Categories
ವಚನಗಳು / Vachanagalu

ಮಲಹರಕಾಯಕದ ಚಿಕ್ಕದೇವಯ್ಯ ವಚನಗಳು

1127
ಆ ನಿಜದರಿವು ತಾನೊಂದು ಬಂಧನದಿಂದ
ಮರೆಯಾದುದ ತಾನರಿಯದೆ,
ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ,
ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ,
ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು,
ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ,
ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ,
ತ್ರಿದೋಷದ ದೆಸೆಯಿಂದ ನಾನಾದರುಶನ
ಪಕ್ಷಪಾತಂಗಳಲ್ಲಿ ಹೊತ್ತು ಹೋರಿ,
ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು,
ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು,
ಷಡುದರುಶನವ ಸಂಪಾದಿಸಿಹೆನೆಂದು,
ಪಂಚಭೌತಿಕ ಭೇದ, ಪಂಚವಿಂಶತಿತತ್ವ
ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು,
ನೂರೊಂದರ ಲಕ್ಷ.
ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ
ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ
ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ?
ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ.
ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ
ಎಸಕವ ತಿಳಿದಡಗಿದ ತೆರದಂತೆ,
ಅರಿದು ನಡೆವ ಪರಮವಿರಕ್ತಂಗೆ
ಹಲವುಮಾತಿನ ಬಲೆಯ ಭ್ರಮೆಯಿಲ್ಲ.
ಗೆಲ್ಲಸೋಲದ ಕಲ್ಲೆದೆಯವನಲ್ಲ.
ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ
ಥೆಕಾವ್ಯವೆಲ್ಲವ ಹೇಳುವನಲ್ಲ.
ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ,
ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ
ಸಂಸಾರದಲ್ಲಿಯೆ ಸಾವನಲ್ಲ.
ಕಲ್ಲಿಯೊಳಗಣ ಮಕರದ ಜೀವದಂತೆ,
ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ.
ಆತನ ಇರವು ದಗ್ಧಪಟದಂತೆ,
ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ,
ಸ್ಫಟಿಕದ ನಿರ್ದೆಹದ ವರ್ಣದ ಹೊದ್ದಿಗೆಯಂತೆ,
ಇಂತು ಚಿದ್ರೂಪನ ಇರವು.
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗದೊಳಗಾದವನ ಇರವು

1128
ಒಂದು ವರ್ಣದಿಂದ, ಭೇದಕ್ರಮದಿಂದ ಕೂಡಲಾಗಿ,
ಪಂಚವರ್ಣವಾಯಿತ್ತು.
ಶ್ವೇತವರ್ಣ ಮೊದಲು ಪರಿಕ್ರಮದಿಂದ ಷಡುವರ್ಣವಾಯಿತ್ತು.
ಆ ವರ್ಣದ ಭೇದ ಬಿಳುಹಿನ ಸ್ವಾಯತ್ತೆಯಲ್ಲಡಗಿತ್ತು.
ಇಂತೀ ಪರಮನಿಂದ ಇಂದ್ರಿಯ ವಿಕಾರವಾದುದನರಿಯದೆ,
ಆತ್ಮಂಗೆ ಪರಿಭ್ರಮಣವೆಂದು ಸಂದೇಹವ ಮಾಡುವ
ಬಂಧಮೋಕ್ಷಕರ್ಮಂಗಳಿಗೆ ಪರಮಸಂದ ಹರಿದಲ್ಲದೆ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವು ಸಾಧ್ಯವಲ್ಲ.

1129
ಕಂಚು ತಾಮ್ರ ಹಿತ್ತಾಳಿ ಈ ಮೂರು ಸೀಸದಂಗನ ಭೇದ.
ಮನ ಬುದ್ಧಿ ಚಿತ್ತ ಈ ಮೂರು ಅಹಂಕಾರದಂಗದೊಡಲು.
ಅರಿದುದ ಮರೆದುದ ಮತ್ತರಿದೆನೆಂಬುದು
ಆ ಗುಣ ಕ್ಷಣಿಕಾತ್ಮನ ಒಡಲು.
ಇಂತಿವನರಿದು ಬಿಡಲು,
ಹಿರಿಯ ಹಸುಬೆಯೊಳಗಡಗಿದ ನಾನಾ ವ್ಯವಹಾರದೊಡಲು.
ಇಂತೀ ಗುಣವಡಗಿ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವ ಕೂಡಬಲ್ಲಡೆ.

1130
ಗಜಕರ್ಣದಂತೆ, ಇಂದ್ರಮಹೇಂದ್ರಜಾಲದಂತೆ,
ಅಗ್ನಿಸ್ತಂಭನೆಯಂತೆ, ಬಿಲ್ಲುವಿದ್ಯೆಯಂತೆ,
ಜಲಸೂತ್ರದಂತೆ, ರಣಕ್ಕೆ ತೊಲಗದ ಪಟುಭಟನಂತೆ.
ಇಂತೀ ಸರ್ವಾಂಗಲಿಂಗಿಯಾದ ಪರಿಪೂರ್ಣಭಕ್ತಜಂಗಮಕ್ಕೆ
ಇಂತಿವನರಿವ ಭೃತ್ಯಕುಲಕ್ಕೆ ತ್ರಿಸಂಧ್ಯಾಕಾಲ ಶರಣೆಂದು,
ಎನ್ನ ಮುಕ್ತನ ಮಾಡು, ನಿನ್ನ ಧರ್ಮ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗಾ.

1131
ತತ್ವವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ,
ವಸ್ತುವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ
ಆ ತತ್ವವೂ ಆ ವಸ್ತುವೂ ತನ್ನ ಕತ್ತಲು ಕೂಸೆ ?
ತಾ ಸತ್ತೆನೆಂದು ಹೇಳುವಾಗ,
ಆ ಗುಣ ಚೇತನವೋ ? ಅಚೇತನವೋ ?
ಮದೋನ್ಮತ್ತಂಗೆ, ಸರ್ಪದಷ್ಟಂಗೆ,
ದುಗ್ರ್ರಹವೇದಿತಂಗೆ, ತ್ರಿವಿಧಮಲಲೋಲುಪ್ತಮತ್ತಂಗೆ
ಮತ್ತೆ ತನ್ನ ಕೊರತೆಯನರಿಯದ
ದುಶ್ಚರಿತ ಕುಹಕಿ ಕ್ಷುದ್ರಂಗೆ,
ಮತ್ತೆ ನಿಜವಸ್ತುವಲ್ಲಿ ಹೊತ್ತು ನಿತ್ತರಿಸಿಪ್ಪನೆ ?
ನಿಜನಿಃಕಲರಲ್ಲಿ, ನಿರ್ದೆಹಿಗಳಲ್ಲಿ, ನಿರಾಲಂಬರಲ್ಲಿ,
ಸರ್ವಕ್ರೀ ಸಂಪೂರ್ಣರಲ್ಲಿ, ಅಕುಟಿಲರಲ್ಲಿ
ಇಂತೀ ಉಭಯದಿರವ ತಿಳಿದು ಮಾಡುವ ಭಕ್ತಂಗೆ
ಗುರುವಿನ ಇರವು, ಚರದ ಲಕ್ಷಣ.
ಲಿಂಗದ ಪರೀಕ್ಷೆಯಿಂದ ತ್ರಿವಿಧದ ಬಿಡುಗಡೆಯ ಒಳಗೆ ಹಿಡಿವ,
ಬಿಡುಮುಡಿಯಲ್ಲಿ ಕೂಡುವ, ಕೊಂಬ ಎಡೆಗಳಲ್ಲಿ
ಅಡಿಗಡಿಗೆ ಒಡಗೂಡಿ ನೋಡುತ್ತಿರಬೇಕು.
ವರ್ಮದ ಬಿಡುಗಡೆಯಲ್ಲಿ ಮಾಡುವ
ಭಕ್ತನ ಕೂಡಿಹ ವಿರಕ್ತನ ತೆರ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವು ತಾನಾದ ಭಕ್ತನ ಯುಕ್ತಿ.

1132
ಪರಮನಿಂದ ಮನ, ಮನದಿಂದ ಬುದ್ಧಿ,
ಬುದ್ಧಿಯಿಂದ ಚಿತ್ತ, ಚಿತ್ತದಿಂದ ಅಹಂಕಾರ,
ಅಹಂಕಾರದಿಂದವೆ ಸರ್ವಕರಣೇಂದ್ರಿಯಂಗಳ ಮೊತ್ತದ ಬಳಗ,
ಇಂತೀ ಗುಣವ ಚಿತ್ತುವಿನಿಂದ ವಿಚಾರಿಸಿ,
ಪರಮನ ಪ್ರಕಾರವ ಬಂಧಿಸಿ, ನಿಂದಿಸಿದವಂಗಲ್ಲದೆ
ಹಿಂದಣ ಮುಂದಣ ಬಂಧ ಬಿಡದು.
ಆನಂದ ಹಿಂಗೆ, ಅಶ್ರುಜಲ ನಿಂದು, ಚಿತ್ತು ಚಿದಾದಿತ್ಯದಲ್ಲಿ
ನಷ್ಟವನೆಯ್ದಿದ ಮತ್ತೆ,
ಹಸುಬೆಯ ವ್ಯವಹಾರ ಬಟ್ಟಬಯಲು,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವ ಕೂಡಿದ ಮತ್ತೆ.

1133
ಮನ ಬುದ್ಧಿ ಚಿತ್ತ ಅಹಂಕಾರವೆಂಬ
ನಾಲ್ಕು ಲೋಹದಿಂದ ಸರ್ವೆಂದ್ರಿಯದ ಮೊತ್ತ.
ಮನ ವಸ್ತುವ ಮುಟ್ಟದೆ, ನಿಜನಿಷ್ಠೆಯನರಿಯದೆ,
ಬಹುಮೊತ್ತದ ಮಾತಲ್ಲದ ಮಾತನಾಡುವದು,
ಕಳ್ಳವಣ, ಸಲ್ಲದ ತಾರ ಇವೆಲ್ಲವ ತಿಳಿದು
ಕಂಬಳಿಯ ಚೀಲದವನ ಬೆಂಬಳಿಯಲ್ಲಿ ಬನ್ನಿ.
ನಿಮಗಲ್ಲದ ಒಡವೆಯನೊಳ್ಳಿತ್ತು ಮಾಡಿಕೊಡುವೆ,
ಊಧ್ರ್ವರೇತೋಮೂರ್ತಿ ಶ್ವೇತ ಸ್ವಯಂಭು
ಕಪಿಲೇಶ್ವರಲಿಂಗ ಸಾಕ್ಷಿಯಾಗಿ.

1134
ಮುರಿಗಂಚು ತವರ ಹಿತ್ತಾಳೆ ತಾಮ್ರ
ಇವು ಮೊದಲಾದ ಲೋಹವ ತನ್ನಿ.
ಕಳ್ಳವಣ, ಕಂದುವೆಳ್ಳ ಮೊದಲಾದ ರೊಕ್ಕವ ತನ್ನಿ.
ನಿಮಗಲ್ಲದ ಒಡವೆ ಎನಗೆ.
ನಿಮಗೆ ಒಳ್ಳಿ[ತ]ಹ ಒಡವೆಯ ಕೊಡುವೆ.
ಎನ್ನ ಕಂಬಳಿಯ [ಚೀಲವಂ] ಬಿಡುವೆ.
ಅದರಲ್ಲಿದ್ದ ಸಂಬಾರದ್ರವ್ಯವ
ಕೊಡುವೆನೆಂಬುದಕ್ಕೆನ್ನ ನಂಬಿ ಬನ್ನಿ.
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದಾಣತಿ.

1135
ರತ್ನದ ಕಾಂತಿಯ ಕಳೆಯಿಂದ,
ತನ್ನಂಗದಲ್ಲಿ ಹುಟ್ಟಿದ ಜಜ್ಜರಿ ಕಾಣಿಸಿಕೊಂಬಂತೆ.
ಚಂದ್ರನ ಕಳಂಕು ತನ್ನ ಪರಿಪೂರ್ಣದ ಬೆಳಗಿನ ಕಳೆಯಿಂದ,
ತನ್ನಲ್ಲಿಯೆ ಕಲೆ ಕಾಳಿಕವ ಕಾಣಿಸಿಕೊಂಬಂತೆ,
ಇಂತೀ ಸುವಸ್ತು ವಸ್ತುಕದಲ್ಲಿ ವಿಸ್ತರಿಸಲಾಗಿ,
ಪರಮ ಜೀವನಾದುದ ತಿಳಿದು ನೋಡಿಕೊಳ್ಳಿ.
ಗೆಲ್ಲಸೋಲದ ಮಾತಲ್ಲ.
ಆಗಮದ ಮಾತಿನ ಮಾಲೆಯ ನೀತಿಯಲ್ಲ.
ಬೆಂಕಿ ಕೆಟ್ಟಡೆ, ಉರುಹಿದಡೆ ಹೊತ್ತುವುದಲ್ಲದೆ
ದೀಪ ಕೆಟ್ಟಡೆ ಮತ್ತೆ ಉರುಹಿದಡೆ ಹೊತ್ತಿದುದುಂಟೆ ?
ಕ್ರೀವಂತ ಮರದಡೆ ಅರಿವನಲ್ಲದೆ,
ಮರೆದರಿದವ ಮತ್ತೆ ಮರೆದಡೆ ಮತ್ತರಿಯಬಲ್ಲುದೆ ?
ಬೆಳಗದ ಕಂಚು, ತೊಳೆಯದ ಕುಂಭ,
ಪಕ್ವಕ್ಕಳಿಯದ ಫಲ, ನೆರೆಯನರಿಯದವನ ಸತ್ಕ್ರಿಯಾ ಮಾಟ,
ಬರುಕಟೆ ವೃಥಾಹೋಯಿತ್ತು.
ಇಂತೀ ಗುಣವ ತಿಳಿದು ಅರಿದವರಲ್ಲಿ,
ತಾನರಿದು ಕೂಡಬೇಕು, ಕೂಡಿಕೊಳ್ಳಬೇಕು.
ಕೊಂಡು ಕೊಡಬೇಕು, ಕೊಟ್ಟೆನೆಂಬ ಎಡದೆರಪಿಲ್ಲದೆ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವ ಕೂಡಬೇಕು.

1136
ಸದ್ಭಕ್ತನಾದಡೆ ಪರಾಪರಸ್ತ್ರೀಯ ಕೂಡಬೇಕು.
ಸಜ್ಜನಪತಿವ್ರತೆಯಾದಡೆ ಪರಾಪರಪುರುಷನ ನೆರೆಯಬೇಕು.
ಇದು ಸದ್ಭಕ್ತಿಯ ಹಾದಿ, ಸದಾಸನ್ನದ್ಧರ ಉಭಯದ ಯೋಗ
ಈ ಗುಣವ ಒಳಗು ತಿಳಿದು, ಹೊರಗೆ ಮರೆದಡೆ,
ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವ ಕೂಡಬಲ್ಲಡೆ.