೧೯೭೩ ಮೇ ತಿಂಗಳಲ್ಲಿ ಅಖಿಲ ಭಾರತ ರಂಗಭೂಮಿಯ ಸಮ್ಮೇಳನ ಬೆಂಗಳೂರಲ್ಲಿ ನಡೆಯಿತು. ‘ಜಾನಪದ ರಂಗಭೂಮಿಯ ಸಮಸ್ಯೆಗಳು’ ಇದರ ಬಗ್ಗೆ ನಾನು ಪ್ರಬಂಧ ಪ್ರಕಾರಗಳನ್ನು ಓದಿದಾಗ ‘ಭಾಮಾ ಕಲಾಪ’ದ ವಿಚಾರವು ನನ್ನನ್ನು ವಿಶೇಷವಾಗಿ ಆಕರ್ಷಿಸಿತು. ಜಾನಪದ ರಂಗಭೂಮಿಯಲ್ಲಿ ನಮ್ಮ ನಾಡಿನ ಕೃಷ್ಣ ಪಾರಿಜಾತಕ್ಕೆ ಆಂದ್ರ ಪ್ರದೇಶದ ಭಾಮಾ ಕಲಾಪಕ್ಕೂ ಇರುವ ಕೆಲವು ಸಾಮ್ಯಗಳು, ಕಥೆಯ ರಚನೆ ಇತ್ಯಾದಿಗಳು ಕುತೂಹಲವನ್ನುಂಟು ಮಾಡಿದವು. ಆ ವಿದ್ವಾಂಸರೊಂದಿಗೆ ಚರ್ಚಿಸಿ, ಅನುಕೂಲ ಒದಗಿಸಿದ್ದಲ್ಲಿ ಅವರ ನಾಡಿನಲ್ಲಿ ಸಂಚರಿಸಿ ಭಾಮಾ ಕಲಾಪವನ್ನು ತಿಳಿಯುವೆ ಎಂದಿದ್ದೆ. ಸಂದರ್ಭ ಒದಗಿತು. ಘನ ಸರಕಾರವೂ ನನ್ನ ಯೋಜನೆಯನ್ನು ಒಪ್ಪಿದ್ದರಿಂದ ಎರಡು ಬಾರಿ ವಿವಿಧ ಮನೋವೇದಿಕೆಯೊಂದಿಗೆ ಆಂಧ್ರದಲ್ಲಿ ಈ ಮೊದಲೇ ಸುತ್ತಿದ್ದ ಕೃಷ್ಣಾ ನದಿಯ ತೀರದ ನಮ್ಮ ನಾಡನ್ನು ಸುತ್ತಿದೆ. ಹೊಳೆದ ವಿಚಾರಗಳು ನೂರಾರು ಆದರೂ ಗಟ್ಟಿಯಾಗಿ ಉಳಿದ ಕೆಲವೊಂದು ಸಮಸ್ಯೆಗಳನ್ನು ಸಂದೇಹಗಳನ್ನು ಇದರಲ್ಲಿ ವಿವರಿಸಿದ್ದೇನೆ. ಒಂದು ನಾಡಿನ ಕಲೆ, ಪಕ್ಕದ ನಾಡಿನ ಕಲೆಯಿಂದ ಎರವಲು ಪಡೆದಿರಬಹುದು. ಅಥವಾ ಪ್ರಭಾವ ಬೀರಿರಬಹುದು. ಇದು ನಾಡಿನ ಸಾಂಸ್ಕೃತಿಕ ಅಧ್ಯಯನದಲ್ಲಿ ಜನತೆಯ ಕಲಾಜೀವನದಲ್ಲಿ ಎಂಥ ಪಾತ್ರವಹಿಸಿದೆ ಎಂಬುದು ಅಧ್ಯಯನಕ್ಕೆ ಅರ್ಹವಾದ ವಿಷಯ. ಒಂದು ಜಾನಪದ, ಇನ್ನೊಂದು ಶಾಸ್ತ್ರೀಯ ಹೀಗೆ ಇತ್ತೀಚೆಗೆ ನನಗೆ ವಿಂಗಡಿಸಿ ಜನ ಹೇಳಿದರೂ ಯಾವ ತಳಹದಿಯ ಮೇಲೆ ಈ ಆಟ, ಕುಣಿತ ಜಾನಪದ ಅಥವಾ ಶಾಸ್ತ್ರೀಯವೆಂದು ವಿಂಗಡಿಸಬೇಕು ಎನ್ನುವುದು ಇನ್ನೂ ಪೂರ್ತಿಯಾಗಿ ತಿಳಿಯದ ವಿಚಾರವೆಂದು ನನ್ನ ಭಾವನೆ. ನನ್ನ ಮಟ್ಟಿಗೆ ಹೇಳುವುದಾದರೆ ಕೇವಲ ಹಳ್ಳಿಯವರು ಅಭಿನಯಿಸಿದರೆ ಅದು ಶಾಸ್ತ್ರೀಯವೆಂದೂ ಪರಿಗಣಿಸುವಂತಿಲ್ಲ. ಹಾಡಿನ ಮಟ್ಟಗಳು ಎರಡರಲ್ಲೂ ಭಿನ್ನ. ಕುಣಿತದ ಗತ್ತಿನಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದನ್ನು ಹೇಳಿದ್ದೇನೆ. ಆದರೆ ಯಾವ ಸ್ವರದಲ್ಲಿ ಅವುಗಳ ಭಿನ್ನತೆಯೆಂಬುದು ನನಗೆ ಇನ್ನೂ ಅಸ್ಪಷ್ಟ. ಎಷ್ಟೋ ಬಾರಿ ಈ ಎರಡೂ ಆಟಗಳನ್ನು ಹೋಲಿಸಬೇಕಾದ ಅವಶ್ಯಕತೆಯಾದರೂ ಏನು ಎಂದುಕೊಂಡಿದ್ದೇನೆ. ಆದರೆ ಅವುಗಳ ವಿಶ್ಲೇಷಣೆ ಒಂದು ಆಳವಾದ ಅಧ್ಯಯನಕ್ಕೆ ಅರ್ಹವಾದ ಒಂದು ವಿಷಯವೆಂದೂ ನನಗೆ ಕಾಣದ ಒಂದು ಅದಮ್ಯ ಶಕ್ತಿಯೂ ಒಳಗಿನಿಂದ ಕೂಗಿ ಹೇಳುತ್ತಿತ್ತು. ಎರಡೂ ಪ್ರಕಾರದ ಜನತೆಯ ಮೇಲೆ ಬೀರಿದ ಪ್ರಭಾವವೇನು, ಪರಿಸರದ ಸ್ಥಿತಿಯಂತಿತ್ತು, ಸಾಂಸ್ಕೃತಿಕ ಜೀವನದಲ್ಲಿ, ಸಾಮಾಜಿಕ ಜೀವನಕ್ಕೆ ಈ ಎರಡೂ ಆಟಗಳು ತಮ್ಮ ಕ್ಷೇತ್ರದಲ್ಲಿ ಯಾವ ಯಾವ ರೀತಿಯಿಂದ ಎಷ್ಟರ ಮಟ್ಟಿಗೆ ಸೇವೆ ಸಲ್ಲಿಸಿವೆ ಎಂಬುದನ್ನು ಕುತೂಹಲದಿಂದ, ನಾಡಿನ ತುಂಬಾ ಸುತ್ತಾಡಿ, ವಿದ್ವಾಂಸರನ್ನು, ಹಳ್ಳಿಯ ನಿರಕ್ಷರಿ ಕಲಾವಿದರನ್ನೂ ಸಂದರ್ಶಿಸಿ ನನಗೆ ಸೂಕ್ತವೆನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. ಇದು ಒಂದು ವಿಧದಲ್ಲಿ ಈ ಸಂಶೋಧನೆಯ ಅಂಕುರವೆಂದರೂ ಸರಿ.

ತಿಳುವಳಿಕೆಯುಳ್ಳ ಪ್ರತಿ ಮಾನವ ಮತ್ತು ಮಹಿಳೆಗೆ ಒಂದು ಸಾಮಾಜಿಕ ಕರ್ತವ್ಯ ಇದೆ. ಅದನ್ನು ನೆರವೇರಿಸಬೇಕಾಗುದುದು ಸುಸಂಸ್ಕೃತರ ಕರ್ತವ್ಯ. ದಿನದ ಇಪ್ಪತ್ನಾಲ್ಕು ಘಂಟೆಗಳನ್ನು ವರ್ಷದ ಮುನ್ನೂರೈವತ್ತೈದು ದಿನಗಳನ್ನು ಹೊಟ್ಟೆ ಹೊರೆಯುವುದರಲ್ಲಿಯೇ ಕಳೆದರೆ ಹೇಗೆ? ಸುಸಂಸ್ಕೃತರು ಇದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಅದು ‘ಪರಿಪೂರ್ಣ ಜೀವನ’ ಹೇಗಾದೀತು? ಎನ್ನುವುದು ನನ್ನ ಅಭಿಪ್ರಾಯ, ಸಮಾಜದ ಸ್ಥಿತಿಗತಿಗಳನ್ನು ಅರಿತು ತನ್ನ ನೆರೆಹೊರೆಗೆ ಸುಧಾರಣೆಯ ಮಾರ್ಗವನ್ನು ಸೂಚಿಸಬೇಡವೇ? ಇಂದು ಅನೇಕ ಕೀಳುದರ್ಜೆಯ, ಅರ್ಥವಿಲ್ಲದ, ಕೀಳು ಅಭಿರುಚಿಯ ಚಲನಚಿತ್ರಗಳ ಹಾವಳಿಯನ್ನು ನೋಡಿ, ಇಂಥ ಮನರಂಜನೆಯ ಸಂಪ್ರದಾಯವು ಮುಂದುವರಿಯಬೇಕೆ? ಎನ್ನಿಸುತ್ತದೆ. ಇಂತಹ ಭಾವನೆಗಳೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ತಿಳಿಯುವ ಆಧುನಿಕ ಶಾಸ್ತ್ರೀಯ ಪದ್ದತಿಗಳನ್ನು ತಿಳಿದು ಮುಂದಿನ ಹೆಜ್ಜೆ ಹಾಕಿದೆ.

ಸಂಶೋಧನೆಯನ್ನು ಕೈಗೊಳ್ಳುವ ಕಾರಣಗಳಲ್ಲಿ ಒಂದು ಮುಖ್ಯ ಕಾರಣವು ನನ್ನ ಕೆಳಗಿನ ಅನುಭವದಿಂದ ಉಂಟಾಯಿತು. ಸಾಹಿತಿಗಳೊಬ್ಬರನ್ನು ಒಮ್ಮೆ ನನ್ನ ನಾಟಕದ ಹಸ್ತಪ್ರತಿಯೊಂದಿಗೆ ಭೇಟಿಯಾದೆ. ಆಕಾಶವಾಣಿಯಿಂದ ಬಿತ್ತರಿಸಲು ಯೋಗ್ಯವಾದದ್ದೆಂಬ ಭಾವನೆ ನನಗಿತ್ತು. ಆ ಮಹಾಶಯರು ಅಲ್ಲಿಷ್ಟು ಇಲ್ಲಿಷ್ಟು ಅವಲೋಕಿಸುವ “ನಾಟಕ ಮಾಡಿ” ಅತೀ ಬಾಲಿಶವಾದ ಬರಹ ಅದೇನೋ ಇಂದು ಎಲ್ಲರೂ ಬರೆದು ಸಾಹಿತಿಯಾಗುವವರೇ? ಎಂದು ಸಾಮಾನ್ಯವಾಗಿ ಮೂದಲಿಸಿದರೂ ಅದು ನನ್ನನ್ನೇ ಕುರಿತಾದದ್ದು ಎಂಬುದು ನನಗೆ ನಿಚ್ಚಳವಾಯಿತು. ಅವರು ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ಪರಿಚಯಪತ್ರವಿದ್ದುದರಿಂದ ಇಷ್ಟಾದರೂ ನನ್ನೊಂದಿಗೆ ಮಾತನಾಡಿದರು ಎಂದೂ ತಿಳಿಯಿತು. ಅವರ ವಿಮರ್ಶೆಯನ್ನು ಹೊರದೃಷ್ಟಿಯಿಂದ ಒಪ್ಪಿದರೂ ಯಾವದೋ ಒಂದು ಆಶಾಭಾವನೆಯಿಂದ ಹಸ್ತಪ್ರತಿಯನ್ನು ಆಕಾಶವಾಣಿ ನಿಲಯಕ್ಕೆ ಕಳುಹಿಸಿದೆ. ಒಂದೆರಡು ವಾಕ್ಯಗಳ ಬದಲಾವಣೆಯಿಂದ ನಾಟಕವು ಬಿತ್ತರಿಸಲ್ಪತ್ತಿತು. ಬಿತ್ತರಿಸಲ್ಪಡುವ ವಿಷಯವನ್ನು ವಿಶೇಷವಾಗಿ ಸೂಚಿಸಿದ ಆಂಗ್ಲ ದಿನಪತ್ರಿಕೆಯೊಂದಿಗೆ “ಡೆಕ್ಕನ್ ಹೆರಾಲ್ಡ್” ಮೊದಲು ಭೇಟಿ ಮಾಡಿದ ಸಾಹಿತಿಯನ್ನು ಕಂಡೆ.

ನಕ್ಷತ್ರಕನಂತೆ ಈತ ನನಗೆ ಗಂಟುಬಿದ್ದ ಎಂಬ ಭಾವನೆಯೊಂದಿಗೆ ನನ್ನನ್ನು ಕಂಡ ಕೂಡಲೆ ದೇಶಾವರಿ ನಗೆ ಬೀರುತ್ತ “ಓಹೋ ಬನ್ನಿ, ಬನ್ನಿ ಆಕಾಶವಾಣಿಯ ನಾಟಕ ವಿಭಾಗದವರಿಗೆ ನಿಮ್ಮ ನಾಟಕದ ಶಿಫಾರಸು ಮುಂದಿನ ವಾರ ಮಾಡುವೆ” ಎಂದರು. ಸುಮ್ಮನಿದ್ದು ಪತ್ರಿಕೆಯಲ್ಲಿ ಬಂದ ವಿಷಯ ತೋರಿಸಿ ಅಲ್ಲಿಂದ ಮೇಲೆದ್ದು ಬಂದೆ. ಬಿತ್ತರಿಸಲ್ಪಟ್ಟ ಪ್ರಹಸನ ನಿರೀಕ್ಷೆಯಲ್ಲಿ ಇದು ನನ್ನ ಮನದ ಮೇಲೆ ಬಲವಾದ ಪರಿಣಾಮ ಬೀರಿತು. ಜನಪ್ರಿಯ ವಿಜ್ಞಾನದ ಮೇಲೆ ಬರೆದ ಹಸ್ತಪತ್ರಿಯೊಂದಿಗೆ ಒಬ್ಬ ಲೇಖಕರನ್ನು ಭೇಟಿಯಾದಾಗಲೂ ಹೊಸಬರ ಹಸ್ತಪ್ರತಿ ಪರಿಶೀಲಿಸದಷ್ಟು “ಬೀಜಿ” ವ್ಯಕ್ತಿ ತಾವೆಂದು ಪರ್ಯಾಯವಾಗಿ ಹೇಳಿ ಹೊತ್ತು ಹಾಕಿದರು. ಆ ಪುಸ್ತಕ “ಬೆಳಗಿನಿಂದ ಸಂಜೆಯವರೆಗೆ ವಿಜ್ಞಾನ”. ವಿದ್ಯಾ ಪ್ರಕಾಶನದಿಂದ ಪ್ರಕಟವಾಗಿ ಮೂರು ಆವೃತ್ತಿಗಳನ್ನು ಕಂಡಿದೆ.

ಯೋಜನೆ ಅನುಸರಿಸಿದ ವಿಧಾನ :

ಸಂಶೋಧನೆಯನ್ನು ಮಾಡಲು, ಅದೂ ಸಾಮಾಜಿಕ ಹಿನ್ನೆಲೆಯೊಳಗೊಂಡ ಪ್ರಶ್ನೆಯ ಸಂಶೋಧನೆಗೆ ಸಮಾಜಶಾಸ್ತ್ರಜ್ಞರು ವಿವಿಧ ರೀತಿಗಳನ್ನು ಕಂಡು ಹಿಡಿದಿದ್ದಾರೆ. ಯಾವುದೇ ಸಂಶೋಧನೆಯನ್ನು ನಿರ್ವಹಿಸುವ ರೀತಿ, ವಿಧಾನಗಳಿವೆ. ಇವೇ ವೈಜ್ಞಾನಿಕ ವಿಧಾನಗಳು. ಈ ಸಂಶೋದನೆಯಲ್ಲಿ ನಾನು ಅನುಸರಿಸಿದ ರೀತಿಗಳನ್ನು ಹೆಸರಿಸುವುದು ಸುಲಭ ಸಾಧ್ಯವಿಲ್ಲ. ಏಕೆಂದರೆ ಯಾವುದೋ ಒಂದು ವಿಧಾನವನ್ನು ಅನುಸರಿಸಿದಲಿ ಅವಶ್ಯವಿರುವ ವಿಷಯ ಸಂಗ್ರಹ, ದತ್ತಾಂಶ ವಿಶ್ಲೇಷಣೆಗೆ ಅಪೂರ್ಣವಾಗುತ್ತದೆ. ಆದರೂ ಪ್ರಮುಖವಾಗಿ ಕೆಳಗಿನಂತೆ ವಿಂಗಡಿಸಬಹುದು.

ಪರಿಶೀಲನೆ :

ಸಂಗತಿಗಳನ್ನು, ದತ್ತಾಂಶಗಳನ್ನು ಹೇಗೆ ಇವೆಯೋ ಹಾಗೆ, ವೈಯಕ್ತಿಕ ಭಾವನೆ ವಿಚಾರಗಳನ್ನು ಬೆರೆಸದೆ ಸಂಗ್ರಹಿಸುವುದು, ಕಲೆ ಹಾಕುವುದು ಅಂದರೆ ಯಾವುದೋ ಜಿಲ್ಲೆಯಲ್ಲಿ ಹಿಂದಕ್ಕೆ ಪ್ರಸಿದ್ಧವಾದ ಒಂದು ಜಾನಪದ ಕಲೆ. ನಾನು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಪ್ರಸಿದ್ಧವಾಗುತ್ತೆಂದು ಹೇಳುವದು ಜಿಲ್ಲಾದ ಅಭಿಮಾನವಾಗದೆ, ದುರಭಿಮಾನವಾಗುತ್ತದೆ. ವಿಷಯಕ್ಕೆ ಲೋಪ ಉಂಟಾಗುತ್ತದೆ. ವೈಜ್ಞಾನಿಕವಾಗಿ ಸತ್ಯದಿಂದ ದೂರಾಗುತ್ತದೆ ಅನೇಕ ತಂಡಗಳಿಂದ “ಕೃಷ್ಣ ಪಾರಿಜಾತ” ಆಟವನ್ನು ಕರ್ನಾಟಕದಲ್ಲಿ “ಭಾಮಾ ಕಲಾಪ” ಆಂದ್ರದಲ್ಲಿಯೂ ಆಡಿಸಿ ನೋಡಿ, ಕಲೆಗೆ ಸಂಬಂಧಿಸಿದ ಕಲಾವಿದರ ಅಭಿಪ್ರಾಯಗಳನ್ನು ಕಲೆ ಹಾಕುವುದು ಸಂದರ್ಭಾನುಸಾರವಾಗಿ ಅಲ್ಲಲ್ಲಿ ಸಾಹಿತ್ಯ ದೊರೆತರೆ ಅದನ್ನು ಬರೆದುಕೊಳ್ಳುವುದು. ಅಥವಾ ಪ್ರತಿಗಳನ್ನು ಅವರಿಂದ ಕೊಳ್ಳುವುದು ಕೆಲವೊಂದು ಎಡರುಗಳು ಎದುರಾದರೂ ಅಂಥ ತೊಂದರೆಯೇನಾಗಲಿಲ್ಲ.

