Categories
ವಚನಗಳು / Vachanagalu

ಬೊಕ್ಕಸದ ಚಿಕ್ಕಣ್ಣ ವಚನಗಳು

393
ಅಂಗದ ಬೊಕ್ಕಸದ ಮಂದಿರಕ್ಕೆ
ಚಿದ್ಘನಲಿಂಗವೆಂಬುದೊಂದು ಬೀಗ.
ತ್ರಿಗುಣವೆಂಬ ಮೂರೆಸಳಿನ ಸಿಕ್ಕು.
ಒಂದು ಪೂರ್ವಗತಿ, ಒಂದು ಮಧ್ಯಗತಿ,
ಒಂದು ಉತ್ತರಗತಿಯಾಗಿ ಸಿಕ್ಕಿದವು ಮೂರೆಸಳು.
ಆ ಎಸಳಿಗೆ ಘಟ ಒಂದೆ ಒಡಲು.
ಎಸಳ ತೆಗವುದಕ್ಕೆ ಕೈಯ ಕಾಣೆ.
ಪ್ರತಿ ಕೈಗೆ ಎಸಳು ಅಸಾಧ್ಯ ನೋಡಾ.
ಇಂತೀ ಬೀಗದ ಗುಣವ
ಬಸವಣ್ಣಪ್ರಿಯ ನಾರಗರೇಶ್ವರಲಿಂಗಾ ನೀವೇ ಬಲ್ಲಿರಿ.
394
ಅಂಗಲಿಂಗಸಂಬಂಧಿಗಳು ನಿಮ್ಮನರಿಯರು.
ಪ್ರಾಣಲಿಂಗಸಂಬಂಧಿಗಳು ನಿಮ್ಮನರಿಯರು.
ಎಂತೆನೆ, ಅಂಗಲಿಂಗವೆಂದು, ಪ್ರಾಣಲಿಂಗವೆಂದು
ಉಭಯದ ಸಂದುಂಟೆ ?
ಕರ್ಪುರಕುಂಭದಲ್ಲಿ ಹಾಕಿದ ಕಿಚ್ಚು
ಒಳಗು ಬೆಂದು, ಹೊರಗು ನಿಂದುದುಂಟೆ ?
ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು
ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ
ಇಷ್ಟ ದೃಷ್ಟದಲ್ಲಿ ಇಲ್ಲ, ಆತ್ಮನು ನಿಶ್ಚಯದಲ್ಲಿ ನಿಲ್ಲ.
ಬಸವಣ್ಣಪ್ರಿಯ ನಾರಗರೇಶ್ವರಲಿಂಗವನೆತ್ತ ಬಲ್ಲರೊ ?
395
ಆ ಬೊಕ್ಕಸದ ಮನೆಯಿಪ್ಪ ಭೇದ : ಹೊರಗಣ ಹೊದಕೆ ನಾನಾ ಚಿತ್ರವಿಚಿತ್ರ.
ಮಳೆಗೆ ನೆನವುದು, ಬೆಂಕಿಗೆ ಬೇವುದು,
ಗಾಳಿಗೆ ಮುರಿಯುವುದು.
ಆ ಮನೆಗೆ ವಿರೋಧವಾಹಲ್ಲಿ ಪಟ್ಟಿ ಕೆಡದು
ದೇವಾಂಗ ಬೇಯದು, ರತ್ನ ಗಾಳಿಯ ತಪ್ಪಲಿಗೆ ಒಳಗಾಗದು.
ಈ ಬೊಕ್ಕಸದ ಮನೆಯ ಹೊರಗಣ ಕೇಡು,
ಒಳಗಣ ಲಾಭವ ನಿರೀಕ್ಷಿಸಿ ನೋಡಬೇಕು.
ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಕೇಳಬೇಕು.
396
ಎಲ್ಲರ ಪರಿಯಲ್ಲ ಎನ್ನ ಊಳಿಗ.
ಬಸವಣ್ಣ ಚೆನ್ನಬಸವಣ್ಣ ಕೊಟ್ಟ ಕಾಯಕ
ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ,
ಲೌಕಿಕಕ್ಕೆ, ಬೊಕ್ಕಸದ ಭಂಡಾರಕ್ಕೆ.
ಈ ವರ್ತಕ ಶುದ್ಧವಾದ ಮತ್ತೆ
ಒಳಗಣ ಮುತ್ತು, ಬೆಳಗುವ ರತ್ನ, ಥಳಥಳಿಸುವ ವಜ್ರ.
ಈ ಕಾಯಕದ ಹೊಲಬ ಕೊಟ್ಟ ಮತ್ತೆ
ಕಳವಿನಿಸಿಲ್ಲದಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.

