Categories
ವಚನಗಳು / Vachanagalu

ಪರಂಜ್ಯೋತಿ ವಚನಗಳು

1257
ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಉಪಾದಿ ಬೋಧಕ್ಕೆ ಸಿಲ್ಕಿ
ಶ್ವಾನ ಮಾಂಸ ಕಚ್ಚಿಕೊಂಡ ಪರಿಯಲ್ಲಿರಲು,
ಆ ಸಮಯದಲ್ಲಿ ಇತ್ತರವಾಗಿರ್ದ ಮನುಜ ಬರಲು
ಕಂಡು ಅಂಜಿ ಬಿತಿಸಿ,
ನನ್ನ ಕಲ್ಪನೆ ಅರಿಯಿತೆಂದು ಆಹಾರಮಂ ತೆಗೆದನೆಂದು
ಗುರುಗುಟ್ಟುವ ಶ್ವಾನನ ಮರ್ಯಾದೆಯಲ್ಲಿ
ಕಲ್ಪಿತಾಹಾರಮಂ ಕಂಡು ನಚ್ಚಿ ಮಚ್ಚಿ
ಅಜ್ಞಾನದೊಳು ಬಿದ್ದು ಸಾವ ಭ್ರಾಂತಮೂಳರಿಗೆ
ದೊರಕುವುದೆ ಸ್ವಯಂಭು ?
ಇತರವನಳಿದಂಗಲ್ಲದೆ ನರರಿಗುಂಟೆ ಹೇಳಾ ?
ಘನ ಮಹತೋತ್ತಮನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1258
ಆಧಾರ ಸ್ವಾದಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞಾ ಎಂಬ ಷಡಾಧಾರಚಕ್ರಂಗಳ ಭೇದಿಸಿಕೊಂಡು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಮಹೇಶ್ವರ ಸದಾಶಿವನ ಧ್ಯಾನಿಸಿ ಕಂಡಡೆ,
ಮಹಿಮಾದಿಗಳಳಿವವೆಂದು ನುಡಿವರು.
ಮುಟ್ಟಿ ಮುಟ್ಟಿ ನೋಡುವುದು ಮಾಯೆ,
ಕರುಣದಿಂದ ಕಂಡುದು ಮಾಯೆ,
ಮನದಿಚ್ಫೆ ಅರಿವುದು ಮಾಯೆಯಲ್ಲವೆ ?
ತನುಮನ ಹಿಡಿದು ನೋಡಿದುದೆಲ್ಲ ಮಾಯೆಯಲ್ಲವೆ ?
ದೇಹವಿಡಿದು ವಿದೇಹಿಯಾದ ಮಹಾತ್ಮಂಗೆ
ದೇಹವಿಲ್ಲ ಮಾಯೆಯಿಲ್ಲ ಕರುಣವಿಲ್ಲ
ಮರಣವಿಲ್ಲ ಜನನವಿಲ್ಲ.
ಪ್ರತಿಯಿಲ್ಲದ ಘನಮಹತೋತ್ತಮನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1259
ಇಂದ್ರಿಯ ಆಲಿಯಲ್ಲಿ ನೋಡಿ ಕಂಡು
ನಿಜವಾದ ನಿರಾಲಯಂಬದ ಗೋಲದ
ಶೂನ್ಯ ನಿಃಶೂನ್ಯ ಶೂನ್ಯದ ಮೇಲೆ
ಸಹಜಮಣಿ ಸ್ವಯಂಭುಜ್ಯೋತಿಯಂ ಕಂಡು,
ಅದರೊಳಗೆ ವಟಮೂಲದ ಬೀಜಮಂ ಕಂಡು,
ಆ ಬೀಜಾಕಾರ ಗರ್ಭದೊಳಗೆ ಆ ಮರದ ಬುಡದಲ್ಲಿ
ನವರತ್ನದ ಪ್ರಕಾಶದ ಕೆರೆಯಂ ಕಂಡು,
ಮೇಲೆ ಕೈಲಾಸಗೋಪುರಮಂ ಕಂಡು,
ಅಲ್ಲಿರುವ ಸಮಸ್ತವ ಕಂಡೆನೆಂದು ನುಡಿವ
ಭ್ರಾಂತಯೋಗಿಗೆ ಸ್ವಯಂಭು ಸಲ್ಲದು ಕಾಣಾ.
