Categories
ವಚನಗಳು / Vachanagalu

ದೇಶಿಕೆಂದ್ರ ಸಂಗನಬಸವಯ್ಯನ ವಚನಗಳು

ಅಂಕೋಲೆಯ ಬಿತ್ತು ಪೃಥ್ವಿಯ ಮೇಲೆ ಬಿದ್ದು,
ಆ ಕಾಲಕ್ಕೆ ಬಂದು ನೈಯ್ದುವಂತೆ,
ತನ್ನ ನಿಮಿತ್ತ ತಾನು ತನುವಿಡಿದಿರ್ದು
ಸರ್ವಾಚಾರಸಂಪತ್ತೆಂಬ ಸೌಖ್ಯದಿಂ ವಿನೋದಿಸಿ
ಲೀಲೆ ನಿಂದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ
ನಿರ್ವಯಲಾದುದೇ ಒಂದಾಶ್ಚರ್ಯವು./1
ಅಂಗ ಆಚಾರಂಗವಾಗದನ್ನಕ್ಕರ,
ಮನಸು ಉನ್ಮನಸಾಗದನ್ನಕ್ಕರ,
ಪ್ರಾಣ ಚಿತ್ಪ್ರಾಣವಾಗದನ್ನಕ್ಕರ,
ಭಾವ ಮಹಾನುಭಾವವಾಗದನ್ನಕ್ಕರ,
ಜೀವ ಸಜ್ಜೀವವಾಗದನ್ನಕ್ಕರ,
ಇಹಪರಕಾಂಕ್ಷೆ ಅಳಿಯದನ್ನಕ್ಕರ,
ಎಂತು ಮಾಹೇಶ್ವರನಪ್ಪನಯ್ಯಾ?
ಕಾಯದಲ್ಲಿ ಗುರುಭಕ್ತಿ ಕಾಣದನ್ನಕ್ಕರ,
ಮನದಲ್ಲಿ ಲಿಂಗಭಕ್ತಿ ಕಾಣದನ್ನಕ್ಕರ,
ಪ್ರಾಣದಲ್ಲಿ ಜಂಗಮಭಕ್ತಿ ಕಾಣದನ್ನಕ್ಕರ,
ಭಾವದಲ್ಲಿ ಪ್ರಸಾದಭಕ್ತಿ ಕಾಣದನ್ನಕ್ಕರ
ಎಂತು ಮಾಹೇಶ್ವರನಪ್ಪನಯ್ಯಾ ?
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣರ ಸಂಗವಿಲ್ಲದನ್ನಕ್ಕರ
ಎಂತು ಮಾಹೇಶ್ವರನಪ್ಪನಯ್ಯಾ ?/2
ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ಗುಣವರ್ಗ ಊಮರ್ಿ ಭೂತೇಂದ್ರಿಯ ಕರಣವಿಷಯಾದಿ
ಸಕಲನಿಃಕಲವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ
ಪಂಚಾದಶ ಮಾಯಾಪಟಲಾದಿ ತಾಮಸವೆಲ್ಲ ಹುಸಿಯೆಂಬುದ
ಕಂಡೆಯಲ್ಲ ಮೂಗಣ್ಣಿಂದೆ.
ಕಂಡೆ ಕಾಣೆ ಬೇಕು ಬೇಡ ನಾನು ನೀನೆಂಬ
ದ್ವಂದ್ವಕರ್ಮದ ಕತ್ತಲೆ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ಇಂತಿವೆಲ್ಲ ಕಂಡ ಕಾಣಿಕೆ ನಿಶ್ಚಯವಾದಲ್ಲಿ
ನಿಜ ನಿರ್ವಾಣದ ನಿಲವು ನೀನೆಂಬೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ./3
ಅಂಗ ಮನ ಪ್ರಾಣವನರಿಯದೆ ತನ್ನನಿತ್ತ
ಸತ್ಯಶರಣರ ಕಳವಳಿಕೆಗೆ ಸಮವೆಂದು ಬೀರಿಕೊಳ್ಳುವ
ಕಕ್ಕುಲಾತಿ ಡಂಭಕವೇಷಧಾರಿಗಳು ತಮ್ಮನರಿಯದೆ
ತಾವು ಗುರುಲಿಂಗಜಂಗಮಕೊಕ್ಕುಮಿಕ್ಕಿ
ಯೋಗ್ಯವೆಂಬ ಅಯೋಗ್ಯ ನುಡಿಗಳನೇನೆಂಬೆನಯ್ಯಾ ?
ಆ ಗುರುಲಿಂಗಜಂಗಮವು ಬಂದಲ್ಲಿ
ಅರ್ಥ ಪ್ರಾಣ ಅಭಿಮಾನವಿಡಿದು ವಂಚನೆಯೊಳು ನಿಂದು
ಮಾಡಿ ನೀಡಿ ಕಳುಹುವ ತ್ರಿವಿಧಗುರುದ್ರೋಹಿಗಳಿಗೆ
ಸತ್ಕ್ರಿಯಾಚಾರವೆಲ್ಲಿಹದೊ !
ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ
ಸುಜ್ಞಾನ ಆಚಾರವೆಲ್ಲಿಹದೊ !
ಸುಜ್ಞಾನ ಆಚಾರವಿಲ್ಲದ ತ್ರಿವಿಧಜಂಗಮದ್ರೋಹಿಗಳಿಗೆ
ಸಮರಸಭಾವಾಚಾರವೆಲ್ಲಿಹದೊ !
ಸಮರಸಭಾವಾಚಾರವಿಲ್ಲದ ತ್ರಿವಿಧಪ್ರಸಾದದ್ರೋಹಿಗಳಿಗೆ
ಗುರುನಿರಂಜನ ಚನ್ನಬಸವಲಿಂಗವಾದ ನಿಜಪದವೆಲ್ಲಿಹದೊ !/4
ಅಂಗಕ್ಕೆ ಅಷ್ಟಾವರಣ, ಮನಕ್ಕೆ ಮಂತ್ರ, ಪ್ರಾಣಕ್ಕೆ ಪಂಚಾಚಾರ,
ಭಾವಕ್ಕೆ ಅರಿವುಸಂಬಂಧವಾದ ಭಕ್ತ ಎಂತು ನಡೆದಂತೆ ಸಂತು,
ಹಿಂದುಮುಂದೆಂಬ ಸಂದೇಹಿಗಳ ಮಾತು ಹಿಂದಕೆ ಸರಿ.
ಗುರುನಿರಂಜನ ಚನ್ನಬಸವಲಿಂಗದಂಗವಾದ ಅಗಮ್ಯರಿಗೆ ಅಂತಿಂತೆನ್ನಲಾಗದು./5
ಅಂಗಕ್ಕೆ ಲಿಂಗವ ಭಿನ್ನವಿಟ್ಟು ಆರಾಧಿಸಿ ಅರಿವ
ಕುನ್ನಿಸಿದ್ಧಾಂತಿಯ ಭಾವಕ್ಕೆ ಚಿನ್ಮಯಪ್ರಕಾಶ ಪ್ರಾಣಲಿಂಗವು
ಅಗೋಚರ ನೋಡಾ.
ಅಂಗದಮೇಲೆ ಲಿಂಗಶೂನ್ಯವಾಗಿ ಆತ್ಮನೇ ಲಿಂಗವೆಂದು
ಅಹಂಕಾರದಿಂದರಿವ ಅವಲಕ್ಷಣಪಸು ಗೊಡ್ಡು ವೇದಾಂತಿಯ ಭಾವಕ್ಕೆ
ಮಹಾಪ್ರಕಾಶಮಯ ಪ್ರಾಣಲಿಂಗವು ಅಪ್ರಮಾಣವಾಗಿಹುದು ನೋಡಾ.
ಮತ್ತೆಂತೆಂದೊಡೆ, ಅಂಗಕ್ಕೆ ಆಚಾರಸಂಬಂಧವಾಗಿ
ಮನಕ್ಕೆ ಸುಜ್ಞಾನಸಂಬಂಧವಾಗಿ
ಭಾವಕ್ಕೆ ಮಹಾನುಭಾವಸಂಬಂಧವಾದಲ್ಲಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧ ನೋಡಾ. /6
ಅಂಗದಲ್ಲಿ ಆಚಾರ, ಆತ್ಮನಲ್ಲಿ ಗೌರವ,
ಪ್ರಾಣದಲ್ಲಿ ಶಿವ, ಕರಣಂಗಳಲ್ಲಿ ಜ್ಞಾನ,
ವಿಷಯಂಗಳಲ್ಲಿ ಪರಮಾನಂದ,
ಹೃದಯದಲ್ಲಿ ಪರಮಪರವಶ,
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಅನುಪಮಸುಖಿ./7
ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ,
ಆತ್ಮನಲ್ಲಿ ಗುರುಲಿಂಗಪ್ರಸಾದ ತಾನೆ,
ಪ್ರಾಣನಲ್ಲಿ ಶಿವಲಿಂಗಪ್ರಸಾದ ತಾನೆ,
ಕರಣಂಗಳಲ್ಲಿ ಜಂಗಮಲಿಂಗಪ್ರಸಾದ ತಾನೆ,
ವಿಷಯಂಗಳಲ್ಲಿ ಪ್ರಸಾದಲಿಂಗಪ್ರಸಾದ ತಾನೆ,
ತೃಪ್ತಿಯಲ್ಲಿ ಮಹಾಲಿಂಗಪ್ರಸಾದ ತಾನೆ,
ಸ್ಥೂಲಾಂಗದಲ್ಲಿ ನಿಷ್ಕಲಲಿಂಗಪ್ರಸಾದ ತಾನೆ,
ಸೂಕ್ಷ್ಮಾಂಗದಲ್ಲಿ ಶೂನ್ಯಲಿಂಗಪ್ರಸಾದ ತಾನೆ,
ಕಾರಣಾಂಗದಲ್ಲಿ ನಿರಂಜನಲಿಂಗಪ್ರಸಾದ ತಾನೆ,
ಎನ್ನ ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿಪ್ಪ
ಗುರುನಿರಂಜನ ಚನ್ನಬಸವಲಿಂಗಪ್ರಸಾದ ತಾನೆ./8
ಅಂಗದಲ್ಲಿ ಲಿಂಗಸನ್ನಿಹಿತನಾಗಿ, ಲಿಂಗದಲ್ಲಿ ಅಂಗಸನ್ನಿಹಿತನಾಗಿ,
ಅಂಗಲಿಂಗಸಂಗದಲ್ಲಿ ಪರಮಪರಿಣಾಮಿಯಾಗಿ,
ಇಹಪರವರಿಯದ ಪರಿಪೂರ್ಣಸುಖಾನಂದ ಶರಣಂಗೆ
ನಮೋ ನಮೋ ಎಂದು ಬದುಕಿದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./9
ಅಂಗದಿಚ್ಫೆಗೆ ಅನುಸರಣೆವಿಡಿದು
ಲಿಂಗಪಂಚಾಚಾರ ಗತಿಗೆಡಿಸಿದಲ್ಲಿ ಗುರುಕರುಣಯೆಲ್ಲಿಹುದೊ !
ಷಟ್ಸ್ಥಲಸಂಬಂಧವೆಲ್ಲಿಹುದೋ ?
ಅಷ್ಟಾವರಣದವಿರಳಸುಖವೆಲ್ಲಿಹುದೋ ?
ಗುರುನಿರಂಜನ ಚನ್ನಬಸವಲಿಂಗದ ನಿಜವೆಲ್ಲಿಹುದೋ ?/10
ಅಂಗನೆಯ ಸಂಗಮೋಹಿಗೆ ಗುರುನಿಷ್ಠೆಯಿಲ್ಲ, ಲಿಂಗನಿಷ್ಠಯಿಲ್ಲ,
ಜಂಗಮನಿಷ್ಠೆಯಿಲ್ಲ, ಪಾದೋದಕಪ್ರಸಾದನಿಷ್ಠೆಯಿಲ್ಲ,
ಈ ಪಂಚವಿಧ ಪ್ರಸನ್ನಸುಖವರಿಯದ ಮಲಸುಖಿಯು
ತಾನೊಂದು ಕಾರ್ಯವರಿದುಬಂದು ಕಾರಣಿಕಪುರುಷನೆಂದರೆ
ಈ ಹುಸಿ ಬಾಯಿಗೆ ಮುಂದೆ ಕಸಮಲ ಹುಡಿಯ ತುಂಬುವುದೇ ಸಾಕ್ಷಿ.
ಇದು ಕಾರಣ, ಈ ಹುಸಿನಾಲಿಗೆಯನು ಇದರ ಚೇತನವನು ಅದರಾಸ್ವಾದವನು
ಸುಟ್ಟು ಬಟ್ಟಿಟ್ಟಲ್ಲದೆ ಭಕ್ತಾದಿಕುಳವೆಂದರೆ ಅಘೋರನರಕ ತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./11
ಅಂಗಭವಿಯೊಡನೆ ಕ್ರಿಯೆಗೂಡಿ ನಡೆಯಲಾಗದು.
ಮನಭವಿಯೊಡನೆ ಮಾತನಾಡಿ ಸುಖಿಸಿಕೊಳ್ಳಲಾಗದು.
ಪ್ರಾಣಭವಿಯೊಡನೆ ಮಹಾನುಭಾವಪ್ರಸಾದ ಸಮರಸ ಮಾಡಲಾಗದು.
ಅದೇನು ಕಾರಣವೆಂದಡೆ.
ಅವರು ತ್ರಿವಿಧ ದ್ರೋಹಿಯಾದಕಾರಣ.
ಗುರುಮಾರ್ಗಶೂನ್ಯರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ./12
ಅಂಗಯ್ಯಲಿಂಗದನುವರಿದು ಅನಿಮಿಷಸುಖಿಯಾಗಲರಿಯದೆ,
ತುಂಗಭದ್ರೆಯ ಹಂಪೆ, ನಂಜುಂಡಪರ್ವತ, ಕಾಶಿ,
ಸಂಗಮಾದಿ ಪುಣ್ಯಕ್ಷೇತ್ರವ ಕಂಡು ಬದುಕುವೆನೆಂದು
ಮಂಡಲವ ಸುತ್ತಿ ಬೆಂಡಾಗಿ ಅಸುವಳಿದು ಹೋಗುವ
ಕಸಮನುಜರು, ಅವರೆತ್ತ ಬಲ್ಲರಯ್ಯಾ
ಗುರುನಿರಂಜನ ಚನ್ನಬಸವಲಿಂಗದ ಘನವ./13
ಅಂಗ-ಲಿಂಗ, ಶಕ್ತಿ-ಭಕ್ತಿ, ಹಸ್ತ-ಮುಖ, ಪದಾರ್ಥ-ಪ್ರಸಾದವೆಂಬ
ಅಷ್ಟ ವಿಧ ಸಕೀಲನರಿದು,
ಎನ್ನ ಸ್ಥೂಲತತ್ವದೊಳಗಣ ಸಕಲನಿಃಕಲ ನಿರಂಜನವನು
ಸತ್ತುಸ್ವರೂಪಕ್ಕಿತ್ತು ಶುದ್ಧವಾಗಿ ಮರೆದೆನಯ್ಯಾ,
ಎನ್ನ ಸೂಕ್ಷ್ಮ ತತ್ವದೊಳಗಣ ಸಕಲನಿಃಕಲ ನಿರಂಜನವನು
ಚಿತ್ಸ್ವರೂಪಕ್ಕಿತ್ತು. ಸಿದ್ಧವಾಗಿ ಮರೆದೆನಯ್ಯಾ.
ಎನ್ನ ಕಾರಣತತ್ವದೊಳಗಣ ಸಕಲನಿಃಕಲ ನಿರಂಜನವನು
ಆನಂದಸ್ವರೂಪಕ್ಕಿತ್ತು ಪ್ರಸಿದ್ಧವಾಗಿ ಮರೆದೆನಯ್ಯಾ.
ಗುರುನಿರಂಜನ ಚನ್ನಬಸವಲಿಂಗ ಪ್ರಸಾದದೊಳಡಗಿ
ನಾನು ಪ್ರಸಾದಿಯೆಂಬುದನರಿಯೆನಯ್ಯಾ./14
ಅಂಗಲಿಂಗವನರಿಯದು, ಲಿಂಗವಂಗವನರಿಯದು,
ಲಿಂಗಾಂಗಸಂಗವನರಿಯದು.
ಸಂಗಲಿಂಗಾಂಗವನರಿಯದು,
ಅಂಗಲಿಂಗಸಂಗವ ಸಮರಸ ನುಂಗಿ
ನಿರವಯ ನಿತ್ಯ ಗುರುನಿರಂಜನ ಚನ್ನಬಸವಲಿಂಗ
ನಾಮ ನಿರ್ನಾಮ ನಿರ್ವಯಲಾಯಿತ್ತು./15
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು.
ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು.
ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು.
ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./16
ಅಂಗವನರ್ಪಿಸಿದ ಮಂಗಲರೆಂದು ಹೇಳಿ ನಡೆವರಯ್ಯಾ
ಉಚ್ಛಿಷ್ಟವನರಿಯದೆ.
ಮನವನರ್ಪಿಸಿದ ಮಹಿಮರೆಂದು ಹೇಳಿ ನಡೆವರಯ್ಯಾ
ಮಲಸಂಬಂಧವನರಿಯದೆ.
ಪ್ರಾಣವನರ್ಪಿಸಿದ ಜಾಣರೆಂದು ಹೇಳಿ ನಡೆವರಯ್ಯಾ
ಮಾಯಾಮೋಹದ ಮಚ್ಚು ಬಿಚ್ಚದೆ.
ಭಾವವನರ್ಪಿಸಿದ ಮಹಾನುಭಾವಿಗಳೆಂದು ಹೇಳಿ ನಡೆವರಯ್ಯಾ ಭ್ರಾಂತಿಹಿಂಗದೆ.
ಇಂತು ಚತುರಾರ್ಪಿತವಿಹೀನವಾಗಿ ಚತುರ್ವಿಧಸಾರಾಯರೆಂದರೆ
ಗುರುಲಿಂಗಜಂಗಮಪ್ರಸಾದ ಮರೆಯಾಗಿರ್ದವು
ಲಯಗಮನದತ್ತ ಕೆಡಹಿ ಗುರುನಿರಂಜನ ಚನ್ನಬಸವಲಿಂಗಾ./17
ಅಂಗವಲ್ಲದ ಅಂಗಸಂಗವಾದ ಸರ್ವಜ್ಞ ಮಹಿಮಂಗೆ ನಿರ್ವಿಕಲ್ಪ ನಿಜವಾಗಿ
ಭಾವ್ಯ ಭಾವ ಭಾವಕವೆಂಬುವೇನುಯಿಲ್ಲದ ನಿರ್ಭಾವದ ನಿಲುವೇ ನಿಂದು
ನೆರೆಯರಿಯದಿದರ್ುದು ಗುರುನಿರಂಜನ ಚನ್ನಬಸವಲಿಂಗ ತಾನೆಂಬ./18
ಅಂಗವಾರರಲ್ಲಿ ಬೆಳಗ ನಿಲ್ಲಿಸಿ, ಪ್ರಾಣಾಂಗವಾರರಲ್ಲಿ ಬೆಳಗ ನಿಲ್ಲಿಸಿ,
ಎರಡೊಂದು ಪಾದವಿಡಿದು ಸಕಲರು ಕೂಡಿ ಬಂದು ಶರಣೆಂದು ಮರೆದರೆ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅದೇ ಪ್ರಾಣಲಿಂಗಸಂಬಂಧವು./19
ಅಂಗವಿಲ್ಲದ ನಿಲುವಿಂಗೆ ಆಚಾರವಿಲ್ಲ.
ಆಚಾರವಿಲ್ಲದ ನಿಲುವಿಂಗೆ ನೆನಹಿಲ್ಲ.
ನೆನಹು ಇಲ್ಲದ ನಿಲುವಿಂಗೆ ಅರುಹಿಲ್ಲ.
ಅರುಹು ಇಲ್ಲದ ನಿಲುವಿಂಗೆ ಗುರುನಿರಂಜನ
ಚನ್ನಬಸವಲಿಂಗವಿಲ್ಲದ ನಿಜೈಕ್ಯ ತಾನೆ ನೋಡಾ./20
ಅಂಗವಿಲ್ಲದ ಬಾಳಿಗೆ ಅಂಗವೆಂಬುದಿಲ್ಲ,
ಅಂಗವಿಲ್ಲದ ಬಾಳಿಗೆ ಲಿಂಗವೆಂಬುದಿಲ್ಲ,
ಸಂಗದ ಸುಖಮಯದ ಬಾಳಿಗೆ ತಾನಿಲ್ಲ ನೀನಿಲ್ಲ.
ತಾನುಯೆಂಬುದು ಆಶ್ಚರ್ಯದ ಗತಿ,
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಗತಿ./21
ಅಂಗವಿಲ್ಲದ ಭಕ್ತನ ಶೃಂಗಾರವ ನೋಡಾ !
ಮನವಿಲ್ಲದ ಭಕ್ತನ ಮಚ್ಚು ನೋಡಾ !
ಪ್ರಾಣವಿಲ್ಲದ ಭಕ್ತನ ಘನವ ನೋಡಾ !
ಭಾವವಿಲ್ಲದ ಭಕ್ತನ ಸುವಿಚಾರವ ನೋಡಾ !
ಪರಿಜ್ಞಾನವಿಲ್ಲದ ಭಕ್ತನ ಇರವ ನೋಡಾ !
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವ ನೋಡಾ !/22
ಅಂಗವಿಲ್ಲದೆ ಸಂಗಸನ್ನಿಹಿತ ಜಂಗಮವೆನ್ನಲ್ಲಿಗೈತಂದರೆ,
ಮಂಗಳಾರತಿಯನೆತ್ತಿ,
ಎನ್ನ ಸಂಗ ಎನ್ನ ಅಂಗ ಮನ ಭಾವಂಗಳೊಪ್ಪಿ ಕರೆತರುವೆ ಕೇಳಿರವ್ವಾ !
ಬಂದ ಬರವ ಕಂಡು ಕರಣತ್ರಯ ಕೈಗೂಡಿ ಮಾಡುವೆ
ನೀವು ಮೆಚ್ಚುವಂತೆ ಕೇಳಿರವ್ವ ಕೆಳದಿಯರೆಲ್ಲ.
ಮತ್ತೆ ನಿಮ್ಮ ನಿಲವೆನ್ನವೊಳಹೊರಗೆ ಸಯವಾದರೆ
ಗುರುನಿರಂಜನ ಚನ್ನಬಸವಲಿಂಗದೊಲುಮೆ ನಿತ್ಯ ಕಾಣಿರವ್ವಾ./23
ಅಂಗವೆಂಬುವುದಿಲ್ಲ ಲಿಂಗವೇದಿ ಶರಣಂಗೆ,
ಲಿಂಗವೆಂಬುವುದಿಲ್ಲ ಅಂಗಸಂಗಸನ್ನಿಹಿತ ಶರಣಂಗೆ,
ಹಸ್ತವೆಂಬುವುದಿಲ್ಲ ಲಿಂಗನಿವಾಸ ಶರಣಂಗೆ,
ಮುಖವೆಂಬುವುದಿಲ್ಲ ಸುಖಭರಿತ ಶರಣಂಗೆ,
ಶಕ್ತಿಯೆಂಬುವುದಿಲ್ಲ ಮುಕ್ತಾಂಗ ಶರಣಂಗೆ,
ಭಕ್ತಿಯೆಂಬುವುದಿಲ್ಲ ನಾದಬಿಂದು ಕಲಾಶೂನ್ಯ ಶರಣಂಗೆ.
ಪದಾರ್ಥವೆಂಬುವುದಿಲ್ಲ ಗುರುಭಾವವಿರಹಿತ ಶರಣಂಗೆ,
ಪ್ರಸಾದವೆಂಬುವುದಿಲ್ಲ ಗುರುನಿರಂಜನ ಚನ್ನಬಸವಲಿಂಗ
ತಾನು ತಾನಾದ ಶರಣಂಗೆ./24
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು
ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು,
ಈ ಕುರುಹಿನೊಳು ನಿಂದು ಹೊರಗಣನೆರವಿಯ
ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ
ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ?
ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ
ತನ್ನ ತಾ ನೋಡುತಾಡುತಿರ್ಪನು./25
ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು
ಗುರುಮುಖದಿಂದೆ ಕರ ಮನ ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು,
ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ,
ಕಾಶಿ ಗೋಕರ್ಣ ರಾಮೇಶ ನದಿ ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು
ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ
ಕಂಡರೇನು ಕಾಣಿಸಿಕೊಂಡರೇನು ಹೋಗಿ ಬರುವ ಮಾರ್ಗ ತಪ್ಪದು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./26
ಅಂತರಂಗದಲ್ಲಿ ಪರಿಪೂರ್ಣಜ್ಞಾನವಿರ್ದು
ಬಹಿರಂಗದಲ್ಲಿ ವಿನೋದ ಕಾರಣ ಚರಿಸಿದೊಡೆ,
ಅಂತರಂಗದಲ್ಲಿ ವಿಪರೀತ ದುಸ್ಸಾರಭರಿತವಾ
ಬಹಿರಂಗದ ವೇಷರು ಹೆಂಡದ ಭಾಂಡದಂತೆ
ತಮ್ಮ ತಾವರಿಯದೆ ಮುಂದುಗಾಣದೆ ನೋಯಿಸಿ ನುಡಿವರಯ್ಯಾ,
ಅದು ತಾಗಲಮ್ಮದು.
ಉಷ್ಣಕ್ಕೆ ನೊಂದು ಸೂರ್ಯಂಗೆ ಭೂಬಂಡು ನೆಗೆದೊಗೆದರೆ
ತನಗಲ್ಲದೆ ತಾಗಲರಿಯದು.
ಇದು ಕಾರಣ ಈ ಒಡಲಗಿಚ್ಚಿನ ತುಡುಗುಣಿಗಳ ಎನ್ನತ್ತ ತೋರದಿರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ./27
ಅಂತರಂಗದವಿರಳಾನಂದ ಜ್ಯೋತಿರ್ಮಯ ಭಸಿತವನು
ಪಾದಾದಿ ಮಸ್ತಕಕೆ ಸರ್ವಾಂಗದಲಿ ಧರಿಸಿ
ಆದಿ ಮಧ್ಯ ಕಡೆಯೆಂಬ ಕರ್ಕಸವ ನೂಂಕಿ,
ಕತರ್ು ನಿರಂಜನ ಚನ್ನಬಸವಲಿಂಗದಲ್ಲಿ ಸುಖಿಯಾದೆನು. /28
ಅಂತರಂಗವನರಿಯದ ಬಹಿರಂಗ, ಬಹಿರಂಗವನರಿಯದ ಅಂತರಂಗ,
ಈ ನಡೆ ನಿಲುವುಗಳನು ಜರಿದು ನಿಂದ ಅಂತರಬಾಹ್ಯ
ಬಾಹ್ಯಾಂತರಸಂಧಾನಸಂಪನ್ನಶರಣಂಗೆ ಸರಿಯೆನ್ನಬಹುದೇ ನರರುಗಳ ?
ಒಳಗೆಂಬುದನರಿಯರು, ಹೊರಗೆಂಬುದನರಿಯರು,
ಏನು ಏನು ಏನುವನರಿಯದ ಹೀನ ಹೀನ ಹೀನ ಪಾತಕರ
ತರಲಾಗದು ಗುರುಲಿಂಗಸಂಬಂಧೈಶ್ವರ್ಯದ ಮುಂದೆ ಶಿವಜ್ಞಾನಿಗಳು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./29
ಅಂತಾಲಯದೊಳೊಂದಿ ಚರಿಸುವ
ಭ್ರಾಂತಿಮಾಯೆಯ ನಿಂತು ನೋಡುವರನಾರನು ಕಾಣೆನು,
ನೋಡುವ ನೋಟಕರ ನುಂಗುತ್ತ ಉಗುಳುತ್ತ
ಉಚ್ಫಿಷ್ಟ ರೂಪನೆ ಮಾಡಿ ಕಾಡಿತ್ತು
ಷಡುದರ್ಶನಾದಿ ಸಕಲರನು ; ಇನ್ನುಂಟೆ ನಿನಗಿದಿರು
ನಿರಂಜನ ಚನ್ನಬಸವಲಿಂಗ ಶರಣರಲ್ಲದೆ ?/30
ಅಂದು ಬಂದ ಮುಸುಕು ತೆರೆದು ಹೊಂದಿಸಿಕೊಂಡು
ಅಂದಂದಿಂಗವಧಾನ ಸುಖಾನಂದಮಯದೊಳಗೆ
ಸುಳಿವುತಿರ್ದನಾಚಾರಲಿಂಗವೆನ್ನ ಸುಚಿತ್ತಪಾಣಿಯಲ್ಲಿ.
ಶ್ರದ್ಧೆಸುಖಪರಿಣಾಮಿಯಾಗಿ ಮುಂದ ನೋಡುತ್ ಸುಳಿಯುತಿರ್ದ
ಗುರುಲಿಂಗವೆನ್ನ ಸುಬುದ್ಧಿಹಸ್ತದಲ್ಲಿ.
ನಿಷ್ಠೆ ಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ
ಶಿವಲಿಂಗವೆನ್ನ ನಿರಹಂಕಾರ ಪಾಣಿತಾಣದಲ್ಲಿ.
ಸಾವಧಾನಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ
ಜಂಗಮಲಿಂಗವೆನ್ನ ಸುಮನಹಸ್ತದಲ್ಲಿ.
ಅನುಭಾವಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ
ಪ್ರಸಾದಲಿಂಗವೆನ್ನ ಸುಜ್ಞಾನಕರಸ್ಥಲದಲ್ಲಿ.
ಆನಂದಸುಖಪರಿಣಾಮಿಯಾಗಿ ಮುಂದೆ ನೋಡುತ್ತ
ಸುಳಿಯುತಿರ್ದ ಮಹಾಲಿಂಗವೆನ್ನ ಸದ್ಭಾವಹಸ್ತದಲ್ಲಿ.
ಸಮರಸಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ
ಗುರುನಿರಂಜನ ಚನ್ನಬಸವಲಿಂಗವೆನ್ನ ಪ್ರಾಣಲಿಂಗಿಯೆಂದೆನಿಸಿ./31
ಅಕಳಂಕ ಮಹಿಮಾಚಾರ್ಯನ ನಿರ್ಮಲ ಕಟಾಕ್ಷಮಣಿಯನು
ಅರಿದರಿದು ಅವಧರಿಸಿದ ಅಪ್ರತಿಮ ಶರಣಂಗೆ
ಅರಿಷಡ್ವರ್ಗಂಗಳು ಮುಟ್ಟಲಮ್ಮವು,
ಷಡೂರ್ಮಿಯಂಗಳು ಸ್ಪಶರ್ಿಸಲಮ್ಮವು,
ಮರಳಿ ಮುಂದುಗಾಣದಿರ್ದವು ಗುಣಾಳಿ,
ಕರ್ಮತ್ರಯಂಗಳಳಿದು ನಿರ್ಮಳ ನಿಲವಾಗಿರ್ದವು
ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./32
ಅಕ್ಕತಂಗಿಯರ ಚಕ್ಕಂದ ಹೊಕ್ಕಿತೆನ್ನ ಒಡಲೊಳಗೆ.
ಸಕ್ಕರೆ ಹಾಲು ಸಮರಸವನಿಟ್ಟು ಕಂಡವರಳವೆ ಧರೆಯೊಳಗೆ ?
ಚೆದುರ ಹದುರಿನ ಸೊಬಗು ಸದನವುಳ್ಳನ್ನಕ್ಕರ ಸವೆಯದು.
ಮುದದಿನೋಡುವೆ ಮಹಾಘನದೊಳು ನಿಂದು ಸವಿಸವಿಯ
ಗುರುನಿರಂಜನ ಚನ್ನಬಸವಲಿಂಗವನರಿಯದೆ. /33
ಅಖಂಡ ಜ್ಞಾನದೊಳಡಗಿರ್ದ ಸರ್ವಶೂನ್ಯಂಗೆ
ಭೇದವಮಾಡಿ ನುಡಿವ ಮಾಯೆಯೊಳಗಿಪ್ಪ ಮನುಜರ ವಾಕ್ಪಟುತ್ವವಂತಿರಲಿ,
ಪ್ರಯೋಜನವಿಲ್ಲದ ಪ್ರಯೋಜನ ಯಾತಕ್ಕೆ ಪ್ರಯೋಜನ ?
ಶೋಭನಮುಂದೆ ಬೊಗಳುವ ಶುನಕನ ಶಬ್ದವನರಿವರಾರು ?
ಆ ಶರಣನೆಂದಿರ್ದಡು ಅಂತಿಲ್ಲ,
ರಸವಿಲ್ಲದ ನಾಲಿಗೆಯಂತೆ ರೂಪಿಲ್ಲದ ನೇತ್ರದಂತೆ
ಗಂಧವಿಲ್ಲದ ಘ್ರಾಣದಂತೆ ಇರ್ದ ಕಾಣಾ ಸಕಲರಲ್ಲಿಯೂ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ./34
ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು
ಆ ವೀರಸ್ಥಲದಲ್ಲಿ ಧರಿಸಪ್ಪ
ಅನುಪಮ ವೀರಮಾಹೇಶ್ವರನ ನಡೆಯಲ್ಲಿ ತೋರುವುದು, ನುಡಿಯಲ್ಲಿ ತೋರುವುದು,
ಹಿಡಿವಲ್ಲಿ ಕಾಣುವುದು, ಕೊಡುವಲ್ಲಿ ಕಾಂಬುವುದು, ಕೊಂಬಲ್ಲಿ ಕಾಣುವುದು,
ಬರುವಲ್ಲಿ ತೋರುವುದು, ಹೋಗುವಲ್ಲಿ ತೋರುವುದು
ಗುರುನಿರಂಜನ ಚನ್ನಬಸವಲಿಂಗವು ತಾನೇ ನಿರುತವಾಗಿ./35
ಅಖಂಡಬೆಳಗಿನೊಳಗಿರ್ದ ಅನುಪಮ ಶರಣನ
ಕರಸ್ಥಲದಲ್ಲಿ ಕಾಣಿಸಿಕೊಂಬ ಜ್ಯೋತಿರ್ಮಯಲಿಂಗವು
ತನ್ನ ವಿನೋದಕಾರಣ ಆ ಶರಣನ ಶ್ರದ್ಧೆಗೆ ಆಚಾರಲಿಂಗವಾಗಿ,
ನಿಷ್ಠೆಗೆ ಗುರುಲಿಂಗವಾಗಿ, ಸಾವಧಾನಕ್ಕೆ ಶಿವಲಿಂಗವಾಗಿ,
ಅನುಭಾವಕ್ಕೆ ಪ್ರಾಣಲಿಂಗವಾಗಿ, ತನ್ನ ಬೆಳಗಿನೊಳಡಗಿಸಿಕೊಂಡು
ಆನಂದಭಕ್ತಿಯ ನೋಡುತಿರ್ದ
ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿ./36
ಅಖಂಡಲಿಂಗವೆನ್ನ ಕರಪೀಠದಲ್ಲಿ ಬೆಳಗ ಬೀರುತಿರ್ದನು.
ಆ ಬೆಳಗಿನೊಳು ನಿಂದು ಒಳಗರಿದು,
ಇಳೆ ಜಲಾಗ್ನಿ ಮರುತಾಂಬರ ಬೆಳೆ ಕಳೆಯ ಪಾಕ ನಿವೇದಿಸಿಕೊಂಡು,
ನಿರಂತರಪರಿಣಾಮಿ ನಾನು ಗುರುನಿರಂಜನ ಚನ್ನಬಸವಲಿಂಗದಲ್ಲಿ./37
ಅಖಂಡಶಿವ ಅನಂತ ಪ್ರಭಾನಂದಮಯ ಶ್ರೀಮಹಾಘನಭಸ್ಮವನು
ಸತ್ಕ್ರೀಯಾ ಸಮ್ಯಕ್ಜ್ಞಾನ ಸಮರಸಾನುಭಾವಸಂಯುಕ್ತವಾಗಿ
ಸದಾನಂದಸುಖದೊಳೋಲಾಡುತಿರ್ದನು ಕಾಣಾ
ನಿರಂಜನ ಚನ್ನಬಸವಲಿಂಗಾ./38
ಅಗಮ್ಯ ಅವಿರಳ ಗುರುವಿನತಿಶಯ ದೀಕ್ಷಾತ್ರಯದಿಂದೆನ್ನಂಗ
ಪ್ರಾಣ ಭಾವಂಗಳಲ್ಲಿ
ಗುರು ಲಿಂಗ ಜಂಗಮ ಪ್ರಸಾದಬೆಳಗು ಪ್ರಜ್ವಲಿಸುತ್ತಿಹುದು.
ಭಿನ್ನ ಭಕ್ತಿಯನರಿತು, ಅಭಿನ್ನ ಭಕ್ತಿ ಆವರಿಸಿತ್ತು.
ಪ್ರಾಣಲಿಂಗತ್ವ ಲಿಂಗಾಪ್ರಾಣತ್ವ ಪ್ರಸಾದಮುಕ್ತತ್ವವೆಂಬ
ಸಂಪತ್ತಿನ ಸಾರಾಯಪ್ರಭೆಯೊಳೊಪ್ಪುತಿರ್ನೆನು
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತವಾಗಿ./39
ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ,
ತನುಪ್ರಾಣಸಂಬಂಧಿ ತಾನಾದ ಶರಣಂಗೆ,
ತನುವಿನ ತರಹರವ ತರಲಿಲ್ಲ, ಮನದ ಮಗ್ನತೆಯನರಿಯಲಿಲ್ಲ,
ಪ್ರಾಣದ ಹೊಲೆಯ ಕಾಣಲಿಲ್ಲ.
ಭಾವ ನಿರ್ಭಾವ ನಿರಾವಲಂಬಿ
ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬಲ್ಲಿ./40
ಅಚ್ಚ ಗುರುಲಿಂಗಜಂಗಮವನು ಆರತಿ ಎತ್ತಿ ವಂದಿಸಿ,
ಆರು ಆರಾರ ತೆರದಿಂದರ್ಚಿಸಿ,
ಆಯತಪ್ರಸಾದದೊಳವಧಾನಿಭಕ್ತ ನಾನು.
ನಿನ್ನಾಯತವ ಕಳೆದು ಕರ್ಮವನುಂಬುವನಲ್ಲ,
ನಿನ್ನ ಸ್ವಾಯತವ ಕಳೆದು ಕಲ್ಪನೆಯೊಳೊಂದುವನಲ್ಲ,
ನಿನ್ನ ಸನ್ನಿಹಿತವ ಕಳೆದು ಕತ್ತಲೆಯಗೂಡಿ ಹೋಗುವನಲ್ಲ.
ನೋಡಿ ಕೂಡು ಗುರುನಿರಂಜನ ಚನ್ನಬಸವಲಿಂಗನ./41
ಅಚ್ಚ ಮತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು
ನಿಮ್ಮಾದಿ ಶಿಶುವಾದಕಾರಣ.
ನಚ್ಚಿ ಮಾಡಿದಡಿಗೆಯು ಅಚ್ಚಳಿಯದಿದ್ದಿತ್ತು
ಆಡುತ ಬನ್ನಿ ಮೂವರೊಂದಾಗಿ.
ಬೇಡಿಕೊಂಬುವನಲ್ಲ, ನೀಡಿ ನೂಕಿ ನಿಲ್ಲುವೆ
ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗದಲ್ಲಿ./42
ಅಚ್ಚ ಮಹೇಶ್ವರನ ಕಚ್ಚುಟವ ಧರಿಸಿ ನಿಚ್ಚ ನಿಚ್ಚಕೆ
ಕಾಳು ಕಾಂಚಾಣ ಕಪಟಕ್ಕೆ ಕೈಯೊಡ್ಡಿ,
ಸಚ್ಚಿದಾನಂದ ಶಿವನ ಅರಿಯದ ನುಚ್ಚಮಾನವರು
ಬೇಡಿಕೊಂಡು ಆಡಿಗಳವ ಕುಚಿತ್ತ ಖೂಳರ ಚುಚ್ಚಿಹಾಕುವರು ಭವದತ್ತ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ. /43
ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು-
ವೃದ್ಧಂಗೆ ಯೌವ್ವನ, ಮೂರ್ಖಂಗೆ ವಿದ್ಯೆ, ಸುಖಿಗೆ ಆಯುಷ್ಯ,
ಯಾಚಕಂಗರ್ಥ, ಮರಣವನೈದುವಂಗೆ ಮರುಜೀವಣಿ ಬಂದಂತೆ.
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಭಿನ್ನವಾದ ಕಾರಣ./44
ಅಚ್ಚಮುತ್ತೈದೆ ತಾನೊಬ್ಬ ಅಂಗವಿಲ್ಲದ ಪುರುಷನ ಸಂಗವಮಾಡಲು
ತಬ್ಬಿಬ್ಬುಗೊಂಡಿತ್ತು ಹದಿನಾಲ್ಕು ಭುವನವೆಲ್ಲ.
ಮೂರು ಮನೆಯ ನಾರಿ ನೀರಕೊಡವನೊಡೆದು
ಹಾರುತಿಯಾಗಿ ಕೈಯಲ್ಲಿ ಆರತಿ ಪಿಡಿದು,
ಮೂರಾರಿಗೆತ್ತಿ ಬೆಳಗುತ್ತಿರಲು ಸೂರೆಗೊಂಡು ನೆರೆದನು
ನಮ್ಮ ಗುರುನಿರಂಜನ ಚನ್ನಬಸವಲಿಂಗ./45
ಅಚ್ಚಮುತ್ತೈದೆ ಮೆಚ್ಚಿದ ಗಂಡನ ಕೈವಿಡಿದು
ಬಿಸಿಲು ಬೆಳದಿಂಗಳದಲ್ಲಿ ಸಸಿನೆ ನಡೆವಳು ನೋಡಾ.
ನೀರ ಜಲದಲ್ಲಿ ತೊಳೆದು ಗುರುನಿರಂಜನ ಬಸವಲಿಂಗದಭಿಷೇಕವ
ನಿತ್ಯ ಮಾಡುವಳು ನೋಡಾ./46
ಅಚ್ಚುಗವಿಲ್ಲದ ಅಚ್ಚುಗವಿದೇನಯ್ಯಾ ?
ಕಣ್ಣ ಮುಂದೆ ಮೆಚ್ಚುವಿಲ್ಲದ ಮೆಚ್ಚು ಇದೇನಯ್ಯಾ ಹುಚ್ಚುಗೊಂಡಿತ್ತು !
ನಾನೆಂಬುದು ನಷ್ಟವಾಗಿ ನೀನೆಂಬುದು ನಿಂದುರಿದು,
ಬೆಳಗಹೊದ್ದು ಬೆಳಗನುಂಡು ಬೆಂಬಳಿಯ ಸುಖವ ಮುಂಬಳಿಯೊಳಿಟ್ಟು
ಮುಂಬರಿವ ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ./47
ಅಚ್ಚೊತ್ತಿರ್ದ ಅವಿರಳಲಿಂಗದಲ್ಲಿ
ಅನಿಮಿಷನಾಗಿರ್ದಬಳಿಕ ಬೇರೊಂದನರ್ಚಿಸಲಿಲ್ಲ.
ಭೇದವಾದಿಯಂತೆ ಗುಂಭಭ್ರಾಂತನಲ್ಲ ;
ಅಭೇದವಾದಿಯಂತೆ ಅಪ್ರತಿಮ ಶರಣ.
ನಡೆನುಡಿಯನರಿಯಬಾರದು ಕಾಯಪ್ರಾಣವುಳ್ಳನ್ನಕ್ಕರ
ಗುರುನಿರಂಜನ ಚನ್ನಬಸವಲಿಂಗದಲ್ಲಿ./48
ಅಚ್ಚೊತ್ತಿರ್ದ ಲಿಂಗದಿಚ್ಛೆಯಲ್ಲಿಪ್ಪ
ಇಳೆ ಜಲಾಗ್ನಿ ಮರುತಾಂಬರ ನಿರಂಜನ ಶರಣ.
ತನ್ನ ಅಖಂಡ ಗತಿಮತಿಯೊಳೊಂದು ಕಿಂಚಿತ್ತು
ಖಂಡಿತ ಕುರುಹ ಭಾವಿಸುವರ ತ್ರಿಪುಟಿಗಳಿಗಸಾಧ್ಯವಾಗಿರ್ದನು
ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣನು./49
ಅಚ್ಚೊತ್ತಿರ್ದ ಸಚ್ಚಿದಾನಂದೈಶ್ವರ್ಯ ಪ್ರಭಾಮಯ ಶರಣನು
ನಿಚ್ಚನಿರ್ಮಲ ದಾಸೋಹಿ ಸಕಲಮಲಿನ ಸಂಹಾರಿ,
ತ್ರಿಕರಣ ಸತ್ಯ, ಮಿಥ್ಯಾಚಾರಧ್ವಂಶಿ,
ಕಾರಣರೂಪ ಗುರುನಿರಂಜನ ಚನ್ನಬಸವಲಿಂಗದಲ್ಲಿ./50
ಅಜ್ಞಾನ ಸುಜ್ಞಾನವಪ್ಪುದೆ?
ಗರಳ ಮಧುರವಪ್ಪುದೆ?
ಬಕ ಹಂಸವಪ್ಪುದೆ?
ಗುರುನಿರಂಜನ ಚನ್ನಬಸವಲಿಂಗಾ
ಸಂಸಾರಿ ಶರಣನಪ್ಪನೆ? /51
ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ
ಶರಣನಾಗಿ ಜಂಗಮವಾಗಿ ಭಕ್ತನಾಗಿ ಲಿಂಗವಾಗಿ ಶಿಷ್ಯನಾಗಿ ಗುರುವಾಗಿ
ಕ್ರಿಯಾಜ್ಞಾನ ಭಾವಾಚಾರವಿಡಿದು, ಪರಿಪೂಣರ್ಾಚಾರದೊಳು ನಿಂದು ವರ್ತಿಸುವ
ಪರಮಾನಂದಸುಖಭೋಕ್ತನೆಂಬ ಭೇದವನರಿಯದೆ,
ಭಿನ್ನವಿಟ್ಟು ನುಡಿವ ಮರುಳು ಕುನ್ನಿ ಮಾನವರ
ಎನ್ನ ಗತಿಮತಿಯತ್ತ ತಾರದಿರಾ,
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ./52
ಅತ್ತಲರಿಯದೆ ಇತ್ತಲರಿಯದೆ ಸತ್ಯವಿಡಿದು
ಸಂಗದನುವ ಸ್ಥಲಕ್ಕೆ ತಂದು ಹಿಂಗದಾಡಿದೆ ಹಿರಿಯರ ಮುಂದೆ,
ನೋಡಿಯಾಡಿದೆ ಹಿರಿಯರ ಮುಂದೆ, ಕೂಡಿಯಾಡಿದೆ ಹಿರಿಯರ ಮುಂದೆ.
ಹಿರಿಯರೆನ್ನವರಾಗಿ ಆಡಲಿಲ್ಲ ನೋಡಲಿಲ್ಲ ಕೂಡಲಿಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ./53
ಅತ್ತಲರಿವರು ಸುತ್ತ ಮೋಹಿಗಳು ;
ಅತ್ತಲನುಪಮದನುವನವರರಿವರೆ ?
ಇತ್ತಲರಿವರು ವಿಷಮವಿರಹಿತ ವಿಮಲಾಂಗ ಸಂಗಸುಖಿಗಳ;
ಇತ್ತಲನುಭೇದ ವಿಸರ್ಜನವನಿವರರಿವರೆ ?
ಇದು ಕಾರಣ, ಅತ್ತಿಲ್ಲದಿರ್ದನಿತ್ತಲನುದಿನ ಚಲುವಾಂಗ
ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು ಭಾವಿಸಿ./54
ಅತ್ತಲಿತ್ತಲು ತಿರುಗಾಡಿ ಹೊತ್ತುಗಳೆಯದೆ
ನಿತ್ಯಶರಣನ ಮನೆಗೆ ಸುತ್ತಿ ಸುತ್ತಿ ಸುಳಿದು
ಸತ್ತುಹೋಗದ ಕರ್ತಜಂಗಮಲಿಂಗಬಂದರೆ
ಬತ್ತಲೆಬಂದಡಿಗೆರಗಿ ಸತ್ಯಸುಯಿದಾನದ ಪಾಕವ ಗಡಣಿಸಿ
ಎತ್ತಿ ಎಡೆಮಾಡಿದರೆ ತುತ್ತು ಭೋಜ್ಯಾದಿಗಳ ಬತ್ತಿಸಿದಮೇಲೆ
ನಿತ್ಯವಾಗಿ ಸುಖಿಸುವ ನಮ್ಮ ಗುರುನಿರಂಜನ ಚನ್ನಬಸವಲಿಂಗವು
ತಾನೆಯಾಗಿ./55
ಅತ್ತಿತ್ತರಿಯದ ನಿತ್ಯಾನಂದಪ್ರಸಾದಿಯ ಚಿತ್ತವಾಚಾರಲಿಂಗಕ್ಕರ್ಪಿತವಾಗಿ
ಮಿಥ್ಯವನರಿಯದು ನೋಡಾ.
ತನುಭಾವಶೂನ್ಯ ಘನಪ್ರಸಾದಿಯ ಬುದ್ಧಿ ಗುರುಲಿಂಗಕರ್ಪಿತವಾಗಿ
ಪರವನೆಣಿಸದು ನೋಡಾ.
ಷೋಡಶಮದವಳಿದುಳಿದ ಮಹಾಪ್ರಸಾದಿಯ ಅಹಂಕಾರ
ಶಿವಲಿಂಗಕರ್ಪಿತವಾಗಿ ಅಹಮಮತೆಯನರಿಯದು ನೋಡಾ.
ಸಂಕಲ್ಪ ವಿಕಲ್ಪ ವಿರಹಿತ ಪ್ರಸಾದಿಯ ಮನ ಜಂಗಮಲಿಂಗಕ್ಕರ್ಪಿತವಾಗಿ
ಮನತ್ರಯದ ಮಸಕ ಹಿಡಿಯದು ನೋಡಾ.
ತ್ರಿಪುಟಿ ಶೂನ್ಯ ಚಿನುಮಯಾನಂದಪ್ರಸಾದಿಯ ಜ್ಞಾನ
ಪ್ರಸಾದಲಿಂಗಕ್ಕರ್ಪಿತವಾಗಿ ಮಾಯಾವಿಷಯವನರಿಯದು ನೋಡಾ.
ಸಮರಸಾನುಭಾವಪ್ರಸಾದಿಯ ಭಾವ ಮಹಾಲಿಂಗಕ್ಕರ್ಪಿತವಾಗಿ
ವಿಪರೀತಭ್ರಮೆಯನರಿಯದು ನೋಡಾ.
ಪರಮನಿಷ್ಠೆ ಮಾಹೇಶ್ವರ ಭಾವ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ
ಇತರನಂಗಯಿಸಲರಿಯದು ನೋಡಾ./56
ಅತ್ತಿತ್ತರಿಯದವಳ ಚಿತ್ತ ಸತ್ಯವೆಂದು ಕಾಣಯ್ಯಾ.
ಹಿಂದೆ ಮುಂದೆ ತಂದು ನಿಂದವಳ ಚಂದ ನಿಮಗಂದವಾಯಿತ್ತಯ್ಯಾ.
ಬಂದ ಬಂದೊಲುಮೆಯನೊಂದು ತೋರದೆ ಇಂದು ಕೊಳ್ಳಾ,
ಮುಂದೆನಗೆ ಸಮರಸದ ಕಲೆಯಿತ್ತು ಕೂಡಾ
ಗುರುನಿರಂಜನ ಚನ್ನಬಸವಲಿಂಗಾ./57
ಅತ್ತಿತ್ತಲುಕದೆ ನಿಟ್ಟೆಲುವ ನೇವರಿಸಿ
ಮೂರೇಳು ಗ್ರಂಥಿಯ ತಟ್ಟಿಸಿ ಕುಂಡಲಿಯ ನೆಗೆದು ಬಂಧಿಸಿದಂದಕ್ಕಿಳಿದು
ವಾತ ಪಿತ್ತ ಶ್ಲೇಷ್ಮಯೇರಿಸಿದ ರಸನೆಗಿಳಿಯೆ
ಚಿದಾಮೃತವೆಂದು ಸೇವಿಸಿ ಬಾಳಿಹೋಗುವ
ಬಯಲಭ್ರಾಂತರಿಗಿನ್ನೆಂತು ಪ್ರಾಣಲಿಂಗದ ಪ್ರಸಾದ ಸಾಧ್ಯವಪ್ಪುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ?/58
ಅತ್ತಿತ್ತಲುಕದೆ ನೆತ್ತಿಯೊಳಗುಸಿರು ಸುತ್ತಿ ಕಣ್ಣ ಸಿಕ್ಕಿಸಿ
ಕಂಡೆವೆಂಬ ಭಿನ್ನಭಾವಿಗಳರಿವಿಂಗೆ,
ಚನ್ನಷಟ್ಸ್ಥಲ ಕ್ರಿಯಾಸುಜ್ಞಾನ ಸುವಿಲಾಸ ಸುಪ್ರಭಾಲಿಂಗವು
ಸ್ವಪ್ನದಲ್ಲಿ ಸುಳಿಯದು ಕಾಣಾ, ಗುರುನಿರಂಜನ ಚನ್ನಬಸವಲಿಂಗಾ./59
ಅತ್ತಿತ್ತಲುಗದೆ ತನು ತರಹರವಾಯಿತ್ತು ನಿಮ್ಮಡಿಗೆ.
ಸಂಚಲವಳಿದುಳಿದೀ ಮನವು ಒಲಿದು ಉಲಿಯುತ್ತಿದೆ ನಿಮ್ಮ ನೆನವಿಂಗೆ.
ವಂಚನೆಯ ಜರೆದು ಮರೆದು ನೆರೆದಿಪ್ಪವು
ನಿಮ್ಮ ಸುಳುಹಿನ ಬರವ ಪಂಚೇಂದ್ರಿಯಗಳು.
ಇಚ್ಫೆ ಆಮಿಷ ಅಳಿದುಳಿದು ಆಚ್ಫಾದಿಸಿ ಆಹ್ವಾನಿಸುತಿರ್ದವು
ನಿಮ್ಮತ್ತ ಪಂಚವಿಷಯಗಳು.
ಇಂತು ಸಕಲ ಸಂಭ್ರಮ ನೆರವಿಯೊಳೊಂದಿ ಪರವಶದೊಳಿರ್ದೆನು
ಪರಮಗುರು ಚರಲಿಂಗವೆ,
ಅರಿದರಿದೆನ್ನವಧರಿಸು ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗಾ./60
ಅತ್ತಿಯ ಹಣ್ಣು ಹಸ್ತ ನೇತ್ರಕ್ಕೆ ಮೃದು ಮಿಶ್ರವಿರ್ದಡೇನು,
ಬಿಚ್ಚಿದರೆ ಕ್ರಿಮಿ ಘನವಯ್ಯಾ.
ದುಃಸಂಸಾರಿ ಸಮಯಕ್ಕೆ ನಾಚಿ ಲಾಂಛನಧಾರಿಯಾದಡೇನು,
ನುಡಿ ರೂಪು ನಯನ ನುಣುಪಲ್ಲದೆ,
ಮನಭಾವವನೊರೆದುನೋಡಿದರೆ ದುಷ್ಕರ್ಮಘನ ಕಾಣಾ.
ಇಂತಲ್ಲದೆ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ
ತೆಂಗು ಬಾಳೆಯ ಫಲದಂತೆ ಬಿಚ್ಚಿನೋಡಿದರೆ
ಲಿಂಗಸಾರಾಯಸುಖಿ ನೋಡಾ./61
ಅತ್ತೆ ಅಳಿಯನ ಸಂಗವ ಮಾಡಿ
ಒಳ ಒಳಗಿನ ಗೆಳೆಯರ ಬಳಿವಿಡಿಯನಾರು ಬಲ್ಲರಯ್ಯಾ!
ಅಳಿಯ ನೆಂಟರ ಕೂಟವಂದಾದಲ್ಲಿ
ನಿಂದಿತ್ತು ಪ್ರಾಣಲಿಂಗಸಂಬಂಧ ಗುರುನಿರಂಜನ ಚನ್ನಬಸವಲಿಂಗದಲ್ಲಿ./62
ಅತ್ತೆ ಅಳಿಯನ ಹಡೆದು ಹೊದಕೆಯ ತೊಟ್ಟಿಲೊಳಗಿಟ್ಟು
ನೋಡಿ ನೋಡಿ ತೂಗಿದರೆ,
ತಾಯಿ-ಮಗಳ ದಾರಿ ಒಂದಾಗಿ ಭಾವನ ಹೆಜ್ಜೆಯ ಮೆಟ್ಟಿದರು ನೋಡಾ.
ಭಾವನ ಹೆಜ್ಜೆಯಲ್ಲಿ ಅಳಿಯನ ಸಂಗವ ಮಾಡಿದರೆ
ಪರಿಣಾಮವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ
ಶರಣನ ಮುಖದಿಂದ./63
ಅತ್ಯತಿಷ್ಟರ್ದಶಾಂಗುಲವೆಂಬ ಅನುಪಮಲಿಂಗವನು
ಸಗುಣಸದ್ಗುರುವಿನಿಂದ ಪಡೆದು,
ಅಂಗ ಮನ ಭಾವಂಗಳಲ್ಲಿ ಹೆರೆಹಿಂಗದಾಚರಿಸುವ
ಪರಮಾನಂದ ಶರಣರ ನೆರೆಯಲ್ಲಿರ್ದ ನರರೆಲ್ಲ
ಪರಿಭವಂಗಳ ನೀಗುವರಯ್ಯಾ.
ಅವರ ನುಡಿಯ ಕೇಳಿ ನಡೆದವರು ಪರಮಸುಖದೊಳಗಿರ್ಪರಯ್ಯಾ.
ಅವರ ಸೇವೆಯಮಾಡಿ ಒಲಿಸಿಕೊಂಡವರು ಸದ್ಯೋನ್ಮಕ್ತರಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರ ದರ್ಶನ ಸ್ಪರ್ಶನ ಸಂಭಾಷಣೆಯೇ ನಿಜಪದವಯ್ಯಾ./64
ಅದ್ವೈತನಾಗಿ ಜೀವಭಾವಿಯಲ್ಲ ಶರಣ.
ದ್ವೈತಿಯಾಗಿ ದೇಹಭಾವಿಯಲ್ಲ ಶರಣ.
ಯೋಗಗತಿಯೆಂದು ಕಷ್ಟಕರ್ಮಿಯಲ್ಲ ಶರಣ.
ಮತ್ತೆಂತೆಂದೊಡೆ, ಸತ್ಕ್ರಿಯಾನಂದಸುಖಿ ಶರಣ.
ಸಮಕ್ಜ್ಞಾನಾನಂದಸುಖಿ ಶರಣ.
ಗುರುನಿರಂಜನ ಚನ್ನಬಸವಲಿಂಗಾ ಸಮರಸಾನಂದಸುಖಿ ಶರಣ. /65
ಅದ್ವೈತವನಳಿದುಳಿದ ಕುರುಹು ನಾಶವಾಯಿತ್ತು.
ದ್ವೈತವನಳಿದುಳಿದ ಕುರುಹು ನಷ್ಟವಾಯಿತ್ತು.
ಯೋಗಗತಿಯನಳಿದುಳಿದ ಕುರುಹು ಲಯವಾಯಿತ್ತು.
ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ ಬಯಲಗೊಂಡಿತ್ತು. /66
ಅನಂತಕೋಟಿ ಸೋಮಸೂರ್ಯಾಗ್ನಿ
ಪ್ರಕಾಶವ ಕಂಡು ಮುಳುಗಿದ ಮಹಾತ್ಮನು
ಖಂಡಿತ ಮಾರ್ಗದ ಕರ್ಮಕತ್ತಲೆಯ ಕನಸಿನೊಳಗರಿಯನು.
ಭಿನ್ನ ನುಡಿಗಡಣಕ್ಕಿಂಬುಗೊಟ್ಟರಿವ ಮನತ್ರಯವು ಮಹದಲ್ಲೊಪ್ಪುತ್ತಿಹುದು.
ಸಕಲನಿಃಕಲಸನುಮತ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ. /67
ಅನಂತಜನ್ಮ ತಿರುಗಿ ಬಂದ ಮನವು ತನ್ನ ವಾಸವಾಗಿರ್ಪುದು.
ಆ ಮನವ ಮಹದಲ್ಲಿರಿಸಿ ಮರೆದುದೇ ನಿಜೈಕ್ಯ.
ಆ ಮನವ ಸಂಸಾರದಲ್ಲಿರಿಸಿ ಮರೆದುದೇ ನರಕ.
ನೀರು ತುಹಿಲ ನೆರೆದರೆ ಬಿಳ್ಪಾಗುವುದು.
ನೀರು ಮಸಿಯ ನೆರೆದರೆ ಕಪ್ಪಾಗುವುದು.
ಇದನರಿದು ಎನಗುಳ್ಳುದೊಂದು ಮನ, ಆ ಮನವನಪ್ಪಿ
ಗುರುನಿರಂಜನ ಚನ್ನಬಸವಲಿಂಗದೊಳಗೆ ಪರಿಣಾಮಿಯಾಗಿರ್ದೆನು./68
ಅನಂತಬ್ರಹ್ಮಾಂಡ ಸಚರಾಚರ ಯಗಜುಗವನರಿದು ನಿಂದ
ನಿಶ್ಚಿಂತ ನಿಜಾನಂದನಿಲುವಿಂಗೆ,
ಸಂದುಸಂಶಯ ದ್ವಂದ್ವಕರ್ಮಕಂಡು ಕಲೆ ನಿಂದಿರಲೆಡೆಯಿಲ್ಲ.
ಅದೇನ ಕಾರಣವೆಂದೊಡೆ,
ಸೂರ್ಯಂಗಿದಿರುಕತ್ತಲೆ, ನೀರಿಂಗಿದಿರು ಬೆಂಕಿ, ಮರುತಂಗಿದಿರು ಮೇಘ,
ಮಹಾಜ್ಞಾಲೆಗಿದಿರು ಶೀತ, ಮಹದರುವಿಂಗಿದಿರು ಮಾಯೆ,
ಇನಿತಕ್ಕಿಂಬಿಲ್ಲದಂತೆ ನಿತ್ಯ ನಿತ್ಯ ಗುರುನಿರಂಜನ ಚನ್ನಬಸವಲಿಂಗ
ನಿಮ್ಮ ಶರಣ. /69
ಅನಾದಿ ಅಸಮಾಕ್ಷಮಾಲೆಯನುಳಿದು
ಚಿನುಮಯಲಿಂಗವ ಪೂಜಿಸಿದರೆ ನಿಜಪದವಸಾಧ್ಯವಯ್ಯಾ.
ಚಂದ್ರಮೌಳಿಯ ನಯನಜಲಬಿಂದೋದಯ ಮಣಿಮಾಲೆಯನುಳಿದು
ಪಲವು ಮಣಿಮಾಲೆಯಿಂದೆ ಜಪ ಧ್ಯಾನಾನುಷ್ಠಾನವನೆಸಗಿದರೆ
ಶಿವಪದವು ಅಸಾಧ್ಯವಯ್ಯಾ.
ಪರಶಿವನೂಧ್ರ್ವನಿರೀಕ್ಷಣಾನಂದೋದಕ ಮಾಲೆಯನುಳಿದು
ಪರಿಪರಿಯಾಭರಣವ ಧರಿಸಿ
ಗುರಾಚಾರ ಭಕ್ತಿದಾಸೋಹವ ನಲಿನಲಿದು ಮಾಡಿದರೆ
ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಲ್ಲ ಕಾಣಾ./70
ಅನಾದಿ ನಿರವಯಲಿಂಗದಲ್ಲಡಗಿರ್ದ ಅವಿರಳ ಪ್ರಕಾಶವೇ
ಬಹಿರ್ಗತಿಯ ಬಂದು ನಿಂದಲ್ಲಿ ಚಿತ್ತೆಂದೆನಿಸಿತ್ತು.
