚನ್ನಬಸವಲಿಂಗಕ್ಕೆ ತಾನಿಲ್ಲವಾಗಿ./753
ನಿರ್ಮನವೆಂಬ ಭೂಮಿಯಮೇಲೆ ಚಿದ್ವೃಷ್ಟಿಗರೆಯಲು,
ಹದನರಿದು ಹಲಾಯುಧ ಮೂರುತಾಳಕೂರಿಗೆಯಿಂದ ಬಿತ್ತಿದಲ್ಲಿ
ಒಂದಂಕುರದಿಂದಂಕುರಿಸಿದ ಪೈರದಿ ಸಕಲ ಚರಾಚರಕ್ಕೆ ಸೌಖ್ಯದೋರಿ,
ಉರಹಿತಂಗೆ ಉಲ್ಲಾಸವಾಗಿ,
ತೆರಿಗೆಯ ಹೊನ್ನ ಒಂದೆರಡು ಹಪ್ತಿಯ ಮಾಡಿಕೊಟ್ಟು,
ಹಿರಿಯರ ಗತಿಹಿಂಗದೆ ಮಂಗಳಮಂಟಪದಲ್ಲಿರ್ಪ
ಮಹಾರಾಜನ ಪ್ರಭೆಯಲ್ಲಡಗಿ,
ಮನೆ ಹೊಲ ಸುಖ ಮರೆದು ಮರುಳುಗೊಂಡರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗೈಕ್ಯ ತಾನೆ. /754
ನಿರ್ಮಲ ನಿಜಾಂತಜ್ರ್ಯೊತಿ ಸುಪ್ರಕಾಶವೆಂಬ
ಘನಮಹಾ ಶ್ರೀವಿಭೂತಿಯನೊಲಿದು
ಷಡಷ್ಟಾಂಗವನರಿದು, ಷಡಕ್ಷರಸಂಯುಕ್ತದಿಂ ಧರಿಸಿ
ಷಟ್ಸ್ಥಲಜ್ಞಾನದನುಭಾವಿಯಾಗಿರ್ದೆನಯ್ಯಾ
ನಿತ್ಯನಿರಂಜನ ಚನ್ನಬಸವಲಿಂಗಾ./755
ನಿರ್ಮಲಜಾಗ್ರದ ಬೆಳಗನರಿಯದ ವೇದಾಂತಿಯ ಸಂಗಭಂಗವನರಿಯದೆ,
ನಿರುಪಮಸ್ವಪ್ನದ ಕಳೆಯನರಿಯದ ಸಿದ್ಭಾಂತಿಯ ಕೂಟಭಂಗವನರಿಯದೆ,
ನಿರಂಜನಸುಷುಪ್ತಿಯ ಪ್ರಕಾಶವನರಿಯದ
ಯೋಗಮಾಗರ್ಿಯ ಸಂಯೋಗ ಭಂಗವನರಿಯದೆ
ಜಾಗ್ರದ ಬೆಳಗ ಸ್ವಪ್ನದಲ್ಲಿ ಕಂಡು, ಸ್ವಪ್ನದ ಕಳೆಯ ಸುಷುಪ್ತಿಯೊಳ್ಬೆರೆದು
ಸುಮ್ಮನಿರ್ದ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮೊಳಗೆ ಶರಣ./756
ನಿರ್ಮಲವಾದ ಕುಸುಮವನೆತ್ತಿ ಧರಿಸುವರು.
ಸ್ಥಾವರ ಜಂಗಮದ ಪೂಜೆಗೆ ಸಕಲ ಭಕ್ತರುಗಳು ನಲುವಿಂದೆ
ಮಲದಲ್ಲಿ ಬಿದ್ದ ಕುಸುಮವನು ಹೇಸಿ ನೋಡರು.
ಸದುಹೃದಯನುಳ್ಳ ಭಕ್ತನ ಕರಣೇಂದ್ರಿಯವಿಷಯವೆಂಬ ಚಿತ್ಕುಸುಮವನೆತ್ತಿ,
ಸತ್ತುಚಿತ್ತಾನಂದಲಿಂಗಕ್ಕೆ ಧರಿಸಿದರೆ ಪರಿಣಾಮವಾಗುವದು.
ಮಲತ್ರಯದಲ್ಲಿ ಬಿದ್ದ ಮನುಜನ
ಕರಣೇಂದ್ರಿಯ ವಿಷಯಗೂಡಿ ಮಾಡುವ ಪೂಜೆಗೆ
ದೂರದಿಂದತ್ತ ನಿಲುಕದಿರ್ದ ನಮ್ಮ ಗುರು
ನಿರಂಜನ ಚನ್ನಬಸವಲಿಂಗವು./757
ನಿಷ್ಠೆಯಿಲ್ಲದ ಪೃಥ್ವಿ ಜಡ, ನಿಷ್ಠೆಯಿಲ್ಲದ ಅಪ್ಪು ಜಡ,
ನಿಷ್ಠೆಯಿಲ್ಲದ ಅಗ್ನಿ ಜಡ, ನಿಷ್ಠೆಯಿಲ್ಲದ ವಾಯು ಜಡ,
ನಿಷ್ಠೆಯಿಲ್ಲದ ಆಕಾಶ ಜಡ, ನಿಷ್ಠೆಯಿಲ್ಲದ ಆತ್ಮ ಜಡ.
ಇಂತು ಷಡ್ಭೂತದಲ್ಲಿ ನಿಷ್ಠೆರಹಿತವಾಗಿರ್ದು
ಷಟ್ಸ್ಥಲಜ್ಞಾನಿಗಳೆಂದರೆ ಮನೋಮೂರ್ತಿ ಮಹಾಲಿಂಗಮುರ್ತಿಯಾಗಿರ್ಪನು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./758
ನೀತಿಯನರಿಯದ ಸೂತಕಪ್ರಾಣಿಗಳಿಗೆ
ಅಜಾತಗುರೂಪದೇಶ ಅಳವಡುವುದೇ ?
ಅದೆಂತೆಂದೊಡೆ, ಸಮ್ಯಕ್ಜ್ಞಾನದಿಂದೆ ಜಾತಿಸೂತಕವಳಿಯಲಿಲ್ಲ.
ಕ್ರಿಯಾಘನ ಗುರುವಿನಿಂದೆ ಜನನ ಸೂತಕವಳಿಯಲಿಲ್ಲ.
ಲಿಂಗ ಕ್ರಿಯಾಸಂಪರ್ಕದಿಂದೆ ರಜಸೂತಕವಳಿಯಲಿಲ್ಲ.
ಜಂಗಮ ಪಾದೋದಕ ಪ್ರಸಾದದಿಂದ ಉಚ್ಫಿಷ್ಟ ಸೂತಕವಳಿಯಲಿಲ್ಲ.
ಮಹಾಘನದೊಳ್ಮನೋರ್ಲಯವಾಗಿ ಪ್ರೇತಸೂತಕವಳಿಯಲಿಲ್ಲ.
ಇಂತು ಪಂಚಸೂತಕವಳಿಯದೆ ಪಂಚೇಂದ್ರಿಯಪ್ರಪಂಚಸೂತಕದೊಳ್ಮುಳುಗಿ
ಪಂಚಾಚಾರಸಂಬಂಧಿಗಳೆಂದರೆ ನಾಚಿ ನಗುತಿರ್ದರು
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣರು./759
ನೀರಗೋಳಿಯ ನೆತ್ತರವ ಕುಡಿದವನು,
ಹಂಸನ ಪಾಕವನೆತ್ತ ಸೇವಿಸಬಲ್ಲ ಹೇಳಾ !
ಮಿಥ್ಯಸಂಸಾರದೊಳ್ಮುಳುಗಿ ತೇಕ್ಯಾಡುವ ಅನಿತ್ಯ ಮೂಢಪ್ರಾಣಿ
ತಾನೆತ್ತಬಲ್ಲುದು ಹೇಳಾ ಗುರುನಿರಂಜನ ಚನ್ನಬಸವಲಿಂಗೈಕ್ಯ
ನಿಜಗಡಲಸುಖವನು ?/760
ನೀರಜದೊಳಗೊಂದು ಮಾಜರ್ಾಲ ಹುಟ್ಟಿ
ಮೂರುಲೋಕವ ನುಂಗಿತ್ತು ನೋಡಾ.
ನುಂಗಿದ ಪ್ರಾಣಿಗಳ ಹಿಂಗಿಸಿ ನೋಡಿದರೆ ಸಂಗ್ರಹಕ್ಕೆ ಸಯವಾದವು.
ಸಂಗ್ರಹ ಸವೆದು ಶರದಿಯಕೂಡಲು ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ನಿರಂಜನ ನಿಜೈಕ್ಯವದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ./761
ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು,
ಪೂರ್ಣಿಮೆಯ ಚಂದ್ರ ಮೂಡಿಬರಲು
ಸಣ್ಣಬಾವಿಯ ಶಿಲೆಯ ಜಲವುಕ್ಕಿ ಹಾದಿಯಮೇಲೆ ಸುರಿಯೆ
ಎಡೆಯಾಡುವ ಸಕಲ ತಿಂಥಿಣಿ ಪ್ರಮಥಗಣವಾದುದು ಕಂಡು
ಗುರುನಿರಂಜನ ಚನ್ನಬಸವಲಿಂಗವಾಗಿ ಮರೆದಿರ್ದನು./762
ನೀರೊಳಗಿನ ಕಿಚ್ಚೆದ್ದು ಊರೆಲ್ಲ ಸುಟ್ಟಿತ್ತು.
ಕೇರಿಯೊಳಗಣ ಸೂಳೆಯರು ಗರತಿಯಾದುದನೇನೆಂಬೆನಯ್ಯಾ.
ಹಾರುವನ ಕುತ್ತಿಗೆಯ ಕೊಯ್ದು ಮೇಲಣೊರತೆಯ ಉದಕವ ಹೊಯ್ದರೆ
ಹಾರುವನ ಕುಲಕೋಟಿ ಸತ್ತು ಕುಣಿಕುಣಿದು ಕೂಡಿದರು
ಗುರುನಿರಂಜನ ಚನ್ನಬಸವಲಿಂಗ ಶರಣ ಬೆಂಬಳಿವಿಡಿದು. /763
ನೀರೊಳಗೆ ನೀರು ಹುಟ್ಟಿತೇನು ?
ಆರಾರ ಮೇಲಿಂದೆನ್ನರಸಿಕೊಂಡು ಬಂದಿತೇನು ?
ಆರನಾರಿಂಗೆ ತಂದಿತೇನು ? ಆರ ಸುಖವಾರಿಂಗೆ ತೋರಿಕೊಂಡಿತೇನು ?
ಆರ ಕೈಯಿಂದ ಮರೆಮರೆಯಾಗುತ ತೋರಿತ್ತದೇನು ?
ಗುರುನಿರಂಜನ ಚನ್ನಬಸವಲಿಂಗ ಮತ್ತೇನು ?/764
ನೀರೊಳು ಬಿದ್ದು ನೀರಪುಳವ ಭಕ್ಷಿಸುವ ಕುಕ್ಕುಟ
ಕ್ಷೀರವನೀಂಟಬಲ್ಲುದೆ ಹೇಳಾ?
ತಿಪ್ಪೆಯಕೆದರಿ ಮಲಪುಳವ ತಿಂಬ ಕೋಳಿ
ಮಧುರಾಮೃತಸುಖವ ಬಲ್ಲುದೆ ಹೇಳಾ?
ಮಾಯಾಮೋಹ ವಿಷಯರಸವನೀಂಟುವ ಜೀವ ಜಾತಿಗಳು,
ಆದಿಗುರು ಕರುಣಾಮೃತ ಅನಾದಿ ಮಹಾನುಭಾವ
ಜಂಗಮಪ್ರಸಾದಸೇವಿಪ ಸುಖವನವರೆತ್ತಬಲ್ಲರು ಹೇಳಾ?
ಗುರುನಿರಂಜನ ಚನ್ನ ಬಸವಲಿಂಗ ಚಿದಾಂಶಿಕರಲ್ಲದೆ./765
ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು
ಬಸವಣ್ಣನ ಮನೆಗೆ ಶರಣೆನ್ನಹೋದರೆ
ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮದೇವರು,
ಪ್ರಭುಸ್ವಾಮಿ, ಅಜಗಣ್ಣಯ್ಯಗಳು ಸಹವಾಗಿ
ಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಮಡಿವಾಳತಂದೆಯ ಮನೆಗೆ ಶರಣೆನ್ನ ಹೋದರೆ
ಚನ್ನಬಸವಣ್ಣ, ಸಿದ್ಧರಾಮಯ್ಯ, ಪ್ರಭುದೇವರು,
ಅಜಗಣ್ಣ ತಂದೆ, ಬಸವಣ್ಣ ಸಹವಾಗಿ
ಮಡಿವಾಳ ತಂದೆಯ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಚನ್ನಬಸವಣ್ಣನ ಮನೆಗೆ ಶರಣೆನ್ನಹೋದರೆ
ಸಿದ್ಧರಾಮಯ್ಯತಂದೆ, ಪ್ರಭುದೇವರು,
ಅಜಗಣ್ಣಯ್ಯಗಳು, ಬಸವರಾಜದೇವರು, ಮಡಿವಾಳಯ್ಯಗಳು ಸಹವಾಗಿ
ಚನ್ನಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಸಿದ್ಧರಾಮಯ್ಯನ ಮನೆಗೆ ಶರಣೆನ್ನಹೋದರೆ
ಪ್ರಭುದೇವ, ಅಜಗಣ್ಣಯ್ಯಗಳು, ಬಸವಣ್ಣ, ಮಡಿವಾಳಯ್ಯ,
ಚನ್ನಬಸವಣ್ಣನವರು ಸಹವಾಗಿ
ಸಿದ್ಧರಾಮಯ್ಯನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಪ್ರಭುವಿನ ಸ್ಥಲಕ್ಕೆ ಶರಣೆನ್ನಹೋದರೆ
ಅಜಗಣ್ಣ, ಬಸವಣ್ಣ, ಮಡಿವಾಳ, ಚನ್ನಬಸವಣ್ಣ,
ಸಿದ್ಧರಾಮಯ್ಯಗಳು ಸಹವಾಗಿ
ಪ್ರಭುವಿನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಅಜಗಣ್ಣಯ್ಯನ ಮನೆಗೆ ಶರಣೆನ್ನಹೋದರೆ
ಬಸವರಾಜ, ಮಡಿವಾಳತಂದೆ, ಚನ್ನಬಸವಣ್ಣ,
ಸಿದ್ಧರಾಮ, ಪ್ರಭುದೇವರು ಸಹವಾಗಿ
ಅಜಗಣ್ಣಯ್ಯಗಳ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಇಂತು ಬಲ್ಲಂತೆ ಕಂಡು ಶರಣೆಂದು ಸುಖಿಯಾದೆನು
ಗುರುನಿರಂಜನ ಚನ್ನಬಸವಲಿಂಗದಲ್ಲಿ./766
ನೀಲಲೋಚನೆಯಮ್ಮನವರ ಮನೆಯಲ್ಲಿ ನಿರ್ಮಲಪ್ರಸಾದವ ಕಂಡು
ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
ನಾಗಲಾಂಬಿಕೆಯವರ ಮನೆಯಲ್ಲಿ ಚಿತ್ಕಲಾಪ್ರಸಾದವ ಕಂಡು
ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
ಅಕ್ಕಮಹಾದೇವಿಯವರ ಮನೆಯಲ್ಲಿ ನಿರಂಜನಪ್ರಸಾದವ ಕಂಡು
ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
ಮುಕ್ತಾಯಕ್ಕಳ ಮನೆಯಲ್ಲಿ ನಿರವಯ ಸಂವಿತ್ಪ್ರಭಾನಂದಪ್ರಸಾದವ ಕಂಡು
ನಿತ್ಯ ಸೇವಿಸಿ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸುಖಾನಂದಸುಗ್ಗಿಯೊಳೋಲಾಡುತಿರ್ದೆನು./767
ನುಡಿಯಲಮ್ಮೆನಯ್ಯಾ ಹುಸಿಗಲತ ಕುಶಲಗಳ
ಗುರುಪ್ರಸಾದವಾವರಿಸಿದ ಜಿಹ್ವೆಯಾದ ಕಾರಣ.
ನುಡಿಯಲಮ್ಮೆನಯ್ಯಾ ದ್ವೈತಾದ್ವೈತ ಸಂವಾದ ಸರವನು
ಸಮರಸಾನುಭಾವವಾವರಿಸಿದ ಜಿಹ್ವೆಯಾದ ಕಾರಣ.
ನುಡಿಯಲಮ್ಮೆನಯ್ಯಾ ನಾನು ನೀನೆಂಬ ನಾಣನುಡಿಯನು
ಗುರುನಿರಂಜನ ಚನ್ನಬಸವಲಿಂಗವೇ ತಾನೆಂಬ ನುಡಿಯ ನುಂಗಿ ನಿಂದ
ನಿರಾವಲಂಬ ಜಿಹ್ವೆಯಾದ ಕಾರಣ./768
ನುಡಿವನಯ್ಯಾ ಶರಣನು ತನ್ನಡಿಗೆರಗಿ ನಿಂದ ನಿರ್ಮಲರಿಗೊಲಿದು.
ನುಡಿವನಯ್ಯಾ ಶರಣನು ಭಕ್ತಿತ್ರಯದ ಯುಕ್ತರ ಕೂಡಿ.
ನುಡಿವನಯ್ಯಾ ಶರಣನು ಮಹಾನುಭಾವರ ಪ್ರಸಂಗಕ್ಕೆ ಅಬಿನ್ನಮುಖದಿಂದೆ.
ನುಡಿವನಯ್ಯಾ ಶರಣನು ಗುರುನಿರಂಜನ ಚನ್ನಬಸವಲಿಂಗ ತಾನಾಗಿ./769
ನೆನವು ನಿರಂತರ ನಿಜಾನಂದಶರಣನು
ಖಂಡಿತವಳಿದುಳಿದು ಕಾಣಿಸಿಕೊಂಬನು.
ಹರಿದುಹತ್ತಿದ ಕ್ರಿಯಾಸನ್ನಿಹಿತ ಗುರುವೆಂಬೆನು.
ಮರೆದು ನೆರೆದ ಜ್ಞಾನಸನ್ನಿಹಿತ ಲಿಂಗವೆಂಬೆನು.
ಜರೆದುಳಿದ ಭಾವಸನ್ನಿಹಿತ ಜಂಗಮವೆಂಬೆನು.
ಗುರುನಿರಂಜನ ಚನ್ನಬಸವಲಿಂಗಕ್ಕೆಯಿಲ್ಲದೆ
ನಡೆನುಡಿ ಗಂಭೀರ ಮಹೇಶ್ವರನು./770
ನೆಲ ಗಗನಕ್ಕೆ ನಿಲುಕದ ಗಂಭೀರ ಮಹಾಘನ ಪರಬ್ರಹ್ಮಮೂರುತಿ
ಕರಸ್ಥಲದಲ್ಲಿ ಬಂದಿರಲು,
ಭವಿಬೆರಸಿದುದಕವ ಮಜ್ಜನಕ್ಕೆರೆದರೆ ಗುರುದ್ರೋಹ.
ಭವಿಬೆಳೆದ ಪತ್ರಿ ಪುಷ್ಪಂಗಳ ಧರಿಸಿದರೆ ಲಿಂಗದ್ರೋಹ.
ಭವಿಬೆರಸಿದ ಗಂಧಾಕ್ಷತೆ ಪರಿಮಳದ್ರವ್ಯಂಗಳ ಧರಿಸಿದರೆ ಜಂಗಮದ್ರೋಹ.
ಭವಿಬೆರಸಿದ ಪಾಕಪದಾರ್ಥವನರ್ಪಿಸಿದರೆ ಪ್ರಸಾದದ್ರೋಹ.
ಭವಿಸೋಂಕಿದ ಹಾಲು ತುಪ್ಪ ಸಕ್ಕರೆ ಮಧು ಮೊಸರು
ಮೊದಲಾದವನರ್ಪಿದರೆ ಪಾದೋದಕದ್ರೋಹ.
ಇಂತು ಪಂಚವಿಧವನರಿಯದೆ ಪಂಚಮಹಾಪಾತಕಕ್ಕಿಳಿವ
ಪಾಶಬದ್ಧರಿಗೆ ದೂರವಾಗಿಪ್ಪ ನಮ್ಮ ಗುರುನಿರಂಜನ ಚನ್ನಬಸವಲಿಂಗ./771
ನೆಲದಮೇಲೆ ನಡೆವರು, ನೀರ ಮೇಲೆ ನಡೆವರು,
ಗಗನದ ಮೇಲೆ ನಡೆವರು, ಗಾಳಿಯ ಮೇಲೆ ನಡೆವರು,
ಪಾವಕನ ಮೇಲೆ ನಡೆವರು ಇವರೆಲ್ಲ ಆತ್ಮವಿದ್ಯೆ ಸಾಧಕರು.
ಇವರ ವಿದ್ಯಕ್ಕೆ ಸಮ್ಮುಖ ಗುರುನಿರಂಜನ ಚನ್ನಬಸವಲಿಂಗದ
ನಿಲುವು ತಾನಾದ ಕುರುಹು
ಪಂಚಗಮನ ನಿಷ್ಪತ್ತಿ ನಿರುಪಮಾನಂದ ನಿತ್ಯ ಕಾಣಾ./772
ನೆಲದಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
ನೀರಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
ಬೆಂಕಿಯಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
ಗಾಳಿಯ ಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
ಆಕಾಶದಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
ಪಾತಾಳದಲ್ಲಿ ಲಿಂಗಸ್ಥಾಪನವಮಾಡಿ ಪೂಜಿಸುವ,
ಇಂತಿಷ್ಟವನು ಅಂಗೈಯಲ್ಲಿ ಸ್ಥಾಪನವಮಾಡಿ ಪೂಜಿಸುವ
ನಿತ್ಯಪ್ರಾಣಲಿಂಗಿ ತಾನೆ ಗುರುನಿರಂಜನ ಚನ್ನಬಸವಲಿಂಗ./773
ನೇಮಿಸಿದ ನಿಲುವಿಂಗೆ ಕಾಮಿಸಿ ಬಂದಲ್ಲಿ ಕಲ್ಪಿತವೇಕಯ್ಯಾ?
ಕರ್ಮವನುಂಡರೆ ತ್ರಿವಿಧದ್ರೋಹಿ.
ಅರಿದರ್ಪಿಸು ಗುರುನಿರಂಜನ ಚನ್ನಬಸವಲಿಂಗಕ್ಕೆ ಪ್ರಸಾದಿಯಾದಡೆ./774
ನೋಟಕ್ಕೆ ನಿಲುಕದ ಮಾಟಕ್ಕೆ ಸಮನಿಸದ ಕೂಟಕ್ಕೆ ಕಾಣಿಸದ
ಸಾಕ್ಷಿಸಭೆಗಳರಿಯದ ನಿರವಯ ಬ್ರಹ್ಮವನು
ಕರ ಮನ ಭಾವದಲ್ಲಿ ತರಹರಮಾಡಲಾರಳವಲ್ಲ ನೋಡಾ,
ಮಹಾಘನ ಮಹಾಮಹಿಮರಿಗಲ್ಲದೆ.
ಭಾವ ಬತ್ತಲೆಯಾಗಿ ಪ್ರಾಣನ ಗೊತ್ತುತಪ್ಪಿ,
ಮನದ ಕತ್ತಲೆ ಹರಿದು ತನು ನಿರ್ಮಲವಾಗಿ
ನಡೆ ನುಡಿ ಶುದ್ಧವಾದ ಸುಪ್ರಭಾನಿಲವಿಂಗೆ
ಸ್ವಯವಾಗಿಪ್ಪ ನೋಡಾ ನಮ್ಮ ಗುರುನಿರಂಜನ ಚನ್ನಬಸವಲಿಂಗವು./775
ನೋಟಲಂಪಟರಿಗೆ ಸ್ತ್ರೀಯರ ರೂಪವಲ್ಲದೆ
ಶರಣಸ್ವರೂಪವೆಲ್ಲಿಹದೊ?
ನಡೆಲಂಪಟರಿಗೆ ದುರಾಚಾರವಲ್ಲದೆ
ಶರಣನ ಸದಾಚಾರವೆಲ್ಲಿಹದೊ?
ಜಿಹ್ವೆಲಂಪಟರಿಗೆ ಕೂಳೇ ಪ್ರಾಣವಲ್ಲದೆ
ಶರಣನುಡಿರಸವೆಲ್ಲಿಹದೊ?
ಗುಹ್ಯಲಂಪಟರಿಗೆ ಯೋನಿಮೋಹವಲ್ಲದೆ
ಶರಣಮೋಹವೆಲ್ಲಿಹದೊ?
ಶಬ್ದಲಂಪಟರಿಗೆ ದುಗರ್ೋಷ್ಠಿಗೆ ರತಿಯಲ್ಲದೆ
ಶರಣರನುಭಾವಕ್ಕೆ ರತಿಯೆಲ್ಲಿಹದೊ?
ವಾಕ್ಪಟುಗಳಿಗೆ ಬರಿಗರ್ಜನೆಯಲ್ಲದೆ
ಶರಣನೆನಹೆಲ್ಲಿಹದೊ?
ವಾಸನೆಯಲಂಪಟರಿಗೆ ಮಲತ್ರಯವಾಸನೆಯಲ್ಲದೆ
ಶರಣಸತಿ ಲಿಂಗಪತಿವಾಸನೆಯೆಲ್ಲಿಹದೊ?
ಸ್ಪರ್ಶನಲಂಪಟರಿಗೆ ಸ್ತ್ರೀಯಪ್ಪುಗೆಯಲ್ಲದೆ
ಶರಣರಪ್ಪುಗೆಯೆಲ್ಲಿಹದೊ?
ಹಸ್ತಲಂಪಟರಿಗೆ ಕುಚ ಹೇಮಾಸೆಯಲ್ಲದೆ
ಶರಣಸೇವೆಯೆಲ್ಲಿಹದೊ?
ಮನಲಂಪಟರಿಗೆ ಸಂಕಲ್ಪವಿಕಲ್ಪವಲ್ಲದೆ
ಶರಣಲಿಂಗ ಒಂದೆಂಬ ಭಾವವೆಲ್ಲಿಹದೊ?
ಪ್ರಾಣಲಂಪಟರಿಗೆ ಮಾಯಾಮೋಹ ವಿಷಯಹಂಭಾವವಲ್ಲದೆ
ಶಿವೋಹಂಭಾವವೆಲ್ಲಿಹದೊ?
ಇಂತು ಈ ಪ್ರಾಣಿಗಳಿಗೆ ಶರಣರೆನ್ನಬಹುದೆ?
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ,
ಭವಸಂಬಂಧಿಗಳಿಗೆ ಲಿಂಗಸಂಬಂಧಿಯೆನ್ನಬಾರದು ಕಾಣಾ. /776
ನೋಡಬಂದ ನಲ್ಲಂಗೆ ಕೂಡಿ ಮಾಡಿದ ಶುದ್ಧಪ್ರಸಾದಿ.
ಆಡಬಂದ ನಲ್ಲಂಗೆ ಕೂಡಿ ನೀಡಿದ ಸಿದ್ಧಪ್ರಸಾದಿ.
ಕೂಡಬಂದ ನಲ್ಲಂಗೆ ಕೂಡಿ ಕೂಡಿದ ಪ್ರಸಿದ್ಧಪ್ರಸಾದಿ.
ನೋಟ ಆಟ ಕೂಟದ ಕುಳವನರಿಯದೆ
ಬೇಟಕ್ಕೊಳಗಾದರು ಗುರುನಿರಂಜನ ಚನ್ನಬಸವಲಿಂಗ./777
ನೋಡಬಾರದ ಬೆಳಗು ಮೂಡಿಬಂದಲ್ಲಿ ಕೂಡಿದ ಕುಲವಳಿದು ನೋಡ ನಿಂದೆ.
ವಂಶಿಂದೆ ನಾನೇತಕ್ಕೆ ಬಂದೆ, ಈ ಸಂದು ಸವರಿ,
ಹಿಂದಿನ ಹಿಂದು ಮುಂದೆ ಬಂದವರೆಂದು ಕಾಂಬೆ
ನಾನಹುದು ನಿರಂಜನ ಚನ್ನಬಸವಲಿಂಗಾ./778
ನೋಡಲಿಲ್ಲದ ನುಡಿಸಲಿಲ್ಲದ ಕೂಡಲಿಲ್ಲದ ಲಿಂಗವ
ನಾ ನೋಡಿ ಶರಣೆಂದು ಸುಖಿಸಿದೆ ನೋಡಾ.
ಎನ್ನೊಡನೆ ನುಡಿಸಿ ಶರಣೆಂದು ಸುಖಮಯನಾದೆ ನೋಡಾ.
ಎನ್ನೊಡನೆ ಕೂಡಿ ಶರಣೆಂದು ಪರಿಣಾಮಿಯಾದೆ ನೋಡಾ.
ಗುರುನಿರಂಜನ ಚನ್ನಬಸವಲಿಂಗವನು
ನಾನರಿಯದೆ ಶರಣೆಂದು ಪರಮಾನಂದ ಲೋಲುಪ್ತನಾದೆ ನೋಡಾ./779
ನೋಡಿ ಬೇಡಿಕೊಂಡ ಶರಣ, ಬೇಡ ಮರೆದಿರುವುದೇ ಸಹಜ.
ತನ್ನ ತನ್ನ ಲೀಲೆಗೆ ಗುರುಲಿಂಗಜಂಗಮವನು ಬೇಡುವ.
ಪಾದೋದಕ ಪ್ರಸಾದವ ಅನ್ಯರ ಬೇಡಲಿಲ್ಲ.
ತನ್ನನಾರಾಗಲಿ ಬೇಡಲು ಇಲ್ಲೆನಲಿಲ್ಲ.
ಇದು ಶರಣಜಂಗಮದಿರವು, ಪರಶಿವನರಿವು, ನಿಜವಾದ ಕುರುಹು.
ಈ ಭೇದವನರಿಯದೆ ತನ್ನವಸರಕೆ ಅನ್ಯರ ಬೇಡಿಕೊಂಡು ನಡೆವರೆಲ್ಲ
ಗುರುಲಿಂಗಜಂಗಮ ದ್ರೋಹಿಗಳು.
ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕೆ
ದೂರವಾಗಿ ಹೋಗುವರು./780
ನೋಡಿರೆ ನೋಡಿರೆ ಮಾಯೆಯ ಕುಟಿಲವನು
ದೂಡಿರೆ ದೂಡಿರೆ ಸಂಸಾರ ಸರಸವನು.
ಮಾಡಿರೆ ಮಾಡಿರೆ ಗುರುಪಾದ ಸೇವೆಯನು;
ಬೇಡಿರೆ ಬೇಡಿರೆ ನಿಮ್ಮ ಸ್ವರೂಪವನು.
ಆಡಿರೆ ಆಡಿರೆ ಸತಿ ಪತಿಯ ಸೊಂಪಿನಿಂದೆ ;
ಹಾಡಿರೆ ಹಾಡಿರೆ ಬಾಯಿಗೆ ಬಂದಂತೆ.
ಕೂಡಿರೆ ಕೂಡಿರೆ ನಿರಂಜನ ಚನ್ನಬಸವಲಿಂಗವ
ಬೇರೆ ಕಾಣದಂತೆ ಮುಮುಕ್ಷುಗಳಿರಾ./781
ಪಂಕ, ಶಿಲೆ, ಸ್ಪಟಿಕ, ತಾಂಬ್ರ, ಲೋಹ, ತಾರೆ, ಹೇಮಾದಿಗಳಿಂದೆ
ಮಾಡಿ ಮಾಡುವ ತೋರಿಕೆಯೆಲ್ಲ ಲಿಂಗವೇ ಅಲ್ಲ.
ಅವೇ ಲಿಂಗವೆಂದು ನಿಯಮವಿಡಿದು
ಇದೇ ಪತ್ರಿ ಇದೇ ಪುಷ್ಪ ಇದೇ ನೀರು ಆಗಬೇಕೆಂದು
ಸಾಧಿಸುದ ಭೇದಜೀವಜಂತುಗಳಿಗೆ
ಅದೇ ಫಲದಿಂದತ್ತ ಭವ ತಪ್ಪದು ಕಾಣಾ,
ಸಾಧ್ಯಸಾಧ್ಯ ಅನುಪಮಲಿಂಗವ ಸಾಧಿಸಿ
ಅಂಗ ಮನ ಭಾವ ಸಂಗಸಂಯೋಗಿ ತಾನೆ
ಗುರುನಿರಂಜನ ಚನ್ನಬಸವಲಿಂಗವಲ್ಲದೆ ಬೇರಿಲ್ಲ ಕಾಣಾ ಶರಣಂಗೆ./782
ಪಂಚಗೋಮಯವ ತಂದು
ಪಂಚಪ್ರಣವ ಶಿಖಾಗ್ನಿಯಿಂದೆ ದಹಿಸಿ,
ವಂಚನೆಯಳಿದುಳಿದು ವರ್ಮವರಿದು
ಸ್ಥಾನವು ಧೂಳನ ಧಾರಣವಾದ
ಮಹಾಘನಮಹಿಮ ಶಿವಶರಣಂಗೆ
ನಮೋ ನಮೋ ಎಂಬೆನಯ್ಯಾ ನಿರಂಜನ ಚನ್ನಬಸವಲಿಂಗಾ./783
ಪಂಚಭೌತಿಕ ಧರ್ಮ ಅಂತರವೇದಿಯಾಗಿ
ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ವಂಚನೆ
ಉದಾಸೀನ ನಿರ್ದಯವೆಂಬಾರು ಅಂತರಂಗದ ಭವಿ,
ಬಹಿರಂಗದ ವೇದಿಯಾಗಿ ಮದಮುಖದಿಂದೆ ವರ್ತಿಸುವ ನರನು
ವೇಷಲಾಂಛನ ಹೊತ್ತು ನಡೆವಲ್ಲಿ ಪರಮಾಚಾರಪ್ರಿಯ
ಚನ್ನಬಸವಲಿಂಗವಲ್ಲದಿರ್ದನು ಸದಮಲಲಿಂಗದಲ್ಲಿ./784
ಪಂಚಮೂರ್ತಿಯನೊಳಕೊಂಡಿರ್ದ ಪ್ರಸಾದಮೂರ್ತಿಯ
ಪಂಚವಿಧವ ಗಬರ್ಿಕರಿಸಿಕೊಂಡಿರ್ಪ ಬಯಲಾಂಗನು
ತನ್ನಂತರಂಗದ ಅವಿರಳಬೆಳಗೆಂದರಿದು
ಮನ ಭಾವ ಕರಣದೊಳಾವರಿಸಿ ನೆರೆದು ನಿತ್ಯ ಪರಮಪರಿಣಾಮಿಯಾಗಿರ್ದ
ಗುರುನಿರಂಜನ ಚನ್ನಬಸವಲಿಂಗ ತಾನಾಗಿ./785
ಪಂಚವಕ್ತ್ರದ ಮಿಂಚು ಮೈ ಸೋಂಕಿ
ಪಂಚವಕ್ತ್ರನ ಸಂಚವನರಿಯದೆ
ಕೆಂಚ ಕರಿಕರತ್ತಿತ್ತಾದರಲ್ಲಾ!
ಪಂಚ ಪಂಚವದಾಟಿ ಗೊಂಚಲ ಫಳಿಕಿನಲ್ಲಿ ಹೊಳೆವ ಪರಶಿವಲಿಂಗವನು,
ಪರಿಪರಿಯಿಂದೆ ಕಂಡು ಪರಮಸುಖಿಯಾಗಿರ್ನೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ. /786
ಪಂಚವಣ್ಣಿಗೆ ಪಟ್ಟಣ ಪಂಚಮಾಲುಪೂರ್ಣ ಪೇಟೆಯಲ್ಲಿ
ಹರದರನಂತರ ಕೊಳುಕೊಡೆ ಕಡೆ ಮೊದಲಿಲ್ಲ ನೋಡುವ ಬನ್ನಿರೆ.
ಅರಿಷಿಣ ಬೆಳ್ಳೊಳ್ಳಿ ಗುಗ್ಗಳ ಚಂದನ ವೀಳ್ಯೆದೆಲೆ
ಲವಂಗ ಪತ್ರಿ ಜಾಜಿಕಾಯಿ ಖಾರೀಕ ಮಾರುವದೊಂದು
ಮಳಿಗೆಸಾಲು ಕೊರತೆಯಾಗದೆ ತಿಳಿಯಿರೆಯಮ್ಮ.
ಕಲ್ಲುಸಕ್ಕರೆ ಜೇನುತುಪ್ಪ ನೆಲ್ಲಿಯಕಾಯಿ ಬೆಟ್ಟಡಕೆ ಮೆಣಸು
ಶುಂಠಿ ಸೋಲು ಹುಣಸೆಫಳ ಕಾಚುಗರಳ ಮಾರುವದೊಂದು
ಮಳಿಗೆಸಾಲು ಮನವೊಪ್ಪಿ ಅರಿಯಿರೆಯಮ್ಮ.
ಹೊನ್ನು ಬಂಗಾರ ಬೆಳ್ಳಿ ಮುತ್ತು ಪವಳ ನಾರಂಜಿ
ಪಚ್ಚ ಪಸುರುಂಬರ ನೀಲ ಕಸ್ತೂರಿಗಳೊಪ್ಪಿ ಮಾರುವದೊಂದು
ಮಳಿಗೆಸಾಲು ಇರ್ದಂತೆ ನೋಡಿರೆಯಮ್ಮ.
ತಟ್ಟು ಕಂಬಳಿ ಕುಸುಮಸುಪ್ಪತ್ತಿಗೆ ಸೂರ್ಯಚಂದ್ರ
ಬಿಸಿಲು ಉರಿ ಬೆಳಗು ಇರುಳು ಬೆಳದಿಂಗಳವಿಡಿದು
ಕಾಜುಕಪ್ಪೆ ಮುಟ್ಟಿ ಮಾರುವದೊಂದು ಮಳಿಗೆಸಾಲು ಕಾಣಿರೆಯಮ್ಮ.
ಕಂಚುಗಳು ಕಾಬರ್ೊನ್ನದೆಳೆದೊಗಲು ಕಾಷ್ಠ ಗೂಡಿ
ಕೊಂಬು ಶಂಖ ಮಾತುಮಾತಿನಿಂದೆ ಮಾರುವದೊಂದು
ಮಳಿಗೆಸಾಲು ಕೇಳಿರೆಯಮ್ಮ.
ತರುಮೂಲ ಹಣ್ಣು ಬೆಲ್ಲಾದಿ ಹಾಗಲಫಲಗಸೆ
ತಾಳಾದಿ ವಚನಗಳಿನಿತು ಪರಿಣಾಮಗೊಂಡು ಮಾರುವದೊಂದು
ಮಳಿಗೆಸಾಲು ಸಂತೋಷ ಕಾಣಿರಮ್ಮ.
ಇಂತಪ್ಪ ಪುರದ ಬಾಜಾರ ನೆರವಿಯೊಳಿಪ್ಪ ಶೆಟ್ಟಿ ಎಮ್ಮ ಕೈಪಿಡಿದರೆ
ಚೌಕ ಚಾವಡಿಯಲ್ಲಿ ನಮ್ಮ ನಮ್ಮ ಗಂಡರ ನಂಟು ಬಲಿಸಿದರೆ
ಕಂಟಕವಿಲ್ಲದೆ ಕಾಣಿಸಬಹುದು
ಗುರುನಿರಂಜನ ಚನ್ನಬಸವಲಿಂಗ ಪ್ರಸಾದಸುಖಪದವ./787
ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು
ಕೂಡಿ ಸುಖಿಸಿದೆನು ಆದಿಯಲ್ಲಿ.
ಮತ್ತೆ ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು
ಕೂಡಿ ಸುಖಿಸಿದೆನು ಮಧ್ಯದಲ್ಲಿ.
ಮತ್ತು ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು
ಕೂಡಿ ಸುಖಿಸಿದನು ಅಂತ್ಯದಲ್ಲಿ.
ಇಂತು ತ್ರಿವಿಧ ಕಲೆಯ ಬೆಳಗಿನ ಬೆಳಗು
ಗುರುನಿರಂಜನ ಚನ್ನಬಸವಲಿಂಗ ತಾನೆ ಬೇರಿಲ್ಲ./788
ಪಂಚಾಕ್ಷರವೆ ಪ್ರಾಣವಾಗಿರ್ದ ಪರಮ ಶಿವಭಕ್ತಲಿಂಗಮಹೇಶ್ವರರುಗಳಿಗೆ
ಬೆರಸವಿರಹಿತನಡೆ, ಬೆರಸವಿರಹಿತನುಡಿ, ಬೆರಸವಿರಹಿತ ನೋಡಾ.
ಬೆರಸವಿರಹಿತನಾಗಿ ಗುರುನಿರಂಜನ ಚನ್ನಬಸವನಲ್ಲಿ ಸದಾಸನ್ನಿಹಿತ./789
ಪಂಚಾಕ್ಷರವೇ ಪರಮಾಮೃತವೆಂದು ಕರ್ಣದ್ವಾರದಲ್ಲಿ ಕೊಂಡು
ಜಿಹ್ವೆ ಮನಕ್ಕೆ ಸಂಬಂಧವಾಯಿತ್ತೆಂದು ಹೇಳಿಕೊಂಡ ಬಳಿಕ
ಹುಸಿ ನುಡಿ ದುರ್ವಾಕ್ಯದಿಂದೆ ಮನ ಹೆಚ್ಚಿ ನಡೆದರೆ
ಆತನ ನಡೆಗೆ ವೈತರಣಿಯೇ ಗತಿ.
ಆತನ ನುಡಿ ಅಧೋಶಬ್ದ, ಆತನ ಮನ ಕಾಡ ಕಿರಾತ.
ಇಂತಪ್ಪ ಭವಿಗಳ ಹೃದಯಕ್ಕೂ
ಗುರುನಿರಂಜನ ಚನ್ನಬಸಲಿಂಗಕ್ಕೂ ಇರುಳು ಹಗಲು./790
ಪಂಚಾಕ್ಷರಸಂಬಂಧವಾದ ನಿಜಾನಂದ ಶರಣ
ಗಜಬಜೆಯ ಗೋಷ್ಠಿಗಳನೊಮ್ಮೆ ತೋರ.
ಅದೇನು ಕಾರಣವೆಂದೊಡೆ : ಆತನ ಜಿಹ್ವೆ ಪಂಚಾಕ್ಷರವ ನೆನೆದು ಪಂಚಲಿಂಗಸಂಬಂಧವಾದ ಕಾರಣ
ಸಕಲ ತತ್ವಾತತ್ವಂಗಳೆಲ್ಲ ಲಿಂಗಮಯವಾಗಿ ಕಾಣುತಿರ್ದುದು ;
ಇತರ ನುಡಿಯನರಿಯದಿರ್ದ ನಿರಂಜನ ಚನ್ನಬಸವಲಿಂಗದಲ್ಲಿ./791
ಪಂಚಾಕ್ಷರಿಯ ಧ್ಯಾನದಿಂದೆ ಪಂಚಭೂತಪ್ರಕೃತಿಯನರಿಯದಿರ್ದೆ.
ಪಂಚಾಕ್ಷರಿಯ ನೆನಹಿನಿಂದೆ ಪಂಚೇಂದ್ರಿಯಪ್ರಕೃತಿಯನರಿಯದಿರ್ದೆ.
ಪಂಚಾಕ್ಷರಿಯ ಧ್ಯಾನದಿಂದೆ ಪಂಚವಿಷಯಪ್ರಕೃತಿಯನರಿಯದಿರ್ದೆ.
ಪಂಚಾಕ್ಷರಿಯ ಸ್ಮರಣೆಯಿಂದೆ ಪಂಚಕರಣಪ್ರಕೃತಿಯನರಿಯದಿರ್ದೆ.
ಪಂಚಾಕ್ಷರಿಯ ಮನನದಿಂದೆ ಪಂಚಪ್ರಾಣವಾಯುವಿನ ಪ್ರಕೃತಿಯನರಿಯದಿರ್ದೆ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪಂಚಾಕ್ಷರಿಯ ನಿಧರ್ಾರದಿಂದೆ ಪರಮಸುಖಿಯಾಗಿರ್ದೆನು./792
ಪಂಚೇಂದ್ರಿಯ ಕರ್ಮವಳಿಯದೆ,
ಕಾಯಕ ಗುಣನಾಲ್ಕರಲ್ಲಿ ಕಟ್ಟುಗೊಂಡು,
ವಾಚಕದ ಗುಣಯುತನಾಗಿ, ಮಾನಸದ ಗುಣನಾಲ್ಕರ ಬದ್ಧವೆರೆದ
ಅಶುದ್ಧನೊಂದಾಚಾರವ ಹೊತ್ತು ನಟಿಸಿದರೇನು,
ಅವನಿಗದ ತೋರಿ ನಟಿಸುತ್ತಿರ್ದನನುದಿನ ಭಕ್ತನಂಗ ಸುಲಲಿತ ಸುಖದೊಳು
ನಮ್ಮ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರದಾಯಕಲಿಂಗವು./793
ಪಡೆದುಂಬ ಕಾಲಕ್ಕೆ ಒಡೆಯರು ಬಂದರೆ
ಓರೆಮುಖವಾಗಿ ನಡೆವ ಘೋರಪಶುಗಳನೇನೆಂಬೆನಯ್ಯಾ.
ತನ್ನಿಷ್ಟದ ಕಳೆಯನರಿಯದೆ ಅನ್ಯಕ್ಕೆ ತಲೆಯಿಟ್ಟು ಅರ್ಥವ ಸವೆಸಿ
ಭಂಗಬಟ್ಟು ಭವಕ್ಕೆ ಬೀಳುವ ಕುನ್ನಿ ಮಾನವರ ನಿಷ್ಠೆಯ ನೋಡಾ.
ಮುಂದೆ ಭವಭವಕ್ಕೆಡೆಯಾಡುವ ಕಷ್ಟ ನೋಡಾ
ಗುರುನಿರಂಜನ ಚನ್ನಬಸವಲಿಂಗವನರಿಯದೆ./794
ಪತಿಮೋಹಪೂಣರ್ೆ ಅತಿ ಉನ್ನತೆಯೆನಿಸುವಳು ಒಳ ಹೊರಗೆ,
ಲಿಂಗ ಮೋಹಭರಿತ ಭಕ್ತ ಗತಿಮತಿಗಂಭೀರನೆಂದುಲಿದು
ಹೊರಳುವರು ಅಂತಬರ್ಾಹ್ಯಶರಣರು,
ಆನು ಅಂಗೋಪಚಾರಿ,
ಗುರುನಿರಂಜನ ಚನ್ನಬಸವಲಿಂಗ ಪ್ರಾಣ,
ಮತ್ತೇನುಯಿಲ್ಲ. /795
ಪತಿಯ ಮೋಹದ ಮತಿವಂತೆ ಬಾಲೆಯರು ನೀವು
ತಲೆಯಲ್ಲಿ ಕೊಡನೀರ ಹೊರಬೇಡಿ.
ಮುಂದೆ ಅಹಿತ ಕಾಣಿರೆ, ಕೊಡ ನೀರದೆಡೆಯಾಟದಲ್ಲಿ
ಕಾಲ ಸರ್ಪಳಿಗೆ ಕಡುನಾಚಿಕೆ, ಕೈಬಳೆ ಕಾಂತಿಯಡಗುವುದು.
ಕಟ್ಟಾಣಿಯೆಳೆಗಳೊಪ್ಪುಗೆಡುವುವು ಕಾಣಿರೆ, ಮೂಗುತಿ ತಾಳಿಗೆ ಮೋಸ ಕಾಣಿರೆ.
ಮತ್ತೆಂತೆಂದೊಡೆ, ಆ ಕೊಡನೊಡದು ನೀರ ಹೊರಿಸಿ ತಲೆಯಲ್ಲಿ ತಂದು
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಬಿಷೇಕವದರೊಳು ಮಿಂದರೆ
ಸಕಲಾಭರಣ ಸ್ವಯವಾದವು ಮೂಗುತಿ ತಾಳಿಯೊಳು ನೋಡಿರೆ./796
ಪರಧನ ಪರಸ್ತ್ರೀ ಪರನಿಂದೆ ಪರದೈವ ಅನೃತಾದಿ
ಪಂಚಮಹಾಪಾತಕವ ಪರಿಹರಿಸದನ್ನಕ್ಕರ
ವೀರಮಾಹೇಶ್ವರನೆಂತಪ್ಪನಯ್ಯಾ ?
ಸಂಚಿತಾದಿ ಕರ್ಮತ್ರಯದೊಳಿರ್ದು ಕೆಂಚ, ಧವಲಕ್ಕಜಲವರ್ತಕವಳಿಯದೆ
ವೀರಮಾಹೇಶ್ವರನಾದೆನೆಂದರೆ ಅಸಾಧ್ಯ ಕಾಣಾ
ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ./797
ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ,
ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ,
ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು.
ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ,
ಉಪಾದಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು.
ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ,
ಲೋಕಲೌಕಿಕಚರಿಯ ಹರಿಯದನ್ನಕ್ಕರ,
ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು.
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು
ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ
ಮಹೇಶ್ವರನೆಂದರೆ ಅಘೋರನರಕ ತಪ್ಪದು./798
ಪರಧನಕ್ಕೆ ಹರಿವ ಮನವಿರ್ದಂತೆ
ಜಂಗಮಲಿಂಗೈಕ್ಯವೆಂಬ ನುಡಿ ನಿನಗಿಂಪು ತೋರುವುದೆ ?
ಪರಸ್ತ್ರೀಯರಿಗೆ ಹರಿವ ಮನವಿರ್ದಂತೆ
ಲಿಂಗಜಂಗಮೈಕ್ಯವೆಂಬ ನುಡಿ ನಿನಗೆ ಸಂಪು ತೋರುವುದೆ ?
ಪರದೈವಕ್ಕೆ ಹರಿವ ಮನವಿರ್ದಂತೆ
ಗುರುಲಿಂಗೈಕ್ಯವೆಂಬ ನುಡಿ ನಿನಗೆ ತಂಪು ತೋರುವುದೆ ?
ಇದುಕಾರಣ, ಗುರುನಿರಂಜನ ಚನ್ನಬಸವಲಿಂಗಾ
ನಿನಗೆ ಇಂಪು ಸಂಪು ತಂಪು ತೋರದ ನಡೆನುಡಿ ಕೂಟವೆಲ್ಲ
ನಿರಿಯಕೂಟ ನಿಜವಾಯಿತ್ತು ಕಾಣಾ./799
ಪರಮ ಗುರುಕರುಣಕಟಾಕ್ಷವೆಂಬ
ವರರುದ್ರಾಕ್ಷಿಯನೊಲಿದು ಧರಿಸಿದ ಹರಶರಣರ
ನಿರೀಕ್ಷಣೆ ಮಾತ್ರದಲ್ಲಿ ಪರಿಭವಂಗಳಿರದೆ ಹೋದವು ನೋಡಾ.
ಆ ಮಹಿಮರ ದರ್ಶನ ಸ್ಪರ್ಶನ ಸಂಭಾಷಣೆಯಿಂದೆ
ಮರವೆ ಮಾಯಾಸಂಬಂಧವಳಿದು
ಸ್ಥಿರಪದ ಸಾಧ್ಯವಪ್ಪುದು ತಪ್ಪದು ಕಾಣಾ
ನಿರಂಜನ ಚನ್ನಬಸವಲಿಂಗಾ./800
ಪರಮಗುರುವಿನಿಂದರಿದಬಳಿಕ ಮರೆದು ಮಾಡಲಾಗದು,
ಬೆರೆದು ನೋಡಲಾಗದು, ಒಲಿದು ಕೂಡಲಾಗದು,
ಅದೇನು ಕಾರಣವೆಂದೊಡೆ : ಕೊಟ್ಟುದೊಂದರುವು ಬಿಟ್ಟರೆ ಹುಟ್ಟು ಹೊಂದುಗಳಟ್ಟಬಾರದು,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಇತರ ಸುಖಹಿತವಲ್ಲದ ಕಾರಣ./801
ಪರಮಚೈತನ್ಯ ಜಂಗಮವ ನೆರೆಯರಿದು
ಇರವಿನೊಳು ಹಿರಿದು ಹೆಚ್ಚಿ ನಿತ್ಯಕಾಲದಿಂದಿತ್ತು ಕೊಂಬ
ಪರಿಣಾಮಿಯ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./802
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು
ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ
ಹುಸಿಯೆಂಬ ಮಸಿಯ ಪೂಸದ,
ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ,
ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ,
ಸಂದುಸಂಶಯ ಮಂದಮರುಳನಾಗದೆ,
ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ
ಉಪಾಧಿ ಉಲುಹಿನ ಭ್ರಾಂತನಾಗದೆ,
ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ
ಡಂಭಕ ಜಡಕರ್ಮವ ಸೋಂಕದೆ
ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ
ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ./803
ಪರಮಾನಂದ ಪ್ರಸಾದಿ ಪರಿಪೂರ್ಣಲಿಂಗಕ್ಕೆ ಸಮರ್ಪಿಸಿಕೊಂಬುವನಲ್ಲದೆ,
ಭುವನಾದಿ ಜನಿತ ಗುಣಸಂಭವಿತನಾಗಿ
ಪ್ರಸಾದವ ಪಡೆದ ಪ್ರಸಾದಿಗಳೆಂದು ಪರಪದಾರ್ಥವನರ್ಪಿಸಿಕೊಂಬ
ದುರ್ವಿವೇಕನಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ./804
ಪರಶಿವತತ್ವಾನುಭಾವಿ ಶರಣ ಲೋಕದ ಸಂಸಾರಿಗಳಿಗೊಮ್ಮೆ
ಬೇಡಬೇಕೆಂಬುದು ಹುಸಿಯದು ತನ್ನಂತರಂಗದಲ್ಲಿ.
ಅದೇನು ಕಾರಣವೆಂದೊಡೆ, ಚತುರ್ವಿಧಪದವನೊದೆದು ನಿಂದಿರ್ದನಾಗಿ.
ಪರವಧುವನೊಮ್ಮೆ ನೋಡಿಯೆಳಸುವನಲ್ಲ ಮನಸ್ಸಿನಲ್ಲಿ ;
ಅದೇನು ಕಾರಣವೆಂದೊಡೆ,
ಮಾಯೆಯ ಸಂಬಂಧವ ಕೊಡಹಿ ಜರಿದು ಹೇಯವಮಾಡಿದನಾಗಿ.
ಪರಹಿಂಸೆಯನೊಮ್ಮೆ ಭಾವದಲ್ಲಿ ಅರಿಯನು ;
ಅದೇನು ಕಾರಣವೆಂದೊಡೆ,
ಸಕಲಭುವನ ಬ್ರಹ್ಮಾಂಡದೊಳ ಹೊರಗು ತಾನೆಯಾಗಿ ತನಗೊಂದೂ
ಇತರವಾದುದಿಲ್ಲವಾಗಿ.
ಸುಕ್ಷೇತ್ರಾದಿ ಸಕಲಸ್ಥಾವರಂಗಳನೊಮ್ಮೆ ಹಿರಿದೆಂದು ಭಾವಿಸನು.
ಅದೇನು ಕಾರಣವೆಂದೊಡೆ,
ಗುರುನಿರಂಜನ ಚನ್ನಬಸವಲಿಂಗಕ್ಕೆ ತನ್ನನರ್ಪಿಸಿ ತಾನಾಗಿರ್ದನಾಗಿ./805
ಪರಶಿವನಾಮಾಮೃತವೆಂಬ ಪಂಚಾಕ್ಷರವನು
ಅವ್ಯಕ್ತಮುಖದಿಂದೆ ಸ್ವೀಕರಿಸಿದೆನಾಗಿ,
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ತೋರುತಿರ್ಪುದು.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ತೋರುತಿರ್ಪುದು.
ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ತೋರುತಿರ್ಪುದು.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ತೋರುತಿರ್ಪುದು.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ತೋರುತಿರ್ಪುದು.
ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ತೋರುತಿರ್ಪುದು.
ಎನ್ನ ಬ್ರಹ್ಮಸ್ಥಾನದಲ್ಲಿ ನಿಷ್ಕಲಲಿಂಗವಾಗಿ ತೋರುತಿರ್ಪುದು.
ಎನ್ನ ಶಿಖಾಗ್ರದಲ್ಲಿ ನಿಶ್ಶೂನ್ಯಲಿಂಗವಾಗಿ ತೋರುತಿರ್ಪುದು.
ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ತೋರುತಿರ್ಪುದು.
ಎನ್ನ ಸರ್ವಾಂಗದಲ್ಲಿ ತೋರಿ ತನ್ನಂತೆ ಮಾಡಿಕೊಂಡಿರ್ಪುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ./806
ಪರಿಪೂರ್ಣ ಪ್ರಕಾಶಲಿಂಗಸನ್ನಿಹಿತ ಮಹದಾನಂದ ಶರಣ,
ಅವಿರಳ ಜ್ಞಾನಕ್ರಿಯೆಯಿಂದರಿದಾನಂದಿಸುವನಲ್ಲದೆ
ಯೋಗಮಾರ್ಗವಿಡಿದು ಬಳಲಿ ಬಾಯಾರಿ ಬೆಂಡಾಗಿ ಬಿದ್ದು ಹೋಗುವನಲ್ಲ.
ಅದೇನು ಕಾರಣವೆಂದೊಡೆ,
ಮಾಣಿಕದ ಪರ್ವತದೊಳಗಿರ್ದು ಉಂಗುರಾಭರಣಕ್ಕೆಂದು
ಗಾಜಿನಮಣಿಯಾಗಬೇಕೆಂದು ಪಾಷಾಣಗಿರಿಯ ಶೋದಿಸಿ ಬಳಲುವ
ನಾಶಜ್ಞಾನ ನರಮಾನವನಂತೆ,
ತನ್ನ ಕರ ಮನ ಭಾವದಲ್ಲಿ ಪ್ರಜ್ವಲಿಸುವ ಮಹಾಪ್ರಕಾಶಮಯವಾದ
ಇಷ್ಟಬ್ರಹ್ಮವನರಿಯದೆ
ಬೇರೆ ಬೆಳಗಕಂಡು ಕೂಡಬೇಕೆಂದು ದೇಹಭಾವವೆಂಬ ಗಿರಿಯ ಹಿಡಿದು
ಕಷ್ಟಬಡುವ ಸೊಟ್ಟ ಮತಿಯನೇನೆಂಬೆ ?
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಇಂತುಟಲ್ಲ./807
ಪರಿಪೂರ್ಣಭಾವಿ ಶರಣ ತಾನೊಂದು ವೇಳೆ
ಬರಿಯಕಾಲಲ್ಲಿ ನಡೆವನೇ, ಬರಿಯ ಕೈಯಲ್ಲಿ ಹಿಡಿವನೇ,
ಬರಿಯ ಮುಖದಲ್ಲಿ ನುಡಿವನೇ, ಬರಿಯ ಕಣ್ಣಿನಿಂದ ನೋಡುವನೇ,
ಬರಿಯ ಹೃದಯದಲ್ಲಿ ಸುಖಿಸುವನೇ.
ಆ ಭಾವದೊಳಗೆ ಈ ಭಾವ ಸದ್ಭಾವವದು ತಾನೆ
ಗುರುನಿರಂಜನ ಚನ್ನಬಸವಲಿಂಗಾ./808
ಪರಿಪೂರ್ಣಮಯವಪ್ಪ ಪರಮಸುಜ್ಞಾನದಿಂದೆ
ಪರುಷ ಲೋಹದ ತೆರನಾದೆ.
ಕ್ರಿಯಾಘನ ಗುರುವಿನಿಂದೆ ಭ್ರಮರ ಕೀಟನ್ಯಾಯದಂತಾದೆ.
ಘನಲಿಂಗಸಂಗದಿಂದೆ ಕ್ಷೀರ ನೀರಸಂಗದಂತಾದೆ.
ಅಬಿನ್ನ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿ
ಅಳಿದು ಉರಿ ಕರ್ಪೂರ ಸಮರಸದಂತಾದೆ./809
ಪರುಷ-ಕಬ್ಬಿಣ ಸಂಗದಂತಿಪರ್ುದೊಂದಂಗ.
ಭ್ರಮರ-ಕಾಪುಳ ಸಂಬಂಧದಂತಿಪರ್ುದೊಂದಂಗ.
ಉರಿ-ಕಪರ್ುರ ಯೋಗದಂತಿಪರ್ುದೊಂದಂಗ.
ಈ ಬಗೆಯೊಳಿದರ್ು ಇಂತು ಮಾಡಿದ ಮಾಟ ಮಾಡಿತೋರುವುದು
ಮಹದಂಗವದು ಸತ್ಯ ಶಾಂತ ವೃಷಭೇಂದ್ರಲಿಂಗದಲ್ಲಿ./810
ಪರುಷದ ಹೊರೆಯಲಿರ್ದ ಕಬ್ಬುನ
ನಾಮರೂಪು ನಷ್ಟವಾಗಿರ್ದಂತಾದುದು ನೋಡಾ ಎನ್ನ ಕಾಯವು.
ಕುಂಡಲಿಯನರಿದ ಕೀಟ ತನ್ನನರಿಯದಂತಾದುದು ನೋಡಾ ಎನ್ನ ಮನವು.
ಅನಲನಾವರಿಸಿದ ರಸವರತ ಪರ್ಣದ ಪರಿಯಂತಾದುದು ನೋಡಾ ಎನ್ನ
ಭಾವವು.
ಇದು ಕಾರಣ ಹುಟ್ಟಿಹೊಂದದ ಘನಸಾರದಂತಿರ್ದ
ಉರಿಯೊಲ್ಲಭನ ನೆರೆದಂತಾದುದು ನೋಡಾ ಎನ್ನಾತ್ಮನು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ./811
ಪಾರಮಾರ್ಥಜಂಗಮಲಿಂಗವು ಜಂಗಿಟ್ಟು ಅನಾದಿಭಕ್ತನ
ಮಂದಿರೆಕ್ಕೈಯ್ದಿದಲ್ಲಿ
ಬಯಕೆ ಬಾರದ ಮುನ್ನ ಮಾಡಿ ನೀಡುತಿಪ್ಪನು.
ಮಾಡಿ ನೀಡದ ಮುನ್ನ ಕಾಡಿಕೊಂಬ ಕಲ್ಪಿತಕರಣತ್ರಯದಲ್ಲಿ ಕಾಣಿಸದಿಪ್ಪನು.
ಭಕ್ತಿಬೆಳಗಿನೊಳಗಿಪ್ಪಾತನೇ ಭಕ್ತ.
ವೈರಾಗ್ಯಪ್ರಭೆಯೊಳಿಪ್ಪಾತನೇ ಜಂಗಮ.
ಈ ಭೇದವನರಿಯದೆ ಬೇಡಿಸಿ ಕೊಟ್ಟ ಕೊಂಬ ಭಕ್ತ,
ಬೇಡಿ ಕೊಂಡು ಕೊಡುವ ಜಂಗಮ, ಉಭಯವೇಷಕ್ಕೆ ಭವ ತಪ್ಪದು.
ಈ ಉಭಯಕೂಟದಲ್ಲಿ ಪಾದೋದಕ ಪ್ರಸಾದ ಉದಯವಾಗುವ ಪರಿಯೆಂತೊ!
ಸತಿಪತಿಭಾವ ಕಾಣಿಸದು ಗುರುನಿರಂಜನ ಚನ್ನಬಸವಲಿಂಗದಲ್ಲಿ./812
ಪಾವಕವು ಅಪ್ಪುವಿನ ಸಂಗದಲ್ಲಿ ಜ್ಯೋತಿಯನರಿಯಲಿಲ್ಲ.
ಜ್ಞಾನಾಜ್ಞಾನಸಂಪರ್ಕದಲ್ಲಿ ನಿಜಜ್ಞಾನದ ನಿಲವನರಿಯಲಿಲ್ಲ.
ಭಕ್ತಿಭವಿಸಂಯೋಗದಲ್ಲಿ ಸದಾಚಾರಸೌಖ್ಯವನರಿಯಲಿಲ್ಲ.
ಇದು ಕಾರಣ ಭಕ್ತಕಾಯದಲ್ಲಿ ಮನ ಪ್ರಾಣ ಭಾವ ಜಡವಿರಹಿತನಾದನಲ್ಲದೆ,
ಗುರುನಿರಂಜನ ಚನ್ನಬಸವಲಿಂಗಾಚಾರವನರಿವ ಪರಿಯೆಂತು ಹೇಳಾ!/813
ಪುರುಷನ ಪುಣ್ಯದಿಂದ ಉಟ್ಟಸೀರೆ, ಪುರುಷನ ಪುಣ್ಯದಿಂದಿಟ್ಟಾಭರಣ,
ಪುರುಷನ ಪುಣ್ಯದಿಂದಾಯಿತ್ತು ಮುತ್ತೈದೆತನ.
ಜವ್ವನದ ಸೊಬಗಿನ ಬೆಳಗ ಪುರುಷನನೊಂಚಿಸಿ
ಪರಪುರುಷರ ನೆರೆದರೆ ಪತಿವ್ರತಕ್ಕೆ ಭಂಗ.
ಲೋಕದವರಿಗೆ ಹೇಸಿಕ, ಕಡೆಗೆ ನರಕ.
ಶಿವನಿಂದಾದ ಸುಜ್ಞಾನತನು, ಶಿವನಿಂದಾದ ಗುರುಕರುಣ,
ಶಿವನಿಂದಾದ ಶರಣತ್ವ,
ತನ್ನ ತನು ಮನ ಪ್ರಾಣದ ಕಳೆಯ ಬೆಳಗ ವಂಚಿಸಿ
ಅನ್ಯದೈವ, ಪರಸಮಯ, ಮಲತ್ರಯಕ್ಕಿಚ್ಛೈಸಿತ್ತದೆ
ಸತ್ಪಾತ್ರಕ್ಕೆ ಭಂಗ, ಸಮಯಾಚಾರಕ್ಕೆ ಹೇಸಿಕೆ,
ಕಡೆಗೆ ದುರ್ಗತಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./814
ಪುರುಷನ ಸೋಂಕದೆ ಸಂಗಸಂಯೋಗಸುಖವನರಿದ
ಸತಿಯಳ ಕಂಡವರುಂಟೆ ಮಂಡಲದೊಳಗೆ?
