Categories
ವಚನಗಳು / Vachanagalu

ಭರಿತಾರ್ಪಣದ ಚೆನ್ನಬಸವಣ್ಣ ವಚನಗಳು

403
ಅರಿವಿಂಗೂ ಮರವೆಯ ದೆಸೆಯಲ್ಲಿ ಓಲಾಡುವ
ಇಂದ್ರಿಯಂಗಳ ಸಮೂಹ.
ಈ ಉಭಯವೂ ಕೂಡಿ, ಮಹವೊಡಗೂಡಿದಲ್ಲಿ ಭರಿತಾರ್ಪಣ.
ಅರಿವುಳ್ಳವನೆಂದು, ನಿಬ್ಬೆರಗು ಕರಿಗೊಂಡವನೆಂದು,
ಸರ್ವಸಂಗಪರಿತ್ಯಾಗಿಯೆಂದು ತಾನರಿಯದೆ,
ಉಳಿದರ ಕೈಯಿಂದ, ಪರಾಧೀನರಿಗೊರೆಯದೆ,
ಅಮೃತ ಸುಧೆಯಂತೆ, ಪರಿಪೂರ್ಣ ಕಳೆದಂತೆ,
ಅರಿದರಿಯದಂತಿದ್ದುದು ಭರಿತಾರ್ಪಣ.
ಹೀಂಗಲ್ಲದೆ ಅಜಯಾಗವ ಮಾಡುವ ವಿಪ್ರನ ಕರ್ಮದಂತೆ
ನಾನಲ್ಲ ನೇಣು ಕೊಂದಿತ್ತೆಂದು ದಾಯಗಾರಿಕೆಯಲ್ಲಿ ಹೋಹ
ದರ್ಶನ ಢಾಳಕವಂತಂಗೆ, ತನ್ನ ಕಾಲ ವೇಳೆಗೆ
ತಕ್ಕಹಾಗೆ ಭಕ್ತಿಯ ಮರೆದು, ಸತ್ಯವ ತೊರೆದ
ದುರ್ಮತ್ತಂಗೆ ಭರಿತಾರ್ಪಣದ ಕಟ್ಟುಂಟೆ ?
ಇಂತೀ ಭೇದಂಗಳ ಯುಕ್ತಿಯಲ್ಲಿ
ಸತ್ತು ಚಿತ್ತು ಆನಂದವೆಂಬ ಗೊತ್ತ ಮುಟ್ಟದೆ,
ಮನ ಘನದಲ್ಲಿ ನಿಂದು ಉಭಯದೆಡೆಗೆಟ್ಟುದು ಭರಿತಾರ್ಪಣ.
ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.

404
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ
ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು.
ಇಂತೀ ಉಭಯವ ಪ್ರಮಾಣಿಸಿಕೊಂಡು
ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ
ಸತ್ಯ ಸದೈವರ ಸಹಪಙ್ತೆಯಲ್ಲಿ
ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ
ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ?
ಭರಿತಾರ್ಪಣದ ಯುಕ್ತಿಯ ಭಿತ್ತಿಯೊ?
ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ?
ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ?
ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು
ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ,
ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ,
ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು,
ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ.
ಇಂತೀ ಭರಿತಾರ್ಪಣವನಂಗೀಕರಿಸಿದ
ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು,
ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು.
ಇಂತೀ ವಿಷಯ ವ್ಯಸನಾದಿಗಳಲ್ಲಿ
ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ?
ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ
ಚಲನೆಯ ಗುಣ ಹೆರೆಹಿಂಗದು.
ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ
ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ,
ಲಿಂಗಾಂಗ ಪರಿಪೂರ್ಣನೆಂಬೆ.
ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು
ಈ ವ್ರತವನಂಗೀಕರಿಸಿದನಾದಡೆ
ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ.
ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ
ಚೆನ್ನಬಸವಣ್ಣನ ಕೋರಡಿಯ ಕೊಡುವೆ.
ಸಂಗನಬಸವಣ್ಣನ ಮೆಚ್ಚಿಸುವೆ.
ಪ್ರಭು ನಿಜಗುಣದೇವರ ತಲೆದೂಗಿಸುವೆ.
ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು,
ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.

