Categories
ವಚನಗಳು / Vachanagalu

ವೈದ್ಯ ಸಂಗಣ್ಣ ವಚನಗಳು

ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ,
ನಾಭಿ ಮೂತ್ರನಾಳದ ನಾಲ್ಕಂಗುಲ ಮಧ್ಯದಲ್ಲಿ ಅಪ್ಪುನಾಡಿ,
ಉಡಸೂತ್ರ ನಾಭಿ ಮೊದಲಾದ
ಪಂಚಾಂಗುಲ ಮಧ್ಯದ ಮೇಲೆಸೆಯಲ್ಲಿ [ತೇಜನಾಡಿ]
ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ,
ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ,
ಇಂತೀ ಪಂಚಪಥವನೈದುವ ನಾಡಿಯಲ್ಲಿ ಆಡುವ
ಆತ್ಮನ ವಿವರದ ದೆಸೆಯನರಿದು,
ಇಂತೀ ಐದು ಮುಚ್ಚಿ ಮೇಗಳ ಬ್ರಹ್ಮರಂಧ್ರದಲ್ಲಿಯೆಯಿದರೆಮ್ಮ ವೈದ್ಯರು.
ನಾದ ಬಿಂದು ಕಳೆಗತೀತ ನೋಡಾ,
ಮರುಳಶಂರಪ್ರಿಯ ಸಿದ್ಧರಾಮೇಶ್ವರಲಿಂಗವು./1
ಅಪ್ಪು ತನುವಿನ ಶ್ರೇಷ್ಠವಾಗಲಾಗಿ, ವಾತ ಪಿತ್ತ ಶ್ಲೇಷ್ಮ ಬಲಿಯಿತ್ತು.
ಮಜ್ಜೆ ಮಾಂಸ ನರ ಅಸ್ಥಿಗಳಲ್ಲಿ ವೇಧಿಸಿತ್ತು.
ಆ ವೇಧನೆಯಿಂದ ಸರ್ವಾಂಗವ ದಹಿಸಿ, ದ್ವಾರದ್ವಾರಂಗಳಲ್ಲಿ ಮುಚ್ಚಿ,
ಅಗ್ನಿಯ ಗುಣ ಒಂದು, ಅಪ್ಪುವಿನ ಗುಣವೈದು.
ಇಂತೀ ಗುಣ ಶರೀರದಲ್ಲಿ ಲಕ್ಷಿಸಲಾಗಿ ಜೀರ್ಣಿಸದೆ,
ಆ ಜೀವನ ಪ್ರಮಾಣಿಸಿ ಕಲ್ಪನೆ ತೀರುವನ್ನಕ್ಕ ದೇಹದ ದರ್ಪಗೆಡಿಸಿ,
ಇಪ್ಪುದ ಸೋದಿಸಿಕೊಂಡು, ತ್ರೈಮಲ ಲಕ್ಷಣವ ಸೋಧಿಸಿಕೊಂಡು,
ವೈದ್ಯ ಪ್ರಯೋಗದಿಂದ ಆತ್ಮನ ಭೇದಿಸಿಕೊಂಡು,
ಹಂಸನು ಇಹ ಇರವೆಂಬ ತೆರನ ತಿಳಿದು,
ರಸ ನಾಲಗೆಯಲ್ಲಿ, ಗಂಧ ನಾಸಿಕದಲ್ಲಿ , ರೂಪು ಕಂಗಳಲ್ಲಿ,
ಶಬ್ದ ಕಿವಿಗಳಲ್ಲಿ, ಸ್ಪರುಶನ ಕೈಗಳಲ್ಲಿ ,
ಇಂತಿ ಪಂಚೇಂದ್ರಿಯಂಗಳಲ್ಲಿ ಉಷ್ಣ ಶೈಕ್ಯವಪ್ಪುದನರಿದು,
ನಾಲಿಗೆಯಲ್ಲಿ ದ್ರವವನರಿದು,
ನಾಸಿಕದಲ್ಲಿ ಗಂಧವ ಸೂಸುವ ವಾಯುವಶೈತ್ಯವನರಿದು,
ಕರ್ಣವಾಸದಲ್ಲಿ ಶಬ್ದ ಸೂತ್ರಗೆಟ್ಟು,
ನೇತ್ರದಲ್ಲಿ ಕಪೋತ ಸಿಕ್ಕಿ, ಶ್ವೇತವಿಹಿತವಾಗಿ ಗರ್ಭಿಕರಿಸಿದ ಮತ್ತೆ
ವೈದ್ಯದಲೇತರ ಗುಣ.
