Categories
ವಚನಗಳು / Vachanagalu

ಬಿಬ್ಬಿ ಬಾಚಯ್ಯನ ವಚನಗಳು

ಅಂಗಕ್ಕೆ ಲಿಂಗ ಸಂಬಂಧ. ಆತ್ಮಂಗೆ ಅರಿವು ಸಂಬಂಧ.
ಅರಿವಿಂಗೆ ನಿಶ್ಚಯ ಸಂಬಂಧ. ನಿಶ್ಚಯ ನಿಜದಲ್ಲಿ ನಿಂದಲ್ಲಿ
ಇಷ್ಟಲಿಂಗದ ತೃಷೆ ಅಡಗಿತ್ತು,
ಏಣಾಂಕಧರ ಸೋಮೇಶ್ವರಲಿಂಗವನರಿಯಲಾಗಿ./1
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂಬ ಸಂದೇಹವೆಂತುಟೊ ?
ಜೀವನವ ಹಿಂಗಿದ ಘಟ ಜೀವಿಸಬಲ್ಲುದೆ ?
ಭಾವಕ್ಕೆ ಇದಿರಿಟ್ಟು, ಕುರುಹು ಅಭಿಮುಖವಾಗಿ ಅರಿವುದಕ್ಕೆ ತೆರನಿಲ್ಲ,
ಏಣಾಂಕಧರ ಸೋಮೇಶ್ವರಲಿಂಗ ತಾನಾಗಿ./2
ಅಂಗಲಿಂಗ ಸಂಬಂಧವಾದಡೆ
ವೇದನೆ ಅಂಗದ ನೋವಿನಂತಿರಬೇಕು.
ಹೇಮದಂಗ ಅಗ್ನಿಯ ಸಂಗದಲ್ಲಿದ್ದು
ರೂಪಳಿದು ನೀರಾದಂತೆ, ಅಂಗಲಿಂಗಸಂಬಂಧ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /3
ಅಗ್ನಿ ಲೋಹದಂತೆ, ಫಲ ರಸದಂತೆ
ಕಾಯ ಜೀವದ ಪರಿಯಂತೆ, ಅಂಗ ನೆಳಲಿನಂತೆ
ಅಂಗಲಿಂಗಸಂಬಂಧವಾಗಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./4
ಅರಿದು ಅರುಹಿಸಿಕೊಂಬುದಾದ ಕಾರಣ
ಉಭಯನಾಮವಾಯಿತ್ತು.
ಅದರ ಭೇದದಿಂದ ತಿಳಿಯೆ ಮೂರಾಯಿತ್ತು.
ಮೂರು ಮುಮ್ಮೊಖದಲ್ಲಿ ತಿಳಿಯೆ ಆರಾಯಿತ್ತು.
ಇವೆಲ್ಲವು ಒಡಗೂಡಿ ನೋಡೆ ನೂರೊಂದಾಯಿತ್ತು.
ಭಿನ್ನಭಾವಿಯ ಭೇದದಿಂದ
ಸೂತ್ರದ ದಾರ ನಾಳವೊಂದರಲ್ಲಿ ಅಡಗಿಪ್ಪಂತೆ
ಸ್ಥಲ ಕುಳಂಗಳು ವಸ್ತುವಿನಲ್ಲಿ ಅಡಗಿ ತೋರುವವು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಉಭಯನಾಮ ನಷ್ಟವಾದವಂಗೆ. /5
ಆಕಾಶದುರಿ, ನೆಲದ ಮಡಕೆಯಲ್ಲಿ
ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ
ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು.
ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು./6
ಆತ್ಮ ಘಟದಲ್ಲಿ ನಿಂದಿಹ ಭೇದ :
ನೀರು ಮಣ್ಣಿನಂತೆ, ಬೇರು ಸಾರದಂತೆ ಗಂಧ ತರುವಿನಂತೆ
ಒಂದ ಬಿಟ್ಟೊಂದ ಹಿಂಗಿರವಾಗಿ,
ಅಂಗ ಲಿಂಗ ಪ್ರಾಣಯೋಗ ಸಂಬಂಧ ಸಂದಿಲ್ಲ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./7
ಆರೂ ಇಲ್ಲದ ಅಡವಿಯಲ್ಲಿ, ಬೇರೊಂದು ಮನೆಯ ಮಾಡಿ
ಐವರು ಹಾರುವರು ಕೂಡಿ, ಮೂವರು ಗೆಯ್ವರು ಕೂಡಿ
ಆರಂಬಗೆಯ್ಯುತ್ತಿರಲಾಗಿ ಬೆಳೆ ಬೆಳೆಯಿತ್ತು.
ಮೃಗ ಫಲವಾಗಲೀಸವು.
ಬೇಡರ [ಅ]ಗಡ ಘನವೆಂದು ಬೀಡ ಬಿಟ್ಟಿತ್ತು,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಹೇಳಿಹೆನೆಂದು./8
ಇಕ್ಷುದಂಡಕ್ಕೆ ಹಣ್ಣುಂಟೆ ? ಕಾಮಧೇನುವಿಂಗೆ ಕರುವುಂಟೆ?
ಕಲ್ಪತರುವಿಂಗೆ ತತ್ಕಾಲವುಂಟೆ ?
ಸರ್ವಜ್ಞಂಗೆ ಇಷ್ಟಪ್ರಾಣಜ್ಞಾನಭಿನ್ನ ನಾಸ್ತಿ.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ./9
ಇಷ್ಟ ಆತ್ಮನೆಂದು ಮುಟ್ಟಲುಂಟೆ ಭಿನ್ನವಾಗಿ ?
ಮುಟ್ಟಿ ಮುಟ್ಟಿಸಿಕೊಂಬುದು ಇಷ್ಟವೋ, ಮನವೋ?
ಉಭಯವ ಹಿಂಗಿಸಿದಲ್ಲಿ ಕಾಬುದು ಇನ್ನೇನು ?
ಏಣಾಂಕಧರ ಸೋಮೇಶ್ವರಲಿಂಗ ಅನ್ಯಭಿನ್ನವಿಲ್ಲ./10
ಇಷ್ಟಲಿಂಗ ಪ್ರಾಣಲಿಂಗವೆಂದು
ಭಿನ್ನಭಾವದಿಂದ ಹಿಂಗಿಸುವ ಪರಿಯಿನ್ನೆಂತೊ ?
ಕಾಯದಲ್ಲಿ ನೋವಾದಡೆ ಜೀವಕ್ಕೆ ಭಿನ್ನವೆ ?
ಜೀವ ಹೋದಲ್ಲಿ ಕಾಯ ಉಳಿಯಬಲ್ಲುದೆ ?
ಈ ಉಭಯದ ಭೇದವನರಿ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ./11
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ ತೃಪ್ತಿ ಅರ್ಪಿತ,
ಮಹಾಜ್ಞಾನ ಘನಲಿಂಗಕ್ಕೆ ಪರಮ ಪರಿಣಾಮವೆ ಅರ್ಪಿತ.
