Categories
ವಚನಗಳು / Vachanagalu

ಸೂಜಿಕಾಯಕದ ರಾಮಿತಂದೆಯ ವಚನಗಳು

717
ಏತ್ವದಲ್ಲಿ ಚುಚ್ಚಿ, ಓತ್ವದಲ್ಲಿ ತೆಗೆದು,
ಔತ್ವದಲ್ಲಿ ಒಡಗೂಡಿ, ಕುರುಕಿನಲ್ಲಿ ಸುಳಿದು,
ಸೊನ್ನೆಯಲ್ಲಿ ಸಂಜ್ಞೆಗೆಟ್ಟು, ಸೂಜಿಯ ಮೊನೆಯೊಡಗೂಡುವದಕ್ಕೆ ಎರಡಿಲ್ಲ.
ದಾರಕ್ಕೆ ಹುರಿಯಿಲ್ಲ, ಇದನಾರ ಬಲ್ಲರು.
ಇಂತಿವನಾರಯ್ಯಬಲ್ಲಡೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜನಲಿಂಗವ ಬಲ್ಲವ.

718
ಕನ್ನಡಕ ಒಂದು, ಕರ್ಣದಡಕ ಆರು.
ನಾಸಿಕದಡಕ ಓಸರವೆರಡು.
ಜಿಹ್ವೆಯಡಕವಗಿಡದವೆಂಟು, ಅಡಗದವೆಂಟು.
ಎಂಟರೊಳಗೆಂಟಡಗಿ ಹದಿನಾರು ಚಿಪ್ಪು ಒಡಗೂಡಿದವು.
ಎರಡರಲ್ಲಿ ಒಂದ ಸಂದಿಸಿ, ಸಂದುಗೂಡಿ ಹೊಲಿಸುವುದಕ್ಕೆ ಒಂದನೂ ಕಾಣೆ.
ಇಂತೀ ಪಂಚೇಂದ್ರಿಯದಂಗವ ಬಲ್ಲಡೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.

719
ಕಾಲುಕುಪ್ಪಸವ ಮೇಲಾಗಿ ಹೊಲಿದೆ.
ಅಂಗದ ಕುಪ್ಪಸವ ಮಂಡೆಗೆ ಹೊಲಿದೆ.
ಮಂಡೆಗೆ ಒಂಬತ್ತು ಚಿಪ್ಪು ಸರ್ವಾಂಗಕ್ಕೆ ತೊಡಿಸುವೆ.
ಇದರ ಸಂದಿನ ಕೂಟವ ಬಲ್ಲಡೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.

720
ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು,
ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ ಒಂದೆ ಚಿಪ್ಪಿನ ಕುಪ್ಪಸ.
ಇದರಂಗದ ಆಚರಣೆಯ ಬಲ್ಲವ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.

721
ಬ್ರಹ್ಮಂಗಂಟುದಾರ, ವಿಷ್ಣುವಿಂಗೆ ಉಭಯದ ಹೊಲಿಗೆ,
ರುದ್ರಂಗೆ ಟಿಬ್ಬಿ, ಮಿಕ್ಕಾದ ದೇವಕುಲಕ್ಕೆಲ್ಲಕ್ಕೂ ಅಲ್ಲಲ್ಲಿಗೆ ಕಲ್ಲಿಯ ಹೊಲಿಗೆ.
ಈ ಗುಣವ ಬಲ್ಲವರೆಲ್ಲರೂ
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವರಹರು.

722
ಮೂರು ಗಳಿಗೆಯನೊಂದುಗೂಡಿ,
ಹೊರೆಯಲ್ಲಿ ಐದು ಕತ್ತರಿಸಲಾಗಿ, ಆರು ಹೋಳಾಯಿತ್ತು.
ಆರಕ್ಕೆ ಮೂರ ಪ್ರತಿಯನಿಕ್ಕಲಾಗಿ,
ಸೂಜಿಯ ಮೊನೆಯ ಕೊನೆಯಲ್ಲಿ ಆರಡಗಿ ಮೂರೊಡಗೂಡಿದವು.
ಮೀರಿ ಹೊಲಿವುದಕ್ಕೆ ಒಡಗೂಡುವ ಹೋಳ ಕಾಣೆ.
ಇಂತೀ ಗುಣವಡಗಿದ ಮತ್ತೆ , ಷಡುಸ್ಥಲ ತ್ರಿವಿಧಕೂಟ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನದೇವರಲ್ಲಿಯೆ ಒಡಗೂಟ.

723
ಮೊನೆ ಮೂರು, ಹಿನ್ನೆ ಒಂದು.
ಆ ಸೂಜಿಯಲ್ಲಿ ಹೊಲಿದಹೆನೆಂದಡೆ
ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ.
ಮೊನೆಯೊಂದು, ಹಿನ್ನೆ ಮೂರಾಗಿ ಹೊಲಿದಡೆ,
ಹಿನ್ನೆಯ ಮೂರುದಾರ ಮೊನೆಯ ನಾಳದಲ್ಲಿ ಅಡಗಿದವು ನೋಡಾ.
ಆ ಮೂರ ಹಿಂಚಿ ಹಾಕಿ, ಮೊನೆಯೊಂದರಲ್ಲಿ
ಬೇರೆ ಬೇರೆ ಹೊಲಿಯಬಲ್ಲಡೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.

724
ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ.
ತತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋಹವರ ಕಂಡೆ.
ಮಾತಿನ ಬ್ರಹ್ಮವನಾಡಿ ವಸ್ತುವನರಿಯದೆ, ಭ್ರಾಂತರಾಗಿ ಕೆಟ್ಟವರ ಕಂಡೆ.
ಅಷ್ಟಾಂಗಯೋಗವನರಿತೆಹೆವೆಂದು ಘಟ ಕೆಟ್ಟು ನಷ್ಟವಾದವರ ಕಂಡೆ.
ಇಂತಿವನರಿದು ಕರ್ಮಯೋಗವ ಮಾಡದೆ,
ವರ್ಮಂಗಳನರಿದು ಸರ್ವಗುಣಸಂಪನ್ನನಾಗಿ,
ತನ್ನ ತಾನರಿದ ಮತ್ತೆ ಮಹಾತ್ಮಂಗೆ, ತನಗೆ ಏನೂ ಅನ್ಯಭಿನ್ನವಿಲ್ಲ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವು ತಾನಾದವಂಗೆ.

725
ಸ್ಥೂಲಕ್ಕೆ ಮೂರು, ಸೂಕ್ಷ್ಮಕ್ಕೆ ಎರಡು, ಕಾರಣಕ್ಕೆ ಒಂದೆಂದು ತಿಳಿದ ಮತ್ತೆ ,
ನಾನಾ ಸಂದುಸಂದ ಹೊಲಿಯಲೇತಕ್ಕೆ ?
ನಾ ಗಳಿಗೆಯಲೊಡಗೂಡಿದಡದು ಮುಗಿದು ಮತ್ತೆ,
ಎರಡು ಹೊರೆಯಾಯಿತ್ತು.
ಎರಡು ಹೊರೆಯ ಹೊಲಿಗೆಯನರಿದ ಮತ್ತೆ, ಹೋದವ ತಾನೇಕವಾದ ಮತ್ತೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನು ಒಡಗೂಡುವನ ಇರವು.

726
ಹರಿ ಹತ್ತು, ಹೊಲಿವುದೊಂದೆ ಸೂಜಿ. ಸರಗೆಂಟು, ಮಡಿಸೂದೊಂದೆ ಕೈ.
ಅಡಿ ಆರು, ನಡೆವುದೊಂದೆ ಕಾಲು. ನುಡಿ ಮೂರು, ಅರಿವುದೊಂದೆ ಆತ್ಮ.
ಇಂತೀ ಒಂದರೊಳಗೊಂದಡಗಿ, ಸಂದಿಲ್ಲದ ನೂಲ ಮೂಲೆಯ ಗಂಟನಿಕ್ಕಿ,
ಒಂದಕ್ಕೆ ಮೂರು, ಮೂರಕ್ಕೆ ಆರು, ಆರ ವಿಭಾಗಿಸಿ ಮೂವತ್ತಾರ ಬೇರರಿವ,
ಇಪ್ಪತ್ತೈದ ಮೀರಿ ಕಾಬ, ನೂರೊಂದರಲ್ಲಿ ಸೂರೆಯಾಗದೆ,
ತನಗೊಂದು ತೋರೆ ಒಡಗೂಡಿದಲ್ಲಿಯ ಊರೆಲ್ಲಕೆ ದೂರದೆ,
ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಒಡಗೂಡಬೇಕು.