Categories
ವಚನಗಳು / Vachanagalu

ವಚನಭಂಡಾರಿ ಶಾಂತರಸ ವಚನಗಳು

ಅಂಗ ಕೋಟೆ, ಭುಜ ಆಳುವೇರಿ, ತಲೆ ತೆನೆ, ಕಣ್ಣು ಅಂಬುಗಂಡಿ,
ಕಾದುವ ಅರಸು ಅಸುರಾಜ, ಕೂಟದ ಮನ್ನೆಯರು ಐದುಮಂದಿ.
ಎಂಟು ಘಟೆಯಾನೆ, ಪಂಚವಿಂಶತಿ ಕುದುರೆ,
ಆಳು ಪರಿವಾರ ಕರಣಂಗಳ ಮೊತ್ತ ಕೂಡಿ ಇರಿಯಿತ್ತು.
ಅರಿರಾಜ ತಮವಿರೋಧಿಯೊಡನೆ ಮುರಿದ,
ಅಸುರಾಜ, ಪಶುಪತಿಯ ಗೆದ್ದ.
ಎನಗಾಯಿತ್ತು ಹೇಳಾ, ಅಲೇಖನಾದ ಶೂನ್ಯ ಕಲ್ಲಿನೊಳಗಾದನೆ./1
ಅಗೆಯದ ಬಾವಿಯಲ್ಲಿ ಸಲೆಯಿಲ್ಲದ ನೀರದೆ.
ಸೇದುವುದಕ್ಕೆ ಉರಿಯಿಲ್ಲದ ಕಣ್ಣಿ , ತುಂಬುವುದಕ್ಕೆ ಬಾಯಿಲ್ಲದ ಕುಂಭ,
ಸೇದುವಾತನ ಕಣ್ಣು ತಲೆಯ ಹಿಂದೆ ಅದೆ.
ಕಣ್ಣಿಯ ತೆಗೆವ ಕೈಕಾಲಿಲ್ಲದೆ ಬಾವಿಯ ತಡಿ ತಡವಾಯಿತ್ತು ,
ಅಲೇಖನಾದ ಶೂನ್ಯ ಕಲ್ಲಿನೊಳಗಾದ ಕಾರಣ./2
ಅಯ್ಯಾ ಗುರುವೆಂಬರ್ಚಕನು ತಂದು,
ಎನಗಿಷ್ಟವ ಕಟ್ಟಲಿಕೆ,
ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು.
ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು,
ಲಿಖಿತವ ಲೇಖನವ ಮಾಡಿ ಮಾಡಿ ದಣಿದು,
ಹಂಗನೂಲ ಹರಿದು ಹಾಕಿದೆನು.
ಇಷ್ಟವನಿಲ್ಲಿಯೇ ಇಟ್ಟೆನು.
ಅಯ್ಯಾ ನಾ ಹಿಡಿದ ನೀಲಕಂಠನು
ಶಕ್ತಿ ಸಮೇತವ ಬಿಟ್ಟನು,
ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು,
ನಿರ್ವಚನವಾಯಿತ್ತು .
ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು.
ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು,
ನಾದ ಶೂನ್ಯವಾಯಿತ್ತು
ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು
ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ./3
ಅಲ್ಲಿ ಇಲ್ಲಿ ಎಂಬುದಕ್ಕೆ ಎಲ್ಲಿಯೂ ನೀನೆ.
ಬಳ್ಳಿ ಚಿಗಿತು ಮರನ ನೆಮ್ಮಿ ಎಲ್ಲವ ಮುಸುಕಿದಂತೆ,
ಮೂಲದ ಇರವನರಿತು, ಸಲಹಿದಡೆಲ್ಲಕ್ಕೂ ಕಳೆ ಬಂದು ಬುಡವಾದಡೆ,
ಆ ಬಳ್ಳಿಯ ಕೊಯಿದಡೆ, ಎಲ್ಲವೂ ಒಣಗುವಂತೆ ನಿನ್ನ ಕಳೆ.
ಅನ್ಯಭಿನ್ನವಿಲ್ಲದೆ ಕಾಮ್ಯಾರ್ಥಕ್ಕೆ ಒಲವರವಾಗಿ ಎಲ್ಲಿಯೂ ನೀನೆ.
ಅಲೇಖನಾದ ಶೂನ್ಯ ಕಲ್ಲಿಂದ ತೊಲಗು,
ನಿನ್ನಯ ಇರವಿನ ಪರಿಯ ತೋರಾ./4
ಅಹಿ ಆಹಾರವ ಕೊಂಬಲ್ಲಿ, ತನ್ನಯ ನಂಜ ಮರೆಯಿಸಿಕೊಂಬುದಲ್ಲದೆ,
ತಾನೊಂದರಲ್ಲಿ ಉದಯಿಸಿಹ ಬಿಂದುವಿನಲ್ಲಿ,
ಭಕ್ತರ ಮಂದಿರದಲ್ಲಿ ಒಪ್ಪಿಹ, ಗುರುಜಂಗಮದಲ್ಲಿ ಇರವಿನ ಪರಿ.
ಹರಿಹರಿ ಕೂಡಿದಂತೆ ಅಲೇಖನಾದ ಶೂನ್ಯ ಕಲ್ಲಿಂದ ಬಲ್ಲಿದನಾದೆ ಬಾ./5
ಆಡಿನ ಕೋಡಿನ ತುದಿಯ ಇಂಬಿನಲ್ಲಿ
ಮೂರು ತೋಳನ ಅಗಡ ಘನವಾಯಿತ್ತು.
ಬೇಟೆಯ ಬೆಂಬಳಿಗೆ ಸಿಕ್ಕವು, ನಾಯ ತೋಟಿಗೆ ತೊಡಕವು,
ಹಿಂಡಿನ ಗೊಂದಳದಲ್ಲಿ ಹೊಕ್ಕು ಆಡ ತಿಂದಹವು.
ಆಡ ಕೂಡುವ ಕಳನಿಲ್ಲ, ತೋಳನ ಬಾಧೆ ಬಿಡದು.
ಕೋಳುಹೋಗದ ಮುನ್ನವೆ ಅರಿ,
ಅಲೇಖನಾದ ಶೂನ್ಯ ಕಲ್ಲಿನೊಳಗಾದವನ./6
ಆತ್ಮ ನಿಸ್ಸಂಗತ್ವದ ಇರವು : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚತತ್ವದ ಮಧ್ಯದಲ್ಲಿ ಪುದಿದಿಪ್ಪ ಆತ್ಮನ ಒಡೆಯನನರಿವಾಗ,
ಪೃಥ್ವಿ ಪೃಥ್ವಿಯ ಕೂಡಿತ್ತು, ಅಪ್ಪು ಅಪ್ಪುವ ಕೂಡಿತ್ತು.
ತೇಜ ತೇಜವ ಕೂಡಿತ್ತು, ವಾಯು ವಾಯುವ ಕೂಡಿತ್ತು.
ಆಕಾಶ ಆಕಾಶವ ಕೂಡಿತ್ತು.
ಆ ಪಂಚತತ್ವವು ಒಂದರೊಳಗೊಂದು ಕೂಡಿದಲ್ಲಿ,
ಆತ್ಮನ ಪಾಪ ಪುಣ್ಯವಾವುದು ?
ಬೇರೊಂದು ಠಾವಿನಲ್ಲಿ ನಿಂದು ಅರಿವ ತೆರನಾವುದು ?
ಅದರ ಕುರುಹು ಕೇಳಿಹರೆಂದು
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !/7
ಆದಿ ಅನಾದಿಯ ಮಧ್ಯದ ಭೂಮಿಯಲೊಂದು ಸಾಗರ ಹುಟ್ಟಿತ್ತು.
ಸಾಗರದ ನಡುವೆ ಒಂದು ಸಲಿಲ, ಸಲಿಲದ ಮೇಲೊಂದು ನಿಳಯ.
ನಿಳಯದೊಳಗೊಬ್ಬ ಸೂಳೆ.
ಯೋನಿಯೆಂಟು, ಮೊಲೆ ಮೂರು, ತಲೆಯಾರು, ಕೈ ಐದು, ಕಾಲೊಂದು.