ಇಂತೀ ತ್ರಿವಿಧ ಅರ್ಪಣದಲ್ಲಿ ಸುಚಿತ್ತನಾಗಿರಬೇಕು,
ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ./12
ಉದಕ ಹಲವು ತೆರದಲ್ಲಿ ಏರಿಯ ಕೂಡಿ
ದ್ವಾರವೊಂದರಲ್ಲಿಯೈದುವಂತೆ,
ನಾನಾ ಭವಂಗಳಿಂದ ಇಷ್ಟದ ಗೊತ್ತಿನಲ್ಲಿ ನಿಂದು
ನಿಶ್ಚಯವನರಿದು, ಮತ್ತಾ ಗುಣ ಬಚ್ಚಬಯಲು
ಏಣಾಂಕಧರ ಸೋಮೇಶ್ವರಲಿಂಗದಲ್ಲಿ/13
ಉರಿ ಕುಡಿದ ಎಣ್ಣೆಯಂತೆ, ತಾರಕ ಕೊಂಡ ವಾರಿಯಂತೆ,
ಯಾತನೆ ಕೊಂಡ ವ್ಯಾಪ್ತಿಯಂತೆ, ಮಹಾರ್ಣವ ಕೊಂಡ ಮಣ್ಣಿನಂತೆ,
ಭಾವರೂಪು ಕ್ರೀಯಲ್ಲಿ ಅಡಗಿ, ಆ ಕ್ರೀ ಉರಿಕರ್ಪುರದಂತೆ ಉಭಯನಾಮವಡಗಿ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಸುಳುಹುದೋರದಿದ್ದಿತ್ತು. /14
ಉರಿದು ಬೇವದು ಉರಿಯೋ, ಮರನೋ ?
ಹರಿದು ಕೊರೆವದು ನೆಲನೋ, ನೀರೋ ?
ನೆಲ ನೀರಿನಂತಾದುದು ಅಂಗಲಿಂಗಸಂಬಂಧ.
ಉರಿ ಮರನಂತಾದುದು ಪ್ರಾಣಲಿಂಗಸಂಬಂಧ.
ಈ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ.
ಆ ಸ್ಥಲ ಸುರಧನುವಿನ ಕೆಲವಳಿಯಂತೆ,
ಮರೀಚಿಕಾಜಲವಳಿಯಂತೆ,
ಮಂಜಿನ ರಂಜನೆಯ ಜಂಝಾಮಾರುತನಂತೆ,
ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನ
ರೂಪಳಿದು ನೀರಾದಂತೆ
ಅಂಗಲಿಂಗಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ./15
ಉರಿಯ ಮಡಕೆಯಲ್ಲಿ ಅರಗಿನ ನೀರ ತುಂಬಿ,
ಪರಸತಿಯೆಂಬವಳು ಒಲೆಯ ಉರುಹತ್ತೈದಾಳೆ.
ಒಲೆ ಬಾಯ ನುಂಗಿ, ಅಂಡವ ನೆಲ ನುಂಗಿ ದಿಂಡು ಬಿದ್ದಿತ್ತು.
ಏಣಾಂಕಧರ ಸೋಮೇಶ್ವರಲಿಂಗ ತಾನೆ ಬಲ್ಲ./16
ಉರಿಯ ಮೊನೆಯ ಮೇಲೆ
ಅರಗಿನ ಬೊಂಬೆ ತಿರುಗಾಡುತ್ತದೆ.
ಉರಿ ಕರಗಿ ಬೊಂಬೆ ಉಳಿಯಿತ್ತು,
ಏಣಾಂಕಧರ ಸೋಮೇಶ್ವರಲಿಂಗವ ಇದಿರಿಟ್ಟುಕೊಂಡು./17
ಎಲೆಯಿಲ್ಲದ ವೃಕ್ಷದಲ್ಲಿ ಹೂವಿಲ್ಲದ ಕಾಯಾಗಿತ್ತು.
ಕಾಯಿ ಉದುರಿ ಹಣ್ಣು ಬಲಿಯಿತ್ತು.
ಕಣ್ಣಿಗೆ ಹಣ್ಣಲ್ಲದೆ ಮೆಲುವುದಕ್ಕಲ್ಲ,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು./18
ಏರಿಯಿಲ್ಲದ ಕೆರೆಯಲ್ಲಿ, ನೀರಿಲ್ಲದ ತಡಿಯಲ್ಲಿ ನಿಂದು
ಮಡಕೆಯಿಲ್ಲದೆ ಮೊಗೆವುತ್ತಿದ್ದರು.
ಮೊಗೆವರ ಸದ್ದ ಕೇಳಿ, ಒಂದು [ಹಾ]ರದ ಮೊಸಳೆ
ಅವರೆಲ್ಲರ ನುಂಗಿತ್ತು.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಭಾವವೇನೆಂದು ಅರಿಯೆ. /19
ಒಂದು ಎರಡ ನುಂಗಿ, ಮೂರು ಐದ ನುಂಗಿ,
ಐದರೆಯಾಗಿ ಒರೆದಲ್ಲದೆ
ಏಣಾಂಕಧರ ಸೋಮೇಶ್ವರಲಿಂಗವನರಿಯಬಾರದು./20
ಓಂಕಾರ ಪ್ರಥಮದಲ್ಲಿ ದಿವ್ಯನಿರಾಲಂಬಮೂರ್ತಿ
ಜಗಹಿತಾರ್ಥವಾಗಿ ತತ್ತಾದಲ್ಲಿ
ಪಂಚಬ್ರಹ್ಮ ಸಾಕಾರಮೂರ್ತಿ ಲೀಲಾಸಂಭವವಾದಲ್ಲಿ
ಅಣುವಿಂಗಣು, ಮಹತ್ತಿಗೆ ಮಹತ್ತಾದಲ್ಲಿ
ಅಂಗಕರಂಡ ಆತ್ಮ ಸುಗಂಧ ನೀನಾದೆಯಲ್ಲಾ
ಏಣಾಂಕಧರ ಸೋಮೇಶ್ವರಲಿಂಗ./21
ಕಂಬವಿಲ್ಲದ ಮನೆಯಲ್ಲಿ, ಅಂಗವಿಲ್ಲದ ಗರತಿ
ಉರಿಯಿಲ್ಲದ ಹೊಗೆ ತಾಗಿ, ಕಣ್ಣಿಗೆ ಬಾಧೆಯಾಯಿತ್ತು.
ಓಗರ ಬೆಂದು ಅಕ್ಕಿಯಾಯಿತ್ತು.
ಇದೇನು ಚೋದ್ಯವೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ./22
ಕಣ್ಣಿನೊಳಗಣ ಕವಲು
ಮೂವರು ಅಣ್ಣಂದಿರು ಮನೆಯಾಯಿತ್ತು.
ಮನೆಯ ಮರುಳು ನುಂಗಿ
ಕವಡಿಕೆಯ ಕವಲು ಹಿಸಿದು
ಕಣ್ಣು ಕಂಡಲ್ಲಿಯೇ ಅಡಗಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./23
ಕರ್ದಮ ಕಮಲದಂತೆ, ವೇಣು ದ್ವಾರದಂತೆ
ನೇಣು ಬಂಧದಂತೆ
ಬಿಡುವಿಲ್ಲದಿರಬೇಕು ಅಂಗಲಿಂಗಸಂಬಂಧ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./24
ಕಲೆದೋರದ ಗಾಯದಂತೆ
ಸುಳುಹುದೋರದ ಸಂಚಾರದಂತೆ
ನಳಿನ ನಿಳಯದ ನೆಳಲಿನಂತೆ ಇಷ್ಟಚಿತ್ತಜ್ಞಾನ.
ಸರ್ವಗುಣಸಂಪದ ಪ್ರಾಣಲಿಂಗಿಯ ಲಿಂಗಸ್ಥಲ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ನಿರ್ಲೆಪವಾಯಿತ್ತು. /25
ಕಲ್ಲಿನ ಕಂಬದಲ್ಲಿ ಹುಲ್ಲಿನ ಬೇರು ಹುಟ್ಟಿ
ಬೇರು ಕಲ್ಲ ತಿಂದಿತ್ತು.
ಕಲ್ಲಿನ ದಳ್ಳುರಿ ಹತ್ತಿ, ಬೇರು ಅಲ್ಲಿಯೆ ಅಡಗಿತ್ತು.
