Categories
ಯಕ್ಷಗಾನ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೋಡಿ ಶಂಕರ ಗಾಣಿಗ

ಹಾರಾಡಿ ಮನೆತನದ ಯಕ್ಷಗಾನ ಕಲಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬಂದ ಪ್ರತಿಭಾವಂತ ಕುಡಿ ಕೋಡಿ ಶಂಕರ ಗಾಣಿಗ ಅವರು.
ಅಪ್ಪ, ತಾತಂದಿರ ಕಾಲದಿಂದಲೂ ಮನೆಯಲ್ಲಿ ರಿಂಗಣಿಸುತ್ತಿದ್ದ ಯಕ್ಷಗಾನ ಮದ್ದಳೆಯ ನಾದಕ್ಕೆ ಶ್ರುತಿ ಕೊಟ್ಟು ಬೆಳೆದ ಶ್ರೀಯುತರು ಯಾವ ಮೇಳದಲ್ಲೇ ಇರಲಿ, ಜನ ನಮ್ಮ ಶಂಕರ ಎಂದೇ ಗುರುತಿಸುತ್ತಾರೆ. ನಾಡಿನ ಬಹುಮುಖ್ಯ ಯಕ್ಷಗಾನ ಮೇಳಗಳಲೆಲ್ಲ ದುಡಿದ ೫೦
ವರ್ಷಗಳ ಅವಿರತ ಕಲಾ ಸೇವೆ ಅವರದು.
ಮಂದರ್ತಿ, ಮಾರನಕಟ್ಟೆ, ಕಮಲ ಶಿಲೆ, ಸೌಕೂರು, ಪೆರಡೂರು, ಇಡಗುಂಜಿ, ಮುಂತಾದ ಎಲ್ಲ ಮೇಳಗಳಲ್ಲೂ ತಮ್ಮ ಛಾಪು ಮೂಡಿಸಿ ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲೂ ಪಾತ್ರ ಮಾಡಿದ ಪ್ರತಿಭಾವಂತ ಕಲಾವಿದ ಶಂಕರ ಗಾಣಿಗ.
ರಾಜ್ಯ, ರಾಷ್ಟ್ರದಿಂದಾಚೆಗೂ ತಮ್ಮ ಯಕ್ಷಗಾನ ಕಲೆಯಿಂದ ಪ್ರಸಿದ್ಧರಾದ ಶಂಕರ ಗಾಣಿಗರ ಪ್ರತಿಭೆಯನ್ನು ಅರಸಿಬಂದ ಬಿರುದು ಸನ್ಮಾನಗಳು ಹಲವಾರು. ೭೩ರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಬಲ್ಲ ಯುವಕನ ಉತ್ಸಾಹ ಹೊಂದಿರುವ ಅದ್ಭುತ ಯಕ್ಷಗಾನ ಕಲಾವಿದ ಶ್ರೀ ಕೋಡಿಶಂಕರ ಗಾಣಿಗರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್. ಶಂಕರ ಶೆಟ್ಟಿ

ತಮ್ಮ ನಿಸ್ಪೃಹ ಸೇವೆಯಿಂದ ನೂರಾರು ಬಡಜನರ ಆರಾಧ್ಯದೈವವೆನಿಸಿರುವ ವೈದ್ಯಕೀಯ ಕ್ಷೇತ್ರದ ಹಿರಿಯ ಚೇತನ ಡಾ. ಎಚ್. ಶಂಕರ ಶೆಟ್ಟಿ ಅವರು.
೧೯೩೫ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಗ್ರಾಮ ಹರ್ಕೂರಿನಲ್ಲಿ ಜನಿಸಿದ ಇವರು ಮದರಾಸಿನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ ಮುಂದೆ ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಹಿರಿಯ ಶಸ್ತ್ರಚಿಕಿತ್ಸಕರಾಗಿ, ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಹೀಗೆ ರಾಜ್ಯದ ಬಹುಪಾಲು ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದು.
ಶ್ರೀಯುತ ಶಂಕರ ಶೆಟ್ಟಿ ಅವರ ವೈದ್ಯಕೀಯ ಸೇವೆಗೆ ಅಪಾರ ಜನಮನ್ನಣೆಯ ಜೊತೆಗೆ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನ ಪುರಸ್ಕಾರಗಳು ಸಂದಿವೆ.
ನಿವೃತ್ತಿಯ ನಂತರವೂ ವೈದ್ಯಕೀಯ ಕ್ಷೇತ್ರದಲ್ಲಿ ಬಡಜನರ ಸೇವೆ ಮುಂದುವರಿಸಿರುವ ಹಿರಿಯ ವೈದ್ಯರು ಶ್ರೀಯುತ ಡಾ. ಎಚ್. ಶಂಕರ ಶೆಟ್ಟಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಜನ ಪದ್ಮಮ್ಮ

ಬಳ್ಳಾರಿಯ ಕಪ್ಪಗಲ್ಲು ಗ್ರಾಮದ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಹರಿಜನ ಪದ್ಮಮ್ಮ ಹುಟ್ಟಿನಿಂದಲೇ ಜಾನಪದ ಬಯಲಾಟ ಕಲಾವಿದೆ, ತಾಯಿ ದಿವಂಗತ ಗಂಗಮ್ಮ ಸಹ ಒಳ್ಳೆಯ ಅಭಿನೇತ್ರಿಯಾಗಿದ್ದವರು. ಹಾಗಾಗಿ ಪದ್ಮಮ್ಮನಿಗೆ ಅಭಿನಯ ರಕ್ತಗತವಾಗಿ ಬಂದುದು. ಹೆಣ್ಣುಮಕ್ಕಳು ಬಣ್ಣ ಬಳಿದುಕೊಂಡು ವೇದಿಕೆ ಏರುವುದನ್ನು ಮಹಾಪರಾಧ ಎಂದೇ ಪರಿಗಣಿಸುತ್ತಿದ್ದ ಕಾಲದಲ್ಲೇ ಬಯಲಾಟದ ಗೀಳು ಹಚ್ಚಿಕೊಂಡ ಪದ್ಮಮ್ಮ ಎದುರಿಸಿದ ಎಡರು ತೊಡರುಗಳು ಅನೇಕ. ಆದರೂ ಎದೆಗೆಡದೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವತುಂಬಿ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಸನ್ನಿವೇಶವನ್ನು ಕಣ್ಣಿಗೆ ಕಾಣುವ ಚಿತ್ರದಂತೆ ಅಭಿನಯಿಸುವಲ್ಲಿ ಸಿದ್ಧ ಹಸ್ತರೆನಿಸಿದವರು. ಜನ ಸಮುದಾಯದ ಮನಗೆದ್ದವರು.
ಸಾವಿರಕ್ಕೂ ಹೆಚ್ಚು ಬಯಲಾಟದ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡಿದ್ದಾರೆ. ಅಭಿನಯದ ಜೊತೆಗೆ ಉಚ್ಛಕಂಠದಲ್ಲಿ ದಕ್ಷಿಣಾದಿ ಶೈಲಿಯಲ್ಲಿ ರಂಗಗೀತೆಗಳನ್ನು ಹಾಡುವಾಗ ತನ್ಮಯತೆಯಿಂದ ಮೈಮರೆಯುತ್ತಾರೆ.
ಬಳ್ಳಾರಿ ಹೊಸಪೇಟೆ, ಕೂಡ್ಲಿಗಿ ಸಂಡೂರುಗಳೇ ಅಲ್ಲದೆ ಗಡಿನಾಡು ಪ್ರದೇಶಗಳಲ್ಲೂ ಕನ್ನಡ ಬಯಲಾಟಗಳ ಜಯಭೇರಿ ಬಾರಿಸಿದ ಹೆಗ್ಗಳಿಕೆ ಇವರದು. ಬಳ್ಳಾರಿ ಜನತೆ ಇವರಿಗೆ ಗಾನಕಲಾ ಸರಸ್ವತಿ ಎಂದು ಹಾಡಿಹೊಗಳಿದ್ದಾರೆ. ಇಂಥ ಅಭಿಜಾತ ಕಲಾವಿದೆಗೆ ಸಂದ ಗೌರವ ಸನ್ಮಾನಗಳು ಆನೇಕ ಅಪಾರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿರುವ ಹರಿಜನ ಪದ್ಮಮ್ಮ ಜಾನಪದ ಬಯಲಾಟ ಕ್ಷೇತ್ರದ ದೊಡ್ಡ ಆಸ್ತಿ ಎನ್ನಬಹುದು.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಬನಶಂಕರಿ ಮಹಿಳಾ ಸಮಾಜ

