Categories
ವಚನಗಳು / Vachanagalu

ಸುಂಕದ ಬಂಕಣ್ಣನ ವಚನಗಳು

ಅಂಗದಲ್ಲಿದ್ದು ಅವಧಾನಿಯಾಗಿ,
ಭಾವದಲ್ಲಿದ್ದು ಭವಚ್ಛೇದನವಾಗಿ,
ಸುಖದಲ್ಲಿದ್ದು ಅಸು ಅಂತಕನಾಗಿ,
ಸಕಲಭೋಗಂಗಳಲ್ಲಿದ್ದು ಭೋಗವಿರಾಗನಾಗಿ,
ಬಂಕೇಶ್ವರಲಿಂಗವ ನೋಡುತ್ತಿದ್ದು
ನೋಡದಂತಿರು, ಮನ ಘನದಲ್ಲಿ ನಿಂದು./1
ಅಂಬರ ಸಂಭ್ರಮದ ಬಾಗಿಲಲ್ಲಿ,
ನಾನಾ ಚೆಂದದ ಗುಡಿತೋರಣ, ಮಕರಪತಾಕೆ,
ಧನುಚ್ಛಾಯ, ಸರ ತೋರಿ ಎತ್ತುತ್ತದೆ.
ಕಂಡು ಎವೆ ಹಳಚೂದಕ್ಕೆ ಮುನ್ನವೆ ಅಳಿವುತ್ತದೆ.
ಅರಿ ಅರಿವುದಕ್ಕೆ, ಹಿಂಚುಮುಂಚು ಬಂಕೇಶ್ವರಲಿಂಗವ./2
ಅಂಬುಧಿಯಲ್ಲಿ ಹಡಗು ಬರುತ್ತಿರಲಾಗಿ,
ಹಡಗಿನ ಕುಕ್ಕೊಂಬಿನ ಮೇಲೆ ಒಂದು ಕರಡಿ ಬಂದಿತ್ತು.
ಆ ಕರಡಿಗೆ ಕಾಲು ಮೂರು, ಕಣ್ಣು ಒಂದು, ಬಾಲ ಕಡೆಯಿಲ್ಲ.
ಬಂಕೇಶ್ವರಲಿಂಗಕ್ಕೆ ಹಡಗಿನ ಸುಂಕ ಕಡೆನಡುವಿಲ್ಲ./3
ಅಕ್ಕನ ಮೂಲೆಯ ಮೊದಲಿನಲ್ಲಿ ಮೂವರು ತಮ್ಮಂದಿರು ಬಂದರು.
ತಮ್ಮ ತಮ್ಮ ಅಂಗವ ತೋರಿ, ಅಕ್ಕನ ಮುಂದೆ ಬೆತ್ತಲೆ ಆಡುತ್ತಿದ್ದರೆ,
ಬೆತ್ತಲೆಯ ಮುಟ್ಟಿ ಕಂಡು, ತಮ್ಮನದ ತನ್ನದರಲ್ಲಿ ಇಕ್ಕಿಕೊಂಡಳು.
ಅಕ್ಕ ತಮ್ಮನ ಕೂಡಿ ಒಪ್ಪವಾಗಿ ಬಾಳುತ್ತಿದ್ದರು,
ಬಂಕೇಶ್ವರಲಿಂಗವನರಿತ ಕಾರಣ. /4
ಅಜಶ್ರೋಣಿಯೆಂಬ ಶುಕ್ಲಪೀಠದಲ್ಲಿ, ಮೂವರು ವಿಧಾತರು ಹುಟ್ಟಿದರು.
ಒಬ್ಬ ಇಂದ್ರಜಾಲ, ಒಬ್ಬ ಮಹೇಂದ್ರಜಾಲ.
ಅವರಿಬ್ಬರ ಗೆದ್ದ ಅದೃಶಾಕರಣನೊಬ್ಬ,
ಬಂಕೇಶ್ವರಲಿಂಗವ ಇಲ್ಲಾ ಉಂಟೋ ಎನುತಿದ್ದ. /5
ಅಡಿಗಡಿಗೆ ಬಂದಡರುತಿಪರ್ೆ.
ಕಡುಛಲ ನಿನಗೆ ಬೇಡ ಕಂಡಾ !
ಮೃಡನೆ, ಎನ್ನೊಡನೆ ನೀ ತೊಡರಿ ಸಸಿನೆ ಹೋಗಲಿರಯೆ.
ಎಂತೆಂದಡೆ ನಾನಂಜುವನಲ್ಲ.
ಸಂತತ ಘಾಸಿ ಮಾಡದೆ,
ಕಂತುಹರ ಅಭಯಕರ, ಎನ್ನ ನೇಮಕ್ಕೆ ಅಡ್ಡ ಬರುತ್ತಿರದಿರು.
ಒಡವೆ ಸವೆದರೊಡಲನೊಡ್ಡುವೆ.
ಕಡಗುವಡೊಮ್ಮೆ ಹಳಚಿ ನೋಡು.
ಬಡವನ ಕೈಯ ಕಡುಹ ನೋಡೆನ್ನೊಡೆಯ
ಸಂಗಪ್ರಿಯ ಚೆನ್ನಬಂಕೇಶ್ವರಾ./6
ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ,
ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು.
ಶಿವಲಿಂಗದಲ್ಲಿ ಮೋಹವನಳವಡಿಸಿದರೆ,
ತನ್ನನೀವ ನಮ್ಮ ಚೆನ್ನಬಂಕನಾಥದೇವನು. /7
ಅಪ್ಪು ಉತ್ಪತ್ಯವಾಗಿ ಜಗವ ಕದಡುವಾಗ,
ಇರುಹಿನ ಮೊಟ್ಟೆ ಹೆಪ್ಪಳಿದುದಿಲ್ಲ.
ಇರುಹಿನ ಗೂಡಿನ ಗುಹೆಗೆ ಅಪ್ಪು ಮುಟ್ಟಿದುದಿಲ್ಲ.
ಇದೇನು ಚೋದ್ಯ ? ಬಂಕೇಶ್ವರಲಿಂಗದಲ್ಲಿ ಆರಡಿಗೊಂದು ಬನ್ನಿ./8
ಅಯ್ದು ಕೂಡಿ ವೇಧಿಸಿ, ಹಿರಿಯ ಸಾಗರವಾಯಿತ್ತು.
ಇಪ್ಪತ್ತೈದು ಕೂಡಿ, ನಿಂದ ಸಮುದ್ರವಾಯಿತ್ತು.
ಆ ಸಮುದ್ರದ ನಡುವೆ ನೂರೊಂದು ತುದಿಯಿಲ್ಲದ ಬೆಟ್ಟ.
ತುದಿನೀರೊಳಗೆ ಮುಳುಗಿ, ಗಿರಿಯ ಅಂಡು ಆಕಾಶವ ನೋಡುತ್ತದೆ.
ಇದು ಚೋದ್ಯ, ಬಂಕೇಶ್ವರಲಿಂಗವ ಕೇಳುವ ಬನ್ನಿ./9
ಅರಿದಾಡುವಲ್ಲಿ ಹೊರೆಸುಂಕ.
ಅರಿವು ತೆರೆದು ಬಿಟ್ಟಲ್ಲಿ ಪಸರಸುಂಕ.
ಇಚ್ಛೆಯನರಿತ ಭಕ್ತಿಜ್ಞಾನ ನಿಶ್ಚಯವಾದಲ್ಲಿ,
ಬಚ್ಚಬಯಲಸುಂಕ, ಬಂಕೇಶ್ವರಲಿಂಗಾ./10
ಅಸ್ಥಿ ಚರ್ಮವ ಪುದಿದ ಮರೆಯ ಹರಿಗೆಯೊಳು,
ಅಸುಭಟನೆಂಬ ಬಂಟ, ದಶೇಂದ್ರಿಯನಪ್ಪ ಮಿಸುಗುವ ಕೂರಲಗಿನಲ್ಲಿ
ನಿರ್ಗತಿಯೆಂಬ ಪ್ರಮಥನೊಳು ಕದನವನೆಸಗೆ,
ಹುಸಿಕಾಯ ತೋರದ ಧನುವ ಜೇವಡೆಗೈದು,
ನಿರ್ಧರ ದಿವ್ಯಪ್ರಣಮವೆಂಬ ಮೊನೆದೋರದ ಸರದಲ್ಲೆಸೆಯೆ,
ಅಸ್ಥಿ ಚರ್ಮದ ಪ್ರಕೃತಿಯ ಅಂಗದ ನೇಮದ ಠಾವಿನಲ್ಲಿ
ಬಿದ್ದುಕೊಂಡಿತ್ತು.
ಅವನಸುವ ನಿರ್ವಾಣದ ಕೂರಲಗು ಅರಿ ಇದಿರಿಲ್ಲ.
ಬಂಕೇಶ್ವರಲಿಂಗಕ್ಕೆ ಇದಿರಿಲ್ಲ. /11
ಆಚಾರ ಕ್ರೀ ಸನ್ನದ್ಧವಾಗಿ ನಿಂದಲ್ಲಿ, ಅದು ಅರಿವಿನ ಘನ,
ವಿರಕ್ತಿಯ ಒಡಲು, ಸರ್ವ ಅರ್ಪಿತ,
ಅವಧಾನದ ಚಿತ್ತದ ಕೈ, ಉಭಯಪರಿಪೂರ್ಣದೃಷ್ಟಿ.
ಸತ್ಪಥದ ಸಿಕ್ಕಿಲ್ಲದ ಮಾರ್ಗ,
ಅದು ಉಭಯ ಕೇವಲಜ್ಞಾನ, ದಂಪತಿ ಸಂಬಂಧಲೇಪ,
ಬಂಕೇಶ್ವರಲಿಂಗದಲ್ಲಿ ಉಭಯಸ್ಥಲ ಅಳವಟ್ಟ ಶರಣಂಗೆ./12
ಆಸೆಯೆಂಬ ಕತ್ತೆಯ ಮೇಲೆ ಪೂಸತನವೆಂಬ ಸೆಟ್ಟಿವೇಷ,
ವೇಷಲಾಂಛನದ ಚಿತ್ತವಾಸದ ಪಾಶವನೆತ್ತಿ,
ಈಶನರಿಯದ ಸೆಟ್ಟಿ ವಿಷಕ್ಕಾಗಿ ಕೈಯಾಂತು,
ತನ್ನ ಬೆವಹಾರಕ್ಕೆ ನಷ್ಟಬಂದಿತ್ತು.
ಬಂಕೇಶ್ವರಲಿಂಗಕ್ಕೆ ಲಾಭವಾಯಿತ್ತು./13
ಇದಿರಗುಣ ಸಂಪಾದಿಸುವಲ್ಲಿಯೆ ತನ್ನಯ ಮರವೆ.
ಇದಿರೆಡೆಗೆ ತಾನಲ್ಲದೆ, ತನಗೆ ಇದಿರೆಡೆಯಿಲ್ಲದೆ,
ಉಭಯಕ್ಕೆ ಒಡಲಿಲ್ಲದೆ, ತನ್ನ ಕ್ರೋಧವೆ ಇದಿರಿಂಗೆ ರೂಪು,
ತನ್ನ ಸುಚಿತ್ತವೆ ಇದಿರಿಂಗೆ ಸಮಾಧಾನ.