ಏಣಾಂಕಧರ ಸೋಮೇಶ್ವರಲಿಂಗ, ಏನು ಚೋದ್ಯವೆಂದರಿಯೆ./26
ಕಾಣಿ ಕಡವರವ ಕಂಡು, ಶ್ರೇಣಿ ಸೇನೆಯ ನುಂಗಿ,
ಕಳ್ಳ ಬೆಳ್ಳನ ಒಡಗೂಡಿದ.
ಏಣಾಂಕಧರ ಸೋಮೇಶ್ವರಲಿಂಗವೆಂಬುದು ಎಲ್ಲಿಯೂ ಇಲ್ಲ./27
ಕಾಯಕ್ಕೆ ಸಾಕ್ಷಿ, ಜೀವಕ್ಕೆ ನಿಶ್ಚಯ.
ಉಭಯವ ಕುರಿತಲ್ಲದೆ ಬೇರೊಂದು ಅರಿಯಲಿಲ್ಲ.
ಭೇರಿಯ ಘಟ ಕ್ರೀ ಹೊಯಿದಡೆ ನಾದ ನಿಃಕ್ರೀ.
ಆ ಉಭಯದ ಭೇದ ಏನೆಂದರಿದುದು,
ಜ್ಞಾನಾಜ್ಞಾನ ಲೇಪವಾದುದು,
ಭಾವವಿರಹಿತ ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಉಭಯಸ್ಥಲಭೇದ. /28
ಕಾಯಕ್ಕೆ ಸೋಂಕು ಸುಖ, ಜಿಹ್ವೆಗೆ ಮಧುರ ಸುಖ.
ದೃಕ್ಕಿಗೆ ಚಿತ್ರಭೇದ ಸುಖ, ಶ್ರೋತ್ರಕ್ಕೆ ನಾದ ಶಬ್ದ ಸುಖ.
ಘ್ರಾಣಕ್ಕೆ ಸುಗಂಧ ಸುಖ.
ಇಂತಿವೆಲ್ಲವನರಿದು, ಕೊಡುವ ಭೇದದಲ್ಲಿ ಕೊಟ್ಟು
ಅರ್ಪಿತ ಅವಧಾನಿಯಾಗಿರಬೇಕೆಂಬರು.
ಬಹುಭೇದವಂ ತಿಳಿದು, ಏಕೇಂದ್ರಿಯ ಸುಚಿತ್ತನಾಗಿ ಇದ್ದವಂಗೆ
ಕ್ರೀ ಜ್ಞಾನ ಸಮರ್ಪಣ ಏಣಾಂಕಧರ ಸೋಮೇಶ್ವರಲಿಂಗಕ್ಕೆ./29
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ.
ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ.
ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ,
ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ./30
ಕಾಯಿ ಒಂದರಲ್ಲಿ ಶಾಖೆ ಹಲವಹ ತೆರದಂತೆ,
ಅರಿವು ಒಂದೆ, ರೂಪು ಭಿನ್ನಂಗಳಾಗಿ ತೋರುವ ತೆರದಂತೆ,
ಘಟದ ವಾರಿಯಲ್ಲಿ ತೋರುವ ಇಂದುವಿನಂತೆ,
ಅದೊಂದೆ ಭೇದ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /31
ಕುರುಡ ಕನ್ನಡಿಯ ಪಿಡಿದಲ್ಲಿ ಅದೇನ ಒಡಗೂಡುವ ?
ಬಧಿರಂಗೆ ಗಾಂಧರ್ವವಿರಲಿ ಸ್ವರಸಂಚವುಂಟೆ ?
ಅರಿವುಹೀನಂಗೆ ಘಟಧರ್ಮದ ಪೂಜೆಯಲ್ಲದೆ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಅರಿವು ಸನ್ನದ್ಧವಾಗಬೇಕು./32
ಕುರುಹಿನ ಕುರುಹಿನಲ್ಲಿ, ಅರಿವಿನ ಅರಿವಿನಲ್ಲಿ
ಜ್ಞಾನದ ಜ್ಞಾನದಲ್ಲಿ
ಇಂತೀ ಸಲೆಸಂದ ಭೇದಂಗಳಲ್ಲಿ ನಿಂದು ನೋಡು.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಅರಿವಿನ ಅರಿವು, ಬೆಳಗಾಯಿತ್ತು. /33
ಕೈ ಬಾಯಾಡುವಲ್ಲಿ ಕುರುಹಿನ ಭೇದವನರಿದು
ಒಡಗೂಡಬೇಕು.
ಆ ಗುಣವಡಗೆ, ಬೇರೊಂದಿದಿರೆಡೆಯಿಲ್ಲದಿರೆ
ಏನೂ ಎನಲಿಲ್ಲ.
ಕುರುಹಿಂಗೆ ಕುರುಹ ತೋರಿ, ಅರಿವಿಂಗೆ ಅರಿವ ಕೊಟ್ಟು
ನಿಜವೆ ತಾನಾಗಿದ್ದಲ್ಲಿ ಉಭಯನಾಮವಡಗಿತ್ತು
ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /34
ಕೈದುವ ಹಿಡಿದಾಡುವ ವಿಧಾಂತನ ಭಾವದಂತಿರಬೇಕು,
ಜನದ ನಡುವೆ ಆಡುವ ಅಹಿಯ ಮನದಂತಿರಬೇಕು,
ಕಣನ ಹೊಕ್ಕ ಭಟನ ಉಭಯಕರದಂತಿರಬೇಕು,
ಕ್ರೀ ಜ್ಞಾನಸಂಬಂಧ
ಏಣಾಂಕಧರ ಸೋಮೇಶ್ವರಲಿಂಗದಲ್ಲಿಸ್ವಾನುಭಾವಿಯಾದ ಶರಣಂಗೆ./35
ನಾದ ಭೇದ ಹೊರಹೊಮ್ಮಿ ಮತ್ತಲ್ಲಿಯೆ ಅಡಗುವಂತೆ
ಚಿದ್ರೂಪ ವಿಲಾಸಿತ ಸಕಲರೂಪಿನಲ್ಲಿ ಹೊಂದಿದ್ದು
ಮತ್ತಲ್ಲಿಯೆ ಎಯ್ದುವಂತೆ
ಇದಿರಿಟ್ಟು ಕಾಬುದು, ಕಾಣಿಸಿಕೊಂಬುದು
ಏಣಾಂಕಧರ ಸೋಮೇಶ್ವರಲಿಂಗದಲ್ಲಿಯೇ ಅಡಗಿತ್ತು./36
ಕ್ಷೀರ ಎಡೆಗೊಟ್ಟು ನಿಂದಲ್ಲಿ
ತನ್ನಯ ಗುಣ ಬಲಿದು ಕ್ಷಾರವಾಯಿತ್ತು.
ಅದು ತನಗೆ ಅನ್ಯಭಿನ್ನವಲ್ಲ.
