Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಡಾ. ಪಥಿಕೊಂಡ ವಿಶ್ವಂಬರನಾಥ್

ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರಾಗಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಹಿರಿಮೆಯನ್ನು ಹೊರನಾಡಿನಲ್ಲಿ ಪ್ರಚುರಪಡಿಸುತ್ತಿರುವ ಅಪರೂಪದ ಗಣ್ಯ ವೈದ್ಯರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
ವಿಶ್ವಂಬರನಾಥ್ ಅವರು ಕಿವಿ, ಮೂಗು, ಗಂಟಲು ಚಿಕಿತ್ಸೆಯಲ್ಲಿ ಕರ್ನಾಟಕದ ಹೊಸಪೇಟೆಯಲ್ಲಿ ೧೯೪೨ರಲ್ಲಿ ಜನಿಸಿದ ಶ್ರೀ ವಿಶೇಷ ಪರಿಣತಿಯನ್ನು ಪಡೆದಿರುವವರು. ಆಕ್ಯುಪ್ರೆಷರ್ ನಲ್ಲೂ ಸೇವೆಯಲ್ಲಿ ತೊಡಗಿದ್ದಾರೆ.
ಸಿದ್ಧಹಸ್ತರು. ಕಳೆದ ೨೭ ವರ್ಷಗಳಿಂದ ವೈದ್ಯಕೀಯ ವೃತ್ತಿಯ ಜೊತೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಮಹತ್ವವನ್ನು ವಿದೇಶಿಯರಿಗೆ ಅತ್ಯಂತ ಸಮರ್ಥವಾಗಿ ಅರುಹುವುದು ಇವರ ಪ್ರೀತಿಯ ಹವ್ಯಾಸ.
ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳ ನೃತ್ಯ ಪ್ರವಾಸವನ್ನು ವಿದೇಶದಲ್ಲಿ ಏರ್ಪಡಿಸಿದ ಹಿರಿಮೆ ಇವರದು. ‘ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ‘ಸ್ಕೂಲ್ ಫಾರ್ ದಿ ಡೆಫ್ ಅಂಡ್ ಡೆಮ್’ಗೆ ಶಿಕ್ಷಣ ಪರಿಕರಗಳನ್ನು ಉಚಿತವಾಗಿ ಒದಗಿಸಿದ ಉದಾರಿಗಳು, ೧೯೮೨ರಲ್ಲಿ ಫಾಕ್‌ಲ್ಯಾಂಡ್ಸ್‌ನ ಗವರ್ನರ್ ಅವರ ಆಹ್ವಾನದ ಮೇರೆಗೆ ಅಲ್ಲಿನ ಮಕ್ಕಳಿಗೆ ಉಚಿದ ವೈದ್ಯಕೀಯ ನೆರವನ್ನು ನೀಡಿದ ಕರುಣಾಳು.
ಭಗವದ್ಗೀತೆಯ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ವಿಶೇಷವಾಗಿ ಅಭ್ಯಸಿಸಿ ತಮ್ಮ ಉಪನ್ಯಾಸಗಳಲ್ಲಿ ಅವನ್ನು ಉಲ್ಲೇಖಿಸುವ ಮೂಲಕ ಭಾರತೀಯ ಶ್ರೇಷ್ಠ ಅಧ್ಯಾತ್ಮ ಗ್ರಂಥವೊಂದರ ವಿಶಿಷ್ಟತೆಯನ್ನು ಪರಿಚಯಿಸುತ್ತಿರುವ ಶ್ರೀಯುತರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ತಾಯ್ನಾಡಿನಿಂದ ಬಹುದೂರವಿದ್ದೂ ತಾಯ್ನೆಲದ ಸಂಸ್ಕೃತಿ ಮತ್ತು ಅಧ್ಯಾತ್ಮದ ಸೊಗಡನ್ನು ವಿದೇಶಿ ನೆಲದಲ್ಲಿ ಬಿತ್ತುತ್ತಿರುವ ಅಭಿಮಾನಿ ಕನ್ನಡಿಗರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವವಾಹಿನಿ (ಸಂಸ್ಥೆ)

ಬಿಲ್ಲವ ಸಮುದಾಯದ ಯುವಕರ ಅಭ್ಯುದಯಕ್ಕಾಗಿ ಕ್ರಿಯಾಶೀಲವಾಗಿರುವ ಸಂಸ್ಥೆ ಯುವವಾಹಿನಿ, ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ವಿಸ್ತಾರಗೊಂಡು ಕಾರ್ಯಚಲಿಸುತ್ತಿರುವ ಯುವಕರ ಪಡೆ. ಬಿಲ್ಲವ ಸಮುದಾಯದ ಯುವಕರು ಒಗ್ಗೂಡಿ ೧೯೮೭ರಲ್ಲಿ ಸ್ಥಾಪಿಸಿದ ಸಂಸ್ಥೆ ಯುವವಾಹಿನಿ. ಸಮಾವೇಶದ ಮೂಲಕ ಲೋಕಾರ್ಪಣೆಗೊಂಡ ಸಂಸ್ಥೆ ಬಿಲ್ಲವ ಜನಾಂಗದ ಯುವಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ವೆಚ್ಚ ಭರಿಸುತ್ತಿದೆ. ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಕ್ಕೆ ಇಂಬು ನೀಡುತ್ತಿದೆ. ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಇರುವ ಸಮುದಾಯದ ಯುವಕರ ಸಂಘಟನೆ, ವಿದ್ಯಾನಿಧಿ ಟ್ರಸ್ಟ್‌ ಮೂಲಕ ೨೪೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ, ಸೂರು ಇಲ್ಲದವರಿಗಾಗಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣ, ಬಡಹೆಣ್ಣುಮಕ್ಕಳಿಗೆ ಉಚಿತ ತಾಳಿಭಾಗ್ಯ, ವಧು-ವರಾನ್ವೇಷಣೆಗೆ ನೆರವು, ಕೋವಿಡ್ ಸಂದರ್ಭದಲ್ಲಿ ಅರ್ಹ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ, ಆಸ್ಪತ್ರೆಯಲ್ಲಿದ್ದ ಕಾರ್ಮಿಕರಿಗೆ ಒಂದು ತಿಂಗಳವರೆಗೆ ಉಚಿತ ಆಹಾರ ವಿತರಣೆ, ಪ್ರತಿವರ್ಷ ಕೆಸರುಗದ್ದೆ ಕ್ರೀಡಾಕೂಟ, ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮುಂತಾದ ಹಲವು ಬಗೆಯ ಸಮುದಾಯದ ಹಿತರಕ್ಷಣಾ ಚಟುವಟಿಕೆಗಳಲ್ಲಿ ಯುವವಾಹಿನಿ ನಿರತವಾಗಿದೆ. ಬರೋಬ್ಬರಿ ೩೫ ಘಟಕಗಳನ್ನು ಹೊಂದಿರುವ ಸಂಸ್ಥೆ ಅಧ್ಯಕ್ಷರಾದಿಯಾಗಿ ಎಲ್ಲರ ಅಧಿಕಾರವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಗೆ ಇಂಬು ಕೊಟ್ಟಿದೆ. ಯುವಕರ ಕಲ್ಯಾಣಕ್ಕೆ ದುಡಿಯುತ್ತಿರುವ ಯುವವಾಹಿನಿ ಮಾದರಿ ಸೇವಾಸಂಸ್ಥೆ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ತಿಪ್ಪಣ್ಣ ಹೆಳವ‍ರ್