ಪರಿಶೀಲನೆಯಿಂದ ಪೂರ್ವ ಸಿದ್ಧಾಂತದ ತಯಾರಿಕೆ ಹಂತ :

ಪೂರ್ವ ಸಿದ್ಧಾಂತವನ್ನು ಮುಟ್ಟುವ ಪೂರ್ವದಲ್ಲಿ, ವಿಷಯ ಸಂಗ್ರಹದಿಂದ ದೊರೆತ ಇತಿಮಿತಿಗಳತ್ತ ಗಮನ ಕೊಡುವುದು, ಪ್ರಾಥಮಿಕ ಮತ್ತು ನಂತರದ ಭಾವನಾ ತರಂಗಗಳನ್ನು ಗುರುತಿಸುವುದು ಕಠಿಣವಾದರೂ ಅವಶ್ಯವಾಗಿ ಆಗಬೇಕಾದ ಕಾರ್ಯ ದತ್ತಾಂಶ ಹೆಚ್ಚಿದ್ದಲ್ಲಿ ವಿಷಯ ಸಂಗ್ರಹವು ನಿಖರವಾಗಿ ಸಾಕಷ್ಟು ನಡೆದಲ್ಲಿ ಸಿದ್ಧಾಂತ ಮಟ್ಟವು ಉತ್ತಮ ದರ್ಜೆಯದ್ದಾಗುತ್ತದೆ.

ತುಲನೆ :

ಅಂದರೆ ನಿರೀಕ್ಷಣೆಯ ಕಾಲದಲ್ಲಿ ಕಲೆಹಾಕಿದ ವಿಷಯ, ಟೀಕೆ, ಟಿಪ್ಪಣೆಗಳನ್ನು ವಿಶ್ಲೇಷಣೆ ನಡೆಸಿ, ಮರು ತಪಾಸಣೆ ಮಾಡುವುದು, ಅವಶ್ಯವಾದಲ್ಲಿ ಪೂರ್ವ ಸಿದ್ಧಾಂತವನ್ನು ಬದಲಿಸುವ ಬದಲಾಗಿ ವಿಷಯದ ನಿಖರತೆಯನ್ನು ವರ್ಗೀಕರಿಸುವುದು ಸೂಕ್ತವಾದದು. ಈ ಮೂರು ಹಂತಗಳು ಪ್ರತಿ ವಿಧಾನದಲ್ಲಿ ಹಾಸುಹೊಕ್ಕಾಗಿವೆ.

ನಾನು ಉಪಯೋಗಿಸಿದ ವಿಧಾನ ಹೆಚ್ಚಾಗಿ ಸಂದರ್ಶನ ವಿಧಾನ; ಅಂದರೆ ಉದ್ದೇಶ ಪೂರ್ವಕವಾದ ಬೇಟಿ. ವ್ಯಕ್ತಿಗಳ ನಡುವೆ ಪರಸ್ಪರ ಸಂಬಂಧ ಬರುವುದರಿಂದ ವಿಷಯ ಸಂಗ್ರಹಣೆಗೆ ಇತರ ರೀತಿಗಳಿಗಿಂತ ಇದು ನನಗೆ ಹೆಚ್ಚು ಸಹಕಾರಿಯಾಗಿ ಕಂಡು ಬಂದಿದೆ. ಸಮಾಜದ ವಿವಿಧ ಆರ್ಥಿಕ ಹಂತದ, ನಾನಾ ಕೋಮಿನ ಜನರನ್ನು ಸಂದರ್ಶಿಸಿದೆ. ಜಾನಪದ ಕಲೆಯ ಬಗ್ಗೆ ಎಲ್ಲೂ ಭಿನ್ನಾಭಿಪ್ರಾಯವು ಕಂಡು ಬರಲಿಲ್ಲ. ರಂಗಭೂಮಿಯ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ಹೊಂದಿರುವುದು ಸಂತಸದ ಸಂಗತಿ. ಅವರೆಲ್ಲರೂ “ಜಾನಪದ ರಂಗಭೂಮಿ ಉತ್ತಮ ಮನರಂಜನೆಯ ಕಾರ್ಯಕ್ರಮವೆಂದೂ ಕೃಷ್ಣ ಪಾರಿಜಾತವಂತೂ ಹೇಳಿಕೊಳ್ಳುವಷ್ಟು ಉತ್ತಮ ಮಟ್ಟದ್ದೆಂದೂ “ಹೇಳಿದ್ದಾರೆ. ಉತ್ತರವು ಯಾವ ಬಣ್ಣದ ಹೊಂದಿಕೆಯೊಂದಿಗೆ ಬಾರದಂತೆ ನೋಡಿಕೊಳ್ಳುವುದು ಅನುಭವದಿಂದ ಸಾಧಿಸುವ ಮಾತು, ಕಲೆ.

೧೯೬೮ರಲ್ಲಿ ಕೇಂದ್ರ ಸರಕಾರಕ್ಕೆ ಸಾದರಪಡಿಸಿದ ಜಾನಪದ ರಂಗಭೂಮಿಯ ಪ್ರಬಂಧದ ಕಾಲಕ್ಕೆ ಕಲೆಹಾಕಿದ ಹಳೆಯ ಕಡತಗಳನ್ನು ತೆಗೆದು ಪುನಃ ಇಂದಿಗೂ ಪಾರಿಜಾತವು ನಲಿಯುವ ಕೃಷ್ಣಾನದಿಯ ತೀರದ ಊರುಗಳಿಗೆ ಪ್ರಯಾಣ. ಮೊದಲು ಭೇಟಿ ಮಾಡಿದ್ದ ಪಾರಿಜಾತದ ತಂಡಗಳನ್ನು ಪುನಃ ಕಂಡೆ. ಬೆನಕಟ್ಟಿಯ ಪಾರಿಜಾತದ ತಂಡ, ಮೌಲಾಸಾಹೇಬನ, ಕುಂಚನೂರು ಪಾರಿಜಾತ ತಂಡಗಳನ್ನೂ, ಜಮಖಂಡಿಯ ಅಪ್ಪಾಲಾಲನ ತಂಡವನ್ನೂ ಎರಡು ಬಾರಿ ಕಂಡೆನು. ತಂಡಗಳು ಆಡಿದ ಆಟವನ್ನೆಲ್ಲ ಬರೆದುಕೊಂಡು ಮರುದಿನ ಅವರ ಭೇಟಿಮಾಡಿ ಹಸ್ತಪ್ರತಿ ತಯಾರಿಸಿದೆ. ಮೂರು ತಂಡಗಳಿಂದ ಉಂಟಾದ ಹಸ್ತಪ್ರತಿಗಳಲ್ಲಿ ಸಾಮಾನ್ಯವಾದ ಮಾತುಗಳನ್ನು, ಹಾಡುಗಳನ್ನು ಇಲ್ಲಿ ಬರೆದಿದೆ. ನನ್ನ ಹಸ್ತಪ್ರತಿ ಹೆಚ್ಚಾಗಿ ಕುಂಚನೂರು ಮೇಳವನ್ನು ಅವಲಂಬಿಸಿದೆಯೆಂದರೂ ಸರಿಯೇ. ಬಿಜಾಪುರದಲ್ಲಿ ಮೌಲಾನಾ ಸಾಹೇಬನ ತಂಡದ ಆಟದಿಂದ ಹಾಡುಗಳನ್ನು, ಆತನು ಹೇಳಿದಂತೆ ರಾಗ, ತಾಳಗಳನ್ನು ಬರೆದುಕೊಂಡು, ಬೆಂಗಳೂರಿನಲ್ಲಿಯ ಗೆಳೆಯ ಸಂಗೀತ ವಿದೂಷಿಗಳಿಂದ ರಾಗ, ತಾಳಗಳನ್ನು ಹಿಂದುಸ್ತಾನಿ ರೀತಿ ಕರ್ನಾಟಕ ರೀತಿ ಹಾಡಿಸಿ, ಕೇಳಿ ಅವರ ಅಭಿಪ್ರಾಯ ಪಡೆದು ೪-೬ ಹಾಡುಗಳ ರಾಗಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಇತ್ತೀಚೆಗೆ ಅಕಾಡಮಿಯಿಂದ ಪುರಸ್ಕೃತನಾದ ಜಮಖಂಡಿಯ ಅಪ್ಪಾಲಾಲನನ್ನು ಭೇಟಿ ಮಾಡಿ ಆಟ ನೋಡಿದರೂ ಅಂತಹ ವ್ಯತ್ಯಾಸ ಕಂಡು ಬರಲಿಲ್ಲ. (ತನ್ನ ತಂಡ ದಿಲ್ಲಿಗೆ ಹೋಗಿ ಬರಲು ಅಪರೋಕ್ಷವಾಗಿ ಕಾರಣನಾದ ನನ್ನನ್ನು ಆತನು ಸ್ಮರಿಸಿದ್ದು ಆತನ ಕೃತಜ್ಞತೆಯನ್ನು ತೋರಿಸುತ್ತದೆ.)