ಪುರುಷ ಸತಿ ಕೂಡೆ ವಿಶೇಷ ರೂಪಾದಂತೆ
ಕ್ರೀ ಜ್ಞಾನ ಸಂಭಾಸನದಿಂದ ಚಿದ್ಘನದೊದಗು
ಏಣಾಂಕಧರ ಸೋಮೇಶ್ವರಲಿಂಗ ತಾನೆ./37
ಗಂಧ ಪುಷ್ಪದಂತೆ, ಚಂದನ ಲೀಲೆಯಂತೆ
ಕಂಜ ಕಿರಣದಂತೆ, ಬಿಂದು ಸಸಿಯಂತೆ
ಹಿಂಗದಿರಬೇಕು ಅಂಗಲಿಂಗಸಂಬಂಧ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./38
ಗಮನ ನಿರ್ಗಮನವಾದಲ್ಲಿ, ನಾಮ ನಿರ್ನಾಮವಾದಲ್ಲಿ
ನಾ ನೀನೆಂಬುದ ಮರೆದು, ಮತ್ತೊಂದರಿವನ್ನಕ್ಕ
ಏಣಾಂಕಧರ ಸೋಮೇಶ್ವರಲಿಂಗವ ಪೂಜಿಸಬೇಕು./39
ಗುಳಿ ನುಂಗಿದ ಸ್ಥಾಣುವಿನಂತೆ, ಬಲವ ನುಂಗಿದ ರತಿಯಂತೆ
ಗತಿಯ ನುಂಗಿದ ನಾದದಂತೆ
ರೂಪು ಭಾವಕ್ಕೆ ಎರವಿಲ್ಲದಂತಾಗಬೇಕು
ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ./40
ಗುಳ್ಳಂಕ ಮೃತ್ತಿಕೆಯ ಕುಪ್ಪಿಗೆಯಲ್ಲಿ ತೋರುವ ಎಣ್ಣೆ ಜಲದಂತೆ
ಇಂದುವಿನಲ್ಲಿ ಸಂದಿಲ್ಲದೆವೊಂದಿ ತೋರುವ ರಂಜನೆಯಂತೆ
ಅಂಗಲಿಂಗಸಂಬಂಧಿಯಾಗಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./41
ಘಟ ಪೃಥ್ವಿಯಲ್ಲಿ ಸಿಕ್ಕಿ, ಆತ್ಮ ಭವದುಃಖಕ್ಕೊಳಗಾಗಿ
ತಾನರಿವ ಲಿಂಗಕ್ಕೆ ಎಲ್ಲಿ ಆಶ್ರಯವಾಯಿತ್ತು ?
ಉಭಯಗೂಡಿ ಪ್ರಾಣಲಿಂಗಯೋಗ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./42
ಘಟ ಬಯಲಂತೆ, ಪಟ ವಾಯುವಂತೆ
ಸ್ಫುಟಿತ ಸುಟಿಯಂತೆ
ಘಟಿತವಾಗಿರಬೇಕು, ಅಂಗಲಿಂಗಸಂಬಂಧ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./43
ಚಿತ್ತವಸ್ತುವಿನಲ್ಲಿ ನಿಂದು
ತನ್ನಯ ಗುಣದ ಭಿತ್ತಿಯನರಿಯಬೇಕೆಂಬರು.
ಅರಿದ ಮತ್ತೆ ಹೊರಗಾದವ ಬೇರೆ ಕುರುಹಿಡಲೇಕೆ ?
ಕಳೆದು ಬೀಳುವ ಫಲಕ್ಕೆ ಹಿಡಿಗಲ್ಲುಂಟೆ ?
ಅರಿದು ನಿಶ್ಚಯವಾದವಂಗೆ ಬೇರೊಂದೆಡೆಯುಂಟೆ ?
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಪಡಿಪುಚ್ಚವಿಲ್ಲ./44
ಚಿತ್ತು ಕುಚಿತ್ತವ ಹೊತ್ತು ತಿರುಗುವ ದೆಸೆಯಿಂದ
ವಸ್ತುವೆಂದು ಮುಟ್ಟಬೇಕು.
ಅವ, ಸ್ವರೂಪನಾಗಿ ಸಂಪದಕ್ಕೆ ಸಮಪದನಾದ ದೆಸೆಯಿಂದ
ಏಣಾಂಕಧರ ಸೋಮೇಶ್ವರಲಿಂಗವಾಯಿತ್ತು./45
ಜಾಗ್ರದಲ್ಲಿ ಕಂಡಿರವ ಸ್ವಪ್ನದಲ್ಲಿ
ಸುಖ ದುಃಖಾದಿಗಳು ತೋರಿದಾಗ
ಅಲ್ಲಿ ಆವ ಲಿಂಗಕ್ಕೆ ಅರ್ಪಿತ ಭೇದ ?
ಸ್ಥೂಲದಲ್ಲಿ ಕಂಡು, ಸೂಕ್ಷ್ಮದಲ್ಲಿ ಅರಿದು
ಕಾರಣದಲ್ಲಿ ಭಾವಿಸುವ ಲಿಂಗ ಆವುದೆಂದರಿಯಬೇಕು.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ತಾನರಿದು ಲಿಂಗವನರಿಯಬೇಕು. /46
ಜ್ಞಾತೃವಿನಲ್ಲಿ ಇಷ್ಟಲಿಂಗಕಳೆ, ಜ್ಞೇಯದಲ್ಲಿ ಭಾವಲಿಂಗಕಳೆ,
ಭಾವದಲ್ಲಿ ಪ್ರಾಣಲಿಂಗಕಳೆ.
ತ್ರಿವಿಧದಲ್ಲಿ ಹೆರೆಹಿಂಗದರಿಯಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಪ್ರಾಣಲಿಂಗಸಂಬಂಧಿಯಾಗಬಲ್ಲಡೆ./47
ತನುವಿನ ಇಷ್ಟವ ಬಿಟ್ಟಾಗ ಅರಿದು, ಕಟ್ಟಿದಾಗ ಮರೆದು
ಮತ್ತೆ ಸೋಂಕಿದ ಸುಖವ ಅರ್ಪಿಸುವ ಪರಿಯಿನ್ನೆಂತೊ ?
ಒರೆಯ ಮರೆಯ ಕೈದಿನಲ್ಲಿ ಕಡಿದಡೆ ಹರಿದುದುಂಟೆ ?
ಕುರುಹಿನ ಮರೆಯಲ್ಲಿದ್ದಾತನ, ಎರಡಳಿದು ಅವಧಿಯಿಲ್ಲದಿರಬೇಕು
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ./48
ತನುವಿನಲ್ಲಿ ಹಿಡಿದು, ಮನದಲ್ಲಿ ಅರಿದು
ಜ್ಞಾನದಲ್ಲಿ ಕಂಡು, ಮಹಾಪ್ರಕಾಶದಲ್ಲಿ ಕೂಡಿ
ಭೇದಭಾವವಿಲ್ಲದಿರಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಪ್ರಾಣಲಿಂಗಸಂಬಂಧಿಯಾಗಬಲ್ಲಡೆ. /49
ತನ್ನ ಮರೆದಲ್ಲಿ ಲಿಂಗವ ಮರೆಯಬೇಕು.
ತನ್ನನರಿತಲ್ಲಿ ಲಿಂಗವನರಿಯಬೇಕು. ಉಭಯಭಾವ ಅಳವಟ್ಟಲ್ಲಿ
ಮುಂದಕ್ಕೊಂದು ಕುರುಹು ಏನೂ ಎನಲಿಲ್ಲ.
ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ
ಕುರುಹಾಗುತ್ತಿದ್ದಿಹಿತ್ತು./50
ತಾನರಿದಲ್ಲಿ ಸಕಲವೆಲ್ಲ ತನ್ನೊಳಗಡಗಿತ್ತು.
ತಾ ಮರೆದಲ್ಲಿ ಸಕಲವ್ಯಾಪಾರ ತನ್ನಿರವಾಯಿತ್ತು.
ನಿಂದ ವಾರಿಯಲ್ಲಿ ಹಾವಸೆ ತನ್ನಿಂದ ಒದಗಿದಂತೆ,
ಚರಿಸೆ ಹಾವಸೆ ಹರಿದು ನಿರ್ಮಲವಾದಂತೆ,
ಅರಿವು ಮರವೆ ಬೇರೊಂದೆಡೆಯಿಲ್ಲ.
