Categories
ವಚನಗಳು / Vachanagalu

ವೇದಮೂರ್ತಿ ಸಂಗಣ್ಣ ವಚನಗಳು

97
ಆಧಾರದಲ್ಲಿ ಸಾಮವೇದ, ಸ್ವಾಧಿಷ್ಠಾನದಲ್ಲಿ ಅಥರ್ವಣವೇದ.
ಮಣಿಪೂರಕದಲ್ಲಿ ಯಜುರ್ವೆದ, ಅನಾಹತದಲ್ಲಿ ಋಗ್ವೇದ.
ಆಜ್ಞೆಯಲ್ಲಿ ಉತ್ತರ ಖಂಡಣೆ, ವಿಶುದ್ಧಿಯಲ್ಲಿ ಪ್ರಣಮದ ಲಕ್ಷಿತ.
ಇಂತೀ ವೇದವೇದ್ಯರು ನೋಡಾ ಎಮ್ಮವರು.
ಲಲಾಮಭೀಮಸಂಗಮೇಶ್ವರಲಿಂಗವನೊಳಕೊಂಡ ಶರಣರಂಗ.

98
ಕೃತಯುಗದಲ್ಲಿ ಕುಂಜರಯಾಗಕ್ಕೆ, ತ್ರೇತಾಯುಗದಲ್ಲಿ ಅಶ್ವಯಾಗಕ್ಕೆ,
ದ್ವಾಪರದಲ್ಲಿ ಮಹಿಷಯಾಗಕ್ಕೆ, ಕಲಿಯುಗದಲ್ಲಿ ಅಜಯಾಗಕ್ಕೆ,
ಇಂತೀ ವೇದಗಳಿಂದ ವೇದವೇದ್ಯರೆ ನೀವು ?
ವೇದಯಾಗಕ್ಕೆ ವಧೆಯುಂಟೆ ?
ಇಂತೀ ಭೇದವನರಿಯದೆ ಶಾಪಹತರುಗಳಿಗೆ
ಸರ್ವಜ್ಞಾತೃದೃಷ್ಟವಪ್ಪುದೆ ?
ಇಂತೀ ವೇದವೇದ್ಯರು ಶಾಸ್ತ್ರಸಂಪನ್ನರು.
ಪುರಾಣಪೂರ್ವಜ್ಞಾನಯುತರು, ಸಕಲಾಗಮಕ್ಕತೀತರು ಎಮ್ಮವರು,
ಲಲಾಮ ಭೀಮಸಂಗಮೇಶ್ವರಲಿಂಗದೊಳಗಾದ ಶರಣರು.

99
ತಾ ನಿಜವಿಟ್ಟ ಆ ನೆಲೆಯಲ್ಲಿ,
ತನ್ನಯ ವಿಶ್ವಾಸದಿಂದ ದೇವತಾಕಲೆ ಕುರುಹುಗೊಂಡಿತ್ತು.
ದೇವತಾಕಲೆ ತನ್ನ ತಾನಹಲ್ಲಿ ಇದಿರೆಡೆಯುಂಟೆ ?
ಸ್ಫಟಿಕದ ಘಟವರ್ತಿಯನೊಳಕೊಂಬುದಲ್ಲದೆ,
ಸ್ವಯರತ್ನ ಬಹುವರ್ಣಕ್ಕೊಳಗಪ್ಪುದೆ ?
ಇಂತಿವ ತಿಳಿದ ಸ್ವಾನುಭಾವಾತ್ಮಕನು.
ಲಕ್ಷಾಲಕ್ಷಂಗಳೆಂಬ ಭಿತ್ತಿಯ ಮೆಟ್ಟದೆ ನಿಶ್ಚಯವಾಗಿಹ ನಿಜಶರಣ ನೋಡಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.

