Categories
ಶರಣರು / Sharanaru

ಪ್ರಸಾದಿ ಭೋಗಣ್ಣ

ಅಂಕಿತ: ಚನ್ನಬಸವಣ್ಣ ಪ್ರಿಯ ಭೋಗ ಮಲ್ಲಿಕಾರ್ಜುನ

ಈತನ ಜೀವನ ವಿವರ ತಿಳಿದಿಲ್ಲ ಕಾಲ ೧೧೬೦ ಅಂಕಿತ ಚೆನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನಲಿಂಗ. ೧0೩ ವಚನಗಳು ದೊರೆತಿವೆ. ತತ್ವಭೋದೆ ಪ್ರಧಾನವಾಗಿದೆ. ಶರಣಸ್ತುತಿ, ಭಕ್ತನ ಲಕ್ಷಣ, ಲಿಂಗಾಂಗ ಸಾಮರಸ್ಯದ ಸ್ವರೂಪ, ವೇದ ಆಗಮಶಾಸ್ತ್ರ ಪುರಾಣಗಳ ನಿರಾಕರಣೆ ಇತ್ಯಾದಿಗಳ ವಿವರ ಬಂದಿದೆ. ಕೆಲವು ವಚನಗಳು ದೀರ್ಘವಾಗಿದ್ದು, ಗದ್ಯದ ಗುಣವನ್ನು ಹೊಂದಿವೆ.

ಬಸವಣ್ಣ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಯ್ಯ, ಪ್ರಭು – ಇವರನ್ನು ಪೂಜಿಸಿ ಧನ್ಯನಾದೆ ಎನ್ನುವನು. ಏಕೊತ್ತರ ಶತಸ್ಥಲದ ಉಲ್ಲೇಖ ಮಾಡಿರುವನು. ದೀಕ್ಷೆಯ ಬಗೆಗೆ ಹಲವು ವಚನಗಳಲ್ಲಿ ಹೇಳಿರುವನು. ದ್ವೈತಾದ್ವೈಗಳನ್ನು ನಿನ್ನಲ್ಲಿಯೇ ನೀನು ತಿಳಿಯುವ ಪ್ರಯತ್ನ ಮಾಡು ಎನ್ನುವನು . ಕುಂದಣಕ್ಕೆ ಗಂಧ ಕೂಡಿದಂತೆ ನುಡಿನಡೆ ಏಕವಾಗಲು ನೀನೇ ಪರಮಾತ್ಮನಾಗುವೆ ಎನ್ನುವನು. ವೇದ ಶಾಸ್ತ್ರ ಪುರಾಣ ಆಗಮಗಳಿಂದ ಹಾದಿಯನ್ನು ಕಂಡುಕೊಳ್ಳುತ್ತೇನೆಂದರೆ, ಅವು ಸಂದೇಹದ ಸಂದು ಎನ್ನುವನು. ಚತುರಾಚಾರ್ಯರ ಉಲ್ಲೇಖವನ್ನು ವಚನವೊಂದರಲ್ಲಿ ಮಾಡಿರುವನು. ಚಾತುರ್ವರ್ಣ್ಯಗಳ ಉಗಮದ ಪ್ರಸ್ತಾಪವನ್ನು ಒಂದು ವಚನದಲ್ಲಿ ಮಾಡಿರುವನು.