ಬೆಂಗಳೂರಿನಲ್ಲಿ ೧೯೭೩ ರಲ್ಲಿ ಆರಂಭಗೊಂಡ ಬನಶಂಕರಿ ಮಹಿಳಾ ಸಮಾಜ ಸಕ್ರಿಯವಾಗಿ ಧಾರ್ಮಿಕ,ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಮಹಿಳಾ ಸಮಾಜವು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮ, ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಕಾರ್ಯಕ್ರಮ, ಅರೋಗ್ಯ ಜಾಗೃತಿ,ಮನೆ ಮದ್ದು,ಅಡುಗೆ ಕಾರ್ಯಕ್ರಮ,ಕಾನೂನು ಅರಿವು, ಪರಿಸರ ಸಂರಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮಹಿಳೆಯರಿಗೆ ನೆರವಾಗುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಸ್ಟೆಪ್ ಒನ್

‘ಸ್ಟೆಪ್ ಒನ್ ಟು ಸ್ಟಾಪ್ ಕೋವಿಡ್’ಅನ್ನುವ ಶಿರೋನಾಮೆಯಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ, ಕೋವಿಡ್ ನ ವಿರುದ್ಧ ದೊಡ್ಡ ಸಮರ ಸಾರಿದೆ. ಇಡಿ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-೧೯ ರ ವಿರುದ್ಧವೇ ಸಜ್ಜಾದ ಈ ಸಂಸ್ಥೆ ಸುಮಾರು ೭೦೦೦ ಡಾಕ್ಟರ್ ಗಳ ಸಹಕಾರ ಹೊಂದಿದ್ದು ೧೦೦೦ ಕ್ಕೂ ಹೆಚ್ಚು ಸ್ವಯಂಸ್ಥೆವಕರನ್ನು ಒಳಗೊಂಡಿದೆ. ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳು ಒಗ್ಗೂಡಿ ಸಾರ್ವಜನಿಕ ಆರೋಗ್ಯ ಜಾಗೃತಿ ಹಾಗೂ ರಕ್ಷಣೆಯ ಭಾರ ಹೊರುವುದೇ ಸ್ಟೆಪ್ ಒನ್ ಸಂಸ್ಥೆಯ ಪರಿಕಲ್ಪನೆ. ಸಾರ್ವಜನಿಕರ ಅಗತ್ಯಕ್ಕಾಗಿ ಟೋಲ್ ಫ್ರೀ ಸಹಾಯವಾಣಿ ಇದ್ದು, ಸಂಸ್ಥೆ ಸಹಾಯಕ್ಕೆ ಧಾವಿಸುತ್ತದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅದಮ್ಯ ಚೇತನ

ಅನ್ನ-ಅಕ್ಷರ,ಆರೋಗ್ಯ-ಪ್ರಕೃತಿ-ಸಂಸ್ಕೃತಿ ಎಂಬ ಪ್ರಮುಖ ಧೈಯಗಳಡಿಯಲ್ಲಿ ಸೇವಾನಿರತವಾಗಿರುವ ಸಂಸ್ಥೆ ಅದಮ್ಯ ಚೇತನ. ೧೯೯೭ ರಲ್ಲಿ ಆರಂಭವಾದ ಈ ಸಂಸ್ಥೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಡಿಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಶಾಲಾಮಕ್ಕಳ ಹಸಿವನ್ನು ನೀಗಿಸಲು ‘ಅನ್ನಪೂರ್ಣ’ಬಿಸಿಯೂಟದ ಯೋಜನೆಯಡಿಯಲ್ಲಿ ಬೆಂಗಳೂರು, ಹುಬ್ಬಳ್ಳಿ,ಕಲಬುರಗಿ, ಅಡುಗೆ ಕೇಂದ್ರಗಳಿಂದ ಶುಚಿಯಾದ ಪೌಷ್ಟಿಕವಾದ ಮಧ್ಯಾಹ್ನದ ಬಿಸಿಯೂಟವನ್ನು ಉಣಬಡಿಸುತ್ತಿದೆ. ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ಜೊತೆಗೆ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಅಲೆಯ ಸಂದರ್ಭದಲ್ಲಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ, ಸಾವಿರಾರು ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಅದಮ್ಯ ಚೇತನವು ಗ್ರಾಮಗಳನ್ನು ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಸಬಲೀಕರಿಸಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿದೆ. ಜೊತೆಗೆ ಸಸ್ಯಾಗ್ರಹ ಯೋಜನೆಯಡಿಯಲ್ಲಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಉತ್ಸವ್ ರಾಕ್ ಗಾರ್ಡನ್

ಹುಬ್ಬಳ್ಳಿ ಮತ್ತು ಹಾವೇರಿ ನಡುವೆ ನಗರ ಜೀವನದಿಂದ ದೂರವಿರುವ ಸುಮಾರು ೫೦ ಎಕರೆ ಪ್ರದೇಶದಲ್ಲಿ ಸೃಷ್ಟಿಗೊಂಡಿರುವ ರಾಕ್ ಗಾರ್ಡನ್ ಪಾರಂಪರಿಕ ಶಿಲ್ಪಕಲೆಗಳ ವಸ್ತುಸಂಗ್ರಹಾಲಯ. ೨೦೦೯ ರಲ್ಲಿ ಡಾ. ಟಿ.ಟಿ. ಸೊಲಬಕ್ಕನವರ್ ಅವರ ಕಲ್ಪನೆಯ ಮೂಸೆಯಿಂದ ಅರಳದ ರಾಕ್ ಗಾರ್ಡನ್ನಲ್ಲಿ ಸಂಗ್ರಹವಾಗಿರುವ ಶಿಲ್ಪಕಲೆಗಳ ಉತ್ಸವದಿಂದ ಖ್ಯಾತಿಗೊಂಡಿದೆ. ಇಂಥ ಅದ್ಭುತ ಕನಸಿಗೆ ಜೀವವನ್ನೆರೆದು ನಿರ್ಮಾಣ ಮಾಡಿದವರು ಸೊಲಬಕ್ಕನವರ್ ಅವರ ಅಳಿಯನಾದ ದಾಸನೂರು ಗ್ರೂಪ್ನ ಶ್ರೀ ಪ್ರಕಾಶ್ ದಾಸನೂರು ಅವರು. ಇದೀಗ ಅತ್ಯದ್ಭುತ ಕಲಾಕೇಂದ್ರ ಎನಿಸಿಕೊಂಡಿದೆ. ನೂರಾರು ಕಲಾವಿದರು ರಾಕ್ ಗಾರ್ಡನ್ ಸೃಷ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ರಾಕ್ ಗಾರ್ಡನ್ ನ ಮತ್ತೊಬ್ಬ ಪ್ರೇರಕ ಶಕ್ತಿ ಎಂದರೆ ಶ್ರೀಮತಿ ವೇದಾರಾಣಿ ದಾಸನೂರು. ಅವರು ಈ ರಾಕ್ ಗಾರ್ಡನ್ ನಿರ್ಮಾಣದ ಹಿಂದೆ ಹೆಚ್ಚಿನ ಶ್ರಮಪಟ್ಟಿದ್ದಾರೆ. ಅದಕ್ಕಾಗಿ ಈ ಹನ್ನೊಂದು ವರ್ಷಗಳಲ್ಲಿ ಮೂರೂವರೆ ಲಕ್ಷ ಕಿ.ಮಿ ಪ್ರಯಾಣ ಮಾಡಿ ಅದ್ಭುತ ಕಲಾಲೋಕದ ಸೃಷ್ಟಿಗೆ ಕಾರಣಕರ್ತರಲ್ಲಿ ತಾವೂ ಒಬ್ಬರಾಗಿ ತನ್ಮೂಲಕ ಗ್ರಾಮೀಣ ಕಲೆಗಳ ಮೌಲ್ಯಗಳನ್ನು ಪರಿಚಯಿಸುವಲ್ಲಿ ಸಫಲರಾಗಿದ್ದಾರೆ. ಈ ಜಾಗತೀಕರಣ, ಹೆಸರುವಾಸಿಯಾಗಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್

೧೯೯೪ ರಲ್ಲಿ ಆರಂಭಗೊಂಡ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್, ಸೇವಾ ಮನೋಭಾವದ ದೃಷ್ಟಿಯಿಂದ ಪ್ರಮುಖವಾಗಿ ವಿಶೇಷಚೇತನರ ಅನುಕೂಲಕ್ಕಾಗಿಯೇ ಸಮರ್ಪಿಸಿಕೊಂಡ ಸಂಸ್ಥೆ. ಹುಬ್ಬಳ್ಳಿಯಲ್ಲಿ ನೆಲೆ ನಿಂತಿರುವ ಈ ಸಂಸ್ಥೆ, ೧೯೯೭ ರಿಂದ ೪೦ ಸಾವಿರಕ್ಕೂ ಹೆಚ್ಚು ಕೃತಕ ಅಂಗಗಳನ್ನು ನೀಡಿ ಮಾನವೀಯತೆ ಮೆರೆದಿದೆ. ಸಂಸ್ಥೆಯಿಂದ ಕೃತಕ ಅಂಗ ಪಡೆದುಕೊಂಡ ಕರ್ನಾಟಕ, ಆಂಧ್ರ ಹಾಗೂ ಗೋವಾದ ಫಲಾನುಭವಿಗಳು ಸ್ವಾವಲಂಬನೆಯ ಬದುಕು ನಡೆಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣಾಶ್ರಮ ಮಂಗಳೂರು