ಲಿಂಗವನರಿಯದೆ ಚರಗುರುಭಕ್ತಿಯ ಸಾರಾಯಸುಖ ಬೆಳಗಬಲ್ಲೆನೆಂದು
ಅಲ್ಲಿಯೇ ಸಂದಿ ಹೋಗುವ ಬಂಧನಬದ್ಧ ಮೂಢ ಪ್ರಾಣಿಯ ಉರದೊಳು
ಒಲ್ಲದಿರ್ದನು ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು
ಸನುಮತರ ಸಂಗಸಮತೆಯೊಳಗೆ./815
ಪೂರ್ವದಂದುಗವನಳಿದು ಪುನಜರ್ಾತನಾದ ಬಳಿಕ
ಸೂತಕದ ಪಾತಕದೊಳಿರಲಾಗದು.
ಅದೇನು ಕಾರಣ,
ಪಂಚಾಚಾರಸ್ವರೂಪನಾದ ಆಚಾರಲಿಂಗಸನ್ನಿಹಿತನಾದ ಕಾರಣ.
ಅಷ್ಟ ಕುಶಬ್ದದ ಹೊಲೆಯೊಳಿರಲಾಗದು.
ಅದೇನು ಕಾರಣ,
ಮಂತ್ರಾತ್ಮಕಸ್ವರೂಪವಾದ ಗುರುಲಿಂಗ ಸನ್ನಿಹಿತನಾದ ಕಾರಣ.
ಚಂಚಲ ದೃಷ್ಟಿಯ ವಂಚನೆಯೊಳಗಿರಲಾಗದು.
ಅದೇನು ಕಾರಣ,
ನಿರೀಕ್ಷಣಾಸ್ವರೂಪವಾದ ಶಿವಲಿಂಗಸನ್ನಿಹಿತನಾದಕಾರಣ.
ತನುವಿನ ದುಸ್ಸಾರಾಯದುನ್ನತಿಯೊಳಿರಲಾಗದು,
ಅದೇನು ಕಾರಣ,
ಯಜನಸ್ವರೂಪವಾದ
ಜಂಗಮಲಿಂಗಸನ್ನಿಹಿತನಾದ ಕಾರಣ.
ಹುಸಿ ಕಳವು ಪಾರದ್ವಾರ ಹಿಂಸಾದಿ ದುಗರ್ೊಷ್ಠಿಯನಾಲಿಸಲಾಗದು.
ಅದೇನು ಕಾರಣ,
ಸ್ತೌತ್ಯಸ್ವರೂಪವಾದ ಪ್ರಸಾದಲಿಂಗ ಸನ್ನಿಹಿತನಾದ ಕಾರಣ.
ಅಂತರಂಗದಲ್ಲಿ ಗುಣತ್ರಯ ಮದಾವಳಿಯೊಳಿರಲಾಗದು.
ಅದೇನು ಕಾರಣ,
ಪರಮ ಶಾಂತಸ್ವರೂಪವಾದ ಮಹಾಲಿಂಗಸನ್ನಿಹಿತನಾದ ಕಾರಣ.
ಗುರುನಿರಂಜನ ಚನ್ನಬಸವಲಿಂಗವನು ಹಿಂಗಿ ಇರಲಾಗದು.
ಅದೇನು ಕಾರಣ, ತನು ಮನ ಭಾವವ ಕೊಟ್ಟುಳಿದವನಾದ ಕಾರಣ./816
ಪೂರ್ವದಂದುಗವನಳಿದು ಪುನಜರ್ಾತನಾದ ಶರಣನು
ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ
ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು.
ಮೇಲುಗತಿಮತಿಗಳಸುಖ ದೊರೆಯದು.
ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ
ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ
ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ./817
ಪೂರ್ವದೈವರ ಕಾಲತೊಳೆಸಿ ನಡೆಸಬೇಕು.
ಉತ್ತರದೈವರ ಕಾಲತೊಳೆಸಿ ನಡೆಸಬೇಕು.
ಪಶ್ಚಿಮದೈವರ ಬಾಯಿತೊಳೆಸಿ ನಡೆಸಬೇಕು.
ಮೆರೆವ ಮೂವರ ಸಿರಿಯತೊಳೆಸಿ,
ಇಂತಿವರಕೂಡಿ ಗುರುನಿರಂಜನ ಚನ್ನಬಸವಲಿಂಗದತ್ತ
ಅಬಿಮುಖವಾಗಿ ನಡೆಯಬೇಕು./818
ಪೃಥ್ವಿ ಅಂಶವನಳಿದು ಚಿತ್ತ್ಪೃಥ್ವಿಯಂಗವಾಗಿ
ಭೃತ್ಯಾಚಾರ ನೆಲೆಸಿದುದೇ ಆಚಾರಲಿಂಗಸಂಬಂಧ.
ಅಪ್ಪುವಿನಂಶವನಳಿದು ಚಿದಪ್ಪುವೇ ಅಂಗವಾಗಿ
ಗಣಾಚಾರ ನೆಲೆಸಿದುದೇ ಗುರುಲಿಂಗಸಂಬಂಧ.
ಅಗ್ನಿಯಂಶವನಳಿದು ಚಿದಗ್ನಿಯೇ ಅಂಗವಾಗಿ
ಶಿವಾಚಾರ ನೆಲೆಸಿದುದೇ ಶಿವಲಿಂಗಸಂಬಂಧ.
ವಾಯುವಿನಂಶವನಳಿದು ಚಿದ್ವಾಯುವೇ ಅಂಗವಾಗಿ
ಸದಾಚಾರ ನೆಲೆಸಿದುದೇ ಜಂಗಮಲಿಂಗಸಂಬಂಧ.
ಆಕಾಶದಂಶವನಳಿದು ಚಿದಾಕಾಶವೇ ಅಂಗವಾಗಿ
ಲಿಂಗಾಚಾರ ನೆಲೆಸಿದುದೇ ಪ್ರಸಾದಲಿಂಗಸಂಬಂಧ.
ಇಂತು ಪಂಚಾಚಾರ ಪಂಚತತ್ವವಳಿದುಳಿದು ನೆಲೆಸಿ ಪಂಚಲಿಂಗಸಂಬಂಧವಾದಲ್ಲಿ
ಆತ್ಮನಂಶವನಳಿದುಳಿದು ಸರ್ವಾಚಾರಸಂಪತ್ತು ನೆಲೆಸಿ
ಮಹಾಲಿಂಗಗುರುನಿರಂಜನ ಚನ್ನಬಸವಲಿಂಗ
ಸಂಬಂಧವಾಯಿತ್ತು ಮಾಹೇಶ್ವರಂಗೆ./819
ಪೃಥ್ವಿಯ ಗುಣವೈದರ ಕಳೆಯನುರುಹಿ
ತನ್ನ ಸುಳುಹನಿರಯದನ್ನಕ್ಕರ ಶರಣನಲ್ಲ.
ಅಪ್ಪುವಿನ ಗುಣವೈದರ ಕಳೆಯನುರುಹಿ
ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ.
ಅಗ್ನಿಯ ಗುಣವೈದರ ಕಳೆಯನುರುಹಿ
ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ.
ವಾಯುವಿನ ಗುಣವೈದರ ಕಳೆಯನುರುಹಿ
ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ.
ಆಕಾಶದ ಗುಣವೈದರ ಕಳೆಯನುರುಹಿ
ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ.
ಇಂತೀ ಪಂಚಭೂತಾಳಿಯ ತಲೆಯಲ್ಲಿ ಹೊತ್ತು
ನಲಿನಲಿದು ನಡೆಯುತ್ತ ಶರಣರೆನಿಸಿಕೊಂಬ ಶುನಕಜಾತಿಗಳ ನೀತಿಯ ನೋಡಿ
ನಗುತ್ತ ನಡೆವರು ನಿಮ್ಮ ಶರಣರು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮತ್ತ./820
ಪೃಥ್ವಿಯ ಹಿಡಿದು ಆಚಾರಲಿಂಗಾನುಭಾವಿಯಾಗಿ
ಗಂಧಪ್ರಸಾದವ ಕಂಡು ಸುಖಿಯಾದೆನಯ್ಯಾ.
ಸಲಿಲವಿಡಿದು ಗುರುಲಿಂಗಾನುಭಾವಿಯಾಗಿ
ರಸಪ್ರಸಾದವ ಕಂಡು ಸುಖಿಯಾದೆನಯ್ಯಾ.
ತೇಜವಿಡಿದು ಶಿವಲಿಂಗಾನುಭಾವಿಯಾಗಿ
ರೂಪುಪ್ರಸಾದವ ಕಂಡು ಸುಖಿಯಾದೆನಯ್ಯಾ.
ವಾಯುವಿಡಿದು ಜಂಗಮಲಿಂಗಾನುಭಾವಿಯಾಗಿ
ಸ್ಪರ್ಶನಪ್ರಸಾದವ ಕಂಡು ಸುಖಿಯಾದೆನಯ್ಯಾ.
ಆಕಾಶವಿಡಿದು ಪ್ರಸಾದಲಿಂಗಾನುಭಾವಿಯಾಗಿ
ಶಬ್ದ ಪ್ರಸಾದವ ಕಂಡು ಸುಖಿಯಾದೆನಯ್ಯಾ.
ತತ್ವವಿಡಿದು ಪರತತ್ವಾನುಭಾವಿಯಾಗಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ತೃಪ್ತಿಪ್ರಸಾದವ ಕಂಡು ನಿರಂತರ ಸುಖಿಯಾದೆನಯ್ಯಾ./821
ಪೃಥ್ವಿಯಂಗದಲ್ಲಿ ಆಚಾರಲಿಂಗವೆಂಬ ಪತಿಗೆ
ಶ್ರದ್ಧೆಯುಕ್ತಸತಿಯಾಗಿ ಸುಖಿಸಬಲ್ಲರೆ ಶರಣನೆಂಬೆ.
ಅಪ್ಪು ಅಂಗದಲ್ಲಿ ಗುರುಲಿಂಗವೆಂಬ ಪತಿಗೆ
ನೈಷ್ಠೆಯುಕ್ತಸತಿಯಾಗಿ ಮೋಹಿಸಬಲ್ಲರೆ ಶರಣನೆಂಬೆ.
ಅಗ್ನಿಯಂಗದಲ್ಲಿ ಶಿವಲಿಂಗವೆಂಬ ಪತಿಗೆ
ಸಾವಧಾನಯುಕ್ತಸತಿಯಾಗಿ ರಮಿಸಬಲ್ಲರೆ ಶರಣನೆಂಬೆ.
ವಾಯುವಂಗದಲ್ಲಿ ಜಂಗಮಲಿಂಗವೆಂಬ ಪತಿಗೆ
ಅನುಭಾವಯುಕ್ತಸತಿಯಾಗಿ ಸಂಗತಿಯಬಲ್ಲರೆ ಶರಣನೆಂಬೆ.
ಆಕಾಶಾಂಗದಲ್ಲಿ ಪ್ರಸಾದಲಿಂಗವೆಂಬ ಪತಿಗೆ
ಆನಂದಯುಕ್ತಸತಿಯಾಗಿ ಪರಿಣಾಮಿಸಬಲ್ಲರೆ ಶರಣನೆಂಬೆ.
ಆತ್ಮಾಂಗದಲ್ಲಿ ಮಹಾಲಿಂಗವೆಂಬ ಪತಿಗೆ
ಸಮರಸಯುಕ್ತಸತಿಯಾಗಿ ಪರಿಣಾಮಿಸಬಲ್ಲರೆ ಶರಣನೆಂಬೆ.
ಅಭಿನ್ನಯುಕ್ತಸತಿಯಾಗಿ ಆನಂದಮಯನಾಗಬಲ್ಲರೆ
ಅಚ್ಚಶರಣನೆಂಬೆ ಕಾಣಾ. /822
ಪೃಥ್ವಿಯಂಗವಾದ ಭಕ್ತನಲ್ಲಿ ಪಂಚಾಚಾರ ಸ್ವರೂಪವಾದ ಆಚಾರಲಿಂಗವು,
ತಾನು ಷಡ್ವಿಧಲಿಂಗವಾಗಿ ಆ ಭಕ್ತನೊಳಗಣ ಷಡ್ವಿಧಲಿಂಗವೆರೆದ
ಷಡ್ವಿಧಭಕ್ತಿಯಿಂದ ಷಡ್ವಿಧ ಶಕ್ತಿಸಮೇತ ಷಡ್ವಿಧ ಹಸ್ತಗೂಡಿ
ಷಡ್ವಿಧಮುಖಮುಟ್ಟಿ ಕೈಕೊಳ್ಳುತಿರ್ದ ಸಾರಾಯದ ಸೌಖ್ಯವನು
ಆ ಲಿಂಗವನು ಅಂಗ ಮನ ಪ್ರಾಣದಲ್ಲಿರಿಸಿ ಹಿಂಗದೆ
ಅಭಿನ್ನ ಭಕ್ತಿಯೊಳಿಪರ್ಾತನೆ ಅಚ್ಚಭಕ್ತ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./823
ಪೃಥ್ವಿಯಂಶವನಳಿದು ಆಚಾರಲಿಂಗವನರಿದು,
ಸುಚಿತ್ತವೆಂಬ ಹಸ್ತದಿಂದೆ ಶ್ರದ್ಧೆಯುಕ್ತವಾಗಿ
ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ.
ಅಪ್ಪುವಿನಂಶವನಳಿದು ಗುರುಲಿಂಗವನರಿದು
ಸುಬುದ್ಧಿಯೆಂಬ ಹಸ್ತದಿಂದೆ ನೈಷ್ಠಿಕಾಯುಕ್ತವಾಗಿ
ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ
ಅಗ್ನಿಯಂಶವನಳಿದು ಶಿವಲಿಂಗವನರಿದು
ನಿರಹಂಕಾರವೆಂಬ ಹಸ್ತದಿಂದೆ ಸಾವಧಾನಯುಕ್ತವಾಗಿ
ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ.
ವಾಯುವಿನಂಶವನಳಿದು ಜಂಗಮಲಿಂಗವನರಿದು
ಸುಮನವೆಂಬ ಹಸ್ತದಿಂದೆ ಅನುಭಾವಯುಕ್ತವಾಗಿ
ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ.
ಆಕಾಶದಂಶವನಳಿದು ಪ್ರಸಾದಲಿಂಗವನರಿದು
ಸುಜ್ಞಾನವೆಂಬ ಹಸ್ತದಿಂದೆ ಆನಂದಯುಕ್ತವಾಗಿ
ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ.
ಇಂತು ಪಂಚತತ್ವಪ್ರಕೃತಿಯನಳಿದು
ಗುರುನಿರಂಜನ ಚನ್ನಬಸವಲಿಂಗವನರಿದು ಸದ್ಭಾವವೆಂಬ ಹಸ್ತದಿಂದೆ
ಸಮರಸಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯ./824
ಪೃಥ್ವಿಯನರಿಯಲುಬಾರದು ನಕಾರ,
ಅಪ್ಪುವನರಿಯಲುಬಾರದು ಮಕಾರ,
ಅಗ್ನಿಯನರಿಯಲುಬಾರದು ಶಿಕಾರ,
ವಾತವನರಿಯಲುಬಾರದು ವಕಾರ,
ಅಂಬರವನರಿಯಲುಬಾರದು ಯಕಾರ,
ಭಾವವನರಿಯಲುಬಾರದು ಓಂಕಾರ.
ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ
ಅರಿದು ಅರಿಯದಿರಲುಬೇಕು ಭಕ್ತ./825
ಪೃಥ್ವಿಯಲ್ಲಿ ತಲೆಯ ಕಂಡು ಪರಿಮಳವ ಹೂಸಿಕೊಳಬಲ್ಲರೆ ಭಕ್ತನೆಂಬೆ.
ನೀರೊಳಗೆ ತಲೆಯ ಕಂಡು ರಸವ ಕುಡಿಸಿಕೊಳಬಲ್ಲರೆ ಭಕ್ತನೆಂಬೆ.
ಬೆಂಕಿಯಲ್ಲಿ ತಲೆಯ ಕಂಡು ಸಕಲವ ತೋರಿಕೊಳಬಲ್ಲರೆ ಭಕ್ತನೆಂಬೆ.
ಗಾಳಿಯಲ್ಲಿ ತಲೆಯ ಕಂಡು ಅಪ್ಪಿಕೊಳಬಲ್ಲರೆ ಭಕ್ತನೆಂಬೆ.
ಗಗನದಲ್ಲಿ ತಲೆಯ ಕಂಡು ಕೇಳಿಸಿಕೊಳಬಲ್ಲರೆ ಭಕ್ತನೆಂಬೆ.
ಯಜಮಾನದಲ್ಲಿ ತಲೆಯ ಕಂಡು ಪರಿಣಾಮಿಸಿಕೊಳಬಲ್ಲರೆ ಭಕ್ತನೆಂಬೆ.
ಈ ತಲೆಯ ಸುಖವನರಿಯದೆ ಕೈಯಲ್ಲಿ ಹಿಡಿದು ಕಾಣಲರಿಯದೆ,
ತಿರುಗಾಡುವವರನೆಂತು ಭಕ್ತನೆಂಬೆನೈ ಗುರುನಿರಂಜನ ಚನ್ನಬಸವಲಿಂಗಾ? /826
ಪೃಥ್ವಿಯಲ್ಲಿ ಮಾಯೆ ನೋಡಿರೆ ಶಿವನ,
ಅಪ್ಪುವಿನಲ್ಲಿ ಮಾಯೆ ನೋಡಿರೆ ಶಿವನ,
ಅಗ್ನಿಯಲ್ಲಿ ಮಾಯೆ ನೋಡಿರೆ ಶಿವನ,
ವಾಯುವಿನಲ್ಲಿ ಮಾಯೆ ನೋಡಿರೆ ಶಿವನ,
ಆಕಾಶದಲ್ಲಿ ಮಾಯೆ ನೋಡಿರೆ ಶಿವನ,
ಯಾಜಮಾನನಲ್ಲಿ ಮಾಯೆ ನೋಡಿರೆ ಶಿವನ,
ಷಡ್ಭೂತ ನಿರಂಜನ ಚನ್ನಬಸವಲಿಂಗವ ನೋಡಿರೆ ಸಾಕಾರವಿಡಿದು./827
ಪೃಥ್ವಿಯೇ ಅಂಗವಾದ ಭಕ್ತನು ಎಲ್ಲಕ್ಕೂ ತಾನೇ ಆಶ್ರಯವಾಗಿಹನು.
ತನ್ನಂಗ ಪ್ರಾಣ ಜ್ಞಾನ ಕಳೆವರರಾದ ಗುರುಲಿಂಗಜಂಗಮಕ್ಕೆ ತಾನಲ್ಲದೆ,
ಇತರೇತರವಾದ ಬಹುಜನಾದಿಗಳಿಗೆ
ನಡೆ ನುಡಿ ನೋಟಕ್ಕಗಣಿತ ಅಗಮ್ಯವಾಗಿರಿಸಿಹನು.
ಗುರುನಿರಂಜನ ಚನ್ನಬಸವಲಿಂಗವನರಿವುದಕ್ಕೆ ಆದಿ ತಾನೆ./828
ಪೈರವಿಲ್ಲದ ಭೂಮಿಯ ಕಂಡು ಕೌಲವಿಡಿದನೊಬ್ಬ ಹಲಾಯುಧನು.
ಮೂರುತಾಳಿನ ಕೂರಿಗೆಯ ಹೂಡಿ ಬಿತ್ತಲು ಫಲವಂದಂಕುರಿಸಿ ಫಲವಾಗಲು,
ನೋಡಿ ಆಡಿ ಪರಿಣಾಮಿಸಿದ ಲೀಲೆಯ ಕುರುಹಿಂಗೆ ಮತ್ತೆ ಕುರುಹು ಕಾಣಬಾರದು.
ಸುತ್ತಿದ ಸುಯಿಧಾನದಲತೆ ತೋರದು ಸುಪ್ರಭಾಮಯ
ಗುರುನಿರಂಜನ ಚನ್ನಬಸವಲಿಂಗ ತಾನೆ ಆದಿ ಅನಾದಿ./829
ಪ್ರಕಾಶಪ್ರವರ್ತನ ಮೋಹನವೆಂಬ ಸದ್ಭಾವತ್ರಯದಲ್ಲಿ ಮುಳುಗಿ
ಭಾವಲಿಂಗಸನ್ನಿಹಿತ ಶರಣಂಗೆ ದುರ್ಭಾವತ್ರಯಂಗಳು
ಹೊದ್ದಲಮ್ಮವು ನೋಡಾ.
ವಿದ್ಯಾತ್ರಯದಲ್ಲಿ ಶುದ್ಧಗತಿಮತಿ ಗೂಢಗಂಬಿರ
ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಂಗೆ
ನೀನೆಂಬ ಕುರುಹು ನಿಶ್ಶೂನ್ಯ ಕಾಣಾ./830
ಪ್ರಣತಿಯೊಳು ತೈಲ ಬತ್ತಿ ಅಗ್ನಿ ಕೂಟವಾದಲ್ಲಿ
ಜ್ಯೋತಿಯಾಗಿ ನಿಂದಿತ್ತು.
ತನುವಿನೊಳು ರತಿ ಮನ ಜ್ಞಾನ ಸಂಯೋಗವಾದಲ್ಲಿ
ಗುರುನಿರಂಜನ ಚನ್ನ ಬಸವಲಿಂಗದಂಗವಾಗಿ ನಿಂದನು. /831
ಪ್ರಸಾದಮುಖದಿಂದುದಯವಾದ ಮಹೇಶ್ವರನಂಗದಲ್ಲಿ
ಪ್ರಸಾದಪ್ರಕಾಶವೇ ತೋರುತಿಹುದು.
ತನ್ನ ಪ್ರಾಣವಾದ ಶಿವಜಂಗಮಾರ್ಯಂಗೆ
ಉಪಚಾರ ಅರ್ಪಿತದ ಪರಿಯನೊಬ್ಬರು ಹೇಳುವರಿಲ್ಲ ನೋಡಾ,
ಕೇಳುವರಿಲ್ಲ ನೋಡಾ, ಕಾಣುವರಿಲ್ಲ ನೋಡಾ.
ಚತುರಂಗ ಚತುರಂಗ ಕೂಡಿ ಮಾಡುವಲ್ಲಿ
ಸದನದೊಳಗಿರ್ದ ಸಕಳರು ನಿಮ್ಮವರಯ್ಯಾ.
ನೋಟ, ಮಾಟ, ಕೂಟಕ್ಕೆ ನೀವೆಯಯ್ಯಾ
ಗುರುನಿರಂಜನ ಚನ್ನಬಸವಲಿಂಗ./832
ಪ್ರಸಾದವ ಪಡೆದವರೆಂದು ಅಗಲತುಂಬ ಒಟ್ಟಿಸಿಕೊಂಡು
ಮಿಗೆ ಸೂಸಿ ಜಿಹ್ವೆಲಂಪಟವಿಷಯದೊಳ್ಮುಳುಗಿ,
ನೆಗೆನೆಗೆದು ಕೊಂಬ ಭಗಜನಿತ ಬಟ್ಟೆಹರಕರಿಗೆ
ಅಪ್ರತಿಮಪ್ರಸಾದ ಸಾಧ್ಯವಹುದೆ
ಅನಿಮಿಷಪ್ರಕಾಶ ಆನಂದಮಯಪ್ರಸಾದಿಗಲ್ಲದೆ?
ಅನಿಷ್ಟಬದ್ಧರಂತಿರಲಿ;
ಗುರುನಿರಂಜನ ಚನ್ನಬಸವಲಿಂಗಕ್ಕೆ ಸಾವಧಾನಭಾವಿಯೇ ಪ್ರಸಾದಿ ಕಾಣಾ./833
ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ!
ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು,
ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ
ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ?
ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ?
ಛೀ ಅದೇತರ ನಡೆನುಡಿ ಅತ್ತ ಹೋಗಿ,
ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ./834
ಪ್ರಸಾದವ ಬಲ್ಲವರಾರು, ಪದಾರ್ಥವ ಬಲ್ಲವರಾರು,
ಪ್ರಸಾದಿಯ ಬಲ್ಲವರಾರು ಹೇಳಾ !
ಪದಾರ್ಥವನಗಲಿ ಪ್ರಸಾದಿಯಿಲ್ಲ, ಪ್ರಸಾದಿಯನಗಲಿ ಪ್ರಸಾದವಿಲ್ಲ,
ಈ ಭೇದವನರಿದಾನಂದಸುಖಮಯವಾಗಲರಿಯದೆ,
ಪದಾರ್ಥವ ರೂಹಿಸಿ ಪ್ರಸಾದವ ರೂಹಿಸಿ
ಪ್ರಸಾದಿಯೆಂದು ಭಿನ್ನವಿಟ್ಟು ಬೇರೆ ರೂಹುಳ್ಳನ್ನಕ್ಕರ
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ನಿಜಪ್ರಸಾದವನಾರು ಬಲ್ಲರು ಹೇಳಾ./835
ಪ್ರಸಾದಿ ಪ್ರಸಾದಿಗಳೆಂಬ ಕಸಮಲಯುಕ್ತರನೇನೆಂಬೆನಯ್ಯಾ!
ಹಸಿವಿನಿಚ್ಛೆಗೆ ಹರಿದಾಡಿ ಅಸುವಿನ ಪ್ರಕಾಶದಲ್ಲಿ
ಅನುಗೆಟ್ಟು ತಿಂಬುವ ಅಬದ್ಧ[ರು] ಪರಮಪ್ರಸಾದಿಗಳಹರೆ?
ಅಂಗದ ಮುಖವ ಲಿಂಗವರಿಯದು, ಲಿಂಗದ ಮುಖವ ಅಂಗವರಿಯದು.
ಕಂಗಳು ಕೆಟ್ಟು ಕಲ್ಪಿಸಿಕೊಂಬ ಭಂಗಭವಿಗಳು ಲಿಂಗಪ್ರಸಾದಿಗಳಹರೆ?
ಹುಟ್ಟು ಹೊಂದಿದ ಕಷ್ಟ ಕಳೆಯದೆ, ಹರಟೆಯೆತ್ತಿ
ಹೊಟ್ಟೆಹೊರವ ಭ್ರಷ್ಟಮಾನವರು ಶ್ರೇಷ್ಠಪ್ರಸಾದಿಗಳಹರೆ
ಗುರುನಿರಂಜನ ಚನ್ನಬಸವಲಿಂಗಾ?/836
ಪ್ರಸಾದಿಯ ಕಾಯವೆಲ್ಲ ಅಷ್ಟಾವರಣ ಪ್ರಕಾಶಮಯವಾಗಿ ತೋರುವದಲ್ಲದೆ
ಪ್ರಕೃತಿಮಯತೋರದು ನೋಡಾ.
ಪ್ರಸಾದಿಯ ಮನವೆಲ್ಲ ಚತುರ್ವಿಧಭಕ್ತಿಪ್ರಕಾಶಮಯವಾಗಿ ತೋರುವದಲ್ಲದೆ
ಪ್ರಕೃತಿಮಯತೋರದು ನೋಡಾ.
ಪ್ರಸಾದಿಯ ಭಾವವೆಲ್ಲ ಮಹಾನುಭಾವಪ್ರಕಾಶಮಯವಾಗಿ ತೋರುವದಲ್ಲದೆ
ಪ್ರಕೃತಿಮಯತೋರದು ನೋಡಾ.
ಪ್ರಸಾದಿಯು ನಿರಂತರ ಗುರುನಿರಂಜನ ಚನ್ನಬಸವಲಿಂಗ
ತಾನಾಗಿ ತೋರುವನಲ್ಲದೆ ಪ್ರಕೃತಿಮಯತೋರದು ನೋಡಾ./837
ಪ್ರಸಾದಿಯಂಗದಲ್ಲಿ ಮೃದುಕಠಿಣ ಸೀತೋಷ್ಣ ಸುಖಕ್ಕೆಳಸುವ
ರತಿಮೋಹವುಂಟೆ? ಇಲ್ಲ.
ಅದೇನು ಕಾರಣ, ಜಂಗಮಲಿಂಗಕ್ಕಂಗವಾದಕಾರಣ.
ಪ್ರಸಾದಿಯ ಮನದಲ್ಲಿ ಷಡುರಸರುಚಿ ಸೌಖ್ಯಕ್ಕೆ ಇಚ್ಛೈಸುವ
ವಿಷಯ ಮೋಹವುಂಟೆ? ಇಲ್ಲ.
ಅದೇನು ಕಾರಣ, ಗುರುಲಿಂಗಕ್ಕಂಗವಾದಕಾರಣ.
ಪ್ರಸಾದಿಯ ಭಾವದಲ್ಲಿ ಷಡುತೃಪ್ತಿಯ ಸೌಖ್ಯದ ಗ್ರಾಹಕತ್ವವುಂಟೆ?
ಇಲ್ಲ. ಅದೇನು ಕಾರಣ, ಮಹಾಲಿಂಕ್ಕಂಗವಾದಕಾರಣ.
ಇಂತು ಅಂಗ ಮನ ಭಾವದಿಚ್ಛೆಯನಳಿದುಳಿದ ನಿರ್ಮಲಪ್ರಸಾದಿಯಲ್ಲದೆ
ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತನಾಗಬಾರದು./838
ಪ್ರಾಣ ಲಿಂಗದಲ್ಲರತು, ಲಿಂಗ ಪ್ರಾಣದಲ್ಲರತು,
ಪ್ರಾಣ ಲಿಂಗ ಸಂಗದಲ್ಲರತು, ಸಂಗ ಸುಖದಲ್ಲರತು,
ಸುಖ ಪರಿಣಾಮದಲ್ಲರತು, ಪರಿಣಾಮ ಪರವಶದಲ್ಲರತು
ಪರವಶ ಪರಿಪೂರ್ಣಾನಂದ ಗುರುನಿರಂಜನ ಚನ್ನಬಸವಲಿಂಗ
ತಾನೇ ಬೇರಿಲ್ಲದ ಬೆಡಗು./839
ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
ಅನುವನರಿದ ಅಭಿನ್ನಪ್ರಸಾದಿಗೆ ದ್ವೈತಾದ್ವೈತ ಕಷ್ಟ;
ಭಾವಿಕರು ಕಾರಣದ ಬರವೆಂದು ಕಾಣಲಿಲ್ಲ.
ಅದೇನು ಕಾರಣವೆಂದೊಡೆ: ಅಜಾತ ಅನುಪಮಾನಂದಪ್ರಕಾಶ
ಗುರುನಿರಂಜನ ಚನ್ನಬಸವಲಿಂಗ ಪ್ರಾಸದಕ್ಕೆ ಪ್ರಸಾದಿಯಾದ ಕಾರಣ./840
ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
ಭೇದವನಾರು ಅರಿಯಬಾರದು ನೋಡಾ,
ಅದೆಂತೆಂದೊಡೆ, ಸುಜ್ಞಾನ ಪರಿಪೂರ್ಣಭರಿತವೆಂಬುದೇ ಪ್ರಾಣಲಿಂಗತ್ವ.
ಸತ್ಕ್ರಿಯಾಸನ್ನಿಹಿತ ಸತ್ಪ್ರೇಮಮುಖವೆಂಬುದೇ ಲಿಂಗಪ್ರಾಣತ್ವ.
ಉರಿಕರ್ಪೂರಸಂಯೋಗಲಯದಂತೆ
ಸಮರಸಾನುಭಾವೈಕ್ಯವಾದುದೇ ಪ್ರಸಾದಮುಕ್ತತ್ವ.
ಇಂತು ಇದರಂದವನರಿದ ಅಪ್ರತಿಮ ಪ್ರಕಾಶಮಯ ತಾನೆ
ಪ್ರಾಣಲಿಂಗೈಕ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗಾ. /841
ಪ್ರಾಣಲಿಂಗದ ಬೆಳಗ ಕಂಡೆವೆಂದು
ಕಣ್ಣಸಿಕ್ಕಿಸಿ ಕಷ್ಟದಿಂದೆ ಕಳೆಯನೆಬ್ಬಿಸಿ ಕಳೆದುಳಿವ ಖಂಡಿತರು
ಪ್ರಾಣಲಿಂಗ ಸಂಬಂಧಿಗಳೆಂತಪ್ಪರಯ್ಯಾ?
ಕಾಯದ ಕರ್ಮವಳಿಯದೆ, ಮನದ ಮಲಿವನ ತೊಳೆಯದೆ,
ಭಾವದ ಜಂಜಡ ಹರಿಯದೆ ಪ್ರಾಣಲಿಂಗಸಂಬಂಧಿಗಳೆಂತಪ್ಪರಯ್ಯಾ
ಎಂತಿರ್ದಂತೆ ಭ್ರಾಂತಿ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗಾನುಭಾವ ಸರಸವಲ್ಲ ಕಾಣಾ.
/842
ಪ್ರಾಣಲಿಂಗವ ಕಂಡವರೆಂದು ನುಡಿದುಕೊಂಬ
ಕೋಣಮೂಳರನೇನೆಂಬೆನಯ್ಯಾ?
