Categories
ಶರಣರು / Sharanaru

ಮೋಳಿಗೆ ಮಾರಯ್ಯ

ಅಂಕಿತ: ನಿಃಕಳಂಕ ಮಲ್ಲಿಕಾರ್ಜುನಾ
ಕಾಯಕ: ಕಾಶ್ಮೀರ ದೇಶದ ದೇಶದ ಅರಸ, ರಾಜ್ಯ ತ್ಯಾಗಮಾಡಿ ಕಟ್ಟಿಗೆ ಮಾರುವ ಕಾಯಕ

ಈತ ಕಾಶ್ಮೀರ ದೇಶದ ಅರಸ. ಮೂಲ ಹೆಸರು ಮಹಾದೇವ ಭೂಪಾಲ. ಹೆಂಡತಿ ಗಂಗಾದೇವಿ. ಬಸವಣ್ಣನವರ ಹಿರಿಮೆಯನ್ನು ಕೇಳಿ ರಾಜ್ಯ ತ್ಯಾಗಮಾಡಿ ಇಬ್ಬರೂ ಕಲ್ಯಾಣಕ್ಕೆ ಬರುತ್ತಾರೆ. ಮಾರಯ್ಯ-ಮಹಾದೇವಿ ಹೆಸರಿನಿಂದ ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಂಡು ಶರಣ ಜೀವನ ನಡೆಸುತ್ತಾರೆ. ಇವರ ಕಾಯಕನಿಷ್ಠೆಯ ಕಥೆ ಶೂನ್ಯ ಸಂಪಾದನೆಯ ಒಂದು ಅಧ್ಯಾಯದಲ್ಲಿ ನಿರೂಪಿತವಾಗಿದೆ. ಕಾಲ-೧೧೬೦. ‘ನಿ:ಕಳಂಕ ಮಲ್ಲಿಕಾರ್ಜುನ’ ಅಂಕಿತದಲ್ಲಿ ಈತ ರಚಿಸಿದ ೮೦೮ ವಚನಗಳು ದೊರೆತಿವೆ. ವೈವಿಧ್ಯಮಯ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಅನುಭಾವಿಕ ವಸ್ತು ವಿಷಯಗಳನ್ನೊಳಗೊಂಡ ಅವು ಮಾರಯ್ಯನ ವಿದ್ವತ್ತು, ಆಧ್ಯಾತ್ಮಿಕ ನಿಲುವು, ಅನುಭಾವದ ಎತ್ತರ, ಸಾಮಾಜಿಕ ಕಳಕಳಿ, ಸಾಹಿತ್ಯಿಕ ಶ್ರೀಮಂತಿಕೆಯನ್ನು ಎತ್ತಿ ತೋರುತ್ತವೆ.