೧೯೪೭ರಲ್ಲಿ ಆರಂಭವಾದ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ, ಸುಮಾರು ಆರು ದಶಕಗಳಿಂದ ಸಮಾಜದಲ್ಲಿ ಧರ್ಮ ಮತ್ತು ಆಧ್ಯಾತ್ಮದ ಬೀಜವನ್ನು ಬಿತ್ತುವಲ್ಲಿ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅಕ್ಷರ, ಆಶ್ರಯ ಮತ್ತು ಅನ್ನ ನೀಡುವ ಉದ್ದೇಶದಿಂದ ಆರಂಭಗೊಂಡ ಈ ಆಶ್ರಮ, ಧ್ಯಾನ, ಭಜನೆ, ಪ್ರಾರ್ಥನೆಗಳ ಮೂಲಕ ಶಾಂತಿ ನೆಮ್ಮದಿ ನೀಡುವಲ್ಲಿ ಯಶಸ್ವಿಯಾಗಿದೆ. ಯೋಗ, ಶಿಕ್ಷಣಗಳ ಮೂಲಕ ಸಮಾಜದ ಹಾಗೂ ಜನರ ಮಾನಸಿಕ ಸ್ವಾಸ್ಥ ಕಾಪಾಡುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ

ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬ ಆಶಯದಲ್ಲಿ ಆರಂಭಗೊಂಡ ಸಂಸ್ಥೆ. ಶೈಕ್ಷಣಿಕ ದೃಷ್ಟಿಕೋನದಿಂದ ಸಂಸ್ಥೆ ಇಲ್ಲಿಯವರೆಗೆ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ೧೯೯೯ ರಲ್ಲಿ ರಜತ ಮಹೋತ್ಸವ ಕಂಡಿರುವ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ
ಮಾಡಿದೆ.
೧೯೭೪ ರಲ್ಲಿ ಆರಂಭಗೊಂಡ ಈ ಸಂಸ್ಥೆ ಇದೀಗ ಸುಮಾರು ೩೫ ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯು ಅತ್ಯಂತ ಕ್ರಿಯಾಶೀಲವಾಗಿದ್ದು ೨೦೨೪ ರಲ್ಲಿ ಸುವರ್ಣ ಮಹೋತ್ಸವ ಕಾಣಲಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕರ್ನಾಟಕ ಹಿಮೋಫೀಲಿಯಾ ಸೊಸೈಟಿ

ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವವರ ಕ್ಷೇಮಾಭಿವೃದ್ಧಿಗಾಗಿ ೧೯೯೦ ರಲ್ಲಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಆರಂಭಗೊಂಡು ಎರಡೂವರೆ ದಶಕಗಳು ಕಳೆದಿವೆ. ಹಿಮೋಫೀಲಿಯ ಕಾಯಿಲೆಯನ್ನು ಗುಣಪಡಿಸದೇ ಹೋದರೆ ಶಾಶ್ವತ ಊನಕ್ಕೆ ತುತ್ತಾಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿತವಾಯಿತು.
ಮಾನವೀಯ ನೆಲೆಯಲ್ಲಿ ಶುರುವಾದ ಹಿಮೊಫೀಲಿಯ ಸೊಸೈಟಿ, ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುತ್ತಿದೆ. ಸಾವಿರಾರು ಜನ ಹಿಮೋಫೀಲಿಯಾಕ್ಕೆ ತುತ್ತಾದವರು ಇಲ್ಲಿ ಗುಣವಾಗಿ ಸಂತಸದ ಬದುಕನ್ನ ನಡೆಸುತ್ತಿದ್ದಾರೆ. ನಿಸ್ವಾರ್ಥ ಮತ್ತು ನಿರಪೇಕ್ಷೆಯಿಂದ ನಡೆಯುತ್ತಿರುವ ಈ ಸಂಸ್ಥೆಗೆ ಸಾರ್ವಜನಿಕರು, ದಾನಿಗಳು ಹಾಗೂ ಸಂಘ ಸಂಸ್ಥೆಗಳಿಂದ ಬೆಂಬಲ ಸಿಗುತ್ತಿದೆ. ಸೊಸೈಟಿಗಾಗಿ ಸಹಾಯಾರ್ಥ ಪ್ರದರ್ಶನಗಳನ್ನು ಶ್ರೀ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶ್ರೀಮತಿ ಸಂಗೀತಾಕಟ್ಟ, ಶ್ರೀಮತಿ ಉಷಾ ಉತ್ತುಪ್, ಮುಂತಾದವರು ನೀಡಿ ಮಾನವೀಯತೆ ಮೆರೆದಿದ್ದಾರೆ.