ಇಂದ್ರಿಯಗುಣರೋಗಕ್ಕೆ ಜ್ಞಾನವೈದ್ಯ ನೋಡಾ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಾ./2
ಅರಿಯದವಂಗೆ ಅರಿದಿಹೆನೆಂಬ ಬಯಲರೋಗ ಹುಟ್ಟಿ,
ಕಾಲುಗೆಟ್ಟು ದೃಷ್ಟಿ ನಷ್ಟವಾಗುತ್ತಿದೆ ನೋಡಾ !
ಅದಕ್ಕೆ ನಾನೊಂದ ಮದ್ದ ಕಂಡೆ. ಹೆಸರಿಲ್ಲದ ಗಿಡ, ಮೂಲವಿಲ್ಲದ ಬೇರು.
ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು,
ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು,
ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ ಇಕ್ಕುವದಕ್ಕೆ ಮೊದಲೆ,
ಮದ್ದಿನ ದೃಷ್ಟ ನಷ್ಟವಾಯಿತ್ತು ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ. /3
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ?
ಆತ್ಮನೆಂದಡೆ ಸಾಯದು ಚಿತ್ತ ,
ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ.
ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ,
ಆ ಎರಡರ ಸಂಗದಿಂದ ರುಜೆ ಪ್ರಮಾಣು.
ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ
ನಾನೊಂದು ಔಷಧಿಯ ಭೇದವ ಹೇಳಿಹೆ.
ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು.
ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ.
ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ.
ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ.
ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ.
ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ./4
ಅಸ್ಥಿ ಮಾಂಸ ಶುಕ್ಲ ಶೋಣಿತವುಳ್ಳನ್ನಕ್ಕ
ಆರಿಗೂ ಅದಿವ್ಯಾಧಿಯ ತಾಪತ್ರಯದ ತನುತ್ರಯದ ಕೂಟಸ್ಥ ಬಿಡದು.
ರೋಗವನರಿದು ವೈದ್ಯವ ಮಾಡಿಹೆನೆಂದಡೆ,
ತನು ಪ್ರಮಾಣು, ಪೈತ್ಯಪ್ರಮಾಣು, ವಾತಪ್ರಮಾಣು,
ಶ್ಲೇಷ್ಮಪ್ರಮಾಣು, ಆತ್ಮತತ್ವಪ್ರಮಾಣು, ಚಂದ್ರ ಸೂರ್ಯ ಬಿಂದು ಪ್ರಮಾಣು,
ಮಿಕ್ಕಾದ ಸರ್ವಾಂಗ ಪ್ರಮಾಣ ಹೇಳಿಹೆನೆಂದಡೆ,
ಮರೀಚಿಕಾಜಲದಂತೆ, ಸುರಚಾಪದಂತೆ,
ಆಕಾಶದ ಪರಿಬಣ್ಣದಂತೆ, ಇಂತೀ ಶರೀರದ ತೆರ.
ಅಲ್ಪಾಂತರ ತಿರುಗುವನ್ನಕ್ಕರ ಶರೀರ ಸಿಕ್ಕುಹುದಲ್ಲದೆ,
ಮತ್ತೆಯೂ ಆತ್ಮನ ಕಟ್ಟಿಕೊಂಡಿಹೆನೆಂದಡೆ ಸತ್ವವುಂಟೆ ?
ವ್ಯಾಧಿಯಲ್ಲಿ ಹೊಂದುವ ತೆರನಾದಡೆ,
ಬ್ರಹ್ಮಂಗೆ ಸೃಷ್ಟಿಯಿಲ್ಲ, ವಿಷ್ಣುವಿಂಗೆ ಸ್ಥಿತಿ ಇಲ್ಲ, ರುದ್ರಂಗೆ ಲಯವಿಲ್ಲ.
ಇಂತೀ ಕರ್ಮಕಾಂಡದಲ್ಲಿ ಪ್ರಾಪ್ತಿ, ವರ್ಮಕಾಂಡದಲ್ಲಿ ಸರ್ವ,
ಜ್ಞಾನಕಾಂಡದಲ್ಲಿ ತ್ರಿವಿಧವಳಿದ ಮಹದೊಡಗೂಟ.
ಇಂತೀ ಜಗದಲ್ಲಿ ಒಂದನಹುದು, ಒಂದನಲ್ಲಾ ಎಂದಡೆ,
ಅಮೃತಕ್ಕೂ ಸುರಾಪಾನಕ್ಕೂ ಸರಿಯೆಂದು ಮಾರುವನ ತೆರದಂತೆ,
ಆರಾರ ತೆರನನು ನೋಡಿ ಸುಖಿಯಾಗಿ,
ತನ್ನನರಿವರಲ್ಲಿ ಮನಮುಕ್ತವಾಗಿ ಉಭಯವಳಿದು ಒಡಗೂಡಬೇಕು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಕಳುಹಿದಂತೆ ಮಾಡಿ,
ಭಕ್ತಿಗೆ ಖೋಡಿ ಇಲ್ಲದೆ ಸತ್ಯವನೊಡಗೂಡಬೇಕು. /5
ಆರು ವರ್ಣದ ಬೇರು ಮೂರು ವರ್ಣದ ಉದಕ,
ರವೆ ತೋರಬಾರದ ಕಲ್ಲು, ಇಂತಿವ ಮೀರಬಾರದ ಗುಂಡು.