405
ಉಂಬೆಡೆಯಲ್ಲಿ ಭರಿತಾರ್ಪಣವೆಂದು
ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ
ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ,
ಆ ಗುಣ ಉಭಯಭರಿತಾರ್ಪಣಭೇದ.
ಇದನರಿಯದೆ ಲಿಂಗಕ್ಕೆ ಸಂದಲ್ಲದೆ,
ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ,
ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ.
ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ,
ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ
ಅರ್ಪಿತವಾದುದ ದೃಷ್ಟಾಂತವನರಿದು,
ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು,
ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ,
ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ
ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ
ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ
ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.

406
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ?
ಮುಟ್ಟಿ ಮುಟ್ಟಿ ಅರ್ಪಿಸಲಾರದೆ
ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು
ಇದು ಕೃತ್ಯದ ನೇಮ, ಭರಿತಾರ್ಪಣವೆ? ಭರಿತಾರ್ಪಣವಾವುದೆಂದಡೆ: ಪರಸ್ತ್ರಿ ಒಲಿದು ಬಂದಲ್ಲಿ, ನೇಮಕಲ್ಲದ ದ್ಯವ್ಯನೆರೆದು,
ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು
ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧಾನಾಗಿ
ಕಾಯಕರ್ಮಕ್ಕೊಳಗಲ್ಲದೆ,
ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ,
ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ,
ಪರಿಭ್ರಮವ ಹರಿದುದು ಭರಿತಾರ್ಪಣ.
ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.

407
ಕಾಷ್ಠಪದಾರ್ಥವನರಿದು, ಕರ್ಮಪದಾರ್ಥವ ಶೋಧಿಸಿಕೊಂಡು,
ವರ್ಮಪದಾರ್ಥವ ನಿರ್ಧರಿಸಿ,
ಇಂತೀ ಪದಾರ್ಥಂಗಳ ಅರ್ಪಿಸುವಲ್ಲಿ
ಬಂದ ಬಟ್ಟೆ, ಮುಂದಣ ಪಯಣ.
ನಿಂದ ಮಧ್ಯದಲ್ಲಿ ಕಾಬ ಸುಖಂಗಳ ಸಂದನಳಿದುದು, ಭರಿತಾರ್ಪಣ
ಸಂದಿಗೊಂದಿಯ ಸಂಸಾರಿಗಳಲ್ಲಿ ಬೆಂಬಳಿಯಾಗಿಹುದೆ ?
ಅವರ ಮಂದಿರಂಗಳಲ್ಲಿ ಸ್ತುತಿನಿಂದ್ಯಾದಿಗಳ ತಂದುಕೊಳ್ಳದೆ,
ಅವರಿಗೆ ಬಂಧ ಮೋಕ್ಷ ಕರ್ಮಂಗಳ ಭಾವಕ್ಕೆ ಸಂದನಿಕ್ಕದೆ,
ತಾ ಬಂದನಲ್ಲದಿಪ್ಪುದೆ ಭರಿತಾರ್ಪಣ.
ಇಂತೀ ನಿಹಿತ ತಿಳಿದು, ಸಂಸಾರ ಘಾತಕವ ಬಿಟ್ಟು,
ಪರದೇಶಿಕತ್ವವಾದುದು ಭರಿತಾರ್ಪಣ.
ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.

408
ಗುರು ಚರ ಕರ್ತರು ತಾವಾದ ಮೇಲೆ
ಭಕ್ತನಾಚಾರದಲ್ಲಿರಬೇಕು.
ಮೃಷ್ಟಾನ್ನಕಿಚ್ಫೈಸದೆ ದೂರಸ್ಥರಾಗಿ,
ಗಣಕ ಪಾರದ್ವಾರ ಹುಸಿ ಕೊಲೆ ಕಳವು ಹಿಂಸೆಗೊಡಂಬಡದೆ,
ಮತ್ತೆ ಕಿಸುಕುಳದ ಗಂಟ ಕೆಲಕೊತ್ತಿಸಿ,
ತಾ ಹರಚರವಾದ ಪರಮಲಿಂಗಾಂಗಿಗೆ
ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗೈಕ್ಯ.