ಇನ್ನು ಭಾಮಾ ಕಲಾಪದ ವಿಚಾರ :

ಆಂಧ್ರಪ್ರದೇಶದ ಸಂಗೀತನಾಟಕ ಅಕಾಡಮಿಯೊಂದಿಗೆ ವ್ಯವಹರಿಸಿ ಕೆಲವೊಂದು ಕಲಾವಿದರ, ಕಲಾವಿದೆಯರ ವಿಳಾಸ ಪಡೆದು ಮೊದಲ ಬಾರಿಗೆ ಆಂಧ್ರ ಪ್ರದೇಶವನ್ನು ೧೯೭೬ರ ಅಗಷ್ಟ ತಿಂಗಳಲ್ಲಿ ಸುತ್ತಿದೆ. ಶ್ರೀಶರ್ಮ, ಸಿದ್ದೇಂದ್ರ ಕಲಾಕ್ಷೇತ್ರದ ಪ್ರಿನ್ಸಿಪಾಲರ ಅತಿಥಿಯಾಗಿ ಸುತ್ತಿದೆ. ವೇದಾಂತಂ ಸತ್ಯನಾರಾಯಣ ಶರ್ಮರನ್ನು ಕಂಡೆ. ಭಾಮೆಯ ಪಾತ್ರಕ್ಕಾಗಿಯೇ ಇವರು ಹುಟ್ಟಿದ್ದಾರೆಂದು ನನ್ನ ಭಾವನೆ. ಹಾಡು, ಕುಣಿತದಲ್ಲಿ ಕೂಚಿ ಪುಡಿಯಲ್ಲಿ ೩ ದಿನ ಕಳೆದು ನಂತರ ಭಾಮಾಕಲಾಪಕ್ಕೆ ಸಂಬಂಧಿಸಿದ ಪೂರ್ವಕಾಲದ ಕಲಾವಿದರನ್ನು ಕಂಡೆ. ಕವಿ ಕೇತಯ್ಯನಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳಾದ ಮುವ್ವ, ಶ್ರೀಕಾಕುಳಂಗೆ ಭೇಟಿ, ಹೈದ್ರಾಬಾದಿಗೆ ಹೋಗಿ ಅಕಾಡಮಿಗೆ ಭೇಟಿ. ಅಲ್ಲಿ ಕುಚಿಪುಡಿಯ ಪಂಡಿತರೊಂದಿಗೆ ಸಂದರ್ಶನ ಪೂರ್ವಭಾವಿಯಾಗಿ ಗೆಳೆಯರು ಶ್ರಮವಹಿಸಿ ವ್ಯವಸ್ಥೆ ಮಾಡಿದ್ದರು. ನಾಟ್ಯಾಚಾರ್ಯರನ್ನು ಕಂಡು ಮೊದಲ ಸುತ್ತಿನ ಯಾತ್ರೆ ಮುಗಿಸಿ ಬೆಂಗಳೂರಿಗೆ ಪಯಣ. ೧೯೭೭ರ ಮೇ ತಿಂಗಳಲ್ಲಿ ಎರಡನೆಯ ಸುತ್ತಿನ ಪ್ರಯಾಣಕ್ಕೆ ಹೊರಡುವಾಗ್ಗೆ ಭಾಮಾ ಕಲಾಪದ ಬಗ್ಗೆ ನಿರ್ದಿಷ್ಟ ಕಲ್ಪನೆ, ರೂಪರೇಷೆಗಳೊಂದಿಗೆ ಕೆಲವು ಸಂದೇಹಗಳೂ ಮೂಡಿದ್ದವು. ಮದ್ರಾಸಿನ ಮ್ಯೂಜಿಕ್ ಅಕಾಡಮಿಯಲ್ಲಿ ಒಂದಿಷ್ಟು ತಂಗಿ, ನೇರವಾಗಿ ವಿಜಯವಾಡ, ಕೂಚಿಪುಡಿ, ವೆಲ್ಲೂರ, ಮಚಲಿಪಟ್ಟಣಕ್ಕೆ ಪ್ರಯಾಣ. ವಿಜಯವಾಡ ತಂಡದ ಕೃಷ್ಣರ ಊರು, ಭಾಮಾ ಕಲಾಪಕ್ಕಾಗಿ ಜೀವ ಸವೆಸಿದ ವ್ಯಕ್ತಿ, ಭಾಮಾ ಕಲಾಪ, ಕೂಚಿಪುಡಿ ತಂಡದೊಂದಿಗೆ ಅಮೇರಿಕಾಕ್ಕೆ ಹೋಗಿ ಬಂದ ಕಲಾಪ್ರೇಮಿ, ಕೂಚಿಪುಡಿಯಲ್ಲಿ ಪರಿಣಿತರನ್ನು ಹಾಡಿಸಿ, ಕುಣಿಸಿ, ಹಸ್ತಪ್ರತಿ ತಯಾರಿಸಿದೆ. ವೇದಾಂತ ಪಾರ್ವತಿಶರ್ಮರು ಸಂಪಾದಿಸಿದ ಗ್ರಂಥವನ್ನು ಉಪಯೋಗಿಸಿದ್ದೇನೆ. ಅವರೊಂದಿಗೂ ೧೯೭೭ರಲ್ಲಿ ಕಾಲಕಳೆದೆ. ಕೂಚಿಪುಡಿಗೆ ಪುನಃ ಹೋಗಿ ಬಂದೆ.

ಕೃಷ್ಣ ಪಾರಿಜಾತ :