ಇಂತಿವ ಭೇದಿಸಿ ಅರೆಯಲಾಗಿ ಸವೆಯಿತ್ತು ಮದ್ದು , ವಿಶ್ವಾಸವೆಂಬ ತಟ್ಟೆಯಲ್ಲಿ.
ಭಕ್ತಂಗೆ ಮೂರು, ಮಾಹೇಶ್ವರಂಗೆ ನಾಲ್ಕು,
ಪ್ರಸಾದಿಗೆ ಐದು, ಪ್ರಾಣಲಿಂಗಿಗೆ ಆರು,
ಶರಣಂಗೆ ಎಂಟು, ಐಕ್ಯಂಗೆ ಹತ್ತು ಇಂತೀ ಕ್ರಮದಲ್ಲಿ ಕೊಂಡ ಮತ್ತೆ ,
ಮೂರು ನಾಲ್ಕುಗೂಡಿ, ಆರು ಎಂಟುಗೂಡಿ,
ಎಂಟುಹತ್ತುಗೂಡಿ ನಷ್ಟವಾದ ಮತ್ತೆ ,
ರೋಗದ ಕಟ್ಟು ತೊಟ್ಟು ಬಿಟ್ಟಿತು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ. /6
ಇಂತು ಐದುನಾಡಿಗಳೊಳಗಾದ ಇಪ್ಪತ್ತೇಳು ನಾಡಿ, ಬಾಹ್ಯದಲ್ಲಿ ಆಡುವವು.
ಜೀವಗತಿಯಾಗಿ ಅಸ್ಥಿನರನಾಳ ಮಧ್ಯದಲ್ಲಿ ಅಂತ್ಯನಾಡಿ.
ಆತ್ಮ ಚೇತನ ಅಸ್ಥಿಯೊಳಗಾದ ಸಂದುಸಂದಿನ ಮಜ್ಜೆಯ ಮಧ್ಯದಲ್ಲಿ ಸ್ವಪ್ನನಾಡಿ.
ಇಂತೀ ಉಭಯನಾಡಿ ಸುಷುಪ್ತಿಯ ಸುಷುಪ್ತಿಯಲ್ಲಿ
ಪರವಶನಾದ ಪರಬ್ರಹ್ಮನೋಡಾ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವಲಿಂಗವು./7
ಐದು ತತ್ತ್ವಂಗಳಿಂದಾದ ದೇಹಕ್ಕೆ ರೋಗರುಜೆಯಹುದೆ ?
ಕಾಯತತ್ವಂಗಳ ಗೊತ್ತಿನಲ್ಲಿ ನಿಂದು,
ಅವರವರ ಚಿಕಿತ್ಸೆಯಲ್ಲಿ ಹೊತ್ತು ನಿತ್ತರಿಸುವುದೆ ಕ್ರಮ.
ಅದೆಂತೆಂದಡೆ : ಭಕ್ತಿನಿಷ್ಠೆ , ವಿಶ್ವಾಸನಿಷ್ಠೆ, ಜ್ಞಾನನಿಷ್ಠೆ.
ಇಂತಿ ಸದ್ಭಾವ ನೆಲೆಗೊಳ್ಳದ ಕಾರಣ,
ತನುವಿಂಗೆ ಅನುಪಾನವ ಪಾನವ ಮಾಡಬೇಕು.
ಮೇಲೆ ಅರಿದಡೆ, ಮನವು ಮನದಲ್ಲಿ ನಿಲಬೇಕು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನೊಡಗೂಡಬೇಕು./8
ಕಕ್ಕಯ್ಯನೆನಗೆ ಕಾಮಧೇನುವಯ್ಯ. ಚೆನ್ನಯ್ಯನೆನಗೆ ಕಲ್ಪವೃಕ್ಷವಯ್ಯಾ.
ಹರಳಯ್ಯನೆನಗೆ ಚಿಂತಾಮಣಿಯಯ್ಯಾ.
ಕೆಂಭಾವಿಯ ಭೋಗಯ್ಯನೆನಗೆ ಸುದಾಬ್ಧಿಯಯ್ಯಾ.
ಶಿವನಾಗಮಯ್ಯನೆನಗೆ ಪರುಷದ ಗಿರಿಯಯ್ಯಾ.
ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು ಬದುಕಿದೆನಯ್ಯಾ.
ಮರುಶಂಕರಪ್ರಿಯ ಸಿದ್ಧರಾಮೇಶ್ವರಯ್ಯಾ. /9
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ?
ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ?
ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ.
ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ.
ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ.
ಇದು ನಿರಿಗೆ ಕೊಳಬಲ್ಲಡೆ,
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ./10
ಕಾಯಕರ್ಮವ ಅನುಭವಿಸುತ್ತ ಮತ್ತೆ , ದಿವ್ಯಜ್ಞಾನದ ಮಾತದೇತಕ್ಕೆ ?
ವಾಗ್ವಾದಕ್ಕೂ ದಿವ್ಯಜ್ಞಾನಕ್ಕೂ ಅನುಪಾನಉಂಟೆ ?
ರಸವಾದದ ಬೇರ ಕದ್ದ ಚೋರನಂತೆ,
ಅದರ ಭೇದವನರಿಯ, ಅದ ವೇಧಿಸಿ ಕಾಣ.
ಕಳಂಕ ಹೋದ ಹೊಲಬನರಿಯ, ಆ ಚೋರನ ಮಾತ ವೇದಿಗಳೊಪ್ಪುವರೆ ?
ಇಂತಿ ಭೇದವ ತಿಳಿದು, ಷಡುಸ್ಥಲವೇದಿಗಳಾಗಬೇಕು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ,
ಅರಿವಿನಲ್ಲಿ ವೇಧಿಸಿಕೊಳ್ಳಬೇಕು. /11
ಜಿಹ್ವೆಂದ್ರಿಯವೆಂಬ ರೋಗ ಬಾಯಲ್ಲಿ ಹುಟ್ಟಿ,
ಗುಹ್ಯೇಂದ್ರಿಯವೆಂಬ ರೋಗ ಚಿತ್ತದಲ್ಲಿ ತತ್ತರಿಸುತ್ತಿದೆ ನೋಡಾ.
ಆಸೆಯೆಂಬ ರೋಗ ಸರ್ವಾಂಗದಲ್ಲಿ ಹೊಕ್ಕು,
ಸರ್ವರಿಗೆಲ್ಲಕ್ಕೂ ಪಾಷಂಡಿ ವೇಷಧಾರಿಗಳೆನಿಸುತ್ತಿದೆ ನೋಡಾ.
ಈ ರೋಗ ನಿರೋಗವಹುದಕ್ಕೊಂದು ಮದ್ದುಂಟು.
ಅದು ಬೇರು ಮೂರು, ಶಾಖೆ ಐದು, ಎಲೆ ಆರು, ಕೊನೆ ಇಪ್ಪತ್ತೈದು.
ಇಂತೀ ಗಿಡುವ ಸಹ ಮೂಲಸಹಿತ ತಂದು, ಕಂಗಳ ಕಲ್ಲಿನಲ್ಲಿ ಇಂಗಿಸಿ,
ಆನಂದಾಶ್ರುವೆಂಬ ಜಲವನೆರೆದು,
ಚಿತ್ತಶುದ್ಧವೆಂಬ ಗುಂಡಿನಲ್ಲಿ ಲಕ್ಷಿಸಿ ಅರೆಯಲಾಗಿ, ಮದ್ದು ನೀರೊಳಡಗಿತ್ತು .
ಕಲ್ಲು ಗುಂಡಿನಲ್ಲಿಗೆ ಸಾಧ್ಯವಲ್ಲದೆ ಹೋಯಿತ್ತು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿಗೆ./12
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ
ವ್ಯಾಧಿಯ ಚಿಕಿತ್ಸೆಯನಾರು ಅರಿಯರಲ್ಲಾ !
ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ , ಆತ್ಮಂಗೆ ಆಣವ, ಮಾಯಾ, ಕಾರ್ಮಿಕ.
ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ,
ಬಂಧನದಲ್ಲಿ ಸಾವುತ್ತಿದೆ ಅಂಗ.
ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ.
ಒಂದ ಅಂಗದಲ್ಲಿ ಮದರ್ಿಸಿ, ಒಂದು ಆತ್ಮನಲ್ಲಿ ಮಥನಿಸಿ,
ಒಂದ ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು.
ಇದಕ್ಕನುಪಾನ ಇದಿರೆಡೆಯಿಲ್ಲ ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ./13
ನವಪಾಷಾಣ ರಸ ಮುಂತಾದ ಔಷಧಿಗಳೆಲ್ಲವೂ
ಈ ಮೂರು ಮೂಲಿಕದೊಳಗು. ಇವು ಮತ್ರ್ಯದ ಜೀವರ ಚಿಕಿತ್ಸೆ.