100
ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ
ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ
ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ
ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ,
ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ,
ಉಭಯಚಿಂತನೆಯಾದರೂ ವೇದವೇದ್ಯರಲ್ಲ.
ಅದೆಂತೆಂದಡೆ : ಮದವ ಸ್ವೀಕರಿಸಿದ ಮದೋನ್ಮತ್ತನಂತೆ,
ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ,
ವೇದಘಾತಕರಲ್ಲದೆ ವೇದವೇದ್ಯರಲ್ಲ.
ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು,
ತಾನೆಂಬ ಭಾವ ಏನೂ ಇಲ್ಲದೆ,
ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ,
ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ,
ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ,
ಭಾವ ನಿಜವಸ್ತುವಿನಲ್ಲಿ ವೇಧಿಸಿ ನಿಂದಾತನೇ ವೇದವೇದ್ಯ,
ಲಲಾಮಭೀಮಸಂಗಮೇಶ್ವರ ಲಿಂಗದೊಳಗಾದ ಶರಣ.

101
ನೋಡುವ ದೃಷ್ಟಿಯು ಮುಟ್ಟಿದ ಮತ್ತೆ, ಇದಿರೆಡೆಯ ಕಾಬುದಿನ್ನೇನೊ ?
ಕ್ರಿಯ ಸಂಪದಂಗಳ ಮರೆದು, ಅರಿವ ಅರಿವಿನ ತೆರನಿನ್ನೆಂತು ?
ಸಕಲವೆಂದಲ್ಲಿ ಜಗ, ನಿಃಕಲವೆಂದಲ್ಲಿ ಕಾಬ ಲಕ್ಷ.
ಕಂಡು ನಿಶ್ಚೆ ಸಿದಲ್ಲಿ ಕಂಡೆಹೆನೆಂಬ ಭ್ರಾಂತು ಕಾಣಿಸಿಕೊಂಡು
ಇದಿರೆಡೆಗೊಟ್ಟುವದು,
ಲಲಾಮಭೀಮಸಂಗಮೇಶ್ವರಲಿಂಗವನರಿದ ಶರಣ.

102
ಪೂರ್ವಚಿಂತನೆಯಿಂದ ಕಂಡು, ಉತ್ತರಚಿಂತನೆಯಿಂದ ಖಂಡಿಸಿ,
ಲಕ್ಷಾಲಕ್ಷವೆಂಬ ಬೀಜಾಕ್ಷರದ ಪ್ರಣವದ
ಮೂಲಾಕ್ಷರದ ಚತುರ್ಭದವನರಿದು,
ಪಂಚಾಕ್ಷರಿ ಮುಂತಾದ ಷಡಕ್ಷರಿಯೊಳಗಾದ,
ಐವತ್ತೊಂದನೆಯ ಅಕ್ಷರದಲ್ಲಿ ನಿರ್ವಾಹವೇದ ಮುಂತಾದ ಶಾಸ್ತ್ರದೊಳಗಾದ,
ಪುರಾಣಾಗಮಂಗಳೆಲ್ಲವೂ ನಾನಾರೆಂಬುದ ತಿಳಿವುದಕಿಕ್ಕಿದ ಭಿತ್ತಿ.
ತನ್ನ ತಾನರಿದ ಮತ್ತೆ ಮಿಕ್ಕಾದ ಉಳುಮೆ ತನಗನ್ಯಭಿನ್ನವಿಲ್ಲ.
ಲಲಾಮಭೀಮಸಂಗಮೇಶ್ವರಲಿಂಗವಲ್ಲದಿದೆರೆಡೆಯಲ್ಲ.