ಕಲೆಗಾಗಿ ಆಸ್ತಿಯನ್ನು ಕಳೆದುಕೊಂಡು ತಾವೇ ಕಲೆಗೆ ಆಸ್ತಿಯಾದ ದೇಸೀ ಪ್ರತಿಭೆ ತಿಪ್ಪಣ್ಣ ಹೆಳವ‍ರ್, ಆರು ದಶಕಗಳಿಗೂ ಮೀರಿ ಸೇವೆಗೈದ ಬಯಲಾಟದ ಕಲಾವಿದ. ಜನಪದರಿಗೆ ಕಲೆಯೇ ಬದುಕು, ಬದುಕೇ ಕಲೆ. ತಿಪ್ಪಣ್ಣ ಅಂತಹ ಜನಪದೀಯ ಗಾಯಕ. ಅವಿಭಜಿತ ಬಿಜಾಪುರ ಜಿಲ್ಲೆ ಲಕ್ಕುಂಡಿಯವರು. ೧೯೪೪ರಲ್ಲಿ ಜನಿಸಿದ ತಿಪ್ಪಣ್ಣರದ್ದು ಅಪ್ಪಟ ಅನಕ್ಷರಸ್ಥ ಮನೆತನ, ಬಾಲ್ಯದಿಂದಲೂ ಕಲಾಸಕ್ತಿ, ನಟನೆಯ ಗೀಳು. ಬಯಲಾಟದ ಕಲಾವಿದನಾಗಿ ಊರೂರು ತಿರುಗುವುದೇ ಜೀವನ. ಈ ಕಲಾತಿರುಗಾಟ, ಬಯಲಾಟದ ಮೋಹಕ್ಕೆ ೮೭ ಎಕರೆ ಜಮೀನು ಕಳೆದುಕೊಂಡು ಬರಿಗೈ ದಾಸನಾಗಿದ್ದು ದಿಟ. ಆದರೂ ಕೊಂಚವೂ ಮುಕ್ಕಾಗದ ಕಲಾಪ್ರೇಮ, ಬಯಲಾಟದ ಹಾಡುಗಳನ್ನು ನೆನಪಿಟ್ಟುಕೊಳ್ಳಲೆಂದೇ ಮನೆಯಲ್ಲೇ ಅಕ್ಷರಕಲಿತ ಜಾಣ, ಅಲೆಮಾರಿ ಹೆಳವ—ಪಿಚ್ಚ-ಗುಂಟಲು ಜನಾಂಗದವರಾಗಿ ಗುಂಟಲು ಸಮುದಾಯದ ಮೂಲಪುರುಷ ೬ನೇ ಶತಮಾನದ ಮುತ್ತಿನಾಥಯ್ಯ ಬಗ್ಗೆ ಕೆಲವು ವಚನಗಳನ್ನು ಸಂಸ್ಕರಿಸಿ ಇತಿಹಾಸಕಾರರಿಗೆ ಅಚ್ಚರಿ ಉಂಟುಮಾಡಿದಾತ. ಮನೆಮನೆಗಳಿಗೆ ತೆರಳಿ ಜನನ-ಮರಣ ದಾಖಲಿಸುವ ಒಕ್ಕಲುತನದಲ್ಲೂ ನಿರತರಾಗಿರುವ ತಿಪ್ಪಣ್ಣಗೆ ಭಿಕ್ಷಾಟನೆ ಮತ್ತು ಕಲಾರಾಧನೆ ಎರಡೇ ಆಧಾರ. ೭೮ರ ಇಳಿವಯಸ್ಸಿನಲ್ಲೂ ಕಲಾಕೈಂಕರ್ಯದಲ್ಲಿ ತೊಡಗಿರುವ ತಿಪ್ಪಣ್ಣ ಹಳ್ಳಿಗಾಡಿನ ನಿಜ ಜಾನಪದ ಸಂಪತ್ತು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ (ಸಂಸ್ಥೆ)

ಆರೋಗ್ಯ ಕ್ಷೇತ್ರದ ಮಾರಣಾಂತಿಕ ಕಾಯಿಲೆ ಪೀಡಿತ ಮಕ್ಕಳ ಶುಶೂಷೆಯಲ್ಲಿ ಸಕ್ರಿಯವಾಗಿರುವ ಸೇವಾನಿಧಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ. ನೂರಾರು ಮಕ್ಕಳ ಬಾಳಿನ ಜೀವರಕ್ಷಕಕೇಂದ್ರ, ತಲಸೇಮಿಯಾ ಹಾಗೂ ಹೀಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ೨೦೧೭ರಲ್ಲಿ ಬಾಗಲಕೋಟ ಜಿಲ್ಲೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ‘ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ’ ಅಸ್ತಿತ್ವಕ್ಕೆ ಬಂತು. ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ಈ ಸೊಸೈಟಿ ಬಾಗಲಕೋಟೆಯಲ್ಲಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪ್ರಾಮಾಣಿಕ ಕಾಳಜಿಯಿಂದ ಅವಿರತವಾಗಿ ಶ್ರಮಿಸುತ್ತಿದೆ. ಸುಮಾರು ೧೦೯ ಮಕ್ಕಳು ಚಿಕಿತ್ಸೆಗಾಗಿ ನೋಂದಾಯಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವುದು ವಿಶೇಷ, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಮಕ್ಕಳಿಗೂ ಉಚಿತ ಸೇವೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುವ ಕಡೆ ಹಾಗೂ ಸಾರ್ವಜನಿಕರಲ್ಲಿ ತಲಸೇಮಿಯಾ ಮತ್ತು ಹಿಮೋಫೀಲಿಯಾ ಕಾಯಿಲೆಯ ಬಗ್ಗೆ ತಿಳವಳಿಕೆ ಮೂಡಿಸಲು ಅನೇಕ ಶಿಖರಗಳನ್ನು ಸೊಸೈಟಿ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ತಲಸೇಮಿಯಾ ಪೀಡಿತ ಮಕ್ಕಳಿಗೆ ಉಚಿತ ರಕ್ತವರ್ಗಾವಣೆ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುತ್ತಿರುವ ಸೊಸೈಟಿ ರಕ್ತಭಂಡಾರವನ್ನೂ ಹೊಂದಿದ್ದು ಮಾನವೀಯ ಸೇವೆಯಿಂದಾಗಿ ನೊಂದ ಮಕ್ಕಳ ಮೊಗದಲ್ಲಿ ನಗು ಚಿಮ್ಮಿಸಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಸುಮನಾ ಫೌಂಡೇಶನ್ (ಸಂಸ್ಥೆ)

ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿಶಿಷ್ಟ ಸಂಸ್ಥೆ ಸುಮನಾ ಫೌಂಡೇಶನ್, ನಾಡು-ನುಡಿ ರಕ್ಷಣೆ, ಜನಹಿತಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಪರೂಪದ ಸೇವಾಕೇಂದ್ರ, ಸಾಮಾಜಿಕ ಸೇವಾಬದ್ಧತೆಯೊಂದಿಗೆ ೨೦೧೨ರಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸ್ಥಾಪನೆಗೊಂಡ ಸುಮನಾ ಫೌಂಡೇಶನ್‌ನ ರೂವಾರಿ ಡಾ. ಸುನೀತಾ ಮಂಜುನಾಥ್, ಸ್ವಚ್ಛಭಾರತ ಅಭಿಯಾನದೊಂದಿಗೆ ತನ್ನ ಸೇವಾಯಾನ ಆರಂಭಿಸಿದ ಸಂಸ್ಥೆ ಬೆಂಗಳೂರಿನ ರಸ್ತೆಗಳ ಬದಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿದೆ. ೧೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಖರಗಳು, ೧೦ ಸಾವಿರ ಆಯುಷ್ಮಾನ್‌ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಿಕೊಡುವಿಕೆ, ೫೦೯ಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿನಿತ್ಯ ೫೦೦ರಿಂದ ಒಂದು ಸಾವಿರ ಮಂದಿ ಬಡವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ, ನೂರಾರು ಬಸ್ ತಂಗುದಾಣಗಳಿಗೆ ಹೊಸ ರೂಪ, ಕಡುಬಡವರಿಗೆ ಮನೆಗಳ ನಿರ್ಮಾಣ, ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ವಿತರಣೆ, ತರಕಾರಿ ಸರಬರಾಜು, ಪರಿಸರಸ್ನೇಹಿ ಗಣಪತಿಗಳ ತಯಾರಿಗೆ ಪ್ರೋತ್ಸಾಹ, ಸೈಕಲ್‍ ರ‍್ಯಾಲಿ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ, ರುದ್ರಭೂಮಿ ಸ್ವಚ್ಛತೆ ಫೌಂಡೇಶನ್‌ನ ಜನಮುಖಿ ಕಾರ್ಯಗಳು. ಸ್ವತಃ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುನೀತಾ ಮಂಜುನಾಥ್‌ ಅವರು ಪ್ರತಿ ವರ್ಷ ೩೦ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಸೇವೆಗೆ ಸಂದ ಸತ್ಫಲವಾಗಿದೆ.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುಬ್ರಹ್ಮಣ್ಯ ಧಾರೇಶ್ವರ

ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ, ನಿರ್ದೇಶಕ, ಕಥಾಸಂಯೋಜಕ, ಸಂಘಟಕ, ರಾಗಸಂಯೋಜಕರಾಗಿ ೪೯ ವರ್ಷಗಳ ಸೇವಾಹಿರಿತನದ ಕಲಾಕಾರರು. ೧೯೫೭ರಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಬಾಲ್ಯದಲ್ಲೇ ಸ್ವರಮೋಹಿತರು. ಹತ್ತನೇ ವಯಸ್ಸಿಗೆ ಹಿಂದೂಸ್ತಾನಿ ಸಂಗೀತಾಭ್ಯಾಸ, ನಾಟಕ ಕಂಪನಿಗಳಲ್ಲಿ ತರಬೇತಿ, ೧೬ನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಸಹಭಾಗವತನಾಗಿ ಕಲಾಸೇವಾರಂಭ, ೧೨ ವರ್ಷಗಳಲ್ಲಿ ನಿತ್ಯವೂ ಕಲಿಕೆ, ಆನಂತರ ಪ್ರಧಾನಭಾಗವತ, ನಿರ್ದೇಶಕ, ಕಥಾಸಂಯೋಜಕರಾಗಿ ೨೮ ವರ್ಷಗಳ ಕಾಲ ಶ್ರೀಪೆರ್ಡೂರು ಮೇಳ ಮುನ್ನಡೆಸಿದ ಹಿರಿಮೆ, ಹೊಸರಾಗಗಳ ಅಳವಡಿಕೆ ಮತ್ತು ಹೊಸ ತಾಂತ್ರಿಕತೆಯನ್ನು ಬಳಸಿದ ಹೆಗ್ಗಳಿಕೆ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ, ಸಂಯೋಜನೆ ಮತ್ತು ಪ್ರದರ್ಶನ. ೪೩೦ಕ್ಕೂ ಹೆಚ್ಚು ಕಥಾನಕದ ಆಡಿಯೋ ಕ್ಯಾಸೆಟ್‌ಗಳ ಮುದ್ರಣ, ೨೫೦ಕ್ಕೂ ಅಧಿಕ ವಿಡಿಯೋ-ಸಿಡಿ-ಡಿವಿಡಿಗಳ ಚಿತ್ರೀಕರಣದ ದಾಖಲೆ, ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರ ಕಲಾಸೇವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನಪ್ರಶಸ್ತಿ, ಶ್ರೀರಾಮವಿಠಲ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಸನ್ಮಾನಿತಗೊಂಡ ಮಾದರಿ ಸಾಧನೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸೇನೆ

ಸುಬೇದಾ‌ರ್ ಶ್ರೀ ಬಿ.ಕೆ.ಕುಮಾರಸ್ವಾಮಿ

ಭಾರತೀಯ ಸೈನ್ಯದ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ದೇಶಸೇವೆಗೈದ ವೀರಯೋಧ ಸುಬೇದಾ‌ರ್ ಕುಮಾರಸ್ವಾಮಿ, ಗ‍ಡಿಬೇಲಿ ರಚಿಸಲು ನೆರವಾದ ದೇಶಪ್ರೇಮಿ. ಬೆಂಗಳೂರಿನಲ್ಲಿ ೧೯೬೨ರಲ್ಲಿ ಜನಿಸಿದ ಬಿ.ಕೆ.ಕುಮಾರಸ್ವಾಮಿ ೧೮ನೇ ವಯಸ್ಸಿಗೆ ಭಾರತೀಯ ಸೇನೆಗೆ ಸೇರಿದವರು. ಸಿಪಾಯಿಯಾಗಿ ಆಪರೇಷನ್‌ ಬ್ಲೂಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ್ ಮತ್ತು ಎಲ್‌ಸಿ ಫೆನ್ಸಿಂಗ್‌ನಂತಹ ಪ್ರಮುಖ ಕಾರ್ಯಾಚರಣೆಯಲ್ಲಿ ನಾಡಿಗಾಗಿ ಹೋರಾಡಿದವರು. ಕಬಡ್ಡಿ ಮತ್ತು ವೇಟ್‌ಲಿಫ್ಟಿಂಗ್ ಆಟಗಾರರಾಗಿ, ಭಾರತೀಯ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದವರು. ೧೯೮೧ರಿಂದ ೮೩ರವರೆಗೆ ಬಾಕ್ಸಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ಹ್ಯಾಟ್ರಿಕ್ ದಾಖಲೆ. ಭಯೋತ್ಪಾದನೆಗೆ ಸುಲಭ ಪ್ರವೇಶ ನಿರ್ಬಂಧಿಸುವ ಗಡಿಪ್ರದೇಶದ ಬೇಲಿ ರಚಿಸಲು ಉಪಕ್ರಮ ಕೈಗೊಂಡು ಪ್ರಶಸ್ತಿಗೆ ಪಾತ್ರರಾದವರು. ನಿವೃತ್ತಿ ನಂತರವೂ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ, ಎನ್‌ಸಿಸಿ ಕೆಡೆಟ್‌ ಸಮಿತಿಯ ಗೌರವಾಧ್ಯಕ್ಷರಾಗಿ ಸೇವಾನಿರತರು. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಲೇ ಬಡಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾದ ಕುಮಾರಸ್ವಾಮಿ ಕೆ.ಎಂ.ಕಾರಿಯಪ್ಪ ಪ್ರಶಸ್ತಿ, ಜಯಕರ್ನಾಟಕ ಸಾಧನ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸುಬ್ಬರಾಮ ಶೆಟ್ಟಿ

ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನರ್ಘ್ಯ ಸೇವೆಸಲ್ಲಿಸಿದ ಸಮಾಜಬಂಧು ಸುಬ್ಬರಾಮ ಶೆಟ್ಟಿ. ಆರ್.ವಿ. ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಣತಜ್ಞ. ಬಡಮಕ್ಕಳಿಗೆ ನೆರವಾದ ಸಮಾಜಮುಖಿ, ಉದ್ಯಮಿ. ಸುಶಿಕ್ಷಿತ ಕುಟುಂಬದ ಕುಡಿಯಾದ ಸುಬ್ಬರಾಮ ಶೆಟ್ಟಿ ಅವರು ಬಿಎಸ್ಸಿ, ಟೆಕ್ಸ್‌ಟೈಲ್ಸ್ ಪದವೀಧರರು. ಆರ್.ವಿ.ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷರಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದುಡಿದು ಸಂಸ್ಥೆಯ ಪ್ರಗತಿಗೆ ಅಮೂಲ್ಯ ಕಾಣಿಕೆ ಕೊಟ್ಟವರು. ವಾಸವಿ ಟ್ರಸ್ಟ್ ಅಧ್ಯಕ್ಷರಾಗಿ ಆಸ್ಪತ್ರೆ, ಕನ್ವೆನ್ಷನ್ ಹಾಲ್ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಮಾರುತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿ ಹಳ್ಳಿಮಕ್ಕಳ ಬಾಳಲ್ಲಿ ಅಕ್ಷರ ಜ್ಯೋತಿ ಬೆಳಗಿದವರು, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷರಾಗಿ ವೃದ್ಧರ ಸೇವೆ, ಎಪಿಎಸ್ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷರಾಗಿ ಶ್ಲಾಘನೀಯ ಪಾತ್ರ, ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷರಾಗಿ ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಹಿಂದೂ ಸೇವಾ ಪ್ರತಿಷ್ಠಾನ-ಭಾರತ್ ವಿಕಾಸ್‌ ಪರಿಷತ್ತುಗಳಲ್ಲಿ ಗಣನೀಯ ಸೇವೆ, ಕೋಮರ್ಲ ಉದ್ದಿಮೆಗಳ ಗುಂಪಿನ ಅಧ್ಯಕ್ಷರಾಗಿ ಉದ್ಯಮರಂಗದಲ್ಲೂ ಸಾಧನೆ, ಎಫ್‌ಕೆಸಿಸಿಐ ಅಧ್ಯಕ್ಷ, ಬೆಂಗಳೂರು ವಿವಿ ಸೆನೆಟ್ ಸದಸ್ಯ, ಪೀಪಲ್ಸ್ ಟ್ರಸ್ಟ್ ಅಧ್ಯಕ್ಷ ಸೇರಿ ಹತ್ತಾರು ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆಗೈದ ವಿರಳ ಸೇವಾಸಿಂಧು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಸೋಲಿಗರ ಮಾದಮ್ಮ

ಬುಡಕಟ್ಟು ಸಮುದಾಯದ ಹಿತರಕ್ಷಣೆಗೆ ಹೋರಾಡಿದ ಮೊಟ್ಟಮೊದಲ ದಿಟ್ಟ ಮಹಿಳೆ ದೊಡ್ಡಮಾದಮ್ಮ. ಸೋಲಿಗರ ನಾಯಕಿ, ಜಾನಪದ ಹಾಡುಗಾರ್ತಿ, ಉಪಕಾರಿ ನಾಟಿವೈದ್ಯೆ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಜೀರಿಗೆಗದ್ದೆಯವರಾದ ದೊಡ್ಡಮಾದಮ್ಮ ಸೋಲಿಗ ಸಮುದಾಯದ ಹೆಣ್ಣುಮಗಳು. ಬಿಳಿಗಿರಿರಂಗನಬೆಟ್ಟದ ಡಾ. ಸುದರ್ಶನ್‌ರ ಮಾರ್ಗದರ್ಶನದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಸ್ಥಾಪಿಸಿ ಸಮುದಾಯದ ಏಳ್ಗೆಗೆ ಶ್ರಮಿಸಿದಾಕೆ. ಭೂಮಿ ಹಕ್ಕು, ಜಾತಿಪದ್ಧತಿ, ಅರಣ್ಯ ಅಧಿಕಾರಿಗಳ ಕಿರುಕುಳ ಮುಂತಾದ ಸಮಸ್ಯೆಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ಹೋರಾಡಿದ ಗಟ್ಟಿಗಿತ್ತಿ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸೋಲಿಗರನ್ನು ಒಗ್ಗೂಡಿಸಿದ ಮಹಾತಾಯಿ. ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಮಹಿಳಾಪ್ರಜ್ಞೆ ಜಾಗೃತಿಗೊಳಿಸಿದ ಛಲಗಾತಿ. ಪಾರಂಪರಿಕ ಅರಣ್ಯ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುವ ಮಾದಮ್ಮ ನಾಟಿ ವೈದ್ಯೆಯಾಗಿಯೂ ಸಮುದಾಯದ ಸೇವೆಯಲ್ಲಿ ಅನವರತ ನಿರತ. ಸೋಲಿಗರ ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆಗಳನ್ನು ಮಾಡಿಸಿರುವ ಈ ಅಜ್ಜಿಗೆ ಆದಿವಾಸಿ ಕಲೆ, ಸಂಸ್ಕೃತಿ–ಪದ್ಧತಿಯ ಬಗ್ಗೆ ಆಳಜ್ಞಾನ, ಸೋಲಿಗರ ಜಾನಪದ ಹಾಡು, ಸೋಬಾನೆ ಹಾಡು ಮತ್ತು ಮಾದೇಶ್ವರ ಹಾಡುಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ೮೫ರ ಇಆವಯಸ್ಸಿನಲ್ಲಿ ಕಣ್ಣುದೃಷ್ಟಿಗೆ ತೊಂದರೆಯಾಗಿದ್ದರೂ ಸೋಲಿಗರ ಹಿತ ಚಿಂತಿಸುವ ಮಾದಮ್ಮ ನಾಗರಿಕ ಸಮಾಜಕ್ಕೇ ಮಾದರಿ.

Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ವೆಂಕಟಾಚಲಪತಿ

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರತೆಯಿಂದ ಹೆಸರಾದವರು ಎಸ್.ಕೆ.ವೆಂಕಟಾಚಲಪತಿ. ಬಡಕಕ್ಷಿದಾರರ ಪಾಲಿನ ಆಪತ್ಬಾಂಧವರು. ಎಸ್.ಕೆ.ವೆಂಕಟಾಚಲಪತಿ ಅವರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು. ಬಹು ದಶಕಗಳಿಂದಲೂ ನ್ಯಾಯಾಂಗದಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವವರು. ಬಡವರು, ನಿರ್ಗತಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಪ್ರಕರಣಗಳಲ್ಲಿ ಹಣ ಪಡೆಯದೇ ಉಚಿತವಾಗಿ ಕಾನೂನು ಸೇವೆಯಲ್ಲಿ ನೀಡುವ ಅಪರೂಪದ ವಿರಳಾತಿ ವಿರಳ ನ್ಯಾಯವಾದಿ. ಬೆಂಗಳೂರಿನಲ್ಲಿ ನೆಲೆನಿಂತಿರುವ ವೆಂಕಟಾಚಲಪತಿಗಳು ಎಂದಿಗೂ ಕಕ್ಷಿದಾರರಿಗೆ ಹೊರೆಯಾಗಿದ್ದಿಲ್ಲ. ಕಕ್ಷಿದಾರರ ಆರ್ಥಿಕ ಸ್ಥಿತಿಗನುಗುಣವಾಗಿ ಕಾನೂನು ಸೇವೆ ಒದಗಿಸುವುದು ಅವರ ಹೆಚ್ಚುಗಾರಿಕೆ ಹಾಗೂ ಹೃದಯ ವೈಶಾಲ್ಯತೆಗೆ ಸಾಕ್ಷಿ, ತಮ್ಮನ್ನು ಸಂಪರ್ಕಿಸುವ ಬಡವರಿಗೆ ಯಾವುದೇ ಹೊರೆಯಾಗದಂತೆ ಎಚ್ಚರವಹಿಸುವ ಅವರು ಉಚಿತ ಸೇವೆ ನೀಡುವುದರ ಜತೆಗೆ ಬದುಕಿನಲ್ಲಿ ಭರವಸೆಯನ್ನೂ ತುಂಬುವುದು ಬಲು ವಿಶಿಷ್ಟ. ನ್ಯಾಯಾಂಗದಲ್ಲಿ ಹಿರಿತನವುಳ್ಳ ವೆಂಕಟಾಚಲಪತಿ ಅವರು ನ್ಯಾಯದಾನ ವ್ಯವಸ್ಥೆಯ ಘನತೆ ಮತ್ತು ಅಂತಃಕರಣವನ್ನು ಹೆಚ್ಚಿಸಿದ ಅಪರೂಪದ ನ್ಯಾಯವಾದಿ.

