Categories
ವಚನಗಳು / Vachanagalu

ಭೋಗಣ್ಣನ ವಚನಗಳು

ಅಂಗದ ಕೈಯಲ್ಲೊಂದಂಗವದೆ ನೋಡಾ.
ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ.
ಈ ಉಭಯದ ಮಧ್ಯದಲ್ಲಿ ಅರಿದ ತಲೆಯ,
ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ.
ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ,
ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ,
ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ
ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು.
ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ
ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ.
ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು.
ನೋಡಿದಡೆ ಮುಂದೆಬಂದು ನಿಂದಿತ್ತು.
ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು.
ಅರಸಹೋದಡೆ ಅವಗವಿಸಿತ್ತು. ನಿಜಗುರು ಭೋಗೇಶ್ವರಾ,
ಇದರ ಕೌತುಕದ ಕಾರಣವೇನು ಹೇಳಯ್ಯಾ./1
ಅಂಗೈಯಗಲದ ಪಟ್ಟಣದೊಳಗೆ
ಆಕಾಶದುದ್ದ ಎತ್ತು ತಪ್ಪಿತ್ತು.
ಅರಸಹೋಗಿ ಹಲಬರು ಹೊಲಬುದಪ್ಪಿ,
ತೊಳಲಿ ಬಳಲುತ್ತೈದಾರೆ.
ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ.
ಜಲಗಾರನ ಕರೆಸಿ, ಜಲವ ತೊಳೆಯಿಸಿ
ಅಘಟಿತ ಘಟಿತ ನಿಜಗುರು ಭೋಗೇಶ್ವರಾ,
ಅರಸಿಕೊಂಡು ಬಾರಯ್ಯಾ./2
ಅಯ್ಯಾ ನಿಮ್ಮ ಶರಣರ ಇರವು,
ಹರಿಯ ಕೈಯ ದೀವಿಗೆಯಂತೆ ಇದ್ದಿತ್ತಯ್ಯಾ.
ನಿಮ್ಮ ಶರಣರ ಸುಳುಹು,
ಪವನನ ಕೈಯ ಪರಿಮಳದಂತೆ ಇದ್ದಿತ್ತಯ್ಯಾ.
ಹುತಾಸನವೆಂಬ ಗದ್ದುಗೆಯ ಮೇಲೆ
ಕರ್ಪುರದರಸುವಂ ಕುಳ್ಳಿರಿಸಲು,
ಅರಸು ಗದ್ದುಗೆಯ ನುಂಗಿದನೊ ?
ಗದ್ದುಗೆ ಅರಸನ ನುಂಗಿತ್ತೊ? ಎಂಬ ನ್ಯಾಯದಲ್ಲಿ
ಕಂಗಳ ಗದ್ದುಗೆಯ ಮೇಲೆ
ಸದ್ಗುರು ಲಿಂಗವೆಂಬ ಅರಸನಂ ಕುಳ್ಳಿರಿಸಲು,
ಆ ಲಿಂಗ ಕಂಗಳ ನುಂಗಿದನೊ ?
ಕಂಗಳು ಲಿಂಗವ ನುಂಗಿ[ದವೊ]?
ಈ ಉಭಯವ ನುಂಗಿದ ಬೆಡಗು ಬಿನ್ನಾಣವ,
ನಿಜಗುರು ಭೋಗೇಶ್ವರಾ, ನಿಮ್ಮ ಶರಣರಲ್ಲಿ ಕಾಣಬಹುದು./3
ಆಗಮ ನಿಗಮ ಶಾಸ್ತ್ರ ಪುರಾಣವೆಂಬ
ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ,
ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ.
ಹಿಂದಕ್ಕೆ ತಿರುಗಲರಿಯದೆ,
ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ.
ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ.
ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ,
ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು,
ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ
ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ: ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ
ಉಚ್ಚಿಯ ಬಚ್ಚಲಲ್ಲಿ ಓಲಾಡುವ
ತೂತಜ್ಞಾನಿಗಳಿಗೆಂತಪ್ಪದು ಹೇಳಾ ?
ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ?
ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ
ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ
ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು.
ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ,
ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ,
ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ
ತೋರಿ ಬದುಕಿಸಾ.
ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ./4
ಆಚಾರವುಳ್ಳನ್ನಕ್ಕ ಭಕ್ತನಲ್ಲ.
ಅನಾಚಾರವುಳ್ಳನ್ನಕ್ಕ ಭವಿಯಲ್ಲ.