ಭಕ್ತಂಗೆ, ನಿಷ್ಠಾಪರಂಗೆ, ಸುಚಿತ್ತ ನಿರ್ಮಲ ವಿರಕ್ತಂಗೆ,
ರೋಗರುಜೆಯಡಸಿದಲ್ಲಿ ತನುವಿಂಗೆ ಕ್ರೀ ಮಾಡಿದಡೂ ದೋಷವಿಲ್ಲ.
ಅದೆಂತೆಂದಡೆ : ಉಷ್ಣಕ್ಕೆ ಶೈತ್ಯ ನೆರವಣಿಗೆಯಾದಂತೆ,
ಪಂಚಭೌತಿಕದಿಂದಾದ ಶರೀರಕ್ಕೆ ಚಿಕಿತ್ಸೆ,
ಅರಿವು ತಲೆದೋರಿದ ರೇತಕ್ಕೆ ಸಾವಧಾನದಲ್ಲಿ ತ್ರಿವಿಧದ ಬಿಡುಗಡೆ.
ತ್ರಿವಿಧಕಿತ್ತು ವಸ್ತುವನೊಡಗೂಡಿ ಎಂಯ್ದಿದವಂಗೆ
ರೋಗದಡಿಯಲ್ಲಿ ಸತ್ತವನಲ್ಲ,
ಮರುಳಶಂಕರರಪ್ರಿಯ ಸಿದ್ಧರಾಮೇಶ್ವರಲಿಂಗದಡಿಯೊಳಗಡಗಿದವಾ./14
ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ,
ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ,
ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ,
ಇವರಿಂದ ರುಜೆದರ್ಪಂಗಡಗು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ. /15
ಪಿಂಡ ಪ್ರಾಣ ಆರೋಗ್ಯಂಗಳ ಚಿಕಿತ್ಸೆಯನರಿದು,
ವೈದ್ಯವ ಮಾಡಬಲ್ಲಡೆ ಪಂಡಿತನಪ್ಪ.
ಘಟತ್ರಯದ ಭೇದವನರಿದು ಮಾಡುವ ಕ್ರಮವೆಂತುಂಟೆಂದಡೆ :
ಕಟಿ ಮೊದಲಾದ ಕೀಳುದೆಸೆಯಲ್ಲಿ ಸಂದಿನ ಭೇದ.
ಅಂಗುಲಿ ಸಂದು ಇಪ್ಪತ್ತು, ಮಡಸಂದು ಎರಡು, ಪಚ್ಚಳ ಸಂದು ಎರಡು.
ಇಂತೀ ಅಧಮನಾಳದಿಂದ ಕೆಳಗಾದ ನಾಳ ನಾಡಿಗಳ ಸೋಧಿಸಿಕೊಂಡು,
ಊಧ್ರ್ವದಂಡದಲ್ಲಿ ಉಭಯಪಕ್ಷದಲ್ಲಿ ಕೆಲವರಿದ ಸಂದು ಅರುವತ್ತಾರು.
ಅಂತು ಕೀಳು ಮೊದಲಾದ ಸಂದು ನರ ಇಪ್ಪತ್ತನಾಲ್ಕು.
ಅದರಿಂದ ಮೊದಲಾದ ಉಭಯಕರದ ಸಂದು,
ಅಂಗುಲಿಯ ಸಂದು ಇಪ್ಪತ್ತಂಟು. ಇಂತೀ ಉಭಯಕರದ ಸಂದಾರು.
ಇಂತೀ ಕರದೊಳಗಾದ ಮೂವತ್ತುನಾಲ್ಕರ ಸಂದಿನ
ನಾಳನಾಡಿಗಳನರಿದು, ಅದರಿಂದ ಮೇಲೆ ಸಂಪುಟವೆರಡು.
ಜಿಹ್ವೆ ಮೊದಲಾದ ಏಳುದ್ವಾರಂಗಳ ಸೋಧಿಸಿಕೊಂಡು,
ಕಪಾಲದ ತ್ರಿವಿಧದ ಹೊಲಿಗೆಯ ಕಂಡು, ಅಂಗುಷ್ಟ ತೊಟ್ಟು
ವಾಣಾಗ್ರಪರಿಯಂತರದಲ್ಲಿ ಸ್ಥಾನವ ಮುಟ್ಟಿ ನೋಡಿ,
ರವಿ ಶಶಿ ಪವನ ಪಾವಕ ಮುಟ್ಟಿ ಎಡೆಯಾಡುವ ಲಕ್ಷಣವ ಕಂಡು,
ಅವಕ್ಕೆ ಚಿಕಿತ್ಸೆಯಪ್ಪ ಅನ್ನ ಔಷಧಿ ಪಯಪಾನ ಉದಕ
ಮುಂತಾದ ತೆರವನರಿದಡೆ, ಆತನೆ ಇರವನರಿದವ.
