Categories
ಶರಣರು / Sharanaru

ವಚನ ಭಂಡಾರಿ ಶಾಂತರಸ

ಅಂಕಿತ: ಅಲೇಖನಾದ ಶೂನ್ಯ ಕಲ್ಲಿನೊಳಗಾದ
ಕಾಯಕ: ಶರಣರ ವಚನಗಳನ್ನು ಬರೆದುಕೊಳ್ಳುವ, ಸಂಗ್ರಹಿಸುವ ಕಾಯಕ

24
ಅಲ್ಲಿ ಇಲ್ಲಿ ಎಂಬುದಕ್ಕೆ ಎಲ್ಲಿಯೂ ನೀನೆ.
ಬಳ್ಳಿ ಚಿಗಿತು ಮರನ ನೆಮ್ಮಿ ಎಲ್ಲವ ಮುಸುಕಿದಂತೆ,
ಮೂಲದ ಇರವನರಿತು, ಸಲಹಿದಡೆಲ್ಲಕ್ಕೂ ಕಳೆ ಬಂದು ಬುಡವಾದಡೆ,
ಆ ಬಳ್ಳಿಯ ಕೊಯಿದಡೆ, ಎಲ್ಲವೂ ಒಣಗುವಂತೆ ನಿನ್ನ ಕಳೆ.
ಅನ್ಯಭಿನ್ನವಿಲ್ಲದೆ ಕಾಮ್ಯಾರ್ಥಕ್ಕೆ ಒಲವರವಾಗಿ ಎಲ್ಲಿಯೂ ನೀನೆ.
ಅಲೇಖನಾದ ಶೂನ್ಯ ಕಲ್ಲಿಂದ ತೊಲಗು,
ನಿನ್ನಯ ಇರವಿನ ಪರಿಯ ತೋರಾ.

ಈತ ಕಲ್ಯಾಣದ ಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿಡುವ ವಚನ ಭಂಡಾರದ ಮೇಲ್ವಿಚಾರಕನಾಗಿದ್ದ. ವಚನಗಳನ್ನು ಬರೆದುಕೊಳ್ಳುವ, ಸಂಗ್ರಹಿಸುವ ಸಂರಕ್ಷಣೆ ಮಾಡುವ ಕಾರ್ಯ ಈತನದಾಗಿತ್ತೆಂದು ತೋರುತ್ತದೆ. ಮೊದಲು ಬ್ರಾಹ್ಮಣನಾಗಿದ್ದು, ಬಸವಣ್ಣನವರ ಪ್ರಭಾವದಿಂದ ಶರಣನಾದಂತೆ ತಿಳಿಯುತ್ತದೆ. ಇದನ್ನು ಸಮರ್ಥಿಸಲು ಈತನ ವಚನಗಳಲ್ಲಿ ಕೆಲವು ಉಲ್ಲೇಖಗಳು ದೊರೆಯುತ್ತವೆ. ಕಾಲ-೧೧೬೦. ‘ಅಲೇಖನಾದ ಶೂನ್ಯ ಕಲ್ಲಿನೊಳಗಾದ’ ಅಂಕಿತದಲ್ಲಿ ಬರೆದ ೬೪ ವಚನಗಳು ದೊರೆತಿವೆ. ಇವುಗಳಲ್ಲಿ ತಾನು ಬ್ರಾಹ್ಮಣವನ್ನು ಬಿಟ್ಟು ಬಂದುದನ್ನು ಕಲ್ಯಾಣ ಕ್ರಾಂತಿಯ ನಂತರ ಉಂಟಾದ ಪರಿಸ್ಥಿತಿಯನ್ನು, ಭಂಡಾರ ಹಾಳಾದುದರ ತಳಮಳವನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾನೆ. ಜೊತೆಗೆ ಷಟ್-ಸ್ಥಲ ತತ್ವನಿರೂಪಣೆಯನ್ನೂ ಅಷ್ಟೇ ನಿಷ್ಠೆಯಿಂದ ಮಾಡುತ್ತಾನೆ. ಹೆಚ್ಚಿನ ವಚನಗಳು ಬೆಡಗಿನ ಭಾಷೆಯಲ್ಲಿವೆ.