ಆ ಚಿತ್ತಿನಿಂದ ಚಿನ್ನಾದ, ಬಿದ್ಬಿಂದು, ಚಿತ್ಕಲೆಯೆಂಬ
ತ್ರಯಾಕ್ಷರಗಳುದಯವಾದವು.
ಆ ತ್ರಿವಿಧಪ್ರಣವವೇ ಚಿದ್ಭಸ್ತವ.
ಆ ಚಿದ್ಭಸ್ತವವೆಂಬ ಚಿದ್ಭಸ್ಮವ ಧರಿಸಿದರೆ
ಘನ ನಿರಂಜನ ಚನ್ನಬಸವಲಿಂಗವಾಗಿರ್ದೆನಯ್ಯಾ. /71
ಅನಾದಿ ಪರಶಿವನು ಭೂಮಿಯ ನಿರ್ವಯಲಲ್ಲಿ ನೆಲೆಸಿದ ಮೇಲೆ,
ಬೆಳೆದಳಿವ ಭೂರುಹಕ್ಕೆ ಆಸ್ಪದ ಹರಿಯಣಲೊಳಗಡಗಿತ್ತು.
ಆ ಪಾವಕಪ್ರಭೆ ಸಕಲವನೊಳಕೊಂಡು
ಅನಿಲವೆರೆದು ಅಂಬರಂಗಳನಾವರಿಸಲು
ನೆಲ್ಲು ಪಲ್ಲವಿಸಿತ್ತು, ಅಲ್ಲಮಲ್ಲರು ವಿದ್ಯೆಯ ಬೀರುತ್ತ ಶಬ್ದವಿಟ್ಟರೆ
ಬದ್ಭಮಂದಿರ ಶುದ್ಧಸುವ್ಯವಧಾನದಿಂದೆತ್ತೀಯಲು,
ಎತ್ತಿಕೊಂಡರು ಭಕ್ತಸಹಿತ ಗುರುನಿರಂಜನ ಚನ್ನಬಸವಲಿಂಗ./72
ಅನಾದಿ ಪರಶಿವಲಿಂಗವನು
ತಮ್ಮ ವಶಗತವ ಮಾಡಿಕೊಂಡಾಚರಿಸುವ ಅಪ್ರತಿಮ ಶರಣರಿಗೆ
ಬಿನುಗು ಮಾತಿನಲ್ಲಿ ಜಿನುಗುತಲೊಂದೊಂದು
ಘನವ ಕಿರಿದಿಟ್ಟು, ಕಿರಿದ ಘನವಮಾಡಿ,
ಹುಸಿಹುಂಡನ ಮಾಟವನು ಢಂಬಿಗಿಕ್ಕುವ
ಭಂಡ ಮೂಕೊರೆಯರು ದಂಡಧರನಾಳಿನ ಕೈಯಲ್ಲಿ ಕೊಲ್ಲಿಸಿಕೊಳ್ಳರೆ?
ಮುಂದೆ ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ ಕೆಟ್ಟರು./73
ಅನಾದಿ ಮಹಾಬೆಳಗಿನಿಂದೆ ಬೆಳಗ ಕೊಂಡು
ಬೆಳೆಯೊಳಿರ್ಪ ಭೇದಾಭೇದ ಗತಿಶೂನ್ಯಶರಣರ ಬಳಿವಿಡಿದು ಬಂದ
ಭಕ್ತ ಮಹೇಶ್ವರರೆಂದು ಹೇಳಿಕೊಂಡು ಬಳಿಕ
ಹೊನ್ನು ಹೆಣ್ಣು ಮಣ್ಣು ವಿಡಿದು ತಾನೊಂದು ಕಾಯಕವ ಮಾಡಿ ನಡೆವಲ್ಲಿ
ಜಂಗಮಲಿಂಗಸನ್ನಿಹಿತವಾಗಿರಬೇಕಲ್ಲದೆ ಉಳಿದು ಬದುಕಲಾಗದು.
ಅದೇನು ಕಾರಣವೆಂದೊಡೆ: ಜಂಗಮವಿರಹಿತವಾದಲ್ಲಿ ಆ ಹೊನ್ನು ಹೆಣ್ಣು ಮಣ್ಣು ಮಲವಾಗಿರ್ಪುದು.
ಆ ಜಂಗಮವನುಳಿದು ನೀರಕುಡಿದರೆ ಏನಾಯಿತ್ತು ನೋಡಿ?
ಅಲ್ಲಿ ಅನ್ನವನಂಡರೇನಾಯಿತ್ತು ನೋಡಿ?
ಅಲ್ಲಿ ಸಕಲ ಭೋಗವ ಮಾಡಿದರೇನಾಯಿತ್ತು ನೋಡಿ?
ಅಲ್ಲಿರ್ದು ಗುರುನಿರಂಜನ ಚನ್ನಬಸವಲಿಂಗದ
ಬೆಳಗುಕೂಡವೆನೆಂದರೆ ಕತ್ತಲೆಯು ಕಾಣಾ. /74
ಅನಾದಿಭಕ್ತನು ಆದಿಗುರುವಿನ ಕೈಯಿಂದೆ ಜನಿಸಿ,
ಆದಿ ಅನಾದಿಯಿಂದತ್ತತ್ತಲಾದ
ಅನುಪಮಲಿಂಗವ ಪಡೆದುಕೊಂಡು ಬಂದ ಬಳಿಕ,
ಆ ಲಿಂಗಕಳಾಚೈತನ್ಯವಾದ ಮಹಾನುಭಾವ ಜಂಗಮವ ಕಂಡು,
ಆ ಜಂಗಮಲಿಂಗ ಗುರುಮೂರ್ತಿಗಳಿಗೆ
ಕಾಯವುಳ್ಳನ್ನಕ್ಕರ ಭಕ್ತಿಯ ಮಾಡೂದು,
ಮನವುಳ್ಳನ್ನಕ್ಕರ ಪೂಜೆಯ ಮಾಡೂದು,
ಭಾವವುಳ್ಳನ್ನಕ್ಕರ ಇಚ್ಫೆಗೆ ಎಡೆ ಮಾಡೂದು
ಇದೇ ಸದ್ಭಕ್ತನಿರವು ಗುರುನಿರಂಜನ ಚನ್ನಬಸವಲಿಂಗದಲ್ಲಿ./75
ಅನಾದಿಯ ಬೆಳಗು ಆದಿಯಲ್ಲುದಯವಾಗಿ
ಆದಿಯ ಕುಳಗತಿಯ ಕೆಡಿಸಿತ್ತು ನೋಡಾ!
ಮತ್ತಾದಿಯ ಮುಖವನರಿಸಿತ್ತು.
ಮಥನದಿಂದಾಗಿ ಬಂದು ಎನ್ನ ಕಂಗಳ ಮುಂದೆ ನಿಂದು,
ಕಾರಣನಾಗಿ ಕಾರ್ಯದಿಂದೆ ಸಕಲ ಸಂಜನಿತ ಸುಖಮಯ ವ್ಯಾಪಾರಗೊಂಡು
ತನ್ನ ಮೂಲದ್ರವ್ಯಪ್ರಕಾಶದೊಳಪ್ಪಿಕೊಂಡನು
ಎನ್ನ ಗುರುನಿರಂಜನ ಚನ್ನಬಸವಲಿಂಗ. /76
ಅನಾದಿವಿಡಿದು ಬಂದ ಸದೋದಿತ ಶರಣಂಗೆ
ನಾದ ಬಿಂದು ಕಳೆಯ ಸುಖ ಹಿಂಗಿ, ಆದಿ ಮಧ್ಯ ಅವಸಾನ ಸನ್ನಿಹಿತವಾಗಿ,
ಮಾರ್ಗವಿಡಿದಡಿಯಿಟ್ಟು ಸಾವಧಾನಿ ಸಂಭಾವಿತ ನೋಡಾ.
ಆದಿ ಅನಾದಿಯನರಿದು ಆರೋಗಣೆಯಮಾಡಿಕೊಂಬ ಸುಖಾನುಭಾವಿ
ನಿಮ್ಮ ಪ್ರಸಾದಿ ನೋಡಾ, ಗುರುನಿರಂಜನ ಚನ್ನಬಸವಲಿಂಗಾ./77
ಅನಾದಿಸಂಸಿದ್ಧ ನಿರಂಜನ ಪರಶಿವಲಿಂಗಸನ್ನಿಹಿತವಾದ ವೀರಮಾಹೇಶ್ವರರು,
ಗೌರವಬುದ್ಧಿ ಲಿಂಗಲೀಯಾದಿ ಷಡ್ವ್ರತಾಚಾರವೇ ಅಂಗವಾಗಿ,
ಅಕ್ರೋಧ ಸತ್ಯವಚನಾದಿ ಷಡ್ವಿಧ ಶೀಲಸಂಪನ್ನತೆಯೇ ಪ್ರಾಣವಾದ ಕಾರಣ,
ಹಿಡಿದು ಬಿಡೆನೆಂಬುದೊಂದು ಛಲ.
ಬಿಟ್ಟ ರಚ್ಚೆಯ ಬಳಸೆನೆಂಬುದೊಂದು ಛಲ.
ಹಿಡಿದು ತಪ್ಪಿದವರ ಕೆಡಹಿಬಿಡುವೆನೆಂಬುದೊಂದು ಛಲ.
ಬಿಟ್ಟುದ ಹಿಡಿದು ಮೋಹಿಸುವವರ ಕುಟ್ಟಿ ಕಳೆದುಹಾಕುವೆನೆಂಬುದೊಂದು ಛಲ.
ಭಿನ್ನ ದೈವವ ಪೂಜಿಸುವವರ ಕುನ್ನಿಗಳ ಸರಿಗಾಂಬುದೊಂದು ಛಲ.
ಅನ್ಯರುಗಳ ಬೇಡದಿರುವುದೊಂದು ಛಲ.
ಇಂತು ಷಡ್ವಿಧಛಲದ ಮೇಲೆ
ಗುರುನಿರಂಜನ ಚನ್ನಬಸವಲಿಂಗವಿಲ್ಲದಂಗಿಗಳೊಡನೆ
ಮಾತನಾಡಬಾರದೆಂಬುದೊಂದು ಘನ ಛಲವು./78
ಅನಾದಿಸಂಸಿದ್ಧ ನಿರಂಜನ ಪ್ರಾಣಲಿಂಗಿಯ ಘನವನೇನೆಂದುಪಮಿಸುವೆನಯ್ಯಾ!
ಚಿತ್ಕಾಯದಲ್ಲೆಸೆವ ಸುಚಿತ್ತ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದರ್ಚಿಸಿಕೊಂಬ
ಸದ್ರೂಪಸ್ವರೂವಾದ ಇಷ್ಟಮಹಾಲಿಂಗವನು.
ಉನ್ಮಾನಸದಲ್ಲೊಪ್ಪುವ ನಿರಹಂಕಾರಸುಮನವೆಂಬ
ಹಸ್ತದಲ್ಲಿ ಪಿಡಿದರ್ಚಿಸಿಕೊಂಬ
ಚಿದ್ರೂಪಸ್ವರೂಪವಾದ ಪ್ರಾಣಲಿಂಗವನು.
ಅನುಭಾವದಲ್ಲೊಪ್ಪುವ ಸುಜ್ಞಾನಸದ್ಭಾವವೆಂಬ
ಹಸ್ತದಲ್ಲಿ ಪಿಡಿದು ಅರ್ಚಿಸಿಕೊಂಬ
ಆನಂದಸ್ವರೂಪವಾದ ಭಾವಲಿಂಗವನು.
ಇಂತು ಕಾಯ ಮನ ಭಾವದಲ್ಲಿ ಪರಿಪೂರ್ಣಪೂಜೆ ಅಳವಡಿಸಿಕೊಂಡು
ಸುಖಮಯನಾದಲ್ಲಿ
ನೇಮ ಸೀಮೆ ಖಂಡಿತಕ್ರಿಯಂಗಳೆಲ್ಲ ಕರಗಿ ಅಖಂಡಮಯವಾಗಿ
ಅನುಪಮ ಬೆಳಗಿನೊಳೊಪ್ಪುತಿರ್ದನು
ಗುರುನಿರಂಜನ ಚನ್ನಬಸವಲಿಂಗದಲ್ಲಿ./79
ಅನಾದಿಸಂಸಿದ್ಧ ನಿರಂಜನಗುರುಲಿಂಗದಿಂದುದಯವಾದ ವೀರಮಾಹೇಶ್ವರನು,
ತಾಯಿ ತಂದೆಯಿಂದೆ ಹುಟ್ಟಿದವನೆಂದು ಬಂಧುಪ್ರಿಯನಲ್ಲ.
ಹರಿಯಜರರಿತಕ್ಕಗೋಚರವಾದ ಪರಮಲಿಂಗವು
ಕರಕಮಲದಲ್ಲೊಪ್ಪುತಿಪ್ಪುದಾಗಿ,
ಅನ್ಯದೈವವೆಂಬ ಜಂಗುಳಿಗಳ ಕುಕ್ಕುರಾಳಿಯೆಂದು ಕಾಂಬುವ.
ಕರಸ್ಥಲದ ಲಿಂಗಕ್ಕೆ ಮನ ಕರಣಂಗಳ ಮಾರುಗೊಟ್ಟವನಾಗಿ,
ಮಾನಿನಿಯರ ಮರುಕಾಳಿಗೆರ್ದು ಪಿಶಾಚಿಯಾಚರಿಯೆಂದು ತಿಳಿವ.
ಗುರುಚರಲಿಂಗ ಭಸಿತಾಕ್ಷಿಮಣಿಮಂತ್ರ, ಚರಣಜಲಶೇಷ ಪ್ರಾಣವಾದಕಾರಣ,
ಹೇಮ ರಜತಾಭರಣವ ಹೇಯವ ಮಾಡಿ ಜರೆವ.
ಸಕಲದಾಸೋಹಿತನಾಗಿ,
ಆದಿ ಮಧ್ಯ ಅವಸಾನವರಿದರಿದಾನಂದಮುಖನಾದ ಕಾರಣ,
ಅನ್ಯೋಪಾಧಿಡಂಭಕದನುಸರಣೆಗಳೆಲ್ಲ ಅಪಾತ್ರವೆಂದು ಅರಿದು ಬಿಡುವ.
ಇಂತಪ್ಪ ಭಕ್ತಿ ಜ್ಞಾನ ವೈರಾಗ್ಯಸ್ವರೂಪವಾದ ವೀರಮಾಹೇಶ್ವರಂಗೆ
ನಮೋ ನಮೋ ಎಂದು ಬದುಕುವೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./80
ಅನಾದಿಸಂಸಿದ್ಧ ನಿರಂಜನಲಿಂಗದಿಂದೊಗೆದವ ನಾನಾದ ಕಾರಣ,
ಜ್ಞಾನೋದಯವಾಗಿ ಮಾಯಾದಿ ಸಕಲಕರ್ಮಂಗಳ ವಿಸರ್ಜಸಿದೆನು.
ಆದಿ ಮಹಾಲಿಂಗದಂಗದಿಂದುಯವಾದವ ನಾನಾದ ಕಾರಣ
ಶ್ರೀ ಗುರುಕಾರುಣ್ಯವಾಗಿ ಲಿಂಗಾಂಗ ಷಟ್ಸ್ಥಲಜ್ಞಾನಿಯಾದೆನು.
ಆದಿ ಮಧ್ಯ ಅವಸಾನದಿಂದಲತ್ತತ್ತಲಾದ
ನಿರವಯಾನಂದಪರಬ್ರಹ್ಮಾಂಶಿಕ ನಾನಾದ ಕಾರಣ
ತ್ರಿವಿಧ ಲಿಂಗಾನುಭಾವವೆಂಟಂಗ, ಪಂಚಪ್ರಾಣಾದಿ
ಸಕಲ-ನಿಃಕಲ ಸನುಮತಾನಂದ ಪರಬ್ರಹ್ಮವೆಯಾಗಿರ್ದೆನು
ನಿರಂಜನ ಚನ್ನಬಸವಲಿಂಗದಲ್ಲಿ./81
ಅನಾಮಯ ಜಂಗಮಲಿಂಗವೇ,
ಎಮ್ಮ ಗೃಹದಲ್ಲಿರ್ಪ ಸಕಲಸೈದಾನ
ಎನ್ನ ಅರುಹಿಂಗೆ ಶರಣುಹೊಕ್ಕು ಮುಂದುವರಿಯುತಿರ್ದವು.
ಎನ್ನ ಅರಿವು ಜ್ಞಾನಕ್ಕೆ ಶರಣುಹೊಕ್ಕು ಮುಂದುವರಿಯುತಿರ್ದವು.
ಎನ್ನ ಜ್ಞಾನ ಮನಕ್ಕೆ ಶರಣುಹೊಕ್ಕು ಮುಂದುವರಿಯುತಿರ್ದವು.
ಎನ್ನ ಮನ ಕಂಗಳಿಗೆ ಶರಣುಹೊಕ್ಕು ಮುಂದುವರಿಯುತಿರ್ದವು.
ಎನ್ನ ಕಂಗಳು ಹಸ್ತಂಗಳಿಗೆ ಶರಣುಹೊಕ್ಕು ಮುಂದುವರಿಯುತಿರ್ದವು.
ಎನ್ನ ಹಸ್ತಂಗಳು ನಿಮ್ಮ ಪದಕಮಲದ ಸೋಂಕಿನ ಸುಖವನೇ ಮುಂದುವರಿಯುತಿರ್ದವು.
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಚಿತ್ತೈಸಬನ್ನಿ./82
ಅನಿತ್ಯ ವನಿತಾದಿ ಸಕಲಸಂಸ್ಕೃತಿಯ ವಾಸನೆಯನಳಿದುಳಿದು
ನಿಜಜ್ಞಾನಾನಂದ ನಿಲುವಿಗೆ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಗತಿ.
ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಮತಿ.
ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಸಂಗ.
ಇದನುಳಿದು ಅರಿಯದಂಗೆ ಗುರುನಿರಂಜನ ಚನ್ನಬಸವಲಿಂಗ ತಾನೆ./83
ಅನುಪಮಲಿಂಗದಂಗ ಶರಣಂಗೆ
ಅನುಸರಣೆಯೇನೂ ಇಲ್ಲವಯ್ಯ.
ಅವಿರಳ ಕ್ರಿಯೆಯಲ್ಲಿ ಜಡಮಿಶ್ರವಿರಹಿತನಾಗಿ
ಕಡುಗಲಿವೀರಪ್ರಸಾದಿಯಯ್ಯಾ.
ವಿಪರೀತ ಜ್ಞಾನವಳಿದು ಸುಜ್ಞಾನಸಮೇತ ಸಾರಾಯ ಸಂಗಸುಖಿಯಯ್ಯಾ.
ಅಭಿನ್ನ ಪ್ರಸಾದಿ ತನ್ನ ಅಪ್ರತಿಮಾಚಾರದಲ್ಲಿ
ದ್ವೈತಾದ್ವೈತಚರಿಯ ಸುಳಿಯಲೆಸೆದರ್ಪಿತ ಅಸಮಘನಮಹಿಮನಯ್ಯಾ.
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಗಮ್ಯಪ್ರಸಾದಿಯಯ್ಯಾ./84
ಅನುಪಮಲಿಂಗದಲ್ಲಿ ಘನವಿನಯ ಮಂಗಲಮಹೇಶ್ವರನು
ಒಂದನುವಿಡಿದಾಚಾರಸನ್ನಿಹಿತ ತಾನಾಗಿ,
ತನುಮನಭಾವಾತ್ಮ ನಿರ್ಮಲ ಸ್ವಯಂಜ್ಯೋತಿ ನೋಡಾ !
ಒಂದಿಷ್ಟು ಅನುಮಾನ ಟಕ್ಕು ಅನುಸರಣೆಗಳನರಿಯ ನೋಡಾ !
ಎರಡು ಚರಿತೆಯ ಹಿಡಿದು ಕಳೆವರ ಹಳಿದು ತಿಳುಹುವ ನೋಡಾ !
ಬಳಿವಿಡಿದು ಬೆಳೆಯುವರ ತಿಳಿಯಕೂಡಿ ಬೆಳಗುವ ನೋಡಾ !
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತದಿರುವಿನ ಪರಿ ನೋಡಾ./85
ಅನುಭಾವಮಾಡಬಲ್ಲವರೆಂದು ಮನ ಭಾವ ಕಳೆಯೊಳು ನಡೆವ
ಲಿಂಗಜಂಗಮ ದ್ರೋಹಿಗಳ ಸಂಗಸಮರಸ ಮಾಡಲಾಗದು ಶಿವಜ್ಞಾನಿಗಳು.
ಅದೇನು ಕಾರಣವೆಂದೊಡೆ: ಶುಕನ ಮಾತು, ಚೆಲುವು ನೀತಿ, ಹೊಲೆಯ ವಿಹಂಗನ ಊಟ ವಿಸರ್ಜನೆಯಂತೆ
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ./86
ಅನುಭಾವವನಾವರಿಸಿ ಹೇಳುವರಂಗ ಬಾಳೆಯ ಸ್ತಂಭದಂತೆ
ಮುಟ್ಟಿನೋಡುವರ ಕರ ಮನ ಕಂಗಳಿಗೆ ನಯವಾಗಿರಬೇಕು.
ಕೇಳುವರ ಚಿತ್ತ ಅಚ್ಚೊತ್ತಿ ತನುಮನಾತ್ಮಾಹುತಿಯಾಗಿರ್ದ
ಭಾವ ಬೆಳಗುತ್ತಿರಬೇಕು.
ಶರಣತತಿದೃಷ್ಟಕ್ಕೆ ಇದೇ ನಿಜೈಕ್ಯದ ನಿಲುವು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./87
ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ.
ಅನುಭಾವವಿಲ್ಲದ ಜ್ಞಾನ ವಿಚಾರಕ್ಕೆ ದೂರ.
ಅನುಭಾವವಿಲ್ಲದ ಭಕ್ತಿ ಅರುವಿಂಗೆ ದೂರ.
ಅನುಭಾವವಿಲ್ಲದ ವೈರಾಗ್ಯ ಅಗಮ್ಯಕ್ಕೆ ದೂರ.
ಗುರುನಿರಂಜನ ಚನ್ನಬಸವಲಿಂಗವನರಿವರೆ ಅನುಭಾವವೇ ಬೀಜ ಕಾಣಾ./88
ಅನುಭಾವಿ ಅನುಭಾವಿಗಳೆಂದು ನುಡಿದುಕೊಂಬ
ಬಿನುಗುನರರುಗಳನೇನೆಂಬೆನಯ್ಯಾ?
ಅನುಭಾವಿಯಂಗದಲ್ಲಿ ಆಶೆ ಆಮಿಷಯಿರಲುಂಟೆ?
ಅನುಭಾವಿಯ ಮನದಲಿ ಮಲತ್ರಯದ ಮೋಹವುಂಟೆ?
ಅನುಭಾವಿಯ ಪ್ರಾಣದಲ್ಲಿ ದುರ್ವಂಚನೆ ಸಂಕಲ್ಪವುಂಟೆ?
ಅನುಭಾವಿಯ ಭಾವದಲ್ಲಿ ಕರಣೇಂದ್ರಿಯ ವಿಷಯಭ್ರಾಂತಿಯುಂಟೆ?
ಇಂತು ದುರ್ಗುಣಾನುಭಾವಿತನಾಗಿ ಶಿವಾನುಭಾವಿಯೆಂದೊಡೆ
ಬಾಯಲ್ಲಿ ಬಾಲ್ವುಳ ಸುರಿಯವೆ
ಗುರುನಿರಂಜನ ಚನ್ನಬಸವಲಿಂಗಾ?/89
ಅನುಭಾವಿಯ ಭಕ್ತಿ ಗುರುವನರಿದು
ಅನುವನರಿದು ಆರಾಧಿಸಿ ನಿಂದಿತ್ತು.
ಅನುಭಾವಿಯ ಭಕ್ತಿ ಲಿಂಗವನರಿದು
ಅನುವನರಿದು ಆರಾಧಿಸಿ ನಿಂದಿತ್ತು.
ಅನುಭಾವಿಯ ಭಕ್ತಿ ಜಂಗಮವನರಿದು
ಅನುವನರಿದು ಆರಾಧಿಸಿ ನಿಂದಿತ್ತು.
ಅನುಭಾವಿಯ ಭಕ್ತಿ ತನ್ನನರಿದು
ಅನುವನರಿದು ಆರಾಧಿಸಿ ನಿಂದಿತ್ತು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಿಯಾಗಿ./90
ಅನುಭಾವಿಯಾದ ಅಪ್ರತಿಮಶರಣಂಗೆ
ಖಂಡಿತಕರ್ಮಂಹಗಳೆಲ್ಲ ಭಕ್ತಿಯೊಡನೈದಿ
ಜ್ಞಾನಲಿಂಗಸನ್ನಿಹಿತವಾಗಿ ಒಪ್ಪುತಿರ್ದವು ನೋಡಾ.
ಛಲ ನಿಯಮ ವ್ರತಂಗಳೆಲ್ಲ ಭಕ್ತಿ ಪ್ರಕಾಶದೊಡನೈದಿ
ಜ್ಞಾನಲಿಂಗಾಭರಣವಾಗಿ ತೋರುತಿರ್ದವು ನೋಡಾ.
ಸಕಲ ಸಂಭ್ರಮಂಗಳೆಲ್ಲ ಭಕ್ತಿಗೂಡಿ ಸುಜ್ಞಾನಪ್ರಭೆಯನೈದಿ
ಗುರುನಿರಂಜನ ಚನ್ನಬಸವಲಿಂಗಾರ್ಚನೆಯ
ಸೊಬಗಿನ ಸುಖದೊಳೋಲಾಡುತಿರ್ದವು ನೋಡಾ./91
ಅನುವನರಿಯದ ಮನುಜರು ಘನಲಿಂಗಸನ್ನಿಹಿತರೆಂದು
ಅನ್ಯದೈವವನೆ ಮನೆಯೊಳಗಿರಿಸಿ ದೀಕ್ಷವ ಮಾಡಿಸಿಕೊಂಡು ನಡೆವ
ಮಂದಮತಿ ಹೀನಜಾತಿ ದ್ರರ್ೊಗಅನೇನೆಂಬೆನಯ್ಯಾ?
ಜರಿದು ಹರಿದು ಮರೆದು ನಡೆವ ಪರಿಪೂರ್ಣಂಗಲ್ಲದೆ
ಗುರುನಿರಂಜನ ಚನ್ನಬಸವಲಿಂಗವೆಂಬ
ಘನಪ್ರಸಾದ ಸಾಮಾನ್ಯವೇ ಹೇಳಾ? /92
ಅನೃತ ಅಸ್ಥಿರವಾಕ್ಯವನುಳ್ಳ ನಾಲಿಗೆ, ವಂಚನೆ ಪಂಕ್ತಿಭೇದವನುಳ್ಳ ಮನ,
ಉದಾಸೀನ ನಿರ್ದಯವುಳ್ಳ ತನುವು – ಈ ನುಡಿ ಮನವಂಗ ಸ್ವಯವಾಗಿ,
ನಾನು ಸತ್ಯವ್ರತಸಂಬಂದಿಯೆಂದು ಸುಟ್ಟನಾಲಿಗೆಯಲ್ಲುಸುರುವ
ಭ್ರಷ್ಟ ಭವಿಗೆ ಕಷ್ಟಕಡೆಗಾಣಬಾರದು ನಿರವಯದಲ್ಲಿ.
ಅದು ಕಾರಣ, ನಿಷ್ಠೆನಿರ್ಮಲರು ತರಲಾಗದು
ತಮ್ಮ ನುಡಿಯೊಳಗಿಕ್ಕಿ ಆ ಪಾತಕರ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./93
ಅಪ್ರತಿಮ ಅಖಂಡ ಪರಶಿವಾನಂದ ಸಕಳನಿಃಕಳನು
ತನ್ನ ಸರ್ವಾಚಾರಸಂಪತ್ತಿನೊಳಗಿರ್ದು,
ಭಿನ್ನವಿಲ್ಲದೆ ಗುರುಲಿಂಗಜಂಗಮಕ್ಕರಿದು ಮಾಡುವಲ್ಲಿ,
ಅತ್ತಣಿತ್ತಣಿಂದೆತ್ತಿ ಬಂದು ಬೆರಸಿದ ಕತ್ತಲೆವೆರಸಿ ಚರಿಸುವ
ಷಟ್ಸ್ಥಲದ ಭಕ್ತ ಮಹೇಶ್ವರರುಗಳ ಮಿಥ್ಯವ ಜರೆದು ತೊಳೆಯುತ್ತ,
ಚಿತ್ತನಿರ್ಮಲಮಾಡೆತ್ತಿ ತೋರುತ್ತ,
ನಡೆಸಿ ನಡೆವ ಸತ್ಯಸದಾಚಾರವೆ ಕತರ್ುಮಹೇಶ್ವರ ಅದು ತಾನೆಯೆಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./94
ಅಪ್ರತಿಮ ಶಿವಯೋಗಿಯ ವೇಷವ ಧರಿಸಿ
ಅನುಪಮಸುಖಮುಖಾನಂದವನರಿಯದೆ,
ಹಗಲೇ ಕತ್ತಲೆಯಣ್ಣಗಳ ಮಾತಿಗರುವಿತ್ತು
ಅತ್ತಿತ್ತನರಿಯದೆ ಸುತ್ತಿ ಸುತ್ತಿ ಸುಳಿವರು
ಅಶುದ್ಧಬದ್ಧ ಹುಸಿಕರು ಗುರುನಿರಂಜನ ಚನ್ನಬಸವಲಿಂಗವನರಿಯದೆ./95
ಅಪ್ರತಿಮ ಸುಖಮಯ ಬೆಳಗಿನ ಸುಳುವರಿದು ಕರತಳಾಮಳಕವಾಗಿ,
ನೋಟ ನಡೆಯಲ್ಲಿ ಬೇಟ ಬೆಂಬಳಿವಿಡಿದು
ಕುಂಟಕುರುಡರ ನಂಟು ನೆರೆಯದೆ, ಒಂಟಿವೊಗತನವಪ್ಪಿನಿಂದರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನೆ ಪ್ರಾಣಲಿಂಗಿಶರಣ./96
ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ
ಅರಿದು ಅವಧರಿಸಿದ ಅನುಪಮ ಶರಣಂಗೆ
ಅಜ ವಿಷ್ಣು ಇಂದ್ರಾದಿ ಮನುಮುನಿ ಷಡುದರ್ಶನ
ಸಕಲ ನಿಃಕಲ ಸಂಭವಿತರೆಲ್ಲ ಶರಣು ಶರಣೆಂದು
ಬದುಕುವರು ಕಾಣಾ ನಿರಂಜನ ಚನ್ನಬಸವಲಿಂಗಾ. /97
ಅಭೇದನಖಂಡ ಪರಶಿವಲಿಂಗವೆನ್ನ ಕುರಿತು,
ಸುಭೇದಸುಪ್ರಕಾಶತ್ರಯವಾಗಿ,
ಕ್ರಿಯಾಪಾದ, ಜ್ಞಾನಪಾದ, ಚರ್ಯಾಪಾದವೆಂಬ
ಪಾದತ್ರಯಕ್ಕನುಗೈದು ಬಂದಲ್ಲಿ,
ಕರಣತ್ರಯ ಕರ್ಮವಿರಹಿತನಾಗಿ,
ಕಾರ್ಯದಿಂದರ್ಚಿಸಿ ಮಾಡಿ ಆನಂದಿಸುವೆ
ಗುರುವಿನೊಳು ಲಿಂಗಜಂಗಮವ ಕಂಡು.
ಮನದಿಂದರ್ಚಿಸಿ ಮಾಡಿ ಆನಂದಿಸುವೆ
ಲಿಂಗದಲ್ಲಿ ಜಂಗಮಗುರುವ ಕಂಡು.
ಪ್ರಾಣದಲ್ಲಿ ಅರ್ಚಿಸಿ ಮಾಡಿ ಆನಂದಿಸುವೆ
ಜಂಗಮದಲ್ಲಿ ಗುರುಲಿಂಗವ ಕಂಡು.
ಅರ್ಥ ಪ್ರಾಣ ಅಭಿಮಾನವಿಲ್ಲ ಗುರುನಿರಂಜನ ಚನ್ನಬಸವಲಿಂಗ./98
ಅಭ್ರ ಜಂಜಡವಳಿದುಳಿದ ಆಕಾಶದಲ್ಲಿಪ್ಪ
ಸೂರ್ಯನ ಪ್ರಕಾಶ ಪರಿಪೂರ್ಣಪಾಗಿಪ್ಪುದು.
ಮಿಥ್ಯ ಸಂಸಾರದ ಮೊತ್ತವನಳಿದುಳಿದನಂತಪ್ರಕಾಶ
ಸರ್ವತೋ ಪರಿಪೂರ್ಣವಾಗಿ ಕಾಣಿಸಿಕೊಳ್ಳುತಿಪ್ಪುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ./99
ಅಯ್ಯನರಾಣಿಯೆಂಬುದ ಊರೆಲ್ಲ ಬಲ್ಲುದು,
ಕೇರೆಲ್ಲ ಬಲ್ಲುದು, ಜನರೆಲ್ಲ ಬಲ್ಲರು ಇನ್ನಾರಂಜಿಕೆಯೆನಗೆ?
ಸಾರಿದಡಹುದು ಸಾರದಿರ್ದಡಹುದು,
ಕೊಟ್ಟಡಹುದು ಕೊಡದಿರ್ದಡಹುದು,
ಎಂತಿರ್ದಂತೆ ಸಂತ ನೋಡಾ,
ಗುರುನಿರಂಜನ ಚನ್ನಬಸವಲಿಂಗ ತನ್ನಂಗವಾದವಳನೇನ ಮಾಡಿದರೇನು?/100
ಅಯ್ಯಾ, ಅನಾದಿ ಚಿನ್ಮಯಲಿಂಗವೆನ್ನ
ಕರಸ್ಥಲಕ್ಕೆ ಬಂದುದು ಚೋದ್ಯ ನೋಡಾ !
ಅಯ್ಯಾ, ಆಕಾರ ನಿರಾಕಾರ ನಿರಂಜನಲಿಂಗವೆನ್ನ ಕುರಿತು
ಗುರುಮುಖದಿಂದ ಸಾಕಾರವಾಗಿ ಬಂದುದೆನಗತಿ ಚೋದ್ಯ ನೋಡಾ.
ಸುರೇಂದ್ರಜ ವಿಷ್ಣುಗಳರಿಯದ ಅನುಪಮ ಅಖಂಡ ಅವಿರಳಾನಂದ
ಪರಬ್ರಹ್ಮವೆನ್ನನರಿದು ಬಂದುದಾಶ್ಚರ್ಯ ನೋಡಾ !
ಆರಾರರಿಯದಪ್ರತಿಮ ಗುರುನಿರಂಜನ ಚನ್ನಬಸವಲಿಂಗ
ತಾನೇ ಬಂದ ಪರಿಯ ನೋಡಾ./101
ಅಯ್ಯಾ, ಅನಾದಿ ಪರಶಿವ ತನ್ನ ವಿನೋದಕಾರಣ
ಮತ್ರ್ಯಲೋಕದ ಮಹಾಗಣಂಗಳ ನೋಡಲೋಸುಗ
ನಾದಬಿಂದುಕಳಾಮೂರ್ತಿಯಾಗಿ ಸತ್ಯವೆಂಬ ಕಂತೆಯ ಧರಿಸಿ,
ಸಮತೆಯೆಂಬ ಕಮಂಡಲವ ಪಿಡಿದು, ನಿರ್ಮಲವೆಂಬ ಟೊಪ್ಪರವ ಧರಿಸಿ,
ನಿಜದರುವೆಂಬ ದಂಡವ ತಳೆದು, ಮಹಾಜ್ಞಾನವೆಂಬ ಭಸ್ಮವ ಧರಿಸಿ,
ಘನಭಕ್ತಿ ವೈರಾಗ್ಯವೆಂಬ ಹಾವುಗೆಯ ಮೆಟ್ಟಿ,
ಸದ್ಭಾವವೆಂಬ ಹಸ್ತದಲ್ಲಿ ಪರಮಾನಂದವೆಂಬ ಪಾವಡವ ಕಟ್ಟಿ,
ಭಕ್ತದೇಹಿಯೆಂದು ಸಜ್ಜನ ಸದುಹೃದಯ ಶಾಂತರುಗಳನರಸುತ್ತ
ತಾಮಸವ ಪರಿಸುತ್ತ ಅಡಿಗೆರಗಿ ಬಂದವರಿಗನುಭಾವವ ತಿಳಿಸುತ್ತ
ಸುಪವಿತ್ರಕ್ಕಿಳಿಸುತ್ತ ಸುಜ್ಞಾನವೆರಸಿ ತನ್ನಂತೆ ಮಾಡುತ್ತ ಚರಿಸುತಿರ್ದ
ಗುರುನಿರಂಜನ ಚನ್ನಬಸವಲಿಂಗ ಭಕ್ತೋಪಕಾರವಾಗಿ./102
ಅಯ್ಯಾ, ಅಭ್ಯಾಸ ಕಾಯದಿಂದೆ ವಸ್ತುವ ಕಂಡವರೆಂದು
ಬಂಧನದೊಳು ಬಿದ್ದುಹೋಗುವ ತುಂಡಜ್ಞಾನದ ಪಶುಗಳನೇನೆಂಬೆನಯ್ಯಾ !
ಕಾಣಲಿಲ್ಲದ ಲಿಂಗವ ಕಂಡವರುಂಟೆ ?
ಮತ್ತೆಂತೆಂದೊಡೆ, ಸಕಳ ನಿಃಕಳಾನುಮತಕ್ಕಗೋಚರ
ಅನುಪಮ ಶಿವನನುಗ್ರಹತ್ರಯವೆಂಬ
ಸರ್ವಕಲಾಬಿಜ್ಞತೆಯೊಳ್ಮೂಡಿದ ಭಾವಲಿಂಗವು,
ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು.
ವಿದ್ಯಾ ವಿನಯಸಂಪನ್ನತೆಯೊಳ್ಮೂಡಿದ ಪ್ರಾಣಲಿಂಗವು
ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು.
ವೀರಶೈವೋತ್ತಮತೆಯೊಳ್ಮೂಡಿದ ಇಷ್ಟಲಿಂಗವು
ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು.
ಇಂತು ತ್ರಿವಿಧಲಿಂಗಪ್ರಕಾಶದೊಳ್ಮುಳುಗಿ ನಿತ್ಯಸುಖಿಯಾದೆನು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರೊಳಗೆ./103
ಅಯ್ಯಾ, ಆದ್ಯರು ವೇದ್ಯರು ಸಾಧ್ಯರೆಂಬ ಸದಮಲಾತ್ಮರುಗಳಿಗಲ್ಲದೆ
ಸಂಗಸಂಯೋಗ ಸಮರಸಸಂಪದವು ಸಾಮಾನ್ಯವೇ ಹೇಳಾ ?
ಹಂಗಿನೊಳಗಾಗಿ ಭಂಗದೊಳಗಿದರ್ು ಭವವಿರಹಿತನೊಳು ಸಂತೃಪ್ತರೆಂಬ
ಬೆಂಗರ್ವಿಗಳ ಕಂಡು ಪೆರ್ಬಲೆಯೊಳಿಕ್ಕಿ ನಗುತಿರ್ದ
ನಮ್ಮ ಚನ್ನತ್ರಿವರ್ಣಲಿಂಗವು ನಿರ್ಮಲಂತರ್ಮುಖಿಗಳೊಡವೆರೆದು./104
ಅಯ್ಯಾ, ಆನು ನಿನಗೆಂದು ಬಂದೆ, ನಿನಗೆಂದು ನೋಡಿಹಿಡಿದೆ,
ನಿನಗೆ ಶರಣೆಂದು ನಿನ್ನಿಂದೆ ನಿನ್ನ ಕೊಂಡೆ,
ನಿನ್ನ ಸೆರಗ ಹಿಡಿದು ಸತಿಭಾವ ತಪ್ಪದೆ
ನಿನಗೆ ನಾನೆತ್ತಿ ಇತ್ತು ಸುಖಿಸಿದಡೆ ಉತ್ತುಮತೆಯಾದೆನಯ್ಯಾ
ಉರುನಿರಂಜನ ಚನ್ನಬಸವಲಿಂಗ./105
ಅಯ್ಯಾ, ಈ ಜಾಗ್ರಾವಸ್ಥೆ ಸಕಲವ ನುಂಗಿ ಕರಸ್ಥಲದೊಳಗಡಗಿತ್ತು.
ಈ ಸ್ವಪ್ನಾವಸ್ಥೆ ನಿಃಕಲವ ನುಂಗಿ ಮನಸ್ಥಲದೊಳಗಡಗಿತ್ತು.
ಅಯ್ಯಾ, ಈ ಸುಷುಪ್ತಾವಸ್ಥೆ ನಿರಂಜನವ ನುಂಗಿ ಭಾವಸ್ಥಲದೊಳಡಗಿತ್ತು.
ಸ್ಥಲ ಸ್ಥಲವ ನುಂಗಿ ನಿಃಸ್ಥಲದ ನಿಲವು
ಗುರುನಿರಂಜನ ಚನ್ನಬಸವಲಿಂಗದಲ್ಲರತಿತ್ತು./106
ಅಯ್ಯಾ, ಎನಗೆ ಬರುವ ಗಂಧದ್ರವ್ಯ, ನಿನ್ನನುಭಾವಿಸಿ ಬಂದ ಬರವಯ್ಯಾ.
ಎನಗೆ ಬರುವ ರಸದ್ರವ್ಯ ನಿನ್ನ ಸುಖಿಸಿ ಬಂದ ಬರವಯ್ಯಾ.
ಎನಗೆ ಬರುವ ರೂಪುದ್ರವ್ಯ ನಿನ್ನ ಪರಿಣಾಮಿಸಿ ಬಂದ ಬರವಯ್ಯಾ.
ಎನಗೆ ಬರುವ ಸ್ಪರ್ಶದ್ರವ್ಯ ನಿನ್ನ ಆನಂದಿಸಿ ಬಂದ ಬರವಯ್ಯಾ.
ಎನಗೆ ಬರುವ ಶಬ್ದದ್ರವ್ಯ ನಿನಗೆ ಸೊಗಸನಿಟ್ಟು ಬಂದ ಬರವಯ್ಯಾ.
ಎನಗೆ ಬರುವ ತೃಪ್ತಿದ್ರವ್ಯ ನಿನ್ನ ತೃಪ್ತಿಯಪಡಿಸಿ ಬಂದ ಬರವಯ್ಯಾ.
ಎನಗೆ ಬರುವ ಸಕಲವು
ಗುರುನಿರಂಜನ ಚನ್ನಬಸವಲಿಂಗ ಸಹಿತವಯ್ಯಾ./107
ಅಯ್ಯಾ, ಎನ್ನ ಇಂದ್ರಿಯಂಗಳೆಲ್ಲ
ನಿಮ್ಮ ಸೋಂಕಿನ ಸೊಬಗೆಂಬ ತವನಿದಿಯಲ್ಲಿ ಮುಳುಗಿ,
ಹಿಂದಿನ ಮುಂದಿನ ಬಂಧನದ ಸಂಕೋಲೆಯ ಕಳೆದಿರ್ದವಯ್ಯಾ.
ಅಯ್ಯಾ, ಎನ್ನ ಕರಣಂಗಳೆಲ್ಲ ನಿಮ್ಮ ಮುಟ್ಟಿ
ಮುಂದನರಿಯದೆ ಹಿಂದನರಿಯದೆ ಸಂದಸುಖದಲ್ಲಿ
ಬಂದ ಪರಿಣಾಮದಲ್ಲಿ ಮುಳುಗಿ ಮತ್ತರಿಯದಿರ್ದವಯ್ಯಾ.
ಅಯ್ಯಾ, ಎನ್ನ ವಿಷಯಂಗಳೆಲ್ಲ
ನಿಮ್ಮ ಸಂಬಂಧಸಂವಿತ್ಪ್ರಭಾನಂದದೊಳು ಮುಳುಗಿ
ಬಿನ್ನ ಸುಖವರಿಯದಿರ್ದವಯ್ಯಾ.
ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ
ನಿನ್ನೊಡಲಗೊಂಡವನಾದಕಾರಣ ಕಾಣಯ್ಯಾ./108
ಅಯ್ಯಾ, ಎನ್ನ ಕರಸ್ಥಲದಲ್ಲಿ ಲಿಂಗವು,
ಎನ್ನ ಪ್ರಾಣಸ್ಥಲದಲ್ಲಿ ರುದ್ರಾಕ್ಷಿ,
ಎನ್ನ ಭಾವಸ್ಥಲದಲ್ಲಿ ಭಸಿತವು,
ಎನ್ನ ಅರುಹಿನ ಸ್ಥಲದಲ್ಲಿ ಪ್ರಸಾದ,
ಎನ್ನ ಜ್ಞಾನದ ಸ್ಥಲದಲ್ಲಿ ಪಾದೋದಕವು,
ಎನ್ನ ಮನದ ಸ್ಥಲದಲ್ಲಿ ಪಂಚಾಕ್ಷರಿ ಸಂಯುಕ್ತವಾಗಿ,
ಗುರುನಿರಂಜನ ಚನ್ನಬಸವಲಿಂಗಜಂಗಮಕ್ಕೆ
ನಮೋ ನಮೋ ಎನುತಿರ್ದೆನು./109
ಅಯ್ಯಾ, ಎನ್ನ ಕಾಯದ ಕರಸ್ಥಲದಲ್ಲಿ ಬಸವಣ್ಣನ ಪ್ರಸಾದವ ಕಂಡೆ.
ಅಯ್ಯಾ, ಎನ್ನ ಮನದ ಕರಸ್ಥಲದಲ್ಲಿ ಚನ್ನಬಸವಣ್ಣನ ಪ್ರಸಾದವ ಕಂಡೆ.
ಅಯ್ಯಾ, ಎನ್ನ ಭಾವದ ಕರಸ್ಥಲದಲ್ಲಿ ಪ್ರಭುದೇವರ ಪ್ರಸಾದವ ಕಂಡೆ.
ಅಯ್ಯಾ, ಎನ್ನ ಸರ್ವಾಂಗದಲ್ಲಿ ಈ ತ್ರಿವಿಧ ಪ್ರಸಾದದ ಪರಿಣಾಮದಲ್ಲಿ
ಓಲಾಡುತಿರ್ದೆನು ಗುರುನಿರಂಜನ ಚನ್ನಬಸವಲಿಂಗಾ./110
ಅಯ್ಯಾ, ಎನ್ನ ಕಾಯದಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಕ್ರಿಯಾಗಮ್ಯ ಕಾಣಾ.
ಅಯ್ಯಾ, ಎನ್ನ ಮನದ ಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಜ್ಞಾನಗಮ್ಯ ಕಾಣಾ.
ಅಯ್ಯಾ, ಎನ್ನ ಭಾವದ ಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಭಾವಗಮ್ಯ ಕಾಣಾ.
ಮತ್ತೆಂತೆಂದೊಡೆ, ಪ್ರಾಣವ ಕರಗಿ ಭಕ್ತಿರಸವೆರೆದು
ಸ್ವಯವ ಮರೆದು ಪಟವ ಹರಿದು ನೆರೆದಲ್ಲಿ ನಿರುತವಾಗಿರ್ದ ನೀನೇ
ಗುರುನಿರಂಜನ ಚನ್ನಬಸವಲಿಂಗಾ./111
ಅಯ್ಯಾ, ಎನ್ನ ಕಾಲಕರ್ಮವ ಕಳೆದ ಕರುಣಾಸಾಗರಲಿಂಗವೇ ಶರಣು ಶರಣು.
ಎನ್ನ ಕರವ ನಿರ್ಮಲಮಾಡಿದ ನಿಜಲಿಂಗವೇ ಶರಣು ಶರಣು.
ಎನ್ನ ನಾಸಿಕದ ವಾಸನೆಯನಳಿದ ಶೇಷಲಿಂಗವೇ ಶರಣು ಶರಣು.
ಎನ್ನ ಜಿಹ್ವೆಯ ಕಲ್ಮಷವ ಕಳೆದ ಘನಮಹಾಲಿಂಗವೇ ಶರಣು ಶರಣು.
ಎನ್ನ ಕಂಗಳ ಕತ್ತಲೆಯ ಕಳೆದ ಮಂಗಳಮಹಾಲಿಂಗವೇ ಶರಣು ಶರಣು.
ಎನ್ನ ತ್ವಕ್ಕಿನ ಆಕಾರವನಳಿದ ಚಿತ್ಕಲಾಲಿಂಗವೇ ಶರಣು ಶರಣು.
ಎನ್ನ ಕರ್ಣದ ದೋಷವ ಪರಿದ ಪರಮಲಿಂಗವೇ ಶರಣು ಶರಣು.
ಎನ್ನ ಹೃದಯದ ಕಳವಳವನಳಿದ ಅನುಪಮಲಿಂಗವೇ ಶರಣು ಶರಣು.
ಇಂತು ಎನ್ನ ಸರ್ವಾಂಗದ ಗರ್ವಾದಿಗಳನಳಿದು ನಿರಂತರ ಕರಸ್ಥಲಕ್ಕನುವಾದ
ನಿರಂಜನ ಚನ್ನಬಸವಲಿಂಗವೇ
ನಿಮಗೆ ಶರಣು ಶರಣೆಂದು ಬದುಕಿದೆನಯ್ಯಾ./112
ಅಯ್ಯಾ, ಎನ್ನ ಕುಲವಳಿದು ಗುರುವಿನೊಳಗಾದೆ,
ಛಲವಳಿದು ಲಿಂಗದೊಳಗಾದೆ,
ಧನವಳಿದು ಜಂಗಮದೊಳಗಾದೆ,
ರೂಪುಮದವಳಿದು ಭಸ್ಮದೊಳಗಾದೆ,
ಯವ್ವನಮದವಳಿದು ರುದ್ರಾಕ್ಷಿಯೊಳಗಾದೆ,
ವಿದ್ಯಾಮದವಳಿದು ಮಂತ್ರದೊಳಗಾದೆ,
ರಾಜಮದವಳಿದು ಪಾದೋದಕದೊಳಗಾದೆ,
ತಪಮದವಳಿದು ಪ್ರಸಾದದೊಳಗಾದೆ,
ಇಂತು ಸಕಲವಳಿದು ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಂಗವಾದೆ ಕಾಣಾ./113
ಅಯ್ಯಾ, ಎನ್ನ ಕೈ ಕೈಗೆ ಬಂದಮೇಲೆ ಕ್ರಿಯಾಂಗನೆಯಾದೆ,
ಜ್ಞಾನಾಂಗನೆಯಾದೆ, ಇಚ್ಫಾಂಗನೆಯಾದೆ, ಆದಿಯಂಗನೆಯಾದೆ.
ಚಿದಾಂಗನೆಯ ಶರಗವಿಡಿದು ಪರಾಂಗನೆಯಾಗಿ
ಪ್ರಸಾದಮೂರ್ತಿಯ ಅನುಭಾವಕ್ಕಂಗವಾಗಿ ಅಗಲದಿರ್ದೆನು
ಗುರುನಿರಂಜನ ಚನ್ನಬಸವಲಿಂಗದಲ್ಲಿ./114
ಅಯ್ಯಾ, ಎನ್ನ ಗುರುವಿನಲ್ಲಿ ಗುಣವನರಸಿ ಬೋಧೆಯ ಹೇಳಿ ನಡೆಸುವೆ.
ಅಯ್ಯಾ, ಎನ್ನ ಲಿಂಗದಲ್ಲಿ ಶಿಲೆಯನರಸಿ ತಿದ್ದಿ ಕೈಯೊಳು ಹಿಡಿವೆ.
ಅಯ್ಯಾ, ಎನ್ನ ಜಂಗಮದಲ್ಲಿ ಕುಲವನರಸಿ ಜರೆದು ಅನುಭಾವದೊಳಗಿರಿಸುವೆ.
ಇಂತು ಎನ್ನ ಗುರುಲಿಂಗಜಂಗಮದ ಇಚ್ಫೆಯಲ್ಲಿರ್ದೆನಾದರೆ ಭವತಪ್ಪದೆಂದು,
ಎನ್ನಿಚ್ಫೆಯಲಿರಿಸಿ ನಿಮ್ಮಲ್ಲಿ ಸುಖಿಯಾಗಿರ್ದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ, ಧರ್ಮವೇ ಜಯವೆಂದು./115
ಅಯ್ಯಾ, ಎನ್ನ ಚೌಪೀಠಮಂಟಪದಲ್ಲಿ
ಪ್ರಭುದೇವರನುಭಾವವ ನೋಡಿ ಪರಮಪರವಶವಾಗಿರ್ದೆನು.
ಅಯ್ಯಾ, ಎನ್ನ ಮಧ್ಯಪೀಠದಮಂಟಪದಲ್ಲಿ
ಚನ್ನಬಸವಣ್ಣನನುಭಾವವ ನೋಡಿ ನಿರುತಪರವಶವಾಗಿರ್ದೆನು.
ಅಯ್ಯಾ, ಎನ್ನ ಕಂಗಳಮುಂದಣ ಮಂಗಳಮಂಟಪದಲ್ಲಿ
ಬಸವಣ್ಣನನುಭಾವವ ನೋಡಿ ಅವಿರಳಪರವಶವಾಗಿರ್ದೆನು.
ಇಂತು ಸಕಲ ಪುರಾತನರನುಭಾವಪ್ರಕಾಶದೊಳು ಮುಳುಗಿ
ಘನಪರವಶದಿಂದೋಲ್ಯಾಡುತಿರ್ದೆನು
ಗುರುನಿರಂಜನ ಚನ್ನಬಸವಲಿಂಗ ನಿಮ್ಮೊಳಗೆ./116
ಅಯ್ಯಾ, ಎನ್ನ ತನುಶುದ್ಧವ ಕಂಡು ಸೇವೆಯ ಕೊಳ್ಳಯ್ಯಾ.
ಲಿಂಗಯ್ಯಾ, ಎನ್ನ ಮನಶುದ್ಧವ ಕಂಡು ಪೂಜೆಯ ಕೊಳ್ಳಯ್ಯಾ.
ಸಂಗಯ್ಯಾ, ಎನ್ನ ಪ್ರಾಣಶುದ್ಧವ ಕಂಡು ದಾಸೋಹವ ಕೊಳ್ಳಯ್ಯಾ.
ಎಲೆ ಅಯ್ಯಾ, ಎನ್ನ ಭಾವಶುದ್ಧವ ಬಂದು ಕೂಡಯ್ಯಾ.
ಗುರುನಿರಂಜನ ಚನ್ನಬಸವಲಿಂಗಯ್ಯಾ ತಪ್ಪೆನ್ನದು ತಪ್ಪೆನ್ನದು./117
ಅಯ್ಯಾ, ಎನ್ನ ನಡೆಯಲ್ಲಿ ನಿನ್ನನುಳಿದು ನಡೆದೆನಾದರೆ
ಹುಳುಗೊಂಡ ಮುಂದೆ ನಿರುತವೆಂಬುದು.
ನಿಮ್ಮವರ ನಿನ್ನ ವಾಕ್ಯವನು ಕೇಳಿ ಅಂಜಿ ನಡೆವೆನಯ್ಯಾ.
ಅಯ್ಯಾ, ಎನ್ನ ನುಡಿಯಲ್ಲಿ ನಿನ್ನನುಳಿದು ನುಡಿದೆನಾದರೆ
ಕೊಂದುಕೆಡಹುವರು ಮುಂದೆ ನಿರವಯದಲ್ಲೆಂಬುದು
ನಿಮ್ಮವರ ನಿನ್ನ ವಾಕಯವಕೇಳಿ ಅಂಜಿ ನುಡಿವೆನಯ್ಯಾ.
ಅಯ್ಯಾ, ಎನ್ನ ಕೂಟದಲ್ಲಿ ನಿನ್ನನುಳಿದು ಕೂಡಿದೆನಾದರೆ
ಮುಂದೆ ನಾಯಕ ನರಕವೆಂಬುದು
ನಿಮ್ಮವರ ನಿನ್ನ ವಾಕ್ಯವ ಕೇಳಿ ಅಂಜಿ ಕೂಡುವೆನಯ್ಯಾ.
ಅಯ್ಯಾ, ಎನ್ನೊಳಹೊರಗೆ ನಾನರಿಯದೆ ನೀನೆಯಾಗಿರ್ನೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./118
ಅಯ್ಯಾ, ಎನ್ನ ನಡೆಯಲ್ಲಿ
ಶರಣೆಂಬ ಭಾವದ ಪರಿಮಳದೊಳಡಗಿರ್ದೆ ಕಾಣಾ.
ಅಯ್ಯಾ, ಎನ್ನ ನುಡಿಯಲ್ಲಿ
ಶರಣೆಂಬ ಭಾವದ ಪರಿಮಳದೊಳು ಮುಳುಗಿರ್ದೆ ಕಾಣಾ.
ಅಯ್ಯಾ, ಎನ್ನ ಕೊಡುಕೊಳ್ಳೆಯಲ್ಲಿ
ಶರಣೆಂಬ ಭಾವದ ಪರಿಮಳದೊಳು ಎರಕವಾಗಿರ್ದೆ ಕಾಣಾ.
ಅಯ್ಯಾ, ಎನ್ನ ಸಕಲಸುಖದುಃಖಾದಿ ಮತ್ತೆಲ್ಲಾದರೆಯೂ
ಶರಣೆಂಬ ಭಾವದ ಸುವಾಸನೆಯೊಳು ಸಮರಸವಾಗಿರ್ದೆ ಕಾಣಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ./119
ಅಯ್ಯಾ, ಎನ್ನ ಪರಮ ಗುರುಕರುಣದಿಂದೆ
ಪರಮೇಕಲಿಂಗವೆನ್ನ ಆಚಾರಾಂಗದ ಮೇಲೆ ಆಯತವಾಯಿತ್ತು.
ಅಯ್ಯಾ, ಎನ್ನ ನಿರ್ಮಲ ಮನದ ಮೇಲೆ
ಪ್ರಾಣಲಿಂಗ ಸ್ವಾಯತವಾಯಿತ್ತು.
ಅಯ್ಯಾ, ಎನ್ನ ಸದ್ಭಾವದ ಮೇಲೆ
ಭಾವಲಿಂಗ ಸನ್ನಿಹಿತವಾಯಿತ್ತು.
ಅಯ್ಯಾ, ಎನ್ನ ಸರ್ವಾಂಗದಲ್ಲಿ
ಷಡಕ್ಷರ ಬೆಳಗುತ ಮಹಾಶೂನ್ಯವಾಗಿರ್ದುದು
ನಿರಂತರ ಗುರುನಿರಂಜನ ಚನ್ನಬಸವಲಿಂಗದಲ್ಲಿ./120
ಅಯ್ಯಾ, ಎನ್ನ ಬೆನ್ನಿಂದೆ ಬಂದ ಕತರ್ು ನೀನೆಂದರಿದೆ.
ಅದೇನು ಕಾರಣ, ಎನ್ನ ಕರ್ಮವ ಕಳೆದು, ವರ್ಮವ ತಿಳುಹಿ,
ನಿರ್ಮಳ ಮೂರುತಿಯಾಗಿನಿಂದಲ್ಲಿ.
ಅಯ್ಯಾ, ಎನ್ನಾದಿಮುಖದಿಂದೆ ವೇಧಿಸಬಂದ ಮಹಿಮ ನೀನೆಂದರಿದೆ,
ಅದೇನು ಕಾರಣ, ಎನ್ನ ಪಂಚದಶ ಮಾಯಾಪಟಲ ಹರಿದು
ಪ್ರಾಣಮಯಮೂರುತಿಯಾಗಿ ನಿಂದಲ್ಲಿ.
ಅಯ್ಯಾ, ಎನ್ನನಾದಿಯನರುಹಿಸಲುದಯವಾಗಿ ಬಂದ ಚಿನುಮಯ ನೀನೆಂದರಿದೆ.
ಅದೇನು ಕಾರಣ, ಎನ್ನ ಸಪ್ತವ್ಯಸನ ವಿಷಯವಿಕಾರವನ್ನುರುಹಿ
ಆನಂದಮಯ ಮೂರುತಿಯಾಗಿನಿಂದಲ್ಲಿ.
ಅಯ್ಯಾ, ಎನ್ನ ಸರ್ವಾಂಗ ಸುಖಮುಖ ನೀನೆಂದರಿದೆ.
ಅದೇನು ಕಾರಣ, ಗುರುನಿರಂಜನ ಚನ್ನಬಸವಲಿಂಗ
ಮೂರುತಿಯಾಗಿನಿಂದಲ್ಲಿ./121
ಅಯ್ಯಾ, ಎನ್ನ ಭಕ್ತಿಪ್ರಕಾಶ ನಿಮ್ಮನಾವರಿಸಿರ್ದು
ಮರಳಿಮಾಡುವ ಕುರುಹಿಂಗೆ ಇಂಬುಗಾಣೆನಯ್ಯಾ.
ಎನ್ನ ಯುಕ್ತಿಪ್ರಕಾಶ ನಿಮ್ಮನಾವರಿಸಿರ್ದು
ಮರಳಿ ಯುಕ್ತಿಯ ಕುರುಹಿಂಗೆ ಇಂಬುಗಾಣೆನಯ್ಯಾ.
ಅಯ್ಯಾ, ಎನ್ನ ಜ್ಞಾನತ್ರಿಪುಟಿಗಳ ಪ್ರಕಾಶ ನಿಮ್ಮನಾವರಿಸಿರ್ದು
ಮರಳಿ ಜ್ಞಾತೃ, ಜ್ಞಾನ, ಜ್ಞೇಯವೆಂಬ ಕುರುಹಿಂಗೆ ಇಂಬುಗಾಣೆನಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣಲಿಂಗೈಕ್ಯದಾನಂದ ಬೆಳಗನೇನೆಂದುಪಮಿಸಬಹುದು ?/122
ಅಯ್ಯಾ, ಎನ್ನ ಭಕ್ತಿಯ ಬೆಳಗಿನೊಳಗೆ
ಮತ್ತೊಂದು ಬೆಳಗುಬಂದು ಆವರಿಸಿತ್ತು ಇದೇನು ನೋಡಾ !
ಅಯ್ಯಾ, ಎನ್ನ ಜ್ಞಾನದ ಬೆಳಗಿನೊಳಗೆ
ಮತ್ತೊಂದು ಬೆಳಗು ಬಂದು ಆವರಿಸಿತ್ತು ಇದೇನು ನೋಡಾ !
ಅಯ್ಯಾ, ಎನ್ನ ವೈರಾಗ್ಯದ ಬೆಳಗಿನೊಳಗೆ
ಮತ್ತೊಂದು ಬೆಳಗು ಬಂದು ಆವರಿಸಿತ್ತು ಇದೇನು ನೋಡಾ !
ಅಯ್ಯಾ, ಎನ್ನನಾವರಿಸಿದ ತ್ರಿವಿಧ ಬೆಳಗನೊಂದು ಮಾಡಿ
ಮೂಲ ಬೆಳಗನರಿಯದಿರ್ದಲ್ಲಿ,
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಅನುಭಾವಬೆಳಗೆನ್ನ ಭಕ್ತಿಯ ಬೆರೆಸಿತ್ತು. /123
ಅಯ್ಯಾ, ಎನ್ನ ಮಂದಿರದಲ್ಲಿ ಬಸವಣ್ಣನ ಮಹಾನುಭಾವಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಎನ್ನ ಮಂದಿರದಲ್ಲಿ ಮಡಿವಾಳಯ್ಯನ ಚಿದ್ರಸಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಎನ್ನ ಮಂದಿರದಲ್ಲಿ ಚನ್ನಬಸವಣ್ಣನ ಚಿದ್ರೂಪಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಎನ್ನ ಮಂದಿರದಲ್ಲಿ ಸಿದ್ಧರಾಮಯ್ಯನ ಚಿತ್ಕಲಾಸೋಂಕಿನ ಶುದ್ಧಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಎನ್ನ ಮಂದಿರದಲ್ಲಿ ಪ್ರಭುದೇವರ ಚಿದಾನಂದಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಎನ್ನ ಮಂದಿರದಲ್ಲಿ ಅಜಗಣ್ಣನ ಮಹದಾನಂದಪ್ರಸಾದವನು
ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ
ಎನ್ನ ಮಂದಿರದಲ್ಲಿ ತೆರಹಿಲ್ಲದೆ ಇಪ್ಪ
ಅಸಂಖ್ಯಾತ ಮಹಾ ಪ್ರಮಥಗಣಂಗಳ ಅನುಪಮ ಪ್ರಸಾದವನು
ಕೂಡೆಸನ್ನಿಹಿತಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !/124
ಅಯ್ಯಾ, ಎನ್ನ ಸಂಚಿತಕರ್ಮದಿಂದುಲಿವ
ಆಣವಮಲಸಂಬಂಧವ ತೊಳೆದು,
ಇಷ್ಟಲಿಂಗ ಸಂಬಂಧವ ಮಾಡಿ
ಕ್ರಿಯಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ.
