Categories
ವಚನಗಳು / Vachanagalu

ಬಾಹೂರ ಬೊಮ್ಮಣ್ಣ ವಚನಗಳು

ಅಗ್ನಿಯ ಅಡಕವ, ನೀರಿನಲ್ಲಿ[ಯ] ಸಾರವ
ನಿರವಯದ ಹೊರೆಯ ಭೇದಿಸಿ ಕಾಬಂತೆ
ಅಗ್ನಿಗೆ ಮಥನದಿಂದ, ನೀರಿನ ಸಾರಕ್ಕೆ ಮಧುರದಿಂದ
ನಿರವಯದ ಹೊರೆಯಕ್ಕೆ ತನ್ನರಿವಿನ ಭೇದದಿಂದ
ಕಾಣಿಸಿಕೊಂಬುದು ತ್ರಿವಿಧಲಿಂಗಭೇದ, ಪ್ರಾಣಲಿಂಗಿಯ ಸಂಗ.
ಈ ಗುಣ ಸಂಗನಬಸವಣ್ಣನ ಸುಸಂಗ.
ಬ್ರಹ್ಮೇಶ್ವರಲಿಂಗವ ಕೂಡುವ ಕುರುಹಿನ ನಿರಂಗ./1
ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ?
ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ.
ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ.
ತ್ರಿವಿಧಮಲವನೊಲ್ಲೆನೆಂದು ತೊಟ್ಟವ.
ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ.
ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ
ಇನ್ನಾವ ಠಾವಿನಲ್ಲಿ ನುಂಗುವ ?
ಈ ಹೇಹ[ಯ]ವ ಬಿಡಿಸಾ ಎನಗೆ ಸಂಗನಬಸವಣ್ಣಾ.
ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ./2
ಅರಿದೆ ಮರೆದೆನೆಂಬನ್ನಕ್ಕ ಭಕ್ತಿವಿಶ್ವಾಸಭಾವಿಯಲ್ಲ.
ಇನ್ನರಿಯಲಿಲ್ಲ, ಮುಂದೆ ಒಂದು ಕುರುಹಿಲ್ಲ
ಎಂಬನ್ನಕ್ಕ ಪರವಸ್ತುಭಾವಿಯಲ್ಲ.
ನಾನೆಂಬನ್ನಕ್ಕ ತಾನಿದ್ದು ಮುಂದೆ ಏನೂ ಇಲ್ಲವೆಂಬುದು ನಿಜವೆ ?
ತಾನೆಂಬುದನಳಿದು ಮುಂದೆ ಏನೂ ಇಲ್ಲಾಯೆಂಬುದು ನಿಜವಾಗಿ
ಅದು ನಿಭರ್ಾವವಾದುದು ಸಂಗನಬಸವಣ್ಣನ ಐಕ್ಯ.
ಬ್ರಹ್ಮೇಶ್ವರಲಿಂಗದ ಕುರುಹು ನಾಮನಷ್ಟ./3
ಅಹಂಕಾರಿಗೆ ಗುರುಭಕ್ತಿಯಿಲ್ಲ.
ಪರಸೇವೆಯುಳ್ಳವಂಗೆ ಲಿಂಗಪೂಜೆಯಿಲ್ಲ.
ಋಣಾನುಸಂಬಂದಿಗೆ ಮಾಟದ ಮರ್ಮವಿಲ್ಲ.
ಇಂತೀ ತ್ರಿವಿಧಭೇದದ ಕೂಟವನರಿತು
ಸಂಗನಬಸವಣ್ಣನ ಆಟದಂತೆ
ಬ್ರಹ್ಮೇಶ್ವರಲಿಂಗದಲ್ಲಿ ಕೂಟಸ್ಥನಾಗಬೇಕು./4
ಆತ್ಮ ಒಂದೆಂದಲ್ಲಿ, ಇಂದ್ರಿಯಂಗಳು ಹಲವು ತೆರನಾದವು ನೋಡಾ.
ವಾಯು ಒಂದೆಂದಡೆ, ಒಂಬತ್ತು ಸಂಧಿಸಿದವು ನೋಡಾ.
ಇಂದ್ರಿಯ ಒಂದೆಂದಡೆ, ನಾಲ್ಕು ಸಂದಣಿಸಿದವು ನೋಡಾ.
ಮದ ಒಂದೆಂದಡೆ, ಏಳು ಸಂಭ್ರಮಿಸುತಿವೆ ನೋಡಾ.
ಕಳೆ ಒಂದೆಂದಡೆ, ಹದಿನೈದು ಹಿಂಗದಿವೆ ನೋಡಾ.
ಇಂತೀ ಸ್ಥೂಲತನು ಒಂದೆಂದಡೆ, ಸೂಕ್ಷ್ಮಕಾರಣ ದ್ವಂದ್ವವಾಗಿವೆ ನೋಡಾ.
ಜೀವ ಒಂದೆಂದಡೆ, ಪರಮಾತ್ಮನೆಂದು ತ್ರಿವಿಧ ಸಂಗವಾಗಿದೆ ನೋಡಾ.
ಅರಿದೆನೆಂಬಲ್ಲಿ ಹಿಂದೊಂದು ಮರವೆ, ಮರೆದೆನೆಂಬಲ್ಲಿ ಮುಂದೊಂದರಿವು.
ಇಂತೀ ದಂಪತಿ ಸಂಗವುಳ್ಳನ್ನಕ್ಕ ಏನನಹುದೆಂಬೆ, ಏನನಲ್ಲಾ ಎಂಬೆ !
ನುಡಿದಡೆ ಸಮಯಕ್ಕೆ ದೂರ, ಸುಮ್ಮನಿದ್ದಡೆ ಸ್ವಾನುಭಾವಕ್ಕೆ ದೂರ.
ಆರೆಂದಡೂ ಎನಲಿ, ಆವ ಸ್ಥಲದಲ್ಲಿ ನಿಂದಡೂ ಭಕ್ತಿಸ್ಥಲವೆ.
ವಸ್ತುವ ನೆಮ್ಮುವುದಕ್ಕೆ ವಿಶ್ವಾಸ.
ಇದು ಸಂಗನಬಸವಣ್ಣನ ಕಟ್ಟು, ಬ್ರಹ್ಮೇಶ್ವರಲಿಂಗವ ಮುಟ್ಟುವ ಗೊತ್ತು./5
ಆರುಸ್ಥಲದಲ್ಲಿ ನಿಂದು ನಿಜವಸ್ತುವ ಭೇದಿಸಿ ಕಂಡೆಹೆನೆಂದಡೆ
ಆ ಭಕ್ತನ ಭಕ್ತ, ಆ ಮಾಹೇಶ್ವರನ ಮಾಹೇಶ್ವರ, ಆ ಪ್ರಸಾದಿಯ ಪ್ರಸಾದಿ,
ಆ ಪ್ರಾಣಲಿಂಗಿಯ ಪ್ರಾಣಲಿಂಗಿ, ಆ ಶರಣನ ಶರಣ, ಆ ಐಕ್ಯನ ಐಕ್ಯ.
ಇಂತಿವರೊಳಗಿನಲ್ಲಿ ಮಿಶ್ರಭೇದಂಗಳಾಗಿ, ಸ್ಥಲನಾಮವಾಗಿ,
ವರ್ಣಭೇದವನಿಟ್ಟು, ಬೀಜದೊಳಗೆ ಬೇರು ಶಾಖೆ ಪರ್ಣ ಅಂಕುರ ಫಲ
ಮುಂತಾದ ಭೇದಂಗಳೆಲ್ಲವೂ ಬೀಜದಲ್ಲಿ ಅಡಗಿಪ್ಪಂತೆ
ಚಿತ್ತುವಿನಲ್ಲಿ ಸುಚಿತ್ತದಲ್ಲಿ ಅಡಗಿಪ್ಪ ಏಕವಸ್ತುವ
ಹಲವು ತೆರದಲ್ಲಿ ಹೊಲಬಿಗನಾಗಿ ಕಂಡೆಹೆನೆಂದಡೆ
ಒಂದೇ ಹೊಲಬಿನ ವಿಶ್ವಾಸದಿಂದಲ್ಲದೆ ಆಗದು.
ಅದು ಹಲವು ಕುಂಭದಲ್ಲಿ ತೋರುವ ವರುಣನ ಕಿರಣದಂತೆ.
ವಿಶ್ವಮುಖದಿಂದ ಕಂಡೆಹೆನೆಂದಡೆ ವಿಶ್ವಾಸದಿಂದಲ್ಲದೆ ಆಗದು.
ಆ ವಿಶ್ವಾಸ ಉಭಯವನಳಿದಲ್ಲಿ ಷಡುಸ್ಥಲಭರಿತ, ಸರ್ವಸ್ಥಲ ಸಂಪೂರ್ಣ.
ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು
ಅರಿತವಂಗಲ್ಲದೆ ಸಾಧ್ಯವಲ್ಲ ನೋಡಾ./6
ಆವ ಭಕ್ತಿ ಸನ್ಮಾರ್ಗದಲ್ಲಿ ನಡೆವಲ್ಲಿ ಭಕ್ತಂಗೆ ಗುರುಭಕ್ತಿ,
ಮಾಹೇಶ್ವರಂಗೆ ಲಿಂಗಭಕ್ತಿ, ಪ್ರಸಾದಿಗೆ ಜಂಗಮಭಕ್ತಿ,
ಪ್ರಾಣಲಿಂಗಿಗೆ ಸರ್ವ ಅವಧಾನ, ಶರಣಂಗೆ ಪರಿಪೂರ್ಣತ್ವ,
ಐಕ್ಯಂಗೆ ಇಂತೀ ಐದು ಗುಣಲೇಪ.
ಆರೆಂಬುದ ಮೀರಿ ತೋರಿದಲ್ಲಿ ಷಡುಸ್ಥಲ ಶುದ್ಧ
ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಾಟ. /7
ಆವ ಸ್ಥಲ ಸಾಧಿಸಿ ಬಂದು ನಿಂದಡೂ
ಭಾವಶುದ್ಧಾತ್ಮವಾಗಿ ವೇಧಿಸುವುದೊಂದೆ ವಸ್ತು.
ಅದು ಭಕ್ತಿಯ ಬೇರು, ಸದಾಶ್ರದ್ಧೆಯ ಶಾಖೆ,
ವಿಶ್ವಾಸದ ಫಲ, ನಿಜತತ್ವದ ರಸ, ಸ್ವಯದ ಸಾದು.
ಅದು ಸಂಗನಬಸವಣ್ಣನಿಂದ ಬಂದ ಬೆಳೆ,
ಬ್ರಹ್ಮೇಶ್ವರಲಿಂಗದಲ್ಲಿ ಐಕ್ಯವಾಯಿತ್ತು./8
ಆವುದೊಂದು ಕರ್ಮಂಗಳ ವ್ಯಾಪಾರಿಸಿ ಮಾಡುವಲ್ಲಿ
ಸತ್ವಕ್ಕೆ ತಕ್ಕ ಸಾಮಥ್ರ್ಯವನರಿತು
ಆ ವ್ರತ ಕ್ರೀ ವರ್ತನಂಗಳ ಹಿಡಿದಲ್ಲಿ
ಹಿಂದಣ ನಗೆಗೆಡೆ, ಮುಂದಣ ಹಾಸ್ಯರಸಕ್ಕೆ ಒಳಗಲ್ಲದೆ
ನುಡಿದ ಮಾತಿಂಗೆ ನಡೆ ಶುದ್ಧವಾಗಿ,
ಆ ನಡೆವ ನಡೆಗೆ ಕ್ರೀ ಶುದ್ಧವಾಗಿ,
ಆ ಕ್ರೀಯಲ್ಲಿ ವ್ರತಭಂಗವಿಲ್ಲದೆ ಇಪ್ಪುದು, ಸದ್ಭಕ್ತನ ಸಂಬಂಧ.
ಈ ಗುಣ ಸಂಗನಬಸವಣ್ಣನ ಶ್ರದ್ಧೆ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ಕ್ರಿಯಾಮಾರ್ಗ. /9
ಉಪಾಧಿಕಂಗೆ ಆವ ವ್ರತ, ತ್ರಿವಿಧ ಭಕ್ತಿ ಏನೂ ಇಲ್ಲ.
ನಿರುಪಾಧಿಕಂಗೆ ಅವಾವ ವ್ರತ, ತ್ರಿವಿಧಭಕ್ತಿ ಉಂಟು.
ಸ್ವಯಾನುಭಾವಿಗೆ ಇದಿರ ದಯೆ ದಾಕ್ಷಿಣ್ಯ
ತನ್ನಯ ಅರಿವಿನ ವಿಲಾಸಿತದ ಲಕ್ಷ.
ಸರ್ವಗುಣದಲ್ಲಿ ಸನ್ನದ್ಧನಾಗಿಪ್ಪುದು ಸ್ವಯಾನುಭಾವದ ಸಂಬಂಧ.
ಇಂತೀ ಖಂಡಿತ ಅಖಂಡಿತ ಪರಿಪೂರ್ಣತ್ವ ವಿಭೇದವಿಲ್ಲದೆ
ಪೂರ್ಣತ್ವವಾಗಿ ಇಪ್ಪುದು ಸಂಗನಬಸವಣ್ಣನ ಸತ್ಕ್ರೀಮಾರ್ಗ,
ಬ್ರಹ್ಮೇಶ್ವರಲಿಂಗವನರಿದೆಹೆನೆಂದು
ಉಪಾಧಿಕೆ ನಿರುಪಾಧಿಕೆಯೆಂಬುದನರಿದು ಸ್ವಯವ ಕೂಡಿಹೆನೆಂದು./10
ಎಲೆಗಳೆದ ವೃಕ್ಷಕ್ಕೆ ತಳಿರ ಕೊನರಲ್ಲದೆ
ಬೇರು ಸಾರಗೆಟ್ಟು ನಷ್ಟವಾದ ತರುವಿಂಗೆ ಮತ್ತೆ ಅಂಕುರವುಂಟೆ ?
ತ್ರಿವಿಧಮಲಕ್ಕೆ ದೂರಸ್ಥನಾಗಿ ಅಪೇಯವೆಂದು ಬಿಟ್ಟಲ್ಲಿ
ಮತ್ತರಿದು ಹಿಡಿದೆಹೆನೆಂದಡೆ ಪೇಯವಪ್ಪುದೆ ?
ತಳನನಗೆದು ಮೇಲನರಿಯದೆ ಬೀಳಿಸಿಕೊಂಬವನಂತೆ
ತನ್ನ ಊಣೆಯವ ತಾನರಿಯದೆ
ಮೂಕೊರತಿ ಮೂಕುತಿಯ ಮಣಿಯ
ತನಗೆಂದು ವಿಚಾರಿಸುವಂತೆ
ಇಂತೀ ನಿರ್ವಾಣ ಬರುದೊರೆವೋಯಿತ್ತಲ್ಲಾ ಸಂಗನಬಸವಣ್ಣಾ.
ಇವರುವನರಿಯದಂತೆ
ಬ್ರಹ್ಮೇಶ್ವರಲಿಂಗಕ್ಕೆ ಉರಿಯದೆ ಹೋದರಲ್ಲಾ. /11
ಕಲ್ಲರೂಪು ಕಬ್ಬ ಮೆಲುವಾಗ,
ಎತ್ತಿದ ವಿಮಾನದಲ್ಲಿಪ್ಪ ಸದ್ಗುರು ಬರುವಾಗ,
ಹೂಳಿದ ವೃಷಭ ಕಲೆವಾಗ,
ಇಂತಿವು ಭಾವದ ಬಲ್ಮೆ, ಸತ್ಯದ ಚಿತ್ತ, ಚಿತ್ತದ ಹೆಚ್ಚುಗೆ.
ಇಂತೀ ಗುಣ ಸಂಗನಬಸವಣ್ಣನ ಉತ್ಸಾಹ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ನಿಶ್ಚಯದ ವಿಶ್ವಾಸ./12
ಕಾದ ಲೋಹದ ಮೇಲೆ ನೀರನೆರೆದಡೆ
ನೀರ ಕುಡಿದುದು ಕಾಹೊ, ಕಬ್ಬುನವೊ ?
ಎಂಬುದನರಿತಲ್ಲಿ ಅಂಗಲಿಂಗಸಂಬಂಧಿ.
ಕ್ಷೀರ ಉಕ್ಕುವಲ್ಲಿ ಆರೈದು ನೀರನೆರೆದಡೆ
ಆ ನೀರ ಕುಡಿದುದು ಹಾಲೊ, ಹಂಚೊ ?
ಎಂಬುದ ಕಡೆಗಾಣಿಸಿದಲ್ಲಿ ಕ್ರೀ ಜ್ಞಾನ ಆತ್ಮಲಿಂಗಸಂಬಂಧಿ.
ಇಂತೀ ಉಭಯದ ಒಳಗನರಿತಲ್ಲಿ
ಕ್ರೀಗೆ ವರ್ತನೆ, ಅರಿವಿಂಗೆ ಕೂಟ.
ಈ ಗುಣ ಸಂಗನಬಸವಣ್ಣನ ಆಟ.
ಬ್ರಹ್ಮೇಶ್ವರಲಿಂಗದ ಒಳಗನರಿದವರಾಟ./13
ಕಾಯ ತೊಟ್ಟಿನಲ್ಲಿ ನೀರ ಬಿಟ್ಟಡೆ
ಕಾಯಿ ನಿಂದುದುಂಟೆ ಬೇರೊಣಗಿದ ಮತ್ತೆ ?
ಇಂತೀ ಮೂಲಭೇದದಿಂದ ಶಾಖೆ ಪರ್ಣ ಫಲವಲ್ಲದೆ
ಮೊದಲಿಗೆ ನಷ್ಟಲಾಭಕ್ಕೆ ದಿನವುಂಟೆ ?
ಜ್ಞಾನಹೀನನು ಆವ ಸ್ಥಲವ ನೆಮ್ಮಿ ಮಾತನಾಡಿದಡೂ
ಷಡುಸ್ಥಲದಲ್ಲಿ ಭಾವಶುದ್ಭವಾಗಿಪ್ಪನೆ ?