ಮಾಯದಿಂದರಿವುದಲ್ಲ, ಕಾಯದಿಂದರಿವುದಲ್ಲ.
ಚಿತ್ತ ಉತ್ಪತ್ಯ ಮಾಡಿದ ಸ್ಥಿತಿ ಗತಿ ಲಯ ಉಂಟಾದವೆಲ್ಲ
ಕಂಡಾಗಲೆ ಕಂಡೆನು.
ಜಾಗ್ರ ಮೀರಿ ಸ್ವಪ್ನದಲ್ಲಿ ಎಷ್ಟು ಕಂಡ ?
ಸುಷುಪ್ತಿಗತವಾದ ಮೇಲೆ ಕಾಣುವುದು ಇನ್ನೇನು ಹೇಳಾ ?
ಬರೆಯದ ಪುರುಷಂಗೆ ಮರವಿಲ್ಲ ಅರುವಿಲ್ಲ,
ಗುರಿಯಳಿದು ನಿಂದಾನು.
ವರನಾಗನ ಗುರುವೀರನೆ ಪರಂಜ್ಯೋತಿ [ಮಹಾ]ವಿರಕ್ತಿ.

1260
ಬಹಳ ಬಹಳ ಕಂಡೆನೆಂದು ನುಡಿವ,
ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ
ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು
ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ.
ಎರಡೂ ಒಂದೇ.
ಮುಂದೆ ಮೀರಿ ಮನಸಮಾಧಿ ಮಾಡಿದಡೆ
ಮುಕ್ತಿಯೆಂದು ಹೇಳುವರು.
ಮನ ಮುಳುಗಿದುದೆ ಲಿಂಗವೆಂದೆಂಬರು.
ಆ ಲಿಂಗ ಮುಳುಗುವುದು ಸಮಾಧಿ ಕಾಣಾ,
ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ?
ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ?
ಚಿಂತಿಸಿ ಮುಳುಗಿದವರೆಲ್ಲ
ಕಡೆಯಿಲ್ಲ ಮೊದಲಿಲ್ಲ ನೋಡಾ.
ಇನ್ನು ಉಳಿದದ್ದು ಘನವು.
ಉಳಿಯೆ ಹೇಳಾ ನಿಜಕೆಲ್ಲ.
ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1261
ಇಡಾದಲ್ಲಿ ಸುಳಿವ ಚಂದ್ರನು ದೇವರೆಂದು ನುಡಿವರು.
ಪಿಂಗಳದಲ್ಲಿ ಸುಳಿವ ಸೂರ್ಯನು ದೇವರೆಂದು ನುಡಿವರು.
ಸುಷುಮ್ನನಾಳದ ತುದಿಯನಡರಿ ಬ್ರಹ್ಮರಂಧ್ರದ
ಸಹಸ್ರದಳಪದ್ಮದಲ್ಲಿ ನೋಡಿ,
ದೇವರ ಕಂಡೆನೆಂದು ನುಡಿವರು ನೋಡಾ.
ಇಂಥ ಭ್ರಾಂತುಭ್ರಮೆಗಳಿಗೆ ಕೆಟ್ಟ ಕೇಡಿಂಗೆ
ಕಡೆಯಿಲ್ಲ ಮೊದಲಿಲ್ಲ ನೋಡಾ.
ಮುಂದೆ ಸ್ವಾನುಭವ ಸ್ವಯಂಭು ತಾನಾದ ಮಹಾತ್ಮಂಗೆ
ಇತರವಾದ ಮಾಯಾರೂಪಿನ ಭ್ರಾಂತುಂಟೆ ಹೇಳಾ ?
ಅಚ್ಚಳಿದ ಬ್ರಹ್ಮ ಮುಟ್ಟಲು
ಬ್ರಹ್ಮವಪ್ಪುದಲ್ಲದೆ ಮಾಯೆ ಉಂಟೆ ಹೇಳಾ ?
ಸೀಮೆಯ ಬಿಟ್ಟು ನಿಸ್ಸೀಮನಾದ ದೈವಕ್ಕೆ
ಸರಿಯಿಲ್ಲ ಮಿಗಿಲಿಲ್ಲ ಮರವಿಲ್ಲ.
ಪರಿಪೂರ್ಣ ತಾನಾದ
ವರನಾಗನ ಗುರುವೀರೇಶ ಪರಂಜ್ಯೋತಿ ಮಹಾವಿರಕ್ತಿ.

1262
ಕರ್ಮಕಾಂಡಿ[ಗಳಿ]ಗೆ ಕತ್ತಲೆಕರ್ಮಿಗಳೆಂದು ನುಡಿವರು ನೋಡಾ.
ಅವರು ಮಾಯಾಮೋಹಕ್ಕೆ ಸಿಲ್ಕಿ
ಕೆಟ್ಟರು ಕಾಣಾ ಎಂದು ನುಡಿವರು ಕೇಳಾ.
ಸಗುಣಸ್ಥಲದ ಮನೋಜ್ಞಾನಿಗಳವರು ಕೆಟ್ಟಂತೆ ನಾವು ಕೆಡಬಾರದು.
ತಮ್ಮ ಮನಕ್ಕೆ ಬುದ್ಧಿಯಂ ಕೊಟ್ಟು
ಆಸೆಯಂ ಬಿಟ್ಟು ತನುವೆಂಬ ಬಿಲ್ಲಿಗೆ
ಮನವೆಂಬ [ಹೆದೆ]ಯನೇರಿಸಿ,
ಉರಿನರಿಯಂಬ ಅಳವಡಿಸಿ
ವಾರಿ ಮೋರೆಯನೆ ತಿದ್ದಿಕೊಂಡು
ಗುರುಕೊಟ್ಟ ಬಿಲ್ಲ ದೃಢವಾಗಿ ಹಿಡಿದು
ಶ್ರೀಗಿರಿಯೆಂಬ ಗುರಿಯ ನೋಡಿ ಎಸೆವಾಗ,
ಭವ ಹರಿಯಿತ್ತು, ಕಾಲಕರ್ಮವೆಂಬ ಶಿರ ಹರಿಯಿತ್ತು.
ಅರಸು ಪ್ರಧಾನಿ ಪ್ರಜೆ ಪರಿವಾರ ಓಡಿ ಹೋಯಿತ್ತು.
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಅಂದೇ ಬೆಳಗಾಯಿತ್ತು.
ಇಂತಪ್ಪ ಪ್ರಸಾದ ಆ ಗುರು ಲಿಂಗ ಜಂಗಮ ತಮ್ಮೊಳಗಾಯಿತ್ತು.
ಇಂತಪ್ಪ ಪ್ರಸಾದವು ಯಾರಿಗೂ ಅಳವಡದು.
ಪ್ರಭುವಿನೊಳ್ ಐಕ್ಯವಾದ ಬಸವಸಂಪತ್ತಿಗಲ್ಲದೆ
ಮಿಕ್ಕ ಪ್ರಪಂಚಿಗಳಿಗೆ ಅಳವಡದೆಂದು ಹೇಳುವ
ಸಗುಣದ ಭ್ರಮಿತರು ಅವರು
ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ ನೋಡಾ.
ಮುಂದೆ ಇಷ್ಟವ ಕಂಡು ಮುಳುಗಿದವರಿಗೆ
ಮುಕ್ತಿ ಎಂದೆಂದಿಗೂ ಇಲ್ಲ ಕಾಣಾ.
ಇನ್ನು ಕೈವಲ್ಯಾನ್ವಯ ಪ್ರವರ್ತಕ
ನಿಸ್ಸೀಮಾಂಬುಧಿ ನಿಲರ್ೆಪ ತಾನಾದಂಥ ದೇವ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1263
ಕಾಯವಿಡಿದು ಮಾಯೆ ಬಿಡಬೇಕೆಂಬ ಹೆಡ್ಡರಿಗೆ
ಮಾಯೆ ಬಿಡುವುದು ಹೇಂಗಯ್ಯ ?
ದೇಹವಿಡಿದು ನೋಡಿ ಕಂಡು ಆ ಅಮೃತ ಉಂಡೆನೆಂದು ನುಡಿವರು.
ಆ ಅಮೃತ ಉಂಡ ಬಳಿಕ ಹಸಿವುಂಟೆ ಹೇಳಾ.