ಇಂತೀ ಭಾವವನರಿ, ಬಂಕೇಶ್ವರಲಿಂಗದಲ್ಲಿ./14
ಇದು ಜಗವ್ಯವಹಾರಣೆಯ ಧರ್ಮ, ಮುಂದಕ್ಕೆ ಐಕ್ಯಾನುಭಾವ.
ಕಾಯ ಅಕಾಯದಲ್ಲಿ ಅಡಗಿ, ಜೀವ ನಿಜರ್ಿವದಲ್ಲಿ ಅಡಗಿ,
ಭ್ರಮೆ ಸಂಚಾರವಿಲ್ಲದೆ,
ಮಹಾಘನದಲ್ಲಿ ಸಂದು, ಉಭಯದ ಸಂದಿಲ್ಲದೆ
ಬಂಕೇಶ್ವರಲಿಂಗದಲ್ಲಿ ಸಲೆ ಸಂದವನ ಒಲುಮೆ./15
ಇರುಹಿನ ಕಾಲಿನಲ್ಲಿ ಮೂರು ಮೊರಡಿ ಹುಟ್ಟಿದವು.
ಒಂದು ಗಡಿಗೆಯ ರೂಪು, ಒಂದು ಅಡಿಗಲ್ಲಿನ ಅಂದ,
ಒಂದು ಕೊಡಗೂಸಿನ ಚೆಂದ.
ಆ ಗಡಿಗೆಯ ಅಡಿಗಲ್ಲ, ಕೊಡಗೂಸು ಕುಡಿದಳು.
ಆ ಇರುಹೆಯ ಕಾಲು ಕೊಡಗೂಸಿನಲ್ಲಿ ಅದೆ.
ಬಂಕೇಶ್ವರಲಿಂಗವು ಎಲ್ಲಿ ಹೋದನೆಂದರಿಯೆ./16
ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ.
ಆ ಮಗ್ಗಕ್ಕೆ ಒಬ್ಬನೆ ಹಾರುವ ನೈವಾತ.
ಆ ಮಗ್ಗದೊಳಗಿದ್ದು ಸುಂಕಕಂಜಿ ಹೊಲೆಯನಾದ,
ಬಂಕೇಶ್ವರಲಿಂಗವನರಿಯದೆ./17
ಎಂಬತ್ತನಾಲ್ಕುಲಕ್ಷಕೋಟಿ ಮಾರಿನಲ್ಲಿ
ಮಾರಿಸಿಕೊಂಡ ಶರೀರ ಇದ ತಂದವರಾರಣ್ಣಾ.
ಕಾಯಕ್ಕೆ ಜೀವ ಸುಂಕವ ಕೊಡದೆ,
ಕಾಯದೊಳಗಣ ಬಂದ ಭಾವಭ್ರಮೆ ಸುಂಕ.
ಈ ವಿಧದ ಚೀಟ, ಬಂಕೇಶ್ವರಲಿಂಗದಲ್ಲಿ ಒಪ್ಪಿಸಿಕೊಳ್ಳಿರಣ್ಣಾ./18
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು .
ಎನ್ನ ಸುಂಕ ಎಲ್ಲರ ಪರಿಯಲ್ಲ.
ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ
ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ.
ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ
ಎಂದು ಕೊಟ್ಟ ಚೀಟು ವಿಶುದ್ಧಿ,
ಜಗದ ಸುಂಕದೊಡೆಯ ಬಂಕೇಶ್ವರಲಿಂಗನು./19
ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ.
ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ.
ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ?
ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ
ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ.
ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ ! /20
ಎವೆಯ ಮುಚ್ಚಿ, ಕಣ್ಣು ತೆರೆಯಬೇಕು.
ಶರೀರವ ಗೆದ್ದು, ಜ್ಞಾನವನರಿಯಬೇಕು.
ಜ್ಞಾನವ ಮರೆದು, ವಿಜ್ಞಾನ ಸುಜ್ಞಾನದಲ್ಲಿ ನಿಂದು,
ಚಿದ್ಘನದಲ್ಲಿ ಚಿಚ್ಛಕ್ತಿಯ ಕೂಡಿ, ಚಿಚ್ಛಕ್ತಿ ನಷ್ಟವಾಗಿ ವಸ್ತುಲೇಪ.
ದೃಕ್ಕಿಂಗೆ ಅಗೋಚರವಾಗಿ,
ತತ್ವಮಸಿಯೆಂಬ ಭಿತ್ತಿಯ ಭಾವವಿತ್ತಲೆ,
ಅತ್ತಲರಿ, ಬಂಕೇಶ್ವರಲಿಂಗವ./21
ಐಮುಕ್ತಿ ಕ್ಷೇತ್ರದ ವಾಸದ ರಜತಗಿರಿಯ ಮಧ್ಯದಲ್ಲಿ ಕುರುಕ್ಷೇತ್ರ.
ಅದರೊಳಗಿಬ್ಬರು ದೊರೆಗಳು ಅರಿರಿಪುಗಳಾದರು.
ಅವರ ಹೆಸರು ಕಳಾಂಧರ ಕಮ್ಮಟಹತ.
ಅಸುಗತನೆಂಬವ ಬೇರೊಬ್ಬನರಸು ರಿಪು.
ಕುಲತಮನಾಶಗತಿ ಮಂಡಲವಿರಹಿತ ರಾಜಕುಲ ಅಸುನಾಥ.
ಇವರಿಬ್ಬರು ಮಸಕಲಿಕೆ ಮೊನೆಯಾಯಿತ್ತು.
ಅಸುಭಟರೆಲ್ಲರು ಹುಸಿಭಟರಾದರು,
ಬಂಕೇಶ್ವರಲಿಂಗವ ಅಹುದಲ್ಲವೆಂದ ಕಾರಣ./22
ಕಟ್ಟಿದುದೇನು ಕಂಕುಳದೊಳಗೆ ?
ಹೊತ್ತುದೇನು ಮಂಡೆಯ ಮೇಲೆ ?
ಕೈಯೊಳಗಣ ಹೊರೆಯ ಬಿಟ್ಟು.
ತೋರು ಕೆಡದಿಹರೆ ಜಗದೊಡೆಯನ,
ಚೀಟ ಕೊಳ್ಳಿ, ಬಂಕೇಶ್ವರಲಿಂಗದ./23
ಕಣ್ಣಿನ ಕಡೆಯ ಕಾಡಿಗೆಯನಿಕ್ಕಿದವಳ
ಅಣ್ಣನ ಕಣ್ಣಿನಲ್ಲಿ ಮೂರು ಕಣ್ಣಿ ಹುಟ್ಟಿದವು.
ಒಂದು ಕಣ್ಣಿ ಕುಂಭಕ್ಕೆ ಕುಣಿಕೆ.
ಒಂದು ಕಣ್ಣಿ ಎರಡರ ತಲಪು ಕೂಡಿದ ಕುಣಿಕೆ.
ಮತ್ತೊಂದು ಕಣ್ಣಿ ಕುಣಿಕೆಗೆ ಮೋಸ.
ಈ ಮೂರು ಕಣ್ಣಿಯ ಮುಪ್ಪುರಿಗೂಡಬೇಕು.
ಅವು ಹುರಿವಿಟ್ಟಂದ ಇವಾರಿಗೂ ಅಸಾಧ್ಯ,
ಬಂಕೇಶ್ವರಲಿಂಗವನರಿವವರಿಗಲ್ಲದಾಗದು./24
ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ,
ಉರಿ ಸಾರವ ಕೊಂಡಂತೆ, ನಿರುತ ನಿರ್ವಾಣವಾದಂತೆ,
ಸರಶಂಕೆಯ ಬಿಟ್ಟು, ಶರಧಿಯ ಒಡಗೂಡಿದಂತೆ,
ತನುವಿನ ಸುಂಕವ ಮನೆದೆರಿಗೆಯ ಕರ್ತಂಗೆ ಒಪ್ಪಿಸಿದೆ.
ಸಂದಿತ್ತು , ನೀವು ಕೊಟ್ಟ ಮಣಿಹವೆಂಬುದಕ್ಕೆ ಮುನ್ನವೆ
ಬಯಲಾಯಿತ್ತು , ಬಂಕೇಶ್ವರಲಿಂಗದಲ್ಲಿ./25
ಕಾಬುದು ಕ್ಷೀರವಾಗಿ ಕಂಡು, ನಿಂದುದು ದಧಿಯಾಗಿ,
ಉಂಟು ಇಲ್ಲಾ ಎಂಬುದು ಮಥನವಾಗಿ,
ನಿಂದುದು ನವನೀತವಾಯಿತ್ತು.
ಸಮ್ಯಜ್ಞಾನ ಜ್ಯೋತಿ ಘಟದಲ್ಲಿ ಕಾಸಿ,
ನಾ ನೀನೆಂಬುದನಳಿದು, ಭಾವ ಶುದ್ಧವಾದಲ್ಲಿ ಘೃತವಾಯಿತ್ತು.
ಅಸಿ ತ್ವಂ ಪದ ತತ್ವವಾಯಿತ್ತು , ಬಂಕೇಶ್ವರಲಿಂಗವ ಕೂಡಿದ ಕಾರಣ./26
ಕಾಯದ ಜೀವದ ಮಧ್ಯದಲ್ಲೊಂದೂರ ಬಾಗಿಲಲ್ಲಿ
ಮೂವರು ಹೊಲೆಯರ ಕಾವಲು.
ಒಬ್ಬ ಜಾತಿಸೂತಕ, ಒಬ್ಬ ಜನನಸೂತಕ, ಒಬ್ಬ ಪ್ರೇತಸೂತಕ.
ಇಂತೀ ಗ್ರಾಮದ ಹೊಲೆಯರು ಕೊಂಡಾಡುತ್ತಿದ್ದರು.
ಒಬ್ಬಂಗೆ ಅಂಡೊಡೆದು, ಒಬ್ಬಂಗೆ ಅಂಗ ಭಿನ್ನವಾಗಿ,
ಒಬ್ಬಂಗೆ ಶಿರಚ್ಛೇದನವಾಗಿ,
ಗ್ರಾಮದ ಬಾಗಿಲು ಬಟ್ಟಬಯಲಾಯಿತ್ತು.
ಬಂಕೇಶ್ವರಲಿಂಗವನರಿಯಿರಣ್ಣಾ./27
ಕಾಯದ ಭಾವವ ನಿನ್ನಂಗವ ಮುಟ್ಟಿ ಕಳೆದೆ.
ಜೀವನ ನಾನಾಜನ್ಮದ ಭವವ ನಿನ್ನ ನೆನಹಿಂದ ಕಳೆದೆ.
ನಾನಾ ಪ್ರಕೃತಿ ಸಂಚಾರವ ನಿಮ್ಮ ಶರಣರ ಸಂಗದಿಂದ ನೀಗಿದೆ.
ಅಂಗಕ್ಕಾಚಾರ, ಮನಕ್ಕೆ ಅರಿವು,
ಈ ಉಭಯವ ಸಂಬಂಧಿಸಿ, ಅದು ಲೇಪವಾಗಿ ಸಂದಿತ್ತು ನಿಮ್ಮಲ್ಲಿ.
