Categories
ವಚನಗಳು / Vachanagalu

ಶಂಕರದಾಸಿಮಯ್ಯನ ವಚನಗಳು

128
ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ,
ನಿಜಗುರು ಶಂಕರದೇವಾ.

129
ಎರಳೆ ಯತಿಯಂತೆ, ಕಾಕ ಪಿಕದಂತಿರಬೇಡವೆ ?
ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ!
ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ.
ಅರಿದಡೆ ಶರಣ, ಮರೆದಡೆ ಮಾನವ.
ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ
ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ.

130
ಕಾಯದ ಮದವಳಿದಲ್ಲದೆ ಮಾಯಾವಿಕಾರವಳಿಯದು.
ಮಾಯಾವಿಕಾರವಳಿದಲ್ಲದೆ ಭವನಾಶವಾಗದು.
ಭವನಾಶವಾದಲ್ಲದೆ ಲಿಂಗಸಂಬಂಧವಳವಡದು.
ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.
ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು.
ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.
ಇಂತಪ್ಪ ಮಹಾನುಭಾವದ ಮೂರ್ತಿ
ಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು ಕಾಣಬಂದಿತ್ತು.
ಇದು ಕಾರಣ, ನಿಜಗುರು ಶಂಕರದೇವರ ಶರಣ
ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.

131
ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ,
ಮಥನವಿಲ್ಲಾಗಿ ಭಾವವಿಲ್ಲ, ಭಾವವಿಲ್ಲಾಗಿ ಬಯಕೆಯಿಲ್ಲ,
ಬಯಕೆಯಿಲ್ಲಾಗಿ ನಿರ್ಭಾವ ನಿಜವನೈದಿ,
ನಿಜಗುರು ಶಂಕರದೇವರೆಂಬುದು ತಾನಿಲ್ಲ.

132
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.