Categories
ವಚನಗಳು / Vachanagalu

ಮೋಳಿಗೆ ಮಹಾದೇವಿಯ ವಚನಗಳು

ಅಂಗಕ್ರಿಯೆಯನರಿವಲ್ಲಿ ಸ್ಥಾಣುವಿನ ಬಾಯ ತಿಲದಂತೆ,
ಆತ್ಮನ ಕಳೆಯ ತಿಳಿವಲ್ಲಿ
ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ,
ಆ ಅರಿವು ಮಹದಲ್ಲಿ ಬೆರಸುವಾಗ,
ವಾರಿಶಿಲೆ ನೋಡ ನೋಡಲಿಕೆ ನೀರಾದಂತೆ ಇರಬೇಕು.
ಕಾಯವಶದಿಂದ ಕರ್ಮವ ಮೀರಿ,
ಕರ್ಮವಶದಿಂದ ವರ್ಮವಶಗತನಾದಲ್ಲಿ,
ಅದೆ ಕಾಯವೆರಸಿ ಎಯ್ದಿದ ಕೈಲಾಸ.
ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ/1
ಅಂಗದ ಲಿಂಗ ಆತ್ಮನಲ್ಲಿ ವೇದಿಸಬೇಕೆಂಬುದಕ್ಕೆ ವಿವರ;
ತಿಲರಾಶಿಯಲ್ಲಿ ಸುಗಂಧದ ಕುಸುಮವ
ದ್ವಂದ್ವವಮಾಡಿ ಕೂಡಿ ಇರಿಸಲಿಕ್ಕಾಗಿ,
ಆ ಗಂಧ ತಿಲದಂಗವ ವೇದಿಸಿ
ಆ ತಿಲರಸವ ಭೇದಿಸಿದಂತೆ ಆಗಬಲ್ಲಡೆ,
ಆ ಲಿಂಗ ಆತ್ಮನಲ್ಲಿ ವೇದಿಸಿಹುದು.
ಕುಸುಮದ ಗಂಧ ಒಳಗಾದುದನು,
ತಿಲದ ಹಿಪ್ಪೆ ಹೊರಗಾದುದನು ಅರಿದು ನಿಶ್ಚಯವ ಕಂಡಲ್ಲಿ,
ಹೊರಗಣ ಪೂಜೆ, ಒಳಗಣ ದಿವ್ಯಪ್ರಕಾಶ,
ವಸ್ತುವಿನ ಭಾವದ ಕೂಟ ಇಷ್ಟಲ್ಲದಿಲ್ಲ.
ಇದ ಮೀರಿ ಕಾಬ ನಿಜಲಿಂಗೈಕ್ಯರು ನೀವೆ ಬಲ್ಲಿರಿ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಮುಳುಗಿದುದೆ ಸಮುದ್ರ./2
ಅಂಗದಲ್ಲಿ ಲಿಂಗ ವೇದಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ,
ಅಂಗಕ್ಕೂ ಪ್ರಾಣಕ್ಕೂ ಲಿಂಗ ವೇದಿಸುವುದಕ್ಕೆ ಹಾದಿಯ ಹೊಲಬು
ಅದಾವ ಠಾವಿನಲ್ಲಿ ವೇದಿಸುವುದು ಹೇಳಯ್ಯಾ ?
ಆ ಅಂಗ ನೀರಬಾಗಿಲ ನೆಲನೆ ? ಮೆಳೆಯ ಸವರಿನ ಹಾದಿಯೆ ?
ಹೋಹ ಹೊಲಬಿನ ಪಥವೆ ?
ಈ ಅಪ್ರಮಾಣವಪ್ಪ ಲಿಂಗವ ಚಿತ್ತದ ಭೇದದಿಂದರಿತು
ಆತ್ಮನ ದೃಷ್ಟದಲ್ಲಿ ಲಕ್ಷಿಸಿ, ಇದಿರಿಟ್ಟು,
ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವ ನಿಕ್ಷೇಪಿಸಿ ಬೈಚಿಟ್ಟಲ್ಲಿ
ಅಂಗಕ್ಕೂ ಪ್ರಾಣಕ್ಕೂ ಬೇರೆಡೆ ಲಿಂಗವಿಪ್ಪುದೆರಡಿಲ್ಲ.
ಇದು ಕ್ರಿಯಾಲೇಪಸ್ಥಲ ಇದು ಸದ್ಭಾವ ಸಂಬಂಧ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./3
ಅದೇತಕೆ ಅಯ್ಯಾ,
ಶಿವನೊಳಗೆ ಕೂಟಸ್ಥನಾದೆಹೆನೆಂಬ ಹಲುಬಾಟ ?
ಇದು ನಿತ್ಯ ಸತ್ಯದ ಆಟವಲ್ಲ
ಇನ್ನಾರಿಗೆ ಕೇಳಿ, ಮತ್ತಿನ್ನಾರಿಗೆ ಹೇಳುವೆ ನೀ ಮಾಡುವ ಮಾಟ ?
ಮುನ್ನ ನೀನಾರೆಂದಿದ್ದೆ ಹೇಳಾ ?
ಆ ಭಾವವನರಿದು ನಿನ್ನ ನೀನೆ ತಿಳಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./4
ಅನಾಚಾರ ಅಳವಟ್ಟು ಗುರುವನರಿಯಬೇಕು.
ಅನಾಮಿಕನಾಗಿ ಲಿಂಗವ ಗ್ರಹಿಸಬೇಕು.
ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು.
ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು
ಇರವಿನಲ್ಲಿ ಇರವನಿಂಬಿಟ್ಟು
ಉರಿ ಎಣ್ಣೆಯ ವೇದಿಸಿ ಉರಿದು ಯೋಗ ನಿಂದಲ್ಲಿ,
ಮಾಡುವ ಕ್ರೀ ಮಾಡಿಸಿಕೊಂಬ ವಸ್ತು ಉಭಯ ನಷ್ಟವಹನ್ನಕ್ಕ
ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಬಿನ್ನಭಾವ.
ಈ ಉಭಯದ ಗನ್ನ ಬೇಡ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ತಲ್ಲೀಯವಾಗಿರು./5
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ
ಎನ್ನಂಗದ ಭಂಗ ಹಿಂಗಿತ್ತು ನೋಡಾ.
ಅಯ್ಯಾ, ನಿಮ್ಮ ಶರಣರ ಸಂಗದಿಂದ
ಮಹಾಲಿಂಗದ ಸಂಯೋಗವಾಯಿತ್ತು ನೋಡಾ.
ಅಯ್ಯಾ, ನಿಮ್ಮ ಶರಣರ ಸಂಗದಿಂದ
ಮಹಾಪ್ರಸಾದದ ಪರುಷವ ಕಂಡೆ,
ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ,
ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ,
ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ.
ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ,
ಕರದವನೆ ನೆರದ, ನೆರದವನೆ ಕುರುಹನರಿದ,
ಅರಿದವನೆ ನಿಮ್ಮನರಿದವ ಕಾಣಾ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./6
ಆರು ದೇವರ ನಿಮ್ಮ ರಿದೆಯಲ್ಲಿ ಇರಿದುಕೊಳ್ಳಿ.
ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ.
ಗುರು ತೋರಿದ್ದು ಒಂದೇ ದೇವರು ಸಾಕು,
ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ./7
ಆರು ಮಣಿಗೆ ದಾರವನೇರಿಸಿ,
ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು.
ಇದು ಆದಿಯ ಕ್ರೀ, ಅನಾದಿಯ ಜ್ಞಾನ.
ಈ ಉಭಯವ ಭೇದಿಸಿದಡೆ ಕುಣಿಕೆಯ ಮಣಿ ತಲಪಿಗೇರಿತ್ತು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಏಕವೆಂದಲ್ಲಿ/8
ಆವ ಬೀಜವ ಬಿತ್ತಿದಡೂ
ಪೃಥ್ವಿಗೆ ಬೇರು, ಬಯಲಿಂಗೆ ಶಾಖೆ ತಲೆದೋರಿ ಬೆಳೆವಂತೆ
ಐಕ್ಯಕ್ಕೆ ಮರೆ, ಕ್ರೀಗೆ ಬಾಹ್ಯ.
ಉಭಯದ ಭೇದವುಳ್ಳನ್ನಕ್ಕ ಭಕ್ತಿಯ ಹೋರಾಟ ಬಿಡದು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಮಣಿಯುಳ್ಳನ್ನಕ್ಕ ಪವಣಿಕೆಯ ಹಂಗು ಬಿಡದು./9
ಇನ್ನೇವೆನಯ್ಯಾ ನಾನು ಕೆಡೆದಿದ್ದೇನೆ.