ಎಲೆ ಗಿಡು ಮುಳ್ಳಿನಂತೆ, ಉರಿ ಮಥನ ಕಾಷ್ಠದಂತೆ,
ಶಿಲೆ ಕುರುಹು ರೂಪಿನಂತೆ, ಫಲ ಖಲದಂತೆ,
ನಿರುತ ನಿಳಯದಂತೆ, ಭರತ ಶಬ್ದದಂತೆ,
ಜೀವ ನಾದದಂತೆ ಉಭಯ ಭಿನ್ನವಿಲ್ಲ.
ಏಣಾಂಕಧರ ಸೋಮೇಶ್ವರಲಿಂಗವೆಂಬುದು
ಅಲ್ಲಿಯೇ ಭಾವವಿರಹಿತವಾಯಿತ್ತು./51
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ?
ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ?
ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ?
ಇಷ್ಟ ವಸ್ತುವಿನಲ್ಲಿ ಲೇಪವಾಗಿ
ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ./52
ತಿಲದ ಮರೆಯ ತೈಲವ ಅರೆದು ಕಾಬಂತೆ
ಚಂದನದ ಮರೆಯ ಗಂಧವ ಬಂಧಿಸಿ ಕಾಬಂತೆ
[ಶೃಂ]ಗಿಯ ನಾದವ ಖಂಡಿಸಿ ಅರಿವಂತೆ
ಇಷ್ಟಜ್ಞಾನವನರಿವುದಕ್ಕೆ ಇದೇ ದೃಷ್ಟ.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ. /53
ಧರೆ ಆಕಾಶದ ಮಧ್ಯವನರಿವನ್ನಕ್ಕ
ಕುರುಹಾದ ತೆರನನರಿಯಬೇಕು.
ಅದು ತನ್ಮಯ ತದ್ರೂಪಾಗಿಯಿಹುದು,
ಏಣಾಂಕಧರ ಸೋಮೇಶ್ವರಲಿಂಗ ಭಾವಕ್ಕೆಯ್ದಿದ ಕಾರಣ./54
ನಾನಾ ರಸಂಗಳಲ್ಲಿ ಅರಿದ ಕಿಸಲಯ
ಒಂದರಲ್ಲಿ ನಿಂದುದಿಲ್ಲ.
ಸಂದಿಲ್ಲದ ಸವಿಯನರಿವುದು. ಅದೊಂದೆ ಭೇದ ಸಂದಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಸ್ಥಲ ಏಕೀಕರವಾಯಿತ್ತು. /55
ನಾನಾ ವೇಷವ ತೊಟ್ಟು ಆಡುವನಂತೆ
ಬಹುರೂಪು ಬೇರಲ್ಲದೆ ಆಡುವ ತಾನೊಬ್ಬನೆ,
ಎಲ್ಲಿ ಅರ್ಪಿತ ಮುಖ, ಅಲ್ಲಿಯೂ ನೀನೇ
ಏಣಾಂಕಧರ ಸೋಮೇಶ್ವರಲಿಂಗವೆ. /56
ನಾಲಗೆಯ ಹಿಡಿದು ನುಡಿಯಬಹುದೆ ಅಯ್ಯಾ ?
ಕೈ ಸಿಕ್ಕಿದಲ್ಲಿ ಓಡಬಹುದೆ ಅಯ್ಯಾ ?
ಕ್ರೀಯ ಮರೆದು ಅರಿವನರಿಯಬಹುದೆ ಅಯ್ಯಾ ?
ಕುಸುಮವ ಬಿಟ್ಟು ಗಂಧವ ಮುಡಿಯಬಹುದೆ ಅಯ್ಯಾ ?
ಇಂತೀ ಉಭಯವನರಿತಡೆ ಪ್ರಾಣಲಿಂಗಯೋಗ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./57
ನಿರ್ಮಲಜಲ ಪಂಕವ ಬೆರಸಿದಲ್ಲಿ
ತನ್ನಯ ಸಾರದಿಂದ ಕೆಸರಹ ಹಾಂಗೆ
ಅದು ಅರಿಯೆ ಮುನ್ನಿನಂತೆ ಅರಿವು ನಿಂದು
ಕುರುಹಾಯಿತ್ತು. ಪಂಕವಾರಿಯಂತೆ
ಏಣಾಂಕಧರ ಸೋಮೇಶ್ವರಲಿಂಗವ ಭಾವಿಸಬೇಕು./58
ನೊಣ ಲೋಕವ ನುಂಗಿ,
ತ್ರಿಣಯನನ ಗುಂಗುರು ಕೊಂದು,
ಗುಂಗುರು ಗಾಳಿಯಲ್ಲಿ ನೊಂದಿತ್ತು.
ಗಾಳಿ ಘಟ ಹೇಳದೆ ಹೋಯಿತ್ತು,
ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ./59
ಪಟುಭಟಂಗೆ ಪ್ರಳಯ ಒಂದೆಯೆಂದು ಪ್ರಮಾಣಿಸಿದಲ್ಲಿ
ಅಂಗದಾಸೆ ಮರೆಯಿತ್ತು.
ಸರ್ವಗುಣಸಂಪದ ಭೇದವ ಒಂದುಮಾಡಿ
ದ್ವಯಗುಣವ ಹಿಂಗಿದಲ್ಲಿ
ಸ್ಥಲ ಅಲ್ಲಿಯೇ ಲೇಪವಾಯಿತ್ತು
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./60
ಪೂಜೆಯ ಮಾಡಿದಲ್ಲಿ ಪುಣ್ಯ ನಾಸ್ತಿ.
ನಾನಾ ವಿಚಾರವನರಿದಲ್ಲಿ ಭವಂ ನಾಸ್ತಿ.
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ನಾನೆಂಬುದನರಿತಲ್ಲಿ, ತಾ ನಾಸ್ತಿಯಾಯಿತ್ತು./61
ಪೃಥ್ವಿಯೆಂಬ ಅಂಗದ ಧರೆಯಲ್ಲಿ
ಅಪ್ಪುವೆಂಬ ಅಸು ಹರಿವುತ್ತಿರಲಾಗಿ
ಬಹುಚಿತ್ತವೆಂಬ ಜನರು ನೆರೆದು
ಅರುವೆಂಬ ಹರುಗೋಲು ಕೆಟ್ಟಿದೆ.
ಕುರುಹಿನ ಜಲ್ಲೆಯ ಹಿಡಿದು
ಒತ್ತುವರಿಲ್ಲದೆ ತಡಿಯಲ್ಲಿ ಕೂಗುತ್ತೈದಾರೆ
ಏಣಾಂಕಧರ ಸೋಮೇಶ್ವರಲಿಂಗವನರಿಯದೆ./62
ಫಲ ತರುವಿನಂತೆ, ತಿಲ ಸಾರದಂತೆ
ಮಧುರ ದಂಡದಂತೆ, ಶರಧಿಯಲ್ಲಿರುವ ಲಫುವಿನಂತೆ
ಭಿನ್ನಭಾವವಿಲ್ಲದಿರಬೇಕು ಅಂಗಲಿಂಗಸಂಬಂಧ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./63
ಬಲುಗಜಕ್ಕೆ ಬಾದಳದಲ್ಲಿ ಹಾದಿಯುಂಟೆ ?
ವಿಕ್ರಮಪಕ್ಷಿ ಕಲ್ಲಿಗೆ ಸಿಕ್ಕುವುದುಂಟೆ ?
ಬಲ್ಲವನೆಲ್ಲರಿಗೆ ಲಲ್ಲೆಯ ನುಡಿವನೆ ?
ಬಲ್ಲವನ ಇರವು ಛಲ್ಲಿಯ ರೂಹಿನಂತೆ.
ಇದ ಬಲ್ಲವರಾರೊ, ಏಣಾಂಕಧರ ಸೋಮೇಶ್ವರಲಿಂಗವ./64
ಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಭಕ್ತಿ ಸಾಧ್ಯವಾಯಿತ್ತು.
ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಜ್ಞಾನ ಸಾಧ್ಯವಾಯಿತ್ತು.
ಪ್ರಭುದೇವರ ಪ್ರಸಾದವ ಕೊಂಡ ಕಾರಣ
ಎನಗೆ ವೈರಾಗ್ಯ ಸಾಧ್ಯವಾಯಿತ್ತು.
ಇಂತೀ ಮೂವರು ಒಂದೊಂದು ಕೊಟ್ಟ ಕಾರಣ
ಎನಗೆ ಸರ್ವವೂ ಸಾಧ್ಯವಾಯಿತ್ತು.
ಏಣಾಂಕಧರ ಸೋಮೇಶ್ವರಾ,
ನಿಮ್ಮ ಶರಣರೆನ್ನ ಮಾತಾಪಿತರು./65
ಬಾರದವನುಂಡು ಬಂದವ ಹಸಿದಿದ್ದ.
ಬೇಯದದು ಬೆಂದು, ಬೆಂದದು ಬೇಯದೆ
ಉಭಯವ ಹಿಂಗಿದಂದು ಸಂದು,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು. /66
ಬಿಲದೊಳಗಣ ಇಲಿ, ಹುತ್ತದೊಳಗಣ ಹಾವು
ಇತ್ತಂಡ ಕೂಡಿ ಮನೆಯೊಳಗಣ ಬೆಕ್ಕ ಮುರಿ ತಿಂದವು.
ಮಿಕ್ಕಡಗ ನರಿ ತಿಂದು, ನಾಯಿಗೆ ಸಿಕ್ಕದೆ ಹೋಯಿತ್ತು.
ಎತ್ತಲೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗ ತಾನೆ ಬಲ್ಲ./67
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ?
ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ?
ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ?
ಇಂತೀ ಭೇದದಲ್ಲಿ ಭೇದಕನಾಗಿ
ಎರಡಳಿದು ವೇಧಿಸಿ ನಿಂದಲ್ಲಿಯೆ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ./68
ಬೆಣ್ಣೆ ಕೆಚ್ಚಲ ನುಂಗಿ, ಕಣ್ಣು ತಲೆಯ ನುಂಗಿ,
ತುದಿ ಬೇರಿನಲ್ಲಿ ಅಡಗಿತ್ತು.
ಏಣಾಂಕಧರ ಸೋಮೇಶ್ವರಲಿಂಗವೆಂಬುದು
ಅಲ್ಲಿಯೇ ಅಡಗಿತ್ತು. /69
ಬೆಳಗಿನ ಘಟವ ತಮದ ಕುಡಿಕೆ ನುಂಗಿತ್ತು.
ಉಭಯದ ಘಟವ ಕೊಡಗೂಸಿನ ಕೂಸೊಡೆಯಿತ್ತು,
ಏಣಾಂಕಧರ ಸೋಮೇಶ್ವರಲಿಂಗವನರಿತು./70
ಭಕ್ತನ ಭಕ್ತಿಭಾವ, ಮಾಹೇಶ್ವರನ ಮಾಹೇಶ್ವರಭಾವ.
ಪ್ರಸಾದಿಯ ಪ್ರಸಾದಭಾವ, ಪ್ರಾಣಲಿಂಗಿಯ ಪ್ರಾಣಲಿಂಗಭಾವ.
ಶರಣನ ಸನ್ನದ್ಧಭಾವ, ಐಕ್ಯನ ಐಕ್ಯಭಾವ.
ಇಂತೀ ದ್ವಾದಶಸ್ಥಲಂಗಳಲ್ಲಿ
ಸಾಗಿಸಿ ನಿಂದ ಅನಾಗತಸಿದ್ಧ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಉಭಯಭಾವ ಭಿನ್ನವಿಲ್ಲದ ಶರಣಂಗೆ./71
ಭ್ರಾಂತಳಿದು ನಿಂದಲ್ಲಿ ಅರ್ಚನೆ,
ವಿಕಾರವಳಿದಲ್ಲಿ ಪೂಜೆ, ಸಮತೆ ನಿಂದಲ್ಲಿ ನೈವೇದ್ಯ.
ಸಕಲವನರಿದು ಮರೆದಲ್ಲಿ ಪರಿಪೂರ್ಣ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /72
ಮಂಜಿನ ಮನೆಯಲ್ಲಿ ಸಂದೇಹದ ಸತಿ
ಬಂದ ಬಂದವರ ಕೊಂದು ತಿನ್ನುತ್ತೈದಾಳೆ.
ಅವಳಿಗೆ ಗಂಡನಾಗಲಮ್ಮರು,
ಏಣಾಂಕಧರ ಸೋಮೇಶ್ವರಲಿಂಗವಲ್ಲದೆ./73
ಮತ್ಸ್ಯದ ಕಣ್ಣು, ಸರ್ಪನ ವಿಷ, ಹುಲಿಯ ಕಾಲುಗುರು
ನಡೆವಲ್ಲಿ ಅಡಗುವಂತೆ, ಕೊಲುವಲ್ಲಿ ಬಿಡುವಂತೆ
ಇಂತೀ ವಿಗಡತ್ರಯವ ಅರಿ, ಅಸುವಿನ ಭೇದವ
ಏಣಾಂಕಧರ ಸೋಮೇಶ್ವರಲಿಂಗವ ಬಲ್ಲಡೆ./74
ಮನಕ್ಕೆ ಸಾಹಿತ್ಯವಾದಲ್ಲದೆ, ಕಾಯಕ್ಕೆ ಸಾಹಿತ್ಯವಾಗಬಾರದು.
ಆತ್ಮ ಘಟದಲ್ಲಿ ನಿಂದಲ್ಲದೆ, ಚೇತನರೂಪಾಗಿ ನಡೆಯಬಾರದು.
ಇಂತೀ ದ್ವಯ ಘಟಿಸಿ ನಿಂದಲ್ಲಿ, ಏಣಾಂಕಧರ ಸೋಮೇಶ್ವರಲಿಂಗ ತಾನೆ./75
ಮರನ ಹೂ ನುಂಗಿ, ಅಡಿಯೊಳಗಡಗಿ ಹಣ್ಣಾಯಿತ್ತು.
ಹಣ್ಣು ಎಳೆಗಾಯಿ ನುಂಗಿ, ಹೂ ಮರನ ಉಗುಳಿತ್ತು.
ಮರ ಮರಣಕ್ಕೆ ತೆರಹಿಲ್ಲ,
ಏಣಾಂಕಧರ ಸೋಮೇಶ್ವರಲಿಂಗವನರಿತೆಹೆನೆಂದು./76
ಮರನಿಲ್ಲದ ಮನೆಯ ಮಾಡಿ, ನೆಲನಿಲ್ಲದ ಒಲೆಯಲ್ಲಿ,
ಉರಿಯಿಲ್ಲದ ಬೆಂಕಿಯಲ್ಲಿ
ಮೊಲೆ ಯೋನಿಯಿಲ್ಲದವಳು [ಅ]ಡುತ್ತೈದಾಳೆ.
ಓಗರವಾಗದು, ಮಡಕೆ ಕರಗಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /77
ಮುಕುರ ಬಿಂಬದಂತೆ, ಉರಿ ದ್ರವ್ಯದಂತೆ
ಧರೆ ಸಲಿಲದಂತೆ, ಕುರುಹು ಸಂಬಂಧ ಯೋಗದ ತೆರದಂತೆ
ಅಂಗಲಿಂಗಸಂಬಂಧವಾಗಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ. /78
ಮುಕುರದ ಬಿಂಬದಲ್ಲಿ ತೋರುವ ಜಗದಂತೆ
ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ, ಭಾವಕ್ಕೆ ಭಾವ
ಜ್ಞಾನ ನಿರೂಪಾದ ಏಣಾಂಕಧರ ಸೋಮೇಶ್ವರಲಿಂಗ./79
ಮೌನವಾದ ಮತ್ತೆ ಜಗಳವುಂಟೆ ?
ಧ್ಯಾನವಾದ ಮತ್ತೆ ಫರಾಕುಂಟೆ ?
ಸ್ಥಲ ಲೇಪವಾದ ಮತ್ತೆ ಭೇದದ ಭಿನ್ನವುಂಟೆ ?
ಕ್ರೀ ಜ್ಞಾನ ಸಮಗಂಡಲ್ಲಿ, ಭಾವ ಶುದ್ಧವಾಯಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./80
ಯೋನಿಯಿಲ್ಲದ ಆಕಳಿನಲ್ಲಿ, ಬಾಯಿಯಿಲ್ಲದ ಕರು ಹುಟ್ಟಿತ್ತು.
ಮೊಲೆಯಿಲ್ಲದ ಹಾಲ ಕುಡಿದು, ಒಡಲಿಲ್ಲದೆ ತಿರುಗಾಡುತ್ತದೆ.
ಏಣಾಂಕಧರ ಸೋಮೇಶ್ವರಲಿಂಗ, ಇದೇನು ಸೋಜಿಗವೆಂದರಿಯೆ./81
ರವಿಯ ಶಶಿ ನುಂಗಿ
ಉಕ್ಕಿನ ಘಟ್ಟಿಯ ಮೃತ್ತಿಕೆಯ ಚೇಣ ಕಡಿಯಿತ್ತು.
ಕಪ್ಪೆಯ ವಿಷ ತಾಗಿ ಹಾವು ಸತ್ತಿತ್ತು,
ಏಣಾಂಕಧರ ಸೋಮೇಶ್ವರಲಿಂಗವನರಿತು./82
ಲತೆ ಹಲವು ಶಾಖೆಯಲ್ಲಿ ಹರಿದು ಸುತ್ತಿದಡೆ
ಮೂಲವ ಕಿತ್ತಲ್ಲಿಯೆ ಹಲವು ಬಳ್ಳಿ ಒಣಗುವಂತೆ
ಸ್ಥಲ ಕುಳಂಗಳು ಬಿನ್ನಭಾವವಾಗಿ ತೋರುವ ಇರವು
ಅರಿತಲ್ಲಿಯೇ ನಷ್ಟವಾಯಿತ್ತು.
ಏಣಾಂಕಧರ ಸೋಮೇಶ್ವರಲಿಂಗ ತಾನು ತಾನೆ./83
ಲಿಂಗವೆಂದು ಹಿಂಗಿ ಭಾವಿಸುವಾಗ
ಅರಿವು ಲಿಂಗಕ್ಕೆ ಹೊರಗೆ.
ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ
ಅಣೋರಣೀಯಾನ್ ಮಹತೋ ಮಹೀಯಾನ್
ಎಂದು ಪ್ರಮಾಣಿಸಿಕೊಂಬುದು ಹುಸಿಯೆ ?
ತೊರೆಯುದಕ ಮಳಲ ಮರೆಯಲ್ಲಿ ಬಂದು
ಸಂದೇಹವ ಬಿಡಿಸುವಂತೆ,
ಎಲ್ಲಿಯೂ ನೀನೇ, ಏಣಾಂಕಧರ ಸೋಮೇಶ್ವರಲಿಂಗವೆ./84
ಲೆಪ್ಪದ ಬೊಂಬೆ ಒಂದಾದಡೆ
ಅವಯವಂಗಳಲ್ಲಿ ಬಣ್ಣ ನಿಂದು ರೂಪುದೋರುವಂತೆ
ವಸ್ತು ಭಾವವೊಂದಾದಲ್ಲಿ
ಮುಟ್ಟುವ ಸ್ಥಲದಿಂದ ಹಲವಾಯಿತ್ತು.
ಕೇಳಿದಲ್ಲಿ ಭಾವನಾಸ್ತಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ./85
ಲೋಹಂಗಳ ರೂಪು ಒಡೆಯೆ, ಕರಗಿ ಮುನ್ನಿನಂತಾಗೆ,
ಮತ್ತೆ ಪ್ರತಿರೂಪಿಂಗೆ ಒಡಲಾಗಿರೆ,
ತದ್ಭಾವ ನಿಜವಸ್ತು ಜಗಹಿತಾರ್ಥ ಕೂಟಸ್ಥನಾಗಿ
ಏಣಾಂಕಧರ ಸೋಮೇಶ್ವರಲಿಂಗನಾದ. /86
ವಾಯು ಬಯಲೆಂದಡೆ
ತರುಗಿರಿಗಳೊದರುವ ಪರಿಯಿನ್ನೆಂತೊ ?
ನಾದ ಬಯಲೆಂದಡೆ ಶಬ್ದ ಬಯಲು ಪರಿಯಿನ್ನೆಂತೊ ?
ತನ್ಮಯವೆಲ್ಲವೂ ರೂಪು
ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪಾಗಿ
ಜಗದಲ್ಲಿ ಇಹನ್ನಬರ. /87
ಶಾಖೆಯ ಸುತ್ತಿದ ಲತೆಯಂತೆ,
ನೇಕೆಯಲ್ಲಿದ್ದ ಶಿಶುವಿನಂತೆ, ಲೆಪ್ಪದಲ್ಲಿದ್ದ ಬಣ್ಣದಂತೆ
ಅಂಗಲಿಂಗಸಂಬಂಧ ಹೀಗಾಗಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./88
ಶುಕ್ತಿಯಲ್ಲಿ ವೇಧಿಸಿದ ಉದಕದಂತೆ
ಸಸಿಗೆ ಅಂಕುರವ ಕೊಟ್ಟ ವಿಷತಂಪಿನಂತೆ
ಕಿಸಲಯದಲ್ಲಿ ಮುಟ್ಟಿದ ಘೃತಸಾರದಂತೆ
ಇಷ್ಟಚಿತ್ತಭಾವ.
ಅಲ್ಲ ಅಹುದೆಂದೆನಬಾರದು.
ಇದಿರೇರಿ ಇರಿದ ತೊಡಪಿನ ಅಸಿ ಎದೆಯಲ್ಲಿ ಸಿಕ್ಕಿದಂತೆ
ಆ ಉಭಯವ ಹಿಂಗಿರಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಪ್ರಾಣಲಿಂಗಿಯ ಲಿಂಗೈಕ್ಯನಾಗಬಲ್ಲಡೆ. /89
ಸತ್ತ ಶ್ರವಕ್ಕೆ ತಟ್ಟುಮುಟ್ಟು ಕೇಳಲೇಕೆ ?
ಅರಿದು ನಿಜಕ್ಕೆ ಬೇರೊಂದ ಬಿಡೆಂದು ನುಡಿಯಲೇತಕ್ಕೆ ?
ತನ್ನಿರವ ತಾನರಿದ ಮತ್ತೆ, ಇದಿರಿಂಗೆ ಅನ್ಯಭಿನ್ನವ ಹೇಳಲೇತಕ್ಕೆ ?
ಅದು ಸುಮನ ಮನ್ನಣೆಯಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ./90
ಯೋನಿಯಿಲ್ಲದ ಆಕಳಿನಲ್ಲಿ, ಬಾಯಿಯಿಲ್ಲದ ಕರು ಹುಟ್ಟಿತ್ತು.