ಅಂಗ ನಷ್ಟವಾಗಿ, ಕಂಗಳಲ್ಲಿ ಅರ್ಪಿಸಿ,
ತಲೆಯಲಿ ಉಣ್ಣಬಲ್ಲಡೆ ಭಕ್ತ,
ಅರ್ಪಿಸಿಕೊಳ್ಳ[ದ], ಅನರ್ಪಿತವ ಮುಟ್ಟದೆ
ಅಚ್ಚಪ್ರಸಾದವ ಕೊಳಬಲ್ಲಡೆ ಭವಿ.
ಉಭಯ ಒಂದಾದಡೆ
ನಿಜಗುರು ಭೋಗೇಶ್ವರನಲ್ಲಿ ಲಿಂಗೈಕ್ಯನು./5
ಆದಿ ಅನಾದಿಗಳಿಲ್ಲದಂದು ರೂಪು ನಿರೂಪುಗಳಿಲ್ಲದಂದು,
ತನುಮಯ ಚಿನುಮಯವೆಂಬ ನಾಮವು ತಲೆದೋರದಂದು,
ನೀನು ಇಲ್ಲದಿಪ್ಪಂದು,
ಆನು ನಿನ್ನೊಳಗೆ ಹೆಸರಿಲ್ಲದೆ ಇಪ್ಪುದನರಿಯಾ.
ಎನ್ನೊಳಗೆ ಉಭಯನಾಮವು ಪಸರಕ್ಕೆ ಬಾರದಂತೆ
ಚೇತನವಾಗಿ ನೀನಿದ್ದುದನರಿಯಾ.
ಏನು ಕಾರಣ ನೀನು ಶೂನ್ಯನಾದೆ, ನಿನ್ನ ಕಾರಣ ನಾನು ಸಾಕಾರನಾದೆ.
ನಮ್ಮಿಬ್ಬರ ಬಯಕೆಯಿಂದ ಮಹಾದೇವನುದಯಿಸಿದ.
ಆತನ ಮನೋಭಾವದಲ್ಲಿ ನೀನು ಹುಟ್ಟಿದೆ.
ಆತನ ಅಭಯದಲ್ಲಿ ಆನು ಪುಟ್ಟಿದೆ.
ಇಬ್ಬರಿಗೆ ಮದುವೆಯ ಮಾಡಿ ಕೈಗೂಡಿ,
ಕಂಕಣದಾರವಂ ಕಟ್ಟಿದರಯ್ಯಾ.
ಎನ್ನ ಸೋಂಕಿಂದ ನೀನು ಲಿಂಗವಾದೆ.
ನಿನ್ನ ಸೋಂಕಿಂದ ಆನು ಅಂಗರೂಪಾದೆ.
ಅದೆಂತೆಂದಡೆ : ಆನು ತೃಣ, ಎನ್ನೊಳಗಿಪ್ಪ ಅಗ್ನಿ ನೀನು.
ಕರ್ಪುರ ಆನು, ಪರಿಮಳವಾಗಿ ವೇಧಿಸಿಕೊಂಡೆ ನೀ ಅಯ್ಯಾ.
ಎನ್ನ ಕಂಗಳ ಕೊನೆಯ ಮೊನೆಯ ಮೇಲೆ
ನೀನು ಮನೆಯ ಮಾಡಿಕೊಂಡಿಪ್ಪೆ,
ನಿನ್ನ ಅಂತರಂಗದೊಳಗೆ ಆನು ಕಂದನಾಗಿ.
ನಿಜಗುರು ಭೋಗೇಶ್ವರಾ,
ನೀ ಮುನ್ನವೋ, ನಾ ಮುನ್ನವೋ ? ಬಲ್ಲಡೆ ಹೇಳಯ್ಯಾ./6
ಇದ್ದು ಜೀವನಲ್ಲ, ಸತ್ತು ಹೆಣನಲ್ಲ.
ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು.
ಹಿಂದಾದಡೆ ಏರುವುದು, ಮುಂದಾದಡೆ ತೋರುವುದು.
ಹಿಡಿಯಲ್ಲ ಕರಿಯಲ್ಲ.
ಇಕ್ಕಿದ ಹೆಜ್ಜೆಯ ತೆಗೆಯದು.
ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು.
ಕಾದಬಂದ ಕಲಿಗಳನೆಲ್ಲರ ಆಗಿದಗಿದು ನುಂಗಿತ್ತು ನೋಡಾ.
ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ?
ಇಹಪರ ನಷ್ಟವಾದ ಮಹಾವೀರಧೀರರಿಗಲ್ಲದೆ
ಮುಕ್ತಿಗೆ ದೂರವಾದ ಲಿಂಗಾಂಗಿಗಳ
ನೆನಹೆಂಬ ಜೋಡಂ ತೊಟ್ಟು,
ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ,
ಗುರುಕರುಣವೆಂಬ ಅಲಗಂ ಪಿಡಿದು,
ಮುಂಡ ಬಿದ್ದಡೂ ತಲೆಯಲ್ಲಿರಿವೆ.
ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ./7
ಕಂಗಳ ತಿರುಳನುರುಹಿ,
ಆದಿಯ ಬೀಜವ ವೇದವರಿಯಲ್ಲಿ ಸುಟ್ಟು,
ಆ ಭಸ್ಮವ ಹಣೆಯಲ್ಲಿ ಧರಿಸಿ,
ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ.
ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ.
ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ,
ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ
ರುದ್ರಲೋಕಕ್ಕೆ ದಾಳಿ ಮಾಡಿ,
ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು,
ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ,
ಗಂಗೆವಾಳುಕರಿಗೆ ಕೈವಲ್ಯವನಿತ್ತು,
ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ,
ವಿಶ್ವಮೂರ್ತಿಯ ಪಾಶವಂ ಪರಿದು,
ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ,
ರುದ್ರಲೋಕಕ್ಕೆ ದಾಳಿ ಮಾಡಿ,
ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು,
ಬಟ್ಟಬಯಲ ಕಟ್ಟಕಡೆಯೆನಿಪ
ಸಿದ್ಭ ನಿಜಗುರು ಭೋಗಸಂಗನಲ್ಲಿ
ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ
ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ
ನಮೋ ನಮೋ ಎಂದು ಬದುಕಿದೆ./8
ಕುದುರೆಯನೇರಿದ ರಾವುತ,
ಕುದುರೆ ಕೆಟ್ಟಿತೆಂದು ಅರಸಹೋಗಿ, ಇರುಬಿಲಿ ಬಿದ್ದಡೆ
ಬಳ್ಳು ತರುಬಿ, ಕುದುರೆ ರಾವುತನಿಬ್ಬರ ನುಂಗಿತ್ತು.
ಇದೇನು ಸೋಜಿಗ ಹೇಳಾ, ನಿಜಗುರು ಭೋಗೇಶ್ವರಾ./9
ಕುರುಡನ ಮುಂಡಕ್ಕೆ ಹೆಳವನ ಶಿರಸ್ಸು ಸ್ಥಾಪ್ಯವ ಮಾಡಿದರಯ್ಯಾ.
ಅದಕ್ಕೆ ಮೋಟನು ಪರಿಚಾರಕ ನೋಡಾ.
ಮೂಗ ಹೇಳುವ ಮಾತನು ಬಧಿರ ಕೇಳಿ,
ಅತ್ತೆಯನಳಿಯ ಮದುವೆಯಾಗಿ,
ಅವರಿಬ್ಬರ ಸಂಗದಿಂದ ಹುಟ್ಟಿತೊಂದು ಮಗು.
ಮೊರೆಗೆಟ್ಟು ತಂದೆ ಮಗಳ ಮದುವೆಯಾಗಿ,
ತ್ರಿಪುರದ ಮಧ್ಯದೊಳಗೆ ಕ್ರೀಗಳ ದೇಗುಲ ನಿಂದಿತ್ತು.
ದೇವರ ನೋಡಹೋದಡೆ ದೇವರು ದೇಗುಲದ ನುಂಗಿದರು.
ಇದ ಕಂಡು ಆನು ಬೆರಗಾದೆನು, ನಿಜಗುರು ಭೋಗೇಶ್ವರನಲ್ಲಿ./10
ಗಮ್ಯಾಗಮ್ಯಗಳಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು,
ಬೀಜಕ್ಷೇತ್ರಗಳಿಲ್ಲದಂದು, ನಾದದ ಮೊದಲಂಕುರ ತಲೆದೋರದಂದು,
ಪಂಚಬ್ರಹ್ಮರ ಜನನವಿಲ್ಲದಂದು, ಪಂಚಾಕಾಶ ತಲೆದೋರದಂದು,
ಪಂಚಭೂತಿಕ ಸಪ್ತಸಾಗರ ಅಷ್ಟಕುಲಪರ್ವತ
ಚತುರ್ದಶಭುವನ ರಚನೆಗೆ ಬಾರದಂದು,
ಇವರೆಲ್ಲರ ತಾಯಿ ತಂದೆ ಹುಟ್ಟದ ಮುನ್ನವೆ ಹುಟ್ಟಿಪ್ಪಳೆಮ್ಮವ್ವೆ.
ಆಕೆಯ ಭಾವದ ಕೊನೆಯ ಮೊನೆಯ ಮೇಲೆ
ಇಲ್ಲದೆಯಿಪ್ಪ ಎಮ್ಮಯ್ಯನು.
ಇವರಿಬ್ಬರಿಗೆ ಸಂಗವಿಲ್ಲದಲ್ಲಿ ಹುಟ್ಟಿದೆ ನಾನು.
ಅವರಿಬ್ಬರಿಗೂ ಮದುವೆಯ ಮಾಡಿದನಯ್ಯಾ.
ಅವರಿಬ್ಬರ ಸಂಗದಿಂದ ಹುಟ್ಟು ಹೊಂದು,
ಕಣ್ಣು ಕಾಲಿಲ್ಲದ, ಕಿವಿ ಮೂಗಿಲ್ಲದ, ಕೈ ಬಾಯಿಲ್ಲದ
ಒಂದು ಶಿಶು ಹುಟ್ಟಿತ್ತು.
[ಆ] ಮಗನನೆನಗೆ ಮದುವೆಯ ಮಾಡಿದರಯ್ಯಾ.
ಅದ ನಾ ನೋಡುವಲ್ಲಿ ನೋಡಿಸಿದೆ,
ನಾ ಕೇಳುವಲ್ಲಿ ಕೇಳಿಸಿದೆ, ನಾ ನುಡಿವಲ್ಲಿ ನುಡಿಸಿದೆ,
ನಾನುಂಬಲ್ಲಿ ಉಣಿಸಿದೆ, ನಾ ವಾಸಿಸುವಲ್ಲಿ ವಾಸಿಸಿದೆ,
ನಾ ಸೋಂಕುವಲ್ಲಿ ಸೋಂಕಿಸಿದೆ, ನಾ ನೆನೆವಲ್ಲಿ ನೆನೆಸಿದೆ.
ಎನ್ನ ತೋಳು ತೊಡೆಯ ಮೇಲೆ ಬೆಳೆದು,
ಯೌವನ ಪ್ರಾಯವಾಗಿ, ಎನ್ನ ದಶಾವಸ್ಥೆಯ ಮೋಹದಿಂದ,
ಎನ್ನ ನೆರೆವ ಭರವಸದಿಂದ ಹೆಣ್ಣು ಗಂಡಾಗಿ,
ಎನ್ನನವಗವಿಸಿಕೊಂಡಿತ್ತಯ್ಯಾ.
ನಾ ನೋಡದ ಮುನ್ನವೇ ನೋಡಿತ್ತು.
ನಾ ಕೇಳದ ಮುನ್ನವೇ ಕೇಳಿತ್ತು.
ನಾ ನುಡಿಯದ ಮುನ್ನವೇ ನುಡಿಯಿತ್ತು.
ನಾನುಣ್ಣದ ಮುನ್ನವೇ ಉಂಡಿತ್ತು.
ನಾ ವಾಸಿಸದ ಮುನ್ನವೇ ವಾಸಿಸಿತ್ತು.
ನಾ ಸೋಂಕದ ಮುನ್ನವೇ ಸೋಂಕಿತ್ತು.
ನಾ ನೆನೆಯದ ಮುನ್ನವೇ ನೆನೆಯಿತ್ತು.
ಇಂತೀ ಎನ್ನ ಸರ್ವಾಂಗವ ಶಿಖಿ ಕರ್ಪುರವನೊಳಕೊಂಡಂತೆ,
ನಿಜಗುರು ಭೋಗೇಶ್ವರನು ಒಳಕೊಂಡನಾಗಿ
ನಾನು ಸುಖಿಯಾದೆನು./11
ಜಗದಗಲದ ಗದ್ಗುಗೆಗಳಿಗೆ
ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ.
ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ.
ನಾಲ್ಕೈದು ಬಾಗಿಲು ನೋಡಾ.
ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು.
ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು.
ತೆಗೆಯಹೋದಡೆ ಮುಚ್ಚುವವು ನೋಡಾ.
ಈ ವರ್ಮಸಕೀಲವನರಿಯದೆ
ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ.
ವೀರಧೀರಸುಭಟರುಗಳೆಲ್ಲಾ
ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು.
ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು.
ಇದನಾರಯ್ಯಾ ಬಲ್ಲವರು ?
ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ !
ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ !
ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ
ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ
ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ
ಸಚರಾಚರದವರನೆಲ್ಲ ನುಂಗಿತ್ತು ನೋಡಾ.
ಇದನಾರಿಗೂ ಅರಿಯಬಾರದು ನೋಡಾ.
ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ
ಇದರ ಭೇದವ ಬಲ್ಲವ ಅಲ್ಲಮನು.
ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು.
ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ.
ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ
ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು,
ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ
ನೆತ್ತಿಗಣ್ಣಿಂದ ತೆಗೆದು ನೋಡಿ,
ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು
ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ
ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ
ನಿಜಗುರು ಭೋಗೇಶ್ವರ ನಿಮ್ಮ ಇರವು,
ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ
ವಾಗದ್ವೈತದಿಂದ ಒಡಲ ಹೊರೆವ
ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?/12
ಜಾಳೇಂದ್ರದೇಶದ ಅರಸು ಆನೆಯನೇರಿ,
ನಾಯಕ ಪಾಯಕ ಮಾವತಿಗರ ತಳತಂತ್ರ
ಮಾರ್ಬಲ ಸಹಿತ ರಾಜಬೀದಿಯೊಳು ಬರುತಿರಲು,
ಹೆಜ್ಜೆಗಾಣದೆ ತಳಿತಕಾರೆಯಮೆಳೆಯೊಳಗಿಪ್ಪ
ಬಿಜ್ಜು ಅರಸು, ಆನೆ ಮೊದಲಾದ ತಳತಂತ್ರ
ಮಾರ್ಬಲನ ನುಂಗಿತ್ತ ಕಂಡೆ.
ಎರಡೂರ ಬಟ್ಟೆ, ಒಂದಾದ ತಲೆವೊಲದಲ್ಲಿ
ಒಬ್ಬ ತನ್ನ ತಲೆಯ ಕೊಯ್ದು ಮುಂದಿರಿಸಿಕೊಂಡು
ಮುಂಡದಲಿ ಹೇನ ಕಳವುದ ಕಂಡೆ.
ಅಂಗವ ಕೈಯಲ್ಲಿ ಹಿಡಿದುಕೊಂಡು ಅರಸಿ ಬಳಲುತ್ತಿರೆ ಹಲಬರು.
ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ
ಕರುಣವುಳ್ಳವರಿಗಲ್ಲದೆ
ಮಿಕ್ಕಿನ ಜಡಮತಿಗಳಿಗೆಂತು ಸಾಧ್ಯವಪ್ಪುದು ಕೇಳಿರಣ್ಣಾ./13
ನೆಲದ ಬೊಂಬೆಗೆ ಜಲದ ಹೊದಿಕೆಯ ಹೊದಿಸಿ,
ಅಗ್ನಿಯ ಆಭರಣವ ತೊಡಿಸಿ, ಆಕಾಶದ ಅರಳೆಲೆಯ ಕಟ್ಟಿ,
ವಾಯುವ ಸೂತ್ರಧಾರವಂ ಹೂಡಿ,
ಸೂರ್ಯ ಸೋಮ ವೀಥಿಗಳೊಳಗೆ ಎಡೆಯಾಡಿಸುವ ಸೂತ್ರಗನಿವನಾರೋ ?
ಅನಾದಿಯ ಶಿಷ್ಯಂಗೆ ಆದಿಯ ಗುರು
ಉಭಯನಷ್ಟವಾದ ಲಿಂಗವಂ ತಂದು,
ಅಂಗದ ಮೇಲೆ ಬಿಜಯಂಗೈಯಿಸಲೊಡನೆ
ಲಿಂಗನಾಮನಷ್ಟವಾಯಿತ್ತು, ಗುರುವಿನ ಕುಲವಳಿಯಿತ್ತು.
ಜಂಗಮದ ಕೈಕಾಲಂ ಮುರಿದು, ಸೂತ್ರಿಕನ ಹಿಡಿದು,
ಮೇಲುದುರ್ಗದಲ್ಲಿ ಶೂಲಕ್ಕೆ ತೆಗೆದು,
ಆ ಸೂತ್ರದ ಹಗ್ಗಮಂ ಹರಿದು ಬಿಸುಟುಹೋದಡೆ
ತಲೆಯ ಒಂದಾಗಿ ಗಂಟಿಕ್ಕಿ,
ಮೂವರ ಮುಂದುಗೆಡಿಸಿ ಒಂದು ಮಾಡಿ,
ಹಿಂದಣಸ್ಥಿತಿ ಮುಂದಣಗತಿಯನೊಂದಾಗಿ ಸುಟ್ಟು,
ಆ ಭಸ್ಮವ ಅಂಗದಲ್ಲಿ ಅನುಲೇಪನವ ಮಾಡಿಕೊಂಡು
ನೀವು ಹೊಕ್ಕಲ್ಲಿ ಹೊಕ್ಕು, ಮಿಕ್ಕು ಮೀರಿ,
ಮಿಗೆವರಿದ ಲಿಂಗಾಂಗಿಗಳ ಪಾದದೊಳು ಹಿಂಗದಂತೆ ಇರಿಸೆನ್ನ.
ನಿಜಗುರು ಭೋಗೇಶ್ವರಾ, ನಾ ನಿಮ್ಮ ಬೇಡಿಕೊಂಬೆ./14
ಪಕ್ಕ ಮುರಿದ ಹಕ್ಕಿಯಂತೆ, ಸಾಸಿವೆಯನೊಕ್ಕಿದ ಎತ್ತಿನಂತೆ,
ಬೆಳಗ ಕಂಡು ಮೈಮರೆದ ಹುಲ್ಲೆಯಂತೆ,
ಅಳಿಕುಲಕ್ಕೆ ವಿಷವಾದ ಸಂಪಿಗೆಯ ಪುಷ್ಪದಂತೆ,
ಎನ್ನ ತನು ಮನ ಕುಲಕ್ಕೆ
ನಿಮ್ಮ ನೆನಹೆಂಬ ಜ್ವಾಲೆ ತಾಗಿ ಸತ್ತೆನಯ್ಯಾ ಸಾಯದಂತೆ.
ಹುಲ್ಲಸರವಿಯಲ್ಲಿ ಕಟ್ಟಿದ ಕಿಚ್ಚಿನಂತೆ, ಬೇಯದಂತೆ ಬೆಂದೆನಾಗಿ
ನಿಜಗುರು ಭೋಗೇಶ್ವರಾ, ನಿಮ್ಮ ಸಂಗಸುಖವದೇಕೊ ?/15
ಬೀಜವಿಲ್ಲದ ವೃಕ್ಷ, ಎಲೆಯಿಲ್ಲದ ಉಲುಹು,
ಹೂವಿಲ್ಲದ ಪರಿಮಳ, ಕಾಯಿಲ್ಲದ ಹಣ್ಣು,
ರಸವಿಲ್ಲದ ನವರುಚಿ ಮೆಲಬಲ್ಲವನಾರೊ ?
ಕಾಲು ಕೈಯಿಲ್ಲದ, ಕಿವಿ ಮೂಗಿಲ್ಲದ ಹುಟ್ಟುಗುರುಡನು
ಆ ಹಣ್ಣ ಮೂಗಿನಲ್ಲಿ ಮೆದ್ದನು.
ಕಂಗಳಲ್ಲಿ ತೃಪ್ತಿಯಾಗಿ, ಕಿವಿಯಲ್ಲಿ ತೇಗಿ, ತಲೆಯಲ್ಲಿ ಲಿಂಗಕ್ಕರ್ಪಿಸಿ,
ಆ ಪ್ರಸಾದವ ಬಾಯಿಂದ ಉಂಡು,
ನಿಜಗುರು ಭೋಗಸಂಗನೊಳು ಒಚ್ಚತವೋದ ಶರಣರ ಇರವು,
ಅರಳೆಲೆಯಸಿಂಗಾರದ ಸರಮಾಲೆಯ ಸರಕೆ
ನವಪಸರವನಿಕ್ಕಿ ಮಾರುವ ಬಹುಭಾಷೆಗಳಿಗೆಂತು
ಸಾಧ್ಯವಪ್ಪುದು ಹೇಳಯ್ಯಾ./16
ಭಕ್ತನ ಮೆಲಬಾರದು, ಭವಿಯ ತಿನಬಾರದು.
ಭಕ್ತನ ಕೊಂದಡೆ ಪಂಚಮಹಾಪಾತಕ.
ಅಂತು ವಿಚಾರಿಪಡೆ ಶೀಲವಂತರಿಲ್ಲಾಗಿ ಉಪಚಾರವೆಂತೂ ಇಲ್ಲ.
ಅಂತು ಶೀಲವಂತರಲ್ಲಿ ಅಹಿಂಸಾ ಪರಮೋಧರ್ಮವೆಂದು
ಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ ?
ಶಿವೋ ದಾತಾ ಶಿವೋ ಭೋಕ್ತಾ ಶಿವೋ ಜಗತ್ಸರ್ವಂ
ಎಂದುದಾಗಿ, ಈ ಅನುವನರಿದಾತ ಭಕ್ತ.
ಇಂತಪ್ಪ ಯುಕ್ತ, ಆತನೇ ಯುಕ್ತ.
ಇಂತಪ್ಪ ಸುಯಿಧಾನಿಗಳ ತೋರಿ ಬದುಕಿಸಯ್ಯಾ,
ನಿಜಗುರು ಭೋಗೇಶ್ವರಾ, ನಿಮ್ಮ ಧರ್ಮ, ಬೇಡಿಕೊಂಬೆನು./17
ಮನವನ್ಯಾಯಪಾತಕದೊಳಗೆ ಸಿಲುಕಿಹುದು.
ಮಾತಿನಲ್ಲಿ ಭಕ್ತಿ ವಿನಯ ಉಪಚಾರವ ನುಡಿದರು.
ಅನುವಿಲ್ಲದರಿಯದೆ ಬರಿಯ ಬಾಯಭುಂಜಕರು.
ಜಾರೆ ಜಾರನ ಸ್ನೇಹದೊಳಿದ್ದು,
ನೀನಲ್ಲದೆ ಅಂತಃಪುರವನರಿಯೆನೆಂದು
ಕಣ್ಣನೀರ ತುಂಬುತ್ತ ಬೋಸರಿಗತನದಿಂದ ಒಡಲ ಹೊರೆವಳಂತೆ,
ವಾಗದ್ವೈತದಿಂದ ಒಡಲ ಹೊರೆವ ಶಬ್ದಬೋಧಕರಿಗೆ
ನಿಜಗುರು ಭೋಗೇಶ್ವರ ಶರಣರ ಪದವೆಂತು ದೊರೆಕೊಂಬುದೋ ?/18
ಮೂಗಿನಲ್ಲಿ ಕಂಡು, ಮೂರ್ತಿಯ ಕಂಗಳಲ್ಲಿ ಮಾಡಿಸಿ,
ಕಿವಿಯಲ್ಲಿ ಶೋಭನ, ತಲೆಯಲ್ಲಿ ಕೈಗೂಡಿ,
ಕಣ್ಣ ಕಾಡಿನ ತಲೆ ಹೊಲದಲ್ಲಿ ಸತ್ತದೇವರ ಕಂಡು,
ಹುಟ್ಟಿದ ಗಿಡುವಿನ ಪತ್ರೆಯ ಕೈ ಮುಟ್ಟದೆ ಕೊಯ್ದು,
ಬತ್ತಿದ ಕೆರೆಯ ಜಲವ ತುಂಬಿಕೊಂಡು,
ಬಂದು ಮುಟ್ಟಿ ಪೂಜಿಸಹೋದಡೆ
ಸತ್ತ ದೇವರೆದ್ದು ಪೂಜಾರಿಯ ನುಂಗಿದರು ನೋಡಾ.
ತಲೆಯಲ್ಲಿ ನಡೆದು, ತಲೆಗೆಟ್ಟು ನಿರಾಳವಾದ
ನಿಜಗುರು ಭೋಗೇಶ್ವರಾ, ನಿಮ್ಮ ಶರಣರಿಗಲ್ಲದೆ
ಸತ್ತದೇವರನು ಸಾಯದವರು ಪೂಜಿಸಿ
ನಿತ್ಯವ ಹಡೆದೆಹೆನೆಂಬ ಮಾತೆಲ್ಲಿಯದೊ ?/19
ಮೂರುಲೋಹದ ಕೋಟೆಗೆ ಏಳುಸುತ್ತಿನ ಅಗಳು ನೋಡಾ.
ಆ ಕೋಟೆಯೊಳಗೆ ಒಂಬತ್ತು ದುರ್ಗವಿಹವು.
ನಾಲ್ಕೈದು ಹೆಬ್ಬಾಗಿಲಿಹವು. ಕಾಬರಿಗೆ ಕಾಣಬಾರದು.
ಕಂಡೆ ಕಾಣೆನೆಂಬ ಉಭಯದ ಸಂದಳಿದುಳಿದವರಿಗಲ್ಲದೆ ಕಾಣಬಾರದು.
ಆ ಪಟ್ಟಣದೊಳಗೆ ಅತಿರಥ ಮಹಾರಥರಿಹರು.
ಸಾವಂತ ಭಲ್ಲೂಕರಿಹರು.
ಷಡಾಯತೆ ಚಕ್ರವರ್ತಿಗಳು ಹರಿದು ರಾಜ್ಯವನಾಳುತ್ತಿಹರು.
ಇಪ್ಪತ್ತೆಂಟುಲಕ್ಷ ಭೂತತಂಡವಿಹರು.
ಹದಿನೆಂಟುಲಕ್ಷ ರಾಕ್ಷಸಸ್ತೋಮವಿಹರು.
ಆ ಪಟ್ಟಣವ ಕಾವಳ ಐವಾಯಲ್ಲಿ ತೆಗೆದು
ಅವಳ ಮೂಗು ಮೊಲೆಯ ಕೊಯ್ದು
ಮೊರೆಗೆಟ್ಟು ಒಡಹುಟ್ಟಿ ದೇವರ ಕೂಡೆ
ಹಾದರವನಾಡಿ, ನಿರಾಳದಲ್ಲಿ ನಿಶ್ಚಟನಾಗಿ
ನಿಃಶೂನ್ಯವೆಂಬ ಸಿಂಹಾಸನದ ಮೇಲೆ
ಸೋಂಕಿಲ್ಲದೆ ಸೊಬಗಿನಲ್ಲಿ ಮೂರ್ತಿಗೊಂಡಿಪ್ಪ
ಆ ಮಹಾಪ್ರಭುವಿನ ಪಾದಕ್ಕೆ
ನಾನು ನಮೋ ನಮೋ ಎಂದು ಬದುಕಿದೆನು ನೋಡಾ
ನಿಜಗುರು ಭೋಗೇಶ್ವರಾ. /20
ಶೂನ್ಯ ನಿಃಶೂನ್ಯಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು,
ಬೆಳಗು ಕತ್ತಲೆಯಿಲ್ಲದಂದು,
ಮಹಾಬೆಳಗಿನ ನಿಜಪ್ರಕಾಶವೇ ಗಟ್ಟಿಗೊಂಡು
ಮೂರ್ತಿಗೊಂಡಿಪ್ಪಲ್ಲಿ,
ಅಜಾತನೆಂಬ ಶ್ರೀಗುರುವಿನ ಜಾತವು.
ಕಂಗಳು ಬೆಳಗಿಸಲಾಗಿ ಪುನೀತನಾಗಿ, ಶಿಷ್ಯನು ದೇವಕರ್ಮವ
ಭಕ್ತಿ ವೈರಾಗ್ಯಮಂ ಮಾಡಬೇಕೆನಲು,
ಆ ಶಿಷ್ಯನ ಮನೋಭಾವದಿ ಕಾರುಣ್ಯ ಪುಟ್ಟಿ,
ಕರಕ್ಕೆ ಲಿಂಗವಾದ ಆ ಶಿಷ್ಯನ ಕೈಯಲ್ಲಿ
ಅಷ್ಟವಿಧಾರ್ಚನೆ ಶೋಡಷೋಪಚಾರದಲ್ಲಿ
ಪೂಜಿಸಿಕೊಳಬೇಕಾಗಿ ಜಂಗಮವಾದ.
ಇಂತೀ ಗುರುಲಿಂಗಜಂಗಮವೆಂಬ
ತ್ರಿವಿಧವೂ ಶಿಷ್ಯನಿಂದಾಯಿತ್ತಲ್ಲದೆ
ಆ ಶಿಷ್ಯ ತನ್ನಿಂದ ತಾನಾದ ನಿರಾಲಂಬನು.
ಅದೆಂತೆಂದಡೆ: ಹೆತ್ತ ತಂದೆಗಳು ಶಿಶುವಿಗೆ ನಾಮಕರಣವನಿಕ್ಕಿ
ಹಲವಂದದಲ್ಲಿ ಕರೆದು ತೋರುವಂತೆ,
ಗುರುಲಿಂಗ ಶಿವಲಿಂಗ ಜಂಗಮಲಿಂಗ
ಸದ್ಗುರುವೆ ಮದ್ಗುರುವೆ ಘನಗುರುವೆ ಎಂದು ಪೆಸರಿಟ್ಟು ಕರೆದು,
ತನ್ನ ಒಕ್ಕಮಿಕ್ಕ ಪ್ರಸಾದವನಿಕ್ಕಿದ ಕಾರಣ,
ನಿನ್ನ ಪೂರ್ವಾಶ್ರಯವಳಿದು ಸಕಲದೇವರಿಗೆ ದೇವನಾದೆ.
ಅದಕ್ಕೆ ಮುನ್ನ ನಿಮ್ಮ ಪೆಸರೇನೆಂದು ಹೇಳಾ
ನಿಜಗುರು ಭೋಗೇಶ್ವರಾ./21
ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ
ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ.
ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು
ವಾಯುವನೇ ಉಂಡು ಬೆಳೆವವು ನೋಡಾ.
ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ
ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ.
ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು.
ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ?
ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ.
ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ.
ಆದಿ ಅನಾದಿಯ ಅಂಗವ ಮಾಡಿ,
ಆ ಮಹಾ ಅನಾದಿಯ ಪ್ರಕಾಶವನೆ
ಶ್ರೀಗುರು ಸಾಕಾರಮೂರ್ತಿಯಂ ಮಾಡಿ,
ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು,
ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ
ಮೊದಲಾದ ಸರ್ವೆಂದ್ರಿಯದಲ್ಲಿ ವೇಧಿಸಿಕೊಂಡು,
ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ,
ಆ ಪರಮ ಪ್ರಸಾದವನುಂಡು,
ಮಾತಂಗ ನುಂಗಿದ ನಾರಿವಾಳದ ಫಲದಂತೆ
ಬಯಲುಂಡ ಪರಿಮಳದಂತೆ
ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು,
ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ./22