ಇದು ಕಾರಣದಲ್ಲಿ ಗುರುವಾಜ್ಞೆಯ ಮೀರದೆ
ಶಿವಲಿಂಗಪೂಜೆಯ ಮರೆಯದೆ
ಜಂಗಮಸೇವೆಯಲ್ಲಿ ಸನ್ನದ್ಧನಾಗಿ
ಆವುದಾನೊಂದು ವ್ರತವೆಂದು ಹಿಡಿದು
ಅದ್ವೈತವನರಿದೆನೆಂದು ಬಿಡದೆ
ನಿಂದನಿಂದ ಸ್ಥಲಕ್ಕೆ ನಿಬದ್ಧಿಯಾಗಿ ನಿಂದಲ್ಲಿಯೆ
ಲಿಂಗಸಂಗ ಸಂಗನಬಸವಣ್ಣನ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವನರಿದುದು./14
ಕೃಷಿಯಿಂದ ಮುಂದಣ ಫಲವ ಕಾಬಂತೆ
ಅಸಿಕಲಿಯಿಂದ ಮುಂದಣ ಅರಿಬಲವ ಗೆಲುವಂತೆ
ಸತ್ಕ್ರೀಮಾರ್ಗ ಮರ್ಮ ಧರ್ಮಂಗಳನರಿದು
ಮುಂದಣ ಆಸುರ ಕರ್ಮಂಗಳ ತಮ ಬಂಧಂಗಳನೀಸಿ
ಗೆಲುವುದಕ್ಕೆ ಇಷ್ಟಲ್ಲದಿಲ್ಲ.
ಇದು ವಸ್ತುಪೂಜಕನ ವಿಶ್ವಾಸ, ಸಂಗನಬಸವಣ್ಣನ ಸಂಬಂಧ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ವಿಶ್ವಾಸಭಿತ್ತಿ./15
ಕೊರಡು ಕೊನವರುವದಲ್ಲಿ, ಬರಡು ಹಯನಾದಲ್ಲಿ
ಚಿತ್ರದ ಬೊಂಬೆ ನಿಜಕರ್ತೃರೂಪಾಗಿ ಬಂದಲ್ಲಿ
ಅವು ಹಾಹೆಯ ದೃಷ್ಟವೋ, ವಿಶ್ವಾಸಿಯ ಚಿತ್ತವೋ ?
ಇದು ಭಕ್ತಿಯ ಹೊಲಬಿಗೆ ಮುಖ್ಯ.
ಸಂಗನಬಸವಣ್ಣನ ಸತ್ಯ, ಬ್ರಹ್ಮೇಶ್ವರಲಿಂಗವ ಕೂಡುವ ಕೃತ್ಯ./16
ಗುರು ಅಳಿದಲ್ಲಿ ಗುರುಪಟ್ಟವೆಂದು ಕಟ್ಟಿ
ಪರಮ ಗುರುವೆಂದು ಶರಣೆಂಬಲ್ಲಿ ಲಿಂಗಬಾಹ್ಯವಾಗಿ
ಅಂಗವ ಹರಿದುಹೋದಲ್ಲಿ ಮತ್ತೊಂದು ಲಿಂಗ ಉಂಟೆಂದು
ಕಟ್ಟಿಕೊಳ್ಳರೇತಕ್ಕೆ ?
ಗುರು ಪೂರ್ವ, ಲಿಂಗ ಉತ್ತರವೆ ?
ಗುರು ಆದಿ, ಲಿಂಗ ಅನಾದಿಯೇ ? ಇದು ಕಾರಣದಲ್ಲಿ
ಗುರುಭಕ್ತಿ ಅರಿಬಿರಿದು, ಲಿಂಗಭಕ್ತಿ ಎತ್ತಲಾನು
ಒಬ್ಬ ಜಂಗಮಭಕ್ತಿಗೆ ಸಂಗನಬಸವಣ್ಣನಲ್ಲದಿಲ್ಲ
ಬ್ರಹ್ಮೇಶ್ವರಲಿಂಗ ಸಾಕ್ಷಿಯಾಗಿ./17
ಗುರು ಭಕ್ತನಾದಲ್ಲಿ ಗುರುವಳಿದು ತಾನುಳಿದಡೆ ಗುರು ಭಕ್ತನಲ್ಲ.
ಲಿಂಗ ಭಕ್ತನಾದಡೆ ಜಾಗ್ರಜಾಹೆಗಳಲ್ಲಿ ತನ್ನಂಗವ ಬಿಟ್ಟು
ಲಿಂಗ ಹಿಂಗಿದಲ್ಲಿಯೆ, ಆತ್ಮ ಒಡಗೂಡಿದಲ್ಲಿಯೆ ಲಿಂಗ ಭಕ್ತನಲ್ಲ.
ಜಂಗಮ ಭಕ್ತನಾದಡೆ ಕಳವು ಹಾದರ ದುರ್ಗುಣದಿಂದ
ಕಡಿಯಿಸಿಕೊಂಬಲ್ಲಿ, ಬಿಡಿಸದೆ ತಾನಡಗಿ
ಅರಿಯದಂತಿದ್ದಾಗವೆ ಜಂಗಮ ಭಕ್ತನಲ್ಲ.
ಇಂತೀ ತ್ರಿವಿಧ ಭಾವಂಗಳಲ್ಲಿ
ಘಟದ ಸಂದನಳಿದವಂಗಲ್ಲದೆ ತ್ರಿವಿಧಭಕ್ತಿಯಿಲ್ಲ.
ಈ ಗುಣ ಸಂಗನಬಸವಣ್ಣಂಗಲ್ಲದೆ ಸಾಧ್ಯವಿಲ್ಲ.
ಬ್ರಹ್ಮೇಶ್ವರಲಿಂಗವನರಿದವರಿಗೂ ಅಸಾಧ್ಯ ನೋಡಾ./18
ಗುರುನಿಷ್ಠೆ ಲಿಂಗನಿಷ್ಠೆ ಜಂಗಮನಿಷ್ಠೆ.
ಈ ತ್ರಿವಿಧ ನಿಷ್ಠೆಯಲ್ಲಿ ಏಕಾಂಗಲಿಂಗನಿಷ್ಠೆ
ವೀರಧೀರಂಗಲ್ಲದಾಗದು.