Categories
ಕಿರುತೆರೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿಹಿಕಹಿ ಚಂದ್ರು

ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯನ್ನು ವಿಶಿಷ್ಟ ಬಗೆಯಲ್ಲಿ ಬೆಳಗಿ ಜನಮಾನಸವನ್ನು ರಂಜಿಸಿದ ಕಲಾಪ್ರತಿಭೆ ಸಿಹಿಕಹಿಚಂದ್ರು. ನಟ, ನಿರ್ದೇಶಕ, ಧಾರಾವಾಹಿಗಳ ನಿರ್ಮಾಪಕ, ಅಡುಗೆ ಪ್ರಚಾರಕ ಹಾಗೂ ಹಾಸ್ಯಗಾರನಾಗಿ ಅವರದ್ದು ಬಹುಮುಖ ಪ್ರತಿಭಾದರ್ಶನ. ಸಿಹಿಕಹಿ ಚಂದ್ರು ಎಂದೇ ಜನಜನಿತರಾದ ಚಂದ್ರಶೇಖರ್ ಬಾಲ್ಯದಿಂದಲೂ ಕಲಾಮೋಹಿ, ನಟನೆಯ ಗೀಳು, ಬಣ್ಣದ ಹುಚ್ಚು. ಕಾಲೇಜು ದಿನಗಳಿಂದಲೂ ರಂಗಸಖ್ಯ. ಶೇಕ್ಸ್‌ಪಿಯರ್ ಅವರ ಏ ಕಾಮಿಡಿ ಆಫ್ ಎರರ್ಸ್‌ನ ಕನ್ನಡ ರೂಪಾಂತರ ನೀನಾನಾದ್ರೆ ನಾನೀನೇನ? ಚಂದ್ರು ಅಭಿನಯಿಸಿದ ಜನಪ್ರಿಯ ಹಾಸ್ಯನಾಟಕ. ರಂಗಭೂಮಿಯಿಂದ ೯೦ರ ದಶಕದಲ್ಲೇ ಕಿರುತೆರೆ ಜಿಗಿದ ಚಂದ್ರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸಿಹಿಕಹಿ’ ಧಾರಾವಾಹಿಯಿಂದ ಜನಪ್ರಿಯರು. ಅಂದಿನಿಂದಲೇ ಸಿಹಿಕಹಿಚಂದ್ರುವಾಗಿ ರೂಪಾಂತರ. ಬ್ಯಾಂಕ್ ಜನಾರ್ದನ್, ಉಮಾಶ್ರೀ ಜತೆಗಿನ ಚಂದ್ರು ಅವರ ಹಾಸ್ಯ ಸನ್ನಿವೇಶಗಳು ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಧಾರಾವಾಹಿಗಳ ನಿರ್ಮಾಣಕ್ಕೆ ಇಳಿದ ಚಂದ್ರು ಸಿಲ್ಲಿಲಲ್ಲಿ, ಪಾಪಪಾಂಡು ಜನಪ್ರಿಯ ಧಾರಾವಾಹಿಗಳ ನಿರ್ದೇಶಕರು. ಅಡುಗೆ ಮಾಡುವುದು ಚಂದ್ರು ಅವರ ಪರಮಾಪ್ತ ಕಲೆ. ಈ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿವಾಹಿನಿಗಳಲ್ಲಿ ಶೋ ನಡೆಸಿದ ಜನಾನುರಾಗಿಯಾದ ಹೆಗ್ಗಳಿಕೆ. ಬದುಕು ಸಾಗಿದ ಹಾದಿಯಲ್ಲಿ ನಡೆಯುತ್ತಲೇ ಬಹುಬಗೆಯ ಪಾತ್ರ-ಆಸಕ್ತಿಯಿಂದ ಗೆದ್ದ ಸಿಹಿಕಹಿ ಚಂದ್ರು ಕಲೆಯಿಂದಲೇ ಬದುಕುಕಟ್ಟಿಕೊಂಡು ಬೆಳಗಿದ ಅಪರೂಪದ ಕಲಾವಂತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಶ್ರೀ ಗೋಪಾಲಕೃಷ್ಣ ಶರ್ಮ

ವೇದಾಧ್ಯಯನ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ವಿಶಿಷ್ಟ ಸಾಧಕರು ವಿದ್ವಾನ್ ಗೋಪಾಲಕೃಷ್ಣ ಶರ್ಮ, ೩೦ ಸಾವಿರ ಶ್ಲೋಕಗಳ ಅರ್ಥ ವಿಶ್ಲೇಷಕರು, ಹೆಸರಾಂತ ಜ್ಯೋತಿಷ ಪಂಡಿತರು, ಶಾಸ್ತ್ರ ವಿದ್ವಾಂಸರು, ಬಡವರಿಗೆ ನೆರವಾಗುವ ಸಮಾಜಸೇವಕರು. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬಾಲಿಕೊಪ್ಪ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಗೋಪಾಲಕೃಷ್ಣ ಶರ್ಮ ಅವರು ಬಾಲ್ಯದಲ್ಲೇ ವೇದಾಧ್ಯಯನದತ್ತ ಚಿತ್ತ ಹರಿಸಿದವರು. ಹೊನ್ನಾವರದಲ್ಲಿ ಪ್ರಾಥಮಿಕ ಸಂಸ್ಕೃತಾಧ್ಯಯನ, ವೇದಾಧ್ಯಯನ, ಉಡುಪಿಯಲ್ಲಿ ಜ್ಯೋತಿಷ ವಿದ್ವಾನ್ ಪದವಿ, ಪೌರೋಹಿತ್ಯದಲ್ಲಿ ವಿಶೇಷ ಪಾಂಡಿತ್ಯ, ಕೇರಳದಲ್ಲಿ ಮಂತ್ರಶಾಸ್ತ್ರ, ಪ್ರಶ್ನಾಶಾಸ್ತ್ರ ಅಧ್ಯಯನ. ಟಿವಿ ವಾಹಿನಿಗಳಜ್ಯೋತಿಷ ಪಂಡಿತರಾಗಿ ಬಲು ಜನಪ್ರಿಯರು. ವಿದ್ವತ್ತಿನ ಪಯಣದಾಚೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡವರು ಗೋಪಾಲಕೃಷ್ಣ ಶರ್ಮ, ಸಾವಿರಾರು ಬಡಮಕ್ಕಳಿಗೆ ಉಚಿತ ಪುಸ್ತಕ, ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಅಹಾರಕಿಟ್‌ಗಳ ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ದಿನಸಿ, ಬಟ್ಟೆ ವಿತರಿಸಿದ ಸಮಾಜಮುಖಿ, ೩೦ ಸಾವಿರ ಶ್ಲೋಕಗಳನ್ನು ಅರ್ಥ ಸಮೇತ ವಿವರಿಸಬಲ್ಲ ಪಂಡಿತೋತ್ತಮರು. ಜ್ಯೋತಿಷ ಮಾರ್ತಾಂಡ, ಜ್ಯೋತಿಷ ಸಾರ್ವಭೌಮ, ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ-ಗೌರವಗಳಿಂದ ಭೂಷಿತರಾದ, ಕನ್ನಡದ ವಿದ್ವತ್ ಪರಂಪರೆಯನ್ನು ಶ್ರೀಮಂತಗೊಳಿಸಿದ ವಿದ್ವತ್ಮಣಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವ ಮಹತ್ತಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾಕೇಂದ್ರ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಸ್ವಾಮಿ ಸಿದ್ದೇಶ್ವರಾನಾಂದ ಸ್ವಾಮಿ ಅವರು ೧೯೨೫ರಲ್ಲಿ ಸ್ಥಾಪಿಸಿದ ಈ ಸಂಸ್ಥೆಗೆ ೧೯೩೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನೀಡಿದ ಅನುದಾನದಿಂದ ಸ್ವಂತಕಟ್ಟಡದ ಸ್ಥಾಪನೆ. ಸ್ವಾಮೀಜಿಗಳ ಪಾಲಿಗೆ ಪ್ರತಿಷ್ಠಿತ ವೇದಾಂತ ಅಧ್ಯಯನ ಕೇಂದ್ರವಾಗಿದ್ದ ಆಶ್ರಮ ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ. ರಾಷ್ಟ್ರಕವಿ ಕುವೆಂಪು ಅವರು ಬಾಲ್ಯದಲ್ಲಿ ಇಲ್ಲಿಯೇ ಕಲಿತದ್ದು ವಿಶೇಷ. ಸಂಸ್ಥೆಯು ವಿವೇಕ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿವರ್ಷ ೩೫೦ ರಿಂದ ೫೦೦ ವಿದ್ಯಾರ್ಥಿಗಳು ಶಿಕ್ಷಿತರಾಗುತ್ತಿರುವುದು ಮಹತ್ವದ ಸಾಧನೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು ೯ ಶಾಲೆಗಳನ್ನು ನಡೆಸುತ್ತಿರುವ ಎಲ್ಲೆಡೆ ಮಕ್ಕಳಲ್ಲಿ ಬದುಕಿನ ನೈತಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ. ಸಂಸ್ಥೆಯಲ್ಲಿ ಕಲಿತ ಮಕ್ಕಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು ಶಿಸ್ತು-ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ. ಸಂಸ್ಥೆಯು ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಶತಮಾನದ ಅಂಚಿನಲ್ಲಿದೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್‌.ಆರ್. ಶ್ರೀಶಾ