ಇಂತೀ ನಟನೆಯಲ್ಲಿ ಆಡುತ್ತಿರಲಾಗಿ, ನೋಡಿದವ ಮನಸೋತು
ಕೂಡಿಹೆನೆಂದಡೆ,
ಕೂಡಬಾರದು ಯೋನಿಯೆಂಟಾದವಳ.
ಹಿಡಿವಡೆ ಮೊಲೆ ಕೂರಲಗು, ಚುಂಬನಕ್ಕೆ ಅಧರ ನಂಜು, ತೆಕ್ಕೆಗೆ ಅಳವಲ್ಲ.
ಇದು ಎನಗೆ ಸುಖಕ್ಕಚ್ಚುಗವೆಂದು ಬೆಚ್ಚಿದೆ.
ಇವಳ ಕೂಟ ಒಚ್ಚತ ಬೇಡ,
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ./8
ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ.
ನೋಯಿಸದೆ ಕಾಬುದಕ್ಕೆ ಆರಡಿಯಲ್ಲ.
ನೋಯದೆ ಕೊಂಬುದಕ್ಕೆ ಪಿಪೀಲಿಕನಲ್ಲ, ಬಂಧಿಸಿ ಕಾಬುದಕ್ಕೆ ಚಂದನ ಶಿಲೆಯಲ್ಲ.
ಭಕ್ತಿಯೆಂಬ ಅಂಗದ ಸತಿ ನಾನಾಗಿ,
ವಿರಕ್ತಿಯೆಂಬ ಘನಲಿಂಗದ ಕೂಟಪುರುಷ ನೀನಾಗಿ,
ಇಂತೀ ಉಭಯದಿಂದ ಒದಗಿದ ರೂಪು ನಾಮವ ಏನೆಂಬೆ ?
ಅಲೇಖನಾದ ಶೂನ್ಯ ಕಲ್ಲಿನ ಹಂಗು ಬಿಡು, ಬೇಡಿಕೊಂಬೆ./9
ಇನ್ನೆಲ್ಲರ ಕೇಳುವುದಕ್ಕೆ ಕುಲ ಛಲ ಮಲ ದೇಹಿಕರು ಬಿಡರೆನ್ನ.
ಎದೆಯಲ್ಲಿ ಕಟ್ಟಿದ ಎಳೆಯಾಸೆ ಬಿಡದು.
ಕೊಡುವ ಕೊಂಬಲ್ಲಿ ದ್ವಿಜರ ಒಡಗೂಡುವುದು ಬಿಡದು.
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿಯಿಡಲಮ್ಮದೆ ಕಟ್ಟಿದೆ.
ಹಿಡಿದು ಅರ್ಚಿಸುವುದಕ್ಕೆ ಶಿರದ ಕಡೆಯ ಕಾಣೆ.
ಮಜ್ಜನ ಮಂಡೆಗೆಂದರಿಯೆ, ಪಾದಕ್ಕೆಂದರಿಯೆ.
ಕುಸುಮವನಿಕ್ಕುವುದಕ್ಕೆ ಸಸಿಯಾದೆ ಮಕುಟದಲ್ಲಿ.
ಪಾದಕ್ಕೆ ಮದನ ಪಿತನ ಅಕ್ಷಿಯಾದೆ ಉಂಗುಷ್ಠದಲ್ಲಿ.
ಊಟಕ್ಕೆ ಬಾಯ ಕಾಣೆ, ಕೂಟಕ್ಕೆ ಅವಯವಂಗಳಿಲ್ಲ.
ಮಾತಿಗೆ ಆತ್ಮನ ಕಾಣೆ.
ಇದೇತರ ಮುರಿ ? ಪಾಷಾಣದಂತಿದೆ ! ಇದರಾಟವೆನಗೆ ಕಾಟವಾಗಿದೆ !
ಅಲೇಖನಾದ ಶೂನ್ಯ ಕಲ್ಲಾದ ಭೇದವ ಮೆಲ್ಲಗೆ ಎನಗೆ ಹೇಳು./10
ಉಭಯ ಭಕ್ತ ಜಂಗಮದಿರವು : ಹಾಲು ಹುಳಿಯಂತೆ, ಸತಿ ಪುರುಷನಂತೆ,
ಕೀಲೋತ್ಪನ್ನದಂತೆ,
ಕುಸುಮ ಗಂಧದಂತೆ,
ಘಟ ಪ್ರಾಣದಂತೆ,
ಒಂದನೊಂದು
ಮೀರಿ ಹಿಂಗುವ ಕಾವಿಲ್ಲ.
ಇದರ ಸಂಗವಾವುದು ಹೇಳಾ,
ಅಲೇಖನಾದ ಶೂನ್ಯ ಬಹುಶಿಲೆಯ ನೆಲೆಯ ಬಿಟ್ಟೆಯಲ್ಲ./11
ಊಧ್ರ್ವ ಭೂಮಿಯ ವಿರಾಗದಲ್ಲಿ ಸಪ್ತಸಮುದ್ರಕ್ಕೆ ಭೂಮಿ ಒಂದೆ.
ಭೂಮಿಯ ಮಧ್ಯದಲ್ಲಿ ಒಂದು
ವಟವೃಕ್ಷ
ಹುಟ್ಟಿತ್ತು.
ಕೊಂಬು ಮೂರು, ಅದರ ಬೆಂಬಳಿಯಲ್ಲಿ
ಹುಟ್ಟಿದ
ಕವಲಿಗೆ ಲೆಕ್ಕವಿಲ್ಲ.
ಆ ಆಲದ ಹಣ್ಣಿಂಗೆ
ಮೋನದ ಹಕ್ಕಿ ಈರೇಳುಕೋಟಿ ಕೂಡಿ,
ಎಂಬತ್ತುನಾಲ್ಕು ಲಕ್ಷ ಬೇಟೆಕಾರರ ಬಲೆಯೊಳಗಾಯಿತ್ತು.
ಇದರ ಒಲವರವ ಕೇಳಿಹರೆಂದು,
ಅಲೇಖಮಯನಾದ
ಶೂನ್ಯ ಕಲ್ಲಿನ ನಿಳಯದೊಳಗಾದ./12
ಊರ ಹೊರಗೊಂದು ಗಿಡುಮರ.
ಅದರೊಳಗೆ ಅಡಗಿಪ್ಪರು ಐವರು ಕಳ್ಳರು : ಒಬ್ಬ ನರಿ ಬಲೆಯವ, ಒಬ್ಬ ಹುಲಿ ಬಲೆಯವ,
ಒಬ್ಬ ಉಡುಬೇಂಟೆಕಾರ, ಒಬ್ಬ ಬಳ್ಳುವಿನ ಕಾಲುಕಣ್ಣಿಯ ಪುಳಿಂದ,
ಒಬ್ಬ ನಾಲ್ವರ ಬೇಂಟೆಯ ನೋಡುವ
ಉಡಿಗಳ್ಳ.
ಬೇಟೆ ಬೆಂಬಳಿಯಾದುದಿಲ್ಲ,
ಬೇಟೆಗೆ ಹೋದವರೆಲ್ಲರೂ
ಕಾಟಕ್ಕೆ
ಒಳಗಾದರು.
ಇದರಾಟವ ಕೇಳಿಹರೆಂದಂಜಿ,
ಅಲೇಖನಾದ ಶೂನ್ಯ ಕಲ್ಲಿನ ನೆಲೆಮನೆಯ ಹೊಕ್ಕೆಯಲ್ಲ./13
ಊರಳಗಣ ಅರಳೆಯ ಮರದಲ್ಲಿ ,
ಮೂರುವರ್ಣದ ಗಿಣಿ ಮರಿಯನಿಕ್ಕಿತ್ತು.
ರಟ್ಟೆ ಬಲಿದು ಹಾರಲಾರದು, ಕೊಕ್ಕು ಬಲಿದು ಕೆಂಪಾಗದು.
ಬಾಯಿ ಬಲಿದು ಹಣ್ಣ ಮೆಲಲಾರದು, ಅದ ಓಡಿಸುವರಿಗೆ ಅಸಾಧ್ಯ.