ಇದು ಸಂಗನಬಸವಣ್ಣನಿಂದ ಬಂದ ಸಂತತಿಗಲ್ಲದಾಗದು.
ಬ್ರಹ್ಮೇಶ್ವರಲಿಂಗವನರಿವುದಕ್ಕೆ
ತ್ರಿಗುಣಸಂದೇಹಿಗಳಿಗೆ ವಸ್ತು ಸಂಧಿಸದು ನೋಡಾ./19
ಗುರುಭಕ್ತಿ ಉಂಟು, ಲಿಂಗಭಕ್ತಿ ಉಂಟು.
ಜಂಗಮಭಕ್ತಿ ಎತ್ತಲಾನೆ ಉಂಟು.
ತನ್ನನರಿದು ಇದಿರ ಕಾಬ ಜ್ಞಾನಭಕ್ತಿ
ಚೆನ್ನಬಸವಣ್ಣಂಗೆ ಸಾಧ್ಯವಾಯಿತ್ತು ನೋಡಾ.
ಅದು ಅರಿದರುವಿಂಗೆ ಮುನ್ನವೆ ಕುರುಹಿಟ್ಟ ನಿಜ.
ಆ ಗುಣ ಸಂಗನಬಸವಣ್ಣ ಬಂದ ಹಾದಿ, ಬ್ರಹ್ಮೇಶ್ವರಲಿಂಗದಲ್ಲಿಗಾಗಿ./20
ಗುರುವಿನಲ್ಲಿ ಅನುವನರಿತವಂಗೆ
ಮತ್ತೆ ಗುರು ನಿರೂಪವೆಂಬುದಿಲ್ಲ.
ಪ್ರಾಣವೆ ಲಿಂಗವಾದವಂಗೆ ನೆನಹಿಂಗೆ ಎಡೆದೆರಪಿಲ್ಲ.
ಸರ್ವದಯೆ ಸಂಪೂರ್ಣನಾದವಂಗೆ
ಇಕ್ಕಿಹೆ ಎರೆದಿಹೆನೆಂಬ ತೋಟಿಯ ತೊಡಕಿಲ್ಲ.
ಇಂತಿವನೊಳಗನರಿದು ವೇಧಿಸುವನ್ನಕ್ಕ
ಗುರುವಿನ ಆಜ್ಞೆ, ಲಿಂಗದ ಪೂಜೆ,
ಮಾಟಕೂಟದ ಬೇಟವ ಬಿಡಲಿಲ್ಲ.
ಇದು ಸಂಗನಬಸವಣ್ಣನಾಟ, ಬ್ರಹ್ಮೇಶ್ವರಲಿಂಗದ ಕೂಟ/21
ಚಂದ್ರಕಾಂತದ ಶಿಲೆಯಲ್ಲಿ ಬಿಂದುವಿದ್ದಡೆ
ಹಿಂಡಿ ಹಿಳಿದಡೆ ಬಂದುದುಂಟೆ ಆ ಬಿಂದು ?
ವರುಣ ಶಿಲೆಯಲ್ಲಿ ಉರುಹಿ ನೋಡಲಿಕ್ಕೆ
ಉರಿದುದುಂಟೆ ಅನಲ ?
ಅವು ತಮ್ಮ ಒಲವರದ ಸಾಮ್ಯಕ್ಕಲ್ಲದೆ ಫಲಿಸುವುದಿಲ್ಲ.
ಇಂತೀ ತೆರದಂತೆ ಕ್ರೀ ಜ್ಞಾನ ಎಲ್ಲವ ಬಲ್ಲೆನೆಂದು
ಅಡ್ಡವಾಯ್ದು ಅಲ್ಲಲ್ಲಿ ನುಡಿದಡೆ
ನಿಜವಸ್ತು ಸಲ್ಲೀಲೆಯಲ್ಲಿಪ್ಪನೆ ?
ಶ್ರದ್ಧೆ ಸನ್ಮಾಗರ್ಿಗಳಲ್ಲಿಯಲ್ಲದೆ ಗೆಲ್ಲಗೂಳಿಗಳಲ್ಲಿಯಿಲ್ಲ.
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವು ಅವರಲ್ಲಿ ಇಲ್ಲವಾಗಿ/22
ತ್ಯಾಗಾಂಗನಾಗಿ ಕೊಡುತ್ತಿದ್ದಲ್ಲಿ
ಭೋಗಾಂಗನಾಗಿ ಸುಖಿಸುತ್ತಿದ್ದಲ್ಲಿ
ಯೋಗಾಂಗನಾಗಿ ವಾಯುದ್ವಾರ ಭೇದಂಗಳನರಿತು
ಧ್ಯಾನ ಧಾರಣ ಸಮಾಧಿಗಳಲ್ಲಿದ್ದಡೂ ಒಂದು ಕುರಿತು ಲಕ್ಷಸಿ
ವಸ್ತು ಇದೇನೆಂದು ವಿಶ್ವಾಸದಿಂದಲ್ಲದಾಗದು.
ಹಿಂದಕ್ಕಾದ ದೇವಪದವಂತರು
ಮುಂದಕ್ಕೆ ಅರಿದು ಕೂಡುವ ಅರುಹಿರಿಯ ಶರಣತತಿಗಳೆಲ್ಲರು
ವಿಶ್ವಾಸದಿಂದಲ್ಲದೆ ದೃಷ್ಟವ ಕಾಣರು.
ಇದು ಕಾರಣ, ಬಾಹ್ಯಕರ್ಮ ಅಂತರಂಗ ಶುದ್ಧ
ನಿರವಯವೆಂಬುದೊಂದು ಕುರುಹಿನ ನೆಮ್ಮುಗೆ
ಉಂಟಹನ್ನಕ್ಕ ವಿಶ್ವಾಸಬೇಕು.
ಇದು ಸಂಗನಬಸವಣ್ಣ ಕೊಂಡು ಬಂದ ಲಿಂಗದ ಬಟ್ಟೆ.
ಬ್ರಹ್ಮೇಶ್ವರಲಿಂಗವೆಂಬ ವಸ್ತುವ ಕೂಡುವ ದೃಷ್ಟ./23
ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ
ಶ್ರುತಿ ವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ
ಮೂರುಮಲದ ಭೇದವನರಿತು
ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ.
