Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಶ್ರೀ ಗೋಪಾಲಕೃಷ್ಣ ಶರ್ಮ

ವೇದಾಧ್ಯಯನ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ವಿಶಿಷ್ಟ ಸಾಧಕರು ವಿದ್ವಾನ್ ಗೋಪಾಲಕೃಷ್ಣ ಶರ್ಮ, ೩೦ ಸಾವಿರ ಶ್ಲೋಕಗಳ ಅರ್ಥ ವಿಶ್ಲೇಷಕರು, ಹೆಸರಾಂತ ಜ್ಯೋತಿಷ ಪಂಡಿತರು, ಶಾಸ್ತ್ರ ವಿದ್ವಾಂಸರು, ಬಡವರಿಗೆ ನೆರವಾಗುವ ಸಮಾಜಸೇವಕರು. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬಾಲಿಕೊಪ್ಪ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಗೋಪಾಲಕೃಷ್ಣ ಶರ್ಮ ಅವರು ಬಾಲ್ಯದಲ್ಲೇ ವೇದಾಧ್ಯಯನದತ್ತ ಚಿತ್ತ ಹರಿಸಿದವರು. ಹೊನ್ನಾವರದಲ್ಲಿ ಪ್ರಾಥಮಿಕ ಸಂಸ್ಕೃತಾಧ್ಯಯನ, ವೇದಾಧ್ಯಯನ, ಉಡುಪಿಯಲ್ಲಿ ಜ್ಯೋತಿಷ ವಿದ್ವಾನ್ ಪದವಿ, ಪೌರೋಹಿತ್ಯದಲ್ಲಿ ವಿಶೇಷ ಪಾಂಡಿತ್ಯ, ಕೇರಳದಲ್ಲಿ ಮಂತ್ರಶಾಸ್ತ್ರ, ಪ್ರಶ್ನಾಶಾಸ್ತ್ರ ಅಧ್ಯಯನ. ಟಿವಿ ವಾಹಿನಿಗಳಜ್ಯೋತಿಷ ಪಂಡಿತರಾಗಿ ಬಲು ಜನಪ್ರಿಯರು. ವಿದ್ವತ್ತಿನ ಪಯಣದಾಚೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡವರು ಗೋಪಾಲಕೃಷ್ಣ ಶರ್ಮ, ಸಾವಿರಾರು ಬಡಮಕ್ಕಳಿಗೆ ಉಚಿತ ಪುಸ್ತಕ, ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಅಹಾರಕಿಟ್‌ಗಳ ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ದಿನಸಿ, ಬಟ್ಟೆ ವಿತರಿಸಿದ ಸಮಾಜಮುಖಿ, ೩೦ ಸಾವಿರ ಶ್ಲೋಕಗಳನ್ನು ಅರ್ಥ ಸಮೇತ ವಿವರಿಸಬಲ್ಲ ಪಂಡಿತೋತ್ತಮರು. ಜ್ಯೋತಿಷ ಮಾರ್ತಾಂಡ, ಜ್ಯೋತಿಷ ಸಾರ್ವಭೌಮ, ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ-ಗೌರವಗಳಿಂದ ಭೂಷಿತರಾದ, ಕನ್ನಡದ ವಿದ್ವತ್ ಪರಂಪರೆಯನ್ನು ಶ್ರೀಮಂತಗೊಳಿಸಿದ ವಿದ್ವತ್ಮಣಿ.