ಅಲೇಖನಾದ ಶೂನ್ಯ ಇದರ ಹೊಲಬ ಕೇಳಿಹರೆಂದು ಕಲ್ಲಿನೊಳಗಾದ./14
ಎಚ್ಚ ಗುರಿಯ ಮನ ನಿಶ್ಚೈಸಿದಂತೆ,
ಇಷ್ಟ ಮಚ್ಚಿದ ಲಲನೆಯ ಬೆಚ್ಚಂತಿಪ್ಪ ಚಿತ್ತದಂತೆ,
ಕಡೆಯಾಣೆಯ ಒಡಗೂಡಿ ಲೇಪಿಸಿದಂತೆ,
ಇಷ್ಟದ ಮರೆಯಲ್ಲಿ ತೋರುವ ನಿಶ್ಚಿಂತನಂಗದ ಕೂಟ.
ಭಕ್ತಿಯ ಮೂಲ, ಸತ್ಯದ ಸುಧೆ, ವಿರಕ್ತಿಯ ಬೆಳೆ.
ಇಷ್ಟನರಿತಡೆ ಉಭಯದಿರವು ತನು ಮನ ವಸ್ತು ಲೇಪ.
ಇದರ ಅಸುವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ./15
ಎತ್ತಬಾರದ ಕಲ್ಲು ನೀರಿನ ಮೇಲೆ ತೆಪ್ಪದಂತೆ ಹೋದಾಗ
ಮೇಲೆ ಕುಳಿತು ಒತ್ತುವರ ನುಂಗಿತ್ತು.
ನುಂಗಿದವರು ಅಲ್ಲಿದಂತೆ ಹೊಳೆಯ ನೀರ ತಪ್ಪಲಿಕ್ಕೆ ಕುಡಿದು,
ಆ ತೆಪ್ಪ ಪೃಥ್ವಿಯಲ್ಲಿ ನಿಂದಿತ್ತು.
ಈ ಗುಣಭಿತ್ತಿಯ ಕೇಳಿಹರೆಂದು,
ಅಲೇಖನಾದ ಶೂನ್ಯ ಶಿಲೆಯ ಮರೆಯಾದ./16
ಒಡೆಯನಿಲ್ಲದ ಬಂಟ ತಲೆಯ ಕೊಯಿತಂದ.
ಕಣ್ಣ ಬಾಯ
ಹೊರಗೆ ಇರಿಸಿ,
ಇದು ತಲೆಯಲ್ಲಾ ಎಂಬುದ ಕೇಳಿ,
ಅಂಗವ ಹಾಕಿದ ಕಣ್ಣಿನ ಬೆಂಬಳಿಯಲ್ಲಿ,
ಇದ ಎಲ್ಲರಿಗೂ
ಹೇಳಲಾದೀತೆಂದು,
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದ./17
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ
ಶಕ್ತಿ ಕೂಡಿ ಪ್ರಣವವಾಯಿತ್ತು.
ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು.
ಸರ್ವರ ಕೂಟದ
ಕೂಗಿನಿಂದ ಪುರಾಣವಾಯಿತ್ತು.
ಇಂತಿವರ ಗೋಷ್ಠಿಯ ಹುದುಗಿಗಾರದೆ,
ಅಲೇಖನಾದ ಶೂನ್ಯ ಕಲ್ಲಿನೊಳಗಾದ./18
ಕಂಬಳಿಯ ಕೌಪ ಕಟ್ಟಿದ ಮತ್ತೆ,
ಅವರವರ ಬೆಂಬಳಿಯಲ್ಲಿ ಕಂಬಳಿಯ ಹೊದಿಹೆನೆಂಬ ಆಸೆಯೇಕೆ ?
ಹೊದೆಯಲಿಲ್ಲದ ಕಂಬಳಿಯ ಉಡಿಗೆ ಕಟ್ಟಿದ ಮತ್ತೆ,
ಈ ಕೈಯ ಗಡಿಗೆಯಣ್ಣಗಳ ಒಡಗೂಡಲೇಕೆ ?
ಅವರ ತೊಡೆಯ ಸಂದಿಯಲ್ಲಿ ಕುಳಿತು, ಅವರುವ ಮಾತಿಗೆ ಅಡುಮೆಯಾಗಲೇಕೆ ?
ಇಂತಿವನರಿದಹರೆಂದಡಗಿದ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದ/19
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ,
ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ
ಮನೆಯವರೆಲ್ಲರ ಕಾಡುವಂತೆ,
ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು.
ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು.
ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ
ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ?
ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು.
ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ.
ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ/20
ಕಾಯದ ಕರಸ್ಥಲದಲ್ಲಿ ಇಷ್ಟಲಿಂಗವನರಿವುದಕ್ಕೆ
ಬಾಹ್ಯೇಂದ್ರಿಯ ನಷ್ಟವಾಗಿರಬೇಕು.
ಪ್ರಾಣನ ಕರಸ್ಥಲದಲ್ಲಿ ಪ್ರಾಣಲಿಂಗವನರಿವುದಕ್ಕೆ
ಅಂತರಿಂದ್ರಿಯವರತು ಮಂತ್ರಸಾಹಿತ್ಯವಾಗಿರಬೇಕು.
ಭಾವದ ಕರಸ್ಥಲದಲ್ಲಿ ಭಾವಲಿಂಗವನರಿವುದಕ್ಕೆ
ಭಾವದ ಭ್ರಮೆಯಳಿದು ನಿಜ ನೆಲೆಗೊಳ್ಳಬೇಕು.
ಕಾಯ ತನ್ನಂತೆ ಹರಿದು, ಜೀವ ತನ್ನಂತೆ ನೆನೆದು,
ಭಾವ ತನ್ನಂತೆ ಬೆರಸಿದಡೆ, ಸೂಳೆಯ ಕೂಟದಂತೆ ಕಾಣಾ,
ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ/21
ಕಾಲಲ್ಲಿ ಕಟ್ಟಿದ ಸಡ್ಡೆಯ ಕೀಳುವರಿಲ್ಲ.
ಕೈಯಲ್ಲಿ ಹಿಡಿದ ಮೊರನ ಬೇಡಾ ಎಂಬವರಿಲ್ಲ.
ತಲೆಯಲ್ಲಿ ಹೊತ್ತ ಕೊಂಗವ ಇಳುಹುವರಿಲ್ಲ.
ಸಡ್ಡೆಗೆ ಮೂರು ಕವೆ. ಒಂದೆ ಚಿತ್ತವಟ್ಟ.
ಮೊರಕೆ ಮೂರು ಗೋಟು,
ಮಾಡುವಾಕೆ ಒಬ್ಬಳೆ.
ಕೊಂಗಕ್ಕೆ ಎರಡು ಗೋಟು, ತೂರುವರು ಮೂವರು.
ರಾಶಿವೊಂದೆ, ಕೊಳಗ ಎರಡು, ಅಳೆವರು ಲೆಕ್ಕಕ್ಕೆ ಕಡೆಯಿಲ್ಲ.
ಇದ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಹೊಕ್ಕ./22
ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ
ಒಬ್ಬ ಸೂಳೆಯ ಬಾಗಿಲಲ್ಲಿ ಎಂಬತ್ತನಾಲ್ಕು ಲಕ್ಷ ಮಿಂಡಗಾರರು.
ಅವಳ ಸಂಗದಲ್ಲಿ ಇರಲಮ್ಮರು, ಅವಳು ತಾವೇ ಬರಲೆಂದು ಕರೆಯದಿಹಳು.
ಅವಳಿಗೆ ಯೋನಿ ಹಿಂದು, ಅಂಡ ಮುಂದು,
ಕಣ್ಣು ಅಂಗಾಲಿನಲ್ಲಿ,
ತಲೆ ಮುಂಗಾಲಿನಲ್ಲಿ,
ಕಿವಿ ಭುಜದಲ್ಲಿ, ಕೈ ಮಂಡೆಯ ಮೇಲೆ,
ಮೂಗು ಹಣೆಯಲ್ಲಿ, ಮೂಗಿನ ದ್ವಾರ
ಉಂಗುಷ್ಠದಲ್ಲಿ,
ಬಸುರು ಬಾಯಲ್ಲಿ, ನಡೆವಳು ತಲೆ ಮುಂತಾಗಿ, ಕಾಲು ಮೇಲಾಗಿ.