Categories
ಉದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ಯಾಮರಾಜ್

ಬೆಂಗಳೂರಿನ ಮೌರ್ಯ ಹೋಟೆಲ್ನ ವ್ಯವಸ್ಥಾಪಕ ನಿರ್ದೇಶಕ ಶ್ಯಾಮರಾಜ್ ಅವರು ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೋಟೆಲ್ ಉದ್ಯಮದಲ್ಲಿನ ಅವರ ಶಿಸ್ತು ಮತ್ತು ಕಾಯಕನಿಷ್ಠೆ ಅವರನ್ನ ಒಬ್ಬ ಪ್ರಮುಖ ಉದ್ಯಮಿಯನ್ನಾಗಿಸಿದೆ.

Categories
ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ

ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸುಮಾರು ಎಳು ದಶಕಗಳಿಂದ ಅಂಧ ಮತ್ತು ಅನಾಥರ ಬಾಳಿಗೆ ಬೆಳಕಾಗಿದೆ. ಈ ಪುಣ್ಯಾಶ್ರಮಕ್ಕೆ ಚೇತನರಾಗಿದ್ದವರು ಪಂ.ಪಂಚಾಕ್ಷರಿ ಗವಾಯಿಗಳು. ಹುಟ್ಟು ಕುರುಡರಾಗಿದ್ದ ಪಂಚಾಕ್ಷರಿ ಗವಾಯಿಗಳ ನಂತರ ಈ ವೀರೇಶ್ವರ ಪುಣ್ಯಾಶ್ರಮಕ್ಕೆ ಕಣ್ಣಾದವರು ಶ್ರೀ ಪುಟ್ಟರಾಜ ಗವಾಯಿಗಳು.
ಸುಮಾರು ೭೦೦ ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತ್ರಿವಿಧ ದಾಸೋಹ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತದೆ. ಅಂಧ ಮಕ್ಕಳಿಗೆ ಜೀವನ ಸಾಗಿಸಲು ಹಾಗೂ ಆತ್ಮವಿಶ್ವಾಸ ತುಂಬುವುದಕ್ಕೆ ಸಂಗೀತವನ್ನು ಕಲಿಸಲಾಗುತ್ತದೆ. ಇಲ್ಲಿ ಆಳವಾಗಿ ಅಧ್ಯಯನ ಮಾಡಿದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಅಭ್ಯಾಸ ನಡೆಯುತ್ತಿದೆ.

Categories
ಯೋಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ರಾಘವೇಂದ್ರ ಶೆಣೈ

ಬೆಂಗಳೂರಿನ ಯೋಗಗುರು ಡಾ. ರಾಘವೇಂದ್ರ ಶೆಣೈ ಪ್ರತಿಯೊಬ್ಬರಿಗೂ ಯೋಗಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ೨೦೦೭ ರಲ್ಲಿ ‘ನಿರ್ಮಯ ಯೋಗ ಕುಟೀರಂ’ ಸ್ಥಾಪಿಸಿ ಸಾವಿರಾರು ಯೋಗಾಸಕ್ತರಿಗೆ ಯೋಗ ಕಲಿಸುತ್ತ ಬಂದಿದ್ದಾರೆ. ಜೀವನವೇ ಒಂದು ಯೋಗವಾಗಬೇಕು, ಸ್ವಸ್ಥ ಜೀವನಕ್ಕೆ ಯೋಗವೇ ಸಹಕಾರಿ ಎಂಬ ತತ್ವದಡಿಯಲ್ಲಿ ಯೋಗಶಿಕ್ಷಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಪ್ರಖ್ಯಾತ ಯೋಗಗುರುಗಳಾದ ಬಿ.ಕೆ.ಎಸ್ ಅಯ್ಯಂಗಾರ್ ಅವರ ಶಿಷ್ಯರಾದ ಇವರ ಬಳಿ ಯೋಗ ಕಲಿತವರು ಸ್ವಸ್ಥ ಹಾಗೂ ಸಮಭಾವದ ಜೀವನ ನಡೆಸುತ್ತಿದ್ದಾರೆ.

