Categories
ವಚನಗಳು / Vachanagalu

ವಿಶ್ವಪತಿ ವಿಶ್ವನಾಥನ ವಚನಗಳು ##

1359
ತನುವಿನಲ್ಲಿ ವೇಷವನಾರು ಧರಿಸರು?
ಪಟದಲ್ಲಿರದೆ ವೇಷ? ಘಟದಲ್ಲಿರದೆ ವೇಷ?
ಕೊಂಬಿನಲ್ಲಿರದೆ ವೇಷ? ಅಂಬರದಲ್ಲಿರದೆ ವೇಷ?
ವೇಶಿಯಲ್ಲಿರದೆ ವೇಷ? ಮೇಘದಲ್ಲಿರದೆ ವೇಷ?
ಇವು ರಾಶಿಯ ದೈವವಲ್ಲದೆ,
ಪರಮನ ವೇಷ ಕಾವಿಯಲಿಲ್ಲ,
ಜಡೆ ಮುಡಿ ಬೋಳಿನಲಿಲ್ಲ, ವಿಶ್ವಪತಿ ವಿಶ್ವನಾಥಾ.
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)

125
ಎನ್ನ ಕಾಮದ ಕಳೆಯ ಕಳೆಯಯ್ಯ ಸಿದ್ಧರಾಮಯ್ಯ.
ಎನ್ನ ಕ್ರೋಧದ ಕೊನರ ಚಿವುಟಯ್ಯ ಚೆನ್ನಬಸವಣ್ಣ .
ಎನ್ನ ಲೋಭದ ಬಲೆಯ ಹರಿಯಯ್ಯ ಪ್ರಭುದೇವ.
ಎನ್ನ ಮೋಹದ ಮುಂದ ಬಿಡಿಸಯ್ಯ ಸಂಗನಬಸವಣ್ಣ.
ಎನ್ನ ಮದಕ್ಕೆ ಮಾವತಿಗನಾಗಿ ಬಾರಯ್ಯ ಮಡಿವಾಳಯ್ಯ.
ಎನ್ನ ಮಚ್ಚರಕಿಚ್ಚ ಸುಟ್ಟು ನಿಮ್ಮಲ್ಲೆನ್ನ ಅಚ್ಚೊತ್ತಿದಂತಿರಿಸಯ್ಯಾ
ಮಹಾಘನ ಶಾಂತಮಲ್ಲಿಕಾರ್ಜುನಲಿಂಗವೆ.

126
ಎನ್ನ ತನು ಬಸವಣ್ಣನಲ್ಲಿ ಅಡಗಿತ್ತು.
ಎನ್ನ ಮನ ಚೆನ್ನಬಸವಣ್ಣನಲ್ಲಿ ಅಡಗಿತ್ತು.
ಎನ್ನ ಪ್ರಾಣ ಪ್ರಭುದೇವರಲ್ಲಿ ಅಡಗಿತ್ತು.
ಎನ್ನ ಸರ್ವಾಂಗದ ಸಕಲಕರಣಂಗಳೆಲ್ಲವು
ನಿಮ್ಮ ಶರಣರ ಶ್ರೀಪಾದದಲ್ಲಿ ಅಡಗಿದವು
ಮಹಾಘನ ಶಾಂತಮಲ್ಲಿಕಾರ್ಜುನ.

127
ಚೊಕ್ಕ ಭೋಜನಕಂಪಿತವಾದ ತಂದೆಯನು,
ತನ್ನ ಸಾಗಿಸಿ ಸಾಕಿದವ್ವೆಯನು,
ತನ್ನಲ್ಲಿ ಮೆಚ್ಚಿಯಚ್ಚೊತ್ತಿಹ ಬೆಚ್ಚಳನು,
ಇಚ್ಛೆಗಿಚ್ಛೆಯ ಬಿಟ್ಟು ಪರಜಂಗಮವಾಗಿ ನಿಂದ ಬಳಿಕ
ಆ ಚೊಕ್ಕಭೋಜನ ತನಗಿಲ್ಲದಿರಬೇಕು,
ಆ ತಂದೆಗೆ ತಪ್ಪಿರಬೇಕು, ಆ ತಾಯಿಗೆ ಸಂದಿಸದಿರಬೇಕು.
ಹೆಂಡತಿಗೆ ಮನವಿಕ್ಕದಿರಬೇಕು.
ಇಂತಾದಾತನೆ
ಪರಮಪ್ರಭು ಶಾಂತಮಲ್ಲಿಕಾರ್ಜುನದೇವರು ತಾನೇ ಕಾಣಾ
ಲಜ್ಚೆಗೆಟ್ಟ ನಿರ್ಲಜ್ಜನಾದ ಶರಣ.

128
ಪರಿಪೂರ್ಣ ನಿತ್ಯನಿರಂಜನ ನಿರವಯಲಿಂಗದೊಳು
ಸಮರಸೈಕ್ಯವನೆಯ್ದಿಸಿ,
ಘನಕ್ಕೆ ಘನವೇದ್ಯವಾದ ಬಳಿಕ
ಅರಿವೆಂಬುದಿಲ್ಲ , ಮರಹೆಂಬುದಿಲ್ಲ.
ಕೂಡಿದೆನೆಂಬುದಿಲ್ಲ , ಅಗಲಿದೆನೆಂಬುದಿಲ್ಲ.
ಕಂಡೆನೆಂಬುದಿಲ್ಲ , ಕಾಣೆನೆಂಬುದಿಲ್ಲ.
ಸಂಗನಿಸ್ಸಂಗವೆಂಬುದಿಲ್ಲ.
ಶೂನ್ಯ ನಿಶ್ಶೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ.
ಇಂತಿವೇನೂಯೇನೂ ಇಲ್ಲದೆ ಶಬ್ದಮುಗ್ಧವಾಗಿ
ಭ್ರಮರ ಚಂಪಕದೊಡಗೂಡಿದಂತೆ,
ಉರಿಯೊಳಡಗಿದ ಕರ್ಪುರದಂತೆ,
ಕ್ಷೀರದೊಳು ಬೆರೆದ ಸಲಿಲದಂತೆ,
ಅಂಬುಧಿಯೊಳಡಗಿದ ಆಲಿಕಲ್ಲಿನಂತೆ,
ನಾನೀನೆಂಬೆರಡಳಿದ ಘನಸುಖವನೇನೆಂದುಪಮಿಸುವೆನಯ್ಯ
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ !

129
ಶರಣಾರ್ಥಿ ಶರಣಾರ್ಥಿ ಸಿದ್ಧರಾಮಯ್ಯಾ.
ಶರಣಾರ್ಥಿ ಶರಣಾರ್ಥಿ ಚೆನ್ನಬಸವಣ್ಣಾ.
ಶರಣಾರ್ಥಿ ಶರಣಾರ್ಥಿ ಪ್ರಭುದೇವಾ.
ಶರಣಾರ್ಥಿ ಶರಣಾರ್ಥಿ ಸಂಗನಬಸವಣ್ಣಾ.
ಶರಣಾರ್ಥಿ ಶರಣಾರ್ಥಿ ಅಜಗಣ್ಣಯ್ಯ.
ಶರಣಾರ್ಥಿ ಶರಣಾರ್ಥಿ ಮುಕ್ತಾಯವ್ವಾ.
ಶರಣಾರ್ಥಿ ಶರಣಾರ್ಥಿ
ಮಹಾಘನ ಶಾಂತಮಲ್ಲಿಕಾರ್ಜುನಲಿಂಗವ ತೋರಿದ
ಮಹಾಗಣಂಗಳ ಶ್ರೀಪಾದಕ್ಕೆ ಶರಣಾರ್ಥಿ ಶರಣಾರ್ಥಿ
ನಮೋ ನಮೋ ಎನುತಿರ್ದೆನಯ್ಯಾ.

130
ಜಂಗಮವೆಂತವನೆಂದಡೆ : ನಿಜಸ್ವರೂಪವಾದಾತನೀಗ ಜಂಗಮ.
ಅಧೀನವುಳ್ಳಾತನು ಅಲ್ಲ, ಅಧೀನವಿಲ್ಲದಾತನು ಅಲ್ಲ.
ಸಾಕಾರನು ಅಲ್ಲ, ನಿರಾಕಾರನು ಅಲ್ಲ.
ಶಾಂತನು ಅಲ್ಲ, ಕ್ರೋಧಿಯು ಅಲ್ಲ.
ಕಾಮಿಯು ಅಲ್ಲ , ನಿಷ್ಕಾಮಿಯು ಅಲ್ಲ.
ಖಂಡಿತನು ಅಲ್ಲ , ಅಖಂಡಿತನು ಅಲ್ಲ.
ದ್ವೈತಾದ್ವೈತವನುಳಿದು ದ್ವಂದ್ವಾತೀತನಾಗಿ
ನಿಜಗುರು ಶಾಂತಮಲ್ಲಿಕಾರ್ಜುನ ತಾನಾದ ಜಂಗಮ.

131
ಶರಣಂಗಾಧಾರವಿಲ್ಲ ;
ಶರಣ ತಾನೆಲ್ಲವಕ್ಕಾಲಯವಾದ.
ಶರಣಂಗಿಹವಿಲ್ಲ, ಪರವಿಲ್ಲ.
ಎಂತಿರ್ದಂತೆ ಪರಬ್ರಹ್ಮವು ತಾನೇ
ನಿಜಗುರು ಶಾಂತಮಲ್ಲೇಶ್ವರಾ ನಿಮ್ಮ ಶರಣನು.

##: ಈ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.