ಪತ್ರಿಕೋದ್ಯಮದಲ್ಲಿ ‘ಕರೆಂಟ್ ಮಾತು’ನಿಂದಲೇ ಹೆಸರಾದ ಹಿರಿಯ ವಿಷಯತಜ್ಞ ಪತ್ರಕರ್ತರು ಎಚ್‌.ಆರ್.ಶ್ರೀಶಾ, ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೫೧ರಲ್ಲಿ ಜನಿಸಿದ ಶ್ರೀಶ ಕನ್ನಡ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು. ಖಾದ್ರಿ ಶಾಮಣ್ಣರ ಗರಡಿಯಲ್ಲಿ ಪಳಗಿದ ಪತ್ರಕರ್ತರು, ಹಾಸನದ ಜನಮಿತ್ರ, ಸಂಯುಕ್ತಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕದಲ್ಲಿ ಪತ್ರಿಕಾಸೇವೆ. ವಿಷಯತಜ್ಞರು ವಿರಳವಾಗುತ್ತಿರುವ ಪತ್ರಿಕಾರಂಗದಲ್ಲಿ ಎಚ್.ಆರ್.ಶ್ರೀಶ ಅವರದ್ದು ವಿಶೇಷ ಹೆಸರು. ವಿದ್ಯುತ್ ಕ್ಷೇತ್ರದ ಬಗ್ಗೆ ಅವರದ್ದು ತಳಸ್ಪರ್ಶಿ ಅಧ್ಯಯನ, ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೇ ಸರಳ, ಪದಗಳಂತೆ ಮಾತು ಮೃದು. ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳು ಬರೆದ ಲೇಖನಸರಮಾಲೆಗೆ ಲೆಕ್ಕವಿಲ್ಲ. ಸರ್ಕಾರದ ಕಣ್ಣಿರೆಸಿದವರು. ಜನಪ್ರಿಯ ಕರೆಂಟ್ ಮಾತು’ ಅಂಕಣಕಾರರು. ಕೆಇಆರ್‌ಸಿ, ಕೆಪಿಸಿಎಲ್‌ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್‌ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು. ವಾದ-ವಿವಾದಗಳಲ್ಲದೇ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಅಪ್ಪಟ ಪತ್ರಿಕಾಜೀವಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂಕರ ಬುಚಡಿ

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲಪರವಾದ ಹೋರಾಟಗಳಿಂದ ಮರಾಠಿ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಿದ ವೀರಕನ್ನಡಿಗ ಶಂಕರ ಮಾಣಿಕಾ ಬುಚಡಿ. (೧೯೬೦-೭೦ರ ದಶಕದಲ್ಲಿ ಬೆಳಗಾವಿಯಲ್ಲಿದ್ದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಕನ್ನಡದ ಉಳಿವಿಗಾಗಿ ಕನ್ನಡ ಗೆಳೆಯರ ಬಳಗ ಸ್ಥಾಪಿಸಿ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡ ಸೇವೆಗೈದವರು. ಕನ್ನಡ ವಾಚಾನಾಲಯ ತೆರೆದವರು, ರಸ್ತೆನಾಮಫಲಕಗಳನ್ನು ಕನ್ನಡಜಾರಿಗೆ ಶ್ರಮಿಸಿದವರು, ಕನ್ನಡ ಚಳವಳಿಗಾರರ ಸಂಘದ ಮೂಲಕ ಕನ್ನಡದಕಹಳೆ ಮೊಳಗಿಸಿದವರು. ಮಹಾಜನ್‌ ವರದಿ ಜಾರಿಗಾಗಿ ಹೋರಾಡಿದ ಶಂಕರ್ ಬುಚಡಿ ನೇಕಾರರ ಸಂಘದ ಮೂಲಕ ಸಮುದಾಯದ ಸೇವೆಗೈದವರು. ಗಾಯಿತ್ರಿ ಅರ್ಬನ್ ಸೊಸೈಟಿ ತೆರೆದು ಜನಾಂಗದ ಆರ್ಥಿಕಾಭಿವೃದ್ಧಿಗೆ ನೀರೆರೆದವರು. ಹಲವು ಕೃತಿಗಳ ಲೇಖಕರು, ಹವ್ಯಾಸಿ ಬರಹಗಾರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರದಾಸಿಮಯ್ಯ ಅಧ್ಯಯನ ಪೀಠದ ಸಂಪಾದಕ ಮಂಡಲ ಸದಸ್ಯರಾಗಿ ಗುರುತರ ಸೇವೆಗೈದವರು. ಜೈಲುವಾಸ ಅನುಭವಿಸಿದ ಅಪ್ರತಿಮ ಚಳವಳಿಗಾರರು. ದಶಕಗಳ ಕಾಲ ಕನ್ನಡದ ಗೇಯತೆ ಮೆರೆಯಲು ಅಹರ್ನಿಶಿ ದುಡಿದ ಬುಚಡಿ ಅವರು ಕನ್ನಡನುಡಿ ಶ್ರೀ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ನೇಕಾರರತ್ನ ಪ್ರಶಸ್ತಿ, ಪ್ರತಿಭಾರತ್ನ ಪ್ರಶಸ್ತಿ ಮುಂತಾದ ಗೌರವಗಳಿಂದ ಭೂಷಿತರು. ೮೦ರ ಇಳಿವಯಸ್ಸಿನಲ್ಲೂ ಕನ್ನಡಸೇವೆಗೆ ಮುಂದಾಗುವ ಅಪ್ಪಟ ಕನ್ನಡಪ್ರೇಮಿ.

Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ

ಬದುಕಿನ ಮಾಟದಲ್ಲಿ ಬಯಲಾಟವನ್ನೇ ಜೀವಭಾವವಾಗಿಸಿಕೊಂಡವರು ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ, ಕಲಾರಂಗದ ನಾದಸೇವಕರು, ಹಳ್ಳಿಗರ ಮನಗೆದ್ದ ದೊಡ್ಡಾಟದ ಹಾಮ್ಮೋನಿಯಂ ವಾದಕ, ಪಾತ್ರಧಾರಿ, ಸ್ವರಸಂಯೋಜಕ, ಶಂಕರಪ್ಪ ಕೊಪ್ಪಳ ಜಿಲ್ಲೆಯ ಪ್ರತಿಭೆ, ಕೊಪ್ಪಳ ತಾಲ್ಲೂಕಿನ ಸಾ.ಮೋರನಾಳದ ಉಪ್ಪಿನ ಬೆಟಗೇರಿ ಹುಟ್ಟೂರು. ನಾದದೊಲುಮೆ ಅಪ್ಪನಿಂದ ಬಂದ ಬಳುವಳಿ, ಕಲಾಪ್ರೇಮ ಊರುಕೇರಿ ಬೆಸೆದ ಭಾವ. ಹರೆಯದಲ್ಲಿ ಮನವೇರಿದ ನಾದದ ಗುಂಗು. ೨೭ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಕಲಾರಂಗಪ್ರವೇಶ. ಪಕ್ಕವಾದ್ಯಪಟುವಾಗಿ ಕಲಾಸೇವೆಗೈಯುತ್ತಲೇ ಬಣ್ಣ ಹಚ್ಚಿ ಕಲಾವಿದನಾದ ಹಿರಿಮೆ, ಬಯಲಾಟಗಳ ನಿರ್ದೇಶಕನಾಗಿಯೂ ಮೇಲೆ ಬರೋಬ್ಬರಿ ೧೮೦ ಬಯಲಾಟಗಳಿಗೆ ಸ್ವರಸಂಯೋಜನೆ ಮಾಡಿದ ಹೆಗ್ಗಳಿಕೆ, ಕೊಪ್ಪಳ ಜಿಲ್ಲೆಯಿಂದ ಹಿಡಿದು ನಾಡಿನ ಹಲವೆಡೆ ಬಯಲಾಟಗಳಿಗೆ ನಾದದ ರಂಗುತುಂಗ ಸೈ ಎನಿಸಿಕೊಂಡು ಕಲಾನಿಪುಣ, ೪೨ ವರ್ಷಗಳಿಂದ ಅವಿರತವಾಗಿ ಕಲಾಸೇವಾನಿರತರಾಗಿರುವ ಶಂಕರಪ್ಪಗೆ ಬದುಕೇ ಬಯಲಾಟ, ಬಯಲಾಟವೇ ಬದುಕು. ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ಶಂಕರಪ್ಪ ಹಳ್ಳಿಗಾಡಿನ ಕಲಾವಂತಿಕೆ, ಸಮರ್ಪಣಾಭಾವ ಮತ್ತು ನಿಸ್ಪೃಹ ಕಲಾಸೇವೆಯ ನಿಜಪ್ರತೀಕ.

Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಿತ್ರಿ ಶಿವಪ್ಪ ಪೂಜಾರ

ಜಾನಪದವನ್ನೇ ಬದುಕಿನ ಪಥವಾಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಸಾಧಕಿ ಸಾವಿತ್ರಿ ಶಿವಪ್ಪ ಪೂಜಾರ, ಮಹಿಳಾಪರ ಹೋರಾಟಗಾರ್ತಿ, ಗೀಗೀಪದ ಹಾಡುಗಾರ್ತಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ೧೯೬೧ರಲ್ಲಿ ಜನಿಸಿದ ಸಾವಿತ್ರಿ ಪೂಜಾರ್ ಬಡಕುಟುಂಬದ ಕುಡಿ, ಸಾಮಾಜಿಕವಾಗಿ ಹಿಂದುಳಿದ ಮನೆತನ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಈ ಹಂತದಲ್ಲಿ ಸಾವಿತ್ರಿ ಅವರ ಕೈಹಿಡಿದು ನಡೆಸಿದ್ದು ಜಾನಪದ. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿದ ಗೀಗೀಪದ ಹಾಡುಗಾರಿಕೆಯನ್ನೇ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡ ಕಲಾವಿದೆ. ಜಾತ್ರೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ತತ್ವಪದಗಳ ಗಾಯನದಿಂದ ಕಲಾರಸಿಕರ ಮನಗೆದ್ದ ಸಾವಿತ್ರಿ ಪೂಜಾ‌ ಜಾನಪದ ಕೋಲಲೆಯೆಂದೆ ಜನಜನಿತರು. ಸರ್ಕಾರದ ಉತ್ಸವಗಳು ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ನಿರಂತರ ಕಲಾಪ್ರದರ್ಶನ, ನಾಲ್ಲೂವರೆ ದಶಕಗಳ ಅನನ್ಯ ಕಲಾಸೇವೆ, ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಯಾಗಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಿದವರು. ದೇವದಾಸಿ ಪದ್ಧತಿ ವಿರುದ್ಧ ಸಮರ ಸಾರಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಸಾವಿತ್ರಿ ಪೂಜಾ‌ರ ಅವರದ್ದು. ಫಕೀರವ್ವ ಗುಡಿಸಾಗರ ಪ್ರಶಸ್ತಿ, ಬಾಬು ಜಗಜೀವನರಾಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಸಾವಿತ್ರಿ ಪೂಜಾ‌ರ ಜಾನಪದ ಲೋಕದ ಮಂದಾರ ಪುಷ್ಪ.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸರಪಾಡಿ ಅಶೋಕ ಶೆಟ್ಟಿ

ಯಕ್ಷರಂಗಭೂಮಿಯಲ್ಲಿ ಕಲಾವಿದನಾಗಿ ರಸಿಕರ ಮನರಂಜಿಸಿದ ಕಲಾಚೇತನ ಸರಪಾಡಿ ಅಶೋಕ ಶೆಟ್ಟಿ, ನಾಟ್ಯಗುರು, ಸಮರ್ಥ ಪಾತ್ರಧಾರಿ, ಯಕ್ಷಪ್ರಸಂಗಗಳ ರಚನಾಕಾರರು, ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರುನಲ್ಲಿ ೧೯೬೧ರಲ್ಲಿ ಜನಿಸಿದ ಅಶೋಕ ಶೆಟ್ಟಿ ಎಳವೆಯಿಂದಲೇ ಯಕ್ಷಪ್ರೇಮಿ, ಪ್ರೌಢಶಿಕ್ಷಣದವರೆಗಷ್ಟೇ ವ್ಯಾಸಂಗ, ಆನಂತರ ಕಲೆಯೇ ಜೀವನ, ಕಲೆಯೇ ಶಿಕ್ಷಣ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ, ಉತ್ತಮ ನೃತ್ಯಪಟು, ಅರ್ಜುನ, ದೇವೇಂದ್ರ, ರಕ್ತಬೀಜ, ಕೌಂಡ್ಲಕ, ಶತ್ರುಘ್ನ, ಇಂದ್ರಜಿತು ಮುಂತಾದವು ಅಶೋಕಶೆಟ್ಟಿ ಅವರ ಕಲಾಭಿವ್ಯಕ್ತಿಯ ಜನಪ್ರಿಯ ಪಾತ್ರಗಳು. ಕಟೀಲು ಮೇಳ, ಅಳದಂಗಡಿ ಮೇಳ, ಬಪ್ಪನಾಡು ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳ ಮುಂತಾದ ಮೇಳಗಳಲ್ಲಿ ಕಲಾವಿದ, ಸಂಚಾಲಕನಾಗಿ ಸಾರ್ಥಕ ಕಲಾಸೇವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಉಚಿತ ನಾಟ್ಯ ತರಬೇತಿ ನೀಡಿದ ಗುರು. ಸಾವಯವ ಕೃಷಿ ವಿಜಯ ಕುರಿತ ಆರು ಯಕ್ಷಗಾನ ಪ್ರಸಂಗಗಳ ರಚನೆ ಮತ್ತು ನಿರ್ದೇಶನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ. ಹತ್ತಾರು ಸಂಘಸಂಸ್ಥೆಗಳಲ್ಲಿ ನಿಸ್ವಾರ್ಥ ಕಾರ್ಯ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸೇರಿದಂತೆ ಹಲವು ಸನ್ಮಾನಗಳಿಂದ ಭೂಷಿತ ಯಕ್ಷಪ್ರತಿಭೆ.