Categories
ಯೋಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭ. ಮ. ಶ್ರೀಕಂಠ

ಶಿವಮೊಗ್ಗದ ಶ್ರೀ. ಭ. ಮ. ಶ್ರೀಕಂಠರವರು ಯೋಗಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ವಿದ್ಯಾರ್ಥಿಗಳನ್ನು ಯೋಗಶಿಕ್ಷಕರನ್ನಾಗಿ ರೂಪಿಸಿದ ಕೀರ್ತಿ ಇವರದು. ಶಿವಮೊಗ್ಗದಲ್ಲಿ ಯೋಗಶಿಕ್ಷಣ ಸಮಿತಿಯ ಪ್ರಾರಂಭಕ್ಕೆ ಪ್ರೇರಣೆ ನೀಡಿ ನಗರದ ವಿವಿಧ ಬಡಾವಣೆಗಳಲ್ಲಿ ೫೫ ಕ್ಕೂ ಹೆಚ್ಚು ಉಚಿತ ಯೋಗ ತರಗತಿಗಳ ಪ್ರಾರಂಭಕ್ಕೆ ಉತ್ತೇಜನ ನೀಡಿದ್ದಾರೆ.
ಯೋಗಶಿಕ್ಷಣದಲ್ಲಿ ಶ್ರೀಯುತರು ಸಲ್ಲಿಸಿರುವ ಸೇವೆಗೆ, ಬೆಂಗಳೂರು ಯೋಗ ಸೆಂಟರ್ ನವರು ‘ಯೋಗಶ್ರೀ ಪ್ರಶಸ್ತಿ-೧೯೯೦ ನೀಡಿ ಗೌರವಿಸಿದ್ದಾರೆ. ೨೦೧೬ ರಲ್ಲಿ ‘ಆರ್ಟ್ ಆಫ್ ಅವಿಂಗ್’ ರವರಿಂದ ‘ಯೋಗೋಪಾಸಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸನ್ಮಾನ ಮತ್ತು ಶ್ರೀ ರಾಘವೇಂದ್ರ ಯೋಗಕೇಂದ್ರದಿಂದ ಪುರಸ್ಕಾರ ಲಭ್ಯವಾಗಿವೆ. ಅಜಿತಶ್ರೀ ಪ್ರಶಸ್ತಿ ಯೋಗಾಚಾರ್ಯ ಪ್ರಶಸ್ತಿಗಳು ಇವರನ್ನ ಹುಡುಕಿ ಬಂದಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಮಹದೇವಪ್ಪ ಕಡೆಚೂರು

ಸ್ವಾತಂತ್ರ್ಯ ಚಳವಳಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಹೋರಾಟದ ಹಾದಿಯನ್ನು ಕಂಡ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಶ್ರೀ ಮಹದೇವಪ್ಪ ಕಡೆಚೂರು ಅವರು ಯಾದಗಿರಿ ಜಿಲ್ಲೆಯ ಸುರಪುರದವರು. ಗಣಿತ ಹಾಗೂ ಹಿಂದಿ ಉಪನ್ಯಾಸಕರಾಗಿ ಕೆಲಸ ಮಾಡಿದ ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು. ಸ್ವಾತಂತ್ರಾ ನಂತರವೂ ಹೈದರಾಬಾದ್ ನಿಜಾಮನ ವಶದಲ್ಲಿದ್ದ ಹೈದರಾಬಾದ್ ಅನ್ನು ಉಳಿಸಿಕೊಳ್ಳಲು ಹೈದರಾಬಾದ್ ಮುಕ್ತಿ ಹೋರಾಟ ಮಾಡಿ, ಹೈದರಾಬಾದ್ ಅನ್ನು ಸ್ವತಂತ್ರಭಾರತದಲ್ಲಿ ವಿಲೀನಗೊಳಿಸುವಲ್ಲಿಯಶಸ್ವಿಯಾದವರು. ೭೫ ವರ್ಷಗಳ ಕಾಲ ಸಮಾಜದ ಅಭ್ಯುದಯಕ್ಕಾಗಿ ದುಡಿದ ಅವರು ಈಗ ೯೦ ರ ಹರೆಯದಲ್ಲಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶ್ರಮಿಕ ವಲಯ