ಕಾಶ್ಮೀರ ಸವಾಲಕ್ಷದ ಅರಸನಾಗಿದ್ದ ಈತ ಬಸವಣ್ಣನ ಮಹಿಮೆ ಕೇಳಿ ಕಲ್ಯಾಣಕ್ಕೆ ಬಂದನು. ಅವನ ಅನೇಕ ವಚನಗಳಲ್ಲಿ ಅವನ ಪೂರ್ವ ಜೀವನದ ಸ್ಮೃತಿಗಳು ಇಣಿಕಿ ಹಾಕಿದೆ. ಬಸವಾದಿ ಪ್ರಮಥರನ್ನು ತುಂಬು ಗೌರವದಿಂದ ಸ್ಮರಿಸಿರುವನು. ಈತನ ವಚನಗಳಲ್ಲಿ ಇಷ್ಟಲಿಂಗ, ಸ್ಥಲ-ಹೀಗೆ ಧಾರ್ಮಿಕ ವಿಚಾರಗಳು ನಿರೂಪಿತವಾಗಿದೆ. ಆ ಕಾಲಕ್ಕೆ ಆಧ್ಯರ ವಚನಗಳನ್ನು ನೋಡಿ, ಓದಿ ಹೇಳುವ ಜನರಿದ್ದರು. ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ – ಎಂಬಂತಹ ಇಬ್ಬಂದಿ. ಜನ ಮಾತಿನಲ್ಲಿ ಅದ್ವೈತವನ್ನು ನುಡಿದು ನಡೆಯಲ್ಲಿ ಅಧಮರಾಗಿರುತ್ತಿದ್ದರು. ಮಾತಿನಲ್ಲಿ ಬ್ರಹ್ಮವ ನುಡಿವ ಇಂತಹ ಬ್ರಹ್ಮೇತಿಕಾರರಿಗೆ ಅಷ್ಟಾವರಣಗಳಿಲ್ಲ. ಇಂಥಹವರನ್ನು ಪರಮಾತ್ಮ ಮೆಚ್ಚ ಎಂದಿರುವನು. ಸತಿಪತಿಯಿಬ್ಬರೂ ಏಕವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು ಎಂದು ಸತಿಪತಿಗಳೊಂದಾದ ಭಕ್ತಿಯ ಫಲವನ್ನು ತಿಳಿಸುವನು. ಕಲ್ಯಾಣದ ಕೊನೆದಿನಗಳಲ್ಲಿ ಶರಣರ ಬದುಕು ಅಸ್ತವ್ಯಸ್ತವಾಗಿದ್ದಿತು. ಆ ದಿನಗಳಲ್ಲಿ ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳಿವೆಗೆ, ಪ್ರಭು ಶ್ರೀಶೈಲದ ಕದಳಿಗೆ, ಮಿಕ್ಕಿನ ಶರಣರು ತಮಗೆ ಇಷ್ಟ ಬಂದ ಕಡೆಗೆ ಚದುರಿಹೋದರು. ದಿಕ್ಕು ತಪ್ಪಿದ ಶರಣ ಸಂಘಟನೆಯನ್ನು `ಊರು ಕೆಟ್ಟು ಸೂರೆಮಾಡುವಲ್ಲಿ ಆರಿಗಾರು ಇಲ್ಲ’ ಎನ್ನುವ ಇವನ ಮಾತು ಧ್ವನಿಪೂರ್ಣವಾಗಿ ಹೇಳತ್ತದೆ ಎಲ್ಲರೂ ಹೋದರು ತನದೊಂದು ದಾರಿ ತೋರು ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವ ಇವನ ನೋವಿನ ಸ್ಥಿತಿ ನಮ್ಮ ಅರಿವಿಗೆ ಬರುತ್ತದೆ.

ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಶಿವಾರ್ಚನೆ ಹಾಗೂ ಜಂಗಮ ಸೇವೆ ಮಾಡುವುದು. ನಂತರ ದೇವರ ಪ್ರಸಾದ ಸ್ವೀಕರಿಸಿ ಕಾಡಿಗೆ ತೆರಳುವುದು, ಅಲ್ಲಿ ಕಟ್ಟಿಗೆ ಕಡಿದು ತಂದು ಊರಿನಲ್ಲಿ ಮಾರಿಬಂದ ಹಣದಲ್ಲಿ ದಾಸೋಹ ಮಾಡುವುದು, ಇವರ ಕಾಯಕ. ಮಹಾರಾಜನಾದರೂ ಶ್ರೀಸಾಮಾನ್ಯನಂತೆ ಶರಣರ ಸೇವೆ ಮಾಡುತ್ತಾ ಮಾರಯ್ಯ ದಂಪತಿಗಳು ಮಹಾಶಿವಶರಣರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಬಸವಣ್ಣನವರ ಪ್ರಭಾವದಿಂದ ಮಹಾರಾಜನೊಬ್ಬ ಶಿವಶರಣನಾದ. ಅವರು ಎಲ್ಲಾ ಶರಣರಿಗೂ ಮಾದರಿಯಾದರು. ಈ ಮಾರಯ್ಯನವರ ಗವಿ ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ 12 ಕಿ.ಮೀ. ದೂರದಲ್ಲಿರುವ ಮೋಳಕೇರಿ ಎಂಬ ಗ್ರಾಮದಲ್ಲಿದೆ. ಇವರು ಶತಾಯುಷಿಗಳಾಗಿ ಬದುಕಿದ್ದರು ಎಂದು ಅವರ ವಚನವೊಂದು ಹೇಳುತ್ತದೆ. ಇವರ ಅರ್ಥಗರ್ಭಿತ ವಚನಗಳು ಇಂದು ಸಹ ನಮಗೆ ಸ್ಫೂರ್ತಿಯನ್ನು ತುಂಬುತ್ತವೆ. ಶಿವಶರಣರಲ್ಲಿ ಅಗ್ರಮಾನ್ಯನಾಗಿದ್ದರು. ಇವರ ಆದರ್ಶದ ಬೆಳಕು ಇಡೀ ಮಾನವ ಕುಲಕ್ಕೆ ದಾರಿ ದೀಪವಾಗಿದೆ.