ಕಂಡ ಲಿಂಗವ ಕೊಂಡ ಪರಿಯೆಂತು ಹೇಳಾ!
ಕಂಡವರಾರು? ಕಾಣಿಸಿಕೊಂಡವರಾರು?
ಬೆಂಡಾಗಿ ಬಿದ್ದು ಹೋದರು ನೋಡಾ
ಗುರುನಿರಂಜನ ಚನ್ನಬಸವಲಿಂಗದಾದಿ ಮಧ್ಯಂತರವನರಿಯದೆ./843
ಪ್ರಾಣಲಿಂಗವನು ಮಾಣದೆ ನೋಡಿ,
ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ.
ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ
ಚಂದ ಚಂದದ ನಡೆಯೊಳೆಸೆಯುತ,
ನುಡಿಯೊಳೊಂದಿದ ಬಿಂದು ಅಲಸದೆ
ಹಿಂದು ಹಿಂದನು ಮುಂದು ಮುಂದನು
ತಂದು ಆರಾಧಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ./844
ಪ್ರಾಣಲಿಂಗವಾದ ಬಳಿಕ ಪ್ರಾಣದಲ್ಲಿ ಗುಣವಿರಲುಂಟೆ?
ಪ್ರಪಂಚ ತೋರಲುಂಟೆ?
ಸಂಕಲ್ಪಭ್ರಮೆಯುಂಟೆ?
ಅಜ್ಞಾನ ಸುಜ್ಞಾನ ಆವರಿಸಲುಂಟೆ?
ಮಾಯಾಮೋಹ ಮಲದಲ್ಲಿ ಮಗ್ನತೆಯುಂಟೆ?
ಇಂತು ಸಕಲ ಸಂಭವಿತನಾಗಿ ನಾನು ಪ್ರಾಣಲಿಂಗಸಂಬಂಧಿಯೆಂದರೆ
ಕಾಲನ ಕರ್ಮ ಕಡೆಗಾಣದಿರ್ದನು,
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾಗಿ./845
ಪ್ರಾಣಲಿಂಗವಾದ ಬಳಿಕ, ಕಾಯದಲ್ಲಿ ನೋಡಿದರೆ ಲಿಂಗಬೆಳಗು,
ಮನದಲ್ಲಿ ನೋಡಿದರೆ ಲಿಂಗಬೆಳಗು,
ಭಾವದಲ್ಲಿ ನೋಡಿದರೆ ಲಿಂಗಬೆಳಗು,
ಸರ್ವಾಂಗದಲ್ಲಿ ನೋಡಿದರೆ ಲಿಂಗಬೆಳಗು.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಪ್ರಾಣಲಿಂಗಿ ಬೆಳಗಿನೊಳು ಬೆಳಗ ಸೇವಿಸುತಿರ್ದನು. /846
ಪ್ರಾಣಲಿಂಗಸಂಬಂಧಿಯಾದ ಮಹಾತ್ಮನು
ಅರಿಷಡ್ವರ್ಗಂಗಳರಿಯ,
ಕ್ಷುತ್ತು ಪಿಪಾಸು ಶೋಕ ಮೋಹ ಜರೆ ಮರಣ ಗುಣತ್ರಯದೊಳೊಂದಿ ನಿಲ್ಲ.
ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ
ಅವಸ್ಥಾತ್ರಯವೆಂಬ ಪಂಚದಶ ಮಾಯಾಪಟಲ ಹರಿದು ಮರೆದು
ಮಹಾಘನ ಬೆಳಗಿನ ಸುಖವ ಸುಗ್ಗಿಯೊಳಿರ್ದು
ಪ್ರಾಣಲಿಂಗವನರ್ಚಿಸುತ್ತಿಹನು ಭಕ್ತಿತ್ರಯಗೂಡಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ. /847
ಪ್ರಾಣವ ಹಿಂಗಿ ಅಂಗಸುಖಿಸಲು ಪರಿಯಾವುದಯ್ಯಾ ?
ಚಿತ್ಪ್ರಾಣನಾಥನೆಂಬಾ ಚಿತ್ಪ್ರಕಾಶ ಜಂಗಮಲಿಂಗವನುಳಿದು,
ಸತ್ಕ್ರಿಯಾಚಾರಸಂಬಂದಿಗಳೆಂದರೆ ಸತ್ಯವಪ್ಪುದೇ ?
ಹುಸಿ ದುರ್ವಾಸನೆಯಾಗಿ ಹೋಗುವದು.
ನಾನಿಂತಲ್ಲ ನಿತ್ಯವಾಗಿರ್ದೆ ನಿನ್ನಂಗವಿಡಿದು
ಗುರುನಿರಂಜನ ಚನ್ನಬಸವಲಿಂಗಾ./848
ಪ್ರಾಣವೇ ಜಂಗಮವೆಂದರಿದು ಮಾಡುವಲ್ಲಿ
ಮನಕೆ ಮನ ಸಾಕ್ಷಿಯಾಗಿಹನಲ್ಲದೆ,
ಬೇರಿಟ್ಟು ಮಾಡಿ ತೋರುವ ಭಾವಗಡಕ ಭ್ರಾಂತನಲ್ಲ,
ಅದೆಂತೆಂದೊಡೆೊ: ಪತಿವ್ರತಾಂಗನೆ
ತನ್ನ ಪ್ರಾಣಸುಖವ ಪುರುಷಂಗಿತ್ತು
ಸುಖಿಸಿ ಆನಂದಿಸುವಳಲ್ಲದೆ ಬೇರಿಟ್ಟು ತೋರಲಿಲ್ಲ.
ಇದರಂದವನರಿದು ನಡೆನುಡಿಯೊಳಿರ್ದನು
ಗುರುನಿರಂಜನ ಚನ್ನಬಸವಲಿಂಗಸಹಿತ./849
ಪ್ರಾಣವೇ ಲಿಂಗವಾದ ಶರಣಂಗೆ
ಕಂಡರು ಕಾಣಬಾರದು, ಕೇಳಿದರು ಕೇಳಬಾರದು,
ಹಿಡಿದರು ಹಿಡಿಯಬಾರದು,
ಬಂದರು ಬರಬಾರದು, ನಿಂತರು ನಿಲ್ಲಬಾರದು.
ಅಂದಂದಿಂಗತ್ತತ್ತ ಇಂದಿಂದಿಂಗಿತ್ತತ್ತ
ಸತ್ಯ ಸದಾನಂದ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣನಪರಿ ಆಶ್ಚರ್ಯವು./850
ಫಲ ವೃಕ್ಷ ತರು ಲತೆಗಳೆಲ್ಲ ತಮ್ಮ ಸಲಹಿದವರಾದಿ ಸಕಲರುಗಳಿಗೆ
ವಂಚನೆಯಿಲ್ಲದೀಯುವಂತೆ ನಿಜತನಿರಸವನು,
ಸಮ್ಯಕ್ಜ್ಞಾನಗುರುವಿನಿಂದೆ ಜನಿಸಿ ಬೆಳೆದ ಪರಮಸಾವಧಾನಿ ಶರಣನು
ತನ್ನ ಸತ್ತುಚಿತ್ತಾನಂದಸ್ವರೂಪವಾದ ಗುರುಲಿಂಗಜಂಗಮಕ್ಕೆ
ತನುಮನಧನದ ಚಿದ್ರಸಸ್ವಾದವನು ವಂಚನೆವಿರಹಿತನಾಗಿತ್ತು
ಪರಿಣಾಮಿಸಿಕೊಂಡು ಲೀಲಾಲೋಲನಾಗಿರ್ದ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./851
ಬಂಗಾರವನೊಲ್ಲೆ, ಶೃಂಗಾರವನೊಲ್ಲೆ,
ಇಹದ ದಾರಿಯನೊಲ್ಲೆ, ಪರದ ನೆರವಿಯನೊಲ್ಲೆ,
ಮತ್ತೇನುವೊಲ್ಲೆ ಕಂಗಳ ಮುಂದೆ ಸಂಗಯ್ಯ ಬಂದುದೆನಗೆ ಸಾಕು.
ಮನಹೆಚ್ಚಿ ಮಾಡಿ ನೇಮಿಸಿದ ಘನರತಿಯನು,
ಹೆಂಗಳೆಯರ ಸಹವಾಗೆನ್ನಕೂಡಿ ಪರಿಣಾಮಿಸಿದರೆ ಸಾಕು.
ಗುರುನಿರಂಜನ ಚನ್ನಬಸವಲಿಂಗವೆನಗೆ ಮೆಚ್ಚಿದರೆ ಸಾಕು. /852
ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರಗೈವ ಕಾಲದೊಳು
ಚರಣಾಯುಧ ಕೂಗಲು ನಿದ್ರೆಗಳೆಯಲು
ರವಿಯ ಮಧ್ಯೆ ಕತ್ತಲೆಗೆಡೆಯಿಲ್ಲ ನೋಡ.
ಕೆಂಡಕ್ಕೆ ಬಂದೊರಲೆ ನಿಂದಿರಲೆಡೆಯಿಲ್ಲ !
ಜ್ಞಾನೋದಯವಾದ ಶರಣನ ಮುಂದೆ
ತಮ್ಮ ಶರಣವೃಂದ ಗಾಲುಮೇಲುಗಳ ನಾಶ
ನಿರಂಜನ ಚನ್ನಬಸವಲಿಂಗಾ.
/853
ಬಂದುದ ಹಿಂದಕ್ಕೆಂದು ಸಂದು ಸರ್ವಜ್ಞತ್ವನಾಗಿ
ಕಂದನ ಕೈಬಂಧನ ಬಂಧನವಾದ ಮಹಿಮಂಗೆ,
ಹಿಂದಣ ಚಂದದಂದಕ್ಕೆ ಸಂದು ವಿರಹಿತ ಸ್ವಯವಾದುದು
ಗುರುನಿರಂಜನ ಚನ್ನಬಸವಲಿಂಗಾ./854
ಬಂದುದು ನಿಂದುದು ಬೆಂದುದು ಬಂದು ಬೆರಸಿದುದು.
ತಂದು ಕಂಡು ತರತರದ ಸುಖವಾದುದು.
ಸುಖದಿಂದ ಸುಯಿಧಾನ ಸ್ವಯವಾದುದು.
ಇದು ಸಕಲ ಇದು ನಿಃಕಲವಾಗಿ
ಗುರುನಿರಂಜನ ಚನ್ನಬಸವಲಿಂಗದೊಳಗರಿವು ಮರವಾದುದು. /855
ಬಚ್ಚಲದ ತಂಪಿನಲ್ಲಿ ಬಿದ್ದು ಸುಖಿಸುವ ಸೂಕರ
ಸುಗಂಧಪಂಕದ ಸುಸೌಖ್ಯವ ಸುಖಿಸಲೇನು ಬಲ್ಲುದು ಹೇಳಾ.
ಮಲತ್ರಯದ ಗೊಜ್ಜಿನ ತಂಪುಗೊಂಡ ಮಾನವ
ಲಿಂಗತ್ರಯವೆರೆದ ಸುಖಾನುಭಾವದ್ವಾಸನೆಯೆಂಬ ಪರಮಶಾಂತ
ಪರಿಣಾಮವನವನೆತ್ತ ಬಲ್ಲ ಹೇಳಾ.
ಅರಿದವರರಿಯಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮನು./856
ಬಡಿದೆಬ್ಬಿಸಿ ಹಾಲನೆರೆದರೆ
ಸವಿದು ಪರಿಣಾಮಿಸುವುದೇ ಕರಲೇಸಯ್ಯಾ.
ಕ್ರೋಧ ಹೊಂದಿ ಜರಿದರೆ ದುಃಖದಾಗರವಯ್ಯಾ.
ಪರಮ ವೈರಾಗ್ಯ ಜಂಗಮವೆನ್ನ ಜರಿದು
ಅವಿರಳಬೋಧಾಮೃತವ ಎನ್ನ ಮಸ್ತಕದ ಮೇಲೆ ಸೂಸಿದರೆ
ಅತ್ಯಂತ ಸುಯಿಧಾನಿಯಾಗಿರ್ದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./857
ಬಯಲ ರಥ ಬಯಲ ಸ್ಥಾವರ ಬಯಲ ಬೊಂಬೆಯ
ಸಡಗರ ಜಾಣತನವ ಮಾಣಬಾರದು.
ರುದ್ರನ ಕಟ್ಟಳೆಯ ಕಾಣದ ಮುನ್ನ
ಭದ್ರ ಗುರುನಿರಂಜನ ಚನ್ನಬಸವಲಿಂಗ./858
ಬಯಲಪುರುಷನ ನೆರೆದು ಬಯಲರೂಪಕೆ ತಂದು,
ಬಯಲರೂಪಿನಲ್ಲಿರಿಸಿ ನಡೆಯಬಲ್ಲ ಶರಣ.
ರೂಪ ಬಯಲಲ್ಲಿರಿಸಿ ನೋಡಬಲ್ಲ ಶರಣ.
ರೂಪ ಬಯಲೆಂಬ ಕುರುಹಳಿದು ಕೂಡಬಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಘನಮಹಿಮ ಶರಣ./859
ಬಯಲಬೀಜ ಭೂಮಿಯಲ್ಲಂಕುರಿಸಿ
ಎಲೆಯೆರಡಾದುವು, ಎಸಳು ಮೂರಾದವು,
ಕುಸುಮ ಆರಾದವು, ಕಾಯಿ ಮೂವತ್ತಾರಾದವು,
ಹಣ್ಣು ಇನ್ನೂರಾಹದಿನಾರಾದವು.
ತೊಟ್ಟು ತುಂಬಿ ವಿಶ್ವಪರಿಪೂರ್ಣವಾಗಿ
ತೊಟ್ಟು ಕಳಚಿ ಇನ್ನೂರಹದಿನಾರರೊಳು ನಿಂದು
ಆ ಮೂವತ್ತಾರರಲ್ಲಿ ಅಡಗಿ ಆರರಲ್ಲಿ ಅಳಿದು
ಮೂರರಲ್ಲಿ ಮುಳುಗಿ ಎರಡರಲ್ಲಿ ನಿಂದು ಒಂದಾಗಿ ಮರೆದುಳಿದು
ಗುರುನಿರಂಜನ ಚನ್ನಬಸವಲಿಂಗದೊಳಗೆ./860
ಬಯಲಭೂಮಿಯ ಕಲಾಪರ್ಯಾಯನಾರಿಯ ಸಂಗದ ಸುಖವೆನ್ನ
ಸುಬುದ್ಧಿಯೊಳಗಾಯಿತ್ತು.
ಬಯಲ ಅಪ್ಪುವಿನ ಕಲಾಪರ್ಯಾಯಸುಗುಣಿಯ ಸಂಗದ ಸುಖವೆನ್ನ
ನಿರಹಂಕಾರದೊಳಗಾಯಿತ್ತು,
ಬಯಲಾನಲ ಕಲಾಪರ್ಯಾಯಕಾಮಿನಿಯ ಸಂಗದ ಸುಖವೆನ್ನ
ಸುಮನದೊಳಗಾಯಿತ್ತು.
ಬಯಲಾನಿಲ ಕಲಾಪರ್ಯಾಯಕೂಟ ಸ್ತ್ರೀಸಂಗದ ಸುಖವೆನ್ನ
ಸುಜ್ಞಾನದೊಳಗಾಯಿತ್ತು.
ಬಯಲಾಂಬರ ಕಲಾಪರ್ಯಾಯ ಪರಲಲನೆಯ ಸಂಗದ ಸುಖವೆನ್ನ
ಸದ್ಭಾವದೊಳಗಾಯಿತ್ತು.
ಬಯಲಾತ್ಮ ಕಲಾಪರ್ಯಾಯ ಚಿತ್ರಾಂಗನೆಯ ಸಂಗದ ಸುಖವೆನ್ನ
ಅನುಪಮಪ್ರಕಾಶ ಗುರುನಿರಂಜನ ಚನ್ನಬಸವಲಿಂಗದೊಳಗಾಯಿತ್ತು./861
ಬಯಲಿಂದ ಬಂದ ತಳ್ಳೆಕಾರಂಗೆ
ಉಳ್ಳುದೆಲ್ಲವನಿತ್ತು ಒಳ್ಳೆಯವನಾಗಿ ಕಾಲವಿಡಿದು
ಕಾಳಬೆಳಗಿಲ್ಲದ ಬಿಸಿಲು ಬೆಳದಿಂಗಳದಲ್ಲಿ ಸನ್ನಿಹಿತ ಬರುವವರಾರು ನೋಡಾ!
ಹೊರಗುಳ್ಳವರಿಗೆ ಹೊರಗಾದ ಒಳಗುಳ್ಳವರಿಗೊಳಗಾದ
ಅರಿದು ಬನ್ನಿ ಗುರುನಿರಂಜನ ಚನ್ನಬಸವಲಿಂಗಕ್ಕೆ ರೂಪಿಲ್ಲದೆ./862
ಬಯಲು ನಲುಗಿ ಬಯಲು ನಿಂದು ಬಯಲರುಹಿಸಿ,
ಬಯಲಿಂಗೆ ಬಯಲು ಬಲಿದು,
ಬಯಲಿಂದೆ ಬಯಲಳಿದು, ಬಯಲು ಬಯಲ ಕೂಡಿ
ನಿರ್ವಯಲು ಹುಟ್ಟಿ ಬಯಲಸಮರಸದಲ್ಲಿ
ಬಯಲು ನಿರ್ವಯಲಾಗಿ ನಿರವಯವಾಯಿತ್ತು
ಗುರುನಿರಂಜನ ಚನ್ನಬಸವಲಿಂಗಾ./863
ಬರಬಾರದ ಬರವು ನೆರದಲ್ಲಿ,
ಹುಟ್ಟಬಾರದ ಹುಟ್ಟು ಘಟಿಸಿ ಬಂದಾತನೆ ಶರಣ.
ತೋರಬಾರದ ರೂಪವನು ತೋರಿ ನಡೆವಾತನೆ ಶರಣ.
ನೋಡಬಾರದ ನೋಟ ನೀಟಾಗಿ ನಿಂದಲ್ಲಿ
ಕಾಟ ಬೇಟದ ಕಳವಳವ ದಾಟಿಸಿ,
ಮರೆದಿರುವ ಮಡದಿ-ಪುರುಷರ ನಡೆಯಲ್ಲಿ
ಎರಡಿಲ್ಲದಿಪ್ಪ ಮಹಿಮ,
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./864
ಬರಿಕೋಟಲೆ ಹಿರಿದುಳ್ಳ ಹೆಸರುವಂತರಿಗೆ
ಹರಿದುಮಾಡುವ ಉಪದೇಶವು ಪರಿವಿಡಿಯಲೆಳತಟಕ್ಕೆಳಸುವುದು,
ಮಾಡಲಾಗದು ಜ್ಞಾನಿಗಳು. ನೋಡಿಕೊಳ್ಳಲಾಗದು ತನುಮನಧನವ.
ಅದೇನುಕಾರಣವೆಂದೊಡೆ,
ಹಾಲನೆರೆದು ಹಾವಿನ ಬಾಲವ ಪಿಡಿದಾಡುವ ಮರುಳನಂತೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./865
ಬಲ್ಲಿದರೆಂಬ ಹರಿ ವಿಧಿಗಲ್ಲಲ್ಲಿಗರಿಸದ ಅಖಂಡ ಚಿನ್ಮಯಲಿಂಗವನು
ಸಲ್ಲಲಿತವಾಗಿ ಪಡೆದ ಸತ್ಯಶರಣನ ಮುಂದೆ
ಆಗುಹೋಗಿನ ಛಾಯೆ ಅನಂತವಾಗಿ ತೋರಿದಡೇನು
ಅಭ್ರದಂಗದ ಪರಿಯೆಂದರಿದು ಚರಿಸುವನಲ್ಲದೆ,
ಏನುಯೆಂತೆಂಬ ಭಾವ ಅವಸ್ಥಾತ್ರಯದಲ್ಲಿ ಅರಿಯನು ಕಾಣಾ.
ಪರಿಪೂರ್ಣನೇ ತಾನಾಗಿ ಸತ್ತುಚಿತ್ತಾನಂದ ನಿತ್ಯಸನ್ನಿಹಿತ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ
ಗಮನಾಗಮನಗಮ್ಯ ಕಾಣಾ./866
ಬಸವ ಶಗಣಿಯಿಂದಾದ ಅಸಮ ಶ್ರೀಮಹಾಭಸಿತವ,
ನೊಸಲಾದಿ ಪಾದಾಂತ್ಯವಾಗಿ ನಾಲ್ವತ್ತೆಂಟು ಸ್ಥಾನಂಗಳನರಿದು ಧರಿಸಿ,
ಪಸರಿಸಿ ಪ್ರಜ್ವಲಿಸುವ ಪಶುಪತಿಯ ಗತಿಮತಿಯೊಳೊಪ್ಪಿ,
ಎಸೆವ ಶಿವಶರಣರಂಘ್ರಿಯ ಜಲಶೇಷವನು ಸಸಿನೆಯಿಂದ ಸೇವಿಸುವ
ಶಿಶುವಾಗಿರ್ದೆ ಅನುದಿನ ನಿರಂಜನ ಚನ್ನಬಸವಲಿಂಗ ಸನ್ನಿಹಿತ. /867
ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ,
ಚನ್ನಬಸವಣ್ಣ ಎನ್ನಜ್ಜನಾಗಿ ಬಂದನಯ್ಯಾ,
ಪ್ರಭುದೇವರು ಎನ್ನ ಮುತ್ತಯ್ಯನಾಗಿ ಬಂದನಯ್ಯಾ,
ಈ ಮೂವರ ಮುಂದಣಾಭರಣ ಹೊದಿದುಕೊಂಡು
ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನಯ್ಯಾ./868
ಬಸವಣ್ಣನ ಕುರಣಜಲದಲ್ಲಿ ಮುಳುಗಿ ಕಾಯಮುಕ್ತನೆನಿಸಿದೆ.
ಚನ್ನಬಸವಣ್ಣನ ವಿನಯಜಲದಲ್ಲಿ ಮುಳುಗಿ ಮನೋಮುಕ್ತನೆನಿಸಿದೆ.
ಪ್ರಭುವಿನ ಸಮತಾಜಲದಲ್ಲಿ ಮುಳುಗಿ ಪ್ರಾಣಮುಕ್ತನೆನಿಸಿದೆ.
ತ್ರಿವಿಧೋದಕವೊಂದಾದ ಗುರುನಿರಂಜನ ಚನ್ನಬಸವಲಿಂಗಾ
ಸಂಗಪರಮಾನಂದ ಪಾದೋದಕದಲ್ಲಿ ಮುಳುಗಿ
ಅರಿಯದಿರ್ದನುಪಮನೆನಿಸಿದೆನು./869
ಬಸವಣ್ಣನ ಕೃಪೆ ಎನ್ನ ಶ್ರದ್ಧೆ ಕೂಡಿದಲ್ಲಿ ಎನ್ನಂಗವೆಲ್ಲ ಶುದ್ಧಪ್ರಸಾದ.
ಮಡಿವಾಳಯ್ಯನ ಕೃಪೆ ಎನ್ನ ನಿಷ್ಠೆಕೂಡಿದಲ್ಲಿ ಎನ್ನಾತ್ಮವೆಲ್ಲ ಅಮಲಪ್ರಸಾದ.
ಚನ್ನಬಸವಣ್ಣನ ಕೃಪೆ ಎನ್ನ ಸಾವಧಾನ ಕೂಡಿದಲ್ಲಿ ಪ್ರಾಣವೆಲ್ಲ ಸಿದ್ಧಪ್ರಸಾದ.
ಸಿದ್ಧರಾಮಯ್ಯನ ಕೃಪೆ ಎನ್ನ ಅನುಭಾವ ಕೂಡಿದಲ್ಲಿ ಕರಣವೆಲ್ಲ ನಿಜಪ್ರಸಾದ.
ಉರಿಲಿಂಗಪೆದ್ದಣ್ಣಗಳ ದಯೆ ಎನ್ನಾನಂದ ಕೂಡಿ[ದಲ್ಲಿ]
ವಿಷಯಂಗಳೆಲ್ಲ ಪ್ರಸಿದ್ಧಪ್ರಸಾದ.
ಅಜಗಣ್ಣನ ಕೃಪೆ ಎನ್ನ ಸಮರಸ ಕೂಡಿ[ದಲ್ಲಿ] ತೃಪ್ತಿಯೆಲ್ಲ ಮಹಾಪ್ರಸಿದ್ಧಪ್ರಸಾದ.
ಇಂತು ಎನ್ನೊಡೆಯರ ಪ್ರಸಾದವನು ಮಂಡೆಯೊಳಿಟ್ಟು ಮುಳುಗಿ
ಪ್ರಸಾದವೆಂಬ ಭಾವದೋರದೆ ಗುರುನಿರಂಜನ
ಚನ್ನಬಸವಲಿಂಗದೊಳಡಗಿರ್ದೆನು/870
ಬಸವಣ್ಣನ ಪಾದವನ್ನು ಕರ ಮನ ಭಾವದಲ್ಲಿ ಕಂಡು
ಸರ್ವಾಂಗ ಬೆಚ್ಚಿ ಬೇರಿಲ್ಲ ದರ್ಚಿಸಿ ಸುಖಿಯಾಗಿದ್ದೆನಯ್ಯಾ.
ಚನ್ನಬಸವಣ್ಣನ ಪಾದವನ್ನು ಮನ ಭಾವದಲ್ಲಿ ಕಂಡು
ಕರಣಕೊಬ್ಬಿ ಅಭಿನ್ನವಾಗಿ ಅರ್ಚಿಸಿ ಸುಖಿಯಾಗಿರ್ನೆನಯ್ಯಾ.
ಪ್ರಭುವಿನ ಪಾದವನ್ನು ಭಾವ ಕರ ಮನದಲ್ಲಿ ಕಂಡು
ಬೆಚ್ಚಿ ಭೇದವಳಿದರ್ಚಿಸಿ ಸುಖಿಯಾಗಿರ್ನೆನಯ್ಯಾ.
ತ್ರಿವಿಧವನೊಂದುಮಾಡಿ ಸಕಲ ಪರಿಣಾಮ ಪರವಶವ ನೆರೆದು
ಆರಾಧಿಸುತಿರ್ನೆನು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ./871
ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ;
ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ;
ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ;
ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ
ತಾನೆಂಬುದು ಕಂಡು ಮರೆಯಿತ್ತು ನೋಡಾ./872
ಬಸವಣ್ಣನ ಮುಖದಿಂದೆ ಅಸಂಖ್ಯಾತ ಪ್ರಮಥರ ಕಂಡೆನಯ್ಯಾ,
ಚನ್ನ ಬಸವಣ್ಣನ ಮುಖದಿಂದೆ ಗಣಸನ್ನಿಹಿತಮಹಾನುಭಾವಸುಖಿಯಾದೆನಯ್ಯಾ.
ಪ್ರಭುವಿನ ಮುಖದಿಂದೆ ಮಹದಾನಂದಪರಿಣಾಮಿಯಾಗಿರ್ದೆನಯ್ಯಾ.
ಈ ತ್ರಿವಿಧವನೊಡಗೂಡಿ ಗುರುನಿರಂಜನ ಚನ್ನಬಸವಲಿಂಗ
ಶರಣೆಂದು ನಿಮ್ಮೊಳಗಾದೆನಯ್ಯಾ./873
ಬಸವಣ್ಣನ ರೂಪವ ನಾನು ಕಾಣಲಿಲ್ಲ,
ಮಡಿವಾಳಯ್ಯನ ರೂಪವ ನಾನು ಕಾಣಲಿಲ್ಲ,
ಮರುಳಶಂಕರದೇವರ ರೂಪವ ನಾನು ಕಾಣಲಿಲ್ಲ,
ಸಿದ್ಧರಾಮಯ್ಯನ ರೂಪವ ನಾನು ಕಾಣಲಿಲ್ಲ,
ಪ್ರಭುವಿನ ರೂಪವ ನಾನು ಕಾಣಲಿಲ್ಲ,
ಘಟ್ಟಿವಾಳಯ್ಯನ ರೂಪವ ನಾನು ಕಾಣಲಿಲ್ಲ.
ಕಂಡು ಮಹಾದೇವಿಯಕ್ಕನ ಪದಕಮಲಕ್ಕೆ ಮರುಳುಗೊಂಡ ಮರಿದುಂಬಿಯಯ್ಯಾ
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./874
ಬಹಿಮರ್ುಖಸುಖವಿರಹಿತಂಗೆ ಸಗುಣಾರ್ಪಿತ ಶೂನ್ಯ ಕಾಣಾ.
ಅಂತಮರ್ುಖಸುಖವಿರಹಿತಂಗೆ ನಿರ್ಗುಣಾರ್ಪಿತ ಶೂನ್ಯ ಕಾಣಾ.
ಸಮತೆಮುಖಸುಖವಿರಹಿತಂಗೆ ಸನ್ನಿಹಿತಸುಖಾರ್ಪಿತ ಶೂನ್ಯ ಕಾಣಾ.
ಈ ತ್ರಿವಿಧಾರ್ಪಿತ ನಾಸ್ತಿಯಾಗಿ ಗುರುನಿರಂಜನ ಚನ್ನಬಸವಲಿಂಗ
ಪ್ರಸಾದಿಯೆಂದಡೆ ನಾಯಕನರಕ ತಪ್ಪದು ಕಾಣಾ./875
ಬಹಿರಂಗದ ಬಳಕೆಯನು ಇಂದ್ರಿಯಂಗಳಿಗಿಕ್ಕದಿರ್ದಡಾತ ಶ್ರುತಿಜ್ಞಾನಿ.
ಅಂತರಂಗದನುವ ಕರಣಚತುಷ್ಟಿಗಿಕ್ಕದಿರ್ದಡಾತ ಸುಜ್ಞಾನಿ.
ಆತ್ಮನ ಮುಖವನು ವಿಷಯಗತಿಗನುಗೊಳಿಸದಿರ್ದಡಾತ ನಿಜಜ್ಞಾನಿ.
ಈ ತ್ರಿವಿಧ ಜ್ಞಾನವನು ಮಹಾಜ್ಞಾನವೆರಸಿ ಮರೆದಾಚರಿಸುವ
ಪರಮಜ್ಞಾನಿಗಳ ಪಾದಕ್ಕೆ ನಮೋ ನಮೋ ಎಂಬೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./876
ಬಹಿರಂಗದಲ್ಲಿ ದುರಾಚಾರ ಅಂತರಂಗದಲ್ಲಿ ದುಃಸಂಕಲ್ಪ
ಉಭಯಗೂಡಿದ ವರ್ತಕದಲ್ಲಿ
ಷಡ್ಗುಣ ಸಾರಸಂಬಂಧ ದುರ್ಭಾವತ್ರಯಗೂಡಿ ಜೀವಿಸುವ ಪ್ರಾಣಿಯು
ಕಂಡಾಡುವ ಕಟ್ಟಳೆಯ ಸೋಗುಹೊತ್ತು ನಡೆದರೇನು, ಅದನು ನುಡಿದರೇನು?
ಆ ನಡೆನುಡಿಯ ವಾಸನೆಯನರಿಯದಿರ್ಪ ಸಜದ್ಭಕ್ತಿಚರಿತೆಯ ಸುಖದೊಳಗೆ
ಸದ್ಗುರು ಚನ್ನವೃಷಭೇಂದ್ರಲಿಂಗವು./877
ಬಹಿರಂಗವನಿಟ್ಟು ಮಾಡುವರು, ಅಂತರಂಗವನಿಟ್ಟು ನೋಡುವರು,
ಈ ಉಭಯವನರಿಯದೆ ಕೂಡುವುದು ಇದು ಅಮಳತೇಜಾಂಗದ ನಿಲವು.
ಅಪ್ರತಿಮ ಮಹಿಮ ಶಾಂತ ಚನ್ನವೃಷಭೇಂದ್ರಲಿಂಗದಲ್ಲಿ./878
ಬಹುಜನ್ಮಭಾರಿಗಳ ಕರತಂದು
ಹಿರಿಯತನದಾಸೆಗೆ ಹರಿದು ಉಪದೇಶವ ಕೊಟ್ಟರೆ
ಗುರುಶಿಷ್ಯಭಾವ ಸರಿಯಪ್ಪುದೆ ?
ಕಣ್ಣಿಲ್ಲದ ಗುರು, ಕುರುಡ ಶಿಷ್ಯ,
ಅವರಿಗಾಚಾರ ವಿಚಾರ ಸಮಯಾಚಾರಸಂಬಂಧವೆಂತಪ್ಪುದಯ್ಯಾ,
ಭೂತ ಅದ್ಭೂತ ಅವಿಚಾರ ಘಟಿತರಿಗೆ
ಗುರುನಿರಂಜನ ಚನ್ನಬಸವಲಿಂಗಾ ?/879
ಬಾಗಿ ಬಳುಕಿ ಬೀಗಿ ಬಿರಿದು ತೂಗಿಕೊಂಡು ಬಂದ ಭೋಗಿ ಸಾಕ್ಷಿಯಾಗಿ
ತ್ಯಾಗ ಭೋಗ ಯೋಗವೆಂಬ ಮಹದೈಶ್ವರ್ಯದೊಳಗಿರ್ದೆನಯ್ಯಾ.
