Categories
ಶರಣರು / Sharanaru

ಭೋಗಣ್ಣ

ಅಂಕಿತ: ನಿಜಗುರು ಭೋಗೇಶ್ವರ

ಕೆಂಭಾವಿ ಭೋಗಣ್ಣನಿಂದ ಭಿನ್ನವಾದ ಈತನ ಕಾಲ-೧೧೬೦. ‘ನಿಜಗುರು ಭೋಗೇಶ್ವರ’ ಅಂಕಿತದಲ್ಲಿ ೨೨ ವಚನಗಳು ದೊರೆತಿವೆ. ಶರಣರ ಸ್ತುತಿ, ಭವಿ-ಭಕ್ತ ಭೇದ, ಸಾಕಾರ-ನಿರಾಕಾರ, ಅಂಗ-ಲಿಂಗಗಳ ಸಂಬಂಧ, ಶರಣಸತಿ-ಲಿಂಗಪತಿ ಭಾವ, ಬೆಡಗಿನ ಪರಿಭಾಷೆ – ಇವುಗಳಲ್ಲಿ ತೋರುತ್ತವೆ. ವಚನಗಳು ಹೆಚ್ಚು, ದೀರ್ಘವಾಗಿದ್ದು ಗದ್ಯದ ಲಕ್ಷಣಗಳನ್ನು ಹೊಂದಿವೆ. ಕೆಲವು ವಚನಗಳಲ್ಲಿ ವೇಷಡಂಭಕರ, ಶಬ್ದಾಡಂಬರದ ಭವಭಾರಿಗಳ ಟೀಕೆ ತೀಕ್ಷ್ಣವಾಗಿ ಕಾಣಿಸುತ್ತದೆ.

ವೇದ ಆಗಮ ಶಾಸ್ತ್ರ ಪುರಾಣಗಳೆಲ್ಲ ಕುರುಡನ ಕೈಗೆ ಕೋಲು ಕೊಟ್ಟು ನಡೆಸಿಕೊಂಡು ಹೋಗುವಂತೆ ವ್ಯರ್ಥ ಎನ್ನುವ ಅವನ ಧೋರಣೆಯಲ್ಲಿ ಅವುಗಳ ನಿರಾಕರಣೆಯಿದೆ. ಭಕ್ತನ ಕೊಂದಡೆ ಪಂಚಮಹಾಪಾತಕ ಎನ್ನುವ ಭೋಗಣ್ಣ ಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ? ಎಂದು ಜೈನರನ್ನು ಟೀಕಿಸುವನು. ಅವನ ಉಪಮೆಗಳು ಅರ್ಥಪೂರ್ಣವಾಗಿರುವದರಿಂದ ವಚನಗಳಿಗೆ ಸಾಹಿತ್ಯಕ ಸಂಸ್ಪರ್ಶವಿದೆ. ಬಾಯಬುಂಜಕರನ್ನು ವ್ಯಂಗ್ಯವಾಗಿ ಟೀಕಿಸುತ್ತ ಜಾರೆ ಜಾರನ ಸ್ನೇಹದೊಳಿದ್ದು ನೀನಲ್ಲದೆ ಅಂತಃಪುರವನರಿಯೆನೆಂದು ಕಣ್ಣನೀರ ತುಂಬುತ್ತಬೋಸರಿಗತನದಿಂದ ಒಡಲ ಹೊರೆವಳಂತೆ ‘ ಎಂದು ಹೋಲಿಕೆ ಕೊಡುವನು. ಇವನಲ್ಲಿ ಬೆಡಗಿನ ವಚನಗಳು ಕಂಡು ಬಂದಿವೆ.