Categories
ವಚನಗಳು / Vachanagalu

ಪ್ರಸಾದಿ ಭೋಗಣ್ಣನ ವಚನಗಳು

ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ?
ಪಂಕಕ್ಕೆ ಜಲ ಒಳಗೋ, ಹೊರಗೋ ?
ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ
ಅರಿವ ಠಾವಿನ್ನಾವುದು ?
ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ
ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ?
ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ
ಅದು ಲಿಂಗಾಂಗಸಂಯೋಗಸಂಬಂಧ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./1
ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ
ನಿಜಸ್ವರೂಪ ನಿಃಕಲವಸ್ತು ಜಗಲೀಲಾಭಾವಿಯಾಗಿ
ತ್ರಿಗುಣ್ಮಾತಕವಾದ ಭೇದಪೂರ್ವಕ ಮುಂತಾದ
ಷಡ್ದರ್ದಶನದ ವಿವರಂಗಳಿಗೆ
ಶೈವ ವೈಷ್ಣವ ಉಭಯಂಗಳಲ್ಲಿ ಶೈವವಾರು ವೈಷ್ಣವವಾರು.
ಇಂತೀ ಉಭಯದಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು.
ಉಭಯನಾಮ ಕುಲಲಯವಹಲ್ಲಿ ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ.
ಇದು ಅಕ್ಷಯ ಲಕ್ಷ ನಿರೀಕ್ಷಣೆಯಿಂದತ್ತಣ ಮಾತು.
ಅಂದಿನಿಂದ ಇತ್ತಣ ವಿವರ: ನಾಲ್ಕು ಲಕ್ಷವು ಮೂವತ್ತೈರಡನೆಯ ಸಹಸ್ರವತ್ಸರಂಗಳಿಂದ
ಈಚೆಯಾದ ಸರ್ವಪ್ರಮಾಣಿಗೆ ಏಕಾದಶಗುಣ.
ಅವತಾರಕ್ಕೆ ಸಮಾಧಿ, ದಶ ಅವತಾರಕ್ಕೆ ದಹನ.
ಇಂತೀ ಭೇದಂಗಳು ಆವರ್ಚಿಸಿ ನಡೆದು
ಕಲಿಯುಗದ ಕಡೆಯಲ್ಲಿ ಅನಾದಿಪರಮೇಶ್ವರನ
ಅಪರಾವತಾರ ಭೇದರೂಪು ಬಸವಣ್ಣನಾಗಿ
ಅಭೇದ್ಯರೂಪು ಚೆನ್ನಬಸವಣ್ಣನಾಗಿ ವೀರಶೈವಸಿದ್ಧಾಂತವೆಂಬುದು ಲಕ್ಷಿಸಿ
ಷಡ್ದರ್ಶನಕ್ಕೆ ಸ್ಥಾಪನಾಚಾರ್ಯನಾಗಿ
ವಿಶ್ವಕ್ಕೆ ಚಕ್ಷುವಾಗಿ, ಆಚಾರಕ್ಕೆ ಅಂಗವಾಗಿ
ಶಿಕ್ಷೆ ದೀಕ್ಷೆ ಮೋಕ್ಷಕ್ಕೆ ಮುಮುಕ್ಷುವಾಗಿ
ಚತುರ್ಗುಣ ಆಚಾರಕ್ಕೆ ಅರಸಾಗಿ ಸರ್ವಗುಣಸಂಬಂಧಿ ನೀನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ, ನಿನ್ನ ಲೀಲಾಭಾವ./2
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ
ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು ?
ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ
ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ ?
ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ
ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ
ಚಿತ್ತದ ಒಲವರದಿಂದ ಅರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ./3
ಅಯಃಕಾಂತದ ಶಿಲೆ ಲೋಹಕ್ಕೆ ಬಾಯ ಕಂಡಲ್ಲಿ ವೇದ ಸಿದ್ಧಾಂತಿ.
ಲೋಹ ಸುವರ್ಣವ ಏಗೆಯ್ದುಯೆತ್ತುವಲ್ಲಿ
ಆ ಭೇದವ ಬಲ್ಲಡೆ ಶಾಸ್ತ್ರಸಂಪದನು.
ಮರಾಳ ಕ್ಷೀರವನೀಂಟಿ ಜಲವನುಳುಹಿದ ಭೇದವ ಬಲ್ಲಡೆ ಪುರಾಣಸಂಬಂಧಿ.
ಗೋವು ಅಜ ಮುಂತಾದವು ತೃಣ ಪರ್ಣ ಗ್ರಾಸವ ಕೊಂಡು
ಪುನರಪಿಯಾಗಿ ಸವಿದಿಳಿವ ಭೇದವ ಬಲ್ಲಡೆ ಆಗಮಯುಕ್ತ.
ಇಂತೀ ಭೇದಂಗಳಲ್ಲಿ ಭೇದಿಸಿ, ಅಭೇದ್ಯವಪ್ಪ ಲಿಂಗವ ಸಾಧಿಸಿ
ಕ್ರೀಗೆ ಮಾರ್ಗ, ಅರಿವಿಂಗೆ ಆಚರಣೆ
ಉತ್ತರ ಪೂರ್ವವ ನಿಶ್ಚೈಸಿ, ನಿಜನಿಶ್ಚಯದಲ್ಲಿ ನಿಂದ ಶರಣಂಗೆ
ಮುಕ್ತ ನಿರ್ಮುಕ್ತನೆಂಬುದಿಲ್ಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ತಾನಾಗಿ./4
ಅರ್ತಿಗೆ ತಿರಿಗಿ ಮೊತ್ತದ ಮಾತನಾಡಿ
ಕತ್ತೆ ಹೊರೆಯ ಹೊತ್ತು ಹೆಂಗತ್ತೆಯ ಕಂಡು
ಬಾಯಬಿಟ್ಟು ಒರಲುವಂತೆ ಒರಲುತ್ತಿರ್ಪವರ ಕಂಡು
ತ್ರಿವಿಧದ ಗೊತ್ತಿನ ಮಾರಿಯ ತುತ್ತೆಂದೆ
ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗದಲ್ಲಿ. /5
ಅವಿದ್ಯನಾಗಿ, ಅವಗುಣನಿರತನಾಗಿ
ಅವಿವೇಕ ಅನಾಮಯನಾಗಿ
ಅಬದ್ಧ ಅಪ್ರಮಾಣಂಗೆ ಗುರು ಲಿಂಗ ಜಂಗಮವೆಂಬ
ಇದಿರೆಡೆಯಿಲ್ಲ, ಅದು ಪರಿಪೂರ್ಣಭಾವ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ನಿಜವೆ ತಾನಾದ ನಿತ್ಯ./6
ಅಷ್ಟವಿಧಾರ್ಚನೆ ಷೋಡಶ ಉಪಚರಿಯ ಷಟ್ಕರ್ಮ
ತ್ರಿವಿಧವರ್ಮ ಚತುರ್ವಿಧಫಲಭೋಗ ಭೋಜ್ಯ
ಪೂಜಾ ವ್ಯವಧಾನ ಕರ್ಮಂಗಳಲ್ಲಿ ಸೋದಿಸಿ
ವರ್ಮವನರಿಯಬೇಕು.
ವರ್ಮವನರಿತಲ್ಲಿ ಸರ್ವಜೀವಕ್ಕೆ ಶಾಂತಿ, ಆಚಾರ್ಯನಂಗಕ್ಕೆ ನಿಹಿತ.
ಸರ್ವಚೇತನಾದಿಗಳಲ್ಲಿ ಘಾತಕತನವಿಲ್ಲದೆ
ಮನ ವಚನ ಕಾಯ ತ್ರಿಕರಣಶುದ್ಧವಾಗಿ
ಈಶ್ವರಪೂಜೆಯ ಮಾಡುವಾತನ ಆಶ್ರಯದ ಶೇಷಪ್ರಸಾದವ ಕೊಂಬ
ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ
ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ./7
ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ
ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು
ರವಿಶಶಿ ಉಭಯ ಸಮಾನಂಗಳ ಕಂಡು
ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ
ಅಷ್ಟಗಣ ನೇಮಂಗಳ ದೃಷ್ಟವ ಕಂಡು
ರವಿ ಶಶಿ ಪವನ ಪಾವಕ ಆತ್ಮ ಮುಂತಾದ
ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು
ಮಂತ್ರಜ್ಞಾನದಲ್ಲಿ ಸರ್ವೆಂದ್ರಿಯವ ಕಳೆದು ವೇದನೆ ವೇಧಿಸಿ
ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷ್ಠೆ
ಆತ್ಮಂಗೆ ಸ್ವಯಂಭುವೆಂಬುದು
ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋÙರಿ
ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ
ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ.
ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಆಚಾರ್ಯನಾದ ಲೀಲಾಭಾವ. /8
ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ.
ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ.
ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ
ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ
ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು
ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು
ಇಂತೀ ಐವತ್ತೆರಡು ಗುರುಲಫು ಗುಣನೇಮ ಬಿಂದು ವಿಸರ್ಗ ಶಾಖೆ
ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ.
ಇಂತೀ ಗುರುಸ್ಥಲದ ವಿವರ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./9
ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ ?
ಹೇಮ ತನ್ಮಯವಾದಲ್ಲಿ ಪರುಷರಸವುಂಟೆ ?
ನಾನು ನೀನಾದಲ್ಲಿ ಕರ್ತೃ ಭೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ?/10
ಇಂತೀ ವಾಚಾಶ್ರುತಿಗಳಲ್ಲಿ
ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ
ಪಂಚಾಶತ್ಕೋಟಿ ವಿಸ್ತೀರ್ಣದೊಳಗಾದ
ಕವಿ ಗಮಕಿ ವಾದಿ ವಾಗ್ಮಿಗಳು ಮುಂತಾದ
ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು
ಷಟ್ಸ್ಥಲಬ್ರಹ್ಮ ಪಂಚವಿಂಶತಿತತ್ವ ಶತ ಏಕಸ್ಥಲ ಮುಂತಾದ
ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ.
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ
ಅನಾದಿವಸ್ತುವಿನ ಬೀಜರೇಣು.
ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ
ಚೆನ್ನಬಸವಣ್ಣ ಪ್ರಭು ತ್ರೈಮೂರ್ತಿಗಳು.
ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ
ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ
ಸ್ಥೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ
ರೂಪು, ರುಚಿ, ಗಂಧ ಸೌಖ್ಯಸಂಬಂಧವಾದಂತೆ
ಮತ್ರ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು
ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ. /11
ಇಂತೀ ಸ್ಥಲ ಕುಳಂಗಳಲ್ಲಿ ವೇಧಿಸಿ ಭೇದಿಸಿಹೆನೆಂದಡೆ
ನಾಲ್ಕು ವೇದ ಹದಿನಾರು ಶಾಸ್ತ್ರ
ಇಪ್ಪತ್ತೆಂಟು ದಿವ್ಯಪುರಾಣಂಗಳೊಳಗಾದ
ಶಬ್ದಶಾಸ್ತ್ರ, ಸಂಸ್ಕೃತ, ಅಕ್ಷರಜ್ಞತ್ವ, ಭರತಶಿಲ್ಪ ಮುಂತಾದ
ಕ್ರಿಯಾಕಾರಕಂಗಳ ತಿಳಿದು ನೋಡಿದರೂ
ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ./12
ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬಲ್ಲಿ
ಇಚ್ಫಾಶಕ್ತಿಗೆ ಪುರುಷನಾರು ? ಕ್ರಿಯಾಶಕ್ತಿಗೆ ಪುರುಷನಾರು ?
ಜ್ಞಾನಶಕ್ತಿಗೆ ಪುರುಷನಾರು?
ಜ್ಞಾತೃ, ಜ್ಞಾನ, ಜ್ಞೇಯವೆಂಬಲ್ಲಿ ಶಕ್ತಿಪುರುಷತ್ವಕ್ಕೆ
ಸ್ಥೂಲ, ಸೂಕ್ಷ್ಮ, ಕಾರಣ ಇಂತೀ ತನುತ್ರಯದಲ್ಲಿ
ಕಾಬುದೊಂದು ಕಾಣಿಸಿಕೊಂಬುದೊಂದು.
ಉಭಯದ ಮನದಲ್ಲಿ ನಾನಾರೆಂಬುದ ಅರಿವುದದೇನು ?
ಮುಕುರವ ಹಿಡಿದು ನೋಡುವನಂತೆ
ಹಿಡಿವವನಾರು, ಮುಕುರವೇನು ? ಅಲ್ಲಿ ತೋರುವ ಬಿಂಬವೇನು ?
ಮುಕುರವೊಂದು, ನೋಡುವೆಡೆಯಲ್ಲಿ ಮೂರಾದ ಭೇದವನರಿತು
ಆ ಮುಕುರವೇ ಶಕ್ತಿಯೊ, ಬಿಂಬವೇ ಪುರುಷನೊ ?
ಈ ಉಭಯವ ಸಂದೇಹಕ್ಕಿಕ್ಕಿ ನೋಡುವಾಗ
ತ್ರಿವಿಧಶಕ್ತಿಯಲ್ಲಿ ಅಡಗಿತ್ತೆಂಬುದನರಿವುದಕ್ಕೆ ದೃಷ್ಟ: ತಿರುಳಿಲ್ಲದ ಬೀಜ ಬೆಳೆದುದುಂಟೆ ?
ಮೃತಘಟದ ಚಕ್ಷು ಲಕ್ಷಿಸಿ ಕಂಡುದುಂಟೆ ?
ಅಪ್ಪು ಬಟ್ಟೆಯಲ್ಲಿ ಹೋಹ ತೆಪ್ಪದ ಮೇ[ಗ]ಣವನಂತೆ
ಒತ್ತುವುದು ನಿಂದಲ್ಲಿ ಅಪ್ಪು ತನ್ನ ಇಚ್ಫೆಗೆ
ಆ ತೆಪ್ಪವ ಕೊಂಡು ಹೋಹ ತೆರದಂತೆ
ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬವು
ಜ್ಞಾತೃ, ಜ್ಞಾನ, ಜ್ಞೇಯಗಳೆಂಬವು
ಸ್ಥೂಲ, ಸೂಕ್ಷ್ಮ, ಕಾರಣ ತನುತ್ರಯಂಗಳೆಂಬವು
ಇಂತಿವೆಲ್ಲವು ಶಕ್ತಿಸಂಪುಟವಾಗಿ ದ್ವೈತಾದ್ವೈತಂಗಳಲ್ಲಿ
ಹೊರಳಿ ಮರಳುವವಾಗಿ, ವೀಣೆಯ ನಿಚ್ಚಣಿಗೆಯಂತೆ
ಸ್ಥಾನ ಸ್ವಸ್ಥಾನಂಗಳಲ್ಲಿ ನಿಂದು ಸಪ್ತಸ್ವರವ ಲಕ್ಷಿಸಿದಂತೆ
ಇಂತೀ ಲಕ್ಷ ಜೀವಾಳದಲ್ಲಿ ಅಡಗಿ ಆ ಜೀವಾಳ ನಾದಕ್ಕೆ ಅರಸಾಗಿ
ಆ ಭೇದದಂತೆ ಆತ್ಮತತ್ವ ನಿಶ್ಚಯಪದವಾಗಲಾಗಿ
ಅದು ಐಕ್ಯಸ್ಥಲ ನಾಮನಷ್ಟಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /13
ಇಷ್ಟಲಿಂಗವೆಂಬುದ ಕೊಟ್ಟು ತಾ ಸಂಸಾರದ
ಬುಟ್ಟಿಯೊಳಗನ್ನಕ್ಕ ಕರ್ಮಕಾಂಡ.
ಆತ್ಮಬೋಧೆಯ ವೇಧಿಸಬೇಕೆಂದು ವಾದಿಸಿ
ಸರ್ವಚೇತನದಲ್ಲಿ ಭ್ರಾಂತನಾಗಿ ತಿರುಗುತ್ತ ಇಪ್ಪವನ ನಿಹಿತದ ಮಾತು
ಭವಪಾಶದ ಗ್ರಾಸ.
