Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಅಶೋಕ್ ಆರ್. ಸೊನ್ನದ್

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅನ್ವರ್ಥಕ ಡಾ|| ಅಶೋಕ್ ಆರ್. ಸೊನ್ನದ್. ನಾಡು ಕಂಡ ಅಪರೂಪದ ಅನುಭವಿ ವೈದ್ಯ, ಸೇವೆಗೆ ನಿಂತ ಸಂತ. ಲಕ್ಷಾಂತರ ಜನರ ಆರೋಗ್ಯ ರಕ್ಷಿಸಿದ ಸಂಜೀವಿನಿ.
ಬಾಗಲಕೋಟೆ ಜಿಲ್ಲೆ ಮುಧೋಳದವರಾದ ಅಶೋಕ್ ಸೊನ್ನದ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯ ಪದವಿ, ಗುಜರಾತ್ ಅಹಮದಾಬಾದ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಫಿಲೆಡಾಲ್ಪಿಯಾದಲ್ಲಿ ತರಬೇತಿಗೊಂಡವರು. ಅಮೆರಿಕಾದ ವಿವಿಧ ಆಸ್ಪತ್ರೆಗಳಲ್ಲಿ ೩೬ ವರ್ಷಗಳ ಸುದೀರ್ಘ ಸೇವೆ, ನೂರಾರು ಯಶಸ್ವಿ ಶಸ್ತ್ರಚಿಕಿತ್ಸೆ, ಅಪಾರ ಅನುಭವ-ಗೌರವ ಸಂಪಾದನೆ. ೨೦೧೦ರಲ್ಲಿ ವೈಭೋಗದ ಜೀವನ-ಕುಟುಂಬ ತೊರೆದು ಭಾರತಕ್ಕೆ ವಾಪಸ್, ಹುಟ್ಟೂರಿನಲ್ಲಿ ತಾಯಿಯ ಹೆಸರಿನಲ್ಲಿ ಮಧುಮೇಹ ತಪಾಸಣೆ ಹಾಗೂ ಸಂಶೋಧನೆ ಕೇಂದ್ರ ಸ್ಥಾಪನೆ, ದಶಕದ ಅವಧಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ಸೇವೆ, ಹೊಸ ಬದುಕು ನೀಡಿದ ಮಾನವೀಯ ಕಾರ್ಯ. ಜಿಲ್ಲೆಯಲ್ಲಿ ಆರೋಗ್ಯಕ್ರಾಂತಿಗೆ ಮುನ್ನುಡಿ ಬರೆದ ಧನ್ವಂತರಿ ಅಶೋಕ್ ಅವರ ಪಾಲಿಗೆ ಚಿಕಿತ್ಸೆಯೇ ಪ್ರಜೆ, ರೋಗಿಗಳೇ ದೇವರು.