ಇದು ಸಂಗನಬಸವಣ್ಣನ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವ ಕೂಡಬೇಕು./24
ನಿಂದ ನೆಲೆಯ ನೀರಿನಂತೆ
ಮರ ಶಿಲೆಯಲ್ಲಿ ಸಂಧಿಸಿ ನಿಂದ ಪಾವಕನಂತೆ
ಕರಂಡದಲ್ಲಿ ಬಂಧಿಸಿ ನಿಂದ ಸುವಾಸನೆಯಂತೆ
ಈ ಅಂಗದಲ್ಲಿ ನಿಂದ ನಿಜಲಿಂಗಾಂಗಸಂಗಸಂಬಂಧ.
ಈ ಗುಣ ಸಂಗನಬಸವಣ್ಣಂಗೆ ಸಂಬಂಧವಾಯಿತ್ತು.
ಬ್ರಹ್ಮೇಶ್ವರಲಿಂಗವು ಅವರಿಗೆ ಒಳಗಾದ. /25
ಬಯಲು ಬೆಳಗುಳ್ಳನ್ನಕ್ಕ
ಮುಂದೊಂದು ಕುರುಹಿನ ಕುಲ ಬಿಡದು.
ಕುರುಹುಳ್ಳನ್ನಕ್ಕ ಅರಿದೆಹೆನೆಂಬ ಭಾವ.
ಆ ಅರಿಕೆಯೆಂಬುದು ವಿಶ್ವಾಸದಿಂದಲ್ಲದೆ ಕಾಣಬಾರದು.
ಇದು ಸಂಗನಬಸವಣ್ಣ ಸಂಧಿಸಿದ ಸಂಬಂಧ.
ಬ್ರಹ್ಮೇಶ್ವರಲಿಂಗವ ವಿಶ್ವಾಸದಿಂದಲ್ಲದೆ ಸಂಬಂಧಿಸಬಾರದು./26
ಬಾಗಿಲವಾಡವ ಬಳಸಿ ಬಂಧದಲ್ಲಿಕ್ಕಿದಡೂ
ಮರೆಯ ಭೇದವಲ್ಲದೆ ನಿಳಯಕ್ಕೆ ಹೋಹುದ ತಪ್ಪದು.
ತತ್ವಂಗಳ ವಿಚಾರಿಸಿ, ಸ್ಥಲಂಗಳ ವಿಸ್ತರಿಸಿ
ಪರಿಪೂರ್ಣ ಪೂರ್ಣಂಗಳೆಂಬಲ್ಲಿ ವಿಶ್ರಮಿಸಿ
ಅರಿವುದೊಂದು ಅರುಹಿಸಿಕೊಂಬುದೊಂದು.
ಉಭಯವನೇಕೀಕರಿಸಿ ನಿಂದಾತನೆ ಪರಮಸುಖಿ.
ಇದು ಸಂಗನಬಸವಣ್ಣನಿಕ್ಕಿದ ಭಿತ್ತಿ.
ಬ್ರಹ್ಮೇಶ್ವರಲಿಂಗದಲ್ಲಿ ಎಯ್ದುವ ಸುಪಥದ ಪಥ./27
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ ?
ಇಂತೀ ಇವಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು.
ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು.
ಇದು ಸಂಗನಬಸವಣ್ಣನ ಭಕ್ತಿ
ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ./28
ಬೀಜ ಹುಟ್ಟುವ ತತ್ಕಾಲವೆಂತೆಂದಡೆ:
ಹೊಯ್ದಿದ್ದ ಹೊಯಿಗಿಲದಲ್ಲಿಯೆ ಬೇರು ಬಿಟ್ಟು, ಸಸಿ ಬೆಳೆದು
ಎಲೆ ನೀಡಿ ಫಲ ಬೆಳೆದುದುಂಟೆ ?
ಸಕಲ ಸ್ಥಲ ಕುಳವನರಿತ ಬ್ರಹ್ಮಿ ತಾನೆಂದಡೆ
ಅರ್ಚನೆ ಅರತು, ಪೂಜೆ ನಿಂದು, ಸತ್ಯ ಕೆಟ್ಟು
ಭಕ್ತಿ ಹಾರಿದಲ್ಲಿ, ಆತ ನಿಜತತ್ವಜ್ಞನಪ್ಪನೆ ?
ಇದು ವಿಶ್ವಾಸದ ಭಿತ್ತಿ, ವಿರಕ್ತಿಯ ನಿಳಯ.
ಸಂಗನಬಸವಣ್ಣ ಭಕ್ತಿ ವಿರಕ್ತಿಗಿಕ್ಕಿದ ಕಟ್ಟು.
ಬ್ರಹ್ಮೇಶ್ವರಲಿಂಗವ ಮುಟ್ಟುವ ಮುಟ್ಟು./29
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು.
ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು.
ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ
ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು.
ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ
ನಿಂದು ಸೋಂಕುವ ದುರ್ಗುಣ
ಉಭಯ ಸೋಂಕುವುದಕ್ಕೆ ಮುನ್ನವೆ
ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು.
ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ
ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ
ರಾಗವಿರಾಗವೆಂಬುದಕ್ಕೆ ಮನವಿಕ್ಕದೆ
ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ
ಮದಗಜದಂತೆ ಇದಿರನರಿಯದಿಪ್ಪುದು.
ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ
ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ
ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ
ಬಿಂಬದೊಳಗಣ ತರಂಗದ ವಿಸ್ತರದಂಗದಂತೆ
ಇಂತೀ ಷಟ್ಸ್ಥಲಕ್ಕೆ ನಿರ್ವಾಹಕವಾಗಿ
ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ./30
ಭಕ್ತಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಭಕ್ತಸ್ಥಲ.
ಮಾಹೇಶ್ವರಂಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಪ್ರಸಾದಿಸ್ಥಲ.