ಈ ಜಾನಪದ ಆಟದ ಮೂಲವನ್ನು ದಾಸರಾಟದಲ್ಲಿ ಗುರ್ತಿಸಬಹುದು. ಪಾರಿಜಾತದ ಪೂರ್ವ ರಂಗ, ಸೋಗುಗಳ ಬೆಳವಣಿಗೆಯ ಹಂತಗಳು ದಾಸರಾಟದಲ್ಲಿ ಸ್ಪಷ್ಟವಾಗಿದೆ. ಕಾರಣ ಕೃಷ್ಣ ಪಾರಿಜಾತವನ್ನು ಅರಿಯುವ ಮೊದಲು ದಾಸರಾಟದ ಬಗ್ಗೆ ತಿಳಿಯುವುದು ಅವಶ್ಯವಾಗಿದೆ. (ದಾಸರಾಟ-೧) (-ರಾಧಾನಾಟ-) ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ “ದಾಸರೆಂಬ” ಒಂದು ಜನಾಂಗದ ಕೆಲವು ಕುಟುಂಬಗಳಿವೆ. ಅವರು ದಾಸ ಜನಾಂಗವೆನ್ನುವುದು ಬಹು ಮಾರ್ಮಿಕವಾಗಿದೆ. ದಾಸವೆನ್ನುವುದು ಒಂದು ಸಾಂಸ್ಕೃತಿಕ ಹಿನ್ನಲೆಯೊಳಗೊಂಡ ಜನಾಂಗವಾಗಿದೆ. ಆರ್ಯರು ದಕ್ಷಿಣ ಭಾರತಕ್ಕೆ ಬಂದು ಇಲ್ಲಿಯವರನ್ನು ತಮ್ಮ ದಾಸರನ್ನಾಗಿ ಮಾಡಿಕೊಂಡ ಜನಾಂಗವಿದ್ದರೂ ಇರಬಹುದು. ಅಥವಾ ಆರ್ಯ ಮತ್ತು ದ್ರಾವಿಡ ಸಂಗಮದ ಸಂತತಿ ಎಂದು ಭಾವಿಸಲೂ ಸಾಧ್ಯವಿದೆ. ಈ ಜನಾಂಗದ ಕುಟುಂಬಗಳು ಈಗ ಎಣಿಕೆ ಮಾಡುವಷ್ಟು ಮಾತ್ರ ಇವೆ. ಇವರು ತಮ್ಮ ಪೂರ್ವಜರ ಬಗ್ಗೆ ವಂಶಾವಳಿಯ ಮುಖ್ಯ ಸ್ಥಾನ-ಮೂಲ ಪುರುಷರ ಬಗ್ಗೆ ಹೇಳುವ ಕತೆಯು ಕುತೂಹಲಕರವಾಗಿದೆ. ಪ್ರತಿ ಜನಾಂಗವು ತಮ್ಮ ವಂಶವು ಒಬ್ಬ ಮಹರ್ಷೀಯಿಂದ ಆರಂಭವಾದ ಗೋತ್ರಕ್ಕೆ ಸಂಬಂಧಿಸಿದ್ದೆಂದು ಸಾಮಾನ್ಯವಾಗಿ ಹೇಳುವ ರೂಡಿ ನಮ್ಮ ನಾಡಿನಲ್ಲಿದೆ. ಆದರೆ ದಾಸರ ವಂಶ ಮೂಲ ಪುರುಷನು ಯಾವ ಋಷಿಯೂ ಆಗಿರದೆ ಸಾಮಾನ್ಯ ಮಾನವನಾಗಿದ್ದಾನೆ. ಆತನೇ ಅಜಮಿಳನು. ಊರು ಹೊರಗೆ ಜೀವಿಸುತ್ತಿದ್ದನು. ಅಂತ್ಯಜ ಕುಲದವನಾಗಿದ್ದನೆಂದು ಹೇಳುವರು. ಆತನು ಸಮೀಪದ ಅರಣ್ಯದಿಂದ ಸೌದೆ ತಂದು ಮಾರಿ ಉಪಜೀವನ ಸಾಗಿಸುತ್ತಿದ್ದನು. ಅದೇ ಹಳ್ಳಿಯ ಇನ್ನೊಂದು ಹೊರಬದಿಯಲ್ಲಿ ಬಹಿಷ್ಕೃತ ಉಚ್ಚಕುಲದ ಸ್ತ್ರೀಯೋರ್ವಳು ರೂಪಜೀವಿಯಾಗಿ ಜೀವಿಸುತ್ತಿದ್ದಳು. ಅಜಮಿಳನಿಗೂ ಅವಳಿಗೂ ಶರೀರ ಸಂಬಂಧ ಬೆಳೆದು ಇಬ್ಬರೂ ಕೂಡಿ ಜೀವಿಸ ಹತ್ತಿದರು. ಕಾಲಾಂತರದಲ್ಲಿ ಅವನಿಗೆ ಅನೇಕ ಗಂಡು ಮಕ್ಕಳು ಹೆಣ್ಣುಮಕ್ಕಳೂ ಹುಟ್ಟಿದರು. ಅಜಮಿಳನು ಅತೀ ಕಾಮುಕ. ತನ್ನ ಮಗಳನ್ನೇ ಕೂಡಿ ತನ್ನ ಕಾಮೇಚ್ಚೆಯನ್ನು ತಣಿಸಿಕೊಂಡವ ತನ್ನ ಅವಸಾನ ಕಾಲದಲ್ಲಿ ಅಪ್ರಯತ್ನವಾಗಿ ತನ್ನ ಪ್ರೀತಿಯ ಕೊನೆಯ ಮಗನಾದ ನಾರಾಯಣನನ್ನು ಕೂಗಿದನು. ಪ್ರಾಣಾ ಹೋಗುವ ವೇಳೆಯಲ್ಲಿ ಭಗವಂತನ ನಾಮಸ್ಮರಣೆ ಮಾಡಿದ್ದರಿಂದ, ಆತನು ಮಾಡಿದ ಪಾಪಗಳೆಲ್ಲ ತೊಳೆದು ಹೋಗಿ, ಆತನನ್ನು ವೈಕುಂಠಕ್ಕೆ ಒಯ್ಯಲಾಯಿತು. ಈ ಸಂತತಿಯೇ ಈಗಿನ ದಾಸರು. ಸಮಾಜಶಾಸ್ತ್ರ, ನರಕುಲ ವಿಜ್ಞಾನದ ಅರ್ಥದಲ್ಲಿ ಈ ಕತೆಯನ್ನು ಹೀಗೆ ನಿರೂಪಿಸಬಹುದು. ಬಹಿಷ್ಕಾರ ಹೊಂದಿದ ಸ್ತ್ರೀ ಆರ್ಯಳಾಗಿಯೂ, ಪುರುಷನು ದ್ರಾವಿಡನು ಇರಬಹುದು. ನನ್ನ ಸಂದರ್ಶನದಲ್ಲಿ ದಾಸ ಜನಾಂಗವು ಕ್ಷತ್ರಿಯರೆಂದೂ ಮಾರುತಿಯ ಪೂಜಾರಿಗಳೆಂದೂ ತಿಳಿದು ಬಂದಿತು. ಉತ್ತರ ಕರ್ನಾಟಕದ ಪ್ರತಿ ಹಳ್ಳಿಯಲ್ಲಿಯೂ ಮಾರುತಿಯ, ಆಂಜನೇಯನ ದೇವಾಲಯವಿದೆಯೆಂದರೂ ತಪ್ಪಿಲ್ಲ. ಅನೇಕ ಗುಡಿಗಳಲ್ಲಿ ಕ್ಷತ್ರಿಯರೇ ಪೂಜಾರಿಗಳಾಗಿದ್ದಾರೆ.

ಕೆಲವು ಸಂಸ್ಕೃತ ಗ್ರಂಥಗಳಲ್ಲಿ ದಾಸರನ್ನು ದಸ್ಯುಗಳೆಂದು ವರ್ಣಿಸಿದ್ದಾರೆ. ಆರ್ಯರನ್ನು ಪ್ರತಿಭಟಿಸಿದ ದ್ರಾವಿಡರೆ ದಸ್ಯುಗಳೆಂದು ವಿವರಣೆ ಇದೆ. ‘ನಟು’ ಜನಾಂಗವನ್ನು ಹೋಲುವಂಥ ಜನರೆಂದು ತಿಳಿಸಲಾಗಿದೆ. ನರಕುಲ ವಿಜ್ಞಾನಿಗಳ ಪ್ರಕಾರ ನಟು ಜನಾಂಗವು ಒಂದು ಅಲೆಮಾರಿ ಜನಾಂಗ; ಕ್ರೂಕ್ರವರ ಅಭಿಪ್ರಾಯದಲ್ಲಿ ಜಿಪ್ಲಿಯಂತಹ ಜನಾಂಗ. ಇವರು ನೃತ್ಯಗಾರರು, ಆಟವಾಡುವ ರೂಪಜೀವಿಗಳನ್ನೊಳಗೊಂಡ ಒಂದು ಜನಾಂಗ. ಈ ಜನಾಂಗದ ಉಗಮಸ್ಥಾನದ ಬಗ್ಗೆ ಇನ್ನು ಒಂದು ನಿಶ್ಚಿತ ಅಭಿಪ್ರಾಯ ಮೂಡಿಲ್ಲ. ದಾಸ ಜನಾಂಗ ನಟು ಜನಾಂಗದಂತಹ ಜನಾಂಗವಾಗಿದೆ. ಈ ದಾಸ ಜನಾಂಗ ಮೊದಲು ಯಾವ ಧರ್ಮವನ್ನು ಅನುಸರಿಸುತ್ತಿದ್ದರೆಂಬುದು ತಿಳಿಯದು. ಕಾಲಕ್ರಮದಲ್ಲಿ ಅವರು ಹಿಂದೂ ಧರ್ಮವನ್ನು ಅನುಸರಿಸಿದರು. ಈ ಜನತೆಯ ಮುಖ್ಯ ಕಸಬು ಹಾಡುವುದು, ಕುಣಿಯುವುದು, ಗಿಡಮೂಲಿಕೆ ಕೊಡುವುದು, ಸೀರಣಿಗೆಗಳನ್ನು ಊರಲ್ಲಿ ಕೂಗುತ್ತ ಮಾರಿ ಉದರ ನಿರ್ವಹಣೆ ಮಾಡುವುದಾಗಿ ತಿಳಿದು ಬಂದಿದೆ. ಔಷಧಿ ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಅವರು ಸ್ತ್ರೀಯರು ಅದಾಯದ ಮೂಲವೆಂದು ಪರಿಗಣಿಸುತ್ತಾರೆ. ಇಂದಿನ ಅನೇಕ ದಾಸ ಕುಟುಂಬದಲ್ಲಿ ಮೇಲೆ ಹೇಳಿದ ಎಲ್ಲ ಲಕ್ಷಣಗಳು ಉಳಿದುಕೊಂಡಿವೆ. ದಾಸ ಸ್ತ್ರೀಯರು ಈಗೀಗ ಹಳ್ಳಿಗಳಲ್ಲಿ ಆಟಗಳಲ್ಲಿ ಸ್ತ್ರೀಪಾತ್ರಗಳನ್ನು ವಹಿಸುವರು. ನೆರೆಹೊರೆಯ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳನ್ನು ಸಂಭಾವನೆ ಪಡೆದು ನಿರ್ವಹಿಸುತ್ತಾರೆ. ಜಾನಪದ ರಂಗಭೂಮಿಗೆ ಪಾದಾರ್ಪಣೆಮಾಡಿದ ಮೊದಲ ಸ್ತ್ರೀ ದಾಸ ಜನಾಂಗದಿಂದ ಎಂಬುದನ್ನು ಧಾರಳವಾಗಿ ಪರಿಗಣಿಸಬಹುದು. ಈ ಜನತೆಯೇ ಸಂಗೀತದ ಸರಳ ಉಪಕರಣಗಳಿಂದ ೨-೩ ಸ್ತ್ರೀಯರದೊಂದು ಗುಂಪುಮಾಡಿ, ಆಡಿದ ಆಟವೇ “ದಾಸರಾಟ”. ಕಳೆದ ಒಂದು ಶತಮಾನದಿಂದ ದಾಸರಾಟ ಮೊದಲಿನ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿದೆ. ಇದಕ್ಕೆ ಹಳ್ಳಿಗರ ಚಲನಚಿತ್ರಪ್ರೇಮ, ದಾಸಸ್ತ್ರೀಯರನ್ನೊಳಗೊಂಡು ತಾವೇ ಒಂದು ಆಟವನ್ನಾಡುವದಾಗಿದೆ. ಹಿಂದಕ್ಕೆ ದಾಸರಾಟದ ತಂಡಗಳು ಹಳ್ಳಿಯಿಂದ ಹಳ್ಳಿಗೆ ಚಲಿಸುತ್ತಿದ್ದವು.