Categories
ಚಿತ್ರಕಲೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಣ್ಣರಂಗಪ್ಪ ಚಿತ್ರಗಾರ್

ನಶಿಸುತ್ತಿರುವ ಕಿನ್ನಾಳ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಹಿರಿಯ ಕಲಾಚೇತನ ಸಣ್ಣರಂಗಪ್ಪ ಚಿತ್ರಗಾರ, ಕಲೆಯನ್ನೇ ಬದುಕಾಗಿಸಿಕೊಂಡ ವಿರಳ ಕಲಾವಿದರು. ಸಾಂಪ್ರದಾಯಿಕ ಮರದ ಕಲೆಯಾದ ಕಿನ್ನಾಳ ಕಲೆ ಬಲು ಪುರಾತನವಾದುದು. ಕಾಲಚಕ್ರದೊಟ್ಟಿಗೆ ನಶಿಸುತ್ತಿರುವ ಈ ಕಲಾಸಂತತಿಯ ದಿವ್ಯಕೊಂಡಿಯಂತಿರುವ ಸಣ್ಣರಂಗಪ್ಪ ಚಿತ್ರಗಾರ ಕೊಪ್ಪಳ ಜಿಲ್ಲೆಯ ದೇಸೀ ಪ್ರತಿಭೆ. ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಹುಟ್ಟೂರು. ಇಡೀ ಊರಿಗೆ ಊರೇ ತಿನ್ನಾಳಕಲೆಗೆ ಅರ್ಪಿತಗೊಂಡಿರುವುದು ವಿಶೇಷ. ತಲೆತಲಾಂತರದಿಂದ ಕಿನ್ನಾಳ ಕಲೆಯೆ ಕುಲಕಸುಬು. ಸಣ್ಣರಂಗಪ್ಪಗೆ ಅಪ್ಪನೇ ಕಲಾಗುರು. ಬದುಕಿಗಾಗಿ ಕಲಿತ ಕಲೆಯಿಂದಲೇ ಹೊಟ್ಟೆಪಾಡು. ಕಿನ್ನಾಳ ಆಟಿಕೆಗಳು ಮತ್ತು ಧಾರ್ಮಿಕ ವಿಗ್ರಹಗಳನ್ನು ತಯಾರಿಸುವುದೇ ನಿತ್ಯದ ಕಾಯಕ, ತರಹೇವಾರಿ ವಸ್ತುಗಳನ್ನು ತಯಾರಿಸಿ ಕಣ್ಣಿಗೆ ಹಬ್ಬವೆಂಬಂತೆ ತೋರ್ಗಾಣಿಸುವಲ್ಲಿ ಸಣ್ಣರಂಗಪ್ಪ ಎತ್ತಿದ ಕೈ. ಈ ಕಲಾಕಾರನ ಮೋಡಿಗೆ ತಲೆದೂಗದವರೇ ಇಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ದಶಕಗಳಿಂದಲೂ ಕಿನ್ನಾಳ ಕಲೆಯಲ್ಲಿ ಅನವರತ ನಿರತದ ಮಹತ್ಸಾಧನೆ. ಈ ನಿಸ್ಪೃಹ ಕಲಾಸೇವೆಗೆ ಸಂದ ಗೌರವಗಳು-ಪ್ರಶಸ್ತಿಗಳು ಬಲು ಅಲ್ಪವೇ. ಸದ್ಯ ನೇತ್ರದೋಷದಿಂದ ಆಟಿಕೆ ತಯಾರಿಸಲಾಗದ ಸಂಕಟದಲ್ಲಿ ಕಾಲಕಳೆಯುತ್ತಿರುವ, ಕಣ್ಣಿಗಿಂತಲೂ ಕಿನ್ನಾಳಕಲೆ ದೀರ್ಘಕಾಲ ಬಾಳಲೆಂಬುದೇ ಹಾರೈಸುವ ಸಣ್ಣರಂಗಪ್ಪ ಕಲೆಗೆ ಸಮರ್ಪಿತಗೊಂಡ ಜೀವಿ.

Categories
ಪರಿಸರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಾಲುಮರದ ನಿಂಗಣ್ಣ

ಬಡತನದ ಬದುಕಿನಲ್ಲೂ ಸಮಷ್ಟಿ ಪ್ರಜ್ಞೆ ಮೆರೆದ ಅಪ್ಪಟ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ. ಹಳ್ಳಿಗಾಡಿನ ನಿಜ ಸೇವಕ, ಸಾವಿರಾರು ಗಿಡಗಳನ್ನು ಪೋಷಿಸಿದ ಸಮಾಜಮುಖಿ, ರಾಮನಗರ ಜಿಲ್ಲೆ ಕೂಟಗಲ್ ಹೋಬಳಿಯ ಅರೇಹಳ್ಳಿಯವರಾದ ನಿಂಗಣ್ಣ ವೃತ್ತಿಯಲ್ಲಿ ಕೂಲಿಕಾರ್ಮಿಕ, ಬಾಲ್ಯದಿಂದಲೂ ಪ್ರಕೃತಿಯ ಆರಾಧಕ, ಬಟಾಬಯಲಿನಂತಿದ್ದ ಅರೇಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದೇ ನಿತ್ಯಕಾಯಕ. ಆಲ, ಅರಚಿ, ಬೇವು, ಬಾಗೆ, ಹೊಂಗೆ, ಅತ್ತಿ ಮುಂತಾದ ಗಿಡಗಳನ್ನು ನೆಟ್ಟು ನಿತ್ಯ ನೀರೆರೆದು ಪೋಷಿಸಿ ಬೇಲಿ ಹಾಕಿ ಕಾವಲು ಕಾದು ಮರಗಳನ್ನಾಗಿ ಬೆಳೆಸಿದ ಪರಿಸರಪ್ರೇಮಿ, ಬರಗಾಲದಲ್ಲಿ ಮರಗಳಿಗೆ ನೀರುಣಿಸಲು ಪತ್ನಿಯ ಮಾಂಗಲ್ಯ ಮಾರಲು ಹೋಗಿದ್ದ ತ್ಯಾಗಮಯಿ, ಊರವರ ಕುಹಕಮಾತು, ಅಧಿಕಾರಿಗಳ ಕಿರುಕುಳದ ಮಧ್ಯೆಯೂ ೩೦ ವರ್ಷಗಳಲ್ಲಿ ಬರೋಬ್ಬರಿ ೧೫೦೦ ಮರಗಳನ್ನು ಬೆಳೆಸಿದ ಪರಿಸರ ರಕ್ಷಕ. ಗಿಡಮರಗಳ ಬಗ್ಗೆ ನಿಷ್ಕಲ್ಮಶ ಪ್ರೀತಿ, ನಿಷ್ಕಾಮ ಸೇವೆ. ೬೭ರ ಇಳಿವಯಸ್ಸಿನಲ್ಲೂ ತವರೂರಿನ ಕೆರೆಯ ಪಕ್ಕ ನೂರು ಗಿಡನೆಟ್ಟು ನಿತ್ಯ ಆರೈಕೆ ಮಾಡುತ್ತಿರುವ ನಿಂಗಣ್ಣ ನಿಜ ಅರ್ಥದಲ್ಲಿ ಸಾಲುಮರದ ನಿಂಗಣ್ಣ. ಪರಿಸರಕಾಳಜಿಗೆ ರಾಜ್ಯಪಾಲರ ಸನ್ಮಾನ, ರಾಜ್ಯ ಪರಿಸರ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರ. ಮರಗಳನ್ನು ಬೆಳೆಸಲು ದುಡಿದ ಕೂಲಿ ಹಣದ ಒಂದು ಭಾಗ ವ್ಯಯಿಸಿರುವ ನಿಂಗಣ್ಣ ನಮ್ಮ ನಡುವಿರುವ ನಿಜ ಮನುಷ್ಯ, ನಿಸ್ವಾರ್ಥ ಸೇವೆಗೊಂದು ಮಹಾಮಾದರಿ.