ಪ್ರಳಯವಿದ್ಯೆ ವಾತ ಪಿತ್ಥ ಶ್ಲೇಷ್ಮಂಗಳ ಕುಡಿದು
ಆ ಅಮೃತವ ಉಂಡೆನೆಂದು ನುಡಿವವರಿಗೆ
ಎಂದೆಂದಿಗೂ ದೊರಕದು ಕಾಣಾ.
ಇಂಥ ಭ್ರಾಂತಭ್ರಮಿತರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ.
ಚಿತ್ತೇ ತಾನಾದ ಮಹಾತ್ಮಂಗೆ ಲಯವಿಲ್ಲ ಭಯವಿಲ್ಲ ಅನುವಿಲ್ಲ.
ದೇಹದಿ ನೋಡುವ ಕಪಿಚೇಷ್ಟೆಗಳಿಗೆ ಎಂದೆಂದಿಗೂ ಇಲ್ಲ.
ಮಹತೋತ್ತಮನಾದ ವರನಾಗನ
ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1264
ಅಜ್ಞಾನದಿಂದ ಮೋಕ್ಷಕತರ್ೃ ಇಲ್ಲವೆಂದು
ಸುಜ್ಞಾನಕ್ಕೆ ಗುರುವಿನ ದಯವಾಗಿ,
ಸಕೀಲವರಿಯಲಾಗಿ ಒಂಬತ್ತು ಬಾಗಿಲ ಮುಚ್ಚಿ
ಒಳಯಕ್ಕೆ ಒಬ್ಬರನೂ ಬಿಡಬೇಡೆಂದು
ಒಮ್ಮನ ಮಾಡು, ಸುಮ್ಮನೆ ನೀಡು, ಗಮ್ಮನೆ ಕಳುಹು ಎಂದರು.
ಮುಂದೆ ನಮ್ಮ ದೇವನ ಬಳಿಯಲ್ಲಿ
ಸಂಭ್ರಮದ ಪೂಜೆಯಾಗಿಟ್ಟ ಎಡಬಲನ ಮುರಿದು
ಬೀಗದ ಕೈಕೊಂಡು ಕುಂಭಿನಿ ಬಾಗಿಲ ಕದವ ತೆಗೆದು,
ಒಳಪೊಕ್ಕು ಒಂದಾನೊಂದು ಕಟ್ಟಳೆಯ ಮಾಡಿ
ಪರತತ್ವದಲ್ಲಿ ಬೆರಸಿದ ನಿಷ್ಠಕ್ಕೆ ದೇವನೆಂದು
ನಮೋ ನಮೋ ಎಂದು ನಂಬುವರು ಕಾಣಾ
ಎಂದು ನುಡಿವ ಮದೃಷ್ಟವುಳ್ಳವರು
ದೃಷ್ಟಿಯಲಿ ನೋಡಿದುದೆಲ್ಲ ಲಯದಲ್ಲಿ ಅಡಗಿತು ಕಾಣಾ.
ಲಯವಾದವರಿಗೆ ಇನ್ನೆಲ್ಲಿ ಮುಕ್ತಿಯೋ ?
ಲಯಭಯಕ್ಕೆ ವಿರಹಿತನಾಗಿ
ವೇದಾಂತ ಮಹಾನುಭಾವದಿಂದ ತಿಳಿದು
ತನ್ನ ತಾನರಿದು ತಾನಾರೆಂದು ತಿಳಿದು ತಮ್ಮುವಳಿದು ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1265
ಪೃಥ್ವಿಯಿಂದ ಭಕ್ತನಾದೆ, ಅಪ್ಪುವಿನಿಂದ ಮಾಹೇಶ್ವರನಾದೆ,
ತೇಜದಿಂದ ಪ್ರಸಾದಿಯಾದೆ, ವಾಯುವಿನಿಂದ ಪ್ರಾಣಲಿಂಗಿಯಾದೆ,
ಆಕಾಶದಿಂದ ಶರಣನಾದೆ, ಝೇಂಕಾರದಿಂದ ಸರ್ವಾಂಗ ವೇದಿಸಿ
ಪಂಚಮುಖವುಳ್ಳ ಪರಮೇಶ್ವರನನರಿತು
ಪಾವನನಾದ ಮೇಲೆ ಘನವೆಂದು ಕೆಟ್ಟರು ಕೋಟ್ಯಾನುಕೋಟಿ.