ದಾಸರಾಟದ ಜನಪ್ರಿಯತೆಗೆ, ರಂಗದಲ್ಲಿ ಸ್ತ್ರೀವೇಷದಲ್ಲಿ ಸ್ತ್ರಿಯರನ್ನು ನೋಡುವದಾಗಿತ್ತೆಂದರೆ ತಪ್ಪಲ್ಲ ಅವರು ಅಳವಡಿಸಿದ ಲಘು ಸಂಗೀತ, ಸರಳ ಸಂಗೀತ ಉಪಕರಣಗಳ ಜೋಡಿ, ಹಾಸ್ಯ ಇವು ಹಿಂದಕ್ಕೆ ದಾಸರಾಟದ ಜನಪ್ರಿಯತೆಗೆ ಕೆಳಗಿನ ಕಥೆಯನ್ನು ನಾವು ನಿದರ್ಶಿಸಬಹುದು. ಈಗಿನ ಬಿಜಾಪುರ ಜಿಲ್ಲೆಯಲ್ಲಿ ಚಾಲುಕ್ಯ ವಂಶಸ್ಥಳಾದ ಅಕ್ಕಮ್ಮನು ೧೦೨೧ರಲ್ಲಿ ರಾಜ್ಯವಳಿದಳು. ಅನಂತರ ಹಾಳಾದ ಈ ಪಟ್ಟಣವೇ ಅರಸಿಬೀದಿ. ಹಾಳಾದ ಕೂಡಲೆ ಇಲ್ಲಿ ದೆವ್ವಗಳು ವಾಸಿಸಲು ಪ್ರಾರಂಭಿಸಿದವು. ಒಂದು ಸಾಯಂಕಾಲ ಆ ಮಾರ್ಗವಾಗಿ ದಾಸರಾಟದ ತಂಡವೊಂದು ಹೊರಟಿತ್ತು. ಅರಸಿ ಬೀದಿಯ ನಿವಾಸಿಯೊಬ್ಬ ಬಂದು ಆಟ ಆಡಬೇಕೆಂದು ದೈನ್ಯದಿಂದ ಬೇಡಿಕೊಂಡನು. ನಾಯಕ, ಆಮಂತ್ರಣವನ್ನು ಒಪ್ಪಿ, ಊಟಮಾಡಿ ಆಟವನ್ನು ಚಾವಡಿಯಲ್ಲಿ ಪ್ರಾರಂಭಿಸಿದರು. ಅವರ ಉಪಚಾರದಿಂದ ಸಂತುಷ್ಟರಾದ ದಾಸರು ಚೆನ್ನಾಗಿ ಹಾಡಿ ಕುಣಿದು ರಾತ್ರಿಯಲ್ಲಾ ಆಟವಾಡಿದರು. ಬೆಳೆಗಾದಂತೆ ಪ್ರೇಕ್ಷಕರ ವಿಕಾರ ರುಪ, ಅಲ್ಲಿಯ ಸ್ಮಶಾನ ಸದೃಶ ಪರಿಸ್ಥಿತಿಯನ್ನು ತಿಳಿದು ನಟನಟಿಯರು ರಂಗಭೂಮಿಯ ಮೇಲೆಯೇ ಉಟ್ಟಬಟ್ಟೆಯಲ್ಲಿಯೇ ಪ್ರಾಣತೆತ್ತರು. ಪ್ರೇಕ್ಷಕರೆಲ್ಲಾ ಮನುಜರಲ್ಲಾ! ದಾಸರಟದ ದೈರ್ಯಶಾಲಿ ಮುಂದಾಳು ಮತ್ತು ಒಬ್ಬ ನಟಿ ಮಾತ್ರ ಬದುಕಿ ಮರಳಿದರಂತೆ. ಕಥೆ ಎಂತದೇ ಇದ್ದರೂ ಜನಪ್ರಿಯತೆಯನ್ನು ನಿದರ್ಶಿಸುತ್ತದೆ. ಹಳ್ಳಿಗೆ ಪ್ರಯಾಣ ಬೆಳೆಸುತ್ತಿದ್ದ ಪದ್ಧತಿ ಅವರದು. ಇಂದು ‘ದಾಸ’ ಕುಟುಂಬಗಳು ಅಲೆಮಾರಿಗಳಾಗಿ ತಿರುಗದೆ ಹೊಲಮನೆ ಮಾಡಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಾರೆ.

ಕ್ರಿಸ್ತಪ್ರಾರಂಭದ ಶತಮಾನದಲ್ಲಿ ದಾಸರಾಟವನ್ನು ಹೋಲುವಂತಹ ಆಟದ ವರ್ಣನೆ ತಮಿಳು ‘ಶಿಲಷ್ಪಾದಿಕಾರಮ್’  ಎಂಬ ಗ್ರಂಥದಲ್ಲಿ ಸೂಚಿತವಾಗಿದೆ. ನೀಲರಿಗಿ ಬೆಟ್ಟದಲ್ಲಿ ಚೇರ್ ಅರಸನ ಗೌರವಾರ್ಥವಾಗಿ ಒಂದು ಮನರಂಜನೆಯ ಆಟವು ಏರ್ಪಟ್ಟಿತ್ತೆಂದೂ, ಅದರಲ್ಲಿ ನಟನಟಿಯರು ಭಾಗವಹಿಸಿದ್ದರೆಂಬ ವರ್ಣಿಸಲಾಗಿದೆ. ಆ ನಟನಟಿಯರು ಬಣ್ಣ ಬಳಿದುಕೊಂಡು ಪಾತ್ರಧಾರಿಗಳಾಗಿ, ತಮ್ಮ ಸಂಗೀತ ಮತ್ತು ನೃತ್ಯದಿಂದ ಅರಸನ ಮನಾನಂದಗೊಳಿಸಿದರೆಂದು, ಅವರ ಸಂಖ್ಯೆ ನೂರಿಪ್ಪತ್ತು ಎಂದೂ ಆ ಗ್ರಂಥದಲ್ಲಿ ಹೇಳಿದೆ. ಇದು ಬಹುಶಃ ಅಲೆದಾಡುತ್ತಿದ್ದ ದಾಸರ ಒಂದು ಗುಂಪಿರಬಹುದು. ಗಂಡು, ಹೆಣ್ಣು, ಒಟ್ಟಿಗೆ ಹಾಡುತ್ತಾ ಕುಣಿಯುತ್ತಾ ಅಲೆದಾಡುವ ಗುಂಪು ಭಾರತದ ಈ ಭಾಗದಲ್ಲಿ ದಾಸರನ್ನು ಬಿಟ್ಟರೆ ಬೇರಿಲ್ಲಾ. ಕಾರಣ “ಶಿಲಪ್ಪಾದಿಕಾರಮ್” ನಲ್ಲಿ ವರ್ಣಿಸಿದ ನಾಟ್ಯ, ಕುಣಿತ, ದಾಸರಾಟವನ್ನು ಸೂಚಿಸಬಹುದೆಂದು ನನ್ನ ಭಾವನೆ. ದಾಸರ ಗುಂಪಿನಲ್ಲಿ ಅಲ್ಲದೆ ಸ್ತ್ರೀಯರು ಹಾಡುತ್ತಾ ಕುಣಿಯುವುದು ಇನ್ನೆಲ್ಲಿಯೂ ಕಂಡು ಬಂದಿಲ್ಲ. ಅಂದು ನೀಲಗಿರಿ ಪ್ರದೇಶವು ಕನ್ನಡ ನಾಡಿನ ಒಂದು ಭಾಗವಾಗಿತ್ತು. ಅವರು ಅರಸನ ಮುಂದೆ ದೇಶೀಯ ಆಟವನ್ನು ನೃತ್ಯ ಸಂಗೀತದೊಡಗೂಡಿದ್ದನ್ನು ಪ್ರದರ್ಶಿಸಿ ಅರಸನ ಮೆಚ್ಚಿಕೆಯನ್ನು ಪಡೆದಿರಬಹುದು. ೧೫೧೪ರ ಚೆರವು ಬೆಳಗಲ ಶಿಲ್ಪದಲ್ಲಿ ಹೀಗಿದೆ. ಮದುವೆಯ ಸಂದರ್ಭದಲ್ಲಿ ನಟುವ ತಿಮ್ಮಯ್ಯ ಮತ್ತು ನಟುವ ನಾಗಯ್ಯನಿಗೆ ಭೂಮಿಯನ್ನು ಕಾಣಿಕೆ ಕೊಟ್ಟಿದ್ದಾಗಿ ಹೇಳಿದೆ. ನಟುವ ಶಬ್ದ ನಟ-ಅಭಿನಯಿಸುವವನೆಂದಾಗುತ್ತದೆ. ಈ ಜನಾಂಗ ದಕ್ಷಿಣ ಕನ್ನಡ ಅಥವಾ ಹಳೆಯ ಮೈಸೂರು ಪ್ರದೇಶದಲ್ಲಿ ಕಂಡುಬಂದಿಲ್ಲ. ಈ ಜನಾಂಗವು ಹಬ್ಬ ಹರಿದಿನಗಳಲ್ಲಿ ಹಾಡುತ್ತ. ಜಾತ್ರೆಗಳಲ್ಲಿ ಹಾಡುತ್ತ ಕುಣಿಯುತ್ತ ತಮ್ಮ ಉಪಜೀವನವನ್ನು ನಿರ್ವಹಿಸುತ್ತಿದ್ದರು. ಈ ಜನಾಂಗದ ಅಭ್ಯಾಸದಿಂದ ಕ್ರಿಸ್ತಾರಂಭದ ಆದಿಯಲ್ಲಿ ಇವರು ಧಾರ್ಮಿಕ ಮತ್ತು ಮೂರ್ತಿ ಪೂಜೆಯ ಕಾರ್ಯಗಳಲ್ಲಿ ತೊಡಗಿದ್ದರೆಂದು ತಿಳಿದುಬರುತ್ತದೆ. ನಂತರ ಇವರು ವೈಷ್ಣವ ದೀಕ್ಷೆಯನ್ನು ಪಡೆದುದಾಗಿ ತಿಳಿಯುವುದು.