ಬಂದು ಕೊಳ್ಳಿರಿ ಬಗೆಬಗೆಯಿಂದೆ, ಚಂದವಾದರೆ ನಿಂದುದು ನಿಷ್ಠೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಆನು ಭಕ್ತನೆಂಬೆ./880
ಬಾರಯ್ಯಾ ಬಾರಯ್ಯಾ ಬಂದೊಮ್ಮೆ ನೋಡಯ್ಯಾ
ಎನ್ನ ತನುಭಕ್ತಿ ಕೊರತೆಯನು.
ಬಾರಯ್ಯಾ ಬಾರಯ್ಯಾ, ನಿಂದು ನಿಂದೊಮ್ಮೆ ನೋಡಯ್ಯಾ.
ಬಾರಯ್ಯ ಬಾರಯ್ಯ, ಬಂದು ನಿಂದು ಸಂದೊಮ್ಮೆ ನೋಡಯ್ಯಾ,
ಎನ್ನ ಭಾವಭಕ್ತಿ ಕೊರತೆಯನು.
ಗುರುನಿರಂಜನ ಚನ್ನಬಸವಲಿಂಗಯ್ಯಾ
ನಿನ್ನಂಗದಲ್ಲಿ ಎನ್ನ ನೋಡಯ್ಯಾ./881
ಬಾಲಯವ್ವನವೃದ್ಭಶೂನ್ಯ ಶರಣಂಗೆ
ಜನನ ಸ್ಥಿತಿ ಲಯವೆಂಬುದೇನು ಹೇಳಾ !
ಗಳಿಸಲಿಲ್ಲದ ಹಾಕದ ಕಳೆಯಲಿಲ್ಲದ ಅಸಲುಮುಳುಗಿದ
ಮತ್ತೆ ಬಡ್ಡಿಯ ಬರೆಯಲುಂಟೆ.
ಲೀಲೆಯಾದರೆ ಲೋಲ ಗುರುನಿರಂಜನ ಚನ್ನಬಸವಲಿಂಗಾ./882
ಬಾಹಿರಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ.
ಅಂತರಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ.
ಮಧ್ಯ ಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಎನ್ನ ಸಾವಧಾನಭಕ್ತಿಯ ಕೊಂಡುದಕ್ಕೆ ಅನುವಪ್ರಸಾದವ ಕೊಡಿ. /883
ಬಿಂದುಪ್ರಕಾಶ ನಾದಪ್ರಕಾಶ ಕಲಾಪ್ರಕಾಶ
ಭಾವಪ್ರಕಾಶವನವಧರಿಸಿದ ಅಚ್ಚಮಹೇಶ್ವರನ ಮಹದರುವಿನ ಮುಂದೆ,
ಕಾಮಾದಿ ಷಡ್ವರ್ಗಂಗಳಳಿದುಳಿದು ಬಂದು ಶರಣೆನುತ್ತಿಹವು,
ಅಸ್ತಿತೆಯಾದಿ ಷಡ್ಭಾವವಿಕಾರಂಗಳೆಲ್ಲ ಅಳಿದುಳಿದು
ಮಹಾನುಭಾವಕ್ಕೆ ಆಸ್ಪದವಾಗಿಹವು.
ಪಂಚೇಂದ್ರಿಯಂಗಳಳಿದುಳಿದು ಪೂರ್ವದವರ ಮೇಲೆ
ಶಸ್ತ್ರವ ಪಿಡಿದು ಶರಣೆನುತ್ತಿಹವು.
ದಶವಾಯುಗಳೆಲ್ಲ ಅಳಿದುಳಿದು ಪೂರ್ವದವರ ಮೇಲೆ
ಮುನಿದು ನಮೋ ನಮೋ ಎನುತ್ತಿಹವು.
ಕರಣ ಸಮೂಹಂಗಳಳಿದುಳಿದು ಸಹಾಯಿಗಳಾಗಿ ಶರಣೆನುತ್ತಿಹವು.
ಕಮರ್ೆಂದ್ರಿಯಂಗಳಳಿದುಳಿದು ಸದ್ಭಕ್ತರಾಗಿ ಸೇವೆಯನೆಸಗುತ್ತಿಹವು.
ಪಂಚವಿಷಯಂಗಳಳಿದುಳಿದು ಸುಖವದೋರಿ ಆನಂದಿಸುತ್ತಿಹವು.
ಇಂತು ಸಕಲಸನುಮತಸಂಬಂಧಿ ಗುರುನಿರಂಜನ ಚನ್ನಬಸವಲಿಂಗ./884
ಬಿಟ್ಟಾಡುವ ಮಡದಿಗೆ ಇಚ್ಫೆಗೈಯ್ದು ಕೊಟ್ಟು
ಸುಖಿಸಿಕೊಂಬ ಪರಿಯದಯ್ಯಾ !
ಲಿಂಗವನುಳಿದು ಅನ್ಯದೈವದೆಂಜಲಗೊಂಬ ಚನ್ನಕುನ್ನಿ
ಗುರುನಿರಂಜನ ಚನ್ನಬಸವಲಿಂಗಕ್ಕಂಗವನಿತ್ತು
ಮಂಗಲಗೊಂಬ ಇಂಗಿತವನೆತ್ತ ಬಲ್ಲದು ಹೇಳಾ!/885
ಬಿನ್ನವಳಿದು ತನ್ನನರಿದು ತಾನಾದ ಶರಣನು
ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ
ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ.
ಅಕಾಯಚರಿತ್ರನಾದ ಅನುಪಮಸುಖಿ
ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ
ಕನಿಷ್ಠವೆಂಬವೇನು ಕಾಣದಿರ್ದವು ನೋಡಾ.
ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು.
ಇವರೆತ್ತ ಹೋಗುವರು ಎತ್ತ ಬರುವರು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ./886
ಬಿಳಿಯಶೃಂಗಾರದಂಗನೆ ಸಂಗವಮಾಡಿ ಕುಲಗೆಟ್ಟಳು ನೋಡಾ !
ಆರಾರ ಮನೆಯ ಹೊಕ್ಕು, ಅಲ್ಲಲ್ಲೆ ನಲ್ಲರ ಕೂಡಿ
ಉಂಡು ಭೋಗವ ಮಾಡುತ್ತಿರಲು,
ಗಂಡಸಹಿತ ಮಾವ ಮುತ್ತೆಯರು ಬಂದು ಬಂದು ಕಾಡಿದರೆ
ಮಂಡಲಪತಿಗೊಂದು ಲಕ್ಷವನಿಟ್ಟು ಕಾಲು ಕೈಹಿಡಿದು,
ವೀಳ್ಯೆಯಿಂದೆ ಅವರ ಮನ್ನಿಸಿ,
ಕಪ್ಪವ ಕೊಟ್ಟು, ಒಲುಮೆಯ ಪಡೆದು ಓಲಾಡುತಿರ್ವಳು ನೋಡಾ,
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಾದಿಕುಳದಂಗನೆ ನೋಡಾ ! /887
ಬೆಂದವ ಬೇಯಿಸಬಂದವರ ನಿಂದವರ ನಿಲಿಸಬಂದವರ ಸತ್ತವರ ಕೊಂದು
ಕಂಗಳನೀರ ತಲೆಗೆ ಎರೆದವರ, ಕೈಯೊಳು ಕೈಭಾಷೆಯನಿತ್ತು
ಕಡೆಗಾಣಿಸಿಕೊಂಡವರ
ನಡೆಗತಿಯ ಮಂಡೆಯೊಳಿಟ್ಟು ಸಡಗರದ ಸುಖದ ಸೊನ್ನೆಯಲ್ಲಿ ಸಯವಾದೆ
ಗುರುನಿರಂಜನ ಚನ್ನಬಸವಲಿಂಗದಾದಿಯ ಪಡೆದವರ./888
ಬೆಂದು ಹೋಯಿತ್ತೆ ಪಟ್ಟಣ ! ಚಂದವಳಿಯಿತ್ತೆ ಅರಸಿನ !
ಅಂದಗೆಟ್ಟಿತ್ತೆ ರಾಣಿವಾಸ !
ಸುಂದುಗವಿಯಿತ್ತೆ ಸಕಲ ಪರಿಜನರ ಗರ್ಜನೆ !
ಪರವಾಯಿತ್ತೆ ಗಜನೇರಿ ಮೆರೆವ ಮಂತ್ರಿಯ ಸಿರಿಸಂಪತ್ತು !
ಅರಿಯಬಂದನೆ ನಿರಂಜನ ಚನ್ನಬಸವಲಿಂಗ !
ತನ್ನಿಂದ ತನ್ನ ಮೊರೆಯ ಹೋಗುವ ಬನ್ನಿ./889
ಬೆಡಗಿನ ಕೀಲಿವಿಡಿದು ಬಂದು ಕಂಡವರ ಕಲ್ಯಾಣದ
ಅಡಿಗತಿಯನರಿಯದೆ ಅನಿತ್ಯಕಲ್ಯಾಣವೆಂದು
ಸುಡುಗಾಡದಲ್ಲಿ ಅಟ್ಟುಂಬ ಕಸಮನುಜರು
ನಿತ್ಯಕಲ್ಯಾಣದ ಸತ್ಯ ಶರಣರಿಗಿತ್ತು ಕೊಂಬ
ಚಿತ್ತವನವರೆತ್ತಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗಾ./890
ಬೆಳಗಿನ ಬೆಳಗಿನ ಬೆಳಗಿನಲ್ಲಿ ಹೊಳೆವ ಇಳೆ
ನಿರಂಜನ ಲಿಂಗವ, ಕರ ಮನ ಭಾವದಲ್ಲಿ ಕಂಡು,
ಆದಿಯಾಧಾರ ಚೈತನ್ಯಕ್ಕರಿದರಿದೀವ ಪರಮಮಹೇಶ್ವರಂಗೆ
ನಮೋ ನಮೋ ಎಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.
/891
ಬೆಳಗಿಲ್ಲದ ಬೆಳಗಿನ ಮನೆಯಲ್ಲಿ ಇಳೆಯಾಂಬರ ನಿಸ್ಸಾರದೇವ
ಬಳಿವಿಡಿಯೆ ಕರ್ಮಕ್ಕನುಗೆಯ್ದ ಸುಖರತಿಯ ಬೆಳಗ
ಹೇಳಲಾರಳವಲ್ಲ ಕೇಳಲಾರಳವಲ್ಲ ನೋಡಲಾರಳವಲ್ಲ ಕೂಡಲಾರಳವಲ್ಲ
ಗುರುನಿರಂಜನ ಚನ್ನಬಸವಲಿಂಗವ ಭಿನ್ನವಿಟ್ಟು.
/892
ಬೇಕೆನ್ನದ ಬೇಡೆನ್ನದ ಬಾ ಹೋಗೆಂಬ
ಆಗು ಹೋಗಿನ ಸೋಗಿನ ಸೊಮ್ಮಿನವನಲ್ಲ ಕಾಣಾ ನಿಮ್ಮ ಶರಣ.
ಮಾತಿನ ಮಲಕಿನ ನೀತಿಗೆ ಸೋತು
ಅರಿದವನಲ್ಲ ನಿಮ್ಮ ಶರಣ.
ಕಾಯದಂಡನೆ ಬಾಯಮುದ್ರೆ ಭಿನ್ನಭಾವಿಯೆಂಬ
ಮಾಯೆಯ ಭ್ರಮೆಗೆ ಮನವಿಟ್ಟವನಲ್ಲ ನಿಮ್ಮ ಶರಣ.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣನ ಪರಿ ಅವಲೋಕದೊಳಗೂ ಇಲ್ಲ ಕಾಣಾ. /893
ಬೇಡಲಿಲ್ಲದ ಭಕ್ತ ಮಾಡಲನುಗೈದಲ್ಲಿ
ಗುರುಚರಣದ ಬರವನಂಗೈಸುವನಲ್ಲದೆ ರೂಪವನರಸ.
ಬೆಳಗಿನೊಳಗಿರ್ದವನಾಗಿ ಗುಣಧರ್ಮವರ್ಮವನರಸ,
ಹಮ್ಮು ಬಿಮ್ಮುಗಳ ಹವಣಿಲ್ಲವಾಗಿ,
ಸಮ್ಮುಖ ಸ್ವಯವನರಸ
ಗುರುನಿರಂಜನ ಚನ್ನಬಸವಲಿಂಗದ ಅಂಗವಾಗಿ./894
ಬೇರಿಲ್ಲದ ಗಂಡಂಗೆ ತೋರಿಮಾಡುವರಾರೂ ಇಲ್ಲ.
ಈ ಧರೆಯಿಂದಲರಿದು ಶರಣುಹೊಕ್ಕು ಸುಖಿಯಾದೆ.
ಈ ಜಲದಿಂದಲರಿದು ಶರಣುಹೊಕ್ಕು ಸುಖಿಯಾದೆ.
ಈ ತೇಜದಿಂದಲರಿದು ಶರಣುಹೊಕ್ಕು ಸುಖಿಯಾದೆ.
ಈ ಪವನದಿಂದಲರಿದು ಶರಣುಹೊಕ್ಕು ಸುಖಿಯಾದೆ.
ಈ ಅಂಬರದಿಂದಲರಿದು ಶರಣುಹೊಕ್ಕು ಸುಖಿಯಾದೆ.
ಗುರುನಿರಂಜನ ಚನ್ನಬಸವಲಿಂಗಾ
ನಿನ್ನ ಪಂಚಮುಖದಿಂದೆ ನಿನ್ನನರಿದು ಶರಣುಹೊಕ್ಕು
ಪರಮಸುಖಪರಿಣಾಮಿಯಾಗಿರ್ದೆನು ಕಾಣಾ./895
ಬೇರಿಲ್ಲದ ಲಿಂಗವ ಬೇರೆಮಾಡಿ ಪೂಜಿಸುವ
ತನುಸಂಬಂಧಿಗಳನೇನೆಂಬೆನಯ್ಯಾ !
ತನುಸಂಬಂಧವಾದಲ್ಲಿ ಮನವುಲಿವುದು,
ಭಾವ ಬೆರೆಸುವದು, ಬೆಸಿಗೆ ಬಿಚ್ಚುವದು,
ಗುರುನಿರಂಜನ ಚನ್ನಬಸವಲಿಂಗ ವೇದಿಸದೆ ಭಕ್ತಿ ಇತ್ತರವಾಗಿಪ್ಪುದು./896
ಬೇರಿಲ್ಲದ ಲಿಂಗಸಾರಾಯಸುಖಿ ತಾನೆಂದರಿಯದೆ
ಪಂಚಭೂತ ಪ್ರಕೃತಿಕಳಾನ್ವಿತ ತಾನೆಯಾಗಿ
ಇದು ಲಿಂಗ ನಾನು ದೇಹಿ, ಇದು ನಿರ್ಮಳ ನಾನು ಮಲಿನ,
ಇದು ಬೇರೆ ನಾನು ಬೇರೆಂದು,
ಇಲ್ಲದ ಸಂಶಯ ಸಂಬಂಧಿಸಿಕೊಂಡು
ನಾ ಕೆಟ್ಟೆನು ನಾ ಮುಟ್ಟೆನು ನಾ ಬಿಟ್ಟೆನು ಎಂದು
ಕುಟಿಲಕರ್ಮ ಕಷ್ಟದಿಂದೆ ಕಾಣಲಿಲ್ಲ ಕೇಳಲಿಲ್ಲ
ಮಾಡಲಿಲ್ಲ ಕೂಡಲಿಲ್ಲದ ಮೂಢ ಮರುಳುಗಳು ಶರಣರೆಂತಪ್ಪರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./897
ಬೇರಿಲ್ಲದ ವೃಕ್ಷಕ್ಕೆ ಹಾರಲಿಲ್ಲದ ಪಕ್ಷಿ ಸಾರಿರ್ದ ಸಂಬಂಧವ ನೋಡಾ!
ನೀರಿಲ್ಲದೆ ಪಸರಿಸಿ ಗಂಧವಿಲ್ಲದ ಕುಸುಮದಿಂದಾದ
ಸಾರವಿಲ್ಲದ ಹಣ್ಣ ಸೇವಿಸುವದು ನೋಡಾ.
ಊರಿಲ್ಲದ ಹಾರುವ ಬೇರಿಲ್ಲದ ಉಂಗುಷ್ಠದಿಂದೆ
ತೋರಿ ತೋರಿಕೊಂಡು ಸುಖಿಸಿದ
ಗುರುನಿರಂಜನ ಚನ್ನಬಸವಲಿಂಗದಲ್ಲಿ./898
ಬೊಮ್ಮತಿಮ್ಮರರಿಯಬೇಕೆಂದು ಅಡರಿಹೊಕ್ಕು
ಕಂಗೆಟ್ಟು ಬಳಲಿ ಅಂಗಭಂಗವಾದುದರಿಯದೆ
ಹಾದಿ ಬೀದಿಯವೊಡ ಕೇಳಿ ಸಾಧಿಸಿ
ಕಂಡೆನೆಂಬ ಭೇದವಾದಿಗಲನೇನೆಂಬೆನಯ್ಯಾ?
ನಾದಬಿಂದುಕಲಾತೀತ ನಿಜಾನಂದ ನಿರ್ಮಲ
ಅಖಂಡತೇಜೋಮಯಲಿಂಗವ
ಆದಿಮುಖದಿಂದೆ ಸಾಧಿಸಿಕೊಂಡರಿದು
ಅಂಗ ಮನ ಭಾವಂಗಳಲ್ಲಿ ಸಂಗಸಂಯೋಗಿಯಾದ
ಮಂಗಳಮಹಿಮ ಶರಣರಿಗಲ್ಲದೆ ಅರಿಯಬಹುದೆ
ಗುರುನಿರಂಜನ ಚನ್ನಬಸವಲಿಂಗಾ?/899
ಬ್ರಹ್ಮನಂತೆ ವಿಷ್ಣುವಿನಂತೆ ರುದ್ರನಂತೆ ಇಂದ್ರ ಚಂದ್ರ ಸೂರ್ಯನಂತೆ
ಪಾವುಗೆಯ ಪಾದದಲ್ಲಿ ಧರಿಸಿ ಚರಿಸುತಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./900
ಬ್ರಹ್ಮನಂಶವ ಸವರಿ ಸತ್ಯಲೋಕವ ಸುಟ್ಟು ಅಲ್ಲಿಪ್ಪಜನರ ಕೊಳುಕೊಟ್ಟು,
ವಿಷ್ಣುವಿನಂಶವ ಸವರಿ ವೈಕುಂಠವ ಸುಟ್ಟು ಅಲ್ಲಿಪ್ಪ ಜನರ ಕೊಳುಕೊಟ್ಟು,
ರುದ್ರನಂಶವ ಸವರಿ ಕೈಲಾಸವ ಸುಟ್ಟು ಅಲ್ಲಿಪ್ಪ ಜನರ ಕೊಳುಕೊಟ್ಟು,
ಹಾಳು ದೇಶದೊಳಗಿರ್ದ ಮೂರುಪುರವ ತುಂಬಿಸಿ
ಮೂರುದೊರೆಗಳ ಮುಂದಿಟ್ಟು ತೂಗಿಸ್ಯಾಡಬಲ್ಲರೆ
ಅದೇ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗಸಂಬಂಧ. /901
ಬ್ರಹ್ಮಮಂಡಲದ ಪರಿಜನಪ್ರಮೋದವಳಿದು,
ವಿಷ್ಣುಮಂಡಲದ ವಿಷಮರುಗಳಳಿದು,
ರುದ್ರಮಂಡಲದ ನಿದ್ರಾಮುದ್ರದ ಭದ್ರ ಬಿಚ್ಚಿ,
ಶುದ್ಧನಿರ್ಮಳವಜಡವಾದಲ್ಲಿ
ಚಿದ್ರಮಣ ಗುರುನಿರಂಜನ ಚನ್ನಬಸವಲಿಂಗ ತಾನೆ ಬೇರಿಲ್ಲ./902
ಭಂಗಭರಿತರ ಮಾತನೇನೆಂಬೆ ನೋಡಾ.
ಭವಸಂಪ್ರೀತರ ಮಾತನೇನೆಂಬೆ ನೋಡಾ.
ಯೋನಿಸೂತಕರ ಮಾತನೇನೆಂಬೆ ನೋಡಾ.
ಪ್ರಮಥರ ನಡೆನುಡಿಯೈಕ್ಯ ಪ್ರಮಥರಿಗೆ ಸರಿ
ನಮಗಾಗಬಲ್ಲುದೇ ಹೇಳಾ ಎಂಬುವರು.
ತನುವೊಂದು ಜ್ಞಾನವೊಂದು ವೈರಾಗ್ಯವೊಂದು ಭಕ್ತಿಯೊಂದು
ಕಾರುಣ್ಯವೊಂದು ಆಚಾರವೊಂದು ಅನುಭಾವವೊಂದು ಸಮರಸವೊಂದು
ಮತ್ತೆ ಇನ್ನೊಂದು ಬೇರುಂಟೆ ಶಿವಾಂಶಿಕರಿಗೆ ಹೇಳಾ ?
ಇಂತಾ ಜಡಮೂಢಪ್ರಾಣಿಗಳ ಮಾತಿಂಗೆ ಮಾತ ನೀಡಲಾಗದು ಕಾಣಾ
ಪರಿಣಾಮ ಭರಿತಾಂಗರು ನಿಜಾಂತಃಪ್ರಿಯ ಚನ್ನಬಸವಲಿಂಗಾ./903
ಭಕ್ತ ಭವಿಯಾಗಲರಿಯನು, ಭವಿ ಭಕ್ತನಾಗಲರಿಯನು.
ಬೇವು ಸಿಹಿಯಾಗಲುಂಟೆ ?
ಭವಿಯ ತಂದು ಭಕ್ತನ ಮಾಡಿದರೆ ಮಾಟಕರ ನೋಟವ ಬಲ್ಲನೆ ?
ನೋಟಹೀನನ ಮಾಟ ಕೂಟಕ್ಕೆ ದೂರ
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದಖಂಡ ಭಕ್ತನಲ್ಲದೆ. /904
ಭಕ್ತನ ಶ್ರದ್ಧೆ ಗುರುಲಿಂಗಜಂಗಮವೇ ಪ್ರಾಣವೆಂಬುದು.
ಭಕ್ತನ ನಿಷ್ಠೆ ಪಂಚಾಕ್ಷರಿಯೇ ಪ್ರಾಣವೆಂಬುದು.
ಭಕ್ತನ ಸಾವಧಾನ ಪ್ರಸಾದವೇ ಪ್ರಾಣವೆಂಬುದು.
ಭಕ್ತನ ಅನುಭಾವ ರುದ್ರಾಕ್ಷಿಯೇ ಪ್ರಾಣವೆಂಬುದು.
ಭಕ್ತನ ಆನಂದ ಪಾದೋದಕವೇ ಪ್ರಾಣವೆಂಬುದು.
ಭಕ್ತನ ಸಮರಸ ಶ್ರೀ ವಿಭೂತಿಯೇ ಪ್ರಾಣವೆಂಬುದು.
ಇಂತು ಅಷ್ಟಾವರಣ ಪ್ರಾಣವಾಗಿ,
ನಡೆಯೇ ಪ್ರಕಾಶವಾಗಿರ್ದ ನಮ್ಮ
ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ./905
ಭಕ್ತನ ಸಮರಸ ಆಚಾರಲಿಂಗದಲ್ಲಿ,
ಮಹೇಶ್ವರನ ಸಮರಸ ಗುರುಲಿಂಗದಲ್ಲಿ,
ಪ್ರಸಾದಿಯ ಸಮರಸ ಶಿವಲಿಂಗದಲ್ಲಿ,
ಪ್ರಾಣಲಿಂಗಿಯ ಸಮರಸ ಜಂಗಮಲಿಂಗದಲ್ಲಿ.
ಶರಣನ ಸಮರಸ ಪ್ರಸಾದಲಿಂಗದಲ್ಲಿ,
ಐಕ್ಯನ ಸಮರಸ ಮಹಾಲಿಂಗದಲ್ಲಿ,
ಎನ್ನ ಸಮರಸ ಗುರುನಿರಂಜನ ಚನ್ನಬಸವಲಿಂಗದಲ್ಲಿ./906
ಭಕ್ತನಾಚಾರ ಜಂಗಮಲಿಂಗಸನ್ನಿಹಿತ,
ಜಂಗಮದಾಚಾರ ಲಿಂಗಜಂಗಮಸನ್ನಿಹಿತ,
ಷಟ್ಕೃಷಿ ಸತ್ಕಾಯಕವೇ ಮುಕ್ತಿಯ ಬೀಡು,
ಭಕ್ತಂಗಾದರು ಸತ್ಕಾಯಕವೇಬೇಕು, ಜಂಗಮಕ್ಕಾದರೂ ಸತ್ಕಾಯಕವೇಬೇಕು.
ಭಕ್ತಂಗಾಚರಣೆ, ಜಂಗಮಕ್ಕೆ ಸಂಬಂಧ.
ಅದೆಂತೆಂದೊಡೆ, ಜ್ಞಾನೋದಯವಾದ ಮಹಾತ್ಮನು
ಮಾಯಾನಿವೃತ್ತಿಯ ಮಾಡಿ
ತನುಸಂಬಂಧ ಸದ್ಗುರು ಸಮ್ಮುಖೋಪಾವಸ್ತೆಯನೆಯಿದು ಕಂಡು,
ತನುತ್ರಯವನಿತ್ತು ದೀಕ್ಷಾತ್ರಯಾನ್ವಿತನಾಗಿ ಬಂದು
ಸರ್ವಾಚಾರಸಂಪತ್ತು ಶೋಭನಲೀಲೆಯ ನಟಿಸುವಲ್ಲಿ
ಸ್ಥಲಸ್ಥಲಂಗಳ ತಾಮಸಸುಳುಹಿಂಗೆ ಸುಜ್ಞಾನಶಾಸ್ತ್ರವನು ಸುಚಿತ್ತದಲ್ಲಿ ಧರಿಸಿ
ಸಾಕಾರ ಸುದ್ರವ್ಯಂಗಳನು ನಿರ್ವಂಚಕತ್ವ ತ್ರಿಕರಣ ಶುದ್ಭಾತ್ಮಕದಿಂದೆ
ಸಗುಣಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ
ಶ್ರದ್ಧಾಭಕ್ತನಾಚಾರವಯ್ಯಾ.
ಆ ತದ್ಭಾವಸಮೇತ ನಿಜಲಿಂಗಜಂಗಮಸನ್ನಿಹಿತ
ಭೋಗೋಪಭೋಗಿಯಾಗಿಹುದೇ ಆಚಾರಲಿಂಗ ಜಂಗಮದ ಸ್ಥಲ.
ಇದು ಅಸಿಯೆಂಬ ವ್ಯಾಪಾರವಯ್ಯ.
ಆಚಾರಂಗ, ವಿಚಾರ ಮನ, ಸಮಯಾಚಾರ ಭಾವವೆಂಬ ನಿರ್ಮಲಸುಕ್ಷೇತ್ರಂಕನಾಗಿ
ಸಾವಧಾನಮುಖಸುಖಭಕ್ತಿಯಿಂದೆ
ಸಾಕಾರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ
ಸಾವಧಾನ ಪ್ರಸಾದಿಭಕ್ತನಾಚಾರವಯ್ಯಾ.
ತದ್ಭಾವಭರಿತನಾಗಿ ಸ್ವಯಂ ಲಿಂಗಜಂಗಮಸನ್ನಿಹಿತನಾಗಿಹುದೇ
ಶಿವಲಿಂಗಜಂಗಮಸ್ಥಲ.
ಇದು ಕೃಷಿಯೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ಭೇದಾಭೇದ ಸದ್ವಿವೇಕಮುಖ ಲೇಖನ ಸ್ಥಾಪ್ಯ
ನಿರ್ಮಲನಿಷ್ಟಾಂಗನಾಗಿ ವೀರಜಂಗಮಲಿಂಗಸನ್ನಿಹಿತ
ಭೋಗೋಪಭೋಗಿಯಾಗಿಹುದೇ ನಿಷ್ಠಾಮಹೇಶ್ವರ ಭಕ್ತನಸ್ಥಲ.
ಅಂತಪ್ಪ ನಿಷ್ಠಾಂಗಮಂತ್ರಮೂರ್ತಿಯಾಗಿ
ನಿಜಲಿಂಗಜಂಗಮಭೋಗೋಪಭೋಗಿಯಾಗಿಹುದೇ ಗುರುಲಿಂಗಜಂಗಮಸ್ಥಲ.
ಇದು ಮಸಿಯೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ದಶವಾಯುವಿನ ದಂದುಗವನು
ಸುಜ್ಞಾನಕ್ರಿಯಾಸಂಭಾಷಣೆಯಲ್ಲಡಗಿಸಿ
ಅಷ್ಟ ಕುಶಬ್ದ ಬಾಹ್ಯಪ್ರಣವ ಪರಿಪೂರ್ಣನಾಗಿ
ಅನುಭಾವಭಕ್ತಿಯಿಂದೆ, ಸತ್ಯಜಂಗಮಲಿಂಗಸನ್ನಿಹಿತ
ಭೋಗೋಪಭೋಗಿಯಾಗಿಹುದೇ ಪ್ರಾಣಲಿಂಗಿಭಕ್ತನಸ್ಥಲ.
ತದ್ಭಾವ ಪರಿಪೂರ್ಣನಾಗಿ ಅನುಭಾವ ಲಿಂಗಜಂಗಮ
ಭೋಗೋಪಭೋಗಿಯಾಗಿಹುದೇ ಚರಲಿಂಗ ಜಂಗಮಸ್ಥಲ.
ಇದು ವಾಣಿಜ್ಯತ್ವವೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ಅವಿರಳತ್ವದಿಂದೆ ಏಕೋತ್ತರಶತ ಸಕೀಲ
ಸರ್ವಕಲಾಬಿಜ್ಞತೆಯಾತ್ಮಕನಾಗಿ,
ಚಿದೇಂದ್ರಿ ಚಿತ್ಕರಣ ಚಿದ್ವಿಷಯಾನಂದಪ್ರಸಾದಕ್ಕೆ
ಸುಜ್ಞಾನದಿಂ ಕಾಮ್ಯಾಂಗನಾಗಿ ಜಂಗಮಲಿಂಗ ಭೋಗೋಪಭೋಗಿಯಾಗಿಹುದೇ
ಶರಣ ಭಕ್ತನಾಚಾರವಯ್ಯ.
ತದ್ಭಾವಾತ್ಮಕನಾಗಿ ಆ ವೀರ ಲಿಂಗಜಂಗಮ ಭೋಗೋಪಭೋಗಿಯಾಗಿಹುದೇ
ಪ್ರಸಾದಲಿಂಗ ಜಂಗಮಸ್ಥಲ.
ಇದು ಯಾಚಕತ್ವವೆಂಬ ವ್ಯಾಪಾರವಯ್ಯಾ.
ಸ್ಥಲಸ್ಥಲಂಗಳಲ್ಲಿ ಅಹಂಭಾವವಳಿದು ಸೋಹಂಭಾವವನುಳಿದು,
ದಾಸೋಹಂಭಾವಭರಿತನಾಗಿ ತನುಮನಧನದ
ಮಾಟ ನೋಟ ಕೂಟ ಶೂನ್ಯನಾಗಿ
ಘನಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ
ಐಕ್ಯಸ್ಥಲದಾಚಾರವಯ್ಯಾ.
ತದ್ಭಾವಪೂರ್ಣನಾಗಿ ಸರ್ವಶೂನ್ಯತ್ವದಿಂದೆ
ನಿರಾಮಯಲಿಂಗಜಂಗಮ ಭೋಗೋಪಭೋಗಿಯಾಗಿಹುದೇ
ಮಹಾಲಿಂಗಜಂಗಮಸ್ಥಲ.
ಇದು ಗೋಪಾಲತ್ವವೆಂಬ ವ್ಯಾಪಾರವಯ್ಯಾ.
ಈ ಭೇದವನರಿಯದೆ ಭಕ್ತನೆನಿಸಿ ವರ್ತಿಸುವ ಪ್ರಾಣಿ ಅನಾಚಾರಿ.
ಈ ಭೇದವನರಿಯದೆ ಕಾಯ ಕಂದಿಸಿ ಮನವ ಸಂಸಾರಕ್ಕಿಕ್ಕಿ
ಭಾವ ಭ್ರಾಂತಿಗೊಂಡು ಮಾಟಕೂಟವ ಹೊತ್ತು ತಿರುಗುವ ಪ್ರಾಣಿ ಅಜ್ಞಾನಿ.
ಈ ಉಭಯವನರಿಯದೆ ಸಂಬಂಧವನು ಅಸಂಬಂಧವ ಮಾಡಿ,
ಅಸಂಬಂಧವನು ಸಂಬಂಧವ ಮಾಡಿಕೊಟ್ಟು ಹಿರಿಯನೆನಿಸುವವ ಮೂಢಪ್ರಾಣಿ.