397
ಕಾಯ ಧರ್ಮ ಕರ್ಮವನುಂಬನ್ನಕ್ಕ
ಜೀವ ಭವಕ್ಕೆ ಬಪ್ಪುದು ತಪ್ಪದು.
ಅದು ಕುಂಭದೊಳಗಣ ಜಲ ಹಿಂಗುವನ್ನಕ್ಕ
ಹುಗಿಲವಾಯಿತ್ತು.
ಕುಂಭ ಹೋಳಾಗಿ ಜಲ ನೆಲದಲ್ಲಿ ಹಿಂಗೆ,
ಉಭಯದ ಬಂಧ ಬಿಟ್ಟಿತ್ತು.
ಕಾಯ ಕರ್ಮವನರಿಯದೆ ಜೀವ ಭವವನುಣ್ಣದೆ,
ಸರ್ಪನ ದವಡೆಯಲ್ಲಿ ಸಿಕ್ಕಿದ ಕಪ್ಪೆಯಂತೆ
ಆ ವಿಷ ತಪ್ಪಿದ ಮತ್ತೆ ನೆಟ್ಟಹಲ್ಲೇನ ಮಾಡುವದು.
ಇಂತೀ ಗುಣವ ತಪ್ಪೂದು, ತಪ್ಪಿ ಒಪ್ಪವನೊಪ್ಪಿದಲ್ಲಿ
ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಿಶ್ಚಿಂತನಾಗಿ.
398
ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ,
ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ,
ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,
ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.

399
ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು.
ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು.
ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ
ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು.
ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ,
ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು,
ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ
ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ.
ಇಂತೀ ಭಿನ್ನಭಾವನಲ್ಲ,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ.
400
ಗುರುವಿಂಗೆ ಗುರುವುಳ್ಳನ್ನಕ್ಕ, ಲಿಂಗಕ್ಕೆ ಲಿಂಗವುಳ್ಳನ್ನಕ್ಕ
ಜಂಗಮಕ್ಕೆ ಜಂಗಮವುಳ್ಳನ್ನಕ್ಕ, ಆತ್ಮಂಗೆ ಅರಿವುಳ್ಳನ್ನಕ್ಕ,
ಅರಿವು ಮರವೆಗೆ ಇದಿರೆಡೆಯುಂಟು.
ಗುರುವೀಂಗೆ ಉಭಯವಿಲ್ಲದೆ, ಲಿಂಗಕ್ಕೆ ಉಭಯವಿಲ್ಲದೆ,
ಜಂಗಮಕ್ಕೆ ಉಭಯವಿಲ್ಲದೆ,
ಆತ್ಮಂಗೆ ಎರಡಳಿದು, ನಿಜ ಏಕವಹನ್ನಬರ
ಒಂದನಹುದು ಒಂದನಲ್ಲಾ ಎಂದು
ಸಂದೇಹಕ್ಕೆ ಒಡಲಾಗಬಾರದು.
ತಾ ನಿಂದ ನಿಂದಲ್ಲಿಯೇ ಸಂದಳಿಯಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
401
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ
ಭಾವದ ಬಹುಚಿತ್ತವನರಿಯಬೇಕು.
ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ
ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು.
ಎಂಟುರತ್ನದ ಕಾಂತಿ, ಜೀವರತ್ನದ ಕಳೆ
ಭಾವಿಸಿ ಏಕವ ಮಾಡಿ ನಡೆವುದು.
ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು.
ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ
ಬೊಕ್ಕಸದ ಮಣಿಹವನೊಪ್ಪಿಸಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
402
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು.
ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು.
ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ
ಅದ್ವೈತ ಅಸತ್ಯ ನೋಡಾ.
ಇದು ಕಾರಣ, ಕ್ರಿಯೆ ಮರೆಯಲಿಲ್ಲ,
ಅರಿವು ಶೂನ್ಯವೆಂದು ಬಿಡಲಿಲ್ಲ.
ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ.
ಅವರ ಒಲವರದಲ್ಲಿ ಕುಲವ ಕಾಣಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.