ಮೊಲೆಯಿಲ್ಲದ ಹಾಲ ಕುಡಿದು, ಒಡಲಿಲ್ಲದೆ ತಿರುಗಾಡುತ್ತದೆ.
ಏಣಾಂಕಧರ ಸೋಮೇಶ್ವರಲಿಂಗ, ಇದೇನು ಸೋಜಿಗವೆಂದರಿಯೆ./81
ರವಿಯ ಶಶಿ ನುಂಗಿ
ಉಕ್ಕಿನ ಘಟ್ಟಿಯ ಮೃತ್ತಿಕೆಯ ಚೇಣ ಕಡಿಯಿತ್ತು.
ಕಪ್ಪೆಯ ವಿಷ ತಾಗಿ ಹಾವು ಸತ್ತಿತ್ತು,
ಏಣಾಂಕಧರ ಸೋಮೇಶ್ವರಲಿಂಗವನರಿತು./82
ಲತೆ ಹಲವು ಶಾಖೆಯಲ್ಲಿ ಹರಿದು ಸುತ್ತಿದಡೆ
ಮೂಲವ ಕಿತ್ತಲ್ಲಿಯೆ ಹಲವು ಬಳ್ಳಿ ಒಣಗುವಂತೆ
ಸ್ಥಲ ಕುಳಂಗಳು ಬಿನ್ನಭಾವವಾಗಿ ತೋರುವ ಇರವು
ಅರಿತಲ್ಲಿಯೇ ನಷ್ಟವಾಯಿತ್ತು.
ಏಣಾಂಕಧರ ಸೋಮೇಶ್ವರಲಿಂಗ ತಾನು ತಾನೆ./83
ಲಿಂಗವೆಂದು ಹಿಂಗಿ ಭಾವಿಸುವಾಗ
ಅರಿವು ಲಿಂಗಕ್ಕೆ ಹೊರಗೆ.
ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ
ಅಣೋರಣೀಯಾನ್ ಮಹತೋ ಮಹೀಯಾನ್
ಎಂದು ಪ್ರಮಾಣಿಸಿಕೊಂಬುದು ಹುಸಿಯೆ ?
ತೊರೆಯುದಕ ಮಳಲ ಮರೆಯಲ್ಲಿ ಬಂದು
ಸಂದೇಹವ ಬಿಡಿಸುವಂತೆ,
ಎಲ್ಲಿಯೂ ನೀನೇ, ಏಣಾಂಕಧರ ಸೋಮೇಶ್ವರಲಿಂಗವೆ./84
ಲೆಪ್ಪದ ಬೊಂಬೆ ಒಂದಾದಡೆ
ಅವಯವಂಗಳಲ್ಲಿ ಬಣ್ಣ ನಿಂದು ರೂಪುದೋರುವಂತೆ
ವಸ್ತು ಭಾವವೊಂದಾದಲ್ಲಿ
ಮುಟ್ಟುವ ಸ್ಥಲದಿಂದ ಹಲವಾಯಿತ್ತು.
ಕೇಳಿದಲ್ಲಿ ಭಾವನಾಸ್ತಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ./85
ಲೋಹಂಗಳ ರೂಪು ಒಡೆಯೆ, ಕರಗಿ ಮುನ್ನಿನಂತಾಗೆ,
ಮತ್ತೆ ಪ್ರತಿರೂಪಿಂಗೆ ಒಡಲಾಗಿರೆ,
ತದ್ಭಾವ ನಿಜವಸ್ತು ಜಗಹಿತಾರ್ಥ ಕೂಟಸ್ಥನಾಗಿ
ಏಣಾಂಕಧರ ಸೋಮೇಶ್ವರಲಿಂಗನಾದ. /86
ವಾಯು ಬಯಲೆಂದಡೆ
ತರುಗಿರಿಗಳೊದರುವ ಪರಿಯಿನ್ನೆಂತೊ ?
ನಾದ ಬಯಲೆಂದಡೆ ಶಬ್ದ ಬಯಲು ಪರಿಯಿನ್ನೆಂತೊ ?
ತನ್ಮಯವೆಲ್ಲವೂ ರೂಪು
ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪಾಗಿ
ಜಗದಲ್ಲಿ ಇಹನ್ನಬರ. /87
ಶಾಖೆಯ ಸುತ್ತಿದ ಲತೆಯಂತೆ,
ನೇಕೆಯಲ್ಲಿದ್ದ ಶಿಶುವಿನಂತೆ, ಲೆಪ್ಪದಲ್ಲಿದ್ದ ಬಣ್ಣದಂತೆ
ಅಂಗಲಿಂಗಸಂಬಂಧ ಹೀಗಾಗಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./88
ಶುಕ್ತಿಯಲ್ಲಿ ವೇಧಿಸಿದ ಉದಕದಂತೆ
ಸಸಿಗೆ ಅಂಕುರವ ಕೊಟ್ಟ ವಿಷತಂಪಿನಂತೆ
ಕಿಸಲಯದಲ್ಲಿ ಮುಟ್ಟಿದ ಘೃತಸಾರದಂತೆ
ಇಷ್ಟಚಿತ್ತಭಾವ.
ಅಲ್ಲ ಅಹುದೆಂದೆನಬಾರದು.
ಇದಿರೇರಿ ಇರಿದ ತೊಡಪಿನ ಅಸಿ ಎದೆಯಲ್ಲಿ ಸಿಕ್ಕಿದಂತೆ
ಆ ಉಭಯವ ಹಿಂಗಿರಬೇಕು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ
ಪ್ರಾಣಲಿಂಗಿಯ ಲಿಂಗೈಕ್ಯನಾಗಬಲ್ಲಡೆ. /89
ಸತ್ತ ಶ್ರವಕ್ಕೆ ತಟ್ಟುಮುಟ್ಟು ಕೇಳಲೇಕೆ ?
ಅರಿದು ನಿಜಕ್ಕೆ ಬೇರೊಂದ ಬಿಡೆಂದು ನುಡಿಯಲೇತಕ್ಕೆ ?
ತನ್ನಿರವ ತಾನರಿದ ಮತ್ತೆ, ಇದಿರಿಂಗೆ ಅನ್ಯಭಿನ್ನವ ಹೇಳಲೇತಕ್ಕೆ ?
ಅದು ಸುಮನ ಮನ್ನಣೆಯಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ./90
ಹೊಲಬು ಹೊಲಬನೆ ಕಂಡು, ಶಿಲೆ ಕುಲದಲ್ಲಿ ಅಳಿದು,
ಅನ್ನ ಅರ್ಪಿತದಲ್ಲಿ ಹಿಂಗಿ, ಉದಕ ಮಜ್ಜನದಲ್ಲಿ ನಿಂದು,
ಪ್ರಸಾದ ಪ್ರಸನ್ನದಲ್ಲಿ ಐಕ್ಯವಾಗಿ,
ಬಿಬ್ಬಿನ ಮನದಲ್ಲಿ ಒಬ್ಬುಳಿಯಾಯಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./101
ಹೊಳೆಯನೀಸುವನಂತೆ ಧರೆಯ ಒಲವರವುಂಟೆ ?
ಸಂಸಾರಸಂಬಂಧಿಯಾದಲ್ಲಿ ಅವಿರಳನ ಗುಣವ ವೇಧಿಸಬಲ್ಲನೆ ?
ನೆಲಹೊಲವನರಿಯದವ ಕಳವಿಗೆ ಹೋದಂತಾಯಿತ್ತು.
ಸ್ಥಲಕುಳವನರಿಯದವನಿಗೆ ಕ್ರೀಯ ನೆಲ ಶುದ್ಧಿಯೇಕೆ ?
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯಭಾವವನರಿಯಬೇಕು./102