ಎನ್ನಯ ಇರವು ನಿಮ್ಮಲ್ಲಿ ಸಲೆ ಸಂದಿತ್ತು, ಚೆನ್ನಬಂಕೇಶ್ವರಲಿಂಗಾ./28
ಕಾಯದಿಂದ ಕಾಬುದು ಬ್ರಹ್ಮಯೋಗ.
ಭಾವದಿಂದ ಕಾಬುದು ವಿಷ್ಣುಯೋಗ.
ಜ್ಞಾನದಿಂದ ಕಾಬುದು ಅನಾದಿಶಕ್ತಿ ಸಂಬಂಧ ರುದ್ರಯೋಗ.
ಇಂತೀ ತ್ರಿವಿಧಭೇದದಲ್ಲಿ ಸಂಬಂಧಿಗಳೆಲ್ಲರೂ
ಬಂಕೇಶ್ವರಲಿಂಗನ ಶಂಕೆಯನರಿಯರು. /29
ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು.
ಕಾಯ ಅರಿವಿಂಗೆ ಹೊರಗೆ.
ಕಾಯ ಜೀವವೆರಡೂ ಕೂಡಿ ಕಂಡ ಜ್ಞಾನರತ್ನದ ರತಿ ಬೇರೆ.
ಆ ಘಟವ ಬೇರೆ ಭಿನ್ನವ ಮಾಡಿ, ರತ್ನ ಮಾರುವ ಪರಿ ಇನ್ನೆಂತೊ ?
ಇಷ್ಟದ ರೂಪ ಹಾಕಿ, ಮತ್ತೆ ಲಿಂಗಪೂಜಕನೆಂತಪ್ಪನೊ ?
ಅಂಗದ ಕೂಟ, ಮನದ ವಿಶ್ರಾಂತಿ ಉಭಯವ ಬೇರೆ ಮಾಡದಿರಯ್ಯಾ.
ಪತಿ ಹೋಹಲ್ಲಿ ಸತಿ ಉಳಿದಡೆ, ಅದು ಅಪಮಾನದ ಕೇಡೆಂಬರು.
ನಿನ್ನಯ ನೆನಹ ಹೊತ್ತಿದ್ದ ಘಟ ಮಣ್ಣಿಗೀಡಾಗಲೇಕೆ ?
ಚೆನ್ನಬಂಕೇಶ್ವರಲಿಂಗಾ, ನಿನ್ನಲ್ಲಿಯೆ ಗ್ರಹಿಸಿಕೊಳ್ಳಯ್ಯಾ, ನಿನ್ನ ಧರ್ಮ./30
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡುವ ಪರಿ ಎಂತೆಂದಡೆ :
ಶಿವನಾಮವೆಂಬ ಕೊಡಲಿಗೆ ನಿತ್ಯವೆಂಬ ಕಾವು,
ಕುಟಿಲ ಕುಹಕ ಕ್ಷುದ್ರ ಅಟಮಟವೆಂಬ ಗಿಡವನೆ ಕಡದುಡಿಯನೊಟ್ಟಿ,
ಸುಜ್ಞಾನವೆಂಬ ಕಿಡಿಯನೆ ಹಾಕಿ ಸುಟ್ಟು, ಒಂಬತ್ತು ಕಟ್ಟೆಯ ಕಟ್ಟಿ,
ನಿಷ್ಠೆಯ ಘಟ್ಟಿಯೆಂಬ ನೇಗಿಲಿಂಗೆ ದೃಢವೆಂಬ ಮುಂಜನ,
ಏಕೋಭಾವವೆಂಬ ಈಚಿಂಗೆ ಮೂಹುರಿಯ
ಭಾವತ್ರಯದ ಭಾರಣೆಯ ಹಾಸಂ ಹಾಸಿ, ಜೀವಪ್ರಾಣವೆಂಬ ಎತ್ತಂ ಕಟ್ಟಿ,
ಮರಹು ತೆರಹೆಂಬ ಕಸಕಾರಿಕೆಯಂ ಹಾಯಿದು,
ಹಸಿವು ತೃಷೆಯೆಂಬ ನೇರದ ಕಿಚ್ಚಂ ಕೆಡಿಸಿ, ಪರಿಣಾಮವೆಂಬ ಮಳೆ ಹೊಯ್ಯಲು,
ವಿಚಾರವೆಂಬ ಸಸಿ ಹುಟ್ಟಲು, ಅನಾಚಾರವೆಂಬ ಹಕ್ಕಿ ಬಂದು,
ಹಕ್ಕಲ ಮಾಡದ ಹಾಂಗೆ ಹರಹರಾಯೆಂಬ ಕವಣೆಯನೆ ಕೊಂಡು,
ಎಚ್ಚಿಡುತಿದರ್ೆ ಕಾಣಾ, ಚೆನ್ನಬಂಕೇಶ್ವರಾ.
ಈ ಪರಿಯ ಬೆಳಸು, ನಿಮ್ಮ ಶರಣ ಚೆನ್ನಬಸವಣ್ಣಂಗೆ ಸಾಧ್ಯ.
ಉಳಿದವರಿಗೆ ಸಾಧ್ಯ ಅಸಾಧ್ಯವೆಂಬುದ ನೀವೆ ಬಲ್ಲಿರಿ. /31
ಕಾಲ ಸಂಹಾರವ ಮಾಡುವಲ್ಲಿ , ಕಾಳಗತ್ತಲೆಯ ಕೋಣೆಯೊಳಗೊಂದು
ಬಾಲಲೀಲೆಯ ಶಿಶು ಉಳಿಯಿತ್ತು.
ಬಾಲಲೀಲೆ ಹಿಂಗಿ, ವಿಷದ ಏಳಿಗೆಯಾಯಿತ್ತು.
ಕಣ್ಣಿನಲ್ಲಿ ಮೊಲೆ ಹುಟ್ಟಿ, ಎದೆಯಲ್ಲಿ ಯೋನಿ ಹುಟ್ಟಿ,
ಕೈಯಲ್ಲಿ ಬೆಸಲಾಯಿತ್ತು.
ಅದು ಗಂಡೋ, ಹೆಣ್ಣೋ ಎಂದು ಅಂಡವ ಹಿಡಿದು ನೋಡಿ,
ಅಂಡಜಮುಗ್ಧೆಯ ಮಕ್ಕಳಿರಾ ಎಂದರವರು.
ಅದರಂದವ ನೋಡಿ, ಹೆಣ್ಣೂ ಅಲ್ಲ ಗಂಡೂ ಅಲ್ಲ,
ನಡುವೆ ಒಂದು ಕೆಂಡದಂತಿದೆ.
ಬಂಕೇಶ್ವರಲಿಂಗಕ್ಕೆ ತೋರಿ, ಕುರುಹಿಟ್ಟುಕೊಂಬೊ./32
ಕಾಲದೊಳು ತನುದಂಡಣೆ, ಜೀವಭವ ಸಂಭವ.
ಈ ಉಭಯವು ಪ್ರಕೃತಿಯೊಳಗಾದಲ್ಲಿ,
ಅರಿವು ಹೋಯಿತ್ತು ಸುಂಕಕ್ಕೆ, ಬಂಕೇಶ್ವರಲಿಂಗದಲ್ಲಿ./33
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು.
ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ.
ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ.
ಅದು ಕೂಗುವಾಗ ಜಾವವಳಿದು, ದಿನ ಸತ್ತು,
ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ.
ಕೂಗಿನ ದನಿಯ ಕೇಳಿ ಬೆಳಗಾಯಿತ್ತು,
ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ./34
ಕಾಳಗ ಕರಣಂಗಳಲ್ಲಿ ಸೋಲುವೆ.
ಮನ ಮಹವನೊಡಗೂಡಿದವರಲ್ಲಿ ಕೇಣಸರಬೇಡ.
ಸರ್ವಪ್ರಾಣಿಗಳಲ್ಲಿ ಊಣೆಯನರಸಬೇಡ.
ತನ್ನಯ ಮನ ಪ್ರಮಾಣಿಸಿದಲ್ಲಿ ನಾ ನೀನೆಂದೆನಬೇಡ,
ಬಂಕೇಶ್ವರಲಿಂಗವ ಭಾವಿಸಿದಲ್ಲಿ. /35
ಕಾಳೆಯ ಮೊಗಹಿನಲ್ಲಿ ಒಂದು ಜೀರುಂಡೆ ಹುಟ್ಟಿ,
ಅದು ಆರ ಮಾತನೂ ಕೇಳಲೀಸದು.
ಅದು ಕಾಳೆಯ ಮೊಗಹಿನ ಸತ್ವ.
ಆ ಕಹಳೆ ಏಳೋಧರ ಕಮ್ಮಟಕೆ ಈಡೆಂದು ಹೇಳುತ್ತಿಪ್ಪುದು.
ಆ ಜೀರುಂಡೆಯ ಭೇದ, ಕಾಳೆಯ ಘಟ,
ಬಂಕೇಶ್ವರಲಿಂಗವ ಕೇಳಿಯಲ್ಲದೆ ಅರಿಯಬಾರದು./36
ಕಾಳೋರಗನ ಹಿಡಿದು ಹೇಳಿಗೆಯ ಕೂಡಿ,
ಹೊತ್ತಾಡುವ ಹಾವಡಿಗಂಗೆ ಹಾವಿನ ಸುಂಕ.
ಅದ ಹಿಡಿದಾಡಿದ ಕಾರಣ, ಅದು ಕೊಡುವ ಕೊಂಬ ಭೇದ.
ಅದು ತಡೆಯ ಬಿಟ್ಟಡೆ ಸುಂಕವ ಕೊಡಲಿಲ್ಲ,
ಬಂಕೇಶ್ವರಲಿಂಗಕ್ಕೆ./37
ಕೈಯಲ್ಲಿ ಮುಟ್ಟೂದಕ್ಕೆ ಮುನ್ನವೆ, ಮರವೆ ತೋರದ ಮುನ್ನವೆ,
ಕಣ್ಣಿನಲ್ಲಿ ನೋಡಿ ಎವೆ ಹಳಚೂದಕ್ಕೆ ಮುನ್ನವೆ ಕಾಣು.
ಚಿತ್ತದಲ್ಲಿ ಅರಿದು ಚಿತ್ತ ಮುಂಚೂದಕ್ಕೆ ಮುನ್ನವೆ ಅಳಿವುತ್ತದೆ.
ಅರಿ ಅರಿವುದಕ್ಕೆ, ಹಿಂಚು ಮುಂಚು ಬಂಕೇಶ್ವರಲಿಂಗವ. /38
ಕೊಂಡವಂಗೆ, ಕೂಲಿಗೆ ಕಟ್ಟಿದವಂಗೆ,
ಲಂಡ ಗುರುವಿಂಗೆ, ಜಗಭಂಡ ಶಿಷ್ಯ.