ಇಂತೀ ಕಾಯಕದ ವೈದ್ಯವ ಮಾಡಬಲ್ಲವ,
ಮೇಲನರಿದು ಕೀಳ ಮರೆಯಬಲ್ಲಡೆ, ಆತ ವೈದ್ಯಪಂಡಿತನೆಂಬೆ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ ಬಲ್ಲವ./16
ಭಕ್ತಂಗೊಂದೆ ವಾಕ್ಯಸ ಬಾಳೆಗೊಂದೆ ಫಲ.
ವಿರಕ್ತ ಬಿಟ್ಟುದ ಹಿಡಿದಲ್ಲಿ ಮತ್ತೆ ಮುಟ್ಟಿದಡೆ ಸತ್ತನಾಯ ಹಡುಹು.
ಮತ್ತೆ ಸತ್ಕ್ರಿಯೆಯಲ್ಲಿ ನಡೆವವ ತನ್ನ ನಿತ್ಯನೇಮವ ತಪ್ಪಿ,
ಕೆಟ್ಟು ನಡೆದು, ಮತ್ತೆ ದ್ರವ್ಯವ ಕೊಟ್ಟು,
ಭಕ್ತರೊಡೆಯರಲ್ಲಿ ತಪ್ಪ ಪರಿಹರಿಸಿಕೊಂಡಿಹೆನೆಂದು
ಬಹಮಿಟ್ಟೆಯ ಭಂಡರ ಕಂಡಡೆ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ
ಲಿಂಗವಾಯಿತ್ತಾದಡೂ ಒಡಗೂಡಲೊಲ್ಲೆ./17
ಮಯೂರನಾಡಿ, ಮಂಡೂಕನಾಡಿ, ಜಳೂಕನಾಡಿ, ಅಹಿವಳಿನಾಡಿ,
ಮಂಡಲಗಮಕನಾಡಿ, ಷಂಡೇತಪಥನಾಡಿ, ದೀರ್ಘನಾಡಿ,
ಅಧಮನಾಡಿ, ಉತ್ತರನಾಡಿ, ಪೂರ್ವನಾಡಿ. ಪಶ್ಚಿಮನಾಡಿ,
ಗಜಗಮನನಾಡಿ, ಹಚ್ಚೋತಿನಾಡಿ, ವಿಕ್ರಮನಾಡಿ, ಸೂತ್ರನಾಡಿ,
ಸಂಚುನಾಡಿ, ಸಂಚಲನಾಡಿ, ಶೈತ್ಯನಾಡಿ, ಉಷ್ಣನಾಡಿ,
ವಿಹಂಗನಾಡಿ, ಕೂರ್ಮನಾಡಿ, ಮರ್ಕಟನಾಡಿ,
ಪಿಪೀಲಿಕಾನಾಡಿ, ದಂಷ್ಟ್ರನಾಡಿ, ಮಕರನಾಡಿ, ಕಕರ್ೊಟಕನಾಡಿ,
ಸಮರಸನಾಡಿ, ಸಂತೋಷನಾಡಿ.
ಇಂತೀ ಪ್ರಥಮನಾಡಿಯೊಳಗಾದ ಶರೀರದಲ್ಲಿ ತೋರುವ ನಾಡಿ
ಜೀರ್ಣ ಪರ್ಣದಂತೆ ರೋಮಕೂಪದಲ್ಲಿ ಸೂಸುವ ವಾಯು,
ಇಂತಿವ ನೋಡಿ ವ್ಯಾಧಿಕ್ರಮವನರಿತೆಹೆನೆಂದಡೆ ಅದಾರಿಗೂ ಅಸಾಧ್ಯ.
ನಾ ಮೂರುನಾಡಿಯ ಬಲ್ಲೆ,
ಉತ್ಪತ್ಯ ಒಂದು ಸ್ಥಿತಿ ಎರಡು, ಲಯ ಮೂರು.
ನಾಳದ ನಾಡಿಯ ಬಲ್ಲೆ, ಭಕ್ತಿಯೆಂಬ ಹಸ್ತವಿಡಿದು ನೋಡಲಾಗಿ.
ಗುರುನಾಡಿ ಉಭಯವ ಕೊಂಡೆಡೆಯಾಡುತ್ತಿದೆ,
ಲಿಂಗನಾಡಿ ತ್ರಿವಿಧಸಂಧಿಯೊಳಗೆ ಸೂಸುತ್ತಿದೆ.