ಇದು ಕಾರಣ ಈ ಅನಾಚಾರಿ ಅಜ್ಞಾನಿ
ಮೂಢ ಪ್ರಾಣಿಗಳ ನೋಡಿ ನಗುತಿರ್ದರು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು./907
ಭಕ್ತನೆಂದು ಯುಕ್ತನೆಂದು ವ್ಯಕ್ತನೆಂದು ಮುಕ್ತನೆಂದು
ಹೇಳುವರಲ್ಲದೆ ಬಾಳುವರಿಲ್ಲ ನೋಡಾ.
ಬಾಳುವೆ ಬರಿದಾಯಿತ್ತು ಮೂರು ಘಳಿಗೆಯೊಳಗೆ ಶರಣೆಂದು ನಿಂದಲ್ಲಿ.
ಶರಣನು ಶರಣೆನ್ನಬಲ್ಲರೆ ಭಕ್ತ, ತಾರದಿರ್ದಡೆ ಯುಕ್ತ,
ನೋಡದಿರ್ದಡೆ ವ್ಯಕ್ತ, ಹೀಗೆಂಬುದ ಮರೆದಡೆ ಮುಕ್ತ ನೋಡಾ
ಗುರುನಿರಂಜನ ಚನ್ನಬಸವಲಿಂಗಾ./908
ಭಕ್ತಿ ಜ್ಞಾನ ವೈರಾಗ್ಯ ಕ್ರಿಯಾಪೀಠಕತರ್ುಮೂರ್ತಿಯ
ವರ್ತನೆಯ ಹೊತ್ತು ನಿಂದಲ್ಲಿ ಸತ್ಯಾಸತ್ಯ ವಿವೇಕಮುಖನಾಗಿರಬೇಕು.
ಬಂದ ನಿಜಜ್ಞಪ್ತಿನಿಲುವನರಿವಡೆ ಸುಜ್ಞಪ್ತಿ ಮುಕುರವೆಂಬ ಹೃದಯವೊಳಗುಂಟು.
ಮತ್ತೆ ನಾದವನೊರೆದು ನೋಡುವರೆ ಜ್ಞಾನಪದವುಂಟು.
ಬಿಂದುವನೊರೆದು ನೋಡುವರೆ ಕ್ರಿಯಾಪದವುಂಟು.
ಕಳೆಯನೊರೆದು ನೋಡುವರೆ ಚರ್ಯಾಪದವುಂಟು.
ಆತ್ಮನನೊರೆದು ನೋಡುವರೆ ಅನಾದಿರೂಪುಂಟು.
ಮತ್ತೆ ಹೀಗಿದರ್ು ಇದರ ರುಚಿಯನುಳಿದು
ರೂಪವ ಹೊತ್ತುವಂದು ವಿಷಯಕೆ ಸಂದಿಸಿಕೊಂಡು
ಮಾಡಿ ತೋರಿ ನಿಲಿಸಿದೆವೆನುತ ಬೇಡಿ ಕಾಡಿ ಬೇರೆ ಕೂಡೆಂದು
ಸೆಳೆಸೆಳೆದು ಒಡಲ ಹೊರವ ತುಡುಗುಣಿಗಳು ಗುರುತ್ವಕ್ಕೆ ಸಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ./909
ಭಕ್ತಿ ಜ್ಞಾನ ವೈರಾಗ್ಯವುಳ್ಳಾತನೆ ಗಂಭೀರ,
ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ಅಂಗಮೂರರ ಸಂಗಸೌಖ್ಯವನರಿಯಬಾರದು.
ಅದೆಂತೆಂದೊಡೆ:ಅಡಿಯಿಟ್ಟು ಬಂದ ಗುರುಲಿಂಗಜಂಗಮಕ್ಕೆ
ಸ್ಥೂಲತನುತ್ರಯವ ಸೂರೆಮಾಡಿದ ಬರವನರಿದು
ಸಮುಖರತಿ ಸಂಧಾನಸುಖವನರಿಯಬಲ್ಲರೆ ಭಕ್ತಿಗಂಭೀರನಹುದೆಂಬೆ.
ಸೂಕ್ಷ್ಮತನುವ ಸುಜ್ಞಾನದೊಳಿಟ್ಟು ಸುಯಿಧಾನವೆರೆದು
ಅವರಂತಸ್ಥಕ್ಕೊತ್ತೆಗೈದು ಒಲುಮೆಯ ಬರವನರಿದು
ಘನರತಿಸಂಬಂಧಸುಖವನರಿಯಬಲ್ಲರೆ ಜ್ಞಾನಗಂಬಿರನೆಂಬೆ.
ಕಾರಣತನುವನು ನಿಃಸಂಕಲ್ಪ ನಿರ್ವಂಚನೆ ನಿಭರ್ೆದವೆಂಬ ಸತ್ಯಜ್ಞಾನದಲ್ಲಿರಿಸಿ
ಮಿಥ್ಯಮಮಕಾರವ ಛೇದಿಸಿ ಸದ್ಭಾವಗೂಡಿ
ಅವರ ಮಹಾನುಭಾವಕ್ಕೊತ್ತೆಗೈದು ಹರುಷರಸಬರವನರಿದು
ನಿರ್ಭಾವರಸವೆತ್ತಿ ನಿರ್ವಾಣಸುಖಸಮರಸವ ಬಲ್ಲರೆ
ಆತ ವೈರಾಗ್ಯ ಗಂಭೀರನೆಂಬೆ.
ಈ ಸೌಭಾಗ್ಯತ್ರಯವನುಳ್ಳಾತನೆ ಚೆಲುವಂಗ ಪ್ರಾಣಾತ್ಮಪ್ರಿಯ
ಸಿದ್ಧಲಿಂಗ ತಾನೆ ಬೇರಿಲ್ಲ./910
ಭಕ್ತಿತ್ರಯದಲ್ಲಿ ಯುಕ್ತರಾದ ಮಹಿಮರು : ಇಹಪರದಲ್ಲಿ ಚಂದ್ರನ ಇರವು ಸಕಲರಿಗೆ,
ಇಹಪರದಲ್ಲಿ ಸೂರ್ಯನಿರವು ಸಕಲರಿಗೆ,
ಇಹಪರದಲ್ಲಿ ಅಗ್ನಿಯಿರವು ಸಕಲರಿಗೆ,
ಇಹಪರದಲ್ಲಿ ಗುರುನಿರಂಜನ ಚನ್ನಬಸವಲಿಂಗದಂಗದಿರವು
ಸಕಲನಿಃಕಲರಿಗೆ./911
ಭಕ್ತಿಯ ಮಾಡುವವರ ಮನವೇ ಗುರುಚರಲಿಂಗಕ್ಕೆ ಪೀಠವಾಗಿಹುದು.
ಆ ಪೀಠವ ಸೆಳೆದು ತನುವಿಷಯ ಮೋಹಕ್ಕೆ ಚಾಚಿದರೆ
ಕೆಡುವುದು ತ್ರಿವಿಧದ ನಿಲುವು, ಹಿಡಿವುದು ರಾಹು ಚಂದ್ರನ ಲೋಕಕ್ಕೆ ರಾವಳ.
ಕಾಣಬಾರದು ಗುರುನಿರಂಜನ ಚನ್ನಬಸವಲಿಂಗವನು ನಿಮಿಷವಾದರು./912
ಭಕ್ತಿಯಲ್ಲಿ ಬಂದು, ಜ್ಞಾನದಲ್ಲಿ ಬೆಳೆದು,
ವೈರಾಗ್ಯದಲ್ಲಿ ಅಡಗಿರ್ದ ಅಪ್ರತಿಮಶರಣ.
ಅರಿದು ಮಾಡುವನಲ್ಲ, ಹರಿದುಬಿಟ್ಟವನಲ್ಲ, ತೋರಿಸಿಕೊಂಬುವನಲ್ಲ.
ಲೋಕದೊಳಗಿರ್ದು ಲಿಂಗದೊಳಗಿರ್ದ ನಿಲವನಾರು ಬಲ್ಲರು ಹೇಳಾ !
ಬೇಕುಬೇಡೆನ್ನದ ಮೂಕಮಾತನಲ್ಲ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./913
ಭಕ್ತಿಯೆಂಬುದು ತನುಗತಿ, ಯುಕ್ತಿಯೆಂಬುದು ಮನಗತಿ,
ವಿರಕ್ತಿಯೆಂಬುದು ಭಾವಗತಿ – ಇವು ಒಂದೊಂದು ಲೀಲೆ.
ಈ ಲೀಲೆಯನರಿದಿರುವನ್ನಕ್ಕರ ಲೋಲಮುಖಮಯ ಮುಂದಿಪ್ಪುದು
ಇದು ಕಾರಣ ಈಸುವನೋಸರಿಸದೆ ನೀವಾಗಿರ್ದ ಭಾವ ಅದೇ ಸದ್ಭಾವ
ಗುರುನಿರಂಜನ ಚನ್ನಬಸವಲಿಂಗಾ./914
ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ.
ಇಂಬಿಲ್ಲ ಇಂಬಿಲ್ಲ ನೋಡುವರೆ ನುಡಿಸುವರೆ.
ಎಲೆದೋರದ ವೃಕ್ಷ ಫಲವಾಗಿ ಕಾಣಿಸಿಕೊಳ್ಳದು.
ಬಂದರೇನು ನಿಂದರೇನು ಭೋಗಿಸಿದರೇನು ಅಂದಂದಿಗೆ ಆರೂಢ ತಾನೆ
ಗುರುನಿರಂಜನ ಚನ್ನಬಸವಲಿಂಗ./915
ಭಕ್ತಿವಿಹೀನ ಕಾಯಕ್ಕೆ ಲಾಂಛನವಿರ್ದಡೇನು?
ನೆನಹಿಲ್ಲದ ಮನಕ್ಕೆ ವಿನಯನುಡಿ ಘನವಿರ್ದಡೇನು?
ಆಪ್ಯಾಯನಕ್ಕರಿಯದ ದ್ರವ್ಯ ಅನಂತವಿರ್ದಡೇನು?
ಬೂರದ ತರು, ಸಾರವಿಲ್ಲದ ಸಿಂದಿಯಗಿಡ, ಸೂಳೆ, ಸರ್ಪನ ತೆರ.
ಗುರುನಿರಂಜನ ಚನ್ನಬಸವಲಿಂಗದಲ್ಲಿ, ಅಂತಲ್ಲ ನಿಜಭಕ್ತನಿರವು./916
ಭಕ್ತಿಸ್ಥಲವುಳ್ಳಂಗೆ ತನುಮನಧನದಾಸೆ ಶತ್ರು ಕಾಣಾ.
ಮಹೇಶ್ವರಸ್ಥಲವುಳ್ಳವಂಗೆ ಪರಧನ ಪರಸತಿ
ಪರದೈವವೆಂಬಿವರ ಕಾಂಕ್ಷೆಯೇ ಶತ್ರು ಕಾಣಾ.
ಪ್ರಸಾದಿಸ್ಥಲವುಳ್ಳವಂಗೆ ಸದ್ವಿವೇಕ ಸಾವಧಾನದ ಮರವೆಯೇ ಶತ್ರು ಕಾಣಾ.
ಪ್ರಾಣಲಿಂಗಸ್ಥಲವುಳ್ಳವಂಗೆ ವಾಯ್ವೇಂದ್ರಿಯಪ್ರಕೃತಿಯೇ ಶತ್ರು ಕಾಣಾ.
ಶರಣಸ್ಥಲವುಳ್ಳವಂಗೆ ಸಕಲವು ಬಿಡುಗಡೆವಿರಹಿತವೆ ಶತ್ರು ಕಾಣಾ.
ಐಕ್ಯಸ್ಥಲವುಳ್ಳವಂಗೆ ಉಭಯದ ಕುರುಹೇ ಶತ್ರು ಕಾಣಾ.
ಇಂತು ಸ್ಥಲವರಿತು ನಿಂದ ಶರಣಂಗೆ ಸಕಲ ನಿಃಕಲಸನುಮತ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಾಣಾ./917
ಭವಿಯ ಸಂಪರ್ಕವನರಿಯದ ಕಾಯ, ಪರಸ್ತ್ರೀಯ ಸಂಗಕ್ಕೆಳಸದ ಮನ,
ಅನ್ಯಧನಮೋಹವನರಿಯದ ಪ್ರಾಣ, ಪರದೈವವನರಿಯದ ಭಾವ,
ಅನ್ಯಹಿಂಸೆಯನರಿಯದ ಆತ್ಮಸಯವಾದ ನಿಲುವಿಗೆ ಭಕ್ತಿಬೆರಸಿಪ್ಪುದು.
ಅಂಗಲಿಂಗವ ಹಿಂಗದೆ ಮರೆದು ಸಂಗಸುಯಿಧಾನಿ
ಗುರುನಿರಂಜನ ಚನ್ನಬಸವಲಿಂಗವಿಡಿದು./918
ಭವಿಯಕಳೆದು ಭಕ್ತನಾದೆವೆಂದು ಭವಿಯೊಡನೆ ಬೆರೆಸಿದವರಿಗೆಂದು,
ಪರದ್ವಾರ ಹಿಂಸೆ ಹುಸಿ ಕಳವು ದುರ್ಭಕ್ಷಯುಕ್ತರಿಗೆಂದು,
ಪರದೈವ ಪೂಜೆ, ಪರಸಮಯಚರಿತೆಯುಳ್ಳವರಿಗೆಂದು,
ವೈತರಣಿ, ಕುಂಬಿ, ರೌರವಗಳಾಗಿರ್ದವು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./919
ಭಾವಮರೆದು ಭಕ್ತಿಯ ಮಾಡುವರು;
ಬರುಕಾಯರಿಗೆ ಸುಖವೆಲ್ಲಿಹದೋ!
ಭಾವಮರೆದು ಪೂಜೆಯ ಮಾಡುವರು;
ಹುಸಿಮನಯುಕ್ತರಿಗೆ ರತಿಪ್ರೇಮವೆಲ್ಲಿಹದೊ!
ಭಾವಮರೆದು ದಾಸೋಹವ ಮಾಡುವರು;
ಭ್ರಾಂತಂಗೆ ಪರಿಣಾಮವೆಲ್ಲಿಹದೊ!
ಭಾವಮರೆದು ಗುರುನಿರಂಜನ ಚನ್ನಬಸವಲಿಂಗಕ್ಕರ್ಪಿಸಿಕೊಂಡೆವೆಂಬುವರು
ದ್ವೈತರು ಪ್ರಸಾದವೆಲ್ಲಿಹದೊ! /920
ಭಾವವುಳ್ಳರೆ ಭಕ್ತನಾಗಲಿ, ಭಾವವುಳ್ಳರೆ ವಿರಕ್ತನಾಗಲಿ,
ಭಾವವುಳ್ಳರೆ ಮತ್ತೇನೇನಾದರು ಆಗಲಿ.
ಭಾವವೊಂದನುಳಿದು ಬಂದರೇನು ನಿಂದರೇನು ಹೋದರೇನು
ಮಾರುತ ಮಾರುತ ಗುರುನಿರಂಜನ ಚನ್ನಬಸವಲಿಂಗ./921
ಭಿಕ್ಷಕ್ಕೆ ಬಂದಾ ಚರಮೂರ್ತಿಗಳ ಕಂಡು
ಕುಕ್ಷಿಯಲ್ಲಿ ಮರಗುವ ಯಕ್ಕಲನರಕಿಗಳಿಗೆತ್ತಣ ಉಪದೇಶವಯ್ಯಾ?
ಸುತ್ತಿರ್ದ ಪ್ರಪಂಚಕ್ಕೆ ಸವೆದು ಕರ್ತುಗಳಿಗೆ ಅರೆಕಾಸು ಸವೆಯದೆ
ನಾವು ನಿತ್ಯಭಕ್ತರೆಂದರೆ ಒತ್ತಿ ಹಾಕುವರು ಬಾಯಲ್ಲಿ ಹುಡಿಯಯ್ಯಾ ಯಮನವರು
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುಮರ್ುಖಿಗಳೆಂದು./922
ಭಿನ್ನಯೋಗಮಾಗರ್ಿಗಳಂತೆ ಹೃದಯ, ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ
ವಸ್ತುವ ಕಂಡು ಕೂಡಬೇಕೆಂಬ ವಾಗದ್ವೈತಿಯಲ್ಲ ನೋಡಾ.
ಅದೆಂತೆಂದೊಡೆ: ಪರಮಗುರುವಿನ ಕ್ರಿಯಾದೀಕ್ಷೆಯಿಂದೆ ಹೃದಯಕಮಲದಲ್ಲಿ
ನಿಃಕಲಗುರುವ ಕಂಡು ನಾನು ಗುರುಭಕ್ತಿಯ ಮಾಡುತಿರ್ದೆನಯ್ಯಾ.
ಪರಮಗುರುವಿನ ಮಂತ್ರದೀಕ್ಷೆಯಿಂದೆ ಭ್ರೂಮಧ್ಯದಲ್ಲಿ
ನಿಃಶೂನ್ಯಲಿಂಗವ ಕಂಡು ನಾನು ಲಿಂಗಭಕ್ತಿಯ ಮಾಡುತಿರ್ದೆನಯ್ಯಾ.
ಪರಮಗುರುವಿನ ವೇಧಾದೀಕ್ಷೆಯಿಂದ ಬ್ರಹ್ಮರಂಧ್ರದಲ್ಲಿ
ನಿರಂಜನಜಂಗಮವ ಕಂಡು ನಾನು ಜಂಗಮಭಕ್ತಿಯ ಮಾಡುತಿರ್ದೆನಯ್ಯಾ.
ಇಂತು ಸತ್ಕ್ರಿಯಾಸುಜ್ಞಾನವನುಳಿದು ನಡೆವ ಗತಿಯೆನಗಿಲ್ಲವಯ್ಯಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ./923
ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ
ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ.
ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ ಬಂಧನ ಬಪ್ಪುದು ತಪ್ಪದು.
ಅಂದಂದಿನ ಮಾತು ಇಂದುಳಿವನಲ್ಲ,
ಸಂದುಸಂಶಯ ನಿಂದುರುಹಿದ ನಿಷ್ಠೆಯೆನಗುಂಟು
ಗುರುನಿರಂಜನ ಚನ್ನಬಸವಲಿಂಗದಲ್ಲಿ./924
ಭುವನ ಬ್ರಹ್ಮಾಂಡ ಸಚರಾಚರ ಸಗುಣ ನಿರ್ಗುಣ
ಸಕಲ ಸಂಪತ್ತೆಲ್ಲ ಜಲಪ್ರಳಯಗೊಂಡಿತ್ತು ನೋಡಾ.
ಆ ಜಲ ಪಾವಕಂಗಾಹುತಿಯಾಯಿತ್ತು.
ಆ ಪಾವಕನ ಪ್ರಭಾಮಂಡಲದಲ್ಲಿ ಪರಿಪೂರ್ಣತ್ವಾನಂದ ಪ್ರಕಾಶವೆರೆದು
ಆಯತ ಸ್ವಾಯತ ಸನ್ನಿಹಿತ ಸಮಾಧಾನವಾಗಿ
ನಿಂದ ನಿಲವರಿಯದೈಕ್ಯಪದ ನಿಜವಾಯಿತ್ತು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ./925
ಭುವನದ್ವಯ ತತ್ವದ್ವಯ ವರ್ಣದ್ವಯ ಮಂತ್ರದ್ವಯ
ಕಲಾದ್ವಯ ಪದದ್ವಯ
ನಿರಾಮಯ ನಿರುಪಮಾನಂದ ಸುಖಮಯ ಶರಣ ತಾನು
ಸಾಧ್ಯಾಸಾಧ್ಯ ಗಮನಕ್ಕೆ ಗೋಚರನಾಗಿ,
ಗಮನಾಗಮನ ಗರ್ಭಭರಿತ ಗಂಬಿರ ಗುಣಾರ್ಣವ
ಪರಮಜ್ಯೋತಿರ್ಲೆಂಗವಾಗಿರ್ದನಲ್ಲದೆ
ಪಂಚೇಂದ್ರಿಯವಿಷಯ ಗುಣಭರಿತನಾಗಿ
ಬಲ್ಲಂತೆ ಭುಲ್ಲವಿಸಿ ಚರಿಸುತ್ತ
ಅಲ್ಲಲ್ಲಿಗೊಂದೊಂದು ವ್ರತ ನಿಯಮಂಗಳ ಗಂಟಿಕ್ಕಿಕೊಂಡು
ಬಲೆಯೊಳು ಬಿದ್ದು ಹೋಗುವ ಫಲಪಿಸುಣಿಗಳಂತಲ್ಲ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣನ ಪರಿ ಆರಿಗೆಯೂ ಕಾಣಬಾರದು./926
ಭುವನಸಾರಾಯ ಹಾರುವರು ಭವನಸಾರಾಯಸುಖವನೆತ್ತ ಬಲ್ಲರು.
ವಿಹಂಗ ಹಂಸಗಳಂತೆ ಹೇಯದಲ್ಲಿ ಉದಿಸಿದ ಕ್ರಿಮಿಗಳು
ಅಲ್ಲಿಯೇ ಲಯವಲ್ಲದೆ ಮತ್ತೆ ಉಂಟೆ ?
ಗುರುನಿರಂಜನ ಚನ್ನಬಸವಲಿಂಗಾ./927
ಭುವನಾದಿ ಜನಿತ ನಿರ್ಮಲ ಪದಾರ್ಥವ ಮಾಡಿ
ಪರಮಾನಂದಪ್ರಸಾದಿ ಪರಿಪೂರ್ಣಲಿಂಗಕ್ಕೆ ಸಮರ್ಪಿಸಿ ಕೊಂಬುವನಲ್ಲದೆ,
ಭುವನಾದಿ ಜನಿತ ಗುಣಸಂಭವಿತನಾಗಿ
ಅನ್ಯಪದಾರ್ಥವನರಿದರಿದಾಯಾಸಗೊಂಡು ಕೊಂಬ
ದುರ್ವಿವೇಕಿಯಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ./928
ಭುವನಾಪಸಂಪರ್ಕಶೂನ್ಯವಾದಲ್ಲಿ ಬೀಜದಲ್ಲಿ ಅಂಕುರ ಪಲ್ಲೈಸದು.
ತನುಜ್ಞಾನಸಂಗಶೂನ್ಯಶರಣಂಗೆ ಸರ್ವಾಚಾರ ಪಲ್ಲೈಸದು.
ಮರಹನಳಿದುಳಿದ ಗುರುನಿರಂಜನ ಚನ್ನಬಸವಲಿಂಗ ಸಮರಸಕ್ಕೆ./929
ಭೂ ಪೃಥ್ವಿಯ ಸುಖ ಜಲದೊಳು ನಿಂದು,
ಅಗ್ನಿವಿಡಿದು, ಅನಿಲವೆರೆದು, ಅಂಬರಗೂಡಿ,
ಆತ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸಮರಸಾನಂದಸುಖಿ ನಿಮ್ಮ ಭಕ್ತ./930
ಭೂತ ಚಿದ್ಭೂತವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ.
ಇಂದ್ರಿಯ ಚಿದೇಂದ್ರಿಯವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ.
ಕರಣ ಚಿತ್ಕರಣವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ.
ವಿಷಯ ಚಿದ್ವಿಷಯವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ.
ವಾಯು ಚಿದ್ವಾಯುವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ.
ಸಕಲವೆಲ್ಲ ನಿಃಕಲವಾಗಿ ನಿರಂಜನದಲ್ಲಡಗಿತ್ತು ನಿರವಯವಾಗಿ,
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ನಾಮ ನಿರ್ನಾಮವಾಗಿ ನಿರ್ವಯಲಾದುದು./931
ಭೂತಪಂಚಕದ ಭಾವ, ಇಂದ್ರಿಯಪಂಚಕದ ಭಾವ,
ವಿಷಯಪಂಚಕದ ಭಾವ, ಕರಣಪಂಚಕದ ಭಾವ,
ವಾಯುಪಂಚಕದ ಭಾವವುಳ್ಳನ್ನಕ್ಕರ ಭಾವನಿರಾಮಯ ಶರಣ ತಾನೇ
ಗುರುನಿರಂಜನ ಚನ್ನಬಸವ ಲಿಂಗಾಂಗಸುಖಿ./932
ಭೂಪಾಲನ ಹೆಂಡತಿಯ ಭುಜದ ಮೇಲಿರ್ದ ಕೋಡಗ
ಗಾಲುಮೇಲಾದ ಶಾಖೆಗಳಿಗೆ ಲಂಘಿಸುವದು ನೋಡಾ!
ಕೋಡಗನ ನಾಭಿಯಲ್ಲಿ ಚಿಕ್ಕೆಮೂಡಿ ಚಂದ್ರನ ಕೂಡಲು
ದೇವಗನ್ನೆಯರು ಆರತಿಯ ಬೆಳಗುತಿರ್ದರು ನೋಡಾ!
ಆ ಬೆಳಗಿನೊಳಗೆ ಗುರುನಿರಂಜನ ಚನ್ನಬಸವಲಿಂಗವನಿದಿರುಗೊಳ್ಳಬಲ್ಲರೆ
ಪ್ರಾಣಲಿಂಗಿಯೆಂಬೆ ಕಾಣಾ. /933
ಭೂಮಿಯ ಕುಟ್ಟಿ ಶೋಧಿಸಿ ಕಂಡು,
ನೀರಜಲದಲ್ಲಿ ತೊಳೆದು ಹೊಳವಮಾಡಿ ಕಂಡು,
ಕೆಂಡವ ಸುಟ್ಟು ಬಯಲಮಾಡಿ ಕಂಡು,
ಎರಡು ಆಟವಾಡಿ ಬಯಲಾಟದಲ್ಲಿ ನಿಂದು ನೋಡಲು,
ಆಟನೋಟದೊಳು ಕೂಡಿ ಕೋಟೆಯಮೇಲಣ
ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಮಂಡಲಗಳಮಧ್ಯ ಝಗಝಗಿಸುತಿರ್ದ
ಗುರುನಿರಂಜನ ಚನ್ನಬಸವಲಿಂಗವ ಕಂಡು
ಕಣ್ಮುಚ್ಚಿ ಕರಗಿದ ನೋಡಾ ಅಚ್ಚಪ್ರಾಣಲಿಂಗಿ./934
ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು
ಮೂರು ಬಣ್ಣದ ಗಿರಿಯನೇರಿ,
ಮೂರೈದು ಗತಿಯಿಂದೆ ಉರಿಯಮಂದಿರದೊಳಗಿರ್ಪ
ಬಯಲಶೃಂಗಾರವ ಕಾಣಬಹುದೆ?
ಭೂಮಿಯ ನೆಳಲ ಸುಟ್ಟು, ಊಟವ ಮೀರಿ, ತಾಯ ಕೊಂದು,
ಬೆಳಗನುರುಹಿ, ಗಿರಿಯಬಣ್ಣವ ಕಳೆದು,
ಮೇಲಕ್ಕೆ ನೋಡಿ ನಿಂದಲ್ಲಿ ಬಿಳಿಯ ಕುರುಹ ಕಂಡುಕೊಂಡು
ಮೂರೈದು ಗತಿಯನರಿದು, ಎರಡು ಕಾಣದೆ ನಡೆದು ನಿಂದಲ್ಲಿ
ಉರಿಯಮಂದಿರದೊಳಗಿರ್ಪ ಬಯಲಶೃಂಗಾರವ ಕಾಣಬಹುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ./935
ಭೂಮಿಯ ಮೇಲೆ ಸೂರ್ಯಚಂದ್ರರ
ಹಿಡಿದು ತಂದು ಕೂಡಿಸಿ ನಿಮಿಷವಳಿದು ನಿಂದಲ್ಲಿ,
ಅತಿಶಯಾನಂದಪ್ರಕಾಶಪ್ರಾಣಲಿಂಗ ತಾನೆ
ಗುರುನಿರಂಜನ ಚನ್ನಬಸವಲಿಂಗ./936
ಭೂಮಿಯ ಹಿಡಿದು ಭೂಮಿಯ ಸುಖವನರಿಯರಯ್ಯಾ
ಸತ್ಕ್ರಿಯಾ ಸಂಬಂಧವಾಗಿ.
ಹೆಣ್ಣ ಹಿಡಿದು ಹೆಣ್ಣಿನ ಸುಖವನರಿಯರಯ್ಯಾ
ಸಮ್ಯಕ್ಜ್ಞಾನಸನ್ನಿಹಿತನಾಗಿ.
ಹೊನ್ನ ಹಿಡಿದು ಹೊನ್ನಿನ ಸುಖವನರಿಯರಯ್ಯಾ
ಮಹಾನುಭಾವಸಮೇತವಾಗಿ.
ಈ ತ್ರಿವಿಧದ ಸುಖವ ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು
ನಿಃಸಂಸಾರಿಗಳಯ್ಯಾ ನಿಮ್ಮ ಶರಣರು./937
ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ?
ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಭಾವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಕತರ್ಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ?
ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ./938
ಭೂಮಿಯೊಳಗಿಂದಲುದಯಿಸಿ ರವಿ ಮೂಡಿಬರಲು
ನೆಲ-ಜಲಾಗ್ನಿ ಮರುತಾಕಾಶಕ್ಕಾವರಿಸಿದ ಕತ್ತಲೆ
ಹರಿದು ಹೋಯಿತ್ತು ನೋಡಾ !
ಸಕಲ ಜನರೆಲ್ಲ ಎಚ್ಚತ್ತು ಯುಕುತಿ ವ್ಯಾಪಾರ ಲೆಕ್ಕವನು ಗೈಯಲು
ಲೋಕನಾಥನ ರಾಣಿವಾಸ ಮಡಿಯಿತ್ತು.
ಚಿತ್ರಾಣಿ ಲೋಕನಾಥನ ಸೋಂಕಲು
ದೇವಲೋಕನಾಥನಾದುದನೇನೆಂಬೆ ನಿರಂಜನ ಚನ್ನಬಸವಲಿಂಗಾ !/939
ಭೂಲೋಕದೊಳಗೆ ನಾಗಗನ್ನೆಯ ನಿದ್ರೆಯ ಕೆಡಿಸಿ
ಭಾವಿಸಿದರೆ ದೇವಲೋಕದ ಕನ್ಯೆಯಿವಳು ನೋಡಾ !
ತಾನೊಮ್ಮೆ ನೆಲ ನೀರು ಬೆಂಕಿ ಗಾಳಿಯ
ತನ್ನೊಳಗೆ ಹಿಡಿಯದೆ ಹಿಡಿದು ಬೇಟಕವಾಗಿ ನೋಡುತಿರಲು
ಕೂಟದ ಕುರುಹಳಿದ ಸುಖಿ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./940
ಭ್ರಷ್ಟಬೀಜದಾಗು ನಷ್ಟವಾದಂತೆ ಇರ್ದಡೇನು ಹೋದಡೇನು
ಶಬ್ದಶೂನ್ಯ ಶರಣ ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ.
ನಾದಬಿಂದುಕಲಾ ನಿರಂಜನ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣ./941
ಮಂಗಳದೆಸೆವಿಡಿದು ಸಂಗಸಮೇತ ಚರಿಸುವ ಜಂಗಮಲಿಂಗದೇವನು ತಾನು,
ಲಿಂಗಶರಣರನರಸುತ್ತ ಸದ್ಭಕ್ತಿಯ ಕೊಳ್ಳುತ್ತ ನಿಜಾನುಭಾವವನುಸುರುತ್ತ
ಅಭಿನ್ನತ್ವವ ತೋರುತ್ತ ತಾನುತಾನಾಗಿ ಚರಿಸುವನಲ್ಲದೆ
ಕಾಯಪ್ರಕೃತಿವಿಡಿದು ಕಾಮಿನಿ ಕನಕಾಲಯದೊಳ್ಬಿದ್ದು ವೇಷಧಾರಿಯಾಗಿ
ಮಲರುಚಿಯನರಸುತ್ತ ಕಾರ್ಪಣ್ಯಬಟ್ಟು ಕರಕರೆಯಕೊಳ್ಳುತ್ತ
ಜನರಿಗೆ ಹೇಯವ ತೋರುತ್ತ ಉದರಾಗ್ನಿಯೊಳ್ಮುಳುಗಿ ಹೋಗುವ
ಬಿನುಗುಮಾನವರಂತಲ್ಲ ನೋಡಾ ನಿಮ್ಮ ಶರಣ
ಗುರುನಿರಂಜನ ಚನ್ನಬಸವಲಿಂಗಾ./942
ಮಠಮಾನ್ಯದಯ್ಯತನದ ಹಿರಿಯರೆನಿಸುವ ಅಟಮಟದಯ್ಯಗಳ
ಹಟದ ಕುಟಿಲಗಳ ಪರಿಯ ನೋಡಾ !
ತಾವು ದೇವರೆಂದು ಸಕಲ ಭಕ್ತಜನರಿಂದೆ ಪೂಜೆಯ ಕೈಕೊಂಡು
ಮೆರೆಯುತಲಿರ್ದು ತಮಗೊಂದು ದೇವರುಂಟೆಂದು,
ಈರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲೇಶ,
ಜಗುಲಿಯ ಮೇಲೆ ಭುಗಿಭುಗಿಲೆನಿಸುತ್ತ,
ಅಪ್ಪ, ಅಜ್ಜ, ಮುತ್ತಯ್ಯನ ಮುಚ್ಚಿದ ಗರ್ದುಗೆಯೆಂದು,
ಹಾವುಗೆ ಬೆತ್ತ ಪುರಾಣ ಧೂಳತಾದಿಗಳಿಂಗೆ
ನೇಮಿಸಿದ ವಾರ ತಿಥಿವಿಡಿದರ್ಚಿಸಿ,
ಕಾಯಿ ಫಲ ಕೂಳ ತೋರಿ ತೋರಿ ತಿಂಬುವ
ನಾಯಿಭವಿಗಳನೆಂತು ದೇವರೆಂದು ಪೂಜಿಸಬಹುದು !