ಶ್ರೀಮತಿ ರತ್ನಮ್ಮ ಶಿವಪ್ಪ

ಯಾದಗಿರಿ ನಗರಸಭೆಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬದಲಾದ ೩೫ ವರ್ಷಗಳ ಕಾಲ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಡುವ ಕೆಲಸದಲ್ಲಿ ಮೇಲು ಕೀಳು ಅನ್ನುವ ತಾರತಮ್ಯ ತೋರದೇ ಶೀಮತಿ ರತ್ನಮ್ಮ ಸ್ವಚ್ಛತಾ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ ತಮ್ಮ ವೃತ್ತಿಬದ್ಧತೆಯನ್ನು ಮೆರೆದಿದ್ದಾರೆ. ಜೀವನದ ನಡುದಾರಿಯಲ್ಲಿ ಗಂಡನನ್ನು ಕಳೆದುಕೊಂಡರೂ ಎದೆಗುಂದದೆ ತಮ್ಮ ಐವರು ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಇವರ ಕರ್ತವ್ಯ ಪ್ರಜ್ಞೆ ದೊಡ್ಡದು.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ

ಶ್ರೀ ಪ್ರವೀಣ್ ಕುಮಾರ್ ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಮಹನೀಯರಲ್ಲಿ ಒಬ್ಬರು. ಕಳೆದ ಎರಡು ದಶಕಗಳಿಂದ ಯು.ಎ.ಇ ಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಶ್ರೀ ಪ್ರವೀಣ್ ಶೆಟ್ಟಿ ಅವರು, ೩೭ ದೇಶಗಳ ೧೨೩ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ‘ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್’ನ ಮಹಾಪೋಷಕರಾಗಿದ್ದು ಎಲ್ಲ ಕನ್ನಡಿಗರನ್ನು ಬೆಸೆದಿದ್ದಾರೆ. ಪರರಾಷ್ಟ್ರದಲ್ಲಿದ್ದರೂ ಕನ್ನಡ ನಾಡಿನ ಸೆಳೆತದಲ್ಲಿಯೇ ಇರುವ ಅವರು ಅನೇಕ ಬಡಕುಟುಂಬದ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ಅವರೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ನೀಡುತ್ತ ಉತ್ತಮ ನಾಗರೀಕರನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ.

Categories
ನ್ಯಾಯಾಂಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ದರಾಮೇಶ್ವರ ಕಂಟೀಕ

ದೇಶದಾದ್ಯಂತ ಗ್ರಾಹಕರ ವ್ಯಾಜ್ಯಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಶ್ರಮಿಸುತ್ತಿರುವ ಡಾ. ಸಿದ್ದರಾಮೇಶ್ವರ ಕಂಟೀಕ ದೊಡ್ಡ ಹೆಸರು. ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಭಾರತ ಸರ್ಕಾರದ ವತಿಯಿಂದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯಕೀಯ ಓದಿಕೊಂಡಿದ್ದರೂ ನ್ಯಾಯಾಂಗ ವಿಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಗ್ರಾಹಕರ ವ್ಯಾಜ್ಯಗಳನ್ನು ಪರಿಹರಿಸಲು, ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಶೇಖರ ಪಾಲೆತ್ತಾಡಿ

ಪುತ್ತೂರು ತಾಲ್ಲೂಕಿನ ಬಜೆತ್ತೂರು ಗ್ರಾಮದ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಹೆಸರಾಂತ ಪತ್ರಕರ್ತರು, ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ, ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನು ಹಾಗೂ ವರದಿಗಳನ್ನು ಬರೆದು ಓದುಗರಿಗೆ ಹತ್ತಿರವಾದವರು. ಮುಂಬೈನಲ್ಲಿ ನೆಲೆಸಿರುವ ಇವರು, ಮುಂಬೈನಿಂದ ಪ್ರಕಟವಾಗುವ ಏಕೈಕ ಕನ್ನಡ ಪತ್ರಿಕೆ ‘ಕರ್ನಾಟಕ ಮಲ್ಲ’ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕನ್ನಡಿಗರ ಧ್ವನಿಯನ್ನು ಒಗ್ಗೂಡಿಸುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ಇವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ, ತುಳುವ ಸಿರಿ ಪ್ರಶಸ್ತಿ, ಮುಂತಾದ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಂದಿವೆ.