Categories
ವಚನಗಳು / Vachanagalu

ಮೋಳಿಗೆ ಮಾರಯ್ಯಗಳ ವಚನಗಳು

ಅ[ಜಾ]ಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ
ಕಾಷ್ಠದ ವೇಷ ಗುರುಚರ[ಲಿಂಗ]ವಾದಲ್ಲಿ, ಎನ್ನ ಕಾಯಕದ ಕಾಷ್ಠ ಚಿನ್ನವಾದಲ್ಲಿ,
ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ,
ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು
ಆ ಭಾವಕ್ಕೆ ಬಲೋತ್ತ[ರ]ನಾಗಿದ್ದಾತನ ಇರವು,
ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ./1
ಅಂಗ ಲಿಂಗವಂತವಾದ ಮತ್ತೆ
ಮುಟ್ಟುವ ತಟ್ಟುವ, ಸೋಂಕಿನಲ್ಲಿ ಸುಳಿವ,
ಇದಿರಿಟ್ಟು ಬಂದ ಪದಾರ್ಥವ
ಅಂಗಲಿಂಗಕ್ಕೆ ಕೊಟ್ಟುಕೊಳಬೇಕು.
ಪ್ರಾಣಲಿಂಗವಾದ ಮತ್ತೆ ಕರಣಂಗಳಿಗಿಂಬುಗೊಡದಿರಬೇಕು.
ತನ್ನನರಿದುದಕ್ಕೆ ಉಭಯಾರೂಢನಾಗಿರಬೇಕು.
ಉಭಯವೇಕವಾದ ಮತ್ತೆ ಸಾಕು ಸತ್ಕ್ರೀ, ನಿಃಕಳಂಕ ಮಲ್ಲಿಕಾರ್ಜುನಾ/2
ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ?
ಪರರಂಗವನರಿದು ಹೆರರಂಗದಲ್ಲಿ ಸಿಲ್ಕಿ ಭಂಗಿತನಾಗಲೇಕೊ?
ನದಿಯೊಳಗೆ ಮುಳುಗಿ ತನ್ನೊಡವೆಯ ಸುದ್ಧಿ ಯಾಕೊ?
ಅದರ ವಿಧಿ ನಿಮಗಾಯಿತ್ತು, ಬಿಡು ಕಡುಗಲಿತನವ
ನಿಃಕಳಂಕ ಮಲ್ಲಿಕಾರ್ಜುನಾ./3
ಅಂಗದ ನಿರಾಭಾರಿಗಳೆಲ್ಲರೂ ಕೂಡಿ,
ಲಿಂಗದ ಹೊಲಬ ಬಲ್ಲೆವೆಂದು, ಅನಂಗನ ಬಲೆಯೊಳಗಿಲ್ಲವೆಂದು,
ಸಕಲರ ಸಂಸರ್ಗವನೊಲ್ಲೆವೆಂದು
ಮತ್ತೆ ಅಖಿಲರೊಳಗೆ ಸಕಲಭೋಗವನುಂಡು,
ವಿಕಳಗೊಂಡವರ ನೋಡಾ.
ಪ್ರಕೃತಿ ಹರಿಯದೆ, ಸುಖವ ಮೆಚ್ಚಿ ತಿರುಗದೆ,
ಇಂತಿಹ ಅಖಿಳಂಗೆ ನಮೋ ನಮೋ, ನಿ:ಕಳಂಕ ಮಲ್ಲಿಕಾರ್ಜುನಾ./4
ಅಂಗದ ಮೇಲೆ ಶಿವಲಿಂಗ ನೆಲಸುವಂಗೆ
ಮೂರುಸ್ಥಲವಾಗಬೇಕು. ಅವಾವವಯ್ಯಾಯೆಂದಡೆ: ಗುರುಲಿಂಗಜಂಗಮದಲ್ಲಿ ಭಕ್ತಿ.
ಅರಿವ ಸಾಧಿಸುವಲ್ಲಿ ಜ್ಞಾನ.
ಕರಣಾದಿಗಳ ಭಂಗ ವೈರಾಗ್ಯ.
ಇನಿತಿಲ್ಲದೆ ಲಿಂಗವ ಪೂಜಿಸಿಹೆನೆಂಬ,
ಲಿಂಗವ ಧರಿಸಿಹೆನೆಂಬ ಲಜ್ಜೆಭಂಡರ ಕಂಡು,
ನಾ ನಾಚಿದೆನಯ್ಯಾ.
ಇದು ಕಾರಣ ಗದ್ದುಗೆಗೆಟ್ಟು ಎದ್ದಾತನು ಲಿಂಗವಲ್ಲ ಕಾಣಾ.
ಲಿಂಗ ಸತ್ತ, ನಾ ಕೆಟ್ಟೆ, ರಂಡೆಗೂಳೆನಿಸಲಾರೆ.
ಎನ್ನ ಹತ್ಯವ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ./5
ಅಂಗಭವಿ, ಗುರುವಿನ ಹಂಗು; ಮನಭವಿ, ಲಿಂಗದ ಹಂಗು.
ರುಚಿಭವಿ, ಜಂಗಮದ ಹಂಗು.
ಇಂತೀ ತ್ರಿವಿಧದ ಭೇದವನರಿಯಬೇಕು.
ಅಂಗಭವಿಯ ಕಳೆದಲ್ಲದೆ ಭಕ್ತನ ಮಾಡಬಾರದು.
ಮನಭವಿಯ ಕಳೆದಲ್ಲದೆ ಲಿಂಗವ ಕೊಡಬಾರದು.
ತನುರುಚಿಯ ಕಳೆದಲ್ಲದೆ ಜಂಗಮದ ಪ್ರಸಾದವ ಕೊಳಬಾರದು.
ಹೀಂಗಲ್ಲದೆ, ಮಾತಿನ ಬಣಬೆಯ ಕಲಿತು,
ನೀತಿಯ ಹೇಳುವರೆಲ್ಲರೂ ತ್ರಿವಿಧಕ್ಕಾಚಾರ್ಯರಲ್ಲವೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ./6
ಅಂಗಭವಿ, ಭಕ್ತಂಗೆ ಮನಭವಿ ಮಹೇಶ್ವರಂಗೆ.
ರುಚಿಭವಿ ಪ್ರಸಾದಿಗೆ, ಕುರುಹುಭವಿ ಪ್ರಾಣಲಿಂಗಿಗೆ.
ತ್ರಿವಿಧನಾಮಭವಿ ಶರಣಂಗೆ, ಕೂಟಸ್ಥಭವಿ ಐಕ್ಕಂಗೆ.
ಇಂತೀ ಸ್ಥಲಂಗಳಲ್ಲಿ, ಕುರುಹ ಕುರುಹಿನಲ್ಲಿ ಕಂಡು,
ಅರಿವ ಅರಿವಿನಲ್ಲಿ ತಿಳಿದು, ಐಕ್ಯ ಐಕ್ಯನಾದ ಮತ್ತೆ,
ಅದು ಕಲ್ಲಿನೊಳಗಣ ಬೆಳಗು, ಮುತ್ತಿನೊಳಗಣ ಅಪ್ಪು,
ಕರ್ಪುರದೊಳಗಣ ಉರಿಯಂತೆ,
ದೃಷ್ಟವಿದ್ದು ನಿಃಪತಿಯಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ/7
ಅಂಗಲಿಂಗ ಸಂಬಂಧ, ಭಾವಲಿಂಗ ಸಂಬಂಧ, ಪ್ರಾಣಲಿಂಗ ಸಂಬಂಧವೆಂದು
ಭಾವಿಸಬೇಕು, ಭಾವಿಸಬೇಡಾ ಎಂಬ ಉಭಯದ ತೆರನೆಂತುಟೆಂದಡೆ:
ಮೃದುಕಠಿನವನರಿವನ್ನಕ್ಕ ಕುರುಹ ಮರೆಯಲಿಲ್ಲ.
ಶೀತ ಉಷ್ಣಾದಿಗಳನರಿವನ್ನಕ್ಕ ಭಾವವ ಮರೆಯಲಿಲ್ಲ.
ರೂಪು ನಿರೂಪೆಂಬ ದ್ವಯಂಗಳ ಭೇದಿಸುವನ್ನಕ್ಕ
ಪ್ರಾಣಲಿಂಗವೆಂಬ ಉಭಯದ ಕುರುಹುಂಟು, ನಿಃಕಳಂಕ ಮಲ್ಲಿಕಾರ್ಜುನಾ./8
ಅಂಗಲಿಂಗವೆಂದು, ಪ್ರಾಣಲಿಂಗವೆಂದು,
ಉಭಯದ ಒಡಲನೊಡಗೂಡುವ ಪರಿಯಿನ್ನೆಂತೊ?
ಅದು ಶಿಲೆಯ ಬೆಳಗಿನಂತೆ, ಶಿಲೆ ಅಡಗಿದಡೆ ಬೆಳಗಿಲ್ಲ.
ಬೆಳಗಡಗಲಿಕ್ಕೆ ಆ ಶಿಲೆ ಅಚೇತನ ಪಾಷಾಣವಾಯಿತ್ತು.
ಅಪ್ಪು ಕೂಡಿದ ಪರ್ಣಯೆಲೆ ನಾಮರೂಪಾದಂತೆ,
ಅಪ್ಪುವಡಗೆ ಅಚೇತನ ತರಗಾಯಿತ್ತು.
ಅಂಗದ ಮೇಲಣ ಲಿಂಗ, ಲಿಂಗದ ಮೂರ್ತಿಯ ನೆನಹು,
ಈ ತ್ರಿವಿಧ ಒಂದುಗೂಡಿದಲ್ಲಿ,
ಅಂಗವೆಂಬ ಭಾವ, ಲಿಂಗವೆಂಬ ನೆನಹು ನಿರಂಗವಾದಲ್ಲಿ,
ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ.
ಈ ಗುಣ ಪ್ರಾಣಲಿಂಗಿಯ ಭೇದ, ನಿ:ಕಳಂಕ ಮಲ್ಲಿಕಾರ್ಜುನಾ./9
ಅಂಗವಿರಲಾಗಿ ಲಿಂಗವೆಂಬುದೊಂದು ಕುರುಹು.
ಆ ಕುರುಹನರಿವುದಕ್ಕೆ ಅರಿವೆಂಬುದೊಂದು ಭಾವ.
ಭಾವದ ಮರೆಯಲ್ಲಿ ಚಿತ್ತ, ಚಿತ್ತದ ಮರೆಯಲ್ಲಿ ನಿಶ್ಚಯ,
ನಿಜವನೆಯ್ದಿದಲ್ಲಿ ವಸ್ತುಭಾವಲೇಪ.
ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./10
ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ,
ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ.
ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ,
ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು?
ಎಯ್ದಿಸಿಕೊಂಬುವನಾರೆಂದು ನಾನರಿಯೆ.
ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ?
ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ,
ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ./11
ಅಂದಚಂದದ ಬಣ್ಣವ ಹೊದ್ದು,
ಹರನ ಶರಣರೆಂಬ ಅಣ್ಣಗಳೆಲ್ಲರು
ಕರಣಂಗಳೆಂಬ ಉರವಣೆಯ ಅಂಬಿಗಾರದೆ,
ಭಕ್ತಿಯೆಂಬ ಹರಿಗೆಯ ಹಿಡಿದು,
ಮುಕ್ತಿಯೆಂಬ ಗ್ರಾಮವ ಮುತ್ತಿ ಕಾದಿ,
ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ.
ಎನಗೆ ಹೊದ್ದಿಗೆ ಯಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?/12
ಅಂದಳದ ಮುಂದೆ ವಂದಿಸಿಕೊಂಡೆನೆಂದು
ತ್ರಿವಿಧವ ಹೆರೆಹಿಂಗಿ ಮಾಡುವ ನಿರ್ಬಂಧಿಗನ ನೋಡಾ.
ಕಂಡಕಂಡವರ ಮನೆಯಲ್ಲಿ ಕೊಂಡಾಡಬೇಕೆಂದು
ಹಿಂಡ ಕೂಡಿ ಕೂಳನಿಕ್ಕುವ ಭಂಡರಿಗೆಲ್ಲಿಯದೊ ಭಕ್ತಿ?
ಇವರಂದಕ್ಕೆ ಅಂದೇ ಹೊರಗು, ಸಂದೇಹವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ/13
ಅಂಧಕ ಪಂಗುಳನಾದ, ಪಂಗುಳ ಅಂಧಕನಾದ.
ಈ ಉಭಯದ ಬೆಂಬಳಿಯನರಿಯಬೇಕು.
ಮಂಜರಿ ವಿಹಂಗನ ಕೊಂದು ಉಭಯವನರಿಯಬೇಕು.
ಪರಮ ಜೀವನದೊಳಗಡಗಿ ಪರಮನಾದ ಉಭಯವ ತಿಳಿಯಬೇಕು.
ಬೆಂಕಿ ಮರದೊಳಗಿದ್ದು, ಮಥನದಿಂದ ಮರ ಸುಟ್ಟು,
ಮರ ಬೆಂಕಿಯಾದ ತೆರನನರಿತಡೆ ಪ್ರಾಣಲಿಂಗಸಂಬಂಧಿ.
ಪ್ರಾಣಲಿಂಗವೆಂಬುಭಯ ಸಮಯ ನಿಂದಲ್ಲಿ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./14
ಅಂಬರ ಹರಿದಡೂ ಸಂಭವಿಸದಡೂ ಕಲೆ ಬಿಡದು.
ಇದರಂದವ ತಿಳಿ.
ಹೀಂಗಲ್ಲದೆ ಮನವ ಲಿಂಗದಲ್ಲಿ ನಿಕ್ಷೇಪಿಸಿ, ಬಂಧವ ಹಿಂಗಿ, ಸುಸಂಗನಾಗು.
ಮಹಾಲಿಂಗಿಗಳ ಸಂಭಾಷಣದಲ್ಲಿ ನಿಂದು ನಿರ್ವಾಣನಾಗು,
ನಿಃಕಳಂಕ ಮಲ್ಲಿಕಾರ್ಜುನಾ./15
ಅಂಬರದಲ್ಲಿ ಒಂದು ಕೋಡಗ ಹುಟ್ಟಿ, ಕೊಂಬಿಲ್ಲದೆ ನೆಗೆವುತ್ತಿಹುದ ಕಂಡೆ.
ಮತ್ತಾ ಕೊಂಬಿನ ಮೇಲಣ ಕೋಡಗ ಅಂಬರವ ಕಾಣದೆ,
ಲಂಘಿಸಿ ನಿಲುವುದಕ್ಕೆ ನೆಲದ ಅಂಗವ ಕಾಣದೆ
ಕೊಂಬಿನಲ್ಲಿಯೆಯ್ದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ./16
ಅಂಬುವಿನ ಸಾರ ಒಡಗೂಡಿ,
ಆ ಮಣ್ಣಿಂಗೆ ಕುಂಭವೆಂಬುದಕ್ಕೆ ಕುರುಹುಗೊಟ್ಟು,
ಘನ ಕಿರಿದಲ್ಲದೆ, ಕುಂಭದಲ್ಲಿ ಲೀಯವಾದಂತೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಲೀಯ./17
ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು?
ನೀರಿಲ್ಲದಿರ್ದಡೆ ಹಾಲನಾರು ಬಲ್ಲರು?
ನಾನಿಲ್ಲದಿರ್ದಡೆ ನಿನ್ನನಾರು ಬಲ್ಲರು? ನಿನಗೆ ನಾ, ನನಗೆ ನೀ.
ನಿನಗೂ ನನಗೂ ಬೇರೊಂದು ನಿಜವುಂಟೆ, ನಿಃಕಳಂಕ ಮಲ್ಲಿಕಾರ್ಜುನಾ./18
ಅಕ್ಕಿಯ ಕುದಿಸಿದಡೆ ಪಕ್ವವಲ್ಲದೆ, ಮಿಕ್ಕುಳಿದುದಕ್ಕೆ ಪಕ್ವವುಂಟೆ?
ಮರವೆಯಲ್ಲಿ ಅರಿವಲ್ಲದೆ, ಅರಿವಿನಲ್ಲಿ ಮರವೆಯುಂಟೆ?
ಅದ ಉಂಟೆನಬಾರದು, ಇಲ್ಲೆನಬಾರದು.
ಈ ಉಭಯವನೀಂಟಿಯಲ್ಲದೆ,
ಗಂಟಿಕೆಗೆ ಹೊರಗಾಗ, ನಿಃಕಳಂಕ ಮಲ್ಲಿಕಾರ್ಜುನ./19
ಅಗ್ನಿ ವಾಯುವ ಧರಿಸಿ, ವಾಯು ಆಕಾಶವ ಧರಿಸಿ,
ಆಕಾಶ ಅಪ್ಪುವ ಧರಿಸಿ, ಅಪ್ಪು ಪೃಥ್ವಿಯ ಧರಿಸಿ,
ಆ ಪೃಥ್ವಿಗೆ ಅಪ್ಪು, ಆ ಅಪ್ಪುವಿನ ಮಧ್ಯದ ಕಮಠ,
ಕಮಠನ ಮಧ್ಯದ ಶೇಷ, ಶೇಷನ ಮಧ್ಯದ ಜಗ,
ಜಗದ ಆಗುಚೇಗೆಯಲ್ಲಿ ಲೋಲನಾಗದೆ,
ಕಾಯಗುಣವ ಕರ್ಮದಿಂದ ಕಳೆದು, ಜೀವ ಗುಣವ ಅರಿವಿನಿಂದ ಮರೆದು,
ಭಾವ ನಿರ್ಭಾವವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ./20
ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು.
ಮನಮಚ್ಚಿ ಕೊಟ್ಟ ಲಿಂಗ, ಹೃತ್ಕಮಲದಲ್ಲಿ ಮುಟ್ಟಿದುದಿಲ್ಲ.
ತಾ ದೃಷ್ಟಿತನಾದಲ್ಲದೆ ಇದಿರಿಂಗಿಷ್ಟವ ಕಟ್ಟಬಾರದು.
ಕಟ್ಟಿಕೊಂಡು ಮತ್ತೆ ಗುರಿಯನೆಚ್ಚ ಕೈಯ [ಲಾ]ಹರಿಯಂತಿಬೇಕು.
ರಣವ ಗೆಲಿದ ಧೀರನ ಉದಾರದಂತಿರಬೇಕು.
ಹೀಂಗಲ್ಲದೆ ಗುರುಸಂಬಂಧವೆಲ್ಲ
ಮಡಕೆಯ ಮರೆಯ ಕ್ಷೀರದಂತೆ ಕೈಗುಡಿತೆಗೆ ಬಂದುದಿಲ್ಲ,
ಈ ಗುರುಸ್ಥಲವೆಂದಡಕವೇಕೆ, ನಿಃಕಳಂಕ ಮಲ್ಲಿಕಾರ್ಜುನಾ?/21
ಅಜ ಅರ್ಕನ ಕೊಂಬಿನಲ್ಲಿ ನಿಂದು, ಭಜನೆವಂತರ ಕಂಡು,
ತ್ರಿಜಗವೆಲ್ಲ ತಾನೆಂದು ಗಜಬಜೆಯಲ್ಲಿ ಅಡಗಿತ್ತು,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ./22
ಅಜ ಗಳದಲ್ಲಿ ಬಿಡುಮೊಲೆಯಿದ್ದಡೆ ಅದು ಗಡಿಗೆಗೇಡು.
ದೃಢವೆನಗಿಲ್ಲದಲ್ಲಿ ಒಡಗೂಡುವುದಕ್ಕೆಡಹೆ ?
ತುಡುಗುಣಿಯಲ್ಲಿ ಮೀಸಲುಂಟೆ ?
ಅಡಿಯನರಿಯದವಂಗೆ ದೃಢಭಕ್ತಿಯುಂಟೆ ?
ಇಂತಿವರೊಡಗೂಡುವ ಗುರುಶಿಷ್ಯನ ಇರವು,
ಪರಿಭ್ರಮಣ ಬಂದು ಶರೀರವನೊಡಗೂಡಿದಂತೆ,
ನಿಃಕಳಂಕ ಮಲ್ಲಿಕಾರ್ಜುನಾ./23
ಅಡಗಿದ ಕಿಚ್ಚು ಉರಿದಾಗವೆ ತನ್ನ ಇರವು ನಷ್ಟ.
ತುರೀಯದ ಮೋಹ ಬೆರಸಿದಾಗವೆ ಆ ತುರೀಯ ನಷ್ಟ.
ಇಷ್ಟದ ಮೇಗಣ ಚಿತ್ತ ಅಭಿ[ವಾ]ರ್ಥವೆಂಬ ಗುಟ್ಟ ಬಿಟ್ಟಲ್ಲಿಯೆ ನಿಜನಿಶ್ಚಯ.
ಆ ನಿಶ್ಚಯ ಅಚ್ಚೊತ್ತುವುದಕ್ಕೆ ಮುನ್ನವೆ, ಸಶ್ಚಿತ್ತವಾದ[ಲ್ಲಿಯೆ]
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./24
ಅಣುಮಾತ್ರವಪ್ಪ ವಾಯುವ, ಮನದ ಕೊನೆಯ ಮೊನೆಯಲ್ಲಿ
ಸಪ್ತಸಮುದ್ರ, ದಿಗ್ವಳಯದ ಗಿರಿಗಳು ಮುಂತಾದವ
ತನ್ನ ಸತ್ವದಲ್ಲಿ ಎತ್ತುವದ ಕಂಡೆ.
ಕೊಂಡು ಹೋ[ಹು]ದ ಕಂಡುದಿಲ್ಲ.
ಎತ್ತಿ ಎಯ್ದಿಹೆನೆಂಬುದರಲ್ಲಿ, ವಾಯುಸತ್ವ ನಷ್ಟವಾಯಿತ್ತು.
ಇಂತೀ ಗುಣವ ತ್ರಿಗುಣಾತ್ಮಕರು ತಿಳಿದು, ಜಡ ಅಜಡವೆಂಬುದ ಕಳೆದು
ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಳಗು ಮಾಡಿರೆ./25
ಅದಿರಿನ ತಲೆ, ಬಿದಿರಿದ ಬಾಯಿ,
ಕಾಡಿನ ಹಕ್ಕೆ, ಓಡಿನ ಊಟಿ
ಹತ್ತಿದ ಹೊಟ್ಟೆ, ಬತ್ತಿದ ಗಲ್ಲ,
ಊರಿದ ಚರಣ, ಏರಿದ ಭಾಷೆ.
ಇದು ಶರಣಂಗಲ್ಲದೆ ನಡುವಣ ಪುಕ್ಕಟವಾದವರಿಗೆಲ್ಲಿಯದೊ,
ನಿಃಕಳಂಕ ಮಲ್ಲಿಕಾರ್ಜುನಾ./26
ಅದ್ವೈತವ ಹೇಳುವ ಹಿರಿಯರೆಲ್ಲರೂ ದ್ವೈತಕ್ಕೊಳಗಾದರು.
ನಿಸ್ಸಂಸಾರವ ಹೇಳುವ ಹಿರಿಯರೆಲ್ಲರೂ
ಸಂಸಾರದ ಸಾರವ ಚಪ್ಪಿರಿದು ಕೆಟ್ಟರು.
ಭಕ್ತರಿಗೆ ನಿತ್ಯವಲ್ಲೆಂದು ಹೇಳಿ, ತಾವು ಅನಿತ್ಯವ ಹಿಡಿದು,
ಪಾಶಕ್ಕೆ ಸಿಕ್ಕಿ ಸತ್ತುದನರಿಯದೆ,
ನಾವು ಮುಕ್ತರಾದೆವೆಂಬ ಭ್ರಷ್ಟರ ನೋಡಾ.
ನನಗಿನ್ನೆತ್ತಣ ಮುಕ್ತಿ ಎಂದಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ/27
ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ,
ಬೇಯ್ದ[ಆಕೆಯ] ಕರಚರಣಾದಿಗಳು, ಆ ಗಂಡನಲ್ಲಿಯೆ ಒಪ್ಪವಿಟ್ಟಂತಿರಬೇಕು.
ಇಂತಪ್ಪ ಇಷ್ಟಲಿಂಗವ ದೃಷ್ಟದಲ್ಲಿ ಹಿಡಿದುದಕ್ಕೆ ಇದೇ ದೃಷ್ಟ.
ಹೀಂಗಲ್ಲದೆ ಲೌಕಿಕಾರ್ಚನೆಯ ಮಾಡುವ ಪೂಜಕರ ಮೆಚ್ಚೆನೆಂದ,
ನಚ್ಚಿನಗ್ಫಣಿಯ ಮಜ್ಜನದೊಡೆಯ ನಿಃಕಳಂಕ ಮಲ್ಲಿಕಾರ್ಜುನಾ./28
ಅನಾಚಾರದಲ್ಲಿ ಆಚಾರವಡಗಿ, ಭಕ್ತನಲ್ಲದೆ ಭವಿಯಾಗಿ,
ನಿತ್ಯನಲ್ಲದೆ ಅನಿತ್ಯನಾಗಿದ್ದವಂಗಲ್ಲದೆ, ಮೂರು ಕುಳವಿಲ್ಲ.
ಆರು ಕುಳದಲ್ಲಿ ಬಲ್ಲವನಲ್ಲದೆ,
ಇಂತಿವರೊಳಗಾದ ನೂರೊಂದು ಕುಳಕ್ಕೆ ಸ್ಥಲಜ್ಞನಲ್ಲ.
ಇಂತಿವ ಬಲ್ಲವರೆಲ್ಲರಲ್ಲಿ ನಿಃಕಳಂಕ ಮಲ್ಲಿಕಾರ್ಜುನಲಿಂಗ,
ಸೊಲ್ಲಿನೊಳಗಾಗಿಹನು./29
ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ?
ಎನ್ನ ತನುಮನ ಶುದ್ಧವಿಲ್ಲೆಂದು, ಎನ್ನ ನೆನಹಿನಲ್ಲಿ ನೀ ನಿಲ್ಲೆಯಾ, ಅಯ್ಯಾ ?
ಎನ್ನಪಾತಕದ ಪುಂಜವ ನೀ ಅತಿಗಳೆಯಾ.
ಎನ್ನ ಹಸುವಿಂಗೆ ಅಸು ನೀನೆ, ವಿಷಯಕ್ಕೆ ಮನ ನೀನೆ,
ಭೋಗಿಸುವುದಕ್ಕೆ ಅಂಗ ನೀನೆ.
ಸ್ಫಟಿಕದ ಘಟದೊಳಗಣ ಬಹುರಂಗಿನಂತೆ,
ಎನ್ನ ಅಂಗಮಯ ನೀನಾಗಿ ಹಿಂಗಲೇಕೆ ನಿಃಕಳಂಕ ಮಲ್ಲಿಕಾರ್ಜುನಾ ?/30
ಅನುವನರಿವನ್ನಕ್ಕ ಅರ್ಚನೆ ಬೇಕು.
ಪುಣ್ಯವನರಿವನ್ನಕ್ಕ ಪೂಜೆ ಬೇಕು.
ನಾ ನೀನೆಂಬುದನರಿವನ್ನಕ್ಕ
ಎಲ್ಲಾ ನೇಮವ ಭಾವಿಸಬೇಕು.
ಕಾಲಕರ್ಮಜ್ಞಾನಭಾವ ತಾನುಳ್ಳನ್ನಕ್ಕ ಭಾವಿಸಬೇಕು.
ತನ್ನನರಿದು ವಸ್ತುವ ಕುರಿತು ನಿಂದ ಮತ್ತೆ
ಬತ್ತಲೆ ಹೋಹವಂಗೆತ್ತಲೂ ಭಯವಿಲ್ಲ
ನಿಃಕಳಂಕ ಮಲ್ಲಿಕಾರ್ಜುನಾ./31
ಅನ್ಯ ಶಬ್ದವ ನುಡಿಯೆ, ಕೇಳೆನೆಂದು ಗಂಟೆಯ ಕರ್ಣದಲ್ಲಿ ಕಟ್ಟಿಕೊಂಡೆ.
ಮತ್ತೆಯೂ ಅಪಶಬ್ದವ ನುಡಿವುದಕ್ಕೆ ನೀನೆ ತಿಳಿದು ನೋಡು,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ./32
ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ?
ಇವರಾಗುಹೋಗನರಿಯದೆ,
ಬಾಧೆಗೆ ಸಿಕ್ಕಿ ನಾದವ ಲಾಲಿಸುವ ನಾಗಫಣಿಯಂತೆ
ಆಡುತ್ತಿದ್ದು, ಹೋದ ಹೊಲಬೇಕೆಂದ
ನಿಃಕಳಂಕ ಮಲ್ಲಿಕಾರ್ಜುನಾ./33
ಅಪರವನರಿತೆನೆಂದು ಪರಮನ ಬಿಡಲೇತಕ್ಕೆ ?
ನಿಃಕ್ರೀಯವನರಿತೆನೆಂದು ಕ್ರೀಯ ಬಿಡಲೇಕೆ ?
ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವೈರಾಗ್ಯ,
ವೈರಾಗ್ಯದಿಂದ ನಿಜದ ನಿಶ್ಚಯ.
ಅದಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./34
ಅಪರವನರಿದುದೆ ಖರ್ಪರ, ತ್ರಿವಿಧವ ಮುರಿದುದೆ ಕಟ್ಟಿಗೆ.
ಸರ್ವವ ಕೇಳಿ ಕೇಳದಂತಿಪ್ಪುದೆ ಕುಂಡಲ.
ರುದ್ರಪಾಶವ ಕಿತ್ತು ಗಟ್ಟಿಗೊಂಬುದೆ ಜಡೆ.
ಜ್ಞಾನ ವಿಜ್ಞಾನ ಸುಜ್ಞಾನ ಮಹಾಜ್ಞಾನ ಅಪರಜ್ಞಾನ.
ಇಂತೀ ಪಂಚಜ್ಞಾನ ದಹ್ಯಮಂ ಮಾಡಿ,
ಬ್ರಹ್ಮಲಿಖಿತವ ತೊಡೆವಂತೆ ಧರಿಸುವುದು ತ್ರಿಪುಂಡ್ರವ.
ಇಂತೀ ವೇಷವ ಧರಿಸಿ ಭಕ್ತನೆಂಬ ಭೂಮಿಯಲ್ಲಿ,
ಸಕಲಕರಣಂಗಳ ತೀರ್ಥಯಾತ್ರೆಯಂ ಮಾಡುತ್ತ,
ಕಳೆದುಳಿಯಬಲ್ಲಡೆ, ಆತನೇ ಲಿಂಗಜಂಗಮ,
ನಿಃಕಳಂಕ ಮಲ್ಲಿಕಾರ್ಜುನಾ./35
ಅಪ್ಪು ಫಲವ ನುಂಗಿ, ಫಲ ಅಪ್ಪುವ ನುಂಗಿ,
ಒಪ್ಪಿ ಗಟ್ಟಿಗೊಂಡ ಭೇದ[ವೆ] ಭಕ್ತಿಜ್ಞಾನ.
ರುಚಿಯ ಜಿಹ್ವೆ ನುಂಗಿ, ಜಿಹ್ವೆಯ ರುಚಿ ನುಂಗಿ,
ಈ ಉಭಯ[ದ] ಭೇದವೆಲ್ಲಿ[ಯೂ] ಭಿನ್ನವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./36
ಅಪ್ಪು ಬೆರಸಿದ ಕಟ್ಟಿಗೆಯ ಕಿಚ್ಚಿನಲ್ಲಿಕ್ಕಿದಡೆ,
ಅದು ಚಿತ್ತಶುದ್ಧವಾಗಿ ಹೊತ್ತಬಲ್ಲುದೆ, ತಟ್ಟಾರಿದ ಕಾಷ್ಠದಂತೆ ?
ಇಂತೀ ಅರ್ತಿಕಾರರಿಗೆ ಸಿಕ್ಕುವನೆ ನಿಜವಸ್ತು, ನಿಃಕಳಂಕ ಮಲ್ಲಿಕಾರ್ಜುನಾ./37
ಅಪ್ಪು ಷಡುವರ್ಣವ ಕೂಡಿ ಚಿಹ್ನವಿಚ್ಫಿನ್ನವಿಲ್ಲದೆ
ವರ್ಣಭೇದವ ಕೊಟ್ಟು, ಬಿನ್ನಾಣದಿ ತಾನ[ರಿ]ತಂತೆ ತ್ರಿವಿಧಮೂರ್ತಿಯಾಗಿ,
ಷಟ್ಸ್ಥಲಬ್ರಹ್ಮಿಯಾಗಿ ನಾನಾತತ್ವಂಗಳಲ್ಲಿ ಕಲ್ಪಿತನಾಗಿ,
ಸತ್ಕ್ರೀಯಲ್ಲಿ ಭಾವಿತನಾಗಿ, ನಿಃಕ್ರೀಯಲ್ಲಿ ನಿರಂಗನಾಗಿ,
ಕರ್ಪುರದ ಬುಡದಲ್ಲಿ ಕಿಚ್ಚು ಹುಟ್ಟಿದಂತೆ,
ಅದು ಹುಟ್ಟುವಲ್ಲಿ ಆ ಬುಡಕ್ಕೆ ನಿಶ್ಚಯವಾಯಿತ್ತು.
ಅರಿದರುಹಿಸಿಕೊಂಬ ಉಭಯವಲ್ಲದಿಲ್ಲ.
ಭಕ್ತಿಗೆ ಕ್ರೀ, ವಿರಕ್ತಿಗೆ ನಿರವಯ.
ಇಂತೀ ದ್ವಂದ್ವವುಳ್ಳನ್ನಕ್ಕ ನೀನು, ನೀನೆಂಬನ್ನಕ್ಕ ನಾನು
ಎನ್ನ ಭಾವದಲ್ಲಿ ಮನೋಮೂರ್ತಿಯಾದಲ್ಲಿ,
ನಿಃಕಳಂಕನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ/38
ಅಪ್ಪುವರತಲ್ಲಿಯೆ ಪೃಥ್ವಿಯ ಅಂಕುರ ನಷ್ಟ.
ಅಂಕುರ ನಷ್ಟವಾದಲ್ಲಿಯೆ ಮುಂದಣ ಬಿತ್ತಿಲ್ಲ.
ಇಂತೀ ಭಾವವ ತಿಳಿದು, ಸ್ಥಲ ನಿಃಸ್ಥಲವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ಭಾವವಿರಹಿತ./39
ಅಪ್ಪುವಿನ ಯೋಗದ ಕಾಷ್ಠ ಹೊತ್ತುವಲ್ಲಿ,
ಮೆಚ್ಚನೆ ತಮದ ಧೂಮ, ಶುಷ್ಕದ ಅಪ್ಪುವಿನ ಗುಣ.
ಅಪ್ಪುವರತು ಶುಷ್ಕ [ತೊ]ಟ್ಟಾರೆ, ಕಿಚ್ಚು ಮುಟ್ಟುವುದಕ್ಕೆ ಮುನ್ನವೆ,
ಹೊತ್ತಿ ಬೇವುದದು ಕಿಚ್ಚೋ, ಮತ್ತೊಂದೋ ?
ಇಂತೀ ಉಭಯವನರಿತು, ಒಂದರಲ್ಲಿ ಒಂದು ಅದೆಯೆಂಬ
ಸಂದೇಹವ ನೋಡಾ.
ಅಲ್ಲಾ ಎಂದಡೆ ಭಿನ್ನಭಾವ, ಅಹುದೆಂದಡೆ ಇಷ್ಟದ ದೃಷ್ಟವೊಂದೆಯಾಗಿದೆ.
ಜನ ಜಾತ್ರೆಗೆ ಹೋದವನಂತೆ ಕೂಟದಲ್ಲಿ ಗೋಷ್ಠಿ ಹ[ರಿ]ದಲ್ಲಿ,
ತಮ್ಮ ತಮ್ಮ ಮನೆಯ ಇರವಿನ ಹಾದಿ.
ಇಂತಿವನರಿದು ಬಾಡಗೆಯ ಮನೆಗೆ
ಹೊಯ್ದಾಡಲೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ./40
ಅಪ್ಪುವಿನೊಳಗಣ ಅಗ್ನಿಯಂತೆ ಅಪ್ಪುವಿನೊಳಗೆ ಬೆರೆದು,
ಕೆಡದ ಕಿಚ್ಚಿನಂತೆ ಸ್ಥಲಕುಳಭರಿತನಾಗಿ,
ಸ್ಥಲದಲ್ಲಿದ್ದು ಸ್ಥಲವ ನೇತಿಗಳೆದಲ್ಲಿ ಒಳಗು ಹೊರಗಾಯಿತ್ತು.
ಆ ಹೊರಗಣ ಹೊಲಬ ಕಂಡು, ಆ ಹೊಲಬಿ[ಗ]ನ ಹೊಲನ ನೋಡಿ,
ವಿರಳ ಅವಿರಳವೆಂಬುದನರಿತು, ಕುರುಹು ನಷ್ಟವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ನಾಮನಷ್ಟ./41
ಅಮೃತ ಸಾರವ ಬಲ್ಲುದೆ ? ಶಾಖೆ ಫಲವ ಬಲ್ಲುದೆ ?
ನಿರ್ಜಾತರ ಜಾತ ಬಲ್ಲನೆ ?
ಅವನೇತಕ್ಕೂ ಸಿಕ್ಕ ಅರಿಯದವರಾಸೆಗೆ ಸಿಕ್ಕುವ,
ಇದು ಭಾಷೆ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ/42
ಅಯ್ಯಾ [ನಾ] ನಿನಗಂಜುವೆ.
ಕಚ್ಚುವ ಹಾವ ಕೈಯಲ್ಲಿ ಹಿಡಿದೆ.
[ಕು]ತ್ತುವ ಹಸುವ ಬಾಗಿಲಲ್ಲಿ ಕಟ್ಟಿದೆ.
ತಿಂಬ ಹುಲಿಯ ಅಂಗಳದಲ್ಲಿ ಕೂಡಿದೆ.
ನಿನ್ನಂಗವಿದೇನೊ, ಅಭಂಗ ನಿಃಕಳಂಕ ಮಲ್ಲಿಕಾರ್ಜುನಾ./43
ಅಯ್ಯಾ ಎನ್ನ ಕೇಡು ನಿನಗಲ್ಲದೆ ಎನಗೊಂದಿಲ್ಲ.
ಕಾಳಗದಲ್ಲಿ ಪೌಜನಿಕ್ಕಿ ಮುರಿದಲ್ಲಿ, ಅರಸೆಂಬರಲ್ಲದೆ ಬಂಟರೆಂಬುದಿಲ್ಲ.
ಅದರೊಚ್ಚೆಯವಾರಿಗೆಂಬುದನರಿ.
ನಾ ನಿಮಗೆ ಕೊರತೆಯ ತರಬಾರದೆಂಬುದಕ್ಕೆ ನಿಮಗೆ ಹೇಳಿಹೆನಲ್ಲದೆ,
ಕೊಟ್ಟ ಜೀವಿತಕ್ಕೆ ಓಲೈಸುವಂಗೆ ರಾಜ್ಯದ ಕಟ್ಟೇಕೆ,
ನಿಃಕಳಂಕ ಮಲ್ಲಿಕಾರ್ಜುನಾ?/44
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ.
ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ.
ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ.
ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ,
ಒಂದು ಜ್ಯೋತಿ ಬಿಳಿಯ ವರ್ಣ.
ಈ ಮೂರು ಜ್ಯೋತಿಯ ಬೆಳಗಿನಲ್ಲಿ,
ಒಂಬತ್ತು ರತ್ನವ ಕಂಡೆನಯ್ಯಾ.
ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ.
ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ.
ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ,
ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ,
ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ./45
ಅರಗಿನ ಪುತ್ಥಳಿ ಉರಿಯ ಮನೆಯ ಹೊಕ್ಕಂತಿರಬೇಕು.
ಸಿರಿಯ ಲಕ್ಷ್ಮಿ ಉದಕದಲ್ಲಿ ನೆರೆದು ಹೋದಂತಿರಬೇಕು.
ಅಂಬರಕ್ಕೆ ಸಂಭ್ರಮ ಹರಿದಂತಿರಬೇಕು.
ಆತನಿರವು ಕಣ್ಣಿನಲ್ಲಿ ಪು[ಟ್ಟಿ]ದ ಆಲಿಯ ತೆರದಂತಿರಬೇಕು.
ಭಿನ್ನವಹುದು, ಅಲ್ಲಾ ಎಂಬ ಸಂದೇಹ[ವೇಕೊ]
ನಿಃಕಳಂಕ ಮಲ್ಲಿಕಾರ್ಜುನಾ ?/46
ಅರಗಿನ ಮಣಿಯ ಮಾಡಿ, ಉರಿಯ ನೇಣ ಮಾಡಿ,
ಹಿರಿಯರೆಲ್ಲರು ಪವಣಿಸಲಾರರು.
ಈ ಮಣಿಯ ಗುಣಕ್ಕೆ ಗುಣಜ್ಞರಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./47
ಅರಿತೆಹೆನರಿತೆಹೆನೆಂದು ಹೊರಹೊಮ್ಮುವಾಗ
ಕಾಯ ಮರುಜವಣಿಯೆ ? ಮಹಾಪ್ರಳಯಕ್ಕೆ ಹೊರಗಾದ ಶ್ರ[ಮ]ಣವೆ ?
ಅವತಾರಕ್ಕೆ ಹೊರಗಾದ ನಿರಂಗವೆ ?
ಅಸಗ ನೀರಡಿಸಿ ಸತ್ತಂತಾಯಿತ್ತು ಅವನಿರವು,
ನಿಃಕಳಂಕ ಮಲ್ಲಿಕಾರ್ಜುನಾ./48
ಅರಿದ ಶರಣಂಗೆ ಅಡಗುವ ಠಾವುಂಟೆ ?
ಅಡಗಿದ ಮತ್ತೆ ಬಿಡಬೇಕು
[ಆದಿ]ಯ ಮೆಟ್ಟುವ ಜಡರ ಸಂಸರ್ಗ ಬಿಡವು ಸರಿ.
ಇಂತೀ ದೃಢಚಿತ್ತಂಗೆ ಕಡೆ ನಡು ಮೊದಲಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./49
ಅರಿದವ ತಾ[ನರಿ]ದ ಮತ್ತೆ ಹೆರೆ ಹಿಂಗದಿರಬೇಕು.
ಆಸೆ, ಆಮಿಷ, ತಾಮಸ, ಸಕಲೇಂದ್ರಿಯವ ಭಾವಿಸಲಿಲ್ಲ ಭ್ರಮೆಗೊಳಗಾದ ಮನುಷ್ಯರು
ಜ್ಞಾನಿ ತಾನಾದ ಮತ್ತೆ
ಮಾನವರ ಮೊರೆಹೊಗದೆ ತಾನು ತಾನಾಗಬಲ್ಲಡೆ,
ಆತಂಗೆ [ಭ]ವದ ಭ್ರಮೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ./50
ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ.
ಅದಕ್ಕೆ ಮರೆದರಿವು ತಪ್ಪದು.
[ಆ] ಅರಿವಿನ ಭೇದ ಎತ್ತಿದ ದೀಪದ ಬೆಳಗಿನಂತೆ.
ಅರಿದು ಮರೆಯದೆ, [ಮರೆದು ಅರಿಯದೆ]
ಇಂತೀ ಅರಿಕೆಯಲ್ಲಿ ಮಾಡುವವನ ಅರಿವು,
ಹೊತ್ತ ದೀಪದ ನಿಶ್ಚಯದಂತೆ.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ,
ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು./51
ಅರಿದೆನೆಂಬುದೇನೊ ? ಮರೆದೆನೆಂಬುದೇನೊ ?
ಅರಿವು ಮರವೆ ಎರಡರ ಎಡೆಯಲ್ಲಿ [ಇದರ] ತೆರನನರಿಯಾ,
ನಿಃಕಳಂಕ ಮಲ್ಲಿಕಾರ್ಜುನಾ./52
ಅರಿವ ಕತ್ತಿ ಹರಣದ ಇರವ ಬಲ್ಲುದೆ ?
ಬಿರುನುಡಿಯ ನುಡಿವವ ಮಾನ್ಯರ [ಮಾ]ನದ ಮನ್ನಣೆಯ ಬಲ್ಲನೆ ?
ಹೆತ್ತವರಿಗೆ ಕೂಸು ಹುಚ್ಚಾದರೆ,
ಅದರರ್ತಿ ಹೆತ್ತವರಿಗಲ್ಲದೆ ಮಿಕ್ಕಾದವರಿಗುಂಟೆ,
ನಿಃಕಳಂಕ ಮಲ್ಲಿಕಾರ್ಜುನಾ./53
ಅರಿವ ಮನ ಏಕವಾಗಿಯಲ್ಲದೆ, ವಸ್ತುವನೊಡಗೂಡಬಾರದು.
ಹುರಿ ರಜ್ಜು ಒಂದೆ ಗಡಣದಲ್ಲಿಯಲ್ಲದೆ ಎಡಬಲಕ್ಕಿಲ್ಲ./54
ಅರಿವನರಿವನ್ನಕ್ಕ ಅರ್ಚನೆ ಬೇಕು, ಪುಣ್ಯವನರಿವನ್ನಕ್ಕ ಪೂಜೆ ಬೇಕು.
ತಾನೆಂಬುದನರಿವನ್ನಕ್ಕ ಎಲ್ಲ ನೇಮವ ಭಾವಿಸಬೇಕು.
ಕಾಲ ಕರ್ಮ ಜ್ಞಾನ ಭಾವ ತಾನುಳ್ಳನ್ನಕ್ಕ ಭಜಿಸಬೇಕು.
ತನ್ನ ಮರೆದು, ವಸ್ತುವ ಕುರಿತು ನಿಂದ ಮತ್ತೆ
ಬತ್ತಲೆ ಹೋಹವಂಗೆ ಎತ್ತಲೂ ಭಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./55
ಅರಿವಿಂದ ಕಂಡೆಹೆನೆಂದಡೆ,
ಅರಿವಿಂಗೆ ಮರಹು ಹಿಡಿಯಬೇಕು.ಕುರುಹಿನಿಂದ ಕಂಡೆಹೆನೆಂದಡೆ,
ಆ ಕುರುಹಿನಲ್ಲಿ ಅರಿವು ಕರಿಗೊಳ್ಳಬೇಕು.
ಉಭಯವನರಿದ ಮತ್ತೆ ಅರಿವಿನಿಂದ ಅರಿದೆಹೆನಂದಡೆ
ಆ ಅರಿವು ನಾನಾ ಯೋನಿಯಲ್ಲಿ ಒಳಗಾಯಿತ್ತು.
ಕುರುಹಿನಿಂದ ಅರಿದೆಹೆನೆಂದಡೆ,
ಆ ಕುರುಹು ಪುನರಪಿಗೊಳಗಾಯಿತ್ತು.
[ಆ]ಅರಿವನರಿ [ವ] ಅರಿವೇನೋ? ಕುರುಹನರಿವ ಅರಿವದೇನೋ?
ಅರಿವನರಿದಲ್ಲಿಯೂ ಕುರುಹನರಿದಲ್ಲಿಯೂ ಅರಿವಿಂಗೆ ತೆರಹಿಲ್ಲ.
ಬರಿದೆ ಅರಿದೆನೆಂಬ ಬರುಬರ ಮೆಚ್ಚ,
ನಿಃಕಳಂಕ ಮಲ್ಲಿಕಾರ್ಜುನಾ/56
ಅರಿವು ಕರಿಗೊಂಡಲ್ಲಿ ಇದರ ತೆರನನರಿಯಬೇಕು.
ತನ್ನ ಮರೆಯಬೇಕು, ಲಿಂಗವನರಿಯಬೇಕು.
ಅರಿದ ಮತ್ತೆ ಎರಡಕ್ಕೆ ತೆರಪಿಲ್ಲ, ಹಿಡಿವುದಕ್ಕೆ ಅಂಗವಿಲ್ಲ.
ಅರಿವುದಕ್ಕೆ ಆತ್ಮವಿಲ್ಲ. ಬೇರೆ ಬಿಡುಗಡೆ ಇಲ್ಲವಾಗಿ,
ಆ ಅರಿಕೆ ತಾನೆ ಶರಣನಲ್ಲಿ. [ಇದು] ನಿರ್ಲೇಪ, ಶರಣಸ್ಥಲ,
ನಿಃಕಳಂಕ ಮಲ್ಲಿಕಾರ್ಜುನಾ /57
ಅರಿವೆ ಹೇಳುವರೆಲ್ಲರೂ ಮರವೆಯಲ್ಲಿ ಬಿದ್ದು ಮೂರೆಲೆ ಹಿಡಿದರಲ್ಲಾ.
ಅದು ಬಾಯಿಗೆ ಪಸಲೆ, ಕೈಗೆ ಕಳಂಕ, ಜ್ಞಾನಕ್ಕೆ ದೈವ.
ಇದ ಭಾವಿಸುವರಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ? /58
ಅರಿವ ಹೇಳುವ ಹಿರಿಯರೆಲ್ಲರೂ
ಕುರುಹಿನ ಶಿಲೆಯ ಕೈಯಲ್ಲಿ ಹಿಡಿದು,
ನರಗುರಿಗಳ ಕುರುಹಿನ ಬಾಗಿನಲ್ಲಿ ನಿಂದು,
ಮೊರೆಯಿಡುತ್ತಿರ್ಪ[ರು].
ಈ ಅರಿಗುರಿಗಳ ಮೆಚ್ಚ, ನಿ:ಕಳಂಕ ಮಲ್ಲಿಕಾರ್ಜುನ/59
ಅರುದರುಶನದೊಡೆಯನ ಅಂತರಂಗದೊಳಿಪ್ಪ
ಅರಿಗಾದಡೆ[ಯೂ] ಗಗನ ಭುವನವೊಂದೆ ಎಂದುದಾಗಿ,
ಮಹಾಬಯಲು ಕಡಿದು ಎರಡ ಮಾಡಿಹೆನೆಂದು, ಆ ಬಯಲು ಎರಡಹುದೆ?
ಅಣುರೇಣು [ತೃಣಕಾಷ್ಠ] ಮಧ್ಯ ಗುಣಭರಿತ ಅಖಂಡ ಬ್ರಹ್ಮವ
ಪ್ರಾದೇಶಿಕ ಪರಿಚ್ಛಿನ್ನವೆಂದು ನುಡಿಯಲುಂಟೆ
ನಿಃಕಳಂಕ ಮಲ್ಲಿಕಾರ್ಜುನಾ?/60
ಅರುವಿಂಗೆ ಅರ್ಚನೆ ಒಳಗು.
ಅರ್ಚನೆಗೆ ಎಚ್ಚರೆ ನಿತ್ಯಕ್ಕೊಳಗು.
ನಿತ್ಯತ್ವ ನಿಂದರೆ ಬಚ್ಚಬರಿಯ ಬಯಲು,
ನಿಃಕಳಂಕ ಮಲ್ಲಿಕಾರ್ಜುನಾ /61
ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು,
ಬೇಡಲೇಕೆ ಭಿಕ್ಷವ? ಕಾಡಲೇಕೆ ಮರ್ತ್ಯರ?
ರೂಢಿಯೊಳಗೆ ಸಿಕ್ಕಿ ಅಡುವಂಗೆ, ಆ ರೂಢಿ ಬೇಡಾ ಎಂದೆ,
ನಿಃಕಳಂಕ ಮಲ್ಲಿಕಾರ್ಜುನಾ./62
ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು.
ಪೂಜನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು.
ಇಂತೀ ಉಭಯದೊಳಗಾದ ಅಷ್ಟವಿಧಾರ್ಚನೆ,
ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು,
ಇಲ್ಲ, ಇಂತೀ ನೇಮ ಹುಸಿ, ನಿಲ್ಲು.
ಇಂತೀ ನೇಮಕ್ಕೆ ಒಳಗಾದಡೆ, ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥ,
ತನಗೆ ದೃಷ್ಟದಲ್ಲಿ ಆದುದಿಲ್ಲ.
[ಇಹ]ದಲ್ಲಿ ಕಾಣದೆ, ಪರದಲ್ಲಿ ಕಂಡೆನೆಂಬುದು, ಹುಸಿ, ಸಾಕು ನಿಲ್ಲು.
ಕುರುಹಿನಿಂದ ಕಾಬಡೆ, ತನ್ನಿಂದಲೋ, ಕುರುಹಿನಿಂದಲೋ ?
ಅರಿವಿನಿಂದಲೋ, ಕುರುಹಿನಿಂದಲೋ ?
ಕುರುಹಿನಿಂದಲರಿದೆಹೆನೆಂದಡೆ, ಆ ಅರಿವಿನಿಂದ ಬೇರೊಂದು ಕಂಡೆಹೆನೆಂದಡೆ,
ಕಾಣಿಸಿಕೊಂಡುದು ನೀನೋ, ನಾನೋ ?
ಇಂತುಭಯವೇನೆಂದರಿಯದಿಪ್ಪುದೆ
ಬೆಳಗಿನ ಕಳೆಯ ಕಾಂತಿಯೊಳಗಣ ನಿಶ್ಚಯ ತಾನಾದ ಮತ್ತೆ
ಏನೂ ಎನಲಿಲ್ಲ, ಅದು ತಾನೇ.
ಅದು ತಾ[ನೇನೂ] ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./63
ಅರ್ಚನೆಯ ಮಾಡುವಲ್ಲಿ, ಮಚ್ಚಿ ಬಯಸಲಾಗದು ಇಷ್ಟಾರ್ಥವ.
ಲೋಕದ ಪೂಜೆಯ ಮಾಡುವಲ್ಲಿ, ಪುಣ್ಯಲೋಕವ ಮಚ್ಚಲಾಗದು.
ಇಂತೀ ಗುಣವಿರಹಿತನಾಗಿ, ಚತುರ್ವೆಧಫಲ ಹೊರತೆಯಾಗಿ,
ನಿತ್ಯನೇಮವೆಂಬ ಮಾಡುವ ಭಕ್ತವಿದಂಗೆ ಮಾಡಿಯೂ ಮಾಡದಿರ್ದಡೇನು
ದಗ್ಧಪಟದಂತೆ, ನಿಃಕಳಂಕ ಮಲ್ಲಿಕಾರ್ಜುನಾ./64
ಅರ್ಚನೆಯಲರ್ಚಿಸಿದಲ್ಲಿ ಪುಣ್ಯದ ಫಲ, [ಭಕ್ತಿ].
[ಈ] ದ್ರವ್ಯವ ಕೊಡುವುದು ಮುಕ್ತಿಲೋಕದೊಳಗು.
ಈ ಉಭಯದ ಭಿತ್ತಿಯನರಿದು ನಿತ್ಯವ ತಿಳಿದವಂಗೆ
ಏನೂ ಎನಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./65
ಅರ್ಪಿತ ಭಿನ್ನವ ಮಾಡಬಹುದೆ ಅಯ್ಯಾ ?
ಸರ್ಪ ದಷ್ಟವಾದಲ್ಲಿ ಕಚ್ಚಿದ ಠಾವಿನಲ್ಲಿರ್ಪುದೆ ವಿಷ ?
ತನುವಿನ ದರ್ಪವ ಮುರಿವುದಲ್ಲದೆ,
ಸಿಲುಕುವುದೆ ಒಂದು ಠಾವಿನಲ್ಲಿ ?
ಭಕ್ತಿ ಜ್ಞಾನ ವೈರಾಗ್ಯ[ವೆಂಬ] ಮೂರರ ತೊಟ್ಟುಬಿಟ್ಟ ಶರಣಂಗೆ
ಅರ್ಪಿತವೆರಡಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./66
ಅಲ್ಲಿಗೆ ಮರ್ಕಟನಂತಾಗದೆ, ಇಲ್ಲಿಗೆ ವಿಹಂಗನಂತಾಗದೆ.
ಈಚೆಯಲ್ಲಿಗೆ ಪಿಪೀಲಿಕನಂತಾಗದೆ,
ರಾಜಸ ತಾಮಸ ಸಾತ್ವಿಕದಲ್ಲಿ ಸಾಯದೆ,
ಭಾಗೀರಥಿಯಂತೆ ಹೆಚ್ಚು ಕುಂದಿಲ್ಲದೆ,
ಮಾಸದ ಚಂದ್ರನಂತೆ, ಕಲೆಯಿಲ್ಲದ ಮೌಕ್ತಿಕದಂತೆ,
ರಜವಿಲ್ಲದ ರತ್ನದಂತೆ, ತೆರೆದೋರದ ಅಂಬುಧಿಯಂತೆ,
ಒಡಲಳಿದವಂಗೆ, ನೆರೆ ಅರಿದವಂಗೆ,
ಕುರುಹೆಂಬುದು ಆತ್ಮನಲ್ಲಿ ಘಟಿಸಿದವಂಗೆ ಬೇರೊಂದೆಡೆಯಿಲ್ಲ.
ಆ ಗುಣವಡಗಿದಲ್ಲಿ ಪ್ರಾಣಲಿಂಗಸಂಬಂಧ.
ಆ ಸಂಬಂಧ ಸಮಯ ಸ್ವಸ್ಥವಾದಲ್ಲಿ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./67
ಅಷ್ಟ [ಕು] ಲ ದಿಗ್ದೇಶವನೆಲ್ಲವನು,
ತತ್ತಿಯೊಳಗಣ ತುಪ್ಪುಳು ನುಂಗಿತ್ತು.
ತುಪ್ಪುಳ ಬಲಿದು ಮತ್ತೆ ಹಾರಲಾಗಿ,
ಮತ್ತಾ ತತ್ತಿಯ ನುಂಗಿತ್ತು.
ಮಹಾಹಕ್ಕಿಯ ತುಪ್ಪುಳ, ತತ್ತಿಯ ಚಿತ್ತು ನುಂಗಿತ್ತು.
ನುಂಗಿದ ಚಿತ್ತುವ ಅಭಂಗ ಕೊಂಡಿತ್ತು.
ಅದಕ್ಕೆ ಸಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ./68
ಅಷ್ಟತನುಮೂರ್ತಿ ಕೂಡಿ ನಿಂದು, ವಸ್ತುವನರಿಯಬೇಕೆಂದು,
ತತ್ವ ಇಪ್ಪತ್ತೈದು ಕೂಡಿ ನಿಂದು, ವಸ್ತುವನರಿಯಬೇಕೆಂಬುದು,
ಶತ ಏಕವನರಸಿ ಒಂದುಗೂಡಿ ವಸ್ತುವನರಿಯಬೇಕೆಂಬುದು,
ತಾಪತ್ರಯವಾರು, ತನುತ್ರಯ ಮೂರು,
ದಶವಾಯುವಿನಲ್ಲಿ ಸೂಸುವ ಆತ್ಮನ ಮುಕ್ತವ ಮಾಡಿ
ವಸ್ತುವನರಿಯಬೇಕೆಂಬುದು,
ಅಷ್ಟಮದಂಗಳ ಹಿಟ್ಟುಗುಟ್ಟಿ, ವಸ್ತುವ ಕಾಣಬೇಕೆಂಬುದು,
ಷಟ್ಸ್ಥಲವನಾಚರಿಸಿ ನಿಂದು ವಸ್ತುವ ಒಡಗೂಡಿ ಅರಿಯಬೇಕೆಂಬುದು,
ಬ್ರಹ್ಮನ ಉತ್ಪತ್ಯಕ್ಕೆ ಹುಟ್ಟದೆ, ವಿಷ್ಣುವಿನ ಸ್ಥಿತಿಗೊಳಗಾಗದೆ,
ರುದ್ರನ ಲಯಕ್ಕೆ ಸಿಕ್ಕದೆ,
ನಿಜದಲ್ಲಿ ನಿಂದು ವಸ್ತುವನರಿಯಬೇಕೆಂಬುದು ಅದೇನು ಹೇಳಾ?
ಆ ಗುಣ ಸ್ವಾದೋದಕ ಮೇಘದಲ್ಲಿ ಏರಿ ಧರೆಗೆಯ್ದಿದಂತೆ,
ಆ ಅಪ್ಪುವಿನಿಂದ ತರು, ಸಸಿ ಸಕಲಜೀವಂಗಳಿಗೆ
ಸುಖವನೆಯ್ದಿಸುವಂತೆ,
ಎಂಬುದನರಿದು ವರ್ತನಕ್ಕೆ ಕ್ರೀ, ಕ್ರೀಗೆ ನಾನಾ ಭೇದ,
ನಾನಾ ಭೇದಕ್ಕೆ ವಿಶ್ವಮಯ ಸ್ಥಲಂಗಳಾಗಿ,
ಸ್ಥಲ ಏಕೀಕರಿಸಿ ನಿಂದುದು ಮಹಾಜ್ಞಾನ.
ಆ ಮಹಾಜ್ಞಾನವನೇಕೀಕರಿಸಿ ನಿಂದುದು ದಿವ್ಯಜ್ಞಾನ.
ಆ ಜ್ಞಾನ ಸುಳುಹುದೋರದೆ ನಿಂದುದು ಪ್ರಾಣಲಿಂಗಿಯ ಭಾವ.
ಆ ಭಾವ ನಿರ್ಭಾವವಾದುದು ಐಕ್ಯಾನುಭಾವ.
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಸಂದನಳಿದು ನಿಂದ ನಿಜ./69
ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ
ಷಟ್ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ.
ಆ ಜಂಗಮದ ಪಾದೋದಕ ಪ್ರಸಾದವ ಕೊಂಬ
ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ,
ಸಂಗದಲ್ಲಿ ನುಡಿದಂತೆ, ಕುಂಭಿನಿಪಾತಕ.
ಅವರನು ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ
ಪಂಚಾಚಾರಕ್ಕೆ ಹೊರಗು.
ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ.
ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ/70
ಅಸಿಯಾಗಲಿ ಮಸಿಯಾಗಲಿ ಕೃಷಿಯಾಗಲಿ
ವಾಣಿಜ್ಯ ಮುಂತಾದ ಕೃಷಿಯ ಮಾಡುವಲ್ಲಿ,
ಪಶುಪತಿಗೆಂದೇ ಪ್ರಮಾಣಿಸಿ ಭಕ್ತಿಯೆಸಕದಿಂದ,
ಹಸಿವಿಲ್ಲದೆ ತೃಷೆಯಿಲ್ಲದೆ ವಿಷಯವನರಿಯದೆ,
ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದ ಮಾಡುತಿರ್ಪ ಭಕ್ತನ ಅಂಗಣವೆ ವಾರಣಾಸಿ,
ಆತನ ಆಶ್ರಯವೆ [ಅ] ವಿಮುಕ್ತ ಕ್ಷೇತ್ರ, ಆತನ ಮುಖವೆ ಮೋಕ್ಷದಾಗರ.
ಆತನಂಗವೆ [ಲಿಂ]ಗದ ಬೆಳಗು, ಆತನ ಪಾದವೆ ಪವಿತ್ರ ಸುಧೆ.
ಹೀಂಗೆ ತ್ರಿಕರಣ ಶುದ್ಧಾತ್ಮ ಭಕ್ತನಂತೆ
ಒಕ್ಕುದ ಕಾಯ್ದುಕೊಂಡಿರ್ಪ ಕುಕ್ಕು [ಟ] ನಂತೆ ಮಾಡಾ.
ಎನಗಿದೇ ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ./71
ಅಹುದಹುದು, ಮಹಾಂತಿನ ಮನ ಎಲ್ಲರಿಗೆಲ್ಲಿಯದೊ?
ಆ ಚಿದ್ರೂಪ ಚಿನ್ಮಯನ ಅನುವನರಿಯದೆ,
ಮಹಾಂತಿನ ಕೂಡಲಸಂಗದೇವರೆಂಬ ಮೂಕೊರೆಯರನೇನೆಂಬೆಯ್ಯಾ?
ಹಾಗದಾಸೆಗೆ ಶಿಲೆಯ ಮಾರುವ ಕಲ್ಲುಕಟಿಗರ, ದಾಯಾದ್ಯರ,
ಮಹಾಂತಿನ ಕೂಡಲದೇವರೆನಬಹುದೆ?
ವೀರಶೈವದ ನಿರ್ಣಯವ ತಿಳಿಯರು.
ಭಕ್ತಿ ಜ್ಞಾನ ವೈರಾಗ್ಯದ ಆಚಾರದ ಅನುಭಾವದ ಅನುವನರಿಯರು.
ಅರುಸ್ಥಲದಂತಸ್ಥವನರಿಯರು.
ಮೂರುಸ್ಥಲದ ಮೂಲವ ಮುನ್ನವರಿಯರು.
ಭಕ್ತಿಗೆ ಆರಕ್ಷರದ ಆದ್ಯಂತವನರಿಯದ ಮಂದಮತಿಗಳ
ಮಹಾಂತಿನ ಕೂಡಲದೇವರೆಂದು ನುಡಿವ ನರಕಿಜೀವಿಗಳ
ಮುಖವ ನೋಡಲಾಗದಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ. /72
ಅಳಿವರಿಗೆ ಉಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ.
ಉಳಿವರಿಗೆ ಅಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ.
ಈ ಅಳಿವು ಉಳಿವು ಎಂಬುಭಯವನೇನೆಂಬುದ ತಿಳಿ.
ತಿಳಿದ ಮತ್ತೆ ನಿಃಕಳಂಕ ಮಲ್ಲಿಕಾರ್ಜುನ ಏನೂ ಇಲ್ಲವೆಂಬುದ ತಿಳಿ./73
ಆ ಖಂಡವ ಕೊಯ್ದು ಉಂಡವ ಭಕ್ತ, ಕೊಂಡವ ಮಾಹೇಶ್ವರ.
ಕೊಂಡವನ ಕೊಂದು, ಖಂಡವ ಕೊಯ್ದವ ಪ್ರಸಾದಿ.
ಅದರ ಸಂದ ಮುರಿದವ ಪ್ರಾಣಲಿಂಗಿ.
ಆನಂದಿಸಿದವನ ಕೊಂದು ಹಿಂಡೆಯ ಕೂಳನುಂಡವ ಶರಣೈಕ್ಯ.
ಇದರಂದದ ಐಕ್ಯವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./74
ಆ ಮಹಾಂತಿನ ಘನವೆಂತೆಂದಡೆ, ಹೇಳಿಹೆ ಕೇಳಿರಣ್ಣಾ.
ನಿರ್ಮಾಯ ನಿಶ್ಚಿಂತ ನಿರ್ಗಮನ ನಿರುಪಮ ನಿರ್ಮೋಹಿ
ನಿರ್ಲೇಪ ನಿಃಕಳಂಕ ನಿರ್ದೇಹಿ ನಿರಂಜನ ಪರಶಿವನು.
ಅಂತಪ್ಪ ಶಿವನ ಕೂಡಿದಾತನೆಂತಿಹನೆಂದಡೆ,
ನಡೆವುದು ಶಿವಮಾರ್ಗ, ನುಡಿವುದು ಶಿವಾನುಭಾವ.
ಮಹಾನುಭಾವಿಗಳ ಸಂಭಾಷಣೆ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಶಿವಮಂತ್ರದೊಡನೆ ಕೂಡಿದ ಮಹಾತ್ಮನೆ
ಮಹಾಂತಿನ ಕೂಡಲದೇವರೆಂಬೆನಯ್ಯಾ.
ಉಳಿದ ಪಶು ಪ್ರಾಣಿಗಳ ಹುಸಿಯೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ./75
ಆ ಲಿಂಗಸ್ಥಲ ಭಾವ[ಸ್ವ]ರೂಪವಾದಲ್ಲಿ,
ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧವ ತಾಳ್ದು, ಮೂರ್ತಿ ಕುರುಹುಗೊಂಬಲ್ಲಿ,
ನಾನಾ ಮಧುರ[ರ] ಸದಂಡ ವೃಕ್ಷಂಗಳಲ್ಲಿ, ಮಿಕ್ಕಾದ ಲತೆ ಪಚ್ಚೆ ಪೈರುಗಳಲ್ಲಿ,
ಕುಸುಮ ಗಂಧ ಮೃಗಗಂಧಗಳು ಮುಂತಾದ
ಸ್ಥಾವರ ಸುಗಂದ ಸುವಾಸನೆಗಳಿಗೆಲ್ಲಕ್ಕೂ
ತದ್ರೂಪಿಂಗೆ ಹಿಂಗದಂತೆ ಬಂದೊದಗಿ, ಸಂಗದಂತೆ ಕುರುಹುಗೊಂಡೆಯಲ್ಲಾ.
ಕಾಯದ ಜೀವದ ಉಭಯದ ಮಧ್ಯದಲ್ಲಿ ನಿಂದು,
ದೇವಾನಾದೆಯಲ್ಲಾ ನಿನ್ನ ಲೀಲೆ ಕಾರಣವಾಗಿ.
ಸಂದೇಹಿಗಳಿಗೆ ಸಂಕಲ್ಪಿಯಾಗಿ, ನಿರಂಗಿಗೆ ನಿರಾಲಂಬನಾಗಿ,
ಸಮ್ಯಕ್ಜ್ಞಾನ ಮುಕುರದಂತೆ ಸಂಬಂಧಿಸಿದೆಯಲ್ಲಾ.
ನಿರಂಗ ನಿಃಕಳಕ ಮಲ್ಲಿಕಾರ್ಜುನಾ, ನಿನ್ನಿರವ ನೀನೇ ಬಲ್ಲೆ./76
ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು,
ಬೆಂಕಿ ಸತ್ತ ಠಾವಿನಲ್ಲಿ ಸುಟ್ಟಿತ್ತು.
ಕೈಯಿಲ್ಲದ ಮೋಟ ಹಿಡಿ ಖಂಡವ ಕೊಯ್ದ.
ನಾಲಗೆಯಿಲ್ಲದೆ ಬಾಯಲ್ಲಿ ಮೆದ್ದು,
ಪರಿಣಾಮವಿಲ್ಲದ ಸಂತೋಷಿಯಾದನಯ್ಯಾ, ಆ ಶರಣ.
ಆತನ ಇರವು, ಇಹದಲ್ಲಿ ಅಜ್ಞಾನಿ, ಪರದಲ್ಲಿ ಸುಜ್ಞಾನಿ.
ಇಹಪರವೆಂಬ ಸಂದನಳಿದಲ್ಲದೆ ಲಿಂಗವಂತನಲ್ಲ.
ಲಿಂಗ ಪ್ರಾಣದ ಮೇಲೆ ನಿಂದುದಕ್ಕೆ ಸಾಕ್ಷಿ
ಉರಿ ಕೊಂಡ ಕರ್ಪುರದಂತೆ, ವಿಷ ಕೊಂಡ ಘಟದಂತೆ
ಘಟ ಕೊಂಡ ಸೂತ್ರದಂತೆ, ಶೌರ್ಯ ಕೊಂಡ ಪ್ರತಾಪದಂತೆ.
ಹಾಂಗಿರಬೇಕು ಮನ.
ಲಿಂಗ ಕೊಂಡ ಮನಕ್ಕೆ ಇದೇ ದೃಷ್ಟ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ವಾನುಭಾವಿಗೆ.
ಮೋಳಿಗೆ ಮಾರಯ್ಯ/77
ಆಕಾಶದಲಾಡುವ ಪಕ್ಷಿ ಆಕಾಶವ ನುಂಗಿ,
ಮಹದಾಕಾಶದಲ್ಲಿ ಆಡುತ್ತಿದ್ದಿತ್ತು.
ಆ ಆಡುವ ಪಕ್ಷಿಯ, ಪಕ್ಷಿಯೊಳಗಾದ ಆಕಾಶವ,
ಪಕ್ಷಿಗೆ ತೆರಪುಗೊಟ್ಟ ಮಹದಾಕಾಶವ,
ಒಂದು ಸಂಖ್ಯೆಯಲ್ಲಿ ಒಡಗೂಡಿ, ಷಡ್ಫಾಗವಾದ ಕುಕ್ಕುಟನ ಕೊರಳು ನುಂಗಿತ್ತು.
ನಿಃಕಳಂಕ ಮಲ್ಲಿಕಾರ್ಜುನಾ/78
ಆಕಾಶದಲ್ಲಿ ಗುಡಗಿ ಆಡಗುವ ಭೇದವ, ಮಿಂಚಿನ ಹರಿವ ಸಂಚಾರವ
ಅದರ ಸಂಚವನಂಜಿಸುವ ಭೇದವ ಮುಂಚೆ ಬಲ್ಲಡೆ,
ವಸ್ತುವಿಪ್ಪೆಡೆಯ ಸಂಚವ ಬಲ್ಲರೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ./79
ಆಗಮವನರಿದಲ್ಲಿ ಆಗುಚೇಗೆಯನಯಬೇಕು.
ಶಾಸ್ತ್ರವನರಿದಲ್ಲಿ ಸಾವನರಿಯಬೇಕು.
ಪುರಾಣವನರಿದಲ್ಲಿ ಪುಂಡರ ಸಂಗವ ಹರಿಯಬೇಕು.
ಇಂತಿವನರಿದ ಚಿತ್ತಶುದ್ಧಂಗಲ್ಲದೆ ಸನ್ಮತವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./80
ಆಚಾರ ಅನುಸರಣೆಯಾದಲ್ಲಿ, ಲಿಂಗ ಬಾಹ್ಯವಾದಲ್ಲಿ,
ತನ್ನ ವ್ರತ ನೇಮಕ್ಕೆ ಅನುಕೂಲವಾಗದೆ ಭಿನ್ನಭಾವಿಗಳಾದಲ್ಲಿ,
ಸತಿ ಸುತ ಪಿತ ಮಾತೆ ಸರ್ವಚೇತನ ಬಂಧುಗಳಾದಡೂ
ಗುರು ಲಿಂಗ ಜಂಗಮವಾದಡೂ ಒಪ್ಪೆನು.
ಇದಿರಿಂಗೆ ದೃಷ್ಟವ ತೋರಿ, ಪರಕ್ಕೆ ಕೊಂಡುಹೋದೆಹೆನೆಂದಡೂ
ಆ ಕೈಲಾಸ ಎನಗೆ ಬೇಡ.
ಆಚಾರಕ್ಕೆ ಅನುಸರಣೆಯಿಲ್ಲದೆ, ನೇಮಕ್ಕೆ ಕುಟಿಲವಿಲ್ಲದೆ ನಿಂದ
ಸದ್ಭಕ್ತನ ಬಾಗಿಲ, ಬಚ್ಚಲ ಕಲ್ಲೆ,
ಎನಗೆ ನಿಶ್ಚಯದ ಕೈಲಾಸ, ನಿಃಕಳಂಕ ಮಲ್ಲಿಕಾರ್ಜುನಾ/81
ಆಚಾರಗುರು, ಸಮಯಗುರು, ಜ್ಞಾನಗುರು.
ಆಚಾರಗುರು ಬ್ರಹ್ಮಕಲ್ಪವ ತೊಡೆಯಬೇಕು.
ಸಮಯಗುರು ವಿಷ್ಣುವಿನ ಸ್ಥಿತಿಯ ಹರಿಯಬೇಕು.
ಜ್ಞಾನಗುರು ಉತ್ಪತ್ಯಸ್ಥಿತಿಲಯ ಮೂರನೂ ಕಳೆಯಬೇಕು.
ಇಂತೀ ತ್ರಿವಿಧಗುರು ಏಕವಾದಲ್ಲಿ,
ಸದ್ಗುರು ಮದ್ಗುರು ಮಹಾಗುರವೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
ಮೋಳಿಗೆ ಮಾರಯ್ಯ/82
ಆಡುವ ಆಟವು ತಪ್ಪಿದ ಮತ್ತೆ
ಆಟದವನ ಮನಸ್ಸಿಂಗೆ ಕಿಂಕಿಲದೋರಿ, ಮತ್ತೆ ಓಡಬೇಕಲ್ಲದೆ,
ಅರಿದು ಮರೆದೆನೆಂಬ, ಮರೆದು ಮತ್ತರಿದೆನೆಂಬ
ಖುಲ್ಲರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ./83
ಆಡುವಂಗೆ ಅವಧಾನ ಆಭಾಸಾಂಗವಲ್ಲದೆ
ನೋಡುವಂಗೆ ಚೋದ್ಯವಪ್ಪಂತೆ, ಈ ಉಭಯವನೊಡಗೂಡಿದ ಭೇದವ ನೋಡಾ.
ಕೈಯಲ್ಲಿ ಅಡಗುವಾಗ ಕಲ್ಲಲ್ಲ.
ಮನದಲ್ಲಿ ಒಡಗೂಡಿ ಸುಳಿವಾಗ ಗಾಳಿಯಲ್ಲ. ಏನೂ ಎನ್ನದೆ ಇಹಾಗ ಬಯಲಲ್ಲ.
ಎಲ್ಲಿ ತನ್ನನರಿದಲ್ಲಿಯೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ./84
ಆತ್ಮ ತೇಜಕ್ಕೆ ಬೀಗಿ ಬೆರೆದು,
ಶಾಸ್ತ್ರದ ಸಂತೋಷಕ್ಕೆ ಸಾಧ್ಯವಾದಿಹಿತೆಂದು,
ವಚನದ ರಚನೆಗೆ ರಚಿಸಿದೆನೆಂದು,
ತರ್ಕಕ್ಕೆ ಹೊತ್ತು ಹೋರುವನ್ನಕ್ಕರ ಗುರುವೆಂತಾದಿರೊ?
ಘಟದ ಮಧ್ಯದಲ್ಲಿ ಪೂಜಿಸಿಕೊಂಬವನಾರೆಂದು ಅರಿಯದೆ,
ಫಲವ ಹೊತ್ತಿರ್ಪ ಮರನಂತೆ, ಕ್ಷೀರವ ಹೊತ್ತಿರ್ಪ ಕೆಚ್ಚಲಂತೆ,
ನಿನ್ನ ನೀನೆ ತಿಳಿದು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ./85
ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ ಕೆಟ್ಟ ಕೇಡ ನೋಡಾ.
ಅಂದಳ ಸತ್ತಿಗೆ ಕರಿ ತುರಗಂಗಳಿಂದ,
ನಾನಾ ಭೂಷಣ ಸುಗಂಧ ಸುಖದಿಂದ ಮೆಚ್ಚಿ ಪೂಜಿಸಿಕೊಂಬ ಹಿರಿಯರೆಲ್ಲರೂ
ಬೋಧನೆಯ ಹೇಳಿ ಬೋಧಿಸಿಕೊಂಡುಂಬ ಹಿರಿಯರುಗಳೆಲ್ಲರೂ
ಹಿರಿಯರಲ್ಲದೆ ಕಿರಿಯರಾದವರಾರೂ ಇಲ್ಲ.
ಇದುಕಾರಣ, ಅಂಧಕನ ಕೈಯ ಅಂಧಕ ಹಿಡಿದಂತೆ.
ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ?
ತನುಸುಖವ ಮೆಚ್ಚಿದ, ಗುರು ಮುಟ್ಟಿದ ಭಕ್ತಂಗೆ ನಿಶ್ಚಯ ಹೇಳಲಾಗಿ,
ಅವನಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?/86
ಆತ್ಮ ನನರಿದೆಹೆವೆಂದು ಭೀಷ್ಮಿಸಿಕೊಂಡಿಪ್ಪ
ಜಗದಾಟ ತ್ರಿವಿಧ ಕಾಟದ ನೀತಿವಂತರು ಕೇಳಿರೊ.
ಆತ್ಮನ ಇರವು ಶ್ವೇತವೋ, ಹರೀತವೋ, ಕಪೋತವೋ, ಮಾಂಜಿಷ್ಠವೋ?
ಕೃಷ್ಣಗೌರವ ಗಾತ್ರಕ್ಕೆ ಮೊದಲಾದ ಬಣ್ಣದ ವರ್ಣವೋ?
ಇವೇಕೊ? ಬಾಯಲ್ಲಿ ಆಡುವ ಮಾತಲ್ಲದೆ, ಭಾವಜ್ಞರನಾರನೂ ಕಾಣೆ.
ಆತ್ಮನ ಕಂಡವನ ಇರವು ಮುಕುರದೊಳಗಣ ಪ್ರತಿಬಿಂಬದಂತೆ,
ಶ್ರುತಿಯೊಳಗಡಗಿದ ಗತಿ ನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ.
ಇದರ ಎಸಕದ ಕುರುಹನರಿದವ ನೀನೋ, ಆತ್ಮನೋ?
ಇದನೇನೆಂದು ಅರಿಯೆ.
ಭಾವಭ್ರಮೆಗೆ ದೂರ ಜ್ಞಾನ ನಿರ್ಲೇಪ,
ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ./87
ಆತ್ಮ ಪೃಥ್ವಿಯ ಗುಣವೊ? ಅಪ್ಪುವಿನ ಗುಣವೊ?
ತೇಜದ ಗುಣವೊ? ವಾಯುವಿನ ಗುಣವೊ? ಆಕಾಶದ ಗುಣವೊ?
ತನ್ನ ಸ್ವಬುದ್ಧಿಯೊ? ಎಂಬುದ ತಿಳಿಯಬೇಕು,
ಆಧ್ಯಾತ್ಮವನರಿದೆಹೆನೆಂಬ ಲಿಂಗಾಂಗಿಗಳು.
ಅದು ಅಡಗಿ, ಉಡುಗಿಹ ಭೇದವನರಿದಡೆ,
ಅದೇ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ./88
ಆತ್ಮತೇಜವ ಬಿಟ್ಟಾಗವೆ ಗುರುವನರಿದವ.
ಮನವಿಕಾರವ ಬಿಟ್ಟಾಗವೆ ಲಿಂಗವನರಿದವ.
ಧನವಿಕಾರವ ಬಿಟ್ಟಾಗವೆ ಜಂಗಮವನರಿದವ.
ಇಂತೀ ತ್ರಿವಿಧ ನಾಸ್ತಿಯಾದಂಗಲ್ಲದೆ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸಹಜಭಕ್ತನಲ್ಲ./89
ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ
ಸ್ಥೂಲ ಸೂಕ್ಷ್ಮ ಕಾರಣ ಆದಿ ಮಧ್ಯಾವಸಾನಂಗಳಲ್ಲಿ
ಜಗದಲ್ಲಿ ಸಾಧಿಸುತ್ತಿರ್ದ ಬೋಧರುಗಳು ನೀವು ಕೇಳಿರೊ.
ಅಭ್ಯೇದ್ಯಲಿಂಗವ ಭೇದಿಸಿ ಸುಬುದ್ಧಿಯಿಂದ ಕಂಡ ಪರಿ ಇನ್ನೆಂತೊ?
ಮಾತಿನ ಮಾಲೆಯ ಕಲಿತು ಸಂತೆಯ ಹೋತಿನಂತೆ ಹೋರುವ
ತೂತಜ್ಞಾನಿಗಳಿಗಿನ್ನೇತರ ಭಕ್ತಿ ವಿರಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?/90
ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು
ಅದಾವ ಭಾವ? ತಿಳಿದು ಹೇಳಿರಣ್ಣಾ.
ಆದಿಯ ತಿಳಿವುದು ಅದಾವ ಆತ್ಮ?
ಮಧ್ಯವ ತಿಳಿವುದು ಆದಾವ ಆತ್ಮ?
ಅವಸಾನವ ತಿಳಿವುದು ಆದಾವ ಆತ್ಮ?
ಅದು ಅರುವೋ, ಮರವೆಯೋ?
ಕೆಂಡ ಕೆಟ್ಟಡೆ ಹೊತ್ತುವುದಲ್ಲದೆ,
ದೀಪ ನಂದಿದ ಕಿಡಿ ತುಷ ಮಾತ್ರಕ್ಕೆ ಹೊತ್ತಿದುದುಂಟೆ?
ಇಂತೀ ಆಧ್ಯಾತ್ಮವ ತಿಳಿದಲ್ಲಿ,
ಮೂರುಸ್ಥಲ ಮುಕ್ತ, ಉಭಯವಾರುಸ್ಥಲ ಭರಿತ.
ಮಿಕ್ಕಾದ ನೂರೊಂದೆಂದು ಗಾರಾಗಲೇತಕ್ಕೆ?
ಪೂರ್ವದಲ್ಲಿ ನಿಂದು, ಉತ್ತರದಲ್ಲಿ ಒಂದೆಂದು,
ಸಲೆ ಸಂದಲ್ಲಿ ನಾನಾ ಸ್ಥಲ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ./91
ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ?
ಅನಾಗತವನರಿದ ಮತ್ತೆ ಅನ್ಯಾಯದಲ್ಲಿ ನಡೆವ ಗನ್ನವೇಕೆ?
ಇಹಪರವೆಂಬುಭಯವನರಿದ ಮತ್ತೆ ಪರರ ಬೋಧಿಸಿ
ಹಿರಿಯನಾದೆಹೆನೆಂಬ ಹೊರೆಯೇತಕ್ಕೆ?
ಯೋಗಿಯಾದ ಮತ್ತೆ ರೋಗದಲ್ಲಿ ನೋಯಲೇತಕ್ಕೆ?
ಆದಿಮಧ್ಯಾಂತರವನರಿದ ಮತ್ತೆ ಸಾಯಸವೇಕೆ ಕರ್ಮದಲ್ಲಿ?
ಇಂತೀ ಭೇದಕರಿಗೆ ಅಭೇದ್ಯ, ಅಪ್ರಮಾಣ ಅಭಿನ್ನವಾದ ಶರಣಂಗೆ
ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ./92
ಆದಿಶೂನ್ಯಲಿಂಗಕ್ಕೆ ಮಜ್ಜನವಾವುದು?
ಕುಸುಮಭರಿತಲಿಂಗಕ್ಕೆ ಪೂಜೆ ಯಾವುದು?
ಪರಿಪೂರ್ಣ ಲಿಂಗಕ್ಕೆ ನೈವೇದ್ಯವಾವುದು?
ಅರ್ಪಿಸುವುದಕ್ಕೆ ಮುನ್ನವೆ ತೃಪ್ತಿಯಾದ ಮತ್ತೆ
ಮುಟ್ಟಿ ಕೂಡುವ ಠಾವಿನ್ನಾವುದೊ?
ಅಟ್ಟ ಮಡಕೆಯ ನೆತ್ತಿಯ ಮೇಲೆ ಹೊತ್ತು ತಿರುಗುವನಂತೆ,
ಹೊಟ್ಟೆಗೆ ಕಾಣದೆ ಇವರು ಕೆಟ್ಟ ಕೇಡ ನೋಡಿರೆ.
ಈ ಬಟ್ಟೆಯ ಮೆಟ್ಟದಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ./93
ಆದ್ಯರ ವಚನವ ನೋಡಿ,
ಓದಿ ಹೇಳಿದಲ್ಲಿ ಫಲವೇನಿ ಭೋ?
ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ.
ನುಡಿಯಲ್ಲಿ ಅದ್ವೈತವ ನುಡಿದು,
ನಡೆಯಲ್ಲಿ ಅದಮರಾದಡೆ,ಶಿವಶರಣರು ಮೆಚ್ಚುವರೆ?
ಇದು ಕಾರಣ, ಅವರ ನಡೆನುಡಿ ಶುದ್ಧವಿಲ್ಲವಾಗಿ,
ಅವರಿಗೆ ಗುರು ಲಿಂಗ ಜಂಗಮ
ಪಾದೋದಕ ಪ್ರಸಾದವಿಭೂತಿ ರುದ್ರಾಕ್ಷಿ ಪಂಚಮ ಪಂಚಾಕ್ಷರವಿಲ್ಲ.
ಇಂತಿವಿಲ್ಲದೆ ಬರಿಯಮಾತಿನಲ್ಲಿ ಬೊಮ್ಮವ ನುಡಿವ
ಬ್ರಹ್ಮೇತಿಕಾರರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ./94
ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ.
ತಲೆದೂಗಿ ಝಂಪಿಸಿ ಅಂತಃಕರಣ ಕದಡಿ ಆನಂದಿಸುವುದು ಭಾವಭಕ್ತಿ.
ಬಿಂಬಿಸುವುದಕ್ಕೆ ಪ್ರತಿರೂಪಿಲ್ಲದೆ ಆನಂದ ಅಶ್ರುಗಳು ನಿಂದು,
ಮುತ್ತಿನೊಳಗಣ ಅಪ್ಪುವಿನಂತೆ ಹೆಪ್ಪಳಿಯದೆ ನಿಂದುದು ಜ್ಞಾನಭಕ್ತಿ.
ಇಂತೀ ತುರೀಯಾತುರೀಯವು ಏಕಚಿತ್ತವೆಂಬುದು ನಿಹಿತವಾದಲ್ಲಿ,
ಸ್ಥಲಲೇಪ,ನಿಃಕಳಂಕ ಮಲ್ಲಿಕಾರ್ಜುನನಲ್ಲಿ./95
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ./96
ಆರೂಢನಾದ ಮತ್ತೆ, ರೂಢಿಯ ಅವತಾರವ ಹೊರಲೇಕೊ?
[ಕೋಡಗ] ಕಂಡಕಂಡವರಲ್ಲಿ ಹಿಂಡಿನೊಳಗೆ ಹೊಕ್ಕು,
ಬಂಡುಗೆಡೆಯಲೇತಕ್ಕೋ?
ಈ ಅಂದಗಾರ ಅಣ್ಣಗಳ ಕಂಡು ಭಂಡಾದಿರಯ್ಯಾ.
ಅರ್ತಿಗೆಯಾಡುವ ಸತ್ಯವಂತರಿಗಿನ್ನೆತ್ತಣ ಮುಕ್ತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ?/97
ಆವಾವ ವಸ್ತು ತನ್ನ ಸ್ಥಾನದಲ್ಲಿ ರಿತುಕಾಲ ತುಂಬುವನ್ನಕ್ಕ.
ಫಲ ಕುಸುಮ ಚಂದನ ಸುಗಂಧ ಮುಂತಾದ ಲೌಕಿಕ ರತ್ನಂಗಳು
ಕುಲಸ್ಥಾನವಂ ಬಿಟ್ಟು ಯೋಗ್ಯವಾದಂತೆ,
ಸ್ಥಲ ಬಂಧದಲ್ಲಿ ಬಲಿದು, ಕಳೆದುಳಿದ ಮತ್ತೆ
ಆರು ಮೂರು ಇಪ್ಪತ್ತೈದು ನೂರೊಂದು ಅವು ಕೂಡಿದವಲ್ಲ,
ನಿಃಕಳಂಕ ಮಲ್ಲಿಕಾರ್ಜುನನನಾರೆಂದರಿದಲ್ಲಿಯೆ./98
ಆವಾವ ವಿಶ್ವಾಸದಲ್ಲಿ, ಭಕ್ತಿಯ ಮಾಡುವಲ್ಲಿ,
ಸತಿ ಸುತ ಬಂಧುಗಳು ಮುಂತಾದ ಬಂಧಿತವಳಯವೆಲ್ಲವೂ
ಭಕ್ತಿಗೆ ಏಕರೂಪವಾಗಿ, ಸತ್ಯಕ್ಕೆ ನಿಜರೂಪಾಗಿ.
ಕೃತ್ಯಕ್ಕೆ ತಪ್ಪುವರಲ್ಲದೆ, ವಸ್ತು ಭಾವದಲ್ಲಿ ತಪ್ಪದೆ ಇದ್ದಾತನ ಭಕ್ತಿ,
ನಿಃಕಳಂಕ ಮಲ್ಲಿಕಾರ್ಜುನನ ನಿಶ್ಚಯದ ನಿಜನಿವಾಸ. /99
ಆವಾವ ಸ್ಥಲಂಗಳನಾದರಿಸಿ ನಡೆವಲ್ಲಿ,
ಆ ಘಟನೆ ಬೀಗವಾಗಿ ಎಸಳೆ ಆತ್ಮವಾಗಿ, ಅರಿವೆ ಕೈಯಾಗಿ,
ಸ್ವಸ್ಥ ಘಟಕ್ಕೆ, ಸ್ವಸ್ಥ ಕೈಗಳಿಂದ ಸಿಕ್ಕು ಹರಿವುದಲ್ಲದೆ,
ಮತ್ತೊಂದು ಕೈಯಿಕ್ಕಿ ತುಡುಕಿದಡೆ ಬಿಟ್ಟುದುಂಟೆ ಆ ಸಿಕ್ಕು?
ಇಂತೀ ಕ್ರೀಯಲ್ಲಿ ಕ್ರೀಯ ಕಂಡು, ಭಾವದಲ್ಲಿ ಭ್ರಮೆ ಹಿಂಗಿ,
ಜ್ಞಾನದಲ್ಲಿ ಸಂಚವಿಲ್ಲದೆ ನಿಂದ ನಿಲವು,
ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ./100
ಆಳಿನಪಮಾನ ಆಳ್ದಂಗೆಂದಲ್ಲಿ,
ಆಳ್ದನಪಮಾನ ಆಳಿಂಗೆ ಬಂದಲ್ಲಿ,
ಉಭಯದ ನೋವು ಒಂದೆಂದು ತಿಳಿದಲ್ಲಿ,
ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ?
ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ?
ನಾನೊಡೆಯ, ತುಡುಗುಣಿಯ ಸವಿತ. [ಅವ]ನೊಡೆಯನಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./101
ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ,
ಅವಧಿಗೆ ಬಂದಲ್ಲಿ ಒದಗಬೇಕಲ್ಲದೆ,
ಬಯಲ ಚಿಪ್ಪಿರಿದು ಬೆಲ್ಲವ ಮೆದ್ದೆನೆಂದಡೆ ಮೆಚ್ಚುವರೆ?
ಗೆಲ್ಲದ ಜೂಜು, ಕೊಲ್ಲದ ಅರಿಗಳ ಬಲ್ಲವರು ಮೆಚ್ಚುವರೆ?
ಸೊಲ್ಲಿನ ಮಾತಿಂಗೆ ನೆರೆ ಬಲ್ಲವರು ಸಿಕ್ಕುವಡೆ, ಗೆಲ್ಲ ಗೂಳಿತನವೆ?
ಬರಿಯ ಚೀರದ ಪಸರಕ್ಕೆ ಲಲ್ಲೆಯ ಮಾತೇ
ಒಳ್ಳಿಹ ನಿಃಕಳಂಕ ಮಲ್ಲಿಕಾರ್ಜುನನ ಸಂಗ. /102
ಇಂತೀ ಗುರುಸ್ಥಲವ ಲಿಂಗಸ್ಥಲವ, ಅಂಗೀಕರಿಸಿ ನಿಂದ ಶರಣನ ಇರವು
ವಾಯುವಿನ ಕೈಯ ಗಂಧದಂತೆ,
ಸಾವಯ ನಿರವಯವೆ ಭೇದಿಸುವ ಸುನಾದದಂತೆ,
ಅದ್ರಿಯ ಮುಸುಕಿದ ಮುಗಿಲ ರಂಜನೆಯ ಸಂದೇಹದ ನಿರಂಜನದಂತೆ,
ಅಂಬುಧಿಯ ಚಂದ್ರನ ಪೂರ್ಣದ ಬೆಂಬಳಿಯಂತೆ.
ಇಂತೀ ನಿಸ್ಸಂಗದಲ್ಲಿ ಸುಸಂಗಿಯಾದ ಐಕ್ಯಂಗೆ,
ಬಂಧ ಮೋಕ್ಷ ಕರ್ಮಂಗಳೆಂದು ಸಂದೇಹವಿಲ್ಲ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ./103
ಇಂದ್ರಿಯಂಗಳ ಕಟ್ಟಿ ವಸ್ತುವನರಿಯದೆಹೆನೆಂದಡೆ, ಕರೆವ ಹಸುವಲ್ಲ.
ಇಂದ್ರಿಯಂಗಳ ಬಿಟ್ಟು ವಸ್ತುವನರಿದೆಹೆನೆಂದಡೆ, ಬಿಡಾಡಿಯಲ್ಲ.
ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು,
ಆ ಸಂಧಿಯ ಬೆಸುಗೆಯಲ್ಲಿ ನಿಂದಿರ್ಪವನ ಅಂದವ ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ./104
ಇಕ್ಕುವುದಕ್ಕೆ ಮುನ್ನವೆ ಬಾಯಾರಿ,
ಕೊಡುವುದಕ್ಕೆ ಮುನ್ನವೆ ಕೈಯಾಂತು ಮತ್ತೇಕೆ?
ಮಾತಿನ ಮಾಲೆಯ ತೂತರುಗಳ ಕಂಡು,
ನಿರ್ಜಾತನಡಗಿದ, ನಿಃಕಳಂಕ ಮಲ್ಲಿಕಾರ್ಜುನಾ./105
ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ,
ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ.
ಆ ವಾಯುವನಧೋಮುಖಕ್ಕೆ ತರಬಾರದೆಂದು,
ಊಧ್ರ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ
ಅಷ್ಟಾಂಗಕರ್ಮಿಗಳು ಕೇಳಿರೊ.
ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ
ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ?
ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ?
ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ?
ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ?
ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ
ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ?
ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ?
ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ?
ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ,
ಕಂಡೆಹೆನೆಂಬ ಭ್ರಾಂತೆಲ್ಲಿಯದೊ?
ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ
ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ
ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ
ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ
ಕೆಟ್ಟರಲ್ಲ ಕರ್ಮಯೋಗಿಗಳು.
ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ./106
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು.
ಇಲ್ಲದುದ ಇದ್ದುದೆಂದು ನೋಡಲಿಕಾಗಿ,
ಇದ್ದಲ್ಲಿಯೆ ತಲ್ಲೀಯವಾಯಿತ್ತು
ಇಂತು ಉಭಯವ ಕಡೆಗಾಣಿಸಲಾಗಿ,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು./107
ಇನ್ನು ಕೇಳಿ ಅರಿದೆಹೆನೆಂಬಾಗ ಮುಂದಕ್ಕೆ ಮರವೆಯೆ?
ಮುಂದನರಿದು ಹಿಂದೆ ಮರೆವಾಗ ಭೂತಕಾಯವೆ?
ಹಿಂದಕ್ಕೂ ಮುಂದಕ್ಕೂ ಈ ದ್ವಂದ್ವ ಭೇದವ,
ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./108
ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ?
ಹಿರಿದಹ ಗಿರಿಯ ಹತ್ತಿ, ಬಿದಿರೆಲೆಯ ತರಿದ[ವ]ನಂತೆ,
ಒಂದ ಬಿಟ್ಟೊಂದ ಹಿಡಿದಡೆ ಅದೆಲ್ಲಿಯ ಚಂದ?
ಹಿಂಗುವುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./109
ಇರಿ ಎಂಬುದಕ್ಕೆ ಮುನ್ನವೆ ಒಡಲು ಹರಿಯಿತ್ತೆ?
ಮಾತನಾಡುವುದಕ್ಕೆ ಮುನ್ನವೆ ಮನ ಸಂದಿತ್ತೆ?
ಕಲ್ಪತರುವಿನ ನಾಮವ ಹಡೆದ ದುತ್ತೂರದಂತೆ,
ಭಕ್ತ ವಿರಕ್ತರೆಂದಡೆ ಸತ್ಯರಪ್ಪರೆ?
ಅದು ನಿಶ್ಚಯವಲ್ಲ, ನಿಃಕಳಂಕ ಮಲ್ಲಿಕಾರ್ಜುನೊಪ್ಪದ ಮಾತು./110
ಇರಿವ ಅಸಿ, ನೋವ ಬಲ್ಲುದೆ?
ಬೇಡುವಾತ ರುಜವ ಬಲ್ಲನೆ?
ಕಾಡುವ ಕಾಳುಮೂಳರ ವಿಧಿ ಎನಗಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./111
ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು.
ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು.
ಕಚ್ಚಿದ ವಿಷ ತಾಗಿ ಮತ್ತನಾಗಿ ಬಿದ್ದಿತ್ತು.
ನಾಗಾಲಡಿಯಾಗಿ ಆನೆಯದೆ
ತಾನುಳಿದ ಪರಿಯ ನೋಡಾ,
ಈ ವಸ್ತುವನ್ನೇಂಬೆ, ನಿಃಕಳಂಕ ಮಲ್ಲಿಕಾರ್ಜುನಾ./112
ಇಷ್ಟಲಿಂಗ ನಿದ್ರೆಯಲ್ಲಿ ಸೃಷ್ಟಿಯ ಮೇಲೆ ಬಿದ್ದು ಹೊರಳುವಾಗ,
ನಿಷ್ಠಾವಂತರೆಂತಾದಿರೊ?
ಅದು ನಿಮಗೆ ಇಷ್ಟಲಿಂಗವೊ, ಪ್ರಾಣಲಿಂಗವೊ?
ಕಟ್ಟಿದವನ ಕೈಯ ಕೇಳಿಕೊಳ್ಳಿ.
ಹೀಂಗಲ್ಲದೆ, ಬಟ್ಟಗುತ್ತತನಕ್ಕೆ ಹೋರುವ ಭ್ರಷ್ಟಭಂಡರನೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ./113
ಇಷ್ಟಲಿಂಗಕ್ಕವಿರ್ತದ ಭಾಜನದೆಂದು,
ತುತ್ತ ನುಂಗವುದಕ್ಕೊಂದು ಮಿಥ್ಯದ ಭಾಜನದೆಂದು,
ಈ ಅಚ್ಚುಗದಲ್ಲಿ ಬಿದ್ದು ಸಾವರಿಗೆತ್ತಣ ಲಿಂಗಾರ್ಪಿತ?
ಮಜ್ಜನ ಮಲಿನ ಹೊದ್ದಿಹ ಸುಖ ಶೃಂಗಾರ, ಇವರೊಳಗೆ ವರ್ಜಿತವೆಂದ.
ಲಿಂಗಕ್ಕೊಂದು ಹಂಗು, ತಾನುಂಬದಕ್ಕೆ ಒಂದು ಹಂಗು,
ಇದರಂದವನರಿಯದೆ ಬೆಳದಿಂಗಳಲ್ಲಿ ನಿಂದು, ಹೆಂಡವ ಕೊಂಡವನಂತೆ
ಲಿಂಗದ ಸಂದನೇನ ಬಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./114
ಇಷ್ಟಲಿಂಗದಂಗ ಭಕ್ತಿಸ್ಥಲ, ಭಾವಲಿಂಗದಂಗ ಮಹೇಶ್ವರಸ್ಥಲ,
ಪ್ರಾಣಲಿಂಗದಂಗ ಪ್ರಸಾದಿಸ್ಥಲ, ಶರಣಸ್ಥಲದಂಗ ಐಕ್ಯಸ್ಥಲ.
ಐಕ್ಯಸ್ಥಲದಂಗ ಅಭೇದ್ಯಸ್ಥಲದಂಗ.
ಇಂತೀ ಉಭಯವಳಿದ ನಿರಂಗಂಗೆ ಸ್ಥಲ ಕುಳ ಲೇಪವಾಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ./115
ಇಷ್ಟಲಿಂಗದಲ್ಲಿ ಮುಟ್ಟುತಟ್ಟು ಬಲ್ಲವಂಗೆ
ಕಷ್ಟನಿದ್ರೆರೆಯ ಮುಟ್ಟುವ ಭೇದವ, ತಟ್ಟುವ ಪರಿಯಿನ್ನೆಂತುಟೋ?
ಇಂತಿವರು ಮುಟ್ಟರು, ಅರಿಯರು, ನಿಶ್ಚಯದ ನಿಜ ಏಕತ್ವವನರಿಯರು.
ಇವರಿಷ್ಟಲಿಂಗವ ಮುಟ್ಟಿ ಪೂಜಿಸಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ?/116
ಇಷ್ಟಲಿಂಗವ ಹಿಡಿದು ಪೂಜೆಯ ಮಾಡುವಲ್ಲಿ,
ಕಷ್ಟಗುಣಕ್ಕೆ ಬಾರದಿರಬೇಕು.
ಪ್ರಾಣಲಿಂಗವನರಿದು ಭಾವಿಸಿದಲ್ಲಿ,
ಜಾಗ್ರ ಸ್ವಪ್ನ ಸುಷುಪ್ತಿ ವಿಪತ್ತಿ ಲಯಕ್ಕೊಳಗಾಗದಿರಬೇಕು.
ಹೀಂಗೆ ಉಭಯವನರಿದು ದಗ್ಧವಾದಂಬರದಂತೆ,
ವಾರಿಯ ಕೂಡಿದ ಕ್ಷೀರದಂತೆ,
ಭಾವಕ್ಕೆ ಭ್ರಮೆಯಿಲ್ಲದೆ, ಸಾಕಾರವ ಮರೆದು,
ಪರತ್ರಯದ ತುತ್ತಿಂಗೆ ತುಚ್ಛನಾಗದೆ,
ನಿಶ್ಚಯನಾದ ಮಹಾತ್ಮಂಗೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ./117
ಇಷ್ಟಲಿಂಗವನರಿದು ಪೂಜೆಯ ಮಾಡಿ,
ಪ್ರಾಣಲಿಂಗವನರಿದು ಪಥ್ಯದ ಕೊಂಡು,
ಜಂಗಮವಾದೆವೆಂಬ ಮಿಥ್ಯತಥ್ಯದ ಅಣ್ಣಗಳು ಕೇಳಿರೊ.
ಕೊಟ್ಟಾತಗುರು, ಕೊಂಡಾತ ಶಿಷ್ಯನೆಂದು
ಜಗದಲ್ಲಿ ಅಂದಗಾರಿಕೆಯಲ್ಲಿ ನಡೆವ ಭಂಡರಿಗೇಕೆ ಲಿಂಗಾಂಗ,
ನಿಃಕಳಂಕ ಮಲ್ಲಿಕಾರ್ಜುನಾ./118
ಇಷ್ಟಲಿಂಗವನರ್ಚಿಸುವನ ಇರವು,
ಹೇಮಾಚಲದ ಶಿಲೆಯಂತಿರಬೇಕು.
ಕುಸುಮದ ಅಪ್ಪುವಿನ ಸ್ನೇಹದಂತಿರಬೇಕು,
ಅಯಕಾಂತದ ಶಿಲೆ ಲೋಹದಂತಿರಬೇಕು,
ಅಣುವಿನನೊಳಗಣ ನೇಣಿನಂತಿರಬೇಕು.
ಇಷ್ಟಕ್ಕೂ ಪ್ರಾಣಕ್ಕೂ ತತ್ತುಗೊತ್ತಿಲ್ಲದ ಬೆಚ್ಚಂತಿರಬಲ್ಲಡೆ,
ಆತನೇ ಇಷ್ಟ ಪ್ರಾಣ ತೃಪ್ತಿವಂತನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ./119
ಇಷ್ಟಲಿಂಗಸಂಬಂಧ, ಭಾವಲಿಂಗಸಂಬಂಧ,
ಪ್ರಾಣಲಿಂಗಸಂಬಂಧವೆಂದು ಭಾವಿಸಿ ಕಲ್ಪಿಸುವಾಗ,
ಅಂಗದ ಮರೆಯ ಇಷ್ಟ, ಇಷ್ಟದ ಮರೆಯ ಭಾವ,
ಭಾವದ ಮರೆಯ ಪ್ರಾಣ, ಪ್ರಾಣದ ಮರೆಯ ಜ್ಞಾನ,
ಇಂತೀ ಗುಣಂಗಳ ಏಕವ ಮಾಡಿ,
ಉಭಯ ದೃಷ್ಟಕ್ಕೆ ಒಡಲಿಲ್ಲದೆ ನಿಂದ ನಿಜ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./120
ಇಷ್ಟಲಿಂಗಸಂಬಂಧಿಗಳು ಭಕ್ತಿಸ್ಥಲವನರಿಯರು.
ಪ್ರಾಣಲಿಂಗಸಂಬಂಧಿಗಳು ಮಾಹೇಶ್ವರಸ್ಥಲವನರಿಯರು.
ಪ್ರಸಾದಲಿಂಗಸಂಬಂಧಿಗಳು ಪ್ರಾಣಲಿಂಗಸ್ಥಲವನರಿಯರು.
ಶರಣಸ್ಥಲಭರಿತರು ಪ್ರಾಣಲಿಂಗಸಂಬಂಧವನರಿಯರು.
ಐಕ್ಯ ನಿರ್ಲೇಪವಾದಲ್ಲಿ ಶರಣಸ್ಥಲ ನಿಂದಿತ್ತು.
ಇಂತೀ ಐದು ಸ್ಥಲವ ಆರೋಪಿಸಿ,
ಇದಿರಿಟ್ಟು ಕೂಡಿದಲ್ಲಿ ಆರುಸ್ಥಲವಾಯಿತ್ತು.
ಆರುಸ್ಥಲ ವೇಧಿಸಿ ನಿಂದಲ್ಲಿ, ನೀ ನಾನೆಂಬ ಭಾವ,
ಎಲ್ಲಿ ಅಡಗಿತ್ತು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./121
ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು,
ಅದು ಹುಸಿ, ನಿಲ್ಲು.
ಇಹದಲ್ಲಿ ದುಃಖಿ, ಪರದಲ್ಲಿ ಪ್ರಕೃತಿಯೆಂದೆ.
ಇಂತೀ ಇಹಪರವೆಂಬೆರಡು.
ಲಕ್ಷ್ಮಿಯ ಮನೆಯ ತೊತ್ತಿನ ತೊತ್ತಾದವರಿಗೆ
ಇನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ./122
ಈದ ಪಶುವಿನ ಮೊಲೆಯಲ್ಲಿ ಕೈಯನಿಕ್ಕಿದಡೆ ಕ್ಷೀರವಲ್ಲದೆ,
ಬಂಜೆಯಾವಿನ [ಮೊಲೆಯಲ್ಲಿ] ಉಂಟೆ?
ಇದರಂದವ ತಿಳಿವುದು ಲಿಂಗಾಂಗಿಗಳು.
ಹೊತ್ತು ತುಂಬಿದವಳು ಬಲ್ಲಳು ತನ್ನ ನಿತ್ತರಿಸುವ ಬೇನೆಯ.
ಭಕ್ತಿಯುಳ್ಳವರು ಬಲ್ಲರು ನಿಶ್ಚಟದ ಲಿಂಗಾಂಗಿಗಳ.
ಇಂತೀ ಸತ್ಯವನರಿಯದೆ ಹೊತ್ತು ಹೋಕನಾಗಿ ನುಡಿವ
ಮರ್ತ್ಯರಿಗೇಕೆ, ನಿಃಕಳಂಕ ಮಲ್ಲಿಕಾರ್ಜುನಾ./123
ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ.
ಅದನೇನ ಹೇಳುವೆ? ಕಣ್ಣಿಂಗೆ ರೂಪಿಲ್ಲ. ಕೈಗೆ ಹಿಡಿಯಿಲ್ಲ.
ನೆನೆವುದಕ್ಕೆ ಗೋಚರವಾಗಿ ನಿಂದು ಸುಳಿಯಿತ್ತು ನೋಡಾ.
ಆ ಸುಳುಹಿನ ಮರೆಯಲ್ಲಿ ಬಂದು ಹಿಡಿಯಲಾಗಿ,
ಕೂಸು ಸತ್ತು, ಅತ್ತ ನೀರಿನಲ್ಲಿ ಮುಕ್ತಿಯೆಂಬವಳು ಹುಟ್ಟಿದಳು.
ಮುಕ್ತಿಯ ಬಸುರಲ್ಲಿ ಸತ್ತವರೆಲ್ಲ ಐದಾರೆ.
ಹೊತ್ತುಹೋರಿ ಕರೆಯಲಾಗಿ,
ನಿಚ್ಚಟದ ಅಲಗ ಹಿಡಿದು ಕುತ್ತಿದರಯ್ಯಾ, ಹೊಟ್ಟೆಯ ಹುರಿಯ.
ಕುತ್ತಿದ ಬಾಯಲ್ಲಿ ಕೂಳ ಸುರಿದು, ಅವರೆಲ್ಲ ಉಂಟಾದರು.
ಅವರಿಗಿನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?/124
ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ.
ನುಂಗಿದ ಕೋಡಗವ ಗುಂಗುರ ನುಂಗಿತ್ತು.
ಗುಂಗುರ ಬಂದು ಕಣ್ಣ ಕಾಡಲಾಗಿ,
ಕಣ್ಣಿನ ಕಾಡಿಗೆ ಅಳಿಯಲಾಗಿ, ಕಣ್ಣಿನ ಬಣ್ಣ ಕೆಟ್ಟಿತ್ತು.
ಕಣ್ಣಿನ ಒಡೆಯ ನೋಡಿ ಗುಂಗುರ ಒರಸಲಾಗಿ,
ಆ ಗುಂಗುರ ಸತ್ತು, ಕೋಡಗ ಉಳಿಯಿತ್ತು.
ಆ ಕೋಡಗವನಾಡಿಸಿಕೊಂಡುಂಬ ಜೋಗಿಗಳಿಗೇಕೆ,
ಆ ರೂಢನ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ./125
ಈಶ್ವರನಂಗವ ತಾಳಿದ ಮತ್ತೆ ಪರ[ಕೆ ದೇಗುಲವಾಗಿರಬೇಕು]
ತ್ರಿವಿಧದ ಆಶೆಗೆ ಮನ ಪಸರಿಸದಂತಿರಬೇಕು, ಆತನ ಗುಣ.
ನಿರ್ಜಾತನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ./126
ಉ[ರಿವ] ಗಿರಿಯ ಮೇಲೆ ಬೆಣ್ಣೆಯ ಕೋಣ ಹುಟ್ಟಿ,
ಕರ್ಪುರದ ಘಟ್ಟಿ ಸೋಪಾನ ಕಟ್ಟಿತ್ತು.
ಅಜು ಮಂಜಿನ ನೀರು, ಆ ನೀರ ತುಂಬುವುದಕ್ಕೆ ಮಳಲ ಮಡಕೆ,
ತುಂಬಿ ಹಿಡಿವುದಕ್ಕೆ ಕೈಯಿಲ್ಲದೆ, ನಡೆವುದಕ್ಕೆ ಕಾಲಿಲ್ಲದೆ,
ಮೀರಿ ಹೊರುವುದಕ್ಕೆ ತಲೆಯಿಲ್ಲದೆ ತುಂಬಿ ತರಬೇಕು.
ತಂದು ಬಂದು ನಿಂದಲ್ಲಿ, ಕಣ್ಣಿಲ್ಲದೆ ನೋಡಿ,
ಕೈಯಿಲ್ಲದೆ ಮುಟ್ಟಿ, ಬಾಯಿಲ್ಲದೆ ಈಂಟಿ,
ಅರಿವಿಲ್ಲದ ತೆರದಲ್ಲಿ ಸುಖಿಯಾದ ಐಕ್ಯಂಗೆ ಲಕ್ಷಿಸಲಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./127
ಉಂಟು ಉಂಟೆಂಬನ್ನಕ್ಕ ಸಂದೇಹಕ್ಕೀಡಾಗದೆ,
ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ,
ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ,
ಉಭಯಚಕ್ಷು ಒಡಗೂಡಿ ಕಾಬಂತೆ,
ನೋಡುವುದು, ಉಭಯ ನೋಡಿಸಿಕೊಂಬುದು ಒಂದೆ.
ಕ್ರೀಯಲ್ಲಿ ಇಷ್ಟ, ಅರಿವಿನಲ್ಲಿ ಸ್ವಸ್ಥ.
ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ./128
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ
ಡಿಂಡೆಯ ಮತದ ಹಿರಿಯರುಗಳೆಲ್ಲಾ ನೀವು ಕೇಳಿರೊ.
ಬಲೆಯೊಳಗಾದ ಹುಲಿಗೆ ಬಲಾತ್ಕಾರವುಂಟೆ?
ಲಲನೆಯರ ಸಂಸರ್ಗದಲ್ಲಿ ಚಲನೆಯಿಲ್ಲದೆ ಬಿಂದುವುಂಟೆ?
ಶಿಲೆಯೊಳಗಣ ಬೆಂಕಿಗೆ ಅಲಂಕಾರ ಉಂಟೆ?
ಸಲಿಲದೊಳಗಣ ತೃಷ್ಣೆಗೆ ಅಪ್ಯಾಯನ ಉಂಟೆ?
ಅರಿವನರಿದಂಗಕ್ಕೆ, ಮರವೆಗೆ ತೆರನುಂಟೆ?
ತೆರನನರಿದು, ಹರಿದಲ್ಲಿಯೆ ಅರಿಕೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ./129
ಉಂಡು ಕೊಂಡಾಡುವನ್ನ ಬರ,
ವೇಶಿಯ ಮನೆಯ ದಾಸಿಯ [ಬರಿಹುಂಡವೆಂಬೆ],
ಈಶ್ವರನ ರೂಪ ತೊಟ್ಟು ಕೈಯಾಂತು ಬೇಡಿದಡೆ,
ವೇಷದ ಮರೆಯ ಬಲೆಯ ಬೀಸುವ ಬೇಟೆಗಾರನೆಂಬೆ,
ಆಗಮವ ಕಲಿತು ಅವರಿಗೆ ಆಗಹೇಳಿ, ಹೋಗಿನ ದ್ರವ್ಯಕ್ಕೆ ಕೈಯಾನುವ
ಈ ಲಾಗಿನ ಅಣ್ಣಗಳ ಬಗೆಯ ಭಕ್ತಿಯಲ್ಲಿ ಇದ್ದೆಹೆನೆಂಬವರಿಗೆ
ಸತ್ತು ಸಾಯದ ಕುದುರೆಗೆ ಹುಲ್ಲನಡಕುವಂತಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./130
ಉಂಬ ಊಟ ನಿನಗೊ, ಅಶನಕ್ಕೊ ಎಂಬುದನರಿ,
ಮಾಡುವ ಭಕ್ತಿ ಮಾಡುವಂಗೊ, ಮಾಡಿಸಿಕೊಂಬವಂಗೊ
ಎಂಬುದ ತಿಳಿದ ಮತ್ತೆ ಹೋರಿ ಆರ್ಜವ ಮಾಡಲೇಕೆ?
ಎಂಬುದ ತಿಳಿದ ಕೊಂಡು ಬಪ್ಪಂತೆ,
ತಾ ತನ್ನ ತಿಳಿದ ಮತ್ತೆ ಅನ್ಯವೇಕೊ,
ನಿಃಕಳಂಕ ಮಲ್ಲಿಕಾರ್ಜುನಾ?/131
ಉಂಬ ತಳಿಗೆಯ ಬೆಳಗಿದಡೆ ನೊಂದಿತ್ತೆ, ನನ್ನ ಬೆಳಗಿದರೆಂದು?
ಬೆಂದ ಮಸಿಯ ತೊಳೆದಡೆ ನೊಂದಿತ್ತೆ, ಎನ್ನ ಹೊರೆಯನೆತ್ತಿದರೆಂದು?
ಅಂ[ಧ] ಮಂದರೊಂದನು ನುಡಿದಡೆ ನೊಂದು ಬೇಯಲೇಕೆ?
ಅವರು ನೊಂದರೂ ನೋಯಲಿ
ಹಿಂಗಬೇಕೆಂದೆ ನಿಃಕಳಂಕ ಮಲ್ಲಿಕಾರ್ಜುನಾ./132
ಉಡುಪ ತನ್ನ ಕಳೆಯ ತಾ ಕಾಣಿಸಿಕೊಂಬಂತೆ,
ಸೂರ್ಯ ತನ್ನ ಬೆಳಗ ತಾ ಕಾಣಿಸಿಕೊಂಬಂತೆ,
ಫಲ ತನ್ನ ರುಚಿಯ ತಾ ಕಾಣಿಸಿಕೊಂಬಂತೆ,
ಇಂತೀ ತ್ರಿವಿಧ ಉಂಟೆನಬಾರದು, ಇಲ್ಲೆನಬಾರದು.
ತನ್ನಿಂದರಿವಡೆ ಸ್ವತಂತ್ರಿಯಲ್ಲ, ಇದಿರಿನಿಂದರಿವಡೆ ಪರತಂತ್ರಿಯಲ್ಲ.
ಈ ಉಭಯವನಿನ್ನಾರಿಗೆ ಹೇಳುವೆ?
ಕಡಲೊಳಗೆ ಕರೆದ ವಾರಿಯಂತೆ, ನಿಃಕಳಂಕ ಮಲ್ಲಿಕಾರ್ಜುನಾ./133
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ,
ಹೊಸಮಾಣಿಕ್ಯವ ನುಂಗಿತ್ತ ಕಂಡೆ.
ನುಂಗುವಾಗ ಒಂದು, ಗುಟುಕಿಸುವಾಗ ಎರಡು,
ಸ್ವಸ್ಥಾನದಲ್ಲಿ ನಿಂದಾಗ ಮೂರು,
ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ./134
ಉದಕದ ರಸದಂತೆ, ಅಗ್ನಿಯ ಉಭಯದಂತೆ,
ವಿಷ ನಿರ್ವಿಷದಂತೆ ಕಾಬ, ಕಾಣಿಸಿಕೊಂಬ ಭೇದ.
ತನುವಿನ ಮೇಲಿನ ಲಿಂಗದ ನೆನಹು, ಪ್ರಾಣನ ಮೇಲಿಹ ಭಾವದ ಸಂಚು.
ಆ ಉಭಯವನೊಳಕೊಂಡ ಜ್ಞಾನದ ಬಿಂದು,
ಸದಮಲ ಬೆಳಗಿನೊಳಗೆಯ್ದಿದ ಮತ್ತೆ ಬಿಡುಮುಡಿ ಎರಡಿಲ್ಲ.
ಅದು ಶರಣನ ನಿಜದೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ./135
ಉದಕದಲ್ಲಿ ತೊಳೆದು ಕಂಡೆಹೆನೆಂದಡೆ ಮಲಿನವಲ್ಲ.
ಪುಷ್ಪದಲ್ಲಿ ಪೂಜಿಸಿ ಕಂಡೆಹೆನೆಂದಡೆ,
ಹೊತ್ತಿನ ವೇಳೆಗೆ ಬಂದು ಗೊತ್ತು ಮುಟ್ಟವನಲ್ಲ.
ನಾನಾ ಉಪಚಾರದಿಂದ ಭಾವಿಸಿ ಕಂಡೆಹೆನೆಂದಡೆ ಭ್ರಮೆಯವನಲ್ಲ.
ಇದನರಿದು ಮರವೆಗೆ ತೆರಹಿಲ್ಲದಿರ್ಪ,
ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದವನೇ./136
ಉದಕದಲ್ಲಿ ಮಜ್ಜನವ ಮಾಡಿ,
ಇಹ ಪರವ ಹರಿದವರಾರುವ ಕಾಣೆ.
ಪುಷ್ಪದಲ್ಲಿ ಪೂಜೆಯ ಮಾಡಿ, ಪುನರಪಿಯ ಗೆದ್ದವರನಾರನು ಕಾಣೆ.
ಕರ್ಮದಿಂದ ಒದವಿದ ಸುಖ,
ಚತುರ್ವಿಧಕ್ಕೆ ಒಳಗಲ್ಲದೆ ಹೊರಗಾದುದಿಲ್ಲ.
ಕರ್ಮವ ಮಾಡುವಲ್ಲಿ ಧರ್ಮವನರಿದಡೆ, ಅದು ಪಥಕ್ಕೆ ಹೊರಗೆಂದೆ.
ಮೌಕ್ತಿಕ ಉಂಡ ಜಲಕ್ಕೆ ರಾಗ ಉಂಟೆ ಅಯ್ಯಾ?
ಅಮೃತದಲೊದಗಿರ್ದ ಆಜ್ಯವ ಧರಿಸಿದ ಜಿಹ್ವೆಗೆ
ಕರತಳ ಉಂಟೆ ಅಯ್ಯಾ?
ಕರದಲ್ಲದೆ ಅರಿದು ಹಿಡಿದವಂತೆ ಬಿಡುಗಡೆ ಇನ್ನೇನೊ?
ಅರಿದಡೆ ತಾ, ಮರೆದಡೆ ಜಗವೆಂಬ ಉಭಯವ ಹರಿದಾಗವೆ ಪೂಜಕನಲ್ಲ,
ಪ್ರತಿಷ್ಠೆಯಲ್ಲಿ ಪರಿಣಾಮಿಯಲ್ಲ, ಸ್ವಯಂಭುವಿನಲ್ಲಿ ಸ್ವಾನುಭಾವಿಯಲ್ಲ.
ಏನೂ ಎನಲಿಲ್ಲವಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತಾನೆಯಾಗಿ./137
ಉದಕವ ನುಂಗಿದ ಕೆಸರಿನಂತೆ, ಆತ್ಮ ಗಸಣಿಗೊಳಗಾಯಿತ್ತು.
ಉದಕವರತ ಕೆಸರಿನ ತೆರನುಂಟೆ?
ಈ ಉಭಯಭೇದವನರಿದಡೆ ಪ್ರಾಣಲಿಂಗಿಯೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ./138
ಉದಕವಿಲ್ಲದಿರೆ ಅಂಬುಧಿ ತಟಾಕಂಗಳೆಂಬ ನಾಮವುಂಟೆ?
ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ?
ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ?
ನೀನಿಲ್ಲದಿರೆ ನಾನೆಂಬ ಭಾವವುಂಟೆ?
ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ.
ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ.
ಜಗಹಿತಾರ್ಥವಾಗಿ ಭಕ್ತನಾದೆ.
ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ.
ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ.
ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ.
ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ.
ಶರಣ ತದರ್ಥನಾಗಿ ಐಕ್ಯನಾದೆ.
ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ
ಸಂಗನಬಸವಣ್ಣ, ಚೆನ್ನಬಸವಣ್ಣ,
ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ
ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು
ಮತ್ತೆ ಅವಧಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲಾ.
ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು.
ಎನ್ನ [ಭ]ವದ ಉರಿಯ ಬಿಡಿಸು,
[ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ./139
ಉದ್ಯಾಪನ ವ್ಯಾಪಾರ ಕೃತಭೇದ ಸರ್ವವನರಿದು,
ತ್ಯಾಗಾಂಗನಾಗಿ, ಭೋಗಾಂಗನಾಗಿ, ಯೋಗಾಂಗನಾಗಿ,
ತಾಮಸ ನಿರಸನವಾಗಿ, ಭೂತ ಭವಿಷ್ಯದ ದ್ವರ್ತಮಾನಕ್ಕೆ ಹೊರಗಾಗಿನಿಂದ
ನಿಜತತ್ವದಂಗಕ್ಕೆ ಬೇರೆ ಮಂಗಲೋತ್ತರವರಸಲಿಲ್ಲ.
ಲಿಂಗವನಂಗಬಾಹ್ಯದಲ್ಲಿ ಇರ್ದಿಹೆನೆಂಬ ಭ್ರಾಂತಿಲ್ಲ.
ಆತ ಲಿಂಗವೆ ಅಂಗವಾದ ಕಾರಣ, ಪೃಥಕ್ ಎಂಬುದಿಲ್ಲ.
ಆತನಂಗವೆ ಮಂಗಲದೊಡಲು, ನಿಃಕಳಂಕ ಮಲ್ಲಿಕಾರ್ಜುನಾ./140
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು.
ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು.
ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ?
ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ?
ಇಂತೀ ಉಭಯದೊಳಗನರಿತು,
ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ./141
ಉಭಯವ ನೆಮ್ಮಿ ಹರಿವ ನದಿಯಂತೆ,
ಮಾಡುವ ಕ್ರೀ, ಅರಿವ ಚಿತ್ತ.
ಈ ಉಭಯದ ನೆಮ್ಮುಗೆಯಲ್ಲಿ ಭಾವಿಸಿ ಅರಿವ ಚಿತ್ತ,
ಅಂಗದ ಮುಟ್ಟನರಿತು ನಿಜಸಂಗದ ನೆಲೆಯಲ್ಲಿ ನಿಂದು,
ಉಭಯ ನಿರಂಗವಾದಲ್ಲಿ,
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./142
ಉರಿ ಆತ್ಮಸ್ಥಾವರಂಗಳಲ್ಲಿ ನಂದದಿಹನ್ನಕ್ಕ,
ನೀರು ಒಂದರಲ್ಲಿಯೆ ಇಂಗದಿಹನ್ನಕ್ಕ,
ಲಿಂಗವೆಂಬುದೊಂದು ಪ್ರಮಾಣವುಂಟು
ಆ ಪ್ರಮಾಣು ಅಪ್ರಮಾಣಹನ್ನಕ್ಕ,
ಭಾವ ಮೂರು, ನಿರ್ಭಾವ ಮೂರು,
ಸ್ಥೂಲವಾರು, ತತ್ತ್ವವೈದು, ಇಂತಿವು ಕೂಡೆ,
ಅಳೆದು ಮರಳಲಿಕ್ಕೆ ಹಲವು ಸ್ಥಲ ಕುಳ ಬೇರಾಯಿತ್ತು.
ಬಂಗಾರವೊಂದು ಹಲವು ತೊಡಿಗೆಯ ಹೊಲಬಾದಂತೆ,
ತನ್ನಷ್ಟೇ ತದ್ದೃಷ್ಟವುಭಯವ ಕೂಡುವನ್ನಬರ,
ನಿಃಕಳಂಕ ಮಲ್ಲಿಕಾರ್ಜುನನೆಂದೆನುತ್ತಿರಬೇಕು./143
ಉರಿ ನೀರು ಕುಂಭದಂತೆ ಆಗಬಲ್ಲಡೆ, ಕಾಯಲಿಂಗಸಂಬಂಧಿ.
ತರು ಧರಿಸಿದ ನೀರು ಉರಿಯಂತಾಗಬಲ್ಲಡೆ, ಭಾವಲಿಂಗಸಂಬಂಧಿ.
ಕರ್ಪುರ ಧರಿಸಿದ ಅಪ್ಪು ಉರಿಯ ಯೋಗದಂ [ತಾಗಬಲ್ಲಡೆ] ಪ್ರಾಣಲಿಂಗ ಸಂಬಂಧಿ.
ಇಂತೀ ಇವನಿಪ್ಪ ಭೇದವನರಿದು ನಿಶ್ಚಯಿಸಿದಲ್ಲಿ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./144
ಉರಿಗೆ ರಸ ನಿಂದಾಗವೆ ರಸಸಿದ್ಧಿ ಎಂದೆ.
ಅಸಿಗೆ ಶರೀರ ನಿಂದಲ್ಲಿಯೆ ಕಾಯಸಿದ್ಧಿ ಎಂದೆ.
ಲಿಂಗವಿಡಿದ ತನುವಿಂಗೆ ಅಂಗವ್ಯಾಪಾರವ ಬಿಟ್ಟಾಗವೆ, ಲಿಂಗಸಿದ್ಧಿ ಎಂಬೆ.
ಇದರಂಗ ಒಂದೂ ಇಲ್ಲದಿರ್ದಡೆ,
ತ್ರಿಭಂಗಿಯಂ ತಿಂದು ಅಂದಗೆಡುವನಿಗೇಕೆ, ಲಿಂಗದ ಶುದ್ಧಿ,
ನಿಃಕಳಂಕ ಮಲ್ಲಿಕಾರ್ಜುನಾ. /145
ಉರಿದು ಬೇವುದು ಉರಿಯೋ, ಮರನೋ?
ಹರಿದು ಕೊರೆವುದು ನೆಲನೋ, ನೀರೊ?
ನೆಲ ನೀರಂತಾದುದು ಅಂಗಲಿಂಗಸಂಬಂಧ.
ಉರಿ ಮರೆದಂತಾದುದು ಪ್ರಾಣಲಿಂಗಸಂಬಂಧ.
ಇಂತೀ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ.
ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲದ ವಳಿಯಂತೆ,
ಮಂಜಿನ ರಂಜೆಯ ಝಂಝಾಮಾರುತನಂತೆ.
ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ./146
ಉರಿದು ಸತ್ತುದು, ಮತ್ತುರಿದು,
ನಾನಾ ಭೇದಂಗಳ ಘಟಮಟಂಗಳ ಆಶ್ರಯಕ್ಕೊಡಲಾಗಿ,
ಮತ್ತೆ ಭಸ್ಮವಾಗಿ, ಒಡಲಗಿಡದ ತೆರದಂತೆ.
ಇಂತೀ ತ್ರಿವಿಧದ ಕುರುಹಿನ ಲಕ್ಷದ ಭೇದ ಒಪ್ಪಿರಬೇಕು,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ. /147
ಉರಿಯ ಬಣ್ಣದ ಸೀರೆಯನುಟ್ಟು,
ಹರಶರಣರೆಲ್ಲರೂ ಮದುವೆಗೆ ಹೋದರು.
ನಿಬ್ಬಣಿಗನ ಹಿಂದುಳುಹಿ, ಮದುವೆಯ ಹರೆ ಮುಂದೆ ಹೋಯಿತ್ತು.
ಮದುವೆಗೆ ಕೂಡಿದ ಬಂಧುಗಳೆಲ್ಲರು,
ಮದವಳಿಗನ ಮದವಳಿಗಿತ್ತಿಯ ಕಾಣದೆ,
ಕದನವಾಯಿತ್ತು ಮದುವೆಯ ಮನೆಯಲ್ಲಿ.
ಈ ಗಜೆಬಜೆಗಂಜಿ ಹರೆಯವ ಸತ್ತ.
ಎಣ್ಣೆಯ ಗಡಿಗೆಯ ಒಡೆಯ ಹಾಕಿದ.
ಇನ್ನು ಮದುವೆಯ ಸಡಗರವೇಕೆಂದ, ನಿಃಕಳಂಕ ಮಲ್ಲಿಕಾರ್ಜುನ./148
ಉರಿಯೊಳಗಣ ಶೈತ್ಯದಂತೆ, ಶೈತ್ಯದೊಳಗಣ ಉರಿಯಂತೆ,
ಅರಿದು ಅರುಹಿಸಿಕೊಂಬುದೇನು ಹೇಳಾ?
ಅದು ಚಂದ್ರನೊಳಗಣ ಕಲೆ,
ತನ್ನಂಗದ ಕಳೆಯಿಂದ ಉಭಯದೃಷ್ಟವ ಕಾಣಿಸಿಕೊಂಬಂತೆ,
ಆ ಇಷ್ಟದ ದೃಷ್ಟದ ಕಾಣಿಸಿಕೊಂಡಂತೆ,
ಅರಿವುದು, ಅರುಹಿಸಿಕೊಂಬುದು ಒಡಗೂಡಿದಲ್ಲಿ ಶರಣ ಸ್ಥಲ.
ಆ ಸಂಬಂಧಸಮಯ ನಿಂದಲ್ಲಿ ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./149
ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ.
ನೋಟದ ಸುಖವ ಕಲಿತ ಮತ್ತೆ ಬೇಟಕ್ಕೆ ದೃಷ್ಟ.
ಬೇಟದ ಸುಖವ ಕಲಿತ ಮತ್ತೆ ಕೂಟಕ್ಕೆ ದೃಷ್ಟ.
ಕೂಟದ ಸುಖವ ಕಲಿತ ಮತ್ತೆ ಜಗದಾಟಕ್ಕೆ ದೃಷ್ಟ.
ಇಷ್ಟನರಿಯದೆ ನಿರ್ಜಾತನೆನಲೇಕೆ.
ಇಷ್ಟಕ್ಕಂಜಿ ಈಸನ ಮರೆಯ ವೇಷವ ಬಿಟ್ಟು,
ಎನ್ನಗಿನ್ನೇಸು ಕಾಲ ಆಸೆಯೆಂಬ ಕೋಳವೋ,
ನಿಃಕಳಂಕ ಮಲ್ಲಿಕಾರ್ಜುನಾ. /150
ಊರ ಗುಬ್ಬಿಯೂ ಕಾಡಗುಬ್ಬಿಯೂ ಕೂಡಿಕೊಡು,
ಒಣಗಿಲ ಮೇವ ತೆರನಂತೆ,
ಭಕ್ತ ಮಾಡುವ ಠಾವಿನಲ್ಲಿ ಗುರುಚರ ಕರ್ತೃಗಳೆಂದು ಪೂಜಿಸಿಕೊಂಡು,
ತಮ್ಮ ಆತ್ಮತೇಜರ ತಥ್ಯಮಿಥ್ಯಕ್ಕೆ ಕಡಿದಾಡುತ್ತ,
ಆಸನ ಪಙ್ತಿ, ವಾಹನ ವಿಶೇಷ ಭೋಗಂಗಳಿಗೆ ಕುಕ್ಕನೆ ಕುದಿದು,
ಬಿಕ್ಕನೆ ಬಿರಿವ ದುರ್ಮತ್ತರಿಗೆ
ವಿರಕ್ತಿಯ ಮಾತಿನ ನಿಹಿತ ಇಂತೀ ಹೊತ್ತು ವಿಸ್ತರಿಸಲಾರದೆ,
ಭಕ್ತರಿಚ್ಛೆವನರಿಯದೆ ತನ್ನ ನಿತ್ಯಾನಿತ್ಯವ ತಿಳಿಯಲರಿಯದೆ,
ತನ್ನ ಪ್ರಕೃತಿಮತ್ಸರಗುಣದಿಂದ ಭಕ್ತರಂತಿಂತೆಂದು ನುಡಿವ, ತಟ್ಟುವ ಭಂಡನ,
ಇಂತಿವರ ಕಂಡು ಅರ್ಚಿಸಿ ಪೂಜಿಸಿ ಶರಣೆಂಬ ಮಿಟ್ಟೆಯ ಭಂಡನ,
ಈ ಉಭಯದ ಗುಣವನೆತ್ತಲಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ./151
ಊರ ಮುಂದೊಂದು ದೇವರ ಗುಡಿಯ ಕಂಡೆ.
ದೇವರಿಲ್ಲದೆ ದೇಗುಲವಿದ್ದಿತ್ತು.
ದೇಗುಲದೊಳಗಣ ತಮ್ಮಡಿ ಆರೈದು ನೋಡುತ್ತಿರ್ದ,
ತನ್ನೋಗರದೊಡೆಯನ ಕಾಣದೆ.
ಇದನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ./152
ಊರಾಡಿದಂತಾಡದಿರ್ದಡೆ ದೂರಿಹರೆನ್ನನು.
ನಾಡಾಡಿದಂತಾಡದಿರ್ದಡೆ ಬೈದಹರೆನ್ನನು.
ಕೆಸರೊಳಗೆ ಮುಳುಗಿ ಹೊಸಸೀರೆಯೆಂದಡೆ,
ಅದರ [ಪಾಶ] ಕುಸುಕಿರಿ [ಯದೆ] ಮಾಣ್ಬುದೆ?
ಈ ದೂಷಣೆ ಇನ್ನೇಸು ಕಾಲ?
ಭವಪಾಶರಹಿತ ಓಸರಿಸುವಂತೆ ಮಾಡಾ,
ನಿಃಕಳಂಕ ಮಲ್ಲಿಕಾರ್ಜುನಾ./153
ಊರಿಗೆ ಹೋ[ಹಾಗ] ಓಣಿಯ ಇಕ್ಕೆಲದ ದಾರಿಯಲ್ಲಿ ಕಟ್ಟಿದ ಕಳ್ಳರ ದಂಡೆ.
ಅವರ ವರ್ಣ; ಒಬ್ಬ ಕಪೋತ, ಒಬ್ಬ ಕೃಷ್ಣ.
ಕಪೋತನ ಕಾಲ ಹೊಯ್ದು, ಕೃಷ್ಣನ ಕುತ್ತಿ ಕೆಡಹಿ, ಮತ್ತೆ ಹೋಗುತ್ತಿರಲಾಗಿ,
ಓಣಿಯ ತಪ್ಪಲ ತಲಹದಲ್ಲಿ ಕಟ್ಟಿದ್ದನೊಬ್ಬ ಕಳ್ಳ.
ಅವನ ಕಂಡು ಕೂಗುವಡೆ ಬಾಯಿಲ್ಲ, ಹೊಯ್ವಡೆ ಕೈದಿಲ್ಲ.
ಮೀರಿ ಹೋದಹೆನೆಂದಡೆ ಹಾದಿಗೆ ಹೊಲಬಿಲ್ಲ.
ಇದು ಅವನ ಕೌತುಕವೋ? ಎನ್ನ ಭಾವದ ಭ್ರಮೆಯೋ?
ಮುಂದಣವನ ಸುದ್ದಿ [ಯ] ಹಿಂಗಿ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./154
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ,
ಎಯ್ದಿ ಬಂದಿತ್ತೊಂದು ಹಾವು.
ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ.
ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು.
ಗಾರಾದೆನಯ್ಯಾ ಈ ಹಾವ ಕಂಡು.
ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು
ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ].
ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು.
ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ./155
ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ.
ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ,
ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ
ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು.
ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./156
ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ.
[ಅದು] ಸಂದಿಗೆ ಸಾವಿರ ರೂಪು, ಕೊಂಬಿಗೆ ಹಿಂಗದ ವೆಜ್ಜ,
ಅದರಂಗದ ಕಂಗಳು ಕಪ್ಪು.
ಅದ ಕೊಂದವ[ರ] ತಂದು ಕೂಡಿದೆ ನನ್ನಂಗಳದಲ್ಲಿ.
ಆ ಅಂಗಳ, ಅವರ ತಿಂದು ನುಂಗಿತ್ತು.
ಮೂರು ಭುವನವ ನುಂಗಿದವರ ಕಂಡು, ಹಿಂಗಲಾರೆ,
ನಿಃಕಳಂಕ ಮಲ್ಲಿಕಾರ್ಜುನಾ./157
ಊರೊಗಿದ್ದು ಊರು ಸುಡಬೇಕಲ್ಲದೆ,
ಊರ ಹೊರಗಿದ್ದು ಸುಡಬಹುದೆ ಅಯ್ಯಾ?
ಕ್ರೀಯೊಳಗದ್ದು ಕ್ರೀಯನರಿಯಬೇಕಲ್ಲದೆ,
ಕ್ರೀ ಹೊರಗಾಗಿ ಜ್ಞಾನವುಂಟೆ ಅಯ್ಯಾ?
[ಕೈದಟ್ಟುವ ಠಾವಿನಲ್ಲಿ ಕಾಳವಗಲ್ಲದೆ]
ಕೈದಟ್ಟದ ಠಾವಿನಲ್ಲಿ ಕಾಳಗವುಂಟೆ ಅಯ್ಯಾ?
ನಾ ನೀನಾದಡೆ ದೇವ, ನೀ ನಾನಾದಡೆ ದೇವ.
ಉಭಯವ ವೇದಿಸಿದಲ್ಲಿ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ./158
ಊರೊಳಗಣ ಉಡು ಕೇರಿಯ ನುಂಗಿತ್ತು.
ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತಹತಹತ್ತು.
ಸಾರಬಂದ ಧೀರನ ಬಾರಿಕ ಕೊಂದ.
ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು.
ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ.
ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು.
ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ,
ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ,
ಹಿರಿಯರಸನ ಕೈಸೆರೆಯ ಬಿಡಿಸಿ,
ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದ ಕೆಟ್ಟ ಅರಸು.
ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ.
ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ,
ಅಲಗಿನ ಹಂಗೇಕೆ?
ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ, ನಿಃಕಳಂಕ ಮಲ್ಲಿಕಾರ್ಜುನಾ./159
ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು.
ಎನಗೆ ಲಿಂಗವಾಗಿ ಬಂದು, ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು.
ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದ.
ಭಕ್ತಿ ಜ್ಞಾನ ವೈರಾಗ್ಯವ ತುಂಬಿ,
ಪಾದೋದಕ ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು.
ಆ ಬಸವಣ್ಣನ ಶ್ರೀಪಾದವನರ್ಚಿಸಿ, ಪೂಜಿಸಿ,
ನಮೋ ನಮೋ ಎಂದು ಸುಖಿಯಾದೆನಯ್ಯಾ,
ನಿಃಕಳಂಕ ಮಲ್ಲಿಕಾರ್ಜುನಾ./160
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು,
ನಿಃಕಲವಸ್ತುವಾಗು.
ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು.
ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು.
ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು.
ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ,
ಜ್ಞಾನಸಿಂಧು ಸಂಪೂರ್ಣನಾಗಿ,
ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ.
ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ,
ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ./161
ಎನ್ನ ಅರಿವು ಮರಹು ಬಸವಣ್ಣಂಗರ್ಪಿತ.
ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತ.
ಎನ್ನ ಭಾವ ನಿರ್ಭಾವ ಬಸವಣ್ಣಂಗರ್ಪಿತ.
ಎನ್ನ ಅಂತರಂಗ ಬಹಿರಂಗ ಬಸವಣ್ಣಂಗರ್ಪಿತ.
ನಾ ನೀನೆಂಬುದು ಬಸವಣ್ಣಂಗರ್ಪಿತ.
ಇಂತು ಎನ್ನನೆ ಬಸವಣ್ಣಂಗೆ ನಿಷೇಧಿಸಿ, ಆವ ಅವಲಂಬವು ಇಲ್ಲದೆ,
ನಿರಾಲಂಬದಲ್ಲಿ ನಿಜನಿವಾಸಿಯಾಗಿರ್ದೆನು ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ./162
ಎನ್ನ ಚಿತ್ತಕ್ಕೆ ನಕಾರವಾದನಯ್ಯಾ ಬಸವಣ್ಣನು.
ಎನ್ನ ಬುದ್ಧಿಗೆ ಮಕಾರವಾದನಯ್ಯಾ ಬಸವಣ್ಣನು.
ಎನ್ನ ಅಹಂಕಾರಕ್ಕೆ ಶಿಕಾರವಾದನಯ್ಯಾ ಬಸವಣ್ಣನು.
ಎನ್ನ ಮನಕ್ಕೆ ವಕಾರವಾದನಯ್ಯಾ ಬಸವಣ್ಣನು.
ಎನ್ನ ಜ್ಞಾನಕ್ಕೆ ಯಕಾರವಾದನಯ್ಯಾ ಬಸವಣ್ಣನು.
ಎನ್ನ ಮತಿಗೆ ಓಂಕಾರವಾದನಯ್ಯಾ ಬಸವಣ್ಣನು.
ಎನ್ನ ನಾದಕ್ಕೆ ಆಕಾರವಾದನಯ್ಯಾ ಬಸವಣ್ಣನು.
ಎನ್ನ ಬಿಂದುವಿಗೆ ಉಕಾರವಾದನಯ್ಯಾ ಬಸವಣ್ಣನು.
ಎನ್ನ ಕಳೆಗೆ ಮಕಾರವಾದನಯ್ಯಾ ಬಸವಣ್ಣನು.
ಎನ್ನ ಭವವ ಕೊಂದೆಹೆನೆಂದು ಬಕಾರವಾದನಯ್ಯಾ ಬಸವಣ್ಣನು.
ಎನ್ನ ಸಕಲಾಸೆಯ ಕೊಂದೆಹೆನೆಂದು ಸಕಾರವಾದನಯ್ಯಾ ಬಸವಣ್ಣನು.
ಎನ್ನ ವಿಕಾರವ ಕೊಂದೆಹೆನೆಂದು ವಕಾರವಾದನಯ್ಯಾ ಬಸವಣ್ಣನು.
ಎನ್ನ ಭಕ್ತಿಗೆ ಬಕಾರವಾದನಯ್ಯಾ ಬಸವಣ್ಣನು.
ಎನ್ನ ಶಕ್ತಿಗೆ ಸಕಾರವಾದನಯ್ಯಾ ಬಸವಣ್ಣನು.
ಎನ್ನ ವಚಸ್ಸಿಂಗೆ ವಕಾರವಾದನಯ್ಯಾ ಬಸವಣ್ಣನು.
ಇಂತಪ್ಪ ಮಹಾಪ್ರಣಮಂಗಳೇ ಬಸವಣ್ಣನಾಗಿ,
ಬಸವಣ್ಣನೇ ಮಹಾಪ್ರಣಮಂಗಳಾಗಿ,
ತಮ್ಮ ಮಠಕ್ಕೆ ತಾವೇ ಬಂದು, ಭಕ್ತಿ ವಸ್ತುವನಿತ್ತಡೆ,
ನಾನದ ನಿಃಕಳಂಕ ಮಲ್ಲಿಕಾರ್ಜುನನ ಶರಣರಿಗಿತ್ತು ಸುಖಿಯಾದೆನು./163
ಎನ್ನ ತನುವಿನಲ್ಲಿ ಗುರುಮೂರ್ತಿ ಸಂಗನಬಸವಣ್ಣನ ಕಂಡೆನು.
ಎನ್ನ ಮನದಲ್ಲಿ ಲಿಂಗಮೂರ್ತಿ ಚನ್ನಬಸವಣ್ಣನ ಕಂಡೆನು.
ಎನ್ನ ಭಾವದಲ್ಲಿ ಜಂಗಮಮೂರ್ತಿ ಸಿದ್ಧರಾಮಯ್ಯನ ಕಂಡೆನು.
ಎನ್ನ ತೃಪ್ತಿಮುಖದಲ್ಲಿ ಪ್ರಸಾದಮೂರ್ತಿ ಮರುಳಶಂಕರದೇವರ ಕಂಡೆನು.
ಎನ್ನ ಅರಿವಿನ ಮುಖದಲ್ಲಿ ನೈಷ್ಠಿಕಾಮೂರ್ತಿ ಮಡಿವಾಳಯ್ಯನ ಕಂಡೆನು.
ಎನ್ನ ಹೃದಯಮುಖದಲ್ಲಿ ಜ್ಞಾನಮೂರ್ತಿ ಪ್ರಭುದೇವರ ಕಂಡೆನು.
ಇಂತೀ ಷಟ್ಸ್ಥಲವ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠೆಯ ಮಾಡಿ ತೋರಿದ
ನಿಃಕಳಂಕ ಮಲ್ಲಿಕಾರ್ಜುನಾ,
ನಿಮ್ಮ ಶರಣರ ಕಂಡು, ಪರಮಸುಖಿಯಾಗಿರ್ದೆನು./164
ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಕಂಗಳ ಮನೆಯ ಮಾಡಿಕೊಂಡಪ್ಪ ನಿತ್ಯದ ಬೆಳಗೆ.
ಎನ್ನ ಧಾನ್ಯದೊಳಗಣ ದೃಢವೆ, ಎನ್ನ ಸುಖದೊಳಗಣ ಸುಗ್ಗಿಯೆ.
ನಿಃಕಳಂಕ ಮಲ್ಲಿಕಾರ್ಜುನಾ.
ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು./165
ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು.
ಶ್ರೋತ್ರನಾಶದಲ್ಲಿ ಜಯಸ್ವರದ ಪಾಡಿದಂತಾಯಿತ್ತು.
[ಬೆಳ್ಳ], ಹಣ್ಣಿಂಗೆ ತಾಳಿದ ದೃ[ಷ್ಟದಂ] ತಾಯಿತ್ತು.
ನಾ ಬಂದ ಲೀಲೆಯನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ./166
ಎನ್ನ ವಿಶ್ವಾಸದಿಂದ ನಿನ್ನ ನೋಡಿಹೆನೆಂದಡೆ, ನೀ ವಿಶ್ವಾಸಹೀನ.
ನಿನ್ನ ವಿಶ್ವಾಸ ಎನ್ನಲ್ಲಿ ಕರಿಗೊಂಡು, ಎನ್ನ ಅದೃಢ, ನಿಮ್ಮ ಅದೃಢವಾಗಿ ನಿಂದಲ್ಲಿ,
ಲಿಂಗ ಭಕ್ತ, ಭಕ್ತಲಿಂಗವೆಂಬ ಶ್ರುತಿ ತಪ್ಪದು,
ನಿಃಕಳಂಕ ಮಲ್ಲಿಕಾರ್ಜುನಾ./167
ಎಲೆ ಆತ್ಮನೆ ಪಾತಕದ ಪಾಕುಳದಲ್ಲಿ ಏಕೆ ಹುಟ್ಟಿದೆ?
ಹಸಿದಡುಣಬೇಕು, ವಿಷಯವನನುಕರಿಸಬೇಕು, ಹುಸಿಯಬೇಕು.
ಇವರೆಲ್ಲರು ಎಂದಂತೆ ಗಸಣೆಗೊಳಗಾದೆನೆನ್ನಸುವ ಕೊಂಡೊಯ್ಯೊ.
ನಿಃಕಳಂಕ ಮಲ್ಲಿಕಾರ್ಜುನಾ./168
ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು.
ದಿಟಪುಟವನರಿದಡೂ ಗುರು ಕೊಟ್ಟ ನಿಟಿಲಲೋಚನನ ಘಟಿಸಬೇಕು.
ಭಿತ್ತಿಯ ಮೇಲೆ ಚಿತ್ತಾರ ಒಪ್ಪವಿಟ್ಟಂತಿರಬೇಕು.
ಗುರು ಕೊಟ್ಟ ಇಷ್ಟದ ಬೆಂಬಳಿಯ ದೃಷ್ಟವನರಿಯಬೇಕು.
ಮೆಟ್ಟಿದುದು ಜಾರಿ, ಹಿಡಿದುದ ಮುರಿದ ಮತ್ತೆ,
ಎರಡುಗೆಟ್ಟವಂಗೆ ಇನ್ನೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ?/169
ಏಕಜಲ ಬಹುಜಲವಾದ ಕ್ರಮವನರಿವುದು.
ಅದಕ್ಕೆ ದೃಷ್ಟ;
ಅನಾದಿಯ ಪ್ರಣವನರಿಯದೆ, ಹಾದಿಯ ಕಲ್ಲ ಪೂಜಿಸಿದರಯ್ಯಾ,
ಸಂಸಾರಕ್ಕೆ ಬೋಧೆಗೆ ಸಿಕ್ಕಿರೆ
ಅನಾಗತಸಿದ್ಧಿಯ ಹೋದ ಹೊಲಬನರಿಯದೆ ಕೆಟ್ಟರಯ್ಯಾ.
ಅಂಧಕಂಗೆ ಚಂದಾದ ಮುಖವುಂಟೆ?
ಶೃಂಗಾರ ಪಂಗುಳಂಗೆ ಯೋಜನದ ಸುದ್ದಿಯಿಲ್ಲ.
ಲಿಂಗವನರಿಯದಂಗೆ ಜಗದ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./170
ಏಕಾಕಾಶದಿಂದ ಅಂಬು ಸಂಭ್ರಮಿಸಿತ್ತು.
ಬಹುವರ್ಣದ ಧರಿತ್ರಿಯಲ್ಲಿ, ಅವರವರ ವರ್ಣಛಾಯೆ ನಿಂದಿತ್ತು.
ಕೂಡಿ ವೇಧಿಸಿ ಚರಿಸಲಾಗಿ, ಒಂದೆ ಗುಣ ನಿಂದಿತ್ತು.
ಅದು ತಟಾಕದಲ್ಲಿ ಆಶ್ರಯಿಸಲಾಗಿ, ಸ್ತೋಮವಾಯಿತ್ತು.
[ಕೀಳಿನಲ್ಲಿ] ನಿಂದು ಜಾಳಿಸಲಾಗಿ, ಸ್ತೋಮ ಬಿಟ್ಟಿತ್ತು.
ಭಾವಿಸಿ ನೋಡಿಹೆನೆಂದಡೆ ಪ್ರಮಾಣವಿಲ್ಲ ಕಂಡಯ್ಯಾ.
ಇಂತೀ ಪ್ರಕಾರದಲ್ಲಿ ಜನಿಸಿದ ಪಿಂಡ ಹಿಂಗುವ ಠಾವಿನ್ನಾವುದೊ?
ಒಂದು ಚಕ್ರದಲ್ಲಿ ಜನಿಸಿದ ನಾನಾವರ್ಣದ ಕುಂಭಂಗಳಿಗೆ
ಸ್ಥೂಲ ಸೂಕ್ಷ್ಮದ ಅನ್ಯವ ಕಲ್ಪಿಸಲುಂಟೇ
ಒಂದೆ ಗುಣದ ಬಗೆಯಲ್ಲದೆ?
ಅಡಗಿದ ತತ್ವಂಗಳ ತತ್ವಮುದ್ದೆಯ ತುತ್ತನೊಲ್ಲದೆ ನಿಶ್ಚಯವಾದ, ನಿಃಕಳಂಕ ಮಲ್ಲಿಕಾರ್ಜುನಾ./171
ಏತದ ತುದಿಯಲ್ಲಿ ಕಟ್ಟಿದ ಮಡಕೆಯಂತೆ, ಅದ ನೀತಿವಂತರು ಮೆಟ್ಟಿ,
ಧರೆ ಪಾತಾಳದ ಉದಕವ ತಂದು ಪಾತ್ರೆಗೆ ಹರಹಿದ ತೆರದಂತೆ,
ಸರ್ವಮಯದಲ್ಲಿ ಒಪ್ಪಿಪ್ಪ ವಸ್ತುವನರಿಯದು, ನಿರ್ಜಾತನಾಗಬಲ್ಲಡೆ,
ಆತ್ಮನ ಜೀವನ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ./172
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು.
ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು.
ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ./173
ಐಕ್ಯ ಶರಣಸನ್ಮತವಾಗಿ, ಶರಣ ಪ್ರಾಣಸನ್ಮತವಾಗಿ,
ಪ್ರಾಣ ಪ್ರಸಾದಸನ್ಮತವಾಗಿ, ಪ್ರಸಾದ ಮಾಹೇಶ್ವರಸನ್ಮತವಾಗಿ,
ಮಾಹೇಶ್ವರ ಭಕ್ತಸನ್ಮತವಾಗಿ, ಆ ಭಕ್ತ ಸಮ್ಯಕ್ರೀ ಸನ್ನದ್ಧವಾಗಿ,
ಕ್ರೀಯಿಕ್ಕಿದ ಕಿಚ್ಚಿನಂತೆ, ಅರ್ಕ ಚಂದ್ರನಂತೆ, ಆರಾರ ಚಿತ್ತಕ್ಕೆ ಹೆಚ್ಚುಕುಂದಿಲ್ಲದೆ
ನಿಶ್ಚಿಂತನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ./174
ಐದು ವರ್ಣದ ಪಶುವಿನ ಬಸುರಿನಲ್ಲಿ, ಮೂರು ವರ್ಣದ ಕರು ಹುಟ್ಟಿ,
ಒಂದೇ ವರ್ಣದ ಹಾಲ ಸೇವಿಸಿ, ಹಲವು ಹೊಲದಲ್ಲಿ ತಿರುಗಾಡುತ್ತಿದ್ದಿತ್ತು.
ನಿಃಕಳಂಕ ಮಲ್ಲಿಕಾರ್ಜುನಲಿಂಗದ ಕುಳದ ಹೊಲಬುಗಾಣದೆ./175
ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ, ಸಂದೇಹಪದದಲ್ಲಿ ಅರಿವುದಿನ್ನೇನೋ?
ಒಂದನರಿತು, ಒಂದ ಮರೆತು, ಬೇರೊಂದ ಕಂಡಹೆನೆನುವ ಒಡಲದೇನೋ?
ಆ ದ್ವಂದ್ವವಳಿದು, ನಿಂದ ನಿಜವೆ ಸಂದೇಹಕ್ಕೆ ಒಡಲಿಲ್ಲ ನಿಂದುದು,
ಷಡುಸ್ಥಲಭರಿತ ಪರಿಪೂರ್ಣ ನಿಃಕಳಂಕ ಮಲ್ಲಿಕಾರ್ಜುನಾ./176
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು,
ಹೊಲಬುದಪ್ಪಿ ನುಡಿದವರ ನೋಡಾ.
ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ.
ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು.
ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ.
ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ?
ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು.
ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು.
ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು.
ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ?
ಬಲುಹು ಮುರಿದವಂಗೆ ರಣದ ಸುದ್ದಿಯೇಕೋ?
ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ?
ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ,
ಒಂದರಲ್ಲಿ ಕಡೆಗಾಣಿಸಿದ ಮತ್ತೆ
ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ,
ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ,
ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು.
ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ.
ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ,
ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ,
ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ. /177
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ.
ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು.
ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು.
ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು,
ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು,
ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ.
ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ.
ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ,
ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ,
ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ,
ಹೆಸರಿಡಬಾರದಯ್ಯಾ, ಆ ಜಂಗಮದಿರವ.
ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ./178
ಒಂದು ಬಾಲೆ ಕಂದನ ಹೊತ್ತು ಬಂದಿತ್ತು.
ಕಂದ ಹುಟ್ಟಿ, ಎಡದ ಕೈಯಲ್ಲಿ ಗಡಿಗೆ, ಬಲದ ಕೈಯಲ್ಲಿ ಕಟ್ಟಿಗೆ.
ಮಂಡೆಯ ಮೇಲೆ ಕಿಚ್ಚು ಸಹಿತವಾಗಿ ಅಟ್ಟುಂಬುದಕ್ಕೆ ನೆಲಹೊಲನ ಕಾಣದೆ,
ತಿಟ್ಟನೆ ತಿರುಗಿ, ಗಟ್ಟದ ಒತ್ತಿನಲ್ಲಿ, ಕಟ್ಟಕಡೆಯಲ್ಲಿ,
ಒಂದು ಬಟ್ಟಬಯಲು ಮಾಳವಿದ್ದಿತ್ತು.
ಕೈಯಕಂದನನಿರಿಸಿ ಕಟ್ಟಿಗೆಯ ಹೊರೆಯ ಕಟ್ಟ ಬಿಟ್ಟು,
ಮಸ್ತಕದ ಬೆಂಕಿಯ ಕಟ್ಟಿಗೆಯ ಒತ್ತಿನಲ್ಲಿರಿಸಿ,
[ಒತ್ತಿನ ಕಾಲ] ಕಾಣದೆ ಹೊಲಬುದಪ್ಪಿ, ಆ ಹೊಲದೊಳಗೆ ತಿರುಗಿನೋಡಿ,
ಪಶ್ಚಿಮದಲ್ಲಿ ಕಂಡ ಪಚ್ಚೆಯ ಕಲ್ಲ, ಉತ್ತರದಲ್ಲಿ ಕಂಡ ಪುಷ್ಕರದಲ್ಲಿ ಕಲ್ಲ,
ಪೂರ್ವದಲ್ಲಿ ಕಂಡ ಬಿಳಿಯಕಲ್ಲ ಮೂರೂ ಕೂಡಿ,
ಮಡಕೆಯ ಮಂಡೆಯ ಮೇಲಿರಿಸಲಾಗಿ, ಕಂಡಿತ್ತು ಕಲ್ಲಿನ ಇರವ.
ಉದಕವನರಸಿ ಅ[ಳಲು] ತ್ತಿರ್ದಿತ್ತು [ಬೆಂಕಿ.ಆ] ಬೆಂಕಿ ಬೇಗೆಗಾರದೆ,
ಉದಕ ಒಡೆದು ಮಡಕೆ ನಿಂದಿತ್ತು.
ನಿಂದ ಮಡಕೆಯ ಅಂಗವ ಕಂಡು, ಇದರ ಹಂಗೇನೆಂದು ಕೈ ಬಿಡಲಾಗಿ,
ಮಡಕೆಯಡಗಿತ್ತು ಮೂರುಕಲ್ಲಿನ ಮಧ್ಯದಲ್ಲಿ
ಕಟ್ಟಿಗೆ ಸುಟ್ಟ [ವನ] ಮಕ್ಕಳುಂಡರು ಮಿಕ್ಕವರೆಲ್ಲಾ ಹಸಿದರು.
ಹಸಿದವರ ಸಂಗ ಗಸಣೆಗೊಳಿಸಿತ್ತು.
ಇಂತೀ ಹುಸಿಯ ದೇಹವ ತೊಟ್ಟು ದೆಸೆಗೆಟ್ಟೆನಯ್ಯ,
ನಿಃಕಳಂಕ ಮಲ್ಲಿಕಾರ್ಜುನಾ./179
ಒಂದು ಬೀಜವ ಬಿತ್ತಿದಡೆ ಮೂರುಫಲವಾಯಿತ್ತು.
ಆ ಫಲ ಬಲಿದು ಬೆಳೆದ ಮತ್ತೆ,
ಒಂದ ಉದಯದಲ್ಲಿ ಕೊಯ್ದೆ, ಒಂದ ಮಧ್ಯಾಹ್ನದಲ್ಲಿ ಕೊಯ್ದೆ,
ಒಂದ ಹೊತ್ತು ಸಂದ ಮತ್ತೆ ಕೊಯ್ದೆ.
ಈ ಮೂರರೆಯನೊಂದು ಮಾಡಿ ಮೆಟ್ಟಿಸಿದೆ.
ಭಕ್ತಿಜ್ಞಾನವೈರಾಗ್ಯವೆಂಬ ಎತ್ತಿನ ಕೈಯಲ್ಲಿ ತೂರಿದೆ ಕೊಂಗವನೆತ್ತಿ
ಅಂಗವೆಂಬ ಹೊಳ್ಳು ಹಾರಿತ್ತು.
ಸಂಸಾರವೆಂಬ ಚೊಳ್ಳು ನಿತ್ಯಾನಿತ್ಯ ವಿವೇಕವೆಂಬ ಕೊಳಗವ ಹಿಡಿದಳೆಯಲಾಗಿ,
ನೂರೊಂದು ಕೊಳಗವಾಯಿತ್ತು.
ಹೆಡಗೆಗೆ ಅಳವಡಿಸುವಾಗ ಐವತ್ತೊಂದು ಕೊಳಗವಾಯಿತ್ತು.
ನಡುಮನೆಯಲ್ಲಿ ಸುರಿವಾಗ ಇಪ್ಪತ್ತೈದು ಕೊಳಗವಾಯಿತ್ತು.
ಪಡುವಣ ಕೋಣೆಯಲ್ಲಿ ಮಡಗಿರಿಸುವಾಗ,
ಪಡಿಯ ನೋಡಲಾಗಿ ಐಗಳವಾಯಿತ್ತು.
ಅದು ಬಿಡುಬಿಸಿಲಿನಲ್ಲಿ ಒಣಗೆ, ಅದು ಪಡಿಪುಚ್ಚಕ್ಕೆ ಮೂಗಳವಾಯಿತ್ತು.
ಆ ಮೂಗಳವ ನಡುಮೊರದಲ್ಲಿ ಸುರಿಯೆ,
ಪಡಿಗಣಿಸುವಾಗ ಒಕ್ಕುಳವಾಯಿತ್ತು.
ಈ ಒಕ್ಕುಳವ ಕುಟ್ಟಿ, ಮಿಕ್ಕುದ ಕೇರೆ ಮತ್ತೆ ಒಬ್ಬಳವಾಯಿತ್ತು.
ಒಬ್ಬಳವ ಕುಡಿಕೆಯಲ್ಲಿ ಹೊಯ್ದು ನಿರುತದಿಂ ನೋಡೆ,
ಮೂರು ಮಾನವ ನುಂಗಿ, ಒಂದು ಮಾನವಾಯಿತ್ತು.
ಒಂದು ಮಾನವನಟ್ಟು ಕುಡಿಕೆಯಲ್ಲಿ ಕುಸುರೆ
ಕೂಳೊಡೆದು ಬಾಲಗೋಗರವಾಯಿತ್ತು.
ಉಂಡವರತ್ತ, ನಾನಿತ್ತ ನಿಃಕಳಂಕ ಮಲ್ಲಿಕಾರ್ಜುನಾ./180
ಒಂದು ಮೂರಾದ ಭೇದವ, ಮೂರು ಆರಾದ ಭೇದವ,
ಆರು ಇಪ್ಪತ್ತೈದಾದ ಭೇದವ, ಇಪ್ಪತ್ತೈದು ನೂರೊಂದಾದ ಭೇದವ,
ಒಂದನರಿಯದ ಯೋಗಿಗಳ ಪಾಶವನಳೆವ ತೆರದಂತೆ,
ಆ ನೂರೊಂದು ಇಪ್ಪತ್ತೈದರಲ್ಲಿ ಅಡಗಿತ್ತು.
ಆ ಇಪ್ಪತ್ತೈದು ಆರರಲ್ಲಿ ಅಡಗಿತ್ತು.
ಆ ಆರು ಮೂರರಲ್ಲಿ ಅಡಗಿತ್ತು, ಆ ಮೂರು ಒಂದರಲ್ಲಿ ಸಂದಿತ್ತು.
ಆ ಒಂದು ಸಂದೇಹವಳಿಯಿತ್ತು.
ಇದರಂದವನಾರು ಬಲ್ಲರಯ್ಯಾ?
ಸಂದೇಹದಲ್ಲಿ ಬಿದ್ದು, ಲಿಂಗವನರಿಯದೆ ಭಂಗಿತರಾದರಯ್ಯಾ,
ಆಗಮಕ್ಕತೀತ ಆನಂದ ದಾವಾನಲ, [ಭ]ವರಹಿತ
ನಿಃಕಳಂಕ ಮಲ್ಲಿಕಾರ್ಜುನಾ./181
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ.
ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ,
ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು.
ಇಂತೀ ಕಡುಗಲಿಯ ದೇವನೆಂಬರು ನೋಡಾ.
ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ.
ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ.
[ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ.
ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ].
ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ.
ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ.
ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ.
ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ,
ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ.
ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ./182
ಒಡಗೂಡಿಪ್ಪ ಲಿಂಗವನರಿಯದೆ ಅಡಿಯಿಟ್ಟು,
ಪೊಡವಿಯೊಳಗಣ ಅಡವಿ ಗಿಡುಗಳಲ್ಲಿಪ್ಪ ಮೃಡಾಲಯಮಂ ಕಂಡು, ಪೊಕ್ಕು
ಸಡಗರಿಸಿಕೊಂಡು ವರವ ಹಡೆವೆನೆಂದು ಬೇಡುವುದು ಕುರಿತು,
ಅದು ಜರಿದು ಬೀಳೆ, ಕೊಟ್ಟ [ನೆ]ರವನೆಂದು ನಿಶ್ಚಯ ಮಾಡಿದ ಮತ್ತೆ,
ಸಾವರ ಕಂಡು ಅಚ್ಚುಗಬಡುತ್ತಿದ್ದೇನೆ.
ಇವರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ? /183
ಒಡಲಿಲ್ಲದ ಭಕ್ತಂಗೆ ನಿರ್ಜೀವಿ ಜಂಗಮ ಸುಳಿದ ನೋಡಯ್ಯಾ.
ಆ ಜಂಗಮ ಸುಳಿದಡೆ, ಆ ಭಕ್ತನೋಡಲು ತುಂಬಿ ಜೀವವಾಯಿತ್ತು.
ಆ ಜಂಗಮದ ಭೇದವನರಿಯಲಾಗಿ,
ಆ ಜೀವವಳಿದು, ನೀ ನಾನೆಂಬ ಭಾವಕ್ಕೆ ನೆಲೆಯಾಯಿತ್ತು.
ಆ ಜಂಗಮದ ಕಳಾಪರಿಪೂರ್ಣವನರಿಯಲಾಗಿ,
ಆ ಭಾವ ಮಹತ್ವವನೊಳಕೊಂಡಿತ್ತಯ್ಯಾ.
ಆ ಒಳಕೊಂಡ ಮಹತ್ವವೆ ಮಹದೊಡಗೂಡಿ ಹೋಯಿತ್ತು.
ಹೋದ ಮತ್ತೆ ನಾ ನೀನೆಂಬುದಿಲ್ಲ. ನಿಃಕಳಂಕ ಮಲ್ಲಿಕಾರ್ಜುನಾ./184
ಒಡಲಿಲ್ಲದೆ ಆತ್ಮನಿರಬಲ್ಲುದೆ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ?
ಭಾವವಿಲ್ಲದೆ ವಸ್ತು ಈಡಪ್ಪುದೆ?
ಒಂದರಾಸೆಯಲ್ಲಿ ಒಂದ ಕಂಡು, ದ್ವಂದ್ವನೊಂದು ಮಾಡಿ,
ಒಂದೆಂಬುದನರಿತು, ಪ್ರಾಣಕ್ಕೆ ಸಂಬಂಧವ ಮಾಡಿ,
ಕೂಡಿಯಿದ್ದುದು ಪ್ರಾಣಲಿಂಗ.
ಆ ಉಭಯದ ಸಂದಳಿದುದು, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./185
ಒಡೆಯರ ಕಟ್ಟಳೆಯಾದ ಮತ್ತೆ,
ಒಡಗೂಡಿ ಸಹಪಂಙ್ತಿಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ,
ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ,
ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ?
ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ,
ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ,
ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ.
ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು,
ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು?
ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ?
ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ],
ನಿಃಕಳಂಕ ಮಲ್ಲಿಕಾರ್ಜುನಾ?/186
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ.
ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ.
ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ.
ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ.
ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ,
ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ./187
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ.
ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ.
ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ.
ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ.
ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ?
ಅರಿವುದೆ ಮರವೆ, ಮರೆವುದೆ ಅರಿವು.
ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ?
ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ.
ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./188
ಒಳಲೆಯಲಟ್ಟಿದ ಹಾಲು, ಆ ಮಗುವಿನ ತಳದ ಏಣಲೆ ಕುಡಿಯಿತ್ತು.
ಬೆಟ್ಟಿನಲ್ಲಿಕ್ಕಿದ ತುಪ್ಪವ, ಆ ಮಗುವಿನ ಪಿಟ್ಟವೆ ತಿಂದಿತ್ತು.
ಬೆಣ್ಣೆಯ ಮಡಕೆಯ ನೊಣ ನುಂಗಿತ್ತು.
ನುಂಗಿದ ನೊಣದ ಹಿಂದೆ ಹಿಡಿಯಲಾಗಿ,
ಉಗುಳದು ಬೆಣ್ಣೆಯ, ಕೊಡದು ಮಡಕೆಯ
ಇದರಗಡುತನವ ನೋಡಾ, ಅದ ಹಿಡಿದು ಕೊಡಾ,
ನಿಃಕಳಂಕ ಮಲ್ಲಿಕಾರ್ಜುನಾ./189
ಓ ಎಂದಲ್ಲಿ ನಿರಾಕಾರವಸ್ತುವಾದೆಯಲ್ಲಾ,
ಓಂ ಎಂದಲ್ಲಿ ಸಾಕಾರವಸ್ತುವಾದೆಯಲ್ಲಾ.
ತತ್ತ ್ವಮಸಿಯೆಂದಲ್ಲಿ ತತ್ವರೂಪಾಗಿ,
ಜಗವ ರಕ್ಷಿಸಿಹೆನೆಂದು ಕರ್ತೃರೂಪಾದೆಯಲ್ಲಾ.
ನಿಮಗೆ ಮರ್ತ್ಯದ ಮಣಿಹ ಎಲ್ಲಿ[ಯ] ಪರಿಯಂತರ, ಎನಗೆ ಕಟ್ಟುಗುತ್ತಗೆಯೆ?
ನಾ ಕಟ್ಟಿಗೆಯ ಹೊತ್ತೆ, ಶಿವಭಕ್ತರ ಮನೆಗೆ.
ನೀವು ಕೊಟ್ಟ ಕಾಯಕದ ಕೃತ್ಯ, ಇನ್ನೆಷ್ಟುದಿನ ಹೇಳಾ,
ನಿಃಕಳಂಕ ಮಲ್ಲಿಕಾರ್ಜುನಾ./190
ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ, ಪಾಠದಲ್ಲಿ ಕಾಬಡೆ ಗಂಧರ್ವನಲ್ಲ.
ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ.
ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ.
ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ./191
ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ, ಪಾಠದಲ್ಲಿ ಕಾಬಡೆ ಗಂಧರ್ವನಲ್ಲ.
ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ.
ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ.
ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ./192
ಔದುಂಬರದ ಕುಸುಮದಲ್ಲಿ ಪಾದರಿ ಫಲವಾಗಿ,
ಆ ಫಲಬಿಂದು ಎಲವದ ಮರದಲ್ಲಿ ಹಣ್ಣಾಯಿತ್ತು.
ಆ ಹಣ್ಣನೊಡೆದು ನೋಡಲಾಗಿ, ರಸವಿಲ್ಲದೆ ತುಷಾರ ಹಾರಿತ್ತು.
ಇಂತೀ ಅಂಗವಿದ್ದು, ನಿರಂಗವಾಗಬಲ್ಲಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವನೆಂಬೆ./193
ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ ?
ಅದರ ಸಂಚವ ಕಂಚಗಾರನೆ ಬಲ್ಲ.
ಸಂಚಿತಕರ್ಮ ಪ್ರಾರಬ್ಧವೆಂಬಿವ ಮುಂದಕ್ಕೆ ನಾನೇನ ಬಲ್ಲೆ.
ಹಿಂಗಿದ್ದ ದೇಹದ ಸಂಚವನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ./194
ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ?
ಅದರ ಸಂಚವ ಕಂಚಗಾರನೆ ಬಲ್ಲ.
ಸಂಚಿತಕರ್ಮ ಪ್ರಾರಬ್ಧವೆಂಬಿವ ಮುಂದಕ್ಕೆ ನಾನೇನ ಬಲ್ಲೆ.
ಹಿಂಗಿದ್ದ ದೇಹದ ಸಂಚವನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ./195
ಕಂಡು ನೋಡಿದಲ್ಲಿ ಕಂಗಳಿಗೆ ಸುಖ, ಉಂಡು ನೋಡಿದಲ್ಲಿ ಜಿಹ್ವೆಗೆ ಸುಖ,
ಮುಟ್ಟಿ ನೋಡಿದಲ್ಲಿ ತ್ವಕ್ಕಿಗೆ ಸುಖ.
ಮುಖಮುಖಂಗಳಲ್ಲಿ ಭಿನ್ನವಿಲ್ಲದೆ, ಅರ್ಪಿತಾವಧಾನ ಏಕಮುಖವೆಂದೆ.
ಜಾತಿಗೆ ಬೇರೆ ಹರುಗೋಲುಂಟೆ ? ಆಚಾರಕ್ಕೆ ಬೇರೆ ಕುಲಛಲವುಂಟೆ ?
ಶಿಲೆ ಹಲವು ರೂಪಾದ ತೆರನಂತೆ,
ಅವರ ಒಲವರದ ರೂಪು ಅವರ ಛಲದ ಗುಣ.
ಬಳಿಕೆವಂತರೆಲ್ಲ ನಳಕೆಯ ಕೀರನಂತೆ, ಅವರರಿದಾಗ ಅರಿವಲ್ಲ,
ನಾ ನುಡಿದ ತಪ್ಪನೊಪ್ಪುಗೊಳ್ಳಾ, ನಿಃಕಳಂಕ ಮಲ್ಲಿಕಾರ್ಜುನಾ./196
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ಮಸ್ತುವ.
ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು.
ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ?
ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು,
ಹೊಡೆವಡೆ ಕೈಯೊಳಗಲ್ಲ.
ಇದರ ಕೂಟ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./197
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ.
ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು.
ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ?
ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು,
ಹೊಡೆವಡೆ ಕೈಯೊಳಗಲ್ಲ.
ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./198
ಕಂಡೆನೊಂದು ನೆಟ್ಟ ಶೂಲವ, ಮೊದಲೊಂದು, ತುದಿಮೂರು.
ಆ ಮೂರರ ತುದಿಯಲ್ಲಿ ಆರು ಸೂನಗೆ.
ಆರು ಸೂನಗೆಯ ಮೇಲೆ ಇಪ್ಪತ್ತೈದು ಹೆಣ ತೆಗೆಯಿತ್ತು.
ಹೆಣನೂದಿ ರುಧಿರ ಸುರಿಯಲಾಗಿ, ಅದರ ಭಾರ ತಾಗಿ, ಸೂನಗೆ ಮುರಿಯಿತ್ತು.
ಸೂನಗೆ ಕಾಣಬಾರದು, ಹೆಣ ಬಯಲಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./199
ಕಂಥಯೊಳಗಣ ಕಪ್ಪ[ಡ]ವ ಹರಿದಲ್ಲದೆ ಕಾಯವಂಚಕನಲ್ಲ.
ಕಟ್ಟಿಗೆಯೊಳಗಣ ಗಣ್ಣ ಮುರಿದಲ್ಲದೆ ಕರ್ಮರಹಿತನಲ್ಲ.
ಕಪ್ಪರದೊಳಗಣ ಆಪ್ಯಾಯನವನೊಡದಲ್ಲದೆ [ಜೀ]ವಭಾವಕನಲ್ಲ.
ಕಣ್ಣೊಳಗಣ ಕಾಳಿಕೆ ಹಿಂಗಿಯಲ್ಲದೆ ಜ್ಞಾನಭಾವುಕನಲ್ಲ.
ಮಾಯೆಯೊಳಗಣ ಕಂಥೆಯಹರಿದು, ಕಾಯದೊಳಗಣ ಕಟ್ಟಿಗೆಯ ಮುರಿದು,
ಮನದೊಳಗಣ ಕಪ್ಪರವನೊಡೆದು, ಸೂಸಿ ಸುಳಿದಾಡುವ ಕಣ್ಣ ಕಿತ್ತು,
ನಿಶ್ಚಯದ ನಿಜದಲ್ಲಿ ಚ[ರಿ]ಸುವ ಜಂಗಮಕ್ಕೆ ನಮೋ ನಮೋ [ಎಂಬೆ],
ನಿಃಕಳಂಕ ಮಲ್ಲಿಕಾರ್ಜುನಾ./200
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ,
ಅಳಲುತ್ತ ಬಳಲುತ್ತಲೈದಾರೆ.
ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ.
ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು.
ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ.
ವಿಷ್ಣುವಿನ ನಾಭಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ.
ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು.
ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ.
ಕುರಿ ಸಾಯದು, ಕಂಬಳಿ ಹರಿಯದು.
ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ/201
ಕಂಬಳಿಯಲ್ಲಿ ಕೂಳ ಕಟ್ಟಿ, ಕೂದಲ ಸೋದಿಸಬಹುದೆ ಅಯ್ಯಾ ?
ಸಂಸಾರಕ್ಕಂಗವನಿತ್ತು, ಮೋಹಕ್ಕೆ ಮನವವಿತ್ತು,
ಮನುಜರ ಗುಣ ತಮಗೊಂದೂ ಬಿಡದೆ,
ಘನವನರಿತೆಹೆನೆಂಬ ಬಿನುಗಾಟದ ಮಾತೇಕೆ ?
ಹಸಿವು ತೃಷೆ ವ್ಯಸನ ವ್ಯಾಪ್ತಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಯವಾಗುತ್ತಿರ್ದು,
ದ್ವೈತಾದ್ವೈತದ ಮಾತಿನ ಬಣಬೆಯ ವೇಷಗಳ್ಳಗೇಕೆ ಪರದೇಶಿಗನ ಸುದ್ದಿ ?
ಅರಿದವನ ಅಂಗ ದಗ್ಧಪಟದಂತೆ, ಬೆಂದ ನುಲಿಯಂತೆ,
ಬೆಳಗಿನ ರೂಪಿನಂತೆ, ಉದಕದ ಪ್ರತಿಬಿಂಬದಂತೆ,
ಅದು ತೋರಲಿಲ್ಲವಾಗಿ, ಅದು ಅಂಗಲಿಂಗಪ್ರಾಣಸಂಯೋಗ,
ನಿಃಕಳಂಕ ಮಲ್ಲಿಕಾರ್ಜುನಾ./202
ಕಕ್ಷದಲ್ಲಿ ಅಂಗವ ಧರಿಸಿದ ಮತ್ತೆ ಕುಕ್ಷಿಯ ವರ್ತನೆ ಬಿಡಬೇಕು.
ಕರಸ್ಥಲದಲ್ಲಿ ಲಿಂಗವ ಧರಿಸಿದ ಮತ್ತೆ ಪರದ್ರವ್ಯಕ್ಕೆ ಕೈಯಾನದಿರಬೇಕು.
ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮತ್ತೆ ಮರ್ತ್ಯರುಗಳಿಗೆ ನೆಟ್ಟನೆ ಇರಬೇಕು.
ಅಮಳೋಕ್ಯದಲ್ಲಿ ಲಿಂಗವ ಧರಿಸಿದ ಮತ್ತೆ ತುತ್ತಿನಿಚ್ಫೆಯ ಬಿಡಬೇಕು.
ಉರಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಪರಸ್ತ್ರೀಯರ ಸಂಗವ ಬಿಡಬೇಕು,
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಸಕಲಗುಣವನರಿಯಬೇಕು.
ಇಂತಿವನರಿಯದೆ ಸತ್ಕ್ರಿಯೆಯಲ್ಲಿ ನಡೆವ ನಡೆ ಎಂತುಟಯ್ಯಾ ?
ಭಕ್ತನಾದ ಮತ್ತೆ ಮರ್ತ್ಯರ ಸಂಗ ಬಿಡಬೇಕು.
ಮಾಹೇಶ್ವರನಾದ ಮತ್ತೆ ಮಹಾವಿಚಾರವ ತಿಳಿಯಬೇಕು.
ಪ್ರಸಾದಿಯಾದ ಮತ್ತೆ ಪರದೂಷಣೆಯ ಕೇಳದಿರಬೇಕು.
ಪ್ರಾಣಲಿಂಗಿಯಾದಮತ್ತೆಜಾಗ್ರ ಸ್ವಪ್ನಸುಷುಪ್ತಿಯಲ್ಲಿ ಮತ್ತತ್ವವಿಲ್ಲದಿರಬೇಕು.
ಶರಣನಾದ ಮತ್ತೆ ಸರ್ವಾವಧಾನಿಯಾಗಿರಬೇಕು.
ಐಕ್ಯನಾದ ಮತ್ತೆ ಸತ್ತುಚಿತ್ತಾನಂದವೆಂಬ ತ್ರಿವಿಧದ ಗೊತ್ತು ಮುಟ್ಟದಿರಬೇಕು.
ಹೀಂಗಲ್ಲದೆ ಷಟ್ಸ್ಥಲಕ್ಕೆ ಸಲ್ಲ, ಪರಬ್ರಹ್ಮಕ್ಕೆ ನಿಲ್ಲ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೆಪವಾದ ಶರಣ./203
ಕಕ್ಷೆ, ಕರಸ್ಥಲ, ಉತ್ತಮಾಂಗ, ಉರಸೆಜ್ಜೆ, ಮುಖಸೆಜ್ಜೆ, ಅಮಳೋಕ್ಯ,
ಇಂತೀ ಷಟ್ಸ್ಥಾನ ಲಿಂಗಸಂಬಂಧವೆಂಬ ಅಂಗಹೀನರ ಮುಖವ ನೋಡಲಾಗದು.
ಉಂಗುಷ್ಠದಲ್ಲಿ ಸರ್ಪ ದಷ್ಟವಾದಡೆ, ದೇಹವೆಲ್ಲ ತದ್ವಿಷವಾದ ತೆರೆದಂತೆ,
ಆ ತೆರ ಸರ್ವಾಂಗಲಿಂಗಿಗೆ ಉಂಟಿಲ್ಲವೆಂಬುದ ನೀವೆ ಬಲ್ಲಿರಿ.
ಇದು ಕಾರಣ, ವಿಷಕ್ಕೆ ಸ್ಥಾಪ್ಯವಿಲ್ಲ, ಸರ್ವಾಂಗಲಿಂಗಿಗೆ ಷಟ್ಸ್ಥಾನವಿಲ್ಲ.
ಇಂತೀ ವ್ಯರ್ಥರು ಕೆಟ್ಟ ಕೇಡ ನೋಡಿ ದೃಷ್ಟವಾಗಿ,
ಎನಗೆ ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ./204
ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ.
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ.
ತಿಂಬ ಹುಲಿಗೆ ಅಂಗವ ತಪ್ಪಿಸುವುದ ಕಲಿಸಿದುದಿಲ್ಲ.
ಇದು ನಿನಗೆ ದಿಂಡೆಯತನವೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ ?/205
ಕಟ್ಟರಸಿನೊ[ಡನೆ] ಎಕ್ಕಸಕ್ಕವನಾಡಿದಡೆ,
ಅವರು ಮುತ್ತಿ ಮುಸುರಿ ಹಿಕ್ಕದೆ ಬಿಡುವರೆ, ಅಸುವಿನೊಡೆಯರು ?
ಮರ್ಕಟಬುದ್ಧಿಯಲ್ಲಿ ತಪ್ಪಿ ನುಡಿದಡೆ, [ಅದ] ಒಪ್ಪವಿಟ್ಟುಕೊಳ್ಳಾ,
ನಿಃಕಳಂಕ ಮಲ್ಲಿಕಾರ್ಜುನಾ./206
ಕಟ್ಟಿ ಬಿಟ್ಟು ಕಂಡೆಹೆವೆಂದು ಬಿಗಿದಿಪ್ಪರಂತೆ ಕೆಲ[ವರು].
ಕಣ್ಣು ಮುಚ್ಚಿ ಧ್ಯಾನದಿಂದರಿದು ನಿಂದಿಹೆವೆಂದು ಕೆಲ[ವರು].
ಜಪತಪ ನೇಮದಿಂದ ತಿರುಹಿ ಕಂಡೆಹೆವೆಂದು ಕೆಲ[ವರು].
ವೇದ ಶಾಸ್ತ್ರ ಆಗಮವ ನೋಡಿ ಕಂಡೆಹೆವೆಂದು ಕೆಲ[ವರು].
ಮಾಡಿ ನೀಡಿ ಕೊಟ್ಟುಕೊಂಡು ಸುಖಿಯಾಗಿ ನಿಂದಿಹೆವೆಂದು [ಕೆಲವರು].
ಕರ್ತೃ ಭೃತ್ಯರಾದೆಹೆವೆಂದು [ಕೆಲವರು].
ಲೋಕವೆಲ್ಲ ಕೆಟ್ಟು, ಮುನ್ನಾದಿಯಲ್ಲಿ ಆದ ಲಿಂಗ,
ಇದೆ ಸಾಮ್ಯಕೃತ್ಯವೆಂದು ಭೇದಿಸುವುದಕ್ಕೆ
ಅತೀತನಾದ ಶೂನ್ಯಲಿಂಗ. ಅನ್ಯಸಾಧ[ಕ]ಕ್ಕೆ ಸಿಕ್ಕದಿಪ್ಪ ಅನಾಗತ ಸಂಸಿದ್ಧಲಿಂಗವನು,
ತನ್ನನರಿದು ಇದಿರ ಕಂಡಡೆ, ಪ್ರಾಣಲಿಂಗವದೇಕೊ ?
ಏನೂ ಎನ್ನದೆ, ಅದೆಂತೂ ಎನ್ನದಿರ್ಪ
ನಿಃಕಳಂಕ ಮಲ್ಲಿಕಾರ್ಜುನ ತಾನೆ ಬಲ್ಲ./207
ಕಟ್ಟಿಗೆ ಕಸ ನೀರ ಹೊತ್ತು ಭಕ್ತರನ್ನಲ್ಲದೆ ಬೇಡೆನೆಂದು,
ಅವರು ಕರ್ತೃ, ನಾನು ತೊತ್ತೆಂದು, ಅವರು ಒಕ್ಕುದನಿಸಿಕೊಂಡು ಬಂದು,
ತನ್ನ ಕೃತ್ಯದ ನೇಮ ತಪ್ಪದೆ,
ಆಗವೆ ತನ್ನ ಸತಿ ಸುತ ಬಂಧು ದೇವರು ಮುಂತಾಗಿ
ಲಿಂಗಾರ್ಚನೆ ಮಾಡಬೇಕಲ್ಲದೆ,
ಇಂದಿಂಗೆ ನಾಳಿಂಗೆಂದು ಸಂದೇಹವ ಮಾಡಿದಡೆ,
ಲಿಂಗಕ್ಕೆ ದೂರ, ಜಂಗಮಕ್ಕೆ ಸಲ್ಲ, ಪ್ರಸಾದವಿಲ್ಲ.
ಇದಕ್ಕೆ ಸೋಲ ಬೇಡ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆ ಸಾಕ್ಷಿ./208
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ.
ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ.
ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ.
ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ,
ನಿಃಕಳಂಕ ಮಲ್ಲಿಕಾರ್ಜುನಾ./209
ಕಣ್ಣಿನಲ್ಲಿ ನೋಡಿ ಕಂಡೆಹೆನೆಂದಡೆ ರೂಪಿಂಗೊಡಲಿಲ್ಲ.
ಕೈಯಲ್ಲಿ ಮುಟ್ಟಿ ಕಂಡೆಹೆನೆಂದಡೆ ನೆಟ್ಟಗೂಟವಲ್ಲ.
ಮನದಲ್ಲಿ ನೆನೆದು ಕಂಡೆಹೆನೆಂದಡೆ ಅನುವಿಂಗಗೋಚರ,
ಈ ಅನುಪಮಲಿಂಗವಾರಿಗೂ ಸಾಧ್ಯವಿಲ್ಲ.
ಘನಮಹಿಮ ನೀವೆ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ./210
ಕಣ್ಣಿಲ್ಲದವ ಕನ್ನಡಿಯ ನೋಡಿ ಕಂಡ.
ಬಾಯಿಲ್ಲದವ ಹೊಟ್ಟೆ ತುಂಬ ಉಂಡು ದಣಿದ.
ತಾನಿದ್ದು ಸತ್ತ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಗೆ
ಹೊದ್ದಿ ಹೋಗುತ್ತಿರ್ದ./211
ಕಣ್ಣಿಲ್ಲದವಂಗೆ ಬಣ್ಣಬಚ್ಚಣೆಯೇಕೆ ?
ಮನ್ನಣೆಯಿಲ್ಲದ ಠಾವಿನಲ್ಲಿ ಅಣ್ಣ ಅಪ್ಪ ಎನಲೇಕೆ ?
ನನ್ನಿಯ ಗುಣವಿಲ್ಲದಲ್ಲಿಗೆ, ಪನ್ನಗಧರನ ಶರಣರು ಮತ್ತಲ್ಲಿಗೆ ಹೋದಡೆ,
[ಕಾಲಿಗೆ] ತಾಗಿದ ಸರ[ಳ]ಕಂತಾಯಿತ್ತು.
ಬಲ್ಲವರಿಗೆ ಇದೇ ಗುಣವೆಂದೆ, ಪ್ರಾಣವಲ್ಲಭ
ನಿಃಕಳಂಕ ಮಲ್ಲಿಕಾರ್ಜುನಾ./212
ಕಣ್ಣು ಕಳೆದು ದೃಷ್ಟಿ ಕಾಬುದ ಕಂಡೆ.
ಬಯಲು ಬಡಿವಡೆಯಿಸಿಕೊಂಡು, ಬಂಧನದಲೊಡಗೂಡುವುದ ಕಂಡೆ.
ಈ ಅಂಗವನೂ ನಿರಂಗವನೂ ಉಭಯಭಾವವಳಿದು ತಿಳಿಯಲಾಗಿ,
ನಿಃಕಳಂಕ ಮಲ್ಲಿಕಾರ್ಜುನಲಿಂಗ, ತನ್ನೊಳಗಾದ ಚೋದ್ಯ./213
ಕತ್ತಲೆಯ ಉದಕದಲ್ಲಿ ಮತ್ಸ್ಯ ಹುಟ್ಟಿದುದ ಕಂಡೆ.
ಮತ್ಸ್ಯಕ್ಕೆ ಮೂರು ಗರಿ, ಮರಿಗೆ ಆರು ಗರಿ.
ಮರಿ ಮತ್ಸ್ಯವ ನುಂಗಿತ್ತೊ ? ಅದು ತಾಯ ಬಸುರಲ್ಲಿ ಬಸರಿಕ್ಕಿತ್ತೊ ?
ಕೆರೆಯೊಡೆದು ಇಹುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./214
ಕತ್ತಿಯನೆತ್ತಿ ಕೊಲೆಗೆಣಿಸಿದಡೆ,
ಕಲ್ಪಿತವ ತೊಡುವುದು ಕತ್ತಿಯೋ, ಹೊತ್ತವನೋ ?
ಈ ಉಭಯದ ಚಿತ್ರವನರಿದಡೆ,
ಆತ ಮುಕ್ತಿಗೆ ಹೊರಗು, ನಿಃಕಳಂಕ ಮಲ್ಲಿಕಾರ್ಜುನಾ./215
ಕತ್ತೆ ಬತ್ತಲೆ ಇದ್ದಡೆ ನೆಟ್ಟನೆ ನಿರ್ವಾಣಿಯೆ ?
ಹುಚ್ಚ ಹೊಟ್ಟೆಗೆ ಕಾಣದೆ, ಎತ್ತಲೆಂದರಿಯದೆ,
ಮರ್ತ್ಯದೊಳಗಿರ್ದಡೆ ನಿಶ್ಚಟ ವಿರಕ್ತನೆ ?
ಇಂತಿವರ ತತ್ತುಗೊತ್ತ ಬಲ್ಲವಂಗೆ ಇನ್ನೆತ್ತಣ ಭಕ್ತಿ ವಿರಕ್ತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ ?/216
ಕತ್ತೆ, ಕರ್ಪುರವ ಬಲ್ಲುದೆ ? ನಾಗ, ನಾಣ್ಣುಡಿಯ ಬಲ್ಲುದೆ ?
ನಾಯಿ, ಸುಭಕ್ಷ್ಯವ ಬಲ್ಲದೆ ? ಮಕ್ಷಿಕ, ಗಂಧವ ಬಲ್ಲುದೆ ?
ಹುಟ್ಟುಗೊಡ್ಡು, ಮಕ್ಕಳ ಗರ್ಭವ ಬಲ್ಲುದೆ ?
ಜಗದಲ್ಲಿ ಹೊತ್ತುಹೊರುವ ಮಿಥ್ಯವಂತರಿಗೆ ತತ್ವದ ಶುದ್ಧಿಯ ಹೇಳಿದಡೆ,
ನಿತ್ಯರುದ್ರನಾದಡೂ ತಪ್ಪದು ನರಕ, ನಿಃಕಳಂಕ ಮಲ್ಲಿಕಾರ್ಜುನಾ./217
ಕದ್ದ ಕಳವ ಮರೆಸಿಕೊಂಡು, ನಾ ಸಜ್ಜನನೆಂಬಂತೆ,
ಇದ್ದ ಗುಣವ ನೋಡಿ, ಹೊದ್ದಿ ಸೋದಿಸಲಾಗಿ,
ಕದ್ದ ಕಳವು ಕೈಯಲ್ಲಿದ್ದ ಮತ್ತೆ, ಸಜ್ಜನತನವುಂಟೆ ?
ಇಂತೀ ಸಜ್ಜನಗಳ್ಳರ ಕಂಡು ಹೊದ್ದದೆ ಹೋದ,
ನಿಃಕಳಂಕ ಮಲ್ಲಿಕಾರ್ಜುನ./218
ಕಪ್ಪೆ ಸತ್ತು ಸರ್ಪನ ನುಂಗಿತ್ತು ನೋಡಾ.
ಮೊಲ ಸತ್ತು ಬಲೆಯ ಮೀರಿತ್ತು ನೋಡಾ.
ಮತ್ತೊಡೆದು ಜಲವ ನುಂಗಿತ್ತು ನೋಡಾ.
ಜೀವ ಸತ್ತು ಕಾಯ ನುಂಗಿತ್ತು ನೋಡಾ.
ಉದಕ ಒಡೆದು ಏರಿ ತುಂಬಿತ್ತು, ರೆಕ್ಕೆ ಮುರಿದು ಪಕ್ಷಿ ಹಾರಿತ್ತು.
ಹಾರುವ ಪಕ್ಷಿಯ ಮೀರಿ ನಿಂದಿತ್ತು ಬಯಲು.
ನುಂಗಿದ ಬಯಲವ, ಹಿಂಗಿದ ಪಕ್ಷಿಯ ಕಂಗಳು ನುಂಗಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./219
ಕರಣ ನಾಲ್ಕು, ಮದುವೆಂಟು, ವ್ಯಸನವೇಳು, ಅರಿಷಡ್ವರ್ಗಂಗಳಲ್ಲಿ
ಬುದ್ಧಿಯಾಗಿರಬೇಕೆಂದು ಹೇಳುತ್ತಿರ್ಪ ಅಣ್ಣಗಳು ಕೇಳಿರೊ.
ಆತ್ಮ ಸಂಬಂಧವಾದಲ್ಲಿ ಆವ ಕರಣಂಗಳೂ ಇಲ್ಲ.
ಆತ್ಮನಿಂದ ಒದಗಿದ ಇಂದ್ರಿಯಂಗಳಲ್ಲದೆ, ಬೇರೆ ಕರಣಂಗಳಿಗೆ ಗುಣವಿಲ್ಲವಾಗಿ,
ಸ್ಥಾವರ ಮೂಲವ ಕಡಿದು ಶಾಖೆಗಳಿಲ್ಲವಾದ ಕಾರಣ,
ಆತ್ಮನ ನಿಲವನರಿದವಂಗೆ, ಬೇರೆ ಕರಣಂಗಳ ಬಂಧನವಿಲ್ಲವಾದ ಕಾರಣ,
ಲಿಂಗವ ಕುರಿತಲ್ಲಿ, ಅಂಗವ [ಮ]ರೆಯಬಾರದು.
ಅಂಗಕ್ಕೂ ಪ್ರಾಣಕ್ಕೂ ಹಿಂಗಿತೆನಬಾರದು,
ನಿಃಕಳಂಕ ಮಲ್ಲಿಕಾರ್ಜುನನ ಸಂಗದಲ್ಲಿ ನಿರ್ವಾಣವಾದವಂಗೆ./220
ಕರ್ತೃ ನೀನಾಗಿ, ಭೃತ್ಯ ನಾನಾದ ಅಚ್ಚುಗವ ಬಿಡಿಸಯ್ಯಾ.
ಜ್ಞಾನಕ್ಕೆ ಜ್ಞಾನವ ಹೇಳಿದಡೆ ಕೇಳಬಲ್ಲವರಾರು.
ಸವಿಗೆ ಸ್ವಾದವನಿಕ್ಕಿದಡೆ ಉಣಬಲ್ಲವರಾರು.
ಬೆಳಗಿಂಗೆ ಬೆಳಗನಿತ್ತಡೆ ಉಡಬಲ್ಲವರಾರು.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಜೈಕ್ಯನಾದೆನೆಂಬಾತ ಮತ್ತೊಬ್ಬನಾರು./221
ಕರ್ಪುರದ ಘಟ ಬೆಂದಂತೆ, ಭಿತ್ತಿಯ ಮೇಲಣ ಚಿತ್ರಪಟ ನೆನೆದಂತೆ,
ಅಪ್ಪುವಿನ ಮೇಲಣ ಬಹುಮಣಿ ಲಕ್ಷಿಸಿದಂತೆ,
ದೃಷ್ಟವಾಗಿ ದೃಕ್ಕಿಂಗೆ ಒಡಲಳಿವಂತೆ,
ಅರಿತು ಅಳಿದ ಸ್ಥಲಭರಿತಂಗೆ ಕುಳಭೇದವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನ, ಅವಿರಳದ ಹೊಲಬಿಗನಾದ ಕಾರಣ./222
ಕರ್ಮವ ಮಾಡುವಲ್ಲಿ, ಆ ಕರ್ಮದ ವರ್ಮವನರಿಯಬೇಕು.
ಆ ಕರ್ಮದ ವರ್ಮವನರಿವಲ್ಲಿ,
ಉಮ್ಮಳದುಮ್ಮಳವೆಂಬ, ಸುಖಸುಮ್ಮಾನವೆಂಬ ಉಭಯವಡಗಿದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ./223
ಕಲ್ಲದೇವರೆಂದು ನಂಬಿ ಪೂಜಿಸಿದವರೆಲ್ಲರೂ
ಕಲಿಯುಗದ ಕತ್ತೆಗಳಾಗಿ ಸಿಲ್ಕಿ, ಕೆಟ್ಟಳಿದು ಹೋದರು ನೋಡಾ.
ಮಣ್ಣುದೇವರೆಂದು ನಂಬಿ ಪೂಜೆಯ ಮಾಡಿದವರೆಲ್ಲರೂ
ಮುಕ್ತಿಪಥ ಕಾಣದೆ ಕೆಟ್ಟು, ಶುನಿಸೂಕರಾದಿಗಳಾಗಿ ಕೆಟ್ಟುಹೋದರು ನೋಡಾ.
ಎಲ್ಲ ದೇವರಿಗೆ ಮಸ್ತಕಪೂಜೆ.
ನಮ್ಮ ಶಿವಭಕ್ತರ ಕರಮನಭಾವದೊಳು ಪೂಜೆಗೊಂಬುವ
ಶ್ರೀಗುರುಲಿಂಗಜಂಗಮಕ್ಕೆ ಉಂಗುಷ್ಟಪೂಜೆ ನೋಡಾ.
ಇಕ್ಕಿದಡೆ ಉಂಬುವದು, ಒಡನೆ ಮಾತನಾಡುವದು.
ಅನೇಕ ಬುದ್ಧಿಯ ಪೇಳ್ವುದು.
ಇಂಥ ಪರಮ ದೈವವನುಳಿದು, ಭೂತ ಪ್ರೇತ ಪಿಶಾಚಿಗೆ ಅನ್ನವನಿಕ್ಕಿ,
ನಿಧಾನವ ಪಡೆವೆನೆಂಬ ಭವಭಾರಿಗೆ
ನಾಯಕ [ನರಕ], ಮಹಾಪಾತಕ ತಪ್ಪದು ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ./224
ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂಧಿ.
ಮಣ್ಣಿನಲ್ಲಿ ಸುಟ್ಟ ಓಡು ಮನ್ನಿನಂತಾಗಬಲ್ಲಡೆ ಭಾವಲಿಂಗಸಂಬಂಧಿ.
ಇಷ್ಟಭಾವವನರಿವ ಆ ಚಿತ್ತ ದೃಷ್ಟವನರಿವುದಕ್ಕೆ ಶ್ರುತದೃಷ್ಟವೆಂತುಟೆಂದಡೆ:
ವಾರಿಕಲ್ಲು ನೋಡ ನೋಡಲಿಕ್ಕೆ ನೀರಾದಂತೆ. ಇಷ್ಟ ಭಾವ ಕರಿಗೊಂಡು,
ನಿಶ್ಚಯಪದವೆಂಬ ಗೊತ್ತ ಮುಟ್ಟದೆ, ಅದು ಸಶ್ಚಿತ್ತವಾದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ./225
ಕಲ್ಲಿನೊಳಗಣ ದಳ್ಳುರಿ, ಹುಳ್ಳಿಯ ಕಿಚ್ಚಿನಂತೆ
ಅಲ್ಲಿಯೇ ಉರಿಯಬಲ್ಲುದೆ ?
ಕ್ರೀಯಲ್ಲಿಗೆ ಸ್ಥಲ, ಜ್ಞಾನದಲ್ಲಿಗೆ ಕೂಟ,
ಸ್ವಾನುಭಾವದಲ್ಲಿಗೆ ನಿರ್ಲೆಪ, ನಿಃಕಳಂಕ ಮಲ್ಲಿಕಾರ್ಜುನಾ./226
ಕಲ್ಲಿನೊಳಗೆ ವಲ್ಲಭನಿದ್ದಹನೆಂದು ಎಲ್ಲರೂ ಬಳಲುತಿರ್ಪರು ನೋಡಾ.
ಅಲ್ಲಿ ಎಲ್ಲಿಯೂ ಕಾಣೆ ತನ್ನಲ್ಲಿ ಕುರಿತು ಇದಿರಿಟ್ಟಲ್ಲಿಯಲ್ಲದೆ,
ಮತ್ತೆಯಿಲ್ಲವಾಗಿ ಇದು ಬಲ್ಲವರ ಬಲ್ಲತನ.
ಹಾಗಲ್ಲದೆ ತನ್ನ ಮರೆದು, ಅನ್ಯವ ಕಂಡೆಹೆನೆಂದಡೆ, ಅದು ನನ್ನಿಯಲ್ಲ, ಹುಸಿ.
ಮನ್ನಣೆಗೆ ಸಿಕ್ಕಿದ ಶಿಲೆಯ ಬಣ್ಣಿಸುತ್ತಿರ್ಪವರ ನೋಡಾ.
ಬಣ್ಣಿಸುತ್ತಿಪ್ಪ ಅಣ್ಣಗಳೆಲ್ಲರೂ ಸನ್ನದ್ಧವಾದರೂ
ಕೋಟೆಯಲ್ಲಿ ಸಿಕ್ಕಿ ಸತ್ತುದಿಲ್ಲ.
ಎಲ್ಲರೂ ಕೋಟೆಯ ಹೊರಗಿರ್ದು ಸತ್ತು ಕೆಟ್ಟರಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ./227
ಕಲ್ಲಿಯ ಬಿಗಿದಡೆ, ತಲ್ಲೀಯವಾದ ಕ[ಲ್ಲಿ]
ಕೀಳುವುದೆ ಅಯ್ಯಾ ?
ಈ ಹೊಳ್ಳುಗರ ಮಾತಿಗೆ, ಬಲ್ಲವ[ನ]ಲ್ಲಿ ಸಿ[ಕ್ಕು]ವ[ನೆ]
ನಿಃಕಳಂಕ ಮಲ್ಲಿಕಾರ್ಜುನಾ ?/228
ಕಲ್ಲು ಮಣ್ಣು ಮರದಲ್ಲಿ ದೇವನಿದ್ದಹನೆಂದು
ಎಲ್ಲಿಯೂ ತೊಳಲುತ್ತಿರ್ಪ ಅಣ್ಣಗಳು ಕೇಳಿರೊ.
ಅದನಲ್ಲಲ್ಲಿಟ್ಟು ಬಲ್ಲತನದ ಕುರುಹಲ್ಲದೆ, ಸೊಲ್ಲಿ[ಂ]ಗತೀತನನರಿಯ
ಮನದಿರವೆಲ್ಲಿಹುದೊ ಅವನಲ್ಲಿಹ, ನಿಃಕಳಂಕ ಮಲ್ಲಿಕಾರ್ಜುನಾ./229
ಕವಡೆ ಕಟಕವ ನುಂಗಿತ್ತು, ಕುಡಿಕೆ ಹಿರಿದಪ್ಪ ಮಡಕೆಯ ನುಂಗಿತ್ತು.
ಅಡಕೆ ಮರನ ನುಂಗಿದ ಮತ್ತೆ ಫಲವುಂಟೆ?
ಅರ್ಚನೆ ಭಕ್ತಿಯಲಡಗಿ, ಭಕ್ತಿ ಮುಕ್ತಿಯಲಡಗಿ,
ಮುಕ್ತಿ ಜ್ಞಾನದಲಡಗಿ, ಜ್ಞಾನ ನಾನೆಂಬಲ್ಲಿ ಅಡಗಿದ ಮತ್ತೆ
ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ./230
ಕಳಬಂದ ಕಳ್ಳ ಬೆಳ್ಳನ ಕಾಲದೆಸೆಯಲ್ಲಿ, ಮರೆದು ನಿದ್ರೆಗೈದ ನೋಡಾ.
ತೆರನನರಿಯದೆ ಎಚ್ಚತ್ತು, ಮನೆಯ ಒಡೆಯನೆಂದಡೆ ಮೆಚ್ಚುವರೆ ?
ಅದು ಕಾರಣದಲ್ಲಿ, ಇರಿವ ಮನ ಪಾಪಕ್ಕೆ ಸಿಕ್ಕಿ,
ಪಾಷಂಡಿಗಳಪ್ಪ ಪಾಶವ ಹೊತ್ತು ತಿರುಗುವ ವೇಷಧಾರಿಗಳೆಲ್ಲರೂ
ಜಂಗಮವಲ್ಲದೆ, ಜ್ಞಾನಜಂಗಮವಲ್ಲ.
ಕರದಲ್ಲಿ ಖರ್ಪರವಿಲ್ಲ, ಕೈಯಲ್ಲಿ ಕಟ್ಟಿಗೆಯಿಲ್ಲ,
ಕರಣದಲ್ಲಿ ಮುದ್ರಿಕೆಯಿಲ್ಲ, ಶಿರದಲ್ಲಿ ಜಟಾಬಂಧವಿಲ್ಲ.
ಕಕ್ಷೆಯಲ್ಲಿ ಭಸ್ಮಘಟಿಕೆಯಿಲ್ಲ.
ಇವೆಲ್ಲ ರುದ್ರನ ವೇಷವ ಹೊತ್ತು,
ಗ್ರಾಸಕ್ಕೆ ತಿರುಗುವ ಘಾತಕರೆಲ್ಲರೂ ಜಂಗಮವೆ ?
ಮನದಾಸೆಯ ಬಿಟ್ಟು, ರೋಷವ ಕಿತ್ತು,
ಮಹದಾಶ್ರಿತರಾಗಿ ನಾನೆಂಬುದ ತಾನರಿದು,
ನಾ ನೀನೆಂಬುಭಯವನೇನೆಂದರಿಯದೆ,
ತಾನು ತಾನಾದ, ನಿಃಕಳಂಕ ಮಲ್ಲಿಕಾರ್ಜುನಾ./231
ಕಳವಿನಲ್ಲಿ ಬಂದಿರಿದಾತ ಕಳ್ಳನಲ್ಲದೆ ಧೀರನಲ್ಲ.
ಆಲಗಿನ ಮೊನೆ ಹಳಚಿನಲ್ಲಿ ಗತಿ ತಪ್ಪಿ ಬಿದ್ದಡೆ,
ಕೈದು ಸಹಿತ ಕೋಯೆಂದು ಇದಿರಾಗು ಎನಬೇಕಲ್ಲದೆ,
ಬಸವಳಿದು ಬಿದ್ದವನ ಅಸುವ ಕೊಂಬ ಸುಗಡಿಗಳನೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ ?/232
ಕಳೆ ಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ.
ಹೊಲೆ ಮಲವ ಕಳೆದಲ್ಲದೆ ಮನ ಶುದ್ಧವಲ್ಲ.
ಜೀವನ ನೆಲೆಯನರಿದಲ್ಲದೆ ಕಾಯ ಶುದ್ಧವಲ್ಲ.
ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ.
ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು,
ನಿಃಕಳಂಕ ಮಲ್ಲಿಕಾರ್ಜುನಾ./233
ಕಾಡೆಮ್ಮೆಯ ಹಾಲ, ಊರ ಕೋಣ ಕುಡಿದು,
ಮತ್ತಾರನೂ ಲೆಕ್ಕಿಸದೆ, ಬಹುಜನರ ನೋಯಿಸಿ ಬರುವಲ್ಲಿ,
ಒಂದಾಡಿನ ಬಾಲದ ಹೊಯ್ಲಿಗಂಜಿ ಓಡಿಹೋಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಲಿಂಗವ ಭೇದಿಸಲರಿಯದೆ./234
ಕಾಣಬಾರದ ಲಿಂಗವ ಕಾಬ ಪರಿಯಿನ್ನೆಂತೊ ?
ಕುರುಹಿಲ್ಲದ ಜ್ಞಾನವ ಕುರುಹಿಟ್ಟರಿವ ಪರಿಯಿನ್ನೆಂತೊ ?
ನೋಟಕ್ಕೆ ಬಾರದ ರೂಪ, ಕೂಟದಲ್ಲಿ ಸುಖವನರಿವ ಪರಿಯಿನ್ನೆಂತೊ ?
ಅರಿದೆಹೆನೆಂಬುದೇನು, ಇದಿರಿಟ್ಟರಿಸಿಕೊಂಡಿಹೆನೆಂಬುದೇನು ?
ಅರಿವಿಂಗೂ ಮರವೆಗೂ ಒಡಲಾಯಿತ್ತೆ ಲಿಂಗವು ?
ಘಟದೊಳಗಣ ಜ್ಯೋತಿ ಮಠಕ್ಕೆ ಬಿನ್ನವುಂಟೆ ?
ಘಟಕ್ಕೆ ಮಠ ಬೇರೆಯುಂಟೆ ?
ಅರಿಯಲಿಲ್ಲವಾಗಿ ಮರೆಯಲಿಲ್ಲ,
ಮರೆದರಿಯಲಿಲ್ಲವಾಗಿ, ತೆರಹಿಲ್ಲದ ಮತ್ತೆ ಕುರುಹಿಡಲಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./235
ಕಾಣಿಯ ಹಾಕಿ ಮುಕ್ಕಾಣಿಯನರಸುವನಂತೆ,
ಒಂದ ಬಿಟ್ಟೊಂದನರಿದೆಹೆನೆಂಬ ಸಂದೇಹಿಗೇಕೆ ಲಿಂಗ ?
ಸರ್ವವ್ಯಾಪಾರವ ಕಟ್ಟಿಕೊಂಡಿರ್ಪ ಹರದಿಗನ ತೆರನಂತೆ,
ಕೊಂಡುದಕ್ಕೆ ಕೊಡುವಲ್ಲಿ, ವಾಸಿಯಂ ಕಂಡು ಬಿಟ್ಟ ಲಾಭಗಾರನಂತೆ,
ಮೊದಲಿಂಗೆ ಮೋಸ ಲಾಭಕ್ಕರಸಲುಂಟೆ ?
ಅಯ್ಯಾ, ಒಂದನರಿದಲ್ಲದೆ ಮೂರನು ಮರೆಯಬಾರದು.
ಮೂರ ಮರೆದಲ್ಲದೆ ಐದ ಹರಿಯಬಾರದು.
ಐದ ಹರಿದಲ್ಲವೆ ಆರ ಮೆಟ್ಟಬಾರದು.
ಆರ ಮೆಟ್ಟಿದಲ್ಲದೆ ಎಂಟನೀಂಟಬಾರದು.
ಎಂಟರೊಳಗಣ ಬಂಟರೆಲ್ಲರೂ ಮಹಾಪ್ರಳಯರಾದರು.
ಹೀಂಗಲ್ಲದೆ ಪ್ರಾಣಲಿಂಗಿಗಳೆಂತಾದಿರೊ ?
ಗಂಟ ಕೊಯ್ದು ಕೊಡದ ಗಂಟುಗಳ್ಳರಂತೆ,
ತುಂಟರ ಮೆಚ್ಚುವನೆ, ನಿಃಕಳಂಕ ಮಲ್ಲಿಕಾರ್ಜುನ ?/236
ಕಾಬ ಕಣ್ಣಿದ್ದು ಕನ್ನಡಿಯ ನೋಡುವನಂತೆ,
ನಡೆವ ಕಾಲಿದ್ದು ದಡಿಯನೂರಿ ನಡೆವನಂತೆ,
ಇರುವ ಕೈಯಿದ್ದು ಕೈದ ಹಿಡಿದು ಇರಿವನಂತೆ,
ದೃಷ್ಟಕ್ಕೆ ದೃಷ್ಟವ ಕೊಟ್ಟು, ನೀ ತಪ್ಪಿಸಿಕೊಂಬರೆ,
ನಿಃಕಳಂಕ ಮಲ್ಲಿಕಾರ್ಜುನಾ ?/237
ಕಾಯ ಇಂದ್ರಿಯಂಗಳಲ್ಲಿ ಮಚ್ಚಿ ಇಹನ್ನಕ್ಕ ಭಕ್ತಿಸ್ಥಲವಿಲ್ಲ.
ಆತ್ಮ ಹಲವು ವಿಷಯಂಗಳಲ್ಲಿ ಹರಿವನ್ನಕ್ಕ ಮಹೇಶ್ವರಸ್ಥಲವಿಲ್ಲ.
ಹಿರಿದು ಕಿರಿದನರಿದು ರೋಚಕ ಆರೋಚಕವೆಂಬನ್ನಕ್ಕ ಪ್ರಸಾದಿಸ್ಥಲವಿಲ್ಲ.
ಜಾಗ್ರದಲ್ಲಿ ಕಂಡು ಸ್ವಪ್ನದಲ್ಲಿ ತೋರಿ ಸುಷುಪ್ತಿಯಲ್ಲಿ ಅಳಿವನ್ನಕ್ಕ
ಪ್ರಾಣಲಿಂಗಸಂಬಂಧಿಯಲ್ಲ.
ಚತುರ್ವೆಧಫಲಪದಂಗಳಲ್ಲಿ ಕಾಬ ಕಾಣಿಕೆ ಉಳ್ಳನ್ನಕ್ಕ ಶರಣಸ್ಥಲವಿಲ್ಲ.
ಅರಿದೆ ಮರೆದೆನೆಂದು ಉಭಯದ ಸಂದೇಹವುಳ್ಳನ್ನಕ್ಕ ಐಕ್ಯಸ್ಥಲವಿಲ್ಲ.
ಇಂತೀ ಷಟ್ಸ್ಥಲಂಗಳಲ್ಲಿ ಸೋಪಾನದ ಮೆಟ್ಟಿಲಿನಂತೆ,
ಒಂದ ಮೆಟ್ಟಿ ಒಂದನೇರುವನ್ನಕ್ಕ ಸ್ಥಲಕುಳಭರಿತನಾಗಬೇಕು.
ಮೇಲನೇರಿ ಕೆಳಗೆ ಇಳಿಯೆನೆಂಬ ಭಾವ ನಿಂದಲ್ಲಿ ಆರನೆಣಿಸಲಿಲ್ಲ.
ಮೂರೆಂದು ಬೇರೊಂದ ಮುಟ್ಟಲಿಲ್ಲ.
ಕರಗಿದ ಬಂಗಾರಕ್ಕೆ ಕರಚರಣಾದಿಗಳು ಇಲ್ಲದಂತೆ,
ಆತ ಕುರುಹಡಗಿದ ಷಡುಸ್ಥಲಬ್ರಹ್ಮಿ, ನಿಃಕಳಂಕ ಮಲ್ಲಿಕಾರ್ಜುನಾ./238
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ,
ಆ ಲಿಂಗ ಕಾಯಕ್ಕೋ, ಜೀವಕ್ಕೋ ?
ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು.
ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು.
ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ?
ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು.
ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು.
ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ,
ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./239
ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ,
ಕೈಲಾಸವೆಂಬ ಭವಸಾಗರವನೊಲ್ಲೆ.
ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ,
ನಿನ್ನಲ್ಲಿಗೆ ಕೂಟಸ್ಥವ ಮಾಡು, ನಿಃಕಳಂಕ ಮಲ್ಲಿಕಾರ್ಜುನಾ./240
ಕಾಯ ಹಸಿದು ಓಗರವ ಬೇಡುವಾಗ, ಲಿಂಗಕ್ಕೆ ಅರ್ಪಿತವೆಲ್ಲಿಯಿತ್ತೊ ?
ಮನ ತನುವ ಬಿಟ್ಟು ಸರ್ವವಿಕಾರದಲ್ಲಿ ಭ್ರಮಿಸುವಾಗ, ಸಾವಧಾನಿಗಳೆಂತಾದಿರೊ?
ಸ್ಥೂಲದಲ್ಲಿ ಹಿಡಿದು, ಸೂಕ್ಷ್ಮದಲ್ಲಿ ಮರೆದು, ಕಾರಣದಲ್ಲಿ ಏನೆಂದರಿಯದೆ,
ಜಗದ ಉತ್ಪತ್ಯಕ್ಕೆ ಒಳಗಾಹವರ ಪ್ರಾಣಲಿಂಗಿಗಳೆಂಬೆನೆ? ಎನ್ನೆನು.
ಇಂತಿವರೆಲ್ಲರೂ ಡಾಗಿನ ಪಶುಗಳು, ವೇಷಧಾರಿಗಳು,
ಶಾಸ್ತ್ರದ ಸಂತೆಯವರು, ಪುರಾಣದ ಪುಂಡರು,
ತರ್ಕದ ಮರ್ಕಟರು, ಭವಸಾಗರದ ಬಾಲಕರು.
ತತ್ವವನರಿಯದ ಮತ್ತರು.
ಇಂತಿವರು ಕೆಟ್ಟ [ಕೇಡ] ನೋಡಿ ಗುರು[ವಿನ] ಕೊರಳ ಕೊಯ್ದು,
ಲಿಂಗದ ತಲೆಯೊಡೆಯಲಿಕ್ಕಿ, ಜಂಗಮದ ಸಂದ ಮುರಿದೆ.
ದ್ವಂದ್ವವ ಹಿಂಗಿದೆ, ಸಂದನಳಿದೆ, ಸದಮಲಾನಂದ ಹಿಂಗಿದೆ.
ಹೊಂದದ ಬಟ್ಟೆಯಲ್ಲಿ ಸಂದೆನಯ್ಯಾ,
ಮಹಾದಾನಿ ನಿಃಕಳಂಕ ಮಲ್ಲಿಕಾರ್ಜುನಾ./241
ಕಾಯ ಹೋಗಿ ಕರ್ಮವ ಮಾಡಿ, ಜೀವಕ್ಕೆ ಬಾಧೆಯ ತಂದಿತ್ತೆಂಬರು.
ಆ ಜೀವವಿಲ್ಲದೆ ಕಾಯ ಹೋಗಿ ಕರ್ಮವ ಮಾಡುವಾಗ,
ಅದಾವುದರ ಬಲುಹೋ ?
ಕಾಯ ನಾನು, ಜೀವ ನೀನು, ನನಗೂ ನಿನಗೂ ಸಮ ಹುದುಗು.
ಎನ್ನನೇಕೆ ಕಾಡಿಹೆ ? ಗನ್ನತನವೆ ? ಹೇಳಾ ಚೆನ್ನ,
ನಿಃಕಳಂಕ ಮಲ್ಲಿಕಾರ್ಜುನಾ./242
ಕಾಯಕ್ಕೆ ಕಲ್ಪಿತವುಂಟೆಂಬುದು ಹುಸಿಯೋ, ದಿಟವೋ ?
ಜೀವಕ್ಕೆ ಜನ್ಮವುಂಟೆಂಬುದು ಹುಸಿಯೋ, ದಿಟವೋ ?
ಕೆಂಡದೊಳಗೆ ಹೊಗೆಯಡಗಿತ್ತೋ, ಹೊಗೆಯಲ್ಲಿ ಕೆಂಡವಿದ್ದಿತ್ತೋ ?
ಲಿಂಗದಲ್ಲಿ ಮನವಿದ್ದಿತ್ತೋ, ಮನದಲ್ಲಿ ಲಿಂಗವಡಗಿತ್ತೋ ?
ಇಂತೀ ಉಭಯದ ಸಂದನಳಿದು ಬೆರಸಬಲ್ಲಡೆ ಆತನೆ ಪ್ರಾಣಲಿಂಗಿ,
ನಿಃಕಳಂಕ ಮಲ್ಲಿಕಾರ್ಜುನಾ./243
ಕಾಯಗುಣವಿಡಿದು ಮಾಡುವನ್ನಕ್ಕ ಸತ್ಯಸದ್ಭಕ್ತನಲ್ಲ.
ಜೀವಗುಣವಿಡಿದು ತಿರುಗುವನ್ನಕ್ಕ ಪರಶಿವರೂಪನಲ್ಲ.
ಕ್ರೀಯನರಿದು ಆಚಾರದಲ್ಲಿ ನಿಂದು,
ರಿಣಾತೂರ್ಯ ಮುಕ್ತ್ಯಾತೂರ್ಯ ಸ್ವ ಇಚ್ಫಾತೂರ್ಯವೆಂಬ
ಮೂರುಮಾಟವ ಕಂಡು,
ಭಕ್ತಿ ಜ್ಞಾನ ವೈರಾಗ್ಯವೆಂಬ ತ್ರಿವಿಧ ನಿಶ್ಚಯವನರಿದು,
ಸುಮನ ವಚನ ಕಾಯ ತ್ರಿಕರಣ ಶುದ್ಧಾತ್ಮನಾಗಿ,
ಆಪ್ಯಾಯನದ ಅನುವನರಿದು,
ಸಮಯದಲ್ಲಿ ಮಾನ್ಯರ ಇರವನರಿತು ಕೂಡುವಲ್ಲಿ,
ಇಂತೀ ಭಾವ ಸದ್ಭಕ್ತ ಸ್ಥಲ.
ಹೆಣ್ಣು ಹೊನ್ನು ಮಣ್ಣಿನಲ್ಲಿ, ಸ್ತುತಿ ನಿಂದ್ಯಾದಿಗಳಲ್ಲಿ,
ತಥ ಮಿಥ್ಯಂಗಳಲ್ಲಿ ವಿರಾಗನಾಗಿ,
ಸುಖದುಃಖಗಳಲ್ಲಿ ಸರಿಗಂಡು ನಿಃಕಳಂಕನಾಗಿ ಚರಿಸಬಲ್ಲಡೆ,
ನಿಃಕಳಂಕ ಮಲ್ಲಿಕಾರ್ಜುನನೆಂಬೆನು./244
ಕಾಯದ ಕರದಲ್ಲಿ ಲಿಂಗವ ಹಿಡಿದು,
ಬಾಯಾರಿ, ಭವಗೆಟ್ಟು, ನಾಣುಗೆಟ್ಟು ನಾನಾರೆಂಬುದನರಿಯದೆ,
ಇದಿರಿಚ್ಫೆಯನೇನೆಂದರಿಯದೆ,
ಕಾಯದ ಸುಖಕ್ಕಾಗಿ ಜೀವರ ಬೇಡುವ ಜಾರರಿಗೆಲ್ಲಿಯದೊ ಲಿಂಗ,
ನಿಃಕಳಂಕ ಮಲ್ಲಿಕಾರ್ಜುನಾ ?/245
ಕಾಯದ ಕಳವಳದಿಂದ, ಜೀವನ ಭ್ರಾಂತಿಯಿಂದ,
ಅರಿದು ಮರೆದೆನೆಂದು ಎಡದೆರಹಿಲ್ಲದ ವಸ್ತುವಿಂಗೆ,
ಬೇರೊಂದೆಡೆಯುಂಟೆಂದು, ಕಲ್ಪಿಸಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?/246
ಕಾಯದ ಕೈಯಲ್ಲಿ ಲಿಂಗಪೂಜೆ.
ಮನದ ಕೈಯಲ್ಲಿ ಸಂಸಾರ.
ಎಂತಹದಯ್ಯಾ ಲಿಂಗಪೂಜೆ ?
ಎಂತಹದಯ್ಯಾ ಜಂಗಮಪೂಜೆ ?
ಇಂತಪ್ಪ ನಾಚಿಕೆಗೆಟ್ಟ ಮೂಕೊರೆಯರ ತೋರದಿರಾ,
ನಿಃಕಳಂಕ ಮಲ್ಲಿಕಾರ್ಜುನಾ./247
ಕಾಯದ ಗುಣವನರಿವುದು ಕಾಯವೋ, ಜೀವವೋ ?
ಜೀವನ ಗುಣವ ಸಂಬಂಧಿಸುವುದು ಜ್ಞಾನವೋ, ಆ ಜೀವವೋ ?
ಈ ಉಭಯವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./248
ಕಾಯದೊಳಗುಂಟೆಂದಡೆ ಕರ್ಮಕಾಂಡಿಯಲ್ಲ.
ಜೀವದೊಳಗುಂಟೆಂದಡೆ ನಾನಾ ಯೋನಿಯವನಲ್ಲ.
ಭಾವದೊಳಗುಂಟೆಂದಡೆ ನಾನಾ ಪ್ರಕೃತಿಯವನಲ್ಲ.
ಅದು ಇದ್ದಿಲು ಶುಭ್ರದ ತೆರ.
ಅದು ಹೊದ್ದದಾಗಿ ಬದ್ಧಕತನವಿಲ್ಲೆಂದೆ, ನಿಃಕಳಂಕ ಮಲ್ಲಿಕಾರ್ಜುನಾ./249
ಕಾಯಪ್ರಕೃತಿ, ಜೀವಪ್ರಕೃತಿ, ಭಾವಪ್ರಕೃತಿ.
ಸಂಚಾರಭ್ರಮೆ ಮುಂಚದೆ,
ಸಂಚಿತ ದುಃಕರ್ಮಂಗಳ ಪಙ್ತಿಯಲ್ಲಿ ಕುಳ್ಳಿರದೆ,
ಇದರಂಚೆಯ ತಿಳಿ, ಮುಂಚು ಬೇಗ,
ನಿಃಕಳಂಕ ಮಲ್ಲಿಕಾರ್ಜುನನ ನಿಸ್ಸಂಗದ ಕೂಟ./250
ಕಾಯಬಂಧನ ಭಾವ, ಭಾವಬಂಧನ ಜ್ಞಾನ, ಜ್ಞಾನಬಂಧನ ಸಕಲೇಂದ್ರಿಯ.
ಇಂತೀ ಸ್ವರೂಪಂಗಳ ಕಲ್ಪಿಸುವಲ್ಲಿ,
ಕಾಯಕ್ಕೆ ಬಂಧವಲ್ಲದೆ ಜೀವಕ್ಕೆ ಬಂಧವುಂಟೆ ಎಂದೆಂಬರು.
ಭೇರಿಗೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ ಎಂಬರು.
ಉಭಯದ ಭೇದವ ತಿಳಿದಲ್ಲಿ, ಕಾಯಕ್ಕೆ ಬಂಧವುಂಟೆ, ಜೀವಕ್ಕಲ್ಲದೆ ?
ಭೇರಿಗೆ ಬಂಧವುಂಟೆ, ನಾದಕ್ಕಲ್ಲದೆ?
ಇಂತೀ ಅಳಿವುಳಿವ ಎರಡ ವಿಚಾರಿಸುವಲ್ಲಿ,
ಜೀವ ನಾನಾ ಭವಂಗಳಳ್ಲಿ ಬಪ್ಪುದ ಕಂಡು, ಮತ್ತಿನ್ನಾರನೂ ಕೇಳಲೇತಕ್ಕೆ?
ನಾದ ಸ್ಥೂಲ ಸೂಕ್ಷ್ಮಂಗಳಳ್ಲಿ ಹೊರಳಿ ಮರಳುತ್ತಿಹುದ ಕಂಡು,
ಆರಡಿಗೊಳಲೇಕೆ ?
ಇಂತಿವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದ ಮತ್ತೆ,
ಲಿಂಗಕ್ಕೆ ಪ್ರಾಣವೋ, ಪ್ರಾಣಕ್ಕೆ ಲಿಂಗವೋ ಎಂಬುದ ಪ್ರಮಾಣಿಸಿದಲ್ಲಿ,
ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ./251
ಕಾಯಸೂತಕಿಗಳು ಗುರುವನರಿಯರಾಗಿ,
ಭಾವಸೂತಕಿಗಳು ಲಿಂಗವನರಿಯರಾಗಿ,
ತ್ರಿವಿಧಸೂತಕಿಗಳು ಜಂಗಮವನರಿಯರಾಗಿ,
ತನುಶುದ್ಧವಾಗಿ ಗುರುವನರಿಯಬೇಕು.
ಮನಶುದ್ಧವಾಗಿ ಲಿಂಗವನರಿಯಬೇಕು.
ತ್ರಿವಿಧ ಮಲಶುದ್ಧವಾಗಿ ಜಂಗಮವನರಿಯಬೇಕು.
ಇಂತೀ ಸ್ಥಲ ಕುಳಂಗಳ ಭಾವಿಸಿ, ತನಮನಧನ ನಿರತನಾಗಿ,
ತ್ರಿವಿಧಕ್ಕೆ ತ್ರಿವಿಧವನಿತ್ತು, ತ್ರಿವಿಧಾಂಗ ಭರಿತನಾಗಿಪ್ಪ ನಿಜಲಿಂಗಾಂಗಿಗೆ
ಇಹ ಪರವೆಂಬ ಉಭಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./252
ಕಾಲಜ್ಞಾನ, ಕರ್ಮಜ್ಞಾನ, ಭಾವಜ್ಞಾನ ಭ್ರಮೆಯಳಿದು,
ನಾ, ನೀನೆಂಬ ಮದ ಮತ್ಸರ ಮುರಿದು,
ಭಕ್ತಿಜ್ಞಾನವೈರಾಗ್ಯವೆಂಬ ಸಂತೋಷವ ಮೆಟ್ಟಿನಿಂದು,
ನಿಜವೆ ತಾನಾಗಿರ್ಪ ಪರಿಪೂರ್ಣಂಗೆ ಇಹ ಪರವೆಂಬ ಉಭಯದವನಲ್ಲ.
ಇಂತೀ ಪರಂಜ್ಯೋತಿ ಪ್ರಕಾಶಂಗೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ./253
ಕಾಳಗಕ್ಕೆ ಆಳಾಗಿ ಬಂದೆ.
ಎನಗಿದಿರಾಗಿ ಕೈದುವ ಹಿಡಿವವರನಾರನೂ ಕಾಣೆ.
ಅಗೆದು ನೋಡಿದೆ, ಮೊಗೆದು ನೋಡಿದೆ, ಎನಗೆ ಇದಿರಹವರಿಗೆ.
ಎನ್ನ ದೇಹ ವಜ್ರಾಂಗಿಯೆ ? ಎನ್ನ ಕರ ಕಂಪಿಸುವ ಕೈದೆ ?
ಎನ್ನ ಹೃದಯ ಬೆಳಗಿನೆದೆಗಿಚ್ಚೆ ? ನಿರ್ಭಿತಿ ನೀತಿಯೆ ?
ಎನ್ನನೊಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ./254
ಕಾಳಗದಲ್ಲಿ ಹೋದ ಮತ್ತೆ ಆಳುತನವೆನಗಿಲ್ಲ ಎಂದಡೆ,
ಅವರು ಸೀಳದಿಪ್ಪರೆ ತನ್ನುದರವ?
ಭಾಳಾಂಬಕನ ಭಕ್ತನಾಗಿ ಭಕ್ತಿಯ ತಾರಲಾರೆನೆಂದಡೆ,
ಅದು ಬಾಲರ ಚಿತ್ತದ ಲೀಲೆಯಂತೆ, ನಿಃಕಳಂಕ ಮಲ್ಲಿಕಾರ್ಜುನಾ./255
ಕಾಳರಾತ್ರಿಯೆಂಬ ಕತ್ತಲೆಯ ಮನೆಯ ಹೊಕ್ಕು,
ಜಾಳಿಗೆಯ ಮುದ್ರೆಯನೊಡೆದನೆಂಬವನಂತೆ,
ಸಭೆಯಲ್ಲಿರ್ದು ನಭವನಡರಿದೆನೆಂಬವನಂತೆ,
ಗಡಿಗೆಯಲ್ಲಿ ಸಮುದ್ರವ ತುಂಬಿ ಅಡಗಿಸಿದೆನೆಂಬವನಂತೆ
ಸರ್ವವನೊಡಗೂಡಿ ಹರಿದಾಡುತ್ತ, ಸಡಗರಿಸುತ್ತ,
ಲಲನೆಯರೊಡಗೂಡುತ್ತ, ಕರಣಂಗಳಲ್ಲಿ ಬಡಿಹೋರಿಯಾಗುತ್ತ,
ಲಿಂಗವನರಿದೆನೆಂಬ ಸುಗುಡರ ನೋಡಾ.
ಜಾಗ್ರದಲ್ಲಿ, ಕನಸಿನಲ್ಲಿ ತಾ ಸತ್ತೆನೆಂದು ಎಚ್ಚತ್ತು ಅಳುವ ಕುಚಿತ್ತನಂತೆ,
ನಿಃಕಳಂಕ ಮಲ್ಲಿಕಾರ್ಜುನಾ./256
ಕಾಳಾಂಧರವೆಂಬ ಕಾಳರಕ್ಕಸಿಯ ಬಸುರಲ್ಲಿ,
ಒಬ್ಬ ಭಾಳಲೋಚನ ಹುಟ್ಟಿದ.
ಆತ ಕಾಲಸಂಹಾರ, ಕಲ್ಪಿತನಾಶನ.
ಆತ ಕಾಳಾಂಧರ ರಕ್ಕಸಿಯ ಕೊಂದ.
ತಾಯ ಕೊಂದ ನೋವಿಲ್ಲ, ಹೆತ್ತ ತಾಯ ಕೊಂದ ಅನಾಚಾರಿ.
ನಿಃಕಳಂಕ ಮಲ್ಲಿಕಾರ್ಜುನ, ಕಟ್ಟುಮೆಟ್ಟಿನವನಲ್ಲ./257
ಕಾಳೆಮ್ಮೆಯ ಕರೆಯಲಾಗಿ, ಹಾಲು ರೋಹಿತವಾಗಿ ಬಿದ್ದಿತ್ತು.
ರೋಹಿತವಾದುದ ಕಂಡು, ಕರೆವ ಬಾಲೆ ಹಾಲಿಲ್ಲಾ ಎಂದಡೆ,
ಮೇಲಿದ್ದಾತ ನೋಡಿ ಹಾಲನಳಿದು ಹೆಪ್ಪ ಬಿಡೆಂದ.
ಶೋಣಿತವಳಿದು ಹೋಗಲಾಗಿ ಹೆಪ್ಪಾಯಿತ್ತು,
ಅದು ಶೂಲಪಾಣಿಯ ಮರದ ಮಂತಿನಲ್ಲಿ,
ಏನೂ ಇಲ್ಲದ ನೇಣು ಹೂಡಿ ಕಡೆಯೆ,
ಮಡಕೆಯ ಬಾಯಲ್ಲಿ ಕರಗಿತ್ತು ಬೆಣ್ಣೆ, ನಿಃಕಳಂಕ ಮಲ್ಲಿಕಾರ್ಜುನಾ./258
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಿದಾಗ ಭಕ್ತಸ್ಥಲ.
ಕಣ್ಣ ಮುಚ್ಚಿ ಕರ್ಣದಲ್ಲಿ ನೋಡಿದಾಗ ಮಾಹೇಶ್ವರಸ್ಥಲ.
ಈ ಉಭಯ ಮುಚ್ಚಿ ನಾಸಿಕದೋಹರಿ ನಷ್ಟವಾದಲ್ಲಿ ಪ್ರಸಾದಿಸ್ಥಲ.
ಆ ಸುಗುಣ ದುರ್ಗುಣವೆಂಬುದು ನಿಂದಲ್ಲಿ ಪ್ರಾಣಲಿಂಗಿಸ್ಥಲ.
ಆ ಪ್ರಾಣ ಪರಿತೋಷಂಗಳಲ್ಲಿ ಪ್ರವರ್ತನ ನಿಂದಲ್ಲಿ ಶರಣಸ್ಥಲ.
ಆ ಶರಣ ಆರೂಢ ಸಲೆ ಸಂದು ನಿಂದಲ್ಲಿ ಐಕ್ಯಸ್ಥಲ.
ಐಕ್ಯವೆಂಬ ಕೂಟಸ್ಥ[ಲ] ನಿಂದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನನೆಂಬ ನಾಮಕ್ಕೆ ನಷ್ಟವಿಲ್ಲ.
ಆ ನಾಮವುಳ್ಳನ್ನಕ್ಕ ಎನ್ನ ಬಿರಿದಿನ ಸಾರ ಸಾಯದು./259
ಕೀಲಿಂಗೆ ಕೀಲ ಮಾಡಿಹೆನೆಂದಡೆ, ಆ ತರುವಿಂಗೆ ಕಡೆ ನಡು ಮೊದಲಿಲ್ಲ.
ಸ್ಥಲವ ಹಿಡಿದು ಸ್ಥಲವನೆಯ್ದಿಹೆನೆಂದಡೆ, ಅದು ನಾಮ ರೂಪು.
ಭಾವ ಹಿಡಿವಲ್ಲಿ, ಅರಿತು ಬಿಡುವಲ್ಲಿ, ಮರೆದಡೆ ಆತನೊಡಗೂಡಿಪ್ಪ,
ನಿಃಕಳಂಕ ಮಲ್ಲಿಕಾರ್ಜುನ./260
ಕೀಲಿನೊಳಗೊಂದು ಕೀಲ ಕಂಡೆ.
ಆ ಕೀಲಿನೊಳಗೊಂದು ಸಕೀಲವ ಕಂಡು, ಸಕಲವನೆಲ್ಲವನರಿದೆ.
ಆ ಅರಿವು ಮರವೆಗೊಳಗಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಲಿಂಗದ ಅರಿವಿನಲ್ಲಿ./261
ಕೀಳು ಮೇಲನರಸುವುದಕ್ಕೆ ಕೋಳಿಯ ಕಾಳಗವೆ ?
ಆ[ಳು] ಮೇಳದಲ್ಲಿ ಲೋಲಿತನಾಗಿಹಾಗ, ಸೂಳೆಯ ಮನೆಯ ಆಳೆ ?
ಬಾಲರಾಳಿಯ ಜೂಜಿನ ಸೋಲುವೆಯೆ ?
ಅವರ ಗಾಣದಲ್ಲಿ ಬಪ್ಪ ಸಾಲಿನ ಹೆಜ್ಜೆಯಂತೆ ಇನ್ನಾರಿಗೆ ಹೇಳುವೆ ?
ಮೆಟ್ಟಿದ ಹೆಜ್ಜೆಯ ಮೆಟ್ಟುವ ಕಷ್ಟಜೀವಿಗಳಿಗೆ ಇನ್ನೆತ್ತಣ ಗತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ ?/262
ಕುಕ್ಕುಟನ ಗರ್ಭದಲ್ಲಿ ಒಂದು ಮಾರ್ಜಾಲ ಹುಟ್ಟಿ,
ಹೆತ್ತ ತಾಯ ತಿಂದು, ತತ್ತಿಯ ಬಿಟ್ಟಿತ್ತು.
ಈ ಗುಣ ಉಭಯದೃಷ್ಟವಿದೆ, ನಿಃಕಳಂಕ ಮಲ್ಲಿಕಾರ್ಜುನಾ./263
ಕುರಿ ಕುನ್ನಿ ಮೊದಲಾಗಿರ್ದವು ಒಡೆಯನ ಬಲ್ಲವು.
ಅರ್ಚಿಸಿ ಪೂಜಿಸಿ ಭಾವಿಸಿ ಏಕೆ ಅರಿಯೊ ?
ಅಯ್ಯಾ ಹೋಯಿತ್ತು ಭಕ್ತಿ, ಮ[ಳ]ಲ ಕೂಡಿದೆಣ್ಣೆಯಂತೆ.
ಹೋಯಿತ್ತು ಪೂಜೆ, ಪುರೋಹಿತನ ಕೊಂದು ಪುರಾಣವ ಕೇಳಿದಂತೆ.
ತಾ ಮಾಡುವ ಭಕ್ತಿಯ, ತಾ ಮಾಡುವ ಸತ್ಯವ,
ತಾ ಮಾಡುವ ಸದಾಚಾರವನರಿಯದೆ,
ಮಾಡುವ ಭಕ್ತ[ನ] ಮನೆಯಲ್ಲಿ ಹೊಕ್ಕುಂಡ ಜಂಗಮಕ್ಕೆ ಏಳನೆಯ ಪಾತಕ.
ಆ ಜಂಗಮಪ್ರಸಾದವ ಕೊಂಡ ಭಕ್ತಂಗೆ,
ಹುಲಿ ಕವಿಲೆಯ ತಿಂದು, ಮಿಕ್ಕುದ ನರಿ ತಿಂದಂತೆ,
ನಿಃಕಳಂಕ ಮಲ್ಲಿಕಾರ್ಜುನಾ./264
ಕುರುಡನ ಮುಂದೆ ಗುಣಮಣಿ ಇದ್ದಡೆ,
ಅದ ಎಡಹುವನಲ್ಲದೆ ಕಾಣಲರಿಯ.
ಸರ[ಟ]ನ ಮುಂದೆ ಸತ್ಯವಿದ್ದಡೆ ನಿಶ್ಚಯಿಸಬಲ್ಲನೆ ?
ಬರಡಿಯ ಕೈಯಲ್ಲಿ ಮಕ್ಕಳಿದ್ದಡೆ ತೊರೆವುದೆ ಮೊಲೆ ?
ಅರಿವುಹೀನರಂಗದಲ್ಲಿ ಕುರುಹಿರಲಾಗಿ ಅರಿಯಬಲ್ಲರೆ ?
ಇವು ಬರಿಯಮಾತಿನ ಸೊಲ್ಲೆಂದೆ.
ಎನ್ನೊಡೆಯ ಕೈಯ ಗಡಿಗೆಯ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ./265
ಕುರುಹ ಕೊಡುವಲ್ಲಿ ಗುರುವಾಗಿ,
ವೇಷವ ತೊಟ್ಟು ತಿರುಗುವಲ್ಲಿ ಚರವಾಗಿ,
ಭಾಷೆಯ ತೊಟ್ಟು ಮಾಡುವಲ್ಲಿ ಭಕ್ತನಾಗಿ,
ಈ ತ್ರಿವಿಧದಾಟ ಇದರ ಭೇದ.
ಘನಲಿಂಗವ ಕೂಡಿಹೆನೆಂಬ ಕೂಟದ ಭೇದ.
ಎತ್ತ ಸುತ್ತಿ ಬಂದಡೂ ವಂಕದ ತಪ್ಪಲಿನಲ್ಲಿ ಹೋಗಬೇಕು.
ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ./266
ಕುರುಹಡಗಿಯಲ್ಲದೆ ಒಂದನರಿಯಬಾರದು.
ತಾನರಿದಲ್ಲಿಯಲ್ಲದೆ ಕುರುಹಿನ ಕುಲ ಕೆಡದು.
ಅರಿಯದುದನರಿದಲ್ಲಿ ಮರೆದು, ಮರೆದುದನರಿದಲ್ಲಿ ಕಂಡು,
ಉಭಯದ ತೋಟಿಯ ತೊಳಸಿ ನಿಂದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನಲಿಂಗದ ಅಂಗ, ಕರತಳಾಮಳಕವಾಯಿತ್ತು./267
ಕುರುಹವಿಡಿದು ಕಂಡೆಹೆನೆಂದಡೆ, ಪುಣ್ಯವ ಮಾಡಬೇಕೆಂಬರು.
ಅರಿದು ಕಂಡೆಹೆನೆಂದಡೆ ಕಾಯದ ಕರಣಂಗಳ ಬಿಡಬೇಕೆಂಬರು.
ಕೆಟ್ಟೆವಯ್ಯಾ, ಚಕ್ರದಂಡದಲ್ಲಿ ಸಿಕ್ಕಿದ ಮರ್ಕಟನಂತೆ,
ನಿಃಕಳಂಕ ಮಲ್ಲಿಕಾರ್ಜುನಾ./268
ಕುಲ ಛಲ ಪಿಷ್ಠ ನೈಷ್ಠಿಕತೆಯಿಂದ ದೃಷ್ಟಿಸಿಕೊಂಡಿರ್ಪ
ಕಷ್ಟಮನುಜರಿಗೇಕೆ ನಿಜತತ್ವದ ಮಾತು ?
ಅವರು ಎತ್ತಿ ಹೋರುವ ಮತ್ತತ್ವವೈಸೆ ನಿತ್ಯತ್ವವಿಲ್ಲ.
ಇವರು ಭಕ್ತರು, ಜಂಗಮವೆಂದಡೆ ಮತ್ತೆ ಮತ್ತೆ ನರಕ,
ನಿಃಕಳಂಕ ಮಲ್ಲಿಕಾರ್ಜುನಾ./269
ಕುಲಿಶ ಅಂಗುಲದೊಳಗಡಗಿದಡೆ, ಕುಟ್ಟದೆ ಬೆಟ್ಟವ ಹಿಟ್ಟುಗುಟ್ಟಿ ?
ಶಿಲೆಯೊಳಗಡಗಿದ್ದ ಪಾವಕ ಉದಯಿಸಿ ಸುಡದೆ ಮಹಾರಣ್ಯವ ?
ಚಿತ್ತುವಿನಲ್ಲಿ ಉದಯಿಸಿದ ಜ್ಞಾನ, ತನುವಿನ ಮೊತ್ತದೊಳಗಿಪ್ಪ
ಕಟ್ಟೇಂದ್ರಿಯವ ನಷ್ಟವ ಮಾಡದೆ ?
ಸರ್ಪದಷ್ಟವಾದಡೇನು ವಿಷ ಚಲನೆಯಾಗಿಯಲ್ಲದೆ ತನುವಿನ ಮರವೆಯಿಲ್ಲ.
ಹೀಂಗೆ ಘಟಿಸಿಯಲ್ಲದೆ ಅಘಟಿತವಾಗಬಾರದು.
ಇಂತಪ್ಪ ಪ್ರಕಾಶಿತಂಗೆ ನಮೋ ನಮೋ [ಎಂಬೆನು],
ನಿಃಕಳಂಕ ಮಲ್ಲಿಕಾರ್ಜುನಾ./270
ಕುಸುಮ ಗಂಧ[ವ] ಉಪದೃಷ್ಟದಿಂದ ಹೊರೆವಂತೆ,
ಕಿಸಲಯದ ಘೃತ, ಅದು ತನ್ನ ಎಸಳದಿಂದ ಬಂಧ ಬಿಡುವಂತೆ,
ರಸಿಕರ ವಿವೇಕವ ಹೊಸ ನವನೀತದಲ್ಲಿ ನಿಶಿತ ಅಳಕವ ತೆಗೆದಂತೆ,
ಆವಾವ ಸ್ಥಲವ ವೇಧಿಸಿದಲ್ಲಿ, ಭಾವಕ್ಕೆ ಭ್ರಮೆಯಿಲ್ಲದೆ,
ಉಭಯಕ್ಕೆ ನೋವು ಇಲ್ಲದೆ, ಭಾವ ನಿರ್ಭಾವವಾಗಬೇಕು.
ಆತ ಷಟ್ಸ್ಥಲವೇದಿ, ಉಭಯಸ್ಥಲಭರಿತ, ಸರ್ವಸ್ಥಲಸಂಪೂರ್ಣ,
ಸರ್ವಭಾವ ಲೇಪ ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಉಭಯಸ್ಥಲಲೇಪವಾದ ಶರಣ./271
ಕುಸುಮದಲ್ಲಿ ವಾಸನೆಯಿದ್ದಡೇನು ಅದು ಎಸೆಯದನ್ನಕ್ಕರ ?
ಕುಶಲನಲ್ಲಿ ರಸಿಕವಿದ್ದಡೇನು ಅದು ಎಸಗದನ್ನಕ್ಕರ ?
ಕುಟಿಲದ ವಸ್ತು ಕೈಯಲ್ಲಿದ್ದಡೇನು, ಅದು ಒಸೆದು ಪ್ರಾಣವ ಬೆರ[ಸದ]ನ್ನಕ್ಕರ?
ಇಂತೀ ಹುಸಿನುಸುಳ ಕಲಿತು ಬೆರಸಿದೆ ಲಿಂಗವನೆಂದಡೆ,
ಕಟ್ಟೋಗರದ ಮೊಟ್ಟೆಯಂತೆ, ಬಿಟ್ಟ ಶಕಟದಂತೆ,
ತೃಷೆಯ ಗಡಿಗೆಯಂತೆ, ಇದು ಸಹಜವಲ್ಲ ಲಿಂಗೈಕ್ಯರಿಗೆ
ನಿಃಕಳಂಕ ಮಲ್ಲಿಕಾರ್ಜುನಾ./272
ಕುಸುಮದೊಳಗಣ ಗಂಧ ಹೋದ ಮತ್ತೆ, ಕುಸುಮವನಾರು ಬಲ್ಲರು ?
ದರುಶನದಲ್ಲಿ ಜ್ಞಾನವಿಲ್ಲದ ಮತ್ತೆ, ದರುಶನವನಾರು ಬಲ್ಲರು ?
ಮಾತು ಕಲಿತು ನುಡಿವರಲ್ಲಿ, ನಿರ್ಜಾತನ ನೆಲೆ ಇಲ್ಲದಲ್ಲಿ, ಮಾತನಾರು ಬಲ್ಲರು?
ಇಷ್ಟನರಿಯದೆ ಇದ್ದಡೆ, ಇವರೆಲ್ಲರೂ ಭ್ರಾಂತುಯೋಗಿಗಳೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ./273
ಕೂಟಗೆಯ ಕೂಳನುಣ್ಣಬಂದವರೆಲ್ಲರೂ ಅಜಾತನ ನಿಲವ ಬಲ್ಲರೆ ?
ಬೇಟದ ಕಣ್ಣಿನವರೆಲ್ಲರೂ ಸಕಳೇಶನ ಬಲ್ಲರೆ ?
ಈಷಣತ್ರಯವ ಕೂಡುವರೆಲ್ಲರೂ ಪರದೇಶಿಗನ ಕೂಡಬಲ್ಲರೆ ?
ಆಶೆಯೆಂಬ ಕೊಳದಲ್ಲಿದ್ದು, ನಿರಾಶೆಯ ನಿನರ್ಾಮವ ಬಲ್ಲರೆ ?
ದೋಷದೂರ ನಿರ್ಜಾತನು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ./274
ಕೂಟದ ಲಕ್ಷಣವುಳ್ಳನ್ನಕ್ಕ ಐಕ್ಯಸ್ಥಲ.
ಭಾವದ ಕಲ್ಪಿತಂಗಳುಳ್ಳನ್ನಕ್ಕ ಶರಣಸ್ಥಲ.
ಕೊಂಡೆಹೆ ಕೊಟ್ಟೆಹನೆಂಬನ್ನಕ್ಕ ಪ್ರಾಣಲಿಂಗಿಸ್ಥಲ.
ಉಂಡೆಹೆ ಕೊಟ್ಟೆಹೆನೆಂಬನ್ನಕ್ಕ ಪ್ರಸಾದಿಸ್ಥಲ.
ಅರಿದೆಹೆ ಅರಿದೆಹೆನೆಂಬನ್ನಕ್ಕ ಮಾಹೇಶ್ವರಸ್ಥಲ.
ಗುರುವಿಂಗೆ ತನು, ಲಿಂಗಕ್ಕೆ ಮನ,
ಜಂಗಮಕ್ಕೆ ಧನವ ಕೊಟ್ಟೆಹೆನೆಂಬನ್ನಕ್ಕ ಭಕ್ತಸ್ಥಲ.
ಇವ ನಿಶ್ಚಯಿಸಿ ನಿಜಐಕ್ಯವೆಂದರಿತಲ್ಲಿ, ಷಟ್ಸ್ಥಲಲೇಪ,
ನಿಃಕಳಂಕ ಮಲ್ಲಿಕಾರ್ಜುನಾ./275
ಕೂಟದಲ್ಲಿ ಸುಖಿಯಾದ ಮತ್ತೆ ಬೇಟ ಕೂಟವೇಕೆ ?
ಕೂಟವ ಮಾಡಿದ ಮತ್ತೆ ವಸ್ತುವಿನಲ್ಲಿ ಕೂಡಿದೆನೆಂಬ ಅರಿವೇಕೆ ?
ನಿತ್ಯಸುಖಿಯಾದ ಮತ್ತೆ ಒಚ್ಚಿ ಹೊತ್ತಿಂಗೊಂದು ಪರಿಯಾಗಲೇಕೆ ?
ನಿಜನಿತ್ಯಘನದೊಳಗೈಕ್ಯನಾದಾತ ಭಕ್ತಿಮುಕ್ತಿಗೆ ದೂರ,
ನಿಃಕಳಂಕ ಮಲಿಕಾರ್ಜುನಾ./276
ಕೃತಯುಗಕ್ಕರಸು ಶೂಲಿ, ತ್ರೇತಾಯುಗಕ್ಕರಸು ರಘು.
ದ್ವಾಪರಕ್ಕರಸು ಸರಸ್ವತೀಪತಿ, ಕಲಿಯುಗಕ್ಕರಸು ರಾಮ ರಾವಣ.
ಇವರೊಳಗಾದ ಚಕ್ರವರ್ತಿಗಳು, ನರಕುಲಜಾತಿ,
ಪುಣ್ಣಪಾಪವೆಂಬ ಅರಸುತನಕ್ಕೊಳಗಾದರಯ್ಯಾ.
ಕೃತಯುಗದಲ್ಲಿ ಆ ಶೂಲಿ ಆಚಾರ್ಯನಾದ.
ತ್ರೇತಾಯುಗದಲ್ಲಿ ಆ ರಘು ದಶಾವತಾರನಾದ.
ದ್ವಾಪರಯುಗದಲ್ಲಿ ಆ ಬ್ರಹ್ಮ ಚತುರ್ಮುಖನಾದ.
ಕಲಿಯುಗದಲ್ಲಿ ಷಡ್ದರ್ಶನ ಪಲ್ಲವಿಸಿತ್ತು.
ಈ ದೃಷ್ಟವ ಹಂಚಿಕೊಂಡರು.
ದೃಷ್ಟವ ಕಾಬುದಕ್ಕೆ ಮಟ್ಟನಿರಿಸಿ ಪ್ರಳಯಗತರಾದರಯ್ಯ.
ಮೂರರೊಳಗಲ್ಲದ, ಆರಕ್ಕತೀತನ ತೋರಲಿಲ್ಲದ
ಘನವ ಮೀರಿ ನಿಂದವರಾರೋ ?
ಸೂರೆಯೊಳು ಗಾರಾದವರಿಗೆ ಮೀರಲಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./277
ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು.
ತ್ರೇತಾಯುಗದಲ್ಲಿ ಅಶ್ವನೆಂಬ ಕುದುರೆಯ ತಿಂದರು ವಿಪ್ರರು.
ದ್ವಾಪಾರದಲ್ಲಿ ಮಹಿಷನೆಂಬ ಕೋಣನಂ ತಿಂದರು ವಿಪ್ರರು.
ಕಲಿಯುಗದಲ್ಲಿ ಅಜನೆಂಬ ಹೋತ ತಿಂದರು ವಿಪ್ರರು.
ಇಂತು ಅನಂತ ಯುಗಂಗಳಲ್ಲಿ ಅನಂತ ಪ್ರಾಣಿ ವಧೆಯಂ ಮಾಡಿದರು.
ಇದಕ್ಕೆ ಕೊಟ್ಟು, ಸೆರಗು ಹಾಕಿದ ಮುಂಡಿಗೆಯು
ಇದು ಯಥಾರ್ಥ, ನಿಃಕಳಂಕ ಮಲ್ಲಿಕಾರ್ಜುನಾ./278
ಕೆಚ್ಚ[ಲಿನ] ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ.
ಬೆಂಕಿಯೊಳಗಣ ಬೇಗೆಯ ಬಲ್ಲಡೆ ಬಲ್ಲರೆಂಬೆ.
ವಾಯುವಿನೊಳಗಿರ್ಪ ಸಂಚಾರವ ಬಲ್ಲಡೆ ಬಲ್ಲರೆಂಬೆ.
ಬೀಜದೊಳಗಿರ್ಪ [ರ]ಸಾಂಕುರ[ವ] ಬಲ್ಲಡೆ ಬಲ್ಲರೆಂಬೆ.
ಕಾಯದೊಳಗಿರ್ಪ ಪ್ರಾಣನ ನೆಲೆಯ ಬಲ್ಲಡೆ ಬಲ್ಲರೆಂಬೆ.
ಚಂದನದೊಳಗಿಪ್ಪ ಗಂಧವ ಬಂಧಿಸಿ ಹಿಡಿಯಬಲ್ಲಡೆ.
ಲಿಂಗವಿಪ್ಪೆಡೆಯ ಬಲ್ಲರೆಂಬೆ.
ಶಿಲೆಯೊಳಗಿಪ್ಪ ಕುಲಹೀನನ ಬೆಳಗಿ ತೋರುವ
[ಆ]ಮಲಿನ[ರ] ಮುಖವ ಕಂಡು ಮತ್ತೆ ದಿಂಗು[ವಿ]ಡಿಯಲೇಕೊ?
ದಿಂ[ಗ ವಿ]ಡಿದು ಭಂಡರಹ ಲಂಡರಿಗೇಕೆ ಲಿಂಗದ ಸುದ್ದಿ,
ನಿಃಕಳಂಕ ಮಲ್ಲಿಕಾರ್ಜುನಾ ?/279
ಕೆರೆಯೊಳಗಣ ಮೊಸಳೆಯ ತಡಿಯ, ಉಡು ನುಂಗಿತ್ತು.
[ಆ] ಉಡುವ ದಡಿಯಲ್ಲಿಡಲಾಗಿ [ಅದು ಆ] ಬಡಿಗೆಯ ನುಂಗಿ,
ತನ್ನ ಬಳಗವನೊಡಗೂಡಿತ್ತು, ನಿಃಕಳಂಕ ಮಲ್ಲಿಕಾರ್ಜುನಾ./280
ಕೆಸರ ತೊಳೆವರಲ್ಲದೆ ಉದಕವ ತೊಳೆವರುಂಟೆ ಅಯ್ಯಾ ?
ಕನ್ನಡಿಯ ಬೆಳಗುವರಲ್ಲದೆ ಮಣ್ಣ ಬೆಳಗುವರೆ ಅಯ್ಯಾ ?
ಹಾಲಿಂಗಂತರವಲ್ಲದೆ ಕೀಳಿಂಗೆ ಮೇಲುಂಟೆ ಅಯ್ಯಾ ?
ಕಾಳುಹೃದಯರಲ್ಲಿ ಪ್ರವೀಣರಿಗೆ ತೆರಪಿಲ್ಲ.
ಅವರಿಗದೇ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ./281
ಕೈಯಲ್ಲಿ ಕುರುಹ ಹಿಡಿದು, ಕಣ್ಣಿನಲ್ಲಿ ನೋಡಿ,
ಆತ್ಮದಲ್ಲಿ ಅರಿದು, ತನ್ನ ತಾನೇ ತಿಳಿದು,
ಕೈಯಲ್ಲಿದ್ದುದೇನು, ಕಣ್ಣಿನಲ್ಲಿ ನೋಡಿದುದೇನು,
ಆತ್ಮನಿಂದ ಅರಿದುದೇನು,
ಇಂತೀ ತ್ರಿವಿಧಗುಣವ ತಿಳಿಯಬೇಕಣ್ಣಾ.
ಕೈಯಲ್ಲಿದ್ದುದು ಕಡದ ಲಿಂಗವೋ ?
ಕಣ್ಣಿನಲ್ಲಿ ನೋಡಿದುದು ಬಣ್ಣದ ಲಿಂಗವೋ ?
ಆತ್ಮನಿಂದ ಅರಿದುದು ಬಯಲ ಲಿಂಗವೋ ?
ಕೈಗೂ ಕಣ್ಣಿಗೂ ಮನಕ್ಕೂ ಭಿನ್ನವಾಯಿತ್ತು.
ಲಿಂಗಪ್ರಾಣಿ, ಪ್ರಾಣಲಿಂಗಿಗಳ ಇನ್ನಾರನೂ ಕಾಣೆ.
ಭಾವಿಸಲಿಲ್ಲ, ಭ್ರಮೆಗೊಳಗಾಯಿತ್ತು.
ಆದಿಯ ಶರಣರೆಲ್ಲಾ ಹೋದರಲ್ಲ ಹೊಲಬುಗೆಟ್ಟು.
ನಾದಕ್ಕೊಳಗಾಯಿತ್ತು, ಆತ್ಮನ ಕಳೆಯನೈದಿದವರಿನ್ನಾರನೂ ಕಾಣೆ.
ಕಳಾತೀತ ಪರಂಜ್ಯೋತಿ ಪ್ರಕಾಶ ನೀನೇ, ನಿಃಕಳಂಕ ಮಲ್ಲಿಕಾರ್ಜುನಾ./282
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ, ಲಿಂಗವಿಲ್ಲಾ ಎಂದೆ.
ಕಣ್ಣಿನಲ್ಲಿ ನೋಡಿ ಕಬಳೀಕರಿಸಿದೆನೆಂದಡೆ ಅದು ಕವುಳಿಕವೆಂಬೆ.
ಮನದಲ್ಲಿ ನೆನೆದು ಘನದಲ್ಲಿ ನಿಂದೆಹೆನೆಂದಡೆ ಭವಕ್ಕೆ ಬೀಜವೆಂದೆ.
ಕೈಗೂ ಕಣ್ಣಿಗೂ ಮನಕ್ಕೂ ಬಹಾಗ ತೊತ್ತಿನ ಕೂಸೆ ?
ಕಂಡಕಂಡವರ ಅಪ್ಪಾ ಅಪ್ಪಾ ಎಂಬ ಇಂತೀ ಸುಚಿತ್ತರನರಿಯದೆ,
ಉದ್ಯೋಗಿಸಿ ನುಡಿವ ಜಗದ ಭಂಡಕರನೊಲ್ಲೆನೆಂದ,
ನಿಃಕಳಂಕ ಮಲ್ಲಿಕಾರ್ಜುನ./283
ಕೊಂಡ ಅನ್ನದಿಂದ ಅಜೀರ್ಣ ಬಂದಡೆ,
ಆ ಅಜೀರ್ಣ ತನಗೊ, ಅಂಗಕ್ಕೊ ?
ತನ್ನ ಅನುವ ತಾನರಿಯದೆ, ಬಂದುಂಬ ಜಂಗಮದಲ್ಲಿ
ಅಂಗವನರಸುವ ಲಿಂಗದೂರರಿಗೇಕೆ ಜಂಗಮಭಕ್ತಿ,
ನಿಃಕಳಂಕ ಮಲ್ಲಿಕಾರ್ಜುನಾ ?/284
ಕೊಂದು ಕುಟ್ಟಿ ದಂಡವ ಕೊಂಬವಂಗೆ,
ಅದು ಬಂದಿಕಾರತನವೊ, ಕೃಪೆಯೊ ?
ಇದರಂದವ ತಿಳಿಯಬೆಕು.
ಬಂದು ಉಂಡುಹೋಹ ಜಂಗಮಕ್ಕೆ,
ಇದರ ಸಂದನರಿಯದಿರ್ದಡೆ,
ಬಂಧದಲ್ಲಿ ಬಿದ್ದ ವಿಹಂಗನಂತೆ,
ಇದರ ದಂದುಗವ ನೋಡಲಾರೆ,
ನಿಃಕಳಂಕ ಮಲ್ಲಿಕಾರ್ಜುನಾ./285
ಕೊಟ್ಟ ದ್ರವ್ಯವನು ತಮ್ಮ ತಮ್ಮ ಲಿಂಗಕ್ಕೆ
ಸಮರ್ಪಣೆಯ ಮಾಡಿಕೊಂಡು,
ತನು ಭೋಗಾದಿ ಭೋಗಂಗಳ ಭೋಗಿಸುತ್ತಿರ್ದರಲ್ಲಾ
ಹೊನ್ನಪರಿಯಾಣಂಗಳಲ್ಲಿ.
ಅನಂತಪರಿಯ ಗುಗ್ಗುಳ ಧೂಪ ದಶಾಂಗವೆಸೆಯಲು,
ಭರದಿಂದ ನಡೆತಂದು ಶೂನ್ಯಸಿಂಹಾಸನದ ಮುಂದೆ ನಿಂದಿರ್ಪರು.
ಪಂಚಮಹಾವಾದ್ಯ ಮೊಳಗುತ್ತಿರಲು,
ಅವರವರ ಕೈಯ ನಿವಾಳಿಗಳನೀಸಿಕೊಂಡು,
ನಾಗಾಯವ್ವೆಗಳು ನಿಃಕಳಂಕ ಮಲ್ಲಿಕಾರ್ಜುನ ಪ್ರಭುವಿಂಗೆ
ಆರತಿಯನೆತ್ತುತಿರ್ದರಲ್ಲಾ./286
ಕೊರಳ ಕಟ್ಟಿದ ನೇಣು ತಿರುಗಲಾಗಿ,
ತನ್ನ ಸುತ್ತಿ ತಾ ಬಿದ್ದುದಕ್ಕೆ ಕಟ್ಟಿದವನ ದುಷ್ಟನೆಂಬುದು ಕಷ್ಟವಲ್ಲವೆ ?
ತನ್ನ ಭಕ್ತಿಯ ತಾನೊಪ್ಪಿ, ಅದರ ಚನ್ನನರಿಯದೆ,
ಇದಿರಿನಲ್ಲಿ ಅನ್ಯಾಯವೆಂಬ ಕನ್ನಗಳ್ಳರ ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ./287
ಕೊರಳಿಗೆ ಒಂದು ನೇಣಿನಲ್ಲಿ ಸಂದೇಹ ಬಿಡದು.
ಎರಡು ನೇಣಿನಲ್ಲಿ ಹಿಂಗಿ ಹೋಗದು,
ಮೂರು ನೇಣಿನಲ್ಲಿ ಮುಕ್ತಾಯವಾಗದು.
ಹಲವು ನೇಣಿನಲ್ಲಿ ಕಟ್ಟುವಡೆದುದು ಕೂಸು,
ಅದಕ್ಕೆ ಒಲವರವೇಕೆ, ನಿಃಕಳಂಕ ಮಲ್ಲಿಕಾರ್ಜುನಾ./288
ಕೊಲ್ಲಬಾರದು ಎಂದು ಎಲ್ಲಕ್ಕೆ ಹೇಳಿ,
ಮತ್ತೆ ಗೆಲ್ಲ ಸೋಲದ ಮಾತು.
ಅಲ್ಲ ಅಹುದೆಂದು ಹೋರಲೇಕೆ ?
ಅದೆ ಕೊಲ್ಲದ ಕೊಲೆ, ನಿಃಕಳಂಕ ಮಲ್ಲಿಕಾರ್ಜುನಾ./289
ಕೋಡಗ ಜೋಗಿನಾಡಿಸುವುದ ಕಂಡೆ.
ಹಾವು ಹಾವಾಡಿಗನ ಗಾರುಡವನಿಕ್ಕಿ,
ಹೇಳಿಗೆಯ ಬಂಧನದಲ್ಲಿ ಕೂಡಿ ಕಾಡುವುದ ಕಂಡೆ.
ಉರಿಗೆಂಡ ತೃಣಕಂಜಿ, ಅಲ್ಲಿಯೆ ಅಡಗಿ ತನ್ನ ಉಷ್ಣವಿಲ್ಲದುದ ಕಂಡೆ.
ಇಂತೀ ದೃಷ್ಟವ ಮರೆದು, ಇಷ್ಟವನರಿಯದ ವಿಶ್ವಾಸಹೀನರು,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದರು./290
ಕೋಡಗದಣಲಿನಲ್ಲಿ ಮೂರಗುಳ ಕಂಡೆ.
ಒಂದಗುಳು ಚಪ್ಪೆಗಲ್ಲಿನಂದ, ಒಂದಗುಳು ಅಡ್ಡಗಲ್ಲಿನಂದ,
ಒಂದಗುಳು ಊಧ್ರ್ವಗಲ್ಲಾಗಿ ನಿಂದಿಹುದು.
ಆ ಕಲ್ಲಿನ ತುದಿಯಲ್ಲಿ ನಿಂದು ಕೋಡಗವ ಕೊಂದೆ.
ಚಪ್ಪೆಗಲ್ಲನಪ್ಪಳಿಸಿದೆ, ಅಡ್ಡಗಲ್ಲನಡ್ಡಿಗೆಯನಿಕ್ಕಿ ಒಡೆದೆ.
ನಿಂದ ಕಲ್ಲ ಸಂದೇಹವಿಲ್ಲದೆ ತಳ್ಳಿದೆ.
ಅದರಂದವ ತಿಳಿ, ಲಿಂಗೈಕ್ಯನಾದಡೆ ಹೊಂದದ ಬಟ್ಟೆಯೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ./291
ಕೋಲ ಹಿಡಿದು ಆನೆಯನೇರಿದ ಮತ್ತೆ, ಅದು ಭಾವಿಸದು ನೋಡಾ.
ಲೋಕಜ್ಞಾನವನರಿದು, ಭಾವಭ್ರಮೆಯಲ್ಲಿ ಚರಿಸಿದಡೆ,
ಅರಿಯಬಾರದು ನೋಡಾ.
ಅರಿದಲ್ಲಿ ಸಾಗುವನೊಡಲು, ತೆಪ್ಪದ ಮೇಲಿಪ್ಪ ಒಪ್ಪದವೊಲೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ./292
ಕೋಳು ಹೋದ ಮತ್ತೆ ಕಾಳಗದ ಇರವೇಕೆ ?
ಜಾಣನಾದ ಮತ್ತೆ ಕೇಳಲೇಕೆ ಆರುವನು ?
ಜ್ಞಾನಿಯಾದ ಮತ್ತೆ ಬಾಳಲೇಕೆ ಭವದಲ್ಲಿ ?
ಇದು ವೇಣುವಿನೊಳಗಣ ಕಿಚ್ಚಿನಂತಾಯಿತ್ತು.
ಇದಕ್ಕೆ ಜಾಣತನವೆ, ನಿಃಕಳಂಕ ಮಲ್ಲಿಕಾರ್ಜುನಾ./293
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ.
ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ.
ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ.
ಕೂಡುನ್ನಬರ ನೋಟ ಸುಖಿಯಾಗಿ,
ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ,
ಉಭಯದೃಷ್ಟ ಏಕವಾಯಿತ್ತು.
ಚರ ಅಚರವಾದಲ್ಲಿ ಉಭಯನಾಮರೂಪು ನೀನೆ,
ನಿಃಕಳಂಕ ಮಲ್ಲಿಕಾರ್ಜುನಾ./294
ಕ್ರೀವಂತಂಗೆ ಅಂಗ ಭವಿ, ನಿಃಕ್ರೀವಂತಂಗೆ ಮನ ಭವಿ,
ವೇಷವ ಹೊತ್ತು ತಿರುಗವ ಜಂಗಮಕ್ಕೆ ಆಶೆ ಭವಿ.
ಇನ್ನಾನೇವೆನಯ್ಯಾ ?
ಹಿಡಿವ ಎಡೆ ಕಾದ ಮತ್ತೆ ಪಿಡಿವುದಿನ್ನಾವುದೋ ?
ಆತ್ಮನು ಅಲಗಾದ ಮತ್ತೆ ಕೊಲುವ ಹಗೆ ಬೇರಿಲ್ಲವಾಗಿ,
ಹೇಳುವ ಜ್ಞಾನಿ ಸಂಸಾರಿಯಾದ ಮತ್ತೆ, ಕೆಳೆಗೊಂಡವ ಕೆಟ್ಟ ನೋಡಾ.
ಸಾಧನೆಯಿಂದ ಬಂದ ಒದಗು, ಕಳನೇರಿ ಕೈ ಮರೆದಂತೆ,
ನಿಃಕಳಂಕ ಮಲ್ಲಿಕಾರ್ಜುನಾ./295
ಕ್ರೀವಂತಂಗೆ ಪಡಿಪುಚ್ಚಕ್ಕೆ ಬಂದಾಗವೆ ಆಚಾರಕ್ಕೆ ಭಂಗ.
ಪಟುಭಟಂಗೆ ರಣಕ್ಕೆ ಹಂದೆಯಾದಲ್ಲಿಯೆ ಮಾತಿನ ಕೊರತೆ.
ವಿರಾಗಿ ರಾಗಿಯಾದಲ್ಲಿಯೆ ಸಮತೆಯೆಂಬುದಕ್ಕೆ ಸಮಾಧಾನವಿಲ್ಲ.
ವಿರಕ್ತನಾದಲ್ಲಿ ಸ್ತುತಿನಿಂದ್ಯಾದಿ ಕಂಗಳಲ್ಲಿ,
ಅಂಗಭಾವ ನಿಂದಲ್ಲಿಯೆ ವಿರಕ್ತಿಯೆಂಬ ಸಂಗವಿಲ್ಲ.
ಇಂತಿವರ ಸಂದನಳಿದಲ್ಲದೆ ಕ್ರೀ ಭಾವ ಜ್ಞಾನ ಒಂದೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./296
ಕ್ರೀಶುದ್ಧವಾದವಂಗೆ ಭಾವಶುದ್ಧ.
ಭಾವಶುದ್ಧವಾದವಂಗೆ ಆತ್ಮಶುದ್ಧ.
ಆತ್ಮಶುದ್ಧವಾದವಂಗೆ ಅರಿವು ಕರಿಗೊಂಡು ನಿಂದ ನಿಜವೆ,
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./297
ಕ್ರೂರ, ಮೃಗ, ಜಾರ, ಚೋರ, [ಸ]ಂದಣಿಗ, ಭಂಡ, ಚಾರ್ವಕ, ಸರ್ವಪಾತಕ,
ಸುರಾಪಾನಭುಂಜಕ, ಪಣ್ಯಾಂಗನಾಸಂಗಿ,
ಇಂತಿವರಲ್ಲಿ ತತ್ವಭಾವವ ಭಾವಿಸಿ ವ್ಯಕ್ತೀಕರಿಸಿದರೆ,
ದೃಷ್ಟಿಯಲ್ಲಿ ಇದಿರಾಗಿ ಹೊತ್ತು ನುಡಿದಡೆ,
[ಆ] ಭಕ್ತಂಗೆ ಭಕ್ತಿಯಿಲ್ಲ, ಮುಕ್ತಂಗೆ ಮುಕ್ತಿಯಿಲ್ಲ, ಜ್ಞಾನಿಗೆ ಜ್ಞಾನವಿಲ್ಲ.
ಸತಿಪತಿಸಂಯೋಗ ಸುಸಂಗವಲ್ಲದೆ,
ದುಸ್ಸಂಗದಿಂದ, ವ್ಯಾಪಾರದಿಂದ ನುಡಿಯಬಹುದೆ ?
ಬಲ್ಲವನಾದೆಹೆನೆಂದು ಅಲ್ಲಿಗಲ್ಲಿಗೆ ನುಡಿದಡೆ,
ಆತ್ಮನಲ್ಲಿದ್ದುದೇ ದ್ರೋಹ, ನಿಃಕಳಂಕ ಮಲ್ಲಿಕಾರ್ಜುನಾ./298
ಕ್ರೋಧವ ಬಿಟ್ಟಲ್ಲದೆ ಇಚ್ಫಾಶಕ್ತಿಯ ಹೊರಗಲ್ಲ.
ಮೋಹವ ಬಿಟ್ಟಲ್ಲದೆ ಜ್ಞಾನಶಕ್ತಿಯ ಹೊರಗಲ್ಲ.
ವ್ಯಾಪಾರ ಮುಂತಾದ ಸಕಲಕೃತ್ಯದ ತಾಪವ ಬಿಟ್ಟಲ್ಲದೆ
ಕ್ರಿಯಾಶಕ್ತಿ ಹೊರಗಲ್ಲ.
ಇಂತೀ ತ್ರಿವಿಧ ನಿರ್ಲೆಪವಾಗಿಯಲ್ಲದೆ ಲಿಂಗೈಕ್ಯವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./299
ಖ್ಯಾತಿಲಾಭಕ್ಕೆ ಮಾಡುವಾತನೆಂಬುದನರಿದು,
ಭೂತಹಿತ ದಯಾ ದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು,
ಮಹಿಮಾಸ್ಪದದಿಂದ ವೀರವೈರಾಗ್ಯಗಳಿಂದ ಇಕ್ಕುವಾತನೆಂಬುದನರಿದು,
ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಿಹರೆಂದು
ಗುತ್ತಿಗೆಯಲ್ಲಿ ಇಕ್ಕುವಾತನೆಂಬುದನರಿದು,
ಅರ್ತಿ ತಪ್ಪದೆ, ಬಾಹ್ಯದ ಭಕ್ತಿ ತಪ್ಪದೆ,
ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ,
ಸುಚಿತ್ತ ಧರ್ಮದಲ್ಲಿ ಮಾಡುವಾತನನರಿದು,
ಇಂತೀ ವರ್ಮಧರ್ಮಂಗಳಲ್ಲಿ ಅರಿದು,
ಸುಮ್ಮಾನದ ಸುಖತರದಲ್ಲಿ ಮಾಡುವ ಧರ್ಮಿಗನನರಿದು,
ಆರಾರ ಭಾವದ ಕಲೆಯನರಿದು, ಗುಣವೆಂದು ಸಂಪಾದಿಸದೆ,
ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ,
ಇಂತೀ ಸರ್ವಗುಣಸಂಪನ್ನನಾಗಿ ಪೂಜಿಸಿಕೊಂಬ ಗುರುವಿಂಗೆ,
ಚರಿಸುವ ಜಂಗಮಕ್ಕೆ, ಉಪಾಧಿ ನಷ್ಟವಾದ ವಿರಕ್ತಂಗೆ,
ಕೂಗಿಂದ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ/300
ಗರಳವಿಲ್ಲದ ಉರಗಂಗೆ ಹಲಬರಂಜಿದರುಂಟೆ ?
ಕೈದಿಲ್ಲದ ಭಟ ಗರ್ಜಿಸಿದಡೆ ಅಂಜಿದರುಂಟೆ ?
ಇಷ್ಟ ಬಾಹ್ಯ ದೃಷ್ಟ ಮಾತನಾಡಿದಡೆ,
ನೆಟ್ಟನೆ ಪ್ರಾಣಲಿಂಗಿಯಪ್ಪನೆ ?
ಅದು ನಿಶ್ಚಯವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./301
ಗಾಜಿನ ಗೋಡೆಯ ಸುಣ್ಣ ವೇಧಿಸಬಲ್ಲುದೆ ?
ನಾಗರಹೆಡೆಯ ಚಿಕ್ಕೆರ ಬಲ್ಲುದೆ ?
ಉರಿಯ ಪುತ್ಥಳಿಯ ಅರಗು ಮುಟ್ಟಿ ಅಪ್ಪಬಲ್ಲುದೆ ?
ಲಿಂಗಮಯ ಸಿರಿವಂತರ ಅಂಗವ ಸಂಗಿಸಬಲ್ಲವೆ ಇಂದ್ರಿಯಂಗಳು,
ಇಂತೀ ಗುಣವ ಹಿಂಗಿ, ಲಿಂಗವೆ ತಾನಾಗಿಪ್ಪ
ನಿಃಕಳಂಕ ಮಲ್ಲಿಕಾರ್ಜುನನ ?/302
ಗಾಣದಲ್ಲಿ ಸಿಲುಕಿದ ಎಳ್ಳು, ನೋಯದೆ ಎಣ್ಣೆಯ ಬಿಡುವುದೆ ?
ಕಾಯದಲ್ಲಿ ಸಿಲುಕಿದ ಜೀವ, ನೋಯದೆ ಕರಣಂಗಳ ಬಿಡುವನೆ ?
ಭಾವದಲ್ಲಿ ಸಿಲುಕಿದ ಭ್ರಮೆ, ನೋಯದೆ ವಿಕಾರವ ಬಿಡುವುದೆ ?
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./303
ಗಾರುಡವ ತಿಳಿದಡೆ ಹಾವಿನ ಸರಸವೆ ಲೇಸು.
ಆಪ್ಯಾಯನವನರತಡೆ ಹಸುವಿನ ಸಂಗವೆ ಲೇಸು.
ವಿಕಾರವರತಡೆ ಕಾಲವ್ಯಾಘ್ರನ ಸಂಭಾಷಣೆಯೆ ಲೇಸು.
ನನ್ನನರಿತು, ನಿಮ್ಮ ಬೆರೆದಡೆ ನಿನಗೆ ಲೇಸು,
ನಿಃಕಳಂಕ ಮಲ್ಲಿಕಾರ್ಜುನಾ./304
ಗಾಳಿಯಲೆದ್ದ ಧೂಳು, ತೃಣ ಎಲೆ ಮೊದಲಾದ
ಬಹುವ್ಯಾಪಾರ, ಗಾಳಿಯ ಮುಟ್ಟಿದುದಿಲ್ಲ.
ಶರಣನ ಸರ್ವೆಂದ್ರಿಯ, ಗಾಳಿಯ ಧೂಳಿನ ಪರಿಯಂತೆ,
ಪಳುಕದ ಭಾಂಡ ಬಹುವರ್ಣದಂತೆ,
ಮುಟ್ಟಿಯೂ ಮುಟ್ಟದಿರ್ಪ ಮಹಾಶರಣಂಗೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ./305
ಗುಣವ ಕಂಡು ನೆನೆದೆಹೆನೆಂದಡೆ ಆ ನೆನಹು ನಿನ್ನ ಹಂಗು.
ಅಂಗವ ಬಿಟ್ಟು ಕಂಡೆಹೆನೆಂದಡೆ, ಆ ದೇಹ ಕರಣಂಗಳ ಹಂಗು.
ಅರಿಯಬಾರದು, ಅರಿಯದೆ ಇರಬಾರದು.
ಈ ಉಭಯದ ಭೇದವ ಇನ್ನಾರಿಗೆ ಹೇಳುವೆ,
ನಿಃಕಳಂಕ ಮಲ್ಲಿಕಾರ್ಜುನಾ./306
ಗುತ್ತಿಗೆಕಾರ ನುಡಿದಡೆ, ಅದ ಒಪ್ಪವಿಡಲರಿಯರು.
ಹೊತ್ತುಹೊರಗೆಯವರು ನುಡಿದಡೆ, ತಪ್ಪನೊಪ್ಪವಿಡಬೇಕು.
ಮುಂದಣ ತಪ್ಪಿಗೆ ಈಡಾದ ಕಾರಣ, ಇದು ನಿಶ್ಚಯವೆಂದು ತಿಳಿ,
ನಿಃಕಳಂಕ ಮಲ್ಲಿಕಾರ್ಜುನಾ./307
ಗುರು ಭಕ್ತನಂಗ, ಲಿಂಗ ಮಹೇಶ್ವರನಂಗ, ಜಂಗಮ ಪ್ರಸಾದಿಯಂಗ.
ಇಂತೀ ತ್ರಿವಿಧಸ್ಥಲಂಗಳಲ್ಲಿ ತ್ರಿವಿಧವಡಗಿ,
ತ್ರಿವಿಧ ಇದಿರಿಟ್ಟು, ತ್ರಿವಿಧ ಐಕ್ಯವಾಗಿ,
ಬೆಳಗಿಂಗೆ ಕಳೆದೋರಿ, ಕಳೆಗೆ ಕಾಂತಿ ಪ್ರಜ್ವಲಿಸುವಂತೆ,
ಅರ್ಕನ ಕಿರಣದಂತೆ, ಸಾಕಾರ ರೂಪಿಂಗೆ ಉಭಯಚಕ್ಷುವಾಗಿ,
ಬೆಳಗಿನಿಂದ ಬೆಳಗ ಕಂಡಂತೆ,
ಸ್ಥಲವ ನೆಮ್ಮಿ, ಸ್ಥಲದಲ್ಲಿ ಒಲವರವಿಲ್ಲದೆ ನೋಡಲಿಕ್ಕೆ,
ಸ್ಥಲಭರಿತಮೆಲ್ಲಿಯೂ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ./308
ಗುರುಜಂಗಮದ ಪಾದೋದಕವ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ,
ಆ ಲಿಂಗ ಮೊದಲೋ, ಗುರುಚರ ಮೊದಲೋ ?
ಅನಾದಿಬೀಜ ಲಿಂಗ, ಆದಿಬೀಜ ಗುರುಚರ.
ಇಂತೀ ಉಭಯವನರಿತಲ್ಲಿ,
ಗುರುಚರಕ್ಕೆ ಲಿಂಗವೆ ಆದಿ, ನಿಃಕಳಂಕ ಮಲ್ಲಿಕಾರ್ಜುನಾ./309
ಗುರುಪೂಜಕರೆಲ್ಲರೂ ಬ್ರಹ್ಮನ ಪಾಶಕ್ಕೊಳಗಾದರು.
ಲಿಂಗಪೂಜಕರೆಲ್ಲರೂ ವಿಷ್ಣುವಿನ ಪಾಶಕ್ಕೊಳಗಾದರು.
ಜಂಗಮಪೂಜಕರೆಲ್ಲರೂ ರುದ್ರನ ಪಾಶಕ್ಕೊಳಗಾದರು.
ಇಂತೀ ಮೂವರ ಹಂಗಿಗೆ ಸಿಲ್ಕಿ ಜ್ಞಾನಿಗಳೆಂತಾದಿರಯ್ಯಾ ?
ಮುಟ್ಟಿ ಪೂಜಿಸುವದಕ್ಕೆ ರೂಪಿಲ್ಲದ ಲಿಂಗದ
ದೃಷ್ಟವ ಕಂಡ ಪರಿಯಿನ್ನೆಂತೊ ?
ಇದು ಮರ್ತ್ಯದಲ್ಲಿ ಮಾಡುವ ಅಭ್ಯಾಸವಲ್ಲದೆ ನಿಜವಲ್ಲ.
ಅನಿತ್ಯವ ಬಿಟ್ಟ ನಿಜನಿಶ್ಟಯಂಗಲ್ಲದೆ,
ಸುಚಿತ್ತ ನಿರ್ಮುಕ್ತ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಐಕ್ಯನಲ್ಲ./310
ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು.
ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು.
ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು.
ಗುರುವಿನ ಅನುವನರಿಯನಾಗಿ ಗುರು ಸಂಬಂಧಿಯಲ್ಲ.
ಲಿಂಗದ ನಿಲವನರಿಯನಾಗಿ ಲಿಂಗಸಂಬಂಧಿಯಲ್ಲ.
ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂಧಿಯಲ್ಲ.
ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು,
ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ.
ಆ ಶರಣ ಉರಿಯುಂಡ ಕರ್ಪುರದಂತೆ./311
ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ,
ದೃಢಚಿತ್ತವಿಲ್ಲದೆ ಪೊಡವಿಯ ಜನಂಗಳು ಮೆಚ್ಚಬೇಕೆಂದು,
ಮೃಡನ ಭಕ್ತರಿಗೆ ನೆರೆನಿಶ್ಚಟವುಂಟೆನಿಸಿಕೊಂಡೆಹೆನೆಂಬ
ಧಾರುಣಿಯ ಚೋರರಿಗೆಲ್ಲಿಯದೊ ನಿಜಭಕ್ತಿ,
ನಿಃಕಳಂಕ ಮಲ್ಲಿಕಾರ್ಜುನಾ ?/312
ಗುರುಲಿಂಗದ ಕುರುವಹುದಕ್ಕೆ ಕೆಟ್ಟ ದನವೆ ?
ಅರಸಿಕೊಂಬುದಕ್ಕೆ ಓಡಿಹೋದ ತೊತ್ತೆ ?
ದೃಷ್ಟದಲ್ಲಿ ಕಾಬುದಕ್ಕೆ ನೆಟ್ಟನೆ ಗೊತ್ತೆ ?
ಈ ಸಂದೇಹದ ಅಚ್ಚುಗದಲ್ಲಿ ಬಿದ್ದು ಕೆಟ್ಟೆನಯ್ಯಾ.
ಇದಕಿನ್ನೇನು ದೃಷ್ಟ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./313
ಗುರುವ ಭಾವಿಸಿದಲ್ಲಿ ಲಿಂಗವ ಮರೆಯಬೇಕು.
ಲಿಂಗವ ಭಾವಿಸಿದಲ್ಲಿ ಜಂಗಮವ ಮರೆಯಬೇಕು.
ಜಂಗಮವ ಭಾವಿಸಿದಲ್ಲಿ ಪ್ರಸಾದವ ಮರೆಯಬೇಕು.
ಪ್ರಸಾದವ ಭಾವಿಸಿದಲ್ಲಿ ಪಾದೋದಕವ ಮರೆಯಬೇಕು.
ಪಾದೋದಕವ ಭಾವಿಸಿದಲ್ಲಿ ಪ್ರಸನ್ನವನರಿಯಬೇಕು.
ಅರಿದರಿದು [ಮರೆವುದು] ಮತ್ತೆ ಎಡೆಯ ಕುರುಹಲ್ಲ.
[ಬೇಡುವ]ವರ ಬಯಕೆ.
ಎನ್ನೊಡೆಯನೆ ಒಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ./314
ಗುರುವನರಿದವಂಗೆ ಗುರುವಿಲ್ಲ, ಲಿಂಗವನರಿದವಂಗೆ ಲಿಂಗವಿಲ್ಲ.
ಜಂಗಮವನರಿದವಂಗೆ ಜಂಗಮವಿಲ್ಲ, ಪ್ರಸಾದವನರಿದವಂಗೆ ಪ್ರಸಾದವಿಲ್ಲ,
ಪಾದೋದಕವನರಿದವಂಗೆ ಪಾದೋದಕವಿಲ್ಲ.
ಇವೆಲ್ಲವನರಿದು ಮರೆದವಂಗೆ,
ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ, ಎಲ್ಲಿಯೂ ಇಲ್ಲ.
ಮತ್ತೆ ಎಲ್ಲಾ ಎಡೆಯಲ್ಲಿಯೂ ತಾನೆ.
ಲೀಲೆಗೆ ಹೊರಗೆಂದಡೆ ಕೇಡಿಲ್ಲದವನೆ, ನಿರ್ಭವ ನೀ,
ನಿಃಕಳಂಕ ಮಲ್ಲಿಕಾರ್ಜುನಾ./315
ಗುರುವನರಿಯದ ಕಾರಣ ತನು ಸವೆಯಬೇಕೆಂಬರು.
ಲಿಂಗವನರಿಯದ ಕಾರಣ ಮನ ಸವೆಯಬೇಕೆಂಬರು.
ಜಂಗಮವನರಿಯದ ಕಾರಣ ಧನ ಸವೆಯಬೇಕೆಂಬರು.
ಇಂತೀ ತ್ರಿವಿಧವನರಿಯದ ಕಾರಣ ಮಾಟಕೂಟಕ್ಕೆ
ಮನೆಗಟ್ಟಿ ಮಾಡುತ್ತಿರ್ದರಯ್ಯಾ ಮಹಾಗಣಂಗಳು, ತಾವು ಸ್ವಇಚ್ಫಾಪರರಲ್ಲದೆ.
ಬ್ರಹ್ಮನ ಹಂಗಿಂದ ಬಂದ ಗುರುವನರಿಯರಾಗಿ,
ವಿಷ್ಣುವಿನ ಹಂಗಿಂದ ಬಂದ ಲಿಂಗವನರಿಯರಾಗಿ,
ರುದ್ರನ ಹಂಗಿಂದ ಬಂದ ಜಂಗಮವನರಿಯರಾಗಿ,
ಅಹಂಕಾರವ ಮರೆದಲ್ಲಿಯೆ ಗುರುವನರಿದವ,
ಚಿತ್ತದ ಪ್ರಕೃತಿಯ ಹರಿದಲ್ಲಿಯೆ ಲಿಂಗವನರಿದವ,
ಮಾಟಕೂಟದ ಅಲಸಿಕೆಯ ಮರೆದಾಗವೆ ಜಂಗಮವನರಿದವ.
ಇಂತೀ ತ್ರಿವಿಧಸ್ಥಲನಿರತಂಗಲ್ಲದೆ ವರ್ಮವಿಲ್ಲಾ ಎಂದೆ.
ಖ್ಯಾತಿ ಲಾಭಕ್ಕೆ ಮಾಡುವಾತನ ಭಕ್ತಿ, ಅಗ್ನಿಯಲ್ಲಿ ಬಿದ್ದ ಬಣ್ಣವನರಸುವಂತೆ,
ನಿಃಕಳಂಕ ಮಲ್ಲಿಕಾರ್ಜುನಾ./316
ಗುರುವಾದಡೆ ಕಾಲಿಲ್ಲದಿರಬೇಕು.
ಲಿಂಗವಾದಡೆ ಬಾಯಿಲ್ಲದಿರಬೇಕು.
ಜಂಗಮವಾದಡೆ ಅಂಗವಿಲ್ಲದಿರಬೇಕು.
ಈ ಮೂವರು ಮೂವರ ಹಂಗಿಗರಾದರು.
ಏತರ ಹಂಗಿಲ್ಲದಾತ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ./317
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
ಇಂತಿವ ಕೊಟ್ಟು ಮುಕ್ತಿಯ ಗಳಿಸಿಕೊಂಡೆಹೆನೆಂಬ
ಮುಯ್ಯ ಬಂಧುಗಳಂತೆ,
ಬಡ್ಡಿಯಾಸೆಗೆ ಕೊಟ್ಟ ಲುಬ್ಧನಂತೆ, ನಿಃಕಳಂಕ ಮಲ್ಲಿಕಾರ್ಜುನಾ./318
ಗುರುವಿಂಗೆ ತನುವ ಕೊಟ್ಟಾಗವೆ ಬ್ರಹ್ಮನ ಬಲೆ.
ಲಿಂಗಕ್ಕೆ ಮನವ ಕೊಟ್ಟಾಗವೆ ವಿಷ್ಣುವಿನ ಬಲೆ.
ಜಂಗಮಕ್ಕೆ ಧನವ ಕೊಟ್ಟಾಗವೆ ರುದ್ರನ ಬಲೆ.
ಈ ಇದಿರಿಟ್ಟ ಭೇದ,
ಸ್ಥೂಲ ಸೂಕ್ಷ್ಮ ಕಾರಣ ಮೂರು ಮೂರಕ್ಕೊಡಲಾದ ಮತ್ತೆ,
ಇದ ಸಾರಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ./319
ಗುರುವಿಂಗೆ ತನುವ ಕೊಟ್ಟಿಹೆವೆಂದು
ಗುರುವಿಂಗೆ ಭವಭಾರವ ಹೊರಿಸಲೇಕೊ ?
ಲಿಂಗಕ್ಕೆ ಮನವ ಕೊಟ್ಟಿಹೆವೆಂದು ಬೆಂಬಳಿಯಲ್ಲಿ ತಿರುಗಲೇಕೊ ?
ಜಂಗಮಕ್ಕೆ ಧನವ ಕೊಟ್ಟಿಹೆವೆಂದು ಪಾಶವ ತಪ್ಪಿಸಲೇಕೊ ?
ಕೊಟ್ಟೆನೆಂಬುದು ಆಶೆಯೊ, ನಿರಾಶೆಯೊ ?
ಕೊಡುವುದಕ್ಕೆ ತಾನಾರೆಂಬುದನರಿದು,
ಇದಿರಿಟ್ಟು ಈಸಿಕೊಂಬವನಾರೆಂದರಿದು,
ಮಾಡುವ ಭಕ್ತಿಗೆ ಕೇಡಿಲ್ಲದ ಪದವೆಂದರಿದು,
ಕೊಟ್ಟವ ಭಕ್ತ, ಕೊಂಡವ ದೇವ.
ಇದರ ಬಂಧ ಎನಗೊಂದೂ ಬೇಡ, ನಿಮ್ಮಲ್ಲಿ ಹಿಂಗದಂತಿರಿಸು.
ಆನಂದಕ್ಕತೀತ, ಸ್ವಾನುಭಾವಾತ್ಮಕ, ನಿಃಕಳಂಕ ಮಲ್ಲಿಕಾರ್ಜುನಾ./320
ಗುರುವಿಲ್ಲವೆಂದೆ, ಶಿಕ್ಷೆಯೊಳಗಣ ನಿಳಯವನರಿಯನಾಗಿ.
ಲಿಂಗವಿಲ್ಲವೆಂದೆ, ಜಂಗಮದ ತ್ರಿಕರಣವನರಿಯನಾಗಿ.
ಜಂಗಮವಿಲ್ಲವೆಂದೆ, ಗುರುವಿನ ಅನಾದಿಸಂಸಿದ್ಧಿಯನರಿಯನಾಗಿ.
ಈ ತ್ರಿವಿಧವಿಲ್ಲವೆಂದೆ, ತನ್ನ ತಾನರಿಯನಾಗಿ.
ತನ್ನ ತಾನರಿದಲ್ಲಿಯೆ, ನಿಃಕಳಂಕ ಮಲ್ಲಿಕಾರ್ಜುನನ ಒಡಲುಗೊಂಡು,
ಕುರುಹಾದ ಭೇದ./321
ಗುರುವೆಂದಡೆ ತನು, ಲಿಂಗವೆಂದಡೆ ಆತ್ಮ,
ಜಂಗಮವೆಂದಡೆ ಆತ್ಮನರಿವು.
ತ್ರಿವಿಧದ ವ್ಯಾಪ್ತಿಯ ಕಳೆದುಳಿದ ಸಂಬಂಧವದು ನೀನೆ,
ಅನುಪಮಲಿಂಗ, ನಿರವಯ, ನಿಃಕಳಂಕ ಮಲ್ಲಿಕಾರ್ಜುನಾ./322
ಗುರುವೆಂದು ಪ್ರಮಾಣಿಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವೆಯಾಗಿರಬೇಕು.
ಲಿಂಗವೆಂದು ಪ್ರಮಾಣಿಸಿದಲ್ಲಿ, ಸಂದೇಹವಿಲ್ಲದಿರಬೇಕು.
ಜಂಗಮವೆಂದು ಪ್ರಮಾಣಿಸಿದಲ್ಲಿ, ತ್ರಿವಿಧದ ಹಂಗಿಲ್ಲದಿರಬೇಕು.
ಇದರಂದ ಒಂದೂ ಇಲ್ಲದೆ ಭಕ್ತರಾದೆವೆಂಬ ಮಿಟ್ಟೆಯ ಭಂಡರ ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ./323
ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ.
ಲಿಂಗವೆಂಬೆನೆ, ಸಂಸಾರಕ್ಕೆ ಅಂಗವ ಕೊಟ್ಟ.
ಜಂಗಮವೆಂಬೆನೆ, ಕಂಡಕಂಡವರ ಅಂಗಳವ ಹೊಕ್ಕು, ಬಂಧನಕ್ಕೊಳಗಾದ.
ಎನಗಿದರಂದವಾವುದೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ./324
ಗುರುಶಿಷ್ಯ ಸಂಬಂಧ, ಕಮಠನ ಶಿಶುವಿನ ಕೂರ್ಮೆಯಂತಿರಬೇಕು.
ಗುರುಶಿಷ್ಯ ಸಂಬಂಧ, ಬಿತ್ತಳಿದ ಕಾರ್ಪಾಸದ ಪಾವಕನ ಸಂಗದಂತಿರಬೇಕು.
ಗುರುಶಿಷ್ಯ ಸಂಬಂಧ, ಪಯದ ಅಪ್ಪುವಿನ ಸಂಗದಂತಿರಬೇಕು.
ಗುರುಶಿಷ್ಯ ಸಂಬಂಧ, ಲೆಕ್ಕಣಿಕೆಯೊಳಡಗಿದ ಸುರೇಖೆಯಂತಿರಬೇಕು.
ಹೀಂಗಲ್ಲದೆ ಹಸ್ತಮಸ್ತಕಸಂಯೋಗವ ಮಾಡಿದ ಗುರುವಿನ ಇರವು.
ಒಡೆದ ಗಡಿಗೆಯಲ್ಲಿ ಸುಧೆಯ ತುಂಬಿ ಅದಿರಬೇಕೆಂದಡೆ,
ಪಡಿಗೆ ತೆರಹಿಲ್ಲ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ./325
ಗುರುಸೇವೆಯ ಮಾಡುವಲ್ಲಿ, ಉತ್ಪತ್ಯದ ಒಡಲೊಡೆಯಬೇಕು.
ಲಿಂಗಪೂಜೆಯ ಮಾಡುವಲ್ಲಿ,
ಸುಖದುಃಖ ಭೋಗಂಗಳ ಸಕಲದ ಬುಡಗೆಡೆಯಬೇಕು.
ಜಂಗಮ ಪೂಜೆಯ ಮಾಡುವಲ್ಲಿ,
ಚತುರ್ವೆಧಫಲಪದಂಗಳ ಭಾವ ನಷ್ಟವಾಗಬೇಕು.
ತ್ರಿವಿಧವ ತ್ರಿವಿಧದಿಂದ ಕೂಡಿ, ಬೆಳಗಿಂಗೆ ಬೆಳಗೊಳಗಾದಂತೆ,
ಷಟ್ಸ್ಥಲಭಾವ ಲೇಪವಾಯಿತ್ತು, ಪ್ರಾಣಲಿಂಗದ ಸಂಗವ ಮಾಡಲಾಗಿ.
ಇಂತೀ ಗುಣವ ತಿಳಿದು ನೋಡಲಾಗಿ ಐಕ್ಯವಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಜಭಾವದ ಬೆಳಗು./326
ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ,
ಜಂಗಮಸ್ಥಲ ಪ್ರಸಾದಿಯ ವಂಶಿಕ.
ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧ ಅನಾದಿಯ ಸೋಂಕು.
ಅವು ಪೂರ್ವಗತಿಗೆ ಬಂದು, ಉತ್ತರಗತಿಯನೆಯ್ದಿಸುವುದಕ್ಕೆ ಗೊತ್ತಾಗಿ,
ನಿತ್ಯ ಅನಿತ್ಯವೆಂಬ ಉಭಯದ ಹೆಚ್ಚುಕುಂದ ತಿಳಿವುದಕ್ಕೆ
ದೃಷ್ಟವ ಕೊಟ್ಟೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ./327
ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ.
ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ,
ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು.
ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ,
ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ,
ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ,
ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ./328
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ.
ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ.
ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ.
ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ?
ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ.
ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು.
ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು,
ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ.
ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ.
ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ.
ಇಂತೀ ತ್ರಿವಿಧಭೇದವ ಕೊಟ್ಟು ಬಂದು,
ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ.
ಹೇಳಿ ಕೆಟ್ಟ ಚೆನ್ನಬಸವಣ್ಣ,
ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು.
ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ.
ಸಂದೇಹದಂಗವ ತಾಳಿರ್ದ ಪ್ರಭುದೇವರು.
ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ.
ಇಲ್ಲವೆಂಬೆನೆ ಸಮಯಕ್ಕೆ ದೂರ.
ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ.
ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು.
ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ,
ಕರ್ಮಕಾಂಡಿಯಾದ.
ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ.
ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ,
ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ.
ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ.
ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ,
ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ.
ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ./329
ಗುರುಸ್ಥಲವಾರು, ಲಿಂಗಸ್ಥಲ ಮೂರು,
ಜಂಗಮಸ್ಥಲ ಒಂದೆಯೆಂದಲ್ಲಿ ಓಂಕಾರ ಬಿಂದು ಸಹಿತಾದಂತೆ.
ಆರೋಹ ಅವರೋಹವಾಗಿ ನಿಂದು, ಏರಿದ ವಿಷ ಇಳಿದು ಸೋರುವಂತೆ.
ಅದಾರ ಗುಣವೆಂದು ಪ್ರಣವದ ಬೇರನರಿತಲ್ಲಿ,
ಸರ್ವಸ್ಥಲ ಜಾರಿ ಮೀರಿತ್ತು, ನಿಃಕಳಂಕ ಮಲ್ಲಿಕಾರ್ಜುನಾ./330
ಗುರುಸ್ಥಲವೆಂದು ಬಂದೆ, ಆಚಾರ್ಯನಾಗಿ.
ಲಿಂಗಸ್ಥಲವೆಂದು ಬಂದೆ, ಆರೋಹ ಅವರೋಹಂಗಳ ಪರಿಹರಿಸಿಹೆನೆಂದು.
ಶರಣನಾಗಿ ಬಂದೆ, ಭಕ್ತಿಜ್ಞಾನ ವೈರಾಗ್ಯ
ತ್ರಿವಿಧದ ಗೊತ್ತ ಮುಕ್ತಿಯ ಮಾಡಿಹೆನೆಂದು.
ದುತ್ತೂರಕ್ಕೆ, ಕಲ್ಪತರುವಿಂಗೆ ಮತ್ತಾವ ವೃಕ್ಷಫಲಾದಿಗಳಿಗೆ ಅಪ್ಪುವೊಂದು,
ಹಲವು ವೃಕ್ಷಂಗಳು ತಮ್ಮ ತಮ್ಮ ಸಶ್ಚಿತ್ತದ ಸವಿಯಾದಂತೆ,
ನಾನಾ ಸ್ಥಲಕ್ಕೆ ದೇವನೊಬ್ಬನೆ.
ಊರೊಳಗಾದಲ್ಲಿ ಅರಸು ಆಳಿನೊಳಗಾದಂತೆ ಆದೆಯಲ್ಲಾ.
ಕ್ರೀಗೆ ತುತ್ತಾಗಿ ಸಿಕ್ಕಿದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ. /331
ಗೂಳಿಯ ಕೋಡಿನಲ್ಲಿ ನಾಡೆಲ್ಲ ಸಿಕ್ಕಿತ್ತು.
ಗೂಳಿಯ ಕೊಲಬಾರದು, ನಾಡು ಕಾಡ ಕೂಡಿತ್ತು.
ಈ ರೂಢಿಯೊಳಗಣ ಹೊಲನ ಮೇದು, ಆಡ ಬಂದೆಯೋ ?
[ಕಾ]ಡಿನ ನಾಡ ಬಿಟ್ಟು ರೂಢಿಯ [ಮೊ]ಹ ಬಿಡಬೇಡ.
ನಿನ್ನ ಬೇಡಿಕೊಂಬೆ, ನಿಃಕಳಂಕ ಮಲ್ಲಿಕಾರ್ಜುನಾ./332
ಗೆಲ್ಲಾಳೆಲ್ಲರು ಬಿಲ್ಲನೂರಿ ನಿಂದಿರಲಾಗಿ
ಬಿಲ್ಲಿನ ಹೆದೆ [ಹರಿದು] ಬಿಲ್ಲಿನ ಹೆದೆಯ ಕೊಪ್ಪು ಅಲ್ಲಲ್ಲಿಗೆ ತೊಡಕು,
ಮೆಲ್ಲಗೆ ಏರಿಸಿದಡೆ ಹೆದೆ ಅಲ್ಲಿಯೆ ಸಿಕ್ಕಿತ್ತು.
ಆ ಹೆದೆಯನಿಳುಹುವರ ಕಾಣೆ.
ಬಲ್ಲತನದಿಂದ ಬಿಲ್ಲು ಬೆರಗಾಯಿತ್ತು.
ಬಿಲ್ಲ ಹಿಡಿದಾತ ಮರೆದೊರಗಿದ.
ಮರೆದೊರಗಿದಾತನ ಕರೆಯಲಾಗಿ,
ಬಿಲ್ಲಿನ ಹೆದೆ ಇಳಿಯಿತ್ತು, ಸೈವೆರಗು ಬಿಟ್ಟಿತ್ತು.
ಅಂಬಿನ ಕಣೆ ಎಲ್ಲಿ ಹೋಯಿತ್ತೆಂದರಿಯೆ,
ನಿಃಕಳಂಕ ಮಲ್ಲಿಕಾರ್ಜುನಾ./333
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ.
ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು.
ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು.
ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು.
ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು.
ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು.
ಕಂಡಿತ್ತು ಬೆಂಕಿಯ ಬೆಳಗ,
ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು.
ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ./334
ಗ್ರಾಮ ಮಧ್ಯದೊಳಗೆ ದೇಗುಲ, ದೇಗುಲದೊಳಗೆ ಮೂವರ ಕಂಡೆ.
ಒಬ್ಬನೆಡೆಯಾಡುತ್ತಿರ್ದ, ಒಬ್ಬ ನುಡಿಯುತ್ತಿರ್ದ, ಒಬ್ಬ ಅಳುತ್ತಿರ್ದ,
ಬಂದು ನೋಡಲಾಗಿ ನಡೆವನ ಕಾಲ ನಡಗಿಸಿ, ನುಡಿವನ ಬಾಯ ಮುಚ್ಚಿ,
ಅಳುವನ ಕಣ್ಣಿನಲ್ಲಿ ಬಣ್ಣಬಚ್ಚಣೆಯ ಮಣ್ಣ ತುಂಬಿ,
ಈ ಮೂವರೆಡೆಯಾಟದಲ್ಲಿ ನೋಯಲಾರದೆ,
ಅಂಜಿ ಅಲಸಿ ಹಿಂಗಿರ್ದೆ, ನಿಃಕಳಂಕ ಮಲ್ಲಿಕಾರ್ಜುನಾ./335
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ,
ತೇಜಸ್ತತ್ವ ಅರಿವುಭೇದವಾಗಿ,
ಇಂತೀ ತ್ರಿವಿಧಭೇದ ವರ್ತುಳ ಗೋಮುಖ ಗೋಳಕಾಕಾರ ಕೂಡಿ ಲಿಂಗವಾದಲ್ಲಿ,
ಈಶ್ವರತತ್ವ ವಾಯುಭೇದವಾಗಿ, ಸದಾಶಿವತತ್ವ ಆಕಾಶಭೇದವಾಗಿ,
ಉಭಯ ಏಕವಾಗಿ, ಅಗ್ನಿತತ್ವ ಕೂಡಲಿಕ್ಕೆ ಆ ತ್ರಿವಿಧ ಏಕವಾಗಿ,
ಅಪ್ಪುತತ್ವವ ಕೂಡಲಿಕ್ಕೆ ಆ ಚತುರ್ಭಾವ ಏಕವಾಗಿ,
ಪೃಥ್ವಿತತ್ವ ಕೂಡಲಾಗಿ, ಉತ್ಪತ್ಯವೆಲ್ಲಿ ಅಡಗಿತ್ತು ?
ಸ್ಥಿತಿಯೆಲ್ಲಿ ನಡೆಯಿತ್ತು ? ಲಯವೆಲ್ಲಿ ಸತ್ತಿತ್ತು ?
ಲಿಂಗ ಮಧ್ಯ ಸಚರಾಚರವೆಂದಲ್ಲಿ, ಕಂಡು ಕಾಣೆ,
ನಿಃಕಳಂಕ ಮಲ್ಲಿಕಾರ್ಜುನಾ./336
ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು,
ಸಂಗಗುಣದಿಂದ ನೀರಾಗಿ.
ಸಂಗ ಹಿಂಗಲಿಕೆ ಉಭಯದಂಗ ಒಂದಾದ ತೆರನಂತೆ,
ಈ ಗುಣ ಲಿಂಗಾಂಗಿಯ ಸಂಗದ ವಿವರ,
ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕೂಡಿದ ಪರಮಸುಖಿಯಂಗ. /337
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ?
ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ?
ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು.
ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು.
ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ,
ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ./338
ಚಂದ್ರಮಂಡಲದಲ್ಲಿ ನಿಂದಿರ್ಪ ಭೇದ[ವ], ಅದರಂಗದ ನಿಲುವೆಂತುಟೊ ?
ಅಂಗಮಂಡಲದಲ್ಲಿ ಲಿಂಗವಿಪ್ಪ ಭೇದವ, ಸಂಗೊಳಿಸುವ ಪರಿಯಿನ್ನೆಂತುಟೊ ?
ಈ ಭಂಗಿತವ ಮಾಡುವ ಇಂದ್ರಿಯ ಕರಣಂಗಳಲ್ಲಿ ನಿಂದಿಹ ಪರಿಯಿನ್ನೆಂತುಟೊ ?
ಈ ಭೇದ, ರಸಫಲದಂಗ, ಬಸವಣ್ಣ ಮೊದಲಾದ ಪ್ರಮಥರು ಬಲ್ಲರು.
ಇದನಾನೇವೆ, ನಿಃಕಳಂಕ ಮಲ್ಲಿಕಾರ್ಜುನಾ ? /339
ಚಕ್ರಿಯ ಚಿತ್ತದಂತೆ, ಚಿತ್ರಜ್ಞನ ಕೈಯ ಲೆಕ್ಕಣಿಕೆಯಂತೆ,
ಅಪ್ಪುವಿನ ಮಡುವಿನ ಮತ್ಸ್ಯದ ಪಥದಂತೆ,
ಇಂತೀ ಭಕ್ತಿಜ್ಞಾನವೈರಾಗ್ಯ ನಿಃಪತಿಯಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ./340
ಚಿತ್ತ ಶುದ್ದವಾದಲ್ಲಿಯೆ ಮಜ್ಜನದ ಮಂಡೆ.
ಆಂಗದಾಪ್ಯಾಯನವರತಲ್ಲಿಯೆ ಎಂಬುದಕ್ಕೆ ಬಾಯಿ.
ಸಂದುಸಂಶಯ ಹರಿದಲ್ಲಿಯೆ ಲಿಂಗದ ಸಂಸರ್ಗ.
ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./341
ಚಿತ್ತಶುದ್ಧವನರಿದು ನಡೆಯಬೇಕೆಂಬರು,
ನಡೆದು ಹೊಡೆವಾಗ ಹೂಡಿದ ಬಂಡಿಯೆ, ಆಡುವ ವಿಧಾತನೆ ?
ಈ ಭೇದವನರಿಯದೆ,
ಗಾಜಿನ ಕುಪ್ಪಿಗೆಯಲ್ಲಿ ತೋರುವ ಪ್ರತಿಬಿಂಬದಂತೆ,
ಅದ ಭೇದಿಸಿ ನೋಡಿ, ನಿಃಕಳಂಕ ಮಲ್ಲಿಕಾರ್ಜುನಾ./342
ಚಿತ್ರದ ಹುಲಿ ಮನುಷ್ಯನ ಕಚ್ಚಬಲ್ಲುದೆ ?
ಮರ್ತ್ಯದೊಳಗೆ ಈಶ್ವರನ ದರ್ಶನ ಹೊತ್ತವರಿಗೆಲ್ಲ ನಿತ್ಯತ್ವವುಂಟೆ ?
ಇದರಚ್ಚೆಯ ಹೊರಲಾರದಿರ್ದಡೆ, ಮರ್ತ್ಯಕ್ಕೆ ಹೊರಗೆಂದ ನಿಚ್ಚಟ ಶರಣ,
ನಿಃಕಳಂಕ ಮಲ್ಲಿಕಾರ್ಜುನಾ./343
ಚಿನ್ನದ ಕುರುಹ ಒರೆದಲ್ಲದೆ ಅರಿಯಬಾರದು.
ಚಂದನದ ಗುಣವ ಮರ್ದನಂಗೈದಲ್ಲದೆ ಗಂಧವ ಕಾಣಬಾರದು.
ಇಕ್ಷುದಂಡದ ಪರಿಯ ಬಂಧಿಸಿದಲ್ಲದೆ ವಿಶೇಷವ ಕಾಣಬಾರದು.
ನಾನಾ ರಸ ಗಂಧಂಗಳ ಗುಣವ ಸವಿದಲ್ಲದೆ ಕಾಣಬಾರದು.
ಕ್ಷೀರದ ಘಟ್ಟಿಯ ಮಥನದಿಂದಲ್ಲದೆ ರುಚಿಸಬಾರದು.
ಮಹಾತ್ಮರ ಸಂಗ ಮಹಾನುಭಾವದಿಂದಲ್ಲದೆ ಕಾಣಬಾರದು.
ಇದು ಕಾರಣ, ಮಾತು ಮಾತಿಂಗೆಲ್ಲಕ್ಕೂ ಮಹದನುವುಂಟೆ ?
ಲಿಂಗವ ಸೋಂಕಿದ ಮನಕ್ಕೆ ಅಂಗ ಭಿನ್ನವಾವುದೆಂದಡೆ,
ಶೇಷನ ಅವಸಾನದಂತಿರಬೇಕು, ತ್ರಾಸಿನ ವಾಸದ ಭಾಷಾಂಗದಂತಿರಬೇಕು.
ಹೀಂಗಲ್ಲದೆ ಸರ್ವಾನುಭಾವಿಗಳೆಂತಾದಿರಣ್ಣಾ.
ಕೊಲ್ಲದ ಕೊಲೆಯ, ಗೆಲ್ಲದ ಜೂಜವ,
ಬಲ್ಲತನವಿಲ್ಲದ ಬರಿವಾಯ ಮಾತಿನ ಗೆಲ್ಲ ಸೋಲಕ್ಕೆ ಹೋರಿದಡೆ,
ವಲ್ಲಭ ನಿಃಕಳಂಕ ಮಲ್ಲಿಕಾರ್ಜುನನವರನೊಲ್ಲನಾಗಿ./344
ಚಿನ್ನದಲ್ಲಿ ಮಾಡಿದ ರೂಪು, ಮಣ್ಣಿನಲ್ಲಿ ಮಾಡಿದ ರೂಪು,
ಕಲ್ಲಿನಲ್ಲಿ ಮಾಡಿ ರೂಪು ಪ್ರಳಯವಾಗಲು,
ಸ್ಥೂಲವಳಿದಡೆ ಸೂಕ್ಷ್ಮಕ್ಕೆ ತರಬಹುದು.
ಬಣ್ಣದ ರೂಪು ಚೆನ್ನುತನ ಹರಿದಲ್ಲಿ, ಅದ ನನ್ನಿಯ ಮಾಡಬಹುದೆ ?
ಅದು ತನ್ನಲ್ಲಿಯೆ ಲೇಪ, ಅದು ಭಿನ್ನಕ್ಕೆ ಬಾರದು.
ಇವ ಚೆನ್ನಾಗಿ ಹೇಳಾ, ಅಭಿನ್ನಮೂರ್ತಿ ನಿಃಕಳಂಕ ಮಲ್ಲಿಕಾರ್ಜುನಾ./345
ಚಿಪ್ಪಿನ ಮಂದಿರದಲ್ಲಿ ಮುತ್ತು ಬೆಳೆದ ಭೇದದಂತೆ,
ಮೃತ್ತಿಕೆಯ ಸಾರದಲ್ಲಿ ಹೊಮ್ಮಿದ ಹೊಂಗಳ ಪರಿಯಂತೆ,
ಕಾಯದಲ್ಲಿ ಬೆಳಗಿ ತೋರುವ ಮಹದರಿವಿನ ಕೊನೆಯಲ್ಲಿ,
ಪ್ರಜ್ವಲಿತ ಪ್ರಭಾಕರ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ./346
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು,
ಬಂಗಾರವ ಕಳೆದು ಬಣ್ಣವ ನೋಡಬಾರದು.
ಕುಸುಮವ ಕಳೆದು ಗಂಧವ ಕಾಣಬಾರದು.
ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ?
ಅಂಗವ ಕಳೆದು ಲಿಂಗವನರಿಯಬಾರದು.
ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ?
ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ
ಅಜಾತರು ಕೇಳಿರೊ.
ಅಂಗವ ಕಳೆದು ಲಿಂಗವ ಕಂಡೆನೆಂಬುದು,
ಲಿಂಗವಳಿದು ಆತ್ಮನನರಿದೆನೆಂಬುದು,
ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಮರೆ ಹೇಳಾ.
ತೃಷೆಯರತು ನೀರ ಕೊಳಬಹುದೆ ?
ಆಪ್ಯಾಯನವನರತು ಓಗರವನುಣಬಹುದೆ ?
ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ?
ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ
ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ. /347
ಜಂಗಮ ಸುಳಿದಡೆ ವಸಂತ ಗಾಳಿಯಂತೆ ಸುಳಿವ.
ಬಿರುಗಾಳಿಯಂತೆ ಸುಳಿವನೆ ? ಸುಳಿಯ.
ಜಂಗಮಸ್ಥಲವೆಂತೆಂದಡೆ, ಮಳಲೊಳಗಣ ಅಗ್ಘಣಿಯಂತೆ.
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಕದಡ ಚೆಲ್ಲಿ,
ತಿಳಿಯ ಕೊಳಬಲ್ಲಡೆ ಜಂಗಮವೆಂಬೆ.
ಇಂತಲ್ಲದಿರ್ದಡೆ ಭೂತಪ್ರಾಣಿಯೆಂಬೆ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ./348
ಜಂಗಮಕ್ಕೆ ಇಕ್ಕಿದಲ್ಲದೆ ಒಲ್ಲೆವೆಂಬ ಭಕ್ತರು ಕೇಳಿರೊ.
ಆ ಜಂಗಮ ಮುಂದೆ ಬಂದು ನಿಂದಿರಲು,
ತಾ ಕುಳಿತಿದ್ದು, ಏನು ಬಂದಿರಯ್ಯಾ ಎಂದು, ಉದಾಸೀನ ಪಕ್ಷಿತನಾಗಿ,
ಆಸನವ ತೊಲಗದೆ, ಲೇಸ ನುಡಿಯದೆ,
ವಾಸಿವಟ್ಟಕ್ಕೆ ಕೂಳನಿಕ್ಕುವ ದಾತರಿಗೆಲ್ಲಿಯದೊ, ಜಂಗಮಲಿಂಗದ ಪೂಜೆ ?
ಮನವೊಲಿದು ಮಾಡುವ ಭಕ್ತನ ಸ್ಥಲ,
ತಾ ಹೋಹಲ್ಲಿ, ಜಂಗಮ ಬಾಹಲ್ಲಿ ಇದಿರೇಳಬೇಕು.
ಮೆಟ್ಟಡಿಯಂ ಕಳೆದು, ಬಟ್ಟೆಯಂ ತೊಲಗಿ,
ಸಾಷ್ಟಾಂಗವೆರಗಿ, ಪ್ರತಿಶಬ್ದವಿಲ್ಲದೆ ಕೈಕೊಂಡು,
ತ್ರಿಕರಣಶುದ್ಧನಾಗಿ ಕೊಡುವುದ ಕೊಟ್ಟು, ತನಗೆ ಬೇಕಾದುದ ಕೇಳಿಕೊಂಡು,
ಭಾವಿಸಬಲ್ಲಡೆ, ಅದೇ ಸದ್ಭಕ್ತಿ, ಅದೇ ಜೀವನ್ಮುಕ್ತಿ.
ಇಷ್ಟವನರಿಯದೆ, ಕಾಬವರ ಕಂಡು, ಮಾಡುವರ ನೋಡಿ ಮಾಡುವ ಮಾಟ,
ರಾಟಾಳದ ಕಂಭದ ಪಾಶದಂತೆ.
ಆಶೆಕರನೊಲ್ಲೆನೆಂದ ನಿಃಕಳಂಕ ಮಲ್ಲಿಕಾರ್ಜುನಾ./349
ಜಂಗಮಭಕ್ತಿಯ ಮಾಡಿಹೆನೆಂದು ಮಹಾಮನೆಯ ಕಟ್ಟಿದ ಮತ್ತೆ,
ಹಗೆ ಕಪಟವಂ ತಾಳ್ದು, ಶಿವರೂಪಿನಲ್ಲಿ ಬಂದು ಇರಿದಡೆ,
ಅಂಗವ ಕೊಡದಿದ್ದಡೆ ಭಕ್ತಂಗದೆ ಭಂಗ.
ಕಪಟದಿಂದ ಸತಿಯ ಹಿಡಿದಡೆ, ಗದಕದಲ್ಲಿದ್ದೇನೆಂದಡೆ, ತನ್ನ ಸತ್ಯಕ್ಕೆ ಭಂಗ.
ಆಶೆಯಿಂದ ಬಂದು, ವೇಷವ ತಾಳಿ, ರಾಶಿಯ ಹೊನ್ನ ಬೇಡಿದಡೆ,
ಮನದಲ್ಲಿ ಆಶೆದೋರಿದಡೆ, ತಾ ಪೂಜಿಸುವ ಈಶ್ವರಂಗೆ ಭಂಗ.
ಇದಿರಾಶೆಯ ಬಿಡದೆ ಮಾಡುವನ ಭಕ್ತಿ,
ಕೂಸು ಸತ್ತು ಹೇತದ ನಾತ ಬಿಡದಂತೆ,
ಅವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನಾ./350
ಜಂಗಮವೆಂದು ಮಾಡಿ ಪಙ್ತಿಯಲ್ಲಿ ವಿಂಗಡಿಸಿ,
ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ
ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ,
ನಿಃಕಳಂಕ ಮಲ್ಲಿಕಾರ್ಜುನಾ./351
ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ.
ಬ್ರಹ್ಮಮೂರ್ತಿ ಗುರುವಾದ, ವಿಷ್ಣುಮೂರ್ತಿ ಲಿಂಗವಾದ,
ರುದ್ರಮೂರ್ತಿ ಜಂಗಮವಾದ.
ಇಂತೀ ಮೂವರು ಬಂದ ಭವವ ನೋಡಾ.
ಇಷ್ಟಲಿಂಗವ ಕೊಟ್ಟು ಕಷ್ಟದ್ರವ್ಯಕ್ಕೆ ಕೈಯಾನುವ ಕಾರಣ,
ಗುರುಬ್ರಹ್ಮನ ಕಲ್ಪಿತವ ತೊಡೆದುದಿಲ್ಲ.
ಲಿಂಗ ಸರ್ವಾಂಗದಲ್ಲಿ ಸಂಬಂಧಿಸಿದ ಮತ್ತೆ,
ಕಾಯದಲ್ಲಿ ಮೆಟ್ಟಿಸಿಕೊಂಬ ಕಾರಣ, ವಿಷ್ಣುವಿನ ಸ್ಥಿತಿ ಬಿಟ್ಟುದಿಲ್ಲ.
ಜಂಗಮ ರುದ್ರನ ಪಾಶವ ಹೊತ್ತ ಕಾರಣ, ರುದ್ರನ ಲಯಕ್ಕೆ ಹೊರಗಾದುದಿಲ್ಲ.
ಇಂತಿವರ ಗುರುವೆನಬಾರದು, ಲಿಂಗವೆನಬಾರದು, ಜಂಗಮವೆನಬಾರದು.
ಪೂಜಿಸಿದಲ್ಲಿ ಮುಕ್ತಿಯಲ್ಲದೆ ನಿತ್ಯತ್ವವಿಲ್ಲ.
ಸತ್ಯವನರಸಿ ಮಾಡುವ ಭಕ್ತ, ನಿತ್ಯಾನಿತ್ಯವ ವಿಚಾರಿಸಬೇಕು.
ಸತ್ತು ಗುರುವೆಂಬುದ, ಚಿತ್ತು ಲಿಂಗವೆಂಬುದ, ಆನಂದ ಜಂಗಮವೆಂಬುದ [ಅರಿದು],
ಇಂತೀ ತ್ರೈಮೂರ್ತಿಯಾಗಬೇಕು.
ತಾನೆ ಗುರುವಾದಡೆ ಬ್ರಹ್ಮಪಾಶವ ಹರಿಯಬೇಕು.
ತಾನೆ ಲಿಂಗವಾದಡೆ ಶಕ್ತಿಪಾಶವ ನಿಶ್ಚೆ ಸಬೇಕು.
ತಾನೆ ಜಂಗಮವಾದಡೆ ರುದ್ರನ ಬಲೆಯ ಹರಿಯಬೇಕು.
ಇಂತಿವರೊಳಗಾದವೆಲ್ಲವು ಪ್ರಳಯಕ್ಕೆ ಒಳಗು.
ಗುರುವೆಂಬುದು ಬಿಂದು, ಲಿಂಗವೆಂಬುದು ಕಳೆ,
ಜಂಗಮವೆಂಬುದು ಕಳಾತೀತ, ಜ್ಞಾನ ಜಂಗಮ.
ಆ ವಸ್ತುವಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ.
ಪಾಶಬದ್ಧನಲ್ಲ, ವೇಷಧಾರಿಯಲ್ಲ, ಗ್ರಾಸಕ್ಕೋಸ್ಕರವಾಗಿ ಭಾಷೆಯ ನುಡಿವನಲ್ಲ.
ಈಶಲಾಂಛನವ ಹೊತ್ತು, ಕಾಸಿಂಗೆ ಕಾರ್ಪಣ್ಯಬಡುವನಲ್ಲ.
ಮಹದಾಶ್ರಯವನಾಶ್ರಯಿಸಿದನಾಗಿ, ಮನೆಯ ತೂತಜ್ಞಾನಿಗಳ ಮೆಚ್ಚ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೆಪನಾದ ಶರಣ./352
ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ
ಚೋರತನವ ಕಂಡು ಅಂಜಿದೆನಯ್ಯಾ.
ಮನೆಯ ಕೂಡಿಕೊಂಡು ಅನ್ನವನಿಕ್ಕಿದಲ್ಲಿ
ಸುಳಿವ ಚೋರರ ಕಂಡು ಗುರುವೆನಲಾರೆ.
ಅದೆಂತೆಂದಡೆ : ಮಹತ್ತರವಪ್ಪ ಜ್ಯೋತಿಲರ್ಿಂಗವ ಕೈಯಲ್ಲಿ ಕೊಟ್ಟು,
ಪಾತಕವಪ್ಪ ಫಲಭೋಗಂಗಳ ಕೈಯಲ್ಲಿ ಕೊಟ್ಟು,
ಅಜಾತರೆಂದಡೆ ನಾಚಿದೆನಯ್ಯಾ.
ಇಂತೀ ಭ್ರಾಂತರ ಕಂಡು ವಂದಿಸಲಾಗದು,
ತನ್ನ ರೋಗಕ್ಕೆ ನಿರ್ವಾಹವ ಕಾಣದೆ, ಇದಿರ ರೋಗವ ಮಾಣಿಸಿಹೆನೆಂದು,
ಮದ್ದಿನ ಚೀಲವ ಹೊತ್ತು ಸಾವ ಕದ್ದೆಹಕಾರನಂತೆ,
ಕ್ಷುದ್ರಜೀವಿಗೆಲ್ಲಿಯದು ಸದ್ಗುರುಸ್ಥಲ ?
ಸದ್ಗುರುವಾದಡೆ ಅವ ಬದ್ಧನಾಗಿರಬೇಕು.
ತಂತ್ರದಲ್ಲಿ ಹೋಹ ಮಂತ್ರದಂತಿರಬೇಕು.
ಮಂದಾರದಲ್ಲಿ ತೋರುವ ಸುಗಂಧದಂತಿರಬೇಕು.
ಇಂತಿಪ್ಪ ಗುರುವಿಂಗಿಹವಿಲ್ಲ, ಪರವಿಲ್ಲ, ಭಾವಕ್ಕೆ ಭ್ರಮೆಯಿಲ್ಲ.
ಆ ಗುರುವಿನ ಕೈಯಲ್ಲಿ ಬೋಧಿಸಿಕೊಂಡ ಶಿಷ್ಯಂಗೆ
ತುಪ್ಪವನಿಕ್ಕಿದ ಚಿತ್ತೆಯಂತೆ ಸ್ಫಟಿಕವ [ಸಾರಿ] ದ [ಒರತೆ ]ಯಂತೆ.
ಹೀಂಗಲ್ಲದೆ, ಗುರುಶಿಷ್ಯಸಂಬಂಧವಾಗಬಾರದು.
ಇದನರಿಯದಿರ್ದಡೆ ಅಂಧಕನ ಕೈಯ ಅಂಧಕ ಹಿಡಿದಂತೆ,
ಪಂಗುಳ[ನ]ಲ್ಲಿ ಚಂದವನರಸುವನಂತೆ,
ಸ್ವಯಾನಂದಭರಿತ, ನಿಃಕಳಂಕ ಮಲ್ಲಿಕಾರ್ಜುನಾ./353
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು,
ಇಲ್ಲವೆಂದು ನುಡಿವುತ್ತಿಹರು ಆಧ್ಯಾತ್ಮಯೋಗಿಗಳು.
ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ?
ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ.
ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ?
ನಾನಾ ಸುಖಂಗಳ ಸುಖಿಸಬಲ್ಲುದೆ ?
ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ,
ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ.
ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು.
ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು.
ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ./354
ಜಪವೇಕೊ ಅಪ್ರಮಾಣಂಗೆ ?
ತಪವೇಕೊ ಚತುರ್ವೆಧಪ[ಥೆ]ಕ್ಕೆ ಹೊರಗಾದಾತಂಗೆ ?
ನೇಮವೇಕೊ ನಿತ್ಯತೃಪ್ತಂಗೆ ?
ನಿತ್ಯವೇಕೊ ಅಷ್ಟವಿಧಾರ್ಚನೆ ಷೋಡಶೋಪಚಾರಭರಿತಂಗೆ ?
ಜಪಕ್ಕೊಳಗಾದ ರುದ್ರ, ತಪಕ್ಕೊಳಗಾದ ವಿಷ್ಣು,
ನೇಮಕ್ಕೊಳಗಾದ ಬ್ರಹ್ಮ, ನಿತ್ಯಕ್ಕೊಳಗಾದ ಈಶ್ವರ,
ಉಪಚರಣೆಗೊಳಗಾದ ಸದಾಶಿವ.
ಇಂತಿವರೆಲ್ಲರೂ ಸೃಷ್ಟಿಯ ಮೇಲಣ ತಪ್ಪಲಿಲ್ಲಿರ್ದರೇಕೆ,
ಎಲ್ಲಾ ಬೆಟ್ಟವನೇರಿ ?
ಇಂತಿವರ ಬಟ್ಟೆಯ ಮೆಟ್ಟದೆ ನಿಶ್ಚಯವಾದ ಶರಣ,
ಇಹದವನಲ್ಲ, ಪರದವನಲ್ಲ.
ಆ ಶರಣ ಉಡುವಲ್ಲಿಯೂ ತಾನೆ, ತೊಡುವಲ್ಲಿಯೂ ತಾನೆ,
ಕೊಡುವಲ್ಲಿಯೂ ತಾನೆ, ಮುಟ್ಟುವಲ್ಲಿಯೂ ತಾನೆ,
ತಟ್ಟುವಲ್ಲಿಯೂ ತಾನೆ ಬೇರೊಂದಿಲ್ಲವಾಗಿ.
ಕ್ಷೀರವ ಕೂಡಿದ ಜಲವ ಭೇದಿಸಬಹುದೆ ಅಯ್ಯಾ ?
ವಾರಿಧಿಯ ಕೂಡಿದ ಸಾರವ ಬೇರೆ ರುಚಿಸಲುಂಟೆ ಅಯ್ಯಾ ?
ಆರಡಿ ಕೊಂಡ ಗಂಧವ ಬೇರು ಮಾಡಿ ಮುಡಿಯಲಿಲ್ಲ.
ತೋರಲಿಲ್ಲದ ರೂಪಿಂಗೆ ಆರಾಧಿಸುವುದಕ್ಕೆ ಬೇರೆ ಒಡಲಿಲ್ಲ.
ಸಾಕಾರಕ್ಕೆ ಆರೈಕೆಯಿಲ್ಲದೆ ಸತ್ತು ರೂಪಾದಲ್ಲಿಯೆ,
ಇ[ಹದ]ಲ್ಲಿ ಪರದಲ್ಲಿ ಪರಿಣಾಮಿಗಳಾಗಲಿ,
ಇಂತಿವಕ್ಕೆ ದೂರವಾಗಿ ಬಾಳುಗೆಟ್ಟು ಜಾಳಾದೆ,
ಹೇಳಹೆಸರಿಲ್ಲದಂತಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ./355
ಜಲ ಅನಲ ಮಣ್ಣು ಕೂಡಿ ಬಲಿದ ಮತ್ತೆ ಜಲ ಅನಲನಿಗುಂಟೆ ?
ಕ್ರೀವ್ಯಾಪಾರ ಜ್ಞಾನವ ಕೂಡಿದ ಮತ್ತೆ ಪ್ರಳಯ ಉಂಟೆ ?
ಹಾಕಿದೆ ಮುಂಡಿಗೆಯ, ಶಿವನಾಣೆ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸತ್ಯವಂತರೆತ್ತಿರಣ್ಣಾ./356
ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂಧಿಸಬಹುದೆ ?
ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ?
ಇದು ಸುಲಲಿತ, ಇದರ ಒಲುಮೆಯ ಹೇಳಾ,
ನಿಃಕಳಂಕ ಮಲ್ಲಿಕಾರ್ಜುನಾ./357
ಜಾಗ್ರದಲ್ಲಿ ಕಾಬುದು ಬ್ರಹ್ಮನಿರವು.
ಸ್ವಪ್ನದಲ್ಲಿ ಕಾಬುದು ವಿಷ್ಣುವಿನಿರವು.
ಸುಷುಪ್ತಿಯಲ್ಲಿ ಕಾಬುದು ರುದ್ರನಿರವು.
ಇಂತೀ ಗುಣವನರಿಯದೆ,
ಪರಮನ ಇರವನರಿವ ಪರಿಯೆಂತೊ ?
ಭ್ರಾಂತರ ಭ್ರಮೆಗೆ ದೂರ, ಶಾಂತರ ವಿಶ್ರಾಂತಿಯೆ,
ನಿಃಕಳಂಕ ಮಲ್ಲಿಕಾರ್ಜುನಾ./358
ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ,
ಬೈಚಿಟ್ಟಿ ನೆಲೆಯಂತಿರ್ದಡೇನು ಭೋಗಿಸಲರಿಯನಾಗಿ,
ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ ?
ಇವರಂಗವ ನೋಡಾ.
ಕೆಳಗೆ ನಿಂದು ಚಪ್ಟಿರಿದಡೆ ತೊಟ್ಟು ಬಿಟ್ಟಿತ್ತೇ ಹಣ್ಣು ?
ಅದರ ಒಲುಮೆ ಈ ಪರಿ, ನಿಃಕಳಂಕ ಮಲ್ಲಿಕಾರ್ಜುನಾ./359
ಜಿಹ್ವೆಯ ಲಂಪಟಕ್ಕಾಗಿ ಅನ್ಯರ ಬೋಧಿಸಲೇಕೆ ?
ಗುಹ್ಯದ ವಿಷಯಕ್ಕಾಗಿ ಮನುಷ್ಯರೊಳು ದೈನ್ಯಬಡಲೇಕೆ ?
ಅಂಗದ ಇಂದ್ರಿಯಕ್ಕಾಗಿ ನಿಜಲಿಂಗವ ಹಿಂಗಲೇಕೆ ?
ಮನುಷ್ಯರ ಹಂಗ ಬಿಟ್ಟು ನಿಜಾಂಗವಾದ ಮಹಾತ್ಮಂಗೆ ಇದಿರಿಡಲಿಲ್ಲ.
ಇದಿರಿಂಗೆ ತಾನಿಲ್ಲ.
ಉಭಯವಳಿದ ಮತ್ತೆ ಏನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ/360
ಜೀವವ ಕಡಿದವಂಗಿಲ್ಲದ ಪಾಪ, ಕತ್ತಿಗುಂಟೆ ಎಲೆದೇವಾ ?
ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ?
ಕೊಲಿಸಿದ ಅರಸಿದ್ಧಂತೆ ಬಂಟಂಗೆ ಮುನಿವರೆ ?
ಎಲೆ ದಿವ್ಯಜ್ಞಾನವೆ,
ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನನಿದ್ದಂತೆ,
ಎನ್ನನೇಕೆ ಕಾಡಿಹೆ ?/361
ಜ್ಞಾತೃಚಕ್ಷುವಿನಿಂದ ಜಗದ ರೂಪ ಕಾಬಲ್ಲಿ,
ಜ್ಞಾನಚಕ್ಷುವಿನಲ್ಲಿ ಕಾಬ ಸ್ವಪ್ನಂಗಳು,
ಜ್ಞೇಯಚಕ್ಷುವಿನಲ್ಲಿ ಕೂಡಿ ಕಾಬ ಸುಖಂಗಳು.
ಇಂತೀ ತ್ರಿವಿಧ ದೃಷ್ಟಂಗಳ ಕಾಬುದೆಲ್ಲ ಜ್ಞಾತೃವಿನಲ್ಲಿ ಉಪದೃಷ್ಟ,
ಜ್ಞಾನದಲ್ಲಿ ಸ್ವಪ್ನದೃಷ್ಟ, ಜ್ಞೇಯದಲ್ಲಿ ಕೂಟದೃಷ್ಟವಾಗಿ ಕಾಬುದು
ತನುತ್ರಯದ ಭೇದವೋ, ಆತ್ಮತ್ರಯದ ಭೇದವೋ ?
ಆತ್ಮನೊಂದೆಂದಡೆ ಘಟ ಪರಿಕರಂಗಳಾಗಿ ತೋರುತ್ತಿಹವಾಗಿ,
ಆತ್ಮನ ಏಕವೆನಬಾರದು.
ಆತ್ಮನ ಹಲವೆಂದಡೆ, ಮೃದು ಕಠಿನ ಶೀತ ಉಷ್ಣಾದಿಗಳಲ್ಲಿ ಹೆಚ್ಚುಕುಂದಿಲ್ಲದೆ,
ಆತ್ಮಂಗೆ ಒಂದೆ ಭೇದವಾಗಿ ತೋರುತ್ತಿಹವಾಗಿ, ಆತ್ಮನ ಹಲವೆನಬಾರದು.
ಇಂತೀ ಘಟಭೇದವನರಿತು, ಆತ್ಮನ ಸುಖದುಃಖವನರಿತು,
ಭಕ್ತಿಗೆ, ಸತ್ಯ ವಿರಕ್ತಿಗೆ, ಮಲತ್ರಯದೂರ ಸರ್ವಜೀವಕ್ಕೆ
ಹೆಚ್ಚುಕುಂದಿಲ್ಲದೆ ನಿಶ್ಚಯವಾಗಿ ನಿಂದ
ನಿಶ್ಚಿಂತನಂಗವೆ ಷಟ್ಸ್ಥಲ.
ಬ್ರಹ್ಮವೇ ಸರ್ವಸ್ಥಲಭರಿತ ಸರ್ವಾಂಗಲಿಂಗಿ, ಆತ
ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ./362
ಜ್ಞಾನಕ್ಕೆ ಲೇಪವಾದವನಿರವು, ತುಪ್ಪವ ನಂಬಿದ ಬತ್ತಿಯಂತೆ,
ಕಾದ ಲೋಹದ ಜಲದಿರವಿನಂತೆ, ನಾದವ ನುಂಗಿದ ಬಯಲಿನಂತೆ,
ಚೋದ್ಯವ ಕಂಡ ಕನಸಿನಂತೆ,
ಇದಾರಿಗೆ ಭೇದಕ ? ಇದ ಶೋಧಿಸಬೇಕು.
ಲಿಂಗದಾದಿಯ ಅಂತುವನರಿದಡೆ, ಗುಣಸಂಗಿಯಲ್ಲದೆ ಯೋಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./363
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ:
ಅಂಬುಧಿಯ ಕೂಡಿದ ಸಂ[ಭೇದದ]ತಿರಬೇಕು.
ಮುಖ ಶಿರ ಬೋಳಾದಡೇನೊ,
ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ?
ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ,
ಜಗದೊಳಗೆ ಸುಳಿವ ಬದ್ಧಕತನದಲ್ಲಿ
ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು,
ತುರುಬ ಚಿಮ್ಮುರಿಗಳ ಕಟ್ಟಿ,
ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ
ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು.
ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ,
ಮೊಲೆಯ ಕಾಣದ ಹಸುಳೆಯಂತೆ ?
ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ?
ಅರಿವೆ ಅಂಗವಾದ ಲಿಂಗಾಂಗಿಗೆ
ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ?
ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ.
ಅರುಹು ಕುರುಹಿಂಗೆ ಸಿಕ್ಕದು,
ಅರಿದುದು ಕುರುಹಿಂಗೆ ಸಿಕ್ಕದು,
ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ,
ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ.
ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ
ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ./364
ಜ್ಞಾನಲಿಂಗದ ಆದಿ ಅಂತ್ಯವನರಿವಡೆ,
ಈ ಗುಣ ಸಾ[ಧಿ]ಸಿಯಲ್ಲದೆ ಯೋಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./365
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ?
ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ?
ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು,
ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ,
ಇಂತಿವರ ಬಲ್ಲತನ ಬರುಸೂರೆಹೋಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./366
ಜ್ಞಾನಾರೂಢನಾದಲ್ಲಿ ಮಾನವರಲ್ಲಿ ಅಶ್ರಯಿಸಲಾಗದು.
ಮಾನವರಿಚ್ಫೆಯ ನುಡಿಯಲಾಗದು.
ಪೂಜೆಗೆ ಸಿಲ್ಕಿ ಬಾಧಿಸಿಕೊಳಲಾಗದು.
ಸಾಧನೆಯ ಹೇಳಿ ಸಾವಂತೆ ಮಾಡಲಾಗದು.
ಸಾವಧಾನದಿಂದ ಸೋಹೆಯ ತಿಳಿದು, ಏನೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ./367
ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ.
ಭಾನುತೇಜಕ್ಕೆ ನಾನಾಗುಣವೆಲ್ಲವೂ ಸರಿ.
ಬೀಸುವ ವಾಯುವಿಂಗೆ ಸುಗುಣ ದುರ್ಗುಣವಿಲ್ಲ.
ಇದು ಅಜಾತನ ಒಲುಮೆ.
ಮಿಕ್ಕಿನ ಮಾತಿನ ಮಕ್ಕಳಿಗಿಲ್ಲಯೆಂದೆ, ಜಗದೀಶನ ಒಲುಮೆ,
ನಿಃಕಳಂಕ ಮಲ್ಲಿಕಾರ್ಜುನಾ./368
ಜ್ಞಾನಿಯ ಸಂಗ ನೇಕೆಯ ಶಿಶುವಿನಂತಿರಬೇಕು.
ಜ್ಞಾನಿಯ ಸಂಗ ಭಾನುವಿನ ಉದಯದಂತಿರಬೇಕು.
ಜ್ಞಾನಿಯ ಸಂಗ ಸೌಖ್ಯದ ಆಲಯದ ಠಾವಿನಂತಿರಬೇಕು.
ಹೀಂಗಲ್ಲದೆ ಮಾತಿಂಗೆ ಮಾತ ಕಾಳ್ಗೆಡವವರನೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ ? /369
ಜ್ಯೋತಿಯ ಬೆಳಗಿನಲ್ಲಿ [ನೋಡಿ] ಜ್ಯೋತಿಯ ಪಟವ ಕಾಬಂತೆ,
ಕಣ್ಣಿನಿಂದ ಕನ್ನಡಿಯ ನೋಡಿ ಕಣ್ಣ ಕಲೆಯ ಕಾಬಂತೆ,
ತನ್ನಿಂದ ತಾ ನೋಡಿ ತನ್ನನರಿಯಬೇಕು.
ತನ್ನನರಿಯದವ ನಿಮ್ಮನೆತ್ತಬಲ್ಲನೋ ?
ತನ್ನನರಿವುದಕ್ಕೆ ದೃಷ್ಟವ ಕೈಯಲ್ಲಿ ಕೊಟ್ಟು
ಕಾಣದುದಕ್ಕೆ ಚಿತ್ತವ ನೆನಹಿಂಗಿತ್ತ.
ಚಿತ್ತ ಇಷ್ಟದಲ್ಲಿ ಅಚ್ಚೊತ್ತಿದ ಮತ್ತೆ ದೃಷ್ಟವ ಕಾಬುದಿನ್ನೇನೋ ?
ಉರಿಯೊಳಗಣ ಕರ್ಪುರ, ಅನಿಲನೊಳಗಣ ಪಾವಕ,
ಶಿಲೆಯುಂಡ ಎಣ್ಣೆ ಅಳತೆ[ಗೆ ಉ]ಂಟೇ ಅಯ್ಯಾ.
ಲಿಂಗವ ಮೆಚ್ಚಿದ ಅಂಗಕ್ಕೆ ಜಗದ ಹಂಗಿಲ್ಲ.
ಅನಂಗ, ಅತೀತ ನಿಃಕಳಂಕ ಮಲ್ಲಿಕಾರ್ಜುನಲಿಂಗವೇ
ತಾನಾದ ಶರಣಂಗೆ./370
ಡೊಂಬರ ಡೊಳ್ಳಧ್ವನಿ ಕೇಳಬಂದಿತ್ತು.
ಪೌಜೆಂದು ಮುಂದೆ ಹರಿವನಂತೆ,
ಅದರಂದವ ಕೇಳದೆ, ಹಿಂದು ಮುಂದ ತಿಳಿಯದೆ,
ಕಂಡಕಂಡವರೊಳಗೆ ಬಂಧಕ್ಕೆ ಹೋರಿಯಾಡುವ ಬಂಧನಿಗೇಕೆ ಜ್ಞಾನ,
ನಿಃಕಳಂಕ ಮಲ್ಲಿಕಾರ್ಜುನಾ./371
ತತ್ವಬ್ರಹ್ಮವ ನುಡಿವ ಹಿರಿಯರೆಲ್ಲರೂ ಮೃತ್ಯುವಿನ ಬಾಯ ತುತ್ತಾದರು.
ಇಹ ಪರ ಶುದ್ಧಿಯ ಹೇಳುವ ಹಿರಿಯರೆಲ್ಲರೂ
ಅನ್ನವನಿಕ್ಕಿ ಹೊನ್ನ ಕೊಡುವ ಅಣ್ಣಗಳ ಮನೆಯ ಎತ್ತುವ ಕೂಸಾದರು.
ಇನ್ನಾರಿಗೆ ಹೇಳುವೆ, ಆರೂಢ ಶುದ್ಧಿಯ, ನಿಃಕಳಂಕ ಮಲ್ಲಿಕಾರ್ಜುನಾ./372
ತತ್ವಬ್ರಹ್ಮವನರಿವ ಹಿರಿಯರೆಲ್ಲರೂ
ಕ್ಷುತ್ತಿನ ಸುಖವ ಮೆಚ್ಚಿ, ಇಚ್ಫೆಯ ನುಡಿವುತ್ತಿಪ್ಪರು ನೋಡಾ.
ಚಿತ್ತವನರಿದಲ್ಲಿ ಕುಚಿತ್ತ ಬೋಧೆಯ ಹೇಳಲಾಗದು.
ಆಳಾಗಿರ್ದು ಅರಸಾಗಬಹುದಲ್ಲದೆ, ಅರಸಾಗಿರ್ದು ಆಳಾಗಬಾರದು.
ರೂಪಾಗಿರ್ದು ನಿರೂಪಾಗಬಹುದಲ್ಲದೆ, ನಿರೂಪಾಗಿರ್ದು ರೂಪಾಗಬಾರದು.
ಇದು ಕಾರಣ, ನಾ ಸತ್ತೆನೆಂಬ ಹೆಣವಿಲ್ಲವಾಗಿ,
ನಾ, ನೀನೆಂಬ ಉಭಯವ ಹಿಂಗಿಯಲ್ಲದೆ, ಪರಿಪೂರ್ಣವಾಗಬಾರದು,
ನಿಃಕಳಂಕ ಮಲ್ಲಿಕಾರ್ಜುನಾ./373
ತಥ್ಯವುಳ್ಳವಂಗೆ ತತ್ವದ ಮಾತು ನುಡಿದು, ಹೊತ್ತು ಹೋರಲೇಕೆ ?
ಭಕ್ತಿಯುಳ್ಳವಂಗೆ ಕೃತ್ಯಕ್ಕೆ ಸಿಕ್ಕಿ ಸುಚಿತ್ತವನರಸಲೇಕೆ ?
ಚಿತ್ತದ ಕಲೆಯ ಬಲ್ಲ ವಿರಕ್ತನೆನಿಸಿಕೊಂಬವಂಗೆ,
ತ್ರಿವಿಧಕ್ಕೆ ಹೊತ್ತು ನಿತ್ತರಿಸಲೇಕೆ ?
ಇವರೆಲ್ಲರ ಗುಣ, ಕತ್ತೆ ಹೊರೆಯ ಹೊತ್ತಿರ್ಪುದನರಿಯದೆ,
ವಿಷಯಕ್ಕೆ ಹರಿವ ಅದರಚ್ಚಿಗದಂತಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./374
ತನು ನಿರ್ವಾಣವೊ, ಮನ ನಿರ್ವಾಣವೊ, ಭಾವ ನಿರ್ವಾಣವೊ ?
ತ್ರಿವಿಧ ತನಗಿಲ್ಲದ ನಿರ್ವಾಣವೊ ? ಇದ ನಾ ನುಡಿಯಲಂಜುವೆ.
ತೊಟ್ಟ ಘಟಧರ್ಮಕ್ಕೆ ಬೇಡೂದೆ,
ಲೆಕ್ಕವಿಲ್ಲದೆ ಆಸೆ ಮನದೊಳಗೆ ಹೊಕ್ಕು ತಿರುಗಾಡುತ್ತ ?
ಇಂತೀ ಚಿಕ್ಕಮಕ್ಕಳಿಗೆಲ್ಲಿಯದೊ ನಿರ್ವಾಣ, ಘಟ್ಟಿವಾಳಂಗಲ್ಲದೆ
ನಿಃಕಳಂಕ ಮಲ್ಲಿಕಾರ್ಜುನಾ ?/375
ತನುವ ನೆಮ್ಮಿ ಕಾಬ ಮನವಿಲ್ಲ.
ಮನವ ನೆಮ್ಮಿ ಕಾಬ ಅರಿವಿಲ್ಲ.
ಅರಿವ ನೆಮ್ಮಿ ಕಾಬ ಕುರುಹಿಲ್ಲ.
ಬರುದೊರೆ ಹೋಯಿತ್ತಲ್ಲ ಎನ್ನ ಬಾಲಲೀಲೆ.
ಅಗಣಿತ ಅಗೋಚರವ ನೆರೆಯರಿವುದಕ್ಕೆ
ಕುರುಹ ತೋರುವರ [ನಾ] ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ./376
ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ?
ಮನಕ್ಕೆ ಲಿಂಗ ಬಾಹಾಗ ತೊಂಡಿನ ದನವೆ ?
ಕಂಡಕಂಡವರಂಗದಲ್ಲಿ ಹಿಂಗಿಹನೆಂದಡೆ, ಬಂಧುಗಳ ಮನೆಯ ಲಂದಣಗಾರನೆ ?
ಇವರಂದದ ಮಾತು ಸಾಕು.
ಲಿಂಗವಿಪ್ಪೆಡೆಯ ಹೇಳಿಹೆ ಕೇಳಿರಣ್ಣಾ.
ಸುಖಿಯಲ್ಲದೆ ದುಃಖಿಯಲ್ಲದೆ, ಆಗಿಗೆ ಮನಗುಡದೆ, ಚೇಗೆಗೆ ದುಃಖಿತನಾಗದೆ,
ಕಂಡಕಂಡವರಲ್ಲಿ ಭಂಡ ಗೆಲಿಯದೆ,
ತೊಂಡಿನ ಜೀವದನದಂತೆ, ಬಂದು ಹೊಯ್ವವರನರಿಯದೆ,
ಇವರಂದವನರಿಯ ಮತ್ತೆ ಉಭಯದ ಸಂದಳಿದು,
ಒಂದೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ./377
ತನುವಿಗೆ ಕುರುಹು ಕೊಟ್ಟು, ಮನಕ್ಕೆ ಅರಿವ ಕೊಟ್ಟು,
ಘನಕ್ಕೆ ವಿಶ್ರಾಂತಿಯ ಕೊಟ್ಟು, ಚರಿಸಾಡುವ ಪರಿಪೂರ್ಣಂಗೆ
ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ./378
ತನುವಿನ ಮೇಲಿಪ್ಪ ಲಿಂಗಕ್ಕೆ, ಅನವರತ ಬಿಡದೆ ನೆನಹಿರಬೇಕೆಂಬರು.
ಅಂಗದ ಮೇಲಣ ಲಿಂಗವ, ಪ್ರಾಣಸಂಬಂಧವ ಮಾಡುವ ಪರಿ ಇನ್ನೆಂತೊ ?
ಇದರಂದವನರಿಯದೆ ತ್ರಿಭಂಗಿಯಲ್ಲಿ ಸಿಕ್ಕಿ,
ಬೆಂದವರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ./379
ತನುವಿನಾಶೆಯ ಬಿಟ್ಟು ಕಂಡೆಹೆನೆಂದಡೆ, ಗುರುವಿನ ಹಂಗು ಬಿಡಬೇಕು.
ಮನಾದಾಶೆಯ ಬಿಟ್ಟು ಕಂಡೆಹೆನೆಂದಡೆ, ಲಿಂಗದ ಹಂಗು ಬಿಡಬೇಕು.
ಸರ್ವವ್ಯಾಪಾರದ ಹಿಂಗಿ ಕಂಡೆಹೆನೆಂದಡೆ, ಜಂಗಮದ ಹಂಗು ಬಿಡಬೇಕು.
ಒಂದ ಬಿಟ್ಟು, ಒಂದ ಕಂಡೆಹೆನೆಂದಡೆ, ಒಂದಕ್ಕೂ ನೆಲೆಯಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./380
ತನುವಿನಿಂದ ಕಂಡೆಹೆನೆಂದಡೆ ರೂಪಿನ ಜಡ.
ಮನದಿಂದ ಕಂಡೆಹೆನೆಂದಡೆ ಕರಣಂಗಳ ಹೊಲ.
ಘನದಿಂದ ಕಂಡೆಹೆನೆಂದಡೆ ನಿರಾಳದ ಬಯಲು.
ಇನ್ನೇತರಿಂದ ಅರಿವಿನ ಈಡು ಎನಗೆ.
ಅನಾಥರ ನಾಥಾ, ಕರುಣಿಸು, ನಿಃಕಳಂಕ ಮಲ್ಲಿಕಾರ್ಜುನಾ./381
ತನ್ನ ತಾನರಿದು ಕಂಡೆಹೆನೆಂದಡೆ, ಆ ಚಿತ್ತ ಬಣ್ಣದ ಬಯಲು.
ಇದಿರುವ ಕುಳಿತು ಕೇಳಿ ಕಂಡೆಹೆನೆಂದಡೆ, ಆ ಭಾವ ಭ್ರಮೆಗೊಳಗು.
ಭಕ್ತಿಯಲ್ಲಿ ನಡೆವ ಭಕ್ತರಿಗಿನ್ನೆತ್ತಣ ಮುಕ್ತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ ?/382
ತನ್ನಂಗವ ತಾ ಬಡಿದು, ಇದಿರಿನಲ್ಲಿ ನೋವ ಕೇಳುವನಂತೆ,
ತನ್ನ ದ್ರವ್ಯ ತಾನಿಕ್ಕಿ, ಪರರುವ ಕೈಯಲ್ಲಿ ಜರೆಯಿಸಿಕೊಂಬವನಂತೆ.
ವರ್ಮವನರಿಯದವನ ಸುಮ್ಮಾನ, ಹೆಮ್ಮೆಗೆ ಹುಯ್ಯಲಿನಲ್ಲಿ ಸಿಕ್ಕಿ,
ತನ್ನ ತಾನರಿಸಿಕೊಂಡಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ./383
ತಮಂಧವೆಂಬ ಕೊಪ್ಪರಿಗೆಯಲ್ಲಿ, ತಾರಾಮಂಡಲದ ಉದಕವ ತುಂಬಿ,
ಮಹಾಂಧಕಾರದಿಂದುರುಹಲಾಗಿ ದಾವಾನಳವೆದ್ದಿತ್ತು.
ವಿಶ್ವಾಸಭಕ್ತಿಯೆಂಬ ಅಟ್ಟಕಳಿಯನಿಕ್ಕಿ, ಚಿತ್ತಶುದ್ಧದ ಕೈಯಲ್ಲಿ ಒರಸಲಾಗಿ,
ರುದ್ರನ ಜಡೆಮಣ್ಣು ಬಿಟ್ಟಿತ್ತು, ಮಂದಿರಕ್ಕೊಳಗಾಯಿತ್ತು.
ಮಣ್ಣ ಬಿಟ್ಟು ಮಂಡೆ ಚೆನ್ನಾಯಿತ್ತು.
ಮಂಡೆಯ ಹತ್ತಿ ನೋಡಲಾಗಿ, ಮೂರು ಮಂಡಲ ಕಾಣಲಾಯಿತ್ತು.
ಒಂದು ಮಂಡಲ, ಉಪದೇಶವ ಹೇಳುವ ಗುರುವಿನ ಬಾಯ ನುಂಗಿತ್ತು.
ಮಧ್ಯಮಂಡಲ ಶುದ್ಧವೆಂದು ಕೊಟ್ಟ ಲಿಂಗವ ಗರ್ಭಿಕರಿಸಿತ್ತು.
ಬಟ್ಟಬಯಲ ಕಟ್ಟಕಡೆಯ ಮಂಡಲ ಸುತ್ತಿತ್ತು.
ಜಂಗಮವ ನಿಷ್ಠೆಯಿಂದ ಪೂಜಿಸುವ, ಭಕ್ತರ ಬಟ್ಟೆ ಹುಳು ಹತ್ತಿತ್ತು.
ಆ ಬಟ್ಟೆಯ ಹೊಲಬುತಪ್ಪಿ ಸುತ್ತಿಯಾಡುತ್ತಿಹ
ಸದ್ಭಕ್ತರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?/384
ತಮದಲ್ಲಿ ಸ್ಥಾಣುವ ನಟಿಸಿದ ವ್ಯಾಧನಂತೆ ಅಂಜಲೇಕೋ ?
ಅರಿದ ಮತ್ತೆ ಹೆದರಲೇಕೋ ?
ಇದಿರಿಂಗರಿವ ಹೇಳುವ, ಮರೆದೊರಗುವನ ಕಂಡು
ಒಡಗೊಡಲಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ./385
ತರಬಾರದ ಠಾವಿನಲ್ಲಿ ಪರುಷರಸವಿದ್ದರೇನೋ ?
ಹತ್ತಬಾರದ ಠಾವಿನಲ್ಲಿ ಸಂಜೀವನಫಳವಿದ್ದರೇನೋ ?
ಲಿಂಗವನರಿಯದ ಠಾವಿನಲ್ಲಿ ವೇಷಯುಕ್ತರಿದ್ದರೇನೋ ?
ಜಂಗಮವನರಿಯದ ಠಾವಿನಲ್ಲಿ
ತ್ರಿವಿಧವಿಧ ಸಮೃದ್ಧಿಯಾಗಿದ್ದರೇನೋ ?
ಆಪ್ಯಾಯನವಡಿಸಿದಲ್ಲಿ ಆಪ್ಯಾಯನ ಛೇದಿಸಿದಲ್ಲಿಯೆ
ಸಂಜೀವನವೊಳಗಾಯಿತ್ತು.
ಸಂಗದ ಭೇದದಿಂದ ಮಂಗಳದ ಬೆಳಗು.
ನಿಜ ನೆಲೆಗೊಳಲಿಕೆ ಲಿಂಗವಾಯಿತ್ತು.
ಅದು ಕಾರಣ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಆ ಶರಣ ಉರಿವುಂಡ ಕರ್ಪುರದಂತೆ./386
ತಲೆಯ ಹಿಡಿಯಲರಿಯದೆ ನಡುವ ಹಿಡಿದ ಮತ್ತೆ,
ಕಚ್ಚದೆ ಸರ್ಪನೇನ ಮಾಡುವುದು ?
ಹಗೆಯ ಕೊಲಹೋಗಿ, ಅವನ ಕಡುಗಲಿತನಕ್ಕಂಜಿ ಅಡಿಗೆರಗಿದಡೆ,
ಅವ ಒಡಗೂಡಿ ಇರಿಯದೆ ಮಾಣ್ಬನೆ ?
ಮೃಡನಡಿಯನರಿಯದೆ ನರಕದಲ್ಲಿ ಬೀಳುವ ಕುರಿಗಳಿಗೇಕೆ, ನೆರೆ ಅರಿವು ?
ಕರಿಗೊಂಡವಂಗಲ್ಲದೆ ಬರಿಮಾತಿಂಗುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?/387
ತಲೆಯನಿತ್ತವಂಗೆ ನಯನದ ಹಂಗೇಕೆ ?
ಮನವನಿತ್ತವಂಗೆ ತನುವಿನ ಹಂಗೇಕೆ ?
ಮೋಹವನಿತ್ತವಂಗೆ ಅಪಮಾನದ ಹಂಗೇಕೆ ?
ಇಂತೀ ಭೇದವನರಿದು ಕಳೆದುಳಿದವಂಗೆ, ಮಾತಿನ ನೀತಿ ಯಾಕೆ,
ನಿಃಕಳಂಕ ಮಲ್ಲಿಕಾರ್ಜುನಾ ?/388
ತಲೆಯಿಲ್ಲದೆ ಕಾಲು ನಡೆಯಬಲ್ಲುದೆ ?
ಕುಕ್ಷಿಯಿಲ್ಲದಿರೆ ಬಾಯಿ ಉಣ್ಣಬಲ್ಲುದೆ ?
ಆತ್ಮನಿಲ್ಲದಿರೆ ಕರಚರಣಾದಿಗಳಿಗೆ ಏತರ ಹೊಲಬು ?
ನಿನ್ನ ಭಕ್ತಿಯ ಬೆಳೆ ಎನಗೆ ಸತ್ಯದ ಹಾದಿ.
ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ./389
ತಲೆಯಿಲ್ಲದೆ, ಹಾವು ಕಚ್ಚಿ, ವಿಷ ಹತ್ತುವುದಕ್ಕೆ ಮೊದಲೆ ಜೀವ ಸತ್ತಿತ್ತು.
ಜೀವ ಬಿದ್ದು, ಘಟದ ಬಂಧುಗಳೆಲ್ಲರೂ ಕೂಡಿ ಶೋಕವ ಮಾಡುತ್ತಿದ್ದಹರು.
ಅವರೊಳಗೊಬ್ಬ ನಗುತ್ತಿದ್ದಹನು.
ನಗುವನ ಕಂಡು ಒಬ್ಬ ಹೆಣನ ಬಾಯ ಹೊಯ್ದು,
ಐವರ ಮೂಗ ಕೊಯ್ದು, ಐವತ್ತಿಬ್ಬರ ನಾಲಗೆಯ ಕೀಳುವುದ ಕಂಡಂಜಿ,
ಹದಿನಾರುಮಂದಿ ಹಳುಹಾದರು, ಎಂಟು ಬಂಟರು ಕಂಟಕನಾಶವಾದರು.
ಇಪ್ಪತ್ತೈದುಮಂದಿ ಸೊಪ್ಪಡಗಿದರು.
ಇವರೆಲ್ಲರ ಕಳೆವನ್ನಕ್ಕರ ಕತ್ತಲೆ ಹರಿದು ಬೆಳಗಾಯಿತ್ತು,
ಅಂಗೈಯೊಳಡಗಿದ ಬರಿಯ ಕಂಗಳಿಗೆ ತಂದೆ.
ಕಂಗಳು ನುಂಗಿ ಹಿಂಗದಿರ್ದೆ, ನೀ ಸತ್ತೆ, ನಾ ಸಾಯೆ.
ಸಾವವರ ಕಂಡು ಸಾವಧಾನಿಯಾಗಿರ್ದೆನಯ್ಯಾ.
ಆದ ಮತ್ತೆ ಆದೆಹೆ ಆಗೆನೆಂಬುದಿಲ್ಲ,
ನಿಃಕಳಂಕ ಮಲ್ಲಿಕಾರ್ಜುನನ ಏನೆಂದು ಎನಲಿಲ್ಲವಾಗಿ./390
ತಾ ನಡೆಯಲರಿದೆ, ಮೊನೆಯ ಮೆಟ್ಟಿ ಬಯ್ವವನಂತೆ,
ತನ್ನ ಇಷ್ಟವ ತಾನರಿಯದೆ, ಕೊಟ್ಟವನ ಕಷ್ಟವ ಮಾಡುವನಂತೆ,
ಈ ದೃಷ್ಟವನರಿಯದೆ, ಮೆಟ್ಟಿದ ಹೆಜ್ಜೆಯ ಮೆಟ್ಟುವ ಗಾಣದ ಎತ್ತಿನ ತೆರದಂತೆ,
ಇವರಿಗೆ ಇಷ್ಟದ ಶುದ್ಧಿ ಯಾಕೋ, ನಿಃಕಳಂಕ ಮಲ್ಲಿಕಾರ್ಜುನಾ ?/391
ತಾ ಮಾಡಿದೆನೆಂದಡೆ ತನ್ನ ಕೆಳಗಣದೆ,
ಆಣವ ಮಾಯಿಕ ಕಾರ್ಮಿಕ ಕೊಡೆನೆಂದು ಮನಕ್ಕೆ ತೋರಿದಡೆ,
ತನ್ನ ಕೆಳಗಣ ಬೇಡುಗವೆ, ಈ ಮೂರು.
ಉಭಯಕ್ಕೆ ಒಡಲಿಲ್ಲ, ತನಗೆ ತೆರಹಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./392
ತಾಗಿದ ಮತ್ತೆ ಬಾಗುವರೆಂಬುದನೆಲ್ಲರೂ ಬಲ್ಲರು.
ಸೋಂಕಿದ ಮತ್ತೆ ಅರ್ಪಿತವೆಂಬುದನೆಲ್ಲರೂ ಬಲ್ಲರು.
ಅರ್ಪಿತ ಅನರ್ಪಿತವೆಂಬುದನು ಮುಂದಕ್ಕೆ ಮುನ್ನವರಿದು,
ಭೇದಿಸುವ ಅರ್ಪಿತ ಅವಧಾನಿಗೆ ಬಿಡುಮುಡಿ ಇಲ್ಲವೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ./393
ತಾನರಿಯದಿರ್ದಡೆ, ಅರಿವ ಮುಖ ಬೇಕು, ದೃಷ್ಟಿಗೆ ಪ್ರತಿಬಿಂಬದಂತೆ.
ಮರೆದಡೆ, ಅರಿಯೆಂದು ಹೇಳಿದಡೆ, ಇದು ಕೊರತೆಯೇ ?
ನೆರೆ ಬಲ್ಲವರಿಗೆ ಅದು ತೆರಪಿನ ಹೃದಯ, ಅರಿವಿನಾಗರ.
ಮಿಥ್ಯವನಳಿದು ತಥ್ಯ ಕರಿಗೊಂಡಡೆ, ಲಿಂಗದಲ್ಲಿ ಅಚ್ಚೊತ್ತಿದಂತೆ,
ನಿಃಕಳಂಕ ಮಲ್ಲಿಕಾರ್ಜುನಾ./394
ತಾನಳಿದ ಮತ್ತೆ ತಾನಾದುದ ಕಂಡೆ,
ತಾನಾಗಿ ಮತ್ತೆ ಅಳಿದುದ ಕಂಡೆ,
ಏನೂ ಇಲ್ಲದೆ ನೀನಾಗಿ ಮತ್ತೆ ನಾನಾದುದ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿಶ್ಚಿಂತನಾಗಿ./395
ತಾನು ಹೊಳೆಯಲ್ಲಿ ಮುಳುಗಿ ಹೋಗುತ್ತ, ಈಸಬಲ್ಲವರ ಕಂಡೆನೆಂಬಂತೆ,
ತಾ ನಾಶಕನಾಗಿ, ಇದಿರಿನಲ್ಲಿ ನಿರಾಶೆಯನರಸುವನಂತೆ,
ತಾನಿದ್ದು ತನ್ನ ಕಾಣದೆ, ಕೆಟ್ಟುಹೋದೆಹೆನೆಂದು ಅರಸುವನಂತೆ.
ಇಂತೀ ಗುಣವುಳ್ಳನ್ನಕ್ಕ ಗುರುವಲ್ಲ.
ಆ ಗುರುವಿನ ಬೆಂಬಳಿಯಿಂದಾದುದು ಲಿಂಗವಲ್ಲ.
ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತುವ ಧೀರರನಾರುವ ಕಾಣೆ.
ಸತ್ತ ಹೆಣನನೆತ್ತಿ ಅರ್ತಿಮಾಡುವನಂತೆ,
ಸಚ್ಚಿದಾನಂದ, ನಿಃಕಳಂಕ ಮಲ್ಲಿಕಾರ್ಜುನವರುವ ಬಲ್ಲನಾಗಿ ಒಲ್ಲನು./396
ತಾನೇ ಬಲ್ಲವನೆಂದು ಇಲ್ಲದ ಹುಸಿಯ ಹುಸಿವ,
ಗೆಲ್ಲಗೂಳಿತನಕ್ಕೆ ವಲ್ಲಭನೆಂದು, ಇವರೆಲ್ಲರೂ ಅರಿಯರೆಂದು
ಬಲ್ಲಹ ನಾನೆಂದು ನಿಲ್ಲದೆ ಹೋರುವ ಖುಲ್ಲರ ನೋಡಾ.
ಕಳ್ಳರ ಹಾದಿಯೊಳಗಿಪ್ಪ ಅನುವಿನ ನೆರೆಮೊಂಡನಂತೆ,
ಕೊಳ್ಳದ ಬೆಲೆಯ ಬೇಡಿ ಕಾಡುವ ಖುಲ್ಲನ ಬಲ್ಲತನದಂತೆ,
ಇವರೆಲ್ಲರ ಹಿರಿಯರೆಂದಡೆ, ಕಲ್ಲಿಯೊಳಗಾದ ಮೃಗದಂತೆ,
ಇವರೆಲ್ಲಕ್ಕೂ ಬಲ್ಲತನವೇಕೆ, ನಿಃಕಳಂಕ ಮಲ್ಲಿಕಾರ್ಜುನಾ./397
ತಾನೇನೊಂದ ನೆನೆದು ಮಾಡಿ ಆಯಿತ್ತೆಂದಡೆ ತಾನೇನು ಬ್ರಹ್ಮನೆ ?
ತಾನೊಬ್ಬರಿಗೆ ಕೊಟ್ಟು ಸುಖವಾಯಿತ್ತೆಂದಡೆ ತಾನೇನು ವಿಷ್ಣುವೆ ?
ತಾನೊಬ್ಬರ ಕೊಂದು ಸತ್ತರೆಂದಡೆ ತಾನೇನು ರುದ್ರನೆ ?
ಇಂತಿವನೇನೂ ಅರಿಯದೆ, ಆಹಂ ಬ್ರಹ್ಮವೆಂಬ ಭಾವಭ್ರಮಿತರಿಗೇಕೆ ಜ್ಞಾನ,
ನಿಃಕಳಂಕ ಮಲ್ಲಿಕಾರ್ಜುನಾ./398
ತಾವು ಬಲ್ಲವರಾದೆವೆಂದು ಗೆಲ್ಲಸೋಲಕ್ಕೆ ಹೋರುತಿಪ್ಪರು.
ಇದೆಲ್ಲವನತಿಗಳೆದ ಮತ್ತೆ ಗೆಲ್ಲಸೋಲಕ್ಕೆ ಹೋರಲೇಕೋ ?
ಗೆಲ್ಲುವಂಗೆ ಸೋಲುವದೆ ಧರ್ಮ, ಸೋತ ಮತ್ತೆ ಒಲವರವಿಲ್ಲವಾಗಿ.
ಜಲನದಿಯಲ್ಲಿ ಹೋಹ ಬಲುಮರನಂತೆ,
ಇವರ ನೆಲೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ./399
ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ.
ತಾವು ವ್ರತಿಗಳೆಂದು ಇದಿರಿಂಗೆ ಹೇಳದಿಹುದೆ ವ್ರತ.
ಗುರುಲಿಂಗಜಂಗಮವ ದೂಷಿಸದಿಹುದೆ ವ್ರತ.
ಸಹಪಂಙ್ತಿಯಲ್ಲಿ ವಿಶೇಷವ ಕೊಳದಿಪ್ಪುದೆ ವ್ರತ.
ಇಂತಪ್ಪ ವ್ರತಕ್ಕೆ ನಮೋ ನಮೋ ಎಂಬೆ.
ಇಂತಲ್ಲದೆ ಜಗವ ಸಿಕ್ಕಿಸುವ ಬಹುಮುಖಿಗಳಿಗೆಲ್ಲಿಯದೊ ಮುಕ್ತಿ ?
ಮಾತಿನಲ್ಲಿ ಭಕ್ತಿ, ಮನದಲ್ಲಿ ಕತ್ತರಿ,
ಭಕ್ತಿಯಲ್ಲಿ ಬಲೆ, ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ ಭಕ್ತಿಶೀಲ ?
ಇಂತಿವ ಬಲ್ಲೆನಾಗಿ ಭಕ್ತಿ ನನಗಿಲ್ಲ.
ಇನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ./400
ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ,
ಫಲದ ಮರಯ ರಸವ ಹಿಳಿದು ಕಾಬ ಸವಿವ ರುಚಿಯಂತೆ,
ತೆರೆಯ ಮರೆಯ ರೂಪ ತೆಗೆದು ಕಾಬ ಸುಖದಂತೆ,
ಇಷ್ಟದ ಮರೆಯಲ್ಲಿದ್ದ ದೃಷ್ಟವ, ಉಭಯವ ನಿಶ್ಚಿಯಿಸಿದಲ್ಲಿ
ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ./401
ತೃಣ ತ್ರಿಣಯನ ಹೆಡಗೈಯ ಕಟ್ಟಿತ್ತು.
ಭಾವ ಕಾಲನ ಸಂಕಲೆಯನಿಕ್ಕಿತ್ತು.
ಕುರುಹು ಅರಿವವರ ಕೈಯಲ್ಲಿ,
ನೆರೆನಂಬಿ ಎಂದು ತೆರಪ ಹೇಳುತ್ತ, ಈ ಅರಿಕೆ ಇನ್ನಾವುದೊ ?
ನುಡಿವಡೆ ಮಾತಿಂಗಗೋಚರ, ನಡೆವರಂಗಕ್ಕೆ ಅಗೋಚರ.
ಇಂತಿವರೊಳಗೆ ಭಂಗಿತರಾಗಿ ಸಾವವರಿಗೇಕೆ
ಲಿಂಗಾಂಗಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ ?/402
ತೃಣವತಿಶುಷ್ಕವಾದ ಪರ್ಣ ತರುವ ಹಿಡಿದ ಅನಲನ ನಡುವೆ
ಎಡಗೈಯ ಬಲ್ಲದೆ ?
ನಿರ್ಮಲ ಸುಚಿತ್ತನ ಪರಮವಿರಕ್ತನ ಭಾವ,
ವಸ್ತುವ ಮುಟ್ಟಿದಲ್ಲಿ, ತ್ರಿವಿಧಮಲಕ್ಕೆ ಸಿಕ್ಕುವನೆ ?
ಅವು ತನ್ನೊಳಗಿರ್ದಡೂ ತಾನವರೊಳಗಿರ್ದಡೂ
ಗಾಜಿನ ಕುಪ್ಪಿಗೆಯ ನೀರೆಣ್ಣೆಯಂತೆ,
ಸ್ಫಟಿಕದ ಮಧ್ಯದಲ್ಲಿ ಬಹುವರ್ಣವಾದ ಹೊರೆಯ ತೋರಿ ಹಿಡಿವವನಂತೆ,
ಅದು ಸ್ವಯವಲ್ಲ, ಇದು ಸ್ವಯವಲ್ಲದಿಪ್ಪ
ಬಾಹ್ಯಕ್ರಿಯಾವರ್ತಕನ ಲಕ್ಷಣದ ಭಿತ್ತಿಯ ತೆರ
ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ./403
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು,
ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ,
ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ.
ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ,
ಮೆಚ್ಚುವರೆ ಪ್ರಾಣಲಿಂಗಿಸಂಬಂಧಿಗಳು.
ಉಂಡವನು ಉಂಡಂತೆ ತೇಗುವ ಸಂದಳಿದು,
ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ,
ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ,
ಭಾವನೆಗೆ ಬಂದವರಾರೆಂದು ವಿಚಾರಿಸಿ,
ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ,
ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ./404
ತೊಗಲಚೀಲದಲ್ಲಿ ಪರಶಿವನಿದ್ದಾನೆಂದು
ಪೊಡವಿಯ ಮೃಡಭಕ್ತರೆಲ್ಲ ನುಡಿವುತಿಪ್ಪರು.
ಇದ ನಾ ನುಡಿಯಲಂಜುವೆ.
ಹಡಕಿಯ ಕೊಳಕಿನ ತೊಗಲ ಹೊದಿಕೆಯ ಹೊರೆಯೊಳಗೆ
ಅರಸಿ ಕಂಡಿಹೆನೆಂಬ ಕುರುಕರ ನೋಡಾ.
ಅರಿವಿಡೆ ತೆರಹಿಲ್ಲ, ಕುರುಹಿಡುವದಕ್ಕೆ ನೆರೆ ನಾಮವಿಲ್ಲ.
ಅರಿದಡೆ ತಾನೇ, ಮರೆದಡೆ ಮಾಯೆ.
ಇದಕ್ಕೆ ಬಿಡುಗಡೆಯಿಲ್ಲ.
ಮೃಡನ ಮುಂಡಿಗೆಯ ಹಾಕಿದೆ, ಎತ್ತುವ ಕಡುಗಲಿಗಳ ಕಾಣೆ.
ಎನ್ನೊಡೆಯಾ ಎನ್ನ ಬಿಡದಿರಾ, ನಿಃಕಳಂಕ ಮಲ್ಲಿಕಾರ್ಜುನಾ./405
ತೊಳೆದು ಕಂಡೆಹೆನೆಂದಡೆ ಅಂಗದವನಲ್ಲ.
ಪೂಜಿಸಿ ಕಂಡೆಹೆನೆಂದಡೆ ಮಂಡೆಯವನಲ್ಲ.
ಊಡಿಸಿ ಕಂಡೆಹೆನೆಂದಡೆ ಬಾಯವನಲ್ಲ.
ಅವರು ಮೂವರು ನೆರಿಕೆಯೊಳಗಿರ್ದಡೆ,
ಆ ನೆರಿಕೆಯ ಹೊರಗಿರ್ದು ಬರುಕಾಯನಾದೆಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./406
ತೊಳೆದು ನೋಡಿಹೆನೆಂದಡೆ ಉದಕಕ್ಕೆ ಭೇದಿಸೆ.
ಕಣ್ಣಿನಲ್ಲಿ ಒಸೆದು ನೋಡಿಹೆನೆಂದಡೆ ಶಿಲೆಯ ಮರೆಯೊಳಗಾದೆ.
ಮನಸ್ಸಿನಲ್ಲಿ ನೆನೆದು ನೋಡಿಹೆನೆಂದಡೆ ಬಟ್ಟಬಯಲುನೊಳಕೊಂಡೆ.
ಇನ್ನೇತರಿಂದರಿವೆ ?
ಈ ಮನಸ್ಸಿನ ಸೂತಕವ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ./407
ತೋಹಿನ ಶಬರನಂತೆ, ಲಾಗಿನ ವ್ಯಾಘ್ರನಂತೆ,
ಆಡುವ ವಿಧಾಂತನಂತೆ, ಇಂತೀ ವೇಷ ಸಹಜವೆ ?
ದೊರೆವನ್ನಬರ ಭಕ್ತ, ದೊರೆವನ್ನಬರ ವಿರಕ್ತ.
ಇಂತೀ ಇವರಿರವ ಕಂಡು ಬೆರಸಿದೆನಾದಡೆ,
ಎನಗೆ ಘೋರ ನರಕ, ನಿಮಗೆ ಎಕ್ಕಲ ತಪ್ಪದು.
ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತಿ ಶುದ್ಧರಾಗಿ,
ನಿಃಕಳಂಕ ಮಲ್ಲಿಕಾರ್ಜುನಾ./408
ತ್ರಿಕರಣ ಶುದ್ಧವಿಲ್ಲದವನ ಮಾಟ, ನೇಣು ಹರಿದವನಾಟ.
ಭಯಭಕ್ತಿ ಇಲ್ಲದವನ ಕೈಯ ದ್ರವ್ಯಕ್ಕೆ
ಆಶೆಯ ಮಾಡುವ ಭವಭಾರಿಗೆ, ಭವವೇ ಕಡೆ.
ಅದಕ್ಕೆ ಏನೂ ಇಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ./409
ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ.
ಅದರ ಮಧ್ಯದಲ್ಲಿ ಇಪ್ಪತ್ತೈದು ಮಹಾಮೇರುವೆ.
ಹದಿನಾರು ವರ್ತನದ ಕೊಂಡಿಗರು.
ಲಘುವೆಂಬ ತಾರುಗದ, ಅದಕ್ಕೆ ಅಗುಳಿ ದಿವಾರಾತ್ರಿಯೆಂಬವೆರಡು.
ಅಗುಳಿಯ ಸನ್ನರ್ಧವಾಗಿ ಬಲಿದವನ ನೋಡಾ.
ಅವನ ನಖದ ಕೊನೆಯಲ್ಲಿ ಲಕ್ಷ ಅಲಕ್ಷವೆಂಬ ಭೇದ.
ಆ ಭೇದವೆಂಬ, ಜರನಿರ್ಜರವೆಂಬ, ಅಹುದಲ್ಲವೆಂಬ,
ಆಗುಚೇಗೆಯೆಂಬ, ಶಂಕೆ ಸಂತೋಷವೆಂಬ,
ಕಾಂಕ್ಷೆ ನಿಃಕಾಂಕ್ಷೆಯೆಂಬ, ಜೀವ ಪರಮವೆಂಬ
ಇಂತೀ ದ್ವಂದ್ವಂಗಳೆಲ್ಲ ದ್ವಾರಸಂಚಾರಕ್ಕವಧಿಯಾದವು.
ಇದಕ್ಕಿಂದ ಮುನ್ನವೆ ಭುವನ ಕೆಟ್ಟಿತ್ತು.
ಕೋಟೆ ಕೋಳು ಹೋಯಿತ್ತು, ಹಿರಿಯರಸು ಸಿಕ್ಕಿದ,
ಪ್ರಧಾನನ ತಲೆ ಹೋಯಿತ್ತು, ತಳವಾರನ ಕಣ್ಣು ಕಳೆಯಿತ್ತು.
ಎಕ್ಕಟಿಗನ ಮಕ್ಕಳೆಲ್ಲರೂ ನಷ್ಟಸಂತಾನವಾದರು.
ಸೃಷ್ಟಿಯೊಳಗೆಲ್ಲ ರಣಮಯವಾಯಿತ್ತು.
ರಣಮಧ್ಯದಲ್ಲೊಂದು ವೃಕ್ಷವ ಕಂಡೆ, ಸತ್ತವನಿರ್ದ, ಇರ್ದವಸತ್ತ.
ಇವರಿಬ್ಬರ ಮಧ್ಯದಲ್ಲೊಂದು ವೃಕ್ಷವ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಾ./410
ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ
ದೋಷಕ್ಕಂಜಿ ಧರ್ಮವ ಮಾಡುವ, [ಬೇಡುವ] ಕಾಟಕ್ಕಂಜಿ,
ತ್ರಿವಿಧವ ಕೊಡುವ ನಾಟರಿಗೇಕೊ ಸದ್ಭಕ್ತಿ ?
ಜಗದ ಘಾತಕರ ಘಾತಿಸದೆ, ವಿಷಯವನರಿಯದೆ,
ಆಶೆಯಲ್ಲಿ ಸುಳಿವ ಭ್ರಾಂತು ಮಾರಿಗಳನೇನೆಂದರಿಯದೆ,
ವಸ್ತುವಿನಲ್ಲಿ ಓತಿರ್ಪ ಸಾತ್ವಿಕರನರಿದು ಸದ್ಭಕ್ತಿಯ ಮಾಡುವುದು.
ಅರಿದುದಕ್ಕೆ ಇದೇ ಕುರುಹೆಂದು, ಮರೆಯೊಳಡಗಿ ಮೊರೆಯಿಡುತ್ತಿದ್ದೇನೆ,
ನಿಃಕಳಂಕ ಮಲ್ಲಿಕಾರ್ಜುನಾ./411
ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ.
ಮುಕ್ತಿಯೆ ಸತ್ಯಕ್ಕೆ ಬೀಜ, ಸತ್ಯವೆ ಫಲಕ್ಕೆ ಬೀಜ.
ಫಲವೆ ಭವಕ್ಕೆ ಬೀಜ.
ಇಂತೀ ಭೇದವ ಭೇದಿಸಿ ಶ್ರುತಿಸ್ಮೃತಿತತ್ವಂಗಳಿಂದ
ಬೇಡಿದವರಿಗೆ ಬಯಕೆಯ ಕೊಟ್ಟು, ಬೇಡದವರಿಗೆ ನಿಜವನಿತ್ತು,
ಲೇಸು ಕಷ್ಟವೆಂಬುದ ಸಂಪಾದಿಸದೆ,
ಉಭಯದ ತೆರನ ಸಂದನರಿದಿಪ್ಪ ಲಿಂಗಾಂಗಿಗೆ
ಆತನಂಗಕ್ಕಿನ್ನಾವುದು ಸರಿ, ನಿಃಕಳಂಕ ಮಲ್ಲಿಕಾರ್ಜುನಾ./412
ದಳ್ಳುರಿಯಲ್ಲಿಗೆ ಹೋದಡೆ, ಮೆಲ್ಲನೆ ಮುಟ್ಟುವುದೆ ಅಯ್ಯಾ ?
ಬಲ್ಲವ ಗೆಲ್ಲ ಸೋಲಕ್ಕೆ ಹೋರಿದಡೆ, ಕಲ್ಲುಹೃದಯಿ ಬಲ್ಲನೆ ಬಲ್ಲವನಿರವ ?
ಇದೆಲ್ಲಕ್ಕೂ ಸಾಧ್ಯವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./413
ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರುವಾದಲ್ಲಿ,
ತ್ರಿವಿಧ ಕಾರಣಂಗಳನರಿತು,
ಕರ್ಮ ಕ್ರೀ ಆಚಾರ ಸಂಬಂಧವ ಸಂಬಂಧಿಸಿ,
ಮಾಡುವಲ್ಲಿ ದೀಕ್ಷಾಗುರು.
ಆ ಕ್ರೀ ತಪ್ಪಿದಲ್ಲಿ ಬಂಧನವ ಮಾಡುವಲ್ಲಿ ಶಿಕ್ಷಾಗುರು.
ಇಷ್ಟ ಕಾಮ್ಯ ಮೋಕ್ಷಂಗಳ ಗೊತ್ತ ಕೆಡಿಸಿ, ನಿಶ್ಚಿಯಿಸಿ ಮಾಡುವುದು ಮೋಕ್ಷಗುರು.
ಇಂತೀ ಭೇದದ ಆಗನರಿತು, ಭಾಗೀರಥಿಯಂತೆ ಆಗಬಲ್ಲಡೆ,
ಪರಮಗುರು ನಿಃಕಳಂಕ ಮಲ್ಲಿಕಾರ್ಜುನಾ./414
ದೀಪದ ಕೊನೆಯ ಮೊನೆಯ ಮೇಲಿದ್ದುದು, ತಮವೋ, ಬೆಳಗೋ ?
ಮನದ ಕೊನೆಯ ಮೇಲಿದ್ದುದು, ಅರಿವೊ, ಮರವೆಯೋ ?
ಬೀಜದ ಕೊನೆಯ ಮೊನೆಯ ಮೇಲಿದ್ದುದು,
ಮುಂದಕ್ಕದು ಬೀಜವೋ, ಸಂದೇಹವೋ ?
ಅರಿವುದಕ್ಕೆ ತೆರಹಿಲ್ಲ, ಮರೆವುದಕ್ಕೆ ಒಡಲಿಲ್ಲ.
ಅದರ ಹೂ ಮುಡಿಯಲ್ಲಿದ್ದು ಬಿಡುಗಡೆಯಾದೆ,
ನಿಃಕಳಂಕ ಮಲ್ಲಿಕಾರ್ಜುನಾ./415
ದೀರ್ಘಕ್ಕೆ ದೀರ್ಘವನೈದಿಸಿ, ಸಾಗಿಸಿ ಮುರಿವನಂತೆ,
ನಾದಕ್ಕೆ ಸುನಾದವನೈದಿಸಿ, ಭೇದಿಸಿ ಕಾಬವನಂತೆ,
ನಿನ್ನೊಡನೈದಿ ನಿನ್ನ ಕಂಡ ಮತ್ತೆ ಎನಗಿನ್ನೇತರ ಸಾಧನ,
ನಿಃಕಳಂಕ ಮಲ್ಲಿಕಾರ್ಜುನಾ ?/416
ದೇವರು ಹುಟ್ಟುವಾಗ ಮಾಯೆ ಕವಳೀಕರಿಸಿ ಬಂ[ದುದೆ]ಂಬರು.
ಅದು ಬಣ್ಣ ಬಚ್ಚಣಿಕೆಯ ಮಾತು.
ದೇವಪದವಾದ ಬಳಿಕ ಮತ್ತೆ ದೇವರಿಗುಂಟೆ ಮೂರುಕುಲ ?
ಅವ ಬೇಡಿದವರಿಗೀವ ಭಾವಜ್ಞನಾಗಿ.
ಭಾವಕ್ಕೆ ಹೊರಗಾದಾತಂಗೆ ಲೀಲೆಯುಂಟೆ ?
ಆ ಗುಣ ಚಿಪ್ಪು ಮುತ್ತಿನ ತೆರ.
ಕಸ್ತೂರಿ ಶುಕ್ಲದ ತೆರ, ಕದಳಿ ಕರ್ಪುರದ ತೆರ.
ಬಂದುದಕ್ಕೆ ಸಂದೇಹವ ಮಾಡಲಿಲ್ಲ.
ನಿರಂಗ ನಿರುತ ಸುಸಂಗ ನಿಃಕಳಂಕ ಮಲ್ಲಿಕಾರ್ಜುನಾ,
ಇದರಂಗವ ಹೇಳಾ./417
ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ.
ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆ ಇಲ್ಲ.
ಸರ್ವಸುಖದಾಲಯದ ಪಾಶದ ಕಟ್ಟಿಲ್ಲ.
ಅವರವರ ಕಂಡಲ್ಲಿಯೇ ಸುಖಿ.
ನಿಧಾನಿಸಿ ಕೂಡಿದಲ್ಲಿಯೇ ತೃಪ್ತಿ.
ಆತ ತ್ರಿವಿಧಮಲದ ಹಂಗಿನವನಲ್ಲ.
ಗ್ರಾಮ ನಿಳಯ ಬಂಧಂಗಳಿಲ್ಲ.
ಮಾತಿನ ರಚನೆಯ ಪಾಶವನೊಲ್ಲ.
ಆತ ಸರ್ವಾಂಗಲಿಂಗ ಸನ್ಮತ,
ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ./418
ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ.
ಭಾವದ ಭ್ರಮೆ ಉಳ್ಳನ್ನಕ್ಕ ಭಾವಲಿಂಗ ಸಂಬಂಧಿಯಲ್ಲ.
ಪ್ರಾಣ ಪ್ರಳಯವನರಿವನ್ನಬರ ಪ್ರಾಣಲಿಂಗ ಸಂಬಂಧಿಯಲ್ಲ.
ಭಾವ ಇಷ್ಟದಲ್ಲಿ ನಿಂದು, ಇಷ್ಟಕ್ಕೆ ಭಾವ ಚೇತನವಾಗಿ
ರಜ್ಜು ತೈಲವ ಆಗ್ನಿಗೆ ಛೇದಿಸಿಕೊಡುವಂತೆ,
ಇಷ್ಟಭಾವದ ಸತ್ವ, ಆ ಉಭಯನಾಧರಿಸಿ ನಿಂದ ಒಡಲು ಸದ್ಭಾವವಂತನ ಕ್ರೀ.
ಈ ಮೂರು ಏಕವಾಗಿ ವೇಧಿಸಿ, ಉದಯಿಸಿ ತೋರುವ ಬೆಳಗು,
ಆ ಕಳೆಯನೊಳಕೊಂಡಲ್ಲಿ, ಪ್ರಾಣಲಿಂಗಸಂಬಂಧ,
ನಿಃಕಳಂಕ ಮಲ್ಲಿಕಾರ್ಜುನಾ./419
ದ್ರವ್ಯದ ಸಂಗದಿಂದ ಅರಸಿಕೊಂಬ ಅಪ್ಪು,
ದ್ರವ್ಯವ ಕಳೆದುಳಿದು ಅರಸಿಕೊಂಬುದೆ ?
ಅಂಗದಲ್ಲಿ ದ್ವಂದ್ವವಾದ ಆತ್ಮಬಂಧಕ್ಕೆ ಈಡಪ್ಪುದಲ್ಲದೆ
ನಿರಂಗವ ಬಂಧಿಸಬಹುದೆ ?
ಆ ನೀರು ಸಾರವ ಕೊಟ್ಟ ದ್ರವ್ಯಕ್ಕೆ
ಮತ್ತೆ ತುಷಾರವಾಗಿ ಸಾರವನೆಯ್ದಿದಂತೆ,
ವಸ್ತು ತ್ರಿವಿಧನಾಗಿ, ನಿತ್ಯಾನಿತ್ಯವ ಹೊತ್ತಾಡಿ ಭಕ್ತಿ ಕಾರಣವಾಗಿ,
ಭಕ್ತಿ ಮುಕ್ತಿಯಾಗಿ, ಮುಕ್ತಿ ನಿಶ್ಚಯವಾದಲ್ಲಿ, ಪ್ರಾಣಲಿಂಗಸಂಬಂಧ.
ಪ್ರಾಣ ಪ್ರಣವದಲ್ಲಿ ಲೇಪವಾದ ಮತ್ತೆ ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./420
ದ್ವೇಷವಿಲ್ಲದ ಭಕ್ತ, ಆಶೆಯಿಲ್ಲದ ವಿರಕ್ತ,
ಸಂಸಾರಪಾಶವಿಲ್ಲದ ಗುರು.
ಇಂತೀ ಮೂವರು ಈಶ್ವರ[ನ] ರೂಪವಲ್ಲ.
ಸದಾಶಿವಮೂರ್ತಿಗಿಂದತ್ತ ನಿಃಕಳೆಯಾದ,
ನಿಃಕಳಂಕ ಮಲ್ಲಿಕಾರ್ಜುನನು./421
ಧರೆ ನೀರ ಕುಡಿದಲ್ಲಿ, ಉರಿ ಶಿಲೆ ಮರನ ಸುಡುವಲ್ಲಿ,
ಜಲ ಉರಿ ನಿಲುವುದಕ್ಕೆ ಒಡಲುಂಟೆ ?
ನೆರೆ ಅರಿದ ಅರಿವು ಮರೆದು ಮತ್ತೆ ಬೇರೊಬ್ಬ ಅರಿವನುಂಟೆ ?
ಆ ತೆರ ದರಿಸಿನವನರಿದಲ್ಲಿ, ಪ್ರಾಣಲಿಂಗಸಂಬಂಧ,
ನಿಃಕಳಂಕ ಮಲ್ಲಿಕಾರ್ಜುನಾ./422
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು
ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ,
ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ,
ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ,
ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗರ್ಭಿಕರಿಸಿ,
ಗುರುವೆಂಬ ಭಾವ ತನಗಿಲ್ಲದೆ
ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ,
ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಭೀಷ್ಮ ನಿಂದು,
ಮನ ಮಹವನೊಡಗೂಡಿದಲ್ಲಿ,
ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ,
ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ.
ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ.
ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ./423
ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ,
ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ.
ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು.
ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ.
ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ.
ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು,
ಮೀರಿಹ ರಟ್ಟೆ[ಯ] ಬೆಂದು, ಕೊರಳಿನ ಹಳದಿ, [ಹಾರಿ], ಕೊಕ್ಕಿನ ಬೆಳ್ಪು
ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ./424
ಧಾನ್ಯವ ಹೊಯ್ದಿದ್ದ ಘಟ, ಅಳತೆಗೆ ಬಪ್ಪುದೆ, ಆ ಧಾನ್ಯವಲ್ಲದೆ ?
ಘಟ ಕರ್ಮವನುಂಬುದೆ, ಆತ್ಮನಲ್ಲದೆ ?
ಹೆಪ್ಪಿಗೆ ರುಚಿ ಉಂಟೆ, ಮಧುರಕ್ಕಲ್ಲದೆ ?
ಅವು ಒಂದೊಂದೆಡೆಯಿಪ್ಪ ಸ್ವಸ್ಥಾನವಲ್ಲವೆ ?
ಆ ಸ್ವಸ್ಥಾನವ ನಿಶ್ಚಿಯಿಸಿ ಅರಿದಲ್ಲಿ ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ./425
ನಡುನೀರ ಮಧ್ಯದಲ್ಲಿ ಅಗಮ್ಯದ ಜ್ಯೋತಿ ಉರಿವುತ್ತಿದೆ.
ಅಗಲದೆ ನೋಡಲಿಕೆ ನೀರಿನ ಮೇಲೆ ಉರಿವುತ್ತಿಪ್ಪುದು.
ಹೊದ್ದಿ ನೋಡಲಿಕ್ಕೆ ನೀರಿನೊಳಗೆ ಮುಳುಗಿ ಉರಿವುತ್ತಿಪ್ಪುದು.
ಅದು ಜ್ಯೋತಿಯ ಗುಣವೋ, ತನ್ನ ಭ್ರಾಂತಿನ ಗುಣವೋ ?
ಎಂಬುದ ತಿಳಿದಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವ./426
ನರಸುರ ಚೌರಾಸಿಗಳಿಗೆಲ್ಲಾ ನೀನಿತ್ತಲ್ಲದಿಲ್ಲ ನೋಡಯ್ಯಾ.
ಬೊಮ್ಮ ಹರಿ ಸುರರಿಗೆಲ್ಲಾ ನೀನಿತ್ತಲ್ಲದಿಲ್ಲ ನೋಡಯ್ಯಾ.
ನೀನಿದ್ದ ಶಿವಭಕ್ತರನು ಬಡವರೆಂಬ ಬಡಮತಿಗಳನೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ ?/427
ನಾ ತಪ್ಪಿ ನುಡಿದಡೆ ಒಪ್ಪವಿಟ್ಟುಕೊಳ್ಳಿರಣ್ಣಾ.
ಕಣ್ಣಿನಲ್ಲಿ ಕಸ ಹೊಕ್ಕಡೆ ಕೈ ಹಗೆಯೆ ಅಯ್ಯಾ ?
ಇದು ಬಣ್ಣಗಾರಿಕೆಯಲ್ಲ, ಸನ್ನರ್ಧರಿರವು,
ನಿಃಕಳಂಕ ಮಲ್ಲಿಕಾರ್ಜುನಾ./428
ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ.
ಅವ ನಾನೊಲ್ಲದೆ ಒಂದ ಬ್ರಹ್ಮಂಗೆ ಕೊಟ್ಟೆ.
ಒಂದ ವಿಷ್ಣುವಿಗೆ ಕೊಟ್ಟೆ, ಒಂದ ರುದ್ರಂಗೆ ಕೊಟ್ಟೆ.
ಆ ಕೊಟ್ಟುದನು ಬ್ರಹ್ಮ ಬೆಗಡವನಿಕ್ಕಿ ಪವಣಿಸಿ ಕಟ್ಟಿದ.
ಅದ ವಿಷ್ಣು ಕುಂದಣದಲ್ಲಿ ಕೀಲಿಸಿ ಮುಂಗೈಯಲ್ಲಿಕ್ಕಿದ.
ಮತ್ತೊಂದವನಾ ರುದ್ರನೊಡೆದು ಬೆಳಗ ಬಯಲು ಮಾಡಿದ.
ಇಂತೀ ಮೂವರು ರತ್ನದ ಹಂಗಿಗರಾದರು.
ಅವರ ಹಂಗನೊಲ್ಲದೆ ಸಂದೇಹ ಬಿಡಲಾರದೆ,
ಬಂದ ಬಂದ ಯೋನಿಯಲ್ಲಿ ಸಂದಿಲ್ಲದೆ ತಿರುಗಲಾರದೆ, ನೊಂದೆನಯ್ಯಾ.
ಬ್ರಹ್ಮನ ಬಲೆಯಲ್ಲಿ ಸಿಲುಕಿ, ವಿಷ್ಣುವಿನ ಬಂಧನದಲ್ಲಿ ಕಟ್ಟುವಡೆದು,
ರುದ್ರನ ಹಣೆಗಿಚ್ಚಿನಲ್ಲಿ ಉರಿಯಲಾರದೆ, ಹಾರಿದೆನಯ್ಯಾ ಕೇಡಿಲ್ಲದ ಪದವ.
ಗುರುವಿನ ಹಂಗ ಬಿಟ್ಟೆ, ಅಡಿಗಡಿಗೆ ಏಳಲಾರದೆ.
ಲಿಂಗದ ಹಂಗ ಬಿಟ್ಟೆ, ಮಜ್ಜನಕ್ಕೆರೆದ ಹಾವಸೆಗಾರದೆ.
ಜಂಗಮದ ಹಂಗ ಬಿಟ್ಟೆ, ಸಂದೇಹದಲ್ಲಿ ಸಾಯಲಾರದೆ.
ಇವರಂದ ಒಂದೂ ಚಂದವಿಲ್ಲ.
ಅಭಂಗ ನಿರ್ಲೆಪ, ನಿಃಕಳಂಕ ಮಲ್ಲಿಕಾರ್ಜುನಂಗೆ. /429
ನಾಣ್ಯವ ಹೊದ್ದಡೆ ಬೇಲಿಯ ಮೇಲೆ ಸಿಲ್ಕಿಸಿ ಸೀಳಬಹುದೆ ?
ಭಾಳಾಂಬಕನ ಬಲ್ಲಡೆ ಕಾಳುಮರ್ತ್ಯರಲ್ಲಿ ಸತ್ಯವ ಹೇಳಬಹುದೆ ?
ಇದು ಸತ್ಯದ ಆಳುತನಕ್ಕೆ ಭಂಗ.
ಜಾಣನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ./430
ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ.
ನಿನ್ನನರಿತು, ಎನ್ನನರಿದಿಹೆನೆಂದಡೆ ಪ್ರತಿರೂಪನಾದೆ.
ನಾನಿನ್ನೇತರಿಂದರಿವೆ ?
ಅರಿವುದಕ್ಕೆ ಮೊದಲೆ ಅಪ್ರಮಾಣನಾದೆ.
ನಾಮ ರೂಪಿಗೆ ಬಂದು ಒಡಲಾದೆ.
ಒಡಲವಿಡಿದು ಕಂಡೆಹೆನೆಂದಡೆ ಅಗೋಚರ.
ಒಡಲು ಹರಿದು ಕಂಡೆಹೆನೆಂದಡೆ ನಿರವಯಾಂಗ.
ಇನ್ನೇವೆನಿನ್ನೇವೆ, ಸನ್ನರ್ಧ ಎನಗನ್ಯಭಿನ್ನನಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ./431
ನಾನರಿದು ಕಂಡೆಹೆನೆಂದಡೆ ಸ್ವತಂತ್ರಿಯಲ್ಲ.
ನಿನ್ನ ಭೇದಿಸಿ ಕಂಡೆಹೆನೆಂದಡೆ ವಿಶ್ವಾಸಿಯಲ್ಲ.
ಈ ಉಭಯದ ತೆರನ ಹೇಳಾ.
ಚಿತ್ತಶುದ್ಧವಾಗಿ ಕಂಡೆಹೆನೆಂದಡೆ,
ಆ ಚಿತ್ತವ ಪ್ರಕೃತಿಗೊಳಗುಮಾಡಿದೆ.
ನಿನ್ನನರಿದು ಭೇದಿಸಿ ಕಂಡೆಹೆನೆಂದಡೆ,
ಅವರ ಮನದ ಧರ್ಮಕ್ಕೊಳಗಾದೆ.
ಅಂಧಕ ಅಂಧಕನ ಕೈ ಹಿಡಿದಡೆ,
ಅವರೆಲ್ಲಿಗೆ ಹೋಗುವರು, ನಿಃಕಳಂಕ ಮಲ್ಲಿಕಾರ್ಜುನಾ ?/432
ನಾನರಿದು ಬಲ್ಲೆನೆಂದು ನುಡಿಯಲೇಕೆ ?
ಸರಿಗುಡುಗನಾಡುವ ಬಾಲಕರಂತೆ,
ನಾನೊಡವೆರಸಿ ಹೋಗಿ ಕೆಡಹಿದೆನೆಂಬತೆ,
ಅರಿವಿಗೇಕೆ ಗೆಲ್ಲಸೋಲ ?
ಆಕಾಶವ ನೋಡವುದಕ್ಕೆ ತಳ್ಳು ನೂಕೆ,
ನಿಃಕಳಂಕ ಮಲ್ಲಿಕಾರ್ಜುನಾ ?/433
ನಾನರಿಯದಿರ್ದಡೆ ಜ್ಞಾನಿಗಳ ಸಂಭಾಷಣೆಯನರಸುತ್ತಿದ್ದೇನೆ.
ಕಲಿಗಳೊಂದಿಗೆ ಹಂದೆ ಹೋಹಂತೆ,
ಹೊಳೆಯಲ್ಲಿ ಹೋಹನ ಉಡಿಯ ಹಿಡಿದು ಹೋಹಂತೆ,
ಅಂಧಕ ದೃಷ್ಟಿಯವನೊಡನೆ ನಡೆವಂತೆ,
ಆನು ನಿಮ್ಮ ಶರಣರ ಬೆಂಬಳಿವಿಡಿದೆಯ್ದುವೆ,
ನಿಃಕಳಂಕ ಮಲ್ಲಿಕಾರ್ಜುನಾ./434
ನಾನಾ ಚಿಹ್ನವಿಚ್ಫಿಹ್ನಂಗಳು ತಲೆದೋರದೆ,
ನಾನಾ ವೇಷ ಪಾಶ ರೋಷದೋಷ ನಾಶವಾಗಿ,
ವಿಮಲಾಂಗವಾಗಿಪ್ಪುದು ಶಿವಲಿಂಗಸ್ಥಲ.
ಫಲಭೋಗಭೋಜ್ಯಂಗಳು ನಿವೃತ್ತಿಯಾಗಿ,
ಕಾಮ ಲೋಭ ಮೋಹ ಮದ ಮತ್ಸರಂಗಳಲ್ಲಿ ನಿರತನಾಗಿ,
ಹಸಿವು ಕ್ರೋಧ ತೃಷೆ ವ್ಯಸನಂಗಳಲ್ಲಿ ಅಲಕ್ಷಿತನಾಗಿ,
ಪಾಶಬದ್ಧ ವಿರಹಿತನಾಗಿ, ಗುಣ ಅವಗುಣವ ವಿಚಾರಿಸದೆ,
ಋಣಾತುರಿಯ, ಮುಕ್ತ್ಯಾತುರಿಯ, ಸ್ವಇಚ್ಫಾತುರಿಯಂಗಳಲ್ಲಿ
ಉಂಬ ಠಾವಿನಲ್ಲಿ ಬದ್ಧನಾಗದೆ,
ಸ್ತುತಿಯಲ್ಲಿ ನಿಲ್ಲದೆ, ನಿಂದೆಯಲ್ಲಿ ಓಡದೆ, ಆ ಉಭಯವ ಒಂದೂ ಅರಿಯದೆ,
ಸರ್ವಾಂಗಮುಖ ಜಂಗಮವಾಗಿ,
ಗುರುಲಿಂಗ ಉಭಯಸ್ಥಲ ಗರ್ಭಿಕರಿಸಿ ನಿಂದ,
ಪರಮವಿರಕ್ತನ ಪಾದಾಂಬುಜವೆ ಮಜ್ಜನವಾಗಿ, ಪ್ರಸಾದವೆ ಸಂಜೀವನವಾಗಿ,
ಆತನ ನಿಜಸ್ವರೂಪವೆ ಎನ್ನ ಕಂಗಳು ತುಂಬಿ, ಹಿಂಗದಿದ್ದಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ./435
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ.
ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ.
ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ.
ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ.
ಹೀಗಲ್ಲದೆ ತ್ರಿವಿಧವ ಕಳೆಯಬಾರದು.
ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು.
ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು.
ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು.
ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು,
ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ,
ಓಂಕಾರವಪ್ಪ ಪ್ರಣಮವ ಪರಿಣಾಮಿಸಿ,
ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು,
ಪರ್ವೆ ಪ್ರಕಾರದಿಂದ ಉರ್ವೆಯ ಸುತ್ತಿಮುತ್ತಿ ಬೆಳೆದ
ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು,
ಕಾಳೋರಗನಂ ಬೇರು ಮಾಡಿ,
ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ,
ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ,
ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ,
ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ,
ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ,
ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ,
ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು,
ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಸರ್ವಾಂಗದಲ್ಲಿ ನಿರ್ಲೆಪವಾ[ದುದೇ] ಶರಣಸ್ಥಲ. /436
ನಾನಾ ವರ್ಣವ ನೀರುಂಡು,
ಆ ವರ್ಣ ನೀರೆರಡಿಲ್ಲದೆ ಅವಗವಿಸಿದಂತೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗನೊಡಗೂಡಿರಬೇಕು./437
ನಾನಾ ಸಾರಂಗಳ ಸವಿಯ, ಆ ಸಾರ ಅರಿಯಬಲ್ಲುದೇ,
ಸವಿಸಾರವ ಬಲ್ಲವನಲ್ಲದೆ ?
ನಾನಾ ಘಟಪಟವ ಆ ಘಟಪಟಂಗಳು ಬಲ್ಲವೆ, ಇದಿರಿಟ್ಟವಲ್ಲದೆ ?
ತಾ ನೋಡುವಲ್ಲಿ ನಾನಾ ಛಾಯಂಗಳು ದರ್ಪಣದಲ್ಲಿ ಒಪ್ಪುವಂತೆ,
ಆ ದರ್ಪಣಕ್ಕೆ ತನ್ನ ಮುಖಕ್ಕೆ ದೃಷ್ಟವುಂಟೆ ?
ಆ ನೆನಹಿಂಗೆ ಇಷ್ಟ, ಆ ಇಷ್ಟಕ್ಕೆ ಈ ಗುಣದೃಷ್ಟ.
ಇಂತೀ ಪ್ರಾಣಲಿಂಗಿಯ ಕೂಟ, ಮೇಲೆ ಐಕ್ಯಾನುಭಾವಿಯ ಲೇಪ,
ನಿಃಕಳಂಕ ಮಲ್ಲಿಕಾರ್ಜುನಲಿಂಗದೊಳಗಿನಾಟ./438
ನಾನಾ ಸ್ಥಲಂಗಳ ಮಾತಿನ ಮಾಲೆಯಲ್ಲಿ,
ನಿತ್ಯ ಅನಿತ್ಯವೆಂಬ ಮಾತ ಬಣ್ಣಿಸಿ ನುಡಿವಲ್ಲಿ, ಅದೇತರ ಸ್ಥಲ ?
ಕಾಮದಲ್ಲಿ ಕಂದಿ, ಕ್ರೋಧದಲ್ಲಿ ಬೆಂದು,
ನಾನಾ ಲೋಭ ಮೋಹಂಗಳಲ್ಲಿ ಸಲೆಸಂದು ಸಾವುತ್ತ,
ಭಾವದ ಭ್ರಮೆಯಡಗದೆ, ಜೀವವಿಕಾರ ಹಿಂಗದೆ,
ಕೂರಲಗಿನ ಒಪ್ಪದಂತೆ, ಕಣ್ಣಿಗೆ ನೋಟ, ಘಟ ಅಸುವಿಂಗೆ ಓಟ.
ಆ ಅಸಿಯ ಘಾತಕತನದಂತೆ, ಇವರ ಭಾವಕ್ಕೆ ಭಕ್ತರೆನಲಾರೆ,
ಜ್ಞಾನಕ್ಕೆ ಗುರುವೆನಲಾರೆ, ಸದ್ಭಾವಕ್ಕೆ ಜಂಗಮವೆನಲಾರೆ.
ಎಂದಡೆ ಎನಗದು ಬಂಧನವಲ್ಲ, ಅದು ಕಾಯ ಜೀವದ ಭೇದ.
ಅದು ಸ್ಥಾಣು ರಜ್ಜು, ಎಣ್ಣೆ ಉರಿಯೋಗದ ಕೂಟ.
ಆ ಗುಣ ಒಂದೂ ತೋರದೆ, ಬೆಳಗೆಂಬ ನಾಮವಡಗಿತ್ತು.
ಇಂತೀ ಉಭಯ ಭಿನ್ನವಾದಲ್ಲಿ,
ಎನ್ನ ಮರವೆ ನಿನ್ನ ಕೇಡು, ನಿನ್ನ ಮಲ ಎನ್ನ ಕೇಡು.
ಅದು ದೃಕ್ಕು ಬೊಂಬೆಯಂತೆ,
ನಿಶ್ಚಯವಾದಲ್ಲಿ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ./439
ನಾನಾ ಸ್ಥಲಂಗಳ ಹೊಲಬಿನ ಹೊಲನ ವಿಚಾರಿಸುವಲ್ಲಿ,
ಸುಖದುಃಖವೆಂಬ ಉಭಯವುಂಟು.
ತಾನರಿದಲ್ಲಿ, ನಡೆನುಡಿ ಸಿದ್ಧಾಂತವಾದಲ್ಲಿ, ಇಹಪರಸುಖ.
ಭಾವಕ ಪರಿಭ್ರಮಣದಿಂದ, ಯಾಚಕ ಮಾತುಗಂಟತನದಿಂದ,
ವಸ್ತುಭಾವದ ನಿಹಿತವನರಿಯದೆ, ವಾಗ್ವಾದಕ್ಕೆ, ಗೆಲ್ಲಸೋಲಕ್ಕೆ ಹೋರುವಲ್ಲಿ,
ಇಹಪರ ಉಭಯದಲ್ಲಿಗೆ ದುಃಖ.
ಇಂತೀ ಸ್ಥಲಂಗಳ ಗರ್ಭಿಕರಿಸಿ, ಆರುಸ್ಥಲವ ಅಲ್ಲಾ ಎನ್ನದೆ,
ಮೂರುಸ್ಥಲ ಇಲ್ಲಾ ಎನ್ನದೆ, ಬೇರೊಂದು ಸ್ಥಲವುಂಟೆಂದು ಊರೆಲ್ಲಕ್ಕೆ ದೂರದೆ,
ಆರಾರ ಅರಿವಿನಲ್ಲಿ, ಆರಾರ ಸ್ಥಲಂಗಳಲ್ಲಿ, ಆರಾರ ಕ್ರೀ ನೇಮಂಗಳಲ್ಲಿ ಇಪ್ಪ,
ವಿಶ್ವಾಸಕ್ಕೆ ತಪ್ಪದಿಪ್ಪ ಆ ವಸ್ತುವ,
ಬೇರೊಂದು ಲಕ್ಷಿಸಿ, ಕಟ್ಟಗೊತ್ತಿಂಗೆ ತರವಲ್ಲ.
ದೃಷ್ಟವಲ್ಲಾ ಎಂದು ಇದಿರಿಂಗೆ ಹೇಳಲಿಲ್ಲ.
ತನ್ನ ಭಾವ ನಿಶ್ಚಯವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ/440
ನಾನು ನೀನೆಂಬ ಉಭಯವ ಭೇದಿಸಿ ಹೋರಲೇಕೆ,
ವಸ್ತು ತಾನಾದ ಮತ್ತೆ ?
ಇಷ್ಟವನರಿಯದೆ ಆತ್ಮತೇಜಕ್ಕೆ, ಮಾತಿನ ಘಾತಕಕ್ಕೆ,
ತಮ್ಮ ಪ್ರಖ್ಯಾತದ ಧಾತು ಕುಂದಿಹಿತೆಂದು
ಮಾತಿಗೆ ಮಾತ ನುಡಿದು, ಗೆದ್ದೆಹೆನೆಂಬ ಪಾಷಂಡಿಗಳಿಗೇಕೆ
ಸುಚಿತ್ತ ಸಮ್ಯಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ ? /441
ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು.
ಆ ಅರಿವು ಐಕ್ಯವಾದಲ್ಲಿಯೆ ಗುರುವ ಭಾವಿಸಲಿಲ್ಲ.
ಆ ಗುರು ಐಕ್ಯವಾದಲ್ಲಿಯೆ ಲಿಂಗವನರಿದುದು.
ಆ ಜಂಗಮ ಐಕ್ಯವಾದಲ್ಲಿಯೆ ತ್ರಿವಿಧವ ಮರೆದುದು.
ಆ ಲಿಂಗ ಐಕ್ಯವಾದಲ್ಲಿಯೆ ಜಂಗಮವ ಮರೆದುದು.
ತ್ರಿವಿಧವ ಮರೆದಲ್ಲಿಯೆ ತನ್ನ ಮರೆದುದು.
ತನ್ನ ಮರೆದಲ್ಲಿಯೆ ಇದಿರಿಟ್ಟುದನರಿದುದು.
ಮತ್ತೆ ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ.
ತೆರಹಿಲ್ಲವಾಗಿ ಭಾವಿಸಿ ಕಂಡೆಹೆನೆಂಬ ಭ್ರಮೆಯೆಲ್ಲಿಯದೊ ?
ಪೂಜಿಸಿ ಕಂಡೆಹೆನೆಂಬ ಕ್ರೀ ಎಲ್ಲಿಯದೊ ?
ಹೂಬಲಿದು ಕಾಯಾಗಬೇಕಲ್ಲದೆ ಕಾಯಿ ಬಲಿದು ಹೂವಾಗಬಲ್ಲುದೆ ?
ಹಣ್ಣು ಬಲಿದು ಬಣ್ಣವಹುದಕ್ಕೆ ಮೊದಲೆ, ಕೊಂಬು ಮುರಿಯಿತ್ತು,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಐಕ್ಯವಾದ ಶರಣಂಗೆ./442
ನಾನೇಕೆ ಬಂದೆ ಸುಖವ ಬಿಟ್ಟು ?
ಬಂದುದಕ್ಕೆ ಒಂದೂ ಆದುದಿಲ್ಲ.
ಸಂಸಾರದಲ್ಲಿ ಸುಖಿಯಲ್ಲ, ಪರಮಾರ್ಥದಲ್ಲಿ ಪರಿಣಾಮಿಯಲ್ಲ.
ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ.
ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ,
ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ.
ಈ ಭಾಷೆ ಇನ್ನೇಸು ಕಾಲ, ನಿಃಕಳಂಕ ಮಲ್ಲಿಕಾರ್ಜುನಾ ?/443
ನಾರಿ ಸುತ್ತನಾರೈಕೆಗೊಂಬವನ ಬೇರಿನ ಬಿಲ್ಲ ನುಂಗಿತ್ತು.
ಬಿಲ್ಲಿನ ಬಾಗಿನಲ್ಲಿ ಇವರೆಲ್ಲರೂ ಸಿಕ್ಕಿದರು.
ಬಿಲ್ಲಿನ ನಾರಿಯನಿಲಿ ಬಂದು ಕಡಿಯಲಾಗಿ,
ನಾರಿ ಜಾರಿತ್ತು, ಬಿಲ್ಲು ಮುರಿಯಿತ್ತು.
ಬಿಲ್ಲಿನೊಳಗಾಡುವ ಚೊಲ್ಲೆಹಸರವೆಲ್ಲಿಯೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./444
ನಾಲ್ಕು ಯುಗವು ಕೂಡಿ ಇಪ್ಪತ್ತೊಂದುವೇಳೆ ತಿರುಗಿದಡೆ,
ಇಂದ್ರಂಗೆ ಮರಣ, ಬ್ರಹ್ಮಂಗೊಂದು ದಿನ.
ಅಂಥಾ ಬ್ರಹ್ಮರು ಸಹಸ್ರ ಕೂಡಿದಡೆ, ವಿಷ್ಣುವಿಂಗೆ ಪರಮಾಯು.
ಅಂಥಾ ವಿಷ್ಣು ಕೋಟಿ ಕೂಡಿದಡೆ ರುದ್ರಂಗೊಂದು ಜಾವ.
ಅಂಥಾರುದ್ರರು ಏಕದಶ ಕೋಟಿ ಕೂಡಿದಡೆ, ಈಶ್ವರಂಗೆ ಎರಡು ಜಾವ.
ಅಂಥಾಈಶ್ವರರು ದ್ವಾದಶರು ಕೂಡಿದಡೆ, ಸದಾಶಿವಂಗೊಂದು ಜಾವ.
ಅಂಥಾಸದಾಶಿವರು ಒಂದುಕೋಟಿ ಕೂಡಿದಡೆ, ಮಹಾಪ್ರಳಯವಹುದು.
ಅಂಥಾಥ್ರಳಯ ಹದಿನೆಂಟು ಕೂಡಿದಡೆ, ಮಹಾ ಅಂಧಕಾರವಹುದು.
ಅಂಥಿಾ ಅಂಧಕಾರ ಸಂದಿಲ್ಲದೆ ತಿರುಗುವಲ್ಲಿ, ಬಯಲು ಬರಿದಹುದು.
ಅಲ್ಲಿಂದಾಚೆ ನೀವೆ ಬಲ್ಲಿರಿ, ನಾನರಿಯೆ.
ಸೊಲ್ಲಿಂಗತೀತನಪ್ರಮಾಣನಗೋಚರ ಘನವು,
ನಿಃಕಳಂಕ ಮಲ್ಲಿಕಾರ್ಜುನ./445
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ.
ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ.
ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ.
ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ.
ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ.
ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು.
ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ,
ಭಾವಕ್ಕೆ ಅಗೋಚರನಾಗಿಪ್ಪೆ.
ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ,
ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು,
ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ,
ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ.
ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ./446
ನಿನ್ನ ಇರವು, ನಿನ್ನನರಿವಿನ ಇರವು ಮೃತ್ತಿಕೆಯ ಚಕ್ರದಂತೆ,
ನಿನ್ನನರಿವಿನ ಇರವು ತರುಸಾರದ ಹೇಮದಾಶ್ರಯದಂತೆ,
ನಿನ್ನನರಿವಿನ ಇರವು ಲೋಹದ ವಹ್ನಿಯ ಸಂಗದಂತೆ,
ಇದಾರಿಗೂ ಅಸಾಧ್ಯ ನೋಡಾ.
ಅಸಮಾಕ್ಷ ಅನಾಮಯ ನೀನೇ, ನಿಃಕಳಂಕ ಮಲ್ಲಿಕಾರ್ಜುನಾ./447
ನಿನ್ನನರಿತು ಅರಿದೆನೆಂದಡೆ,
ನಾ ಕುತ್ತದ ಕೊಮ್ಮೆ, ನೀ ಮದ್ದಿನ ಗುಳಿಗೆ.
ನಿನ್ನನರಿತು ನೆರೆದಿಹೆನೆಂದಡೆ, ನೀ ಹೆಣ್ಣು, ನಾ ಗಂಡು.
ಸಾಕು, ಬಲ್ಲಹರ ಮಾತು ಬಿಡು,
ನಿನ್ನದು ನೀತಿಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./448
ನಿನ್ನನರಿವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ
ಸನ್ನೆಯ ತೊರೆಯ ಹಾಯಬೇಕು.
ಆ ಮೂರನರಿವಲ್ಲಿ, ಮರೆದು ಹಿಡಿವಲ್ಲಿ, ಅರಿದು ಬಿಡುವಲ್ಲಿ,
ಆ ಉಭಯದ ಒಡಲು ಹರಿದು, ತೋರಿಕೆ ನಷ್ಟವಾಗಿ ನಿಂದವಂಗಲ್ಲದೆ,
ನಿನ್ನ ಚರಣದ ಬಾಗಿಲ ಬಾದಳವನೇರಬಾರದು.
ಅದಕ್ಕೆ ಸನ್ನೆಗಟ್ಟಿಗೆಯೆ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ./449
ನಿನ್ನಿಂದ ನಾ ಭವಸಾಗರವ ಗೆದ್ದೆಹೆನೆಂದಡೆ,
ಭಕ್ತರಿಗೆ ನೀನೇರುವ ಹರುಗೋಲವೆ ?
ನಿನ್ನ ಮರೆಯಲ್ಲಿ ಇದ್ದೆಹೆನೆಂದಡೆ, ಕರದ[ಲ್ಲಿ] [ಕಡ್ಡಾ]ಯವೆ ?
ಚಿನ್ಮಯ ನೀನಾಗಿ, ತನ್ಮಯ ನಾನಾಗಿ ಭಿನ್ನಭಾವಿಯಾದಲ್ಲಿ,
ನೀನಾರು, ನಾನಾರು ನಿಃಕಳಂಕ ಮಲ್ಲಿಕಾರ್ಜುನಾ ?/450
ನಿಮಿತ್ತ ಶುಭಸೂಚನೆಯ ಬಿನ್ನಪವನವಧರಿಸು.
ಅತಿಥಿಯ ಮಸ್ತಕ ತಾಗಿ,
ಶೂನ್ಯಸಿಂಹಾಸನದ ಫಳಹರಂಗಳೆಲ್ಲವೂ ಅಲ್ಲಾಡುವುದ ಕಂಡೆನಯ್ಯಾ.
ಮುತ್ತಿನಾರತಿಯ ಮುಂದೆ ಹಿಡಿದುಕೊಂಡು,
ಮುಕ್ತಿವನಿತೆಯರು ನಿತ್ಯನಿರಂಜನಂಗೆ ನಿವಾಳಿಸುವುದ ಕಂಡೆನಯ್ಯಾ.
ಇದರಿಂದ, ನಿಃಕಳಂಕ ಮಲ್ಲಿಕಾರ್ಜುನದೇವರು ಬಾರದಿರ್ದಡೆ,
ನೀನಾದಂತೆ ಅಹೆನು, ಕಟ್ಟು ಗುಡಿಯ ಸಂಗನಬಸವಣ್ಣಾ./451
ನಿರವಯಲಿಂಗ ಲೀಲೆಗೆ ರೂಪಾಯಿತ್ತೆಂದು ನುಡಿವರು,
ಬಯಲು ರೂಪಾದ ಪರಿಯಿನ್ನೆಂತೊ ?
ಮೊದಲುಗೆಟ್ಟು ಲಾಭನರಸುವ ಪರಿಯಿನ್ನೆಂತೊ ?
ರೂಪಿಂಗೆ ಬಂದುದು ನಿರೂಪವಾದ ಮತ್ತೆ ? ರೂಪಿಂಗೆ ಈಡಪ್ಪುದೆ ?
ಇದು ಕಾರಣ, ತಮ್ಮಲ್ಲಿರ್ದ ಜ್ಞಾನವ ತಾವರಿಯದೆ,
ತಾವು ಹಿಡಿದಿರ್ದ ಲಿಂಗದ ಆದಿ, ಅಳಿ ಉಳಿವ ಉಭಯವ ಭೇದಿಸಲರಿಯದೆ,
ಜ್ಞಾನವ ಸಾಧಿಸಲರಿಯದೆ, ಸಾಧ್ಯರೆಂತಾದಿರೊ ?
ಆ ಸಾಧ್ಯ, ನಿರುಪಮ ನಿರವಯ ಪರಂಜ್ಯೋತಿ ಲಿಂಗವ
ಕುರುಹಿಡುವ ಪರಿಯಿನ್ನೆಂತೊ ?
ಕುರುಹಿನ ಮರೆಯೊಳಗಿಪ್ಪ ವಸ್ತುವ ಕಾಬ ತೆರ ಇನ್ನಾವುದೊ ?
ಇವೆಲ್ಲವೂ ಮರವೆಯ ಮಾತಲ್ಲದೆ, ಬರಿಯ ಹೋರಟೆಗೆ ಬಲ್ಲವರಲ್ಲವೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ./452
ನಿರುಪಾಧಿಭಕ್ತಂಗೆ ನಿರಂಜನ ಜಂಗಮ, ನಿರವಯ ಅಭೇದ್ಯ ಲಿಂಗ.
ಆ ಲಿಂಗದ ಸ್ವರೂಪವು ಜಂಗಮ, ಆ ಜಂಗಮವೆ ಲಿಂಗ.
ಆ ಲಿಂಗಜಂಗಮವ ಹೃತ್ಕಮಲ ಮಧ್ಯದಲ್ಲಿ
ನಿಜಾನಂದಸ್ವರೂಪನಾಗಿ ಇಂಬಿಟ್ಟುಕೊಂಡಿಪ್ಪ ಮಹಾಭಕ್ತಂಗೆ
ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ./453
ನಿರ್ಘಟದಲ್ಲಿ ಘಟ ಹುಟ್ಟಿ, ಪ್ರಕಟಿಸುವುದ ಕಂಡೆ.
ನಿರ್ವೆಕಳತೆಯಲ್ಲಿ ವಿಕಳತೆ ಹುಟ್ಟಿ, ಉಭಯಗತಿ[ಗೆಟ್ಟವರ ಕಂಡೆ].
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದವರ [ಕಂಡೆ]. |/454
ನಿಶ್ಚಟ ಭಾಷೆಯ ನುಡಿದ ಮತ್ತೆ, ರಣದಲ್ಲಿ ವಾಸಿಗೆ ಸಾಯಲೇಬೇಕು.
ಈಶಲಾಂಛನವ ಹೊತ್ತು ಮತ್ತೆ, ಸತ್ಯದ ವಾಸಿಗೆ ಸಾಯದ
ವೇಷಧಾರಿಗಳವರೇತಕ್ಕೆ ಬಾತೇ, ನಿಃಕಳಂಕ ಮಲ್ಲಿಕಾರ್ಜುನಾ ?/455
ನಿಷ್ಠೆಯ ಹರಿದು ಭಕ್ತಿಯೆಂಬ ತೂರ್ಯದಲ್ಲಿ ಸಿಲ್ಕಿ ಸಾಯದೆ,
ವಿರಕ್ತಿಯಿಂದ ಕರಿಗೊಂಡು ಮಾಡುವ ಸದಾನಂದನ ಇರವು
ಹೇಂಗಿರಬೇಕೆಂದಡೆ :
ಬಂದುದನೊಲ್ಲೆನ್ನದೆ, ಬಾರದುದಕ್ಕೆ ಬಯಸದೆ, ಮಾಟದಲ್ಲಿ ಮನ ಸಂದೇಹಿಸದೆ,
ಜಗದಲ್ಲಿ ಸುಳಿವ ಆಟದವರ ನೋಡುತ್ತ,
ಉಣಬಂದವರಿಗಿಕ್ಕಿ, ಬೇಡ ಬಂದವರಿಗೆ ಕೊಟ್ಟು,
ಆರೂಢರನರಿದು ಶೋಧಿಸಿ ಮಾಡುವುದು.
ನಿಷ್ಪತ್ತಿ ನಿರವಯ ಭಕ್ತನ ಯುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ./456
ನೀತಿಗೆ ನೀತಿ, ಜಾತಿಗೆ ಜಾತಿ ಭೇದವನರಿದು,
ಕೂಟಕ್ಕೆ ಕೂಟ, ಕ್ಷೀರಕ್ಕೆ ಕ್ಷೀರ ಕೂಡಿದಂತಿರಬೇಕು.
ವಾರಿಯ ವಾರಿ ಕೂಡಿದಂತಿರಬೇಕು.
ಇದು ಜ್ಞಾನಿಗಳ ಮಹಾಪ್ರಕಾಶದ ಕೂಟದ ಸುಖ,
ನಿಃಕಳಂಕ ಮಲ್ಲಿಕಾರ್ಜುನಾ./457
ನೀನೊಳ್ಳಿಹನೆಂಬೆನೆ ಮನಧರ್ಮವನರಸಿಹೆ.
ನಾನೊಳ್ಳಿಹನೆಂಬೆನೆ ನೀನೆಲ್ಲಿದ್ದಹನೆಂದರಸಿಹೆ.
ಕೈದು ಕೈದು ಹಳಚಿದಲ್ಲಿ ಅಲಸಿದುದುಂಟೆ ?
ಆ ಅಲಸಿ ಅಸುವಿಂಗಲ್ಲದೆ ಈ ದೆಶೆಯ ಹೇಳಾ,
ಕುಶಲ ತನ್ಮಯ ನಿಃಕಳಂಕ ಮಲ್ಲಿಕಾರ್ಜುನಾ./458
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು:
ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ,
ಕೊಂಬ ಮೀರುವ ಎಲೆಯಿಲ್ಲದೆ, ಎಲೆಯ ಮೀರುವ ಹೂವಿಲ್ಲದೆ,
ಹೂವ ಮೀರುವ ಕಾಯಿಯಿಲ್ಲದೆ,
ಇದು ಚೆನ್ನಾಗಿ ತಿಳಿದು ನೋಡಿ.
ಆ ನೀರು ಬೇರ ನುಂಗಿ, ಬೇರು ವೃಕ್ಷವ ನುಂಗಿ,
ಪರ್ಣ ಕುಸುಮವ ಕೊಂಡು, ಕುಸುಮ ಕಾಯವ ಕೊಂಡು,
ಕಾಯಿ ಹಣ್ಣನು ಮೆದ್ದಲ್ಲಿ ಭಾವವಳಿಯಿತ್ತು.
ಇದನಾರು ಬಲ್ಲರು ? ನಿಃಕಳಂಕ ಮಲ್ಲಿಕಾರ್ಜುನಾ, ನೀನೆ ಬಲ್ಲೆ./459
ನೀರ ಹೊಳೆಯಲ್ಲಿ ಹೋಗುತ್ತಿರಲಾಗಿ,
ಅಲ್ಲಿ ಒಬ್ಬ ಸತ್ತು, ಬೇವುತ್ತಿರ್ದ.
ತಲೆ ಕಾಲು ಬೇಯದು, ಕೈ ಮುರುಟದು,
ಕಪಾಲ ಸಿಡಿಯದು, ಕೂದಲು ಉಳಿಯಿತ್ತು.
ಆ ಕೂದಲ ಮೊನೆಯಲ್ಲಿ ಮೂರು ಲೋಕ ಎಡೆಯಾಡುತ್ತದೆ,
ನಿಃಕಳಂಕ ಮಲ್ಲಿಕಾರ್ಜುನಾ./460
ನೀರಿನ ಮೇಲಣ ತೆಪ್ಪ ಒಪ್ಪವಾಗಿ ಹೋಹುದು
ತೆಪ್ಪದ ಗುಣವೋ, ಅಪ್ಪುವಿನ ಗುಣವೋ ? ಮೇಲಿದ್ದು ಒತ್ತುವನ ಗುಣವೋ ?
ಇಂತೀ ಭೇದವ ಭೇದಿಸಿ, ನೀರ ಬಟ್ಟೆಯಲ್ಲಿ ಹೋಹವನ ಯುಕ್ತಿ.
ಇಷ್ಟದ ಪೂಜೆ, ದೃಷ್ಟದ ನಿಷ್ಠೆ,
ನಿಷ್ಠೆಯ ಶ್ರದ್ಭೆಯ ಸದಮಲದಲ್ಲಿ ತೊಳಗಿ ಬೆಳಗುವ ಬೆಳಗು.
ಆ ಕಳೆಯೆನ್ನಲ್ಲಿ ಕಾಂತಿ ಕಳೆದೋರೆ,
ಕರಣಂಗಳ ವೇಷದ ಪಾಶ ಹರಿಗು, ನಿಃಕಳಂಕ ಮಲ್ಲಿಕಾರ್ಜುನಾ./461
ನೀರು ಕೂಡಿ[ದ] ಕ್ಷೀರ ಬೆಂದಲ್ಲದೆ ಮತ್ತಾ
ನೀರು ಸಾರವರತು ಹೊತ್ತದೆ ಉಳಿದ ಉಳುಮೆಯೆಂತೋ ?
ಇಕ್ಷುವಿನ ಸಾರ ಅಪ್ಪುವಿನ ಕೂಟದಿಂದ ಪಕ್ವವಾಗಿ,
ಮತ್ತೆ ಉಳಿದುದು ಸಕ್ಕರೆಯಾದಂತೆ,
ಎಣ್ಣೆ ನೀರ ಕೂಡಿ ಬೆಂದು, ಬಿನ್ನಾಣದಿ ಮೇಲೇರಿ,
ಆ ಉಭಯಕ್ಕೆ ಅನ್ಯವಿಲ್ಲದೆ ಬೇರೆಯಾದಂತೆ,
ಇಂತೀ ಸ್ಥಲವನೆಯ್ದಿ, ನಿಃಸ್ಥಲವಾಗಬೇಕು.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಷಟ್ಸ್ಥಲ ಸಂಪೂರ್ಣ./462
ನೀರು ನೆನೆದುದ ಕಂಡೆ.
ಹೆಚ್ಚದ ಕುಂದದ ವಾರುಧಿ, ವಾರುಣಿಸಿ ಸೋರಿಹೋದುದ ಕಂಡೆ.
ಇಂತಿವನಾರಯ್ದು ನೋಡಲಾಗಿ,
ನೀರು ನೆನೆದುದಿಲ್ಲ, ವಾರುಧಿ ಸೋರಿದುದಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಲೀಯವಾಗಬಲ್ಲಡೆ. /463
ನೀರು ನೇಣು ಭೂಮಿಯ ತಡಿಯ ಕುಂಭ ಮುಂತಾಗಿ ಬಂದಲ್ಲದೆ,
ಪಾತಾಳ ಜಲವೆಯ್ದದು ಧರೆಗೆ.
ಭಕ್ತಿ ಜ್ಞಾನ ವೈರಾಗ್ಯಂಗಳೆಂಬವು,
ಒತ್ತಿ ಬೆಳೆದ ಶರೀರದ ಪೃಥ್ವಿಯ ಪಙ್ತಿಯಲ್ಲಿ
ಹೊಯ್ದ ಉದಕ ಸಾರಾಯವಾಯಿತ್ತು.
ಸಸಿಗೆ ಸಸಿ ಬೆಳೆದು, ಕೊಯ್ದು ಒಕ್ಕಿ ಒಯ್ದ ಮತ್ತೆ
ಬಾವಿ ಬಿದ್ದಿತ್ತು, ನೇಣು ಹರಿಯಿತ್ತು, ಕುಂಭ ಒಡೆಯಿತ್ತು,
ಭೂಮಿ ಹಾಳಾಯಿತ್ತು, ಅಳೆವವ ಸತ್ತ.
ಆ ಬತ್ತ ಸಿಕ್ಕಿತ್ತು ಅರಮನೆಯಲ್ಲಿ.
ಸಿಕ್ಕಿದ ಬತ್ತವನುಂಡು ಮತ್ತರಾದರು, ಮರ್ತ್ಯದವರೆಲ್ಲರೂ ತುತ್ತ ನುಂಗಿದರು.
ಇತ್ತಲಿದ್ದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ./464
ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ ?
ಆರನರಿತು, ಮೂರ ತಿಳಿದು, ಬೇರೊಂದು ಇದೆಯೆಂದು ಲಕ್ಷಿಸಿದಲ್ಲಿ,
ಆ ಲಕ್ಷ ನಿರ್ಲಕ್ಷ್ಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ./465
ನೀರೆಂತು ನೆನೆವುದೆಂದು ಬೆಸಗೊಂಡರೆ, ಹೇಳಬಹುದೆ ಅಯ್ಯಾ ?
ನಿರಾಳ ನಿರ್ಮಾಯ ಪರಶಿವನಲ್ಲಿ ಐಕ್ಯವಾದ ನಿಜಲಿಂಗೈಕ್ಯನ
ಉಪಮಿಸಲುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ? /466
ನೀರೊಳಗಣ ಶಿಲೆಯ ಒಡೆಯರುಗಳೆಲ್ಲರೂ ಕೂಡಿ,
ಅದ ಊರಿ ನೆನೆಯಿತ್ತೆಂದಡೆ, ಅದು ಸಾರಾಯವಾಯಿತ್ತೆ ?
ಮೀರಿದ ಶರಣರೆಲ್ಲರೂ ಕೂಡಿ,
ಗುರು ಕೊಟ್ಟ ಲಿಂಗವ ಸೇರುವ ಸಾರಾಯವ ಬಲ್ಲರೆ ?
ಹುತ್ತವ ಬಡಿದಡೆ ಹಾವು ಸತ್ತುದುಂಟೆ ?
ಇದು ನಿಶ್ಚಯವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ./467
ನೂಲೆಳೆಯ ಗಾತ್ರದ ಮರದಲ್ಲಿ,
ಬೆಟ್ಟದ ತೋರದ ಕಾಯಿ ಫಲವಾಯಿತ್ತು.
ಅದು ಹಣ್ಣಾಗದು, ನೋಡಿರಯ್ಯಾ ಇನ್ನೆಂತೊ ?
ಏರಬಾರದು ಮರನ, ಕೊಯ್ದು ಹಿಡಿಯಬಾರದು ಕಾಯ.
ಈ ಭೇದವನರಿದು ಮರನನೇರದೆ, ಕಾಯ ಮುಟ್ಟದೆ,
ಹಣ್ಣಿನ ರುಚಿಯ ಚೆನ್ನಾಗಿ ಬಲ್ಲಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗ ತನ್ನಲ್ಲಿ ನಿರ್ಲೆಪಸಂಬಂಧಿ./468
ನೆಟ್ಟ ಲಿಂಗವ ಪ್ರತಿಷ್ಠೆಯೆಂಬರು.
ಹುಟ್ಟಿದ ಲಿಂಗವ ಸ್ವಯಂಭುವೆಂಬರು.
ಈ ಉಭಯದಲ್ಲಿ, ಸ್ವಯಂಭು ಪ್ರತಿಷ್ಠೆಯನರಿವುತ್ತಿರ್ದವರ ಕಂಡು,
ಮರ್ತ್ಯದ ಮಹಾಜನಂಗಳು ಹೊತ್ತುಹೋರಲೇಕೆ ?
ಎನಗೆ ಇಷ್ಟವ ಕೊಟ್ಟ ಗುರು, ಬಟ್ಟೆಯ ಹೇಳಿದುದಿಲ್ಲ.
ಪೃಥ್ವಿಯೊಳಗಣ ಮುತ್ತರದ ಅಚ್ಚಿಗವ ಬಿಡಿಸಾ,
ನಿಃಕಳಂಕ ಮಲ್ಲಿಕಾರ್ಜುನಾ./469
ನೆಲ ತಳವಾರನಾದಡೆ, ಕಳ್ಳಂಗೆ ಹೊಗಲೆಡೆಯುಂಟೆ ?
ಸರ್ವಾಂಗಲಿಂಗಿಗೆ ಅನರ್ಪಿತವುಂಟೆ,
ನಿಃಕಳಂಕ ಮಲ್ಲಿಕಾರ್ಜುನಾ ?/470
ನೇಮಕ್ಕೊಳಗಾದ ಬ್ರಹ್ಮ, ತಪಕ್ಕೊಳಗಾದ ವಿಷ್ಣು.
ಜಪಕ್ಕೊಳಗಾದ ರುದ್ರ, ನಿತ್ಯಕ್ಕೊಳಗಾದ ಈಶ್ವರ.
ಉಪಚಾರಕ್ಕೊಳಗಾದ ಸದಾಶಿವ, ಶೂನ್ಯಕ್ಕೊಳಗಾದ ಪರಮೇಶ್ವರ.
ಇಂತಿವರೆಲ್ಲರೂ ಪ್ರಳಯಕ್ಕೊಳಗಾದರು, ನಿಃಕಳಂಕ ಮಲ್ಲಿಕಾರ್ಜುನಾ./471
ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು.
ನಿತ್ಯವ ಮಾಡುವರೆಲ್ಲರು ವಿಷ್ಣುಪಾಶಕ್ಕೊಳಗಾದರು.
ಜಪವ ಮಾಡುವರೆಲ್ಲರು ರುದ್ರಪಾಶಕ್ಕೊಳಗಾದರು.
ತಪವ ಮಾಡುವರೆಲ್ಲರು ರತಿಪಾಶಕ್ಕೊಳಗಾದರು.
ಇಂತಿವು ಮೊದಲಾದ ನಾನಾ ಕೃತ್ಯವ ಮಾಡುವ
ಸಂಕಲ್ಪಜೀವಿಗಳೆಲ್ಲರು ನಾನಾ ಯೋನಿಸಂಭವದಲ್ಲಿ ಬರ್ಪುದಕ್ಕೆ
ತಮ್ಮ ತಾವೇ ಲಕ್ಷವಿಟ್ಟುಕೊಂಡರು.
ಅಲಕ್ಷ ಅತೀತ ಅನಾಮಯ ಅಮಲ ಅದ್ವಂದ್ವ
ಕಾಲಭೇದಚ್ಫೇದನಕುಠಾರ ನಾನಾ ಶಾಸ್ತ್ರ ನಿರ್ಲೆಪ
ಸಕಲ ಕೃತ್ಯ ಹೇತುದಾವಾನಲ ನಿಃಕಾರಣಮೂರ್ತಿ ಸಹಜಭರಿತಂಗೆ
ಹಿಡಿಯಲ್ಲಿಲ್ಲಾಗಿ ಬಿಡಲಿಲ್ಲ, ಅರಿಯಲಿಲ್ಲಾಗಿ ಅರಿದೆನೆಂಬ ತೆರನಿಲ್ಲ.
ಮತ್ತೆ ಕುರುಹಿನಿಂದ ಕಂಡ ಅರಿಕೆ ಇನ್ನೇಕೆ ?
ಸಿಪ್ಪೆಯ ಕಳೆದು, ಸುಭಿಕ್ಷವ ಸೇವಿಸಿ, ಬಿತ್ತನುಳಿದೆ,
ನಿತ್ಯವ ಪರಿದು, ಅನಿತ್ಯವ ಕಳೆದು,
ಮತ್ತೇನು ಎನ್ನದಿರ್ಪುದೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ./472
ಪಂಚಭೌತಿಕದಿಂದ ಬಂದ ತನುವಿನಲ್ಲಿ, ಪಂಚಮುಖವನರಿವುದೆ ದೃಷ್ಟ.
ಸಂಚಿತವ ಹರಿದ ವಸ್ತುವನರಿವುದಕ್ಕೆ, ಸಂಚಾರ ಹಿಂಗಿ ಅರಿವುದೆ ದೃಷ್ಟ.
ಈ ಉಭಯಸಂಚವನರಿದು ಮುಂಚಬಲ್ಲಡೆ, ಆತನೆ ಲಿಂಗೈಕ್ಯ,
ನಿಃಕಳಂಕ ಮಲ್ಲಿಕಾರ್ಜುನಾ./473
ಪಂಚಮುಖದ ಗಿರಿಯ ಗಹ್ವರದಲ್ಲಿ,
ಮುಂಚಿದರೈದುವ ಹುಲಿಗಳ ಕಂಡೆ.
ಆ ಹುಲಿಯೊಂದಕ್ಕೆ ಐದು ಬಾಯಿ.
ಆ ಬಾಯೊಳಗೆ ಹೊಕ್ಕು ಹುಲಿಯ ಕುಲಗೆಡಿಸಬೇಕು,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ. /474
ಪಟ ಬಾಲಸರವು ಕೂಡಿರ್ದಡೇನು ?
ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ,
ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ?
ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ,
ಮನಮುಟ್ಟದಿರ್ದಡೇನಾಯಿತ್ತು ?
ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು?
ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ,
ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೆಶ./475
ಪಯವ ಕೂಡಿದ ನೀರಿನಂತೆ,
ಮಧುರವ ಕೂಡಿದ ಅಂಬಸಿಯಂತೆ,
ತೈಲವ ಕೂಡಿದ ಉದಕದಂತೆ,
ನೋಡಿ ಏರ ಕಾಸಲಿಕ್ಕೆ ಅಲ್ಲಿಯೆ ಅರತಂತೆ, ಸ್ಥಲ ಬೇರಾಗಲಿಲ್ಲ.
ಆ ಅರಿವು ಸ್ಥಲಂಗಳನರಿತು, ಉಭಯ ತಲೆದೋರದಿದ್ದಲ್ಲಿಯೆ
ನಿಃಕಳಂಕ ಮಲ್ಲಿಕಾರ್ಜುನನು ಷಡುಸ್ಥಲ ಸಂಪೂರ್ಣನು./476
ಪರಬ್ರಹ್ಮವ ನುಡಿಯುತ್ತ, ಪರದ್ರವ್ಯವ ಕೈಯಾಂತು ಬೇಡುತ್ತ,
ಮಾತಿನಲ್ಲಿ ಶೂನ್ಯತನ, ಮನದಲ್ಲಿ ಆಶೆಯೆಂಬ ತೊರೆ
ಹಾಯಬಾರದೆ ಹರಿವುತ್ತಿದೆ.
ಮತ್ತೆಂತಯ್ಯ ಪರಬ್ರಹ್ಮದ ಮಾತು ?
ಇದು ಎನಗೆ ಹೇಸಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ./477
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ?
ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆ
ಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ./478
ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ,
ಅನಲ ನುಂಗಿದ ತಿಲದಂತೆ, ವರುಣನ ಕಿರಣ ಕೊಂಡ ದ್ರವದಂತೆ,
ಇನ್ನೇನನುಪಮಿಸುವೆ ? ಇನ್ನಾರಿಗೆ ಹೇಳುವೆ ?
ನೋಡುವದಕ್ಕೆ ಕಣ್ಣಿಲ್ಲ, ಕೇಳುವದಕ್ಕೆ ಕಿವಿಯಿಲ್ಲ,
ಕೀರ್ತಿಸುವದಕ್ಕೆ ಬಾಯಿಲ್ಲ, ಏನೂ ಎಂಬುದಕ್ಕೆ ತೆರಪಿಲ್ಲ,
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವು./479
ಪಾದತೀರ್ಥವ ಕೊಂಡಲ್ಲಿ ಬ್ರಹ್ಮಂಗೆ ಹೊರಗು.
ಪ್ರಸಾದವ ಕೊಂಡಲ್ಲಿ ವಿಷ್ಣುವಿಂಗೆ ಹೊರಗು.
ಮಹದ ಒಳಗನರಿದಲ್ಲಿ ರುದ್ರಂಗೆ ಹೊರಗು.
ಇಂತೀ ಭಾವಭೇದವನರಿಯದೆ,
ಹುತ್ತವ ಬಡಿದಡೆ ಸರ್ಪ ಸಾಯಬಲ್ಲುದೆ ?
ಭಕ್ತರೆಂದಡೆ ಶಿವನೊಪ್ಪುಗೊಂಬನೆ, ನಿಶ್ಚಟರನಲ್ಲದೆ ?
ನಿಃಕಳಂಕ ಮಲ್ಲಿಕಾರ್ಜುನನವರ ಬಲ್ಲನಾಗಿ ಒಲ್ಲನು./480
ಪಾದೋಕದದಿಂದ ಪದಂ ನಾಸ್ತಿಯಾಗಿರಬೇಕು.
ಲಿಂಗೋದಕದಿಂದ ಅಂಗ ಮಂಗಳಮಯವಾಗಬೇಕು.
ಪ್ರಸಾದೋದಕದಿಂದ ಆತ್ಮಭಾವಕ್ಕೆ ಬೀಜವಿಲ್ಲದಿರಬೇಕು.
ಒಂದನಳಿದು, ಒಂದ ಕಂಡೆಹೆನೆಂದಡೆ,
ತಾವು ತಾವು ನಿಂದಲ್ಲಿಯೆ ನಿರುತರು.
ಎನಗಾ ಉಭಯದ ಬಂಧವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./481
ಪಾದೋದಕ ಪ್ರಸಾದೋದಕ ಲಿಂಗೋದಕಗಳಲ್ಲಿ,
ಕೊಂಬ ಕೊಡುವ ಇಂಬಿಡುವ ಭೇದವನರಿಯಬೇಕು.
ಪಾದೋದಕವ ಲಿಂಗಕ್ಕೆ ಮಜ್ಜನಕ್ಕೆರೆಯಲಿಲ್ಲ.
ಪ್ರಸಾದೋದಕವ ಸೂಸಲಿಲ್ಲ, ಲಿಂಗೋದಕವ ತನ್ನಂಗಕ್ಕೆ ಕೊಳಲಿಲ್ಲ.
ಅದೆಂತೆಂದಡೆ : ಪಾದಕ್ಕೂ ಲಿಂಗಕ್ಕೂ ಸಂಬಂಧವಿಲ್ಲವಾಗಿ,
ಆ ಪ್ರಸಾದೋದಕಕ್ಕೂ ಆತ್ಮಕ್ಕೂ ಸಂಬಂಧವಿಲ್ಲವಾಗಿ,
ಆ ಲಿಂಗೋದಕಕ್ಕೂ ಲಿಂಗಕ್ಕೂ ಸಂಬಂಧವಿಲ್ಲವಾಗಿ.
ಇಂತೀ ತ್ರಿವಿಧಂಗಳಲ್ಲಿ ಕೊಡಬಲ್ಲಡೆ, ಕೊಳಬಲ್ಲಡೆ,
ಆದಿ ಆಧಾರವನರಿತು, ಅನಾದಿ ಪೂರ್ವಯುಕ್ತವ ತಿಳಿದು,
ಗುರುವಾರು ಲಿಂಗವಾರು ಜಂಗಮವಾರೆಂಬುದ ತಿಳಿದು,
ಪೂರ್ವ ಉತ್ತರಂಗಳಲ್ಲಿ ನಿಶ್ಚಯಿಸಿ,
ಪಾದೋದಕವಾರಿಗೆ, ಪ್ರಸಾದೋದಕವಾರಿಗೆ ಲಿಂಗೋದಕವಾರಿಗೆಂಬುದನರಿತು,
ಮರಕ್ಕೆ ನೀರನೆರೆದಲ್ಲಿ ಬೇರಿಗೋ, ಮೇಲಣ ಕೊಂಬಿಗೋ ?
ಎಂಬ ಭೇದವ ಕಂಡು,
ಗುರುಲಿಂಗಜಂಗಮ ಮೂರೊಂದೆನಬೇಕು.
ಹೀಗಲ್ಲದೆ ಕಾಬವರ ಕಂಡು ಏಗೆಯ್ದು ಮಾಡಿದಡೆ,
ಅದು ಭವಭಾರಕ್ಕೊಳಗು, ನಿಃಕಳಂಕ ಮಲ್ಲಿಕಾರ್ಜುನಾ./482
ಪಾದೋದಕ ಮಂಡೆಗೆ ಮಜ್ಜನ, ಪ್ರಸಾದೋದಕ ಜಿಹ್ವಗೆ ಭಾಜನ.
ಲಿಂಗೋದಕ ಅಂಗಕ್ಕೆ ಲೇಪನ.
ಈ ಮೂರು ಮುನ್ನಿನ ಅನಾದಿಯ ಲಿಂಗ ಸೋಂಕು.
ಆದಿಯಿಂದತ್ತ ನೀವೆ ಬಲ್ಲಿರಿ, ನಾನರಿಯೆ,
ನಿಃಕಳಂಕ ಮಲ್ಲಿಕಾರ್ಜುನಾ./483
ಪಾಪ ಪುಣ್ಯವಿಲ್ಲವೆಂದು ನುಡಿವ ಕಾಕರ ಮಾತ ಕೇಳಲಾಗದು.
ಅವರು ಇದಿರಿಗೆ ನಿರಾಶೆಯ ಹೇಳಿ,
ತಾವು ಆಶೆಯೆಂಬ ಪಾಶದಲ್ಲಿ ಕಟ್ಟುವಡೆವ ವೇಷಧಾರಿಗಳ ಕಂಡು,
ನಾಚಿತ್ತೆನ್ನ ಮನ, ನಿಃಕಳಂಕ ಮಲ್ಲಿಕಾರ್ಜುನಾ./484
ಪಾಪ ಪುಣ್ಯವೆಂದು ಹೇಳುವ ಕೂಪರಪ್ಪ ಭಕ್ತರು ಕೇಳಿರಣ್ಣಾ,
ಎನಗೆ ನಾ ಕಾಣದೆ ನಿಂದಿಸುವವನಲ್ಲ, ಕಂಡು ನುಡಿವವಲ್ಲ.
ಅಂದಗಾರಿಕೆಯಲ್ಲಿ ನುಡಿವವನಲ್ಲ.
ಉಂಬಾಗ ಜಂಗಮವೆಂದು, ಸಂಜೆಗೆ ಕಳ್ಳನೆಂದು ಹಿಂಗಿ ನುಡಿವನವನಲ್ಲ.
ವಂದಿಸಿ ನಿಂದಿಸುವ ಸಂದೇಹದವನಲ್ಲ.
ಎನಗೆ ಅಂದಂದಿಗೆ ನೂರಿಪ್ಪತ್ತು ಸಂದಿತ್ತು.
ಎನ್ನ ನಿನ್ನ ಬಂಧವ ಹೇಳಿರಣ್ಣಾ.
ದ್ವಿತೀಯ ಶಂಭು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳು,
ನೀವು ಹೋದ ಹೊಲಬಿನ ಹಾದಿಯಲ್ಲದೆ ಎನಗೊಂದು ಹಾದಿಯಿಲ್ಲ.
ಬೊಂಬೆಗೆ ಸ್ವತಂತ್ರವಿಲ್ಲ, ಆಡಿಸುವ ಸೂತ್ರಧಾರಿಗಲ್ಲದೆ.
ಐದರಲ್ಲಿ ಹುದುಗಿದ, ಇಪ್ಪತ್ತೈದರಲ್ಲಿ ಕೂಡಿದ,
ಒಂದರಲ್ಲಿ ಉಳಿದ, ನಿಜಸಂದಿಯಲ್ಲಿ ನಿಂದು ವಂದನೆಯ ಮಾಡುತ್ತ ಇದ್ದೇನೆ.
ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ./485
ಪಿಂಡ ಪಿಂಡಸ್ಥಲ, ಭಾವ ಭಾವಸ್ಥಲ, ಜ್ಞಾನ ಜ್ಞಾನಸ್ಥಲ.
ಒಂದು ಕೆಂಡದ ಬುಡದಲ್ಲಿ ನಾನಾ ಉರಿ,
ದಿಕ್ಕುದಿಕ್ಕಿನಲ್ಲಿ ಹತ್ತಿ ಬೇವುದ ಕಂಡು ಲಕ್ಷಿಸಿದ ಮತ್ತೆ,
ಒಂದು ಮೂರಾಗಿ, ಮೂರು ಆರಾಗಿ,
ಇಂತೀ ನಾನಾ ಭೇದಂಗಳ ತಾ ಕಂಡ ಮತ್ತೆ,
ಬಾಗಿಲವಳಿ ಹೊಳಹಿನಂತೆ ಎಯ್ದುವುದು ಒಂದೇ ದಾರಿ.
ಆ ಭೇದವನರಿತಲ್ಲಿ, ಅಭೇದ್ಯಮೂರ್ತಿ,
ಏಕಛತ್ರಕ್ಕೆ ನೀವೆ ಅರಸು, ನಿಃಕಳಂಕ ಮಲ್ಲಿಕಾರ್ಜುನಾ./486
ಪಿಂಡ ಪಿಂಡಸ್ಥಲವಾದಲ್ಲಿ ಆತ್ಮನೆರಡುಂಟೆ ?
ಕರಚರಣ ಅವಯವಾದಿಗಳು ಹಲವಲ್ಲದೆ, ಆತ್ಮ ಹಲವುಂಟೆ ?
ಅದು ಏಕರೂಪು ವರುಣನ ಕಿರಣದಂತೆ.
ನಿನ್ನ ನೀ ತಿಳಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ./487
ಪುಷ್ಪಗಂಧದಂತೆ ಪ್ರಾಣಲಿಂಗಭಾವ.
ನೀರು ಗಂಧದಂತೆ ಇಷ್ಟಲಿಂಗಭಾವ.
ಇಂತೀ ನಾಲ್ಕರ ಯೋಗ ಕೂಡಿದಲ್ಲಿ ಶರಣಸ್ಥಲಭಾವ.
ಇಂತೀ ಐದರ ಭಾವವ ಅವಗವಿಸಿ ನಿಂದುದು,
ಐಕ್ಯಸ್ಥಲಂಗೆ ಅವಧಿಗೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./488
ಪೂಜಿಸುವಲ್ಲಿ ಹೂ ನೀರು ಮುಂತಾದ ಷೋಡಶ ಉಪಚರಿಯಕ್ಕೆ ನಿಲ್ಲ.
ವೇದದ ಕಡೆ, ಶಾಸ್ತ್ರದ ಮೊದಲು, ಪುರಾಣದ ಸುದ್ದಿಯ ಸುಮ್ಮಾನಂಗಳಲ್ಲಿ
ವಚನದ ರಚನೆಗೆ ನಿಲ್ಲ, ಮಹಾಜ್ಞಾನಿಗಳಲ್ಲಿಯಲ್ಲದೆ.
ಘಟದಲ್ಲಿ ವೈಭವ, ಆತ್ಮನಲ್ಲಿ ವಿರೋಧ, ಆಚಾರದಲ್ಲಿ ಕರ್ಕಶ.
ಇಂತೀ ನಿಹಿತಾಚಾರಂಗಳಲ್ಲಿ ನಿರತನಾಗಿ,
ಕಾಯಕ ಕರ್ಮ, ಜೀವನ ಭಾವ, ಜ್ಞಾನದ ಒಳಗನರಿಯಬೇಕು,
ನಿಃಕಳಂಕ ಮಲ್ಲಿಕಾರ್ಜುನಾ./489
ಪೂಜೆಯ ಮಾಡುವಲ್ಲಿ, ಪುಣ್ಯವನರಿಯದೆ ಮಾಡಬೇಕು.
ಹೆಣ್ಣು ಹೊನ್ನು ಮಣ್ಣು ಕೊಡುವಲ್ಲಿ, ಹಮ್ಮುಬಿಮ್ಮಿಲ್ಲದಿರಬೇಕು.
ಎರಡು ತಲೆದೋರದೆ, ಒಂದು ನಾಮ ನಷ್ಟವಾಗಿ,
ಇಂತಿವ ಕಳೆದುಳಿದ ಮತ್ತೆ ಹೋದ ಹೊಲಬಿಲ್ಲ.
ಕೊಟ್ಟು ಕೊಂಡೆಹೆನೆಂಬ ಕೊಳುಮಿಡಿಯಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ/490
ಪೂಜೆಯಲ್ಲಿ ಮುಕ್ತನೆಂದು ಜ್ಞಾನವ ಮರೆಯಲಿಲ್ಲ.
ಜ್ಞಾನವನರಿತೆನೆಂದು ಪೂಜೆಯ ಬಿಡಲಿಲ್ಲ.
[ಈ ಉಭಯದ] ಭೇದ, ಬೆಳಗಿನಲ್ಲಿ ಉದಯಿಸಿದ ಕಳೆಯಂತೆ,
ಆ ಕಳೆ ಬೆಳಗನೊಳಕೊಂಡಂತೆ,
ಉಭಯವಿರಹಿತವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನಾ./491
ಪೂಜೆಯಿಂದ ತಾ ಪೂಜ್ಯವಂತನಾದೆಹೆನೆಂದು ಮಾಡುವನ ಇರವು,
ಹೊಲತಿ ತನ್ನ ಹೊಲೆಯ ಮರೆದು,
ಶುದ್ಧನೀರ ಮಿಂದೆನೆಂದು ಕೆಲಬರ ಮುಟ್ಟುವಂತೆ,
ಆ ವಿಧಿ ನಿಮಗಾಯಿತ್ತು.
ತ್ರಿಕರಣಶುದ್ಧವಿಲ್ಲದ ಪೂಜೆ[ಯ]ವರು
ಕೆಟ್ಟ ಕೇಡಿಂಗೆ ಇನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?/492
ಪೂರ್ವತತ್ವ ಬಿಟ್ಟುದು ಭಕ್ತಸ್ಥಲ,
ಮಧ್ಯದ ಭಾವವ ಬಿಟ್ಟುದು ಮಾಹೇಶ್ವರಸ್ಥಲ.
ತ್ರಿವಿಧದ ಕೂಟವ ಬಿಟ್ಟುದು ಪ್ರಸಾದಿಸ್ಥಲ.
ಗಮನ ನಿರ್ಗಮನವ ಬಿಟ್ಟುದು ಪ್ರಾಣಲಿಂಗಿಸ್ಥಲ.
ಶ್ರುತದಲ್ಲಿ ಕೇಳಿ ಕೇಳದಂತೆ, ದೃಷ್ಟದಲ್ಲಿ ಕಂಡು ಕಾಣದಂತೆ,
ಅನುಮಾನದಲ್ಲಿ ಅರಿದು ಅರಿಯದಂತೆ ಇದ್ದುದು ಶರಣಸ್ಥಲ.
ವಿರಳ ಅವಿರಳವೆಂಬ ಸುಳುಹು ಸೂಕ್ಷ್ಮಂಗಳು ನಿಂದಲ್ಲಿ ಐಕ್ಯಸ್ಥಲ.
ಇಂತೀ ಸ್ಥಲಂಗಳಲ್ಲಿ ಸ್ವೀಕರಿಸಿ, ಆರೋಪಿಸಿ,
ಪೂರ್ವಕಕ್ಷೆಯ ಕಂಡು, ಮಧ್ಯದ ಕಕ್ಷೆಯಲ್ಲಿ ನಿಂದು,
ಉತ್ತರರಕ್ಷೆಯ ಕೂಡಿದಲ್ಲಿ,
ಆರುಸ್ಥಲದ ಸೋಂಕಿಲ್ಲ, ಮೂರುಸ್ಥಲದ ಮುಟ್ಟಿಲ್ಲ.
ಬೇರೊಂದು ಸ್ಥಲವೆಂದು ಲಕ್ಷಿಸುವುದಕ್ಕೆ ಗೊತ್ತಿಲ್ಲ.
ಅದು ಉರಿಯ ಬುಡ ತುದಿಯಂತೆ ಕತ್ತುವುದು ಪೂರ್ವವಾಗಿ,
ಮೇಲೆ ಹತ್ತಿ ಉರಿವುದು ಉತ್ತರವಾಗಿ,
ಆ ಉಭಯದ ಗೊತ್ತು ನಿಂದಲ್ಲಿ, ಸ್ಥಲ ನಿಃಸ್ಥಲವಾಯಿತ್ತು.
ನಿಃಕಳಂಕ ಮಲ್ಲಿಕಾರ್ಜುನ ದೃಷ್ಟಕ್ಕೆ ಗೋಚರವಾದನು./493
ಪೂರ್ವಧಾತುವಿನ ಮೋಹ, ಉತ್ತರಧಾತುವಿನ ನಿರ್ಮೊಹ,
ಉಭಯದ ಕಕ್ಷೆಯ ತಿಳಿದು ಅರಿದಲ್ಲಿ,
ಅರಿದು ಮರೆದಲ್ಲಿ, ಮತ್ತೇತರ ದರಿಸಿನ ?
ಇಂತೀ ಗುಣವ ಸಂದೇಹಕ್ಕೆ ಇಕ್ಕಿ, ಬೇರೊಂದರಲ್ಲಿ ನಿಂದು ಕಂಡೆಹೆನೆಂದಡೆ,
ಉಭಯಲಿಂಗದಂಗ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ./494
ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ.
ಪೂರ್ವವನಳಿದುದಕ್ಕೆ ಭವ ಹಿಂಗಬೇಕು.
ಪುನರ್ಜಾತನಾದ ಮತ್ತೆ ಪುನರಪಿ ಇಲ್ಲದಿರಬೇಕು.
ಹೀಂಗಲ್ಲದೆ ಗುರುಕರಜಾತನಾಗಬಾರದು.
ತಾನರಿದು ಸರ್ವೆಂದ್ರಿಯವ ಮರೆದು, ಅಳಿವು ಉಳಿವು ಉಭಯವ ಪರಿದ
ಸುಖನಿಶ್ಚಯ ಜ್ಯೋತಿರ್ಮಯ ಪ್ರಕಾಶಂಗೆ,
ಪಿಂಡದ ಜನ್ಮವ ಕಳೆದುಳಿಯಬೇಕು.
ಹೀಂಗಲ್ಲದೆ ಗುರುಸ್ಥಲ ಇಲ್ಲ.
[ತ್ರಿವಿಧಕ್ಕೋಲು], ಅದಾರಿಗೆ ದೃಷ್ಟ ?
ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ./495
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು ತಲೆದೋರುವುದಕ್ಕೆ ಮುನ್ನವೆ,
ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ,
ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು
ಕುರುಹುಗೊಳ್ಳುವುದಕ್ಕೆ ಮುನ್ನವೆ,
ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ,
ಬ್ರಹ್ಮಾಂಡವೆಲ್ಲಿ ಆಯಿತ್ತು ? ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು ?
ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ?
ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ,
ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ,
ಜೀವ ಪರಮನ ನೆಲೆಯ ಕಂಡೆಹೆನೆಂದು ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ,
ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./496
ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದ
ಹೊಂದುವ, ಹುಟ್ಟುವ ದೇಹದ ಅಂದಗಾರಿಕೆಯಲ್ಲಿ ಬಂದುದನರಿಯ.
ಬಂದಂತೆ ಹಿಂಗಿತೆಂದು ಇರು.
ಮುಂದಣ ನಿಜಲಿಂಗವನರಿಯಾ, ನಿಃಕಳಂಕ ಮಲ್ಲಿಕಾರ್ಜುನಾ./497
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು.
ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ,
ಲಯವಾದ ಮತ್ತೆ ಜಗವಿಲ್ಲವಾಗಿ.
ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು,
ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ,
ತನ್ನಿಂದನ್ಯವಪ್ಪುದೊಂದಿಲ್ಲವಾಗಿ.
ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು.
ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ.
ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ?
ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ?
ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ?
ನೆರೆ ಸತ್ಯನಲ್ಲಿ [ಹಾ]ರುವ ಮ[ನದವನು]ಂಟೆ ?
ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ
ಗುರುವೆಂದರರು, ಲಿಂಗವೆಂದರು, ಜಂಗಮವೆಂದರು.
ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ.
ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ.
ಇಂತೀ ಷಟ್ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ
ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು,
[ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ./498
ಪೃಥ್ವಿ ಅಪ್ಪು, ಅಗ್ನಿಯ ಘಟ.
ವಾಯು ಆಕಾಶ, ಅಗ್ನಿಯ ಪ್ರಾಣ.
ಆ ಅಗ್ನಿ ಜಗದ ಜೀವ.
ಇಂತೀ ಪಂಚತತ್ವವ ಧರಿಸಿ, ಉರಿಲಿಂಗವಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ./499
ಪೃಥ್ವಿ ಅಪ್ಪುವಿನ ಸಂಗದಲ್ಲಿ, ಅನಲ ಅನಿಲವೆಂಬ ಪುತ್ಥಳಿ ಹುಟ್ಟಿತ್ತು.
ಆ ಪುತ್ಥಳಿಯ ಗರ್ಭದಲ್ಲಿ, ಆಕಾಶ ಮಹದಾಕಾಶವೆಂಬ ಕುರುಹುದೋರಿತ್ತು.
ಅದು ನಾದಪೀಠ ಬಿಂದುಲಿಂಗ ಕಳೆ ವಸ್ತುವಾಗಿ, ಹೊಳಹುದೋರುತ್ತದೆ.
ಆ ಹೊಳಹು ಆರುಮೂರಾದ ಭೇದವ ತಿಳಿದು,
ಮೂರು ಏಕವಾದಲ್ಲಿ, ಐಕ್ಯವನರಿತಲ್ಲಿ, ನಾದಬಿಂದುಕಳೆಭೇದವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ./500