ಅವಳ ಕೂಡುವ ಪರಿಯ ಹೇಳಾ,
ಅಲೇಖನಾದ ಶೂನ್ಯ ಗೆದ್ದೆಯಲ್ಲಾ, ಕಲ್ಲಿನ ಹೊಟ್ಟೆಯ ಮರೆಯಲ್ಲಿ./23
ಕಾಳಾಡಿನ ಹಾಲ ಕಂಬಳಿಗುರಿ ಕುಡಿಯಿತ್ತು.
ಕುಡಿದು ಮೂರುಲೋಕವೆಲ್ಲವೂ
ಎನ್ನ ಕಂಬಳಿಯ ಗೊಪ್ಪೆಯಲ್ಲಿ ತುಂಬಿದೆನೆಂದು ಸಂಭ್ರಮ ಮಾಡುತ್ತಿದೆ.
ಅದರ ಸಂಗಸುಖವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ./24
ಕುರುಹಿಂಗೆ ಆಚಾರದ ಪೂಜೆ.
ಅರಿವಿಂಗೆ ಸಕಲ ವರ್ಮ ಪ್ರಕೃತಿ ಪಂಚೇಂದ್ರಿಯದೊಳಗಾದ
ಸಂಚಿತಕರ್ಮಂಗಳ ಶಂಕೆಯ ಹರಿದು ಇಪ್ಪುದು, ತನುಭಕ್ತಿ.
ಮನ ಮಹದೊಡಗೂಡಿ ಇರು.
ಅಲೇಖನಾದ ಶೂನ್ಯ ಕಲ್ಲಿನೊಳಗೆ ಇದ್ದವನ ಮೆಲ್ಲನೆ ಅರಿ./25
ಚೊಚ್ಚಿಲ ಕೂಸು ಹೆತ್ತತಾಯ ಮೊಲೆಯನುಂಬಾಗ,
ಕತ್ತೆಯ ಮರಿ ಕೊರಳ ಕಚ್ಚಿತ್ತು,
ಕತ್ತೆಯ ಮರಿಯ ಚೊಚ್ಚಿಲ ಕೂಸ, ಮೊಲೆಯ ತೊಟ್ಟು ನುಂಗಿತ್ತು.
ಮೊಲೆಯ ಹೊತ್ತಿದವಳ ಹೊಟ್ಟೆಯ ಸುಳಿ ನುಂಗಿತ್ತು.
ಈ ಬಟ್ಟೆಯ ಕೇಳಿಹರೆಂದಂಜಿ, ಅಲೇಖನಾದ
ಶೂನ್ಯ ಕಲ್ಲಿನಾಥನಾದ/26
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ?
ಶಿಲ್ಪನ ಶಿಲೆ ಲೋಹ ಮೊದಲಾಗಿ ಕುರುಹುಗೊಂಡವ
ದೇವತಾಕಳೆಯ ತುಂಬುವನೆ ?
ಶಿಲೆ ಲೋಹ ಲಕ್ಷಣವ ನೆಲೆ ಶುದ್ಧವ ಮಾಡುವನಲ್ಲದೆ.
ತಾ ಕಟ್ಟುವ ಇಷ್ಟಕ್ಕೆ ಕಟ್ಟಿಲ್ಲ, ಮೇಲೆ ರೊಕ್ಕವ ತಾಯೆಂಬವಳಂತೆ
ಕಟ್ಟಿಹೋದ ಮನವ ಇಷ್ಟದಲ್ಲಿ ನೆಮ್ಮಿಸದೆ. ಇನ್ನಾರ ಕೇಳುವೆ ?
ನೀ ಅಲೇಖಮಯ ಶೂನ್ಯ ಕಲ್ಲಿನ ಮರೆಯಾದೆ/27
ತುಂಬಿದ ನಾಳಿ ಬಾಯ ಹಂಗಾದಂತೆ, ಬಾಯ ಬೆಣ್ಣೆಯ ಹಂಗಿಗನಾಗಿ,
ನಳಿಗೆ ಬಾಯಿ ಬೆಣ್ಣೆಯೆರೆವಳ ಹಂಗು.
ಮಂಡೆಯ ಶೂಲೆ ಇನ್ನೆಂದಿಗೆ ಹರಿಗು ?
ಈ ಅಭಿಸಂಧಿಯ ಹೇಳು, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ/28
ತೆರೆಯ ಮರೆಯ ಬಹು ರೂಪದಂತೆ, ಸೀರೆಯ ಮರೆಯ ಉಪಸ್ಥಳದಂತೆ,
ಆ ಪೂರ್ವ ಕಟ್ಟಿದ ಮರೆಯ
ಬಿಡುವನ್ನಕ್ಕ ಸೈರಿಸಲಾರದವನಂತೆ
ಎನ್ನ
ತಲ್ಲಣ.
ನಿನ್ನಯ ಕಲ್ಲಿನ ಮರೆಯ ನನ್ನಿಯ ರೂಪ ತೋರು.
ಎನ್ನಯ ಕಲ್ಲೆದೆಯ
ಬಿಡಿಸು, ಮನೋವಲ್ಲಭ, ಅಲೇಖನಾದ ಶೂನ್ಯ,
ಉರಿಗಲ್ಲಿನ ಖುಲ್ಲತನವ ಬಿಡು, ಬೇಡಿಕೊಂಬೆ ನಿನ್ನನು./29
ಧ್ಯಾನವ ಮಾಡಿ ಕಾಬಲ್ಲಿ ಚಿತ್ತ ಪ್ರಕೃತಿಯ ಗೊತ್ತು.
ಕುರುಹುವಿಡಿದು ಕಂಡೆಹೆನೆಂದಡೆ, ಅದು ಶಿಲೆ, ಉಳಿಯ ಹಂಗು,
ಕೊಟ್ಟವನ ಹಿಡಿದಿಹೆನೆಂದಡೆ, ಗುತ್ತಗೆಯ ಕೇಣಿಕಾರ,
ಮಾಡಿ ನೀಡಿ ಕಂಡೆಹೆನೆಂದಡೆ, ಎನ್ನ ಮನೆಗೆ
ಬಂದವರೆಲ್ಲರು,
ಉಂಡು ಉಟ್ಟು ಎನ್ನ ಹಂಗಿಗರು.
ಆಗರಗಳ್ಳನ ಹಾದರಿಗ ಕಂಡಂತೆ, ಇನ್ನಾರಿಗೆ ಹೇಳುವರು ಆ
ಘನವ ?
ಅದು ಎನಗಾಯಿತ್ತು, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ./30
ನನ್ನ ನಾನರಿವಡೆ, ಮೂರು
ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ,
ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ ಠಾವಿಂಗೆ
ತಪ್ಪಿಹೋದ
ಮೂಷಕನಂತೆ,
ಎತ್ತಲೆಂದರಿಯೆ.ಅರ್ತಿಯಿಂದ ಕಟ್ಟಿದೆ ಇಷ್ಟವ.
ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ
ಮರೆ ಬೇಡ./31
ನಾದ ಗುರುವಾದಲ್ಲಿ , ಬಿಂದು ಲಿಂಗವಾದಲ್ಲಿ,
ಕಳೆ ಜಂಗಮವಾದಲ್ಲಿ, ಉತ್ಪತ್ಯಕ್ಕೆ ಹೊರಗು.
ನಾದ ವಿಸರ್ಜನವಾದಲ್ಲಿ ಸ್ಥಿತಿಗೆ ಹೊರಗು.
ಬಿಂದು ವಿಸರ್ಜನವಾದಲ್ಲಿ ಪ್ರಳಯಕ್ಕೆ ಹೊರಗು.
ಸರ್ವಚೇತನಕ್ಕೆ ವಿಸರ್ಜನವಾದಲ್ಲಿ ಇಂತೀ ತ್ರಿವಿಧನಾಮ ನಷ್ಟ.