ಪ್ರಾಣಲಿಂಗಿಗೆ ಐಕ್ಯಸ್ಥಲ, ಐಕ್ಯಂಗೆ ಭಕ್ತನ ವಿಶ್ವಾಸವನರಿತು
ಮಾಹೇಶ್ವರನ ಪ್ರಸನ್ನತೆಯ ಕಂಡು
ಪ್ರಸಾದಿಯ ಪರಿಪೂರ್ಣತ್ವವನರಿದು
ಪ್ರಾಣಲಿಂಗಿಯ ಉಭಯವ ತಿಳಿದು ನಿಂದುದ ಕಂಡು,
ಇಂತೀ ಚತುಷ್ಟಯ ಭಾವ ಏಕವಾಗಿ
ಶರಣನ ಸನ್ಮತದಲ್ಲಿ ಅಡಗಿ, ಒಡಗೂಡಿದಲ್ಲಿ
ಐಕ್ಯಂಗೆ ಬೀಜನಾಮ ನಿರ್ಲೆಪ, ಇಂತೀ ಸ್ಥಲಭಾವ.
ಪಶುವಿನ ಪಿಸಿತದ ಕ್ಷೀರವ, ಶಿಶುವಿನ ಒಲವರದಿಂದ ತೆಗೆವಂತೆ
ಆ ಕ್ಷೀರದ ಘೃತವ, ನಾನಾ ಭೇದಂಗಳಿಂದ ವಿಭೇದಿಸಿ ಕಾಬಂತೆ
ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ಫಲ, ಪ್ರಸಾದಿಗೆ ನಿಷ್ಠೆ,
ಪ್ರಾಣಲಿಂಗಿಗೆ ಮೂರ್ತಿಧ್ಯಾನ, ಶರಣಂಗೆ ನಿಬ್ಬೆರಗು,
ಐಕ್ಯಂಗೆ ಈ ಐದು ಲೇಪವಾದ ನಿರ್ನಾಮ.
ಇಂತೀ ಷಟ್ಸ್ಥಲವ ನೆಮ್ಮಿ ಕಾಬುದು ಒಂದೆ ವಿಶ್ವಾಸ.
ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು
ಅರಿದವನಿಗಲ್ಲದೆ ಸಾಧ್ಯವಲ್ಲ ನೋಡಾ./31
ಭಕ್ತಂಗೆ ವಂದಿಸಿ ನಿಂದಿಸಿದಲ್ಲಿಯೆ ವಿಶ್ವಾಸ ಜಾರಿತ್ತು.
ವಿರಕ್ತಂಗೆ ಸುಗುಣ ದುರ್ಗುಣವ ಸಂಪಾದಿಸಿದಲ್ಲಿಯೆ
ವಿವೇಕ ಹೋಯಿತ್ತಯ್ಯಾ.
ಕಣ್ಣಿನಲ್ಲಿ ಮುಳ್ಳುಮುರಿದಂತೆ
ಚುಚ್ಚಿ ತೆಗೆಯಬಾರದು, ವೇದನೆ ಬಿಡದು.
ವರ್ತನೆಗೆ ಭಂಗ, ಸತ್ಯಕ್ಕೆ ದೂರ, ಈ ಸಮಯದ ಸಂಗ.
ಎನ್ನ ಗುಣದ ಕಷ್ಟವನಳಿವುದಕ್ಕೆ
ಸಂಗನಬಸವಣ್ಣನಿಂದ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದಾಗದು./32
ಭಕ್ತಸ್ಥಲ ಗುರುರೂಪು, ಮಾಹೇಶ್ವರಸ್ಥಲ ಲಿಂಗರೂಪು,
ಪ್ರಸಾದಿಸ್ಥಲ ಜಂಗಮರೂಪು, ಪ್ರಾಣಲಿಂಗಿಸ್ಥಲ ಆತ್ಮರೂಪು,
ಶರಣಸ್ಥಲ ಅರಿವುರೂಪು, ಐಕ್ಯಸ್ಥಲ ಶಬ್ದಮುಗ್ಧ ನಿರ್ನಾಮಭಾವ.
ಇಂತೀ ಷಡುಸ್ಥಲಭಕ್ತಿಯ ನೆಮ್ಮಿ, ವಿಶ್ವಾಸವ ಕಂಡು, ಸತ್ಯದಲ್ಲಿಯೆ ನಿಂದು
ಬುದ್ಧಿಕೇವಲ, ವಿದ್ಯೆಕೇವಲ ಅವಿದ್ಯೆಕೇವಲ.
ಇಂತೀ ತ್ರಿವಿಧ ಕೇವಲಜ್ಞಾನದಲ್ಲಿ
ಸಂಚಿತ ಪ್ರಾರಬ್ಧ ಆಗಾಮಿಗಳ ಸ್ಥಿರೀಕರಿಸಿ
ಸುಚಿತ್ತದಲ್ಲಿ ದಿವ್ಯತೇಜಪ್ರಕಾಶ ಕೇವಲವಪ್ಪ
ಪರಂಜ್ಯೋತಿಯಲ್ಲಿ ವಿಶ್ವಾಸದಿಂದ ಪರವಶನಾಗಬೇಕು.
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು./33
ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ,
ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ,
ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ.
ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ.
ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ
ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ?
ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು.
ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ.
ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ,
ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ./34
ವಿಶ್ವಾಸವಿಲ್ಲದವಂಗೆ ಭಕ್ತಸ್ಥಲವಿಲ್ಲ, ಗುರು ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಮಾಹೇಶ್ವರಸ್ಥಲವಿಲ್ಲ, ಲಿಂಗ ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಪ್ರಸಾದಿಸ್ಥಲವಿಲ್ಲ, ಜಂಗಮ ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಪ್ರಾಣಲಿಂಗಿಸ್ಥಲವಿಲ್ಲ, ಸರ್ವ ವ್ಯವಧ್ಯಾನಿಯಲ್ಲ.
ವಿಶ್ವಾಸವಿಲ್ಲದವಂಗೆ ಶರಣಸ್ಥಲವಿಲ್ಲ, ಆರೂಢಭಾವಿಯಲ್ಲ.
ವಿಶ್ವಾಸವಿಲ್ಲದವಂಗೆ ಐಕ್ಯಸ್ಥಲವಿಲ್ಲ, ಸರ್ವಲೇಪನಲ್ಲ.
ಇಂತೀ ಷಟ್ಸ್ಥಲಸಂಬಂಧ.