103
ಪ್ರಥಮಪಾದದಲ್ಲಿ ಒಂಕಾರಕ್ಕೆ ನಕಾರ ಬೀಜಾಕ್ಷರ.
ಆ ನಕಾರ ಉಭಯ ಕೂಡಿದ ಮತ್ತೆ ಮಕಾರ ಬೀಜಾಕ್ಷರ.
ಇಂತೀ ತ್ರಿವಿಧಾಕ್ಷರ ಒಡಗೂಡಿ ಒಡಲಾದ ಮತ್ತೆ ಶಿಕಾರ ಬೀಜಾಕ್ಷರ.
ಇಂತೀ ಶಿಕಾರ ಮೂರನೊಡಗೂಡಿ ನಾಲ್ಕೆಂಬಲ್ಲಿಗೆ ಯಕಾರ ಬೀಜಾಕ್ಷರ.
ಇಂತೀ ಪಂಚಾಕ್ಷರಿಯ ಮೂಲಮಂತ್ರ ಸಂಬಂಧವಾಗಲಾಗಿ ಪ್ರಣಮದ ಬೀಜ.
ಆ ಪ್ರಣಮವು `ಒಂ ಭರ್ಗೊ ದೇವಃ’ ಜಗಕ್ಕೆ ಕರ್ತೃ ನೀನಲಾ ಎಂದು.
ಸಾಮ ಅರ್ಥವಣ ಯಜಸ್ಸು ಋಕ್ಕು ಉತ್ತರ ಖಂಡನ.
ಇಂತೀ ಪಂಚವೇದಂಗಳಲ್ಲಿ ಚತುರ್ವೆದಿಗಳಪ್ಪರಲ್ಲದೆ,
ಐಕ್ಯೋತ್ತರ ಚಿಂತನೆಯನೀ ವಿಪ್ರಕುಲ ಮಿಥ್ಯವಂತರು ಬಲ್ಲರೆ ?
ಕಣ್ಣಿನಲ್ಲಿ ನೋಡುತ್ತ ಕಣ್ಗಾಣೆನೆಂಬವನಂತೆ ಶಾಪಹತರಿಗೆಲ್ಲಕ್ಕೂ
ಲಲಾಮಭೀಮಸಂಗಮೇಶ್ವರಲಿಂಗವು ಅಸಾಧ್ಯ ನೋಡಾ.

104
ವೇದದ ಮೊದಲಧ್ಯಾಯದಲ್ಲಿ ಒಂಕಾರಕ್ಕೆ ಒಡೆಯನಾರೆಂಬುದ ತಿಳಿದು,
ಸದ್ಯೋಜಾತಾದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ
ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ |
ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ ||
ಇಂತೀ ವೇದವೇದ್ಯರು ಶಿವಭಕ್ತರಲ್ಲದಿಲ್ಲ.
ಇಂತಿದನರಿಯದೆ, ಘನ ಕಿರಿದೆಂದು ಹೋರುವವರಿಗೆ ತಿಳಿವಳವ ಕೊಡುವೆ.
ನಿಮ್ಮ ಶಾಂಕರಸಂಹಿತೆಯಲ್ಲಿ ದೃಷ್ಟವ ತಿಳಿದುಕೊಳ್ಳಿ.
ಲಲಾಮಭೀಮಸಂಗಮೇಶ್ವರಲಿಂಗವಲ್ಲದಿಲ್ಲಾ ಎಂದೆ.

105
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ.
ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ
ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ,
ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು,
ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ
ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು
ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ
ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ ,
ಆತ ವೇದಾಂತನೆ ಬಲುರೋಗಾಂತನಲ್ಲದೆ ?
ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ,
ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ,
ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ,
ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು,
ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವಜರ್ಿಸಿ,
ಶಿಯೆಂಬ ಶಿಕಾರವ ಸ್ವೀಕರಿಸಿ,
ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ ,
ವೇದವೇದ್ಯನು ನೋಡಾ, ಲಲಾಮಭಿಮಸಂಗಮೇಶ್ವರಲಿಂಗವು.

106
ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ ?
ಮಧುರರಸಂಗಳಿದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ ?
ತಾನುಂಡು ನೆನದಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ ?
ಅರಿದು ನಡೆದಡೆ ವೇದವೇದ್ಯನು, ಅರಿದು ನಡೆದಡೆ ಶಾಸ್ತ್ರಸಂಬಂಧಿ,
ಅರಿದು ನಡೆದಡೆ ಪುರಾಣಪುಣ್ಯವಂತನು,
ಅರಿದು ನಡೆದಡೆ ಸಕಲಾಗಮಭರಿತನು.
ಇಂತೀ ಪಂಚಾಕ್ಷರಿಯ ಮೂಲಷಡಕ್ಷರಿಯ ಭೇದ.
ಜಗಕ್ಕಾಧಾರವಾರೆಂಬುದ ಏಕಮೇವನದ್ವಿತೀಯನೆಂಬುದ ತಿಳಿದು,
ಸೋಹಂ ಕೋಹಂ ಎಂಬುದ ತಿಳಿದು,
ಆ ನಿಜವೆ ವಸ್ತುವಿಗೊಡಲೆಂಬುದ ಪ್ರಮಾಣಿಸಿ,
ನುಡಿದು ನಡೆಯಬಲ್ಲವನೆ ವೇದವೇದ್ಯನು ಕಾಣಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.