ದಾಸರಾಟದ ಹಿನ್ನೆಲೆಯನ್ನು ತಿಳಿದ ನಂತರ ಈಗ ದಾಸರಾಟದ ರೂಪರೇಶೆಗಳನ್ನು ಗಮನಿಸೋಣ. ದಾಸರಾಟದಲ್ಲಿ ಗಣ ಸ್ತುತಿಯ ನಂತರ ರಂಗದಲ್ಲಿ ನಟಿಯು ಪ್ರವೇಶಿಸುವಳು. ಇತರ ಜಾನಪದ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುವುದರಿಂದ. ಇಲ್ಲಿಯ ಸ್ತ್ರೀ ಪಾತ್ರಧಾರಿ ನಟಿ, ವಿಶೇಷ ಗಮನಾರ್ಹಳಾಗಿ ಪ್ರೇಕ್ಷಕರಿಗೆ ಕಂಡುಬರುವಳು. ನಾಯಕ-ಈತನನ್ನು ಗೊಡ್ಡಿ ಭೀಮಣ್ಣ ಎಂದು ಕರೆಯಲಾಗುತ್ತದೆ. ಇವನ ಸಾಂಪ್ರದಾಯಕವಾದ ಮಾತಿನ ನಂತರ ಸಂಗೀತ ನೃತ್ಯದೊಂದಿಗೆ ಆಟ ಪ್ರಾರಂಭವಾಗುತ್ತದೆ. ಹಿಮ್ಮೇಳವು ಹಾಡಿ, ಬೇರೊಂದು ಪಾತ್ರದ ಆಗಮನವನ್ನು ಸೂಚಿಸುತ್ತದೆ. ಮಾಮೂಲು ವೇಷದ ಉಪನಾಯಕಿಯ ಪ್ರವೇಶ, ಪಕ್ಕದ ಪಟ್ಟಣಕ್ಕೆ ಸಮೀಪದ ಹಳ್ಳಿಯಿಂದ ಹಾಲು ಮಾರುವ ಗೌಳಗಿತ್ತಿಯಿವಳು. ಹಾಲು ಮಾರಲು ಹೊರಟ ಗೌಳಗಿತ್ತಿಗೆ ತನ್ನ ಸುಂಕ ಕೊಡಬೇಕೆಂದು ಭೀಮಣ್ಣನ ಕಾಟ. ಇಲ್ಲಿ ನಡೆಯುವ ಸಂವಾದ ದ್ವಂದ್ವಾರ್ಥದಿಂದ ಕೂಡಿದ್ದು ಅತೀ ರಂಜನೀಯವಾಗಿದೆ. ಗೊಲ್ಲತಿ ಸುಂಕಗೊಡುವುದರಿಂದ ತನಗೆ ಮನ್ನಾ ಮಾಡಬೇಕೆಂದು ವಿವಿಧ ಭಂಗಿಯಲ್ಲಿ ಬೇಡುವಳು. ನಿರಾಶೆ ಹೊಂದಿ ಇಬ್ಬರೂ ಪಟ್ಟಣದ ಯಜಮಾನನಲ್ಲಿಗೆ ನ್ಯಾಯ ಪಡೆಯುವುದಕ್ಕಾಗಿ ಬರುವರು. ಮುಂದಿನ ದೃಶ್ಯದಲ್ಲಿ ನಾಯಕಿಯ ಪ್ರವೇಶ-ಪ್ರವೇಶದೊಂದಿಗೆ ಸಾಂಪ್ರದಾಯಿಕ ಸಂಗೀತ ಮೇಳದೊಂದಿಗೆ ವಿಲಾಸಮಯವಾದ ಸ್ತ್ರೀಕುಣಿತ. ಕುಣಿತದ ಅಂತ್ಯದಲ್ಲಿ ಗೊಡ್ಡಿ ಭಿಮಣ್ಣ ಅವಳ ಅಂಗಾಂಗಗಳನ್ನು, ಅವಳ ಚೆಲುವನ್ನು ಬಾಯಿ ತುಂಬಾ ಹೊಗಳಿ ನೆರೆದ ಪ್ರೇಕ್ಷಕರಿಗೆ ರಂಜಿಸುವ ರೀತಿಯ ಹಾಡುಗಳಿಂದ ಅಭಿನಯದಿಂದ ವರ್ಣಿಸಿ ಅವಳ ಅನುರಾಗಕ್ಕಾಗಿ ಭಿನ್ನವಿಸುತ್ತಾನೆ. ಗಂಡೇ ನೀನು ಮಾಯದ ಮುದ್ದೆ, ನಂಬಿಕೆಗೆ ಅರ್ಹನಲ್ಲದವನೇ ಗಂಡು ಪ್ರಾಣಿ, ಗಂಡು ಜಾತಿ ಅಂತಹದೆಂದು, ಗಂಡು ತನ್ನ ಪ್ರೇಮಯಾಚನೆಗೆ ಅನರ್ಹವೆಂದು ಅಣಕವಾಡುವಳು. ಅವಳ ಚುಚ್ಚು ಮಾತುಗಳಿಂದ ಕುಪಿತಗೊಂಡ ಗಂಡು- (ಭೀಮಣ್ಣ) ‘ಹೆಣ್ಣು’ ಮಾಯೇ, ಧರ್ಮಶಾಸ್ತ್ರದಲ್ಲಿ ಹೆಣ್ಣಿನಿಂದ ನಡೆದ ಅನರ್ಥಗಳನ್ನು ಉಪಮಾನ ಅಪಮೇಯಗಳನ್ನು ಹೇಳಿ ಅಧೋಗತಿಗೆ ಹೆಣ್ಣೇ ಕಾರಣ. ನರಕದ ದಾರಿಯೆಂದು ಪುರಾಣ ಅಧಾರಿತ ಕತೆಗಳನ್ನು ಹೇಳಿ ಅವಳ ಸವಾಲುಗಳಿಗೆ ಪ್ರತಿ ಸವಾಲುಗಳನ್ನು ಹಾಕುವನು. ಅಲ್ಲಲ್ಲಿ ಲಾವಣಿಗಳ ಚಿಟುಕಗಳನ್ನು, ಲಘು ಸಂಗೀತದ ಮಾಧುರ್ಯವನ್ನು ಇಬ್ಬರೂ ಪ್ರಶ್ನೋತ್ತರ ರೂಪದಿಂದ ಜನತೆಗೆ ನೀಡುತ್ತಾರೆ. ನಾಯಕಿ ಉತ್ತರಗಳನ್ನು ಹಾವಭಾವದಿಂದ ಪುರಾಣ ಕಥೆಗಳಿಂದಲೂ ಉತ್ತರಿಸುವಳು. ಗಂಡು ಭಯಂಕರ ಪ್ರಾಣಿಯೆಂದೂ ನಂಬಿಕೆಗೆ ಅರ್ಹನಲ್ಲವೆಂದೂ ಸಾಧಿಸುವಳು. ಗಂಡು ಹೆಣ್ಣುಗಳು ತಮ್ಮ ತಮ್ಮ ನಿಲುವನ್ನು ಸಮರ್ಥಿಸಲು ಕೊಡುವ ಪೌರಾಣಿಕ ಕತೆಗಳು ಅನೇಕ ಪ್ರೇಕ್ಷಕರಿಗೆ ಗೊತ್ತಿರುವುದರಿಂದ ಅವರ ಸಂವಾದವು ಆಕರ್ಷಣೀಯದಾಯಕವಾಗುತ್ತದೆ. ಇಬ್ಬರೂ ಉದಾಹರಿಸುವ ತತ್ವದ ಮಾತುಗಳು ಗಮನಾರ್ಹವಾಗಿವೆ. ಇವರ ಸಂವಾದದಲ್ಲಿಯ ದ್ವಿರುಕ್ತಿಗಳನ್ನು ಒಡೆದು, ಜನತೆಯನ್ನು ನಗೆಗಡಲಿನಲ್ಲಿ ಕೆಡವಲು ಇನ್ನೊಂದು ಪಾತ್ರವಿದೆ. ಇವನೇ ಜವರಿ (ಜವರಿ ಮೊದಲಿನ ಹೆಸರಿರಲಾರದು-ಇತ್ತೀಚಿನ ರೂಪಾಂತರವಿರಬಹುದು). ಉದಾಹರಣೆಯನ್ನು ಆಗಾಗ್ಗೆ ಲಗತ್ತಿಸಿ, ಜನತೆಗೂ, ರಂಗಭೂಮಿಗೂ ನಿಕಟ ಸಂಬಂಧವನ್ನು ಕುದುರಿಸುವ ಪಾತ್ರ ಇವನದು. ಜನತೆ ಹುಚ್ಚೆದ್ದು ಹರ್ಷಪಟ್ಟು ಕೋರಿದ ಹಾಡುಗಳನ್ನು ನೃತ್ಯದೊಂದಿಗೆ ಸಾಮಾನ್ಯವಾಗಿ ನಾಯಕಿ ಅಭಿನಯಿಸುವದರಿಂದ ಕಟ್ಟುನಿಟ್ಟಾದ ಸಂಭಾಷಣೆಯನ್ನು ಹೊಂದದ ಈ ಆಟಕ್ಕೆ ಈ ಕಾರಣದಿಂದಲೇ “ದಾಸರ ಆಟವಲ್ಲ-ದೋಸೆ ಊಟವಲ್ಲ” ಎಂಬ ಮಾತು ಬಳಕೆಯಲ್ಲಿ ಬಂದಿರಬೇಕು. ಗೊಲ್ಲತಿಯಿಂದ ಪ್ರಾರಂಭವಾಗುವ ಕೃಷ್ಣಕ್ರೀಡಾ ಪ್ರಸಂಗಗಳನ್ನು ಅನುಸರಿಸುವ ಈ ಜಾನಪದ ಆಟಕ್ಕೆ ವೈಷ್ಣವ ಸಂಪ್ರದಾಯದ ಪ್ರಭಾವವೆಂದು ತಿಳಿಯಬಹುದು.

