Categories
ವಚನಗಳು / Vachanagalu

ಮಹಾಲಿಂಗ ಶಶಿಮೌಳಿ ಸದಾಶಿವ ## ವಚನಗಳು

ಅಂತಪ್ಪ ಸದ್ಭಕ್ತನು, ತನ್ನ ಭಕ್ತಿಸ್ಥಲದ ಆಚರಣೆಯ ಸಾಂಗವಾಗಿ ನಡಸಿ,
ಮಹೇಶ್ವರಸ್ಥಲವನಂಗೀಕರಿಸಿ, ಮಹೇಶ್ವರನೆನೆಸಿ,
ಆ ಆಚರಣೆಯನೆಂತು ನಡೆಸುವನೆಂದರೆ,
ಕ್ರಿಯಾತನುವ ತಾಳಿ, ಪ್ರಾಣವಾಯುಗಳ ಪ್ರಪಂಚಿನಲ್ಲಿ ತೊಡಕದೆ,
ಮನ ಬುದ್ಧಿ ಚಿತ್ತ ಅಹಂಕಾರಂಗಳ ತನ್ನಾಧೀನವಂ ಮಾಡಿ,
ಅಷ್ಟಮದಂಗಳ ನಷ್ಟವೆಂದೆನಿಸಿ, ಸಪ್ತವ್ಯಸನಂಗಳ ತೊತ್ತಳದುಳಿದು,
ಅರಿಷಡ್ವರ್ಗಂಗಳು ಮೊದಲಾದವರ ಅನ್ಯಕ್ಕಾಶ್ರಯಮಾಗದೆ,
ಪಂಚೇಂದ್ರಿಯಂಗಳ ಅನ್ಯಸಂಚಾರವ ಕಳೆದು, ಇಂದ್ರಿಯಂಗಳಿಂ ತೋರಿದ
ಜ್ಞಾನವಿಷಯ ಸುಖಂಗಳೆಲ್ಲಮಂ ಆ ಲಿಂಗಪ್ರಸಾದವೆಂದೇ ತಾನಂಗೀಕರಿಸಿ,
ಶಿವಮತವಲ್ಲದೆ ಮತ್ತೆ ಬೇರೆ ಮತ ಉಂಟೆಂಬ ಭವಬಾಧಕರ
ಮುಖಮನಾಲೋಕನಂಗೆಯ್ಯದೆ,
ಅವರ ನುಡಿಗಡಣಮಂ ಶ್ರೋತ್ರಮಂ ಸೋಂಕಲೀಯದೆ,
ಜಿಹ್ವೆಯ ಕೊನೆಯಲ್ಲಿ ಮರೆದೊಮ್ಮೆಯೂ ಪಾರುಗೊಳ್ಳದೆ,
ಅಂತಪ್ಪ ದುಷ್ಕರ್ಮಿಗಳ ಚರಿತ್ರವಾಸನಾ ಧರ್ಮವನಂಗೀಕರಿಸದೆ,
ಅವರ ತನುಸೋಂಕಿನಿಂ ಬಂದ ವಾಯು ಸ್ಪರ್ಶನ,
ತಮ್ಮಂಗವ ತಟ್ಟಿ ಮುಟ್ಟಲೀಯದೆ,
ಜಾಗ್ರಸ್ವಪ್ನದಲ್ಲಿ ಅವರ ನೆನಹು ಮನಕ್ಕೆ ತಟ್ಟದಂತೆ ಬಹಿಷ್ಕಾರವಂ ಮಾಡಿ,
ವೀರಶೈವವೆಂಬ ಜಯಸ್ತಂಭಮಂ ಚಿತ್ರದಲ್ಲಿ ಬರೆದು,
ಲಿಂಗಾಂಗಸಂಗಿಯಾಗಿ ಜಿಹ್ವೆಯ ಕೊನೆಯಲ್ಲಿ
ಮಂತ್ರೋಚ್ಚರಣೆಯ ಉಲುಹಡಗದೆ,
ದಯೆಶಾಂತನೆಯ ನಿರ್ಮಲಚಿತ್ತನೆನಿಸಿ,
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿ,
ಲಿಂಗಾಣತಿಯಿಂದ ಬಂದ ಪದಾರ್ಥವ ಮಹಾಲಿಂಗ ಪ್ರಸಾದವೆಂದು
ತನ್ನಿಷ್ಟಲಿಂಗಕ್ಕೆ ಸಮರ್ಪಣೆಯಂ ಮಾಡಿ,
ಆ ಲಿಂಗದೊಡನೆ ಸಹಭೋಜನವನುಂಡು, ಪ್ರಾಣಲಿಂಗಕ್ಕೆ ತೃಪ್ತಿಪಡಿಸಿ,
ಜ್ಞಾನಜ್ಯೋತಿಯ ಬೆಳಗಿನಲ್ಲಿ ಸಂಚಾರವ ಮಾಡುವಾತನೆ ಮಹೇಶ್ವರನಯ್ಯಾ,
ಮಹಾಲಿಂಗ ಶಶಿಮೌಳಿ ಸದಾಶಿವಾ./1
ಗುರುವಿನಿಂದ ಅಂಗದ ಮೇಲೆ ಶಿವಲಿಂಗ ಧಾರಣವಂ ಮಾಡಿತಾಭಕ್ತನೆನಿಸಿ,
ಹಿಂದೆ ಮುಂದೆ ವಿಚಾರಿಸದೆ, ಆಚಾರದಲ್ಲಿ ಅಧಿಕನೆನಿಸಿಕೊಳಬೇಕೆಂಬ
ತೊಳ ಮುಂದುಗೊಂಡು ಭಕ್ಷ್ಯ ಭೋಜ್ಯ ಲೇಹ್ಯ ಚೋಹ್ಯ ಪಾನ ಮೊದಲಾದ
ಪದಾರ್ಥದ ರುಚಿಗಳೆಲ್ಲಮಂ ಜಂಗಮದಿಂದ ಪ್ರಸಾದವ
ಪಡೆದುಕೊಂಬೆನೆಂದು ನೆನೆವ ಮಾಡುವರು.
ಅರ್ಪಿತಕ್ಕೆ ಸಲುವ ಪದಾರ್ಥಮಂ ಕಣ್ಣಿನಲ್ಲಿ ಕಂಡು, ಮನದಲ್ಲಿ ನೆನೆದು,
ಆ ಪದಾರ್ಥರುಚಿಗಳೆಲ್ಲ ತನ್ನ ಮನಕ್ಕೆ ತಟ್ಟಿದಲ್ಲಿ,
ಆದ ಪ್ರಸಾದವ ಮಾಡಿಕೊಟ್ಟ ಜಂಗಮವಾರು ? ಅದ ಪಡೆದುಕೊಂಡ ಭಕ್ತನಾರು ?
ಎನಗಿದು ಚೋದ್ಯ ಚೋದ್ಯ. ಇದು ಪ್ರಸಾದಿಯ ಆಚರಣೆಯಲ್ಲ.
ಮಹಾಪ್ರಸಾದಿಯ ಆಚರಣೆ ಎಂಬುದು ಇಂದ್ರಿಯಂಗಳ ವಿಷಯದಿಂ
ತೋರಿದುದೆಲ್ಲಮಂ ಆಯಾ ಲಿಂಗಾರ್ಪಣೆಯಂ ಮಾಡಿ,
ಆ ಪರಿಣಾಮವು ತನ್ನ ಮನವ ನಂಬಿ, ಆ ಮನೋವ್ಯಾಪಾರದಿಂದ ನಡೆವ
ಮೂವತ್ತು ಮೂರುಕೋಟಿ ಇಂದ್ರಿಯ, ಅರುವತ್ತಾರುಕೋಟಿ ಕರಣಂಗಳೆಲ್ಲವಂ
ಸರ್ವಕಾರಣವೆನಿಸಿದ ಆ ಪರವಸ್ತುವಿನ ಕರಣೇಂದ್ರಿಯಂಗಳೆಂದು
ಭಿನ್ನ ಭಿನ್ನವಾಗಿ ಆಯಾ ಲಿಂಗಕ್ಕೆ ಸಮರ್ಪಣೆಯ ಮಾಡುವಾತನೆ
ಮಹಾಪ್ರಸಾದಿಯಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವ./2
ನಿತ್ಯ ಕೇಡಿಲ್ಲದಂತ ನಿರೂಪಿಸಲ್ಬಾರದಂಥ,
ನಿರಾಕಾರ ಆಕಾರ ರಹಿತಮಾದಂಥ, ನಿರ್ನಾಮ ಹೆಸರಿಲ್ಲದಂಥ,
ನಿರಂಜನ ಅಜ್ಞಾನ ಕಾಳಿಕೆ ಹೊದದಂಥ, ನಿಸ್ಸಂಗಿ ಚಿಚ್ಛಕ್ತಿ ಸಮ್ಮೇಳವಿಲ್ಲದಂಥ,
ನಿರ್ನಾಮ ಹೆಸರಿಲ್ಲದಂಥ, ನಿರೂಪಕರ ಚರಣಾವಯವರಹಿತಮಾದಂಥ,
ನಿರ್ಲೆಪ ಮಾಯಾಪ್ರಪಂಚು ಸೋಂಕಿಲ್ಲದಂಥ,
ಶೂನ್ಯ ಕುರುಹುಗಾಣಿಸದಂಥ, ನಿಮಿತ್ತ ಪ್ರಪಂಚಿಗೆ ಕಾರಣಮಾದಂಥ,
ಅಖಂಡ ಸರ್ವವು ಪರಿಪೂರ್ಣಮಾದಂಥ, ಅದ್ವಯ ತಾನೊಂದಲ್ಲದೆ ಎರಡಿಲ್ಲದಂಥ,
ಪರಕೆ ಪರವಿನಿಂದತ್ತತ್ತಣ ನಿರ್ಗುಣ ಪರಬ್ರಹ್ಮವು
ತನ್ನ ಸ್ವಲೀಲಾನಂದ ಪರಿಪೂರ್ಣ ಸಂತುಷ್ಟಿಯಿಂದೆ ಬೆರಗುವಡೆದು,
ಸುಷುಪ್ತಿಯನೈದಿ ಬಯಲು ಬಯಲಾದಂತಿಹುದು.
ಆ ಶೂನ್ಯಾನಂದಪೂರ್ಣವಹ ಕಾಲಕ್ಕೆ ಆ ಬ್ರಹ್ಮದ ಚೈತನ್ಯಜ್ಞಾನಪ್ರಭಾ
ಸಾಮರ್ಥ್ಯದ ಬೆಳಗೇ ಬೀಜದೊಳಗಣ ವೃಕ್ಷದಂತಿರ್ದು
ನನೆಯೊಳಗಣ ಪರಿಮಳ ಬಲಿದು ಬಿಂದು ನುಂಗಿದಂತೆ,
ಸುಷುಪ್ತಿಯನೈದಿದ ನಿರ್ಗುಣಬ್ರಹ್ಮಕ್ಕೆ ಚಿತ್ತು ಪ್ರಸನ್ನತೆಯಾಯಿತ್ತು.
ಆ ಚಿತ್ತೇ ಜ್ಞಾನಶಕ್ತಿಯೆನಿಸಿತ್ತು.
ಅದರಿಂ ಸ್ವಪ್ನಾವಸ್ಥೆಯ ಆರುಹಿನಂತಾಗೆ ಹಕಾರ ಪ್ರಣವೋತ್ಪತ್ಯಮಾದುದು.
ಆ ಹಕಾರ ಪ್ರಣಮವೆ ಭ್ರಮರ ಝೇಂಕಾರದಂತೆ ಒಂಕಾರನಾದವಾಯಿತ್ತು.
ಆ ಒಂಕಾರನಾದವೆಂಬ ಮಂತ್ರಲಿಂಗದಿಂದ ಅಕಾರ ಉಕಾರ ಮಕಾರವೆಂಬ
ಪ್ರಣವಬೀಜಾಕ್ಷರಂಗಳುತ್ಪತ್ಯವಾದವು.
ಆ ಅಕಾರವೆಂಬ ಬ್ರಹ್ಮಕ್ಕೆ ಉಕಾರವೆಂಬ ಚಿತ್ಪ್ರಣವೆ ಅಂಗಮಾಗೆ,
ಮ ಕಾರ ಪ್ರಣಮ ಕಲೆ ಸಂಧಿಸಲು,
ಅಖಂಡಗೋಳಕಾಕಾರ ತೇಜೋಮೂರ್ತಿಯಾಗಿ,
ಸತ್ವ ರಜತಮವೆಂಬ ಗುಣತ್ರಯಮಂ
ನಿವೃತ್ತಿ ಪ್ರತಿಷ್ಠೆ ವಿದ್ಯೆ ಶಾಂತಿ ಶಾಂತ್ಯತೀತ ಶಾಂತ್ಯತೀತೋತ್ತರೆ
ಎಂಬಾರು ಕಲಾಶಕ್ತಿಗಳು
ಕತೃಸಾದಾಖ್ಯ ಮಹಾಸಾದಾಖ್ಯಗಳೆಂಬ ಷಟ್ಸಾದಾಖ್ಯಗಳಮಂ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮೊದಲಾದ ಪಂಚಭೂತಂಗಳುಮಂ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಪಂಚವಾಯುಮಂ
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬೈದು ಜ್ಞಾನೇಂದ್ರಿಯಮಂ
ಶಬ್ದ ಸ್ಪರ್ಶ ರೂಪ ಗಂಧವೆಂಬೈದು ವಿಷಯಮಂ
ವಾಕು ಪಾಣಿ ಪಾದ ಗುಹ್ಯ ವಾಯುವೆಂಬೈದು ಕರ್ಮೆಂದ್ರಿಯಮಂ
ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರವೆಂಬೈದು ಕರಣಮಂ
ಸಾಮವೇದ ಋಗ್ವೇದ ಯಜುರ್ವೆದ ಅಥರ್ವಣವೆಂಬ ನಾಲ್ಕು ವೇದಮಂ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯವೆಂಬಾರು ಸ್ಥಲಮಂ
ಪಂಚಭೂತಂಗಳಿಂದಾದ ಬ್ರಹ್ಮಾಂಡಾದಿ
ಸ್ವರ್ಗ ಮರ್ತ್ಯ ಪಾತಾಳ ಮೊದಲಾದ ಅನಂತ ಲೋಕಂಗಳಲ್ಲಿ
ಉತ್ಪತ್ತಿ ಸ್ಥಿತಿ ಲಯ ಕರ್ತೃಗಳಿಂದಾದ ಅಂಡಜ ಸ್ವೇದಜ ಉದ್ಭಿಜ ಜರಾಯುಜ
ಮುತ್ರಜ ಎಂಬೈದು ತೆರದುತ್ಪತ್ಯಮಂ
ಸಮಸ್ತ ಸ್ಥಾವರಜಂಗಮಂಗಳ ಜನನ ಮರಣ ಪುಣ್ಯ ಪಾಪ ಸ್ವರ್ಗ ನರಕಂಗಳು
ಇವು ಮೊದಲಾದ ಅನೇಕವೆಲ್ಲವು
ಚಿತ್ರಿಕನ ಊಹೆ ಚಿತ್ರಿಕನ ಭಾವದಲ್ಲಿ ಅಡಗಿದಂತೆ
ಸರ್ವವಿಶ್ವವೆಲ್ಲಮುಂ ತನ್ನ ಲೀಲೆಗುಂಟೆನಿಸಿ
ಏಕಮೇವಾದ್ವಿತೀಯಂ ಬ್ರಹ್ಮವೆ ಮಹಾಲಿಂಗವೆನಿಸಿತ್ತು.
ಆ ಮಹಾಲಿಂಗದ ಕಾರಕದಲ್ಲಿ ನ ಕಾರ, ದಂಡದಲ್ಲಿ, ಮ ಕಾರ,
ಕುಂಡಲಿಯಲ್ಲಿ ಶಿ ಕಾರ
ಅರ್ಧಚಂದ್ರದಲ್ಲಿ ವ ಕಾರ, ದರ್ಪಣದಲ್ಲಿ ಯ ಕಾರ,
ಆ ಮಹಾಲಿಂಗದ ಪ್ರಣವ ಪಂಚಾಕ್ಷರದ ಚಿತ್ಕಳೆಯೇ ಪಂಚಮುಖ,
ದಶಪಂಚನೇತ್ರ, ದಶಭುಜ, ತನು ಏಕ,
ದ್ವಿಪಾದದಿಂದೆ ಪ್ರಪಂಚಿಗೆ ಕಾರಣಮಾದ ಸದಾಶಿವಮೂರ್ತಿ ಎನಿಸಿತ್ತು.
ಆ ಮೂರ್ತಿಯ ಮುಖಗಳಾವವೆಂದರೆ: ಸದ್ಯೋಜಾತ, ವಾಮದೇವ, ಅಘೋರ,
ತತ್ಪುರುಷ, ಈಶಾನ್ಯವೆಂಬೈದು ಮುಖಂಗಳು.
ಆ ಮುಖಂಗಳಿಂದ ಪ್ರಪಂಚಿಗಾಲಯಮಾದ ಬ್ರಹ್ಮಾಂಡವ ರಚಿಸುವ ಕಾರಣ,
ಐದು ಭೂತಂಗಳು ಹುಟ್ಟಿದವು, ಆ ಭೂತಂಗಳ ಗುಣಮಿಶ್ರ ಭೇದದಿಂದ
ಪಂಚೀಕರಿಸಲು ಪಂಚವಿಂಶತಿತತ್ವಂಗಳಾದವು.
ಅದೆಂತಾದವೆಂದರೆ: ಆಕಾಶವೆಂಬ ಭೂತದಿಂದ ಜ್ಞಾನ ಬುದ್ಧಿ ಮನ ಚಿತ್ತ ಅಹಂಕಾರವೆಂಬ
ಪಂಚಕರಣಂಗಳು ಹುಟ್ಟಿದವು.
ವಾಯುವೆಂಬ ಭೂತದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ಪಂಚ ಪ್ರಾಣವಾಯುಗಳು ಹುಟ್ಟಿದವು.
ಅಗ್ನಿಯೆಂಬ ಭೂತದಿಂದ ಶ್ರೋತ್ರ ಸ್ಪರ್ಸಕ್ಕೆ ನೇತ್ರ ಜಿಹ್ವೆ ಘ್ರಾಣವೆಂಬೈದು
ಜ್ಞಾನೇಂದ್ರಿಯಂಗಳು ಪುಟ್ಟಿದವು.
ಅಪ್ಪುವೆಂಬ ಭೂತದಿಂದ ಶಬ್ದ ಸ್ಪರ್ಶ ರೂಪು ರಸ ಗಂಧವೆಂಬೈದು
ವಿಷಯಂಗಳು ಹುಟ್ಟಿದವು.
ಆ ಕರ್ಮೆಂದ್ರಿಯಂಗಳ ವಿಷಯ ವಚನ ದಾನ ಗಮನ ಆನಂದ ವಿಸರ್ಜನ
ಎಂಬೈದು ವಿಷಯಂಗಳು
ಮತ್ತಮಾ ಭೂತಂಗಳ ಗುಣಧರ್ಮ ಕರ್ಮವರ್ಣಅಧಿದೇವತೆಗಳಾವವೆಂದರೆ: ಪೃಥ್ವಿಗೆ ಶಬ್ದ ಸ್ಪರ್ಶ ರೂಪು ರಸ ಗಂಧ ಈ ಐದು ಗುಣ.
ಕಠಿಣತ್ವವೆ ಧರ್ಮ, ಧಾರಣಾದಿ ಕರ್ಮ, ತದಂಗ ಪೀತವರ್ಣ
ಅಧಿದೇವತೆ ಬ್ರಹ್ಮ.
ಅಪ್ಪುವಿಂಗೆ ಶಬ್ದ ಸ್ಪರ್ಶ ರೂಪು ರಸ ಈ ನಾಲ್ಕು ಗುಣ.
ದ್ರವಿಸೂದೆ ಧರ್ಮ, ಪಿಂಡಿ ಕರಣ ಕರ್ಮ,
ತದಂಗ, ಶ್ವೇತವರ್ಣ, ಅಧಿದೇವತೆ ವಿಷ್ಣು.
ಅಗ್ನಿಗೆ ಶಬ್ದ ಸ್ಪರ್ಶ ರೂಪ ಈ ಮೂರು ಗುಣ.
ಉಷ್ಣಿ ಸುವುದೆ ಧರ್ಮ, ವಚನಾದಿ ಕರ್ಮ, ತದಂಗ ರಕ್ತವರ್ಣ,
ಅಧಿದೇವತೆ ರುದ್ರನು.
ವಾಯುವಿಂಗೆ ಶಬ್ದ ಸ್ಪರ್ಶ ಎರಡು ಗುಣ, ಚಲಿಸುವುದೆ ಧರ್ಮ.
ವ್ಯಹನಾದಿ ಕರ್ಮ, ತದಂಗ ಹರೀತ ವರ್ಣ, ಅಧಿದೇವತೆ ಈಶ್ವರನು.
ಆಕಾಶಕ್ಕೆ ಶಬ್ದವೊಂದೆ ಗುಣ, ಬಯಾಲಗಿಹುದೆ ಧರ್ಮ.
ಸುಳಿವುದಕ್ಕೆ ತೆರಹುಗೊಡುವುದೆ ಕರ್ಮ, ತದಂಗ ಕೃಷ್ಣವರ್ಣ,
ಅಧಿದೇವತೆ ಸದಾಶಿವನು.
ಈ ಪಂಚಮಹಾಭೂತಂಗಳ ಪಂಚಾಂಶಿಕಭೇದಮಿಶ್ರದಿಂ
ಪಂಚೀಕೃತಿಯನೈದು ದೇಹವಾಯಿತ್ತು.
ಆ ಮಿಶ್ರವೆಂತೆಂದಡೆ: ಆಕಾಶದೊಂದಂಶ ವಿಜ್ಞಾನ, ಆಕಾಶದೊಂದಂಶ ವಾಯುವ
ಕೂಡಲು ಮನಸ್ಸಾಯಿತು.
ಆಕಾಶದೊಂದಂಶ ಅಗ್ನಿಯ ಕೂಡಲು ಬುದ್ಧಿ ಎನಿಸಿತ್ತು.
ಆಕಾಶದೊಂದಂಶ ಅಪ್ಪುವ ಕೂಡಲು ಚಿತ್ತವೆನಿಸಿತ್ತು.
ಆಕಾಶದೊಂದಂಶ ಪೃಥ್ವಿಯ ಕೂಡಲು ಅಂಹಕಾರವೆನಿಸಿತ್ತು.
ವಾಯುವಿನೊಂದಂಶ ಆಕಾಶವ ಕೂಡಲು ಸಮಾನವಾಯುವೆನಿಸಿತ್ತು.
ವಾಯುವಿನೊಂದಂಶ ವಾಯುವಿನಲ್ಲಿ ಕೂಡಲು ಉದಾನವಾಯುವೆನಿಸಿತ್ತು.
ವಾಯುವಿನೊಂದಂಶ ಅಗ್ನಿಯ ಕೂಡಲು ವ್ಯಾನವಾಯುವೆನಿಸಿತ್ತು.
ವಾಯುವಿನೊಂದಂಶ ಅಪ್ಪುವ ಕೂಡಲು ಅಪಾನವಾಯುವೆನಿಸಿತ್ತು.
ವಾಯುವಿನೊಂದಂಶ ಪೃಥ್ವಿಯ ಕೂಡಲು ಪ್ರಾಣವಾಯುವೆನಿಸಿತ್ತು.
ಅಗ್ನಿಯದೊಂದಂಶ ಆಕಾಶವ ಕೂಡಲು ಶ್ರೋತ್ರವೆನಿಸಿತ್ತು.
ಅಗ್ನಿ ಯದೊಂದಂಶ ವಾಯುವ ಕೂಡಲು ತ್ವಕ್ಕೆನಿಸಿತ್ತು.
ಅಗ್ನಿಯದೊಂದಂಶ ಅಗ್ನಿಯಲ್ಲಿ ಕೂಡಲು ನೇತ್ರವೆನಿಸಿತ್ತು.
ಅಗ್ನಿಯದೊಂದಂಶ ಅಪ್ಪುವಿನಲ್ಲಿ ಕೂಡಲು ಜಿಹ್ವೆಯೆನಿಸಿತ್ತು.
ಅಗ್ನಿಯದೊಂದಂಶ ಪೃಥ್ವಿಯ ಕೂಡಲು ಶಬ್ದವೆನಿಸಿತ್ತು.
ಅಪ್ಪುವಿನದೊಂದಂಶ ಆಕಾಶವ ಕೂಡಲು ಶಬ್ದವೆನಿಸಿತ್ತು.
ಅಪ್ಪುವಿನದೊಂದಂಶ ವಾಯುವ ಕೂಡಲು ಸ್ಪರ್ಶವೆನಿಸಿತ್ತು.
ಅಪ್ಪುವಿನದೊಂದಂಶ ಅಗ್ನಿಯ ಕೂಡಲು ರೂಪವಿನಿಸಿತ್ತು.
ಅಪ್ಪುವಿನದೊಂದಂಶ ಅಪ್ಪುವಿನಲ್ಲಿ ಕೂಡಲು ರಸವೆನಿಸಿತ್ತು.
ಅಪ್ಪುವಿನದೊಂದಂಶ ಪೃಥ್ವಿಯ ಕೂಡಲು ಗಂಧವೆನಿಸಿತ್ತು.
ಪೃಥ್ವಿಯದೊಂದಂಶ ಆಕಾಶವ ಕೂಡಲು ವಾಕ್ಕೆನಿಸಿತ್ತು.
ಪೃಥ್ವಿಯದೊಂದಂಶ ವಾಯುವ ಕೂಡಲು ಪಾಣಿಯೆನಿಸಿತ್ತು.
ಪೃಥ್ವಿಯದೊಂದಂಶ ಅಗ್ನಿಯ ಕೂಡಲು ಪಾದವೆನಿಸಿತ್ತು.
ಪೃಥ್ವಿಯದೊಂದಂಶ ಅಪ್ಪುವ ಕೂಡಲು ಗುಹ್ಯವೆನಿಸಿತ್ತು.
ಪೃಥ್ವಿಯದೊಂದಂಶ ಪೃಥ್ವಿಯಲ್ಲಿ ಕೂಡಲು ಪಾಯವೆಂದೆನಿಸಿತ್ತು.
ಇಂತೀ ಪಂಚಭೂತಂಗಳ ಗುಣಮಿಶ್ರದಿಂದ
ಆತ್ಮಂಗೆ ಪಂಚವಿಂಶತಿತತ್ವಮಾದಂಥ ದೇಹಮಾಯಿತ್ತು.
ಬಳಿಕ ಈ ಪಂಚವಿಂಶತಿತತ್ವದಿಂದ ಜಗದುತ್ಪತ್ಯಮಾದುದು.
ಅದೆಂತಾದುದೆಂದಡೆ: ಆ ಪಂಚಬ್ರಹ್ಮವೆನಿಸಿದ ಸದಾಶಿವಮೂರ್ತಿಯ
ಸದ್ಯೋಜಾತಮುಖದಿಂದ ಪೃಥ್ವಿ ಪುಟ್ಟಿತ್ತು.
ಆ ಪೃಥ್ವಿಯ ವಾಮದೇವಮುಖದಿಂದಾದ ಅಪ್ಪುವಿನಿಂ ಕಲಸಿ,
ಮೃತ್ಪಿಂಡಮಂ ಮಾಡಿ, ಅಘೋರಮುಖದಿಂದಾದ ಅಗ್ನಿಯಿಂ ದಹಿಸಿ,
ತತ್ಪುರುಷಮುಖದಿಂದಾದ ವಾಯುವಿನಿಂ ಸೀತಳವೆನಿಸಿ,
ಈಶಾನ್ಯಮುಖದಿಂದಾದ ಆಕಾಶದಿಂ ಆ ಮೃತ್ಪಿಂಡದೊಳಗೆ ಬಯಲು ಮಾಡಿ,
ಆ ಸುವರ್ಣಮಯ ಕಂತುಕವನೆ ಸದಾಶಿವಮೂರ್ತಿ ಅನೇಕಕಾಲ ಪಿಡಿದಿರ್ದು,
ಆ ಮೂರ್ತಿಗೆ ಪ್ರಪಂಚುಲೀಲಾನಂದ ಮುಂದುಗೊಂಡು,
ತನ್ನ ಸತ್ವ ರಜ ತಮವೆಂಬ ಗುಣತ್ರಯದಿಂದೆ
ಸೃಷ್ಟಿ ಸ್ಥಿತಿ ಲಯ ಕರ್ತೃವಾದಿಯಾದ ಬ್ರಹ್ಮ ವಿಷ್ಣು ರುದ್ರರನು
ತನ್ನ ನೆನಹುಮಾತ್ರದಿಂದ ತತ್ವಮೂವತ್ತಾರರಿಂದೆ ದೇಹಿಗಳೆನಿಸಿ,
ಆ ತ್ರೈಮೂರ್ತಿಗಳಿಗೆ ಅಹಂ ಮಮತೆಯುಂ ಪುಟ್ಟಿಸಿ, ಜೀವಾತ್ಮರೆನಿಸಿ,
ಪುಣ್ಯ ಪಾಪವೆಂಬ ಕರ್ಮದುದ್ಯೋಗಮಂ ಪ್ರೇರಿಸಿ,
ಜನನ ಮರಣ ದುಃಖ ಬಂಧ ಮೋಕ್ಷಂಗಳೆಂಬ ಭವಮಾಲೆಗೊಳಗುಮಾಡಿ,
ಆ ಸುವರ್ಣಮಯ ಕಂತುವನೆ ಆ ಮೂರ್ತಿ
ತನ್ನ ನಖಾಗ್ರದಿಂದ ಇಬ್ಭಾ ಎನಿಸಿ,
ಅದಕ್ಕೆ ಕಪ್ಪರಕಟಹವೆಂದು ಪೆಸರಿಟ್ಟು, ಆ ತ್ರೈಮೂರ್ತಿಗಳಿಗೆ
ಪ್ರಪಂಚು ನಿಮ್ಮಿಂದ ನಡೆಯಲೆಂದು ಕಟ್ಟಳೆಯಂ ಮಾಡಿದಲ್ಲಿ,
ಬ್ರಹ್ಮಾಂಡದ ಕರ್ಪರದೊಳಪೊಕ್ಕ ಕರಂಡ ಮುಚ್ಚಳವಂ ಮುಚ್ಚಿದಂತೆ,
ಆ ಕಪ್ಪರಕಟಹಕ್ಕೆ ಬೆಸುಗೆಗೊಳಿಸಿ,
ಬಳಿಕ ಅಂಡಜ ಶ್ವೇದಜ ಉದ್ಭಿಜ ಜರಾಯುಜ
ಮಂತ್ರಜವೆಂಬೈದು ತೆರದುತ್ಪತ್ಯದಿಂ
ಸಮಸ್ತ ಸ್ಥಾವರ ಜಂಗಮಂಗಳು ಪಂಚಭೂತಕಾಯಮಂ ಧರಿಸಿ,
ರೂಪು ವರ್ಣನಾಮ ಜಾತಿ ಭೇದಂಗಳಿಂದ ಪ್ರಪಂಚಿನ ಹೊದರೊಡೆದುದು.
ಬಳಿಕ ಸ್ಥಾವರ ಜಂಗಮಂಗಳ ಜಾತಿಭೇದವೆಂತೆಂದಡೆ: ನವಲಕ್ಷ ಮನುಷ್ಯಜಾತಿ, ಹದಿನಾಲ್ಕುಲಕ್ಷ ದೇವಜಾತಿ,
ಹತ್ತುಲಕ್ಷ ಜಲಚರಂಗಳು, ಹತ್ತುಲಕ್ಷ ಬಹುಪಾದಜೀವಿಗಳು,
ಹತ್ತು ಲಕ್ಷ ಸರ್ಪಜೀವಿಗಳು, ಹತ್ತ ಲಕ್ಷ ಖೇಚರ ಸಂಚಾರಿಗಳು,
ಒಂದುಲಕ್ಷ ಜಾತಿಭೂತಪ್ರಾಣಿಗಳು, ಇಪ್ಪತ್ತುಲಕ್ಷ ಸ್ಥಾವರಜನ್ಮಗಳು.
ಅಂತು ಎಂಬತ್ತುನಾಲ್ಕುಲಕ್ಷ ಜಾತಿಭೇದಂಗಳು, ಅವರ
ಕರ್ಮಕೃತ್ಯದ ಯುಗಂಗಳು : ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗವೆಂಬೀ ನಾಲ್ಕುಯುಗಂಗಳು.
ಆ ಯುಗಂಗಳಿಗೆ ಸಂವತ್ಸರವಿಷ್ಟೆಂದು, ಸಂವತ್ಸರಕ್ಕೆ ಮಾಸವಿಷ್ಟೆಂದು
ಮಾಸ ಒಂದಕ್ಕೆ ದಿನಗಣನೆಯಂ ಮಾಡಿ, ದಿನ ಒಂದಕ್ಕೆ ದಿನಾ ರಾತ್ರಿ
ಕಾಲತ್ರಯಂಗಳುಂಟೆನಿಸಿ,
ಅಹಂಕಾರವೆಂಬ ಕಂಬದಲ್ಲಿ ಮಾಯಾಸೂತ್ರದಿಂದ ಕಟ್ಟುವಡೆಸಿ, ಸಂಚಿತ
ಪ್ರಾರಬ್ಧವೆಂಬಾಹಾರವನಿತ್ತು,
ಸಮಸ್ತ ಸ್ಥಾವರ ಜಂಗಮಂಗಳ ಕಾಲಕಾಮರ ವಶವಂ ಮಾಡಿ,
ಯುಗಧರ್ಮದ ಸ್ತೂಲಸೂಕ್ಷ್ಮದಿಂ ನಡೆವ ಪುಣ್ಯಪಾಪವೆಂಬ
ಪಥವೆರಡರಲ್ಲಿ ಸಂಚಾರವ ಮಂಡಿಸಿ,
ಜನ್ಮದ ಕಡೆಗಾಣದವರಿಗೆ ನರಕ ಪ್ರಾಪ್ತಿಯನೈದಿಸಿ,
ಪುಣ್ಯಶರೀರಿಗಳಿಗೆ ಸ್ವರ್ಗಾದಿ ಭೋಗಗಳುಂಟಾಗಿಹವು.
ಮತ್ತಮಾ ಬ್ರಹ್ಮಾಂಡದ ಒಳ ವಳಯದ ಖರ್ಪರದಲ್ಲಿ
ಘನಗಂಭೀರಮಾದ ದಾರಿ ಪೂರಿತಮಾಗಿಹುದು.
ಅವರ ಮಧ್ಯದಲ್ಲಿ ವಿಶ್ವಕರ್ಮ ನಿರ್ಮಿತ ದಿವ್ಯಸಿಂಹಾಸನದ ಮೇಲೆ,
ಜಲಸ್ತಂಭಕತ್ವದಿಂ ಮೆರೆವಾಧಾರಶಕ್ತಿ ಹಿರಣ್ಮಯ ಶರೀರದಿಂ
ಏಕವಕ್ತ್ರ ತ್ರಿಲೋಚನ ಪಾಶಾಂಕುಶ ವರದ ಭಯಂಕರ ಮೊದಲಾದ
ಕರಚತುಷ್ಟಯಂಗಳಿಂ ಶಿವಧ್ಯಾನಪೂರಿತಳಾಗಿ,
ನಿಶ್ಚಲಾತ್ಮಕಿಯಾಗಿರುತ್ತಿಪ್ಪಳ ಮಸ್ತಕದಲ್ಲಿ ಸೂಡಿದ ಹೊಂದಾವರೆಯಂತೆ
ದಶಕೋಟಿಯೋಜನ ವಿಶಾಲದಿಂದೆ
ಸುವರ್ಣಮಯರಚನೆಯಾದ ಕೂರ್ಮನಿಹುದು.
ಆ ಕೂರ್ಮನ ಬೆನ್ನು ಸುತ್ತುವಳಯದೊಳಿಂದ್ರಾದಿ ದಿಕ್ಕೆಂಟರೊಳು
ಕ್ರಮದಿಂದೈರಾವತ ಪುಂಡರೀಕ ವಾಮನ ಕುಮುರ ಅಂಜನ ಪುಷ್ಪದಂತ
ಸಾರ್ವಭೌಮ ಸುಪ್ರತೀಕವೆಂಬ ಅಷ್ಟದಿಗ್ಗಜಂಗಳಿಪ್ಪವು.
ಮತ್ತಂ ಅಭ್ರಮೆ ಕಪಿಲೆ ಪಿಂಗಳೆ ಅನುಪಮೆ ತಾಮ್ರಪರ್ಣಿ
ಶುಭ್ರದಂತ ಅಂಗನೆ ಅಂಜನಾವತಿಯೆಂಬ ಸ್ತ್ರೀಯರಂ ಕೂಡಿ ಬಂಧಿಸಿದ
ಫಣಿಗಳಾವವೆಂದರೆ: ಅನಂತ ತಕ್ಷಕ ವಾಸುಗಿ ಶಂಖಪಾಲ ಪದ್ಮ ಕರ್ಕೊಟಕ ಕ್ರೋಢ ಕಾಳಾ
ಎಂಬಷ್ಟಕಾಲ ಫಣಿಗಳಿರ್ಕ್ಕುಂ.
ಮತ್ತಮಾ ಕೂರ್ಮನ ಬೆನ್ನ ಮಧ್ಯದಲ್ಲಿ ನೆಲಸಿ, ಪರಮೈಶ್ವರ್ಯಸಂಪನ್ನನಾಗಿ
ಮೆರೆದ ಮಹಾಶೇಷನು ಸಹಸ್ರಪಣಾಮಣಿಗಳಿಂದೊಪ್ಪುತ್ತಿಹನು.
ಆ ದಿಗ್ಗಜಂಗಳ ಮಹಾಶೇಷನ ಘಣಾಮಣಿಗಳ ಮೇಲೊಪ್ಪುವ.
ಹಿರಣ್ಮಯ ಭೂಮಿಯೊಂದು ಕೋಟಿಯೋಜನದಳತೆಯ ದಟ್ಟಿತ್ತಮಾಗಿಪ್ಪುದು.
ಮತ್ತಂ ಆ ಭೂಮಿಯಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು.
ಸಪ್ತಕುಲಪರ್ವತಂಗಳು ಇಪ್ಪವು.
ಬಳಿಕ ಆ ಭೂಮಿಯಿಂ ಕೆಳಗೆ ಅತಳ ವಿತಳ ಸುತಳ ಮಹೀತಳ
ತಳಾತಳ ರಸಾತಳ ಪಾತಾಳ ಎಂಬೇಳು ಲೋಕ ಉಂಟಾಗಿಪ್ಪವು.
ಮತ್ತಂ ಭೂಲೋಕ ಭುವರ್ಲೊಕ ಸುವರ್ಲೊಕ ಮಹರ್ಲೊಕ
ಜನರ್ಲೊಕ ತಪರ್ಲೊಕ ಸತ್ಯಲೋಕ ಎಂಬಿವು ಮೊದಲಾದ
ಹದಿನಾಲ್ಕುಲೋಕಗಳು.
ಬಳಿಕ ಸಪ್ತದ್ವೀಪಂಗಳಲ್ಲಿ ಮುಖ್ಯವಾದ ಜಂಬೂದ್ವೀಪ ಮಧ್ಯದಲ್ಲಿ
ಭೂಕಾಂತೆಯ ನಾಭಿಯ ಕಮಲಕರ್ಣಿಕೆಯಂತೆ
ಲಕ್ಷಯೋಜನೋನ್ನತ ಪ್ರಮಾಣಿನಿಂದೆ ಸವರ್ಣಮಯ ವಿಚಿತ್ರರಚನೆಯಿಂದ
ಮಹಾಮೇರು ಹದಿನಾರುಸಾವಿರಯೋಜನದಳತೆಯ ಭೂಮಿಯಲ್ಲಿ ನೆಟ್ಟು,
ಭೂಮಿಯಿಂದ ಮೇಲೆ ಕಂಕಣತ್ರಯದಿಂ
ಎಂಬತ್ತುನಾಲ್ಕು ಸಾವಿರಯೋಜನಪ್ರಮಾಣಿಂದಿಹುದು.
ಆ ಮೇರುವಿನ ಅಗ್ರದಲ್ಲಿ ತ್ರೈಮೂರ್ತಿಗಳ ಪಟ್ಟಣಂಗಳಿಪ್ಪವು.
ಊರ್ಧಕಂಕಣದಿ ಇಂದ್ರಾದಿ ದಿಕ್ಪಾಲಕರ ಪಟ್ಟಣಂಗಳಿಪ್ಪವು.
ಮಧ್ಯಕಂಕಣದಿ ಮನುಮುನಿಸಿದ್ಧರಿರ್ಕುಂ.
ಮೊದಲ ಕಂಕಣದಲ್ಲಿ ದನುಜ ದಿವಿಜ ಗಂಧರ್ವ ಭೇದಗಳನೇಕರುಂಟಾಗಿಹರು.
ಆ ಮೇರುವಿನ ಮೂಲಗುಹೆಗಳಲ್ಲಿ ದೇವಗಣಗಳಿಪ್ಪರು.
ಆ ಮೇರುವಂ ಬಳಸಿ ನಾಲ್ಕು ಕೀಲಕಪರ್ವತಂಗಳಿಪ್ಪವು.
ಆ ಪರ್ವತಂಗಳಲ್ಲಿ ಅಂಗಪೂಜಕರಾಗಿ ಬಹುವಿಧದ ದೇವತೆಗಳಿಪ್ಪರು.
ಆ ಮೇರುವಂ ಬಳಸಿ ಸುರಸಂತತಿಗಳ ಕ್ರೀಡಾವಿನೋದಾರ್ಥವಾಗಿ
ಚೈತ್ರರಥಾದಿ ನಾಲ್ಕು ವನಂಗಳಿಪ್ಪವು.
ಆ ವನಂಗಳ ಮಧ್ಯದೊಳೊಂದೊಂದು
ಮಾಡವೆಟ್ಟಗಳು ನವರತ್ನ ಮಯವಾಗಿಪ್ಪವು.
ಮಂದಾರ ಪಾರಿಜಾತ ಸಂತಾನ ಕಲ್ಪವೃಕ್ಷ
ಹರಿಚಂದನವೆಂಬೈದು ಸುರತರುಗಳಿಪ್ಪವು.
ಬಳಿಕ ಕಾಮಧೇನು ಚಿಂತಾಮಣಿ ಮರಿಜವಳಿ ಪರುಷದಖಣಿ
ಸಿದ್ಧರಸದ ಮಡು ಸಂಜೀವನ ಬಾವನ್ನ ಮಲಯಜ
ಅಮೃತಮಯವಾದ ವಾಪಿ ಕೂಪ ತಟಾಕ ನದಿ ಹರಿ ಕಾಲುವೆಗಳಿಂ
ಕಮಲ ಕುಮುದ ಸುರಗಿ ಸೇವಂತಿ ಜಾಜಿ ಮೊಲ್ಲೆ ಮಲ್ಲಿಗೆ ಜಾಜಿ
ಸಂಪಗೆ ಪಾದರಿ ಮೊದಲಾದ ಲತೆ ವೃಕ್ಷಂಗಳಿಪ್ಪವು.
ಅಲ್ಲಿಯ ಕುಸುಮ ಮಕರಂದ ಸೌರಭವನುಂಡು, ಮಥಿಸಿ,
ಝೇಂಕರಿಸುತಾನಂದಿಪ ಮಧುಕರಂಗಳಿಂ
ಚಕೋರ ಚಕ್ರವಾಕ ರಾಜಹಂಸೆ ಮೊದಲಾದ ನೀರ್ವಕ್ಕಿಗಳಿಂ
ವನಸಂಚಾರದಿಂದಂ ನಂದಿ ಪಶುಕಪಿಗಳಿಂ
ಬಾವನ್ನಮಂ ಬಳಸಿ ಸುತ್ತಿದ ಫಣಿಗಳಿಕೆಯಿಂ,
ಸಮಸ್ತ ಕುಸುಮಗಂಧವನಾಲಂಗಿಸಿ ಶೈತ್ಯ ಸೌರಭ್ಯಮಾಂದ್ಯದಿಂ
ನಡೆದು ಸಂಚರಿಪ ಮಲಯಾನಿಲನಿಂ ಮನೋಹರವಾಗಿ,
ಅಲ್ಲಿ ಕ್ರೀಡಾವಾಸಿಗಳಾದ ಗಂಧರ್ವರ
ಪಂಚೇಂದ್ರಿಯಂಗಳು ತೃಪ್ತಿವೊಡದಿರ್ಕುಂ.
ಮತ್ತಮಾ ಭೂಮಿಗೆ ಒಂದುಲಕ್ಷಯೋಜನ ಉನ್ನತಪ್ರಮಾಣಿನಲ್ಲಿ
ಸೂರ್ಯನ ಲೋಕ ಇಪ್ಪುದು.
ಆ ಸೂರ್ಯನ ರಥ ಕೆತ್ತಿದ ರತ್ನ ಗಂಬಳಿಗಳಿಂದೆತ್ತಿದ ರೆಕ್ಕೆಯ
ಪತಾಕೆಗಳಿಂದಲಂಕಾರಂಗೆಯ್ದು ,
ವಿಶ್ವಕರ್ಮ ನಿರ್ಮಿತಮಾದ ರತ್ನಸಿಂಹಾಸನದಿ
ರಥಾರೂಢನಾದ ಸೂರ್ಯನ ಶರೀರ ಪ್ರಮಾಣು
ಒಂಬತ್ತು ಸಾವಿರಯೋಜನ ಪ್ರಮಾಣಿನುನ್ನತವಿಪ್ಪುದು.
ಹಿಮಕಿರಣ ಮುನ್ನೂರಮೂವತ್ತು ಮೂರು,
ಉಷ್ಣಕಿರಣ ಮುನ್ನೂರಮೂವತ್ತು ಮೂರು.
ವರ್ಷಕಿರಣ ಮುನ್ನೂರಮೂವತ್ತು ಮೂರು.
ಬೀಜ ಭೂತ ಕಿರಣ ಒಂದು ಅಂನತಸಹಸ್ರ ಕಿರಣ ಜ್ಯೋತಿಪ್ರಭಾಮಂಡಲ
ಇಪ್ಪತ್ತೇಳುಸಾವಿರ ಯೋಜನಪ್ರಮಾಣಿನಿಂದಿಹುದು.
ಬಳಿಕ ಗಂಧಮೌಲ್ಯ ರತ್ನಾಭರಣ ದಿವ್ಯದುಕೂಲದಿಂದಲಂಕೃತವಡೆದು,
ಖಡ್ಗಪಾಣಿಯೆನಿಸಿ ತನ್ನ ರಥ ಸಂಚಾರ
ಜೋಡಣೆಯಂ ಮೇರುವಿನಲ್ಲಿ ಬೆಸುಗೆಗೊಳಿಸಿ,
ಲೋಕಾಲೋಕ ಪರ್ವತದ ಒಳ ಒಳಂತುದೊಳ್ಬಳಸಿ,
ಸಂವತ್ಸರ ಮತ್ತು ಧರ್ಮವರಿದು ತನ್ನ ಕಿರಣ ಸಂಚಾರವಂ ಮಾಡಿಸಿ,
ಮೇರು ಪ್ರದಕ್ಷಿಣದಿಂದೆ ಭೂಲೋಕಕ್ಕೆ ದಿವಾರಾತ್ರೆ ಕಾಲತ್ರಯಂಗಳಂ ನಡೆಸಿ,
ತನ್ನಿಂದಾದ ಸಿದ್ಧಾಂತದಿಂದ ತಿಥಿ ವಾರ ನಕ್ಷತ್ರ ಯೋಗ ಕರಣವೆಂಬ
ಪಂಚಾಂಗದಿಂ ಮಿೂನಾದಿ ಹನ್ನೆರಡು ರಾಶಿಗಳು,
ಅಶ್ವನಿ ಭರಣಿ ಕೃತ್ತಿಕೆಯಾದಿಯಾದ ಇಪ್ಪತ್ತೇಳು ನಕ್ಷತ್ರಂಗಳಲ್ಲಿ.
ತಾನಾದಿಯಾದ ಇಪ್ಪತ್ತೇಳು ನಕ್ಷತ್ರಂಗಳಲ್ಲಿ ಪ್ರವೇಶಿತಮಾಗಿ,
ಸಮಸ್ತ ಸ್ಥಾವರ ಜಂಗಮಂಗಳ ಜನನಕಾಲದ ಮುಹೂರ್ತಭೇದಂಗಳಲ್ಲಿ
ಶುಭಾಶುಭ ಗ್ರಹಯೋಗಗಳಿಂದ ಅಂತರ್ದೆಶೆ ಮಹರ್ದೆಶೆಗಳಿಂ,
ಅವರವರ ನಾಮಭೇದದಿಂ ಫಲಭೇದಗಳು ತಟ್ಟಿ
ಬಹದೆ ಗ್ರಹಚಾರವೆನಿಸುವುದು.
ಮತ್ತಮಾ ಸೂರ್ಯನಿಂ ಮೇಲೆ ಲಕ್ಷಯೋಜನದುನ್ನತದಿಂ
ಅಮೃತಪೂರಿತವಾದ ಷೋಡಶಕಲೆಗಳಿಂ ರಾಜಿಸುವ ಚಂದ್ರನ ಲೋಕವಿಪ್ಪುದು.
ಆ ಚಂದ್ರನೆ ತನ್ನ ವಿರತಗಾತಿಶಯದಿ ಸುರಸಂತತಿಯ ಅಮೃತಕಿರಣದಿ
ತೃಪ್ತಿಪಡಿಸಿದ ಮಾಸಾರ್ಧವೆ ಕೃಷ್ಣಪಕ್ಷವೆನಿತ್ತು.
ಬಳಿಕೆ ಸೂರ್ಯನಿಂ ಪಡೆದ ಅಮೃತಕಿರಣ
ವೃದ್ಧಿಯ ಮಾಸಾರ್ಧವೆ ಶುಕ್ಲ ಪಕ್ಷವೆನಿಸಿತ್ತು,
ಬಳಿಕ ಚಂದ್ರನಿಂ ಮೇಲೆ ಬುಧ ಬೃಹಸ್ಪತಿ ಶುಕ್ರ ಶನಿ ಮಂಗಳ
ಅವರವರ ನಾಮಭೇದಗಳಿಂದವರವರ ಲೋಕಂಗಳಿಷ್ಟಿಷ್ಟು
ಯೋಜನಪ್ರಮಾಣಮೆನಿಸಿರ್ಕ್ಕು.
ರಾಹುಕೇತುಗಳೆರಡು ಶನೀಶ್ವರನ ಲೋಕದಲ್ಲಿ ಇಪ್ಪವು,
ಬಳಿಕ ವಾಯುವಿನಿಂದುದಿಸಿದ ಪ್ರಜೇತಸ್ಯೆಂಬ ವಾಯು,
ಉತ್ಕೃಷ್ಟವಾದ ಪ್ರಚಂಡವಾಯುವೆನಿಸಿ,ಗಿರಿಶೃಂಗಮಹಾವೃಕ್ಷಂಗಳಂ ಮುರಿದು,
ಪಾವಕನೆಬ್ಬಿಸಿ ಅರಣ್ಯವಂ ದಹಿಸಿ, ಸಮುದ್ರಜಲಮಂ ತುಳುಕಿ,
ಅತ್ತಿತ್ತೆನಿಸಿ ಬಡಬಾಗ್ನಿಯ ಪಟುತರಂಗೈದು.
ಭೂವಿಗೆ ಶತಯೋಜನೋನ್ನತದೊಳಿರ್ದು ಪ್ರಚೇತನೆಂಬ ವಾಯುವು,
ಮಿಂಚುವರ್ಣದ ಮೂಕವೆಂಬ ಮೇಘವನೆಬ್ಬಿಸಿ ತಂದು,
ಸಮುದ್ರೋದಕಮಂ ಮೊಗದೆತ್ತಿ ಮೇಘಗಳಂ ತುಂಬಿ,
ಭೂಮಿಯಿಂದ ಮೇಲೆ ನೂರಾ ಇಪ್ಪತ್ತು
ಯೋಜನಾಂತರದೊಳಿರ್ದ ಮೇಘಂಗಳಂ ನಿಲಿಸಿ,
ಬಳಿಕಲ್ಲಿರ್ದುದಕಮಂ ಚಳಯಂಗೊಡುವಂತೆ ಕೆದರಿ ಚೆಲ್ಲಿ,
ವೃಷ್ಟಿಯಾಗಿ ಕರೆದು, ಆ ಮೇಘಂಗಳಂತೆ ನಿಲಿಸಿಕೊಂಡು ಪೋಪುದು.
ಆ ದೃಷ್ಟಿಜಲಶಾಂತಿಯಿಂದೆ ಸಮಸ್ತಸ್ಥಾವರ ಜಂಗಮಂಗಳು ಚೇತನಮಾಗಿಪ್ಪವು.
ವಾಯುಭೇದ ಜಲಭೇದದಿಂದೊಂದೊಂದು
ದೇಶರಿತುಧರ್ಮದಿಂದಾರೋಗ್ಯ ಅನಾರೋಗ್ಯ ಉಂಟಾಗಿಹವು.
ಮತ್ತಾ ಜಂಬೂದ್ವೀಪಮಂ ಬಳಸಿದ
ಲವಣಸಮುದ್ರ ಲಕ್ಷಯೋಜನದಳತೆಯಿಂದಿಪ್ಪುದು.
ಆ ದ್ವೀಪವನಾಳ್ವ ಮೇಧಾತಿಥಿ ಎಂಬ ಭೂಪತಿ.
ಮೂರು ತಾಳೋನ್ನತ ಶರೀರದಿಂ ಆಭರಣ ಗಂಧಮೌಲ್ಯ ಅಲಂಕಾರದಿ
ಕಲ್ಪವೃಕ್ಷದಾಹಾರದಿಂ ಜರೆರುಜೆಗಳಿಲ್ಲದೆ
ಇಪ್ಪತ್ತು ಸಾವಿರವರುಷದಾಯುಷ್ಯದಿಂದಿಪ್ಪುದು.
ಮತ್ತಂ ಅದಂ ಬೆಳಸಿದ ಕ್ಷೀರಸಮುದ್ರ ಎರಡುಲಕ್ಷಯೋಜನದಳತೆಯಿಂ
ಅಹಲ್ಯೆ ಸಿರಿ ತಾರಾದೇವಿ ಸುಧೆ ಸುಧಾಂಶು ಸುರತರು ಸುರಧೇನು ಚಿಂತಾಮಣಿ
ಮುಖ್ಯವಾದ ವಸ್ತುಗಳುದಿಸಿದೆಡೆ ಎನಿಸಿ,
ಹತ್ತುಸಾವಿರ ಯೋಜನೆ ವಿಶಾಲ ಕನಕಮಣಿಮಯ
ವಿಚಿತ್ರರಜೆಯಿಂದಾದರಮನೆಯಲ್ಲಿ ಕುಶದ್ವೀಪವಿಪ್ಪುದು.
ಅದಕ್ಕೆ ಪುಷ್ಪದತ್ತನೆಂಬ ಭೂಪತಿ, ಮೂರು ತುಳಾಪ್ರಮಾಣ ಶರೀರದಿಂದೆ
ಗಂಧಮೌಲ್ಯ ವಸ್ತ್ರಾಭರಣದಿಂದಲಂಕಾರವಡೆದು,
ಜರೆರುಜೆಗಳಿಲ್ಲದೆ ಇಪ್ಪತ್ತು ಸಾವಿರವರುಷ ಆಯುಷ್ಯದಿಂದಿಪ್ಪರು.
ಮತ್ತದಂ ಬಳಸಿದ ನಾಲ್ಕುಲಕ್ಷ ಯೋಜನದಳತೆಯಗಲದಿಂ
ದಧಿಸಮುದ್ರವಿಪ್ಪುದು.
ಮತ್ತದಂ ಬಳಸಿ ಎಂಟುಲಕ್ಷ ಯೋಜನದಳತೆಯದಿಂದೆ ಕ್ರೌಂಚದ್ವೀಪವಿಪ್ಪುದು.
ಜ್ಯೋತಿಷ್ಮಂತನೆಂಬ ಭೂಪತಿ, ಉನ್ನತಶರೀರದಿಂ
ಗಂಧಮೌಲ್ಯ ವಸ್ತ್ರಾಭರಣದಿಂದಲಂಕಾರವಡೆದು
ಕಲ್ಪವೃಕ್ಷದಾಹಾರದಿಂದ ಜರೆರುಜೆಗಳಿಲ್ಲದೆ,
ಇಪ್ಪತ್ತುಸಾವಿರ ವರ್ಷದಿಂದಾಯುಷ್ಯದಿಂದಿಪ್ಪರು.
ಮತ್ತದಂ ಬಳಸಿ ಎಂಟುಲಕ್ಷಯೋಜನದಳತೆಯಗಲದಿಂ ಘೃತಸಮುದ್ರವಿಪ್ಪುದು.
ಮತ್ತದಂ ಬಳಸಿದ ಹದಿನಾರುಲಕ್ಷಯೋಜನದಳತೆಯಗಲದಿಂ
ರಕ್ತವರ್ಣದ ಭೂಮಿ ಶಾಲ್ಮಲಿದ್ವೀಪವೆನಿಸಿಪ್ಪುದು.
ಅದಕ್ಕೆ ದ್ಯುತಿವಂತನೆಂಬ ಭೂಪತಿ, ದೀರ್ಘಶರೀರದಿಂ
ಗಂಧಮೌಲ್ಯ ವಸ್ತ್ರಾಭರಣದಿಂದಲಂಕಾರಗೈದು
ಕಲ್ಪವೃಕ್ಷದಾಹಾರದಿಂ ಜರೆರುಜೆಗಳಿಲ್ಲದೆ,
ಇಪ್ಪತ್ತುಸಾವಿರ ವರುಷದಾಯುಷ್ಯದಿಂದಿಪ್ಪರು.
ಮತ್ತದಂ ಬಳಸಿದ ಇಕ್ಷುರಸಸಮುದ್ರ,
ಹದಿನಾರುಲಕ್ಷ ಯೋಜನದಳತೆಯಗಲದಿಂದಿಪ್ಪದು.
ಆ ದ್ವೀಪಕೆ ಭವ್ಯನೆಂಬ ಭೂಪತಿ, ಉನ್ನತಶರೀರದಿಂ
ಗಂಧಮೌಲ್ಯ ವಸ್ತ್ರಾಭರಣದಿಂದಲಂಕಾರಂಗೈದು,
ಕಲ್ಪವೃಕ್ಷದಾಹಾರದಿಂ ಜರೆರುಜೆಗಳಿಲ್ಲದೆ
ಇಪ್ಪುತ್ತುಸಾವಿರ ವರ್ಷದಾಯುಷ್ಯದಿಂದಿಪ್ಪರು.
ಮತ್ತದಂ ಬಳಸಿದ ಧವಳ ಗೋಮೇಧಿಕ ದ್ವೀಪ
ಮೂವತ್ತೆರಡುಲಕ್ಷ ಯೋಜನದಳತೆಯಿಂದಿಪ್ಪುದು.
ಆ ದ್ವೀಪಕ್ಕೆ ಭವ್ಯನೆಂಬ ಭೂಪತಿ, ಉನ್ನತ ಶರೀರದಿಂ
ಗಂಧಮೌಲ್ಯ ವಸ್ತ್ರಾಭರಣರದಿಂದಲಂಕಾರವಡೆದು,
ಕಲ್ಪವೃಕ್ಷದಾಹಾರದಿಂ ಜರೆರುಜೆಗಳಿಲ್ಲದೆ
ಇಪ್ಪತ್ತು ಸಾವಿರ ವರ್ಷದಾಯುಷ್ಯದಿಂದಿಪ್ಪರು.
ಮತ್ತದ ಬಳಸಿದ ಧವಳವರ್ಣದ ಭೂಮಿ,
ಅರುವತ್ತು ನಾಲ್ಕುಲಕ್ಷಯೋಜನದಗಲದಳತೆಯಿಂ
ಪುಷ್ಕರದ್ವೀಪವಿಪ್ಪುದು.
ಅದಕ್ಕ ಶವನೆಂಬ ಭೂಪತಿ, ಗಂಧಮೌಲ್ಯ ವಸ್ತ್ರಾಭರಣದಿಂದಲಂಕಾರವಡೆದು,
ಕಲ್ಪವೃಕ್ಷದಾಹಾರದಿಂ ಜರೆರುಜೆಗಳಿಲ್ಲದೆ,
ಇಪ್ಪತ್ತುಸಾವಿರ ವರುಷದಾಯುಷ್ಯದಿಂದಿಪ್ಪರು.
ಮತ್ತದಂ ಬಳಸಿದ ಸ್ವಾದೋದಕ ಸಮುದ್ರವೆ
ಅರುವತ್ತುನಾಲ್ಕುಲಕ್ಷಯೋಜನೆದಳತೆಯಿಂ
ಸಮಸ್ತ ಮೇಘಜಾಲಂಗಳಿಗೆ ಉದಕವನಿತ್ತು,
ಸಮಸ್ತಲೋಕೋಪಕಾರಮಾಗಿಪ್ಪುದು.
ಮತ್ತದಂ ಬಳಸಿದ ಹಿರಣ್ಮಯ ಭೂಮಿಯೆ ಸರ್ವದೇವತಾಕ್ರೀಡಾರ್ಥಮಾಗಿ,
ದಶಕೋಟಿ ಯೋಜನದಗಲದಳತೆಯಗಲದಿಂದೆ
ಜಂಘಾಪ್ರಮಾಣ ದುದಕವಿಪ್ಪುದು.
ಮತ್ತದಂ ಬಳಸಿ ಸುರಸಂತತಿಗೆ ಹಿತಕರನಾದ ಸೂರ್ಯರಥ ಸಂಚಾರಕ್ಕೆ
ಆಸ್ಪದಮಾದ ಲೋಕಾಲೋಕ ಪರ್ವತಮಂ ಬಳಸಿ,
ಮೂವತ್ತೈದುಕೋಟಿ ಹತ್ತೊಂಬತ್ತುಲಕ್ಷ ನಾಲ್ವತ್ತು ಸಾವಿರ
ಯೋಜನೆಯಳತೆಯಗಲದಿಂ
ತಮೋಭೂಮಿಯಲ್ಲಿ ನಿಶಾಚರರು
ತಮ್ಮ ಕೋರೆದಾಡೆಯ ಬೆಳಗಿನಿಂದೆ ಸಂಚಾರವ ಮಾಡುತ್ತಿಪ್ಪರು.
ಮತ್ತದಂ ಬಳಸಿದ ಗರ್ಭೊದಕಸಮುದ್ರ,
ಒಂದುಕೋಟಿಯು ಇಪ್ಪತ್ತೈದುಲಕ್ಷಯೋಜನದಗಲದಳತೆಯಿಂದಿಪ್ಪುದು.
ಅಲ್ಲಿ ಬಲಮುರಿಯ ಶಂಖ ಪರ್ವತ ತಿಮಿತಿಮಿಂಗಿಲು ಮೊದಲಾದ
ಅನಂತಭೇದದ ಜಲಚರಪ್ರಾಣಿಗಳಿಪ್ಪವು.
ಆ ತಿಮಿತಿಮಿಂಗಿಲ ಸಂಯೋಗಾನಂದ ಮಥನದಿಂದ ತುಳುಂಕಿ ಮೇರೆದಪ್ಪಿ,
ಸಪ್ತದ್ವೀಪ ಸಪ್ತಸಮುದ್ರಂಗಳೊಳಕೊಳ್ಳದಂತೆ
ಉಭಯಮಧ್ಯದಲ್ಲಿ ಮಹಾಪರ್ವತೋಪಮಾನಮಾದ ಕೂರ್ಮನಿಪ್ಪನು.
ಮತ್ತದಂ ಬಳಸಿ ತಟಾಹಾರಿತಮಾಗಿ ಒಂದುಕೋಟಿ ಯೋಜನದಳತೆಯಿಂ
ಸುವರ್ಣಮಯ ಭೂಮಿ ಇಪ್ಪುದು.
ಆ ಬ್ರಹ್ಮಾಂಡದ ಪೂರ್ವ ಪಶ್ಚಿಮ ತಟಾಹಕ್ಕೆ ಗಣಿತಮಂ ಮಾಡೆ,
ನೂರುಕೋಟಿ ಯೋಜನಪ್ರಮಾಣು ಮಧ್ಯದಲ್ಲಿ ಮಹಾಮೇರುವಿಪ್ಪುದು.
ಬಳಿಕ ಸಪ್ತದ್ವೀಪಗಳಲ್ಲಿ ಮುಖ್ಯವಾದ ಜಂಬೂದ್ವೀಪ,
ಆ ಜಂಬೂದ್ವೀಪದಲ್ಲಿ ಅನೇಕ ಪರ್ವತಂಗಳು,
ಮಲಪ್ರಹರಿ ಗೋಮತಿ ಗಂಗೆ ಯಮುನೆ ಸರಸ್ವತಿ ತುಂಗಭದ್ರೆ
ಗಂಡಕಿ ಕಾವೇರಿ ಕಪಿಲೆ ಕಪಿನಿ ಹೇಮಾವತಿ ವರುಣೆ ಕೃಷ್ಣವೇಣಿ
ಗೋದಾವರಿ ಭಾಗೀರಥಿಯಾದಿಯಾದ ಮಹಾನದಿಗಳೆನಿಸಿಕೊಂಬವು.
ಅಬನೂರು ಶ್ರೀಶೈಲ ಸೇತು ಕೇದಾರ ಕಾಳಹಸ್ತಿ ಕುಂಭಕೋಣ. ಕುರುಕ್ಷೇತ್ರ
ಕನಕಾಚಲ ಕಕುದ್ಗಿರಿ ಅರುಣಾಚಲ ಅಗಸ್ತ್ಯನಾಥ ವೃಂದಾಚಲ ಪರಶುರಾಮ
ಕಾಶಿ ಆದಿಯಾದ ಮಹಾಕ್ಷೇತ್ರಂಗಳು ಅರುವತ್ತೆಂಟು ಉಂಟಾಗಿಪ್ಪವು.
ಮತ್ತಮಾ ಜಂಬೂದ್ವೀಪವನಾಳ್ದ ಅಗ್ನೀಶ್ವರನೆಂಬ ಭೂಪತಿ,
ತಾನಾಳ್ವ ದ್ವೀಪಮಂ ನವಖಂಡಮಂ ಮಾಡಿ, ತನ್ನ ಕುಮಾರರೆನಿಸಿದ
ಅವರವರ ಪೆಸರಿನಲ್ಲಿ ಆಯಾ ಖಂಡಂಗಳಿಪ್ಪವು.
ಮೊದಲು ನಾಭಿ ಎಂಬಾತನೆ ವೃಷಭ,
ಆ ವೃಷಭನ ಮಗನೆ ಭರತ, ಆ ಭರತನ ಪೆಸರಲ್ಲಿ ಭರತಖಂಡವಿಪ್ಪುದು,
ಆ ಭೂರತಖಂಡವೆ ಹಿಮಸೇತುಮಧ್ಯ ಪರಿಯಂತರ ಕರ್ಮಭೂಮಿಯೆನಿಸಿ,
ಅದರಲ್ಲಿ ಅಂಗ ವಂಗ ಕಳಿಂಗ ತೆಲುಗ ಲಾಳ ಬಂಗಾಳ ಚೋಳ ಕೇರಳ
ಗೌಳ ದ್ರವಿಡ ಪಾಂಚಾಳ ಕನ್ನಡ ಸಿಂಗಳ ಕುಂತಳ ಮಲೆಯಾಳ
ಮಾಳವ ಕೊಂಕಣ ಕಾಶ್ಮೀರ ಮೊದಲಾದಯಿವತ್ತಾರು ದೇಶಗಳುಂಟಾಗಿಹವು.
ಆ ದೇಶಂಗಳನಾಳ್ವ ಭೂಪತಿಗಳು
ತಮ್ಮ ತಮ್ಮ ಪಟ್ಟಣಂಗಳಲ್ಲಿ ಅನೇಕ ವಿಭವದಿಂದಿಪ್ಪರೆ,
ಅದರಲ್ಲಿ ದ್ವಾದಶಯೋಜನಕ್ಕೆ ಒಂದೊಂದು ಜಾತಿ ಭಾಷೆ
ಮಾತು ನೀತಿ ರೀತಿ ಉಡಿಗೆ ತೊಡಿಗೆ ಎಂಬೀ ಕ್ರಿಯಾಭೇದಗಳಾಗಿರ್ಕು.
ಈ ಭರತಖಂಡವೆಂಬ ಕರ್ಮಭೂಮಿಯಲ್ಲಿ ಮಾಡಿದ ಲಿಂಗಪೂಜೆ
ಉಗ್ರತಪಸ್ಸು ಯಾಜ್ಞಾದಿಕರ್ಮ ಷೋಡಶಮಹಾದಾನಂಗಳ ಫಲವಿಶೇಷಮಂ
ತಮ್ಮ ತಮ್ಮ ಮನೋಕಲ್ಪಿತ ಬಯಕೆಯಿಂ
ಸ್ವರ್ಗಾದಿ ಭೋಗಂಗಳ ಪಡೆವರು ಕೆಲಂಬರು.
ಅದೃಶ್ಯ ಅಕರುಷಣ ಕಾಯಸಿದ್ಧಿ ಶಾಪಾನುಗ್ರಹ ಸಾಮಥ್ರ್ಯ
ಸ್ಥಿರಂಜೀವತ್ವವಂ ಬಯಸಿ ಪಡೆವರು ಕೆಲಂಬರು.
ಸಾಲೋಕ್ಯ ಸಾವಿಾಪ್ಯ ಸಾರೂಪ್ಯ ಸಾಯುಜ್ಯ ಬಯಸಿ
ಅನುಭವವಿರುವ ಕೆಲಂಬರು.
ದಯಾ ದಾಕ್ಷಿಣ್ಯ ಪರೋಪಕಾರ ಸತ್ಯ ಶೌಚಮಂ ತೊರೆದು,
ಕಳವು ಪರದಾರ ಹಿಂಸೆ ಅಸತ್ಯ ಮಿತ್ರಘಾತಕ ಬ್ರಹ್ಮಹತ್ಯೆ ಮೊದಲಾದ
ಮಹಾಪಾತಕಂಗಳಂ ಮಾಡಿ, ಅನಂತ ನರಕಂಗಳನನುಭವಿಸುವರು ಕೆಲಂಬರು.
ಮತ್ತಂ ಮಾಡಿದ ಸುಕರ್ಮಫಲದಿಂ ಸ್ವರ್ಗಾದಿ ಭೋಗ
ಆದಿಯಾದ ಅನೇಕ ಪದಂಗಳಂ ಪಡೆದ ಅನುಭವಿಪ ಸುಖವು
ಭವಕ್ಕೆ ಬೀಜವೆಂದು ತಿಳಿದು,
ಗುರುಕಾರುಣ್ಯದಿಂ ಇಷ್ಟಲಿಂಗ ಪ್ರಸನ್ನತೆಯಂ ತಿಳಿಯದೆ,
ಬರಿದೆ ತಮಗಾತ್ಮಜ್ಞಾನವಾಯಿತೆಂದಹಂಕರಿಸಿ,
ತಾವೇ ಬ್ರಹ್ಮವೆಂದು ನುಡಿವ ಅಂಗವಿಕಾರದ ಬಂಜೆಜ್ಞಾನಿಗಳ ಜ್ಞಾನವೆಲ್ಲವು
ಪಿಪೀಲಿಕವಿಹಂಗನಂತೆ ಉದರ ಪೋಷಣದ ನೆಪ್ಪಲ್ಲದೆ ಅದು ಮಹಾಜ್ಞಾನವಲ್ಲ,
ಅದು ಕಾರಣ, ಎಂಚಿತ ಪ್ರಾರಬ್ಧ ಕರ್ಮವಿಮೋಚನವಿಲ್ಲದೆ,
ಭವವೆಂಬ ರಾಟಾಳದಲ್ಲಿ ಮರಳಿ ಮರಳಿ ಬರುತ್ತಿಪ್ಪರು
ಮತ್ತಮಾ ಪಂಚಭೂತವನುಳ್ಳ ಜೀವರುಗಳಲ್ಲಿ ಜನ್ಮದ ಕಡೆಗಂಡು,
ಭೂತಕಾಯಮೆಂಬ ಶಬ್ದ ಎಂತು ವಿಮೋಚನವಾದಪುದೋಎಂದುಜಾನಿಪಂಗೆ,
ಆ ಮಹಾಲಿಂಗ ತಾನೆ ಸದ್ಗುರುಮೂರ್ತಿಯಾಗಿ
ಶಿವಸಂಸ್ಕಾರ ಸಂಬಂಧಿಯಾದಾತನ ಭೂತಕಾಯಮಂ ತಳೆದು,
ಲಿಂಗಕಾಯವ ಮಾಳ್ಪನೆಂದು ತನ್ನ ಹೃದಯಕಮಲಕರ್ಣಿಕಾಗ್ರದಿ
ಪ್ರಸನ್ನತೆಯಾಗಿ ಬೆಳಗುವ ಜ್ಯೋತಿರ್ಲಿಂಗಮಂ ಧ್ಯಾನಿಸಿ,
ಆ ಲಿಂಗಕಳೆಯನೆ ಭಾವಕ್ಕೆ ತಂದು, ಭಾವದಿಂದ ಮನಕ್ಕೆ ತಂದು,
ಮನದಿಂದ ನೇತ್ರದಲ್ಲಿ ನಿಲ್ಲಿಸಿ, ಮಹಾಲಿಂಗಮೂರ್ತಿಯ ರೂಪನೆ
ಶಿಲೆಯ ಕುರುಹಿಂಗುಂಟುಮಾಡಿ, ಆ ಮೂರ್ತಿಗೆ ಷಡಾಕ್ಷರಿಯ ಮಂತ್ರೋಪದೇಶಂ
ಚೈತನ್ಯವೆನಿಸಿ, ಆ ಲಿಂಗಕ್ಕೆ ಕ್ರಿಯಾರ್ಚನೆಯಂ ಮಾಡಿ,
ಇಷ್ಟಲಿಂಗವೆಂದು ಹೆಸರಿಟ್ಟು.
ಇಷ್ಟ ಪ್ರಾಣ ಭಾವವೆಂದು ಆ ಮಹಾಲಿಂಗ ಒಂದೆ ಮೂರುತೆರನಾಯಿತ್ತು.
ಅದೆಂತೆನೆ:ರೇಚನ ಪೂರಕ ಕುಂಭಕವೆಂದು ನಾಮಭೇದವಾದರು.
ಅಖಂಡಿತವಾದ ಪ್ರಾಣವಾಯು ಒಂದೆಯಾದಂತೆ
ನೆಲದ ಮರೆಯ ನಿಧಾನವ ಅಂಜನಸಿದ್ಧಿಯಿಂ ಕಾಬಂತೆ,
ಈ ಇಷ್ಟಲಿಂಗದ ಸತ್ಕ್ರಿಯಾರ್ಚನೆಯಿಂದ ಪ್ರಾಣಲಿಂಗಸ್ವರೂಪವ ತಿಳಿವುದೆಂದು,
ಸುಜ್ಞಾನರೂಪಾದ ಶಿಷ್ಯನ ಹಸ್ತಸಿಂಹಾಸನದಿ ಇಷ್ಟಲಿಂಗಮಂ ಮೂರ್ತಿಗೊಳಿಸಿ,
ಹಸ್ತಮಸ್ತ ಕಸಂಯೋಗದಿಂದ ಷಡಾಕ್ಷರಿ ಮಂತ್ರೋಪದೇಶಮಂ ಮಾಡಿದಲ್ಲಿ ,
ರಾಹು ತುಡುಕಿದ ಶಶಿಮಂಡಲವು ಸ್ಪರ್ಶನ ವಿಮೋಚನೆಯಾದಲ್ಲಿ ,
ಷೋಡಶಕಳೆ ಪರಿಪೂರ್ಣತೆಯಿಂ ಥಳಥಳಿಸುವಂತೆ,
ಆ ಭಕ್ತನ ಅಂಗಸೋಂಕಿನ ಆಜ್ಞಾನಕಾಳಿಕೆಯು ಹರಿದು,
ಸರ್ವಾಂಗವ ಒಳ ಹೊರಗೆಯುಂ ಸ್ಫಟಿಕದ ಘಟಜ್ಯೋತಿಯಂತೆ,
ಮಹಾಜ್ಞಾನ ಅಖಂಡಿತಮಾಗಿ ಅವಲಂಬಿಸಿ,
ಮತ್ತದರಿಂ ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದಾಕ್ಷಿ
ಷಡಾಕ್ಷರಿ ಮಂತ್ರವಾದಿಯಾದ ಅಷ್ಟಾವರಣವೆ ತನಗಂಗವಾಗಿ,
ತನ್ನ ಸರ್ವೆಂದ್ರಿಯಂಗಳು ಲಿಂಗಸ್ವರೂಪೆಂದು ತಿಳಿದು,
ರೂಪಾದ ಪದಾರ್ಥಮಂ ಕಾಯದ ಕೈ ಮುಟ್ಟಿ
ಪ್ರಾಣಲಿಂಗಕ್ಕೆ ಕೊಡುವುದೆ ಕ್ರಿಯಾರ್ಪಣ.
ಇಂದ್ರಿಯಂಗಳಿಂದರಿದು ಮನದ ಕೈ ಮುಟ್ಟಿ,
ಪ್ರಾಣಲಿಂಗಕ್ಕೆ ಕೊಡುವುದೆ ಕರಣಾರ್ಪಣ.
ಆ ಪ್ರಾಣಲಿಂಗ ತೃಪ್ತಿಯನೆ ಭಾವಲಿಂಗಕ್ಕೆ ಕೊಡುವದೆ ಭಾವಾರ್ಪಣ.
ಇಂತೀ ಅರ್ಪಣತ್ರಯವ ತಿಳಿದ ಸದ್ಭಕ್ತನು
ಶ್ರೋತ್ರಾದಿಯಾದ ತನ್ನ ಜ್ಞಾನೇಂದ್ರಿಯಂಗಳಲ್ಲಿ
ನಾಮಭೇದಗಳಿಂ ಪ್ರವೇಶಿತಮಾದ ಷಡ್ವಿಧಲಿಂಗಂಗಳಿಗೆ
ಷಡ್ವಿಧವಿಷಯ ಪದಾರ್ಥಮಂ
ಆಯಾಯ ಲಿಂಗಕ್ಕೆ ಬೇರೆ ಬೇರೆ ಸಮರ್ಪಣೆಯ ಮಾಡುವನು.
ಅದೆಂತೆನೆ :ಶಬ್ದದಲ್ಲಿಯ ಪದಾರ್ಥವ
ಶ್ರೋತ್ರದಲ್ಲಿಯ ಪ್ರಸಾದಲಿಂಗಕ್ಕೆ ಸಮರ್ಪಣೆಯ ಮಾಡುವನು.
ಸ್ಪರ್ಶವಿಷಯ ಪದಾರ್ಥವ
ತಕ್ಕಿನಲ್ಲಿಯ ಜಂಗಮಲಿಂಗಕ್ಕೆ ಸಮರ್ಪಣೆಯ ಮಾಡುವನು.
ರೂಪುವಿಷಯಪದಾರ್ಥವ
ನೇತ್ರದಲ್ಲಿಯ ಶಿವಲಿಂಗಕ್ಕೆ ಸಮರ್ಪಣೆಯ ಮಾಡುವನು.
ರಸವಿಷಯಪದಾರ್ಥವ
ಜಿಹ್ವೆಯಲ್ಲಿಯ ಗುರುಲಿಂಗಕ್ಕೆ ಸಮರ್ಪಣೆಯ ಮಾಡುವನು
ಗಂಧವಿಷಯಪದಾರ್ಥವ
ನಾಸಿಕದಲ್ಲಿಯ ಆಚಾರಲಿಂಗಕ್ಕೆ ಸಮರ್ಪಣೆಯ ಮಾಡುವನು.
ಇಂತೀ ಲಿಂಗಪಂಚಕಂಗಳಿಗೆ ಸಮರ್ಪಣೆಯ
ಮಾಡಿದ ವಿಷಯಪದಾರ್ಥತೃಪ್ತಿ ಪರಿಣಾಮವನು,
ಹೃದಯದಲ್ಲಿಯ ಮಹಾಲಿಂಗಕ್ಕೆ ಸಮರ್ಪಣೆಯ ಮಾಡುವನು.
ಭಕ್ತಿಸ್ಥಲವಾದಿಯಾದ ಷಟ್ಸ್ಥಲಗಳಲ್ಲಿ
ಆಯಾಸ್ಥಲಗಳ ಆಚರಣೆಯಲ್ಲಿ ತಾನಾಚರಿಸಿ,
ಆ ಸ್ಥೂಲ ಪರಿವಿಡಿಗಳನುಳಿದು ಐಕ್ಯಸ್ಥಲವೆನೈದುವಾತನು ಭಕ್ತನೋರ್ವನೆ.
ಆ ಭಕ್ತನು ಪ್ರಥಮದಲ್ಲಿ ಭಕ್ತಿಸ್ಥಲದಾಚರಣೆಯನೆಂತು ನಡೆಸುವನೆಂಧರೆ,
ತನುಮನಧನಂಗಳಲ್ಲಿ ನಿರ್ವಂಚಿತನಾಗಿ, ಲಿಂಗಾಣತಿಯಿಂ ಬಂದ ಪದಾರ್ಥವ
ಇಂದು ನಾಳಿಂಗೆಂದು ದುಸ್ಸಂಸಾರ ದುರಾಸೆಯ ಸಂಚವಂ ಮನದಿ ನೆನೆಯದೆ,
ಅಖಂಡಪದಾರ್ಥಂಗಳ ಜಂಗಮ ಪಾದೋದಕದಿಂ ಒಳೆದು ಪವಿತ್ರವೆನಿಸಿ
ಗೃಹಪ್ರವೇಶಮಂ ಮಾಡಿ, ಜಂಗಮಲಿಂಗಕ್ಕೆ ಆರೋಗಣೆಯ ಮಾಡುವೆನೆಂದು
ಸಡಗರದ ಸಂಭ್ರಮದ ಸಂತೋಷದೊಳಾಳ್ದು, ಹಸ್ತಪ್ರಸಾದಮಂ ತೊಳೆದು,
ಮುಖಮಜ್ಜನವಂ ಮಾಡಿ, ತಲ್ಪದಿ ಮಂಡಿಸಿ,
ಕರಕಮಲಕ್ಕೆ ಚಿದ್ಭಸ್ಮಮಂ ಬಿಜಯಂಗೈಸಿ,
ಮಂತ್ರೋದಕದಿಂ ಚುಳುಕೋದಕಂದಳೆದು, ಗಂಧಕುಸುಮಗಳನರ್ಚಿಸಿ,
ಪ್ರಣವಪಂಚಾಕ್ಷರಿಯಂನುಡಿದು, ಅಂಗುಲಿಗಳಿಂದ ತೆಗೆದು ತ್ರಿಪುಂಡ್ರವನಿಟ್ಟು,
ಸರ್ವಾಂಗಧೂಳನಂ ಮಾಡಿ, ಇಷ್ಟಲಿಂಗಮಂ ಹಸ್ತಸಿಂಹಾನಕ್ಕೆ ಬಿಜಯಂಗೈಸಿ,
ಮಂತ್ರಾರ್ಚನೆಯಿಂದಾದ ಅಗ್ಘಣಿಯಂ, ಶ್ರೀರುದ್ರಮಂ ನುಡಿದು,
ಮಜ್ಜನಕರೆದು ಚಿದ್ಭಸಿತಮನಿಟ್ಟು, ಪೂಜಾವಿಧಾನಮಂ ಪೂರ್ಣವೆನಿಸಿ,
ತನ್ನ ಧ್ಯಾನಭಾವದಿಂದೆ ಪ್ರದಕ್ಷಿಣಮಂ ಬಂದು ಶರಣನೊಪ್ಪಿಸಿ,
ಉರುಸೆಜ್ಜೆಯರಮನೆಗೆ ಶಿವಲಿಂಗಮಂ ಬಿಜಯಂಗೈಸಿ,
ರೇಚಕ ಪೂರಕಂಗಳಲ್ಲಿ ಮಂತ್ರಮನೆಡೆಯಾಡಿಸುತ್ತ ಭಾಂಡಭಾಜನಮಂ ತೊಳೆದು,
ನಿರ್ಮಲವೆನಿಸಿ ಪದಾರ್ಥಪರಿಕರಂಗಳ ಬೇರೆ ಬೇರಿಟ್ಟು, ಪಾಕಶುದ್ಧವರಿದು
ಲವಣಾಮ್ರ ವಿಶ್ರಮಂ ಸಮವೆನಿಸಿ ಶುಚಿಕರಮಾದ ಪದಾರ್ಥಂಗಳ
ಇಂದ್ರಿಯ ಮನೋಭಾವಂಗಳಿಗೆ ತಟ್ಟಿ,
ಮೀಸಲಳಿಯದೆ ಜಂಗಮಲಿಂಗಮಂ ಬಿಜಯಂಗೈಸಿ,
ದಂಪತಿಗಳ ಭಾವದ ನಿಜವು ರತ್ನ ಕಾಂತಿಯಂತೆ,
ಕುಸುಮ ಗಂಧದಂತೆ, ಅಮೃತರುಚಿಯಂತೆ,
ಭಿನ್ನವಿಲ್ಲದೆ ಜಂಗಮಲಿಂಗಕ್ಕೆ ಆರೋಗಣೆಗೆಡೆಮಾಡಲು,
ಆ ಜಂಗಮವು ಇಂತಪ್ಪ ಭಕ್ತನೆ ಬಸವಣ್ಣನಪರಾವತಾರಮೂರ್ತಿ.
ಆತನರ್ಧಾಂಗಿಯೇ ನೀಲಲೋಚನೆಯು.
ಕರುಣದ ಕಂದನೆಂದು ಚಿತ್ತದಲ್ಲಿ ನೆಲೆಗೊಳಿಸಿ,
ಅವರ ಹಸ್ತ ಸೋಂಕಿನಿಂ ಬಂದ ಪದಾರ್ಥವೆ
ಮಹಾಲಿಂಗಪ್ರಸಾದವೆಂದು ಆಲೋಕನಂಗೆಯ್ದು,
ಶಿವಲಿಂಗಾರ್ಪಣವಂ ಮಾಡಿ, ಗಂಧವಿಶೇಷವ ಆಚಾರಲಿಂಗಕಿತ್ತು,
ಕಾಯದ ಕೈ ಮುಟ್ಟಿ, ಇಷ್ಟಲಿಂಗಕ್ಕೆ ನೈವೇದ್ಯವಂ ಮಾಡಿ,
ಆ ಇಷ್ಟದೊಡನೆ ಸಹಭೋಜನವನುಂಡು.
ಗುರುಲಿಂಗದಿಂದರಿದ ರುಚಿಪ್ರಸಾದಮಂ ಮನದ ಕೈ ಮುಟ್ಟಿ ಪ್ರಾಣಲಿಂಗಕಿತ್ತು,
ಆ ಪ್ರಾಣಲಿಂಗತೃಪ್ತಿಯನೆ ಭಾವಲಿಂಗದಲ್ಲಿ ಸಮರಸಂಗೈದು,
ಪ್ರಸಾದಭರಿತವಾಯಿತ್ತೆನಲು,
ಆ ಮಹಾಪ್ರಸಾದಮಂ ಭಕ್ತ ತನ್ನ ಭಕ್ತಿಕಿಂಕುರ್ವಾಣದಿಂ ಬಿಜಯಂಗೈಸಿ,
ತನ್ನ ಕ್ರಿಯಾಲಿಂಗಕ್ಕೆ ನೈವೇದ್ಯವಂ ಮಾಡಿ,
ಆ ಲಿಂಗದೊಡನೆ ಸಹಭೋಜನವನುಂಡು,
ಗುರುಲಿಂಗದಿಂದರಿದ ರುಚಿಯ, ಆ ಗುರುಲಿಂಗಪ್ರಸಾದವೆಂದು ಕೊಂಬಾತನೆ
ನಿಜಭಕ್ತನಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವಾ./3
ನಿರಲಂಬಶರಣನೆಂತಿಹನೆಂದರೆ ಮನಬುದ್ಧಿ ಚಿತ್ತಾಹಂಕಾರಗಳಿಂದಾದ
ತನುಕರಣಜಂಗುಳಿಯನುಳಿದು ಮೋಕ್ಷಕಾಯಶೂನ್ಯನಾಗಿ,
ಭದ್ರಗಜ ನುಂಗಿದ ಬೇಳದ ಹಣ್ಣಿನಂತೆ,
ಕರ್ಮರಹಿತವಾದ ಮಹದಾಕಾಶದಂತೆ,
ಉಲುಹಡಗಿದ ಸುರಕುಜದಂತೆ, ಚಂದ್ರನಿಲ್ಲದ ಚಂದ್ರಿಕೆಯಂತೆ,
ಫಲವಿಲ್ಲದ ರುಚಿಯಂತೆ, ಕುಸುಮವಿಲ್ಲದ ಪರಿಮಳದಂತೆ,
ತರಂಗವಡಗಿದ ಸಮುದ್ರದಂತೆ, ಸ್ಪಠಿಕದ ಘಟಜ್ಯೋತಿಯಂತೆ
ಸರ್ವಾಂಗದೊಳಹೊರಗೆಯು ಪ್ರಣವಮಂತ್ರವೆ ಪರಿಪೂರ್ಣಲಿಂಗವೆನಿಸಿ,
ದಯಶಾಂತಭರಿತನಾಗಿ ತನ್ನ ನಂದು, ಇದಿರ ಮರೆದು,
ವಸಂತಕಾಲದ ಮಂದಾನಿಲನಂತೆ ಸಂಚಾರದ ಮಾಳ್ಪನಯ್ಯಾ,
ಮಹಾಲಿಂಗ ಶಶಿಮೌಳಿ ಸದಾಶಿವಾ./4
ಪ್ರಥಮದಲ್ಲಿ ಭಕ್ತಿಸ್ಥಲದಲ್ಲಿ ನಿಂದು,
ಭಕ್ತನ ಆಚರಣೆಯ ಅನುಭಾವದಿಂ ತಿಳಿದು,
ಮಹೇಶ್ವರಸ್ಥಲವನಂಗೀಕರಿಸಿ, ಮಹಾಪ್ರಸಾದಿ
ವೀರವ್ರತದ ಆಚರಣೆಯ ಸಾವಧಾನಮಂ
ಮಹಾಜ್ಞಾನದೊಳಿಳಿದು ಚಿತ್ತದೊಳವಲಂಬಿಸಿ, ಪ್ರಾಣಲಿಂಗಿಸ್ಥಲವನಂಗೀಕರಿಸಿ,
ಲಿಂಗಾಂಗಸಮರಸದ ಪರಮಾನಂದವ ಸರ್ವಾಂಗದಲ್ಲಿ ಪರಿಪೂರ್ಣವೆನಿಸಿ,
ಶರಣಸ್ಥಲವನಂಗೀಕರಿಸಿ,
ಶರಣಸತಿ ಲಿಂಗಪತಿ ಎಂಬ ಪತಿವ್ರತಾಧರ್ಮವ ನಿಜದಿ ಕಂಕಣವ ಕಟ್ಟಿ,
ಷಟ್ಸ್ಥಲದ ಸ್ವರೂಪಮಂ ಜ್ಞಾನಮುಖದಿಂ ತಿಳಿದು,
ಸತ್ಕ್ರಿಯೆಗಳಿಂದವರವರ ಆಚರಣೆ ಲೋಪವಾಗದಂತೆ ಪೂರ್ಣವೆನಿಸಿ,
ಅಂತಪ್ಪ ಜ್ಞಾನ ಕ್ರೀಯ ವಸ್ತು ಮಹಾಜ್ಞಾನದಿಂ ಲಯವನೈದಿಸಿ,
ಆ ಮಹಾಜ್ಞಾನವನೆ ಮಹಾಲಿಂಗದಲ್ಲಿ ಅದೃಶ್ಯವ ಮಾಡಿದಾತನೆ ಐಕ್ಯನಯ್ಯಾ,
ಮಹಾಲಿಂಗ ಶಶಿಮೌಳಿ ಸದಾಶಿವ. /5
ಭಕ್ತ ಭಕ್ತನೆಂದೆಂಬರು,
ಭಕ್ತನೆನಿಸುವಾತ ಪಂಚಭೂತಕಾಯವ ಧರಿಸಿದ
ಮಾನವರಲ್ಲಿ ಹತ್ತರಲ್ಲಿ ಹನ್ನೊಂದು.
ಭಕ್ತನಿಂದ ಗುರುವೆನಿಸಿತ್ತು, ಲಿಂಗವೆನಿಸಿತ್ತು, ಜಂಗಮವೆನಿಸಿತ್ತು.
ವಿಭೂತಿ ರುದ್ರಾಕ್ಷಿ ಪಾದತೀರ್ಥ ಪ್ರಸಾದ ಮಂತ್ರವಾದಿಯಾದ
ಅಷ್ಟಾವರಣ ಪ್ರಸನ್ನತೆಯಾಯಿತ್ತು.
ಅಂತಪ್ಪ ಭಕ್ತನೆಂಬ ನಾಮವಿಲ್ಲದಿರ್ದಡೆ
ಗುರುಲಿಂಗಜಂಗಮವೆಂಬ ಹೆಸರೆಲ್ಲಿಯದು?
ವಿಭೂತಿ ರುದ್ರಾಕ್ಷಿಯ ಧರಿಸುವರಾರು ?
ಪಾದತೀರ್ಥಪ್ರಸಾದವ ಕೊಂಬವರಾರು?
ಮಂತ್ರೋಚ್ಛರಣೆಯ ಉಲುಹೆಲ್ಲಿಯದು?
ಅದು ಕಾರಣ, ಭಕ್ತನಿಂದಧಿಕವಿಲ್ಲವೆಂದು ಸಮಸ್ತವಿಶ್ವಮೆಲ್ಲಮಂ
ತನ್ನ ನೆನಹುಮಾತ್ರದಲ್ಲಿಯೆ ಉಂಟಿಲ್ಲವೆನಿಸುವ ಪರಬ್ರಹ್ಮವೆ
ಆ ಭಕ್ತನ ಹೃದಯಕಮಲಮಧ್ಯದಲ್ಲಿ ಜ್ಯೋತಿಸ್ವರೂಪನಾಗುತ್ತಿರ್ಪನಯ್ಯ,
ಮಹಾಲಿಂಗ ಶಶಿಮೌಳಿ ಸದಾಶಿವ. /6
ಶರಣಸತಿ ಲಿಂಗಪತಿಯೆನಿಸಿದ್ದಲ್ಲಿ,
ಪಂಚೇಂದ್ರಿಯಂಗಳಿಗೆ ಪತಿವ್ರತಾಧರ್ಮವನುಂಟುಮಾಡಿ,
ಮನೋನಿಜದ ಕಂಕಣವ ಕಟ್ಟಿ ತನ್ನಿಷ್ಟಲಿಂಗದ ಪೂಜಾವಿಧಾನಮಂ
ಸ್ತೋತ್ರ ಮಂತ್ರ ವ್ರತವನುಂಟುಮಾಡಿ, ದುಗುಡಣೆಯಿಂದ ಪೂರ್ಣವೆನಿಸಿ,
ನೇತ್ರ ಸೂತ್ರಂಗಳ ಶಿವಾಲಿಂಗಾರ್ಚನೆಯ,
ಅಲಂಕಾರದ ಚೆಲ್ವಿನಲ್ಲಿ ಬೆಸುಗೆಗೊಳಿಸಿ,
ಆನಂದಾಶ್ರು ಬಟ್ಟಾಡಿ ತನ್ನ ಭಕ್ತಿಭಾವದ ನಿಜವ,
ಲಿಂಗವೆಂಬ ಪತಿಯಲ್ಲಿ ಸಮರಸಂಗೈದು,
ತನುಪುಳಕಮಂ ತಳೆದು ಶರಣನೊಪ್ಪಿಸಿ,
ಶಿವಭಕ್ತರ ಹಸ್ತಸ್ಪರ್ಶನದಿಂದ ಪವಿತ್ರವೆನಿಸಿ,
ಲಿಂಗಾಣತಿಯಿಂದ ಬಂದ ಪದಾರ್ಥವ
ಮಹಾಲಿಂಗಪ್ರಸಾದವೆಂದು ಇಷ್ಟಲಿಂಗಮುಖವ ತಿಳಿದು,
ಸಮರ್ಪಣೆಯ ಮಾಡಿ, ಸಹಭೋಜನವನುಂಡು,
ಪರಮಾನಂದವ ಅಪ್ಪಾತನೆ ಶರಣನಯ್ಯಾ,
ಮಹಾಲಿಂಗ ಶಶಿಮೌಳಿ ಸದಾಶಿವಾ. /7
ಸಂಸಾರವೆಂಬ ಶರಧಿಯಲ್ಲಿ ನಿಂದು ಗುರುಕರಜಾತನೆನಸಿ,
ಅರುಹು ತಲೆದೋರಿ ಆಚರಣೆಯಂಗೋಡು,
ಪ್ರಸಾದಕ್ರೀಯ ನಡೆಸುವಾತನ ಭಾವಜಲ್ಮೆಯ ಸಾವಧಾನವೆಂತೆಂದಡೆ,
ಶಿವಲಿಂಗದಿಂದರದ ಸಮಸ್ತ ರೂಪಾತಿಶಯಮಂ
ಶಿವಲಿಂಗ ಪ್ರಾಸದವೆಂದೇ ತಾನಂಗೀಕರಿಸುವನು.
ಶಬ್ದರೂಪಾದ ಸಮಸ್ತ ಶಬವೆಲ್ಲವಂ
ಪ್ರಸಾದಲಿಂಗದ ಪ್ರಸಾದವೆಂದೇ ತಾನಂಗೀಕರಿಸುವನು.
ಭಕ್ಷ್ಯ ಭೋಜ್ಯ ಲೇಹ್ಯ ಚೋಹ್ಯ ಮೊದಲಾದ ರೂಪಾದ ಪದಾರ್ಥಮಂ
ಇಷ್ಟಲಿಂಗ ಸಮರ್ಪಣೆಯಂ ಮಾಡಿ ಗುರುಲಿಂಗದಿಂದರಿದ ರುಚಿಯ
ಗುರುಲಿಂಗ ಪ್ರಸಾದವೆಂದೇ ತಾನಂಗೀಕರಿಸುವನು.
ಗಂಧಾನುಲೇಪನ ಕುಸುಮಮಾಲೆ ಮಡಿವರ್ಗ ದಿವ್ಯದುಕೂಲಂಗಳು
ರತ್ನಾಭರಣ ಶೀತೋಷ್ಣ ಮೃದು ಕಠಿಣ ವಾಯು ಸ್ಪರ್ಶನ
ವನಿತೆಯರ ಭೋಗಸುಖಂಗಳಿಗನುಕೂಲವಾದವೆಲ್ಲಮಂ
ಜಂಗಮಲಿಂಗಪ್ರಸಾದವೆಂದಂಗೀಕರಿಸುವಾತನು ಮಹಾಪ್ರಸಾದಿಯಯ್ಯಾ,
ಮಹಾಲಿಂಗ ಶಶಿಮೌಳಿ ಸದಾಶಿವಾ./8
ಸದ್ಗುರುಮೂರ್ತಿಯು ಶಿವನ ಸಂಸ್ಕಾರಸಂಬಂಧಿಯಾದವನ
ಮಾಂಸಪಿಂಡವ ಕಳೆದು ಮಂತ್ರ ಪಿಂಡವ ಮಾಡುವೆನೆಂದು
ತನ್ನ ಪ್ರಾಣಲಿಂಗ ಸ್ವರೂಪವಂ ಭಾವಿಸಿ,
ಭಾವದಿಂದ ಧ್ಯಾನಕ್ಕೆ ತಂದು, ಧ್ಯಾನದಿಂದ ಮನಕ್ಕೆ ತಂದು,
ಮನದಿಂದ ನೇತ್ರದಲ್ಲಿ ನಿಲ್ಲಿಸಿ,
ಆ ಮಹಾಲಿಂಗಮೂರ್ತಿಯ ರೂಪನೆ ಶಿಲಾಮೂರ್ತಿ ಗುಂಡಿಲಿಸಿ,
ಷಡಾಕ್ಷರಿಯ ಮಂತ್ರದಿಂದ ಆ ಮೂರ್ತಿಗೆ ಚೈತನ್ಯವೆನಿಸಿ,
ಆ ಲಿಂಗಕ್ಕೆ ಕ್ರಿಯಾರ್ಚನೆಯಂ ಮಾಡಿ, ಇಷ್ಟಲಿಂಗವೆಂದು ಪೆಸರಿಟ್ಟು,
ಇಷ್ಟ ಪ್ರಾಣ ಭಾವವೆಂದು ಪ್ರಾಣಲಿಂಗ
ಒಂದೆ ನಾಮಭೇದದಿಂದ ಮೂರುತೆರನೆನಿಸಿದಂತೆ,
ಆ ಶಿವಲಿಂಗಮಂ ಶಿಷ್ಯನ ಹಸ್ತಸಿಂಹಾಸನಕ್ಕೆ ಬಿಜಯಂಗೈಸಿ,
ತನ್ನ ಹಸ್ತಮಸ್ತಕಸಂಯೋಗದಿಂದ ಕರ್ಣದಲ್ಲಿ ಮಂತ್ರೋಪದೇಶವಂ ಮಾಡಿ,
ಜ್ಞಾನಮೌಲ್ಯವನಿತ್ತು, ನೆಲದ ಮರೆಯ ನಿಧಾನವ ಅಂಜನಸಿದ್ಧಿಯಿಂ ಕಾಬಂತೆ,
ಇಷ್ಟಲಿಂಗದ ಕ್ರಿಯಾರ್ಚನೆಯಿಂದ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ
ವಿಭೂತಿ ರುದ್ರಾಕ್ಷಿ ಷಡಾಕ್ಷರಿಮಂತ್ರವಾದಿಯಾದ ಅಷ್ಟಾವರಣವಂಗವಪ್ಪುದು.
ಅದರಿಂ ನಿನ್ನ ಜ್ಞಾನೇಂದ್ರಿಯಂಗಳೆ ಲಿಂಗಸ್ವರೂಪವೆಂದು ತಿಳಿವುದು.
ರೂಪಾದ ಪದಾರ್ಥಮಂ ಕಾಯದ ಕೈ ಮುಟ್ಟಿ,
ಇಷ್ಟಲಿಂಗಕ್ಕೆ ಕೊಡುವುದೆ ಕ್ರಿಯಾರ್ಪಣ.
ಆ ಪ್ರಾಣಲಿಂಗದ ತೃಪ್ತಿಯನೆ ಭಾವದ ಲಿಂಗದಲ್ಲಿ ಸಮರಸವ ಮಾಡೆಂದು
ಗುರುನಿರೂಪಣೆಯಿಲ್ಲದೆ ಇಷ್ಟಲಿಂಗದ ಭೋಗ
ಕಲ್ಪಿತ ಪೂರ್ಣಮಾದಲ್ಲಿ ಪ್ರಾಣಬಾಧೆಯ
ಮಾಡೆಂದುಪದೇಶವಿತ್ತನೆ ಆಚಾರ್ಯನು.
ಪರುಷ ಸೋಂಕಿದ ಲೋಹ ಸುವರ್ಣವಪ್ಪುದಲ್ಲದೆ
ಮತ್ತದು ಲೋಹವಾಗಬಲ್ಲುದೆ?
ಆ ಮಹಾಲಿಂಗವೆ ಸದ್ಗುರುಮೂರ್ತಿಯಾಗಿ, ಶಿಷ್ಯನ ಉತ್ತಮಾಂಗದಿ
ತನ್ನ ಹಸ್ತ ಸ್ಪರ್ಶನವಂ ಮಾಡಿ, ಎನ್ನ ಸರ್ವಾಂಗವು ಲಿಂಗಸ್ವರೂಪವೆಂಬಲ್ಲಿ,
ಲಿಂಗ ಬಾಹ್ಯನೆಂಬುದು ಜ್ಞಾನವಲ್ಲ.
ಇಷ್ಟಲಿಂಗಪ್ರಾಣಿಗಳೆಂದು, ಪ್ರಾಣಲಿಂಗಸಂಬಂಧಿಗಳೆಂದು,
ಭಾವಲಿಂಗ ಪರಿಣಾಮಿಗಳೆಂದು ತಮ್ಮ ಭಾವದ ನಿಜದಿಂದ
ಲಿಂಗತ್ರಯವೆನಿಸಿದರೂ ಪ್ರಾಣಲಿಂಗ ಒಂದೆ.
ಅಂದೆಂತೆಂದಡೆ:ರೇಚಕ ಪೂರಕ ಕುಂಭಕವೆಂದು,
ಅಖಂಡಿತವಾದ ಪ್ರಾಣವಾಯುವೊಂದೆ ಮೂರುತೆರನೆನಿಸಿದಂತೆ,
ಹಾಗೆ ಪರಬ್ರಹ್ಮವೆಂಬ ಮೂಲವೃಕ್ಷದಲ್ಲಿ ಋತುಕಾಲಯೋಗದಿಂದ
ಪತ್ರಪುಷ್ಪಫಲಂಗಳು ತೋರಿಯಡಗುವಂತೆ, ಮಹದಾಕಾಶದಿಂದುದಯಿಸುವ
ಅನೇಕ ವಿಚಿತ್ರತರವಾದ ಮೇಘಜಾಲ ಇಂದ್ರಚಾಪ ರೂಪು
ವರ್ಣನಾಮ ಭಿನ್ನ ಭಿನ್ನಮಾಗಿ ತೋರಿದರು.
ಆಕಾಶದಿಂದೆ ಉದಿಸಿ ಅಲ್ಲಿಯೆ ಅಡಗುವಂತೆ,
ಕ್ರಿಯಾದಿಲಿಂಗದರಿವ ಆಚಾರಾದಿ ಲಿಂಗ ಪಂಚಕವು
ಪ್ರಾಣಲಿಂಗದಿಂದು ಂಟೆನಿಸಿ
ಅಲ್ಲಿಯೆ ಐಕ್ಯಮಪ್ಪುದೆಂಬುದೆ ಮಹಾಜ್ಞಾನ.
ಹಾಗಾದರೂ ತನ್ನ ಮನೋಭಾವ ಮೆಚ್ಚಿನ ನಿಜದಿಂದ ಲಿಂಗತ್ರಯವೆನಿಸುವುದು.
ಇಷ್ಟಲಿಂಗವೆಂಬ ಕುರುಹೆಲ್ಲಿಯದು ಭಾವಲಿಂಗ ಪರಿಣಾಮಿಗಳಿಗೆ?
ಇಷ್ಟಪ್ರಾಣವೆಂಬ ನೆನಹೆಲ್ಲಿಯದು ಮಹಾಲಿಂಗ ಶಶಿಮೌಳಿ ಸದಾಶಿವ?/9