ಇತ್ತಂಡದ ಮೊಟ್ಟೆಯ ಸುಂಕ,
ಕೊಟ್ಟಿತ್ತು ಜೀವಕಾಯದ ಬಂಕೇಶ್ವರಲಿಂಗಕ್ಕೆ./39
ಕೊರಳು ತಲೆಹೊರೆ ಭವಜನ್ಮ ತೊಟ್ಟು,
ಘಟಕಾಲನ ಕಾಲಾಟಕ್ಕೆ ಸುಂಕ,
ಅದು ನಮ್ಮ ಹಾದಿಯಲ್ಲ,
ಬಂಕೇಶ್ವರಲಿಂಗಕ್ಕೆ ಹೊಲಬಲ್ಲ./40
ಕೋಡಗ ಬಲಿದು ಕೋಣನಾಗಿ, ಕೋಣನ ಕೋಡಿನಲ್ಲಿ ಈರಾರು ಸೇನೆ
ಸೇನೆಗೊಬ್ಬ ಭಟ, ಭಟಗೆ ಮೂವರು ಸತಿಯರು.
ಸತಿಯರ ಕುಚದ ನಡುವೆ ಒಂದು ಕಸ.
ಹಾವು ಕಚ್ಚಿ ಭಟರೆಲ್ಲರೂ ಸತ್ತರು.
ನಿಭರ್ಿತಿವಂತರು ಕೇಳಿ ಬಂಕೇಶ್ವರಲಿಂಗವ./41
ಕ್ರೀಯೆಂಬ ಬೆವಹಾರವ ಮಾಡುವಾಗ,
ಆಚಾರವೆಂಬ ಸೆಟ್ಟಿ ಕೊಂಬಲ್ಲಿ,
ಅರಿವೆಂಬ ಸುಂಕ ಹುಟ್ಟಿತ್ತು.
ತಲೆವಿಡಿ ಕೊಳುವಿಡಿ ಬಂದಿತ್ತು.
ಕ್ರೀಯ ಮಾರಿದವಂಗೆ, ಆಚಾರವ ಕೊಂಡವಂಗೆ
ಉಭಯದ ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ./42
ಕ್ಷಯು ಕಾರಣವೆಂಬ ಪಟ್ಟಣಕ್ಕೆ ಲಯಕಾರಣವೆಂಬ ಅರಸು.
ಪೋಲಿಕಾರ ಪ್ರಧಾನ, ಮದೋನ್ಮತ್ತ ತಳವಾರ.
ಇಂತೀ ಪಟ್ಟಣದರಸು, ಮರವೆಯ ಮಹಾರಾಜ್ಯವನು ಆಳುತ್ತಿರಲಾಗಿ,
ಆತನ ಅಡಿಗೆರಗಿ ಅಂಜುವರಿಲ್ಲ,
ಬಂಕೇಶ್ವರಲಿಂಗವ ಕಂಡರಿಯದ ಕಾರಣ./43
ಗೂಗೆ ಹಂಸೆಯ ಕಚ್ಚಿದ ಭೇದದಿಂದ ಕಾಗೆಯಾಯಿತ್ತು.
ಕಾಗೆ ಹಾರುವ ಲಾಗಿನಿಂದ ಕೋಗಿಲೆಯಾಯಿತ್ತು.
ಕೋಗಿಲೆ ಸರದಿಂದ ನಾಗಫಣಿಯಾಯಿತ್ತು.
ನಾಗಫಣಿ ಹೋದ ಪಥದಿಂದ ನಾದಶೂನ್ಯವಾಯಿತ್ತು,
ಬಂಕೇಶ್ವರಲಿಂಗದಲ್ಲಿ. /44
ಗೋಳಕಾಕಾರ ಗೋರಕ್ಷನೆಂಬ ಪಟ್ಟಣದಲ್ಲಿ,
ಗೋಮಯವೆಂಬ ಪರಶಕ್ತಿ ಅಪರ ಪ್ರಸೂತಕವಾಗಲಾಗಿ,
ಅದರಂಡದಲ್ಲಿ ಆಡು ಹುಟ್ಟಿತ್ತು.
ಆಡಿನ ಅಂಡದಲ್ಲಿ ಕೋಡಗ ಹುಟ್ಟಿತ್ತು.
ಕೋಡಗದ ಕುಂಡಿಯಲ್ಲಿ ಸಿರಿಯಕ್ಕ ಹುಟ್ಟಿದಳು.
ಸಿರಿಯಕ್ಕನ ಆತುರಿಯದಲ್ಲಿ ಮೂದೇವಿ ಉರಿಯಕ್ಕ ಹುಟ್ಟಿದಳು.
ಉರಿಯಕ್ಕನ ಉರವಣೆಯಲ್ಲಿ ಜಗ ಹುಟ್ಟಿ,
ಜಗದ ಸಿರಿಯಲ್ಲಿ ಹೋದರು ಹಿರಿಯರೆಲ್ಲರು,
ಬಂಕೇಶ್ವರಲಿಂಗವನರಿಯದೆ./45
ಘಟ ದೀಪಾಂತರ ಮಾರುತ ಮಾವಿಂದ ಬಂದಿತ್ತೊಂದು
ವಿಕಟಾಂಗದ ಕುದುರೆ.
ಬಾಯಿಗೆ ಹಲ್ಲಣ, ಲೆಕಕ್ಕೆ ಕಡಿವಾಣ, ಹಲ್ಲಿಗೆ ಹಕ್ಕರಿಕೆ,
ಅದರ ಮೇಲಿದ ಬಲ್ಲಹಂಗೆ ಭಲ್ಲೆಹ ಟೌಳಿ.
ಸುಲಲಿತ ಕರಗಸ ಸಿಂಗಾಡಿಗತ್ತಿ, ಜವದಾಡೆ,
ಅಲ್ಲಿ ಅದೆ, ಅವನುಡಿಯಲ್ಲಿ.
ರಾವುತನ ತಲೆ, ಕುದುರೆಯ ಕಾಲು, ಭಲ್ಲೆಹದ ಮೊನೆ,
ಅಲ್ಲಿಯೆ ಅಡಗಿತ್ತು, ಬಂಕೇಶ್ವರಲಿಂಗವ ಅರಿದ ಅಸುವಾಹಕಂಗೆ./46
ಚಿದ್ಘನದ ಒಂದನೆಯ ಮೂರ್ತಿ ರುದ್ರನ ಅವತಾರ.
ಆ ಚಿದ್ಘನದ ಎರಡನೆಯ ಮೂರ್ತಿ ವಿಷ್ಣುಭಾವ.
ಆ ಚಿದ್ಘನದ ಮೂರನೆಯ ಮೂರ್ತಿ ಬ್ರಹ್ಮಭಾವ.
ಇವು ಮೂರು ಕೂಡಿ ಜಗವನಳಿದು ನಿಂದಲ್ಲಿ ಈಶ್ವರಭಾವ.
ಈಶ್ವರ ವೇಷವಡಗಿ ನಿಂದಲ್ಲಿ ಸದಾಶಿವಭಾವ.
ಸದಾಶಿವಮೂರ್ತಿ ಸನ್ನದ್ಧವಾದಲ್ಲಿ ಪರಶಿವತತ್ವ,
ತತ್ವ ನಿಶ್ಚಯವಾದಲ್ಲಿ ಬಂಕೇಶ್ವರಲಿಂಗನ ಕೂಟ. /47
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ವಿಶ್ವ ತೈಜಸ ಪ್ರಾಣನಾಗಿಪ್ಪ ಕಾರಣ,
ಅಹೋರಾತ್ರಿಯಲ್ಲಿ ನಿಮ್ಮ ನೆನಹೆನಗೆ.
ಚೆನ್ನಬಂಕೇಶ್ವರಲಿಂಗವೆ, ಎನ್ನ ಸಜ್ಜನಿಕೆಯ ದಿಟವ ಮಾಡೆನ್ನ ತಂದೆ./48
ತತ್ವಾರ್ಥವ ಬಲ್ಲವಂಗೆ ಆ ತತ್ವಾರ್ಥವೆ ಕತ್ತಲೆಯ ಮಾಯೆ.
ಆಧ್ಯಾತ್ಮವ ಬಲ್ಲವಂಗೆ ಆ ಪವನನೆ ತನ್ನ ಸುತ್ತಿದ ಮಾಯೆ.
ಕ್ರೀಭಾವವಂತರಿಗೆ ಸಂದೇಹವೆ ತನ್ನ ಸುತ್ತಿದ ಮಾಯೆ.
ಇಂತಿವನಹುದಲ್ಲಾ ಎಂಬುದು ತಾ ಮಾಯೆ,
ಬಂಕೇಶ್ವರಲಿಂಗವ ಕೇಳಿಕೊಂಬ./49
ತನುಮಂಡಲ ರಣಮಯವಾಯಿತ್ತು .
ಕರಣಂಗಳ ಹಿಂಡು ಕೆದರಿತ್ತು.
ತನುಮಂಡಲದರಸು ಹಿಂದುಮುಂದಾದ ಚಂಡಿಕ,
ಚಂಡಿಕ ಪ್ರಚಂಡ ತಮಕೋದಂಡ ಮಾತರ್ಾಂಡಮಯ,
ಸ್ವಯಕುಲ ಚಕ್ರವರ್ತಿ ಗೆದ್ದ, ಬಂಕೇಶ್ವರಲಿಂಗದೊಲುಮೆಯಿಂದ./50
ತರುಗಿಡು ಗುಣನಾಮವಾದಡೇನು, ಸ್ಥಾಣುವಿನ ಒಲವರದ ತೆರ ಬೇರೆ.
ದರ್ಶನ ಸುಖಸಂಪತ್ತಾದಡೇನು, ಅರಿವಿನ ಒಲವರದ ತೆರ ಬೇರೆ.
ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ ?
ಶಬರನ ವೇಷ, ಮೃಗದ ಹರಣದ ಕೇಡು.
ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ,
ಬಂಕೇಶ್ವರಲಿಂಗವ ಅರಿದ ಅರಿವು ?/51
ತುರೀಯದಲ್ಲಿ ಕೂಡಿದ ಕೂಟ ಸುರತಕ್ಕೆ ಈಡಲ್ಲ.
ತದನಂತರದಲ್ಲಿ ಕೂಡಿದ ಕೂಟ ಕರಣಂಗಳ ಹೋರಟೆ.
ಕಡೆಯಲ್ಲಿ ಕೂಡಿದ ಕೂಟ ವಿಷಯಕ್ಕೆ ಒಡಮರಣವಾಯಿತ್ತು.
ಈ ತ್ರಿವಿಧದ ತೊಡಿಗೆಯನರಿ, ಬಂಕೇಶ್ವರಲಿಂಗವ ಒಡಗೂಡುವುದಕ್ಕೆ./52
ತೋರುವ ತೋರಿಕೆ ಸಬರೆ ಮುಟ್ಟಾಗಿ,
ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ,
ಚಿತ್ತವನರಿಯದ ಭಾವ ಎತ್ತಾಗಿ,
ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ,
ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು,
ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು.
ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ,
ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು./53
ದಬ್ಬಳ ಧರೆಯ ಚುಚ್ಚಲಾರದೆ,
ಹಾಗ ಮುಳ್ಳು ಮೂರುಲೋಕವ ಚುಚ್ಚಿತ್ತು.
ರಟ್ಟೆ ಬಲಿದ ಹಕ್ಕಿ ಹಾರಲಾರದೆ,
ಆ ಕೊಂಬಿಂದ ಈ ಕೊಂಬಿನಲ್ಲಿ ಉಳಿಯಿತ್ತು.
ತುಪ್ಪುಳ ಬಾರದ ಮರಿ ಮಹದಾಕಾಶವ ಸುತ್ತಿತ್ತು.