ಅರಿದು ಅರುಹಿಸಿಕೊಂಬ ಉಭಯಲೇಪ ಏನೂ ಎನಲಿಲ್ಲ.
ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ, ಇಲ್ಲಿಗೆ ಬಾರಯ್ಯಾ./32
ನಾಮದ ರೂಪಿನಲ್ಲಿ ಅಡಗಿ ಹೊಯ್ದಡೆ ತೋರಿ,
ಮತ್ತಾ ಶೂನ್ಯನಾದದಲ್ಲಿ ಅಡಗುವ ತೆರ, ಶರೀರದ ಆತ್ಮನ ಭೇದ,
ಹೊಯ್ದಡೆಯ್ದಿ
ಮತ್ತೆ
ಪುದಿದುದ ಮುಟ್ಟಿ,
ಇಂತೀ ಶರೀರದ ಅನ್ವಯ ಸಂಚವ ಬಿಟ್ಟು,
ಕಾಬ ಆಗಾವುದು, ಬಿಡದಿದ್ದಡೆ ಚೇಗೆ ಯಾವುದು ?

ಕಡೆ
ನಡು ಮೊದಲ ಕೇಳಿಹರೆಂದಡಗಿದೆಯಾ ?
ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !/33
ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ ?
ನಿನ್ನ ಭಾವ ಹಿರಣ್ಯನ ಪುತ್ರನ ಮಾರನ
ಪಿತನ ಅವತಾರದ
ವಜ್ರದ ಕಂಬದಲ್ಲಿ ತೋರಿದ ಕುರುಹಿಂಗೆ ಕಡೆಯೆ ?
ಕಾರ್ಯಕ್ಕೆ ಮಾಡಿದ ಮರುಳಿನ ನಂಬುಗೆಯ ತೆರದಿಂದ ಕಡೆಯೆ
?
ಎನಗೆ ನೀ ಮನಸಿಜನಾಗು, ಮನದಲ್ಲಿ ಹೆರಹಿಂಗದಿರು.
ಅಲೇಖನಾದ ಶೂನ್ಯ ಶಿಲೆ ಮಂಥಣ ಬೇಡ, ಸಲಹೆನ್ನುವ./34
ನಿನ್ನ ಸೋದಿಸುವಡೆ ಎನ್ನ ಕೈಯಲ್ಲಿ ಆಗದು.
ಎಳ್ಳಿನೊಳಗಣ ಎಣ್ಣೆಯಂತೆ, ಹಣ್ಣಿನೊಳಗಣ ರುಚಿಯಂತೆ,
ಹೂವಿನೊಳಗಣ ಸಂಜ್ಞೆಯಂತೆ, ತರುಧರ ಅಗ್ನಿಯ ಕೂಟದಂತೆ,
ಕಂಡಡೆ ಕರಗಿ, ಕಾಣದಡೆ ಬಿರುಬಾಗಿ, ಇವರಂಗವ ಕಂಡು ಅಡಗಿದೆಯೆ ?
ನಿನ್ನ ಸಂಗವನರಿವುದಕ್ಕೆ ಎನ್ನಂಗದ ಇರವಾವುದು ?
ತನುವ ದಂಡಿಸುವುದಕ್ಕೆ ನೀ ಸರ್ವಮಯ, ನಿನ್ನ ಖಂಡಿಸುವದಕ್ಕೆ ನೀ ಪರಿಪೂರ್ಣ.
ಎನ್ನ ಮರೆದು, ನಿನ್ನ ಕಾಬುದಕ್ಕೆ ಒಳಗಿಲ್ಲ.
ನಿನ್ನ ಕಾಬುದಕ್ಕೆ ನೀ ಅಲೇಖಮಯ ಅನಂತಶೂನ್ಯ, ಕಲ್ಲಿನ ಮರೆಯಾದೆಯಲ್ಲಾ, ಎಲ್ಲರಿಗೆ ಅಂಜಿ./35
ನಿನ್ನನರಿವುದಕ್ಕೆ ಅಲ್ಲಿ ಇಲ್ಲಿ ಗೆಲ್ಲ ಸೋಲವೇಕೆ ?
ಎಲ್ಲರಲ್ಲಿ ಅಹುದು ಅಲ್ಲಾ ಎಂಬ ಕಲ್ಲೆದೆಯಾಗಿ ಹೋರಲೇಕೆ ?
ಅಮೃತವ ಕೊಂಡು ಸವಿವುಂಟೆ ಎಂದು ಎಲ್ಲರ ಕೇಳುವನಂತೆ,
ತಿಗರನೇರಿಸಿ ಕಲಿತನವ ಕೊಡೆಂಬವನಂತೆ,
ಅಮೃತ ಘುಟಿಕೆಯಿದ್ದು, ಅಶನದ ಮುದ್ದೆಯ ಕೇಳಿ ಗಸಣಿಗೊಂಬವನಂತೆ,
ಈ ಹುಸುಕರಿಗೆ ಅಂಜಬೇಡ,
ಅಲೇಖನಾದ ಶೂನ್ಯ ಕಲ್ಲಿನ ಮನೆಯ ಬಿಟ್ಟು
ನೆಲೆಗೊಳ್ಳೆನ್ನೊಳು, ಬೇಡ./36
ಪಾಡಿನ ಫಲವನಡೆದಡೆ ಫಳ ರಸವಲ್ಲದೆ ಹೂ ಮಿಡಿಯಲ್ಲಿ ಅಡೆದವರುಂಟೆ?
ತನುರಸ ಆತ್ಮನ ಅಡಿಯಲ್ಲಿ ಅಡಗುವನ
ಬಿಡುಮುಡಿಯ ಲತೆಯ ಸಾಗಿಸಿದ ಶಾಖೆಯಂತೆ, ಘಟದ ಅಸುವಿನ ಭೇದ.
ಇದರ ಎಸಕವ ಕೇಳಿಹರೆಂದು,
ಅಲೇಖನಾದ ಶೂನ್ಯ ಕಲ್ಲಿನ ಮೆರೆಯಾದೆಯಾ ?/37
ಪುಡಿಯ ದ್ರವಹೀನವಾಗಿ ಕೂಡಿ ಕುಂಭವನೊದಗಿಸುವವನಂತೆ,
ಅರಿವುಹೀನವಾಗಿ ಕುರುಹ ಎಡೆಬಿಡುವಿಲ್ಲದೆ ತೊಳೆವವನಂತೆ,
ಆಸೆ ಮುಂಚು, ಅರಿವು ಹಿಂಚಾಗಿ ಜಗದೀಶನ ಪೂಜೆ ಏತರದೆಂದೆ ?
ಇದರ ಖ್ಯಾತವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ./38
ಪೂಜೆ ಪುಣ್ಯದ ಇರವು, ಮಾಟ ಸುಕೃತದ ಬೀಜ, ಸುಕೃತ ಭವದೊಡಲು.
ಪೂಜೆಯ ಮೀರಿ ಕಾಬರಿವಿಲ್ಲ,
ಮಾಟವ ಮೀರಿ ಮೂರರ ಕೂಟವನರಿವುದಿಲ್ಲ.
ಉಭಯದ ಕೋಟಲೆಯ ಬಿಡಿಸು, ಅಲೇಖನಾದ ಶೂನ್ಯ ಕಲ್ಲಿನ ಒಲವರ ಬೇಡ. /39
ಪೃಥ್ವಿ ಆಕಾಶದ ಮಧ್ಯದಲ್ಲಿ ಖೇಚರ ಮಂಡಲ :
ಆ ಮಂಡಲದರಸು ವಿಹಂಗರಾಜ, ಮರೀಚಿಕ ಪ್ರಧಾನ, ಮಹೀತಳ ತಳವಾರ,
ಇಂತೀ ಮಂಡಲ ಸುರಕ್ಷದಲ್ಲಿ ಇರುತಿರಲಾಗಿ,
ಗೋರಕ್ಷನೆಂಬ ಅರಸು ಮುತ್ತಿದ ಮಂಡಲವ.
ಪಟ್ಟಣ ಕೋಳುಹೋಗದು, ಮುತ್ತಿದರಸು ಬಿಟ್ಟುಹೋಗ.
ಇದ ಸಂತೈಸಲಂಜಿ,
ಅಲೇಖಮಯನಾದ ಶೂನ್ಯ ಕಲ್ಲಿನೊಳಹೊಕ್ಕು, ಎಲ್ಲರ ಗೆದ್ದ./40
ಪೃಥ್ವಿ ನಿನ್ನ ಮುಖದಲ್ಲಿ, ಅಪ್ಪು ನಿನ್ನ ಮುಖದಲ್ಲಿ,
ತೇಜ ನಿನ್ನ ಮುಖದಲ್ಲಿ, ವಾಯು ನಿನ್ನ ಮುಖದಲ್ಲಿ,
ಆಕಾಶ ನಿನ್ನ ಮುಖದಲ್ಲಿ, ಪಂಚಭೂತಿಕನಾದೆ,
ಸರ್ವಲೋಕ ಕುಕ್ಷಿ ಕರಂಡನಾದೆ, ನಾ ನಿನಗೆ ಹೊರಗೆ.
ಅರಿವುಮಯ ನೀನಾಗಿ, ಕಲ್ಲಿನ ಮರೆ ಬೇಡ.
ಮನದ ಶಿಲೆಯಲ್ಲಿ ಕುರುಹುಗೊಳ್ಳು.
ಅಲೇಖನಾದ ಶೂನ್ಯ ಅವತಾರ ಶೂನ್ಯ ಎನಗೊಂದು ಹೇಳಾ./41
ಪೃಥ್ವಿಯಲ್ಲಿದ್ದು ಪೃಥ್ವಿಯನರಿತು, ಅಪ್ಪುವಿನಲ್ಲಿದ್ದು
ಅಪ್ಪುವನರಿತು,
ತೇಜದಲ್ಲಿದ್ದು
ತೇಜವನರಿತು, ವಾಯುವಿನಿಲ್ಲಿದ್ದು
ವಾಯುವನರಿತು,
ಆಕಾಶದಲ್ಲಿದ್ದು
ಆಕಾಶವನರಿತು, ತನ್ನಲ್ಲಿದ್ದು
ತನ್ನನರಿತು,
ಕಣ್ಣಿನೊಳಗಣ ಕಣ್ಣ ಕಂಡು ಕಲ್ಲಿನೊಳಗಡಗಿ,
ಅಲೇಖನಾದ ಶೂನ್ಯನ ಭೇದವನರಿತು, ಕಾಯವನರಿ/42
ಬಾಯಲ್ಲಿ ಕಾಲು ಹುಟ್ಟಿ, ಕೈಯಲ್ಲಿ ಕಣ್ಣು ಹುಟ್ಟಿ, ನಾಸಿಕ ಕಿವಿಯಾಗಿತ್ತು.
ಇಷ್ಟು ಹೇಳಲಾರದೆ, ಅಲೇಖನಾದ ಶೂನ್ಯ ಕಾಲಕ್ಕಂಜಿ ಕಲ್ಲಿನೊಳಗಾದ/43
ಬಾಯಿ ಉಂಡು, ನಾಸಿಕ ವಾಸಿಸಿ, ಕಣ್ಣು ಕಂಡು, ಕಿವಿ ಕೇಳಿ,
ಕೈ ಮುಟ್ಟಿನೋಡಿ ಅರ್ಪಿಸುವಾಗ ನಿನಗಲ್ಲಿಯೇ ತೃಪ್ತಿಯೇ ?
ನೀ ತತ್ತುಗೈಯ ಇಕ್ಕಿನ ಕೂಳವನೆ ?
ಎಲ್ಲರ ಮನಸ್ಸು ಪರಕೈಯಿಂದ ಪರೀಕ್ಷಿಸಿಕೊಂಬವನೆ ?
ಎಲ್ಲರಲ್ಲಿ ಅರಿಕೆ ತನ್ಮಯ ನೀನೆಂಬುದನರಿಯದೆ.
ಕಾಲ ಮುಳ್ಳು ಕೈಯಿಂದ ಕಳೆವಂತೆ, ಅದಾರಿಗೆ ಲೇಸು ಹೇಳಾ ?
ಇದರ ಆಗ ಕೇಳಿಹರೆಂದು, ಅಲೇಖನಾದ ಶೂನ್ಯ ಕಲ್ಲಿನೊಳಗಾದೆಯಲ್ಲಾ !/44
ಬಾಯಿಲ್ಲದ ಪಶು ಬತ್ತದ ಹೊಲನ ಹೊಕ್ಕು, ಹುಟ್ಟದ ಸಸಿಯ ಮೆಯ್ದು,
ಒಡೆಯನಿಲ್ಲದ ಪರವ ತೊಂಡ ಕೂಡಿದ,
ತೊಂಡಿನ ಹಟ್ಟಿಯ ಬಾಗಿಲೊಂದು, ಬೀಗ ಒಂಬತ್ತು.
ಮೂರೆಸಳಿನ ಬೀಗ ಮೂರು, ಆರೆಸಳಿನ ಬೀಗ ಮೂರು,
ಇಪ್ಪತ್ತೈದೆಸಳಿನ ಬೀಗ ಮೂರು
ತೆಗೆವ ಕೈಗೆ ನಾಭಿಯಿಲ್ಲ, ಸಿಕ್ಕಿತ್ತು ಹಸು ಹಟ್ಟಿಯಲ್ಲಿ,
ಇನ್ನಾರಿಗೆ ಹೇಳುವೆ ?
ಅಲೇಖನಾದ ಶೂನ್ಯ ಕಲ್ಲಿನೊಳಗಾದವನ ಬಲ್ಲವರಾರೊ ?/45
ಬಾಹ್ಯ ರಚನೆಯಿಂದಾದ ಭಕ್ತಿ ವಿರಕ್ತಿ ಸತ್ಪಥ ಮಾರ್ಗದಿರವು,
ಮಾತಿನಲ್ಲಿಯೊ, ಚೈತನ್ಯಾತ್ಮಕ ಭಾವ ಮುಟ್ಟಿದಲ್ಲಿಯೊ ?
ಉಭಯವನರಿದಲ್ಲಿ ಕಾಬವನ ಇರವು,
ಮಠದ ದೀಪ ವಾಯುವಿನ ಸಂಗದ ಕೂಟ.
ಪಾಷಾಣದಲೊದಗಿದ ಜ್ಯೋತಿಯ ಬೆಳಗು, ವಾಯುವ ನೀತಿಗೊದಗುವುದೆ ?
ಕಪಟದ ನಿಃಕಪಟದ ದೀಪದ್ವಯ ಪರಿಯಂತೆ,
ವಸ್ತು ನಿದರ್ೆಶದ ಸುಖ ಸಂಭಾಷಣ ದೃಷ್ಟ ಕೊಡು,
ಅಲೇಖನಾದ ಶೂನ್ಯ ಕಲ್ಲಿನಲ್ಲಿದ್ದು, ಮೆಲ್ಲನೆ ಓ ಎನಲಾಗದೆ ?/46
ಬ್ರಹ್ಮಮೂರ್ತಿಗೂ ಶಿಲೆ ಒಂದೆ, ವಿಷ್ಣು ಮೂರ್ತಿಗೂ ಶಿಲೆ ಒಂದೆ,
ರುದ್ರಮೂರ್ತಿಗೂ ಶಿಲೆ ಒಂದೆ, ರೂಪಿನ ಅವತಾರ ಭಿನ್ನವಾಯಿತ್ತು,
ಸ್ಥೂಲ ಸೂಕ್ಷ್ಮ ಕಾರಣದಂತೆ, ಕುಂಭ ಜಲ ಬಿಂಬದಂತೆ,
ಇನ್ನಾರನಹುದೆಂಬೆ, ಇನ್ನಾರನಲ್ಲಾ ಎಂಬೆ ?
ಬ್ರಹ್ಮ ಕಾಲು, ವಿಷ್ಣು ಕೈ, ರುದ್ರ ಕಣ್ಣು, ಈಶ್ವರ ತಲೆ,
ಸದಾಶಿವ ಪ್ರಾಣವಾದಲ್ಲಿ ಇವು ಸಮಯ.
ಈ ಪಂಚಕೋಶಕ್ಕೆ ಆಧಾರ ಪರಮಜ್ಞಾನ.
ಅದ ಭೇದಿಸಲರಿಯದೆ ವಾದವ ಮಾಡಿದರೆಲ್ಲರು.
ನಾದ ಬಿಂದು ಕಳೆ ಅತೀತನರಿ, ಅಲೇಖನಾದ ಶೂನ್ಯ ಕಲ್ಲಿನೊಳಗಾದವನ./47
ಭಕ್ತ ಮಾಹೇಶ್ವರ ಪ್ರಸಾದಿ, ಇವು ಮೂರು ಭೃತ್ಯಭಾವ.
ಪ್ರಾಣಲಿಂಗಿ ಶರಣ ಐಕ್ಯ, ಇವು ಮೂರು ಕರ್ತಭಾವ.
ಭಕ್ತನ ತತ್ತು, ಕುರುಹಿನ ಇಷ್ಟ, ಐಕ್ಯನ ತತ್ತು, ಕುರುಹಿನ ಕಳೆ.
ಆ ಕಳೆಯನರಿವುದು ವಿರಕ್ತಿಯ ಭಾವ.
ಅದು ನಾಮ ರೂಪು ಭಾವ ನಾಶನ,
ಅದು ಬಯಲೊಳಗಿನ ಬೆಳಗು, ಬೆಳಗಿನ ಕಳೆ,
ಅಲೇಖನಾದ ಶೂನ್ಯ ಕಲ್ಲಿನ ಹೊರೆ ಬೇಡ./48
ಮಗನ ಕೊಂದು ತಿಂದ ತಾಯ ಕಂಡೆ.
ಬಂಧುಗಳ ಕೊಂದು ನಂಟರಲ್ಲಿ ಕೂಪನ ಕಂಡೆ.
ಅತ್ತೆ ಅಳಿಯನ ಒತ್ತಿನಲ್ಲಿ ಮಲಗಿ ಕೂಸು ಹುಟ್ಟಿತ್ತು.
ಅಳಿಯ ಅತ್ತೆಯ ನೋಡಿ, ಅತ್ತೆ ಅಳಿಯನ ನೋಡಿ,
ಹೋಯಿತ್ತು ಹೋಗದಿದೆಯೆಂದು ನಗುವರ ಕಂಡೆ.
ಅವರಿಬ್ಬರ ನೋಡಿ ಹೆತ್ತ ಕೂಸು, ನಾನಿವರ ಅಳಿಯನೆಂದು ಹೋಯಿತ್ತು.
ಇದ ಕೇಳಿಹರೆಂದು ಹೇಳಲಂಜಿ,
ಅಲೇಖನಾದ ಶೂನ್ಯ ಕಲ್ಲಿನ ಒಳಹೊಕ್ಕ./49
ಮನೆಯ ಮರೆಯಲ್ಲಿ ಇದ್ದ ಸತಿಗೆ ಪತಿ ಕೂಟವುಂಟೆ ?
ಕಣ್ಣಿಗೆ ಮರೆಯಾದ ಹೊನ್ನ ಚೆನ್ನಾಗಿ ನೋಡಬಹುದೆ ?
ಕಂಗಾಣದವ ಪ್ರತಿ ಶೃಂಗಾರವ ಮಾಡಿದಡೆ,
ತನ್ನ ಅಂಗದ ಕೈಯಲ್ಲದೆ ಕಂಗಳಿಗಿಲ್ಲ, ಸುಸಂಗಹೀನನ ಮಂಗಳಮಯದಂತೆ.
ಅಂಗದ ಮೇಲೆ ಶಿವಲಿಂಗ ರುದ್ರಾಕ್ಷಿ ಭಸ್ಮಂಗಳ ಧರಿಸಿಪ್ಪ
ಕಳ್ಳನ ಕಾಟಕಾರದೆ ಕಲ್ಲಿನೊಳಗಾದನು.
ಅಲೇಖನಾದ ಶೂನ್ಯ, ಕಾಡದಿರು ಎನ್ನುವ./50
ಮಲವ ತೊಳೆಯಬಹುದಲ್ಲದೆ, ಅಮಲವ ತೊಳೆಯಬಹುದೆ ಅಯ್ಯಾ ?
ಮಾತಾಡಬಹುದಲ್ಲದೆ, ಅಜಾತನನರಿಯಬಹುದೆ ಅಯ್ಯಾ ?
ಮಾಟವ ಮಾಡಬಹುದಲ್ಲದೆ, ವರ್ಮದ ಕೂಟವ ಕೂಡಬಹುದೆ ಅಯ್ಯಾ ?
ರಣದ ಪಂಥವ ಹೇಳಬಹುದಲ್ಲದೆ, ಕಾದಬಹುದೆ ಅಯ್ಯಾ ?
ಮಾತುಗಳ ಕೂಡಿ ಓತು ಹೇಳುವರೆಲ್ಲರು ಉಮಾಕಾಂತನ ಬಲ್ಲರೆ ?
ಈ ಮಾತಿನ ಮಾಲೆಗೆ ಅಂಜಿ,
ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ./51
ಮಾಜರ್ಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು.
ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ.
ಅದಕ್ಕೆ ಹೋಗಿ ಆಡುವ ನಾಟಕಸಾಲೆ.
ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು.
ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು,
ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು.
ನೋಡುವ ಅಣ್ಣಗಳ ಬಯಕೆ ಹರಿಯಿತ್ತು.
ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ.
ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ.
ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು,
ಕಲ್ಲಿನೊಳಗಿಂದ ಇತ್ತ ಬಾರಯ್ಯಾ./52
ಮಾರುತನ ಸಂಗದ ಸ್ಫುಟಿತ ಪಲ್ಲವ ಕಾಷ್ಠ ತೃಣ,
ಇವು ಮೊದಲಾದವೆಲ್ಲವು ಗಂಡಾಕಾರವಾಗಿ ತೋರಿ,
ಸಂಚಾರ ಹಿಂಗೆ, ಮತ್ತವು ಪುನರಪಿಯಂತಾಗೆ.
ಚಿತ್ತ ನಾಲ್ಕರೊಳು ಕೂಡಿದ ಮತ್ತಳಿಯೆ, ಚಿತ್ತದ ಬಂಧವಾವುದು ಹೇಳು,
ಅಲೇಖನಾದ ಶೂನ್ಯಕಲ್ಲಿನ ಮನೆಯವನೆ./53
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ,
ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ.
ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಭಿತ್ತಿ,
ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ./54
ವೃಕ್ಷ ಬೀಜದೊಳಗಡಗಿ, ಬೀಜ ವೃಕ್ಷದೊಳಗಡಗಿ ಉಭಯವಿದು ಫಲವೇನು?
ಆದಿ ಧರೆಯಿದಲ್ಲದೆ ಉಭಯನಾಮವಿಲ್ಲ.
ಅರಿವಿನ ಅರಿಕೆ, ಕುರುಹಿನ ಪೂಜೆ ನೆರಿಗೆಯಾಗಬೇಕೆ ?
ಅಲೇಖನಾದ ಶೂನ್ಯ ಬಲುಗಲ್ಲಿನ ನೆಲೆಯ ದಾಂಟಿದೆಯಲ್ಲಾ./55
ವೃಶ್ಚಿಕ ಬಾಲದಲ್ಲಿ, ಸರ್ಪ ಬಾಯಲ್ಲಿ, ಕಂಠೀರವ ದಂತದಲ್ಲಿ,
ಇಂತಿವರ ಸಂಚವನರಿದಲ್ಲಿ ಸಂಕಲ್ಪವಿಲ್ಲ.
ಚಿತ್ತದ ಹಿಂಚುಮುಂಚನರಿತಲ್ಲಿ, ಕರಣದ ಇಂದ್ರಿಯಂಗಳ ಗೊಂಚಲ ಮುರಿದು,
ನಿಜತತ್ತ್ವದ ಶಾಂತಿಯನರಿಯೆಂಬ ಕುರುಹ ಕೇಳಿಹರೆಂದು,
ಅಲೇಖಮಯನಾದ ಶೂನ್ಯ ಕಲ್ಲಿನ ಮರೆ ಬೇಡ, ಹೇಳೆನ್ನೊಳು./56
ವೇದದಲ್ಲಿ ಕಂಡುದಿಲ್ಲ, ಅದು ಮಾತಿನ ಮನೆಯಾಗಿ ಹೋಯಿತ್ತು.
ಹೋಮದಲ್ಲಿ ಕಂಡುದಿಲ್ಲ, ತಿಲ ಘೃತ ಹೋತು ಮೊದಲಾದ
ಕಾಷ್ಠ ತೃಣ ದಿಗ್ಬಲಿಗಳನಿಕ್ಕಿ ರೂಪಾದುದಿಲ್ಲ.
ಶಾಸ್ತ್ರವ ಕೇಳಿ ಮನ ಸಂತೈಸುವುದಿಲ್ಲ,
ಪುರಾಣವನೋದಿ ಪುಣ್ಯನಪುಣ್ಯನ ಕಂಡುದಿಲ್ಲ.
ಈತ ಕೊಟ್ಟುದು ಕೈಯಲ್ಲಿ ಹಿಡಿದು, ಕಣ್ಣಿನಲ್ಲಿ ನೋಡಿ, ಮನವರಿಯದಿದೆ.
ಇನ್ನೇವೆ ? ಇದರನ್ವಯವ ಹೇಳು,
ಅಲೇಖನಾದ ಶೂನ್ಯ ಕಲ್ಲಿನೊಳಗಾದವನೆ./57
ಶಿವ ಶಿವಾ ! ಎಲ್ಲರೂ ಉಂಟಾದುದ ಹೇಳಿ,
ಇಲ್ಲದ ಬಯಲಿಂಗೆ ಮನವನಿಕ್ಕಿದರು.
ಎನಗಿನ್ನಾವುದು ಬಟ್ಟೆ ?
ಬಸವಣ್ಣನ ಕರುಣೆಯಿಂದ ಕಟ್ಟಿದ ಲಿಂಗಕ್ಕೆ ಹುಟ್ಟುಮೆಟ್ಟನರಿಯೆ.
ಕೊಟ್ಟಾತ ಹೇಳಿದುದಿಲ್ಲ, ಕಟ್ಟಿಕೋ ಎಂದಾತ, ಈ ಬಟ್ಟೆಯಲಿರು ಎಂದುದಿಲ್ಲ.
ಕಡ್ಡಾಯಕ್ಕೆ ಕಟ್ಟಿದ ಈ ಒಡ್ಡಗಲ್ಲಿನ ಮುರಿಯೆ ಎನಗೊಂದು ಬುದ್ಧಿಯ ಹೇಳಾ.
ಅಲೇಖನಾದ ಶೂನ್ಯ ಕಲ್ಲಿನೊಳಗೆ ಏಕಾದೆಯಯ್ಯಾ./58
ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು.
ಮೂಷಕನ ಮೀಸೆಯ ಬಿಂದು ಮೂರುಲೋಕವ ಮುಣುಗಿಸಿತ್ತು.
ಕಾಸದ ನೀರು ಬಿಸಿಯಾಗಿ ಕುಡಿವರ ಮೀಸೆ ಸುಟ್ಟಿತ್ತು.
ಸಾಸಿವೆಯ ಮೂಷಕನ ಮೀಸೆಯ ಬಿಸಿನೀರ ಕುಡಿವಾತನ,
ಬಾಯೊತ್ತಿನ ಮೀಸೆಯಲ್ಲಿ ಹುಟ್ಟಿತ್ತು ಒಂದು ಹಾಸರೆಗಲ್ಲು.
ಹಾಸರೆಗಲ್ಲಿನ ಮೇಲೆ ಕುಳಿತಿದಾತನ ಕೇಳಿಹರೆಂದು ಏತಕ್ಕಡಗಿದೆ,
ಅಲೇಖಮಯ ಶೂನ್ಯ ಕಲ್ಲಿನ ಮನೆಯೊಳಗೆ./59
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು.
ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ.
ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು.
ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು,
ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು,
ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು.
ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ,
ಉರಿಯ ಮಡುವನೀಂಟಿ, ಸರಬಾವಿಯ ಕುಡಿದು,
ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ,
ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು.
ಅದರ ತೊಡಿಗೆಯ ಕೇಳಿಹರೆಂದಂಜಿ,
ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?/60
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು.
ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು.
ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು.
ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು.
ಶರಣನಾಗಿ ಐಕ್ಯನಾಗಬೇಕೆಂಬರು.
ಐಕ್ಯ ಏತರಿಂದ ಕೂಟ ? ನಾನರಿಯೆ.
ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು.
ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು.
ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ
ಮಾಹೇಶ್ವರನಾಗಬೇಕು.
ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು.
ಯುಕ್ತಿ
ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು.
ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು.
ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು./61
ಹಲವು ಧಾನ್ಯವನುಂಡವರ ಸಲಗೆಡದಿದೆ ಅಸು.
ಫಲ ರಸಸಾಳಿ ಸುಭಿಕ್ಷವ ಕೊಂಡು ಅಸು ಗೆಲದಿದೆ.
ಇಂತೀ ಒಲವರವೇಕೆ ನಿನಗೆ, ಕೆಲವರ ಅಳಿಸಿ, ಕೆಲವರ ನಗಿಸಿ ?
ಬಲವಂತತನವೆ ನಿನಗಿದು ?
ಬಲುಹೇಕೆ ಭಕ್ತರೊಳು, ನಿನ್ನಯ ನೆರೆ ನಂಬುವ ಶರಣರೊಳು ?
ಬಿಡು, ಕಲ್ಲಿನೊಳಗಣ ಮರೆಯ, ತೆರೆಯ ತೆಗೆ.
ಅಲೇಖನಾದ ಶೂನ್ಯ, ಸಮಗಂಡಿರು ಎಲ್ಲರುವ./62
ಹುಟ್ಟದೆ ಬ್ರಹ್ಮನ ಹಂಗಿನಲ್ಲಿ, ಬೆಳೆಯದೆ ವಿಷ್ಣುವಿನ ಹಂಗಿನಲ್ಲಿ,
ಸಾಯದೆ ರುದ್ರನ ಬೆಂಬಳಿಯಲ್ಲಿ ,
ಹರಿಯಿತ್ತು ಬ್ರಹ್ಮನ ಬಲೆ, ಗುರುವಿನ ಕರದಲ್ಲಿ.
ಬಿಟ್ಟಿತ್ತು ವಿಷ್ಣುವಿನ ಸುಖ, ಲಿಂಗದ ಅರ್ಪಿತದಲ್ಲಿ.
ಮರೆಯಿತ್ತು ರುದ್ರನ ಮರಣ, ವಸ್ತುವಿನ ಮೂರ್ತಿಯಲ್ಲಿ.
ಮತ್ತೆ ನಾನಿನ್ನಾರ ಕೇಳಿಹೆ ?
ಅಲೇಖನಾದ ಶೂನ್ಯ ಕಲ್ಲ ಬಿಟ್ಟ ತೆರನ ಕಂಡೆ./63
ಹುಟ್ಟಿಸುವವ ಪೃಥ್ವಿಗೆ ಹಂಗಾದ, ಬೆಳೆಯಿಸುವವ ಅಪ್ಪುವಿಗೆ ಹಂಗಾದ.
ಕೊಯಿಸುವವ ಕಾಲಗೆ ಹಂಗಾದ, ನಿನ್ನನರಿತೆಹೆನೆಂಬವ ಶಿಲೆಗೆ ಹಂಗಾದ.
ಇವರೆಲ್ಲರ ಹಂಗಿಗೆ ಹರುಹ ಕೇಳಿಹರೆಂದಂಜಿ,
ಅಲೇಖಮಯನಾದ ಶೂನ್ಯ ಕಲ್ಲಿನ ಮರೆಯಾದೆಯಾ ?/64