ಗುರುವಿನಲ್ಲಿ ಶ್ರದ್ಧೆ, ಲಿಂಗದಲ್ಲಿ ಅಭಿನ್ನನಲ್ಲದೆ
ಜಂಗಮದಲ್ಲಿ ಮನೋಮೂರ್ತಿಯಾಗಿಪ್ಪುದೆ
ಸರ್ವಾಂಗಲಿಂಗಸಂಬಂಧದ ಇರವು
ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಲ್ಲಿ. /35
ಶಿಲೆ ಮರ ಮಣ್ಣು ಬೆಂಕಿ ನೀರು ಮಳಲುಗಳಲ್ಲಿ
ಇಂದು ಚಂದ್ರ ಇಂತಿವರೊಳಗಾದವರ ಮರೆಯಲ್ಲಿ
ತಮ್ಮ ವಿಶ್ವಾಸ ಎಂತಿದ್ದಿತ್ತು ಅಂತೆ ವಸ್ತುವಿಪ್ಪುದನರಿತು
ಇದು ಸಂಗನಬಸವಣ್ಣ ಸರ್ವಾಧಾರವಾಗಿ ಬಂದ ಸಂಬಂಧ.
ಬ್ರಹ್ಮೇಶ್ವರಲಿಂಗವು ವಿಶ್ವಾಸದಲ್ಲಿ ತಪ್ಪದಿಪ್ಪನು./36
ಸಂಚಿತವನರಿವುದು ಕರ್ಮಯೋಗ.
ಆಗಾಮಿಯನರಿವುದು ಆತ್ಮಯೋಗ.
ಪ್ರಾರಬ್ಧವನರಿವುದು ಪರಮಯೋಗ.
ಇಂತೀ ತ್ರಿವಿಧಯೋಗಂಗಳಲ್ಲಿ ತಿಳಿದು
ಯೋಗ ನಿಯೋಗವೆಂಬುದ ಕಂಡು
ತನ್ನಯ ಆತ್ಮನ ಸ್ಪರ್ಶಗಾಢಂಗಳ ಘಟದಲ್ಲಿ
ಸ್ವಸ್ಥಾನದಲ್ಲಿಪ್ಪುದ, ಇರದೆಂಬುದ ಲಕ್ಷಿಸಿಕೊಂಡು
ಸರ್ವವ್ಯವಧಾನಂಗಳಲ್ಲಿ ಸಾವಧಾನವನರಿವುದು
ಪ್ರಾಣಲಿಂಗಿಯ ಕೂಟ.
ಈ ಗುಣ ಸಂಗನಬಸವಣ್ಣನ ಸಂಯೋಗ.
ಬ್ರಹ್ಮೇಶ್ವರಲಿಂಗದ ಕೂಟ./37
ಸದ್ಭಕ್ತಿಯಿಲ್ಲದ ವಿಶ್ವಾಸಹೀನನು ವಾಚಾರಚನೆಗಳಿಂದ
ಮಾತಿನ ಮಾಲೆಯ ಎಷ್ಟು ನುಡಿದಡೇನು ?
ಹೆಂಡದಂತೆ, ಮೃತ ಘಟದಂತೆ, ಶಿಥಿಲ ಫಳದಂತೆ
ಅದಾರಿಗೆ ಯೋಗ್ಯ?
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವು
ಅವರಲ್ಲಿ ನಿಲ್ಲನಾಗಿ. /38
ಹಾಲನಟ್ಟಿ ಹಾವ ಸಲಹಿದಲ್ಲಿ
ಅದು ತನ್ನಯ ಉಚಿತಕ್ಕೆ ಹಾಳಾಹಳವ ಬಿಟ್ಟಿತ್ತೆ ?
ಕುಕ್ಕುಟನ ಮಾಳಿಗೆಯಲ್ಲಿ ಕೂಡಿ, ಪ್ರತಿಗೂಡಿನಲ್ಲಿ ಕೂಡಲಿಕ್ಕೆ
ತನ್ನ ತತ್ಕಾಲಕ್ಕೆ ಕೂಗುವುದ ಬಿಟ್ಟಿತ್ತೆ ?
ಇಂತೀ ವರ್ತನದಂತೆ ಭಕ್ತಿಢಾಳಕರ ದರ್ಶನ.
ಚೋರಕರ, ವಾಚಾರಚನೆಗರ ಬರಿಮಾತಿನ ಪೂಸರ,
ಈಶ್ವರ ಭಕ್ತರ ಪರಮೇಶ್ವರ ರೂಪು ಎನಲಾರೆ.
ಮತ್ತೆ ನೀತಿಯ ವಿಶ್ವಾಸವ ಬಿಡಲಾರೆ.
ಈ ಭಕ್ತಿಯೆಂಬ ಪಾಶವ ಹರಿವುದಕ್ಕೆ
ನಿಹಿತವ ತೋರಯ್ಯಾ ಸಂಗನಬಸವಣ್ಣಾ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ಕುರುಹ ಹೇಳಣ್ಣಾ./39
ಹಿಂದಣ ಸುಖ, ಮುಂದಣ ದುಃಖಂಗಳು
ಮುಂದಣ ಸುಖ, ಹಿಂದಣ ದುಃಖಂಗಳು
ಇವ ತಾ ಸಂಧಿಸಿ ಅನುಭವಿಸಿದಲ್ಲಿ
ಸಂಚಿತ ಪ್ರಾರಬ್ಧ ಆಗಾಮಿಗಳೆಂದು
ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ?
ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು
ಅಂದಂದಿಗೆ ನೂರು ತುಂಬಿತ್ತೆಂದು
ಸಂದೇಹ ನಿವೃತ್ತಿಯಾಗಿರಬೇಕು,
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವನರಿವುದಕ್ಕೆ./40

ಹುರಿಯ ಮೆಟ್ಟುವ ವಿಹಂಗ ಜಾತಿ ಜೀವಂಗಳೆಲ್ಲವೂ
ಮುಂಚಿ ಅವ ಬಲ್ಲಡೆ ಸಂಚವ ಮೆಟ್ಟಿ ತಾವು ಸಿಕ್ಕುವವೆ ?
ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ
ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ
ಅದು ಬರುಕಟಿಯೆಂಬರು.
ನೆರೆ ಅರಿದು ಹರಿದ ಶರಣರು
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ
ಹೊರೆಹೊರೆಯಲ್ಲಿ ವೇಧಿಸಬೇಕು/41