ಹೆತ್ತವಳರಿಯದ ಮದ, ಆಗ ಹುಟ್ಟಿದ ಶಿಶು ಅರಿಯಿತ್ತು.
ತಮ್ಮವ್ವೆಗೆ ಮದ್ದ ಕೊಟ್ಟು, ತಾ ಸತ್ತಿತ್ತು, ಬಂಕೇಶ್ವರಲಿಂಗದಲ್ಲಿ./54
ಧರ್ಮವ ನುಡಿವಲ್ಲಿ ಕ್ರಿಯಾಧರ್ಮ,
ನಿರ್ಮವ ನುಡಿವಲ್ಲಿ ಮಾಯಿಕಮಲಂ ನಾಸ್ತಿ.
ಕಾಯ ಉಳ್ಳನ್ನಕ್ಕ ಪೂಜೆ, ಜೀವವುಳ್ಳನ್ನಕ್ಕ ನೆನಹು.
ಎರಡಿಟ್ಟು ನೋಡುವಲ್ಲಿ ಕೂಟ, ಆತುರ ಹಿಂಗಿದ ಮತ್ತೆ
ಬಂಕೇಶ್ವರಲಿಂಗನ ಎಡೆಯಾಟ ಹಿಂಗಿತ್ತು. /55
ನಡೆದಾಚರಿಸೂದಕ್ಕೆ ಕ್ರೀ, ಅದು ಲೇಪವಾಗಿ ನಿಂದಲ್ಲಿ ಉಭಯನಾಮನಷ್ಟ.
ಅದ ಭಾವಿಸುವ ಭಾವ, ತೆರದರಿಸಿನವಾದಲ್ಲಿ ವಿರಕ್ತಿಭಾವ.
ಬಂಕೇಶ್ವರಲಿಂಗವನರಿವುದಕ್ಕೆ ಶ್ರದ್ಧೆಯ ಭಿತ್ತಿ./56
ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ.
ಪಶುವ ನೆಚ್ಚು ಕೂಡಿ ಹಸಿಗೆಗೆ ಬಂದಂತೆ.
ಉಂಬ ಊಣೆಯಕ್ಕೆ ನೆರೆದು, ಭಕ್ತಿಯ ಊಣೆಯಕ್ಕೆ ಹಿಂದುಮುಂದಾದ
ಸಂದಣಿಯ ಚೋರರಿಗೇಕೆ, ವ್ರತ ನೇಮ ನಿತ್ಯ?
ಇವರಂಗಕ್ಕೆ ಸಂಗವಾದ ಬಂಕೇಶ್ವರಲಿಂಗ./57
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ.
ಇವರಿಬ್ಬರು ಪರಮಬಂಧುಗಳು.
ಆ ಯೋಗಿಯ ಪುಣ್ಯವನೊಬ್ಬ ಕೊಂಬ, ಪಾಪವನೊಬ್ಬ ಕೊಂಬ.
ಇದು ಕಾರಣ, ಗುರುಪ್ರಿಯ ಚೆನ್ನಬಂಕೇಶ್ವರನಲ್ಲಿ,
ಸತ್ಯಶರಣರು ನಿತ್ತಮುಕ್ತರು./58
ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ,
ವಿಚ್ಛಂದವಾಗಿ ಬಯಕೆಯ ಬಿಟ್ಟುದೆ ಲವಣನಾಸ್ತಿ.
ಸರ್ವಕರಣೇಂದ್ರಿಯಂಗಳ ಸಂಸರ್ಗಕ್ಕೆ
ಮನವನೀಯದಿದುದೆ ಭವಿ ವಿರೋಧ.
ಉಚಿತ ತತ್ಕಾಲಂಗಳಲ್ಲಿ ಅಪ್ಯಾಯನವರಿತು ವಿಶ್ರಮಿಸೂದೆ
ಕೃತ್ಯದ ಕಟ್ಟಣೆ.
ಮನಬಂದಂತೆ ನುಡಿದು, ತನುಬಂದಂತೆ ಆಡಿ,
ನಿಂದಿಹ ಸ್ಥಿತಿಯ ತಾನಾಡಿ, ಹಲಬರ ಕೈಯಲ್ಲಿ ಕೇಳಿ,
ಇಂತೀ ಗುಣಕ್ಕೆ ಒಪ್ಪಿ,
ಭಕ್ತನೆಂಬ ಕೃತ್ಯದ ಮತ್ತರನೊಪ್ಪ ಬಂಕೇಶ್ವರಲಿಂಗ./59
ಪಂಕವ ಮೆಟ್ಟಿದ ಅಡಿ, ಉಭಯಕ್ಕೆ ಶಂಕೆದೋರದಿಹುದೆ ?
ತ್ರಿವಿಧವ ಕೂಡಿ ಆಡುವ ಮನ, ಅವರೊಳು ಒಡಗೂಡದಿಹುದೆ ?
ಅದರ ತೊಡಿಗೆಯನರಿತಡೆ ಗಡಿಗೆಯನೊಡಗೂಡಿದ ಜಲದಂತಿರಬೇಕು.
ಕಾರ್ಯ ಕೂಡಿದಲ್ಲಿ ಗಡಿಗೆಯಾಗಿ, ಮತ್ತೆ ವಾರಿಯ ಬೆರಸದಂತಿರಬೇಕು.
ಇದು ಕರತಳಾಮಳಕ, ಬಂಕೇಶ್ವರಲಿಂಗವನರಿವುದಕ್ಕೆ./60
ಪರಮಪ್ರಕಾಶ ತನ್ನಯ ಮೂರ್ತಿ ಭಿತ್ತಿ ಅಹಲ್ಲಿ,
ಚಿತ್ಪ್ರಕಾಶಶಕ್ತಿ ಮುಕ್ತಿಯ ಸಾಕಾರವ ಧರಿಸಿದಲ್ಲಿ,
ತ್ರಿವಿಧದ ಉತ್ಪತ್ಯದ ಭೇದ.
ಒಂದು ಮೂರಾಗಿ, ಮೂರ ಹಲವಾಗಿ,
ಅಂಡ ಪಿಂಡಗಳಲ್ಲಿ ತೋರುವ ತೋರಿಕೆ,
ಬಂಕೇಶ್ವರಲಿಂಗನ ಲೀಲಾಭಾವ. /61
ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ, ಆರವೆಯಿಲ್ಲದ ಮರ ಹುಟ್ಟಿ,
ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು,
ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು,
ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು.
ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು,
ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ./62
ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ,
ಮೆಲುವರಿಗೆ ಅಡಹೆ ?
ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ,
ಭುಂಜಿಸುವರ ಅಂಗ ಮನೋಹರವಾಗಿಪ್ಪುದು.
ಲೌಕಿಕ ಪರಮಾರ್ಥಂಗಳ ಭೇದ,
ಉಭಯರೂಪು ನಿಬದ್ಧಿಯಾದಲ್ಲಿ,
ಬಂಕೇಶ್ವರಲಿಂಗವು ಎಂತಿದಡೇನು ?/63
ಬಂದವರಿವರಾರು ? ಅಂದಗೇಡಿಯ ಮೂಳಿಯ ಮಕ್ಕಳು.
ಅವರು ಸಂದುಸಂದಿಗೆಲ್ಲಕ್ಕೂ ಕೊಂದಾಡುತ್ತಿರ್ಪರು.
[ಖ]ಂಡವನೊಲ್ಲರು, ಹಿಡಿಘಖಘೆಂಡವ ತಿಂಬರು,
ಅವರೆಂದಿಗೂ ಮೂಳಿಯ ಮಕ್ಕಳು.
ಇದು ಸಂದೇಹವಲ್ಲ, ಬಂಕೇಶ್ವರಲಿಂ[ಗಾ]./64
ಬಲುಗಲ್ಲಿನ ಮಣಿಯ ಬೆಗಡವನಿಕ್ಕೂದಕ್ಕೆ
ಹುಲ್ಲು ಸೂಜಿ, ತಾವರೆಯ ನೂಲಿನ ಬಿಲ್ಲು, ದಳ್ಳುರಿಯ ನೇಣು.
ಇವೆಲ್ಲವ ಕೂಡಿ ಕಲ್ಲಿನ ಮೇಲಿರಿಸಿ,
ಮಣಿಯ ಮುಖಕ್ಕಿಕ್ಕಿ ತೆಗೆಯಲಾಗಿ ಮಣಿ ವಿರಾಳವಾಯಿತ್ತು.
ಹುಲ್ಲು, ಬಿಲ್ಲು, ದಳ್ಳುರಿಯ ನೇಣು,
ಬಂಕೇಶ್ವರಲಿಂಗದಲ್ಲಿ ಅಡಗಿತ್ತು. ಇದ ಬಲ್ಲವರಾರು ಹೇಳಾ ?/65
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ.
ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು,
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ.
ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ,
ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿದರ್ೆನಯ್ಯಾ,
ವೀರಬಂಕೇಶ್ವರಾ./66
ಬಹುರೂಪು ತೊಟ್ಟಾಡಿದ ದೇಹ ಒಂದೇ.
ವೇಷ ರೂಪಿನ ಪಲ್ಲಟವಲ್ಲದೆ ವೇಷಕ್ಕೆ ತಕ್ಕ ಭಾಷೆ.
ಭಾಷೆಗೆ ತಕ್ಕ ವೇಷ, ಅರಿವು ಆಚರಣೆ ಒಂದಾಗಬೇಕು,
ಬಂಕೇಶ್ವರಲಿಂಗವನರಿವುದಕ್ಕೆ./67
ಬ್ರಹ್ಮನ ಕುದುರೆಯ ಮಾಡಿ, ವಿಷ್ಣುವ ಹೇರ ಮಾಡಿ,
ಸಕಲಭೋಗೋಪಭೋಗಂಗಳೆಲ್ಲವ ಸರಕ ಮಾಡಿ,
ಶ್ರದ್ಧೆ ನಿಬದ್ಧಿಯೆಂಬ ರುದ್ರ ಮಾರುತ್ತಿರಲಾಗಿ,
ವಿರಕ್ತಿಯೆಂಬ ಚೀಟಿಗೆ ಒಪ್ಪವಿಲ್ಲದಿರಲು,
ಅಲ್ಲಿ ಸಿಕ್ಕಿದ ಅಂತಕನ ಕೋಲುಕಾರಂಗೆ,
ಬಂಕೇಶ್ವರಲಿಂಗನ ಒಪ್ಪವಿಲ್ಲದ ಕಾರಣ./68
ಬ್ರಹ್ಮಾಂಡಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು.
ಅವಳಿಗೆ ಐವರು ಗಂಡಂದಿರು, ಮೂವರು ಮಿಂಡಂದಿರು.
ಗಂಡಂಗೆ ಕಾಲ ಕೊಟ್ಟು, ಮಿಂಡಂಗೆ ಮಂಡೆಯ ಕೊಟ್ಟು,
ಗಂಡಮಿಂಡರ ಒಡಗೂಡಿಕೊಂಡಿಪ್ಪ
ನಾರಿಯ ಅಂಗೈಯಲ್ಲಿ ಒಂದು ನಾರಿವಾಳದ ಸಸಿ ಹುಟ್ಚಿತ್ತು.