ಇನ್ನು ಕಬ್ಬಿಣಕೆ ಪರುಷ ಸೋಂಕಲು ಕನಕವಾಯಿತೆಂದರು.
ಮುಂದೆ ಕಬ್ಬಿಣಕೆ ಬಾಧೆ ತಪ್ಪದು, ಕನಕಕ್ಕೆ ಬಾಧೆ ತಪ್ಪದು.
ಇನ್ನು ಇಂಥ ಚಿನ್ನಬಿನ್ನವೇ ಪರುಷವೆಂದೆನ್ನುವರು.
ಪರುಷ ಮುಟ್ಟಲು ಪರುಷವಾದುದೇ ತನ್ನ ಘನವು.
ಪರುಷ ಮುಟ್ಟಿ ಚಿನ್ನವಾದುದೆ ಸಿದ್ಭಾಂತ ಕಾಣಾ.
ಮುಂದೆ ಪರುಷಮುಟ್ಟಲು ಪರುಷಕಟ್ಟಳೆ
ಮುಂದೆ ವೇದಾಂತ ಗುರುಮುಟ್ಟಿ ಗುರುವಾದ
ನಿಷ್ಕಳಂಕ ನಿರಾಭಾರಿ ನಿರ್ಗುಣನಾದ
ಮಹಾತ್ಮಂಗೆ ನೋಟವಿಲ್ಲ ಕೂಟವಿಲ್ಲ
ಆಟವಿಲ್ಲ ಪಾಠವಿಲ್ಲ ಆರೋಗಣೆಯಿಲ್ಲ.
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1266
ನಕಾರ ಮಕಾರ ಶಿಕಾರ ವಕಾರ ಯಕಾರ
ಈ ಪಂಚಾಕ್ಷರಿ ಪ್ರಣಮವನರಿದು,
ಅಂಗದ ಮೇಲೆ ಶಿವಲಿಂಗ ಧಾರಣವಾಗಿ,
ಸದ್ಯೋಜಾತಮುಖದ ಆಚಾರಲಿಂಗದೇವರು
ವಾಮದೇವಮುಖದ ಗುರುಲಿಂಗದೇವರು
ಅಘೋರಮುಖದ ಶಿವಲಿಂಗದೇವರು
ತತ್ಪುರುಷಮುಖದ ಚರಲಿಂಗದೇವರು
ಈಶಾನಮುಖದ ಪ್ರಸಾದಲಿಂಗದೇವರು
ಗಂಬಿರಮುಖದ ಘನಲಿಂಗದೇವರುಗಳಿಂದ
ಕರ್ಮವಳಿದು ದೃಢವಾಗಿ ಮುಕ್ತರಾದೆವೆಂದು
ಹೆಸರಿಟ್ಟುಕೊಂಡು ಪಂಚಾಕ್ಷರಿ ಪಂಚಬ್ರಹ್ಮವನರಿದು
ಓಂಕಾರ ಸಾಕ್ಷಾತ್ ಶಿವಬ್ರಹ್ಮವನರಿಯಲ್ಕೆ
ಭವವಳಿದು ಬಯಲಾದೆವು ಎಂಬರು.
ಮುಂದೆ ಭವವುಳ್ಳ ದೇಹ ಭವವಳಿವುದು ಹೇಂಗಯ್ಯಾ ?
ಭವವಿಲ್ಲದಾತನು ಮುಟ್ಟಲು ಭವವುಳ್ಳ ದೇಹವಳಿದು
ಭ್ರಮೆಯ ಮೀರಿ ಅಚ್ಚಳಿದು ನಿಂದ ನಿಜಕ್ಕೆ
ಮೆಚ್ಚುವುದು ಇನ್ನೊಂದುಂಟೆ ಹೇಳಾ ?
ಮನವೆ ಮುಖ್ಯವ ಮಾಡುವ ಭ್ರಮಿತರಿಗೆ
ಮನ ಮುಳುಗಿದಂತೆ ಮುಳುಗುವರು ಕಾಣಾ.
ಮುಳುಗಿದವರು ಮುಳುಗಿಸುವರ ಎಬ್ಬಿಸುವರ
ಏನು ಬಲ್ಲರು ಹೇಳಾ ? ಮುಕ್ತನೆ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1267
ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ
ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ.
ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು
ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು
ತನುವ ಗುರುವಿಗೆ ಅರ್ಪಿಸಬೇಕು,
ಮನವ ಲಿಂಗಕ್ಕೆ ಅರ್ಪಿಸಬೇಕು,
ಧನವ ಜಂಗಮಕ್ಕೆ ಅರ್ಪಿಸಬೇಕು.
ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ
ಶಿಷ್ಯ ಸುಬುದ್ಧಿಯಿಂದ ‘ಗುರುವೇ ನೀನು ಅದಿಕಾರನು
ನಿನ್ನ ಪಾದ ಸೋಂಕಿತೆಂದು’ ನುಡಿಯಲಾಗಿ,
ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋದಿಸಿ
ಆತಂಗೆ ಕಟ್ಟಳೆಯ ಮಾಡಿ
ಹೆಣ್ಣು ಹೊನ್ನು ಮಣ್ಣು ಮೂರು
ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ,
ಅವನು ವಿಕಾರಿಯಾಗಿ
‘ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ
ಸಮರ್ಪಣವೆಂದು’ ನುಡಿಯಲಾಗಿ,
ಬೋದಿಸುವ ಆ ಗುರುವಿಂಗೆ
ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ
ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ
ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು
ಅನಾಚಾರಿಯಾಗಿ ಕಚ್ಚಡಕನಾಗಿ
ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ
ವೇಷಡಂಭಕರ ತೋರದಿರಯ್ಯಾ.
ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ
ಎತ್ತಣ ಸ್ವಯಂಭು ಎತ್ತಣ ನಿಜವು.
ತೊತ್ತು ದೊರೆಯಾಗುವುದೇನಯ್ಯಾ ?
ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು ?
ಬ್ರಹ್ಮವೆತ್ತ, ತಾನೆತ್ತ, ಹೋಗತ್ತ.
ಇಂಥ ಭ್ರಾಂತುಯೋಗಿಗಳು ಕೆಟ್ಟ ಕೇಡಿಂಗೆ ಕಡೆಯಿಲ್ಲ.
ವಿದೇಹಿ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1268
ಅಂಗದೊಳಗಿದ್ದ ಲಿಂಗವ ಕಾಣದೆ ಆಡುವ ಮಾನವನೆ
ನನ್ನ ತತ್ಸಂಗಲೀಯವಾಗಿರೆ ನಾನಾ ಲಕ್ಷಗಳಿಂದ
ನೀನು ಸುಖಿಸುವ ಸಕೀಲವರಿವನಲ್ಲಾ.
ನಮ್ಮ ಗುರುವೆ ಅರುವೆಂಬ ಮರ್ಯಾದೆ
ಆದಿಯಲ್ಲಿ ನಡೆದು ನಂಬಿದಕ್ಕೆ ಮುಂದೆ ನಾನು
ಬೇಡಿದ ಪದಾರ್ಥಂಗಳ ಕೊಟ್ಟರೆ
ನಿನ್ನಲ್ಲಿ ಇದ್ದದ್ದನ್ನೆಲ್ಲಾ ತೋರಿಕೊಡುವೆನೆಂದು ನುಡಿಯಲಾಗಿ,
ಶಿಷ್ಯ ನಂಬುಗೆಯಿಂದ ನಿನ್ನ ಆಜ್ಞೆಗೆ ನಿಲ್ಲುವೆನೆಂದು
ವಂದನೆಯ ಮಾಡಿ ವಂದಿಸಲು
ಮನನಿರೂಪದಿಂದ ಅಂತರಂಗದೊಳಗಿದ್ದ
ಮನಪ್ರಕಾಶವನು ತೋರಿ,
ಥಳಥಳ ಮಾಯಾರೂಪಗಳನು ತೋರಿ
ನಿಜವೆಂದು ಭಾವಿಸಿ ನಿರ್ಣಯಿಸಿಕೊಳ್ಳೆಂದು
ಶಿಷ್ಯನ ಸತಿಯಂ ಕಂಡು ಕಾಮುಕನಾಗಿ
ಗುರುಸೇವೆಯ ಮಾಡಿದರೆ ಮುಕ್ತರಾದೆವೆಂದು ನುಡಿದು
ಮೆಚ್ಚಿಸಿಕೊಂಡು ಉಚ್ಚನರಕದೊಳು
ಮುಳುಗುವ ಹುಚ್ಚರಿಗೆ ಬೆಚ್ಚುವುದೆ ಮಹಾನುಭಾವ ?
ಅನ್ಯಭಾವದಿ ಬಳಸುವ ಅನಾಚಾರಿಗೆ
ತನ್ನ ಭಾವ ದೊರಕುವುದೆೊ? ದೊರಕದಯ್ಯಾ.
ಚಿತ್ತೇ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

1269
ತಾನು ಈಶನೆಂಬುದನು ತಾನರಿದು,
ಮಾನೀಶನೆಂಬುದನು ತಾನರಿದು.
ತಾನೆ ತಾನಾಗುವ ಸಕೀಲವನರಿಯದೆ
ಧ್ಯಾನಧಾರಣಸಮಾಧಿ ಯೋಗಾಂಗವೆಂಬ
ಯೋಗಧ್ಯಾನದಿಂದ ಅರಿಯ[ಬ]ಹುದೆ ಸ್ವಯಂಭು[ವ] ?
ಯೋಗಿ ದೇಹರಹಿತ, ಈ ದೇಹವಿಡದೇ
ವಿದೇಹಿಯಾಗುವ ಸಕೀಲಸಂಜ್ಞೆಯ ಅರಿಯಬಲ್ಲಂಥ
ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ?
ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ?
ತನ್ನ ಘನವು ಆ ಮನವು
ಮದಾವಸ್ಥೆಯಲ್ಲಿ ಮಗ್ನವಹುದಲ್ಲದೆ ಮಾಣದು ನೋಡಾ.
ಅದು ಮೂರುಗುಣ, ಅದು ತ್ರಿಪುಟಿ ಮಾಯಾ.
ಜಾಗ್ರತದಲ್ಲಿದ್ದ ವರ್ತನೆ ಸ್ವಪ್ನದಲ್ಲಿಲ್ಲ.
ಸ್ವಪ್ನದಲ್ಲಿದ್ದ ವರ್ತನೆ ಸುಷುಪ್ತಿಯಲ್ಲಿಲ್ಲ.
ಈ ಮನ ತಾನು ಹುಟ್ಟುಗುರುಡು
ಮೊದಲಿಂಗೆ ಹುಸಿ ವಿಲಕ್ಷಣಾದಿ
ಶಿವನೆತ್ತ, ಲಕ್ಷದಿಂದ ಅರಿಯಬೇಕೆಂಬ ಮನವೆತ್ತ, ಹೋಗುತ್ತ, ನೀನತ್ತ.
ಈ ಮನಸು ತಾನು ಮೊದಲಿಂಗಲ್ಲದೆ
ಹುಸಿಯೆಂದರಿಯದೆ ನದಿಯ ಸುಳಿಯಲ್ಲಿ ಬಿದ್ದ ಹುಳದಂತೆ
ಮುಳುಗುತ್ತ ಏಳುತ್ತ ತಿರುಗುವವರಿಗೆಲ್ಲ
ತನ್ನ ನಿಜವು ತನ್ನವೆಂದರ್ಥವಾಗುವುದೆ ? ಅದು ತಮ್ಮ ಇಚ್ಫೆ.
ಇದನರಿಯದೆ ಮನ ಸಮಾಧಿಯ ಮಾಡಬೇಕೆಂಬ ಮಹಾಗಣಂಗಳು
ಇಂತಿವರಲ್ಲ.
ಮಹಾಗಣಂಗಳು ಮಹಾಜ್ಞಾನಿಗಳು ಇಂತಿವರಲ್ಲ.
ಮತ್ರ್ಯದಲ್ಲಿ ಎನ್ನದೊಂದು ವಂಶವೆಂದಾತ
ನಮ್ಮ ವೀರ ಸದ್ಗುರು ಪರಂಜ್ಯೋತಿ ಮಹಾವಿರಕ್ತಿ.