ಕಾಯವುಳ್ಳನ್ನಕ್ಕ ಕರ್ಮ ಬಿಡದು
ಜೀವವುಳ್ಳನ್ನಕ್ಕ ಪ್ರಕೃತಿ ಕೆಡದು
ಭಾವಿಸಿಹೆನೆಂಬನ್ನಕ್ಕ ವಿಶ್ವಾಸ ಬಿಡದು
ಈ ಉಭಯವುಳ್ಳನ್ನಕ್ಕ ಮನ ನಿನ್ನ ನೆನೆಯಬಿಡದು.
ನೀ ನಷ್ಟವಾದಲ್ಲಿ ಎನ್ನ ಭಾವ ನಷ್ಟ
ಭಾವ ನಷ್ಟವಾದಲ್ಲಿ ಎನ್ನಯ್ಯನಿಲ್ಲ
ನೀನು ಪ್ರಿಯನಲ್ಲದ ಇಮ್ಮಡಿ ದೇವನಲ್ಲ.
ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ
ಎಲ್ಲಿ ಅಡಗಿತ್ತೆಂದರಿಯೆನಲ್ಲ ?/10
ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ
ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು
ಭಾವವೆಂಬ ಕುರುಹ ಮರೆದುದು.
ಇಂತೀ ಉಭಯ ನಿರ್ಭಾವವಾದಲ್ಲಿ
ಇಹಪರವೆಂಬ ಹೊಲಬುಗೆಟ್ಟಿತ್ತು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಒಂದೆಂದಲ್ಲಿ/11
ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ ?
ಅದು ಗಿಡುವಿಡಿದಾದ ಕುಸುಮವೆಂಬುದನರಿದು
ಗಿಡುವಿನ ಹೆಚ್ಚುಗೆ; ಕುಸುಮದ ನಲವು; ಸುಗಂಧದ ಬೆಳೆ.
ಭಕ್ತಿಗೆ ಕ್ರೀ, ಕ್ರೀಗೆ ಶ್ರದ್ಧೆ, ಶ್ರದ್ಧೆಗೆ ಪೂಜೆ, ಪೂಜೆಗೆ ವಿಶ್ವಾಸ,
ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು.
ಇದು ತುರೀಯಭಕ್ತಿಯ ಇರವು
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವ ಮೆಲ್ಲಮೆಲ್ಲನೆ ಕೂಡುವ ಕೂಟ./12
ಊರ್ವಸಿ ಕರ್ಪೂರವ ತಿಂದು
ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರಲ್ಲದೆ,
ಹಂದಿ ಕರ್ಪೂರವ ತಿಂದು
ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರೆ,
ಹುಡುಹುಡು ಎಂದಟ್ಟುವರಲ್ಲದೆ ?
ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರಲ್ಲದೆ,
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರೆ ?
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಆ ಹಂದಿಗಿಂದ ಕರಕಷ್ಟ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./13
ಎನಗೆ ನೀನಿಂಬುಕೊಡುವಲ್ಲಿ,
ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು.
ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೆಪವಾಗು.
ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು.
ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ
ಠಕ್ಕು ಠವಳವ ಬಿಡು.
ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ,
ಜ್ಞಾನಸಿಂಧುಸಂಪೂರ್ಣನಾಗಿ
ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ.
ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./14
ಎಸುವರ ಬಲ್ಲೆ;
ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ.
ಪೂಜಿಸುವವರ ಬಲ್ಲೆ
ಪೂಜಿಸಿದ ಲಿಂಗ ಅಭಿಮುಖವಾಗಿ
ಸರ್ವಾಂಗದಲ್ಲಿ ವೇಧಿಸುವರ ಕಾಣೆ.
ನುಡಿಗೆ ನಡೆ, ಆ ನಡೆಗೆ ನುಡಿ
ಉಭಯವ ವೇಧಿಸುವರ ಕಾಣೆ.
ಈ ಉಭಯವು ಸಿದ್ಧಿಯಾಗಿ ಸಿದ್ಧಾಂತವಾದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ಕ್ರೀಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ./15
ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ಸಹಜ.
ಆ ಸಹಜದಿಂದಾಯಿತ್ತು ಸೃಷ್ಟಿ,
ಸೃಷ್ಟಿಯಿಂದಾಯಿತ್ತು ಸಂಸಾರ,
ಸಂಸಾರದಿಂದಾಯಿತ್ತು ಅಜ್ಞಾನ,
ಅಜ್ಞಾನದಿಂದಾಯಿತ್ತು ಮರವೆ.
ಆ ಮರವೆಯಿಂದವೆ ಜ್ಞಾನರತ್ನವ ಮರೆದು
ತಾಮಸಕ್ಕೊಳಗಾದಲ್ಲಿ ನಾನೀನೆಂಬ ಅಹಂಕಾರ ತಲೆದೋರಿತ್ತು.
ಆ ಅಹಂಕಾರದಿಂದ ಸೀಮೆಗೆಟ್ಟು ದುಷ್ಕರ್ಮಕ್ಕೀಡಾಗಿ
ನೀನೆಂಬುದ ಮರೆದೆನಯ್ಯಾ.
ಇನ್ನು ಕೃಪೆಯಮಾಡು, ಕೃಪೆಯ ಮಾಡು ಶಿವಧೋ ಶಿವಧೋ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./16
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ,
ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ,
ಆ ಸೂತ್ರ ಆ ಪಾಷಾಣವ ಗ್ರಹಿಸಿ,
ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ,
ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ
ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು
ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ
ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು
ಶಿವಪೂಜಕನ ಶಿವಮೂರ್ತಿಧ್ಯಾನ.
ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಲಿಂಗವನರಿವವರಿಗಲ್ಲದೆ ಕಾಣಬಾರದು./17
ಕಪಟಕ್ಕೆ ಒಳಗು ಹೊರಗಲ್ಲದೆ,
ಸ್ವಯಂಭು ಹೇಮಕ್ಕುಂಟೆ ಒಳಗು ಹೊರಗು ?
ಕುಟಿಲದಿಂದ ಘಟವ ಹೊರೆವಂಗೆ ಪ್ರಕಟಪೂಜೆಯಲ್ಲದೆ,
ಅಘಟಿತಂಗುಂಟೆ ಅಖಿಳರ ಮೆಚ್ಚಿನ ಪೂಜೆ ?
ತೃಣದ ತುದಿಯ ಬಿಂದುವಾದಡೂ, ಉದುರಿ ಒಣಗಿದ ಕುಸುಮವಾದಡೂ
ತ್ರಿಕರಣಶುದ್ಧವಾಗಿ ತ್ರಿಗುಣಾತ್ಮನ ಏಕವ ಮಾಡಿ
ತ್ರಿಶಕ್ತಿಯ ಇಚ್ಫೆಯ ಮುಚ್ಚಿ ನಿಶ್ಚಯದಿಂದ ಮಾಡಿ ಮಾಡದಿದ್ದಡೂ
ಮುಟ್ಟಿದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿರಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು,
ಉಭಯ ಲೇಪವಾದ ಕಾರಣ./18
ಕರ್ಮದೊಳಗಣ ಸತ್ಕರ್ಮ, ಮರ್ಮದೊಳಗಣ ನಿಜವರ್ಮ,
ಅರಿವಿನೊಳಗಣ ಅರಿವ, ತೆರಹದೊಳಗಣ ತೆರವ ಕುರುಹಿಟ್ಟು,
ಕುರುಹ ಕುರುಹು ಅವಗವಿಸಿ,
ಅಬಿನ್ನವಿಲ್ಲದೆ ನಿರ್ವಾಹ ನಿರ್ಲೆಪವಾದುದು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ತಾನೆ ಕುರುಹು ಅರಿವಿದನು./19
ಕಲ್ಲ ಬಿತ್ತಿ ನೀರನೆರೆದಲ್ಲಿ
ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ ?
ಶ್ರದ್ಧೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ
ಗುರುಭಕ್ತಿ, ಶಿವಲಿಂಗಪೂಜೆ, ಚರಸೇವೆ
ತ್ರಿವಿಧ ಇತ್ತವೆ ಉಳಿಯಿತ್ತು.
ಮತ್ತೆ ನಿಜವಸ್ತುವಿನ ಸುದ್ದಿ ನಿಮಗೆತ್ತಣದೊ ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು./20
ಕಾಣಿಗೆ ಹೋರಿ ಕಡವರವ ನೀಗಲೇತಕ್ಕೆ ?
ಅಲುಗಾಡಿ ತುಂಬಿದ ಕೊಡನ ಹೊಡೆಗೆಡಹಲೇತಕ್ಕೆ ?
ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ
ಆ ನಿಜಲಿಂಗದ ಸಂಗವನರಿಯದೆ
ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ ?