ಅದು ಕಂಗಳ ನೀರ ಕುಡಿದು, ಅಂಗದ ಮರೆಯ ನೆಳಲಲ್ಲಿ ಬಲಿದು,
ಸಸಿ ಮರನಾಯಿತ್ತು.
ಮರ ಮಹದೊಡಗೂಡಿ ತೆಂಗಿನಕಾಯಿ ಆಕಾಶದಲ್ಲಿ ನಿಂದಿತ್ತು.
ಮಟ್ಟೆಯನೊಡೆದು ಕಾಯ ನಿಶ್ಚಯದಲ್ಲಿ ನೋಡಲಾಗಿ,
ಕಾಯಿಗೆ ಕಣ್ಣಿಲ್ಲ , ಅಲಿಕಿದಡೆ ಜಲವಿಲ್ಲ.
ಅಂಗ ಭಿನ್ನವ ಮಾಡಿ ನೋಡಲಾಗಿ, ಕಾಯ ಕರ್ರಗಾಗಿತ್ತು ,
ನೀರು ಬೆಳ್ಳಗಾಯಿತ್ತು , ಒಡೆದಾತನ ಬಾಯಿ ಬೆತ್ತಲೆಯಾಯಿತ್ತು.
ಬ್ರಹ್ಮಾಂಡಮಂಡಲದ ಶಕ್ತಿ ಗಂಡನ ಕೊಂಡು,
ಮಿಂಡನ ವಂಚಿಸಿ, ಬಂಧುಗಳ ಹಿಂಗಿ,
ತನ್ನ ಹಿಂಡನೊಡಗೂಡಿದಳು.
ಇಂತಿವರೆಲ್ಲರ ಬಲ್ಲತನ ಅವಳಲ್ಲಿಯೇ ಹೋಯಿತ್ತು.
ಶಕ್ತಿ ಉಮಾಪತಿ, ನಿಶ್ಶಕ್ತಿ ಪರಮಜ್ಞಾನ.
ಕಾಯ ಭ್ರಮೆ, ಜೀವ ಬಯಲು, ಅರಿವು ರೂಪು,
ಬಂಕೇಶ್ವರಲಿಂಗವನರಿದನೆಂಬುದು ಗರ್ವಮಾಯೆ./69
ಭಂಡವ ತುಂಬಿರಿಸಿದ ಮುಟ್ಟು, ಭಂಡ ಹುಳಿತಡೆ ಮುಟ್ಟಿ ಮಾರುವರುಂಟೆ?
ಅಂಗ ಪ್ರಾಣಸಂಗದಲ್ಲಿ ಪ್ರಾಣಪ್ರಕೃತಿಯಾದ ಮತ್ತೆ ಅಂಗಕ್ಕೆ ಹಂಗುಂಟೆ?
ಪ್ರಾಣಪ್ರಕೃತಿಯ ಮಾಡಿ, ಅಂಗದ ಹಂಗವ ಕೊಳುತ್ತಿದೆ.
ಇದರ ಸಂಗವ ಕೇಳಿಕೊಂಬ ಬನ್ನಿ, ಬಂಕೇಶ್ವರಲಿಂಗದಲ್ಲಿಗೆ./70
ಭವಿಸಂಗವನೊಲ್ಲೆನೆಂದು, ಭವಿಗಳ ಮನೆಯಲ್ಲಿ ಉಣ್ಣೆನೆಂದು,
ಭವಿಗಳಿಗೆ ಇಕ್ಕೆನೆಂದು, ಭವಿಪಾಕದ ಕ್ಷಾರ ಕ್ರಮುಕ ಮಧುರ ತಿಲ ಚೂರ್ಣ
ಇವು ಮೊದಲಾದ ದ್ರವ್ಯಂಗಳ ಭಕ್ಷಿಸಿ, ಪ್ರೇತರ ಕೂಟವನೊಲ್ಲೆನೆಂಬ,
ಜಗನೀತಿಯ ವರ್ತಕರುಗಳಿಗೆ ಅದೇತರ ಶೀಲ,
ಬಂಕೇಶ್ವರಲಿಂಗದಲ್ಲಿ ? /71
ಭಾನುತೇಜವ ರಾಹು ಕೊಂಡಲ್ಲಿ,
ಸೋನೆಯ ಡುಂಡುಕ ತನ್ನಯ ಕೇಣವನೆತ್ತಿದಂತೆ,
ಎನ್ನಯ ಸುತ್ತಿದ ಮಾಯೆ ನಿನಗೆ ಅನ್ಯವೆ ?
ಅದು ನಿನ್ನಯ ಚುನ್ನ, ಚೆನ್ನಬಂಕೇಶ್ವರಲಿಂಗಾ./72
ಭಾವವಿಕಾರ ಕಾಯಕ್ಕೆ ಚೇಗೆ.
ಕಾಯದ ಕೇಡು, ಅರಿವಿಂಗೆ ಆಶ್ರಯಿಸುವದಕ್ಕೆ ಹೀನ.
ಉಭಯದಲ್ಲಿ ಬಂದುದಕ್ಕೆ ಕಾಯ ಸುಂಕವ ತೆತ್ತು,
ಜೀವ ಹೋಯಿತ್ತು, ಬಂಕೇಶ್ವರಲಿಂಗದಲ್ಲಿ ./73
ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ತನಗೆ ವೈರಿಗಳು.
ನಿರ್ಮಲ ಸುಚಿತ್ತ ದಿವ್ಯಜ್ಞಾನವೆ ತನಗೆ ಕೂಪರು.
ಮರೆದಡೆ ಹಗೆ.
ತನ್ನ ತಾನರಿತಡೆ, ತನ್ನಯ ಪರಿಸ್ಪಂದ ದಿವ್ಯಜ್ಞಾನ.
ಇಂತೀ ಉಭಯವ ತಿಳಿ, ಬಂಕೇಶ್ವರಲಿಂಗದಲ್ಲಿ. /74
ಮಹಿಮಾಪದದಲ್ಲಿ ಒಂದು ಮನೋಹರದ ಪಟ್ಟಣ.
ಪಟ್ಟಣದ ಸುತ್ತುವಳೆಯದಲ್ಲಿ ಇಕ್ಕಿದ ಕೋಟೆ.
ರಸಮಂದಿರದ ಮಣ್ಣು, ನಿರಂಜನದ ಅಗಳು.
ತತ್ವಾರ್ಥದ ಆಳುವೇರಿ, ಮಂಡೆಗೆಮರೆ ತೆನೆ.
ಮುಕ್ತಿ ನಿಶ್ಚಯವಾದ ಪೃಥ್ವಿಪಟ.
ಅದರೊಳಗಾದ ಎಂಬತ್ತನಾಲ್ಕುಲಕ್ಷ ಮನೆಯಲ್ಲಿ
ಹೊಂದುವರೊಬ್ಬರೂ ಇಲ್ಲ.
ಪಟ್ಟಣ ಆರಿಗೂ ಸಾಧ್ಯವಲ್ಲ, ಬಂಕೇಶ್ವರಲಿಂಗವನರಿತವರಿಗಲ್ಲದೆ./75
ಮಾಧವನ ಪಟ್ಟಣದಿಂದ ಓಡಿದರು ಮೂವರು ಸೂಳೆಯರು.
ಅವರು ಹೋದ ಹಾದಿಯಲ್ಲದೆ, ಬೇರೊಂದು ಹಾದಿಯಲ್ಲಿ
ಅರಸಿ ಕಂಡರು ಸೂಳೆಯರ.
ಅವರ ಮೂವರ ಸೆರೆಯ ವಿವರ:
ಬಾಯಿಗೆ ಕೋಳ, ಕಾಲಿಗೆ ನೂಲೆಳೆಯ ಕಟ್ಟು,
ಕೈಹೋಗದಂತೆ ಕೂರಲಗಿನ ಸಂಭವ ಕಟ್ಟು,
ಮೂವರ ಅಗಡ ಹಿಂಗಿತ್ತು.
ಇನ್ನೈವರ ಕೇಳಿ, ಬಂಕೇಶ್ವರಲಿಂಗವ./76
ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು.
ಉಳುವುದಕ್ಕೆ ಹೆಗಲಿಲ್ಲ , ನಡೆವುದಕ್ಕೆ ಕಾಲಿಲ್ಲ ,
ಮೇವುದಕ್ಕೆ ಬಾಯಿಲ್ಲ , ಎರಡಾರಿಂಗೆ ಎಣೆಯಿಲ್ಲ .
ಎತ್ತು ವಿಚ್ಛಂದವಾಯಿತ್ತು ,
ಎತ್ತು ಕಾವ ಹೈದ, ಎತ್ತ ಹೋದನೆಂದರಿಯೆ.
ಕೊಟ್ಟಿಗೆ ಬಚ್ಚಬಯಲಾಯಿತ್ತು , ಬಂಕೇಶ್ವರಲಿಂಗಾ./77
ಮುತ್ತು ಮೊಲೆಯ ನುಂಗಿತ್ತು, ಮೊಲೆ ಅಬಲೆಯ ನುಂಗಿತ್ತು.
ಅಬಲೆಯ ಬಲೆಯಲ್ಲಿ, ಬಲವಂತರೆಲ್ಲರು ಸಿಕ್ಕಿದರು.
ಸುಂಕಕ್ಕಡಹಿಲ್ಲ, ಬಂಕೇಶ್ವರಲಿಂಗಾ./78
ಮೇಲೇರಿದ ಹುಗಿಲ ತಾಳ ಪುಟಕ್ಕೆ ಅಗೆದು,
ಕೇಳಿನ ಹುಗಿಲ ಮೇಗಳ ತಾಳು ನುಂಗಿತ್ತು.
ಕೀಳಿನ ಮೇಲಿನ ದ್ವಾರವ ಕೀಲು ನುಂಗಿತ್ತು.
ಕೀಲು ಕೀಳುವ ಸಕೀಲವ ಇನ್ನಾರುವ ಕಾಣೆ.
ಬಂಕೇಶ್ವರಲಿಂಗದಲ್ಲಿ ಲೀಯವಾದವಂಗಲ್ಲದೆ ಇಲ್ಲ./79
ಮೊದಲು ಬಂದ ಬಾಯಿ ಕಚ್ಚಿದುದಿಲ್ಲ.
ಕಡೆಯಲ್ಲಿ ಹುಟ್ಟಿದ ಹುಲ್ಲು, ಕಠಿಣವು ಕಡಿವುತ್ತಿದೆ ನೋಡಾ.
