Categories
ವಚನಗಳು / Vachanagalu

ಮೆಡ್ಲೇರಿ ಶಿವಲಿಂಗ ವಚನಗಳು

ಆದಿ ಪರಶಿವನ ಜಟಾಮಗುಟದಲ್ಲಿ
ಫಣಿಯ ತ್ರಿಪುರ ಸಂಗ್ರಾಮದಲ್ಲಿ ರೌದ್ರವು ಪುಟ್ಟಿ
ತ್ರಿಪುರವನೆಸೆವಲ್ಲಿ ರಾಕ್ಷಸರ ಸಂಹರಿಸಲ್ಪಟ್ಟಂಥ
ಶೇಷನ ನಯನವು ಸಸಿಯನು ವಿವರಿಸಿ ಪೇಳಾ
ಚೆನ್ನಬಸವೇಶ್ವರಾ./1
ಆರಾರು ಅರಿದುದಿಲ್ಲ, ತಾನಾರಿಗೆ ಸಾಧ್ಯನಲ್ಲ.
ಧಾರುಣಿಗೆ ಮಿಗಿಲಾದೆಲ್ಲ ಊರೂರಿ ತಾನಿಂತಾಗದಲ್ಲ
ತೋರಿ ನಯಕ್ಕೆ ಸಿಕ್ಕದಲ್ಲ
ಧೀರತನದಲ್ಲಿ ಕಂಡು ಎಸೆದನಲ್ಲ
ಸರ್ವರನುಳುಹಿ ರಕ್ಷಿಸಿದನಲ್ಲಿ
ನಮ್ಮ ಘನಗುರು ಸದಾಶಿವಮೂರ್ತಿ ಕಾಣಾ
ಕುವರ ಚೆನ್ನಬಸವೇಶ್ವರಾ./2
ಆವಾವಸ್ಥಾನದಲ್ಲಿಯು
ಉಗ್ರಮೂರ್ತಿ ನಯನ ಕರುಣದಿಂದ
ಶಿವಲೀಲಾನಂದವಾಗಿ ಇರುವ ಶರಣರು
ಲೌಕಿಕದ ಜಡರು ಮಂಕು ಮರುಳರು
ಕಳ್ಳರು ಸುಳ್ಳರು ಆಹಾರಗಳ್ಳರು ಇತ್ಯಾದಿಕರು ಅರಿಯಬಲ್ಲರೆ ?
ಅಂತಪ್ಪ ಮಹಿಮರ ಶಿವಲಿಂಗನಿಷ್ಠಾಪರರ
ಏಕದಾರ್ಚನೆಯರ ಮಹಿಮೆಯೆ ನೋಡಲ್ಕೆ
ಯರಳು ಇದ್ದಲ್ಲಿಗೆ ಸಕ್ಕರೆಯು ಬಂದ ಪರಿಯಾಯಿತ್ತು ಕಾಣಾ
ಕುವರ ಚೆನ್ನಬಸವೇಶ್ವರಾ./3
ಇಂದುಧರ ನಿಂದ ನಿಲುಗಡೆಯ ಕಂಡು
ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು
ಶಿವಗಣರ ಶಿವಾಚಾರರ ಶಿವನಿಷ್ಠೆಯುಳ್ಳವರ ಕೂಡೆ ಕೆಣಕಿ
ನಿಲುಗಡೆಯ ಕಾಣದೆ ಮಂದದೈತ್ಯರು
ತಮ್ಮ ತಮ್ಮ ಸತ್ವದಿಂದ ಹೊರವಂಟು ಸೆಣಸಿ ಮಡಿದರು ಕಾಣಾ
ಕುವರ ಚೆನ್ನಬಸವೇಶ್ವರಾ./4
ಎಲೆ ಅಯ್ಯಾ, ನಿನ್ನ ಆಸೆ ಬವುಸೆ ತೀರಿಸಿಕೊಂಡು
ಧ್ಯಾನ ಮುಗಿಸಿ ಜವಳವರಿದು ಪವನವೇಗದಿ ಬಂದು ಗಿರಿಜೆಗೆ ಅರುಹಿ
ಮಂದಗರ್ವದ ರಾಕ್ಷಸರನು ಸಂಹರಿಸುವೆನೆಂದು
ಬಸವಗಣನಜ ಹರಿ ಬ್ರಹ್ಮ ದೇವೇಂದ್ರ ಯಮ ದಿಕ್ಪಾಲ
ನವಗ್ರಹ-ರವಿ ಕೇತು ಕಾಲ ರಾಹು ಮರುಳ ಭೂತವು
ಹ್ರೀಂಕಾರಿ ಪ್ರೇತಸ್ವಿನಿ ಚಾಮುಂಡಿ ನಿಗಂಡಿ
ಇಂತಪ್ಪವಿವೇಕವಾದ ಚಂದ್ರ ಸೂರ್ಯ ವಾಯು
ಮೊದಲಾದ ಸಂಕುಳ ಸಹ ಕೂಡಿ ಬಲವ ನಿಂದು ನಿಲುಕಡೆ ಕಂಡ
ನಮ್ಮ ಘನಗುರು ಸದಾಶಿವನು ಕಾಣಾ ಕುವರ ಚೆನ್ನಬಸವೇಶ್ವರಾ./5
ಎಲೆ ಅಯ್ಯಾ, ನಿಮ್ಮ ನಿಲವ ನಿರ್ಮಳವ
ಬಲ್ಲವರಾರು ? ಆರೂ ಇಲ್ಲ.
ಕಾಯದ ನಿಲವ ಮಾಯೆಗೆ ಒಪ್ಪಿಸಿ
ದೇವ ನಿರಾಲಂಬವಾಗಿ,
ನಿರಹಂಕಾರ ನಿರ್ಮಾಲ್ಯ ನಿತ್ಯನಿರ್ಗುಣ
ಸತ್ಯ ಸದಮಲ ಸಮರಸ[ಲಿ]ಂಗ ಸಂಗನ ಶರಣ
ನಮ್ಮ ಅಲ್ಲಾಳೇಶ್ವರನೆಂಬ ನಾಮವು
ನಿನಗೆ ತಕ್ಕುದಲ್ಲದೆ ಕಾಮಾಕ್ಷಿಯೊಳು ಬೆರದು ಪೇಳಿ
ಏಕಚಕ್ಷುದಯನಿತ್ತಾತ ನೀನೆ ಕಾಣಾ
ಕರಸ್ಥಳದ ಇಷ್ಟಲಿಂಗೇಶ್ವರಾ./6
ಎಲೆ ಅಯ್ಯಾ,
ನೀನು ಕುಲವು, ಅವಕುಲವು ಎನ್ನದೆ
ಒಲಿದು ಅವರಿಗೆ ಬೆಲೆಯಿಲ್ಲದ ಬಲವ ಮಾಡಿದೆ.
ಒಲಿದು ನಿನ್ನ ಪೂಜಿಪರಿಗೆ ಗೆಲವ ಮಾಡಿ,
ನಿಲುಗಡೆಯ ಮರೆದವರ ತಲೆಯರಿದು ಬಿಸುಡಿ[ದೆ]
ಕಲಿದೇವ, ನಿನಗಾರು ಸರಿಯಿಲ್ಲ ಕಾಣಾ ಚೆನ್ನಬಸವೇಶ್ವರಾ./7
ಎಲೆ ಅಯ್ಯಾ,
ಮಾಯೆ ಮೋಹಾ, ಮುಖಚಂದ್ರ,
ನಸು ಮುಸುಕು ಕುಚಕಳಸ,
ತೂರ್ಯತ್ರ ಬೆಳನಗೆ[ಗೆ]
ಸಿಕ್ಕದವರು ಆರೂ ಇಲ್ಲವು.
ಸಿಕ್ಕದ ಮಹಿಮನಾರೋ
ಕರಸ್ಥಳದ ಇಷ್ಟಲಿಂಗೇಶ್ವರಾ ?/8
ಕಂಡುದ ಕಡೆಗಿಡುವರಲ್ಲದೆ
ಕಾಣದುದ ಸ್ಥಿರವೆನಿಸಿ ಪಾಡಿ
ಮಾರ್ಗವ ಹಚ್ಚಿ ಸಚರಾ[ಚರ]ಕ್ಕೆಲ್ಲ ಕಾಣ್ಕೆಯ ಮಾಡಿ
ಭರದಿಂದ ಗೃಹವ ಪೊಗದೆ ಪರವೆಯ ನೋಡದೆ
ವಾಲ್ಮೀಕಿ ನಿಳಯಕ್ಕೆ ಬಂದು ನಯನವಂ ಪಡಕೊಂಡು
ಪರವೆಯ ಸಂಗಸುಖಸಮರಸದಲ್ಲಿ ಇರುತ
ಸಂಕಿಲೆಯ ಕರಸಿ ಸುಖಮಿರ್ದರು ಕಾಣಾ ಚೆನ್ನಬಸವೇಶ್ವರಾ./9
ಕಂಡುದ ಸ್ಥಿರವೆಂಬೋರಲ್ಲದೆ
ಕಾಣದ ಸಾಧ್ಯವಾಗಲಾಗದೆಂಬೋರು.
ಮುಗ್ಧ ಶರಣೆಯು ಎಲೆಯಡಗಿದ ವೃಕ್ಷದಂತೆ
ನೆಲೆಯರಿಯದ ಜಲದ ತನುವಿನಂತೆ
ನೆಲದೊಳಗಣ ನಿಧಾನವಿದ್ದು ಕಾಣದೆ ಹಂಬಲಿಪಂತೆ.
ತಾನು ಶುಕ್ರನ ಕೊಟ್ಟು ಜನದೊಳು ನಿಂದು ಮುಳುಗಿ
ಗಡ ಮುರಿದು ವರುಷವಾಯವಾಗಿ (?)
ಹಂಬಲ ಮರದು ಶಿವನ ಧ್ಯಾನಾರೂಢಳಾಗಿ
ಲೋಲುಪ್ತಿಯಿಂದ ಇರುವ ಶರಣೆಗೆ
ಪೂರ್ವ ನಿಜವ ಸಂತಾನವ ತೋರಿ ನಿಧಿನಿಧಾನದಲ್ಲಿರಿಸಿದೆ
ನೀನೆ ಕಾಣಾ ಕರಸ್ಥಳದಿಷ್ಟಲಿಂಗೇಶ್ವರಾ./10
ಕಾಣದುದನರಸುವರಲ್ಲದೆ
ಕಂಡುದನರಸುವರು ಆರೂ ಇಲ್ಲವು.
ದಿಂಡೆಯರು ಮೊಂಡರು ಮೂಕೊರೆಯರು ಪೆಂಡರುಗಳೆಲ್ಲ
ಮಂಡಲದೊಳು ಬಂಡು ಭೂತಗಳಾಗಿ ಹೋದವು.
ಕಂಡುದ ನಿಜನಿಲವರಿದು ಛಂಡಿಗಿಗೆ ಸಮವಾಗಿ
ಮುಕ್ತಿಗಳಿಗೇನೆಂಬೆನಯ್ಯ ?
ಶಿವೆ ದೇವಿಗಲ್ಲದೆ ಗಂಡರಬಿಟ್ಟ ದಿಂಡೇರ ಕೈಯಲ್ಲಿ
ಕುಂಡಿಯನುದ್ಧಿಸಿಕೊಂಬ ಮೂಳಹೊಲೆ ಹಾದರಗಿತ್ತಿಗೆ ಸರಿಯೇನಯ್ಯ ?
ಈಶಾನ್ಯಶೆಟ್ಟಿಯ ಸತಿಯು ಶಿವೆದೇವಿಗೆ ಸರಿಯೆಂಬುವರ
ಬಾಯ ಮೇಲೆ ಕುಟ್ಟೆಂದ ನಮ್ಮ ಚೆನ್ನಸಂಗಮದೇವ./11
ಕಾಮ ಕಾಲದೆ ಕಾಡುವ ಮಾಯೆ
ನೆಳಲುಗತ್ತಲೆ ನೀನು ಮಾಯೆ.
ಸಂಗ ಸುಖದಿಂದ ಹಿಂಗುವರಾರುಯಿಲ್ಲ.
ಬಿಗಿದ ಕುಚ, ಉರಮಧ್ಯವು
ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು
ಸನ್ಮೋಹ ಅಮೃತ ಸಾರವು
ಇಳೆ ಉತ್ಪತ್ಯಕ್ಕೆ ಆಧಾರವು
ಇಂಥ ಮೋಹಪ್ರಿಯವಾದ ಮೋಹಿನಿಯರ
ಅಗಲುವುದೆಂತೊ ಕರಸ್ಥಳದ ಇಷ್ಟಲಿಂಗೇಶ್ವರಾ ?/12
ಕಾಯಯ್ಯ ಕಾಯಯ್ಯ ಕರುಣದಿ ನೀನು.
ಆಸೆಯ ಪಾಶವೆ ಮಾಯೆ[ಯ] ವಾಸದಲ್ಲಿ ಇರಲಮ್ಮದೆ
ಭಾಷೆಯ ಕೊಟ್ಟೆ ಭಜನೆಯ ತೋ[ರಿದೆ];
ಭಾರವ ಹೊರಿಸದಿರಯ್ಯ.
ದೇಸಿಗರಿಗೆ ದೇವ ನೀನಲ್ಲದೆ ಮತ್ತೆ ದೈವಂಗಳಿಲ್ಲವೆಂದು
ಶ್ರುತಿ ಆಗಮದಲ್ಲಿ ಸಾರುತ್ತಿದ್ದವು.
ಅದನೆ ಒಲಿದು, ಅದನೆ ಉಟ್ಟೆ, ಅದನೆ ಉಂಡು ಅದನೆ ಹೊದ್ದು ,
ಅದನೆ ಹರಸಿ, ಅದನೆ ಬೆರಸಿ, ಅದನೆ ಕೂಡಿ,
ಅದನೆ ಬಿತ್ತಿ , ಅದನೆ ಬೆಳೆದು
ಅಹೋ ರಾತ್ರಿಯಲ್ಲಿ ಸ್ತುತಿಪೆ ಕಾಣಾ ಇಷ್ಟಲಿಂಗೇಶ್ವರಾ./13
ಕೊಟ್ಟು ನೋಡುವ ಕೊಡದಲೆ ಕಾಡುವ
ಸಿಟ್ಟು ಮಾಡುವ ಗಟ್ಟಿಯಾಗುವ
ಹೊಟ್ಟೆಯ ತುಂಬುವ ಹೊಟ್ಟೆಸಲಹುವ
ಕಟ್ಟೆಯನು ಕಟ್ಟುವ ಬಿಟ್ಟಿಯನು ಮಾಡುವ
ಕಟ್ಟಳಿಲ್ಲದೆ ಉಂಬುವ ಹುಟ್ಟಲಿ ತಿವಿಸಿಕೊಂಬುವ
ಕಟ್ಟಳಿಲ್ಲದೆ ತಿರುಗುವ ಗಟ್ಟಿಯಾಗಿ ಹಡಪವನು ಹೊತ್ತವ
ಒಟ್ಟಿದವನ ಕೊಟ್ಟವಂ ಇಷ್ಟುದಿನ ತಪ್ಪದಲೆ ನಡೆಸಿ
ಹುಟ್ಟದಲೆ ನಂಬಿಗೆ ಕೊಡದಲೆ ತನ್ನನು ನಂಬಿ ಇದ್ದಲ್ಲಿಗೆ ತರಿಸಿದ
ನಮ್ಮ ಘನಗುರು ಸದಾಶಿವ ಸದ್ಗುರುವು ಕಾಣಾ
ಕುವರ ಚೆನ್ನಬಸವೇಶ್ವರಾ./14
ಚಾಡಿಗನಹುದಲ್ಲ ನೋಡಿಕ್ರೋಧವನೆಲ್ಲ
ಕೂಡಿವಿಂದವನೆಲ್ಲ ಹೇಡಿ ಮಾಡಿದನಲ್ಲ
ಕೂಡೆ ವಿತರ್ಕರ ಸಂತವಿಟ್ಟವನಲ್ಲ
ನಮ್ಮ ಘನಗುರು ಗಿರಿಜೆ ಮನೋಹರನು
ಕಾಣಾ ಕುವರ ಚೆನ್ನಬಸವೇಶ್ವರಾ./15
ತಿರಿದುಂಬುವ ಹರಿದುಂಬುವ ಗರಿವಿಂದ ಗಂಭೀರವ
ಸಂಗವರಂಗವದಂಗವ ಕೊಡುವಂಗವ ಸಿರಿದಂದವ
ತರಿದಂದವ ಸಿರಿಯಂದವ ಹೂಚೆಂದವ ನಡೆವಂದವ
ಪರಮಂದವ ಸಮರಸಂಗವ ತಿಳಿದು ಕೊಡುವ ಕೊಡುವ ಕಾಣಾ
ಕುವರ ಚೆನ್ನಬಸವೇಶ್ವರಾ./16
ದೇವರೆಲ್ಲವ ಹೊಡದು ತಂದು ಮಾಯೆಯೊಳಗೆ ಕೂಡಿತ್ತು.
ಹರಹರ ಮಾಯೆ[ಯ] ಇರವ ನೋಡಾ !
ಗಿರಿಜೆ ಕಳೆಯ ಇಮ್ಮಡಿ ಗುಣದ ಶಾಂತತೆಯ
ನಿರ್ವಿಕಾರದ ಗಿರಿಜೆ ಕಳೆಯ ರೂಪಾಗಿ ಇಳೆಗೆ ಬಂದು
ಪಾಶವ ಹಾಕಿ ಕಟ್ಟಿನೊಳಗೆ ಅವಿಕಿ ಮರುಳು ಮಾಡಿಸುವಳು.
ಬಾಯ ತೆಗೆಸುವಳು, ಬಳಲಿಸುವಳು,
ಬಣ್ಣ ಗುಂದಿಸುವಳು.
ಮೂರು ಲೋಕದವರೆಲ್ಲ ಮಂಕು ಕುರಿಗಳು
ಬೆಂಬತ್ತಿ ತಿರುಗಿಸುವಳು.
ಇಂಥ ಮಾಯಾವಿಕಾರದ ಮಾಯೆಯ ಜನನವ ನೋಡಾ
ಕರಸ್ಥಳದ ಇಷ್ಟಲಿಂಗೇಶ್ವರಾ./17
ದೇವಿಯರೊಳಗೆ ದೇವನೆ ಕೂಡಿದ.
ಹರಹರ ಮಾಯೆ[ಯ] ಘನವ ಮನವ ತನುವನಾರಿಗೆಯು ತಿಳಿಯಬಾರದು.
ತಿಳಿದೆನೆಂಬೊ ಭ್ರಮಿ[ತರಿಗೆ] ಕರ ಸನ್ನಿಹಿತವಳವಡುವಳಲ್ಲ .
ತಂದೆ ಅಣ್ಣ ತಮ್ಮ ಬಂಧು ಬಳಗ ಕುಲ ಆವುದೆನ್ನದೆ
ಕುಲಗೆಡುವಂಥವಳಲ್ಲ.
ನಮ್ಮ ಘನ ಗುರು ಅಲ್ಲಮ ಪ್ರಭುದೇವನು
ಶಾಂತಿ ಸೈರಣೆ ಉಳ್ಳಂಥವಂಗೆ
ತದ್ರೂಪದ ಮಹಿಮೆಯ ಉಸುರಿ ಹೇಳುವನು
ನಮ್ಮ ತನಯ ಶಿವಶಾಂತ ಮೂರುತಿ ಕಾಣಾ ಚೆನ್ನಬಸವೇಶ್ವರಾ./18
ನೆಲದ ನಿಧಾನವು ಇದ್ದಂದದೆ
ಶಿಲೆಯೊಳಗೆ ಲಿಂಗ ಜಂಗಮ ಸಂಗ ಹಿಂಗದಿರುವ
ಸುಳುವು ಪಾವನಮೂರ್ತಿ
ಮರುಳ ಆಕಾರ ವಿಕಾರರಲ್ಲಿ ಪರಶಿವ ನೆಲೆಸಿಹ
ಜ್ಞಾನಾತ್ಮರಲ್ಲಿ ನಿತ್ಯ ನಿತ್ಯವಗಲದೆ ಕೂಡಿರುವ
ನಮ್ಮ ಕುವರ ಚೆನ್ನಬಸವೇಶ್ವರಪ್ರಭುವು ಕಾಣಾ ಕಲಿದೇವರದೇವ/19
ಪ್ರತಿಯಿಲ್ಲದ ದೇವನ,
ನಿಗಮಾಗಮಂಗಳಿಗೆ ನಿಲುಕದೆ ದೂರದಲ್ಲಿಹನ,
ಹರಿಯಜ ಬ್ರಹ್ಮ ರುದ್ರ ವಾದ ತರ್ಕಕ್ಕೆ ನಿಲುಕದೆ
ಮಾಯೆಗೆ ಸಿಕ್ಕದಾತನ,
ಬ್ರಹ್ಮ ವಿಷ್ಣು ರುದ್ರರ ನಿರ್ಮಿತವ ಮಾಡಿ,
ಇರುವೆಯು ಮೊದಲು ಆನೆಯು ಕಡೆ
ಜೀವರಾಸಿಯೆಲ್ಲರಿಗೆ ಅಂತು
ಎಂಬತ್ತು ನಾಲ್ಕು ಕೋಟಿಗೆಲ್ಲಕ್ಕೆ ಅಧಿಪತಿಯ ಮಾಡಿ
ನಿಜಹೃದಯದಲ್ಲಿರಿಸಿ,
ಮಾಯಚಿನ್ಮಯವಾಗಿ ಇದ್ದಾತನಂ
ಲೀಲೆ ಬಾಲತ್ವದಿಂದ ಈ ಕೃತಿಯ ಪೇಳ್ವೆನು [ಇಷ್ಟಲಿಂಗೇಶ್ವರಾ]./20
ಬೆಲೆಯಿಲ್ಲದ ರತ್ನವ ಬೇಹಾರಿಸಿ ಕೊಂಬುವರಾರನು ಕಾಣೆ.
ಎಲೆ ಮಹಾಪ್ರಭುವೆ ನೀನೆ ಮಹಾರತ್ನವು.
ವ್ಯವಹಾರಿಯು ಬಸವಣ್ಣನು.
ಹೇಮವ ಒರೆಗಲ್ಲಿನಲ್ಲಿ ಒರೆದೊರೆದು, [ನೋಳ್ಪವ]
ಬಸವಣ್ಣ ನೀನೊಬ್ಬನಲ್ಲದೆ ಮತ್ತಾರನು ಕಾಣೆ
ಕರಸ್ಥಳದ ಇಷ್ಟಲಿಂಗೇಶ್ವರಾ./21
ಮಾಯೆ ಘನವಾದರೆ ಪುರುಷಂಗೆ ಅಳುಕುವಳೆ ?
ಇಳೆಯ ಜನ ಉತ್ಪತ್ತಿಗಳೆಲ್ಲ ಮಾಯೆ ಘನವೆಂಬರು.
ಮರುಳು ಭ್ರಮೆವಿಡಿದು, ಅದು ಹುಸಿಯು.
ಅರಿಯಿರೆ-ಮಾಯಾಂಗನೆಯ ರೂಪಾಗಿ
ಮರ್ತ್ಯಕ್ಕೆ ಬಂದು, ಶರಣ ಮಹಿಮರ ಸೋಲಿಸೇನೆಂದು
ನಿಂದಿಹುದಕ್ಕೆ, ಸಾಕ್ಷಾತ್ ಶಂಭು ಅಲ್ಲಮನೆಂಬ ನಾಮಗಳಿಂದ
ಸೋಲಿಸಿ, ಮಾಯಾಕೋಳಾ[ಹಳ]ನೆಂಬ ಬಿರಿದು ಶಿವಂಗಲ್ಲದೆ
ಮರ್ತ್ಯಲೋಕದ ಮಾನವರಿಗೆ ಸಾಧ್ಯವೆ ?
ತನ್ನ ತಾನೆ ಇತರ ದಾಡಿಯಮಾಡಿ ಕೊಂಡಳು ಕಾಣಾ
ಕರಸ್ಥಳ[ದ] ಇಷ್ಟಲಿಂಗೇಶ್ವರಾ./22
ಮೂರ್ಖಂಗೆ ಕಥಾಪ್ರಸಂಗವನು
ಬೋಧಿಸಿದ ಪರಿಯ ಮಾಡುವರೆ ಏನಯ್ಯಾ ?
ಸಂಭ್ರಮದೋಲಗದಲ್ಲಿ ನಂಬಿಗೆಯಂ ಕೊಟ್ಟು
ರಂಬಿಸಿಯೆನ್ನನು ಕುಂಭಿನಿಗೆ ಕಳುಹಿ
ಶಂಭುಶಂಕರ ಸದಾಶಿವ ಮುಂಬರವ
ಬಾರದ ಹಲವು ಯೋಚನದ
ಹಗರಣವ ಮಾಡದ ಹೊಲಬ ಮರೆಯಿಸದ
ಸಮರಸವ ಮರಸದ……
[ಹ]ಲ ಬಗೆಯ ನೆಲೆಯನರುಹುವ ನೀನೆ
ನಿಜವನರುಹುವ ದೇವ ಕಾಣಾ ಇಷ್ಟಲಿಂಗೇಶ್ವರಾ./23