ತಾ ನಿಂದಲ್ಲಿ ಕೆಡಹಿದ ಒಡವೆಯ, ಆಚೆಯಲ್ಲಿ ನೆನೆದು ಅರಸಿದಡಿಲ್ಲ.
ಅದು ಮತ್ತೆ ತನಗೆ ಸಂದಿಸುವುದೆ ?
ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ
ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./21
ಕಾಯಭ್ರಮೆಯಿಂದ ಕೈಲಾಸ,
ಜೀವಭ್ರಮೆಯಿಂದ ಮಹದ ಕೂಟವೆಂಬುದು.
ಕಾಯದ ಜೀವದ ಭೇದವನರಿತಲ್ಲಿ
ಅತ್ತಲಿತ್ತಲೆಂದು ಮತ್ತೆ ಹಲುಬಲಿಲ್ಲ.
ಇದು ನಿಶ್ಚಯದ ಕೂಟ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./22
ಕಾಯವಿಹನ್ನಕ್ಕ ಕರ್ಮವ ಬಿಟ್ಟ ಪರಿ ಇನ್ನೆಂತೊ ?
ಜೀವವಿಹನ್ನಕ್ಕ ಅರ್ಪಿಸದೆ ತಾನುಂಬ ಪರಿ ಇನ್ನೆಂತೊ ?
ಕೋಳದೊಳಗೆ ಕಾಲಿದ್ದು ಕೋಲಹಿಡಿದು
ಸಾಧನೆಯ ಮಾಡುವನ ತೆರನಂತೆ,
ಕರ್ಮಕಾಂಡಿಯಾಗಿ ತಾನಿರುತ್ತ
ಇದಿರಿಗೆ ವರ್ಮವ ಬೋದಿಸಲೇತಕ್ಕೆ ?
ಇದು ನನ್ನಿಯ ಇರವಲ್ಲ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಅವರಿಗೆ ಅನ್ಯನಾಗಿಪ್ಪನು./23
ಕಾಯವುಳ್ಳನ್ನಕ್ಕ ಲಿಂಗಪೂಜೆ, ಆತ್ಮವುಳ್ಳನ್ನಕ್ಕ ಅರಿವಿನ ಭೇದ.
ಪುರುಷ ನೀ, ಸತಿ ನಾನೆಂಬಲ್ಲಿ
ಉಭಯದ ಬೀಜ ನಾ ನೀನೆಂಬನ್ನಕ್ಕ.
ಅಂಗದ ಲಿಂಗದಲ್ಲಿಯೆ ನಿರಂಗವಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./24
ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು,
ಇದು ಕ್ರಮವಲ್ಲ.
ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ
ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೆ ?
ಹೇಮದ ಮಾಟದ ಒಳಹೊರಗಿನಂತೆ
ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ.
ಆತ್ಮ ನಿಶ್ಚಯವಾದಲ್ಲಿಯೆ ಕೈವಲ್ಯ.
ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು.
ಈ ಗುಣ ಸದಮಲಭಕ್ತನ ಯುಕ್ತಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಿಕ್ಕಿದ ಗೊತ್ತು./25
ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ ?
ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ ?
ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ ?
ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ ?
ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ ?
ಪಟದೊಳಗಣ ಬಾಲಸರಕ್ಕೆ ಪ್ರತಿಸೂತ್ರ ನೇಣುಂಟೆ ?
ನಿಮ್ಮಲ್ಲಿಯೆ ಎನ್ನ ಭಾವಲೇಪ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿಯೆ./26
ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ?
ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ,
ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ?
ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ
ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ?
ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಬಿನ್ನಭಾವವುಂಟೆ ಅಯ್ಯಾ ?
ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ
ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ?
ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ.
ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ.
ಶಕ್ತಿಯ ಮಾತೆಂದು ದಿಕ್ಕರಿಸಬೇಡಿ.
ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ,
ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ./27
ಕೂಟಕ್ಕೆ ಕುರುಹಾದುದನರಿಯದೆ,
ಆತ್ಮಕ್ಕೆ ಅರಿವಾದುದನರಿಯದೆ,
ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ ?
ಅಂಧಕನ ಕೈಯ ರತ್ನದಂತೆ ಆದಿರಲ್ಲಾ ?
ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ ?
ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವದಕ್ಕೆ
ಉಭಯವುಂಟೆಂಬ ದಂದುಗ ಬೇಡ.
ತಾ ನಿಂದಲ್ಲಿಯೆ ನಿಜಕೂಟ,
ತಿಳಿದಲ್ಲಿಯೆ ನಿರಂಗವೆಂಬುದು.
ಉಭಯವಿಲ್ಲ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./28
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ?
ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ?
ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ?
ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ.
ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ,
ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ/29
ಕ್ರಿಯಾಪೂಜೆ ಒಡಲಾದ ಮತ್ತೆ ಪೂಜಿಸಲಿಲ್ಲ.
ಜ್ಞಾನನೇತ್ರ ಮುಸುಕ ತೆಗೆದ ಮತ್ತೆ ಏನುವ ನೋಡಲಿಲ್ಲ.
ಧ್ಯಾನ ನಿಧಾನಿಸಿ ನಿಂದ ಮತ್ತೆ ಏನುವ ನೆನೆಯಲಿಲ್ಲ.
ಈ ಗುಣಗ್ರಾಹಕಗ್ರಹೀತನ ಉಭಯ ಭಾವ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಕ್ರಿಯಾನಿರ್ವಾಹಸ್ಥಲ./30
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ,
ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ
ಅದಕ್ಕೆ ಬಿನ್ನಭಾವವಾವುದು ?
ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು,
ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ
ಪಾಕಪ್ರಯತ್ನ ತಪ್ಪದಾಗಿ.
ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ,
ಒಳಗಣ ಜ್ಞಾನಸಂಬಂಧವುದ ಉಭಯದ ತತ್ತಿಲ್ಲ.
ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ ?
ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು
ಸ್ವಯಾನುಭಾವಸಿದ್ಧನಾದ ಕಾರಣ./31
ಗುರು ಅನಾಚಾರಿ, ಲಿಂಗವು ನೇಮಸ್ಥ, ಜಂಗಮ ದುರಾಚಾರಿ
ಇಂತೀ ತ್ರಿವಿಧ ಭೇದ.
ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯ ಕೂಡಿ,
ತನುವಿಂಗೆ ಕುರುಹು, ಮನಕ್ಕೆ ಅರಿವು, ಅರಿವಿಂಗೆ ನಿಜದನೆಲೆ ಅಹನ್ನಕ್ಕ
ಸೂತಕಸುಳುಹು ಕೆಡದು, ಸರ್ವವ ನೇತಿಗಳೆವ ಮಾತು ಬಿಡದು.
ಇಂತೀ ತ್ರಿವಿಧದ ಭೇದವ ಭೇದಿಸಿ ನಿಂದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ವಿರಳವಿಲ್ಲದ ಅವಿರಳಸಂಬಂದಿ./32
ಗುರುವನರಿದು ಲಿಂಗವನರಿವವರುಂಟು,
ಲಿಂಗವನರಿದು ಜಂಗಮವನರಿವವರುಂಟು,
ಪಂಚಾಚಾರವನರಿದು ಜಂಗಮವನರಿವವರುಂಟು,
ಆ ಜಂಗಮವನರಿದಲ್ಲಿ ಷಟ್ಸ್ಥಲಸಂಬಂಧವಾಯಿತ್ತು.
ಆ ಸಂಬಂಧ ಸಮಯ ನಿಂದು, ಉಭಯವಳಿದು ಏಕವಾದಲ್ಲಿ,
ಹಲವು ನೆಲೆ ತನ್ನ ವಿಶ್ವಾಸದ ಹೊಲಬಿನಲ್ಲಿ ಅಡಗಿತ್ತು.
ಆ ಹೊಲದ ಹೊಲಬಿನಲ್ಲಿ ನಿಂದವಂಗೆ ಇಹಪರವೆಂಬ ಕಲೆ ಇಲ್ಲ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಒಂದೆ ಎಂದಲ್ಲಿ./33
ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆಯುತ್ತಿಹವೆ ?
ಅವು ಸೂತ್ರಾದಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ.
ನಿಮ್ಮ ಭಕ್ತಿಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು.
ಎನಗೆ ಭಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ ?/34
ತನುವಿನ ಮೇಲಿಪ್ಪುದು ಇಷ್ಟಲಿಂಗವೆಂದೆಂಬರು.
ಆತ್ಮನ ನೆನಹಿನಲ್ಲಿಪ್ಪುದು ಪ್ರಾಣಲಿಂಗವೆಂದೆಂಬರು.
ಇಂತೀ ಘಟಕ್ಕೂ ಆತ್ಮಕ್ಕೂ ಉಭಯ ಲಿಂಗವುಂಟೆ ?