ಮೊದಲು ಬಂದ ಮರವೆ, ಕಡೆಯಲ್ಲಿ ಬಂದ ಅರಿದರಿವು,
ಬಂಕೇಶ್ವರಲಿಂಗವ ಒಡಗೂಡಿತ್ತು, ನೋಡಾ./80
ರಕ್ಕಸಿ ಮಗುವ ಹೆತ್ತು, ಕರುಳ ನೇಣ ಮಾಡಿ,
ಹೆಣೆದ ತೊಟ್ಟಿಲ ಕಟ್ಟಿ, ರಕ್ತದ ಪಾಲನೆರೆದು,
ಮತ್ತ ಜೀವವ, ಜಗವನೊತ್ತಿ ತಿಂಬವನೆ,
ರಕ್ಕಸಿಯ ಹೊತ್ತು ಹೋಗದವನೆಯೆಂದು ತೊಟ್ಟಿಲ ಹಿಡಿದು ತೂಗೆ,
ಬಾಯ ಮುಚ್ಚಿ ಕಣ್ಣಿನಲ್ಲಿ ಅಳುತ್ತಿದ್ದಿತ್ತು,
ಬಂಕೇಶ್ವರಲಿಂಗವ ನೋಡಿಹೆನೆಂದು./81
ರಕ್ಕಸಿಯ ಕೋರೆದಾಡೆಯಲ್ಲಿ,
[ಕ]ಪ್ಪುಹಲ್ಲಿನ ಮಧ್ಯದಲ್ಲಿ ಒಂದು ಒಪ್ಪದ ಶಿಶು ಹುಟ್ಟಿತ್ತು.
ಅವಳು ಕಚ್ಚುವ ಜೀವವ ತಪ್ಪಲಿಕ್ಕೂದು.
ಅವಳು ಅಡಗ ಕಡಿವಲ್ಲಿ, ದಾಡೆಯಲ್ಲಿ ಅಡಗಿ ಅಗಿಯಲೀಸದು.
ಅವಳು ಶಿಶುವನಗಿದೆಹೆನೆಂದಡೆ,
ದಾಡೆಯೊಳಗಡಗಿ ಉಗಳೂದಕ್ಕೆ ಅಸಾಧ್ಯ.
ತನ್ನ ತಲೆಯಳಿದಲ್ಲದೆ, ಶಿಶುವಿನ ಹಗೆ ಬಿಡದು.
ಬಂಕೇಶ್ವರಲಿಂಗ ನೀ ಮಾಡಿದ ಮಾಯೆ, ಇದಾರಿಗೂ ಅಸಾಧ್ಯ./82
ಲೌಕಿಕಕ್ಕೆ ದರ್ಶನ ಧರ್ಮದ ಆಚರಣೆಯಿಂದ,
ಶರೀರದ ಯುಕ್ತಿಧರ್ಮ ಮನ ಅನುವನರಿತಲ್ಲಿ,
ರಸಯುಕ್ತಿಕರಂಡದಂತೆ,
ಒಡೆದಡೆ ಹಲವಾಗಿ, ಹೂಡಿದಲ್ಲಿ ಒಡೆದಡೆ ಭಿನ್ನವಿಲ್ಲದೆ,
ಸಮಯಪದ ಅರಿವಿನ ಗುಣ ವಿವರ ಭೇದ,
ಕ್ಷಾರದ್ರವ್ಯದಂತೆ ಇರಬೇಕು.
ಬಂಕೇಶ್ವರಲಿಂಗವ ಒಡಗೂಡೂದಕ್ಕೆ ಇರವು./83
ವೇಷ ಲಾಂಛನವೆಂಬ ಪಾಠದ ಹೊರೆಯ ಹೊತ್ತು,
ಬೆವಹಾರ ಮಾಡುವ ಹರದಿಗರೆಲ್ಲರೂ ಹರದಿಗರಲ್ಲಾ ಹರವರಿಯಲ್ಲಿ.
ಉಭಯಮಾರ್ಗವ ಬಿಟ್ಟು,
ವೇಷತನದ ಕಳ್ಳಹಾದಿಯಲ್ಲಿ ಹೋಗಿ ಸಿಕ್ಕಿದಿರಿ,
ಕಾಲನ ಕಾಲಾಟಕ್ಕೆ ಬಂಕೇಶ್ವರಲಿಂಗಕ್ಕೆ ಅರಿವಿನ ಸುಂಕದ ಪಥವ ತಪ್ಪಿ./84
ಶುಕ್ಲಪರ್ವತದಲ್ಲಿ ಒಂದು ಮತ್ತಗಜ ಬಿಟ್ಟಾಡುತ್ತಿದೆ.
ಕಟ್ಟಿಗೆ ಸಿಕ್ಕದು, ಪ್ರತಿಗಜದೊತ್ತಿಗೆ ಬಾರದು.
ಅದು ಚಿತ್ತಜನ ಮಾತಂಗ.
ಹೇಮಕೂಟ ರಸ, ಮೊತ್ತದ ಕೋಲುಮೆ.
ಗಣಿಕೆಯರ ಏಕಾಂತದ ವಾಸ, ಚಿತ್ರಜ್ಞನ ಚಿತ್ತದ ಲೆಕ್ಕಣಿಕೆಯ ಕಡ್ಡಿ.
ಇಂತೀ ಭಿತ್ತಿಯನರಿದ ಚಿತ್ತದ ಮತ್ತಮಾತಂಗವನೊತ್ತಿ ಮುರಿ,
ಬಂಕೇಶ್ವರಲಿಂಗವನರಿವುದಕ್ಕೆ. /85
ಶೋಣಿತವ ಮುತ್ತಿದ ನೊಣನ, ಆ ಶೋಣಿತವೇ ತಿಂದಿತ್ತು.
ಅಡಗ ತಿಂಬ ಕುಕ್ಕುರನ, ಆ ಅಡಗೇ ತಿಂದಿತ್ತು.
ಇಷ್ಟವನರಿವ ಚಿತ್ತವನು, ಆ ಇಷ್ಟವೇ ತಿಂದಿತ್ತು.
ಬಂಕೇಶ್ವರಲಿಂಗವನರಿವ ಮನವ, ಅದು ತಾನೆ ಅವಗವಿಸಿತ್ತು. /86
ಸದಾಚಾರವೆ ಸಾಕಾರವಾಗಿ, ಸತ್ಪ್ರಣಮವೆ ಪ್ರಾಣವಾಗಿ,
ಮಾಡುವ ಮಾಟವೆ ಕೈಯಾಗಿ,
ಅರಿವೆಂಬ ಬಾಯಿಗೆ ಕುರುಹಿನ ಕೈ ಮರೆಯದೆ ಅರ್ಪಿಸಿತ್ತು.
ಅಂಗಪ್ರಾಣ ಅರಿವು ಸಂಬಂಧ,
ಅದು ಪ್ರಾಣಲಿಂಗಯೋಗ, ಬಂಕೇಶ್ವರಲಿಂಗದಲ್ಲಿ./87
ಸರ್ವಜೀವಕ್ಕೆ ದಯವೆ ಮೂಲಮಂತ್ರ.
ಸರ್ವರ ಭೂತಹಿತವೆ ದಿವ್ಯಜ್ಞಾನ.
ಇಂತೀ ಉಭಯವನರಿತಲ್ಲಿ ಸದಮಲಪೂಜೆ.
ಹೀಗಲ್ಲದೆ ಬೆನ್ನ ತಡಹಿ, ಅನ್ನವನಿಕ್ಕಿ,
ತಿನ್ನು ಕೊಲ್ಲು ಎಂಬವನ ಪೂಜೆ.
ಅವನನ್ನದ ಹಿರಣ್ಯದ ಒದಗು.
ಅವನ ಮಾಟದ ಮರುಳಾಟ, ಏತದ ಕೂನಿಯ ಘಾತದ ವೆಜ್ಜದಂತೆ,
ಅವನ ನೀತಿಯ ಇರವು, ಬಂಕೇಶ್ವರಲಿಂಗಾ./88
ಸರ್ವೆಂದ್ರಿಯವೆಲ್ಲವು ಸರ್ವಸುಖಂಗಳ ಭೋಗಿಸಿ,
ಸರ್ವೆಶ್ವರನ ಗೊತ್ತ ಮುಟ್ಟಿಸಲರಿಯದೆ ಮತ್ತರಾಗಬೇಡ.
ಗಳೆಯನೇರಿದ ವಿಧಾಂತ ಲಾಗು ಬಾರದೆ ಇಳಿದಡೆ ಅವಗದೇ ಭಂಗ.
ಸರ್ವವನರಿದ ಜೀವನ್ಮುಕ್ತ ಮರಳಿ ಸರ್ವವನೊಡಗೂಡಿದಡೆ,
ಬಂಕೇಶ್ವರಲಿಂಗಕ್ಕೆ ದೂರ./89
ಸಾಕಾರವೆಂಬ ಚೀಲದಲ್ಲಿ, ಪ್ರಕೃತಿ ವಿಕಾರವೆಂಬ ಭಂಡವ ತುಂಬಿ,
ಕ್ರಿಯಾ ಧರ್ಮಂಗಳೆಂಬ ದಾರವ ದಾರದಲ್ಲಿ ಸೇರಿಸಿ,
ಕಟ್ಟಲರಿಯದ ಅಣ್ಣಗಳಿಗೆ ಜಗಸೆಟ್ಟಿತನವೇಕೆ ?
ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ./90
ಸಾಕಾರವೆಂಬ ಸೆಟ್ಟಿ, ಜೀವವೆಂಬ ಎತ್ತಿನ ಮೇಲೆ
ಎತ್ತಿ ಹೊಡೆಯಲಾಗಿ, ಬಹುವಿಧ ಚರಿತ್ರದ ಭೇದ
ಬೆವಹಾರದ ಒಡೆಯಂಗೆ ಕೊಡಿ.
ಕರಣಂಗಳೆಂಬ ಸರಕ ಹೊತ್ತುಮಾರುವ ಸೆಟ್ಟಿಗಳೆಲ್ಲರೂ
ಕೊಡಿ ಬಂಕೇಶ್ವರಲಿಂಗಕ್ಕೆ ಸುಂಕವ./91
ಸಾಗರದ ತಡಿಯಲ್ಲಿ ಒಂದು ಆರವೆ.
ಆರವೆಯ ಬೇರಿನಲ್ಲಿ ಮೂರುಲೋಕ.
ಲೋಕದೊಳಗೆ ಹೊತ್ತು ಬೆವಹಾರ ಮಾಡುವ ಅಣ್ಣಗಳೆಲ್ಲರೂ
ಹೇರಿನ ಮೂಲೆಗೆ ತೋಳಕೊಟ್ಟು, ಅಳೆವ ಕೊಳಗಕ್ಕೆ ಕೈಯನಿಕ್ಕಿದರು.
ಗಡಿವಾಡದ ಸುಂಕವ ಕದ್ದು ಹೋಗಲರಿಯದೆ
ಬಂಕೇಶ್ವರಲಿಂಗವನರಿಯಿರಣ್ಣಾ./92
ಸುಖದ ಸುಖಿಗಳ ಸಂಭಾಷಣೆಯಿಂದ, ದುಃಖ ವಿಶ್ರಾಮವಾಯಿತ್ತು.
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು.
ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತು,
ಚೆನ್ನಬಂಕನಾಥನ ಮಾಹೇಶ್ವರಂಗೆ./93
ಸುಖವ ನಿಶ್ಚೆ ಸಲಿಲ್ಲ, ಅದು ದುಃಖಕ್ಕೆ ಬೀಜ.
ದುಃಖವ ನಿಶ್ಚೆ ಸಲಿಲ್ಲ, ಸುಖದೊಡಲು.
ಸುಖದುಃಖವೆರಡು ಕಾಲನ ಸುಂಕಕ್ಕೆ ಒಳಗು.