ಇಂತೀ ನಿಹಿತವನರಿತು
ಅಷ್ಟವಿಧಾರ್ಚನೆಗೆ, ಮುಕ್ತಿ ನಿಜತತ್ವಕ್ಕೆ
ನಿರವಯ ದೃಷ್ಟಕ್ಕೆ ದೃಷ್ಟವಸ್ತುವನಿತ್ತು
ತಾ ನಿಶ್ಚಯದಲ್ಲಿ ನಿಜವಾಸಿಯಾಗಬಲ್ಲಡೆ
ಕರ್ತೃಭೃತ್ಯತ್ವವೆಂಬುದು ನಿಶ್ಚಯ ನೋಡಾ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದು./14
ಉಚಿತವ ಕಂಡು, ತತ್ಕಾಲವನರಿತು
ರಿತುಕಾಲಂಗಳಲ್ಲಿ ಭೇದಿಸಿ ವೇಧಿಸುವದು
ಮರ್ಕಟ ವಿಹಂಗ ಪಿಪೀಲಕ ಭೇದ.
ಕರ ಕಾಲು ಬಾಯಿಂದ ಕೊಲುವ ಜೀವದ ಹೊಲಬಿನಂತೆ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು
ಅನುಮಾನದಲ್ಲಿ ಅರಿತು ನಡೆವುದು ಲಕ್ಷಣಜ್ಞನ ಯುಕ್ತಿ.
ಆ ಯುಕ್ತಿಯಿಂದ ಭಕ್ತಿ ನೆಲೆಗೊಂಡು, ಆ ಭಕ್ತಿಯಿಂದ ಸತ್ಯ ನೆಲೆಗೊಂಡು
ಸತ್ಯದೊಡಲು ಲಿಂಗದಂಗವಾಗಿ ಇಪ್ಪಾತನೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ./15
ಉರಗನ ಸ್ವಪ್ನದಂತೆ, ಮಯೂರನ ಚಿತ್ತದಂತೆ
ಬರುಹಿಯ ಸಂಪದದಂತೆ, ಎರಡಳಿದ ನಿಜನಿಶ್ಚಯದ ಭೇದ.
ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗದ ಕೂಟ. /16
ಎನ್ನ ಹೃದಯಕಮಲವೆ ಬಸವಣ್ಣನಯ್ಯಾ.
ಎನ್ನ ಕಂಠವೆ ಚನ್ನಬಸವಣ್ಣನಯ್ಯಾ.
ಎನ್ನ ನಯನದ ದೃಕ್ಕೆ ಸಿದ್ಭರಾಮನಯ್ಯಾ.
ಎನ್ನ ಲಲಾಟವೆ ಮಡಿವಾಳಯ್ಯನಯ್ಯಾ.
ಎನ್ನ ಶಿರವೆ ಪ್ರಭುದೇವರಯ್ಯಾ.
ಇಂತೀ ಐವರ ಶ್ರೀಪಾದವನು
ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ. /17
ಏಕಮುಖದಲ್ಲಿ ನಿರವಯ ಜಪ.
ದ್ವಿಮುಖದಲ್ಲಿ ಶಕ್ತಿಸಂಪರ್ಕಯೋಗ.
ತ್ರಿಮುಖದಲ್ಲಿ ತ್ರಿವಿಧಾತ್ಮಭೇದ.
ಚತುರ್ಮುಖದಲ್ಲಿ ಚತುಷ್ಟಯ ಇಷ್ಟಾರ್ಥಮತ.
ಪಂಚಮಮುಖದಲ್ಲಿ ಪಂಚಭೂತಿಕ ಪಂಚಬ್ರಹ್ಮ ಮೂರ್ತಿಗಳಪ್ಪ
ಸಂಚಿತದ ಭೇದ.
ಇಂತೀ ಅಕ್ಷಮಾಲೆಯ ಲಕ್ಷಣಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /18
ಏಕವಸ್ತು ಉಭಯಭೇದವಾಗಿ
ತ್ರಿವಿಧಮಾರ್ಗವನಾಚರಿಸಿ
ಚತುರ್ಭಾಗವಾಗಿ ಪಂಚವಕ್ತ್ರವ ಅವಧರಿಸಿದಲ್ಲಿ
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಸ್ವರೂಪವ ತಾಳಿದಲ್ಲಿ
ಚಚರ್ೆಗೆ ಬಂದ ಎಕ್ಕ ಸೋಲವ ಬಿಟ್ಟು
ಮಿಕ್ಕಾದ ಷಡ್ದರ್ಶನವುಂಟೆಂದು ಹೆಕ್ಕಳ ಗೆಲೆಯದೆ
ಶಕ್ತಿಯ ಧರಿಸಿದ ಉಭಯರೂಪು, ಶಕ್ತಿನಿಶ್ಚಯವಾದಲ್ಲಿ
ನಿಜಸ್ವರೂಪು.
ಅದು ಬಚ್ಚಬಯಲು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಸ್ವಯಂಭುವಾದ ತೆರ. /19
ಐಕ್ಯಸ್ಥಲದ ಲೇಪಜ್ಞಾನ ವಿವರ :
ಅಪ್ಪು ಆವಾವ ಪಾಕಕ್ಕೂ ತಪ್ಪದೆ ಸಾರವ ಕೊಡುವಂತೆ
ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚುಕುಂದನರಿಯದಿಪ್ಪಂತೆ
ವಾಯು ಸುಗುಣ ದುರ್ಗುಣವೆನ್ನದೆ
ತನ್ನಯ ಸಹಜದಿಂದ ಸಂಚರಿಸುವಂತೆ
ಅಗ್ನಿಗೆ ಕಾಷ್ಠ ಸರಿಸ ಡೊಂಕೆನ್ನದೆ ಮಲಿನ ಅಮಲಿನವೆನ್ನದೆ
ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದಡೂ
ಭೇದಿಸಿ ವೇಧಿಸಿ ಸುಡುವುದಾಗಿ.
ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./20
ಐಕ್ಯಸ್ಥಲಲೇಪ ಭಾವಿಯ ಭಾವವೆಂತುಂಟೆಂದಡೆ
ಚಿನ್ನವರಗಿದಲ್ಲಿ ಬಣ್ಣವೊಡಗೂಡಿ ಹೆರೆಹಿಂಗದಂತೆ
ಕಡಿದೊರೆದಡೆ ಚಿನ್ನದಂಗಕ್ಕೆ ಹೊರೆಯಿಲ್ಲದೆ ರಂಜಿಸುವಂತೆ
ಐಕ್ಯನ ಮಹದಾಕಾಶದಲ್ಲಿ ಅವಕಾಶವಾಗಿ ಅವಗವಿಸಿದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./21
ಒಂದೆಂದಡೆ ಬೆಸ, ಎರಡೆಂದಡೆ ಸರಿ ಎಂಬ ಭೇದದಂತೆ
ದ್ವೈತ ಅದ್ವೈತಗಳ ವಿವರ : ಎಷ್ಟು ಲೆಖ್ಖದಲ್ಲಿ ಸಮಗಂಡು ಬಪ್ಪಲ್ಲಿ ದ್ವೈತ.
ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದ್ವೈತ.
ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /22
ಒಂದೊಂದವರೆಯಿಲ್ಲದ ಯುಗ ಚಂದ್ರಾದಿಗಳು ಜನಿಸದಲ್ಲಿ
ಬಿಂದು, ಲಘು, ಗುರು, ಉಭಯಂಗಳಿಲ್ಲದ ಮತ್ತೆ
ಜಗವ ಸಂಧಿಸಿ ಶರಣೆನಿಸಿಕೊಂಬ ದೇವರಾರಯ್ಯ ?
ಪ್ರಥಮದಲ್ಲಿ ಘನಕಲ್ಪಾಂತರಕ್ಕೆ ಎಯ್ದಿದ
ದ್ವಿತೀಯದಲ್ಲಿ ಶಂಭು ಕೂಡಿದ
ತೃತೀಯದಲ್ಲಿ ಪ್ರಮಾಣು ಅವಧಿಗೊಳಗಾದ
ಪಂಚವಿಂಶತಿತತ್ವದಿಂದತ್ತ ಅಭೇದ್ಯವಸ್ತು
ವೈದಿಕ ಮಾಯಾಭೇದವೆಂಬ ಸ್ವರೂಪವ ಕಂಡು
ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ
ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು.
ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮಪದವ ಕೊಟ್ಟು
ನೀ ಭಕ್ತರ ಹೃತ್ಕಮಲಮಧ್ಯದಲ್ಲಿ ನಿಜವಾಸಿಯಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ. /23
ಓಂ ಎಂಬ ಓಂಕಾರ ಪೃಥ್ವೀತತ್ವದ ನಾಮಬೀಜ.
ನ ಎಂಬ ನಕಾರ ಅಪ್ಪುತತ್ವದ ನಾಮಬೀಜ.
ಮ ಎಂಬ ಮಕಾರ ತೇಜತತ್ವದ ನಾಮಬೀಜ.
ಶಿ ಎಂಬ ಶಿಕಾರ ವಾಯುತತ್ವದ ನಾಮಬೀಜ.
ವಾ ಎಂಬ ವಾಕಾರ ಆಕಾಶತತ್ವದ ನಾಮಬೀಜ.
ಯ ಎಂಬ ಯಕಾರ ಆತ್ಮತತ್ವದ ನಾಮಬೀಜ.
ಇಂತೀ ಷಡಕ್ಷರದ ನಾಮಭೇದ.
ರೋಹ ಅವರೋಹವಾಗಿ, ಅವರೋಹ ರೋಹವಾಗಿ
ಪೂರ್ವ ಉತ್ತರಕ್ಕೆ ಪುಂಜಕ್ಕೆ ವಿರಳವಾದಂತೆ
ಉಭಯಚಕ್ಷು ಅಭಿಮುಖವಾಗಿ ಏಕಾಕ್ಷರದಲ್ಲಿ
ಗುಣಿತನಾಮದಿಂದ ಹಲವಕ್ಷರ ಹೊಲಬುದೋರುವಂತೆ
ಓಂಕಾರ ಬೀಜನಾಮದಲ್ಲಿ ದಶಾಕ್ಷರವಡಗಿ
ದಶಾಕ್ಷರದ ಅಕಾರಾಂತದಲ್ಲಿ ಷೋಡಶಾಕ್ಷರ ಭೇದ.
ಆ ಭೇದದಿಂದ ಐವತ್ತೆರಡು ಅಕ್ಷರನಾಮ ಬೀಜವಾಗಿ
ಷಡಕ್ಷರ ಘಟವಾಗಿ ಪಂಚಾಕ್ಷರಿ ಪ್ರಾಣವಾಗಿ
ಆ ಗುಣದಲ್ಲಿ ತೊಳಗಿ ಬೆಳಗುವ ಕಳೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಾಗಿ./24
ಓಂ ಎಂಬುದು ಬ್ರಹ್ಮಾಕ್ಷರ.
ನ ಎಂಬುದು ನಾರಾಯಣಬೀಜ.
ಮ ಎಂಬುದು ಮಹಾದೇವನ ಬೀಜಾಕ್ಷರ.
ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ.
ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ.
ಇಂತೀ ಕ್ರೀಮಾರ್ಗದ ನಿಜ
ಅರಿವಿನ ಆಚರಣೆ, ಉಭಯವು ಏಕವಾದಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ./25
ಕರ್ಪುರವ ಕರಂಡದಲ್ಲಿ ಹಾಕಿ ತೆಗೆದಡೆ ಗಂಧವಿಪ್ಪುದಲ್ಲದೆ
ಮತ್ತಾ ಕರ್ಪುರವ ಕಿಚ್ಚಿನಲ್ಲಿ ಹಾಕಿ
ಗಂಧದ ಲಕ್ಷಣವ ನೋಡಿಹೆನೆಂದಡೆ
ಅದು ಅಪ್ರಮಾಣು ನೋಡಾ.
ಇಂತೀ ಸ್ಥಲವನಾಚರಿಸುವಲ್ಲಿ ಕರಂಡ ಗಂಧಸ್ಥಲ ನಿಶ್ಚಯವಾದಲ್ಲಿ
ಉರಿ ಗಂಧ ಸಂಗ.
ಇಂತೀ ಜ್ಞಾತೃ ಜ್ಞೇಯ ಭೇದಕ್ರೀ ನಿರ್ವಾಹಕ್ಕೆ ಸ್ಥಲ.
ಆರೋಪ ಲಕ್ಷಣ ಐಕ್ಯಲೇಪ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /26
ಕಲ್ಲ ತೆಪ್ಪದಂತೆ ಆಗದೆ, ಮೃತ್ಪಿಂಡದಂತೆ ಜಲದಲ್ಲಿ ಇಳಿಯದೆ
ಅಜಡ ಜಡವ ತಡಿಗೆ ಸಾಗಿಸುವಂತೆ ಕುಂಭದಲ್ಲಿ ಇರಿಸದೆ
ಬೈಕೆಯ ಅಂಬುವಿಗೆ ಇಂಬುಗೊಡದೆ
ಕೊಂಡು ಹೋದಂತೆ.
ಇಂತೀ ಉಭಯಸ್ಥಲ ನಿರ್ವಾಹ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./27
ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ ?
ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ ?
ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ
ಆಶೆಯ ಪಾಶವ ಕೊಲ್ಲಬಲ್ಲುದೆ ?
ಮರೆಯ ಗ್ರಾಸವ ಕೊಂಬ ಮತ್ರ್ಯನಂತೆ
ಈಷಣತ್ರಯಕ್ಕೆ ಮಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ
ಈ ಯಾಚಕರುಗಳಿಗೆ ಏತರ ಬೋಧೆ ?
ಇದು ನಿಹಿತದ ಉಭಯಸ್ಥಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /28
ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ
ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ
ಷಡ್ದರ್ಶನ ಸಂಪದವಾಯಿತ್ತು.
ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ
ಅಸ್ತಿಭೇದ ಶಿವಾಧಿಕ್ಯ, ಉಭಯಚೇತನ ವಸ್ತುವಾಗಿ
ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ
ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ.
ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ
ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ.
ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ.
ಏಕಾಕ್ಷರದ ಲೇಖನವಳಿದ ಅಲೇಖ.
ಅಯಿವತ್ತೆರಡನೆಯ ಸರಹರಿದ ಸಂಬಂಧ.
ಇದು ಸ್ವಯ ಚರ ಪರದ ಸುಮುದ್ರೆ.
ಶ್ರುತಿಸ್ಮೃತಿತತ್ವದ ಶೋಧನೆ.
ಆ ಗುಣ ಪ್ರಸನ್ನವಪ್ಪ ಚನ್ನಬಸವಣ್ಣಪ್ರಿಯ
ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ. /29
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು
ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು
ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ
ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು
ಲಂಘಿಸುವ ಸಿಂಹದ ಅಂಗವ ಸೀಳಿ
ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ
ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ
ಸರ್ಪನ ಗಾಳಿ ತಾಗಿ ಗರುಡ ಸತ್ತು
ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ.
ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ.
ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ.
ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ.
ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ.
ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ.
ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು.
ಆ ಮಹದೊಳಗು ಸಯವಾದಲ್ಲಿ
ಸರ್ವಮಯವೆಂಬುದು ಇಹಪರ ನಾಸ್ತಿ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ. /30
ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ
ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ ?
ಮತ್ತರಪ್ಪ ದುರ್ವಾಚಕರ ಮಾತಿನಮಾಲೆ
ಸ್ವಯ ಸ್ವಾನುಭಾವಿಕರಲ್ಲಿ ಉಂಟೆ ?
ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ
ಸಾಧಕನ ಶರೀರಧರ್ಮ
ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ.
ಇಂತೀ ಅಭೇದ್ಯವಸ್ತುವನರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./31
ಗುರುವಿಂಗೆ ಗುರುವುಂಟು, ಉಭಯನಾಮವಾಗಿ.
ಲಿಂಗಕ್ಕೆ ಲಿಂಗವುಂಟು, ಕುರುಹೆಂಬ ಭೇದವುಂಟಾಗಿ.
ಆತ್ಮಂಗೆ ಅರಿವುಂಟು, ಮುಂದೆ ಒಂದು ಮರಣವುಂಟಾಗಿ.
ಇಂತೀ ಭೇದಂಗಳು ಬೇಕಾದ ಉಮಾಪತಿಯಾದಲ್ಲಿ ಉಭಯವಾಯಿತ್ತು.
ಶಕ್ತಿಸಮೇತವೆಂಬುದು ಕರ್ತೃಭೃತ್ಯ ಸಂಬಂಧ.
ಇಂತೀ ಆಚಾರ್ಯನಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ./32
ಗುರುವೆಂದು ಇದಿರಿಟ್ಟಲ್ಲಿ ಗುರುದ್ರೋಹ.
ಲಿಂಗವೆಂದು ಸಂದೇಹಿಸಿದಲ್ಲಿ ಲಿಂಗದ್ರೋಹ.
ಜಂಗಮವೆಂದು ಉಭಯದಲ್ಲಿಕಂಡಡೆ ಜಂಗಮದ್ರೋಹ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆಂದು
ಇದಿರೆಡೆಯಾಡಿದಡೆ ಮಹಾದ್ರೋಹ./33
ಗೃಹಸ್ಥಧರ್ಮದ ಗುರುವಿನ ದೀಕ್ಷಾಚಾರ್ಯನ ಭೇದ
ಪಿಂಡೋತ್ಪತ್ಯ ಜಾತಿ ಗೋತ್ರ ಛಾಂದಸ ಭೇದ
ಸಲಕ್ಷಣ ನೀತಿ ಭಕ್ತಿ ಸಂಪೂರ್ಣ ಕಳೆಯನರಿತು
ಕುಚಿತ್ತ ಕುಹಕ ಕ್ಷುದ್ರ ಪಿಸುಣತ್ವ ಅಸಿಘಾತಕ ಪಾರದ್ವಾರ
ಇಂತಿವು ಮುಂತಾದವೆಲ್ಲವ ಸಂತೈಸಿ ಸೋದಿಸಿ
ಹದಿನೆಂಟನೆಯ ದೋಷಂಗಳ ವಿಭಾಗಿಸಿ ತೋರಿ
ಪಾಪದ ಹೆಚ್ಚುಗೆಯ ಪುಣ್ಯದ ಸನ್ನದ್ಧವಂ ತೋರಿ
ಹದಿನೆಂಟು ಸೂತ್ರವಂ ಪ್ರಕರಣಮಂ ಮಾಡಿ
ಜಾನು ಜಂಘ ಕಟಿ ನಾಭಿ ಹೃದಯಮಧ್ಯ
ಕಂಠ ಕರ್ಣ ಜಿಹ್ವೆ ನಾಸಿಕ ನಯನ
ಕಪಾಲ ಕರ ಮುಂತಾಗಿ ಪೂರ್ವಾಶ್ರಯಂಗಳಂ ಬಿಡಿಸಿ
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ
ಸ್ಥೂಲದ ವ್ಯವಹರಣೆ ಸೂಕ್ಷ್ಮದ ಪ್ರಕೃತಿ
ಕಾರಣದ ಪ್ರಮೇಯವಂ ಕಾಣಿಸಿಕೊಂಡು
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಸಂಶಯಮಂ ಪರಿಹರಿಸಿ
ಮನ ವಚನ ಕಾಯ ತ್ರಿಕರಣವಂ ಶುದ್ಧಾತ್ಮವಂ ಮಾಡಿ
ಈಶ್ವರಧ್ಯಾನದಿಂದ ಕರಕಮಲವಂ
ಕಪಾಲದ ಮೇಲೆ ಮೂರ್ತಿಗೊಳಿಸಿ
ಧ್ಯಾನಪ್ರಯೋಗಮಂ ಕಲ್ಪಿಸಿ ಜ್ಞಾನಪ್ರಯೋಗಮಂ ವೇಧಿಸಿ
ಮೇಲೆ ಪ್ರಾಣಲಿಂಗಪ್ರತಿಷ್ಠೆಯ ಮಾಡುವಲ್ಲಿ
ಅಂಗಕ್ಕೆ ಆಚಾರ ಆತ್ಮಂಗೆ ಅರಿವು ಈ ಗುಣ ಸಂಭವಿಸಿದ ಮೇಲೆ
ಹಸ್ತಮಸ್ತಕದ ಸಂಯೋಗವ
ಇಷ್ಟತನುವಿಂಗೆ ಇಷ್ಟಲಿಂಗವ ಸಂಬಂಧಿಸಬೇಕು.
ಇದು ಚತುರ್ವಿಧಮತದ ಆಚಾರ್ಯನಂಗ, ಗುರುಸ್ಥಲದ ಭಿತ್ತಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ
ಗುರುದೀಕ್ಷಾಸೂತ್ರ./34
ಘಟಾಕಾಶ ಮಠಾಕಾಶದಲ್ಲಿ ತೋರುವ ಬೆಳಗು
ಘಟಮಠವೆಂಬ ಉಭಯ ಇರುತಿರಲಿಕ್ಕೆ ರೂಪುಗೊಂಡಿತ್ತು.
ಬಯಲು ಘಟಮಠವೆಂಬ ಭೇದಂಗಳಳಿಯಲಾಗಿ
ಆಕಾಶತತ್ವದಲ್ಲಿ ನಿಶ್ಚಿಂತವನೆಯ್ದಿ ಮಹದಾಕಾಶದಲ್ಲಿ ಲೀಯವಾದುದು
ವ್ಯತಿರಿಕ್ತವೆಂಬುದು ನಾಮಶೂನ್ಯ, ಐಕ್ಯನ ಅರ್ಪಿತಸ್ಥಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./35
ಜಿಹ್ವೇಂದ್ರಿಯ ಗುಹ್ಯೇಂದ್ರಿಯದಲ್ಲಿ
ಜಿಹ್ವೇಂದ್ರಿಯ ಆತ್ಮಮನೋಹರಲಿಂಗಕ್ಕೆ
ಗುಹ್ಯೇಂದ್ರಿಯ ಚಲನೆ
ಉಚಿತದಲ್ಲಿ ಅರ್ಪಿತವ ಮುಟ್ಟುವ ಭೇದವಾವುದು ?
ಇಂತೀ ಜಿಹ್ವೆ, ಗುಹ್ಯದಲ್ಲಿ ನಿರತನಾದವಂಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ನಿರತನು./36
ಜೀವಾತ್ಮನಳಿದು ಪರಮಾತ್ಮನಾಗಬೇಕೆಂಬಲ್ಲಿ
ಆ ಪರಮಾತ್ಮನ ಪರವಶದಲ್ಲಿ ಬೆರೆಸಬೇಕೆಂಬುದು ಅದಾವಾತ್ಮ ?
ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯಂಗಳಲ್ಲಿ
ಕೀಳ ಬಿಟ್ಟು ಮೇಲ ಬೆರಸಬೇಕೆಂಬುದು ಅದಾವಾತ್ಮ ?
ಹಿಂದೆ ಮಾಡಿದ ಕರ್ಮವ ಇಂದರಿದು
ಮುಂದಣ ಮುಕ್ತಿ ಎಂಬುದು ಅದಾವಾತ್ಮ ?
ತಿತ್ತಿಯಲ್ಲಿ ಹೊಕ್ಕ ವಾಯು ಒತ್ತಿದಡೆ ಹೋಗಿ
ಎತ್ತಿದಡೆ ತುಂಬಿ ಮತ್ತೆ ಇರಿಸಿದಡೆ ಸತ್ತಹಾಗೆಯಿಪ್ಪುದು ಅದಾವಾತ್ಮ ?
ಮೃತ ಘಟ, ಚೇತನ ಘಟಂಗಳಲ್ಲಿ ಹೊರಳಿ ಮರಳುವುದು ಅದಾವಾತ್ಮ ?
ಇಂತೀ ಗುಣದ ವಾಯುಧಾರಣದಿಂದ ಅಷ್ಟಾಂಗಯೋಗ ಕರ್ಮಂಗಳ
ಮಾಡುವ ಯೋಗಿಗಳೆಲ್ಲರೂ ಮುಕ್ತರಪ್ಪರೆ ?
ಭೂನಾಗ ಭೂಮಿಯೊಳಗಿದ್ದು ಉಸುರಿಂಗೆ ಉಬ್ಬಸವಿಲ್ಲದಂತೆ
ಜಲಚರ ಜಲದಲ್ಲಿದ್ದು ಆ ಜಲವ ನಾಸಿಕ ಬಾಯಿಗೆ ಹೊಗಲೀಸದಂತೆ
ನೇತ್ರ ಶ್ರೋತ್ರಂಗಳಲ್ಲಿ ಜಲವೆ ಮನೆಯಾಗಿ ಇಪ್ಪ ತೆರ.
ಆವಾವ ಜಾತಿಗೂ ಆ ವಿಷಯಗೋತ್ರ ಲಕ್ಷಣಭೇದ.
ಸಾಧಕ ಸಾಧನೆಗಳಿಂದ ಅಸಾಧ್ಯವ ಸಾಧಿಸಬಾರದು.
ಅಸಾಧ್ಯ ವೇದ್ಯವಾದವ, ಕರ್ಮಕಾಂಡಿಯಲ್ಲ
ತ್ರಿವಿಧಮಲಕ್ಕೆ ಸಲ್ಲ, ತಥ್ಯಮಿಥ್ಯವಿಲ್ಲ.
ಹೆಚ್ಚು ಕುಂದೆಂಬ ಶರೀರಕ್ಕೆ ಚಿತ್ತದ ಭಾರದವನಲ್ಲ.
ಸದ್ಭಕ್ತರ ಸದಮಲಯುಕ್ತರ ಸರ್ವವಿರಕ್ತರ
ಷಟ್ಸ್ಥಲಸಂಪನ್ನರ ಸರ್ವಾಂಗಲಿಂಗಿಗಳ
ಅಂಗದಲ್ಲಿ ನಿಜ ಹಿಂಗದಿಪ್ಪ ಆತ ನಿರಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು. /37
ತತ್ವಂಗಳಿಂದ ಗೊತ್ತ ನೋಡಿಹೆನೆಂದಡೆ
ಮರ್ಕಟ ದರ್ಪಣದಂತೆ, ತಾನಾಡಿದಂತಲ್ಲದೆ
ಬೇರೊಂದು ಗುಣವಿಲ್ಲ.
ಗಿರಿಯ ಗಹ್ವರದಲ್ಲಿ ಕರೆದಡೆ ಕರೆದಂತೆ
ವಿಶ್ವಾಸವೆಂತ ಅಂತೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ಹಾಂಗಿಪ್ಪನು./38
ತತ್ವಸೂತ್ರ ಶಕ್ತಿಸಂಬಂಧವಾಗಿಹುದು.
ಜ್ಞಾನಸೂತ್ರ ಬಿಂದುಸಂಬಂಧವಾಗಿಹುದು.
ಕಳಾಸೂತ್ರ ದಿವ್ಯತೇಜಃಪ್ರಕಾಶ ಸಂಬಂಧವಾಗಿಹುದು.
ವರ್ತುಳ ಗೋಮುಖ ಗೋಳಕಾಕಾರದಲ್ಲಿ ಲೀಯಲ್ಪಟ್ಟುದು ಲಿಂಗಭೇದ.
ಆಹ್ವಾನದಿಂದ ಆರೋಪಿಸಿ ಸ್ವಯವಾದುದು
ಆ ಪರಮಾನಂದದಲ್ಲಿ ಪರವಶನಾಗದೆ ನಿಂದ ಅರಿವು ತಾನೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು./39
ತನ್ನ ತಾನರಿತೆನೆಂಬಲ್ಲಿ ತಾನಾರು ? ಅರಿತುದೇನಯ್ಯಾ ?
ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ
ಆ ಮರೆದ ಅರಿವಿಂಗೆ ಕುರುಹುಂಟೆ ?
ಇಂತೀ ಉಭಯದಲ್ಲಿ ತಿಳಿದು ಮತ್ತೆ
ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ ?
ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭಿತಿಯಾದಂತೆ
ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ ?
ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯಭಿನ್ನವಿಲ್ಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು. /40
ತರುವಿನ ಕಿಚ್ಚಿನಂತೆ, ಅರಗಿನ ಉರಿಯ ಯೋಗದಂತೆ
ಮಾಣಿಕ್ಯದ ಮೈಸಿರಿಯಂತೆ
ಅಪ್ಪು ಹೆಪ್ಪಳಿಯದೆ ಮೌಕ್ತಿಕವಾದಂತೆ
ಕರ್ಪುರದ ಘಟ್ಟದಲ್ಲಿ ಕಿಚ್ಚು ಹುಟ್ಟುತಲೆ ದರ್ಪ ಗೆಡುವಂತೆ
ಅರಿವು ತಲೆದೋರಿದಲ್ಲಿ ಇಂದ್ರಿಯ ನಷ್ಟವಪ್ಪುದು
ಸ್ವಾನುಭಾವಾತ್ಮಕನ ಸನ್ನದ್ಧ.
ಇಂತೀ ಉಭಯಸ್ಥಲದ ಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /41
ತ್ರಿವಿಧಲಿಂಗಕ್ಕೆ ಸೂತ್ರಭೇದ.
ಸ್ಥಾವರಲಿಂಗ ಬಾಣಲಿಂಗ ಇಷ್ಟಲಿಂಗಕ್ಕೆ,
ಪಂಚಸೂತ್ರದ ತ್ರಿವಿಧಲಿಂಗಕ್ಕೆ ಲಕ್ಷಣಭೇದ.
ಚಕ್ರದಂಡಕ್ಕೆ ಖಂಡಿಕಾದಂಡಕ್ಕೆ ಶಕ್ತಿಪೀಠ ಗೋಮುಖಕ್ಕೆ
ಪಂಚಾಂಗುಲದಲ್ಲಿ ಪ್ರಥಮಾಂಗುಲದ ರೇಖೆ ಮಧ್ಯದಲ್ಲಿ ಹೇಮ
ಪ್ರಥಮ ಅಂಗುಲ ಗತಿ ನಾಲ್ಕರಲ್ಲಿ ಏಕಾದಶ ಪ್ರಕಾರ ಪ್ರಯೋಗದಲ್ಲಿ
ಗುಣಿತದ ಸೂತ್ರ ಲೆಕ್ಕ ಪ್ರಯೋಗಿಸಿರೆ ಚಕ್ರದಂಡಭೇದ.
ಆ ಅರೆಪ್ರಯೋಗ ಸೂತ್ರ ಖಂಡಿಕಾದಂಡ.
ಆ ಉಭಯಭೇದ ಸೂತ್ರಸಂಬಂಧ ಗೋಮುಖ
ಸೂತ್ರಾವಟ್ಟ ಪರಿವರ್ತನ ಪ್ರಯೋಗಸಂಬಂಧ.
ವಿಸ್ತೀರ್ಣಕ್ಕೆ ದಿಗ್ವಳಯಕ್ಕೆ ಸರ[ಳ]ರೇಖೆ
ಶುದ್ಧಪೀಠಿಕಾವಳಯಕ್ಕೆ ಮೇಲೆ ಲಿಂಗಪ್ರಯೋಗ ಚಕ್ರ.
ಖಂಡಿಕಾಶಕ್ತಿಪೀಠಕ್ಕೆ ಲಿಂಗಪ್ರಮಾಣ ಲಕ್ಷಣಭೇದ.
ಕುಬ್ಜ ದೀರ್ಘ ಹರಿವರಿಯಿಲ್ಲದೆ ಪ್ರಮಾಣ ಪಂಚಸೂತ್ರವಾಗಿ
ರವಿ ಶಶಿ ಪವನ ಪಾವಕ ಪವಿತ್ರಯೋಗಿ ರೇಖೆ
ಮುಂತಾದ ಲಕ್ಷಣಯುಕ್ತಿಯಲ್ಲಿ ಪ್ರತಿಷ್ಠೆ ಶೈವಲಿಂಗಭೇದ.
ಆ ಪ್ರಮಾಣುವಿನಲ್ಲಿ ಸ್ಥೂಲಕ್ಕೆ ಸ್ಥೂಲ ಸೂಕ್ಷ್ಮಕ್ಕೆ ಸೂಕ್ಷ್ಮ.
ಈ ಸೂತ್ರದಲ್ಲಿ ಬಾಣಲಿಂಗ ಇಷ್ಟಲಿಂಗದ ಲಕ್ಷಣಯುಕ್ತಿ.
ಇಂತೀ ಭೇದ ಉತ್ತಮ ಕನಿಷ್ಠ ಮಧ್ಯಮವೆಂದು
ಸಂಕಲ್ಪಕ್ಕೊಳಗಹ ವೇದಾಂತ ಪ್ರಥಮಪ್ರತಿಷ್ಠೆ
ಆಚಾರ್ಯನ ಕರ್ಮಕ್ರೀ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ
ಆಚಾರ್ಯನಂಗ./42
ತ್ರಿವಿಧವ ಮಲವೆಂದರಿತು
ತನ್ನ ಸುಖಕ್ಕೋಸ್ಕರವಾಗಿ ವಸ್ತುವಿನಿಂದ
ನಿರ್ಮಲವಾಯಿತ್ತೆಂದು ಮುಟ್ಟಬಹುದೆ ?
ಲಿಂಗಭೋಗೋಪಭೋಗಂಗಳೆಂದು ಬಿಟ್ಟ
ನಿರ್ಮಾಲ್ಯವನರ್ಪಿಸಬಹುದೆ ?
ಇಂತಿವನರಿದು ಅರ್ಪಿಸುವಲ್ಲಿ ಸಲ್ಲದೆಂಬುದ ತಾನರಿತು
ಮತ್ತೆ ಸಲುವುದೆಂಬಲ್ಲಿ ಅನರ್ಪಿತ ಅರ್ಪಿತವುಂಟೆ ?
ಇಂತಿವ ದೃಷ್ಟದಿಂದ ಲಕ್ಷಿತನಾಗಿ ಮುಟ್ಟುವ ತೆರನ
ನೀವೆ ಬಲ್ಲಿರಿ ನಾವರಿಯೆವು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ಬಲ್ಲ./43
ದೃಕ್ಕು ಗುರುವಿನ ಭಾವ, ದೃಶ್ಯ ಶಿಷ್ಯನ ಯುಕ್ತಿ.
ಆತ್ಮ ಘಟದಂತೆ, ಕರ್ತೃಭೃತ್ಯಭಾವ.
ಇಂತೀ ಉಭಯ ಏಕವಾದಲ್ಲಿ ನಿರ್ವಿಜ ನಿರಿಯಾಣ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಉಭಯವಾದ ಭೇದ. /44
ದೊರಕುವನ್ನಕ್ಕರ ನಿಸ್ಪೃಹ.
ದೊರಕಿದ ಮತ್ತೆ ಸಂಸಾರಿಯೆ ?
ಇಂತೀ ಉಭಯವನರಿಯದೆ ಪೂಜಿಸಿಕೊಂಬ
ಹಿರಿಯರ ನಾನರಿದೆ, ತ್ರಿವಿಧವೆಂಬ ಮಾರಿಯ ಮುಂದೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಅರಿದಹನೆಂದು./45
ಧರೆ ಜಲ ಅನಲ ಅನಿಲ ಇವು ಮುಂತಾದುವಕ್ಕೆ
ಅಳಿವುದಕ್ಕೆ ಉಳಿವುದಕ್ಕೆ ಆತ್ಮಭೇದವಾವುದು ?
ಶ್ರುತಿ ಮುಂತಾದ ತರ್ಕಂಗಳಿಂದ ಹೊತ್ತು ಹೋರಿಹೆನೆಂದಡೆ
ರಥದ ಕೀಲಿನಂತೆ ಮಾತಿಗೆ ಮಾತುಂಟು.
ಪೃಥ್ವಿಯ ಮೇಲಣ ನದಿ ತಟಾಕ ಅಪ್ಪುಮಯವೆಲ್ಲವು
ಸಿಂಧುವಿನ ತಪ್ಪಲಿಗೆ ಎಯ್ದುವಂತೆ ಇದು ವಸ್ತುಮಯದ ಹಾಹೆ.
ಈ ಗುಣ ಏಕವಸ್ತುವಿನ ನಿಜ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ
ಎಂಬ ಮುಂಡಿಗೆ. /46
ಧ್ಯಾನದಿಂದ ಮನದ ಕೊನೆಯಲ್ಲಿ ವಸ್ತುವ ಕಟ್ಟಿತಂದು
ಇಷ್ಟಲಿಂಗದ ಗೊತ್ತಿನಲ್ಲಿ ಬೈಚಿಟ್ಟಿರಬೇಕೆಂಬುದು ಇದಾರ ದೃಷ್ಟವಯ್ಯಾ ?
ಆ ದೃಷ್ಟಕ್ಕೆ ಆ ಮೂರ್ತಿ ಒಂದೆಂಬುದನರಿಯದೆ
ನೆನೆವುದು ನೆನೆಹಿಸಿಕೊಂಬುದು ಉಭಯವಾದಲ್ಲಿ ಸಂದೇಹದ ಸಂದು.
ಆ ಸಂದನಳಿದಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ./47
ನ ಎಂಬಕ್ಷರದ ಭೇದ ಜನನ ನಾಸ್ತಿಯಾದ ವಿವರ.
ಮ ಎಂಬಕ್ಷರದ ಭೇದ ಮರಣ ನಾಸ್ತಿಯಾದ ವಿವರ.
ಶಿ ಎಂಬಕ್ಷರದ ಭೇದ ಸ್ವೀಕರಣೆ ನಾಸ್ತಿಯಾದ ವಿವರ.
ವ ಎಂಬಕ್ಷರದ ಭೇದ ವಕಾರ ನಾಸ್ತಿಯಾಗಿ ಸಾಕಾರವಳಿದ ಭೇದ.
ಯ ಎಂಬಕ್ಷರದ ಭೇದ ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ
ಉತ್ಪತ್ಯ ಸ್ಥಿತಿ ಲಯವೆಂಬ ತ್ರಿವಿಧವ ಮುಟ್ಟದೆ
ಅದು ನಿಶ್ಚಯವಾದಲ್ಲಿ ಪಂಚಾಕ್ಷರಿಯ ಭೇದ.
ಇಂತೀ ಭೇದಂಗಳಲ್ಲಿ ಜಪಧ್ಯಾನವ ಧ್ಯಾನಿಸಿ
ಇಷ್ಟ ಕಾಮ್ಯ ಮೋಕ್ಷಂಗಳೆಂಬ ಮೂರಂಗುಲವನರಿವುದು.
ಸದೃಷ್ಟ ತನ್ನಷ್ಟವೆಂಬ ಉಭಯದ ಅಂಗುಲವ ಕಂಡು
ಚತುರ್ವಿಧಫಲಪದಂಗಳಲ್ಲಿ ಭಾವಿಸಿ ಕಲ್ಪಿಸದಿಪ್ಪುದು ಜಪಧ್ಯಾನ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /48
ನಂದಿಯೆಂಬ ಗಣಿತದ ಲೆಖ್ಖದಲ್ಲಿ ಸರ್ವವೆಲ್ಲವೂ ಹೊಂದಿ
ಜಾಗರದಿಂದ ಸಂದು ಕವಲಾದಂತೆ
ಈ ಗುಣ ಲಿಂಗೋದ್ಭವದ ಭೇದ.
ಈ ಗುಣ ಜಗದ ಸಂದೇಹಿಗಳಿಗೆ ಹಾಕಿದ ಕಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಎಂಬ ಭಾಷೆ./49
ನಾನಾ ವರ್ಣಕ್ಕೆ ಶ್ವೇತಾಂಗ ಅಂಗವಾಗಿ
ಮಿಕ್ಕಾದ ವರ್ಣಂಗಳಿಗೆ ಇಂಬುಗೊಟ್ಟಂತೆ.
ಐಕ್ಯಸ್ಥಲ ಆದಿಯಾಗಿ, ಶರಣಸ್ಥಲ ಸಂಬಂಧಿಯಾಗಿ
ಪ್ರಾಣಲಿಂಗಿಸ್ಥಲ ಏಕವಾಗಿ, ಪ್ರಸಾದಿಸ್ಥಲ ಪರಿಪೂರ್ಣವಾಗಿ
ಮಾಹೇಶ್ವರಸ್ಥಲ ಮಾಯಾಮಲಂ ನಾಸ್ತಿಯಾಗಿ
ಭಕ್ತಿಸ್ಥಲ ಸರ್ವಗುಣಸಂಪನ್ನವಾಗಿ
ಅಳಿವು ಉಳಿವು ಗರ್ಭಾಂತರವನರಿತು
ನೋಡನೋಡ ಮಹದೊಡಲಿಕ್ಕೆ
ರಂಜನೆ ಬಿಸಿಲೊಳಗಡಗಿ, ಬಿಸಿಲು ರಂಜನೆಯ ನುಂಗಿ
ಉತ್ತರ ಪೂರ್ವವ ಹೊತ್ತಾಡಿ, ಪೂರ್ವ ಉತ್ತರದಲ್ಲಿ ನಿಶ್ಚಯವಾಗಿ
ಬೆಸುಗೆ ಕಲೆದೋರದೆ ಉಭಯಚಕ್ಷು ಏಕರೂಪವಾಗಿ
ಲಕ್ಷಿಸಿ ನಿರ್ಧರವೆಂದಲ್ಲಿ ಗುರಿಯನೆಚ್ಚ ಕರ ಅಹುದಲ್ಲಾ
ಎಂಬುದನರಿದಂತೆ ಕ್ರೀಯಲ್ಲಿ ಮಾರ್ಗ, ಜ್ಞಾನದಲ್ಲಿ ನಿಶ್ಚಯ
ಇಂತಿವನರಿದು ಅರುಹಿಸಿಕೊಂಬ ಭೇದ.
ಕರ್ತೃಭೃತ್ಯಸಂಬಂಧ ವಸ್ತು ಶಕ್ತಿಸಮೇತವಾದ ಭೇದ.
ಇಂತೀ ಸ್ಥಳಂಗಳು, ಭಕ್ತಿಗೆ ನಾಮರೂಪಾದ ಭೇದವನರಿತು
ಸ್ಥಲಂಗಳ ಹಂಚಿಹಾಕಿ, ಕುರುಡ ದಡಿವಿಡಿದು ನಡೆವಂತೆ ಷಟ್ಸ್ಥಲಭೇದ.
ಆ ಭೇದಲೋಲುಪ್ತನಾಗಿ ಸರ್ವಾಂಗಲಿಂಗಭರಿತನಾಗಿ
ಆಹ್ವಾನ ವಿಸರ್ಜನವಿಲ್ಲದೆ ನಾಮರೂಪೆಂಬ ಉಭಯವಳಿದು
ಕಲೆ ತಲೆದೋರದೆ ನಿಂದ ಉಳುಮೆ ಐಕ್ಯಸ್ಥಲಕೂಟ ನಿರ್ವಾಹ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./50
ನಾನಾ ವೇದ ಶಾಸ್ತ್ರ ಪುರಾಣ ಆಗಮ ಪಾಠಕನಾದಲ್ಲಿ
ಪರಿಭಾಷೆ ಪರತತ್ವದ ಮಾತನಾಡಿದಡೇನು ?
ಜಿಹ್ವೇಂದ್ರಿಯಕ್ಕೆ ಹರಿಯದೆ, ಗುಹ್ಯೇಂದ್ರಿಯಕ್ಕೆ ಸಿಕ್ಕದೆ
ಬಂದ ತೆರನನರಿದು ವಿಚಾರಿಸಿ ಮುಟ್ಟುವ ಕಟ್ಟನರಿತು
ಅರ್ಪಿತದ ಭೇದವನರಿದು
ವಸ್ತುವಿಪ್ಪೆಡೆಯಲ್ಲಿ ಅರ್ಪಿಸಬಲ್ಲಡೆ ವಿರಕ್ತನು, ಅಲ್ಲದಿರ್ದಡೆ ಪಂಡಿತನಪ್ಪನು.
ಇಂತೀ ಉಭಯದ ಸೊಲ್ಲನರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./51
ನಾನಾ ಶಬ್ದ ಸಂಸ್ಕೃತ ದೇಶೀಯ ವ್ಯಾಕರಣಸೂತ್ರ
ಮುಂತಾದ ಬಿಂದು ಮಾತೃಕ ತ್ರಿಲಿಂಗಭೇದ
ಉಪನಿಷತ್ತು ಸಂಹಿತೆ ಜಯಂತಿ ಚತು[ಥರ್ಿ]ಕ ನಿಮಿಷಕ
ಈ ಉಭಯ ಪ್ರತಿಷ್ಠೆ ವಾಚಕ ಮತಿ ವಾಯುಬಿಂದು ಕೂಡಿದ ಆಮ್ನೆ
ಇಂತಿವ ಲಕ್ಷಿಸಿ ನಿಂದಡೂ ತ್ರಿಗುಣಮಲತ್ರಯಕ್ಕೆ ಹೊರಗಾಗಬೇಕು.
ಹೊರಗಾದಡೂ ದುರ್ವಾಸನೆ ಆತ್ಮಭೇದಂಗಳಲ್ಲಿ
ನಿಜವಸ್ತುವ ಕುರಿತು ಸ್ವಸ್ಥನಾಗಿರಬೇಕು.
ಇಂತೀ ಗುಣಸ್ವಸ್ಥನಾಗಿ ನಿಂದಲ್ಲಿ
ಅಂಗಕ್ಕೆ ಆಚಾರ, ಮನಕ್ಕೆ ಅರಿವು.
ಅರಿವೆಂಬುದೊಂದು ಕುರುಹು ನಿಷ್ಪತ್ತಿಯಹನ್ನಕ್ಕ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾಎನುತ್ತಿರಬೇಕು. /52
ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ
ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ
ಸರ್ವಗುಣಸಂಪನ್ನನಾಗರ್ಿದಲ್ಲಿ
ಭೂತಹಿತವನರಿತು ಆತ್ಮಚಿತ್ತವ ಮರೆದು
ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ
ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ
ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ
ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ
ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗವ ಅವಧರಿಸಿದ ಅಂಗ/53
ನಾನಾ ಶ್ರುತಿತತ್ವಂಗಳಲ್ಲಿ
ಸಾಮ ಅಥರ್ವಣ ಯಜುಸ್ಸು ಋಗ್ವೇದ ಮೊದಲಾದ
ಶಂಕರಸಂಹಿತೆ ಉಪೇಕ್ಷೆ ಅಭಿಸಂಧಿ ಚಿಂತನೆ ಸೂತ್ರಾವರಣಭೇದ
ತಂತ್ರ ಖಂಡಿತ ಖಂಡನ ಉತ್ತರ ನಿರುತ್ತರ
ಮುಂತಾದ ಯುಕ್ತಿಯಲ್ಲಿ ನುಡಿದಡೂ
ಶಬ್ದಶಾಸ್ತ್ರಕ್ಕೆ ಹೆಚ್ಚುಗೆವಂತನಲ್ಲದೆ ವಿರಕ್ತಿಗೆ ಸಲ್ಲ.
ತತ್ವಂಗಳನೆಲ್ಲವನರಿವುದಕ್ಕೆ
ರುಜೆಗೆ ಚಿಕಿತ್ಸೆಯಂತೆ ಫಲ ಫಲಿಸುವಂತೆ
ವೇದನೆ ವೇಧಿಸಿ ವಿಭೇದವಿಲ್ಲದೆ ನಿಂದಂತೆ
ವಾಚಕಾವೃತ್ತಿಯ ಕ್ರೀ ಸರ್ವದುರ್ಗುಣವ ನೇತಿಗಳೆವ
ವಸ್ತುಕೂಟಯೇಕವಾದಲ್ಲಿ ನುಡಿ ನಡೆ ಸಿದ್ಧಾಂತ.
ಇದು ಸತ್ಪಥಮಾರ್ಗದ ಭಿತ್ತಿಯ ಹಾದಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ./54
ಪರುಷರಸ ಸೋಂಕಿದಲ್ಲಿ ಲೋಹಕ್ಕಿದಿರೆಡೆ ಉಂಟೆ ?
ಸಿಂಧುವೊಳಕೊಂಡ ದ್ರವ್ಯಕ್ಕೆ ಋತುಕಾಲ ವೈಶಾಖಮಾಸಂಗಳಲ್ಲಿ
ಜಲವಿಂಗಲು ಮತ್ತೆ ಕಂಡೆಹೆವೆನಲುಂಟೆ ?
ಸರ್ವಸಂಗಪರಿತ್ಯಾಗವ ಮಾಡಿದ ಯೋಗಿ
ತಂದೆ ತಾಯಿ ಸಹೋದರ ಬಂಧುಗಳೆಂದು
ಪಕ್ಷವ ಅಂಗೀಕರಿಸಿದಡೆ
ತ್ರಿಭಂಗಿಯ ಭುಂಜಿಸಿದವ
ಮರವೆಯ ಸುರಾಪಾನವ ಅಂಗೀಕರಿಸಿದವ, ಆತ ಲಿಂಗಾಂಗಿಯಲ್ಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಸಲ್ಲ./55
ಪವಳ ಪದ್ಮಾಕ್ಷಿ ಪುತ್ರಜೀವಿ ಮೌಕ್ತಿಕ ರುದ್ರಾಕ್ಷಿ
ಇವು ಮುಂತಾದ ಪವಣಿಗೆಯಲ್ಲಿ
ಸದ್ಯೋಜಾತಮುಖಕ್ಕೆ ಪವಳಮಾಲೆ
ವಾಮದೇವಮುಖಕ್ಕೆ ಪದ್ಮಮಾಲೆ
ಅಘೋರಮುಖಕ್ಕೆ ಪುತ್ರಿಕಮಾಲೆ
ತತ್ಪುರುಷಮುಖಕ್ಕೆ ಮೌಕ್ತಿಕಮಾಲೆ
ಈಶಾನಮುಖಕ್ಕೆ ರುದ್ರಾಕ್ಷಿ
ನೂರೆಂಟರಲ್ಲಿ ಪುನರಪಿಯಾಗಿ
ದ್ವಾದಶದಲ್ಲಿ ಶತಸಂಖ್ಯೆಯಲ್ಲಿ ಜಪಧ್ಯಾನದಲ್ಲಿ ಆಹ್ವಾನಿಸಲಿಕ್ಕೆ
ನವಬ್ರಹ್ಮತ್ವ ದಶಾವತಾರಕ್ಕೆ ಮುಖ್ಯತ್ವ
ಏಕಾದಶ ಶತರುದ್ರರಿಗೆ ಗಣಂಗಳ ಪದಕ್ಕೆ ಸಾಲೋಕ್ಯವಪ್ಪುದು
ಈ ಪಂಚಾಕ್ಷರಿಯ ಪ್ರಣಮ.
ಇದು ಮೂಲದಿವ್ಯಮಂತ್ರ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ
ಪಂಚಾಕ್ಷರಿಯ ಭೇದ./56
ಪಶು ಪಾಷಂಡಿ ಚಾರ್ವಾಕ ಮಾತುಗಂಟಿ
ಎಷ್ಟನಾಡಿದಡೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ ?
ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ ?
ನಪುಂಸಕಂಗೆ ಜಿತೇಂದ್ರಿಯತ್ವವುಂಟೆ ?
ದರಿದ್ರಂಗೆ ನಿಸ್ಪೃಹತ್ವವುಂಟೆ ?
ನಿಶ್ಚೈಸಿ ನಿಜವಸ್ತುವನರಿಯದವನು
ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ ?
ಮೃತಘಟದ ವೈಭವದಂತೆ, ವಿಧವೆಯ ಗರ್ಭದಂತೆ
ನಿನ್ನಲ್ಲಿಯೆ ನೀನರಿ ದ್ವೈತಾದ್ವೈತಂಗಳೆಂಬವ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /57
ಪೂರ್ವಾಂಗ ಪಕ್ಷ ದಹನ ಸಮಾಧಿಗಳೆಂಬಲ್ಲಿ
ಭಸ್ಮ ಮೃತ್ತಿಕೆಗಳಿಂದ ಉಭಯನಾಮಭೇದವಾದ ತೆರನ ತಿಳಿಯಬೇಕು.
ಶೈವ ವೈಷ್ಣವವೆಂಬಲ್ಲಿ ಪಂಚಭೂತಿಕಾತ್ಮಕ್ಕೆ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳೆಂಬಲ್ಲಿ
ಶೈವ ಸಾಂಖ್ಯಮತಕ್ಕೆ ಬೇರೆ ಧರೆ ಜಲ ಅನಲ ಅನಿಲ
ಈ ಚತುರ್ಗುಣ ಮುಂತಾದವಕ್ಕೆ
ಭೇದನಾಮವ ಕಂಡಲ್ಲಿ ವಿಭೇದವುಂಟು
ಉಂಟೆಂದಡೆ ತರ್ಕ. ಈ ಕುತರ್ಕಂಗಳಲ್ಲಿ ಲಕ್ಷಿತವಲ್ಲದೆ
ಲೋಹವ ಲೋಹದ ಬಲಿಕೆಯಿಂದ ಖಂಡಿಸುವಂತೆ
ನಿಃಸತ್ವವ ಸತ್ವದಿಂದ ಪರಿಹರಿಸುವಂತೆ
ತೆಪ್ಪವ ನೀರದಪ್ಪದಿಂದ ಒತ್ತುವಂತೆ
ಶಕ್ತಿಯ ಸಂಭವ ವಿರಕ್ತಿಯ ನಿಶ್ಚಯ
ಉಭಯಚಕ್ಷುಗೂಡಿ ಇಷ್ಟವ ಏಕದೃಷ್ಟಿಯಿಂದ ಕಾಂಬಂತೆ
ಇಲ್ಲ ಉಂಟೆಂಬುದು ನಿಜದಲ್ಲಿಯೆ ಅದೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿಯೆ./58
ಪ್ರಜ್ವಲಿಸಿ ಪ್ರಕಾಶಿಸಿ ಆ ಬೆಳಗು ಹರಿವರಿಯಾಗಿ
ಅವಗವಿಸುವ ಭೇದ, ಅದು ಉದಯಿಸಿದ ಘಟವುಳ್ಳನ್ನಕ್ಕ
ಆ ಶಿಲೆಯನೊಡೆದು ಚೂರ್ಣಿಸಲಿಕ್ಕೆ ಆ ಚೂರ್ಣವ ಪಿಂಡವ ಮಾಡಿ
ಆ ಗಂಭೀರದ ಬೆಳಗು ಶಿಥಿಲವಾಯಿತ್ತು.
ಚೂರ್ಣದಲ್ಲಿ ಆ ಕಳೆಯ ಭೇದದಂತೆ ಐಕ್ಯನ ನಾಮನಷ್ಟ ಕೂಟಲೇಪ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /59
ಪ್ರಥಮಾಂಗುಲದಲ್ಲಿ ಉಪದೃಷ್ಟ.
ಉಭಯಾಂಗುಲದಲ್ಲಿ ಕರ್ಮಕ್ರೀ.
[ತ್ರಿವಿ]ಧಾಂಗುಲದಲ್ಲಿ ಸಂ[ಶ]ಯಸಿದ್ಧಿ.
ಚತುರ್ವಿಧ ಅಂಗುಲದಲ್ಲಿ ಚತುರ್ವಿಧ ಫಲಪದ.
ಪಂಚಮಪಕ್ಷದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ
ಭವದ ಗೊಂಚಲ ಸಂಚಂಗಳಿಲ್ಲ.
ಇದು ಪಂಚಾಕ್ಷರಿಯ ಪ್ರಣಮಮಂತ್ರದ ಕ್ರೀ
ಆಚಾರ್ಯನಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /60
ಬೀಜವ ಕಳೆದು ತರು ಬೆಳೆದಂತೆ
ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ
ಪರಮ ಜೀವನ ಕಳೆದು
ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು ಪರಶಕ್ತಿಸಮೇತವಾದಲ್ಲಿ
ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಷ್ಟವಾಗಿ ತಾ ನಷ್ಟವಾದಂತೆ
ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ
ತೆರೆ ದರುಶನ ಉಭಯವಡಗಿತ್ತು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ./61
ಭಕ್ತ ಬ್ರಹ್ಮತತ್ವ, ಮಾಹೇಶ್ವರ ವಿಷ್ಣುತತ್ವ
ಪ್ರಸಾದಿ ರುದ್ರತತ್ವ, ಪ್ರಾಣಲಿಂಗಿ ಈಶ್ವರತತ್ವ
ಶರಣ ಸದಾಶಿವತತ್ವ, ಐಕ್ಯ ಮಹಾಭೇದತತ್ವ.
ಇಂತೀ ಷಡ್ಭಾವದ ಆದ್ಯಂತದಿಂದ ಭೇದವ ಹಂಚಿಹಾಕಿ
ನೀನು ಅಸಾಧ್ಯನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ./62
ಭಕ್ತಂಗೆ ಸ್ಪರ್ಶನ ವಿಷಯವಳಿದು
ಮಾಹೇಶ್ವರಂಗೆ ಅಪ್ಪು ವಿಷಯವಳಿದು
ಪ್ರಸಾದಿಗೆ ರುಚಿ ವಿಷಯವಳಿದು
ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು
ಶರಣಂಗೆ ಸುಖದುಃಖ ವಂದನೆ ನಿಂದೆ
ಅಹಂಕಾರ ಭ್ರಮೆ ವಿಷಯವಳಿದು
ಐಕ್ಯಂಗೆ ಇಂತೀ ಐದರ ಭೇದದಲ್ಲಿ
ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ
ಮುಂದಣ ಹಿಂದಣ ಸಂದೇಹದ ವಿಷಯ ನಿಂದು
ಕರ್ಪುರವುಳ್ಳನ್ನಕ್ಕ ಉರಿಯ ಭೇದ
ಉರಿವುಳ್ಳನ್ನಕ್ಕ ಕರ್ಪುರದಂಗ.
ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೆಪ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /63
ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ.
ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ.
ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ.
ಸವಿದಲ್ಲಿಯೆ ಅಂತರೀಯಜ್ಞಾನ.
ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ.
ದಿವ್ಯ ತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ.
ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಅಪ್ರಮಾಣಾದ ಕಾರಣ./64
ಭಕ್ತಿಸ್ಥಲ ವರ್ತುಳರೂಪಾಗಿಹುದು.
ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು.
ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು.
ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು.
ಶರಣಸ್ಥಲ ಪಂಚಸೂತ್ರಪ್ರಕಾರವ ಕೂಡಿಕೊಂಡು
ಪೀಠಿಕಾಸಂಬಂಧವಾಗಿ, ಗೋಳಕಾಕಾರಮೂರ್ತಿಯಾಗಿಹುದು.
ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮಶೂನ್ಯವಾಗಿ
ತಿಳಿವೆಡೆಯಲ್ಲಿ ಉಂಟಾಗಿ, ತಿಳಿದ ಮತ್ತೆ ಇದಿರೆಡೆಯಿಲ್ಲವಾಗಿ
ಇಂತೀ ಪಂಚಬ್ರಹ್ಮಮೂರ್ತಿ ನೀವಾಗಿ
ಲೀಲೆಗೆ ಉಮಾಪತಿಯಾಗಿ, ಲೀಲೆ ನಿಂದಲ್ಲಿ ಸ್ವಯಂಭುವಾಗಿ
ಇಂತೀ ಐದರಲ್ಲಿ ಭೇದಿಸಿ ಆರರಲ್ಲಿ ವೇಧಿಸಿನಿಂದ
ನಿಜಸಂಬಂಧಸೂತ್ರ
ಆ ಭೇದನಿಂದಲ್ಲಿ ನಿರತಿಶಯ ಸ್ವಾನುಭಾವ.
ಉಭಯದ ಭಾವ ನೀನಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ. /65
ಭೇದ ಉತ್ತರಕಾವ್ಯ ಪೂರ್ವಾಂತರ ಜೈಮಿನಿ ಭುವನಕೋಶ
ಕಾಲಚಕ್ರ ಭೂಚಕ್ರ ಷಡಾಧಾರ ಸನ್ಮತಚಕ್ರ
ಆತ್ಮವಾಯು ಸಂಪರ್ಕ ಸಂಭವ ಚಕ್ರಂಗಳಲ್ಲಿ
ಹೂಣೆಹೊಕ್ಕು ನೋಡಿದಡೂ ಕರ್ಮವಾರ ತಿಳಿದು
ವರ್ಮ ಮೂರನರಿದು ಮಿಕ್ಕಾದ ದುಃಕರ್ಮದಲ್ಲಿ ಹೋಗದೆ
ನಿಶ್ಚಿಂತನಾದ ನಿರತ ಸ್ವಯಾನುಭಾವಿಗೆ
ಉಂಡಡೆ ಉಪವಾಸಿಯಾಗಿಪ್ಪ, ಬಳಸಿದಡೆ ಬ್ರಹ್ಮಚಾರಿಯಾಗಿಪ್ಪ.
ಭಾಗೀರಥಿಯಂತೆ ಆವ ಜೀವದಿಂದ ನಿಂದಡೂ
ಸಮಪ್ರಮಾಣ ಗರಳವ ಮೀರಿದಾಗ
ವಾದಿಗೆ ವಾದವ ನುಡಿಯ, ಶಾಸ್ತ್ರದ ಸಂದಣಿಯ ಹೊಗ
ಪುರಾಣದ ಪೂರ್ವವ ವಿಸ್ತರಿಸ.
ವೇದವ ವಿಭೇದವೆಂದು, ಆಹ್ವಾನ ವಿಸರ್ಜನವಿಲ್ಲ.
ಸರ್ವಗುಣದಲ್ಲಿ ಸಂಪೂರ್ಣನಾದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದ ಶರಣನು./66
ಭೇರಿಯ ಹೊಯ್ದಡೆ ಒಡಗೂಡಿ ನಾದ ಎಯ್ದುವಂತೆ
ತ್ರಿವಿಧಭಕ್ತಿಯಲ್ಲಿ ಮುಟ್ಟುವ ಚಿತ್ತ ನಿಶ್ಚಯವಾಗಿ ನಿಂದುದು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ
ವಿಶ್ವಾಸ ಕ್ರೀ ಜ್ಞಾನಭರಿತ ಸರ್ವಾಂಗಲಿಂಗಿಯ ಸ್ಥಲ./67
ಮನವಿಕಾರದಲ್ಲಿ ತೋರುವ ಸುಳುಹು
ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ
ಅರಿವಿನ ಭೇದ ಎಲ್ಲಿ ಅಡಗಿತ್ತು ?
ಅರಿದು ತೋರದ ಮತ್ತೆ
ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ?
ಇಂತೀ ಭಗಧ್ಯಾನರನೊಪ್ಪ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು./68
ಮಹಾಶೂನ್ಯ ಅಂಧಕಾರ ಸುರಾಳ ನಿರಾಳ
ನಿರಾಲಂಬದಿಂದತ್ತ ತನ್ಮಯ ಸ್ವಯಂಭು ಸನ್ನದ್ಧವಾಗಿ
ಅನಾದಿವಸ್ತು ಆದಿಸ್ವರೂಪವ ತಾಳ್ದು ಬಂದ ವಿವರ: ನಾದ ಬಿಂದು ಕಳೆ ಈ ತ್ರಿವಿಧಭೇದ ಏಕವಾಗಿನಿಂದ ದೆಸೆಯಿಂದ
ಆ ವಸ್ತುವಿನ ತಿಲಾಂಶು ಸದಾಶಿವಮೂರ್ತಿಯ ಅಂಶೀಭೂತವಾಗಿ
ಏಕಾಂತ ಪ್ರಮಥ ರುದ್ರನ ದೆಸೆಯಿಂದ
ದಶರುದ್ರರ ಸಂಬಂಧ ವೈಷ್ಣವಭೇದ.
ಆ ವೈಷ್ಣವ ದಶ ಅವತಾರಭೇದ.
ದಕ್ಷ ಮುಂತಾದ ನವಬ್ರಹ್ಮತ್ವದಿಂದ ಮನುಮುನಿಗಳು ಮುಂತಾದ
ಯಕ್ಷ ರಾಕ್ಷಸ ಶಕ್ತಿದೇವತೆ ಕುಲ ಮುಂತಾದ ಷಡ್ದರ್ಶನ
ಪಕ್ಷಪಾತ ಭೇದಂಗಳಾಗಿ ಇಪ್ಪ ತೆರನ
ವೇದದ ಹಾದಿಯಿಂದ ಶಾಸ್ತ್ರದ ಸಂದೇಹದಿಂದ
ಪುರಾಣದ ಪೂರ್ವ ಮುಂತಾದ ಯುಕ್ತಿಯಿಂದ ತಿಳಿದು
ಉತ್ತಮ ಮಧ್ಯಮ ಕನಿಷ್ಠವೆಂಬ ದೇವತ್ವಕುಲವನರಿ.
ಇಂದುವಿನ ಕಳೆಯಿಂದ ಆ ಇಂದುವಿನ ಕಳೆಯನರಿವಂತೆ
ಜ್ಯೋತಿಯ ಕಳೆಯಿಂದ ಆ ಜ್ಯೋತಿಯ ಲೇಸು ಕಷ್ಟವ ಕಾಂಬಂತೆ
ನಿಮ್ಮ ಶಾಸ್ತ್ರಸಂಪದಗಳಲ್ಲಿ ಏಕಮೇವನದ್ವಿತೀಯನೆಂಬ
ಶ್ರುತಿಯ ವಿಚಾರಿಸಿಕೊಂಡು ಇದ್ದ ಮತ್ತೆ ಆರಡಿಯೇತಕ್ಕೆ ?
ಇಂತೀ ಭೇದಕ್ಕೆ ವಿಶ್ವಮಯನಾಗಿ ವಿಶ್ವಚಕ್ಷುವಾಗಿ
ತತ್ವಂಗಳಿಗೆ ಮುಖ್ಯವಾಗಿ ಉತ್ಪತ್ಯ ಸ್ಥಿತಿ ಲಯಕ್ಕೆ ಕರ್ತೃವಾಗಿ
ಆಚಾರ್ಯಮತಕ್ಕೆ ಅಂಗವಾಗಿ ಲೀಲಾಗುಣದಿಂದ ಶಕ್ತಿಸಮೇತವಾಗಿ ಮತ್ತೆ
ನಿನ್ನ ಇಚ್ಫೆ ಹಿಂಗಿ ನಿಶ್ಚಯವಾಗಿ ಸ್ವಯಂಭುವಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ./69
ಮಾತಿನ ರಚನೆಯಿಂದ ಗೆಲಿದೆಹೆನೆಂದಡೆ
ಬಿಂಗದ ಹೊರೆಯಂತೆ ಅದರಂಗವುಳ್ಳನ್ನಕ್ಕ
ಸಂದು ಸಂಶಯದಲ್ಲಿ ಸಂದು ನೋಡಿಹೆನೆಂದಡೆ
ಸಂಗಿಗೆ ನೀರು ಉಪ್ಪರಕ್ಕೆ ಬಂದುದುಂಟೆ ?
ಇಂತೀ ಶ್ರುತಿಸಂದೇಹಿಗಳಿಗೆ ಹಾಕಿದ ಮುಂಡಿಗೆ .
ಏಕಚಿತ್ತದಲ್ಲಿ ನಿಂದ ನಿರುತಂಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬ ಭಾಷೆ/70
ರತ್ನದ ಪುಂಜವ ಬೆಗಡವನಿಕ್ಕುವಲ್ಲಿ
ಮೊನೆ ಮುಂದೆ ಸವೆದ ಮತ್ತೆ ಪೂರ್ವಕ್ಕೆ ಉತ್ತರವಿಲ್ಲ.
ನಿಶ್ಚೈಸಿ ಉತ್ತರ ಕಡೆಗಾಣಿಸಿದಲ್ಲಿ ಮುಟ್ಟಿ ಮುಂಚುವ
ಅರ್ಪಿತ ಅಲ್ಲಿಯೆ ಉಪದೃಷ್ಟ ನಷ್ಟ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /71
ರಸ ಗಂಧ ರೂಪು ಶಬ್ದ ಸ್ಪರ್ಶ
ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ.
ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ.
ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ.
ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ.
ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ.
ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು
ಕೂಡಬೇಕೆಂಬನ್ನಕ್ಕ ಐಕ್ಯ.
ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್ಸ್ಥಲ.
ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು
ಐಕ್ಯಸ್ಥಲಲೇಪಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./72
ರಿತು ರುತು ಪ್ರಾತಃಕಾಲ
ಅಘ್ರ್ಯಂಗಳ ನ್ಯಾಸ ಅಂಗುಲವಾಸ ಪಚ್ಫಳ ಮಡಿ ಕಟಿಸೂತ್ರ
ಗುಹ್ಯ ನಾಭಿ ಪಂಚಾಗ್ನಿ ಮಧ್ಯ ಬಾಹುಗಳ ಜಿಹ್ವೆ
ನಾಸಿಕ ನಯನ ಕರ್ಣ ಲಲಾಟ ಮಸ್ತಕ ಕರ ಸಂಜ್ಞೆಗಳಲ್ಲಿ
ನ್ಯಾಸಸೂತಕನಾಗಿ, ಜಪಗ್ರಹಿತನಾದಡೂ
ಶಿವಧ್ಯಾನಮೂರ್ತಿಯಿಂದ ಪರಿಹರಿಸಬೇಕು,
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಕರ್ಮಕ್ರೀ./73
ಲಿಂಗವೇ ಪ್ರಾಣವಾದ ಮತ್ತೆ
ಬೇರೆ ನೆನೆಯಿಸಿಕೊಂಬುದು ಇನ್ನಾವುದಯ್ಯಾ ?
ಇದಿರಿಟ್ಟು ಬಂದುದ ಮುನ್ನವೆ ಮುಟ್ಟಿ
ಅರ್ಪಿತ ಅವಧಾನಂಗಳಲ್ಲಿ ಸೋಂಕಿದ ಮತ್ತೆ
ಪುನರಪಿಯಾಗಿ ಸೋಂಕಿದಡೆ ನಿರ್ಮಾಲ್ಯ ಕಂಡಯ್ಯಾ.
ಮೊನೆಗೂಡಿ ಹಾಯ್ವ ಕಣೆಯಂತೆ ಅರ್ಪಿತಾಂಗ ಸಂಗಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ./74
ಲಿಂಗೋದ್ಭವ ಐವತ್ತೆರಡು ಅಕ್ಷರಂಗಳಲ್ಲಿ
ವರ್ತುಳ ಗೋಮುಖ ಗೋಳಕಾಕಾರಕ್ಕೆ ಸಂಬಂಧಿಸುವಲ್ಲಿ
ಅಕಾರ ವರ್ತುಳಾಕಾರಕ್ಕೆ, ಉಕಾರ ಗೋಮುಖಕ್ಕೆ
ಮಕಾರ ಗೋಳಕಾಕಾರಕ್ಕೆ.
ಇಂತೀ ಆದಿ ಆಧಾರ ಆತ್ಮಬೀಜ ಓಂಕಾರದಿಂದ
ಉದ್ಭವವಾದ ಅಕ್ಷರಾತ್ಮಕ ವಸ್ತುವನರಿತು
ಬ್ರಹ್ಮ ವರ್ತುಲದಲ್ಲಿ ಅಡಗಿ, ವಿಷ್ಣು ಗೋಮುಖದಲ್ಲಿ ನಿಂದು
ರುದ್ರ ಗೋಳಕಾಕಾರಕ್ಕೆ ಸಂಬಂಧಿತನಾಗಿ
ಉತ್ಪತ್ಯ ಸ್ಥಿತಿ ಲಯಂಗಳ ಲಕ್ಷಿಸುತ್ತ ಜಗಹಿತಾರ್ಥವಾಗಿ
ಸ್ವಯಂಭು ಉಮಾಪತಿಯಾದೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಾದೆಹೆನೆಂದು./75
ಲೋಹದ ಪಿಂಡವೆಂದಡೆ
ಅಲಗಾಗದ ಮುನ್ನವೆ ಇರಿಯಬಲ್ಲುದೆ ?
ಕುಸುಮದ ಗಿಡುವೆಂದಡೆ ಕುಸುಮವಾಸನೆಯ ಕೊಂಡು
ಎಸಗುವುದಕ್ಕೆ ಮುನ್ನವೆ, ಆ ಗಿಡುವಿನ ಪರ್ಣನ ಸುವಾಸನೆವುಂಟೆ ?
ಇಂತೀ ದ್ವೈತ ಅದ್ವೈತದ ಭೇದ ಉಭಯಸ್ಥಲ ವಿವರ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /76
ವಾದದ ಹೇಮ ಸ್ವಯ ಹೇಮವ ಕೂಡಿ
ವೇಧಿಸಲಿಕ್ಕೆ ವಿಭೇದವಾದುದಿಲ್ಲ.
ಶಾಸ್ತ್ರಂಗಳ ಶಬ್ದದ ಯುಕ್ತಿ, ತನ್ನ ಸ್ವಯದ ಸ್ವಾನುಭವದ ಕೂಟ.
ಇಂತೀ ಉಭಯವೇಕವಾದಲ್ಲಿ ನಡೆನುಡಿ ಸಿದ್ಧಾಂತ
ಆತ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ./77
ವಾಯುವಡಗಿದ ಮಹಾರ್ಣವದಂತೆ
ನಾದವನೊಳಕೊಂಡ ತನ್ಮಯದಂತೆ
ಶೂನ್ಯ ಸೋಂಕಿಲ್ಲದ ನಿಶ್ಚಯದಂತೆ
ವಸ್ತುವಿನಲ್ಲಿ ಲೇಪವಾದ ಸುಚಿತ್ತನಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವ ಕೂಡಿದ ಕೂಟ./78
ವಾರಿ ವಾಯುವಿನ ಸಂಗದಿಂದ ಕಲ್ಲಾದ ಮತ್ತೆ
ನೋಡ ನೋಡ ಕರಗಲೇತಕ್ಕೆ ?
ವಸ್ತುವಿನ ಚಿತ್ತ ವೇಧಿಸಿದ ಮತ್ತೆ
ಅರಿದು ಮರೆದೆನೆಂಬುದು ಅದೇತಕ್ಕೆ ?
ಚಿಪ್ಪಿನಲ್ಲಿ ಅಪ್ಪು ನಿಂದು ಹೆಪ್ಪಳಿಯದೆ ದೃಷ್ಟವ ಕಂಡ ಮತ್ತೆ
ಚಿತ್ತ ವಸ್ತುವಿನಲ್ಲಿ ಎಯ್ದಿದ ಮತ್ತೆ
ದೃಷ್ಟ ಉಭಯದಂತಿರಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /79
ವಿಶ್ವಾಸವನರಿತಲ್ಲಿ ಗುರುಭಕ್ತಿ.
ಶ್ರದ್ಧೆ ಸನ್ಮಾರ್ಗಂಗಳಲ್ಲಿ ಪೂಜಿಸಿ ವೇಧಿಸುವುದು ಶಿವಲಿಂಗಭಕ್ತಿ.
ಲಾಂಛನಕ್ಕೆ ನಮಸ್ಕಾರ, ಆಪ್ಯಾಯನಕ್ಕೆ ಅನ್ನ
ಅರಿವಿನ ತೆರನನರಿತು ನೆರೆ ವಿಶ್ವಾಸ ಜಂಗಮಭಕ್ತಿ.
ಇಂತೀ ಕ್ರೀಯಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ.
ಇಂತೀ ಗುಣ ಕಾಯ ಜೀವದ ಭೇದ.
ಕರ್ತೃಭೃತ್ಯಸಂಬಂಧ ಏಕವಾದುದು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದುದು./80
ವಿಹಂಗನ ತತ್ತಿಗೆ ಸ್ಪರ್ಶನದಿಂದ
ಕೂರ್ಮನ ಶಿಶುವಿಂಗೆ ಕೂರ್ಮೆಯಿಂದ
ಚತುಃಪಾದಿ ನರಕುಲಕ್ಕೆ ಕುಚಗಳಿಂದ
ಮಿಕ್ಕಾದ ಜೀವಜಾತಿ ಲಕ್ಷಣಕ್ಕೆ ತಮ್ಮ ಸ್ಥಾನದಲ್ಲಿಯೆ ತೃಪ್ತಿ.
ಆವ ಸ್ಥಲವ ನೆಮ್ಮಿದಲ್ಲಿಯೂ ಭಾವಶುದ್ಧವಾದಲ್ಲಿಯೆ ಮುಕ್ತಿ.
ಉಭಯಕ್ಕೆ ಉಪಮಾತೀತನಾದಾಗಲೇ ನಿರ್ವಿಜ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./81
ವೃಕ್ಷ ಎಲೆಗಳೆವುದಲ್ಲದೆ
ತರುವಿನ ಸಲೆ ನೆಲೆ ಸಾರಗಳದು ಫಲಿಸುವುದುಂಟೆ ?
ಅಂಗದಲ್ಲಿ ಸೋಂಕಿದ ಮರವೆಯ ಕಳೆಯಬಹುದಲ್ಲದೆ
ಮನ ವಚನ ಕಾಯ ತ್ರಿಕರಣದಲ್ಲಿ ವೇಧಿಸಿದ
ಮರವೆಯ ಹರಿವ ಪರಿಯಿನ್ನೆಂತೊ ?
ಉರಿ ವೇಧಿಸಿದ ತರುವಿನಂತೆ ಅದಕ್ಕೆ ಪರಿಹರವಿಲ್ಲ.
ಅರಿದು ಮಾಡುವ ದೋಷಕ್ಕೆ ಪಡಿಪುಚ್ಚವಿಲ್ಲ.
ಆ ಭೇದವನರಿದು ಹರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /82
ವೇದ ವರ್ಣಕ, ಶಾಸ್ತ್ರ ಸಂದು, ಪುರಾಣ ಪುಚ್ಚವಿಲ್ಲದ ವೃಶ್ಚಿಕ
ಆಗಮ ಆಗುಛೇಗೆಯನರಿಯದ ಹೋರಾಟ.
ಇಂತಿವೆಲ್ಲವೂ ಐವತ್ತೆರಡಕ್ಷರದ ನಾಮಬೀಜ.
ತವರಾಜಂಗೆ ಫಲ ಬಲಿಯಿತೆನಬಹುದೆ ?
ದಿನನಾಯಕಂಗೆ ತಮ ರಮಿಸಿತೆನಬಹುದೆ ? ಸುರಭಿಗೆ ಗರ್ಭ ಉದಿಸಿತೆನಬಹುದೆ ?
ಇಂತು ಸರ್ವಾಂಗ ಸಕಲಯುಕ್ತಿ ಸಂಪೂರ್ಣಂಗೆ
ನುಡಿಯೆ ವೇದ, ನಡೆಯೆ ಆಗಮ.
ಅಂಗಮಾರ್ಗಂಗಳಲ್ಲಿ ಸಂಬಂಧಿಸುವುದೆ ಶಾಸ್ತ್ರಸಂಪದ.
ಇಂತೀ ಅಕ್ಷರಾತ್ಮಕ ತಾನಾಗಿ, ಭಕ್ತಿಕಾರಣದಿಂದ ಲಕ್ಷಿತನಾದ ಕಾರಣ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಆಚಾರ್ಯನಾದ ಭೇದ. /83
ವೇದ ಶಾಸ್ತ್ರ ಪುರಾಣ ಆಗಮಂಗಳಿಂದ
ಸುಪಥದ ಹಾದಿಯನರಿತೆಹೆನೆಂದಡೆ ಸಂದೇಹದ ಸಂದು.
ಇವ ಹಿಂಗಿ ಕಂಡೆಹೆನೆಂದಡೆ ನಡಹಿಲ್ಲದ ಬಟ್ಟೆ.
ಒಂದ ಕಳೆದು ಒಂದರಲ್ಲಿ ನೋಡಿ ಅರಿತೆಹೆನೆಂದಡೆ ನೀರಿಲ್ಲದ ಏರಿ.
ಏರಿಯಿಲ್ಲದ ನೀರು ನಿಲಲರಿಯದಾಗಿ
ಇಂತೀ ವೇದದ ವಿಷಯ, ಶಾಸ್ತ್ರದ ಬಟ್ಟೆ
ಪುರಾಣದ ಪುಣ್ಯ, ಆಗಮದ ಯುಕ್ತಿ.
ಇಂತಿವ ತಿಳಿದು, ಖಂಡಿತರಿಗೆ ಉಭಯವಳಿದು
ಸಂದೇಹಿಗಳಿಗೆ ಮಾಯಾವಾದ, ವೈದಿಕಕ್ಕೆ ತ್ರಿಗುಣಭೇದ.
ಇಂತೀ ಏಕದಂಡ ದ್ವಿದಂಡ ತ್ರಿದಂಡ ಆಧ್ಯಾತ್ಮಭೇದ, ಶೈವಸಂಬಂಧ
ಇಂತೀ ಆಚಾರ್ಯಮತ ಸಂಬಂಧಗಳಲ್ಲಿ ಭೇದವನಿಂಬುಗೊಟ್ಟು
ವಿಭೇದಕ್ಕೆ ಒಳಗು ಹೊರಗಲ್ಲದೆ ನಿನ್ನನರಿವ ನಿಜಜ್ಞರುಗಳಲ್ಲಿ
ನಿಂದ ನಿಜಸ್ವರೂಪ ನೀನೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ/84
ವೇದಕ್ಕೆ ಯಜ್ಞ, ಶಾಸ್ತ್ರಕ್ಕೆ ವಿಸ್ತರ
ಪುರಾಣಕ್ಕೆ ಬೋಧೆ, ಆಗಮಕ್ಕೆ ಉಭಯ ನಿರುತ್ತರ.
ಇಂತಿವು ಆಚರಣೆಯ ಕರ್ಮ.
ಇಂತಿವು ಉತ್ತರಗತಿಯನರಿವುದಕ್ಕೆ ಪೂರ್ವಗತಿ ಪಥವಾಗಿ
ಕುಂದಣಕ್ಕೆ ಗಂಧ ಕೂಡಿದಂತೆ ನುಡಿನಡೆ ಉಭಯವೊಂದಾದಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ./85
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ
ಪುರಾಣದ ಅಭಿಸಂಧಿಯ ತಿಳಿದು
ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ
ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು
ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ
ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು
ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು
ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ,
ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ.
ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು
ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ
ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ.
ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ
ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ
ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು.
ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ
ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು./86
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ.
ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ
ದಿಗ್ವಳಯ ಬಂಧನ, ಗ್ರಹಸಂಬಂಧಯೋಗ.
ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ರ್ತಿ]ಸಿ ನಿಂದ ಸ್ವಯವಾವುದು ?
ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ
ಇವು ಮುಂತಾದ ನಾನಾ ಭೇದಂಗಳ ಹೇಳಿ
ತನ್ನ ಅಳಿವು ಉಳಿವು ಕಂಡುದಿಲ್ಲ.
ಪುರಾಣವನೋದಿ ಕೆಲರ್ಗೆ ಹೇಳಿ
ಪೂರ್ವಯಥಾಕಥನ ಮುಂತಾದ ರಾಮರಾವಣಾದಿಗಳು
ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ
ಬೋಧಿಸಿದಲ್ಲಿಯೂ ಸಫಲವಾದುದಿಲ್ಲ.
ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ
ಬಿಡುಮುಡಿ ಉಭಯದ ಭೇದವ ತಾನರಿತು
ಮಲತ್ರಯಕ್ಕೆ ದೂರಸ್ಥನಾಗಿ
ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು
ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು
ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ
ತರಣಿಯ ಕಿರಣದಂತೆ, ವಾರಿಯ ಸಾರದಂತೆ
‘ಖಲ್ವಿದಂ ಬ್ರಹ್ಮವಸ್ತು’ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ
‘ಓಂ ಭರ್ಗೊ ದೇವಸ್ಯ ಧೀಮಹಿ’ ಯೆಂದಲ್ಲಿ
ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ
ಆರಾರ ಭೇದಕ್ಕೆ ಭೇದ.
ತ್ರಿಮೂರ್ತಿಗಳ ಜಗಹಿತಾರ್ಥವಾಗಿ
ಸಂಶಯಸಿದ್ಧಿಯಿಂದ ತಿಳಿವುದು.
ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ
ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು./87
ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ
ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ?
ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ?
ಆ ತೆರನ ತಿಳಿದು ವೇದವಾರನರಸಿತ್ತು ?
ಶ್ರುತಿ ಯಾರ ಭೇದಿಸಿತ್ತು ?
ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು.
ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ
ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು.
ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ
ವೇಧಿಸಿ ಭೇದಿಸಿ ಕಂಡೆನೆಂಬಲ್ಲಿ
ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ.
ತರ್ಕಂಗಳಿಂದ ತರ್ಕಿಸಿ ನೋಡಿ
ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ
ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ
ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು.
ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ
ಸಸಿ ವೃಕ್ಷಂಗಳ ಸಲಹುವಂತೆ
ಸರ್ವಗುಣಸಂಪನ್ನನಾದೆಯಲ್ಲಾ
ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ
ಎನಗೆ ನೀನಾದೆಹೆನೆಂದು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ./88
ವೇದೋತ್ತರ ಸಂಧಿ ಉಪಸನ್ನೆ ಸಂಜ್ಞೆ ಉತ್ತರ
ಚಿಂತನೆ ಖಂಡನೆಗಳಲ್ಲಿ ಭೃಗು, ದಧೀಚಿ, ಕಾಶ್ಯಪ, ಸಾಂಖ್ಯ, ಅಗಸ್ತ್ಯ
ಮೊದಲಾದ ಋಷಿವರ್ಗಂಗಳೆಲ್ಲರು
ವೇದದ ಕಡೆ ಮೊದಲೆಂದು ಪಠಿಸಿ ವೇಧಿಸಿ
ಆ ವೇದ ಚಿಂತನೆಗೆ ಸಂದುದಿಲ್ಲ.
ಇಂತೀ ವೇದ ಮೊದಲು ಶಾಸ್ತ್ರ ಆಗಮ ಪುರಾಣಂಗಳಲ್ಲಿ
ಸನ್ನಿಧಿ ಸಮನ ಗಮನ ಪರಿಪೂರ್ಣವಾದುದಿಲ್ಲ.
ಒಂದು ವೇದ ನಾಮದ ಶಾಖೆವೊಂದಕ್ಕೆ
ಉಪನಯನ ಭೇದ ಸಂಖ್ಯೆ ಶತಸಹಸ್ರ
ಪುನರಪಿಯಾಗಿ ಬಪ್ಪಲ್ಲಿ ಒಂದು ಅಧ್ಯಾಯ ಸಂಬಂಧದಿಂದ.
ಆ ಸಂಬಂಧ ಶಾಖೆ ಉಚಿತವಹಾಗ
ವಿಷ್ಣುವಿಂಗೆ ಪರಮಾಯು, ಬ್ರಹ್ಮಂಗೆ ಉಪನಯನವಿಲ್ಲ
ಋಷಿವರ್ಗಕ್ಕೆ ವೇದೋಪದೇಶವಿಲ್ಲ.
ಇಂತೀ ಶಂಕೆಯ ಸಂಕಲ್ಪದಲ್ಲಿ ನೋಡಿ ಕಂಡೆಹೆನೆಂದಡೆ
ಚಕ್ರದ ಅಂಗುಲದ ಬಳಸಿನ ಲೆಕ್ಕದಂತೆ
ಇಂತೀ ವೇದದ ಹಾದಿಯಲ್ಲ, ಶಾಸ್ತ್ರದ ಸಂದೇಹವಲ್ಲ.
ಆಗಮಂಗಳಲ್ಲಿ ಭೇದ ವಿಭೇದವ ಕಂಡು
ತರ್ಕಂಗಳಲ್ಲಿ ಹೋರುವ ಕುತರ್ಕಿಯಲ್ಲ.
ಇಂತಿವ ನೇತಿಗಳೆದ ಸರ್ವಾಂಗಲಿಂಗಸಂಬಂಧವಾದ ಶರಣನು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೇ
ಅಂಗವಾದ ನಿರಂಗನು./89
ವ್ಯತಿರಿಕ್ತವಾದ ಪರಿಪೂರ್ಣತ್ವ ಆದೆನೆಂದಲ್ಲಿ
ಅಚಲಿತವಪ್ಪ ನಿಜಚಲಿತನಾಗಿ ಚಲಿಸದೆ ನಿಂದ ಪರಿಯಿನ್ನೆಂತೊ ?
ರತ್ನದ ಘಟಗೂಡಿ ಮುಚ್ಚಿದಡೆ ದೀಪ್ತಿ ಅಲ್ಲಿಯೆ ಅಡಗುವುದಲ್ಲದೆ
ಘಟ ಬೇರಿದ್ದು ಬೆಳಗ ಮುಚ್ಚಿಹೆನೆಂದಡೆ ಅಡಗಿದುದುಂಟೆ ಆ ಬೆಳಗು?
ಅದು ಕಾರಣದಲ್ಲಿ ಪರಿಪೂರ್ಣತ್ವವಾದಲ್ಲಿಯೆ ಇದಿರೆಡೆಯಿಲ್ಲ.
ಅರ್ಪಿತಕ್ಕೆ ಅಗ್ನಿ ಕೊಂಡ ಘೃತ ತಿಲ ಸಾರ ಮುಂತಾದವು ರೂಪಗೊಂಡವು.
ಅಲ್ಲಿಯೆ ಅಡಗಿದಂತೆ ಐಕ್ಯನ ಅರ್ಪಿತಸ್ಥಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./90
ಶಿವಾಧಿಕ್ಯಸಂಪನ್ನ ಶಿವಯೋಗಿಯಾದಲ್ಲಿ
ಶಿವತತಿ ಶಿವಾಚಾರ ಶಿವಾಧಿಕ್ಯ ಪಂಚಮುದ್ರೆ
ಪಂಚಾಚಾರ ಪ್ರಮಾಣು ಎಲ್ಲವು ಸರಿಯಲ್ಲದೆ
ಬೇರೆ ಅಲ್ಲಿ ಅನ್ಯರು ಎಮ್ಮವರೆಂದುಂಟೆ?
ಅರಿವು ಕರಿಗೊಂಡವ ತನ್ನವ.
ಆಚಾರಕ್ಕೆ ಅನುಸರಣೆಯಿಲ್ಲದವ ತನ್ನವ.
ಈ ಉಭಯಕ್ಕೆ ಹೊರಗಾದವ ಅನ್ಯನೆಂದು
ಕಾಬುದು ವಿಚಾರಮತ, ಆಚಾರ್ಯಸ್ಥಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /91
ಶೈವವಾರು, ವೀರಶೈವ ಮೂರು, ಗುರುಸ್ಥಲವೈದು,
ಆಚಾರ್ಯನಂಗ ನಾಲ್ಕು, ಆಚಾರಕ್ಕೆ ಅಂಗವಾರು.
ಆತ್ಮಂಗೆ ಅರಿವು ಮೂರು.
ಮತ್ತಿವರೊಳಗಾದ ಷಡ್ದರುಶನಭೇದ.
ಆಚರಣೆ ಆಶ್ರಯಂಗಳು ವಿಶ್ವತೋಮುಖವಾಗಿಹವು.
ಚೀರದ ಬಾಯಿದಾರದಂತೆ ಕಟ್ಟುವುದು ಒಂದೆ ಭೇದ,
ಬಿಡುವುದು ಒಂದೆ ಭೇದ.
ಇಂತೀ ಸ್ಥಳಕುಳಂಗಳಲ್ಲಿ ಭೇದಂಗಳನರಿವುದು ಆಚಾರ್ಯನಿರವು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ವಿಭೇದವಾದಭೇದ./92
ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ
ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ
ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ
ಆಚಾರ್ಯಸ್ಥಲ ಷಡುಸ್ಥಲ ಒಳಗಾದ
ನಾನಾಸ್ಥಲಜ್ಞರುಗಳಲ್ಲಿ ವರಪ್ರಸಾದಿ ಚನ್ನಬಸವಣ್ಣ
ಅವರ ಕಾರುಣ್ಯಪ್ರಸಾದ ಎನಗಾಯಿತ್ತು.
ಸಂಚಿತ ಪ್ರಾರಬ್ಧ ಆಗಾಮಿಗಳಲ್ಲಿ ಉಪಚಕ್ಷು ನೀನಾಗಿ ಸಲಹಿದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /93
ಷಡ್ದರ್ಶನಕ್ಕೆ ದೈವವೊಂದೆಂದಡೆ ವಾದಕ್ಕೆ ಮೂಲ
ಹಲವೆಡೆಯೆಂದಡೆ ಸಮಯಕ್ಕೆ ದೂರ.
ತಮ್ಮ ಒಲವರದಿಂದ ಕುಲದೈವ ಫಲಿಸುವಂತೆ
ಏಕಛತ್ರವ ಕೊಟ್ಟು ರಾಣುವೆಗೆ ಹೊಲಬಿಗರ ಮಾಡಿದಂತೆ
ದೇವನೊಬ್ಬ ತ್ರೈಮೂರ್ತಿಗಳಿಗೆ ಭೇದವ ಕೊಟ್ಟುಯಿಪ್ಪುದ
ನಿಮ್ಮ ವೇದದ ಕಡೆಯಲ್ಲಿ ನೋಡಿಕೊಳ್ಳಿ.
ಶಾಸ್ತ್ರದ ಸಂದನಿಯಲ್ಲಿ ಕಂಡುಕೊಳ್ಳಿ.
ಪುರಾಣದ ಮೊದಲಪ್ರಸಂಗದಲ್ಲಿ ಸಂದೇಹವಿಡಿಸಿಕೊಳ್ಳಿ.
ಆಗಮಂಗಳಲ್ಲಿ ತಿಳಿದು ನಾದಬಿಂದುಕಳೆಗೆ ಆತನಾರೆಂಬುದ ಕಂಡುಕೊಳ್ಳಿ.
ಹದಿನೆಂಟುದೋಷಂಗಳಲ್ಲಿ ತ್ರಿವಿಧಮಲಂಗಳಲ್ಲಿ
ತ್ರಿಜಾತಿ ವಂಶಭೇದದಲ್ಲಿ ತ್ರಿಗುಣಾತ್ಮಕನಾರೆಂಬುದ ತಿಳಿದು
ಆದಿಯಿಂದಿತ್ತ ಅನಾದಿಯಿಂದತ್ತ
ಲೀಲೆಯಿಂದಿತ್ತ ಸ್ವಯಂಭುವಿಂದತ್ತ
ಈ ವಿಭೇದಕ್ಕೆ ಭೇದಕನಾರೆಂಬುದನರಿತು
ಅಭೇದ್ಯವಸ್ತು ಭಕ್ತಿ ಕಾರಣದಿಂದ ವೇದ್ಯನಾಗಿ ಬಂದು
ಜಗಹಿತಾರ್ಥವಾಗಿ ಬ್ರಹ್ಮಂಗೆ ಪ್ರಜಾಪತಿ
ವಿಷ್ಣುವಿಂಗೆ ಯೋನಿ ಸಂಭವ, ರುದ್ರಂಗೆ ಬಿಂದು ಕಳೆಯಂ ಕೊಟ್ಟು
ಮರೀಚಿಕ ಪ್ರಳಯರುದ್ರಂಗೆ ಸಂಹಾರವನಿತ್ತು
ಇಂತಪ್ಪ ಭೇದದಲ್ಲಿ ವೇದ್ಯವಪ್ಪ ವಸ್ತುವ ನೋಡಿಕೊಳ್ಳಿ.
ಇದರಿಂದ ವೆಗ್ಗಳವುಂಟೆಂದಡೆ ಸೋಧಿಸಿಕೊಂಬ
ಶತಸಹಸ್ರ ಅವತಾರಂಗಳಿಂದೀಚೆ ಆದ
ದಶ ಅವತಾರಕ್ಕೆ ಒಳಗಾದವನ ತಪ್ಪಿಂದ ಶಿರಸ್ಸನ್ನು ಒಪ್ಪಗೆಡಿಸಿದವನ
ಬೌದ್ಭನಾಗಿ ಭ್ರಮೆಯಿಂದ ನಾಣುಗೆಟ್ಟು ನಾಚಿಕೆಯಿಲ್ಲದವನ
ತೊಡೆ, ಜಠರದಲ್ಲಿ ಮಡದಿಯರವೊಡಗೂಡಿಯಿಪ್ಪವನ
ಇಂತೀ ಇವರನು ಅಡಿಗೆರಗಿಸಿಕೊಂಬ
ಒಡೆಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ./94
ಸಕಲವೆಂದಲ್ಲಿ ನಿಃಕಲ, ನಿಃಕಲವೆಂದಲ್ಲಿ ಸಕಲ
ದ್ವೈತ ಅದ್ವೈತವೆಂತೆಂದಂತೆಯೆಂಬುದು ಜಗದ ವಾಗ್ವಿಲಾಸ.
ವಾಚಾರಚನೆಗಳಿಂದ ತ್ರಿಗುಣ ತ್ರಿವಿಧಮೂರ್ತಿಯ ಕಲ್ಪಿಸಿ
ದಿವಾರಾತ್ರಿಯಂತೆ ಪುನರಪಿಯಾಗಿ
ಅಳೆವುತ್ತಯಿಪ್ಪುದು ಉಮಾಪತಿಯ ಭೇದ.
ಅದು ರುದ್ರನ ಲೀಲಾಭಾವ.
ಆ ಗುಣವ ಛೇದಿಸಿ ನಿಂದಲ್ಲಿ ಹದಿನೆಂಟುದೋಷಂಗಳಿಗೆ ಹೊರಗಾಗಿ
ತ್ರಿವಿಧ ಅವತಾರಮೂರ್ತಿಗಳಿಗೆ ಒಳಗಲ್ಲದೆ
ಎಂಬತ್ತನಾಲ್ಕುಲಕ್ಷ ಜೀವಂಗಳಲ್ಲಿ ಆತ್ಮನ ಬಂಧಿಸದೆ
ಇಂತೀ ದೋಷಂಗಳಲ್ಲಿ ಸಂದಿಸದೆ
ನಿಜಾತ್ಮನ ನೆಲೆಯ ಉಚಿತವನರಿದು
ತ್ರಿವಿಧ ಬಂಧದಲ್ಲಿಯೆ ಅಲ್ಲಿ ಅಲ್ಲಿ ಇಂಬಿಟ್ಟು
ಸ್ವಯವೇ ತಾನಾಗಿರ್ದುದು ಸ್ವಯಂಭು.
ಇಂತೀ ಉಭಯಸ್ಥಲಭಾವ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./95
ಸದಾಶಿವ ವಸ್ತುವ ಭೇದವಂಶದಲ್ಲಿ ಆದ ಮಹಾ ಅಂಧಕಾರದಲ್ಲಿ
ಬಲಭದ್ರ ವೀರರುದ್ರನ ಸಂಬಂಧದಿಂದ ಆದ
ಉಭಯ ಯುಗಳದಿಂದ ಆದ ಜಾತಿ ಉದ್ಭವ ಲಕ್ಷಣ.
ಜಿಹ್ವೆಯಲ್ಲಿ ವೇದ, ಭುಜದಲ್ಲಿ ಶಸ್ತ್ರ, ಉದರದಲ್ಲಿ ವ್ಯವಹಾರ,
ಜಂಘೆಯಲ್ಲಿ ಕೃಷಿ.
ಇಂತೀ ಶೂದ್ರ ವೈಶ್ಯ ಕ್ಷತ್ರಿಯ ದ್ವಿಜ
ಇಂತೀ ಮತಭೇದಂಗಳಲ್ಲಿ ಗೋತ್ರ ಹಲವಾಗಿ ವಾಸಿವಟ್ಟಕ್ಕೆ ಒಳಗಾದವು.
ಇಂತಿವರ ಒಳಗು ಹೊರಗಲ್ಲ ಸಂತತ ಶರಣ ಶಿವಯೋಗಿ.
ಕರಂಡದ ಗಂಧದಂತೆ, ಮೃತ್ತಿಕೆಯ ಹೇಮದಂತೆ
ಶುಕ್ತಿಯ ಅಪ್ಪುವಿನಂತೆ, ಶಿಲೆಕುಲದ ರತಿಯಂತೆ
ಮತ್ರ್ಯದ ಮತ್ತರ ಹೊದ್ದದ ಸ್ವಯಿಚ್ಫಾಪರ ಭಕ್ತ ಶಿವಯೋಗಿಗೆ
ಮತ್ರ್ಯ ಕೈಲಾಸವೆಂಬ ಗೊತ್ತಿಲ್ಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ. /96
ಸದ್ಯೋಜಾತಮುಖ ಚನ್ನಮಲ್ಲಿಕಾರ್ಜುನಲಿಂಗವಾಯಿತ್ತು.
ವಾಮದೇವಮುಖ ಭೋಗಮಲ್ಲಿಕಾರ್ಜುನಲಿಂಗವಾಯಿತ್ತು.
ಅಘೋರಮುಖ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವಾಯಿತ್ತು.
ತತ್ಪುರುಷಮುಖ ಶಾಂತಮಲ್ಲಿಕಾರ್ಜುನಲಿಂಗವಾಯಿತ್ತು.
ಈಶಾನಮುಖ ಇಂತೀ ಚತುರ್ವಿಧ ಆಚಾರ್ಯಂಗೆ
ಗುರುಮೂರ್ತಿಯಾದಲ್ಲಿ,
ಇಷ್ಟಲಿಂಗನ ಕೊಡಬೇಕೆಂದು ತನ್ನ ದೃಷ್ಟಕ್ಕೆ ದೃಷ್ಟನಾದೆಹೆನೆಂದು
ಬಂದುದನರಿತು ನಿಂದ ಮಾರ್ಗವೆ ಗುರುಸ್ಥಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ
ಉಭಯಮಾರ್ಗ ಗುರುಸ್ಥಲ./97
ಸಾಕ್ಷಿಯನಿಟ್ಟು ನಿಕ್ಷೇಪವ ನಿಕ್ಷೇಪಿಸುವಂತೆ
ದ್ವೈತವೆಂಬುದನರಿದು ಅದ್ವೈತವ ಕಾಣಬೇಕು.
ಕಂಡೆಹೆನೆಂಬನ್ನಕ್ಕ ಅದ್ವೈತವಿಲ್ಲ.
ವಿಕಾರದ ರೋಗಕ್ಕೆ ಸ್ವಪ್ನದ ಪಥ್ಯದಂತೆ
ಪೃಥ್ವಿಯ ಪಟದಲ್ಲಿ ಪಂಕವ ಕಡೆಗಾಣಿಸಿಹೆನೆಂಬಂತೆ
ಪಟ ಅಂಗಳವುಳ್ಳನ್ನಕ್ಕ ನೀರ ಸಂಗದಿಂದ ತೊಳೆದಹೆನೆಂದಡೆ
ಪಂಕದ ಬೀಜ ಸಂದೇಹವುಳ್ಳನ್ನಕ್ಕ ನಿಜಲಿಂಗದ ಹೊಲಬು ಕಾಣಬೇಕು.
ಇದರಲ್ಲಿಯೆ ಸ್ವಯವಚನ ವಿರುದ್ಧವ ತಿಳಿದು
ನಿಜವ ಬಲ್ಲವನಾಗಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ./98
ಸೂತಕಂಗಳಿಂದ ಜನನ, ಪ್ರಸೂತಕಂಗಳಿಂದ ಮರಣ.
ಕ್ರೀಯಿಂದ ನಿಃಕ್ರೀಯ ಜನನ, ನಿಃಕ್ರೀಯಿಂದ ಕ್ರೀಗೆ ಜನನ.
ಉಭಯದ ಪ್ರೇತಸೂತಕವಳಿದು ಆತ್ಮಂಗೆ ಅರಿವಾದಲ್ಲಿ
ಮುಂದಣ ಕುರುಹು ನಿಃಪತಿಯಾಯಿತ್ತು.
ಅದು ಆದಿಯ ವೃಕ್ಷ, ಅನಾದಿಯ ಬೀಜ.
ವಿಭೇದವಿಲ್ಲದ ಭೂಮಿಯಲ್ಲಿ ನಷ್ಟವಾಯಿತ್ತು.
ಇದ ಸಾಧಿಸಿದನಭೇದ್ಯ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ತಾನಾದ ಕಾರಣ. /99
ಸೂತ್ರ ಪ್ರಕರಣಗಳಿಂದ
ಏಕಸಂಜ್ಞೆ ದ್ವಯಸಂಪರ್ಕ, ತ್ರಿವಿಧಭೇದ
ಚತುರ್ಭಾಗ ಪಂಚವಿಂಶತಿ ಶಾಂಕರೀಯ
ರಘುಪ್ರಕಾರ, ಮೀಮಾಂಸಕಾ ಸೂತ್ರ
ವಿಷಮಸಂಧಿಭೇದಕಾ ಪ್ರಯೋಗ
ಪ್ರಾತಃಕಾಲ ರಿತು ಉಚಿತತಮ ತತ್ಕಾಲ ನಾರಣೀಯ
ಜೈಮಿನಿ ಭೇದ, ಪಾರಸೀಯ ಸಾಂಖ್ಯ ಕಾಪಾಲಿಕ ಬೌದ್ಧ ಶೈವ.
ಇಂತೀ ಆಗಮ ಸೂತ್ರ ನಾನಾವಿಲಕ್ಷಣ ಲಕ್ಷಣಂಗಳಲ್ಲಿ ತಿಳಿದಡೂ
ಕರ್ಮವಾರು ವರ್ಮ ಮೂರು
ಸದ್ಧರ್ಮವೊಂದರಲ್ಲಿ ನಿರತನಾಗಿ
ಸರ್ವಗುಣಸಂಪನ್ನನಾಗಿ ಲಿಂಗಪ್ರಾಣಿಯಾಗಿ
ಪ್ರಾಣಲಿಂಗಿಯಾಗಿ ನಿಂದಾತಂಗೆ ಅಂಗ ಆತ್ಮನೆಂಬ ಉಭಯದ ಸಂದಿಲ್ಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ. /100
ಸೃಷ್ಟಿಯೊಳಗಾದ ತೀರ್ಥಂಗಳ ಮೆಟ್ಟಿ ಬಂದಡೂ
ದೃಷ್ಟಿಮತಿ, ನಿಮುಷಮತಿ, ಭೇದಮತಿ[ವೇ]ದ್ಯಮತಿ
ಅಭೇದ್ಯಭೇದಕಮತಿ ಉಚಿತಮತಿ
ಸಾಮಮತಿ ದಾನಮತಿ ದಂಡಮತಿ
ಆತ್ಮಚಿಂತನಮತಿಗಳಲ್ಲಿ ನುಡಿದಡೂ ಪಂಡಿತನಪ್ಪನಲ್ಲದೆ
ವಸ್ತುವ ಮುಟ್ಟ.
ಇದಕ್ಕೆ ದೃಷ್ಟ ಮತ್ತರಿಗೆ ಹಾಕಿದ ಮುಂಡಿಗೆ.
ವಸ್ತುವನರಿದುದಕ್ಕೆ ಲಕ್ಷಣವೇನೆಂದಡೆ: ತಥ್ಯಮಿಥ್ಯವಳಿದು ರಾಗದ್ವೇಷ ನಿಂದು
ಆವಾವ ಗುಣದಲ್ಲಿಯೂ ನಿರ್ಭಾವಿತನಾಗಿ
ಸರ್ವಗುಣಸಂಪನ್ನನಾಗಿ ತತ್ಪ್ರಾಣ ಸಾವಧಾನವನರಿತು
ಬಂದ ಬಂದ ಮುಖದಲ್ಲಿ ಲಿಂಗಾರ್ಪಿತವ ಮಾಡಿ ನಿಂದುದೆ ನಿಜಲಿಂಗಾಂಗ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ./101
ಸ್ಥಲಂಗಳ ಭೇದ ವಿವರ: ವೇಣು ವೀಣೆ ಮೌರಿ ವಾದ್ಯಂಗಳಲ್ಲಿ
ವಾಯು ಅಂಗುಲಿಯ ಭೇದದಿಂದ ರಚನೆಗಳ ತೋರುವಂತೆ
ಘಟದ ಸ್ಥೂಲ ಸೂಕ್ಷ್ಮಂಗಳಲ್ಲಿ ತ್ರಾಣ ತತ್ರಾಣವಾದಂತೆ
ಅದು ಭಾವಜ್ಞಾನ ಷಟ್ಸ್ಥಲ ಕ್ರಿಯಾಭೇದದ ವಾಸ.
ಇಂತೀ ಉಭಯದೃಷ್ಟ ನಾಶವಹನ್ನಕ್ಕ ಐಕ್ಯಲೇಪನಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. /102
ಹಲವು ಗುಳಿಯ ಬೆಟ್ಟದ ಗುಂಟಿಗೆಯಂತೆ
ಸುಮುದ್ರೆ ಏಕವಾಗಿ ಹಲವು ಗುಣದಲ್ಲಿ ಸಲುವಂತೆ
ಆ ಗುಣ ನೆಲೆ ಆಚಾರ್ಯನಂಗ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಉಮಾಪತಿಯಾದ ಸಂಗ./103