ದಾಸರಾಟವು ಜನಪ್ರಿಯವಾಗಲು ರಂಗಭೂಮಿಯ ಮೇಲೆ ನಟಿ ಕುಣಿಯುವುದು; ತತ್ವಜ್ಞಾನದ ಉಪದೇಶದೊಂದಿಗೆ ಸಾಗುವ ಸಂಭಾಷಣೆ ಮತ್ತು ಜೀವನದ ಸಾಮ್ಯವು ಕಾರಣವಾಗಿವೆ. ಭಾರತೀಯರಾದ ನಮ್ಮ ಜನ ಜೀವನದಲ್ಲಿ ತತ್ವಜ್ಞಾನವನ್ನು ಬೆಳೆಸುವ ಮಾತು, ಆಡುವ ಆಟಗಳು ಜನಾದರಣೀಯವಾಗಲು ಅದಕ್ಕೆ ಜನ ಸಂಸ್ಕೃತಿಯೂ ಜನ ಜೀವನದ ರೀತಿನೀತಿಯೂ ಕಾರಣವಾಗಿದೆ. ರಂಗಭೂಮಿಯಲ್ಲಿ ಮೊದಲಿದ್ದ ವಿವಿಧ ರಾಗಗಳಿಲ್ಲದ ಏಕ ತೆರನಾದ ಸಂಗೀತದ ಬದಲಾಗಿ ದಾಸರಾಟದಲ್ಲಿಯ ಸಲಕರಣೆಗಳು ಜಾನಪದ ರಂಗಭೂಮಿಯ ಉಪಕರಣಗಳಾದರೂ ಹಾಡುವ ಆರೆಂಟು ರಾಗಗಳು, ಲಾವಣಿಗಳ ತುಂಡುಗಳು ಲಘು ಸಂಗೀತದ ಎರೆಡೆರಡು ಪಾದದ ಲಘು ಗೀತೆಗಳು; ಜನತೆಗೆ ಹೊಸಮಾದರಿಯ ಸಂಗೀತವನ್ನು ಒದಗಿಸದಂತಾಗಿತ್ತು. ದಾಸರಾಟದ ವಾದ ರೂಪದಲ್ಲಿಯ ಕೆಲವು ಸಂವಾದಗಳು ಅತೀ ಜನಪ್ರಿಯವಾಗಿದೆ. ಉದಾಹರಣೆಗಳಂತೂ ನಿತ್ಯ ಜೀವನದಲ್ಲಿ ಹಳ್ಳಿಗರು ಕಾಣುವಂಥವು. ಕಾರಣ ಪ್ರೇಕ್ಷಕರಿಗೆ ರಸದೌತಣವಾಯಿತು. ಉದಾಹರಣೆಗಾಗಿ ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಎಂಬ ಸಂವಾದವು ಉಲ್ಲೇಖಾರ್ಹವಾಗಿದೆ. ಮೊದಲಿನಿಂದ ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಎಂದು ಗೆಳೆಯರ ಗುಂಪುಗಳಲ್ಲಿ ಅಲ್ಲಲ್ಲಿ ಹಾಸ್ಯ ಸಂದರ್ಭಗಳಲ್ಲಿ ವಾಗ್ವಾದಗಳು ಅಂದು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಅದೇ ರಂಗಭೂಮಿಯ ಮೇಲೆ ಬರಲು ಪ್ರೇಕ್ಷಕರಿಗೆ ಆಟವು ತಮ್ಮ ಸಮಸ್ಯೆಯನ್ನೊಳಗೊಂಡಿವೆ. ಹರ್ಷಿಸಿತು. ತಂದೆ ಹೆಚ್ಚಾದರೆ ತಂದೆಯ ಎದೆಯ ಹಾಲುಂಡು ಬೆಳೆಯಲು ಸಾಧ್ಯವೆ ? ತಾಯಿ ಹೆಚ್ಚಾದರೆ ಶಾಲೆಯಲ್ಲಿ ತಾಯಿಯ ಹೆಸರು ಹಚ್ಚಲು ಸಾಧ್ಯವೇ. ಗಂಡು ಹೆಣ್ಣುಗಳು ದೇವರ ದೃಷ್ಟಿಯಲ್ಲಿ ಸಮಾನವೆಂಬ ತತ್ವ ಜ್ಞಾನದ ಅಭಿಪ್ರಾಯದೊಂದಿಗೆ ಈ ಸಂವಾದವು ಕೊನೆಗೊಳ್ಳುತ್ತದೆ. ಜವರಿಯು ಈ ಸಂಭಾಷಣೆಯಲ್ಲಿ ಮಹತ್ವದ ಪಾತ್ರ ವಹಿಸಿ ಸಂದರ್ಬೋಚಿತವಾಗಿ ನಿಜ ಜೀವನದ ಉದಾಹರಣೆಗಳನ್ನು ಬೆಸೆದು ಜನತೆಯ ಅಭಿರುಚಿಯನ್ನು ಇಮ್ಮಡಿಗೊಳಿಸುವನು. ಧಾರ್ಮಿಕ ಭಾವನೆಯವರಿಗೂ, ರಸಿಕರಿಗೂ ಸಮಾಧಾನಗೊಳಿಸುವ ಸಂಭಾಷಣೆಯೆಂದಾಗಿ ಹಳ್ಳಿಯ ಎಲ್ಲ ವಿಧವಾದ ಪ್ರೇಕ್ಷಕರಿಗೂ ಜನರಂಜನೀಯವಾಯಿತು. ಮೇಲಾಗಿ ನಟಿಯು ತನ್ನ ಸಂಗೀತ ನೃತ್ಯದಿಂದ ರಂಗಭೂಮಿಯನ್ನು ಬೆಳೆಗಿದಳು. ಈ ಆಟದ ಸ್ತ್ರೀ ಪಾತ್ರಧಾರಿಯನ್ನು “ಚಿಮಣಾ” ಎಂದು ಕರೆಯುತ್ತಾರೆ. ಎಂಥ ಕಲಾತ್ಮಕ ನಾಮಕರಣೆ! ಚಿಮಣಾ ಎಂದರೆ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲಿ ಬೆಳೆಗುವ ಸೀಮೆ ಎಣ್ಣೆಯ ದೀಪ ಅದರಂತೆ ರಂಗಭೂಮಿಯನ್ನು ಬೆಳಗುವ ದೀಪ ಇವಳು. ಎಂಬುದು ಎಂತಹ ಸಾದೃಶ್ಯ ಸಂಪತ್ತು. ಕಲ್ಪನಾ ಸಾಮರ್ಥವನ್ನು ಸೂಚಿಸುತ್ತದೆ. ಈ ಆಟದ ಸ್ಥೂಲಸ್ವರೂಪವೇ ಬೆಳೆದು ಪಾರಿಜಾತವಾಯಿತು. ಪಾರಿಜಾತವೆನ್ನುವುದು ಒಂದು ಜಾನಪದ ರಂಗಭೂಮಿಯ ಆಟ . ಇದರಲ್ಲಿ ಅನೇಕ ವಿಧಗಳಿದ್ದರೂ ಪಾರಿಜಾತವೆಂದರೆ “ಕೃಷ್ಣಪಾರಿಜಾತವೆಂದೇ” ಹೇಳುವಷ್ಟು ಜನಪ್ರಿಯವಾಗಿದೆ. ಕೃಷ್ಣಪಾರಿಜಾತ ಇದನ್ನು ಅಭಿನಯಿಸಿದ ಅಭಿನಯಿಸುವ ಅನೇಕ ತಂಡಗಳು ಕೃಷ್ಣಾ ನದಿಯ ತೀರದಲ್ಲಿವೆ ಕೆಲವು ಪ್ರಸಿದ್ಧ ತಂಡಗಳು ಕೌಜಲಗಿ ನಿಂಗಮ್ಮ. ಸವಡಿ ಮಲ್ಲಯ್ಯ, ಚೂಡಪ್ಪ ಅಂಗೂರ ಕುಂಚಗನೂರ, ಜಮಖಂಡಿ ಕೌಜಲಗಿ ಅಪ್ಪಾಲಾಲ್ (ಈತನನ್ನು ನಮ್ಮ ರಾಜ್ಯ ಸಂಗೀತ ನಾಟಕ ಅಕಾಡಮಿ ಗೌರವಿಸಿದೆ ). ಮಹಲಿಂಗಪೂರ, ಬೆನಕಟ್ಟಿ, ಬೈಲಹೊಂಗಲದ ಒಂದೆರಡು ತಂಡಗಳು ಮೌಲಾನಾ ಸಾಬ ತಂಡವೂ ಸುಮಾರಾಗಿದೆ. ಮೊದಲಿನ ಒಂದೆರಡು ತಂಡಗಳನ್ನು ಬಿಟ್ಟರೆ ಉಳಿದ ಪ್ರಾಯಶಃ ಎಲ್ಲಾ ತಂಡಗಳನ್ನೂ ಅವರ ಆಟಗಳನ್ನೂ ನೋಡಿದ್ದೇನೆ.