ಅಯ್ಯಾ, ಎನ್ನ ಪ್ರಾರಬ್ಧಕರ್ಮದಿಂದುಲಿವ
ಮಾಯಾಮಲಸಂಬಂಧವ ತೊಳೆದು,
ಪ್ರಾಣಲಿಂಗಸಂಬಂಧವ ಮಾಡಿ
ಜ್ಞಾನಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ.
ಅಯ್ಯಾ, ಎನ್ನ ಆಗಾಮಿಕರ್ಮದಿಂದುಲಿವ
ಕಾರ್ಮಿಕಮಲಸಂಬಂಧವ ತೊಳೆದು
ಭಾವಲಿಂಗಸಂಬಂಧವ ಮಾಡಿ
ಭಾವಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ.
ಇಂತು ಎನ್ನಂಗ ಮನ ಪ್ರಾಣದಲ್ಲಿ ಲಿಂಗಸಂಬಂದಿಯೆನಿಸಿ
ಭಾವ ತುಂಬಿ ನಿರಂಜನ ಚನ್ನಬಸವಲಿಂಗದಲ್ಲಿ
ಪರಮಪರಿಣಾಮವ ತೋರಿತ್ತು ನಿರಂತರ ನೋಡಾ ಪಂಚಾಕ್ಷರಿ./125
ಅಯ್ಯಾ, ಎನ್ನ ಸ್ಥಲವ ಆಚಾರಲಿಂಗವಾಗಿಬಂದು ಗಬರ್ಿಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಗುರುಲಿಂಗವಾಗಿಬಂದು ಗಬರ್ಿಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಶಿವಲಿಂಗವಾಗಿಬಂದು ಗಬರ್ಿಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಜಂಗಮಲಿಂಗವಾಗಿಬಂದು ಗಬರ್ಿಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಸ್ಥಲವ ಮಹಾಲಿಂಗವಾಗಿಬಂದು ಗಬರ್ಿಕರಿಸಿಕೊಂಡೆ ನೀನು.
ಅಯ್ಯಾ, ಎನ್ನ ಷಟ್ಸ್ಥಲವನು ಪ್ರಸಾದಲಿಂಗವಾಗಿ ಬಂದು,
ಗಬರ್ಿಕರಿಸಿಕೊಂಡೆ ನೀನು.
ಗುರುನಿರಂಜನ ಚನ್ನಬಸವಲಿಂಗ ನೀನಂಗ ನಾನುಭಯಸಂಗ./126
ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು
ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ,
ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ನೆನಯ್ಯಾ.
ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು
ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು
ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ
ಮಂಗಳ ಜಯ ಜಯವೆನುತಿರ್ನೆನಯ್ಯಾ.
ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು
ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು
ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ
ಮಂಗಳ ಜಯ ಜಯವೆನುತಿರ್ನೆನಯ್ಯಾ.
ಅಯ್ಯಾ. ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ
ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ
ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು
ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ
ಜ್ಞಾನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ನೆನಯ್ಯಾ./127
ಅಯ್ಯಾ, ಎನ್ನಲ್ಲಿ ಅರುಹಿನ ಮುಖವನರಿದೆನಾಗಿ
ಕುಲಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಪ್ರಾಣನ ಮುಖವನರಿದೆನಾಗಿ
ಛಲಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಜ್ಞಾನಮುಖವನರಿದೆನಾಗಿ
ಧನಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ನೇತ್ರಮುಖವನರಿದೆನಾಗಿ
ರೂಪಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಅಂಗಮುಖವನರಿದೆನಾಗಿ
ಯವ್ವನಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಜಿಹ್ವೆಮುಖವನರಿದೆನಾಗಿ
ವಿದ್ಯಾಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಶ್ರೋತ್ರಮುಖವನರಿದೆನಾಗಿ
ರಾಜಮದವಳಿದುಳಿದು ಬಂದಿತ್ತು.
ಅಯ್ಯಾ, ಎನ್ನಲ್ಲಿ ಘ್ರಾಣಮುಖವನರಿದೆನಾಗಿ
ತಪಮದವಳಿದುಳಿದು ಬಂದಿತ್ತು.
ಇಂತು ಅಷ್ಟಸ್ಥಲವನರಿದೆನಾಗಿ
ಅಷ್ಟಮದವಳಿದುಳಿದು ಬಂದಿತ್ತು.
ಅಷ್ಟಾವರಣವಾಗಿ ಉಳಿದು ಎನ್ನ ವಿರಳಕ್ರಿಯಾಜ್ಞಾನಕ್ಕೆ ಆಸ್ಪದವಾಯಿತ್ತು
ಗುರುನಿರಂಜನ ಚನ್ನಬಸವಲಿಂಗದಲ್ಲಿ./128
ಅಯ್ಯಾ, ಎನ್ನಲ್ಲಿ ವಂಚನೆಗಿಂಬಿಡಲೆಡೆಯಿಲ್ಲ
ಮನವೆಂಬ ಸುಳುಹಿಲ್ಲ ಲಿಂಗಕ್ಕೆ ಆಲಯವಾಗಿತ್ತಾಗಿ.
ಅಯ್ಯಾ, ಎನ್ನಲ್ಲಿ ಭಿನ್ನಭಾವಕ್ಕನುವಿಲ್ಲ
ಮಹಾನುಭಾವವಾಗಿ ಮಹದಲ್ಲೆರಕವಾಯಿತ್ತಾಗಿ.
ಅಯ್ಯಾ, ಎನ್ನಲ್ಲಿ ಜ್ಞಾನವಿಡಿದು
ನಿನ್ನ ನೋಡಿ ಆಲಿಂಗಿಸಬೇಕೆಂಬ ಅನುವಿಲ್ಲ
ಗುರುನಿರಂಜನ ಚನ್ನಬಸವಲಿಂಗವೆನ್ನನಾವರಿಸಿಕೊಂಡಿರ್ದನಾಗಿ./129
ಅಯ್ಯಾ, ಎನ್ನಾಧಾರಚಕ್ರದಲ್ಲಿ ಕರ್ಮಸಾದಾಖ್ಯ ಹೊಂದಿ,
ನಿವೃತ್ತಿಕಲಾಪರ್ಯಾಯನಾಮವನುಳ್ಳ
ಕ್ರಿಯಾಶಕ್ತಿಸಮೇತವಾದ ಆಚಾರಲಿಂಗವ ಧರಿಸಿಪ್ಪೆನಾಗಿ
ಅಲುಪ್ತಶಕ್ತಿತ್ವಾನುಭಾವಿಯಾದೆನಯ್ಯಾ.
ಎನ್ನ ಸ್ವಾದಿಷ್ಠನಚಕ್ರದಲ್ಲಿ ಕತರ್ೃಸಾದಾಖ್ಯ ಹೊಂದಿ
ಪ್ರತಿಷ್ಠಾಕಲಾಪರ್ಯಾಯನಾಮವನುಳ್ಳ ಜ್ಞಾನಶಕ್ತಿಸಮೇತವಾದ
ಗುರುಲಿಂಗವ ಧರಿಸಿಪ್ಪೆನಾಗಿ ಸ್ವತಂತ್ರತ್ವಾನುಭಾವಿಯಾದೆನಯ್ಯಾ.
ಎನ್ನ ಮಣಿಪೂರಕಚಕ್ರದಲ್ಲಿ ಮೂರ್ತಿಸಾದಾಖ್ಯ ಹೊಂದಿ
ವಿದ್ಯಾಕಲಾಪರ್ಯಾಯನಾಮವನುಳ್ಳ ಇಚ್ಫಾಶಕ್ತಿಸಮೇತವಾದ
ಶಿವಲಿಂಗವ ಧರಿಸಿಪ್ಪೆನಾಗಿ ನಿತ್ಯತ್ವಾನುಭಾವಿಯಾದೆನಯ್ಯಾ.
ಎನ್ನ ಅನಾಹತಚಕ್ರದಲ್ಲಿ ಅಮೂರ್ತಿಸಾದಾಖ್ಯ ಹೊಂದಿ
ಶಾಂತಿಕಲಾಪರ್ಯಾಯನಾಮವನುಳ್ಳ ಆದಿಶಕ್ತಿಸಮೇತವಾದ
ಜಂಗಮಲಿಂಗವ ಧರಿಸಿಪ್ಪೆನಾಗಿ ಅನಾದಿಬೋಧತ್ವಾನುಭಾವಿಯಾದೆನಯ್ಯಾ.
ಎನ್ನ ವಿಶುದ್ಧಿಚಕ್ರದಲ್ಲಿ ಶಿವಸಾದಾಖ್ಯ ಹೊಂದಿ
ಶಾಂತ್ಯತೀತಕಲಾಪರ್ಯಾಯನಾಮವನುಳ್ಳ ಪರಶಕ್ತಿಸಮೇತವಾದ
ಪ್ರಸಾದಲಿಂಗವ ಧರಿಸಿಪ್ಪೆನಾಗಿ ಸರ್ವಜ್ಞತ್ವಾನುಭಾವಿಯಾದೆನಯ್ಯಾ.
ಎನ್ನ ಅಜ್ಞಾಚಕ್ರದಲ್ಲಿ ಮಹಾಸಾದಾಖ್ಯ ಹೊಂದಿ
ಶಾಂತ್ಯತೀತೋತ್ತರೆಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ ಸಮೇತವಾದ
ಮಹಾಲಿಂಗವ ಧರಿಸಿಪ್ಪೆನಾಗಿ ತೃಪ್ತತ್ವಾನುಭಾವಿಯಾದೆನಯ್ಯಾ.
ಇಂತು ಎನ್ನ ಷಡಂಗದಲ್ಲಿ ಷಡುಲಿಂಗವ ಧರಿಸಿ ಷಟ್ಸ್ಥಲಜ್ಞಾನಾನುಭಾವಿಯಾದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ./130
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ.
ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ.
ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ.
ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ
ಸರ್ವಾಂಗಸನ್ನಿಹಿತನಾಗಿ ನಿಂದೆ.
ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು
ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
/131
ಅಯ್ಯಾ, ಕೈಯೊಡ್ಡಿ ಬೇಡುವದು ಸ್ಥಲವಲ್ಲ ; ಕೈಯೆತ್ತಿಕ್ಕುವದು ಸ್ಥಲವಲ್ಲ.
ಮತ್ತೆಂತೆಂದೊಡೆ, ಗೋದಿ ತೊಗರಿ ಬರಗು ಅಗಸೆ ಚೆನ್ನಂಗಿಬೇಳೆ ಕಡ್ಲೆ ಬೇಳೆ
ಬೆಲ್ಲ ಹುಣಸಿಹಣ್ಣು ಮಧು-ಇಂತು ಇವಂ ನಿರ್ಮಳವಾಗಿ ಪಾಕವಮಾಡಿ
ಗುರುವನರಿದಿತ್ತುಕೊಂಬುದೇ ಶುದ್ಧಪ್ರಸಾದ.
ಅಕ್ಕಿ ಕುಸುಬೆ ಬಿಳಿಯೆಳ್ಳು ಬೀಳಿಜೋಳ
ಸಾಸಿವೆ ಹಾಲು ಮೊಸರು ಲವಣ ಹೆತ್ತುಪ್ಪ ಶುಂಠ
ಇಂತು ಇವಂ ನಿರ್ಮಳವಾಗಿ ಪಾಕವಮಾಡಿ
ಲಿಂಗವನರಿದಿತ್ತುಕೊಂಬುದೇ ಸಿದ್ಧಪ್ರಸಾದ.
ಉದ್ದು ಸಾವೆ ವಟಾಣೆ ಸಜ್ಜೆ ಕರಿಕಡ್ಲೆ ತೈಲ ಮೆಣಸು ಲಾವಂಗ
ಇಂತು ಇವಂ ನಿರ್ಮಳವಾಗಿ ಪಾಕವಮಾಡಿ
ಜಂಗಮವನರಿದಿತ್ತುಕೊಂಬುದೇ ಪ್ರಸಿದ್ಧಪ್ರಸಾದ.
ಈ ಸೈದಾನದೊಳಗಿಪ್ಪ ಸಕಲವನರಿದು ನಿರ್ಮಲ ಪಾಕವಮಾಡಿ
ನಿಜಗುರುನಿರಂಜನ ಚನ್ನಬಸವಲಿಂಗವನರಿದಿತ್ತುಕೊಂಬ
ಮಹಾಪ್ರಸಾದಿಯೇ ಶರಣ ಕಾಣಾ./132
ಅಯ್ಯಾ, ಗುರುಪ್ರಸಾದವ ಕೈಯೊಡ್ಡಿ ಬೇಡುವರು ಶಿಷ್ಯರು.
ಲಿಂಗಪ್ರಸಾದವ ಕೈಯೊಡ್ಡಿ ಬೇಡುವರು ಭಕ್ತರು.
ಜಂಗಮಪ್ರಸಾದವ ಕೈಯೊಡ್ಡಿ ಬೇಡುವರು ಶರಣಸ್ಥಲವುಳ್ಳವರು.
ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಶರಣ
ಗುರುಲಿಂಗಜಂಗಮಕ್ಕೆ ಕೈಯೊಡ್ಡಿ ಬೇಡಲಿಲ್ಲ ಕಾಣಾ./133
ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ
ನೆರೆಹೊರೆಯವರತ್ತ ಸಾರಿ, ಕೆಂಚಕೆಡಿಗರತ್ತ ಸಾರಿ,
ಬಿಳಿಯ ಬೆಂಗಡಿಗರತ್ತ ಸಾರಿ, ಕರಿಯಗೊಂದಣಿಗರತ್ತ ಸಾರಿ,
ಮುಂದೆ ಹುಣ್ಣಿವೆಗಮ್ಮಯ್ಯನ ಯಾತ್ರೆ ಬೇಕಾದರೆ
ಅಮಾವಾಸ್ಯೆಯ ಕಳೆದು ಅಂಗ ಮಡಿಯಾಗಿ
ಕಂಗಳ ಮುಂದೆ ಬಂದರೆ
ಸಂಗಯ್ಯನ ತೇರು ಸುಖದಿಂದೆ ರಂಗಮಂಟಪಕ್ಕೆ ಸಾಗಿ,
ಧರೆಯಾಕಾಶ ತುಂಬಿದ ಪರಿಸೆ
ಹರಹರ ಶಿವಶಿವ ಜಯಜಯ ಚಾಂಗು ಭಲೆಯೆಂದು
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಓಲ್ಯಾಡುವ ಬನ್ನಿರಿ./134
ಅಯ್ಯಾ, ತನುವಿತ್ತು ಮಗನೆಂದು ಮಾಡುವೆನಲ್ಲದೆ
ಪ್ರಕೃತಿಗಿತ್ತೆನಾದರೆ ಕಷ್ಟದೊಳಗಿಕ್ಕು ದೇವ.
ಮನವಿತ್ತು ಮಗನೆಂದು ಮಾಡುವೆನಲ್ಲದೆ
ಪ್ರಕೃತಿಗಿತ್ತೆನಾದಡೆ ಕರ್ಮದೊಳಿಕ್ಕು ಲಿಂಗವೆ.
ಪ್ರಾಣವನಿತ್ತು ಮಗನೆಂದು ಮಾಡುವೆನಲ್ಲದೆ
ಪ್ರಕೃತಿಗಿತ್ತೆನಾದಡೆ ಮರಣದೊಳಿಕ್ಕು ಶಿವನೆ.
ಅಯ್ಯಾ, ಎನ್ನ ತನು ಮನ ಪ್ರಾಣವೇ ಗುರುಲಿಂಗಜಂಗಮ.
ಗುರುಲಿಂಗಜಂಗಮವೇ ಎನ್ನ ತನು ಮನ ಪ್ರಾಣ.
ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ./135
ಅಯ್ಯಾ, ತಮ್ಮಲ್ಲರಿಯದೆ ನಿಮ್ಮ ನೋಡುವರಯ್ಯಾ.
ತಮ್ಮಲ್ಲರಿಯದೆ ನಿಮಗೆ ಮಾಡುವರಯ್ಯಾ.
ತಮ್ಮಲ್ಲರಿಯದೆ ನಿಮ್ಮನು ಕೂಡಬೇಕೆಂದು ಆಯಾಸಬಡುವರಯ್ಯಾ.
ಇದನರಿದು ಭಿನ್ನವಳಿದು ಅಭಿನ್ನಭಕ್ತಿಯೊಳಾನಂದಮುಖನಾಗಿರ್ನೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./136
ಅಯ್ಯಾ, ತಾನೇ ತನ್ನವಿನೋದಕ್ಕೆ ತಂದು,
ತನ್ನಿಂದೆ ತನ್ನನಾರಾಧನೆಯ ಮಾಡಿ,
ಮರೆಯಾಗಿ ಮಾಜುವ ಮಹಾಂತರ ಕಂಡು,
ಮನವೊಂದುಕಡೆಗೆ ತನುವೊಂದುಕಡೆಗೆ ನುಡಿಯೊಂದುಕಡೆಗೆ ಮಾಡಿ
ವಂದನೆ ನಿಂದನೆಗಳ ನೆರೆದು ನಡೆವ ಪಶುಪ್ರಾಣಿಗಳಿಗೆ
ಕುಂಬಿನೀ ನಾಯಕನರಕ ಕಡೆಗಿಂಬು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./137
ಅಯ್ಯಾ, ನಾನು ಆಚಾರಲಿಂಗಜಂಗಮಕ್ಕೆ
ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ?
ಭಕ್ತಸ್ಥಲ ಎನಗಿಲ್ಲವಯ್ಯಾ.
ಗುರುಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ?
ಮಹೇಶ್ವರಸ್ಥಲವೆನಗಿಲ್ಲವಯ್ಯಾ.
ಶಿವಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ?
ಪ್ರಸಾದಿಸ್ಥಲವೆನಗಿಲ್ಲವಯ್ಯಾ.
ಜಂಗಮಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ?
ಪ್ರಾಣಲಿಂಗಿಸ್ಥಲವೆನಗಿಲ್ಲವಯ್ಯಾ.
ಪ್ರಸಾದಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ?
ಶರಣಸ್ಥಲವೆನಗಿಲ್ಲವಯ್ಯಾ.
ಇಂತು ಪಂಚಸ್ಥಲವನೊಳಗೊಂಡಿಪ್ಪ ಐಕ್ಯಸ್ಥಲದಲ್ಲಿ ನಿಂದು
ಪಂಚಲಿಂಗವನೊಳಗೊಂಡಿಪ್ಪ ಮಹಾಲಿಂಗಜಂಗಮಕ್ಕೆ
ಅಷ್ಟವಿಧಾರ್ಚನೆಯೊಳ್ವೆರೆದು ಮಾಡದ ಮುನ್ನವೇ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳೈಕ್ಯ./138
ಅಯ್ಯಾ, ನಾನು ಗುರುಭಕ್ತಿಯ ಮಾಡುವನಲ್ಲ.
ನಾನು ಲಿಂಗಭಕ್ತಿಯ ಮಾಡುವನಲ್ಲ.
ನಾನು ಜಂಗಮಭಕ್ತಿಯ ಮಾಡುವನಲ್ಲ.
ನಾನು ಪ್ರಸಾದಭಕ್ತಿಯ ಮಾಡುವನಲ್ಲ.
ನಾನು ಚತುರ್ವಿಧಸಾರಾಯ ಪ್ರಸಾದಕಾಣದ
ಗುರುನಿರಂಜನ ಚನ್ನಬಸವಲಿಂಗ
ಪ್ರಸಾದಕ್ಕಂಗವಾಗಿ ಅರಿಯದಿರ್ದೆ ಕಾಣಾ./139
ಅಯ್ಯಾ, ನಿನ್ನ ನಾಮಧ್ಯಾನಸುಖದಿಂದೆ ಮತ್ತೇನು ಅರಿಯೆನಯ್ಯಾ.
ಅದೇನು ಕಾರಣವೆಂದಡೆ, ಎನ್ನ ಹೃದಯದಲ್ಲಿ ನೆಲೆಸಿರ್ದು ಸಕಲನಿಃಕಲದಲ್ಲಿ
ಮಹದೈಶ್ವರ್ಯವಾಗಿ ಆನಂದಪ್ರಕಾಶಮಯವಾಗಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ ತೆರಹಿಲ್ಲದೆ
ಪರಿಣಾಮವ ತೋರುತಿರ್ಪುದು./140
ಅಯ್ಯಾ, ನಿನ್ನ ಬೆಳಗು ಅನಂತಕೋಟಿ
ಸೋಮ-ಸೂರ್ಯಾಗ್ನಿ ಬೆಳಗಿಂಗೆ ಮೀರಿಪ್ಪುದು.
ನಾ ನೋಡಲಾರೆ ಅಡ್ಡಬಂದು ಕೂಡಿಕೊ
ಅಪ್ರತಿಮ ನಿರಂಜನ ಚನ್ನಬಸವಲಿಂಗಾ./141
ಅಯ್ಯಾ, ನಿನ್ನ ಬೆಳಗುಯೆದ್ದು ನಿಂದಲ್ಲಿ
ಎನ್ನ ಸಂದುಸಂದಿನ ಬಂಧುಗಳೆಲ್ಲ ಬೆಂದುನಿಂದರು.
ಚಲುವಾಯಿತ್ತೆ ನಿನಗೆ, ಗೆಲುವಾಯಿತ್ತೆ ಎನಗೆ, ಬಲುವಾಯಿತ್ತೆ ಮುಂದೆ ಘನತೆ?
ಅರಿದು ಬಂದಾವರಿಸು ನಿರಂಜನ ಚನ್ನಬಸವಲಿಂಗಾ.
/142
ಅಯ್ಯಾ, ನಿನ್ನನು ಕಾಯವಿಡಿದು ಕಂಡು ಕೂಡೇನೆಂದರೆ ಕ್ರಿಯಾಗಮ್ಯ ಕಾಣಾ.
ಅಯ್ಯಾ, ನಿನ್ನನು ಮನವಿಡಿದು ಕಂಡು ಕೂಡೇನೆಂದರೆ ಜ್ಞಾನಗಮ್ಯ ಕಾಣಾ.
ಅಯ್ಯಾ, ನಿನ್ನನು ಭಾವವಿಡಿದು ಕಂಡು ಕೂಡೇನೆಂದರೆ ಭಾವಗಮ್ಯ ಕಾಣಾ.
ಇವು ಯಾತಕ್ಕೂ ಸಿಕ್ಕಬಾರದಿರುವ ಶ್ರುತಿಗುರುಸ್ವಾನುಭಾವದಿಂದರಿದು
ಕಾಯ ಮನ ಭಾವವನರಿಯದೆ ಕಂಡು ಕೂಡಿ ಅಗಲಿಕೆಯನರಿಯದೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಸುಖಿಯಾಗಿರ್ದೆನು./143
ಅಯ್ಯಾ, ನಿನ್ನನೊಂದುಮುಖದಲ್ಲಿ ಅರ್ಚಿಸುವೆನೆ ?
ಎನ್ನ ಶ್ರದ್ಭೆ ಆನಂದಭಕ್ತಿಯೊಳೊಡವೆರೆದುದಾಗಿ
ಭಕ್ತಿಸ್ಥಲವೆನಗಿಲ್ಲವಯ್ಯಾ.
ಮತ್ತೊಂದುಮುಖದಲ್ಲರ್ಚಿಸುವೆನೆ ?
ಎನ್ನ ನಿಷ್ಠೆ ಆನಂದಭಕ್ತಿಯೊಳೊಡವೆರೆದುದಾಗಿ
ಮಹೇಶ್ವರಸ್ಥಲವೆನಗಿಲ್ಲವಯ್ಯಾ.
ಮತ್ತೊಂದುಮುಖದಲ್ಲರ್ಚಿಸುವೆನೆ ?
ಎನ್ನ ಸಾವಧಾನ ಆನಂದಭಕ್ತಿಯೊಳೊಡವೆರೆದುದಾಗಿ
ಪ್ರಸಾದಿಸ್ಥಲವೆನಗಿಲ್ಲವಯ್ಯಾ.
ಮತ್ತೊಂದುಮುಖದಲ್ಲರ್ಚಿಸುವೆನೆ ?
ಎನ್ನ ಅನುಭಾವ ಆನಂದಭಕ್ತಿಯೊಳೊಡವೆರೆದುದಾಗಿ
ಪ್ರಾಣಲಿಂಗಿಸ್ಥಲವೆನಗಿಲ್ಲವಯ್ಯಾ.
ಮತ್ತೊಂದುಮುಖದಲ್ಲರ್ಚಿಸುವೆನೆ ?
ಎನ್ನ ಸಮರಸ ಆನಂದಭಕ್ತಿಯೊಳೊಡವೆರೆದುದಾಗಿ,
ಐಕ್ಯಸ್ಥಲವೆನಗಿಲ್ಲವಯ್ಯಾ.
ಗುರುನಿರಂಜನ ಚನ್ನಬಸವಲಿಂಗವನು
ಆಯಾಯಮುಖದಲ್ಲಿ ಎನ್ನ ಆನಂದದೊಳೊಡವೆರೆದು ಅರ್ಚಿಸಿ
ಪರಮಸುಖಿಯಾಗಿದ್ದೆನಯ್ಯಾ./144
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ಬಿಂದುವಿನ ಸುಳುಹಿಲ್ಲ ಕಾಣಾ.
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ನಾದದ ಸುಳುಹಿಲ್ಲ ಕಾಣಾ.
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ ಕಳೆಯ ಸುಳುಹಿಲ್ಲ ಕಾಣಾ.
ಅದೇನು ಕಾರಣವೆಂದಡೆ, ನಾದ ಬಿಂದು ಕಳೆ ಶಿವಕಳೆಯೊಳು ಬೆರೆದಿರ್ದವಾಗಿ.
ಎನ್ನ ನಡೆ ನುಡಿ ನಿಮ್ಮೊಳಗೆ ಅಡಗಿರ್ದವು ಕಾಣಾ
ಗುರುನಿರಂಜನ ಚನ್ನ ಬಸವಲಿಂಗಾ./145
ಅಯ್ಯಾ, ನಿಮ್ಮ ಕಾಯದನುವಿಡಿದಖಿಳಸುಖವ
ನಿಮ್ಮ ಲಾಂಛನಕ್ಕೀಯದೆ ಎನ್ನ ಪೂರ್ವಪ್ರಕೃತಿಗಿತ್ತೆನ್ನ ಸುಖವನರಿದೆನಾದರೆ
ಮುಂದೆ ಕಿಲ್ಬಿಷದಗತಿಯೆಂಬುದ ಬಲ್ಲೆನಯ್ಯಾ.
ಅಯ್ಯಾ, ನಿಮ್ಮ ಮನದನುವಿಡಿದಖಿಳಸುಖವ
ನಿಮ್ಮ ಲಾಂಛನಕ್ಕೀಯದೆ ಪೂರ್ವಪ್ರಕೃತಿಗಿತ್ತೆನ್ನ ಸುಖವನರಿದೆನಾದರೆ
ಮುಂದೆ ನರಕದಗತಿಯೆಂಬುದ ಬಲ್ಲೆನಯ್ಯಾ.
ಅಯ್ಯಾ. ನಿಮ್ಮ ಲಾಂಛನಕ್ಕೀಯದೆ ಪೂರ್ವಪ್ರಕೃತಿಗಿತ್ತೆನ್ನ ಸುಖವನರಿದೆನಾದರೆ
ಮುಂದೆ ವೈತರಣಿಗತಿಯೆಂಬುದ ಬಲ್ಲೆನಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮಾತ್ಮದಿ ಸಕಲತತ್ವಯುಕ್ತಸೌಖ್ಯವ ನಿಮಗೀಯದೆ ಸುಖಿಸಿದರೆ
ಅಘೋರನರಕವೆಂಬುದ ಕಂಡು ಕೇಳಿ ಮೊರೆಹೊಕ್ಕು ಮಾಡಿದೆನಯ್ಯಾ./146
ಅಯ್ಯಾ, ನಿಮ್ಮ ಬಸವಣ್ಣನನುಭಾವದ ಬೆಳಗೆನ್ನ ಇಷ್ಟಲಿಂಗ ಕಾಣಾ.
ಅಯ್ಯಾ, ನಿಮ್ಮ ಚನ್ನಬಸವಣ್ಣನನುಭಾವದ ಬೆಳಗೆನ್ನ ಪ್ರಾಣಲಿಂಗ ಕಾಣಾ.
ಅಯ್ಯಾ, ನಿಮ್ಮ ಪ್ರಭುದೇವರನುಭಾವದ ಬೆಳಗೆನ್ನ ಭಾವಲಿಂಗ ಕಾಣಾ.
ಅಯ್ಯಾ, ನಿಮ್ಮ ಸಕಲ ಪುರಾತನರನುಭಾವದ ಬೆಳಗೆನ್ನ ಸರ್ವಾಂಗದಲ್ಲಿ.
ಗುರುನಿರಂಜನ ಚನ್ನಬಸವಲಿಂಗಾ, ನೀನೇ ಕಾಣಾ
ಮತ್ತೊಂದ ಕರಣತ್ರಯದಲ್ಲಿ ಕಂಡೆನಾದಡೆ ನಿಮಗೆ ನಾನಂದೆ ದೂರ./147
ಅಯ್ಯಾ, ನಿಮ್ಮ ಬಿಂದುವಿನ ಕಳೆಯ ನೋಡಿಕೊಳ್ಳಿ,
ನಿಮ್ಮ ನಾದದ ಕಳೆಯ ನೋಡಿಕೊಳ್ಳಿ,
ನಿಮ್ಮ ಕಳೆಯ ಕಳೆಯ ನೋಡಿಕೊಳ್ಳಿ,
ನಾನು ಕದ್ದುಕೊಂಡು ಸೊಲ್ಲನೆಬ್ಬಿಸಿ ಅಲ್ಲದಾಟವನಾಡುವನಲ್ಲ.
ನಾ ಬಲ್ಲೆ ನೋಡಿಕೊಂಡು ಕೂಡು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಾವಧಾನಿ ಭಕ್ತ./148
ಅಯ್ಯಾ, ನಿಮ್ಮ ಭೃತ್ಯ ನಾನು, ನಿಮ್ಮನುಭಾವದಲ್ಲಿರ್ದು
ನಿಮ್ಮಿಂದನ್ಯವನಾಚರಿಸದಂತೆ
ಸತ್ಕ್ರಿಯಾನಂದಸ್ವರೂಪಕ್ಕೆ
ಎನ್ನ ಸರ್ವಾಂಗವನು ಸಮವೇದಿಸುವೆನು.
ನಿಮ್ಮಿಂದನ್ಯವ ನುಡಿಯದಂತೆ
ಸಮ್ಯಕ್ಜ್ಞಾನಾನಂದಸ್ವರೂಪಕ್ಕೆ
ಎನ್ನ ಮನ ಕರಣ ಸುಕೃತವಾಕ್ಯದಿಂದೆ ಕೂಡಿ
ಸ್ತೋತ್ರ ಮಂತ್ರ ಸನ್ನಿಹಿತನಾಗಿರ್ದೆನು.
ನಿಮ್ಮಿಂದನ್ಯವ ಭಾವಿಸದಂತೆ
ಎನ್ನ ಭಾವ ಭಾವ್ಯ ಭಾವಕವೆಂಬ ತ್ರಿಪುಟಿಯನು
ಸಚ್ಚಿದಾನಂದಸ್ವರೂಪಕ್ಕೆ ಮಹಾಧ್ಯಾನದೊಳೊಂದಿ
ಮುಗ್ಧಮುಖವಾಗಿರ್ದೆನು.
ಎನ್ನ ಮಹಾನುಭಾವ ಗುರುನಿರಂಜನ ಚನ್ನಬಸವಲಿಂಗವಾಗಿ
ಮುಂದಿರಿಸಿ ಭಕ್ತಿಯ ಮಾಡುವೆನು./149
ಅಯ್ಯಾ, ನಿಮ್ಮ ಶರಣ ಜನನಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಗುರುವಿನ ಕರಪದ್ಮದಲ್ಲಿ ಜನಿಸಿಬಂದವನಾಗಿ.
ಅಯ್ಯಾ, ನಿಮ್ಮ ಶರಣ ಜಾತಿಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಅನಾದಿಸಂಸಿದ್ಧನಿರಂಜನ ಶಿವಾಂಶಿಕ ತಾನಾಗಿ.
ಅಯ್ಯಾ, ನಿಮ್ಮ ಶರಣ ರಜಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಮಂತ್ರಮೂರುತಿ ಪರಮಪವಿತ್ರ ತಾನಾಗಿ.
ಅಯ್ಯಾ, ನಿಮ್ಮ ಶರಣ ಉಚ್ಫಿಷ್ಟ ಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಚರಣಜಲಶೇಷಸುಖಮಯನಾಗಿ.
ಅಯ್ಯಾ, ನಿಮ್ಮ ಶರಣ ಪ್ರೇತಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಲೀನವಾಗಿರ್ದನಾಗಿ./150
ಅಯ್ಯಾ, ನಿಮ್ಮ ಶರಣ ನಡೆವಲ್ಲಿ ಜಾಣನಯ್ಯಾ, ನುಡಿವಲ್ಲಿ ಜಾಣನಯ್ಯಾ,
ಹಿಡಿವಲ್ಲಿ ಜಾಣನಯ್ಯಾ, ಕಡಿದ ಸುಖವೊಂದಾಗುವನ್ನಬರ,
ಅದೆಂತೆಂದೊಡೆ, ಮೊಸರ ಕಡೆವ ನಾರಿಯು ನವನೀತ ಬರುವನ್ನಕ್ಕರ
ಹಿಡಿವಲ್ಲಿ ಜಾಣೆ, ಕಡೆವಲ್ಲಿ ಜಾಣೆ, ತಿಳಿವಲ್ಲಿ ಜಾಣೆ,
ಕೂಡಿ ಬಂದ ಬಳಿಕ ಕಾರ್ಯವಿಲ್ಲ ಕಾಣಾ ನಿಮ್ಮ ಶರಣಂಗೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ./151
ಅಯ್ಯಾ, ನಿಮ್ಮ ಶರಣಂಗೆ ಜ್ಞಾನಿಯೆಂಬರೆ ತಾಮಸವಿಲ್ಲ,
ತಾಮಸಿಯೆಂಬರೆ ಜ್ಞಾನವಿಲ್ಲ.
ಜ್ಞಾನಾಜ್ಞಾನದ ಕುರುಹರಿಯದ ನಿರಂಜನನ ನಿಲುವು ಅರಿಯಬೇಕೆಂಬರಿಗಸಾಧ್ಯ ;
ಅರಿಸಿಕೊಂಬರಿಗೆ ಅನುಮಾನ, ಅರಿದೆನೆಂಬರಿಗೆ ಅತ್ತತ್ತಲಾ
ಗುರುನಿರಂಜನ ಚನ್ನಬಸವಲಿಂಗದಂಗವಾಗಿದರ್ು ನಿಜಾನಂದ./152
ಅಯ್ಯಾ, ನಿಮ್ಮ ಶರಣರ ವೇಷವ ಹೊತ್ತು ನಡೆವರಯ್ಯಾ ಈ ಧರೆಯೊಳಗೆ,
ನಾವು ನಿಜೈಕ್ಯರೆಂದು ನುಡಿದುಕೊಂಬುವರಯ್ಯಾ ವಾಕ್ಪಟುತ್ವವನೆತ್ತಿ.
ಅಗಮ್ಯಜ್ಞಾನಿಗಳೆಂದು ಮೌನಗೊಂಡಿಪ್ಪರಯ್ಯಾ
ಮಲತ್ರಯದಲ್ಲಿ ಮನವ ಹುದುಗಿಸಿ.
ಇಂಥಿಾ ಗುಪ್ತಪಾತಕ ಅಜ್ಞಾನಿಗಳಿಗೆ ಕುಂಭಿನಿ ನಾಯಕನರಕ ತಪ್ಪದು ಕಾಣಾ,
ಗುರುನಿರಂಜನ ಚನ್ನಬಸವಲಿಂಗಾ./153
ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು
ಬೆರೆಸಿ ಹೇಳುವರು ಹಾದಿ ಹತ್ತಿಕೆಯ ನುಡಿಗಳ.
ಅದು ಎನಗೆಂದೂ ಸೊಗಸದು ಕಾಣಾ.
ಎನ್ನ ನಿಜರತ್ನಪ್ರಕಾಶ ನಿಮ್ಮ ಶರಣರ ವಚನ.
ಇವಕ್ಕೆ ಸಾಕ್ಷಿ ತಂದು ಹೇಳುವ ಭಾವವ ದಹಿಸಿ
ಭಸ್ಮವ ಮಾಡಿ ಧರಿಸಿರ್ದೆನಾಗಿ ಕಾಣಿಸದು.
ಶರಧಿಗೆ ತೊರೆಗಾವಲಿ, ಮೇರುವಿಗೆ ಮೊರಡಿ,
ಗಗನಕ್ಕೆ ಕೊಪ್ಪರಿಗೆ ತೋರಿದರೆ ಸರಿಯಪ್ಪುದೆ ?
ಆ ಕುರಿಗಳ ನುಡಿ ಅತ್ತಿರಲಿ, ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರ ನುಡಿಬೆಳಗನಗಲದಿರ್ದೆನು ನಿಮ್ಮೊಳಗೆ. /154
ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು
ಅದು ದಿಟವೆಂಬುದೇ ನಿಷ್ಠೆ: ದ್ವೈತಾದ್ವೈತ ಯೋಗ ಮಾಗರ್ಿಗಳಲ್ಲಿ.
ಅಯ್ಯಾ, ನಿಮ್ಮ ಪ್ರಮಥರೆನಗೆ ಜ್ಞಾನವಿಲ್ಲೆಂಬುವರು.
ಅದು ಸಹಜವೆಂಬುದೇ ನಿಷ್ಠೆ: ಅನಿತ್ಯ ನಿತ್ಯವೆಂಬುವ ಮನದಲ್ಲಿ.
ಅಯ್ಯಾ, ನಿಮ್ಮ ಭಕ್ತರು ಎನಗೆ ವೈರಾಗ್ಯವಿಲ್ಲೆಂಬುವರು
ಅದು ಬದ್ಧವೆಂಬುದೇ ನಿಷ್ಠೆ: ತನ್ನ ಸತ್ಕ್ರಿಯಾನುಕೂಲೆಯಾದ ಸತಿಸುತಾಲಯಂಗಳಲ್ಲಿ.
ಅಯ್ಯಾ, ನಿಮ್ಮ ಶರಣರಿದು ಸತ್ಯವೆಂಬುವರು, ಅದು ನಿತ್ಯವೆಂಬುದೆ ನಿಷ್ಠೆ:
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಂದಂತಿಪ್ಪುದು./155
ಅಯ್ಯಾ, ನಿಮ್ಮ ಶ್ರೀಪಾದಕ್ಕೆರಗಿದ ಕಾಯವು
ಮತ್ತೊಂದಕ್ಕೆರಗಬಾರದೆಂಬ ಭಾಷೆ
ಇದೇ ಎನ್ನ ಮಸ್ತಕಕ್ಕೆ ಹೇಮರತ್ನಕಿರೀಟವಯ್ಯಾ.
ನಿಮ್ಮ ಪೂಜಿಸಿದ ಕರವು ಅನ್ಯದೈವದರ್ಚನೆ
ಪರಧನಕಿಚ್ಫೈಸಬಾರದೆಂಬ ಭಾಷೆ
ಇದೇ ಎನ್ನ ಬೆರಳುಂಗರವಯ್ಯಾ.
ಅಯ್ಯಾ, ನಿಮಗೊಲಿದು ಸಕಲ ನಿಷ್ಕಲಸನುಮತವೀವ ಭಾವ
ವನಿತಾದಿಸಕಲಪ್ರಪಂಚಭ್ರಾಂತಿಯಲ್ಲಿ ಸುಳಿಸಬಾರದೆಂಬ ಭಾಷೆ
ಇದೇ ಎನ್ನ ಪ್ರಾಣಪದಕವಯ್ಯಾ.
ನಿಮ್ಮ ಗುರುಲಿಂಗಜಂಗಮವೇ ಎನ್ನಂಗ ಮನ ಪ್ರಾಣವೆಂಬ ಸಂಪತ್ತು
ಮಾಯಾಮೋಹ ವಿಷಯವೆಂಬ ದುಷ್ಟಕೃತಿಗನುಗೈಯಬಾರದೆಂಬ ಭಾಷೆ.
ಇದೇ ಎನ್ನ ಸರ್ವಾಭರಣಭೂಷಣವಯ್ಯಾ.
ಗುರುನಿರಂಜನ ಚನ್ನಬಸವಲಿಂಗವೆಂಬ ಭಾವ
ಇದೇ ಎನ್ನ ನಿಜವಯ್ಯಾ./156
ಅಯ್ಯಾ, ನಿಮ್ಮ ಸಮರಸದೊಳಗಣ
ಶ್ರದ್ಧೆಯಬೆಳಗಿನ ಸೊಬಗನಾರು ಬಲ್ಲರು ಹೇಳಾ !
ನಿಮ್ಮ ಸಮರಸದೊಳಗಣ ನೈಷ್ಠೆಬೆಳಗಿನ ಸೊಬಗನಾರು ಬಲ್ಲರು ಹೇಳಾ !
ನಿಮ್ಮ ಸಮರಸದೊಳಗಣ ಸಾವಧಾನಬೆಳಗಿನ ಸೊಬಗನಾರು ಬಲ್ಲರು ಹೇಳಾ !
ನಿಮ್ಮ ಸಮರಸದೊಳಗಣ ಅನುಭಾವಬೆಳಗಿನ ಸೊಬಗನಾರು ಬಲ್ಲರು ಹೇಳಾ !
ನಿಮ್ಮ ಸಮರಸದೊಳಗಣ ಆನಂದಬೆಳಗಿನ ಸೊಬಗನಾರು ಬಲ್ಲರು ಹೇಳಾ !
ನಿಮ್ಮ ಸಮರಸದೊಳಗಣ ಸಮಬೆಳಗಿನ ಸೊಬಗನಾರು ಬಲ್ಲರು ಹೇಳಾ !
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ನಿಜದೊಳಗಿಪ್ಪ ನಿಜೈಕ್ಯಂಗಲ್ಲದೆ ಅರಿಯಬಾರದು ಕಾಣಾ./157
ಅಯ್ಯಾ, ನಿಮ್ಮಂಗ ನಾನಾಗಿ ನಿನ್ನಿಂದೆ ಕಡೆಗಿಟ್ಟು
ಮಾಯೆಯ ಕಾವಲವ ಹೊಗಲೆನಗೆ ವಿಧಿಯೆ ?
ಅವಳ ಕಲ್ಪನೆಯೊಳೊಂದಿ ನಡೆಯಲೆನಗೆ ಅಭಾಗ್ಯವೆ ಹೇಳಾ !
ಅವಳ ಸಂಸಾರಸುಖವನರಿಯಲೆನಗೆ ದುರ್ಮರುಳವೆ ನೋಡಾ.
ಗುರುನಿರಂಜನ ಚನ್ನಬಸವಲಿಂಗಾ
ನೀವಿರ್ದಂತೆ ನಾನಿಪ್ಪೆ ನಿಮ್ಮೊಳಗೆನ್ನ ಮರೆದು./158
ಅಯ್ಯಾ, ನಿಮ್ಮೊಳಗಿರ್ದು ನಿಮ್ಮ ಮರೆದು
ಇತರವಾದಖಿಳವನೇನೆಂದರಿಯೆ ನೋಡಾ !
ಅಯ್ಯಾ, ನಿಮ್ಮೊಳಗಿರ್ದು ನಿಮಗೊಂದುವೇಳೆ
ವಿಶ್ವಾಸವನರಿಯೆ, ನಿಷ್ಠೆಯನರಿಯೆ,
ಸಾವಧಾನವನರಿಯೆ, ಅನುಭಾವವನರಿಯೆ,
ಆನಂದವನರಿಯೆ ಸಮರಸಸುಖಲೋಲುಪ್ತ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./159
ಅಯ್ಯಾ, ನೀ ಮಾಡಲಾಯಿತ್ತು ನಾನು ನೀನು.
ನೀ ಮಾಡಲಾಯಿತ್ತು ಶಿಷ್ಯ ಗುರು.
ನೀ ಮಾಡಲಾಯಿತ್ತು ಭಕ್ತ ಲಿಂಗ.
ನೀ ಮಾಡಲಾಯಿತ್ತು ಜಂಗಮ ಶರಣ.
ನೀ ಮಾಡಲಾಯಿತ್ತು ಷಟ್ಸ್ಥಲ ತ್ರಿವಿಧಸ್ಥಲ ಏಕೋತ್ತರಸ್ಥಲ.
ನೀ ಮಾಡಲಾಯಿತ್ತು ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರಸ್ಥಲ.
ನಿನ್ನ ಮಾಟ ನಿಂದಲ್ಲಿ ಸಕಲ ನಿಃಕಲದೊಳಡಗಿ
ನಿಃಕಲ ನಿರ್ವಯಲಾದ ನಿರುಪಮ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ನಾಮಶೂನ್ಯ./160
ಅಯ್ಯಾ, ನೆಲಜಲಾಗ್ನಿ ಮರುತಾಕಾಶವಿಲ್ಲದ
ಪಂಚವಣ್ಣಿಗೆಯ ಗರ್ದುಗೆಯ ಹಾಸಿ,
ಪಶ್ಚಿಮದತ್ತ ಸ್ವಾಚ್ಛಾಲಯದ ಸ್ವಯಾನಂದ ಮೂರುತಿಯ
ಎನ್ನರುವಿನಮುಖದಿಂದೆ ಕರೆತಂದು ಮೂರ್ತಿಗೊಳಿಸಿ,
ಸತ್ಯೋದಕದಿಂದೆ ಪಾದಾಭೀಷೇಕವ ಮಾಡಿ
ತ್ರಿಪುಟಿಯ ದಹಿಸಿ ಭಸಿತವ ಧರಿಸಿ, ಹೃದಯಕಮಲವನೆತ್ತಿ ಧರಿಸಿ,
ಶ್ರದ್ಧೆಧೂಪವರ್ಪಿಸಿ, ಸೋಹಂ ಎಂಬ ಚಾಮರ ಢಾಳಿಸಿ,
ಸುಜ್ಞಾನಜ್ಯೋತಿಯ ಬೆಳಗನೆತ್ತಿ
ಜಯ ಜಯ ಮಂಗಳವೆಂದು ಅರ್ಚಿಸುವೆನಯ್ಯಾ ಅನುದಿನ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಎನ್ನ ಪ್ರಾಣಲಿಂಗಕ್ಕೆ. /161
ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿಪರ್ುದು ನೋಡಾ !
ಜಲ-ಜಲಗಲ್ಲಿನ ಕೂಟದಂತೆ, ಮುತ್ತುಂಡ ನೀರಿನಂತೆ,
ಜ್ಯೋತಿಯೊಳರತ ತೈಲದಂತೆ ಇದರ್ುದು ಮಹದಂಗದ ನಿಲವು,
ನಿಶ್ಚಯವದು ಕಾಣಾ
ಮಹಾಘನ ಚನ್ನವೃಷಭೇಂದ್ರಲಿಂಗ./162
ಅಯ್ಯಾ, ಭಕ್ತಿವಿರಹಿತ ಗುರುವನರಿಯಬಾರದು.
ನಿಷ್ಠೆವಿರಹಿತ ಲಿಂಗವನರಿಯಬಾರದು.
ಸಾವಧಾನವಿರಹಿತ ಪ್ರಸಾದವನರಿಯಬಾರದು.
ಅನುಭಾವವಿರಹಿತ ಜಂಗಮವನರಿಯಬಾರದು.
ಆನಂದವಿರಹಿತ ಪಾದೋದಕವನರಿಯಬಾರದು.
ಸಮರಸವಿರಹಿತ ಮಹಾನುಭಾವಸಂಗವನರಿಯಬಾರದು.
ಇದು ಕಾರಣ, ಭಕ್ತಿಶೂನ್ಯನಾದಲ್ಲಿ ಭವದಿಂದತ್ತ ಕಾಣನು
ಗುರುನಿರಂಜನ ಚನ್ನಬಸವಲಿಂಗದ ನಿಜವ./163
ಅಯ್ಯಾ, ಮಹದಾನಂದ ಸದ್ಗುರುವಿತ್ತ,
ಪರಮಾಚಾರ ಪರಿಪೂಣರ್ೈಶ್ವರ್ಯವೆಂಬ ಪರಮರುದ್ರಾಕ್ಷಿಯ
ಎಂಟೇಳು ಮಣಿಮಾಲೆಯನು ಲಿಂಗಕ್ಕೆ ಧರಿಸಿ,
ಒಂಬತ್ತು ಮಣಿಮಾಲೆಯನು ಲಿಂಗಕ್ಕೆ ಧರಿಸಿ
ಲಿಂಗಭಕ್ತನಾದೆನಯ್ಯಾ.
ಒಂದೆಂಟು ಮಣಿಮಾಲೆಯ ಲಿಂಗಕ್ಕೆ ಧರಿಸಿ,
ಒಂದೆಂಟು ಮಣಿಯ ಆನು ಧರಿಸಿ ಲಿಂಗಮಹೇಶ್ವರನಾದೆನಯ್ಯಾ.
ಒಂದಾರು ಮಾಲೆಯ ಲಿಂಗಕ್ಕಿತ್ತು,
ಮೂರಾರು ಮಾಲೆಯ ಆನು ಧರಿಸಿ ಶಿವಪ್ರಸಾದಿಯಾದೆನಯ್ಯಾ.
ಒಂದು ನಾಲ್ಕು ಮಾಲೆಯ ಲಿಂಗಕ್ಕಿತ್ತು,
ಹನ್ನೆರಡು ಮಾಲೆಯ ಆನು ಧರಿಸಿ ಪ್ರಾಣಲಿಂಗಿಯಾದೆನಯ್ಯಾ.
ಒಂದು ಮೂರು ಮಾಲೆಯ ಲಿಂಗಕ್ಕಿತ್ತು,
ಆರು ಮೂರು ಮಾಲೆಯ ಆನು ಧರಿಸಿ ಶಿವಶರಣನಾದೆನಯ್ಯಾ.
ಒಂದು ಮೂರು ಮಾಲೆಯ ಲಿಂಗಕ್ಕಿತ್ತು,
ಮೂರು ಮೂರು ಮೂರು ಮಾಲೆಯ ಆನು ಧರಿಸಿ ಲಿಂಗೈಕ್ಯನಾದೆನಯ್ಯಾ.
ಇಂತು ಸರ್ವಾಂಗದಲ್ಲಿ ಧರಿಸಿ
ನಿರಂಜನ ಚನ್ನಬಸವಲಿಂಗಾಂಗಸ್ಥಲಕುಳವನರಿದು
ಸುಖಿಯಾಗಿರ್ದೆನಯ್ಯಾ./164
ಅಯ್ಯಾ, ಶರಣನೆಂದಡೆ ಸಕಲನಿಃಕಲಸನುಮತನು,
ಸತ್ತುಚಿತ್ತಾನಂದರೂಪನು, ಸರ್ವಕಳಾಭಾವಿತನು, ಷಟ್ಸ್ಥಲಾನುಭಾವಿ ಕಾಣಾ,
ಸತ್ಕ್ರಿಯಾ ಸಮ್ಯಕ್ಜ್ಞಾನಾನುಭಾವಿ,
ತ್ರಿವಿಧಲಿಂಗಾನುಭಾವಿ, ತ್ರಿವಿಧಾರ್ಪಣಾನುಭಾವಿ,
ಷಡ್ವಿಧಾರ್ಪಣಾನುಭಾವಿ,ಮಹಾಜ್ಞಾನಾನುಭಾವಿ,
ಪರಮ ಜ್ಞಾನಾನುಭಾವಿ ಜಂಗಮಲಿಂಗ ತಾನೇ ಕಾಣಾ
ಗುರುನಿರಂಜನ ಚನ್ನಬಸವಲಿಂಗ./165
ಅಯ್ಯಾ, ಶರಣಸ್ಥಲವ ಬಲ್ಲೆನೆಂಬರು,
ಬಲ್ಲತನ ಬರಿದಾಯಿತ್ತು.
ಕಾಯವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ?
ಕರಣವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ?
ಭಾವವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ?
ಈ ತ್ರಿವಿಧವುಳ್ಳವಂಗೆ ಶರಣಸ್ಥಲವುಂಟು.
ಇವು ನಾಸ್ತಿಯಾದರೆ ಶರಣಸ್ಥಲವಿಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./166
ಅಯ್ಯಾ, ಶ್ರದ್ಭಾಭಕ್ತಿಯೊಳಗೆ ಅನುಭಾವ ಬೆರಸಿದಲ್ಲಿ
ಆಚಾರಲಿಂಗದ ಬೆಳಗು ಎನ್ನ ಪೃಥ್ವಿತತ್ವದಲ್ಲಿ ಥಳಥಳಿಸುತ್ತಿಹುದು.
ಗುರುಲಿಂಗದ ಬೆಳಗೆನ್ನ ಅಪ್ಪುತತ್ವದಲ್ಲಿ ಥಳಥಳಿಸುತ್ತಿಹುದು.
ಶಿವಲಿಂಗದ ಬೆಳಗೆನ್ನ ಅಗ್ನಿತತ್ವದಲ್ಲಿ ಥಳಥಳಿಸುತ್ತಿಹುದು.
ಜಂಗಮಲಿಂಗದ ಬೆಳಗೆನ್ನ ವಾಯುತತ್ವದಲ್ಲಿ ಥಳದಳಿಸುತ್ತಿಹುದು.
ಪ್ರಸಾದಲಿಂಗದ ಬೆಳಗೆನ್ನ ಆಕಾಶತತ್ವದಲ್ಲಿ ಥಳಥಳಿಸುತ್ತಿಹುದು.
ಮಹಾಲಿಂಗದ ಬೆಳಗೆನ್ನ ಆತ್ಮತತ್ವದಲ್ಲಿ ಥಳಥಳಸುತ್ತಿಹುದು.
ಇದು ಕಾರಣ, ಸರ್ವಸಕಲತತ್ವದಲ್ಲಿಯೂ
ಗುರುನಿರಂಜನ ಚನ್ನಬಸವಲಿಂಗದ ಬೆಳಗು
ಎನ್ನ ಭಕ್ತಿ ಬೆಳಗಿನೊಳಗೆ ಥಳಥಳಿಸುತ್ತಿರ್ದುದು./167
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ
ಸರ್ವಕಲಾಭಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ
ಎನ್ನ ಭಾವದ ಕರಸ್ಥಲದಲ್ಲಿ ನಿಂದು,
ಭಾವ ತನುಮನಯುಕ್ತವಾದ
ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ.
ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ
ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ
ಎನ್ನ ಮನದ ಕರಸ್ಥಲದಲ್ಲಿ ನಿಂದು,
ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ.
ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ
ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ
ಎನ್ನ ಕಾಯದ ಕರಸ್ಥಲದಲ್ಲಿ ನಿಂದು,
ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ.
ಅಯ್ಯಾ, ನಿರಂಜನ ಚನ್ನಬಸವಲಿಂಗವ
ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತುಮಾಂಗ, ಅಮಳೊಕ್ಯದಲ್ಲಿ ಧರಿಸಿ
ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು./168
ಅಯ್ಯಾ, ಶ್ರೀಮಹಾವಿಭೂತಿಯಿಂದೆ
ಎನ್ನ ಕರ್ಮದ ಕತ್ತಲೆಯ ಕಳೆದು
ನಿರ್ಮಲಾಂಗನೆಂದೆನಿಸಿದೆ ನೋಡಾ.
ಅಯ್ಯಾ, ಶ್ರೀಮಹಾವಿಭೂತಿಯಿಂದೆ
ಎನ್ನ ಇಂದ್ರಿಯಗಮನವಳಿದು
ನಿರ್ಗಮನಿಯಾಗಿ ನಿಜಜಂಗಮವೆನಿಸಿದೆ ನೋಡಾ.
ಅಯ್ಯಾ, ಶ್ರೀಮಹಾವಿಭೂತಿಯಿಂದೆ
ಎನ್ನ ಕರಣವೃತ್ತಿಜ್ಞಾನವಳಿದು
ನಿಜ ಜ್ಞಾನವೆಂದೆನಿಸಿದೆ ನೋಡಾ.
ಅಯ್ಯಾ, ಶ್ರೀಮಹಾವಿಭೂತಿಯಿಂದೆ
ಸಕಲ ವಿಷಯಮೋಹಂಗಳಳಿದು
ನಿರ್ವಿಷಯ ನಿಜಮೋಹಿಯೆಂದೆನಿಸಿದೆ ನೋಡಾ.
ಅಯ್ಯಾ, ಶ್ರೀಮಹಾವಿಭೂತಿಯಿಂದೆ
ಅಪ್ರತಿಮ ಶರಣನೆಂದೆನಿಸಿದೆ ನೋಡಾ.
ನಿರಂಜನ ಚನ್ನಬಸವಲಿಂಗದವಿರಳ ಪ್ರಕಾಶವೆಂಬ
ಶ್ರೀಮಹಾವಿಭೂತಿಯಿಂದೆ ಸದ್ಯೋನ್ಮುಕ್ತನೆಂದೆನಿಸಿದೆ ನೋಡ./169
ಅಯ್ಯಾ, ಸತ್ಪ್ರಕಾಶವೆಂಬ ವಿಭೂತಿಯನರಿದರಿದು ಧರಿಸಿದೆನಾಗಿ
ಗಮನವಳಿದು ಗುರುವಾಣಿಜಾತನೆನಿಸಿದೆನು.
ಚಿತ್ಪ್ರಕಾಶವೆಂಬ ಭಸಿತವನರಿದರಿದು ಧರಿಸಿದೆನಾಗಿ
ಸ್ಥಿತಿಯಳಿದು ಲಿಂಗಸ್ಥಿತಿಯುಕ್ತನೆನಿಸಿದೆನು.
ಆನಂದಪ್ರಕಾಶವೆಂಬ ಭಸ್ಮವನರಿದರಿದು ಧರಿಸಿದೆನಾಗಿ
ಲಯಗೆಟ್ಟು ಜ್ಞಾನ ಜಂಗಮದಲ್ಲಿ ಲಯವೆನಿಸಿದೆನು.
ನಿತ್ಯಪ್ರಕಾಶವೆಂಬ ಕ್ಷಾರವನರಿದರಿದು ಧರಿಸಿದೆನಾಗಿ
ತಿರೋದಾನವಳಿದು ಶಿವಶರಣರಿಗೆ ದಿನದಿನಕ್ಕೆ ಶರಣೆಂದು
ಅನುಭಾವವನರಿದವನೆನಿಸಿದೆನು.
ಪರಿಪೂರ್ಣಪ್ರಕಾಶವೆಂಬ ಕ್ಷಾರವನರಿದರಿದು ಧರಿಸಿದೆನಾಗಿ
ಅನುಗ್ರಹಗೆಟ್ಟು ಗುರುಲಿಂಗಜಂಗಮದನುವಿಡಿದವಧರಿಸುತಿರ್ದವನೆನಿಸಿದೆನು.
ಇಂತು ಪಂಚಬ್ರಹ್ಮಪ್ರಕಾಶಯುಕ್ತವಾದ ಅಖಂಡಪ್ರಕಾಶದ
ಶ್ರೀ ವಿಭೂತಿಯನರಿದರಿದು ಧರಿಸಿದೆನಾಗಿ, ಪಂಚಕೃತ್ಯಂಗಳ ನಷ್ಟವ ಮಾಡಿ
ನಿರಂಜನ ಚನ್ನಬಸವಲಿಂಗಪ್ರಕಾಶವ ನಿತ್ಯಧರಿಸಿದವನೆನಿಸಿದೆನು./170
ಅಯ್ಯಾ, ಸದ್ರೂಪವಾದ ದೀಕ್ಷಾಗುರುವಿನ ಮುಖದಿಂದೊಗೆದ
ಇಷ್ಟಲಿಂಗವೆನ್ನ ಸತ್ಕ್ರೀಯಲ್ಲಿ ನಿಂದಿತ್ತು.
ಚಿದ್ರೂಪವಾದ ಶಿಕ್ಷಾಗುರುವಿನ ಮುಖದಿಂದೊಗೆದ
ಪ್ರಾಣಲಿಂಗವೆನ್ನ ಸುಜ್ಞಾನಕ್ರೀಯಲ್ಲಿ ನಿಂದಿತ್ತು.
ಆನಂದಸ್ವರೂಪವಾದ ಮೋಕ್ಷಗುರುವಿನಿಂದೊಗೆದ
ಭಾವಲಿಂಗವೆನ್ನ ಮಹಾಜ್ಞಾನಕ್ರೀಯಲ್ಲಿ ನಿಂದಿತ್ತು.
ನಿತ್ಯಪರಿಪೂರ್ಣ ಅಖಂಡ ನಿರಂಜನ ಚನ್ನಬಸವಲಿಂಗದ ಘನಕ್ಕೆ
ನಮೋ ನಮೋ ಎನುತಿರ್ದೆನು. /171
ಅಯ್ಯಾ, ಸೂರ್ಯನು ನಿತ್ಯ ಭೂಪ್ರದಕ್ಷಿಣೆಯಾದರೆ ಅದು ಚೋದ್ಯವಲ್ಲ.
ಚಂದ್ರನು ತಾರೆಗಳೊಡವೆರೆದು ತಿಥಿ ವತ್ಸರಾದಿ ಸಕಲವ ನಡಸಿ
ಕ್ಷೀಣ ಘನವಾಗಿ ತೋರಿದಡೆಯು ಅದು ಚೋದ್ಯವಲ್ಲ.
ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶದೊಳಗೆ
ತಮ್ಮ ತಮ್ಮ ಪರುಷಪಂಚಕವ ನಿರ್ಮಿಸಿದಡೆಯು ಅದು ಆಶ್ಚರ್ಯವಲ್ಲ.
ಮತ್ತಾವುದು ಆಶ್ಚರ್ಯವೆಂದೊಡೆ
ಗುರುನಿರಂಜನ ಚನ್ನಬಸವಲಿಂಗಾ ನೀವು ನಾಮ ಸೀಮೆಗೆ ತೋರಿ
ನಾಮ ನಿರ್ನಾಮ ನಿಸ್ಸೀಮ ನಿರ್ವಯಲಾದುದೇ ಘನಚೋದ್ಯ ಕಾಣಾ/172
ಅಯ್ಯಾ, ಸೊಸೆಯೆಂದರಿಯಬಾರದು, ಮಗಳೆಂದರಿಯಬಾರದು,
ಹಂಡೆತಿಯೆಂದರಿಯಬಾರದು, ತಾಯಿಯೆಂದರಿಯಬಾರದು ಇದೇನು ಹೇಳಾ ?
ಅಳಿಯನೆಂದರಿಯಬಾರದು, ಮಗನೆಂದರಿಯಬಾರದು,
ಮಾವನೆಂದರಿಯಬಾರದು, ತಂದೆಯೆಂದರಿಯಬಾರದು ಇದೇನು ಹೇಳಾ ?
ಹಾಳೂರ ಸುಟ್ಟು ಬಾಳುವೆಯ ಮಾಡಿ ಕುಲಗೆಟ್ಟು ಕೋಳುವೋದರು.
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮಂತೆ ನಿಮ್ಮಂಗದ ಮಹಿಮೆ./173
ಅಯ್ಯಾ, ಹಾದಿಯ ಮಾತಕೇಳಿ ಮೇದಿನಿಯಲ್ಲಿ ಉಳಿದರಯ್ಯಾ.
ಮೇಗಣ ಮಾತಕೇಳಿ ಮೂಕರಾಗಿ ಮುಂದೆಕಾಣಲಿಲ್ಲವಯ್ಯಾ.
ವಿದ್ಯಾಬುದ್ಧಿಯ ಕೇಳಿ ಆಗು ಹೋಗಿನೊಳಗಾದರಯ್ಯಾ.
ಇದನರಿದು ನಾದಬಿಂದುಕಳೆಯ ಹೊಳೆವ ಕುಳಕ್ಕಿಟ್ಟು ಮರೆದು
ಪರಿಣಾಮಿಯಾದೆ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ./174
ಅರಣ್ಯದೊಳಗಾದ ತಾವರೆಯಗಡ್ಡೆಯ ನೋಡಿ
ನೀರ ಹೊಯ್ಯಿರೊ ಚಿಕ್ಕಮಕ್ಕಳತಂದೆಗಳೆನಿಸುವರು.
ಎತ್ತಿದ ಕುಸುಮಗಳತ್ತ ಒಯ್ಯಲಿಬೇಡಿರಿ.
ತಲೆಯಲ್ಲಿ ಸೂಡಿದ ಗಂಧ ನಲಿನಲಿದು ಮೂಸಿದರೆ
ಬೆಚ್ಚಿಲ್ಲದ ಬೆಚ್ಚು ಅಚ್ಚೊತ್ತಿತ್ತಾಗಳೆ
ಗುರುನಿರಂಜನ ಚನ್ನಬಸವಲಿಂಗಾ./175
ಅರಸಿಕೊಂಡಾಗಿ ಬಂದಲ್ಲಿ ಅರಿದರಿದು ಮಾಡಬೇಕು ಕಾಯದ ಕ್ರಿಯೆಯಿಂದ
ಅರಿದರಿದು ಮಾಡಬೇಕು ಮನದ ಕ್ರಿಯೆಯಿಂದ,
ಅರಿದರಿದು ಮಾಡಬೇಕು ಭಾವದ ಕ್ರಿಯೆಯಿಂದ.
ಗುಣ ತ್ರಿವಿಧ ಈ ಭೇದವನರಿಯದೆ
ಒಂದು ಕುರುಹಿಂದೆ ಜರಿದು ಲಿಂಗದಲ್ಲುಂಟೆಂದು
ಗುರುವನುಳಿದು ಪರಿಪರಿಯ ಸೊಬಗನೋಲೈಸಿದರೇನು ?
ಬೇರುಕಿತ್ತೊಗೆದ ಮರದಂತೆ ಮುಂದೆಯಿಲ್ಲದೆ ವೃರ್ಥವಾಗುವದು.
ಕೆಟ್ಟುಬೀಳುವ ಸಂಗವನು ಬಿಟ್ಟುಕಳೆಯುವುದೇ ಸ್ಥಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./176
ಅರಸಿಕೊಂಡು ಬಂದ ಗಂಡನ ಸುಖ ಹೆಂಡತಿಯ ಮುಂದೆ,
ಹೆಂಡತಿಯ ಸುಖ ಗಂಡನೊಳಗೆ,
ಕಾಣಬಾರದ ಸೌಖ್ಯ ಕಾಣಲಾಯಿತ್ತು ಸತಿಯಿಂದೆ ಪತಿಗೆ ;
ಕೊಳ್ಳಬಾರದ ಸೌಖ್ಯ ಕೊಳ್ಳಲಾಯಿತ್ತು ಪತಿಯಿಂದೆ ಸತಿಗೆ.
ಸತಿಪತಿಸಂಯೋಗದಲ್ಲಿ ಪತಿಯ ಸತಿನುಂಗಿ,
ಸತಿಯು ಪತಿಯಾಗಿ ಪತಿ ಅಳಿದು
ಗುರುನಿರಂಜನ ಚನ್ನಬಸವಲಿಂಗವೆಂಬ ನಾಮನಿರ್ನಾಮವಾಯಿತ್ತು./177
ಅರಿದ ಶರಣ ಮರೆದು ಮಾಡುವನಲ್ಲ,
ಮಾಟದ ಕಳೆ ಅಳಿದಿರ್ದುದಾಗಿ.
ಹಿಡಿದ ಶರಣ ಹರಿದು ನೋಡುವನಲ್ಲ,
ನೋಟದ ಜ್ವಾಲೆ ದೂಟಿಸಿರ್ದುದಾಗಿ.
ಮಾಟ ನೋಟ ಕೂಟವ ಒಳಹೊರಗಾಡುವ
ಗುರುನಿರಂಜನ ಚನ್ನಬಸವಲಿಂಗಕ್ಕೆ ಸತಿಯೆಂದು./178
ಅರಿದು ಅರಿದವನಲ್ಲ ಅರಿದುಕೊಳ್ಳಿ,
ಮರೆದು ಮರೆದವನಲ್ಲ ಕರೆದುಕೊಳ್ಳಿ.
ಬರಿದೆ ಬಂದವನಲ್ಲ ಬಂದುಕೊಳ್ಳಿ.
ನಾಳೆಂಬ ಬಾಳುವೆಯನರಿಯದಿರ್ದೆ,
ಸುಳಿದುಬಂದೆನ್ನ ಸುಖವ ಕೊಳ್ಳಿ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಒಕ್ಕುದ ಕೊಡಿ./179
ಅರಿದು ಒಂದಾದ ಶರಣಂಗೆ ಹಿರಿದು ಕಿರಿದೆಂದು
ಹರಿದು ಹಾಕಿದರೆ ಒಂದನೆಯ ಪಾತಕ.
ತನುಮನ ಧನವೆಲ್ಲವನೊಪ್ಪಿಸಿ ಅನುವಿಡಿದಾಚರಿಸುವ
ಸನುಮತಕ್ಕೆ ವಿಮುಖರಾದರೆ ಎರಡನೆಯ ಪಾತಕ.
ಆ ಗುರುವರನ ಕರಮನಭಾವದಲ್ಲಿರಿಸಿ ಮೆರೆವ ಮಹಾಂತಗತಿಯುಳ್ಳ ಮಹಿಮಂಗೆ
ಉದರಾಗ್ನಿವೆರೆದು ಒಂದು ವಿಷಯಕೆ ಜರಿದರೆ ಮೂರನೆಯ ಪಾತಕ.
ನಿಜಗುರುವಾಗ್ನೆ ನೆಲೆಗೊಂಡು ಹುಸಿಮಾತುಮಥನವ ಮರೆದಿರುವ ಘನತೆಯನು
ಬಿನುಗುಕೋಟಲೆಗೆಳಸಿ ಕಾಡುವುದು ನಾಲ್ಕನೆಯ ಪಾತಕ.
ತಾನಿಲ್ಲದೆ ಮಾಡುವ ಕುರುಹಿನ ತನುಮನಪ್ರಾಣವ ಘಾಸಿಮಾಡಿ
ಧನದಾಸೆಯಲ್ಲಿ ಮುಳುಗಿ ಸೆಳೆಸೆಳೆದು ನೋಯಿಸುವುದು ಐದನೆಯ ಪಾತಕ.
ಇಂತೀ ಪಂಚಮಹಾಪಾತಕ ಪ್ರಾಣಿಗೆ ದೊರೆನರಕವಲ್ಲದೆ,
ಗುರುತನ ಸಲ್ಲದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ. /180
ಅರಿದು ಬಂದು ಒಂದೇ ವೇಳೆ ಮರೆದು ಹೆಜ್ಜೆಯನೆಣಿಸುವ ಭಂಗವ ನೋಡಾ.
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ
ಸಿನಿಹಾಳು ಅನಿಲವನೊಲ್ಲದಿರ್ದನು ನಮ್ಮ ಐವರ್ಣಸಂಜ್ಞೆದೇವ./181
ಅರಿದು ಮರೆದವನಲ್ಲ, ಮರೆದು ಅರಿದವನಲ್ಲ,
ಅರಿವು ಮರೆವು ಹಿಡಿದು ಚರಿಸಿದವನಲ್ಲ, ಗಗನ ಧರೆಹಿರಿಯರ ನೆರವಿಯವನಲ್ಲ.
ಪರಮ ಪರಿಣಾಮಿ ನಿರಂತರ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./182
ಅರಿದೆನೆಂಬ ಅರಿವಿಂಗೆ ಅರಿಯಬಾರದ ಅವಿರಳ ಲಿಂಗವ
ಕರ ಕಕ್ಷ ಉರ ಸಜ್ಜೆ ಉತ್ತುಮಾಂಗ ಮುಖಪೀಠವಮಳೋಕ್ಯವೆಂಬಾರಂಗ
ಸಂಗಸಮರಸದಲ್ಲಿಪ್ಪ ಪರಮ ಶರಣಂಗೆ
ನರನೆಂಬ ನಾಯಮನುಜರನೇನೆಂಬೆನಯ್ಯಾ.
ನಿರವಯಗಮಿತರಂತಿರಲಿ ; ಪರಶಿವನಂಗದಲ್ಲುದಯವಾದ ಶರಣಂಗೆ
ಪರಶಿವನೆನ್ನ ಬೇಕಲ್ಲದೆ ಅಂತಿತೆನ್ನಬಾರದು ಕಾಣಾ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./183
ಅರಿಯದೆ ಆಗಿ ಬಂದವರೆನಲಾಗದು, ಆದವರಿಗೆ ಮನಬಾಧೆಯುಂಟೆ ?
ಅದೇಕೆಂದಡೆ, ಶರಣುಹಾಕಿ ಬಂದಲ್ಲಿ ನಿರ್ಮಳ ಮಾತನಾಡುವರು.
ಹಾಕದೆ ಬಂದು ಮಾತನಿಟ್ಟರೆ ಪೂರ್ವದ ಹಗೆಭಾವದುಲುವ ತೋರುವರು.
ಕೊಡಲಿಲ್ಲ ಕೊಳ್ಳಲಿಲ್ಲ ತುಡುಗುಣಿತನದ ಬಡಿವಾರವ ನೋಡಾ.
ಇಂತಲ್ಲ ಶರಣ, ಲೋಕರವಿಯಂತಿಪ್ಪ
ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ./184
ಅರಿಯಬಲ್ಲ ಹಿರಿಯರೆಂದು
ನೋಡಿಕೊಡುವರಯ್ಯಾ ಅಜ್ಞಾನಿಗಳು.
ಲಿಂಗವಬಲ್ಲ ಸಂಗವಿರಹಿತರೆಂದು
ಮುಟ್ಟಿಕೊಡುವರಯ್ಯಾ ಅಂಗಹೀನರು.
ಜಂಗಮಾರ್ಪಿತವಬಲ್ಲ ಜಗದಾರಾಧ್ಯರೆಂದು
ಸವಿದುಕೊಡುವರಯ್ಯಾ ಜಿಹ್ವೆಲಂಪಟರು.
ಪ್ರಸಾದವಬಲ್ಲ ಪ್ರಸಾದಿಗಳೆಂದು
ಕೇಳಿಕೊಡುವರಯ್ಯಾ ಶಬ್ದಹೀನರು.
ಸಾವಧಾನಭಕ್ತಿಯ ವಾಸನೆಯ ಬಲ್ಲವರೆಂದು
ಸೇವಿಸಿಕೊಡುವರಯ್ಯಾ ಮೂಕೊರೆಯರು.
ಮಹಾತೃಪ್ತಿಯ ಬಲ್ಲ ಸದುಹೃದಯರೆಂದು
ಪರಿಣಾಮಿಸಿಕೊಡುವರಯ್ಯಾ ಅಂತಃಶೂನ್ಯರು.
ಗುರುನಿರಂಜನ ಚನ್ನಬಸವಲಿಂಗದ ನಿಜವನರಿಯದೆ
ವಾಗ್ಭ್ರಹ್ಮವ ನುಡಿವರಯ್ಯಾ ಉಚ್ಛಿಷ್ಟಭುಂಜಕರು. /185
ಅರಿಯಬಾರದ ಅರಿವು ಅಂಗವಾದಲ್ಲಿ
ಆಟವೆನ್ನೆ ನೋಟವೆನ್ನೆ ಕೂಟದಸುಖ ತಲೆಗೇರಿತ್ತಾಗಿ,
ಗುರುನಿರಂಜನ ಚನ್ನಬಸವಲಿಂಗದೊಳಗಿರ್ದು ಲಿಂಗವೆನ್ನೆ./186
ಅರಿಯಬಾರದ ಘನವನರಿವ ಪರಿಯೆಂತು ಹೇಳಾ !
ಕುರುಹಿಟ್ಟು ಕೂಡುವರ ಕಾಣೆ ಮೂರುಲೋಕದೊಳಗೆ.
ಅರಿಯಬಾರದುದನರಿದು, ಹರಿಯಬಾರದುದ ಹರಿದು,
ಮರೆಯಬಾರದುದ ಮರೆದು ನೆರೆಯಬಾರದುದ ನೆರೆದು
ನಿಜವಾದರು ನಿಮ್ಮ ಶರಣರು
ಗುರುನಿರಂಜನ ಚನ್ನಬಸವಲಿಂಗಾ.
/187
ಅರಿಯಬಾರದ ನೋಡಬಾರದ ಕೂಡಬಾರದ
ಅಗಲಬಾರದ ಅವಿರಳಲಿಂಗವನು,
ಅಂಗ ಮನ ಭಾವದಲ್ಲರಿದ ಅನುಪಮ ಶರಣನ ನಾಸಿಕದಲ್ಲಿ
ಬೆಳಗು ನಿಂದು ವಾಸನೆಯನರಿಯದು.
ಜಿಹ್ವೆಯಲಿ ಬೆಳಗು ನಿಂದು ರುಚಿಯನರಿಯದು.
ನೇತ್ರದಲ್ಲಿ ಬೆಳಗು ನಿಂದು ರೂಪವನರಿಯದು.
ತ್ವಕ್ಕಿನಲ್ಲಿ ಬೆಳಗು ನಿಂದು ಸ್ಪರ್ಶವನನರಿಯದು.
ಶ್ರೋತ್ರದಲ್ಲಿ ಬೆಳಗು ನಿಂದು ಶಬ್ದವನರಿಯದು.
ಹೃದಯದಲ್ಲಿ ಬೆಳಗು ನಿಂದು ಇನ್ನೊಂದರ ಸುಖವನರಿಯದು.
ಗುರುನಿರಂಜನ ಚನ್ನಬಸವಲಿಂಗದ ಬೆಳಗು ತನ್ನ ಸರ್ವಾಂಗದಲ್ಲಿ ನಿಂದು
ತ್ರಿಪುಟಿಶೂನ್ಯನಾಗಿರ್ದ ಕಾಣಾ./188
ಅರಿಯಬಾರದ ಸ್ನೇಹವ ಹೂಡಿ ಅಗಲಬಾರದ ಆಟದೊಳಗೆ
ಅತಿಶಯವರಿದು ಮರೆದು ನಿಂದ ನಿವಾತಜ್ಯೋತಿಯಂತೆ
ಗುರುನಿರಂಜನ ಚನ್ನಬಸವಲಿಂಗದೊಳಗೊಪ್ಪುತ
ಲಿಂಗೈಕ್ಯವನರಿಯದಿರ್ದನು./189
ಅರಿಯಲಿಲ್ಲದ ಅರಿವಿಂಗೆ ಬರಸೆಳೆದು ಕೊಟ್ಟನೊಂದು ಲಕ್ಷವನು.
ಹಿರಿಯ ಮಾರ್ಗದಲ್ಲಿ ನಿಂದು ಹಗಲಿರುಳು ವ್ಯಾಪಾರ ನಡೆವಲ್ಲಿ,
ಸುಂಕಿಗರೈತಂದು ನೋಡಲು ಕಾಡದ ಮುನ್ನ
ಲೆಕ್ಕವ ಕೊಟ್ಟು ಕೌಲು ಕೊಂಡಲ್ಲಿ ಮೂಲದ್ರವ್ಯ ಮುಳುಗಿತ್ತು.
ಹೇಳಲಿಲ್ಲ ಕೇಳಲಿಲ್ಲ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಗಂಬಿರ ನಿಮ್ಮ ಮಹೇಶ್ವರ./190
ಅರಿಯಲಿಲ್ಲದ ಅರಿವು ಎನ್ನಲ್ಲಿ ತೋರಿತ್ತಾಗಿ
ಧರೆ ಮೊದಲಖಿಳವನಳಿದುಳಿದ ಅಮಲಮೂರುತಿಯ ಕಂಡೆ.
ಆ ಮೂರುತಿಯಿಂದೆ ಅನಂತ ಮನುಮುನಿಗಳ
ಅರಿತಕ್ಕಗೋಚರವಾದ ಅನಾಮಯಮೂರುತಿಯ ಕಂಡೆ.
ಆ ಮೂರುತಿಯನೆನ್ನ ಕರದೊಳು ಧರಿಸಿಕೊಂಡು
ಅಗಣಿತಮಹಿಮನಾದೆನು ಕಾಣಾ
ನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ./191
ಅರಿಯಲಿಲ್ಲದ ಬೆಳಗ ಅರಿದುಕಂಡೆನು ಎನ್ನ ಕಂಗಳ ಮುಂದೆ.
ಮರೆಯಲಿಲ್ಲದ ಬೆಳಗ ಮರೆದುಕಂಡೆನು ಎನ್ನ ಮನದ ಮುಂದೆ.
ಕರೆದು ಕಳುಹಲಿಲ್ಲದ ಬೆಳಗ ಕಳುಹಿ ಕರೆಯದೆ ಕಂಡೆನು ಎನ್ನ ಭಾವದ ಮುಂದೆ.
ಕಾರ್ಯಕಾರಣವಿರಹಿತ ಗುರುನಿರಂಜನ ಚನ್ನಬಸವಲಿಂಗವೆಂಬ ಬೆಳಗ
ಕಾರ್ಯಕಾರಣದಿಂದೆ ಕಂಡೆನು. /192
ಅರಿಯಲಿಲ್ಲದ ಮರೆಯಲಿಲ್ಲದ ಕೂಡಲಿಲ್ಲದ ಶರಣನ
ನಡತೆ ಹಿಡಿತೆ ಬಿಡಿತೆಗಳನರಿಯದೆ,
ಅರಿದು ಮರೆದು ನೆರೆದ ಅಂಧಕರು
ತಾವೊಂದು ಮರೆಯಲ್ಲಿ ಬಲ್ಲಂತೆ ಆಡುವರಯ್ಯಾ.
ಅದು ಸಹಜವೇ? ಅಲ್ಲ.
ಸೂರ್ಯ ಮೇಘದಲ್ಲಿ ಸಿಕ್ಕಿದನೆಂದಡೆ ನಿಜವೆನ್ನಲುಂಟೆ?
ಬರಿದೆ ಕೇಡ ನುಡಿದರೆ ಸುರಿಯವೇ ಬಾಯಲ್ಲಿ ದುಷ್ಕ್ರಿಮಿಗಳು.
ಈ ದುರಾಚಾರಿಗಳನೆನಗೊಮ್ಮೆ ತೋರದಿರಾ
ಗುರುನಿರಂಜನ ಚನ್ನಬಸವಲಿಂಗ./193
ಅರುವ ಮರೆದು ತಿರುಗುವ ಕುರಿಗಳಿಗಿನ್ನೆತ್ತಣ ಶರಣಪದವಯ್ಯಾ.
ಬರಿಮಾತಿನಿಂ ಮೆರೆದು ಸೂತಕ ಪಾತಕದಲ್ಲಿ ಹರಿವ
ಹಲವು ಕುಟಿಲಬುದ್ಧಿಯ ಮುಖವಾಗಿರುವ ದುಶ್ಚಲರಿಗೆ
ನಿಶ್ಚಲ ನಿರ್ಮಾಯ ನಿರುಪಮ ಶರಣಪದವೆಂತು ಎನ್ನಬಹುದು
ಗುರುನಿರಂಜನ ಚನ್ನಬಸವಲಿಂಗಾ./194
ಅರುವಿನ ಮಂದಿರದೊಳಡಗಿರ್ದ
ಅಜಗಣ್ಣ ಮೂರುತಿಯ ಮೂಜಗದ ಮೇಲೆ ಸ್ಥಾಪಿಸಿ,
ಗಜಬಜೆಯ ಬೆಳಗ ಹರಹಿದಲ್ಲಿ ಶ್ರದ್ಧೆಯೆಡೆಗೊಂಡಿತ್ತು,
ನಿಷ್ಠೆಯಾವರಿಸಿತ್ತು, ಸಾವಧಾನ ಸಮವೇದಿಸಿತ್ತು,
ಅನುಭಾವ ಮುಸುಗಿತ್ತು, ಆನಂದ ತಲೆದೋರಿತ್ತು.
ಸಮರಸದಲ್ಲಿ ನಿಂದು ಪರವಶನಾದಲ್ಲಿ
ಮುಂದೆ ಗುರುನಿರಂಜನ ಚನ್ನಬಸವಲಿಂಗವೆನ್ನ ಕೈಪಿಡಿದ
ಮಹಾಲಿಂಗವಾಗಿ./195
ಅರೆಮರುಳಿನಿಂದಾದ ಕುರುಹಿಂಗೆ ನೆರೆಮರುಳಾಗಿ ನರಳಿತ್ತು
ಮೂರುಲೋಕವೆಲ್ಲ.
ಸಿರಿವಲ್ಲಭ ಶಿರಹೀನ ಕರಶೂಲರಾದಿ ಸರ್ವರು ಕರ್ಮಕ್ಕೊಳಗಾದರು.
ಪರಿಪರಿಯ ಪರಿಗಳನರಿಯದೆ ಹಿರಿದೆಂದರಿದಲ್ಲಿ
ಪರಮ ಗುರುನಿರಂಜನ ಚನ್ನಬಸವಲಿಂಗವ
ನೆರೆದುನೆರೆಯದಂತಿರ್ದ ಶರಣ./196
ಅರ್ಥ ಪ್ರಾಣ ಅಭಿಮಾನ ನಾಸ್ತಿಯಾದಲ್ಲಿ
ಕಿಚ್ಚುಗೊಂಡು ಮುಗ್ಧರಾದರು ಅನಂತರು.
ಪರಧನ ಪರಸ್ತ್ರೀ ಪರಹಿಂಸೆಗೆಳಸಿ ಬಾಧೆಗೆ ಸಿಲ್ಕಿ ಮುಗ್ಧರಾದರಖಿಳರು.
ಅನಿಷ್ಟವೆರಸಿ ಅಧಿಕರೋಗವೆಡೆಗೊಂಡಲ್ಲಿ ಮುಗ್ಧರು.
ಆಯಾಯ ಕಾಲಕ್ಕೆ ಅಲ್ಲಲ್ಲಿಗೆ ಮುಗ್ಧರಲ್ಲದೆ ನಿತ್ಯಮುಗ್ಧರಲ್ಲ.
ಇದು ಕಾರಣ, ಲಿಂಗಶರಣನಿಂತಲ್ಲ.
ಕಾಯದಲ್ಲಿ ಮುಗ್ಧ, ಕರಣದಲ್ಲಿ ಮುಗ್ಧ,
ಪ್ರಾಣದಲ್ಲಿ ಮುಗ್ಧ, ಭಾವದಲ್ಲಿ ಮುಗ್ಧ,
ಗುರುನಿರಂಜನ ಚನ್ನಬಸವಲಿಂಗ ಸಮರಸವಾಗಿ./197
ಅರ್ಥ ಪ್ರಾಣ ಅಭಿಮಾನದೊಳಣುಮಾತ್ರವಿಲ್ಲದೆ
ಮಾಡುವ ಭಕ್ತನಂಗಳ ಪಾವನಕ್ಷೇತ್ರ.
ಆತನ ಮಂದಿರ ಶಿವನಮನೆ.
ಆತನೊಡನೆ ದರ್ಶನ ಸ್ಪರ್ಶನ ಸಂಭಾಷಣೆ ಮಾಡಿದ ಸಜ್ಜನರೆಲ್ಲ
ಅಮರಗಣ ಮನು ಮುನಿಗಳು.
ಆ ಮಹಾಪುರುಷನೇ ಸಾಕ್ಷಾತ್ ಪರಮೇಶನೆಂಬೆನಯ್ಯಾ.
ಅದಲ್ಲದೆ ಹೊನ್ನು, ಹೆಣ್ಣು, ಮಣ್ಣುಗಳ ಮೋಹವೇ ಪ್ರಾಣವಾಗಿ
ಚನ್ನಗುರುಲಿಂಗಜಂಗಮವೇ ಅನ್ಯವಾಗಿ
ದಂಡಕ್ಕನುಗೈದ ರಾಜನ ದರ್ಶನದಂತೆ
ಮುಖವನಡಗಿಸಿಕೊಂಬ ದ್ರೋಹಿಗಳ
ತೆರಹಿಲ್ಲದೆ ನರಕವನುಂಡು ಕಡೆಗಾಣದ ಸೊಣಗರೆಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./198
ಅರ್ಪಿತ ದಷ್ಟಗೊಂಡು ಅವಿರಳವಾಗಿದರ್ಿತ್ತು ಬಹಿರಂಗ,
ಬಹಿರಂಗ ಬಳಕೆಯೊಳಗಾಗಿ ನಿರಾಳವಾಯಿತ್ತು ಅಂತರಂಗ,
ಈ ಉಭಯದಷ್ಟ ತಲೆಗೊಂಡು ನಿರಂಜನವಾಯಿತ್ತು ಚೈತನ್ಯ.
ಈ ತ್ರಿವಿಧವ ಭಾವಿಸಿ ನಿಂದಲ್ಲಿ ಪ್ರಸಾದಂಗ ಪರಿಪೂರ್ಣ ತಾನೆ
ಚೆಲುವ ಶುದ್ಧ ಸಿದ್ಧ ಪ್ರಸಿದ್ಧ ಪ್ರಭುಲಿಂಗವು./199
ಅರ್ಪಿತತ್ರಯದನುವರಿಯದಂಗ ಕಡೆಗಾಣದ ಭಂಗ.
ಮುಂದೆ ಕಾಂಬುವುದು ಬಹುತೆರದಂಗ ನೋಡಾ.
ಈ ಸೋಂಕಾಂಕನ ಮಾಟ ಸುಲಲಿತ ಕಾರ್ಯಕ್ಕೆ ಸಲ್ಲದು.
ಮಾಯಾನುಕೂಲಿ ಪ್ರೇಮಭಾವಕ್ಕೆ ಬಾಧೆಯನುಳಿದು ಬೋಧಾಂಗವಿಲ್ಲ.
ಆ ಅಂಗವನೊಲ್ಲದಿರ್ದನು ಚಿದಂಗಸುಖಮುಖಿಯಾಗಿ
ನಮ್ಮ ಶುದ್ಧಸಿದ್ಧಪ್ರಸಿದ್ಧಪ್ರಭುಲಿಂಗವು./200
ಅರ್ಪಿತವನರಿಯದ ಕಾಯಾರ್ಪಿತ ಕರ್ಮದಬೀಜ.
ಅರ್ಪಿತವನರಿಯದ ಕರಣಾರ್ಪಿತ ದುಃಖದಾಗರ.
ಅರ್ಪಿತವನರಿಯದ ಭಾವಾರ್ಪಿತ ಭವದ ಬೀಡು.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಅರ್ಪಿತವನರಿದು ಅರ್ಪಿಸಿಕೊಂಬ ಪರಮಪ್ರಸಾದಿ./201
ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ
ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ.
ಅರ್ಪಿತ ಪ್ರಾಣದಮೇಲಿಪ್ಪ ಅವಿರಳಲಿಂಗಕ್ಕೆ
ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ,
ಅರ್ಪಿತ ಭಾವದಮೇಲಿಪ್ಪ ಅಭಿನ್ನ ಲಿಂಗಕ್ಕೆ
ಅರ್ಪಿತವನರ್ಪಿಸಿ [ಆನಂದಿಸಿ] ಕೊಂಬುವನಯ್ಯ ತನ್ನ ವಿನೋದಕ್ಕೆ.
ಅರ್ಪಿಸಿಕೊಂಡಿಪ್ಪ ಗುರುನಿರಂಜನ ಚನ್ನಬಸವಲಿಂಗಕ್ಕೆ
ಅರ್ಪಿತವನರ್ಪಿತವಾಗಿರ್ಪನಯ್ಯ ತನ್ನ ವಿನೋದಕ್ಕೆ ನಿಮ್ಮ ಪ್ರಸಾದಿ./202
ಅರ್ಪಿಸಿಕೊಂಡಿಹೆನೆಂದು ಹುಸಿಯನೆ ತುಂಬುವರು;
ಅರ್ಪಿಸಿದೆನೆಂಬುದು ಹುಸಿ.
ಲಿಂಗವೆಲ್ಲಿಹದೊ? ಅಂಗವೆಲ್ಲಿಹದೊ? ಪದಾರ್ಥವೆಲ್ಲಿಹದೊ?
ಲಿಂಗಾಂಗಪದಾರ್ಥವನರಿದರ್ಪಿಸಬಲ್ಲಾತಂಗಲ್ಲದೆ
ಗುರುನಿರಂಜನ ಚನ್ನಬಸವಲಿಂಗಾ ನಿಜಪ್ರಸಾದವೆಲ್ಲರಿಗೆಲ್ಲಿಹದೊ?/203
ಅಲಕ್ಷ ಅನಾಮಯ ಅಖಂಡ ನಿಲವು ಲಕ್ಷಕ್ಕೆ ಬಂದು ನಿಂದಲ್ಲಿ
ನಿರ್ಗಮನ ನಿರ್ಮಾಯ ನಿಸ್ಸೀಮದಿರವು ಸೀಮೆಗೊಂಡಿತ್ತು ನೋಡಾ.
ಕಣ್ಣಿಗೆ ನಿಲುಕದಾಟ, ಹಣ್ಣಿತು ಮೂರುಲೋಕದೊಳಗೆ
ಒಳಗೊಳಗಿನಾಟ ಬಳಿವಿಡಿದು ಬಂದು
ಉಭಯಕ್ಕಾವರಿಸಿ ಗಮಿಸುವಲ್ಲಿ ಅಂತು ಇಂತುಯೆನಲುಂಟೆ ?
ಜಡ ಅಜಡಯೆನಲುಂಟೆ ಜಾತಾದಿ ಸಕಲ ತೃಣಾಗ್ನಿ ?
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ
ಅನುಸರಣಿತಮಾದಿತ್ಯ./204
ಅಲುಪ್ತ ಶಕ್ತಿತ್ವಾನುಭಾವಪ್ರಕಾಶದೊಳ್ಮುಳುಗಿ
ಆಚಾರಲಿಂಗಭಕ್ತನೆಂಬ ನಾಮನಷ್ಟವಾಯಿತ್ತು ನೋಡಾ !
ಸ್ವತಂತ್ರತ್ವಾನುಭಾವಪ್ರಕಾಶದೊಳ್ಮುಳುಗಿ
ಗುರುಲಿಂಗಮಹೇಶನೆಂಬ ನಾಮನಷ್ಟವಾಯಿತ್ತು ನೋಡಾ.
ನಿತ್ಯತ್ವಾನುಭಾವಪ್ರಕಾಶದೊಳ್ಮುಳುಗಿ
ಶಿವಲಿಂಗಪ್ರಸಾದಿಯೆಂಬ ನಾಮನಷ್ಟವಾಯಿತ್ತು ನೋಡಾ.
ಅನಾದಿ ಭೇದತ್ವಾನುಭಾವಪ್ರಕಾಶದೊಳ್ಮುಳುಗಿ
ಜಂಗಮಲಿಂಗ ಪ್ರಾಣಲಿಂಗಿಯೆಂಬ ನಾಮನಷ್ಟವಾಯಿತ್ತು ನೋಡಾ.
ಸರ್ವಜ್ಞತ್ವಾನುಭಾವಪ್ರಕಾಶದೊಳ್ಮುಳುಗಿ
ಪ್ರಸಾದಲಿಂಗಶರಣನೆಂಬ ನಾಮನಷ್ಟವಾಯಿತ್ತು ನೋಡಾ.
ತೃಪ್ತತ್ವಾನುಭಾವಪ್ರಕಾಶದೊಳ್ಮುಳುಗಿ
ಮಹಾಲಿಂಗೈಕ್ಯನೆಂಬ ನಾಮವನುಡುಗಿ
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮೊಳಗೆ ನಿಜೈಕ್ಯನಾದೆನು ಕಾಣಾ./205
ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು
ಅಲ್ಲಿಯೇ ಮುಳುಗಿಹೋಗುವುದೇ ಲೋಕದಗತಿ.
ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು
ಅಲ್ಲಿಯೇ ಮುಳುಗಿಹೋಗುವುದೇ ಪಾರಮಾರ್ಥಗತಿ.
ಇದು ಕಾರಣ ನೋಡಿ ಬಾ ಗುರುನಿರಂಜನ ಚನ್ನಬಸವಲಿಂಗದೊಳಗೆ./206
ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು,
ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ.
ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು,
ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ.
ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು,
ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ.
ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು,
ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ.
ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು,
ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ./207
ಅವರ್ಣದಾಗಿಂಗೆ ವರ್ಣದಪರಿವಿಡಿಯಿಂದೆ ಅರಿಯಲುಂಟೆ ?
ರೂಪಿಂಗೆ ರೂಪಲ್ಲದೆ ಸಯವಲ್ಲ, ನಿರೂಪಿಂಗೆ ನಿರೂಪವೇ ಸಯವಯ್ಯಾ.
ಕಾಣಬಾರದುದ ಕಂಡುಹಿಡಿವರಾರು ನೋಡಾ ಮೂರುಲೋಕದೊಳಗೆ ?
ಮಾರಾರಿ ಮಹಿಮರು ನಿಮ್ಮ ಶರಣರಿಗಲ್ಲದೆ ಅರಿಯಬಾರದು,
ಗುರುನಿರಂಜನ ಚನ್ನಬಸವಲಿಂಗವನು, ಕುರುಹಳಿದು ಕಾಣಾ./208
ಅವರ್ಣಾತ್ಮಕರ ಭಾಷೆಗಳನರಿದು ಭಾವಿಸಬಾರದು ವರ್ಣಾತ್ಮಕರುಗಳಿಗೆ.
ವರ್ಣಾತ್ಮಕರುಗಳ ಭಾಷೆಗತಿಗಳನರಿದು ಭಾವಿಸಬಾರದು
ಅವರ್ಣಾತ್ಮಕರುಗಳಿಗೆ.
ಈ ತೆರನಪ್ಪ, ಲೌಕಿಕ ಪರಮಾರ್ಥವನು ಭಾವಿಸಿ ಮರೆದಿರ್ದ
ಮಹಾಮಹಿಮನೇ ಶರಣ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./209
ಅವಿರಳ ಜ್ಞಾನಕ್ರಿಯೆಯಲ್ಲಿ ಅಂಗಮನವಳಿದು,
ಅಷ್ಟಾಂಗಸಂಬಂಧವಾದ ಶ್ರೇಷ್ಠ ಭಕ್ತನ,
ಸಮರಸವನರಿದಾನಂದಿಸುವ ಶಿವ ತಾನೆ.
ಆರಂಗಕ್ಕೆ ಲಿಂಗವಾಗಿರ್ದು ತನ್ನ ಸದ್ವಾಸನೆಯ ಶ್ರದ್ಧೆಗೀವ,
ತನ್ನ ಸುರಸವ ನಿಷ್ಠೆಗೀವ, ತನ್ನ ಸುರೂಪವ ಸಾವಧಾನಕ್ಕೀವ,
ತನ್ನ ಸುಸ್ಪರ್ಶನವ ಅನುಭವಕ್ಕೀವ,
ತನ್ನ ಸುಶಬ್ದವ ಆನಂದಕ್ಕೀವ,
ತನ್ನ ಮಹಾತೃಪ್ತಿಯ ಸಮರಸಕ್ಕೀವ,
ತನ್ನ ನಿಜವ ಷಟಸ್ಥಲಭಕ್ತಂಗೀವ ಗುರುನಿರಂಜನ ಚನ್ನಬಸವಲಿಂಗಾ./210
ಅವಿರಳ ಪರಬ್ರಹ್ಮ ಪ್ರಸಾದಮೂರ್ತಿಯು
ತನ್ನ ತಾನೆ ಬೆಳಗಾಗಿ ತೋರುವ ನಿರಂತರ,
ತನುತ್ರಯ ಮನತ್ರಯ ಭಾವತ್ರಯ ಕರಣತ್ರಯಾದಿ
ಸಕಲರಲ್ಲಿಯು ಕೂಡಿ ಗುರುನಿರಂಜನ ಚನ್ನಬಸವಲಿಂಗದ
ಶರಣನು ತನ್ನೊಳಗೆ ಪರಿಣಾಮಿ./211
ಅವಿರಳಪರಶಿವಲಿಂಗಕ್ಕೆ
ಕ್ರಿಯಾಶಕ್ತಿ ಪಾದಸೇವೆಯ ಮಾಡುತಿರ್ದಳು
ಆಚಾರಲಿಂಗವೆನ್ನ ಪ್ರಾಣನಾಥನೆಂದು.
ಜ್ಞಾನಶಕ್ತಿಯು ಸವಿನಯಮಾತಿನಿಂದ ಮಜ್ಜನಮಾಡಿಸುತ್ತಿಹಳು
ಗುರುಲಿಂಗವೆನ್ನ ಪ್ರಾಣನಾಥನೆಂದು.
ಇಚ್ಫಾಶಕ್ತಿಯು ಇಚ್ಫೆಯ ಗ್ರಹಿಸುತ್ತಿಹಳು
ಶಿವಲಿಂಗವೆನ್ನ ಪ್ರಾಣನಾಥನೆಂದು.
ಆದಿಶಕ್ತಿಯು ಪೂಜಾನುಕೂಲೆಯಾಗಿಹಳು
ಜಂಗಮಲಿಂಗವೆನ್ನ ಪ್ರಾಣನಾಥನೆಂದು.
ಪರಶಕ್ತಿಯು ಮಂತ್ರ ಧ್ಯಾನ ಜಪ ಸ್ತೋತ್ರದಿಂದ ಸ್ತುತಿಯಮಾಡುತ್ತಿಹಳು
ಪ್ರಸಾದಲಿಂಗವೆನ್ನ ಪ್ರಾಣನಾಥನೆಂದು.
ಚಿಚ್ಛಿಕ್ತಿಯು ಪರಮಸುಖಾನಂದವ ತೋರುತ್ತಿಹಳು
ಮಹಾಲಿಂಗವೆನ್ನ ಪ್ರಾಣನಾಥನೆಂದು.
ಇಂತು ಷಡ್ವಿಧಶಕ್ತಿಯರೆನ್ನಲ್ಲಿ ನಿಂದು,
ನಿರಂಜನ ಚನ್ನಬಸವಲಿಂಗವೆನ್ನ ಪ್ರಾಣನಾಥನೆಂದು
ಕರಸ್ಥಲವಿಡಿದಾನಂದಿಸುತ್ತಿಹರು./212
ಅವಿರಳಾನಂದಮುಖದಿಂದೊಗೆದು ಬಂದ ನಿಲುವಿಂಗೆ
ಹಲವು ಪ್ರಕಾರ ಹುಸಿಮುಸುಕಿ,
ಆ ಕಾಲಕ್ಕರಿದು ಬೆರಗುವಟ್ಟಲ್ಲಿ ಪರಿವಿಡಿಯಿಂದೆ ಬಂದು
ನೋಡುತ್ತ ಮುಟ್ಟುತ್ತ ಹೇಳುತ್ತ ಕೊಟ್ಟುಯಿಟ್ಟಲ್ಲಿ,
ಬಟ್ಟೆಗಳ ಕಂಡೆನಲ್ಲ ದಿಟ್ಟರನರಿದೆನಲ್ಲ.
ಅತ್ತಿತ್ತರಿಯದೆ ನಿರ್ಮಲತನುಮನಭಾವವನರಿದಲ್ಲಿ
ಮತ್ತೇನೂ ಕೊಡು ಕೊಳ್ಳಿ ಕಾಣಲಿಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಸಾದಿಯ ಪ್ರಸಾದ. /213
ಅವ್ವಾ, ಬನ್ನಿರೆ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಮಕ್ಕಳೆಲ್ಲ
ನಮ್ಮಕ್ಕನ ಮನೆಯಲೊಕ್ಕುದನುಂಬುವ.
ಬನ್ನಿರೆ ಎಮ್ಮ ಸುಚಿತ್ತ ಕೈಯ ಪಿಡಿದು ನಿಂದ ನಲ್ಲನ
ಸುಗಂಧಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ಸುಬುದ್ಧಿಯ ಕೈಯ ಪಿಡಿದು ಬಂದ ನಲ್ಲನ
ಸುರಸಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ನಿರಹಂಕಾರ ಕೈಯ ಪಿಡಿದು ಬಂದ ನಲ್ಲನ
ಸುರೂಪಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ಸುಮನ ಕೈಯ ಪಿಡಿದು ಬಂದ ನಲ್ಲನ
ಸುಸ್ಪರ್ಶನಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ಸುಜ್ಞಾನ ಕೈಯ ಪಿಡಿದು ಬಂದ ನಲ್ಲನ
ಸುಶಬ್ದಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ಸದ್ಭಾವ ಕೈಯ ಪಿಡಿದು ಬಂದ ನಲ್ಲನ
ಸುತೃಪ್ತಿಭಾಜನದಲ್ಲಿ ಕೂಡಿ ಉಂಬುವ.
ಬನ್ನಿರೆ ಎಮ್ಮ ಕೈಗಳಿಂದೆ ಗುರುನಿರಂಜನ ಚನ್ನಬಸವಲಿಂಗವ
ಬಿಡದೆ ಕೂಡಿ ಉಂಬುವ ಸುಖವ ಹೇಳುವರೆ ತೆರಹಿಲ್ಲ ಕಾಣಿರಮ್ಮಾ./214
ಅಷ್ಟತನುವಿನ ಕಷ್ಟದೊಳಗಿರ್ದು ದೃಷ್ಟಲಿಂಗವ ಕರದಲ್ಲಿ ಪಿಡಿದು
ಕೆಟ್ಟ ವಾಕ ಜಿನುಗುತ ಮುಟ್ಟಿ ಲಿಂಗಾನುಭಾವವ ಮಾಡುವ
ಭ್ರಷ್ಟಜೀವಿಗಳನೆಂತು ಶರಣರೆನ್ನಬಹುದಯ್ಯಾ?
ಹುಟ್ಟಿದ ಯೋನಿಯ ಬಿಟ್ಟು ಕಳೆಯದೆ
ನೆಟ್ಟನೆ ಲಿಂಗಶರಣನೆಂದೊಡೆ ಕೆಟ್ಟು ಹೋಯಿತ್ತು ಇವರರುಹು
ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ./215
ಅಷ್ಟಮದಸೂತಕದ ಕೆಟ್ಟಗುಣವಳಿದುಳಿದು,
ಇಷ್ಟಲಿಂಗದಲ್ಲಿ ನಿಷ್ಠೆ ನಿಬ್ಬೆರಸಿದ ವೀರಮಾಹೇಶ್ವರನ
ಘನಮಹಿಮೆಯನಾರು ಬಲ್ಲರು ಹೇಳಾ !
ಪರಮನಾಣತಿವಿಡಿದು, ಪೊಡವಿಯೊಳು ಬಂದು,
ನಡೆಗೆಟ್ಟ ಜಡರುಗಳ ಕಡೆದಾರಿಯನು ತೋರಿ
ಹಿಡಿದು ನಡೆಸಿದ ಕಡುಗಲಿಯನಾರು ಬಲ್ಲರು ಹೇಳಾ !
ಗಮನಾಗಮನವಾದಿಗಳನಮಿತಕ್ಕಗಣಿತ
ಗಮನಾಗಮನ ಗುರುನಿರಂಜನ ಚನ್ನಬಸವಲಿಂಗ
ಸನ್ನಿಹಿತದಿರವನಾರುಬಲ್ಲರು ಹೇಳಾ !/216
ಅಷ್ಟವಿಧಾರ್ಚನೆ ಷೊಡಶೋಪಚಾರ ಮಾಡಿ ಮಾಡಿ
ಮುಂದುಗಾಣದೆ ಬಂದು ಹೋಗುವರಯ್ಯಾ.
ಅಷ್ಟಮದವಳಿಯದ ಅಷ್ಟವಿಧಾರ್ಚನೆಯೆಲ್ಲಿಯದೋ?
ಅಂತರಂಗದಲ್ಲಿ ಪರಮಶಾಂತಿದೋರಗೆ ಷೋಡಶೋಪಚಾರವೆಲ್ಲಿಹದೊ?
ತ್ರಿಪುಟಿ ಮಲತ್ರಯಸನ್ನಿಹಿತವಿರಲು ಮಾನಸಪೂಜೆಯೆಲ್ಲಿಹದೊ?
ಜ್ಞಾನ ವಿಕೃತಿಭಾವ, ವರ್ತನಾವಿಕೃತಿಭಾವ, ಮೋಹವಿಕೃತಿಭಾವವೆಂಬ
ಭಾವತ್ರಯಸಂಬಂಧಿಗೆ ನಿಜಾನುಭಾವದ ನಿಲುವು ಎಲ್ಲಿಹದೊ?
ಇಂತು ಶರಣ ಭಕ್ತನಾಗಬೇಕಾದರೆ
ಅರಿದು ಮರೆದಾಚರಿಸಬೇಕು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ. /217
ಅಷ್ಟಾಂಗವಾದ ಮಾಹೇಶ್ವರನ ಸರ್ವಾಂಗವೆಲ್ಲ ಲಿಂಗವೆಯಾಗಿರ್ಪುದು.
ಅದೆಂತೆಂದೊಡೆ : ವ್ಯಾಲಗರಳ ಸೋಂಕಿದಂಗ ಸರ್ವಮಯವಾದಂತೆ.
ಶ್ರದ್ಧೆ ನಿಷ್ಠೆಯೊಳೊಂದಿ ಅಂಗವಾದಲ್ಲಿ
ಸಾವಧಾನನುಭಾವ ಆನಂದ ಸಮರಸ ಪ್ರಾಣವಾಗಿರಲು
ಗುರುನಿರಂಜನ ಚನ್ನಬಸವಲಿಂಗವು ಎತ್ತೆತ್ತ ನೋಡಿದಡತ್ತತ್ತ ತಾನೆ./218
ಅಸಮಗಂಭೀರ ಲಿಂಗಶರಣರಡಿವಿಡಿದು ಬಂದು
ಸಸಿನೆ ಗತಿಯುಕ್ತನಾಗಿರ್ದುದೆ ಸಹಜಮತಿ.
ಮಡದಿ ಪುರುಷರಡಿವಿಡಿಯಲಾಗದು.
ಆಚಾರಬ್ರಹ್ಮ ಕಣ್ಮನಭಾವಭರಿತ ಸ್ವಯವಿತ್ತುಕೊಂಡು ಸುಖಿಸುವದು
ಗುರುನಿರಂಜನ ಚನ್ನಬಸವಲಿಂಗದಂಗವಾಗಿ. /219
ಅಳಿಯನಂತೆ ಬಂದಪ್ಪನ ಕೈಯಿಂದ ತಲೆಗೆ,
ಗೆಳೆಯನಂತೆ ಬಂದಪ್ಪನ ಮಾತಿನಿಂದೆ ಕಿವಿಗೆ,
ಗಂಡನಂತೆ ಬಂದ ಅಪ್ಪ ಮನೆಯಿಂದ ಕೈಹಿಡಿಯ,
ಇನ್ನೇನು ಮುಟ್ಟಲವ್ವಾ, ಇನ್ನೇನು ಕೇಳಲವ್ವಾ ಇನ್ನೇನು ಹಿಡಿಯಲವ್ವಾ.
ಮುಟ್ಟುವರೆ ಭಾವವಿಲ್ಲ, ಕೇಳುವರೆ ಮನವಿಲ್ಲ, ಹಿಡಿವರೆ ಕೈಯಿಲ್ಲ.
ತಂದೆಯ ಮಗನ ಸಂಗದಿಂದೆ ಸಂಸಾರವ ಮಾಡಿ
ಗಂಡನಕೊಂದು ಸತ್ತುದು ನಮ್ಮ
ಗುರುನಿರಂಜನ ಚನ್ನಬಸವಲಿಂಗಕ್ಕೆ ಸುಖವಾಯಿತ್ತು./220
ಆಕಾರ ನಿರಾಕಾರವಾಗಿ ಸಾಕಾರ ಸನ್ನಿಹಿತನಾದ
ಸದಮಲಶರಣನ ಪರಮಶಾಂತಿಯ
ಮುಂದೆ-ಹಿಂದೆ, ಬಲ-ಎಡ, ಮೇಲೆ-ಕೆಳಗೆ, ಕಿಕ್ಕಿಂದವಾಗಿ
ನಿರಾಕಾರಭಕ್ತಿ ಸಾಕಾರಸದಾನಂದವಾಗಿ, ಉಲಿ ಉಲಿದಾಡುತಿದರ್ಿತ್ತು,
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./221
ಆಕಾರದನುವಿಡಿದು ಸಾಕಾರಸನ್ನಿಹಿತನಾಗಿ,
ಆಕಾರವ ಮರೆದನುಭವಿಸಿದರೆ ಸಾಕಾರದ್ರೋಹ ಸವೆಯದು.
ನಿರಾಕಾರದನುವಿಡಿದು ನಿರಾವಯಸನ್ನಿಹಿತನಾಗಿ,
ನಿರಾಕಾರವ ಮರೆದು ಅನುಭವಿಸಿದರೆ ನಿರಾವಯದ್ರೋಹ ಪರಿಯದು.
ಬಯಲದನುವಿಡಿದು ನಿರ್ವಯಲಸನ್ನಿಹಿತನಾಗಿ,
ಬಯಲ ಮರೆದು ಅನುಭವಿಸಿದರೆ ನಿರ್ವಯಲದ್ರೋಹ ಸರಿಯದು.
ಹೀಗೆಂಬ ಶ್ರುತಿಯ ಗುರುಸ್ವಾನುಭಾವದಿಂದರಿದು
ಮರೆಯದೆ ಮಾಟತ್ರಯದಲ್ಲಿ ನೀಟವಾಗಿರ್ದೆನು
ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗಾ./222
ಆಕಾಶತತ್ವದಿಂದುದುರಿ ಬಂದ ಬೀಜವು ಧರೆಯುದಕ
ಸಂಗದಲ್ಲಿ ಅಡಗಿರ್ದಡೇನು
ಅಂಕುರಿಸಿ ಆಕಾಶಕ್ಕೆ ತಲೆಯದೋರುವುದಲ್ಲದೆ,
ಭುವನದತ್ತ ತಲೆಯಿಡದು ನೋಡಾ.
ಘನಗಂಬಿರ ಶರಣನು ತಾನೊಂದು ಕಾರ್ಯಕ್ಕೆ ಹೇಗೆ ಹಿಡಿದು ಮುಸುಕಿರ್ದಡೇನು,
ಕ್ರಿಯಾಭೋಗಿತ್ತ ಜ್ಞಾನಭೋಗತ್ತ ನಡುವೆ ಪರಿಪೂರ್ಣ ಭಕ್ತಿನಿರಂತರ.
ಇದು ಗೌರವಾಂಗದತಿಶಯದ ನಿಲವು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./223
ಆಕಾಶದ ಬಣ್ಣವನೋಕರಿಸಿ ತೋರಲು
ತಾಕಲಾರದು ತಾರೇಂದು ರವಿ ಮೇಘ ಗಡಣವನುಳಿದು.
ತನುಮನಪ್ರಾಣಭಾವಶೂನ್ಯ ಗುರುನಿರಂಜನ ಚನ್ನಬಸವಲಿಂಗ./224
ಆಕಾಶದ ಬೆಳಗು ಲೋಕೇಶನ ಮಠಕ್ಕೆ ಬಂದಲ್ಲಿ
ಅನೇಕರು ಕೊಡನೊಡೆದು ನೀರಿಗೆ ಬಂದರು ನೋಡಾ !
ಲೋಕೇಶ ಕೂಡಿ ದಾರಿ ತಪ್ಪಿಸಿ, ಮಾರ್ಗವಿಡಿದು
ಕಪ್ಪವ ಕೊಟ್ಟು ತನ್ನ ತಪ್ಪಿಸಿಕೊಂಡರೆ
ಒಪ್ಪಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತಿ./225
ಆಕಾಶದಲ್ಲಿರ್ದ ತಾವರೆಯೊಳಗಿನ ಮುತ್ತಿನ ನೀಲದ ಮುಮ್ಮೊನೆಯೊಳು
ಥಳಥಳನೆ ಹೊಳೆವ ಪರಮ ಪುರುಷನ ನೆರೆದು ಸುಖಿಸಬಲ್ಲ ಮಹಿಮನೆ
ಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./226
ಆಗಬಾರದಾಗಿಂಗೆ ನಿಲ್ಲಬಾರದ ನಿಲುವು, ಮಾಡಬಾರದ ಮಾಟ,
ಬರಬಾರದ ಬರವಿಂಗೆ ಬಂದ ಪರಿಯ ನೋಡಾ !
ಈ ಬಂದ ಬಂಧನದಲ್ಲಿ ನೊಂದು ಬೆಂದರು ಹರಿವಿರಂಚಿ ಸುರಪಾದಿ ಸಕಲರೆಲ್ಲ.
ಇದನರಿದು ಹಿಂದುಮುಂದಾದೆನು ಕಾಣಾ ನಿರಂಜನ ಚನ್ನಬಸವಲಿಂಗಾ./227
ಆಚಾರ ಗುರು ಶಿವ ಜಂಗಮ ಶೇಷ
ಮಹಾ ಇಷ್ಟ ಪ್ರಾಣ ಭಾವಲಿಂಗ ಬೆಳಗಿನೊಳು
ಬೆಳಗುತಿರ್ದ ಘನಮಹಾಪ್ರಸಾದಿಯ ನಡೆಯ ಬಲ್ಲವರಾರು?
ನುಡಿಯ ಬಲ್ಲವರಾರು? ಹಿಡಿಯಬಲ್ಲವರಾರು?
ಕೊಡಬಲ್ಲವರಾರು? ಕೊಳ್ಳಬಲ್ಲವರಾರು?
ಗುರುನಿರಂಜನ ಚನ್ನಬಸವಲಿಂಗದಂಗವಾದ ಇರವ ಬಲ್ಲವರಾರು?/228
ಆಚಾರಂಗವಾಗಿ ಅರುಹೇ ಪ್ರಾಣವಾಗಿ
ಮಹಾಜ್ಞಾನಾನುಭಾವದಲ್ಲಿ ತರಹರವಾದ ಶರಣಂಗೆ
ಮಾಡಲಿಲ್ಲ ಮಾಡದಿರಲಿಲ್ಲ, ನೋಡಲಿಲ್ಲ ನೋಡದಿರಲಿಲ್ಲ,
ಕೂಡಲಿಲ್ಲ ಕೂಡದಿರಲಿಲ್ಲ
ಗುರುನಿರಂಜನ ಚನ್ನಬಸವಲಿಂಗ ತಾನಾಗಿರ್ದ ಕಾರಣ./229
ಆಚಾರಂಗವಾಗಿ ಶ್ರದ್ಧಾಭಕ್ತಿಯನರಿಯೆ.
ಗೌರವಾಂಗವಾಗಿ ನಿಷ್ಠಾಭಕ್ತಿಯನರಿಯೆ.
ಶಿವಾಂಗವಾಗಿ ಸಾವಧಾನಭಕ್ತಿಯನರಿಯೆ.
ಚರಾಂಗವಾಗಿ ಅನುಭಾವಭಕ್ತಿಯನರಿಯೆ.
ಶೇಷಾಂಗವಾಗಿ ಆನಂದಭಕ್ತಿಯನರಿಯೆ.
ಪರಿಣಾಮಂಗವಾಗಿ ಸಮರಸಭಕ್ತಿಯನರಿಯೆ.
ಗುರುನಿರಂಜನ ಚನ್ನಬಸವಲಿಂಗವಾಗಿ ಮಾಡಲರಿಯೆ./230
ಆಚಾರನಿಷ್ಠೆಯೆನಗಂಗವಾದಲ್ಲಿ
ಕ್ರಿಯಾದೀಕ್ಷೆಸ್ವರೂಪವಾದ ಆಚಾರಲಿಂಗವೆನ್ನ
ಕರಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಗೌರವನಿಷ್ಠೆಯೆನಗಂಗವಾದಲ್ಲಿ
ಮಂತ್ರದೀಕ್ಷೆಸ್ವರೂಪವಾದ ಗುರುಲಿಂಗವೆನ್ನ
ನಯನಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಶಿವನಿಷ್ಠೆಯೆನಗಂಗವಾದಲ್ಲಿ
ವೇಧಾದೀಕ್ಷೆಸ್ವರೂಪವಾದ ಶಿವಲಿಂಗವೆನ್ನ
ಭೃಕುಟಿಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಚರನಿಷ್ಠೆಯೆನಗಂಗವಾದಲ್ಲಿ
ಬೋಧಾದೀಕ್ಷೆಸ್ವರೂಪವಾದ ಜಂಗಮಲಿಂಗವೆನ್ನ
ಹೃದಯಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಪ್ರಸಾದನಿಷ್ಠೆಯೆನಗಂಗವಾದಲ್ಲಿ
ಪ್ರಸನ್ನದೀಕ್ಷೆಸ್ವರೂಪವಾದ ಪ್ರಸಾದಲಿಂಗವೆನ್ನ
ಮಂತ್ರಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಮಹದನಿಷ್ಠೆಯೆನಗಂಗವಾದಲ್ಲಿ
ನಿರ್ವಾಣದೀಕ್ಷೆಸ್ವರೂಪವಾದ ಮಹಾಲಿಂಗವೆನ್ನ
ಲಯಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ.
ಇಂತು ಷಡುನಿಷ್ಠೆಯೆನಗಂಗವಾದಲ್ಲಿ
ಷಡ್ವಿಧಲಿಂಗವೆನ್ನ ಷಡುಸ್ಥಲವನಿಂಬುಗೊಂಡು ಬೆಳಗುತಿರ್ದಬಳಿಕ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಮಹಾನುಭಾವಿಮಹೇಶ್ವರನಾದೆನು./231
ಆಚಾರಲಿಂಗಕ್ಕೆ ಅಂಗವಾದ ಅನುಪಮ ಶರಣನ ಕಂಡರೆ
ಪೂಣರ್ೆಂದುವಿಂಗಿದಿರಗಡಲದಂತಾಯಿತ್ತೆನ್ನ ತನು;
ರವಿಬರವಿಂಗರಳಿದ ಪದುಮದಂತಾಯಿತ್ತೆನ್ನ ಹೃದಯ;
ಮೇಘದರ್ಶನಸುಖದ ಸಿಖಿಯಂತಾಯಿತ್ತೆನ್ನ ಗಮನಗತಿ;
ಚಂಪಕದರಳಿಂಗೆರಗಿದ ಭ್ರಮರದಂತಾಯಿತ್ತೆನ್ನಭಾವ;
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./232
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು.
ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು.
ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು.
ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು.
ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು.
ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು.
ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ ?
ಗುರುನಿರಂಜನ ಚನ್ನಬಸವಲಿಂಗಾ/233
ಆಚಾರಲಿಂಗದೊಳಗಿರ್ದು ಗಂಧವನರಿಯೆ,
ಗುರುಲಿಂಗದೊಳಗಿರ್ದು ರುಚಿಯನರಿಯೆ,
ಶಿವಲಿಂಗದೊಳಗಿರ್ದು ರೂಪವನರಿಯೆ,
ಜಂಗಮಲಿಂಗದೊಳಗಿರ್ದು ಸೋಂಕವನರಿಯೆ,
ಪ್ರಸಾದಲಿಂಗದೊಳಗಿರ್ದು ಶಬ್ದವನರಿಯೆ,
ಮಹಾಲಿಂಗದೊಳಗಿರ್ದು ಪರಿಣಾಮವನರಿಯೆ,
ಅದೇನುಕಾರಣವೆಂದೊಡೆ
ಗುರುನಿರಂಜನ ಚನ್ನಬಸವಲಿಂಗ ತಾನಾದ ಕಾರಣ./234
ಆಚಾರಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಗುರುಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಶಿವಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಜಂಗಮಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಇಂತು ಷಡುಲಿಂಗಾನುಭಾವದಲ್ಲಿ ಅನಿಮಿಷನಾಗಿ
ಅಖಂಡ ಗುರುನಿರಂಜನ ಚನ್ನಬಸವಲಿಂಗೈಕ್ಯ ಪದಪ್ರಕಾಶದೊಳ್ಮುಳುಗಿ
ಬೆಳಗುತಿರ್ದೆನು./235
ಆಚಾರವನರಿಯದ ನಡೆ ದುರ್ನಡೆ.
ಆಚಾರವನರಿಯದ ನೋಟ ಭವದಕೂಟ.
ಆಚಾರವನರಿಯದ ಅಂಗ ವಿಚಾರಭಂಗ.
ಆಚಾರವನರಿಯದ ಅನುಭಾವ ಅಪ್ರಮಾಣ ದುರ್ಭಾವ.
ಇದು ಕಾರಣ ಗಣಕೂಟಕೆ ಆಚಾರವೇಬೇಕು ಕಾಣಾ
ಚನ್ನ ಕಾಯಮನಭಾವಪ್ರಿಯ ಮಹಾಲಿಂಗದಲ್ಲಿ./236
ಆಚಾರವನಾಚಾರವೆಂಬನುವರಿದುಕೊಂಡು ಬಂದವರೆಂದು
ಸೋಗುತೊಟ್ಟು ನಡೆವಲ್ಲಿ, ಕಾಯಕ್ಕೆ ಭಕ್ತಿಯನಗಲಿಸಿದರೆ
ಕತ್ತೆಯ ಬಸುರಲ್ಲಿ ಬಂದು ನರಕವನೈಯ್ದುವರು.
ಮನಕ್ಕೆ ಜ್ಞಾನವನಗಲಿಸಿದರೆ
ಶ್ವಾನದ ಯೋನಿಯಲ್ಲಿ ಬಂದು ನರಕವನೈದುವರು.
ಭಾವಕ್ಕೆ ಅರಿವನಗಲಿಸಿದರೆ
ಸೂಕರನ ಗರ್ಭದಿಂದೆ ಬಂದು ನರಕವನೈದುವರು.
ಗುರುನಿರಂಜನ ಚನ್ನಬಸವಲಿಂಗದ ಬೆಳಗನಗಲಿ
ಮಾಯಾಮೋಹವಿಷಯದ ಬೆಳಗಿನೊಳು ನಿಂದು ನಡೆದರೆ
ಅನಂತಕೋಟಿವರುಷ ಪಿಶಾಚಿಯಾಗಿ ನರಕವನೈದುವರು. /237
ಆಚಾರವಿಲ್ಲದಂಗ, ವಿಚಾರವಿಲ್ಲದ ಮನ,
ಸಂಬಂಧವರಿಯದ ಪ್ರಾಣ, ಪರಿಣಾಮವರಿಯದ ಭಾವ,
ಈ ಚತುರ್ವಿಧದಲ್ಲಿರ್ದ ಚಾಪಲ್ಯರು ಸಲ್ಲರಯ್ಯಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಸ್ಥಲಕ್ಕೆ. /238
ಆಚಾರವೇ ಗುರು ವಿಚಾರವೇ ಶಿಷ್ಯನೆಂಬುದು ಸಹಜ.
ಆಚಾರವೇ ಜ್ಞಾನ ವಿಚಾರವೇ ಭಕ್ತಿ, ಎರಡರ ಸಂಬಂಧವೇ ಘನ ಸಂಬಂಧವು.