ಕಾಲತೊಳೆದ ನೀರು, ತಿಂದ ಕೂಳು ಇವನೆಂತು ಘನವೆನ್ನಬಹುದು !
ಮತ್ತೆ ಮನೆಯೊಳಗೆ ಸತ್ತವರಿಗೆಂದು, ಕರಿಮರಿಯಮ್ಮಗೆಂದು,
ಲಕ್ಕಿಜಕ್ಕಣೆರಿಗೆಂದು ಹಚ್ಚಡ ಸೀರೆ ಕುಪ್ಪಸಾದಿಗಳ ತಂದು
ಹುಣ್ಣಿವೆ, ಅಮವಾಸ್ಯೆಗೆ ವಸ್ತ್ರವಿಡಿದು ಮಾಡಿ,
ಕರ್ಮಕಾಟವ ಕಳೆದು ಗೆದ್ದೆವೆಂಬ ಮೂಳ ಹೊಲೆಯರು
ತಾವು ದೇವರೆನ್ನಬಹುದೆ ?
ಇಂಥ ಕಾಳಕೂಳರಿಗೆ ಮಾಡಿದ ದುರ್ಗತಿ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./943
ಮಡಿಕೆ ಮಣ್ಣಾಗಲರಿಯದು, ವಹ್ನಿ ಕಾಷ್ಠವಾಗಲರಿಯದು,
ಮುತ್ತು ನೀರಾಗಲರಿಯದು, ಸತ್ಯ ಗುರುವಿನಿಂದುಪದೇಶವಡೆದ
ನಿತ್ಯ ಶರಣನ ಜಿಹ್ವೆ ಪ್ರಸಾದ ಮಂತ್ರವಾಗಿರ್ದು ಉಚ್ಫಿಷ್ಟವಾಗಲರಿಯದು
ನಿರಂಜನ ಚನ್ನಬಸವಲಿಂಗಾ./944
ಮಡುವಿನೊಳು ನಿಂದು ಹರಿವ ನೀರ ಮುಟ್ಟಿ
ಬೇರೊಬ್ಬನ ಕೂಡ ಹಾದರವ ಮಾಡುವಳ ಕಂಡು,
ಬಯಲೊಳಗೆ ನಿಂದು ಎಲ್ಲಗಳು ಅಹುದೆಂದು
ಕೆಟ್ಟ ಕಣ್ಣಿನಿಂದ ಜರಿಯುತಿರ್ದನೊಬ್ಬ ಸುಳ್ಳ.
ಗಾಳಿ ಮೊಟ್ಟೆಯ ಕಟ್ಟಿ ಕಾಳೋರಗನ ಹೆಡೆಯನೆತ್ತಿ
ಮನೆ ಮನೆ ತಿರಿದುಂಡು ಹೋಗಿ ಬರುವನೊಬ್ಬ ಭ್ರಾಂತ.
ಹೆಂಗಸು ಗಂಡಸು ಕಷ್ಟಿಗನು ಇವರ ಕಂಡು
ನಗುತ ಮಾಡಿಕೊಂಡಿರ್ದ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಭಿನ್ನ ಭಕ್ತ./945
ಮಣ್ಣ ಹಿಡಿದು ಸಂಸಾರಿಯಲ್ಲ, ಮಣ್ಣ ಬಿಟ್ಟು ವೈರಾಗ್ಯನಲ್ಲ.
ಹೆಣ್ಣ ಹಿಡಿದು ವಿಕಾರಿಯಲ್ಲ, ಹೆಣ್ಣ ಬಿಟ್ಟು ನಿಷ್ಕಾಮಿಯಲ್ಲ.
ಹೊನ್ನ ಹಿಡಿದು ಲೋಬಿಯಲ್ಲ, ಹೊನ್ನ ಬಿಟ್ಟು ನಿಲರ್ೊಭಿಯಲ್ಲ.
ಹೇಗೆ ಇರ್ದಂತೆ ಗುರುನಿರಂಜನ ಚನ್ನಬಸವಲಿಂಗದೊಳಗೆ ಐಕ್ಯ ಕಾಣಾ./946
ಮಣ್ಣಿನೊಳುನಿಂದು ಮಣ್ಣ ಹಿಡಿದುಮಾಡುವಲ್ಲಿ
ಅನ್ಯವಿಲ್ಲದೆ ಸನ್ನಿಹಿತ ಭಕ್ತ.
ಹೊನ್ನಿನೊಳು ನಿಂದು ಹೊನ್ನ ಹಿಡಿದು ಮಾಡುವಲ್ಲಿ
ತನ್ನನಿಲ್ಲದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಭಕ್ತ./947
ಮಣ್ಣುಕೋಟೆಯೊಳಗೆ ಕಲ್ಲಮಂದಿರದಿ ಮೂರ್ತಿಯನಿರಿಸಿ ನಡೆವ
ಬದ್ಭಹಿರಿಯರ ಸದ್ದು ಸಮಯದ ಸಾರಾಯಕ್ಕತೀತ
ಮತ್ತೆ ದ್ವಂದ್ವದನುಗುಣಾಗಮ್ಯ ಶಿವಾನುಭಾವಿ
ಸಾಕಾರ ಸನುಮತ ನಿರಾಕಾರ ನಿಜಾನಂದ ಕಾರ್ಯಕಾರಣ ನಿರಂಜನನಿದಿ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./948
ಮದ ಮೋಹ ರಾಗ ವಿಷಾದ ತಾಪ
ಶೋಕ ವೈಚಿಂತೆಯೆಂಬ ಸಪ್ತ ಮಲವನು,
ಸಮತಾಜಲದಿಂದೆ ತೊಳೆದು ಭಾವನಿರ್ಮಲವ ಮಾಡಿ
ಪರಶಿವಾನಂದಸ್ವರೂಪವು ಸಂಬಂಧವಾದ ಬಳಿಕ ಭಾವಲಿಂಗೈಕ್ಯ ತಾನೆ ನೋಡಾ.
ತನುವ್ಯಸನ ಮನವ್ಯಸನ ಧನವ್ಯಸನ ಉತ್ಸಾಹವ್ಯಸನ
ರಾಜ್ಯವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನವನು
ವಿನಯಜಲದಿಂದೆ ತೊಳೆದು ಮನ ನಿರ್ಮಲ ಮಾಡಿ
ಪರಶಿವನ ಚಿತ್ಸ್ವರೂಪ ಸಂಯೋಗವಾದ ಬಳಿಕ ಪ್ರಾಣಲಿಂಗೈಕ್ಯ ತಾನೇ ನೋಡಾ.
ರಸ ರುಧಿರ ಮಾಂಸ ಮೇದಸ್ಸು ಅಸ್ತಿ ಮಜ್ಜೆ ಶುಕ್ಲವೆಂಬ
ಸಪ್ತಧಾತುವಿನ ಕಳಂಕವ ಕರುಣಜಲದಿಂದೆ ತೊಳೆದು ತನು ನಿರ್ಮಲ ಮಾಡಿ
ಪರಶಿವನ ಸತ್ತುರೂಪ ಸಮರಸವಾದ ಬಳಿಕ ಇಷ್ಟಲಿಂಗೈಕ್ಯ ತಾನೆ ನೋಡಾ.
ಇದು ಕಾರಣ ಗುರುವಿನಿಂದುದಿಸಿ ಅಷ್ಟಾವರಣದಲ್ಲಿ ಬೆಳೆದು
ಮಹಾಲಿಂಗೈಕ್ಯ ಮಹಾತ್ಮನಿಗೆ
ಸಕಲ ಪ್ರಕೃತಿಯೊಂದುವೇಳೆ ಬೆರಸಲುಂಟೆ ?
ಭೂಮಲದೊಳೆದ ಜಲ ಶರಧಿಯೋಳ್ವೆರಸಿ ಶರಧಿಯಾದಂತೆ
ಶರಣ ಜ್ಞಾನಶರಧಿಯೊಳ್ವೆರೆದ ಕರಣವೆಲ್ಲ ಕಿರಣಮಯವಾಗಿ ಕೂಡೆ
ಗುರುನಿರಂಜನ ಚನ್ನಬಸವಲಿಂಗವ ಬೆರಸಿ ಬೇರಿಲ್ಲದಿರ್ದವು./949
ಮದಮಲದ ಸೋಂಕನಳಿದ ಸದಮಲಪ್ರಸಾದಿ
ಸಾವಧಾನಮುಖಸನ್ನಿಹಿತನಾಗಿ, ನಡೆನುಡಿಯೊಳೊಪ್ಪಿ ಚರಿಸುವನಲ್ಲದೆ
ಆ ಮದಜಡದೇಹಿಗಳಂತೆ ಅರಿವಿನ ಬೆಳಗು ಮರೆದು
ಮನವರಿದಂತೆ ಕಾಯ ಪ್ರಾಣವ ಕಂಡು ಸುಖಿಸಿಕೊಂಬುವನಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಜಡಾನಂದಮುಖಿ. /950
ಮದವಳಿದು ಗುರುಭಕ್ತಿಗೂಡಿ ಬಂದನಯ್ಯಾ ನಿಮ್ಮ ಶ್ರದ್ಧಾಭಕ್ತ.
ಕಾಮವಳಿದು ಲಿಂಗಭಕ್ತಿಗೂಡಿ ಬಂದನಯ್ಯಾ ನಿಮ್ಮ ನಿಷ್ಠಾಭಕ್ತ.
ಮತ್ಸರವಳಿದು ಜಂಗಮಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಾವಧಾನಭಕ್ತ.
ಮೋಹವನಳಿದು ಪಾದೋದಕಪ್ರಸಾದ ಭಕ್ತಿಯಗೂಡಿ ಬಂದನಯ್ಯಾ
ನಿಮ್ಮ ಅನುಭಾವಭಕ್ತ.
ಕ್ರೋಧವನಳಿದು ವಿಭೂತಿ ರುದ್ರಾಕ್ಷಿಭಕ್ತಿಗೂಡಿ ಬಂದನಯ್ಯಾ
ನಿಮ್ಮ ಆನಂದಭಕ್ತ.
ಲೋಭವನಳಿದು ಪಂಚಾಕ್ಷರಿಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಮರಸಭಕ್ತ.
ಇಂತು ಅಷ್ಟಾವರಣದ ಭಕ್ತಿಸಂಯುಕ್ತವಾಗಿ
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾಗಿ ಬಂದನಯ್ಯಾ
ನಿಮ್ಮ ನಿಜಭಕ್ತ./951
ಮದುವೆಯ ಗಂಡನ ಮುಖದಿಂದೆ ಮಂಗಲಪುರುಷರ ಸಂಗವನರಿದೆ.
ನಟನೆಗಳಿಂದೆ ಮೂವರಿಗೆ ರತಿರಮ್ಯವಾಗಿ ಮೆಚ್ಚಿಸಿ ಆ ಮೆಚ್ಚಿನೊಳಗಾದೆನು.
ಸವಿನುಡಿಯ ಸಾರದೊಳು ಮೂವರಿಗೆ ಮರುಳುಮಾಡಿ ಆ ಮರುಳಿನೊಳಗಾದೆನು.
ಮೆಚ್ಚು ಮರುಳ ನುಂಗಿ ಚಿಣ್ಣ ಮನೆಯ ಚೆದುರ
ನಮ್ಮ ಗುರುನಿರಂಜನ ಚನ್ನಬಸವಲಿಂಗವನಪ್ಪಿ ಅರಿಯದಾದೆನು./952
ಮದುವೆಯ ಪತ್ನಿಯ ಕಿರಿಚಿನ್ನ ಬೆಳಗುಪತಿಯನಾವರಿಸಲು,
ಪತಿಯ ಪಿರಿದುನ್ನತಿಯ ಬೆಳಗು ಸತಿಯನಾವರಿಸಲು,
ಸತಿಪತಿಯ ಬೆಳಗು ಹಿತಗಲಿತ ಬಳಿಕ ದ್ವೈತಕಿಟ್ಟರಿವರಿಗಸಾಧ್ಯ
ಗುರುನಿರಂಜನ ಚನ್ನಬಸವಲಿಂಗದ್ವೈತವನು. /953
ಮನದಲ್ಲಿ ಉಕಾರಸ್ವರೂಪವಾದ
ಇಷ್ಟಲಿಂಗವನರಿದರ್ಚಿಸಬಲ್ಲಾತನೆ ಭಕ್ತ.
ಮನದಲ್ಲಿ ಸಕಾರಸ್ವರೂಪವಾದ
ಪ್ರಾಣಲಿಂಗವನರಿದರ್ಚಿಸಬಲ್ಲಾತನೆ ಭಕ್ತ.
ಮನನೀಯದಲ್ಲಿ ಕ್ಷಕಾರಸ್ವರೂಪವಾದ
ಭಾವಲಿಂಗವನರಿದರ್ಚಿಸಬಲ್ಲಾತನೆ ಭಕ್ತ.
ತ್ರಿವಿಧಲಿಂಗವನರಿದರ್ಚಿಸಬಲ್ಲಾತಂಗಲ್ಲದೆ
ಭಕ್ತಿಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./954
ಮನದಾಸೆಯೆಂಬ ಮಾಯೆ ಲೋಕರ ಮೀಸೆಯ ಹಿಡಿದು ನುಂಗಲು
ಭಾಷೆ ಸತ್ತು ಕಾಸುಕಪ್ಪಟದಿ ಪರದ್ರವ್ಯಕ್ಕೆ ಜಿನುಜಿನುಗಿ
ಮೋಸವಾಗಿ ಹೋದವರನೇಕ ಜನ.
ಕುಚ ನಯನ ಸಂಪುಳ್ಳ ಬಾಲೆಯರ ಕಾಲಸಂದಿಗೆ ಮೋಹಿಸಿ
ಬಚ್ಚಲದೊಳಗೆ ಬಿದ್ದು ಎಚ್ಚರದಪ್ಪಿ ಹೋದರನೇಕ.
ಗೃಹ, ಕ್ಷೇತ್ರ, ಸೀಮೆಗಿಚ್ಫೈಸಿ ಹೊಡೆದಾಡಿ ಹೊಲಬುಗಾಣದೆ
ಬಲೆಯೊಳು ಬಿದ್ದು ಹೋದರನೇಕ.
ಇಂತು ಆಶೆ, ಆಮಿಷ, ಬಯಲಭ್ರಾಂತದೊಳಗಿಪ್ಪ ಮಾಯಾಧೀನ ಮನುಜರು
ನಿಮ್ಮ ನಿಜಭಕ್ತರ ಸುಜ್ಞಾನ ಪರಮವೈರಾಗ್ಯವೆಂಬ
ಸುಖದಾಸೆ ಆಮಿಷವನವರೆತ್ತ ಬಲ್ಲರಯ್ಯಾ
ನಿರಂಜನ ಚನ್ನಬಸವಲಿಂಗಾ !/955
ಮನಮಾಯಾಮಥನದಿಂದುದಯವಾದ ಬೆಂಕಿ
ಮೂರುಲೋಕವ ಸುಟ್ಟಿತ್ತು ನೋಡಾ.
ಮೂರುಲೋಕದ ಕಿಚ್ಚು ಹರಿ ಬ್ರಹ್ಮ ಇಂದ್ರ ಚಂದ್ರಾದಿ
ಸಕಲರ ನುಂಗಿ ಭಂಗಬಡಿಸಿ ಕೆಡಹಿತ್ತು ಕಾಣಾ.
ಮತ್ತೆಂತೆಂದೊಡೆ, ಮನಶಕ್ತಿಮಥನದಿಂದೆ ಉದಯವಾದ ಲಿಂಗವು
ಲಯಗಮನ ಸ್ಥಿತಿಯ ಸಂಹರಿಸಿ
ಸತ್ಕ್ರಿಯಾಪ್ರಕಾಶ ಸುಜ್ಞಾನಪ್ರಕಾಶ ಮಹಾಜ್ಞಾನಪ್ರಕಾಶವಾಗಿ
ಶರಣನ ಸರ್ವಾಂಗವ ನುಂಗಿ
ಗುರುನಿರಂಜನ ಚನ್ನಬಸವಲಿಂಗವಾಗಿ ಕಾಣಿಸುತಿರ್ದಿತ್ತು ನೋಡಾ./956
ಮನವ ನಿಲ್ಲಿಸಿಹೆನೆಂಬ ಮಾತು
ಮತ್ತತನದ ಹಿರಿಯರನು ಧಾತುಗೆಡಿಸಿ ಕೆಡಹಿ ನಿಂದಿತ್ತು.
ಹೊನ್ನ ಹಿಡಿಯನೆಂಬವರ ಕಚ್ಚುಟಕಾಂಕ್ಷೆ
ಕಳವಳಕ್ಕೆ ಕೆಡಹಿ ನಿಂದಿತ್ತು.
ಹೆಣ್ಣು ಮುಟ್ಟೆನೆಂಬವರ ನೆನವಿನಾಶ್ರಯದಲ್ಲಿ
ಯೋನಿಚಕ್ರದೊಳಗೆ ಮುಳುಮುಳುಗಿಸಿ ನೂಂಕಿ ಕೆಡಹಿ ನಿಂದಿತ್ತು.
ಮಣ್ಣ ಹಿಡಿಯೆನೆಂಬವರ ನಿರಾಶ್ರಯ ನಿವಾಸಕ್ಕೆ
ಬಿತಿಗೊಳಿಸಿ ಕೆಡಹಿತ್ತು.
ಮಾಡೆನೆಂಬವರ ಮಾಡಿಸಿತ್ತು,
ನೋಡೆನೆಂಬವರ ನೋಡಿಸಿತ್ತು,
ಕೂಡೆನೆಂಬವರ ಕೂಡಿಸಿತ್ತು.
ಈ ಮನವ ನಿಲ್ಲಿಸಬಲ್ಲವರನಾರನು ಕಾಣೆ.
ಭೂ ಗಗನವುಳ್ಳನ್ನಕ್ಕರ
ನಿರಂಜನ ಚನ್ನಬಸವಲಿಂಗದಂಗವಾಗದವರ
ಭಂಗಬಡಿಸಿತ್ತು ಮೂರು ಲೋಕದೊಳಗೆ./957
ಮನವ ಮುಳುಗಿಸಿದ ಮಹಾಂತ ಶರಣ
ತಾನೆತ್ತೆತ್ತನೋಡಿದರತ್ತತ್ತ ತಾನೇ ನೋಡಾ.
ಭಿನ್ನಮಾಟ ಜಾಗ್ರಾವಸ್ಥೆಯೊಳು ಅಣುಮಾತ್ರವರಿಯಬಾರದು ಕಾಣಾ.
ಭಿನ್ನನೋಟ ಸ್ವಪ್ನಾವಸ್ಥೆಯೊಳಣುಮಾತ್ರವರಿಯಬಾರದು ನೋಡಾ.
ಭಿನ್ನಕೂಟ ಸುಷುಪ್ತಾವಸ್ಥೆಯೊಳಣುಮಾತ್ರವರಿಯಬಾರದು ಕೇಳಾ
ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲ ಕಾಣಾ./958
ಮನವನಳಿದುಳಿದ ಮಹಾನುಭಾವಿಗಳ ವಚನವ ನೋಡಿ,
ವಾಕ್ಕಿನಿಂದೆ ವಿರತಿಯ ನುಡಿದು, ಮಾನಸದಿಂದೆ ಮಲವ ಹಿಡಿದು,
ಕಾಯದಿಂದೆ ಕೆಟ್ಟು ನಡೆವ ಭ್ರಷ್ಟ ಮನುಜರಿಗೆ
ಇನ್ನೆಷ್ಟು ಜನ್ಮದ ಕಷ್ಟವನಳಿದು ಬರುವ
ಬಟ್ಟೆಯನರಿವ ಪರಿಯಿನ್ನೆಂತೊ?
ನಿಮ್ಮಾದಿಯ ಬಲ್ಲ ಅಪ್ರತಿಮಂಗಲ್ಲದೆ ಅನುಭಾವವಿಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ. /959
ಮನವರಿಯದ ಬುದ್ಧೇಂದ್ರಿಯ ವಿಷಯಪಂಚಕವಿಲ್ಲ.
ಮನವರಿಯದ ಕಮರ್ೆಂದ್ರಿಯ ವಿಷಯಪಂಚಕವಿಲ್ಲ.
ಮನವರಿಯದ ಮತ್ತೇನನುವಿಲ್ಲ.
ಇದು ಕಾರಣ ಮನೋಮೂರ್ತಿ ಮಹಾಲಿಂಗ ತಾನೆಂದರಿದ ಮಹಿಮಂಗೆ
ಮತ್ತೆ ಅರಿವೆಂದರೇನು ಅರ್ಪಿತವೆಂದರೇನು ಅನರ್ಪಿತವೆಂದರೇನು ?
ಸಂಶಯಕೆ ಸಂಬಂಧ ಕಾಣಾ ಇದು
ಗುರುನಿರಂಜನ ಚನ್ನಬಸವಲಿಂಗಾ./960
ಮನವೆಂಬ ಮಾಯೋಚ್ಫಿಷ್ಟವದು ಸಂಸಾರ ಕುಳಿಯೊಳು ಬಿದ್ದು
ಹೊರಳುವ ಇರುಳುಗಳ್ಳ ಮರುಳಮಾನವರಿಗೆತ್ತಣ ಮಾತಯ್ಯಾ.
ನಿಮ್ಮ ಮಹಾನುಭಾವರ ಸುಜ್ಞಾನಕ್ರಿಯೆಯೆತ್ತ, ಭವದ ಬೆಳೆಯೆತ್ತ ?
ನಿರಂಜನ ಚನ್ನಬಸವಲಿಂಗಾ,
ನಿಮ್ಮ ನಿರವಯ ನಿಜಸಮಾಧಿಯೆತ್ತ, ವೈತರಣಿ ದುರ್ಗತಿಗಳೆತ್ತ ?/961
ಮನೆಪುರುಷ ಮಹಾಲಿಂಗದೇವಗೆ
ಲಲನೆಯರೊಲವಿನಿಂದೆನಗೆ ಘನಸುಖವ ಸಾಧಿಸಿಕೊಂಡೆ ಕೇಳಾ.
ಆದಿಯವಿಡಿದು ಮೇದಿನಿಯೊಳೊಬ್ಬಳಗೂಡಿ
ಸೇವೆಯುಪಚಾರಂಗಳನಿತ್ತು ಶರಣೆಂದು ಹೆಚ್ಚಿಸಿಕೊಂಡೆ ಕಾಣಾ.
ಮತ್ತೊಂದು ದಿನ ಸದ್ಗುಣಿಯೆಂಬವಳ ಕೂಡಿ
ಮನವೊಲಿದಾರ್ಚನೆಯನೆಸಗಿ ಮಾಡಿ ಶರಣೆಂದು ಹೆಚ್ಚಿಸಿಕೊಂಡೆ ಕಾಣಾ.
ಮತ್ತೆ ಮೇಲೊಬ್ಬಳು ಕಾಮಿನಿಯ ಕೂಡಿ
ಸತ್ಯಸೈದಾನ ಸುಪಾಕವನಿತ್ತುಕೊಂಡು ಶರಣೆಂದು ಹೆಚ್ಚಿಸಿಕೊಂಡೆ ಕಾಣಾ.
ಮತ್ತೊಬ್ಬಳು ಭಾಮಿನಿಯ ಕೂಡಿ
ಅಂತರಂಗದ ಸುವಾಕ್ಯಂಗಳಿಂದೆ ಶರಣೆಂದು ಅರಿದರಿದು ಹೆಚ್ಚಿಸಿಕೊಂಡೆ ಕಾಣಾ.
ಮತ್ತೊಬ್ಬಳು ಚಿತ್ರಾಂಗನೆಯ ಕೂಡಿ
ಅತ್ಯಂತ ಮೋಹವೆರೆದಪ್ಪಿ ಅಗಲದೆ ಶರಣೆಂದು ಪರಿಣಾಮಿಸಿಕೊಂಡೆ ಕಾಣಾ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಈ ಐವರ ಸಂಪರ್ಕದಿಂದೆ ಪರಮಸುಖಪರಿಣಾಮಿಯಾಗಿ
ಪರವಶದೊಳಗಿರ್ದನು ಕಾಣಾ./962
ಮರೆದು ಕೊಟ್ಟು ಕೊಂಡರೆ ಸುಖವಾಯಿತ್ತು ಲಿಂಗಕ್ಕೆ.
ಹರಿದು ಕೊಟ್ಟು ಕೊಂಡರೆ ಪರಿಣಾಮವಾಯಿತ್ತು ಜಂಗಮಕ್ಕೆ.
ತೊರೆದು ಕೊಟ್ಟು ಕೊಂಡರೆ ಆನಂದವಾಯಿತ್ತು
ಗುರುನಿರಂಜನ ಚನ್ನಬಸವಲಿಂಗಕ್ಕೆ ಪ್ರಸಾದಿಯಮುಖದಿಂದೆ./963
ಮರೆದು ಮಾಡಿ ನಡೆವೆನಯ್ಯಾ ನಿಮ್ಮ ಶಿಷ್ಯನಾಗಿ ಬಂದುದಕ್ಕೆ.
ಕಳೆದು ಮಾಡಿ ನಡೆವೆನಯ್ಯಾ ನಿಮ್ಮ ಭಕ್ತನಾಗಿ ಬಂದುದಕ್ಕೆ.
ಕಡಿದು ಮಾಡಿ ನಡೆವೆನಯ್ಯಾ ನಿಮ್ಮ ಶರಣನಾಗಿ ಬಂದುದಕ್ಕೆ.
ಇಂತು ಶಿಷ್ಯ ಭಕ್ತ ಶರಣನಾಗಿ ನಿಂದಲ್ಲಿ ನಿಮ್ಮ ಸಗುಣದ ಸೌಖ್ಯ.
ನಿಲ್ಲುವರತ್ತಲ್ಲಿ ಗುರುನಿರಂಜನ ಚನ್ನಬಸವಲಿಂಗಾ. /964
ಮಲತ್ರಯದ ಮೋಹವನು ಹರಿವುದು,
ತನುತ್ರಯದ ಮದವ ತೊರೆವುದು,
ಈಷಣತ್ರಯದ ಪ್ರೇಮವ ಜರಿವುದು,
ಜೀವನತ್ರಯದ ಜಡತ್ವ ಕಳೆವುದು,
ಅವಸ್ಥಾತ್ರಯದನುವ ಮರೆವುದು ಭವಭಾರಿಗಳಿಗೆ ಸಾಮಾನ್ಯವೆ
ಚನ್ನ ಗುರುಲಿಂಗಜಂಗಮಪ್ರಭುವೆ ನಿಮ್ಮ ಸದ್ಭಕ್ತರಿಗಲ್ಲದೆ ?/965
ಮಹದಲ್ಲಿ ಮನಮುಳುಗಿಸಿದ ಮಹಾಂತನ
ಬಗೆಗೊಳ್ಳದೆ ಬೊಗಳಲಾಗದು.
ಅದೇನು ಕಾರಣವೆಂದೊಡೆ,
ಲಿಂಗದೊಳಗಿರ್ದು ಬಲ್ಲಂತೆ ನಡೆವನು ಬಲ್ಲಂತೆ ನುಡಿವನು.
ಬಲ್ಲಂತೆ ಸಕಲ ವ್ಯವಹಾರದೊಳಗಿರ್ದರು ಎಂತಿರ್ದಂತೆ ನಿಜವು ತಾನೆ
ಗುರುನಿರಂಜನ ಚನ್ನಬಸವಲಿಂಗಾ./966
ಮಹದಾನಂದ ಸದ್ಗುರುಮೂರ್ತಿಗೊಲಿದು
ಒಂದುಮುಖದ ರುದ್ರಾಕ್ಷಿಯನಿತ್ತಡೆ,
ಮುಂಗೈಯೊಳು ಧರಿಸಿ ಮಂಗಳಾಂಗನಾದೆ.
ಮತ್ತೊಂದೆರಡುಮುಖದ ರುದ್ರಾಕ್ಷಿಯನು
ತುನುಮನಭಾವದಲ್ಲಿ ಹೆಚ್ಚಿ ಧರಿಸಿ
ಅನುನಯಾಚಾರಜ್ಞಾನಿಯಾದೆನು.
ಮತ್ತೆ ನಾತ್ಕೈದುಮುಖದ ರುದ್ರಾಕ್ಷಿಯನು
ನವನೀಯಸ್ಥಾನದಲ್ಲಿ ಧರಿಸಿ ಚರಿತೆಯುಳ್ಳವನಾದೆನು.
ಆರುಮುಖದ ರುದ್ರಾಕ್ಷಿಯನು ಆರುಭಕ್ತಿಯಿಂದೆ ಧರಿಸಿ
ಷಡಾಚಾರಸಂಪನ್ನನಾದೆನು.
ಏಳೆಂಟೊಂಬತ್ತು ಹನ್ನೆರಡುಮುಖದ ರುದ್ರಾಕ್ಷಿಯನು
ಮನಮೆಚ್ಚಿ ಧರಿಸಿ, ಮನ ಕರಣ ಮಹಾಪ್ರಕಾಶಮಯನಾದೆನು.
ಮತ್ತೆರಡು ಹನ್ನೊಂದು ಹದಿನಾಲ್ಕು ಮುಖದ ರುದ್ರಾಕ್ಷಿಯನು
ಎಂಟುಸರಗೊಳಿಸಿ ಭಾವಶುದ್ಧದಿಂದೆ ಧರಿಸಿ ಸರ್ವಾಚಾರಸಂಪತ್ತಿನೊಳಗಾದೆನು.
ಮತ್ತೆ ಮೀರಿ ಉಳಿದ ರುದ್ರಾಕ್ಷಿಯನು ಸತ್ಯದಿಂದೆ ಸರ್ವಾಂಗದೊಳು ಧರಿಸಿ
ನಿತ್ಯಮುಕ್ತನಾದೆನು ಚನ್ನಗುರು ನಿರಂಜನ ಚನ್ನಬಸವಲಿಂಗ ಸನ್ನಿಹಿತ./967
ಮಹಾಘನ ಗಂಭೀರ ಗುರುವಿನಿಂದುದಯವಾದ ಚಿದಾನಂದ ಭಕ್ತನು,
ಸತ್ಯಕಾಯಕದಿಂದೆ ಗಳಿಸಿದರ್ಥವನು ತ್ರಿಕರಣ ಸುಪ್ರಕಾಶದೊಳು ನಿಂದು,
ಕಾಯದೆರೆಯಂಗೆ ಕಪಟರಹಿತನಾಗಿ, ಮನದೆರೆಯಂಗೆ ಸಂಕಲ್ಪರಹಿತನಾಗಿ,
ಪ್ರಾಣದೆರೆಯಂಗೆ ಭ್ರಾಮಕರಹಿತನಾಗಿ, ನಿರ್ವಂಚನೆ ತನಿರಸದೊಳ್ಮುಳುಗಿ
ಕೊಟ್ಟು ಕೊಳದಿರಬಲ್ಲಾತನೇ ಸಹಜವೆಂಬೆ
ಗುರುನಿರಂಜನ ಚನ್ನಬಸವಲಿಂಗಾ./968
ಮಹಾಘನ ಪರಮಜ್ಯೋತಿರ್ಲೆಂಗವೆನ್ನಲ್ಲಿಗೆ ಬಂದು
ಬಂದುದ ಬೇರ್ಪಡಿಸಿದೆ ನೋಡಾ !
ಬಂದು ಚಿಂತೆಯಕೆಡಿಸಿ ನಿಶ್ಚಿಂತನ ಮಾಡಿದೆ ನೋಡಾ !
ಬಂದು ನಿಂದು ಎನ್ನ ಒಳಹೊರಗೆ ತಾನೆಯಾಗಿ
ಸಂದು ಭೇದವಿಲ್ಲದ ಗತಿಮತಿಯೊಳೊಪ್ಪಿ
ಅತಿಶಯದ ಭೋಗಸಮರಸದೊಳಿದರ್ಿತು ನೋಡಾ.
ಮತ್ತೆ ನಾನೆಂದರೆ ನಾಚಿಕೊಂಡಿತ್ತೆನ್ನ ಲಿಂಗಕಾಯ,
ಅಬಿಮಾನಿಸಿಕೊಂಡಿತ್ತೆನ್ನ ಲಿಂಗಮನ,
ಅಚಲಾನಂದಸುಖಿಯಾಗಿತ್ತೆನ್ನ ಲಿಂಗಭಾವ.
ಈ ತ್ರಿವಿಧವೊಂದಾಗಿ ಗುರುನಿರಂಜನ ಚನ್ನಬಸವಲಿಂಗಾ
ನಾ ನಿನ್ನನರಿಯದಿರ್ದೆ ಭಕ್ತನಾಗಿ ನಿಮ್ಮೊಳಗೆ./969
ಮಹಾಜ್ಞಾನಗುರುವಿನಿಂದುಪದೇಶವಾದವರೆಂದು ತಿಳಿದ ಬಳಿಕ
ತನ್ನ ಮನವ ಕಮರ್ೆಂದ್ರಿಯಪ್ರಕೃತಿಯಲ್ಲಿ ಮುಳುಗಿಸಲಾಗದು,
ವಿಷಯಪ್ರಕೃತಿಯಲ್ಲಿ ಮುಳುಗಿಸಲಾಗದು,
ಬುದ್ಧೀಂದ್ರಿಯ ಪ್ರಕೃತಿಯಲ್ಲಿ ಮುಳುಗಿಸಲಾಗದು,
ವಾಯುಪ್ರಕೃತಿಯಲ್ಲಿ ಮುಳುಗಿಸಲಾಗದು,
ಕರಣಪ್ರಕೃತಿಯಲ್ಲಿ ಮುಳುಗಿಸಲಾಗದು,
ಇಂತು ಪಂಚಪ್ರಕೃತಿಯಲ್ಲಿ ಮುಳುಗಿಸಲಾಗದು,
ಅದೇನು ಕಾರಣ, ಪಂಚಬ್ರಹ್ಮ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯಪದಕ್ಕೆ ಬಾರದುದಾಗಿ./970
ಮಹಾಜ್ಞಾನಿ ಜಂಗಮಲಿಂಗ ತಾನು
ಲೋಕಪಾವನವಾಗಿ ನಡೆನುಡಿಗಳರಿದಾಚರಿಸುವಲ್ಲಿ,
ಜಿಹ್ವೆಯಲ್ಲಿ ಹುಸಿನುಡಿಯಿಲ್ಲದೆ ತನ್ನ ತಾ ನುಡಿಯುತಿರ್ದ ಕಾಣಾ.
ಕಂಗಳಲ್ಲಿ ಭಿನ್ನದೃಷ್ಟಿಯಿಲ್ಲದೆ ತನ್ನ ತಾ ನೋಡುತಿರ್ದ ಕಾಣಾ.
ಶ್ರೋತ್ರದಲ್ಲಿ ಭಿನ್ನಶಬ್ದವಿಲ್ಲದೆ ತನ್ನ ತಾ ಕೇಳುತಿರ್ದ ಕಾಣಾ.
ತ್ವಕ್ಕಿನಲ್ಲಿ ಭಿನ್ನ ಸೋಂಕಿಲ್ಲದೆ ತನ್ನ ತಾ ಸೋಂಕುತಿರ್ದ ಕಾಣಾ.
ಘ್ರಾಣದಲ್ಲಿ ಭಿನ್ನವಾಸನೆಯಿಲ್ಲದೆ ತನ್ನ ತಾನ್ವಾಸಿಸುತಿರ್ದ ಕಾಣಾ.
ಹೃದಯದಲ್ಲಿ ಮಾಯಾಸುಖವಿಲ್ಲದೆ ತನ್ನ ತಾ ಸುಖದಲ್ಲಿರ್ದ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ
ಮತ್ತೆ ಮರಣವಿಲ್ಲದೆ ನಿಮ್ಮಲ್ಲಿ ತನ್ನೊಳೈಕ್ಯ ಕಾಣಾ./971
ಮಹಾಬಯಲು ನಿರ್ವಯಲು ನಿರವಯ ನಿರಂಜನ
ನಿಃಶೂನ್ಯ ನಿಃಕಲ ಪರಶಿವಲಿಂಗವು
ಆ ನೆನಹು ನಿರ್ಧರಿಸಿ ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಯುದಯವಾಗಿ,
ಆ ಮೂಲ ಚಿತ್ತುಗೂಡಿ, ಗಟ್ಟಿಗೊಂಡು
ಗೋಲಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
ಆ ಮಹಾ ಚಿದ್ಘನಲಿಂಗಕ್ಕೆ ಆ ಚಿತ್ತೆ ಅಂಗವಾಗಿ ಶಕ್ತಿಯೆನಿಸಿತ್ತು ನೋಡಾ.
ಆ ಶಿವಶಕ್ತಿಗಳಿಂದೆ ಸಕಲಸಂಭ್ರಮವಾಯಿತ್ತು.
ಆ ಸಕಲಸಂಭ್ರಮೈಶ್ವರ್ಯದೊಳಗೆ
ಆ ಶಿವನ ಅನಂತ ಸಹಸ್ರ ಸಹಸ್ರಾಂಶದೊಳಗೊಂದಂಶ ಬೇರ್ಪಡಿಸಿ
ಚಿದಾತ್ಮನಾಗಿ ಕಾಯಾಶ್ರಯಗೊಂಡು ನಿಮರ್ಿಸಿದಲ್ಲಿ,
ಆ ಕಾಯಸಂಗ ಸಕಲನಿಃಕಲತತ್ವಾನ್ವಿತದಿಂದೆ
ತನ್ನಾದಿಯ ಮರೆದು ಪರಾದಿ ಸ್ವಯವಾಗಿ,
ಪಂಚಕೃತ್ಯಪರಿಯುತದಿಂದಿರ್ದ ಆತ್ಮನ ತೇರ್ಕಡೆಯಾಂತರವರಿದ
ಶಿವ ತಾನೆ ಸುಜ್ಞಾನಗುರುವಾಗಿ ಅಂತರಂಗದಲ್ಲಿ ಬೆಳಗಲು,
ಆ ಬೆಳಗಿನಿಂದೆ ಆತ್ಮನು ತನ್ನಾದಿ ಮಧ್ಯಾವಸಾನವನರಿದು,
ಮಿಥ್ಯ ಮಾಯಾಸಂಸಾರಸಂಬಂಧವನಳಿಸಿ ತನ್ನ ಕಾಂಬಾವಸ್ಥೆಯ
ಮುಂದೆ ಆ ಜ್ಞಾನಗುರುವೇ ಕ್ರಿಯಾಘನಗುರುವಾಗಿ ತೋರಲು
ಅಜ್ಞಾನಕಲಾತ್ಮನು ಗುರೋಪಾಸ್ತೆಯ ಮಾಡುವ ನಿಲವರಿದು
ಗುರುಕಾರುಣ್ಯದಿಂದಿಷ್ಟವನನುಗ್ರಹಿಸಿಕೊಡಲು ಆ ಲಿಂಗವಿಡಿದು ಧಾರಣವಾಗಿ,
ಚಿದ್ಭಸಿತ ರುದ್ರಾಕ್ಷಿಯ ಧರಿಸಿ, ಪರಮಪಂಚಾಕ್ಷರ ಪ್ರಾಣವಾಗಿ,
ಆ ಗುರುಲಿಂಗಕ್ಕೆ ಭಕ್ತಾಂಗನೆಯಾಗಿ ತ್ರಿವಿಧಾಚಾರವನರಿದು,
ಷಟ್ಸ್ಥಲದಲ್ಲಿ ನಿಂದು ಚಿದಂಗ ಚಿಲ್ಲಿಂಗಭಾವದವಿರಳ ವಿನೋದಕ್ಕೆ
ಭಾವತ್ರಿಸ್ಥಲವನುಂಟುಮಾಡಿಕೊಂಡಾಚರಿಸುತಿರ್ದ ತಾನೆ
ನಮ್ಮ ಗುರುನಿರಂಜನ ಚನ್ನಬಸವಲಿಂಗವು./972
ಮಹೇಶ್ವರತತ್ವವನರಿದ ಶರಣ ಗುರುಪ್ರಕಾಶದಲ್ಲರತು
ಇಷ್ಟಲಿಂಗೈಕ್ಯ ತಾನೇ ನೋಡಾ.
ಸದಾಶಿವತತ್ವವನರಿದ ಶರಣ ಲಿಂಗಪ್ರಕಾಶದೊಳರತು
ಪ್ರಾಣಲಿಂಗೈಕ್ಯ ತಾನೇ ನೋಡಾ.
ಶಿವತತ್ವವನರಿದ ಶರಣ ಜಂಗಮಪ್ರಕಾಶದಲ್ಲರತು
ಭಾವಲಿಂಗೈಕ್ಯ ತಾನೇ ನೋಡಾ.
ಇದು ಕಾರಣ, ನಿಜತತ್ವನರಿದ ಶರಣ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಲಿಂಗಾಂಗವನರಿಯದ ಪ್ರಾಣಲಿಂಗೈಕ್ಯನನೇನೆಂದುಪಮಿಸುವೆನಯ್ಯಾ./973
ಮಾಟಕೂಟದ ಭಾವಶೂನ್ಯತ್ವವನರಿದ ಬಳಿಕ
ಮಾಡಲೆಡೆಗಾಣದಿರಬೇಕು, ಕೂಡಲರಿಯದಿರಬೇಕು.
ಫಲವೃಕ್ಷಾಳಿಯ ಗೆಲ್ಲ ಸೋಲಿನಂತೆ ಸರ್ವಕ್ಕು ನಿಃಕಲಭಾವ ನೆನಸಿರಬೇಕು.
ಕುರುಹರಿತ ನಿರುತ ನೀನೆಂಬೆ ಗುರುನಿರಂಜನ ಚನ್ನಬಸವಲಿಂಗಾ./974
ಮಾಟದೊಳು ಮರೆದರಿಯದಂದು
ಚಿರಹೃದಯದಿಂದೊಡೆದು ಮೂಡಿ,
ಪರಿಭವಂಗಳ ಹರಿದ ಇರವರಿಸಬೇಕೆಂದು
ಪರಮಪಾವನ ಗುರುಕರುಣಾಮೃತವಾಗಿ ಬಂದ
ಚಿದ್ರುದ್ರಾಕ್ಷಿಯನೊಲಿದು ನಲಿನಲಿದು ಧರಿಸಿ,
ಮಲಮಾಯಾಮದಕರ್ಮಶೂನ್ಯನಾದೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ./975
ಮಾಟವನರಿಯೆ ಕಾಯವಿಲ್ಲವಾಗಿ,
ನೋಟವನರಿಯೆ ಕಂಗಳಿಲ್ಲವಾಗಿ,
ಕೂಟವನರಿಯೆ ಮನವಿಲ್ಲವಾಗಿ,
ಮಾಟ ನೋಟವನೈಯ್ದಿ, ನೋಟ ಕೂಟವಕೂಡಿ,
ಕೂಟ ಭಾವವನೈಯ್ದಿ, ಭಾವ ನಿರ್ಭಾವವನೈಯ್ದಿ ನಿರ್ವಯಲಾದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./976
ಮಾಡದಿರು ಅನಿತ್ಯಕ್ಕೆ, ಆಹುತಿಯಾಗಿ ಕುರುಹಳಿಯದು.
ಮಾಡದಿರು ಅನಿತ್ಯಕ್ಕೆ, ಮನವೇದಿ ಕುರುಹಳಿಯದು.
ಮಾಡದಿರು ಅನಿತ್ಯಕ್ಕೆ, ತಲೆಯಿಟ್ಟು ಕುರುಹಳಿಯದು.
ಮಾಡದಿರು ನೀನಿಂದು
ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತಿಯ, ನೀನಾಗಬೇಕಾದರೆ./977
ಮಾಡಲರಿಯೆ ಮನವಿಲ್ಲವಾಗಿ,
ನೋಡಲರಿಯೆ ಭಾವವಿಲ್ಲವಾಗಿ,
ಕೂಡಲರಿಯೆ ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲವಾಗಿ./978
ಮಾಡಲರಿಯೆನಯ್ಯಾ ಮಾಟದ ಸುಖವೆನಗೆ ಮುಂದಿಲ್ಲವಾಗಿ.
ನೋಡಲರಿಯೆನಯ್ಯಾ ನೋಟದಸುಖವೆನಗೆ ಮುಂದಿಲ್ಲವಾಗಿ.
ಕೂಡಲರಿಯೆನಯ್ಯಾ ಕೂಟದ ಸುಖವೆನಗೆ ಮುಂದಿಲ್ಲವಾಗಿ.
ಇದು ಕಾರಣ, ಅಚ್ಚೊತ್ತಿರ್ದ ಲಿಂಗವನಗಲಿ ಮಾಟಕೂಟಕಿಂಬುಗಾಣದೆ
ಎಂತಿರ್ದಂತೆ, ಗುರುನಿರಂಜನ ಚನ್ನಬಸವಲಿಂಗ ನಿಮ್ಮೊಳೈಕ್ಯ ಕಾಣಾ./979
ಮಾಡಲಿಲ್ಲದ ತನುವನು ಮಾಡಿಕೆಡಹಿದರು.
ಮಾಡಲಿಲ್ಲದ ಮನವನು ಮಾಡಿಕೆಡಹಿದರು.
ಮಾಡಲಿಲ್ಲದ ಪ್ರಾಣವನು ಮಾಡಿಕೆಡಹಿದರು.
ಕೂಡಲಿಲ್ಲದ ಆತ್ಮನನು ಕೂಡಿಕೆಡಹಿದರು.
ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ./980
ಮಾಡಿ ಕಾಣುವದು ಗುರುಸೇವೆಯ,
ನೋಡಿ ಕಾಣುವದು ಶಿವಲಿಂಗವ,
ನೀಡಿ ಕಾಣುವದು ಜಂಗಮಕ್ಕೆ.
ಈ ತ್ರಿವಿಧದೊಳೊಂದನಗಲಿದರೆ ಸಂದೇಹ ಸಂಬಂಧ.
ಜ್ಞಾನವಿಲ್ಲದಾಚಾರ ಅನಾಚಾರವಾದುದಾಗಿ,
ಜಂಗಮವಿಲ್ಲದ ಮಾಟಕೋಟಲೆಗೊಳಗಾಗಿತ್ತು
ಗುರುನಿರಂಜನ ಚನ್ನಬಸವಲಿಂಗಾ./981
ಮಾಡಿ ಮಾಡಿ ಬೇಡಲಿಲ್ಲದ ಮಹೇಶ್ವರ.
ನೀಡಿ ನೀಡಿ ಆಡಿಕೊಳ್ಳದ ಮಹೇಶ್ವರ.
ಆಡುತಾಡುತ ದೂಡಿ ದೂರಿದ ಮಹೇಶ್ವರ.
ಆದಿ ಅನಾದಿಯ ಕೋಡಿಗಳದು ಕೂಡಿ ನಿಂದನು
ಗುರುನಿರಂಜನ ಚನ್ನಬಸವಲಿಂಗದಂಗವಾಗಿ./982
ಮಾಡಿದಣಿಯದೆ ಮುಂದುವರಿವ ಮಹಿಮನ ನೋಡಾ !
ನೋಡಿದಣಿಯದೆ ಕೂಡಿಯಗಲದ ಬೇಡಬಾರದ ಧೀರ ನೋಡಾ !
ನೀಡಿ ನಿಲ್ಲದ ಬೇಡಿದೋರದ ನೀಡಿಕೊಳ್ಳದ ನಿಲವ ನೋಡಾ !
ಗುರುನಿರಂಜನ ಚನ್ನಬಸವಲಿಂಗನ ಶರಣರಲ್ಲದೆ
ಹಾಡಿಹಡೆದ ಬೆಡಗು ನೋಡಾ !/983
ಮಾಡುವ ಕೈ ಉಚ್ಫಿಷ್ಟ, ನೋಡುವ ಕಣ್ಣು ಉಚ್ಫಿಷ್ಟ,
ಕೊಡುವ ಭಾವ ಉಚ್ಫಿಷ್ಟವಾಗಿರ್ದು,
ಮಾಡಿದರೇನು ನೋಡಿದರೇನು ಕೊಟ್ಟರೇನು
ಕಳ್ಳನ ಉದ್ಯೋಗಕೆ ಜನ ಮೆಚ್ಚದು ಗುರುನಿರಂಜನ ಚನ್ನಬಸವಲಿಂಗಾ./984
ಮಾಡುವುದು ಭಕ್ತಿಯ ತನುವಂಚನೆಯೊಳಡಗಿ,
ನೀಡುವುದು ಮನವ ಸಂಶಯದೊಳ್ನಿಂದು,
ಕೂಡುವುದು ಲಿಂಗವ ಕಾಯವಂತನಾಗಿ,
ಇದು ಭಾರ ಭಾರ ಬಲುಭಾರ ಕಂಡುಂಡು ಕಾಂಬುವರು ಭವಲತೆಯ ಬುಡವ
ಚನ್ನವೃಷಭೇಂದ್ರಲಿಂಗವನರಿಯದೆ./985
ಮಾಡೆನೆಂಬುವರೆ ಕಾಯವಿಲ್ಲ, ನೋಡೆನೆಂಬುವರೆ ಕಂಗಳಿಲ್ಲ,
ನೆನೆದೆನೆಂಬುವರೆ ಮನವಿಲ್ಲ, ಕೂಡೆನೆಂಬುವರೆ ಭಾವವಿಲ್ಲ,
ಕೊಡಲಿಲ್ಲ ಕೊಳಲಿಲ್ಲ, ಕಾಯಕಂಗಳು ಮನ ಭಾವ ನೀವೆಯಾಗಿ
ಗುರುನಿರಂಜನ ಚನ್ನಬಸವಲಿಂಗವೆಂಬುವರೆ ತೆರಹಿಲ್ಲ./986
ಮಾತು ಮಾತಿನ ತೂತಜ್ಞಾನಿಗಳಿಗೆತ್ತಣ ಶರಣಸ್ಥಲವಯ್ಯಾ?
ಸೋತು ನಡೆಯರು ಗುರುಹಿರಿಯರಿಗೆ
ಖ್ಯಾತಿಯ ಮುಂದಿಟ್ಟು ಮಲತ್ರಯದಾಸೆಯೊಳು ಮುಳುಗಿ.
ಇತರರ್ಗೆ ನೀತಿ ನೂತನದಿಂದೆ ಜರಿದು
ತನ್ನನರಿಯದೆ ಭಿನ್ನವಿಟಟು ಮನಗೂಡಿ ಚರಿಸುವ
ಶುನಕರು ಶರಣರೆಂದರೆ ಸರಿಯಪ್ಪುದೆ?
ನಾಚಿಕೆಯಿಲ್ಲದ ನಾಡಭೂತಗಳನೆನಗೊಮ್ಮೆ ತೋರದಿರಯ್ಯಾ
ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ./987
ಮಾತೆಪಿತರುಗಳಿಂದೆ ಉದಯವಾದ ಸುತನು
ಮಾತೆಪಿತರುಗಳ ನಾಮವಿಡಿದು ಗಳಿಸಿದರ್ಥವ,
ಮಾತೆಪಿತರು ತನ್ನ ಪ್ರಾಣವಾಗಿ ಸುಖಿಸಿ ಬಾಳಿದರೆ
ಲೋಕಧರ್ಮಿಗಳು ಮೆಚ್ಚುವರು,
ಮರೆದು ಬಾಳಿದರೆ ಪಾತಕನೆಂಬುವರು.
ಚಿದ್ಘನ ಗುರುವಿನಿಂದುದಯವಾದ ಚಿಲ್ಲಿಂಗಭಕ್ತನು,
ಚಿದಾನಂದ ದ್ರವ್ಯವ ಗಳಿಸಿ ಸತ್ತುಚಿತ್ತಾನಂದ ಪ್ರಾಣವಾಗಿ
ಸುಖಿಸಿ ಬಾಳಿದರೆ ಆ ಲೋಕಧರ್ಮಿಗಳಾವರಿಸಿಕೊಂಬುವರು,
ಮರೆದು ಸುಖಿಸಿದರೆ ಭವಕರ್ಮಿಯೆಂಬುವರು.
ಇದನರಿದು ಬಂದೆ ನೀ ನೋಡಿ ಬಾರಾ
ಎನ್ನ ಪ್ರಾಣವಾದ ಗುರುನಿರಂಜನ ಚನ್ನಬಸವಲಿಂಗಾ./988
ಮಾನಸ ವಾಚಕ ಕಾಯಕದ ಗತಿಮತಿಗತೀತವಾದ ನಿರಂಜನಲಿಂಗವನು,
ಕರ ನಯನ ಮನ ಪ್ರಾಣ ಭಾವ ಜ್ಞಾನದಲ್ಲಿ ಪರಿಪೂರ್ಣವಾಗಿ
ತೆರಹಿಲ್ಲದಿರ್ಪ ಶರಣಂಗೆ
ಮುಟ್ಟಿ ನೋಡಿ ನೆನೆಯಬೇಕೆಂಬುದಿಲ್ಲ,
ಭೇದಿಸಿ ವಿಚಾರಿಸಿ ಕೂಡಬೇಕೆಂಬುದಿಲ್ಲ ನೋಡಾ.
ಜ್ಞಾತೃವಿಂಗೆ ಜ್ಞೇಯಸ್ವರೂಪವಾಗಿರ್ದ ಕಾಣಾ.
ಸ್ವರೂಪವನರಿಯದೆ ಕರಣತ್ರಯದಾವರಣದಲ್ಲಿ ವರ್ತಿಸಿ
ಹಿರಿದಪ್ಪ ಗಮನಾಗಮನವರಿದು ಮರೆದ ಮಹಿಮರೆಂದಡೆ
ಜಿಹ್ವೆ ಮನ ಸಂಗದಚ್ಚರಿಯೆನುತ ನಗುತಿರ್ದರು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು./989
ಮಾಯಾಕಳೆಯೊಳಿರ್ದು ದೇವಕಳೆದು ನೆನೆದರೆ ಸ್ವಯಮಪ್ಪುದೆ?
ಸಾಯದಕಿಂತ ಮುನ್ನ ಸಾಯಸಂಗೊಳಿಸಿ ನಿಯತವಾದಲ್ಲಿ
ನಿಜಬೆಳಗನರಿಯಬಹುದು ಗುರುನಿಂಜನ ಚನ್ನಬಸವಲಿಂಗದಲ್ಲಿ./990
ಮಾರ್ಗಕ್ರಿಯೆಗಳನೊಳಕೊಂಡು
ಮೀರಿದಕ್ರಿಯೆಯಲ್ಲಿ ನಿಂದ ಪರಮಾನಂದ ಶರಣಂಗೆ
ಲೋಕದ ನಡೆ ಲೋಕದ ನುಡಿ ಲೋಕದ ಪ್ರಪಂಚಗಳೆಂಬ
ಖಂಡಿತಕರ್ಮಗಳೇನೂ ಇಲ್ಲ ನೋಡಾ.
ಅಖಂಡ ಅನುಪಮಸುಖಿ ಈ ವರ್ಮವನರಿಯಲರಿಯದೆ
ಕಂಡವರ ಕಂಡು ಒಂದು ಕುರುಹವಿಡಿದು
ಮನಸಿಗೆ ಬಂದಂತೆ ವಾರ ತಿಥಿ ನಕ್ಷತ್ರ ಮಾಸ ವರುಷವಿಡಿದು
ನೇಮವಿಟ್ಟು ಮಾಟ ನಿಯಮವಿಟ್ಟಾರ್ಚನೆ ನಿಯಮಾರ್ಪಣವೆಂದು
ಕೆಟ್ಟ ಭಾವದಲ್ಲಾಡುವ ಸೊಟ್ಟಕರ್ಮಾಳಿಗಳ ಕಂಡು
ಎನಗೆ ಚೋದ್ಯವಾಯಿತ್ತು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./991
ಮಾರ್ಗಕ್ರೀಗಳನಡಗಿಸಿಕೊಂಡು
ಮೀರಿದಕ್ರಿಯೆಯಲ್ಲಿ ನಿಂದು ಸಮರಸವಾದ ಶರಣ,
ತಾನೇನು ಭಕ್ತಿಕ್ರೀಯಲ್ಲಿರ್ದಡು ತಾನಳಿದಿಹನು ;
ತಾನೇನು ವ್ಯಾಪಾರದೊಳಿರ್ದಡು ಹುಸಿವಿರಹಿತನು ;
ತಾನೇನನ್ಯತ್ರ ಚರಿಸಿದಡೆಯು ಬೇಡ ಮರೆದಿಹನು.
ತಾನೆಂತಿರ್ದಡೆಯು ಬೇಡಿದರಿಲ್ಲೆನ್ನ ಮರೆದಿಹನು.
ಈ ಚತುರ್ವಿಧದಲ್ಲಿರ್ದು ಗುರುನಿರಂಜನ ಚನ್ನಬಸವಲಿಂಗವಾಗಿಹನು./992
ಮಾರ್ಗದ ನೀರು ಮಾರುತಗೂಡಿ ಕಿಚ್ಚಿನ ಕಾಲುವೆಯಲ್ಲಿ ಕಟ್ಟೊಡೆಯದಿದರ್ು
ನೆಟ್ಟನೆ ನಿಸ್ಸೀಮದ ಹೊಲಕ್ಕೆ ತಿರುಹಿ ಧರೆಯ ತಂಪು ಹರಿಯದಿರ್ದಡೆ
ಪರಿಪರಿಯ ಸಧರ್ಮಸಂಪತ್ತಿನೊಳಗಾಗಿ ನಿಂದುದು
ಗುರುನಿರಂಜನ ಚನ್ನಬಸವಲಿಂಗ ತಾನಾಗಿ./993
ಮಿಥ್ಯಭಾವವನು ತತ್ತರಿದಂದು, ಕಲ್ಪಕಳೆಯನಳಿದುಳಿದಂದು,
ಸತ್ತವರೆದ್ದು ಬಂದಂದು, ಸಂಬಂಧಸುಖಸಮ್ಮುಖದ ಸಂಗದ ಸವಿಯ ನೋಡಾ.
ಧರೆ ಗಗನದ ಮಧ್ಯ ಜಗಜಗಿಸುತಿರ್ದ
ಷಡುದರ್ಶನ ಮೂಲಮುಖಸುಯಿಧಾನವಿಡಿದು,
ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗಾ./994
ಮಿಥ್ಯವಲ್ಲದ ಭಕ್ತನ ಭಾವ
ನಿತ್ಯ ಜಂಗಮಾರ್ಚನೆಯನೆ ಮುಂದುಗೊಂಡಿಪ್ಪುದು.
ಭೃತ್ಯತ್ವವೆಂಬ ರತ್ನಾಂಬರವ ಹೊದ್ದು
ಕರ್ತೃಗಳಡಿಯನು ಕೂಡಿದ ಕರದ ಮೇಲೆ ಕುಡಿನೋಟ ಬಿಡದಿಹುದು,
ಸತ್ಯ ಪದಾರ್ಥವ ನೀಡಿ ಮಿಕ್ಕುದಕ್ಕೆಳಸಲಲ್ಲಿಟ್ಟಿಹನು ಚಿತ್ತವ.
ಒಡೆಯರಿಂಗಿತವನರಿಯಲಿಟ್ಟಿಹನು ಮನವ.
ಸಮತೋಪಚಾರ ಸಮರಸ ನುಡಿಯನನುಕೂಲಿಗಿಟ್ಟಿಹನು ಗುರುಚರಲಿಂಗ.
ಎನ್ನ ಪ್ರಾಣವೆಂಬುದ ಸುಜ್ಞಾನದಲ್ಲಿಟ್ಟಿಹನು
ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ./995
ಮುಗ್ಧನಾಗಿ ಮುಕ್ತಿಯ ಪಡೆಯಬೇಕೆಂದು ಸ್ಥೂಲತತ್ವದ
ಇಂದ್ರಿಯಂಗಳೆಲ್ಲ
ಸೂಕ್ಷ್ಮತತ್ವದ ಕರಣಂಗಳ ಕೈಯಲ್ಲಿ ವಿಷಯಂಗಳೆಂಬ ಕಾರಣತತ್ವದ
ಮೂಲದಲ್ಲಿ
ಭ್ರಾಂತಿ ದುಸ್ಸಾರದೊಳು ಮುಳುಗಿ ತೇಕಾಡುತ್ತಿಹ
ಸಕಲ ಗಂಜಳದ ಗುಂಜುವಾಗಿಹವು.
ಇಂತು ಭರಿತವಾದ ಸೋಂಗಿಗನು ಆಯಾಸಗೊಂಡು ಸುಮ್ಮನಿರ್ದಡೆ
ಮುಗ್ಧವಾದಾನೆಯೆ ? ಆಗನು.
ನಾಲಿಗೆ ಬಿದ್ದಂದು ಬಾಯಿಮುಗ್ಧ, ಕಂಗಳು ಹೋದಂದು ನೋಟಮುಗ್ಧ,
ಕರ್ಣದ್ವಾರ ಕಟ್ಟಿದಂದು ಕಿವಿಮುಗ್ಧ, ಕಾಲ ಕೂಡಿದಂದು ಸರ್ವಾಂಗಮುಗ್ಧ.
ಹೀಗಲ್ಲ ನಿಮ್ಮ ಶರಣ
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮಲ್ಲಿ ಅಜಗಣ್ಣನೊಬ್ಬನೆ ಮುಗ್ಭನು./996
ಮುಟ್ಟಬಾರದ ತಲೆ ತಟ್ಟಬಾರದ ಗಮನ
ಬಿಟ್ಟು ಬಿಟ್ಟು ನಡೆವ ದಿಟ್ಟರಾರು ಹೇಳಾ ?
ಹಬ್ಬಿದ ಮುಸಿಯೊಳಗೆ ಬೆಳೆದ ಬೆಳಸಿಯ ಕೊಯ್ದು ಮರಳಿ ಚಿಗುರಿಸಿ
ಬೆಳೆದು ವೇದಿಸಿ ಸುಖಿಸುವ ಮಹಿಮರಿನ್ನಾರು ಹೇಳಾ ?
ನೀರ ಹಕ್ಕಿಯ ಪಕ್ಕವಮುರಿದು, ಹುಲಿಯ ಕೊಂದು ಕಾಡಕೋಣನ ಕಡಿದು,
ಊರಮೇಗಣ ಮಠದೊಳಗೆಸೆವ ಗುರುನಿರಂಜನ ಚನ್ನಬಸವಲಿಂಗಕ್ಕೆ
ಶರಣೆಂದು ಬದುಕುವರಾರು ಹೇಳಾ ?/997
ಮುಟ್ಟು ತಟ್ಟು ಮುದ್ದು ಆಲಿಂಗನವೆಂಬ ಕಾಯರತಿಯು
ಇಷ್ಟಲಿಂಗದಲ್ಲಿ ತರಹರವಾಗಿ,
ನೆನಹು ನೀರಿಕ್ಷಣ ಮೋಹ ಕಳೆಯೆಂಬ ಮನದರತಿ
ಪ್ರಾಣಲಿಂಗದಲ್ಲಿ ತರಹರವಾಗಿ,
ಹರುಷ ಸುಖ ಸಮರಸ ಪರವಶವೆಂಬ ಭಾವದರತಿ
ಮಹಾಲಿಂಗದಲ್ಲಿ ತರಹರವಾಗಿ ಸುಳಿವ ಶರಣ
ಎಂತಿರ್ದಂತೆ ಪರಶಿವಲಿಂಗ ತಾನೇ ಕಾಣಾ.
ಈ ದ್ವಾದಶರತಿಯ ಮಲತ್ರಯದಲ್ಲಿ ಹುದುಗಿಸಿ
ನಿರ್ಮಲಶರಣರಿಂದು ನುಡಿದು ನಡೆದು ಹೋದರೆ
ಬಚ್ಚಲದಲ್ಲಿಯ ಹುಳ ಬಾಳಿ ಮಡಿದಂತೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./998
ಮುತ್ತ ತೆತ್ತಿಸಿದ ಪದಕವೆನ್ನ ಕೊರಳಲ್ಲಿ ಕಟ್ಟಿದನಯ್ಯಾ.
ಸೂತ್ರವನೆತ್ತಿದರೆ ಮುತ್ತಿಂಗಾರು ಅದರೊಳಗಾರು?
ಒತ್ತೆಯ ಒಡವಿಂಗೆ ನಿತ್ಯವಾಗಿ ಒಪ್ಪಿ,
ಸತ್ಯವಾಗೆತ್ತಿಕೊಂಡನು ತನ್ನೊಡಲೊಳಗೆ
ಗುರುನಿರಂಜನ ಚನ್ನಬಸವಲಿಂಗ./999
ಮುತ್ತಿನೈದೊಂದೆಳೆಯ ಕಟ್ಟಾಣಿ ಎನ್ನ ಕೊರಳಲ್ಲಿ ಒಪ್ಪುತಿಪ್ಪುದು.
ಸುತ್ತಿಬಂದ ಒಡ್ಡ್ಯಾಣ ಎನ್ನ ನಡುಮಧ್ಯದಲ್ಲಿ ಝಗಝಗಿಸುತಿಪ್ಪುದು.
ಕಾಲ ರುಳಿ ಕಣ್ಣಿಂಗೆ ಮಿರುಗುತಿಪ್ಪುದು,
ನವನೂತನ ಚಿಂತಾಕರ ಮಧ್ಯೆಕೊರಳಿಗೆ ಸಮನಾದ ಮೇಲೆ,
ತವಕ ಮುಂದುಗೊಂಡಿತ್ತು ತಡವೇಕೆ ನಡೆ
ನಮ್ಮ ಗುರುನಿರಂಜನ ಚನ್ನಬಸವಲಿಂಗವ ಮನ್ನಿಸಿ ಕರತನ್ನಿ./1000