Categories
ವಚನಗಳು / Vachanagalu

ಬೊಂತಾದೇವಿ ವಚನಗಳು

1092
ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,
ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.
ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ?
1093
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
1094
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆದ
ಬಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.

1095
ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
1096
ಘಟಪಟನಾದಾ, ಓ ಎಂಬಾತ ಲಿಂಗ.
ತರಗೆಲೆಗಳಿಗೊಂದೆ ಗಾಳಿ
ಹಾರುತ್ತಿಪ್ಪವು.
ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ.
ಕರೆದಡೆ, ಓ ಎಂಬಾತನೆ ಬಿಡಾಡಿ.