409
ತಾನರಿದು ಮತ್ತೇನುವ ಮುಟ್ಟೆನೆಂಬುದು
ಭರಿತಾರ್ಪಣದ ಕಟ್ಟು.
ಇಂತೀ ಗುಣ, ಭರಿತಾರ್ಪಣವಲ್ಲವೆ ?
ಅಶನದಾಸೆಯ ಬಿಡು, ಎಲೆ ದೆಸೆಗೆಟ್ಟ ಜೀವವೆ.
ನಿನ್ನ ನೀನರಿ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ
ಸಂಗವಾಗಬಲ್ಲಡೆ.

410
ತಾನರಿಯದುದನರಿದಾಗವೆ ಭರಿತಾರ್ಪಣ.
ತಾ ಕೆಡಿಸಿದುದ ಕಂಡಲ್ಲಿಯೆ ಭರಿತಾರ್ಪಣ.
ತ್ರಿವಿಧಮಲದಿಂದ ಕಟ್ಟೊತ್ತರ ಬಂದಲ್ಲಿ
ತೊಟ್ಟು ಬಿಟ್ಟ ಹಣ್ಣಿನಂತಿದ್ದಾಗವೆ ಭರಿತಾರ್ಪಣ.
ತಾ ಹೇಳಿದ ವ್ರತ ನೇಮ ನಿತ್ಯ ಕೃತ್ಯಂಗಳಲ್ಲಿ
ಅನುಸರಣೆಯಿಂದ ತನು ಸೋಂಕಿದಾಗವೆ ಭರಿತಾರ್ಪಣ.
ಪಡಿಪುಚ್ಚವಿಲ್ಲದ ನುಡಿಗೆಡೆಯಾಗದೆ
ಲಿಂಗದಲ್ಲಿ ಒಡಗೂಡೂದೆ ಭರಿತಾರ್ಪಣ.
ಇದು ಕ್ಷುತ್ತಿನ ಆಗಲ್ಲ, ಸಂಸಾರಘಟವ ಮೆತ್ತುವ ಬುತ್ತಿಯಲ್ಲ.
ನಿತ್ಯಾನಿತ್ಯವ ತಿಳಿದು, ನಿಶ್ಚಯವನರಿದಲ್ಲಿ ಭರಿತಾರ್ಪಣ.
ಇದು ಸತ್ಯವಂತರ ಹೊಲ, ಮುಕ್ತಿವಂತರ ಬೆಳೆ.
ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.