ಹೊರಗಳ ಅಸ್ಥಿ ಚರ್ಮಕ್ಕೆ ಬೇರೊಂದು ಅಸುವ ಕಲ್ಪಿಸಬಹುದೆ ?
ಒಳಗಳ ಕರುಳು, ಮಜ್ಜೆ, ಮಾಂಸಕ್ಕೆ ಬೇರೊಂದು ಅಸುವಿನ ಕಲೆಯುಂಟೆ ?
ಇದಕ್ಕೆ ದೃಷ್ಟವ ಕಂಡಡೆ ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ಟುಂಟು.
ಅದು ಅಚೇತನವಪ್ಪ ನಿರವಯಕ್ಕೆ ಅಚೇತನವಪ್ಪುದೊಂದು ದೃಷ್ಟ;
ನಿರವಯ ಸಾವಯವದಲ್ಲಿ ಸಂಬಂದಿಸಿ ಕುರುಹಾದ ಭೇದ.
ಆ ಕಾಯದ ಒಳ ಹೊರಗಿನ ನೋವಿನ ಭೇದದಂತೆ,
ಆ ಉಭಯವನರಿವ ಆತ್ಮ ಒಂದೆಯಾಗಿ,
ಇಂತೀ ಕಾಯದ ಇಷ್ಟವೆಂದು, ಆತ್ಮನ ಅರಿವೆಂದು,
ರಿರಡೆನಿಸುವ ಲಿಂಗವೆಂಬುದೊಂದು ಕುರುಹಿಲ್ಲ.
ಅದು ಏಕ ಏವ ಸ್ವರೂಪುದ ಅದು ಚಿದ್ಘನ ಸ್ವರೂಪುದ
ಅದು ಘಟಮಠದ ಬಯಲಿನ ಗರ್ಭದಂತೆ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು
ಅತ್ಯತಿಷ್ಠದ್ದಶಾಂಗುಲನಾಗಿಪ್ಪನು./35
ತನ್ನ ಕಣ್ಣಿಂದ ಕನ್ನಡಿಯ ನೋಡಿ,
ಆ ದೃಷ್ಟಿ ಕಾಣಲಿಕ್ಕೆ ಕಣ್ಣೊ ? ಕನ್ನಡಿಯೊ ?
ಆ ಉಭಯದ ದೃಷ್ಟಿಯಿಂದ ಇಷ್ಟದ ದೃಷ್ಟವ ಕಂಡು,
ಉಭಯ ನಿಶ್ಚಯವಾದಲ್ಲಿ ಕೈವಲ್ಯವೆಂಬ ಕರ್ಕಶ ಬೇಡ.
ಕೈಯ ಮುದ್ದೆಯ ಕೆಡಹಿದಲ್ಲಿ ಬಾಯಿಗೆ ಬಯಲು,
ಅದ ನಿಮ್ಮ ನೀವೇ ತಿಳಿದುಕೊಳ್ಳಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./36
ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ.
ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪ ಥಭಾವಿಯಲ್ಲ.
ತ್ರಿಸಂಧ್ಯಾಕಾಲಂಗಳಲ್ಲಿ ಉಚಿತ ವೇಳೆಯನರಿತು
ರಾಜಸ ತಾಮಸಂಗಳಿಲ್ಲದೆ ಪರಸೇವೆ ನಿಶ್ಚಯವಂತನಾಗಿ,
ಅನಲ ಅಹಿ ವ್ಯಾಘ್ರ ಚೋರ ರಾಜಭಯ ಮುಂತಾದುವೆಲ್ಲವ
ಲಿಂಗ ಕರಸ್ಥಲಕ್ಕೆ ಬಂದಿರಲಿಕ್ಕಾಗಿ,
ಆ ಲಿಂಗದ ಮೂರ್ತಿ ಮನಸ್ಥಲದಲ್ಲಿ ನಿರತಿಶಯದಿಂದ ನಿಂದಿರಲಿಕ್ಕಾಗಿ,
ಇಂತೀ ಭಾವಂಗಳೆಲ್ಲವು ಮೂರ್ಛೆಯಲ್ಲಿ ಮೂರ್ತಿಗೊಂಡು
ಅಮೂರ್ತಿಯಪ್ಪ ವಸ್ತು ಬಿನ್ನಭೇದವಿಲ್ಲದೆ
ಸ್ವಯ ಕ್ರಿಯಾಪೂಜೆ ಸರ್ವಜ್ಞಾನ ಸಂತೋಷ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಕ್ರಿಯಾಸಂಭವಕೂಟ./37
ದುಕೂಲ ಮುಂತಾದ ವಸ್ತ್ರಂಗಳಲ್ಲಿ,
ಹೇಮ ಮುಂತಾದ ಆಭರಣಂಗಳಲ್ಲಿ,
ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ,
ಚಂದನ ಗಂಧ ಮುಂತಾದ ಸುವಾಸನೆಯಲ್ಲಿ,
ಅಂದಳ ಛತ್ರ ಚಾಮರ ಕರಿ ತುರಗಂಗಳು ಮುಂತಾದ
ತಾನು ಸೋಂಕುವ ವೈಭವ ಮುಂತಾದ
ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ,
ಅಂಗೀಕರಿಸುವವನಿರವು ವಾರಿಶಿಲೆ ನೋಡನೋಡಲಿಕ್ಕೆ ನೀರಾದ ತೆರದಂತೆ,
ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ
ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು.
ಇದು ಲಿಂಗಭೋಗೋಪಭೋಗಿಯ ಸಂಗದ ಸುಖ,
ನಿರಂಗದ ನಿಶ್ಚಯ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗದಲ್ಲಿ
ವಿರಳವಿಲ್ಲದ ಪರಮಸುಖ./38
ನಿಚ್ಚಣಿಕೆಯನೇರಿ ತೆಗೆವುದಕ್ಕೆ
ಮುಂದೊಂದಟ್ಟಳೆಯಲ್ಲಿ ಬಯಕೆ ಲಕ್ಷಿಸಿದ್ದಿತ್ತು.
ಬಯಕೆಯುಳ್ಳನ್ನಕ್ಕ ನಿಚ್ಚಣಿಕೆಯನೆತ್ತುತ್ತ ಇಳುಹುತ್ತ
ಈ ಕೃತ್ಯದಲ್ಲಿ ಸಾಯಲಾರೆ.
ಎನ್ನಯ್ಯಾ, ಎನಗೊಂದು ಗೊತ್ತ ತೋರಾ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./39
ನಿಮಿತ್ತಲಗ್ನ ಮಾಯಾಮರುವಡಿ ಬೇಳುವೆಮೂಲಿಕೆಯಿಂದ
ಕಡೆಯೆ ನಿನ್ನ ಇರವು ?
ನೀನೆ ಗತಿಯೆಂದು ಅಚರ್ಿಸುವವರಲ್ಲಿ,
ನೀನೆ ಮತಿಯೆಂದು ನೆನೆವವರಲ್ಲಿ,
ನೀನಲ್ಲದೆ ಪೆರತೊಂದನರಿಯದವರಲ್ಲಿ,
ನೀನಿರದಿದ್ದಡೆ ನಿನಗದೆ ವಿಶ್ವಾಸಘಾತಕ, ನಿನಗದೆ ಪಾತಕ.
ನಿನ್ನ ಗುಣವ ನಾನಿನ್ನರಿದು ಮುಟ್ಟಿದೆನಾದಡೆ, ಪಂಚಮಹಾಪಾತಕ.
ಇದಕ್ಕೆ ದೃಷ್ಟಯಥ ಬೀಜಃ ತಥಾಂಕುರ’ದಂತೆ.
ಅದು ನಿನ್ನ ಗುಣ ಎನ್ನಲ್ಲಿ ಸುಳಿದ ಸುಳಿವು.
ಅದು ಬೀಜದ ನಷ್ಟ:ಫಲಕ್ಕೆ ಮೊದಲಿಲ್ಲ.
ಎನ್ನ ನಿನ್ನ ಮಾತಿನ ಬಳಕೆ ಬೇಡ;
ಎನ್ನಲ್ಲಿ ಸನ್ನದ್ಭನಾಗಿರು
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./40
ನಿರಂಜನೆ ರಂಜಿಸಲುಂಟೆ ?
ನಿಜ ನಿಶ್ಚೈಸಿದಲ್ಲಿ ಸಂಗಕ್ಕೆ ಒಳಗಪ್ಪುದೆ ?
ಈ ಸುಗುಣದಂಗವ ತಿಳಿದು ಲಿಂಗ ಆತ್ಮನಲ್ಲಿ ಸಂಗವಾಗಿ
ಆತ್ಮ ಲಿಂಗದಲ್ಲಿ ಮೂರ್ಛೆಗತವಾದ ಮತ್ತೆ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬ
ಸೊಲ್ಲೇಕೆ ಉಡುಗದು ?/41
ನೀರಿನ ಮೇಲೆ ಧರೆ ಹೊರೆಯಾಗಿ
ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ,
ಬೀಜದ ಸಾರ ಬಲಿದು ಬೀಜವಾಗಿ
ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ,
ನಿರವಯವಸ್ತು ಕುರುಹಾಗಿ
ಆ ಕುರುಹಿಂಗೆ ತಾನರಿವಾಗಿ ಭಾವಿಸಿಕೊಂಬಂತೆ,
ದರ್ಪಣದಲ್ಲಿ ತನ್ನೊಪ್ಪವ ಕಾಣಿಸಿಕೊಂಬ ದೃಕ್ಕು
ದರ್ಪಣದಿಂದೆಂದಡೆ ನಿಶ್ಚಯವಲ್ಲ;
ದೃಕ್ಕಿನಿಂದೆಂದಡೆ ಇದಿರಿಟ್ಟು ಲಕ್ಷಿಸಬೇಕು.
ಇದು ಬಿನ್ನವಲ್ಲ, ಅಬಿನ್ನವಲ್ಲದ ಕ್ರಿಯೆಯಲ್ಲ, ನಿಃಕ್ರಿಯೆಯಲ್ಲದ
ಇದು ಬಿನ್ನವಲ್ಲ, ನಿರ್ಭಾವವಲ್ಲ.
ಅಹುದು ಅಲ್ಲವೆಂಬ ಸಂದೇಹ ಸಂದಿಸಿ ನಿಂದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ಸ್ವಯವಾದ ಸಂಬಂಧಸ್ಥಲ./42
ನೀರು ನೆಲನಿಲ್ಲದೆ ಇರಬಹುದೆ ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೆ ?
ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ ?
ಇಂತೀ ಕ್ರೀಜ್ಞಾನ ಸಂಬಂಧಸ್ಥಲಭಾವ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಉಭಯಸ್ಥಲಭೇದ./43
ನುಡಿದ ನುಡಿಯೆಲ್ಲವು ಮಹಾಪ್ರಸಂಗವಾದ ಮತ್ತೆ
ಲೆಕ್ಕವಿಲ್ಲದ ವೇದ, ಸಂಖ್ಯೆಯಿಲ್ಲದ ಶಾಸ್ತ್ರ,
ಕಡೆ ನಡು ಮೊದಲಿಲ್ಲದ ಪುರಾಣವನೋದಲೇತಕ್ಕೆ ?
ಅಲಗು ಮರೆ ಉಳ್ಳವಂಗೆ ಶಸ್ತ್ರದ ಭಯವೇತಕ್ಕೆ ?
ಬಾಣದ ತೊಗಲುಳ್ಳವಂಗೆ ಅಂಬಿನ ಘಾಯವೇತಕ್ಕೆ ?
ಶಬ್ದಮುಗ್ಧವಾದವಂಗೆ ಇಚ್ಫೆಯ ನುಡಿದು ಕುಚಿತ್ತನಾಗಲೇಕೆ ?
ಅದು ತನ್ನ ಸ್ವಯದಿಂದ ಅಲ್ಲ ಅಹುದೆಂಬುದಕ್ಕೆ ದೃಷ್ಟವಾಯಿತ್ತು.
ಬೆಳಗಿನ ಮುಖದಿಂದ ಬೆಳಗಿನ ಕಳೆಯನರಿವಂತೆ
ನಿನ್ನಿಂದ ನೀನೇ ತಿಳಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ ಭಿನ್ನಭಾವವಿಲ್ಲದೆ/44
ಪೂಜಿಸಿ ಕಂಡೆಹೆನೆಂದಡೆ, ಆ ಪೂಜೆಗೆ ತನ್ಮಯಮೂರ್ತಿ ನೀನು.
ನೆನಹಿನಲ್ಲಿ ಅನುಕರಿಸಿ ಕಂಡೆಹೆನೆಂದಡೆ
ಆ ನೆನಹಿಂಗೆ ಆತ್ಮಸ್ವರೂಪ ನೀನು.
ಎಲ್ಲಾ ಎಡೆಯಲ್ಲಿ ಭಿನ್ನವ ಮಾಡಿ ಕಂಡೆಹೆನೆಂದಡೆ,
ಅಣೋರಣೀಯಾನ್ ಮಹತೋ ಮಹೀಯಾನ್ ನೀನು.
ಸತ್ಯವೆಲ್ಲಿದ್ದಿತ್ತು ಅಲ್ಲಿ ತಪ್ಪದೆ ಇಪ್ಪೆ ನೀನು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
ವಿಶ್ವಾಸವೆಲ್ಲಿಪ್ಪುದೊ ಅಲ್ಲಿ ತಪ್ಪದೆ ಇಪ್ಪೆ ನೀನು./45
ಪೂಜಿಸುವವರ ಕಂಡವರ ಕಂಡು,
ಆ ಗುಣವ ತಾ ಕೈಕೊಂಡು ಪೂಜಿಸದೆ
ವಾಗಬ್ಬ್ರಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ,
ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ಭವಾದ ನುಡಿ,
ಇಂತೀ ಉಭಯಸ್ಥಲಗೂಡಿ,
ಕ್ಷೀರ ನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆ ಕೂಡಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./46
ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು.
ದಾಸೋಹವೆಂಬ ಸೋಹವನರಿದಲ್ಲಿ
ಚತುರ್ವಿಧಫಲಪದದಾಸೆಗೆ ಒಡಲು.
ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ,
ಅವನಾರೈದು ಗುರುವಿಂಗೆ ತನು ಹೋಯಿತ್ತು
ಲಿಂಗಕ್ಕೆ ಮನ ಹೋಯಿತ್ತು
ಜಂಗಮಕ್ಕೆ ಧನ ಹೋಯಿತ್ತು.
ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ,
ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./47
ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು
ಶಿಲೆ ಲೋಹ ಕಂಚುಗಳಲ್ಲಿ ಬೆಳಗಿನ ಕಳೆ ತೋರುವಂತೆ,
ಎನ್ನ ಕರತಳದಲ್ಲಿ ಸ್ವಯಂಭುವಪ್ಪ ಲಿಂಗವೆ,
ನಿನ್ನ ಕಳೆ ಎನ್ನ ಕಂಗಳಿಗೆ ಹೊಲಬಾಗಿ ಏಕೆ ತೋರದು ?
ಅದು ಎನ್ನದು ಜಡವೊ ನಿನ್ನಯ ಪ್ರಕೃತಿಯೊ ?
ಅದು ನಿನ್ನ ಬಿನ್ನಾಣದ ಗನ್ನದ ಭೇದವೊ ?
ಎನ್ನಲ್ಲಿ ನೀನಿಲ್ಲದ ಕಾರಣವೊ ?
ನಾ ನಿನ್ನಲ್ಲಿ ಸುಗುಣವಿಲ್ಲದ ಕಾರಣವೊ
ಎನಗೆ ಬಿನ್ನನಾದೆ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ನೀ ಸನ್ನದ್ಧನಾಗಿರು./48
ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು.
ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು.
ಸವಿದ ಸವಿಯನುಪಮಿಸಬಾರದೆಂದಡೆ
ಜಿಹ್ವೆಯಿಂದ ಕುರುಹುಗೊಂಡಿತ್ತು.
ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ,
ನಾನಾ ಭೇದಂಗಳಿಂದ ರುಚಿಮಯವಾಯಿತ್ತು.
ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು,
ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ
ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ?
ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ
ಕುರುಹುಗೊಂಡಿತ್ತೆ ?
ಇದು ಕ್ರೀ ಜ್ಞಾನ ಸಂಪುಟಸ್ಥಲ.
ಈ ಉಭಯಸ್ಥಲ ಲೇಪವಾದ ಮತ್ತೆ
ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?/49
ಬಿಡುವುದಕ್ಕೆ ಮುನ್ನವೆ ಮೊನೆ ಮುಂಚಿದಂತಿರಬೇಕು.
ಅಡಿ ಏರುವುದಕ್ಕೆ ಮುನ್ನವೆ ಆ ಮೊನೆಯ ಜಾರಿ,
ಮತ್ತೆ ತಾನಡಿಯೇರಿ ಮೀರಿ ಮುಂಚಿದಂತಿರಬೇಕು.
ನೀನೆಂಬನ್ನಕ್ಕ ಲಕ್ಷ್ಯದಲ್ಲಿ ಅಲಕ್ಷ್ಯವಾಗಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಎಂಬುದಕ್ಕೆ ಮುನ್ನವೆ ?/50
ಬಿತ್ತಿದ ಬಿತ್ತು, ಪೃಥ್ವಿಯ ಕೂಟ ಅಪ್ಪುವಿನ ದ್ರವದಿಂದ
ಮಸ್ತಕ ಒಡೆವುದಲ್ಲದೆ,
ಉಷ್ಣದ ಡಾವರಕ್ಕೆ, ಬೆಂಕಿಯ ಬೇಗೆಗೆ ಮಸ್ತಕ ಒಡೆವುದುಂಟೆ ?
ಲಿಂಗವು ಭಕ್ತಿಯ ಶ್ರದ್ಧೆಗೆ, ವಿಶ್ವಾಸದ ಸುಸಂಗಿಗೆ,
ನಿಶ್ಚಯವಪ್ಪ ಲಿಂಗಿಗೆ ದೃಷ್ಟವಪ್ಪುದಲ್ಲದೆ,
ಉನ್ಮತ್ತವಪ್ಪ ವಿಶ್ವಾಸಘಾತಕಂಗೆ, ವಂದಿಸಿ ನಿಂದಿಸುವಂಗೆ,
ಹಿಂದೆ ಮುಂದೆ ಬಂದುದ ಬಾಯ್ಗಿಡುವವಂಗೆ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಸಂದಿಸನವಗೆ/51
ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ?
ಸಸಿಯೊಳಗಣ ಲತೆ ಪರ್ಣ ತಲೆದೋರದ
ನಸುಗಂಪಿನ ಕುಸುಮವ ಅದಾರು ಮುಡಿವರು ?
ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಇದು ಸ್ವಾನುಭಾವಿಯ ಸನ್ನದ್ಧಸ್ಥಲ./52
ಭಕ್ತಂಗೆ ಭಕ್ತಸ್ಥಲವಲ್ಲದೆ ಮಾಹೇಶ್ವರಸ್ಥಲದಲ್ಲಿ ನಿಲ್ಲ
ಮಾಹೇಶ್ವರಂಗೆ ಮಾಹೇಶ್ವರಸ್ಥಲವಲ್ಲದೆ ಪ್ರಸಾದಿಸ್ಥಲದಲ್ಲಿ ನಿಲ್ಲ
ಪ್ರಸಾದಿಗೆ ಪ್ರಸಾದಿಸ್ಥಲವಲ್ಲದೆ ಪ್ರಾಣಲಿಂಗಿಸ್ಥಲದಲ್ಲಿ ನಿಲ್ಲ
ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲವಲ್ಲದೆ ಶರಣಸ್ಥಲದಲ್ಲಿ ನಿಲ್ಲ
ಶರಣಂಗೆ ಶರಣಸ್ಥಲವಲ್ಲದೆ ಐಕ್ಯಸ್ಥಲದಲ್ಲಿ ನಿಲ್ಲ
ಐಕ್ಯಂಗೆ ಐಕ್ಯಸ್ಥಲವಲ್ಲದೆ ಮಹಾಬೆಳಗಿನ ಕಳೆಗೆ ನಿಲುಕ.
ಅದು ಪೂರ್ಣಭಾವ ಪರಿಪೂರ್ಣವಾಗಿಪ್ಪುದು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು
ಭಕ್ತಿಕಾರಣವಾಗಿ ಸ್ಥಲಂಗಳಿಗೆ ಗೊತ್ತಾದ ಭೇದ./53
ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ನೈಷ್ಠೆ, ಪ್ರಸಾದಿಗೆ ಅಯೋಚಿತ,
ಪ್ರಾಣಲಿಂಗಿಗೆ ಮುಟ್ಟಿದಲ್ಲಿ ಅರ್ಪಿತಭೇದ,
ಶರಣಂಗೆ ದೃಷ್ಟದಲ್ಲಿ ಮುನ್ನವೆ ಬಿಡುಗಡೆ,
ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳ.
ಇಂತೀ ಷಟ್ಸ್ಥಲವಾದ ಭೇದ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು
ಎನಗೆ ಉಮಾಮಹೇಶ್ವರನಾದಹನೆಂದು./54
ಮಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ಜಗಭರಿತ ನೀನು
ಹೊನ್ನನಿತ್ತು ನಿಮ್ಮ ಕಂಡೆಹೆನೆಂದಡೆ ಹಿರಣ್ಯಮೂರ್ತಿ ನೀನು
ಹೆಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ತ್ರಿವಿಧಶಕ್ತಿಮೂರ್ತಿ ನೀನು
ಮನವನಿತ್ತು ನಿಮ್ಮ ಕಂಡೆಹೆನೆಂದಡೆ ಮನೋಮೂರ್ತಿ ನೀನು
ಎನಗೇನು ನಿನಗಿತ್ತು ಕಾಬ ಕಾಣಿಕೆ, ನೀನು ಸಿಕ್ಕುವುದಕ್ಕೆ ?
ಕ್ರೀಯಲ್ಲಿ ನಿರತ, ಸದ್ಭಾವದಲ್ಲಿ ಶುದ್ಧ,
ಹಿಡಿದುದ ಬಿಡದೆ, ಬಿಟ್ಟುದ ಹಿಡಿಯದೆ,
ನಿಶ್ಚಯವಾದ ನಿಜಜ್ಞಾನಿಗಳಲ್ಲಿ ಬೆಚ್ಚಂತಿದ್ದಡೆ ನೀನು ಅಲ್ಲಿ ತಪ್ಪದಿಪ್ಪೆ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./55
ಮನೆಯಲ್ಲಿ ವೀರ ದಿರ
ರಣದಲ್ಲಿ ಓಸರಿಸಿದ ಮತ್ತೆ ಭಾಷೆಯ ಬಂಟನಲ್ಲ.
ನೀ ಬಂದ ದೇಶ, ನೀ ಮಾಡುವ ಮಾಟ
ನೀ ಪ್ರಮ ಥರೆಲ್ಲರ ಹಂಗಿಸುವ ನಿರಂಗವಾಚಕನ
ಕೂಡಿಹೆನೆಂಬ ಸಂದಿಯಲ್ಲಿಯೇ ನಿಂದಿತ್ತು ನಿಜಲಿಂಗದಕೂಟ.
ಆ ಸುಸಂಗವ ನಿನ್ನ ನೀನೆ ನೋಡಿಕೊ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./56
ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿ.
ಭಾಷೆಗೆ ತಪ್ಪಿ ಓಸರಿಸಿದ ಮತ್ತೆ ಅನಿಹಿತವ ಹೇಳಿದಲ್ಲಿ
ಮತ್ತೆ ಘಾತಕತನದಿಂದ ಎಯ್ದಿಹೆನೆಂಬುದು ಭಕ್ತಿಗೆ ವಿಹಿತವಲ್ಲ.
ದೃಷ್ಟದಲ್ಲಿ ಕೊಟ್ಟುದ ಲಕ್ಷಿಸಲರಿಯದೆ,
ಅಲಕ್ಷ್ಯವ ಲಕ್ಷಿಸಿ ಕಾಂಬುದಕ್ಕೆ ಲಕ್ಷ್ಯವೇನು ?
ಅದು ನಿರೀಕ್ಷಣೆಯ ಲಕ್ಷ್ಯದಿಂದಲ್ಲದೆ, ಆತ್ಮಂಗೆ ಲಕ್ಷ್ಯವಿಲ್ಲ.
ಇಂತೀ ಉಭಯದಲ್ಲಿ ಲಕ್ಷಿತವಾದವಂಗೆ ಮರ್ತ್ಯ ಕೈಲಾಸವೆಂಬುದುದ
ತನ್ನರಿವು ನಿಶ್ಚಯವಾದಲ್ಲಿ ಅದೆ ಲಕ್ಷ್ಯ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಅಲ್ಲಿ ಇಲ್ಲಿ ರಿಲ್ಲಿಯೂ ತಾನೆ./57
ಮೃತ್ತಿಕೆಯ ತಿಟ್ಟದಿಂದ ಮಯಣದ ಕರುವಿಟ್ಟು,
ಆ ಘಟವ ಲಕ್ಷಿಸಲಿಕ್ಕಾಗಿ,
ಪುನರಪಿಯಾಗಿ ಮೃತ್ತಿಕೆಯ ಬಲಿದು
ಈ ಉಭಯದ ಮಧ್ಯದಲ್ಲಿ ನಿಂದ ತಿಟ್ಟದಂತೆ
ಇಂತೀ ತ್ರಿವಿಧ ಜಾರಿ ಉಳುಮೆ ಒಂದೆ ನಿಂದುದನರಿದು,
ಭಕ್ತಿಯ ಮರೆಯಲ್ಲಿದ್ದ ಸತ್ಯ,
ಸತ್ಯದ ಮರೆಯಲ್ಲಿ ವಿಶ್ರಮಿಸಿದ್ದ ಜ್ಞಾನ,
ಜ್ಞಾನವ ವಿಶ್ರಮಿಸಿಕೊಂಡಿಹ ಶಿವಲಿಂಗಮೂರ್ತಿಧ್ಯಾನ,
ಅದು ತದ್ಧ್ಯಾನವಾಗಲಿಕ್ಕಾಗಿ, ಅದು ನಿಜದ ಉಳುಮೆದ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಸಾವಧಾನಿಯ ಸಂಬಂಧ./58
ಲಿಂಗಭೋಗೋಪಭೋಗಿ ಎಂದು ತಾ ಮುನ್ನ ಬಿಟ್ಟುದ ಮುಟ್ಟಬಹುದೆ ?
ತನ್ನ ಸುಖಕ್ಕೆ ತಾ ಭೋಗಿಸಿ ಲಿಂಗಮುಂತಾಗಿ ಕೂಡಿದೆನೆನಬಹುದೆ ?
ಲಿಂಗದಂಗವನರಿದು ತಾ ಕೂಡಬಲ್ಲಡೆ
ತನ್ನ ಇಂದ್ರಿಯಗಳ ಇಚ್ಫೆ ಉಂಟೆ ?
ತಾ ಕದ್ದ ಕಳವ ಪರಿಹರಿಸಿಕೊಳಲರಿಯದೆ,
ಇದಿರ ್ಫನೀವು ಬನ್ನಿ ರಿಂದು ಕರೆವ ಕದ್ದೆಹಕಾರನಂತೆ.
ಈ ದ್ವಯ ಇದಿರಿಡಬಾರದ ಕುರುಹು.
ಲಿಂಗಭೋಗೋಪಭೋಗಿ ತಾನಾದಡೆ
ಉರಿಗೂಡಿಯೆ ಕರಗುವ ಕರ್ಪೂರದ ಇರವಿನಂತೆ ಇರಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ
ಸಂಗಗೂಡಿ ಸುಖಿಸುವ ಲಿಂಗಾಂಗಿಯ ಇರವು./59
ಶಿವಪೂಜಾಲಂಬನ ಕರ್ಮ ಕ್ರೀ, ದಾಸಿ ಕೊಡನ ಹೊತ್ತಂತೆ;
ಶೇಷನ ಚಮತ್ಕಾರ ಭೇದದಂತೆ
ತತ್ಕಾಲದಲ್ಲಿ ಬಂದ ಗುರುವಿನಿಂದ ಜಂಗಮವ ಲಿಂಗದಲ್ಲಿ ವಿಶ್ರಮಿಸಿ,
ಮನದಲ್ಲಿ ಮುಯ್ಯಾಂತು, ಕಂಗಳ ದೃಷ್ಟಿಯಿಂದ ವಂದಿಸಿ,
ಲಿಂಗಾನುಭಾವಿಗಳ ಅವರಂಗವಳಿದು ಮೂರ್ತಿಗೊಳಿಸಿ,
ಶರಣತತಿಗಳಿಂದ ಕರಣಂಗಳ ನಿವಾರಿಸಿ
ಇಂತಪ್ಪ ಕ್ರಿಯಾಪೂಜೆ ಬಾಹ್ಯದ ಶ್ರದ್ಭೆ,
ಜ್ಞಾನದ ಬೆಳಗು, ಸ್ವಾನುಭಾವ ಸನ್ನದ್ಧ.
ಇಂತೀ ಕ್ರಿಯಾ ಸಾತ್ವಿಕ ನಿರ್ಧಾರವಾದಲ್ಲಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನನರಸಿ
ತೊಳಲಿ ಬಳಲಲಿಲ್ಲ./60
ಷಡುರುಚಿಯನರಿವನ್ನಕ್ಕ ಬೇಟದ ಚುನ್ನ ಬಿಡದು.
ಬೇಟ ಬಲಿದ ಮತ್ತೆ ಕೂಟಕ್ಕೆ ಸಮೀಪ.
ಸಂಭೋಗದ ಸುಖ ಮೈಯುಂಡವಂಗೆ,
ಲೋಕದ ನಚ್ಚು ಮಚ್ಚಿನ ಬಲೆದೊಡಕು ತಪ್ಪದು.
ಇನಿತುಳ್ಳನ್ನಕ್ಕ ನಿರಂಗ ನಾನೆಂಬ ಮಾತು ಸಟೆ.
ಇನಿತುಳ್ಳ ಅನಂಗಸಂಗಿಗಳಿಗೆ ಭಕ್ತಿ ವಿರಕ್ತಿ ಎಲ್ಲಿಯದೊ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?/61
ಸಂದಿಂದಲುದಯಿಸಿದಸಾರಸಂಗ
ಸುಖವೆ ದುಃಖವೆಂದರಿಯದೆ,
ಆ ಸುಖವನೆ ಮೆಚ್ಚಿ ಭವದುಃಖವೆಂಬ
ಕ್ರೂರ ಜನ್ಮಚಕ್ರಕ್ಕೀಡಾಗಿ,
ಅಲ್ಲಿ ತನ್ನ ಮರೆದು, ತನಗಿಲ್ಲದುದ ಭ್ರಮೆಯಿಂದ ತನ್ನದೆಂದು,
ಅಂತಪ್ಪ ಭವಫ್ಸೊರ ನರಕದೊಳಾಳುತ್ತ ಮುಳುಗಾಡುತಿಪ್ಪ
ಅಜ್ಞಾನಿಜೀವಿಗಳು ನಿಮ್ಮನೆತ್ತಬಲ್ಲರಯ್ಯಾ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?/62
ಸಕಲ ಸ್ಥಾವರ ಚರ ಘಟಪಟಾದಿಗಳೆಲ್ಲವು ಪೃಥ್ವಿಯಿಂದವೆ ಜನನ,
ಪೃಥ್ವಿಯ ಉತ್ಕೃಷ್ಟದಿಂದವೆ ಮರಣವೆಂಬುದನರಿತಲ್ಲಿ,
ಕರ್ಮಕ್ರೀ ವರ್ಮವ ಬಲ್ಲವ.
ಸರ್ವಚೇತನ ಭೌತಿಕಕ್ಕೆಲ್ಲಕ್ಕೂ ಅಪ್ಪುವಿನಿಂದವೆ ಉತ್ಪತ್ಯ,
ಅಪ್ಪುವಿನ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ,
ಜೀವನದ ಆಗುಚೇಗೆಯ ಬಲ್ಲವ.
ಸರ್ವದೀಪ್ತಿ ಪ್ರಕಾಶ ತೇಜಸ್ಸು ಅಗ್ನಿಯಿಂದವೆ ಉತ್ಪತ್ಯ,
ಅಗ್ನಿಯ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ,
ಪರಮಪ್ರಕಾಶ ಬಲ್ಲವ.
ಸರ್ವಗೃಹೀತವಾಗಿ ಸುಳಿವ ಮಾರುತ ಫ್ಸೊಷ ವಾಯುವಿನಿಂದವೆ ಉತ್ಪತ್ಯ,
ವಾಯುವಿನ ಉತ್ಕೃಷ್ಟದಿಂದವೆ ಲಯವೆಂಬುದನರಿದಲ್ಲಿ
ದಿವ್ಯಜ್ಞಾನ ಬಲ್ಲವ.
ಆಕಾಶ ಮಹದಾಕಾಶದಿಂದವೆ ಉತ್ಪತ್ಯ,
ಮಹದಾಕಾಶ ಮಹದೊಡಗೂಡಿದಲ್ಲಿ
ಪಂಚಭೌತಿಕ ನಷ್ಟವೆಂಬುದನರಿದು
ಈ ಪಂಚಭೌತಿಕದ ತನು,
ಸಂಚಿತ ಪ್ರಾರಬ್ಧ ಆಗಾಮಿಗಳ ಕಂಡು,
ಸಂಚಿತವೆ ಉತ್ಪತ್ಯ, ಪ್ರಾರಬ್ಧವೆ ಸ್ಥಿತಿ,
ಆಗಾಮಿಯೆ ಲಯವೆಂಬುದ ತಿಳಿದು,
ಇಂತಿವರೊಳಗಾದ ಸಂಚದಲ್ಲಿ ಸಂಬಂದಿಸಿಪ್ಪ
ಸರ್ವೆಂದ್ರಿಯದ ಗೊಂಚಲು ಮುರಿದು ನಿಂದ ಸ್ವಯಾನುಭಾವಿಗೆ
ಕಾಯಕ್ಕೆ ಕರ್ಮವೆಂಬುದಿಲ್ಲ,
ಜ್ಞಾನಕ್ಕೆ ಇದಿರೆಡೆಯೆಂಬ ಕೂಟದ ಭಾವ ನಷ್ಟ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು./63
ಸಕಲದಲ್ಲಿ ಅಳಿದು ನಿಃಕಲದಲ್ಲಿ ಉಳಿದ ಮತ್ತೆ,
ಸಕಲವ ಕೂಡಿಹೆನೆಂಬ ನಿಃಕಲವುಂಟೆ ಅಯ್ಯಾ ?
ನಿಃಕಲದೊಳಗೆ ಸಕಲವಡಗಿ,
ಆ ಗುಣ ಉಪದೃಷ್ಟಕ್ಕೆ ಈಡಿಲ್ಲದಲ್ಲಿ,
ಅಖಿಲಜಗವೆಂಬುದು ಹೊರಗು.
ಆ ಗುಣ ನಿನ್ನ ಸದ್ಭಾವಬೀಜವಾದಲ್ಲಿ ನಿನ್ನಂಗವೆ ಕೈಲಾಸತ
ಆ ಲಿಂಗದ ಕೂಟವೆ ನಿರ್ಯಾಣ.
ಇದು ನಿಸ್ಸಂಗದ ಸಂಗದ ನಿಮ್ಮ ನೀವೇ ತಿಳಿದುಕೊಳ್ಳಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./64
ಸುಗಂಧದ ಮೂಲದ ಬೇರಿನ ಗಂಧ
ಎಲೆ ಬಳ್ಳಿಯನೇತಕ್ಕೆ ವೇದಿಸದು ?
ಕುಸುಮದ ಸುವಾಸನೆ
ತನ್ನಯ ತೊಟ್ಟು ಎಲೆ ಕೊನರು ಬೇರುವನೇಕೆ ವೇದಿಸದು ?
ಇದು ಇಷ್ಟ ಪ್ರಾಣಯೋಗದ ಭೇದ.
ಗಿಡುಗಿಡುವಿಗೆ ಕುರುಹಲ್ಲದೆ
ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ,
ಕದಂಬಗಂಧವಲ್ಲದೆ
ಒಂದರ ಗಂಧವೆಂದು ಸಂದಿಸಿ ತೆಗೆಯಲಿಲ್ಲ.
ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪರು.
ಇದು ದೃಷ್ಟಾನುಭಾವಸಿದ್ಧಿ,
ಸರ್ವಸ್ಥಲಭೇದ,
ವಿಶ್ವತೋಮುಖರೂಪು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ತತ್ವಬಿತ್ತಿಸ್ವರೂಪನು./65
ಸುಮನ ಸುಬುದ್ಧಿ ಭಕ್ತಿಸ್ಥಲ.
ಮಲ ಅಮಲ ಮಹೇಶ್ವರಸ್ಥಲ.
ಅಜ್ಞಾನ ಸುಜ್ಞಾನ ಪ್ರಸಾದಿಸ್ಥಲ.
ಉಭಯ ಕೂಟಸ್ಥವೆಂಬುದ ಪರಿಹರಿಸಿದಲ್ಲಿ ಪ್ರಾಣಲಿಂಗಿಸ್ಥಲ.
ಸ್ತುತಿ ನಿಂದ್ಯಾದಿಗಳಲ್ಲಿ ಒಡಲಳಿದುನಿಂದುದು ಶರಣಸ್ಥಲ.
ಇಂತೀ ಪಂಚಭೇದಂಗಳ ಸಂಚವನರಿತು ವಿಸಂಚವಿಲ್ಲದೆ,
ಪರುಷ ಪಾಷಾಣದಂತೆ ಬಿನ್ನಭಾವವಿಲ್ಲದೆ
ಅರಿದರುಹಿಸಿಕೊಂಬ ಕುರುಹು ಏಕವಾದಲ್ಲಿ ಐಕ್ಯಸ್ಥಲ.
ಎನ್ನಯ್ಯಾ, ಎನ್ನ ನಿನ್ನ ಷಟ್ಸ್ಥಲ
ಇದಕ್ಕೆ ಬಿನ್ನಭಾವವಿಲ್ಲ.
ಅದು ಎನ್ನ ನಿನ್ನ ಕೂಟದ ಸುಖದಂತೆ.
ಇದ ಚೆನ್ನಾಗಿ ತಿಳಿದು ನೋಡಿಕೊಳ್ಳಿ.
ಅಲ್ಲಿ ಇಲ್ಲಿ ಎಂಬ ಗೆಲ್ಲಗೂಳಿತನ ಬೇಡ
ಹಾಗೆಂಬಲ್ಲಿಯೆ ಬಯಲಾಗಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./66
ಸ್ಥಾಣು ನರನೆಂದು, ರಜ್ಜು ಸರ್ಪನೆಂದು,
ಸ್ಫಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ಧಿಸಿ ನೋಡಲಿಕ್ಕಾಗಿ,
ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ ?
ಈ ಸಂದೇಹ ನಿವೃತ್ತಿಯಾದಲ್ಲಿ
ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ.
ರಿನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./67
ಸ್ವಯವಿದ್ದಂತೆ
ಲಯವ ಕೂಡುವರೆ ಅಯ್ಯಾ ?
ಪರುಷವಿದ್ದಂತೆ
ಹೇಮವನರಸುವರೆ ಅಯ್ಯಾ ?
ಸ್ವಯಂಜ್ಯೋತಿಯಿದ್ದಂತೆ
ದೀಪವನರಸುವರೆ ಅಯ್ಯಾ ?
ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಬಿನ್ನವ ಹೇಳಯ್ಯಾ ?
ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು
ಆ ಬಿನ್ನಭಾವದಂತೆ ಆದಿರಲ್ಲಾ ?
ಅದು ನಿಮ್ಮ ಗುಣವಲ್ಲ, ಎನ್ನ ಗುಣ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ./68
ಹೃತ್ಕಮಲಮಧ್ಯದಲ್ಲಿಪ್ಪ ಲಿಂಗವ ಸರ್ವಾಂಗದಲ್ಲಿ ವೇದಿಸಿ,
ಪರಿಪೂರ್ಣವಪ್ಪ ಲಿಂಗವ
ಅಂತರ್ಮುಖದಿಂದ ಬಹಿರ್ಮುಖಕ್ಕೆ ತಂದು,
ಪಂಚಸ್ಥಾನದಲ್ಲಿಪ್ಪ ಲಿಂಗವ ಕರಸ್ಥಲದಲ್ಲಿ
ಮೂರ್ತಿಗೊಳಿಸಲಿಕ್ಕಾಗಿ,
ಕಂಗಳು ತುಂಬಿ, ಬಾಹ್ಯದೃಷ್ಟಿಯರತು,
ಲಿಂಗದೃಷ್ಟಿ ಪರಿಪೂರ್ಣವಾಗಿ,
ದೃಕ್ಕಿಂಗೆ ತೋರುವುದೆಲ್ಲವೂ ಲಿಂಗಮಯವಾಗಿ,
ಏನ ಮುಟ್ಟಿ ಹಿಡಿದಡೆಯೂ ಪುಷ್ಪಮಯವಾಗಿ,
ಜಿಹ್ವೆಯಲ್ಲಿ ತೋರುವ ಅಪ್ಪುರಸ
ಮುಂತಾದುವೆಲ್ಲವು ಅರ್ಪಿತಮಯವಾಗಿ,
ಇಂತಪ್ಪ ವ್ಯವಧಾನ ಸರ್ವಾಂಗಲಿಂಗಿಯ ಅವಧಾನ.
ಇಷ್ಟದ ಅರಿವೆಂದು ಉಭಯದ ಗುಟ್ಟು ಕೆಟ್ಟಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬುದಕ್ಕೆ
ಇದಿರೆಡೆಯಿಲ್ಲ./69
ಹೇಮದ ಬೆಂಬಳಿಯ ಸ್ವರೂಪದಂತೆ,
ಗ್ರಾಮದ ಬೆಂಬಳಿಯ ಬಟ್ಟೆಯಂತೆ.
ಹೇಮದ ರೂಪವಳಿದು ಸ್ವರೂಪವಡಗಿದಲ್ಲಿ
ಕುಶಲಚಿತ್ರವೆಲ್ಲಿದ್ದಿತ್ತು ?
ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ,
ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು.
ಇದು ದೃಷ್ಟಕ್ಕೆ ಕೊಟ್ಟ ಇಷ್ಟ
ಆ ಇಷ್ಟ ಚಿತ್ತದಲ್ಲಿ ಅಚ್ಚೊತ್ತಿದ ಮತ್ತೆ, ಆ ನಿಶ್ಚಯ ಉಭಯವ ತಿಳಿದಲ್ಲಿ,
ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ.
ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ./70