ಈ ಸುಖಾನಂದ ಸುಧೆಯೊಳು ಚರಿಸಲರಿಯದೆ,
ಆಚಾರವ ಜರಿದು ಅವಿಚಾರಮುಖನಾದರೆ
ಸಚರಾಚರದೊಳು ನಿಂದು ಸವೆಯದಾಯಾಸವೇ ಸಹಜ ಕಾಣಾ ಮುಂದೆ
ಗುರುನಿರಂಜನ ಚನ್ನಬಸವಲಿಂಗಾ./239
ಆಚಾರವೇ ಗುರುವಾಗಿ, ಆಚಾರವೇ ಶಿಷ್ಯನಾಗಿ,
ಆಚಾರವೇ ಲಿಂಗವಾಗಿ, ಆಚಾರವೇ ಭಕ್ತನಾಗಿ,
ಆಚಾರವೇ ಸಂಪತ್ತುವಾಗಿ, ಆಚಾರವೇ ಗಮನಾಗಮನವಾಗಿ,
ಗುರುನಿರಂಜನ ಚನ್ನಬಸವಲಿಂಗದೊಳಗೆ
ಸದಾಚಾರಸದ್ಭಕ್ತಂಗೆ ನಮೋ ನಮೋ ಎನುತಿರ್ದೆನು./240
ಆಚಾರವೇ ಪ್ರಾಣವಾದ ಅನಿಮಿಷಲಿಂಗ ಕರಸ್ಥಲವಾದ ಅಪ್ರತಿಮ ಶರಣಂಗೆ
ಮಾಯಾಮೋಹ ವಿಷಯಗತಿ ಸುಖಪ್ರಾಣವಾದ,
ಜೀವಭಾವಸ್ವರೂಪ ನಿಲವಾದ ಭ್ರಮಿತ ನರ ಸರಿಯಪ್ಪನೆ ?
ಮತ್ತೆ ಸರಿಯೆಂದರೆ ದೊರೆನರಕ ತಪ್ಪದು
ಗುರುನಿರಂಜನ ಚನ್ನಬಸವಲಿಂಗಾ./241
ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ.
ಆಚಾರಶೂನ್ಯ ಮನ ಲಿಂಗದ್ರೋಹಿ ಮಾಡಲಾಗದು ಪೂಜೆಯ.
ಆಚಾರಶೂನ್ಯ ಭಾವ ಜಂಗಮದ್ರೋಹಿ ಮಾಡಲಾಗದು ದಾಸೋಹವ.
ಆಚಾರತ್ರಯವಿರಹಿತವಾದ ಅನಾಚಾರ ಭ್ರಷ್ಟರುಗಳ
ಶ್ರೇಷ್ಠರೆಂದು ಪೂಜೆಯ ಮಾಡಿದರೆ ಭವತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./242
ಆಚೆಯಲ್ಲಿ ಸ್ಥಾವರಭಕ್ತಿ ಈಚೆಯಲ್ಲಿ ಜಂಗಮಭಕ್ತಿ ಮನವೆರಡಿಲ್ಲವಯ್ಯಾ.
ಮತ್ತೆಯಿತ್ತ ಕೇಳು ಸ್ಥಾವರ ಜಂಗಮಕ್ಕೆ
ಸೈದಾನ ಪಾಕ ಸುಯಿದಾನ ಭಾವರುಚಿ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./243
ಆಟವಳಿದು ಆರೂಢವಾಯಿತ್ತು,
ನೋಟಕರು ಸತ್ತರು ಮಾಟಕರು ಮಡಿದರು.
ಕೂಟಕರು ಕುರುಹಳಿದರು, ನೋಡಲಿಲ್ಲ ನುಡಿಸಲಿಲ್ಲ ಕೇಳಲಿಲ್ಲ.
ಗುರುನಿರಂಜನ ಚನ್ನಬಸವಲಿಂಗವಾಗಿ ನಿರ್ವಯಲಾದುದನೇನೆಂಬೆನಯ್ಯಾ./244
ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ ?
ಮಾತು ನೀತಿಯ ಕೇಳಿ, ಜಾತಿ ಮೂಲ ಜಂಜಡವೊಂದೆ ಮಾಡಿ
ಲಾಭವನುಂಬ ಹಾದಿಯ ಹಿರಿಯರಂತಿರಲಿ
ನೀಡಿಯಾಡದೆ ಕೊಟ್ಟು ಕಾಣುವ ದಿಟ್ಟಗಲ್ಲದೆ
ಬಟ್ಟೆಗಳ್ಳರಿಗೆಂತೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗ ?
/245
ಆಡಬಂದವಳು ಅಲ್ಲಿಂದರಿಯಳು,
ನೋಡಬಂದವಳು ಮೇಲೊಂದರಿಯಳು.
ನೀಡಬಂದವಳು ಅಲ್ಲಿಂದರಿಯಳು,
ಮಾತನಾಡಬಂದವಳು ಮತ್ತೊಂದರಿಯಳು.
ಚಿತ್ತವನೊಲಿಸಿತ್ತು ಒತ್ತೆಗೊಂಬ ವನಿತೆ ತಾನೊಬ್ಬಳೆ
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾದವಳು./246
ಆಡಬಲ್ಲವನಾಡಿದರೆ ಚಂದವಾಯಿತ್ತು ಲಿಂಗಕ್ಕೆ.
ಮಾಡಬಲ್ಲವ ಮಾಡಿದರೆ ಚಂದವಾಯಿತ್ತು ಲಿಂಗಕ್ಕೆ.
ನೀಡಬಲ್ಲವ ನೀಡಿದರೆ ಚಂದವಾಯಿತ್ತು ಲಿಂಗಕ್ಕೆ.
ಈ ಭೇದವನರಿಯದೆ ಕೂಡಿ, ನಡೆಹೀನ ಭವದುಃಖಿಗಳಿಗೆ,
ಕೊಡುಕೊಳ್ಳಿ ಸಲುವುದೆಂದು ನಡೆದುಣ್ಣಲಾಗದು.
ಬಿಡುವದು ಲೌಕಿಕದತ್ತ
ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕಲ್ಲದ ಮಲಭುಂಜಕರ./247
ಆಡಬಹುದು ಅನಂತ ನುಡಿಗಳ,
ನೋಡಬಹುದು ಬಹುಮುಖಪುರಾಣ ಶಾಸ್ತ್ರಾಗಮ ಶ್ರುತಿಗಳ,
ಮಾಡಬಹುದು ಅಷ್ಟಾಂಗಯೋಗಾದಿ ಸಕಲಭ್ಯಾಸಂಗಳ,
ನೀಡಿ ಮರೆದಿರುವ ನೆರೆದುಂಬ ಮಹಾಂತರಿಗಲ್ಲದೆ
ಸಾಮಾನ್ಯವೇ ಗುರುನಿರಂಜನ ಚನ್ನಬಸವಲಿಂಗ ?/248
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ
ನೋಡ ಬಂದವರನುವನವರೆತ್ತ ಬಲ್ಲರಯ್ಯಾ?
ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ
ಗುರುನಿರಂಜನ ಚನ್ನ ಬಸವಲಿಂಗಾ. /249
ಆಡಿ ದಣಿವರಿಯವಯ್ಯಾ ಎನ್ನ ಕಾಲುಗಳು,
ಮಾಡಿ ದಣಿವರಿಯವಯ್ಯಾ ಎನ್ನ ಕೈಗಳು,
ನೋಡಿ ದಣಿವರಿಯವಯ್ಯಾ ಎನ್ನ ಕಂಗಳು,
ಹಾಡಿ ದಣಿವರಿಯದಯ್ಯಾ ಎನ್ನ ಜಿಹ್ವೆಯು.
ಕೇಳಿ ದಣಿವರಿಯವಯ್ಯಾ ಎನ್ನ ಶ್ರೋತೃ,
ಬೇಡಿ ದಣಿವರಿಯವಯ್ಯಾ ಗುರುನಿರಂಜನ ಚನ್ನಬಸವಲಿಂಗ
ನಿಮ್ಮ ಶರಣರೊಲವೆ ಎನ್ನಭಾವ./250
ಆಡು ಕುರಿಯ ನುಂಗಿ ಬೆಕ್ಕಿನ ಹೊಟ್ಟೆಯ ಹೊಕ್ಕಿತ್ತು,
ಬೆಕ್ಕು ಕಪ್ಪೆಯ ನೆರೆದು ಬಾವಿಯ ಹಾಲು ಕುಡಿಯುತ್ತಿರಲು
ಕಟವಾಯಿಂದೆ ಕ್ಷೀರ ಸುರಿದು ಭೂಮಿಯಸೋಂಕಿ ಕಾಂತಾರ
ಉರಿದು ವ್ಯಾಘ್ರನಳಿಯಿತ್ತು.
ಮೃಗಾದಿ ಸಕಲ ಜನಿತ ತಮ್ಮ ಸ್ಥಲವ ಬಿಟ್ಟು ನೋಡುತ್ತ ನೋಡುತ್ತ ಅಡಗಿ
ಒಂದೂ ಕಾಣದ ಬಯಲ ಬೆಡಗನೇನೆಂದುಪಮಿಸುವೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ ?/251
ಆಡುವರಯ್ಯಾ ಅಂಗವ ಹೊತ್ತು,
ನೋಡುವರಯ್ಯಾ ಕಂಗಳು ಕೆಟ್ಟು,
ಬೇಡುವರಯ್ಯಾ ಬಾಯಿಸವಿಗೆ,
ಹಾಡುವರಯ್ಯಾ ಅಶನವ ಕಂಡು,
ಕೂಡುವರಯ್ಯಾ ಆಡುವ ರಚನೆಗೆ,
ಸತ್ತು ಹೋಗುವರಯ್ಯಾ ದುಃಸಂಸಾರದೊಳಗೆ,
ಗುರುನಿರಂಜನ ಚನ್ನಬಸವಲಿಂಗಾರ್ಪಿತವನರಿಯದೆ
ಬೀಳುವರಯ್ಯಾ ನರಕದೊಳಗೆ./252
ಆಡುವರಯ್ಯಾ ಆಚಾರವನಳಿದು,
ನೋಡುವರಯ್ಯಾ ಶಿವರತಿಯ ಮರದು,
ಮಾಡುವರಯ್ಯಾ ವಂಚನೆಯ ನೆರದು
ಬೇಡುವರಯ್ಯಾ ಮನದೊಳು ಮರದು,
ನೆಟ್ಟನೆ ಕೂಡುವರಯ್ಯಾ ಮಲತ್ರಯಮೋಹದೊಳು
ಹೇಳುವರಯ್ಯಾ ಲಿಂಗಶರಣರೆಂದು,
ಇಂತಪ್ಪ ಕಾಳಕೂಳರಿಗೆ ಸಚ್ಚಿದಾನಂದ ಪರಶಿವಾಂಗ ಶರಣರೆಂತೆನ್ನಬಹುದು
ಗುರುನಿರಂಜನ ಚನ್ನಬಸವಲಿಂಗಾ?/253
ಆಡುವೆನಯ್ಯಾ ಎನ್ನೊಡೆಯನ ಶರಗಹಿಡಿದು ಆರಾರ ಸಂಗತಿಯಿಂದೆ.
ಕೂಡುವೆನಯ್ಯಾ ಎನ್ನಯ್ಯನ ಬಳಿವಿಡಿದು ಆರಾರ ಸಖತನದಿಂದೆ.
ಕೊಂಬುವೆನಯ್ಯಾ ಎನ್ನ ತಂದೆಯ ಮುಂದಿಟ್ಟು ಆರಾರ ರತಿಯಿಂದೆ.
ಆನಂದಿಸುವೆನಯ್ಯಾ ಎನ್ನ ಕತರ್ುಗಳನರಿದು ಆರಾರ ಪ್ರೀತಿಯಿಂದೆ.
ಎನ್ನಾವಾವ ಬಗೆಯಲ್ಲಿ ನಂಟುತನಕ್ಕೆ ಕಂಟಕ ಬಂದರೆ
ಗಂಟ ಬಿಡದಿರು ಅಂಟಿಕೊಂಬೆ ಗುರುನಿರಂಜನ ಚನ್ನಬಸವಲಿಂಗಾ./254
ಆಣವಮಲವ ಕರುಣಜಲದಿಂದೆ ತೊಳೆದು
ಸದ್ಗುರುಲಿಂಗವೆನ್ನ ಅಂಗದಲ್ಲಿರಲು,
ಸಕಲಕ್ರಿಯಂಗಳೆಲ್ಲ ಸತ್ಕ್ರೀಯಾಸ್ವರೂಪವಾಗಿ ಕಾಣಿಸುತಿರ್ದವು.
ಮಾಯಾಮಲವ ವಿನಯಜಲದಿಂದೆ ತೊಳೆದು
ಚಿದ್ಗುರುಲಿಂಗವೆನ್ನ ಪ್ರಾಣದಲ್ಲಿರಲು,
ಸಕಲಜ್ಞಾನಂಗಳೆಲ್ಲ ಸುಜ್ಞಾನಸ್ವರೂಪವಾಗಿ ಕಾಣಿಸುತಿರ್ದವು.
ಕಾರ್ಮಿಕಮಲವ ಸಮತಾಜಲದಿಂದೆ ತೊಳೆದು
ಆನಂದಗುರುಲಿಂಗವೆನ್ನ ಭಾವದಲ್ಲಿರಲು,
ಸಕಲಭಾವಂಗಳೆಲ್ಲ ಮಹಾನುಭಾವವಾಗಿ ಕಾಣಿಸುತಿರ್ದವು.
ಇಂತು ಸತ್ಕ್ರಿಯಾ ಸಮ್ಯಕ್ಜ್ಞಾನ ಮಹಾನುಭಾವ ಸನ್ನಿಹಿತನಾಗಿ
ಒಳಹೊರಗೆ ಪರಿಪೂರ್ಣ ಪ್ರಕಾಶಮಯವಾಗಿರ್ದೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./255
ಆತ್ಮನು ಪರಮಾತ್ಮನುಯೆಂದು ಭಾವಿಸುವ
ಭಾವ ಬಂಧನದಲ್ಲಿಪ್ಪ ಬರಿಜ್ಞಾನಿಗಳಿಗಳವಲ್ಲ.
ನಿಜಾನುಭಾವದ ನಿಲವು ಕತ್ತಲೆ ಬೆಳಗಿದ ಕಳೆಯೊಳೊಂದಿ
ನಿತ್ಯದ ನಿಜವನರಿದಿಹೆನೆಂಬ ಮಿಥ್ಯಮನನೀಯ ಕೊನೆಗೆ ನಿಲುಕದು,
ಸತ್ಯಜ್ಞಾನಾನುಭಾವದ ಬೆಳಗು.
ದಶಮಾರುತನ ಸುಳುಹ ತಪ್ಪಿ ಸುಳಿಯಲರಿಯದಿರ್ದಡೆ,
ಪ್ರಾಣಲಿಂಗದ ಸಮರಸಾನುಭಾವಸಂಬಂಧಿ
ಸದ್ಗುರು ನಿರಂಜನ ಚನ್ನಬಸವಲಿಂಗದಲ್ಲಿ./256
ಆತ್ಮನೇ ಲಿಂಗವೆಂದು ಕಂಡುಂಬ ಬಹಿರ್ಗತ್ತಲೆನುಡಿಯ ಭಾವಿಸರು.
ಅದೇಕೆಂದೊಡೆ, ಅಂಗದಲ್ಲಿ ಇಷ್ಟಲಿಂಗ ಪ್ರಕಾಶಿಸುತ್ತಿಹುದಾಗಿ.
ಇಟ್ಟು ಮಾಡಿ ಕೆಟ್ಟುಂಬ ಅಂತರಗತ್ತಲೆಂದು ನಡೆಯ ಭಾವಿಸರು.
ಅದೇಕೆಂದೊಡೆ, ಮನ ಪ್ರಾಣಲಿಂಗದಲ್ಲಿ ತರಹರವಾದುದಾಗಿ.
ಯೋಗಚರಿಯ ಭೋಗಿಗಳ ತೂಗಿ ಭಾವಿಸರು.
ಅದೇಕೆಂದೊಡೆ, ಶಿವಯೋಗಭೋಗತೃಪ್ತರಾದ ಕಾರಣ.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಪ್ರಸಾದಿಯ ಕಾರ್ಯಕಾರಣ ತಿಳಿಯಬಾರದಾರಿಗೆಯೂ./257
ಆದಾದಿಷ್ಟಮುಖದಿಂ ಸಾಧಿಸಿಕೊಂಡು ಬಂದ ಇಷ್ಟಲಿಂಗವನು
ಮಕುಟಸ್ಥಾನದಲ್ಲಿ ಧರಿಸಿ,
ನಿರಹಂಕಾರವೆಂಬ ಹಸ್ತಕ್ಕೆ ಸಾಧಿಸಿ ಬಂದ ಸಕಲನಿಃಕಲತತ್ವ ಪದಾರ್ಥವನು,
ಇಚ್ಛಾಶಕ್ತಿಸಮೇತ ಸಾವಧಾನಭಕ್ತಿಯುಕ್ತವಾಗಿ
ಅಳಿದುಳಿದು ಅರ್ಪಿಸಿ ಭೋಗಿಸುತ್ತಿಹನು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಸಾದಿಶರಣ./258
ಆದಿ ಅನಾದಿಯಿಂದತ್ತತ್ತಲಾದ ಆ ಮಹಾಘನ ಬ್ರಹ್ಮವ
ತಂದೆನ್ನಂಗೈಯೊಳಗಿರಿಸಿದ ನೋಡಾ.
ಮೂದೇವರರಿಯದ ಅಸಮ ಚಿತ್ಪ್ರಣವಲಿಂಗವ
ಬೋದಿಸಿ ತಂದೆನ್ನ ಮನದಕೈಯೊಳಗಿರಿಸಿದ ನೋಡಾ.
ನಾದ ಬಿಂದು ಕಲಾತೀತ ಗಮನಾಗಮನ
ನಿರಂಜನ ಚನ್ನಬಸವಲಿಂಗನ ತಂದೆನ್ನಭಾವದಕೈಯೊಳಗಿರಿಸಿದ ನೋಡಾ.
ಎನ್ನ ಸರ್ವಾಂಗದೊಳಹೊರಗೆ ತಾನೇ ಪರಿಪೂರ್ಣನಾಗಿರ್ದ
ನಿರಂಜನ ಚನ್ನಬಸವಲಿಂಗವು ಬೆಳಗಿನ ಮಂಟಪದೊಳಗಿರ್ದು./259
ಆದಿ ಅನಾದಿಯಿಂದತ್ತತ್ತಲಾದ
ಮಹಾಘನಾನಂದಪ್ರಕಾಶಪ್ರಸಾದವ ಕಂಡ ಶರಣಂಗೆ,
ಬ್ರಹ್ಮ ವಿಷ್ಣು ಇಂದ್ರಾದಿ ಮನುಮುನಿಗಳ
ಅನಿತ್ಯಪದವೊಂದು ತೃಣವಾಗಿಪ್ಪುದು.
ಅದೇನು ಕಾರಣವೆಂದೊಡೆ : ಅನಂತ ಗುಣಧರ್ಮದಿಂದಾದ ಸಕಲ ಸಂಭ್ರಮವು,
ಅಂತಪ್ಪ ಶರಣ ತನ್ನ ವಿನೋದಕಾರಣ ಲೀಲೆಯನವಧರಿಸಿದನಲ್ಲದೆ,
ಮಲಬದ್ಧ ಮೂಢ ವೇಷಧಾರಿ ಪಾಷಂಡಿಗಳಂತೆ
ಹೊನ್ನೇ ಪ್ರಾಣ, ಮಣ್ಣೇ ಪ್ರಾಣವಾಗಿ,
ಸುಂಬಳದಲ್ಲಿ ಸಿಗಬಿದದ ಮಕ್ಷುಕನಂತೆ ಬಿದ್ದು ಹೋಗಬಂದವನಲ್ಲ.
ಮತ್ತೆಂತೆದೊಡೆ : ತನ್ನಂಶೀಭೂತರನರಸುತ್ತ ಅಡಿಗೆರಗಿನಿಂದವರಿಗೆ ಅನುವ ತೋರುತ್ತ,
ಘನಮಹಿಮ ಗುರುಚರಶೇಷಾಮೃತವ ಸೇವಿಸುತ್ತ
ತನತನಗೆ ಸುಜ್ಞಾನ ಸದ್ಭಕ್ತಿಯಿಂದರಿದು ಬಂದುದ ನೋಡಿ
ಪರಮವೈರಾಗ್ಯದಿಂದೆ ಕೈಕೊಂಡು ಪಾವನಸ್ವರೂಪನಾಗಿ ಚರಿಸುವ
ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ./260
ಆದಿ ಅನಾದಿಯಿಲ್ಲದಿಂದಲತ್ತ,
ಮೂದೇವರುದಯವಾಗದಿಂದಲತ್ತ,
ಸಚರಾಚರವೇನೂ ಇಲ್ಲದಿಂದಲತ್ತ,
ಲೋಕ ಲೌಕಿಕ ಸುಳುಹಿಲ್ಲದಿಂದಲತ್ತ,
ತತ್ವಮೊತ್ತಗಳಿಲ್ಲದಿಂದಲತ್ತ,
ಏನು ಏನೂ ಇಲ್ಲದಿಂದಲತ್ತ,
ನಿರ್ವಯಲ ನಿಜಾನಂದ ನಿರಂಜನ
ಚನ್ನಬಸವಲಿಂಗನೇ ತಾನಾಗಿರ್ದನು./261
ಆದಿ ಅನಾದಿವಿಡಿದು ಸಾಧಿಸಿಬಂದ ಪರಮರುದ್ರಾಕ್ಷಿಯನು
ಸದಮಲನಾಗಿ ಸರ್ವಾಂಗದಲ್ಲಿ ಧರಿಸಿ,
ಇಹಪರಾನಂದ ಸುಗ್ಗಿಯೊಳು ಸುಖವಡೆದೆ
ನಿರಂತರ ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ. /262
ಆದಿ ಮಧ್ಯ ಅವಸಾನವನರಿದು ಅಪ್ರತಿಮಲಿಂಗಸನ್ನಿಹಿತನಾದ ಶರಣ
ಒಳಗೆಂಬ ಕಳವಳವನರಿಯ.
ಪಂಚಾಚಾರಸ್ವರೂಪ ಕಂಗಳು ಹಿಂಗದಿರ್ದುದಾಗಿ
ಹೊರಗೆಂಬ ಸಟೆಭಾವ ದಿಟವಿಲ್ಲ.
ಪ್ರಾಣಲಿಂಗವೇದಿ ಪರಿಪೂರ್ಣ ತಾನಾಗಿ
ಕಂಡರ್ಪಿಸಿಕೊಂಡು ಸುಖಿಸಬೇಕೆಂಬ ಸಂಕಲ್ಪ ಸಂವಿತ್ತನಲ್ಲ.
ಗುರುನಿರಂಜನ ಚನ್ನಬಸವಲಿಂಗವೆಂಬ ಅಖಂಡಪ್ರಸಾದಕ್ಕೆ
ಅಂಗವಾಗಿರ್ದ ಅನುಪಮಪ್ರಸಾದಿ ಶರಣ./263
ಆದಿಗುರುವನಪ್ಪಿ ಮಾಡುವ ಭಕ್ತಿ ಅಂಗ ಆಪ್ತ ಸ್ಥಾನ ಸದ್ಭಾವವೆನಿಪ
ಚತುರ್ವಿಧಭಕ್ತಿ ದಿವ್ಯಪ್ರಕಾಶಮಯವಾಗಿ ತೋರುತಿಪ್ಪುದು.
ಅನಾದಿಪರಶಿವಲಿಂಗವನಪ್ಪಿ ಮಾಡುವ ಮಂತ್ರ ಧ್ಯಾನ ಜಪ ಸ್ತೋತ್ರವೆನಿಪ
ಚತುರ್ವಿಧಭಕ್ತಿ ಘನಪ್ರಕಾಶಮಯವಾಗಿ ತೋರುತಿಪ್ಪುದು.
ನಿರಂಜನ ಜಂಗಮವನಪ್ಪಿ ಮಾಡುವ ಕನಕ,
ಖಟ್ವಾಂಗಾದಿ ಹದಿನೆಂಟು,
ಮಹಾಘನಪ್ರಕಾಶಮಯವಾಗಿ ತೋರುತಿಪ್ಪುದು.
ಇಂತು ತನ್ನ ಗುರುಲಿಂಗಜಂಗಮಕ್ಕೆ ತನ್ನ ತಾ ಭಕ್ತಿಯ ಭಿನ್ನವಳಿದುಳಿದು
ಬಿನ್ನವಾಗಿ ಮಾಡುತಿರ್ದನ್ನು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./264
ಆದಿಗುರುವಿನ ಕೈಯಿಂದೆ ಅನಾದಿಲಿಂಗವ ಪಡೆದವರೆಂದು
ಭೇದಾಭೇದವನರಿಯದೆ ಸಾಧಿಸುವರು ತನುವಿಡಿದು ಇಂದ್ರಿಯ ಸುಖವ ;
ಭೇದಿಸುವರು ಮನವಿಡಿದು ಕಾರಣದ ಸುಖವ ;
ಆವೇದಿಸುವರು ಪ್ರಾಣವಿಡಿದು ವಿಷಯದ ಸುಖವ.
ಇದು ಕಾರಣ ಗುರುವೆಲ್ಲಿಹದೋ ! ಲಿಂಗವೆಲ್ಲಿಹದೋ !
ಜಂಗಮವೆಲ್ಲಿಹದೋ ! ಪ್ರಸಾದವೆಲ್ಲಿಹದೋ !
ಗುರುನಿರಂಜನ ಚನ್ನಬಸವಲಿಂಗದಲ್ಲಿ ಮುಕ್ತಿಯೆಲ್ಲಿಹದೋ !/265
ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾಧಿಸಿ ಕೈಗೊಟ್ಟ ಪರಿಯ ನೋಡಾ !
ಹಾದಿ ಬಟ್ಟೆಯ ಸಾಧಕರತ್ತ ಸವೆಯದೆ
ಮೂದೇವರ ಮಾಟದೊಳಗಿರ್ದು
ಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ./266
ಆದಿಮುಖದಿಂದೆ ಅಂಗ ಮನ ಪ್ರಾಣಂಗಳಲ್ಲಿ
ಅನುಭಾವಿಯಾಗಿ ಅರಿದುಂಬ ಘನವನರಿಯದೆ,
ಆ ಮಹಾಘನಪ್ರಕಾಶವ ಭಿನ್ನವಿಟ್ಟು ಕಂಡು ಕೂಡಿ ಸುಖಿಸೆನೆಂಬ
ಅಪಶಬ್ದ ನುಡಿಯ ಅಜ್ಞಾನಿಗಳಿಗತ್ತತ್ತಲಾದ
ಗುರುನಿರಂಜನ ಚನ್ನಬಸವಲಿಂಗ./267
ಆದಿಯ ಆಧಾರವಿಡಿದವರಿಗಸಾಧ್ಯವ ಸಾಧಿಸಿ ಕಂಡ ಶರಣ
ತನುವುಳ್ಳನ್ನಕ್ಕರ ಭಕ್ತಿಯಮಾಡಿ, ಮನವುಳ್ಳನ್ನಕ್ಕರ ಅರ್ಚನೆಯಮಾಡಿ,
ಪ್ರಾಣವುಳ್ಳನ್ನಕ್ಕರ ದಾಸೋಹವಮಾಡಿ, ಭಾವವುಳ್ಳನ್ನಕ್ಕರ ಸಮರಸಕ್ಕೆಯ್ದಬೇಕು.
ತನ್ನ ವಿನೋದ ಸೂಸಿಕೊಂಡಲ್ಲಿ ತನು ಇಷ್ಟಲಿಂಗೈಕ್ಯವು,
ಮನ ಪ್ರಾಣಲಿಂಗೈಕ್ಯವು, ಪ್ರಾಣವು ಭಾವಲಿಂಗೈಕ್ಯವು,
ಭಾವವು ಗುರುನಿರಂಜನ ಚನ್ನಬಸವಲಿಂಗೈಕ್ಯವಾದುದೇ
ಶರಣಂಗೆ ನಿಜೈಕ್ಯವು./268
ಆದಿಯ ಕುಳವನು ಆದಿ ಅನಾದಿಯಿಂದರಿದು,
ನಾದಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ.
ಅನಾದಿಯ ಕುಳವನು ಆದಿ ಅನಾದಿಯಿಂದರಿದು,
ಬಿಂದುಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ.
ಅತೀತ ಕುಳವನು ಆದಿ ಅನಾದಿಯಿಂದರಿದು,
ಕಳಾಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ.
ಇಂತು ಆದಿ ಅನಾದಿಯಿಂದೆ ಆದಿಯನರಿದು
ಅನಾದಿ ಗುರುನಿರಂಜನ ಚನ್ನಬಸವಲಿಂಗವಾದಾತನೇ ಶರಣ ಕಾಣಾ./269
ಆದಿಯ ನಲ್ಲನು ಹಾದಿಗೆ ಬಂದರೆ ಸಾದಿಸಿ ಕರೆತಂದುಕೊಡಿರಮ್ಮ.
ಎನಗೆ ಕುಸುಮಾಳಿ ಕಸ್ತೂರಿ ಚಂದನ ತೈಲವ
ತಾನರಿದು ಧರಿಸಿ ಮುಡಿಸಲಿ,
ಚಲುವಾಭರಣವ ತಾ ಮುಟ್ಟಿ ಧರಿಸಲಿ,
ಸೌಖ್ಯಗೀತ ನೂತನಾದಿಗಳ ತಾ ನೋಡಿ, ಕೇಳಿ, ತೋರಿ ತಿಳಿಸಲಿ.
ಸುಷಡುರಸವ ತಾ ರುಚಿಸೀಯಲಿ,
ಎನ್ನ ಸಕಲ ಸುಖಾನಂದವ ತಾ ಭೋಗಿಸೆನಗಿತ್ತರೆ
ಸಕಳೆಯರೊಲವೆನಗೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ. /270
ಆದಿಯ ಪ್ರಸಾದವ ಸಾಧಿಸಿಕೊಂಡು ಬಂದವರೆಂದು
ಸಮಯಾಚಾರದಲ್ಲಿ ಬಲ್ಲಬಲ್ಲಂತೆ ಅಲ್ಲಲ್ಲಿ ಗಾಚರಿಸಿ,
ಧೂಮ್ರ ಸೇವನೆ, ಭಂಗಿ, ಅಪು, ಮಧುಪಾನಕ, ನಾಶಿಕಹುಡಿಯನೇರಿಸಿಕೊಂಬ
ಕತ್ತೆ ಕರ್ಮಭವಿ ಶುನಕ ಜನರಿಗೆ ಸಾಧ್ಯವಪ್ಪುದೆ?
ಅಸಾಧ್ಯ ಅನುಪಮಪ್ರಸಾದ.
ಅನಾದಿ ಸಂಸಿದ್ಧ ನಿರಂಜನಪ್ರಸಾದಿಯೇ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಹಜ ಕಾಣಾ./271
ಆದಿಯ ಲಿಂಗವ ಸಾದಿಸಿಕೊಂಡ ಅಚ್ಚಮಹೇಶ್ವರನು
ಅಲ್ಲದಾಟವನಾಡುವನಲ್ಲ.
ಬಲ್ಲಿದ ಕ್ರಿಯಾಜ್ಞಾನಭರಿತನಾಗಿ,
ವೇದಾಂತ ಸಿದ್ಧಾಂತ ಯೋಗಮಾಗರ್ಿಗಳಿಗೆ ಹಿರಿದೆಂದು ಹೇಳಿಕೊಳ್ಳ.
ಗುರುಲಿಂಗಜಂಗಮದ ಭೃತ್ಯನಾಗಿ
ಷಟ್ಸಮಯಾಚಾರಮತವರಿಯ.
ಷಟ್ಸ್ಥಲಜ್ಞಾನಾನುಭವಿಯಾಗಿ,
ಪರಧನ ಪರಸ್ತ್ರೀ ಪರಭೂಮಿಗಿಚ್ಫೈಸುವನಲ್ಲ.
ಸರ್ವಾಚಾರಸಂಪತ್ತಿನೊಳಗಿರ್ದವನಾಗಿ
ಅನ್ಯಭವಿನುಡಿಗಡಣಕ್ಕಿಂಬುಗೊಟ್ಟವನಲ್ಲ
ಗುರುನಿರಂಜನ ಚನ್ನಬಸವಲಿಂಗ ನಾಮಸುಖಿ ತಾನಾಗಿ./272
ಆದಿಯಿಂದ ಹುಟ್ಟಿ ಅನಾದಿಯ ಹಿಡಿದು
ನಡೆಯಬಲ್ಲೆವೆಂಬ ಹಿರಿಯರು ಕೇಳಿಭೋ.
ತನುತ್ರಯ ಮನತ್ರಯ ಭಾವತ್ರಯ ಸಧರ್ಮದ್ರವ್ಯವ ಬಳಸದೆ
ನವವಿಧಭಕ್ತಿಯಿಂದೆ ಸೇವಿಸಿ ಸುಖಭರಿತನಾಗಲರಿಯದೆ,
ದಾಸೋಹಭಕ್ತಿಯ ಮಾಡುವೆನೆಂದು ಹೇಸದೆ
ಅಧರ್ಮ ಅವಿಚಾರಾದಿಗಳ ಬಗೆಬಗೆಯಿಂದೆ ಬಣ್ಣಿಸಿ,
ಕಾಸುಕಳಚಿಸಿ ಕೈಯಾಂತುಕೊಂಡು ಧೂಳಮೇಳ ಸಮೇತ
ಭಕ್ತಿಯೆಂದು ಮಾಡುವದು ಶಿವ ನುಡಿದಿಲ್ಲ ಗುರುವಾಕ್ಯವಿಲ್ಲ.
ಗುರುಲಿಂಗವರಿಯದ ಸಂತಸುಖಿಗಳ ಭಕ್ತಿ.
ಆ ಭಕ್ತಿ ಅಯೋಗ್ಯ ಕಾಣಾ ನಿಮ್ಮ ನಿಲುವಿಗೆ
ಗುರುನಿರಂಜನ ಚನ್ನಬಸವಲಿಂಗಾ./273
ಆದ್ಯರ ವಚನ ಎರಡೆಂಬತ್ತೆಂಟು ಕೋಟಿ
ನೋಡಿ ನೋಡಿ ದಣಿಯನೇಕೆ ? ಹಾಡಿ ಹಾಡಿ ದಣಿಯನೇಕೆ ?
ನೋಡಬಾರದು ಹಾಡಬಾರದು, ನಿಮ್ಮ ಶರಣರಿಗೆ ನೀವೊಲಿದುಕೊಂಡೆ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ./274
ಆದ್ಯರನುಭಾವ ಲಕ್ಷ ಬಂದಲ್ಲಿ ದಾಸೋಹಿಯಾಗಿರ್ದೆನು.
ವೇದ್ಯರನುಭಾವ ಲಕ್ಷ ಬಂದಲ್ಲಿ ಪೂಜಿತನಾಗಿರ್ದೆನು.
ಸಾಧ್ಯರನುಭಾವ ಲಕ್ಷ ಬಂದಲ್ಲಿ ಸೇವಕನಾಗಿರ್ದೆನು.
ನೂತನಪುರಾತನರನುಭಾವ ಲಕ್ಷ ಬಂದಲ್ಲಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸರ್ವಾಚಾರಸಂಪತ್ತಿನೊಳಿರ್ದೆ./275
ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ವೇದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ಸಾಧ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ನೂತನ ಪುರಾತನರು ಕೂಡಿ ಸೋತು ಮಾಡಿದನುಭಾವದಲ್ಲಿ
ಪರಮಸುಖಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗಾ./276
ಆದ್ಯರವಚನ ಸಾಧ್ಯವಾಯಿತೆಂದು
ಮದು ತಿಂದು ಕುಳಿತ ಮನುಜನಂತೆ,
ಇರುಳುಗಳೆದ ಗೂಗೆಯಂತೆ,
ಮೂಲಿ ಗೊಂದಿ ಗುಡ್ಡ ಗುಹ್ಯಂಗಳ ಸೇರಿ
ಮದಡು ತಿಳಿದು ಹಗಲುಗಳೆದು ಉದರ ಬಗೆವಂತೆ,
ದುವರ್ೈರಾಗ್ಯವುಳಿದು, ಮೊದಲ ಸಂದು ಮುಂದೆ ಹೋಗುವ
ತುಡುಗುಣಿ ಗುಹ್ಯವಾದನುಭಾವದ ಕುರುಹನವನೆತ್ತಬಲ್ಲನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ. /277
ಆಧಾರಚಕ್ರದಲ್ಲಿ ಅವಿರಳಪ್ರಕಾಶವನು ತೋರಿ ಬೀರಲಿಲ್ಲದ ಲಿಂಗವ
ಆಚಾರಮುಖದಲೈದಿ ಕಂಡು ಸುಖಿಸಬಲ್ಲರೆ ಪ್ರಾಣಲಿಂಗಿ.
ಸ್ವಾಧಿಷ್ಠಾನಚಕ್ರದಲ್ಲಿ ಬಹುಪ್ರಕಾಶವನು ತೋರಿ ಬೀರಲಿಲ್ಲದ ಲಿಂಗವ
ಮಂತ್ರಮುಖದಲೈದಿ ಕಂಡು ಸುಖಿಸಬಲ್ಲರೆ ಪ್ರಾಣಲಿಂಗಿ.
ಮಣಿಪೂರಕಚಕ್ರದಲ್ಲಿ ಅಗಣಿತಮಯಪ್ರಕಾಶವನು ಕಾಣಿಸಿಕೊಳ್ಳದ ಲಿಂಗವ
ನಿರೀಕ್ಷಣೆಮುಖದಲೈದಿ ಕಂಡು ಪರಿಣಾಮಿಸಬಲ್ಲರೆ ಪ್ರಾಣಲಿಂಗಿ.
ಅನಾಹತಚಕ್ರದಲ್ಲಿ ಅಚ್ಚಪ್ರಕಾಶವ ತೋರಿ ತೋರದ ಲಿಂಗವ
ಅಜನಮುಖದಲೈದಿ ಕಂಡು ಆನಂದಮಯನಾಗಬಲ್ಲರೆ ಪ್ರಾಣಲಿಂಗಿ.
ವಿಶುದ್ಧಿಚಕ್ರದಲ್ಲಿ ಘನಪ್ರಕಾಶವನು ತೋರಿ ನಿಲುಕದ ಲಿಂಗವ
ಅಂತಸ್ತೌತ್ಯಮುಖದಲೈದಿ ಕಂಡು ಪರಿಣಾಮಿಸಬಲ್ಲರೆ ಪ್ರಾಣಲಿಂಗಿ.
ಆಜ್ಞಾಚಕ್ರದಲ್ಲಿ ಮಹಾಘನಪ್ರಕಾಶವನು ತೋರಿ ಆರಿಸದ ಲಿಂಗವ
ಆನಂದಮುಖದಲೈದಿ ಕಂಡು ಹೆಚ್ಚಬಲ್ಲರೆ ಪ್ರಾಣಲಿಂಗಿ.
ಬ್ರಹ್ಮಚಕ್ರದಲ್ಲಿ ಅನಂತಪ್ರಕಾಶವ ತೋರಿ ತೋರದ ಲಿಂಗವ
ಪರಿಪೂರ್ಣಮುಖದಲೈದಿ ಕಂಡು ಆನಂದಿಸಬಲ್ಲರೆ ಪ್ರಾಣಲಿಂಗಿ.
ಶಿಖಾಚಕ್ರದಲ್ಲಿ ಅಖಂಡಪ್ರಕಾಶವನು ತೋರಿ ಕಾಣಿಸದ ಲಿಂಗವ
ಅರುವಿನಮುಖದಲೈದಿ ಕಂಡು ಸುಖಮಯನಾಗಬಲ್ಲರೆ ಪ್ರಾಣಲಿಂಗಿ.
ಪಶ್ಚಿಮಚಕ್ರದಲ್ಲಿ ಅಖಂಡ ಮಹಾಪ್ರಕಾಶವನ ತೋರಿ ಮೀರಿದ ಲಿಂಗವ
ಮಹದರುವಿನಮುಖದಲೈದಿ ಕಂಡು ಆಹ್ಲಾದಿಸಿಕೊಳಬಲ್ಲರೆ ಪ್ರಾಣಲಿಂಗಿ.
ಇಂತು ನವಚಕ್ರದಲ್ಲಿ ನವಪ್ರಕಾಶವಾಗಿ ತೋರಿ ಮೀರುವ ಅಪ್ರತಿಮಲಿಂಗವ
ಸದ್ಗುರುವಿನ ಮುಖದಲಿ ಕರಸ್ಥಲಕ್ಕೈದಿಸಿ
ಕಂಡು ವಿನೋದಮಯನಾಗಬಲ್ಲರೆ ಪ್ರಾಣಲಿಂಗಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ./278
ಆನೆಯ ವೇಷವತೊಟ್ಟು ಶ್ವಾನನಗತಿಯಲ್ಲಿ ಗಮನಿಸುವ
ಗಾವಿಲಮಾನವರಿಗೆ ಅವಿರಳ ಭಕ್ತಿ ಅಳವಡುವುದೆ ?
ನಡೆಯೊಂದುಪರಿ ನುಡಿಯೊಂದುಪರಿ ಹಿರಿಯರಡಿಗೆ
ಶರಣೆಂದು ನಡೆಯದೆ ಪರಯೋನಿಮುಖಜನಿತರಾದ ಪ್ರಾಣಿಗಳೆತ್ತ ಬಲ್ಲರಯ್ಯಾ
ಅನಾದಿಯ ಸ್ಥಲಗತಿಯ ಗುರುನಿರಂಜನ ಚನ್ನಬಸವಲಿಂಗಾ. /279
ಆಯತವಾದಲ್ಲಿ ಅರಿಯಲುಂಟೆ ?
ಸ್ವಾಯತವಾದಲ್ಲಿ ಸಂಶಯವುಂಟೆ ?
ಸನ್ನಿಹಿತವಾದಲ್ಲಿ ನೆರೆಯಲುಂಟೆ ?
ಸತ್ತವರ ಹೆಸರಹೊತ್ತು ನಡೆದು ಹೋದರೆ
ಕತ್ತೆ ನಾಯಿಜನ್ಮ ಕಡೆಗಾಣಬಾರದು.
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಕನು./280
ಆರಾರ ಮೇಲಿಂದತ್ತತ್ತ ತೋರುವ ನಿರವಯ ತಾನೆಂದರಿದ ಮೇಲೆ
ತನುವಿನಲ್ಲಿ ತಾಮಸ ಅವಿದ್ಯೆ ತೋರಲು ಕಾರಣವೇನು ?
ಪರಮಲೀಲಾಸ್ಪದಕ್ಕೆ ನಿಂದುದಾಗಿ.
ಮನದಲ್ಲಿ ಸಂಕಲ್ಪ ವಿಕಲ್ಪ ಕರಣಕರ್ಕಶ ಸುಳಿಯಲು ಕಾರಣವೇನು ?
ಶಿವಲೀಲಾ ಸೂಕ್ಷ್ಮಾಸ್ಪದಕ್ಕೆ ನಿಂದುದಾಗಿ.
ಭಾವದಲ್ಲಿ ವಿಷಯಭ್ರಾಂತಿ ಸೂಸಲು ಕಾರಣವೇನು ?
ಪರಶಿವಲೀಲಾ ಕಾರಣಾಸ್ಪದಕ್ಕೆ ನಿಂದುದಾಗಿ.
ಇಂತು ತೋರಲರಿಯದ ಠಾವಿನಲ್ಲಿ ತೋರಿಕಾಣಿಸಲು
ಶರಣಲಿಂಗಸಂಬಂದಿಗಳೆಂಬ ವಾಗದ್ವೈತಕ್ಕೆ ನಾಚಿಕೆ ಬಾರದೇಕೆ
ಗುರುನಿರಂಜನ ಚನ್ನಬಸವಲಿಂಗದಂಗವನರಿಯದ ಯೋನಿಸೂತಕರಿಗೆ ?/281
ಆರಾರಂಗದ ಸಂಗಕ್ಕೆ ನಿಲುಕದ ನಿರಾಮಯ ಲಿಂಗವೆನ್ನ
ಸಾರಾಯ ಗಮನಾಗಮನಕ್ಕೆಯ್ದಿದ ಪರಿಯ ನೋಡಾ !
ಅಯ್ಯಾ, ಎನ್ನ ಪ್ರಾಣನಾಥನ ಕೂಡಿ ಮಾತನಾಡುವೆ, ಅಗಲಲಿಂಬಿಲ್ಲದೆ.
ಅಯ್ಯಾ, ಎನ್ನ ಕೇಳಿಕೆಯಲ್ಲಿ ಕೂಡೆ ಕೇಳುವೆ ಬಿಡಲೆಡೆಯಿಲ್ಲದೆ.
ಅಯ್ಯಾ, ಎನ್ನ ನೋಟದಲ್ಲಿ ಕೂಡೆ ನೋಡುವ ತಪ್ಪಲುಳುವಿಲ್ಲದೆ.
ಅಯ್ಯಾ, ಎನ್ನ ಹಿಡಿತ ಬಿಡಿತಗಳಲ್ಲಿ ಕೂಡೆ ಮಾಡುವೆ ಬೇರೆಮಾಡಲನುವಿಲ್ಲದೆ.
ಅಯ್ಯಾ, ಎನ್ನ ಸಕಲ ನಿಃಕಲ ಸದ್ಗಂದವ ಕೂಡೆ ಸುಖಿಸುವೆ ಬೆಚ್ಚಲಿಂಬಿಲ್ಲದೆ,
ಅಯ್ಯಾ, ಎನ್ನಂತಬರ್ಾಹ್ಯಾದವಿರಳಾನಂದವನು ಕೂಡೆ ಪರಿಣಾಮಿಸುವೆ
ಬೇರ್ಪಡಿಸಲೆಡೆಯಿಲ್ಲದೆ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ./282
ಆರಾರರಿಂದೆ ಮೀರಿದ ಅಪ್ರತಿಮಲಿಂಗವ ಆರಿಸಿಕೊಂಡ ಬಳಿಕ
ಅರಿದರಿದಾಚರಿಸಲರಿಯದೆ,
ಪುರಾಣವಾಕ್ಯವನರಿದು ಕಾಂಬುವೆನೆಂದು
ಸತ್ಕ್ರಿಯಾ ಸುಜ್ಞಾನ ಬಾಹ್ಯನಾಗಿ,
ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಗಳೆಂಬ
ಅಷ್ಟಾಂಗಯೋಗಾಭ್ಯಾಸದಿಂದ ಕಷ್ಟ ಕಡೆಗಾಣದೆ
ಕೆಟ್ಟು ಹೋಗಿಬರುವ ಮಿಟ್ಟೆಯ ಭಂಡರ ಎನಗೊಮ್ಮೆ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ./283
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು,
ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆ
ಒಂದೂ ಆಶ್ಚರ್ಯ ತೋರದು,
ಅದೇನು ಕಾರಣವೆಂದೊಡೆ,
ತಾನೆ ಹರಿ ವಿಧಿ ಸುರಾದಿ ಮನುಮುನಿ
ಸಕಲಕ್ಕೂ ಆಶ್ಚರ್ಯವಾದ ಕಾರಣ.
ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ.
ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರಧಿತಾಣ ಸ್ಥಾವರಕ್ಷೇತ್ರ
ನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬ
ಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾ
ಗುರುನಿರಂಜನ ಚನ್ನಬಸವಲಿಂಗಕ್ಕೆ./284
ಆರು ಕಮಲದ ಶತಪತ್ರದ ತ್ರಿದಳದೊಂದೆಸಳದ
ಅವಿರಳಾಲಯದಿಂದೆಸವ ಪರಬ್ರಹ್ಮವು
ಕ್ರಿಯಾಜ್ಞಾನ ಭಾವಾಚರಣೆಗೆ ಕೂರ್ತು ಕರಸ್ಥಲಕ್ಕೆ ಬಂದಬಳಿಕ
ಕಣ್ಮನ ಭಾವ ತುಂಬಿ ಪ್ರಾಣವೇದಿಯಾಗಿರಬೇಕಲ್ಲದೆ
ದ್ವೈತಾದ್ವೈತ ಯೋಗಮಾರ್ಗವಿಡಿದು
ಬ್ರಹ್ಮರಂಧ್ರದಲ್ಲಿಪ್ಪ ಚಿತ್ಕಳೆಯ ಕಂಡು ಕೂಡಿ ಮುಕ್ತನಾಗಬೇಕೆಂಬ
ಪಶುಪ್ರಕೃತಿಗಳನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ. /285
ಆರುಬಣ್ಣದ ಸೀರೆಯನುಟ್ಟು ಭೂಪಾಲನ ಮಡದಿ,
ತನ್ನ ಕೈಯಲ್ಲಿ ಆರುರತ್ನವ ಹಿಡಿದಿರ್ದಳು ನೋಡಾ !
ಒಂದೊಂದು ರತ್ನವ ತೋರುವಲ್ಲಿ
ಒಂದೊಂದು ಸೋಂಗ ತಾಳಿದಳು ನೋಡಾ !
ಅವಳು ನಟನೆಯ ಮಾಡುವಲ್ಲಿ ಪರಪುರುಷರ ಮೇಲೆ ಮೋಹ ನೋಡಾ !
ಮನೆಗಂಡನುಪಚಾರವನುಳಿದು ಪರಪುರುಷರ ಮೆಚ್ಚಿ ಬಿಡದೆ
ಅಚ್ಚೊತ್ತಿದಂತಿರ್ದಡೆ ಅರಿದವರು ನಗುವರು.
ಲೌಕಿಕರು ತಲೆತಗ್ಗಿಸಿ ನಾಚುವರು,
ನಮ್ಮ ಗುರುನಿರಂಜನ ಚನ್ನಬಸವಲಿಂಗ ನೋಡಿ ಅಪ್ಪಿಕೊಂಡನು./286
ಆರೆತ್ತಿನ ಹರದಂಗೆ
ನೂರೊಂದು ಬಗೆಯಲ್ಲಿ ಕೊಳುತಿರ್ದನೊಬ್ಬ ರಾಜ.
ಐವತ್ತಾರು ದೇಶದೊಳಗೆ ಹೆಂಡರ ಕುಶಲತ್ವದಿಂದೆ ಹರದ ಬಾಳಿ,
ಹಿರಿಯ ಮನೆಯೊಳಗೆ ಚರಣಗಳನೂರಿ ನೆರೆಯಲು
ಸಂಬಂಧವಾಯಿತ್ತು ಪ್ರಾಣಲಿಂಗ
ಗುರುನಿರಂಜನ ಚನ್ನಬಸವಲಿಂಗದಲ್ಲಿ./287
ಆರೈಕ್ಯವನರಿದುಬಂದರೆ ಭಕ್ತಲಿಂಗೈಕ್ಯವೆಂಬೆ.
ಆರೈಕ್ಯವನರಿದುಬಂದರೆ ಮಹೇಶ್ವರಲಿಂಗೈಕ್ಯವೆಂಬೆ.
ಆರೈಕ್ಯವನರಿದುಬಂದರೆ ಪ್ರಸಾದಿಲಿಂಗೈಕ್ಯವೆಂಬೆ.
ಆರೈಕ್ಯವನರಿದುಬಂದರೆ ಪ್ರಾಣಲಿಂಗಿಲಿಂಗೈಕ್ಯವೆಂಬೆ.
ಆರೈಕ್ಯವನರಿದುಬಂದರೆ ಶರಣಲಿಂಗೈಕ್ಯವೆಂಬೆ.
ಆರೈಕ್ಯವನರಿದುಬಂದರೆ ನಿಜೈಕ್ಯವೆಂಬೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ./288
ಆಸೆಗೆ ವೇಷವಹೊತ್ತು ಅಷ್ಟಮದವೇ ಅಂಗವಾಗಿ,
ಪಂಚಸೂತಕವೆ ಪ್ರಾಣವಾಗಿ, ವಂಚನೆಯೇ ಮುಖವಾಗಿ,
ತಾನೊಂದು ಕಾಯನಾಗಿ ಮಾಡುವ ಮಾಟ ಭವದ ಬೇಟ.
ಈ ಗತಿ ದುರ್ಗತಿ, ಸ್ಥಲನಾಮ ಸಲ್ಲದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./289
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು
ಸಹಜವನೆತ್ತ ಬಲ್ಲರಯ್ಯಾ ?
ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ
ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ
ಲಿಂಗದ ನಿಜವ ?
ಅರ್ಥವ ಹಿಡಿದು, ಅರಿವ ಮರೆದು, ಕತರ್ುಗಳಾಪ್ಯಾಯನವರಿಯದ
ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ
ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ./290
ಆಸೆಯುಳ್ಳರೆ ಭಕ್ತನೆಂಬೆ,
ರೋಷವುಳ್ಳರೆ ಮಹೇಶ್ವರನೆಂಬೆ,
ಆಲಸ್ಯವುಳ್ಳರೆ ಪ್ರಸಾದಿಯೆಂಬೆ,
ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ,
ಸಂಸಾರವುಳ್ಳರೆ ಶರಣನೆಂಬೆ,
ಸಂಗವುಳ್ಳರೆ ಐಕ್ಯನೆಂಬೆ.
ಇಂತಿವು ಶೂನ್ಯವಾದರೆ ಆರೂಢನೆಂಬೆ
ಗುರುನಿರಂಜನ ಚನ್ನಬಸವಲಿಂಗದ
ಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ./291
ಆಹಾ ಎನ್ನಪುಣ್ಯದ ಫಲ !
ನಿರಾಕಾರ ಗುರುವೆನಗೆ ಸಾಕಾರವಾಗಿ ಬಂದುದು.
ಆಹಾ ಎನ್ನ ಬಹುಜನ್ಮದ ತಪಸ್ಸಿನ ಫಲ !
ನಿರವಯಾನಂದ ನಿಜವೆನಗೆ ಸಾಧ್ಯವಾದುದು.
ಆಹಾ ಎನ್ನ ಭಾಗ್ಯದ ನಿಧಿಯೆನಗಿತ್ತ
ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುದೇವನು./292
ಆಳಿದೊಡೆಯರು ಮೇಳೈಸಿ ಕೆಳಗೆ ಬಂದಲ್ಲಿ
ನಾಳೆಂದರೆ ಹಾಳಾಗಿ ಹೋಯಿತ್ತೆನ್ನ ಪತಿಭಾವದ ಬಾಳುವೆ.
ಅಳಿಯಾಸೆಯೆಂಬ ಸುಳುಹೆನ್ನ ಕೆಡಿಸಿತ್ತು,
ಎನಗೆಂತು ಭಕ್ತಿಸಂಭವಿಸುವದು !
ಎನಗೆಂತು ಯುಕ್ತಿ ಸಂಭವಿಸುವದು !
ತಪ್ಪೆನ್ನದು ತಪ್ಪೆನ್ನದು ಬಟ್ಟೆಗೆಟ್ಟು ಬಿದ್ದೆ ನಿಮ್ಮೊಳಗೆ
ಗುರುನಿರಂಜನ ಚನ್ನಬಸವಲಿಂಗಾ./293
ಇಂದ್ರಿಯಂಗಳ ಗಮನಗೆಡದೆ ಕರಣಂಗಳ ಸೂತಕ ಕಡೆಗಾಗದೆ
ಆತ್ಮನ ಕುರುಹು ಅಡಗದೆ ಬರಿದೆ ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ !
ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ!
ಒಂದುವನರಿಯದೆ ಹಿಂದಿನ ಸರಮಾಲೆಯ ಸಂಕೋಲೆಯೊಳಗಾಗಿ
ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ./294
ಇಂದ್ರಿಯಂಗಳಲ್ಲಿ ಸುಳುಹಿಲ್ಲ, ಕರಣಂಗಳಲ್ಲಿ ಉಲುಹಿಲ್ಲ,
ವಿಷಯಂಗಳಲ್ಲಿ ರತಿಯಿಲ್ಲ, ಕಾಯದಲ್ಲಿ ಭಾವವಿಲ್ಲ,
ಭಾವದಲ್ಲಿ ಭ್ರಮೆಯಿಲ್ಲ, ಎಂತಿರ್ದಂತೆ ನಿಜ.
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ
ಗಜಭಕ್ತಕಂಪಿತದಂತೆ ಇರ್ದ ನೋಡಾ./295
ಇಂದ್ರಿಯಂಗಳುಂಟು ಭಾವನಾಸ್ತಿ.
ಕರಣಂಗಳುಂಟು ಮನನಾಸ್ತಿ.
ವಿಷಯಂಗಳುಂಟು ಪ್ರಾಣನಾಸ್ತಿ.
ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ
ನೀನುಂಟು ಶರಣನಾಸ್ತಿ./296
ಇಂದ್ರಿಯವನರಿಯದೆ ಲಿಂಗವ ಬಲ್ಲ ಶರಣ,
ಕರಣವನರಿಯದೆ ಲಿಂಗವ ಬಲ್ಲ ಶರಣ,
ವಿಷಯಂಗಳವನರಿಯದೆ ಲಿಂಗವ ಬಲ್ಲ ಶರಣ,
ತನ್ನನರಿಯದೆ ಗುರುನಿರಂಜನ ಚನ್ನಬಸವಲಿಂಗವ ಬಲ್ಲ ಶರಣ./297
ಇಂದ್ರಿಯವಿಷಯಂಗಳನರಿಯದ ತತ್ವ ಇಷ್ಟಲಿಂಗದ ನೆಲೆವನೆ.
ಇಂದ್ರಿಯವಿಷಯಂಗಳನರಿಯದ ತತ್ವ ಪ್ರಾಣಲಿಂಗದ ನೆಲೆವನೆ.
ಇಂದ್ರಿಯವಿಷಯಂಗಳನರಿಯದ ತತ್ವ ಭಾವಲಿಂಗದ ನೆಲೆವನೆ.
ಮತ್ತೆ ಇಂದ್ರಿಯವಿಷಯಂಗಳನರಿಯದ ತತ್ವ
ಪಂಚಾಕ್ಷರಮೂರ್ತಿಲಿಂಗವ ಹಿಂಗದಂಗವದೆ ನಿರುತ ಕಾಣಾ./298
ಇಂದ್ರಿಯಾನಂದವೆಂಬಲಿಂಗಸನ್ನಿಹಿತ ಅಯತವೆಂಬ ಶರಣ ನೋಡಾ.
ಪ್ರಾಣಾನಂದವೆಂಬಲಿಂಗಸಮೇತ ಸ್ವಾಯತನೆಂಬ ಶರಣ ನೋಡಾ.
ಜ್ಞಾನಾನಂದವೆಂಬಲಿಂಗಸಂಯುಕ್ತ ಸನ್ನಿಹಿತನೆಂಬ ಶರಣ ನೋಡಾ.
ಭಾವಾನಂದವೆಂಬಲಿಂಗಸಂಯುಕ್ತ ಕಳಾಗ್ರಾಹಕನೆಂಬ ಶರಣ ನೋಡಾ.
ತೂರ್ಯಾನಂದವೆಂಬಲಿಂಗಸಮೇತ ಮನೋಮಗ್ನತೆಯೆಂಬ ಶರಣ ನೋಡಾ.
ಮಹದಾನಂದವೆಂಬಲಿಂಗಸನ್ನಿಹಿತ ಘನಸಮರಸವೆಂಬ ಶರಣ ನೋಡಾ.
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ
ನಿರ್ಮಾಯನೆಂಬ ಶರಣ ನೋಡಾ. /299
ಇಕ್ಷುವಿನ ಭಾವ ತಪ್ಪಿ ಗುರುವಿನೊಳೈಕ್ಯವೆಂಬುದೊಂದು ಹುಸಿ,
ಚಂದನದ ಭಾವ ತಪ್ಪಿ ಲಿಂಗದೊಳೈಕ್ಯವೆಂಬುದೊಂದು ಹುಸಿ,
ಹೇಮದ ಭಾವ ತಪ್ಪಿ ಜಂಗಮದೊಳೈಕ್ಯವೆಂಬುದೊಂದು ಹುಸಿ,
ಅದೆಂತೆಂದೊಡೆ, ಶುದ್ಭ ಸಿದ್ಧ ಪ್ರಸಿದ್ಧ ಸಂಬಂಧವಿಲ್ಲವಾಗಿ
ಗುರುನಿರಂಜನ ಚನ್ನಬಸವಲಿಂಗವೆಂಬ ಮಹಾಘನ
ಪ್ರಸಾದದೊಳೈಕ್ಯವೆಂದಿಗೂ ಇಲ್ಲ ನೋಡಾ./300
ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ,
ಶರ್ಕರದೊಳಗೆ ಇಕ್ಷುವಿನ ಕಂಡವರುಂಟೆ ?
ಕ್ಷೀರದೊಳಗೆ ಘೃತವ ಕಾಣಬಹುದಲ್ಲದೆ,
ಘೃತದೊಳಗೆ ಕ್ಷೀರವ ಕಂಡವರುಂಟೆ ?
ಶುಕ್ತಿಯೊಳಗೆ ಮೌಕ್ತಿಕವ ಕಾಣಬಹುದಲ್ಲದೆ,
ಮೌಕ್ತಿಕದೊಳಗೆ ಶುಕ್ತಿಯ ಕಂಡವರುಂಟೆ ?
ಸಂಸಾರದೊಳಗೆ ಶರಣನ ಕಾಣಬಹುದಲ್ಲದೆ,
ಶರಣನೊಳಗೆ ಸಂಸಾರವ ಕಂಡವರುಂಟೆ?
ಮೂರು ಲೋಕದೊಳಗೆ ಇಲ್ಲ ಇಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗ ಸಂಸಾರ ಶರಣ./301
ಇಡಹೇಳಿದೊಡವೆಯ ಕೊಡುವಾತನ ಭಾವ ಹೋಲಲರಿಯರು.
ಕಡಬಡ್ಡಿಯ ಕೊಡುವನ ಹೃದಯದಂತೆ
ಲೋಕ ಲೌಕಿಕ ಪ್ರಾಣಿಗೆ ಯಾಕೆ ಸ್ಥಲ ?
ಏನು ಕಾರಣ ಹೇಳಾ ಗುರುನಿರಂಜನ ಚನ್ನಬಸವಲಿಂಗಾ ! /302
ಇತರನರಿಯದ ಇತರ ಮರೆಯದ ಪತಿವ್ರತಾಂಗನೆಯೆನಿಪ,
ಖತಿ ಕೇಣಾದಿಗಳ ಜರಿದಿರವನುಳ್ಳ
ಪರಮಭಕ್ತನ ಪರಿಯನೇನೆಂದುಪಮಿಸುವೆನಯ್ಯಾ?
ಹತ್ತಿ ಹತ್ತಿ ಬಂದು ಸುತ್ತಲಿಕ್ಕಿ ಎತ್ತಿ ಮುಳುಗುವ
ನಿತ್ಯಭಕ್ತಂಗೆ ನಮೋ ನಮೋ ಎಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./303
ಇಪ್ಪತ್ತೈದು ಬಿಳಿಯ ಮೂರುಗಾಲಿಯ ರಥದ ಮೇಲೆ
ಮುತ್ತಿನ ಚಂಡು ಕೈಯಲ್ಲಿ ಹಿಡಿದು
ಕಾಸಭೋಗದ ತೋಂಟದೊಳಗೆ ಕದಳಿಯ ಬನವ ಸುತ್ತಿ
ವಯ್ಯಾಳಿಯ ಮಾಡುವ ವೀರಮಾಹೇಶ್ವರ ರಾಹುತನ ನೋಡಲು
ಕಾಲಿಲ್ಲದೆ ನಡೆವರಿಗೆ ಪ್ರಿಯ,
ಕೈಯಿಲ್ಲದೆ ಮುಟ್ಟುವರಿಗೆ ಸ್ನೇಹ,
ಕಣ್ಣಿಲ್ಲದೆ ನೋಡುವರಿಗೆ ಪ್ರೀತ,
ಕಿವಿಯಿಲ್ಲದೆ ಕೇಳುವರಿಗೆ ಸುಖ,
ಬಾಯಿಲ್ಲದೆ ಸವಿವರಿಗೆ ಮಚ್ಚು,
ಗುರುನಿರಂಜನ ಚನ್ನಬಸವಲಿಂಗದಂಗಕ್ಕೆ ಅಚ್ಚು./304
ಇರುಳಿನಿಂದೆದ್ದು ಬಂದು ಸತ್ತು, ಹುಟ್ಟಿ,
ತಾಯಿ ಭಾವನ ಮಗನ ಹಡೆದಾಳು ನೋಡ !
ಹಡೆದ ಮಗನ ಕೈಯಲ್ಲಿ ಹಿಡಿದು ಬೀದಿ ಬಾಜಾರ
ಕೇರಿ ಕೇರಿಯಲ್ಲಿ ಮುದ್ದಾಡಲು,
ಮಾತೆಯ ತಕರ್ೈಸಿ ಒಳಗೊಯ್ದು ನೆರೆದು
ಹೆರೆಹಿಂಗದೆ ಮಾವ ಮುತ್ತೆಯರಿಗೊಂದಾಗಿ ಮಾಡಿ ಶರಣೆಂದರೆ
ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು./305
ಇರ್ದ ಸಂಸಾರವನೊದ್ದುಕಳೆಯದೆ
ಇಲ್ಲದ ಶುದ್ಧನ ಮಾಡಿದೆನೆಂಬ ನುಡಿ ಅಶುದ್ಧ ಕಾಣಾ.
ಅದೆಂತೆಂದೊಡೆ, ಕಾಯಕ್ಕುಪದೇಶವ ಮಾಡಿದಡೆ
ಆ ಕಾಯವು ಗುರುಲಿಂಗ ಚರಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ.
ಭಾವಕ್ಕುಪದೇಶವ ಮಾಡಿದಡೆ
ಆ ಭಾವ ಚರಗುರು ಲಿಂಗಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ.
ಬೆಂಕಿಯಿಲ್ಲದೆ ಸದೆಯ ದಹಿಸಿದವರುಂಟೆ ?
ನಿನ್ನ ನಿಷ್ಠೆ ಆತನ ಸ್ಪಷ್ಟ, ನೀನು ನಿನ್ನಂತೆ ಆತ ತನ್ನಂತೆ.
ನಮ್ಮ ಗುರುನಿರಂಜನ ಚನ್ನಬಸವಲಿಂಗ ಸಹಜನಂತೆ./306
ಇಲಿ ಬೆಕ್ಕ ನುಂಗಿ ಕರಿಯಿರುವೆಯೊಳಡಗಿ
ನೀರಸಕ್ಕರೆಯ ಸವಿವುದ ಕಂಡೆ.
ಕಲ್ಲುಹೋರಿನಲ್ಲಿ ನಿಶಾಕರನುದಯವಾಗಿ
ಬೆಳುದಿಂಗಳದೊಳಗೆ ದಿವಾಕರನುದಯವಾದುದ ಕಂಡೆ.
ಬಿಸಿಲು ಆವರಿಸಿದಲ್ಲಿ ಇಲಿ ಸತ್ತು, ಮಾಜರ್ಾಲವೆದ್ದು, ಕರಿಯಿರುವೆಯ ಕೊಡಹಿ,
ನೀರಸಕ್ಕರೆಯ ಚರಣದಲ್ಲೊದೆದು
ಕಲ್ಲುಹೋರು ಕರಗಿ ಕಸವಳಿದಲ್ಲಿ ಬಯಲಬೊಂಬೆಯ ಸಂಗವಮಾಡಿ
ನಿರ್ವಯಲರೂಪು ಸುತನ ಹಡೆದುದ ನೋಡಿ
ರತಿತ್ರಯವೇದಿ ಕುಚಗಳನೊತ್ತಿ ನೆರೆಯಲಾಗಿ
ಸತಿಪತಿ ತೋರಲೊಲ್ಲದೆ ಸ್ತ್ರೀಯಳಿದು ಪುರುಷನಾಗಿ ಸತ್ತಲ್ಲಿ
ಗುರುನಿರಂಜನ ಚನ್ನಬಸವಲಿಂಗ ತಾನೆ./307
ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ
ಕೆಟ್ಟ ಪಾತಕರ ನೋಡಲಾಗದು.
ಜಂಗಮವೆಂದು ಮಾಡಲಾಗದು ಪೂಜೆಯ.
ನಮಿಸಿಕೊಳ್ಳಲಾಗದು ಹರನೆಂದು.
ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ.
ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ,
ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ./308
ಇಷ್ಟಲಿಂಗವನರಿಯದೆ ಕಷ್ಟದಿಂದೆ ಕಷ್ಟವ ಕಾಂಬ ಅಷ್ಟಾಂಗಬದ್ಧರು,
ಮುಟ್ಟಿ ಮುಟ್ಟಿ ಮುಟ್ಟುವ ಶ್ರೇಷ್ಠಗತಿಗಳರಿಯಬಲ್ಲರೆ ?
ಮರಳಿ ಮರಳಿ ಹಗಲಿರುಳು ನೆರೆದಿರುವ ಬರಿ ಸಿರಿಸಂಪನ್ನರೆತ್ತ ?
ಇಂದು ರವಿ ಕಳೆಯಗಲದೆ ಕಂಡು ಸುಖಿಸುವ
ಮಹಾನುಭಾವಿ ಮಹೇಶ್ವರನೆತ್ತ?
ಗುರುನಿರಂಜನ ಚನ್ನಬಸವಲಿಂಗದಲ್ಲಿ./309
ಇಷ್ಟಲಿಂಗವನು ಅಂಗದ ಮೇಲೆ ಧರಿಸಿಕೊಂಡು
ಸೃಷ್ಟಿಯೊಳುಳ್ಳ ಸ್ಥಾವರಕ್ಕೆ ಮೆಚ್ಚಿ ಮಾಡಿ,
ಮುಕ್ತಿಯ ಕಂಡವರುಂಟೆ ಮೂಜಗದೊಳಗೆ ?
ಬಲ್ಲರೆ ಹರಗುರುವಾಕ್ಯದಲ್ಲಿ ತೋರಿ ನಾಚಿಸುವುದು,
ಇಲ್ಲದಿರ್ದಡೆ ನಿಮ್ಮ ಮುಖದಲ್ಲಿ ಮಾಯೋಚ್ಫಿಷ್ಟ.
ಅದಲ್ಲದೆ ಶೈವರಿಗೆ ಸಲ್ಲುವ ಮಾರ್ಗ ನಮಗುಂಟೆಂದು
ಬರುನುಡಿಯ ಬೊಗಳಿದರೆ ಕತ್ತೆ ನಾಯಿ ಗೂಗಿಗಳೆಂದು ಹರಿದುನೂಕುವನತ್ತ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./310
ಇಹದ ಪ್ರಸಾದಭೋಗ, ಪರದ ನಿಜಮೋಕ್ಷ,
ಮಧ್ಯಸುಖಮಯವೆಂಬ – ಈ ತ್ರಿವಿಧ ಚರಿತೆಯೊಳಗೆ
ಬೇಡ ಬೇಡ ಭಕ್ತಭವಿಯ ಶಿವಾನುಭಾವ.
ಬರಿಯ ಗೋಷ್ಠಿಯ ಬಯಲುರತಿಯ ಸಂಸಾರ ಸುಖವ
ಸದ್ಭಕ್ತಿ ತನುದಂಡನೆ ಗುರುನಿರಂಜನ ಚನ್ನಬಸವಲಿಂಗ
ಸನ್ನಿಹಿತ ಹುಚ್ಚು ಮರುಳು./311
ಇಹ-ಪರದ ಪರಿಮಳನಲ್ಲ, ಪುಣ್ಯ-ಪಾಪದ ಪರಿಮಳನಲ್ಲ,
ಮಾಟ-ನೋಟದ ಪರಿಮಳನಲ್ಲ, ಕೋಟಲೆ ಕೂಟದ ಪರಿಮಳನಲ್ಲ,
ಗುರುನಿರಂಜನ ಚನ್ನಬಸವಲಿಂಗಕ್ಕೆ ಸಲ್ಲಿದ ಪರಿಮಳ ಕಾಣಾ./312
ಇಳೆಯಮೇಲೆ ಎಲುವಾಲದ ಮರನಿರ್ದುಫಲವೇನು ?
ಸಾರಾಯಹೀನ ಕಾಯದಮೇಲೆ ಲಾಂಛನವಿರ್ದು ಫಲವೇನು ?
ಭಕ್ತಿ ಜ್ಞಾನ ವೈರಾಗ್ಯಹೀನ ಭಾರ ಭಾರ ಭವಭಾರ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./313
ಈ ತನುವುಳ್ಳವರನಾ ತನುವುಳ್ಳವರು ಹೋಲಬಲ್ಲರೆ ?
ಈ ಮನವುಳ್ಳವರನಾ ಮನವುಳ್ಳವರು ಹೋಲಬಲ್ಲರೆ ?
ಈ ಪ್ರಾಣವುಳ್ಳವರನಾ ಪ್ರಾಣವುಳ್ಳವರು ಹೋಲಬಲ್ಲರೆ ?
ಈ ಭಾವವುಳ್ಳವರನಾ ಭಾವವುಳ್ಳವರು ಹೋಲಬಲ್ಲರೆ ?
ಇದು ಕಾರಣ, ಈ ಸಿಂಹ ಗಜವನಾ ಶುನಕ ಸೂಕರ ಹೋಲಬಲ್ಲವೇನು ?
ಗುರುನಿರಂಜನ ಚನ್ನಬಸವಲಿಂಗಾ ಈ ಶರಣನಾನರನು ಹೋಲಬಲ್ಲನೆ ?/314
ಈ ಪೃಥ್ವಿಯಲ್ಲಿ ಆರೂ ಕಾಣಬಾರದುದ ಕಂಡು
ಶರಣೆಂದು ಸುಖಿಸಿ ಮೈಮರೆತಿರ್ನೆ ಕಾಣಾ.
ಈ ವನದಲ್ಲಿ ಆರೂ ಅರಿಯಬಾರದುದನರಿದು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ಧನಂಜದಲ್ಲಿ ಆರೂ ನೋಡಬಾರದುದ ನೋಡಿ
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ವಾತದಲ್ಲಿ ಆರೂ ತಿಳಿಯಬಾರದುದ ತಿಳಿದು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ನಭದಲ್ಲಿ ಆರೂ ಕಾಣಬಾರದುದ ಕಂಡು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ಆತ್ಮನಲ್ಲಿ ಆರೂ ಅರಿಯಬಾರದುದನರಿದು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ಸಕಲದಲ್ಲಿ ಆರೂ ನೋಡಬಾರದುದ ನೋಡಿ
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ನಿಃಕಲದಲ್ಲಿ ಆರೂ ಅರಿಯಬಾರದುದನರಿದು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಈ ನಿರಾವಯದಲ್ಲಿ ಆರೂ ತಿಳಿಯಬಾರದುದ ತಿಳಿದು
ಶರಣೆಂದು ಸುಖಿಸಿ ಮೈಮರೆದಿರ್ನೆ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ./315
ಈ ಸಂಸಾರಸುಖವ ಮೆಚ್ಚಿ ಮುಂದೇನರಿಯದೆ ಬಂದುಂಡು
ತೊಳಲಿ ಹೋಗುವರು ; ಇನ್ನೆಂದು ಕಳೆದು ಕಾಂಬುವರಯ್ಯಾ ?
ಪರಿಪರಿಯ ಮಿಥ್ಯ ಕುರುಹಿಂಗೆ ಹರಿಹರಿದು ನೆರೆದು,
ಕಿಚ್ಚಿನೊಳು ಅಚ್ಚುತಗೊಂಡು
ಅರಿಯದಾದರು ನಿರಂಜನ ಚನ್ನಬಸವಲಿಂಗಾ./316
ಉಚ್ಫಿಷ್ಟವ ಕಳೆದುಳಿದ ಪದಾರ್ಥ ಪ್ರಸಾದವಾಗಿ ನಿಂದಲ್ಲಿ
ಅಂಗವೆನ್ನೆ ಲಿಂಗವೆನ್ನೆ ಹಸ್ತವೆನ್ನೆ ಮುಖವೆನ್ನೆ ಶಕ್ತಿಯೆನ್ನೆ ಭಕ್ತಿಯೆನ್ನೆ
ಅಷ್ಟಾವಧಾನವಿಲ್ಲದೆ ನೆಟ್ಟನೆ ಗುರುನಿರಂಜನ ಚನ್ನಬಸವಲಿಂಗವಾಗಿ
ಹಿಂಗಿನುಡಿವ ಶಬ್ದಕ್ಕೆ ಇಂಬುಗಾಣೆ./317
ಉಚ್ಫಿಷ್ಟವ ಕಳೆದುಳಿದು ಪದಾರ್ಥ ಪ್ರಸಾದವಾಗಿ ನಿಂದಲ್ಲಿ
ಅಂಗವೆನ್ನೆ ಲಿಂಗವೆನ್ನೆ ಹಸ್ತವೆನ್ನೆ ಮುಖವೆನ್ನೆ ಶಕ್ತಿಯೆನ್ನೆ ಭಕ್ತಿಯೆನ್ನೆ
ಅಷ್ಟಾವಧಾನವಿಲ್ಲದೆ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ
ಹಿಂಗಿನುಡಿವ ಶಬ್ದಕ್ಕೆ ಇಂಬುಗಾಣೆ ನೋಡಾ./318
ಉದಕದಲ್ಲುದಯಿಸಿದ ಪ್ರಾಣಿಗಳು
ಉದಕದಲ್ಲಿ ಸ್ಥಿತಿ, ಉದಕದಲ್ಲಿ ಮರಣವಲ್ಲದೆ ಬೇರೆ ಹೇಳಲುಂಟೆ?
ದುರ್ಮಾಯಾ ಸಂಸಾರದಲ್ಲಿ ಹುಟ್ಟಿದ ಅನಿತ್ಯಜನರಿಂಗೆ
ಆ ದುರ್ಮಾಯಾ ಸಂಸಾರದಲ್ಲಿಯೇ ಸ್ಥಿತಿ.
ಆ ದುರ್ಮಾಯಾ ಸಂಸಾರದಲ್ಲಿಯೇ ಮರಣವಲ್ಲದೆ,
ಗುರುಕರದಲ್ಲುದಿಸಿ ಸರ್ವಾಚಾರಸಂಪತ್ತೆಂಬಾಚರಣೆ ಚರಿತೆಯಲ್ಲಿ ಬೆಳೆದು
ಪರಬ್ರಹ್ಮ ಪರದಲ್ಲೇ ನಿರ್ವಯಲೆಂಬ
ನಿಜಶರಣಪದವೆಂತು ಸಾಧ್ಯವಪ್ಪುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ?/319
ಉಪಾಧಿವಿಡಿದು ಮಾಡುವ ಭಕ್ತನ ಮನೆಯ
ಕೆಟ್ಟಕೂಳ ತಿನ್ನಲಾಗದು ಶಿವಜ್ಞಾನಿಗಳು.
ಅದೇನು ಕಾರಣವೆಂದೊಡೆ : ಲಿಂಗತ್ರಯವನು ಮಾರಿ ಅಂಗತ್ರಯವನು ತುಂಬಿ
ಮಂಗಲಮಹಿಮರೆಂದು ಭಂಗವಿಟ್ಟಾಡುವ ಜಂಗುಳಿಗಳ ಸಂಗ ಸಹಪಂಕ್ತಿ
ಪಂಚಮಹಾಪಾತಕವೆಂದು ಕಂಗಳಿಂದೆ ನಿರೀಕ್ಷಿಸಲೊಲ್ಲರು
ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಶರಣರು. /320
ಉರಿ ಕರ್ಪುರಸಂಗದಿಂದೆ ಉರಿಕರ್ಪುರ ಉಂಟೆ?
ಭ್ರಮರ ಕಾಪುಳಸಂಗದಿಂದೆ ಭ್ರಮರಕಾಪುಳ ಉಂಟೆ?
ಪರುಷ ಲೋಹಸಂಗದಿಂದೆ ಪರುಷಲೋಹವುಂಟೆ?
ಶರಣ ಸಂಸಾರಸಂಗದಿಂದೆ ಶರಣಸಂಸಾರವುಂಟೆ?
ಇದು ಕಾರಣ ನಾ ಮುಟ್ಟಿ ನೀನುಂಟು ನೀ ಮುಟ್ಟಿ ನಾಮುಂಟೆ ಹೇಳಾ
ಗುರುನಿರಂಜನ ಚನ್ನಬಸವಲಿಂಗಾ?/321
ಉರಿಯ ಸೀರೆಯನುಟ್ಟ ವನಿತೆಯರ ಶರಗ ಹಿಡಿದುಬರುವವರಾರೊ!
ಹಾವಿನ ಹೆಡೆಯ ನೆಗಹಿ ಕಾಲಕುಣಿಸುತ ಬರುವವರಾರೊ!
ತಲೆಯೊಳಗೆ ಕಾಲುಮಡಗಿ ಕಾಲೊಳಗೆ ತಲೆಯ ಮಡಗಿ
ಗಗನದುರಿಯ ಹೊಗುವರಾರೊ!
ಕೆಳಗಣ ಮೂರುಮನೆಯ ದೀಪವ ತಂದು ಮೇಗಣ ಮನೆಗೆ ಬಂದವರಾರೊ!
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ
ಪ್ರಾಣಲಿಂಗಿಯೆಂಬೆ ಕಾಣೊ. /322
ಉರಿಯೊಳು ಮುಳುಗಿದ ತಾವರೆಯ ಕುಸುಮದ ತಂದು ಮೂಸಿದರೆ
ಸದ್ವಾಸನೆಯ ತೋರಲರಿಯದು.
ಗುರೂಪದೇಶವಾದ ಹೃದಯಕಮಲವನು
ತಾಪತ್ರಯ ಉರಿಯೊಳು ಹಾಕಿದಾತನ ಹೃದಯದಲ್ಲಿ,
ನಿಜಾನುಭಾವದ ವಾಸನೆ ಶಿವಶರಣರಿಗೆ ತೋರಲರಿಯದು
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಯೋಗ್ಯ ಕಾಣಾ./323
ಉಲುಹನಡಗಿಸಿ ಹೆಜ್ಜೆಯನೊಲವಿಂದೆ ನಲ್ಲಂಗೆ ಹೆಚ್ಚಿಸಿ
ಬೆಳಗಿನೊಳಗಿರಬಲ್ಲರೆ ಪತಿವ್ರತೆ.
ಸಕಲ ಕಲೆಗಳ ಕಣ್ಣಿನೊಳು ತೋರಿ ಸುಖಿಸಿ
ಬೆಳಗಿನೊಳಿರಬಲ್ಲರೆ ಪತಿವ್ರತೆ.
ಕೈ ಕುಶಲ ನುಡಿಗೂಡಿ ನೆರೆದು ಸುಖಬೆಳಗಿನೊಳಗಿರಬಲ್ಲರೆ
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಪ್ರಾಣಲಿಂಗಿ ಕಾಣಾ./324
ಊರ ಸುಟ್ಟು ಉರಿಯಹೊದೆಯ ನಡೆವ ಧೀರಂಗಲ್ಲದೆ
ಗುರುಪ್ರಸಾದವೆಲ್ಲಿಹದೊ?
ಜನರ ಸುಟ್ಟು ಬೂದಿಯ ಧರಿಸಿ ನಡೆವ ಶೂರಂಗಲ್ಲದೆ
ಲಿಂಗಪ್ರಸಾದ ವೆಲ್ಲಿಹದೊ?
ಬಯಲ ಸುಟ್ಟು ನೀರ ಹೊಯ್ದು ನಡೆವ ಸಾರಾಯಂಗಲ್ಲದೆ
ಜಂಗಮಪ್ರಸಾದವೆಲ್ಲಿಹದೊ?
ಹಾಳುಮಾಡಿ ಸುಳಿದು ತುಂಬಿಸಿ ನಡೆವ ಧೀರಂಗಲ್ಲದೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಜಪ್ರಸಾದವೆಲ್ಲಿಹದೊ?/325
ಊರನೆಲ್ಲ ಸುಟ್ಟು ಬೆಂಕಿಯಲ್ಲಿ ಕಾಯವನರಸಲತಿ ಚೋದ್ಯ ಕಾಣಾ.
ಭೂತಾದಿ ಸಕಲಗುಣನಿಕರವನುರುಹಿ ಭಸ್ಮೀಕೃತವ ಮಾಡಿದ
ಚಿದಾರ್ಯನ ಅಪೂರ್ವಪ್ರಕೃತಿಯನರಸಲದು ಅತಿಚೋದ್ಯ ನೋಡಾ.
ತನ್ನ ಶೋಧನಮಾಡಿದ ಠಾವಿನಲ್ಲಿ ಅಶುದ್ಧವನರಸಿದರೆ ಭವಬಂಧನ ತಪ್ಪದು
ಗುರುನಿರಂಜನ ಚನ್ನಬಸವಲಿಂಗ ಸೂತ್ರವನರಿಯದ ಭ್ರಾಂತರಿಗೆ./326
ಊರು ಕೆಟ್ಟುಹೋಗಿ ಕಲ್ಯಾಣ ಕೌಲು ನಿಂದಲ್ಲಿ,
ಕೂಡಿದ ಸಂಪತ್ತು ಸಲ್ಲಲಿತದೊಳಿರ್ದೆನಯ್ಯಾ.
ಎನ್ನ ಮಠಕ್ಕೆ ಬಂದ ಬಸವಣ್ಣನೊಂದುಕೊಂಡ,
ಮಡಿವಾಳಯ್ಯನೊಂದುಕೊಂಡ,
ಚನ್ನಬಸವಣ್ಣನೊಂದುಕೊಂಡ, ಸಿದ್ಧರಾಮಯ್ಯ ನೊಂದುಕೊಂಡ,
ಉರಿಲಿಂಗಪೆದ್ದಣ್ಣನೊಂದುಕೊಂಡ, ಅಜಗಣ್ಣನೊಂದುಕೊಂಡ
ಇಂತಾದಬಳಿಕ ಮುಂದೆ ಮುಕ್ತಾಯಿ ಇಲ್ಲ,
ಮಹಾದೇವಿಯಕ್ಕನೊಳಗಡಗಿರ್ದೆನು
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./327
ಊರೆಂಬುದರಿಯ ಉಲುವೆಂಬುದರಿಯ
ಬರಿಯ ಮಾತಿನ ಬಣ್ಣವನರಿಯದ ಸಿರಿಸಂಪದದೊಳಾನಂದ ತಲೆಗೇರಿ
ಜಾತಿ ಗೋತ್ರ ಕುಲಾಶ್ರಮ ವರ್ಣ ನಾಮಂಗಳೆನುಯೇನೆಂಬ ಭಾವವ
ಮರೆದಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ./328
ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ
ಒಬ್ಬರೂ ಮುಖವಂತರಿಲ್ಲ ನೋಡಾ.
ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ.
ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ.
ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ
ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./329
ಎಂಟರೊಳಗೆ ಬಂದವರು ಸುಂಟುಮಾಡಿ ಬದುಕಿಹೋದವರೊಳರೆ ?
ಅವರೊಳಗಿನ ಸಕಲಸಂಜನಿತರು ಎಂಟರೊಳಬಂದವರು
ಸುಂಟುಮಾಡಿ ಬದುಕಿಹೋದವರೊಳರೆ ?
ಇವರೊಳಗಿನ ಸಕಲಸಂಜನಿತರು ಮತ್ತೆ
ಅವರಂತು ಇವರಿಂತು ಸಮಗಂಡ ನಿಲುವೇ ಆಚಾರಂಗ
ಗುರುನಿರಂಜನ ಚನ್ನಬಸವಲಿಂಗ./330
ಎಚ್ಚರವಿರಲೆಂದು ನಿಶ್ಚಯಿಸಿದಿಷ್ಟ,
ಅಷ್ಟವಾಗಿ ಅಂಗಮನಪ್ರಾಣಭಾವಂಗಳಿಗೆ ಗೋಚರವಾಗಿರಲು,
ಅನ್ಯವ ನೆಚ್ಚಿ ನಾನು ಕೆಟ್ಟೆನಯ್ಯಾ ದಿಟವಾಗಿ.
ಚಂದ್ರ ಸೂರ್ಯಮಾರ್ಗವಿಡಿದು ಕಟುಕರೊಳಗಿರ್ದ ಸೈತಾನಸೌಖ್ಯವೇದಿ,
ಸಗುಣ ನಿರ್ಗುಣ ನಿರಾವಯವರಿದು ನಿವೇದಿಸಿಕೊಂಬ
ನಿಜಪ್ರಸಾದಿಯ ದರ್ಶನ ಸ್ಪರ್ಶನ ಸಂಭಾಷಣೆಯೆಂಬ
ಘನಪ್ರಸಾದವ ಕರುಣಿಸಯ್ಯಾ ಗುರುನಿರಂಜನ ಚನ್ನಬಸವಲಿಂಗಾ./331
ಎಚ್ಚರಿಸಿಕೊಟ್ಟ ಸಚ್ಚಿದಾನಂದ ಗುರುವಿಂಗೆ
ಮುಚ್ಚುಮರೆಯಾಗದೆ ಅಚ್ಚೊತ್ತಿದಂತಿರ್ನೆ.
ಅರ್ಪಿಸಲರಿಯದೆ ಕಾರಣಕ್ಕೆ ಬಂದ ಕರ್ತುಗಳನರಿದು,
ಅತ್ತಿತ್ತಲರಿಯದೆ ಚಿತ್ತವೆರಸಿ ಮರೆಯದೆ ಮರದಿರ್ನೆ ಅರ್ಪಿಸಲರಿಯದೆ.
ಬೋಧಾನಂದಮಯಮೂರ್ತಿಗಳನರಿದು ಭೇದವಿರಹಿತನಾಗಿ
ಆದಾದಿ ಸಕಲವನಿತ್ತು ಮರೆದಿರ್ನೆ ಅರ್ಪಿಸಲರಿಯದೆ.
ಗುರುನಿರಂಜನ ಚನ್ನಬಸವಲಿಂಗಕ್ಕೆ ಭೃತ್ಯನಾಗಿತ್ತು
ಮರೆದಿರ್ನೆ ಅರ್ಪಿಸಲರಿಯದೆ./332
ಎನ್ನ ಅಂಗ ಮನ ಪ್ರಾಣಾನಂದವೇ
ನೀವು ಬಂದ ಬರವಿಂಗೆ,
ನಿಮ್ಮ ಕಾಯದ ಕಾಯಕದಲ್ಲಿ ವಂಚನೆಯುಳ್ಳರೆ ತಲೆದಂಡ.
ನಿಮ್ಮ ಮನದ ಕಾಯಕದಲ್ಲಿ ಕಲ್ಪನೆಯುಳ್ಳರೆ ತಲೆದಂಡ.
ನಿಮ್ಮ ಪ್ರಾಣದ ಕಾಯಕದಲ್ಲಿ ಪರಿಭ್ರಾಂತನುಳ್ಳರೆ ತಲೆದಂಡ.
ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಂಗ ಪ್ರಾಣ ತೆರ ಅಗಲಿದರೆ ಅದೇ ಭಂಗ./333
ಎನ್ನ ಕಾಯದಕಳೆ ಬಸವಣ್ಣಂಗಾಭರಣವಾಯಿತ್ತು.
ಎನ್ನ ಮನದಕಳೆ ಚನ್ನಬಸವಣ್ಣಂಗಾಭರಣವಾಯಿತ್ತು.
ಎನ್ನ ಪ್ರಾಣದಕಳೆ ಪ್ರಭುದೇವರಿಗಾಭರಣವಾಯಿತ್ತು.
ಎನ್ನರುಹಿನಕಳೆ ಮಡಿವಾಳಯ್ಯಂಗಾಭರಣವಾಯಿತ್ತು.
ಗುರುನಿರಂಜನ ಚನ್ನಬಸವಲಿಂಗವೆಂಬ ನಾಮ ನಷ್ಟವಾಯಿತ್ತು./334
ಎನ್ನ ಕಾಯದಲ್ಲಿ ನಿನ್ನ ಕಂಡು ನಾನು ಕಾಣಿಸಿಕೊಳ್ಳದಿರ್ದಡೆ
ಹೊತ್ತು ನಡೆಯಬಹುದು.
ಎನ್ನ ಮನದಲ್ಲಿ ನಿನ್ನ ಕಂಡುನಾನು ಶೂನ್ಯನಾದಡೆ
ಹೊತ್ತು ನಡೆಯಬಹುದು.
ಎನ್ನ ಪ್ರಾಣದಲ್ಲಿ ನಿನ್ನ ಕಂಡು ನಾನು ವಿರಹಿತನಾದಡೆ
ಹೊತ್ತು ನಡೆಯಬಹುದು.
ಎನ್ನ ಭಾವದಲ್ಲಿ ನಿನ್ನ ಕಂಡು ನಾನು ಲಯವನೈದಿದಡೆ
ಹೊತ್ತು ನಡೆಯಬಹುದು,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಿಯ ನಾಮವನು. /335
ಎನ್ನ ಕಾಲು ನಡೆಶೃಂಗರಿಸುತಿರ್ದವು,
ಎನ್ನ ಜಿಹ್ವೆ ನುಡಿಶೃಂಗರಿಸುತಿರ್ದುದು.
ಎನ್ನ ಕಂಗಳು ನೋಟಶೃಂಗರಿಸುತಿರ್ದವು,
ಎನ್ನ ಕರ್ಣ ಆಲಿಸಲನುಗೈಯುತಿರ್ದವು.
ಎನ್ನ ನಾಸಿಕ ಭಕ್ತಿವಾಸನೆಯ ಶೃಂಗರಿಸುತಿರ್ದುದು.
ಎನ್ನ ತ್ವಕ್ಕು ಸೇವಾನುಕೂಲಿಗೆ ಶೃಂಗರಿಸುತಿರ್ದುದು.
ಎನ್ನ ಭಾವ ಸಮರಸಾನಂದಸುಖವ ಕೊಂಬುವುದಕ್ಕೆ ಶೃಂಗರಿಸುತಿರ್ದುದು
ಗುರುನಿರಂಜನ ಚನ್ನಬಸವಲಿಂಗವೆಂಬ
ಗುರುಲಿಂಗ ಜಂಗಮಕ್ಕೆ ನಿರಂತರ./336
ಎನ್ನ ತನುವಿನಲ್ಲಿ ಗುರುಪ್ರಕಾಶವ ಕಂಡು
ಮಾಡುವೆನಯ್ಯಾ ದಣಿವಂತೆ ಭಕ್ತಿಯ.
ಎನ್ನ ಮನದಲ್ಲಿ ಲಿಂಗಪ್ರಕಾಶವ ಕಂಡು
ಮಾಡುವೆನಯ್ಯಾ ದಣಿವಂತೆ ಪೂಜೆಯ.
ಎನ್ನ ಭಾವದಲ್ಲಿ ಜಂಗಮಪ್ರಕಾಶವ ಕಂಡು
ಮಾಡುವೆನಯ್ಯಾ ದಣಿವಂತೆ ದಾಸೋಹವ.
ಗುರುಲಿಂಗಜಂಗಮವೊಂದೆಂದು ಅಬಿನ್ನಭಾವದ ಬೆಳಗಿನೊಳಗೆ
ಒಪ್ಪುತಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ./337
ಎನ್ನ ಪೃಥ್ವಿಸಂಬಂಧವನಳಿಸಿ
ಚಿತ್ಪೃಥ್ವಿಯಲ್ಲಿ ತನ್ನ ತೋರಿ ಸಲಹಿದನು.
ಎನ್ನ ಅಪ್ಪುಸಂಬಂಧವನಳಿಸಿ
ಚಿದಪ್ಪುವಿನಲ್ಲಿ ತನ್ನ ತೋರಿ ಸಲಹಿದನು.
ಎನ್ನ ವಾಯುಸಂಬಂಧವನಳಿಸಿ
ಚಿದ್ವಾಯುವಿನಲ್ಲಿ ತನ್ನ ತೋರಿ ಸಲಹಿದನು.
ಎನ್ನಾಕಾಶಸಂಬಂಧವನಳಿಸಿ
ಚಿದಾಕಾಶದಲ್ಲಿ ತನ್ನ ತೋರಿ ಸಲಹಿದನು.
ಎನ್ನಾತ್ಮಸಂಬಂಧವನಳಿಸಿ
ಚಿದಾತ್ಮದಲ್ಲಿ ತನ್ನ ತೋರಿ ಸಲಹಿದನು.
ಎನ್ನ ಸ್ಥೂಲಾಂಗಸಂಬಂಧವನಳಿಸಿ
ತ್ಯಾಗಾಂಗವೆನಿಸಿ ತನ್ನ ತೋರಿ ಸಲಹಿದನು.
ಎನ್ನ ಸೂಕ್ಷ್ಮಾಂಗಸಂಬಂಧವನಳಿಸಿ
ಭೋಗಾಂಗವೆನಿಸಿ ತನ್ನ ತೋರಿ ಸಲಹಿದನು.
ಎನ್ನ ಕಾರಣಾಂಗಸಂಬಂಧವನಳಿಸಿ
ಯೋಗಾಂಗವೆನಿಸಿ ತನ್ನ ತೋರಿ ಸಲಹಿದನು.
ಎನ್ನ ಸರ್ವಾಂಗಸಂಬಂಧವನಳಿಸಿ
ಸರ್ವಾಂಗದಲ್ಲಿ ಸರ್ವಾಚಾರಸಂಪತ್ತು ತೋರಿ ಸಲಹಿದ
ನಿತ್ಯವಾಗಿ ನಿರಂಜನ ಚನ್ನಬಸವಲಿಂಗ./338
ಎನ್ನ ಮನೆಯ ರಮಣನ ಮಾಧುರ್ಯವನೇನೆಂದು ಹೇಳಲಮ್ಮ.
ನೆಲಮನೆಯಲ್ಲಿ ನೆರೆವ ಸುಖವ ಕಂಡವರರಿಯರು.
ಮನಮಂದಿರದಲ್ಲಿ ಕೂಡುವ ಸುಖವ ವಾಗದ್ವೈತರೇನಬಲ್ಲರು ?
ಸಿಖಿಮಂಟಪದಲ್ಲಿ ಸುರತದಸುಖವ ಕಣ್ಣುಗೆಟ್ಟನಾರಿಯರೇನಬಲ್ಲರು ?
ಪವನಗೃಹದಲ್ಲಿ ನೆರೆವ ಸೌಖ್ಯವ ಅವರಿವರರಿಯರು.
ಗಗನಮಂಟಪದಲ್ಲಿ ಸೊಗಸಿನಿಂದ ನೆರೆವ ಕುಶಲವ ಕೆಳಗಳವರರಿಯರು.
ಮೇಲುಮಂದಿರ ಮಧ್ಯಮಂಟಪದಲ್ಲಿ
ಲೋಲಸಂಯೋಗವ ಕಾಲಕೆಳಗಲವರರಿಯರು.
ಗುರುನಿರಂಜನ ಚನ್ನಬಸವಲಿಂಗದ ನಿಜಾಂಗನೆಯಾನಲ್ಲದೆ,
ಹೋಗಿಬರುವ ಸೋಗಿನ ನಾರಿಯವರೆತ್ತ ಬಲ್ಲರು, ಹೇಳಾಯಮ್ಮ./339
ಎನ್ನ ಸುಚಿತ್ತದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
ಶ್ರದ್ಧೆವೆರೆದಂಗನೆಯಾಗಿ ಸುಖಿಸಿದೆನಯ್ಯಾ.
ಎನ್ನ ಸುಬುದ್ಧಿಯ ಕಳೆಯಲ್ಲಿ ಬೆಳಗುವಲಿಂಗಕ್ಕೆ
ನೈಷ್ಠೆವೆರೆದಂಗನೆಯಾಗಿ ಬಾಳಿದೆನಯ್ಯಾ.
ಎನ್ನ ನಿರಹಂಕಾರದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
ಸಾವಧಾನವೆರೆದಂಗನೆಯಾಗಿ ಸುಖಬಟ್ಟೆನಯ್ಯಾ.
ಎನ್ನ ಸುಮನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
ಅನುಭಾವವೆರೆದಂಗನೆಯಾಗಿ ಶಾಂತಳಾದೆನಯ್ಯಾ.
ಎನ್ನ ಸುಜ್ಞಾನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
ಆನಂದವೆರೆದಂಗನೆಯಾಗಿ ಪರಿಣಾಮಿಯಾದೆನಯ್ಯಾ.
ಎನ್ನ ಸದ್ಭಾವದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
ಸಮರಸವೆರೆದಂಗನೆಯಾಗಿ ಪರಿಪೂರ್ಣಪರಿಣಾಮಿಯಾದೆನಯ್ಯಾ.
ಎನ್ನ ಒಳಹೊರಗಿನ ಕಳೆಯಲ್ಲಿ ಬೆಳಗುವ ಗುರುನಿರಂಜನ ಚನ್ನಬಸವಲಿಂಗಕ್ಕೆ
ನಿಜಾಂಗನೆಯಾಗಿ ಅನುಪಮಸುಖಸುಗ್ಗಿಯೊಳೋಲಾಡುತಿರ್ದೆನಯ್ಯಾ./340
ಎನ್ನರುಹಿನಲ್ಲಿ ಗುರುವಾಗಿ ಬಂದು ನಿಂದಾನು,
ಎನ್ನ ಪ್ರಾಣದಲ್ಲಿ ಲಿಂಗವಾಗಿ ಬಂದು ನಿಂದಾನು,
ಎನ್ನ ಜ್ಞಾನದಲ್ಲಿ ಜಂಗಮವಾಗಿ ಬಂದು ನಿಂದಾನು,
ಎನ್ನ ಘ್ರಾಣದಲ್ಲಿ ಪ್ರಸಾದವಾಗಿ ಬಂದು ನಿಂದಾನು,
ಎನ್ನ ಜಿಹ್ವೆಯಲ್ಲಿ ಪಾದೋದಕವಾಗಿ ಬಂದು ನಿಂದಾನು,
ಎನ್ನ ನೇತ್ರದಲ್ಲಿ ರುದ್ರಾಕ್ಷಿಯಾಗಿ ಬಂದು ನಿಂದಾನು,
ಎನ್ನ ತ್ವಕ್ಕಿನಲ್ಲಿ ವಿಭೂತಿಯಾಗಿ ಬಂದು ನಿಂದಾನು,
ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿಮಂತ್ರವಾಗಿ ಬಂದು ನಿಂದಾನು,
ಇಂತು ಎನ್ನಂಗದಲ್ಲಿ ಅಷ್ಟಾವರಣವಾಗಿ
ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದು ನಿಂದಾನು,
ನಿರಂಜನ ಚನ್ನಬಸವಲಿಂಗ ತಾನೆ ನೋಡ ; ಎನ್ನ ಗುರುವರನು. /341
ಎನ್ನಾಧಾರಚಕ್ರದಲ್ಲಿ ನಕಾರ ಪಂಚಾಕ್ಷರಸ್ವರೂಪವಾದ
ಆಚಾರಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಮಕಾರ ಪಂಚಾಕ್ಷರಸ್ವರೂಪವಾದ
ಗುರುಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ಮಣಿಪೂರಕಚಕ್ರದಲ್ಲಿ ಶಿಕಾರ ಪಂಚಾಕ್ಷರಸ್ವರೂಪವಾದ
ಶಿವಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ಅನಾಹತಚಕ್ರದಲ್ಲಿ ವಾಕಾರ ಪಂಚಾಕ್ಷರಸ್ವರೂಪವಾದ
ಜಂಗಮಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ವಿಶುದ್ಧಿಚಕ್ರದಲ್ಲಿ ಯಕಾರ ಪಂಚಾಕ್ಷರಸ್ವರೂಪವಾದ
ಪ್ರಸಾದಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ಆಜ್ಞಾಚಕ್ರದಲ್ಲಿ ಓಂಕಾರ ಪಂಚಾಕ್ಷರಸ್ವರೂಪವಾದ
ಮಹಾಲಿಂಗವ ಕಂಡು ಉಚ್ಚರಿಸುತಿರ್ದೆನು.
ಎನ್ನ ಸರ್ವಾಂಗದಲ್ಲಿ ಷಡಕ್ಷರಸ್ವರೂಪವಾದ
ಗುರುನಿರಂಜನ ಚನ್ನಬಸವಲಿಂಗವ ಕಂಡು
ಉಚ್ಚರಿಸುತಿರ್ದೆನು ನಿತ್ಯವಾಗಿ./342
ಎರಡು ಕಾಲಿನಿಂದೆ ನಡೆವಾತ ಭಕ್ತನಲ್ಲ
ಎರಡು ಕಣ್ಣಿನಿಂದೆ ನೋಡುವಾತ ಭಕ್ತನಲ್ಲ.
ಎರಡು ಕೈಯಿಂದೆ ಹಿಡಿವಾತ ಭಕ್ತನಲ್ಲ
ಜಿಹ್ವೆ ರಸನೆಯಿಂದೆ ನುಡಿವಾತ ಭಕ್ತನಲ್ಲ.
ಎರಡು ಕಿವಿಯಿಂದೆ ಕೇಳುವಾತ ಭಕ್ತನಲ್ಲ
ಹೊರಗೊಳಗೆ ಗುರುನಿರಂಜನ ಚನ್ನಬಸವಲಿಂಗ ಸಮ್ಮುಖವಾಗಿ
ಮಾಡುವಾತ ಭಕ್ತನಲ್ಲ./343
ಎಲೆ ಅಯ್ಯಾ, ಆನು ನಿಮ್ಮಿಂದುದಯವಾದಕಾರಣ
ನಿಮ್ಮ ವೇಷವ ಧರಿಸಿ ನಿಮ್ಮಿಚ್ಫೆಯಿಂದಾಚರಿಸಿದೆನಯ್ಯಾ.
ನೀನೊಂದಾದಲ್ಲಿ ನಾನೊಂದಂಗವಾದೆ.
ನೀನು ಮೂರಾದಲ್ಲಿ ನಾನು ಮೂರಂಗವಾದೆ.
ನೀನಾರಾದಲ್ಲಿ ನಾನು ಆರಂಗವಾದೆ.
ನೀನು ಮೂವತ್ತಾರಾದಲ್ಲಿ ನಾನು ಮೂವತ್ತಾರಂಗವಾದೆ.
ನೀನು ಇನ್ನೂರಾಹದಿನಾರಾದಲ್ಲಿ ನಾನು ಇನ್ನೂರಾಹದಿನಾರಂಗವಾದೆ.
ನೀನು ಪರಿಪೂರ್ಣವಾದರೆ ನಾನು ಪರಿಪೂರ್ಣ ಅಂಗವಾದೆ
ನೀನು ಗುರುನಿರಂಜನ ಚನ್ನಬಸವಲಿಂಗವಾದಲ್ಲಿ
ನಾನು ನಿರಾವಯನಾದೆ./344
ಎಲೆ ಶಿವನೆ ನಿಮ್ಮನೊಲಿಸಿ ಕೂಡಬೇಕೆಂಬ
ಖಂಡಿತ ಜ್ಞಾನದ ಕರ್ಮಕಾಂಡಿಗಳನು
ಎಳತಟಗೊಳಿಸಿತ್ತು ಇದೇನು ನೋಡಾ !
ವ್ರತಿಗಳೆಂದು ಹೇಳಿಸಿಕೊಂಬ ಹಿರಿಯರ
ಬಲೆಯೊಳೊಂದಿಸಿ ಕಡೆಗೆ ಮಾಡಿಸಿಕೊಂಡಿತ್ತು.
ನಿಯಮಸ್ಥರೆನಿಸಿಕೊಂಬ ಹಿರಿಯರ
ಸೀಮಿಯ ಸಂಸಾರದೊಳಿಟ್ಟು ಬೇರೆ ಮಾಡಿಸಿಕೊಂಡಿತ್ತು.
ಶೀಲವಂತರೆನಿಸಿಕೊಂಬ ಹಿರಿಯರ ದುಶ್ಶೀಲದೊಳೊಂದಿಸಿ ಬಿಡಿಸಿಕೊಂಡಿತ್ತು.
ಯತಿಗಳೆನಿಸಿಕೊಂಬ ಹಿರಿಯರ
ಸತಿಯರ ರತಿಸಂಸಾರದೋರಿ ಬಿಡಿಸಿಕೊಂಡಿತ್ತು.
ಗತಿಮತಿಗಳೆಂಬ ಹಿರಿಯರ
ಭಿನ್ನ ಭಿನ್ನ ಸಂಸಾರವೆರಸಿ ಕಾಡಿಕೊಂಡಿತ್ತು ನಿಮ್ಮ ಮಾಯೆ
ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರನುಳಿದು. /345
ಎಲೆ ಸಂಸಾರಿ ಜಂಗಮವೆ
ಎನ್ನ ಗೃಹಕ್ಷೇತ್ರದ ಸುಖವನರಿಯದೆ ಅರಿದವನಲ್ಲ ಬನ್ನಿ.
ಎನ್ನ ಸ್ತ್ರೀಯಾದಿ ಸೌಖ್ಯವನರಿಯದೆ ಅರಿದವನಲ್ಲ ಬನ್ನಿ.
ಎನ್ನ ಕನಕಾದಿ ದ್ರವ್ಯಂಗಳ ಸುಖವನರಿಯದೆ ಅರಿದವನಲ್ಲ ಬನ್ನಿ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಬರವಿಂಗೆ ನೈಷ್ಠೆ ಮುಂದೆ ಉಲಿಯುತ್ತಿದೆ ಬನ್ನಿ./346
ಏನೂ ಇಲ್ಲದ ಠಾವಿನಲ್ಲಿ ನಿಂದು ಭೂಮಿಯ ನೋಡಲು
ಶ್ರದ್ಧೆಯ ಕಳೆ ಕಾಣಬಂದಿತ್ತು.
ನಿಂದು ಜಲವ ನೋಡಲು ನೈಷ್ಠೆಯ ಕಳೆ ಕಾಣಬಂದಿತ್ತು.
ಬೆಂಕಿಯ ನೋಡಲು ಸಾವಧಾನಕಳೆ ಕಾಣಬಂದಿತ್ತು,
ಗಾಳಿಯ ನೋಡಲು ಅನುಭಾವಕಳೆ ಕಾಣಬಂದಿತ್ತು
ಆಕಾಶವ ನೋಡಲು ಆನಂದಕಳೆ ಕಾಣಬಂದಿತ್ತು
ಆತ್ಮನ ನೋಡಲು ಸಮರಸದಕಳೆ ಕಾಣಬಂದಿತ್ತು.
ಇದು ಕಾರಣ ತನ್ನ ತಾ ನೋಡಲು
ಗುರುನಿರಂಜನ ಚನ್ನಬಸವಲಿಂಗವಾಗಿ
ಕಣ್ಣುಗೆಟ್ಟು ನಿಜಲಿಂಗೈಕ್ಯವಾಯಿತ್ತು./347
ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ ?
ಆಗಮನುಡಿಯ ಕೇಳುವುದು,
ಇತರ ಸಾಗಿಸಿ ಹೇಳುವುದು, ಶಿವಾನುಭಾವವ ಕೇಳುವುದು,
ಅದರಂತೆ ಬೋಧೆಯ ಹೇಳುವುದು.
ನಿತ್ಯಾನಿತ್ಯವನಿದಿರಿಟ್ಟು
ಸತ್ಯವೇ ಮೋಕ್ಷ, ಅಸತ್ಯವೇ ನರಕವೆಂಬುದು.
ಶ್ರುತಿಗುರುಸ್ವಾನುಭಾವವನುಳಿದು, ಗಿಳಿಪಶುಭಾವ ಬರಲುಂಟೆ ?
ನಾಚಿಕೆ ತಾನೇಕೆ ಬಾರದು ?
ಇಂತಹ ಮನವ ಸಂತೈಸುವರನಾರನು ಕಾಣೆ ಶರಣರಲ್ಲದೆ
ನಿರಂಜನ ಚನ್ನಬಸವಲಿಂಗ./348
ಏಳು ಚಿಂತೆಯ ಹೊತ್ತು ಹಾಳೂರನಾಳುವ ಹಾವು
ಹಾವಾಡಿಗನ ಮಡದಿಯ ಮಾಳದ ಹಬ್ಬ ಕೆರೆಯೊಳಗೆ ತಲೆಕೆಳಗಾಗಿ
ಮುಳುಗಾಡುತಿಪ್ಪುದು ಮೂರು ಲೋಕವೆಲ್ಲವು.
ಅದು ಕಾರಣ ತನ್ನಿಂದ ತನ್ನನರಿದ ಶರಣ
ಮುನ್ನವೆ ಮುಂಗೈಯಲ್ಲಿ ಸಂಗವಮಾಡಿ
ಕಳ್ಳರ ಕುಲಗೆಡಿಸಿ ಕೂಡಿ ಕೂಟಕ್ಕೆ ನೀಟವಾದಲ್ಲಿ ಸತ್ತು ಬದುಕಿ ನಿತ್ಯವಾದನು
ಗುರುನಿರಂಜನ ಚನ್ನಬಸವಲಿಂಗದಲ್ಲಿ./349
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು.
ಹೊರವೊಳಯದಲೆರಡಗುಸೆಯ ಬಾಗಿಲು.
ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು.
ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು.
ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು
ಕೊತವಾಲನ ಮುಂದಿಟ್ಟು.
ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು.
ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು.
ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ
ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು.
ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ
ಕಂಟಕ ಬಂದುದನೇನೆಂಬೆನಯ್ಯಾ!
ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು.
ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು
ಕೊತ್ತಲೆಂಟಕ್ಕಾವರಿಸಲು
ಶೆಟ್ಟಿ ಮಧ್ಯಬುರುಜನೇರಲು,
ಬೆಂದ ತಲೆ ಉರಿದು ನಿಂದು ನೋಡಲು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗಸಂಬಂಧವದು ಕಾಣಾ./350
ಐದಂಗದಂಗನೆಯಾನು ಬಾರಯ್ಯಾ.
ಐದು ಕೆಳದಿಯರೆನಗೆ ನೋಡಯ್ಯಾ.
ಹಿರಿಯ ಕಾಲದ ದೇವರ ವರವೆನಗಯ್ಯಾ.
ಬೇಡಿದ್ದು ಮಾಡಿ ಮನೆ ತುಂಬಿಸುವ ಬಾರಯ್ಯಾ.
ಕೈಗೂಡಿ ಕಾರ್ಯವ ಮಾಡಿ, ಮನಗೂಡಿ ಒಗತನ ಮಾಡಿ,
ಪ್ರಾಣಗೂಡಿ ಇಚ್ಫೆಯನರಿದಿತ್ತು,
ಪರಮಪದವಿಯೊಳೋಲಾಡುವ ಬಾರಯ್ಯಾ,
ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ./351
ಐದು ಬಣ್ಣದ ಪಕ್ಷಿ ಬಿಂದುವ ನುಂಗಿ ಬಿಂದುವಿನೊಳು ನಿಂದಿತ್ತು.
ನಾದವ ನುಂಗಿ ಸುನಾದಮಯವಾಗಿ ಕಳೆಯನಾವರಿಸಿ,
ಕಳೆ ಗುರುನಿರಂಜನ ಚನ್ನಬಸವಲಿಂಗವಾದ ಮತ್ತೆ,
ನಾದಬಿಂದುಕಳಾತೀತ ನಾಮ ನಿಂದಿತ್ತು ಶರಣಂಗೆ./352
ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳ
ತನ್ನೊಳಗುಳ್ಳ ಭಕ್ತಿಯಲ್ಲರಿದರ್ಚಿಸಬಲ್ಲರೆ ಶರಣ.
ಆ ಶರಣ ಶಿವನಂತಿಪ್ಪ ನೋಡಿರೆ.
ಕಾಲತ್ರಿಪುರವ ಸುಟ್ಟು ಬೂದಿಯನು ಸರ್ವಾಂಗದಲ್ಲಿ ಧರಿಸಿರ್ದ ನೋಡಿರೆ.
ಸಪರ್ಾಭರಣಭೂಸಿತನಾಗಿ ಚಂದ್ರನ ಮಸ್ತಕದಲ್ಲಿ ತಳೆದುಕೊಂಡಿರ್ದ ನೋಡಿರೆ.
ಬ್ರಹ್ಮಕಪಾಲ ಕೈಯಲ್ಲಿ ಪಿಡಿದು, ಮಾಯೆಯ ಗೆಲಿದ ನೋಡಿರೆ.
ನಾರಾಯಣನ ಕಣ್ಣ ಪಾದದಲ್ಲಿರಿಸಿ,
ಗಂಗೆ ಗೌರಿಯ ಸಂಪರ್ಕ ಒಳಹೊರಗೆ ಪರಿಪೂರ್ಣ ನೋಡಿರೆ,
ತನ್ನೊಲುಮೆಯ ಇರವೆಯಲ್ಲಿ ಕೈಲಾಸಮಧ್ಯಪೀಠ ಪ್ರಕಾಶದೊಳಗು ನೋಡಿರೆ
ಹುಟ್ಟಿ ಬೆಳೆದುದ ಸವರಿಬಿಟ್ಟು ಕಟ್ಟಾಳುಯೆನಿಸಿ ಕಾಣುವ
ಗುರುನಿರಂಜನ ಚನ್ನಬಸವಲಿಂಗದೊಳಗೆ./353
ಒಂದನಾಡಹೋಗಿ ಮತ್ತೊಂದನಾಡುವರು.
ಹಿಂದೆ ಹೋದುದ ಮುಂದೆ ತಂದಿಡುವರು.
ಮುಂದಿನ ಮಾತ ಹಿಂದಕ್ಕೆ ನೂಕುವರು
ಇಲ್ಲದುದನುಂಟುಮಾಡಿ ಗಂಟನಿಕ್ಕಿ ನೋಯಿಸುವರು.
ಗುರುಹಿರಿಯರ ಮತ್ತೆ ತಾವು ಶರಣರೆಂದು ನುಡಿವರು.
ಇಂತಾ ತ್ರಿವಿಧದ್ರೋಹಿಗಳನೆಂತು ಶರಣರೆನ್ನಬಹುದು?
ಅಯ್ಯಾ ನಿಮ್ಮವರ ಕವಳಿಕೆಗೆ ಸಲ್ಲದ ಕರ್ಮಿ ಪಾಪಿಗಳನೆನ್ನತ್ತ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ./354
ಒಂದು ವಿಷಯಕೆ ಮನೆಯ ನೋಡಿ ಮಾಡುವರು
ತನುಗುಣವ ತಪ್ಪಿಸಿ ತರಲರಿಯದವರು.
ಒಂದು ವಿಷಯಕೆ ಧನವ ನೋಡಿ ಮಾಡುವರು
ಪ್ರಾಣನಗುಣವ ತಪ್ಪಿಸಿ ತರಲರಿಯದವರು.
ಒಂದು ವಿಷಯಕೆ ನೆರವಿಯ ನೋಡಿ ಮಾಡುವರು
ಭಾವದಗುಂಜ ತಪ್ಪಿಸಿ ತರಲರಿಯದವರು.
ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ ಘಾಸಿಯಾಗುವ ಪ್ರಾಣಿಗಳು
ತಮಗೆ ಗುರುತ್ವ ಸಹಜವೆ ಅಲ್ಲ.
ಮತ್ತೆಂತೆಂದೊಡೆ : ಭೂಷಣವಿಲ್ಲದ ಶಿಷ್ಯಂಗೆ ಗುಣವಿಲ್ಲದ ಗುರುವು
ಅಣಕದನುಗ್ರಹ ಎಣಿಕೆಗೆಬಾರದು
ನಮ್ಮ ಗುರುನಿರಂಜನ ಚನ್ನಬಸವಲಿಂಗದ ಶರಣಚಾರಿತ್ರದೊಳಗೆ./355
ಒಂದು ಹಿಡಿತೆಗೆ ಬಂದು ಕವಿದ ಕಾಳಗತ್ತಲೆಯ ಹರಿದು ಬಂದ ಬರವಿಂಗೆ,
ಚಿತ್ಕಾಂತನೊಲಿದು ಸದ್ರೂಪ ಸಲೆನಿಂದು,
ನೋಡಿ ನೋಡಿ, ಕಳೆದು ಕಣ್ದೆರಪ ಮಾಡಿ,
ಕರುಣಿಸಿ ಸಲಹಿದ ನಿತ್ಯನಿರಂಜನ ಚನ್ನಬಸವಲಿಂಗ./356
ಒಂದೆರಡು ಬಾಗಿಲದಾಟಿ ಉತ್ತರದಕ್ಷಿಣ ಗೊತ್ತಿನ
ಗೊರವರ ಮನೆಯ ಮುಂದೆರಡು ನಂದಾದೀವಿಗೆಯ ಮಂಟಪದೊಳಗೆ
ಸೂರ್ಯೇಂದು ವಹ್ನಿಕೋಟಿಪ್ರಭಾಮಯನಾಗಿತೋರುವ
ಪರಮಪ್ರಾಣಲಿಂಗವನು
ತೆರಹಿಲ್ಲದೆ ಕಂಡು ಕೂಡಿ ಸುಖಿಸಬಲ್ಲ ಸುಜ್ಞಾನಿ ಶರಣನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ./357
ಒಂಬತ್ತನೊಳಕೊಂಡು ಒಂದೇ ಪೂಜೆಯೆಂಬ ಹಾಗೆ
ನವನಾಳಸೂತ್ರವಪ್ಪ ಪಲವು ಪ್ರಕೃತಿಯನೊಳಕೊಂಡು
ತೋರುವ ಆತ್ಮವೊಂದೆ ಪೂಜೆಯಾಗಿಪ್ಪುದು.
ಆ ಒಂದೇ ಆತ್ಮನನರಿದು ಮರೆತಲ್ಲಿ
ಗುರುನಿರಂಜನ ಚನ್ನಬಸವಲಿಂಗವು ಶೂನ್ಯ./358
ಒಡದು ಮೂಡಿ ನಿಗುರಿ ನೋಡಿ
ಕಡಿದು ಬಿಸಾಟಿದಲ್ಲಿ ಬೆಂಕಿ ಹುಟ್ಟಿತ್ತು ನೋಡಾ !
ಬೆಂಕಿಪುರುಷನ ಸಂಗದಿಂದೆ ಮಂಗಲಮಹಿಮನ ಕಂಡು
ಅಂಗಳದಲ್ಲಿ ಕೂಡಿದರೆ,
ಮನೆ ಸುಟ್ಟು ಹಾವೆದ್ದು ಕಿಚ್ಚ ಹಿಡಿದು ಮೇಲು ಮಂಟಪಕ್ಕೆ ನೆಗೆಯಲು,
ಉರಿಯ ಬೆಳಗಿನೊಳಗಿರ್ದ ಗುರುನಿರಂಜನ ಚನ್ನಬಸವಲಿಂಗದಂಗವ
ಬೆರೆದು ಚರಿಸುವ ಲೀಲೆಯ ನೋಡಾ./359
ಒಡಲಿಚ್ಫೆಗೆ ಉಪಾಧಿವಿಡಿದು ಅನುಸರಣೆಯಿಂದೆ ಅಳಿಕಿ ನಡೆವುದು
ಮಾಯಾಮೋಹಿತರಿಗಲ್ಲದೆ ನಿಸ್ಸೀಮ ನಿರೂಪಾಧಿ ನಿಜಜಂಗಮಕ್ಕೆಲ್ಲಿಹದೊ ?
ತನುವಿನ ರತಿಯ ಮನದ ಮೋಹ ಪ್ರಾಣನ ಗತಿ ರಮ್ಯ ಗಂಜಳ ಗಲಭೆಗಳಿಗಲ್ಲದೆ
ತನುಶಕ್ತಿ ಪ್ರಾಣಮುಕ್ತಿ ಮನಯುಕ್ತಿಯುತ ಮಹಿಮರಿಗೆಲ್ಲಿಹದೊ !
ಇಹಪರದಲ್ಲಿದರ್ು ಇಹಪರವರಿಯದ ಇಹಪರಗತಿಮತಿಯಿಂದೆ,
ನಿರ್ಗಮನವೇದಿ ನಿಶ್ಚಿಂತನಿವಾಸನಿಲುವೆ ಶರಣ ಕಾಣಾ
ಗುರುನಿರಂಜನ ಚನ್ನಬಸವಲಿಂಗ./360
ಒಡೆತನದ ಪೆಚರ್ುಗೆಯ ಕಾಣಿಸಿಕೊಂಬ ಬೆಡಗುವಿದೇನೋ!
ಉಸುರಿನ ಉಲುಹು ಕಂಚು ಚರ್ಮಾದಿ ಸಕಲ ಧನದೊಳು
ಮೆರೆಯಲ್ಯಾಕೊ ನಿಜದ ನಿಲುವಿಂಗೆ!
ಮಧು ಚೂತಫಳ ಶರ್ಕರ ತಮ್ಮ ಬೀರಲಿಲ್ಲ.
ಅರಿದಾಚರಿಸು ಕಡೆಯ ನೆರೆಯಲಾಪಡೆ ಕುರುಹನಿಕ್ಕದಿರು
ಗುರುನಿರಂಜನ ಚನ್ನಬಸವಲಿಂಗ ಲಾಂಛನಕ್ಕೆ./361
ಒತ್ತೆಯ ಕಾರ್ಯಕ್ಕಾಗಿ ಮಿಥ್ಯವನರಿದಲ್ಲಿ ತಥ್ಯತಪ್ಪಿತ್ತು.
ಸಗುಣಕಳೆ ನಿರ್ಗುಣಕ್ಕೆ ಸಲ್ಲದು, ನಿರ್ಗುಣ ಚೈತನ್ಯ ಬೆಳಗ ಕಾಣಲಿಲ್ಲ.
ಗುರುನಿರಂಜನ ಚನ್ನಬಸವಲಿಂಗ ತಾನೆಂದೆನಲಿಲ್ಲ./362
ಒಪ್ಪಿಮಾಡಿದ ಮಾಟದೊಳಗೆ ಒತ್ತೊತ್ತಿ ತಪ್ಪನರಸಲುಂಟೆ ?
ತಪ್ಪನರಸಿ ತಂದುತೋರಿದರೆ ಹಾನಿಯೆತ್ತಣಕೆ ನೋಡಾ !
ಒಮ್ಮೆ ಶಾಂತಿ ಧರಿಸಿ ಅಹುದೆಂದು, ಒಮ್ಮೆ ಅಶಾಂತಿ ಧರಿಸಿ ಅಲ್ಲವೆಂದೊಡೆ,
ಬಂಧನದ ಬರವು ಸಂದೇಹವಿಲ್ಲದ ಮುಖ್ಯರ ಸಂಬಂಧಿಸಿಕೊಂಡರಿ
ನಮ್ಮ ಗುರುನಿರಂಜನ ಚನ್ನಬಸವಲಿಂಗದ
ಸ್ಥೂಲ ತತ್ವವಿಲಾಸ ನೀನಾಗಬೇಕಾದಡೆ./363
ಒಳಗಣ ಗಂಟಬಿಚ್ಚಿತಂದ ಹೊರಗಣ ವ್ಯವಹಾರಿಗಳನೇಕರುಂಟು.
ಹೊರಗಣ ಗಂಟಬಿಚ್ಚಿ ಒಳಗೊಯ್ದು ವ್ಯವಹಾರಗೊಂಬ ಜಾಣರಾರು ಹೇಳಾ ?
ಇದು ಕಾರಣ, ನಿಮ್ಮ ಶರಣ ಒಳಹೊರಗರಿಯದೆ
ವ್ಯವಹಾರದಲ್ಲಿ ಪರವಶನಾಗಿ ಮರೆದಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ./364
ಒಳಗಿನ ಮಾಟ ಸಿಕ್ಕಲರಿಯದಿರ್ದಡೆ ಹೊರಗೆ ಕಾಣಿಸುವ ತನು,
ತನುವಿಡಿದ ಮನ, ಮನವಿಡಿದ ಭಾವ,
ಈ ತ್ರಿವಿಧದಿಂದೆ ನಿರ್ವಂಚಕನಾಗಿ ಷಟ್ಕ್ರಿಯಾವ್ಯಾಪಾರವನೈಯ್ದಿ
ಷಟ್ಸ್ಥಲಗತಿಮತಿಯಿಂದೆ ಗುರುಲಿಂಗಾಚಾರಭಕ್ತಿಯ ಮಾಡಿ
ಸುಖಿಸಿ ಸುಖಮಯನಾದ ಸತ್ಯಭಕ್ತನೇ ಭಕ್ತನಲ್ಲದೆ ಉಳಿದವೆಲ್ಲ ಒಡಲುಪಾಧಿ.
ಈ ನಿಲುವಿಗೆ ನಡೆಗಡಿಯದು ಬಂಧನವಗಲದು ಬಯಲಗಾಣದು
ತ್ರಿವಿಧ ವಾಕ್ಯದಲ್ಲರಿದು ನೋಡು ನೀನಾಗಬಲ್ಲರೆ
ಗುರುನಿರಂಜನ ಚನ್ನಬಸವಲಿಂಗವು./365
ಒಳಗಿಲ್ಲದ ಹೊರಗಿಲ್ಲದ ತೆರಹಿಲ್ಲದ ಪರಿಪೂರ್ಣಲಿಂಗಕ್ಕೆ
ಮಾಡಿ ಕೆಟ್ಟರು ಮನಮುಖಹಿರಿಯರು,
ನೀಡಿ ಕೆಟ್ಟರು ತನುಮುಖಹಿರಿಯರು,
ಕೂಡಿ ಕೆಟ್ಟರು ಭಾವಮುಖಹಿರಿಯರು,
ಇದನರಿದು ನಾನು ಮಾಡದೆ ನೀಡದೆ ಕೂಡದೆ
ಮಾಡಿ ಭವಗೆಟ್ಟೆ, ನೀಡಿ ನಿರ್ಮಲವಾದೆ, ಕೂಡಿ ನಾನು ಕೆಟ್ಟೆ,
ನಿನ್ನನರಿಯದಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ. /366
ಒಳಹೊರಗೆ ತಂದು ಉಲಿದುರಿವ ಸಂಪತ್ತವನರಿವಡೆ
ಹಿಂದಣ ಸಿರಿಸುಖಗಳಿಗಳವಲ್ಲ ಕಾಣಾ.
ಹೊರಗೊಳಗೆ ತಂದು ಉಲಿದುರಿವ ಸಂಪತ್ತವನರಿವಡೆ
ಹೋಗಿ ಬಂದಿರುವ ಪರಿಸುಖಿಗಳಿಗಳವಲ್ಲ ಕಾಣಾ.
ಮತ್ತೆಂತೆಂದೊಡೆ, ಹಾಸಿದ ಶರಗ ಹಸದ ಭಾಷೆಬದ್ಧ ಭಾವಜ್ಞರರಿವರು ನೋಡಾ
ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ./367
ಒಳ್ಳೆಯತನಕ್ಕೆ ಉಪದೇಶವಾಗಿ ಕಳ್ಳತನವೆರೆದು
ಕಡೆಗೆ ವಂಚನೆಯುಳ್ಳರೆ ಆಚಾರವಲಸಿತ್ತು.
ಕರ್ಮಕವಿಯಿತ್ತು, ಯುಕ್ತಿಗೆಟ್ಟಿತ್ತು, ಅವಿದ್ಯಾಶಕ್ತಿ ಅಟ್ಟಿಕೊಂಡಿತ್ತು,
ಭಕ್ತಿ ಬಯಲಾಯಿತ್ತು, ನಿರಯಮಾರ್ಗವಾವರಿಸಿ ಬಂಧನವನುಣಿಸಿತ್ತು
ಗುರುನಿರಂಜನ ಚನ್ನಬಸವಲಿಂಗವನುಳಿದ ಆ ಭಂಗಗೇಡಿಗಳಿಗೆ./368
ಕಂಗಳ ಕರುಳನರಿಯದೆ ನೋಡುವೆನಯ್ಯಾ ನಿಮ್ಮ ಚರಣಕಮಲವನು.
ಮನದ ಮಸಕನರಿಯದೆ ಮಾಡುವೆನಯ್ಯಾ ನಿಮ್ಮ ಚರಣಕಮಲಕ್ಕೆ.
ಭಾವದ ಕಾಳಗತ್ತಲೆಯನರಿಯದೆ ಕೂಡುವನಯ್ಯಾ ನಿಮ್ಮ ಚರಣಕಮಲವನು.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರೊಳಗೆ ನಾನೊಂದು ಸ್ಥಲಾದಿಕಾರಿಯಂಗ ಕಾಣಾ. /369
ಕಂಗಳ ಕಾಂತಿಯನರಿಯದೆ ಅರ್ಪಿತವೆಲ್ಲಿಹದೊ?
ಕಾಯದ ಕಳೆಯನರಿಯದೆ ಅರ್ಪಿತವೆಲ್ಲಿಹದೊ?
ಕರ್ಣದ ಹೊಳಪನರಿಯದೆ ಅರ್ಪಿತವೆಲ್ಲಿಹದೊ?
ನಾಲಿಗೆಯ ಸುಖವಕಾಣದೆ ಅರ್ಪಿತವೆಲ್ಲಿಹದೊ?
ಘ್ರಾಣದ ಪ್ರಾಣವನರಿಯದೆ ಅರ್ಪಿತವೆಲ್ಲಿಹದೊ?
ಹೃದಯದ ಬೆಳಗನರಿಯದೆ ಅರ್ಪಿತವೆಲ್ಲಿಹದೊ?
ಅಸಮ ಗುರುನಿರಂಜನ ಚನ್ನ ಬಸವಲಿಂಗದ ಸುಳುಹಕಾಣದ
ಅರ್ಪಿತವೆಲ್ಲಿಹದೊ? /370
ಕಂಗಳಲ್ಲಿ ಹೆಜ್ಜೆ ಮೂಡಿ, ಹೆಜ್ಜೆಯಲ್ಲಿ ಕಂಗಳು ಮೂಡಿ,
ಕಣ್ಣಿನಲ್ಲಿ ಕಂಗಳು ಮೂಡಿ, ಕಿವಿಯಲ್ಲಿ ಕಂಗಳು ಮೂಡಿ,
ಮೂಗಿನಲ್ಲಿ ಕಂಗಳು ಮೂಡಿ, ನಾಲಿಗೆಯಲ್ಲಿ ಕಂಗಳು ಮೂಡಿ,
ಮೈಯಲ್ಲಿ ಕಂಗಳು ಮೂಡಿ, ಕೈಯಲ್ಲಿ ನಲ್ಲನ ಬಿಗಿದು ಮುದ್ದಿಸಿ,
ನೆರೆದು ಸುಖಿಸಬಲ್ಲಾತಂಗಲ್ಲದೆ ಶರಣಸ್ಥಲ ಸಾಮಾನ್ಯವೇ
ಗುರುನಿರಂಜನ ಚನ್ನಬಸವಲಿಂಗಾ?
/371
ಕಂಗಳು ಬದುಕುತಲಿರ್ದವು ನಿಮ್ಮ ರೂಪವ ಕಾಣಲು.
ಕರ್ಣವಾಲಿಸಿ ಸುಯ್ಗರೆಯುತಿರ್ದವು
ನಿಮ್ಮ ನುಡಿಯನಾಲಿಸೆ.
ಹಸ್ತಂಗಳು, ನಿಮ್ಮ ಉಪಚಾರಕ್ಕೆಳಸಿ ಕಳವಳಿಸುತಿರ್ದವು
ಚರಣಗಳುಲಿದು ಹೆಜ್ಜೆದುಡುಕುತಿರ್ದವು ನಿಮ್ಮ ಬರವ ಭಾವಿಸುತ.
ಹೃದಯ ವಿಕಸನವಾಗಿ ಮುಂಬಾಗುತಿದೆ
ನಿಮ್ಮ ಸತ್ಕ್ರಿಯೆ ಸಮರಸಸುಖವನಿಚ್ಫೈಸಿ-
ಗುರುನಿರಂಜನ ಚನ್ನಬಸವಲಿಂಗ,
ನಿಮ್ಮ ಬರವಿಂಗೆ ಸದ್ಭಕ್ತನವಯವಂಗಳು./372
ಕಂಡ ಕುರುಹು ಕಾಣಿಕೆ ಮಾತ್ರಕ್ಕೆ ಅತಿರಮ್ಯವಲ್ಲದೆ ಆಗಬಾರದು.
ಪೂಜಕಂಗೆ ಪುಣ್ಯದ ನೆರವಿಯಲ್ಲದೆ ಆಗಬಾರದು.
ಅದು ಕಾರಣ ಕಾಣಲಿಲ್ಲ ಮಾಡಲಿಲ್ಲ ಕಲ್ಪಿತ,
ಕಲ್ಪಿತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ./373
ಕಂಡಮಂಡಲದಲ್ಲಿ ಕಂಡವರೆಂದು
ಕಾಲಿಗೆ ಬಂದಂತೆ ನಡೆವರಯ್ಯಾ ;
ಬಾಯಿಗೆ ಬಂದಂತೆ ಆಡುವರಯ್ಯಾ ;
ಮನಕ್ಕೆ ಬಂದಂತೆ ಮಾಟಕೂಟದೊಳಿರ್ದು,
ಶರಣಪದ ಬೆಳಗ ಸುಖಮಯರೆಂದರೆ ನಗುವರಯ್ಯಾ ನಿಮ್ಮ ಶರಣರು,
ಗುರುನಿರಂಜನ ಚನ್ನಬಸವಲಿಂಗಾ./374
ಕಂಡರೆ ಮನೋಹರವಯ್ಯಾ, ಮಾತನಾಡಿದರೆ ಸೊಗಸು ಕಾಣಯ್ಯಾ.
ನಮೋ ನಮೋ ಎಂದು ಕೊಂಡಾಡಿದರೆ ಕುಲಕೋಟಿ ಪಾವನವಯ್ಯಾ.
ನಿಮ್ಮ ಶಿವಶರಣರ ಸಂಗವ ಬಯಸುವ ಭಾವಜ್ಞರಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಚ್ಚೊತ್ತಿದ ಅನಘ ಗಂಭೀರ./375
ಕಂಡು ತಪ್ಪಿಸಿಕೊಂಡು ನಡೆವ ಗಮನಾಗಮನಂಗಳಂಗ,
ಕಂಡು ತಪ್ಪಿಸಿಕೊಂಡು ನೋಡುವ ನೋಟದಂಗ,
ಕಂಡು ತಪ್ಪಿಸಿಕೊಂಡು ಮಾಡುವ ಮಾಟದಂಗ,
ಕಂಡು ತಪ್ಪಸಿಕೊಂಡು ಉಂಬುವ ಊಟದಂಗ,
ಮತ್ತೆ ನಿರಂಜನ ಸತ್ಯಸಾವಧಾನದಂಗ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಲಿಂಗದಲ್ಲಿ ಶೇಷಾಂಗವದೆ./376
ಕಂಡೆನೆಂಬುದು ಸಟೆ, ಕಾಣದಿರವು ದಿಟ.
ಕಾಣಬಲ್ಲವರು ಮುಂದೆ ಕಾಂಬುದೆ ಸತ್ಯ.
ಕಾಣಬಾರದವರು ಮುಂದೆ ಕಾಣದಿರುವುದೇ ಸತ್ಯ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ದ್ವೈತವೆನಲಿಲ್ಲ ಅದ್ವೈತ ಶರಣ./377
ಕಂಡೆನೆಂಬುವರು ಕಾಣಿಕೆಯೊಳಗಿಪ್ಪರು.
ಕೊಟ್ಟುಕೊಂಡೆನೆಂಬುವರು ವ್ಯವಹಾರದೊಳಗಿಪ್ಪರು.
ತಾನಾಗಿ ಮರೆದೆನೆಂಬುವರು ಭಿನ್ನಕಲಂಕಿಗಳು.
ಇವರ ಗತಿಮತಿಯಂತಿರಲಿ ನಮ್ಮ ಗುರುನಿರಂಜನ ಚನ್ನಬಸವಲಿಂಗ
ತಾನಾಗಿ ಮರೆದಿರವು ಅಪೂರ್ವ./378
ಕಚ ನವೀನ ಕುಚ ಜಘನದ ಕುವರಿಯರ ಸವಿನುಡಿಯ ಸೆಳವಿಗೆ
ಕವಳಿಸಿ ಬಿದ್ದು ಮುಳುಗಿ ಬೆಳಗುಗತ್ತಲೆಯೊಳಿರುವರಗಣಿತರು.
ಹಿರಿಯರೆಂದೆನಿಸಿಕೊಂಡ ಬರಿ ಮನುಜರು
ಮನೆಮನೆಯರಸಿಯರ ವಿನಯವೆರೆದು,
ಘನಭಕ್ತಿಜ್ಞಾನವೈರಾಗ್ಯದಿಂದನುಪಮಲಿಂಗಕ್ಕೆ
ತನುಮನಧನವೀವ ಅನುವನವರೆತ್ತಬಲ್ಲರಯ್ಯಾ ?
ಹುಸಿ ದಿಟ, ಕಳ್ಳ ಸಹಜ, ಮಸಿ ಧವಲ ಮಾಡಲುಂಟೆ ?
ಗುರುನಿರಂಜನ ಚನ್ನಬಸವಲಿಂಗಕ್ಕೆ ತಪ್ಪಕರು ಅಪ್ಪಬಲ್ಲರೆ ?/379
ಕಚ್ಚಕಳೆದಕ್ಕಿಯ ಬೋನವ ಹುಚ್ಚಿ ತನ್ನ ಕೈಯಲ್ಲಿ ಕಲಿಸಿದರೆ
ದಾಸತ್ವವಾಯಿತಲ್ಲ ಲೋಕದೊಳಗೆ.
ಕಂಡವರು ಬಾರರು, ಬಂದವರು ಹೊಂದರು, ಅಲ್ಲೇ ನಿಂದವರು ಬೆಂದರು.
ಒಬ್ಬಿಬ್ಬರರಿಯದ ಒಡಲೊಳಗೆ ಸುಖಿಸಿದ
ಗುರುನಿರಂಜನ ಚನ್ನಬಸವಲಿಂಗ./380
ಕಟ್ಟಕಡೆಯಲಿಂದ ನಟ್ಟನಡುಮಧ್ಯಕ್ಕೆ ಬರಲು,
ಸಟ್ಟಸರಿರಾತ್ರಿ ಕವಿಯಿತ್ತು ನೋಡಾ !
ಹುಸಿಗಳ್ಳರೊತ್ತಿಬಂದಲ್ಲಿ ಹೆಸರು ಅಡಗಿ ಹೋಯಿತ್ತು.
ಮತ್ತೆ ನೋಡ ಕಂಡ, ಮಿಥ್ಯದೃಷ್ಟರೊಡ ಕಂಡ,
ನಿರಂಜನ ಚನ್ನಬಸವಲಿಂಗವ ನೋಡ ಕಂಡ./381
ಕಡಗೊಂಡ ಧನದಿಂದೆ ಗಳಿಸಿಕೊಡಲೊಲ್ಲದೆ
ನೋಡಿ ನೋಡಿ ಮಿಡುಕುವ ತುಡುಗುಣಿಯಂತೆ,
ಎನ್ನೊಡೆಯರು ಅಡಿಯಿಟ್ಟು ಬರಲು ಗಡಬಡಗೊಂಡು
ಮನೆ ಮಡದಿ ಮಕ್ಕಳ ಮೋಹ ತಲೆಗೇರಿ,
ಸಲುಗೆಯನಿದಿರಿಟ್ಟು ಸರಿದುಕೊಂಡಿರುವ
ಒಳಗಳ್ಳಗೆಂತು ಭಕ್ತಿಯಪ್ಪುದಯ್ಯಾ !
ನಿಮ್ಮಡಿಯೊಳು ಬಿದ್ದ ಆ ಜಡ ಭಕ್ತಿಗನುವಾಗಿ
ಬಾ ಗುರುನಿರಂಜನ ಚನ್ನಬಸವಲಿಂಗಾ./382
ಕಣ್ಣಿನಿಂದ ಕಾಲಕಳೆದವರು, ಕಣ್ಣಿನಿಂದ ಕಣ್ಣಕಳೆದವರು,
ಕಣ್ಣಿನಿಂದ ಕಿವಿಯಕಳೆದವರು,
ಕಣ್ಣಿನಿಂದ ಮೂಗಕಳೆದವರು, ಕಣ್ಣನಿಂದ ಜಿಹ್ವೆಯ ಕಳೆದವರು,
ಕಣ್ಣಿನಿಂದ ಸರ್ವಾಂಗವನು ಕಳೆದವರು.
ಕಣ್ಣನಿಂದ ಗುರುನಿರಂಜನ ಚನ್ನಬಸವಲಿಂಗವೆಂಬ
ನಾಮವ ಕಳೆದವರು ಶರಣರು./383
ಕಣ್ಣಿಲ್ಲದ ಗುರುವಿನ ಕೈಯಿಂದೆ ಮಣ್ಣಿಲ್ಲದ ಮಗನಾಗಿ
ತಾನೊಂದು ಕಣ್ಣ ಕೊಂಡು ಕಾವ್ಯನಾದ ಬಳಿಕ
ಬಣ್ಣವಿಲ್ಲದ ಧಾನ್ಯವ ತಂದು ಚೆನ್ನಾಗಿ ಪಾಕವಮಾಡಿ
ಮತ್ತಾರ ಕಾಣಗೊಡದೆ, ಸತ್ಯ ಭೋಜ್ಯಗಟ್ಟಿ
ನಿತ್ಯವಾಗಿ ಕೊಟ್ಟು ಕೊಂಡು ಸುಖಿಸಿದರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ತಥ್ಯಪ್ರಸಾದಿಯೆಂಬೆ. /384
ಕಣ್ಣು ನಾಸ್ತಿಯಾದಲ್ಲಿ ಕಾಯದ ರೂಪುನಾಸ್ತಿ.
ಮನನಾಸ್ತಿಯಾದಲ್ಲಿ ನೋಟದ ಬಗೆನಾಸ್ತಿ.
ಪ್ರಾಣನಾಸ್ತಿಯಾದಲ್ಲಿ ಸಂಚಲ ಮಾಟನಾಸ್ತಿ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಭಾವನಾಸ್ತಿಯಾದಲ್ಲಿ ಮಹಾಲಿಂಗೈಕ್ಯ ತಾನೆ ನೋಡಾ./385
ಕತರ್ು ಗುರುಮೂರ್ತಿಯೆನ್ನ ಮಿಥ್ಯವ ಪರಿಹರಿಸಿ
ಅತ್ತತ್ತಲಾದ ಅಸಮಾಕ್ಷಲಿಂಗವನ್ನು
ಸತ್ಯವಿದೆಂದು ಕರ-ಮನ-ಭಾವಕ್ಕೆ ಕರುಣಿಸಿ ಕೊಟ್ಟ ಬಳಿಕ
ಅತ್ತಣಿತ್ತಣ ಕಾರ್ಯಕ್ಕೆಳಸದೆನ್ನ ಕಾಯಭಾವ.
ಸುತ್ತಿಸುತ್ತಿ ಸುಳಿಯದೆನ್ನ ಮನ.
ಸೂಸಿದಲ್ಲಿ ಆಶೆಯನರಿಯದೆನ್ನ ಭಾವ.
ಅನುಪಮ ನಿರಂಜನ ಚನ್ನಬಸವಲಿಂಗವನಗಲಿ
ನೆನೆಯಲಾರದೆ ಆವರಿಸಿಕೊಂಡಿಪ್ಪೆನು./386
ಕತ್ತಲ ಸುತ್ತಿನಲ್ಲಿ ಸುಳಿದಾಡುವ ಕತ್ತೆಯ ತಂದು
ಜೀನವನಿಟ್ಟರೆ ಹೊತ್ತೇರೆ ಕುದುರೆಯಾಗಲರಿಯದು.
ಹುಸಿಯನುಂಬ ಹಸಿಮಾನವನು ತಾಮಸವಿರ್ದಂತೆ ತಂದು ಭಕ್ತನಮಾಡಿದರೆ
ಗತಿ ಬೆಳಗಿನಲ್ಲಿ ಕಂಡರೆ ಭಕ್ತನಾದಾನೇ ನರನಲ್ಲದೆ
ಗುರುನಿರಂಜನ ಚನ್ನಬಸವಲಿಂಗಕ್ಕೆ.
/387
ಕತ್ತಲಾಗಿ ಹೋಯಿತ್ತು ನಿತ್ಯ ಸೂರ್ಯನಿಂದೆ.
ಸತ್ಯವೆಂದಲ್ಲಿ ಮಿಥ್ಯ ಸಾಕಾರ ಸಂದಳಿಸಿ ಬೆಂದು ನಿಂದವು.
ತಾಯಿ ತಂದೆಯಾಗಿ ನಿಂದ ನಿಲವ,
ನಾನೆಂದು ಕಂಡು ಬದುಕುವೆನಯ್ಯಾ ನಿರಂಜನ ಚನ್ನಬಸವಲಿಂಗಾ ?/388
ಕತ್ತಲೆ ಬೆಳಗಿನೊಳಿಪ್ಪ ಮಿಥ್ಯಮಾರಿಯ ಮಕ್ಕಳಿಗೆ
ನಿತ್ಯರೆಂಬ ನುಡಿ ಮತ್ತೆಲ್ಲಿಹದೊ?
ಬಗೆ ಬಗೆ ಸೋಂಗ ತೊಟ್ಟು ನಗುತ್ತಲಳುತ್ತ
ಶರಧಿಯೊಳು ನೀರಾಟವನಾಡುವವರು
ಮಹಾನಂದದಲ್ಲೊಪ್ಪುವ ಮಹಾಲಿಂಗಪ್ರಸಾದಸುಖವನವರೆತ್ತಬಲ್ಲರು
ಗುರುನಿರಂಜನ ಚನ್ನಬಸವಲಿಂಗಪ್ರಸಾದಿಯೈಕ್ಯರಲ್ಲದೆ.
/389
ಕತ್ತಲೆಯ ಕಳೆದುಳಿಸಿಕೊಳಬಲ್ಲ ಪಂಚಾಕ್ಷರಿಯನುಳಿದು
ಕುಟಿಲ ಮಂತ್ರ ಯಂತ್ರಗಳ ಕಲಿತು,
ಗ್ರಾಸಕ್ಕೆ ತಿರುಗಿ ಹಿರಿಯರೆನಿಸಿ ಪರಿಭವವ ಕಾಣುವ
ನರಕಿಗಳನೆಂತು ಗುರುಕರಜಾತರೆನ್ನಬಹುದು ?
ಎಂತು ಲಿಂಗಸುಖಿಗಳೆನ್ನಬಹುದು ?/390
ಕತ್ತಲೆಯ ಕಾಳದೊಳು ಸುಳಿದಾಡುವಾ ಹಕ್ಕಿ
ಪಕ್ಷಿ ಭಾವವಿಲ್ಲದೆ ಇಲ್ಲದ ವ್ಯವಹಾರಗೊಂಡಿತ್ತು.
ಸುಳಿಗಾಳಿ ಬೀಸಿ ಸೂರ್ಯನುದಯಿಸಲು, ಕತ್ತಲೆಯ ಕಾಳಕ್ಕೆ ಬಿಸಿಲು ನೆರೆಯಲು,
ನಟ್ಟನಡುಮಧ್ಯ ಸುತ್ತಲಿಕ್ಕುವ ಮಾರಿ ದೇವಿಯಾದಳು
ನಿರಂಜನ ಚನ್ನಬಸವಲಿಂಗವನರಿವುದಕ್ಕೆ./391
ಕತ್ತಲೆಯ ಕೈಮರೆ ಜನಸೇವೆ ಸಂಬಂಧ
ಅರುಹಿರಿಯರೆಲ್ಲ ಹಿಂದು ಮುಂದರಿಯದೆ
ಸಂದಿನಡೆವರು ಸವೆಯದ ಬಟ್ಟೆಯ.
ಇದನರಿದು ಬೆಂದ ಬೇಗೆಯನುರುಹಿ,
ಬಂದ ಬರವನರಿದು ಸಂತತ ಸಕಲನುಮತವಾಗಿ
ಬಾಗಿ ನಿಂದು ಭಾವಿಸಿ ಅರ್ಪಿಸಿಕೊಳಬಲ್ಲ
ಅವಧಾನಿಗಲ್ಲದೆ ಅರ್ಪಿತವನರಿಯಬಾರದು
ಗುರುನಿರಂಜನ ಚನ್ನಬಸವಲಿಂಗಾ./392
ಕತ್ತೆಯ ತಾಯಿ ಕುದುರೆಯ ಹಡೆದು
ಶೃಂಗಾರದಲ್ಲಿ ಬೆಳೆದು ಭೂಮಿಯೊಳುದಯಿಸಿದ ಹುಲ್ಲ ಮೇಯುತ್ತ
ಏಳುಕೆರೆಯೊಳಗೆ ನಿಂದು, ಐದುಬಾವಿಯ ನೀರುಕುಡಿದು
ಕೆಳಮುಖದ ಮನೆಗಳಲ್ಲಿ ತಾಯಿ ಮಗನ ಹೊತ್ತು ತಿರುಗುತ್ತಿದ್ದಿತಯ್ಯಾ.
ಮನೆಯೊಳಗಣ ಬೆಂಕಿ ಕೆದರಿ ಮುಂದೆ ಬರಲುಳ್ಳ
ಬೆಂದ ಹೊಯಿಲಿಗಳು ಉರಿಯಲು
ಕುದುರೆಯ ತಾಯಿ ಸಾಯಲು ಕತ್ತೆ ಉಳಿದು ನಿತ್ಯವಾದಲ್ಲಿ
ಗುರುನಿರಂಜನ ಚನ್ನಬಸವಲಿಂಗ ತಾನೇ ಬೇರಿಲ್ಲ./393
ಕದಳಿಯ ಫಲದಂತೆ ಪ್ರಣವವೃಕ್ಷಾಂಕಜಿಹ್ವೆಯಿಂದುಲಿವುದೊಂದೆ ಶಿವನುಡಿ.
ಇದರಿಂದ ವಿಹೀನ ಫಲವು ಮಾತೇನ ಬಾತೆ ?
ತಥ್ಯವಿರಹಿತ ಬಾಳಲಿಲ್ಲ ಶರಣ
ಗುರುನಿರಂಜನ ಚನ್ನಬಸವಲಿಂಗವಿಡಿದು./394
ಕನಕದ ಮನೆಯೊಳಗೆ ಕಲ್ಪವೃಕ್ಷವ ಬೆಳೆದು
ಕೈಯಲ್ಲಿ ಚಿಂತಾಮಣಿಯಿರಲು,
ಕೈಕೂಲಿಮಾಡಿ ಕಷ್ಟಬಡುವನಂತೆ !
ಸದ್ಗುರುನಾಥನ ಕೃಪೆಯಿಂದೆ ತ್ರಿವಿಧನುಗ್ರಹವೆಂಬಾಲಯದೊಳಗೆ
ಸರ್ವಾಚಾರಸಂಪತ್ತು ಪಸರಿಸಿ,
ಕರಸ್ಥಲದಲ್ಲಿ ಚಿಂತಿತಾರ್ಥವನೀವ ಚಿನ್ಮಯಮೂರುತಿಯಿರಲು,
ಅದನರಿದು ಮುಕ್ತಿಯನೈದಲರಿಯದೆ,
ಬರುಕಾಯನಾಗಿ ಅಷ್ಟಾಂಗಯೋಗದಿಂದೆ ಕಷ್ಟಬಡುವ
ಭ್ರಷ್ಟಭವಿಗಳನೇನೆಂಬೆನಯ್ಯಾ!
ಅದಲ್ಲದೆ ರಾಷ್ಟ್ರದೊಳಗುಳ್ಳ ಕ್ಷೇತ್ರ ಸ್ಥಾವರ
ನದಿಗಳ ಕಂಡು ಬದುಕುವೆನೆಂದು,
ತನುಮನವ ದಂಡಿಸುವ ದಿಂಡಿಯದ್ವೈತರನೆಂತೆಂಬೆನಯ್ಯಾ ?
ನಾಲಿಗಿಲ್ಲದ ರುಚಿಯನರಿದವರುಂಟೆ
ಗುರುನಿರಂಜನ ಚನ್ನಬಸವಲಿಂಗಾ ?/395
ಕಬ್ಬುನವನರಸಿದರೆ ಪರುಷಭಾವ ತಪ್ಪಿತ್ತು.
ಕಾಷ್ಠವನರಸಿದರೆ ಅಗ್ನಿಭಾವ ತಪ್ಪಿತ್ತು.
ನರಜಿಹ್ವೆಯನರಸಿದರೆ ಶರ್ಕರಭಾವ ತಪ್ಪಿತ್ತು
ಇದು ಕಾರಣ ಇಹಪರವನರಸಿದರೆ ಶರಣಭಾವ ತಪ್ಪಿತ್ತು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./396
ಕಮರ್ೆಂದ್ರಿಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
ವಿಷಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
ಜ್ಞಾನೇಂದ್ರಿಯಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
ವಾಯುಪಂಚಕಂಗಳ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
ಕರಣ ನಾಲ್ಕೊಂದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
ಇಂತಲ್ಲದೆ ಇವರ ತಿರುಳಿನೊಳು ಮರುಳುಗೊಂಡುರುಳುವ ಮಾನವರು
ತಾವು ಶರಣರೆಂದು ನುಡಿದು ನಡೆವ ಸಡಗರವ ಕಂಡು ನಾಚಿತ್ತೆನ್ನ ಮನವು
ಗುರುನಿರಂಜನ ಚನ್ನಬಸವಲಿಂಗದಲ್ಲಿ./397
ಕಮರ್ೆದ್ರಿಯ ಪಂಚಕಂಗಳಳಿದುಳಿದುದೇ ಸತ್ತು.
ವಿಷಯಪಂಚಕಂಗಳಳಿದುಳಿದುದೇ ಚಿತ್ತು.
ಧಮರ್ೆಂದ್ರಿಯ ಪಂಚಕಂಗಳಳಿದುಳಿದುದೇ ಆನಂದ.
ವಾಯುಪಂಚಕಂಗಳಳಿದುಳಿದುದೇ ನಿತ್ಯ.
ಕರಣಪಂಚಕಂಗಳಳಿದುಳಿದುದೇ ಪರಿಪೂರ್ಣ.
ಇದು ಕಾರಣ ಈ ಪಂಚವಿಂಶತಿತತ್ವಂಗಳಳಿದುಳಿದಂಗವು ತಾನೇ ಅದು ಶಿವಾಂಗ
ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಂಗ ಕಾಣಾ./398
ಕಮಲದ ಬಂಡುಂಬ ಭೃಂಗ
ಭೂಜ ರಜ ಹುಡಿಯ ಸೋಂಕಲಮ್ಮದು ನೋಡಾ.
ಐದದು ನಿರಂಜನ ಅಪ್ರತಿಮ ಗಂಭೀರ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ./399
ಕರ ಮನ ಭಾವದಲ್ಲೆಸೆವ ಪರಶಿವಲಿಂಗಕ್ಕೆ
ಸ್ವಯಂ ರತಿತ್ರಯವಿತ್ತು ಮರೆದಿರಲಾರದೆ,
ಪರಿಪರಿಯ ಕುಶಲಗತಿಮತಿಗಳೊಡವೆರೆದ
ದುಸ್ಸಾರಕ್ಕವೇ ರತಿಯನಿತ್ತು ಮರೆದಿರುವ
ಮರುಳಮಾನವರಿಗಿನ್ನೆತ್ತಣ ಶರಣೈಕ್ಯಸ್ಥಲ ಹೇಳಾ
ಗುರುನಿರಂಜನ ಚನ್ನಬಸವಲಿಂಗಾ !/400
ಕರಣತ್ರಯದಪ್ಪುಗೆಯ ಪರಿಹರಿಸದೆ ಮರಣವ ಗೆದ್ದೆವೆಂಬ
ಬರುನುಡಿಯ ಕಂಗುರುಡರನೇನೆಂಬೆನಯ್ಯಾ?
ತ್ರಿವಿಧಭಕ್ತಿಯನರಿಯದೆ ತ್ರಿವಿಧಮಲಸಂಬಂಧವಾಗಿ
ತ್ರಿಕೂಟವ ಕಂಡವರೆಂದು ಕೂಗಿದರೆ ಗೂಗೆ ಕಾಗೆಯ ಕೂಗಿನಂತೆ ಸೊಗಸದಯ್ಯಾ.
ನಿಮ್ಮ ಶರಣರಿಗೆ ಕೊಡುಕೊಳ್ಳಿಯುಳ್ಳರೆ ಭವ ತಪ್ಪದೆಂದು
ನುಡಿದುಂಡು ನಡೆಗೆಟ್ಟು ಹೋಗುವ ತುಡುಗುಣಿಗಳ
ಕೆಡಹಿ ಮೂಗಕೊಯ್ವ ಗುರುನಿರಂಜನ ಚನ್ನಬಸವಲಿಂಗ./401
ಕರಸ್ಥಲ ಲಿಂಗ, ಮನಸ್ಥಲ ಮಂತ್ರ, ಪ್ರಾಣಸ್ಥಲ ಪ್ರಸಾದ,
ಭಾವಸ್ಥಲ ಪರಮಪಾದೋದಕವಾದ ಮಾಹೇಶ್ವರನು
ನಡೆವಲ್ಲಿ ಶುದ್ಧ, ನುಡಿವಲ್ಲಿ ಸಿದ್ಧ, ಕೂಡುವಲ್ಲಿ ಪ್ರಸಿದ್ಧ.
ಅದಲ್ಲದೆ ವೇಷಧಾರಿ ಗುರುವಿನ ಕೈಯ ಲಿಂಗವ ಅಂಗದ ಮೇಲೆ ಧರಿಸಿ ನಡೆವ,
ಕಂಗುರುಡ ಕಸಮಲಮನುಜರನೇನೆಂಬೆನಯ್ಯಾ?
ಆಸೆಯ ಇಚ್ಚೆಗೆ ಆವ ಕುಲದವನಾದರು
ಅವನ ಓಲೈಸುವರು ಶರಣೆಂದು ಗುರುದ್ರೋಹಿಗಳು.
ವಿಷಯದಿಚ್ಛೆಗೆ ಆವ ಕುಲದ ಸ್ತ್ರೀಯಾದರು
ಅವಳ ಅಧೋದ್ವಾರದಲ್ಲಿ ಮುಳುಗುವರು ಲಿಂಗದ್ರೋಹಿಗಳು.
ಹಸಿವಿನಿಚ್ಛೆಗೆ ಶುಚಿಯಶುಚಿಯೆನ್ನದೆ
ಭವಿ ಭಕ್ತನೆನ್ನದೆ ಕಂಡ ಕಂಡ ಜನರ ಕೊಂಡಾಡಿ
ಉದರ ಹೊರೆವರು ಜಂಗಮದ್ರೋಹಿಗಳು.
ಇಂತು ತ್ರಿವಿಧ ದ್ರೋಹಿಗಳಿಗೆ ಗುರುವಿಲ್ಲ ಲಿಂಗವಿಲ್ಲ
ಜಂಗಮವಿಲ್ಲ ಪಾದೋದಕಪ್ರಸಾದವಿಲ್ಲ
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./402
ಕರಸ್ಥಲದಲಿಂಗದೊಳು ಮನವ ಮುಳುಗಿಸಲರಿಯದೆ,
ಮಲತ್ರಯದ ಬೊಂಪಾಸದಲ್ಲಿ ಮುಳುಗಿ ಏಳಲಾರದೆ ಹೊರಳಾಡುವ
ದುರ್ಗತಿಗಳಿಗಿನ್ನಾವ ಸ್ಥಲಸಂಬಂಧವಪ್ಪದು ಹೇಳಾ !
ಈ ಧರ್ಮಕರ್ಮಗಳನೆನ್ನತ್ತ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ./403
ಕರಿಕಾಳಿ ಕಂಠದಲಿ ಲಕ್ಷ ಲಕ್ಷ ರುಂಡಮಾಲೆಯ ಸರವ ನೋಡಾ !
ಮುಂಡಗಳು ಮೊಲೆಯನುಂಡರೆ ಮೂರು ಕೊತ್ತಲ ಕಿಚ್ಚೆದ್ದು ಹೊಯ್ಯಲು
ಮೂರು ಲೋಕದವರೆಲ್ಲ ತಳವೆಳಗಾಗಿ ಹೋದರು
ನಿರಂಜನ ಚನ್ನಬಸವಲಿಂಗವನರಿಯದೆ./404
ಕರಿಯ ಕಾಳಿನೊಳಗೆ ಕತ್ತಲ ಬೆಳಗಿನೊಳು
ನರಳುತ್ತ ನೇಯುತಿದ್ದನೊಬ್ಬ ಜಾಡ.
ಕುಳಿಯೊಳಗಣ ಬೆಂಕಿಯುಳಿದು
ಮಗ್ಗದ ನೂಲು ಸುಟ್ಟು ಚಿಂತೆ ಮಾಡುತ್ತಿರಲು,
ಮೇಲುಮನೆಯಿಂದೊಬ್ಬ ನೋಡಿ ಕೈಗೊಟ್ಟು
ಕಾಲೆರಡು ಸಂದಿನೊಳಗೆ ಇಕ್ಕಿದಮೇಲೆ ತಿರುಗಿ ಜೀವಿಸಲುಂಟೆ ?
ಗುರುನಿರಂಜನ ಚನ್ನಬಸವಲಿಂಗಕ್ಕೆ
ಇರ್ದುದ ಕೊಟ್ಟು ಸದ್ದಿಲ್ಲದಿರ್ದಡೆ ಸದ್ಭಕ್ತನೆಂಬೆ./405
ಕರುಣೋದಕವ ಬಲ್ಲರೆ ಕಾಯಭಾವನಾಸ್ತಿಯಾಗಿರಬೇಕು.
ವಿನಯೋದಕವ ಬಲ್ಲರೆ ಪ್ರಾಣನ ಪ್ರಕೃತಿನಾಸ್ತಿಯಾಗಿರಬೇಕು.
ಸಮತೋದಕವ ಬಲ್ಲರೆ ಆತ್ಮಗುಣವಡಗಿರಬೇಕು.
ಸ್ಪರ್ಶನೋದಕವ ಬಲ್ಲರೆ ಕಾಮವಿಕಾರದ ಸೋಂಕನಳಿದಿರಬೇಕು.
ಅವಧಾರೋದಕವ ಬಲ್ಲರೆ ಅರಿಷಡ್ವರ್ಗ ಶೂನ್ಯವಾಗಿರಬೇಕು.
ಆಪ್ಯಾಯನೋದಕವ ಬಲ್ಲರೆ ಷಡೂರ್ಮಿನಾಸ್ತಿಯಾಗಿರಬೇಕು.
ಹಸ್ತೋದಕವ ಬಲ್ಲರೆ ಅನ್ಯರಿಗೆ ಕೈಯಾಂತು ಬೇಡದಿರಬೇಕು.
ಪರಿಣಾಮೋದಕವ ಬಲ್ಲರೆ ಹುಸಿ ಕಳವು ಪರದಾರಗತಿನಾಸ್ತಿಯಾಗಿರಬೇಕು.
ನಿರ್ನಾಮೋದಕವ ಬಲ್ಲರೆ ಷಡುವರ್ಣರಹಿತನಾಗಿಬೇಕು.
ಸತ್ಯೋದಕವ ಬಲ್ಲರೆ ಮಿಥ್ಯಭಾವನಾಸ್ತಿಯಾಗಿರಬೇಕು.
ಈ ಭೇದವನರಿಯದೆ ದಶವಿಧ ಪಾದೋದಕದಾಚರಣೆಯೊಳಿರ್ದವರೆಂದೊಡೆ
ಕರ್ಮಕತ್ತಲೆಯುಳಿದುಬಾರರು ಗುರುನಿರಂಜನ ಚನ್ನಬಸವಲಿಂಗೈಕ್ಯವೆಂಬ
ಅಖಂಡ ಪಾದೋದಕದಾಲಯಕ್ಕೆ./406
ಕರ್ಕಸನ ಮಗಳು ಅರ್ಕಜನ ಮದುವೆಯ ಮಡದಿಯಾಗಿ
ತನ್ನ ಲಕ್ಷಕೋಟಿ ಮಕ್ಕಳ ಮುದ್ದಾಡಿಸುವಲ್ಲಿ
ನೋಡಬಂದವರ ಕೂಡಿ ಕ್ರೀಡಿಸುವಳು.
ಇದನರಿದ ಕುಲಗೇಡಿ ಭಂಗಹೀನ ಬಯಲ ಭ್ರಾಂತರು
ಕರ್ಕಸನ ಅರ್ಕನೊಡಲೊಳಗಿಕ್ಕಿ ಆಡುತಾಡುತ
ಅರತುನಿಂದರು ಗುರುನಿರಂಜನ ಚನ್ನಬಸವಲಿಂಗವಾಗಿ./407
ಕರ್ಪುರದ ಸುಖವನು ಅಗ್ನಿ ಅರಿದುದೊ ?
ಅಗ್ನಿಯ ಸುಖವನು ಕರ್ಪುರ ಅರಿದುದೊ ?
ಕೂಟದ ಕುರುಹನರಸುವರಾರು ?
ಕೂಟ ಕುರುಹ ನುಂಗಿ ಬಯಲಾದುದು,
ಶರಣ ಲಿಂಗಸಂಬಂಧವಿಂತುಟು
ಗುರುನಿರಂಜನ ಚನ್ನಬಸವಲಿಂಗಾ.
/408
ಕರ್ಮವ ಜರಿದು ಕಾಯದಲ್ಲಿ ಅರಿದು,
ಕರ್ಮವ ಹೊದ್ದದಿಪ್ಪುದೇ ಶರಣಸ್ಥಲ.
ಸಂಶಯಕಲ್ಪನೆಯ ಕಳೆದು ಮನದಲ್ಲಿ ಅರಿದು,
ಆ ಸಂಶಯಕಲ್ಪನೆಯ ಹೊದ್ದದಿರ್ಪುದೇ ಶರಣಸ್ಥಲ.
ಭ್ರಾಂತನಳಿದು ಭಾವದಲ್ಲಿ ಅರಿದು
ಆ ಭ್ರಾಂತ ಹೊದ್ದದಿರ್ಪುದೇ ಶರಣಸ್ಥಲ.
ನಿತ್ಯಾನಿತ್ಯವರಿದು ಚಿತ್ತ ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಚ್ಚೊತ್ತಿ ಅರಿಯದಿರ್ಪುದೇ ಅನಾದಿಶರಣಸ್ಥಲ ಕಾಣಾ./409
ಕಲ್ಯಾಣದೊಳಗುಳ್ಳ ಎಲ್ಲ ಪುರಾತನರು ಕೂಡಿ
ಬಸವಣ್ಣನ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ.
ಚನ್ನಬಸವಣ್ಣನ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ.
ಪ್ರಭುದೇವರ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಂದು
ಕೋಟಿ ಶರಣು ಶರಣೆನ್ನ ಮರೆದು ಪರವಶದೊಳು ಮುಳುಗಿರ್ದೆನು./410
ಕಲ್ಯಾಣವೆಂಬ ಪಟ್ಟಣದಲ್ಲಿ ಅಸಖ್ಯಾಂತ
ಮಹಾಗಣಂಗಳಿಗಾಶ್ರಯಸ್ಥಾನವಾದ
ತ್ರಿಪುರಾಂತಕೇಶ್ವರನ ಆಲಯ.
ಅಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಜಂಗಮಾರಾಧನೆ ನಿತ್ಯವಾಗಿ ಒಪ್ಪುತಿಪ್ಪುದು.
ಬಸವಣ್ಣನ ಮನೆಯಲ್ಲಿ ಎರಡು ಲಕ್ಷ ನಾಲ್ಕುಸಾವಿರ
ಪರಿಪೂರ್ಣಾರಾಧನೆ ನಿತ್ಯವಾಗಿಪ್ಪುದು.
ಮಡಿವಾಳಯ್ಯನ ಆಲಯದಲ್ಲಿ
ಮೂರು ಲಕ್ಷ ಒಂದು ಸಾವಿರ ಮಹಾರಾಧನೆ ನಿತ್ಯವಾಗಿಪ್ಪುದು.
ಮರುಳುಶಂಕರದೇವರಾಲಯದಲ್ಲಿ
ನಾಲ್ಕುಲಕ್ಷನೂರು ಆರಾಧನೆ ನಿತ್ಯವಾಗಿಪ್ಪುದು.
ಸಿದ್ಧರಾಮದೇವರಾಲಯದಲ್ಲಿ ಐದುಲಕ್ಷನೂರಾರಾಧನೆ ನಿತ್ಯವಾಗಿಪ್ಪುದು.
ಉರಿಲಿಂಗಪೆದ್ದಣ್ಣಗಳಾಲಯದಲ್ಲಿ ಆರುಲಕ್ಷನೂರಾರಾಧನೆ ನಿತ್ಯವಾಗಿಪ್ಪುದು.
ಘಟ್ಟಿವಾಳಯ್ಯಗಳಾಲಯದಲ್ಲಿ ಇಂತೀ ಘನದಾಸೋಹದ
ಮಹದಾನಂದದುಳುಮೆಯಾದ ಶೇಷಪ್ರಸಾದವನುಂಡು
ಸುಖಿಸಿ ಪರಮಪರಿಣಾಮಿಯಾಗಿರ್ದೆನು
ಗುರುನಿರಂಜನ ಚನ್ನಬಸವಲಿಂಗದಲ್ಲಿ./411
ಕಲ್ಲೊಳಗಣ ಬೆಂಕಿ ಕಾರ್ಯವನುಳಿದು ಕಾಣದು,
ಕಾಷ್ಠದೊಳಗಿನ ಬೆಂಕಿ ಸೋಂಕದರಿಯದು,
ಬೀಜದೊಳಗಣ ಕುರುಹು ಜಲ ಮೃತ್ತಿಕೆಯನುಳಿದು ತೋರದು.
ಅದು ಕಾರಣ, ಶರಣನೊಳಗಣ ನುಡಿ ತನ್ನ ಅನುನುಡಿಗಳನುಳಿದು ತೋರದು,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶಬ್ದಸೂತಕಿಯಲ್ಲದ ಕಾರಣ./412
ಕಷ್ಟಕಡೆಗಾಣದ ಬಿಂದು, ಅದನಾವರಿಸಿದ ನಾದ
ದ್ವಂದ್ವದ ಮೇಲಣ ಸೂತ್ರಕಳೆ
ಈ ಕುರುಹವರಿತಲ್ಲಿದೆ ಕುರುಹಿಡಿದು ಬಂದೆವೆಂದರೆ
ಕಾಣಿಸದಲ್ಲೋ ಶುದ್ಧ, ತಿಳಿಯದಲ್ಲೋ ಸಿದ್ಧ, ಹೊಳೆಯದಲ್ಲೋ ಪ್ರಸಿದ್ಧ.
ಅದು ಕಾರಣ ಪಂಚಾಕ್ಷರಮೂರ್ತಿಲಿಂಗವ-
ವರಂಗವನೊಲ್ಲದಿರ್ದನು ಶೇಷಾಂಗದಲ್ಲಿ./413
ಕಷ್ಟಬಟ್ಟು ಕಾಣಲರಿಯದೆ ಬಿಟ್ಟು ಬಂದು ಹೋಗುವ
ಬಟ್ಟೆತಪ್ಪುಕ ಬಣ್ಣಗಾರರರಿತಕ್ಕಗಣಿತ ನೋಡಾ ನಿಮ್ಮ ಶರಣ.
ಸೃಷ್ಟಿ ಜಲ ನೆಲ ನೀಲಾಂಬರ ನಿರಂಜನ ನಿಜಭರಿತ ನೋಡಾ ನಿಮ್ಮ ಶರಣ.
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ
ಗೂಢ ಆರೂಢ ಕಾಣಾ./414
ಕಷ್ಟಯೋಗಿಗಳ ಕರ್ಮವ ನೋಡಬಾರದು ಕಾಣಾ.
ಅಷ್ಟಾಂಗಯೋಗವಿಡಿದು ಅನ್ನುದಕವ ತೊರೆದು,
ಆಯಾಸಬಟ್ಟು ಅಭಿನ್ನ ವಸ್ತುವನು ಭಿನ್ನವಿಟ್ಟು,
ಕಂಡು ಕೂಡಿ ಮುಕ್ತಿಯ ಹಡೆಯಬೇಕೆಂದು,
ಕಣ್ಣ ಕಳಕೊಂಡು ಕಾಂತಾರ ಬಿದ್ದು ಹೋಗುವ ಭ್ರಾಂತಬಾಲಕರು
ಎಂತು ಮುಕ್ತಿಯ ಹಡೆವರಯ್ಯಾ ಗುರುನಿರಂಜನ ಚನ್ನಬಸವಲಿಂಗಾ?/415
ಕಸಗೂಡಿದ ಭೂಮಿಯಲ್ಲಿ ಸಸಿ ಪಲ್ಲೈಸುವುದೇ?
ಅನಾದಿ ಮಲಸಂಬಂಧ ಕಾಯದಲ್ಲಿ ಗುರೂಪದೇಶ ಫಲಿಸಲರಿಯದು.
ಭೂತದೇಹಿಗಳಿಗೆ ಪ್ರಸಾದವಕೊಟಟರೆ ಅಘೋರನರಕತಪ್ಪದು,
ಅದೇನು ಕಾರಣ? ಗುರುನಿರಂಜನ ಚನ್ನಬಸವಲಿಂಗದ
ಲೀಲೆಯ ನಟಿಸುವರಾಗಿ./416
ಕಸವಿಲ್ಲದ ಭೂಮಿಯ ಮೇಲೆ ಶಶಿಕಳೆಯಾವರಿಸಿತ್ತು ನೋಡಾ !
ರಸದ ಬಾವಿಯ ಸ್ವಾದೋದಕವ ಕುಡಿದು
ಭೇದವಳಿದುಳಿದು ಬಯಲಾದುದು
ಗುರುನಿರಂಜನ ಚನ್ನಬಸವಲಿಂಗವು./417
ಕಾಡಡವಿಯ ಕಡೆಯನರಿಯದ ಹಾರುವನ
ತಲೆಯನುರುಹಿ ಬಲೆಯಬಂಧನವ ಕಡಿದು,
ಅಂದಿನತ್ತವ ತಂದು ತಲೆಕಾಲವಿಡಿದು ತಕರ್ೈಸಲಾಗಿ
ತಲೆಯುರಿ ತಾಗಿ ಮುಸುಗಿತ್ತು ನೋಡಾ.
ತಲೆಕಾಲು ಕೈಯ ನುಸುಳಿ ಕಡೆಗಾದುದರಿಯದೆ ಕಂಡ ಭಾವವರತು ನಿಂದುದು
ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ./418
ಕಾಡಡವಿಯೊಳೋರ್ವನೆ ದೆಸೆಯಗಾಣದೆ ಅಸುವಳಿವ ಕಾಲದಲ್ಲಿ,
ಒಸೆದೋರ್ವ ಬಂದು ಬಾ ಬಾ ಎಂದೆತ್ತಿ
ಪೊಳಲುಬಳಗದ ಮಧ್ಯ ನಿಲಿಸುವಂತೆ,
ಎನ್ನಾದಿಮಧ್ಯವಸಾನವಳಿದು,
ಭವಾರಣ್ಯ ಭೀತಿತ್ರಯದೊಳಿರ್ಪ ಆತ್ಮನನು
ಅಭಯದಿಂದೆತ್ತಿ, ಅರಿ ಸಕಲ ಪರಿಸಿ ತಲೆದಡಹಿ,
ಮೋಹದ ಮಾತಿನಿಂ ಕೈಯೊಳಗೆ ಕೈಯನಿತ್ತು ಕರುಣಿಸಿದ
ಒಳಹೊರಗೆ ಸಹಜದಲ್ಲಿ
ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನು./419
ಕಾಣಬಾರದ ಕಳೆ ಕಣ್ಣಿಂಗೆ ಗೋಚರಿಸಿದಲ್ಲಿ
ಕಳೆಯಬಾರದ ಕಲ್ಪನೆ ಕಳಚಿತ್ತು ನೋಡಾ.
ಬರಬಾರದ ಬರವು ಬಂದು ನಿಂದಲ್ಲಿ.
ಆಗಬಾರದ ಭೋಗ ಆದುದು ನೋಡಾ.
ಹುಟ್ಟಬಾರದ ಹುಟ್ಟು ಹುಟ್ಟಿಬಂದುದಾಗಿ
ನೆಟ್ಟನೆ ಬಂದು ಕೈಹಿಡಿದುದು ನೋಡಾ.
ಆಡಬಾರದ ಆಟ ಬಂದುದಾಗಿ ಮಾಡಬಾರದ ಸ್ನೇಹ ಹೆಚ್ಚಿತ್ತು ನೋಡಾ.
ಹೇಳಬಾರದ ಸುಖವು ಹೇಳಿ ಸರಿತ್ತಾಗಿ
ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗ ತಾನೆ ಶರಣ ನೋಡಾ. /420
ಕಾಣಬಾರದ ಲಿಂಗ ಕಣ್ಣಮುಂದೆ ಬಂದಲ್ಲಿ
ಮಾಣಬಾರದ ಭಕ್ತಿಯ ಮಾಡುವುದೇ ಲೇಸು.
ನಡೆಯಿಲ್ಲದ ಲಿಂಗ ನಡೆದುಬಂದಲ್ಲಿ
ಒಡವೆರೆದು ಕೊಟ್ಟು ಕೊಂಡು ಭಕ್ತಿಯ ಮಾಡುವುದೇ ಸಹಜ.
ನುಡಿಯಿಲ್ಲದ ಲಿಂಗ ನುಡಿದು ಬಂದಲ್ಲಿ
ಬಡಿವಾರನುಳಿದು ಬಾಗಿ ಕಡವರ ಕಂಡ ಬಡವನಂತೆ
ಮುಡಿಯಿಕ್ಕಿ ಮುಂಬರಿದು ಭಕ್ತಿಯ ಮಾಡುವುದೇ ಸತ್ಯ.
ಇಂತು, ಗುರುಲಿಂಗಜಂಗಮವ ಕಂಡು ಕಂಡು ಕಾಣದೆ ಮಾಡುವುದು
ಬೇರಿಲ್ಲ ತಾನೇ ಗುರುನಿರಂಜನ ಚನ್ನಬಸವಲಿಂಗಾ. /421
ಕಾಣಬಾರದ ಲಿಂಗ ಕೈಗೆ ಬಂದಿತ್ತಾಗಿ
ಮಾಡಬಾರದ ಭಕ್ತಿಯ ಮಾಡುತಲಿರ್ದೆನು.
ನಡೆಯಬಾರದ ನಡೆಯ ನಡೆವೆ,
ಮತ್ತೊಂದನರಿಯೆ,
ನೋಡಬಾರದ ನಡೆ ಕಣ್ಣಮುಂದೆ ಬಂದಿತ್ತಾಗಿ ಅದ್ವೈತನಡೆಯ ಕಾಣಲಿಲ್ಲ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಕಷ್ಟಕರ್ಮದ ಬಟ್ಟೆಯ ಬೆಳಗಿನೊಳಗಿರ್ಪ
ಹೊಟ್ಟೆಹೊರಕರ ಮಾತನೆಣಿಸಲಿಲ್ಲ./422
ಕಾಣಿಸಿಕೊಳ್ಳದ ಶರಣ ಕಾಣಿಸಿಕೊಂಡಾಚರಿಸುವನೆ ?
ಕಾಣಬಾರದು ಕಮರ್ಿಗಳು, ತೋರಬಾರದು ಧಮರ್ಿಗಳು,
ಇದರಂದವನರಿದಿರ್ದಡಾತ ಸುಜ್ಞಾನಿ ಶರಣ
ಗುರುನಿರಂಜನ ಚನ್ನಬಸವಲಿಂಗದಲ್ಲಿ./423
ಕಾಣಿಸುವ ಕಮಲದೊಳಗಿರ್ಪ ಜಾಣನ ಕಂಡು
ಕಾಣಬಂದ ಧರೆಗಗನದೊಳಗುಳ್ಳ ಸಿರಿಸಂಪದನಿತ್ತುಕೊಂಬ
ನಿಯತವನರಿಯದೆ ಕಷ್ಟದಿಂದೆಬ್ಬಿಸಿ
ಕಾರಣವೆಂದು ಸೇವಿಸಿ ಕಾಲಬೆಳೆಯ ಕಳೆಯನುಂಬ
ಕಲ್ಪಿತರೇನು ಬಲ್ಲರಯ್ಯಾ ನಿಮ್ಮ ಪ್ರಾಣಲಿಂಗದ ನಿಲವ
ಗುರುನಿರಂಜನ ಚನ್ನಬಸವಲಿಂಗಾ?/424
ಕಾಮ ಉಲಿವುದು ಭಕ್ತಂಗೆ ಗುರುಲಿಂಗಜಂಗಮದ ಬರವಿಂಗೆ.
ಕ್ರೋಧ ಉಲಿವುದು ಭಕ್ತಂಗೆ ಮದಬದ್ಧ ಮಾನವರ ಮೇಲೆ.
ಲೋಭ ಉಲಿವುದು ಭಕ್ತಂಗೆ ಪಾದೋದಕ ಪ್ರಸಾದದ ನಿಲುವಿಂಗೆ.
ಮೋಹ ಉಲಿವುದು ಭಕ್ತಂಗೆ ಶಿವಾನುಭಾವಸನ್ನಿಹಿತರ ಸಂಭಾಷಣೆಗೆ.
ಮದ ಉಲಿವುದು ಭಕ್ತಂಗೆ ಶಿವದೂಷಕ ಜನರಿಂಗೆ.
ಮತ್ಸರ ಉಲಿವುದು ಭಕ್ತಂಗೆ ಶರಣಸಂಸಾರ ಸಖತನಕೆ.
ಇಂತು ಷಡುವರ್ಗಸಂಪನ್ನನಾದರೆ ಭಕ್ತನ ನಿಷ್ಠೆ ನಿಜವೆಂಬೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ./425
ಕಾಮದಲ್ಲಿಮುಳುಗಿ ನುಡಿವರು ಶರಣಂಗೆ ಕಾಮಿಯೆಂದು,
ಕ್ರೋಧದಲ್ಲಿಮುಳುಗಿ ನುಡಿವರು ಶರಣಂಗೆ ಕ್ರೋಧಿಯೆಂದು,
ಲೋಭದಲ್ಲಿಮುಳುಗಿ ನುಡಿವರು ಶರಣಂಗೆ ಲೋಭಿಯೆಂದು,
ಮೋಹದಲ್ಲಿಮುಳುಗಿ ನುಡಿವರು ಶರಣಂಗೆ ಮೋಹಿಯೆಂದು,
ಮದದಲ್ಲಿಮುಳುಗಿ ನುಡಿವರು ಶರಣಂಗೆ ಮದಭರಿತನೆಂದು,
ಮತ್ಸರದಲ್ಲಿಮುಳುಗಿ ನುಡಿವರು ಶರಣಂಗೆ ಮತ್ಸರಭರಿತನೆಂದು,
ಅರಿಷಡ್ವರ್ಗದಲ್ಲಿರ್ದು ಒಂದೊಂದು ನುಡಿದರೆ ಸಂದೇಹವಿಲ್ಲ ಶರಣಂಗೆ.
ನಿಂದೆಯನಾಡುವ ನರನಿಗೆ ಸೂಕರಜನ್ಮವು ಇದು ಸತ್ಯ
ಗುರುನಿರಂಜನ ಚನ್ನಬಸವಲಿಂಗದ ವಚನ./426
ಕಾಮನಾಸ್ತಿಯಾದಲ್ಲಿ ಅಷ್ಟವಿಧಾರ್ಚನೆಯ ಭಾವನಾಸ್ತಿ.
ಕ್ರೋಧನಾಸ್ತಿಯಾದಲ್ಲಿ ಸುವಿಚಾರ ಭಾವನಾಸ್ತಿ.
ಲೋಭನಾಸ್ತಿಯಾದಲ್ಲಿ ತನುಮನಪ್ರಾಣಭಾವನಾಸ್ತಿ.
ಮೋಹನಾಸ್ತಿಯಾದಲ್ಲಿ ಈಷಣತ್ರಯ ಭಾವನಾಸ್ತಿ.
ಮದನಾಸ್ತಿಯಾದಲ್ಲಿ ತ್ರಿಪುಟಿಭಾವನಾಸ್ತಿ.
ಮತ್ಸರನಾಸ್ತಿಯಾದಲ್ಲಿ ಕೂಟದ ಭಾವನಾಸ್ತಿ.
ಗುರುನಿರಂಜನ ಚನ್ನಬಸವಲಿಂಗನಾಸ್ತಿಯಾದಲ್ಲಿ ತಾನೆಂಬ ಭಾವನಾಸ್ತಿ./427
ಕಾಮವ ತೊರೆದಾತ ಭಕ್ತನಲ್ಲ,
ಕ್ರೋಧವ ತೊರೆದಾತ ಮಾಹೇಶ್ವರನಲ್ಲ.
ಮತ್ಸರವ ತೊರೆದಾತ ಪ್ರಸಾದಿಯಲ್ಲ.
ಮದವ ಬಿಟ್ಟಾತ ಪ್ರಾಣಲಿಂಗಿಯಲ್ಲ.
ಮೋಹವ ಬಿಟ್ಟಾತ ಶರಣನಲ್ಲ.
ಲೋಭವ ಬಿಟ್ಟಾತ ಐಕ್ಯನಲ್ಲ.
ಇಂತು ಷಡುವರ್ಗಶೂನ್ಯನಾದಲ್ಲಿ
ಸ್ಥಲಶೂನ್ಯವಾದ ಕಾರಣ ಷಡ್ವರ್ಗಸನ್ನಿಹಿತನೇ ಶರಣ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./428
ಕಾಮವನುರುಹಿ ಕಾಮಿಯಾಗಿ ಕಾಮತರಹರವಾದ.
ಕ್ರೋಧವನುರುಹಿ ಕ್ರೋಧಿಯಾಗಿ ಕ್ರೋಧತರಹರವಾದ.
ಲೋಭವನುರುಹಿ ಲೋಭಿಯಾಗಿ ಲೋಭತರಹರವಾದ.
ಮೋಹವನುರುಹಿ ಮೋಹಿಯಾಗಿ ಮೋಹತರಹರವಾದ.
ಮದವನುರುಹಿ ಮದಯುಕ್ತನಾಗಿ ಮದತರಹರವಾದ.
ಮತ್ಸರವನುರುಹಿ ಮತ್ಸರನಾಗಿ ಮತ್ಸರತರಹರವಾದ.
ನಿಜೈಕ್ಯಂಗೆ ಅರಿಷಡ್ವರ್ಗಂಗಳ ಸ್ಥಾಪಿಸಿ ನುಡಿವ ಮಿಥ್ಯ ಭಂಡರಿಗೆ
ಅತ್ತ ವೈತರಣಿಯಿಂಬುಗೊಟ್ಟಿಹುದು ಗುರುನಿರಂಜನ ಚನ್ನಬಸವಲಿಂಗಾ./429
ಕಾಮವಿಲ್ಲ ಭಕ್ತಂಗೆ ಪರಸ್ತ್ರೀಯರ ಮೇಲೆ.
ಕ್ರೋಧವಿಲ್ಲ ಭಕ್ತಂಗೆ ಗುರುಲಿಂಗಜಂಗಮದಲ್ಲಿ.
ಲೋಭವಿಲ್ಲ ಭಕ್ತಂಗೆ ಹೊನ್ನು ಹೆಣ್ಣು ಮಣ್ಣಿನಲ್ಲಿ.
ಮೋಹವಿಲ್ಲ ಭಕ್ತಂಗೆ ತನುಮನಧನದಲ್ಲಿ.
ಮದವಿಲ್ಲ ಭಕ್ತಂಗೆ ಸಜ್ಜನಸದ್ಭಾವಿಗಳಲ್ಲಿ.