ಜಂಗಮನಾಡಿ ಮೂರರ ಹಂಗು ಬಿಟ್ಟು ಮಹದಲ್ಲಿ ಸಂದಿರುತ್ತದೇಕೊ ?
ಇದು ಲಿಂಗಾಂಗಿಗಳ ವೈದ್ಯ.
ಸಂಗನಬಸವಣ್ಣ ಬಂದಾಗ ಎನ್ನ ಕೊಂಡು ಬಂದ,
ತನ್ನ ವಶಕ್ಕೆ ವೈದ್ಯನೆಂದು.
ಈ ವೈದ್ಯದ ಚೀಲವ ಹೊತ್ತು ಗಸಣಿಗೊಳ್ಳುತ್ತಿದೇನೆ.
ಈ ಕಾಯಕದ ಸೇವೆಯ ಬಿಡಿಸಿ, ಕರಣಪ್ರಸಾದವ ಕೊಟ್ಟು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ನಿಮ್ಮಡಿಯೊಳಗೆನ್ನನಿರಿಸು./18
ವಾತ ಪಿತ್ತ ಶ್ಲೇಷ್ಮಂಗಳಿಂದ ವ್ಯಾಧಿ ಬಂದಿತ್ತೆಂದು ನುಡಿವರು,
ಪಂಡಿತ ವರ್ಗಂಗಳೆಲ್ಲರು.
ಕರಣನಾಳದ ನಾಡಿಯ ಮುಟ್ಟಿ ನೋಡಿ,
ವಾಯುಗತಿ ನಡೆವ ವರ್ಗಂಗಳ ನೋಡಿ,
ಮಂದಗತಿ, ತಮಂಧಗತಿ, ತಾರುಗತಿ, ತ್ರಯಗತಿ, ಚತುರ್ಗತಿ, ಪಂಚಗತಿ.
ಇಂತೀ ಐದಂಗುಲಿಗೈದು, ನಾಳದ ನಾಡಿ ಸೂತ್ರಗಳ ಭೇದವನರಿದೆವೆಂದು,
ದೀಪನ ಪಚನ ಪೈತ್ಯ ಶ್ಲೇಷ್ಮವಿದೆಯೆಂದು
ಆತ್ಮನ ನಿಹಿತವನರಿಯದ ತೂತವೈದ್ಯನಲ್ಲ.
ಆತ್ಮಹಂಸನು ಷಡಾಧಾರವ ಮುಟ್ಟಿ, ಅಷ್ಟದಳ ಕಮಲವ ಮೆಟ್ಟಿ,
ಮಿಕ್ಕಾದ ದ್ವಾರಂಗಳಲ್ಲಿ ತಟ್ಟಿ ಮುಟ್ಟದೆ ಹೋಹ
ಭೇದವ ಬಲ್ಲಡೆ, ನಾಡಿಯಲಾಡುವ ಆತ್ಮನ ಭೇದವ ಬಲ್ಲವ.
ಆತ್ಮನ ಸೋದಿಸಿ ತಿಳಿದಡೆ, ರುಜೆ ರೋಗವಳಿಯಿತ್ತಲ್ಲಿಯೆ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ./19
ವೈದ್ಯವೆಂದು ಮಾಡುವಲ್ಲಿ ನಾನಾಮೂಲಿಕೆ, ವನದ್ರವ್ಯ ಸಹ ಮುಂತಾಗಿ,
ಲವಣ, ಪಾಷಾಣ, ಲೋಹ, ಪಂಚಸಿಂಧೂರಂಗಳಿಂದ
ರಸ ದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ
ಸರ ಸಂದಾನ ವಿಹಂಗ ಮೃಗ ನರ ಮತ್ತಿವರೊಳಗಾದ
ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮಸಿದ್ಧಿಯಾಗಿ,
ತಾ ಮಾಡಿದ ಔಷಧ ಪ್ರಸಿದ್ಧವಾಗಿ,
ಇಂತಿವ ಪ್ರಮಾಣಿಸಿಕೊಂಡು, ಇದರ ರುಜೆಯ ಪರಿಹರಿಸಿದೆನೆಂಬಲ್ಲಿ,
ಅವನ ದೃಷ್ಟಿ ಮುಟ್ಟಿ, ಸತ್ವ ಸಮಾಧಾನ ಅವಗಡಿಸಿದ
ವ್ಯಾಧಿಯ ಚಿತ್ತವನರಿದು, ವೈದ್ಯವ ಲಕ್ಷಿಸಬೇಕು.
ಅವನ ಶರೀರದ ಕಟ್ಟಳೆಯನರಿದು, ತನ್ನ ಔಷಧಿಯ ದೃಷ್ಟವ
ಪ್ರಮಾಣಿಸಿ, ಅವನಂಗದ ಪೃಥ್ವಿಗುಣ, ಅಗ್ನಿಗುಣ,
ವಾಯುಗುಣ, ಆಕಾಶಗುಣ,
ಇಂತೀ ಪಂಚಗುಣ ಕರತಳನಾಡಿಯಲ್ಲಿದು ಆಡುವ
ಐದು ಜೀವದ ಗುಣಮಂ ತಿಳಿದು,
ಷಡಾಧಾರಂಗಳ ಸ್ವಸ್ಥಾನಮಂ ಮುಟ್ಟಿ ನೋಡಿ,
ಆ ಮನ ವಿರೋಚನಕ್ಕೆ ಪ್ರಮಾಣದಲ್ಲಿ ಪ್ರಮಾಣಿಸಿ,
ಸುಮನ ಸುಗತಿಯಲ್ಲಿ ಪಿಂಡ ಪ್ರಾಣಾರೋಗ್ಯದಿಂದ ರುಜೆಯ
ಸಂಬಂಧವ ಮುರಿದವ ಪಂಡಿತನಪ್ಪ.
ಅದರಂದವ ತಿಳಿದು ಬಂದೆ, ಸರ್ವಾಂಗಲಿಂಗಿಗಳಿಗೆ ಪಂಡಿತನಾಗಿ,
ಮೂರ ಮುರಿದು, ಆರನರದು, ಏಳ ಕಿತ್ತು,
ಎಂಟು ಗಂಟನಿಕ್ಕಿ, ಈರಾರ ಮಾರಿ, ಹದಿನಾರ ವೇಧಿಸಿ,
ಇಪ್ಪತ್ತೈದು ನಷ್ಟವಮಾಡಿ, ಮುೂವತ್ತಾರ ತೂರಿ,
ಗಾರುಮಾಡಿ, ಐವತ್ತೆರಡರ ಉಲುಹಿನ ಬಲೆಯ ಹರಿದು,
ಸಿಂಧೂರ ಬಂದಿದೆ ಕೊಳಬಲ್ಲಡೆ ಕೊಳಬಾರದೆ ?
ಕೊಂಡಡೆ ತ್ರಿವಿಧದ ತೊಟ್ಟು ಬಿಟ್ಟು,
ಭವಮಾಲೆಯ ಕಟ್ಟಿದ ಕ್ರಮ ಒಡೆದು,
ವಸ್ತುವಿನ ನಿಜನಿಳಯದ ಬಟ್ಟೆಯ ಹೋಹೆ.
ಇದು ದೃಷ್ಟ, ಪ್ರಮಥರ ಪ್ರಸನ್ನ ಸಾಕ್ಷಿ.
ಎನ್ನ ವೈದ್ಯದ ಕ್ರಮ ಸರ್ವವಿಕಾರದ ಭವಹರಿವ ತೆರ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ವೈದ್ಯ ವೈದ್ಯನಾದ./20

ಹೊರನಾಳ ಎಂಟುಕೋಟಿ, ಒಳನಾಳ ನೂರೆಂಟು.
ಹೊರದ್ವಾರ ಒಂಬತ್ತು, ಒಳದ್ವಾರ ಸರ್ವಾಂಗಮಯ.
ಇಂತೀ ಪಂಚತತ್ವ, ಅಷ್ಟಗುಣಂಗಳು ಕೂಡಿ,
ಘಟ್ಟಿಗೊಂಡ ತನು ಶುಕ್ಲ ಶೋಣಿತ ಮಜ್ಜೆ ಮಾಂಸ
ಎಲುವು ಸರ ಚರ್ಮ ರೋಮ.
ಇಂತೀ ಅಷ್ಟಗುಣಂಗಳ ಕಷ್ಟೋತ್ತರದಲ್ಲಿ ಸಿಕ್ಕಿದ ಆತ್ಮಂಗೆ,
ಇಂದ್ರಿಯಂಗಳ ರೋಗವಿಡಿದು ಬಂಧ ಮೋಕ್ಷ ಕರ್ಮಂಗಳೆಂಬ
ಶೀತ ಜ್ವರ ತಾಪಂಗಳಲ್ಲಿ ವ್ಯವಹರಿಸುವ ಆತ್ಮಂಗೆ,
ನಾನೊಂದು ನಿಹಿತದ ಮದ್ದ ಕಂಡೆ.
ಅದು ಅರೆವಡೆ ಅಸಾದ್ಯ, ಸುಮ್ಮನೆ ಮೆಲುವಡೆ ಸವೆಯದು.
ದೃಷ್ಟಿ ನಟ್ಟು ಮುಚ್ಚಿರಲಿಕ್ಕಾಗಿ ರೋಗರುಜೆ ಬಚ್ಚಬಯಲು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ./21