ಬಂಕೇಶ್ವರಲಿಂಗದೊಳಗೆ ಒಬ್ಬರೂ ಇಲ್ಲ. /94
ಸುಧೆಯ ಸುಮ್ಮಾನದ ಗಿರಿಯಲ್ಲಿ ಒಂದು ಮಲಯಜದ ಮರ ಹುಟ್ಟಿತ್ತು.
ಬೇರಿಲ್ಲದೆ ನೀರಿಲ್ಲದೆ ಭೂಮಿಯೊಳಗಲ್ಲದೆ ಬೆಳೆವುತ್ತದೆ ನೋಡಾ.
ಅದಕ್ಕೆ ಬೇರಿನೊಳಗಣ ಹಣ್ಣು,
ಮರದ ಮಧ್ಯದಲ್ಲಿ ಕಾಯಿ, ತುದಿಯಲ್ಲಿ ಹೂ.
ತುದಿಯಲ್ಲಿ ಕುಸುಮ ಬಲಿದು,
ಮರದ ಮಧ್ಯದಲ್ಲಿ ಕಾಯಿ ಬಲಿದು, ರಸ ಬೇರಿಗಿಳಿಯಿತ್ತು.
ಬೇರಿನ ಹಣ್ಣು ಬಂಕೇಶ್ವರಲಿಂಗಕ್ಕೆ ಆರೋಗಣೆಯಾಯಿತ್ತು./95
ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು.
ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು.
ಹಿನ್ನಿ ಹಿಡದ ಭೇದದ ನೋಡಾ !
ಮೊನೆ ಗೆಲ್ಲದು ಹಿನ್ನಿಯ ಭಾರಕ್ಕಂಜಿ.
ಹಿನ್ನಿಯ ನನ್ನಿಯ ಮಾಡಿ, ಚೆನ್ನಾಗಿ ಚುಚ್ಚಲಾಗಿ,
ಹಿನ್ನಿ ಕಿತ್ತು ಮೊನೆ ಹೋಯಿತ್ತು.
ಹಚ್ಚಡ ಎಣೆಗೂಡಿತ್ತು, ಬಂಕೇಶ್ವರಲಿಂಗದಲ್ಲಿ./96
ಸೂತಕ ತಡೆದಲ್ಲಿ ಮಕ್ಕಳಾದಹರೆಂದು ಮಚ್ಚಿಪ್ಪುದು ಜಗ.
ಸೂತಕವೇತರಿಂದೊದಗೂದು.
ಜಗದ ಉತ್ಪತ್ಯ, ಈ ಕಾಯದ ಆಶೆಯ ಸೂತಕ ತಡೆದು,
ನಿರಾಶೆಯ ಮಾತೆಯ ಗರ್ಭದಲ್ಲಿ, ನಿಜರ್ಾತನು ಬೆಸಲಾದ.
ಭಾವವೆಂಬ ಯೋನಿಯಲ್ಲಿ , ಬಂಕೇಶ್ವರಲಿಂಗ ಅಂತುಕ ಕುಮಾರನಾದ./97
ಹಡಗಿನ ಮನೆ ಮೂರು.
ಸುರೆಯ ಗಡಿಗೆಯ ಹೊತ್ತು ಮಾರುವ ಅಸುವಿನ
ಘಟಸುಂಕ, ತೆರಿಗೆಯ ಭೇದ.
ಅರಿದು ನಡೆ, ಪಥ ಶುದ್ಧವಾಗಿ,
ಬಂಕೇಶ್ವರಲಿಂಗದೊಪ್ಪದ ಚೀಟ ಕೊಂಡು./98
ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ, ತನ್ನೆಡೆಗೆ ಮರೆಯಹ ತೆರದಂತೆ,
ತನ್ನಯ ಸತ್ಕ್ರೀ ಭಕ್ತಿಮಾರ್ಗದ ಮಾಟಕೂಟದಿರವು.
ತಾ ಮಾಡುವಲ್ಲಿ ಇದಿರ ರೂಪ ನೋಡಲಿಲ್ಲ.
ಅರಿಕೆಯಲ್ಲಿ ಉಭಯವನರಿಯಬೇಕು.
ಎಲೆಯ ಮರೆಯ ಕಾಯನರಿದಂತೆ,
ದರ್ಶನದ ಮರೆಯ ಅರಿವನರಿಯಬೇಕು,
ಬಂಕೇಶ್ವರಲಿಂಗವನರಿವುದಕ್ಕೆ./99
ಹರಿವ ಮನ ತುರಗ, ಅಹಂಕಾರ ಗಜ,
ಮೂಢಚಿತ್ತ ಒಂಟೆಯಾಗಿ, ಜೀವಗಳು ವ್ಯವಹಾರಿಯಾಗಿ,
ಅಂಗವೆಂಬ ಭೂಮಿಯಲ್ಲಿ ಬೆವಹಾರವ ಮಾಡಲಾಗಿ,
ಚಿತ್ತವೆಂಬ ಸೂಳುಗಾರ ಒಪ್ಪದ ಚೀಟ ತೋರಿಯೆಂದಲ್ಲಿ ಸಿಕ್ಕಿದ.
ಜೀವವೆಂಬ ಸೆಟ್ಟಿ ಭವದ ತಕ್ಕೆಯ ಸೆರೆ
ಸಾಲಿಯಲ್ಲಿ ಕೆಟ್ಟಿತ್ತು ಸುಂಕ,
ಬಂಕೇಶ್ವರಲಿಂಗಕ್ಕೆ ನಷ್ಟ ಬಂದುದಿಲ್ಲ./100
ಹಸಿದುಂಬ ಅಣ್ಣಗಳೆಲ್ಲರೂ ಅಸುವಿನ ಘಾತಕ್ಕೊಳಗಾದರು.
ಹಸಿ[ವೆ]ಯ ವಿಷಯಂಗಳಲ್ಲಿ ನಸಿದಾಡದೆ ಹುಸಿಯದೆ,
ಮತ್ರ್ಯರಂತೆ ಗಸಣೆಗೊಳ್ಳದೆ, ದಯದೆರಕದಲ್ಲಿರು,
ಬಂಕೇಶ್ವರಲಿಂಗವನರಿವುದಕ್ಕೆ./101
ಹಾವ ಕೊಂದು ತಿಂದ ಹದ, ತಾ ತಿಂದಡೆ, ಸ್ವಾನುಭಾವಜ್ಞಾನಿ.
ಹುಲಿಯ ಕೊಂದ ನಾಯ ಕೊಲ್ಲದೆ ತಂದಡೆ, ಆತ ಪರಂಜ್ಯೋತಿ ಪ್ರಕಾಶ.
ಇಂತೀ ಹಾವಿನ ಹಗೆ, ಹುಲಿಯ ವಿರೋಧ.
ಇಂತೀ ಉಭಯವ ತಿಂದವನ ತಿಂದು,
ವಿಚ್ಛಂದವಿಲ್ಲದೆ ಬದುಕು, ಬಂಕೇಶ್ವರಲಿಂಗವನರಿವುದಕ್ಕೆ./102
ಹಾವು ಸತ್ತು ಹೇಳಿಗೆಯ ಹೊತ್ತಾಡುವವರೆಲ್ಲರೂ ಎನ್ನವರು.
ಹುಲಿ ಸತ್ತು ಗೂಡ ಹೊತ್ತಾಡುವವರೆಲ್ಲರೂ ಎನ್ನವರು.
ಮಕ್ಕಳಿಲ್ಲದ ಬಂಜೆ ಗೊತ್ತಿಲ್ಲದ ರೂಪು ಮಾರಿ ಮಿಕ್ಕುದು ಎನ್ನೊಡವೆ.
ರೂಪು ರುಚಿ ತೃಪ್ತಿ ಭಾವ ಅದು ನಿನ್ನೊಡವೆ.
ನನಗೂ ನಿನಗೂ ತತ್ತುಗೊತ್ತು, ಬಂಕೇಶ್ವರಲಿಂಗಾ./103
ಹಿಂಡುಗಟ್ಟಿಯ ಕಟ್ಟುವವನ ಅಂಡಿನ ಕೂದಲಿನಲ್ಲಿ ,
ಮೂರುಸಂದು ಹುಟ್ಚಿದವು.
ಮೂರು ಸಂದಿನಿಂದ ಬಂದ ಸಂದೇಹವೆಲ್ಲವು ಜಗದಲ್ಲಿ ಹೊಂದುತ್ತಿದೆ.
ಆ ಹೊಂದುವ ಅಂದವ ಹೇಳು, ಬಂಕೇಶ್ವರಲಿಂಗಾ./104
ಹುಲಿ ಹುತ್ತ ಕಳ್ಳರ ಹಾದಿ, ಬಲುಗೈಯರ ತೆಕ್ಕೆ,
ಇದು ಬಲವಂತತನದಿಂದ ಆಗದು,
ಅವರವರ ಒಲವರದಿಂದಲ್ಲದೆ.
ಗೆಲುವ ಮನ, ಸೋಲುವ ಕಾಯ, ಈ ಉಭಯದ ಒಲವರದಿರವು,
ಶರೀರದ ಸುಂಕ, ಬಂಕೇಶ್ವರಲಿಂಗಕ್ಕೆ./105
ಹುಳ್ಳಿ ಹಳ್ಳದಲ್ಲಿ ಹೋಗುತ್ತಿರೆ, ನೀರು ತಾಗಿ ಅಲ್ಲಾಡದಿಹುದೆ ?
ಸಂಸಾರಸಾಗರಮಧ್ಯದಲ್ಲಿ ವಾಸವಾಗಿದ್ದ ಆತ್ಮ,
ಸಂಸಾರದ ಪಾಶ ತಾಗಿ ಓಸರಿಸದಿಹುದೆ ?
ರಸತಾಗಿದ ರಸ ಪಾವಕಂಗೆ ಹುಸಿಯಾದಂತೆ,
ಅಸು ಘಟಯೋಗ ಅದರ ದೆಸೆಯಂತೆ ಇರಬೇಕು,
ಹುಸಿ ದಿಟದಂತಿರಬೇಕು, ಬಂಕೇಶ್ವರಲಿಂಗವನರಿವುದಕ್ಕೆ./106
ಹೊರವಾರು ಉಭಯಮಾರ್ಗ, ಒಳವಾರು ಸ್ಥಲಕುಳ ವಿಸಂಚವಿಲ್ಲಾ
ಎಂದು ಕೊಟ್ಟ ಚೀಟು, ನಿಮ್ಮ ಕೈಹಾಳೆಯಲ್ಲಿ ಅದೆ.
ತಡಿಯೊಡೆಯಂಗೆ ಕುರುಹ ತೋರಿ,
ನಿಮ್ಮ ನಿಮ್ಮ ಹೊರೆಯ ಕೊಂಡು ಹೋಗಿ,
ಜಗದ ಸುಂಕದೊಡೆಯ ಬಂಕೇಶ್ವರಲಿಂಗದ ಅರಿಕೆಯಾಗಿ./107
ಹೊಲದೊಳಗೊಂದು ಹುಲ್ಲೆ ಮರಿಯನೀದು, ಲಲ್ಲೆಯಿಂದ ನೆಕ್ಕುತ್ತಿರಲಾಗಿ,
ಅದು ಹುಲಿಯ ಮರಿಯಂತಾಯಿತ್ತೆಂದು
ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು.
ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು.
ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ./108