ಮತ್ಸರವಿಲ್ಲ ಭಕ್ತಂಗೆ ಯಾಚಕರ ಮೇಲೆ.
ಇಂತು ಷಡ್ಗುಣವಿರಹಿತನಾದ ಭಕ್ತನಲ್ಲಿ
ಸನ್ನಿಹಿತನಾಗಿರುವ ನಮ್ಮ ಗುರುನಿರಂಜನ ಚನ್ನಬಸವಲಿಂಗ./430
ಕಾಮವಿಲ್ಲದ ಸುಖ ಕಾಯದಲ್ಲಿ,
ಕ್ರೋಧವಿಲ್ಲದ ಸುಖ ಮನದಲ್ಲಿ,
ಲೋಭವಿಲ್ಲದ ಸುಖ ಪ್ರಾಣದಲ್ಲಿ,
ಮೋಹವಿಲ್ಲದ ಸುಖ ವಿಷಯಂಗಳಲ್ಲಿ,
ಮದವಿಲ್ಲದ ಸುಖ ಕರಣಂಗಳಲ್ಲಿ,
ಮತ್ಸರವಿಲ್ಲದ ಸುಖ ಭಾವದಲ್ಲಿ,
ಭಿನ್ನವಿಲ್ಲದ ಸುಖ ಗುರುನಿರಂಜನ ಚನ್ನಬಸವಲಿಂಗದಲ್ಲಿ,
ಅಖಂಡದ ಅವಿರಳಸುಖಾನಂದ ಶರಣ./431
ಕಾಯ ಖಂಡಿಸದೆ ಮನ ಹರಿಯದೆ ಪ್ರಾಣ ತೊರೆಯದೆ
ಭಾವ ಬಿಚ್ಚದೆ ಬರಿದೆ ಹೆಚ್ಚಿ ಬಂಧನಕ್ಕೊಳಗಾದರಲ್ಲ !
ಈ ಭಾವವೇನು ಅಷ್ಟತನು ಮದಭಾವವೊ ?
ಅಷ್ಟಕುಲಾದಿ ಮದಭಾವವೊ! ಅಷ್ಟ ಸಂಸ್ಥಿತಾದಿ ಮದಭಾವವೊ ?
ಚೌರಾಸಿ ಲಕ್ಷ ಯೋನಿಯಲ್ಲಿ ತಿರುಗುವ ಸಾಮಥ್ರ್ಯಭಾವವೊ ? ಹೇಳಾ !
ಧರ್ಮಕತರ್ುವಿನ ಭಾವರಸವಿನೋದಮಯನೆಂದು ಬಂದ ಬಳಿಕ
ಅತಿಶಯದ ಸತಿಪತಿರತಿಭಾವದಂತಿರಬೇಕಲ್ಲದೆ
ಸುರೆಭಾಂಡದ ಸಿರಿಯಂತೆ ಕಾಣಿಸಿಕೊಂಡರೇನು ?
ಪರಿಕಿಸಿದರೆ ದುರ್ಗಂಜಳ, ಸೋಂಕದಿಪ್ಪರು ಹಿರಿಯರು.
ಪರಿಕಿಸಿದರೆ ಇಂಥ ಅಂಗಹೀನ ಭವಿಗಳ ಸಂಗವನೊಲ್ಲದಿರ್ದನು
ಗೌರವಾಂಗದ ಘನಚರಿತೆಯೊಳಗೊಲಿದು
ಚನ್ನ ತನುಮನಭಾವ ಪ್ರಸನ್ನಲಿಂಗವು./432
ಕಾಯ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು.
ಮನ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು.
ಭಾವ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು.
ಸರ್ವಾಂಗ ದಣಿವರಿಯದು ಮಾಡಿ ಮಾಡಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನೆಯಾಗಿ./433
ಕಾಯ ಮನ ಪ್ರಾಣ ಭಾವ ಜ್ಞಾನ ನಾಮ ಸೀಮೆ ನಿರಂಜನ ಶರಣನು
ಮಾಡಲಿಲ್ಲ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ.
ನೋಡಲಿಲ್ಲ ಸ್ತೋತ್ರ ಜಪ ಮಂತ್ರ ಧ್ಯಾನವಿಟ್ಟು ಪ್ರಾಣಲಿಂಗವ.
ಕೂಡಲಿಲ್ಲ ನಿರಂಜನ ಪೂಜೆ ಮನೋರ್ಲಯವಿಟ್ಟು ಭಾವಲಿಂಗವ.
ಎಂತಿರ್ದಂತೆ ಗುರುನಿರಂಜನ ಚನ್ನಬಸವಲಿಂಗವ
ತಾನಾಗಿ ಬಯಲಾದುದನೇನೆಂಬೆ./434
ಕಾಯ ಮನ ಭಾವದಲ್ಲಿ ಸಂಬಂಧವಾದ ಮಾಯೋಚ್ಛಿಷ್ಟವ
ತೊಳೆದುಕೊಂಡು ಬಂದಲ್ಲದೆ ಪ್ರಸಾದಿಯಲ್ಲ.
ಅದೇನು ಕಾರಣವೆಂದಡೆ,
ಕುಲಾಲನ ಸಂಪರ್ಕದಿಂದಾದ ಭಾಂಡಗಳನು
ತೊಳೆದುಕೊಂಡಲ್ಲದೆ ಭೋಜನಬಳಕೆಗೆ ಸಲ್ಲ.
ಸಲ್ಲಿದ ಬಳಿಕ ಪೂರ್ವಸೋಂಕವಾದರೆ ಹೊರಬಳಕೆಯನುಳಿದುಬಾರದು.
ಪ್ರಸಾದಿಯೆನಿಸಿ ಪೂರ್ವಸೋಂಕವಾದರೆ ನರಕವನುಳಿದುಬಾರದು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ./435
ಕಾಯ ಲಿಂಗವ ಮಾಡಿ ಕಂಡರೆ ದಿಟವೆಂಬೆ,
ಮನ ಲಿಂಗವಮಾಡಿ ಕಂಡರೆ ದಿಟವೆಂಬೆ.
ಭಾವ ಲಿಂಗವಮಾಡಿ ಕಂಡರೆ ದಿಟವೆಂಬೆ.
ಗುರುನಿರಂಜನ ಚನ್ನಬಸವಲಿಂಗವಾಗಿ ಅರಿಯದಿರ್ದಡೆ ದಿಟವೆಂಬೆ
ಲಿಂಗೈಕ್ಯ ಶರಣಂಗೆ./436
ಕಾಯಕರ್ಮಕೂಟಿಗಳಿಗೆ
ಕತರ್ುಗಳರಿವ ನಿಷ್ಠೆಯ ನಿರ್ಮಲಸುಖವೆಲ್ಲಿಹದೊ ?
ಮನದ ಮಾಯಾಕೂಟಿಗಳಿಗೆ
ಮನದೊಡೆಯರನರಿವ ನಿಷ್ಠೆಯ ನಿಲುವಿನ ಸೊಬಗೆಲ್ಲಿಹದೊ ?
ಪ್ರಾಣನ ಸಂಚಲಸಂಯೋಗಿಗಳಿಗೆ
ಪ್ರಾಣಲಿಂಗಸಂಬಂಧವನರಿವ ನಿಷ್ಠೆಯ ನಿಜಸುಖವೆಲ್ಲಿಹದೊ ?
ಭಾವದ ಭ್ರಾಂತಿಯೊಳ್ಮುಳುಗಿರ್ದ ತಾಮಸಪ್ರಾಣಿಗಳಿಗೆ
ಗುರುನಿರಂಜನ ಚನ್ನಬಸವಲಿಂಗ ನಿಜೈಕ್ಯದ ನಿಸ್ಸೀಮ ಸುಖವೆಲ್ಲಿಹದೊ?/437
ಕಾಯದ ಕತ್ತಲೆಯೊಳು ಬಿದ್ದು ಮಾಯದ ಮಲಿಕಿನಲ್ಲಿ ಶಿಲ್ಕಿ,
ಹೇಮದಾಸೆಯ ಹೆಚ್ಚಿ ಭೂಮಿಯ ರಚ್ಚಿಗೆ ಮಚ್ಚಿ,
ಬಾಲೆಯರ ಒಲುಮೆಗೆ ಬಿದ್ದು ಕಾಲಗತಿಯ ಕಳೆಯ ಬಂದವನಲ್ಲ ನೋಡಾ.
ತನ್ನಾದಿ ಮಧ್ಯ ಅವಸಾನವನರಿದು
ನಾದ ಬಿಂದು ಕಳೆಯಲ್ಲಿ ಸಾಧಿಸಿ ಕಂಡ ಸತಿಪತಿಭಾವವ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ./438
ಕಾಯದ ಕರಸ್ಥಲದಲ್ಲಿ ಕಂಡು
ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ.
ಮನದ ಕರಸ್ಥಲದಲ್ಲಿ ಕಂಡು
ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ.
ಭಾವದ ಕರಸ್ಥಲದಲ್ಲಿ ಕಂಡು
ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ.
ಕರ ಮನ ಭಾವದ ಕೊನೆಯ ಮೊನೆಯ ಮೇಲಿರ್ಪ
ಗುರುನಿರಂಜನ ಚನ್ನಬಸವಲಿಂಗವನು
ಎನ್ನ ಸರ್ವಾಂಗದಲ್ಲಿ ಕಂಡು ತೆರಹಿಲ್ಲದೆ
ಅಪ್ಪಿ ಅಗಲದ ಮರೆದ ಶರಣೆನುತಿರ್ನೆನಯ್ಯಾ./439
ಕಾಯದ ಕರಸ್ಥಲದಲ್ಲಿ ಲಿಂಗ, ಮನದ ಕರಸ್ಥಲದಲ್ಲಿ ಮಂತ್ರ,
ಭಾವದ ಕರಸ್ಥಲದಲ್ಲಿ ಅರಿವು, ನಿರ್ಧರವಾದುದೇ ನಿಜ ಕಾಣಾ.
ಅಂತಲ್ಲದೆ ಕಾಯದಲ್ಲಿ ಲೋಭ ಕೊಲೆ, ಮನದಲ್ಲಿ ಕ್ರೋಧ ಮೋಹ,
ಭಾವದಲ್ಲಿ ಭ್ರಾಂತಿ ತಾಮಸ, ಇಂತಿವು ಸಂಗಸಂಬಂಧವಾಗಿ
ನಾವು ಲಿಂಗಶರಣರೆಂದು ನುಡಿದುಕೊಂಬ
ಕಡೆ ನಡು ಬುಡಗಳಳಿಯದ ಕರ್ಮಿಗಳನೇನೆಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./440
ಕಾಯದ ಕರ್ಮವ ಕಳೆದುಳಿದು ಕೊಟ್ಟು ಕೊಳಬಲ್ಲ ಪ್ರಸಾದಿ.
ಮನದ ಕಲ್ಪನೆಯಳಿದುಳಿದು ಕೊಟ್ಟು ಕೊಳಬಲ್ಲ ಪ್ರಸಾದಿ.
ಭಾವದ ಬಲೆಯ ಹರಿದು ಅರಿದು ಕೊಟ್ಟು ಕೊಳಬಲ್ಲ ಪ್ರಸಾದಿ.
ಈ ತ್ರಿವಿಧವನು ತ್ರಿವಿಧಾವಸ್ಥೆಯೊಳಗೆ ಕೊಟ್ಟು ಕೊಳಬಲ್ಲ ಸಾವಧಾನಿ
ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ. /441
ಕಾಯದ ಕೈಗಳರಿಯವು
ಗುರುಲಿಂಗಜಂಗಮಕ್ಕರ್ಪಿತವನುಳಿದು ಕರ್ಮದ ಕಾಳಿಕೆಯ.
ಕರಣದ ಕೈಗಳರಿಯವು
ಲಿಂಗಜಂಗಮಗುರುವಿಂಗರ್ಪಿತವನುಳಿದು ಸಂಸ್ಕೃತಿಯ ಸಂಕಲ್ಪದ ಸುಳುಹ.
ಭಾವದ ಕೈಗಳರಿಯವು
ಜಂಗಮಗುರುಲಿಂಗದರ್ಪಿತವನುಳಿದು
ಜ್ಞಾನವಿಕೃತಿಭಾವ ವರ್ತನವಿಕೃತಿಭಾವಮೋಹದ ವಿಕೃತಿಭಾವಂಗಳೆಂಬ ವಿಷಮವ.
ಸರ್ವಾಂಗದ ಕೈಗಳರಿಯವು
ಗುರುನಿರಂಜನ ಚನ್ನಬಸವಲಿಂಗದರ್ಪಿತವನುಳಿದು ಇತರ./442
ಕಾಯದ ಬಣ್ಣವ ಸುಟ್ಟು ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ.
ಮನದ ಬಣ್ಣವ ಕೆಡಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ.
ಭಾವದ ಬಣ್ಣವ ಅಳಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ.
ಗುರುನಿರಂಜನ ಚನ್ನಬಸವಲಿಂಗದಲ್ಲಿ ಹೊರೆಯಿಲ್ಲದಿರಬಲ್ಲರೆ
ಆತನಚ್ಚ ಮಾಹೇಶ್ವರ.
/443
ಕಾಯದ ಸುಖವ ಕಡೆಗಿಟ್ಟು ಬಂದು ಶರಣೆಂದರೆ
ಕರ್ಮದಲ್ಲಿ ಮುಳುಗಿ ಹೋಗುವುದೇ ಸಹಜ.
ಕರಣದ ಸುಖವ ಕಡೆಗಿಟ್ಟು ಬಂದು ಶರಣೆಂದರೆ
ಸಂಸಾರ ಸಂಕಲ್ಪದಲ್ಲಿ ಮುಳುಗಿ ಹೋಗುವುದೇ ಸಹಜ.
ಪ್ರಾಣದ ಸುಖವ ಕಡೆಗಿಟ್ಟು ಬಂದು ಶರಣೆಂದರೆ
ವಾಯುಪ್ರಕೃತಿಯಲ್ಲಿ ಮುಳುಗಿ ಹೊಗುವುದೇ ಸಹಜ.
ಭಾವದ ಸುಖವ ಕಡೆಗಿಟ್ಟು ಬಂದು ಶರಣೆಂದರೆ
ಅನಿಷ್ಟಭ್ರಾಂತಿಯಲ್ಲಿ ಮುಳುಗಿ ಹೊಗುವುದೇ ಸಹಜ.
ಇಂತು ಜಡಸಂಬಂಧಸುಖಮುಖಿಗಳಿಗೆ
ಘನಮಹಾಲಿಂಗೈಕ್ಯವನರಿದು ಬೆರೆಯಬಾರದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./444
ಕಾಯದಲ್ಲಿ ಕರುಣರಸವಿರಹಿತನಲ್ಲ ಕಾಣಾ.
ಮನದಲ್ಲಿ ಪ್ರೇಮರಸ ಶೂನ್ಯನಲ್ಲ ಕಾಣಾ.
ಪ್ರಾಣದಲ್ಲಿ ಅಭಿನ್ನಮೋಹರಸರಹಿತನಲ್ಲ ಕಾಣಾ.
ಭಾವದಲ್ಲಿ ಅಖಂಡಪರಿಪೂರ್ಣರಸವಿರಹಿತನಲ್ಲ ಕಾಣಾ.
ಅರುವಿನಲ್ಲಿ ಘನಸಮರಸ ನಾಶನಲ್ಲ ಕಾಣಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಗಣತತಿಗೆ ಅಜರುಗಳ ಸ್ಥಾನದಂತಲ್ಲ ಕಾಣಾ ಲಿಂಗಶರಣ./445
ಕಾಯದಲ್ಲಿ ಕಳೆಯನರಿಯದ ಕೋಣ,
ಪ್ರಾಣದಲ್ಲಿ ಗುಣವನರಿಯದ ಕತ್ತೆ, ಕರ್ಮಖಂಡಣೆಯ ಗೂಗಿ,
ಈ ಪ್ರಾಣಿಗಳ ಹೆಜ್ಜೆಯ ಹರಿದುರಿದು ಹರದನಾದನೊಬ್ಬ.
ಹರದನ ಕೈಯ ಮಾಣಿಕ ಮೂರುಭಾಗವಾಗಿ ಮುಸುಕಿದರೆ
ಹಬ್ಬದ ಸೊಬಗು ಹವಣವಾಗಿ ನಿಂದಿತ್ತು
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಂತೆ./446
ಕಾಯದಲ್ಲೊಬ್ಬನ ಮೆಚ್ಟಿ ಮಾಡಿದವಳು,
ಆವಗೆ ರತಿಗೊಟ್ಟವಳು, ಆವಗೆ ಉಣಿಸಿದವಳು, ಆತನ ಮೋಹಿಸಿದವಳು,
ಇವರಂತಿರಲಿ, ಎನ್ನ ಸುಖವನರಿಯರು.
ಮನದಲ್ಲೊಬ್ಬನ ಮೆಚ್ಚಿ ಮಾಡಿದವಳು,
ಅಲ್ಲಿಯೇ ನಿಷ್ಠೆಯನಿಟ್ಟವಳು, ಅಲ್ಲಿಯೇ ಮನಮೆಚ್ಚಿ ಉಣಿಸಿದವಳು,
ಅಲ್ಲಿಯೇ ಮಾತಿನ ಮಲಕಿನೊಳು ಮರುಳಾದವಳು,
ಇವರಂತಿರಲಿ, ಎನ್ನ ಪರಿಣಾಮವನರಿಯರು.
ಭಾವದಲ್ಲೊಬ್ಬನ ಮೆಚ್ಚಿ ಮಾಡಿದವಳು,
ಆವಗೆ ಮನವಿಟ್ಟವಳು, ಅಲ್ಲಿಯೇ ಗೋಪ್ಯದಲ್ಲಿ ಉಣಿಸಿದವಳು,
ಅಲ್ಲಿಯೇ ಭಾವಭ್ರಾಂತಿಗೊಂಡವಳು,
ಇವರಂತಿರಲಿ, ಎನ್ನ ಸಂಯೋಗವನರಿಯರು.
ಗುರುನಿರಂಜನ ಚನ್ನಬಸವಲಿಂಗದ ಸುಖವ
ಅಂಗನೆಗಲ್ಲದೆ ಮತ್ತಾರು ಅರಿಯರು ಕಾಣಾ./447
ಕಾಯದೊಳಗೆ ಲಕ್ಷವಿರ್ದಡೆ ಕಾಣಬಾರದು.
ಕರಣದೊಳಗೆ ಲಕ್ಷವಿರ್ದಡೆ ಕಾಣಬಾರದು.
ಪ್ರಾಣದೊಳಗೆ ಲಕ್ಷವಿರ್ದಡೆ ಕಾಣಬಾರದು.
ಭಾವದೊಳಗೆ ಲಕ್ಷವಿರ್ದಡೆ ಕಾಣಬಾರದು.
ತನ್ನೊಳಗೆ ಲಕ್ಷವಿಲ್ಲದಿದರ್ೊಡೆ ಕಾಣಬಾರದು
ಗುರುನಿರಂಜನ ಚನ್ನಬಸವಲಿಂಗವನು. /448
ಕಾಯಭಾವ ಕಾಯದಲ್ಲಿಯೇ ಬೆಳೆದು ಕಾಯದಲ್ಲಿಯೇ ಅಡಗಿ,
ಮನಭಾವ ಮನದಲ್ಲಿಯೇ ಬೆಳೆದು ಮನದಲ್ಲಿಯೇ ಅಡಗಿ,
ಪ್ರಾಣನಭಾವ ಪ್ರಾಣದಲ್ಲಿಯೇ ಬೆಳೆದು ಪ್ರಾಣದಲ್ಲಿಯೇ ಅಡಗಿ,
ಅತ್ತಿತ್ತಲರಿಯದೆ ಸತ್ತುಹೋಗುವ ಮಿಥ್ಯಮಾನವರು
ಕಾಯವಕಳೆದು ಕಾಣಿಸಿ ಅಡಗಿ, ಮನವಕಳೆದು ಕಾಣಿಸಿ ಅಡಗಿ,
ಪ್ರಾಣವಕಳೆದು ಕಾಣಿಸಿ ಅಡಗಿ, ಅತ್ತಿತ್ತರಿಯದೆ ಅಡಗಿ ಹೋಗುವ
ಅಖಂಡೈಕ್ಯವನಿವರೆತ್ತ ಬಲ್ಲರು ?
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿ./449
ಕಾಯವ ಕರ್ಮದಲ್ಲಿ ಮುಳುಗಿಸಿ,
ಮನವನು ಮಾಯಾವಿಷಯದಲ್ಲಿ ಮುಳುಗಿಸಿ,
ಪ್ರಾಣವನು ಹೇಮದ ಆಮಿಷದಲ್ಲಿ ಮುಳುಗಿಸಿ,
ಭಾವವನು ಸಕಲಭ್ರಮೆಯಲ್ಲಿ ಮುಳುಗಿಸುವ ಅವಿಚಾರಿಗೆ
ಅಪ್ರತಿಮಕ್ರಿಯೆಯಲ್ಲಡಗಿ, ಅನುಪಮಜ್ಞಾನದಲ್ಲಿ ಉಡುಗಿ,
ಪರಮಜ್ಞಾನದಲ್ಲಿ ಹೊಕ್ಕು,
ಮಹಾಜ್ಞಾನದಲ್ಲಿ ಮಗ್ನತೆಯನೈದುವ ನಿಜಪದವೆಂತು ಸಾಧ್ಯವಪ್ಪುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ./450
ಕಾಯವನರಿಯದೆ ಕಾಯದಲ್ಲಿರಿಸಿ ಕಾಯುವ ಕಂಡರೆ ಶರಣನೆಂಬುವರು.
ಮನವರಿಯದೆ ಮನದಲ್ಲಿರಿಸಿ ಮನವ ಕಂಡರೆ ಶರಣನೆಂಬುವರು.
ಭಾವವನರಿಯದೆ ಭಾವದಲ್ಲಿರಿಸಿ ಭಾವವ ಕಂಡರ ಶರಣನೆಂಬುವರು.
ತನ್ನನರಿಯದೆ ತನ್ನಲ್ಲಿರಿಸಿ ತನ್ನಕಂಡರೆ ಶರಣನೆಂಬುವರು
ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಮ್ಮ ಶರಣರು./451
ಕಾಯವನರ್ಪಿಸಲರಿಯದೆ ಶುದ್ಧಪ್ರಸಾದಿಯೆಂದರೆ
ಅಣವಮಲಸಂಬಂಧಿ ಸಂಚಿತಸುಖಿ.
ಮನವನರ್ಪಿಸಲರಿಯದೆ ಸಿದ್ಧಪ್ರಸಾದಿಯೆಂದರೆ
ಮಾಯಾಮಲಸಂಬಂಧಿ ಪ್ರಾರಬ್ಧ ಸುಖಿ.
ಪ್ರಾಣವನರ್ಪಿಸಲರಿಯದೆ ಪ್ರಸಿದ್ಧ ಪ್ರಸಾದಿಯೆಂದರೆ
ಕಾರ್ಮಿ ಕಮಲಸಂಬಂಧಿ ಆಗಾಮಿಸುಖಿ.
ಮಲತ್ರಯಸಂಬಂಧವಾಗಿ ಕರ್ಮತ್ರಯನುಂಬ ಭ್ರಾಮಕರರಿವರೆ
ತ್ರಿವಿಧ ಪ್ರಸಾದದಿರವ?
ಅನಾದಿಸಂಸಿದ್ಧ ನಿರಂಜನ ಪ್ರಸಾದಿಯೇ ಬಲ್ಲನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ./452
ಕಾಯವನರ್ಪಿಸಿಕೊಂಡವರೆಂದು ಹೇಳುವರು
ಕರ್ಮಬಾಧೆಯಲ್ಲಿ ಮುಳುಗುವರು.
ಮನವನರ್ಪಿಸಿಕೊಂಡವರೆಂದು ಹೇಳುವರು
ಕರಣಗುಣಕಲ್ಪನೆಯೊಳೊಪ್ಪುವರು.
ಪ್ರಾಣವನರ್ಪಿಸಿಕೊಂಡವರೆಂದು ಹೇಳುವರು
ದಶವಾಯುಪ್ರಕೃತಿಯಲ್ಲಿ ವರ್ತಿಸುತ್ತಿಹರು.
ಸರ್ವಾಂಗವನರ್ಪಿಸಿಕೊಂಡವರೆಂದು ಹೇಳುವರು.
ಮಿಥಿ್ಯಾಸಂಸ್ಕೃತಿ ಭ್ರಾಂತಗೊಂಡಿಪ್ಪರು.
ಇಂತೀ ಸಂತೆಯ ಮಾಡಿ ಹೋಗುವ ಸಕಲ ಪ್ರಾಣಿಗಳು
ನಿಮಗೆಂತು ಅರ್ಪಿಸಿಕೊಂಬುವರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ ?/453
ಕಾಯವನಿತ್ತು ಅರಿದೆನೆಂಬುದು ಕಳವಳಿಕೆ.
ಮನವನಿತ್ತು ಅರಿದೆನೆಂಬುದು ಅರೆಮರುಳು.
ಪ್ರಾಣವನಿತ್ತು ಅರಿದೆನೆಂಬುದು ಭ್ರಾಂತು.
ಸ್ವಯವನಿತ್ತು ಪರವನರಿದೆನೆಂಬುದು ಬಲುಹುಸಿ.
ಮತ್ತೆಂತೆಂದರೆ, ಅರಿವನರಿದು ನೆರೆಯಬೇಕೆಂಬುದನರಿದು ಮರೆದ
ಮಹಾಂತ ನಿಲುವೇ ನಿಜಗುರುನಿರಂಜನ ಚನ್ನಬಸವಲಿಂಗ ತಾನಾದ./454
ಕಾಯವನು ದುರಾಚಾರದಲ್ಲಿ ಮುಳುಗಿಸಿ
ಕಾಯದ ಮೇಲೆ ಲಿಂಗವಧರಿಸಿ
ಕಾಣದೆ ನಡೆವರನೆಂತು ಶರಣರೆನ್ನಬಹುದು?
ಮನವನು ಸಂಸಾರದಲ್ಲಿ ಮುಳುಗಿಸಿ
ಮನದ ಮೇಲೆ ಲಿಂಗವಧರಿಸಿ
ನೋಡದೆ ನಡೆವರನೆಂತು ಶರಣರೆನ್ನಬಹುದು?
ಭಾವವನು ಭ್ರಮೆಯೊಳು ಮುಳುಗಿಸಿ
ಭಾವದ ಮೇಲೆ ಲಿಂಗವನು ಧರಿಸಿ
ಅರಿಯದೆ ನಡೆವರನೆಂತು ಶರಣರೆನ್ನಬಹುದು?
ಮತ್ತೆಂತೆಂದೊಡೆ : ಕಾಯ ಮನ ಭಾವದಲ್ಲಿ ಕರತಳಾಮಳಕವಾಗಿ
ಕ್ರಿಯಾಜ್ಞಾನ ಭಾವಾಚಾರ ಸಮೇತವಾಗಿ
ಗುರುನಿರಂಜನ ಚನ್ನಬಸವಲಿಂಗವೆರಸಿ ನಡೆಯಬಲ್ಲ
ಅಖಂಡಿತನೆ ಶರಣ ಕಾಣಾ./455
ಕಾಯವನೊಳಗಿಟ್ಟ ಶರಣಂಗೆ
ಕ್ರಿಯೋಪಚಾರದ ಕುರುಹನರಿಯಬೇಕೆಂಬುದೇನೋ !
ಮನವನೊಳಗಿಟ್ಟ ಶರಣಂಗೆ
ವಿವೇಕದುಪಚಾರದ ಕುರುಹನರಿಯಬೇಕೆಂಬುದೇನೋ !
ಪ್ರಾಣವನೊಳಗಿಟ್ಟ ಶರಣಂಗೆ ನಾನು ನೀನೆಂದರಿವುದೇನೋ !
ಭಾವವನೊಳಗಿಟ್ಟ ಶರಣಂಗೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯವನರಿಯಬೇಕೆಂಬುದೇನೋ/456
ಕಾಯವಳಿದು ಲಿಂಗವ ಕಂಡು ಕಾಯವನು ಜರೆಯುತಿರ್ದೆ.
ಮನವಳಿದು ಲಿಂಗವ ಕಂಡು ಮನವ ಜರೆಯುತಿರ್ದೆ.
ಪ್ರಾಣವಳಿದು ಲಿಂಗವ ಕಂಡು ಪ್ರಾಣವ ಜರೆಯುತಿರ್ದೆ.
ಭಾವವಳಿದು ಲಿಂಗವ ಕಂಡು ಭಾವವ ಜರೆಯುತಿರ್ದೆ.
ಶ್ರುತಿಗುರುಸ್ವಾನುಭಾವದಿಂದೆ ಆಚಾರವಳಿದು
ಲಿಂಗವ ಕಂಡು ಆಚಾರವ ಜರೆಯುತಿರ್ದೆ.
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಭಿನ್ನವಳಿದು
ಗುರುಲಿಂಗಜಂಗಮವ ಕಂಡು ಗುರುಲಿಂಗಜಂಗಮದಲ್ಲಿ ಜರೆಯುತಿರ್ದೆ./457
ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ;
ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ.
ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ
ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ.
ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ
ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ./458
ಕಾಯವುಳ್ಳನ್ನಕ್ಕರ ಭಕ್ತಿಯ ಬೆಳಗನರಿವೆ,
ಕರಣವುಳ್ಳನಕ್ಕರ ಪೂಜೆಯ ಬೆಳಗನರಿವೆ,
ಪ್ರಾಣವುಳ್ಳನ್ನಕ್ಕರ ಸ್ವರೂಪದ ಬೆಳಗನರಿವೆ,
ಭಾವವುಳ್ಳನ್ನಕ್ಕರ ಮಹಾನುಭಾವಯೋಗದ ಬೆಳಗನರಿವೆ.
ನಾನುಳ್ಳನ್ನಕ್ಕರ ಗುರುನಿರಂಜನ ಚನ್ನಬಸವಲಿಂಗಕ್ಕೆ
ಸತಿಭಾವದಿಂದೆ ಸಂಗಬೆಳಗನರಿವೆ./459
ಕಾಯವುಳ್ಳನ್ನಕ್ಕರ ಲಿಂಗವೆಂಬೆ,
ಪ್ರಾಣವುಳ್ಳನ್ನಕ್ಕರ ಜಂಗಮವೆಂಬೆ,
ಭಾವವುಳ್ಳನ್ನಕ್ಕರ ಪ್ರಸಾದವೆಂಬೆ,
ಕಾಯ ಪ್ರಾಣ ಭಾವ ಮನಗೂಡಿ ಮಗ್ನವಾದಲ್ಲಿ
ಮಹಾಘನ ಗುರುನಿರಂಜನ ಚನ್ನಬಸವಲಿಂಗವೆಯಾಗಿ
ಹಿಂಗಿಯರಿಯದಿರ್ದೆನು ಕಾಣಾ./460
ಕಾಯಶುದ್ಧ ಲಿಂಗಾನುಭಾವಿ,
ಮನಸಿದ್ಧ ಲಿಂಗಾನುಭಾವಿ,
ಭಾವಪ್ರಸಿದ್ಧ ಲಿಂಗಾನುಭಾವಿ-
ಸರ್ವಾಂಗ ಮಹಾಪ್ರಸಿದ್ಧ ಗುರುನಿರಂಜನ ಚನ್ನಬಸವಲಿಂಗಾನುಭಾವಿ./461
ಕಾರಣಮಾತನರಿವ ಕಲ್ಪಿತಭರಿತನಲ್ಲದೆ
ಅಕಾರಣಮಾತನರಿಯನಯ್ಯಾ.
ಕಾರ್ಯನಾಗಿ ಕಾರಣಾನುಕೂಲಿಗಾಸ್ಪದನಲ್ಲದೆ
ಅಕಾರ್ಯನಾಗಿ ಅಕಾರಣಾನುಕೂಲಿಗಾಸ್ಪದವಿರಹಿತನಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಅನುಪಮಸುಖಿ./462
ಕಾಲಕಾಲಕ್ಕೆ ಕೃಪಾನಿಧಿಯೆಂಬ ಪರಮರುದ್ರಾಕ್ಷಿಯನು
ಒಲಿದೊಲಿದು ನಲಿದು ಕೊರಳು ಮೊದಲಂಗದೊಳು ಧರಿಸಿ,
ಕಂಗೊಳಿಸುವ ನಿರಂಜನ ಚನ್ನಬಸವಲಿಂಗಕ್ಕೆ
ಮಂಗಳ ಜಯ ಜಯವೆಂದು ಸಂಗಸುಖಿಯಾಗಿರ್ದೆನು. /463
ಕಾಲತ್ರಯದ ಕೀಲನರಿದು ಖಂಡಿಸಿ
ಕಾಲತ್ರಯ ಲೋಲಮಯನಾದ ಮಹಿಮನು ಕಾಲಕಲ್ಪಿತಭಾವಿಯಲ್ಲ.
ಮತ್ತೆ ಕಾಲತ್ರಯದ ಕರ್ಮವನುಳಿದು ಕಾಲತ್ರಯರೂಪ ಕಂಡಯ್ಯಾ.
ಇಹಪರವರಿಯದ ಇಹಪರ ಭೋಗಿ ತಾನೇ ಕಂಡಯ್ಯಾ.
ನಿರಂತರ ಗುರುನಿರಂಜನ ಚನ್ನಬಸವಲಿಂಗವಾಗಿ
ಸತಿಪತಿಭಾವ ಸವೆಯದನ್ನಕ್ಕರ./464
ಕಾಲತ್ರಯವಿರಹಿತ ಪ್ರಾಣಲಿಂಗಿ,
ಕರ್ಮತ್ರಯವಿರಹಿತ ಪ್ರಾಣಲಿಂಗಿ,
ಕಾಮಿತ ಕಲ್ಪಿತವ ಕಳೆದುಳಿದ ಪ್ರಾಣಲಿಂಗಿ,
ವಾಯುಸಂಚಾರವಳಿದುಳಿದ ಪ್ರಾಣಲಿಂಗಿ,
ಇಂದು ರವಿ ಶಿಖಿಮಂಡಲದ ನಡುವೆ
ಅಖಂಡ ಮಹಾಬೆಳಗಿನೊಳೋಲಾಡುತಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ. /465
ಕಾಲಲ್ಲಿ ಕಣ್ಣನಿಟ್ಟು ಇಷ್ಟಲಿಂಗಭಕ್ತಿಯ ಮಾಡುವ.
ಕಣ್ಣಿನಲ್ಲಿ ಕಾಲನಿಟ್ಟು ಪ್ರಾಣಲಿಂಗಭಕ್ತಿಯ ಮಾಡುವ
ಕಾಲಕಣ್ಣ ಕದಡಿ ಭಾವಲಿಂಗಭಕ್ತಿಯ ಮಾಡುವ
ಮಾಟವನ್ನು ಗುರುನಿರಂಜನ ಚನ್ನಬಸವಲಿಂಗದಲ್ಲಡಗಿಸಿ
ಮಂಗಳ ಜಯ ಜಯವೆನುತಿರ್ನೆ ನಿರಂತರದಲ್ಲಿ./466
ಕಾಲಲ್ಲಿ ತಲೆಯ ಕಟ್ಟಿಕೊಟ್ಟು ಪಡೆಯಬಲ್ಲರೆ ಶರಣ.
ತಲೆಯಲ್ಲಿ ಕಾಲ ಕಟ್ಟಿಕೊಟ್ಟು ಪಡೆಯಬಲ್ಲರೆ ಶರಣ.
ಈ ಉಭಯಗೂಡಿ ಕೊಟ್ಟು ಪಡೆಯಬಲ್ಲರೆ ಶರಣ.
ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಡೆದು
ಮೂಲವ ಕಿತ್ತೊಗೆಯಬಲ್ಲರೆ ನಿಜಶರಣ. /467
ಕಾಲವನರ್ಪಿಸಿ ಕಾಲದೊಳಗಿರ್ನೆ ಕರ್ತುಗಳವಸರಕ್ಕೆ ಭೃತ್ಯನಾಗಿ.
ಕರ್ಮವನರ್ಪಿಸಿ ಕರ್ಮದೊಳಗಿರ್ನೆ ಕಾರಣಕ್ಕೆ ಕಾರ್ಯನಾಗಿ.
ಸ್ವಯವನರ್ಪಿಸಿ ಪರವೆಂದೆನಿಸಿರ್ನೆ ಸ್ಥಲವಿರ್ದುದಾಗಿ.
ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿಸುತಿರ್ನೆ
ಅನ್ಯವನರಿಯದೆ ಆಯತವಾಗಿ./468
ಕಾಲಸುಖವನರಿಯದೆ ಪಂಚೇಂದ್ರಿಯಸುಖವನರಿಯದೆ
ಎಡಬಲವನರಿಯದೆ ಹಿಂದುಮುಂದುವನರಿಯದೆ
ಬಂದ ಬಟ್ಟೆಯ ಸಂದಸೌಖ್ಯ ಸ್ವಯವಾದ ಮತ್ತೆ,
ಸಗುಣ ನಿರ್ಗುಣ ಸೌರಭಕ್ಕೆ ಸಕಳನಾದರೇನು
ಗುರುನಿರಂಜನ ಚನ್ನಬಸವಲಿಂಗಸಮೇತ ನಿಃಕಳನಿರುಪಮ./469
ಕಾಲಿಲ್ಲದ ಕಾಲಲ್ಲಿ ನಡೆವ ಉನ್ನತಿಯೊಳು ಕಾಂಬುವರು.
ಕೈಯಿಲ್ಲದ ಕೈಯಲ್ಲಿ ಹಿಡಿವ ಉನ್ನತಿಯೊಳು ಕಾಂಬುವರು.
ಕಣ್ಣಿಲ್ಲದ ಕಣ್ಣಿನಲ್ಲಿ ನೋಡುವ ಉನ್ನತಿಯೊಳು ಕಾಂಬುವರು.
ಕೂಟಿಲ್ಲದ ಕೂಟದಲ್ಲಿ ಉನ್ನತಿಯೊಳು ಕಾಂಬುವರು ಶರಣರು
ಗುರುನಿರಂಜನ ಚನ್ನಬಸವಲಿಂಗ ತಾನೆಯೆಂದು./470
ಕಾಲಿಲ್ಲದ ಗಮನದವರು ನಡೆಯಲನುವಿಲ್ಲ.
ಕಣ್ಣಿಲ್ಲದ ನೋಟದವರು ನೋಡಲನುವಿಲ್ಲ.
ಕೈಯಿಲ್ಲದ ಮುಟ್ಟುವರು ಮುಟ್ಟಲನುವಿಲ್ಲ.
ಬಾಯಿಲ್ಲದ ನುಡಿವರು ನುಡಿಯಲನುವಿಲ್ಲ.
ಕಿವಿಯಿಲ್ಲದ ಕೇಳುವರು ಕೇಳಲನುವಿಲ್ಲ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಐಕ್ಯವನರಿಯದವರು ಐಕ್ಯವಾಗಲನುವಿಲ್ಲ./471
ಕಾಲಿಲ್ಲದ ಗುರು ಕಣ್ಣಿಲ್ಲದ ಕಂದಗೆ
ಬಣ್ಣವಿಲ್ಲದ ತಲೆಯ ತೋರಿದರೆ
ಕೈಯಿಲ್ಲದೆ ಹಿಡಿದು ಕರ್ಮವಿಲ್ಲದ ಕಾಯದ ಮೇಲೆ ಮಡಗಿದರೆ
ಹೊರಗೊಳಗೆ ಸುಳಿವುದೈ.
ಆ ಸುಳಿಹಿನ ಬೆಳಗಿನೊಳಗೆ ಕಳೆಯುಳ್ಳ ಪುರುಷನ ಪುತ್ಥಳಿಯ ಕಂಡೆನೈ,
ಆ ಪುತ್ಥಳಿಗೆ ಸಕಲವ ಕೊಟ್ಟು ನಿಃಕಲವ ನಿಲಿಸಿ ನಿರಂಜನವನಿತ್ತಡೆ
ಎತ್ತಿಕೊಂಡಿತ್ತ ತನ್ನ ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಗೆ./472
ಕಾಲಿಲ್ಲದ ನಡೆ ಕಂಡೆನಯ್ಯಾ, ಕಂಗಳಿಲ್ಲದ ನೋಟವ ಕಂಡೆನಯ್ಯಾ.
ತನುವಿಲ್ಲದ ಸೋಂಕ ಕಂಡೆನಯ್ಯಾ, ಮನವಿಲ್ಲದ ನೆನವ ಕಂಡೆನಯ್ಯಾ,
ಭಾವವಿಲ್ಲದ ನಿರ್ವಯಲ ಕಂಡೆನಯ್ಯಾ,
ತಾನಿಲ್ಲದೆ ನೀನಾಗಿರ್ಪ ಸುಖವ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಲ್ಲಿ ಕಂಡೆನಯ್ಯಾ./473
ಕಾಲಿಲ್ಲದ ನಡೆ, ಕೈಯಿಲ್ಲದ ಮುಟ್ಟು, ಕಣ್ಣಿಲ್ಲದ ನೋಟ,
ಕರ್ಣವಿಲ್ಲದ ಕೇಳುವಿಕೆ, ನಾಸಿಕವಿಲ್ಲದ ವಾಸನೆ,
ನಾಲಿಗೆಯಿಲ್ಲದ ನುಡಿ, ತಾನಿಲ್ಲದ ಸುಖ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಲಿಂಗೈಕ್ಯವು.
/474
ಕಾಲಿಲ್ಲವೆಂಬುದು ಕಾಣಬಂದಿತ್ತು, ಕಣ್ಣಿಲ್ಲವೆಂಬುದು ಕಾಣಬಂದಿತ್ತು,
ಕಿವಿಯಿಲ್ಲವೆಂಬುದು ಕಾಣಬಂದಿತ್ತು, ಜಿಹ್ವೆಯಿಲ್ಲವೆಂಬುದು ಕಾಣಬಂದಿತ್ತು,
ನಾಸಿಕವಿಲ್ಲವೆಂಬುದು ಕಾಣಬಂದಿತ್ತು, ಸರ್ವಾಂಗವಿಲ್ಲವೆಂಬುದು ಕಾಣಬಂದಿತ್ತು,
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣರನುಭಾವದಿಂದೆ ಶರಣಂಗೆ./475
ಕಾಲುಕಾಣಿಸಿಕೊಳ್ಳದೆ ನಡೆದು ನಿಂದನಯ್ಯಾ.
ಕೈಯಕಾಣಿಸಿಕೊಳ್ಳದೆ ಮುಟ್ಟಿ ನಿಂದನಯ್ಯಾ.
ಕಣ್ಣಕಾಣಿಸಿಕೊಳ್ಳದೆ ನೋಡಿ ನಿಂದನಯ್ಯಾ.
ಎಡಬಲದ ಗುಂಜುಗಂಜಳಕ್ಕಡಿಯಿಡದೆ
ಮಂಜುಳಮಯ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವಾಗಿ./476
ಕಾಲುತೊಳೆದು ಬಾಯಿತೊಳೆದು
ಅಕ್ಕಿಯ ಥಳಿಸಿ ಪಾಕವ ಮಾಡಿ ಕೈಯೆತ್ತಿ ನೋಡುತ್ತಿರ್ದೆನು.
ಕಸ ಮಣ್ಣು ಹರಳ ತೆಗೆದೊಗೆದು
ರಸನೆಗಿಕ್ಕದ ಸಕ್ಕರೆ ಹಾಲುಗೂಡಿ
ಸಸಿನೆ ಬಾಗಿ ಭಾವಿಸುತಿರ್ದೆ ಎಲೆ ಅಕ್ಕ.
ನೀನೆನಗೆ ವಶಗತ ಮಾಡಿದರೆ ಶಶಿಧರನೊಲಿವ
ನಮ್ಮ ಗುರುನಿರಂಜನ ಚನ್ನಬಸವಲಿಂಗ ಕಾಣೆಯಕ್ಕಾ./477
ಕಾಲೊಳಗಿನ ಮುಳ್ಳ ಕಣ್ಣಿನಿಂದೆ ತೆಗೆಯಬಹುದು.
ಕಣ್ಣೊಳಗಿನ ಮುಳ್ಳ ಕಾಲಲ್ಲಿ ತೆಗೆವ ಜಾಣರನಾರನು ಕಾಣೆ
ಮೂರುಲೋಕದೊಳಗೆ.
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರು ಕಣ್ಣ ಮುಚ್ಚಿ ಕಾಲ ಮುಳ್ಳ ತೆಗೆವರು
ಕಾಲಕೊಯ್ದು ಕಣ್ಣ ಮುಳ್ಳ ತೆಗೆವರು,
ಮರಳಿ ನೋಡಿದರೆ ದೀಪದೊಳಡಗುವರು./478
ಕಾಷ್ಠದಿಂದುದಿಸಿದ ಪಾವಕ ತನ್ನೊಳಗೆ
ಕಾಷ್ಠದ ಕುರುಹ ತೋರಿಸಿಕೊಳ್ಳದು ನೋಡಾ.
ಜಲದಿಂದೆ ಜನಿಸಿದ ತಾವರೆಯು ತನ್ನ ಮೇಲೆ
ಪೂರ್ವವ ಕಾಣಿಸಿಕೊಳ್ಳದು ನೋಡಾ.
ಪ್ರಾಣಾಂಗದಿಂದೆ ತೋರಿದ ಲಿಂಗಶರಣನು
ಹಿಂದಣ ಪ್ರಾಣಪ್ರಕೃತಿಯ ಒಡಲೊಳಗರಸ,
ತನುಪ್ರಕೃತಿಯ ತಲೆಯಲ್ಲಿ ತೋರ, ತೋರಿದರೆ ಸ್ಥಲಕ್ಕೆ ಅಸಂಬಂಧ.
ಅರಿವುದು ತ್ರಿವಿಧದಲ್ಲಿ ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಂಗವಾದೆವೆಂಬ ಅರುಹಿರಿಯರು./479
ಕಾಳುದೈವಕ್ಕೆ ಕೈಯತ್ತಲೊಲ್ಲದೆ
ಕಾರಣಮೂರ್ತಿಯ ಕರತಂದು ಪೂಜೆಯ ಮಾಡಿ,
ಭವಿಮುಟ್ಟದ ವರತೆಯ ನೀರ ತಂದು,
ಪಶುಕಾಲು ಸೋಂಕದ ಧಾನ್ಯಗೂಡಿ,
ಮಾಡದ ಒಲೆಯಲ್ಲಿ ಮಾಡಿದ ಪಾಕವ
ಚಲುವಾಗಿ ನೀಡಿದರೆ ಒಲಿದು ಬಂದೆನ್ನಪ್ಪಿದ
ಗುರುನಿರಂಜನ ಚನ್ನಬಸವಲಿಂಗ./480
ಕಿಚ್ಚ ಸುಟ್ಟು ಉರಿಯೊಳು ನಿಲ್ಲಬಲ್ಲರೆ ಪ್ರಾಣಲಿಂಗಿ.
ನೀರ ತೊಳೆದು ಚಂದ್ರನ ಪ್ರಭೆಯೊಳಗೆ ನಿಲ್ಲಬಲ್ಲರೆ ಪ್ರಾಣಲಿಂಗಿ.
ತಾ ಸತ್ತು ಕೂಡಿದ ಹೆಣ್ಣಿನ ಕುಲಗೆಡಿಸಿ ಕೂಡಬಲ್ಲರೆ ಪ್ರಾಣಲಿಂಗಿ.
ಗುರುನಿರಂಜನ ಚನ್ನಬಸವಲಿಂಗದಂಗವಾಗಬಲ್ಲರೆ ಪ್ರಾಣಲಿಂಗಿ./481
ಕುರುಹಿಲ್ಲದ ತೆರಹಿಲ್ಲದ ಮರಹಿಲ್ಲದ ಮರಹಿನಿಂದೊಪ್ಪುವ ನಿಲುವಿಂಗೆ
ಈ ತೆರನಾಗಿ ಹೆಸರನರುಹಿಸಿ ಕಾಣಿಸಿಕೊಂಬ ಸಮಸ್ತುಗಳೆಲ್ಲ
ಅನ್ಯೋನ್ಯವಾಗಿಪ್ಪವಲ್ಲದೆ ತಾವುವೊಂದಾಗಿ ತೋರಿಕೆ ಕಾಣಿಸದು ನೋಡಾ.
ಅದೇನು ಕಾರಣವೆಂದರೆ, ತಾನು ತನ್ನ ವಿನೋದಕ್ಕೆ
ಶರಣಲಿಂಗಪದಾರ್ಥವೆಂದು ತೋರಿದ ತೋರಿಕೆಯಲ್ಲದೆ ಮತ್ತೇನು ಇಲ್ಲ
ಕಾಣಾ.
ಬಳಿಕ ಗುರುನಿರಂಜನ ಚನ್ನಬಸವಲಿಂಗ ತಾನೇ ಕಾಣಾ./482
ಕುರುಹಿಲ್ಲದೆ ಸಿರಿಸಂಪದ ಸಿಕ್ಕದೆಂದು ಕುರುಹನೊಡ್ಡಿದನೊಬ್ಬ ಜಾಣ.
ಆ ಕುರುಹಿನ ಕೂಟದಿಂದೆ, ಕರಿದು ಬಿಳಿದೆಂಬ ಕರ್ಮಹಾಸಿಕೆಯಾಗಿ,
ಭಕ್ತಭೋಗ ನಿದ್ರೆಯಾದಿ ಸಾಕಾರ ನಿರಾಕಾರಸಂಭ್ರಮ ಸಂದಣಿಸಿತ್ತು.
ಇದನರಿದು ನೋಡುವ ಕಣ್ಣಿನವರ ಕಾಣುತ್ತ ಕಣ್ಣಿಲ್ಲದವರ ಕೈಯ ಪಿಡಿದು,
ಕಾಣ ಕಾಣಬಾರದ ಕಂಡು, ಕಂಡು ಕಾಮಿತಸುಖಿಯಾಗಿ
ನಿಃಕಾಮಿ ಗುರುನಿರಂಜನ ಚನ್ನಬಸವಲಿಂಗ ತಾನೆ
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ಪ್ರಾಣಚೈತನ್ಯ. /483
ಕುಲಮದ ಶೂನ್ಯನೆಂಬೆ ಹುಟ್ಟುಗೆಟ್ಟಿರ್ದನಾಗಿ,
ಛಲಮದ ಶೂನ್ಯನೆಂಬೆ ದ್ವೈತಗೆಟ್ಟಿರ್ದನಾಗಿ,
ಧನಮದ ಶೂನ್ಯನೆಂಬೆ ಕರಣಪ್ರಕೃತಿ ನಷ್ಟವಾಗಿರ್ದನಾಗಿ,
ರೂಪಮದ ಶೂನ್ಯನೆಂಬೆ ದೇಹಭಾವವಳಿದಿರ್ದನಾಗಿ,
ಯವ್ವನಮದ ಶೂನ್ಯನೆಂಬೆ ಕಾಮನ ಕಳೆಯಳಿದುಳಿದಿರ್ದನಾಗಿ,
ವಿದ್ಯಾಮದ ಶೂನ್ಯನೆಂಬೆ ನಿಜಭಕ್ತಿ ಸುಜ್ಞಾನ
ಪರಮವೈರಾಗ್ಯವೇ ಸ್ವಯಮಾಗಿರ್ದನಾಗಿ,
ರಾಜಮದ ಶೂನ್ಯನೆಂಬೆ ಚಿದ್ಘನಲಿಂಗಕ್ಕೆ ಚಿತ್ತವನರ್ಪಿಸಿರ್ದನಾಗಿ,
ತಪಮದ ಶೂನ್ಯನೆಂಬೆ ತ್ರಿಪುಟಿಗತೀತ
ಗುರುನಿರಂಜನ ಚನ್ನಬಸವಲಿಂಗವಾಗಿರ್ದನಾಗಿ./484
ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ,
ಧನಮದದಲ್ಲಿ ನಿಷ್ಠೆಯಿಲ್ಲ, ರೂಪುಮದದಲ್ಲಿ ನಿಷ್ಠೆಯಿಲ್ಲ,
ಯೌವನಮದದಲ್ಲಿ ನಿಷ್ಠೆಯಿಲ್ಲ, ವಿದ್ಯಾಮದದಲ್ಲಿ ನಿಷ್ಠೆಯಿಲ್ಲ,
ರಾಜಮದದಲ್ಲಿ ನಿಷ್ಠೆಯಿಲ್ಲ, ತಪಮದದಲ್ಲಿ ನಿಷ್ಠೆಯಿಲ್ಲ.
ಮತ್ತೆ ಹಿಡಿತ ಬಡಿತಗಳಲ್ಲಿ ನಿಷ್ಠೆಯಿಲ್ಲದೆ ಪಡೆದು ಹಿಡಿದು
ಬಂದ ನಿಷ್ಠೆ ನಿಜಮಹೇಶ್ವರನೆಂದರೆ ಅಪಹಾಸ್ಯ ಕುರುಹಿನೊಳಗೆ ಇಂತಲ್ಲ ಶರಣ
ಅಷ್ಟಮದ ನಿಷ್ಠೆ ನಿಜೇಷ್ಠಲಿಂಗಸನ್ನಿಹಿತ
ಗುರುನಿರಂಜನ ಚನ್ನಬಸವಲಿಂಗದಲ್ಲಿ./485
ಕುಸುಮವ ವಾಸಿಸಿ ಕಂಡು ಕಾಣದಂತೆ,
ರುಚಿಯನರಿದು ಕಂಡು ಕಾಣದಂತೆ,
ರೂಪವನರಿದು ಕಂಡು ಕಾಣದಂತೆ,
ಸ್ಪರ್ಶವನರಿದು ಕಂಡು ಕಾಣದಂತೆ,
ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣ ನಿಮ್ಮನರಿದು ಕಂಡುಕಾಣದಂತೆ ನಿಮ್ಮೊಳಗೆ ನೋಡಾ./486
ಕೂಟವನರಿಯದೆ ಕೋಟಲೆಗೊಂಡಿತ್ತು ಲೋಕವೆಲ್ಲ.
ಹಾದಿಯೆರಡರಲ್ಲಿ ನಡೆವ ಕುಂಟ ಕುರುಡರು ತಂಟಕರಾಗಿ ಹೋಗಿಬರುವರು.
ಸಾಧಕ ಸಂದಣಿಗಳೆಲ್ಲ ಮೇದಿನಿಯೊಳುಳಿದರು.
ಹಿರಿಯ ಕಿರಿಯರೆನಿಸುವರೆಲ್ಲ ಬಲೆಯೊಳು ಸಿಲುಕಿದರು.
ಉಳಿದವರಂತಿರಲಿ, ಇದನರಿದು ನಾನು ಮಾಟವ ಮರೆದು ಕೂಟವ ಕಂಡು
ಕಾಣದೆ ಸಮರಸಾನಂದದೊಳಿರ್ದೆನು
ಗುರುನಿರಂಜನ ಚನ್ನಬಸವಲಿಂಗದೊಳಗೆ./487
ಕೂಸುಳ್ಳ ವೇಶ್ಯೆ ಕಾಸಿನಾಸೆಗೆ ಕಾವನಕೇಳಿಗೆ ವಿಟನಿಗೆ ನಿಂದಲ್ಲಿ
ಸಕಲ ವಿಭ್ರಮದ ಬೆಡಗು ಮೂರುಭಾಗವಾಗಿಪ್ಪುದು.
ಭುಜಂಗನ ರತಿಗೆ ರತಿತಪ್ಪಿದ ರತಿಗೆ ಹಿತವಪ್ಪಲರಿಯದು.
ವ್ರತಗೇಡಿಗೆ ಸತ್ಯವಹುದೆ ? ಈ ಪರಿವಿಡಿದಾಡುವ ಮಾಟ
ಕೋಟಲೆಗೆ ನೀಟು ಮನದೊಡೆಯ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿ ತಮ್ಮ ತಮ್ಮ ಭಕ್ತಿಬೇಟಕ್ಕೆ./488
ಕೆಂಡದ ಹೆಡಿಗೆಯ ಹೊತ್ತು ಮಂಡಲದೊಳಗಾಡುವ
ಪುಂಡನ ಕೈಯೊಳಗೆ ಬಿಳಿಯವೆರಡು ದಾರ ನೋಡಾ !
ಮೂದೇವರ ಕೊರಳ ಕಟ್ಟಿ ಮತ್ತೆ ಮೂವರಿಗೆತ್ತಿ ನೀಡಿ
ಅತ್ತಲರಿಯದಿರ್ದಡೆ ಎತ್ತಿಕೊಂಬುವ
ಗುರುನಿರಂಜನ ಚನ್ನಬಸವಲಿಂಗ./489
ಕೆಸರೊಳಗೆ ನಿಂದು ಕೊಡವ ಹೊತ್ತು
ಕಂಡಕಂಡವರ ಕಾಲಿಗೆ ಕೈಗೊಟ್ಟು ಶರಣೆಂಬ ರಂಡೆಯ
ಬಾಯಿ ನೋಡಾ ಹೇಸಿಕೆ,
ಮೂಗು ನೋಡಾ ದುರ್ವಾಸನೆ, ಕಣ್ಣು ನೋಡಾ ಗಂಜಲ,
ಕಿವಿಯು ನೋಡಾ ಕಿಲ್ಬಿಷ, ಸರ್ವಾಂಗವೆಲ್ಲ ಮಸಿಯು.
ಕತ್ತಲಹೊತ್ತು ಕಾರ್ಯನೀತಿಯ ತೆರೆದರೆ
ಬೆಳಗಾಗಿ ಬಂದವರ ಕಾರಣವನರಿದುಣ್ಣಲಾಯಿತ್ತೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಬಕಹಂಸ !/490
ಕೇಳಿಕೊಂಡು ಸಗುಣ ನಿರ್ಗುಣ
ಬೆಳಗಿನಿಂದಾಡುವ ಕಡುಜಾಣ ಕಲಿಗಳು
ಬಡತನವ ಬೀರುವರಲ್ಲಯ್ಯಾ.
ಜಡವಿಡಿದರೇನು ಕಡುಲೋಬಿಯಯ್ಯಾ.
ಗುರುಲಿಂಗಜಂಗಮದಲ್ಲಿ ಪ್ರಾಣಾಂಗಭಾವ ತಪ್ಪದಿಪ್ಪುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಕ್ತನ ನಿಷ್ಠೆ./491
ಕೈಯಲ್ಲಿ ಕುರುಹು ಮೈಯಲ್ಲಿ ಬೂದಿ ಬಾಯಲ್ಲಿ ದೀಪ
ಸತ್ಯನಡೆವ ಸೌಭಾಗ್ಯಕ್ಕೆ ಮತ್ತೆ ಮತ್ತೆ ಶರಣೆಂದು ಬದುಕಿದೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ./492
ಕೊಂಡು ಕೊಟ್ಟವರೊಡವೆಯ ಬಂಡಿಗಿಟ್ಟು ಪ್ರಕೃತಿಸಂಯುಕ್ತನಾಗಿ
ಮಾಯಾಮೋಹ ವಿಷಯಸುಖ ತಲೆಗೇರಿ,
ತಾ ನಿತ್ಯನೆಂದರಿಯದೆ ಅನಿತ್ಯವನುಂಡು,
ಅತ್ತಿತ್ತ ಬೀಳುವ ಅನುಚಿತವಾದ ಮನುಜರು
ನಿಮ್ಮ ನಂಟುಗಂಟಿನ ಕೂಟವನವರೆತ್ತಬಲ್ಲರು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಾನಂದಸುಖಿಬಲ್ಲನಲ್ಲದೆ./493
ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ,
ಕೊಡುಕೊಳ್ಳಿಯಳಿದುಳಿದರೆ ಎರಡಕ್ಕೆ ಬಂಗ.
ಒಂದು ಭಂಗ ಭವಕ್ಕೆ ಬೀಜ, ಎರಡು ಭಂಗ ಲೀಲೆಗೇಡು,
ಒಂದೆರಡರಿಯದೆ ಅಂದಂದಿಗಿತ್ತಡೆ
ಅವಧಾನಿಸಿಕೊ ಗುರುನಿರಂಜನ ಚನ್ನಬಸವಲಿಂಗಾ./494
ಕೊಟ್ಟುಕೊಂಬುವರು ಕುರುಹುಳ್ಳವರು.
ಕೊಡದೆಕೊಂಬುವರು ಅನಿಷ್ಠಬದ್ಧರು.
ಕೊಟ್ಟು ಕೊಳ್ಳದೆ, ಕೊಡದೆ ಕೊಳ್ಳದೆ
ಕಡೆಮೊದಲರಿದು ಮರೆದು ಕೊಟ್ಟು ಕೊಳ್ಳಬಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ದಿಟ್ಟಪ್ರಸಾದಿ. /495
ಕೊಳ್ಳುವಲ್ಲಿ ಒಂದು ಭಾವ, ಹಿಡಿದು ಬಂದಲ್ಲಿ ಒಂದು ಭಾವ,
ನಡೆವಲ್ಲಿ ಒಂದು ಭಾವ, ಹೂಸರೊಳ್ಳೆಯ ತೆರನಿಪ್ಪ ಬಗೆಯನರಿಯದೆ
ಆಸೆವಿಡಿದಾಡಿದರೆ ದ್ವಂದ್ವಪಾಶ ಹಿಂಗದು.
ಅದೆಂತೆಂದೊಡೆ, ಕಾಣದೆ ಕಂಡು ಮಾಡುವುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಕಾಯಗಾಣದ ಗುರುವಾಗಬೇಕಾದಡೆ./496
ಕೋಣನ ತಾಯ ಹಾಲಕುಡಿದು ಮಲಗಿರ್ದ ಕುರುಹ,
ಬೆಳಗಾಗಿ ಕಂಡು ಮೊದಲ ಹಿಡಿದು ತುದಿಯ ಸೇವಿಸಿದಾತನೇ
ಪ್ರಾಣಲಿಂಗಪ್ರಸಾದಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ./497
ಕೋಣನ ನೆರಳಲ್ಲಡಗಿರ್ದ ಕೋಳಿಯೆದ್ದು ಕೂಗಿತ್ತು.
ಸತ್ತವರೆದ್ದು ನಿತ್ಯಕ್ಕೆ ನಡೆದರೆ ಕೆರೆ ಬತ್ತಿ ಉರಿದವು ಮೂರುಲೋಕವೆಲ್ಲ.
ಕೋಳಿ ಕೋಣನ ನುಂಗಿ ಬೋಳುಕುಮ್ಮಟವ ಹೊಗಲು
ಸಾಲುಮನೆಯ ಸೌರಭದ ಬೆಳಗು ಸಮರಸವನೈದಿ
ಸಹಜವಾಗಿರ್ದ ಶರಣ ಗುರುನಿರಂಜನ ಚನ್ನಬಸವಲಿಂಗವಾಗಿ./498
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ,
ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ?
ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು,
ಹಾರುವನ ತಲೆಯ ಬೋಳಿಸಿ,
ಊರ ದೇವತೆಯ ಕಡಿದು ನಿಂತುನೋಡಲು
ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು.
ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು./499
ಕೋಣಹಣೆಪಟ್ಟಿ ಚಿತ್ರವಕೊಯ್ದು, ವಿಚಿತ್ರದಂಗನೆಯ
ನಾಮ ರೂಪು ಕ್ರಿಯವ ತೊಳೆದು,
ಬಿಳಿಯಂಬರನುಡಿಸಿ, ತಾಯಿ ತಂದೆಯ ಮದುವೆಯ ಸಂಭ್ರಮದಲ್ಲಿ
ತಪ್ಪದೆ ನೆರೆದ ಪರವಶ ಶರಣ.
ಅಜ ವಿಷ್ಣು ರುದ್ರರ ಗಜಬಜೆಯನರಿಯದೆ ಸೆರೆವಿಡಿದಿರ್ದ ತನ್ನನುವಿಂಗೆ
ಗುರುನಿರಂಜನ ಚನ್ನಬಸವಲಿಂಗಕ್ಕೆ
ಹರಿಯದ ಭೋಗ ಹವಣವಾಯಿತ್ತು ಶರಣ ಮುಖದಿಂದೆ. /500