411
ದೃಷ್ಟಿಯಿಂದ ನೋಡಿದ ಮತ್ತೆ ಕಂಡಡೆ
ಭರಿತಾರ್ಪಣವೆತ್ತಣ ಮುಟ್ಟು ? ಮುಟ್ಟಿದುದ ಮುಟ್ಟಿ ಅರ್ಪಿಸುವಲ್ಲಿ
ಲಿಂಗಾರ್ಪಿತವಿಲ್ಲದೆ ಸಲ್ಲದೆಂದು
ಗುರುಚರ ಮುಖದಿಂದ ಪ್ರಸಾದಿಸಿ ತಾಯೆಂದ
ಭರಿತಾರ್ಪಣ ಅದೆಲ್ಲಿಯ ತೊಟ್ಟು ?
ಮತ್ತೆ ಗುರುಚರದಲ್ಲಿ ತ್ರಿವಿಧಮಲಕ್ಕೆ ಕಟ್ಟಿನಿಕ್ಕಿ,
ತಪ್ಪಿ ಮುಟ್ಟಿದಲ್ಲಿ ವಂದಿಸಿ ನಿಂದಿಸುವದು.
ಮತ್ತೆ ಪ್ರಸಾದವೆಂದು ಕೈಯೊಡ್ಡಿ ಕೊಂಬ ಭ್ರಷ್ಟನೆತ್ತಣ ಕೊಟ್ಟಿ.
ಲಿಂಗಕ್ಕಿಂದವೂ ಗುರುಚರ ಭಕ್ತಿಸಂಗಗುಣವಿಶೇಷವೆಂಬುದನರಿದು
ಗುರುಚರ ಪ್ರಸಾದವನಂಗೀಕರಿಸಿದ ಮತ್ತೆ
ಆ ಲಿಂಗದ ಅಂಗವೆ ಘಟ.
ಆ ಗುರುಚರಲಿಂಗಕ್ಕೆ ಪ್ರಾಣಸ್ವರೂಪವಾದ ಮತ್ತೆ
ಆ ಲಿಂಗ ತನ್ನ ಸರ್ವಾಂಗದಲ್ಲಿ, ತಾ ವ್ಯವಹರಿಸುವಲ್ಲಿ
ಹೆರೆಹಿಂಗದ ತೆರನ ತಿಳಿದು,
ಆ ಲಿಂಗದಾದಿ ಗುರುಚರವಿಲ್ಲಾ ಎಂದು ಕಂಡ ಮತ್ತೆ
ಗುರುವಿನ ಮುಖದಿಂದ ಲಿಂಗ ಸೋಂಕಿದ
ಜಂಗಮದ ತೃಪ್ತಿಯಿಂದ ತ್ರಿವಿಧದ ವರ್ಮವನರಿದು,
ಮುಂದಕ್ಕೆ ಕುಳವಿಲ್ಲದೆ, ಹಿಂದಕ್ಕೆ ನಷ್ಟವಾಗಿ,
ಅಂದಂದಿಗೆ ಬಂಧ ಮೋಕ್ಷ ಕರ್ಮ ಹಿಂಗಿ ನಿಂದ
ನಿಜಲಿಂಗಾಂಗಿಗೆ ಭರಿತಾರ್ಪಣ.
ಇಂತಿವನೊಂದುವ ಸಂಧಿಸಿ ಕಾಣಿಸಿಕೊಳ್ಳದೆ
ಭರಿತಾರ್ಪಣವೆಂದು ರಸಾಮೃತ ಮೃಷ್ಟಾನ್ನವ
ಸುರಿಯಿಸಿಕೊಂಡು, ಯಥೇಷ್ಟವಾಗಿಟ್ಟುಕೊಂಡು,
ಮಿಕ್ಕಾದುದ ಚೆಲ್ಲಿ ಸೂಸುವ ಕ್ರೀ ಭ್ರಷ್ಟಂಗೆ,
ತ್ರಿವಿಧನಷ್ಟಂಗೆ, ವಿರಕ್ತಂಗೆ,
ಕ್ಷಣಿಕ ಪಾರದ್ವಾರ ಹುಸಿ ಕೊಲೆ ಅತಿಕಾಂಕ್ಷೆ
ಇಂತಿವು ಮೊದಲಾದ ಕಿಸುಕುಳವ ಬಿಟ್ಟವರಿಗೆ,
ಭರಿತಾರ್ಪಣದ ಅರ್ಪಣದ ಅರ್ಪಿತವ ಬಲ್ಲವ
ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗಕ್ಕೆ ಕೊಟ್ಟು ಕೊಳಬಲ್ಲವ.

412
ಭರಿತವೆಂಬ ಶಬ್ದಕ್ಕೆ ಕಡೆಯಾಣಿ,
ಭರಿತವೆಂಬ ಸೊಲ್ಲು ಪರಿಪೂರ್ಣತ್ವ ಕುರುಹಳಿದುದು.
ಭರಿತಾರ್ಪಣವೆಂಬ ಭಕ್ಷ್ಯ ಮುಂದಕ್ಕೂ ಹಿಂದಕ್ಕೂ ಕಟ್ಟಿಲ್ಲದ ದೃಷ್ಟ,
ಭರಿತಾರ್ಪಣವೆಂದು ಕೃತ್ಯದ ಕಟ್ಟ ಹೊತ್ತ ಮತ್ತೆ
ಭರಿತಾರ್ಪಣ ಲಿಂಗ ಪ್ರಸಾದ ಕೊಂಡಲ್ಲಿ,
ಆ ಮನ ಅರೋಚಕ ತಲೆದೋರಬಾರದು ಭರಿತಾರ್ಪಣವೆಂದು.
ನೈವೇದ್ಯವೆಂದು ಸಂದಲ್ಲಿ ಉದಕ ಮುಂತಾದ
ಆವ ದ್ರವ್ಯವೂ ಬೀಸರಿಸಿ, ಆ ಪ್ರಸಾದದಲ್ಲಿ ಬೆರೆಯಬಾರದು.
ಬೆರೆದ ಮತ್ತೆ ಧರಿಸಬಾರದು, ಇರಿಸಬಾರದು.
ಆ ಪ್ರಸಾದವ ಚೆಲ್ಲಿ ಸೂಸಲಿಲ್ಲ. ಮತ್ತೆ ಅರ್ಪಿಸಿಕೊಂಡೆಹೆನೆಂದಡೆ
ಬೇರೆ ದೃಷ್ಟದಲ್ಲಿ ಬಂದುದಲ್ಲ.
ಬೆರೆದ ದ್ರವ್ಯವ ಮತ್ತರ್ಪಿಸಿಹೆನೆಂದಡೆ
ಆ ಪ್ರಸಾದದಲ್ಲಿ ಒಡಗೂಡಿದ ದ್ರವ್ಯ.
ಆ ದ್ರವ್ಯ ಒಡಗೂಡಿದಡೆ ಕುರುಹಿಟ್ಟು ನಿಂದಲ್ಲಿ
ಅರ್ಪಿಸಿ ಒಡಗೂಡಬಹುದು, ಮತ್ತೆ ವಿಚಾರಿಸಲಿಕಾಗಿ
ತನ್ನ ವ್ರತದ ಕಟ್ಟಿನ ನೆಮ್ಮುಗೆಯನರಿತುಕೊಳಬಾರದು.
ಬಿಡಬಾರದು ಎಂಬುದ ಒಳಗನರಿದು,
ಇಂತೀ ಭರಿತಾರ್ಪಣ ಆರಿಗೂ ಸಾಧ್ಯವಲ್ಲ. ಒಬ್ಬಂಗೆ ಸಾಧ್ಯವಾಯಿತ್ತು.
ಬಸವಣ್ಣ ಬೋನವಾಗಿ, ಚೆನ್ನಬಸವಣ್ಣ ಪದಾರ್ಥ ಸ್ವರೂಪವಾದಲ್ಲಿ,
ಪ್ರಭುದೇವರು ಸಾಕು ಭರಿತವೆಂದಲ್ಲಿ
ಅರ್ಪಿತವಾಯಿತ್ತು, ಭರಿತ ಸಲೆ ಸಂದಿತ್ತು.
ಎನಗೆ ಭರಿತ ನೇಮ ಓಸರಿಸುತ್ತಿದೆ.
ಪೂರ್ಣವ ಬಿಟ್ಟು, ಪರಿಪೂರ್ಣವ ಮಾಡು
ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಂಗ.

413
ಭರಿತಾರ್ಪಣ ಸಹಭೋಜನ ನೈವೇದ್ಯ ಸಹ
ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ
ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ,
ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ,
ಒಂದನೂ ಹೊದ್ದದ ಬಹುವರ್ಣದಂತೆ,
ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ
ಈ ತ್ರಿವಿಧ ವ್ರತ ಪ್ರಸಾದವಿಲ್ಲ.
ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ
ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ.
ಕ್ರೀ ತಪ್ಪದೆ ಎನ್ನ ಕೂಡಿಕೊ,
ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.